ತಾಲ್ಲೂಕಿನ ಪುರಾಣ ಪ್ರಸಿದ್ಧ ತಲಕಾಯಲಬೆಟ್ಟದ ಶ್ರೀಭೂನೀಳಾ ಸಮೇತ ವೆಂಕಟರಮಣಸ್ವಾಮಿಯ ಬ್ರಹ್ಮರಥೋತ್ಸವವನ್ನು ಭಾನುವಾರ ವಿಜೃಂಭಣೆಂದ ನೆರವೇರಿಸಲಾತು.
ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.
ಶಿಡ್ಲಘಟ್ಟ ನಗರದ ಉತ್ತರ ದಿಕ್ಕಿನಲ್ಲಿ ನೆಲೆಸಿರುವ ತಲಕಾಯಲಬೆಟ್ಟದ ವೆಂಕಟರಮಣಸ್ವಾಮಿಗೆ ಬ್ರಹ್ಮರಥೋತ್ಸವ ಅಂಗವಾಗಿ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜೆ ನೆರವೇರಿಸಿ ತೀರ್ಥ ಪ್ರಸಾದ ವಿನಿಯೋಗಿಸಲಾತು.
ಸಪ್ತ ಬೆಟ್ಟಗಳ ಸಾಲಿನಲ್ಲಿ, ಸಸ್ಯ ಸಂಪತ್ತಿನ ರಾಶಿ ನಡುವೆ ನೆಲೆನಿಂತ, ಇತಿಹಾಸದ ಪುಟಗಳಲ್ಲಿ ಅಚ್ಚಳಿಯದಂತ ಛಾಪು ಮೂಡಿಸಿದ ವೆಂಕಟರಮಣಸ್ವಾಮಿಯ ದೇವಾಲಯದಲ್ಲಿ ರಥೋತ್ಸವದ ಅಂಗವಾಗಿ ಕಳೆದ ಒಂದು ವಾರದಿಂದಲೂ ನಾನಾ ಹೋಮ, ಹವನ, ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಒಂದೊಂದು ದಿನವೂ ಒಂದೊಂದು ರೀತಿಯಲ್ಲಿ ದೇವರನ್ನು ಅಲಂಕರಿಸಿ ಪೂಜಿಸಲಾಗಿತ್ತು.
ಬ್ರಹ್ಮರಥೋತ್ಸವದ ಅಂಗವಾಗಿ ಹೂವುಗಳಿಂದ ಅಲಂಕರಿಸಿದ್ದ ರಥದಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾತು.
ರಥದ ಹಗ್ಗ ಹಿಡಿದೆಳೆದ ಭಕ್ತರು ನಮೋ ನಮೋ ಎಂದು ದೇವರ ಸ್ಮರಣೆ ಮಾಡಿದರಲ್ಲದೆ ದವನದೊಂದಿಗೆ ಬಾಳೆ ಹಣ್ಣನ್ನು ತೇರಿನ ಕಳಶಕ್ಕೆ ಎಸೆದು ತಮ್ಮ ಇಷ್ಠಾರ್ಥಗಳನ್ನು ಈಡೇರಿಸುವಂತೆ ಭಗವಂತನಲ್ಲಿ ಪ್ರಾರ್ಥಿಸಿದರು.
ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ರಥೋತ್ಸವ ಕಾರ್ಯಕ್ರಮದಲ್ಲಿ ದೇವಾಲಯದ ವ್ಯವಸ್ಥಾಪನ ಸ”ತಿ, ದೇವಾಲಯದ ಅಭಿವೃದ್ಧಿ ಸಮಿತಿ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳ ಗ್ರಾಮಸ್ಥರು ದೇವರ ಕಾರ್ಯಗಳಲ್ಲಿ ಕೈ ಜೋಡಿಸಿದ್ದರು.
ಪುರಾಣ ಪ್ರಸಿದ್ಧ ತಲಕಾಯಲಬೆಟ್ಟ ಶ್ರೀಭೂನೀಳಾ ಸಮೇತ ವೆಂಕಟರಮಣಸ್ವಾಯ ಬ್ರಹ್ಮರಥೋತ್ಸವ
ಪವಾಡ ರಹಸ್ಯ ಬಯಲು ಕಾರ್ಯಕ್ರಮ
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶುಕ್ರವಾರ ಸುಂದರಲಾಲ್ ಬಹುಗುಣ ಇಕೋಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಪವಾಡಭಂಜಕ ಡಾ.ಹುಲಿಕಲ್ ಕೆ.ನಟರಾಜು ಮಾತನಾಡಿದರು.
ನಿತ್ಯಜೀವನದಲ್ಲಿ ಹಾಸುಹೊಕ್ಕಾಗಿರುವ ಮೂಡನಂಬಿಕೆಗಳ ಹಿಂದಿರುವ ವೈಜ್ಞಾನಿಕ ಸತ್ಯಗಳ ಅರಿವನ್ನು ವಿದ್ಯಾರ್ಥಿ ದಿಸೆಯಿಂದ ಮೂಡಿಸುವ ಮೂಲಕ ಮಕ್ಕಳಲ್ಲಿ ವಿಜ್ಞಾನದ ಬೆಳಕು ಚೆಲ್ಲಬೇಕು ಎಂದು ಅವರು ತಿಳಿಸಿದರು.
ಮೌಡ್ಯಮುಕ್ತ ಸಮಾಜದ ನಿರ್ಮಾಣ ಇಂದಿನ ಅನಿವಾರ್ಯವಾಗಿದ್ದು, ವಿದ್ಯಾರ್ಥಿದಿಸೆಯಿಂದಲೇ ವೈಜ್ಞಾನಿಕ ಸತ್ಯಾಸತ್ಯತೆಗಳನ್ನು ಅರಿಯಲು ಮಾರ್ಗದರ್ಶನ ನೀಡಬೇಕು. ಪರಿಸರನಾಶದ ಬಗ್ಗೆ ಜಾಗೃತಿಮೂಡಿಸಿ ಮರಗಳನ್ನು ಹೆಚ್ಚೆಚ್ಚು ಬೆಳೆಸುವಂತಾಗಬೇಕು. ಮೋಸಹೋಗುವವರು ಇರುವವರೆಗೂ ಮೋಸಮಾಡುವ ಜನರಿರುತ್ತಾರೆಂಬ ಸತ್ಯವನ್ನು ಅರಿಯಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಜೆ.ಎನ್.ನಾಗರಾಜು ಮಾತನಾಡಿ, ದೇವರು, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅಮಾನವೀಯ ಆಚರಣೆಗಳಿಗೆ ಕಡಿವಾಣ ಬೀಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ಸಮಾಜದಲ್ಲಿ ನಡೆಯುವ ಮೂಢನಂಬಿಕೆ ಹಾಗು ಪವಾಡಗಳ ಹಿಂದಿನ ರಹಸ್ಯಗಳನ್ನು ಬಯಲುಮಾಡಿ ಜಾಗೃತಿ ಮೂಡಿಸಿದ ಹುಲಿಕಲ್ ನಟರಾಜು ಅವರನ್ನು ಸನ್ಮಾನಿಸಲಾಯಿತು.
ಅಕ್ಷರದಾಸೋಹ ಸಹಾಯಕನಿರ್ದೇಶಕ ಆಂಜನೇಯ, ಬಿಜೆಪಿ ಮುಖಂಡ ಶ್ರೀನಿವಾಸ್, ಸುಂದರಲಾಲ್ ಬಹುಗುಣ ಇಕೋಕ್ಲಬ್ ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ, ಎಸ್‌ಡಿಎಂಸಿ ಅಧ್ಯಕ್ಷ ಎಂ.ಶಂಕರಪ್ಪ ಉಪಾಧ್ಯಕ್ಷ ಜಗದೀಶ್, ಸದಸ್ಯೆ ವಿನುತಾ, ಗ್ರಾಮ ಪಂಚಾಯಿತಿ ಸದಸ್ಯ ಶಿವಶಂಕರಪ್ಪ, ಎಂಪಿಸಿಎಸ್ ಅಧ್ಯಕ್ಷ ಮಂಜುನಾಥ್ ಹಾಜರಿದ್ದರು.
ನಿಧನ ವಾರ್ತೆ – ಬಿ.ಕೆ.ಸತೀಶ್ ಕುಮಾರ
ಶಿಡ್ಲಘಟ್ಟ ತಾಲ್ಲೂಕಿನ ಔಷಧಿ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಹಾಗೂ ನಗರದ ಕುಮಾರ್ ಮೆಡಿಕಲ್ಸ್ ಮಾಲೀಕ ಬಿ.ಕೆ.ಸತೀಶ್ ಕುಮಾರ(58) ಶನಿವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು. ಪತ್ನಿ, ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಸೇರಿದಂತೆ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯನ್ನು ಶನಿವಾರ ಮಧ್ಯಹ್ನ ಹಿಂದು ರುದ್ರಭೂಮಿಯಲ್ಲಿ ನೆರವೇರಿಸಲಾಯಿತು. ತಾಲ್ಲೂಕಿನ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು, ತಾಲ್ಲುಕು ಬಲಿಜ ಸಂಘದ ಸದಸ್ಯರು ಮತ್ತಿತರರು ಮೃತರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.
“ಪಾಪು-ಬಾಪು” ನಾಟಕದ ಮೂಲಕ ಮಹಾತ್ಮರ ಸಂದೇಶ
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜೀವನದ ಪುಟಗಳ ಆಯ್ದ ಭಾಗವನ್ನು ವಿಭಿನ್ನ ರೀತಿಯಲ್ಲಿ ಕಟ್ಟಿಕೊಡುವ ಮೂಲಕ “ಪಾಪು-ಬಾಪು” ನಾಟಕ ಪ್ರೇಕ್ಷಕರ ಮನಗೆದ್ದಿತು.
ನಗರದ ಕೋಟೆ ವೃತ್ತದಲ್ಲಿರುವ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಿವಮೊಗ್ಗ ರಂಗಾಯಣ ತಂಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ “ಪಾಪು-ಬಾಪು” ನಾಟಕವು ಶ್ರೀಪಾದ್ ಭಟ್ ನಿರ್ದೇಶಕದಲ್ಲಿ ಗಾಂಧಿ-150 ಕಲಾವಿದರ ತಂಡದ ಸಾರಥ್ಯದಲ್ಲಿ ವಿಭಿನ್ನವಾಗಿ ಮೂಡಿಬಂದಿತು. ಬೊಳುವಾರು ಮಹಮದ್ ಕುಂಞ ಅವರ “ಪಾಪು ಗಾಂಧಿ ಗಾಂಧಿ ಬಾಪು ಆದ ಕಥೆ” ಕೃತಿ ಆಧರಿಸಿದ “ಪಾಪು ಬಾಪು” ನಾಟಕದ ಪ್ರತಿ ಪಾತ್ರಗಳು ಗಾಂಧೀಜಿ ಅವರ ಜೀವನ ಚಿತ್ರಣದ ದರ್ಶನ ನೀಡುತ್ತಾ, ಗಾಂಧಿ ದೇವಮಾನವರಲ್ಲ, ಎಲ್ಲರಂತೆಯೇ ಹುಟ್ಟಿ, ಎಲ್ಲರಂತೆಯೇ ಬೆಳೆದ ಶ್ರೀಸಾಮಾನ್ಯರೇ ಆಗಿದ್ದವರು ಎಂಬುದನ್ನು ತಿಳಿಸಿತು.
