ಕಲುಷಿತ ಆಹಾರ ಸೇವನೆಯಿಂದ ಅಸ್ವಸ್ಥಗೊಂಡಿದ್ದ ಗ್ರಾಮಸ್ಥರಿಗೆ ಆರೋಗ್ಯ ಇಲಾಖೆಯಿಂದ ಎಲ್.ಮುತ್ತುಗದಹಳ್ಳಿಯ ಅಂಗನವಾಡಿಯಲ್ಲಿ ಚಿಕಿತ್ಸೆ ಸೋಮವಾರವೂ ಮುಂದುವರೆದಿದ್ದು, ಪರಿಸ್ಥಿತಿ ಹತೋಟಿಗೆ ಬಂದಿರುವುದಾಗಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ತಿಳಿಸಿದ್ದಾರೆ.
“ಭಾನುವಾರ ಚಿಕಿತ್ಸೆ ಪಡೆದು ಹೋಗಿದ್ದ 104 ಮಂದಿಯಲ್ಲಿ 27 ಮಂದಿ ಸೋಮವಾರವೂ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಏಳು ಮಂದಿಗೆ ಸುಸ್ತು ಇದೆ ಎಂದಾಗ ಡ್ರಿಪ್ಸ್ ಹಾಕಿದ್ದೇವೆ. ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ಹೋಗಿದ್ದ ಐವರಲ್ಲಿ ಮೂವರು ವಾಪಸಾಗಿದ್ದು, ಆರೋಗ್ಯದಿಂದಿದ್ದಾರೆ. ಇನ್ನಿಬ್ಬರ ಆರೋಗ್ಯವೂ ಸುಧಾರಿಸಿದ್ದು, ಸಂಜೆಗೆ ವಾಪಸಾಗಲಿದ್ದಾರೆ. ಹೊಸದಾಗಿ ಯಾರ ಆರೋಗ್ಯದಲ್ಲೂ ಏರುಪೇರಾಗದಿರುವುದು ಒಳ್ಳೆಯ ಬೆಳವಣಿಗೆ. ಗುರುವಾರದವರೆಗೂ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ತೆರೆದು ಮೇಲೂರು ವೈದ್ಯ ಡಾ.ರಮೇಶ್ ಅವರಿಂದ ಚಿಕಿತ್ಸೆ ಕೊಡಲಾಗುವುದು” ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ತಿಳಿಸಿದರು.
“ಇನ್ನೂ ಒಂದು ವಾರದ ಮಟ್ಟಿಗೆ ಯಾರೂ ಮಾಂಸಾಹಾರ ಸೇವನೆ ಮಾಡಬಾರದು. ಮಸಾಲೆ ಪದಾರ್ಥ ತಿನ್ನಬೇಡಿ. ತಿಳಿ ಸಾರು, ತರಕಾರಿ, ಅನ್ನ ಬಿಸಿಬಿಸಿಯಾಗಿರುವಾಗಲೇ ತಿನ್ನಿ. ಶೌಚಾಲಯಕ್ಕೆ ಹೋಗಿ ಬಂದು ಸೋಪನ್ನು ಬಳಸಿ ಕೈತೊಳೆದುಕೊಳ್ಳಿ ಎಂದು ಗ್ರಾಮಸ್ಥರಿಗೆ ತಿಳಿಹೇಳಿದ್ದೇವೆ. ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛತೆ ಕಾರ್ಯಕ್ರಮ ನಡೆಸಿದ್ದು, ಚರಂಡಿ ಹೂಳು ತೆಗೆದು ಬ್ಲೀಚಿಂಗ್ ಪುಡಿ ಹಾಕಿದ್ದಾರೆ” ಎಂದು ವಿವರಿಸಿದರು.
ತಹಶೀಲ್ದಾರ್ ಅರುಂಧತಿ ಎಲ್.ಮುತ್ತುಗದಹಳ್ಳಿಗೆ ಭೇಟಿ ನೀಡಿ ಗ್ರಾಮಸ್ಥರು ಹಾಗೂ ವೈದ್ಯರಿಂದ ಮಾಹಿತಿ ಪಡೆದರು. ಗ್ರಾಮ ಪಂಚಾಯಿತಿ ಪಿಡಿಒ ಅಂಜನ್ ಕುಮಾರ್, ಡಾ.ರಮೇಶ್ ಹಾಜರಿದ್ದರು.
ಕಲುಷಿತ ಆಹಾರ ಸೇವನೆಯಿಂದ ಅಸ್ವಸ್ಥಗೊಂಡಿದ್ದ ಗ್ರಾಮಸ್ಥರ ಚೇತರಿಕೆ
ತಾತಹಳ್ಳಿ ಸರ್ಕಾರಿ ಶಾಲೆಯಲ್ಲಿ “ಗುಹೆಯಲ್ಲಿ ಒಂದು ದಿನ” ಪುಸ್ತಕ ಬಿಡುಗಡೆ
ತಾಲ್ಲೂಕಿನ ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಹಿತಿ, ಅನುವಾದಕ ಧನಪಾಲ ನಾಗರಾಜಪ್ಪ ಅವರು ತೆಲುಗಿನಿಂದ ಅನುವಾದಿಸಿರುವ “ಗುಹೆಯಲ್ಲಿ ಒಂದು ದಿನ” ಎಂಬ ಮಕ್ಕಳ ಸಚಿತ್ರ ಕಥೆಯ ಪುಸ್ತಕವನ್ನು ಸೋಮವಾರ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್, “ಮಕ್ಕಳ ಸಾಹಿತ್ಯವು ಮಕ್ಕಳಿಗೆ ಸಂತೋಷ ನೀಡುವುದಷ್ಟೇ ಅಲ್ಲದೆ ಅರಿವಿನ ಜ್ಞಾನವನ್ನು ಪಡೆಯಲು ಸಹಕಾರಿಯಾಗಿದೆ. ಮಕ್ಕಳ ಸಾಹಿತ್ಯದಿಂದ ಸಂಸ್ಕೃತಿ, ಶಿಕ್ಷಣ, ಕುಟುಂಬ, ಪರಿಸರದಂತಹ ಅಮೂಲ್ಯವಾದ ಮೌಲ್ಯಯುತ ವಿಷಯಗಳನ್ನು ಮಕ್ಕಳ ಸಾಹಿತ್ಯವು ಒಳಗೊಂದಿರುತ್ತದೆ. ಮಕ್ಕಳ ಮಾನಸಿಕ, ಬೌದ್ಧಿಕ ಸಮಾಜಿಕ ಮತ್ತು ಭಾಷೆಯ ಬೆಳವಣಿಗೆಗೆ ಸಾಹಿತ್ಯ ಉಪಯುಕ್ತವಾಗಿದೆ. ಕಥೆಗಳು ಮಕ್ಕಳ ಆಲೋಚನಾ ಶಕ್ತಿಯನ್ನು ಬೆಳೆಸುತ್ತದೆ ಅಲ್ಲದೆ ಬದುಕುವ ವಿವೇಕವನ್ನು ಮೂಡಿಸುತ್ತದೆ. ಭಾವೈಕ್ಯತೆಯ ಭಾವನೆ ಮೂಡಿಸುವುದರ ಜೊತೆಗೆ ಮನರಂಜನೆಯನ್ನು ನೀಡುತ್ತವೆ” ಎಂದರು.
ಸಾಹಿತಿ ಅನುವಾದಕ ಧನಪಾಲ ನಾಗರಾಜಪ್ಪ ಮಾತನಾಡಿ, “ನಮ್ಮ ಬಾಲ್ಯದಲ್ಲಿದ್ದ ಸಮೃದ್ಧ ಜಗತ್ತು ಈಗಿನ ಮಕ್ಕಳಿಗೆ ಸಿಗುತ್ತಿಲ್ಲ. ಸುತ್ತಲಿನ ಪರಿಸರ ಹಾಳಾಗುತ್ತಿದೆ. ಕಾಡು ಕಾಡಾಗಿ ಉಳಿದಿಲ್ಲ, ಬಾವಿಗಳು ಬತ್ತುತ್ತಿವೆ, ಗಿಡಗಳು ಒಣಗಿಹೋಗಿವೆ. ಹಕ್ಕಿಗಳು ಕಾಣುತ್ತಿಲ್ಲ. ಇವುಗಳ ಕುರಿತು ಅರಿವು ಮೂಡಿಸುವಂಥ ಸಾಹಿತ್ಯ ರಚಿಸುವುದು ಇಂದಿನ ಸವಾಲಾಗಿದೆ. ಮಕ್ಕಳಿದ್ದಲ್ಲಿಗೆ ಹೋಗಿ ಅವರಿಗೆ ಆಸಕ್ತಿ ಹುಟ್ಟಿಸುವ ರೀತಿ ಕಥೆ ಹೇಳಿದರೆ, ಪುಸ್ತಕದ ಕುರಿತು ಹೇಳಿದರೆ ಅವರಲ್ಲಿ ಅಭಿರುಚಿ ಬೆಳೆಯುತ್ತದೆ. ಆ ಕಾರಣ ದಿಂದ ಈ ಶಾಲೆಯ ಸಹಕಾರದಿಂದ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಅನುವು ಮಾಡಿಕೊಟ್ಟಿದ್ದಕ್ಕೆ ಶಾಲೆಯ ಎಲ್ಲಾ ಮುಖ್ಯಸ್ಥರಿಗೆ ಧನ್ಯವಾದ” ಎಂದರು.
ಚಿತ್ರಕಲಾವಿದ ಗಂಗಾಧರ್ ಅಡ್ಡೇರಿ ಮಾತನಾಡಿ, “ಮಕ್ಕಳ ಸಾಹಿತ್ಯಕ್ಕೆ ಚಿತ್ರಗಳನ್ನು ರಚಿಸುವುದು ಒಂದು ಸವಾಲು. ಆದರೆ ಕಥೆಯ ತಿರುಳನ್ನು ಓದಿಕೊಂಡು ಚಿತ್ರಗಳನ್ನು ರಚಿಸುವುದಕ್ಕೆ ಏಕಾಗ್ರತೆ ಬಹಳ ಮುಖ್ಯವಾಗಿರುತ್ತದೆ. ಮಕ್ಕಳು ಚಿತ್ರಕಲೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಕಲಿಕೆಯ ಜೊತೆಗೆ ಚಿತ್ರಕಲೆ ಉತ್ತಮ ಹವ್ಯಾಸವಾಗಿದೆ” ಎಂದರು.
ವಿದ್ಯಾರ್ಥಿಗಳಾದ ಚರಣ್, ಶಿವಮೂರ್ತಿ,ನಿನಾದ್, ನವಿತ, ಪ್ರಜ್ವಲ್ ಅವರು ಪುಸ್ತಕದ ಬಗ್ಗೆ ಮಾತನಾಡಿದರು. ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಕೃಷ್ಣಪ್ಪ, ಶಿಕ್ಷಕರಾದ ಲೋಕೇಶ್, ನಾಗರಾಜ್, ದೇವರಾಜ್, ಎಸ್. ಕಲಾಧರ್, ಶ್ರೀಕಾಂತ್, ಅಶ್ವಿನಿ ಧನಪಾಲ್ ಹಾಜರಿದ್ದರು.
ವಿವಿಧ ಬೇಡಿಕೆಗಳನ್ನು ಈಡೇರಿಸಲು ಮನವಿ ಸಲ್ಲಿಸಿದ ರೈತರು
ತಾಲ್ಲೂಕಿನಾಧ್ಯಂತ ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಫಾರಂ ನಂ 57 ರಲ್ಲಿ ಅರ್ಜಿ ಹಾಕಲು ಅವಕಾಶ ಕೊಡಬೇಕು. ಈಗಾಗಲೇ ಅರ್ಜಿ ಸಲ್ಲಿಸಿರುವ ರೈತರಿಗೆ ಸಾಗುವಳಿ ಚೀಟಿ ವಿತರಿಸುವುದು ಸೇರಿದಂತೆ ಕಳೆದ ಮೂವತ್ತು, ನಲವತ್ತು ವರ್ಷಗಳಿಂದ ದುರಸ್ತಿ ಆಗದೆ ಇರುವ ಭೂಮಿಯನ್ನು ದುರಸ್ತಿ ಮಾಡಿಕೊಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ಪದಾಧಿಕಾರಿಗಳು ತಹಶೀಲ್ದಾರ್ ಕೆ.ಅರುಂದತಿ ಅವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.
