Home Blog Page 341

ಮಾತೃಭೋಜನ ಸಮಾರಂಭ

0

ನಗರದ ಹೊರವಲಯದ ಹನುಮಂತಪುರ ಗೇಟ್‌ ಬಳಿ ಇರುವ ಬಿಜಿಎಸ್‌ ವಿದ್ಯಾಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ಮಾತೃಭೋಜನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಖ್ಯಾತ ಗಾಯಕಿ ಕಸ್ತೂರಿ ಶಂಕರ್ ಮಾತನಾಡಿದರು.
ಎಲ್ಲ ಮತಬಾಂಧವರೂ, ಧರ್ಮೀಯ ತಾಯಂದಿರು ಪ್ರೀತಿ ಮತ್ತು ಮಮತೆಯಿಂದ ಮಕ್ಕಳಿಗೆ ಉಣಬಡಿಸುವುದನ್ನು ಕಂಡು ನನಗೆ ದೇವಲೋಕದಲ್ಲಿರುವಂತೆ ಭಾಸವಾಯಿತು. ಇಲ್ಲಿ ಪ್ರೀತಿ ಉಕ್ಕಿ ಹರಿದಿದೆ, ತಾಯಿಯ ಮಮತೆಯಲ್ಲಿ ಮಕ್ಕಳು ಪುನೀತರಾಗಿದ್ದಾರೆ ಎಂದು ಅವರು ತಿಳಿಸಿದರು.
ತಾಯಿಯ ಹೃದಯ ಬಲು ಮೃದು, ತಾಯಿಯ ಅಡುಗೆ ಬಲು ರುಚಿ. ಏಕೆಂದರೆ ಅದರಲ್ಲಿ ಪ್ರೀತಿ ಬೆರೆತಿರುತ್ತದೆ. ಅದಕ್ಕಾಗಿಯೇ ಇಲ್ಲಿ ತಾಯಂದಿರು ಎಲ್ಲ ಮಕ್ಕಳಿಗೂ ಸಮಾನವಾಗಿ ಪ್ರೀತಿಯಿಂದ ಉಣಬಡಿಸಿರುತ್ತಾರೆ. ಇಷ್ಟೊಂದು ಪ್ರೀತಿಯಿಂದ ತುಂಬಿರುವ ಸ್ಥಳಕ್ಕೆ ಆಗಮಿಸಿ ನಾನೂ ಬೊಗಸೆಯಷ್ಟು ಪ್ರೀತಿಯನ್ನು ತುಂಬಿಕೊಂಡು ಹೋಗುತ್ತಿರುವುದಕ್ಕೆ ಹರ್ಷವಾಗುತ್ತಿದೆ ಎಂದು ನುಡಿದು, ಕಲಿಸು ಗುರುವೆ ಕಲಿಸು, ಕೆ.ಎಸ್.ನರಸಿಂಹಸ್ವಾಮಿಯವರ ಭಾವಗೀತೆ, ಬಿಳಿ ಹೆಂಡ್ತಿ ಚಲನಚಿತ್ರದ ರಂಗೇನಹಳ್ಳಿಯಾಗೆ ಹಾಡು ಮತ್ತು ಹೆಣ್ಣೀನ ಜನುಮಾಕ್ಕೆ ಎಂಬ ಜಾನಪದಗೀತೆಗಳನ್ನು ಹಾಡಿದರು.
ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಆಶೀರ್ವಚನವನ್ನು ನೀಡಿ ಮಾತನಾಡಿ, ಮಕ್ಕಳಿಗೆ ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಿಕೊಡುವಲ್ಲಿ ಪೋಷಕರು ಹೆಚ್ಚಿನ ಗಮನ ನೀಡಬೇಕು. ಮನೆಯೇ ಮೊದಲ ಪಾಠಶಾಲೆ ಎಂಬ ಹಿರಿಯರ ಮಾತಿನಂತೆ ಮಗುವಿನ ಶಿಕ್ಷಣ ಮನೆಯಿಂದಲೇ ಆರಂಭವಾಗುತ್ತದೆ ಹಾಗಾಗಿ ಮನೆಯಲ್ಲಿ ತಂದೆ-ತಾಯಿಗಳು ಮಕ್ಕಳಿಗೆ ಉತ್ತಮವಾದ ವಾತಾವರಣ ಕಲ್ಪಿಸಿದಿದ್ದಲ್ಲಿ ಮಕ್ಕಳು ಪರಿಪಕ್ವವಾಗಿ ಬೆಳೆಯಲು ಸಾಧ್ಯವಿಲ್ಲ ಎಂದರು.
ಮಕ್ಕಳಿಗೆ ಆದರ್ಶಮಯವಾದ ಶಿಕ್ಷಣದ ಜೊತೆ ಜೊತೆಗೆ ಉತ್ತಮ ಸಂಸ್ಕಾರವನ್ನು ಬೆಳೆಸುವ ಜವಾಬ್ದಾರಿ ತಾಯಿಯ ಮೇಲಿರುತ್ತದೆ. ಪ್ರತಿಯೊಬ್ಬ ಮಗುವೂ ದೇವರ ಪ್ರತಿರೂಪವಾದ ತಾಯಿಯನ್ನು ಗೌರವಿಸುವುದನ್ನು ರೂಡಿಸಿಕೊಳ್ಳಬೇಕು ಎಂದರು.
ಬಿಜಿಎಸ್ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ ಮಾತನಾಡಿ, ಸಪ್ತ ಸೂತ್ರ ಶಿಕ್ಷಣದ ಮೂಲಕ ನಮ್ಮ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ಮೌಲ್ಯ ಮತ್ತು ಸಂಸ್ಕಾರವನ್ನು ಕಲಿಸುತ್ತಿದ್ದೇವೆ. ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಹಾಗೂ ಪೋಷಕರ ಪಾತ್ರ ಬಹಳಷ್ಟು ಮಹತ್ತರವಾದದ್ದು ಹಾಗಾಗಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿರುವ ಸಹಕಾರವನ್ನು ಪೋಷಕರು ಶಿಕ್ಷಕರಿಗೆ ನೀಡಬೇಕು ಎಂದರು.
ಗಾಯಕಿ ಕಸ್ತೂರಿ ಶಂಕರ್ ಅವರ ಮಗಳು ಯಶಸ್ವಿನಿ ಉಮೇಶ್, ಮಕ್ಕಳ ಭಾಗ್ಯ ಚಲನಚಿತ್ರದ ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ, ಎಚ್.ಎಸ್.ವಿ ಅವರ ತೂಗುಮಂಚದಲ್ಲಿ ಕೂತು ಗೀತೆಗಳನ್ನು ಹಾಡಿದರು.
ಈ ಸಂದರ್ಭದಲ್ಲಿ ಗಾಯಕಿ ಕಸ್ತೂರಿ ಶಂಕರ್ ಮತ್ತು ಅವರ ಮಗಳು ಯಶಸ್ವಿನಿ ಉಮೇಶ್ ಅವರನ್ನು ಶಾಲಾ ಆಡಳಿತ ಮಂಡಳಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ಪೋಷಕರು ಮಾತೃಭೋಜನ ಸಮಾರಂಭಕ್ಕಾಗಿ ತಯಾರಿಸಿ ತಂದಿದ್ದ ವಿವಿಧ ರೀತಿಯ ತಿಂಡಿಗಳನ್ನು ಮಕ್ಕಳು ಹಾಗು ಪೋಷಕರು ಸವಿದರು.
ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್, ಪ್ರಾಂಶುಪಾಲ ಮಹದೇವ್, ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರಾದ ಮೋಹನ್ ಕುಮಾರ್, ವಿಜಯಕುಮಾರ್, ಬೋರಯ್ಯ, ವಾರ್ಡನ್ ರಾಜು, ಲೋಕೇಶ್, ಕೆಂಪರೆಡ್ಡಿ, ಜೆ.ಎಸ್.ವೆಂಕಟಸ್ವಾಮಿ, ಪುರುಷೋತ್ತಮ್, ರವಿಪ್ರಕಾಶ್ ಹಾಜರಿದ್ದರು.

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಕಿಡ್ನಿ ಶಸ್ತ್ರಚಿಕಿತ್ಸೆ

0

ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರಿನ ಡಾ.ಪುವ್ವಾಡ ಸಂದೀಪ್ ಅವರು ಶಸ್ತ್ರಚಿಕಿತ್ಸೆ ಮೂಲಕ ರೋಗಪೀಡಿತ ಮೂತ್ರಪಿಂಡ ಹೊತತೆಗೆದಿರುವುದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಅಧಿಕೃತವಾಗಿ ದಾಖಲಾಗಿದೆ.
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯ ಮೂತ್ರ ವಿಭಾಗದ (ಯೂರಾಲಜಿ) ತಜ್ಞ ವೈದ್ಯ ಮಳ್ಳೂರಿನ ಡಾ.ಪುವ್ವಾಡ ಸಂದೀಪ್ ಅವರ ನೇತೃತ್ವದ ವೈದ್ಯರ ತಂಡ, ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ ರೋಗಿಯೊಬ್ಬರ ರೋಗಪೀಡಿತ ೭.೨ ಕೆ.ಜಿ ಗಾತ್ರದ ಮೂತ್ರಪಿಂಡವನ್ನು (ಕಿಡ್ನಿ) ಯಶಸ್ವಿಯಾಗಿ ಹೊರತೆಗೆದಿದ್ದರು. “ರೆಟ್ರೊಪೆರಿಟೋನಿಯಲ್ ನೆಫ್ರೆಕ್ಟೊಮಿ” ಶಸ್ತ್ರಚಿಕಿತ್ಸೆ ಮೂಲಕ ರೋಗಗ್ರಸ್ತ ಕಿಡ್ನಿಯನ್ನು ತೆಗೆದಿದ್ದು, ರೋಗಿಯೊಬ್ಬರ ದೇಹದಿಂದ ಹೊರತೆಗೆದ ಅತಿದೊಡ್ಡ ಕಿಡ್ನಿ (೩೧ ಸೆ.ಮೀ ಉದ್ದ ಮತ್ತು ೧೩ ಸೆ.ಮೀ ಅಗಲ) ಇದು ಎಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪರಿಗಣಿಸಿದ್ದು, ೨೦೨೧ ರ ತನ್ನ ಪ್ರಕಟಣೆಯಲ್ಲಿ ಚಿತ್ರ ಸಮೇತ ಪ್ರಕಟಿಸುವುದಾಗಿ ತಿಳಿಸಿದೆ.

