Home Blog Page 340

ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮ

0

ತಾಲ್ಲೂಕಿನ ಚೀಮಂಗಲದ ಕುವೆಂಪು ಶತಮಾನೋತ್ಸವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕಸಾಪ ತಾಲ್ಲೂಕು ಘಟಕ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ “ಕುವೆಂಪು ಬದುಕು ಬರಹ” ಕುರಿತಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಹಡಪದ್ ಮಾತನಾಡಿದರು.
ಪರಿಸರ, ಕೃಷಿ, ಮಹಿಳೆ, ಶೂದ್ರ ಮೊದಲಾದ ಹಲವು ಆಯಾಮಗಳನ್ನು ಒಳಗೊಂಡ ಕಾದಂಬರಿ, ನಾಟಕ, ಶಿಶು ಸಾಹಿತ್ಯ, ಕವನ ಸಂಕಲನ ಹೀಗೆ ಸಾಹಿತ್ಯದ ಎಲ್ಲ ನೆಲೆಗಳನ್ನು ಕುವೆಂಪು ಅವರ ಕೃತಿಗಳಲ್ಲಿ ಕಾಣಬಹುದಾಗಿದೆ. ಕುವೆಂಪು ಅವರು ತಮ್ಮ ಪ್ರಯತ್ನ ಹಾಗೂ ಸಾಧನೆಯಿಂದ ವಿಶ್ವಮಾನವರಾದ ಮಹಾನ್ ಚೇತನ ಎಂದು ಅವರು ತಿಳಿಸಿದರು.
ಕುವೆಂಪುರವರು ಕನ್ನಡ ಸಾಹಿತ್ಯವನ್ನು ಮೇರು ಶಿಖರಕ್ಕೇರಿಸಿದ ಮಹಾನ್‌ ಚೇತನ ಹಾಗೂ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ರಾಷ್ಟ್ರಕವಿ. ಮಲೆನಾಡಿನಲ್ಲಿ ಹುಟ್ಟಿಬೆಳೆದ ಅವರು ತಮ್ಮ ಕಾವ್ಯಗಳಲ್ಲಿ, ಕವಿತೆಗಳಲ್ಲಿ ಮಲೆನಾಡಿನ ಸೊಬಗನ್ನು ಎಳೆಎಳೆಯಾಗಿ ಬಣ್ಣಿಸಿದ್ದಾರೆ. ಕನ್ನಡ ಸಾರಸ್ವತ ಲೋಕಕ್ಕೆ ಕುವೆಂಪು ಅವರು ಯತೇಚ್ಛ ಸಾಹಿತ್ಯ ಭಂಡಾರವನ್ನೇ ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.
ಗ್ರೇಡ್ 2 ತಹಶಿಲ್ದಾರ್ ಹನುಮಂತರಾವ್ ಮಾತನಾಡಿ, ಇಲ್ಲಿ ಯಾರೂ ಮೇಲಲ್ಲ, ಕೀಳಲ್ಲ. ಎಲ್ಲರೂ ಸಮಾನರೆಂಬ ಭಾವನೆಯನ್ನು ಕುವೆಂಪುರವರ ಕೃತಿಗಳಲ್ಲಿ ಕಾಣಬಹುದಾಗಿದೆ. ಕುವೆಂಪು ಅವರು ನೀಡಿದ ಸರ್ವೋದಯ, ಸಮನ್ವಯ, ವಿಶ್ವಮಾನವನ ಸಂದೇಶ ಸಾರ್ವಕಾಲಿಕವಾದುದು ಎಂದರು.
“ಕುವೆಂಪು ಬದುಕು ಬರಹ” ಕುರಿತಂತೆ ಶಾಲೆಯಲ್ಲಿ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಚರಣ್, ಅಮೂಲ್ಯ, ಅಂಕುಶ್ ಯಾದವ್ ಅವರಿಗೆ ಕಸಾಪ ವತಿಯಿಂದ ಪುಸ್ತಕ ಮತ್ತು ಪ್ರಮಾಣಪತ್ರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಹಡಪದ್ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ಮುನಿರಾಜು ಅವರನ್ನು ಗೌರವಿಸಲಾಯಿತು.
ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಿ.ಎಂ.ನಾರಾಯಣಸ್ವಾಮಿ, ಶಿಕ್ಷಕರಾದ ವೆಂಕಟೇಶಪ್ಪ, ನಾಗೇಶ್, ನಾಗರಾಜು, ಶ್ರೀಧರ್, ಮಮತಾ, ಜ್ಯೋತಿ, ರಾಜೀವಗೌಡ, ಲಕ್ಷ್ಮೀಕಾಂತಮ್ಮ, ಅರುಣಕುಮಾರಿ, ಸಿದ್ದಲಿಂಗಪ್ಪ, ಕಸಾಪ ಮಹಿಳಾ ಪ್ರತಿನಿಧಿ ದಾಕ್ಷಾಯಿಣಿ, ಸಂಘಸಂಸ್ಥೆಗಳ ಪ್ರತಿನಿಧಿ ಶಂಕರ್, ನಗರ ಘಟಕದ ಅಧ್ಯಕ್ಷ ಸಿ.ಎನ್.ಮುನಿರಾಜು, ಚಂದ್ರಕಲಾ, ಮಂಜುನಾಥ್ ಹಾಜರಿದ್ದರು.

ದೊಡ್ಡದಾಸೇನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಗೆ “ಪರಿಸರ ಮಿತ್ರ” ಹಸಿರು ಶಾಲೆ ಪ್ರಶಸ್ತಿ

0

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು 2018 – 19 ನೇ ಸಾಲಿನ ಜಿಲ್ಲಾ ಹಂತದ “ಪರಿಸರ ಮಿತ್ರ” ಹಸಿರು ಶಾಲೆ ಪ್ರಶಸ್ತಿಯನ್ನು ತಾಲ್ಲೂಕಿನ ದೊಡ್ಡದಾಸೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನೀಡಿದೆ. ಪ್ರಶಸ್ತಿ ಪಾರಿತೋಷಕದ ಜೊತೆಯಲ್ಲಿ ಐದು ಸಾವಿರ ರೂಗಳ ಚೆಕ್ ಸಹ ನೀಡಲಾಗಿದೆ.
28 ವಿದ್ಯಾರ್ಥಿಗಳು ಮತ್ತು ಶಿಕ್ಷಕರಾದ ಕೆ.ಎನ್.ಶ್ರೀಕಾಂತ್ ಹಾಗೂ ಎ.ಆರ್.ಮಹೇಶ್ ಶಾಲೆಯ ಆವರಣದ ಒಂದೂವರೆ ಎಕರೆ ಸ್ಥಳವನ್ನು ಹಸಿರುತಾಣವನ್ನಾಗಿಸಿದ್ದಾರೆ. ಶಾಲೆಯ ಮುಂದಿನ ತೋಟದಲ್ಲಿ ಸೀತಾಫಲ, ನೇರಳೆ, ಬಾಳೆಗಿಡಗಳು ಸೇರಿದಂತೆ ಸುಮಾರು 550 ಕ್ಕೂ ಹೆಚ್ಚು ಗಿಡಗಳಿವೆ. ಶಾಲೆಯ ಬಿಸಿಯೂಟಕ್ಕೆ ಬೇಕಾದ ಕುಂಬಳಕಾಯಿ, ಕರಿಬೇವು, ಕೊತ್ತಂಬರಿ ಮತ್ತು ಸೊಪ್ಪುಗಳನ್ನು ಬೆಳೆದುಕೊಳ್ಳುತ್ತಾರೆ. ಇವರಲ್ಲಿ ಔಷಧಿ ವನವಿದೆ, ತುಳಸು ವನವಿದೆ ಮತ್ತು ಗುಲಾಬಿ ವನವೂ ಇದೆ.
ನೀರಿಗಾಗಿ ಮಳೆಕೊಯ್ಲು ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಗ್ರಾಮ ಪಂಚಾಯಿತಿಯವರು ಇವರ ಹಸಿರು ಪ್ರೀತಿಯನ್ನು ಕಂಡು ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಹನಿ ನೀರೂ ವ್ಯರ್ಥವಾಗದಂತೆ ತಟ್ಟೆ ತೊಳೆದ, ಕೊಠಡಿ ತೊಳೆದ ನೀರೂ ಗಿಡಗಳೆಡೆಗೆ ಹರಿಯುವಂತೆ ಮಾಡಿಕೊಂಡಿದ್ದಾರೆ. ಮಕ್ಕಳ ಹುಟ್ಟುಹಬ್ಬದಂತೆ ಚಾಕೋಲೇಟ್ ತರಬೇಡಿ, ಒಂದು ಗಿಡ ನೆಡಿ ಎಂದು ಹೇಳಿ ಅದನ್ನು ರೂಢಿಸಿರುವುದರಿಂದ ಮಕ್ಕಳಿಗೆ ಇದು ನನ್ನ ಗಿಡ ಎಂಬ ಆತ್ಮೀಯತೆ ಮೂಡಿದೆ.
“ಶಾಲೆಯ ವಿದ್ಯಾರ್ಥಿಗಳೆಲ್ಲರೂ ನಮ್ಮಲ್ಲಿನ ಗಿಡಗಳನ್ನು ಸಲೀಸಾಗಿ ಗುರುತಿಸಬಲ್ಲರು. ಹಕ್ಕಿ, ಚಿಟ್ಟೆ, ಕೀಟಗಳ ಬಗ್ಗೆ ಮಕ್ಕಳು ತಿಳಿಯುವುದಲ್ಲದೆ, ಪರಿಸರ ಕಾಪಾಡುವ ಮನಸ್ಥಿತಿ ಅವರಲ್ಲಿ ಅಂತರ್ಗತವಾಗಿದೆ. ಇಲ್ಲಿ ಬಿಡುವ ಸೀತಾಫಲ, ಬಾಳೆ, ನೇರಳೆ, ಸೊಪ್ಪು ಎಲ್ಲವೂ ಮಕ್ಕಳಿಗೇ ಮೀಸಲು. ನಾವೇ ತಯಾರಿಸುವ ಎಳೆಹುಳು ಗೊಬ್ಬರವನ್ನು ಗಿಡಗಳಿಗೆ ಹಾಕುತ್ತೇವೆ. ದಾನಿಗಳು ನಮಗೆ ನೆರವು ನೀಡುತ್ತಿರುವುದರಿಂದ ಸಹಕಾರಿಯಾಗಿದೆ. ಈ ದಿನ ನಮ್ಮ ಶಾಲೆಗೆ “ಪರಿಸರ ಮಿತ್ರ” ಹಸಿರು ಶಾಲೆ ಪ್ರಶಸ್ತಿ ನೀಡಿದ್ದು ನಮಗೆ, ಮಕ್ಕಳಿಗೆ ಇನ್ನಷ್ಟು ಉತ್ಸಾಹ ಮೂಡಿಸಿದೆ” ಎಂದು ಶಿಕ್ಷಕ ಕೆ.ಎನ್.ಶ್ರೀಕಾಂತ್ ತಿಳಿಸಿದರು.

