24.1 C
Sidlaghatta
Saturday, December 27, 2025
Home Blog Page 1013

ಶಿಡ್ಲಘಟ್ಟದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

0

ಶಿಡ್ಲಘಟ್ಟದಲ್ಲಿ ಬಿಜೆಪಿ ಕಾರ್ಯಕರ್ತರು ಬುಧವಾರ ಬಸ್ ಪ್ರಯಾಣ ದರ ಇಳಿಸದಿರುವುದು ಹಾಗೂ ಮಹಿಳೆ ಮತ್ತು ಮಕ್ಕಳ ಮೇಲಿನ ಅತ್ಯಾಚಾರವನ್ನು ಖಂಡಿಸಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು.

ಶಿಕ್ಷಣ ಎಂದರೆ ಅಂಕಗಳಿಸುವುದು ಎಂಬ ಭ್ರಮೆಯಿಂದ ಹೊರ ಬರಬೇಕು

0

ಸೇವಾದಳ ಸಂಘಟನೆ ಮೂಲಕ ಎಳವೆಯಲ್ಲಿಯೇ ಮಕ್ಕಳಿಗೆ ಸೇವಾ ಭಾವನೆ, ಶಿಸ್ತು ತರಬೇತಿ ನೀಡಿ ಅವರಲ್ಲಿ ರಾಷ್ಟ್ರ ಪ್ರೇಮ ಬೆಳೆಸಬೇಕು. ಆಪತ್ತು ಸಂಭವಿಸಿದಾಗ ಸ್ವಯಂ ಸೇವಕರಾಗಿ ಭಾಗಿಯಾಗುವ ಬೆರಳೆಣಿಕೆಯ ಸಂಘನೆಯಿದ್ದರೆ ಅದು ಭಾರತ ಸೇವಾದಳ ಎಂದು ಅಖಿಲಭಾರತ ರಾಷ್ಟ್ರ ಸೇವಾದಳದ ಮಾಜಿ ಅಧ್ಯಕ್ಷ ಭರತ್ಲಾಟ್ಕರ್ ತಿಳಿಸಿದರು.
ತಾಲ್ಲೂಕಿನ ಭಕ್ತರಹಳ್ಳಿ ಬಿ.ಎಂ.ವಿ. ಪ್ರೌಢಶಾಲೆಯ ಆವರಣದಲ್ಲಿ ಭಾನುವಾರ ಕಳೆದ ಏಳು ದಿನಗಳಿಂದ ನಡೆಯುತ್ತಿದ್ದ ರಾಷ್ಟ್ರ ಸೇವಾದಳದ ವಸತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಏಳು ದಿನಗಳ ಶಿಬಿರದಲ್ಲಿ ಕಲಿತ ಹಾಡುಗಳು, ನೃತ್ಯ, ವ್ಯಾಯಾಮ, ಕಸರತ್ತುಗಳನ್ನು ಪ್ರದರ್ಶಿಸಿದರು.
ವಿದ್ಯಾರ್ಥಿಗಳು ಏಳು ದಿನಗಳ ಶಿಬಿರದಲ್ಲಿ ಕಲಿತ ಹಾಡುಗಳು, ನೃತ್ಯ, ವ್ಯಾಯಾಮ, ಕಸರತ್ತುಗಳನ್ನು ಪ್ರದರ್ಶಿಸಿದರು.
ದೈಹಿಕವಾಗಿ ಬಲಾಢ್ಯರಾಗಲು ಮತ್ತು ಮಾನಸಿಕವಾಗಿ ಸದೃಢವಾಗಲು ವಿದ್ಯಾರ್ಥಿಗಳು ಭಾರತ ಸೇವಾದಳದಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ಮಕ್ಕಳು ಹಾಗೂ ಪೋಷಕರು ಶಿಕ್ಷಣ ಎಂದರೆ ಅಂಕಗಳಿಸುವುದು ಎಂಬ ಭ್ರಮೆಯಿಂದ ಹೊರ ಬರಬೇಕು. ರಾಷ್ಟ್ರಭಕ್ತಿ,ರಾಷ್ಟ್ರ ಪ್ರೇಮ ಬೆಳೆಸುವ ಸೇವಾದಳ ಸಂಘಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ ಶಿಬಿರದಲ್ಲಿ ನಡೆದ ಚರ್ಚೆ, ಸಂವಾದಗಳು ವಿದ್ಯಾರ್ಥಿಗಳ ಬೌದ್ಧಿಕ ವಿಕಸನಕ್ಕೆ ಸಹಾಯಕವಾಗುವಂತಿದ್ದವು. ಶಿಬಿರದಲ್ಲಿ ಕಲಿತ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಬಿ.ಎಂ.ವಿ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಲ್.ಕಾಳಪ್ಪ ಮಾತನಾಡಿ, ಕಳೆದ ಒಂದು ವಾರದಿಂದ ಶಿಬಿರದಲ್ಲಿ ಭಾಗವಹಿಸಿದ 103 ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ರಾಷ್ಟ್ರಭಕ್ತಿ, ಸೇವಾ ಮತ್ತು ವೈಜ್ಞಾನಿಕ ಮನೋಭಾವದ ಅರಿವು ಮೂಡಿಸಲಾಯಿತು. ದೈಹಿಕ ಕಸರತ್ತು, ಯೋಗ, ಪ್ರಾರ್ಥನೆ, ಆಟಪಾಠಗಳು, ಹಾಡುಗಳು, ನೃತ್ಯ, ಕಥೆ ಹೇಳುವುದು, ಉಪನ್ಯಾಸ, ಸಂವಾದ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಯಿತು ಎಂದು ಹೇಳಿದರು.
