17.1 C
Sidlaghatta
Sunday, December 28, 2025
Home Blog Page 1009

ಶ್ರದ್ಧೆ, ಬದ್ಧತೆ, ಆತ್ಮವಿಶ್ವಾಸ, ಪರಿಶ್ರಮ ಮತ್ತು ನಿಶ್ಚಿತ ಗುರಿಯಿದ್ದಲ್ಲಿ ಯಶಸ್ಸು ಸಾಧ್ಯ

0

ಶ್ರದ್ಧೆ, ಬದ್ಧತೆ, ಆತ್ಮವಿಶ್ವಾಸ, ಪರಿಶ್ರಮ ಮತ್ತು ನಿಶ್ಚಿತ ಗುರಿಯಿದ್ದಲ್ಲಿ ಮಾತ್ರವೇ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಲಿದ್ದು, ಈ ಎಲ್ಲಾ ಅಂಶಗಳನ್ನು ಜೀವನಪರ್ಯಂತ ಯಾವುದೇ ಕಾರಣಕ್ಕೂ ಮರೆಯಬಾರದು ಎಂದು ಇನ್ಫೊಸಿಸ್ ಸಂಸ್ಥೆಯ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ತಿಳಿಸಿದರು.
ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ಪಟ್ಟಣದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ಸುಮಾರು 10 ನಿಮಿಷಗಳ ಕಾಲ ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು, ‘ನನ್ನ ಯಶಸ್ವಿ ಜೀವನಕ್ಕೆ ಈ ಎಲ್ಲಾ ಅಂಶಗಳೇ ಪ್ರಮುಖ ಕಾರಣ’ ಎಂದರು.
ವಿದ್ಯಾರ್ಥಿನಿ ಸ್ನೇಹಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಶಿಡ್ಲಘಟ್ಟದ ಪುಟ್ಟ ಗ್ರಾಮದಿಂದ ಆರಂಭಗೊಂಡ ನನ್ನ ಪಯಣ ಈಗ ಅಂತರ್ರಾಷ್ಟ್ರೀಯ ಮಟ್ಟಕ್ಕೆ ತಲುಪಿದೆ. ಯಾವುದೇ ಪ್ರದೇಶ ಅಥವಾ ಜಾತಿಗೆ ಸೇರಿದ್ದರೂ ಯಾರು ಬೇಕಾದರೂ ವಿಶಿಷ್ಟ ಸಾಧನೆ ಮಾಡಬಹುದು. ದೃಢವಾದ ಗುರಿಯಿರಬೇಕು ಎಂದರು.
ವಿದ್ಯಾರ್ಥಿ ಸ್ವರೂಪ್ ಪ್ರಶ್ನೆಗೆ ಪ್ರತಿಕಿ್ರಯಿಸಿದ ಅವರು, ಇನ್ಫೊಸಿಸ್ ಸಂಸ್ಥೆ ಕಟ್ಟಲು ಅಗತ್ಯವಿದ್ದ ತಂಡವನ್ನು ಕಟ್ಟುವಾಗ ಜಾತಿ, ಧರ್ಮ, ಮತ ಮುಂತಾದವು ಕಡೆ ಗಮನಹರಿಸಲಿಲ್ಲ. ಕೆಲಸ ಮಾಡಲು ಉತ್ಸಾಹಿ ಸಹೋದ್ಯೋಗಿಗಳನ್ನು ಆಯ್ಕೆ ಮಾಡಿಕೊಂಡೆ. ಅವರಲ್ಲಿ ಒಬ್ಬರು ತಂತ್ರಜ್ಞಾನ ಪರಿಣತಿ ಗಳಿಸಿದ್ದರೆ, ಮತ್ತೊಬ್ಬರು ಹಣಕಾಸು ವಿಚಾರದಲ್ಲಿ ತಜ್ಞರಾಗಿದ್ದರು. ವಿಜ್ಞಾನ, ತಂತ್ರಜ್ಞಾನ ಮತ್ತು ಕೌಶಲ್ಯದ ಜ್ಞಾನಕ್ಕೆ ಪ್ರಥಮ ಆದ್ಯತೆ ನೀಡಿದೆ. ಸಂಸ್ಥೆಗೆ ಇವೆಲ್ಲವೂ ಬಲ ತುಂಬಿದವು ಎಂದರು.
ವಿದ್ಯಾರ್ಥಿನಿ ಚಂದನಾ ಪ್ರಶ್ನೆಗೆ ಕನ್ನಡದಲ್ಲಿ ಉತ್ತರಿಸಿದ ಅವರು, ದೇಶದಿಂದ ಭ್ರಷ್ಟಾಚಾರ ತೊಲಗಿಸಲು ಸಾರ್ವಜನಿಕರು ದೃಢವಾದ ನಿಲುವು ತಳೆಯಬೇಕು. ಲಂಚ ತೆಗೆದುಕೊಳ್ಳದೇ ಮತ್ತು ನೀಡದೇ ಕೆಲಸ ಮಾಡಿಸಿಕೊಳ್ಳುವ, ಪ್ರಾಮಾಣಿಕತೆಯಿಂದ ದುಡಿಯುವ ಮನಸ್ಸಿದ್ದಲ್ಲಿ ಭ್ರಷ್ಟಾಚಾರ ನಿವಾರಿಸಬಹುದು ಎಂದರು.
ದೇಶ ಅಭಿವೃದ್ಧಿ ಪಥದಲ್ಲಿ ಮುಂದೆ ಸಾಗಲು ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಬೇಕು. ಉನ್ನತ ಶಿಕ್ಷಣವಿದ್ದಲ್ಲಿ ಮತ್ತು ಹೆಚ್ಚಿನ ಸಂಶೋಧನೆ ಮಾಡಿದ್ದಲ್ಲಿ ಯಶಸ್ಸಿನ ಪಥದಲ್ಲಿ ಖಂಡಿತವಾಗಿಯೂ ನಿರಾತಂಕವಾಗಿ ಮುಂದುವರೆಯಬಹುದು. ಸಂಶಯಪಡುವ ಅಗತ್ಯವೇ ಇಲ್ಲ ಎಂದರು. ಎನ್.ಆರ್.ನಾರಾಯಣಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಮತ್ತು ಶಾಸಕ ಎಂ.ರಾಜಣ್ಣ ಉಪಸ್ಥಿತರಿದ್ದರು.

