ಶಿಡ್ಲಘಟ್ಟದ ತಾಲ್ಲೂಕು ಪಂಚಾಯತಿ ಆವರಣದಲ್ಲಿ ತಾಲ್ಲೂಕಿನ 27 ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಗಳಿಗೆ ಭಾರತ ಸೇವಾದಳದ ರಾಜ್ಯ ಸಂಪನ್ಮೂಲ ಶಿಕ್ಷಕ ವೆಂಕಟರೆಡ್ಡಿ ಹಾಗೂ ತಾಲ್ಲೂಕು ಅಧಿನಾಯಕ ಎಂ.ರಾಮಕೃಷ್ಣಪ್ಪ ರಾಷ್ಟ್ರಧ್ವಜದ ಆರೋಹಣ ಮತ್ತು ಅವರೋಹಣದ ಬಗ್ಗೆ ಪುನರ್ಮನನ ಕಾರ್ಯಾಗಾರವನ್ನು ಈಚೆಗೆ ನಡೆಸಿಕೊಟ್ಟರು.
ಅಥ್ಲೆಟಿಕ್ಸ್, ಖೋ ಖೋ ಪಂದ್ಯಾವಳಿಯಲ್ಲಿ ತಾಲ್ಲೂಕು ಮಟ್ಟಕ್ಕೆ ಆಯ್ಕೆ
ಶಿಡ್ಲಘಟ್ಟ ತಾಲ್ಲೂಕಿನ ಆನೆಮಡುಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಈಚೆಗೆ ತಾಲ್ಲೂಕಿನ ಗೌಡನಹಳ್ಳಿಯಲ್ಲಿ ನಡೆದ ಹೋಬಳಿ ಮಟ್ಟದ ಅಥ್ಲೆಟಿಕ್ಸ್, ಖೋ ಖೋ ಪಂದ್ಯಾವಳಿಯಲ್ಲಿ ವಿಜೇತರಾಗಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳಿಗೆ ಉತ್ತರ ಕರ್ನಾಟಕದ ಜಾನಪದ ನೃತ್ಯ ಕಲಿಕೆ
ತಾಲ್ಲೂಕಿನ ಆನೆಮಡುಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಈಚೆಗೆ ಉತ್ತರ ಕರ್ನಾಟಕದ ಜಾನಪದ ನೃತ್ಯಗಳನ್ನು ಕಲಿಸಲಾಯಿತು.
ಗುಲ್ಬರ್ಗಾದ ನಿವೃತ್ತ ಶಿಕ್ಷಕ ಚನ್ನಮಲ್ಲಯ್ಯ ಕಠಾರಿಮಠ ಅವರನ್ನು ಶಾಲೆಯ ವತಿಯಿಂದ ಕರೆಸಿ ಉತ್ತರ ಕರ್ನಾಟಕದ ಜಾನಪದ ನೃತ್ಯಗಳಾದ ಕೊಂಕಣದ ಜಾಲಿಗರು, ಕೋಲಾಟ, ಕೊಡ ತುಂಬಾ ನೀರು ಮುಂತಾದ ಗೀತನೃತ್ಯಗಳನ್ನು ಕಲಿಸಿದರು.
‘ಸುಮಾರು ಒಂದು ವಾರಗಳ ಕಾಲ ಗುಲ್ಬರ್ಗಾದ ನಿವೃತ್ತ ಶಿಕ್ಷಕ ಚನ್ನಮಲ್ಲಯ್ಯ ಅವರು ನಮ್ಮೊಡನಿದ್ದು ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಉತ್ತರ ಕರ್ನಾಟಕದ ಹಲವು ನೃತ್ಯರೂಪಕಗಳನ್ನು ಕಲಿಸಿಕೊಟ್ಟರು. ನಮ್ಮ ಜಾನಪದದಂತೆ ನಮ್ಮ ರಾಜ್ಯದ ಇನ್ನೊಂದು ಭಾಗದ ಜಾನಪದವೂ ನಮ್ಮ ಮಕ್ಕಳಿಗೆ ಈ ಮೂಲಕ ಕಲಿಸುವಂತಾಯಿತು. ಮಕ್ಕಳಿಗೆ ನೃತ್ಯವನ್ನು ಕಲಿಸಿಕೊಟ್ಟ ನಿವೃತ್ತ ಶಿಕ್ಷಕ ಚನ್ನಮಲ್ಲಯ್ಯ ಕಠಾರಿಮಠ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಿದೆವು’ ಎಂದು ಆನೆಮಡುಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಕೆ.ವಿ.ಪ್ರಕಾಶ್‌ಬಾಬು ತಿಳಿಸಿದರು.