ಸಮಾಜವಾದಿ ಅಧ್ಯಯನ ಕೇಂದ್ರದ ಬಾಪು ಹೆದ್ದೂರುಶೆಟ್ಟಿ, ಪ್ರೊ.ಹನುಮಂತ, ರಾಮ್ ಮನೋಹರ್ ಶಾಂತವೇರಿ, ಸಾಹಿತಿ ಮಂಗ್ಳೂರು ವಿಜಯ, ವಕೀಲ ಬಿ.ಕೆ.ಮೂರ್ತಿಶ್ವರಯ್ಯ, ಸಾಹಿತಿ ಆರ್.ಜಿ.ಹಳ್ಳಿ ನಾಗರಾಜ್, ಅರವಿಂದ ಬಿ.ಕಟ್ಟಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎ.ಮುರಿಗೆಪ್ಪ, ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ, ಜಿ.ವಿ.ಸುಂದರ್, ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತೆ ಸರಸ್ವತಮ್ಮ ಮತ್ತಿತರರು ಶಿಬಿರಕ್ಕೆ ಆಗಮಿಸಿ ಉಪನ್ಯಾಸ ನೀಡಿದ್ದಾರೆ.
ರಾಷ್ಟ್ರ ಸೇವಾದಳದ ಪ್ರಧಾನ ಕಾರ್ಯದರ್ಶಿ ಬಾಬಾ ಸಾಹೇಬ್ ನದಾಫ್, ಚಂದನ್, ಆರತಿ, ಷಹಾಜಿ ಮತ್ತು ಅಮರ್ ವಿದ್ಯಾರ್ಥಿಗಳಿಗೆ ವಿವಿಧ ತರಬೇತಿಗಳನ್ನು ನೀಡಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಏಳು ದಿನಗಳ ಶಿಬಿರದಲ್ಲಿ ಕಲಿತ ಹಾಡುಗಳು, ನೃತ್ಯ, ವ್ಯಾಯಾಮ, ಕಸರತ್ತುಗಳನ್ನು ಪ್ರದರ್ಶಿಸಿದರು. ಬೆಂಗಳೂರು ರೋಟರಿ ಹೈಗ್ರೌಂಡ್ಸ್ ವತಿಯಿಂದ ಶಿಬಿರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ನಿಘಂಟುಗಳನ್ನು ವಿತರಿಸಲಾಯಿತು.
ಬಿ.ಎಂ.ವಿ. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ವಿ.ಮುನೇಗೌಡ, ಬೆಂಗಳೂರು ರೋಟರಿ ಹೈಗ್ರೌಂಡ್ಸ್ ಅಧ್ಯಕ್ಷ ಆರ್.ಬಸವರಾಜ್, ಶಿವಕುಮಾರ್, ಮಂಜುನಾಥ್, ಅರವಿಂದ ನಾಯ್ಡು, ಸಂದೀಪ್, ಸಮಾಜವಾದಿ ಅಧ್ಯಯನ ಕೇಂದ್ರದ ಅಂಬಿಕಾ, ಸ್ಮೈಲ್ ಫೌಂಡೇಷನ್ ಪ್ರತಿನಿಧಿ ಪ್ರದೀಪ್ ರಾಧಾಕೃಷ್ಣ, ರಾಷ್ಟ್ರ ಸೇವಾದಳದ ಪ್ರಧಾನ ಕಾರ್ಯದರ್ಶಿ ಜಾರ್ಜ್ ಜೇಕಬ್, ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಎಂ.ಗೋಪಾಲಗೌಡ, ಎಂ.ಪಿ.ಸಿ.ಎಸ್. ಅಧ್ಯಕ್ಷ ಕೋಟೆ ಚನ್ನೇಗೌಡ, ಎಸ್.ನಾರಾಯಣಸ್ವಾಮಿ, ಎಂ.ನಂಜೇಗೌಡ, ಎಂ.ವೆಂಕಟಮೂರ್ತಿ, ಪುಟ್ಟಮೂರ್ತಿ, ಬಿ.ವೈ.ಅಶ್ವತ್ಥಪ್ಪ, ಮುಖ್ಯಶಿಕ್ಷಕ ಎನ್.ವೆಂಕಟಮೂರ್ತಿ, ಎನ್.ಪಂಚಮೂರ್ತಿ, ಯಾಮ ನಾರಾಯಣಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಗ್ರಾಮದ ಮಹಿಳೆಯರ ಸ್ವಾವಲಂಬಿ ಕೇಂದ್ರವಾದ ಹಳೆಯ ಕಟ್ಟಡ

