ಪಟ್ಟಣದ ಅಮೀರ್ ಭಾಬಾ ದರ್ಗಾ ಹತ್ತಿರ ಶನಿವಾರ ಹೈದರಾಲಿ ಗರಡಿ ವತಿಯಿಂದ ನಡೆಸಿದ ನಾಲ್ಕನೇ ವರ್ಷದ ಕುಸ್ತಿ ಪಂದ್ಯಾವಳಿಯು ರೋಚಕವಾಗಿದ್ದು ಜನರು ಉತ್ಸಾಹದಿಂದ ವೀಕ್ಷಿಸಿದರು.
ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಹಾಸನ, ಮೈಸೂರು, ಹುಬ್ಬಳ್ಳಿ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಹರಿಹರ, ಬೆಂಗಳೂರು ಮುಂತಾದೆಡೆಗಳಿಂದ ಪೈಲ್ವಾನರು ಆಗಮಿಸಿದ್ದರು.
ಮರಿ ಪೈಲ್ವಾನರು ಒಂದೆಡೆ ಸೆಣಸಿ ಜನರಿಂದ ಮೆಚ್ಚುಗೆ ಪಡೆದರೆ, ಮದಗಜಗಳಂತಿದ್ದ ಪೈಲ್ವಾನರು ಮಾರ್ಪೀಟ್ ನಡೆಸಿ ಜನರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದರು.
ಕುಸ್ತಿ ನಡೆಯುವ ಸ್ಥಳದಲ್ಲಿ ಜನರು ಕಿಕ್ಕಿರಿದು ನಿಂತಿದ್ದಲ್ಲದೆ, ಸುತ್ತಮುತ್ತಲಿನ ಕಟ್ಟಡಗಳು ಹಾಗೂ ಮರದ ಮೇಲೆಲ್ಲಾ ಜನರಿದ್ದು ಕುಸ್ತಿಯನ್ನು ಆಸ್ವಾದಿಸಿದರು. ಚಪ್ಪಾಳೆ, ಶಿಳ್ಳೆ ಹೊಡೆದು ಹುರಿದುಂಬಿಸಿದರು. ಗೆದ್ದವರನ್ನು ಅಭಿನಂದಿಸಿದರು. ವಿಜೇತರಿಗೆ ಪ್ರೋತ್ಸಾಹಿಸಲು ಕೆಲವರು ಬಹುಮಾನ ಹಣವನ್ನು ಘೋಷಿಸುತ್ತಿದ್ದರು. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ ಕುಸ್ತಿ ಪಟುಗಳು ವಿವಿಧ ಕಸರತ್ತು ಹಾಗೂ ಕೈ ಚಳಕದೊಂದಿಗೆ ಸ್ಥಳೀಯ ಕುಸ್ತಿ ಪಟುಗಳೊಂದಿಗೆ ಕುಸ್ತಿ ನಡೆಸಿದರು. ಪರಸ್ಪರರು ಬಗ್ಗಿಸಲು ಮತ್ತು ಹೆಣೆಯಲು ನಡೆಸಿದ ತಂತ್ರ ಮತ್ತು ಪ್ರತಿ ತಂತ್ರದ ಕುಸ್ತಿ ಪಟುಗಳು ನೋಡುಗರ ಮೈನವಿರೇಳಿಸಿದವು. ಸೂಕ್ಷ್ಮ ಹೋರಾಟದ ಕ್ಷಣಗಳಲ್ಲಿ ಉತ್ತೇಜಿಸುವ ಜೈಕಾರ ಕೇಳಿ ಬಂದಿತು. ವಿಜೇತರಾದಾಗ ಅಭಿಮಾನಿಗಳು ಸಂತಸದಿಂದ ಕೇಕೆ ಹಾಕಿ ಕೂಗಿ ಕುಣಿದಾಡಿದ ದೃಶ್ಯ ಸಹ ಕಂಡುಬಂತು.
ಭಾಗವಹಿಸಿದ್ದ ಎಲ್ಲಾ ಪೈಲ್ವಾನರಿಗೂ ಪದಕ ಹಾಗೂ ಹೂವಿನ ಹಾರವನ್ನು ಹಾಕಿ ಹೈದರಾಲಿ ಗರಡಿ ವತಿಯಿಂದ ಅಭಿನಂದಿಸಿದ್ದಲ್ಲದೆ, ವಿಶೇಷ ಮಾರ್ಪೀಟ್ನಲ್ಲಿ ಗೆದ್ದವರಿಗೆ ದೊಡ್ಡ ಕಪ್ ನೀಡಿದರು.
ಈ ಸಂದರ್ಭದಲ್ಲಿ ಗರಡಿ ಮನೆಯ ಗುರುಗಳನ್ನು, ವಿವಿದೆಡೆಗಳಿಂದ ಪೈಲ್ವಾನರನ್ನು ಕರೆತಂದಿದ್ದ ಗುರುಗಳನ್ನು ಸನ್ಮಾನಿಸಲಾಯಿತು.
ಶಾಸಕ ಎಂ.ರಾಜಣ್ಣ, ಪುರಸಭಾ ಸದಸ್ಯ ಅಫ್ಸರ್ಪಾಷ, ಎಂ.ಡಿ.ಮೌಲ, ಮುಕ್ತಿಯಾರ್ಪಾಷ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
[images cols=”three” lightbox=”true”]
[image link=”2212″ image=”2212″]
[image link=”2214″ image=”2214″]
[image link=”2210″ image=”2210″]
[/images]
ಹೈದರಾಲಿ ಗರಡಿ ವತಿಯಿಂದ ಕುಸ್ತಿ ಪಂದ್ಯಾವಳಿ
ನಾರಾಯಣದಾಸರಹಳ್ಳಿಯಲ್ಲಿ ರೂಪುಗೊಳ್ಳುತ್ತಿರುವ ಗಾಂಧೀಜಿ ಪ್ರತಿಮೆಗಳು
ಕೋಲನ್ನಿಡಿದು ಮುನ್ನಡಿಗೆಯಲ್ಲಿರುವ ಗಾಂಧೀಜಿಯ ನೂರಕ್ಕೂ ಹೆಚ್ಚು ಪ್ರತಿಮೆಗಳ ನೆನಪಿನ ಕಾಣಿಕೆಯನ್ನು ಕಳೆದ ಗಾಂಧಿ ಜಯಂತಿಯ ಸಂದರ್ಭದಲ್ಲಿ ಗಣ್ಯರಿಗೆಲ್ಲಾ ಗಾಂಧಿ ಭವನದ ವತಿಯಿಂದ ವಿತರಿಸಲಾಯಿತು. ಈ ಗಾಂಧಿ ಪ್ರತಿಮೆಗಳು ರೂಪುಗೊಂಡದ್ದು ತಾಲ್ಲೂಕಿನ ನಾರಾಯಣದಾಸರಹಳ್ಳಿಯಲ್ಲಿ.