ಸಹಶಿಕ್ಷಕರಾದ ಆರ್.ನಾರಾಯಣಸ್ವಾಮಿ, ವೆಂಕಟರೆಡ್ಡಿ, ಕೆ.ಸಿ.ಲಕ್ಷ್ಮೀನಾರಾಯಣ, ಹೇಮಲತಾ ಈ ಸಂದರ್ಭದಲ್ಲಿ ಹಾಜರಿದ್ದರು.
ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ರೇಣುಕಾಎಲ್ಲಮ್ಮ ದೇವಿಯ ದೇವಾಲಯದಲ್ಲಿ ಬಳೆಯ ಅಲಂಕಾರ
ಶಿಡ್ಲಘಟ್ಟದ ರೇಣುಕಾಎಲ್ಲಮ್ಮ ದೇವಿಯ ದೇವಾಲಯದಲ್ಲಿ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಬಳೆಯ ಅಲಂಕಾರವನ್ನು ಮಾಡಿ ವಿಶೀಷ ಪೂಜೆಯನ್ನು ನಡೆಸಲಾಯಿತು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತ ತಪಾಸಣಾ ಶಿಬಿರ
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಬಿಪಿಎಲ್ ಕಾರ್ಡುದಾರರಿಗೆ ಬೆಂಗಳೂರಿನ ಸಾಗರ್ ಆಸ್ಪತ್ರೆಯ ತಜ್ಞ ವೈದ್ಯರು ಉಚಿತ ತಪಾಸಣಾ ಶಿಬಿರವನ್ನು ನಡೆಸಿಕೊಟ್ಟರು.
ಹೃದಯ ರೋಗ ಹಾಗೂ ಮೂತ್ರಪಿಂಡದ ಖಾಯಿಲೆಗಳ ತಜ್ಞ ವೈದ್ಯರು ಆಗಮಿಸಿದ್ದು, ತಪಾಸಣೆಯನ್ನು ನಡೆಸಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರಿಗೆ ಸರ್ಕಾರದ ಖರ್ಚಿನಲ್ಲೇ ಬೆಂಗಳೂರಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಹಾಗೂ ಔಷದೋಪಚಾರವನ್ನು ನೀಡಲಾಗುತ್ತಿದೆ. ತಿಂಗಳಿಗೊಮ್ಮೆ ನಡೆಯುವ ಈ ವಾಜಪೇಯಿ ಆರೋಗ್ಯಶ್ರೀ ಶಿಬಿರವನ್ನು ಗ್ರಾಮೀಣ ಜನರು ಸದುಪಯೋಗಪಡಿಸಿಕೊಳ್ಳಬೇಕೆಂದು ಎಂದು ಈ ಸಂದರ್ಭದಲ್ಲಿ ವೈದ್ಯರು ತಿಳಿಸಿದರು.
ಸುಮಾರು 150 ಮಂದಿ ತಪಾಸಣೆಗೆ ಬಂದಿದ್ದು ಅವರಲ್ಲಿ 20 ಮಂದಿಯನ್ನು ಹೆಚ್ಚಿನ ಶಸ್ತ್ರಚಿಕಿತ್ಸೆಗಾಗಿ ಆಯ್ಕೆ ಮಾಡಲಾಗಿದ್ದು, ಅವರಲ್ಲಿ 10 ಮಂದಿ ಈಗಾಗಲೇ ಹೊರಟಿದ್ದು ಅವರನ್ನು ಬೆಂಗಳೂರಿಗೆ ಕರೆದೊಯ್ಯುತ್ತಿರುವುದಾಗಿ ಅವರು ತಿಳಿಸಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್‌ಕುಮಾರ್, ವಾಜಪೇಯಿ ಆರೋಗ್ಯಶ್ರೀ ಜಿಲ್ಲಾ ಸಂಯೋಜಕ ನಯಾಜ್ ಖಾನ್, ಸಾಗರ್ ಆಸ್ಪತ್ರೆಯ ತಜ್ಞ ವೈದ್ಯ ಡಾ.ಕೃಷ್ಣಪ್ಪ, ಡಾ.ಪ್ರಕಾಶ್, ಅಕ್ಕಲರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕುಂದಲಗುರ್ಕಿಯಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಮತ್ತು ಗ್ರಾಮ ಪಂಚಾಯತಿ ವತಿಯಿಂದ ರಕ್ತದಾನ ಶಿಬಿರ
ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಬುಧವಾರ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಮತ್ತು ಗ್ರಾಮ ಪಂಚಾಯತಿ ವತಿಯಿಂದ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ 52 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಕುಂದಲಗುರ್ಕಿ ವೆಂಕಟೇಶ್, ರೆಡ್ ಕ್ರಾಸ್ ಸೊಸೈಟಿಯ ಗುರುರಾಜರಾವ್, ಸುಬ್ರಮಣಿ ಹಾಜರಿದ್ದರು.