ಸ್ಕೌಟ್ ಮಾಸ್ಟರ್ ಮತ್ತು ಗೈಡ್ ಕ್ಯಾಪ್ಟನ್‌ರ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭ

0

ನಗರದ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಂಗಳವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಆಯೋಜಿಸಲಾಗಿದ್ದ ಸ್ಕೌಟ್ ಮಾಸ್ಟರ್ ಮತ್ತು ಗೈಡ್ ಕ್ಯಾಪ್ಟನ್‌ರ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಶಿಕ್ಷಕ ಸಿ.ಬಿ.ಪ್ರಕಾಶ್ ಮಾತನಾಡಿದರು.
ಮಕ್ಕಳಲ್ಲಿ ಶಿಸ್ತು ಹಾಗೂ ಸಹನೆ ರೂಡಿಸಿಕೊಳ್ಳಲು ಸ್ಕೌಟ್ಸ್ ಮತ್ತು ಗೈಡ್ಸ್ ಅತ್ಯುತ್ತಮ ವೇದಿಕೆಯಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿಯೂ ಸ್ಕೌಟ್ಸ್ ಅಂಡ್ ಗೈಡ್ಸ್ ಘಟಕ ಸ್ಥಾಪಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲ ಶಿಕ್ಷಕರಿಗೆ ತರಬೇತಿ ನೀಡಲು ಒಂದು ವಾರದ ಕಾಲ ಶಿಬಿರ ಆಯೋಜಿಸಿದ್ದು ಶಿಬಿರದಲ್ಲಿ ಪಠ್ಯಕ್ಕನುಗುಣವಾಗಿ ಕೌಶಲ್ಯ ಹಾಗೂ ಚಟುವಟಿಕೆಗಳನ್ನು ಕಲಿಸಲಾಗಿದೆ. ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ನಾಟಿಂಗ್ಸ್, ಗಂಟು ಹಾಕುವುದು, ಧ್ವಜ ಹಾರಿಸುವುದು ಹಾಗೂ ಇಳಿಸುವುದು ಮುಖ್ಯವಾಗಿ ಪ್ರಥಮ ಚಿಕಿತ್ಸೆ ಹೇಗೆ ಮಾಡಬೇಕು ಎನ್ನುವುದನ್ನು ಕಲಿಸಲಾಗಿದೆ ಎಂದರು.
ಶಿಬಿರದಲ್ಲಿ ಸುಮಾರು ೩೩ ಶಿಕ್ಷಕಿಯರು ಸೇರಿದಂತೆ ೩೧ ಶಿಕ್ಷಕರು ಪಾಲ್ಗೊಂಡು ತರಬೇತಿ ಪಡೆದುಕೊಂಡರು.
ತರಬೇತಿ ನಾಯಕಿ ಚಾಯಾ, ತರಬೇತಿ ಸಹಾಯಕ ಡಿ.ಎಸ್.ಮನೋಹರ್, ಶಿಕ್ಷಕರಾದ ನಾಗಲಿಂಗಪ್ಪ, ವಿಜಯ್‌ಕುಮಾರ್, ವಿನಯ್‌ಕುಮಾರ್, ಅರುಣ್‌ಕುಮಾರ್, ಅಕ್ಕಯ್ಯಮ್ಮ, ಗೌರಮ್ಮ, ನಾಗಲಕ್ಷ್ಮಿ, ತಿಮ್ಮರಾಜು ಹಾಜರಿದ್ದರು.

ಪದಕ ಗೆದ್ದ ಶಿಡ್ಲಘಟ್ಟದ ಸ್ಕೇಟಿಂಗ್ ವಿದ್ಯಾರ್ಥಿಗಳು

0

ಚಿಕ್ಕಬಳ್ಳಾಪುರದ ಬಿ.ಜಿ.ಎಸ್ ವರ್ಲ್ಡ್ ಸ್ಕೂಲ್ ನಲ್ಲಿ ಹಮ್ಮಿಕೊಂಡಿದ್ದ ಅಂತರಶಾಲಾ ಸ್ಕೇಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾಗವಹಿಸಿದ್ದ ಶಿಡ್ಲಘಟ್ಟದ ಸ್ಪೀಡ್ ಸ್ಕೇಟಿಂಗ್ ಅಸೋಸಿಯೇಷನ್ ನ ಮಕ್ಕಳು ಪದಕಗಳನ್ನು ಪಡೆದಿದ್ದಾರೆ.
೭ ವರ್ಷದ ೨೦೦ ಮೀಟರ್ ರಿಂಕ್ ರೇಸ್ ಸ್ಪರ್ಧೆಯಲ್ಲಿ ಅಖಿಲ್ (ತೃತೀಯ), ೮ ವರ್ಷದ ೨೦೦ ಮೀಟರ್ ರಿಂಕ್ ರೇಸ್ ಸ್ಪರ್ಧೆಯಲ್ಲಿ ಅಭಿ (ತೃತೀಯ), ೯ ವರ್ಷದ ೩೦೦ ಮೀಟರ್ ರಿಂಕ್ ರೇಸ್ ಸ್ಪರ್ಧೆಯಲ್ಲಿ ಮೋಹಿತ್ (ಪ್ರಥಮ), ಆರ್ಯರಿಶಿಲ್ (ತೃತೀಯ), ೧೨ ವರ್ಷದ ೩೦೦ ಮೀಟರ್ ರಿಂಕ್ ರೇಸ್ ಸ್ಪರ್ಧೆಯಲ್ಲಿ ಧನುಷ್ (ಪ್ರಥಮ), ೧೪ ವರ್ಷದ ೩೦೦ ಮೀಟರ್ ರಿಂಕ್ ರೇಸ್ ಸ್ಪರ್ಧೆಯಲ್ಲಿ ಶಿವವಿಖ್ಯಾತ್ (ದ್ವಿತೀಯ), ೧೬ ವರ್ಷದ ೩೦೦ ಮೀಟರ್ ರಿಂಕ್ ರೇಸ್ ಸ್ಪರ್ಧೆಯಲ್ಲಿ ಮಹಿತ್ (ಪ್ರಥಮ) ಪಡೆದಿರುವುದಾಗಿ ಸ್ಕೇಟಿಂಗ್ ಶಿಕ್ಷಕ ವಿ.ಅರುಣ್ ಕುಮಾರ್ ತಿಳಿಸಿದ್ದಾರೆ.

ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ

0

ತಾಲ್ಲೂಕಿನ ನಡಿಪಿನಾಯಕನಹಳ್ಳಿ ನವೋದಯ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಕರಾಟೆ ಸ್ಪರ್ಧೇಯಲ್ಲಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿ ಎಸ್.ಸ್ನೇಹಾ ಹಾಗೂ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನದಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿ ನಡಿಪಿನಾಯಕನಹಳ್ಳಿ ನವೋದಯ ಶಾಲೆಯ ಅಧ್ಯಕ್ಷ ಕೃಷಮೂರ್ತಿ ಮಾತನಾಡಿದರು.
ಸಾಧಿಸಬೇಕೆನ್ನುವ ಛಲವೊಂದಿದ್ದರೆ ಎಂತಹ ಕಠಿಣವಾದ ಸವಾಲುಗಳನ್ನು ಸಹ ಸುಲಭವಾಗಿ ಜಯಿಸಲಿಕ್ಕೆ ಸಾಧ್ಯವಿದೆ ಎಂದು ಅವರು ಹೇಳಿದರು.
ನಿರಂತರವಾದ ಅಭ್ಯಾಸ, ಅಧ್ಯಯನ, ಹಾಗೂ ಏಕಾಗ್ರತೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಸೋಲು-ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಒಮ್ಮೆ ಸೋತವರು ಜೀವನದಲ್ಲಿ ಬಹಳಷ್ಟು ಬಾರಿ ಗೆಲುವು ಸಾಧಿಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಡಯಟ್ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನದಲ್ಲಿ ಗಣಿತ ಮಾದರಿ ತಯಾರಿಕೆಯಲ್ಲಿ ಎಸ್.ಆರ್.ಮೌನಿಷ ಮತ್ತು ವೈ.ಬಿ.ಲಿಖಿತ (ಪ್ರಥಮ) ; ಕೈಗಾರಿಕಾ ಅಭಿವೃದ್ಧಿ ವಿಭಾಗದಲ್ಲಿ ಎನ್.ನಿಸರ್ಗ ಮತ್ತು ಎಂ. ರಕ್ಷಾಕೃಷ್ಣನ್ (ಪ್ರಥಮ) ; ಸ್ವಚ್ಚತೆ ಮತ್ತು ಆರೋಗ್ಯ ವಿಭಾಗದಲ್ಲಿ ಎನ್.ಸಿರೀಷ, ಮತ್ತು ಟಿ.ಡಿ.ರಂಜಿತ (ಪ್ರಥಮ) ; ಸುಸ್ಥಿರ ಕೃಷಿ ಪದ್ಧತಿಗಳು ವಿಭಾಗದಲ್ಲಿ ಎ.ಕೆ.ಲಿಖಿತ ಮತ್ತು ಆರ್.ಸೌಮ್ಯ (ದ್ವಿತೀಯ) ; ಭವಿಷ್ಯದಲ್ಲಿ ಸಾರಿಗೆ ಮತ್ತು ಸಂಪರ್ಕ ವಿಭಾಗದಲ್ಲಿ ಎಚ್.ಎಸ್.ಉಜ್ವಲ್‌ಗೌಡ ಮತ್ತು ಆರ್. ನಯನ (ದ್ವಿತೀಯ) ; ಸಂಪನ್ಮೂಲ ನಿರ್ವಹಣೆ ವಿಭಾಗದಲ್ಲಿ ವೈ.ಎಲ್. ನಯನ ಮತ್ತು ವೈ.ಜಿ. ವಿದ್ಯಾ (ತೃತೀಯ) ಸ್ಥಾನ ಪಡೆದಿದ್ದಾರೆ.
ಶಿಕ್ಷಕರಾದ ಸುದರ್ಶನ್, ಜೆ.ವಿ.ಸುಜಾತ, ಸತ್ಯನಾರಾಯಣ, ಉಮಾಶಂಕರ್, ಮನ್ಸೂರ್,ಚೌಡರೆಡ್ಡಿ, ಕರಾಟೆ ಶಿಕ್ಷಕರಾದ ನೂರುಲ್ಲಾ, ಮಹಮದ್ ಇನಾಯತ್, ಅಪ್ರೋಜ್ ಪಾಷ, ದ್ಯಾವಪ್ಪ, ಗಿರೀಶ್, ನಾಗೇಶ್, ಕೃಷ್ಣಮೂರ್ತಿ, ಮುನಿರಾಜು, ಶ್ವೇತಾ, ಶಿಲ್ಪ, ತುಳಸಿ, ಲೀಲಾ, ಪ್ರಶೀಲ, ಕಮಲ, ಮಂಜುಶ್ರೀ, ಪುಷ್ಪಾವತಿ, ರೂಪ, ಆದಿನಾರಾಯಣ, ಶ್ರೀಧರ್‌ಮೂರ್ತಿ, ರಜನಿಕಾಂತ್ ಹಾಜರಿದ್ದರು.