ತಾಲ್ಲೂಕಿನ ನಾರಾಯಣದಾಸರಹಳ್ಳಿ ಗ್ರಾಮದ ಪುರುಷೋತ್ತಮ್ ಎಂಬ ಕಲಾವಿದನಿಂದ ರೂಪುಗೊಂಡ ನೂರಾರು ಗಾಂಧಿ ಪ್ರತಿಮೆಗಳು ನೆನಪಿನ ಕಾಣಿಕೆಗಳ ರೂಪದಲ್ಲಿ ವಿವಿದೆಡೆಗೆ ಸಾಗಿವೆ. ಕೆಂಪೇಗೌಡನ ಪ್ರತಿಮೆ, ಡಾ.ರಾಜ್ಕುಮಾರ್ ಪ್ರತಿಮೆ, ಬಸವಣ್ಣ, ಸರ್ವಜ್ಞ, ದಸರಾ ಮೆರವಣಿಕೆಯ ಪ್ರತಿಕೃತಿ ಮುಂತಾದವುಗಳಲ್ಲಿ ಪುರುಷೋತ್ತಮ್ ಅವರ ಕಲೆಯ ಕಾಣಿಕೆಯಿದೆ.

ಚಿತ್ರವನ್ನು ರಚಿಸಿಕೊಂಡು ಅದಕ್ಕೆ ತಕ್ಕಂತೆ ಮಣ್ಣಿನಲ್ಲಿ ಕಲಾಕೃತಿಯನ್ನು ತಯಾರಿಸಿ, ಪ್ಲಾಸ್ಟರ್ ಆಫ್ ಪ್ಯಾರಿಸ್ ಅಥವಾ ರಬ್ಬರಿನ ಎರಕವನ್ನು ತಯಾರಿಸಿಕೊಳ್ಳುತ್ತಾರೆ. ನಂತರ ಫೈಬರ್, ಹಿತ್ತಾಳೆ, ಅಲ್ಯೂಮಿನಿಯಂ ಮುಂತಾದ ಅಗತ್ಯಕ್ಕನುಸಾರವಾಗಿ ಮೂರ್ತಿಗಳ ತಯಾರಿ ನಡೆಸುತ್ತಾರೆ.
ದೆಹಲಿ ಕರ್ನಾಟಕ ಸಂಘ, ಕರ್ನಾಟಕ ಶಿಲ್ಪ ಅಕಾಡೆಮಿ ವತಿಯಿಂದ ನಡೆದ ವಿವಿಧ ಜಿಲ್ಲೆಗಳ ಕಾರ್ಯಾಗಾರಗಳ ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಸಂದಿವೆ.
‘ಸುಮಾರು ಹತ್ತು ವರ್ಷಗಳಿಂದ ಕಲಾಕೃತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಕಲೆಯನ್ನು ಒಲಿಸಿಕೊಳ್ಳಲು ಗುರುಗಳಾದ ಬನಶಂಕರಿಯ ವೆಂಕಟಾಚಲಪತಿಯವರು ನನ್ನನ್ನು ಪ್ರೋತ್ಸಾಹಿಸಿದ್ದೇ ಕಾರಣ. ಅವರೇ ನನ್ನನ್ನು ಕರಕುಶಲ ತರಬೇತಿ ಕೇಂದ್ರಕ್ಕೆ ಸೇರಿಸಿದ್ದರು. ದೊಡ್ಡ ದೊಡ್ಡ ಪ್ರತಿಮೆಗಳ ನಿರ್ಮಾಣವಾಗುವಾಗ ಸಾಂಘಿಕ ಕೆಲಸವಿರುವುದರಿಂದ ನನ್ನ ಕಲೆಯೂ ಅದರಲ್ಲಿ ಸೇರುತ್ತದೆ. ಈಚೆಗೆ ಗಾಂಧಿ ಭವನದವರಿಗೆಂದು ನೂರು ಗಾಂಧೀಜಿ ಮೂರ್ತಿಗಳನ್ನು ತಯಾರಿಸಿ ಕೊಟ್ಟೆ. ಅವನ್ನು ಅವರು ನೆನಪಿನ ಕಾಣಿಕೆಗಳಾಗಿ ಗಣ್ಯರಿಗೆ ನೀಡಿದರು. ನನ್ನ ಕೆಲಸವನ್ನು ಮೆಚ್ಚಿ ಅವರು ಇನ್ನೂ ಐವತ್ತು ಗಾಂಧಿ ಮೂರ್ತಿಗಳನ್ನು ಕೇಳಿದ್ದಾರೆ’ ಎನ್ನುತ್ತಾರೆ ಪುರುಷೋತ್ತಮ್.
ಪುರುಷೋತ್ತಮ್ ಮೊಬೈಲ್ ಸಂಖ್ಯೆ: 9611288202
–ಡಿ.ಜಿ.ಮಲ್ಲಿಕಾರ್ಜುನ.
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಪ್ರಯುಕ್ತ ಪುಸ್ತಕ ಪ್ರದರ್ಶನ
ಉತ್ತಮ ಓದುಗರನ್ನು ಗುರುತಿಸಿ ಗೌರವಿಸುವ ಹಾಗೂ ಓದುಗರನ್ನು ಆಕರ್ಷಿಸುವ ಮೂಲಕ ಗ್ರಂಥಾಲಯದಲ್ಲಿ ಪುಸ್ತಕ ಸ್ನೇಹಿ ಪರಿಸರವನ್ನು ರೂಪಿಸುತ್ತಿರುವುದಾಗಿ ಸಹಗ್ರಂಥಪಾಲಕಿ ಕೆ.ಶಶಿಕಲಾ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಶುಕ್ರವಾರ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಪ್ರಯುಕ್ತ ಪುಸ್ತಕ ಪ್ರದರ್ಶನವನ್ನು ಏರ್ಪಡಿಸಿದ್ದು, ಗ್ರಂಥಾಲಯದ ಪಿತಾಮಹ ಡಾ. ಎಸ್.ವಿ. ರಂಗನಾಥನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಪ್ರಸ್ತುತ 1420 ಗ್ರಂಥಾಲಯ ಸದಸ್ಯರಿದ್ದು, ಈ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ವಾರದ ಕಾಲ ಪುಸ್ತಕ ಪ್ರದರ್ಶನವನ್ನು ಏರ್ಪಡಿಸಿದೆ. ದಿನಪತ್ರಿಕೆ ಹಾಗೂ ವಾರಪತ್ರಿಕೆಗಳನ್ನು ಓದುವವರೂ ಸಾಕಷ್ಟು ಮಂದಿ ಬರುತ್ತಿದ್ದು, ಓದುಗರಿಗೆ ಅನುಕೂಲಕರ ವಾತಾವರಣವನ್ನು ಸೃಷ್ಠಿಸಿ, ಉತ್ತಮ ಓದುಗರನ್ನು ಗೌರವಿಸುವ ಕಾರ್ಯವನ್ನೂ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಗ್ರಂಥಾಲಯದ ಸಹಾಯಕರಾದ ಎನ್.ಶ್ರೀರಾಮ್, ಗೀತಾ, ನವೀನ್ಕುಮಾರ್, ಹಂಡಿಗನಾಳ ಗ್ರಂಥಾಲಯದ ಮೇಲ್ವಿಚಾರಕ ಮುನಿರಾಜು, ತುಮ್ಮನಹಳ್ಳಿ ಗ್ರಂಥಾಲಯದ ಮೇಲ್ವಿಚಾರಕ ದೇವಣ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಶಿಡ್ಲಘಟ್ಟದಲ್ಲಿ ಮಕ್ಕಳ ದಿನಾಚರಣೆಯ ಸಂಭ್ರಮ
ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ನೆಹರೂ ರವರ ಜನ್ಮದಿನ ಹಾಗೂ ಮಕ್ಕಳ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ತಾಲ್ಲೂಕಿನ ಹಲವು ಶಾಲೆಗಳಲ್ಲಿ ನಡೆದ ಮಕ್ಕಳ ಕಾರ್ಯಕ್ರಮಗಳ ಒಂದು ನೋಟ ಇಲ್ಲಿದೆ
[images cols=”six” lightbox=”true”]
[image link=”2202″ image=”2202″]
[image link=”2200″ image=”2200″]
[image link=”2199″ image=”2199″]
[image link=”2198″ image=”2198″]
[image link=”2197″ image=”2197″]
[image link=”2196″ image=”2196″]
[/images]
ಶಿಡ್ಲಘಟ್ಟದಲ್ಲಿ ಕುದುರೆಯ ಮೇಲೆ ಕತ್ತಿ ಹಿಡಿದು ಸಾಗಿದ ಪುಟ್ಟ ಟಿಪ್ಪುಸುಲ್ತಾನ್
ಪಟ್ಟಣದಲ್ಲಿ ಶುಕ್ರವಾರ ಕುದುರೆಯ ಮೇಲೆ ಕತ್ತಿ ಹಿಡಿದು ಸಾಗುತ್ತಿದ್ದ ಪುಟ್ಟ ಟಿಪ್ಪುಸುಲ್ತಾನ್ ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದ.
ಶಾಲೆಯೊಂದರಲ್ಲಿ ವೇಷಭೂಷಣ ಸ್ಪರ್ಧೆಗೆ ಟಿಪ್ಪುಸುಲ್ತಾನ್ ವೇಷಧರಿಸಿದ್ದ ಬಾಲಕ ಕುದುರೆ ಮರಿಯೊಂದರ ಮೇಲೆ ಹೋಗುತ್ತಿದ್ದುದರಿಂದ ಎಲ್ಲರ ಗಮನ ಸೆಳೆದಿದ್ದ. ಎಲ್.ಕೆ.ಜಿ ಓದುವ ವಿದ್ಯಾರ್ಥಿ ಮೊಹಮ್ಮದ್ ಸೂಫಿಯಾನ್ನನ್ನು ಆತನ ತಂದೆ ಅಬ್ದುಲ್ ಅಯಾಜ್ ವೇಷಭೂಷಣ ಸ್ಪರ್ಧೆಗೆ ಅಣಿಗೊಳಿಸಿದ್ದಲ್ಲದೆ ಪುಟ್ಟ ಕುದುರೆಯನ್ನೂ ತಂದು ಅದರ ಮೇಲೆ ಕೂರಿಸಿಕೊಂಡು ಶಾಲೆಗೆ ಕರೆದೊಯ್ಯುತ್ತಿದ್ದ.
ತಳ್ಳುವ ಗಾಡಿಯೊಂದರಲ್ಲಿ ಕಡಲೆಕಾಯಿಯನ್ನು ಮಾರುವ ಫಿಲೇಚರ್ ಕ್ವಾಟರ್ಸ್ ವಾಸಿ ಅಬ್ದುಲ್ ಅಯಾಜ್ ನಾಲ್ಕು ವರ್ಷದ ಮಗುವಿಗಾಗಿ ಪಟ್ಟ ಶ್ರಮವನ್ನು ಕಂಡು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣ ಬಹುಮುಖ್ಯ – ಶಾಸಕ ಎಂ.ರಾಜಣ್ಣ
ಮಕ್ಕಳ ಹಕ್ಕುಗಳು, ಅವರ ಶಿಕ್ಷಣ, ಸಮಾನ ಅವಕಾಶ ಇತ್ಯಾದಿ ಕುರಿತು ಸಾಕಷ್ಟು ಚರ್ಚೆಗಳು ಆಗುತ್ತಿದ್ದರೂ, ಅಂಥ ಚರ್ಚೆಗಳ ಪರಿಧಿಯಿಂದ ಆಚೆಯೇ ಕೆಲ ಮಕ್ಕಳು ಉಳಿದುಬಿಟ್ಟಿದ್ದು ಅವರನ್ನು ಗುರುತಿಸಿ ಶಿಕ್ಷಣ ನೀಡಬೇಕಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ಪಟ್ಟಣದ ಉಲ್ಲೂರುಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಮಕ್ಕಳ ದಿನಾಚರಣೆಯ ಅಂಗವಾಗಿ ನಡೆದ ಬಾಲ ಸ್ವಚ್ಛತಾ ಮಿಷನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಚ್ಛ ಭಾರತ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಿರುವ ರಾಜ್ಯ ಸರಕಾರ ‘ಬಾಲ ಸ್ವಚ್ಛತಾ ದಿವಸ’ ಆಚರಣೆಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ದಿನಾಚರಣೆಯಂದು ಪ್ರಾರಂಭಿಸಿ ಆರು ದಿನಗಳ ಕಾಲ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಬಾಲ ಸ್ವಚ್ಛತಾ ದಿನವನ್ನು ಆಚರಿಸಲಾಗುತ್ತಿದೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದೆ. ಸ್ವಚ್ಛತೆಯ ಕೊರತೆಯಿಂದಾಗಿ ಮಕ್ಕಳು ನಾನಾ ರೋಗಗಳಿಗೆ ತುತ್ತಾಗುವುದು ಸಾಮಾನ್ಯ ಸಂಗತಿಯಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ ಮಾತನಾಡಿ, ಮಕ್ಕಳ ಮನಸ್ಸು ಸೂಕ್ಷ್ಮ. ಆದರೆ ಗ್ರಹಣಾ ಶಕ್ತಿ ಅಧಿಕ. ಪೋಷಕರು ಮತ್ತು ಶಿಕ್ಷಕರು ಅದನ್ನು ಅರಿತು ಅವರಿಗೆ ಉತ್ತಮ ರೀತಿಯಲ್ಲಿ ಮಾರ್ಗದರ್ಶನ ಮಾಡಬೇಕು. ಆರು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಅಂಗನವಾಡಿ ಮತ್ತು ಶಾಲೆ ಸ್ವಚ್ಛತೆ, ಶಾಲಾ ಪರಿಸರ ಹಾಗೂ ಕ್ರೀಡಾಂಗಣದ ಸ್ವಚ್ಛತೆಗೆ ಒತ್ತು ನೀಡಲಾಗುತ್ತದೆ. ನಂತರ ಮಕ್ಕಳಲ್ಲಿ ವೈಯಕ್ತಿಕ ಸ್ವಚ್ಛತೆ, ಆಹಾರದ ಸ್ವಚ್ಛತೆ ಮತ್ತು ಶುದ್ಧ ಕುಡಿಯುವ ನೀರಿನ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲಾಗುತ್ತದೆ. ಅಂತಿಮವಾಗಿ ಮಕ್ಕಳಿಗೆ ಶೌಚಾಲಯದ ಬಳಕೆ ಹಾಗೂ ಸ್ವಚ್ಛತೆ ಮತ್ತು ಅದರ ಪ್ರಾಮುಖ್ಯದ ಬಗ್ಗೆ ತಿಳಿವಳಿಕೆ ನೀಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ವೇಷಭೂಷಣಗಳನ್ನು ಧರಿಸಿದ್ದ ಮಕ್ಕಳು ಕೋಲಾಟ ಹಾಗೂ ನೃತ್ಯವನ್ನು ಪ್ರದರ್ಶಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಲಕ್ಷ್ಮೀದೇವಮ್ಮ, ಪ್ರಭಾರಿ ಇ.