17.1 C
Sidlaghatta
Sunday, December 28, 2025
Home Blog Page 1010

ಎಂ.ಶಶಿಧರ್ ಗೆ ರಾಜೀವ್ ಗಾಂಧಿ ಗೋಲ್ಡ್ ಸ್ಟಾರ್ ಪುರಸ್ಕಾರ

0

ಶ್ರೀ ವೆಂಕಟೇಶ್ವರ ಎಂಜಿನಿಯರಿಂಗ್ ಕಾಲೇಜಿನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಎಂ.ಶಶಿಧರ್ ಅವರ ಶಿಕ್ಷಣ ಕ್ಷೇತ್ರದ ಕೊಡುಗೆಯನ್ನು ಗುರುತಿಸಿ ಇಂಡಿಯನ್ ಸಾಲಿಡಿಟರಿ ಕೌನ್ಸಿಲ್ ಈಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಗೋಲ್ಡ್ ಸ್ಟಾರ್ ಪುರಸ್ಕಾರವನ್ನು ಪ್ರಧಾನ ಮಾಡಿದ್ದಾರೆ. ಅಸ್ಸಾಂ ಮತ್ತು ತಮಿಳುನಾಡು ಮಾಜಿ ರಾಜ್ಯಪಾಲರಾದ ಡಾ.ಬಿಷಮ್ ನಾರಾಯಣ ಸಿಂಗ್, ಮಾಜಿ ಮುಖ್ಯ ಚುನಾವಣಾ ಆಯುಕ್ತರಾದ ಡಾ.ಜಿ.ವಿ.ಜಿ.ಕೃಷ್ಣಮೂರ್ತಿ, ಪಂಜಾಬ್ ಮಾಜಿ ರಾಜ್ಯಪಾಲರಾದ ಜಸ್ಟಿಸ್ ಓ.ಪಿ.ವರ್ಮ ಹಾಜರಿದ್ದರು.

ಕಾನೂನು ಅರಿವು-ನೆರವು ಕಾರ್ಯಕ್ರಮ

0

ಈ ಭೂಮಿಯ ಮೇಲೆ ಮನುಷ್ಯ ಬದುಕಲು ಅನ್ನ, ನೀರು, ಗಾಳಿ ಎಷ್ಟು ಮುಖ್ಯವೋ ಕಾನೂನಿನ ತಿಳುವಳಿಕೆ ಹಾಗೂ ಪಾಲನೆಯೂ ಅಷ್ಟೇ ಮುಖ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಸ್.ಶೀಲಾ ತಿಳಿಸಿದರು.
ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆಯ ಆಶ್ರಯದಲ್ಲಿ ಬಶೆಟ್ಟಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಈಚೆಗೆ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಎಲ್ಲರೂ ಕಾನೂನು ಅರಿತು ತಮ್ಮ ಇತಿಮಿತಿಯಲ್ಲಿ ನಡೆದುಕೊಂಡರೆ ಸುಖ, ಶಾಂತಿ, ನೆಮ್ಮದಿಯ ಬದುಕು ನಡೆಸಬಹುದು. ಆದ್ದರಿಂದಲೆ ಎಲ್ಲ ಶಾಲೆ, ಕಾಲೇಜಿನ ವಿದ್ಯಾರ್ಥಿಗಳು, ಗೃಹಣಿಯರು, ವ್ಯಾಪಾರಸ್ಥರು, ಉದ್ಯೋಗಿಗಳುಮ ನೌಕರರು ಸೇರಿ ಎಲ್ಲ ವರ್ಗದವರಿಗೂ ಕಾನೂನಿನ ಅರಿವು ಮೂಡಿಸುವ ಕೆಲಸ ಕಾನೂನು ಸೇವಾ ಸಮಿತಿಯಿಂದ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿಜಯ ದೇವರಾಜ ಅರಸ್ ಮಾತನಾಡಿ, ನಮ್ಮ ಸಂವಿಧಾನದಲ್ಲಿ ಅಳವಡಿಸಿರುವ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ಇನ್ನೂ ಸಾಕಷ್ಟು ಮಂದಿಗೆ ತಿಳಿದಿಲ್ಲ. ಇದರಿಂದ ಜನ ಸಾಮಾನ್ಯರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಅಭಿಪ್ರಾಯಪಟ್ಟರು.
ಕಡ್ಡಾಯ ಶಿಕ್ಷಣದ ಹಕ್ಕು ಕುರಿತು ವಕೀಲರಾದ ಬಾಸ್ಕರ್ ಉಪನ್ಯಾಸ ನೀಡಿದರೆ, ಮಕ್ಕಳು ಮತ್ತು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಯ ಪೊಸ್ಕೋ ಕಾಯಿದೆ ಕುರಿತು ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಎಸ್ಐ ರಾಘವೇಂದ್ರ ಸವಿವರವಾಗಿ ವಿವರಿಸಿದರು.
ಬಶೆಟ್ಟಹಳ್ಳಿ ಸರ್ಕಾರಿ ಪ್ರೌಢಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಲಕ್ಷ್ಮಿ, ಸಿವಿಲ್ ನ್ಯಾಯಾಧೀಶರಾದ ಎನ್.ಎ.ಶ್ರೀಕಂಠ, ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಲ್.ಶ್ರೀನಿವಾಸಮೂರ್ತಿ, ಎಸ್ಐ ಪುರುಷೋತ್ತಮ್, ಸರ್ಕಾರಿ ವಕೀಲರಾದ ಈ.ಡಿ.ಶ್ರೀನಿವಾಸ್, ಎಸ್.ಕುಮುದಿನಿ, ವಕೀಲರಾದ ಟಿ.ವಿ.ಚಂದ್ರಶೇಖರ್, ಲೊಕೇಶ್, ಕೆ.ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಗಂಗಮ್ಮ ದೇವಿಗೆ ಲಕ್ಷ್ಮೀ ಅಲಂಕಾರ

