ಶಿಡ್ಲಘಟ್ಟ ತಾಲ್ಲೂಕಿನ ಪ್ರಾಥಮಿಕ ವ್ಯವಸಾಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿ.ಎಲ್.ಡಿ) ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆ ಶಾಂತಿಯುತವಾಗಿ ನಡೆಯಿತು. ಕಳೆದ ಎರಡು ಅವಧಿಯಲ್ಲಿ ಕಾಂಗ್ರೆಸ್ ಬೆಂಬಲಿತರ ಕೈಯಲ್ಲಿದ್ದ ಪಿಎಲ್‌ಡಿ ಬ್ಯಾಂಕ್ ಇದೀಗ ಜೆಡಿಎಸ್ ಬೆಂಬಲಿತರ ಪಾಲಾಗಿದೆ. ಬ್ಯಾಂಕಿನ ಆಡಳಿತ ಮಂಡಳಿಯ ಒಟ್ಟ 14 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 8 ಕ್ಷೇತ್ರಗಳಲ್ಲಿ ಜೆಡಿಎಸ್ ಬೆಂಬಲಿತರು ಜಯಗಳಿಸಿದ್ದರೆ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹಾಗೂ ಒಂದು ಕ್ಷೇತ್ರದಲ್ಲಿ ಸ್ವತಂತ್ರ್ಯ ಅಭ್ಯರ್ಥಿ ಜಯಗಳಿಸಿರುವುದರಿಂದ ಪಿಎಲ್‌ಡಿ ಬ್ಯಾಂಕ್ ಆಡಳಿತ ಜೆಡಿಎಸ್ ಪಾಲಾಗಿದೆ.
ಎರಡು ಅವಧಿಗಳ ತರುವಾಯ ಜೆಡಿಎಸ್ ತೆಕ್ಕೆಗೆ ಪಿ.ಎಲ್.ಡಿ ಬ್ಯಾಂಕ್ ಬಂದ ಖುಷಿಗೆ ಜೆಡಿಎಸ್ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇದರಿಂದ ಆಡಳಿತಾರೂಡ ಕಾಂಗ್ರೆಸ್ ಗೆ ಮುಖಭಂಗವಾಗಿದೆ.
ತಾಲೂಕು ಪ್ರಾಥಮಿಕ ವ್ಯವಸಾಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿಯ 14 ಮಂದಿ ನಿರ್ದೇಶಕರ ಸ್ಥಾನಗಳ ಪೈಕಿ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದ ಆನೂರು ಪರಿಶಿಷ್ಠ ಪಂಗಡ ಮೀಸಲು ಕ್ಷೇತ್ರದಿಂದ ಬಂಕ್ ಮುನಿಯಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 13 ನಿರ್ದೇಶಕರ ಸ್ಥಾನಗಳಿಗೆ ಕಣದಲ್ಲಿದ್ದ 27 ಮಂದಿ ಅಭ್ಯರ್ಥಿಗಳ ಆಯ್ಕೆಗಾಗಿ ಸೋಮವಾರ ಚುನಾವಣೆ ನಡೆಯಿತು.
ಸಾಲಗಾರರ ಕ್ಷೇತ್ರದಿಂದ ಒಟ್ಟು 1922 ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ 2380 ಮತದಾರರು ಸೇರಿದಂತೆ ಒಟ್ಟು 4302 ಮತಗಳ ಪೈಕಿ 2894 ಮತದಾರರು ತಮ್ಮ ಮತ ಚಲಾಯಿಸುವುದರೊಂದಿಗೆ ಶೇ 67.27 ರಷ್ಟು ಮತದಾನವಾಯಿತು. ಈ ಪೈಕಿ ೨ ಅಮಾನ್ಯ ಮತಗಳಾಗಿದ್ದು 1 ಖಾಲಿ ಮತಪತ್ರ ವಾದ್ದರಿಂದ 3 ಮತಗಳು ತಿರಸ್ಕೃತ ಗೊಂಡಿದೆ.
ತಾಲ್ಲೂಕು ಪ್ರಾಥಮಿಕ ವ್ಯವಸಾಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳ ಹಾಗೂ ಪಡೆದ ಮತಗಳ ವಿವರ :
ಶಿಡ್ಲಘಟ್ಟ ಟೌನ್ (ಹಿಂದುಳಿದ ವರ್ಗ ಬಿ) ಕ್ಷೇತ್ರದಿಂದ ಮಂಜುನಾಥ ( 95 ಮತ )
ಆನೂರು ಪರಿಶಿಷ್ಠ ಪಂಗಡ ಮೀಸಲು ಕ್ಷೇತ್ರದಿಂದ ಬಂಕ್ ಮುನಿಯಪ್ಪ (ಅವಿರೋಧ)
ಅಬ್ಲೂಡು ಸಾಮಾನ್ಯ ಕ್ಷೇತ್ರದಿಂದ ಸಿ.ಕೆ.ನಾರಾಯಣಸ್ವಾಮಿ ( 77 ಮತ )
ಮೇಲೂರು ಸಾಮಾನ್ಯ ಕ್ಷೇತ್ರದಿಂದ ಎಂ.ವಿ.ಗೋಪಾಲಪ್ಪ ( 91 ಮತ )
ಜಂಗಮಕೋಟೆ ಸಾಮಾನ್ಯ ಕ್ಷೇತ್ರದಿಂದ ಕೆ.ಎಂ.ಭೀಮೇಶ್ ( 120 ಮತ )
ದಿಬ್ಬೂರಹಳ್ಳಿ ಸಾಮಾನ್ಯ ಕ್ಷೇತ್ರದಿಂದ ಡಿ.ಸಿ.ರಾಮಚಂದ್ರ ( 91 ಮತ )
ದೊಡ್ಡತೇಕಹಳ್ಳಿ ಸಾಮಾನ್ಯ ಕ್ಷೇತ್ರದಿಂದ ನಾರಾಯಣಸ್ವಾಮಿ.ಸಿ. ( 47 ಮತ )
ಸಾದಲಿ ಪರಿಶಿಷ್ಠ ಜಾತಿ ಮೀಸಲು ಕ್ಷೇತ್ರದಿಂದ ನಾರಾಯಣಪ್ಪ ( 61 ಮತ )
ಚೀಮಂಗಲ ಮಹಿಳಾ ಮೀಸಲು ಕ್ಷೇತ್ರದಿಂದ ಸುನಂದಮ್ಮ ( 50 ಮತ )
ಗಂಜಿಗುಂಟೆ ಸಾಮಾನ್ಯ ಕ್ಷೇತ್ರದಿಂದ ಎಂ.ಪಿ.ರವಿ ( 85 ಮತ )
ವೈ ಹುಣಸೇನಹಳ್ಳಿ ಮಹಿಳಾ ಮೀಸಲು ಕ್ಷೇತ್ರದಿಂದ ಅನಸೂಯಮ್ಮ, ( 51 ಮತ )
ಮಳಮಾಚನಹಳ್ಳಿ ಸಾಮಾನ್ಯ ಕ್ಷೇತ್ರದಿಂದ ನಾರಾಯಣಸ್ವಾಮಿ.ಸಿ.ವಿ. ( 81 ಮತ )
ಫಲಿಚೇರ್ಲು (ಹಿಂದುಳಿದ ವರ್ಗ ಎ) ಕ್ಷೇತ್ರದಿಂದ ಡಿ.ವಿ.ವೆಂಕಟೇಶಪ್ಪ ( 77 ಮತ )
ತಾಲೂಕು ವ್ಯಾಪ್ತಿ ಸಾಲಗಾರರಲ್ಲದ ಕ್ಷೇತ್ರದಿಂದ ಮುರಳಿ.ಎಂ. ( 743 ಮತ ) ಪಡೆಯುವುದರೊಂದಿಗೆ ವಿಜೇತರಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತಹಸೀಲ್ದಾರ್ ಎಂ.ದಯಾನಂದ್ ತಿಳಿಸಿದ್ದಾರೆ.
ಜೆಡಿಎಸ್ ಪಾಲಾದ ಪಿ.ಎಲ್.ಡಿ ಬ್ಯಾಂಕ್ ; ಆಡಳಿತರೂಡ ಕಾಂಗ್ರೆಸ್ ಗೆ ಮುಖಭಂಗ
ಸ್ವಿಜರ್ಲೆಂಡ್ ದೇಶದ ತಜ್ಞರಿಂದ ರೇಷ್ಮೆ ವೀಕ್ಷಣೆ
ಸ್ವಿಜರ್ಲೆಂಡ್ ದೇಶದಲ್ಲಿ ರೇಷ್ಮೆ, ಹೈನುಗಾರಿಕೆ, ಕಾಫಿ ಮುಂತಾದವುಗಳಲ್ಲಿ ಆಸಕ್ತಿ ಹೊಂದಿರುವವರನ್ನು ಕಳೆದ ಮೂರು ವರ್ಷಗಳಿಂದ ದಕ್ಷಿಣ ಭಾರತಕ್ಕೆ ಕರೆದುಕೊಂಡು ಬರುತ್ತಿದ್ದೇನೆ. ಶಿಡ್ಲಘಟ್ಟಕ್ಕೂ ಮೂರನೆಯ ಬಾರಿ ವಿವಿಧ ಕ್ಷೇತ್ರಗಳ ತಜ್ಞರನ್ನು ಕರೆದುಕೊಂಡು ಬಂದಿದ್ದೇನೆ. ಭಾರತದ ಕೇಂದ್ರೀಯ ರೇಷ್ಮೆ ಮಂಡಳಿಯ ಸಹಕಾರ ಪಡೆದು ರೇಷ್ಮೆಯ ವಿವಿಧ ಹಂತಗಳ ಅಧ್ಯಯನವನ್ನು ಕೈಗೊಂಡಿರುವುದಾಗಿ ಸ್ವಿಜರ್ಲೆಂಡ್‌ನ ಜಾನುವಾರುಗಳ ಅಭಿವೃದ್ಧಿ ಸಂಸ್ಥೆಯ ಸಲಹೆಗಾರ ಫ್ರಿಟ್ಜ್ ಶ್ನೀಡರ್ ತಿಳಿಸಿದರು.
ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಕೆ.ಸುರೇಶ್ ಅವರ ಚಾಕಿ ಕೇಂದ್ರಕ್ಕೆ ಸೋಮವಾರ ತಮ್ಮ ತಂಡದೊಡನೆ ಭೇಟಿ ನೀಡಿದ್ದ ಅವರು ಮಾತನಾಡಿದರು.
ಸ್ವಿಜರ್ಲೆಂಡ್ ದೇಶದಲ್ಲಿ ಈಗಾಗಲೇ ಸ್ವಲ್ಪಮಟ್ಟಿಗಿನ ರೇಷ್ಮೆ ಉತ್ಪಾದನೆಯಿದ್ದು, ಭಾರತದ ಸಹಕಾರದೊಂದಿಗೆ ಅದನ್ನು ಅಭಿವೃದ್ಧಿಗೊಳಿಸುವ ಯೋಜನೆಯಿದೆ. ಹೈನುಗಾರಿಕೆ, ನೀರಿನ ಸದ್ಭಳಕೆಯ ಬಗ್ಗೆಯೂ ಅಧ್ಯಯನ ನಡೆಸುತ್ತಿದ್ದೇವೆ. ಕೇಂದ್ರ ರೇಷ್ಮೆ ಮಾರಾಟ ಮಹಾಮಂಡಳಿಯ ನಿವೃತ್ತ ಅಧಿಕಾರಿ ನಾಗರಾಜ್ ಅವರೊಂದಿಗೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ರೇಷ್ಮೆಯ ಬೆಳೆಯುವ ಬಗ್ಗೆ ಕ್ಷೇತ್ರದರ್ಶನ ಮಾಡಿ ಮಾಹಿತಿಯನ್ನು ಪಡೆಯುತ್ತಿದ್ದೇವೆ.
ಇಂಡೋ ಸ್ವಿಜ್ ಜಂಟಿಯಾಗಿ ರೇಷ್ಮೆ ಬೆಳೆಯುವ ಕೆಲಸವನ್ನು ಸ್ವಿಜರ್ಲೆಂಡ್ ದೇಶದಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳುವ ಉದ್ದೇಶವಿದೆ. ಸ್ವಿಜರ್ಲೆಂಡ್‌ನಲ್ಲಿ –10 ರಿಂದ 30 ಡಿಗ್ರಿಯವರೆಗೆ ತಾಪಮಾನ ವೈಪರೀತ್ಯವಿದೆ. ಆ ದೃಷ್ಟಿಯಿಂದಲೂ ಅಧ್ಯಯನ ಮಾಡುತ್ತಿದ್ದೇವೆ. ಭಾರತದ ತಮಿಳುನಾಡು, ಕೇರಳ, ಆಂದ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಕೇಂದ್ರೀಯ ರೇಷ್ಮೆ ಮಂಡಳಿಯ ಸಹಕಾರ ಪಡೆದು ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ವಿವರಿಸಿದರು.