ಒ ಗಣಪತಿ ಸಾಕರೆ, ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್ಕುಮಾರ್, ಆಯುಷ್ ವೈದ್ಯ ಡಾ.ವಿಜಯ್ಕುಮಾರ್, ಮಹಿಳಾ ಸಾಂತ್ವನ ಕೇಂದ್ರದ ಡಾ.ವಿಜಯಾ, ಸೌಮ್ಯ, ಅಂಗನವಾಡಿ ಮೇಲ್ವಿಚಾರಕರಾದ ಗಿರಿಜಾಂಬಿಕೆ, ಶಾಂತಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಶಿಕ್ಷಕರು ಮಕ್ಕಳಿಗೆ ಸರಳವಾಗಿ ಬೋಧಿಸಲು ಕಾರ್ಯಪ್ರವೃತ್ತರಾಗಬೇಕು
ಎಸ್ಎಸ್ಎಲ್ಸಿ ಹೊಸ ಪಠ್ಯಕ್ರಮವನ್ನು ಜಾರಿಗೊಳಿಸಿದ್ದು ಶಿಕ್ಷಕರು ಮಕ್ಕಳಿಗೆ ಸರಳವಾಗಿ ಬೋಧಿಸಲು ಕಾರ್ಯಪ್ರವೃತ್ತರಾಗಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಪ್ರೌಢಶಾಲಾ ಶಿಕ್ಷಕರ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೊಸ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಪೂರಕ ಮಾಹಿತಿ ನೀಡುವ ಉದ್ದೇಶದಿಂದ ಶಿಕ್ಷಕರಿಗೆ ತರಬೇತಿಯನ್ನು ಹಮ್ಮಿಕೊಂಡಿದ್ದು, ಶಿಕ್ಷಕರು ತಾವು ಪಡೆದ ಜ್ಞಾನವನ್ನು ಮಕ್ಕಳಿಗೆ ತಲುಪಿಸಬೇಕು. ಹೆಚ್ಚು ಬೋಧನೋಪಕರಣಗಳನ್ನು ಬಳಸಿ ಕ್ರಿಯಾಶೀಲವಾಗಿ ಮಕ್ಕಳಿಗೆ ಪಾಠ ಮಾಡಬೇಕೆಂದು ಹೇಳಿದರು.
ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆ ಪ್ರಭಾರಿ ಮುಖ್ಯಶಿಕ್ಷಕ ಬೈರಾರೆಡ್ಡಿ ಮಾತನಾಡಿ, ಎಸ್ಎಸ್ಎಲ್ಸಿ ಫಲಿತಾಂಶ ಉತ್ತಮಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕಾರ್ಯಾಗಾರದಲ್ಲಿ ಒತ್ತು ನೀಡಲಾಗುವುದು. ಶಿಕ್ಷಕರು ಸಂಪನ್ಮೂಲ ವ್ಯಕ್ತಿಗಳ ಬಳಿ ಗೊಂದಲಗಳನ್ನು ಪರಿಹರಿಸಿಕೊಳ್ಳಬೇಕು. ಶಿಕ್ಷಕರು ತರಗತಿಯಲ್ಲಿ ಎದುರಿಸಬಹುದಾದ ಸವಾಲುಗಳನ್ನು ನಿವಾರಿಸಲು ಏರ್ಪಡಿಸಿರುವ ಕಾರ್ಯಾಗಾರವನ್ನು ಸದುಪಯೋಗಪಡಿಸಿಕೊಳ್ಳಲು ತಿಳಿಸಿದರು.
ಶಿಕ್ಷಣ ಸಂಯೋಜಕ ರಾಮಣ್ಣ, ಸಂಪನ್ಮೂಲ ವ್ಯಕ್ತಿಗಳಾದ ಉಪನ್ಯಾಸಕರಾದ ಹನುಮಂತರಾಯಪ್ಪ, ದೇವರಾಜ್, ಶಿಕ್ಷಕರಾದ ಎಲ್.ವಿ.ವೆಂಕಟರೆಡ್ಡಿ, ಬಾಬು ಮತ್ತಿತರರು ಹಾಜರಿದ್ದರು.
ವಿಜ್ಞಾನಿಗಳಾದ ಮೂತ್ತೂರು ಪ್ರೌಢಶಾಲೆಯ ವಿದ್ಯಾರ್ಥಿಗಳು
ವಿದ್ಯಾರ್ಥಿಯಲ್ಲಿರುವ ವಿಜ್ಞಾನಿಯನ್ನು ಗುರುತಿಸುವ ‘ಡಿಸೈನ್ ಫಾರ್ ಚೇಂಜ್’ ಎಂಬ ಸಂಸ್ಥೆ ನಡೆಸುವ ವೈಜ್ಞಾನಿಕ ಸಂಶೋಧನಾ ಸ್ಪರ್ಧೆಗೆ ತಾಲ್ಲೂಕಿನ ಮೂತ್ತೂರು ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಮೂತ್ತೂರು ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯಲ್ಲಿರುವ ಅಜಿತ್, ಶಶಿ ಮತ್ತು ಒಂಬತ್ತನೇ ತರಗತಿಯ ಮನೋಜ್ ರೂಪಿಸಿರುವ ಗುರುತ್ವಾಕರ್ಷಣೆ ಬಳಸಿ ಬೆಳೆಗೆ ನೀರು ಹನಿಸುವ ತಂತ್ರಜ್ಞಾನವು ಸ್ಪರ್ಧೆಗೆ ಆಯ್ಕೆಯಾಗಿದೆ. ಖಾಲಿಯಾದ ನೀರಿನ ಕ್ಯಾನ್, ಹನಿನೀರಿನ ಪೈಪನ್ನು ಅಳವಡಿಸಿ ಶಾಲಾ ಆವರಣದ ತರಕಾರಿ ಬೆಳೆಗಳಿಗೆ ಗುರುತ್ವಾಕರ್ಷಣೆ ಬಳಸಿ ನೀರು ಹನಿಸುವ ಕಡಿಮೆ ವೆಚ್ಚದ ಅವರ ವಿಧಾನವು ಬರಪೀಡಿತ ಜಿಲ್ಲೆಯ ಜನರಿಗೆ, ವಿದ್ಯುತ್ ಕಡಿತವಾಗುತ್ತಿರುವ ದಿನಗಳಲ್ಲಿ ಉಪಯುಕ್ತವಾಗಲಿದೆ. ಶಾಲೆಯ ಅನುಕೂಲಕ್ಕಾಗಿ ರೂಪಿಸಿದ ತಂತ್ರಜ್ಞಾನ ಈಗ ವೈಜ್ಞಾನಿಕ ಸಂಶೋಧನಾ ಸ್ಪರ್ಧೆವರೆಗೂ ಸಾಗಿದೆ.
