ಸಹಕಾರಿ ಸಂಘವು ಅಭಿವೃದ್ಧಿಯ ಹಾದಿಯಲ್ಲಿ ಸಾಗಿ ತನ್ನ ವ್ಯಾಪ್ತಿಯನ್ನು ಗ್ರಾಮೀಣ ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾದರೆ ಜನತೆಯ ಸಹಕಾರ ಅತ್ಯಗತ್ಯವಾಗಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ಪಟ್ಟಣದ ಭೂ ಅಭಿವೃದ್ಧಿ ಬ್ಯಾಂಕಿನ ಆವರಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಸಹಕಾರಿ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಪ್ರತಿಯೊಂದು ಸಹಕಾರ ಸಂಘಗಳ ಮುಖಾಂತರ ಹಳ್ಳಿಗಳ ಅಭಿವೃದ್ಧಿಯಾಗಬೇಕು. ಸಹಕಾರಿ ಸಂಘಗಳಲ್ಲಿ ರಾಜಕೀಯ ಪ್ರವೇಶಕ್ಕೆ ಅವಕಾಶ ನೀಡಬಾರದು. ಸುಮಾರು ೧೧೦ ವರ್ಷಗಳ ಇತಿಹಾಸವಿರುವ ಸಹಕಾರಿ ಕ್ಷೇತ್ರದ ಉದ್ದೇಶ ಶೋಷಣೆ ರಹಿತ ಸಮಾಜ ನಿರ್ಮಾಣ, ಬಡತನ ನಿವಾರಣೆ, ಸ್ವಾವಲಂಬನೆಗೆ ಒತ್ತು ನೀಡುವುದಾಗಿದೆ. ಸಹಕಾರಿ ಸಂಘದ ಮುಖಾಂತರ ಸ್ವಚ್ಚತೆಯನ್ನು ಕಾಪಾಡುವಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು. ಸಹಕಾರಿ ಸಂಘಗಳ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿ ಲಾಭಯುತ ವ್ಯಾಪಾರಗಳನ್ನು ನಡೆಸಬೇಕು ಎಂದು ಹೇಳಿದರು.
ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ಬಂಕ್ಮುನಿಯಪ್ಪ ಮಾತನಾಡಿ, ಸಹಕಾರ ಸಂಘಗಳು ಜನರ ಅಭಿವೃದ್ದಿಯ ಕಡೆಗೆ ಹೆಚ್ಚು ಗಮನ ನೀಡಬೇಕು. ಹಾಲಿನ ಡೈರಿಗಳಲ್ಲಿ ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವ ಮುಖಾಂತರ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಯನ್ನು ಉಂಟುಮಾಡಬೇಕು. ಹಾಲಿನ ಗುಣಮಟ್ಟದಲ್ಲಿ ಶೇ ೯೬ ರಷ್ಟು ಚೇತರಿಕೆ ಕಂಡಿದ್ದು, ಅವಿಭಾಜ್ಯ ಜಿಲ್ಲೆಯಲ್ಲಿ ನಮ್ಮ ತಾಲ್ಲೂಕು ಮೂರನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಶೇ ೧೦೦ ರಷ್ಟು ಗುಣಮಟ್ಟವನ್ನು ಕಾಪಾಡಿ ತಾಲ್ಲೂಕಿಗೆ ಕೀರ್ತಿ ತರಬೇಕು ಎಂದರು.
ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ದಿರುವ ವಂಟೂರು, ಸೀತಹಳ್ಳಿ, ಆನೆಮಡುಗು, ಚೀಮಂಗಲ, ಕುಂದಲಗುರ್ಕಿ, ಜಂಗಮಕೋಟೆ ಸಂಘಗಳ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಎಚ್.ವಿ.ನಾಗರಾಜ್, ನಿರ್ದೇಶಕ ರಮೇಶ್, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕರಾದ ಪಿ.ವಿ.ನಾಗರಾಜ್, ಪಿ.ಶಿವಾರೆಡ್ಡಿ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎ.ರಾಮಚಂದ್ರಪ್ಪ, ಆರ್.ವಿ.ಜಯದೇವ್, ವ್ಯವಸ್ಥಾಪಕ ಸಿ.ಮುನಿಯಪ್ಪ, ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಕೆ.ಜಿ.ಈಶ್ವರಯ್ಯ, ಸಹಕಾರ ಸಂಘಗಳ ಉಪನಿಬಂಧಕಿ ಬಿ.ಜಿ.ಮಂಜುಳಾ, ಸಹಾಯಕ ನಿಬಂಧಕ ಆರಿಫ್ ಉಲ್ಲಾ ಆಸೀಫ್, ವ್ಯವಸ್ಥಾಪಕ ಆರ್. ಲಿಂಗರಾಜು, ನಿರ್ದೇಶಕರಾದ ಎಂ.ಎನ್.ಶಶಿಧರ್, ಲಕ್ಷ್ಮೀಪತಿ, ಕೆ.ಎನ್.ಬಿ.ರೆಡ್ಡಿ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸಹಕಾರಿ ಸಪ್ತಾಹ ಸಮಾರಂಭ
ತಾದೂರು ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ತಾಲ್ಲೂಕಿನ ತಾದೂರು ಗ್ರಾಮದ ವಿನಾಯಕ ಯುವಕರ ಬಳಗದ ವತಿಯಿಂದ ಬುಧವಾರ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡಿದರು.
ಧ್ವಜಾರೋಹಣ ಮಾಡಿ ಮಾತನಾಡಿದ ಶಾಸಕ ಎಂ.ರಾಜಣ್ಣ, ‘ಕನ್ನಡ ನಾಡು, ನುಡಿಯನ್ನು ಉಳಿಸುವ ನಿಟ್ಟಿನಲ್ಲಿ ಯುವಜನತೆ ಒಗ್ಗಟ್ಟಾಗಬೇಕು. ನಮ್ಮ ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯವನ್ನು ಉಳಿಸಿ ಬೆಳೆಸುವಂತಹ ಕಾರ್ಯಗಳಾಗಬೇಕು. ರಾಜ್ಯೋತ್ಸವ ಸಮಾರಂಭಗಳು ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗಬಾರದು. ವರ್ಷದುದ್ದಕ್ಕೂ ನಮ್ಮ ನಡವಳಿಕೆಯ ಮೂಲಕ ನಡೆಯುವಂತಾಗಬೇಕು, ರಾಜ್ಯದ ಪ್ರತಿಯೊಂದು ಗ್ರಾಮದ ಮನೆ ಮನೆಯಲ್ಲಿಯೂ ಕನ್ನಡ ಹಬ್ಬದ ವಾತಾವರಣ ಮೂಡಬೇಕು’ ಎಂದು ಹೇಳಿದರು.
ಗ್ರಾಮದಲ್ಲಿ ರಾಜ್ಯೋತ್ಸವದ ಅಂಗವಾಗಿ ಯುವಕ ಬಳಗದಿಂದ ಉಚಿತ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
ರಮೇಶ್, ಗ್ರಾಮ ಪಂಚಾಯತಿ ಸದಸ್ಯ ಬಿ.ರಘು, ಟಿ.ಎಂ.ಪ್ರಭಾಕರ್, ಡಿ.ಮಂಜುನಾಥ್, ಕೆ.ಮುರಳಿ, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಟಿ.ವಿ.ವೇಣುಗೋಪಾಲ್, ರಾಮಾಂಜಿನಪ್ಪ, ಎಸ್.ಎಂ.ನವೀನ್‌ಕುಮಾರ್, ಮುನೇಗೌಡ, ಸಂಪತ್‌ಕುಮಾರ್, ಎಂ.ಗಜೇಂದ್ರ, ಪ್ರಮೋದ್, ಮಧುಕರ್, ಗಂಗರೆಡ್ಡಿ, ಮೂರ್ತಿ, ನರಸಿಂಹಮೂರ್ತಿ, ನಾರಾಯಣಸ್ವಾಮಿ, ನಟರಾಜ್ ಮುಂತಾದವರು ಈ ಸಂದರ್ಭದಲ್ಲಿಹಾಜರಿದ್ದರು.
ಪೊಲೀಸರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ
ಸದಾ ಒತ್ತಡದ ನಡುವೆ ಕೆಲಸ ಮಾಡುವ ಏಕೈಕ ವೃತ್ತಿಯೆಂದರೆ ಅದು ಪೊಲೀಸ್ ವೃತ್ತಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾಗೋಪಿನಾಥ್ ಹೇಳಿದರು.
ಪಟ್ಟಣದ ಮಾನಸ ನರ್ಸಿಂಗ್ ಹೋಂ ಆವರಣದಲ್ಲಿ ಮಂಗಳವಾರ ಮಾನಸ ಮೆಡಿಕಲ್ ಟ್ರಸ್ಟ್ ನ ವತಿಯಿಂದ ಪೊಲೀಸ್ ಇಲಾಖೆ ಸಿಬ್ಬಂದಿ ಹಾಗು ಅವರ ಕುಟುಂಬದವರಿಗೆ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸದಾ ಒತ್ತಡದ ನಡುವೆ ಕರ್ತವ್ಯ ನಿರ್ವಹಿಸುವ ಪೊಲೀಸರು ತಮ್ಮ ಆರೋಗ್ಯದ ಕಡೆ ಗಮನ ವಹಿಸಬೇಕು. ಬರೀ ಕರ್ತವ್ಯ ಎಂದು ಹೇಳಿಕೊಂಡು ಆರೋಗ್ಯ ಹಾಳುಮಾಡಿಕೊಂಡರೆ ನಿಮ್ಮನ್ನೇ ನಂಬಿರುವ ನಿಮ್ಮ ಕುಟುಂಬದ ಸದಸ್ಯರ ಗತಿಯೇನು. ಹಾಗಾಗಿ ಪ್ರತಿಯೊಬ್ಬರು ತಮ್ಮ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾನಸ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಹೆಚ್.ನರಸಾರೆಡ್ಡಿ, ಡಾ.ಮಧುಕರ್, ಸ್ತ್ರೀ ರೋಗ ತಜ್ಞರಾದ ಡಾ.ಸುಷ್ಮಾ ಸಾಮಗ, ಮಕ್ಕಳತಜ್ಞ ಡಾ.ಎಸ್.ಎ.ರೆಡ್ಡಿ, ಕಣ್ಣಿನತಜ್ಞ ಡಾ.ಶರಣ್, ಡಾ.ನವೀನ್, ಡಾ.ಮಹೇಶ್, ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಲ್.ಶ್ರೀನಿವಾಸಮೂರ್ತಿ, ಪುರಸಭೆ ಸದಸ್ಯ ಚಿಕ್ಕಮುನಿಯಪ್ಪ, ಎಸ್.ಎಂ.ರಮೇಶ್. ಮಾನಸ ಆಸ್ಪತ್ರೆಯ ವ್ಯವಸ್ಥಾಪಕ ಎಂ.ವಿ.ಶಿವಪ್ರಕಾಶ್ ಮತ್ತಿತರರು ಹಾಜರಿದ್ದರು.
ಕಾರ್ತಿಕ ಮಾಸದ ಕಡೆಯ ಸೋಮವಾರದ ಪ್ರಯುಕ್ತ ದೀಪದಾರತಿ
ಕಾರ್ತಿಕ ಮಾಸದ ಕಡೆಯ ಸೋಮವಾರದ ಪ್ರಯುಕ್ತ ಪಟ್ಟಣ ಸೇರಿದಂತೆ ತಾಲ್ಲೂಕಿನ ಶಿವಾಲಯಗಳಲ್ಲಿ ವಿಶೇಷ ಅಲಂಕಾರ ಸಂಭ್ರಮದಿಂದ ನೆರವೇರಿದವು. ತಾಲ್ಲೂಕಿನಾದ್ಯಂತ ವಿವಿಧ ದೇಗುಲಗಳಲ್ಲಿ ಸೋಮವಾರ ಸಂಜೆ ವಿಶೇಷ ಪೂಜೆಗಳು ಹಾಗೂ ದೀಪದಾರತಿಗಳನ್ನು ನಡೆಸಲಾಯಿತು.
