ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ವರದನಾಯಕನಹಳ್ಳಿ ಗೇಟ್ ಶ್ರೀ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಭಾರತರತ್ನ ಡಾ.ಎಸ್.ರಾಧಾಕೃಷ್ಣನ್ ರವರ ಜನ್ಮದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ದೇಶವು ಮುಂದುವರೆಯಲು ಮತ್ತು ಪ್ರಗತಿಯತ್ತ ಸಾಗಲು ಶಿಕ್ಷಕರೇ ಕಾರಣರು. ಭವಿಷ್ಯವನ್ನು ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಒಂದು ಕಡೆ ನೆರೆ ಮತ್ತೊಂದು ಕಡೆ ಬರ. ನಮ್ಮ ಭಾಗದಲ್ಲಂತೂ ಅಂತರ್ಜಲ ಕುಸಿದಿದ್ದು, ನೀರಿಗೆ ಸಾಕಷ್ಟು ತೊಂದರೆಯಾಗಿದೆ. ಮಳೆಬರಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡೋಣ. ಬಂದ ಮಳೆ ನೀರನ್ನು ಸಂಗ್ರಹಿಸೋಣ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿ, ಎಲ್ಲರ ಬದುಕಿಗೆ ದಾರಿದೀಪವಾಗಬಲ್ಲ, ಬೆಳಕಿನ ದೊಂದಿಯನ್ನು ಹಿಡಿದು ಮುನ್ನಡೆಸುವ ಪವಿತ್ರವಾದ ಸೇವೆ ಶಿಕ್ಷಕ ವೃತ್ತಿ. ಮಕ್ಕಳ ವ್ಯಕ್ತಿತ್ವವನ್ನು ರೂಪಿಸುತ್ತಾ ಮುಂದಿನ ಪೀಳಿಗೆಯನ್ನು ತಿದ್ದಿ ತೀಡಿ ಸಮಾಜದ ಪ್ರಗತಿಗೆ ಕಾರಣರಾಗುವ ಶಿಕ್ಷಕರಿಗೆ ಹೃದಯ ವೈಶಾಲ್ಯತೆ ಇರಬೇಕು ಎಂದರು.
ಮುಖ್ಯ ಭಾಷಣಕಾರರಾದ ಬಿ.ಆರ್.ನರಸಿಂಹಮೂರ್ತಿ ಅವರು ಮಾತನಾಡಿ, ಶಿಕ್ಷಣ, ಮಕ್ಕಳ ಮನೋವಿಕಾಸ, ಶಿಕ್ಷಕ ವೃತ್ತಿಯ ಸವಾಲುಗಳು, ಸಾಮಾಜಿಕ ಪಲ್ಲಟಗಳು, ಜ್ಞಾನ, ವಿಜ್ಞಾನ ಮುಂತಾದ ಸಂಗತಿಗಳ ಕುರಿತಂತೆ ವಿವರವಾಗಿ ಮಾತನಾಡಿದರು.
ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಎಸ್.ವಿ.ಪ್ರಭಾಕರ್, ಎಲ್.ನಾಗಭೂಷಣ್ ಮತ್ತು ರುದ್ರೇಶಮೂರ್ತಿ ಅವರನ್ನು ಹಾಗೂ ಕಳೆದ ಸಾಲಿನಲ್ಲಿ ನಿವೃತ್ತರಾಗಿರುವ ಇಪ್ಪತ್ತಮೂರು ಮಂದಿ ಶಿಕ್ಷಕರಿಗೆ ಮತ್ತು ನಲಿಕಲಿಯಲ್ಲಿ ರಾಜ್ಯಮಟ್ಟದ ಉತ್ತಮ ಶಾಲೆಗಳೆಂದು ಐದು ಸಾವಿರ ನಗದು ಬಹುಮಾನ ಪಡೆದ ತಾಲ್ಲೂಕಿನ ಕಾಕಚೊಕ್ಕಂಡಹಳ್ಳಿ, ಪಿಳ್ಳಗುಂಡ್ಲಹಳ್ಳಿ ಮತ್ತು ಗಡಿಮಿಂಚೇನಹಳ್ಳಿ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಸನ್ಮಾನಿಸಲಾಯಿತು. ರಕ್ತದಾನ ಶಿಬಿರವನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್, ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ, ಅಕ್ಕಲರೆಡ್ಡಿ, ಇಸಿಒ ಭಾಸ್ಕರ ಗೌಡ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶಿವಕುಮಾರ್, ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಎಂ.ದೇವರಾಜ್, ಮುನಿವೆಂಕಟಸ್ವಾಮಿ, ಶಿಕ್ಷಕ ಸಂಘದ ಮುನಿರಾಜು, ಬಿ.ಆರ್.ನಾರಾಯಣಸ್ವಾಮಿ, ಬೈರಾರೆಡ್ಡಿ, ಗೋಪಿನಾಥ್, ಎಲ್.ವಿ.ವೆಂಕಟರೆಡ್ಡಿ, ಗಜೇಂದ್ರ, ಪ್ರಕಾಶ್, ತ್ಯಾಗರಾಜ್, ಪುಟ್ಟಪ್ಪ, ಸುರೇಶ್, ರಂಗನಾಥ್ ಹಾಜರಿದ್ದರು.
ಡಾ.ಎಸ್.ರಾಧಾಕೃಷ್ಣನ್ ರವರ ಜನ್ಮದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ
ಶಿಡ್ಲಘಟ್ಟ ತಾಲ್ಲೂಕು ಕಸಾಪ ವತಿಯಿಂದ ಶಿಕ್ಷಕ ದಿನಾಚರಣೆ
ಸಿದ್ದಗಂಗಾ ಮಠದಲ್ಲಿ ಶ್ರೀ ಸಿದ್ದಲಿಂಗೇಶ್ವರ ಸನಿವಾಸ ಪ್ರೌಢಶಾಲೆಯಲ್ಲಿ ಗುರುವಾರ ಶಿಡ್ಲಘಟ್ಟ ತಾಲ್ಲೂಕು ಕಸಾಪ ವತಿಯಿಂದ ಶಿಕ್ಷಕ ದಿನಾಚರಣೆಯ ಪ್ರಯುಕ್ತ ಶಿಕ್ಷಕರನ್ನು ಸನ್ಮಾನಿಸಿ ತಾಲ್ಲೂಕು ಕಸಾಪ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಜಗತ್ತಿನಲ್ಲಿ ಅತ್ಯುತ್ತಮ ವೃತ್ತಿಯೆಂದರೆ ಶಿಕ್ಷಕ ವೃತ್ತಿ. ಉತ್ತಮ ಶಿಕ್ಷಕರು ಕೇವಲ ಕಲಿಸುವವರಲ್ಲ; ಕಲಿಯುತ್ತಲೇ ಇರುವವರು. ವಿದ್ಯೆ, ಸಂಬಂಧ, ಪ್ರೀತಿ, ಬಾಂಧವ್ಯವನ್ನು ಕೇವಲ ಕೊಡುವುದಲ್ಲ, ಪಡೆಯುವ ಪವಿತ್ರ ವೃತ್ತಿಯಿದು ಎಂದು ಅವರು ತಿಳಿಸಿದರು.
ದೇಶದ ಅಭಿವೃಧ್ಧಿಯಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ. ರಾಜಕಾರಣಿ ಹಾಗೂ ಸಮಾಜ ಸುಧಾರಕರಿಂದ ದೇಶವನ್ನು ಸುಧಾರಿಸಲು ಸಾಧ್ಯವಿಲ್ಲ, ಶಿಕ್ಷಕರಿಂದ ಮಾತ್ರ ಸಾಧ್ಯ. ಶಿಕ್ಷಕ ವೃತ್ತಿ ಪವಿತ್ರವಾದದು. ಶಿಕ್ಷಕರು ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುವುದರಿಂದ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಸಾಧ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕ ಟಿ.ಎಸ್.ಪ್ರಭುದೇವ್ ಅವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು. ಸಾಹಿತಿ ಬಿಜಾಪುರ ಭೀಮರಾಯ ಎಸ್.ಹೂಗಾರ ಅವರ “ವಿದ್ಯೆ ಏಕೆ ಕಲಿಯಬೇಕು” ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ, ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಯಿತು.
ಮುಖ್ಯಶಿಕ್ಷಕ ಎಚ್.ಎಂ.ನಾಗರಾಜ ಮೂರ್ತಿ, ಶಿಕ್ಷಕರಾದ ಜಿ.ಮೋಹನ್ ಕುಮಾರ್, ಬಿ.ಆರ್.ತೀರ್ಥೇಶ್ವರ, ಕೆ.ಟಿ.ಕಿರಣ್ ಹಾಜರಿದ್ದರು.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ನೌಕರರ ಪ್ರತಿಭಟನೆ
ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಂದೆ ಅಂಗನವಾಡಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುರುವಾರ ಪ್ರತಿಭಟನೆ ನಡೆಸಿ ಸಿ.ಐ.ಟಿ.ಯು ಜಿಲ್ಲಾಧ್ಯಕ್ಷೆ ಲಕ್ಷ್ಮೀದೇವಮ್ಮ ಮಾತನಾಡಿದರು.
ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ನಡೆಸುವ ಮಾತೃಪೂರ್ಣ ಯೋಜನೆಗೆ ಇದುವರೆಗೂ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ. ಇಡೀ ಜಿಲ್ಲೆಯಲ್ಲಿ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಡಬಲ್ ಸಿಲಿಂಡರ್ ಕೊಟ್ಟಿದ್ದಾರೆ, ಆದರೆ ಶಿಡ್ಲಘಟ್ಟ ತಾಲ್ಲೂಕಿನ ೩೩೯ ಕೇಂದ್ರಗಳಲ್ಲಿ ೯೮ ಕೇಂದ್ರಕ್ಕೆ ಮಾತ್ರ ನೀಡಿದ್ದಾರೆ ಎಂದು ಅವರು ಆರೋಪಿಸಿದರು.
ತಾಲ್ಲೂಕಿನಲ್ಲಿರುವ ೩೩೯ ಅಂಗನವಾಡಿ ಕೇಂದ್ರಗಳಲ್ಲಿ ಅರ್ಧಕ್ಕಿಂತ ಹೆಚ್ಚು ಕೇಂದ್ರಗಳು ಶಾಲೆ, ಬಾಡಿಗೆ ಕಟ್ಟಡ ಅಥವಾ ಸಮುದಾಯ ಭವನಗಳಲ್ಲಿ ನಡೆಯುತ್ತಿವೆ. ಇರುವ ಸ್ವಂತ ಕಟ್ಟಡಗಳನ್ನು ಸಕಾಲಕ್ಕೆ ದುರಸ್ತಿ ಮಾಡಿಸುತ್ತಿಲ್ಲ ಹಾಗೂ ಬಾಡಿಗೆ ಕಟ್ಟಡಗಳಿಗೆ ಸರಿಯಾಗಿ ಬಾಡಿಗೆ ಪಾವತಿಸುತ್ತಿಲ್ಲ. ಮೂರು ನಾಲ್ಕು ತಿಂಗಳುಗಳಾದರೂ ಗೌರವಧನ ಬಿಡುಗಡೆಯಾಗುತ್ತಿಲ್ಲ. ಪ್ರತಿ ತಿಂಗಳು ಐದನೇ ತಾರೀಖಿನೊಳಗೆ ವೇತನ ನೀಡಬೇಕು. ಖಾಲಿ ಇರುವ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಬೇಕು. ಮೂರು ತಿಂಗಳಿಗೊಮ್ಮೆ ಕುಂದುಕೊರತೆಗಳ ಸಭೆಯನ್ನು ಕಡ್ಡಾಯವಾಗಿ ಮಾಡಬೇಕು ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಅಂಗನವಾಡಿ ನೌಕರರು ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಈ ನಿಟ್ಟಿನಲ್ಲಿ ಅಂಗನವಾಡಿ ನೌಕರರ ಅಸ್ಥಿತ್ವ, ಮುಖ್ಯ ಸಮಸ್ಯೆಗಳು ಹಾಗೂ ಸ್ಥಳೀಯ ಸಮಸ್ಯೆಗಳನ್ನೊಳಗೊಂಡ ಮನವಿ ಪತ್ರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಲಕ್ಷ್ಮೀದೇವಮ್ಮ ಅವರಿಗೆ ಅಂಗನವಾಡಿ ನೌಕರರ ಸಂಘದ ವತಿಯಿಂದ ನೀಡಲಾಯಿತು.
ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಲಕ್ಷ್ಮೀದೇವಮ್ಮ, ಅಶ್ವತ್ಥಮ್ಮ, ಗುಲ್ಜಾರ್, ಪಿಳ್ಳಮ್ಮ, ಮುನಿರತ್ನ, ನಾಗವೇಣಿ, ನಂಜಮ್ಮ, ಶಂಕರಪ್ಪ, ಪಾಪಣ್ಣ, ವೇಣುಗೋಪಾಲ್ ಹಾಜರಿದ್ದರು.
ಡಿ.ಕೆ.ಶಿವಕುಮಾರ್ ಬಂಧನವನ್ನು ವಿರೋಧಿಸಿ ಜಂಗಮಕೋಟೆ ವೃತ್ತದಲ್ಲಿ ಪ್ರತಿಭಟನೆ
ಡಿ.ಕೆ.ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದನ್ನು ಖಂಡಿಸಿ ತಾಲ್ಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ.
ತಾಲ್ಲೂಕಿನ ಜಂಗಮಕೋಟೆ ವೃತ್ತದಲ್ಲಿ ಬುಧವಾರ ಟೈರುಗಳನ್ನು ಸುಟ್ಟು ಮಾನವ ಸರಪಣಿಯನ್ನು ನಿರ್ಮಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಇಡಿ ಅಧಿಕಾರಿಗಳು ಕೇಂದ್ರ ಬಿಜೆಪಿ ನಾಯಕರ ದಾಳಕ್ಕೆ ಕುಣಿಯುತ್ತಿದ್ದಾರೆ. ಕಾನೂನು ಚೌಕಟ್ಟಿನಿಂದ ಗೆದ್ದು ಡಿಕೆಶಿ ಹೊರ ಬರಲಿದ್ದಾರೆ ಎಂಬ ಘೋಷಣೆ ಕೂಗಿದರು. ಈ ದ್ವೇಷದ ರಾಜಕಾರಣಕ್ಕೆ ಸಾರ್ವಜನಿಕರು ಉತ್ತರ ಕೊಡಲಿದ್ದಾರೆ. ಉಗ್ರ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು.
ನಗರದ ಬಸ್ ನಿಲ್ದಾಣದ ಬಳಿ ಮಂಗಳವಾರ ರಾತ್ರಿ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ ಬಂಧನ ಖಂಡಿಸಿ ಪ್ರತಿಭಟಿಸಿದರು.
ಜಂಗಮಕೋಟೆ ವೃತ್ತದ ಪ್ರತಿಭಟನೆಯಲ್ಲಿ ಕೃಷ್ಣಪ್ಪ, ಆಂಜನೇಯರೆಡ್ಡಿ, ಕೃಷ್ಣಮೂರ್ತಿ, ಮೂರ್ತಿ, ಮಂಜುನಾಥ್, ಮುನಿಆಂಜಿನೇಯ, ದೇವರಾಜು, ನಾರಾಯಣಸ್ವಾಮಿ, ಮುನಿರಾಜು ಹಾಜರಿದ್ದರು.
ಶಿಡ್ಲಘಟ್ಟದ ಮೂವರು ಶಿಕ್ಷಕರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
ಶಿಡ್ಲಘಟ್ಟ ತಾಲ್ಲೂಕಿನ ಮೂವರು ಶಿಕ್ಷಕರಿಗೆ ಈ ಬಾರಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ನಿಲುವರಾತಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಸ್.ವಿ.ಪ್ರಭಾಕರ್, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಲ್.ನಾಗಭೂಷಣ್ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಸುಗಟೂರು ಸರ್ಕಾರಿ ಶಾಲೆಯ ಶಿಕ್ಷಕ ರುದ್ರೇಶಮೂರ್ತಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶಿಕ್ಷಕ ಎಸ್.ವಿ.ಪ್ರಭಾಕರ್
ಸುಮಾರು ೨೭ ವರ್ಷಗಳ ಕಾಲ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಎಸ್.ವಿ.ಪ್ರಭಾಕರ್ ಅವರು ಸೇವೆಗೆ ಸೇರಿದ್ದು ೧೯೯೨ ರ ಆಗಸ್ಟ್ ೨೭ ರಂದು. ಉಪ್ಪುಕುಂಟಹಳ್ಳಿ ಶಾಲೆಯಲ್ಲಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಇವರು ಅಲ್ಲಿ ಶಾಲೆಗೆ ಸುತ್ತಮುತ್ತಲಿನ ಹಳ್ಳಿಗಳಿಂದ ವಿದ್ಯಾರ್ಥಿಗಳನ್ನು ಕರೆದು ತಂದು ಸೇರಿಸಿಕೊಂಡು ಸಂಖ್ಯೆ ಹೆಚ್ಚಿಸಿ, ಸಮುದಾಯದ ಸಹಕಾರದೊಂದಿಗೆ ಶಾಲೆಗೆ ನಾಲ್ಕು ನಿವೇಶನಗಳನ್ನು ಖರೀದಿಸುವಲ್ಲಿ ಮುಖ್ಯಪಾತ್ರ ವಹಿಸಿದ್ದಾರೆ. ಶಾಲೆಗೆ ಕಾಂಪೌಂಡ್, ಕುಡೀಯುವ ನೀರು, ಪೀಠೋಪಕರಣ, ಶಾಲಾ ಆವರಣದಲ್ಲಿ ಗಿಡ ಮರಗಳನ್ನು ಬೆಳೆಸುವುದು ಮುಂತಾದ ಕೆಲಸಗಳನ್ನು ಮಾಡಿದ್ದಾರೆ.
ಶಿಕ್ಷಣ ಇಲಾಖೆಯಿಂದ ವಿವಿಧ ರೀತಿಯ ತರಬೇತಿಗಳನ್ನು ಪಡೆದಿರುವ ಇವರು ನಿಲುವರಾತಹಳ್ಳಿಯ ಶಾಲೆಯಲ್ಲಿ ೨೦೦೨ ರಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸ್ವಂತ ಸ್ಥಳವೇ ಇಲ್ಲದ ಶಾಲೆಗೆ ಸಮುದಾಯ, ಹಿರಿಯ ವಿದ್ಯಾರ್ಥಿಗಳು ಹಾಗೂ ಗ್ರಾಮ ಪಂಚಾಯಿತಿಯ ನೆರವು ಪಡೆದು ಎರಡು ಎಕರೆಗೂ ಹೆಚ್ಚಿನ ಸ್ಥಳವನ್ನು ದಾನವಾಗಿ ಪಡೆದು ಅಲ್ಲಿ ೩೦ ಕ್ಕೂ ಹೆಚ್ಚು ವಿಧದ ಒಂದು ಸಾವಿರಕ್ಕೂ ಅಧಿಕ ಮರಗಳನ್ನು ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ನೀರಿನ ವ್ಯವಸ್ಥೆ, ಚಿಣ್ಣರ ವೇದಿಕೆ, ಧ್ವಜಸ್ತಂಭ, ಪೀಠೋಪಕರಣಗಳನ್ನು ಸಮುದಾಯದ ನೆರವಿನೊಂದಿಗೆ ಶಾಲೆಗೆ ಮಾಡಿಸಿದ್ದಾರೆ. ಕೂಲಿಗಾಗಿ ತೋಟಗಳಿಗೆ ವಲಸೆ ಬಂದ ಕುಟುಂಬಗಳ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡು ಓದಿಸಿ ವಿದ್ಯಾವಂತರಾಗುವಂತೆ ಮಾಡಿದ್ದಾರೆ.
“ಗಿಡ ಮತ್ತು ಮಕ್ಕಳೆಂದರೆ ನನಗೆ ಪಂಚಪ್ರಾಣ. ಶಾಲೆಯನ್ನು ಅಭಿವೃದ್ಧಿ ಮಾಡಲು ಗ್ರಾಮಸ್ಥರು ಸದಾ ನೆರವು ನೀಡುತ್ತಾರೆ. ಪ್ರಶಸ್ತಿ ಬಂದಿರುವುದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ” ಎಂದು ಶಿಕ್ಷಕ ಎಸ್.ವಿ.ಪ್ರಭಾಕರ್ ತಿಳಿಸಿದರು.
ಶಿಕ್ಷಕ ಎಲ್.ನಾಗಭೂಷಣ್
ಸುಮಾರು ೨೩ ವರ್ಷಗಳ ಕಾಲ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಎಲ್.ನಾಗಭೂಷಣ್ ಅವರು ಸೇವೆಗೆ ಸೇರಿದ್ದು ೧೯೯೬ ರ ನವೆಂಬರ್ ೧೪ ರ ಮಕ್ಕಳ ದಿನಾಚರಣೆಯಂದು. ಗೌರಿಬಿದನೂರಿನ ದೇವರಹಳ್ಳಿ ಮತ್ತು ಕೇಶವಪುರದ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿ ಕಳೆದ ೧೭ ವರ್ಷಗಳಿಂದ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಸಮುದಾಯದ ಸಹಕಾರದೊಂದಿಗೆ ಶಾಲೆಯ ಮೈದಾನವನ್ನು ಉಳಿಸಿಕೊಂಡು ಕಾಂಪೌಂಡ್ ಹಾಕಿಸಿದ್ದಲ್ಲದೆ, ಸುಮಾರು ೧೫೦ ಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. ವಿದ್ಯಾರ್ಥಿಗಳ ಜೊತೆಗೂಡಿ ಶಾಲೆಯ ಬಿಸಿಯೂಟಕ್ಕೆ ಬೇಕಾಗುವ ತರಕಾರಿಗಳನ್ನು ಶಾಲೆಯ ಆವರಣದಲ್ಲಿಯೇ ಬೆಳೆಯುವರು. ಶಾಲೆಯ ಇಬ್ಬರು ಹೆಣ್ಣುಮಕ್ಕಳ ಸಾಹಸವನ್ನು ಗುರುತಿಸಿ ಬೆಳಕಿಗೆ ತಂದು ಅವರಿಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಕೊಡಿಸುವಲ್ಲಿ ಶ್ರಮಿಸಿದ್ದಾರೆ. ಪ್ರತಿವರ್ಷ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಲ್ಲಿ ನಂತರ ಎಸ್ಸೆಸ್ಸೆಲ್ಸಿ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದವರನ್ನು ಪುರಸ್ಕರಿಸುತ್ತಾರೆ. ಹೊರಸಂಚಾರವಾಗಿ ವಿದ್ಯಾರ್ಥಿಗಳನ್ನು ವಿಧಾನಸೌಧಕ್ಕೆ ಕರೆದೊಯ್ಯುವ ಇವರು, ಪ್ರತೀ ವರ್ಷ ಶೈಕ್ಷಣಿಕ ಪ್ರವಾಸಕ್ಕೆ ರಾಜ್ಯದ ವಿವಿದೆಡೆ ಮಕ್ಕಳನ್ನು ಕರೆದುಕೊಂಡು ಹೋಗಿಬರುವರು. ಬೇಸಿಗೆಯಲ್ಲಿ ಅಳಿಲುಗಳು ಹಾಗೂ ಹಕ್ಕಿಗಳಿಗೆ ನೀರಿಡುವುದು, ಸಂಜೆ ವೇಳೆ ಮನೆಯಲ್ಲಿ ತಮ್ಮ ವಿದ್ಯಾರ್ಥಿಗಳಿಗೆ ಪಾಠವನ್ನು ಉಚಿತವಾಗಿ ಹೇಳಿಕೊಡುತ್ತಾರೆ.