ಕೇಂದ್ರ ರೇಷ್ಮೆ ಮಾರಾಟ ಮಹಾಮಂಡಳಿಯ ನಿವೃತ್ತ ಅಧಿಕಾರಿ ನಾಗರಾಜ್ ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕು ರೇಷ್ಮೆ ಮತ್ತು ಹೈನುಗಾರಿಕೆಗೆ ಪ್ರಸಿದ್ಧಿ. ಹಾಗಾಗಿ ಅಧ್ಯಯನಶೀಲರಿಗೆ ಅನುಕೂಲಕರ. ರೇಷ್ಮೆಯ ವಿವಿಧ ಹಂತಗಳು, ಮಾರುಕಟ್ಟೆಯ ಸ್ಥಿತಿಗತಿ, ಅದರ ಉತ್ಪನ್ನಗಳು, ಬಳಕೆ ಎಲ್ಲವನ್ನೂ ಸ್ವಿಜರ್ಲೆಂಡ್ ದೇಶದಿಂದ ಬಂದ 16 ಮಂದಿ ತಜ್ಞರಿಗೆ ವಿವರಿಸುತ್ತಿದ್ದೇವೆ. ನೀರಿನ ಸದುಪಯೋಗ ಹಾಗೂ ಕಾಫಿಯ ಕುರಿತಂತೆಯೂ ಅವರು ಅಧ್ಯಯನ ನಡೆಸುತ್ತಿದ್ದಾರೆ ಎಂದರು.
ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಕೆ.ಸುರೇಶ್ ಅವರ ಚಾಕಿ ಕೇಂದ್ರ, ಹಿಪ್ಪುನೇರಳೆ ತೋಟ, ರೇಷ್ಮೆ ಹುಳು ಸಾಕಾಣಿಕಾ ಮನೆ, ರೇಷ್ಮೆ ಗೂಡಿನ ಮಾರುಕಟ್ಟೆ, ಸ್ವಯಂಚಾಲಿತ ರೀಲಿಂಗ್ ಕೇಂದ್ರವನ್ನು ವೀಕ್ಷಿಸಿ ವಿವರಗಳನ್ನು ಪಡೆದರು.
ರೇಷ್ಮೆ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಜನಾರ್ಧನಮೂರ್ತಿ, ಎಚ್.ಜಿ.ಗೋಪಾಲಗೌಡ ಹಾಜರಿದ್ದರು.
71ನೇ ವರ್ಷದ ಗಣರಾಜ್ಯೋತ್ಸವ ಸಮಾರಂಭ
ದೇಶಕ್ಕೆ ಪ್ರಪಂಚದ ಅತ್ಯಂತ ಬೃಹದಾಕಾರದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿರ್ಮಾಣ ಮಾಡಿಕೊಂಡ ವ್ಯವಸ್ಥೆಯಲ್ಲಿ ಜೀವನ ಮಾಡುತ್ತಿರುವ ಪ್ರತಿಯೊಬ್ಬ ನಾಗರಿಕರು ಸಂವಿಧಾನದ ಆಶಯಗಳಿಗೆ ಕಟಿಬದ್ಧರಾಗಿ ಜೀವಿಸಬೇಕಾದಂತಹ ಅವಶ್ಯಕತೆ ಇದೆ ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಾಗೂ ನಾಡ ಹಬ್ಬಗಳ ಆಚರಣಾ ಸಮಿತಿ ಭಾನುವಾರ ಆಯೋಜನೆ ಮಾಡಿಗಿದ್ದ 71ನೇ ವರ್ಷದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶದ ಏಳಿಗೆಯು ಯುವಜನತೆಯ ಮೇಲೆ ಅವಲಂಬಿಸಿದೆ. ಮೂಲಭೂತ ಸಮಸ್ಯೆಗಳನ್ನು ನಿವಾರಣೆ ಮಾಡಬೇಕಾಗಿದೆ ಯುವಶಕ್ತಿಯ ಮುಂದೆ ವ್ಯವಸ್ಥಿತವಾದ ಸಮಸ್ಯೆಗಳು ಎದುರಾಗುತ್ತಿವೆ, ಭಯೋತ್ಪಾದನೆ, ಕುಡಿಯುವ ನೀರಿನ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಬೇಕಾಗಿದೆ, ಭಾರತಾಂಬೆಯ ರಕ್ಷಣೆಗೆ ನಾವೆಲ್ಲರೂ ಒಟ್ಟಾಗಬೇಕು, ಗಡಿಗಳ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಬೇಕು, ಶಾಲಾ ಮಕ್ಕಳು ಅಕ್ಷರಸ್ಥರಾಗಿ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡಬೇಕು, ಅನಕ್ಷರತೆ ತೊಲಗಬೇಕು, ದೇಶವನ್ನು ಸಾರ್ವಭೌಮ, ಸಮಾಜವಾದಿ, ಜ್ಯಾತ್ಯಾತೀತ ಮತ್ತು ಪ್ರಜಾಪ್ರಭುತ್ವ ಗಣತಂತ್ರವನ್ನಾಗಿ ಮಾಡಲು ಎಲ್ಲಾ ಪ್ರಜೆಗಳು ಸಂಕಲ್ಪ ಮಾಡಬೇಕಾಗಿದೆ, ದೇಶದಲ್ಲಿನ ಜನತೆಯನ್ನು ಭಯಬೀತಗೊಳಿಸುವಂತಹ ಭಯೋತ್ಪಾದನೆಯನ್ನು ಹತ್ತಿಕ್ಕುವಂತಹ ಪ್ರಯತ್ನಕ್ಕೆ ನಮ್ಮೆಲ್ಲರ ಸಹಕಾರ ನೀಡಬೇಕು ಎಂದರು.
ಧ್ವಜಾರೋಹಣವನ್ನು ನೆರವೇರಿಸಿದ ತಹಶೀಲ್ದಾರ್ ಎಂ.ದಯಾನಂದ್ ಮಾತನಾಡಿ, ನಮ್ಮ ಶಿಡ್ಲಘಟ್ಟ ತಾಲ್ಲೂಕು ಅತಿಹೆಚ್ಚು ರಕ್ತದಾನ ಮಾಡುವ ಮೂಲಕ ಮಾನವೀಯ ತಾಲ್ಲೂಕೆಂದು ಪರಿಗಣಿತವಾಗಿದೆ. ಸಮಾನತೆ, ಸಹೋದರತ್ವ, ಪರಸ್ಪರ ಪ್ರೀತಿ ಆದರಗಳನ್ನು ನಿರ್ಮಾಣ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ, ನಾಡಿನ ಮಕ್ಕಳ ಅಪೌಷ್ಟಿಕತೆ ನಿವಾರಣೆ, ದುರ್ಬಲ ವರ್ಗದ ಜನರ ಅಭಿವೃದ್ದಿಯು ಅವಶ್ಯಕತೆಯಿದೆ ಎಂದರು.
ಈ ಸಂಧರ್ಭದಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಪಥಸಂಚಲನ ಆಯೋಜನೆ ಮಾಡಲಾಗಿತ್ತು. ವಾಸವಿ, ಶಾರದಾ ಮತ್ತು ಸಾಯಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ದೇಶಭಕ್ತಿಯನ್ನು ಬಿಂಬಿಸುವ ನೃತ್ಯರೂಪಕಗಳನ್ನು ಪ್ರದರ್ಶಿಸಿದರು. 50 ಬಾರಿ ರಕ್ತದಾನ ಮಾಡಿರುವ ಶಿರಸ್ತೆದಾರ್ ಮಂಜುನಾಥ್, 40 ಬಾರಿ ರಕ್ತದಾನ ಮಾಡಿರುವ ಆರೋಗ್ಯ ಇಲಾಖೆಯ ಟಿ.ಟಿ.ನರಸಿಂಹಪ್ಪ, ಯೂನಿಟಿ ಸಿಲ್ ಸಿಲಾ ಫೌಂಡೇಷನ್ ಅಧ್ಯಕ್ಷ ಅಸದ್, ಉತ್ತಮವಾಗಿ ಕಾರ್ಯನಿರ್ವಹಿಸಿರುವ ಪಿ.ಡಿ.ಒ ಗಳನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಇಒ ಶಿವಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್, ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ, ರೈತಸಂಘದ ರಾಜ್ಯ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಹಾಜರಿದ್ದರು.
ವಿದ್ಯಾರ್ಥಿಗಳಿಂದ ಗುಲಾಬಿ ಆಂದೋಲನ
ಶಾಲೆಯ ಆಸುಪಾಸಿನಲ್ಲಿ ತಂಬಾಕು ಮಾರಾಟ ಹಾಗೂ ಸೇವನೆ ಮಾಡಬೇಡಿ ಎಂದು ಸ್ವತಃ ವಿದ್ಯಾರ್ಥಿಗಳೇ ವಿನೂತನವಾಗಿ ಗುಲಾಬಿ ಆಂದೋಲನವನ್ನು ಗುರುವಾರ ನಡೆಸಿದರು.
ಅಂಗಡಿ ಮಾಲೀಕರಿಗೆ, ಗ್ರಾಹಕರಿಗೆ ಗುಲಾಬಿ ಹೂವು ಕೊಟ್ಟು ತಂಬಾಕು ಮಾರಾಟ ಹಾಗೂ ಸೇವನೆ ಮಾಡಬೇಡಿ ಎಂದು ವಿಭಿನ್ನವಾಗಿ ಮನವಿ ಮಾಡಿಕೊಂಡಿದ್ದಲ್ಲದೆ, ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಪೊಲೀಸ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಈ ವಿಶೇಷ ಗುಲಾಬಿ ಆಂದೋಲನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡು ಶಾಲಾ-ಕಾಲೇಜಿನ 100 ಮೀಟರ್ ಸುತ್ತಮುತ್ತ ಸಿಗರೇಟ್, ಗುಟ್ಕಾದಂತಹ ತಂಬಾಕು ಉತ್ಪನಗಳ ಮಾರಾಟ ಮತ್ತು ಸೇವನೆ ಮಾಡಬೇಡಿ ಎಂದು ಪ್ರೀತಿಪೂರ್ವಕವಾಗಿ ಮನವಿ ಮಾಡಿಕೊಂಡರು.
ಕೋಟೆ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳೊಂದಿಗೆ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಬಹಳ ಹಿಂದಿನಿಂದ ನಮ್ಮಲ್ಲಿ ತಂಬಾಕು ಬಳಕೆಯಲ್ಲಿದೆ. ದುರಾದೃಷ್ಟವೆಂದರೆ ಇತ್ತೀಚೆಗೆ 15 ರಿಂದ 20 ವರ್ಷದೊಳಗಿನ ಯುವಜನತೆ ಈ ತಂಬಾಕಿನ ವಿವಿಧ ಉತ್ಪನ್ನಗಳಿಗೆ ಬಲಿಯಾಗುತ್ತಿದ್ದಾರೆ. ಇದೊಂದು ಮಾರಕ ದುಶ್ಚಟವಾಗಿ ಪರಿಣಮಿಸಿದೆ. ತಂಬಾಕು ಸೇವನೆಯಿಂದ ಉಂಟಾಗುವ ಮಾರಕ ಪರಿಣಾಮಗಳ ಕುರಿತು ಅರಿಯುವುದರಿಂದ ಇದರಿಂದ ದೂರವುಳಿಯಬಹುದು. ಮಕ್ಕಳು ತಮ್ಮ ಮನೆ ಹಾಗೂ ಸುತ್ತಮುತ್ತ ಈ ವ್ಯಸನಕ್ಕೆ ತುತ್ತಾದವರಿಗೆ ಅರಿವು ಮೂಡಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿ, ತಂಬಾಕು ಸೇವೆನೆ ಕ್ಯಾನ್ಸರ್‌ಗೆ ಕಾರಣವಾಗುತ್ತಿರುವುದು ಗೊತ್ತಿದ್ದರೂ ಕೂಡಾ ಯುವ ಜನತೆ ಇದರ ಹಿಂದೆ ಬಿದ್ದು ತಮ್ಮ ಆರೋಗ್ಯ ಹಾಗೂ ಹಣವನ್ನು ಹಾಳು ಮಾಡಿಕೊಳ್ಳುತ್ತಿದೆ. ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಸರಕಾರದ ಆದೇಶವಿದ್ದರೂ ಕೂಡಾ ಯಾವುದೇ ಭಯವಿಲ್ಲದೆ ಎಲ್ಲೇಂದರಲ್ಲಿ ಮಾರಾಟ ಮಾಡಲಾಗುತ್ತಿದೆ. ತಂಬಾಕು ಮಾರಕವಾದ ವಸ್ತವಾಗಿದ್ದು ಇದನ್ನು 18 ವರ್ಷದೊಳಗಿನ ಮಕ್ಕಳಿಗೆ ನೀಡುವುದು ಕೂಡಾ ಕಾನೂನು ಬಾಹಿರ ಅಲ್ಲದೇ ಶಾಲಾ ಸುತ್ತಮುತ್ತಲ ನೂರು ಮೀಟರ ಒಳಗಡೆ ಮಾರಾಟ ಮಾಡದಂತೆ ಸ್ಪಷ್ಟ ಆದೇಶವಿದೆ. ಆದರೆ ಇದನ್ನು ಯಾರು ಪಾಲನೆ ಮಾಡದಿರುವುದು ಬೇಸರದ ಸಂಗತಿ ಎಂದರು.
