ಶಿಡ್ಲಘಟ್ಟ ತಾಲ್ಲೂಕು ಶ್ರೀ ಮಡಿವಾಳ ಮಾಚಿದೇವ ಯುವಕರ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಂಘದ ಕಚೇರಿಯಲ್ಲಿ ಸೋಮವಾರ ನಡೆಯಿತು. ಡಿ.ವಿ.ಕೃಷ್ಣಪ್ಪ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷ ಎನ್.ಹರೀಶ್, ಪ್ರಧಾನ ಕಾರ್ಯದರ್ಶಿ ಎಚ್.ಎಂ.ಮುನಿರಾಜು, ಖಜಾಂಚಿ ಎಂ.ದೇವರಾಜ್, ನಿರ್ದೇಶಕರಾಗಿ ಎಚ್.ಕೆ.ಶ್ರೀನಿವಾಸ್, ಎನ್.ರಾಜು, ಹನುಮಂತರಾಯಪ್ಪ, ದೊಡ್ಡ ಸೋಮಣ್ಣ, ನರಸಿಂಹಮೂರ್ತಿ, ರವೀಂದ್ರನಾಥ್, ಶ್ರೀನಿವಾಸ್, ಆನಂದ್, ಎಚ್.ಸಿ.ರಮೇಶ್, ಸುರೇಶ್, ಚಂದ್ರಪ್ಪ, ಆಂಜಿನಪ್ಪ, ಮುನಿರಾಜು, ರಾಮಚಂದ್ರಪ್ಪ, ಚಿಕ್ಕನಂಜಪ್ಪ, ವೆಂಕಟರಾಯಪ್ಪ, ನರಸಿಂಹಪ್ಪ, ನಾರಾಯಣಸ್ವಾಮಿ, ಗಂಗಾಧರ್, ಗಿರಿಯಪ್ಪ, ಶಂಕರಪ್ಪ ಆಯ್ಕೆಯಾಗಿದ್ದಾರೆ.
ಶ್ರೀ ಮಡಿವಾಳ ಮಾಚಿದೇವ ಯುವಕರ ಸಂಘದ ಪದಾಧಿಕಾರಿಗಳ ಆಯ್ಕೆ
ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ತಾಲ್ಲೂಕು ಕಾನೂನು ಸೇವಾ ಸಮಿತಿ ಆಯೋಜಿಸಿದ್ದ “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಮತ್ತು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ” ದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್ ಮಾತನಾಡಿದರು.
ಮಾನಸಿಕ ರಾಗ, ದ್ವೇಷ, ಅಹಂಕಾರ ಮುಂತಾದ ಕ್ಷುಲ್ಲಕ ಕಾರಣಗಳಿಂದಾಗಿಯೇ ಅನೇಕರು ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಇದರಿಂದಾಗಿ ಅವರ ಆರೋಗ್ಯ, ಹಣ, ಸಮಯ ವ್ಯರ್ಥವಾಗುತ್ತದೆ. ಮಾನಸಿಕ ಪ್ರಜ್ಞೆಯನ್ನು ಆತ್ಮಾವಲೋಕನಾ ಕ್ರಿಯೆಯೊಂದಿಗೆ, ಹೃದಯ ವೈಶಾಲ್ಯದಿಂದ ಬೆಳೆಸಿಕೊಳ್ಳುವ ಅತ್ಯಗತ್ಯವಿದೆ. ಮಾನಸಿಕ ಅಸ್ವಸ್ಥತೆಗೆ ಈಗ ವೈದ್ಯಕೀಯ ಚಿಕಿತ್ಸೆಗಳು ಸುಧಾರಣಾ ಕ್ರಮಗಳು ಇರುವುದನ್ನು ಮನಗಾಣಬೇಕು ಎಂದು ಅವರು ತಿಳಿಸಿದರು.
ಸಿವಿಲ್ ನ್ಯಾಯಾಧೀಶರಾದ ಸಂಜುಕುಮಾರ್ ಎ.ಪಚ್ಚಾಪುರೆ ಮಾತನಾಡಿ, ಅಮೂಲ್ಯವಾದ ಬದುಕನ್ನು ಯಾವ ಯಾವದೋ ಕಾರಣಕ್ಕಾಗಿ ಕಳೆದುಕೊಳ್ಳುವ ಪ್ರವೃತ್ತಿ ದಿನೇದಿನೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ 10ರಂದು ವಿಶ್ವ ಆತ್ಮಹತ್ಯೆ ತಡೆ ದಿನ ಆಚರಿಸಲಾಗುತ್ತಿದೆ. ಪ್ರತಿಯೊಬ್ಬ ಜೀವಿಯ ಹುಟ್ಟು ಆಕಸ್ಮಿಕ ಹಾಗೂ ಸಾವು ನಿಶ್ಚಿತ. ಯಾವೊಬ್ಬ ಮನುಷ್ಯನೂ ತನ್ನ ಆಯ್ಕೆಯಂತೆ ಜನಿಸಲು ಸಾಧ್ಯವಿಲ್ಲ. ಸಾವು ನಿಶ್ಚಿತವಾದರೂ ಅದನ್ನು ನಾವೇ ಆಹ್ವಾನಿಸುವುದು ಸರಿಯಲ್ಲ ಎಂದರು.
ಆಶಾಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ “ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಮತ್ತು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ”ದ ಬಗ್ಗೆ ಅರಿವು ಮೂಡಿಸುವ ಜಾಥಾ ನಡೆಸಿದರು.
ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಎಂ.ಬಿ.ಲೋಕೇಶ್, ವಕೀಲ ವಿಜಯಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಆರೋಗ್ಯ ಇಲಾಖೆಯ ಮುನಿರತ್ನಮ್ಮ, ಗೀತಾ, ಲೋಕೇಶ್, ವಿಜಯಮ್ಮ ಹಾಜರಿದ್ದರು.
ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರ ವಿತರಣೆ
ತಾಲ್ಲೂಕಿನ ದೇವರಮಳ್ಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಗೆ ಕ್ರೀಡಾ ಸಮವಸ್ತ್ರವನ್ನು ವಿತರಿಸಿ ಕಸಾಪ ಸಮ್ಮೇಳನಾಧ್ಯಕ್ಷೆ, ಹಿರಿಯ ರಂಗಭೂಮಿ ಕಲಾವಿದೆ ದೇವರಮಳ್ಳೂರು ಯಶೋದಮ್ಮ ಮಾತನಾಡಿದರು.
ನಮ್ಮ ದೇವರಮಳ್ಳೂರು ಮಣ್ಣಿನಲ್ಲಿಯೇ ಕಲೆಯ ಸೊಗಡಿದೆ. ಒಂದು ಕಾಲದಲ್ಲಿ ತಲೆಯ ಮೇಲೆ ಯಾವುದೇ ಆಧಾರವಿಲ್ಲದೇ ಸಾಲು ಕಳಸಗಳನ್ನು ಹೊತ್ತು ನಮ್ಮ ಗ್ರಾಮದ ಹೆಣ್ಣುಮಕ್ಕಳು ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯದ ಕೀರ್ತಿಯನ್ನು ಮೆರೆಸಿದ್ದರು. ಈಗಿನ ಪೀಳಿಗೆಯವರಿಗೆ ಇದು ಸ್ಫೂರ್ತಿಯಾಗಲಿ ಎಂದು ಅವರು ತಿಳಿಸಿದರು.
ದೇವರಮಳ್ಳೂರು ಗ್ರಾಮದ ಹೆಣ್ಣುಮಕ್ಕಳ ಪಂಡರಿ ಭಜನೆ ತಂಡ ಎಂಭತ್ತರ ದಶಕದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಪ್ರದರ್ಶನ ನೀಡುವ ಮೂಲಕ ಸಾಕಷ್ಟು ಹೆಸರು ಮಾಡಿತ್ತು. ದೇವರಮಳ್ಳೂರಿನಲ್ಲಿ ಹುಟ್ಟಿ, ಇದೇ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ನಾನು ಸಹ ಕಲೆಯ ಆಸಕ್ತಿಯಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡೆ. ನನ್ನ ಬಾಲ್ಯದಲ್ಲಿ ಪಿಂಡಿಪಾಪನಹಳ್ಳಿಯ ಸುಭದ್ರಮ್ಮ ಎಂಬುವವರು ತೆಲುಗು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಆ ತಾಯಿ ನನಗೆ ಪ್ರೇರಣೆ ಮತ್ತು ಸ್ಫೂರ್ತಿ. ಸಂಸಾರ, ವೈಯಕ್ತಿಕ ಜೀವನದ ಕಷ್ಟಗಳ ನಡುವೆ ನನಗೆ ನೆಮ್ಮದಿ ಮತ್ತು ಸಂತಸವನ್ನು ನೀಡಿದ್ದು ರಂಗಭೂಮಿ. ಹಣವನ್ನು ಸಂಪಾದಿಸಲು ಆಗದಿದ್ದರೂ ಕಲಾಸೇವೆ ಮಾಡಿದ ಸಮಾಧಾನ ನನಗಿದೆ ಎಂದು ಹೇಳಿದರು.
ನಮ್ಮ ಮಣ್ಣಿನಲ್ಲಿ ಕಲೆಯಿದೆ. ಅದನ್ನು ಪೋಷಿಸಲು ಪೂರಕ ವಾತಾವರಣವನ್ನು ಕಲ್ಪಿಸಬೇಕಿದೆ. ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ದೇವರುಗಳಿಗೆ ಮಡಿಲು ತುಂಬಿದ ಪವಿತ್ರವಾದ ಗ್ರಾಮವಿದು ಅದಕ್ಕೇ ದೇವರಮಳ್ಳೂರು ಎಂದು ಹೆಸರಾಯಿತು. ಗ್ರಾಮದೇವತೆಯನ್ನು ಮಳ್ಳೂರಾಂಭ ಇರುವ ಪುಣ್ಯದ ನೆಲವಿದು. ಇಲಿನ ಮಕ್ಕಳು ಯಾರಿಗೂ ಕಮ್ಮಿಯಿಲ್ಲ, ದೇಶವೇ ಮೆಚ್ಚುವಂತಹ ಸಾಧನೆಗಳನ್ನು ಮಾಡಿ ಎಂದು ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ರೂಪಿಸಬೇಕು. ಶಿಕ್ಷಕರು ಹಳೆಯ ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ, ಸಮುದಾಯದ ಸಹಕಾರದೊಂದಿಗೆ ಶಾಲೆ ಹಾಗೂ ವಿದ್ಯಾರ್ಥಿಗಳ ಕಲಿಕೆ ಹೆಚ್ಚಳಕ್ಕೆ ಬೇಕಾಗುವ ಅನುಕೂಲಗಳನ್ನು ಕಲ್ಪಿಸಿಕೊಳ್ಳಬೇಕು. ನಮ್ಮ ಮಾತೃಭಾಷೆಯ ಬಗ್ಗೆ ಹೆಮ್ಮೆಯನ್ನು ಹೊಂದಿರಬೇಕು. ವಿವಿಧ ಭಾಷೆಗಳನ್ನು ಕಲಿತರೂ ಕನ್ನಡಕ್ಕೆ ಸದಾ ತಾಯಿಯ ಸ್ಥಾನವನ್ನು ನೀಡಬೇಕು. ಸರ್ಕಾರಿ ಶಾಲೆಯಲ್ಲಿಯೇ ಓದಿ ಸಾಧಕರಾದ ಮಹನೀಯರು ಮಕ್ಕಳಿಗೆ ಪ್ರೇರಣೆಯಾಗಲಿ ಎಂದು ಹೇಳಿದರು.