ಪ್ರಧಾನಿ ಭೇಟಿಯ ವೇಳೆ ರೈತ ಮುಖಂಡರನ್ನು ಬಂಧಿಸಿರುವ ಕ್ರಮ ಖಂಡಿಸಿ ರೈತರಿಂದ ಪ್ರತಿಭಟನೆ

0

ನಗರದ ಸರ್ಕಲ್ ಇನ್ಸ್ ಪೆಕ್ಟರ್ ಕಚೇರಿಯ ಮುಂಭಾಗದಲ್ಲಿ ಗುರುವಾರ ರೈತ ಸಂಘದ ಪದಾಧಿಕಾರಿಗಳೊಂದಿಗೆ ಪ್ರತಿಭಟನೆ ನಡೆಸಿ ರೈತ ಮುಖಂಡ ಎಸ್.ಎಂ.ನಾರಾಯಣಸ್ವಾಮಿ ಮಾತನಾಡಿದರು.
ಕೇಂದ್ರ ಸರ್ಕಾರದ ರೈತ ವಿರೋಧಿ ದೋರಣೆಯನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ವೇಳೆ ತುಮಕೂರಿನಲ್ಲಿ ಪ್ರತಿಭಟನೆಗೆ ಮುಂದಾದ ರೈತ ಮುಖಂಡರನ್ನು ಪೊಲೀಸರು ಬಂಧಿಸಿರುವ ಕ್ರಮ ಸರಿಯಲ್ಲ ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರದ ಹಲವು ನೀತಿಗಳು ಈ ಭಾಗದ ರೈತರಿಗೆ ಮಾರಕವಾಗಿದ್ದು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತರನ್ನು ಪೊಲೀಸರು ಬಂಧಿಸುವ ಮೂಲಕ ರೈತರ ಹಕ್ಕನ್ನು ಮೊಟುಕುಗೊಳಿಸಿದ್ದಾರೆ. ಕೂಡಲೇ ಬಂಧಿತ ರೈತರನ್ನು ಬಿಡುಗಡೆ ಗೊಳಿಸಬೇಕು ಎಂದು ಒತ್ತಾಯಿಸಿ ರೈತ ಮುಖಂಡರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ವೇಣುಗೋಪಾಲ್, ರಾಮಕೃಷ್ಣಪ್ಪ, ದೇವರಾಜ್, ಸೊಣ್ಣಪ್ಪ, ಹಯಾತ್‌ಖಾನ್ ಹಾಜರಿದ್ದರು.

ಖಾಸಗಿ ಕ್ಲಿನಿಕ್‌ಗಳ ಮೇಲೆ ಜಿಲ್ಲಾ ಆರೋಗ್ಯಾಧಿಕಾರಿ ದಾಳಿ, 20 ಕ್ಕೂ ಹೆಚ್ಚು ಮಂದಿ ವೈದ್ಯರಿಗೆ ನೋಟೀಸ್

0

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮದ ಪ್ರಕಾರ ಜಿಲ್ಲಾ ನೋಂದಣಿ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಸುವುದು ಮತ್ತು ತಮ್ಮ ವಿದ್ಯಾರ್ಹತೆಗನುಗುಣವಾಗಿ ಚಿಕಿತ್ಸೆ ನೀಡಬೇಕು. ಹೋಮಯೋಪತಿ, ಆಯುಷ್, ಆಯುರ್ವೇದದ ಪದವಿ ಪಡೆದು ಆಲೋಪಥಿ ಓಷಧಿಗಳನ್ನು ಬಳಸಿ ಜನತೆಗೆ ಚಿಕಿತ್ಸೆ ನೀಡುವಂತಿಲ್ಲ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮೂರ್ತಿ ಹೇಳಿದರು.
ನಗರದಲ್ಲಿ ಶುಕ್ರವಾರ ಸಂಜೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯೋಗೇಶ್‌ಗೌಡ ನೇತೃತ್ವದ ತಂಡದೊಂದಿಗೆ ನಗರದ ಕೆಲ ಖಾಸಗಿ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ನಗರದ ಅಶೋಕ ರಸ್ತೆಯ ಮಾಡ್ರನ್ ಕ್ಲಿನಿಕ್ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ ವೈದ್ಯರ ಪದವಿ ಪ್ರಮಾಣ ಪತ್ರ ಹಾಗೂ ಜಿಲ್ಲಾ ನೋಂದಣಿ ಪ್ರಾಧಿಕಾರದಲ್ಲಿ ನೋದಣಿಯಾಗಿರುವ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿದರು. ಹೋಮಿಯೋಪಥಿ ಪ್ರಮಾಣ ಪತ್ರ ಪಡೆದಿರುವ ವೈದ್ಯ ಆಲೋಪಥಿ ಓಷಧಿ ಬಳಸಿ ಚಿಕಿತ್ಸೆ ನೀಡುತ್ತಿದ್ದುದನ್ನು ಕಂಡು, ಮುಂದೆ ಈ ರೀತಿ ಮಾಡದಂತೆ ಎಚ್ಚರಿಸಿ ತಿಳುವಳಿಕೆ ನೊಟೀಸ್ ನೀಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯೋಗೇಶ್‌ಗೌಡ ಮಾತನಾಡಿ, ನಗರದಾದ್ಯಂತ ಸುಮಾರು 20 ಕ್ಕೂ ಹೆಚ್ಚು ಮಂದಿ ಆಯುಷ್. ಹೋಮಿಯೋಪಥಿ ಹಾಗೂ ಆಯುರ್ವೇದ ಪದವಿ ಪಡೆದಿರುವ ವೈದ್ಯರು ಆಲೋಪಥಿ ಓಷಧಿ ಬಳಸಿ ಚಿಕಿತ್ಸೆ ನೀಡುತ್ತಿರುವ ಬಗ್ಗೆ ನಾಗರಿಕರಿಂದ ಬಂದ ದೂರಿನ ಹಿನ್ನಲೆಯಲ್ಲಿ ಇಂದು ಸಾಂಕೇತಿಕವಾಗಿ ದಾಳಿ ನಡೆಸಿ ತಿಳುವಳಿಕೆ ಮೂಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ಸಹಯೋಗದಲ್ಲಿ ಖಾಸಗಿ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಹಾಬುದ್ದೀನ್, ಡಾ.ಚನ್ನಕೇಶವರೆಡ್ಡಿ ಹಾಜರಿದ್ದರು.

ಕುಡಿಯುವ ನೀರಿನ ಸಮಸ್ಯೆ ಬಗೆಹರಿಯದಿದ್ದಲ್ಲಿ ಅಧಿಕಾರಿ ವಿರುದ್ಧ ಪೊಲೀಸರಿಗೆ ದೂರು ನೀಡಿ

0

ಕುಡಿಯುವ ನೀರಿನ ಸಮಸ್ಯೆ 24 ಗಂಟೆಗಳೊಳಗೆ ಪರಿಹರಿಸಬೇಕು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಯದಿದ್ದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿ ವಿರುದ್ಧ ಪೊಲೀಸರಲ್ಲಿ ದೂರು ನೀಡುವಂತೆ ಕಾಕಚೊಕ್ಕಂಡಹಳ್ಳಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿ ಚಿನ್ಮಯಿಗೆ ಪರಿಸರತಜ್ಞ ಅ.ನಾ.ಯಲ್ಲಪ್ಪರೆಡ್ಡಿ ತಿಳಿಸಿದರು.
ಕಲುಷಿತ ನೀರಿನಿಂದಾಗಿ ಶೇಕಡಾ 90 ರಷ್ಟು ರೋಗಗಳು ಬರುವುದು, ಆದ್ದರಿಂದ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕಾದುದು ಬಹು ಮುಖ್ಯ. ಮಕ್ಕಳು ತಿಳಿಸಿದ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ. ಸಾರ್ವಜನಿಕರು ಕೂಡ ಸಹಕರಿಸಬೇಕು. ಸ್ವಚ್ಛತೆಗೆ ಆದ್ಯತೆಯನ್ನು ನೀಡಬೇಕು. ನಮ್ಮ ಗ್ರಾಮ ಎಂಬ ಮನೋಭಾವ ಬಂದರೆ ಎಲ್ಲವೂ ಸಾಧ್ಯವಿದೆ ಎಂದು ಹೇಳಿದರು.
ಕುಡಿಯುವ ನೀರಿನ ವ್ಯವಸ್ಥೆ, ಶಾಲೆಯಲ್ಲಿನ ಸಮಸ್ಯೆ, ಆಡಲು ಮೈದಾನ, ಶೌಚಾಲಯ, ಸ್ವಚ್ಛತೆಯಿಲ್ಲದ ಸಂಪ್ ಮುಂತಾದ ಸಮಸ್ಯೆಗಳನ್ನು ವಿವರಿಸಿದ ವಿದ್ಯಾರ್ಥಿಗಳು ಅವುಗಳನ್ನು ಪರಿಹರಿಸುವಂತೆ ಕೋರಿದರು.
ಕಾಕಚೊಕ್ಕಂಡಹಳ್ಳಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿ ಚಿನ್ಮಯಿ, ನಮಗೆ ಆಡಲು ಮೈದಾನವಿಲ್ಲ, ನಮ್ಮ ಶಾಲೆಯಲ್ಲಿನ ನೀರಿನ ಟ್ಯಾಂಕ್ ಮುಚ್ಚಳವಿಲ್ಲದೆ, ಕೋತಿಗಳು ಬಂದು ಗಲೀಜು ಮಾಡುತ್ತವೆ, ದಯಮಾಡಿ ಸರಿಪಡಿಸಿಕೊಡಿ ಎಂದನು. ಭಕ್ತರಹಳ್ಳಿಯ ಸರ್ಕಾರಿ ಶಾಲೆಯ ಆರನೇ ತರಗತಿಯ ನವೀಷಾ ಮಾತನಾಡಿ, ನಮ್ಮ ಶಾಲೆ ಕಾಂಪೌಂಡ್ ಒಳಗೆ ಗ್ರಾಮಸ್ಥರು ಬಂದು ಗಲೀಜು ಮಾಡುತ್ತಾರೆ. ಬೀಡಿ, ಸಿಗರೇಟ್ ಮತ್ತು ಮದ್ಯದ ಬಾಟಲ್ ಬಿದ್ದಿರುತ್ತವೆ. ನಮಗೆ ಶೌಚಾಲಯ ಸರಿಯಾಗಿಲ್ಲ, ಆಟದ ಮೈದಾನವಿಲ್ಲ ಎಂದು ಸಮಸ್ಯೆಗಳನ್ನು ವಿವರಿಸಿದಳು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೆನ್ನಮ್ಮ, ಪಿ.ಡಿ.ಒ ಯಮುನಾರಾಣಿ, ಬಿ.ಎಂ.ವಿ. ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಲ್.ಕಾಳಪ್ಪ, ಗ್ರಾಮಾಂತರ ಟ್ರಸ್ಟ್ ನ ಉಷಾಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕಲ್ಪನಾ, ಸುಲೋಚನಾ, ಲಲಿತಮ್ಮ, ಚಿದಾನಂದಮೂರ್ತಿ, ದ್ಯಾವಮ್ಮ, ಸಿ.ಆರ್.ಟಿ ಸತೀಶ್, ಮುಖ್ಯಶಿಕ್ಷಕ ಪಂಚಮೂರ್ತಿ ಹಾಜರಿದ್ದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ

0

ಭಾರತೀಯ ಜನತಾ ಪಕ್ಷದ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ಸಡಗರದಿಂದ ಆಚರಿಸಲಾಯಿತು. ಪಕ್ಷದ ಕಾರ್ಯಕರ್ತರು ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಿಸಿದರು.
“ವಾಜಪೇಯಿ ಅವರು ಅಭಿವೃದ್ಧಿಯ ಹರಿಕಾರರಾಗಿದ್ದು, ತಮ್ಮ ಕೆಲಸಗಳ ಮೂಲಕ ಅವರು ದೇಶದ ಜನರ ಹೃದಯ ಗೆದ್ದಿದ್ದಾರೆ. ವಾಜಪೇಯಿ ಒಬ್ಬ ಅಜಾತಶತ್ರು, ದೇಶಕಂಡ ಹೆಮ್ಮಯ ನಾಯಕ. ಭ್ರಷ್ಟಚಾರ ನಿರ್ಮೂಲನೆ ಮಾಡಿದ ವ್ಯಕ್ತಿ. ಅವರ ಆಡಳಿತದ ಅವಧಿಯಲ್ಲಿ ದೇಶ ಸಾಕಷ್ಟು ಅಭಿವೃದ್ಧಿ ಕಂಡಿತ್ತು. ಈಗ ನರೇಂದ್ರ ಮೋದಿ ಅವರ ಹಾದಿಯಲ್ಲಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ” ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ರಾಘವೇಂದ್ರ ತಿಳಿಸಿದರು.
ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಂದ್ರಗೌಡ ಮಾತನಾಡಿ, “ಆರ್‌ಎಸ್‌ಎಸ್‌ ಕಾರ್ಯಕರ್ತರಾಗಿ, ತುರ್ತು ಪರಿಸ್ಥಿತಿಯಲ್ಲಿ ಹೋರಾಟ ಮಾಡಿ, ಬಿಜೆಪಿಯನ್ನು ಅಧಿಕಾರಕ್ಕೆ ತಂದ ಅವರ ಬದುಕು, ಧ್ಯೇಯ, ತತ್ವಾದರ್ಶ, ವಾಗ್ಝರಿ, ದಿಟ್ಟ ನಿಲುವು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದೆ. ದೇಶ ಕಂಡ ಅಪ್ರತಿಮ ಪ್ರಧಾನಿ, ಅಜಾತಶತ್ರು, ಕವಿ ಹೃದಯಿ, ಮಾನವತಾವಾದಿ, ಮುತ್ಸದ್ಧಿ, ಅಸ್ಖಲಿತ ವಾಗ್ಮಿಯಾಗಿದ್ದ ವಾಜಪೇಯಿಯವರನ್ನು ವಿರೋಧ ಪಕ್ಷದವರೂ ಸಹ ಮೆಚ್ಚುತ್ತಿದ್ದರು” ಎಂದು ಹೇಳಿದರು.
ಮಂಜುಳಮ್ಮ, ಸುಜಾತಮ್ಮ, ದಾಮೋದರ್, ಬೈರಾರೆಡ್ಡಿ, ದೇವರಾಜ ಹಾಜರಿದ್ದರು.