0

ಪಟ್ಟಣದ ಕಾಮಾಟಿಗರ ಪೇಟೆಯ ಊರ ದೇವತೆ ಗಂಗಮ್ಮ ದೇವಾಲಯದಲ್ಲಿ ಕಾರ್ತೀಕ ಮಾಸದ ಕಡೆಯ ಶುಕ್ರವಾರದಂದು ನೋಟುಗಳನ್ನು ಬಳಸಿ ಲಕ್ಷ್ಮೀ ಅಲಂಕಾರವನ್ನು ಮಾಡಲಾಗಿತ್ತು.
ಭಕ್ತರು ನೀಡಿರುವ ಒಂದು ಲಕ್ಷಕ್ಕೂ ಹೆಚ್ಚು ಹಣದ ನೋಟುಗಳಿಂದ ದೇವಿಯನ್ನು ವಿಶೇಷವಾಗಿ ಅಲಂಕರಿಸಿದ್ದು, ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಪೂಜೆಯಲ್ಲಿ ಪಾಲ್ಗೊಳ್ಳಲು ನೂರಾರು ಮಂದಿ ಆಗಮಿಸಿದ್ದರು.
‘ಪ್ರತಿ ಮಂಗಳವಾರ ಮತ್ತು ಶುಕ್ರವಾರ ಗಂಗಮ್ಮನ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಊರ ದೇವತೆಯಾದ ಗಂಗಮ್ಮನ ಭಕ್ತರು ಅಪಾರ. ಕಾರ್ತೀಕ ಮಾಸದ ಕಡೆಯ ಶುಕ್ರವಾರ ದೀಪೋತ್ಸವ, ಲಕ್ಷ್ಮೀ ಅಲಂಕಾರ ವಿಶೇಷವಾಗಿದೆ’ ಎಂದು ಜಿಲ್ಲಾ ಪಂಚಾಯತಿ ಸದಸ್ಯೆ ಶಿವಲೀಲಾ ರಾಜಣ್ಣ ತಿಳಿಸಿದರು.
ಕೆ.ಜಯರಾಮ್, ವೆಂಕಟಾದ್ರಿ, ಅಪ್ಪಿ, ಕೃಷ್ಣಮೂರ್ತಿ, ಛಲಪತಿ, ಮುರಳಿ, ಅರ್ಚಕ ರಾಮು ಮತ್ತಿತರರು ಪೂಜಾ ಕಾರ್ಯಕ್ರಮದಲ್ಲಿ ಹಾಜರಿದ್ದರು.