“ಈ ಪ್ರಶಸ್ತಿ ನನಗಲ್ಲ. ನನ್ನ ಶಾಲೆಗೆ ಸೇರಿದ್ದು. ಈ ಪ್ರಶಸ್ತಿಯ ಮೂಲಕ ವರದನಾಯಕನಹಳ್ಳಿಯ ಸರ್ಕಾರಿ ಶಾಲೆಯನ್ನು ಗುರುತಿಸಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ” ಎಂದು ವಿನೀತರಾಗಿ ಶಿಕ್ಷಕ ಎಲ್.ನಾಗಭೂಷಣ್ ಹೇಳಿದರು.
ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ
ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿರುವ ಎಚ್.ಎಸ್.ರುದ್ರೇಶಮೂರ್ತಿ ಅವರು ಗ್ರಾಮೀಣ ಭಾಗದ ಪ್ರಾಥಮಿಕ ಶಾಲಾ ಮಕ್ಕಳ ಶೈಕ್ಷಣಿಕಾಭಿವೃದ್ಧಿಗೆ ಶ್ರಮವಹಿಸಿದ್ದು, ವೈಜ್ಞಾನಿಕ ಮತ್ತು ಮನೋವೈಜ್ಞಾನಿಕವಾಗಿ, ಶಿಶುಕೇಂದ್ರಿತ ಚಟುವಟಿಕೆ ಆಧಾರಿತವಾಗಿ ಬೋಧನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳನ್ನು ಪಠ್ಯ, ಪಠ್ಯೇತರ ಚಟುವಟಿಕೆಗಳಿಗೆ ಪ್ರೇರೇಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಸರಾ ರಜಾ ಅವಧಿಯಲ್ಲಿ ವಿಶೇಷ ತರಬೇತಿ ನೀಡಿ ಪ್ರತಿವರ್ಷವೂ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ ಮಕ್ಕಳು ಆಯ್ಕೆಯಾಗಲು ಶ್ರಮಿಸುತ್ತಿದ್ದಾರೆ. ಇಲಾಖೆಯು ಶಿಕ್ಷಕರಿಗೆ ನೀಡುವ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಸೇವೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾಪೂರ್ವ ತರಬೇತಿಗಳಲ್ಲಿ ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಸಂಗೀತ, ಸಾಹಿತ್ಯ, ಕ್ರೀಡೆ, ವಿಜ್ಞಾನ, ಕಲೆಯಲ್ಲಿ ನಿರಂತರವಾಗಿ ಮಕ್ಕಳಲ್ಲಿ ಆಸಕ್ತಿ ಹೆಚ್ಚಿಸಲು ಅನೇಕರನ್ನು ಕರೆಸಿ ಆಗಿಂದಾಗ್ಗೆ ಉಪನ್ಯಾಸ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಮುದಾಯದ ಸಹಕಾರ ಪಡೆದು ಶಿಕ್ಷಣಕ್ಕೆ ಪೂರಕವಾದ ಶೈಕ್ಷಣಿಕ, ಭೌತಿಕ ಸವಲತ್ತುಗಳನ್ನು ಒದಗಿಸಿ ಉತ್ತಮ ಶಾಲಾಪರಿಸರವನ್ನು ಸೃಷ್ಟಿಸಿದ್ದಾರೆ. ಅನೇಕ ಸಮಾಜಸೇವಾಸಂಸ್ಥೆಗಳ ಸಹಕಾರ ಪಡೆದು ನಿರಂತರವಾಗಿ ಮಕ್ಕಳೀಗೆ ಅಗತ್ಯವಾದ ನೋಟ್‌ಪುಸ್ತಕ, ಲೇಖನಸಾಮಗ್ರಿಗಳನ್ನು ಪ್ರತಿವರ್ಷವೂ ಕೊಡಿಸುತ್ತಿದ್ದಾರೆ. ಶಾಲೆಬಿಟ್ಟಮಕ್ಕಳನ್ನು ಗುರ್ತಿಸಿ ದಾಖಲಿಸಿಕೊಂಡು ಶಿಕ್ಷಣ ಕೊಡಿಸುತ್ತಿದ್ದಾರೆ.
“ಪ್ರಶಸ್ತಿ ಲಭಿಸಿದ್ದು ಸಂತಸ ತಂದಿದೆ. ಮುಂದೆ ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ನೀಡೀದೆ” ಎಂದು ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.
ನಾಯಿಗಳ ಆಕ್ರಮಣಕ್ಕೆ ತುತ್ತಾದ ಕೃಷ್ಣಮೃಗದ ಮರಿಯ ರಕ್ಷಣೆ
ತಾಲ್ಲೂಕಿನ ಅಜ್ಜಕದಿರೇನಹಳ್ಳಿ ಡೀಮ್ಡ್ ಅರಣ್ಯದ ಬಳಿ ನಾಯಿಗಳ ಆಕ್ರಮಣಕ್ಕೆ ತುತ್ತಾದ ಕೃಷ್ಣಮೃಗದ ಮರಿಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಿಸಿದ್ದಾರೆ.
“ಕೃಷ್ಣಮೃಗದ ಮರಿಯ ಮೇಲೆ ಶನಿವಾರ ನಾಯಿಗಳು ಆಕ್ರಮಣ ಮಾಡಿದ್ದನ್ನು ಕಂಡು ನಮ್ಮ ಇಲಾಖೆಯ ಗಾರ್ಡ್ ವೆಂಕಟರೋಣಪ್ಪ ಮತ್ತು ವಾಚರ್ ಎ.ಪಿ.ನರಸಿಂಹಪ್ಪ ಅದನ್ನು ರಕ್ಷಿಸಿದ್ದಾರೆ. ಗಾಯಗೊಂಡಿದ್ದ ಮರಿಗೆ ಪಶುವೈದ್ಯರ ಬಳಿ ಚಿಕಿತ್ಸೆ ಕೊಡಿಸಿ ನಂತರ ಅದೇ ಅರಣ್ಯದಲ್ಲಿ ಅದನ್ನು ಬಿಟ್ಟಿದ್ದಾರೆ” ಎಂದು ವಲಯ ಅರಣ್ಯಾಧಿಕಾರಿ ಶ್ರೀಲಕ್ಷ್ಮಿ ತಿಳಿಸಿದ್ದಾರೆ.
ತಾಲ್ಲೂಕು ಆಡಳಿತದಿಂದ ಸಮಗ್ರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2020 ಅರಿವು ಜಾಥಾ
ನಗರದ ಪ್ರಮುಖ ರಸ್ತೆಗಳಲ್ಲಿ ಭಾನುವಾರ ನಗರಸಭೆ ಸಿಬ್ಬಂದಿ, ಶಿಕ್ಷರೊಂದಿಗೆ ಜಾಥಾ ನಡೆಸಿ ತಹಶೀಲ್ದಾರ್ ಎಂ.ದಯಾನಂದ್ ಮಾತನಾಡಿದರು.
ಭಾರತ ಚುನಾವಣಾ ಆಯೋಗ ಸಮಗ್ರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2020 ಕಾರ‍್ಯಕ್ರಮವನ್ನು ಜಾರಿಗೊಳಿಸಿದೆ. ಅದರಂತೆ ತಾಲ್ಲೂಕಿನಲ್ಲಿ ಸೆಪ್ಟೆಂಬರ್ ೧ ರಿಂದ ೩೦ ರವರೆಗೆ ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ, ಫೋಟೋ ಅದಲು-ಬದಲು, ತೆಗೆದು ಹಾಕುವಿಕೆ, ವಿಳಾಸ ಬದಲಾವಣೆ, ಮತಗಟ್ಟೆ ಬದಲಾವಣೆ ಸೇರಿದಂತೆ ಮತದಾರರ ಚೀಟಿಯಲ್ಲಿನ ಲೋಪದೋಷಗಳನ್ನು ವಿಶೇಷ ಪರಿಷ್ಕರಣೆ ಕಾರ‍್ಯಕ್ರಮದ ವೇಳೆ ಸರಿಪಡಿಸಲಾಗುತ್ತದೆ. ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು ಎಂದು ಹೇಳಿದರು.
ಮತಗಟ್ಟೆ ಅಧಿಕಾರಿಗಳು(ಬಿಎಲ್‌ಒ) ಮನೆಮನೆ ಭೇಟಿ ನೀಡಲಿದ್ದಾರೆ. ತಮ್ಮ ಹೆಸರುಗಳು ಮತದಾರರ ಪಟ್ಟಿಯಲ್ಲಿರುವುದನ್ನು ಖಾತ್ರಿ ಪಡಿಸಿಕೊಳ್ಳಿ. ದೋಷಗಳಿದ್ದರೆ ಸರಿಪಡಿಸಿಕೊಳ್ಳಿ. ಇದರ ಲಾಭವನ್ನು ಜನತೆ ಪಡೆದುಕೊಳ್ಳಿ. ಕಾಮನ್ ಸರ್ವೀಸ್ ಸೆಂಟರ್, ಅಟಲ್ ಜಿ ಜನಸ್ನೇಹಿ ಕೇಂದ್ರ, ಬಾಪೂಜಿ ಕೇಂದ್ರ, ನಗರಸಭೆ, ತಾಲ್ಲೂಕು ಕಚೇರಿಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುವುದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್, ಪೌರಾಯುಕ್ತ ಚಲಪತಿ, ಆರ್ ಐ ವಿಶ್ವನಾಥ್, ಚುನಾವಣಾ ಸಿಬ್ಬಂದಿ ರೇವಣಸಿದ್ದಪ್ಪ, ನಗರಸಭೆಯ ಪ್ರಸಾದ್, ದಿಲೀಪ್ ಹಾಜರಿದ್ದರು.
ಪರಿಸರ ಪ್ರೇಮಿ ಗಣಪನನ್ನು ಮಾಡಿದ ಅಪ್ಪೇಗೌಡನಹಳ್ಳಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿ ಎಚ್.ಪವನ್
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿ ಎಚ್.ಪವನ್ ಗ್ರಾಮದ ಕುಂಟೆಯ ಬಂಕಮಣ್ಣನ್ನು ಬಳಸಿ ಸುಂದರ ಪರಿಸರ ಪ್ರೇಮಿ ಗಣಪನನ್ನು ಮಾಡಿದ್ದಾನೆ.