ತಾಲ್ಲೂಕಿನ ಅಭಿವೃದ್ಧಿಗೆ ನಾರಾಯಣಮೂರ್ತಿಗೆ ಮನವಿ

0

ಹಲವು ವರ್ಷಗಳ ಬಳಿಕ ತಾಲ್ಲೂಕಿಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಇನ್ಫೊಸಿಸ್ ಸಂಸ್ಥೆಯ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರಿಗೆ ಭಾನುವಾರ ತಾಲ್ಲೂಕಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಮನವಿಪತ್ರ ಸಲ್ಲಿಸಲಾಯಿತು. ಪಟ್ಟಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ತಾಲ್ಲೂಕಿನ ಜನರ ಪರವಾಗಿ ಮನವಿಪತ್ರ ನೀಡಿದ ಶಾಸಕ ಎಂ.ರಾಜಣ್ಣ ಅವರು ಜನರ ಆಶಯ ಈಡೇರಿಸುವಂತೆ ಕೋರಿದರು.
ಹುಟ್ಟೂರು ಎಂಬ ಅಭಿಮಾನದೊಂದಿಗೆ ತಾಲ್ಲೂಕಿನಲ್ಲಿ ಅಂತರ್ರಾಷ್ಟ್ರೀಯ ಮಟ್ಟದ ಬೃಹತ್ ಇನ್ಫೊಸಿಸ್ ಸಭಾಂಗಣ ಇಲ್ಲವೇ ಕಲಾಭವನ ನಿರ್ಮಿಸಬೇಕು. ತಾಲ್ಲೂಕಿನ ಜನರಿಗೆ ಉದ್ಯೋಗಾವಕಾಶ ಮತ್ತು ಮಾರ್ಗದರ್ಶನ ನೀಡಬಲ್ಲ ಉನ್ನತ ಮಟ್ಟದ ಇನ್ಫೊಸಿಸ್ ಕೌಶಲಾ್ಯಾಭಿವೃದ್ಧಿ ತರಬೇತಿ ಸಂಸ್ಥೆ ಸ್ಥಾಪಿಸಬೇಕು. ಇನ್ಫೊಸಿಸ್ ಸಂಸ್ಥೆಯನ್ನು ಇಲ್ಲಿ ಸ್ಥಾಪಿಸುವ ಮೂಲಕ ಸ್ಥಳೀಯರಿಗೆ ಉದ್ಯೋಗಾವಕಾಶ ಮತ್ತು ಆದಾಯ ಗಳಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಲಾಯಿತು.
ತಾಲ್ಲೂಕು, ಪಟ್ಟಣ ಇಲ್ಲವೇ ಪಂಚಾಯಿತಿಯೊಂದನ್ನು ದತ್ತು ತೆಗೆದುಕೊಂಡು ಅಂತರ್ರಾಷ್ಟ್ರೀಯ ಮಟ್ಟಕ್ಕೆ ಅಭಿವೃದ್ಧಿಪಡಿಸಬೇಕು. ಸ್ಫರ್ಧಾತ್ಮಕ ಜಗತ್ತಿನಲ್ಲಿ ಭವಿಷ್ಯದ ಪೀಳಿಗೆ ತಕ್ಕಮಟ್ಟದ ಪೈಪೋಟಿ ನೀಡುವ ರೀತಿಯಲ್ಲಿ ತರಬೇತಿ ಮತ್ತು ಮಾರ್ಗದರ್ಶನ ನೀಡಬಲ್ಲ ಅಂತರ್ರಾಷ್ಟ್ರೀಯ ಮಟ್ಟದ ಶಾಲೆ ಆರಂಭಿಸಬೇಕು. ಇಲ್ಲಿನ ಜನರಿಗೆ ಆರೋಗ್ಯ ರಕ್ಷಣೆ ಕುರಿತು ಜಾಗೃತಿ ಮೂಡಿಸಬಲ್ಲ ಮತ್ತು ಚಿಕಿತ್ಸೆ ನೀಡಬಲ್ಲ ಅತ್ಯಾಧುನಿಕ ಮಾದರಿಯ ಆಸ್ಪತ್ರೆ ಸ್ಥಾಪಿಸಬೇಕು ಎಂದು ಅವರು ಮನವಿ ಮಾಡಿದರು.
ಮನವಿಪತ್ರ ಸ್ವೀಕರಿಸಿದ ಎನ್.ಆರ್.ನಾರಾಯಣಮೂರ್ತಿ ಮಾತನಾಡಿ, ಬಾಯಿಯಿಂದ ಹೇಳುವುದಕ್ಕಿಂತ ಅದನ್ನು ಕಾರ್ಯಗತಗೊಳಿಸುವಲ್ಲಿ ನಂಬಿಕೆ ಇಟ್ಟಿದ್ದೇನೆ. ಎಲ್ಲಾ ಮನವಿಗಳನ್ನು ಈಡೇರಿಸುತ್ತೇನೆಂದು ಈಗಲೇ ಭರವಸೆ ನೀಡುವುದಿಲ್ಲ. ಸುಳ್ಳು ಭರವಸೆ ನೀಡಲು ಇಚ್ಛಿಸುವುದಿಲ್ಲ. ನಿಮ್ಮ ಎಲ್ಲಾ ಮನವಿಗಳನ್ನು ಇನ್ಫೊಸಿಸ್ ಸಂಸ್ಥೆ ಮುಂದಿಡುತ್ತೇನೆ. ಸ್ಥಳೀಯ ಮಟ್ಟದಲ್ಲಿ ಯಾವುದೆಲ್ಲ ಸೌಕರ್ಯಗಳು ಲಭ್ಯ ಇವೆ ಎಂಬುದನ್ನು ಪರಿಶೀಲಿಸಿ ಅವರು ಕ್ರಮ ಕೈಗೊಳ್ಳುತ್ತರೆ ಎಂದರು. ಈ ಸಂದರ್ಭದಲ್ಲಿ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ನ ಗೌರವಾಧ್ಯಕ್ಷ ಡಾ. ಡಿ.ಟಿ.ಸತ್ಯನಾರಾಯಣರಾವ್, ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಕಾರ್ಯದರ್ಶಿ ವಿ.ಕೃಷ್ಣ ಉಪಸ್ಥಿತರಿದ್ದರು.