ತಹಶೀಲ್ದಾರ್‌ರಾಗಿ ನೂತನವಾಗಿ ಅಧಿಕಾರ ಸ್ವೀಕರಿಸಿದ ಕೆ.ಅರುಂದತಿ ಅವರನ್ನು ಕಚೇರಿಯಲ್ಲಿ ಸೋಮವಾರ ಭೇಟಿ ಮಾಡಿದ ರೈತ ಮುಖಂಡರು ತಾಲ್ಲೂಕಿನ ವಿವಿಧ ಸಮಸ್ಯೆಗಳ ಬಗ್ಗೆ ವಿವರಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್ ಮಾತನಾಡಿ, ರೈತರ ಫಹಣಿಯಲ್ಲಿ ಬೆಳೆ ನಮೂದು ಆಗದ ಕಾರಣ ರೈತರ ಖಾತೆಗೆ ಈವರೆಗೂ ಬೆಳೆ ವಿಮೆ ಬಂದಿಲ್ಲ. ಎಚ್.ಎನ್ ವ್ಯಾಲಿ ನೀರು ಜಿಲ್ಲಾ ಕೇಂದ್ರದವರೆಗೂ ಬಂದಿದ್ದು ತಾಲ್ಲೂಕಿನ ಕೆರೆಗಳಿಗೆ ಬಂದಿಲ್ಲ. ಕಾರಣ ತಾಲ್ಲೂಕಿನ ಕೆರೆಗಳಿಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ತೆರವು ಕಾರ್ಯಚರಣೆ ಹಾಗೂ ಕೆರೆಗಳಲ್ಲಿ ಬೆಳೆದು ನಿಂತಿರುವ ಜಾಲಿ ಮರಗಳನ್ನು ತೆರವು ಗೊಳಿಸುವ ಕೆಲಸ ಸಂಪೂರ್ಣವಾಗಿಲ್ಲ. ನಗರಕ್ಕೆ ಹೊಂದಿಕೊಂಡಿರುವ ಗೌಡನಕೆರೆ ಯನ್ನು ಒತ್ತುವರಿ ಮಾಡಿಕೊಂಡಿರುವವರನ್ನು ಈವರೆಗೂ ತೆರವುಗೊಳಿಸಿಲ್ಲ. ಕೂಡಲೇ ತಾಲ್ಲೂಕಿನ ಕೆರೆಗಳ ವೀಕ್ಷಣೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ ಮಾತನಾಡಿ, ಜಿಲ್ಲೆಯಾದ್ಯಂತ ನೀಲಗಿರಿ ತೆಗೆಯಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿ ತಿಂಗಳಾದರೂ ತಾಲ್ಲೂಕಿನಲಿ ನೀಲಗಿರಿ ತೆರವು ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ರೈತರಿಗೆ ಕೆಲವು ಬೆಳೆಗಳಿಗೆ ನೀಲಗಿರಿ ಕಡ್ಡಿಗಳ ಅಗತ್ಯತೆ ಇದ್ದು ನೆರೆಯ ಆಂದ್ರಪ್ರದೇಶದ ಸರ್ಕಾರ ಮಾದರಿ ಕಲ್ಲು ಕೂಚ ಅಳವಡಿಸಿಕೊಳ್ಳಲು ಸರ್ಕಾರದಿಂದ ಸಹಾಯಧನ ನೀಡುವ ಕೆಲಸವಾಗಬೇಕು ಎಂದರು.
ತಾಲ್ಲೂಕಿನಲ್ಲಿ ಎಪಿಎಂಸಿ ಮಾರುಕಟ್ಟೆ, ರೈತಭವನ ನಿರ್ಮಾಣ ಮಾಡುವುದು, ತಾಲ್ಲೂಕಿನಾದ್ಯಂತ ಗುಂಡುತೋಪುಗಳು ಮಾಯವಾಗಿದ್ದು ಹಸಿರು ಕ್ರಾಂತಿ ಯೋಜನೆಯಡಿ ಸಸಿ ನೆಡುವ ಕಾರ್ಯವಾಗಬೇಕು ಎಂಬಿತ್ಯಾದಿ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ತಹಶೀಲ್ದಾರ್‌ರಿಗೆ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಕೆ.ಅರುಂದತಿ ಮಾತನಾಡಿ, ರೈತರು ನೀಡಿರುವ ಮನವಿಯ ಮೇರೆಗೆ ಅಗತ್ಯ ಕ್ರಮ ಜರುಗಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಶ್ರೀಧರ್, ಕೋಟೆ ಚನ್ನೇಗೌಡ, ಎಂ.ವಿ.ವೆಂಕಟರೆಡ್ಡಿ, ಮುದ್ದು ಕೃಷ್ಣ, ವೆಂಕಟೇಶ್, ಶಂಕರನಾರಾಯಣ, ರವಿಕುಮಾರ್, ಸತೀಶ್ ಹಾಜರಿದ್ದರು.
ಕರಾಟೆ ಬೆಲ್ಟ್ ಪರೀಕ್ಷೆ ಹಾಗೂ ಪ್ರಮಾಣಪತ್ರ ವಿತರಣೆ
ನಗರದ ಉಲ್ಲೂರುಪೇಟೆ ಸರ್ಕಾರಿ ಶಾಲೆಯ ಆವರಣದಲ್ಲಿ ಶಿಟೋ ರಿಯೋ ಕರಾಟೆ ಡು ಇಂಡಿಯಾ ಅಕಾಡೆಮಿ ವತಿಯಿಂದ ಕರಾಟೆ ಬೆಲ್ಟ್ ಪರೀಕ್ಷೆ ಹಾಗೂ ಶಿಬಿರದಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಬೆಲ್ಟ್ ಹಾಗೂ ಪ್ರಮಾಣಪತ್ರವನ್ನು ವಿತರಿಸಿ ಗೌರಿಬಿದನೂರಿನ ಕರಾಟೆ ಶಿಕ್ಷಕ ಹಾಗೂ ಕರಾಟೆ ಪರಿವೀಕ್ಷಕ ಚಂದ್ರಶೇಖರ್ ಮಾತನಾಡಿದರು.
ಕರಾಟೆ ಕ್ರೀಡೆಯಾಗಿ ಮಾತ್ರವಲ್ಲ, ಆತ್ಮರಕ್ಷಣೆಯ ಕಲೆಯಾಗಿಯೂ ದೇಶದಲ್ಲಿ ಜನಪ್ರಿಯತೆ ಪಡೆದುಕೊಂಡಿದೆ. ಉತ್ತಮ ಆರೋಗ್ಯವನ್ನು ಹೊಂದಲೂ ಸಹ ಕರಾಟೆ ಸಹಾಯಕವಾಗಲಿದೆ ಎಂದು ಅವರು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಎಲ್ಲರ ಜೀವನ ಶೈಲಿ ಬದಲಾಗಿದ್ದು ಕಂಪ್ಯೂಟರ್, ಟಿ.ವಿ. ಮುಂದೆ ಕುಳಿತುಕೊಳ್ಳುವ ಪ್ರವೃತ್ತಿ, ಕೆಲಸದಿಂದ ದೇಹಕ್ಕೆ ಕಸರತ್ತು ಇಲ್ಲದೆ ಹತ್ತು ಹಲವು ರೋಗಗಳಿಗೆ ನಾವು ತುತ್ತಾಗುತ್ತಿದ್ದೇವೆ. ಈ ಸಮಸ್ಯೆಯಿಂದ ಪಾರಾಗಲು ವ್ಯಾಯಾಮ ಮತ್ತಿತರೆ ದೈಹಿಕ ಕಸರತ್ತು ಮಾಡುವುದರೊಂದಿಗೆ ಶಿಸ್ತುಬದ್ಧ ಜೀವನ ಶೈಲಿಯನ್ನು ಅಳವಡಿಸಿಕೊಂಡು ಹಿತಮಿತವಾದ ಊಟೋಪಚಾರ ಮಾಡಬೇಕಿದೆ. ಆಗಲೇ ಎಲ್ಲರೂ ಆರೋಗ್ಯ ಜೀವನ ನಡೆಸಿ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಕರಾಟೆ ವಿದ್ಯಾರ್ಥಿಗಳಿಗೆ ಎಲ್ಲೋ, ಆರೆಂಜ್, ಗ್ರೀನ್, ಬ್ಲೂ, ಪರ್ಪಲ್, ಬ್ರೌನ್ ಬೆಲ್ಟ್ಗಳನ್ನು ಹಾಗೂ ಪ್ರಮಾಣಪತ್ರವನ್ನು ವಿತರಿಸಲಾಯಿತು.
ಕರಾಟೆ ಶಿಕ್ಷಕರಾದ ವಿ.ಅರುಣ್ ಕುಮಾರ್, ನಾಗೇಶ್, ದೈಹಿಕ ಶಿಕ್ಷಕ ಮುರಳಿ ಕುಮಾರ್ ಹಾಜರಿದ್ದರು.
ಮದುವೆಯಲ್ಲಿ ಕಲುಷಿತ ಆಹಾರ, ಒಬ್ಬ ವ್ಯಕ್ತಿ ಸಾವು
ಮದುವೆ ಮನೆಯಲ್ಲಿ ಊಟ ಕಲುಷಿತಗೊಂಡಿದ್ದರಿಂದ ಪಾಯ್ಲಹಳ್ಳಿ ನಾರಾಯಣಪ್ಪ (55) ನಿಧನರಾಗಿದ್ದು, ಅಲ್ಲಿ ಊಟ ಮಾಡಿ ಅಸ್ವಸ್ಥಗೊಂಡಿದ್ದ ತಾಲ್ಲೂಕಿನ ಎಲ್.ಮುತ್ತುಗದಹಳ್ಳಿ, ಪಾಯ್ಲಹಳ್ಳಿ, ಕುರುಬಚ್ಚನಪಡೆಯ ಗ್ರಾಮಸ್ಥರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಚಿಕ್ಕಬಳ್ಳಾಪುರ ಹೊರವಲಯದ ಕಂದವಾರದಲ್ಲಿರುವ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಎಲ್.ಮುತ್ತುಗದಹಳ್ಳಿಯ ವಧುವಿನೊಂದಿಗೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಮನ್ನಾರ್ ಪುರದ ವರನೊಂದಿಗೆ ಮದುವೆ ನಡೆದಿತ್ತು. ಗುರುವಾರ ರಾತ್ರಿ ಆರತಕ್ಷತೆಯ ಊಟ ಮಾಡಿದ್ದ ಗ್ರಾಮಸ್ಥರಿಗೆ ಮಾರನೆ ದಿನದಿಂದ ಬೇಧಿ ಪ್ರಾರಂಭವಾಗಿದೆ.
ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಈ ಬಗ್ಗೆ ವಿವರಣೆ ನೀಡಿ, “ವಿಷಯ ತಿಳಿದೊಡನೆ ಶನಿವಾರ ಮುಂಜಾನೆಯೇ ನಾವು ಎಲ್.ಮುತ್ತುಗದಹಳ್ಳಿಗೆ ಹೋದೆವು. ಸುಮಾರು ಇಪ್ಪತ್ತಾರು ಮಂದಿಗೆ ಚಿಕಿತ್ಸೆ ನೀಡಿ ಬಂದೆವು. ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಿದೆವು. ಇನ್ನಿಬ್ಬರು ಅವರೇ ಬೆಂಗಳೂರಿಗೆ ಹೋಗಿದ್ದರು. ಅವರಲ್ಲಿ ಪೈಲಹಳ್ಳಿಯವರೊಬ್ಬರು ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಭಾನುವಾರ ಎಲ್.ಮುತ್ತುಗದಹಳ್ಳಿಯ ಅಂಗನವಾಡಿಯಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ತೆರೆದು ಮೇಲೂರು ವೈದ್ಯ ಡಾ.ರಮೇಶ್ ಅವರನ್ನು ನಿಯೋಜಿಸಿ, ಚಿಕಿತ್ಸೆ ಕೊಡಲಾಗುತ್ತಿದೆ.
ಮನೆಮನೆಗೂ ಹೋಗಿ ಮುಂಜಾಗೃತಾ ಕ್ರಮಗಳ ಬಗ್ಗೆ ವಿವರಿಸಿದೆವು. ಬಿಸಿ ಅಡುಗೆಯನ್ನೇ ತಿನ್ನಬೇಕು. ಶೌಚಕ್ಕೆ ಹೋಗಿ ಬಂದ ನಂತರ ಸೋಪು ಬಳಸಿ ಕೈತೊಳೆದುಕೊಳ್ಳಬೇಕು. ಬೇಧಿ ಆಗುತ್ತಿರುವವರನ್ನು ಮುಟ್ಟಿದಾಗಲೂ ಸೋಪು ಬಳಸಿ ಕೈ ತೊಳೆದುಕೊಳ್ಳಿ. ಪಿಡಿಒ ಅವರ ನೆರವು ಪಡೆದು ಚರಂಡಿಗಳನ್ನು ಶುಚಿಗೊಳಿಸಲಾಯಿತು. ಒಟ್ಟಾರೆ ಶುಚಿತ್ವದ ಬಗ್ಗೆ ತಿಳಿಸಿಕೊಟ್ಟೆವು.
