ಕೊರೊನಾ ಸೋಂಕನ್ನು ತಡೆಗಟ್ಟುವ ಉದ್ದೇಶದಿಂದ ನಗರಸಭೆಯವರು ವಿವಿಧ ಅಂಗಡಿಗಳ ಮುಂದೆ ಚಾಕ್ ಪೀಸ್ ನಲ್ಲಿ ಗುರುತು ಹಾಕಿ ನಿರ್ದಿಷ್ಟ ದೂರದಲ್ಲಿ ನಿಂತು ವ್ಯಾಪಾರ ಮಾಡುವಂತೆ ತಿಳಿಹೇಳುತ್ತಿದ್ದಾರೆ.
ಎಲ್ಲೆಡೆ ಕರ್ಫ್ಯೂ ವಿಧಿಸಿರಿರುವುದರಿಂದ ಜೀವನಾವಶ್ಯಕ ವಸ್ತುಗಳನ್ನು ಮಾರುವ ಔಷಧಿ ಅಂಗಡಿಗಳು, ತರಕಾರಿ, ಹಣ್ಣು, ದಿನಸಿ ಮುಂತಾದ ಅಂಗಡಿಗಳಲ್ಲಿ ಜನರು ಆರೋಗ್ಯ ಇಲಾಖೆಯ ಸೂಚನೆಯಂತೆ ಒಂದು ಮೀಟರ್ ಅಂತರವನ್ನು ಕಾಯ್ದುಕೊಳ್ಳಲು ತಿಳಿಹೇಳಲಾಗುತ್ತಿದೆ. ಅದಕ್ಕಾಗಿ ನಗರಸಭೆ ಸಿಬ್ಬಂದಿ ಡ್ಯಾನಿ ಪವನ್, ರವಿಕುಮಾರ್, ಮುನಿರಾಜು ಮುಂತಾದವರು ಚಾಕ್ ಪೀಸ್ ನಲ್ಲಿ ಅಂಗಡಿಗಳ ಮುಂದೆ ಗುರುತು ಹಾಕಿ ಅದರಲ್ಲಿ ನಿಲ್ಲಬೇಕು. ಅಂತರ ಕಾಯ್ದುಕೊಳ್ಳಬೇಕು ಹಾಗೂ ಗ್ರಾಹಕರು ಮುಖಕ್ಕೆ ಮಾಸ್ಕ್ ಅಥವಾ ಬಟ್ಟೆಯನ್ನು ಕಟ್ಟಿಕೊಂಡಿರಬೇಕೆಂದು ತಿಳಿಸಿದರು.
ಈ ರೀತಿ ಚಾಕ್ ಪೀಸ್ ನಲ್ಲಿ ಬರೆದರೆ ಒಂದು ದಿನವೂ ಉಳಿಯುವುದಿಲ್ಲ. ಅದರ ಬದಲು ನಗರಸಭೆಯವರು ಪೇಯಿಂಟ್ ಮಾಡಿಸಿ ಎಂದು ಕೆಲವು ಅಂಗಡಿಗಳವರು ವಿನಂತಿಸಿದರು.
ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಔಷಧಿ ಅಂಗಡಿಗಳು ಹಾಗೂ ದಿನಸಿ ಅಂಗಡಿಗಳ ಮುಂದೆ ಅದೇ ಗ್ರಾಮದ ಎಂಜಿನಿಯರ್ ಎಂ.ಕೆ. ರವಿ ಪ್ರಸಾದ್ ಅವರು ತಾವೇ ಪೇಯಿಂಟ್ ಖರೀದಿಸಿ ಅಂತರ ಕಾಯುವ ಬಾಕ್ಸ್ ಗುರುತು ಮಾಡಿ ಕರೋನಾ ವೈರಸ್ ತಡೆಗಟ್ಟುವ ಅರಿವು ಮೂಡಿಸಿದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಗುರುತು ಹಾಕಿಸಿದ ನಗರಸಭೆ
ನಗರಸಭೆ ಸಿಬ್ಬಂದಿ ಮತ್ತು ಪೊಲೀಸರಿಂದ ಕಾರ್ಯಾಚರಣೆ; ಖಾಲಿಯಾದ ಸಂತೆ ಮೈದಾನ
ಶಿಡ್ಲಘಟ್ಟದಲ್ಲಿ ಪ್ರತಿ ಸೋಮವಾರ ನಡೆಯುವ ಸಂತೆಗೆ ಎಂದಿನಂತೆ ಕುರಿಗಳನ್ನು ಮಾರುವವರು, ತರಕಾರಿ, ಮೊದಲಾದ ಸರಕುಗಳು ಹಾಗೂ ವಸ್ತುಗಳನ್ನು ರೈತರು ಮತ್ತು ವ್ಯಾಪಾರಿಗಳು ತಂದಿದ್ದರು. ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಸರ್ಕಾರದ ಆದೇಶದಂತೆ ಜನಸಂದಣಿಯನ್ನು ತಪ್ಪಿಸಲು ಮುಂಜಾನೆ ನಗರಸಭೆ ಸಿಬ್ಬಂದಿ ಮತ್ತು ಪೊಲೀಸರ ಸಂತೆಗೆ ಭೇಟಿ ನೀಡಿ ಮಾರಾಟಗಾರರನ್ನು ವಾಪಸ್ ಕಳುಹಿಸಿದರು.
ನಗರಸಭೆ ಅಧಿಕಾರಿಗಳ ಈ ಕ್ರಮಕ್ಕೆ ಕೆಲವು ಮಾರಾಟಗಾರರು ಬೇಸರ ವ್ಯಕ್ತಪಡಿಸಿದರು. ನಾವು ಇದನ್ನೇ ನಂಬಿ ಬದುಕುವವರು. ಈ ವಾರ ನಗರಸಭೆ ಅಧಿಕಾರಿಗಳು ವಸ್ತುಗಳನ್ನು ಮಾರಾಟ ಮಾಡಲು ಅನುಮತಿ ನೀಡುತ್ತಿಲ್ಲ. ನಾವು ದೈನಂದಿನ ಗಳಿಕೆಯ ಮೇಲೆ ಅವಲಂಬಿತರಾಗಿದ್ದೇವೆ. ಮನೆಗಳಿಗೆ ಮತ್ತು ಸಾರಿಗೆ ವಾಹನಗಳಿಗೆ ಬಾಡಿಗೆ ಪಾವತಿಸಬೇಕು. ನಾವು ಮನೆಯಲ್ಲಿ ಕುಳಿತುಕೊಂಡರೆ ಊಟಕ್ಕೆ ಏನು ಮಾಡುವುದು ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು.
ಆರೋಗ್ಯ ಇಲಾಖೆ ಮತ್ತು ತಾಲ್ಲೂಕು ಆಡಳಿತ ಅಧಿಕಾರಿಗಳಿಂದ ಜಾಥಾ
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ ಮೂರ್ತಿ ಮತ್ತು ತಹಶಿಲ್ದಾರ್ ಅರುಂಧತಿ ಅವರು ಭಾನುವಾರ ತಮ್ಮ ಸಿಬ್ಬಂದಿಯ ಜೊತೆಯಲ್ಲಿ ವಿದೇಶದಿಂದ ಹಿಂದಿರುಗಿ ಮನೆಗಳಲ್ಲಿಯೇ ಕ್ವಾರಂಟೈನ್ ಆಗಿರುವವರನ್ನು ಭೇಟಿ ಮಾಡಿ, ಅವರ ಆರೋಗ್ಯವನ್ನು ಪರೀಕ್ಷಿಸಿ, ಅವರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿದರು.
ಸಾರ್ವಜನಿಕರು ದೂರವಾಣಿ ಕರೆ ಮಾಡಿ ಜಂಗಮಕೋಟೆಯಲ್ಲಿ ಇಬ್ಬರು ಮೆಕ್ಕಾದಿಂದ ಹಿಂದಿರುಗಿದ್ದಾರೆಂದು ತಿಳಿಸಿದಾಗ ಅಲ್ಲಿಗೆ ತಾಲ್ಲೂಕು ಆರೋಗ್ಯಾಧಿಕಾರಿ ಮತ್ತು ಸಿಬ್ಬಂದಿ ಭೇಟಿ ನೀಡಿದರು. ಆದರೆ ಅವರುಗಳು ಜೈಪುರದ ಬಳಿಯ ಅಜ್ಮೇರ್ ಗೆ ಹೋಗಿ ಬಂದವರೆಂದು ತಿಳಿದುಬಂದಿತು. ಅವರನ್ನೂ ಪರೀಕ್ಷಿಸಿ, ಅವರಿಗೂ ಮುನ್ನೆಚ್ಚರಿಕೆ ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ ಮೂರ್ತಿ, ತಹಶೀಲ್ದಾರ್ ಅರುಂಧತಿ ಸೇರಿದಂತೆ ಆರೋಗ್ಯ ಇಲಾಖೆ ಮತ್ತು ತಾಲ್ಲೂಕು ಆಡಳಿತ ಅಧಿಕಾರಿಗಳು ಪೊಲೀಸರೊಂದಿಗೆ ಮಾಕ್ ಡ್ರಿಲ್ ನಡೆಸಿದರು. ನಗರದ ತಾಲ್ಲೂಕು ಕಚೇರಿಯಿಂದ ಟಿ.ಬಿ. ರಸ್ತೆಯಲ್ಲಿ ದರ್ಗಾವರೆಗೂ ಜಾಥಾ ನಡೆಸಿದರು.