ಕಾರ್ತಿಕ ಮಾಸದ ಕಡೆಯ ಸೋಮವಾರ ದೇವಾಲಯಗಳ ಆವರಣವೆಲ್ಲಾ ಸಾಲು-ಸಾಲು ದೀಪಗಳ ವಿನ್ಯಾಸದಿಂದ ಕೂಡಿದ್ದು, ಮುಸ್ಸಂಜೆಯ ಆ ದಿವ್ಯ ಸಹವಾಸ ದೇವಾನು ದೇವತೆಗಳ ಅನುಗ್ರಹಕ್ಕೆಂದು ಮಹಿಳೆಯರು ಶ್ರದ್ಧೆಯಿಂದ ದೀಪಗಳನ್ನು ಹಚ್ಚುತ್ತಿದ್ದರು.
ಪಟ್ಟಣದ ಕೋಟೆ ವೃತ್ತದ ಸೋಮೇಶ್ವರ ಸ್ವಾಮಿ ದೇವಾಲಯ, ಬೂದಾಳ ಗ್ರಾಮದ ಮಲೆ ಮಲ್ಲೇಶ್ವರ ಸ್ವಾಮಿ ದೇವಾಲಯ, ಅಪ್ಪೇಗೌಡನಹಳ್ಳಿ ಗೇಟ್ ಬಳಿಯ ಬಯಲಾಂಜನೇಯಸ್ವಾಮಿ ದೇವಾಲಯ, ಚೌಡಸಂದ್ರ ಗ್ರಾಮದ ಸೋಮೇಶ್ವರಸ್ವಾಮಿ ದೇವಸ್ಥಾನ ಮುಂತಾದೆಡೆ ವಿಶೇಷ ಪೂಜೆಗಳು ನಡೆದವು.
ಕಡೆಯ ಕಾರ್ತಿಕ ಸೋಮವಾರವಾದ್ದರಿಂದ ದೇವಾಲಯಗಳಿಗೆ ಭೇಟಿ ನೀಡಿದ್ದ ಭಕ್ತಾಧಿಗಳಿಗೆ ದೇವಾಲಯ ಸೇರಿದಂತೆ ವೈಯಕ್ತಿಕವಾಗಿ ಕೆಲ ಭಕ್ತರು ಪ್ರಸಾದ ವ್ಯವಸ್ಥೆ ಏರ್ಪಡಿಸಿದ್ದರು.
ಎಂ.ಡಿ.ಮುಖೇಶ್ ಗೆ ಜಿಲ್ಲಾ ಮಟ್ಟದ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ
ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಎಂ.ಡಿ.ಮುಖೇಶ್ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ ಜಿಲ್ಲಾ ಮಟ್ಟದ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ವಾಜಪೇಯಿ ಆರೋಗ್ಯಶ್ರೀ ಉಚಿತ ಆರೋಗ್ಯ ಶಿಬಿರ
ಶಿಡ್ಲಘಟ್ಟದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಉಚಿತ ಆರೋಗ್ಯ ಶಿಬಿರವನ್ನು ವಾಜಪೇಯಿ ಆರೋಗ್ಯಶ್ರೀ ಯೋಜನೆಯಡಿ ನಡೆಸಿ 115 ಮಂದಿ ರೋಗಿಗಳ ತಪಾಸಣೆ ನಡೆಸಲಾಯಿತು.
ಬಿಜೆಪಿ ಯುವಮೋರ್ಚಾ ವತಿಯಿಂದ ಪ್ರತಿಭಟನಾ ಮೆರವಣಿಗೆ
ನೀರಾವರಿ ಯೋಜನೆಯನ್ನು ಶೀಘ್ರವಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಬಿಜೆಪಿ ಯುವಮೋರ್ಚಾ ವತಿಯಿಂದ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಬಯಲುಸೀಮೆ ಪ್ರದೇಶಗಳಾದ ಕೋಲಾರ ಚಿಕ್ಕಬಳ್ಲಾಪುರ ಜಿಲ್ಲೆಗಳಲ್ಲಿ ಅಂತರ್ಜಲ ಕುಸಿದು ಕುಡಿಯುವ ನೀರಿಗೂ ಪರದಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಕೂಡಲೇ ಶಾಶ್ವತ ನೀರಾವರಿ ಯೋಜನೆಗೆ ಪೂರಕವಾಗಿರುವ ಎತ್ತಿನಹೊಳೆ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಎಂದು ಒತ್ತಾಯಿಸಿದರು.
ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿವರೆಗೂ ಮೆರವಣಿಗೆ ಮೂಲಕ ಸಾಗಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ, ಯುವಮೋರ್ಚಾ ಅಧ್ಯಕ್ಷ ಕೆ.ಆರ್.ರವಿಚಂದ್ರ, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ನರೇಶ್, ಉಪಾಧ್ಯಕ್ಷರಾದ ಶ್ರೀರಾಮ್, ನಾಗೇಂದ್ರ, ಅನಿಲ್, ಮಂಜುಳಮ್ಮ, ಸುಜಾತಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಯಿ ಮಗುವಿನ ಪ್ರೀತಿ ವಾತ್ಸಲ್ಯ ಸದಾ ಅರಳುವುದು
‘ತಾಯಿ ಮಗುವಿನ ಪ್ರೀತಿ ವಾತ್ಸಲ್ಯ ಬಾಡುವುದೂ ಅಲ್ಲ, ಮುರಿಯುವುದೂ ಅಲ್ಲ, ಕಮರುವುದೂ ಅಲ್ಲ, ಅರಳುವುದೇ ಎಲ್ಲ…’
‘ಹುಟ್ಟಿದ್ದು ಅಮ್ಮನ ಹೊಟ್ಟೆಯಲ್ಲಿ, ಬೆಳೆದದ್ದು ಅಮ್ಮನ ಕೈತುತ್ತಿನಲ್ಲಿ, ಓದಿದ್ದು ಅಮ್ಮನ ಸ್ಫೂರ್ತಿಯಲ್ಲಿ, ಈಗಲೂ ಚೆನ್ನಾಗಿದ್ದೀನಿ ಅಮ್ಮನ ಆರೈಕೆಯಲ್ಲಿ, ನಗುನಗುತ್ತಾ ಇದ್ದೀನಿ ಅಮ್ಮನ ಪ್ರೀತಿಯಲ್ಲಿ…’ ಎಂದು ಐದನೇ ತರಗತಿಯ ಕೀರ್ತನಾ ಅಮ್ಮನ ಕುರಿತಂತೆ ಭಾವಪೂರ್ಣವಾಗಿ ಮಾತನಾಡಿದಾಗ ಎಲ್ಲರೂ ಚಪ್ಪಾಳೆ ತಟ್ಟಿ ಅಭಿನಂದಿಸಿದರು.
ಪಟ್ಟಣದ ಹೊರವಲಯದ ಬಿ.ಜಿ.ಎಸ್ ವಿದ್ಯಾಸಂಸ್ಥೆಯಲ್ಲಿ ಸೋಮವಾರ ನಡೆದ ಮಕ್ಕಳ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪುಟ್ಟ ಬಾಲಕಿಯ ಮಾತುಗಳು ಪ್ರಶಂಸೆಗೆ ಪಾತ್ರವಾದವು.
ವೈವಿಧ್ಯಮಯವಾಗಿ ವೇಷ ಭೂಷಣಗಳನ್ನು ಧರಿಸಿ ಮಕ್ಕಳು ನಡೆಸಿಕೊಟ್ಟ ನೃತ್ಯ, ನಾಟಕ, ರೂಪಕ, ಕನ್ನಡನಾಡಿನ ಹಿರಿಮೆಯನ್ನು ಸಾರುವ ಗೀತೆಗಳು ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಕ್ಕಳು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಮಾತನಾಡಿ, ‘ನಮ್ಮ ಜಿಲ್ಲೆಯು ಪಕ್ಕದ ಆಂದ್ರಪ್ರದೇಶದ ಗಡಿ ಭಾಗದಲ್ಲಿರುವುದರಿಂದ ಬಹಳಷ್ಟು ಜನರು ತೆಲುಗು ಭಾಷೆಯನ್ನು ಬಳಸುತ್ತಾರೆ. ಶಿಕ್ಷಕರು ಮಕ್ಕಳಿಗೆ ಭಾಷೆ ಕಲಿಸುವಲ್ಲಿ ಬದ್ಧತೆ ಪ್ರದರ್ಶಿಸಿದಾಗ ಕನ್ನಡ ಬಳಕೆ ಹೆಚ್ಚುತ್ತದೆ’ ಎಂದು ತಿಳಿಸಿದರು.