0

ಹಲವಾರು ಗ್ರಾಮಗಳು ಹಾಗೂ ಊರುಗಳಲ್ಲಿ ಹಳೆಯ ಕಟ್ಟಡಗಳು, ಹಾಳು ಬಿದ್ದ ಮಂಟಪಗಳು ಮತ್ತು ಧರ್ಮಛತ್ರಗಳು ಕಾಣಸಿಗುತ್ತವೆ. ಹಿಂದೆ ಹಿರಿಯರು ದಾರಿ ಹೋಕರು, ಊರೂರು ತಿರುಗುವ ವ್ಯಾಪಾರಸ್ಥರ ಅನುಕೂಲಕ್ಕಾಗಿ, ಶುಭ ಸಮಾರಂಭಗಳಿಗೆಂದು ಧರ್ಮಛತ್ರಗಳನ್ನು ನಿರ್ಮಿಸುತ್ತಿದ್ದರು. ಕಾಲ ಬದಲಾದಂತೆ ಅವುಗಳು ಅವಶ್ಯಕತೆಗಳಿಲ್ಲವಾಗಿ ಹಲವೆಡೆ ಪಾಳುಬಿದ್ದಿವೆ.
ತಾಲ್ಲೂಕಿನ ಮುತ್ತೂರು ಗ್ರಾಮದಲ್ಲಿದ್ದ ಹಾಳುಬಿದ್ದ ಧರ್ಮಛತ್ರವನ್ನು ಪುನರುಜ್ಜೀವನಗೊಳಿಸಿ ಮಹಿಳೆಯರ ಸ್ವಾವಲಂಬಿ ಬದುಕಿಗೆ ನೆರಳಾಗುವ ಕಟ್ಟಡವನ್ನಾಗಿಸಲಾಗಿದೆ. ಗ್ರಾಮ ಹಾಗೂ ಊರುಗಳಲ್ಲಿನ ಹಾಳುಬಿದ್ದ ಕಟ್ಟಡಗಳು ಅನೈತಿಕ ಚಟುವಟಿಕೆಗಳ ತಾಣಗಳಾಗುತ್ತಿರುವಾಗ ಗ್ರಾಮಾಭಿವೃದ್ಧಿಗೆ ಪೂರಕವಾಗುವಂತೆ ಸಮುದಾಯವು ಬಳಸಿಕೊಳ್ಳಬಹುದಾದ ಸಾಧ್ಯತೆಗಳಿಗೆ ಮಾದರಿಯಾಗಿದ್ದಾರೆ ಮುತ್ತೂರು ಗ್ರಾಮಸ್ಥರು.
ಸುಮಾರು ನೂರು ವರ್ಷಗಳ ಹಿಂದೆ ಮುತ್ತೂರು ಗ್ರಾಮದ ಮಡಿವಾಳಿ ನಂದೆಪ್ಪ ಎಂಬುವವರು ಗ್ರಾಮಕ್ಕೆ ಬಂದು ಹೋಗುವವರ ಅನುಕೂಲಕ್ಕಾಗಿ ಪುಟ್ಟ ಕಟ್ಟಡವೊಂದನ್ನು ನಿರ್ಮಿಸಿದ್ದರು. ಅದು ಜನರ ಬಾಯಲ್ಲಿ ನಂದೆಪ್ಪನ ಮಠ ಎಂದಾಗಿ, ದಾರಿಹೋಕರು ಮತ್ತು ನಿರ್ಗತಿಕರ ಆಶ್ರಯತಾಣವಾಗಿತ್ತು. ಕಾಲಾನಂತರ ಗ್ರಾಮದಲ್ಲಿ ಮೊಟ್ಟಮೊದಲು ಪ್ರೌಢಶಾಲೆ ಪ್ರಾರಂಭಿಸಿದಾಗ ಸ್ವಂತ ಕಟ್ಟಡವಿರದಿದ್ದುದರಿಂದ ನಂದೆಪ್ಪನ ಮಠದಲ್ಲೇ ಶಾಲೆಯು ಶುರುವಾಯಿತು. ಮುಂದೆ ಶಾಲೆಯು ತನ್ನದೇ ಸ್ವಂತ ಕಟ್ಟಡಕ್ಕೆ ವರ್ಗಾಯಿಸಲ್ಪಟ್ಟಿತು. ಅಲ್ಲೀಂದೀಚೆಗೆ ಈ ಕಟ್ಟಡವು ದನಕರುಗಳನ್ನು ಕಟ್ಟುವ, ಮೇವನ್ನು ಸಂಗ್ರಹಿಸುವ ತಾಣವಾಯಿತು. ಹೀಗಾಗಿ ಸೂಕ್ತ ನಿರ್ವಹಣೆಯಿಲ್ಲದೆ ಶಿಥಿಲಗೊಂಡಿತ್ತು.
ದಿ.ಸಂಜಯ್ದಾಸ್ಗುಪ್ತ ಅವರ ನೆನಪಿನ ‘ನಮ್ಮ ಮುತ್ತೂರು’ ಸಂಸ್ಥೆಯು ಗ್ರಾಮಸ್ಥರ ಸಹಕಾರದಿಂದ ಶಿಥಿಲಗೊಂಡಿದ್ದ ನಂದೆಪ್ಪನ ಮಠವನ್ನು ಪುನರುಜ್ಜೀವನಗೊಳಿಸಿ ಗ್ರಾಮದ ಮಹಿಳೆಯರು ಸ್ವಾವಲಂಬಿಗಳಾಗಲು ಟೈಲರಿಂಗ್ ತರಬೇತಿ ಹಾಗೂ ವಿವಿಧ ಉತ್ಪನ್ನಗಳ ತಯಾರಿಕಾ ಘಟಕವನ್ನಾಗಿಸಿದ್ದಾರೆ.
‘ಇದು ಒಬ್ಬರಿಂದಾದ ಕೆಲಸವಲ್ಲ. ಗ್ರಾಮಸ್ಥರ ಅನುಮತಿ ಮತ್ತು ಸಹಕಾರದೊಂದಿಗೆ ಹಲವಾರು ಉದಾರ ಹೃದಯಿಗಳು ಒಗ್ಗೂಡಿದ್ದರಿಂದ ಸಾಧ್ಯವಾಯಿತು. ಹಳೆಯ ಕಲ್ಲಿನ ಕಟ್ಟಡವನ್ನು ಹಾಗೆಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗೋಡೆಯ ಮಣ್ಣು ಪರೀಕ್ಷೆಯನ್ನು ಪ್ರೊ.ಯೋಗಾನಂದ ಮತ್ತು ಪ್ರಮೋದ್ ಅವರಿಂದ ಮಾಡಿಸಿದೆವು. ಕಟ್ಟಡವು ಗಟ್ಟಿಮುಟ್ಟಾಗಿದೆಯೆಂದು ಅವರು ವರದಿ ನೀಡಿದ ನಂತರ ಕಟ್ಟಡ ವಿನ್ಯಾಸಗಾರರಾದ ಅಖಿಲಾ ರಮೇಶ್ ಮತ್ತು ತಂಡದ ಸಹಾಯ ಪಡೆದು ಕೆಲಸ ಪ್ರಾರಂಭಿಸಿದೆವು. ನಮ್ಮ ಕಾರ್ಯದಲ್ಲಿ ಆರ್ಥಿಕ ನೆರವನ್ನು ಸ್ವಸ್ಥಿ ಸೇವಾ ಸಂಸ್ಥೆ ಮತ್ತು ಎಡಿಫೈಸ್ ಕನ್ಸಲ್ಟೆಂಟ್ ನೀಡಿದರೆ, ರಿಷ್ಮಾ ಕೌರ್ ಕಟ್ಟಡಕ್ಕೆ ಬಣ್ಣವನ್ನು ಒದಗಿಸಿದರು. ಸಮುದಾಯದ ಉಪಯೋಗಕ್ಕೆಂದು ಹಿಂದೆ ನಿರ್ಮಿಸಿದ್ದ ಕಟ್ಟಡವನ್ನು ಪುನಃ ಸಮುದಾಯಕ್ಕಾಗಿ ಅರ್ಪಿಸಲಾಗಿದೆ. ಹಳೆಯ ಕಟ್ಟಡಕ್ಕೆ ನವೀನ ತಂತ್ರಜ್ಞಾನದ ಲೇಪನವಾಗಿದೆ. ಗ್ರಾಮದ ಮಹಿಳೆಯರು ತಯಾರಿಸುವ ಉಡುಪುಗಳು, ಬ್ಯಾಗ್ ಮುಂತಾದವುಗಳ ಪುಟ್ಟ ಕೇಂದ್ರವಾಗಿದೆ’ ಎಂದು ಹೆಮ್ಮೆಪಡುತ್ತಾರೆ ‘ನಮ್ಮ ಮುತ್ತೂರು’ ಸಂಸ್ಥೆಯ ಉಷಾಶೆಟ್ಟಿ.
–ಡಿ.ಜಿ.ಮಲ್ಲಿಕಾರ್ಜುನ.
[images cols=”three” lightbox=”true”]
[image link=”2151″ image=”2151″]
[image link=”2152″ image=”2152″]
[image link=”2153″ image=”2153″]
[/images]