ಈ ವಿನೂತನ ಗುಲಾಬಿ ಆಂದೋಲನದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ನಗರದ ಟ್.ಬಿ.ರಸ್ತೆ, ನಗರ್ತರಪೇಟೆ ಮುಂತಾದೆಡೆ ಮೆರವಣಿಗೆ ನಡೆಸಿ, ತಂಬಾಕು ಸೇವನೆಯಿಂದಾಗುವ ತೊಂದರೆಗಳ ಬಗ್ಗೆ ಅರಿವು ಮೂಡಿಸಿದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್, ತಾಲ್ಲೂಕು ಆರೋಗ್ಯ ನಿರೀಕ್ಷಕ ಲೋಕೇಶ್, ಶಿಕ್ಷಣ ಸಂಯೋಜಕ ಇ.ಭಾಸ್ಕರಗೌಡ, ಸಿ.ಆರ್.ಪಿ ಪ್ರಕಾಶ್, ಮುಖ್ಯಶಿಕ್ಷಕಿ ನಾಗಮಣಿ, ಶಿಕ್ಷಕ ವೆಂಕಟೇಶ್ ಹಾಜರಿದ್ದರು.
ಪಿಎಲ್‌ಡಿ ಬ್ಯಾಂಕ್ ಚುನಾವಣೆ; 14 ನಿರ್ದೇಶಕರ ಸ್ಥಾನಗಳಿಗೆ ಒಟ್ಟು 51 ನಾಮಪತ್ರ ಸಲ್ಲಿಕೆ
ಶಿಡ್ಲಘಟ್ಟ ತಾಲ್ಲೂಕಿನ ಪ್ರಾಥಮಿಕ ವ್ಯವಸಾಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ) ಬ್ಯಾಂಕಿನ ಆಡಳಿತ ಮಂಡಳಿಯ 14 ನಿರ್ದೇಶಕರ ಸ್ಥಾನಗಳಿಗೆ ಒಟ್ಟು 51 ನಾಮಪತ್ರ ಸಲ್ಲಿಕೆಯಾಗಿದೆ.
ಜನವರಿ 27 ರಂದು ನಡೆಯಲಿರುವ ಚುನಾವಣೆಗೆ ಶನಿವಾರದವರೆಗೂ ಕೇವಲ 7 ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿದ್ದು ಕಡೆಯ ದಿನವಾಗಿದ್ದ ಸೋಮವಾರದಂದು ಒಟ್ಟು 44 ನಾಮಪತ್ರ ಸಲ್ಲಿಕೆಯಾಗುವ ಮೂಲಕ ಒಟ್ಟು 51 ನಾಮಪತ್ರಗಳು ಸಲ್ಲಿಕೆಯಾಗಿವೆ.
ಆನೂರು ಪರಿಶಿಷ್ಠ ಪಂಗಡ ಮೀಸಲು ಕ್ಷೇತ್ರಕ್ಕೆ ಹಾಲಿ ನಿರ್ದೇಶಕ ಬಂಕ್ ಮುನಿಯಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದು ಬೇರಾರು ನಾಮಪತ್ರ ಸಲ್ಲಿಸದ ಕಾರಣ ಬಂಕ್ ಮುನಿಯಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶಿಡ್ಲಘಟ್ಟ ಟೌನ್ (ಹಿಂದುಳಿದ ವರ್ಗ ಬಿ) ಕ್ಷೇತ್ರದಿಂದ ಮಂಜುನಾಥ.ಎ.ಎಸ್. ವೆಂಕಟೇಶಪ್ಪ.ಎಚ್.ಎನ್. ಅಬ್ಲೂಡು ಸಾಮಾನ್ಯ ಕ್ಷೇತ್ರದಿಂದ ಸಿ.ಎಂ.ಗೋಪಾಲ್, ಸಿ.ಕೆ.ನಾರಾಯಣಸ್ವಾಮಿ, ಚಂದ್ರನಾಥ್, ಮೇಲೂರು ಸಾಮಾನ್ಯ ಕ್ಷೇತ್ರದಿಂದ ಎಂ.ವಿ.ಗೋಪಾಲಪ್ಪ, ಗೋಪಾಲರೆಡ್ಡಿ.ಎಂ , ಆರ್.ಬಿ.ಜಯದೇವ್, ಜಂಗಮಕೋಟೆ ಸಾಮಾನ್ಯ ಕ್ಷೇತ್ರದಿಂದ ಮಾರಪ್ಪ.ಡಿ.ಎನ್. ಕೆ.ಎಂ.ಭೀಮೇಶ್, ದಿಬ್ಬೂರಹಳ್ಳಿ ಸಾಮಾನ್ಯ ಕ್ಷೇತ್ರದಿಂದ ಡಿ.ವಿ.ರಂಗಪ್ಪ, ಆನಂದ್.ಕೆ. ಲಕ್ಷ್ಮಣರೆಡ್ಡಿ, ಅಶ್ವತ್ಥನಾರಾಯಣರೆಡ್ಡಿ, ಡಿ.ಸಿ.ರಾಮಚಂದ್ರ, ದೊಡ್ಡತೇಕಹಳ್ಳಿ ಸಾಮಾನ್ಯ ಕ್ಷೇತ್ರದಿಂದ ಡಿ.ಎಸ್.ರಾಮಚಂದ್ರ, ವೆಂಕಟರೆಡ್ಡಿ.ಎ.ಎಂ. ಶಿವಾರೆಡ್ಡಿ.ಎಲ್.ಎನ್. ನಾರಾಯಣಸ್ವಾಮಿ.ಸಿ. ಸಾಧಲಿ ಪರಿಶಿಷ್ಠ ಜಾತಿ ಮೀಸಲು ಕ್ಷೇತ್ರದಿಂದ ನಾರಾಯಣಪ್ಪ, ಶ್ರೀನಿವಾಸ್, ಚೀಮಂಗಲ ಮಹಿಳಾ ಮೀಸಲು ಕ್ಷೇತ್ರದಿಂದ ಸುನಂದಮ್ಮ, ಸುಜಾತಮ್ಮ, ಗಂಜಿಗುಂಟೆ ಸಾಮಾನ್ಯ ಕ್ಷೇತ್ರದಿಂದ ದೊಡ್ಡ ನರಸಿಂಹರೆಡ್ಡಿ, ಎಂ.ಪಿ.ರವಿ, ವೈ ಹುಣಸೇನಹಳ್ಳಿ ಮಹಿಳಾ ಮೀಸಲು ಕ್ಷೇತ್ರದಿಂದ ಜಯಮ್ಮ, ರತ್ನಮ್ಮ, ಅನಸೂಯಮ್ಮ, ಮಳಮಾಚನಹಳ್ಳಿ ಸಾಮಾನ್ಯ ಕ್ಷೇತ್ರದಿಂದ ನಾರಾಯಣಸ್ವಾಮಿ.ಸಿ.ವಿ. ಬೈರೇಗೌಡ.ಕೆ. ಫಲಿಚೇರ್ಲು (ಹಿಂದುಳಿದ ವರ್ಗ ಎ) ಕ್ಷೇತ್ರದಿಂದ ಗೋವಿಂದಪ್ಪ, ಡಿ.ವಿ.ವೆಂಕಟೇಶಪ್ಪ, ತಾಲ್ಲೂಕು ವ್ಯಾಪ್ತಿ ಸಾಲಗಾರರಲ್ಲದ ಕ್ಷೇತ್ರದಿಂದ ದೇವರಾಜ್.ಎಂ, ಎ.ಎಂ.ತ್ಯಾಗರಾಜ್, ಎಚ್.ಶಂಕರ್, ಮುರಳಿ.ಎಂ. ಕೆ.ಶ್ರೀನಾಥ್, ಎನ್.ಕೃಷ್ಣಮೂರ್ತಿ ನಾಮ ಪತ್ರ ಸಲ್ಲಿಸಿದ್ದಾರೆ.
ಜನವರಿ 22 ಬುಧವಾರ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿದ್ದು, ಜನವರಿ 27 ರ ಸೋಮವಾರ ಚುನಾವಣೆ ನಡೆಯಲಿದೆ.
ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಆಚರಣೆ
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಿರಸ್ತೆದಾರ್ ಮಂಜುನಾಥ್ ಮಾತನಾಡಿದರು.
ಮೂಢನಂಬಿಕೆ, ಜಾತಿ ಪದ್ದತಿಯನ್ನು ನಿರ್ಮೊಲನೆ ಮಾಡಲು ಹೋರಾಟ ಮಾಡಿದವರಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಸಹ ಒಬ್ಬರು ಎಂದು ಅವರು ತಿಳಿಸಿದರು.
ನಿಜಶರಣ ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ಸಮಾಜ ಪರಿವರ್ತನೆಗೆ ಶ್ರಮಿಸಿದ ಮಹಾನ್ ಶರಣರು. ಅವರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಪಾಲಿಸಿದಾಗ ಒಳ್ಳೆಯ ಸುಸಂಸ್ಕೃತ ಸಮಾಜ ನಿರ್ಮಣ ಸಾಧ್ಯ ಎಂದರು.
ಅಕ್ಷರ ಪದವಿ ಪೊರ್ವ ಕಾಲೇಜು ಉಪನ್ಯಾಸಕ ಬಿ.ವಿ.ಪ್ರಕಾಶ್ ಮುಖ್ಯ ಭಾಷಣಕಾರರಾಗಿ ಆಗಮಿಸಿ, ಅಂಬಿಗರ ಚೌಡಯ್ಯ ಅವರ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಬೆಸ್ತರ ಸಂಘದ ಶಿವಣ್ಣ, ಸಂಜೀವಪ್ಪ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಶಿಡ್ಲಘಟ್ಟದಲ್ಲಿ ಸ್ವಚ್ಛ ಭಾರತ್ ವಿಫಲ – “ಸ್ವಚ್ಛ ಸರ್ವೇಕ್ಷಣ್ 2020” ಜಿಲ್ಲಾ ತನಿಖಾಧಿಕಾರಿ
ಸ್ವಚ್ಛ ಭಾರತ್ ಕಾಮಗಾರಿಗಳು ಶಿಡ್ಲಘಟ್ಟದ ನಗರದಲ್ಲಿ ಸಂಪೂರ್ಣ ವಿಫಲವಾಗಿದೆ. ಸ್ವಲ್ಪವೂ ಕೆಲಸವಾಗಿಲ್ಲ. ನಗರಸಭೆಯವರು ನೀಡುವ ದಾಖಲೆಗಳು ಮತ್ತು ವಸ್ತು ಸ್ಥಿತಿ ಒಂದಕ್ಕೊಂದು ತಾಳೆಯಾಗುತ್ತಿಲ್ಲ ಎಂದು “ಸ್ವಚ್ಛ ಸರ್ವೇಕ್ಷಣ್ 2020” ಜಿಲ್ಲಾ ತನಿಖಾಧಿಕಾರಿ ಎನ್.ಮಂಜುಳಾ ತಿಳಿಸಿದರು.
ಶಿಡ್ಲಘಟ್ಟದ ಎಲ್ಲಾ ವಾರ್ಡುಗಳನ್ನು ವೀಕ್ಷಣೆ ಮಾಡಿ ಕಸ ವಿಲೇವಾರಿ, ತ್ಯಾಜ್ಯ ನಿರ್ವಹಣೆ, ಚರಂಡಿ ಶುಚಿತ್ವ ಮುಂತಾದವುಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.
ನಗರಸಭೆಯವರಿಗೆ ತಿಳಿಸದೆಯೇ ಬಂದು ಬೆಳಗ್ಗೆ ಆರು ಗಂಟೆಯಿಂದ ಪ್ರತಿಯೊಂದು ವಾರ್ಡನ್ನೂ ಪರಿಶಿಲಿಸಿದ್ದೇನೆ. ಇಲ್ಲಿನ ಅನೈರ್ಮಲ್ಯತೆಯನ್ನು ಕಂಡಾಗ ಶಿಡ್ಲಘಟ್ಟದಲ್ಲಿ ನಗರಸಭೆಯವರು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಕಾಡುತ್ತದೆ. ಕಾರ್ಮಿಕರು, ತಮಗೆ ಸಂಬಳ ಕೊಡುತ್ತಿಲ್ಲ, ಹೇಗೆ ಕೆಲಸ ಮಾಡುವುದು ಎನ್ನುತ್ತಾರೆ. ಒಟ್ಟಾರೆ ಶಿಡ್ಲಘಟ್ಟದ ನಗರಸಭೆ ಸ್ವಚ್ಛತೆಯನ್ನು ಸಂಪೂರ್ಣ ಕಡೆಗಣಿಸಿದೆ ಎಂದು ತಮ್ಮ ಬೇಸರ ಮತ್ತು ಅಸಮಧಾನವನ್ನು ವ್ಯಕ್ತಪಡಿಸಿದರು.