ಜೆಡಿಎಸ್ ಪಕ್ಷ ಮತ್ತೆ ಸೇರುವ ಪ್ರಮೇಯವೇ ಇಲ್ಲ – ಮಾಜಿ ಶಾಸಕ ಎಂ.ರಾಜಣ್ಣ

0

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಘೋಷ್ಠಿ ನಡೆಸಿ ಮಾಜಿ ಶಾಸಕ ಎಂ.ರಾಜಣ್ಣ ಮಾತನಾಡಿದರು.
ಪರಿಶಿಷ್ಠ ಜಾತಿ, ಪಂಗಡ ಸೇರಿದಂತೆ ಬಿಸಿಎಂ ನಿಗಮಗಳಲ್ಲಿ ಇತ್ತೀಚೆಗೆ ಮಧ್ಯವರ್ತಿಗಳ ಹಾವಳಿ ಹೆಚ್ಚಿದ್ದು ಅರ್ಹ ಫಲಾನುಭವಿಗಳಿಗೆ ಯಾವುದೇ ಯೋಜನೆಯ ಸವಲತ್ತು ಸಿಗುತ್ತಿಲ್ಲ. ತಮ್ಮ ಅಧಿಕಾರಾವಧಿಯ 2016-17, 2017-18 ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆ ಮಾಡಿದ ಫಲಾನುಭವಿಗಳ ಜಮೀನಿನಲ್ಲಿಯೇ ಕೊಳವೆ ಬಾವಿ ಕೊರೆಸಬೇಕು ಎಂದು ಅವರು ಹೇಳಿದರು.
ತಮ್ಮ ಅಧಿಕಾರಾವಧಿಯಲ್ಲಿ ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಲು ಫಲಾನುಭವಿಗಳ ಪಟ್ಟಿಯನ್ನು ಆಯ್ಕೆ ಮಾಡಿ ಅನುಮೋದನೆ ಸಹ ಪಡೆಯಲಾಗಿತ್ತಾದರೂ ಗುತ್ತಿಗೆದಾರರು ಕೋರ್ಟ್ ಮೊರೆ ಹೋಗಿದ್ದರಿಂದ ಕೊಳವೆಬಾವಿ ಕೊರೆಸುವ ಪ್ರಕ್ರಿಯೆಗೆ ತಡೆ ಉಂಟಾಗಿತ್ತು. ಇದೀಗ ಗುತ್ತಿಗೆದಾರರ ವ್ಯಾಜ್ಯ ಕೋರ್ಟ್‌ನಲ್ಲಿ ಬಗೆಹರಿದಿದ್ದು ಇದೀಗ ಕೊಳವೆಬಾವಿ ಕೊರೆಸಲು ಮುಂದಾಗಿರುವುದು ಸಂಸತದ ವಿಷಯವಾಗಿದೆ. ಆದರೆ ಹಿಂದಿನ ಪಟ್ಟಿಯಲ್ಲಿರುವ ಫಲಾನುಭವಿಗಳ ಹೆಸರನ್ನು ತೆಗೆದು ಬೇರೊಬ್ಬರನ್ನು ಸೇರಿಸುತ್ತಿರುವ ಬಗ್ಗೆ ಅನುಮಾನವಿದ್ದು ಈ ಹಿಂದೆ ನಮ್ಮ ಅವಧಿಯಲ್ಲಿ ಸಿದ್ದ ಪಡಿಸಲಾಗಿದ್ದ ಫಲಾನುಭವಿಗಳ ಜಮೀನುಗಳಲ್ಲಿಯೇ ಕೊಳವೆ ಬಾವಿ ಕೊರೆಸಬೇಕು ಎಂದು ಒತ್ತಾಯಿಸಿದರು.
ಮುಂದಿನ ರಾಜಕೀಯ ನಡೆ :
ರಾಜ್ಯ ಹಾಗೂ ಕ್ಷೇತ್ರದ ರಾಜಕೀಯ ವಿದ್ಯಾಮಾನಗಳನ್ನು ಕಂಡು ಕಳೆದ ಒಂದೂವರೆ ವರ್ಷದಿಂದ ರಾಜಕೀಯವಾಗಿ ತಟಸ್ಥನಾಗಿದ್ದೇನೆ. ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದ ಶಾಸಕನಾಗಿ ಕ್ಷೇತ್ರದಲ್ಲಿ ಬಹಳಷ್ಟು ಕೆಲಸಗಳು ಮಾಡಿರುವ ತೃಪ್ತಿಯಿದೆ. ಕ್ಷೇತ್ರದ ಯಾವುದೇ ಜನತೆ ನನಗೆ ಮೋಸ ಮಾಡಲಿಲ್ಲ. ಬದಲಿಗೆ ಮೂವತ್ತು ವರ್ಷಗಳು ನಿಷ್ಠೆಯಿಂದ ಜೆಡಿಎಸ್ ಪಕ್ಷಕ್ಕಾಗಿ ದುಡಿದರೂ ಪಕ್ಷದ ವರಿಷ್ಠರು ನನಗೆ ಟಿಕೆಟ್ ತಪ್ಪಿಸುವ ಮೂಲಕ ಮೋಸ ಮಾಡಿದರು. ಅನಾಥನನ್ನಾಗಿ ಮಾಡಿದರು.
ಕಳೆದ ಒಂದೂವರೆ ವರ್ಷದಿಂದ ರಾಜಕೀಯವಾಗಿ ದೂರವುಳಿದಿದ್ದು ನನ್ನ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಒತ್ತಾಯದ ಮೇರೆಗೆ ಮುಂದಿನ ಒಂದು ತಿಂಗಳೊಳಗೆ ಕಾರ್ಯಕರ್ತರ ಸಭೆ ನಡೆಸಿ ಅವರ ತೀರ್ಮಾನದಂತೆ ರಾಜಕೀಯ ನಿಲುವು ಪ್ರಕಟಿಸುತ್ತೇನೆ ಎಂದರು. ಈಗಾಗಲೇ ಜೆಡಿಎಸ್ ನನಗೆ ಮೋಸ ಮಾಡಿರುವುದರಿಂದ ಜೆಡಿಎಸ್ ಪಕ್ಷ ಮತ್ತೆ ಸೇರುವ ಪ್ರಮೇಯವೇ ಇಲ್ಲ. ಬದಲಿಗೆ ಬಿಜೆಪಿ, ಕಾಂಗ್ರೆಸ್ ಅಥವ ಸ್ವತಂತ್ರವಾಗಿ ಹೋರಾಡಲು ನನ್ನ ಅಭಿಮಾನಿಗಳು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆಯೋ ಅದಕ್ಕೆ ನಾನು ಬದ್ದ ಎಂದರು.
ಅಭಿವೃದ್ದಿಗೆ ನನ್ನ ಸಹಕಾರ :
ನನ್ನ ಅಧಿಕಾರಾವಧಿಯಲ್ಲಿ ಕ್ಷೇತ್ರದಲ್ಲಿ ಅಗ್ನಿಶಾಮಕ ದಳ, ಕೆಎಸ್‌ಆರ್‌ಟಿಸಿ ಡಿಪೋ, ಐಟಿಐ ಕಾಲೇಜು ನಿರ್ಮಾಣ ಮಾಡಿದ ತೃಪ್ತಿಯಿದೆ. ಕ್ಷೇತ್ರದಲ್ಲಿ ಪಾಲಿಟೆಕ್ನಿಕ್ ಹಾಗೂ ಕಾರ್ಮಿಕ ವರ್ಗದವರಿಗಾಗಿ ಇಎಸ್‌ಐ ಆಸ್ಪತ್ರೆ ನಿರ್ಮಾಣ ಮಾಡಬೇಕೆನ್ನುವ ಆಸೆ ಹಾಗೆಯೇ ಉಳಿದಿದೆ. ಯಥಾ ರಾಜ ತಥಾ ಪ್ರಜಾ ಎಂಬ ಮಾತಿನಂತೆ ಈಗಿನ ಕ್ಷೇತ್ರದ ಆಡಳಿತ ಮತ್ತು ಭ್ರಷ್ಟಾಚಾರ ಸಾಗಿದೆ. ನಾನು ದ್ವೇಷದ ರಾಜಕಾರಣ ಮಾಡುವುದಿಲ್ಲ. ನನ್ನ ಅವಧಿಯಲ್ಲಿ ನಾನು ಮಾಡಿದ ಕೆಲಸ ಕಾರ್ಯಗಳಿಂದ ಕ್ಷೇತ್ರದಾದ್ಯಂತ ಜನ ನನ್ನ ಮೇಲೆ ತೋರಿಸುವ ಅಭಿಮಾನಕ್ಕೆ ನಾನು ಚಿರಋಣಿ ಎಂದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಸ್.ಕನಕಪ್ರಸಾದ್, ಲಕ್ಷ್ಮಿನಾರಾಯಣ, ಸೋಮಶೇಖರ್, ಮುರಳಿ, ದ್ಯಾವಪ್ಪ, ಮುನಿರೆಡ್ಡಿ, ದೇವು ಹಾಜರಿದ್ದರು.

ಸೂರ್ಯ ಗ್ರಹಣ ವೀಕ್ಷಣೆಗಾಗಿ ಕನ್ನಡಕಗಳನ್ನು ತಯಾರಿಸಿದ ಪೆಂಡ್ಲಿವಾರಹಳ್ಳಿ ಸರ್ಕಾರಿ ಶಾಲಾ ಮಕ್ಕಳು