ಸಾಧಕರಿಗೆ, ವಿದ್ಯಾರ್ಥಿಗಳಿಗೆ ಆತ್ಮೀಯ ಸನ್ಮಾನ

0

ಪಟ್ಟಣ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ತಾಲ್ಲೂಕಿನಲ್ಲಿ ಜನಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಐವರು ಸಾಧಕರನ್ನು ಕೂಡ ಅಭಿನಂದಿಸಲಾಯತು. ಇನ್ಫೊಸಿಸ್ ಸಂಸ್ಥೆಯ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಮತ್ತು ಪತ್ನಿ ಸುಧಾಮೂರ್ತಿ ಸಾಧಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿದರು.
ಅಂತರ್ರಾಷ್ಟ್ರೀಯ ಸಂಬಂಧಗಳ ತಜ್ಞ ಡಾ. ಕೃಷ್ಣಮೂರ್ತಿ ವೆಂಕಟರಾಮ್, ವ್ಯಂಗ್ಯಚಿತ್ರಕಾರ ಬಿ.ವಿ.ಪಾಂಡುರಂಗರಾವ್, ವಿಜ್ಞಾನಿ ಎನ್.ಆರ್.ಸಮರ್ಥರಾಮ್, ಇಂಡಿಯಾ ಇನ್ಫೊಲೈನ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಕ್ರಮಧಾತಿ ಶ್ರೀಧರ್ ಮತ್ತು ಭಾರತೀಯ ಸೇನೆಯ ಎಲೆಕ್ಟ್ರಾನಿಕ್ ಎಂಜಿನಿಯರ್ ಕ್ಯಾಪ್ಟನ್ ಎಂ.ವಿ.ಸುನೀಲ್ ಕುಮಾರ್ ಅವರನ್ನು ಅಭಿನಂದಿಸಲಾಯಿತು. ಹಣ್ಣುಹಂಪಲು, ಸ್ಮರಣಿಕೆ ಮತ್ತು ಪ್ರಮಾಣಪತ್ರ ನೀಡಿ ಸತ್ಕರಿಸಲಾಯಿತು.
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಾದ ಎಸ್.ಆದಿತ್ಯಾ, ಎನ್.ಎಸ್.ರೇವತಿ, ಎ.ಯು.ವರ್ಷಾ, ಅಭಯ್ ಇನಾಮದಾರ್, ಚಂದನಾ, ಎನ್.ಮೇಘನಾ, ಎಂ.ಅನೂಪ್ ಕೃಷ್ಣನ್ ಮತ್ತು ಎಸ್.ಆರ್.ಲಕ್ಷ್ಮಿ. ಪಿಯುಸಿ ವಿದ್ಯಾರ್ಥಿಗಳಾದ ಕೆ.ಅನ್ನಪೂರ್ಣಾ, ಎ.ಎಸ್.ಸ್ನೇಹಾ, ಬಿ.ಕೆ.ಪ್ರಕೃತಿ, ಎಚ್.ವಿ.ಅಕ್ಷತಾ, ಸಿ.ಎಸ್.ಭಾರ್ಗವ ಕಸ್ತೂರಿ ಮತ್ತು ಎಸ್.ದೀಪ್ತಿ. ಬೆಂಗಳೂರು ವಿಶ್ವವಿದ್ಯಾಲಯದ ಗಣಿತ ಎಂ.ಎಸ್ಸಿ ವಿದ್ಯಾರ್ಥಿನಿ ಎಚ್.ಆರ್.ಶ್ವೇತಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಶಾಸಕ ಎಂ.ರಾಜಣ್ಣ, ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಡಾ. ಡಿ.ಟಿ.ಸತ್ಯನಾರಾಯಣ ರಾವ್, ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ವಿ.ಕೃಷ್ಣ, ಖಜಾಂಚಿ ಎನ್.ಶ್ರೀಕಾಂತ್, ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ಎಸ್.ಪಿ.ಕುಲಕರ್ಣಿ, ಹಿರಿಯ ವಕೀಲ ಬಿ.ಸಿ.ಸೀತಾರಾಮರಾವ್, ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯದ ಪ್ರಧಾನ ಅರ್ಚಕ ಪ್ರಸನ್ನಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಕೆ.ಗುರುರಾಜ್ರಾವ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬೆಂಗಳೂರು ಹೊರತುಪಡಿಸಿ ಬೇರೆ ಯಾವ ನಗರದಲ್ಲೂ ನಿರೀಕ್ಷಿತ ಮಟ್ಟದಲ್ಲಿ ಸೌಕರ್ಯಗಳಿಲ್ಲ