ಶಿಡ್ಲಘಟ್ಟ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯ ವ್ಯವಸ್ಥಾಪಕಿ ಹೇಮಲತಾ, ಮಾಲೂರಿನ ಬಿಜಿಎಸ್ ಸಮೂಹಗಳ ಕಾರ್ಯದರ್ಶಿ ಬೈಯ್ಯಣ್ಣ, ಪ್ರಾಂಶುಪಾಲ ಆರ್.ಮಹದೇವಯ್ಯ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ವರದನಾಯಕನಹಳ್ಳಿ ಶಾಲಾ ವಿದ್ಯಾರ್ಥಿಗಳಿಂದ ಬಾಲ ಸ್ವಚ್ಛತಾ ಕಾರ್ಯಕ್ರಮ
ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದಲ್ಲಿ ಶನಿವಾರ ಬಾಲ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿನ ಕಳೆ ಗಿಡಗಳನ್ನು ಸ್ವಚ್ಛಗೊಳಿಸಿದರು.
ಚೀಮಂಗಲ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ತಾಲ್ಲೂಕಿನ ಚೀಮಂಗಲ ಗ್ರಾಮದಲ್ಲಿ ಶನಿವಾರ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ರಾಜ್ಯೋತ್ಸವದ ಪ್ರಯುಕ್ತ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಭಾರತೀಯ ರೆಡ್ ಕ್ರಾಸ್ ಸೊಸೈಟಿ ಮತ್ತು ಚೀಮಂಗಲ ಗ್ರಾಮ ಪಂಚಾಯತಿ ಹಾಗೂ ಗ್ರಾಮದ ಕನ್ನಡ ರಾಜ್ಯೋತ್ಸವ ಆಚರಣೆ ಸಮಿತಿ ಸಹಯೋಗದಲ್ಲಿ ನಡೆಸಿದ ರಕ್ತದಾನ ಶಿಬಿರದಲ್ಲಿ 62 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ತಹಶೀಲ್ದಾರ್ ಜಿ.ಎ. ನಾರಾಯಣಸ್ವಾಮಿ ಧ್ವಜಾರೋಹಣ ನಡೆಸಿ ರಾಜ್ಯೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಯವರು ಕನ್ನಡ ರಾಜ್ಯೋತ್ಸವದಂತಹ ಸಮಾರಂಭಗಳಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳಂತಹ ಸಾಮಾಜಿಕ ಕಳಕಳಿಯುಳ್ಳ ಕೆಲಸಗಳನ್ನು ಮಾಡುತ್ತಿರುವುದು ಪ್ರೇರಣಾದಾಯಕ. ಕನ್ನಡವು ಈಗ ಹೆಚ್ಚು ಪ್ರಚಲಿತದಲ್ಲಿರುವುದು ಗ್ರಾಮಗಳಲ್ಲೇ ಹಾಗೂ ಗ್ರಾಮಸ್ಥರಿಂದ ನೀಡಿದ ರಕ್ತವು ಹಲವರ ಜೀವರಕ್ಷಕ ಎಂದು ತಿಳಿಸಿದರು.
ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಗ್ರಾಮ ಪಂಚಾಯತಿ ಅದ್ಯಕ್ಷ ಬಿ,ಈಶ್ವರ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಎನ್.ಕೆ.ಗುರುರಾಜ ರಾವ್, ಕನ್ನಡ ರಾಜ್ಯೋತ್ಸವ ಆಚರಣೆ ಸಮಿತಿ ಅಧ್ಯಕ್ಷ ಮೋಹನ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮುನಿನಾರಾಯಣಪ್ಪ, ಪ್ರೌಢಶಾಲಾ ಮುಖ್ಯ ಶಿಕ್ಷಕ ಶಿವಶಂಕರ್, ಕಂದಾಯ ನಿರೀಕ್ಷಕ ಕುಮಾರಸ್ವಾಮಿ, ರೆಡ್ ಕ್ರಾಸ್ ಸೊಸೈಟಿಯ ಡಾ.ವಿಕ್ರಮ್, ರವಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

