ಬಯಲುಸೀಮೆ ಪ್ರದೇಶವಾದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ತ್ವರಿತಗತಿಯಲ್ಲಿ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವಂತೆ ವಿಧಾನಸಭಾ ಅಧಿವೇಶನದಲ್ಲಿ ರಾಜ್ಯ ಸರಕಾರದ ಮೇಲೆ ಎರಡೂ ಜಿಲ್ಲೆಗಳ ಶಾಸಕರು ಒಟ್ಟಾಗಿ ಒತ್ತಾಯ ಮಾಡುವುದಾಗಿ ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಲೂಡು, ಚಾಗೆ, ಶೆಟ್ಟಿಹಳ್ಳಿ ಹಾಗು ಜಯಂತಿಗ್ರಾಮಗಳಲ್ಲಿ ಸುಮಾರು 72 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಓವರ್ ಹೆಡ್ ನೀರಿನ ಟ್ಯಾಂಕುಗಳ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಲ್ಲೂಕು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕಳೆದ ಮೂರು ವರ್ಷಗಳಿಂದ ಮಳೆಯಿಲ್ಲದೆ ಬರಗಾಲಕ್ಕೆ ತುತ್ತಾಗಿದ್ದು, ಜನ, ಜಾನುವಾರುಗಳು ಕುಡಿಯುವ ನೀರಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಕೂಡಲೇ ರಾಜ್ಯ ಸರಕಾರ ಎರಡೂ ಜಿಲ್ಲೆಗಳಿಗೆ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಕಲ್ಪಿಸಬೇಕೆಂದರು.
ಸರ್ಕಾರದ ಅನುಧಾನಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಗುಣಮಟ್ಟದ ಕಾಮಗಾರಿಗಳನ್ನು ನಡೆಸಿ ಜನತೆಗೆ ಶುಧ್ದ ಕುಡಿಯುವ ನೀರನ್ನು ಸರಬರಾಜು ಮಾಡುವಲ್ಲಿ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಆಸಕ್ತಿವಹಿಸಿ ಕೆಲಸ ಮಾಡಬೇಕು ಎಂದರು.
ಸರ್ಕಾರದ ವಿವಿಧ ಜನಪರ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.
ಇದೇ ವೇಳೆಯಲ್ಲಿ ಜಯಂತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಅಬ್ಲೂಡು ಗ್ರಾಮ ಪಂಚಾಯಿತಿ ವತಿಯಿಂದ ನೂತನವಾಗಿ ಶಾಲೆಯ ವಿಧ್ಯಾರ್ಥಿಗಳಿಗೆ ಕುಡಿಯುವ ನೀರಿಗಾಗಿ ನಿರ್ಮಿಸಲಾಗಿರುವ ನೀರಿನ ಟ್ಯಾಂಕ್ ಉದ್ಘಾಟನೆ ನೆರವೇರಿಸಿದ ಅವರು ಶಾಲೆ ಹಾಗು ಶಾಲೆಯ ಮಕ್ಕಳ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದ ಅವರು ಶಿಕ್ಷಕರನ್ನುದ್ದೇಶಿಸಿ ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಮುಖಾಂತರ ಮುಂದಿನ ಪರೀಕ್ಷೆಯಲ್ಲಿ ಉತ್ತಮವಾದ ಶ್ರೇಣಿಯಲ್ಲಿ ಫಲಿತಾಂಶವನ್ನು ತಂದುಕೊಟ್ಟು ತಾಲ್ಲೂಕಿಗೆ ಹೆಸರುಗಳಿಸಿಕೊಡಬೇಕು ಎಂದರು.
ಸಾರ್ ನಾವು 8ನೇ ತರಗತಿಯಲ್ಲಿ ಓದುತ್ತಿದ್ದು ಈವರೆಗೂ ನಮಗೆ ಉಚಿತ ಸೈಕಲ್ ವಿತರಣೆಯಾಗಿಲ್ಲ ಎಂಬ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ ಶಾಸಕ ಎಂ.ರಾಜಣ್ಣ ಕೂಡಲೇ ಈ ಬಗ್ಗೆ ಇಆಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಸೈಕಲ್ ನೀಡಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಇನ್ನು ಶಾಲೆಯ ಸುತ್ತಲೂ ಇರುವ ಮೈಧಾನವನ್ನು ಸಮತಟ್ಟು ಮಾಡಿ ಮಕ್ಕಳಿಗೆ ಆಟವಾಡಲು ಅನುಕೂಲವಾಗುವಂತೆ ಮಾಡಲೂ ಈಗಾಗಲೇ ಈ ಭಾಗದ ಜಿಲ್ಲಾ ಪಂಚಾಯಿತಿ ಸದಸ್ಯರ ಅನುಧಾನದಲ್ಲಿ 4 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಶೀಘ್ರವಾಗಿ ಮೈದಾನದ ಕೆಲಸವನ್ನು ಪ್ರಾರಂಭ ಮಾಡಲಾಗುತ್ತದೆ ಎಂದರು.