0

ಇನ್ಫೊಸಿಸ್ ಸಂಸ್ಥೆಯನ್ನು ಸ್ಥಾಪಿಸುವ ಮತ್ತು ಮಾಹಿತಿ ತಂತ್ರಜ್ಞಾನದ ವ್ಯಾಪ್ತಿಯನ್ನು ಎಲ್ಲೆಡೆ ವಿಸ್ತರಿಸುವ ಉದ್ದೇಶವಿದ್ದರೂ ಬೆಂಗಳೂರು ಹೊರತುಪಡಿಸಿ ಬೇರೆ ಯಾವ ನಗರದಲ್ಲೂ ನಿರೀಕ್ಷಿತ ಮಟ್ಟದಲ್ಲಿ ಸೌಕರ್ಯಗಳಿಲ್ಲ ಎಂದು ಇನ್ಫೊಸಿಸ್ ಸಂಸ್ಥೆ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಭಾನುವಾರ ನಡೆದ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಮೈಸೂರು ಮತ್ತು ಮಂಗಳೂರಿನಲ್ಲಿ ಇನ್ಫೊಸಿಸ್ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು ಹುಬ್ಬಳ್ಳಿಯಲ್ಲೂ ಕೂಡ ಆರಂಭವಾಗಲಿದೆ. ಆದರೆ ಬೆಂಗಳೂರು ಹೊರತುಪಡಿಸಿ ಅಲ್ಲಿ ಎಲ್ಲಿಯೂ ನಿರೀಕ್ಷಿತ ಮಟ್ಟದ ಸೌಕರ್ಯಗಳಿಲ್ಲ. ಸಂಸ್ಥೆಯ ಕಾರ್ಯನಿರ್ವಹಣೆ ಮತ್ತು ಉದ್ಯೋಗಿಗಳ ಇರುವಿಕೆಗೆ ಪೂರಕವಾದ ವಾತಾವರಣವಿಲ್ಲ ಎಂದರು.
ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ, ಪಂಚತಾರಾ ಹೋಟೆಲ್ ಮತ್ತು ಇನ್ನಿತರ ಅತ್ಯಾಧುನಿಕ ಸೌಕರ್ಯಗಳು ಇರದಿದ್ದರೆ ಇನ್ಫೊಸಿಸ್ನಂತಹ ಸಂಸ್ಥೆಯ ಕಾರ್ಯ ನಿರ್ವಹಣೆ ಕಷ್ಟವಾಗುತ್ತದೆ. ತಿರುವನಂತಪುರಂ, ಭುವನೇಶ್ವರದಲ್ಲೂ ಇಂತಹದ್ದೇ ಸಮಸ್ಯೆಗಳಿವೆ. ವಿದೇಶದಿಂದ ಬಂದು ಹೋಗುವ ಜನರಿಗೆ ಇಲ್ಲಿ ತಂಗಲು ಅಚ್ಚುಕಟ್ಟಾದ ವ್ಯವಸ್ಥೆಯಿರಬೇಕು ಮತ್ತು ಇತರೆ ಸೌಕರ್ಯಗಳು ದೊರೆಯುವಂತಿರಬೇಕು ಎಂದು ಅವರು ತಿಳಿಸಿದರು.

ಔಷಧಿ ವ್ಯಾಪಾರಿಗಳ ಸಂಘದಿಂದ ವೈದ್ಯ ಡಾ.ಡಿ.ಟಿ.ಸತ್ಯನಾರಾಯಣರಾವ್ ರಿಗೆ ಬೀಳ್ಕೊಡುಗೆ ಗೌರವ

0

ಶಿಡ್ಲಘಟ್ಟದ ಔಷಧಿ ವ್ಯಾಪಾರಿಗಳ ಸಂಘದ ವತಿಯಿಂದ ಅಮೆರಿಕಾಗೆ ಹೊರಟಿರುವ ವೈದ್ಯ ಡಾ.ಡಿ.ಟಿ.ಸತ್ಯನಾರಾಯಣರಾವ್ ಅವರಿಗೆ ಶನಿವಾರ ಬೀಳ್ಕೊಡುಗೆಯನ್ನು ಏರ್ಪಡಿಸಿ ಗೌರವಿಸಿದರು. ಸಂಘದ ಅಧ್ಯಕ್ಷ ವಿ.ಎಸ್.ವಿ.ಗುಪ್ತ, ಕಾರ್ಯದರ್ಶಿ ರಮೇಶ್ ಬಾಬು, ಖಜಾಂಚಿ ಮಂಜುನಾಥ್, ಸಿ.ಆರ್.ಜಗದೀಶ್, ಸತೀಶ್ಕುಮಾರ್, ಶಂಕರನಾರಾಯಣ್, ಚಂದ್ರಶೇಖರ್ ಹಾಜರಿದ್ದರು.

ಶಿಡ್ಲಘಟ್ಟದ ಔಷಧಿ ವ್ಯಾಪಾರಿಗಳ ಸಂಘದ ವತಿಯಿಂದ ಅಮೆರಿಕಾಗೆ ಹೊರಟಿರುವ ವೈದ್ಯ ಡಾ.ಡಿ.ಟಿ.ಸತ್ಯನಾರಾಯಣರಾವ್ ಅವರಿಗೆ ಶನಿವಾರ ಬೀಳ್ಕೊಡುಗೆಯನ್ನು ಏರ್ಪಡಿಸಿ ಗೌರವಿಸಿದರು.
ಶಿಡ್ಲಘಟ್ಟದ ಔಷಧಿ ವ್ಯಾಪಾರಿಗಳ ಸಂಘದ ವತಿಯಿಂದ ಅಮೆರಿಕಾಗೆ ಹೊರಟಿರುವ ವೈದ್ಯ ಡಾ.ಡಿ.ಟಿ.ಸತ್ಯನಾರಾಯಣರಾವ್ ಅವರಿಗೆ ಶನಿವಾರ ಬೀಳ್ಕೊಡುಗೆಯನ್ನು ಏರ್ಪಡಿಸಿ ಗೌರವಿಸಿದರು.

ಶಿಕ್ಷಕ ವೃತ್ತಿಯನ್ನು ಆರಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಪ್ರೇರಕ