ಸತ್ಯ ಹರಿಶ್ಚದ್ರ ನಾಟಕ ಗಾಂಧಿ ಅವರಲ್ಲಿ ನಡೆ-ನುಡಿ ಬದಲಾವಣೆ ಮತ್ತು ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಲು ಪ್ರೇರಣೆಯಾಯಿತು. ಶಾಂತಿ-ಸಮಾನತೆಗಾಗಿ ಹಾತೊರೆಯುತ್ತಿದ್ದ ಗಾಂಧಿ ಮನಸ್ಸಿಯಲ್ಲಿ ಸುಳ್ಳು ಮತ್ತು ಅನ್ಯಾಯದ ವಿರುದ್ಧ ಎದೆಗುಂದದೆ ಹೋರಾಟ ಮಾಡುವ ಗುಣಗಳಿದ್ದವು. ಬಾಲ್ಯದಿಂದ ಮುಪ್ಪಿನವರಿಗೆಗೂ ಜೀವಿಸಿದ ಗಾಂಧಿ ನಮ್ಮ ನಡುವೆಯೇ ಮಹಾತ್ಮರಾಗಿ ರೂಪಗೊಂಡರು ಎಂಬ ಅಂಶಗಳನ್ನು ನಾಟಕ ಸಹಜವಾಗಿ ನಿರೂಪಿಸಿತು.
ಒಂದೂವರೆ ತಾಸು ನಡೆದ ಈ ರಂಗಪ್ರಯೋಗದಲ್ಲಿ ಗಾಂಧಿ-150 ಕಲಾವಿದರ ತಂಡ ತಮ್ಮ ಪಾತ್ರಕ್ಕೆ ಅಚ್ಚುಕಟ್ಟಾಗಿ ನ್ಯಾಯ ಒದಗಿಸಿತು. ನಾಟಕದಲ್ಲಿ ಎಸ್.ಎಂ.ಮಹದೇವಸ್ವಾಮಿ, ಪೂರ್ಣಿಮ ಭೈ ಗಬ್ಬೂರು, ಅಶ್ವಿನಿ ಪ್ರಸಾದ್, ಎ.ಎನ್.ವಿದ್ಯಾರಾಣಿ, ಆರ್.ದಿಲೀಪ್ ಕುಮಾರ್, ಆರ್.ಸ್ವರೂಪ, ಎಂ.ನಂದೀಶ, ಜಗದೀಶ ಕಟ್ಟಿಮನಿ, ಬಿ.ರಂಜಿತ್ ಕುಮಾರ್, ಎ.ವೆಂಕಟೇಶ್, ಲಕ್ಷ್ಮಣ ರೊಟ್ಟಿ, ಸುಮನರಾಜ್ ವೈ ಹಿಮ್ಮಡಿ, ಮಂಜುನಾಥ ಕಠಾರಿ, ಬಿ.ಕೆ.ಮಹಾಬಲೇಶ್ವರ, ಎಂ.ಗಣೇಶ, ಜಂಗಮಕೋಟೆಯ ತಿಲಕ್ ರಂಗರೂಪಕವನ್ನು ಕಟ್ಟಿಕೊಟ್ಟರು. ಗಾಂಧಿ ರಂಗಪಯಣದ ಜತೆಗೆ ಪ್ರೇಕ್ಷಕರ ಪ್ರೀತಿಯ ಸಹಯೋಗ ನಾಟಕ ಪ್ರದರ್ಶನದುದ್ದಕ್ಕೂ ಎದ್ದು ಕಾಣುತ್ತಿತ್ತು.
ಪಾಪು-ಬಾಪು ನಾಟಕ ನೋಡುಗರನ್ನು ಅನನ್ಯ ಭಾವದೆಡೆಗೆ ಕರೆದುಕೊಂಡು ಹೋಗುತ್ತದೆ. ಜನ ಸಾಮಾನ್ಯರ ದಿನನಿತ್ಯದ ಗೋಳಾಡದ ಕಥೆ, ಸಾಮಾನ್ಯ ಗಾಂಧಿ ಮಹಾತ್ಮರಾದ ಚಿತ್ರಣವನ್ನ ನಾಟಕದ ಮೂಲಕ ಅತ್ಯುತ್ತಮವಾಗಿ ಮಕ್ಕಳಿಗೆ ಮತ್ತು ಜನಸಮುದಾಯಕ್ಕೆ ನಾಟಕದ ಮೂಲಕ ತಲುಪಿಸಿದ್ದಾರೆ. ಗಾಂಧೀಜಿ ಪ್ರತಿಪಾದಿಸಿದ ಸತ್ಯ,ಶಾಂತಿ ಮತ್ತು ಅಹಿಂಸೆಯನ್ನು ಅಪ್ಪಿಕೊಳ್ಳಬೇಕು. ಕೋಮು ಸೌಹಾರ್ದತೆಯನ್ನು ಒಪ್ಪಿಕೊಳ್ಳಬೇಕು ಶಿಕ್ಷಕಿ ಪಿ.ಮಂಜುಳಾ ಕಲ್ಯಾಣ್ ಕುಮಾರ್ ಹೇಳಿದರು.
ಬೆಳ್ಳೂಟಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆಗೆ ಗುದ್ದಲಿಪೂಜೆ
ತಾಲ್ಲೂಕಿನ ಬೆಳ್ಳೂಟಿ ಗ್ರಾಮದಲ್ಲಿ ಶುಕ್ರವಾರ ಬಸ್ ತಂಗುದಾಣದ ಉದ್ಘಾಟನೆ, ಕಾಂಕ್ರೀಟ್ ರಸ್ತೆಗೆ ಗುದ್ದಲಿಪೂಜೆ, ಗ್ರಾಮದ ಸ್ವಚ್ಛತೆಕಾರ್ಯ ಹಾಗೂ ಹೊಸವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಸಾಮಾಜಿಕವಾಗಿ, ಆರ್ಥಿಕವಾಗಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಗಾಂಧೀಜಿ ಅವರ ಆಶಯದಂತೆ ಸುಭದ್ರ ಗ್ರಾಮಗಳನ್ನು ಕಟ್ಟಬೇಕಿದೆ. ಈ ನಿಟ್ಟಿನಲ್ಲಿ ಬೆಳ್ಳೂಟಿಯಲ್ಲಿ ಮೊದಲ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.
ಪ್ರತಿಯೊಂದು ಗ್ರಾಮದಲ್ಲೂ ಗ್ರಾಮದ ಏಳಿಗೆಯನ್ನು ಬಯಸುವ ಯುವಪಡೆ ಮುಂದೆಬರಬೇಕು. ರಾಜಕೀಯ, ಧರ್ಮ, ಜಾತಿ, ಮೇಲು ಕೀಳೆಂಬ ಭಾವನೆಗಳಲ್ಲು ಪಕ್ಕಕ್ಕಿಟ್ಟು ಗ್ರಾಮದ ಅಭಿವೃದ್ಧಿಗೆ ಹಾಗೂ ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ಶ್ರಮಿಸಬೇಕು. ಈ ಕೆಲಸದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಪಾತ್ರವೂ ಸಾಕಷ್ಟಿದೆ. ಈ ಆಧುನಿಕ ಯುಗದಲ್ಲೂ ಸ್ವಚ್ಛತೆಯನ್ನು ಕಡೆಗಣಿಸಿದ್ದಕ್ಕೆ ಚೀನಾ ತೆರುತ್ತಿರುವೆ ಬೆಲೆ ನಮಗೆಲ್ಲ ಪಾಠವಾಗಿದೆ. ಎಚ್.ಎನ್ ವ್ಯಾಲಿ ನೀರು ನಮ್ಮ ತಾಲ್ಲೂಕಿನ ಕೆರೆಗಳಿಗೂ ಬರಲಿದೆ. ರೈತರು ಕಡಿಮೆ ನೀರಿನಿಂದ ಬೆಳೆಯಬಹುದಾದ ಬೆಳೆಗಳನ್ನು ವೈಜ್ಞಾನಿಕವಾಗಿ ಬೆಳೆಯಬೇಕಿದೆ ಎಂದರು.
ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೆಳ್ಳೂಟಿ ಸಂತೋಷ್ ಮಾತನಾಡಿ, ಸ್ವಚ್ಛತೆಯ ವಿಷಯವನ್ನು ಹಾಸ್ಯಾಸ್ಪದವಾಗಿ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡತನ ಪ್ರತಿಯೊಬ್ಬರಲ್ಲೂ ಇರುತ್ತದೆ. ಅದು ಸಾಮಾಜವನ್ನು ಕುಟುಂಬದ ಭಾಗವಾಗಿ ನೋಡುವ ಮನಸ್ಸಿನ ಬಡತನವಾಗಬಾರದು. ಗ್ರಾಮದ ರಸ್ತೆ, ಡೈರಿ ಆವರಣ, ಶಾಲಾ ಆವರಣ, ಮನೆಯ ಬಳಿಯ ಚರಂಡಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಯಾರೋ ಗೆದ್ದ ಗ್ರಾಮ ಪಂಚಾಯಿತಿ ಮೆಂಬರು ಬಂದು ಸ್ವಚ್ಛಗೊಳಿಸಲಿ ಎಂಬ ಮನೋಭಾವ ಬಿಡಬೇಕು. ಎಲ್ಲರ ಸಹಭಾಗಿತ್ವದಲ್ಲಿ ಮಾತ್ರ ಸ್ವಚ್ಛ ಸುಂದರ ಗ್ರಾಮೀಣ ಪರಿಸರ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೆಳ್ಳೂಟಿ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು. ಈಚೆಗೆ ಆನೂರು ಗ್ರಾಮ ಪಂಚಾಯಿತಿಗೆ ಸರ್ಕಾರದಿಂದ ಸ್ವಚ್ಛತೆಗಾಗಿ ಬಂದ ಪ್ರಶಸ್ತಿ ಹಣದಲ್ಲಿ ಗ್ರಾಮಗಳ ಸ್ವಚ್ಛತೆಗಾಗಿ ಟ್ರಾಕ್ಟರನ್ನು ಖರೀದಿಸಿದ್ದು, ಅದರ ಲೋಕಾರ್ಪಣೆಯನ್ನು ಸಹ ಮಾಡಲಾಯಿತು.