ಸರ್ಕಾರ ಹಾಗೂ ಜಿಲ್ಲಾಡಳಿತದ ಸೂಚನೆಯಂತೆ ಮಾಕ್ ಡ್ರಿಲ್ ನಡೆಸಿದೆವು. ಮಕ್ಕಳು ಮತ್ತು ಹಿರಿಯರು ಸೇರಿದಂತೆ ಎಲ್ಲರೂ ಮನೆಯಲ್ಲಿಯೇ ಉಳಿಯಿರಿ ಎಂಬ ಸಂದೇಶ ಹೊತ್ತು ಅಧಿಕಾರಿಗಳು ಜಾಥಾ ನಡೆಸಿದೆವು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ ಮೂರ್ತಿ ತಿಳಿಸಿದರು.
ಕೊರೋನಾ ಎಫೆಕ್ಟ್ – ಏಕರೂಪ ನೀತಿ ಅಳವಡಿಕೆಗೆ ರೀಲರುಗಳ ಒತ್ತಾಯ
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಬುಧವಾರ ಕೊರೋನಾ ಸೋಂಕಿನ ಬಗ್ಗೆ ಜನರಲ್ಲಿ ಅರಿವು ಮೂಡಿಸಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಅವರಿಗೆ ರೀಲರುಗಳು ಮಾರುಕಟ್ಟೆಯ ವ್ಯವಹಾರದಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
“ಅತ್ಯಂತ ದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆ ನಮ್ಮದು. ಆಂಧ್ರ, ಕರ್ನಾಟಕದ ಹಲವಾರು ಜಿಲ್ಲೆಗಳು, ಮಡಕಶಿರ, ಹಿಂದುಪುರ, ಕದಿರಿ, ಅನಂತಪುರ ಮುಂತಾದ ಕಡೆಗಳಿಂದ ರೇಷ್ಮೆ ಗೂಡು ಬರುತ್ತದೆ. ಇದುವರೆಗೂ ಯಾವುದೇ ಖಾಯಿಲೆ, ಸೋಂಕು ನಮ್ಮಲ್ಲಿ ಪತ್ತೆ ಆಗಿಲ್ಲ. ರೇಷ್ಮೆ ಗೂಡಿನ ಮಾರುಕಟ್ಟೆಯ ಉಪನಿರ್ದೇಶಕರು ಆಂಧ್ರದ ಗೂಡು ಬರಬಾರದು, ಬೇರೆ ಕಡೆಯವರು ಅಲ್ಲಿಯೇ ಮಾರಿಕೊಳ್ಳಿ ಅನ್ನುತ್ತಿದ್ದಾರೆ. ಬೇರೆಡೆಯಿಂದ ಬಂದು ನಮ್ಮ ರೈತರ ಹೆಸರಿನಲ್ಲಿ ರೇಷ್ಮೆ ಗೂಡನ್ನು ಮಾರಿದರೆ ಕಂಡು ಹಿಡಿಯುವುದು ಹೇಗೆ.
ನಮ್ಮ ತಾಲ್ಲೂಕಿನ ರೈತರು ನಮ್ಮ ಮಾರುಕಟ್ಟೆಗೆ ಬರುವುದಿಲ್ಲ. ನೇರವಾಗಿ ರೀಲರುಗಳ ಮನೆಗಳಿಗೆ ಹೋಗಿ ಮಾರಿಬಿಡುತ್ತಾರೆ. ಈಗ ಮಾರುಕಟ್ಟೆಗೆ ಬರುತ್ತಿರುವುದೇ ಹೊರ ಜಿಲ್ಲೆ ಹಾಗೂ ರಾಜ್ಯದ ರೇಷ್ಮೆ ಗೂಡು. ಅದನ್ನು ನಿಲ್ಲಿಸಿದರೆ ಹೇಗೆ. ಬಂದರೆ ಎಲ್ಲಾ ಕಡೆಯಿಂದಲೂ ರೇಷ್ಮೆ ಗೂಡು ಬರಲಿ, ಇಲ್ಲದಿದ್ದರೆ ಮಾರುಕಟ್ಟೆಯನ್ನೇ ತಾತ್ಕಾಲಿಕವಾಗಿ ಮುಚ್ಚಿಬಿಡಿ” ಎಂದು ರೀಲರುಗಳು ಒತ್ತಾಯಿಸಿದರು.
ಮಾಸ್ಕ್ ಮತ್ತು ಸ್ಯಾನಿಟೈಸರ್ ಅಧಿಕ ಬೆಲೆಗೆ ಮಾರಾಟ ಮಾಡುವವರಿಗೆ ಎಚ್ಚರಿಕೆ
ಕರೋನ ಭೀತಿ ಹಿನ್ನೆಲೆಯಲ್ಲಿ, ಕೆಲ ಔಷಧಿ ಅಂಗಡಿಗಳವರು ಮಾಸ್ಕ್ ಮತ್ತು ಸ್ಯಾನಿಟೈಸರ್ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರಿಂದ ದೂರು ಬಂದದ್ದರಿಂದ ನಗರದ ಕೆಲವು ಔಷಧಿ ಅಂಗಡಿಗಳಿಗೆ ಬುಧವಾರ ಆರೋಗ್ಯ ನಿರೀಕ್ಷಕರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕಂದಾಯ ಇಲಾಖೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ತಂಡ ವಿವಿಧ ಔಷಧಿ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಆಹಾರ ನಿರೀಕ್ಷಕ ನಾರಾಯಣಸ್ವಾಮಿ ಮಾತನಾಡಿ, ಮಾಸ್ಕ್ ಗಳಿಗೆ ಹೆಚ್ವು ಬೇಡಿಕೆ ಇರುವುದರಿಂದ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ದೂರು ಬಂದಿತ್ತು. ಅದರಂತೆ ನಮ್ಮ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಮಾಸ್ಕ್ ಲಭ್ಯತೆ ಮತ್ತು ಅದರ ದರವನ್ನ ಸಾರ್ವಜಕರಿಗೆ ಕಾಣುವಂತೆ ಬೋರ್ಡ್ ಹಾಕಲು ಔಷಧಿ ಅಂಗಡಿ ಮಾಲೀಕರಿಗೆ ಸೂಚನೆ ನೀಡಿದ್ದೇವೆ. ಸಗಟು ಮಾರಾಟದಾರರಿಂದ ಬಿಲ್ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಹೆಚ್ಚು ಬೆಲೆಗೆ ಮಾಸ್ಕ್ ಮಾರಾಟ ಮಾಡಿದ್ದು ಕಂಡುಬಂದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಅಗತ್ಯವಿರುವರು ಮಾತ್ರ ಮಾಸ್ಕ್ ಬಳಸುವುದು ಉತ್ತಮ. ನೆಗಡಿ, ಕೆಮ್ಮು ಸೀನು ಇರುವಂತವರು ಮಾತ್ರ ಮಾಸ್ಕ್ ಧರಿಸುವುದು ಉತ್ತಮ ಎಂದು ಹೇಳಿದರು.
ಆಹಾರ ಇಲಾಖೆಯ ಶಿರಸ್ತೇದಾರ್ ಧನಲಕ್ಷ್ಮಿ, ಹೇಮಂತ್ ಹಾಜರಿದ್ದರು.
ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ವರದನಾಯಕನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು
ತಾಲ್ಲೂಕಿನ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಎಚ್.ಎಂ.ಭವ್ಯ ಮತ್ತು ಎಚ್.ಎಂ.ತರುಣ್ ಅವರು ಎನ್‌ಎಂಎಂಎಸ್ ಪ್ರತಿಭಾನ್ವೇಷಣಾ ರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ.