0

ಉತ್ತಮ ಶಿಕ್ಷಕರನ್ನು ಗುರುತಿಸಿ ಗೌರವಿಸುವುದರಿಂದ ಶಿಕ್ಷಕರಿಗೆ ಪ್ರೋತ್ಸಾಹ ಮತ್ತು ಶಿಕ್ಷಕ ವೃತ್ತಿಯನ್ನು ಆರಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಪ್ರೇರಕವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ತಿಳಿಸಿದರು.
ಪಟ್ಟಣದ ನಗರೇಶ್ವರಸ್ವಾಮಿ ಕಲ್ಯಾಣ ಮಂಟಪದಲ್ಲಿ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶನಿವಾರ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಸನ್ಮಾನ ಮತ್ತು ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ಕನ್ನಡ ನಾಡಗೀತೆಗಳ ಗಾಯನ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಪಾಠ ಪ್ರವಚನ ಮಾಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಅವಶ್ಯಕವಾಗಿರುವ ಎಲ್ಲಾ ಸಲಹೆ, ಸೂಚನೆ ನೀಡುತ್ತಾ ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದಾಗ ವಿದ್ಯಾರ್ಥಿಗಳ ವಿದ್ಯಾರ್ಥಿ ಜೀವನ ಉಜ್ವಲವಾಗುತ್ತದೆ. ಈ ದಿಸೆಯಲ್ಲಿ ಸರಕಾರ ಉತ್ತಮ ಶಿಕ್ಷಕರನ್ನು ಗುರುತಿಸಿ ಅವರನ್ನು ಗೌರವಿಸುವ ಕೆಲಸ ಮಾಡುತ್ತಿರುವುದರಿಂದ ಶಿಕ್ಷಕರಿಗೆ ಇನ್ನಷ್ಟು ಪ್ರೇರೆಪಣೆ ದೊರೆಯುತ್ತಿದೆ ಎಂದು ಹೇಳಿದರು.
ತಹಶಿಲ್ದಾರ್ ಜಿ.ಎ.ನಾರಾಯಣಸ್ವಾಮಿ ಮಾತನಾಡಿ, ಈಗ ತುರ್ತಾಗಿ ಆಗಬೇಕಿರುವುದು ಕನ್ನಡ ಭಾಷೆಯನ್ನು ರಕ್ಷಿಸುವ ಕೆಲಸ. ನಮ್ಮ ಮಕ್ಕಳನ್ನು ಸಲಹಿದಂತೆ ಕನ್ನಡವನ್ನು ಸಲಹುವ ಜವಾಬ್ದಾರಿ ನಮ್ಮ ಮೇಲೆ ಇದೆ. ನಿಜವಾದ ಅರ್ಥದಲ್ಲಿ ಕನ್ನಡ ಭಾಷೆಯನ್ನು ಮುಂದಿನ ಪೀಳಿಗೆಗೆ ಪರಿಣಾಮಕಾರಿಯಾಗಿ ತಲುಪಿಸಲು ಸಾಧ್ಯವಾಗುವುದು ವಿದ್ಯಾರ್ಥಿಯ ಶಿಕ್ಷಣ ಹಂತದಲ್ಲಿ. ಕನ್ನಡವನ್ನು ಉಳಿಸಿ, ಬೆಳೆಸುವ ಭಾವನೆಗಳನ್ನು ಪರಿಣಾಮಕಾರಿಯಾಗಿ ತುಂಬುವುದು ಶಾಲಾ ಕಾಲೇಜುಗಳಲ್ಲಿ ಹೆಚ್ಚು ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕಿ ಮಧುರಾ ಅವರನ್ನು ಸನ್ಮಾನಿಸಲಾಯಿತು. ಕನ್ನಡ ನಾಡಗೀತೆಗಳ ಗಾಯನ ಸ್ಪರ್ಧೆಯಲ್ಲಿ ನಾಡಗೀತೆಗಳನ್ನು ಸ್ಪರ್ಧಿಗಳು ಹಾಡಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಕೃ.ನಾ.ಶ್ರೀನಿವಾಸಮೂರ್ತಿ, ಎಸ್.ವಿ.ನಾಗರಾಜರಾವ್, ಮುತ್ತೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಆಂಜಿನಪ್ಪ, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರತಿಭಾ ಕಾರಂಜಿಯ ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

0

ಶಿಡ್ಲಘಟ್ಟದ ವಾಸವಿ ವಿದ್ಯಾಸಂಸ್ಥೆಯ ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಎಸ್.ಎನ್.ರಚನಾ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ವತಿಯಿಂದ ಬೃಹತ್ ಪಾದಯಾತ್ರೆ

0

ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಮುಖದ ನಾಣ್ಯ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಅಂಚೆ ಚೀಟಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ತಾಲ್ಲೂಕಿನ ಮೇಲೂರು ಶಾಖೆಯ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ವತಿಯಿಂದ ಶನಿವಾರ ಮೇಲೂರಿನಿಂದ ಶಿಡ್ಲಘಟ್ಟದವರೆಗೂ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.
ವೀರಗಾಸೆ ಮತ್ತು ಡೋಲಿನ ವಾದನಗಳ ಸಮೇತವಾಗಿ ಪಾದಯಾತ್ರೆಯನ್ನು ಮೇಲೂರಿನಿಂದ ನಡೆಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲೂ ಸಂಚರಿಸಿ ಘೋಷಣೆಗಳನ್ನು ಕೂಗುತ್ತಾ ತಾಲ್ಲೂಕು ಕಚೇರಿಯ ಮುಂದೆ ಜನಶಕ್ತಿ ವೇದಿಕೆ ಸದಸ್ಯರು ಸೇರಿದರು.
ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರು ನಾಡಿಗೆ ನೀಡಿದ ಕೊಡುಗೆ ಅಪಾರವಾದದ್ದು. ಅಂಥ ಮೇರು ವ್ಯಕ್ತಿತ್ವವನ್ನು ನಾಣ್ಯದ ಒಂದು ಮುಖವಾಗಿ ಚಿತ್ರಿಸಿ ಅವರನ್ನು ಗೌರವಿಸಬೇಕು. ಮೊಟ್ಟಮೊದಲ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ರಾಷ್ಟ್ರಕವಿ ಕುವೆಂಪು ಅವರ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿ ಅವರನ್ನು ಗೌರವಿಸಬೇಕು ಎಂದು ಒತ್ತಾಯಿಸಿ ತಹಶಿಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರಿಗೆ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮನವಿಯನ್ನು ಸ್ವೀಕರಿಸಿ ಮಾತನಾಡಿದ ತಹಶಿಲ್ದಾರ್ ಜಿ.ಎ.ನಾರಾಯಣಸ್ವಾಮಿ, ನಾಡಿಗೆ ಕೊಡುಗೆಯನ್ನು ನೀಡಿರುವ ಮಹಾನ್ ವ್ಯಕ್ತಿಗಳನ್ನು ಗೌರವಿಸುವುದು ಎಲ್ಲರ ಕರ್ತವ್ಯ. ಈ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸುವುದಾಗಿ ಹೇಳಿದರು.
ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘದ ಅಧ್ಯಕ್ಷ ಎಂ.ಆರ್.ಪ್ರಭಾಕರ್, ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ ಸಂಚಾಲಕ ಎಂ.ಸಿ.ಚೇತನ್, ಜಂಟಿ ಕಾರ್ಯದರ್ಶಿ ಆರ್.ಬಿ.ಪ್ರತಾಪ್, ಅನಿಲ್ಕುಮಾರ್, ರಾಘವೇಂದ್ರ, ಗಿರೀಶ್ನಾಯಕ್, ಧರ್ಮೇಂದ್ರ, ಕಿರಣ್, ಮಂಜುನಾಥ್, ಭಾರ್ಗವ್, ಆಟೋ ಮಂಜುನಾಥ್, ಚಂದ್ರು ಮತ್ತಿತರರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ಎಚ್.ಕ್ರಾಸ್ ನ ಸೀತಾರಾಮಾಂಜಿನೇಯಸ್ವಾಮಿ ಬ್ರಹ್ಮರಥೋತ್ಸವ