0

ಡಿಸೆಂಬರ್ 26 ರ ಅಪರೂಪದ ಕಂಕಣ ಸೂರ್ಯಗ್ರಹಣ ವೀಕ್ಷಿಸಲು ಈಗಾಗಲೇ ಹಲವಾರು ಶಾಲೆಗಳಲ್ಲಿ ಹಲವು ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ ತಾಲ್ಲೂಕಿನ ಪೆಂಡ್ಲಿವಾರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ನೇತೃತ್ವದಲ್ಲಿ ಮಕ್ಕಳೇ ಗ್ರಹಣ ವೀಕ್ಷಣೆಗಾಗಿ ಕನ್ನಡಕಗಳನ್ನು ತಯಾರಿಸಿದ್ದಾರೆ.
ಬರಿಗಣ್ಣಿನಿಂದ ಸೂರ್ಯಗ್ರಹಣವನ್ನು ನೋಡಬಾರದೆಂದು ಮಕ್ಕಳಿಗೆ ತಿಳಿ ಹೇಳಿದ ಶಿಕ್ಷಕರು ಮಕ್ಕಳಿಗೆ ಕಲಿಸುತ್ತಾ, ಅಲ್ಯೂಮಿನಿಯಂ ಫಾಯಿಲ್ ನಿಂದ ಶಾಲೆಯಲ್ಲೆ ಕನ್ನಡಕಗಳನ್ನು ತಯಾರಿಸಿದ್ದಾರೆ. ಶಾಲೆಯಲ್ಲಿ ಟಾರ್ಚ್, ಚೆಂಡು ಮತ್ತು ಗ್ಲೋಬ್ ಬಳಸಿ ಮಕ್ಕಳಿಗೆ ಗ್ರಹಣದ ಬಗ್ಗೆ ವಿವರಿಸಿದ್ದಾರೆ.
“ಅತಿ ಕಿರಿಯ ವಯಸ್ಸಿನ ಮಕ್ಕಳಿಗೆ ಸೌರವ್ಯೂಹ, 8 ಗ್ರಹಗಳು, ಗಾತ್ರದ ಬಗ್ಗೆ ವಿವರಿಸುವಾಗ ಭ್ರಮಣೆ ಪರಿಭ್ರಮಣೆಯಲ್ಲಿ ಉಂಟಾಗುವ ಗ್ರಹಣಗಳು ಹಗಲು ರಾತ್ರಿಗಳಷ್ಟೇ ಸಾಮಾನ್ಯ ಎಂದು ಅರಿವು ಮೂಡಿಸಲಾಯಿತು. ಮುಖ್ಯವಾಗಿ ಮಕ್ಕಳ ಪೋಷಕರಿಂದ ವರ್ಗಾಯಿಸಲಾದ ಗ್ರಹಣದ ಬಗೆಗಿನ ಮೂಢನಂಬಿಕೆ ತಪ್ಪು ಎಂದು ತಿಳುವಳಿಕೆ ನೀಡಲಾಯಿತು. ಕಳೆದ ಬಾರಿ ನಡೆದ ರಕ್ತಚಂದ್ರಗ್ರಹಣ ವೀಕ್ಷಿಸಿದ್ದ ಒಂದನೇ ತರಗತಿ ಮಕ್ಕಳು,ಈಗ ಮೊದಲ ಬಾರಿ ಸೂರ್ಯಗ್ರಹಣ ನೋಡಲು ಉತ್ಸುಕರಾಗಿದ್ದಾರೆ” ಎಂದು ಶಿಕ್ಷಕಿ ವಿ.ಉಷಾ ತಿಳಿಸಿದರು.
“ಡಿಸೆಂಬರ್ 26 ರಂದು ಬೇಗನೆ ಶಾಲೆಗೆ ಬಂದು ಮಕ್ಕಳಿಗೆ ಈ ಅಪೂರ್ವ ಸೂರ್ಯಗ್ರಹಣ ವೀಕ್ಷಿಸಲಿದ್ದೇವೆ. ಅಲ್ಲದೆ ಅಂದೇ ಹೊರಗೆ ಕುಳಿತು ಲಘು ಉಪಹಾರ(ರಸಾವಳಿ) ತಯಾರಿಸಿ ಸೇವಿಸುವುದೆಂದು ನಿರ್ಧಾರ ಮಾಡಿದ್ದೇವೆ. ಅದೇ ಸಮಯದಲ್ಲಿ ಮಕ್ಕಳಿಗೆ ಹೊರಗೆ ಹಾಲು ಕುಡಿಯಲು ನೀಡಲಾಗುವುದು” ಎಂದು ಅವರು ವಿವರಿಸಿದರು.

ಹೊಸ ರೈಲಿಗೆ ಸ್ವಾಗತ

0

ಕೋಲಾರ ಮಾರ್ಗವಾಗಿ ಶಿಡ್ಲಘಟ್ಟ ಮೂಲಕ ಯಲಹಂಕ ಹಾಗೂ ವೈಟ್ ಫೀಲ್ಡ್ ಗೆ ಹೊಸ ರೈಲು ಸಂಚಾರ ಆರಂಭಗೊಂಡಿದ್ದು, ಸೋಮವಾರ ಬೆಳಗ್ಗೆ ಶಿಡ್ಲಘಟ್ಟಕ್ಕೆ ಆಗಮಿಸಿದಾಗ ಬಿಜೆಪಿ ಮುಖಂಡರು ಹಾಗೂ ಸಾರ್ವಜನಿಕರು ರೈಲಿಗೆ ಹಾರ ಹಾಕಿ ಸ್ವಾಗತಿಸಿದರು.
ಕಳೆದ ಕೆಲ ತಿಂಗಳುಗಳಿಂದ ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲು ಸ್ಥಗಿತಗೊಂಡಿತ್ತು. ಹೀಗಾಗಿ ಬೆಳಗ್ಗೆ 6 ಗಂಟೆಗೆ ಕೋಲಾರದಿಂದ ಹೊರಡುತ್ತಿದ್ದ ರೈಲು, ಶಿಡ್ಲಘಟ್ಟಕ್ಕೆ 7.25 ಗಂಟೆಗೆ ಬಂದು ಬೆಂಗಳೂರಿಗೆ 10 ಗಂಟೆಗೆ ತಲುಪುತ್ತಿತ್ತು. ಇದರಿಂದಾಗಿ ಶಿಡ್ಲಘಟ್ಟದಿಂದ ಬೆಂಗಳೂರಿಗೆ ಹೋಗುವ ಪ್ರಯಾಣಿಕರು ಬೆಳ್ಳಂಬೆಳಗ್ಗೆ ನಿಲ್ದಾಣಕ್ಕೆ ದೌಡಾಯಿಸಬೇಕಾಗಿತ್ತು. ಆದರೆ ಈಗ ವೈಟ್‌ಫೀಲ್ಡ್‌ಗೆ ತೆರಳುವ ರೈಲು ಕೋಲಾರವನ್ನು ಬೆಳಗ್ಗೆ 7.30ಕ್ಕೆ ಬಿಟ್ಟು ಚಿಕ್ಕಬಳ್ಳಾಪುರಕ್ಕೆ ಬೆಳಗ್ಗೆ 8.45 ಗೆ ಬರುವುದರಿಂದ ಶಿಡ್ಲಘಟ್ಟದಿಂದ ಬೆಂಗಳೂರಿಗೆ ಹೋಗುವ ಸರ್ಕಾರಿ ನೌಕರರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಕೂಲಿ ಕಾರ್ಮಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದೆ. ರೈತರಿಗೂ ಕೆ.ಆರ್‌.ಪುರ ಮಾರುಕಟ್ಟೆಗೆ ಹಣ್ಣು ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಸಾಗಿಸಲು ನೆರವಾಗಲಿದೆ.
ಕೋಲಾರದಿಂದ ಆಗಮಿಸುವ ಈ ಹೊಸ ರೈಲು ಯಲಹಂಕದಿಂದ ಚನ್ನಸಂದ್ರ, ಕೃಷ್ಣರಾಜಪುರಂ ಹಾಗೂ ಹೂಡಿ ಮೂಲಕ ಬೆಳಗ್ಗೆ 10.55 ಕ್ಕೆ ವೈಟ್ ಫೀಲ್ಡ್ ಗೆ ತಲುಪಲಿದೆ. ಪುನಃ ವೈಟ್ ಫೀಲ್ಡ್ ನಿಂದ 4.10 ಕ್ಕೆ ಹೊರಟು ಶಿಡ್ಲಘಟ್ಟಕ್ಕೆ 6.15 ಕ್ಕೆ ಬರಲಿದೆ.
“ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದ ನೈರುತ್ಯ ರೈಲ್ವೆ ಇಲಾಖೆ ಬೆಂಗಳೂರಿನ ಯಶವಂತಪುರದಿಂದ ಚಿಕ್ಕಬಳ್ಳಾಪುರದ ಮೂಲಕ ನಿಜಾಮುದ್ದೀನ್‌ ದೆಹಲಿ ಎಕ್ಸ್ ಪ್ರೆಸ್‌ ರೈಲು ಆರಂಭಿಸಿ ಕೆಲವೇ ತಿಂಗಳಿಗೆ ಸ್ಥಗಿತಗೊಳಿಸಿತು. ಇದರಿಂದ ಜಿಲ್ಲೆಯಿಂದ ನೇರವಾಗಿ ದೆಹಲಿಗೆ ಹೊರಡುತ್ತಿದ್ದ ಪ್ರಯಾಣಿಕರು, ಪ್ರವಾಸಿಗರಿಗೆ ಬೇಸರ ತರಿಸಿತ್ತು. ಆದರೆ ಕೋಲಾರ ಮಾರ್ಗವಾಗಿ ಶಿಡ್ಲಘಟ್ಟ ಚಿಕ್ಕಬಳ್ಳಾಪುರ ಮೂಲಕ ಬೆಂಗಳೂರು ಹಾಗೂ ವೈಟ್ ಫೀಲ್ಡ್ ಗೆ ಹೊಸ ರೈಲು ಬರುತ್ತಿರುವುದು ಸಹಜವಾಗಿಯೇ ಜಿಲ್ಲೆಯ ಪ್ರಯಾಣಿಕರಲ್ಲಿ ಸಂತಸ ತಂದಿದೆ” ಎಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರಗೌಡ ತಿಳಿಸಿದ್ದಾರೆ.
ಬಿಜೆಪಿ ನಗರ ಮಂಡಲ ಅಧ್ಯಕ್ಷ ರಾಘವೇಂದ್ರ, ಬಿ.ಸಿ.ನಂದೀಶ್, ನಗರಸಭಾ ಸದಸ್ಯ ನಾರಾಯಣಸ್ವಾಮಿ, ಮುಖೇಶ್, ದಾಮೋದರ್ ಹಾಜರಿದ್ದರು.

