ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನ ಗಂಗಾದೇವಿ ದ್ರಾಕ್ಷಿ ಬೆಳೆಗಾರರ ರೈತ ಕೂಟಕ್ಕೆ ಅತ್ಯುತ್ತಮ ರೈತ ಕೂಟ ಪ್ರಶಸ್ತಿಯನ್ನು ಬೆಂಗಳೂರಿನ ಬೆಲ್ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಬಾರ್ಡ್ ಬ್ಯಾಂಕಿನ ಮುಖ್ಯ ಮಹಾಪ್ರಬಂಧಕ ಜಿ.ಆರ್.ಚಿಂತಾಲ, ಕೆನರಾ ಬ್ಯಾಂಕಿನ ಉಪಮಹಾ ಪ್ರಬಂಧಕ ಎಂ.ಎಂ.ಚಿನ್ನಿವಾರ್, ಸಿಂಡಿಕೇಟ್ ಬ್ಯಾಂಕಿನ ಸುಧೀರ್ ಕುಮಾರ್ ನೀಡಿದರು. ಗಂಗಾದೇವಿ ದ್ರಾಕ್ಷಿ ಬೆಳೆಗಾರರ ರೈತ ಕೂಟದ ಕಾರ್ಯದರ್ಶಿ ಸಿ.ಎಸ್.ನಾಗೇಂದ್ರ ಪ್ರಸಾದ್, ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್.ಜಿ.ಗೋಪಾಲಗೌಡ ಪ್ರಶಸ್ತಿಯನ್ನು ಸ್ವೀಕರಿಸಿದರು.
ಎಚ್.ಕ್ರಾಸ್‌ನಲ್ಲಿ ನೂತನ ನಂದಿನಿ ಹಾಲಿನ ಮಳಿಗೆ ಉದ್ಘಾಟನೆ
ಶಿಡ್ಲಘಟ್ಟ ತಾಲ್ಲೂಕಿನ ಎಚ್.ಕ್ರಾಸ್‌ನಲ್ಲಿ ಶನಿವಾರ ಶಾಸಕ ಎಂ.ರಾಜಣ್ಣ ನೂತನ ನಂದಿನಿ ಹಾಲಿನ ಮಳಿಗೆಯನ್ನು ಉದ್ಘಾಟಿಸಿದರು. ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಮಾರುಕಟ್ಟೆ ಮೇಲ್ವಿಚಾರಕರು ವಿಜಯ್‌ಕುಮಾರ್, ಸಹಾಯಕ ವ್ಯವಸ್ಥಾಪಕರು ಸೋಮಶೇಖರ್ ಹಾಜರಿದ್ದರು.
ಆರ್ಯ ವೈಶ್ಯ ಮಹಿಳಾ ಮಂಡಳಿ ವತಿಯಿಂದ ಗುರುಪೂರ್ಣಿಮಾ ಪೂಜೆ
ಪಟ್ಟಣದ ಆರ್ಯ ವೈಶ್ಯ ಮಹಿಳಾ ಮಂಡಳಿ ವತಿಯಿಂದ ಶನಿವಾರ ಗುರುಪೂರ್ಣಿಮಾ ಪೂಜಾ ಕಾರ್ಯಕ್ರಮವನ್ನು 51 ಸಾಯಿಬಾಬಾ ಮೂರ್ತಿಗಳ ಪ್ರತಿಷ್ಠಾಪನೆಯೊಂದಿಗೆ ವಿಶಿಷ್ಠವಾಗಿ ಆಚರಿಸಲಾಯಿತು.
ವಾಸವಿ ರಸ್ತೆಯ ಕಾಶೀನಾಥ್ ಅವರ ಮನೆಯಲ್ಲಿ ಗುರುಪೂರ್ಣಿಮಾ ಪೂಜೆಯನ್ನು ಆಯೋಜಿಸಿದ್ದು, ಬೆಳಿಗ್ಗೆ ಕಾಕಡಾರತಿ, ಮಧ್ಯಾಹ್ನದಾರತಿ, ಸಾಯಂಕಾಲದ ಧೂಪಾರತಿ ಹಾಗೂ ಶೇಜಾರತಿಯನ್ನು ನಡೆಸಲಾಗುತ್ತಿದೆ. ಮಹಿಳೆಯರು ಸಾಯಿಬಾಬಾ ವಚನಾಮೃತದ ಗೀತೆಗಳನ್ನು, ಬಾಬಾ ಸ್ತುತಿ ಪದ್ಯಗಳನ್ನು ಹಾಡಿದರು.