ಕೋಚಿಮುಲ್ ನಿರ್ದೇಶಕ ಬಂಕ್‍ಮುನಿಯಪ್ಪ, ಅಬ್ಲೂಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಕೆ.ನಾರಾಯಣಸ್ವಾಮಿ, ಸದಸ್ಯ ರಮೇಶ್, ಮಾಜಿ ಅಧ್ಯಕ್ಷ ಕೆ.ಎಸ್.ಕನಕಪ್ರಸಾದ್, ಮುಖಂಡರಾದ ಮುನಿವೆಂಕಟಸ್ವಾಮಿ, ಶೆಟ್ಟಿಹಳ್ಳಿಮಂಜುನಾಥ್, ಗುಡಿಹಳ್ಳಿ ಬಚ್ಚರಾಯಪ್ಪ, ಜಯಂತಿಗ್ರಾಮದ ಬೈರೇಗೌಡ, ಕೆಂಪನಹಳ್ಳಿ ಮುನಿರೆಡ್ಡಿ, ಕೆ.ಎಸ್.ದ್ಯಾವಕೃಷ್ಣ, ತಾತಹಳ್ಳಿ ಚಲಪತಿ, ಕೊಂಡಪ್ಪ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಜಯಶ್ರೀ, ಶಶಿಕುಮಾರ್, ಮತ್ತಿತರರು ಹಾಜರಿದ್ದರು.
ತ್ವರಿತಗತಿಯಲ್ಲಿ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವಂತೆ ಒತ್ತಾಯ
ಉಚಿತ ಬರಡು ರಾಸು ಚಿಕಿತ್ಸೆ ಮತ್ತು ಪಶು ಆರೋಗ್ಯ ತಪಾಸಣಾ ಶಿಬಿರ
ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿ ಬುಧವಾರ ಪಶುಸಂಗೋಪನಾ ಇಲಾಖೆ ಮತ್ತು ಕೋಚಿಮುಲ್ ವತಿಯಿಂದ ಪಶು ಚಿಕಿತ್ಸಾಲಯದ ಆವರಣದಲ್ಲಿ ಉಚಿತ ಬರಡು ರಾಸು ಚಿಕಿತ್ಸೆ ಮತ್ತು ಪಶು ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಸಹಾಯಕ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ, ಉಪವ್ಯವಸ್ಥಾಪಕ ಡಾ.ಈಶ್ವರಯ್ಯ ಹಾಜರಿದ್ದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರತಿಭಟನೆ
ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸುವುದನ್ನು ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬುಧವಾರ ಪಟ್ಟಣದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ತಾಲ್ಲೂಕು ಈಗಾಗಲೇ ಬರಗಾಲ ಪೀಡಿತವಾಗಿದ್ದು, ರೈತರ ಸಂಕಷ್ಟವನ್ನು ಅರ್ಥ ಮಾಡಿಕೊಳ್ಳದೆ ರೈತರ ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸಲು ಮುಂದಾಗಿದೆ. ಇದರಿಂದಾಗಿ ರೈತರ ಹೊಟ್ಟೆ ಮೇಲೆ ಬರೆ ಎಳೆಯುವಂತಾಗಿದೆ. ಸಮರ್ಪಕ ವಿದ್ಯುತ್ ಇಲ್ಲದಿದ್ದರೂ ಅತ್ಯಲ್ಪ ನೀರಿನಲ್ಲಿ ಬೆಳೆಯನ್ನು ಬೆಳೆಯಲು ರೈತರು ಹರಸಾಹಸ ಪಡುತ್ತಿದ್ದಾರೆ. ಸಾಲದ ಸುಳಿಗೆ ಸಿಲುಕಿರುವ ರೈತರಿಗೆ ತೊಂದರೆ ಕೊಡಬೇಡಿ. ಇಲಾಖೆಯು ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಸುವುದನ್ನು ನಿಲ್ಲಿಸದಿದ್ದಲ್ಲಿ ರೈತರು ಬೀದಿಗಿಳಿದು ಉಗ್ರವಾಗಿ ಹೋರಾಡಬೇಕಾಗುತ್ತದೆ ಎಂದು ತಿಳಿಸಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ ರೈತರು ಬೆಸ್ಕಾಂ ಕಚೇರಿಯ ಮುಂದೆ ಧರಣಿ ನಡೆಸಿದರು. ಬೆಸ್ಕಾಂ ಕಾರ್ಯನಿರ್ವಾಹಕ ಸಹಾಯಕ ಎಂಜಿನಿಯರ್ಗೆ ಮನವಿ ಪತ್ರವನ್ನು ನೀಡಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಮುನಿನಂಜಪ್ಪ, ಕೃಷ್ಣಪ್ಪ, ಶ್ರೀರಾಮಪ್ಪ, ನಾಗರಾಜ್, ಅಬ್ಲೂಡು ಆರ್.ದೇವರಾಜ್, ಎಂ.ದೇವರಾಜ್, ಆಂಜನೇಯರೆಡ್ಡಿ, ವೇಣುಗೋಪಾಲ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
‘ಕಲಿ–ಕಲಿಸು’ ಮೂಲಕ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸೃಜನಾತ್ಮಕ ಕಲಿಕೆ
ಸೃಜನಾತ್ಮಕವಾಗಿ ಮಕ್ಕಳಿಗೆ ಕಲಿಸುವ ನಿಟ್ಟಿನಲ್ಲಿ ಕಲಿಕಾ ವಿಧಾನಗಳಿಗೆ ಪ್ರೋತ್ಸಾಹ ನೀಡುವ ‘ಕಲಿ–ಕಲಿಸು’ ಎಂಬ ಯೋಜನೆಯ ಉದ್ಘಾಟನೆ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನೆರವೇರಿತು.