ಈ ಸಂಶೋಧನೆಯಿಂದಾಗಿ ವಿದ್ಯಾರ್ಥಿಗಳಾದ ಅಜಿತ್, ಶಶಿ, ಮನೋಜ್ ತಮ್ಮ ವಿಜ್ಞಾನ ಶಿಕ್ಷಕರು ಮತ್ತು ಮುಖ್ಯಶಿಕ್ಷಕರೊಂದಿಗೆ ನವೆಂಬರ್ 22 ರಂದು ಅಹಮದಾಬಾದ್ನಲ್ಲಿ ನಡೆಯುವ ‘ಡಿಸೈನ್ ಫಾರ್ ಚೇಂಜ್’ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
‘ಡಿಸೈನ್ ಫಾರ್ ಚೇಂಜ್’ ಸಂಸ್ಥೆಯು ಜಾಗತಿಕ ಮಟ್ಟದ ಸಂಚಲನೆಯನ್ನು ರೂಪಿಸುತ್ತಿದೆ. ಅವರ ಉದ್ದೇಶ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಬೆಳಕಿಗೆ ತರುವುದು ಮತ್ತು ಅದಕ್ಕೆ ಅವಕಾಶ ಕಲ್ಪಿಸಿ ಉತ್ತಮ ಜಾಗತಿಕ ಸಮಾಜ ರೂಪಿಸುವುದಾಗಿದೆ. ಸುಮಾರು 35 ದೇಶಗಳ ಮೂರು ಲಕ್ಷಕ್ಕೂ ಹೆಚ್ಚಿನ ಶಾಲೆಗಳ ಸಂಪರ್ಕದಲ್ಲಿರುವ ಈ ಸಂಸ್ಥೆ ಪ್ರತಿ ವರ್ಷ ವೈಜ್ಞಾನಿಕ ಸಂಶೋಧನಾ ಸ್ಪರ್ಧೆ ನಡೆಸುತ್ತದೆ. ಈ ಬಾರಿಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 2000 ಸ್ಪರ್ಧಿಗಳಲ್ಲಿ 100 ಉತ್ತಮವೆಂದು ಆಯ್ಕೆ ಮಾಡಿದ್ದು, ಅದರಲ್ಲಿ ಮುತ್ತೂರಿನ ವಿದ್ಯಾರ್ಥಿಗಳ ತಂತ್ರಜ್ಞಾನವು ಸ್ಥಾನ ಪಡೆದಿದೆ.
ಮುತ್ತೂರು ಪ್ರೌಢಶಾಲೆಯಲ್ಲಿ ‘ನಮ್ಮ ಮುತ್ತೂರು’ ಸಂಸ್ಥೆ, ಅಗಸ್ತ್ಯಾ ಮತ್ತು ಸೆಲ್ಕೋ ಫೌಂಡೇಷನ್ ಸಹಯೋಗದಲ್ಲಿ ವೈಜ್ಞಾನಿಕ ಪ್ರಯೋಗಾಲಯವನ್ನು ನಡೆಸಲಾಗುತ್ತಿದೆ. ಕಲಿಕೆಯೊಂದಿಗೆ ಪರಿಸರ, ಕೃಷಿ, ತಂತ್ರಜ್ಞಾನ, ತ್ಯಾಜ್ಯ ಮರುಪೂರಣ ಮುಂತಾದ ಹಲವು ವಿಭಾಗಗಳನ್ನಾಗಿಸಿ ವಿದ್ಯಾರ್ಥಿಗಳೇ ತಂಡಗಳಾಗಿ ಇದರಲ್ಲಿ ಭಾಗಿಯಾಗಿದ್ದಾರೆ.
‘ನಮ್ಮ ಶಾಲೆಯಲ್ಲಿ ಪ್ರಯೋಗಗಳನ್ನು ನಡೆಸಲು ‘ನಮ್ಮ ಮುತ್ತೂರು’ ಸಂಸ್ಥೆ ಸಹಾಯ ಮಾಡಿದೆ. ನಮ್ಮ ವಿಜ್ಞಾನ ಶಿಕ್ಷಕ ಶ್ರೀನಿವಾಸ್ ಮತ್ತು ಅಗಸ್ತ್ಯಾ ಫೌಂಡೇಷನ್ ಲಕ್ಷ್ಯಕುಮಾರ್ ನಮಗೆ ಮಾರ್ಗದರ್ಶನ ಮಾಡಿದ್ದಾರೆ. ನಮ್ಮ ಶಾಲಾ ಆವರಣದಲ್ಲಿ ಕಡಿಮೆ ನೀರನ್ನು ಬಳಸಿ ಸಾವಯವ ತರಕಾರಿ ಬೆಳೆಯಲು ಈ ತಂತ್ರಜ್ಞಾನ ಬಳಸಿದೆವು. ಇದರಿಂದಾಗಿ ಗುಜರಾತ್ನ ಅಹಮದಾಬಾದ್ಗೆ ಹೋಗುತ್ತಿರುವುದು ತುಂಬಾ ಸಂತಸ ತಂದಿದೆ. ಅಲ್ಲಿಗೆ ಆಗಮಿಸಿರುವ ಎಲ್ಲಾ ಸ್ಪರ್ಧಿಗಳನ್ನೂ ಕಂಡು ಮಾಹಿತಿ ಪಡೆದು ಬರುತ್ತೇವೆ’ ಎನ್ನುತ್ತಾರೆ ವಿದ್ಯಾರ್ಥಿಗಳಾದ ಅಜಿತ್, ಶಶಿ ಮತ್ತು ಮನೋಜ್.
– ಡಿ.ಜಿ.ಮಲ್ಲಿಕಾರ್ಜುನ.