‘ಆಷಾಡಮಾಸದ ಹುಣ್ಣಿಮೆಯಂದು ಪ್ರತಿ ವರ್ಷ ಗುರುಪೂರ್ಣಿಮೆಯನ್ನು ಆಚರಿಸುತ್ತಾ ಬರುತ್ತಿದ್ದೇವೆ. ಕಳೆದ ಐದು ವರ್ಷಗಳಿಂದ ಮಹಿಳಾ ಮಂಡಳಿಯ ಸದಸ್ಯೆಯರು ಒಂದೊಂದು ವರ್ಷ ಒಬ್ಬೊಬ್ಬರ ಮನೆಯಲ್ಲಿ ಪೂಜೆಯನ್ನು ಆಯೋಜಿಸುತ್ತಿದ್ದೇವೆ. ಎಲ್ಲರಿಗೂ ಆ ಸದ್ಗುರು ಒಳ್ಳೆಯದನ್ನು ಮಾಡಲಿ ಎಂಬ ಉದ್ದೇಶದಿಂದ ಆಚರಿಸುವ ಈ ಪೂಜೆಗೆ ಎಲ್ಲರೂ ತಮ್ಮ ಮನೆಗಳಿಂದ ವಿವಿಧ ಪ್ರಸಾದಗಳನ್ನು ತಂದು ನೈವೇದ್ಯ ಮಾಡಿ ಹಂಚುತ್ತೇವೆ. ಜ್ಞಾನ, ಭಕ್ತಿ ಹಾಗೂ ಆರೋಗ್ಯವನ್ನು ಕರುಣಿಸಿದ ಶಿರಡಿ ಸಾಯಿಬಾಬಾ ಅವರ 51 ಮೂರ್ತಿಗಳನ್ನಿಟ್ಟು ಪೂಜೆ ಸಲ್ಲಿಸುತ್ತಿದ್ದೇವೆ’ ಎಂದು ಆರ್ಯ ವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ಗಜಲಕ್ಷ್ಮಿ ತಿಳಿಸಿದರು.
ಆರ್ಯ ವೈಶ್ಯ ಮಹಿಳಾ ಮಂಡಳಿಯ ಸತ್ಯಲಕ್ಷ್ಮಿ, ರೂಪಾ, ಜಯಶ್ರೀ, ಸರಳಾ, ಪ್ರತಿಮಾ ಮತ್ತಿತರರು ಹಾಜರಿದ್ದರು.
ಸಾಯಿನಾಥ ಜ್ಞಾನಮಂದಿರದಲ್ಲಿ ಗುರುಪೂರ್ಣಿಮಾ ಕಾರ್ಯಕ್ರಮ
ತಾಲ್ಲೂಕಿನ ಮಳ್ಳೂರು ಗ್ರಾಮದ ಹೊರವಲಯದ ಸಾಯಿನಾಥ ಜ್ಞಾನಮಂದಿರದಲ್ಲಿ ಶನಿವಾರ ಗುರುಪೂರ್ಣಿಮಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಗುರುಪೂರ್ಣಿಮಾ ಪ್ರಯುಕ್ತ ಮೂರು ದಿನಗಳಿಂದ ರಾಮಕೋಟಿ ಅಖಂಡ ಭಜನೆಯನ್ನು ಏರ್ಪಡಿಸಲಾಗಿತ್ತು. ಮಳ್ಳೂರು, ಸೊಣ್ಣೇನಹಳ್ಳಿ, ಅಪ್ಪೇಗೌಡನಹಳ್ಳಿ, ಸೀಗೆಹಳ್ಳಿ, ಮೇಲೂರು, ಕೊಮ್ಮಸಂದ್ರ, ಹಿತ್ತಲಹಳ್ಳಿ, ಬೆಳ್ಳೂಟಿ, ಆನೂರು, ಬೋದಗೂರು, ಮುತ್ತೂರು, ಕಾಕಚೊಕ್ಕಂಡಹಳ್ಳಿ, ವೀರಾಪುರ, ಹೊಸಹುಡ್ಯ, ಗಂಗನಹಳ್ಳಿ, ಗಿಡ್ನಹಳ್ಳಿ ಸೇರಿದಂತೆ 35 ಗ್ರಾಮದ ಭಕ್ತರಿಂದ ಸರದಿಯಂತೆ ಹಗಲೂ ರಾತ್ರಿ ರಾಮಕೋಟಿ ಭಜನೆ ನಡೆಯಿತು. ಹತ್ತು ದಿನಗಳ ಕಾಲ ದಿನಕ್ಕೊಂದು ಗ್ರಾಮದಲ್ಲಿ ಭಜನೆ ಕಾರ್ಯಕ್ರಮವನ್ನು ನಡೆಸಲಾಗಿತ್ತು.