0

ತಾಲ್ಲೂಕಿನ ಎಚ್.ಕ್ರಾಸ್ ನಲ್ಲಿರುವ ಸೀತಾರಾಮಾಂಜಿನೇಯಸ್ವಾಮಿ ಬ್ರಹ್ಮರಥೋತ್ಸವಕ್ಕೆ ಶನಿವಾರ ಸಂಸದ ಕೆ.ಹೆಚ್.ಮುನಿಯಪ್ಪ ಚಾಲನೆ ನೀಡಿದರು.
ತಾಲ್ಲೂಕಿನ ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರಾಣ ಪ್ರಸಿಧ್ದ ಸೀತಾರಾಮಾಂಜಿನೇಯ ದೇವಾಲಯದಲ್ಲಿ ಪ್ರತಿವರ್ಷದಂತೆ ಬ್ರಹ್ಮರಥೋತ್ಸವ ಕಾರ್ಯಕ್ರಮವನ್ನು ಭಾರಿ ವಿಜೃಂಭಣೆಯಿಂದ ನೆರವೇರಿಸಲಾಯಿತು, ಬೆಳಗಿನಿಂದಲೇ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.
ರಥೋತ್ಸವ ಅಂಗವಾಗಿ ದೇವರಿಗೆ ಧ್ವಜಾರೋಹಣ, ಅಲಂಕಾರ ಸೇವೆ, ಪ್ರಾಕಾರೋತ್ಸವ, ವಾಸುದೇವ ಪುಣ್ಯಾಹ ಅಂಕುರಾರ್ಪಣೆ, ರಕ್ಷಾಬಂಧನ, ಹನುಮಂತೋತ್ಸವ, ಮಹಾಭಿಷೇಕ, ಪಲ್ಲಕ್ಕಿ ಉತ್ಸವ, ವಿದ್ಯುತ್ ದೀಪಾಲಂಕಾರ, ಶಯನೋತ್ಸವ, ದೇವರ ಪೂಜೆ, ಚಂದ್ರಪ್ರಭಾ, ಗರುಡೋತ್ಸವ, ಸೇರಿದಂತೆ ಹಲವು ಪೂಜಾ ವಿಧಾನಗಳನ್ನು ನೆರವೇರಿಸಲಾಯಿತು.
ಸಂಸದ ಕೆ.ಎಚ್.ಮುನಿಯಪ್ಪ, ಶಾಸಕ ಎಂ.ರಾಜಣ್ಣ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಕೋಚಿಮುಲ್ ನಿರ್ದೇಶಕ ಬಂಕ್ಮುನಿಯಪ್ಪ, ಸಹಕಾರಿ ಯೂನಿಯನ್ ನಿರ್ದೇಶಕ ತಾದೂರು ರಮೇಶ್, ಮುಖಂಡರಾದ ಅಯ್ಯಪ್ಪ, ಹಾಗೂ ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳು ಹಾಜರಿದ್ದರು.

ಶಿಡ್ಲಘಟ್ಟದ ಸಾಧಕರಿಗೆ ಹುಟ್ಟೂರಲ್ಲಿ ಸನ್ಮಾನ

0

ಸಾಧಕರು ಎಲ್ಲೇ ಇದ್ದು ಸಾಧನೆ ಮಾಡಿದರೂ ಅವರ ಹುಟ್ಟೂರು ಸಂಭ್ರಮಿಸುತ್ತದೆ. ಹುಟ್ಟೂರಿನೊಂದಿಗೆ ತಳುಕು ಹಾಕಿಕೊಂಡ ಅವರ ಹೆಸರಿನಿಂದ ‘ನಮ್ಮ ಊರಿನವರು ಈ ಸಾಧನೆ ಮಾಡಿದ್ದಾರೆ’ ಎಂದು ಊರಿನವರು ಹೆಮ್ಮೆ ಪಡುತ್ತಾರೆ. ಈ ರೀತಿ ಊರಿನ ನಂಟನ್ನು ಹೆಸರಲ್ಲಿ ಇಟ್ಟುಕೊಂಡು ದೂರದೂರುಗಳಲ್ಲಿದ್ದುಕೊಂಡೇ ಸಾಧನೆ ಮಾಡಿರುವವರನ್ನು ಹುಟ್ಟೂರಿಗೆ ಕರೆಸಿ ಗೌರವಿಸುವ ಕೆಲಸ ಅಲ್ಲಲ್ಲಿ ನಡೆಯುತ್ತದೆ.
ಶಿಡ್ಲಘಟ್ಟದಲ್ಲಿಯೂ ಈ ರೀತಿಯ ರಾಷ್ಟ್ರಮಟ್ಟದಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಹುಟ್ಟಿದ ಊರಿನ ಘನತೆ ಗೌರವವನ್ನು ಹೆಚ್ಚಿಸಿರುವವರನ್ನು ಕರೆಸಿ ಇಂದು ಗೌರವಿಸಲಾಗುತ್ತಿದೆ. ಈ ಸಾಧಕರನ್ನು ಗೌರವಿಸುತ್ತಿರುವವರು ಶಿಡ್ಲಘಟ್ಟದಲ್ಲಿ ಹುಟ್ಟಿದ್ದ ಮತ್ತೊಬ್ಬ ಸಾಧಕ ಇನ್ಫೋಸಿಸ್ ಪ್ರವರ್ತಕ ಡಾ.ಎನ್.ಆರ್.ನಾರಾಯಣಮೂರ್ತಿ ಎಂಬುದು ಮತ್ತೊಂದು ವಿಶೇಷ.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಜನಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ.ಕೃಷ್ಣಮೂರ್ತಿ ವೆಂಕಟರಾಮ್, ಬಿ.ವಿ.ಪಾಂಡುರಂಗರಾವ್, ಎನ್.ಆರ್.ಸಮರ್ಥರಾಮ್, ಕ್ರಮಧಾತಿ ಶ್ರೀಧರ್, ಕ್ಯಾಪ್ಟನ್ ಸುನಿಲ್ ಕುಮಾರ್ ಅವರನ್ನು ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಇಂದು ಆಯೋಜಿಸಿರುವ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ಗೌರವಿಸುತ್ತಿದ್ದಾರೆ.
ಡಾ.ಕೃಷ್ಣಮೂರ್ತಿ ವೆಂಕಟರಾಮ್:

