Home Blog Page 342

ಗೃಹಿಣಿಯರು ಕೂಡ ಆರ್ಥಿಕವಾಗಿ ಸಾವಲಂಬಿಗಳಾಗಬೇಕು – ಶಾಸಕ ವಿ ಮುನಿಯಪ್ಪ

0

ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಸಂಘದ ವತಿಯಿಂದ ಸೋಮವಾರ ಜಂಗಮಕೋಟೆ ಎಸ್.ಎಫ್.ಸಿ.ಎಸ್ ನಿಂದ ಮಹಿಳಾ ಸಹಾಯ ಸಂಘಗಳಿಗೆ ಸಾಲ ವಿತರಣೆ ಮತ್ತು ರೈತರಿಗೆ ಕೆಸಿಸಿ ಸಾಲ ವಿತರಣಾ ಸಮಾರಂಭದಲ್ಲಿ ಶಾಸಕ ವಿ ಮುನಿಯಪ್ಪ ಮಾತನಾಡಿದರು.
ಗೃಹಿಣಿಯರು ಕೂಡ ಆರ್ಥಿಕವಾಗಿ ಸಾವಲಂಬಿಗಳಾಗಬೇಕು. ಮನೆಯ ಜವಾಬ್ದಾರಿಯನ್ನು ನಿಭಾಯಿಸುತ್ತಲೇ ಕುಟುಂಬದ ಅಭಿವೃದ್ಧಿಗೆ ಕೂಡ ನೆರವಾಗಬೇಕಾದುದು ಬಹಳ ಮುಖ್ಯವಾದದ್ದು ಎಂದು ಅವರು ತಿಳಿಸಿದರು.
ಮಹಿಳೆಯರಿಗೆ ಸಹಾಯ ಸಂಘಗಳಿಂದ ಸಾಲ ನೀಡುವುದರಿಂದ ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಆಗುತ್ತದೆ. ಈ ನಿಟ್ಟಿನಲ್ಲಿ 24 ಮಹಿಳಾ ಸ್ವಸಹಾಯ ಸಂಘಗಳಿಗೆ 62 ಲಕ್ಷ ರೂ ಹಾಗೂ ಕೆಸಿಸಿ ಸಾಲ ಯೋಜನೆಯಡಿಯಲ್ಲಿ 120 ಜನ ರೈತರಿಗೆ 1 ಕೋಟೆ 10 ಲಕ್ಷ ರೂಗಳನ್ನು ನೀಡಲಾಗುತ್ತಿದೆ ಎಂದರು.
ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಮಾತನಾಡಿ, 20 ಕಂತುಗಳಲ್ಲಿ ಸುಲಭವಾಗಿ ಸಾಲ ಮರುಪಾವತಿ ಮಾಡುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಿ ಮಹಿಳಾ ಸಂಘಗಳಿಗೆ ಸಾಲ ನೀಡಲಾಗುತ್ತಿದೆ. ಸಂಘಗಳಿಗೆ ನೀಡುತ್ತಿರುವ ಈ ಸಾಲಕ್ಕೆ ಯಾವುದೇ ರೀತಿಯ ಬಡ್ಡಿ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮಕ್ಕೂ ತೆರಳಿ ಪ್ರತಿ ಸಂಘಕ್ಕೂ ಸಾಲ ವಿತರಿಸುವ ಯೋಜನೆ ನಮ್ಮದಾಗಿದೆ. ಒಂದು ಲಕ್ಷ ಹೆಣ್ಣುಮಕ್ಕಳಿಗೆ ಸ್ವಾವಲಂಬಿಯಾಗಿ ಜೀವನ ಸಾಗಿಸಲು ಸಾಲ ನೀಡಲಾಗುವುದು. ಒಟ್ಟು 50 ಕೋಟಿ ಸಾಲ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜಂಗಮಕೋಟೆ ಎಸ್.ಎಫ್.ಸಿ.ಎಸ್ ಅಧ್ಯಕ್ಷ ಜೆ.ಎಂ.ಹನುಮಂತಪ್ಪ, ಡಿಸಿಸಿ ಬ್ಯಾಂಕ್ ಜಿಲ್ಲಾ ಉಪಾಧ್ಯಕ್ಷ ನಾಗರಾಜ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಆನಂದ್, ಗುಡಿಯಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ನಾಗರಾಜ್, ಜೆ.ಎಮ್.ವೆಂಕಟೇಶ್ , ಮಂಜುಳಾ ಗುಂಡಪ್ಪ, ಮುನಿರತ್ನಮ್ಮ, ಶ್ರೀನಿವಾಸ್, ಮುನೇಗೌಡ, ಸಲೀಂ, ಕೃಷ್ಣಪ್ಪ, ಬಾಬು, ಪರಮೇಶ್ ಹಾಜರಿದ್ದರು.

ಶಿಕ್ಷಕರಿಗಾಗಿ ಸಹಪಠ್ಯ ಚಟುವಟಿಕೆ ಸ್ಪರ್ಧೆ

0

ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಕರ ಕಲ್ಯಾಣನಿಧಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆ ಸ್ಪರ್ಧೆಗಳನ್ನು ಉದ್ಘಾಟಿಸಿ ಕ್ಷೇತ್ರಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿದರು.
ರಾಷ್ಟ್ರದ ಭವಿಷ್ಯವನ್ನು ನಿರ್ಮಿಸುವ ಶಿಕ್ಷಕರಿಗೂ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಪಠ್ಯಚಟುವಟಿಕೆಗಳು ಅತ್ಯಗತ್ಯವಾಗಿವೆ. ವರ್ಷವಿಡೀ ತರಗತಿ ಬೋಧನೆಯಲ್ಲಿ ನಿರತರಾಗಿದ್ದು, ತಮ್ಮಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಗಳನ್ನು ಮಕ್ಕಳ ಕಲಿಕೆಗೆ ಪೂರಕವಾಗಿ ಅಭಿವ್ಯಕ್ತಗೊಳಿಸಲು ಉತ್ತಮ ವೇದಿಕೆಗಳ ಅಗತ್ಯವಿದೆ ಎಂದು ಅವರು ತಿಳಿಸಿದರು.
ಸಹಪಠ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರತಂದುಕೊಂಡು ಮಕ್ಕಳ ಸಮಗ್ರ ಅಭಿವೃದ್ಧಿಗೆ ಸಹಾಯಕವಾಗುವಂತೆ ಬೋಧನೆ-ಕಲಿಕೆ ಪ್ರಕ್ರಿಯೆಯಲ್ಲಿ ಸಮಯೋಚಿತವಾಗಿ ಬಳಸಿಕೊಳ್ಳಬೇಕು ಎಂದರು.
ಶಿಕ್ಷಣ ಸಂಯೋಜಕ ಭಾಸ್ಕರಗೌಡ ಮಾತನಾಡಿ, ಶಿಕ್ಷಕರು ತಮ್ಮಬೋಧನಾ ಅನುಭವದೊಂದಿಗೆ ಹೊಸಹೊಸ ಆವಿಷ್ಕಾರಗಳು ವೃತ್ತಿಪಂಡಿತ್ಯಕ್ಕೆ ಮನೆಮಾಡಿಕೊಡುತ್ತವೆ. ಸಹಪಠ್ಯಚಟುವಟಿಕೆಗಳು ಪರಿಣಾಮಕಾರಿ ಬೋಧನೆಗೆ ಸಹಕಾರಿಯಾಗಿವೆ. ಚಿತ್ರಕಲೆ, ರಾಗಬದ್ಧವಾಗಿ ಪದ್ಯಗಳ ಬೋಧನೆ, ಕಲಿಕೋಪಕರಣಗಳ ತಯಾರಿಕೆ ಮುಂತಾದ ಸ್ಪರ್ಧೆಗಳು ಶಿಕ್ಷಕರನ್ನು ಮತ್ತಷ್ಟು ವೃತ್ತಿಪರರನ್ನಾಗಿಸುತ್ತವೆ ಎಂದರು.
ತಾಲ್ಲೂಕು ಪಂಚಾಯಿತಿ ಅಕ್ಷರದಾಸೋಹ ಸಹಾಯಕ ನಿರ್ದೇಶಕ ಆಂಜನೇಯ ಮಾತನಾಡಿ, ಶಿಕ್ಷಕರೂ ಸದಾಕಾಲ ಅಧ್ಯಯನಶೀಲರೂ ಕ್ರಿಯಾಶೀಲರೂ ಆಗಿರಬೇಕು. ವಿದ್ಯಾರ್ಥಿಗಳಿಗೆ ಹೊಸವಿಷಯಗಳನ್ನು ಕಲಿಸಲು ತಾವೂ ನಿರಂತರವಾಗಿ ಕಲಿಯಬೇಕು ಎಂದರು.
ಶಿಕ್ಷಕರಿಗಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರಾದವರಿಗೆ ನಗದು ಬಹುಮಾನ, ಪ್ರಶಸ್ತಿಪತ್ರಗಳನ್ನು ವಿತರಿಸಲಾಯಿತು.
ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ, ಕಾರ್ಯದರ್ಶಿ ಎಲ್.ವೆಂಕಟರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಕೆಂಪಣ್ಣ, ಜಿಲ್ಲಾಪ್ರತಿನಿಧಿ ಟಿ.ವಿ.ಚಂದ್ರಶೇಖರ್, ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ಮುನಿರಾಜು, ಖಜಾಂಚಿ ಪಿಳ್ಳಣ್ಣ, ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ರವೀಂದ್ರ, ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಗಜೇಂದ್ರ, ಶಿಕ್ಷಕ ಎಂ.ಶಿವಕುಮಾರ್, ಎಚ್.ಎಸ್.ರುದ್ರೇಶಮೂರ್ತಿ, ಸಿಆರ್‌ಪಿ ಸಿ.ಬಿ.ಪ್ರಕಾಶ್ ಹಾಜರಿದ್ದರು.

ಅಂತರಾಷ್ಟ್ರೀಯ ಮಕ್ಕಳ ಶಿಬಿರಕ್ಕೆ ಸುಗಟೂರು ಶಾಲೆಯ ವಿದ್ಯಾರ್ಥಿಗಳು ಆಯ್ಕೆ

0

ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೮ ನೇ ತರಗತಿಯ ನಾಲ್ಕು ಮಂದಿ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಕ್ಕಳ ಬಾಲ ಆನಂದ ಮಹೋತ್ಸವ ಮನೆವಾಸ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.
ನವದೆಹಲಿಯ ರಾಷ್ಟ್ರೀಯ ಯುವಯೋಜನೆ, ಯುವಸಬಲೀಕರಣ ಮತ್ತು ಕ್ರೀಡಾ ಸಚಿವಾಲಯವು ಮಕ್ಕಳದಿನಾಚರಣೆ ಅಂಗವಾಗಿ ನವೆಂಬರ್-೫ ರಿಂದ ೧೨ ರವರೆಗೆ ಮಧ್ಯಪ್ರದೇಶದ ವಿದಿಶಾ ಪಟ್ಟಣದ ಸಾಮ್ರಾಟ್ ಅಶೋಕ ಟೆಕ್ನಾಲಾಜಿಕಲ್ ಕಾಲೇಜಿನಲ್ಲಿ ಶಿಬಿರವನ್ನು ಹಮ್ಮಿಕೊಂಡಿದೆ.
ಈ ಶಾಲೆಯ ನಾಲ್ಕು ವಿದ್ಯಾರ್ಥಿಗಳೊಂದಿಗೆ ಸುಮಾರು ೩೦ ಮಂದಿ ವಿವಿಧ ಭಾಗಗಳ ಮಕ್ಕಳು ಕರ್ನಾಟಕವನ್ನು ಪ್ರತಿನಿಧಿಸಲಿದ್ದು, ವಿಶ್ವದ ಎಲ್ಲಾ ಭಾಗಗಳ ಮಕ್ಕಳೊಂದಿಗೆ ಸಾಂಸ್ಕೃತಿಕ ವಿನಿಮಯ, ಶ್ರಮದಾನ, ಉಪನ್ಯಾಸ, ಸರ್ವಧರ್ಮ ವಿಚಾರಸಂಕಿರಣ, ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ. ಶಿಬಿರದಲ್ಲಿ ವಿದ್ಯಾರ್ಥಿಗಳಾದ ಎಸ್.ಜೆ.ನಿಖಿಲ್, ಎಸ್.ಎಸ್.ದೀಪಿಕಾ, ಎಸ್.ಎನ್.ನವ್ಯಶ್ರೀ, ಎಸ್.ಎಚ್.ನಂದಿನಿ ಪಾಲ್ಗೊಳ್ಳಲಿದ್ದಾರೆ.
ಅಭಿನಂದನಾ ಕಾರ್ಯಕ್ರಮ :
ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಬಿರಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಜೆ.ವೆಂಕಟಾಪುರ ಗ್ರಾಮಪಂಚಾಯಿತಿ ಅಧ್ಯಕ್ಷ ಬಿ.ಎಂ.ರಘುನಾಥ್ ಮಾತನಾಡಿ, ಸಂಸ್ಕಾರದಿಂದ ಬದುಕಿ, ಬಾಳಲು ಪೂರಕವಾದ ಶಿಕ್ಷಣವನ್ನು ಒದಗಿಸಬೇಕು. ಕೇವಲ ಹಣ, ಅಧಿಕಾರ ಗಳಿಕೆಗಾಗಿ ಮಾತ್ರ ಶಿಕ್ಷಣವಾಗುವುದಕ್ಕಿಂತ ಮಾನವನಾಗಿ ಬದುಕಲು ಪೂರಕವಾದ ಗುರಿಯನ್ನು ಶಿಕ್ಷಣ ಕ್ಷೇತ್ರ ಹೊಂದಬೇಕು. ಜೀವನಯಾತ್ರೆಯು ಜೀತವಾಗದಂತೆ ಕಾಪಾಡುವ ಸಜ್ಜನರ ಮನೋಭೂಮಿಕೆಯು ಪಕ್ವ ಮತ್ತು ದೃಢಗೊಳ್ಳಬೇಕು, ವೆಂಕಟಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಶಾಲಾಮಕ್ಕಳು ಅಂತರಾಷ್ಟ್ರೀಯ ಮಟ್ಟದ ಶಿಬಿರದಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆ ತಂದಿದೆ ಎಂದರು.
ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಆತುರವಾಗಿ ಪೂರ್ವಾಪರ ಚಿಂತಿಸದೇ ಕೈಗೊಳ್ಳುವ ಚಟುವಟಿಕೆಗಳಿಂದ ಸತ್ಫಲಕ್ಕಿಂತ ಹಾನಿಯೇ ಹೆಚ್ಚಾಗಿರುತ್ತದೆ. ಪ್ರತಿ ಹೆಜ್ಜೆ ಇಡುವ ಮುನ್ನ ಚಿಂತನೆಗೊಳಪಡಿಸಿ ತಾಳ್ಮೆಯಿಂದ ಕಾರ್ಯ ಸಾಧಿಸಿ ಜೀವನವನ್ನು ಹಸನುಮಾಡಿಕೊಳ್ಳಬೇಕು. ಔಪಚಾರಿಕ ಶಿಕ್ಷಣದೊಂದಿಗೆ ಅನೌಪಚಾರಿಕ ಶಿಕ್ಷಣ ಚಟುವಟಿಕೆಗಳಿಗೂ ಪೋಷಕರು, ಶಿಕ್ಷಕರು ಆದ್ಯತೆ ನೀಡಬೇಕು ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಎಂ.ಶಂಕರಪ್ಪ, ಗ್ರಾಮಪಂಚಾಯಿತಿ ಸದಸ್ಯ ಎನ್.ಅಶ್ವತ್ಥಪ್ಪ, ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ, ಗ್ರಾಮಪಂಚಾಯಿತಿ ಸದಸ್ಯೆ ಭಾಗ್ಯಮ್ಮ ಅರುಣ್‌ಕುಮಾರ್, ಸದಸ್ಯ ಷಣ್ಮುಗಪ್ಪ, ಎಸ್.ಡಿ.ದೇವರಾಜು, ಎಸ್‌ಡಿಎಂಸಿ ಉಪಾಧ್ಯಕ್ಷ ಜಗದೀಶ್, ಸದಸ್ಯೆ ನರಸಮ್ಮ, ದೊಡ್ಡಮುನಿವೆಂಕಟಶೆಟ್ಟಿ, ಹಾಲು ಉತ್ಪಾದಕರ ಸಹಕಾರಸಂಘದ ಅಧ್ಯಕ್ಷ ಮಂಜುನಾಥ್, ಸುರೇಶ್, ಕೃಷ್ಣಪ್ಪ, ಮುಖ್ಯಶಿಕ್ಷಕಿ ಉಮಾದೇವಿ, ಶಿಕ್ಷಕ ಬಿ.ನಾಗರಾಜು, ಎ.ಬಿ.ನಾಗರಾಜು, ಎಂ.ವೈ.ಲಕ್ಷ್ಮಯ್ಯ, ಶಿಕ್ಷಕಿ ತಾಜೂನ್ ಹಾಜರಿದ್ದರು.