ತಾಲ್ಲೂಕಿನ ಯಾದವ ಸಂಘದ ಸದಸ್ಯರ ಮನವಿ

0

ಗೊಲ್ಲ ಸಮುದಾಯದ ಕಾಡುಗೊಲ್ಲ, ಹಟ್ಟಿಗೊಲ್ಲ ಉಪ ಪಂಗಡಗಳನ್ನು ಮಾತ್ರ ಪರಿಶಿಷ್ಠ ಪಂಗಡಕ್ಕೆ ಸೇರ್ಪಡೆ ಮಾಡಿ ಇತರೆ ಉಪಪಂಗಡಗಳನ್ನು ಕೈಬಿಟ್ಟಲ್ಲಿ ಅನ್ಯಾಯವಾಗುವುದರಿಂದ ಸಾಮಾಜಿಕ ನ್ಯಾಯವನ್ನು ಒದಗಿಸುವಂತೆ ತಾಲ್ಲೂಕು ಯಾದವ ಸಂಘದ ಸದಸ್ಯರು ಶಿರಸ್ತೆದಾರರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಗೊಲ್ಲ ಜನಾಂಗದ ಕಾಡುಗೊಲ್ಲರು, ಹಟ್ಟಿಗೊಲ್ಲರು ಎಂಬ ಉಪ ಪಂಗಡಗಳನ್ನು ಪರಿಶಿಷ್ಠ ಪಂಗಡಕ್ಕೆ ಸೇರ್ಪಡೆಗೊಳಿಸುವ ಬಗ್ಗೆ ಪ್ರಸ್ತಾವನೆಯನ್ನು ಸಚಿವ ಸಂಪುಟದ ಅನುಮೋದನೆಗೆ ತರುತ್ತಿದ್ದಾರೆ. ರಾಜ್ಯದ ಎಲ್ಲಾ 29 ಜಿಲ್ಲೆಗಳಲ್ಲಿಯೂ ಗೊಲ್ಲ ಜನಾಂಗದ ಸಮುದಾಯ ಹರಡಿದೆ. ಅವರುಗಳನ್ನು ಗೊಲ್ಲ, ಯಾದವ್, ಯಾದವ, ಆಸ್ಥಾನಗೊಲ್ಲ, ಅಡವಿಗೊಲ್ಲ, ಗೋಪಾಲ, ಗೋಪಾಲಿ, ಗೌಳಿ, ಗಾವ್ಳಿ, ಗಾವಳಿ, ಗಾವ್ಲಿ, ಅನುಬರು, ಅಟನಬರು, ಹಣಬರ್, ಕಾವಡಿ, ಕೊಲಯನ್, ಕೊನಾರ್, ಕೊನ್ನೂರ್, ಕೃಷ್ಣಗೌಳಿ, ಕೃಷ್ಣಗೊಲ್ಲ, ಮಣಿಯಾನಿ ಮುಂತಾದ ಉಪಪಂಗಡಗಲ ಹೆಸರುಗಳಿಂದ ಕರೆಯಲ್ಪಡುತ್ತಾರೆ.
ಅವರ ಮೂಲ ವೃತ್ತಿ ಪಶುಪಾಲನೆ, ಹೈನುಗಾರಿಕೆ, ಕುರಿಸಾಕಾಣಿಕೆ ಹಾಗೂ ಕೃಷಿಯಾಗಿದೆ. ಈ ಸಮಾಜವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿಯೂಅತ್ಯಂತ ಹಿಂದುಳಿದಿದೆ. ರಾಜ್ಯದಲ್ಲಿ ಸುಮಾರು 40 ರಿಂದ 45 ಲಕ್ಷದಷ್ಟು ಜನಸಂಖ್ಯೆಯಿದ್ದು, ಜನಾಂಗದವರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಬೇಕು. ರಾಜ್ಯದ ಸಮಸ್ತ ಗೊಲ್ಲ ಸಮುದಾಯ ಹಾಗೂ ಅದರ ಉಪಜಾತಿ ಪಂಗಡಗಳನ್ನು ಪರಿಶಿಷ್ಠ ಪಂಗಡಕ್ಕೆ ಸೇರ್ಪಡೆಗೊಳಿಸಲು ಸಚಿವ ಸಂಪುಟದಲ್ಲಿ ಶಿಫಾರಸು ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ತಹಶೀಲ್ದಾರರ ಮೂಲಕ ಮನವಿಯನ್ನು ಸಲ್ಲಿಸಿದರು.
ತಾಲ್ಲೂಕು ಯಾದವ ಸಂಘದ ಅಧ್ಯಕ್ಷ ಕೆ.ಯೋಗಾನಂದ, ಪ್ರಧಾನ ಕಾರ್ಯದರ್ಶಿ ಜಿ.ರಾಮಚಂದ್ರಪ್ಪ, ಜಂಟಿ ಕಾರ್ಯದರ್ಶಿ ಡಿ.ಆರ್.ನರಸಿಂಹರಾಜು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಮಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಕ್ಕಳ ಗ್ರಾಮ ಸಭೆ