ಮೇಲ್ನೋಟಕ್ಕೆ ಕಲುಷಿತ ಆಹಾರದಿಂದಲೇ ಈ ಘಟನೆ ನಡೆದಿರುವುದು ಎಂದು ತಿಳಿದುಬರುತ್ತದೆ. ಬೇಧಿ ಸ್ಯಾಂಪಲ್ ಕೂಡ ಪರೀಕ್ಷೆಗೆಂದು ಕಳುಹಿಸಿಕೊಟ್ಟಿದ್ದೇವೆ. ಇವತ್ತು ಐವತ್ತು ಮಂದಿಗೆ ಚಿಕಿತ್ಸೆ ನೀಡಿ ಔಷಧಿಗಳನ್ನು ಕೊಟ್ಟಿದ್ದು, ಐವರಿಗೆ ಡ್ರಿಪ್ ಹಾಕಿದ್ದೇವೆ. ಸಧ್ಯಕ್ಕೆ ಎಲ್ಲಾ ಪರಿಸ್ಥಿತಿ ಹತೋಟಿಯಲ್ಲಿದೆ. ಮದುವೆ ಊಟ ಗುರುವಾರ ರಾತ್ರಿಯದ್ದಾದ್ದರಿಂದ ಆಹಾರ ಅಥವಾ ಅದಕ್ಕೆ ಬಳಸಿದ ವಸ್ತುಗಳ್ಯಾವೂ ಸಿಗಲಿಲ್ಲ. ಅಲ್ಲಿ ಊಟ ಮಾಡಿದವರಿಗೆ ಮಾತ್ರ ಈ ತೊಂದರೆ ಕಾಣಿಸಿಕೊಂಡಿದೆ. ವರನ ಕಡೆಯವರು ಚಿಕ್ಕಬಳ್ಳಾಪುರ ತಾಲ್ಲೂಕಿನ ಮನ್ನಾರ್ ಪುರದವರಿಗೂ ಈ ತೊಂದರೆ ಕಾಣಿಸಿಕೊಂಡಿರುವುದರಿಂದ ಅಲ್ಲಿನ ವೈದ್ಯರಿಗೂ ವಿಷಯ ತಿಳಿಸಿದ್ದು, ಕ್ರಮ ಕೈಗೊಂಡಿದ್ದಾರೆ” ಎಂದು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಬಾಬುರೆಡ್ಡಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯೋಗೇಶ್ ಗೌಡ ಭೇಟಿ ನೀಡಿದ್ದರು. ಡಾ.ರಮೇಶ್, ಪಿಡಿಒ ಅಂಜನ್ ಕುಮಾರ್ ಹಾಜರಿದ್ದರು.
ರೈತರ ಮೇಳ ಮತ್ತು ಕೃಷಿ ವಸ್ತು ಪ್ರದರ್ಶನ
ತಾಲ್ಲೂಕಿನ ಸೊಣ್ಣೇನಹಳ್ಳಿಯಲ್ಲಿ ಶನಿವಾರ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮಣ್ಣು ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ರೈತರ ಮೇಳ ಮತ್ತು ಕೃಷಿ ವಸ್ತು ಪ್ರದರ್ಶನದಲ್ಲಿ ವಿಜ್ಞಾನಿ ಡಾ.ನಳಿನಿ ಮಾತನಾಡಿದರು.
ನಮ್ಮ ಶ್ರೀಮಂತಿಕೆಯು ನಮ್ಮ ಜಮೀನಿನ ಮಣ್ಣನ್ನು ಅವಲಂಬಿಸಿರುತ್ತದೆ. ಮಣ್ಣಿನ ಆರೋಗ್ಯಕ್ಕೆ ನಾವು ಗಮನ ಕೊಡುತ್ತಿಲ್ಲ. ವಿಷವನ್ನು ಹಾಕಿ ಎರೆಹುಳು ಸೇರಿದಂತೆ ಸಕಲ ಸೂಕ್ಷ್ಮಾಣು ಜೀವಿಗಳನ್ನೂ ಸಾಯಿಸಿದ್ದೇವೆ. ಇವತ್ತು ರಾಸಾಯನಿಕ ಬಳಸಿದ ಭೂಮಿಗೆ ನೀರು ಹಿಡಿದಿಡಲು ಆಗುತ್ತಿಲ್ಲ ಎಂದು ಅವರು ತಿಳಿಸಿದರು.
ಹಿಂದೆ ನಮ್ಮ ರೈತರಿಗೆ ಯಾವ ರೀತಿ ಕೃಷಿ ಮಾಡಬೇಕೆನ್ನುವುದು ಗೊತ್ತಿತ್ತು. ಅಕ್ಕಡಿ ಬೆಳೆಗಳನ್ನು ಹಾಕುತ್ತಿದ್ದರು. ಅವುಗಳ ಎಲೆಗಳು ಬಿದ್ದು ಭೂಮಿಗೆ ಹಾಸಿಗೆಯಂತಾಗುತ್ತಿತ್ತು. ಬಿದ್ದ ನೀರನ್ನು ಮಣ್ಣು ಹೀರಿಕೊಳ್ಳುತ್ತಿತ್ತು. ಆದರೆ ಈಗ ಹಸಿರುಕ್ರಾಂತಿಯ ದುಷ್ಪರಿಣಾಮ ದಶಕಗಟ್ಟಲೆ ರಾಸಾಯನಿಕ ಹಾಕಿದ ಮಣ್ಣಿನಲ್ಲಿ ಬಿದ್ದ ನೀರು ಇಂಗುವುದು ಕಷ್ಟವಾಗಿದೆ. ಭೂಮಿಯಲ್ಲಿ ನೀರು ಇಂಗಬೇಕಾದರೆ ಸಾವಯವ ಪದಾರ್ಥ ಇರಲೇಬೇಕು. ಆದ್ದರಿಂದ ಮಳೆನೀರಿನ ಕೊಯ್ಲು ಜೊತೆಗೆ ಸಾವಯವ ಸಮಗ್ರ ಬೇಸಾಯ ಪದ್ಧತಿಯ ಕಡೆಗೆ ರೈತರು ಮರಳಬೇಕು ಎಂದರು.
ನಮ್ಮ ಆರೋಗ್ಯಕರ ಭೂಮಿಯಲ್ಲಿನ ಕೋಟ್ಯಾಂತರ ಸೂಕ್ಷ್ಮಾಣು ಜೀವಿಗಳಿಗೆ ನಾವು ಸಾವಯವ ಗೊಬ್ಬರ ಕೊಡಬೇಕು, ಗಿಡಗಳಿಗಲ್ಲ. ಈ ಜೀವಿಗಳಿಗೆ ರಸಗೊಬ್ಬರಕ್ಕೆ ಹೊಂದಿಕೊಂಡು ಬದುಕುವ ಶಕ್ತಿಯಿಲ್ಲ. ಕೃಷಿಯನ್ನು ಲಾಭದಾಯಕವಾಗಿ ಮಾಡುವಲ್ಲಿ ಮಣ್ಣಿನ ಆರೋಗ್ಯ ಪ್ರಮುಖ ಪಾತ್ರವಹಿಸುತ್ತದೆ. ಫಲವತ್ತಾದ ಮಣ್ಣು ಬೆಳೆಗಳಿಗೆ ಬೇಕಾದ ಎಲ್ಲಾ 16 ಪೋಷಕಾಂಶಗಳನ್ನು ಸರಿಯಾದ ಪ್ರಮಾಣ, ಬೇಕಾದ ರೂಪದಲ್ಲಿ ಹಾಗೂ ಸಮಯದಲ್ಲಿ ಪೂರೈಸುವಂತಿರಬೇಕು. ಮನುಷ್ಯ ತನ್ನ ಆರೋಗ್ಯ ಕಾಪಾಡಿಕೊಳ್ಳಲು ಕಾಲ ಕಾಲಕ್ಕೆ ಹೇಗೆ ಆರೋಗ್ಯ ತಪಾಸಣೆ ಮಾಡಿಸುತ್ತಾನೊ ಹಾಗೆಯೇ, ಮಣ್ಣುಗಳ ಗುಣಧರ್ಮಗಳಲ್ಲಿ ಹಾಗೂ ಫಲವತ್ತತೆಯಲ್ಲಿ ಸ್ಥಳದಿಂದ ಸ್ಥಳಕ್ಕೆ ವಿಭಿನ್ನತೆಯಿದ್ದು ಇದನ್ನು ಸರಿದೂಗಿಸಿ ಕಾಲ ಕಾಲಕ್ಕೆ ಮಣ್ಣಿನ ಆರೋಗ್ಯವನ್ನು ತಿಳಿಯಲು ಮಣ್ಣು ಪರೀಕ್ಷೆ ಅತ್ಯಗತ್ಯವಾಗಿರುತ್ತದೆ ಎಂದು ಹೇಳಿದರು.
ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಟಿ.ಎಸ್.ಭಾಸ್ಕರ್ ರೆಡ್ಡಿ ಮಾತನಾಡಿ, ರೈತರು ತಮ್ಮ ಜಮೀನಿನ ಮಣ್ಣನ್ನು ಹೊರಹೋಗದಂತೆ ಕಾಪಾಡಿಕೊಳ್ಳಬೇಕು. ಬಿದ್ದ ಮಳೆ ನೀರನ್ನು ಹೊರಹೋಗಲು ಬಿಡಬಾರದು. ಗಿಡಮರಗಳನ್ನು ಸಾಕಷ್ಟು ಬೆಳೆಯಲು ಮುಂದಾಗಬೇಕು. ಎಲ್ಲಾ ಸಿರಿ ಸಂಪತ್ತು ಇರುವುದೆ ಹೊಲದ ಬದುವಿನಲ್ಲಿ. ಶ್ರೀಗಂಧ, ಹೆಬ್ಬೇವು, ಸಿಲ್ವರ್ ಓಕ್, ನಿಂಬೆ, ತೆಂಗು ಎಲ್ಲವನ್ನೂ ಬದುವಿನಲ್ಲಿ ಹಾಕಿದರೆ ಕೃಷಿಗೆ ಪೂರಕವಾದ ವಾತಾವರಣ ನಿರ್ಮಾಣವಾಗುತ್ತದೆ. ರೈತರು 12 ತಿಂಗಳು ಕೆಲಸ ಇರುವಂತೆ ಕೃಷಿ ಮಾಡಬೇಕು ಎಂದು ನುಡಿದರು.
ಸಹಾಯಕ ತೋಟಗಾರಿಕಾ ನಿರ್ದೇಶಕ ರಮೇಶ್ ಮಾತನಾಡಿ, ಗೋಡಂಬಿ, ನೇರಳೆ, ಕಡಿಮೆ ನೀರಿಗೆ ಬೆಳೆಯುವ ಬಾಳೆ, ಸೀತಾಫಲ ಮುಂತಾದ ವೈವಿಧ್ಯ ಬೆಳೆಗಳನ್ನು ಬೆಳೆಯುವ ಮೂಲಕ ಹಲವು ರೀತಿಯಲ್ಲಿ ಆದಾಯ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಣ್ಣು ಆರೋಗ್ಯ ಅಭಿಯಾನದ ಮಣ್ಣು ಆರೋಗ್ಯ ಚೀಟಿಯನ್ನು ರೈತರಿಗೆ ವಿತರಿಸಲಾಯಿತು. ಸಿರಿಧಾನ್ಯಗಳು ಹಾಗೂ ಅವುಗಳಿಂದ ತಯಾರಾದ ಆಹಾರ ಪದಾರ್ಥಗಳು, ರೈತರಿಗೆ ಉಅಪಯುಕ್ತ ಯಂತ್ರೋಪಕರಣಗಳ ಪ್ರದರ್ಶನವನ್ನು ನಡೆಸಲಾಗಿತ್ತು.
ದೇವರಮಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ, ತಾಲ್ಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಮಂಜುನಾಥರೆಡ್ಡಿ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಎಚ್.ರಾಮಕೃಷ್ಣಪ್ಪ, ಸಹಾಯಕ ಕೃಷಿ ನಿರ್ದೇಶಕ ಡಾ.ಎಸ್.ವಿ.ಮಂಜುನಾಥ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಜಿ.ಬಿ.ಮಾಲತೇಶ್, ಆತ್ಮಾ ಯೋಜನಾಧಿಕಾರಿ ಅಶ್ವಥನಾರಾಯಣ, ಶ್ರೀನಿವಾಸ್, ಎಸ್.ಎಂ.ನಾರಾಯಣಸ್ವಾಮಿ, ನಿರಂಜನ್ ಹಾಜರಿದ್ದರು.
ಮೇಲೂರು ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ ವಿ ರಾಮನ್ ಅವರ ಅಪೂರ್ವ ಸಾಧನೆಯ ನೆನಪಿನಲ್ಲಿ ಆಚರಿಸುವ ರಾಷ್ಟ್ರೀಯ ವಿಜ್ಞಾನ ದಿನವನ್ನು ಮೇಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶಿಷ್ಟವಾಗಿ ಆಚರಿಸಲಾಯಿತು.
ಶಾಲೆಯಲ್ಲಿ ಎಂದಿನಂತೆ ರಾಷ್ಟ್ರಗೀತೆಯ ನಂತರ ಶಾಲೆಯ ಕನ್ನಡ ಶಿಕ್ಷಕಿ ವಿದ್ಯಾ ಅವರು ರಚಿಸಿದ್ದ ವಿಜ್ಞಾನಿ ಸರ್ ಸಿ ವಿ ರಾಮನ್ ಕುರಿತಾದ ಕವನವನ್ನು ವಿದ್ಯಾರ್ಥಿಗಳು ಜೊತೆಗೂಡಿ ಹಾಡಿದರು.
ಒಂಬತ್ತನೇ ತರಗತಿಯ ವಿದ್ಯಾರ್ಥಿಗಳು ಗ್ರೀಸ್ ದೇಶದ ಪ್ರತಿಭಾವಂತ ಗಣಿತಶಾಸ್ತ್ರಜ್ಞ, ಸಂಶೋಧಕ ಆರ್ಕಿಮಿಡೀಸ್ ಕುರಿತಂತೆ ನಾಟಕವನ್ನು ಪ್ರದರ್ಶಿಸಿದರು. ವಿಜ್ಞಾನ ಪ್ರಯೋಗಗಳನ್ನು ಹಾಗೂ ವಿಜ್ಞಾನದ ರಸನಿಮಿಷಗಳು ಕುರಿತಂತೆ ವಿವಿಧ ಸಂಗತಿಗಳನ್ನು ವಿದ್ಯಾರ್ಥಿಗಳು ವಿವರಿಸಿದರು.
ವಿಜ್ಞಾನ ಶಿಕ್ಷಕಿ ಜಿ.ಸವಿತಾ ಮತ್ತು ಶಿಕ್ಷಕಿ ತುಳಸಿಮಾಲ ರಾಷ್ಟ್ರೀಯ ವಿಜ್ಞಾನ ದಿನದ ಮಹತ್ವ ಮತ್ತು ವಿಜ್ಞಾನಿ ಸರ್ ಸಿ ವಿ ರಾಮನ್ ಅವರ ವೈಜ್ಞಾನಿಕ ಅನ್ವೇಷಣೆಯ ಬಗ್ಗೆ ವಿವರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ಮುಖ್ಯಶಿಕ್ಷಕ ಗಂಗಪ್ಪ, ಶಿಕ್ಷಕರಾದ ಗಾಯತ್ರಿ, ವೆಂಕಟಶಿವಾರೆಡ್ಡಿ, ಸುಜಾತ, ಉದಯಶಂಕರ್ ಹಾಜರಿದ್ದರು.
ಶ್ರೀ ಸರಸ್ವತಿ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ
ನಗರದ ಶ್ರೀ ಸರಸ್ವತಿ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ 43 ನೇ ಶಾಲಾ ವಾರ್ಷಿಕೋತ್ಸವ ಹಾಗೂ 10 ನೇ ತರಗತಿ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ವಿದ್ಯಾಭಾರತಿ ಕರ್ನಾಟಕ ಮಾಜಿ ಪ್ರಾಂತೀಯ ಅಧ್ಯಕ್ಷ, ವಿಜ್ಞಾನ ಲೇಖಕ ಪ್ರೊ.ಎಂ.ಜೆ.ಸುಂದರ್‌ರಾಮ್ ಮಾತನಾಡಿದರು.
ಪ್ರತಿಯೊಂದನ್ನೂ ಸ್ವತಃ ನೋಡಿ, ಮಾಡಿ ಕಲಿಯುವ, ಎಲ್ಲದಕ್ಕೂ ಪುರಾವೆಯನ್ನು ಕೇಳುವ, ಪ್ರಶ್ನೆ ಕೇಳಿ ತಿಳಿದುಕೊಳ್ಳುವ, ಪ್ರಯೋಗ ಮಾಡಿ ಖಚಿತಪಡಿಸಿಕೊಳ್ಳುವ ಗುಣವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ವಿದ್ಯಾರ್ಥಿಗಳು ಪರಿಸರ ಸ್ನೇಹಿ ವೈಜ್ಞಾನಿಕ ಮನೋಭಾವ ಹೊಂದುವ ಮೂಲಕ ಪರಿಸರ ಕಾಪಾಡುವ ಕಾರ್ಯ ಮಾಡಬೇಕು. ವಿಜ್ಞಾನ ಎಂದರೆ ವಿಶಿಷ್ಟವಾದ ಜ್ಞಾನ, ಪ್ರತಿಯೊಬ್ಬರು ವೆಜ್ಞಾನಿಕ ಮನೋಭಾವ ಜತೆಗೆ ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಪ್ರಶ್ನೆ ಮಾಡದೆ ಯಾವುದನ್ನು ಸುಲಭವಾಗಿ ಒಪ್ಪಿಕೊಳ್ಳಬಾರದು ಎಂದು ಹೇಳಿದರು.
ವಿದ್ಯಾರ್ಥಿಗಳು ವಿಜ್ಞಾನ ಕಲಿಯಲು ಆಸಕ್ತರಾಗುವಂತಹ ವಾತಾವರಣ ಸೃಷ್ಟಿಸುವ ಅಗತ್ಯವಿದೆ. ಶಿಕ್ಷಕರು ಶಾಲೆಗಳಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಸಲಕರಣೆಗಳು ಹಾಗೂ ಇತರ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪರಿಣಾಮಕಾರಿ ಬೋಧನೆ ಮಾಡುವ ಮೂಲಕ ಮಕ್ಕಳನ್ನು ಪ್ರೇರೇಪಿಸಬೇಕು ಎಂದರು.
ವಾರ್ಷಿಕೋತ್ಸವದ ಅಂಗವಾಗಿ ಶಾಲಾ ಮಕ್ಕಳಿಂದ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನಸೆಳೆದವು.
ಶಿಕ್ಷಣ ಸಂಸ್ಥೆಯ ಸಂಸ್ಥೆಯ ಅಧ್ಯಕ್ಷ ಎನ್.ಶ್ರೀಕಾಂತ್, ಕಾರ್ಯದರ್ಶಿ ಆರ್.ನಾಗಲಕ್ಷ್ಮಿ, ಆಡಳಿತಾಧಿಕಾರಿ ಸೋಮಶೇಖರ್, ಮುಖ್ಯಶಿಕ್ಷಕರಾದ ಎಸ್.ವಿ.ರಘು, ಎಂ.ಅಗಜಾನನಮೂರ್ತಿ, ವಿ. ರುಕ್ಮಿಣಿ, ಬಿ. ಮಂಜುಳ, ಶಿಕ್ಷಕಿ ಸಾವಿತ್ರಮ್ಮ ಹಾಜರಿದ್ದರು.
ಮಳಮಾಚನಹಳ್ಳಿಯಲ್ಲಿ ಕರುಗಳ ಪ್ರದರ್ಶನ
ತಾಲ್ಲೂಕಿನ ಮಳಮಾಚನಹಳ್ಳಿಯಲ್ಲಿ ಗುರುವಾರ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ, ಗ್ರಾಮ ಪಂಚಾಯಿತಿ, ಸುತ್ತಮುತ್ತಲಿನ ಗ್ರಾಮಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಯೋಗದಲ್ಲಿ ನಡೆದ ಮಿಶ್ರತಳಿ ಕರುಗಳ ಪ್ರದರ್ಶನದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಸಹಾಯ ನಿರ್ದೇಶಕ ಎಚ್.ವಿ.ಮುನಿನಾರಾಯಣರೆಡ್ಡಿ ಮಾತನಾಡಿದರು.
ರೈತರಿಗೆ ಹೈನುಗಾರಿಕೆಯಲ್ಲಿ ಇನ್ನಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಇಲಾಖೆ ಮತ್ತು ಹಾಲು ಒಕ್ಕೂಟದಿಂದ ಕರುಗಳ ಪ್ರದರ್ಶನ ಆಯೋಜಿಸಲಾಗಿದೆ. ಪಶುವೈದ್ಯರ ತಂಡವೇ ಇಲ್ಲಿರುವುದರಿಂದ ರೈತರು ತಮ್ಮ ಅನುಮಾನಗಳನ್ನು ಪರಿಹರಿಸಿಕೊಂಡು ವೈದ್ಯರಿಂದ ನೆರವನ್ನು ಪಡೆದುಕೊಳ್ಳಲು ಇದು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.
ಪಶುಪಾಲನೆ ಇಂದು ಕೇವಲ ಒಂದು ಕಸುಬಾಗಿ ಉಳಿಯದೆ ಉದ್ಯಮವಾಗಿ ಬೆಳೆದು ನಿಂತಿದೆ. ಪಶುಪಾಲನೆ ಈ ಹಂತಕ್ಕೇರಲು ಪಶುಪಾಲನೆ ಮತ್ತು ಪಶುವೈದ್ಯಸೇವಾ ಇಲಾಖೆಯ ಕೊಡುಗೆ ಅಪಾರ. ಈ ನಿಟ್ಟಿನಲ್ಲಿ ಇಲಾಖೆಯು ಉತ್ತಮ ಗುಣಮಟ್ಟದ ಹಸುಗಳ ಸಾಕಾಣಿಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರದರ್ಶನವನ್ನು ಏರ್ಪಡಿಸಿ ಆಯ್ಕೆಯಾದ ಕರುಗಳಿಗೆ ಬಹುಮಾನ ನೀಡಿ ಗೌರವಿಸಲಾಗುತ್ತದೆ ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯ ರಾಜಶೇಖರ್ ಮಾತನಾಡಿ, ಜಿಲ್ಲೆಯ ಗ್ರಾಮೀಣ ಜನತೆಯ ಪ್ರಮುಖ ಉದ್ಯೋಗ ವ್ಯವಸಾಯ ಮತ್ತು ವ್ಯವಸಾಯ ಅವಲಂಬಿತ ಉಪಕಸುಬುಗಳಾಗಿದ್ದು, ಈ ಕಸುಬುಗಳ ನಿರ್ವಹಣೆಗೆ ಉಳುವ ಎತ್ತುಗಳು, ಗೊಬ್ಬರಕ್ಕಾಗಿ ಜಾನುವಾರುಗಳ ಮೇಲಿನ ಅವಲಂಬನೆ ನಿಚ್ಚಳವಾಗಿದೆ. ಪಶುಸಂಗೋಪನೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಉತ್ಪಾದನೆಯನ್ನು ಹೆಚ್ಚಿಸಿ ಉತ್ಪಾದಕರು ಮತ್ತು ಗ್ರಾಹಕರಿಬ್ಬರಿಗೂ ಅನುಕೂಲ ಮಾಡುವ ಉದ್ದೇಶದಿಂದ ಇಲಾಖೆ ಕೈಗೊಂಡ ಈ ಪ್ರದರ್ಶನ ಉಪಯುಕ್ತವಾದುದು ಎಂದರು.
ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋದಗೂರು, ಬಸವಾಪಟ್ಟಣ, ಮುಗಿಲಡಿಪಿ, ಮಳಮಾಚನಹಳ್ಳಿ ಮುಂತಾದ ಗ್ರಾಮಗಳಿಂದ ಪ್ರದರ್ಶನದಲ್ಲಿ 66 ಕರುಗಳನ್ನು ರೈತರು ತಂದಿದ್ದರು. ವಿವಿಧ ವಿಭಾಗಗಳಲ್ಲಿ ಬಹುಮಾನಗಳು ಹಾಗೂ ಉಳಿದವರಿಗೆ ಸಮಾಧಾನಕರ ಬಹುಮಾನವನ್ನು ನೀಡಲಾಯಿತು.