ಆಮೆಯ ಮೇಲೆ ಕುಳಿತ ಗಣಪ ಕಾಲಿನ ಮೇಲೆ ಕಾಲು ಹಾಕಿ ಕುಳಿತಿದ್ದರೆ, ಹೊಟ್ಟೆಯನ್ನು ಸುತ್ತಿರುವ ನಾಗರಹಾವು, ಕೈಗಳಲ್ಲಿ ಶಂಖ, ಚಕ್ರ, ತ್ರಿಶೂಲ, ಕಿವಿಯಲ್ಲಿ ಓಲೆ, ಮೋದಕ ಹಾಗೂ ಗಣಪನ ಹಿಂದಿನ ಪ್ರಭಾವಳಿ ಎಲ್ಲವನ್ನೂ ಸುಂದರವಾಗಿ ರೂಪಿಸಿದ್ದಾನೆ.
“ಎಚ್.ಪವನ್, ಪ್ರತಿಭಾವಂತ ವಿದ್ಯಾರ್ಥಿ. ಕ್ಲೇ ಮಾಡಲಿಂಗ್ ಮಾಡುವುದರಲ್ಲಿ ಇಷ್ಟಪಟ್ಟು ಭಾಗವಹಿಸುತ್ತಾನೆ. ಅವನು ಆರನೇ ತರಗತಿಯಲ್ಲಿದ್ದಾಗ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಗೋಳಗುಮ್ಮಟ ಮಾಡಿ ಮೊದಲ ಬಹುಮಾನ ಪಡೆದಿದ್ದ. ಈ ವರ್ಷದ ಪ್ರತಿಭಾ ಕಾರಂಜಿಯಲ್ಲಿ ಸಿಂಧೂ ನಾಗರಿಕತೆಯ ರುಂಡದ ಮನುಷ್ಯ ಮಾಡಿ ಪ್ರಥಮ ಸ್ಥಾನ ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಪಿಒಪಿ ಅಥವಾ ರಾಸಾಯನಿಕ ಬಣ್ಣಗಳನ್ನು ಬಳಿದ ಗಣಪನನ್ನು ಪೂಜಿಸಿ ನೀರಿನಲ್ಲಿ ಬಿಟ್ಟರೆ ಆಗುವ ಅನಾಹುತಗಳ ಬಗ್ಗೆ ತಿಳಿಸಿದೆವು. ಅದರ ಪರಿಣಾಮ ಎಚ್.ಪವನ್, ಆಮೆ ಮೇಲೆ ಕುಳಿತ ಗಣಪನನ್ನು ಮಾಡಿದ್ದಾನೆ. ಅವನಿಗೆ ಅಶ್ವತ್ ಮತ್ತು ತೇಜಸ್ ಸಹಾಯ ಮಾಡಿದ್ದಾರೆ” ಎಂದು ಶಿಕ್ಷಕ ಚಾಂದ್ ಪಾಷ ತಿಳಿಸಿದರು.
“ನಮ್ಮ ಶಿಕ್ಷಕರು ಪರಿಸರ ಪ್ರೇಮಿ ಗಣೇಶನ ಬಗ್ಗೆ ತಿಳಿಸಿದರು. ಆಗ ಗಣೇಶನ ಮೂರ್ತಿಯನ್ನು ನಾವೇ ಮಾಡಿದರೆ ಹೇಗೆ ಎಂಬ ಆಲೋಚನೆ ಬಂತು. ನನ್ನ ಸ್ನೇಹಿತರ ಸಹಕಾರ ಪಡೆದು ಗಣಪತಿ ಮೂರ್ತಿಯನ್ನು ಮತ್ತು ಗೌರಮ್ಮನನ್ನು ಮಾಡಿದೆವು. ನಮ್ಮ ಶಾಲೆಯಲ್ಲಿರುವ ಪುಟ್ಟ ಗಣೇಶನ ದೇವಾಲಯದಲ್ಲಿ ಈ ಮೂರ್ತಿಗಳನ್ನು ಇಟ್ಟು ಮೂರು ದಿನಗಳ ಕಾಲ ಪೂಜೆ ಮಾಡಲಿದ್ದೇವೆ. ನಂತರ ಒಂದು ಬಕೇಟಿನಲ್ಲಿನ ನೀರಿನಲ್ಲಿ ಮುಳುಗಿಸಿ ವಿಸರ್ಜನೆ ಮಾಡಿ ಗಿಡಕ್ಕೆ ಹಾಕುತ್ತೇವೆ” ಎಂದು ಎಚ್.ಪವನ್ ಹೇಳಿದನು.
ತಹಶಿಲ್ದಾರ್ ಕಚೇರಿಯಲ್ಲಿ ಕದಸಂಸ ಪದಾಧಿಕಾರಿಗಳೊಂದಿಗೆ ಸಭೆ
ನಗರದಲ್ಲಿ ಆಗಸ್ಟ್ ೧೪ ರ ರಾತ್ರಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ “ಯಾರಿಗೆ ಬಂತು, ಎಲ್ಲಿಗೆ ಬಂತು ೪೭ ರ ಸ್ವಾತಂತ್ರ್ಯ” ಎಂದು ಪ್ರಶ್ನಿಸುತ್ತಾ ತಾಲ್ಲೂಕು ಆಡಳಿತದ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ತಹಶಿಲ್ದಾರ್ ಅವರ ಕಚೇರಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಕದಸಂಸ ಪದಾಧಿಕಾರಿಗಳ ಸಭೆಯನ್ನು ತಹಶೀಲ್ದಾರ್ ಎಂ.ದಯಾನಂದ್ ಆಯೋಜಿಸಿದ್ದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್ ಮಾತನಾಡಿ, ಅಂಬೇಡ್ಕರ್ ಭವನಕ್ಕೆ ನಗರದಲ್ಲಿ ನಾಲ್ಕೈದು ಸ್ಥಳಗಳನ್ನು ಸೂಚಿಸಿದ್ದೇವೆ. ಯಾವುದಾದರೂ ಒಂದನ್ನು ತಾಲ್ಲೂಕು ಆಡಳಿತ ಆಯ್ಕೆ ಮಾಡಿ ಅಂಬೇಡ್ಕರ್ ಭವನವನ್ನು ನಿರ್ಮಿಸಬೇಕು. ನಗರದಿಂದ ದೂರ ಎಲ್ಲೋ ಮೂರ್ನಾಕು ಕಿ.ಮೀ ದೂರದಲ್ಲಿ ಅಂಬೇಡ್ಕರ್ ನಿರ್ಮಾಣ ಮಾಡುವ ಅವಶ್ಯಕತೆ ಏನಿದೆ. ಅದು ಸಾರ್ವಜನಿಕರ ಆಸ್ಥಿ. ನಗರದ ಮಧ್ಯೆ ಇದ್ದಾಗ ಮಾತ್ರ ಎಲ್ಲರೂ ಅದನ್ನು ಬಳಕೆ ಮಾಡಿಕೊಳ್ಳಲು, ಕಾರ್ಯಕ್ರಮಗಳನ್ನು ಮಾಡಲು, ನೋಡಲು ಸಾಧ್ಯ ಎಂದು ವಿವರಿಸಿದರು.
ತಹಶೀಲ್ದಾರ್ ಎಂ.ದಯಾನಂದ್ ಮಾತನಾಡಿ, ತಾಲ್ಲೂಕು ಆಡಳಿತ ನಿಮಗೆ ಸಹಮತ ನೀಡುತ್ತದೆ. ನೀವು ಆಯ್ಕೆ ಮಾಡಿರುವ ಸ್ಥಳಗಳ ವಿವರ ನೀಡಿ ಅರ್ಜಿ ಸಲ್ಲಿಸಿ, ನಾನು ತಕ್ಷಣವೇ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸುತ್ತೇನೆ ಎಂದರು.
ಕದಸಂಸ ಜಿಲ್ಲಾ ಸಂಘಟನಾ ಸಂಚಾಲಕ ದಡಂಘಟ್ಟ ತಿರುಮಲೇಶ್ ಮಾತನಾಡಿ, ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂದಗಾನಹಳ್ಳಿ ಗ್ರಾಮದ ಸರ್ವೇ ನಂ ೨೯ ರಲ್ಲಿ ಕಳೆದ ಒಂದು ವರ್ಷದಿಂದ ಗುಡಿಸಲು ನಿರ್ಮಿಸಿಕೊಂಡು ಜೀವನ ನಡೆಸುವವರೆಗೆ ಕೂಡಲೇ ನಿವೇಶನ ಮಂಜೂರು ಮಾಡಬೇಕು. ಇಂದಿಗೂ ತಾಲ್ಲೂಕಿನಾದ್ಯಂತ ಇರುವ ದಲಿತ ಕೇರಿಗಳಲ್ಲಿ ಅಕ್ರಮ ಮಧ್ಯ ಮಾರಾಟ ಮಿರಂತರವಾಗಿ ನಡೆಯುತ್ತಿದೆ. ಅದನ್ನು ತಡೆಗಟ್ಟಬೇಕು ಎಂದು ಮದ್ಯ ಮಾರಾಟ ಮಾಡುವ ವೀಡಿಯೋ ತೋರಿಸಿದರು.
ಸರ್ಕಲ್ ಇನ್ಸ್ ಪೆಕ್ಟರ್ ಆನಂದ್ ಕುಮಾರ್ ಮಾತನಾಡಿ, ಅಬಕಾರಿ ಇಲಾಖೆಯವರು ನಮಗೆ ಸಹಕಾರ ನೀಡಿದಲ್ಲಿ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟುವುದು ಸುಲಭಸಾಧ್ಯ ಎಂದರು.
ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್, ಶಿರಸ್ತೆದಾರ್ ಮಂಜುನಾಥ್, ಬೆಸ್ಕಾಂ ಅಧಿಕಾರಿಗಳು, ರಾಜಸ್ವ ನಿರೀಕ್ಷಕರು ಹಾಜರಿದ್ದರು.
ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ಮೇಜರ್ ಧ್ಯಾನ್ ಚಂದ್ ಜನ್ಮ ದಿನಾಚರಣೆ
ನಗರದ ನೆಹರೂ ಕ್ರೀಡಾಂಗಣದಲ್ಲಿ ಗುರುವಾರ ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಹಾಗೂ ಭಗತ್ ಸಿಂಗ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಿರಂಜನ್ ಮಾತನಾಡಿದರು.
ಹಾಕಿ ಕ್ರೀಡೆಯಲ್ಲಿ ಭಾರತ ದೇಶಕ್ಕೆ ಚಿನ್ನದ ಪದಕವನ್ನು ಪಡೆದು ಭಾರತದ ಕೀರ್ತಿಯನ್ನು ಧ್ಯಾನ್ ಚಂದ್ ಹೆಚ್ಚಿಸಿದ್ದಾರೆ. ಅವರ ಹಾದಿಯಲ್ಲಿ ಯುವ ಪೀಳಿಗೆ ಸಾಗಲಿ ಎಂಬ ಉದ್ದೇಶದಿಂದ ಶಿಡ್ಲಘಟ್ಟ ನೆಹರೂ ಕ್ರೀಡಾಂಗಣ ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲು ಅಧಿಕಾರಿಗಳು ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ರಾಷ್ಟ್ರೀಯ ಕ್ರೀಡಾ ಪಟು ಜಯಂತಿಗ್ರಾಮ ನಾರಾಯಣಸ್ವಾಮಿ ಮಾತನಾಡಿ, ಮೇಜರ್ ಧ್ಯಾನ್ ಚಂದ್ ರವರ ಬದುಕು ಮತ್ತು ಸಾಧನೆಯ ಕುರಿತು ವಿವರಿಸಿದರು. 1956 ರಿಂದ ಆಗಸ್ಟ್ 29 , ರಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಭಾರತ ಸರ್ಕಾರ ಆಚರಿಸುತ್ತಿದೆ. ಇಂದಿಗೂ ಧ್ಯಾನ್ ಚಂದ್ ರವರ ಸಾಧನೆ ಅವರ ದೇಶ ಪ್ರೇಮ ಪ್ರತಿಯೊಬ್ಬರಿಗೂ ಪ್ರೇರಣೆ. ಶಿಡ್ಲಘಟ್ಟ ತಾಲ್ಲೂಕು ನಿಂದ ಉತ್ತಮ ಹಾಕಿ ಕ್ರೀಡಾಪಟುಗಳು ತಯಾರಾಗಲಿ ಎಂದು ಕರೆ ಕೊಟ್ಟರು.