ಮಳೆಕೊಯ್ಲು ಈಗಿನ ನಮ್ಮ ಅನಿವಾರ್ಯತೆ – ಶಾಸಕ ವಿ.ಮುನಿಯಪ್ಪ

0

ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಕಟ್ಟಡಗಳಲ್ಲಿ ನರೇಗಾ ಯೋಜನೆಯಡಿ ಮಳೆ ನೀರು ಸಂಗ್ರಹಿಸಲು ಬೇಕಾದ ಅಗತ್ಯ ಕ್ರಮ ಜರುಗಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಾಗಲೇ ತಾಲ್ಲೂಕಿನಾಧ್ಯಂತ ಬೀಕರ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿದ್ದು, ಸುಮಾರು ೧೫೦೦-೧೬೦೦ ಅಡಿ ಆಳದ ಕೊಳವೆ ಬಾವಿಯಿಂದ ನೀರು ತೆಗೆಯಲಾಗುತ್ತಿದೆ. ಹಾಗಾಗಿ ಮಳೆ ನೀರನ್ನು ಸಂಗ್ರಹಿಸಲು ಮಳೆ ಕೊಯ್ಲು ಅಳವಡಿಸುವುದು ಹಾಗೂ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳ ಹೂಳೆತ್ತಲು ಅಗತ್ಯ ಕ್ರಮ ಜರುಗಿಸುವಂತೆ ಸೂಚಿಸಿದರು.
ಮಹಾತ್ಮ ಗಾಂಧಿ ಉದ್ಯೋಗಖಾತ್ರಿ ಯೋಜನೆಯು ಈ ಭಾಗದ ಪಾಲಿಗೆ ವರದಾನವಾಗಿದ್ದು ಒಂದೊಂದು ಗ್ರಾಮ ಪಂಚಾಯಿತಿಗೆ ವರ್ಷಕ್ಕೆ ಸುಮಾರು ಒಂದು ಕೋಟಿ ಅನುದಾನ ನರೇಗಾ ಯೋಜನೆಯಡಿ ಸಿಗುತ್ತಿದೆ. ಇಷ್ಟೊಂದು ಬೃಹತ್ ಮೊತ್ತದ ಹಣ ಹಿಂದೆಂದೂ ಗ್ರಾಮ ಪಂಚಾಯಿತಿಗಳಿಗೆ ಸಿಗುತ್ತಿರಲಿಲ್ಲ. ಹಾಗಾಗಿ ನರೇಗಾ ಯೋಜನೆಯಡಿ ಹೆಚ್ಚು ಹೆಚ್ಚು ಕೆಲಸಗಳನ್ನು ಮಾಡಿಸುವ ಮೂಲಕ ಪಂಚಾಯಿತಿ ವ್ಯಾಪ್ತಿಗಳಲ್ಲಿ ಜನರಿಗೆ ಅಗತ್ಯ ಮೂಲಭೂತ ಸವಲತ್ತುಗಳನ್ನು ಕಲ್ಪಿಸಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮುಂದಾಗಬೇಕು ಎಂದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿನ ವೈದ್ಯರ ಕೊರತೆಯ ಬಗ್ಗೆ ಆರೋಗ್ಯ ಸಚಿವರಿಗೆ ಪತ್ರ ಬರೆಯುವಂತೆ ಸೂಚಿಸಿದ ಶಾಸಕರು, ತಾಲ್ಲೂಕಿನ ಬಶೆಟ್ಟಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ನಿರ್ಮಾಣಕ್ಕಾಗಿ ಈಗಾಗಲೇ ೧ ಕೋಟಿ ೮೦ ಲಕ್ಷದ ಟೆಂಡರ್ ಕಾರ್ಯ ಮುಗಿದಿದ್ದು, ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಪೊಲೀಸರೊಂದಿಗೆ ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಕ್ರಮ ಜರುಗಿಸಿ ಎಂದರು.
ಪಂಚಾಯತ್ ರಾಜ್ ತಾಂತ್ರಿಕ ಉಪ ವಿಭಾಗದಿಂದ ಈಗಾಗಲೇ ಪ್ರಾರಂಬಿಸಿರುವ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ. ಟೆಂಡರ್ ಆಗಿ ಈವೆರಗೂ ಕಾಮಗಾರಿ ಆರಂಬಿಸದ ಗುತ್ತಿಗೆದಾರರನ್ನು ಕೈ ಬಿಟ್ಟು ಬೇರೆಯವರಿಗೆ ಕಾಮಗಾರಿಯ ಟೆಂಡರ್ ನೀಡಿ ಕಾಮಗಾರಿ ಸಕಾಲದಲ್ಲಿ ಪೂರ್ಣಗೊಳಿಸಿ ಎಂದರು.
ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳಲ್ಲಿ ಆಗಿರುವ ಪ್ರಗತಿಯ ಕುರಿತು ಮಾಹಿತಿ ಪಡೆದುಕೊಂಡ ಅವರು, ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅರ್ಹಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಇಓ ಬಿ.ಶಿವಕುಮಾರ್, ತಹಸೀಲ್ದಾರ್ ಎಂ.ದಯಾನಂದ್ ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಜರಿದ್ದರು.

ರಾಷ್ಟ್ರೀಯ ಕ್ರೀಡಾ ಸ್ಪರ್ಧೆಗೆ ಆಯ್ಕೆಯಾದ ಕ್ರೆಸೆಂಟ್ ವಿದ್ಯಾರ್ಥಿಗಳು

0

ಚಿಂತಾಮಣಿಯಲ್ಲಿ ರಾಷ್ಟ್ರೀಯ ಅಂತರ್ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಅಂತರ್ ಜಿಲ್ಲಾ ಚಾಂಪಿಯನ್ ಶಿಪ್ ನಲ್ಲಿ ಶಿಡ್ಲಘಟ್ಟದ ಕ್ರೆಸೆಂಟ್ ವಿದ್ಯಾಸಂಸ್ಥೆಯ ನಾಲ್ವರು ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ. ತಿರುಪತಿಯಲ್ಲಿ ನವೆಂಬರ್ ೨೩, ೨೪ ಮತ್ತು ೨೫ ರಂದು ನಡೆಯುವ ರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಲ್ಲಿ ಈ ವಿದ್ಯಾರ್ಥಿಗಳು ಭಾಗವಹಿಸಲು ಅರ್ಹತೆಯನ್ನು ಗಳಿಸಿದ್ದಾರೆ.
೧೪ ರಿಂದ ೧೬ ವರ್ಷ ವಯೋಮಿತಿಯ ಕ್ರೀಡಾ ಸ್ಪರ್ಧೆಯಲ್ಲಿ ಚಂದುಶ್ರೀ (ಹರ್ಡಲ್ಸ್, ಉದ್ದಜಿಗಿತ, ೧೦೦ ಮೀಟರ್ ಓಟ), ರಕ್ಷಾ (ಉದ್ದಜಿಗಿತ, ಗುಂಡು ಎಸೆತ), ಪ್ರತೀಕ್ಷಾ (೧೦೦ ಮೀಟರ್ ಓಟ, ೪೦೦ ಮೀಟರ್ ಓಟ), ಜಯಂತ್ (೧೦೦ ಮೀಟರ್ ಓಟ, ೪೦೦ ಮೀಟರ್ ಓಟ) ವಿಜೇತರಾಗಿದ್ದಾರೆ.
ಕ್ರೀಡಾ ಶಿಕ್ಷಕರಾದ ಶಿವಮೂರ್ತಿ, ಮುನಿನರಸಿಂಹಪ್ಪ, ಮಧು ಹಾಜರಿದ್ದರು

ಬಿ.ಆರ್.ಅನಂತಕೃಷ್ಣ, ಎಚ್.ಕೆ.ಸುರೇಶ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

0

ಶಿಡ್ಲಘಟ್ಟ ತಾಲ್ಲೂಕಿನ ಸಾಹಿತ್ಯ ಪರಿಚಾರಕ ಬಿ.ಆರ್.ಅನಂತಕೃಷ್ಣ ಮತ್ತು ಪ್ರಗತಿಪರ ಕೃಷಿಕ ಎಚ್.ಕೆ.ಸುರೇಶ್ ಅವರು ೨೦೧೯ ನೇ ಸಾಲಿನ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬಿ.ಆರ್.ಅನಂತಕೃಷ್ಣ :
ವೃತ್ತಿಯಲ್ಲಿ ದಿನಸಿ ಅಂಗಡಿಯ ಮಾಲೀಕರಾದರೂ ಬಿ.ಆರ್.ಅನಂತಕೃಷ್ಣ ಅವರು ಪ್ರವೃತ್ತಿಯಲ್ಲಿ ಕನ್ನಡ ಸಾಹಿತ್ಯದ ಪರಿಚಾರಕರು. ಕನ್ನಡ ಭಾಷೆ, ನಾಡು ನುಡಿ, ಸಂಸ್ಕೃತಿಯನ್ನು ಬೆಳೆಸುವ ಕಾಯಕದಲ್ಲಿ ಸದಾ ನಿರತರು. ಕಸಾಪ ತಾಲ್ಲೂಕು ಅಧ್ಯಕ್ಷರಾಗಿದ್ದಾಗ ಲಕ್ಷಾಂತರ ರೂ ಬೆಲೆಯ ಪುಸ್ತಕಗಳನ್ನು ತಾಲ್ಲೂಕಿನ ೧೩೦ ಶಾಲೆಗಳ ಗ್ರಂಥಾಲಯಗಳಿಗೆ ಕೊಡುಗೆಯಾಗಿ ನೀಡಿದ್ದಾರೆ. “ಕವಿಯ ನೆನೆದು” ಕಾರ್ಯಕ್ರಮದಡಿ ಕನ್ನಡದ ಕವಿಗಳ ಪರಿಚಯ, ವಿದ್ಯಾರ್ಥಿಗಳನ್ನು ಓದಲು ಹಚ್ಚಿಸುವ “ನನ್ನ ಮೆಚ್ಚಿನ ಪುಸ್ತಕ”, “ಸಾಧಕರ ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆ” ಕಾರ್ಯಕ್ರಮದಡಿ ವಿಜ್ಞಾನಿಗಳು, ನಟರು, ಯೋಧರು, ಹಾಡುಗಾರರು, ಸಾಹಿತಿಗಳು ಮೊದಲಾದ ಸಾಧಕರನ್ನು ಕರೆಸಿ ಮಕ್ಕಳಿಗೆ ವಿವಿಧ ಕ್ಷೇತ್ರಗಳ ಸಾಧಕರನ್ನು ಪರಿಚಯಿಸಿದ್ದಾರೆ. ಕ್ಸಾಪ ಅಧ್ಯಕ್ಷರಾಗಿದ್ದ ಕೇವಲ ಒಂದು ವರ್ಷದ ಅವಧಿಯಲ್ಲಿಯೇ ದಾಖಲೆಯ ನೂರಾರು ಕಾರ್ಯಕ್ರಮಗಳನ್ನು ಮಾಡಿ, ನಂತರ ಕನ್ನಡ ಸಾರಸ್ವತ ಪರಿಚಾರಿಕೆ ಎಂಬ ಸಂಸ್ಥೆಯ ಮೂಲಕ “ಓದುಗರ ಅರಮನೆಯಲ್ಲಿ ಪುಸ್ತಕ ಪರಿಚಯ” ಎಂಬ ವಿನೂತನ ಕಾರ್ಯಕ್ರಮವನ್ನು ಪ್ರತಿ ತಿಂಗಳು ಗ್ರಂಥಾಲಯದಲ್ಲಿ ಆಯೋಜಿಸುತ್ತಾ ಹಲವಾರು ಸಾಹಿತಿಗಳನ್ನು ಪರಿಚಯಿಸುತ್ತಿದ್ದಾರೆ. ವಿಪ್ರಪ್ರತಿಭಾ ಪುರಸ್ಕಾರ ಸೇವಾ ಟ್ರಸ್ಟ್ ಅಧ್ಯಕ್ಷರಾಗಿ ಹೆಚ್ಚು ಅಂಕಗಳನ್ನು ಪಡೆವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಮಾಡುತ್ತಿದ್ದಾರೆ. ಶಿಡ್ಲಘಟ್ಟದ ರುದ್ರಭೂಮಿಗೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ನೆರವು ಪಡೆದು ಸಿಲಿಕಾನ್ ಚೇಂಬರ್ ಅಳವಡಿಸಿದ್ದಲ್ಲದೆ, ಶವ ಸಾಗಾಣಿಕೆ ವಾಹನವನ್ನೂ ಸಹ ಶಾಸಕರ ಅನುದಾನದಲ್ಲಿ ತರಲು ಶ್ರಮಿಸಿದ್ದಾರೆ.
“ಕನ್ನಡ ಸಾಹಿತ್ಯ, ಸಂಸ್ಕೃತಿ, ಸಾಧನೆಯನ್ನು ಪಸರಿಸುವ ಪರಿಚಾರಕನ ಕೆಲಸವನ್ನು ಮಾಡುವ ನನ್ನ ಸೇವೆಯನ್ನು ಜಿಲ್ಲಾಡಳಿತ ಗುರುತಿಸಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡುತ್ತಿರುವುದು ಜವಾಬ್ದಾರಿಯನ್ನು ಹೆಚ್ಚಿಸಿದೆ. ಇನ್ನಷ್ಟು ಕೆಲಸ ಮಾಡಲು ಹುಮ್ಮಸ್ಸು ಬಂದಿದೆ” ಎಂದು ಬಿ.ಆರ್.ಅನಂತಕೃಷ್ಣ ತಿಳಿಸಿದರು.
ಎಚ್.ಕೆ.ಸುರೇಶ್ :
ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿಯ ಎಚ್.ಕೆ.ಸುರೇಶ್, ಪ್ರಗತಿಪರ ಕೃಷಿಕರು. ಕೃಷಿ ಅಧ್ಯಯನಕ್ಕಾಗಿ ಇಸ್ರೇಲ್, ಈಜಿಪ್ಟ್ ಮತ್ತು ದುಬೈ ದೇಶಗಳಿಗೆ ಹೋಗಿ ಬಂದು ತಮ್ಮ ಜಮೀನಿನಲ್ಲಿ ಇಸ್ರೇಲ್ ಮಾದರಿಯ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ತಮ್ಮ ಹಿಪ್ಪುನೇರಳೆ ತೋಟದ ಪಕ್ಕದಲ್ಲಿಯೇ ವಾಸದ ಮನೆ ಹಾಗೂ ಹುಳುಸಾಕಾಣಿಕೆಯ ಮನೆಯನ್ನು ನಿರ್ಮಿಸಿಕೊಂಡಿರುವ ರೈತ ಸುರೇಶ್ ಮನೆಯಲ್ಲಿ ಬಳಸಿದ ನಂತರ ಹೊರ ಬರುವ ತ್ಯಾಜ್ಯದ ನೀರು, ಮನೆಯ ಮೇಲ್ಚಾವಣಿ ಹಾಗೂ ಹುಳು ಮನೆಯ ಮೇಲೆ ಬೀಳುವ ಮಳೆ ನೀರನ್ನು ಶೋಧಿಸಿ ೨೨ ಅಡಿ ಉದ್ದ, ೨೪ ಅಡಿ ಅಗಲ ಮತ್ತು ೧೨ ಅಡಿ ಆಳದ ಗುಂಡಿಯಲ್ಲಿ ಸಂಗ್ರಹಿಸುತ್ತಾರೆ. ಇಸ್ರೇಲ್‌ ತಂತ್ರಜ್ಞಾನವನ್ನೆ ಬಳಸಿ ಮನೆಯ ಬಚ್ಚಲು, ಅಡುಗೆ ಮನೆಯಿಂದ ವ್ಯರ್ಥವಾಗಿ ಹರಿಯುವ ನೀರನ್ನು ಸಂಗ್ರಹಿಸಿ ಅದನ್ನು ಹಿಪ್ಪುನೇರಳೆ ತೋಟಕ್ಕೆ ಹರಿಸಿ ಸೊಪ್ಪು ತೆಗೆಯುವ, ಅಂತರ್ಜಲ ವೃದ್ಧಿಸುವ ಕ್ರಮ ಕೈಗೊಂಡಿದ್ದಾರೆ. ಇಸ್ರೇಲ್ ತಂತ್ರಜ್ಞಾನವನ್ನೇ ಬಳಸಿ ೨೦೦ ಜಿಸಿಎಂ ಪಾಲಿಥೀನ್ ಮೇಣದ ಪೇಪರ್‌ನ ಹೊದಿಕೆಯನ್ನು ಗುಂಡಿಯ ನಾಲ್ಕೂ ಭಾಗಗಳು ಆವರಿಸಿಕೊಳ್ಳುವಂತೆ ಹಾಸಿದ್ದಾರೆ. ಇದರಿಂದ ನೀರು ಬಿಸಿಲಿಗೆ ಆವಿಯಾಗುವುದನ್ನು ತಡೆಯಬಹುದಲ್ಲದೆ, ಕಸ ಕಡ್ಡಿ ಬೆರೆಯದಂತೆಯೂ ನೋಡಿಕೊಳ್ಳಬಹುದಾಗಿದೆ.
“ನನ್ನ ಕೃಷಿ ಕಾಯಕವನ್ನು ಗುರುತಿಸಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡುತ್ತಿರುವುದು ಖುಷಿಯಾಗಿದೆ” ಎಂದು ಎಚ್.ಕೆ.ಸುರೇಶ್ ಹೇಳಿದರು.