ಹಾಪ್ ಕಾಮ್ಸ್ ಅಧ್ಯಕ್ಷ ಚಂದ್ರೇಗೌಡ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ಆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ, ಸದಸ್ಯರಾದ ಗಂಗರೆಡ್ಡಿ, ವರಲಕ್ಷ್ಮಿ ಸಂತೋಷ್, ಪಿಡಿಒ ಅರುಣಕುಮಾರಿ, ಎ.ಪಿ.ಎಂ.ಸಿ ಉಪಾಧ್ಯಕ್ಷ ವೆಂಕಟೇಶ್, ಶ್ರೀನಿವಾಸ್ ಹಾಜರಿದ್ದರು.
ಸುಂಡರಹಳ್ಳಿ ಇಂದಿರಾ ಗಾಂಧಿ ವಸತಿ ಶಾಲೆಗೆ ಜಿಲ್ಲಾಧಿಕಾರಿಗಳ ಭೇಟಿ
ತಾಲ್ಲೂಕಿನ ಸುಂಡ್ರಹಳ್ಳಿಯಲ್ಲಿರುವ ಇಂದಿರಾ ಗಾಂಧಿ ವಸತಿ ಶಾಲೆಗೆ ಬುಧವಾರ ಜಿಲ್ಲಾಧಿಕಾರಿ ಆರ್.ಲತಾ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು.
ತಾಲ್ಲೂಕಿನ ಸುಂಡರಹಳ್ಳಿ ಗ್ರಾಮದಲ್ಲಿ ಸುಮಾರು 10 ಎಕರೆ ವಿಶ್ತಿರಣದಲ್ಲಿ ನಿರ್ಮಿಸಿರುವ ವಸತಿ ಶಾಲೆಯಲ್ಲಿ ಸುಮಾರು 300 ವಿದ್ಯಾರ್ಥಿಗಳು ಇದ್ದಾರೆ. ಜಿಲ್ಲಾಧಿಕಾರಿ ಆರ್.ಲತಾ ಅವರು ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿ ಊಟ, ವಸತಿ, ಸೌಕರ್ಯ ಬೋಧನೆ ಸೇರಿದಂತೆ ಸರ್ಕಾರದಿಂದ ಮಕ್ಕಳಿಗೆ ಸಿಗಬೇಕಾದ ಯೋಜನೆಗಳು, ಪೌಷ್ಠಿಕ ಆಹಾರ ಹಾಗೂ ಮೂಲಭೂತ ಸೌಕರ್ಯಗಳು ಮಕ್ಕಳಿಗೆ ತಲುಪುತ್ತಿದೆಯೇ ಎಂದು ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಿಟ್ಟ ಶಾಲಾ ಕೊಠಡಿಗಳು, ಊಟದ ಕೊಠಡಿ, ಅಡಿಗೆ ಮನೆ, ಗೋಧಾಮ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಇಲ್ಲಿನ ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕರಿಂದ ಶಿಕ್ಷಣ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳ ಚಟುವಟಿಕೆಯ ಮಾತುಗಳನ್ನು ಕೇಳಿ, ಶಿಕ್ಷಣಕ್ಕೆ ಬೇಕಾದ ಮೂಲ್ಲಭೂತ ಸೌಕರ್ಯಗಳು ಹಾಗೂ ಸ್ವಚ್ಛ ಪರಿಸರವನ್ನು ಕಂಡ ಜಿಲ್ಲಾಧಿಕಾರಿಗಳು ಸಂತಸ ವ್ಯಕ್ತಪಡಿಸಿದರು.
ವಸತಿ ಶಾಲೆಯಲ್ಲಿ ನೀರಿ ಸಮಸ್ಯೆ ಇದೆ ಎಂದು ತಿಳಿಸಿದಾಗ ಕೂಡಲೇ ಫೋನ್ ಮುಂಖಾತರ ಕರ್ನಾಟಕ ವಸತಿ ಶಿಕ್ಷಣ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರನ್ನು ಸಂಪರ್ಕಿಸಿ ಕೂಡಲೇ ವಸತಿ ನಿಲಯಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ತಿಳಿಸಿದರು.
ಈಗಾಗಲೇ ವಸತಿ ಶಾಲೆಗೆ ಒಂದು ಕೊಳವೆ ಬಾವಿ ಮಂಜೂರಾಗಿದ್ದು, ಅತಿ ಶೀಘ್ರದಲ್ಲಿ ಕೊಳವೆ ಬಾವಿ ಕೊರೆಸಿ ನೀರಿನ ಸಮಸ್ಯೆ ಬಗೆಹರಿಸಿ ಸೌಕರ್ಯ ಕಲ್ಪಿಸುವುದಾಗಿ ತಿಳಿಸಿದರು.
ಉಪ ವಿಭಾಗಾಧಿಕಾರಿ ರಘುನಂದನ್, ತಹಶೀಲ್ದಾರ್ ಎಂ.ದಯಾನಂದ್, ಮುಖ್ಯಶಿಕ್ಷಕರಾದ ಆರ್.ಮೂರ್ತಪ್ಪ, ವಿಜಯಶ್ರೀ, ಶಿಕ್ಷಕರಾದ ವೆಂಕಟಸ್ವಾಮಿ, ಆನಂದ್, ನರಸಿಂಹಮೂರ್ತಿ, ಗಂಗಾಧರ್, ಬಲರಾಮ್, ರಾಮು, ಸರಳ, ಪ್ರಿಯಾಂಕ ಹಾಜರಿದ್ದರು.
ನೀಲಗಿರಿ ಮುಕ್ತವನ್ನಾಗಿ ಮಾಡಲು ಪಣತೊಟ್ಟ ತಾಲ್ಲೂಕು ಆಡಳಿತ
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನೀಲಗಿರಿ ಮುಕ್ತ ತಾಲ್ಲೂಕು ಮಾಡುವ ನಿಟ್ಟಿನಲ್ಲಿ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಪಿಡಿಒಗಳೊಂದಿಗಿನ ಸಭೆಯಲ್ಲಿ ತಹಶಿಲ್ದಾರ್ ಎಂ.ದಯಾನಂದ್ ಮಾತನಾಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಯನ್ನು ನೀಲಗಿರಿ ಮುಕ್ತವನ್ನಾಗಿ ಮಾಡಲು ಸಮಗ್ರ ಯೊಜನೆಯನ್ನು ಸಿದ್ಧಪಡಿಸಲಾಗಿದೆ. ಅದರಂತೆ ಪ್ರತಿ ತಾಲ್ಲೂಕಿನ ತಹಶಿಲ್ದಾರ್, ಕಾರ್ಯನಿರ್ವಾಹಣಾಧಿಕಾರಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಸಹಯೋಗದಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ ಎಂದು ಅವರು ತಿಳಿಸಿದರು.
ಇಡುವಳಿಗಳು ಮತ್ತು ಸರ್ಕಾರಿ ಎರಡೂ ಜಾಗಗಳಲ್ಲಿ ನೀಲಗಿರಿ ಮರಗಳಿವೆ. ಇಡುವಳಿ ಅಥವಾ ಸ್ವಂತ ಜಾಗಗಳಲ್ಲಿರುವ ನೀಲಗಿರಿ ಮರಗಳನ್ನು ತೆರವುಗೊಳಿಸಲು ಒಂದು ತಿಂಗಳ ಕಾಲಾವಕಾಶವನ್ನು ಜಿಲ್ಲಾಧಿಕಾರಿ ಅವರು ನೀಡಿದ್ದಾರೆ. ಫೆಬ್ರುವರಿ ತಿಂಗಳು ಮುಗಿಯುವಷ್ಟರಲ್ಲಿ ರೈತರು ತಮ್ಮ ಜಾಗಗಳಿಂದ ತೆರವುಗೊಳಿಸಬೇಕು. ಇದಕ್ಕೆ ಅರಣ್ಯ ಇಲಾಖೆಯಿಂದ ಯಾವುದೇ ನಿರ್ಬಂಧವಾಗಲೀ, ಅಡೆತಡೆಯಾಗಲೀ ಇರುವುದಿಲ್ಲ. ಅಕಸ್ಮಾತ್ ರೈತರು ತಮ್ಮ ಜಮೀನುಗಳಲ್ಲಿನ ನೀಲಗಿರಿ ಮರಗಳನ್ನು ತೆರವುಗೊಳಿಸದಿದ್ದರೆ ಜಿಲ್ಲಾಧಿಕಾರಿಗಳು ಅವರ ಜಮೀನನ್ನು ಆರ್.ಟಿ.ಸಿ ಯಲ್ಲಿ ಬೀಳು ಎಂದು ನಮೂದಿಸುತ್ತಾರೆ. ಆದ್ದರಿಂದ ಪರಿಸರಕ್ಕೆ ನಿಮ್ಮ ಕಾಣ್ಕೆಯನ್ನು ನೀಲಗಿರಿ ತೆರವು ಮಾಡುವ ಮೂಲಕ ನೀಡಿ ಎಂದರು.