ನೆಹರೂ ಕ್ರೀಡಾಂಗಣ ಸಮಿತಿಯ ಉಪಾಧ್ಯಕ್ಷ ಟಿ.ಟಿ ನರಸಿಂಹಪ್ಪ, ವಸಂತ್ ಕುಮಾರ್, ಶಿವಪ್ಪ, ಮುರಳಿ, ಹಪೀಜುಲ್ಲಾ, ತಾಲ್ಲೂಕು ಪಂಚಾಯತ್ ಸದಸ್ಯೆ ಪಂಕಜ ನಿರಂಜನ್, ಶಿಕ್ಷಕಿ ದಾಕ್ಷಾಯಿಣಿ, ಸಂತೋಷ್, ಜಯರಾಮ್, ಗಿರೀಶ್ ಬಾಬು, ಬಾಲಕೃಷ್ಣ, ತಾಜ್ ಪಾಷ, ರಾಜ್ ಕುಮಾರ್, ಪ್ರಸಾದ್, ಅಜೀಬ್ ಪಾಷ ಹಾಜರಿದ್ದರು.
ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ
ರೈತರು ತಾಂತ್ರಿಕತೆಯನ್ನು ಅಳವಡಿಸಿಕೊಂಡು ಅತಿ ಹೆಚ್ಚಿನ ಶ್ರದ್ದೆ ವಹಿಸಿ ವ್ಯವಸಾಯ ಮಾಡಿದಾಗ ಮಾತ್ರ ಕೃಷಿಯಲ್ಲಿ ಲಾಭ ಗಳಿಸಬಹುದಾಗಿದೆ ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ಕೃಷಿ ಇಲಾಖೆಯಿಂದ ತಾಲ್ಲೂಕಿನ ಜಂಗಮಕೋಟೆಯಲ್ಲಿ ಶುಕ್ರವಾರ ನಡೆದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ರೈತರು ತಮ್ಮ ಜಮೀನುಗಳಿಗೆ ಹೆಚ್ಚು ಹೆಚ್ಚು ರಾಸಾಯನಿಕ ಗೊಬ್ಬರಗಳನ್ನು ಬಳಸುವುದರಿಂದ ಮಣ್ಣು ಸತ್ವ ಕಳೆದುಕೊಳ್ಳುತ್ತಿದೆ. ಯಾವುದೇ ಬೆಳೆಯಿಡುವ ಮುನ್ನ ಪ್ರತಿಯೊಬ್ಬರೂ ಮಣ್ಣಿನ ಪರೀಕ್ಷೆ ಮಾಡಿಸಿ. ರಾಸಾಯನಿಕ ಗೊಬ್ಬರ ಹಾಕುವ ಮುನ್ನ ಮಣ್ಣಿನಲ್ಲಿ ಯಾವ ಅಂಶದ ಕೊರತೆಯಿದೆ ಎಂದು ತಿಳಿದುಕೊಂಡು ಅಗತ್ಯವಿರುವ ಗೊಬ್ಬರಗಳನ್ನು ಮಾತ್ರ ಬಳಸಿ ಎಂದರು.
ಪೌಷ್ಠಿಕಯುಕ್ತ ಸತ್ವಭರಿತ ಆಹಾರದ ಉತ್ಪಾದನೆಗೆ ಆದ್ಯತೆ ನೀಡಬೇಕಾದ ಅಗತ್ಯವಿದೆ. ಆಹಾರ ಉತ್ಪಾದನೆಗಿಂತ ಆರೋಗ್ಯ ಕಾಪಾಡಲು ನಾವು ಹೆಚ್ಚು ಖರ್ಚು ಮಾಡುತ್ತಿರುವುದು ದುರಂತದ ಸಂಗತಿಯಾಗಿದೆ. ದೇಶೀಯ ರೋಗನಿಯಂತ್ರಣ ಪದ್ಧತಿಗಳನ್ನು ಬಿಟ್ಟು ನಾವೀಗ ಕೀಟನಾಶಕ, ಕಳೆನಾಶಕ, ರೋಗನಾಶಕ ರಾಸಾಯನಿಕಗಳನ್ನು ವಿದೇಶಗಳಿಂದ ತರಿಸಿ ಬಳಸುತ್ತೇವೆ. ಈ ಕಾರಣದಿಂದ ನಮ್ಮ ಆಹಾರ ಬೆಳೆಗಳನ್ನು ವಿದೇಶಿ ಮಾರುಕಟ್ಟೆ ತಿರಸ್ಕರಿಸುತ್ತಿದೆ. ನೀರಿನ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು. ಹನಿಹನಿ ನೀರನ್ನು ಇಂಗಿಸಬೇಕು. ಜೀವಂತಿಕೆಯನ್ನು ತುಂಬುವ ಜಮೀನನ್ನು ತಯಾರು ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ವಿ.ಮಂಜುನಾಥ್ ಮಾತನಾಡಿ ಇಲಾಖೆಯಿಂದ ಸಿಗುವ ಸವಲತ್ತುಗಳ ಸದುಪಯೋಗ ಪಡಿಸಿಕೊಳ್ಳುವಂತೆ ರೈತರಲ್ಲಿ ಮನವಿ ಮಾಡಿದರು.
ರೈತರಿಗೆ ಮಾಹಿತಿ ನೀಡಲು ವಿವಿಧ ಇಲಾಖೆಗಳ ಮಳಿಗೆಗಳು, ಯಂತ್ರೋಪಕರಣಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ.ಮುನಿಯಪ್ಪ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಅನುರೂಪ, ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ರೈತ ಮುಖಂಡರಾದ ಜೆ.ಎಸ್.ವೆಂಕಟಸ್ವಾಮಿ, ಎಸ್.ಎಂ.ರವಿಪ್ರಕಾಶ್. ತಾದೂರು ಮಂಜುನಾಥ್, ಮುನಿಕೆಂಪಣ್ಣ, ಚಿಂತಾಮಣಿ ಕೃಷಿ ಕಾಲೇಜಿನ ಸಹ ಪ್ರಾಧ್ಯಾಪಕ ವಿಶ್ವನಾಥ್, ಹೊಸಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್ ಹಾಜರಿದ್ದರು.
ಜಮೀನು ಮಂಜೂರು ವಿಳಂಬ, ಧರಣಿ ಕುಳಿತ ನಿವೃತ್ತ ಸೈನಿಕ
ಜಮೀನು ಮಂಜೂರು ಮಾಡಲು ವಿಳಂಬ ಮಾಡುತ್ತಿರುವ ಅಧಿಕಾರಿಗಳ ಧೋರಣೆಯನ್ನು ಖಂಡಿಸಿ ಬುಧವಾರ ಅನಿರ್ಧಿಷ್ಟ ಧರಣಿಯನ್ನು ನಿವೃತ್ತ ಸೈನಿಕ ಆರ್ ವಿ ಮಂಜುನಾಥ್ ಆರಂಭಿಸಿದ್ದಾರೆ.
ಸೈನಿಕನಾಗಿ ಸರ್ಕಾರದಿಂದ ಜಮೀನು ಮಂಜೂರಾತಿಗಾಗಿ ೨೦೦೫ರಲ್ಲಿ ಅರ್ಜಿ ಸಲ್ಲಿಸಿದ್ದು ಹದಿನಾಲ್ಕು ವರ್ಷಗಳು ಕಳೆದರೂ ಇದುವರೆಗೂ ಜಮೀನು ಮಂಜೂರು ಮಾಡಿಲ್ಲ ಎಂದು ದೂರಿದರು
೨೦೧೦ರಲ್ಲಿ ಆಗಿನ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಶಿಡ್ಲಘಟ್ಟ ತಹಶೀಲ್ದಾರರಿಗೆ ಪತ್ರ ಬರೆದು ತಾಲ್ಲೂಕು ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಗುರುತಿಸಿ ಮಂಜೂರು ಮಾಡುವಂತೆ ಆದೇಶಿಸಿದ್ದರು. ಅಂದಿನಿಂದ ಇದುವರೆಗೂ ಸಾಕಷ್ಟು ಬಾರಿ ಕಚೇರಿಗಳಿಗೆ ಆಲೆದಿದ್ದೇನೆ ಆದರೂ ಜಮೀನು ಮಂಜೂರಾಗಿಲ್ಲ. ವಿಧಿಯಿಲ್ಲದೆ ಧರಣಿ ಕುಳಿತಿದ್ದೇನೆ ಎಂದು ಅಳಲು ತೋಡಿಕೊಂಡರು.
ಬಿಜೆಪಿ ಸದಸ್ಯತ್ವ ಅಭಿಯಾನ
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಾದ್ಯಂತ ಸುಮಾರು ಒಂದು ಲಕ್ಷ ಸದಸ್ಯತ್ವ ಮಾಡಿಸುವ ಗುರಿ ಹೊಂದಿದ್ದು ಆ ನಿಟ್ಟಿನಲ್ಲಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಯುವಮೋರ್ಚಾ ಅಧ್ಯಕ್ಷ ವೆಂಕಟೇಶ್ ಹೇಳಿದರು.
ನಗರದ ಬಸ್ ನಿಲ್ದಾಣದ ಬಳಿ ಬುಧವಾರ ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಿಜೆಪಿ ಸದಸ್ಯತ್ವ ಪಡೆಯಲು ಇಚ್ಚಿಸುವ ಯುವಕ ಯುವತಿಯರು ತಮ್ಮ ಮೊಬೈಲ್ ಮೂಲಕ ೮೯೮೦೮೦೮೦೮೦ ಸಂಖ್ಯೆಗೆ ಕರೆ ಮಾಡಿದರೆ ಸಾಕು. ಅದರಿಂದ ಒಂದು ಲಿಂಕ್ ಬರುತ್ತದೆ. ಅದರಲ್ಲಿ ಅಗತ್ಯ ಮಾಹಿತಿಯನ್ನು ತುಂಬುವ ಮೂಲಕ ಬಿಜೆಪಿ ಸದಸ್ಯರಾಗಬಹುದು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್, ಮುಖಂಡರಾದ ರವಿಕುಮಾರ್, ಮಂಜುಳಮ್ಮ, ಶ್ರೀರಾಮ್, ನರೇಶ್, ಕೃಷ್ಣಾರೆಡ್ಡಿ ಹಾಜರಿದ್ದರು.