[images cols=”three” lightbox=”true”]
[image link=”2180″ image=”2180″]
[image link=”2179″ image=”2179″]
[image link=”2178″ image=”2178″]
[/images]
ತಾಲ್ಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಆರೋಗ್ಯ ಸಚಿವರ ಭೇಟಿ
ಪ್ರತಿಯೊಂದು ಜಿಲ್ಲಾ ಹಾಗೂ ತಾಲ್ಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಶೀಘ್ರದಲ್ಲೇ ಜನೌಷಧಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ಬೆಳಿಗ್ಗೆ ಭೇಟಿ ನೀಡಿ ಅವರು ಮಾತನಾಡಿದರು. ಹಿಂದೆ ರಾಜ್ಯದ ಆಸ್ಪತ್ರೆಗೆ ಔಷಧಿಗಳ ಖರೀದಿಗಾಗಿ ಬಜೆಟ್ನಲ್ಲಿ ಹಣ ಮೀಸಲಿಡುವಾಗ ಕೆಲವೆಡೆ ಹೆಚ್ಚು ಕೆಲವೆಡೆ ಕಮ್ಮಿಯಾಗುತ್ತಿತ್ತು. ಇದರಿಂದಾಗಿ ವೈದ್ಯರು ಔಷಧಿಗಳನ್ನು ಕೊಂಡು ತರಲು ಬರೆದುಕೊಡುತ್ತಿದ್ದರು. ಬಡರೋಗಿಗಳಿಗೆ ಅನಾನುಕೂಲವಾಗುವುದರಿಂದ ಈ ಸಮಸ್ಯೆ ನಿವಾರಿಸಲು ಮುಖ್ಯಮಂತ್ರಿಗಳು ಜನೌಷಧಿ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಿದ್ದಾರೆ. ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಇಪ್ಪತ್ತನಾಲ್ಕು ಗಂಟೆಗಳ ಕಾಲ ತೆರೆದಿರುವ ಔಷಧಿ ಮಳಿಗೆಯನ್ನು ತೆರೆಯಲು ಹಿಂದೂಸ್ತಾನ್ ಲ್ಯಾಟೆಕ್ಸ್ ಲಿಮಿಟೆಡ್ನೊಂದಿಗೆ ಒಪ್ಪಂದವಾಗಿದ್ದು, ಮೂರು ತಿಂಗಳೊಳಗಾಗಿ ಕಾರ್ಯಾರಂಭವಾಗಲಿದೆ. ಜನರಿಕ್ ಔಷಧಿ ಮಳಿಗೆ ಮತ್ತು 24 ಗಂಟೆ ತೆರೆದಿರುವ ಔಷಧಿ ಮಳಿಗೆ ಪ್ರಾರಂಭಿಸುವುದರಿಂದ ಆಸ್ಪತ್ರೆಗೆ ಬರುವ ರೋಗಿಗಳು ಔಷಧಿಗಾಗಿ ಆಸ್ಪತ್ರೆಯಿಂದ ಹೊರಕ್ಕೆ ಹೋಗುವ ಪ್ರಮೇಯ ಬರದು ಎಂದು ಹೇಳಿದರು.
ರಾಜ್ಯದೆಲ್ಲೆಡೆ ಇರುವ ವೈದ್ಯರ ಕೊರತೆಯನ್ನು ನೀಗಿಸಲು ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಇನ್ನು ಆರು ತಿಂಗಳೊಳಗಾಗಿ ತಜ್ಞವೈದ್ಯರು, ವೈದ್ಯರು, ದಂತವೈದ್ಯರು, ನರ್ಸ್ ಮತ್ತು ಇತರೇ ಸಿಬ್ಬಂದಿಯ ನೇಮಕಾತಿ ನಡೆಯಲಿದೆ. ಎಲ್ಲಾ ಆಸ್ಪತ್ರೆಗಳಲ್ಲೂ ಜನರಿಗೆ ಉತ್ತಮ ಸೇವೆ ಸಲ್ಲಿಸಲು ಅನುಕೂಲವಾಗುವಂತೆ ಮೂಲಭೂತ ಸೌಕರ್ಯಗಳು ಹಾಗೂ ತಾಂತ್ರಿಕ ಅಂಶಗಳನ್ನೂ ಹೆಚ್ಚಿಸಲಾಗುವುದು ಎಂದು ನುಡಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿಯೊಂದು ವಾರ್ಡ್ಗೂ ಭೇಟಿ ನೀಡಿದ ಸಚಿವರು ರೋಗಿಗಳ ಸಮಸ್ಯೆಗಳನ್ನು ವಿಚಾರಿಸಿದರು. ಸೂಕ್ತ ಔಷಧ, ಚಿಕಿತ್ಸೆ ಸಿಗುತ್ತಿದೆಯೇ ಎಂದು ಕೇಳಿದರು. ವೈದ್ಯರು ಮತ್ತು ಔಷಧಿಗಳ ಕೊರತೆಯ ಬಗ್ಗೆ ಮಾಹಿತಿ ಪಡೆದರು.
ಹೋಗು ಹಿಂದಕ್ಕೆ
‘ಏನ್ ನಿನ್ ಸಮಾಚಾರ? ನೀನಿಲ್ಲೇ ಕೆಲಸ ಮಾಡುತ್ತಿದ್ದೀಯಾ? ಎಂದು ಸಂಸದ ಕೆ.ಎಚ್.ಮುನಿಯಪ್ಪ ಕೇಳಿದಾಗ, ‘ಟಿ.ಎಚ್.ಒ ಸರ್, ನಾನು, ತಾಲ್ಲೂಕು ವೈದ್ಯಾಧಿಕಾರಿ’ ಎಂದು ಡಾ.ಅನಿಲ್ ಕುಮಾರ್ ಸಮಜಾಯಿಶಿ ನೀಡಿದರು. ತಕ್ಷಣವೇ ಸಂಸದರು, ‘ಹೋಗ್ ಹಿಂದಕ್ಕೆ, ಅನವಶ್ಯಕವಾಗಿ ಉದ್ದುದ್ದಕ್ಕೆ ಬಂದು ನಿಂತುಕೊಳ್ತೀಯ, ಯಾರ್ರೀ ಡಾಕ್ಟ್ರು ಮುಂದೆ ಬನ್ರೀ, ಬಂದು ಈ ರೋಗಿಯ ಸಮಸ್ಯೆಯನ್ನು ತಿಳಿಸಿ’ ಎಂದು ಆರೋಗ್ಯ ಸಚಿವ ಖಾದರ್ ಸಮ್ಮುಖದಲ್ಲಿ ಗದರಿದರು.