ಮುಖ್ಯಶಿಕ್ಷಕ ವಿ.ಎನ್.ಗೋಪಾಲಕೃಷ್ಣಯ್ಯ ಮಾತನಾಡಿ, “ಕೇಂದ್ರ ಸರ್ಕಾರ ನಡೆಸುವ ಎನ್‌ಎಂಎಂಎಸ್ ಪ್ರತಿಭಾನ್ವೇಷಣಾ ರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಅಗಳಿಗೆ ಪ್ರತಿ ತಿಂಗಳೂ ಒಂದು ಸಾವಿರ ರೂ ವಿದ್ಯಾರ್ಥಿ ವೇತನ ಲಭಿಸುತ್ತದೆ. ಈ ಮಕ್ಕಳು ದ್ವಿತೀಯ ಪಿಯುಸಿ ಮುಗಿಸುವವರೆಗೂ ಈ ವಿದ್ಯಾರ್ಥಿ ವೇತನ ಅವರ ಖಾತೆಗೆ ಪ್ರತಿ ತಿಂಗಳೂ ಜಮೆ ಆಗುತ್ತದೆ” ಎಂದು ತಿಳಿಸಿದರು.
“ಪ್ರತಿ ವರ್ಷ ಈ ಪರೀಕ್ಷೆಯನ್ನು ಎಂಟನೇ ತರಗತಿಯಲ್ಲಿ ಓದುವ ಆರ್ಥಿಕವಾಗಿ ಹಿಂದುಳಿದ ಕೌಟುಂಬಿಕ ಹಿನ್ನೆಲೆಯ ವಿದ್ಯಾರ್ಥಿಗಳು ಬರೆಯಬಹುದಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಈ ಪರೀಕ್ಷೆಯನ್ನು ಬರೆಯುವ ವಿದ್ಯಾರ್ಥಿಗಳಿಗೆ ತರಬೇತಿ, ಪಠ್ಯ ಪುಸ್ತಕ ಹಾಗೂ ಸ್ಟೈಫಂಡ್ ನೀಡಲಾಗಿತ್ತು. ನಮ್ಮ ಶಾಲೆಯಲ್ಲಿ ಹದಿಮೂರು ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆದಿದ್ದರು. ನಮ್ಮ ಶಾಲೆಯಲ್ಲಿ ಶಿಕ್ಷಕರು ಈ ಮಕ್ಕಳಿಗೆ ಹೆಚ್ಚಿನ ತರಬೇತಿ ನೀಡಿ ಪರೀಕ್ಷೆಗೆ ಸಿದ್ದಪಡಿಸಿದ್ದರು” ಎಂದು ಅವರು ವಿವರಿಸಿದರು.
ಶಿಕ್ಷಕರಾದ ಎಂ.ಎ.ರಾಮಕೃಷ್ಣ, ಎಲ್.ನಾಗಭೂಷಣ್, ಗಂಗಶಿವಪ್ಪ, ಮಂಜುನಾಥರೆಡ್ಡಿ ಹಾಜರಿದ್ದರು.
ತ್ಯಾಜ್ಯ ವಿಲೇವಾರಿ ಮಾಡದ ನಗರಸಭೆ ಸಿಬ್ಬಂದಿ
ಕರೋನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಸೋಮವಾರ ಎಂದಿನಂತೆ ಸೇರಿದ್ದ ಸಂತೆಗೆ ತೆರಳಿದ ನಗರಸಭೆ ಪರಿಸರ ಅಭಿಯಂತರ ದಿಲೀಪ್ ಮತ್ತು ಸಿಬ್ಬಂದಿ ಹಾಗೂ ಪೊಲೀಸರು ಸಂತೆಯನ್ನು ನಿಲ್ಲಿಸುವಂತೆ ಜನರಿಗೆ ತಿಳುವಳಿಕೆ ಮೂಡಿಸಿದರು.
ಕರೋನಾ ಸೋಂಕು ಹರಡದಂತೆ ತಡೆಯಲು ಜನಸಂದಣಿ ಸೇರಿಸಬಾರದೆಂದು ಸರ್ಕಾರ ಆದೇಶವಿರುವುದರಿಂದ ಸಂತೆಯಲ್ಲಿ ಅರಿವು ಮೂಡಿಸುವ ಕರಪತ್ರ ನೀಡಿದ ಅಧಿಕಾರಿಗಳು ಕುರಿಗಳನ್ನು ತಂದ ರೈತರನ್ನು ಮನವೊಲಿಸಿ ವಾಪಸ್ ಕಳುಹಿಸಿದರು. ಆದರೆ, ತರಕಾರಿಗಳನ್ನು ತಂದಿದ್ದ ರೈತರು ಮತ್ತು ವ್ಯಾಪಾರಿಗಳು, “ನಾಳೆ ಮುನಿದ್ಯಾವರ ಕಾರ್ಯ ಇರುವ ಕಾರಣ ಎರಡರಿಂದ ಮೂರು ಗಂಟೆ ಅವಧಿ ಸಂತೆ ನಡೆಸಲು ಅವಕಾಶ ನೀಡಬೇಕೆಂದು” ಮನವಿ ಮಾಡಿದರು. ಹೆಚ್ಚು ಜನರು ಸೇರಬಾರದು ಎಂದು ಜನರಲ್ಲಿ ನಗರಸಭೆ ಸಿಬ್ಬಂದಿ ತಿಳಿಹೇಳಿದರು.
ಕೆಲವು ಅಂಗಡಿಗಳವರು, ನಗರಸಭೆಯ ಸಿಬ್ಬಂದಿ ಕೇವಲ ಕರಪತ್ರ ಹಂಚುತ್ತಾರೆ. ಕನಿಷ್ಟ ಅದರಲ್ಲಿರುವ ಸಂಗತಿಗಳನ್ನು ಅವರೂ ಪಾಲಿಸಬೇಕಲ್ಲ. ಕಸ, ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದೇ ಎಲ್ಲೆಂದರಲ್ಲಿಕಸದ ರಾಶಿ ಬಿದ್ದಿರುತ್ತದೆ. ತ್ಯಾಜ್ಯವನ್ನು ವಿಲೇವಾರಿ ಮಾಡುವವರಿಗೆ ಹಲವು ತಿಂಗಳುಗಳಿಂದ ಸಂಬಳ ಕೊಟ್ಟಿಲ್ಲದ ಕಾರಣ ಅವರು ಕೆಲಸ ಮಾಡುತ್ತಿಲ್ಲವೆಂದು ಹೇಳುತ್ತಾರೆ. ಒಟ್ಟಾರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬಂತಾಗಿದೆ” ಎಂದು ಹೇಳಿದರು.
ಸಂತೆ ನಡೆಯುವ ಆಸುಪಾಸಿನಲ್ಲಿ ತ್ಯಾಜ್ಯ ವಿಲೇವಾರಿ ಆಗದಿರುವುದು, ಕರೋನಾ ಸೋಂಕಿನ ಕುರಿತಾದ ಆತಂಕದಿಂದಾಗಿ ಜನರು ಹೆಚ್ಚಾಗಿ ಸಂತೆಯ ಬಳಿ ಸುಳಿಯದ ಕಾರಣ ಬಿಸಿಲಿನಲ್ಲಿ ಸಂತೆ ಭಣಗುಟ್ಟುತ್ತಿತ್ತು.
ಬಸ್ ನಿಲ್ದಾಣದ ಬಳಿ ತಳ್ಳುವ ಗಾಡಿಗಳಲ್ಲಿ ಹಣ್ಣುಗಳನ್ನು ಮಾರುವವರು ತಮ್ಮ ಗಾಡಿಗಳ ಬಳಿ ರಾಶಿ ರಾಶಿ ತ್ಯಾಜ್ಯ ಇವೆ ನಗರಸಭೆಯವರು ವಿಲೇವಾರಿ ಮಾಡುತ್ತಿಲ್ಲ ಎಂದು ದೂರಿದರೆ, ಸಂತೆಯಲ್ಲಿ ಹಾದು ಹೋಗುವ ಚರಂಡಿಗೆ ಫಾಗಿಂಗ್ ಅಥವಾ ಬ್ಲೀಚಿಂಗ್ ಪೌಡರ್ ಕೂಡ ಹಾಕಿಲ್ಲ ಎಂದು ಜನರು ಬೇಸರ ವ್ಯಕ್ತಪಡಿಸಿದರು.
ಬಸ್ ನಿಲ್ದಾಣದ ಬಳಿಯ ಕಾಲುವೆಯಂತೂ ತ್ಯಾಜ್ಯದ ಗುಂಡಿಯಾಗಿದೆ. ಅದನ್ನು ಸ್ವಚ್ಛಗೊಳಿಸುವುದಾಗಲೀ, ಫಾಗಿಂಗ್ ಮಾಡುವುದಾಗಲೀ ನಗರಸಭೆಯವರು ಮಾಡುತ್ತಿಲ್ಲ. ಸಂಕ್ರಾಮಿಕ ರೋಗ ಹರಡಲು ಎಲ್ಲಾ ಅನುಕೂಲಗಳನ್ನೂ ನಗರಸಭೆಯವರೇ ಮಾಡಿಕೊಟ್ಟಂತಿದೆ ಎನ್ನುತ್ತಾರೆ ಆಟೋ ಚಾಲಕರು.