0

‘ಪ್ಲಾಸ್ಟಿಕ್ ಬಳಸುವುದಿಲ್ಲ. ನಮ್ಮ ಶಾಲೆಯಲ್ಲಿ ಮತ್ತು ಗ್ರಾಮ ಪಂಚಾಯತಿಯಲ್ಲಿ ಪ್ಲಾಸ್ಟಿಕ್ ನಿಷೇಧಿಸುತ್ತೇವೆ’ ಎಂದು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟವರು ರಾಜ್ಯ ಸರ್ಕಾರದ ಲೋಕ ಅದಾಲತ್ನ ಸದಸ್ಯ ಹಾಗೂ ಪರಿಸರವಾದಿ ಡಾ. ಆ.ನ ಯಲ್ಲಪ್ಪರೆಡ್ಡಿ.
ತಾಲ್ಲೂಕಿನ ಮಳ್ಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ನಡೆದ ‘ಮಕ್ಕಳ ಗ್ರಾಮ ಸಭೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಕ್ಕಳಿಗೆ ತಿಳುವಳಿಕೆ ನೀಡುವುದರ ಮೂಲಕ ಹಿರಿಯರಿಗೂ ಸಂದೇಶವನ್ನು ರವಾನಿಸಿದರು.
ಮಕ್ಕಳು ಹಾಗೂ ಸಸಿ ಎರಡೂ ಒಂದೆ. ಇಂದು ನಾವು ಬೆಳೆಸಿದ ಸಸಿ ಒಂದಲ್ಲ ಒಂದು ದಿನ ನೆರಳು, ಫಲ ಕೊಟ್ಟೆ ಕೊಡುತ್ತದೆ. ಹಾಗೆಯೆ ನಾವು ಉತ್ತಮವಾಗಿ ಬೆಳೆಸಿದ ಒಬ್ಬ ವಿದ್ಯಾರ್ಥಿ ಇಂದಲ್ಲ ನಾಳೆ ಈ ಸಮಾಜಕ್ಕೆ ಉತ್ತಮ ಕೊಡುಗೆಯಾಗಬಲ್ಲ ಎಂದು ಈ ಸಂದರ್ಭದಲ್ಲಿ ಡಾ. ಆ.ನ ಯಲ್ಲಪ್ಪರೆಡ್ಡಿ ಅಭಿಪ್ರಾಯಪಟ್ಟರು.
ಮುತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ಪ್ರೌಢಶಾಲೆಯ ವಿದ್ಯಾರ್ಥಿಗಳು, ಮಳ್ಳೂರು ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ವಿವೇಕಾನಂದ ಪ್ರೌಢಶಾಲೆಯ ವಿದ್ಯಾರ್ಥಿಗಳು, ಮೇಲೂರು ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದ ‘ಮಕ್ಕಳ ಗ್ರಾಮ ಸಭೆ’ಯಲ್ಲಿ ವಿದ್ಯಾರ್ಥಿಗಳು ತಮ್ಮ ಗ್ರಾಮ, ಶಾಲೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಜಿಲ್ಲಾ ಪಂಚಾಯಿತಿ ಸಿಇಒ ಬಿ.ಬಿ.ಕಾವೇರಿ ಅವರ ಮುಂದಿಟ್ಟು ಪರಿಹಾರವನ್ನು ಪಡೆದರು.
ಮತ್ತೂರಿನ ಪ್ರೌಢಶಾಲೆಯಲ್ಲಿ ಹೆಚ್ಚುವರಿ ಶೌಚಾಲಯ ಬೇಕೆಂದಾಗ ತಕ್ಷಣ ಅದಕ್ಕಾಗಿ 35 ಸಾವಿರ ರೂಗಳನ್ನು ಮಂಜೂರು ಮಾಡುವುದಾಗಿ ಸಿಇಒ ಘೋಷಿಸಿದರು. ಮುತ್ತೂರು ಹಾಗೂ ಮಳ್ಳೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ ಎಂದಾಗ ಗ್ರಾಮ ಪಂಚಾಯತಿ ಅಧ್ಯಕ್ಷ ನಿಶಾಂತ್ ಕೊಳವೆ ಬಾವಿಗಳು ಕೊರೆಸಿದರೂ ನೀರು ಸಿಗುತ್ತಿಲ್ಲವೆಂದು ಹತಾಶರಾಗಿ ನುಡಿದರು. ಆಗ ಡಾ. ಆ.ನ ಯಲ್ಲಪ್ಪರೆಡ್ಡಿ ಮಳೆನೀರು ಕೊಯ್ಲಿನ ಯೋಜನೆ ರೂಪಿಸೋಣ ಎಂದು ಆಶಾಭಾವವನ್ನು ತುಂಬಿದರು.
ಅಂಗನವಾಡಿ ಕಟ್ಟಡಗಳ ಸಮಸ್ಯೆ, ಬೀದಿ ದೀಪಗಳ ಸಮಸ್ಯೆ, ನೈರ್ಮಲ್ಯದ ಕುರಿತಂತೆ ಮಕ್ಕಳು ಕೇಳುತ್ತಿದ್ದಂತೆಯೇ ತಕ್ಷಣ ಆಯಾ ಅಧಿಕಾರಿಗಳಿಗೆ ಆ ಬಗ್ಗೆ ಕ್ರಮ ಕೈಗೊಳ್ಳಲು ಸಿಇಒ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಬಿ.ಕಾವೇರಿ, ‘ವಿದ್ಯಾರ್ಥಿಗಳಲ್ಲಿ ನಮ್ಮ ಸುತ್ತ ಮುತ್ತ ಶೈಕ್ಷಣಿಕವಾಗಿ, ಆರೋಗ್ಯ ಕ್ಷೇತ್ರದಲ್ಲಿ, ಸಾಮಾಜಿಕ ಇನ್ನಿತರೆ ಕ್ಷೇತ್ರಗಳಲ್ಲಿ ಏನು ಅಭಿವೃದ್ದಿಯಾಗುತ್ತಿದೆ, ಇಲ್ಲ ಎನ್ನುವ ವಿಚಾರಗಳು ಗಮನಕ್ಕೆ ಬರುತ್ತವೆಯಲ್ಲದೆ ಅವು ಸಾಮಾಜಿಕ ಕಳಕಳಿಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರೇರಣೆ ನೀಡುತ್ತವೆ. ಎಲ್ಲಾ ಮನೆಗಳಲ್ಲೂ ಶೌಚಾಲಯವಿರುವು ಕಡ್ಡಾಯ. ನೈರ್ಮಲ್ಯದಿಂದ ಆರೋಗ್ಯ ವೃದ್ಧಿಸುತ್ತದೆ. ಆಸ್ಪತ್ರೆಗೆ ಖರ್ಚು ಮಾಡುವ ಹಣದಲ್ಲಿ ಶೌಚಾಲಯ ನಿರ್ಮಿಸಬಹುದು’ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೆಶಕಿ ಸುರೇಖಾ, ತಾಲ್ಲೂಕು ಪಂಚಾಯತಿ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ಗಣಪತಿ ಸಾಕರೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಕ್ಷ್ಮಿದೇವಮ್ಮ, ಕಾರ್ಮಿಕ ಅಧಿಕಾರಿ ರಾಮಪ್ಪ, ಮಳ್ಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ನಿಶಾಂತ್, ಮಳ್ಳೂರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಗೌರಮ್ಮ, ನಮ್ಮ ಮುತ್ತೂರು ಸಂಸ್ಥೆಯ ಕಾರ್ಯದರ್ಶಿ ಉಷಾಶೆಟ್ಟಿ, ಸಿಎಂಸಿ ಕಾರ್ಯಕರ್ತ ಸುನಿಲ್ಕುಮಾರ್, ನೇತಾಜಿ ರೂರಲ್ ಡೆವಲೆಪ್ಮೆಂಟ್ ಸೊಸೈಟಿಯ ಅಧ್ಯಕ್ಷ ಜಿ.ಮಂಜುನಾಥ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಸರ್ಕಾರದ ವತಿಯಿಂದ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಣೆ ಮಾಡಬೇಕು