ಆರೋಗ್ಯ ಸಚಿವ ಖಾದರ್ ಸಾರ್ವಜನಿಕ ಸರ್ಕಾರಿ ಆಸ್ಪತ್ರಗೆ ಭೇಟಿ ನೀಡಿದಾಗ, ಬಚ್ಚಹಳ್ಳಿಯ ಅನೀತಾ ಎಂಬ ರೋಗಿಯು ಟಿ.ಬಿ. ಖಾಯಿಲೆಯಿಂದ ನರಳುತ್ತಿದ್ದು, ‘ನಾವು ಬಡವರಿದ್ದೇವೆ, ತಾಯಿ ಇಲ್ಲಿ ಇದ್ದಾರೆ. ಪಕ್ಕದ ಮನೆಯ ಅಜ್ಜ ಊಟ ತಂದುಕೊಡುತ್ತಾರೆ. ಔಷಧಿಗಳನ್ನು ಹೊರಗಡೆ ಬರೆದುಕೊಡುತ್ತಾರೆ. ಕೊಳ್ಳಲು ಶಕ್ತಿಯಿಲ್ಲ’ ಎಂದು ಆರೋಗ್ಯ ಸಚಿವ ಖಾದರ್ ಅವರಿಗೆ ದೂರಿದರು. ಆರೋಗ್ಯ ಸಚಿವರು ಟಿ.ಬಿ. ಖಾಯಿಲೆ ಇರುವ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕು. ಏಕೆ ಹೊರಗಡೆ ಔಷಧಿಗಳನ್ನು ಬರೆಯಲಾಗುತ್ತಿದೆ ಎಂದು ಪ್ರಶ್ನಿಸಿದಾಗ ಅಲ್ಲೇ ಇದ್ದ ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್ಕುಮಾರ್ ಸಮರ್ಪಕವಾಗಿ ಉತ್ತರಿಸದಿದ್ದಾಗ ಸಂಸದ ಕೆ.ಎಚ್.ಮುನಿಯಪ್ಪ ತರಾಟೆಗೆ ತೆಗೆದುಕೊಂಡರು.
ಹಣ ವಾಪಸ್ ನೀಡಿ

ಸಂಸದ ಕೆ.ಎಚ್.ಮುನಿಯಪ್ಪ ಕರೆದ ತಕ್ಷಣ ಆಗಮಿಸಿದ ಡಾ.ತಿಮ್ಮೇಗೌಡ, ಈ ರೋಗಿಗೆ ಸೋಂಕು ತಗುಲಿದ್ದನ್ನು ಕಡಿಮೆ ಮಾಡಲೆಂದು ಕೆಲವು ಚುಚ್ಚುಮದ್ದನ್ನು ಹೊರಕ್ಕೆ ಬರೆದಿದ್ದೆವು. ಉಳಿದಂತೆ ಟಿ.ಬಿ.ಖಾಯಿಲೆಗೆ ಉಚಿತವಾಗಿ ಔಷಧಿ ಮತ್ತು ಚಿಕಿತ್ಸೆ ನೀಡುತ್ತಿರುವುದಾಗಿ ತಿಳಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರು, ‘ಏಕೆ ಬಡವರನ್ನು ಶೋಷಣೆ ಮಾಡುತ್ತೀರಿ. ಔಷಧಿ ಇಲ್ಲದಿದ್ದರೆ ಏನು ಮಾಡಬೇಕೆಂದು ನಾವು ಹೇಳಿಕೊಡಬೇಕೆ? ರೋಗಿಯ ಬಳಿ ಔಷಧಿ ಬಿಲ್ ಪಡೆದು ಹಣ ಕೊಡಿ’ ಎಂದು ವೈದ್ಯರಿಗೆ ತಾಕೀತು ಮಾಡಿದರು. ಔಷಧಿಯ ಬಿಲ್ ತಂದು ವೈದ್ಯರಿಗೆ ನೀಡಿ ಹಣ ಪಡೆಯಿರಿ ಎಂದು ಟಿ.ಬಿ. ಖಾಯಿಲೆ ಪೀಡಿತ ರೋಗಿ ಅನೀತಾಗೆ ಸೂಚಿಸಿದರು.
ನಿಮ್ಮ ಮನೆಯನ್ನು ಹೀಗೇ ಇಟ್ಟುಕೊಳ್ತೀರಾ?

ಆರೋಗ್ಯ ಸಚಿವ ಖಾದರ್ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದಾಗ, ಅಸ್ವಚ್ಛತೆಯ ಕಂಡು ತಾಲ್ಲೂಕು ವೈದ್ಯಾಧಿಕಾರಿಗಳನ್ನು, ‘ಏನ್ರೀ, ಹೀಗಿದೆ. ಆಸ್ಪತ್ರೆಯಲ್ಲಿ ಸ್ವಚ್ಛತೆ ಮುಖ್ಯ. ನಿಮ್ಮ ಮನೆಯನ್ನು ಹೀಗೇ ಇಟ್ಟುಕೊಳ್ತೀರಾ?’ ಎಂದು ತರಾಟೆಗೆ ತೆಗೆದುಕೊಂಡರು. ‘ಎಷ್ಟು ಶುಚಿಗೊಳಿಸಿದರೂ, ಜನರು ಎಲೆ ಅಡಿಕೆ ಮುಂತಾದವುಗಳನ್ನು ಉಗಿದು ಗಲೀಜು ಮಾಡುತ್ತಾರೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್ಕುಮಾರ್ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ‘ಜನರಿಗೂ ಅರಿವು ಮೂಡಿಸಬೇಕಾದುದು ನಮ್ಮ ಜವಾಬ್ದಾರಿ’ ಎಂದರು ಸಚಿವರು.
ಆಸ್ಪತ್ರೆಯ ವಾರ್ಡ್ನಲ್ಲಿರುವ ಶೌಚಾಲಯಕ್ಕೆ ಭೇಟಿ ನೀಡಿದ ಆರೋಗ್ಯ ಸಚಿವ ಖಾದರ್,‘ಇದು ಸದಾ ಹೀಗಿರುತ್ತದೆಯೋ, ಅಥವಾ ಈ ದಿನ ಮಾತ್ರ ಹೀಗೆ ಶುಚಿಯಾಗಿದೆಯೋ?’ ಎಂದು ನಗುತ್ತಾ ಪ್ರಶ್ನಿಸಿದರು.
ದಿಂಬಿಲ್ಲದೆ ನೀವು ಮಲಗ್ತೀರಾ?

ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳನ್ನು ಮಾತನಾಡಿಸಿದ ಆರೋಗ್ಯ ಸಚಿವ ಖಾದರ್, ‘ಔಷಧಿ, ಚಿಕಿತ್ಸೆ ಸರಿಯಾಗಿ ನೀಡುತ್ತಿದ್ದಾರೆಯೇ? ರಗ್ಗು ಬೆಡ್ಶೀಟ್ ಬದಲಿಸುತ್ತಾರೆಯೇ?’ ಎಂದು ವಿಚಾರಿಸಿದರು. ದಿಂಬುಗಳಿಲ್ಲದ್ದನ್ನು ಗಮನಿಸಿದ ಸಚಿವರು ‘ಏಕೆ ತಲೆ ದಿಂಬನ್ನು ಕೊಟ್ಟಿಲ್ಲ?’ ಎಂದು ವೈದ್ಯಾಧಿಕಾರಿಗಳನ್ನು ಕೇಳಿದರು. ‘ಅನುದಾನ ಬಂದಿದೆ ಸರ್. ಶೀಘ್ರವಾಗಿ ತರಿಸುತ್ತೇವೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್ಕುಮಾರ್ ಉತ್ತರಿಸಿದಾಗ ‘ದಿಂಬಿಲ್ಲದೆ ನೀವು ಮಲಗ್ತೀರಾ? ಬೇಗ ವ್ಯವಸ್ಥೆ ಮಾಡಿ’ ಎಂದು ಸೂಚಿಸಿದರು. ನವಜಾತ ಶಿಶುಗಳು ಮತ್ತು ಬಾಣಂತಿಗಳಿರುವ ವಾರ್ಡ್ಗೆ ತೆರಳಿ ಅವರಿಗೆ ಮಡಿಲು ಕಿಟ್ ನೀಡಿದೆಯಾ ಎಂದು ವಿಚಾರಿಸಿದರು. ‘ಇಲ್ಲಿ ನಾವು ಹೆಚ್ಚು ಹೊತ್ತು ಇರಬಾರದು. ಮಕ್ಕಳು ಮತ್ತು ಬಾಣಂತಿಯರಿಗೆ ಸೋಂಕು ತಗುಲುತ್ತದೆ’ ಎಂದು ಹೇಳಿ ಸಂಸದ ಕೆ.ಎಚ್.ಮುನಿಯಪ್ಪ ಎಲ್ಲರನ್ನೂ ವಾರ್ಡ್ನಿಂದ ಹೊರಕ್ಕೆ ಕರೆದೊಯ್ದರು.
ಸಂಸದ ಕೆ.ಎಚ್.ಮುನಿಯಪ್ಪ, ಶಾಸಕ ಎಂ.ರಾಜಣ್ಣ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಾವೇರಿ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯತಿ ಸದಸ್ಯ ಸತೀಶ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮುನಿಕೃಷ್ಣಪ್ಪ, ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್ಕುಮಾರ್, ಪುರಸಭಾ ಸದಸ್ಯರಾದ ಬಾಲಕೃಷ್ಣ, ಅಫ್ಸರ್ಪಾಷ, ಸಿಕಂದರ್, ಕೇಶವಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
[images cols=”six” lightbox=”true”]
[image link=”2175″ image=”2175″]
[image link=”2174″ image=”2174″]
[image link=”2172″ image=”2172″]
[image link=”2171″ image=”2171″]
[image link=”2170″ image=”2170″]
[image link=”2169″ image=”2169″]
[/images]
ತಾಲ್ಲೂಕಿನ ಅಮಾನಿ ಭದ್ರನಕೆರೆ ಒತ್ತುವರಿ ತೆರವು
ತಾಲ್ಲೂಕಿನ ಅತಿ ದೊಡ್ಡ ಕೆರೆಯೆಂದೇ ಖ್ಯಾತವಾದ ಅಮಾನಿ ಭದ್ರನ ಕೆರೆಯ ಒತ್ತುವರಿಯನ್ನು ಬುಧವಾರ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ತೆರವುಗೊಳಿಸಿದ್ದಾರೆ.
ಸುಮಾರು 840 ಎಕರೆ ವಿಸ್ತೀರ್ಣವಿರುವ ಈ ಬೃಹತ್ ಕೆರೆಯ ಅಚ್ಚುಕಟ್ಟಿನಲ್ಲಿ ಹದಿಮೂರು ಹಳ್ಳಿಗಳಿವೆ. ಸುಮಾರು 435 ಎಕರೆಯಷ್ಟು ಒತ್ತುವರಿಯಾಗಿದ್ದು, ರಾಗಿ, ಜೋಳ, ಹಿಪ್ಪುನೇರಳೆ, ಮೆಣಸಿನಕಾಯಿ, ದನಿಯಾ ಮುಂತಾದ ಬೆಳೆಗಳನ್ನಿಡಲಾಗಿದೆ. ಸುಮಾರು 18 ಖಾಸಗಿ ಕೊಳವೆ ಬಾವಿಗಳನ್ನು ಕೊರೆಸಿರುವುದಲ್ಲದೆ ಹನಿನೀರಾವರಿಯನ್ನೂ ಅಳವಡಿಸಲಾಗಿದೆ. ವಿಜಯಪುರ ಪುರಸಭೆಯ ವತಿಯಿಂದ 35 ಕೊಳವೆಬಾವಿಗಳು, ಹೊಸಪೇಟೆ ಪಂಚಾಯತಿಯಿಂದ 2 ಕೊಳವೆ ಬಾವಿಗಳನ್ನಿಲ್ಲಿ ಕೊರೆಸಲಾಗಿದೆ.

‘ಕೆರೆಗಳು ಸಾರ್ವಜನಿಕ ಆಸ್ತಿಗಳು. ದೇವಾಲಯಕ್ಕಿಂತ ಹೆಚ್ಚು ಮಹತ್ವವನ್ನು ನೀಡಿ ಅವನ್ನು ಉಳಿಸಿಕೊಳ್ಳಬೇಕು. ಹಿಂದೆ ನಮ್ಮನ್ನಾಳಿದ ಅರಸರು ಕೆರೆಗಳನ್ನು ಜನ, ಜಾನುವಾರುಗಳು, ಪ್ರಾಣಿ, ಪಕ್ಷಿಗಳು ಎಲ್ಲರ ಅನುಕೂಲಕ್ಕೆಂದು ಕಟ್ಟಿಸಿದ್ದಾರೆ. ಒತ್ತುವರಿ ಮಾಡುವವರಿಗೆ ತಿಳಿಹೇಳಿ. ಸರ್ಕಾರದಲ್ಲಿ ಕೆರೆ ಒತ್ತುವರಿ ಮಾಡಿರುವವರ ವಿರುದ್ಧ ಕಠಿಣ ಕಾನೂನುಗಳಿವೆ. ಆದರೂ ನಮ್ಮ ಕೆರೆ, ನಮ್ಮ ನೆಲ, ನಮ್ಮ ನೀರು, ನಮ್ಮ ನಾಡು ಎಂಬ ಭಾವನೆ ಎಲ್ಲರಲ್ಲೂ ಮೂಡಿದಾಗ ಯಾರೂ ಒತ್ತುವರಿ ಮಾಡುವುದಿಲ್ಲ. ಗ್ರಾಮ ಪಂಚಾಯತಿಯಲ್ಲಿ ಕೆರೆಗಳ ಬಗ್ಗೆ ಮಾಹಿತಿ ಹೊಂದಿರಬೇಕು. ಕೆರೆಯ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಬೇಕು’ ಎಂದು ಅವರು ಹೇಳಿದರು.
ಡಿ.ಡಿ.ಎಲ್.ಆರ್. ಅಧಿಕಾರಿ ಅಜ್ಜಪ್ಪ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ನಾಗರಾಜ್, ನವಾಬ್ ಪಾಷ, ಡಿ.ವೈ.ಎಸ್.ಪಿ ಸಣ್ಣತಿಮ್ಮಯ್ಯ, ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