ಎಂ.ಪಿ.ಸಿ.ಎಸ್.ನಿರ್ದೇಶಕರಾದ ರಾಜಣ್ಣ, ಮುನಿರಾಜು, ರಾಮಾಂಜಿ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಾಂಜಿ, ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಸಿ.ನಾಗರಾಜ್, ಡಾ.ಡಿ.ಎನ್.ಮಧು, ಡಾ.ರವಿಚಂದ್ರ, ಡಾ.ಶೀಲ, ಡಾ.ವಿನೋದ್ ಕುಮಾರ್, ಡಾ.ಮುನಿಶಾಮಿಗೌಡ, ಡಾ.ನವೀನ್, ಡಾ.ಸುಪ್ರೀತ್, ಡಾ.ಬಿಂದುಜಾ ಹಾಜರಿದ್ದರು.
ಬಹುಮಾನಿತರ ವಿವರ :
0-3 ತಿಂಗಳ ಮಿಶ್ರತಳಿ ಕರುಗಳು : ಎಂ.ಗಂಗಾಧರ, ಮಳಮಾಚನಹಳ್ಳಿ (ಪ್ರಥಮ), ಮೋಹನ್ ಬಾಬು, ಮಳಮಾಚನಹಳ್ಳಿ (ದ್ವಿತೀಯ), ಮುನೇಗೌಡ, ಮಳಮಾಚನಹಳ್ಳಿ (ತೃತೀಯ)
4-6 ತಿಂಗಳ ಮಿಶ್ರತಳಿ ಕರುಗಳು : ಆರ್.ನಾಗೇಶ್, ಮಳಮಾಚನಹಳ್ಳಿ (ಪ್ರಥಮ), ಆರ್.ನಾರಾಯಣಸ್ವಾಮಿ, ಮಳಮಾಚನಹಳ್ಳಿ (ದ್ವಿತೀಯ), ವೆಂಕಟೇಶಪ್ಪ, ಮಳಮಾಚನಹಳ್ಳಿ (ತೃತೀಯ)
7-12 ಮಿಶ್ರತಳಿ ಕರುಗಳು : ಸುರೇಶ್, ಮಳಮಾಚನಹಳ್ಳಿ (ಪ್ರಥಮ), ಮುನಿರತ್ನಮ್ಮ, ಮಳಮಾಚನಹಳ್ಳಿ (ದ್ವಿತೀಯ), ರಮಾದೇವಿ, ಮಳಮಾಚನಹಳ್ಳಿ (ತೃತೀಯ)
ನಾಟಿ ಹಸುಗಳು : ಬೈರಾರೆಡ್ಡಿ, ಮಳಮಾಚನಹಳ್ಳಿ (ಪ್ರಥಮ), ಗುಂಡಪ್ಪ, ಮಳಮಾಚನಹಳ್ಳಿ (ದ್ವಿತೀಯ), ಎಂ.ಕೃಷ್ಣಪ್ಪ, ಬಸವಾಪಟ್ಟಣ (ತೃತೀಯ)
ಉತ್ತಮ ಪರ್ಯಾಯ ಆರೋಗ್ಯ ಕ್ರಮಗಳ ಕುರಿತ ಉಪನ್ಯಾಸ ಕಾರ್ಯಕ್ರಮ
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕಶಾಲಾ ಆವರಣದಲ್ಲಿನ ಸ್ವಾಮಿವಿವೇಕಾನಂದ ವೇದಿಕೆಯಲ್ಲಿ ಸುಂದರಲಾಲ್ ಬಹುಗುಣ ಇಕೋಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಉತ್ತಮ ಪರ್ಯಾಯ ಆರೋಗ್ಯ ಕ್ರಮಗಳ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಪರ್ಯಾಯ ಚಿಕಿತ್ಸಕಿ, ಹೀಲಿಂಗ್ ತಜ್ಞೆ ಡಾ.ಅನ್ಷಿತಾ ಮಾತನಾಡಿದರು.
ಆರೋಗ್ಯವೇ ಮಾಹಾಭಾಗ್ಯ. ಲೌಕಿಕ ಸುಖಗಳು ಮನಸ್ಸಿಗೆ ಸುಖ, ಶಾಂತಿ, ನೆಮ್ಮದಿಯನ್ನು ಕೊಡುವುದಿಲ್ಲ. ಒತ್ತಡರಹಿತ ಬದುಕನ್ನು ನಮ್ಮದಾಗಿಸಿಕೊಳ್ಳುವ ಮೂಲಕ ಆರೋಗ್ಯವನ್ನು ವೃದ್ಧಿಸಿಕೊಂಡು ಆಯಸ್ಸು ಹೆಚ್ಚಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.
ದೈಹಿಕ ಆರೋಗ್ಯಕ್ಕಾಗಿ ನಿಯಮಿತವಾದ ದಿನಚರಿಯುಳ್ಳ ವ್ಯಾಯಾಮ, ಶಾರೀರಿಕ ಚಟುವಟಿಕೆ, ನಿಯಮಿತ ಆಹಾರಸೇವನೆಯನ್ನು ಅನುಸರಿಸಬೇಕು. ಮಾನಸಿಕ ಸ್ವಾಸ್ಥ್ಯಕ್ಕಾಗಿ ಪರಸ್ಪರ ಸೌಹಾರ್ದಯುತ, ಸಹಕಾರ, ಶಾಂತಿ, ಸಾಮರಸ್ಯವನ್ನು ಕಾಯ್ದುಕೊಳ್ಳಬಲ್ಲ ಮನೋಗುಣವು ಬೆಳೆಸಿಕೊಳ್ಳಬೇಕು ಎಂದರು.
ಸುಂದರಲಾಲ್ ಬಹುಗುಣ ಇಕೋಕ್ಲಬ್‌ನ ಶಿಕ್ಷಕಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಮನಸ್ಸು ಮತ್ತು ದೇಹಗಳಲ್ಲಿನ ಗೌರವತತ್ವ ದೂರವಾಗಿ ದೀರ್ಘಾವಧಿಯ ಋಣಾತ್ಮಕ ಪರಿಣಾಮಗಳಾಗುತ್ತಿವೆ. ನಿತ್ಯಬಳಕೆಯ ಔಷಧಿಗಳ ಬಳಕೆಯಿಂದ ವ್ಯತಿರಿಕ್ತ ಪರಿಣಾಮ, ಪರಿಸರಮಾಲಿನ್ಯ, ಒತ್ತಡದ ಬದುಕು ಆರೋಗ್ಯವನ್ನು ಹಾಳುಮಾಡುತ್ತಿವೆ. ಪರ್ಯಾಯ ಆರೋಗ್ಯಕ್ರಮಗಳಿಂದಾಗಿ ನಿದ್ರಾಹೀನತೆ, ಬುದ್ಧಿಚುರುಕುತನ, ಸ್ಮರಣಶಕ್ತಿಯ ವೃದ್ಧಿ ಸಾಧ್ಯವಿದೆ ಎಂದರು.
ಆರೋಗ್ಯ, ಸ್ಮರಣಶಕ್ತಿ ವೃದ್ಧಿಯ ಬಗ್ಗೆ ಉಪಯುಕ್ತ ಮಾಹಿತಿಯನ್ನು ಹೇಳಲಾಯಿತು. ಪ್ರೀತಿ, ಶಾಂತಿ, ಸಾಮರಸ್ಯ ಕುರಿತ ಹಾಡುಗಳನ್ನು ಹಾಡಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಎಂ.ಶಂಕರಪ್ಪ, ಮಾಜಿ ಸದಸ್ಯ ಬಚ್ಚೇಗೌಡ, ಮುಖ್ಯಶಿಕ್ಷಕಿ ಉಮಾದೇವಿ, ಪರ್ಯಾಯ ಚಿಕಿತ್ಸಾ ತಜ್ಞರಾದ ಕಲ್ಪನಾ, ಹರ್ಷವರ್ಧಿನಿ, ಎಸ್.ಎನ್.ಪ್ರಮೀಳಾದೇವಿ, ಜಿ.ವರುಣ್‌ರಾಜ್, ಶಿಕ್ಷಕ ಬಿ.ನಾಗರಾಜು, ಎ.ಬಿ.ನಾಗರಾಜ, ಎಂ.ವೈ.ಲಕ್ಷ್ಮಯ್ಯ, ಶಿಕ್ಷಕಿ ತಾಜೂನ್ ಹಾಜರಿದ್ದರು.
ಸರಸ್ವತಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ವೈದ್ಯರಿಂದ ಆರೋಗ್ಯದದ ಬಗ್ಗೆ ಮಾಹಿತಿ
ನಗರದ ಸರಸ್ವತಿ ವಿದ್ಯಾಸಂಸ್ಥೆಯಲ್ಲಿ ಗುರುವಾರ ಶಾಲಾ ಮಕ್ಕಳ ರಕ್ತದ ಗುಂಪಿನ ಪರಿಚಯ ಹಾಗೂ ಆರೋಗ್ಯದ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಗರದ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ವಿಜಯ್‌ಕುಮಾರ್ ಮಾತನಾಡಿದರು.
ಈಗಾಗಲೇ ಬೇಸಿಗೆ ಶುರುವಾಗಿದ್ದು ತಾಫಮಾನ ಹೆಚ್ಚಾಗಿರುವುದರಿಂದ ಮಕ್ಕಳು ಹೆಚ್ಚಾಗಿ ದ್ರವ ಪದಾರ್ಥಗಳನ್ನು ಸೇವಿಸಬೇಕು. ಆರೋಗ್ಯದ ಬಗ್ಗೆ ಹೆಚ್ಚಿ ಕಾಳಜಿ ವಹಿಸಬೇಕು ಎಂದು ಅವರು ತಿಳಿಸಿದರು.
ಮಕ್ಕಳಿಗೆ ಶುಚಿತ್ವ, ಆಹಾರ ಪದ್ಧತಿ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ತಮ್ಮ ರಕ್ತದ ಗುಂಪು ಯಾವುದು ಎನ್ನುವುದನ್ನು ತಿಳಿಸಲು ಶಾಲೆಗಳಿಗೆ ಭೇಟಿ ನೀಡಿ ರಕ್ತದ ಗುಂಪು ಪರೀಕ್ಷೆ ಮಾಡುವ ಕೆಲಸ ಕೂಡ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಸುಮಾರು 442 ಮಕ್ಕಳ ರಕ್ತ ಪರೀಕ್ಷೆ ನಡೆಸಿ ಮಕ್ಕಳಿಗೆ ಅವರ ರಕ್ತದ ಗುಂಪಿನ ಬಗ್ಗೆ ತಿಳಿಸಲಾಯಿತು.
ಡಾ.ಸೋನಾಲಿ, ಡಾ.ರಾಘವೇಂದ್ರ, ಡಾ.ಭರತ್, ಡಾ.ವೈಶಾಲಿ, ಆಸ್ಪತ್ರೆಯ ಸಿಬ್ಬಂದಿ ನಂದಿನಿ, ಮುನಿರತ್ನಮ್ಮ, ಲೋಕೇಶ್, ವಿಜಯ, ಸುಮಾ, ಭ್ರಮರಾಂಬಿಕಾ, ದರ್ಶಿನಿ ಹಾಜರಿದ್ದರು.
ನಿವೇಶನ ರಹಿತರಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ತಿಪ್ಪೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ಆಶ್ರಯ ನಿವೇಶನ ಯೋಜನೆಯಡಿ ನಿವೇಶನ ರಹಿತರಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಈ ಬೇಸಿಗೆಯಲ್ಲಿ ನೀರಿನ ಅಭಾವವನ್ನು ಎದುರಿಸುವ ನಿಟ್ಟಿನಲ್ಲಿ ನಾವೆಲ್ಲರೂ ಜಾಗೃತರಾಗಬೇಕು. ಮಳೆಕೊಯ್ಲನ್ನು ನಾವು ಈಗಿನಿಂದಲೇ ಪ್ರಾರಂಭಿಸಬೇಕು ಎಂದು ಅವರು ಹೇಳಿದರು.