ಬಿಜಿಎಸ್ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ಸಂತೆ

0

ನಗರದ ಹೊರವಲಯದ ಹನುಮಂತಪುರ ಗೇಟ್ ಬಳಿಯಿರುವ ಬಿಜಿಎಸ್ ವಿದ್ಯಾಸಂಸ್ಥೆಯಲ್ಲಿ ಬುಧವಾರ ೧ ರಿಂದ ೪ ನೇ ತರಗತಿ ಮಕ್ಕಳಿಂದ ಸಪ್ತ ಸೂತ್ರ ಶಿಕ್ಷಣ ಯೋಜನೆಯಡಿ ಆಯೋಜಿಸಲಾಗಿದ್ದ ಮಕ್ಕಳ ಸಂತೆ ಕಾರ್ಯಕ್ರಮವನ್ನುದ್ದೇಶಿಸಿ ಬಿಜಿಎಸ್ ಪ್ರಾಂಶುಪಾಲ ಆರ್.ಮಹದೇವ್ ಮಾತನಾಡಿದರು.
ಸಾಮಾಜಿಕ ಬದುಕು, ಪ್ರಪಂಚ ಜ್ಞಾನ, ಜೀವನದ ಮೌಲ್ಯಗಳನ್ನು ಕಲಿಯದ ಹೊರತು ಶಿಕ್ಷಣ ಪರಿಪೂರ್ಣವಾಗುವುದಿಲ್ಲ ಎಂದು ಹೇಳಿದರು.
ಮಕ್ಕಳಿಗೆ ಬರೀ ಪಠದಲ್ಲಿನ ವಿಷಯಗಳನ್ನು ಕಲಿಸಿದರೆ ಸಾಲದು, ಜೊತೆಯಲ್ಲಿ ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಜೀವನದ ಮೌಲ್ಯಗಳನ್ನು ಕಲಿಸಬೇಕು. ತಮ್ಮ ಪೋಷಕರ ಕಷ್ಟ ಸುಖಗಳು ಮಕ್ಕಳಿಗೆ ತಿಳಿಯಬೇಕು. ಹೊರಗಿನ ಜಗತ್ತಿನಲ್ಲಿ ಜೀವನ ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ತಿಳಿಸುವ ಉದ್ದೇಶದಿಂದ ಮಕ್ಕಳ ಸಂತೆ ಆಯೋಜಿಸಿದ್ದೇವೆ. ಪುಟಾಣಿ ಮಕ್ಕಳ ಈ ಸಂತೆಯಲ್ಲಿ ಭಾಗವಹಿಸಿರುವ ಪೋಷಕರೂ ಹಾಗೂ ಶಾಲಾ ಸಿಬ್ಬಂದಿ ಸಂತೆಯಲ್ಲಿರುವ ಎಲ್ಲ ವಸ್ತುಗಳನ್ನು ಖರೀದಿಸುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಿ ಎಂದರು.
ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಅಧಿಕಾರಿ ತ್ಯಾಗರಾಜ್ ಮಾತನಾಡಿ, ಮಕ್ಕಳಲ್ಲಿ ವ್ಯಾಪಾರಿ ಮನೋಭಾವ ಬೆಳೆಸುವುದು, ವಾಣಿಜ್ಯ ದೃಷ್ಟಿಕೋನ ಹಾಗೂ ವಸ್ತುಗಳನ್ನು ಖರೀದಿಸುವಾಗ ಕಲಿಯಬೇಕಾದ ಮಾಪನಗಳನ್ನು ಪ್ರಾಯೋಗಿಕವಾಗಿ ಮಕ್ಕಳಲ್ಲಿ ಕಲಿಸಲು ಮಕ್ಕಳ ಸಂತೆ ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಕೆಂಪರೆಡ್ಡಿ, ಮಕ್ಕಳ ಪೋಷಕರು, ಶಾಲಾ ಸಿಬ್ಬಂದಿ ಹಾಜರಿದ್ದರು.

ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ನಡಿಪಿನಾಯಕನಹಳ್ಳಿ ಸ್ನೇಹಾ

0

ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ನವೋದಯ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿನಿ ಎಸ್.ಸ್ನೇಹ ಬೆಳಗಾವಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಕರಾಟೆ ವಿಭಾಗದಲ್ಲಿ ಪ್ರಥಮಳಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಎಸ್.ಸ್ನೇಹ, ೫೦ ಕೆ.ಜಿ ವಿಭಾಗದ ಕರಾಟೆಯ ಕುಮಿತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆಯುವ ರಾಷ್ಟ್ರಮಟ್ಟ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾಳೆ.
ಜಿಲ್ಲೆಯ ಇತಿಹಾಸದಲ್ಲಿಯೇ ರಾಷ್ಟ್ರಮಟ್ಟಕ್ಕೆ ಕರಾಟೆ ಸ್ಪರ್ಧೆಯಲ್ಲಿ ಆಯ್ಕೆಯಾಗಿರುವುದು ಪ್ರಥಮವಾಗಿದೆ. ಹೆಮ್ಮೆಯ ಸಂಗತಿಯಾಗಿದೆ ಎಂದು ಕರಾಟೆ ಅಸೋಸಿಯೇಷನ್ ಚೇರ್ಮನ್ ಎಂ.ಅಲ್ತಾಫ್ ಪಾಷ ತಿಳಿಸಿದ್ದಾರೆ. ಜಿಲ್ಲೆಯ ಕರಾಟೆ ಶಿಕ್ಷಕರಾದ ನಸೀರುದ್ದೀನ್, ನಶಾರಾ ಸುಲ್ತಾನ, ಎಸ್.ಮಹಮ್ಮದ್ ನೂರುಲ್ಲಾ, ಎಸ್.ಮಹಮ್ಮದ್ ಇಲಾಯತ್ತುಲ್ಲಾ, ಅಫ್ರೋಜ್ ಪಾಷ ಅಭಿನಂದಿಸಿದ್ದಾರೆ.

“ಕಸಾಪ”ದಿಂದ ಸಾಹಿತಿ ಡಿ. ಎಸ್. ಕರ್ಕಿ ಅವರ ಜನ್ಮದಿನಾಚರಣೆ

0

ತಾಲ್ಲೂಕಿನ ಎಲ್.ಮುತ್ತುಗದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಾಡಿನ ಖ್ಯಾತ ಕವಿ, “ಹಚ್ಚೇವು ಕನ್ನಡದ ದೀಪ” ಗೀತೆಯ ರಚನೆಕಾರ ಡಿ.ಎಸ್.ಕರ್ಕಿ ಅವರ ಜನುಮ ದಿನವನ್ನು ಕಸಾಪ ವತಿಯಿಂದ ದೀಪಗಳನ್ನು ಬೆಳಗುವ ಮೂಲಕ ಆಚರಿಸಿ ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಬಹುತೇಕ ಕನ್ನಡ ಸಮಾರಂಭಗಳು ಪ್ರಾರಂಭವಾಗುವುದು “ಹಚ್ಚೇವು ಕನ್ನಡದ ದೀಪ” ಭಾವ ಗೀತೆಯಿಂದ. ಈ ಗೀತೆಯನ್ನು ಬರೆದವರು ನಮ್ಮ ನಾಡಿನ ಹೆಮ್ಮೆಯ ಸಾಹಿತಿ ಡಿ. ಎಸ್. ಕರ್ಕಿ ಅವರು. ದುಂಡಪ್ಪ ಸಿದ್ಧಪ್ಪ ಕರ್ಕಿ ಅವರು ಈ ಹಾಡಿನಿಂದ ಕನ್ನಡಿಗರ ಮನೆಮಾತಾಗಿದ್ದಾರೆ ಎಂದು ಅವರು ತಿಳಿಸಿದರು.
ಕರ್ಕಿ ಅವರು ಬೆಳಗಾವಿ ಜಿಲ್ಲೆಯ ಹಿರೆಕೊಪ್ಪ ಗ್ರಾಮದಲ್ಲಿ 1907ರ ನವೆಂಬರ್ 15ರಂದು ಜನಿಸಿದರು. ಅಧ್ಯಾತ್ಮಿಕತೆ, ಪ್ರಕೃತಿ ಪ್ರೀತಿ, ಸೌಂದರ್ಯದ ಒಲವು ಅವರ ಕಾವ್ಯದ ಜೀವಾಳಗಳಾಗಿವೆ. ನಾಡಗೀತೆಗಳನ್ನು ಬರೆದು ನಾಡಿನಾದ್ಯಂತ ಪ್ರಸಿದ್ದಿಯನ್ನು ಪಡೆದ ಅವರು ಬೆಳಗಾವಿಯಲ್ಲಿ ಕನ್ನಡ ಜೀವಂತಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. “ನಕ್ಷತ್ರಗಾನ”, “ಭಾವತೀರ್ಥ”, “ಗೀತಗೌರವ”, “ನಮನ”, “ಕರ್ಕಿ ಕಣಗಲ” ಇವು ಕರ್ಕಿ ಅವರ ಪ್ರಮುಖ ಕವನ ಸಂಕಲನಗಳು. ಪ್ರೊ. ಕರ್ಕಿ ಅವರ ಕೃತಿ “ಗೀತ ಗೌರವ” ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್, ಸಿಂಡಿಕೇಟ್ ಸದಸ್ಯರಾಗಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸಹಾ ಕರ್ಕಿಯವರು ಸೇವೆ ಮಾಡಿದ್ದಾರೆ ಎಂದು ವಿವರಿಸಿದರು.
ಮುಖ್ಯ ಶಿಕ್ಷಕಿ ಪಿ.ವಿ.ಸುಜಾತ ಮಾತನಾಡಿ, ಕನ್ನಡದ ಬೆಳಕಿನ ಕಿರಣಗಳನ್ನು ನಾಡಿನೆಲ್ಲೆಡೆ ಹರಡಿಸಿ, ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತೆ “ಹಚ್ಚೇವು ಕನ್ನಡದ ದೀಪ” ಗೀತೆಯನ್ನು ರಚಿಸಿರುವ ಹೆಮ್ಮೆಯ ಸಾಹಿತಿ ಡಿ. ಎಸ್. ಕರ್ಕಿಯವರ ಬಗ್ಗೆ ವಿದ್ಯಾರ್ಥಿಗಳು ತಿಳಿದಿರಲೇಬೇಕು ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸುಶ್ರಾವ್ಯವಾಗಿ “ಹಚ್ಚೇವು ಕನ್ನಡದ ದೀಪ” ಗೀತೆಯನ್ನು ಕೈಯಲ್ಲಿ ದೀಪವನ್ನು ಹಿಡಿದು ಹಾಡಿದರು.
ಶಿಕ್ಷಕರಾದ ಸಿ.ವರಮ್ಮ, ಎಲ್.ಕೋಮಲ ಹಾಜರಿದ್ದರು.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