ಪ್ಲಾಸ್ಟಿಕ್ ಮುಕ್ತ ಸಂದೇಶ ಬೀರುವ ಬೀದಿನಾಟಕ

0

ನಗರದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಬುಧವಾರ ನಗರಸಭೆಯವರು ಆಯೋಜಿಸಿದ್ದ ಪರಿವರ್ತನಾ ಕಲಾ ಸಂಸ್ಥೆಯ ಕಲಾವಿದರಿಂದ ಬೀದಿ ನಾಟಕದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಗರಸಭೆ ಪೌರಾಯುಕ್ತ ಶ್ರೀಕಾಂತ್ ಮಾತನಾಡಿದರು.
ಪ್ಲಾಸ್ಟಿಕ್ ಮುಕ್ತ ಹಾಗೂ ಸ್ವಚ್ಛತೆಯಿಂದ ಕೂಡಿರುವ ನಗರ ನಮ್ಮದಾಗಬೇಕು. ಈ ಉದ್ದೇಶದಿಂದ ಜನರಲ್ಲಿ ಅರಿವನ್ನು ಮೂಡಿಸಲು ಕಲಾವಿದರ ಮೂಲಕ ಬೀದಿ ನಾಟಕವನ್ನು ಆಯೋಜಿಸಿರುವುದಾಗಿ ಅವರು ತಿಳಿಸಿದರು.
ಪ್ಲಾಸ್ಟಿಕ್ ತ್ಯಾಜ್ಯದಿಂದ ಆಗುವ ಅನಾಹುತಗಳನ್ನು ನಾವೆಲ್ಲರೂ ಅರಿಯಬೇಕು. ಈಗಾಗಲೇ ನಗರಸಭೆಯಿಂದ ವಿವಿಧ ರೀತಿಯಲ್ಲಿ ಅರಿವು ಮೂಡಿಸಲಾಗಿದ್ದರೂ ಇನ್ನೂ ಕೆಲವು ಅಂಗಡಿ ಮಾಲೀಕರು ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದಾರೆ. ಅದು ತಪ್ಪು. ಪ್ರತಿಯೊಬ್ಬರೂ ನಗರಸಭೆಯ ಉದ್ದೇಶಕ್ಕೆ ಕೈಜೋಡಿಸಿ. ಸ್ವಚ್ಛ ಭಾರತ ಅಭಿಯಾನದಡಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಗಿಡ ನೆಡುವ ಕಾರ್ಯಕ್ರಮಕ್ಕೂ ಎಲ್ಲರೂ ಸಹಕರಿಸಬೇಕು ಎಂದರು.
ಪರಿವರ್ತನಾ ಕಲಾ ಸಂಸ್ಥೆಯ ಕಲಾವಿದರು ನಗರದ ತಾಲ್ಲೂಕು ಕಚೇರಿಯ ಮುಂದೆ, ಕೋಟೆ ವೃತ್ತದಲ್ಲಿ, ಬಸ್ ನಿಲ್ದಾಣ ಮತ್ತು ಮಯೂರ ವೃತ್ತದಲ್ಲಿ ಬೀದಿ ನಾಟಕದ ಮೂಲಕ ಪ್ಲಾಸ್ಟಿಕ್ ನಿಂದಾಗುವ ತೊಂದರೆಗಳ ಬಗ್ಗೆ ತಿಳುವಳಿಕೆ ಮೂಡಿಸಿದರು.
ಪರಿವರ್ತನಾ ಕಲಾಸಂಸ್ಥೆಯ ಅಧ್ಯಕ್ಷ ದೇವನಹಳ್ಳಿ ದೇವರಾಜ್, ಕಲಾವಿದರಾದ ಶ್ರೀನಿವಾಸ್, ಭರತ್, ವರುಣ್ ತೇಜಸ್, ಪ್ರಮೀಳಾ, ಸುಪ್ರಿಯಾ, ಸಹನಾ, ಪುನೀತ್ ಗಿರೀಶ್ ಹಾಜರಿದ್ದರು.

ಕಸಾಪ ವತಿಯಿಂದ “ಮನೆಯಂಗಳದಲ್ಲಿ ನುಡಿಸಿರಿ” ಕಾರ್ಯಕ್ರಮ

0

ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯ ಸಮೀಪದ ಆನಂದ ಬಾಬು ಮತ್ತು ಮಂಜುಳಾ ದಂಪತಿಯ ಮನೆಯಲ್ಲಿ ಕಸಾಪ ವತಿಯಿಂದ ಆಯೋಜಿಸಿದ್ದ “ಮನೆಯಂಗಳದಲ್ಲಿ ನುಡಿಸಿರಿ” ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಬೆಳಕು ಜ್ಞಾನದ ಸಂಕೇತ. ಪರಸ್ಪರರನ್ನು ಅರಿತುಕೊಂಡು ಪ್ರೀತಿಯಿಂದ ಜೀವನ ಮಾಡುವ ಪಾಠವನ್ನು ದೀಪಾವಳಿ ಕಲಿಸುತ್ತದೆ. ಪಟಾಕಿ ಹಚ್ಚಿ, ಪರಿಸರ ಹಾಳು ಮಾಡುವುದರ ಬದಲು ದೀಪಗಳನ್ನು ಬೆಳಗಿಸಿ, ಗಿಡಗಳನ್ನು ನೆಟ್ಟು ದೀಪಾವಳಿ ಆಚರಿಸೋಣ ಎಂದು ಅವರು ತಿಳಿಸಿದರು.
ದೀಪಾವಳಿ ಹಬ್ಬ ಪಟಾಕಿಗಳ ಹಾವಳಿಯಿಂದ ಶಬ್ದಾವಳಿಯಾಗಿ ಮಾರ್ಪಾಟಾಗಿ, ಪರಿಸರ, ಮಾನವ, ಪ್ರಾಣಿ ಮತ್ತು ಪಕ್ಷಿ ಸಂಕುಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ದೀಪಾವಳಿಯನ್ನು ಪಟಾಕಿ ಹಚ್ಚಿ ಮಾಲಿನ್ಯದ ಹಬ್ಬವಾಗದೇ ಇರಲಿ ಎಂದು ಅರಿವನ್ನು ಮೂಡಿಸಬೇಕು. ಪ್ರತಿಯೊಬ್ಬರೂ ಈ ಆಚರಣೆಯನ್ನು ಪರಿಸರ ಸ್ನೇಹಿಯಾಗಿ ಮತ್ತು ಸುರಕ್ಷಿತವಾಗಿ ಆಚರಿಸಬೇಕು ಎಂದು ಹೇಳಿದರು.
ಪಾಶ್ಚಿಮಾತ್ಯ ಕಲೆ, ಸಂಸ್ಕೃತಿಯನ್ನು ತಿರಸ್ಕರಿಸಿ, ಪ್ರಪಂಚದಲ್ಲೇ ಗೌರವ-ಘನತೆ ತಂದುಕೊಟ್ಟಿರುವ ಭಾರತೀಯ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ಭರತ ನಾಟ್ಯ ಕಲೆಯನ್ನು ಹಲವಾರು ಪೋಷಕರು ತಮ್ಮ ಮಕ್ಕಳಿಗೆ ಕಲಿಸುತ್ತಿರುವುದು ಅಭಿನಂದನೀಯ. ಕಲೆ, ಸಂಸ್ಕೃತಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಭರತನಾಟ್ಯ ಕಲಾವಿದೆಯರನ್ನು ಕಸಾಪ ವತಿಯಿಂದ ಸನ್ಮಾನಿಸಲಾಗುತ್ತಿದೆ ಎಂದು ನುಡಿದರು.
ಭರತನಾಟ್ಯ ಕಲಾವಿದೆಯರಾದ ಎಸ್.ಎ.ಶೋಭಿತ ಹಾಗೂ ಎನ್.ಭುವನ ನೃತ್ಯ ಪ್ರದರ್ಶನ ನೀಡಿದರು. ಈ ಸಂದರ್ಭದಲ್ಲಿ ಭರತನಾಟ್ಯ ಕಲಾವಿದೆಯರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು.
ಕಲಾವಿದೆಯರ ಪೋಷಕರಾದ ಆನಂದ ಬಾಬು ಮತ್ತು ಮಂಜುಳಾ ದಂಪತಿ, ಲಕ್ಷ್ಮೀನಾರಾಯಣ ಮತ್ತು ನಾಗಮಣಿ ದಂಪತಿ, ನಗರಸಭೆ ಸದಸ್ಯ ಎಸ್.ಎ.ನಾರಾಯಣಸ್ವಾಮಿ, ವಿ.ಕೆ.ಸೋಮಶೇಖರ್, ಕಸಾಪ ಕಾರ್ಯದರ್ಶಿ ಎಸ್.ಸತೀಶ್, ನಗರ ಘಟಕ ಅಧ್ಯಕ್ಷ ಸಿ.ಎನ್. ಮುನಿರಾಜ್, ಸಂಘ ಸಂಸ್ಥೆಗಳ ಪ್ರತಿನಿಧಿ ಶಂಕರ್, ಮಹಿಳಾ ಪ್ರತಿನಿಧಿ ದಾಕ್ಷಾಯಣಿ, ನಾಗನರಸಿಂಹ, ರಾಮಚಂದ್ರಪ್ಪ, ಸುಬ್ರಮಣಿ, ಶೋಭ, ಭಾಗ್ಯಲಕ್ಷ್ಮಿ, ಮುರಳಿ, ಲಕ್ಷ್ಮಿ, ಮಂಜುಳಮ್ಮ, ಕವಿತ, ಮಂಜುನಾಥ್ ಹಾಜರಿದ್ದರು.

6.5 ಕೋಟಿ ರೂಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

0

ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಶುಕ್ರವಾರ 6.5 ಕೋಟಿ ರೂಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಸರ್ಕಾರದಿಂದ ನಾಗರೀಕರ ಮೂಲಭೂತ ಸೌಲಭ್ಯಗಳು ಹಾಗೂ ರಸ್ತೆ ಕಾಮಗಾರಿಗಾಗಿ ಕೋಟ್ಯಾಂತರ ರೂಗಳು ಬಿಡುಗಡೆಯಾಗುತ್ತಿದ್ದು, ಕಾಮಗಾರಿಗಳ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕೆಂದು ಅವರು ತಿಳಿಸಿದರು.
ತೀರಾ ಹದಗೆಟ್ಟಿದ್ದ ಹೆಚ್.ಕ್ರಾಸ್-ವಿಜಯಪುರ ರಸ್ತೆಯನ್ನು 19.5 ಕೋಟಿ ರೂಗಳ ವೆಚ್ಚದಲ್ಲಿ ಹಾಗೂ ಕಾಚಹಳ್ಳಿಯಿಂದ ಹಂಡಿಗನಾಳ ಕ್ರಾಸ್ ವರೆಗೆ 6.2 ಕೋಟಿ ರೂಗಳ ವೆಚ್ಚದಲ್ಲಿ ರಸ್ತೆಯನ್ನು ಅಭಿವೃಧ್ಧಿಗೊಳಿಸಲು ಕ್ರಮ ಕೈಗೊಳ್ಳಲಾಗಿದ್ದು ಶಿಡ್ಲಘಟ್ಟದಿಂದ ಬೆಂಗಳೂರಿಗೆ ಹಾಗೂ ಶಿಡ್ಲಘಟ್ಟದಿಂದ ಕೋಲಾರಕ್ಕೆ ಸಂಚರಿಸಲು ಅನುಕೂಲವಾಗಲಿದೆ ಎಂದರು.
ಗ್ರಾಮಸ್ಥರು ತಮ್ಮ ಗ್ರಾಮಗಳಲ್ಲಿ ನಡೆಯುವ ರಸ್ತೆ ಇನ್ನಿತರೆ ಕಾಮಗಾರಿಗಳನ್ನು ಗುಣಮಟ್ಟವನ್ನು ಪರಿಶೀಲಿಸಬೇಕು. ಕಳಪೆ ಕಾಮಗಾರಿ ನಡೆಸಿದರೆ ತಮಗೆ ಅಥವಾ ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಬೇಕೆಂದು ಹೇಳಿದರು.
ಮೇಲೂರಿನ ಫ್ರೌಡಶಾಲಾ ಕಟ್ಟಡದ ನವೀಕರಣ ಕಾಮಗಾರಿಗೆ ೧೩.೫ ಲಕ್ಷ ರೂಗಳು ಬಿಡುಗಡೆಯಾಗಿದ್ದು, ಏಪ್ರಿಲ್ ಒಳಗಾಗಿ ಕಾಮಗಾರಿ ಮುಗಿಸುವಂತೆ ಅದಿಕಾರಿಗಳಿಗೆ ಸೂಚಿಸಿದರು.
ಹಾಪ್ ಕಾಮ್ಸ್ ಅಧ್ಯಕ್ಷ ಚಂದ್ರೇಗೌಡ, ಬಿ.ವಿ. ಮುನೇಗೌಡ, ಎಂ.ಎಂ.ಸ್ವಾಮಿ, ಮೇಲೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆಂಜಿನೇಯರೆಡ್ಡಿ, ಕೆ.ಮಂಜುನಾಥ್, ಮುರಳಿ, ಕೆ.ಎಂ,ಎಫ್ ನಿರ್ದೇಶಕ ಶ್ರೀನಿವಾಸ್, ಭೀಮೇಶ್ ಹಾಜರಿದ್ದರು.