ಕಲೆ ಸಂಸ್ಕೃತಿಯ ಬೆಳವಣಿಗೆಗಳಲ್ಲಿ ತೊಡಗಿಸಿಕೊಂಡು ಬಂದಿರುವ ಸಂಸ್ಥೆ ಇಂಡಿಯಾ ಫೌಂಡೇಷನ್ ಫಾರ್ ಆರ್ಟ್ಸ್ (ಐಎಫ್ಎ) ಶಿಕ್ಷಣ ಪದ್ಧತಿಯಲ್ಲಿ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವ ಸೃಜನ ಕಲೆಯನ್ನು ಸಮರ್ಥವಾಗಿ ಬಳಸಿಕೊಳ್ಳುವುದನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಿದೆ.

ಎರಡನೆಯ ತರಗತಿ ವಿದ್ಯಾರ್ಥಿ ನರಸಿಂಹ ಮೂರ್ತಿ ಚಿತ್ರ ಬರೆಯುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಶಾಲೆಯ ಮಕ್ಕಳು ಗ್ರಂಥಾಲಯದ ಪುಸ್ತಕಗಳನ್ನು ಓದಿ ಅದರ ಬಗ್ಗೆ ಅನಿಸಿಕೆಗಳನ್ನು ಬರೆಯುವ ‘ನಾನು ಓದಿದ ಪುಸ್ತಕ’ ಹಾಗೂ ಶಾಲಾ ಮಕ್ಕಳ ಲೇಖನಗಳು ಹಾಗೂ ಚಿತ್ರಗಳನ್ನು ಒಳಗೊಂಡ ‘ಬೇಲಿಹೂ’ ಎಂಬ ಗೋಡೆ ಪತ್ರಿಕೆಗಳು ಈ ಸಂದರ್ಭದಲ್ಲಿ ಬಿಡುಗಡೆಗೊಂಡವು. ಮಕ್ಕಳೊಂದಿಗೆ ಸಂವಾದ ಮಾಡಿದ ಅತಿಥಿಗಳು ಮಕ್ಕಳು ಕೇಳಿದ ವಿವಿಧ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಕಡಲು ಪ್ರಕಾಶನದ ಶ್ರೀಧರ್ ಗೌಡ ಮಾತನಾಡಿ, ‘ಅನುವಾದದ ಮುಖಾಂತರ ಬೇರೆ ಭಾಷೆಯ ಪುಸ್ತಕಗಳು ಕನ್ನಡಕ್ಕೆ ಬರುತ್ತಿವೆ ಹಾಗೆಯೇ ಕನ್ನಡದ ಹಲವು ಪುಸ್ತಕಗಳು ಬೇರೆ ಭಾಷೆಗಳಿಗೆ ಅನುವಾದ ಆಗುತಿವೆ. ಕನ್ನಮಂಗಲ ಶಾಲೆಯ ಶಾಮಂತಿ ಕೂಡ ಒಂದು ದಿನ ಇಂಗ್ಲಿಷ್ ಭಾಷೆಗೆ ಅನುವಾದವಾಗಿ ಪ್ರಕಟಣೆಯಾಗಲಿ’ ಎಂದು ಆಶಿಸಿದರು.
ಸ್ನೇಹ ಯುವಕರ ಸಂಘದ ಅಧ್ಯಕ್ಷ ವಸಂತವಲ್ಲಭಕುಮಾರ್, ಐಎಫ್ಎ ಸಂಸ್ಥೆಯ ಕಲಿ-ಕಲಿಸು ಯೋಜನೆಯ ಶಾಲೆಗಳ ಸಂಯೋಜಕ ಬಸವರಾಜು, ನಮ್ಮ ಮೆಟ್ರೊ ರಂಗೋಲಿ ಕಲಾ ಕೇಂದ್ರದ ಕಲಾವಿದೆ ಸುರೇಖಾ, ಯಲಹಂಕದ ಸಮಾಜ ಸೇವಕ ಗೋಪಿನಾಥ್, ಕನ್ನಮಂಗಲ ಸ್ನೇಹ ಯುವಕರ ಸಂಘದ ಕಾರ್ಯದರ್ಶಿ ವಾಸುದೇವ್, ನಾಗರಾಜ್, ಕೇಶವಪ್ಪ, ಶಾಲೆಯ ಮುಖ್ಯ ಶಿಕ್ಷಕ ಎಚ್. ಮುನಿಯಪ್ಪ, ಶಿಕ್ಷಕರಾದ ಕೆ.ಶಿವಶಂಕರ್, ಜೆ.ಶ್ರೀನಿವಾಸ್, ಎಸ್.ಕಲಾಧರ್, ಟಿ.ಜೆ.ಸುನೀತ ಭಾಗವಹಿಸಿದ್ದರು.