0

ನಗರದ ಕೋಟೆ ವೃತದಲ್ಲಿ ಸುವರ್ಣ ಕರ್ನಾಟಕ ಜನ ಶಕ್ತಿ ವೇದಿಕೆ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸುವರ್ಣ ಕರ್ನಾಟಕ ಜನ ಶಕ್ತಿ ವೇದಿಕೆಯ ರಾಜ್ಯಧ್ಯಕ್ಷ ನಾಗೇನಹಳ್ಳಿ ಕೃಷ್ಣಮೂರ್ತಿ ಮಾತನಾಡಿದರು.
ರಾಜ್ಯೋತ್ಸವವು ಕೇವಲ ಒಂದು ದಿನಕ್ಕೆ ಸೀಮಿತವಾಗದೇ ನಿತ್ಯೋತ್ಸವವಾಗಬೇಕು. ಈ ನಿಟ್ಟಿನಲ್ಲಿ ನವೆಂಬರ್‌ಗೆ ಮಾತ್ರ ರಾಜ್ಯೋತ್ಸವ ಆಚರಿಸಿ ಕನ್ನಡದ ಮೇಲಿನ ಪ್ರೇಮವನ್ನು ವ್ಯಕ್ತಪಡಿಸುವುದಕ್ಕಿಂತ ವರ್ಷದ ಎಲ್ಲ ದಿನಗಳಲ್ಲೂ ಕನ್ನಡ ಭಾಷೆಯನ್ನು ಬಳಸುವ ಮೂಲಕ ಗೌರವಿಸಬೇಕು ಎಂದು ಅವರು ತಿಳಿಸಿದರು.
ನಾಡು, ನುಡಿ, ಜಲ, ಸಂಸ್ಕೃತಿ, ಸ್ವಾಭಿಮಾನಕ್ಕೆ ಧಕ್ಕೆಯಾದ ಸಂದರ್ಭದಲ್ಲಿ ಪ್ರತಿಯೊಬ್ಬರೂ ಹೋರಾಟ ನಡೆಸುವ ಮೂಲಕ ತಾಯಿ ಭುವನೇಶ್ವರಿ ರಕ್ಷಣೆಗೆ ನಿಲ್ಲಬೇಕು. ಕನ್ನಡ ಕೇವಲ ಭಾಷೆಯಲ್ಲ, ಬದಲಿಗೆ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಸಾಹಿತ್ಯಾತ್ಮಕ ಧ್ವನಿಯಾಗಿದೆ. ಪ್ರತಿಯೊಬ್ಬರೂ ಕನ್ನಡ ಅಭಿವೃದ್ಧಿಗೆ ಕಂಕಣಬದ್ಧರಾಗಬೇಕಿದೆ ಎಂದರು.
ತಹಶೀಲ್ದಾರ್ ಎಂ.ದಯಾನಂದ್ ಮಾತನಾಡಿ, ಈ ರಾಜ್ಯೋತ್ಸವ ನಮಗೆ ಬರಬೇಕಾದರೆ ಹಲವರ ಪ್ರಾಣ ಬಲಿದಾನಗಳು ನಡೆದಿದೆ. ನಿಮ್ಮ ಮನೆ ಭಾಷೆ ಯಾವುದೇ ಇದ್ದರೂ ಮೊದಲ ಆದ್ಯತೆ ಕನ್ನಡಕ್ಕೆ ನೀಡಿ. ಕನ್ನಡ ಭಾಷೆಯನ್ನು ಹೆಚ್ಚು ಗೌರವಿಸಿ ಎಂದರು.
ಈ ಸಂದರ್ಭದಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಾದ್ಯಗೋಷ್ಠಿಯನ್ನು ಆಯೋಜಿಸಲಾಗಿದ್ದು, ಕನ್ನಡ ಪ್ರೇಮವನ್ನು ಬಿಂಬಿಸುವ ಗೀತೆಗಳನ್ನು ಹಾಡಲಾಯಿತು. ಸುವರ್ಣ ಕರ್ನಾಟಕ ಜನ ಶಕ್ತಿ ವೇದಿಕೆಯ ತಾಲ್ಲೂಕು ಪದಾಧಿಕಾರಿಗಳ ತಂದೆ ತಾಯಿಯರನ್ನು ಸನ್ಮಾನಿಸಲಾಯಿತು.
ರಾಜ್ಯ ಸಮಿತಿ ಸದಸ್ಯ ಮಹಮ್ಮದ್ ಅಲಿ, ಸಂಜೀವಪ್ಪ, ಜಿಲ್ಯಾಧ್ಯಕ್ಷ ಮಂಜುನಾಥ್‌ರೆಡ್ಡಿ, ಮಹಿಳಾ ಘಟಕ ಸಂಚಾಲಕಿ ಜಾನಕಿ ಮೋಹನ್, ರಾಜ್ಯ ಸಂಘಟನಾ ಕಾರ್ಯದರ್ಶಿ ನವೀನ್ ಕುಮಾರ್, ರಾಜ್ಯ ಕಾರ್ಮಿಕ ಘಟಕ ಅಧ್ಯಕ್ಷ ಹನುಮಂತರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಶ್, ತಾಲ್ಲೂಕು ಅಧ್ಯಕ್ಷ ಬೈರಾರೆಡ್ಡಿ, ಮಹಿಳಾ ಘಟಕ ಅಧ್ಯಕ್ಷೆ ಗಾಯಿತ್ರಮ್ಮ, ನಗರಾಧ್ಯಕ್ಷ ಮಧುಕುಮಾರ್, ಉಪಾಧ್ಯಕ್ಷ ಸುರೇಶ್, ಅಂಬರೀಶ್, ಕಾರ್ಮಿಕ ಘಟಕ ಅಧ್ಯಕ್ಷ ಗಂಗಾಧರ್, ಸದಸ್ಯರಾದ ಮಂಜುನಾಥ್, ಚಂದ್ರು, ಕೃಷ್ಣಪ್ಪ, ಹೇಮಂತ್, ಮಂಜು, ಆನಂದ್, ನಗರಸಭೆ ಸದಸ್ಯ ನಾರಾಯಣಸ್ವಾಮಿ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ತಾದೂರು ಮಂಜುನಾಥ್, ರವಿಕ್ರಪಾಶ್, ಆನೂರು ದೇವರಾಜು, ಮುನಿರಾಜು ಹಾಜರಿದ್ದರು.

ಹೊಸ ಕಟ್ಟಡಕ್ಕೆ ಅಂಗನವಾಡಿ ಸ್ಥಳಾಂತರ

0

ಗ್ರಾಮಸ್ಥರ ಒತ್ತಾಯದ ಮೇರೆಗೆ ಹಾಗೂ ಮಕ್ಕಳ ಹಿತದೃಷ್ಟಿಯಿಂದ ಹೊಸ ಕಟ್ಟಡಕ್ಕೆ ಅಂಗನವಾಡಿ ಕೇಂದ್ರವನ್ನು ಸ್ಥಳಾಂತರ ಮಾಡಿರುವುದಾಗಿ ಸಿ.ಡಿ.ಪಿ.ಒ ಕಚೇರಿಯ ಅಧಿಕಾರಿ ಮಮತ ತಿಳಿಸಿದರು.
ತಾಲ್ಲೂಕಿನ ಬಚ್ಚಹಳ್ಳಿ ಗ್ರಾಮದಲ್ಲಿ ಹೊಸ ಅಂಗನವಾಡಿ ಕಟ್ಟಡ ನಿರ್ಮಾಣವಾಗಿ ಆರು ತಿಂಗಳಾಗಿದ್ದರೂ, ಅದನ್ನು ಉದ್ಘಾಟಿಸದ ಕಾರಣ ಇನ್ನೂ ಹಳೆಯ ಕಟ್ಟಡದಲ್ಲಿಯೇ ಅಂಗನವಾಡಿ ಕೇಂದ್ರ ಕಾರ್ಯನಿರ್ವಹಿಸುತ್ತಿತ್ತು. ಕಟ್ಟಡ ಶಿಥಿಲವಾದ ಕಾರಣದಿಂದ ಮಳೆ ನೀರು ಜಿನುಗುತ್ತಿದ್ದುದರಿಂದ ಹಳೆಯ ಕಟ್ಟಡದ ಹೊರಕ್ಕೆ ಅಡುಗೆ ಸಾಮಾನುಗಳನ್ನು ಇಟ್ಟುಕೊಂಡು ರಸ್ತೆಯಲ್ಲಿ ಚಾಪೆ ಹಾಸಿ ಮಕ್ಕಳನ್ನು ಕುಳ್ಳಿರಿಸಿಕೊಳ್ಳುವ ಪರಿಸ್ಥಿತಿ ಮೂಡಿತ್ತು. ಈ ಬಗ್ಗೆ ಶನಿವಾರ ಫೋನ್ ಇನ್ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕಚೇರಿಗೆ ಗ್ರಾಮಸ್ಥರು ದೂರವಾಣಿ ಕರೆ ಮಾಡಿ ವಿಷಯ ಮುಟ್ಟಿಸಿದರು.
ತಕ್ಷಣ ಉಪತಹಶೀಲ್ದಾರ್ ಮಂಜುನಾಥ್, ಆರ್.ಐ ಲಕ್ಷ್ಮೀನಾರಾಯಣ್ ಅವರನ್ನು ಸ್ಥಳ ಪರಿಶೀಲನೆಗೆ ಕಳುಹಿಸಿದರು. ಸಿ.ಡಿ.ಪಿ.ಒ ಕಚೇರಿಯ ಅಧಿಕಾರಿ ಗ್ರಾಮಕ್ಕೆ ಆಗಮಿಸಿ ಹೊಸ ಕಟ್ಟಡಕ್ಕೆಂಗನವಾಡಿಯನ್ನು ಸ್ಥಳಾಂತರಿಸಿದರು.
“ಅಂಗನವಾಡಿ ಹೊಸ ಕಟ್ಟಡ ನಿರ್ಮಿಸಿದ್ದರೂ, ಅದನ್ನು ಮಕ್ಕಳ ಉಪಯೋಗಕ್ಕೆ ಬಿಡದೆ ಹಾಗೆಯೇ ಬಿಟ್ಟಿದ್ದರು. ಹಳೆಯ ಕಟ್ಟಡ ಸೋರುತ್ತಿದ್ದುದರಿಂದ ಹಳ್ಳಿಯಲ್ಲಿ ಮಕ್ಕಳನ್ನು ಕಳುಹಿಸಲು ಪೋಷಕರು ಹೆದರುತ್ತಿದ್ದರು. ಈ ದಿನ ತಹಶಿಲ್ದಾರ್ ಕಚೇರಿಗೆ ವಿಷಯ ಮುಟ್ಟಿಸಿದ ಮೇಲೆ ಹೊಸ ಕಟ್ಟಡವನ್ನು ಮಕ್ಕಳು ಉಪಯೋಗಿಸಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ” ಎಂದು ಗ್ರಾಮದ ಮುಖಂಡ ರವಿ ತಿಳಿಸಿದರು.
ಗ್ರಾಮಸ್ಥರಾದ ಸುಬ್ಬಣ್ಣ, ಶ್ರೀನಿವಾಸ್, ಗಣೇಶ್, ವೆಂಕಟೇಶ್, ಅಂಗನವಾಡಿ ಶಿಕ್ಷಕಿ ಮಂಜುಳ, ಸಹಾಯಕಿ ಕಮಲಮ್ಮ ಹಾಜರಿದ್ದರು.

ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ

0

ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸೋಮವಾರ ಯೂನಿಟಿ ಸಿಲ್ ಸಿಲಾ ಫೌಂಡೇಷನ್ ಹಾಗೂ ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ಆರನೇ ವರ್ಷದ ಬೃಹತ್ ರಕ್ತದಾನ ಶಿಬಿರದಲ್ಲಿ ಯೂನಿಟಿ ಸಿಲ್ ಸಿಲಾ ಫೌಂಡೇಶನ್ ಅಧ್ಯಕ್ಷ ಮೊಹಮ್ಮದ್ ಅಸದ್ ಮಾತನಾಡಿದರು.
“ಹಿಂಸೆಯ ಬದಲಿಗೆ ಒಂದಾದರೂ ಜೀವವನ್ನು ಉಳಿಸಿದಲ್ಲಿ ಅದು ಮನುಕುಲದ ಬಹುದೊಡ್ಡ ಸೇವೆ” ಎಂದು ಖುರಾನ್ ನಲ್ಲಿ ಹೇಳಿದೆ. ಹಾಗಾಗಿ ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ಈದ್ ಮಿಲಾದ್ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಜಾತಿ, ಮತ, ಧರ್ಮಗಳನ್ನು ಮೀರಿ ರಕ್ತದಾನ ಮಾಡುವುದರಿಂದ ಅನೇಕ ಮಂದಿಯನ್ನು ಪ್ರಾಣಾಪಾಯದಿಂದ ಪಾರು ಮಾಡಲು ಸಹಕಾರಿಯಾಗುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ಮೆದುಳು ಸೇರಿದಂತೆ ಹೃದಯ, ಹಾಗೂ ದೇಹದ ಎಲ್ಲಾ ಅಂಗಾಂಗಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತವೆ ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್ ಮಾತನಾಡಿ, ಸಾರ್ವಜನಿಕರು ಅದರಲ್ಲಿಯೂ ಮುಖ್ಯವಾಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದಾಗಬೇಕು ಇದರಿಂದ ಅಪಘಾತಗಳು, ಹೆರಿಗೆ ಮುಂತಾದ ಸನ್ನಿವೇಶಗಳಲ್ಲಿ ಆಸ್ಪತ್ರೆಗೆ ಬರುವಂತಹ ರೋಗಿಗಳಿಗೆ ರಕ್ತ ಪೂರೈಸಲು ಸಾಧ್ಯವಾಗುತ್ತದೆ ಎಂದರು.
ಕಳೆದ ಆರು ವರ್ಷಗಳಿಂದ ಮಹಮ್ಮದ್ ಪೈಗಂಬರ್ ನೆನಪಿನಲ್ಲಿ ಯೂನಿಟಿ ಸಿಲ್ ಸಿಲಾ ಫೌಂಡೇಷನ್‌ನ ಯುವಕರು ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.
ಶಿಬಿರದಲ್ಲಿ ರಕ್ತದಾನ ಮಾಡಿದ ನಾಗರಿಕರಿಗೆ ಹಣ್ಣು, ಹಣ್ಣಿನ ರಸ ಮತ್ತು ಪ್ರಮಾಣಪತ್ರಗಳನ್ನು ವಿತರಣೆ ಮಾಡಲಾಯಿತು. ಒಟ್ಟು ೧೫೦ ಯೂನಿಟ್ ರಕ್ತ ಸಂಗ್ರಹಣೆಯಾಯಿತು.
ಯೂನಿಟಿ ಸಿಲ್ಸಿಲಾ ಫೌಂಡೇಶನ್ ಪದಾಧಿಕಾರಿಗಳಾದ ಇಮ್ತಿಯಾಜ್ ಪಾಷ, ಅಕ್ರಂಪಾಷ, ರೆಹಮತ್, ಆಫೀಜ್, ಮುಜಾಹಿದ್, ಫಾರುಕ್, ಶಬ್ಬೀರ್, ವಸೀಮ್, ಮುದಾಸಿರ್, ಜಭಿ, ತೌಸಿಫ್, ಡಾ.ಹೇಮಂತ್, ರೆಡ್ ಕ್ರಾಸ್ ಸಂಸ್ಥೆಯ ಭರತ್, ಕೃಷ್ಣವೇಣಿ ಹಾಜರಿದ್ದರು.

ಸಮತಾ ಸೈನಿಕ ದಳ ಜಂಗಮಕೋಟೆ ಹೋಬಳಿ ಪದಾಧಿಕಾರಿಗಳ ಆಯ್ಕೆ

0

ಜನಸಾಮಾನ್ಯರ ಜೊತೆ ಕೆಲಸ ಮಾಡುವಾಗ ವ್ಯಕ್ತಿಗೆ ಪದವಿಗಿಂತ ಪ್ರಾಮಾಣಿಕ ಸೇವೆ ಬಹು ಮುಖ್ಯವಾಗಿರುತ್ತದೆ. ಆ ನಿಟ್ಟಿನಲ್ಲಿ ಸಮತಾ ಸೈನಿಕ ದಳದ ಪದಾಧಿಕಾರಿಗಳು ಜನರ ಕೆಲಸ ಕಾರ್ಯಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ವೆಂಕಟರೋಣಪ್ಪ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ಭಾನುವಾರ ಸಮತಾ ಸೈನಿಕ ದಳ ತಾಲ್ಲೂಕು ಸಮಿತಿ ವತಿಯಿಂದ ಜಂಗಮಕೋಟೆ ಹೋಬಳಿ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವನ್ನು ಗೌರವಿಸುವ ಜೊತೆಗೆ ರಕ್ಷಿಸುವ ಕೆಲಸವನ್ನು ಸಂಘಟನೆಯ ಪದಾಧಿಕಾರಿಗಳು ಪ್ರಾಮಾಣಿಕವಾಗಿ ಮಾಡಬೇಕು ಎಂದರು.
ಸಮತಾ ಸೈನಿಕ ದಳದ ತಾಲ್ಲೂಕು ಅಧ್ಯಕ್ಷ ಈಧರೆ ಪ್ರಕಾಶ್ ಮಾತನಾಡಿ, ಜನ ಸಾಮಾನ್ಯರಲ್ಲಿ ಜ್ಞಾನದ ಸಂದೇಶವನ್ನು ಭೋಧಿಸಿದಂತಹ ಬುದ್ಧ ಹಾಗೂ ಭೌದ್ದ ಧರ್ಮದ ನೀತಿಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸಮತಾ ಸೈನಿಕ ದಳದ ಜಿಲ್ಲಾ ಕಾರ್ಯಾಧ್ಯಕ್ಷ ಪಿಳ್ಳಾಂಜಿನಪ್ಪ, ಜಿಲ್ಲಾ ಗೌರವಾಧ್ಯಕ್ಷ ಕೆ.ಎಸ್.ದ್ಯಾವಕೃಷ್ಣಪ್ಪ, ಉಪಾಧ್ಯಕ್ಷ ಮೇಲೂರು ಜಿ.ಎಂ.ಮುನಿಶಾಮಯ್ಯ, ತಾಲ್ಲೂಕು ಗೌರವಾಧ್ಯಕ್ಷ ಮುನಿಆಂಜಿನಪ್ಪ, ಪದಾಧಿಕಾರಿಗಳಾದ ವಿಜಯ್‌ಕುಮಾರ್, ಶ್ರೀನಿವಾಸ್, ವೆಂಕಟೇಶ್ ಹಾಜರಿದ್ದರು.
ನೂತನ ಪದಾಧಿಕಾರಿಗಳು
ಜಂಗಮಕೋಟೆ ಹೋಬಳಿ ಅಧ್ಯಕ್ಷರಾಗಿ ಎಲ್.ಮುನಿರಾಜು, ಗೌರವಾಧ್ಯಕ್ಷರಾಗಿ ಮಳ್ಳೂರು ವೆಂಕಟರಾಮಪ್ಪ, ಪ್ರಧಾನಕಾರ್ಯದರ್ಶಿಯಾಗಿ ಸುಗಟೂರು ಭುವನ್, ಕಾರ್ಯಧ್ಯಕ್ಷರಾಗಿ ನಾರಾಯಣದಾಸರಹಳ್ಳಿ ಬಾಲಚಂದ್ರ, ಖಜಾಂಚಿಯಾಗಿ ಜೆ.ವೆಂಕಟಾಪುರ ಪ್ರಸನ್ನಕುಮಾರ್, ಉಪಾಧ್ಯಕ್ಷರಾಗಿ ಜಂಗಮಕೋಟೆ ಚಿಕ್ಕಮುನಿಯಪ್ಪ, ಬೈರಸಂದ್ರ ಮನೋಹರ್, ಅತ್ತಿಗಾನಹಳ್ಳಿ ಮುನಿಕೆಂಚಪ್ಪ , ಹೊಸಪೇಟೆ ವೆಂಕಟರಾಮಪ್ಪ, ನಾರಾಯಣದಾಸರಹಳ್ಳಿ ರಾಜಪ್ಪ, ಸಂಘಟನಾ ಕಾರ್ಯದರ್ಶಿಗಳಾಗಿ ಜಂಗಮಕೋಟೆ ಗೋಪಾಲಕೃಷ್ಣ, ಮಹೇಶ್ ಸೇರಿದಂತೆ ತಾಲ್ಲೂಕು ಉಪಾಧ್ಯಕ್ಷರಾಗಿ ಜಂಗಮಕೋಟೆ ಎಲ್.ಮುನಿರಾಜು, ಸಂಘಟನಾ ಕಾರ್ಯದರ್ಶಿಯಾಗಿ ಶಿಡ್ಲಘಟ್ಟ ನರಸಿಂಹ ಅವರನ್ನು ಆಯ್ಕೆ ಮಾಡಲಾಯಿತು.

ಐದು ಮರಿಗಳನ್ನು ಹಾಕಿ ಅಚ್ಚರಿ ಮೂಡಿಸಿದ ಮುತ್ತೂರಿನ ಕುರಿ

0

ತಾಲ್ಲೂಕಿನ ಮುತ್ತೂರು ಗ್ರಾಮದ ಮಂಜುನಾಥ್ ಅವರ ಕುರಿ ಐದು ಮರಿಗಳನ್ನು ಹಾಕುವ ಮೂಲಕ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ. ಹೆಚ್ಚೆಂದರೆ ೨ ರಿಂದ ೩ ಮರಿ ಹಾಕುವುದನ್ನು ಕಂಡಿದ್ದ ಕುರಿ ಸಾಕಣೆದಾರರು ಇದನ್ನು ಕಂಡು ಅಚ್ಚರಿ, ಮೆಚ್ಚುಗೆ ಹಾಗೂ ಕುತೂಹಲ ವ್ಯಕ್ತಪಡಿಸಿದ್ದಾರೆ.
“ಇದು ಮಹಾರಾಷ್ಟ್ರ ಮೂಲದ ನಾರಿ ಸುವರ್ಣ ಎಂಬ ತಳಿಯ ಕುರಿ. ಕಳೆದ ಬಾರಿ ಮೂರು ಮರಿಗಳನ್ನು ಹಾಕಿತ್ತು. ಆದರೆ ಈ ಬಾರಿ ಐದು ಮರಿಗಳನ್ನು ಹಾಕಿದೆ. ಅವುಗಳಲ್ಲಿ ಎರಡು ಗಂಡು ಮತ್ತು ಮೂರು ಹೆಣ್ಣು ಮರಿಗಳಿದ್ದು, ಎಲ್ಲವೂ ಆರೋಗ್ಯವಾಗಿವೆ” ಎಂದು ಮುತ್ತೂರು ಮಂಜುನಾಥ್ ತಿಳಿಸಿದರು.
“೨೦೧೪ ರಲ್ಲಿ ಟಿ.ಬಿ.ಜಯಚಂದ್ರ ಅವರು ಪಶು ಸಂಗೋಪನಾ ಸಚಿವರಾಗಿದ್ದಾಗ ರಾಜ್ಯಕ್ಕೆ ಮಹಾರಾಷ್ಟ್ರದಿಂದ ಆರು ನಾರಿ ಸುವರ್ಣ ತಳಿಯ ಗಂಡು ಮರಿಗಳನ್ನು ತರಿಸಿದ್ದರು. ಅದರಲ್ಲಿ ಒಂದನ್ನು ೫೨ ಸಾವಿರ ರೂ ಕೊಟ್ಟು ಕೊಂಡೆ. ಅದರಿಂದ ತಳಿ ಅಭಿವೃದ್ಧಿ ಮಾಡಿದೆ. ಹೀಗೆ ನಮ್ಮಲ್ಲಿ ಹುಟ್ಟಿದ ನಾರಿ ಸುವರ್ಣ ತಳಿಯ ಕುರಿ ಐದು ಮರಿಗಳನ್ನು ಹಾಕಿದೆ. ನಮ್ಮ ಬಳಿ ಈ ತಳಿಯ ೮ ಹೆಣ್ಣು ಮತ್ತು ೨ ಗಂಡು ಕುರಿಗಳಿವೆ. ಎರಡು ತಿಂಗಳು ಆಗುವಷ್ಟರಲ್ಲಿ ಹಾಲು ಕುಡಿಯುವುದನ್ನು ಮರಿ ನಿಲ್ಲಿಸುತ್ತದೆ. ಆಗಲೇ ಅದನ್ನು ಕೊಳ್ಳುವವರು ಬಂದು ತೆಗೆದುಕೊಂಡು ಹೋಗುತ್ತಾರೆ. ಸುಮಾರು ೧೨ ಸಾವಿರಕ್ಕೆ ಒಂದು ಮರಿ ಮಾರಾಟವಾಗುತ್ತದೆ” ಎಂದು ಅವರು ವಿವರಿಸಿದರು.

ಹರಳಹಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

0

ತಾಲ್ಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ಶ್ರೀ ಭುವನೇಶ್ವರಿ ಕನ್ನಡ ಯುವಕರ ಸಂಘದಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಕೆ.ಎಂ.ಎಫ್ ವ್ಯವಸ್ಥಾಪಕ ಡಾ.ಎಚ್.ಚನ್ನೇಗೌಡ ಮಾತನಾಡಿದರು.
ಕನ್ನಡ ರಾಜ್ಯೋತ್ಸವ ಒಂದು ದಿನಕ್ಕೆ ಮೀಸಲಾಗಬಾರದು, ಅದನ್ನು ದಿನನಿತ್ಯದ ಬದುಕಿನ ಆಚರಣೆಯಾಗಬೇಕು ಎಂದು ಅವರು ತಿಳಿಸಿದರು.
ಕನ್ನಡ ಭಾಷೆ ಭಾವೋಪಯೋಗಿಯಾಗಿ ಮತ್ತು ಲೋಕೋಪಯೋಗಿಯಾಗಿ ಸಮರ್ಥವಾಗಿ ಬಳಕೆಯಾದಾಗ ಅದು ಬೆಳೆಯುತ್ತದೆ ಮತ್ತು ಅರಳುತ್ತದೆ ಎಂದು ಹೇಳಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ಕನ್ನಡ ಉಳಿಸಲು ನಾವು ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕು. ಗ್ರಾಮೀಣ ಸೊಗಡಿನ ಹಳ್ಳಿಯ ಆಟಗಳ ಸ್ಪರ್ಧೆಯನ್ನು ಹರಳಹಳ್ಳಿಯಲ್ಲಿ ಕಸಾಪ ವತಿಯಿಂದ ನಡೆಸುವುದಾಗಿ ತಿಳಿಸಿದರು.
ಶಿಕ್ಷಕ ನಾಗಭೂಷಣ್ ಮಾತನಾಡಿ, ವೇಗವಾಗಿ ಬದಲಾಗುತ್ತಿರುವ ನಾಗರಿಕ ಸವಾಲುಗಳನ್ನು ಅಷ್ಟೇ ವೇಗವಾಗಿ ಸ್ವೀಕರಿಸಿ, ಅರಗಿಸಿಕೊಂಡು ಭಾಷೆಯು ಸಮರ್ಥವಾಗಿ ಬೆಳೆಯಬೇಕು. ಹೊಸ ಪದಗಳಿಗೆ ಆಲೋಚನೆಗಳಿಗೆ ಒಳಗಾಗುವುದರಿಂದ ಕನ್ನಡ ಬೆಳೆಯುತ್ತಿದೆ. ನಮ್ಮ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ ತೆಲುಗನ್ನಡ ಪದಗಳಾದ ದೋಕಾರಿ, ಕೊಡಿವಿಲಿ, ಗೊಡ್ಲಿ, ಮೊಡುಕು, ಮುಗ್ಗು, ಎಕ್ಕು, ತೊಕ್ಕು, ಶೆಂಪಾಕು, ಪುಡುಗೋಕು ಮುಂತಾದವುಗಳು ಭಾಷೆಗೆ ಸ್ಥಳೀಯ ಸೊಗಡನ್ನು ನೀಡುತ್ತದೆ ಎಂದರು.
ಶಿಕ್ಷಕ ಕೆ.ವಿ.ನಾರಾಯಣಸ್ವಾಮಿ ಮಾತನಾಡಿ, ಮೊಬೈಲ್, ಕಂಪ್ಯೂಟರ್ ಮತ್ತು ಕಾನ್ವೆಂಟ್ ದಾಸರಾಗುತ್ತಿರುವುದರಿಂದ ಕನ್ನಡ ಕುಂಠಿತವಾಗಿದೆ ಎಂದರು.
ಈ ಸಂದರ್ಭದಲ್ಲಿ ರಂಗೋಲಿ ಸ್ಪರ್ಧೆಯಲ್ಲಿ ವಿಜೇತ ಗ್ರಾಮದ ಹೆಣ್ಣುಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಹರಳಹಳ್ಳಿ ಸೊಣ್ಣೇಗೌಡ, ಬಿಬಿಎಂಪಿ ಎಂಜಿನಿಯರ್ ಎಚ್.ಎಂ.ನಂದಕುಮಾರ್, ಗ್ರಾಮ ಪಂಚಾಯಿತಿ ಸದಸ್ಯೆ ಸುಮಿತ್ರಾ ಕೃಷ್ಣಪ್ಪ, ಶ್ರೀನಿವಾಸ್, ವೆಂಕಟರೆಡ್ಡಿ, ದ್ಯಾವಪ್ಪ, ಮಹೇಶ್, ಲಕ್ಷ್ಮೀನಾರಾಯಣ್, ಮುರಳಿ ಹಾಜರಿದ್ದರು.

ತಾಲ್ಲೂಕಿನಾದ್ಯಂತ ಈದ್-ಮಿಲಾದ್ ಆಚರಣೆ

0

ಭಾನುವಾರ ತಾಲ್ಲೂಕಿನಾದ್ಯಂತ ಈದ್-ಮಿಲಾದ್ ಹಬ್ಬವನ್ನು ಶ್ರದ್ಧಾ ಭಕ್ತಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ಮಹಮ್ಮದ್ ಪೈಗಂಬರ್ ಜನ್ಮದಿನದಂದು ಸಂಭ್ರಮದಿಂದ ಆಚರಿಸಲಾಗುವ ಈ ಹಬ್ಬದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಬೀದಿಗಳನ್ನು ಅಲಂಕರಿಸಲಾಗಿತ್ತು.
ಮಹಿಳೆಯರು ಸಿಹಿ ತಿಂಡಿಗಳನ್ನು ತಯಾರಿಸಿ ವಿತರಿಸಿದರು. ಕಿರಿಯರು ಮತ್ತು ಹಿರಿಯರು ಹೊಸ ಉಡುಪುಗಳನ್ನು ತೊಟ್ಟು ಸಂತಸಪಟ್ಟರು. ಮುಸ್ಲೀಮರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಪರಸ್ಪರ ಶುಭ ಹಾರೈಸಿದರು.
ವಿವಿಧ ಬಡಾವಣೆಗಳಲ್ಲಿರುವ ಮಸೀದಿಗಳಲ್ಲಿ ಗುಂಪುಗೂಡಿದ ಬಹುತೇಕ ಮಂದಿ ಮುಸ್ಲೀಮರು ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದರು. ಕಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಾವುಟಗಳನ್ನು ಹಿಡಿದುಕೊಂಡು ಮಹಮ್ಮದ್ ಪೈಗಂಬರ್ ಅವರನ್ನು ಸ್ಮರಿಸಿದರು. ವಿವಿಧ ರೀತಿಯ ಪ್ರಾರ್ಥನಾ ಮಂದಿರಗಳ ಪ್ರತಿಕೃತಿಗಳನ್ನು ಮಾಡಿ ಮೆರವಣಿಗೆಯಲ್ಲಿ ಕೊಂಡೊಯ್ದರು. ಈದ್ ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮನೆಗಳಲ್ಲಿ ತಯಾರಿಸಲಾಗಿದ್ದ ಸಿಹಿ ತಿಂಡಿ ವಿತರಿಸಿದರು.
ಸಂಜೆ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು. ಧರ್ಮಗುರುಗಳು ಉಪದೇಶ ಬೋಧಿಸಿದರು. ಎಲ್ಲ ಮಸೀದಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ನಗರದ ಮುಸ್ಲಿಂ ಜನಾಂಗದ ಎಲ್ಲ ಹಿರಿಯರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಹಬ್ಬದ ದಿನ ಶಾಂತಿ ಸುವ್ಯವಸ್ಥೆಗಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮ

0

ನಗರದ ಅಶೋಕ ರಸ್ತೆಯಲ್ಲಿರುವ ಜಸ್ಮಿತ ಡ್ಯಾನ್ಸ್ ಅಕಾಡೆಮಿಯಲ್ಲಿ ಶಿಡ್ಲಘಟ್ಟ ನೃತ್ಯ ಕಲಾವಿದರಿಂದ ಬುಧವಾರ ಸಂಜೆ ಆಯೋಜಿಸಿದ್ದ ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಆರ್.ಅನಂತಕೃಷ್ಣ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿದರು.
ಕಠಿಣ ಪರಿಶ್ರಮ, ಬದ್ಧತೆ ಮತ್ತು ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಖಂಡಿತವಾಗಿ ಎನನ್ನಾದರೂ ಸಾಧಿಸಬಹುದು. ಸಾಧನೆಯೆಡೆಗೆ ಸಾಗುವಾಗ ಅನೇಕ ತೊಂದರೆಗಳು, ಟೀಕೆಗಳು ಬರುತ್ತವೆ. ಆದರೆ ನಮ್ಮಲ್ಲಿನ ಪ್ರಬಲ ಇಚ್ಚಾಶಕ್ತಿ, ಹಾಗೂ ಹಿಡಿದ ಕೆಲಸವನ್ನು ಗುರಿಮುಟ್ಟಿಸಬೇಕೆಂಬ ದೃಢನಿರ್ಧಾರ ಮಾತ್ರ ಸಾಧನೆಯೆಡೆಗೆ ಕರೆದೊಯ್ಯುತ್ತದೆ ಎಂದು ಅವರು ತಿಳಿಸಿದರು.
ಬಹಳಷ್ಟು ಕನ್ನಡಾಭಿಮಾನಿಗಳು ಮತ್ತು ದಾನಿಗಳು ಸಹಕರಿಸಿ ಕನ್ನಡದ ಕಾರ್ಯಕ್ರಮಗಳನ್ನು ನಡೆಸಲು ಪ್ರೋತ್ಸಾಹ ನೀಡುತ್ತಿದ್ದಾರೆ. ಅವರೆಲ್ಲರ ಸಹಕಾರ ಮತ್ತು ಆಶೀರ್ವಾದದಿಂದ ನಾನು ಕ್ರಿಯಾಶೀಲವಾಗಿ ನಾಡು, ನುಡಿ ಮತ್ತು ಸಾಹಿತ್ಯದ ಕೆಲಸವನ್ನು ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 11 ನೇ ವಾರ್ಡ್ ನ ನಗರಸಭಾ ಸದಸ್ಯ ಎಲ್. ಅನಿಲ್ ಕುಮಾರ್ ಮಾತನಾಡಿ, ನಾಡು, ನುಡಿ ಮತ್ತು ಸಮಾಜಸೇವೆಯಲ್ಲಿ ಮುಂಚೂಣಿಯಲ್ಲಿ ನಿಂತು ನಿಸ್ವಾರ್ಥವಾಗಿ ಕಾರ್ಯಕ್ರಮಗಳನ್ನು ನಡೆಸುವವರು ಅಪರೂಪ. ನಮ್ಮ ಊರಿಗೆ ಸಾಧಕರನ್ನು ಕರೆಸಿ ನಮ್ಮ ಮಕ್ಕಳಿಗೆ ಸ್ಫೂರ್ತಿ ಪ್ರೇರಣೆ ತುಂಬುವುದಲ್ಲದೆ ಕನ್ನಡ ಭಾಷೆ ಸಂಸ್ಕೃತಿಗೆ ಸಂಬಂಧಿಸಿದಂತೆ ಬಿ.ಆರ್.ಅನಂತಕೃಷ್ಣ ಅತ್ಯುತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಪ್ರಶಂಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ವಿ.ಕೃಷ್ಣ, ಲಕ್ಷ್ಮೀನಾರಾಯಣ್ ಹಾಗೂ ಸಾಹಿತಿ ಜಿ.ಎನ್.ಶ್ಯಾಮ ಸುಂದರ್ ಮಾತಾಡಿದರು.
ಈ ಸಂದರ್ಭದಲ್ಲಿ ವಿವಿಧ ಕಲಾವಿದರು ನೃತ್ಯ, ಹಾಡು ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಮತ್ತು ಸನ್ಮಾನ ಕಾರ್ಯಕ್ರಮ ನೆರವೇರಿಸಿದರು. ಚಲನಚಿತ್ರನಟ ಸಿ.ಎನ್.ಮುನಿರಾಜ್, ಲಿಟಲ್ ಸ್ಟಾರ್ ಡ್ಯಾನ್ಸ್ ಅಕಾಡೆಮಿಯ ಶ್ರೀನಿವಾಸ್ ಮತ್ತು ಮನೋಜ್ ತಂಡ, ಜಸ್ಮಿತಾ ಡ್ಯಾನ್ಸ್ ಅಕಾಡೆಮಿಯ ನೃತ್ಯ ನಿರ್ದೇಶಕಿ ಧನುಶ್ರೀ ತಂಡ, ಮಯೂರ ನಾಟ್ಯಕಲಾ ಕೇಂದ್ರ, ಶ್ರೀ ಸಾಯಿ ಆರ್ಟ್ಸ್ ತಂಡದ ಭರತನಾಟ್ಯ ನೃತ್ಯ ಕಲಾವಿದೆಯರಾದ ಶೋಭಿತ ಹಾಗೂ ಭುವನ, ಕಿರುತೆರೆ ನಟಿ ಸುಷ್ಮಾ, ಗಾಯಕರಾದ ನಾಗಭೂಷಣ್, ವಿಶ್ವಕರ್ಮ ಶ್ರೀನಿವಾಸ್, ಸಂತೋಷ್, ಡ್ಯಾನ್ಸ್ ವಿತ್ ಮಿ ಡ್ಯಾನ್ಸ್ ಅಕಾಡೆಮಿಯ ನೃತ್ಯ ನಿರ್ದೇಶಕ ನಾಗೇಶ್ ಹಾಗೂ ಹಲವಾರು ನೃತ್ಯ ಕಲಾವಿದರು, ಪೋಷಕರು ಹಾಜರಿದ್ದರು.

ಸರ್ಕಾರಿ ಶಾಲಾ-ಕಾಲೇಜಿನ ಅಭಿವೃದ್ಧಿಗೆ ಕ್ರಮ: ವಿ.ಮುನಿಯಪ್ಪ

0

ಸಮಾಜದಲ್ಲಿರುವ ಪ್ರತಿಯೊಬ್ಬರು ಜಾತಿ ಮತ ಭೇದ ಮರೆತು ವಿದ್ಯಾವಂತರಾಗಬೇಕು. ಆಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಹೀಗಾಗಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಸುಧಾರಣೆಗೆ ಪ್ರಥಮ ಆದ್ಯತೆ ನೀಡಲಾಗಿದೆ ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಗುರುವಾರ ೯೩ ಲಕ್ಷ ರೂಗಳ ವೆಚ್ಚದಲ್ಲಿ ನೂತನ ಕೊಠಡಿಗಳು ಮತ್ತು ಪ್ರಯೋಗಾಲಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಶಿಥಿಲ ಅವಸ್ಥೆಯಲ್ಲಿರುವ ಶಾಲಾ-ಕಾಲೇಜು ಮತ್ತು ವಿದ್ಯಾರ್ಥಿನಿಲಯಗಳ ಮಾಹಿತಿ ನೀಡಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಾಲ್ಲೂಕಿನಾದ್ಯಂತ ಸುಮಾರು ೧೦ ಸರ್ಕಾರಿ ಪ್ರೌಢಶಾಲೆಗಳ ದುರಸ್ಥಿಗೆ ಕ್ರಮ ಕೈಗೊಳ್ಳಲು ಕ್ಷೇತ್ರ ಶಿಕ್ಷಾಧಿಕಾರಿಗಳ ಮೂಲಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಬಿಸಿಎಂ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ವಿದ್ಯಾರ್ಥಿನಿಲಯಗಳ ಸಮಸ್ಯೆಗಳಿದ್ದಲ್ಲಿ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬುದೇ ನಮ್ಮ ಆಶಯ ಮತ್ತು ಮುಖ್ಯ ಗುರಿ. ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣದ ವ್ಯವಸ್ಥೆಯನ್ನು ಸುಧಾರಣೆ ಮಾಡಲು ಯೋಜನೆಯನ್ನು ರೂಪಿಸಿ ಹಂತ ಹಂತವಾಗಿ ಅನುಷ್ಠಾನಗೊಳಿಸಿ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗುತ್ತದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪೂರ್ವ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಅಂಗನವಾಡಿ ಕೇಂದ್ರದ ಕಟ್ಟಡಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಹಾಗೆಯೇ ಸರ್ಕಾರಿ ಶಾಲೆಗಳಿಗೆ ಭದ್ರತೆ ವ್ಯವಸ್ಥೆ ಮಾಡಲು ಕಾಂಪೌಂಡ್ ನಿರ್ಮಿಸಲಾಗುತ್ತದೆ. ಉತ್ತಮ ಪರಿಸರದಲ್ಲಿ ಶಿಕ್ಷಣ ಪಡೆಯಲು ಎಲ್ಲಾ ರೀತಿಯ ವ್ಯವಸ್ಥೆ ಒದಗಿಸಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರಲು ಗಮನಹರಿಸಲಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಆನಂದ್, ಉಪನ್ಯಾಸಕ ಮುನಿರಾಜು, ವಿ.ಸುಭ್ರಮಣಿ, ಎಂಜಿನಿಯರ್ ನಾರಾಯಣಸ್ವಾಮಿ, ರಾಜಕುಮಾರ್ ಹಾಜರಿದ್ದರು.

ರಾಜೀವ್ ಗಾಂಧಿ ಸೇವಾ ಕೇಂದ್ರದ ಉದ್ಘಾಟನೆ

0

ಗ್ರಾಮೀಣ ಭಾಗದ ಜನರು ವಿವಿಧ ಸರ್ಕಾರಿ ಸೌಲಭ್ಯಕ್ಕಾಗಿ ತಾಲ್ಲೂಕು ಕೇಂದ್ರದವರೆಗೂ ಬರುವುದನ್ನು ತಡೆಯಲು ಹಾಗೂ ತ್ವರಿತವಾಗಿ ಕೆಲಸಗಳು ನಡೆಯಲು ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ಪ್ರಾರಂಭಿಸಲಾಗಿದೆ ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರಾಜೀವ್ ಗಾಂಧಿ ಸೇವಾ ಕೇಂದ್ರದ ಉದ್ಘಾಟನೆಯನ್ನು ಬುಧವಾರ ನೆರವೇರಿಸಿ ಅವರು ಮಾತನಾಡಿದರು.
ಈ ಹಿಂದೆ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಯಾವುದೋ ಕೆಲಸ ಅರಿಸಿ ಬರುವವರ ಸಂಖ್ಯೆ ತೀರಾ ಕಡಿಮೆಯಾಗಿತ್ತು. ಆದರೆ ಇದೀಗ ಗ್ರಾಮ ಪಂಚಾಯಿತಿ ಕಾರ್ಯಲಯದಿಂದ ಕೋಟ್ಯಾಂತರ ರೂಗಳ ಕಾಮಗಾರಿಗಳು ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿದೆ. ದೇಶದ ಜನತೆಯ ಶ್ರೇಯಸ್ಸಿಗಾಗಿ ಮಹತ್ತರ ಯೋಜನೆಗಳನ್ನು ಸರ್ಕಾರಗಳು ಜಾರಿಗೆ ತಂದಿವೆ. ಅವನ್ನು ಸದ್ಭಳಕೆ ಮಾಡಿಕೊಳ್ಳಬೇಕಿದೆ ಎಂದರು.
ತಹಶೀಲ್ದಾರ್ ಎಂ.ದಯಾನಂದ್ ಮಾತನಾಡಿ, ದೇಶದ ಅಭಿವೃದ್ಧಿಯಾಗಬೇಕಾದರೆ ಗ್ರಾಮಗಳ ಅಭಿವೃದ್ಧಿಯಾಗಬೇಕು ಎನ್ನುವ ಮಹಾತ್ಮ ಗಾಂಧೀಜಿಯವರ ಮಾತಿನಂತೆ ಇಂದು ದೇಶದ ಬಹುತೇಕ ಗ್ರಾಮಗಳು ಮಹಾತ್ಮ ಗಾಂಧಿ ಯೋಜನೆಯಡಿ ಅಭಿವೃದ್ಧಿಯೆಡೆಗೆ ಸಾಗುತ್ತಿವೆ. ಗ್ರಾಮೀಣ ಪ್ರದೇಶಗಳ ಚಿತ್ರಣ ಬದಲಾಗುತ್ತಿದೆ. ಗ್ರಾಮಸ್ಥರು ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಪಡೆದುಕೊಂಡು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಉಪಾಧ್ಯಕ್ಷ ಮುನಿಯಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಳಿನಾ ಮಂಜುನಾಥ್, ಕೋಚಿಮುಲ್ ನಿರ್ದೇಶಕ ಶ್ರೀನಿವಾಸ್, ಎಸ್.ಎಂ.ನಾರಾಯಣಸ್ವಾಮಿ, ಪಿಡಿಓ ಹರೀಶ್, ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.