ಶಿಡ್ಲಘಟ್ಟಕ್ಕೆ ಬರಲಿದೆ ಟೆಕ್ಸ್ ಟೈಲ್ ಪಾರ್ಕ್ – ಸಂಸದ ಎಸ್.ಮುನಿಸ್ವಾಮಿ

0

ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಬಿಜೆಪಿ ಪಕ್ಷದಿಂದ ಆಯೋಜಿಸಲಾಗಿದ್ದ ಬಿಜೆಪಿಯ ನೂತನ ನಗರ ಹಾಗೂ ಗ್ರಾಮಾಂತರ ಮಂಡಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿದರು.
ಅಧಿಕಾರ ಯಾರಿಗೂ ಶಾಶ್ವತವಲ್ಲ, ಅಧಿಕಾರವಿದ್ದಾಗ ನಾವು ಏನೆಲ್ಲಾ ಕೆಲಸ ಕಾರ್ಯಗಳು ಮಾಡುತ್ತೇವೆ ಎನ್ನುವುದು ಮುಖ್ಯವಾಗುತ್ತದೆ ಎಂದು ಅವರು ತಿಳಿಸಿದರು
ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಎಲ್ಲರಿಗೂ ಉತ್ತಮ ಅವಕಾಶ ಸಿಗಲಿದ್ದು ಸಿಕ್ಕ ಅವಕಾಶಗಳನ್ನು ಜನರ ಹಾಗೂ ಪಕ್ಷದ ಏಳಿಗೆಗಾಗಿ ಬಳಸಿಕೊಳ್ಳಿ. ಪಕ್ಷವನ್ನು ಸಂಘಟಿಸಿ ಗಟ್ಟಿಗೊಳಿಸಿ ಎಂದರು.
ಶಿಡ್ಲಘಟ್ಟದ ಜನತೆಯ ಬಹುದಿನಗಳ ಬೇಡಿಕೆಯಾಗಿರುವಂತಹ ಟೆಕ್ಸ್ ಟೈಲ್ ಪಾರ್ಕ್ ನಿರ್ಮಾಣಕ್ಕಾಗಿ ಈಗಾಗಲೇ ಎಲ್ಲಾ ಸಿದ್ದತೆಗಳು ನಡೆದಿದ್ದು ೪೦ ಕೋಟಿ ವೆಚ್ಚದ ಡಿಪಿಆರ್ ಸಿದ್ದಪಡಿಸಲಾಗುತ್ತಿದೆ. ಕೋಲಾರ ಜಿಲ್ಲೆ ನನ್ನ ಕರ್ಮಭೂಮಿಯಾಗಿದ್ದು ಇಲ್ಲಿನ ಜನರಿಗೆ ನೀರು ನೀಡುವ ಯೋಜನೆಗಳಾದ ಎತ್ತಿನಹೊಳೆ ಹಾಗೂ ಎಚ್.ಎನ್ ವ್ಯಾಲಿ ಯೋಜನೆಯನ್ನು ಮತ್ತಷ್ಟು ಚುರುಕುಗೊಳಿಸಲು ಕ್ರಮ ಜರುಗಿಸಲಾಗುವುದು ಎಂದರು.
ಕಳೆದ ೭೦ ವರ್ಷಗಳಿಂದ ದೇಶದ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಮೂಲಕ ಅಧಿಕಾರ ನಡೆಸಿ ಕಾಂಗ್ರೆಸ್ ಇದೀಗ ಪೌರತ್ವ ಕಾಯಿದೆಯ ಬಗ್ಗೆ ಇಲ್ಲಸಲ್ಲದ ಸುಳ್ಳುಗಳನ್ನು ಹೇಳಿ ಮುಸ್ಲೀಂ ಬಾಂದವರನ್ನು ಮೋಸ ಮಾಡುತ್ತಿದೆ. ಪೌರತ್ವ ಕಾಯಿದೆಯಿಂದ ದೇಶದಲ್ಲಿ ಹುಟ್ಟಿ ಬೆಳೆದ ಯಾವುದೇ ಧರ್ಮೀಯರಿಗೆ ತೊಂದರೆಯಾಗುವುದಿಲ್ಲ. ಪೌರತ್ವ ಕಾಯಿದೆಯಿಂದ ದೇಶದೊಳಕ್ಕೆ ಅಕ್ರಮವಾಗಿ ನುಸುಳಿ ದೇಶದಲ್ಲಿ ಆಶಾಂತಿ ಸೃಷ್ಟಿಸುವ ನುಸುಳುಕೋರರಿಗೆ ಮಾತ್ರ ತೊಂದರೆಯಾಗಲಿದೆ. ಈ ಬಗ್ಗೆ ಸುಳ್ಳು ವದಂತಿಗಳಿಗೆ ಮುಸ್ಲೀಂ ಬಾಂದವರು ಕಿವಿಗೊಡಬಾರದು ಎಂದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಮಂಡಲಾಧ್ಯಕ್ಷ ಬಿ.ಸಿ.ನಂದೀಶ್ ಅವರು ನೂತನ ನಗರ ಮಂಡಲಾಧ್ಯಕ್ಷ ಎಸ್.ರಾಘವೇಂದ್ರ ಹಾಗೂ ಗ್ರಾಮಾಂತರ ಮಂಡಲಾಧ್ಯಕ್ಷ ಸುರೇಂದ್ರಗೌಡರಿಗೆ ಪಕ್ಷದ ಭಾವುಟ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಲಾಯಿತು. ಬಿಜೆಪಿ ತಾಲ್ಲೂಕು ಘಟದಕ ವತಿಯಿಂದ ಸಂಸದ ಎಸ್.ಮುನಿಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸುರೇಶ್, ಶ್ರೀರಾಮರೆಡ್ಡಿ, ನಗರಸಭೆ ಸದಸ್ಯ ನಾರಾಯಣಸ್ವಾಮಿ, ಈಶ್ವರಾಚಾರಿ, ವೆಂಕಟೇಶ್‌ಗೌಡ, ಡಾ.ಸತ್ಯನಾರಾಯಣರಾವ್, ಮಹಿಳಾ ಘಟಕದ ಮಂಜುಳಮ್ಮ, ಸುಜಾತಮ್ಮ, ಮುನರತ್ನಮ್ಮ, ಮುಖೇಶ್, ಕೆಂಪರೆಡ್ಡಿ ಹಾಜರಿದ್ದರು.

ಸರ್ಕಾರಿ ನೌಕರರ ಸಂಘದ ತಾಲ್ಲೂಕು ಶಾಖೆ ಉದ್ಘಾಟನೆ

0

ಶಿಡ್ಲಘಟ್ಟದ ಕಂದಾಯ ಭವನದಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಕಚೇರಿಗಾಗಿ ನೀಡಿರುವ ಕೋಣೆಯಲ್ಲಿ ಬುಧವಾರ ನಡೆದ ತಾಲ್ಲೂಕು ಶಾಖೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಹಶೀಲ್ದಾರ್ ಎಂ.ದಯಾನಂದ್ ಮಾತನಾಡಿದರು.
ನೂರು ವರ್ಷ ತುಂಬಿರುವ ಕಂದಾಯ ಭವನವೆಂದು ಕರೆಸಿಕೊಳ್ಳುವ ಈ ಪಾರಂಪರಿಕ ಕಟ್ಟಡವನ್ನು ಸೂಕ್ತವಾಗಿ ನಿರ್ವಹಣೆ ಮಾಡಿಕೊಳ್ಳುವ ಮೂಲಕ ತಾಲ್ಲೂಕಿನ ಐತಿಹಾಸಿಕ ಕುರುಹನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ತಿಳಿಸಿದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘ ತನ್ನದೇ ಆದ ಸ್ವಂತ ಭವನ ಹೊಂದುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಅನುದಾನದ ವಿಚಾರದಲ್ಲೂ ಸಹ ಸಕಾರಾತ್ಮಕ ಸ್ಪಂದನೆಗಳು ಸಿಕ್ಕಿವೆ. ಈ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಹಾಗೂ ನಾನೂ ಕೂಡ ವೈಯಕ್ತಿಕವಾಗಿ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ತಾಲ್ಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ ಮಾತನಾಡಿ, ತಾಲ್ಲೂಕು ಸರ್ಕಾರಿ ನೌಕರರ ಸಂಘ ಹಾಗೂ ಗುರುಭವನಕ್ಕಾಗಿ ಸರ್ಕಾರದಿಂದ ಈಗಾಗಲೇ ನಿವೇಶನ ಮಂಜೂರಾಗಿದೆ. ಕಟ್ಟಡ ನಿರ್ಮಾಣಕ್ಕಾಗಿ ಎಲ್ಲಾ ನೌಕರರು ತಮ್ಮ ಒಂದು ದಿನದ ಸಂಬಳವನ್ನು ನೀಡಿ ಕಟ್ಟಡ ನಿರ್ಮಾಣಕ್ಕೆ ಬುನಾದಿ ಹಾಕಲು ಸಹಕಾರ ನೀಡಬೇಕು ಕೋರಿದರು.
ಕಳೆದ ಅನೇಕ ವರ್ಷಗಳಿಂದ ತಾಲ್ಲೂಕು ಸರ್ಕಾರಿ ನೌಕರರ ಸಂಘಕ್ಕೆ ಜಾಗವಿಲ್ಲದೇ ಸಭೆ ಸಮಾರಂಭಗಳನ್ನು ಖಾಸಗಿ ಕಟ್ಟಡಗಳಲ್ಲಿ ಮಾಡುವ ಸ್ಥಿತಿಯಿತ್ತು. ಈ ಬಗ್ಗೆ ತಾಲ್ಲೂಕು ಆಡಳಿತದ ಗಮನಕ್ಕೆ ತಂದಾಗ ನಗರದ ಕಂದಾಯಭವನದಲ್ಲಿ ಸರ್ಕಾರಿ ನೌಕರರ ಸಂಘಕ್ಕೆ ಕೊಠಡಿಯೊಂದನ್ನು ನೀಡುವ ಮೂಲಕ ಸಂಘದ ಕಾರ್ಯ ಚಟುವಟಿಕೆಗಳನ್ನು ಮಾಡಲು ಅನುಕೂಲ ಮಾಡಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರಾದ ಎನ್.ಕೆ. ಗುರುರಾಜರಾವ್ ಮತ್ತು ಕೇಶವರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ಪದಾಧಿಕಾರಿಗಳಿಗೆ ಪ್ರಮಾಣ ಪತ್ರಗಳನ್ನು ಮತ್ತು ಸದಸ್ಯರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಯಿತು .
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶಿವಕುಮಾರ್, ತಾಲ್ಲೂಕು ವೈದ್ಯಾಧಿಕಾರಿ ಡಾ. ವೆಂಕಟೇಶಮೂರ್ತಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆಂಜನೇಯ, ಗ್ರೇಡ್ ೨ ತಹಶೀಲ್ದಾರ್ ಹನುಮಂತರಾವ್, ಆರ್.ಐ ವಿಶ್ವನಾಥ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆನಂದ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ಮುನಿರಾಜು, ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಎಲ್.ವಿ.ವೆಂಕಟರೆಡ್ಡಿ, ಅಕ್ಕಲ ರೆಡ್ಡಿ, ಎನ್.ಪಿ.ಎಸ್ ಅಧ್ಯಕ್ಷ ಗಜೇಂದ್ರ, ಉಪನ್ಯಾಸಕ ಎಚ್.ವಿ.ವೆಂಕಟಶಿವಾರೆಡ್ಡಿ, ಮಧು, ಪ್ರೀತಂ ಹಾಜರಿದ್ದರು.

ಎ.ಪಿ.ಎಂ.ಸಿ ಮಾರುಕಟ್ಟೆ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ – ಮುಖ್ಯ ಕಾರ್ಯನಿರ್ವಾಹಣಾಧಿಕಾರಿ