ನರೇಗಾ ಯೋಜನೆ ಸದುಪಯೋಗ ಮಾಡಿಕೊಳ್ಳಿ

0

ಮಹಾತ್ಮ ಗಾಂಧಿ ಉದ್ಯೋಗಖಾತ್ರಿ ಯೋಜನೆಯಡಿ ೧೦೦ ಮಾನವ ದಿನಗಳ ಕೆಲಸ ಸಿಗುತ್ತಿದ್ದು ಅಲ್ಪ ಸ್ವಲ್ಪ ಜಾಗವಿದ್ದರೆ ದನದ ಕೊಠಡಿ ಮತ್ತು ಕೋಳಿ ಕೊಠಡಿ ನಿರ್ಮಿಸಿಕೊಳ್ಳಲು ಅವಕಾಶವಿದೆ. ಇದರ ಸದುಪಯೋಗ ಪಡೆದುಕೊಂಡು ಪ್ರತಿಯೊಬ್ಬರೂ ಸಮಾಜದ ಮುಖ್ಯ ವಾಹಿನಿ ಬರಬೇಕು ಎಂದು ತಾಲ್ಲೂಕು ಪಂಚಾಯಿತಿ ಇಓ ಬಿ.ಶಿವಕುಮಾರ್ ತಿಳಿಸಿದರು.
ನಗರದ ಬೈಪಾಸ್ ರಸ್ತೆಯಲ್ಲಿರುವ ಪೂಜಮ್ಮ ದೇವಾಲಯದ ಸಮುದಾಯ ಭವನದಲ್ಲಿ ಜೀವಿಕ ಸಂಘಟನೆಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ವೇತನ ಅನುಷ್ಠಾನಕ್ಕಾಗಿ ಅಧಿಕಾರಿಗಳಿಗೆ ಆಗ್ರಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈಗಾಗಲೇ ತಾಲ್ಲೂಕಿನಾದ್ಯಂತ ಸ್ವಸಹಾಯ ಗುಂಪುಗಳಿಗೆ ಸುಮಾರು ೮೫ ಲಕ್ಷ ರೂ ಹಣ ಬಿಡುಗಡೆಯಾಗಿದ್ದು ಇದರಿಂದ ಸಾಲ ಪಡೆದ ಫಲಾನುಭವಿಗಳು ಹಣವನ್ನು ಉತ್ಪಾದನೆಗಾಗಿ ಬಳಸಬೇಕು. ಈಗಾಗಲೇ ದೇಶಾದ್ಯಂತ ಪ್ಲಾಸ್ಟಿಕ್ ನಿಷೇಧ ಮಾಡಿರುವುದರಿಂದ ಬಟ್ಟೆ ಬ್ಯಾಗುಗಳ ತಯಾರಿಕೆ ಹಾಗೂ ಟೈಲರಿಂಗ್ ತರಬೇತಿ ನೀಡುವ ಕೆಲಸ ಮಾಡುವುದರಿಂದ ಆರ್ಥಿಕವಾಗಿ ಮುಂದುವರೆಯಬಹುದು ಎಂದರು.
ಬೇರೆಯವರ ಬಳಿ ದುಡಿಯುವ ಬದಲಿಗೆ ಸ್ವಯಂ ಉದ್ಯೋಗ ಮಾಡಬೇಕು. ತಾಲ್ಲೂಕಿನಾಧ್ಯಂತ ನಿವೇಶನ ರಹಿತರಿಗೆ ನಿವೇಶನ ಹಾಗೂ ಮನೆಯಿಲ್ಲದವರಿಗೆ ಮನೆ ನಿರ್ಮಿಸಿಕೊಡಲು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಅರ್ಹರಿಗೆ ಸಿಗುವಂತೆ ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
ಜೀವಿಕ ಜಿಲ್ಲಾ ಸಂಚಾಲಕ ನಾರಾಯಣಸ್ವಾಮಿ ಮಾತನಾಡಿ, ಇಂದಿಗೂ ಜೀತ ಪದ್ದತಿ ಜೀವಂತ ಇರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ವಿಷಯವಾಗಿದೆ. ಜೀತದಾಳುಗಳ ಬಿಡುಗಡೆ ಹಾಗೂ ಅವರು ಸಮಾಜದಲ್ಲಿ ಗೌರವವಯುತ ಜೀವನ ನಡೆಸಲು ಸರ್ಕಾರ ಅವರಿಗೆ ಕನಿಷ್ಠ ವೇತನ ನಿಗಧಿ ಮಾಡಬೇಕು. ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಜೀತಪದ್ದತಿ ಹೋಗಲಾಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಅನಸೂಯದೇವಿ, ದಸಂಸ ತಾಲ್ಲೂಕು ಸಂಚಾಲಕ ಎನ್.ವೆಂಕಟೇಶ್, ಜೀವಿಕ ತಾಲ್ಲೂಕು ಸಂಚಾಲಕ ನರಸಿಂಹಪ್ಪ, ಹೋಬಳಿ ಸಂಚಾಲಕ ಬಾಲರಾಜು, ಪದಾಧಿಕಾರಿಗಳಾದ ಮುನಿರಾಜು, ಅಮರಾವತಿ ಹಾಜರಿದ್ದರು.

ರಾಜ್ಯ ಆಹಾರ ಆಯೋಗದ ಸದಸ್ಯರಿಂದ ಪರಿಶೀಲನೆ

0

“ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013”ರ ಅನುಷ್ಠಾನದ ಕುರಿತು ಪರಿಶೀಲನೆ ನಡೆಸಲು ರಾಜ್ಯ ಆಹಾರ ಆಯೋಗದ ಡಾ.ಕೆ.ಕೃಷ್ಣಮೂರ್ತಿ ಅವರ ನೇತೃತ್ವದ ಸದಸ್ಯರ ತಂಡ ಶಿಡ್ಲಘಟ್ಟ ನಗರದ ವೇಣು ನ್ಯಾಯಬೆಲೆ ಅಂಗಡಿ, ಬೋವಿ ಕಾಲೋನಿ ಅಂಗನವಾಡಿ ಕೇಂದ್ರ, ಕೋಟೆ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಟೆ ಬಾಲಕಿಯರ ಕನ್ನಡ ಮತ್ತು ಆಂಗ್ಲ ಮಾದ್ಯಮ ಸರ್ಕಾರಿ ಶಾಲೆ ಮತ್ತು ಕೆ.ಎಫ್.ಸಿ.ಎಸ್.ಸಿ ಆಹಾರ ಧಾನ್ಯಗಳ ಸಗಟು ಮಳಿಗೆಗೆ ಭೇಟಿ ನೀಡಿ ಪರಿಶಿಲಿಸಿದರು.
ಮಕ್ಕಳ ಹಾಜರಾತಿ, ಹಾಲು ವಿತರಣೆ, ಬಿಸಿಯೂಟ, ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ ವ್ಯವಸ್ಥೆ, ಸ್ವಚ್ಛತೆ, ಸುರಕ್ಷತೆ, ಕಟ್ಟಡ ನಿರ್ಮಾಣ, ಆಹಾರ ಧಾನ್ಯಗಳ ಸಂಗ್ರಹಣೆ, ಬಳಕೆ ಮತ್ತು ವಿತರಣೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಅಂಗನವಾಡಿಯಲ್ಲಿ ಗರ್ಭಿಣಿಯರು ಹಾಗೂ ಬಾಣಂತಿ ಸ್ತ್ರೀಯರ ಸಂಖ್ಯೆ, ಅವರಿಗೆ ನೀಡುವ ಮಧ್ಯಾಹ್ನದ ಉಪಹಾರ ಹಾಗೂ ಧಾನ್ಯಗಳ ಪ್ರಮಾಣ, ಹಾಜರಾತಿ ಬಗ್ಗೆ ಆಯೋಗದ ಸದಸ್ಯರು ಮಾಹಿತಿ ಪಡೆದರು. ಅಂಗನವಾಡಿಗೆ ಬರದ ಮಕ್ಕಳ ಮನೆಗೆ ಭೇಟಿ ನೀಡಿ ಪೋಷಕರಿಗೆ ಸೌಲಭ್ಯಗಳು, ಕಲಿಕೆಯ ಮಹತ್ವ ಕುರಿತು ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನ್ಯಾಯಬೆಲೆ ಅಂಗಡಿಯ ಕಾರ್ಯವೈಖರಿಯ ಬಗ್ಗೆ ಪರಿಶೀಲಿಸಿದ ತಂಡ, ಸಕಾಲಕ್ಕೆ ಸಾರ್ವಜನಿಕರಿಗೆ ಪಡಿತರವನ್ನು ನೀಡಬೇಕು. ಪಡಿತರದ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಿದರು. ಅಂತ್ಯೋದಯ ಪಡಿತರ ಚೀಟಿಗೆ ಉಚಿತವಾಗಿ 35 ಕೆ.ಜಿ ಅಕ್ಕಿ, ಬಿ.ಪಿ.ಎಲ್ ಪಡಿತರ ಚೀಟಿಗೆ ಒಬ್ಬರಿಗೆ ತಲಾ 6 ಕೆ.ಜಿ ಅಕ್ಕಿ ಹಾಗೂ 1 ಕೆ.ಜಿ ರಾಗಿ ನೀಡಬೇಕು ಮತ್ತು ಅಡುಗೆ ಅನಿಲ ಹೊಂದದೆ ಇರುವವರಿಗೆ ಮೂರು ಲೀಟರ್, ಸಂಪರ್ಕ ಹೊಂದಿದವರಿಗೆ ಒಂದು ಲೀಟರ್ ಸೀಮೆಎಣ್ಣೆಯನ್ನು 35 ರೂ ದರದಲ್ಲಿ ವಿತರಿಸಬೇಕು ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಕೆ.ಕೃಷ್ಣಮೂರ್ತಿ, “ಈಗಾಗಲೇ ನಾವು ೨೨ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದೇವೆ. ಅಂಗನವಾಡಿ, ಶಾಲೆಯ ಬಿಸಿಯೂಟ, ಗೋದಾಮು ಹಾಸ್ಟೆಲ್ ಪರಿಶಿಲನೆ ನಡೆಸುತ್ತಿದ್ದೇವೆ. ಈ ಜಿಲ್ಲೆಯಲ್ಲಿ ಪ್ರವಾಸ ಮುಗಿಸಿ, ಅಕ್ಟೋಬರ್ 24 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆಯನ್ನು ನಡೆಸುತ್ತೇವೆ. ಸಣ್ಣಪುಟ್ಟ ಸಮಸ್ಯೆಗಳಿದ್ದಲ್ಲಿ ಅಲ್ಲಲ್ಲೇ ತಿಳಿಹೇಳುತ್ತೇವೆ. ಚೆನ್ನಾಗಿ ನಿರ್ವಹಣೆ ಮಾಡಿದ್ದರೆ ಮೆಚ್ಚುಗೆ ವ್ಯಕ್ತಪಡಿಸುತ್ತೇವೆ. ನಮ್ಮ ಎಲ್ಲಾ ಭೇಟಿಯ ವಿವರವನ್ನು ಸಭೆಯಲ್ಲಿ ಚರ್ಚಿಸುತ್ತೇವೆ. ಸರ್ಕಾರಗಳು ಅಪೌಷ್ಟಿಕತೆ ಮುಕ್ತ ಭಾರತ ನಿರ್ಮಾಣಕ್ಕೆ ಪಣತೊಟ್ಟಿವೆ. ಆದ್ದರಿಂದ ಅಂಗನವಾಡಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಉತ್ತಮ ಬೆಳವಣಿಗೆಗೆ ಪೂರಕವಾಗಿ ಹಾಲು ವಿತರಿಸಬೇಕು. ಮಧ್ಯಾಹ್ನ ದ್ವಿದಳ ಧಾನ್ಯಗಳ ಬಳಸಿ ತಯಾರಿಸಿರುವ ಊಟ ನೀಡಬೇಕು. ಇದು ನಮ್ಮ ಕಾಳಜಿಯಾಗಿದೆ” ಎಂದರು.
ಆಯೋಗದ ಸದಸ್ಯರಾದ ಶಿವಶಂಕರ್, ಮಹಮದ್ ಆಲಿ, ಬಿ.ಜಿ. ಆಸನಾಬಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ

ಸರ್ಕಾರಿ ಶಾಲೆಯನ್ನು ಚಂದಗೊಳಿಸಿದ ಸಾಫ್ಟ್ ವೇರ್ ಉದ್ಯೋಗಿಗಳು

0

ಶಿಡ್ಲಘಟ್ಟದ ಆಜಾದ್ ನಗರದ ಸರ್ಕಾರಿ ಉರ್ದು ಪ್ರೌಢಶಾಲೆಗೆ ಹೊಸ ಕಳೆ ಬಂದಿದೆ. ಹಲವು ವರ್ಷಗಳಿಂದ ಸುಣ್ಣಬಣ್ಣ ಕಾಣದಿದ್ದ ಈ ಶಾಲೆಯ ಗೋಡೆಗಳನ್ನು ಕಳೆದ ಮೂರು ದಿನಗಳಿಂದ ಬಳಿದಿರುವ್ವ ಬಣ್ಣ ಹಾಗೂ ಗೋಡೆಗಳ ಮೇಲೆ ರಚಿಸಿರುವ ಬಣ್ಣ ಬಣ್ಣದ ವಿನೂತನ ಶೈಲಿಯ ಚಿತ್ರಗಳಿಂದ ನೋಡುಗರ ಮನಸೆಳೆಯುವಂತಾಗಿದೆ. ಇದಕ್ಕೆ ಕಾರಣರಾದವರು ಸಾಫ್ಟ್ ವೇರ್ ಉದ್ಯೋಗಿಗಳು.
ಆಜಾದ್ ನಗರದ ಸರ್ಕಾರಿ ಉರ್ದು ಪ್ರೌಢಶಾಲೆಯ ಆವರಣ, ಸುತ್ತ ಮುತ್ತ ಸ್ವಚ್ಛಗೊಳಿಸಿದ್ದಾರೆ. ಕಳೆಗಿಡಗಳನ್ನೆಲ್ಲಾ ತೆಗೆಯಲಾಗಿದೆ. ಶಾಲೆಯ ಗೋಡೆಗಳ ಮೇಲೆ ವರ್ಲಿಯ ಪ್ರೇರಣೆಯಿಂದ, ಜಾಮಿತಿಕ ನಕ್ಷೆಗಳು, ವಿಜ್ಞಾನ, ಪರಿಸರ, ಶಿಕ್ಷಣ, ಕ್ರೀಡೆ, ಬಿಸಿಯೂಟ, ಸೈಕಲ್ ವಿತರಣೆ ಮೊದಲಾದ ಸರ್ಕಾರಿ ಯೋಜನೆಗಳು, ಕಂಪ್ಯೂಟರ್ ಮುಂತಾದವುಗಳಿರುವ ಸುಂದರ ಚಿತ್ರಗಳನ್ನು ರಚಿಸಲಾಗಿದೆ.
ಗ್ರಾಮಾಂತರ ಟ್ರಸ್ಟ್ ಮೂಲಕ ಸಿಟ್ರಿಕ್ಸ್ ಆರ್ ಅಂಡ್ ಡಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಸುಮಾರು ೨೫ ಮಂದಿ ಉದ್ಯೋಗಿಗಳು ಆಗಮಿಸಿ ತಮ್ಮ ಕಂಪೆನಿಯ ಹಣದಲ್ಲಿ ಗ್ರಾಮೀಣಾಭಿವೃದ್ಧಿಯ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
“ನಾವುಗಳು ಗ್ರಾಮಾಂತರ ಟ್ರಸ್ಟ್ ಸಹಯೋಗದಲ್ಲಿ ಆಜಾದ್ ನಗರದ ಸರ್ಕಾರಿ ಉರ್ದು ಪ್ರೌಢಶಾಲೆಯ ಗೋಡೆಗಳಿಗೆ ಬಣ್ಣ ಬಳಿದಿದ್ದೇವೆ. ಅದರ ಮೇಲೆ ಚಿತ್ರಗಳನ್ನು ರಚಿಸುತ್ತಿದ್ದೇವೆ. ಕಳೆದ ಎರಡು ವರ್ಷಗಳಿಂದ ನಾವು ಚಿಕ್ಕಬಳ್ಳಾಪುರ ಜಿಲ್ಲೆಯ ಹಲವು ಶಾಲೆಗಳಲ್ಲಿ ಈ ರೀತಿಯ ಚಟುವಟಿಕೆ ನಡೆಸಿದ್ದೇವೆ. ಇದಲ್ಲದೆ ನಾವು ಮಕ್ಕಳೊಂದಿಗೆ ಸಂವಾದಿಸುತ್ತಾ ಅವರಿಗೆ ಸುಲಭ ಗಣಿತ, ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವ ಬಗೆ, ಉತ್ತೇಜನ ತುಂಬುವ, ಕಲಿಕಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಕೌಶಲಗಳನ್ನು ಕಲಿಸುತ್ತಿದ್ದೇವೆ. ನಾವು ಈ ರೀತಿಯ ಸಾಮಾಜಿಕ ಚಟುವಟಿಕೆ ನಡೆಸಲು ನಮ್ಮ ಕಂಪೆನಿ ನೆರವಾಗುತ್ತದೆ” ಎಂದು ಕಂಪೆನಿಯ ಸೋಹಿನಿ ತಿಳಿಸಿದರು.
“ಶಾಲೆಯ ಗೋಡೆಯನ್ನು ವರ್ಲಿಯ ರೂಪಾಂತರದಿಂದ, ಜಾಮಿತಿಕ ನಕ್ಷೆಗಳು, ರೇಖಾ ಚಿತ್ರಗಳು, ವಿಜ್ಞಾನ, ಪರಿಸರ, ಶಿಕ್ಷಣ, ಕ್ರೀಡೆ ಮೊದಲಾದ ಚಿತ್ರಗಳಿಂದ ಚಂದಗೊಳಿಸಲು ಬೆಂಗಳೂರಿನಿಂದ ಬಂದಿರುವ ಸಿಟ್ರಿಕ್ಸ್ ಕಂಪೆನಿಯ ಉದ್ಯೋಗಿಗಳಿಗೆ ಸರ್ಕಾರಿ ಶಾಲೆಯ ಕಲಾ ಶಿಕ್ಷಕರಾದ ಎಂ.ನಾಗರಾಜ್, ಜಿ.ಅರುಣ, ಬಿ.ಜೆ.ಸಿದ್ದೇಶ್ ಬಂಡಿಮನೆ, ಎನ್.ಆರ್.ಸಂತೋಷ್ ಕುಮಾರ್ ನೆರವಾಗುತ್ತಿದ್ದಾರೆ” ಎಂದು ಗ್ರಾಮಾಂತರ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟೀ ಉಷಾ ಶೆಟ್ಟಿ ಹೇಳಿದರು.
“ನಮ್ಮ ಶಾಲೆಯ ಮತ್ತು ಮಕ್ಕಳ ಅದೃಷ್ಟವಿದು. ಸಿಟ್ರಿಕ್ಸ್ ಕಂಪೆನಿಯ ಉದ್ಯೋಗಿಗಳು ತಮ್ಮ, ಶ್ರಮ, ಸಮಯ ಮತ್ತು ಹಣವನ್ನು ಸರ್ಕಾರಿ ಶಾಲೆಗೆ ಮೀಸಲಿಟ್ಟು ನಮ್ಮ ಶಾಲೆಯನ್ನು ಸ್ವಚ್ಛಗೊಳಿಸಿ, ಸಿಂಗರಿಸಿದ್ದಾರೆ” ಎಂದು ಸರ್ಕಾರಿ ಉರ್ದು ಪ್ರೌಢಶಾಲೆಯ ಮುಖ್ಯಶಿಕ್ಷಕ ಎಚ್.ಎಂ.ರಂಗನಾಥ್ ತಿಳಿಸಿದರು.
ಗ್ರಾಮಾಂತರ ಟ್ರಸ್ಟ್ ಸಂಚಾಲಕರಾದ ಅಭಿಷೇಕ್, ಅನಂತಲಕ್ಷ್ಮಿ, ನಾಗರಾಜ್, ಶಿಕ್ಷಕರಾದ ಫಾತೀಮುನ್ನೀಸಾ, ಹರ್ಷಿಕಮರ್, ಶಬೀನಾಬಾನು, ಸುಹೇಲ್ ಅಹಮದ್, ವಿಶ್ವನಾಥ್, ವೆಂಕಟೇಶ್, ಕೆ.ಎನ್.ಸುಬ್ಬಾರೆಡ್ಡಿ ಹಾಜರಿದ್ದರು.

ನಗರಸಭೆಗೆ ಜೆ.ಸಿ.ಬಿ ಯಂತ್ರ ಹಸ್ತಾಂತರ ಮತ್ತು ಸೋಲಾರ್ ದೀಪಗಳಿಗೆ ಚಾಲನೆ

0

ನಗರಸಭೆ ಆವರಣದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎ.ನಾಗಾಂಬಿಕಾದೇವಿ, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್, ಎ.ಸಿ ರಘುನಂದನ್, ಯೋಜನಾ ನಿರ್ದೇಶಕಿ ರೇಣುಕಾ ಮತ್ತು ಶಾಸಕ ವಿ.ಮುನಿಯಪ್ಪ ಸುಮಾರು ೨೫ ಲಕ್ಷ ರೂ ವೆಚ್ಚದ ಜೆ.ಸಿ.ಬೆ ಯಂತ್ರವನ್ನು ನಗರಸಭೆ ಪೌರಾಯುಕ್ತ ಶ್ರೀಕಾಂತ್ ಅವರಿಗೆ ಸಾಂಕೇತಿಕವಾಗಿ ಬೀಗದ ಕೈ ನೀಡುವ ಮೂಲಕ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿ, “ನಗರಸಭೆಯಾದ ಮೇಲೆ ನಗರೋತ್ಥಾನದಲ್ಲಿ ೪೦ ಕೋಟಿ ರೂಪಾಯಿ ಬಂದಿದ್ದು, ಸಾಕಷ್ಟು ಕೆಲಸಗಳಾಗಿವೆ, ಇನ್ನೂ ಆಗಬೇಕಾದ ಕೆಲಸಗಳು ಬಹಳ ಇವೆ. ನಗರದ ಅಭಿವೃದ್ಧಿಗೆ ಹೆಚ್ಚುವರಿ ಹಣವನ್ನು ನಗರೋತ್ಥಾನದ ಮೂಲಕ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರನ್ನು ವಿನಂತಿ ಮಾಡಿದರು.
ನಗರಸಭೆ ಎಂದು ಉನ್ನತೀಕರಣಗೊಳಿಸಿದ ನಂತರ ಬೇಕಾದ ಎಲ್ಲಾ ಸೌಲತ್ತುಗಳು ಸಂಪೂರ್ಣವಾಗಿ ಸಿಕ್ಕಿಲ್ಲ. ಆರ್ಥಿಕ ಶಕ್ತಿಯನ್ನು ತಾವು ಕೊಡಬೇಕು. ಕಳೆದ ಐದು ತಿಂಗಳ ಹಿಂದೆ ಚುನಾವಣೆ ನಡೆಯಿತು, ಆದರೆ ಅಧ್ಯಕ್ಷ ಚುನಾವಣೆ ನಡೆಯದೇ ಅಭಿವೃದ್ಧಿಗೆ ಅಡಚಣೆಯಾಗಿದೆ. ದಯಮಾಡಿ, ನಗರಸಭೆ ಅಧ್ಯಕ್ಷ ಚುನಾವಣೆಗೆ ಹಾಕಿರುವ ನಿರ್ಭಂದವನ್ನು ದಯಮಾಡಿ ತೆರವುಗೊಳಿಸಿ. ನಗರ ೨೦ ವರ್ಷದಿಂದೀಚೆಗೆ ತುಂಬಾ ಬೆಳೆದಿದೆ, ನಗರದಲ್ಲಿ ಶೇ ೫೯ ರಷ್ಟು ಯುಜಿಡಿ ಮಾಡಬೇಕಿದೆ. ಅದಕ್ಕೂ ತಮ್ಮ ಸಹಕಾರ ಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಸೋಲಾರ್ ಶಕ್ತಿಯಿಂದ ಉರಿಯುವ ೨೦ ಎ.ಇ.ಡಿ ಬೀದಿ ದೀಪಗಳಿಗೆ ಚಾಲನೆ ನೀಡಲಾಯಿತು. ಮನೆಗಳಿಗೆ ಮಳೆ ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಂಡಿರುವವರಿಗೆ ನಗರಸಭೆ ವತಿಯಿಂದ ಪ್ರೋತ್ಸಾಹದಾಯಕವಾಗಿ ಪ್ರಶಂಸನಾ ಪತ್ರಗಳನ್ನು ವಿತರಿಸಲಾಯಿತು.