0

ಮರಾಠರು ಧಾಳಿ ಮಾಡಿದ್ದ ಶೃಂಗೇರಿ ದೇವಸ್ಥಾನಕ್ಕೆ ರಕ್ಷಣೆ ನೀಡಿದ್ದ ಟಿಪ್ಪು ಸುಲ್ತಾನ್ ಸಾಮರಸ್ಯವನ್ನು ಪ್ರತಿಪಾದಿಸುವ ವ್ಯಕ್ತಿತ್ವ ಎಂದು ಕೈವಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹಮ್ಮದ್ ಖಾಸಿಂ ತಿಳಿಸಿದರು.
ಪಟ್ಟಣದ ದಿಬ್ಬೂರಹಳ್ಳಿ ರಸ್ತೆಯ ದರ್ಗಾ ಬಳಿ ಟಿಪ್ಪು ಅಭಿಮಾನಿ ಬಳಗದಿಂದ ಗುರುವಾರ ನಡೆದ ಟಿಪ್ಪು ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೊಟ್ಟಮೊದಲು ಯುದ್ಧದಲ್ಲಿ ಕ್ಷಿಪಣಿಯ ಪ್ರಯೋಗಿಸಿದ್ದ ಕಾರಣಕ್ಕೆ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆಯವರು ಟಿಪ್ಪುವಿನ ಭಾವಚಿತ್ರವನ್ನು ಪ್ರದರ್ಶಿಸಿದ್ದಾರೆ. ದೇಶಕ್ಕಾಗಿ ಹೋರಾಡಿ ಮಡಿದ ಟಿಪ್ಪು ಸುಲ್ತಾನ್ ಭಾವಚಿತ್ರವೇ ನಮ್ಮಲ್ಲಿಲ್ಲದಿರುವುದು ದೊಡ್ಡ ದುರಂತ. ಸರ್ಕಾರದ ವತಿಯಿಂದ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಭಗವಂತನ ರಾಜ್ಯದ ಸೇವಕನೆಂದು ತನ್ನನ್ನು ಕರೆದುಕೊಂಡಿದ್ದ ಈ ಧೀಮಂತ ನಾಯಕನನ್ನು ದೇಶದ ದುರಂತ ನಾಯಕನನ್ನಾಗಿ ಪ್ರತಿಬಿಂಬಿಸಿರುವುದು ದುರದೃಷ್ಟಕರ ಎಂದು ಹೇಳಿದರು.
ಟಿಪ್ಪು ಅಭಿಮಾನಿ ಬಳಗದಿಂದ ಟಿಪ್ಪು ವೇಷಧಾರಿ ಹಾಗೂ ಭಾವಚಿತ್ರದೊಂದಿಗೆ ಪಟ್ಟಣದಲ್ಲಿ ಮೆರವಣಿಗೆಯನ್ನು ನಡೆಸಲಾಯಿತು.
ಪುರಸಭಾ ಸದಸ್ಯ ಶಫೀವುಲ್ಲಾ, ಸಮತಾ ಸೈನಿಕ ದಳದ ಶ್ರೀರಾಮ್, ಟಿಪ್ಪು ಅಭಿಮಾನಿ ಸಂಘದ ಅಬ್ದುಲ್ ರಶೀದ್, ಡಾ.ಸತ್ಯನಾರಾಯಣ್, ಟಿಪ್ಪು ಸೆಕ್ಯುಲರ್ ಸೇನೆ ರಾಜ್ಯ್ಯ ಸಂಚಾಲಕ ಡಾ.ಶಬ್ಬೀರ್, ಮೊಯುದ್ದೀನ್ ಪಾಷ, ರಸೂಲ್, ಮೌಲಾ, ಜೈ ಹಿಂದ್ ಆಟೋ ಚಾಲಕರ ಅಪ್ಪು, ಗಿರಿಧರ್, ರಘು, ಯೂಸುಫ್, ಮಹಬೂಬ್ ಖಾನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