ಶಿಡ್ಲಘಟ್ಟದಲ್ಲಿ ಕನಕದಾಸರ ಜಯಂತೋತ್ಸವ ಆಚರಣೆ

0

ಪ್ರಾಪಂಚಿಕ ಆಸೆಗಳಿಂದ ಮುಕ್ತರಾಗಿದ್ದ. ಯಾವುದೇ ಜಾತಿ, ಕುಲ, ಮತ, ಧರ್ಮವೆನ್ನದೆ ಪ್ರಪಂಚದಲ್ಲಿರುವ ಎಲ್ಲಾ ಮನುಕುಲವೂ ಉದ್ದಾರವಾಗಬೇಕು ಎಂದು ಸಾರಿದ ಕನಕದಾಸರ ಆದರ್ಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ರೂಡಿಸಿಕೊಳ್ಳಬೇಕು ಎಂದು ಚಿಕ್ಕಬಳ್ಳಾಪುರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಕೋಡಿರಂಗಪ್ಪ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಶನಿವಾರ ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ದಾಸಶ್ರೇಷ್ಠ ಕನಕದಾಸರ ೫೨೭ ನೇ ವರ್ಷದ ಜಯಂತ್ಯುತ್ಸವ ಕಾರ್ಯಕ್ರಮದ ಮುಖ್ಯಭಾಷಣಕಾರರಾಗಿ ಅವರು ಮಾತನಾಡಿದರು.
ಕನಕದಾಸರು ಕೇವಲ ದಾಸಶ್ರೇಷ್ಠರು ಮಾತ್ರವಲ್ಲದೇ ಅತ್ಯುತ್ತಮ ಸಾಹಿತಿ, ಕವಿ, ಗಾಯಕರಾಗಿದ್ದು ಜಾತಿ ನಿರ್ಮೂಲನೆ ಮಾಡುವಲ್ಲಿ ಶ್ರಮಿಸಿದಂತಹ ಮಹಾಪುರುಷನನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸದೇ ಕನಕದಾಸರ ಜಯಂತಿಯನ್ನು ಎಲ್ಲಾ ವರ್ಗಗಳವರೂ ಸೇರಿ ಆಚರಿಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ರಾಜಣ್ಣ ಮಾತನಾಡಿ ಕುಲ ಕುಲವೆಂದು ಹೊಡೆದಾಡಬೇಡಿ, ಕುಲಗಳು ಹುಟ್ಟಿದ್ದು ಎಲ್ಲಿ ಎಂಬುದನ್ನು ಅರ್ಥಮಾಡಿಕೊಂಡಿದ್ದಾದರೆ ಜಾತಿ ಸಂಘರ್ಷಗಳಿಗೆ ಅವಕಾಶವಿರುವುದಿಲ್ಲವೆಂದು ಸಾರಿದ ಕನಕದಾಸರು ಸುಮಾರು ಐದು ಶತಮಾನಗಳಿಂದ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ನೆಲೆಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಕುರುಬ ಸಮಾಜದವರಿಂದ ತಲೆಯ ಮೇಲೆ ತೆಂಗಿನಕಾಯಿಯನ್ನು ಹೊಡೆಯುವಂತಹ ವಿಶಿಷ್ಠ ಆಚರಣೆಯನ್ನು ನೆರವೇರಿಸಲಾಯಿತು. ಎಸ್.ಎಸ್.ಎಲ್.ಸಿ. ಪಿ.ಯು.ಸಿ., ಪದವಿ ತರಗತಿಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ್ದ ಕುರುಬ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಮಾಜದ ಹಿರಿಯ ಮುಖಂಡರನ್ನೂ ಸನ್ಮಾನಿಸಿ ಗೌರವಿಸಲಾಯಿತು.
ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಕುರುಬರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಮಂಜುನಾಥ್, ಗೌರವಾಧ್ಯಕ್ಷ ಎಂ.ಗಣೇಶಪ್ಪ, ಪಿ.ಎಲ್.ಡಿ.ಬ್ಯಾಂಕಿನ ಅಧ್ಯಕ್ಷ ಎ.ರಾಮಚಂದ್ರಪ್ಪ, ಕೋಚಿಮುಲ್ ನಿರ್ದೇಶಕ ಬಂಕ್ಮುನಿಯಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಮುನಿಯಪ್ಪ, ಪುರಸಭೆ ಸದಸ್ಯ ಅಪ್ಸರ್ಪಾಷ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್ಕುಮಾರ್, ಪುರಸಭಾ ಮುಖ್ಯಾಧಿಕಾರಿ ಎಸ್.ಎ.ರಾಮ್ಪ್ರಕಾಶ್, ತಾಲ್ಲೂಕು ಪಂಚಾಯತಿ ಇಒ ಗಣಪತಿಸಾಕರೆ, ಎ.ನಾಗರಾಜ್, ಎಸ್.ಮಂಜುನಾಥ್, ರಾಮಾಂಜಿನಪ್ಪ, ಮಂಜುಳಮ್ಮ ಮತ್ತಿತರರು ಹಾಜರಿದ್ದರು.
[images cols=”six” lightbox=”true”]
[image link=”2146″ image=”2146″]
[image link=”2145″ image=”2145″]
[image link=”2144″ image=”2144″]
[image link=”2143″ image=”2143″]
[image link=”2142″ image=”2142″]
[image link=”2141″ image=”2141″]
[/images]
 
 

ಬೈಕ್ ಕಳ್ಳರಿಂದ ಹತ್ತು ಬೈಕ್ ವಶ

0

ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಪುರ ಠಾಣೆಯ ಪೊಲೀಸರು ಬಂಧಿಸಿ ಬಂಧಿತರಿಂದ ಸುಮಾರು ೩ ಲಕ್ಷ ರೂಪಾಯಿ ಮೌಲ್ಯದ ೧೦ ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಕೋಲಾರ ತಾಲ್ಲೂಕಿನ ಸೀಪುರ ಗ್ರಾಮದ ಶಿವಕುಮಾರ್, ಶ್ರೀನಿವಾಸಪುರ ತಾಲ್ಲೂಕಿನ ನಂಬಿಹಳ್ಳಿ ಗ್ರಾಮದ ಮುನಿರಾಜು ಎಂಬುವವರು ಬಂಧಿತ ಆರೋಪಿಗಳು.
ಕಳೆದ ಮೂರು ದಿನಗಳ ಹಿಂದೆ ಪಟ್ಟಣದ ಎಲ್ಲಮ್ಮ ದೇವಾಲಯದ ಬಳಿಯಲ್ಲಿ ಬೈಕ್ವೊಂದರ ಬೀಗವನ್ನು ಕಿತ್ತು ಕಳವು ಮಾಡಲು ಯತ್ನಿಸಿದ ಕಳ್ಳನನ್ನು ಸಾರ್ವಜನಿಕರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು, ಪೊಲೀಸ್ ಠಾಣೆಯಿಂದ ಪರಾರಿಯಾಗಲು ಯತ್ನಿಸಿದ್ದ ಕಳ್ಳನನ್ನು ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದ ಪೊಲೀಸರು, ಆತನ ಸಹಚರನನ್ನೂ ಬಮಧಿಸಿದ್ದರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆದುಕೊಂಡು ಬಂಧಿತರಿಂದ ೩ ಲಕ್ಷ ರೂಪಾಯಿಗಳ ಬೆಲೆಬಾಳುವ ೧೦ ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸ್ ಸಬ್ಇನ್ಸ್ಪೆಕ್ಟರ್ ಪುರುಷೋತ್ತಮ್, ಪುರಠಾಣೆಯ ಮುಖ್ಯಪೇದೆ ಪಾಟೀಲ್, ಪೇದೆಗಳಾದ ಪ್ರಕಾಶ್, ಆನಂದರೆಡ್ಡಿ, ಅನಂತಕುಮಾರ್, ಚಂದ್ರು, ರಮೇಶ್, ಆರೋಪಿಗಳನ್ನು ಹಿಡಿದು ಅವರು ಕಳ್ಳತನ ಮಾಡಿದ್ದ ವಾಹನಗಳನ್ನು ವಶಪಡಿಸಿಕೊಂಡ ತಂಡದಲ್ಲಿದ್ದರು.
೩ ಲಕ್ಷ ರೂಪಾಯಿಗಳ ಮೌಲ್ಯದ ೩ ಬೈಕ್ಗಳು ೭ ಹೆವಿಡ್ಯೂಟಿ ದ್ವಿಚಕ್ರ ವಾಹನಗಳಲ್ಲಿ, ೭ ದ್ವಿಚಕ್ರವಾಹನಗಳು, ಶ್ರೀನಿವಾಸಪುರ ತಾಲ್ಲೂಕಿಗೆ ಸಂಬಂಧಪಟ್ಟಿವೆ, ೨ ಚಿಂತಾಮಣಿ, ೧ ಶಿಡ್ಲಘಟ್ಟ ತಾಲ್ಲೂಕಿನದ್ದಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪುರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ವಂತ ದುಡಿಮೆಯಿಂದ ವೃದ್ದರಿಗೆ ಆಶ್ರಯ ನೀಡುತ್ತಿರುವ ಗೊರಮಡಗು ಗ್ರಾಮದ ಓಬಣ್ಣ