ಎಂ.ಶಶಿಧರ್‌ಗೆ ಇಂಡೋ–ನೇಪಾಳ್ ಫ್ರೆಂಡ್‌ಶಿಪ್ ಅಂತಾರಾಷ್ಟ್ರೀಯ ಪ್ರಶಸ್ತಿ
ವೆಂಕಟೇಶ್ವರ ಎಂಜಿನಿಯರಿಂಗ್ ಕಾಲೇಜಿನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಎಂ.ಶಶಿಧರ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ನಾಪಾಳದ ಕಠ್ಮಂಡುವಿನಲ್ಲಿ ಶನಿವಾರ ‘ಇಂಡೋ–ನೇಪಾಳ್ ಫ್ರೆಂಡ್‌ಶಿಪ್’ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ಬಡ್ಡಿ ಹಾಗೂ ಸಾಲ ಮನ್ನಾ ಮಾಡದೇ ಹಣವನ್ನು ನೀರಾವರಿ ಯೋಜನೆಗಳಿಗಾಗಿ ಬಳಸಿದಲ್ಲಿ ರೈತರ ಆರ್ಥಿಕತೆ ಸದೃಢಗೊಳ್ಳುತ್ತದೆ
ಬಡ್ಡಿ ಮನ್ನಾ ಹಾಗೂ ಸಾಲ ಮನ್ನಾಗಳನ್ನು ಸರ್ಕಾರಗಳು ಮಾಡದೇ ಆ ಹಣವನ್ನು ನೀರಾವರಿ ಯೋಜನೆಗಳಿಗಾಗಿ ಬಳಸಿದಲ್ಲಿ ರೈತರ ಆರ್ಥಿಕತೆ ಸದೃಢಗೊಳ್ಳುತ್ತದೆ ಎಂದು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ತಿಳಿಸಿದರು.
ತಾಲ್ಲೂಕಿನ ಸಾದಲಿ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ಸೋಮವಾರ 117 ಜನರಿಗೆ ಒಟ್ಟು ಒಂದು ಕೋಟಿ 40 ಲಕ್ಷ ರೂಗಳ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತ ಉಳಿದರೆ ದೇಶ ಉಳಿಯುತ್ತದೆ. ವಾಣಿಜ್ಯ ಬ್ಯಾಂಕ್‌ಗಳಿಗಿಂತ ಹೆಚ್ಚಿನ ಸೌಲಭ್ಯ ನೀಡುವ ಹಾಗೂ ಸಮೂಹ ಸಾಲಗಳನ್ನು ನೀಡುವ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ರೈತರ ಪರವಾಗಿದೆ. ಸಾಲಗಳನ್ನು ಪಡೆದು ಸದುಪಯೋಗ ಮಾಡಿಕೊಂಡು ಸಕಾಲದಲ್ಲಿ ವಾಪಸ್ ಮಾಡಿ ಬ್ಯಾಂಕ್ ಹಾಗೂ ತಾವೂ ಆರ್ಥಿಕವಾಗಿ ಬೆಳೆಯಬೇಕು. ಒಂದು ವರ್ಷದ ವರೆಗೆ ಬಡ್ಡಿಯಿರದೇ ನೀಡುತ್ತೇವೆ. ಬೇರೆಡೆ ಯಥೇಚ್ಛ ಬಡ್ಡಿಗೆ ಕೈಸಾಲ ಮಾಡುವುದನ್ನು ಬಿಟ್ಟು ಬ್ಯಾಂಕ್ ಮೂಲಕ ವ್ಯವಹರಿಸಬೇಕು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳಲ್ಲಿ ಇನ್ನು ಒಂದು ವರ್ಷದೊಳಗೆ ಇತರೇ ಬ್ಯಾಂಕುಗಳಿಗಿಂತ ನಮ್ಮ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮುಂಚೂಣಿಯಲ್ಲಿರುತ್ತದೆ. ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಖಾತೆಗಳನ್ನು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ತೆರೆದು ವ್ಯವಹರಿಸಿ, ಬ್ಯಾಂಕ್ ಮೂಲಕ ಹಸುಗಳಿಗಾಗಿ ಸಾಲವನ್ನು ಪಡೆಯಬಹುದು. ಜಿಲ್ಲಾದ್ಯಂತ 150 ಕೋಟಿ ಸಾಲ ನೀಡುವ ಗುರಿಯಿದೆ ಎಂದು ಹೇಳಿದರು.
ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಶಿವಾರೆಡ್ಡಿ, ದಯಾನಂದ್, ಮುಖಂಡ ಸಾದಲಿ ಜೈಪ್ರಕಾಶ್, ಸಾದಲಿ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಲಕ್ಷ್ಮೀಪತಿ, ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಪಕ ಲಿಂಗರಾಜು, ಸಹಕಾರ ಸಹಾಯಕ ನಿಬಂಧಕ ಆರೀಫುಲ್ಲ, ಚಂದ್ರಶೇಖರ್, ನಟರಾಜ್, ನರಸಿಂಹರೆಡ್ಡಿ, ವ್ಯವಸಾಯ ಸೇವಾ ಸಹಕಾರ ಸಂಘದ ಕಾರ್ಯನಿರ್ವಾಹಣಾಧಿಕಾರಿಗಳಾದ ಭೀಮಪ್ಪ, ನಾಗರಾಜ್, ರಾಮಣ್ಣ, ಸಾದಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಪತ್ರಕರ್ತರ ಸಮಸ್ಯೆಗಳನ್ನು ಚರ್ಚಿಸುವ ದಿನವನ್ನಾಗಿ ಪತ್ರಿಕಾ ದಿನಾಚರಣೆಯನ್ನು ಆಚರಿಸಿ – ಶಾಸಕ ಎಂ.ರಾಜಣ್ಣ
ಸಮಾಜದ ತಪ್ಪು ಒಪ್ಪುಗಳನ್ನು ಪ್ರಚುರಪಡಿಸುವ ಪತ್ರಕರ್ತರ ಸಮಸ್ಯೆಗಳನ್ನು ಚರ್ಚಿಸುವ ದಿನವನ್ನಾಗಿ ಪತ್ರಿಕಾ ದಿನಾಚರಣೆಯನ್ನು ಆಚರಿಸುವಂತೆ ಶಾಸಕ ಎಂ.ರಾಜಣ್ಣ ತಿಳಿಸಿದರು.
ಪಟ್ಟಣದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ತಾಲ್ಲೂಕು ಕಾರ್ಯನಿರತ ಪತ್ರಕರ್ತ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಂತ್ರಜ್ಞಾನ ಪ್ರಗತಿಯಾದಂತೆ ಪತ್ರಕರ್ತರ ಕಾರ್ಯಶೈಲಿಯೂ ಬದಲಾಗಿದೆ ಹಾಗೂ ಸವಾಲುಗಳೂ ಹೆಚ್ಚಿವೆ. ಜನಸಾಮಾನ್ಯರ ಕಷ್ಟ, ನೋವು, ತೊಂದರೆಗಳಿಗೆ ಪತ್ರಕರ್ತರು ಧ್ವನಿಯಾಗಬೇಕು. ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ತಪ್ಪುಗಳನ್ನು ತೋರಿಸಿ ತಿದ್ದುವ ಕೆಲಸದ ಜೊತೆಯಲ್ಲಿ ಸಾಮಾಜಿಕ ಕಳಕಳಿ ಮತ್ತು ಎಲೆಮರೆ ಕಾಯಿಯಂಥಹ ಪ್ರತಿಭೆಗಳು ಹಾಗೂ ಉತ್ತಮ ಕಾರ್ಯಗಳ ಬಗ್ಗೆಯೂ ಬೆಳಕು ಚೆಲ್ಲಬೇಕು. ಪತ್ರಕರ್ತರು ವಸ್ತುನಿಷ್ಠ ಪತ್ರಿಕೋದ್ಯಮವನ್ನು ಅನುಸರಿಸಿ ಮಾದರಿಯಾಗಬೇಕು ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಎಂ.ಜಯರಾಮ್ ಮಾತನಾಡಿ, ದೃಶ್ಯ ಮಾಧ್ಯಮದ ಹೆಚ್ಚಳದಿಂದಾಗಿ ಸುದ್ಧಿಯ ವೇಗ ಹೆಚ್ಚಿದ್ದು ಪತ್ರಕರ್ತರಿಗೆ ಸವಾಲಾಗಿ ಪರಿಣಮಿಸಿದೆ. ಸುದ್ಧಿಯನ್ನು ಪುನರ್ಪರಿಶೀಲಿಸಲು ಅತ್ಯಂತ ಕಡಿಮೆ ಸಮಯವಿರುವುದರಿಂದ ಅಚಾತುರ್ಯವಾಗದಂತೆ ಪತ್ರಕರ್ತರು ಸದಾ ಜಾಗರೂಕರಾಗಿರಬೇಕು. ಸ್ವಹಿತಕ್ಕಿಂತ ಸಮಾಜಮುಖಿಗಳಾಗಿ ದುಡಿಯುವ ಉತ್ತಮ ಪತ್ರಕರ್ತರಿಗೆ ಗೌರವ ಸದಾ ಇರುತ್ತದೆ. ಜಿಲ್ಲಾ ಸಂಘದ ವತಿಯಿಂದ ಜೀವವಿಮಾ ಮಾಡಿಸಲಾಗಿದೆ. ಕಾರ್ಯನಿರತ ಪತ್ರಕರ್ತರು ನಿಧನರಾದರೆ ಜಿಲ್ಲಾ ಸಂಘದಿಂದ 50 ಸಾವಿರ ರೂಗಳನ್ನು ನೀಡುತ್ತೇವೆ. ಗ್ರಾಮೀಣ ಪತ್ರಕರ್ತರು ನಿಜವಾಗಿಯೂ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಕಾರ್ಯನಿರತ ಪತ್ರಕರ್ತರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನೂ ತಲುಪಿಸಲು ಜಿಲ್ಲಾ ಸಂಘ ಶ್ರಮಿಸಲಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಜಾನಪದ ಕಲಾವಿದರಿಂದ ಗೀತಗಾಯನವನ್ನು ಆಯೋಜಿಸಲಾಗಿತ್ತು.
ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ರಾಧಾಕೃಷ್ಣ, ರಾಜ್ಯ ಸಮಿತಿ ಸದಸ್ಯ ಸೋ.ಸು. ನಾಗೇಂದ್ರನಾಥ್, ತಾಲ್ಲೂಕು ಅಧ್ಯಕ್ಷ ನಾಗರಾಜ್, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಬಿ.ಜೆ.ಪಿ ತಾಲ್ಲೂಕು ಅಧ್ಯಕ್ಷ ಸುರೇಂದ್ರಗೌಡ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ಪುರಸಭಾ ಅಧ್ಯಕ್ಷೆ ಮುಷ್ಠರಿ ತನ್ವೀರ್, ರೈತ ಮುಖಂಡರಾದ ಮಳ್ಳೂರು ಹರೀಶ್, ಭಕ್ತರಹಳ್ಳಿ ಬೈರೇಗೌಡ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರಶೇಖರ್, ಖಜಾಂಚಿ ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.
ರಾಜ್ಯ ರೇಷ್ಮೆ ಸಂಶೋಧನೆ ಮಂಡಳಿಯ ಸದಸ್ಯರಾಗಿ ಹಿತ್ತಲಹಳ್ಳಿಯ ಎಚ್.ಕೆ.ಸುರೇಶ್ ಆಯ್ಕೆ
ತಾಲ್ಲೂಕಿನ ಹಿತ್ತಲಹಳ್ಳಿಯ ಎಚ್.ಕೆ.ಸುರೇಶ್ ಅವರು ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ವಿಸ್ತರಣೆ ಮತ್ತು ತರಬೇತಿ ವಿಭಾಗದ ಸಂಶೋಧನಾ ಮಂಡಳಿಯ ಸದಸ್ಯರಾಗಿ ಮೂರು ವರ್ಷದ ಅವಧಿಗೆ ಆಯ್ಕೆಯಾಗಿರುವುದಾಗಿ ರೇಷ್ಮೆ ಅಭಿವೃದ್ಧಿ ಆಯುಕ್ತ ಜಿ.ಸತೀಶ್ ತಿಳಿಸಿದ್ದಾರೆ.