ಜನರು ಕುಂಭಕರ್ಣರಾದರೆ ರಾಜ್ಯವು ರಾವಣರಾಜ್ಯವಾಗುತ್ತದೆ
ಮೇಲೂರು ಗ್ರಾಮವನ್ನು ವಿವಿಧ ಸಾಹಿತಿ, ಕಲಾವಿದರ ಭಾವಚಿತ್ರಗಳಿಂದ ಸಿಂಗರಿಸಲಾಗಿತ್ತು. ನಾಡಬಾವುಟದ ರಂಗು ಗ್ರಾಮವನ್ನು ಆವರಿಸಿತ್ತು. ಗ್ರಾಮದಲ್ಲಿ ಹಬ್ಬದ ವಾತಾವರಣ ಮೂಡಿತ್ತು. ಶಾಲಾ ವಿದ್ಯಾರ್ಥಿಗಳು ನಾಡ ಬಾವುಟವನ್ನು ಕೈಲಿ ಹಿಡಿದು ತಮ್ಮ ನಾಡಪ್ರೀತಿಯನ್ನು ತೋರುತ್ತಿದ್ದರೆ, ಹಿರಿಯರು ಅರಿಶಿನ ಕುಂಕುಮ ಬಣ್ಣದ ಶಲ್ಯವನ್ನು ಹೊದ್ದು ರಾಜ್ಯೋತ್ಸವದ ಆಚರಣೆಯ ಸಮಭ್ರಮದಲ್ಲಿದ್ದರು.
ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘ ಮತ್ತು ಕನ್ನಡ ರೈತ ಯುವಕರ ಸಂಘದ ವತಿಯಿಂದ ಮಂಗಳವಾರ 59ನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕನ್ನಡ ರಣಧೀರ ಪಡೆಯ ಅಧ್ಯಕ್ಷ ಆರ್.ಎಸ್.ಎನ್.ಗೌಡ ಮೇಲೂರು ಗ್ರಾಮದ ಕೆ.ಚಂಗಲರಾಯರೆಡ್ಡಿ ವೃತ್ತದಲ್ಲಿ ನಾಡಧ್ವಜಾರೋಹಣವನ್ನು ನೆರವೇರಿಸಿದರು.
ಧರ್ಮಪ್ರಕಾಶ್ ವೇದಿಕೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ,‘ಜನರು ಕುಂಭಕರ್ಣರಾದರೆ ರಾಜ್ಯವು ರಾವಣರಾಜ್ಯವಾಗುತ್ತದೆ. ಜನರು ನಮ್ಮ ಭೂಮಿ ಕಬಳಿಸುವವರ ವಿರುದ್ಧ ದನಿಎತ್ತಬೇಕು. ಕನ್ನಡ ಉಳಿಸುವುದೆಂದರೆ ನಮ್ಮ ನೆಲಕ್ಕಾಗುವ ಅನ್ಯಾಯವನ್ನು ಖಂಡಿಸುವುದು, ನಮ್ಮ ಜನರಿಗಾಗುವ ತೊಂದರೆಯನ್ನು ಪ್ರತಿಭಟಿಸುವುದು, ಭ್ರಷ್ಟಾಚಾರ ತೊಲಗಿಸುವುದು, ರಾಜ್ಯವನ್ನು ರಾಮರಾಜ್ಯವನ್ನಾಗಿಸುವುದಾಗಿದೆ. ಜನಪ್ತಿನಿಧಿಗಳು ಅನ್ಯಾಯ ಮಾಡಿದರೆ ಪ್ರತಿಭಟಿಸಿ ನಮ್ಮ ಹಕ್ಕನ್ನು ಪಡೆದುಕೊಳ್ಳಬೇಕು’ ಎಂದು ಹೇಳಿದರು.
ಹಿರಿಯ ಸಾಹಿತಿ ಚಂದ್ರಶೇಖರ್ ಪಾಟೀಲ್ ಮಾತನಾಡಿ, ಕನ್ನಡ ಭಾಷೆಗೆ ಅತ್ಯಂತ ಶ್ರೀಮಂತ ಇತಿಹಾಸವಿದ್ದು, ಅದನ್ನು ಇನ್ನಷ್ಟು ಉನ್ನತಕ್ಕೆ ತರಬೇಕಾಗಿದೆ. ಭಾರತ ದೇಶ ಸಮಾನತೆ ಮತ್ತು ಜಾತ್ಯತೀತ ರಾಷ್ಟ್ರವಾಗಿದ್ದು, ಇದರ ಕೀರ್ತಿ ಪತಾಕೆಯನ್ನು ನಮ್ಮ ಮಾತೃಭಾಷೆಯಿಂದ ಎತ್ತಿಹಿಡಿಯಬೇಕು. ನಮ್ಮ ನಡೆ, ನುಡಿ ಎಲ್ಲವೂ ಕನ್ನಡವಾಗಲಿ ಎಂದು ನುಡಿದರು.