ಸರ್ಕಾರಿ ಜಾಗಗಳಲ್ಲಿರುವ ನೀಲಗಿರಿ ಮರಗಳನ್ನು ತೆರವುಗೊಳಿಸಲು ನಾವೆಲ್ಲರೂ ಒಂದು ತಂಡವಾಗಿ ಕೆಲಸ ಮಾಡಬೇಕು. ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿಯೂ ಪಿಡಿಒಗಳು ಕಾರ್ಯತತ್ಪರರಾಗಿ ಕೆಲಸ ಮಾಡಬೇಕು. ಸ್ಥಳೀಯವಾಗಿಯೇ ಜನಪ್ರತಿನಿಧಿಗಳನ್ನು ಹಾಗೂ ಗ್ರಾಮಸ್ಥರನ್ನು ಮನವೊಲಿಸಿ ಪಿಡಿಒಗಳು ಯೋಜನೆಗಳನ್ನು ರೂಪಿಸಿ ಈ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶಿವಕುಮಾರ್, ವಲಯ ಅರಣ್ಯಾಧಿಕಾರಿ ಶ್ರೀಲಕ್ಷ್ಮಿ ಹಾಜರಿದ್ದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸ್ಥಾಪನೆಗೆ ಸ್ಥಳ ಪರಿಶೀಲನೆ
ತಾಲ್ಲೂಕಿನ ಜಂಗಮಕೋಟೆಯ ಅಮರಾವತಿ ಗ್ರಾಮದಲ್ಲಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯಕ್ಕೆ ಮಂಜೂರಾಗಿರುವ ಜಾಗಕ್ಕೆ ಬುಧವಾರ ಉಪ ಮುಖ್ಯಮಂತ್ರಿ, ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಐ.ಟಿ.ಬಿ.ಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಂಗಳೂರು ವಿಶ್ವವಿದ್ಯಾಲಯ ಸ್ಥಾಪನೆ ಮಾಡಬೇಕೆಂಬುವುದು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರ ಬಹು ದಿನಗಳ ಬೇಡಿಕೆಯಾಗಿದೆ. ಈಗಾಗಲೆ ಉತ್ತರ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕಿತ್ತು ಕಾರಣಂತರಗಳಿಂದ ಆಗಿಲ್ಲ. ಆದ್ದರಿಂದ ಶೀಘ್ರವಾಗಿ ಕಾಮಗಾರಿ ಪ್ರಾರಂಭ ಮಾಡಲು ಸ್ಥಳ ಪರಿಶೀಲನೆ ಮಾಡಲಾಗುತ್ತಿದೆ ಹಾಗೂ ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ. ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಲ್ಲೆಯ ಜನರು ಶಿಕ್ಷಣವನ್ನು ಬಲವಾಗಿ ನಂಬಿದ್ದಾರೆ. ಆದ್ದರಿಂದ ಈ ಸಮಾಜದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಶಿಕ್ಷಣವನ್ನು ನಂಬಿದ ಕಾರಣ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಬದಲಾವಣೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ವಿ.ಮುನಿಯಪ್ಪ, ಜಿಲ್ಲಾಧಿಕಾರಿ ಆರ್ ಲತಾ, ಉತ್ತರ ವಿಶ್ವವಿದ್ಯಾಲಯದ ಕುಲಪತಿ ಟಿ. ಡಿ ಕೆಂಪರಾಜು, ಉಪ ವಿಭಾಗಾಧಿಕಾರಿ ರಘುನಂದನ್, ತಹಶಿಲ್ದಾರ್ ಎಂ.ದಯಾನಂದ್ ಹಾಜರಿದ್ದರು.
ಪುರಾತನ ಪ್ರಸಿದ್ಧ ವೇಣುಗೋಪಾಲಸ್ವಾಮಿಯ ಬ್ರಹ್ಮರಥೋತ್ಸವ
ಶಿಡ್ಲಘಟ್ಟದ ಊರದೇವರೆಂದೇ ಖ್ಯಾತವಾದ ನಗರದ ಪುರಾತನ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರವೇ ನಗರದಲ್ಲಿ ಶುಭಕಾರ್ಯಗಳು ಪ್ರಾರಂಭವಾಗುವ ಸಂಪ್ರದಾಯವಿದೆ. ‘ಊರದೇವರು’ ಎಂದೇ ಪ್ರಸಿದ್ಧವಾದ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಬ್ರಹ್ಮರಥೋತ್ಸವ ಸಹಿತ ಎಲ್ಲ ಕೈಂಕರ್ಯಗಳು ಪಾಂಚರಾತ್ರಾಗಮ ಪದ್ಧತಿಯಲ್ಲಿ ಮಂಗಳವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ದೇಗುಲದಲ್ಲಿ ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ರಜಸ್ವ ನಿರೀಕ್ಷಕ ವಿಶ್ವನಾಥ್ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು. ತಮಟೆ ವಾದನ, ಮಂಗಳ ವಾದ್ಯಗಳ ಮಧ್ಯೆ ರಥವನ್ನು ಅಶೋಕ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು. ಮಹಿಳೆಯರು ತೆಂಗಿನಕಾಯಿ ಒಡೆದು, ಪೂಜೆ ಸಲ್ಲಿಸಿ, ಆರತಿ ಬೆಳಗಿದರು. ಮಯೂರ ವೃತ್ತದಲ್ಲಿ ಪಾನಕ ಮತ್ತು ಹೆಸರುಬೇಳೆ ಕೋಸಂಬರಿ ಹಂಚಲಾಯಿತು.
‘ಶಿಡ್ಲಘಟ್ಟ ದೇವರು ಹಿಂದು ಮುಂದು’ ಎಂಬ ಪ್ರಸಿದ್ಧ ನಾಣ್ಣುಡಿಗೆ ಕಾರಣ ಶ್ರೀ ವೇಣುಗೋಪಾಲಸ್ವಾಮಿ ರಥೋತ್ಸವ. ಹಿಂದೆ ನಗರದ ಅಶೋಕರಸ್ತೆಯು ಕಿರಿದಾಗಿತ್ತು. ಆ ಕಾರಣಕ್ಕೆ ದೊಡ್ಡದಾದ ದೇವರ ರಥವನ್ನು ರಸ್ತೆ ಕೊನೆಯಲ್ಲಿ ತಿರುಗಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ದೇವರನ್ನೇ ಹಿಂದು ಮುಂದಾಗಿ ತಿರುಗಿಸಿ ರಥವನ್ನು ಹಿಂಬದಿಯಿಂದ ಎಳೆದು ತರಲಾಗುತ್ತಿತ್ತು. ಹೀಗಾಗಿ ‘ಶಿಡ್ಲಘಟ್ಟದ ದೇವರು ಹಿಂದು ಮುಂದು’ ಎಂಬ ಮಾತು ಚಾಲ್ತಿಗೆ ಬಂತು.
ಶ್ರೀಕೃಷ್ಣದೇವರಾಯ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ತೆರಳುವಾಗ ಮಾರ್ಗ ಮಧ್ಯೆ ತಂಗಿದ್ದು, ತನ್ನ ಆರಾಧ್ಯ ದೈವ ಶ್ರೀ ವೇಣುಗೋಪಾಲಸ್ವಾಮಿಯನ್ನು ಪ್ರತಿಷ್ಠಾಪಿಸಿದನೆಂಬ ಪ್ರತೀತಿಯಿದೆ. ಕ್ರಿ.ಶ. 1526 ರಲ್ಲಿ ಶಿಡ್ಲಘಟ್ಟ ಸ್ಥಾಪಿಸಿದ ಅಲಸೂರಮ್ಮ ಕೂಡ ಈ ದೇವಾಲಯವನ್ನು ಅಭಿವೃದ್ಧಿಗೊಳಿಸಿರುವುದಾಗಿ ಇತಿಹಾಸ ಹೇಳುತ್ತದೆ. ತದನಂತರ ನೂರು ವರ್ಷಗಳ ತರುವಾಯ ಛತ್ರಪತಿ ಶಿವಾಜಿ ಕಾಲದಲ್ಲಿ ದೇವಾಲಯದ ಜೀರ್ಣೋದ್ಧಾರವಾಯಿತೆಂದು ಹೇಳಲಾಗುತ್ತದೆ. ಸುಮಾರು ಐದು ನೂರು ವರ್ಷಗಳಿಗೂ ಹೆಚ್ಚು ಇತಿಹಾಸವನ್ನು ಹೊಂದಿರುವ ಈ ದೇವಾಲಯದಲ್ಲಿ ಪ್ರತಿಷ್ಠಾಪನೆಯಾಗಿರುವ ಶ್ರೀ ವೇಣುಗೋಪಾಲಸ್ವಾಮಿ ಮೂರ್ತಿಯ ಎಡಭಾಗದಲ್ಲಿ ರುಕ್ಮಿಣಿ ಹಾಗೂ ಬಲಭಾಗದಲ್ಲಿ ಸತ್ಯಭಾಮೆಯ ಸುಂದರ ಮೂರ್ತಿಗಳಿವೆ.
ವೇಣುಗೋಪಾಲಸ್ವಾಮಿ ದೇಗುಲದಲ್ಲಿ ಪೂಜಾ ಕಾರ್ಯಕ್ರಮಗಳು ಒಂದು ವಾರದ ಕಾಲ ನಡೆಯಲಿದ್ದು, ನಗರದ ಎಲ್ಲ ಜಾತಿಯವರೂ ವಿವಿಧ ಕೈಂಕರ್ಯಗಳಲ್ಲಿ ಭಾಗಿಯಾಗುವುದು ವಿಶೇಷವಾಗಿದೆ.
ಅರ್ಚಕ ವೈ.ಎನ್.ದಾಶರಥಿಭಟ್ಟಾಚಾರ್ಯ, ದೇಗುಲ ಸಮಿತಿ ಸದಸ್ಯರು, ಶ್ರೀ ವೇಣುಗೋಪಾಲಸ್ವಾಮಿ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್ ಸದಸ್ಯರು ಹಾಜರಿದ್ದರು.
ಆನೆಮಡುಗು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರ ಆಯ್ಕೆ
ತಾಲ್ಲೂಕಿನ ಆನೆಮಡುಗು ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಡಾ.ಎ.ಎಂ.ಜಯರಾಮರೆಡ್ಡಿ, ಹಾಗೂ ಉಪಾಧ್ಯಕ್ಷರಾಗಿ ಚಿಕ್ಕತೇಕಹಳ್ಳಿ ಸಿ.ವೆಂಕಟೇಶಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಆವರಣದಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಎರಡನೇ ಭಾರಿಗೆ ಅಧ್ಯಕ್ಷರಾಗಿ ಡಾ.ಎ.ಎಂ.ಜಯರಾಮರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಚಿಕ್ಕತೇಕಹಳ್ಳಿ ಸಿ.ವೆಂಕಟೇಶಪ್ಪ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾದ ಕನ್ನಪ್ಪನಹಳ್ಳಿ ಕೆ.ಬೈರಾರೆಡ್ಡಿ, ಆನೇಮಡುಗು ಎ.ಎನ್.ಲಕ್ಷ್ಮೀನಾರಾಯಣ, ಪಲಿಚೇರ್ಲು ಪಿ.ವಿ.ಸೋಮಶೇಖರರೆಡ್ಡಿ, ದೊಡ್ಡತೇಕಹಳ್ಳಿ ನರಸಿಂಹಪ್ಪ, ಆನೇಮಡುಗು ಕೆ.ನರಸಿಂಹಮೂರ್ತಿ, ಸಾದಹಳ್ಳಿ ಎಲ್.ಅನಸೂಯಮ್ಮ, ಕನ್ನಪ್ಪನಹಳ್ಳಿ ಸುಶಿಲಮ್ಮ, ಆನೇಮಡುಗು ಲಕ್ಷ್ಮಯ್ಯ, ಬಿನ್ನಮಂಗಲ ನರಸಿಂಹಪ್ಪ, ಗ್ರಾ.ಪಂ ಸದಸ್ಯ ಕೆ.ಬೈರಾರೆಡ್ಡಿ, ಸಂಘದ ಮಾಜಿ ಅಧ್ಯಕ್ಷ ಗೌಡನಹಳ್ಳಿ ನರಸಪ್ಪ ಮುಖಂಡ ಕೆ.ನಾರಾಯಣಸ್ವಾಮಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವರೆಡ್ಡಿ ಈ ಸಂದರ್ಭದಲ್ಲಿ ಹಾಜರಿದ್ದರು.