ನಗರಸಭೆಯವರು ಯಾವ ರೀತಿ ಸ್ವಚ್ಛತೆಯನ್ನು ಕಾಪಾಡುತ್ತಿದ್ದಾರೆ ಎಂಬ ವಸ್ತುನಿಷ್ಠ ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತೇವೆ. ನಾವು ನೀಡುವ ಗ್ರೇಡ್ ಆಧಾರದ ಮೇಲೆ ನಗರಸಬೆಯವರಿಗೆ ಅನುದಾನಗಳು ಬಿಡುಗಡೆಯಾಗುತ್ತವೆ. ಇಲ್ಲಿನ ಹದಗೆಟ್ಟ ಪರಿಸ್ಥಿಯನ್ನು ವಿವರಿಸಿ ವರದಿ ನೀಡಲಿದ್ದು, ಅದರನ್ವಯ ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವರು ಎಂದು ಅವರು ವಿವರಿಸಿದರು.
ಪಲ್ಸ್ ಪೋಲಿಯೋ ಜಾಗೃತಿ ಜಾಥಾ
ನಗರದಲ್ಲಿ ಶನಿವಾರ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ನಿಮಿತ್ತ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿದರು.
ಮಕ್ಕಳಲ್ಲಿ ಶಾಶ್ವತ ಅಂಗವಿಕಲತೆ ಉಂಟು ಮಾಡಿ, ದೀರ್ಘಕಾಲ ಭೀಕರ ಪರಿಣಾಮ ಬೀರುವ ಪೋಲಿಯೋ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ದೇಶವನ್ನು ಪೋಲಿಯೋ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಇಂತಹ ಕಾರ್ಯಕ್ರಮ ನಡೆಸುವುದು ನಮ್ಮ ಆದ್ಯ ಕರ್ತವ್ಯ ಎಂದು ಅವರು ತಿಳಿಸಿದರು.
ಪೋಲಿಯೊ ರೋಗವು ಮಕ್ಕಳಲ್ಲಿ ಶಾಶ್ವತ ಅಂಗವಿಕಲತೆಯನ್ನು ಉಂಟುಮಾಡುತ್ತದೆ. ಇದರಿಂದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಪೋಲಿಯೊ ಹನಿ ಹಾಕಿಸಬೇಕು. ಜನವರಿ 19 ರಿಂದ ನಡೆಯುವ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಲಾಗುತ್ತಿದ್ದು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಒಂದು ಮುಕ್ಕಾಲು ಲಕ್ಷ ಮಕ್ಕಳಿಗೆ ಲಸಿಕೆ ಹಾಕಿಸಲು ಗುರಿ ಹೊಂದಲಾಗಿದೆ. ಅದಕ್ಕಾಗಿ ತಾಲ್ಲೂಕಿನಾದ್ಯಂತ 106 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.
ವಿವಿಧ ಶಾಲೆಗಳ ವಿದ್ಯಾರ್ಥಿಗಳು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಪೋಲಿಯೋ ಲಸಿಕೆ ಹಾಕಿಸುವಂತೆ ಘೋಷಣೆಗಳನ್ನು ಕೂಗುತ್ತಾ ಜನ ಜಾಗೃತಿ ನಡೆಸಿದರು.
ತಾಲ್ಲೂಕು ಕಚೇರಿಯಲ್ಲಿ ಫೋನ್ ಇನ್ ಕಾರ್ಯಕ್ರಮ
ನಗರದ ತಾಲ್ಲೂಕು ಕಚೇರಿಯಲ್ಲಿ ಶನಿವಾರ ಫೋನ್ ಇನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಹಶೀಲ್ದಾರ್ ಎಂ.ದಯಾನಂದ್ ಮಾತನಾಡಿದರು.
ಕಳೆದ ಬಾರಿಯ ಫೋನ್ ಇನ್ ಕಾರ್ಯಕ್ರಮದಲ್ಲಿ ಇಪ್ಪತ್ತಮೂರು ಕರೆಗಳು ಬಂದಿದ್ದು, ಅವುಗಳಲ್ಲಿ ಬಹುತೇಕ ಪರಿಹಾರ ಒದಗಿಸಲಾಗಿದೆ, ಉಳಿದ ಒಂದೆರಡು ಪರಿಹಾರ ದೊರಕಿಸುವ ಹಂತದಲ್ಲಿದೆ ಎಂದು ಅವರು ಹೇಳಿದರು.
ಈ ದಿನದ ಫೋನ್ ಇನ್ ಕಾರ್ಯಕ್ರಮದಲ್ಲಿ ಹದಿಮೂರು ಕರೆಗಳು ಸಾರ್ವಜನಿಕರಿಂದ ಬಂದವು. ಮೊದಲನೇ ಕರೆ ಹನ್ನೊಂದನೇ ವಾರ್ಡಿನ ಸತ್ಯಮೂರ್ತಿ ಕೋತಿಗಳ ಕಾಟದ ಬಗ್ಗೆ ಪ್ರಸ್ತಾಪಿಸಿದರು. ಮಳಮಾಚನಹಳ್ಳಿ ಬೈರೇಗೌಡ ಎಂಬುವರು ಕರೆ ಮಾಡಿ ಆಶ್ರಯ ಬಡಾವಣೆ ಅಳತೆಯಾಗಿಲ್ಲ ಎಂದು ತಿಳಿಸಿದರು. ಬೈಯಪ್ಪನಹಳ್ಳಿ ಗುರುಮೂರ್ತಿ ಕರೆ ಮಾಡಿ ಖಾತೆ ತಿದ್ದುಪಡಿಗೆ ಅರ್ಜಿ ಸಲ್ಲಿಸಿದ್ದು, ವಿಳಂಭವಾಗುತ್ತಿದೆ ಎಂದರು. ಕನ್ನಮಂಗಲದ ಚಿಕ್ಕಾಂಜಿನಪ್ಪ ಕರೆ ಮಾಡಿ ಗ್ರಂಥಾಲಯದ ಸ್ಥಳದಲ್ಲಿ ಪತ್ರಕರ್ತರ ಭವನ ನಿರ್ಮಾಣ ಆಗುತ್ತಿದೆ, ಅದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಕುಂದಲಗುರ್ಕಿ ಸಂತೋಷ್ ಕುಮಾರ್ ಅವರು ಕರೆ ಮಾಡಿ ಅಂಗವಿಕಲರ ಕುಂದುಕೊರತೆ ಸಭೆಯನ್ನು ತಾಲ್ಲೂಕು ಆಡಳಿತ ಮಾಡಿಲ್ಲ ಎಂದು ಗಮನ ಸೆಳೆದರು.
ಬೈಯಪ್ಪನಹಳ್ಳಿ ನರಸಿಂಹರೆಡ್ಡಿ ಕರೆ ಮಾಡಿ, ಸಾಗುವಳಿದಾರರು ಬಂಡಿದಾರಿಯನ್ನು ಒತ್ತುವರಿ ಮಾಡಿದ್ದಾರೆ, ತೆರವುಗೊಳಿಸಲು ಕೋರಿದರು. ಚಿಕ್ಕದಾಸರಹಳ್ಳಿಯಿಂದ ಅನಾಮಿಕ ವ್ಯಕ್ತಿ ಕರೆ ಮಾಡಿ, ಮನೆಮನೆಗಳಲ್ಲಿ ಅಂಗಡಿಗಳಲ್ಲಿ ಅಕ್ರ್ರಮ ಮದ್ಯ ಮಾರಾಟದಿಂದ ಗ್ರಾಮದ ಪರಿಸ್ಥಿತಿ ಹದಗೆಟ್ಟಿದೆ ಎಂದು ಅವಲತ್ತುಕೊಂಡರು. ನಗರದ ಮೈದೀನ್ ಸಾಬ್ ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ನೀಡುತ್ತಿಲ್ಲ, ಕ್ರಮ ಕೈಗೊಳ್ಳುವಂತೆ ವಿನಂತಿಸಿದರು. ಚಿಕ್ಕದಾಸರಹಳ್ಳಿಯ ಪವನ್ ಕರೆ ಮಾಡಿ, ಗ್ರಾಮದಲ್ಲಿ ರುದ್ರಭೂಮಿ ಒತ್ತುವರಿ, ಅಕ್ರಮ ಮದ್ಯ ಮಾರಾಟದ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿದರು. ಹಿತ್ತಲಹಳ್ಳಿಯ ಮುನಿರಾಜು ಕರೆ ಮಾಡಿ, ತಮ್ಮ ಗ್ರಾಮದಲ್ಲಿ 800 ವರ್ಷಗಳಷ್ಟು ಹಳೆಯದಾದ ವೀರಗಲ್ಲುಗಳಿವೆ, ಅವನ್ನು ಸಂರಕ್ಷಿಸಬೇಕೆಂದು ಕೋರಿದರು. ನಗರದ ತೌಸೀಫ್ ಖಾನ್ ಕರೆ ಮಾಡಿ, ಒಳಾಂಗಣ ಕ್ರೀಡಾಂಗಣದ ಅಗತ್ಯತೆಯ ಬಗ್ಗೆ ತಿಳಿಸಿದರು. ಚಿಕ್ಕದಾಸರಹಳ್ಳಿಯ ನಾಗೇಶ್ ಕರೆ ಮಾಡಿ, ರುದ್ರಭೂಮಿಯ ಒತ್ತುವರಿ
ಎಲ್ಲಾ ಸಮಸ್ಯೆಗಳಿಗೂ ಪರಿಹಾರಗಳನ್ನು ಒದಗಿಸಲಾಗುವುದು. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ಫೋನ್ ಮೂಲಕ ತಿಳಿಸಿ, ಪರಿಹಾರ ಕಂಡುಕೊಳ್ಳಲಿ ಎಂದು ಜನಸ್ನೇಹಿ ಆಡಳಿತ ನೀಡಬೇಕು ಎಂಬ ಉದ್ದೇಶದಿಂದ ಈ ಫೋನ್ ಇನ್ ಕಾರ್ಯಕ್ರಮವನ್ನು ಆಯೋಜಿಸಿದ್ದು ಇದರ ಸದುಪಯೋಗಪಡಿಸಿಕೊಳ್ಳುವಂತೆ ತಹಶೀಲ್ದಾರ್ ಎಂ.ದಯಾನಂದ್ ಮನವಿ ಮಾಡಿದರು.
ಗ್ರೇಡ್ 2 ತಹಶೀಲ್ದಾರ್ ಹನುಮಂತರಾವ್, ಶಿರಸ್ತೆದಾರ್ ಮಂಜುನಾಥ್, ಆರ್.ಐ.ವಿಶ್ವನಾಥ್ ಹಾಜರಿದ್ದರು.
ಒಂದು ಸಾವಿರ ಯೂನಿಟ್ ಗಿಂತಲೂ ಅಧಿಕ ರಕ್ತದಾನದ ಗುರಿ
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಜನವರಿ 20 ರಂದು ನಡೆಸಲು ಉದ್ದೇಶಿಸಿರುವ ಬೃಹತ್ ರಕ್ತದಾನ ಶಿಬಿರಕ್ಕೆ ಸಂಬಂಧಿಸಿದಂತೆ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತಹಶೀಲ್ದಾರ್ ಎಂ.ದಯಾನಂದ್ ಮಾತನಾಡಿದರು.
ರಕ್ತದಾನ ಮಾಡುವುದರಿಂದ ಜೀವದಾನ ಮಾಡಿದಂತೆ. ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರ ಸಹಕಾರದೊಂದಿಗೆ ಸಾರ್ವಜನಿಕರಿಗೆ ಮನವೊಲಿಸಬೇಕು. ತಾವುಗಳೂ ರಕ್ತದಾನ ಮಾಡುವ ಮೂಲಕ ದಾಖಲೆಯ ಪ್ರಮಾಣದಲ್ಲಿ ರಕ್ತವನ್ನು ಸಂಗ್ರಹಿಸಬೇಕು. ಒಂದು ಸಾವಿರ ಯೂನಿಟ್ ಗಿಂತಲೂ ಅಧಿಕ ರಕ್ತದಾನಿಗಳಿಂದ ಸಂಗ್ರಹಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಅವರು ತಿಳಿಸಿದರು.