ಶಾಲೆಯ ಎಸ್.ಡಿ.ಎಂ.ಸಿ, ಕಸಾಪ ಸಮ್ಮೇಳನಾಧ್ಯಕ್ಷೆ, ಹಿರಿಯ ರಂಗಭೂಮಿ ಕಲಾವಿದೆ ದೇವರಮಳ್ಳೂರು ಯಶೋದಮ್ಮ ಹಾಗೂ ಶಾಲೆಯ ಅನುದಾನದ ಸಹಾಯದಿಂದ ಎಲ್ಲಾ ವಿದ್ಯಾರ್ಥಿಗಳಿಗೂ ಕ್ರೀಡಾ ಸಮವಸ್ತ್ರವನ್ನು ವಿತರಿಸಲಾಯಿತು.
ಮುಖ್ಯಶಿಕ್ಷಕ ಬಿ.ವಿ.ಮಂಜುನಾಥ್, ಶಿಕ್ಷಕರಾದ ಈಶ್ವರಮ್ಮ, ಶಶಿ, ಶಾಂತಕುಮಾರಿ, ಪಿ.ಪಿಳ್ಳಣ್ಣ, ಟಿ.ಆರ್.ಮುರಳಿ, ಗ್ರಾಮದ ಕಲಾವಿದ ವೆಂಕಟೇಶಮೂರ್ತಿ, ತಮಟೆ ರಾಮಣ್ಣ, ಚನ್ನಕೃಷ್ಣ, ರಾಮರೆಡ್ಡಿ, ಸಿಬ್ಬಂದಿ ಶೋಭಮ್ಮ ಹಾಜರಿದ್ದರು.
ಶಾಮಣ್ಣಬಾವಿಯ ಸ್ವಚ್ಛತೆಯ ಕಾರ್ಯ
ಗಾಂಧಿಜಯಂತಿಯ ಪ್ರಯುಕ್ತ ಬುಧವಾರ ಸುಮಾರು ನಾನ್ನೂರು ವರ್ಷಗಳಿಗೂ ಹಳೆಯದಾದ ನಗರದ ಅಗ್ರಹಾರ ಬೀದಿಯಲ್ಲಿರುವ ಶಾಮಣ್ಣಬಾವಿಯ ಸ್ವಚ್ಛತೆಯ ಕಾರ್ಯವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ತಂಡ ಹಾಗೂ ನಗರಸಭೆಯ ಪೌರಕಾರ್ಮಿಕರು ಕೈಗೊಂಡರು.
ಸ್ವಚ್ಛತೆಯ ಕಾರ್ಯವನ್ನು ಪ್ರಾರಂಭಿಸುವ ಮುನ್ನ ಶಾಸಕ ವಿ.ಮುನಿಯಪ್ಪ ಶಾಮಣ್ಣ ಬಾವಿಯ ಬಳಿ ಗಿಡವನ್ನು ನೆಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಅಗ್ರಹಾರ ಬೀದಿಯಲ್ಲಿದ್ದ ಶಾಮಣ್ಣ ಎಂಬುವವರು ಸುಮಾರು ೪೦೦ ವರ್ಷಕ್ಕೂ ಹಿಂದೆ ಈ ಕಲ್ಯಾಣಿ ನಿರ್ಮಿಸಿದ್ದರು. ಕಲ್ಲಿನ ಚಪ್ಪಡಿಗಳಿಂದ ಚತುಷ್ಕೋನಾಕಾರದಲ್ಲಿ ನಿರ್ಮಿಸಲಾಗಿರುವ ಇದರಲ್ಲಿ ಸದಾ ಶುದ್ಧವಾದ ನೀರಿರುತ್ತಿತ್ತು. ಒಂದೆಡೆ ವಿಶಾಲ ಅರಳಿಕಟ್ಟೆಯಿದ್ದರೆ ಮತ್ತೊಂದೆಡೆ ದೇವಾಲಯವಿದೆ. ಇಲ್ಲಿ ಶ್ರೀಕಂಠೇಶ್ವರ ಮತ್ತು ಲಕ್ಷ್ಮೀನರಸಿಂಹಸ್ವಾಮಿ ಅಂದರೆ, ವಿಷ್ಣು ಮತ್ತು ಶಿವ ಒಂದೇ ಕಡೆ ಇಲ್ಲಿದ್ದಾರೆ. ಇವರೊಂದಿಗೆ ಪಾರ್ವತಿ, ಗಣೇಶ, ಸುಬ್ರಮಣ್ಯ, ಆಂಜನೇಯ, ಕೇದಾರೇಶ್ವರ ಮುಂತಾದ ದೇವರುಗಳಿದ್ದಾರೆ. ಶಾಮಣ್ಣ ಬಾವಿಯ ಸುತ್ತ ಅರಳಿ ಮರಗಳು, ಹುಣಸೆ, ತೆಂಗು, ಹೊಂಗೆ ಮುಂತಾದ ಮರಗಳಿದ್ದು ಅತ್ಯಂತ ಪ್ರಶಾಂತವಾದ ಸುಂದರ ತಾಣವಾಗಿದೆ. ಹಿಂದೆ ಸದಾಕಾಲ ನೀರಿರುತ್ತಿದ್ದ ಈ ಶಾಮಣ್ಣಬಾವಿಯು ನಗರದ ಎಲ್ಲಾ ಯುವಕರಿಗೆ ಈಜು ಕೊಳವಾಗಿತ್ತು. ಕಲ್ಯಾಣಿಗಳನ್ನು ಸ್ವಚ್ಛಗೊಳಿಸಿದಾಗ ಮಳೆ ನೀರು ನಿಲ್ಲುತ್ತದೆ, ಅಂತರ್ಜಲ ವೃದ್ಧಿಸುತ್ತದೆ. ಸ್ವಚ್ಛತೆ ಕಾರ್ಯಕ್ಕೆ ಸ್ವಯಂಸೇವಕರಾಗಿ ಆಗಮಿಸಿರುವ ಸ್ಕೌಟ್ಸ್ ಮತ್ತು ಗೈಡ್ಸ್ ತಂಡಕ್ಕೆ ಅಭಿನಂದನೆಗಳು” ಎಂದು ಹೇಳಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ ೪೫ ಮಂದಿ ವಿದ್ಯಾರ್ಥಿಗಳು ಪೌರಕಾರ್ಮಿಕರ ಜೊತೆಗೂಡಿ ಶಾಮಣ್ಣಬಾವಿಯಲ್ಲಿ ಬೆಳೆದಿದ್ದ ಗಿಡಗಂಟೆಗಳು, ಕಳೆಗಿಡಗಳು ಹಾಗೂ ತ್ಯಾಜ್ಯವನ್ನು ಹೊರಕ್ಕೆ ಹಾಕಿದರು.
ತಹಶೀಲ್ದಾರ್ ಎಂ.ದಯಾನಂದ್, ಪೌರಾಯುಕ್ತ ಶ್ರೀಕಾಂತ್, ನಗರಸಭೆ ಸದಸ್ಯರಾದ ಮಂಜುನಾಥ್, ಅನಿಲ್ ಕುಮಾರ್, ಮಂಜುನಾಥ್, ನಗರಸಭೆ ಸಿಬ್ಬಂದಿ, ಪೌರಕಾರ್ಮಿಕರು, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಆಯುಕ್ತ ಪ್ರಕಾಶ್, ಪ್ರೊ.ಮುರಳಿ ಆನಂದ್, ಪ್ರೊ.ರಾಮಚಂದ್ರರೆಡ್ಡಿ, ವೆಂಕಟೇಶ್ ಹಾಜರಿದ್ದರು.
ಗಾಂಧೀಜಿಯವರ 150ನೇ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ 115ನೇ ಜನ್ಮದಿನಾಚರಣೆ
ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಬುಧವಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ೧೫೦ನೇ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ೧೧೫ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಗಾಂಧೀಜಿ ಮತ್ತು ಶಾಸ್ತ್ರೀಜಿಯವರಿಂದ ನಾವು ಕಲಿಯಬೇಕಾದದ್ದು ಸರಳತೆ, ಸತ್ಯ, ನಮ್ಮ ಕೆಲಸ ನಾವೇ ಮಾಡುವುದು, ಸ್ವಚ್ಛತೆ, ಪಾರದರ್ಶಕತೆ, ಸಮಾಜಕ್ಕಾಗಿ ಸರ್ವಸ್ವ ತ್ಯಾಗ ಮಾಡುವ ಗುಣಗಳು ಎಂದು ಅವರು ತಿಳಿಸಿದರು.
ಹೇಳಿದ್ದನ್ನೇ ಮಾಡುವುದು, ಮಾಡಿದ್ದನ್ನೇ ಹೇಳುವುದು, ಈ ಒಂದು ವಿಶೇಷ ಗುಣದಿಂದ ಗಾಂಧಿ ಮತ್ತು ಶಾಸ್ತ್ರಿಗಳು ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ಶೀಲವಿಲ್ಲದ ಶಿಕ್ಷಣ ತಪ್ಪು ಎಂದು ಅವರು ಭಾವಿಸಿದ್ದರು. ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರು ನಂಬಿದ್ದ ಜೀವನ ಮೌಲ್ಯಗಳು ಸಾರ್ವಕಾಲಿಕವಾದದ್ದು ಎಂದರು.
ತಹಶೀಲ್ದಾರ್ ಎಂ.ದಯಾನಂದ್ ಮಾತನಾಡಿ, ಶಿಕ್ಷಣದ ಜೊತೆಗೆ ಮಕ್ಕಳಿಗೆ ವಿವಿಧ ರಂಗಗಳ ತರಬೇತಿ ಕೊಡುವುದು, ಸರ್ವಾಂಗೀಣ ಪ್ರಗತಿಯತ್ತ ಮಕ್ಕಳನ್ನು ಕೊಂಡೊಯ್ಯುವುದು ಅತ್ಯಗತ್ಯ ಎಂದು ಗಾಂಧೀಜಿ ನಂಬಿದ್ದರು. ಭಾರತ ನಿಜವಾಗಿಯೂ ಹಳ್ಳಿಗಳ ದೇಶ. ಭಾರತದ ನಿಜವಾದ ಶಕ್ತಿ ಹಳ್ಳಿಯಲ್ಲಿದೆ. ಪ್ರತಿ ಹಳ್ಳಿಯ ಜನರಿಗೂ ಆರೋಗ್ಯ, ಶಿಕ್ಷಣ ಸಿಗಬೇಕು, ನೈರ್ಮಲ್ಯತೆ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು ಎಂಬುದು ಅವರ ಕನಸಾಗಿತ್ತು ಎಂದರು.
ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್ ಮಾತನಾಡಿ, ಗಾಂಧಿ ಸರಳತೆ ಇಂದು ಹಾಸ್ಯಾಸ್ಪದ ವಿಷಯವಾಗಿದೆ. ಉದಾತ್ತ ಚಿಂತನೆಯಲ್ಲಿ ಹೆಚ್ಚು ಪ್ರಾಮುಖ್ಯತೆ ಇದೆಯೆ ಹೊರತು, ಆಡಂಬರದ ಜೀವನದಲ್ಲಿ ಅಲ್ಲ ಎಂದು ಅವರು ಪ್ರತಿಪಾದಿಸುತ್ತಿದ್ದರು. ಗಾಂಧಿಯವರದು ನೂರಕ್ಕೆ ನೂರರಷ್ಟು ಆದರ್ಶಮಯ ಬದುಕು. ಅವರ ಎತ್ತರಕ್ಕೆ ಮುಟ್ಟಲಾಗುವುದಿಲ್ಲ. ಆದರೆ ಅವರ ಕಲ್ಪನೆಗಳಾದ ಸತ್ಯ, ಅಹಿಂಸೆ ಮತ್ತು ಕರ್ಮವನ್ನು ಕುರಿತು ಚಿಂತಿಸಿದರೆ ಆಗುವ ಪ್ರಯೋಜನಗಳು ಹಲವಾರು. ಗಾಂಧಿಯವರು ಹೇಳಿದ ಸ್ವಕರ್ಮ ಮತ್ತು ಸ್ವಾವಲಂಬನೆಯನ್ನ್ನು ಅನುಷ್ಠಾನಕ್ಕೆ ತಂದರೆ, ದೇಶ ರಾಮರಾಜ್ಯವಾಗುತ್ತದೆ ಎಂದರು.