‘ಮಕ್ಕಳ ಸುರಕ್ಷ ಸಮಿತಿ’ಯನ್ನು ಶಾಲೆಗಳಲ್ಲಿ ರಚಿಸಿ

0

ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಠಿಯಿಂದ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ತಿಳಿಸಿದರು.
ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ತಾಲ್ಲೂಕಿನ ಖಾಸಗಿ, ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಭೆಯಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಹಾಗೂ ಮಹಿಳಾ ಸಿಬ್ಬಂದಿಗಳ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳನ್ನು ತಡೆಯಲು ಸರ್ಕಾರ ಮುಂದಾಗಿದೆ. ಪ್ರತಿಯೊಂದು ಶಾಲೆಯೂ ತನ್ನ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಶಾಲೆಯ ಮಾಹಿತಿ, ಆಡಳಿತ ಮಂಡಳಿಯ ಪದಾಧಿಕಾರಿಗಳ ಹೆಸರು, ವಿಳಾಸ, ಶಿಕ್ಷಕರು ಮತ್ತು ಸಿಬ್ಬಂದಿಗಳ ವಿವರಗಳನ್ನು ಒದಗಿಸಬೇಕು. ಶಾಲಾ ಮಟ್ಟದಲ್ಲಿ ‘ಮಕ್ಕಳ ಸುರಕ್ಷ ಸಮಿತಿ’ಯನ್ನು ರಚಿಸಬೇಕು. ಪೋಷಕರ ಜವಾಬ್ದಾರಿಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸಬೇಕು. ಶಾಲೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದು, ಶಾಲಾ ವಾಹನಗಳ ನಿರ್ವಹಣೆ ಸೇರಿದಂತೆ ವಿವಿಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ಮಹಿಳೆಯರ, ಮಕ್ಕಳ ಹಾಗೂ ಶಾಲಾ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯಗಳು, ಕಿರುಕುಳ, ಅತ್ಯಾಚಾರಗಳು ರಾಜ್ಯದ ವಿವಿದೆಡೆಗಳಲ್ಲಿ ನಡೆಯುತ್ತಿರುವುದನ್ನು ತಡೆಯಲು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಮಕ್ಕಳ ಹಿತದೃಷ್ಠಿಯಿಂದ ಎಲ್ಲಾ ಶಿಕ್ಷಣ ಸಂಸ್ಥೆಗಳೂ ಪಾಲಿಸಬೇಕೆಂದು ಹೇಳಿದರು.
ಶಿಕ್ಷಣ ಸಂಯೋಜಕರಾದ ರಾಮಣ್ಣ, ಲಕ್ಷ್ಮೀನರಸಿಂಹಗೌಡ, ತಾಲ್ಲೂಕಿನ ಶಿಕ್ಷಣ ಸಂಸ್ಥೆಗಳ ಮುಖ್ಯ ಶಿಕ್ಷಕರು ಮತ್ತು ಆಡಳಿತ ಮಂಡಳಿ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