ಕರೋನಾ ಪರಿಣಾಮ : ರಕ್ತನಿಧಿ ಕೇಂದ್ರದಲ್ಲಿ ರಕ್ತದ ಅಭಾವ
ಕರೋನಾ ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರ ಸಭೆ, ಸಮಾರಂಭ, ಮದುವೆ, ಜಾತ್ರೆ ಮುಂತಾದ ಜನಸೇರುವ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲು ಆದೇಶಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತಿಲ್ಲ. ಇದರಿಂದ ಜಿಲ್ಲೆಯ ಆಸ್ಪತ್ರೆಗಳಲ್ಲಿ ರಕ್ತದ ಕೊರತೆಯುಂಟಾಗಿದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್ ತಿಳಿಸಿದ್ದಾರೆ.
ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಲವು ರಕ್ತದಾನ ಶಿಬಿರಗಳನ್ನು ಆಯೋಜಿಸಲಿದ್ದೆವು. ಅವೆಲ್ಲಾ ಮುಂದೂಡಲಾಗಿದೆ. ಹಾಗಾಗಿ ಈಗ ರಕ್ತದ ಕೊರತೆಯನ್ನು ಎದುರಿಸುತ್ತಿದ್ದೇವೆ.
ಚಿಕ್ಕಬಳ್ಳಾಪುರ ರಕ್ತ ನಿಧಿ ಕೇಂದ್ರಕ್ಕೆ ಒಂದು ತಿಂಗಳಿಗೆ ಒಂದು ಸಾವಿರ ಯೂನಿಟ್ ಗಳ ರಕ್ತದ ಅವಶ್ಯಕತೆಯಿದೆ. ಅಂದರೆ ಪ್ರತಿ ದಿನವೂ 30 – 40 ಯೂನಿಟ್ ಗಳ ಬೇಡಿಕೆಯಿದೆ. ಆದರೆ, ಕರೋನಾ ಭೀತಿಯಿಂದಾಗಿ ರಕ್ತದಾನ ಶಿಬಿರಗಳು ಮೂಂದೂಡುತ್ತಿದ್ದು, ರಕ್ತದ ಅಭಾವ ಉಂಟಾಗಿದೆ. ಆದ್ದರಿಂದ ಜಿಲ್ಲೆಯ ಎಲ್ಲಾ ರಕ್ತದಾನಿಗಳು ಚಿಕ್ಕಬಳ್ಳಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಕ್ತ ನಿಧಿ ಕೇಂದ್ರಕ್ಕೆ ಬಂದು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಿ. ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ರಕ್ತ ನಿಧಿ ಕೇಂದ್ರ ತೆರೆದಿರುತ್ತದೆ. ರಕ್ತದಾನ ಮಾಡಿ ಜೀವ ಉಳಿಸಿ ಎಂದು ಅವರು ಮನವಿ ಮಾಡಿದ್ದಾರೆ.
ಶಿಡ್ಲಘಟ್ಟ ನಗರದಾದ್ಯಂತ ಬಂದ್ ವಾತಾವರಣ; ಕುಸಿದ ರೇಷ್ಮೆ ಗೂಡಿನ ಬೆಲೆ
ಕರೋನ ಪರಿಣಾಮದಿಂದಾಗಿ ಶನಿವಾರ ಶಿಡ್ಲಘಟ್ಟ ನಗರದಾದ್ಯಂತ ಬಂದ್ ವಾತಾವರಣವನ್ನು ನಿರ್ಮಾಣ ಮಾಡಿತ್ತು.
ಒಂದೆಡೆ ಸಿನಿಮಾ ಮಂದಿರ, ಶಾಲೆಗಳು ಮುಚ್ಚಿದ್ದವು. ವ್ಯಾಪಾರ ವಹಿವಾಟು ಕುಸಿತ, ಏರು ಬಿಸಿಲಿನ ಪರಿಣಾಮದಿಂದಾಗಿ ರಸ್ತೆಯಲ್ಲಿ ಜನರು ಹೆಚ್ಚಾಗಿ ಕಂಡು ಬರುತ್ತಿರಲಿಲ್ಲ. ಮಾಂಸದಂಗಡಿಗಳು ಸ್ವಯಂಪ್ರೇರಿತರಾಗಿ ಬಾಗಿಲು ಹಾಕಿದ್ದುದು ಕಂಡುಬಂದಿತು. ಅರ್ಧಕ್ಕರ್ಧ ಹೋಟೆಲುಗಳು ವ್ಯಾಪಾರವಿಲ್ಲದೆ ಮುಚ್ಚಿದ್ದರು.
“ಸರ್ಕಾರದಿಂದ ಬಂದ ಆದೇಶದಂತೆ ನಾವು ಕರೋನ ವೈರಸ್ ಬಗ್ಗೆ ಮುನ್ನೆಚ್ಚರಿಕೆ ಹಾಗೂ ಮುಂಜಾಗೃತಾ ಕ್ರಮಗಳ ಕುರಿತಾದ ಕರಪತ್ರಗಳನ್ನು ಊರಲ್ಲೆಲ್ಲಾ ಹಂಚಿದ್ದೇವೆ. ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದೇವೆ. ಫಾಗಿಂಗ್ ಯಂತ್ರಗಳನ್ನು ಸಿದ್ಧಪಡಿಸಿದ್ದು ಸೋಮವಾರದಿಂದ ಅದನ್ನು ಉಪಯೋಗಿಸುತ್ತೇವೆ. ಬೀದಿಬದಿ ವ್ಯಾಪಾರಸ್ಥರಿಗೆ, ತಿಂಡಿ ತಿನಿಸುಗಳನ್ನು ಮಾರುವವರಿಗೆ ಈಗಾಗಲೇ ಎಚ್ಚರಿಕೆ ನೀಡಿದ್ದು, ಸೋಮವಾರದಿಂದ ಅವರನ್ನು ನಿರ್ಬಂಧಿಸಲಾಗುವುದು. ಜನರಲ್ಲಿ ಈಗಾಗಲೇ ಸಾಕಷ್ಟು ತಿಳುವಳಿಕೆ ಮೂಡಿದ್ದು, ಮಾಂಸಾಹಾರ ಮತ್ತು ಹೊರಗಡೆ ತಿನ್ನುವುದನ್ನು ಕಡಿಮೆ ಮಾಡಿದ್ದಾರೆ” ಎಂದು ಪರಿಸರ ಅಭಿಯಂತರ ದಿಲೀಪ್ ತಿಳಿಸಿದರು.
ಕುಸಿದ ರೇಷ್ಮೆ ಗೂಡಿನ ಬೆಲೆ :
ಶಿಡ್ಲಘಟ್ಟದಲ್ಲಿ ಹೆಚ್ಚಿನ ಜನಸಂದಣಿಯಿರುವ ಸ್ಥಳವಾದ ರೇಷ್ಮೆ ಗೂಡಿನ ಮಾರುಕಟ್ಟೆಯು ಜನರಲ್ಲಿ ಅಗೋಚರ ಭಯ, ಆತಂಕ ಇದ್ದರೂ ಎಂದಿನಂತೆ ಶನಿವಾರವೂ ಕಾರ್ಯನಿರ್ವಹಿಸಿತು. ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ಶನಿವಾರ ರೇಷ್ಮೆ ಗೂಡಿನ ಮಾರುಕಟ್ಟೆಗೆ ಹೆಚ್ಚು ರೇಷ್ಮೆ ಗೂಡಿನ ಆವಕವಾಗಿತ್ತು. 700 ಲಾಟ್ ಅಂದರೆ ಸುಮಾರು 35 ಟನ್ ರೇಷ್ಮೆ ಗೂಡು ಬಂದಿದ್ದು, ಬೆಲೆ ಕುಸಿತ ಕಂಡಿತು. ಸರಾಸರಿ ಒಂದು ಕೇಜಿಗೆ 380 ರೂ ಆಯಿತು. ಕಳೆದ ನಾಲ್ಕೈದು ದಿನಗಳ ಹಿಂದಿನವರೆವಿಗೂ ಕಡಿಮೆ ರೇಷ್ಮೆ ಗೂಡಿನ ಆವಕವಾಗುತ್ತಿದ್ದುದರಿಂದ ಹೆಚ್ಚಿದ್ದ ಬೆಲೆಯು, ಶುಕ್ರವಾರ ಕಚ್ಚಾ ರೇಷ್ಮೆಯ ಬೆಲೆ ಕುಸಿತ ಹಾಗೂ ಹೆಚ್ಚಿನ ರೇಷ್ಮೆ ಗೂಡಿನ ಆಗಮನದಿಂದಾಗಿ ದಿಢೀರ್ ಕುಸಿಯಿತು.