ರೆಡ್ ಕ್ರಾಸ್ ಸೊಸೈಟಿ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್ ಮಾತನಾಡಿ, ಜಿಲ್ಲೆಯಲ್ಲಿ ಒಂದು ದಿನಕ್ಕೆ ಇಪ್ಪತ್ತೈದರಿಂದ ಮುವತ್ತು ಯೂನಿಟ್ ರಕ್ತದ ಅವಶ್ಯಕತೆಯಿದೆ. ಅದಕ್ಕಾಗಿ ಆರೋಗ್ಯವಂತರೆಲ್ಲರೂ ರಕ್ತದಾನ ಮಾಡಿ. ಪ್ರಥಮದರ್ಜೆ ಕಾಲೇಜು , ಐಟಿಐ, ಪಿಯುಸಿ ವಿದ್ಯಾರ್ಥಿಗಳು, ಶಿಕ್ಷಕರು, ಆಟೋ ಚಾಲಕರ ಸಂಘ, ಕನ್ನಡಪರ, ಜನಪರ ಸಂಘಟನೆಗಳು, ರೈತ ಸಂಘಟನೆಗಳು ರಕ್ತದಾನದ ಶಿಬಿರದಲ್ಲಿ ಭಾಗಿಯಾಗಬೇಕು. ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು ಹೆಚ್ಚಾಗಿ ರಕ್ತದಾನದ ಶಿಬಿರದಲ್ಲಿ ಬಾಗವಹಿಸಲು ಪ್ರಚಾರದ ಅವಶ್ಯಕತೆಯಿದೆ. ವಾಟ್ಸಪ್ ಗ್ರೂಪ್, ಮುದ್ರಣ ಪ್ರತಿಗಳು, ಫ್ಲೆಕ್ಸ್ ಬ್ಯಾನರ್ ಹಾಗೂ ಮೌಖಿಕವಾಗಿ ಅರಿವು ಮೂಡಿಸಬೇಕೆಂದರು.
ತಾಲ್ಲೂಕು ಪಂಚಾಯಿತಿ ಇ.ಒ.ಶಿವಕುಮಾರ್, ಡಾ.ವೆಂಕಟೇಶ ಮೂರ್ತಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸುಬ್ಬಾರೆಡ್ಡಿ, ಶಿರಸ್ತೆದಾರ ಮಂಜುನಾಥ್, ಅಕ್ಕಲರೆಡ್ಡಿ ಹಾಜರಿದ್ದರು.
ರೈತರಿಗೆ ಸಂಕ್ರಾಂತಿ ಹಬ್ಬದ ಉಡುಗೊರೆ ವಿತರಣೆ
ನಗರದ ರೈತ ಸಂಘದ ನಗರ ಘಟಕದ ಕಚೇರಿಯಲ್ಲಿ ಶ್ರೀರಾಮ ರೈತ ಆಸಕ್ತ ಗುಂಪು ಮತ್ತು ಶ್ರೀಆಂಜನೇಯ ರೈತ ಆಸಕ್ತ ಗುಂಪುಗಳ ಸದಸ್ಯರಿಗೆ ಉಳಿತಾಯದ ಹಣದಿಂದ ಸಂಕ್ರಾಂತಿ ಹಬ್ಬದ ಉಡುಗೊರೆಯಾಗಿ ಒಂದು ಸಾವಿರ ರೂ ಮತ್ತು ನೀರಿನ ಕ್ಯಾನ್ ವಿತರಿಸಿ ರೇಷ್ಮೆ ರೈತರ ಉತ್ಪಾದಕ ಕಂಪನಿಯ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ ಮಾತನಾಡಿದರು.
ರೈತ ಆಸಕ್ತ ಗುಂಪುಗಳು ಒಗ್ಗೂಡಿ ಕ್ರಿಯಾಶೀಲವಾಗಿ ಕೆಲಸ ಮಾಡಿದಲ್ಲಿ ಎಲ್ಲಾ ರೈತರ ಅಭ್ಯುದಯಕ್ಕೆ ನಾಂದಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಅವರು ತಿಳಿಸಿದರು.
ಎರಡೂ ರೈತ ಆಸಕ್ತ ಗುಂಪುಗಳು ಶಿಸ್ತು ಮತ್ತು ಬದ್ಧತೆಯಿಂದ ಪ್ರಗತಿಯನ್ನು ಸಾಧಿಸಿ ಹಣವನ್ನು ಉಳಿತಾಯ ಮಾಡಿದ್ದಾರೆ. ತಾವು ಉಳಿತಾಯ ಮಾಡಿರುವ ಹಣದಲ್ಲಿ ಸ್ವಲ್ಪ ಭಾಗವನ್ನು ತಮ್ಮ ಸದಸ್ಯರಿಗೆ ನೀಡುವ ಮೂಲಕ ಉತ್ತೇಜನ ನೀಡುತ್ತಿರುವುದು ಶ್ಲಾಘನೀಯ ಎಂದರು. ಇನ್ನೂ ಮುಂದುವರಿದು ರೈತ ಆಸಕ್ತ ಗುಂಪುಗಳು ಫ್ಲೋರ್ ಮಿಲ್, ಉಪ್ಪಿನಕಾಯಿ ಘಟಕ ಅಥವಾ ರೈತರಿಗೆ ಉಪಯುಕ್ತ ಯಂತ್ರಗಳನ್ನು ತರಿಸಿ ಬಾಡಿಗೆಗೆ ನೀಡುವ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು ಎಂದರು.
ರೇಷ್ಮೆ ರೈತರ ಉತ್ಪಾದಕ ಕಂಪನಿಯ ಸಿಇಒ ಕೆ.ಎನ್.ಜನಾರ್ಧನಮೂರ್ತಿ ಮಾತನಾಡಿ, ನಗರದಲ್ಲಿರುವ ಎರಡೂ ರೈತ ಆಸಕ್ತ ಗುಂಪುಗಳು ಪ್ರತಿ ತಿಂಗಳೂ ಎರಡು ಸಭೆಗಳನ್ನು ನಡೆಸುತ್ತಾ ಬಂದಿರುವರು. ಅದರಲ್ಲಿ ಸದಸ್ಯರು ತಲಾ 200 ರೂ ಉಳಿತಾಯ ಮಾಡುತ್ತಾ, ಸದಸ್ಯರಿಗೆ ಸಾಲವನ್ನೂ ನೀಡುತ್ತಾ ಬಂದಿರುವರು. ಅದರಲ್ಲಿ ಬಂದ ಲಾಭಾಂಶದಲ್ಲಿ ಒಂದು ಭಾಗವನ್ನು ಸಂಕ್ರಾಂತಿಯ ಉಡುಗೊರೆಯಾಗಿ ಸದಸ್ಯರಿಗೆ ನೀಡಿದ್ದಾರೆ. ಇದು ಇತರರಿಗೂ ಮಾದರಿಯಾಗಲಿ ಎಂದು ಹೇಳಿದರು.
ರೈತ ಆಸಕ್ತ ಗುಂಪುಗಳ ಸದಸ್ಯರಾದ ಬಿ. ನಾರಾಯಣಸ್ವಾಮಿ, ರಾಮಕೃಷ್ಣಪ್ಪ, ವೇಣುಗೋಪಾಲ್, ಅನಂತ ಪದ್ಮನಾಭ, ದೇವರಾಜ್ ಹಾಜರಿದ್ದರು.
ಗಾಂಧಿಪೆಕ್ಸ್ 2020 ಭಿತ್ತಿಪತ್ರ ಬಿಡುಗಡೆ
ಕರ್ನಾಟಕ ಗ್ರಾಮಾಂತರ ಅಂಚೆಚೀಟಿ ಸಂಗ್ರಹಕಾರರ ಸಂಘದಿಂದ ಜನವರಿ 26-27 ರಂದು ನಡೆಯಲಿರುವ ಗಾಂಧಿಪೆಕ್ಸ್ 2020, ಅಂಚೆ ಚೀಟಿ ಪ್ರದರ್ಶನದ ಭಿತ್ತಿಪತ್ರವನ್ನು ಬಿಡುಗಡೆ ಮಾಡಿ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಚಾರ್ಲ್ಸ್ ಲೋಬೋ ಮಾತನಾಡಿದರು.
ಮಹಾತ್ಮ ಗಾಂಧೀಜಿ ಎಂದರೆ ಇಡೀ ಜಗತ್ತಿಗೆ ಸನ್ಮಾರ್ಗ ತೋರಿದ ಬೆಳಕು ಎಂದು ಅವರು ತಿಳಿಸಿದರು.
ವಿಶ್ವ ಶಾಂತಿದೂತ, ಸತ್ಯಾನ್ವೇಷಕ ಮಹಾತ್ಮ ಗಾಂಧೀಜಿ ಅವರ 150 ನೇ ಹುಟ್ಟುಹಬ್ಬವನ್ನು ವಿಶ್ವದಾದ್ಯಂತ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತಿದೆ. ಕರ್ನಾಟಕ ಗ್ರಾಮಾಂತರ ಅಂಚೆಚೀಟಿ ಸಂಗ್ರಹಕಾರರ ಸಂಘದಿಂದ ಶಿಡ್ಲಘಟ್ಟದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ 2222 ನೇ ವಿಶ್ವ ಗ್ರಾಮಾಂತರ ಅಂಚೆಚೀಟಿ ಪ್ರದರ್ಶನವನ್ನು ಏರ್ಪಡಿಸಿದೆ. ವಿಶ್ವದ ನೂರಾರು ದೇಶಗಳು ಹೊರತಂದಿರುವ ಮಹಾತ್ಮ ಗಾಂಧೀಜಿ ಅವರ ಅಂಚೆ ಚೀಟಿಗಳನ್ನು ಪ್ರದರ್ಶಿಸಲಾಗುತ್ತದೆ.
1936 ರ ಮೇ 31 ರಂದು ಮಹಾತ್ಮ ಗಾಂಧೀಜಿ ಶಿಡ್ಲಘಟ್ಟಕ್ಕೆ ಭೇಟಿ ನೀಡಿದ್ದರ ಸವಿನೆನಪಿನಲ್ಲಿ ವಿಶೇಷ ಅಂಚೆ ಲಕೋಟೆಯನ್ನು ಸಹ ಈ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಮಹಾತ್ಮ ಗಾಂಧೀಜಿ ಅವರ ಸತ್ಯ, ನಿಷ್ಠೆ, ಪ್ರಾಮಾಣಿಕತೆ, ಅಹಿಂಸಾ ತತ್ವ ಎಲ್ಲೆಡೆ ಸಾರಬೇಕು ಎಂಬ ಉದ್ದೇಶದಿಂದ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ ಎಂದು ವಿವರಿಸಿದರು.
ಕರ್ನಾಟಕ ಗ್ರಾಮಾಂತರ ಅಂಚೆಚೀಟಿ ಸಂಗ್ರಹಕಾರರ ಸಂಘದ ಅಧ್ಯಕ್ಷ ಮೇಲೂರು ಎಂ.ಆರ್.ಪ್ರಭಾಕರ್ ಹಾಜರಿದ್ದರು.
ಕರ್ನಾಟಕ ದರ್ಶನ ಪ್ರವಾಸಕ್ಕೆ ಹೊರಟ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು
ನಗರದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಿರುವ ತಾಲ್ಲೂಕಿನ 8 ನೇ ತರಗತಿಯ ಒಟ್ಟು 129 ಪ್ರೌಢಶಾಲೆ ವಿದ್ಯಾರ್ಥಿಗಳ ಕರ್ನಾಟಕ ದರ್ಶನ ಪ್ರವಾಸಕ್ಕೆ ಚಾಲನೆ ನೀಡಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ದೇಶ ಸುತ್ತು ಕೋಶ ಓದು ಎನ್ನುವುದು ನಮ್ಮ ನಾಡಿನ ಹಿರಿಯರು ರೂಪಿಸಿದ ನಾಣ್ಣುಡಿ. ಈ ಮಾತು ನಮ್ಮ ದೇಶದ ಭವ್ಯ ಪರಂಪರೆಯನ್ನು ಸೂಚಿಸುತ್ತದೆ. ದೇಶ ಸುತ್ತುವುದು ಎಂದರೆ ಪ್ರವಾಸ ಮಾಡುವುದು. ಆ ಮೂಲಕ ಜ್ಞಾನ ಸಂಪಾದಿಸುವುದಾಗಿದೆ ಎಂದು ಅವರು ತಿಳಿಸಿದರು.
ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರವಾಸವನ್ನು ಒಂದು ಅಧ್ಯಯನವನ್ನಾಗಿ ಪರಿಗಣಿಸಿ ತಾವು ನೋಡುವ ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ತಮ್ಮ ವಿದ್ಯಾರ್ಥಿ ಜೀವನವನ್ನು ಇನ್ನಷ್ಟು ಸಾರ್ಥಕ ಪಡಿಸಿಕೊಳ್ಳಬೇಕು. ಸರ್ಕಾರಿ ಶಾಲೆಯಲ್ಲಿ ಓದುವಂತಹ ವಿದ್ಯಾರ್ಥಿಗಳಿಗೆ ಕರ್ನಾಟಕದ ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವ ಅವಕಾಶವನ್ನು ಸರ್ಕಾರದ ಪ್ರವಾಸೋದ್ಯಮ ಇಲಾಖೆ ಕಲ್ಪಿಸಿದ್ದು ವಿದ್ಯಾರ್ಥಿಗಳು ಪ್ರವಾಸದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿ, ಚಿತ್ರದುರ್ಗ, ಚಂದವಳ್ಳಿಯ ತೋಟ, ಶಿವಮೊಗ್ಗ, ಜೋಗ್ ಫಾಲ್ಸ್, ಗೋಕರ್ಣ, ಬೀಚ್, ಕೊಲ್ಲೂರು, ಶೃಂಗೇರಿ, ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಆದಿಚುಂಚನಗಿರಿ, ಯಡೆಯೂರು ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ತಾಲ್ಲೂಕಿನಿಂದ ಕರ್ನಾಟಕ ದರ್ಶನ ಪ್ರವಾಸಕ್ಕೆ ಈ ಬಾರಿ 129 ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಇದನ್ನು ಕಲಿಕೆಯ ಒಂದು ಭಾಗವಾಗಿ ಪರಿಗಣಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾರ್ಗದರ್ಶಿ ಶಿಕ್ಷಕರಾದ ರುದ್ರೇಶಮೂರ್ತಿ, ಸಾದಿಕ್ ಪಾಷ, ಪ್ರಭಾಕರ್, ನಾಗಭೂಷಣ್, ಸುಶೀಲಮ್ಮ, ಸುಜಾತಮ್ಮ, ಪ್ರವಾಸೋದ್ಯಮ ನಿಗಮದ ವ್ಯವಸ್ಥಾಪಕ ಮಹೇಶ್ವರಪ್ಪ, ಸಿ.ಎಂ.ಮುನಿರಾಜು, ಗಜೇಂದ್ರ, ಮಂಜುನಾಥ್, ಪ್ರಕಾಶ್, ಎಲ್.ವಿ.ವೆಂಕಟರೆಡ್ಡಿ ಹಾಜರಿದ್ದರು.
ರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವ
ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ನಲ್ಲರಾಳ್ಳಹಳ್ಳಿ ಬಳಿಯಿರುವ ರಾಮಲಿಂಗೇಶ್ವರ ಬೆಟ್ಟದ ರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವವನ್ನು ಪುಷ್ಯ ಶುಕ್ಲ ಪಕ್ಷ ಪೌರ್ಣಮಿ ಶುಕ್ರವಾರದಂದು ವಿಜೃಂಭಣೆಯಿಂದ ಆಚರಿಸಲಾಯಿತು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ ರಥೋತ್ಸವಕ್ಕೆ ಚಾಲನೆ ನೀಡಿದರು.
ರಾಮ ಮತ್ತು ಈಶ್ವರ ಒಂದೆಡೆ ನೆಲೆಸಿರುವುದು ಅಪರೂಪ. ದೇಶದ ದಕ್ಷಿಣದ ತುತ್ತ ತುದಿಯಲ್ಲಿ ರಾವಣನೊಂದಿಗೆ ಯುದ್ಧಕ್ಕೆ ತೆರಳುವ ಮುಂಚೆ ರಾಮನು ಶಿವನನ್ನು ಪೂಜಿಸಿದ ಕ್ಷೇತ್ರ ರಾಮೇಶ್ವರವಾಗಿದ್ದರೆ, ತಾಲ್ಲೂಕಿನಲ್ಲಿ ಶ್ರೀರಾಮ ವನವಾಸದ ಕಾಲದಲ್ಲಿ ಪೂಜಿಸಲೆಂದು ಸ್ಥಾಪಿಸಿದ್ದ ಇಷ್ಟಲಿಂಗವಿರುವ ಕ್ಷೇತ್ರ ರಾಮಲಿಂಗೇಶ್ವರವೆಂದೇ ಪ್ರಸಿದ್ಧವಾಗಿದೆ.
ರಾಮಲಿಂಗೇಶ್ವರ ಬೆಟ್ಟ ಪುರಾತನವಾದ ಹಾಗೂ ಪ್ರಸಿದ್ಧಿಪಡೆದ ಕ್ಷೇತ್ರವಾಗಿದೆ. ಬೆಟ್ಟದ ಮೇಲಿನ ದೇವಾಲಯ ಹಾಗೂ ಪರಿಸರ ಹಲವು ವಿಶೇಷತೆಗಳನ್ನು ಹೊಂದಿದ್ದು, ಬ್ರಹ್ಮರಥೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ವಿವಿಧ ತಾಲ್ಲೂಕು ಹಾಗೂ ಜಿಲ್ಲೆಗಳಿಂದ ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು.
ಭಕ್ತರಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ರಥೋತ್ಸವದ ಸಂದರ್ಭಕ್ಕೆ ದನಗಳ ಜಾತ್ರೆಯು ಕೂಡ ನಡೆಯಿತು. ರಾಸುಗಳನ್ನು ಕೊಳ್ಳಲು ಮತ್ತು ಮಾರಲು ಸುತ್ತಮುತ್ತಲಿನ ಜಿಲ್ಲೆಗಳಿಂದ ರೈತರು ಆಗಮಿಸಿದ್ದರು.
ರಾಮಾಯಣದ ಹಿನ್ನೆಲೆ, ಚೋಳರ ಕಾಲದ ಕೆತ್ತನೆಗಳುಳ್ಳ ದೇಗುಲ, ನೂರಾರು ವರ್ಷಗಳ ಇತಿಹಾಸ ಸಾರುವ ಶಿಲ್ಪಗಳು, ಸಾವಿರಾರು ವರ್ಷದಿಂದ ಕದಲದೇ ಇರುವ ಬೆಟ್ಟ, ದೇವಾಲಯ ಮುಜರಾಯಿಯದ್ದಾದರೂ, ಪ್ರತಿವರ್ಷ ಜನವರಿ ತಿಂಗಳ ಶುಕ್ಲ ಪಕ್ಷದ ಚತುರ್ದಶಿಯಂದು ನಡೆಯುವ ಬ್ರಹ್ಮರಥೋತ್ಸವದ ನಿರ್ವಹಣೆಯನ್ನು ದೇವಾಲಯ ಸಂಚಾಲಕರಾದ ಎಂ.ಸುನೀತ ಶ್ರೀನಿವಾಸರೆಡ್ಡಿ ಮತ್ತು ಕುಟುಂಬದವರು ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ.
ಸಾಕಷ್ಟು ದೂರಕ್ಕೇ ಕಾಣಬಲ್ಲ ಅತಿ ಎತ್ತರವಾದ ಧ್ವಜಸ್ತಂಭ, ದೊಡ್ಡದಾದ ಏಕಶಿಲಾ ಬಸವಣ್ಣ ಈ ದೇವಾಲಯದ ವೈಶಿಷ್ಟ್ಯ. ಬೇರೆಲ್ಲಿಯೂ ಕಾಣಸಿಗದ ಹನುಮಲಿಂಗ ದೇವಾಲಯ ಕೂಡ ಇಲ್ಲಿದೆ. ರಾಮದೊಣೆ, ಲಕ್ಷ್ಮಣದೊಣೆ ಮತ್ತು ಸೀತಾದೊಣೆಗಳೆಂಬ ನೀರಿನ ಸೆಲೆಗಳಾದ ದೊಣೆಗಳಿಲ್ಲಿವೆ. ಇವುಗಳಲ್ಲಿ ಸದಾ ನೀರು ತುಂಬಿರುತ್ತವೆ. ಅವುಗಳನ್ನು ರಾಮ ನಿರ್ಮಿಸಿದ್ದನೆಂಬ ಪ್ರತೀತಿಯಿದೆ. ಭಕ್ತರು ಅವುಗಳಿಂದ ನೀರನ್ನು ಮೊಗೆದು ತಲೆಗೆ ಸಿಂಪಡಿಸಿಕೊಳ್ಳುತ್ತಿದ್ದರು.
ರಾಜಸ್ವ ನಿರೀಕ್ಷಕ ನರಸಿಂಹಮೂರ್ತಿ, ಪಟೇಲ್ ಬೈರಾರೆಡ್ಡಿ, ಡಿ.ಬಿ.ವೆಂಕಟೇಶ್, ಎ.ಬಿ.ಬೈರಾರೆಡ್ಡಿ, ಅರ್ಚಕರಾದ ನಾಗರಾಜ್, ಸುರೇಶ್, ಶ್ರೀನಿವಾಸಮೂರ್ತಿ ಹಾಜರಿದ್ದರು.
ಪ್ರತ್ಯಂಗಿರಾ ದೇವಿ ಹಾಗೂ ಶ್ರೀಲಕ್ಷ್ಮೀ ಪೂಜೆ
ತಾಲ್ಲೂಕಿನ ಹಂಡಿಗನಾಳದ ಕೆ.ವಿ.ಭವನದಲ್ಲಿ ಲೋಕಕಲ್ಯಾಣಾರ್ಥವಾಗಿ ಶುಕ್ರವಾರ ಪೂರ್ಣಿಮೆಯಂದು ಕೇರಳ ಮಾದರಿಯಲ್ಲಿ ತಾಂತ್ರಿಕ ಪ್ರತ್ಯಂಗಿರಾ ದೇವಿ ಹೋಮ ಹಾಗೂ ಲಕ್ಷ್ಮೀದೇವಿ ಪೂಜೆಯನ್ನು ಜೋಡಿ ಮುನೇಶ್ವರ ಸ್ವಾಮಿ ದೇವಸ್ಥಾನದ ಶಿವಶಂಕರ ಗುರೂಜಿ ನಡೆಸಿದರು. ಸಾವಿರಾರು ಮಂದಿ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
“ಊರಿಗೆ, ತಾಲ್ಲೂಕಿಗೆ ಹಾಗೂ ಪೂಜೆ ಮಾಡಲಿಚ್ಚಿಸುವ ಜನರಿಗೆ ಅನುಕೂಲವಾಗಲಿ ಮತ್ತು ಸರ್ವರಿಗೂ ಶುಭವಾಗಲಿ ಎಂಬ ಉದ್ದೇಶದಿಂದ ಈ ಬೃಹತ್ ಹೋಮ ಹಾಗೂ ಪೂಜೆಯನ್ನು ಮಾಡುತ್ತಿದ್ದೇವೆ. ಪೂಜೆಯಲ್ಲಿ ಪಾಲ್ಗೊಳ್ಳುವುದರಿಂದ ಮದುವೆ ಆಗುವುದಕ್ಕೆ ಅಡೆತಡೆ, ಸ್ವಯಂವರ ಪಾರ್ವತಿ ಲಗ್ನ ದೋಷ ನಿವಾರಣೆ ಆಗುವುದು” ಎಂದು ಜೋಡಿ ಮುನೇಶ್ವರ ಸ್ವಾಮಿ ದೇವಸ್ಥಾನದ ಶಿವಶಂಕರ ಗುರೂಜಿ ತಿಳಿಸಿದರು.
ಒಣಮೆಣಸಿನಕಾಯಿ ಹೋಮ, ಬಾಳೆ ಬಲಿ, ಜನಶತ್ರು ನಿವಾರಣೆ, ವ್ಯಾಪಾರದಲ್ಲಿ ಅಡೆತಡೆ ನಿವಾರಣೆ, ಲಕ್ಷ್ಮೀ ಆಕರ್ಷಣೆ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನಡೆಸಲಾಯಿತು. ಜೋಡಿ ಮುನೇಶ್ವರ ಸ್ವಾಮಿ ದೇವಸ್ಥಾನದ ವತಿಯಿಂದ ಪೂಜೆಯಲ್ಲಿ ಭಾಗವಹಿಸಿದವರಿಗೆ ಬೆಳ್ಳಿಯ ಶ್ರೀಲಕ್ಷ್ಮೀ ನಾಣ್ಯವನ್ನು ಉಚಿತವಾಗಿ ನೀಡಲಾಯಿತು.
ಪೂಜೆಯಲ್ಲಿ ಭಾಗವಹಿಸಿದ್ದ ದಂಪತಿಗಳು 200 ಗ್ರಾಂ ಒಣಮೆಣಸಿನಕಾಯಿ ಮತ್ತು ಒಂದು ಸಣ್ಣ ಅಣತಿ ತುಪ್ಪದ ದೀಪ ತಂದಿದ್ದರು. ಹೋಮದಲ್ಲಿ ಪೂಜೆಯಲ್ಲಿ ಪಾಲ್ಗೊಂಡವರೆಲ್ಲರೂ ಒಣಮೆಣಸಿನಕಾಯಿಯನ್ನು ಅಗ್ನಿಗೆ ಅರ್ಪಿಸಿದರು. ಮೆಣಸಿನಕಾಯಿಯ ಘಾಟು ಮಾತ್ರ ಇರದಿದ್ದುದು ವಿಶೇಷವಾಗಿತ್ತು.