ಗಾಂಧೀಜಿಯವರ ಬದುಕು ನಮಗೆ ಪ್ರೇರಣೆಯಾಗಲಿ – ಗಾಂಧೀವಾದಿ ವೇಮಗಲ್ ಸೋಮಶೇಖರ್

0

ನಗರ ಶಾಖಾ ಗ್ರಂಥಾಲಯದಲ್ಲಿ ಭಾನುವಾರ ಶಿಡ್ಲಘಟ್ಟ ತಾಲ್ಲೂಕು ಕನ್ನಡ ಸಾರಸ್ವತ ಪರಿಚಾರಿಕೆ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ ಇವರ ಸಹಯೋಗದೊಂದಿಗೆ ನಡೆದ “ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ” 23 ನೇ ತಿಂಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿರಿಯ ಗಾಂಧೀವಾದಿ ಹಾಗೂ ಸಾಹಿತಿ ವೇಮಗಲ್ ಸೋಮಶೇಖರ್ ಮಾತನಾಡಿದರು.
ಗಾಂಧೀಜಿ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ನಾಯಕರು. ಗಾಂಧೀಜಿಯವರ ಸಮಯಪ್ರಜ್ಞೆ, ಸರಳ ಜೀವನ, ಸೇವಾ ಮನೋಭಾವ, ಸ್ವಚ್ಛತೆ, ನುಡಿದಂತೆ ನಡೆದ ಅವರ ಬದುಕು ನಮಗೆಲ್ಲಾ ಪ್ರೇರಣೆಯಾಗಬೇಕು ಎಂದು ಅವರು ತಿಳಿಸಿದರು.
ಗಾಂಧೀಜಿ ಮತ್ತು ಕಸ್ತೂರಬಾ ಇಬ್ಬರದ್ದೂ ೧೫೦ ನೇ ಜನ್ಮವರ್ಷಾಚರಣೆಯ ಸಂದರ್ಭವಿದು. ಗಾಂಧೀಜಿಯವರದ್ದು ಮೇರು ವ್ಯಕ್ತಿತ್ವ. ಅವರನ್ನು ಕಂಡವರು, ಓದಿದವರು ಅವರಿಂದ ಪ್ರಭಾವಿತರಾಗಿದ್ದಾರೆ. ೧೯೩೬ ರಲ್ಲಿ ನಂದಿಬೆಟ್ಟಕ್ಕೆ ಬಂದಿದ್ದ ಗಾಂಧೀಜಿಯವರು ನಂತರ ಅಲ್ಲಿಂದ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ ಮಾರ್ಗವಾಗಿ ಕೋಲಾರ ಮತ್ತು ಬಂಗಾರಪೇಟೆಗೆ ಹೋಗಿದ್ದರು. ಶಿಡ್ಲಘಟ್ಟದಲ್ಲಿ ಆಗಿನ ಪುರಸಭಾ ಉಪಾಧ್ಯಕ್ಷರಾಗಿದ್ದ ಬಿ.ವಿರೂಪಾಕ್ಷಪ್ಪನವರು ದೇಣಿಗೆ ನೀಡಿ ಅವರಿಂದ ಪ್ರೇರಿತರಾಗಿ ಪ್ರೌಢಶಾಲೆಯನ್ನು ಕಟ್ಟಿದರು. ಇದರಿಂದ ಸಾಕಷ್ಟು ಮಂದಿಗೆ ಸಹಾಯವಾಯಿತು ಎಂದು ಹೇಳಿದರು.
“ಸ್ವಚ್ಛತೆಯೇ ಭಗವಂತ” ಎಂದು ನಂಬಿದವರು ಗಾಂಧೀಜಿ. ಅಡುಗೆ ಮನೆಯಷ್ಟೇ ಶುಚಿಯಾಗಿ ನಮ್ಮ ಶೌಚಾಲಯವನ್ನು ಇಟ್ಟುಕೊಳ್ಳಬೇಕೆಂದು ಹೇಳುವುದಲ್ಲದೆ, ತಾವೇ ಶೌಚಾಲಯವನ್ನು ಶುಚಿಮಾಡುತ್ತಿದ್ದರು. ಅವರ ಆಶ್ರಮದಲ್ಲಿ ಆಶ್ರಿತರಾಗಿ ಬಂದ ಕುಷ್ಠರೋಗಿಗಳಿಗೆ ಅವರೇ ಸೇವೆ ಮಾಡುತ್ತಿದ್ದರು. ಸರಳವಾಗಿ ಮದುವೆ ಮಾಡಿಸುತ್ತಿದ್ದರು. ಚಪ್ಪಲಿ ಹಾಕದೇ ಓಡಾಡುತ್ತಿದ್ದರು. ನಮ್ಮ ರೈತರನ್ನು ಅವರು ಗಮನಿಸಿ, ರೈತರಂತೆಯೇ ಕಚ್ಚೆಯೆಂಬ ತುಂಡುಡುಗೆ ಧರಿಸಲು ತೀರ್ಮಾನಿಸಿ ಅದರಂತೆಯೇ ಜೀವನದುದ್ದಕ್ಕೂ ಬದುಕಿದರು. ಇಂಗ್ಲೆಂಡಿಗೆ ಹೋದಾಗಲೂ ತಮ್ಮ ತುಂಡುಡುಗೆಯಲ್ಲಿಯೇ ಇದ್ದರು. ಮೇಕೆಯ ಹಾಲು ಕುಡಿಯುತ್ತಿದ್ದರು ಎಂದರು.
ನಂದಿಬೆಟ್ಟದಲ್ಲಿ ತಂಗಿದ್ದಾಗ ತಮಗೆ ಕ್ಷೌರ ಮಾಡುತ್ತಿದ್ದ ಸುಲ್ತಾನಪೇಟೆಯ ವೆಂಕಟಪ್ಪನ ಭುಜದ ಮೇಲೆ ಕೈಹಾಕಿ ಕಷ್ಟಸುಖ ವಿಚಾರಿಸುತ್ತಿದ್ದರು. ಆತನ ಮಗಳಿಂದ ಪಂಡರಿಭಜನೆ ಹಾಡಿಸಿ ಕಸ್ತೂರಬಾ ಅವರಿಂದ ರವಿಕೆ ಬಟ್ಟೆ ಕೊಟ್ಟು ಆಶೀರ್ವದಿಸಿದ್ದರು. ನಂದಿಬೆಟ್ಟಕ್ಕೆ ಎರಡನೇ ಬಾರಿ ಬಂದಾಗ ಕುರುವತ್ತಿ ಕಡೆಯಿಂದ ಕಾಲುದಾರಿಯಲ್ಲಿ ನಡೆದು ಗಾಂಧೀಜಿ ಬೆಟ್ಟ ಹತ್ತಿದ್ದರು. ಗೌರಿಬಿದನೂರಿನ ಎಚ್.ನರಸಿಂಹಯ್ಯನವರಿಗೆ ಬಾಲ್ಯದಲ್ಲಿಯೇ ಗಾಂಧೀಜಿ ಪ್ರೇರಣೆ ನೀಡಿದ್ದರು ಎಂದು ಹೇಳಿದರು.
ಪುಸ್ತಕಗಳು ಜ್ಞಾನಾರ್ಜನೆಯ ಸಾಧನಗಳು. ಪುಸ್ತಕ ಓದುವ ಹವ್ಯಾಸವುಳ್ಳವನು ಎಲ್ಲಿ ಹೋದರೂ ಸಂತೋಷವಾಗಿರಬಲ್ಲ. ಮಕ್ಕಳಿಗೆ ಓದುವ ಹವ್ಯಾಸವನ್ನು ರೂಢಿಸಿ ಎಂದು ನುಡಿದರು.
ನಗರಸಭಾ ಸದಸ್ಯ ಎಂ.ಮುನಿರಾಜು ಮಾತನಾಡಿ, ಗಾಂಧೀಜಿಯವರನ್ನು ವಿಶ್ವವೇ ಕೊಂಡಾಡುತ್ತಿದೆ. ಅವರ ೧೫೦ ನೇ ಜನ್ಮರ್ಷಾಚರಣೆಯ ಸಂದರ್ಭದಲ್ಲಿ ಗ್ರಂಥಾಲಯದಲ್ಲಿ ಗಾಂಧೀಜಿಯವರ ಕುರಿತಾದ ಕಾರ್ಯಕ್ರಮ ಆಯೋಜಿಸಿರುವುದು ಸೂಕ್ತವಾಗಿದೆ. ಮಹಾತ್ಮರ ಬದುಕನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು. ಅದರಿಂದ ನಮ್ಮ ಆಲೋಚನೆ ಖಂಡಿತ ಬದಲಾಗುವುದು ಎಂದರು.
ಕನ್ನಡ ಸಾರಸ್ವತ ಪರಿಚಾರಿಕೆ (ಕಸಾಪ) ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಕೋಲಾರ ಜಿಲ್ಲೆ ವೇಮಗಲ್ ಮೂಲದವರಾದ ಇವರು ಉಪಾದ್ಯಾಯ ವೃತ್ತಿಯನ್ನು ಆರಂಭಿಸಿ,ಭಾರತೀಯ ದೂರವಾಣಿ ಇಲಾಖೆಯಲ್ಲಿ ಟೆಕ್ನಿಕಲ್ ಅಸಿಸ್ಟೆಂಟ್ ಆಗಿ ನಿವೃತ್ತಿ ಹೊಂದಿದ್ದಾರೆ. ಕರ್ನಾಟಕ ಇತಿಹಾಸ ಅಕಾಡೆಮಿಯ ಕಾರ್ಯದರ್ಶಿಯಾಗಿ, ಹವ್ಯಾಸಿ ಲೇಖಕರಾಗಿ ಬೆಂಗಳೂರು ಹಾಗೂ ಕರ್ನಾಟಕದ ಇತಿಹಾಸದ ಬಗ್ಗೆ ಅನೇಕ ಸಂಶೋಧನಾತ್ಮಕ ಲೇಖನಗಳನ್ನು ಬರೆದಿದ್ದಾರೆ. ಬೆಂಗಳೂರಿನಲ್ಲಿ ಮಹಾತ್ಮ ಗಾಂಧಿ ಮತ್ತು ಕರ್ನಾಟಕದಲ್ಲಿ ರವೀಂದ್ರನಾಥ ಠಾಗೋರ್ ಸಂಬಂಧಿಸಿದಂತೆ ಹೆಚ್ಚಿನ ಪರಿಣತಿ ಹೊಂದಿದ್ದಾರೆ. ಇವರು 11 ಪುಸ್ತಕಗಳನ್ನು ಬರೆದಿದ್ದು, ಹೆಚ್ಚಿನವು ಗಾಂಧೀಜಿ ಕುರಿತದ್ದಾಗಿವೆ ಎಂದು ಸಾಹಿತಿಗಳ ಪರಿಚಯ ಮಾಡಿಕೊಟ್ಟರು.
ಗಾಂಧೀವಾದಿ ಹಾಗೂ ಸಾಹಿತಿ ವೇಮಗಲ್ ಸೋಮಶೇಖರ್ ಅವರು ತಮ್ಮ ಕೆಲವು ಪುಸ್ತಕಗಳನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು. ಕನ್ನಡ ಸಾರಸ್ವತ ಪರಿಚಾರಿಕೆ (ಕಸಾಪ) ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್, ಗ್ರಂಥಪಾಲಕಿ ರಾಮಲೀಲಾ, ನಿವೃತ್ತ ಶಿಕ್ಷಕ ಸುಂದರನ್, ಚಲನಚಿತ್ರ ನಟ ಸಿ.ಎನ್.ಮುನಿರಾಜು, ವೃಷಬೇಂದ್ರಪ್ಪ, ಮಧುಸೂದನ್, ಗೋಪಾಲಕೃಷ್ಣ, ಲಕ್ಷ್ಮೀಕಾಂತ್, ಲಕ್ಷ್ಮೀನಾರಾಯಣ, ಮಕ್ಸೂದ್ ಹಾಜರಿದ್ದರು.

ಅಂಕತಟ್ಟಿ ಗ್ರಾಮಸ್ಥರ ಧರಣಿ ಸ್ಥಳಕ್ಕೆ ಸಿ.ಇ.ಒ ಭೇಟಿ

0

ತಾಲ್ಲೂಕಿನ ಮಳ್ಳೂರಿನ ಗ್ರಾಮ ಪಂಚಾಯಿತಿ ಮುಂದೆ ಅಂಕತಟ್ಟಿ ಗ್ರಾಮಸ್ಥರು ನಡೆಸುತ್ತಿದ್ದ ಅನಿರ್ಧಿಷ್ಟಾವಧಿ ಧರಣಿ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಫೌಜೀಯಾ ತರುನ್ನುಮ್ ಶನಿವಾರ ಭೇಟಿ ಗ್ರಾಮಸ್ಥರ ಅಹವಾಲನ್ನು ಆಲಿಸಿದರು.
ತಾಲ್ಲೂಕಿನ ಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಕತಟ್ಟಿ ಗ್ರಾಮದಲ್ಲಿ ಗ್ರಾಮಠಾಣೆ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು, ಅಕ್ರಮವಾಗಿ ದಾಖಲೆಗಳು ಮಾಡಿಕೊಂಡಿದ್ದಾರೆ. ನಾವು ಸರ್ಕಾರಿ ಭೂಮಿ ಉಳಿಸಬೇಕು ಎಂದು ಹೋರಾಟ ಮಾಡುತ್ತಿದ್ದೇವೆ. ನಮಗೆ ನ್ಯಾಯ ಒದಗಿಸಿಕೊಡಿ ಎಂದು ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ನಾವು ಊರಿನಲ್ಲಿ ವಾಸಮಾಡಲಿಕ್ಕೂ ಭಯಪಡುವಂತಹ ಸನ್ನಿವೇಶ ನಿರ್ಮಾಣವಾಗಿದೆ. ನಮ್ಮ ಮನೆಗಳಲ್ಲಿ ಗಂಡಸರು ಸರ್ಕಾರಿ ಭೂಮಿ ಉಳಿಸಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಭೂಮಿಯನ್ನು ಅಕ್ರಮವಾಗಿ ದಾಖಲೆ ಮಾಡಿಕೊಂಡಿರುವವರು, ಅವರ ಮೇಲೆ ವಿನಾಕಾರಣ ಕೇಸುಗಳು ದಾಖಲಿಸುತ್ತಾರೆ. ಇದರಿಂದ ಭಯಗೊಂಡು ನಮ್ಮ ಮನೆಗಳಲ್ಲಿನ ಗಂಡಸರು ಊರು ಬಿಟ್ಟು ಹೋಗುತ್ತಾರೆ. ನಾವು ಜೀವನ ಮಾಡೋದು ಹೇಗೆ? ನಮಗೆ ವಿನಾಕಾರಣ ಮಾನಸಿಕವಾಗಿ ಕಿರುಕುಳ ನೀಡುತ್ತಾರೆ. ನಮಗೆ ರಕ್ಷಣೆ ನೀಡುವವರು ಯಾರು? ಎಂದು ತಮ್ಮ ಸಮಸ್ಯೆಯನ್ನು ಮಹಿಳೆಯರು ಹೇಳಿಕೊಂಡರು.
ಮುಖಂಡ ವೆಂಕಟರೆಡ್ಡಿ ಮಾತನಾಡಿ, ನಮ್ಮ ಗ್ರಾಮದ ೨೫ ಕ್ಕೂ ಹೆಚ್ಚು ಮಂದಿಯ ಮೇಲೆ ಕೇಸು ದಾಖಲಿಸಿದ್ದಾರೆ. ಹೈಕೋರ್ಟ್‌ನಲ್ಲಿ ಬೇಲ್ ತೆಗೆದುಕೊಳ್ಳಬೇಕಾಯಿತು. ಅಧಿಕಾರಿಗಳು ಮಾಡಿರುವ ತಪ್ಪುಗಳಿಗೆ ನಾವು ಶಿಕ್ಷೆ ಅನುಭವಿಸುವಂತಾಗಿದೆ. ನೀವು ಗ್ರಾಮಕ್ಕೆ ಬಂದು ಪರಿಶೀಲನೆ ಮಾಡಿ, ನಮಗೆ ನ್ಯಾಯ ಒದಗಿಸಿಕೊಡಿ. ವಿಜಯಪುರದವರನ್ನು ಎತ್ತಿಕಟ್ಟಿ ನಮ್ಮ ಮೇಲೆ ಅಟ್ರಾಸಿಟಿ ಕೇಸು ದಾಖಲು ಮಾಡಿಸಲು ಪ್ರಯತ್ನ ಮಾಡಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಫೌಜೀಯಾ ತರುನ್ನುಮ್ ಮಾತನಾಡಿ, ಅಂಕತಟ್ಟಿ ಗ್ರಾಮದಲ್ಲಿ ಅಕ್ರಮವಾಗಿ ಖಾತೆಗಳಾಗಿವೆ ಎನ್ನಲಾಗುತ್ತಿರುವ ದಾಖಲೆಗಳನ್ನೆಲ್ಲಾ ಈಗಲೇ ತಾಲ್ಲೂಕು ಪಂಚಾಯಿತಿ ಇ.ಓ.ಅವರ ಸುಪರ್ಧಿಗೆ ಕೊಡಿ. ಜಿಲ್ಲಾ ಪಂಚಾಯಿತಿ ಹಂತದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ. ಅವರು ತಾಲ್ಲೂಕು ಪಂಚಾಯಿತಿಗೆ ಬಂದು ದಾಖಲೆಗಳು ಪರಿಶೀಲನೆ ನಡೆಸುತ್ತಾರೆ. ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಯಾರೇ ತಪ್ಪು ಮಾಡಿದ್ದರೂ ಅವರ ಮೇಲೆ ನೇರವಾಗಿ ಕ್ರಮ ಜರುಗಿಸಲಾಗುತ್ತದೆ. ಸದರಿ ಭೂಮಿಯನ್ನು ಅಳತೆ ಮಾಡಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ನಾನು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮುಖಂಡರಿಗೂ ತಿಳಿಸಿದ್ದೇನೆ. ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಪರಿಶೀಲನೆ ನಡೆಸುತ್ತೇವೆ. ನಿಮಗೆ ನ್ಯಾಯಒದಗಿಸಿಕೊಡುವ ಹೊಣೆಗಾರಿಕೆ ನನ್ನದು ಎಂದು ಭರವಸೆ ನೀಡಿದ ನಂತರ ಪ್ರತಿಭಟನಾ ನಿರತರು ಧರಣಿ ಕೈ ಬಿಟ್ಟರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಮ್ಮಶಿವಕುಮಾರ್, ಪಿಡಿಒ ಮಮತ, ಕಾರ್ಯದರ್ಶಿ ಕೃಷ್ಣಪ್ಪ, ಸದಸ್ಯ ರವಿಕುಮಾರ್,ಶಿವಣ್ಣ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಪುಟ್ಟಣ್ಣಯ್ಯ ಬಣ)ಯ ಜಿಲ್ಲಾ ಪ್ರಧಾನಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ, ಗ್ರಾಮಸ್ಥರಾದ ಜಗನ್ನಾಥ್, ಬಾಬು, ನಾರಾಯಣಸ್ವಾಮಿ, ಎಸ್.ದೇವರಾಜು, ಕೆ.ದೇವರಾಜು, ಅನಿತಮ್ಮ, ಅಮೃತ, ರತ್ನಮ್ಮ, ಗೌರಮ್ಮ, ನಾರಾಯಣಮ್ಮ, ರಾಧಮ್ಮ, ಶ್ರೀನಿವಾಸ್, ಅರುಣ್‌ಕುಮಾರ್, ಚನ್ನೇಗೌಡ, ನಾಗರಾಜ್, ಶಂಕರನಾರಾಯಣ, ಶ್ರೀನಿವಾಸ್, ಶ್ರೀಧರ್, ಚಿಕ್ಕವೆಂಕಟರಾಯಪ್ಪ ಹಾಜರಿದ್ದರು.