ಶಾರದಾ ಪೂಜೆ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ
ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಶಾರದಾ ಪೂಜೆ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಕವಿ, ಲೇಖಕ ಚಂದ್ರಶೇಖರ ಹಡಪದ್ ಮಾತನಾಡಿದರು.
ವಿದ್ಯಾರ್ಥಿಗಳು ಈಗಿನಿಂದಲೇ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ಸದಾ ಜಾಗರೂಕರಾಗಿದ್ದು, ಪ್ರತಿ ಸಂದರ್ಭದಲ್ಲೂ ಒಳ್ಳೆಯ ವಿಚಾರಗಳನ್ನು ಕಲಿತು ಸತ್ಪ್ರಜೆಗಳಾಗಿ ಪರೀಕ್ಷೆಯನ್ನು ಒಂದು ಹಬ್ಬದಂತೆ ಸಂಭ್ರಮಿಸಿ, ಆತಂಕವನ್ನು ಹೊಡೆದೋಡಿಸಿ ಎಂದು ಅವರು ತಿಳಿಸಿದರು.
ಪರೀಕ್ಷೆಯೇ ಬದುಕಲ್ಲ, ಬದುಕಿನ ಒಂದು ಭಾಗವಷ್ಟೆ. ನಿಮ್ಮ ಬದುಕು ಹಿರಿದಾಗಿದೆ. ಈ ರೀತಿಯ ಪರೀಕ್ಷೆಗಳನ್ನು ಹೆಜ್ಜೆಗೊಂದರಂತೆ ಎದುರಿಸಬೇಕಾಗುತ್ತದೆ. ಸೂಕ್ತ ತಯಾರಿ, ಶ್ರದ್ಧೆಯಿಂದ ಓದುವುದು, ಅರ್ಥೈಸಿಕೊಳ್ಳುವುದರಿಂದ ಬದುಕು ಬಂಗಾರವಾಗುತ್ತದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಎಸ್.ಶಿವಶಂಕರ್ ಮಾತನಾಡಿ, ನಮ್ಮ ಶಾಲೆಯಲ್ಲಿ ಉತ್ತಮ ವಿದ್ಯೆ ಮತ್ತು ಸಂಸ್ಕಾರವನ್ನು ಕಲಿತಿರುವಿರಿ. ಇದನ್ನು ಮುಂದುವರೆಸಿಕೊಂಡು ಹೋಗಿ. ನೀವು ಮುಂದಿನ ದಿನಗಳಲ್ಲಿ ಸಾಧನೆ ಮಾಡಿದಷ್ಟೂ ನೀವು ಓದಿದ ಶಾಲೆಗೆ ಕೀರ್ತಿ ಬರುತ್ತದೆ ಎಂದು ನುಡಿದರು.
ಈ ಸಂದರ್ಭದಲ್ಲಿ ವರ್ಷದ ಶಾಲೆಯ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ಆರ್.ಮಹೇಶ್ ಎಂಬ ವಿದ್ಯಾರ್ಥಿಗೆ ನೀಡಿ ಗೌರವಿಸಲಾಯಿತು. ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಹಾಗೂ ಇಕೋ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಚಟುವಟಿಕೆಗಳಲ್ಲಿ ಬಹುಮಾನಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಎಸ್.ಡಿ.ಎಂ.ಸಿ.ಅಧ್ಯಕ್ಷ ಮಂಜುನಾಥ್, ಶಿಕ್ಷಕರಾದ ನವೀನ್ ಕುಮಾರ್, ಶ್ರೀನಿವಾಸ್, ಎಂ.ಶಿವಕುಮಾರ್, ರಾಮಮೂರ್ತಿ, ದೊಡ್ಡನಾಯ್ಕ, ಸವಿತಾ ಹಾಜರಿದ್ದರು.
ನಗರಸಭೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ
ನಗರದ ವ್ಯಾಪ್ತಿಯಲ್ಲಿ ನಗರಸಭೆಯ ಸಿಬ್ಬಂದಿಯು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ನಗರದಾದ್ಯಂತ ಕಸ ಕಡ್ಡಿಗಳಿಂದ ತುಂಬಿದ್ದು ಚರಂಡಿಗಳನ್ನು ಹಾಗೂ ಒಳ ಚರಂಡಿಯನ್ನು ಶುಚಿಗೊಳಿಸದೆ ಬಗ್ಗೆ ಹಲವು ಬಾರಿ ನಗರಸಭಾ ಸದಸ್ಯರು ಹಾಗೂ ಸಾರ್ವಜನಿಕರು ನೀಡಿದ ದೂರನ್ನು ಪರಿಗಣಿಸಿಲ್ಲ. ಈ ಬಗ್ಗೆ ಆಕ್ರೋಶಗೊಂಡ ಕೆಲ ನಗರಸಭಾ ಶುಕ್ರವಾರ ನಗರಸಭಾ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಿದರು.
ನಗರದ ಕ್ರೆಸೆಂಟ್ ಶಾಲೆಯ ರಸ್ತೆಯಲ್ಲಿನ ಒಳ ಚರಂಡಿಯ ಮ್ಯಾನ್‌ಹೋಲ್ ಮುಚ್ಚಳ ಇಲ್ಲದೆ ಕಸಕಡ್ಡಿಗಳಿಂದ ತುಂಬಿದ್ದು ಕೊಳಚೆ ನೀರು ಕಳೆದ 10 ದಿನಗಳಿಂದ ದುರ್ನಾತ ಬೀರುತ್ತಿತ್ತು. ಈ ಬಗ್ಗೆ ನಾಲ್ಕನೇ ವಾರ್ಡಿನ ನಗರಸಭಾ ಸದಸ್ಯ ಲಕ್ಷ್ಮಯ್ಯ ಹಲವು ಬಾರಿ ನಗರಸಭೆಯ ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳದೇ ಕಾರಣ ನಗರಸಭೆ ಅಧಿಕಾರಿಗಳ ಕಾರ್ಯವೈಕರಿಯಿಂದ ಬೇಸತ್ತು ನಗರಸಭಾ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದರು.
ಎಚ್ಚೆತ್ತುಕೊಂಡ ನಗರಸಭೆಯ ಆರೋಗ್ಯಾಧಿಕಾರಿ ದಿಲೀಪ್ ತಕ್ಷಣವೇ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಒಳ ಚರಂಡಿಯನ್ನು ಸ್ವಚ್ಚಗೊಳಿಸಿ ಮ್ಯಾನ್‌ಹೋಲ್ ಮುಚ್ಚಳವನ್ನು ದುರಸ್ಥಿಗೊಳಿಸಿದರು. ಆ ನಂತರ ನಗರಸಭೆ ಕಚೇರಿಯ ಬೀಗವನ್ನು ತೆಗೆಯಲಾಯಿತು.
ತಂಬಾಕು ನಿಯಂತ್ರಣ ಕಾನೂನು ಉಲ್ಲಂಘಿಸಿದವರಿಗೆ ದಂಡ ವಿಧಿಸಿದ ಅಧಿಕಾರಿಗಳು
ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಇಲಾಖೆಗಳ ಅಧಿಕಾರಿಗಳು ನಗರದ ವಿವಿದೆಡೆ ಹತ್ತಿರದ ಅಂಗಡಿ, ಹೋಟೆಲುಗಳಿಗೆ, ಬಸ್ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆ ಮಾಡುತ್ತಿರುವವರಿಗೆ ತಂಬಾಕು ನಿಯಂತ್ರಣ ಕಾನೂನಿನನ್ವಯ ಗುರುವಾರ ದಂಡ ವಿಧಿಸಿದರು.
ಆರೋಗ್ಯ ಇಲಾಖೆಯ ಮೇಲ್ವಿಚಾರಕ ಲೋಕೇಶ್ ಹಾಗೂ ತಂಡ ಪೊಲೀಸರ ಜೊತೆಯಲ್ಲಿದ್ದು, ರೈಲ್ವೆ ನಿಲ್ದಾಣ, ಸರ್ಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ತಾಲ್ಲೂಕು ಕಚೇರಿ ಹಾಗೂ ವಿವಿಧ ಶಾಲೆಗಳ ಹತ್ತಿರದ ಅಂಗಡಿಗಳು, ತಳ್ಳುವ ಗಾಡಿಗಳು, ಕಾಫಿ ಟೀ ಶಾಪ್‌ಗಳಿಗೆ ಹೋಗಿ ತಂಬಾಕು ಉತ್ಪನ್ನಗಳ ಮಾರಾಟವನ್ನು ಕಂಡು ತಿಳುವಳಿಕೆ ನೀಡಿದ್ದಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದ ವ್ಯಕ್ತಿಗಳಿಗೆ ದಂಡ ವಿಧಿಸಿದರು.