ಶನಿವಾರ ಗುರುಪೂರ್ಣಿಮಾ ಅಂಗವಾಗಿ ಕಾಕಡಾರತಿ, ಪಂಚಾಮೃತಾಭಿಷೇಕ, ಸತ್ಯನಾರಾಯಣಸ್ವಾಮಿ ಪೂಜೆ, ಸಾಯಿ ಹೋಮ, ದತ್ತಾತ್ರೇಯ ಹೋಮ, ಶ್ರೀರಾಮ ತಾರಕ ಹೋಮ, ಮಹಾಮಂಗಳಾರತಿ, ಮಹಾಪ್ರಸಾದ ವಿನಿಯೋಗ ನಡೆಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ತಾಲ್ಲೂಕು ಹಾಗೂ ಸುತ್ತಮುತ್ತಲಿನ ತಾಲ್ಲೂಕುಗಳಿಂದ ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು.
ತಾಲ್ಲೂಕಿನ ಮೂವ್ವತ್ತೈದು ಶಾಲೆ ಹಾಗೂ ಕಾಲೇಜುಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ರಾಮಕೃಷ್ಣ ವಿವೇಕಾನಂದ ಮಠದ ಪೂರ್ಣಾನಂದ ಸ್ವಾಮಿಗಳು ಮಾಡಿದರು. ವಿವಿಧ ಶಾಲೆಗಳ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಭಜನೆ ನಡೆಸಿದ ಗ್ರಾಮಸ್ಥರಿಗೆ ಪ್ರಶಸ್ತಿ ಪತ್ರಗಳನ್ನು ನೀಡಿದರು. ತಾಲ್ಲೂಕಿನ ಹಿರಿಯ ಕಲಾವಿದರಾದ ಪಿಟೀಲು ವಿದ್ವಾನ್ ಹೊಸಪೇಟೆ ನಾರಾಯಣಾಚಾರ್, ಮೃದಂಗ ವಿದ್ವಾನ್ ವೆಂಕಟರಮಣಪ್ಪ ಅವರನ್ನು ಸನ್ಮಾನಿಸಲಾಯಿತು.
‘ಸಾಯಿನಾಥ ಜ್ಞಾನ ಮಂದಿರದಲ್ಲಿ ಹಲವಾರು ವರ್ಷಗಳಿಂದ ಗುರುಪೂರ್ಣಿಮಾ ಪೂಜಾ ಕಾರ್ಯಕ್ರಮವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದೇವೆ. ತಾಲ್ಲೂಕಿನ ಪ್ರತಿಭಾವಂತ ಮಕ್ಕಳನ್ನು ಈ ಸಂದರ್ಭದಲ್ಲಿ ಗೌರವಿಸಿ ಪ್ರೋತ್ಸಾಹಿಸಲಾಗುತ್ತಿದೆ. ಈ ವಿಶಿಷ್ಠ ದಿನ ಹೋಮ ಹವನಗಳನ್ನು ನಡೆಸಿ ವಿಶೇಷ ಪೂಜೆ ನಡೆಸುವುದರಿಂದ ಹೆಚ್ಚೆಚ್ಚು ಭಕ್ತರು ಆಗಮಿಸುತ್ತಾರೆ. ಎಲ್ಲರಿಗೂ ಪ್ರಸಾದವನ್ನು ವಿನಿಯೋಗಿಸುತ್ತಿದ್ದೇವೆ’ ಎಂದು ದೇವಾಲಯದ ಸಂಚಾಲಕ ನಾರಾಯಣಸ್ವಾಮಿ ತಿಳಿಸಿದರು.
ಸಾಯಿನಾಥ ಜ್ಞಾನ ಮಂದಿರದ ಸಂಸ್ಥಾಪಕ ಎಂ ವೆಂಕಟೇಶ್, ನೈರುತ್ಯ ರೇಲ್ವೆ ವಿಭಾಗೀಯ ಕಾರ್ಮಿಕ ಅಧಿಕಾರಿ ಟಿ.ಶಿವಣ್ಣ, ಡಿ.ಸಿ.ಪಿ ಕಚೇರಿಯ ಸಂಚಾರಿ ವಿಭಾಗದ ಮುಖ್ಯಸ್ಥೆ ಆರ್.ಮಂಜುಳ, ಮಳ್ಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮರೆಡ್ಡಿ, ಹಿರಿಯ ಜಾನಪದ ಕಲಾವಿದ ಎಂ.ಆರ್.ಲಕ್ಷೀಪತಿ, ಗೋವಿಂದಪ್ಪ, ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ವಿಶ್ವ ಜನಸಂಖ್ಯಾ ದಿನಾಚರಣೆಯ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ಜನಸಂಖ್ಯಾ ಜಾಗೃತಿ ಜಾಥಾ
ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ‘ಯೋಜಿತ ಪರಿವಾರ –ಸುಖ ಸಂತೋಷ ಅಪಾರ’ ಎಂಬ ಘೋಷಣೆಯೊಂದಿಗೆ ಆಚರಿಸಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಾಲಾ ವಿದ್ಯಾರ್ಥಿಗಳು ಜನಸಂಖ್ಯಾ ಜಾಗೃತಿ ಜಾಥಾ ನಡೆಸಿದರು.