ರಾಮಕೃಷ್ಣ ಮಠದ ಮಂಗಳಾನಾಥಾನಂದ ಸ್ವಾಮೀಜಿ ಭಕ್ತಿಗೀತೆಗಳನ್ನು ಹಾಡಿ ಕನ್ನಡ ನಾಡು ನುಡಿಯ ಕುರಿತಂತೆ ಆಶೀರ್ವಚನ ನೀಡಿದರು. ಕನ್ನಡ ರಣಧೀರ ಪಡೆಯ ಅಧ್ಯಕ್ಷ ಆರ್.ಎಸ್.ಎನ್.ಗೌಡ, ಸಾಹಿತಿ ಚಟ್ನಳ್ಳಿ ಮಹೇಶ್, ಕೆನರಾ ಬ್ಯಾಂಕ್ ಗ್ರಾಮಾಂತರ ವೃತ್ತದ ಉಪಮಹಾಪ್ರಬಂಧಕ ಎಂ.ಎಂ.ಚಿನಿವಾರ್, ಕನ್ನಡ ಪ್ರಾಧ್ಯಾಪಕ ಎಚ್.ಜಿ.ಶ್ರೀನಿವಾಸ ಪ್ರಸಾದ್ ಮಾತನಾಡಿದರು.
ವಿವಿಧ ಶಾಲಾ ವಿದ್ಯಾರ್ಥಿಗಳು ಕನ್ನಡ ನಾಡಿನ ಕುರಿತ ಗೀತೆಗಳಿಗೆ ನೃತ್ಯವನ್ನು ಹಾಗೂ ಕಿತ್ತೂರು ಚನ್ನಮ್ಮ ನಾಟಕವನ್ನು ಪ್ರದರ್ಶಿಸಿದರು.

ಈ ಸಂದರ್ಭದಲ್ಲಿ ಮೇಲೂರಿನ ಹಿರಿಯ ಶ್ರಮ ಜೀವಿ ಚಾಂದ್ಪಾಷ, ಕನ್ನಡದ ಕಟ್ಟಾಳು ಹಾಗೂ ಪ್ರಕಾಶಕ ವೆಂಕಟೇಶಮೂರ್ತಿ ಮತ್ತು ವನ್ಯಜೀವಿ ಛಾಯಾಗ್ರಾಹಕ ಡಿ.ಜಿ.ಮಲ್ಲಿಕಾರ್ಜುನ ಅವರನ್ನು ಸನ್ಮಾನಿಸಲಾಯಿತು.
ಮೇಲೂರು ಸುಧೀರ್, ಸುದರ್ಶನ್, ಧರ್ಮೇಂದ್ರ, ಆರ್.ಎ.ಉಮೇಶ್, ಕೆ.ಮಂಜುನಾಥ್, ಎಚ್.ಟಿ.ನಾರಾಯಣಸ್ವಾಮಿ, ಶ್ರೀನಿವಾಸ್, ಗೋಪಾಲ್, ಆನಂದ್, ಶ್ರೀಧರ್, ಕೆ.ಎಸ್.ಮಂಜುನಾಥ್, ಎಂ.ಮುನಿಕೃಷ್ಣ, ಎಂ.ಜೆ.ಶ್ರೀನಿವಾಸ್, ಶ್ರೀನಿವಾಸ್(ಪುಲಿ) ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸ್ನೇಹ ಯುವಕರ ಸಂಘದಿಂದ ಕನ್ನಡ ರಾಜ್ಯೋತ್ಸವ
ಅಖಂಡ ಕರ್ನಾಟಕದ ನಾಡು, ನುಡಿ, ಭಾಷೆ, ಕಲೆ, ಸಂಸ್ಕೃತಿಗಳ ಉಳಿವಿಗಾಗಿ ಎಲ್ಲಾ ಸಂಘಟನೆಗಳು ಸೇರಿದಂತೆ ಪ್ರತಿಯೊಬ್ಬ ಕನ್ನಡಿಗನೂ ಶ್ರಮವಹಿಸಬೇಕು ಎಂದು ಕನ್ನಡಪರ ಹೋರಾಟಗಾರ ಖ.ರಾ.ಖಂಡೇರಾವ್ ಹೇಳಿದರು.
ಪಟ್ಟಣದ ಹಳೇ ಅಂಚೆ ಕಚೇರಿ ರಸ್ತೆ ವೃತ್ತದಲ್ಲಿ ಪಟ್ಟಣದ ಸ್ನೇಹ ಯುವಕರ ಸಂಘದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ನಾಡಿನ ನೆಲ, ಜಲ, ಭಾಷೆಯ ವಿಷಯದಲ್ಲಿ ರಾಜ್ಯದ ಎಲ್ಲಾ ಸಂಘಟನೆಗಳು ಒಂದಾಗಿ ದುಡಿಯಬೇಕು ಎಂದ ಅವರು ಕನ್ನಡ ರಾಜ್ಯೋತ್ಸವವನ್ನು ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತಗೊಳಿಸದೇ ವರ್ಷದುದ್ದಕ್ಕೂ ಆಚರಿಸುವಂತಾಗಬೇಕು. ಆಂಧ್ರಪ್ರದೇಶದ ಗಡಿ ಬಾಗದಲ್ಲಿರುವ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ ಮಕ್ಕಳಲ್ಲಿ ಕನ್ನಡ ಭಾಷೆಯ ಸೊಂಪನ್ನು ಬೆಳಸಲು ಮಕ್ಕಳ ಪೋಷಕರು ಸೇರಿದಂತೆ ಶಿಕ್ಷಕರು ಹೆಚ್ಚಿನ ಶ್ರಮವಹಿಸಬೇಕೆಂದರು.