ಆರ್.ಎನ್.ಆರ್ ಪ್ರಾವಿಜನ್ ಸ್ಟೋರ್ಸ್ ಆರ್.ನಾಗರಾಜ್ ಮಾತನಾಡಿ, ಮೈಸೂರು, ಕೊಳ್ಳೇಗಾಲ, ಚಿಂತಾಮಣಿ, ಚಿಕ್ಕಬಳ್ಳಾಪುರ, ತುಮಕೂರು, ಹಿಂದೂಪುರ, ಮಾಲೂರು, ಶ್ರೀನಿವಾಸಪುರ, ದೊಡ್ಡಬಳ್ಳಾಪುರ ಮುಂತಾದೆಡೆಗಳಿಂದ ಹೋಮ ಮತ್ತು ಪೂಜೆಗೆ ಆಗಮಿಸಿದ್ದಾರೆ. ನಿಯಮಬದ್ಧವಾಗಿ ಪೂಜೆಯನ್ನು ನಡೆಸಿದ್ದೇವೆ. ಪೂಜೆಯಲ್ಲಿ ಭಾಗವಹಿಸುವವರಿಗೆಲ್ಲಾ ತಿಂಡಿ ಹಾಗೂ ಪ್ರಸಾದವನ್ನು ಸಹ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಮಂದಿ ಪೂಜೆಯಲ್ಲಿ ಭಾಗವಹಿಸಿ ನಮ್ಮ ತಾಲ್ಲೂಕಿಗೆ ಹಾಗೂ ನಾಡಿಗೆ ಒಳ್ಳೆಯದಾಗಲೆಂದು ಪ್ರಾರ್ಥಿಸಿದ್ದಾರೆ” ಎಂದರು.
ಯಾಗದ ಉಸ್ತುವಾರಿ ಆರ್.ಎನ್.ಮನೋಜ್ ಮಾತನಾಡಿ, ನಿರ್ಗುಣ ತತ್ವದಿಂದ ಬಂದ ಅಗಾಧ ಶಕ್ತಿ ದೇವಿಯೆ ಪ್ರತ್ಯಂಗಿರಾ ದೇವಿ. ಈ ದೇವಿಯನ್ನು ಆರಾಧಿಸುವವರಿಗೆ ಯಾವುದೆ ರೀತಿಯ, ಗಂಡಾಂತರವಾಗಲಿ, ಅಪಾಯಗಳಾಗಲಿ, ಶತ್ರು ಬಾಧೆಯಾಗಲಿ ಇಲ್ಲವೆ ಭಯವಾಗಲಿ ಇರುವುದೆ ಇಲ್ಲ ಎಂದರ್ಥ. ಅಷ್ಟು ಮಹತ್ವ ಪಡೆದಿರುವ ದೇವಿ ಪ್ರತ್ಯಂಗಿರಾ ದೇವಿಯ ಹೋಮ ಮತ್ತು ಪೂಜೆಯನ್ನು ಸರ್ವರ ಒಳಿತಿಗಾಗಿ ಉಚಿತವಾಗಿ ಆಯೋಜಿಸಿರುವ ಉದ್ದೇಶ ಊರಿಗೆ, ತಾಲ್ಲೂಕಿಗೆ ಮತ್ತು ನಾಡಿಗೆ ಒಳ್ಳೆಯದಾಗಲಿ ಎಂಬುದಾಗಿದೆ ಎಂದರು.
ಜೋಡಿ ಮುನೇಶ್ವರ ಸ್ವಾಮಿ ದೇವಸ್ಥಾನದ ಶಿವಶಂಕರ ಗುರೂಜಿ ಅವರನ್ನು ಸನ್ಮಾನಿಸಲಾಯಿತು. ಪಟಾಕಿ ಸಿಡಿಸುವ ಮೂಲಕ ಪೂಜೆ ಮತ್ತು ಹೋಮದ
ರೆಡ್ ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್, ಬಿ.ಸಿ.ನಂದೀಶ್, ಮುಖೇಶ್, ಮಂಜುನಾಥ ಹಾಜರಿದ್ದರು.
ಸಿ.ಐ.ಟಿ.ಯು ನೇತೃತ್ವದಲ್ಲಿ ಅಂಗನವಾಡಿ ಮತ್ತು ಗ್ರಾಮ ಪಂಚಾಯಿತಿ ನೌಕರರ ಪ್ರತಿಭಟನೆ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿ.ಐ.ಟಿ.ಯು ನೇತೃತ್ವದಲ್ಲಿ ಅಂಗನವಾಡಿ ಮತ್ತು ಗ್ರಾಮ ಪಂಚಾಯಿತಿ ನೌಕರರು ಬುಧವಾರ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ತಹಶೀಲ್ದಾರ್ ಎಂ.ದಯಾನಂದ್ ಅವರಿಗೆ ಮನವಿಯನ್ನು ಸಲ್ಲಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಶಿಕ್ಷಣ ನೀಡಬೇಕು. ಮೇ 17 ರಂದು ಶಿಕ್ಷಣ ಇಲಾಖೆ ಶಿಫಾರಸ್ಸು ಮಾಡಿದ ಆದೇಶವನ್ನು ರದ್ದುಪಡಿಸಬೇಕು. ಎಲ್ಲಾ ಅಸಂಘಟಿತ ವಲಯದ ನೌಕರರಿಗೆ 21 ಸಾವಿರ ಕನಿಷ್ಠ ವೇತನ ಜಾರಿಗೊಳಿಸಬೇಕು. ಗ್ರಾಮ ಪಂಚಾಯಿತಿಯ ಎಲ್ಲಾ ಸಿಬ್ಬಂದಿಗಳ ಬಾಕಿ ಇರುವ ವೇತನ ಬಿಡುಗಡೆ ಮಾಡಬೇಕು. ಕನಿಷ್ಠ ಮೂರು ತಿಂಗಳಿಗೊಮ್ಮೆ ಅಧಿಕಾರಿಗಳ ಮಟ್ಟದಲ್ಲಿ ಕಾರ್ಮಿಕರ ಮುಖಂಡರನ್ನೊಳಗೊಂಡ ಕುಂದುಕೊರತೆ ಸಭೆ ನಡೆಸಬೇಕು. ಎಲ್ಲಾ ನೌಕರರಿಗೆ ಸೇವಾ ನಿಯಮಾವಳಿ, ಪಂಚಾಯಿತಿ ಸಿಬ್ಬಂದಿಯ ಸೇವಾ ಪುಸ್ತಕ ತೆರೆಯಬೇಕು. 45 ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸುಗಳಾದ ಸಾಮಾಜಿಕ ಭದ್ರತೆ, ಪೆನ್ಷನ್, ಹೆರಿಗೆ ಭತ್ಯ ಮೊದಲಾದ ಸೌಲಭ್ಯ ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಮನವಿಯನ್ನು ಸ್ವೀಕರಿಸಿದ ತಹಶೀಲ್ದಾರ್ ಎಂ.ದಯಾನಂದ್, ಕಾರ್ಮಿಕರ ಮುಖಂಡರನ್ನೊಳಗೊಂಡ ಕುಂದುಕೊರತೆ ಸಭೆ ನಡೆಸುವ ಭರವಸೆ ನೀಡಿದರು.
ಸಿ.ಐ.ಟಿ.ಯು ಜಿಲ್ಲಾ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ತಾಲ್ಲೂಕು ಅಧ್ಯಕ್ಷ ಶಂಕರಪ್ಪ, ಗುಲ್ಜಾರ್, ಫಯಾಜ್, ಅಂಗನವಾಡಿ ನೌಕರರ ತಾಲ್ಲೂಕು ಅಧ್ಯಕ್ಷೆ ಅಶ್ವತ್ಥಮ್ಮ, ಮುನಿರತ್ನ, ಭಾಗ್ಯಮ್ಮ ಹಾಜರಿದ್ದರು.
ಪ್ರಧಾನಮಂತ್ರಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಡಿ.ಧೀರಜ್ ಗೌಡ
ಜನವರಿ 20 ರಂದು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಡೆಯಲಿರುವ “ಪರೀಕ್ಷಾ ಪೇ ಚರ್ಚಾ” ಕಾರ್ಯಕ್ರಮದಲ್ಲಿ ಭಾಗವಹಿಸಲು ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಪ್ರೌಡಶಾಲೆಯ 9 ನೇ ತರಗತಿ ವಿದ್ಯಾರ್ಥಿ ಡಿ.ಧೀರಜ್ ಗೌಡ ಆಯ್ಕೆಯಾಗಿದ್ದು, ದೆಹಲಿಗೆ ಹೊರಟಿದ್ದಾನೆ.
ಬೆಂಗಳೂರಿನ ಬಿ.ಜಿ.ದೇವೇಗೌಡ ಹಾಗೂ ಶಾರದ ದಂಪತಿಗಳ ಪುತ್ರನಾದ ಧೀರಜ್ ಗೌಡ ತಾಲ್ಲೂಕಿನ ಮೇಲೂರು ಗ್ರಾಮದ ಪ್ರೌಢಶಾಲೆಯಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇದೇ ಗ್ರಾಮದ ಬಿಸಿಎಂ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಯದಲ್ಲಿ ಆಶ್ರಯ ಪಡೆದುಕೊಂಡು ಆಂಗ್ಲಭಾಷೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ.
ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಪ್ರಧಾನಮಂತ್ರಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಏಕೈಕ ವಿದ್ಯಾರ್ಥಿ ಆಗಿದ್ದು. ಗ್ರಾಮೀಣ ಪ್ರತಿಭೆಯೊಂದು ದೇಶದ ಪ್ರಧಾನಮಂತ್ರಿಯವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿರುವುದು ಶಾಲೆಯ ಶಿಕ್ಷಕರು ಸೇರಿದಂತೆ ಪೋಷಕರಲ್ಲಿ ಸಂತಸ ತಂದಿದೆ. ತಾಲ್ಲೂಕು ಹಾಗೂ ಜಿಲ್ಲೆಗೆ ಕೀರ್ತಿ ತಂದಂತಾಗಿದೆ.
ಜಿಲ್ಲಾ ಅಕ್ಷರ ದಾಸೋಹದ ಸಂಯೋಜಕ ರಘುನಾಥರೆಡ್ಡಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಯನ್ನು ಅಭಿನಂದಿಸಿದರು.
ಮುಖ್ಯಶಿಕ್ಷಕಿ ಸಿ.ಸುಜಾತ, ಶಿಕ್ಷಕರಾದ ಜಿ.ಸವಿತಾ, ಉಮಾಶಂಕರ್, ಪ್ರಸಾದ್ ಹಾಜರಿದ್ದರು.
ಮಳ್ಳೂರು ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಹಾಗೂ ಕಾಲೇಜು ವಾರ್ಷಿಕೋತ್ಸವ
ತಾಲ್ಲೂಕಿನ ಮಳ್ಳೂರು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ 2019-20 ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಹಾಗೂ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಉದ್ಘಾಟನೆ ಮಾಡಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೆಶಕ ಸೀತಾರಾಮರೆಡ್ಡಿ ಮಾತನಾಡಿದರು.
ಬದುಕು ಹೆಜ್ಜೆ ಹೆಜ್ಜೆಗೂ ಪಾಠ ಕಲಿಸುತ್ತದೆ. ಉತ್ತಮ ಜೀವನಕ್ಕೆ ಮಾರ್ಗದರ್ಶನ ಮಾಡುವವರೆಲ್ಲರೂ ಗುರುಗಳೇ. ಹಾಗಾಗಿ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆದಲ್ಲಿ ಸಾಧಕರಾಗಬಹುದು ಎಂದು ಅವರು ಹೇಳಿದರು.
ವಿದ್ಯಾರ್ಥಿಗಳ ಜೀವನದಲ್ಲಿ ಅಂಕಗಳು ಮಾನದಂಡವಲ್ಲ, ಅವರ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ. ಮಕ್ಕಳು ಸಮಯಪಾಲನೆ ಮಾಡುವುದನ್ನು ಕಲಿಯಬೇಕಾಗಿದೆ. ಶಿಕ್ಷಣ ಸಂಸ್ಥೆಗಳು ಇದನ್ನು ಮಾಡಬೇಕು. ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರ್ತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿ, ದೇಶದ ಮಾನವ ಸಂಪನ್ಮೂಲವನ್ನು ಅಭಿವೃದ್ಧಿ ಪಡಿಸಬೇಕಾಗಿರುವ ಹೊಣೆಗಾರಿಕೆ ನಮ್ಮದು. ಜಾತ್ಯತೀತ ರಾಷ್ಟ್ರದಲ್ಲಿ ಬದುಕುತ್ತಿರುವ ನಾವು ಸಮಗ್ರ ರಾಷ್ಟ್ರದ ಅಭಿವೃದ್ಧಿಯಲ್ಲಿ ಭಾಗವಹಿಸಬೇಕು. ದೇಶದ ಅಭಿವೃದ್ಧಿ ಮಾನವ ಸಂಪನ್ಮೂಲದ ಅಭಿವೃದ್ಧಿಯಲ್ಲಿದೆ.