ಶಿಡ್ಲಘಟ್ಟಕ್ಕೆ 23 ರಂದು ಡಾ.ಎನ್.ಆರ್.ನಾರಾಯಣಮೂರ್ತಿ ಭೇಟಿ

0

ಇನ್ಫೋಸಿಸ್ ಸಂಸ್ಥಾಪಕ ಡಾ.ಎನ್.ಆರ್.ನಾರಾಯಣಮೂರ್ತಿ ತಮ್ಮ ಹುಟ್ಟೂರು ಶಿಡ್ಲಘಟ್ಟಕ್ಕೆ ನವೆಂಬರ್ 23 ರ ಭಾನುವಾರದಂದು ಆಗಮಿಸುತ್ತಿದ್ದಾರೆ.
ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಬೆಳಿಗ್ಗೆ 11 ಗಂಟೆಗೆ ಆಯೋಜಿಸಿರುವ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ವಿಪ್ರ ಜನಾಂಗದ ಪ್ರತಿಭಾವಂತರು ಮತ್ತು ಸಾಧಕರಿಗೆ ಸನ್ಮಾನಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಡಿ.ಟಿ.ಸತ್ಯನಾರಾಯಣರಾವ್, ಉದ್ಘಾಟನೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಡಾ.ಬಿ.ಎನ್.ವಿ.ಸುಬ್ರಮಣ್ಯ, ಮುಖ್ಯ ಅತಿಥಿಗಳಾಗಿ ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ಎಸ್.ಪಿ.ಕುಲಕರ್ಣಿ, ಶಾಸಕ ಎಂ.ರಾಜಣ್ಣ, ಬಿ.ವಿ.ಮಂಜುನಾಥ್, ಬಿ.ಸಿ.ಸೀತಾರಾಮರಾವ್, ಪ್ರಸನ್ನಕುಮಾರ್, ಎನ್.ಕೆ.ಗುರುರಾಜರಾವ್ ಭಾಗವಹಿಸುವರು.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಜನಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಪ್ರರಾದ ಡಾ.ಕೃಷ್ಣಮೂರ್ತಿ ವೆಂಕಟರಾಮ್, ಬಿ.ವಿ.ಪಾಂಡುರಂಗರಾವ್, ಎನ್.ಆರ್.ಸಮರ್ಥರಾಮ್, ಕ್ರಮಧಾತಿ ಶ್ರೀಧರ್, ಕ್ಯಾಪ್ಟನ್ ಸುನಿಲ್ ಕುಮಾರ್ ಅವರನ್ನು ಸನ್ಮಾನಿಸಲಾಗುತ್ತದೆ.

ಶಿಡ್ಲಘಟ್ಟದ ಮುಂಜಾನೆಯ ಮಂಜು

0

ಮುಂಜಾನೆಯ ಮಂಜು..
ಬೆಳಗಿನ ಚುಮು ಚುಮು ಚಳಿ..
ಹಸಿರು ಹುಲ್ಲು ಹಾಸಿನ ಮೇಲೆ ಇಬ್ಬನಿಯ ಹನಿಗಳು..
ಶಿಡ್ಲಘಟ್ಟದಲ್ಲಿ ಗುರುವಾರದ ಮುಂಜಾವು ಸದ್ದಿಲ್ಲದೆ ಮಂಜಿನಲ್ಲಿ ಮೀಯುತ್ತಿತ್ತು. ಡಿಸೆಂಬರಿನ ಕೊರೆಯುವ ಚಳಿ ಹೊಸ್ತಿಲಲ್ಲೇ ಇದೆ ಎಂಬುದನ್ನು ನೆನಪಿಸುವ ರೀತಿಯಲ್ಲಿ ತಾಲ್ಲೂಕಿನಲ್ಲಿ ದಟ್ಟ ಹಿಮವು ಆವರಿಸಿತ್ತು. ಬೆಳಿಗ್ಗೆ ಎಂಟು ಗಂಟೆಯದರೂ ರಸ್ತೆಗಳಲ್ಲಿ ವಾಹನಗಳು ದೀಪ ಉರಿಸುತ್ತಲೇ ಸಂಚರಿಸಬೇಕಾಯಿತು.
ಬೆಳಿಗ್ಗೆ ನಿದ್ದೆಯಿಂದೆದ್ದು ಹೊರಗೆ ಬಂದವರಿಗೆ ಮತ್ತೊಂದು ಬಿಳಿಯ ಕನಸಿನ ಲೋಕ ಕಣ್ಮುಂದೆ ತೆರೆದುಗೊಂಡಿತ್ತು. ಅದು ಕನಸಲ್ಲ, ಉದ್ದಕ್ಕೂ ಹಬ್ಬಿದ ಇಬ್ಬನಿಯ ಇಹದ ಲೋಕ ಎಂದು ತಿಳಿಯಲು ಕೆಲ ಕ್ಷಣಗಳು ಬೇಕಾದವು. ಹೀಗೆ ಚಳಿಗಾಲದ ಪ್ರಾರಂಭವು ಹೊಸ ಬಗೆಯಲ್ಲಿ ಆರಂಭಗೊಂಡಿತು.
ವಾಹನಗಳಲ್ಲಿ ಸಂಚರಿಸುತ್ತಿದ್ದವರ ತಲೆಕೂದಲು ಹಾಗೂ ಮುಖದ ಮೇಲೆಲ್ಲಾ ಮಂಜಿನ ಹನಿಗಳು ಮೂಡಿದ್ದರೆ, ದಾರಿಯುದ್ದಕ್ಕೂ ಬೆಳೆದ ಹುಲ್ಲು, ಗರಿಕೆ, ವನಕುಸುಮಗಳ ಮೇಲೆ ಇಬ್ಬನಿಯು ಮುತ್ತುಗಳಂತೆ ಕಂಗೊಳಿಸುತ್ತಿದ್ದವು. ಗಿಡಗಂಟೆಗಳ ಮೇಲೆ ಹಬ್ಬಿದ ಜೇಡರ ಬಲೆಗಳ ಮೇಲೂ ಮಂಜಿನ ಹನಿಗಳು ಮಣಿಗಳಂತೆ ಮೂಡಿ ಕಿರು ಬಿಸಿಲಿಗೆ ಹೊಳೆಯುತ್ತಿದ್ದವು.
ಎಲ್ಲವೂ ಇಬ್ಬನಿಯ ಹಾಸಿಗೆಯಲ್ಲಿ ಮಲಗಿ ನಿದ್ದೆ ಹೋದಂತೆ ಇತ್ತು. ಎಲ್ಲವೂ ಇದ್ದರೂ ಕಾಣದಂತಿತ್ತು. ದಾರಿಬದಿಯ ಮರಗಳಿಂದ ಇಬ್ಬನಿಯ ತುಂತುರಿನ ಸೋನೆ ಮಳೆಯೂ ಜಿನುಗುತ್ತಿತ್ತು. ಬೆಳಿಗ್ಗೆ ಒಂಬತ್ತರ ವೇಳೆಗೆ ಹೊರ ಬಂದರೂ ಸೂರ್ಯ ಮಂಜಿನ ಮರೆಯಲ್ಲಿ ಚಂದ್ರನಂತೆ ಹೊಳೆಯುತ್ತಿದ್ದ.
ಕಾಲಕ್ಕೆ ತಕ್ಕಂತೆ ವ್ಯಾಪಾರ ಮಾಡುವ ತಳ್ಳು ಗಾಡಿಗಳವರು ಚಳಿಗಾಲದ ಟೊಪ್ಪಿ, ಮಫ್ಲರ್ ಮುಂತಾದ ಉಡುಪುಗಲ ಮಾರಾಟದಲ್ಲಿ ತೊಡಗಿದ್ದರು. ಬೆಳಿಗ್ಗೆ ನಿತ್ಯ ಕಾಯಕದಲ್ಲಿ ನಿರತರಾಗುವ ಕಟ್ಟಡ ಕಾರ್ಮಿಕರು ಬೆಚ್ಚನೆಯ ಉಡುಪುಗಳ ಚೌಕಾಸಿಯಲ್ಲಿ ನಿರತರಾಗಿದ್ದರು.
ಮುಂಜಾನೆಯ ಕೆಲಸದಲ್ಲಿ ತೊಡಗಿಕೊಳ್ಳುವ ಹಾಲು, ಹೂ, ತರಕಾರಿ ಮತ್ತು ಪತ್ರಿಕೆ ವಿತರಕರು ಚಳಿಗೆ ನಡುಗುತ್ತಾ ತಮ್ಮ ಕೆಲಸ ಮಾಡಿದರೆ, ಬೆಳಗಿನ ವಾರ್ತಾ ಪತ್ರಿಕೆ ಓದುತ್ತಾ ಬಿಸಿ ಚಹಾ ಅಥವಾ ಕಾಫಿ ಸೇವಿಸುತ್ತಾ ಹಲವರು ಚಳಿಯ ಸುಖಾನುಭವವನ್ನು ಸವಿದರು.
 