“ಮಕ್ಕಳ ಹಬ್ಬದ” ಪ್ರಯುಕ್ತ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ತಾಲ್ಲೂಕಿನ ಕನ್ನಮಂಗಲದಲ್ಲಿ “ಮಕ್ಕಳ ಹಬ್ಬದ” ಪ್ರಯುಕ್ತ ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಸ್ನೇಹ ಯುವಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಸರ್ಕಾರಿ ಶಾಲೆಯ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ತಹಶೀಲ್ದಾರ್ ಎಂ.ದಯಾನಂದ್ ಮಾತನಾಡಿದರು.
ರಕ್ತದಾನದಿಂದ ಮತ್ತೊಬ್ಬರ ಪ್ರಾಣ ಉಳಿಸುವ ಜತೆಗೆ ವ್ಯಕ್ತಿ ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗಲಿದೆ. ಈಗಾಗಲೇ ಶಿಡ್ಲಘಟ್ಟ ನಗರದಲ್ಲಿ ಒಂದು ಸಾವಿರ ಯೂನಿಟ್ ಗೂ ಹೆಚ್ಚು ರಕ್ತ ಸಂಗ್ರಹಿಸುವ ಮೂಲಕ ಮಾನವೀಯತೆಯನ್ನು ಪ್ರದರ್ಶಿಸಿದ್ದೇವೆ ಎಂದು ಅವರು ತಿಳಿಸಿದರು.
ರಕ್ತದ ಅಗತ್ಯ ಉಂಟಾದಾಗ ಜಾತಿ, ಕೋಮುಗಳನ್ನು ಲೆಕ್ಕಹಾಕುವುದಿಲ್ಲ. ಅಗತ್ಯ ಇರುವವರಿಗೆ ರಕ್ತ ನೀಡಿದರೆ ಜೀವ ಉಳಿಸಿದ ಭಾಗ್ಯ ದೊರೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ರಕ್ತದಾನ ಮಾಡಲು ಮುಂದಾಗಬೇಕು. ವೈದ್ಯಕೀಯ ಚಿಕಿತ್ಸೆಗಳು ದುಬಾರಿಯಾಗುತ್ತಿರುವ ದಿನಗಳಲ್ಲಿ ಗ್ರಾಮಗಳಿಗೆ ಬಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸುವುದು ಉಪಯುಕ್ತವಾಗಿದೆ. ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
45 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ರಕ್ತದಾನಿಗಳಿಗೆ ಪ್ರಶಂಸಾಪತ್ರವನ್ನು ನೀಡಿದರು. ಗ್ರಾಮಸ್ಥರು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಚಿಕಿತ್ಸೆ ಪಡೆದರು.
ಭಾರತೀಯ ರೆಡ್ ಕ್ರಾಸ್ ಸೊಸೈಟಿ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ಮುಖ್ಯ ಶಿಕ್ಷಕ ಚೌಡರೆಡ್ಡಿ, ವೈದ್ಯರಾದ ಡಾ.ಮಂಜುನಾಥಪ್ರಸಾದ್, ಡಾ.ಇವಾನ್, ಡಾ.ಅಪರ್ಣ, ಡಾ.ನಿಪಾನ್, ಡಾ.ಸ್ನೇಹ, ಯಲಹಂಕದ ಕೃಷ್ಣದೇವರಾಯ ಡೆಂಟಲ್ ಕಾಲೇಜಿನ ವೈದ್ಯರು, ಮಂಜು ನೇತ್ರಾಲಯದ ವೈದ್ಯರು ಹಾಜರಿದ್ದರು.
ಮಡಿವಾಳ ಮಾಚಿದೇವರ ಜಯಂತ್ಯುತ್ಸವ
ನಗರದ ತಾಲ್ಲೂಕು ಕಚೇರಿ ಪಕ್ಕದಲ್ಲಿರುವ ಕಂದಾಯ ಭವನದ ಆವರಣದಲ್ಲಿ ಶನಿವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಶ್ರೀ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಹಿಂದುಳಿದ ಹಾಗೂ ಶ್ರಮಜೀವಿ ವರ್ಗದ ಸಮಾನತೆಗೆ ಸಾಮಾಜಿಕ ಕ್ರಾಂತಿ ಮಾಡಿದವರಲ್ಲಿ ಮಾಚಿದೇವ ಪ್ರಮುಖರು. ಆಧ್ಯಾತ್ಮಿಕ ಪ್ರವೃತ್ತಿಯ ಮೂಲಕ, ಜನರಲ್ಲಿ ಭಕ್ತಿಪ್ರಧಾನ ಚಿಂತನೆಗಳನ್ನು ತುಂಬಿಸಿದ ಅವರು ಮೂರು ಲಕ್ಷ ಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದಾರೆ ಎಂದು ಅವರು ತಿಳಿಸಿದರು.
ಶರಣರ ವಚನಸಾಹಿತ್ಯದ ರಕ್ಷಣೆಗಾಗಿ ಹೋರಾಡಿದ ಮಾಚಿದೇವರ ಜಯಂತಿಯನ್ನು ಎಲ್ಲೆಡೆ ಶ್ರದ್ಧೆಯಿಂದ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.
ತಹಶೀಲ್ದಾರ್ ಎಂ.ದಯಾನಂದ್ ಮಾತನಾಡಿ, ಸರ್ವರಿಗೂ ಸಮಪಾಲು -ಸಮಬಾಳು ಒದಗಿಸಲು ಬಸವ- ಮಾಚಿದೇವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು. ಶರಣರ ಅಗ್ರಗಣ್ಯ ಬಳಗದಲ್ಲಿ ‘ಮಡಿವಾಳ ಮಾಚಿದೇವ’ ಪ್ರಮುಖರು ಎಂದರು.
ಮುಖ್ಯ ಭಾಷಣಕಾರ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಎಂ.ದೇವರಾಜ್ ಮಾತನಾಡಿ, ಶರಣರ ಬಟ್ಟೆಗಳನ್ನು ಶುಚಿ ಮಾಡುವುದು ಮಾಚಿದೇವರ ಕಾಯಕ. ವೀರನಿಷ್ಠೆಯ ಶರಣನೀತ. ಶಾಸನ ಶಿಲ್ಪಗಳಲ್ಲಿಯೂ ಇವರ ಕುರಿತಾಗಿ ಮಾಹಿತಿಯಿದೆ. ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಅತಿ ಮಹತ್ವದ್ದು ಎಂದು ಮಾಚಿದೇವರ ಜೀವನದ ಘಟನೆಗಳನ್ನು, ವಚನಸಾಹಿತ್ಯವನ್ನು ವಿವರಿಸಿದರು.
ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಮುತ್ತಿನ ಪಲ್ಲಕ್ಕಿಗಳ ಮೆರವಣಿಗೆಯಲ್ಲಿ ಗಾರುಡಿಗೊಂಬೆಗಳು, ವೀರಗಾಸೆ, ತಮಟೆ ತಂಡ, ಕಳಶ ಹೊತ್ತ ಮಹಿಳೆಯರು ಭಾಗವಹಿಸಿದ್ದರು. ನಗರದ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿಯವರೆಗೂ ಮೆರವಣಿಗೆ ನಡೆಸಲಾಯಿತು. ಮಡಿವಾಳ ಜನಾಂಗದ ಸಮುದಾಯ ಭವನಕ್ಕೆ ನಿವೇಶನ ನೀಡಬೇಕೆಂದು ಕೋರಿ ಶಾಸಕರಿಗೆ ಮನವಿಯನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಸಮುದಾಯದ ಹಿರಿಯ ಮುಖಂಡರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಟ್ಟೆ ಶುಚಿಮಾಡಲು ಬಳಸುವ ಬಾನೆಯಲ್ಲಿರಿಸಿದ್ದ ಎಣ್ಣೆ ಮೊಗುವೆಯೊಂದಿಗಿನ ಪಂಜನ್ನು ಉರಿಸುವ ಮೂಲಕ ಮಾಡಲಾಯಿತು.
ರಾಜ್ಯ ಮಡಿವಾಳ ಸಂಘದ ಉಪಾಧ್ಯಕ್ಷ ಆರ್.ವಿ.ರಾಜಣ್ಣ, ಮಡಿವಾಳ ಯುವಕ ಸಂಘದ ಅಧ್ಯಕ್ಷ ಡಿ.ವಿ.ಕೃಷ್ಣಪ್ಪ, ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎನ್.ಎನ್.ಮುರಳೀಧರ, ಉಪನ್ಯಾಸಕ ಎಸ್.ಎಂ.ಕೃಷ್ಣಪ್ಪ, ರಾಮಚಂದ್ರಪ್ಪ, ಛಲಪತಿ, ಮುನಿಕೃಷ್ಣಪ್ಪ, ನಾಗರಾಜು, ಕೊರಿಯರ್ ರಾಜು, ವೆಂಕಟಸ್ವಾಮಿ, ದೇವರಾಜ್, ರಾಜಣ್ಣ ಹಾಜರಿದ್ದರು.
ಜಿಲ್ಲಾ ಮಟ್ಟದ ಯುವಜನ ಮೇಳ ಉದ್ಘಾಟನೆ
ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್ ಬಳಿಯ ಬಾಲಾಜಿ ಕಲ್ಯಾಣಮಂಟಪದಲ್ಲಿ ಶನಿವಾರ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಈಧರೆ ಕಲೆ ಮತ್ತು ಸಾಂಸ್ಕೃತಿಕ ಕೇಂದ್ರ, ಭಗತ್ ಸಿಂಗ್ ತಾಲ್ಲೂಕು ಅಥ್ಲೆಟಿಕ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 2019-20 ನೇ ಸಾಲಿನ ಜಿಲ್ಲಾ ಮಟ್ಟದ ಯುವಜನ ಮೇಳವನ್ನು ಉದ್ಘಾಟಿಸಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಮಾತನಾಡಿದರು.
ಗ್ರಾಮೀಣ ಜಾನಪದ ಕಲೆಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಯುವಜನ ಮೇಳಗಳು ಸಹಕಾರಿಯಾಗಲಿದೆ. ಯುವ ಜನರು ಜಾನಪದ ಕಲೆಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಮತ್ತು ಯುವ ಜನ ಮೇಳಗಳನ್ನು ಒಂದೊಂದು ವರ್ಷ ಒಂದೊಂದು ತಾಲ್ಲೂಕಿನಲ್ಲಿ ಏರ್ಪಡಿಸುವುದರಿಂದ, ಗ್ರಾಮೀಣ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಾಧ್ಯ ಎಂದು ಅವರು ತಿಳಿಸಿದರು.