ಮುಖ್ಯಭಾಷಣಕಾರರಾದ ಡಾ.ರಾಮಯ್ಯ, ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಜೀವನ ಸಾಧನೆ ಬದುಕಿನ ಬಗ್ಗೆ ವಿವರವಾಗಿ ತಿಳಿಸಿದರು. ಕಾರ್ಯಕ್ರಮದ ಮುನ್ನ ತಾಲ್ಲೂಕು ಕಚೇರಿ ಆವರಣದಲ್ಲಿ ಗಣ್ಯರು ಗಿಡವನ್ನು ನೆಟ್ಟರು. ಭಗವದ್ಗೀತೆ, ಬೈಬಲ್ ಮತ್ತು ಕುರಾನ್ ಪಠಣ ಮಾಡಲಾಯಿತು. ಪ್ಲಾಸ್ಟಿಕ್ ಬಳಕೆ ತ್ಯಜಿಸುವ ಮತ್ತು ತ್ಯಾಜ್ಯ ನಿರ್ಮೂಲನೆಗೆ ಸಹಕರಿಸುವ ಬಗ್ಗೆ ಕಾರ್ಯಕ್ರಮದಲ್ಲಿದ್ದವರಿಗೆಲ್ಲಾ ಪ್ರತಿಜ್ಞಾ ವಿಧಿ ಭೋದಿಸಲಾಯಿತು.
ನಗರಸಭೆ ಪೌರಾಯುಕ್ತ ಶ್ರೀಕಾಂತ್, ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಸರ್ಕಲ್ ಇನ್ಸ್ ಪೆಕ್ಟರ್ ಆನಂದ್, ನಗರಸಭೆ ಸದಸ್ಯರಾದ ಮಂಜುನಾಥ್, ಅನಿಲ್ ಕುಮಾರ್, ಮಂಜುನಾಥ್ ಹಾಜರಿದ್ದರು.
ಗಾಂಧಿ ಜಯಂತಿ ಅಂಗವಾಗಿ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ
ನಗರದ ಸ್ತ್ರೀಶಕ್ತಿ ಭವನದಲ್ಲಿ ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ಗಾಂಧಿ ಜಯಂತಿ ಅಂಗವಾಗಿ ೫ ರಿಂದ ೧೬ ವರ್ಷದೊಳಗಿನ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
೫ ರಿಂದ ೮ ವರ್ಷ : ಮಳ್ಳೂರು ಸ್ವಾಮಿ ವಿವೇಕಾನಂದ ಶಾಲೆಯ ಕಾವ್ಯಗೌಡ (ಪ್ರಥಮ), ಸರಸ್ವತಿ ವಿದ್ಯಾಸಂಸ್ಥೆಯ ಸೈಯದ್ ಫೈಜಾನ್ (ದ್ವಿತೀಯ);
೯ ರಿಂದ ೧೨ ವರ್ಷ : ಡಾಲ್ಫಿನ್ ಶಾಲೆಯ ವಿ.ಹರ್ಷಿತ್ (ಪ್ರಥಮ), ಡಾಲ್ಫಿನ್ ಶಾಲೆಯ ಎಸ್.ಜಯಂತ್ (ದ್ವಿತೀಯ), ಬಿ.ಜಿ.ಎಸ್. ಶಾಲೆಯ ಸಿ.ಎಂ.ಯೋಗೇಶ್ (ತೃತೀಯ) ;
೧೩ ರಿಂದ ೧೬ ವರ್ಷ : ಡಾಲ್ಫಿನ್ ಶಾಲೆಯ ಡಿ.ಎಂ.ಮೋಹನ್ (ಪ್ರಥಮ), ಬಿ.ಜಿ.ಎಸ್ ಶಾಲೆಯ ಎನ್.ಶಿವಮಣಿ (ದ್ವಿತೀಯ), ಬಿ.ಜಿ.ಎಸ್ ಶಾಲೆಯ ಎಸ್.ಎನ್.ಚಂದ್ರಿಕಾ (ತೃತೀಯ) ಸ್ಥಾನ ಪಡೆದರು.
ವಿಜೇತ ಮಕ್ಕಳಿಗೆ ಪ್ರಮಾಣ ಪತ್ರ ಮತ್ತು ನಗದು ಬಹುಮಾನವನ್ನು ವಿತರಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಲಕ್ಷ್ಮೀದೇವಮ್ಮ, ತೀಪುಗಾರರಾಗಿದ್ದ ಚಿತ್ರಕಲಾ ಶಿಕ್ಷಕ ಎಂ.ನಾಗರಾಜ್, ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್, ಡಾಲ್ಫಿನ್ ಶಾಲೆಯ ಕೆ.ಕೆ.ಶೈನ್, ಬಿ.ಜಿ.ಎಸ್ ಶಾಲೆಯ ಸಯ್ಯದ್ ಅಲಿ, ಗಿರಿಜಾಂಬಿಕೆ, ಶಾಂತಜಿಂದ್ರಾಳೆ, ಎಂ.ರಾಧಮ್ಮ, ಸಂದೀಪ್, ಅಂಜದ್ ಹಾಜರಿದ್ದರು.
ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ
ನಗರದ ಚಿಂತಾಮಣಿ ರಸ್ತೆಯಲ್ಲಿರುವ ನಗರಸಭೆ ಉದ್ಯಾನವನದಲ್ಲಿ ನಗರಸಭೆಯಿಂದ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ತಹಶೀಲ್ದಾರ್ ಎಂ.ದಯಾನಂದ್ ಮಾತನಾಡಿದರು.
ಪೌರ ಕಾರ್ಮಿಕರು ನಗರದ ಜೀವನಾಡಿಗಳಾಗಿದ್ದಾರೆ. ನಗರದಲ್ಲಿ ರೋಗ ರುಜನಿಗಳು ಹರಡದಂತೆ ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಪೌರರ ಆರೋಗ್ಯವನ್ನು ಕಾಪಾಡಲು ಕಾರ್ಯನಿರ್ವಹಿಸುತ್ತಾರೆ ಎಂದು ಅವರು ತಿಳಿಸಿದರು.
ಪೌರ ಕಾರ್ಮಿಕರು ಸಮಾಜದ ಮುಖ್ಯ ವಾಹಿನಿಯೊಂದಿಗೆ ಸಮನಾಗಿ ಸಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆಗಳನ್ನು, ಸೌಲಭ್ಯಗಳನ್ನು ನೀಡುತ್ತಿದೆ. ಇವುಗಳ ಸದುಪಯೋಗ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕು. ನಗರದ ಸ್ವಚ್ಛತೆಯನ್ನು ಕಾಪಾಡುವ ಪೌರಕಾರ್ಮಿಕರ ಸೇವೆ ಗಮನಾರ್ಹವಾದುದು, ಅವರನ್ನು ಗೌರವದಿಂದ ಕಾಣಬೇಕು ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಸಮಾಜದಲ್ಲಿ ಸ್ವಚ್ಛತೆ ಕಾಪಾಡಲು ಶ್ರಮಿಸುವ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ನೀಡಬೇಕು. ಇಂದು ಶ್ರಮಿಕ ವರ್ಗದ ಹಲವು ಜನರು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಹೀಗಾದರೆ ಕೇವಲ ಆರೋಗ್ಯಕ್ಕೊಂದೇ ಹಾನಿಯಾಗದೆ ಇಡೀ ಸಮಾಜ ಅಸ್ವಸ್ಥವಾಗುವ ಆತಂಕ ಇದೆ. ಕಾರಣ ದುಶ್ಚಟಗಳಿಂದ ಮುಕ್ತವಾಗಬೇಕಾದ ಅವಶ್ಯಕತೆ ಇದೆ. ತಮ್ಮ ನಿತ್ಯ ಕಾರ್ಯದಲ್ಲಿ ಸುರಕ್ಷತಾ ಸಾಧನಗಳನ್ನು ಧರಿಸಿ ಕೆಲಸ ಮಾಡಬೇಕು ಎಂದು ಹೇಳಿದರು.
ನಿವೃತ್ತ ಪೌರಕಾರ್ಮಿಕ ಬ್ಯಾಟಪ್ಪ, ಪೌರಕಾರ್ಮಿಕರಾದ ಚಿನ್ನಮ್ಮ, ಸರೋಜಮ್ಮ, ಯಲ್ಲಮ್ಮ, ನಾಗರಾಜ್, ನಾರಾಯಣಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ನೀರಿನ ಸಂರಕ್ಷಣೆ ಹಾಗೂ ಮಿತ ಬಳಕೆಯ ಕುರಿತಂತೆ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.
ಸರ್ಕಲ್ ಇನ್ಸ್ ಪೆಕ್ಟರ್ ಆನಂದ್, ಪೌರಾಯುಕ್ತ ಶ್ರೀಕಾಂತ್, ದಿಲೀಪ್, ನಗರಸಭಾ ಸದಸ್ಯರು ಹಾಜರಿದ್ದರು.
ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮಕ್ಕೆ ಚಾಲನೆ
ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತ ಚುನಾವಣಾ ಆಯೋಗ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿಯ ಸಂಯುಕ್ತ ಆಶ್ರಯದಲ್ಲಿ ಸಮಗ್ರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ- 2020 ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಹಶೀಲ್ದಾರ್ ಎಂ.ದಯಾನಂದ್ ಮಾತನಾಡಿದರು.
ಸೆಪ್ಟಂಬರ್ ಒಂದರಿಂದ ಅಕ್ಟೋಬರ್ 30ನೇ ತಾರೀಖಿನವರಿಗೆ ಭಾರತ ಚುನಾವಣಾ ಆಯೋಗ ಸಮಗ್ರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2020 ಕಾರ‍್ಯಕ್ರಮವನ್ನು ಜಾರಿಗೊಳಿಸಿದೆ. ಅದರಂತೆ ಈ ದಿನಗಳಲ್ಲಿ ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಕುಟುಂಬದ ಎಲ್ಲ ಸದಸ್ಯರನ್ನು ಒಳಗೊಂಡ ಮತದಾರರ ಮಾಹಿತಿ ಒಂದೇ ಭಾಗದಲ್ಲಿ ಮತ್ತು ಸ್ಥಳದಲ್ಲಿ ಇರುವಂತೆ ನಿಗಾ ವಹಿಸಲಾಗುತ್ತದೆ. ಮನೆ ಸಂಖ್ಯೆ ನಮೂನೆ -7 ಮೂಲಕ ಒಂದಕ್ಕಿಂತ ಹೆಚ್ಚಿನ ನೋಂದಣಿ ಇದ್ದರೆ ತೆಗೆದುಹಾಕುವುದು, ಮರಣವಾಗಿದ್ದರೆ ಅಥವಾ ಕಾಯಂ ಆಗಿ ಸ್ಥಳಾಂತರಗೊಂಡಿದ್ದರೆ ಹೆಸರು ತೆಗೆದುಹಾಕುವುದು. ಅರ್ಹರೆಲ್ಲರು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗುವಂತೆ ನೋಡಿಕೊಳ್ಳುವುದು ಇದರ ಗುರಿ ಎಂದರು.
ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ, ಫೋಟೋ ಅದಲು-ಬದಲು, ತೆಗೆದು ಹಾಕುವಿಕೆ, ವಿಳಾಸ ಬದಲಾವಣೆ ಸೇರಿದಂತೆ ಮತದಾರರ ಚೀಟಿಯಲ್ಲಿನ ಲೋಪದೋಷಗಳನ್ನು ವಿಶೇಷ ಪರಿಷ್ಕರಣೆ ಮೊಬೈಲ್ ಆಪ್ ಮುಖಾಂತರ ಮಾಡುವುದನ್ನು ಈ ಸಂದರ್ಭದಲ್ಲಿ ಉಪನ್ಯಾಸಕ ಡಾ.ರಘು ಕಾಲೇಜಿನ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಚಂದ್ರನಾಯ್ಕ್, ಮುನಿರಾಜು, ಸುಂದರಾಚಾರಿ ಹಾಜರಿದ್ದರು.
ಇಸ್ರೋ ವಿಜ್ಞಾನಿಗಳಿಗೆ ಪತ್ರ ಬರೆದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು
ಚಂದ್ರಯಾನ 2ರ ಕಕ್ಷಾಗಾಮಿ (ಆರ್ಬಿಟರ್) ಉತ್ತಮವಾಗಿದ್ದು, ಅದಕ್ಕೆ ನಿಯೋಜಿಸಿದ್ದ ಪ್ರಯೋಗಗಳಲ್ಲಿ ನಿರತವಾಗಿದೆ. ಇಸ್ರೋ ವಿಜ್ಞಾನಿಗಳ ಸಾಧನೆಯ ಬಗ್ಗೆ ಜಗತ್ತೇ ಕೊಂಡಾಡುತ್ತಿದೆ. ದೇಶ ವಿದೇಶಗಳಿಂದ ಇಸ್ರೋ ವಿಜ್ಞಾನಿಗಳಿಗೆ ಬೆಂಬಲ ಶುಭಾಶಯಗಳನ್ನು ತಿಳಿಸಿದ್ದಾರೆ.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನಾವೂ ಕೂಡ ಇಸ್ರೋ ವಿಜ್ಞಾನಿಗಳಿಗೆ ಶುಭಾಶಯ ತಿಳಿಸುತ್ತೇವೆಂದು ಶಿಕ್ಷಕರಿಗೆ ತಿಳಿಸಿ, ಪತ್ರಗಳನ್ನು ಬರೆದಿದ್ದಾರೆ.
“ನಿಮ್ಮ ಮುಂದಿನ ಯೋಜನೆಗಳು ಕೂಡ ಯಶಸ್ವಿಯಾಗಲಿ, ನಮ್ಮ ದೇಶದ ಕೀರ್ತಿ ಪ್ರಪಂಚಕ್ಕೆ ಹರಡಲಿ, ನಮ್ಮ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಇಡೀ ಪ್ರಪಂಚ ತಿರುಗಿ ನೋಡುವಂತಾಗಲಿ” ಎಂದು ಮಕ್ಕಳು ಹಾರೈಸಿದ್ದಾರೆ. ಏಳನೇ ತರಗತಿಯ ಪವನ್, ಮೋಹಿತ್, ವರ್ಷಿತ, ಸ್ಪೂರ್ತಿ ತಮ್ಮ ಎಲ್ಲಾ ಸ್ನೇಹಿತರನ್ನೂ ಹುರಿದುಂಬಿಸಿ ಪತ್ರ ಬರೆದಿದ್ದಾರೆ” ಎಂದು ಮುಖ್ಯಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ ತಿಳಿಸಿದರು.
“ಒಬ್ಬೊಬ್ಬ ವಿದ್ಯಾರ್ಥಿಯೂ ವಿಭಿನ್ನವಾಗಿ ತಮ್ಮ ಅನಿಸಿಕೆಗಳನ್ನು ಪತ್ರದಲ್ಲಿ ಬರೆದಿದ್ದಾರೆ. ಚಂದ್ರಯಾನ 2ರ ರಾಕೆಟ್ ಉಡಾವಣೆಯನ್ನು ದೂರದರ್ಶನದಲ್ಲಿ ನೋಡಿದ್ದ ಮಕ್ಕಳು ಆಗ ಅನುಭವಿಸಿದ್ದ ಕಾತರ, ಆತಂಕದ ಕ್ಷಣಗಳು, ಆ ಸಂದರ್ಭದಲ್ಲಿ ಅವರ ಮನಸ್ಸಿನ ಭಾವನೆಗಳು, ಪ್ರಶ್ನೆಗಳನ್ನೆಲ್ಲಾ ಅಭಿವ್ಯಕ್ತಿಸಿದ್ದಾರೆ. ವಿಜ್ಞಾನ ಕ್ಷೇತ್ರದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿದೆ. ಹಲವರಿಗೆ ವಿಜ್ಞಾನಿಗಳಾಗುವ ಕನಸು ಹುಟ್ಟಿದೆ” ಎಂದು ಶಿಕ್ಷಕ ಚಾಂದ್ ಪಾಷ ಸಂತಸವನ್ನು ವ್ಯಕ್ತಪಡಿಸಿದರು.
ಪ್ರಪಂಚವೇ ನಮ್ಮತ್ತ ನೋಡುವಂತೆ ಮಾಡಿರುವ ನಿಮಗೆ ಸಾವಿರ ಸಾವಿರ ಚಪ್ಪಾಳೆ ಎಂದೊಬ್ಬರು ಬರೆದಿದ್ದರೆ. ನಮ್ಮ ದೇಶದ ಪ್ರತಿಯೊಬ್ಬ ನಾಗರಿಕರೂ ನಿಮ್ಮ ಬಗ್ಗೆ ಹೆಮ್ಮೆ ಪಡಬೇಕು ಎಂದೊಬ್ಬರು ಬರೆದಿದ್ದಾರೆ. ನಿಮ್ಮನ್ನು ಸದಾ ನಾವು ಬೆಂಬಲಿಸುತ್ತೇವೆ ಎಂದು ತಮ್ಮ ಮುಗ್ದ ಮನಸ್ಸಿನ ಪದಗಳಲ್ಲಿ ಮಕ್ಕಳು ಪತ್ರಗಳನ್ನು ಬರೆದಿದ್ದಾರೆ
ಶಿಕ್ಷಕರಾದ ಎಂ.ಸುಜಾತ ಮತ್ತು ಎಂ.ಭಾರತಿ ಹಾಜರಿದ್ದರು.
ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ
ಹಂಡಿಗನಾಳ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಶುಕ್ರವಾರ ಹಂಡಿಗನಾಳ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ೨೦೧೮-೧೯ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಮಹಿಳೆಯರು ಒಗ್ಗೂಡಿದರೆ ಅಸಾಧ್ಯವನ್ನು ಸಾಧ್ಯವಾಗಿಸಬಹುದು ಎಂಬುದಕ್ಕೆ ಹಂಡಿಗನಾಳದ ಹಾಲು ಉತ್ಪಾದಕರ ಸಂಘ ಉದಾಹರಣೆಯಾಗಿದೆ. ಸಂಪೂರ್ಣ ಮಹಿಳೆಯರಿಂದಲೇ ನಿರ್ವಹಿಸಲ್ಪಡುವ ಈ ಸಂಘದ ಸಾಧನೆಗೆ ಕೆ.ಎಂ.ಎಫ್ ನಿಂದ ಜಿಲ್ಲಾಮಟ್ಟದ ಪ್ರಶಸ್ತಿ ನೀಡಿ ಗೌರವಿಸಿರುವುದು ಅಭಿನಂದನಾರ್ಹ ಎಂದು ಅವರು ತಿಳಿಸಿದರು.
ಡಿಸಿಸಿ ಬ್ಯಾಂಕ್ ಮುಖಾಂತರ ಮಹಿಳೆಯರಿಗೆ ಬಡ್ಡಿರಹಿತ ಸಾಲವನ್ನು ಕೊಡಿಸಿಕೊಡುತ್ತೇನೆ. ಗುಣಮಟ್ಟದ ಹಾಲನ್ನು ಡೈರಿಗೆ ನೀವು ಸರಬರಾಜು ಮಾಡಿ. ಈಗಾಗಲೇ ಸಂಘದಿಂದ ಹೆಚ್ಚು ಹಣವನ್ನು ಉಳಿತಾಯ ಮಾಡಿ ಸುಮಾರು ೭೫ ಲಕ್ಷ ರೂ ವೆಚ್ಚದಲ್ಲಿ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡುತ್ತಿದ್ದು, ನನ್ನ ಅನುದಾನದಿಂದಲೂ ಈಗಾಗಲೇ ವಾಗ್ದಾನ ಮಾಡಿರುವಂತೆ ಹಣ ನೀಡುತ್ತೇನೆ. ರಾಜ್ಯಕ್ಕೇ ಮಾದರಿಯಾಗುವಂತೆ ಹಾಲಿನ ಡೈರಿಯನ್ನು ಅಭಿವೃದ್ಧಿಗೊಳಿಸಿ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯ ಜಯರಾಮ್, ಹಿರಿಯ ಮುಖಂಡರಾದ ಎಂ.ನರಸಿಂಹಮೂರ್ತಿ, ನಾಗಪ್ಪನವರ ಶೀನಪ್ಪ ಹಂಡಿಗನಾಳ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಸುಜಾತಮ್ಮ ವಿ.ನಾಗರಾಜ್, ನಿರ್ದೇಶಕರಾದ ಬೈರಮ್ಮ, ಮುನಿರತ್ನಮ್ಮ, ಎಸ್.ಎಮ್.ಕಲ್ಪನ, ಅನಿತಾ, ಪಾರಿಜಾತ, ಮಂಜುಳಮ್ಮ, ಅನಿತಾ ಪ್ರಕಾಶ್, ಚಿಕ್ಕಮ್ಮ, ಜಯಮ್ಮ, ವೆಂಕಟಲಕ್ಷ್ಮಮ್ಮ, ಸಿಬ್ಬಂದಿ ರೂಪಮ್ಮ, ನಾಗವೇಣಿ, ಲಕ್ಷ್ಮಮ್ಮ, ಮುನಿನರಸಮ್ಮ, ಡೀಸಿಸಿ ಬ್ಯಾಂಕ್ ವ್ಯವಸ್ಥಾಪಕಿ ಗುಲಾಬ್ ಜಾನ್, ವಿಸ್ತರಣಾಧಿಕಾರಿ ನರಸಿಂಹಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿಶ್ವಕರ್ಮರು ಈ ಮಣ್ಣಿನ ದೇಸಿ ವಿಜ್ಞಾನಿಗಳು
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಹಾಗೂ ನಾಡಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವದಲ್ಲಿ ಗ್ರೇಡ್ ೨ ತಹಶೀಲ್ದಾರ್ ಹನುಮಂತರಾವ್ ಮಾತನಾಡಿದರು.
ಸಮಾಜದ ಸಮಗ್ರ ಅಭಿವೃದ್ಧಿಗಾಗಿ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರವಾದದ್ದು. ಜೀವನದ ಎಲ್ಲ ಹಂತದಲ್ಲಿಯೂ ಪ್ರತಿಯೊಬ್ಬರಿಗೂ ವಿಶ್ವಕರ್ಮರ ಸಹಕಾರ ಬೇಕೇ ಬೇಕು. ಮನೆ ಕಟ್ಟುವುದು, ಕೃಷಿ ಸೇರಿದಂತೆ ಎಲ್ಲ ರಂಗದಲ್ಲೂ ಅವರ ಅಗತ್ಯವಿದೆ ಎಂದು ಅವರು ತಿಳಿಸಿದರು.