ಸ್ನೇಹ ಯುವಕರ ಸಂಘದ ಎನ್.ಭರತ್, ಶ್ರೀನಿವಾಸ್, ಡಿ.ವಿ.ವೆಂಕಟೇಶ್, ಮಂಜುನಾಥ್, ಮುನಿರಾಜು, ಜೆ.ವಿ.ವೆಂಕಟಸ್ವಾಮಿ. ಅಪ್ಪೇಗೌಡನಹಳ್ಳಿ ತ್ಯಾಗರಾಜ್, ಸುನಿಲ್, ಗೋಪಿನಾಥ್, ನವೀನ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬೆಳ್ಳೂಟಿಯಲ್ಲಿ ರಾಜ್ಯೋತ್ಸವ, ರಕ್ತದಾನ ಶಿಬಿರ, ಅಂಗವಿಕಲರಿಗೆ ವೀಲ್ ಚೇರ್ ವಿತರಣೆ
ಕನ್ನಡ ರಾಜ್ಯೋತ್ಸವವನ್ನು ಕೇವಲ ಸಾಂಕೇತಿಕವಾಗಿ ಆಚರಿಸದೇ ರಕ್ತದಾನ ಮಾಡುತ್ತಾ ಯುವಕರು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ತಹಶಿಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ಬೆಳ್ಳೂಟಿ ಗ್ರಾಮದಲ್ಲಿ ಸೋಮವಾರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೆಡ್ಕ್ರಾಸ್ ಸಂಸ್ಥೆಯು ರಕ್ತನಿಧಿಯನ್ನು ಸ್ಥಾಪಿಸಿ ವಿವಿದೆಡೆ ರಕ್ತದಾನ ಶಿಬಿರವನ್ನು ನಡೆಸುತ್ತಿದೆ. ಅದರ ಆಜೀವ ಸದಸ್ಯರಾಗುವ ಮೂಲಕ ಹಾಗೂ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ, ಗಾಯಾಳುಗಳಿಗೆ ಸಹಾಯ ಮಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಬೆಳ್ಳೂಟಿಯ ಭಾರತಾಂಬೆ ಕನ್ನಡ ಯುವಕರ ಸಂಘದ ವತಿಯಿಂದ ಅಂಗವಿಕಲೆ ಚೌಡಸಂದ್ರ ರೂಪಾ ಹಾಗೂ ಬೆಳ್ಳೂಟಿ ಗ್ರಾಮದ ಮಹಿಳೆಯೊಬ್ಬರಿಗೆ ವೀಲ್ ಚೇರ್ಗಳನ್ನು ನೀಡಿದರು. ರಕ್ತದಾನ ಶಿಬಿರದಲ್ಲಿ 41 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಬೆಳ್ಳೂಟಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ನಾಡ ಧ್ವಜಾರೋಹಣೆ ನಡೆಯಿತು. ಶಾಲಾ ವಿದ್ಯಾರ್ಥಿಗಳಿಂದ ನಾಡ ಗೀತೆ ಹಾಡಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಶಾಸಕ ಎಂ.ರಾಜಣ್ಣ, ಕೋಚಿಮುಲ್ ನಿರ್ದೇಶಕ ಮುನಿಯಪ್ಪ, ಪಿ.ವಿ.ನಾಗರಾಜ್, ಖಂಡೇರಾವ್, ಗುರುರಾಜರಾವ್, ಚಂದ್ರಪ್ಪ, ಮಾರಪ್ಪ, ವೆಂಕಟಸ್ವಾಮಿ, ಮುರಳಿ, ತ್ಯಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಮಳಮಾಚನಹಳ್ಳಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ
ಕನ್ನಡದ ಹೆಸರಿನಲ್ಲಿ ಹಲವಾರು ಸಂಘಟನೆಗಳು ಹುಟ್ಟಿಕೊಳ್ಳುತ್ತಿವೆ. ಆದರೆ ಕನ್ನಡಿಗರ ಆಶೋತ್ತರಗಳನ್ನು ಎಷ್ಟು ಸಂಘಟನೆಗಳು ಈಡೇರಿಸಲು ಸಫಲವಾಗಿವೆ ಎಂದು ಆತ್ಮಾವಲೋಕನೆ ಮಾಡಿಕೊಳ್ಳಬೇಕಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ದಾ.ಪಿ.ಆಂಜಿನಪ್ಪ ತಿಳಿಸಿದರು.
ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ನಾಲ್ಕನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿಗಳು ಬೆಂಗಳೂರು ಮಹಾನಗರವನ್ನು ಮೂರು ಭಾಗಗಳನ್ನಾಗಿ ಮಾಡಲು ಹೊರಟಿದ್ದಾರೆ. ಒಂದು ಭಾಗ ತಮಿಳರಿಗೆ, ಮತ್ತೊಂದು ತೆಲುಗರಿಗೆ ಹಾಗೂ ಉಳಿದೊಂದು ಭಾಗವನ್ನು ಮರಾಠಿಗರಿಗೆ ಕೊಟ್ಟು ಕೊನೆಗೆ ಕನ್ನಡಿಗರನ್ನು ಹೊರಸಾಗಿಸುವ ಪರಿಸ್ಥಿತಿ ತಂದೊಡ್ಡುತ್ತಿದ್ದಾರೆ. ಭಾಷೆ ಅಳಿದರೆ ನಮ್ಮ ಉಸಿರು ನಿಂತಂತೆ. ಸಂಸ್ಕೃತಿ ಅಳಿದಂತೆ. ನಮ್ಮ ಆಲೋಚನಾ ಕ್ರಮವನ್ನು ಬೇರೆ ಭಾಷೆ ನಿಯಂತ್ರಿಸಬಾರದು. ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಉಳಿವಿಗಾಗಿ ಕಂಕಣಬದ್ಧವಾಗಿದೆ. ಸರ್ಕಾರದ ಕನ್ನಡದ ವಿರೋಧಿನೀತಿಯನ್ನು ಖಂಡಿಸುತ್ತೇವೆ ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಯುವಕರು ಕನ್ನಡಿಗರ ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಕನ್ನಡದಲ್ಲಿ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ನಗದು ಬಹುಮಾನ ವಿತರಿಸಿದರು. ರಕ್ತದಾನ ಶಿಬಿರವನ್ನು ನಡೆಸಲಾಯಿತು. ರಸಸಂಜೆಯನ್ನು ರಾತ್ರಿ ಆಯೋಜಿಸಲಾಗಿತ್ತು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಆರ್.ಶ್ರೀನಿವಾಸ್, ಕ.ರ.ವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಮಳಮಾಚನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಬಿ.ಬೈರೇಗೌಡ, ಡಿ.ಲಕ್ಷ್ಮಯ್ಯ, ಬಿ.ಎನ್.ಕೃಷ್ಣಯ್ಯ, ಎಂ.ಸಿ.ಜಗದೀಶ್, ಮೇಲೂರು ಉಮೇಶ್, ಎಂ.ಕೆ.ರಾಜಶೇಖರ್, ಎಂ.ಎಲ್.ಮುನೇಗೌಡ, ಎಂ.ದೇವರಾಜು, ಮಳಮಾಚನಹಳ್ಳಿಯ ಕ.ರ.ವೇ ಗೌರವಾಧ್ಯಕ್ಷ ಎಂ.ಜೆ.ಪ್ರವೀಣ್ ಕುಮಾರ್, ಅಧ್ಯಕ್ಷ ಎಂ.ಗಯನ್ಗೌಡ, ಮುನಿರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ತಾಲ್ಲೂಕಿನ ಎನ್.ಶ್ಯಾಮಲ ಅವರಿಗೆ ಯುವ ರೈತ ಮಹಿಳೆ ಪ್ರಶಸ್ತಿ
ತಾಲ್ಲೂಕಿನ ಶೀಗೇಹಳ್ಳಿ ಗ್ರಾಮದ ಎನ್.ಶ್ಯಾಮಲ ಅವರಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ತಾಲ್ಲೂಕು ಮಟ್ಟದ ಪ್ರಗತಿಶೀಲ ಯುವ ರೈತ ಮಹಿಳೆ ಪ್ರಶಸ್ತಿಯನ್ನು ನೀಡಿದ್ದಾರೆ.
ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ಕೃಷಿ ಮೇಳದಲ್ಲಿ ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ ಮತ್ತು ಅನಂತಕುಮಾರ್, ವಿಧಾನಪರಿಷತ್ ಸದಸ್ಯ ರಾಮಚಂದ್ರಗೌಡ ಪ್ರಶಸ್ತಿ ಮತ್ತು ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.
ಸಾವಯವ ಕೃಷಿಯಲ್ಲಿ ರೇಷ್ಮೆ , ರಾಗಿ, ಅವರೆ, ಜೋಳ, ತರಕಾರಿ ಬೆಳೆಗಳನ್ನು ಬೆಳೆಯುತ್ತಿರುವ ಶೀಗೇಹಳ್ಳಿ ಗ್ರಾಮದ ಎನ್.ಶ್ಯಾಮಲ, ಹಸು, ಎಮ್ಮೆ, ಕುರಿ, ಕೋಳಿ ಮುಂತಾದ ಪ್ರಾಣಿಗಳನ್ನೂ ಸಾಕಿದ್ದಾರೆ. ತ್ಯಾಜ್ಯದಿಂದ ಎಳೆಹುಳು ಗೊಬ್ಬರವನ್ನು ತಯಾರಿಸುತ್ತಾರೆ. ಗೋಬರ್ ಗ್ಯಾಸ್ನಿಂದ ಅಡುಗೆ ಮಾಡುತ್ತಾರೆ. ಕೃಷಿ ಮೇಳ, ಬೆಳೆ ಕ್ಷೇತ್ರೋತ್ಸವ, ಪ್ರಗತಿಪರ ರೈತರ ತೋಟಗಳಿಗೆ ಭೇಟಿ ನೀಡಿ ಪಡೆದ ಜ್ಞಾನವನ್ನು ಅಳವಡಿಸಿಕೊಂಡು ಆರ್ಥಿಕ ಪ್ರಗತಿಯನ್ನು ಕಂಡುಕೊಂಡಿದ್ದಾರೆ.