‘ಜನಸಂಖ್ಯೆಯ ಹೆಚ್ಚಳದಿಂದ ಸರ್ಕಾರ ರೂಪಿಸುವ ವಿವಿಧ ಯೋಜನೆಗಳು ಎಲ್ಲರನ್ನೂ ತಲುಪಲಾಗುತ್ತಿಲ್ಲ. ಭೂಮಿಯು ಇರುವಷ್ಟೇ ಇರುತ್ತದೆ. ವಿಸ್ತರಿಸಲಾಗದು. ಆದರೆ ಹೆಚ್ಚುವ ಜನಸಂಖ್ಯೆಯ ಭಾರ ಹಾಗೂ ಒತ್ತಡ ಭೂಮಿಯ ಮೇಲೆ ಬೀಳುವುದರಿಂದ ಆಹಾರದ ಕೊರತೆ ಉಂಟಾಗುತ್ತದೆ. ವೈದ್ಯಕೀಯ ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿ ಆಗಿರುವುದರಿಂದ ಮಕ್ಕಳಾಗದಂತೆ ಶಸ್ತ್ರಚಿಕಿತ್ಸೆಯನ್ನು ಸುಲಭವಾಗಿ ಮಾಡಿಸಿಕೊಳ್ಳಬಹುದಾಗಿದೆ. ಕೆಲವು ಮಹಿಳೆಯರು ಮನೆಯಲ್ಲೂ ಹಾಗೂ ಹೊರಗೂ ದುಡಿಯುವುದಿದ್ದಲ್ಲಿ ಪುರುಷರು ಶಸ್ತ್ರಚಿಕಿತ್ಸೆಗೆ ಒಳಗಾಗಬಹುದು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್‌ಕುಮಾರ್ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಅಂತರ್ಜಲ ಕುಸಿದು, ಕೊಳವೆ ಬಾವಿಗಳನ್ನು ಕೊರೆಸಿ ಕೊರೆಸಿ ರೈತರು ಹಾಳಾಗಿದ್ದಾರೆ. ಭೂಮಿಯಲ್ಲಿ ಬೆಳೆ ತೆಗೆಯುವುದೇ ಕಷ್ಟಕರ ಪರಿಸ್ಥಿತಿಯಲ್ಲಿ ಹೆಚ್ಚುವ ಜನಸಂಖ್ಯೆಗೆ ಆಹಾರ ಒದಗಿಸುವುದು ಕಷ್ಟಕರ. ಈ ಬಗ್ಗೆ ಜನರೇ ಜಾಗೃತರಾಗಬೇಕು. ಪ್ರತಿಯೊಬ್ಬರೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಿ.ನರಸಿಂಹಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಶಿವಲೀಲಾ ರಾಜಣ್ಣ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಎ.ರಾಮಚಂದ್ರಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜರಾವ್, ಆರೋಗ್ಯ ಶಿಕ್ಷಣಾಧಿಕಾರಿ ಕಿರಣ್ ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಮನೆಯೊಂದರಲ್ಲಿ ಕಂಡ ವಿಷಕಾರಿಯಲ್ಲದ ಹಸಿರುಹಾವು ಸುರಕ್ಷಿತವಾಗಿ ಕಾಡಿಗೆ
ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಮನೆಯೊಂದರ ಹಿತ್ತಲಿನ ಬಾಳೆಗಿಡದಲ್ಲಿ ಬುಧವಾರ ಕಂಡು ಬಂದ ಹಸಿರುಹಾವನ್ನು ಅದೇ ಗ್ರಾಮದ ಸ್ನೇಕ್ ನಾಗರಾಜ್ ರಕ್ಷಿಸಿ ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ.

ಗ್ರೀನ್ ವೈನ್ ಸ್ನೇಕ್ ಎಂದು ಕರೆಯುವ ಅಚ್ಚ ಹಸಿರು ಬಣ್ಣದ ಹಸಿರಾವು ನೋಡಲು ಸುಂದರವಾದ ಹಾವು. ಹಸಿರು ಬಣ್ಣದ ಮರಗಿಡಗಳ ಕಾಂಡಗಳಲ್ಲಿರುವ ಅದನ್ನು ಗುರುತಿಸುವುದು ಕಷ್ಟ. ಅದನ್ನು ಕಡ್ಡಿಯೊಂದರ ಮೇಲೆ ಸ್ನೇಕ್ ನಾಗರಾಜ್ ಹತ್ತಿಸಿದಾಗ ಸಾಧುವಂತೆ ಕಂಡ ಹಾವು, ಅದರ ಫೋಟೋ ತೆಗೆಯಲು ಹೋದೊಡನೆ ಲೆನ್ಸ್‌ನಲ್ಲಿ ಕಂಡ ತನ್ನ ಪ್ರತಿಬಿಂಬವನ್ನು ಕಂಡು ಭುಸುಗುಡತೊಡಗಿತು. ಅದರ ಆ ಪ್ರತಿಕ್ರಿಯೆಯಿಂದ ಉತ್ತಮ ಚಿತ್ರ ದಾಖಲಾಯಿತು.