ವೇದ ಪಾರಾಯಣದ ಅಭಿನಂದನಾ ಸಮಾರಂಭ
ನಗರದ ನಗರೇಶ್ವರಸ್ವಾಮಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ವಿಪ್ರ ಪೌರೋಹಿತರ ಮತ್ತು ಆಗಮೀಕರ ವಿಶ್ವಸ್ಥ ಮಂಡಳಿಯ ಜಿಲ್ಲಾ ಮತ್ತು ತಾಲ್ಲೂಕು ಶಾಖೆಗಳಿಂದ ಆಯೋಜಿಸಿದ್ದ ‘ವೇದೋನಿತ್ಯಮಧೀಯತಾಂ’ ವೇದ ಪಾರಾಯಣದ ಅಭಿನಂದನಾ ಸಮಾರಂಭದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ವೇದ ಮಂತ್ರಗಳು ಮನುಷ್ಯನ ಅಂತಃಸತ್ವವನ್ನು ಹೆಚ್ಚಿಸುತ್ತವೆ. ಅವನನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ಮಾಡುವ ಸಾಮರ್ಥ್ಯ ವೇದ ಮಂತ್ರಗಳಲ್ಲಿ ಇದೆ. ಈ ಮಂತ್ರಗಳನ್ನು ಲೋಕಕಲ್ಯಾಣಾರ್ಥವಾಗಿ ಪಠಿಸಿ ವಿಪ್ರವೃಂದ ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ ಎಂದು ಅವರು ತಿಳಿಸಿದರು.
ಸದಾ ಪರಮಾತ್ಮನ ಸನ್ನಿದಾನದಲ್ಲಿರುತ್ತಾ ಆದ್ಯಾತ್ಮ ಜೀವನ ನಡೆಸುವ ವಿಪ್ರರು ಸಮಾಜಕ್ಕೆ ತಮ್ಮನ್ನೇ ಅರ್ಪಣೆ ಮಾಡಿಕೊಂಡಿದ್ದಾರೆ. ಸಮಾಜಕ್ಕೆ ಮಾರ್ಗದರ್ಶನ ಮಾಡುವ ವಿಪ್ರ ಕುಲಕ್ಕೆ ಸರ್ಕಾರದ ವತಿಯಿಂದ ಏನೇ ಅನುಕೂಲ ಬೇಕಿದ್ದರೂ ಮುಂದೆ ನಿಂತು ನಡೆಸಿಕೊಡುತ್ತೇನೆ ಎಂದು ಹೇಳಿದರು.
ವಿಪ್ರ ಪೌರೋಹಿತರ ಮತ್ತು ಆಗಮೀಕರ ವಿಶ್ವಸ್ಥ ಮಂಡಳಿಯ ಜಿಲ್ಲಾ ಅಧ್ಯಕ್ಷ ಎಲ್.ಶಿವಗುರು ಶರ್ಮ ಮಾತನಾಡಿ, ವೇದಗಳ ಸಂರಕ್ಷಣೆಯಾಗಬೇಕು ಹಾಗೂ ವೇದದ ಮಹತ್ವ ಎಲ್ಲರಿಗೂ ತಿಳಿಸಬೇಕೆಂಬ ಉದ್ದೇಶ ದಿಂದ ವೇದಪಾರಾಯಣ ಅಭಿಯಾನವನ್ನು ತಾಲ್ಲೂಕಿನ ೧೦ ದೇವಸ್ಥಾನಗಳಲ್ಲಿ ಮತ್ತು ೧ ಮನೆಗಳಲ್ಲಿ ನಡೆಸಿದ್ದೇವೆ. ವಿಪ್ರಕುಲಕ್ಕೆ ಶಕ್ತಿ, ಆತ್ಮಸ್ಥೈರ್ಯ ತುಂಬಲು ಪ್ರತೀ ವರ್ಷವೂ ಈ ಅಭಿಯಾನವನ್ನು ಮುಂದುವರೆಸುವುದಾಗಿ . ಸಾಂಘಿಕವಾಗಿ ವಿಪ್ರಕುಲಕ್ಕೆ ಶಕ್ತಿ, ಆತ್ಮಸ್ಥೈರ್ಯ ತುಂಬಿ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುನ್ನ ವೇ.ಬ್ರ.ಶ್ರೀ ವಿರೂಪಾಕ್ಷಂ ರಾಮಮೋಹನ್ ಶಾಸ್ತ್ರಿ ಮತ್ತು ತಂಡದವರಿಂದ ಲೋಕಕಲ್ಯಾಣಾರ್ಥವಾಗಿ ಶಂಕರಮಠದಲ್ಲಿ ಅಭಿಷೇಕವನ್ನು ನೆರವೇರಿಸಲಾಯಿತು. ವೇದ ಪಾರಾಯಣದಲ್ಲಿ ಪಾಲ್ಗೊಂಡಿದ್ದ ವೇದ ಪಂಡಿತರುಗಳಾದ ರಾಮಮೋಹನಶಾಸ್ತ್ರಿ, ಎಂ.ಎಸ್.ನಾರಾಯಣಮೂರ್ತಿ, ಎಂ.ಎಸ್.ವೆಂಕಟೇಶಮೂರ್ತಿ, ವೆಂಕಟಬಾಲಶಾಸ್ತ್ರಿ, ಬಿ.ಕೃಷ್ಣಮೂರ್ತಿ, ದಾಶರಥಿ ಮುಂತಾದವರನ್ನು ಸನ್ಮಾನಿಸಲಾಯಿತು. ವೇದ ಮತ್ತು ಆಗಮ ಪಂಡಿತ ಎಂ.ಎನ್.ಶ್ರೀಕಾಂತ ಶರ್ಮ ಉಪನ್ಯಾಸ ನೀಡೀದರು.
ವಿಪ್ರ ಪೌರೋಹಿತರ ಮತ್ತು ಆಗಮೀಕರ ವಿಶ್ವಸ್ಥ ಮಂಡಳಿಯ ತಾಲ್ಲೂಕು ಅಧ್ಯಕ್ಷ ವೈ.ಎನ್.ದಾಶರಥಿ, ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಶಿವಗುರುಶರ್ಮ, ನಗರಸಭೆ ಸದಸ್ಯ ವಿ.ಮುನಿರಾಜು, ಜಿಲ್ಲಾ ಬ್ರಾಹ್ಮಣ ಮಹಾಸಭಾ ಮಾಜಿ ಅಧ್ಯಕ್ಷ ಎಂ.ವಾಸುದೇವರಾವ್, ತಾಲ್ಲೂಕು ಅಧ್ಯಕ್ಷ ಎ.ಎಸ್.ರವಿ, ವಿಪ್ರ ಪ್ರತಿಭಾ ಪುರಸ್ಕಾರ ಹಾಗೂ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಡಾ.ಡಿ.ಟಿ.ಸತ್ಯನಾರಾಯಣರಾವ್, ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಗ್ರೇಡ್ ೨ ತಹಶೀಲ್ದಾರ್ ಹನುಮಂತರಾವ್, ನಗರ್ತಮಂಡಳಿ ಅಧ್ಯಕ್ಷ ಶಿವಶಂಕರ್, ಎನ್.ಶ್ರೀಕಾಂತ್, ಜಿ.ಕೃಷ್ಣಮೂರ್ತಿ ಹಾಜರಿದ್ದರು.
ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ – ೨೧ ನೇ ತಿಂಗಳ ಕಾರ್ಯಕ್ರಮ
ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ಕನ್ನಡ ಸಾರಸ್ವತ ಪರಿಚಾರಿಕೆ, ಕೇಂದ್ರ ಗ್ರಂಥಾಲಯದ ಸಹಯೋಗದಲ್ಲಿ “ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ” ೨೧ ನೇ ತಿಂಗಳ ಕಾರ್ಯಕ್ರಮದಲ್ಲಿ ಲೇಖಕ ರಂಜಿತ್ ಜಯರಾಮ್ ಅವರ “ನಮ್ಮಲ್ಲೇ ತಪ್ಪಿರುವಾಗ ಪ್ರಶ್ನಿಸುವುದ್ಯಾರನ್ನು?” ಪುಸ್ತಕವನ್ನು ಬಿಡುಗಡೆ ಮಾಡಿ ಸಾಹಿತಿ ವೇಮಗಲ್ ಪ್ರಶಾಂತ್ ರಾಮಸ್ವಾಮಿ ಮಾತನಾಡಿದರು.
ಸಮಾಜದಲ್ಲಿನ ಬದಲಾವಣೆ ಹಾಗೂ ವಿದ್ಯಾರ್ಥಿ ಪೋಷಕರೊಟ್ಟಿಗಿನ ಸಂಬಂಧದ ಬಗ್ಗೆ ಗೆಳೆಯನೊಬ್ಬ ಪಕ್ಕದಲ್ಲಿ ಕುಳಿತು ಹೇಳುವಂತೆ ಉತ್ತಮ ಮಾರ್ಗದರ್ಶಿ ಸೂತ್ರಗಳನ್ನು ತಮ್ಮ ಪುಸ್ತಕದಲ್ಲಿ ಲೇಖಕ ರಂಜಿತ್ ಜಯರಾಮ್ ಪೋಣಿಸಿಕೊಟ್ಟಿದ್ದಾರೆ. ತೆರೆದ ಮನಸ್ಸಿನಿಂದ ಪುಸ್ತಕವನ್ನು ಓದಿದಾಗ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಲು ಸಾಧ್ಯ ಎಂದು ಅವರು ತಿಳಿಸಿದರು.
ಶಿಕ್ಷಣದೊಂದಿಗೆ ಜೀವನ ಮೌಲ್ಯವನ್ನು ವೃದ್ಧಿಸಿಕೊಂಡು ಸಮಾಜಮುಖಿಯಾಗಿ ಬದುಕನ್ನು ಸಾಗಿಸಿದಾಗ ಮಾತ್ರ ನಮ್ಮ ಹುಟ್ಟು ಸಾರ್ಥಕತೆ ಕಾಣುತ್ತದೆ ಎಂದರು.
ಲೇಖಕ ರಂಜಿತ್ ಜಯರಾಮ್ ಮಾತನಾಡಿ, ವಿದ್ಯಾರ್ಥಿಗಳು ಬದಲಾವಣೆಗೆ ತುಡಿಯಬೇಕು. ಸಾಧನೆಗೆ ಹಂಬಲಿಸಬೇಕು. ಇಡೀ ಕುಟುಂಬದವರು ತಮ್ಮ ಕನಸನ್ನು ನನಸಾಗಿ ಮಾಡಿಕೊಳ್ಳಲು ಬಯಸಬೇಕು. ಸಾಧನೆಗೆ ಬೇಕಾದ ಹಠವಿರುವ ಉತ್ಸಾಹಿ ಯುವಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಕುಗ್ಗಿರುವ ಮನಸ್ಸುಗಳಿಗೆ ಉಪಯುಕ್ತವಾಗಲೆಂಬ ಉದ್ದೇಶದಿಂದ ಪುಸ್ತಕವನ್ನು ಬರೆದಿರುವೆ. ಶಿಕ್ಷಣದೊಂದಿಗೆ ಸಂಸ್ಕಾರ ಮತ್ತು ಸಂಸ್ಕೃತಿ ಅಗತ್ಯತೆಯನ್ನು ತಿಳಿಸಿಕೊಡುವುದು ಮತ್ತು ಆತ್ಮಾವಲೋಕನಕ್ಕೆ ಹಚ್ಚುವುದು ನನ್ನ ಕಾಳಜಿಯಾಗಿದೆ ಎಂದು ಹೇಳಿದರು.