0

ವೃದ್ಧರು, ಅಶಕ್ತರು, ನಿರ್ಗತಿಕರ ನೆರವಿಗೆ ಬರುವವರು ವಿರಳ. ಲಾಭದ ಅಪೇಕ್ಷೆಯಿಲ್ಲದೆ ಅದಕ್ಕಾಗಿ ಸಮಯ ಹಾಗೂ ಹಣವನ್ನು ಮೀಸಲಿಡುವವರು ಇನ್ನೂ ವಿರಳ. ಆದರೆ ತಾಲ್ಲೂಕಿನ ಗೊರಮಡಗು ಗ್ರಾಮದ ಓಬಣ್ಣ ತಮ್ಮ ಹೊಲದಲ್ಲೇ ಪುಟ್ಟ ಮನೆಯೊಂದನ್ನು ಕಟ್ಟಿ ವೃದ್ದರಿಗೆ ಆಶ್ರಯ ನೀಡಿದ್ದಾರೆ. ಯಾವುದೇ ಸರ್ಕಾರಿ ಅಥವಾ ಎನ್.ಜಿ.ಒ ಸಹಾಯ ಪಡೆಯದೇ ತಮ್ಮ ದುಡಿಮೆಯಿಂದಲೇ ವೃದ್ಧರ ಪೋಷಣೆಗೆ ಮುಂದಾಗಿದ್ದಾರೆ.
ನಾಲ್ಕು ಎಕರೆ ಜಮೀನನ್ನು ಹೊಂದಿರುವ ಓಬಣ್ಣ ಅರ್ಧ ಎಕರೆ ಭೂಮಿಯನ್ನು ವೃದ್ಧಾಶ್ರಮಕ್ಕೇ ಮೀಸಲಿಟ್ಟಿದ್ದಾರೆ. ಗ್ರಾಮದಿಂದ ಪಟ್ಟಣಕ್ಕೆ ಬಸ್ ಸೌಕರ್ಯವಿರದಿರುವುದರಿಂದ ಸರ್ಕಾರಿ ಆಸ್ಪತ್ರೆಗೆ ವೃದ್ಧರನ್ನು ಚಿಕಿತ್ಸೆಗಾಗಿ ಕರೆತರಬೇಕಾದರೆ ತಮ್ಮ ದ್ವಿಚಕ್ರ ವಾಹನವನ್ನೇ ಅವಲಂಬಿಸುತ್ತಾರೆ. ವೃದ್ಧರು ಚಟುವಟಿಕೆಯಿಂದಿರಲೆಂದು ಮೇಣದಬತ್ತಿ ತಯಾರಿಕೆ, ಸೋಪ್, ಪೌಡರ್ ಮುಂತಾದವುಗಳನ್ನು ತಯಾರಿಕೆಯ ಬಗ್ಗೆ ಅವರಿಗೆ ತರಬೇತಿಯನ್ನು ಕೊಡಿಸುತ್ತಾರೆ. ಎರಡು ಹಸುಗಳನ್ನು ಸಾಕಿದ್ದು, ಕೆಲ ವೃದ್ಧರು ಅವುಗಳ ಪೋಷಣೆಗೂ ನೆರವಾಗುತ್ತಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು, ಸಾಂತ್ವನ ಕೇಂದ್ರದವರು ಹಾಗೂ ಈ ಆಶ್ರಮದ ಬಗ್ಗೆ ಮಾಹಿತಿ ಇರುವವರು ಎಲ್ಲಾದರು ವೃದ್ಧರು ಮತ್ತು ಅಶಕ್ತರು ಕಂಡಲ್ಲಿ ಇವರಿಗೆ ಮಾಹಿತಿ ನೀಡಿ, ಕೆಲವೊಮ್ಮೆ ಕರೆತಂದು ಸೇರಿಸುತ್ತಾರೆ. ಕೆಲವರು ಮಾನಿಸಿಕ ಅಸ್ವಸ್ಥರೂ ಇದ್ದರೆ, ಇನ್ನು ಕೆಲವರು ವಯೋ ಸಹಜ ದೌರ್ಭಲ್ಯ, ಖಾಯಿಲೆಗಳಿಂದ ನರಳುತ್ತಿರುತ್ತಾರೆ. ಶಸ್ತ್ರಚಿಕಿತ್ಸೆಯ ಅಗತ್ಯವಿರುವುದರಿಂದ ಮನೆಯವರಿಂದ ದೂರವಾದವರೂ ಇದ್ದಾರೆ. ಸುಮಾರು ಆರು ವರ್ಷಗಳಿಂದ ನಡೆಸುತ್ತಿರುವ ಈ ವೃದ್ಧಾಶ್ರಮದಲ್ಲಿ ಈಗ 12 ಮಂದಿಯಿದ್ದಾರೆ.
‘ನಮ್ಮ ತಂದೆಯವರು ಕಾಲವಾದ ನಂತರ ವೃದ್ಧರ ಸೇವೆ ಮಾಡಿ ಅವರಲ್ಲಿ ತಂದೆ ತಾಯಿರನ್ನು ಕಾಣುತ್ತಿದ್ದೇನೆ. ಈ ಕಾರ್ಯದಲ್ಲಿ ನನ್ನ ಪತ್ನಿಯ ಸಹಕಾರವಿದೆ. ವೃದ್ಧರಿಗೆಲ್ಲಾ ಬೇಸರಿಸದೆ ಅಡುಗೆ ಮಾಡುತ್ತಾಳೆ. ಸರ್ಕಾರದ ಅಥವಾ ಸಂಘ ಸಂಸ್ಥೆಗಳ ಹಣವನ್ನು ಅಪೇಕ್ಷಿಸದೇ ನನ್ನ ಶಕ್ತ್ಯಾನುಸಾರ ನಮ್ಮ ಸ್ಥಳದಲ್ಲೇ ಜೀವೋದಯ ಟ್ರಸ್ಟ್ ಎಂಬ ಹೆಸರಿನಲ್ಲಿ ವೃದ್ಧಾಶ್ರಮ ನಡೆಸುತ್ತಿದ್ದೇನೆ. ನಮ್ಮ ಹೊಲದಲ್ಲೇ ಬೆಳೆಯುವ ತರಕಾರಿ, ರಾಗಿ ತಿನ್ನಲು ಬಳಸುತ್ತೇವೆ. ಕೆಲ ಸ್ನೇಹಿತರು ಸಹಾಯವನ್ನೂ ಮಾಡುತ್ತಾರೆ. ಯಾರಿಂದಲೂ ನಾನು ಸಹಾಯ ಬಯಸುವುದಿಲ್ಲ. ಆದರೆ ಶಾಲಾ ಕಾಲೇಜಿನ ಶಿಕ್ಷಕರಲ್ಲಿ ಮನವಿ ಮಾಡುತ್ತಿರುತ್ತೇನೆ. ವಿದ್ಯಾರ್ಥಿಗಳನ್ನು ಕರೆತಂದು ಸ್ವಲ್ಪ ಹೊತ್ತು ವೃದ್ಧರೊಂದಿಗೆ ಸಮಯವನ್ನು ಕಳೆಯಿರಿ, ಒಡನಾಡಿ. ಇದರಿಂದ ವೃದ್ಧರಿಗೂ ಚೈತನ್ಯ ಬರುತ್ತದೆ ಮತ್ತು ವಿದ್ಯಾರ್ಥಿಗಳಲ್ಲೂ ಉತ್ತಮ ಭಾವನೆಗಳು ಉಂಟಾಗುತ್ತವೆ’ ಎನ್ನುತ್ತಾರೆ ಓಬಣ್ಣ.
ಓಬಣ್ಣ ಅವರ ಮೊಬೈಲ್ ನಂ. 9972009189.

ಪುರಸಭೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸ್ವಚ್ಛ ಭಾರತ ಅಭಿಯಾನ

0

ಪ್ರತಿಯೊಬ್ಬ ನಾಗರೀಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದರ ಮುಖಾಂತರ ದೇಶವನ್ನು ಸ್ವಚ್ಛ ಭಾರತವನ್ನಾಗಿ ಮಾಡಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ಪಟ್ಟಣದ ಕೋಟೆ ವೃತ್ತದಲ್ಲಿ ಶಿಡ್ಲಘಟ್ಟ ಪುರಸಭೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶುಕ್ರವಾರ ಆಯೋಜನೆ ಮಾಡಲಾಗಿದ್ದ ಸ್ವಚ್ಛ ಭಾರತ ಅಭಿಯಾನ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಕನಸಿನಂತೆ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಹಮ್ಮಿಕೊಂಡಿರುವ ಈ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮವು ಯಶಸ್ವಿಯಾಗಬೇಕಾದರೆ, ಜನಪ್ರತಿನಿಧಿಗಳಲ್ಲಿ ಇಚ್ಛಾಶಕ್ತಿ, ಅಧಿಕಾರಿಗಳಲ್ಲಿ ಬದ್ಧತೆ, ನಾಗರಿಕರಲ್ಲಿ ಸಮರ್ಪಣಾ ಮನೋಭಾವವಿದ್ದರೆ ಮಾತ್ರ ಸಾಧ್ಯವಾಗುತ್ತದೆ ಎಂದರು.
ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ನಾಗರಾಜಶೆಟ್ಟಿ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತಜಿಲ್ಲೆಯನ್ನಾಗಿ ಮಾಡಲು ಚಿಂತನೆ ನಡೆಸಲಾಗಿದೆ. ಮನೆಗಳಲ್ಲಿ ಉಪಯೋಗಿಸಿದ ಹಸಿತ್ಯಾಜ್ಯ, ಹಾಗೂ ಒಣತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಮಾಡಿ, ಪುರಸಭೆಯ ಸಿಬ್ಬಂದಿಗೆ ನೀಡಿ, ಪಟ್ಟಣವನ್ನು ಸ್ವಚ್ಛ ಪಟ್ಟಣವನ್ನಾಗಿ ಮಾಡಲು ಸಹಕಾರ ನೀಡಬೇಕು. ಮನೆಗಳ ಮುಂಭಾಗಗಳಲ್ಲಿ ಅಂಗಡಿಗಳ ಮುಂಭಾಗದಲ್ಲಿ ಬಿದ್ದಿರುವ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ರಸ್ತೆಯ ಬದಿಗಳಲ್ಲಿ ಕಸವನ್ನು ಹಾಕಬಾರದು. ಖಾಲಿ ನಿವೇಶನಗಳ ಮಾಲೀಕರು ತಮ್ಮ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದು ರೋಗಗಳಿಗೆ ಆಹ್ವಾನ ನೀಡದಂತೆ ಕ್ರಮ ಕೈಗೊಳ್ಳಬೇಕು. ಹೋಟೆಲ್ ಮತ್ತು ಬೇಕರಿಗಳ ಮಾಲೀಕರು, ಬಾರ್ ಅಂಡ್ ರೆಸ್ಟೋರೆಂಟುಗಳ ಮಾಲೀಕರು ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು ಎಂದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಪುರಸಭಾ ಅಧ್ಯಕ್ಷೆ ಮುಷ್ಟರಿತನ್ವೀರ್, ಉಪಾಧ್ಯಕ್ಷೆ ಸುಮಿತ್ರಮ್ಮರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಕೇಶವಮೂರ್ತಿ, ಸಾರ್ವಜನಿಕ ಆಸ್ಪತ್ರೆಯ ವೈಧ್ಯಾಧಿಕಾರಿ ಡಾ.ಅನಿಲ್ಕುಮಾರ್, ಮುಖ್ಯಾಧಿಕಾರಿ ರಾಮ್ಪ್ರಕಾಶ್, ಕೌಶಲ್ಯಾಭಿವೃದ್ಧಿ ತಜ್ಞ ಮಂಜುನಾಥ್, ಪುರಸಭಾ ಸದಸ್ಯರಾದ ಚಿಕ್ಕಮುನಿಯಪ್ಪ, ಬಾಲಕೃಷ್ಣ, ಸುಹೇಲ್ಅಹ್ಮದ್, ಅಪ್ಸರ್ಪಾಷಾ, ಲಕ್ಷ್ಮಯ್ಯ, ವೆಂಕಟಸ್ವಾಮಿ, ರಮೇಶ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾದೂರು ಗ್ರಾಮದ ಹೊಲಗಳಿಗೆ ಕೀಟಕೋಟಲೆಗಳು