ಯಾವುದೇ ದೇಶದ ಸಂಪತ್ತನ್ನು ದೃಢಪಡಿಸುವುದು ಹಣವಲ್ಲ. ಅದು ಮಾನವ ಸಂಪನ್ಮೂಲ. ಇಂತಹ ಮಾನವ ಸಂಪನ್ಮೂಲ ಸರಿದಾರಿಯಲ್ಲಿ ನಡೆದರೆ ದೇಶದ ಪ್ರಗತಿ ಸಾಧ್ಯ. ಯಾವುದೇ ಒಂದು ದೇಶ ಬಲಿಷ್ಠವಾಗಲು ಅಲ್ಲಿನ ಯುವಜನತೆಯ ಪಾತ್ರ ಬಹುಮುಖ್ಯವಾಗಿರುತ್ತದೆ ಎಂದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ, ಹದಿನೈದರಿಂದ ಮೂವತ್ತೈದನೇ ವಯಸ್ಸಿನ ಯುವ ಸಮುದಾಯ ಸರಿಯಾದ ಮಾರ್ಗದರ್ಶನ ಪಡೆಯಬೇಕು. ಯುವಶಕ್ತಿ ನಿಂತ ನೀರಾಗಬಾರದು. ಅದು ಸದಾ ಜಾಗೃತ ವಹಿಸಿ ಸಂಚಲನತೆಯಿಂದ ಕೂಡುವ ಮೂಲಕ ಉತ್ತಮ ಬದುಕು ರೂಪಿಸಿಕೊಳ್ಳಬೇಕು. ಮಳೆಗಾಲದಲ್ಲಿ ಮಳೆ ನೀರನ್ನು ಸಂಗ್ರಹಿಸಿ ಉಪಯೋಗಿಸಿಕೊಳ್ಳುವಂತೆ ಯುವಶಕ್ತಿ ತಮ್ಮ ವಯಸ್ಸಿನಲ್ಲಿ ಹಿರಿಯರ ಮಾಗದರ್ಶನ ಪಡೆದು ಉತ್ತಮ ದೇಶ ಕಟ್ಟುವ ಸತ್ಪ್ರಜೆಗಳಾಗಬೇಕು ಎಂದರು.
ಭಾವಗೀತೆ, ಲಾವಣಿ, ರಂಗಗೀತೆ, ಏಕಪಾತ್ರಾಭಿನಯ, ಗೀಗಿ ಪದ, ಜಾನಪದ ಗೀತೆ, ಭಜನೆ, ಕೋಲಾಟ, ಜಾನಪದ ನೃತ್ಯ, ಡೊಳ್ಳು ಕುಣಿತ, ವೀರಗಾಸೆ ಕುಣಿತ ಮುಂತಾದ ಸ್ಪರ್ಧೆಗಳನ್ನು ಯುವಕರಿಗೆ ಮತ್ತು ಯುವತಿಯರಿಗೆ ಪ್ರತ್ಯೇಕವಾಗಿ ನಡೆಸಲಾಯಿತು.
ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಟಿ.ಜಯಲಕ್ಷ್ಮಿ, ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್, ನಗರಸಭಾ ಸದಸ್ಯರಾದ ಕೃಷ್ಣಮೂರ್ತಿ, ಅನಿಲ್ ಕುಮಾರ್, ತೀರ್ಪುದಾರರಾದ ಲೀಲಾ ಲಕ್ಷ್ಮಿನಾರಾಯಣ್, ವೆಂಕಟರಾಮ್, ಮುನಿರಾಜು, ಈಧರೆ ಪ್ರಕಾಶ್, ಸೋ.ಸು.ನಾಗೇಂದ್ರ, ಜಯಂತಿಗ್ರಾಮ ನಾರಾಯಣಸ್ವಾಮಿ ಹಾಜರಿದ್ದರು.
ಮೇಲೂರು ಎಂ.ಪಿ.ಸಿ.ಎಸ್ ಜೆಡಿಎಸ್ ವಶಕ್ಕೆ
ಮೇಲೂರು ಹಾಲು ಉತ್ಪಾದಕರ ಸಹಕಾರ ಸಂಘದ (ಎಂ.ಪಿ.ಸಿ.ಎಸ್) 13 ಮಂದಿ ನಿರ್ದೇಶಕರ ಚುನಾವಣಾ ಫಲಿತಾಂಶ ಹೊರಬಂದಿದ್ದು, ಎಲ್ಲರೂ ಜೆಡಿಎಸ್ ಬೆಂಬಲಿತರೇ ಆಯ್ಕೆಯಾಗುವುದರೊಂದಿಗೆ ಎಂ.ಪಿ.ಸಿ.ಎಸ್, ಜೆಡಿಎಸ್ ಪಾಲಾಗಿದೆ.
ಒಟ್ಟು 13 ಸ್ಥಾನಗಳಲ್ಲಿ 11 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, ಎರಡು ನಿರ್ದೇಶಕರ ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಿತು ಎಂದು ಚುನಾವಣಾಧಿಕಾರಿ ಗೋಪಾಲಕೃಷ್ಣ ತಿಳಿಸಿದ್ದಾರೆ.
ಆಯ್ಕೆಯಾದ ನಿರ್ದೇಶಕರು : ಎನ್.ಎಂ.ಕೃಷ್ಣಪ್ಪ (64 ಮತಗಳು), ಎಂ.ಎನ್.ನಿತ್ಯಾನಂದಶೆಟ್ಟಿ (57 ಮತಗಳು), ಅವಿರೋಧವಾಗಿ ಆಯ್ಕೆಯಾದವರು : ಎಂ.ಶ್ರೀನಿವಾಸ್, ಕೆ.ಎನ್.ಬಚ್ಚೇಗೌಡ, ಎಚ್.ಎಂ.ನಾರಾಯಣಸ್ವಾಮಿ, ಬಿ.ಕೆಂಪೇಗೌಡ, ಎಸ್.ಟಿ.ಸುರೇಶ್, ಎಂ.ಎನ್.ಶಿವಕುಮಾರ್, ಎಂ.ಎಸ್.ರಮೇಶ್, ಗುಣಮ್ಮ, ನಾಗವೇಣಿ, ಎಂ.ಆರ್.ಬಿಂದು ಮಾದವ, ಎನ್.ನಾಗರಾಜ್.
ಪಿ.ಡಿ.ಒ ತನ್ವೀರ್ ಅಹಮದ್ ಅವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ
ನರೇಗಾ ಯೋಜನೆಯಡಿ ಅಂತರ್ಜಲ ವೃದ್ಧಿ, ಪರಿಸರ ಸಂರಕ್ಷಣೆಗೆ ಅಗತ್ಯವಿರುವ ಹಲವಾರು ಕಾಮಗಾರಿಗಳನ್ನು ಸಮರ್ಪಕವಾಗಿ ಜಾರಿಗೊಳಿಸಿ ಜಿಲ್ಲಾ ಮಟ್ಟದ ಮೆಚ್ಚುಗೆಗೆ ಪಾತ್ರರಾಗಿದ್ದ ತಾಲ್ಲೂಕಿನ ಈ.ತಿಮ್ಮಸಂದ್ರ ಗ್ರಾಮ ಪಂಚಾಯಿತಿ ಪಿ.ಡಿ.ಒ ತನ್ವೀರ್ ಅಹಮದ್ ಅವರ ಸೇವಾಕ್ಷಮತೆಯನ್ನು ಗುರುತಿಸಿ ಜಿಲ್ಲಾಡಳಿತ 2018-19 ನೇ ಸಾಲಿನ ಜಿಲ್ಲಾಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಿದೆ.
ಜಿಲ್ಲಾ ಕೇಂದ್ರದಲ್ಲಿ ಈಚೆಗೆ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯಿತಿ ಸಿಇಒ ಫೌಜಿಯಾ ತರನ್ನುಮ್ ಅವರು ಪಿ.ಡಿ.ಒ ತನ್ವೀರ್ ಅಹಮದ್ ಅವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಸನ್ಮಾನಿಸಿದ್ದಾರೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಸೇವಾ ಸೌಲಭ್ಯಗಳು ಒದಗಿಸಲು ರಾಜೀವ್ ಗಾಂಧಿ ಸೇವಾ ಕೇಂದ್ರದ ಕಟ್ಟಡ ನಿರ್ಮಿಸಲು ಮುಂದಾಗಿರುವ ಪಿ.ಡಿ.ಒ ತನ್ವೀರ್ ಅಹಮದ್, ಸರ್ಕಾರದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದರೊಂದಿಗೆ ನರೇಗಾ ಯೋಜನೆಯಡಿ ಶಾಲಾ ಕಟ್ಟಡ, ಗ್ರಾಮ ಪಂಚಾಯಿತಿ ಕಟ್ಟಡಗಳಿಗೆ ಮಳೆಕೊಯ್ಲು ಅಳವಡಿಕೆ, ಅಂತರ್ಜಲ ವೃದ್ಧಿಗಾಗಿ ಕೆರೆಕುಂಟೆಗಳ ಹಾಗೂ ಕಲ್ಯಾಣಿ ಅಭಿವೃದ್ಧಿ, ಕಮಾನು ಚೆಕ್ ಡ್ಯಾಂಗಳ ನಿರ್ಮಾಣ, ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣ ಹಾಗೂ ನೂತನ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಿದ್ದಾರೆ.
ಗ್ರಾಮಸ್ಥರಿಗೆ ವಾಯುವಿಹಾರಕ್ಕೆ ಮತ್ತು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಗ್ರಾಮೀಣ ಉದ್ಯಾನವನ, ಗ್ರಾಮಾಂತರ ಪ್ರದೇಶದಲ್ಲಿ ಕ್ರೀಡಾಪ್ರತಿಭೆಗಳಿಗೆ ಅನುಕೂಲವಾಗಲೆಂದು ಸರ್ಕಾರಿ ಶಾಲೆಗೆ ಆಟದ ಮೈದಾನ ಮತ್ತು ಬ್ಯಾಸ್ಕೆಟ್ ಬಾಲ್ ಕೋರ್ಟ್ ನಿರ್ಮಾಣ ಮಾಡಿದ್ದಾರೆ. ಸಾಂಪ್ರದಾಯಿಕ ಜಲಮೂಲಗಳ ಸಂರಕ್ಷಣೆ ಕಾರ್ಯಕ್ರಮದಡಿ ಹಾಳುಬಿದ್ದಿದ್ದ ತೆರೆದ ಬಾವಿಗಳನ್ನು ಪುನಶ್ಚೇತನಗೊಳಿಸಿ ನೀರಿನ ಬವಣೆ ನೀಗಿಸಲು ಪ್ರಯತ್ನಿಸಿದ್ದಾರೆ.