ಮಕ್ಕಳಲ್ಲಿ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಕೌಶಲ್ಯಗಳನ್ನು ಕಲಿಸುವುದು ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಗಳನ್ನು ಸಹ ನಡೆಸುತ್ತಿದ್ದು, ಎಳೆಯರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿರುವುದಾಗಿ ಹೇಳಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಲೇಖಕರಾದ ರಂಜಿತ್ ಜಯರಾಮ್ ರವರು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಊರಿನವರು. ಮೆಕಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. “ಅಕ್ಷರದ್ವಾರ” ಎಂಬ ಸಂಸ್ಥೆಯೊಂದನ್ನು ಕಟ್ಟಿಕೊಂಡು ಅದರ ಮೂಲಕ ವಿದ್ಯಾರ್ಥಿ, ಪೋಷಕ ಹಾಗೂ ಸಮಾಜಕ್ಕೆ ಒಳಿತಾಗುವ ಕೆಲಸವನ್ನು ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಬಗೆಗಿರುವ ಗೊಂದಲವನ್ನು ಪರಿಹರಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದು ಪರಿಚಯಿಸಿದರು.
ಲೇಖಕ ರಂಜಿತ್ ಜಯರಾಮ್ ಅವರು ಗ್ರಂಥಾಲಯಕ್ಕೆ ತಾವು ರಚಿಸಿರುವ ಕೃತಿಯನ್ನು ಕೊಡುಗೆಯಾಗಿ ನೀಡಿದರು.
ಜಯರಾಮ್, ಶ್ಯಾಮಲ, ವೆಂಕಟೇಶ್, ರವಿ, ಸುಂದರನ್, ಅಜಿತ್ ಕೌಂಡಿನ್ಯ, ರಾಜಣ್ಣ, ಶ್ರೀಕಾಂತ್ ತಾಮ್ರಪಾಣಿ, ಸತೀಶ್, ಕಸಾಪ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಚಿತ್ರನಟ ಸಿ.ಎನ್.ಮುನಿರಾಜು, ಶಿಕ್ಷಕರಾದ ದೇವರಾಜ್, ಕಲಾಧರ್, ಗ್ರಂಥಪಾಲಕಿ ಶಂಶಾದ್ ಬೇಗಮ್, ಸಹಾಯಕಿ ಬಾಂಧವ್ಯ, ಲಕ್ಷ್ಮೀನಾರಾಯಣ ಹಾಜರಿದ್ದರು.
ನಾಲ್ಕನೇ ಶ್ರಾವಣ ಶನಿವಾರದ ಪ್ರಯುಕ್ತ
ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಗುಟ್ಟದ ಮೇಲಿರುವ ಭೂನೀಳಾ ಸಮೇತ ಬ್ಯಾಟರಾಯಸ್ವಾಮಿ ದೇವಾಲಯದಲ್ಲಿ ನಾಲ್ಕನೇ ಶ್ರಾವಣ ಶನಿವಾರದ ಪ್ರಯುಕ್ತ ಶ್ರೀ ಬ್ಯಾಟರಾಯಸ್ವಾಮಿ ಸೇವಾ ಸಮಿತಿ ವತಿಯಿಂದ ವಿಶೇಷ ಪೂಜಾ ಮಹೋತ್ಸವವನ್ನು ಆಯೋಜಿಸಲಾಗಿತ್ತು.
ಸುಮಾರು ಸಾವಿರ ವರ್ಷಗಳಿಗೂ ಹಳೆಯದಾದ ವಿಶಾಲವಾದ ಗುಟ್ಟದ ಮೇಲೆ ನಿರ್ಮಾಣಗೊಂಡಿರುವ ದೇವಾಲಯ, ಅದರ ಬಲ ಬದಿಯಲ್ಲಿ ಕಲ್ಯಾಣಿ, ಅದರ ಮಧ್ಯೆ ಸುಂದರವಾದ ಮಂಟಪವಿದೆ. ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾದ ಈ ದೇವಾಲಯವು ವಿಶಾಲವಾದ ಪ್ರಾಕಾರ, ಗರ್ಭಗುಡಿ, ಅರ್ಧಮಂಟಪ, ಮುಖಮಂಟಪ ಹೊಂದಿದ್ದು, ಚೋಳರು ಹಾಗೂ ಹೊಯ್ಸಳರ ಕಾಲದಲ್ಲೂ ಅವರ ಕಲಾ ಪ್ರಕಾರದಲ್ಲಿ ನಿರ್ಮಾಣ ಕಂಡಿದ್ದು, ಅದರ ಅಂದ ಚಂದ ವೈಭವ ಬೆರಗು ಮೂಡಿಸುತ್ತದೆ.
ದೇವಾಲಯವು ವಿಶಾಲವಾದ ಗುಟ್ಟದ ಮೇಲೆ ನೆಲೆಸಿದ್ದು, ಸುತ್ತಲೂ ಹಸಿರ ಹೊದಿಕೆ ಆವರಿಸಿದೆ. ದೇವಾಲಯದ ಜಮೀನಿನಲ್ಲಿ ಬೆಳೆದ ಗಿಡ ಮರಗಳ ಹಸಿರು ದೇವಾಲಯವನ್ನು ಸುತ್ತುವರೆದಿದ್ದು ಆಕರ್ಷಣೀಯವಾಗಿದೆ.
ಇಲ್ಲಿ ಅನಾದಿಕಾಲದಿಂದಲೂ ನಾಯಕ ಸಮುದಾಯಕ್ಕೆ ಸೇರಿದವರೆ ಪೂಜೆ ನಡೆಸಿಕೊಂಡು ಬಂದಿರುವುದು ವಿಶೇಷ. ಶ್ರಾವಣ ಶನಿವಾರ ಭೂನೀಳಾ ಸಮೇತ ಬ್ಯಾಟರಾಯಸ್ವಾಮಿ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದಲ್ಲಿ ದೇವರ ಅನುಗ್ರಹವಾಗುವುದೆಂಬ ನಂಬಿಕೆಯಿಂದ ತಾಲ್ಲೂಕು ಹಾಗೂ ನೆರೆಯ ತಾಲ್ಲೂಕುಗಳಿಂದ ಸಾವಿರಾರು ಮಂದಿ ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಶ್ರೀ ಬ್ಯಾಟರಾಯಸ್ವಾಮಿ ಸೇವಾ ಸಮಿತಿ ವತಿಯಿಂದ ಭಕ್ತರಿಗೆ ಪ್ರಸಾದವನ್ನು ವಿನಿಯೋಗಿಸಲಾಯಿತು.
ಧರ್ಮದರ್ಶಿಗಳಾದ ದಾಮೋದರ್, ಎಸ್.ಶ್ರೀನಿವಾಸ್, ತಾಳಂಕಿ ಕುಟುಂಬದವರು, ಚಿಕ್ಕಗಂಗಪ್ಪನವರ ಕುಟುಂಬದವರು, ಬಿ.ಬೈರೇಗೌಡ, ಎ.ಶೇಷಪ್ಪ, ಡಿ.ಎ.ಅಶ್ವತ್ಥನಾರಾಯಣ್, ಬಿ.ಎನ್.ಕೃಷ್ಣಯ್ಯ, ಎನ್.ದೇವರಾಜ್, ಪಿ.ಎಂ.ಪುಟ್ಟರಾಜು, ಎಸ್.ಎಂ.ಮಂಜುನಾಥ್, ಎಂ.ಸಿ.ಜಗದೀಶ್, ಸಿ.ಆರ್.ಲಕ್ಷ್ಮಣಮೂರ್ತಿ, ಎಚ್.ಎನ್.ಬೈರೇಗೌಡ, ಎಸ್.ಶ್ರೀನಿವಾಸ್ ಹಾಜರಿದ್ದರು.
ಜಿಲ್ಲಾ ಬಾಂಬ್ ಪತ್ತೆ ದಳ ಹಾಗೂ ಶ್ವಾನದಳದಿಂದ ಶೋಧ ಕಾರ್ಯ
ರಾಜ್ಯಾದ್ಯಂತ ಹೈಅಲರ್ಟ್ ಘೋಷಿಸಿರುವ ಹಿನ್ನಲೆಯಲ್ಲಿ ಶನಿವಾರ ನಗರದ ಸಾರ್ವಜನಿಕ ಪ್ರದೇಶಗಳಾದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸೇರಿದಂತೆ ರೈಲ್ವೇ ನಿಲ್ದಾಣ, ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಜಿಲ್ಲಾ ಬಾಂಬ್ ಪತ್ತೆ ದಳ ಹಾಗೂ ಶ್ವಾನದಳದ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಉಗ್ರರದಾಳಿಯ ಎಚ್ಚರಿಕೆಯನ್ನು ಕೇಂದ್ರ ಗುಪ್ತಚರ ಇಲಾಖೆ ನೀಡಿರುವ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಬಾಂಬ್ ಪತ್ತೆ ದಳ ಹಾಗೂ ಶ್ವಾನದಳದ ಅಧಿಕಾರಿಗಳಿಂದ ಶೋಧ ಕಾರ್ಯಾಚರಣೆ ನಡೆಸುವ ಮೂಲಕ ಬಿಗಿ ಭದ್ರತೆಗೆ ಪೊಲೀಸ್ ಇಲಾಖೆ ಕ್ರಮ ವಹಿಸಿದೆ.
ಜಿಲ್ಲಾ ಬಾಂಬ್ ಪತ್ತೆ ದಳದ ಎಎಸ್ಸೈ ಮಂಜುನಾಥ್ ಮಾತನಾಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದ ಮೇರೆಗೆ ಜನನಿಬಿಡ ಪ್ರದೇಶಗಳಾದ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಶೋಧ ಕಾರ್ಯ ಕೈಗೊಂಡಿದ್ದೇವೆ, ಎಂದು ಹೇಳಿ, ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶ್ವಾನದಳದ ಅಧಿಕಾರಿ ಮಿಲ್ಲರ್ ಫಿಲಿಪ್ಸ್, ಸಿಬ್ಬಂದಿ ದಯಾನಂದ್, ಶಿವಕುಮಾರ್, ಪೊಲೀಸ್ ಪೇದೆಗಳಾದ ರಾಜಗೋಪಾಲ್, ರೆಡ್ಡಪ್ಪ ಹಾಜರಿದ್ದರು.
ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ
ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ನಗರದ ಟಿ.ಬಿ. ರಸ್ತೆಯಲ್ಲಿರುವ ಕೃಷ್ಣಸ್ವಾಮಿ ದೇವಸ್ಥಾನ ಸೇರಿದಂತೆ ಉಲ್ಲೂರುಪೇಟೆಯ ಶ್ರೀರಾಮ ಭಜನೆ ಮಂದಿರದಲ್ಲಿ ವಿಶೇಷ ಹೂವಿನ ಅಲಂಕಾರ, ಹೋಮ, ಪೂಜೆ ನಡೆಸಲಾಯಿತು.
ಯಾದವ ಕುಲಸ್ಥರು ಕುಟುಂಬ ಸಮೇತರಾಗಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಮಹಿಳೆಯರು ತಂಬಿಟ್ಟು ದೀಪಗಳನ್ನು ಮೆರವಣಿಗೆಯಲ್ಲಿ ತಂದು ಪೂಜೆಯನ್ನು ನೆರವೇರಿಸಿದರು.