‘ನಾಗರಹಾವನ್ನು ಕಂಡಲ್ಲಿ ಮಾತ್ರ ಜನರು ನನ್ನನ್ನು ಕರೆಯುತ್ತಾರೆ. ಉಳಿದ ಯಾವುದೇ ಹಾವನ್ನು ಕಂಡರೂ ತಾವೇ ಕೋಲೆತ್ತಿ ಕೊಂದು ಬಿಡುತ್ತಾರೆ. ಈ ರೀತಿಯ ವಿಷವಿಲ್ಲದ ಹಾವನ್ನು ಕಂಡರೆ ಕರೆಯುವವರು ಅಪರೂಪ. ಯಾವ ಹಾವಾದರೂ ಸರಿ ಅಕಸ್ಮಾತಾಗಿ ಮನುಷ್ಯರ ವಾಸಸ್ಥಾನದ ಬಳಿ ಬರುತ್ತವೆಯಷ್ಟೆ. ಅವನ್ನು ಸುರಕ್ಷಿತವಾಗಿ ಅವುಗಳ ವಾಸಸ್ಥಾನದಲ್ಲಿ ಬಿಡಬೇಕು. ಅವೂ ಕೂಡ ನಮ್ಮಂತೆಯೇ ಜೀವಿಗಳು’ ಎನ್ನುತ್ತಾರೆ ಸ್ನೇಕ್ ನಾಗರಾಜ್.
’ಹಸಿರು ಹಾವು ವಿಷಕಾರಿ ಅಲ್ಲ. ಆದರೂ ಅದು ಭುಸುಗುಡುತ್ತದೆ ಮತ್ತು ಕಚ್ಚುತ್ತದೆ. ಇದರ ಆಹಾರವಾದ ಕಪ್ಪೆ, ಹಲ್ಲಿ ಮುಂತಾದವನ್ನು ಕೊಲ್ಲಲು ಇದರಲ್ಲಿ ಸ್ವಲ್ಪ ಮಟ್ಟದ ವಿಷ ಇರುತ್ತದೆ. ಇದು ಮನುಷ್ಯರಿಗೆ ಕಚ್ಚಿದಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಯಾವುದೇ ಅಪಾಯವಿಲ್ಲ’ ಎಂದು ಅವರು ಹೇಳಿದರು.
ಸರ್ಮಸ್ತ್ ಹುಸೇನಿ ಷಾವಾಲಿ ಮಸೀದಿಯಲ್ಲಿ ರಮ್‌ಜಾನ್ ‘ರೋಜಾ’ ಆಚರಣೆ
ಹಿಂದುಗಳ ದೀಪಾವಳಿ ಹಬ್ಬದಂತೆ ಮುಸ್ಲೀಮರಿಗೆ ರಮ್‌ಜಾನ್ ಸಂತೋಷದ ದೊಡ್ಡ ಹಬ್ಬ. ಹಿಜರಿ ಶಕೆಯ ಒಂಬತ್ತನೆಯ ತಿಂಗಳು ರಮ್‌ಜಾನ್ ಆಗಿದೆ. ಈ ತಿಂಗಳಿನಲ್ಲಿ ‘ರೋಜಾ’ (ಉಪವಾಸ ವೃತ) ಆಚರಿಸುವುದರಿಂದ ಪಾಪಗಳು ಸುಟ್ಟು ಬೂದಿಯಾಗುತ್ತವೆಂಬ ನಂಬಿಕೆಯಿದೆ.
ಪಟ್ಟಣದ ಸರ್ಮಸ್ತ್ ಹುಸೇನಿ ಷಾವಾಲಿ ಮಸೀದಿಯಲ್ಲಿ ರೋಜಾ ಕೈಗೊಂಡವರಿಗೆಲ್ಲಾ ಸಂಜೆ ರೋಜಾ ಬಿಡುವ ಸಮಯದಲ್ಲಿ ಬಾಳೆ ಹಣ್ಣು, ಖರ್ಜೂರ, ಸಮೋಸಗಳನ್ನು ಮಸೀದಿಯ ವತಿಯಿಂದ ನೀಡಲಾಗುತ್ತಿದೆ.
ಇಡೀ ತಿಂಗಳು ರೋಜಾ ಇರುವುದು ಇಸ್ಲಾಂ ಧರ್ಮದ ವೈಶಿಷ್ಟ್ಯ. ದುಃಖದಿಂದ ಪಾರಾಗಲು ಅಲ್ಲಾಹನ ಪ್ರೇಮ ಸಂಪಾದಿಸಲು ರೋಜಾ ಪವಿತ್ರಮಾರ್ಗವೆಂದು ಮುಸ್ಲಿಂ ಬಾಂಧವರು ನಂಬುತ್ತಾರೆ.