ಎಲ್ಲಾ ಜಾತಿ–ಧರ್ಮದಲ್ಲೂ ಪ್ರತಿಭಾವಂತರು
ಪ್ರತಿಭಾವಂತರು ಮತ್ತು ಸಾಧಕರು ಪ್ರತಿಯೊಂದು ಜಾತಿ–ಧರ್ಮದಲ್ಲಿದ್ದು, ಪ್ರತಿಭೆ ಎಂಬುದು ಯಾರೊಬ್ಬರ ಅಥವಾ ಜಾತಿಯೊಂದರ ಸ್ವತ್ತಲ್ಲ. ವಿಪ್ರ ಸಮುದಾಯದ ಪ್ರತಿಭಾವಂತರನ್ನು ಮಾತ್ರವನ್ನು ಪರಿಗಣಿಸದೇ ಎಲ್ಲಾ ಜಾತಿ–ಧರ್ಮದಲ್ಲಿನ ಪ್ರತಿಭಾವಂತರು ಮತ್ತು ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸಿ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಬೇಕು ಎಂದು ಇನ್ಫೊಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿಯವರ ಪತ್ನಿ ಮತ್ತು ಸಾಹಿತಿ ಸುಧಾಮೂರ್ತಿ ತಿಳಿಸಿದರು.

ಪಟ್ಟಣದಲ್ಲಿ ಭಾನುವಾರ ನಡೆದ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಿದ ಬಳಿಕ ಮಾತನಾಡಿದ ಅವರು, ಪ್ರತಿಭಾವಂತರನ್ನು ಹೊಂದಿರುವ ವಿಪ್ರ ಸಮುದಾಯವೊಂದೇ ಶ್ರೇಷ್ಠ ಎಂಬ ಭಾವನೆಯಿಂದ ಹೊರಬರಬೇಕು. ಯಾವುದೇ ಜಾತಿ ಅಥವಾ ಸಮುದಾಯದಲ್ಲಿ ಪ್ರತಿಭಾವಂತರಿದ್ದರೂ ಅವರನ್ನು ಸಹ ಕರೆದು ಪ್ರತಿಭಾ ಪುರಸ್ಕಾರ ಪ್ರದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಎಲ್ಲಾ ಜಾತಿ–ಧರ್ಮದವರನ್ನು ಪ್ರತಿಭಾ ಪುರಸ್ಕಾರ ಮಾಡಲೆಂದೇ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್‌ಗೆ ₨ 10 ಲಕ್ಷ ನೀಡುತ್ತೇವೆ. ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವಂತಹ ಕಾರ್ಯ ನಿರಾತಂಕವಾಗಿ ಮುಂದುವರೆಯಲಿ ಎಂದು ಅವರು ತಿಳಿಸಿದರು.
ಶಾಲೆಗಳಿಗೆ ಕೊಠಡಿ, ಶೌಚಾಲಯ ಸೌಲಭ್ಯ
ತಾಲ್ಲೂಕಿನ ನಡಿಪಿನಾಯಕನಹಳ್ಳಿಯಲ್ಲಿನ ಅನುದಾನಿತ ಶಾಲೆಗೆ 8 ಕೊಠಡಿಗಳನ್ನು ಇನ್ಫೊಸಿಸ್ ಪ್ರತಿಷ್ಠಾನದ ವತಿಯಿಂದ ನಿರ್ಮಿಸಲಾಗುವುದು ಮತ್ತು ಅಗತ್ಯ ಸೌಕರ್ಯ ಕಲ್ಪಿಸಲಾಗುವುದು ಎಂದು ಇನ್ಫೊಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ತಿಳಿಸಿದರು.
ತಮ್ಮ ತಾಯಿಯ ಸ್ವಗ್ರಾಮವಾದ ನಡಿಪಿನಾಯಕನಹಳ್ಳಿಗೆ ಭಾನುವಾರ ಭೇಟಿ ನೀಡಿದ ಸಂದರ್ಭದಲ್ಲಿ ಸಂಬಂಧಿ ಎನ್.ಕೆ.ಗುರುರಾಜರಾವ್‌ಗೆ ಈ ವಿಷಯ ತಿಳಿಸಿದ ಅವರು, ಇನ್ಫೊಸಿಸ್ ಪ್ರತಿಷ್ಠಾನದಿಂದ ಹಣ ನೀಡುವುದರ ಬದಲು ಕೊಠಡಿಯನ್ನೇ ನಿರ್ಮಿಸಿಕೊಡುತ್ತೇವೆ ಎಂದರು.
ನಂತರ ಶಾಸಕ ಎಂ.ರಾಜಣ್ಣ ಜೊತೆಗೆ ಮಾತನಾಡಿದ ನಾರಾಯಣಮೂರ್ತಿಯವರು ಶೌಚಾಲಯದ ಕೊರತೆ ಎದುರಿಸುತ್ತಿರುವ ತಾಲ್ಲೂಕಿನ ಸರ್ಕಾರಿ ಶಾಲೆಗಳ ಪಟ್ಟಿ ನೀಡಲು ಹೇಳಿದರು. ಕೊರತೆಯನ್ನು ಪರಿಶೀಸಿಲಿ, ಶೌಚಾಲಯ ಸೌಲಭ್ಯ ಕಲ್ಪಿಸಲು ಪ್ರಯತ್ನಿಸುತ್ತೇನೆ ಎಂದು ಅವರು ತಿಳಿಸಿದರು.