0

ತಾಲ್ಲೂಕಿನ ತಾದೂರು ಗ್ರಾಮದ ಹೊಲಗಳಿಗೆ ಬುಧವಾರ ಕುರುಬೂರಿನ ರೇಷ್ಮೆ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಕೀಟ ಶಾಸ್ತ್ರಜ್ಞರು ಭೇಟಿ ನೀಡಿ ಕೀಟಗಳಿಂದಾದ ಅನಾಹುತವನ್ನು ಪರಿಶೀಲಿಸಿದರು.
ತಾದೂರು ಗ್ರಾಮದ ರಾಮಾಂಜಿನಪ್ಪ ಅವರ ಹೊಲ ಹಾಗೂ ಸುತ್ತಮುತ್ತಲಿನ ಹೊಲಗಳಿಗೆ ಹುಳಗಳ ಧಾಳಿ ನಡೆದಿದ್ದು, ರಾಗಿ, ಅವರೆ, ಜೋಳದ ಎಲೆಗಳನ್ನೆಲ್ಲಾ ಹುಳುಗಳು ಕಬಳಿಸಿ ಅಲ್ಲೇ ಕೋಶಾವಸ್ಥೆಯನ್ನು ಕೆಲವು ತಲುಪಿದ್ದರೆ, ಕೆಲವಂತೂ ಪತಂಗಗಳಾಗಿವೆ.
ಕೀಟಶಾಸ್ತ್ರಜ್ಞರಾದ ಡಾ.ಸುಮಿತ್ರಮ್ಮ, ಡಾ.ವಿದ್ಯಾಮೂಲೆಮನಿ, ಡಾ.ಕವಿತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಫಾಸ್ಪನಾಪಾಸ್ ಅಥವಾ ಕ್ಲೋರೋಪೈರಿಪಾಸ್ 2 ಮಿಲಿಯನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದರಿಂದ ಕೀಟಗಳ ಹತೋಟಿ ಸಾಧ್ಯ ಎಂದು ಅವರು ಸಲಹೆ ನೀಡಿದರು.
ರೈತಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಮುನಿನಂಜಪ್ಪ, ಕೃಷಿ ತಾಂತ್ರಿಕ ಅಧಿಕಾರಿ ಶೋಭಾಪಾಟೀಲ್, ರೈತರಾದ ರಾಮಾಂಜಿನಪ್ಪ, ಕೃಷ್ಣಪ್ಪ, ಮುನಿರಾಜು, ರೈತ ಅನುವುಗಾರರಾದ ಬೂದಾಳ ರಾಮಾಂಜಿ, ಮುತ್ತೂರು ಗಜೇಂದ್ರ, ಸಾದಹಳ್ಳಿ ಮುರಳಿ ಈ ಸಂದರ್ಭದಲ್ಲಿ ಹಾಜರಿದ್ದರು.

ಗಂಜಿಗುಂಟೆಯಲ್ಲಿ ಮೇವು ಬೀಜ ವಿತರಣೆ ಹಾಗೂ ಸ್ವಚ್ಛ ಭಾರತ ಅಭಿಯಾನದ ಕಾರ್ಯಕ್ರಮ

0

ತಾಲ್ಲೂಕಿನ ಗಂಜಿಗುಂಟೆ ಪಶುವೈದ್ಯ ಚಿಕಿತ್ಸಾ ಆಸ್ಪತ್ರೆ ಆವರಣದಲ್ಲಿ ಬುಧವಾರ ಪ್ರಗತಿಪರ ಕುರಿ ಸಾಕಾಣಿಕೆದಾರರ ಸಹಕಾರ ಸಂಘದ ವತಿಯಿಂದ ಬರಗಾಲದ ಪ್ರಯುಕ್ತ ಮೇವು ಬೀಜ ವಿತರಣೆ ಹಾಗೂ ಸ್ವಚ್ಛ ಭಾರತ ಅಭಿಯಾನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
‘ಜಿಲ್ಲೆಯಲ್ಲಿ ಬರಗಾಲವಿದ್ದು ಕುರಿ ಮೇಕೆ ಹಾಗೂ ದನಕರುಗಳಿಗೆ ಮೇವು ಸಿಗದೇ ಅತಿ ಹೆಚ್ಚು ಹಣ ಕೊಟ್ಟು ಖಾಸಗಿಯಾಗಿ ಮೇವು ಕೊಂಡುಕೊಳ್ಳಲು ಶಕ್ತಿಯಿಲ್ಲದೆ ಜಾನುವಾರುಗಳನ್ನು ಕಸಾಯಿಖಾನೆಗೆ ಮಾರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದಕ್ಕಾಗಿ ಕುರಿ ಮತ್ತು ಉಣ್ಣೆ ನಿಗಮದ ವತಿಯಿಂದ ಪ್ರಗತಿಪರ ಕುರಿ ಸಾಕಾಣಿಕಾದಾರರ ಸಹಕಾರ ಸಂಘದ ಸದಸ್ಯರುಗಳಿಗೆ ಮತ್ತು ಮೇವು ಬೆಳೆಯುವ ಅರ್ಹರಿಗೆ ಅಗಸೆ, ಜೋಳ, ಲೂಸನ್, ಅಲಸಂಧಿ ಬೀಜಗಳನ್ನು ಉಚಿತವಾಗಿ ವಿತರಿಸುತ್ತಿದ್ದೇವೆ’ ಎಂದು ಪ್ರಗತಿಪರ ಕುರಿ ಸಾಕಾಣಿಕೆದಾರರ ಸಹಕಾರ ಸಂಘದ ಅಧ್ಯಕ್ಷ ಸಿ.ವಿ.ಲೋಕೇಶ್ ಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ಗಂಜಿಗುಂಟೆ ಪಶುವೈದ್ಯ ಚಿಕಿತ್ಸಾ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಅಗಿತ್ತು.
ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕರಾದ ಡಾ.ಶಿವರಾಂ, ಸಹಾಯಕ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ, ಕುರಿ ಉಣ್ಣೆ ನಿಗಮದ ಯೋಜನಾಧಿಕಾರಿ ಸೀತಾರಾಂ, ಗ್ರಾಮ ಪಂಚಾಯತಿ ಅಧ್ಯಕ್ಷೆ ದ್ಯಾವಮ್ಮ, ಉಪಾಧ್ಯಕ್ಷ ಮೂರ್ತಿ, ಸದಸ್ಯರಾದ ಚಂದ್ರಶೇಖರರೆಡ್ಡಿ, ನರಸಮ್ಮ, ಪ್ರಗತಿಪರ ಕುರಿ ಸಾಕಾಣಿಕೆದಾರರ ಸಹಕಾರ ಸಂಘದ ನಿರ್ದೇಶಕರಾದ ಶಿವಣ್ಣ, ದ್ಯಾವಪ್ಪ, ಪಶುವೈದ್ಯಾಧಿಕಾರಿ ಡಾ.ಬಾಬು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಹಿಂದೂ ಮತ್ತು ಮುಸ್ಲಿಂರ ಭಾವೈಕ್ಯತೆಯ ಸಂಕೇತವಾಗಿರುವ ಮೊಹರಂ ಆಚರಣೆ