ರೈತ ಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳಿಂದ ಧರಣಿ

0

ತಾಲ್ಲೂಕಿನಾಧ್ಯಂತ ಸಾಗುವಳಿ ಚೀಟಿ ವಿತರಿಸಿರುವ ರೈತರಿಗೆ ಸಾಗುವಳಿ ಚೀಟಿಯಂತೆ ಖಾತೆ ಮಾಡಿಕೊಡುವುದು ಹಾಗೂ ಈವರೆಗೂ ಸಾಗುವಳಿ ಚೀಟಿ ವಿತರಿಸದೇ ಇರುವ ರೈತರಿಗೆ ಕೂಡಲೇ ಸಾಗುವಳಿ ಚೀಟಿ ವಿತರಿಸಬೇಕು ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಒತ್ತಾಯಿಸಿದರು.
ನಗರದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಮಂಗಳವಾರ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳಿಂದ ಹಮ್ಮಿಕೊಂಡಿದ್ದ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಾಲ್ಲೂಕಿನಾಧ್ಯಂತ ಬರಗಾಲ ತಾಂಡವವಾಡುತ್ತಿದ್ದು ಇರುವ ಅಲ್ಪಸ್ವಲ್ಪ ನೀರಿನಲ್ಲಿ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದೇ ರೈತ ಕಂಗಾಲಾಗಿದ್ದಾನೆ.
ಇಂತಹ ಸಂದರ್ಭದಲ್ಲಿ ಸಾಗುವಳಿ ಚೀಟಿಯಂತೆ ಖಾತೆ ಮಾಡಿಕೊಡಿ ಎಂದು ತಾಲ್ಲೂಕು ಕಚೇರಿಗೆ ಬಂದರೆ ಅಧಿಕಾರಿಗಳು ವಿನಾಕಾರಣ ರೈತರನ್ನು ಅಲೆದಾಡಿಸುತ್ತಾರೆ. ತಾಲ್ಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಕೆಲ ಅಧಿಕಾರಿಗಳು ಕಾನೂನು ಅರಿವಿಲ್ಲದ ಹಾಗೆ ವರ್ತಿಸುತ್ತಿದ್ದು ಅಂತಹ ಅಧಿಕಾರಿಗಳನ್ನು ಕೂಡಲೇ ಇಲ್ಲಿಂದ ವರ್ಗಾವಣೆಗೊಳಿಸಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ಎಂ.ದಯಾನಂದ್ ಪ್ರತಿಭಟನಾನಿರತರೊಂದಿಗೆ ಮಾತನಾಡಿ ಮನವೊಲಿಸಲು ಯತ್ನಿಸದರಾದರೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಪಟ್ಟುಹಿಡಿದ ಕಾರಣ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಆರತಿ ಆನಂದ್ ಭೇಟಿ ನೀಡಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.
ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಆರತಿ ಆನಂದ್ ಮಾತನಾಡಿ, ತಾಲ್ಲೂಕು ಕಚೇರಿಯ ಸಿಬ್ಬಂದಿಯಿಂದ ವಿನಾಕಾರಣ ಕೆಲಸ ಕಾರ್ಯಗಳು ತಡವಾಗುವುದು ಮತ್ತು ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಗಟ್ಟಲು ಅಗತ್ಯ ಕ್ರಮ ಜರುಗಿಸಲಾಗುವುದು. ರೈತರ ಕೆಲಸ ಕಾರ್ಯಗಳು ತಹಶೀಲ್ದಾರ್ ಕಚೇರಿಯ ಹಂತದಲ್ಲಿದ್ದರೆ ಅಂತಹ ಕೆಲಸ ಕಾರ್ಯಗಳು ಇಲ್ಲಿಯೇ ಮಾಡಿಕೊಡಲಾಗುವುದು. ಇನ್ನು ಜಿಲ್ಲಾ ಹಂತದ ಕೆಲಸ ಕಾರ್ಯಗಳಾದರೆ ನಮ್ಮಲ್ಲಿ ಮಾಡಿಕೊಡಬಹುದು. ಕೆಲವೊಮ್ಮ ರೈತರ ಕೆಲಸ ಕಾರ್ಯಗಳು ಸರ್ಕಾರದ ಮಟ್ಟದಲ್ಲಿ ಆಗಬೇಕಾಗಿರುವುದರಿಂದ ತಡವಾಗಬಹುದು. ತಾವು ನೀಡಿರುವ ಮನವಿ ಪತ್ರದ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್. ಗೌರವಾಧ್ಯಕ್ಷ ಸೊಣ್ಣೇನಹಳ್ಳಿ ಎಸ್.ಎಂ.ನಾರಾಯಣಸ್ವಾಮಿ, ಉಪಾಧ್ಯಕ್ಷ ಮನಿನಂಜಪ್ಪ. ಕಾರ್ಯದರ್ಶಿ ಕೃಷ್ಣಪ್ಪ. ಪದಾಧಿಕಾರಿಗಳಾದ ಎಂ.ರಮೇಶ್. ರಾಮಚಂದ್ರಪ್ಪ. ನರಸಿಂಹಪ್ಪ. ವೇಣುಗೋಪಾಲ್ ಹಾಜರಿದ್ದರು.

ಹೆಣ್ಣುಮಕ್ಕಳು ಹೆಚ್ಚು ಓದಬೇಕು – ಜಿಲ್ಲಾಧಿಕಾರಿ ಆರ್.ಲತಾ

0

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ವಿಶೇಷ ತರಗತಿಗಳನ್ನು ನಡೆಸುತ್ತಿದ್ದು, ಆಗಿಂದಾಗ್ಗೆ ಅವರಿಗೆ ಅನಿರೀಕ್ಷಿತವಾಗಿ ಪರೀಕ್ಷೆಗಳನ್ನು ನಡೆಸುತ್ತೇವೆ. ನಮ್ಮ ಉದ್ದೇಶ ಮಕ್ಕಳನ್ನು ಶೈಕ್ಷಣಿಕವಾಗಿ ತಯಾರು ಮಾಡುವುದಾಗಿದೆ. ವಿದ್ಯಾರ್ಥಿಗಳು ಕೂಡ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ನಗರದ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸೋಮವಾರ ಗಿಡವನ್ನು ನೆಟ್ಟು ಅವರು ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳೊಂದಿಗೆ ಸಂವಾದಿಸಿದರು.
ಕೇವಲ ಪಾಸಾಗುವುದಲ್ಲ, ಹೆಚ್ಚು ಅಂಕಗಳನ್ನು ಪಡೆದು ಮುಂದಿನ ಓದಿಗೆ ವಿದ್ಯಾರ್ಥಿಗಳು ಗುರಿಯನ್ನು ಹೊಂದಬೇಕು ಎನ್ನುವುದು ನಮ್ಮ ಆಶಯ. ನಾನು ಎಸ್ಸೆಸ್ಸೆಲ್ಸಿ ವರೆಗೂ ಕನ್ನಡ ಮಾಧ್ಯಮದಲ್ಲಿಯೇ ಓದಿದ್ದು. ಶ್ರದ್ಧೆ, ಆಸಕ್ತಿ, ಶಿಸ್ತು ಅಳವಡಿಸಿಕೊಂಡಲ್ಲಿ ಗುರಿಯು ನಿಚ್ಚಳವಾಗುತ್ತದೆ. ಹೆಣ್ಣುಮಕ್ಕಳು ಎಸ್ಸೆಸ್ಸೆಲ್ಸಿ, ಪಿಯುಸಿಗೆ ಓದನ್ನು ನಿಲ್ಲಿಸಬಾರದು. ಹೆಚ್ಚು ಓದಿ ತಮ್ಮ ಕಾಲ ಮೇಲೆ ತಾವು ನಿಲ್ಲುವ ಸಾಮರ್ಥ್ಯವನ್ನು ಪಡೆಯಬೇಕು. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಈ ಬಾರಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆಂದೇ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಯಾವುದೇ ಅನುಮಾನಗಳಿದ್ದರೂ ಪರಿಹರಿಸಿಕೊಳ್ಳಿ. ಸಾಧಿಸಲಾಗದ್ದು ಯಾವುದೂ ಇಲ್ಲ. ಸಾಧನೆ ಕೊಂಚ ಪರಿಶ್ರಮವನ್ನು ಬೇಡುತ್ತದೆ ಅಷ್ಟೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎ.ಬಿ.ವಿ.ಪಿ ಸದಸ್ಯರು, ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡ ಕಟ್ಟಿ ಕೇವಲ ಎಂಟೇ ವರ್ಷಗಳಾಗಿದ್ದರೂ ಅದು ಕಳಪೆ ಕಾಮಗಾರಿಯಿಂದಾಗಿ ಸೋರುತ್ತಿದೆ ಎಂದು ಜಿಲ್ಲಾಧಿಕಾರಿಯವರಿಗೆ ಕರೆದುಕೊಂಡು ಹೋಗಿ ತೋರಿಸಿದರು. ಸೂಕ್ತ ಭದ್ರತೆಯಿಲ್ಲದ ಕಾರಣ ಕಾಲೇಜಿನ ಕಟ್ಟಡದಿಂದ ಸಾಕಷ್ಟು ವಸ್ತುಗಳು ಕಳ್ಳತನವಾಗಿವೆ ಹಾಗೂ ಕುಡಿಯಲು ಮತ್ತು ಶೌಚಾಲಯಕ್ಕೆ ನೀರಿನ ಸಮಸ್ಯೆಯಿದೆ ಎಂದು ತಿಳಿಸಿದರು. ಹಿಂದುಳಿದ ವರ್ಗ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ಹಾಸ್ಟೆಲ್ ತುಂಬಾ ಅಗತ್ಯವಿದೆ. ಗಂಡು ಮಕ್ಕಳ ಹಾಸ್ಟೆಲ್ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿದೆ. ಅದನ್ನು ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.
ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಆರ್.ಲತಾ ಭರವಸೆ ನೀಡಿದರು.
ತಹಶೀಲ್ದಾರ್ ಎಂ.ದಯಾನಂದ್, ನಗರಸಭೆ ಪೌರಾಯುಕ್ತ ಶ್ರೀಕಾಂತ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆನಂದ್, ಎ.ಬಿ.ವಿ.ಪಿ ಮಂಜುನಾಥರೆಡ್ಡಿ, ಸಿ.ಎಂ.ಟಿ ರಮೇಶ್, ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ನರೇಶ್, ಸರ್ವೋದಯ ಸ್ವಯಂಸೇವಾ ಸಂಸ್ಥೆ ಅಧ್ಯಕ್ಷೆ ಜಿ.ವಿ.ಗಾಯಿತ್ರಿ, ಎನ್.ಎಸ್.ಎಸ್. ಮುನಿರಾಜು ಹಾಜರಿದ್ದರು.