0

ತಾಲ್ಲೂಕಿನ ತಿಪ್ಪೇನಹಳ್ಳಿ ಮತ್ತು ಹಿತ್ತಲಹಳ್ಳಿಯ ಪ್ರಗತಿಪರ ಕೃಷಿಕರ ತೋಟಗಳಿಗೆ ಭೇಟಿ ನೀಡಿ ರೈತರೊಂದಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿದರು.
ತಾಲ್ಲೂಕಿನ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಎ.ಪಿ.ಎಂ.ಸಿ ಮಾರುಕಟ್ಟೆ ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಅವರು ತಿಳಿಸಿದರು.
ನೀರಿನ ಸದ್ಭಳಕೆ, ಸಾವಯವ ಪದ್ಧತಿ, ಸಿರಿಧಾನ್ಯಗಳನ್ನು ಬೆಳೆಯುವುದು, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು, ರಸಗೊಬ್ಬರದ ಬಳಕೆ ಕಡಿಮೆ ಮಾಡುವುದು, ಮಣ್ಣಿನ ಫಲವತ್ತತೆಗೆ ಕ್ರಮ ಕೈಗೊಳ್ಳುವ ಮೂಲಕ ವೆಚ್ಚ ಕಡಿಮೆ ಮಾಡಿಕೊಂಡು ರೈತರು ಲಾಭ ಮಾಡಿಕೊಳ್ಳಬೇಕು. ಮಧ್ಯವರ್ತಿಗಳ ಕಾಟವಿಲ್ಲದೇ ಮಾರುಕಟ್ಟೆಯ ವ್ಯವಸ್ಥೆ ಆದರೆ ರೈತರಿಗೆ ಅನುಕೂಲವಾಗುವುದರಿಂದ ಅದರ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದೆಂದರು.
ತಿಪ್ಪೇನಹಳ್ಳಿ ಗ್ರಾಮದ ರೈತ ವಿಜಯಕುಮಾರ್ ಅಳವಡಿಸಿಕೊಂಡಿರುವ ಸಾವಯವ ಹಾಗೂ ಸಮಗ್ರ ಕೃಷಿ ಪದ್ಧತಿಯನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ನರೇಗಾ ಯೋಜನೆಯನ್ನು ಸದುಪಯೋಗ ಮಾಡಿಕೊಂಡು ಬೆಳೆದಿರುವ ರೇಷ್ಮೆ (ಹಿಪ್ಪುನೇರಳೆ) ಬೆಳೆಯ ಬಗ್ಗೆ ಮಾಹಿತಿ ಪಡೆದರು. ರೈತ ವಿಜಯಕುಮಾರ್ ಅವರು, ತಾವು ತಯಾರಿಸುವ ನಾಟಿ ಗೊಬ್ಬರ ಹಾಗೂ ಎರೆಹುಳುಗೊಬ್ಬರದ ವಿಧಾನಗಳಿಂದ ಆಗುವ ಅನುಕೂಲದ ಬಗ್ಗೆ ವಿವರಿಸಿದರು.
ಹಿತ್ತಲಹಳ್ಳಿಯ ಕೃಷಿ ಪಂಡಿತ ಎಚ್.ಜಿ.ಗೋಪಾಲಗೌಡ ಅವರ ಸಮಗ್ರ ಕೃಷಿ ಪದ್ಧತಿ ಹಾಗೂ ಮಿಶ್ರಬೆಳೆ ತೋಟವನ್ನು ವೀಕ್ಷಿಸಿದರು. ಸಮಗ್ರ ಕೃಷಿ ಪದ್ಧತಿ, ಕೃಷಿ ಹೊಂಡದಿಂದ ನೀರಿನ ಸದ್ಬಳಕೆ, ರೇಷ್ಮೆಯಲ್ಲಿ ಹಸಿರು ಎಲೆ ಗೊಬ್ಬರವಾಗಿ ಪರಿವರ್ತಿಸಲು ಸೆಣಬು ಹುರಳಿ ಬೆಳೆದಿರುವುದು, ಕುರಿ, ಹಸು ಸಾಕಣೆ, ಮೀನುಸಾಕಣೆ, ರೇಷ್ಮೆ ಕೃಷಿ ಹಾಗೂ ಜಮೀನಿನ ಸುತ್ತಲೂ ಸಿಲ್ವರ್ ಮರ, ೨೪ ಅಡಿಗೊಂದರಂತೆ ಮಾವು, ಆರು ಅಡಿ ಅಂತರದಲ್ಲಿ ಹಿಪ್ಪುನೇರಳೆ, ಅದರ ನಡುವೆ ತರಕಾರಿ ಬೆಳೆಗಳು, ಕೃಷಿ ಹೊಂಡ, ಅದರ ಸುತ್ತಲೂ ಮಾವು, ಗೋಡಂಬಿ, ನಿಂಬೆ, ಹಲಸು, ಪಪ್ಪಾಯ, ಬಾಳೆ, ನೆಲ್ಲಿ, ಸೀಬೆ, ಸಪೋಟ, ದಾಳಿಂಬೆ, ಕಿತ್ತಳೆ, ಚಕ್ಕೆ ಗಿಡ, ಗೆಣಸು ಮುಂತಾದವುಗಳನ್ನು ಬೆಳೆದಿದ್ದು, ಎಲ್ಲರೂ ಸಮಗ್ರ ಬೇಸಾಯ ಪದ್ದತಿ ಅಳವಡಿಸಿಕೊಂಡಿದ್ದೇ ಆದಲ್ಲಿ ಈ ಭಾಗದ ರೈತನಿಗೆ ಲಾಭದಾಯಕವಾಗಲಿದೆ ಎಂಬುದನ್ನು ರೈತ ಹೆಚ್.ಜಿ.ಗೋಪಾಲಗೌಡ ವಿವರಿಸಿದರು.
ಕೃಷಿ ಇಲಾಖೆಯ ಪ್ರಭಾರ ಜಂಟಿ ನಿರ್ದೇಶಕಿ ಅನುರಾಧ, ಕೃಷಿ ಉಪ ನಿರ್ದೇಶಕಿ ಪಂಕಜ, ಸಹಾಯಕ ನಿರ್ದೇಶಕ ಡಾ.ಎಸ್.ವಿ.ಮಂಜುನಾಥ್, ರೇಷ್ಮೆ ಉತ್ಪಾದಕ ಕಂಪೆನಿ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ, ಸಾವಯವ ಕೃಷಿಕ ಪರಿವಾರದ ಬೂದಾಳ ರಾಮಾಂಜಿ, ಅಧಿಕಾರಿಗಳಾದ ಮಾಲತೇಶ್, ಅಶ್ವತ್ಥನಾರಾಯಣ ಹಾಜರಿದ್ದರು.

ಶಿಡ್ಲಘಟ್ಟದ ನ್ಯಾಯಾಲಯಕ್ಕೆ ಸುಡಾನ್ ದೇಶದ ನ್ಯಾಯಾಧೀಶರ ಭೇಟಿ

0

ಸುಡಾನ್ ದೇಶದ ನ್ಯಾಯಾಲಯದ 25 ಮಂದಿ ನ್ಯಾಯಾಧೀಶರುಗಳು ಸೋಮವಾರ ಶಿಡ್ಲಘಟ್ಟದ ನ್ಯಾಯಾಲಯಕ್ಕೆ ಭೇಟಿ ನೀಡಿ ಇಲ್ಲಿ ನ್ಯಾಯಾಲಯಗಳ ಆಡಳಿತ ವ್ಯವಸ್ಥೆ, ಕಾರ್ಯವೈಖರಿ, ತೀರ್ಪುದಾನ ನೀಡುವ ಕುರಿತು ಮಾಹಿತಿ ಪಡೆದರು.
ಜಿಲ್ಲಾ ಮತ್ತು ಗಣತಂತ್ರ ಸುಡಾನ್ ದೇಶದ ನ್ಯಾಯಾಲಯದ ನ್ಯಾಯಾಧೀಶರಾದ ಗಾಸೀಮ್ ಮಹಮ್ಮದ್ ಎಲ್ಕೇದರ್, ಅಬ್ದುಲ್ ರೆಹಮಾನ್, ಸುಡಾನ್ ಸವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಡೇರರ್ ಯೂಸೆಫ್, ಸೈಯದ್ಅಹಮ್ಮದ್ ಯೂಸೆಫ್ ಸೇರಿದಂತೆ ಜಿಲ್ಲಾ ಮತ್ತು ವಿವಿಧ ಸ್ತರಗಳ ನ್ಯಾಯಿಕ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರು ಮತ್ತು ನ್ಯಾಯಿಕ ದಂಡಾಧೀಶರು ಆಗಮಿಸಿದ್ದರು.
ಹೈಕೋರ್ಟ್ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ನ್ಯಾಯಾಲಯಕ್ಕೆ ಭೇಟಿ ನೀಡಿ ನಂತರ ತಾಲ್ಲೂಕು ಮಟ್ಟದ ನ್ಯಾಯಾಲಯದ ಆಡಳಿತ ವ್ಯವಸ್ಥೆ, ಕಾರ್ಯವೈಖರಿ, ತೀರ್ಪುದಾನ ಸೇರಿದಂತೆ ಕಾನೂನು ಸೇವೆಗಳ ಪ್ರಾಧಿಕಾರ ವ್ಯವಸ್ಥೆ ಮೊದಲಾದ ತಾಂತ್ರಿಕ ವ್ಯವಸ್ಥೆಯಿಂದ ಕೂಡಿದ ಮತ್ತು ಇ-ಕೋರ್ಟ್ ಮೂಲಕ ಕಕ್ಷಿದಾರರಿಗೆ ಮತ್ತು ವಕೀಲರಿಗೆ ನೀಡುತ್ತಿರುವ ಸೇವಾ ಸೌಲಭ್ಯಗಳು ಮತ್ತು ತ್ವರಿತ ನ್ಯಾಯಿಕ ನಿರ್ವಹಣೆ ಹಾಗೂ ಕಾರ್ಯವೈಖರಿ ಬಗ್ಗೆ ತಿಳಿದುಕೊಂಡರು.
ಈ ಸಂದರ್ಭದಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಶಿ.ಆರ್.ಮಂಜುನಾಥ್, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಂಜುಕುಮಾರ್ ಎ ಪೊಚ್ಚಾಪುರೆ, ಸಿವಿಲ್ ನ್ಯಾಯಾಧೀಶರಾದ ಡಿ.ರೋಹಿಣಿ ಅವರು ಸುಡಾನ್ ನ್ಯಾಯಾಧೀಶರನ್ನು ಸ್ವಾಗತಿಸಿ, ಇಲ್ಲಿನ ನ್ಯಾಯಾಲಯಗಳ ಕಾರ್ಯವೈಖರಿ ಪರಿಚಯಿಸಿ ಇಲ್ಲಿರುವ ವಕೀಲರ ಜೊತೆ ಸಂವಾದ ನಡೆಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ರೇಷ್ಮೆ ಕೃಷಿಯ ಬಗ್ಗೆ ತಿಳಿಯಲು ಬಯಸಿದ ಅವರಿಗೆ ಸ್ಥಳೀಯ ರೇಷ್ಮೆ ಗೂಡಿನ ಮಾರುಕಟ್ಟೆಯಿಂದ ರೇಷ್ಮೆ ಗೂಡನ್ನು ತರಿಸಿ, ರೇಷ್ಮೆ ತಯಾರಿಕೆ, ಅದರ ಹಿಂದಿನ ಪರಿಶ್ರಮದ ಬಗ್ಗೆ ವಿವರಿಸಲಾಯಿತು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರೇಗೌಡ, ಗೌರವಾಧ್ಯಕ್ಷ ಎಂ.ಪಾಪಿರೆಡ್ಡಿ, ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಣ್ಯರಿಗೆ ಸನ್ಮಾನ

0

ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಶ್ರೀ ಗಂಗಮ್ಮ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತವಾಗಿ ಶ್ರೀ ಗಂಗಮ್ಮದೇವಿ ಗೆಳೆಯರ ಬಳಗ ಗುರುವಾರ ಸಂಜೆ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಈ ಕಾರ್ಯಕ್ರಮದಲ್ಲಿ ಲಿಟಲ್ ಸ್ಟಾರ್ ಡ್ಯಾನ್ಸ್ ಅಕಾಡೆಮಿ ತಂಡ, ಜಸ್ಮಿತ್ ಡ್ಯಾನ್ಸ್ ಅಕಾಡೆಮಿ ತಂಡ ಮತ್ತು ಸಿ.ಎನ್.ಮುನಿರಾಜ್ ನೃತ್ಯ ಪ್ರದರ್ಶನ ನಡೆಸಿಕೊಟ್ಟರೆ, ದೇವರಮಳ್ಳೂರು ಮಹೇಶ ಹಾಗೂ ತಂಡ ಗೀತಗಾಯನವನ್ನು ನಡೆಸಿಕೊಟ್ಟರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಚಲನಚಿತ್ರ ನಟಿ ಗೀತಪ್ರಿಯ ಮಾತನಾಡಿ, “ಕಲೆಗೆ ಪ್ರೋತ್ಸಾಹ ಅತ್ಯಗತ್ಯ. ಸ್ಥಳೀಯ ಕಲಾವಿದರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು. ಪ್ರೇಕ್ಷಕರ ಚಪ್ಪಾಳೆ, ಬೆಂಬಲ ಕಲಾವಿದ ಬೆಳೆಯಲು ಅತ್ಯಗತ್ಯ. ಒಬ್ಬರ ಬೆಳವಣಿಗೆ ಮತ್ತೊಬ್ಬರಿಗೆ ಪ್ರೇರಣೆಯಾಗುತ್ತದೆ. ಗ್ರಾಮೀಣ ಭಾಗದಲ್ಲಿ ಈ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಸ್ಥಳೀಯರಿಗೆ ಅವಕಾಶ ನೀಡುತ್ತಿರುವುದು ಖುಷಿ ಕೊಡುವ ಸಂಗತಿಯಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದ ಆಯೋಜಕರು ಸಾಂಸ್ಕೃತಿಕ ನೃತ್ಯ ಪ್ರದರ್ಶನ ನೀಡಿದ ತಂಡದವರನ್ನು ಸನ್ಮಾನಿಸಿದರು. ನೃತ್ಯ ಪಟುಗಳಿಗೆ ಪದಕ ಮತ್ತು ಪ್ರಮಾಣ ಪತ್ರವನ್ನು ನೀಡಿದರು.
ಎಂ.ಪಿ.ಸಿ.ಎಸ್ ಅಧ್ಯಕ್ಷ ಬಿ.ಎಲ್.ನಂಜುಂಡಪ್ಪ, ಎಸ್.ಎಂ.ನಾರಾಯಣಸ್ವಾಮಿ, ಡಾ.ಡಿ.ಟಿ.ಸತ್ಯನಾರಾಯಣರಾವ್, ನಿರಂಜನ್, ಶ್ರೀನಿವಾಸ್, ವೆಂಕಟೇಶಪ್ಪ, ಸೊಣ್ಣಪ್ಪ, ಗಂಗಾಧರ, ಶ್ರೀ ಗಂಗಮ್ಮ ದೇವಿಯ ಗೆಳೆಯರ ಬಳಗದ ಆಂಜನಪ್ಪ, ಶ್ರೀನಿವಾಸ್ ,ವೆಂಕಟರೆಡ್ಡಿ, ಮನೋಹರ್, ಗಗನ್, ಅನಿಲ್ ಕುಮಾರ್, ನರಸಿಂಹಪ್ಪ, ಸುನಿಲ್, ಕೇಶವ, ಪ್ರದೀಪ್, ಚಂದ್ರಪ್ಪ, ಅನಿಲ್, ಸತೀಶ್, ಸಂತೋಷ್, ಹರೀಶ್, ಕಿರಣ್, ರವಿ, ನವೀನ್, ಅನಿಲ್, ಶ್ರೀರಾಮ್, ಗಂಗಾಧರ್, ಲಿಟಲ್ ಸ್ಟಾರ್ ಡ್ಯಾನ್ಸ್ ಅಕಾಡೆಮಿ ಮನೋಜ್, ಸುಬ್ಬು, ಶ್ರೀನಿವಾಸ್, ಜಸ್ಮಿತ್ ಡ್ಯಾನ್ಸ್ ಅಕಾಡೆಮಿಯ ಧನುಶ್ರೀ, ಅಭಿರಾಮ್ ಹಾಜರಿದ್ದರು.

ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ

0

ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಶುಕ್ರವಾರ ನಗರದ ವಿವಿಧ ಮುಸ್ಲಿಂ ಸಂಘಟನೆಯ ಸದಸ್ಯರು ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ತಹಶೀಲ್ದಾರ್ ಎಂ.ದಯಾನಂದ್ ಅವರಿಗೆ ಮನವಿಯನ್ನು ಸಲ್ಲಿಸಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ತಾಲ್ಲೂಕು ಕಚೇರಿಗೆ ಆಗಮಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಷ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯಲು ಮುಂದಾಗಿದೆ. ಒಂದು ದೇಶ ಒಂದು ಕಾನೂನು ಎನ್ನುತ್ತಲೇ ಸರ್ಕಾರ ಎರಡು ಕಾನೂನು ಮಾಡಲು ಮುಂದಾಗಿದೆ. ಕೇಂದ್ರ ಸರ್ಕಾರದ ಈ ತಿದ್ದುಪಡಿ ದೇಶದ ನೈತಿಕ, ಸಾಂವಿಧಾನಿಕ ಹಾಗೂ ಜಾತ್ಯಾತೀತ ಪರಂಪರೆಗೆ ವಿರುದ್ಧವಾಗಿದೆ. ಪೌರತ್ವ ಮಸೂದೆ ಧಾರ್ಮಿಕ ನೆಲೆಯ ತಾರತಮ್ಯವಾಗಿದ್ದು, ನಮ್ಮ ಸಂವಿಧಾನ ಪರಿಚ್ಛೇದ ೧೪ ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪೌರತ್ವ ತಿದ್ದುಪಡಿ ಮಸೂದೆಯನ್ನು ಹಿಂಪಡೆಯುವಂತೆ ರಾಷ್ಟ್ರಪತಿಗಳಿಗೆ ತಹಶಿಲ್ದಾರ್ ಎಂ.ದಯಾನಂದ್ ಅವರ ಮೂಲಕ ಮನವಿಯನ್ನು ಸಲ್ಲಿಸಿದರು.
ಜಾಮಿಯಾ ಮಸೀದಿ ಸಮಿತಿ ಅಧ್ಯಕ್ಷ ತಾಜ್ ಪಾಷ, ಕಾರ್ಯದರ್ಶಿ ಹೈದರ್ ವಲಿ ಪದಾಧಿಕಾರಿಗಳು, ಮದೀನ ಮಸೀದಿ ಅಧ್ಯಕ್ಷ ಫಯಾಜ್ ಸಾಬ್, ಯೂನಿಟಿ ಸಿಲ್‌ಸಿಲಾ ಫೌಂಡೇಶನ್ ಅಧ್ಯಕ್ಷ ಮೊಹಮ್ಮದ್ ಅಸದ್, ಆಮೀರಿಯಾ ಮಸೀದಿ ಬಾಬ ಜಾನ್, ಟಿಪ್ಪು ಮೌಲ ಹಾಗೂ ಇತರೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.

ದೇವರಮಳ್ಳೂರಿನಲ್ಲಿ ಮಳ್ಳೂರಾಂಭ ದೇವಿಯ ರಥೋತ್ಸವ

0

ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಗುರುವಾರ ಮಳ್ಳೂರಾಂಭ ದೇವಿಯ ರಥೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಅತ್ಯಂತ ಪುರಾತನ ದೇವಾಲಯವಾದ ಮಳ್ಳೂರಾಂಭ ದೇವಾಲಯದ ರಥೋತ್ಸವವು ಜಿಲ್ಲೆಯಾದ್ಯಂತ ಪ್ರಸಿದ್ಧವಾಗಿದ್ದು, ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ಜನರು ದೇವಿಯ ದರ್ಶನ ಪಡೆದು ಪೂಜೆಯಲ್ಲಿ ಪಾಲ್ಗೊಂಡು ರಥವನ್ನು ಎಳೆದರು. ದೇವರನ್ನು ವಿಶೇಷವಾಗಿ ಅಲಂಕರಿಸಿದ್ದರು. ಬ್ರಹ್ಮರಥೋತ್ಸವಕ್ಕೆ ರಥವನ್ನು ವಿಶೇಷವಾಗಿ ಅಲಂಕರಿಸಿ ದಾರಿಯುದ್ದಕ್ಕೂ ತಳಿರು ತೋರಣಗಳಿಂದ ಸಿಂಗರಿಸಿದ್ದರು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ಗಾರುಡಿಬೊಂಬೆ, ಕೀಲುಕುದುರೆ, ವೀರಗಾಸೆ, ತಮಟೆ ವಾದನ ಆಕರ್ಷಕವಾಗಿತ್ತು. ತಿಂಡಿ ತಿನಿಸುಗಳು, ಆಟಿಕೆಗಳು, ಅಚ್ಚೆ ಹಾಕುವವರು, ದಿನೋಪಯೋಗಿ ವಸ್ತುಗಳು ಸೇರಿದಂತೆ ಬಹುತೇಕ ಅಂಗಡಿಗಳು ತೆರೆದಿದ್ದು ಜನಾಕರ್ಷಕವಾಗಿದ್ದವು.
ಶಾಸಕ ವಿ.ಮುನಿಯಪ್ಪ ಹಾಗೂ ತಹಶೀಲ್ದಾರ್ ಎಂ.ದಯಾನಂದ್ ರಥೋತ್ಸವಕ್ಕೆ ಚಾಲನೆ ನೀಡಿದರು. ದೇವಾಲಯ ಸೇವಾ ಸಮಿತಿ ಸದಸ್ಯರು ಸೇರಿದಂತೆ ಗ್ರಾಮಸ್ಥರು ಪೂಜಾಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಗುಲಾಬಿ ಹೂವು ನೀಡಿ ತಂಬಾಕು ಉತ್ಪನ್ನಗಳ ಮಾರಾಟ ಮಾಡದಂತೆ ಮನವಿ

0

ಸಿಗರೇಟ್‌ ಸೇವನೆ ಎಷ್ಟು ಅಪಾಯಕಾರಿಯೋ, ಅದರಿಂದ ಹೊರಹೊಮ್ಮುವ ರಾಸಾಯನಿಕಗಳ ಸಂಪರ್ಕಕ್ಕೆ ಬರುವವರೂ ಅಷ್ಟೇ ಅಪಾಯ ಎದುರಿಸುತ್ತಾರೆ. ತಂಬಾಕು ಹಾಗೂ ಧೂಮಪಾನ ಸೇವನೆಯಿಂದ ಸಿಗುವ ಕ್ಷಣಿಕ ಸುಖವನ್ನು ತ್ಯಜಿಸಿ ಎಲ್ಲರೂ ಆರೋಗ್ಯವಂತರಾಗಿ ಜೀವನ ನಡೆಸುವಂತಾಗಬೇಕು ಎಂದು ತಹಶೀಲ್ದಾರ್ ಎಂ.ದಯಾನಂದ್ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಇಓ ಶಿವಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ ಹಾಗೂ ನಗರಸಭೆ ಸಿಬ್ಬಂದಿಯೊಂದಿಗೆ ಗುರುವಾರ ನಗರದ ಸರ್ಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ವಿವಿಧ ಶಾಲೆಗಳ ಮುಂಭಾಗದ ಅಂಗಡಿ, ತಳ್ಳುವ ಗಾಡಿಗಳು, ಕಾಫಿ ಟೀ ಶಾಪ್‌ಗಳಿಗೆ ಭೇಟಿ ನೀಡಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಗುಲಾಬಿ ಹೂವು ನೀಡುವ ಮೂಲಕ ಮನವಿ ಮಾಡಿದರು.
ತಂಬಾಕು ಹಾಗೂ ಧೂಮಪಾನ ಸೇವನೆಯಿಂದ ತಮಗಷ್ಟೇ ತೊಂದರೆಯಾಗುವುದಿಲ್ಲ ಬದಲಿಗೆ ಸುತ್ತಲಿನ ಅಮಾಯಕ ಜನತೆಯ ಮೇಲೂ ಇದರ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮಾಡುವುದಕ್ಕೆ ಯಾರೂ ಅವಕಾಶ ಕೊಡಬೇಡಿ ಎಂದರು.
ತಂಬಾಕು ನಿಯಂತ್ರಣ ಕಾನೂನು ಕೋಟ್ಪಾ ಕಾಯ್ದೆಯ ಬಗ್ಗೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ ಮಾತನಾಡಿ, ೧೮ ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಹಾಗೂ ಶಾಲಾ ಕಾಲೇಜುಗಳ ೧೦೦ ಯಾರ್ಡ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರುವುದನ್ನು ನಿಷೇಧಿಸಲಾಗಿದೆ. ಈ ಬಗ್ಗೆ ನಾಮಫಲಕವನ್ನೂ ಕಡ್ಡಾಯವಾಗಿ ಶಾಲಾ ಕಾಲೇಜಿನ ಆವರಣ ಗೋಡೆಯ ಮುಂಭಾಗದಲ್ಲಿ ಪ್ರದರ್ಶಿಸಬೇಕಾಗುತ್ತದೆ ಎಂದು ತಿಳಿಸಿದರು.
ಸಾಂಕೇತಿಕವಾಗಿ ಇಂದು ಹಲವು ಅಂಗಡಿಗಳಿಗೆ ೧೦೦ ರೂ ನಂತೆ ದಂಡ ವಿಧಿಸಿದ ಅಧಿಕಾರಿಗಳು ಮುಂದಿನ ದಾಳಿಯ ವೇಳೆ ತಂಬಾಕು ಉತ್ಪನ್ನಗಳ ಮಾರಾಟ ಮಾಡುವ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ಹೆಚ್ಚಿನ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಹಿರಿಯ ಅಭಿಯಂತರ ಜಯರಾಂ, ತಂಬಾಕು ನಿಯಂತ್ರಣ ಜಿಲ್ಲಾ ಸಂಯೋಜಕ ರಾಘವೇಂದ್ರರೆಡ್ಡಿ, ಸಮಾಜ ಕಾರ್ಯಕರ್ತ ಮಂಜುನಾಥ್ ಹಾಜರಿದ್ದರು.