0

ಹಿಂದೂ ಮತ್ತು ಮುಸ್ಲಿಂರ ಭಾವೈಕ್ಯತೆಯ ಸಂಕೇತವಾಗಿರುವ ಮೊಹರಂ(ಬಾಬಯ್ಯನವರ)ಹಬ್ಬ ಶ್ರಧ್ಧಾಭಕ್ತಿಯಿಂದ ಪಟ್ಟಣದಲ್ಲಿ ಆಚರಿಸಲಾಯಿತು.
ವಿಶೇಷ ಪ್ರಾರ್ಥನೆ ನಡೆಸಿ ಪಾನಕ ಮತ್ತು ಪ್ರಸಾದಗಳನ್ನು ಬರುವ ಭಕ್ತಾಧಿಗಳಿಗೆ ಹಂಚಿಕೆ ಮಾಡಿದರು. ಕಳೆದ ೬೦ ವರ್ಷಗಳಿಂದ ಕಳೆಗುಂದಿದ್ದ ಮೊಹರಂ ಹಬ್ಬಗೆ ಈ ಬಾರಿ ವಿಶೇಷ ಮೆರುಗು ನೀಡಲಾಗಿತ್ತು. ಈ ಸಂದರ್ಭದಲ್ಲಿ ಮುಜಾವರ್ ಅಬ್ದುಲ್ ರಶೀದ್ ಮತ್ತು ಮುಜಾವರ್ ನೌಷಾದ್(ಅಬ್ದುಲ್ ವಹಾಬ್) ವಿಶೇಷ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಮುಸ್ಲಿಂ ಬಾಂಧವರು ಮೊಹರಂ ಹಬ್ಬವನ್ನು ಆಚರಿಸಿ ಮೊಹರಂ ಮಾಸದ ೧೦ನೇ ದಿನದಂದು ಆಶುರಾ ಕಾರ್ಯಕ್ರಮವನ್ನು ನೆರವೇರಿಸಿ ಪ್ರವಾದಿ ಮೊಹ್ಮದ್ ಪೈಗಂಬರ್ ಅವರ ಮೊಮ್ಮಕ್ಕಳಾದ ಹಝರತ್ ಇಮಾಂ ಹಸೇನ್ ಮತ್ತು ಹಝರತ್ ಇಮಾಂ ಹುಸೇನ್ ಅವರು ಹುತಾತ್ಮರಾದ ಚರಿತ್ರೆಯನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಸಂಪ್ರದಾಯದಂತೆ ಮೊಹರಂ ಆಚರಣೆಗೆ ತೆರೆ ಎಳೆಯಲಾಯಿತು.
ಮಹಬೂಬ್ ನಗರದಲ್ಲಿ ಕಳೆದ ೧೦ ದಿನಗಳಿಂದ ಹಝರತ್ ಬಾರಾಇಮಾಂಗಳ ಹಸ್ತದ ಗುರುತಗಳನ್ನು ಇರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಅಗ್ನಿಕುಂಡವನ್ನು ಮುಚ್ಚಿ ಅದರ ಮೇಲೆ ದಾಳಿಂಬೆ ಗಳನ್ನು ನೆಟ್ಟು ಪಂಜಗಳೊಂದಿಗೆ ಮೆರವಣಿಗೆ ನಡೆಸಿ ಇಲ್ಲಿನ ಹಝರತ್ ಅಮೀರ್ ಬಾಬಾ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪಂಜಗಳನ್ನು ಶುಧ್ದವಾದ ನೀರಿನಿಂದ ಶುಚಿಗೊಳಿಸಿ ಭದ್ರಗೊಳಿಸಿದರು.
‘ನಮ್ಮ ತಾತಾ ದಿ.ಮುಜಾವರ್ ಮಹಡಿ ಅಬ್ದುಲ್ ವಹಾಬ್ ಅವರ ಕಾಲದಿಂದಲೂ ಪ್ರವಾದಿ ಮೊಹ್ಮದ್ ಪೈಗಂಬರ್ ಅವರ ಮೊಮ್ಮಕ್ಕಳಾದ ಹಝರತ್ ಇಮಾಂ ಹಸೇನ್ ಮತ್ತು ಹಝರತ್ ಇಮಾಂ ಹುಸೇನ್ ಅವರ ಸ್ಮರಣಾರ್ಥ ಮೊಹರಂ ಹಬ್ಬವನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿತ್ತು. ಈ ಬಾರಿ ನಾಗರಿಕರ ಸಹಕಾರ ಮತ್ತು ಪ್ರೋತ್ಸಾಹದಿಂದ ವಿಜೃಂಭಣೆಯಿಂದ ಆಚರಣೆ ಮಾಡಲಾಗಿದೆ. ಪ್ರತಿ ವರ್ಷವು ಸಹ ವಿಜೃಂಭಣೆಯಿಂದ ಮೊಹರಂ ಹಬ್ಬವನ್ನು ಆಚರಣೆ ಮಾಡುವ ಮೂಲಕ ಸಂಪ್ರದಾಯವನ್ನು ಮುಂದುವರೆಸುತ್ತೇವೆ’ ಎಂದು ಮುಜಾವರ್ ಅಬ್ದುಲ್ ರಶೀದ್ ಹೇಳಿದರು.
ಈ ಸಂದರ್ಭದಲ್ಲಿ ಮುಜಾವರ್ ದಸ್ತಗೀರ್, ಮೊಹದೀನ್, ಅತೀಖ್, ಅಬ್ದುಲ್ ವಹಾಬ್, ಅಬ್ದುಲ್ ರಝಾಖ್, ಅಮೀರ್ ಪಾಷ, ಅಯೂಬ್, ಸಾಧಿಕ್ ಪಾಷ, ಶನ್ನು ಮತ್ತಿತರರು ಹಾಜರಿದ್ದರು.
[images cols=”five” lightbox=”true”]
[image link=”2114″ image=”2114″]
[image link=”2115″ image=”2115″]
[image link=”2116″ image=”2116″]
[image link=”2117″ image=”2117″]
[image link=”2118″ image=”2118″]
[/images]

error: Content is protected !!