ಮದುವೆ ಸಮಾರಂಭಗಳಲ್ಲಿ ವಧು ವರನಿಗೆ ಆಭರಣ ಹಾಗೂ ರೈತರ ಕಾರ್ಯಗಳಿಗೆ ಬೇಕಾದ ಉಪಕರಣಗಳನ್ನು ಸಿದ್ಧ ಮಾಡಿಕೊಡುವಲ್ಲಿ ಶತಮಾನಗಳಿಂದ ವಿಶ್ವಕರ್ಮ ಸಮುದಾಯದವರು ಶ್ರಮಿಸಿದ್ದಾರೆ ಎಂದರು.
ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಗೌರವಾಧ್ಯಕ್ಷ ಕೆ.ಎನ್.ಜನಾರ್ಧನಮೂರ್ತಿ ಮಾತನಾಡಿ, ಕರಕುಶಲ ಜ್ಞಾನವನ್ನು ಹೊಂದಿರುವ ವಿಶ್ವಕರ್ಮ ಸಮುದಾಯಕ್ಕೆ ಮೂರುವರೆ ಸಾವಿರ ವರ್ಷಗಳ ಇತಿಹಾಸವಿದೆ. ವಿಶ್ವಕರ್ಮರು ಈ ಮಣ್ಣಿನ ದೇಸಿ ವಿಜ್ಞಾನಿಗಳು. 1650 ವರ್ಷಗಳ ಹಿಂದೆ, ಅಂದರೆ ಕ್ರಿ.ಶ.250ರಲ್ಲೇ ಶಿಕಾರಿಪುರದಲ್ಲಿ ದೊರೆತ ಶಾಸನವೊಂದರಲ್ಲಿ ವಿಶ್ವಕರ್ಮರ ಬಗ್ಗೆ ಉಲ್ಲೇಖಿಸಲಾಗಿದೆ ಎಂದರು.
ಈ ಸಮುದಾಯವನ್ನು ಪಂಚಶಾಲಾ ಕೆಲಸಗಾರರೆಂದು ಬಣ್ಣಿಸಲಾಗಿದೆ. ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿರುವ ವಿಶ್ವಕರ್ಮರು ಶ್ರಮ ಸಂಸ್ಕೃತಿ ಹರಿಕಾರರು. ಕರಕುಶಲತೆಯಿಂದ ಕೆಲಸ ಮಾಡುವುದೇ ಒಂದು ಯೋಗ ಎಂದರಿತಿರುವ ವಿಶ್ವಕರ್ಮರು ಈ ದೇಶದ ಆಸ್ತಿ ಆಗಿದ್ದಾರೆ. ನಮ್ಮಲ್ಲಿರುವ ದೇಗುಲಗಳ ವಿನ್ಯಾಸ, ಶೈಲಿ, ದೇವರ ವಿಗ್ರಹಗಳ ವೀಕ್ಷಣೆಗೆಂದೇ ವಿದೇಶಿಯರು ಭಾರತಕ್ಕೆ ಭೇಟಿ ಕೊಡುತ್ತಾರೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಸಮುದಾಯ ಕಾರಣವಾಗಿದೆ. ಆ ಮೂಲಕ ಬೊಕ್ಕಸದ ಸಂಪನ್ಮೂಲ ಸಂಗ್ರಹಕ್ಕೆ ವಿಶ್ವಕರ್ಮರ ಪಾತ್ರ ಪ್ರಮುಖವಾಗಿದೆ ಎಂದರು.
ಪತ್ರಕರ್ತ ರೂಪಸಿ ರಮೇಶ್ ಮಾತನಾಡಿದರು. ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗಿಡಗಳನ್ನು ವಿತರಿಸಲಾಯಿತು.
ಶಿರಸ್ತೆದಾರ್ ಮಂಜುನಾಥ್, ನಗರಸಭೆ ಸದಸ್ಯ ಎಲ್.ಅನಿಲ್ ಕುಮಾರ್, ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಅಮರನಾರಾಯಣಾಚಾರಿ, ಕಾಳಿಕಾಂಭ ಕಮಠೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಮುನಿರತ್ನಾಚಾರಿ, ಈಶ್ವರಾಚಾರಿ ಹಾಜರಿದ್ದರು.
ಬಿಜೆಪಿ ಕಾರ್ಯಕರ್ತರಿಂದ ಪ್ರಧಾನಿ ಮೋದಿಯವರ ಹುಟ್ಟುಹಬ್ಬ ಆಚರಣೆ
ಪ್ರಧಾನಿ ನರೇಂದ್ರ ಮೋದಿಯವರ ೬೯ನೇ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಆಶಾ ಕಿರಣ ಅಂದ ಮಕ್ಕಳ ಶಾಲೆಯಲ್ಲಿ ಮಕ್ಕಳೊಂದಿಗೆ ಆಚರಿಸುತ್ತಿದ್ದೇವೆ ಎಂದು ಬಿ.ಜೆ.ಪಿ ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ತಾಲ್ಲೂಕು ಬಿ.ಜೆ.ಪಿ ಯುವಮೋರ್ಚಾ ವತಿಯಿಂದ ಮಂಗಳವಾರ ನಗರದ ಆಶಾಕಿರಣ ಅಂದಮಕ್ಕಳ ಶಾಲೆಯಲ್ಲಿ ಪ್ರದಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಕೇಕ್ ಕತ್ತರಿಸಿ, ಮಕ್ಕಳೊಂದಿಗೆ ಊಟ ಮಾಡಿ ಅವರು ಮಾತನಾಡಿದರು.
ಪ್ರಧಾನಿ ಮೋದಿ ಅವರ ಹುಟ್ಟು ಹಬ್ಬ ಪ್ರಯುಕ್ತ ಸೆಪ್ಟೆಂಬರ್ ೧೪ ರಿಂದ ೧೭ ರವರೆಗೆ ಸೇವಾ ದಿವಸ್ ಆಚರಣೆ ಮಾಡುತ್ತಿದ್ದು ಅದರ ಅಂಗವಾಗಿ ಬೃಹತ್ ರಕ್ತದಾನ ಶಿಬಿರ, ಶ್ರೀ ಬಸವೇಶ್ವರ ದೇವಾಲಯದಲ್ಲಿ ಸಂಸದ ಮುನಿಸ್ವಾಮಿ ಅವರಿಂದ ಗಿಡ ನೆಡುವ ಕಾರ್ಯಕ್ರಮ, ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಣೆ, ಆಸ್ಪತ್ರೆಯನ್ನು ಸ್ವಚ್ಛತೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಇಂದು ಆಶಾಕಿರಣ ಮಕ್ಕಳ ಶಾಲೆಯಲ್ಲಿ ಕೇಕ್ ಕತ್ತರಿಸಿ ದೇಶದ ನೆಚ್ಚಿನ ಪ್ರಧಾನಿ ಮೋದಿಯವರಿಗೆ ಶುಭ ಕೋರಿ, ಅಂಧ ಮಕ್ಕಳ ಜೊತೆಯಲ್ಲಿ ಊಟ ನಾಡುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಯುವಮೋರ್ಚಾ ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ರವಿಚಂದ್ರ, ದಾಮೋಧರ್, ನಟರಾಜು, ನರೇಶ್, ಆನಂದ್, ಮುರಳಿ, ದೇವರಾಜು, ಮಂಜುನಾಥ್, ನಾಗೇಶ್, ರಾಜು, ಆಶಾಕಿರಣ ಅಂದಮಕ್ಕಳ ಶಾಲೆಯ ಶಿಕ್ಷಕರಾದ ಗೋಪಾಲಪ್ಪ, ಶಾಂತಮ್ಮ ಹಾಜರಿದ್ದರು.
ಎಲ್ಲಾ ಭಾಷೆಗಿಂತ ತಾಯಿ ಭಾಷೆ ದೊಡ್ಡದು
ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ಶಿಡ್ಲಘಟ್ಟ ತಾಲ್ಲೂಕು ಕನ್ನಡ ಸಾರಸ್ವತ ಪರಿಚಾರಿಕೆ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ ಇವರ ಸಹಯೋಗದಲ್ಲಿ ಆಯೋಜಿಸಿದ್ದ 22 ನೇ ತಿಂಗಳ ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ.ಎಚ್.ಗವಿಸಿದ್ದಯ್ಯ ಮಾತನಾಡಿದರು.
ಎಲ್ಲಾ ಭಾಷೆಗಿಂತ ತಾಯಿ ಭಾಷೆ ದೊಡ್ಡದು. ಅದರಲ್ಲಿನ ತಾಯ್ತನದಿಂದ ನಾವು ಭಾವನೆ, ಸ್ಪಂದನೆ, ನೋವು ನಲಿವುಗಳನ್ನು ಶಕ್ತ ರೀತಿಯಲ್ಲಿ ಅಭಿವ್ಯಕ್ತಿಸಲು ಸಾಧ್ಯ ಎಂದು ಅವರು ತಿಳಿಸಿದರು.
ಸೂರ್ಯ ಚಂದ್ರರಿರುವವರೆಗೂ ಸಾಹಿತ್ಯ ಶಾಶ್ವತ. ಚಿರಂತನವಾದ ಈ ಸಾಹಿತ್ಯ ಸೇವೆ ಶ್ರೇಷ್ಠವಾದುದು. ಸಾಹಿತ್ಯದ ಅಭಿರುಚಿಯಿದ್ದರೆ ಮಾನವೀಯತೆ, ಸೌಹಾರ್ಧತೆ, ಎಲ್ಲರನ್ನೂ ಗೌರವಿಸುವ ಮನೋಭಾವ, ವಿನಯಶೀಲತೆ ಮೂಡುತ್ತದೆ. ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಎಲ್ಲೋ ಇರುವ ದೇವರನ್ನು ಪೂಕಿಸುವ ಮುನ್ನ ಪ್ರತ್ಯಕ್ಷ ದೇವರುಗಳಾದ ತಂದೆ ತಾಯಿಗಳನ್ನು ಪ್ರೀತ್ಯಾದರದಿಂದ ಕಾಣಬೇಕು. ಈಗೀಗ ಅವಿಭಕ್ತ ಕುಟುಂಬಗಳು ಹೋಗಿ ವಿಭಕ್ತ ಕುಟುಂಬಗಳಾಗುತ್ತಿವೆ. ಸಂಬಂಧಗಳನ್ನು ಕಡಿದುಕೊಳ್ಳಬಾರದು ಎಂದು ಹೇಳಿದರು.