[images title=”ಮುಂಜಾನೆಯ ಮಂಜು” cols=”four” auto_slide=”true” lightbox=”true”]
[image link=”2253″ image=”2253″]
[image link=”2255″ image=”2255″]
[image link=”2254″ image=”2254″]
[image link=”2256″ image=”2256″]
[/images]

ನಾಗಲಮುದ್ದಮ್ಮ ದೇವಾಲಯದಲ್ಲಿ ವಿಶೇಷ ಪೂಜೆ

0

ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಎದ್ದಲತಿಪ್ಪೇನಹಳ್ಳಿ ಗ್ರಾಮದ ನಾಗಲಮುದ್ದಮ್ಮ ದೇವಾಲಯದಲ್ಲಿ ಕಾರ್ತೀಕ ಮಾಸದ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು.
ದೇವಾಲಯವನ್ನು ಈಚೆಗೆ ಜೀರ್ಣೋದ್ಧಾರ ಮಾಡಿದ್ದು, ಕಾರ್ತೀಕ ಮಾಸದ ಆಚರಣೆಯ ಸಂದರ್ಭದಲ್ಲಿ ಲಕ್ಷ ದೀಪೋತ್ಸವ, ವಿಶೇಷ ಪೂಜೆ ನಡೆಸಲಾಯಿತು. ಅತ್ಯಂತ ಪುರಾತನವಾದ ಈ ದೇವಾಲಯಕ್ಕೆ ಸುತ್ತಮುತ್ತಲ ಗ್ರಾಮಗಳಿಂದಲ್ಲದೆ ದೂರದೂರುಗಳಿಂದಲೂ ಭಕ್ತರು ಆಗಮಿಸಿದ್ದು ಪೂಜೆಯಲ್ಲಿ ಪಾಲ್ಗೊಂಡರು. ಅಭಿಷೇಕ, ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ಈ ಸಂದರ್ಭದಲ್ಲಿ ಆಯೋಜಿಸಿದ್ದ ವೀರಗಾಸೆ, ಕರಡಿ ಸಮ್ಮೇಳನ ಮತ್ತು ನಾಸಿಕ್ ಡೋಲ್ ವಿಶೇಷ ಆಕರ್ಷಣೆಯಾಗಿತ್ತು.

error: Content is protected !!