ಮುಂದಿನ ಪೀಳಿಗೆಯನ್ನು ಸ್ಪರ್ಧಾತ್ಮಕ ಯುಗದಲ್ಲಿ ಹೇಗೆ ಮುನ್ನಡೆಯಬೇಕು ಎಂದು ಆಲೋಚಿಸಿ ಅವರನ್ನು ಸನ್ನದ್ಧರನ್ನಾಗಿ ಮಾಡಬೇಕಾಗಿದೆ. ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿಯಲ್ಲಿ ಉತ್ತಮ ಸಾಧನೆಯಾಗಬೇಕು. ಫಲಿತಾಂಶದ ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕು. ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ರೂಢಿಸಿಕೊಳ್ಳುವಂತೆ ಮಾಡಬೇಕು. ಹಿರಿಯರ ಮಾತುಗಳು ಮುಂದಿನ ಭವಿಷ್ಯಕ್ಕೆ ದಾರಿದೀಪವಾಗುತ್ತವೆ ಎಂದರು.
ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಮಾಂಜಿನಪ್ಪ ಮಾತನಾಡಿ, ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೇ ಸದುಪಯೋಗ ಮಾಡಿಕೊಂಡು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು. ಪೋಷಕರು ಅವರ ಪ್ರಗತಿಗಾಗಿ ಶ್ರಮಿಸಬೇಕು ಎಂದರು.
ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಂ.ಆರ್.ಶಿವಣ್ಣ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ನಗರ ಪ್ರದೇಶಗಳ ಮಕ್ಕಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಸಂಸ್ಥೆಯಲ್ಲಿ ಅಳವಡಿಸಿಕೊಂಡು ಮಕ್ಕಳನ್ನು ಭವಿಷ್ಯದ ಪ್ರಜೆಗಳನ್ನಾಗಿ ರೂಪಿಸಲಾಗುತ್ತಿದೆ. ಪೋಷಕರು ಅವರ ಪ್ರಗತಿಗೆ ಹೆಚ್ಚಿನ ಸಹಕಾರ ನೀಡಬೇಕು ಎಂದರು.
ಕಳೆದ ಸಾಲಿನಲ್ಲಿ ಹೆಚ್ಚಿನ ಅಂಕಗಳು ಗಳಿಸಿರುವ ಮಕ್ಕಳನ್ನು ಪುರಸ್ಕರಿಸಲಾಯಿತು. ವಿವಿಧ ಕ್ರೀಡಾಕೂಟಗಳು ಹಾಗೂ ವೇಷ ಭೂಷಣ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಸಿ.ಎಂ.ದೇವರಾಜ್, ಎಂ.ಕೆ.ಚಂದ್ರಶೇಖರ್, ಲಕ್ಷ್ಮೀಪತಿ, ನಾರಾಯಣಸ್ವಾಮಿ, ನಾಗರಾಜ್, ಪಿ.ಯು.ಕಾಲೇಜಿನ ಪ್ರಾಂಶುಪಾಲ ಚಂದ್ರಕುಮಾರ್, ಆಂಗ್ಲಮಾದ್ಯಮ ಶಾಲೆಯ ಮುಖ್ಯಶಿಕ್ಷಕ ರಾಜೇಂದ್ರಬಾಬು, ಪ್ರೌಢಶಾಲೆಯ ಮುಖ್ಯಶಿಕ್ಷಕ ವೀರಭದ್ರಪ್ಪ, ಮುಖ್ಯಶಿಕ್ಷಕಿ ರಾಧಮ್ಮ ಹಾಜರಿದ್ದರು.
ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಮಸೂದೆ, ಪೌರತ್ವ ನೋಂದಣಿ ಪ್ರಕ್ರಿಯೆ ವಿರೋಧಿಸಿ ಉಪವಾಸ ಸತ್ಯಾಗ್ರಹ
ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾನೂನು ಹಾಗೂ ಪೌರತ್ವ ನೋಂದಣಿ ಪ್ರಕ್ರಿಯೆಯ ವಿರುದ್ಧ ಶನಿವಾರ ತಾಲ್ಲೂಕು ಮುಸ್ಲೀಂ ಫೋರಂ ಘಟಕ ಸೇರಿದಂತೆ ವಿವಿಧ ಸಂಘಟನೆಯ ಸದಸ್ಯರು ನಗರದ ಕಂದಾಯ ಭವನದ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು.
ಕೇಂದ್ರ ಸರ್ಕಾರ ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯಲು ಮುಂದಾಗಿದೆ. ಒಂದು ದೇಶ ಒಂದು ಕಾನೂನು ಎನ್ನುತ್ತಲೇ ಸರ್ಕಾರ ಎರಡು ಕಾನೂನು ಮಾಡಲು ಮುಂದಾಗಿದೆ. ಕೇಂದ್ರ ಸರ್ಕಾರದ ಈ ತಿದ್ದುಪಡಿ ದೇಶದ ನೈತಿಕ, ಸಾಂವಿಧಾನಿಕ ಹಾಗೂ ಜಾತ್ಯಾತೀತ ಪರಂಪರೆಗೆ ವಿರುದ್ಧವಾಗಿದೆ. ಪೌರತ್ವ ಮಸೂದೆ ಧಾರ್ಮಿಕ ನೆಲೆಯ ತಾರತಮ್ಯವಾಗಿದ್ದು, ನಮ್ಮ ಸಂವಿಧಾನ ಪರಿಚ್ಛೇದ 14 ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಮುಸ್ಲೀಂ ಮುಖಂಡರು ಆರೋಪಿಸಿದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ, ಕಳೆದ 2014 ರ ಲೋಕಸಭೆ ಚುನಾವಣೆಯಲ್ಲಿ ದೇಶದ ಜನತೆಗೆ ಸುಳ್ಳು ಭರವಸೆಗಳು ನೀಡುವ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಿಂದ ಇದೀಗ ದೇಶದಲ್ಲಿ ಶಾಂತಿ ಕದಡುವ ಸ್ಥಿತಿ ನಿಮಾಣವಾಗಿದೆ ಎಂದರು.
ಯುವಕರಿಗೆ ಉದ್ಯೋಗಸೃಷ್ಟಿ, ವಿದೇಶದಲ್ಲಿರುವ ಕಪ್ಪುಹಣ ತರುವುದು ಸೇರಿದಂತೆ ದೇಶದ ಆರ್ಥಿಕ ಸ್ಥಿತಿ ಬದಲಾವಣೆ ಮಾಡುತ್ತೇವೆ ಎಂದು ಹೇಳಿದ್ದ ಯಾವುದೇ ಭರವಸೆಗಳು ಈಡೇರಲಿಲ್ಲ. ಬದಲಿಗೆ ದೇಶದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡಲು ಮುಂದಾಗಿದ್ದಾರೆ.
ಕೇಂದ್ರ ಸರ್ಕಾರ ಸಹ ಪೌರತ್ವ ತಿದ್ದುಪಡಿ ಮಸೂದೆ ಮತ್ತು ಪೌರತ್ವ ನೋಂದಣಿ ಪ್ರಕ್ರಿಯೆಯನ್ನು ಕೈಬಿಡುವವರೆಗೂ ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಲು ಮುಂದಾಗಬೇಕು ಎಂದರು.
ಜಾಮಿಯಾ ಮಸೀದಿ ಸಮಿತಿ ಅಧ್ಯಕ್ಷ ತಾಜ್‌ಪಾಷ, ಕಾರ್ಯದರ್ಶಿ ಹೈದರ್‌ವಲಿ, ಮದೀನ ಮಸೀದಿಯ ನಿಸಾರ್, ಅಜೀಜ್‌ಸಾಬ್, ಅಮೀರಿಯಾ ಮಸೀದಿಯ ಬಾಬಾಜಾನ್, ದಸಂಸ ಸಂಚಾಲಕರಾದ ಎನ್.ಎ.ವೆಂಕಟೇಶ್, ಟಿ.ವಿ.ಚಲಪತಿ, ಯೂನಿಟಿ ಸಿಲ್‌ಸಿಲಾ ಫೌಂಡೇಶನ್ ಅಧ್ಯಕ್ಷ ಮೊಹಮ್ಮದ್ ಅಸದ್, ಮೈನಾರಿಟಿ ಸೆಲ್ ಅಧ್ಯಕ್ಷ ಅಂಜದ್, ಸೈದು ಹಾಜೀಸಾಬ್, ಕಬೀರ್ ಅಹಮ್ಮದ್, ಟಿಪ್ಪು ಮೌಲ ಹಾಜರಿದ್ದರು.
ಪೇಜಾವರ ಶ್ರೀ ವಿಶ್ವೇಶ್ವತೀರ್ಥ ಶ್ರೀಪಾದರಿಗೆ ನುಡಿ ನಮನ
ಉಡುಪಿಯ ಪೇಜಾವರ ಮಠಾಧೀಶರಾದ ವಿಶ್ವೇಶ್ವತೀರ್ಥ ಶ್ರೀಪಾದರು ಇತ್ತೀಚಿಗೆ ಕೃಷ್ಣಕ್ಯರಾಗಿದ್ದಕ್ಕೆ ತಾಲ್ಲೂಕು ಬ್ರಾಹ್ಮಣ ಸಭಾ ವತಿಯಿಂದ ಗುರುವಾರ ಸಂಜೆ ನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ನುಡಿ ನಮನವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಘವೇಂದ್ರ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ವಾಸುದೇವರಾವ್ ಮಾತನಾಡಿ, ಶ್ರೀಗಳು ಶಿಡ್ಲಘಟ್ಟದ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನದ ಶಂಕುಸ್ಥಾಪನೆ ಮಾಡಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು ಹಾಗೂ ಹಿಂದೂ ಧರ್ಮದ ಸಾವಿರಾರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಧರ್ಮದ ಪ್ರಚಾರದಲ್ಲಿ ತೊಡಗಿ ಮಾರ್ಗದರ್ಶಕರಾಗಿದ್ದರು ಎಂದರು.
“ವಿಶ್ವೇಶ್ವತೀರ್ಥ ಶ್ರೀಪಾದರು ಸುಮಾರು 80 ವರ್ಷಗಳ ಕಾಲ ಸೇವೆ ಸಲ್ಲಿಸಿ, 5 ಪರ್ಯಾಯಗಳನ್ನು ವಿಜೃಂಭಣೆಯಿಂದ ಆಚರಿಸಿದರು. ದೇಶದ ರಾಜಕೀಯ ನೇತಾರರಿಗೆ, ವಿವಿದ ಕ್ಷೇತ್ರದ ಗಣ್ಯರಿಗೆ ಮಾರ್ಗ ದರ್ಶಕರಾಗಿದ್ದರು. ನಮ್ಮ ಹಿಂದೂ ಧರ್ಮಕ್ಕೆ ತೊಂದರೆಗಳು ಎದುರಾದ ಸಂದರ್ಭದಲ್ಲಿ ಅವರು ಮಾರ್ಗದರ್ಶನ ಮಾಡಿ ನಾಯಕತ್ವ ವಹಿಸುತ್ತಿದ್ದರು” ಎಂದು ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ನ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕು ಭ್ರಾಹ್ಮಣ ಮಹಾಸಭಾ ಅದ್ಯಕ್ಷ ಎ.ಎಸ್. ರವಿ ಮಾತನಾಡಿ ಶ್ರೀಗಳ ವೈಚಾರಿಕತೆ ಮತ್ತು ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳನ್ನು ಸ್ಮರಿಸಿದರು,ಕೃಷ್ಣಕ್ಯರಾದ ಶ್ರೀಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.
ಶಂರಸೇವಾ ಟ್ರಸ್ಟ್ ನ ಅಧ್ಯಕ್ಷ ಶ್ರೀನಿವಾಸಮೂರ್ತಿ, ಬಿ.ಆರ್.ನಟರಾಜ್, ವಿ.ಕೃಷ್ಣ, ಎ.ಎಸ್.ಶಂಕರರಾವ್, ಶಶಿಕಾಂತ್, ಮಂಜುನಾಥ್, ವೈಶಾಕ್, ನಾಗೇಂದ್ರ, ಉದಯ್, ನರಸಿಂಹಮೂರ್ತಿ, ಮಧುಸೂದನ್, ಪಿ.ಶ್ರೀಕಾಂತ್, ರಮೇಶ್ ಭಾಯಿರಿ, ವೆಂಕಟೇಶ, ಶಂಕರ್, ವೇಬ್ರಶ್ರೀ ಸತ್ಯನಾರಾಯಣ ಚಾರ್, ವೇಬ್ರಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ, ಶಂಕರ್, ಕೆಂಪಣ್ಣ, ಹರೀಶ್ ಹಾಜರಿದ್ದರು.