ಕಳೆದ ಇಪ್ಪತ್ತೈದು ವರ್ಷಗಳಿಂದ ಸರಿಯಾದ ಮಳೆಗಳಿಲ್ಲದೇ ಈ ಭಾಗದ ಜನತೆ ಪರದಾಡುವಂತಾಗಿದ್ದಾರೆ. ಜಿಲ್ಲೆಯಾಧ್ಯಂತ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು ಜನತೆಗೆ ನೀರು ಪೂರೈಸಲು ಅನಿವಾರ್ಯವಾಗಿ ಕೊಳವೆಬಾವಿಗಳ ಮೊರೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇಷ್ಟಾದರೂ ಸಮರ್ಪಕ ನೀರು ಪೂರೈಸಲು ಆಗುತ್ತಿಲ್ಲ ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚಿಕ್ಕನರಸಿಂಹಯ್ಯ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದಷ್ಟು ಸರ್ಕಾರಿ ಜಾಗವಿದೆ ಎಂದು ಗೊತ್ತಾದರೆ ಸಾಕು ಅಧಿಕಾರಿಗಳನ್ನು ಹಿಡಿದು ಕಬಳಿಸಲು ಮುಂದಾಗುವ ಸ್ಥಿತಿಯಿರುವಾಗ, ಇಂದಿಗೂ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಪ್ಪೇನಹಳ್ಳಿ ಗ್ರಾಮದ ನಿವೇಶನ ರಹಿತರಿಗೆ ನಿವೇಶನಗಳನ್ನು ನೀಡಲು ಸುಮಾರು 4.5 ಎಕರೆ ಸ್ಥಳ ಉಳಿಸಿಕೊಂಡಿರುವ ಪಂಚಾಯಿತಿಯ ಕಾರ್ಯ ಶ್ಲಾಘನೀಯ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾ ರಘು ಮಾತನಾಡಿ, ಕೋಲಾರ ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳು ಬರಗಾಲ ಪೀಡಿತ ಜಿಲ್ಲೆಗಳಾಗಿದ್ದು ಶಿಡ್ಲಘಟ್ಟ ತಾಲ್ಲೂಕನ್ನು ಸಹ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಲು ಮಾನ್ಯ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಬರಪೀಡಿತ ತಾಲ್ಲೂಕು ಎಂದು ಘೋಷಣೆಯಾಗಿದ್ದೇ ಆದಲ್ಲಿ ಕ್ಷೇತ್ರದ ಮತ್ತಷ್ಟು ಜನರಿಗೆ ಕೊಳವೆ ಬಾವಿ ಕೊರೆಸಲು ಅವಕಾಶವಾಗುತ್ತದೆ, ಸರ್ಕಾರದ ಸಹಾಯಹಸ್ತ ಸಿಗುತ್ತದೆ ಎಂದರು.
ಈ ಸಂದರ್ಭದಲ್ಲಿ ತಿಪ್ಪೇನಹಳ್ಳಿ ಗ್ರಾಮದ ಸುಮಾರು 30 ಮಂದಿಗೆ ನಿವೇಶನ ಹಕ್ಕು ಪತ್ರ ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಸಿಇಓ ಫೌಜಿಯಾ ತರನ್ನುಮ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಮ್ಮ, ಉಪಾಧ್ಯಕ್ಷ ಸುರೇಂದ್ರ, ತಾಲ್ಲೂಕು ಪಂಚಾಯಿತಿ ಇಓ ಬಿ.ಶಿವಕುಮಾರ್, ಕೋಚಿಮುಲ್ ನಿರ್ದೇಶಕ ಶ್ರೀನಿವಾಸ್, ಕೆ.ಗುಡಿಯಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್ ಹಾಜರಿದ್ದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಣೆ
ನಗರದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಶಿಬಿರ ಕಚೇರಿಯಲ್ಲಿ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ವಿತರಿಸುವ 2019-20 ನೇ ಸಾಲಿನ ಸುಜ್ಞಾನನಿಧಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿದರು.
ಗ್ರಾಮೀಣ ಅಭಿವೃದ್ಧಿಯಲ್ಲಿ ಧರ್ಮಸ್ಥಳ ಯೋಜನೆಯ ಪಾತ್ರ ಅತ್ಯಂತ ಮಹತ್ವವಾದದ್ದು. ಒಂದು ಸರ್ಕಾರ ಮಾಡುವ ಕೆಲಸವನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳು ನೂರಾರು ಜನಪರ ಕಾರ್ಯಕ್ರಮಗಳ ಮೂಲಕ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ಓದುವ ಮಕ್ಕಳಿಗೆ ನೆರವು, ಅಶಕ್ತ ವೃದ್ಧರಿಗೆ ಸಹಾಯಹಸ್ತ, ಕುಡಿತ ಬಿಡಿಸುವುದು, ಕೃಷಿಗೆ ಉಪಕರಣಗಳನ್ನು ಕಡಿಮೆ ದರದಲ್ಲಿ ಬಾಡಿಗೆಗೆ ನೀಡುವುದು, ಸೋಲಾರ್ ದೀಪ, ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ವಿವಿಧ ಯೋಜನೆಗಳನ್ನು ಮಾಡುವ ಮೂಲಕ ಪ್ರತಿಭಾ ಪಲಾಯನ ಮತ್ತು ನಗರಕ್ಕೆ ವಲಸೆ ಹೋಗುವುದನ್ನು ತಪ್ಪಿಸುತ್ತಿರುವ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಗಳು ಸಮಾಜವನ್ನು ಬೆಳಗುತ್ತಿವೆ ಎಂದರು.
ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಿ.ವಸಂತ್ ಮಾತನಾಡಿ, ವಿದ್ಯಾರ್ಥಿಗಳು ಶಿಷ್ಯವೇತನವನ್ನು ಪಡೆದುಕೊಂಡು ಮುಂದಿನ ಜೀವನದಲ್ಲಿ ಶೈಕ್ಷಣಿಕ ಪ್ರಗತಿಯ ಜೊತೆಗೆ ಸಮಾಜಕ್ಕೆ ಮಾದರಿಯಾಗಬೇಕು. ಧರ್ಮಸ್ಥಳ ಯೋಜನೆಯ ಮೂಲಕ ಇದುವರೆಗೆ ರಾಜ್ಯದಲ್ಲಿ 36,000 ವಿದ್ಯಾರ್ಥಿಗಳಿಗೆ 45 ಕೋಟಿ ಶಿಷ್ಯವೇತನ ನೀಡುವುದರ ಮೂಲಕ ಅರ್ಥಿಕ ಸಹಾಯ ಮಾಡಲಾಗಿದೆ. ಇದುವರೆಗೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ 181 ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ತ್ಯಾಗರಾಜ್ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ ಧರ್ಮಸ್ಠಳ ಯೋಜನೆ ಮಾಡದ ಕಾರ್ಯಕ್ರಮಗಳಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಜಿಲ್ಲಾ ಜನಜಾಗ್ರತಿ ವೇದಿಕೆ ಸದಸ್ಯ ನಾಗೇಂದ್ರ ಕೃಷಿ ಮೇಲ್ವಿಚಾರಕ ಹರೀಶ್ ಹಾಜರಿದ್ದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪಕರ ದಿನಾಚರಣೆ
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿಡ್ಲಘಟ್ಟ ತಾಲ್ಲೂಕು ಸ್ಥಳೀಯ ಸಂಸ್ಥೆಯ ವತಿಯಿಂದ ಶನಿವಾರ ನಡಿಪಿನಾಯಕನಹಳ್ಳಿಯ ನವೋದಯ ಶಾಲೆಯಲ್ಲಿ ಸಂಸ್ಥಾಪಕರ ದಿನಾಚರಣೆ ಮತ್ತು ಚಿಂತನಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು .
ಧ್ವಜಾರೋಹಣದೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿ ಸರ್ವಧರ್ಮ ಪ್ರಾರ್ಥನೆ ಹಾಗೂ ಊರಿನ ರಸ್ತೆಗಳಲ್ಲಿ ಸೈಕಲ್ ರ್ಯಾಲಿಯನ್ನು ನಡೆಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದ ಸ್ಕೌಟ್ಸ್ ಮತ್ತು ಗೈಡ್ಸ್ ಗಳಿಗೆ ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನವೋದಯ ವಿದ್ಯಾಸಂಸ್ಥೆಯ ಅಧ್ಯಕ್ಷ ಕೃಷ್ಣಮೂರ್ತಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತಾಲ್ಲೂಕು ಕಾರ್ಯದರ್ಶಿ ಸಿ.ಬಿಪ್ರಕಾಶ್, ಸಹಕಾರ್ಯರ್ಶಿ ಬಿ.ಸಿ ಮುನಿರಾಜು ಹಾಗೂ ಗೈಡ್ ಕ್ಯಾಪ್ಟನ್ ಶ್ವೇತಾ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ಗಳು ಭಾಗವಹಿಸಿದ್ದರು.
ಕಾಚಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಜ್ಜಿ ಕಥೆ ಕಾರ್ಯಕ್ರಮ
ತಾಲ್ಲೂಕಿನ ಕಾಚಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಅಜ್ಜಿ ಕಥೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮುಖ್ಯಶಿಕ್ಷಕಿ ಆರ್.ರಾಜೇಶ್ವರಿ ಮಾತನಾಡಿದರು.
ನಾಗರೀಕತೆಯ ಹೆಸರಿನಲ್ಲಿ ಒತ್ತಡದ ಜೀವನ ನಡೆಸುವುದು ಸೇರಿದಂತೆ ದಿನ ಪೂರ್ತಿ ಮೊಬೈಲ್ ಬಳಕೆಯಲ್ಲಿಯೇ ನಿರತರಾಗಿರುವ ಪೋಷಕರಿಂದ ಇಂದಿನ ಬಹುತೇಕ ಮಕ್ಕಳು ಹಳೆಯ ಕಾಲದ ನಮ್ಮ ಸಂಸ್ಕೃತಿಯನ್ನು ತಿಳಿದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಹಿಂದಿನ ಕಾಲದಲ್ಲಿ ಮಕ್ಕಳು ತಮ್ಮ ಅಜ್ಜ, ಅಜ್ಜಿಯರೊಂದಿಗೆ ಬಹುತೇಕ ಸಮಯ ಕಳೆಯುತ್ತಿದ್ದು ಅವರಿಂದ ಅವರ ಅನುಭವಗಳು ಸೇರಿದಂತೆ ಕಥೆ, ಹಾಡು, ಲಾವಣಿ ಕೇಳುವ ಮೂಲಕ ತಮ್ಮ ಜೀವನ ರೂಡಿಸಿಕೊಳ್ಳುತ್ತಿದ್ದರು. ಆದರೆ ಇದೀಗ ಪೋಷಕರ ಒತ್ತಡದ ಜೀವನ ಸೇರಿದಂತೆ ಶಾಲಾ ಪಠ್ಯ ಪುಸ್ತಕಗಳಿಗೆ ಮಾತ್ರ ಸೀಮಿತವಾಗಿರುವ ಮಕ್ಕಳು ಅಜ್ಜಿಯರ ಜೊತೆ ಬೆರೆಯುವುದೇ ವಿರಳವಾಗಿದೆ. ಹಾಗಾಗಿ ನಮ್ಮ ಶಾಲೆಯಲ್ಲಿ ಇಂದು ಅಜ್ಜಿ ಕಥಟ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು ಗ್ರಾಮದ ಎಲ್ಲಾ ಎಲ್ಲಾ ಹಿರಿಯ ಜೀವಗಳು ಸೇರಿದಂತೆ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಅಜ್ಜಿಯಂದಿರನ್ನು ಕರೆಸಿ ಮಕ್ಕಳಿಗೆ ಅವರ ಜೀವನಾನುಭವ ಸೇರಿದಂತೆ ಅವರಲ್ಲಿರುವ ಜ್ಞಾನವನ್ನು ಮಕ್ಕಳಿಗೆ ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ ಎಂದರು. ಸಹ ಶಿಕ್ಷಕ ವಿ.ಚಂದ್ರಶೇಖರ್ ಅಜ್ಜಿ ಕಥೆ ಕಾರ್ಯಕ್ರಮದ ಬಗ್ಗೆ ಆಶಯ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಗ್ರಾ.ಪಂ ಸದಸ್ಯೆ ರತ್ನಮ್ಮ, ಸಂಪಂಗೆಮ್ಮ, ನಾರಾಯಣಮ್ಮ, ಲಕ್ಷ್ಮಮ್ಮ, ಜಯಮ್ಮ, ಮುನಿಯಮ್ಮ ರತ್ನಮ್ಮ, ಮದ್ದೂರಮ್ಮ ಅಡುಗೆ ಸಹಾಯಕಿ ಗಾಯಿತ್ರಮ್ಮ ಮತ್ತಿತರರು ಭಾಗವಹಿಸಿ ಮಕ್ಕಳಿಗೆ ಕಥೆ, ಹಾಡು, ಲಾವಣಿಗಳನ್ನು ಹೇಳಿಕೊಡುವ ಮೂಲಕ ಶಾಲಾ ಮಕ್ಕಳನ್ನು ಆಶೀರ್ವದಿಸಿದರು. ಶಾಲಾಭಿವೃದ್ದಿ ಸಮಿತಿ ಸದಸ್ಯರು ಹಾಜರಿದ್ದರು.