ನಾಡು ನುಡಿಗೆ ಸಲ್ಲಿಸುವ ಸೇವೆ ನಿಜವಾದ ಸೇವೆ. ನನ್ನ ಊರಿನ ಋಣ ತೀರಿಸಲು, ಆವತಿಯ ಬಗ್ಗೆ ಇತಿಹಾಸದ ಪುಸ್ತಕ ಬರೆದೆ. ಅನೇಕ ಶಿಲಾಶಾಸನಗಳು, ಶಾಸನಗಳ ಬಗ್ಗೆ ಮಾಹಿತಿ ಪಡೆದು, ಹಲವು ವಿಷಯಗಳನ್ನು ಸಂಗ್ರಹಿಸಿ ರಣಭೈರೇಗೌಡರ ಬಗ್ಗೆ ಪುಸ್ತಕ ಬರೆದೆ ಎಂದು ತಮ್ಮ ಸಾಹಿತ್ಯ ಕೃಷಿಯ ಬಗ್ಗೆ ವಿವರಿಸಿ, “ಕನ್ನಡಾಂಬೆ, ಸಜ್ಜನರೇ ಹೀಗೆ, ಪೆನ್ನು, ವಾಲ್ಮೀಕಿ ಮುಂತಾದ ಸ್ವರಚಿತ ಕವನಗಳನ್ನು ಕಾರ್ಯಕ್ರಮದಲ್ಲಿ ವಾಚಿಸಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ದೊಡ್ಡಬಳ್ಳಾಪುರದ ಆರ್.ಎಲ್. ಜಾಲಪ್ಪ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಪ್ರೊ.ಗವಿಸಿದ್ದಯ್ಯ, ಮೂಲತಃ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕೋಳಾಲ ಊರಿನವರು. ಪ್ರಸ್ತುತ ಬುಳ್ಳಹಳ್ಳಿ , ದೇವನಹಳ್ಳಿ ತಾಲ್ಲೂಕಿನಲ್ಲಿ ವಾಸವಿದ್ದಾರೆ. ಅನೇಕ ದಿನಪತ್ರಿಕೆ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳಲ್ಲಿ ಇವರು ಬರೆದ ಕಥೆ, ಕವ, ಚುಟುಕು ಮತ್ತು ಲೇಖನ ಮೊದಲಾದುವುಗಳು ಪ್ರಕಟವಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಪ್ರಕಟನೆಗಳಲ್ಲಿ ಇವರು ಬರೆದ ಕಥೆ ಮತ್ತು ಕವನಗಳು ಪ್ರಕಟವಾಗಿದೆ. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ ವತಿಯಿಂದ ಇವರಿಗೆ “ಸಾಹಿತ್ಯ ವಿಶಾರದ” ಎನ್ನುವ ಬಿರುದು ನೀಡಿ ಗೌರವಿಸಿದೆ. 2003 ರಲ್ಲಿ ವೆಂಕಟಗಿರಿಕೋಟೆಯಲ್ಲಿ ನಡೆದ ದೇವನಹಳ್ಳಿ ತಾಲ್ಲೂಕು 8 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ಎಂದು ಪ್ರೊ.ಗವಿಸಿದ್ದಯ್ಯ ಅವರ ಪರಿಚಯ ಮಾಡಿದರು.
ಸಾಹಿತಿ ಚಂದ್ರಶೇಖರ ಹಡಪದ್ ಮಾತನಾಡಿ, ಸಾಹಿತ್ಯ ಅನ್ನುವುದು ಸಮಕಾಲೀನ ಇತಿಹಾಸವನ್ನು ಸಹ ತಿಳಿಸುತ್ತದೆ. ಸಾಹಿತ್ಯ ಮೂಲಕ ತಿಳಿದುಬರುವ ಇತಿಹಾಸ ಮುಂದಿನ ಪೀಳಿಗೆಗೆ ಮಾರ್ಗದರ್ಶನ ಮಾಡುತ್ತದೆ ಎಂದರು.
ಸಾಹಿತಿಗಳಾದ ಪ್ರೊ.ಗವಿಸಿದ್ದಯ್ಯ ಮತ್ತು ಚಂದ್ರಶೇಖರ ಹಡಪದ್ ತಾವು ಬರೆದ ಪುಸ್ತಕಗಳನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.
ನಿವೃತ್ತ ಶಿಕ್ಷಕ ಸುಂದರನ್, ಶಿಕ್ಷಕ ದೇವರಾಜ್, ಲೋಕೇಶ್, ಮಂಗಳ, ಹುಜಗೂರು ಕೆಂಪೇಗೌಡ, ಬೆಳ್ಳೂಟಿ ರಮೇಶ್, ಚಲನಚಿತ್ರ ನಟ ಸಿ.ಎನ್.ಮುನಿರಾಜು, ಸತೀಶ್, ಗ್ರಂಥಪಾಲಕಿ ಶಂಶಾದ್ ಬೇಗಂ, ಸಹಾಯಕಿ ಭಾಂದವ್ಯ, ವೈಶಾಕ್, ಲಕ್ಷ್ಮೀಕಾಂತ್ , ಮಕ್ಸೂದ್, ಸುದರ್ಶನ್, ಶ್ರೀನಾಥ್ ಹಾಜರಿದ್ದರು.
ಅಪ್ಪೇಗೌಡನಹಳ್ಳಿ ಶಾಲೆಯಲ್ಲಿ “ಪ್ರಥಮ ಚಿಕಿತ್ಸಾ ದಿನ”
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ “ಪ್ರಥಮ ಚಿಕಿತ್ಸಾ ದಿನ” ದ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿರುವ ಔಷಧಿಗಳು ಹಾಗೂ ಅದರ ಬಳಕೆಯನ್ನು ಬಿದ್ದು ಗಾಯ ಮಾಡಿಕೊಂಡ ಮಗುವಿಗೆ ಬ್ಯಾಂಡೇಜ್ ಮಾಡುವ ಮೂಲಕ ಮುಖ್ಯ ಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ ಪ್ರಾತ್ಯಕ್ಷಿಕವಾಗಿ ವಿವರಿಸಿದರು.
ನಮ್ಮ ಸುತ್ತಲ ಪರಿಸರ, ಶಾಲೆ, ಮನೆಗಳಲ್ಲಿ ಹಲವು ಅವಘಡಗಳು ಸಂಭವಿಸುವುದು ಸಾಮಾನ್ಯ. ಇಂಥಹ ಸಂದರ್ಭಗಳಲ್ಲಿ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಅರಿತರೆ ಭಯವೂ ಆಗುವುದಿಲ್ಲ, ಸುಲಭವಾಗಿ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಆಟವಾಡುವಾಗ ಆಯತಪ್ಪಿ ಬಿದ್ದು ಗಾಯ ಮಾಡಿಕೊಳ್ಳುವುದು, ಬಿಸಿ ವಸ್ತುಗಳಿಂದ ಆಗುವ ಚರ್ಮದ ಸುಟ್ಟ ಗಾಯಗಳು ಇವೆಲ್ಲಾ ಆದಾಗ ಹೇಗೆ ಚಿಕಿತ್ಸೆ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದಿರಬೇಕು. ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಒಳಗಿರುವ ವಸ್ತುಗಳ ಬಗ್ಗೆ, ಅವುಗಳನ್ನು ಬಳಕೆ ಮಾಡುವುದು ಹೇಗೆ ಎನ್ನುವ ಬಗ್ಗೆ ಅರಿತಿದ್ದು ಸಂದರ್ಭ ಬಂದಾಗ ಉಪಯೋಗಿಸಲು ಮುಂದಾಗಬೇಕು. ಕೈಕವಚ (ಗ್ಲೌಸು), ಹತ್ತಿ, ಆಂಟಿ ಬಯಾಟಿಕ್ ಮುಲಾಮು, ಆಂಟಿಸೆಪ್ಟಿಕ್ ದ್ರಾವಣ, ವಿವಿಧ ಗಾತ್ರದ ಬ್ಯಾಂಡೇಜ್ಗಳು, ನೋವು ನಿವಾರಣೆಗಳಿಗೆ ಔಷಧಗಳು ಮುಂತಾದವು ಈ ಪೆಟ್ಟಿಗೆಯ ಒಳಗಿರುತ್ತವೆ ಎಂದು ಎಲ್ಲವನ್ನೂ ತೋರಿಸಿ ವಿವರಿಸಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ಗಾಯ ಅಥವಾ ಅವಘಡಗಳಾದಾಗ ನೀವು ಒದಗಿಸುವ ಪ್ರಾಥಮಿಕ ಆರೈಕೆಗೆ “ಪ್ರಥಮ ಚಿಕಿತ್ಸೆ” ಎನ್ನುತ್ತಾರೆ. ಇವು ಜೀವರಕ್ಷಕ ತಂತ್ರವಾಗಿದ್ದು, ತೊಂದರೆಯಿಂದ ಪಾರು ಮಾಡುವ ಮೊದಲ ಹೆಜ್ಜೆಯಾಗಿದೆ. ಸಾಮಾನ್ಯವಾಗಿ ಶಾಲೆಗಳಲ್ಲಿ, ಸಾರ್ವಜನಿಕ ವಾಹನಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಿರುತ್ತದೆ. ತುರ್ತು ಸಂದರ್ಭ ಬಂದಾಗ ತಜ್ಞರ ಸಹಾಯದೊಂದಿಗೆ ಅದನ್ನು ಉಪಯೋಗಿಸಿ ಚಿಕಿತ್ಸೆಯನ್ನು ಮಾಡಬಹುದು ಎಂದು ಹೇಳಿದರು.
ಶಿಕ್ಷಕಿಯರಾದ ಭಾರತಿ, ಸುಜಾತ, ಸಿಬ್ಬಂದಿ ವೆಂಕಟಮ್ಮ ಹಾಜರಿದ್ದರು.
ರಾಷ್ಟ್ರೀಯ ಲೋಕ ಅದಾಲತ್
ತಾಲ್ಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು ೫೫೫ ಪ್ರಕರಣಗಳ ಪೈಕಿ ಸುಮಾರು ೧೫೯ ವಿವಾದ ಪೂರ್ವ ವ್ಯಾಜ್ಯಗಳು ಇತ್ಯರ್ಥವಾಗಿದೆ.
ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರು, ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಅದಾಲತ್‌ನಲ್ಲಿ ವಿವಿಧ ರೀತಿ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಲಾಯಿತು.
ಅದಾಲತ್‌ನಲ್ಲಿ ಸುಮಾರು ೧೩೯ ಕ್ರಿಮಿನಲ್ ಪ್ರಕರಣಗಳೂ ಸೇರಿದಂತೆ ೨೦ ಸಿವಿಲ್ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು. ಈ ಪೈಕಿ ೧೪ ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಒಟ್ಟು ೨೬ ಲಕ್ಷ ೫೪ ಸಾವಿರದಷ್ಟು ಹಣ ಪಾವತಿಸಲು ಅದಾಲತ್‌ನಲ್ಲಿ ಸೂಚಿಸಲಾಯಿತು.
ತಾಲ್ಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ, ಸಿವಿಲ್ ನ್ಯಾಯಾಧೀಶರಾದ ಸಂಜುಕುಮಾರ್ ಎ ಪಚ್ಚಾಪುರೆ, ಸಿವಿಲ್ ನ್ಯಾಯಾಧೀಶರಾದ ಡಿ.ರೋಹಿಣಿ, ಸಂದಾನಕಾರ ವಕೀಲರಾದ ವಿ.ಸುಬ್ರಮಣ್ಯಪ್ಪ, ಜೆ.ವೆಂಕಟೇಶ್, ಆರ್.ವಿ.ವೀಣಾ, ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಎಂ.ಬಿ.ಲೋಕೇಶ್, ನ್ಯಾಯಾಲಯದ ಶಿರಸ್ತೇದಾರ್ ಮಧುಸೂದನ್, ವಕೀಲರಾದ ವಿ.ಎಂ.ಬೈರಾರೆಡ್ಡಿ, ಎಸ್.ಕೆ.ನಾಗರಾಜ್, ಸಿ.ಜಿ.ಬಾಸ್ಕರ್, ಯೋಗಾನಂದ, ಎಸ್.ಅಶೋಕ್, ಸಿ.ಲಕ್ಷ್ಮಮ್ಮ ಹಾಜರಿದ್ದರು.
ತಾಲ್ಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟ
ನಗರದ ನೆಹರೂ ಕ್ರೀಡಾಂಗಣದಲ್ಲಿ ಶುಕ್ರವಾರ ೨೦೧೯ – ೨೦ನೇ ಸಾಲಿನ ತಾಲ್ಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿದರು.