ಶ್ರಮಶಕ್ತಿ ಯೋಜನೆಯಡಿ ಫಲಾನುಭವಿಗಳಿಗೆ ಸಾಲದ ಮಂಜೂರಾತಿ ಪತ್ರ ವಿತರಣೆ
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಬುಧವಾರ ಶ್ರಮಶಕ್ತಿ ಯೋಜನೆಯಡಿ ಸುಮಾರು 26 ಮಂದಿ ಅಲ್ಪಸಂಖ್ಯಾತ ಫಲಾನುಭವಿಗಳಿಗೆ ತಲಾ 25 ಸಾವಿರ ರೂ ಸಾಲದ ಮಂಜೂರಾತಿ ಪತ್ರ ವಿತರಿಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಅಲ್ಪಸಂಖ್ಯಾತರಿಗಾಗಿ ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಎಲ್ಲರೂ ಆರ್ಥಿಕವಾಗಿ ಮುಂದುವರೆಯಬೇಕು ಎಂದು ಅವರು ಹೇಳಿದರು.
ಪಡೆದ ಸಾಲವನ್ನು ನಿರ್ದಿಷ್ಠ ಉದ್ದೇಶಕ್ಕಾಗಿ ಬಳಸಿಕೊಂಡು ಪ್ರತಿಯೊಬ್ಬರೂ ಆರ್ಥಿಕವಾಗಿ ಮುಂದುವರೆಯಬೇಕು. ಮುಂದಿನ ದಿನಗಳಲ್ಲಿ ಶ್ರಮಶಕ್ತಿ ಯೋಜನೆಯಡಿ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿಗೆ ಸಾಲ ವಿತರಿಸಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಕೃಷ್ಣಮೂರ್ತಿ, ಜಭೀವುಲ್ಲಾ, ಮುಖಂಡರಾದ ಅಂಜದ್, ಅಕ್ರಂ, ಮುಸ್ತು ಹಾಜರಿದ್ದರು.
ಅಪ್ಪೇಗೌಡನಹಳ್ಳಿ ಸರ್ಕಾರಿ ಶಾಲೆಗೆ ಪ್ರೊಜೆಕ್ಟರ್, ನೀರಿನ ಫಿಲ್ಟರ್ ಕೊಡುಗೆ
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಶಾಲೆಗೆ ಪ್ರೊಜೆಕ್ಟರ್ ಹಾಗೂ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸ್ಟೀಲ್ ಬಾಟಲಿಗಳನ್ನು ನೀಡಿ ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಎ.ಎಸ್.ಮಂಜುನಾಥ್ ಮಾತನಾಡಿದರು.
ಪ್ರಾಥಮಿಕ ಶಾಲೆಯ ಹಂತದಲ್ಲಿಯೇ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಚಿತ್ರ ಹಾಗೂ ವೀಡಿಯೋ ಮೂಲಕ ಕಲಿಕೆಯನ್ನು ನಡೆಸುವುದರಿಂದ ನಗರ ಹಾಗೂ ಖಾಸಗಿ ಶಾಲೆಯ ಮಕ್ಕಳಿಗಿಂತ ಹೆಚ್ಚು ಶೈಕ್ಷಣಿಕ ಪ್ರಗತಿಯನ್ನು ಸಾಧಿಸಬಹುದೆಂದು ಅವರು ತಿಳಿಸಿದರು.
ಮಕ್ಕಳಿಗೆ ಅತ್ಯುತ್ತಮ ಚಲನಚಿತ್ರಗಳು, ಪರಿಸರ, ವಿಜ್ಞಾನ ಹಾಗೂ ಪಠ್ಯಕ್ಕೆ ಸಂಬಂಧಿಸಿದ ಸಾಕ್ಷ್ಯ ಚಿತ್ರಗಳನ್ನು ತೋರಿಸಿ ಅವರ ಬುದ್ಧಿ, ಆಲೋಚನೆ ಮತ್ತು ಮನಸ್ಸನ್ನು ಅರಳಿಸಬೇಕು. ಪ್ರಶ್ನೆ ಮಾಡುವ ಮನೋಭಾವವನ್ನು ಬೆಳೆಸಬೇಕೆಂದು ಹೇಳಿದರು.
ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷ ಆರ್.ಮಂಜುನಾಥ್ ಅವರು ಶಾಲೆಯ ಗ್ರಂಥಾಲಯ ನಿರ್ವಹಣೆಗೆ ಅಗತ್ಯವಿರುವ ಕಪಾಟನ್ನು ನೀಡಿದರು. ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷ ಪುಷ್ಪ ಅವರು ಬೀರುವೊಂದನ್ನು ಶಾಲೆಗೆ ನೀಡಿದರು. ಎಂ.ಪಿ.ಸಿ.ಎಸ್ ಅಧ್ಯಕ್ಷ ಮತ್ತು ಸದಸ್ಯರು ಸುಮಾರು 12 ಸಾವಿರ ರೂ ಬೆಲೆಯ ನೀರಿನ ಫಿಲ್ಟರ್ ಶಾಲೆಗೆ ಕೊಡುಗೆಯಾಗಿ ನೀಡಿದರು.
ಕ.ಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್, ಭಾಗ್ಯಮ್ಮ, ಲೋಕೇಶ್, ಮನು, ಕೃಷ್ಣಪ್ಪ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಮಮತಾ, ಸದಸ್ಯರಾದ ಹನುಮಂತರೆಡ್ಡಿ, ಶಾಲೆಯ ಶಿಕ್ಷಕರಾದ ಎಸ್.ಚಾಂದ್ ಪಾಷ, ಸುಜಾತ, ಭಾರತಿ, ಅಂಗನವಾಡಿ ಸಿಬ್ಬಂದಿ ಮಂಜುಳಾ, ನಳಿನಾ, ನಾರಾಯಣಮ್ಮ, ನೀಲಮ್ಮ ಹಾಜರಿದ್ದರು.
ವಿದ್ಯಾವಿಕಾಸ ಯೋಜನೆಯ ವಾರ್ಷಿಕೋತ್ಸವ ಕಾರ್ಯಕ್ರಮ
ತಾಲ್ಲೂಕಿನ ತಾತಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ “ವಿದ್ಯಾವಿಕಾಸ ಯೋಜನೆ” ಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಮಂಗಳನಾಥ ಸ್ವಾಮೀಜಿ ಮಾತನಾಡಿದರು.
ಜಾತಿ ಮತ ಭೇದವಿಲ್ಲದೆ ಶಿಕ್ಷಣ ಎಲ್ಲರಿಗೂ ಸಿಗಬೇಕು. ಕೆಳವರ್ಗದವರನ್ನು ಶಿಕ್ಷಣ ಮತ್ತು ಸಂಸ್ಕಾರ ಕಲಿಸುವ ಮೂಲಕ ಸದೃಢಗೊಳಿಸುವ ಕೆಲಸವನ್ನು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮೂಲಕ ಕೈಗೊಳ್ಳಲಾಗಿದೆ. ಕಳೆದ ಒಂದು ವರ್ಷದಿಂದ ತಾತಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪ್ರತಿದಿನ ಒಂದು ಗಂಟೆಯ ಕಾಲ ಶಿಕ್ಷಣ ಮತ್ತು ಸಂಸ್ಕಾರ ಕಲಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಪ್ರತಿಭಾನ್ವಿತ ಬಡ ಮಕ್ಕಳನ್ನು ಗುರುತಿಸಿ ಅವರಿಗೆ ಉಚಿತ ವಸತಿ, ವಿದ್ಯೆ ನೀಡಲಾಗುವುದು. ಮಕ್ಕಳನ್ನು ಸರ್ವಾಂಗೀಣ ಸಂಪನ್ನತೆಯನ್ನಾಗಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಮಕ್ಕಳ ಜ್ಞಾನಾರ್ಜನೆಗೆ ಪೋಷಕರು ಸಹಕಾರ ನೀಡಬೇಕಾಗಿದೆ. ಈ ಯೋಜನೆಯನ್ವಯ ತಾತಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ಇನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಮತ್ತು ಪೋಷಕರು, ಶಾಲೆಗೆ ಎಲ್.ಇ.ಡಿ ಟಿ.ವಿ ಮತ್ತು ಸ್ಪೀಕರ್ ಗಳು, ಉತ್ತಮ ಕಂಪ್ಯೂಟರ್, ಯುಪಿಎಸ್, ಪ್ರಿಂಟರ್ ಹಾಗೂ ಶಾಲೆಯ ಆವರಣದಲ್ಲಿ ಧೂಳು ಹೆಚ್ಚಾಗಿರುವುದರಿಂದ ಆವರಣಕ್ಕೆ ಪಾರ್ಕಿಂಗ್ ಟೈಲ್ಸ್ ವ್ಯವಸ್ಥೆ ಮಾಡಿಕೊಟ್ಟರೆ ಸಾಕಷ್ಟು ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು. ಸ್ವಾಮೀಜಿ ಇವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು.
ಬಿ.ಜಿ.ಎಸ್ ಸಂಸ್ಥೆಯ ಆಡಳಿತಾಧಿಕಾರಿ ಡಾ.ಎನ್.ಶಿವರಾಮರೆಡ್ಡಿ, ಬಿಜಿಎಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಮಹದೇವ್, ತಾತಹಳ್ಳಿ ಗ್ರಾಮದ ಕನಕಪ್ರಸಾದ್, ಕೃಷ್ಣಪ್ಪ, ಮುನಿನರಸಿಂಹಪ್ಪ, ಸರ್ಕಾರಿ ಶಾಲಾ ಶಿಕ್ಷಕರಾದ ದೇವರಾಜ್ ಹಾಜರಿದ್ದರು.
ಧರಣಿ ಮಾಡಲು ತೆರಳಿದ ಪ್ರಾಥಮಿಕ ಶಾಲಾ ಪದವಿ ಶಿಕ್ಷಕರ ಸಂಘದ ಸದಸ್ಯರು
ನಗರದ ಕೋಟೆ ವೃತ್ತದ ಬಳಿ ಮಂಗಳವಾರ ಪ್ರಾಥಮಿಕ ಶಾಲಾ ಪದವಿ ಶಿಕ್ಷಕರ ಸಂಘದ ವತಿಯಿಂದ ಭೋದನಾ ಬಹಿಷ್ಕಾರ, ಅನಿರ್ದಿಷ್ಟಾವದಿ ಧರಣಿ ಮುಷ್ಕರ ಮಾಡಲು ಬೆಂಗಳೂರಿನ ಪ್ರೀಡಂ ಪಾರ್ಕ್‌ಗೆ ಸಾಮೂಹಿಕವಾಗಿ ತೆರಳುವ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಪದವಿ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಮುಜಾಫೀರ್ ಮಾತನಾಡಿದರು.