ತಾಲ್ಲೂಕಿನ ಯಾದವ ಕುಲಸ್ಥರಿಂದ ಕೃಷ್ಣಸ್ವಾಮಿ ದೇವಸ್ಥಾನದಿಂದ ಕುದುರೆ ರಥ ಮೆರವಣಿಗೆಯನ್ನು ಆಯೋಜಿಸಿದ್ದು, ಶ್ರೀಕೃಷ್ಣ ಮೂರ್ತಿಗಳಿರುವ ಮುತ್ತಿನ ಪಲ್ಲಕ್ಕಿಗಳು, ಸಪ್ತಾಶ್ವದ ರಥಗಳು, ಕೀಲುಕುದುರೆ, ಗಾರ್ಡಿಬೊಂಬೆ, ನವಿಲುಬೊಂಬೆ, ತಮಟೆ ವಾದನ, ನಾದಸ್ವರ, ಶ್ರೀಕೃಷ್ಣ ವೇಷಧಾರಿಗಳಾದ ಮಕ್ಕಳು, ದೀಪಗಳನ್ನು ಹೊತ್ತ ಮಹಿಳೆಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದ್ದು ಆಕರ್ಷಕವಾಗಿತ್ತು.
ಪಟ್ಟಣದ ಉಲ್ಲೂರುಪೇಟೆಯ ಭಜನೆ ಮಂದಿರದಲ್ಲಿರುವ ಪುರಾತನ ತಂಜಾವೂರು ಚಿತ್ರಕಲೆಯ ಬಾಲಕೃಷ್ಣನ ಚಿತ್ರಪಟಕ್ಕೆ ವಿಶೇಷ ಅಲಂಕಾರವನ್ನು ಮಾಡಿ ಪೂಜೆಯನ್ನು ನೆರವೇರಿಸಲಾಯಿತು. ಉಯ್ಯಾಲೆಯಲ್ಲಿ ಬಾಲಕೃಷ್ಣ ಮೂರ್ತಿಯನ್ನಿರಿಸಿ ವಿವಿಧ ತಿಂಡಿಗಳನ್ನು ಕಟ್ಟಿ ತೂಗಿದರು.
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಲ್ಲಾ ಪಲ್ಲಕ್ಕಿಗಳ ತಂಡದವರಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು.
ಸಂಸದ ಎಸ್.ಮುನಿಸ್ವಾಮಿ, ಶಾಸಕ ವಿ.ಮುನಿಯಪ್ಪ, ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್, ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್, ತಾಲ್ಲೂಕು ಯಾದವ ಸಂಘದ ಅಧ್ಯಕ್ಷ ಕೆ.ಕೇಶವಮೂರ್ತಿ, ಗೌರವಾಧ್ಯಕ್ಷ ಟಿ.ಕೆ.ನಟರಾಜ್, ವೈ.ರಾಮಕೃಷ್ಣಪ್ಪ, ಡಿ.ವಿ.ವೆಂಕಟೇಶ್, ಬ್ರಹ್ಮಾನಂದರೆಡ್ಡಿ, ಜಿ.ರಾಮಚಂದ್ರಪ್ಪ, ಕೆ.ಕೃಷ್ಣಪ್ಪ, ದೊಡ್ಡಪಾಪಣ್ಣ, ನಗರಸಭಾ ಸದಸ್ಯರಾದ ಎನ್.ಲಕ್ಷ್ಮಣ, ಎಸ್.ಎ.ನಾರಾಯಣಸ್ವಾಮಿ, ಮುನಿರಾಜು ಹಾಜರಿದ್ದರು.
೬.೫ ಕೋಟಿ ರೂಗಳ ವೆಚ್ಚದಲ್ಲಿ ರಸ್ತೆ ಅಭಿವೃಧ್ಧಿ ಕಾಮಗಾರಿಗೆ ಚಾಲನೆ
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಕಚೊಕ್ಕಂಡಹಳ್ಳಿ-ಅಂಕತಟ್ಟಿ,ಭಕ್ತರಹಳ್ಳಿ-ಮಳಮಾಚನಹಳ್ಳಿ ರಸ್ತೆ ಅಭಿವೃಧ್ಧಿ ಕಾಮಗಾರಿಗೆ ಶಾಸಕ ವಿ.ಮುನಿಯಪ್ಪ ಬುಧವಾರ ಚಾಲನೆ ನೀಡಿದರು.
ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ೬.೫ ಕೋಟಿ ರೂಗಳ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವಿ.ಮುನಿಯಪ್ಪ ಚಾಲನೆ ನೀಡಿ ಮಾತನಾಡಿ, ಜನ ಮಳೆ ನೀರು ಸಂರಕ್ಷಣೆ ಮಾಡಿಕೊಳ್ಳಲು ಜಾಗೃತಿವಹಿಸದಿದ್ದರೆ ಭವಿಷ್ಯದಲ್ಲಿ ಮತ್ತಷ್ಟು ಕಠಿಣ ದಿನಗಳನ್ನು ನೋಡುವ ಪರಿಸ್ಥಿತಿ ನಿರ್ಮಾಣವಾಗುವುದು. ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಳೆ ನೀರು ಸಂರಕ್ಷಣೆ ಮಾಡಲು ವ್ಯಾಪಕವಾಗಿ ಪ್ರಚಾರ ಮಾಡಿ ಅರಿವು ಮೂಡಿಸಬೇಕೆಂದರು.
ಗ್ರಾಮದ ವೆಂಕಟಮೂರ್ತಿ, ನಾರಾಯಣಸ್ವಾಮಿ, ಕೋಚಿಮುಲ್ ನಿರ್ದೇಶಕ ಶ್ರೀನಿವಾಸ್, ಬಿ.ವಿ. ಮುನೇಗೌಡ, ತಾಪಂ ಇಓ ಶಿವಕುಮಾರ್, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ಚಿದಾನಂದಮೂರ್ತಿ, ಬಿಎಂವಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕಾಳಪ್ಪ, ಗುತ್ತಿಗೆದಾರ ಭಾಸ್ಕರ್ ನಾಯ್ಡು, ಲೋಕೇಶ್, ಮಂಜುನಾಥ್, ವಿಶ್ವನಾಥ್, ನರಸಿಂಹಮೂರ್ತಿ, ಹಾಜರಿದ್ದರು.
“ಪತ್ರಿಕೋದ್ಯಮ ಪಿತಾಮಹ” ಎಂ. ವೆಂಕಟಕೃಷ್ಣಯ್ಯ ಅವರ ಜನ್ಮದಿನಾಚರಣೆ
ತಾಲ್ಲೂಕಿನ ಲಕ್ಕಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನಮ್ಮ ನಾಡಿನ ಖ್ಯಾತ ಪತ್ರಕರ್ತರಾಗಿದ್ದ ಎಂ.ವೆಂಕಟಕೃಷ್ಣಯ್ಯ ಅವರ ಜನುಮ ದಿನದ ಪ್ರಯುಕ್ತ, ಕಸಾಪ ನಡೆಸಿದ ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
“ಪತ್ರಿಕೋದ್ಯಮ ಪಿತಾಮಹ”ರೆಂಬ ಬಿರುದು ಪಡೆದು, ವಿದ್ಯಾರ್ಥಿಗಳಿಂದ ‘ತಾತಯ್ಯ’ ಎಂಬ ನಾಮಾಂಕಿತ, ಬಡ-ಬಗ್ಗರ ಸೇವೆಯಲ್ಲಿ ‘ದಯಾಸಾಗರ’ ಎಂಬ ಹಿರಿಮೆ, ಗಾಂಧಿಯವರಿಂದ ‘ಭೀಷ್ಮಾಚಾರ್ಯ’ ಎಂಬ ಪ್ರಶಂಸೆಗೆ ಪಾತ್ರರಾಗಿದ್ದವರು ಹಿರಿಯ ಪತ್ರಕರ್ತ ಎಂ. ವೆಂಕಟಕೃಷ್ಣಯ್ಯನವರು. ‘ಜನ ಸೇವೆಯೇ ಜನಾರ್ಧನ ಸೇವೆ’ ಎಂದು ನುಡಿದುದನ್ನು ನಡೆಯಲ್ಲಿ ತೋರಿಸಿ ಮಹತ್ವಪೂರ್ಣ, ಚಿರಸ್ಮರಣೀಯವಾದ ಜೀವನವನ್ನು ನಡೆಸಿ ಮಾದರಿಯಾಗಿದ್ದಾರೆ ಎಂದು ಅವರು ತಿಳಿಸಿದರು.
1883 ರಲ್ಲಿ ಹಿತಬೋಧಿನಿ ಪತ್ರಿಕೆಯ ಮೂಲಕ ಪತ್ರಕರ್ತರಾಗಿ ಜೀವನ ಆರಂಭಿಸಿದ ಎಂ. ವೆಂಕಟಕೃಷ್ಣಯ್ಯನವರು ಮುಂದೆ ಸಾಧ್ವಿ, ವೃತ್ತಾಂತ, ಚಿಂತಾಮಣಿ, ಮೈಸೂರು ಹೆರಾಲ್ಡ್ ಮುಂತಾದ ಪತ್ರಿಕೆಗಳ ಮೂಲಕ ಕನ್ನಡ ಪತ್ರಿಕೋದ್ಯಮಕ್ಕೆ ಭದ್ರ ಬುನಾದಿ ಹಾಕಿದವರು. ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮೈಸೂರಿನಲ್ಲಿ ಅನಾಥಾಲಯ ಸ್ಥಾಪನೆ ಮಾಡಿದವರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಪತ್ರಿಕೆಗಳ ಮೂಲಕ ಮನವರಿಕೆ ಮಾಡಿಕೊಡುತ್ತಿದ್ದರು. ಅಸ್ಪೃಶ್ಯತೆ, ಜೀತ ವ್ಯವಸ್ಥೆ ವಿರುದ್ಧ ಹೋರಾಟ ಮಾಡಿದವರು ಅವರು. ಸ್ವಾತಂತ್ರ್ಯ ಪೂರ್ವದಲ್ಲಿ ವಿಧವಾ ವಿವಾಹಕ್ಕೆ ಉತ್ತೇಜನ ನೀಡಿದವರು. ಪತ್ರಿಕೋದ್ಯಮ, ಶಿಕ್ಷಣ, ಸಾಮಾಜಿಕ ಸುಧಾರಣೆಗಳ ಮೂಲಕ ಇಡೀ ಬದುಕನ್ನು ಸಮಾಜಕ್ಕೆ ಅರ್ಪಿಸಿಕೊಂಡ ಎಂ. ವೆಂಕಟಕೃಷ್ಣಯ್ಯನವರು ಕುರಿತು ವಿಚಾರಗಳನ್ನು ಈಗಿನವರು ತಿಳಿಯುವುದು ಅವಶ್ಯಕ ಎಂದು ಹೇಳಿದರು.
ಶಾಲಾ ವಿದ್ಯಾರ್ಥಿಗಳಿಗೆ ಕಸಾಪ ವತಿಯಿಂದ ಸಿಹಿಯನ್ನು ವಿತರಿಸಲಾಯಿತು.
ಶಾಲೆಯ ಮುಖ್ಯಶಿಕ್ಷಕ ಶಿವಕುಮಾರ್, ಶಿಕ್ಷಕ ರಮೇಶ್, ಎಸ್.ಡಿ.ಎಂ.ಸಿ ಅಧ್ಯಕ್ಷ ಗಂಗಾಧರ್, ನರಸಿಂಹಮೂರ್ತಿ, ಬಚ್ಚಪ್ಪ, ಎಂ.ಗೋಪಾಲಪ್ಪ, ನಾರಾಯಣಸ್ವಾಮಿ, ಬಾಬು ಹಾಜರಿದ್ದರು.