ಸಾರ್ವಜನಿಕರಿಂದ ಕುಂದುಕೊರತೆಗಳನ್ನು ಕೇಳಲು ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮ

0

ಕಳೆದ ಬಾರೊಯ ಫೋನ್ ಇನ್ ಕಾರ್ಯಕ್ರಮದಲ್ಲಿ ಹದಿಮೂರು ಕರೆಗಳು ಬಂದಿದ್ದು, ಅವುಗಳಲ್ಲಿ ೧೧ ಕ್ಕೆ ಪರಿಹಾರ ಒದಗಿಸಲಾಗಿದೆ, ಉಳಿದ ಎರಡು ಪರಿಹಾರ ದೊರಕಿಸುವ ಹಂತದಲ್ಲಿದೆ ಎಂದು ತಹಶೀಲ್ದಾರ್ ಎಂ.ದಯಾನಂದ್ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ಶನಿವಾರ ನಾಲ್ಕನೇ ಫೋನ್ ಇನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ದಿನದ ಫೋನ್ ಇನ್ ಕಾರ್ಯಕ್ರಮದಲ್ಲಿ ಹನ್ನೊಂದು ಕರೆಗಳು ಸಾರ್ವಜನಿಕರಿಂದ ಬಂದವು. ಮೊದಲನೇ ಕರೆ ಕುಂದಲಗುರ್ಕಿ ಸಂತೋಷ್ ಮಾಡಿ, ಗ್ರಾಮದ ಸರ್ವೆ ನಂಬರ್ ೪೨ ರಲ್ಲಿ ಕೋಳಿಫಾರಂ ಮಾಡಿದ್ದಾರೆ. ಅದರಿಂದ ಸುತ್ತಮುತ್ತಲಿನ ಮನೆಗಳವರಿಗೆ ತೊಂದರೆಗಳಾಗುತ್ತಿವೆ ಎಂದರು. ಹರಳಹಳ್ಳಿಯ ಸುರೇಶ್, ಹರಳಹಳ್ಳಿ ಮತ್ತು ಎಲ್.ಮುತ್ತುಗದಹಳ್ಳಿಯ ನಡುವೆ ರಾಜಕಾಲುವೆ ಒತ್ತುವರಿಯ ಬಗ್ಗೆ ದೂರಿದರು. ಎದ್ದಲತಿಪ್ಪೇನಹಳ್ಳಿ ಸುರೇಶ್ ಅವರು ಸಾರ್ವಜನಿಕ ಸ್ಮಶಾನದ ಬಗ್ಗೆ ಕೇಳಿದರು.
ಎಲ್.ಮುತ್ತುಗದಹಳ್ಳಿಯ ಮಂಜುನಾಥರೆಡ್ಡಿ, ಗ್ರಾಮದ ರುದ್ರಭೂಮಿ ಸಾಲುತ್ತಿಲ್ಲ ಎಂದು ತಿಳಿಸಿದರು. ವಾರಹುಣಸೇನಹಳ್ಳಿಯ ಸುರೇಶ್ ಆಧಾರ್ ಸಮಸ್ಯೆಯ ಬಗ್ಗೆ ತಿಳಿಸಿದರು. ವಾಸವಿ ರಸ್ತೆಯ ಮೋಹನ್ ಫುಟ್ ಪಾತ್ ಒತ್ತುವರಿಯನ್ನು ತೆರವುಗೊಳಿಸಿಕೊಡುವಂತೆ ಕೋರಿದರು. ಬಚ್ಚಹಳ್ಳಿಯ ಶ್ರೀಕಾಂತ್ ಗ್ರಾಮದ ರಸ್ತೆಯ ಬಗ್ಗೆ ಕೇಳಿದರು.
ಎಲ್ಲಾ ಸಮಸ್ಯೆಗಳಿಗೂ ಪರಿಹಾರಗಳನ್ನು ಒದಗಿಸಲಾಗುವುದು. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ಫೋನ್ ಮೂಲಕ ತಿಳಿಸಿ, ಪರಿಹಾರ ಕಂಡುಕೊಳ್ಳಲಿ ಎಂದು ಜನಸ್ನೇಹಿ ಆಡಳಿತ ನೀಡಬೇಕು ಎಂಬ ಉದ್ದೇಶದಿಂದ ಈ ಫೋನ್ ಇನ್ ಕಾರ್ಯಕ್ರಮವನ್ನು ಆಯೋಜಿಸಿದ್ದು ಇದರ ಸದುಪಯೋಗಪಡಿಸಿಕೊಳ್ಳುವಂತೆ ತಹಶೀಲ್ದಾರ್ ಎಂ.ದಯಾನಂದ್ ಮನವಿ ಮಾಡಿದರು.

ಗ್ರಾಮ ಪಂಚಾಯಿತಿ, ಅಂಗನವಾಡಿಗೆ ಸಿಇಒ ಭೇಟಿ

0

ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು, ಅಧಿಕಾರಿ ಹಾಗೂ ಸಿಬ್ಬಂದಿ ನಿಮ್ಮ ವ್ಯಾಪ್ತಿಯ ಸರ್ಕಾರಿ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ಆಗಾಗ ಭೇಟಿ ನೀಡಬೇಕು. ಮಕ್ಕಳೊಂದಿಗೆ ಬಿಸಿ ಊಟ ಮಾಡಿ, ಅವರ ಸಮಸ್ಯೆಗಳನ್ನು ಕೇಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿಗೆ ಶನಿವಾರ ಭೇಟಿ ನೀಡಿ ಅವರು ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿಯೊಂದಿಗೆ ಮಾತನಾಡಿದರು.
ನರೇಗಾ ಯೋಜನೆಯಲ್ಲಿ ಹೆಚ್ಚೆಚ್ಚು ಕೆಲಸಗಳನ್ನು ಮಾಡಿಸಿ. ಗ್ರಾಮದ ಜನರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಅರಿವನ್ನು ಮೂಡಿಸಿ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಅಳವಡಿಸಿದ ಮಳೆ ಕೊಯ್ಲು, ಶುದ್ಧ ನೀರಿನ ಘಟಕವನ್ನು ಪರಿಶಿಲಿಸಿ, ನರೇಗಾ ಯೋಜನೆಯಡಿ ನಡೆದಿರುವ ಕಾಮಗಾರಿಗಳ ಮಾಹಿತಿ ಪಡೆದರು. ಹತ್ತಿರದ ಕೇಶವಪುರದಲ್ಲಿ ನಿರ್ಮಿಸುತ್ತಿರುವ ಹೊಸ ಅಂಗನವಾಡಿ ಕಟ್ಟಡದ ಕಾಮಗಾರಿಯನ್ನು ಪರಿವೀಕ್ಷಿಸಿ, ಬಾಡಿಗೆ ಕಟ್ಟಡದಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳನ್ನು ಮಾತನಾಡಿಸಿದರು. ಬಾಣಂತಿಯರ ಮತ್ತು ಗರ್ಭಿಣಿಯರ ಆಹಾರವನ್ನು ಪರೀಕ್ಷಿಸಿದರು. ಚೀಮನಹಳ್ಳಿಯಲ್ಲಿ ನರೇಗಾ ಯೋಜನೆಯಡಿ ನಿರ್ಮಾಣವಾದ ನೀರಿನ ಹೊಂಡವನ್ನು ವೀಕ್ಷಿಸಿದರು.
ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್, ನರೇಗಾ ಸಹಾಯಕ ನಿರ್ದೇಶಕ ತನ್ವೀರ್ ಅಹಮದ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿಯಪ್ಪ, ಸದಸ್ಯ ಎ.ಎಂ.ತ್ಯಾಗರಾಜ್, ಪಿಡಿಒ ಅಂಜನ್ ಕುಮಾರ್, ಕಾರ್ಯದರ್ಶಿ ಶ್ರೀನಿವಾಸ್, ಕರವಸೂಲಿಗಾರ ಶ್ರೀನಿವಾಸ್, ಅಂಬರೀಶ್, ವೆಂಕಟೇಶಪ್ಪ ಹಾಜರಿದ್ದರು.

ವಿದೇಶಿ ಹಾಲು ಆಮದು ನಿರ್ಧಾರ ಕೈಬಿಡಲು ಜೆಡಿಎಸ್ ಮುಖಂಡರ ಆಗ್ರಹ

0

ಜಿಲ್ಲೆಯಲ್ಲಿ ಹೈನುಗಾರಿಕೆ ಮತ್ತು ರೇಷ್ಮೆಯನ್ನು ಅವಲಂಬಿಸಿ ಲಕ್ಷಾಂತರ ಮಂದಿ ಜೀವನ ನಡೆಸುತ್ತಿದ್ದಾರೆ. ರೇಷ್ಮೆ ಆಮದಿಗೆ ಸುಂಕವನ್ನು ಕಡಿತ ಮಾಡಿ ಕೇಂದ್ರ ಸರ್ಕಾರ ರೇಷ್ಮೆ ಅವಲಂಬಿತರ ಬದುಕಿಗೆ ಕೊಳ್ಳಿ ಇಟ್ಟಿದ್ದು, ಇದೀಗ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಮೂಲಕ ಹೈನುಗಾರಿಕೆಯನ್ನು ಅವಲಂಬಿತರ ಬೆನ್ನು ಮೂಳೆ ಮುರಿದಿದೆ. ರೈತರನ್ನು ಒಗ್ಗೂಡಿಸಿ ಜೆಡಿಎಸ್ ಪಕ್ಷದ ವತಿಯಿಂದ ಈ ಬಗ್ಗೆ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ಬಸ್ ನಿಲ್ದಾಣದ ಬಳಿಯ ಎಸ್.ಎಲ್.ಎನ್ ಭವನದಲ್ಲಿ ಗುರುವಾರ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಕೋಚಿಮುಲ್ ಹಾಗೂ ಕೆ.ಎಂ.ಎಫ್ ಚುನಾಯಿತ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಕೇಂದ್ರ ಸರ್ಕಾರದ ಈ ರೈತ ವಿರೋಧಿ ನೀತಿಯನ್ನು ಖಂಡಿಸಬೇಕು. ಕೇಂದ್ರ ಸರ್ಕಾರದ ಈ ರೈತ ವಿರೋಧಿ ನಡೆಯಿಂದ ದೇಶದ ಹೈನುಗಾರಿಕೆ ಮೇಲೆ ಅದರಲ್ಲೂ ಕರ್ನಾಟಕ ಹಾಗೂ ಗುಜರಾತ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಇದರಿಂದ ಲಕ್ಷಾಂತರ ಜನರ ಬದುಕು ಬೀದಿಗೆ ಬೀಳಲಿದೆ. ಗುಜರಾತ್ ರಾಜ್ಯದವರಾಗಿದ್ದಾಗ್ಯೂ ಪ್ರಧಾನಿ ಮೋದಿಯವರು ಈ ನಿರ್ಧಾರ ಕೈಗೊಂಡಿರುವುದು ದುರದೃಷ್ಟಕರ. ವಿದೇಶದ ಹಾಲು ಬಂದರೆ, ನಮ್ಮ ರೈತರು ಬೆಲೆಕುಸಿತದಿಂದ ನೆಲಕಚ್ಚುತ್ತಾರೆ. ಸರ್ಕಾರ ಹೈನುಗಾರರ ಹಿತ ಕಾಪಾಡಬೇಕು. ಜೆ.ಡಿ.ಎಸ್ ಪಕ್ಷವು ರೈತರ ಹಿತಾಸಕ್ತಿಗೆ ಬದ್ಧವಾಗಿದ್ದು, ರೈತರ ಪರವಾಗಿ ಹೋರಾಟ ಮಾಡುವುದಾಗಿ ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ನಮ್ಮ ರಾಜ್ಯವು ಹಾಲು ಉತ್ಪಾದನೆಯಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ೧೪ ಹಾಲು ಒಕ್ಕೂಟಗಳು ಕಾರ್ಯನಿರ್ವಹಿಸುತ್ತಿದ್ದು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ೨,೨೩,೮೦೦ ಹಾಲು ಉತ್ಪಾದಕ ಕುಟುಂಬಗಳಿವೆ. ಪ್ರತಿ ದಿನ ಎರಡೂ ಜಿಲ್ಲೆಗಳಲ್ಲಿ ೧೦.೫೦ ಲಕ್ಷ ಲೀಟರ್ ಹಾಲು ಉತ್ಪಾದನೆಯಾದರೆ, ರಾಜ್ಯದಲ್ಲಿ ಪ್ರತಿದಿನ ೭೬.೪೪ ಲಕ್ಷ ಲೀಟರ್ ಹಾಲು ಉತ್ಪಾದಿಸಲಾಗುತ್ತಿದೆ. ನಮ್ಮ ಜಿಲ್ಲೆಗಳ ರೈತರ ಜೀವನಾಡಿಯಾದ ಹೈನುಗಾರಿಕೆಯ ರೂವಾರಿ ದಿ.ಎಂ.ವಿ.ಕೃಷ್ಣಪ್ಪ ಅವರನ್ನು ರೈತರು ಸದಾ ನೆನೆಯುವರು. ಪ್ರಧಾನಿ ನರೇಂದ್ರ ಮೋದಿಯವರು ವಿದೇಶಗಳಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ತೆರಿಗೆ ರಹಿತ ಅನುಮತಿಯನ್ನು ನೀಡಿ ರೈತ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಪ್ರತಿದಿನ ಸುಮಾರು ಒಂದು ಲಕ್ಷ ಲೀಟರ್ ಹಾಲನ್ನು ಪೌಡರ್ ಮಾಡಿ ಒಂದು ಲೀಟರ್ ಹಾಲಿಗೆ ೭ ರಿಂದ ೮ ರೂಪಾಯಿ ನಷ್ಟವನ್ನುಂಟು ಮಾಡಿಕೊಳ್ಳುತ್ತಿರುವ ಒಕ್ಕೂಟಕ್ಕೆ ಹಾಗೂ ಅದನ್ನು ನಂಬಿರುವ ರೈತರಿಗೆ ಈ ನೀತಿ ಕರಾಳವಾಗಿದೆ ಎಂದು ಹೇಳಿದರು.
ಜೆ.ಡಿ.ಎಸ್ ತಾಲ್ಲೂಕು ಅಧ್ಯಕ್ಷ ಡಿ.ಬಿ.ವೆಂಕಟೇಶ್ ಮಾತನಾಡಿ, ಕೇಂದ್ರ ಸರ್ಕಾರ ಆಮದು ಸುಂಕ ಕಡಿತ ಮಾಡಿ ಚೀನಾದಿಂದ ರೇಷ್ಮೆ ಬರುವಂತೆ ಮಾಡಿ ರೇಷ್ಮೆ ಕೃಷಿಕರಿಗೆ ಮತ್ತು ಉದ್ದಿಮೆದಾರರಿಗೆ ಹೊಡೆತ ಕೊಟ್ಟಿದೆ. ಕೆಂಪು ಗುಲಾಬಿ ಈರುಳ್ಳಿ ರಫ್ತು ಮಾಡುವುದನ್ನು ನಿಲ್ಲಿಸಿ ಅದರ ಬೆಲೆ ಕುಸಿದು ರೈತರನ್ನು ಕಣ್ಣೀರಿಡುವಂತೆ ಮಾಡಿದೆ. ಅಂತರ್ಜಲ ಕುಸಿದಿದ್ದರೂ ಕಷ್ಟದಲ್ಲಿಯೂ ಹೈನುಗಾರಿಕೆಯನ್ನು ನಂಬಿರುವ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ಈಗ ಕೇಂದ್ರದ ವಿದೇಶಿ ಹಾಲು ಆಮದಿನಿಂದ ಕುಸಿದುಹೋಗಿದ್ದಾರೆ. ತಕ್ಷಣವೇ ಕೇಂದ್ರ ಸರ್ಕಾರ ಈ ನೀತಿಯನ್ನು ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದಲ್ಲಿ ರೈತರೊಂದಿಗೆ ಪ್ರತಿಭಟನೆ ಮಾಡುವುದಾಗಿ ಹೇಳಿದರು.
ಜೆಡಿಎಸ್ ಮುಖಂಡ ಮುಗಿಲಡಿಪಿ ನಂಜಪ್ಪ ಮಾತನಾಡಿ, ಒಂದು ವೇಳೆ ಭಾರತ ನ್ಯೂಜಿಲ್ಯಾಂಡ್‌ ಜತೆಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡು ಹಾಲಿನ ಆಮದು ಮಾಡಿಕೊಳ್ಳಲು ಆರಂಭಿಸಿದರೆ, ದೇಶದಲ್ಲಿ ಹೈನುಗಾರಿಕೆಯನ್ನು ನಂಬಿಕೊಂಡಿರುವ ಕುಟುಂಬಗಳನ್ನು ಸರ್ಕಾರವೇ ಬೀದಿಗೆ ತಳ್ಳಿದಂತಾಗುತ್ತದೆ. ವಿದೇಶಿ ಸಂಸ್ಥೆಗಳು ಆರಂಭದಲ್ಲಿ ಕಡಿಮೆ ದರಕ್ಕೆ ಹಾಲು ನೀಡಿ, ಮಾರುಕಟ್ಟೆಯನ್ನು ವಶಪಡಿಸಿಕೊಂಡ ನಂತರ, ಹಾಲಿನ ಬೆಲೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. ವಿದೇಶಿ ಸಂಸ್ಥೆಗಳು ನೇರವಾಗಿ ಮಾರುಕಟ್ಟೆ ಪ್ರವೇಶ ಮಾಡುವುದರಿಂದ ಹಾಲಿನ ದರ ನಿಯಂತ್ರಿಸಲೂ ರಾಜ್ಯ ಸರ್ಕಾರಗಳಿಗೆ ಅಧಿಕಾರ ಇಲ್ಲದಂತಾಗುತ್ತದೆ. ಇದರಿಂದ ಹೈನುಗಾರಿಕೆ ನಂಬಿರುವ ಕುಟುಂಬಗಳು ಬೀದಿಗೆ ಬೀಳುವಂತಾಗುತ್ತದೆ. ರೈತರನ್ನು ಸರ್ಕಾರವೇ ಪರೋಕ್ಷವಾಗಿ ಕೊಲ್ಲುವ ನೀತಿಯಿದು ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಮುಖಂಡರಾದ ತಾದೂರು ರಘು, ಪಿ.ವಿ.ನಾಗರಾಜ್, ಲಕ್ಷ್ಮೀನಾರಾಯಣ್, ಆರ್.ಎ.ಉಮೇಶ್, ರಮೇಶ್ ಹಾಜರಿದ್ದರು.