ಆರೋಗ್ಯ ಇಲಾಖೆಯ ಲೋಕೇಶ್ ಮಾತನಾಡಿ, “ತಂಬಾಕು ನಿಯಂತ್ರಣ ಕಾನೂನು ಕೋಟ್ಪಾ ಕಾಯ್ದೆಯ ಬಗ್ಗೆ ಜನರಿಗೆ ತಿಳಿವಳಿಕೆ ನೀಡುತ್ತಾ ಸಾರ್ವಜನಿಕವಾಗಿ ಬೀಡಿ ಸಿಗರೇಟ್ ಸೇದುವವರಿಗೆ ಸಣ್ಣ ಪ್ರಮಾಣದ ದಂಡ ವಿಧಿಸಿದೆವು. 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಹಾಗೂ ಶಾಲಾ ಕಾಲೇಜುಗಳ 100 ಯಾರ್ಡ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರುವುದನ್ನು ನಿಷೇಧಿಸಿದೆ. ಈ ಬಗ್ಗೆ ನಾಮಫಲಕವನ್ನೂ ಕಡ್ಡಾಯವಾಗಿ ಶಾಲಾ ಕಾಲೇಜಿನ ಆವರಣ ಗೋಡೆಯ ಮುಂಭಾಗದಲ್ಲಿ ಪ್ರದರ್ಶಿಸಬೇಕಾಗುತ್ತದೆ. ಇಂದು ಸುಮಾರು ಹತ್ತು ಮಂದಿಗೆ ದಂಡ ವಿಧಿಸಿದ್ದೇವೆ’ ಎಂದು ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, “ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ಉನ್ನತಾಧಿಕಾರಿಗಳು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ತಂಬಾಕು ನಿಯಂತ್ರಣ ಕಾನೂನು ಕೋಟ್ಪಾ ಕಾಯ್ದೆಯಡಿ ತಾಲ್ಲೂಕಿನೆಲ್ಲೆಡೆ ದಿಡೀರ್ ಭೇಟಿ ನೀಡಿ ದಂಡ ವಿಧಿಸುವ ಕಾರ್ಯಯೋಜನೆಯಿದೆ. ಸಾರ್ವಜನಿಕರಿಗೆ ಹಾಗೂ ಅಂಗಡಿಗಳವರಿಗೆ ಈಗಾಗಲೇ ಕಾನೂನಿನ ಅರಿವು ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಕಾನೂನು ಕ್ರಮವನ್ನು ಕೈಗೊಳ್ಳುತ್ತೇವೆ” ಎಂದು ಹೇಳಿದರು.
ಆರೋಗ್ಯ ಇಲಾಖೆಯ ಧನಂಜಯ, ಕೀರ್ತಿ, ಪೊಲೀಸ್ ಪೇದೆ ಶಶಿಕುಮಾರ್ ಹಾಜರಿದ್ದರು.
ಕೊರೋನಾ ಸೋಂಕು ತಡೆ ಕುರಿತು ಜಾಗೃತಿ ಕಾರ್ಯಕ್ರಮ
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆರೋಗ್ಯ ಇಲಾಖೆ, ಸುಂದರಲಾಲ್ ಬಹುಗುಣ ಇಕೋಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಕೊರೋನಾ ಸೋಂಕು ತಡೆ ಜಾಗೃತಿ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಶುಷ್ರೂಷಕಿ ಎನ್.ಆಶಾ ಮಾತನಾಡಿದರು.
ರೋಗಗಳು ಬಂದ ನಂತರ ಕಷ್ಟಪಡುವುದಕ್ಕಿಂತ ಬಾರದಂತೆಯೇ ತಡೆಯುವ ಕ್ರಮಗಳನ್ನು ಅನುಸರಿಸಬೇಕು. ಸುತ್ತಮುತ್ತಲೂ ಮತ್ತು ವೈಯಕ್ತಿಕ ನೈರ್ಮಲ್ಯದ ಸರಳ ಕ್ರಮಗಳನ್ನು ಅನುಸರಿಸುವ ರೋಗ ಹರಡುವುದನ್ನು ತಡೆಯಬಹುದು ಎಂದು ಅವರು ತಿಳಿಸಿದರು.
ಕೆಮ್ಮುವಾಗ, ಸೀನುವಾಗ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಆಗಿಂದಾಗ್ಗೆ ಬಿಸಿನೀರಿನಿಂದ ಕೈಗಳನ್ನು ತೊಳೆದುಕೊಳ್ಳುವುದು, ಗಂಟಲನ್ನು ಉಪ್ಪು ಮತ್ತು ಬಿಸಿನೀರಿನಿಂದ ತೊಳೆಯಬೇಕು. ಅನಾರೋಗ್ಯ ಕಾಡಿದ ತಕ್ಷಣ ಆರೋಗ್ಯ ಇಲಾಖೆಯಿಂದ ಸಲಹೆ ಪಡೆಯಬೇಕು ಎಂದರು.
ಇಕೋಕ್ಲಬ್‌ನ ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಜನಜಂಗುಳಿಯಿರುವ ಪ್ರದೇಶಗಳಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಎಚ್ಚರವಹಿಸಬೇಕು. ಮೂಗು, ಬಾಯಿ, ಗಂಟಲುಗಳನ್ನು ಅನೈರ್ಮಲ್ಯುತ ಕೈಯಿಂದ ಮುಟ್ಟದೇ ಸ್ವಚ್ಚವಾಗಿರಿಸಕೊಳ್ಳಬೇಕು. ಕಾಯಿಲೆಯ ಕುರಿತು ಭಯಪಡದೇ ಜಾಗ್ರತಾಕ್ರಮಗಳನ್ನು ಅನುಸರಿಸಬೇಕು ಎಂದರು.
ಈ ಸಂದರ್ಭದಲ್ಲಿ ಕೊರೋನಾ ಸೋಂಕುತಡೆ ಕುರಿತು ಕರಪತ್ರಗಳನ್ನು ಹಂಚಿ ಜಾಗೃತಿ ಮೂಡಿಸಲಾಯಿತು.
ಆರೋಗ್ಯಕಾರ್ಯಕರ್ತೆ ಭಾಗ್ಯಮ್ಮ, ಲಕ್ಷ್ಮಮ್ಮ, ತಿಮ್ಮಕ್ಕ, ಮುಖ್ಯಶಿಕ್ಷಕಿ ಉಮಾದೇವಿ, ಶಿಕ್ಷಕ ಬಿ.ನಾಗರಾಜು, ಲಕ್ಷ್ಮಯ್ಯ, ಎ.ಬಿ.ನಾಗರಾಜ, ಶಿಕ್ಷಕಿ ತಾಜೂನ್, ಎಸ್‌ಡಿಎಂಸಿ ಮಾಜಿ ಸದಸ್ಯ ಬಚ್ಚೇಗೌಡ ಹಾಜರಿದ್ದರು.
ಪೂಜಮ್ಮದೇವಿ ಹೂವಿನ ಕರಗ ಮಹೋತ್ಸವ
ನಗರದ ಬೈಪಾಸ್ ರಸ್ತೆಯಲ್ಲಿರುವ ಶ್ರೀ ಪೂಜಮ್ಮದೇವಿ ಹೂವಿನ ಕರಗ ಮಹೋತ್ಸವ ಸೋಮವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.
ಕರಗದ ಪ್ರಯುಕ್ತ ನಗರದ ವಿವಿದೆಡೆ ವಿಶೇಷ ವಾದ್ಯಗೋಷ್ಠಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ದೀಪಾಲಂಕಾರಗಳ ಪೂಜಮ್ಮ ದೇವಿಯ ಮುತ್ತಿನ ಪಲ್ಲಕ್ಕಿ ಉತ್ಸವ ಸಹ ನಡೆಯಿತು.
ಕದಿರಿಹುಣ್ಣಿಮೆಯಂದು ಪ್ರತಿವರ್ಷವೂ ನಗರದ ಪೂಜಮ್ಮ ದೇವಿಯ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಕರಗವನ್ನು ನಡೆಸಲಾಗುತ್ತದೆ.
ಆಕರ್ಷಕ ತಮಟೆ ವಾದ್ಯ ಗಮನ ಸೆಳೆಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿತು. ಮನೆಗಳ ಮುಂದೆ ರಂಗೋಲಿ ಹಾಕಲಾಗಿತ್ತು. ಪ್ರತಿ ಮನೆಯವರು ಕರಗಕ್ಕೆ ಪೂಜೆ ಸಲ್ಲಿಸಿ ಹೂವನ್ನು ಅರ್ಪಿಸಿದರು.