ದೈಹಿಕ ಮತ್ತು ಮಾನಸಿಕ ನೆಮ್ಮದಿಗೆ ಕ್ರೀಡೆ ಅವಶ್ಯಕ. ಕೇವಲ ಬಹುಮಾನ ಗೆಲ್ಲಲು ಅಲ್ಲ, ಕ್ರೀಡಾ ಮನೋಭಾವ ಮೂಡಿಸಲು ಈ ಕ್ರೀಡಾಕೂಟ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಮನುಷ್ಯನ ಜೀವನದಲ್ಲಿ ದೈಹಿಕ ಆರೋಗ್ಯ ಮುಖ್ಯ. ದೈಹಿಕವಾಗಿ ಆರೋಗ್ಯವಂತನಾದ ವ್ಯಕ್ತಿ ಜೀವನದಲ್ಲಿ ಯಾವುದೇ ಗುರಿ ಸಾಧಿಸಬಲ್ಲ. ಇದಕ್ಕೆ ಮುಖ್ಯವಾಗಿ ಕ್ರೀಡೆ, ವ್ಯಾಯಾಮ, ಯೋಗ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್, ಶಿಕ್ಷಣ ಸಂಯೋಜಕ ಭಾಸ್ಕರ್ ಗೌಡ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆಂಜನೇಯ, ಬಿ.ಆರ್.ಸಿ ಸಮನ್ವಯಾಧಿಕಾರಿ ತ್ಯಾಗರಾಜು, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸುಬ್ಬಾರೆಡ್ಡಿ, ನಿವೃತ್ತ ದೈಹಿಕ ಶಿಕ್ಷಕರಾದ ಶ್ರೀನಿವಾಸ್, ಅಶ್ವತ್ಥನಾರಾಯಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ಮುನಿರಾಜು, ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಪುಟ್ಟಪ್ಪ, ಶಿಕ್ಷಕ ಎಚ್.ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು.
ತಾಲ್ಲೂಕಿನ ವಿವಿಧ ಶಾಲೆಗಳ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.
ದೈಹಿಕ ಶಿಕ್ಷಣ ಪರಿವೀಕ್ಷಕ ಎಚ್.ಎಂ.ರಂಗನಾಥ್, ಅಗಜಾನನಮೂರ್ತಿ ಹಾಜರಿದ್ದರು.
ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವ ಕಾರ್ಯಕ್ರಮ
ನಗರದ ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ತಾಲ್ಲೂಕು ಆಡಳಿತದಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ತಹಶಿಲ್ದಾರ್ ಎಂ.ದಯಾನಂದ್ ಮಾತನಾಡಿದರು.
ಭರತ ಖಂಡವು ಕಂಡ ಮಹಾನ್ ದಾರ್ಶನಿಕರಾದ ಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಆಚರಿಸುವ ಮೂಲಕ ಈ ಮಹಾನ್ ಧಾರ್ಮಿಕ ಚಿಂತಕ, ಸಮಾಜ ಸುಧಾರಕರಿಗೆ ಗೌರವ ಸಲ್ಲಿಸುತ್ತಿದ್ದೇವೆ. 19ನೆಯ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ಬದುಕಿ ಹೋದ ಮಹಾನ್ ಸಂತರಾದ ನಾರಾಯಣ ಗುರುಗಳ ಬದುಕು ಸದಾ ಪ್ರೇರಣಾದಾಯಕ ಎಂದು ಅವರು ತಿಳಿಸಿದರು.
ನಾರಾಯಣ ಗುರುಗಳು ಕೇರಳದ ತಿರುವನಂತಪುರದ ಹತ್ತಿರದ ಹಳ್ಳಿಯ ಅಂದು “ಅಸ್ಪೃಶ್ಯ” ಎಂದು ಪರಿಗಣಿಸಲ್ಪಟ್ಟಿದ್ದ ಈಳವ ಸಮುದಾಯದಲ್ಲಿ ಜನಿಸಿದ್ದರೂ, ಮುಂದೆ ಇಡೀ ಕೇರಳದ ಲಕ್ಷಾಂತರ ಜನರ ಬದುಕಿನಲ್ಲಿ ದೊಡ್ಡ ಬದಲಾವಣೆಯನ್ನೇ ತಂದರು. ನಾರಾಯಣ ಗುರುಗಳು ನಡೆಸಿದ ಸುಧಾರಣಾ ಕಾರ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಎಲ್ಲೆಲ್ಲಿ ದೇವಸ್ಥಾನಗಳನ್ನು ಸ್ಥಾಪಿಸಲಾಗುತ್ತದೆಯೋ ಅಲ್ಲಿ ಗ್ರಂಥಾಲಯಗಳಿರಬೇಕು, ಹತ್ತಿರದಲ್ಲಿ ಶಾಲೆಗಳನ್ನು ತೆರೆಯಬೇಕು. ಜ್ಞಾನಾರ್ಜನೆಗೆ ಅವಕಾಶವಿರಬೇಕು. ಆದ್ಯಾತ್ಮಿಕ ತಿಳಿವಳಿಕೆ ನೀಡಬೇಕು. ಜನರನ್ನು ಕಂದಾಚಾರಗಳಿಂದ ಹೊರತರಬೇಕು. ಮದುವೆಗಳನ್ನು ಸರಳವಾಗಿ ನಡೆಸಲು ಪ್ರೇರೇಪಿಸಬೇಕು, ಮುಂತಾಗಿ ಅನೇಕ ಸುಧಾರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು ಎಂದು ವಿವರಿಸಿದರು.
ಕೆಳ ಜಾತಿಯವರಿಗಾಗಿಯೇ ರಾತ್ರಿ ಶಾಲೆಗಳನ್ನು ತೆರೆದರು. ಇದರ ಪರಿಣಾಮವಾಗಿ ಒಂದು ಶಿಕ್ಷಣ ಕ್ರಾಂತಿಯೇ ನಡೆದು ಹೋಯಿತು. ಅನೇಕ ಬಗೆಯ ಸ್ವಯಂ ಉದ್ಯೋಗಗಳನ್ನು ನಡೆಸಲು ಪ್ರೇರೇಪಿಸಿದರು. ನಾರಾಯಣ ಗುರುಗಳು ಒಬ್ಬ ಆಧ್ಯಾತ್ಮಿಕ ವ್ಯಕ್ತಿಯಾಗಿ ಕಾಣಿಸಿಕೊಂಡರೂ ತಮ್ಮ ಚಿಂತನೆ ಮತ್ತು ಕೆಲಸಗಳ ಮೂಲಕ ತಾವೊಬ್ಬ ಅದ್ವಿತೀಯ ಸಮಾಜ ಸುಧಾರಕೆಂಬುದನ್ನು ಸಾಧಿಸಿ ತೋರಿಸಿದರು. ಕುಸಿದು ಕುಳಿತಿದ್ದ ಜನತೆಯಲ್ಲಿ ಸ್ವಾಭಿಮಾನ ತುಂಬಿದರು, ಅರಿವಿನ ಬೆಳಕು ತೋರಿದರು ಎಂದು ಹೇಳಿದರು.
ಸಾದಲಿ ಎಸ್.ಎನ್.ವೆಂಕಟಾಚಲಪತಿ, ಎಸ್.ಎ.ನಾಗರಾಜು, ನಾಣೆಪ್ಪ, ನವೀನ್ ಕುಮಾರ್, ಎಸ್.ಗೊಲ್ಲಹಳ್ಳಿ ವೆಂಕಟೇಶ್, ದ.ಸಂ.ಸ ಜಿಲ್ಲಾ ಸಂಚಾಲಕ ಮುನಯ್ಯ, ಪೌರಾಯುಕ್ತ ಚಲಪತಿ ಹಾಜರಿದ್ದರು.
ತಾಲ್ಲೂಕು ಮಟ್ಟದ ಶಾಲಾ ಕಾಲೇಜುಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ತಾಲ್ಲೂಕು ಮಟ್ಟದ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಾಲಾ ಕಾಲೇಜುಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ವಿದ್ಯಾರ್ಥಿಗಳ ವ್ಯಕ್ತಿತ್ವದ ಏಳಿಗೆಗೆ ಪೂರಕವಾಗಿ ಮಕ್ಕಳಲ್ಲಿ ಇರುವ ಸುಪ್ತಪ್ರತಿಭೆಯನ್ನು ಹೊರತರುವ ಮತ್ತು ವಿದ್ಯಾರ್ಥಿಗಳ ಕಲಿಕೆಗೆ ಹಾಗೂ ಹೊಸದಾದ ಜೀವನ ಕೌಶಲ್ಯವನ್ನು ಹೊಂದಲು ವೇದಿಕೆಯಾಗಿ ಪ್ರತಿಭಾ ಕಾರಂಜಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ತಿಳಿಸಿದರು.
ಮಕ್ಕಳಲ್ಲಿ ಅಡಗಿರುವ ಜನಪದ ಕಲೆ ಮತ್ತು ಸಂಸ್ಕೃತಿಯನ್ನು ಹೊರಹೊಮ್ಮಿಸುವ ಪ್ರತಿಭಾ ಕಾರಂಜಿ ಕಾರ್ಯಕ್ರಮ ಪ್ರತಿಭಾನ್ವೇಷಣೆಗೆ ಉತ್ತಮ ವೇದಿಕೆಯಾಗಿದೆ. ಗ್ರಾಮಾಂತರ ಮಟ್ಟದಲ್ಲಿ ಪ್ರತಿಭಾವಂತ ಮಕ್ಕಳಿದ್ದು, ಅವರಲ್ಲಿ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕೆಲಸದತ್ತ ಪೋಷಕರು, ಶಿಕ್ಷಕರು ಹೆಚ್ಚು ಶ್ರಮಿಸಬೇಕು ಎಂದರು.
ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ರೂಪಿಸಲು ಪೋಷಕರು ಹಾಗೂ ಶಿಕ್ಷಕರನ್ನು ಪ್ರೋತ್ಸಾಹಿಸುವ ವೇದಿಕೆಯಿದು. ಪಠ್ಯೇತ್ತರ ಚಟುವಟಿಕೆಯ ಜೊತೆಗೆ ಆಟದ ಮೂಲಕ ಪ್ರತಿಭೆಯನ್ನು ಗುರುತಿಸುವ ಮಟ್ಟಕ್ಕೆ ಮಕ್ಕಳ ಜ್ಞಾನವನ್ನು ವೃದ್ದಿಸಲು ಸರ್ಕಾರ ಈ ಕ್ರಮ ತೆಗೆದುಕೊಂಡಿದೆ. ಇದು ವಿದ್ಯಾರ್ಥಿಗಳಿಗೆ ಸದುಪಯೋಗವಾಗಬಲ್ಲದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್, ಪದವಿಪೂರ್ವ ಕಾಲೇಜಿನ ಮುಖ್ಯಶಿಕ್ಷಕ ಆನಂದ್, ಅಕ್ಷರ ದಾಸೋಹ ಆಂಜನಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ಮುನಿರಾಜು, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ, ಎನ್.ಪಿ.ಎಸ್ ತಾಲ್ಲೂಕು ಅಧ್ಯಕ್ಷ ಗಜೇಂದ್ರ, ಸುದರ್ಶನ್, ರವೀಂದ್ರ, ನಾರಾಯಣಸ್ವಾಮಿ, ಪ್ರಕಾಶ್, ಸಾಧಿಕ್ ಪಾಷ, ಸುರೇಶ್, ರಂಗನಾಥ್, ಪಿಳ್ಳಣ್ಣ, ಭಾಸ್ಕರ್‌ಗೌಡ, ತ್ಯಾಗರಾಜು, ಎಲ್.ವಿ.ವೆಂಕಟರೆಡ್ಡಿ ಹಾಜರಿದ್ದರು.