‘ಪ್ರತಿದಿನ ಬೆಳಿಗ್ಗೆ ‘ಫಜ್ರ’ ನಮಾಜಿನ ವೇಳೆಗಿಂತ ಮೊದಲು ಹಿತ-ಮಿತ ಆಹಾರ ಸೇವಿಸಿ ‘ಸಹರಿ’ (ರೋಜಾ ಆರಂಭಿಸುವುದು) ಮಾಡುತ್ತಾರೆ. ಇದಕ್ಕೆ ಅನೇಕ ನಿಯತ್ (ವಿಧಿ, ನಿಯಮ) ಇದ್ದು ಅದರಲ್ಲಿ ಒಂದು ಹೀಗಿದೆ “ನವಾಯಿತನ್ ಆರ್ ಮೊಗದಮ್ ಸೌಮ ರಮಧಾನ್ ಮನ ಫರ್ದುಲ್ಲಾ ಹಿತಾಲಾ” ಎಂದು ಮನಸ್ಸಿನಲ್ಲಿಯೇ ಹೇಳಿಕೊಳ್ಳಬೇಕು. ಅಂದರೆ ರೋಜಾ ಸ್ವೀಕೃತಿಯಾಗುತ್ತದೆ. ಅನಂತರ ಇಡೀ ದಿನ ಆಹಾರ ನೀರು ಸ್ವೀಕರಿಸದೆ, ಸೂರ್ಯಾಸ್ತವಾದ ನಂತರ ಮಗರಿಬ್ ನಮಾಜಿನ ವೇಳೆಗೆ ಹಲ್ಲುಜ್ಜಿ ಬಾಯಿ ತೊಳೆದುಕೊಂಡು ಮನೆಯಲ್ಲಿ ಅಥವಾ ಮಸೀದೆಯಲ್ಲಿ ಕುಳಿತು ‘ರೋಜಾ’ ಬಿಡಬೇಕು.
“ಅಲ್ಲಾಹೂಮಾ ಲಕಾಸಂತೋ ವ ಬಿಕಾಮಂತೊ ವ ಅಲಾಯಿಕಾ ತವಕ್ಕಿಲ್ ತೋ ವ ಅಲಾರಿಸ್‌ತಿಕಾ ಆಪ್ತರತೋ ವತ್ ಖಬ್ಬಲ್ ಮಿನ್ನಿ” (ಅಲ್ಲಾಹ, ನಾನು ನಿನ್ನ ಸಲುವಾಗಿ ಉಪವಾಸ ವೃತ ಕೈಗೊಂಡಿದ್ದೆನು ಮತ್ತು ನಿನ್ನ ಆಜ್ಞೆಯ ಮೇರೆಗೆ ನಾನು ಉಪವಾಸ ವೃತ ಬಿಡುತ್ತೇನೆ) ಎಂದು ಹೇಳಿ ಖರ್ಜೂರ ಅಥವಾ ಬಾಳೆಯ ಹಣ್ಣು (ಅಥವಾ ಸ್ವಲ್ಪ ಆಹಾರ) ಸೇವಿಸಿ ರೋಜಾ ಬಿಡುತ್ತಾರೆ. ‘ಆಜಾನ್’ (ಪ್ರಾರ್ಥನೆಯ ಕರೆ) ಆದೊಡನೆ ಮಸೀದೆಯಲ್ಲಿ ಜಮಾ ಅತ್‌ನೊಂದಿಗೆ ‘ಮಗರಿಬ್’ ನಮಾಜು ಮಾಡಿ ಮನೆಗೆ ಮರಳುತ್ತಾರೆ’ ಎಂದು ಹಫೀಜುಲ್ಲಾ ತಿಳಿಸಿದರು.
ರಸ್ತೆ ಬದಿಯ ವ್ಯಾಪಾರ, ಅಪಘಾತಕ್ಕೆ ಆಹ್ವಾನ
ಸುಸಜ್ಜಿತ ಸಂತೆ ಮೈದಾನ ಹಾಗೂ ಮಳಿಗೆಗಳಿದ್ದರೂ ತಾಲ್ಲೂಕಿನ ಹೊಸಪೇಟೆ ಗೇಟ್ ಬಳಿ ರಸ್ತೆಯ ಬದಿಯಲ್ಲೇ ಸಂತೆ ವ್ಯಾಪಾರ ನಡೆಸುತ್ತಿದ್ದು ಅಪಘಾತಕ್ಕೆ ಕಾರಣವಾಗಿದೆ.
ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯಿತಿಗೆ ಸೇರಿರುವ ಜಂಗಮಕೋಟೆ ಕ್ರಾಸ್ ಅತಿ ಹೆಚ್ಚು ವ್ಯಾಪಾರ ನಡೆಯುವ ಕೇಂದ್ರವಾಗಿದೆ. ಪ್ರತಿ ಮಂಗಳವಾರ ನಡೆಯುವ ಇಲ್ಲಿನ ಸಂತೆಯಿಂದ ಪಂಚಾಯಿತಿಗೆ ವಾರ್ಷಿಕವಾಗಿ ಒಂದೂವರೆ ಲಕ್ಷ ರೂಗಳಷ್ಟು ಆದಾಯವಿದೆ. ಜಂಗಮಕೋಟೆ ಕ್ರಾಸ್‌ನಲ್ಲಿ ನಾಲ್ಕು ರಸ್ತೆಗಳ ಕೂಡುವ ಸ್ಥಳ ಹಾಗೂ ಜನಜಂಗುಳಿ ಹೆಚ್ಚೆಂದು ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದು ರಸ್ತೆ ಬದಿಯಲ್ಲಿ ಸಂತೆ ನಡೆಯುತ್ತಿದ್ದುದನ್ನು ಬದಲಿಸಿ ಹೊಸಪೇಟೆ ಗೇಟ್ ಬಳಿ ಪಂಚಾಯಿತಿ ಸ್ಥಳದಲ್ಲಿ ಸುಮಾರು 19 ಲಕ್ಷ ರೂಗಳ ವೆಚ್ಚದಲ್ಲಿ ಸುಸಜ್ಜಿತ ಸಂತೆ ಮೈದಾನ, ಶೆಡ್ ಹಾಗೂ ಪ್ಲಾಟ್‌ಫಾರಂಗಳನ್ನು ನಿರ್ಮಿಸಲಾಗಿತ್ತು. ನೆರಳು, ಕುಡಿಯುವ ನೀರು, ಶೌಚಾಯಲ ವ್ಯವಸ್ಥೆ ಎಲ್ಲವನ್ನೂ ಕಲ್ಪಿಸಿದ್ದರೂ ಮಳಿಗೆಗಳ ಮುಂದೆ ರಸ್ತೆಬದಿಯಲ್ಲೇ ಜನರು ವ್ಯಾಪಾರಕ್ಕೆ ಅಂಗಡಿಗಳನ್ನು ತೆರೆದಿರುವುದರಿಂದ ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಾರೆ.
ರಸ್ತೆ ಬದಿಯಲ್ಲಿ ಕೆಲವರು ಅಂಗಡಿ ಇಡುವುದರಿಂದಾಗಿ ಸಂತೆಯ ದಿನ ಟೆಂಪೊ, ಟ್ರಾಕ್ಟರ್ ಮುಂತಾದ ವಾಹನಗಳಲ್ಲಿ ತರಕಾರಿ ಮೊದಲಾದ ವಸ್ತುಗಳನ್ನು ಮಾರಾಟಕ್ಕೆ ತರುವವರು ಸಂತೆ ಮೈದಾನದೊಳಕ್ಕೆ ಹೋಗಲಾಗುವುದಿಲ್ಲ. ವಾಹನ ಸಂಚಾರ ಹೆಚ್ಚಾಗಿರುವ ಕೋಲಾರ ಚಿಕ್ಕಬಳ್ಳಾಪುರ ರಸ್ತೆಯಿದಾಗಿದ್ದು, ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸುವುದರಿಂದ ಒಂದೆಡೆ ವಾಹನ ಸಂಚಾರಕ್ಕೆ ಅಡಚಣೆಯುಂಟಾದರೆ, ತರಕಾರಿ ಮುಂತಾದವುಗಳನ್ನು ತಂದವರು ಸಂತೆ ಮಳಿಗೆಯವರೆಗೂ ರಸ್ತೆಯಿಂದ ಸಾಗಿಸಬೇಕಾದ ಅನಿವಾರ್ಯತೆ ಎದುರಿಸುವಂತಾಗುತ್ತದೆ.
‘ಸಂತೆ ನಡೆಯುವ ಸ್ಥಳ ಬದಲಿಸಿರುವುದಿಂದ ಜನರಿಗೆ ಗೊತ್ತಾಗಲೆಂದು ಮಿಠಾಯಿ ಮತ್ತು ಪ್ಲಾಸ್ಟಿಕ್ ಅಂಗಡಿಗಳನ್ನು ರಸ್ತೆ ಬದಿ ಇಡಲು ಅನುಮತಿ ಕೊಟ್ಟಿದ್ದೇವೆ. ಆದರೆ ಬೇರೆ ಎಲ್ಲಾ ವ್ಯಾಪಾರಸ್ಥರೂ ಸಂತೆಯ ಒಳಗೇ ವ್ಯಾಪಾರ ಮಾಡಬೇಕೆಂದು ತಿಳಿಸಿದ್ದೇವೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ತಿಳಿಸಿದರು.