ವಿಶ್ವ ಗ್ಲಾಕೋಮಾ ಸಪ್ತಾಹದ ಅಂಗವಾಗಿ ಜಾಥಾ
ವಿಶ್ವ ಗ್ಲಾಕೋಮಾ ಸಪ್ತಾಹದ ಅಂಗವಾಗಿ ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ, ಅಂಧತ್ವ ಮತ್ತು ದೃಷ್ಟಿದೋಷ ನಿಯಂತ್ರಣ ವಿಭಾಗ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಮಂಗಳವಾರ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಜನಜಾಗೃತಿ ಜಾಥಾ ನಡೆಸಿದರು. ಜಾಥಾಕ್ಕೆ ಕಣ್ಣಿನ ತಜ್ಞ ಡಾ.ಧರ್ಮೇಂದ್ರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ನೇತ್ರ ವಿಭಾಗದ ಡಾ.ಧರ್ಮೇಂದ್ರ, ಗ್ಲಾಕೋಮ ರೋಗವು ಸದ್ದಿಲ್ಲದೆ ಕಣ್ಣಿನ ದೃಷ್ಟಿಯನ್ನು ಕುಂದಿಯುತ್ತದೆ. ಗ್ಲಾಕೋಮಾವನ್ನು ಪ್ರಾಥಮಿಕ ಹಂತದಲ್ಲೆ ತಪಾಸಣೆ ಮತ್ತು ಚಿಕಿತ್ಸೆ ಮಾಡಿಸಿಕೊಳ್ಳುವುದರ ಮೂಲಕ ಸಾರ್ವಜನಿಕರು ತಮ್ಮ ಕಣ್ಣಿನ ದೃಷ್ಟಿಯನ್ನು ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ದೃಷ್ಟಿ ನರ ಮತ್ತು ದೃಷ್ಟಿ ಕ್ಷೇತ್ರದ ಬದಲಾವಣೆಗಳೊಂದಿಗೆ ಮುಂದುವರೆದ ಆಪ್ಟಿಕ್ ನ್ಯೂರೋಪಥಿ ದೋಷವೇ ಗ್ಲಾಕೋಮಾ. ಗ್ಲಾಕೋಮಾದಲ್ಲಿ ಕಂಡುಬರುವ ಇಂಥ ಎಲ್ಲ ಬದಲಾವಣೆಗಳು ಮಾರ್ಪಡಿಸಲು ಸಾಧ್ಯವಾಗದೆ ಇರುವಂಥದ್ದು. ಈ ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲ. ಆದರೆ ಇದನ್ನು ನಿಯಂತ್ರಿಸಬಹುದು. 40 ವರ್ಷಗಳ ಮೇಲ್ಪಟ್ವರು ಆಪ್ಟಿಕ್ ನರ್ವ್‌ನ ಎಚ್ಚರಿಕೆಯ ಮೌಲ್ಯ ಮಾಪನ ಮತ್ತು ಕಣ್ಣಿನ ಒತ್ತಡದ ಮಾಪನ ಸೇರಿದಂತೆ ಅಗಾಗ ಸಮಗ್ರ ನೇತ್ರ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಮುಖ್ಯ. ಆದ್ದರಿಂದ ಈ ವಯೋಮಾನಕ್ಕೆ ಮೇಲ್ಪಟ್ಟ ಎಲ್ಲರೂ ಗ್ಲಾಕೋಮಾ ತಪಾಸಣೆಗೆ ಒಳಪಡಬೇಕಾದುದು ಕಡ್ಡಾಯ. ಮಕ್ಕಳಿಗೂ ಗ್ಲಾಕೋಮಾ ಹಾನಿ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಈ ರೋಗ ಮಕ್ಕಳಲ್ಲಿ ಕಂಡುಬಂದರೆ ತಕ್ಷಣ ಚಿಕಿತ್ಸೆ ಕೊಡಿಸಬೇಕು. ಇಲ್ಲದಿದ್ದರೆ, ಅವರ ಜೀವನದಲ್ಲಿ ಅಂಧತ್ವದ ಕತ್ತಲು ಕವಿಯುತ್ತದೆ ಎಂದು ವಿವರಿಸಿದರು.
ಸರಸ್ವತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ವಿಶ್ವ ಗ್ಲಾಕೋಮಾ ಸಪ್ತಾಹದ ಅಂಗವಾಗಿ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ನೇತ್ರ ವಿಭಾಗದ ಮೀನಾಕ್ಷಿ, ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳಾದ ಲೋಕೇಶ್, ಲವಕುಮಾರ್, ನಂದಿನಿ, ವಿಜಯಾ, ಮಂಗಳಾ, ಚೈತ್ರಾ ಹಾಜರಿದ್ದರು.
“ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ”ಯ ಕಾನೂನು ಅರಿವು ನೆರವು ಕಾರ್ಯಕ್ರಮ
ನಗರದ ಸ್ತ್ರೀಶಕ್ತಿ ಭವನದಲ್ಲಿ ಮಂಗಳವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ “ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ”ಯ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ಸಂಜು ಕುಮಾರ್ ಎ.ಪಚ್ಚಾಪುರೆ ಮಾತನಾಡಿದರು.
ಮಹಿಳೆಯರಿಗಾಗಿ ನಾನಾ ಕಾನೂನುಗಳಿದ್ದು, ಈ ಬಗ್ಗೆ ಎಲ್ಲ ಮಹಿಳೆಯರು ಸಂಪೂರ್ಣವಾಗಿ ಅರಿತುಕೊಳ್ಳಬೇಕು. ಇಲ್ಲವಾದರೆ ಒಂದಿಲ್ಲೊಂದು ಶೋಷಣೆಗೆ ಒಳಗಾಗುವುದು ತಪ್ಪುವುದಿಲ್ಲ. ವಿದ್ಯಾವಂತ ಮಹಿಳೆಯರು ಈ ಬಗ್ಗೆ ಅರಿತು ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ ಅರಿವು ಮೂಡಿಸುವ ಮೂಲಕ ಎಷ್ಟೋ ಹೆಣ್ಣುಮಕ್ಕಳು ಶೋಷಣೆಗೆ ಒಳಗಾಗುವುದನ್ನು ತಪ್ಪಿಸಿದಂತಾಗುತ್ತದೆ ಎಂದು ಅವರು ತಿಳಿಸಿದರು.
ಮಹಿಳಾ ಸಂರಕ್ಷಣಾ ಕಾಯಿದೆ, ಮಹಿಳಾ ದೌರ್ಜನ್ಯ ಕಾಯ್ದೆ, ವರದಕ್ಷಿಣೆ ವಿರೋಧಿ ಕಾಯ್ದೆ ಸೇರಿ ಹಲವು ಕಾಯ್ದೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. 2005 ರಲ್ಲಿ ತಂದೆಯ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಸಮಾನ ಆಸ್ತಿ ನೀಡುವ ಕಾಯ್ದೆ ಜಾರಿಯಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸರ್ಕಾರಿ ವಕೀಲೆ ಎಸ್.ಕುಮುದಿನಿ ಮಾತನಾಡಿ, ಸಂವಿಧಾನ ಪುರುಷ ಹಾಗೂ ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡಿದೆ. ಆದರೆ ಪುರಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಿಂತಿಲ್ಲ. ಇದಕ್ಕೆ ಹೆಣ್ಣು ಮಕ್ಕಳಲ್ಲಿ ಶಿಕ್ಷಣದ ಕೊರತೆ ಕಾರಣವಾಗಿದೆ. ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಮೂಲಕ ಶೋಷಣೆಯಿಂದ ಮುಕ್ತಗೊಳಿಸಬೇಕು. ಭ್ರೂಣ ಹತ್ಯೆ ನಿಲ್ಲಬೇಕು ಎಂದು ಹೇಳಿದರು.
ಮಹಿಳಾ ಸಾಂತ್ವನ ಕೇಂದ್ರದ ವಿಜಯಾ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ಕಾರ್ಯದರ್ಶಿ ಎಂ.ಬಿ.ಲೋಕೇಶ್, ವಕೀಲರಾದ ಸುಬ್ರಮಣ್ಯಪ್ಪ, ವೀಣಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ನಾಗವೇಣಿ, ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಮುನಿರತ್ನಮ್ಮ ಹಾಜರಿದ್ದರು.
ಉಲ್ಲೂರುಪೇಟೆಯ ಸರ್ಕಾರಿ ಶಾಲಾವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ನಗರದ ಉಲ್ಲೂರುಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ನಗರಸಭೆ ಕಾರ್ಯಾಲಯ, ಹೊಸಕೋಟೆಯ ಎಂ.ವಿ.ಜೆ.ಆಸ್ಪತ್ರೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಪ್ರತಿಯೊಂದು ಗ್ರಾಮ ಪಂಚಾಯಿತಿ ಕೇಂದ್ರಗಳ ವ್ಯಾಪ್ತಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ನಗರಸಭೆಯ ವ್ಯಾಪ್ತಿಯಲ್ಲಿ ಮೂರು ವಾರ್ಡ್‌ಗಳನ್ನು ಸೇರಿಸಿಕೊಂಡು ಒಂದು ಸ್ಥಳದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿ, ನುರಿತ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಿ, ಅಗತ್ಯವಿರುವ ಜನರಿಗೆ ಹೊಸಕೋಟೆ ಎಂ.ವಿ.ಜೆ.ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆಯ ವ್ಯವಸ್ಥೆಯನ್ನು ಮಾಡಿರುವುದು ಶ್ಲಾಘನೀಯ ಎಂದರು.