ಥ್ರೋಬಾಲ್ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾದ ತನುಜ್ ಗೌಡನಿಗೆ ಪ್ರೋತ್ಸಾಹ ಧನ ವಿತರಣೆ
ಶಿಡ್ಲಘಟ್ಟ ತಾಲ್ಲೂಕು ಜಂಗಮಕೋಟೆ ಹೋಬಳಿ ಘಟಮಾರನಹಳ್ಳಿಯ ತನೋಜ್ ಗೌಡ ಥ್ರೋಬಾಲ್ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾಗಿ ಪದಕಗಳನ್ನು ಗೆದ್ದಿದ್ದು, ಸೋಮವಾರ ಕೋಚಿಮುಲ್ ವತಿಯಿಂದ ಹೈನುಗಾರಿಕೆಯ ಕುಟುಂಬದ ಸದಸ್ಯನೆಂದು ಪ್ರೋತ್ಸಾಹಕವಾಗಿ 25 ಸಾವಿರ ರೂಗಳ ಚೆಕ್ ನೀಡಿದ್ದಾರೆ.
ತಾಲ್ಲೂಕಿನ ಘಟಮಾರನಹಳ್ಳಿಯ ನಂಜೇಗೌಡ ಮತ್ತು ಮಂಜುಳಮ್ಮ ದಂಪತಿ ಹೈನುಗಾರಿಕೆಯನ್ನು ನಂಬಿರುವ ರೈತಕುಟುಂಬದವರು. ಇವರ ಮಗ ತನೋಜ್ ಗೌಡ ಹತ್ತನೇ ತರಗತಿಯವರೆಗೂ ನವೋದಯ ನಡಿಪಿನಾಯಕನಹಳ್ಳಿಯಲ್ಲಿ ವ್ಯಾಸಂಗ ಮಾಡಿ, ಡಿಪ್ಲೊಮಾ ಮಾಡಿ ನಂತರ ಈಗ ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿ.ಕಾಂ ಎರಡನೇ ವರ್ಷ ಓದುತ್ತಿದ್ದಾನೆ.
ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ತನೋಜ್ ಗೌಡ, ಕಾಲೇಜಿನಲ್ಲಿ ಸಿಕ್ಕ ತರಬೇತಿಯಿಂದಾಗಿ ಥ್ರೋಬಾಲ್, ಫೆನ್ಸಿಂಗ್, ಅಮೆರಿಕನ್ ಫುಟ್ ಬಾಲ್ ಕ್ರೀಡೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾನೆ. ಮೈಸೂರು ದಸರಾದಲ್ಲಿ ಫೆನ್ಸಿಂಗ್ ಕ್ರೀಡೆಯಲ್ಲಿ ಪ್ರಶಸ್ತಿ ಪಡೆದಿರುವನು.
“ಥ್ರೋಬಾಲ್ ಕ್ರೀಡೆಯಲ್ಲಿ ಜೈಪುರದಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗಿಯಾಗಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದೆವು. ಪಂಜಾಬ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕ ತಂಡದ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿ ಪ್ರಶಸ್ತಿ ಪಡೆದಿರುವೆ. ಮನೆಯಲ್ಲಿ ನನಗೆ ಕ್ರೀಡೆಯಲ್ಲಿ ಇಷ್ಟವಿದೆಯೆಂದಾಗ ಪ್ರೋತ್ಸಾಹಿಸಿದರು. ನಮ್ಮ ಕ್ರೀಡಾ ಗುರುಗಳು ಚೆನ್ನಾಗಿ ಕಲಿಸಿದ್ದರಿಂದ ಈಗ ರಾಷ್ಟ್ರಮಟ್ಟದಲ್ಲಿ ಆಡುವಂತಾಗಿದ್ದೇನೆ. ಕ್ರೀಡೆಯಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ, ದೇಶಕ್ಕೆ ಹೆಸರು ತರಬೇಕೆಂಬ ಆಸೆಯಿದೆ” ಎಂದು ತನೋಜ್ ಗೌಡ ತಿಳಿಸಿದರು.
ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ವಾಷೀಕೋತ್ಸವದ ಕಾರ್ಯಕ್ರಮ
ತಾಲ್ಲೂಕಿನ ಸುಂಡ್ರಹಳ್ಳಿ ಗ್ರಾಮದ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ವಾಷೀಕೋತ್ಸವದ ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಮಕ್ಕಳಿಗೆ ಆಸ್ತಿ ಮಾಡಿಡುವುದರ ಬದಲಾಗಿ ಅವರನ್ನು ವಿದ್ಯಾವಂತರಾಗಿ, ಸತ್ಪ್ರಜೆಗಳನ್ನಾಗಿ ಮಾಡುವುದು ಬಹು ಮುಖ್ಯ ಎಂದು ಅವರು ತಿಳಿಸಿದರು.
ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ಯಾವ ಖಾಸಗಿ ಶಾಲೆಗೂ ಕಡಿಮೆಯಿಲ್ಲದ ಹಾಗೆ ಸೌಕರ್ಯ ಹಾಗೂ ವಿದ್ಯಾಭ್ಯಾಸ ನೀಡುತ್ತಿದೆ. ಅತ್ಯುತ್ತಮ ಶಿಕ್ಷಕ ವೃಂದ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ವ್ಯಾಸಂಗ ಮಾಡುವ ಮಕ್ಕಳ ಭವಿಷ್ಯ ಉಜ್ವಲವಾಗಿದೆ. ಆಗಾಗ್ಗೆ ಪೋಷಕರು ಶಾಲೆಗೆ ಭೇಟಿ ನೀಡಿ ಮಕ್ಕಳ ಶಿಕ್ಷಕರು ಹಾಗೂ ಶಾಲೆಯ ಮುಖ್ಯ ಶಿಕ್ಷಕರೊಂದಿಗೆ ಮಾತುಕತೆ ನಡೆಸುವ ಮೂಲಕ ಮಕ್ಕಳು ಯಾವ ವಿಷಯದಲ್ಲಿ ಹಿಂದುಳಿದಿದ್ದಾರೆ ಅವರನ್ನು ಯಾವ ರೀತಿ ತಿದ್ದಬೇಕು ಎಂಬುದರ ಬಗ್ಗೆ ಚರ್ಚಿಸಬೇಕು ಎಂದರು.
ಇತ್ತೀಚೆಗೆ ಮಕ್ಕಳು ಮೊಬೈಲ್ ಹಾಗು ಟಿವಿ ವೀಕ್ಷಣೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿರುವುದರಿಂದ ಅವರ ಪ್ರತಿಭೆಗೆ ಮಂಕು ಕವಿಯುತ್ತಿದೆ. ಇತರರ ಕ್ರಿಯಾಶೀಲತೆಯನ್ನು ನೋಡಿ ಕಾಲ ಕಳೆಯುವುದರ ಬದಲು ತಮ್ಮ ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳುವಲ್ಲಿ ಮಕ್ಕಳು ಮುಂದಾಗಬೇಕು. ಪೋಷಕರು ಮಕ್ಕಳ ಕೈಗೆ ಮೊಬೈಲ್ ಕೊಡುವುದು ಮತ್ತು ಟ.ವಿ ವೀಕ್ಷಣೆ ಮಾಡದಂತೆ ಎಚ್ಚರವಹಿಸಬೇಕೆಂದರು.
ಸಹಾಯಕ ಪ್ರಾಧ್ಯಾಪಕ ಶಂಕರ್ ಮಾತನಾಡಿ, ತಾಲ್ಲೂಕಿನ ಸುಂಡ್ರಹಳ್ಳಿ ಗ್ರಾಮದಲ್ಲಿ ಸುಮಾರು 10 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಿರುವ ವಸತಿ ಶಾಲೆಯಲ್ಲಿ 300 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ವಸತಿ ಶಾಲೆಯಲ್ಲಿ ಊಟ, ವಸತಿ, ಬೋಧನೆ ಜೊತೆಗೆ ಸರ್ಕಾರದಿಂದ ಮಕ್ಕಳಿಗೆ ಸಿಗಬೇಕಾದ ಯೋಜನೆಗಳು, ಪೌಷ್ಠಿಕ ಆಹಾರ ಹಾಗೂ ಮೂಲಭೂತ ಸೌಕರ್ಯಗಳು ಮಕ್ಕಳಿಗೆ ಸಿಗುತ್ತಿದೆ. ಮಕ್ಕಳು ಅದನ್ನು ಉಪಯೋಗಿಸಿಕೊಂಡು ಉತ್ತಮ ವಿದ್ಯಾಭ್ಯಾಸ ಮಾಡಬೇಕು. 2020-21ನೇ ಸಾಲಿನಲ್ಲಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗೆ ಸೇರಬಯಸುವ ವಿದ್ಯಾರ್ಥಿಗಳು ಅನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕೆಂದು ತಿಳಿಸಿದರು.
2019-20ನೇ ಸಾಲಿನಲ್ಲಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ಕ್ರೀಡಾಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಹೊಸಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ನಾರಾಯಣಸ್ವಾಮಿ, ಮುನಿಆಂಜಿನಪ್ಪ, ಮಂಜುನಾಥಗೌಡ, ರೆಡ್ಡಿ, ಎನ್.ಇ.ಜಗದೀಶ್‌ಬಾಬು, ಮುಖ್ಯಶಿಕ್ಷಕ ಆರ್.ಮೂರ್ತಿಪ್ಪ, ಶಿಕ್ಷಕರಾದ ವಿಜಯಶ್ರೀ, ವೆಂಕಟಸ್ವಾಮಿ, ಆನಂದ್, ನರಸಿಂಹಮೂರ್ತಿ, ಗಂಗಾಧರ್, ಬಲರಾಮ್, ರಾಮು, ಸರಳ, ಪ್ರೀಯಾಂಕ ಹಾಜರಿದ್ದರು.
ಗ್ರಾಮ ಪಂಚಾಯಿತಿ ವತಿಯಿಂದ ಮಕ್ಕಳ ಗ್ರಾಮಸಭೆ
ಹಂಡಿಗನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಗ್ರಾಮ ಪಂಚಾಯಿತಿ ವತಿಯಿಂದ ನಡೆದ “ಮಕ್ಕಳ ಗ್ರಾಮಸಭೆಯಲ್ಲಿ” ತಮ್ಮ ಶಾಲೆ ಹಾಗೂ ಗ್ರಾಮದ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳು ಮಾತನಾಡಿದರು.
ಹಂಡಿಗನಾಳ ಶಾಲೆಯ ಆರನೇ ತರಗತಿಯ ಪ್ರೇಕ್ಷ ಶಾಲೆಗೆ ಆಟದ ಮೈದಾನವಿಲ್ಲ ಮತ್ತು ಕುಡಿಯುವ ನೀರಿನ ಫಿಲ್ಟರ್ ಅಗತ್ಯವಿರುವುದಾಗಿ ಹೇಳಿದಳು. ಹನುಮಂತಪುರದ ಶಾಲೆಯ ವಿದ್ಯಾರ್ಥಿ ಕಾರ್ತಿಕ್, ಶಾಲೆಯ ಆವರಣದಲ್ಲಿ ಸಂಜೆ ವೇಳೆ ಡೂಮಪಾನ, ಮದ್ಯಪಾನ ಮಾಡುವವರ ಹಾವಳಿ ಹೆಚ್ಚಾಗಿದೆ. ಶಾಲೆಯ ಕಾಂಪೌಂಡ್ ಭದ್ರಪಡಿಸಬೇಕು, ಶೌಚಾಲಯ ಬೇಕು ಮತ್ತು ಶಾಲೆಯ ಕಟ್ಟಡಕ್ಕೆ ಸುಣ್ಣಬಣ್ಣ ಬಳಿಸಬೇಕೆಂದು ಕೇಳಿದನು.