ಡಾ.ಕೃಷ್ಣಮೂರ್ತಿ ವೆಂಕಟರಾಮ್
ಡಾ.ಕೃಷ್ಣಮೂರ್ತಿ ವೆಂಕಟರಾಮ್

ಶಿಡ್ಲಘಟ್ಟದ ಬ್ಯಾಂಕ್ ಕೃಷ್ಣಮೂರ್ತಿ ಹಾಗೂ ಮೀನಾಕ್ಷಮ್ಮರವರ ಮಗ 80 ವರ್ಷ ವಯಸ್ಸಿನ ಡಾ.ಕೃಷ್ಣಮೂರ್ತಿ ವೆಂಕಟರಾಮ್ ಎಸ್. ಎಸ್. ಎಲ್. ಸಿ ವರೆಗೂ ಓದಿದ್ದು ಶಿಡ್ಲಘಟ್ಟದಲ್ಲಿಯೇ. ಕೆನಡಾ ದೇಶದಲ್ಲಿ ಉನ್ನತ ವ್ಯಾಸಂಗ ಮಾಡಿ ಅಂತಾರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಪರಿಣಿತಿ ಎಂಬ ಪ್ರಬಂಧಕ್ಕೆ – ಡಾಲ್ಹೌಸಿ ವಿಶ್ವವಿದ್ಯಾಲಯದಿಂದ ಪಿ. ಹೆಚ್. ಡಿ. ಪದವಿ ಪಡೆದಿದ್ದಾರೆ. ಇಥಿಯೋಪಿಯ ಹಾಗೂ ಬ್ರಿಟಿಷ್ ದೇಶಗಳ ಸಂಬಂಧ ಹಾಗೂ ವಿದೇಶಾಂಗ ನೀತಿಗಳ ಸಂಶೋಧನೆ ನಡೆಸಲು ಇಥಿಯೋಪಿಯಾ, ಫ್ರಾನ್ಸ್, ಇಂಗ್ಲೆಂಡ್ ಹಾಗೂ ಇಟಲಿ ದೇಶಗಳ ವಿದೇಶಾಂಗ ಕಚೇರಿಗಳಲ್ಲಿ ಅಧ್ಯಯನ ಮಾಡಿದ್ದಲ್ಲದೆ, ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಸುಮಾರು ೩೦ ವರ್ಷಗಳ ಕಾಲ ಇಥಿಯೋಪಿಯ, ಉಗಾಂಡ ಹಾಗೂ ಕೆನಡಾ ದೇಶಗಳ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡಿದ್ದಾರೆ. ಇಥಿಯೋಪಿಯ ಹಾಗೂ ಬ್ರಿಟಿಷ್ ದೇಶಗಳ ಸಂಬಂಧ ಕುರಿತು, ಜಗದ್ಗುರು ಚಂದ್ರಶೇಖರ ಸ್ವಾಮೀಜಿ ಬಗ್ಗೆ ಮತ್ತು ಪರಿವರ್ತನೆ ಎಂಬ ಪುಸ್ತಕಗಳನ್ನು ಬರೆದಿದ್ದಾರೆ.
ಬಿ.ವಿ.ಪಾಂಡುರಂಗರಾವ್:
ಬಿ.ವಿ.ಪಾಂಡುರಂಗರಾವ್
ಬಿ.ವಿ.ಪಾಂಡುರಂಗರಾವ್

ಶಿಡ್ಲಘಟ್ಟದ ಹಳೆಯ ಆಸ್ಪತ್ರೆ ಕ್ವಾಟರ್ಸ್ನಲ್ಲಿ ಬಾಲ್ಯವನ್ನು ಕಳೆದಿದ್ದ 70 ವರ್ಷ ವಯಸ್ಸಿನ ಬಿ.ವಿ.ಪಾಂಡುರಂಗರಾವ್, ಶಿಡ್ಲಘಟ್ಟದಲ್ಲಿ ವೈದ್ಯರಾಗಿದ್ದ ಡಾ.ಬಿ.ವೆಂಕಟರಾವ್ ಮತ್ತು ಇಂದಿರಾಬಾಯಿ ಅವರ ಮಗ. ಇವರು ಫ್ಲಿಪ್ ಬುಕ್ ಅನಿಮೇಷನ್ನಲ್ಲಿ 6 ಬಾರಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ 6 ಬಾರಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲೆ ಮಾಡಿದ್ದಾರೆ. ವಿಶ್ವದ ವಿವಿಧ ದೇಶಗಳು ನಡೆಸಿರುವ ವ್ಯಂಗ್ಯ ಚಿತ್ರ ಸ್ಪರ್ಧೆ ಮತ್ತು ಪ್ರದರ್ಶನಗಳಲ್ಲಿ ಇವರ ಚಿತ್ರಗಳು 53 ಬಾರಿ ಪ್ರಶಸ್ತಿಗೆ ಭಾಜನವಾಗಿವೆ. ದೇಶದ ಹಲವೆಡೆ ಏಕ ವ್ಯಕ್ತಿ ವ್ಯಂಗ್ಯ ಚಿತ್ರ ಪ್ರದರ್ಶನಗಳು ನಡೆದಿವೆ. 2011 ರಲ್ಲಿ ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಅವರಿಂದ ಜೀವಮಾನ ಸಾಧನೆ ಪ್ರಶಸ್ತಿ ಲಭಿಸಿದೆ. ಕರ್ನಾಟಕ ವ್ಯಂಗ್ಯ ಚಿತ್ರಕಾರರ ಸಂಘದ ಅಧ್ಯಕ್ಷರಾಗಿ, ರಾಜ್ಯ ಕ್ರಿಕೆಟ್ ಅಂಪೈರ್ ಆಗಿ ಮಧ್ಯಪ್ರದೇಶ ವಿಭಾಗ ಮತ್ತು ಅಖಿಲ ಭಾರತ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಎನ್.ಆರ್.ಸಮರ್ಥರಾಮ್:
ಎನ್.ಆರ್.ಸಮರ್ಥರಾಮ್
ಎನ್.ಆರ್.ಸಮರ್ಥರಾಮ್