ಕಸಾಪ ವತಿಯಿಂದ “ವಿಶ್ವ ಆಹಾರ ದಿನ”ದ ಕಾರ್ಯಕ್ರಮ

0

ತಾಲ್ಲೂಕಿನ ಶಿಲೇಮಾಕನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಕಸಾಪ ವತಿಯಿಂದ “ವಿಶ್ವ ಆಹಾರ ದಿನ”ದ ಅಂಗವಾಗಿ ಗ್ರಾಮದ ಮಹಿಳೆಯರಿಗೆ ಪೌಷ್ಠಿಕ ಆಹಾರ, ಸ್ವಚ್ಛತೆ, ನೀರಿನ ಸದ್ಭಳಕೆ ಹಾಗೂ ಸಾವಯವ ಆಹಾರ ಪದ್ಧತಿಯ ಬಗ್ಗೆ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾಹಿತಿ ನೀಡಿದರು.
ಮಹಿಳೆಯರು ಆದಷ್ಟು ಗೃಹೋಪಯೋಗಿ ತರಕಾರಿ ಹಾಗೂ ಸೊಪ್ಪುಗಳನ್ನು ಮನೆಯ ಬಳಿಯೇ ಬೆಳೆಯಿರಿ. ರಾಸಾಯನಿಕ ಮುಕ್ತ ಆಹಾರ ನಮ್ಮದಾಗಲಿ. ಸ್ವಚ್ಛತೆಗೆ ಆಧ್ಯತೆ ನೀಡಿ ಎಂದು ಅವರು ತಿಳಿಸಿದರು.
ಅಕ್ಟೋಬರ್‌ 16 ಹಸಿವಿನ ವಿರುದ್ಧ ಹೋರಾಡಲು ಇರುವ ದಿನ. 1945 ರಲ್ಲಿ ವಿಶ್ವಸಂಸ್ಥೆಯು ಈ ದಿನವನ್ನು ಕೃಷಿ ಸಂಸ್ಥೆಯ ಸ್ಥಾಪನೆಯ ದಿನಾಂಕದ ಗೌರವಾರ್ಥವಾಗಿ ಆಹಾರ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಮಕ್ಕಳಿಗೆ ಆಹಾರ ವ್ಯರ್ಥ ಮಾಡಬಾರದು ಎಂಬುದನ್ನು ಹಿರಿಯರು ಆಚರಿಸಿ ತೋರಿಸಿಕೊಡಬೇಕು. ಮನೆಯ ಆಹಾರ ತ್ಯಾಜ್ಯಗಳು, ಪಾತ್ರೆ ತೊಳೆದ ನೀರನ್ನು ಗಿಡಗಳಿಗೆ ಹಾಯಿಸಿ. ಮನೆಯ ಬಳಿ ತರಕಾರಿ, ಸೊಪ್ಪು ಬೆಳೆಯಿರಿ. ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಬೇಕು.
ವಿಜ್ಞಾನದ ಪ್ರಕಾರ, ದೇಹದಲ್ಲಿ ಪೌಷ್ಠಿಕಾಂಶದ ಕೊರತೆ ಮತ್ತು ಮನಸ್ಸಿನ ನಡುವೆ ಬಲವಾದ ಸಂಬಂಧ ಇದೆ. ಅದಕ್ಕಾಗಿ ನಾವು ಈ ಪೌಷ್ಟಿಕಾಂಶಗಳು ಇರುವ ಆಹಾರವನ್ನು ಸೇವಿಸಬೇಕು. ನಾವು ಪ್ರತಿನಿತ್ಯ ತಿನ್ನುವ ಕೆಲವು ಆಹಾರಗಳು ನಮಗೆ ಒಳ್ಳೆಯ ಆರೋಗ್ಯ ನೀಡುವುದಲ್ಲದೇ ನಮ್ಮ ದೈಹಿಕ ಶಕ್ತಿ ಹೆಚ್ಚಿಸುವ ಮತ್ತು ರೋಗಗಳನ್ನು ತಡೆಗಟ್ಟು ಗುಣ ಕೂಡ ಹೊಂದಿರುತ್ತದೆ. ಇಂತಹ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದು ಆರೋಗ್ಯಕ್ಕೆ ಹೆಚ್ಚು ಉಪಯುಕ್ತ ಎಂದು ವಿವರಿಸಿದರು.
ಅಂಗನವಾಡಿ ಶಿಕ್ಷಕಿ ಎಚ್.ಅಂಬುಜಾಕ್ಷಿ, ಸಹಾಯಕಿ ಅನಸೂಯಮ್ಮ, ಗ್ರಾಮದ ವೆಂಕಟೇಶಪ್ಪ, ರತ್ನಮ್ಮ, ಗಂಗರತ್ನ, ಭಾರತಿ, ಮಂಜುಳ, ಲಕ್ಷ್ಮಮ್ಮ, ಶ್ವೇತ, ಲಕ್ಷ್ಮಮ್ಮ, ಗೌತಮಿ, ರಾಧ, ಮೇಘನ, ಉಮಾ, ಅಂಜಲಿ, ಭಾವನ, ವಂದಿತಾ, ಶ್ರಾವಣಿ, ನಯನ, ಅನುಶ್ರೀ, ಅನೂಷ ಹಾಜರಿದ್ದರು.

ಮಳ್ಳೂರು ಗ್ರಾಮ ಪಂಚಾಯಿತಿ ಮುಂದೆ ಅಂಕತಟ್ಟಿ ಗ್ರಾಮಸ್ಥರ ಪ್ರತಿಭಟನೆ

0

ಸರ್ಕಾರಿ ಗ್ರಾಮ ಠಾಣಾ ಜಾಗವನ್ನು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ಸಹಕಾರದಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಪ್ರಭಾವಿಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟು, ಇ ಖಾತೆಯನ್ನೂ ಮಾಡಿಕೊಡುವ ಮೂಲಕ ಇಲಾಖೆಯ ನೀತಿ ನಿಯಮಗಳನ್ನು ಗಾಳಿಗೆ ತೂರಿ, ಬಡವರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿ ಅಂಕತಟ್ಟಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಮಳ್ಳೂರು ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ಸದಸ್ಯರು ಅಧಿಕಾರಿಗಳ ವಿರುದ್ಧ ಘೋಷಣೆಗಳು ಕೂಗಿ, ಅಕ್ರಮ ಖಾತೆಗಳು ಮಾಡಿರುವ ಅಧಿಕಾರಿಗಳನ್ನು ಕೂಡಲೇ ಅಮಾನತ್ತುಪಡಿಸಬೇಕು ಎಂದು ಒತ್ತಾಯಿಸಿದರು.
ಅಂಕತಟ್ಟಿ ಗ್ರಾಮದ ಮುಖಂಡ ಎಸ್.ವೆಂಕಟರೆಡ್ಡಿ ಮಾತನಾಡಿ, ಅಂಕತಟ್ಟಿ ಗ್ರಾಮದ ಸರ್ವೆ ನಂಬರ್ ೭/೨ ರಲ್ಲಿ ೪.೮೬ ಹೆಕ್ಟೇರ್ ೧೨. ಎಕರೆ ೩೦ ಭೂಮಿ ಇದೆ. ಈ ಭೂಮಿಯನ್ನು ಇದುವರೆಗೂ ಹೌಸ್‌ಲಿಸ್ಟ್ ಮಾಡಿಲ್ಲ. ೪ ಎಕರೆ ಸರ್ಕಾರಿ ಗ್ರಾಮಠಾಣೆ ಜಾಗಕ್ಕೆ ದಾಖಲೆಗಳೇ ಇಲ್ಲ. ಈ ಜಾಗವನ್ನು ಗ್ರಾಮದ ಪ್ರಭಾವಿಗಳು ೨೦೧೭ ರಲ್ಲಿ ಒತ್ತುವರಿ ಮಾಡಲು ಪ್ರಯತ್ನ ಮಾಡಿದ್ದರು. ಕೂಡಲೇ ಎಚ್ಚೆತ್ತುಕೊಂಡ ಗ್ರಾಮಸ್ಥರು, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಜಿಲ್ಲಾಧಿಕಾರಿ, ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ಎಲ್ಲರಿಗೂ ದೂರುಗಳು ಕೊಟ್ಟಿದ್ದೆವು. ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಇಲಾಖೆಯ ಮೇಲಾಧಿಕಾರಿಗಳು ಆದೇಶ ನೀಡಿದ್ದರು.
ಮೇಲಾಧಿಕಾರಿಗಳ ಆದೇಶದಂತೆ ಅಂತಕಟ್ಟಿ ಗ್ರಾಮಕ್ಕೆ ಬಂದಿದ್ದ ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಸದರಿ ಭೂಮಿಯನ್ನು ಸರ್ವೆ ಮಾಡಿ ಗಡಿ ಗುರ್ತಿಸಿದ್ದರು. ಸರ್ಕಾರಿ ಗ್ರಾಮಠಾಣಾ ಜಾಗವನ್ನು ಪಂಚಾಯಿತಿ ವಶಕ್ಕೆ ತೆಗೆದುಕೊಳ್ಳುವಂತೆ, ಅಕ್ರಮವಾಗಿ ಅನುಭವದಲ್ಲಿರುವವರಿಗೆ ನೋಟಿಸ್ ಜಾರಿ ಮಾಡುವಂತೆ ಆದೇಶ ಮಾಡಿದ್ದರೂ, ಇದುವರೆಗೂ ಸದರಿ ಭೂಮಿಯನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿಲ್ಲ. ಅಧಿಕಾರಿಗಳು ಶಾಮೀಲಾಗಿ ಸದರಿ ಭೂಮಿಯನ್ನು ನಿಯಮಬಾಹಿರವಾಗಿ ದಾಖಲೆಗಳನ್ನು ಸೃಷ್ಠಿಮಾಡಿ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ ಮಾತನಾಡಿ, ಸರ್ಕಾರಿ ಭೂಮಿಯನ್ನು ಉಳಿಸಿ, ಬಡವರಿಗೆ ನಿವೇಶಗಳನ್ನು ಹಂಚಿಕೆ ಮಾಡಬೇಕು ಎಂದು ಹೋರಾಟ ಮಾಡುತ್ತಿರುವವರ ವಿರುದ್ಧವಾಗಿ ಪೊಲೀಸರಿಗೆ ದೂರು ನೀಡಿ, ವಿನಾಕಾರಣ ಮಾನಸಿಕವಾಗಿ ಹಿಂಸೆ ಮಾಡಲಾಗಿದೆ. ನಿಯಮಬಾಹಿರವಾಗಿ ಅಕ್ರಮವಾಗಿ ಮಾಡಿಕೊಟ್ಟಿರುವ ಖಾತೆಗಳನ್ನು ವಜಾಗೊಳಿಸಬೇಕು, ಅಕ್ರಮ ಖಾತೆಗಳನ್ನು ಮಾಡಲಿಕ್ಕೆ ಸಹಕಾರ ನೀಡಿರುವ ಅಧಿಕಾರಿಗಳನ್ನು ಕೂಡಲೇ ಅಮಾನತ್ತುಪಡಿಸಬೇಕು, ಸದರಿ ಭೂಮಿಯನ್ನು ಪಂಚಾಯಿತಿ ವಶಕ್ಕೆ ಪಡೆದುಕೊಂಡು ಬಡವರಿಗೆ ನಿವೇಶಗಳನ್ನು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರ್ ಸ್ಥಳಕ್ಕೆ ಬೇಟಿ ನೀಡಿ, ಖಾತೆಗಳು ಮಾಡಿರುವ ಕುರಿತು ನೇರವಾಗಿ ಕ್ರಮ ಕೈಗೊಳ್ಳಲಿಕ್ಕೆ ನಮಗೆ ಅಧಿಕಾರವಿಲ್ಲ. ಪಂಚಾಯಿತಿಯಿಂದ ದಾಖಲೆಗಳನ್ನು ತರಿಸಿಕೊಂಡು ಪರಿಶೀಲನೆ ಮಾಡಲಿಕ್ಕೆ ಸಮಯಾವಕಾಶ ಬೇಕಾಗಿದೆ ಎಂದು ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರಾದರೂ ಪ್ರತಿಭಟನಾಕಾರರು ಸಮಸ್ಯೆ ಇತ್ಯರ್ಥವಾಗುವ ತನಕ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರಿಂದ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗೆ ವರದಿ ಸಲ್ಲಿಸುವುದಾಗಿ ಹೇಳಿದರು.
ಗ್ರಾಮ ಪಂಚಾಯಿತಿ ಆವರಣದಲ್ಲಿ ಬಿಗಿಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.
ರೈತ ಸಂಘದ ಮುಖಂಡ ಮಳ್ಳೂರು ಶಿವಣ್ಣ, ಮುಖಂಡರಾದ ಜಗನ್ನಾಥ್, ಬಾಬು, ನಾರಾಯಣಸ್ವಾಮಿ, ಎಸ್.ದೇವರಾಜು, ಕೆ.ದೇವರಾಜು, ಅನಿತಮ್ಮ, ಅಮೃತ, ರತ್ನಮ್ಮ, ಗೌರಮ್ಮ, ನಾರಾಯಣಮ್ಮ, ರಾಧಮ್ಮ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಶ್ರೀನಿವಾಸ್, ಅರುಣ್‌ಕುಮಾರ್, ಚನ್ನೇಗೌಡ, ನಾಗರಾಜ್, ಶಂಕರನಾರಾಯಣ, ಶ್ರೀನಿವಾಸ್, ಶ್ರೀಧರ್, ಚಿಕ್ಕವೆಂಕಟರಾಯಪ್ಪ ಹಾಜರಿದ್ದರು