ಆಶಾಕಿರಣ ಅಂಧ ಮಕ್ಕಳ ಶಾಲೆಯಲ್ಲಿ “ದಿ ಗ್ರೇಟ್ ಬಿಲ್ಡ್” ಕಾರ್ಯಕ್ರಮ
ನಗರದ ಆಶಾಕಿರಣ ಅಂಧ ಮಕ್ಕಳ ಶಾಲೆಯಲ್ಲಿ ಗುರುವಾರ ವರೆಜಾನ್ ಮೀಡಿಯ ಮತ್ತು ಮಾನವನ ಅಗತ್ಯಗಳ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ “ದಿ ಗ್ರೇಟ್ ಬಿಲ್ಡ್” ಕಾರ್ಯಕ್ರಮವನ್ನು ಉದ್ಘಾಟಿಸಿ ಸಮಾಜ ವಿಜ್ಞಾನಿ ಹಾಗೂ ಮಾನವನ ಅಗತ್ಯಗಳ ಸಂಶೋಧನಾ ಸಂಸ್ಥೆಯ ಸಂಸ್ಥಾಪಕ ರವೀಂದ್ರನಾಥ್ ಮಾತನಾಡಿದರು.
ಪ್ರತಿಯೊಂದು ಮಗುವೂ ಚೈತನ್ಯಶೀಲವಾಗಿರುತ್ತದೆ. ಕೆಲವು ಮಕ್ಕಳಿಗೆ ಅಂಗ ನ್ಯೂನತೆಯಿರುತ್ತವೆ, ಅಂಥಹ ಮಕ್ಕಳ ಶಕ್ತಿಯನ್ನು ಜಾಗೃತಗೊಳಿಸಿ, ಉತ್ತೇಜಿಸಿ, ಕೌಶಲಗಳನ್ನು ಕಲಿಸಿ ಅವರನ್ನು ಪರಾಧೀನರಾಗದಂತೆ ಮಾಡಬೇಕು ಎಂದು ಅವರು ತಿಳಿಸಿದರು.
ಅಂಧಮಕ್ಕಳಿಗೆ ಈ ದಿನ ಕೆಲವು ಅಗತ್ಯ ವಸ್ತುಗಳಾದ ಟ್ರಂಕ್, ಹೊದಿಕೆಗಳು ಮತ್ತು ಬ್ಯಾಗ್ ಗಳನ್ನು ನೀಡುವ ಜೊತೆಗೆ ವರೆಜಾನ್ ಮೀಡಿಯ ಸಂಸ್ಥೆಯ ತರಬೇತಿ ಪಡೆದ ಕೆಲವು ಉದ್ಯೋಗಿಗಳು ಮಕ್ಕಳಿಗೆ ಕೆಲವಾರು ಕೌಶಲಗಳನ್ನು ಕಲಿಸಲಿದ್ದಾರೆ. ಒಂದು ದಿನ ಮಕ್ಕಳೊಂದಿಗೆ ಬೆರೆತು, ಅವರಿಗೆ ಧ್ವನಿ ಮೂಲಕ ಕಂಪ್ಯೂಟರ್ ಬಳಕೆ, ಮಕ್ಕಳಲ್ಲಿನ ಜೀವನ ಕೌಶಲ್ಯಗಳು, ಸಂವಹನ ಕೌಶಲ್ಯಗಳ ಬೆಳವಣಿಗೆ, ಉಪಕರಣಗಳ ಬಳಕೆ, ಆತ್ಮವಿಶ್ವಾಸ ಹೆಚ್ಚಳ ಮಾಡುವ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದೇವೆ ಎಂದು ವಿವರಿಸಿದರು.
ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಕಾರ್ಯಕ್ರಮ ನಿಯೋಜಕ ಶಾಂತ ಅರಸ್ ಮಾತನಾಡಿ, ಮನುಷ್ಯನಲ್ಲಿ ಒಂದು ಅಂಗ ಊನವಾದರೆ ಮಿಕ್ಕ ಅಂಗಗಳು ಚುರುಕಾಗಿರುತ್ತವೆ. ಆದರೆ ವೈಜ್ಞಾನಿಕವಾಗಿ ಅಂಗವೈಕಲ್ಯವುಳ್ಳ ಮಕ್ಕಳಿಗೆ ಎಳೆಯ ವಯಸ್ಸಿನಿಂದಲೇ ತರಬೇತಿ ನೀಡಿದಲ್ಲಿ ಅವರು ಜೀವನವನ್ನು ಯಾರ ಮೇಲೂ ಅವಲಂಬಿಸದೆ ಬದುಕಬಹುದಾಗಿದೆ. ಈ ನಿಟ್ಟಿನಲ್ಲಿ ತಾಂತ್ರಿಕ ಕೌಶಲ್ಯವುಳ್ಳ ಸಂಸ್ಥೆಯ ಉದ್ಯೋಗಿಗಳು ಬಂದು ಮಕ್ಕಳಿಗೆ ನೆರವಾಗುತ್ತಿರುವುದು ಶ್ಲಾಘನೀಯ ಎಂದರು.
ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ಹಲವು ವರ್ಷಗಳಿಂದ ನಗರದಲ್ಲಿ ಆಶಾಕಿರಣ ಅಂಧಮಕ್ಕಳ ಶಾಲೆಯು ತಾಲ್ಲೂಕಿನ ಹಾಗೂ ನೆರೆಯ ತಾಲ್ಲೂಕುಗಳ ಅಂಧಮಕ್ಕಳಿಗೆ ಬೆಳಕಾಗಿದೆ. ಇಲ್ಲಿನ ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸದಾ ಒಳ್ಳೆಯ ಅಂಕಗಳನ್ನು ಪಡೆದು ಉತ್ತೀರ್ಣರಾಗುತ್ತಾರೆ. ಈ ಮಕ್ಕಳಿಗೆ ವಿವಿಧ ಕೌಶಲಗಳನ್ನು ಕೊಟ್ಟರೆ ಇನ್ನಷ್ಟು ಅವರಿಗೆ ಸಹಾಯಕವಾಗುತ್ತದೆ ಎಂದು ಹೇಳಿದರು.
ಆಶಾಕಿರಣ ಅಂಧಮಕ್ಕಳ ಶಾಲೆಯ ಸಂಚಾಲಕ ಗೋಪಾಲಯ್ಯ, ಸಿಬ್ಬಂದಿ ಶಾಂತಮ್ಮ, ಆಂಜಿನಪ್ಪ, ಮಾನವನ ಅಗತ್ಯಗಳ ಸಂಶೋಧನಾ ಸಂಸ್ಥೆಯ ಸಿಇಒ ಶಾರದಾ, ಅಧ್ಯಕ್ಷ ಶೈಲೇಶ್, ಕಾರ್ಯದರ್ಶಿ ಪಾರ್ಥ, ವರೆಜಾನ್ ಮೀಡಿಯ ವ್ಯವಸ್ಥಾಪಕ ಪ್ರೀತಮ್, ಸುಮಾ, ಪುಷ್ಪಾ ಮತ್ತು ತಂಡ ಹಾಜರಿದ್ದರು.
ಗೃಹಪ್ರವೇಶಕ್ಕೆ ಹೆಲ್ಮೆಟ್ ಉಡುಗೊರೆಯಾಗಿ ನೀಡಿದ ಅಪ್ಪೇಗೌಡನಹಳ್ಳಿ ಯುವಕರು
ಸಾರಿಗೆ ನಿಯಮ ಪಾಲನೆಗೆ ದುಬಾರಿ ದಂಡ ವಿಧಿಸುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಯುವಕರು ತಮ್ಮ ಗೆಳೆಯನ ಗೃಹಪ್ರವೇಶಕ್ಕೆ ಉಡುಗೊರೆಯಾಗಿ ಹೆಲ್ಮೆಟ್ ನೀಡುವ ಮೂಲಕ ವಿಶಿಷ್ಟತೆಯನ್ನು ಮೆರೆದಿದ್ದಾರೆ.
ಅಪ್ಪೇಗೌಡನಹಳ್ಳಿಯ ರಂಜಿತ್ ಅವರ ಗೃಹಪ್ರವೇಶಕ್ಕೆ ಗೆಳೆಯರಾದ ನರಸಿಂಹಮೂರ್ತಿ, ಮಹೇಶ್, ನವೀನ್, ಜಗದೀಶ್, ಮನೋಜ್, ವೇಣು, ಮನೋಹರ್, ಆಕಾಶ್, ರವಿಕುಮಾರ್ ಜೊತೆಗೂಡಿ ಈಗಿನ ಅಗತ್ಯತೆಗೆ ಅನುಗುಣವಾಗಿ ಹೆಲ್ಮೆಟ್ ಉಡುಗೊರೆಯಾಗಿ ನೀಡಿದ್ದಾರೆ.
“ಮೊದಲಾದರೆ ನೂರು ರೂ ದಂಡವಿತ್ತು. ಆದರೆ ಈಗ ಹೆಲ್ಮೆಟ್ ಇಲ್ಲದಿದ್ದರೆ, ಒಂದು ಸಾವಿರ ರೂ ದಂಡ ವಿಧಿಸುತ್ತಿದ್ದಾರೆ. ನಮ್ಮ ಸ್ನೇಹಿತ ರಂಜಿತ್ ಬಳಿ ಬೈಕ್ ಇದೆ ಆದರೆ ಹೆಲ್ಮೆಟ್ ಇರಲಿಲ್ಲ. ಅದಕ್ಕೆ ನಾವು ಗೆಳೆಯರು ಒಗ್ಗೂಡಿ ಅವನಿಗೆ ಉಪಯುಕ್ತವಾದ ಹೆಲ್ಮೆಟ್ ಕೊಟ್ಟಿದ್ದೇವೆ. ಗೆಳೆಯನಿಗೆ ಸಾರಿಗೆ ನಿಯಮ ಪಾಲಿಸುವಂತೆ ತಿಳಿಸಿದ್ದೇವೆ. ವಾಹನ ಸವಾರರಿಗೆ ಹೆಲ್ಮೆಟ್ ಜೀವರಕ್ಷಕವಿದ್ದಂತೆ ಮತ್ತು ಕಾನೂನು ಪಾಲನೆಯೂ ಅವಶ್ಯಕ. ಅದಕ್ಕಾಗಿ ಸರ್ಕಾರ ದಂಡದ ಮೊತ್ತವನ್ನು ಹೆಚ್ಚಿಸಿದ್ದಾರೆ. ಆದರೆ ಈಗ ಹೆಲ್ಮೆಟ್ ದರ ಗಗನಕ್ಕೇರಿದೆ. ಅದಕ್ಕಾಗಿ ದಂಡ ವಿಧಿಸುವ ಸ್ಥಳದಲ್ಲೇ ದಂಡದ ಹಣದಲ್ಲಿಯೇ ಒಂದು ಹೆಲ್ಮೆಟ್ ಕೊಟ್ಟರೆ ಒಳ್ಳೆಯದು ಮತ್ತು ಗ್ರಾಮಾಂತರ ಬಡ ಜನರಿಗೆ ಈ ದುಬಾರಿ ದಂಡ ತೆರಲು ಕಷ್ಟವಾಗುವುದರಿಂದ ಸರ್ಕಾರ ದಂಡದ ಮೊತ್ತವನ್ನು ತಗ್ಗಿಸಿದರೆ ಒಳ್ಳೆಯದು” ಎಂದು ಅಪ್ಪೇಗೌಡನಹಳ್ಳಿ ನರಸಿಂಹಮೂರ್ತಿ ತಿಳಿಸಿದರು.