ಶಿಡ್ಲಘಟ್ಟ ತಾಲ್ಲೂಕಿನ ನಾರಾಯಣದಾಸರಹಳ್ಳಿ ಗ್ರಾಮದ ರಾಮಣ್ಣ ಮತ್ತು ಸೀತಮ್ಮ ದಂಪತಿಗಳ ಮಗ 50 ವರ್ಷ ವಯಸ್ಸಿನ ಎನ್.ಆರ್.ಸಮರ್ಥರಾಮ್ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಭಾರತ ಸರ್ಕಾರದಲ್ಲಿ ಹಿರಿಯ ವಿಜ್ಞಾನಿಯಾಗಿ ರಾಜ್ಯ ಸರ್ಕಾರದ ಜನಸ್ನೇಹಿ ಯೋಜನೆಗಳಾದ ಭೂಮಿ, ನೆಮ್ಮದಿ, ಇ–ಸ್ವತ್ತು ಹಾಗೂ ಇ–ವಿನ್ಯಾಸಗಳನ್ನು ರೂಪಿಸಿ 2011 ರಲ್ಲಿ ಕೇಂದ್ರ ಸರ್ಕಾರದ ‘ಗೋಲ್ಡ್ ಐಕಾನ್’ ಪ್ರಶಸ್ತಿ ಪುರಸ್ಕೃತರು.
ಕ್ರಮಧಾತಿ ಶ್ರೀಧರ್:
ಕ್ರಮಧಾತಿ ಶ್ರೀಧರ್
ಕ್ರಮಧಾತಿ ಶ್ರೀಧರ್

ಶಿಡ್ಲಘಟ್ಟ ತಾಲ್ಲೂಕಿನ ದಡಂಘಟ್ಟ ಗ್ರಾಮದ ಕೃಷ್ಣಮೂರ್ತಿ ಮತ್ತು ಲೀಲಾವತಮ್ಮ ಅವರ ಮಗ 41 ವರ್ಷ ವಯಸ್ಸಿನ ಕ್ರಮಧಾತಿ ಶ್ರೀಧರ್ ಕಳಿಂಗ ವಿಶ್ವವಿದ್ಯಾನಿಲಯದಲ್ಲಿ ಆಡಳಿತ ವ್ಯವಹಾರಗಳ ಮೇಲೆ ಎಂ.ಬಿ.ಎ ಪದವಿ ಪಡೆದಿದ್ದಾರೆ. ಹಾಕಿನ್ ಕುಕ್ಕರ್ಸ್ ಲಿಮಿಟೆಡ್, ಗ್ರಿಂದ್ಲೇ ಬ್ಯಾಂಕ್ ಮತ್ತು ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಲ್ಲಿ ಕಾರ್ಯನಿರ್ವಹಿಸಿ ಈಗ ಇಂಡಿಯಾ ಇನ್ಫೋಲೈನ್ ಲಿಮಿಟೆಡ್ ನಲ್ಲಿ ದಕ್ಷಿಣ ವಲಯ ಹಿರಿಯ ಉಪಾಧ್ಯಕ್ಷರಾಗಿದ್ದಾರೆ.
ಕ್ಯಾಪ್ಟನ್ ಸುನಿಲ್ ಕುಮಾರ್:
ಕ್ಯಾಪ್ಟನ್ ಸುನಿಲ್ ಕುಮಾರ್
ಕ್ಯಾಪ್ಟನ್ ಸುನಿಲ್ ಕುಮಾರ್

ಶಿಡ್ಲಘಟ್ಟ ತಾಲ್ಲೂಕಿನ ಮುತ್ತೂರು ಗ್ರಾಮದ ಎಂ.ಎಸ್.ವೆಂಕಟೇಶಮೂರ್ತಿ ಮತ್ತು ವಿಜಯಲಕ್ಷ್ಮಿ ಅವರ ಮಗ 28 ವರ್ಷದ ಕ್ಯಾಪ್ಟನ್ ಸುನಿಲ್ ಕುಮಾರ್, ಓದಿದ್ದು ಮಳ್ಳೂರಿನ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ. ಭಾರತೀಯ ಸೇನೆಯಲ್ಲಿ ಎಲೆಕ್ಟ್ರಿಕ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಪಂಚದ ಅತ್ಯಂತ ದುರ್ಗಮ ಕದನ ಪ್ರದೇಶ ಸಿಯಾಚಿನ್ನಲ್ಲಿ ಕಾರ್ಯನಿರ್ವಹಿಸಿರುವ ಇವರು ಕಾಶ್ಮೀರದಲ್ಲಿ ಭಯೋತ್ಪಾದಕರ ನಿಗ್ರಹ ದಳದಲ್ಲೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಇವರ ಕಾರ್ಯಕ್ಷೇತ್ರ ಜಾರ್ಖಂಡ್ನ ರಾಂಚಿಯಾಗಿದ್ದು, ಸಂಗೀತ, ಈಜು, ಟೇಬಲ್ ಟೆನ್ನಿಸ್ ಮುಂತಾದ ಹವ್ಯಾಸಗಳನ್ನು ಹೊಂದಿದ್ದಾರೆ.
–ಡಿ.ಜಿ.ಮಲ್ಲಿಕಾರ್ಜುನ.
error: Content is protected !!