ಸಾಂಜಿ ಕಲಾವಿದರಿಂದ ಮಕ್ಕಳಿಗೆ ಕಾಗದ ಕಲಾಕೃತಿಗಳ ತಯಾರಿಕೆಯ ಕಲಿಕೆ

0

ತಾಲ್ಲೂಕಿನ ತಾತಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಒಂದು ದಿನದ ಕಾಗದ ಕಲಾಕೃತಿ ತಯಾರಿಕೆಯ ಕಾರ್ಯಾಗಾರದಲ್ಲಿ ಸಾಂಜಿ ಕಲಾವಿದ ಎಸ್.ಎಫ್.ಹುಸೇನಿ ಮೈಸೂರು ಮಾತನಾಡಿದರು.
ಕಾಗದ ಕಲಾಕೃತಿಗಳನ್ನು ಮಕ್ಕಳಿಗೆ ಕಲಿಸುವ ಮೂಲಕ ಅವರಿಗೆ ಜಾಮಿತಿ, ಬಣ್ಣಗಳು, ೨ಡಿ ಮತ್ತು ೩ಡಿಗಳ ಬಗ್ಗೆಯೂ ತಿಳಿವಳಿಕೆ ಮೂಡಿಸಬಹುದು ಎಂದು ಅವರು ತಿಳಿಸಿದರು.
ಮಕ್ಕಳಿಗೆ ಪಠ್ಯದಲ್ಲಿನ ವಿಚಾರಗಳ ಮೂಲಕವೇ ಕಲೆಯೆಡೆಗೆ ಆಕರ್ಷಿತಗೊಳಿಸಬಹುದಾಗಿದೆ. ಬಣ್ಣಬಣ್ಣದ ಕಾಗದಗಳನ್ನು ನಿರ್ದಿಷ್ಟವಾಗಿ ಮಡಚುವ ಮೂಲಕ ತ್ರಿಭುಜ, ಚೌಕಘನ, ಆಯತಘನ ಮೊದಲಾದ ಚಾಮಿತಿಯ ಆಕಾರಗಳನ್ನು ತಯಾರಿಸಿ, ನಂತರ ಅವುಗಳನ್ನು ಬಳಸಿ ಪೆನ್ ಸ್ಟ್ಯಾಂಡ್, ಗಿಫ್ಟ್ ಬಾಕ್ಸ್ ಮುಂತಾದವುಗಳನ್ನು ತಯಾರಿಸುವುದನ್ನು ಕಲಿಸಲಾಯಿತು. ಇದು ಅವರ ಪಠ್ಯದಲ್ಲಿನ ವಿಚಾರಗಳನ್ನು ಮನಸ್ಸಿನಲ್ಲಿ ಮೂಡಿಸಲು ನೆರವಾಗುತ್ತದೆ. ಇದಲ್ಲದೆ ಮಕ್ಕಳಿಗೆ ವಿವಿಧ ರೀತಿಯ ಕಾಗದ ಕಲಾಕೃತಿ ಮಾಡುವುದನ್ನು ಕಲಿಸಿದ್ದೇನೆ ಎಂದು ಹೇಳಿದರು.
ಮುಖ್ಯ ಶಿಕ್ಷಕಿ ಸರಸ್ವತಮ್ಮ ಮಾತನಾಡಿ, ಕಲೆಯ ಮೂಲಕ ಕಲಿಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಸಾಧ್ಯವಾಗಿಸಬಹುದು. ಅದರಲ್ಲೂ ಪಠ್ಯಕ್ಕೆ ಪೂರಕವಾದ ಕಲೆಯು ಮಕ್ಕಳಿಗೆ ಹೆಚ್ಚು ಆಪ್ತವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಎಂ.ದೇವರಾಜ್, ಡಿ.ಎಸ್.ಶ್ರೀಕಾಂತ್, ಕೆ.ಎ.ನಾಗರಾಜ್ ಹಾಜರಿದ್ದರು.

ವೈಜ್ಞಾನಿಕ ಪ್ರಜ್ಞೆ ಬೆಳೆಸುವ ಮಕ್ಕಳ ವಿಜ್ಞಾನ ಹಬ್ಬ

0

ನಗರದ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಉಲ್ಲೂರುಪೇಟೆ ಕ್ಲಸ್ಟರ್ ಮಟ್ಟದ ಮಕ್ಕಳ ವಿಜ್ಞಾನ ಹಬ್ಬವನ್ನು ಉದ್ಘಾಟಿಸಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆಂಜನೇಯಲು ಮಾತನಾಡಿದರು.
ಮಕ್ಕಳಲ್ಲಿ ಸ್ವಕಲಿಕೆ, ವೈಜ್ಞಾನಿಕ ಪ್ರಜ್ಞೆ ಹಾಗೂ ಪ್ರಶ್ನಿಸುವ ಮನೋಭಾವ ಬೆಳೆಸುವ ಉದ್ದೇಶದಿಂದ ಮಕ್ಕಳ ವಿಜ್ಞಾನ ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಚಟುವಟಿಕೆ ಆಧಾರಿತ ಕಲಿಕೆಯಿಂದ ಮಕ್ಕಳಲ್ಲಿ ಕೌಶಲ್ಯಾಭಿವೃದ್ಧಿ ಬೆಳೆಸಲು ಸಾಧ್ಯ. ಮಗು ತನ್ನ ಬಾಲ್ಯವನ್ನು ಸಂಭ್ರಮಿಸಬೇಕೆಂದರೆ ಕಲಿಕೆಯು ಹಬ್ಬವಾಗಬೇಕು. ಮಕ್ಕಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಮುನ್ನಡೆಯ ಬೇಕಾದರೆ ವಿಜ್ಞಾನ ಅವಶ್ಯಕ. ಮಕ್ಕಳಲ್ಲಿ ಇರುವ ಪ್ರತಿಭೆ ಗುರುತಿಸಲು ಮಕ್ಕಳ ವಿಜ್ಞಾನ ಹಬ್ಬದಿಂದ ಸಾಧ್ಯ ಎಂದರು.
ಬಿ.ಆರ್.ಸಿ.ಸಂಯೋಜಕ ತ್ಯಾಗರಾಜ್ ಮಾತನಾಡಿ, ವಿಜ್ಞಾನವಿಲ್ಲದೇ ಬದುಕು ನಡೆಸಲು ಸಾಧ್ಯವೇ ಇಲ್ಲ. ಶಿಕ್ಷಣದಲ್ಲಿಹೊಸ ಸಂಚಲನ ಮೂಡಿಸುವಲ್ಲಿಮಕ್ಕಳ ವಿಜ್ಞಾನ ಹಬ್ಬ ಸ್ಪೂರ್ತಿದಾಯಕವಾಗಿದೆ. ಮಕ್ಕಳು ಇದರ ಸದುಪಯೋಗ ಪಡೆದು ಶೈಕ್ಷಣಿಕವಾಗಿ ಮುಂದುವರಿಬೇಕು ಎಂದರು.
ಸಿ.ಆರ್.ಪಿ.ಪ್ರಕಾಶ್ ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಉಲ್ಲೂರುಪೇಟೆ, ಗಂಜಿಗುಂಟೆ ಮತ್ತು ಬಶೆಟ್ಟಹಳ್ಳಿ ಮೂರು ಕ್ಲಸ್ಟರ್ ಗಳಲ್ಲಿ ಈ ದಿನ ವಿಜ್ಞಾನ ಹಬ್ಬವನ್ನು ನಡೆಸಲಾಗುತ್ತಿದೆ. ಎರಡು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ೬, ೭ ಮತ್ತು ೮ ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಜ್ಞಾನದ ಪ್ರಯೋಗ, ಕರಕುಶಲ ಪ್ರಯೋಗ ಮತ್ತು ಆಟೋಟಗಳನ್ನು ನಡೆಸಲಾಗುತ್ತದೆ. ಉಲ್ಲೂರುಪೇಟೆ ಕ್ಲಸ್ಟರಿನ ಎಂಟು ಶಾಲೆಗಳಿಂದ ೧೨೦ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಪ್ರತೀ ಕ್ಲಸ್ಟರಿನಿಂದ ನಾಲ್ವರು ಗಂಡು ಮತ್ತು ನಾಲ್ವರು ಹೆಣ್ಣುಮಕ್ಕಳನ್ನು ಆರಿಸಿ ಜಿಲ್ಲಾಮಟ್ಟದ ವಿಜ್ಞಾನ ಹಬ್ಬಕ್ಕೆ ಕಳುಹಿಸಿಕೊಡಲಾಗುವುದು. ಆತಿಥ್ಯ ಅತಿಥೇಯ ಎಂಬ ಪರಿಕಲ್ಪನೆಯಲ್ಲಿ ಇಲ್ಲಿಂದ ಹೋದ ಮಕ್ಕಳು ಅಲ್ಲಿನ ಮಕ್ಕಳ ಮನೆಗಳ ಮನೆಯಲ್ಲಿ ಉಳಿಯುತ್ತಾರೆ ಎಂದು ವಿವರಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎನ್.ಮುನಿರಾಜು, ಎಸ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ಗಜೇಂದ್ರ, ಪಿಳ್ಳಣ್ಣ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ್, ಸಂಪನ್ಮೂಲ ಶಿಕ್ಷಕರಾದ ಎಂ.ಎ.ರಾಮಕೃಷ್ಣ, ರಮೇಶ್, ನಿರ್ಮಲ, ರಂಜಿತ, ಜಯಂತಿ, ಚಂದ್ರಕಲಾ ಹಾಜರಿದ್ದರು.

ಅತ್ಯುತ್ತಮ ಕೃಷಿ ಉದ್ಯಮ ಶೀಲ ಪ್ರಶಸ್ತಿ

0

ತಾಲ್ಲೂಕಿನ ಭಕ್ತರಹಳ್ಳಿಯ ಅಂಬರೀಷ್ ಅವರ ಕೃಷಿ ಉದ್ದಿಮೆ ಕ್ಷೇತ್ರದಲ್ಲಿನ ಸೇವೆಗಾಗಿ ಮಂಗಳೂರಿನ ನಿಟ್ಟೆ ಇನ್ಸ್ಟಿಟ್ಯೂಟ್ ಮತ್ತು ಕರ್ನಾಟಕ ಬ್ಯಾಂಕ್, ಅತ್ಯುತ್ತಮ ಕೃಷಿ ಉದ್ಯಮ ಶೀಲ ಪ್ರಶಸ್ತಿ ನೀಡಿ ಗೌರವಿಸಿವೆ.
ಮೂಲತಃ ಕೃಷಿ ಪದವೀಧರರಾದ ಭಕ್ತರಹಳ್ಳಿ ಅಂಬರೀಷ್, ಈ ಟಿ.ವಿ ಅನ್ನದಾತ ಕಾರ್ಯಕ್ರಮದಲ್ಲಿ 5 ವರ್ಷ ಸೇವೆ ಸಲ್ಲಿಸಿ, ಕಳೆದ 15 ವರ್ಷಗಳಿಂದ ಸೃಷ್ಟಿ ಮೀಡಿಯ ಸಂಸ್ಥೆಯನ್ನು ನಡೆಸುತ್ತದ್ದಾರೆ. ರೈತರಿಗೆ ಅನುಕೂಲವಾದ ಕೃಷಿ ಮಾಹಿತಿ ಒಳಗೊಂಡ ೩೦೦ ಕ್ಕೂ ಹೆಚ್ಚು ಸಾಕ್ಷ್ಯಚಿತ್ರಗಳ ನಿರ್ಮಾಣ ಮಾಡಿದ್ದಾರೆ. ರೈತರಿಗೆ ತರಬೇತಿ ಕಾರ್ಯಕ್ರಮಗಳ ಆಯೋಜನೆ, ರೈತರಿಗೆ ಅಗತ್ಯ ಮಾಹಿತಿ ಪೂರೈಕೆ, ನಿರುದ್ಯೋಗಿಗಳಿಗೆ ಸ್ವಾವಲಂಬಿ ಉದ್ಯೋಗ ನಡೆಸಲು ಮಾರ್ಗದರ್ಶನ ಮಾಡುತ್ತಿದ್ದಾರೆ.
2017 ರಲ್ಲಿ ಕೇಂದ್ರ ಸರ್ಕಾರದಿಂದ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಕೃಷಿ ಉದ್ದಿಮೆದಾರ ಪ್ರಶಸ್ತಿ ಕೂಡ ಇವರಿಗೆ ಲಭಿಸಿದೆ. ಕೃಷಿ ಪದವೀಧರನಾಗಿ ಸ್ವಾವಲಂಬಿ ಉದ್ದಿಮೆದಾರನಾಗಿ ರೂಪುಗೊಂಡಿರುವ ಇವರ ಸಾಧನೆ ಮತ್ತು ಕೇಉಷಿ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.
ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ, ಗಣ್ಯರಾದ ಎ.ಪಿ.ಆಚಾರ್, ಉಲ್ಲಾಸ್ ಕಾಮತ್, ಪ್ರವೀಣ್ ಕಾಮತ್, ಡಾ.ಪಿ.ಚಂದ್ರಶೇಖರ ಉಪಸ್ಥಿತರಿದ್ದರು.