ಸರ್ಕಾರದ ಮತ್ತು ಅಧಿಕಾರಿಗಳ ದ್ವಂದ್ವ ನೀತಿಯಿಂದಾಗಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರು ತ್ರಿಶಂಕು ಸ್ಥಿತಿಯಲ್ಲಿದ್ದು ಅನ್ಯಾಯವನ್ನ ಸರಿಪಡಿಸಲು ಆಗ್ರಹಿಸಿ ಅನಿರ್ದಿಷ್ಟವಾಗಿ ಭೋದನೆಯ ಬಹಿಷ್ಕಾರ ಧರಣಿ ಮುಷ್ಕರ ಮಾಡುತ್ತೇವೆ ಎಂದು ಅವರು ತಿಳಿಸಿದರು.
ನಮ್ಮ ಪದವಿ ಶಿಕ್ಷಕರಿಗೆ ಆದ ಅನ್ಯಾಯದ ಬಗ್ಗೆ ಮುಖ್ಯ ಮಂತ್ರಿಗಳು ಮತ್ತು ಶಿಕ್ಷಣ ಸಚಿವರೊಂದಿಗೆ ನಡೆದ ಮಾತುಕತೆಯಲ್ಲಿ ನಮಗಾದ ಅನ್ಯಾಯವನ್ನು ಪರಿಗಣಿಸಿ ಮುಖ್ಯಮಂತ್ರಿಗಳು ನಿಯಮ ತಿದ್ದುಪಡಿಗಾಗಿ ಟಿಪ್ಪಣಿ ಹಾಕಿ ಆದೇಶ ಮಾಡಿದ್ದಾರೆ, ಆದರೆ ಶಿಕ್ಷಣ ಇಲಾಖೆಯ ಐ.ಎ.ಎಸ್ ಅದಿಕಾರಿಗಳು ಈ ಬಗ್ಗೆ ಕ್ರಮ ತೆಗೆದುಕೊಳ್ಳದೆ ಬೇಡಿಕೆಗೆ ಸ್ವಂದಿಸದೆ ಕಾಲ ದೂಡುತ್ತಿದ್ದಾರೆ ಎಂದು ಆರೋಪಿಸಿದರು.
ಇಂದು ನಮಗೆ ನ್ಯಾಯಸಿಗದಿಂದಲ್ಲಿ ನಾಳೆಯಿದಲೇ ಅನಿರ್ದಿಷ್ಟವಾಗಿ ಭೋದನೆಯ ಬಹಿಷ್ಕಾರ ಧರಣಿ ಮುಷ್ಕರ ಮಾಡುತ್ತೇವೆ. ಈ ಧರಣೆಯಲ್ಲಿ ಪಾಲ್ಗೊಳ್ಳಲು ತಾಲ್ಲೂಕಿನಿಂದ 3 ಬಸ್ಸುಗಳಲ್ಲಿ 150 ಕ್ಕೂ ಹೆಚ್ಚು ಮಂದಿ ತೆರಳುತ್ತಿರುವುದಾಗಿ ಅವರು ಹೇಳಿದರು.
ತಾಲ್ಲೂಕು ನೌಕರರ ಸಂಘ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಮುನಿರಾಜು, ಎನ್.ಪಿ.ಎಸ್ ಅಧ್ಯಕ್ಷ ಗಜೇಂದ್ರ, ಪಿಳ್ಳಣ್ಣ, ಮುನಿನಾರಾಯಣಪ್ಪ, ಪ್ರಸನ್ನ ಕುಮಾರ್, ಸುಮಾ ಅಮರೇಂದ್ರ. ಚಂದ್ರಶೇಖರ್.ವಿ, ಬಿ.ವಿ.ಮಂಜುನಾಥ್, ಸಿ.ಬಿ.ಪ್ರಕಾಶ್, ಹಾಜರಿದ್ದರು.
ಕಾನೂನು ಅರಿವು ನೆರವು ಕಾರ್ಯಕ್ರಮ ಹಾಗೂ ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ
ನಗರದ ದಿಬ್ಬೂರಹಳ್ಳಿ ರಸ್ತೆಯ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ವಕೀಲರ ಸಂಘ, ಕಂದಾಯ, ಶಿಕ್ಷಣ, ಆರೋಗ್ಯ, ಪೋಲಿಸ್, ಅರಣ್ಯ, ಕಾರ್ಮಿಕ, ಸಮಾಜ ಕಲ್ಯಾಣ, ನಗರಸಭೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಸಾಂತ್ವನ ಕೇಂದ್ರ ಸಂಯುಕ್ತಾಶ್ರಯದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ ಹಾಗೂ ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ ನೀಡಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಅಮರನಾರಾಯಣ ಮಾತನಾಡಿದರು.
ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಜನರಿಗೆ ಕಾನೂನಿನ ಅರಿವು ಮತ್ತು ನೆರವು ಒದಗಿಸುವ ದೃಷ್ಠಿಯಿಂದ ಕಾನೂನು ಸಾಕ್ಷರತಾ ರಥ ಕಾರ್ಯಕ್ರಮ ಆರಂಭವಾಗಿದ್ದು ನಾಗರಿಕರು ಸದುಪಯೋಗ ಮಾಡಿಕೊಳ್ಳಬೇಕೆಂದು ಅವರು ತಿಳಿಸಿದರು.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಾಮಾನ್ಯ ನಾಗರಿಕರಿಗಿರುವ ಸಹ ಹಕ್ಕುಗಳು ಮತ್ತು ಕಾನೂನು ಕಾಯ್ದೆಗಳ ಕುರಿತು ಸಮಗ್ರವಾಗಿ ಮಾಹಿತಿ ನೀಡುವ ಉದ್ದೇಶದಿಂದ ಕಾನೂನು ಸಾಕ್ಷರತಾ ರಥ ಮೂಲಕ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ತಾಲ್ಲೂಕಿನ ವಿವಿದೆಡೆ ನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ಬಿ.ಜಿ.ಎಸ್ ವಿದ್ಯಾ ಸಂಸ್ಥೆ, ನಲ್ಲೋಜನಹಳ್ಳಿ, ಎಸ್.ಎಂ.ಕೊಂಡರಾಜನಹಳ್ಳಿ, ಜಂಗಮಕೋಟೆ, ಗರುಡಾದ್ರಿ ಶಾಲೆ, ಎಚ್.ಕ್ರಾಸ್, ಕೊಂಡಪ್ಪಗಾರಹಳ್ಳಿ, ವಾಸವಿ ಶಾಲೆ, ಚಾಕ್ಕಪ್ಪನಹಳ್ಳಿ, ನಾರಾಯಣದಾಸರಹಳ್ಳಿ, ಮಳಮಾಚನಹಳ್ಳಿ, ಕಾಳನಾಯಕನಹಳ್ಳಿ ಹಾಗೂ ಶಿಡ್ಲಘಟ್ಟ ನಗರದಲ್ಲಿ ನಡೆಸಲಾಗುತ್ತಿದ್ದು ನಾಗರಿಕರು ಈ ಕಾರ್ಯಕ್ರಮವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಎಲ್ಲರೂ ಕಾನೂನಿನ ಅರಿವು ಹೊಂದುವುದು ಸಂವಿಧಾನದಲ್ಲಿಯೇ ಹೇಳಿದೆ. ಹಾಗಾಗಿ ಕಾನೂನು ರಥದೊಂದಿಗೆ ವಿವಿಧ ಗ್ರಾಮಗಳಿಗೆ ಆಗಮಿಸುತ್ತಿದ್ದು ಕಾನೂನಿನ ಬಗ್ಗೆ ವಕೀಲರು ತಿಳಿಸಿಕೊಡುತ್ತಾರೆ. ಬಡತನವೆಂದು ಕೈಕಟ್ಟಿ ಅನ್ಯಾಯ ಸಹಿಸಬಾರದು. ಜನ ತಮ್ಮ ಹಕ್ಕುಗಳ ಜೊತೆಗೆ ಕರ್ತವ್ಯದ ಬಗ್ಗೆಯೂ ಯೋಚಿಸುವಂತಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರವನ್ನು ನೀಡುವುದು ಅತ್ಯವಶ್ಯಕವಾಗಿದೆ. ಇಂದು ಮಕ್ಕಳ ಮೇಲೆ ಅನೇಕ ರೀತಿಯ ದೌರ್ಜನ್ಯಗಳು, ಲೈಂಗಿಕ ಶೋಷಣೆಗಳು ನಡೆಯುತ್ತಿರುವುದು ಖೇದದ ಸಂಗತಿ. ತಾಯಂದಿರು ಇದರ ಸೂಕ್ಷ್ಮತೆಯನ್ನು ಅರಿತು ಮಕ್ಕಳ ಚಲನವಲನ, ವರ್ತನೆಗಳ ಮೇಲೆ ನಿಗಾ ವಹಿಸಬೇಕು. ಅಲ್ಲದೇ ತಮ್ಮ ಜೀವಕ್ಕೆ ಮತ್ತು ಆಸ್ತಿ ಪಾಸ್ತಿಗೆ ಹಾನಿ ಉಂಟಾದಲ್ಲಿ ಪ್ರಾಧಿಕಾರ ಅವಶ್ಯಕ ನೆರವು ನೀಡಿ ನ್ಯಾಯ ಒದಗಿಸುತ್ತದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ದೇವರಾಜ್, ಡಿ.ಆರ್.ಮಂಜುನಾಥ್, ಪ್ರಧಾನ ಸಿವಿಲ್ ನ್ಯಾಯಾಧೀಶ ಸಂಜುಕುಮಾರ್ ಎ.ಪಚ್ಚಾಪುರೆ, ಅಪರ ಸಿವಿಲ್ ನ್ಯಾಯಾಧೀಶೆ ಡಿ.ರೋಹಿಣಿ, ಜಿಲ್ಲಾ ಹಿರಿಯ ಶ್ರೇಣಿ ನ್ಯಾಯಾಧೀಶೆ ರೂಪ, ತಾಲ್ಲೂಕು ವಕೀಲರ ಸಂಘದ ಗೌರವಾಧ್ಯಕ್ಷ ಎಂ.ಪಾಪಿರೆಡ್ಡಿ, ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ಎ.ಪಿ.ಪಿ ಕುಮುದಿನಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ವೈ.ನಾಗವೇಣಿ, ಸಾಂತ್ವನ ಕೇಂದ್ರದ ವಿಜಯ ವೆಂಕಟರಾಮ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ವಕೀಲರಾದ ಎಂ.ಬಿ.ಲೋಕೇಶ್, ವಿ.ಸುಬ್ರಮಣ್ಯಪ್ಪ, ಡಾ.ವಿಜಯಕುಮಾರ್ ಹಾಜರಿದ್ದರು.