ಅಪ್ಪೇಗೌಡನಹಳ್ಳಿ ಶಾಲೆಯ ಲಾಲಿಶ, ನಮ್ಮ ಶಾಲೆಯನ್ನು ಗ್ರಾಮ ಪಂಚಾಯಿತಿಯವರು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ನಮಗೆ ಜಾರೋ ಬಂಡೆ ಮತ್ತು ಆಡಲು ಕೆಲವಾರು ಆಟಿಕೆಗಳು ಬೇಕೆಂದರೆ, ಎಲ್.ಮುತ್ತುಗದಹಳ್ಳಿಯ ಗಗನ್, ನಮ್ಮ ಶಾಲೆಗೆ ಆಟದ ಮೈದಾನವಿಲ್ಲ, ಶೌಚಾಲಯ ರಿಪೇರಿ ಮಾಡಿಸಬೇಕು ಮತ್ತು ಕಾಂಪೌಂಡ್ ಬೀಗ ಹಾಕಿಸಬೇಕು ಎಂದನು.
ಹರಳಹಳ್ಳಿ ಶಾಲೆಯ ವಿದ್ಯಾರ್ಥಿ ಶಾಲೆಯ ದುರಸ್ತಿ, ಶೌಚಾಲಯ ದುರಸ್ತಿ ಹಾಗೂ ಆಟದ ಮೈದಾನ ಬೇಕೆಂದು ಕೇಳಿದರೆ, ಪ್ಯಾಲಹಳ್ಳಿಯ ಅಂಗನವಾಡಿಗೆ ಸ್ವಂತ ಕಟ್ಟಡಕ್ಕೆ ಕೋರಿಕೆಯನ್ನಿಟ್ಟರು. ಹಂಡಿಗನಾಳದ ಎರಡನೇ ಅಂಗನವಾಡಿಯನ್ನು ಬಾಡಿಕೆ ಕಟ್ಟಡದಲ್ಲಿ ನಿರ್ವಹಣೆ ಮಾಡುತ್ತಿದ್ದು, ಸ್ವಂತ ಕಟ್ಟಡ ಬೇಕೆಂದರು.
ಮಕ್ಕಳ ಹಕ್ಕುಗಳ ಸಂಸ್ಥೆ ಅಧಿಕಾರಿ ಕಾಂತರಾಜು ಮಾತನಾಡಿ, “ಮಕ್ಕಳ ಮನಸ್ಸಿನಲ್ಲಿ ಕಲ್ಮಶವಿರುವುದಿಲ್ಲ. ಅವರು ತಮ್ಮ ಅನುಭವಕ್ಕೆ ಬಂದುದನ್ನೇ ವ್ಯಕ್ತಪಡಿಸುತ್ತಾರೆ. ಅವರ ಸಮಸ್ಯೆಗಳನ್ನು ಪರಿಹರಿಸಬೇಕಾದ್ದು ನಮ್ಮ ಕರ್ತವ್ಯ. ಮಕ್ಕಳು ತಿಳಿಸಿದ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ. ಸಾರ್ವಜನಿಕರು ಕೂಡ ಸಹಕರಿಸಬೇಕು. ಸ್ವಚ್ಛತೆಗೆ ಆದ್ಯತೆಯನ್ನು ನೀಡಬೇಕು. ನಮ್ಮ ಗ್ರಾಮ ಎಂಬ ಮನೋಭಾವ ಬಂದರೆ ಒಗ್ಗಟ್ಟಿನಿಂದ ಅಭಿವೃದ್ಧಿಯತ್ತ ಸಾಗಬಹುದು” ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿಯಪ್ಪ, ಸದಸ್ಯರಾದ ಬಿ.ಎಂ.ಜಯರಾಮ್, ಎ.ಎಂ.ತ್ಯಾಗರಾಜ್, ಆಶಾ, ಎ.ಆರ್.ಮಹದೇವಯ್ಯ, ಆಂಜಿನಮ್ಮ, ರಾಜು, ಬೈರಾರೆಡ್ಡಿ, ಅಶ್ವತ್ಥಮ್ಮ, ರೇಷ್ಮೆ ಇಲಾಖೆಯ ಪ್ರವೀಣ್, ನರೇಗಾ ನೋಡಲ್ ಅಧಿಕಾರಿ ಮಲ್ಲಿಕಾರ್ಜುನ, ಪಿಡಿಒ ಅಂಜನ್ ಕುಮಾರ್, ಕಾರ್ಯದರ್ಶಿ ಎಚ್.ಎನ್.ಶ್ರೀನಿವಾಸ್, ಕರವಸೂಲಿಗಾರ ಶ್ರೀನಿವಾಸ್ ಹಾಜರಿದ್ದರು.
ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ವಕೀಲರ ಒತ್ತಾಯ
ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲು ಕಲ್ಪಿಸುವ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬಂದ್ ಬೆಂಬಲಿಸಿ ಗುರುವಾರ ತಾಲ್ಲೂಕು ವಕೀಲರ ಸಂಘ ಕಲಾಪದಿಂದ ಹೊರಗುಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಕೀಲರ ಸಂಘದ ಗೌರವಾಧ್ಯಕ್ಷ ಎಂ.ಪಾಪಿರೆಡ್ಡಿ, ಡಾ.ಸರೋಜಿನಿ ಮಹಿಷಿ ವರದಿ ಬಗ್ಗೆ ಈಗಾಗಲೇ ಹಲವೆಡೆ ಗಂಭೀರ ಚಿಂತನೆ ನಡೆಡಿದೆ. ಹಲವು ವರ್ಷಗಳಿಂದ ಸರೋಜಿನಿ ಮಹಿಷಿ ವರದಿ ಸಂಪೂರ್ಣವಾಗಿ ಅನುಷ್ಠಾನ ಆಗದಿರುವುದರಿಂದ ಅದಕ್ಕಿರುವ ತೊಂದರೆಗಳೆಲ್ಲವನ್ನೂ ನಿವಾರಣೆ ಮಾಡಿ ನಮ್ಮ ಕನ್ನಡಿಗರಿಗೆ ಕೆಲಸ ಕೊಡುವುದಕ್ಕೆ ಗಂಭೀರ ಚಿಂತನೆ ಸರ್ಕಾರ ನಡೆಸಬೇಕೆಂದು ಒತ್ತಾಯಿಸಿದರು.
ಸರೋಜಿನಿ ಮಹಿಷಿ ವರದಿ ದಶಕಗಳಷ್ಟು ಹಳೆಯದ್ದು. ರಾಜ್ಯದ ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ತಯಾರಿಸಲಾದ ವರದಿಯಿದು. ಕರ್ನಾಟಕದ ಸಾರ್ವಜನಿಕ ವಲಯ ಸಂಸ್ಥೆಗಳು, ಖಾಸಗಿ ಮತ್ತು ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗಗಳಲ್ಲಿ ನಿರ್ದಿಷ್ಟ ಶೇಕಡಾವಾರು ಮೀಸಲಾತಿಯನ್ನು ಕನ್ನಡಿಗರಿಗೆ ಮಾತ್ರ ನೀಡಬೇಕೆಂದು ಸರೋಜಿನಿ ಮಹಿಷಿ ಸಮಿತಿ ಶಿಫಾರಸು ಮಾಡಿದೆ. ಕನ್ನಡ ನಾಡಿನಲ್ಲಿ ಹುಟ್ಟಿಬೆಳೆದವರಿಗೆ ಕೆಲಸದಲ್ಲಿ ಆದ್ಯತೆ ನೀಡಲೇಬೇಕು ಎಂದು ಆಗ್ರಹಿಸಿದರು.
ವಕೀಲರ ಸಂಘದ ಉಪಾಧ್ಯಕ್ಷ ಎಸ್.ಎನ್.ಚಂದ್ರಶೇಖರ್, ಕಾರ್ಯದರ್ಶಿ ಬಿ.ಎಂ.ಲೋಕೇಶ್, ವಿ.ನಾಗೇಂದ್ರಬಾಬು, ಜಿ.ನಾಗರಾಜು, ರಾಮಕೃಷ್ಣ, ಸಿ.ಜಿ.ಭಾಸ್ಕರ್, ಪ್ರಭು, ಡಿ.ಸಿ.ಮಂಜುನಾಥ, ಕೃಷ್ಣಮೂರ್ತಿ, ಮೋಹನ್, ಎನ್.ಎಂ.ಮಂಜುನಾಥ್, ಜಿ.ಎ.ವೆಂಕಟೇಶ್ ಹಾಜರಿದ್ದರು.
ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ನಗರದ ಸುಮಾರು 50 ಸಾವಿರ ಜನರಿಗೆ ನೀರು ಪೂರೈಸಲು ಸಹಕಾರಿಯಾಗಲಿರುವ ಎಚ್.ಎನ್ ವ್ಯಾಲಿ ಯೋಜನೆಯ ನೀರು ಸಂಸ್ಕರಿಸಲು ಉದ್ದೇಶಿಸಲಾಗಿರುವ ಕೆರೆಗಳಲ್ಲಿ ಜಾಲಿ ಗಿಡಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಕೂಡಲೇ ಅಗತ್ಯ ಕ್ರಮ ಜರುಗಿಸಬೇಕು ಎಂದು ಅವರು ತಿಳಿಸಿದರು.
ಜಾಲಿ ಗಿಡಗಳ ತೆರವಿಗೆ ಈಗಾಗಲೇ ಸರ್ಕಾರ ಆದೇಶ ಹೊರಡಿಸಿದ್ದು, ಸರ್ಕಾರದ ಆದೇಶದಂತೆ ಕೆರೆಗಳಲ್ಲಿ ಬೆಳೆದು ನಿಂತಿರುವ ಜಾಲಿ ಗಿಡಗಳನ್ನು ಕೂಡಲೇ ತೆರವುಗೊಳಿಸಬೇಕು. ಕ್ಷೇತ್ರದಾದ್ಯಂತ ಬೇಸಿಗೆ ಕಾಲದಲ್ಲಿ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸುವುದು ಹಾಗೂ ಸರ್ಕಾರಿ ಸೌಲಭ್ಯಗಳನ್ನು ಕ್ಷೇತ್ರದ ಜನತೆಗೆ ತಲುಪಿಸುವಂತಹ ಮಹತ್ತರವಾದ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಅಧಿಕಾರಿಗಳ ಬದ್ಧತೆಯಿಂದಲೇ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಟೆಂಡರ್ ಮುಗಿದು ಕಾಮಗಾರಿ ಆರಂಭವಾದ ನಂತರ ಗುತ್ತಿಗೆದಾರರು ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಬಗ್ಗೆ ಅಧಿಕಾರಿಗಳು ಮೇಲುಸ್ತುವಾರಿ ವಹಿಸಿ ಕೆಲಸ ಮಾಡಬೇಕು. ನಗರದ ಮಯೂರ ವೃತ್ತದ ಬಳಿ ನಿರ್ಮಿಸಲಾಗುರತ್ತಿರುವ ವಾಲ್ಮೀಕಿ ಭವನದ ಕಾಮಗಾರಿ ನಿಧಾನತಿಯಲ್ಲಿ ನಡೆಯುತ್ತಿದೆ. ಬಹಳಷ್ಟು ಕಾಮಗಾರಿಗಳು ಈವರೆಗೂ ಪೂರ್ಣಗೊಂಡಿಲ್ಲ ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕ ಆಸ್ಪತ್ರೆಗೆ ಸೇರಿದ ಆಂಬ್ಯುಲೆನ್ಸ್‌ಗಳ ದುರುಪಯೋಗವಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಆಂಬುಲೆನ್ಸ್ ವಾಹನಗಳಿಗೆ ಕೂಡಲೇ ಜಿಪಿಎಸ್ ಅಳವಡಿಸುವಂತೆ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಯಿತು.
ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅರ್ಹಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಅಧಿಕಾರಿಯೂ ಕಾರ್ಯನಿರ್ವಹಿಸಬೇಕು. ಪ್ರಗತಿ ಪರಿಶೀಲನಾ ಸಭೆಗೆ ಇಲಾಖೆಯಿಂದ ಆಗಿರುವ ಕಾಮಗಾರಿಗಳ ಮಾಹಿತಿ ತರದೇ ಬರುವ ಹಾಗೂ ಸಭೆಗೆ ಗೈರು ಹಾಜರಾದವರ ವಿರುದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬೆರಯುವಂತೆ ಇಓಗೆ ಸೂಚಿಸಲಾಯಿತು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಶಿವಕುಮಾರ್, ಸಹಾಯಕ ನಿರ್ದೇಶಕ ಚಂದ್ರಪ್ಪ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