ವಿಪರೀತವಾದ ವಾಹನ ಸಂಚಾರವಿರುವ ಕೋಲಾರ ಚಿಕ್ಕಬಳ್ಳಾಪುರ ರಸ್ತೆಯ ಬದಿಯಲ್ಲೇ ಎಲ್ಲಾ ರೀತಿಯ ಸಂತೆಯ ಅಂಗಡಿಗಳೂ ಮಂಗಳವಾರದಂದು ಸ್ಥಾಪಿತವಾಗುತ್ತವೆ. ಜನರು ರಸ್ತೆಯ ಬದಿಯಲ್ಲೇ ನಿಂತು ವ್ಯಾಪಾರ ಮಾಡುತ್ತಿರುತ್ತಾರೆ. ವೇಗವಾಗಿ ಹೋಗುವ ವಾಹನಗಳಿಂದ ಅನಾಹುತವಾಗುವುದರಿಂದ ಅಧಿಕಾರಿಗಳು ರಸ್ತೆ ಬದಿಯ ವ್ಯಾಪಾರಕ್ಕೆ ಕಡಿವಾಣ ಹಾಕಬೇಕು. ಪಂಚಾಯಿತಿಯಿಂದ ನಿರ್ಮಿಸಲ್ಪಟ್ಟ ಮಳಿಗೆಯಲ್ಲೇ ವ್ಯಾಪಾರ ಮಾಡುವಂತೆ ನಿರ್ಬಂಧಿಸಬೇಕು. ಇದರಿಂದ ರಸ್ತೆಯ ಧೂಳು, ಅಪಘಾತ ಹಾಗೂ ವ್ಯಾಪಾರ ಮಾಡುವ ಜನರಿಗೆ ಸುರಕ್ಷೆಯೂ ಇರುವಂತಾಗುತ್ತದೆ ಎನ್ನುತ್ತಾರೆ ಸಾರ್ವಜನಿಕರು.
ಶ್ರೀ ವಾಸವಿ ವಿದ್ಯಾ ಸಂಸ್ಥೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಣೆ
ಶಿಡ್ಲಘಟ್ಟದ ಶ್ರೀ ವಾಸವಿ ವಿದ್ಯಾ ಸಂಸ್ಥೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು. ಗಿಡ ನೆಡುವುದರ ಮೂಲಕ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ನಾಗೇಂದ್ರಪ್ಪ ಪರಿಸರ ಕುರಿತಾದ ಮಾಹಿತಿಯನ್ನು ಮಕ್ಕಳಿಗೆ ತಿಳಿಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರ.ಮು.ಶಿ ವೆಂಕಟರಮಣಪ್ಪ ಪರಿಸರದ ಅವಶ್ಯಕತೆ, ಮಾಲಿನ್ಯದ ದುಷ್ಪರಿಣಾಮಗಳು, ಓಜೋನ್ ಪದರದ ಸದ್ಯದ ಪರಿಸ್ಥಿತಿಯನ್ನು ವಿವರವಾಗಿ ಮಕ್ಕಳಿಗೆ ತಿಳಿಸಿದರು. ಶಿಕ್ಷಕರಾದ ಅಮರನಾಥ್ ಮತ್ತು ನಾಗರಾಜ್ ರವರು ಮಕ್ಕಳಿಗೆ ಪರಿಸರ ಸಂರಕ್ಷಣೆಯ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.
ಸೋಮೇಶ್ವರಸ್ವಾಮಿ ಕ್ರಿಕೆಟ್ ಕ್ಲಬ್ ಟೆನ್ನಿಸ್‌ಬಾಲ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಕೋಲಾರ ಕ್ರಿಕೆಟ್ ಅಸೋಸಿಯೇಷನ್ ತಂಡಕ್ಕೆ ವಿಜಯ
ಶಿಡ್ಲಘಟ್ಟ ತಾಲ್ಲೂಕಿನ ಯಣ್ಣಂಗೂರು ಗೇಟ್ ಬಳಿ ಸೋಮೇಶ್ವರಸ್ವಾಮಿ ಕ್ರಿಕೆಟ್ ಕ್ಲಬ್ ಸೋಮವಾರ ಆಯೋಜಿಸಿದ್ದ ಟೆನ್ನಿಸ್‌ಬಾಲ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಕೋಲಾರ ಕ್ರಿಕೆಟ್ ಅಸೋಸಿಯೇಷನ್ ತಂಡ ವಿಜೇತರಾಗಿ 12 ಸಾವಿರ ರೂ ನಗದು ಮತ್ತು ಟ್ರೋಫಿಯನ್ನು ಪಡೆದರೆ, ದ್ವಿತೀಯರಾದ ಯಣ್ಣಂಗೂರು ತಂಡದವರು 6 ಸಾವಿರ ರೂ ನಗದು ಮತ್ತು ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.