ಶಿಡ್ಲಘಟ್ಟ ನಗರಸಭೆಯ ಮಾದರಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಜನರಿಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಎಂ.ವಿ.ಜೆ.ಆಸ್ಪತ್ರೆಯ ಸಹಯೋಗದೊಂದಿಗೆ ಪ್ರತಿಯೊಂದು ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಮತ್ತು ಶಸ್ತ್ರಚಿಕಿತ್ಸಾ ಶಿಬಿರಗಳನ್ನು ನಡೆಸಲು ಉದ್ದೇಶಿಸಿರುವುದಾಗಿ ಹೇಳಿದರು.
ರೇಷ್ಮೆ ಉದ್ಯಮವನ್ನು ನೆಚ್ಚಿಕೊಂಡಿರುವ ನಾಗರಿಕರು ಅಸ್ತಮಾ, ಚರ್ಮರೋಗ ಮೊದಲಾದ ಖಾಯಿಲೆಗಳಿಂದ ನರಳುತ್ತಿದ್ದಾರೆ ಎಂದು ವೈದ್ಯರು ಧೃಡಪಡಿಸಿದ್ದಾರೆ. ಸರ್ಕಾರ ಸಹ ರೇಷ್ಮೆ ಕೂಲಿ ಕಾರ್ಮಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಬೇಕಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಖಾಲಿಯಿರುವ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೇ ಆರೋಗ್ಯ ಸಚಿವ ಶ್ರೀರಾಮುಲು ಅವರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದರು.
ಹೊಸಕೋಟೆಯ ಎಂ.ವಿ.ಜೆ.ಆಸ್ಪತ್ರೆಯ ಮುಖ್ಯಸ್ಥ ಡಾ.ಪ್ರಮೋದ್ ಮಾತನಾಡಿ, ಎಂ.ವಿ.ಜೆ.ಆಸ್ಪತ್ರೆಯ ತಜ್ಞ ವೈದ್ಯರು ವಾರದಲ್ಲಿ ಎರಡು ದಿನಗಳ ಕಾಲ ಉಚಿತವಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ನಗರಸಭೆಯ ಸದಸ್ಯರು ಮತ್ತು ಪೌರಾಯುಕ್ತರ ಮನವಿಯನ್ನು ಪುರಸ್ಕರಿಸಿ ಪ್ರತಿ ಭಾನುವಾರದಂದು ಮೂರು ವಾರ್ಡ್‌ಗಳನ್ನು ಸೇರಿಸಿಕೊಂಡು ಒಂದು ಪ್ರದೇಶದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಸಹ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ವಾರ್ಡ್ 11 ರ ನಗರಸಭಾ ಸದಸ್ಯ ಅನೀಲ್ ಕುಮಾರ್, 23 ನೇ ವಾರ್ಡಿನ ರಾಘವೇಂದ್ರ ಮಾತನಾಡಿ ಹೊಸಕೋಟೆಯ ಎಂ.ವಿ.ಜೆ.ಆಸ್ಪತ್ರೆ ಹಾಗೂ ನಗರಸಭೆಯ ಸಹಯೋಗದೊಂದಿಗೆ ನಡೆಸುತ್ತಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು. 430 ಮಂದಿ ಚಿಕಿತ್ಸೆ ಪಡೆದರು.
ಕಾರ್ಯಕ್ರಮದಲ್ಲಿ ರೇಷ್ಮೆ ಉದ್ಯಮಿ ಬಿ.ಲಕ್ಷ್ಮೀನಾರಾಯಣಪ್ಪ, ನಗರಸಭೆಯ ಸದಸ್ಯ ಮಂಜುನಾಥ್, ಕೃಷ್ಣಮೂರ್ತಿ, ಮನೋಹರ್, ಪೌರಾಯುಕ್ತ ಎಚ್.ವಿ.ಹರೀಶ್, ರಿಯಾಝ್ ಪಾಷ ಹಾಜರಿದ್ದರು.
ಬ್ಯಾಟರಾಯಸ್ವಾಮಿ ಬ್ರಹ್ಮ ರಥೋತ್ಸವ
ಚಿಕ್ಕದಾಸರಹಳ್ಳಿಯ ಸಮೀಪದ ಬ್ಯಾಟರಾಯಸ್ವಾಮಿ ಬ್ರಹ್ಮ ರಥೋತ್ಸವ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಾಂಗೋಪವಾಗಿ ನಡೆಯಿತು. ಸುತ್ತಮುತ್ತಲ ಗ್ರಾಮಗಳಿಂದ ಹಾಗೂ ನಗರದಿಂದ ಆಗಮಿಸಿದ್ದ ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದರು.
ರಥೋತ್ಸವ ಅಂಗವಾಗಿ ದೇಗುಲದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ಬತ್ತಾಸು, ಸಿಹಿ ಖಾರದ ತಿಂಡಿಗಳು, ವಿವಿಧ ಹಣ್ಣುಗಳು, ತಂಪು ಪಾನೀಯ, ಕರಿದ ತಿಂಡಿ ತಿನಿಸು, ಮಕ್ಕಳಿಗೆ ಆಟಿಕೆ, ಅಚ್ಚೆ ಹಾಕುವವರು, ಬಳೆಗಾರರು ಉತ್ಸವಕ್ಕೆ ರಂಗು ತುಂಬಿದರು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತರಿಗೆ ಪಾನಕ, ಮಜ್ಜಿಗೆ ಹಾಗೂ ಹೆಸರು ಬೇಳೆ ವಿತರಿಸಲಾಯಿತು. ವಿವಿಧ ಗ್ರಾಮಸ್ಥರು ಹೆಸರುಬೇಳೆ ಪಾನಕ ವಿತರಿಸಿದರು. ಅನ್ನಸಂತರ್ಪಣೆ ನಡೆಯಿತು.
ವಿಜಯನಗರ ಕಾಲದ ಬ್ಯಾಟರಾಯಸ್ವಾಮಿ ದೇವಾಲಯವು ಎತ್ತರವಾದ ಗುಡ್ಡದ ಮೇಲಿರುವುದರಿಂದ ಕಂಗೊಳಿಸುತ್ತಿತ್ತು. ಶಿಲ್ಪಕಲಾ ದೃಷ್ಟಿಯಿಂದ ಅತ್ಯಂತ ಆಕರ್ಷಕ ಕಲಾನೈಪುಣ್ಯತೆ ಹೊಂದಿದೆ. ಬ್ಯಾಟರಾಯನ ಉತ್ಸವಮೂರ್ತಿ ಜತೆಗೆ ಶ್ರೀದೇವಿ ಭೂದೇವಿ ಅವರ ಸುಂದರ ಶಿಲ್ಪಗಳಿವೆ.
‘ಪ್ರತಿ ವರ್ಷ ಕಾಮನ ಹುಣ್ಣಿಮೆಯಂದು ಇಲ್ಲಿ ರಥೋತ್ಸವ ನಡೆಯುತ್ತದೆ. ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಭಕ್ತರು ಈ ದೇವಾಲಯದಲ್ಲಿ ಪ್ರಸಾದ ಕೇಳುವುದು ರೂಢಿ. ಮನೆಗೆ ಹೆಣ್ಣು ತರಲು, ಹೆಣ್ಣು ಕೊಡಲು, ಬಾವಿ ತೋಡಲು, ಕೊಳವೆ ಬಾವಿ ಕೊರೆಸಲು, ಭೂಮಿ ಕೊಳ್ಳಲು, ಮನೆ ಕಟ್ಟಲು ಮುಂತಾದ ಶುಭ ಕಾರ್ಯಗಳಿಗೆ ಬ್ಯಾಟರಾಯಸ್ವಾಮಿಯ ಪ್ರಸಾದ ಕೇಳುತ್ತಾರೆ’ ಎಂದು ಬ್ಯಾಟರಾಯಸ್ವಾಮಿ ದೇವಾಲಯ ಧರ್ಮದರ್ಶಿಯೊಬ್ಬರು ಹೇಳಿದರು.
ಸುತ್ತಮುತ್ತಲಿನ ಗ್ರಾಮಗಳು ಹಾಗೂ ತಾಲ್ಲೂಕಿನ ವಿವಿಧ ಭಾಗಗಳಿಂದ ನೂರಾರು ಭಕ್ತರು ಆಗಮಿಸಿ ದೇವರ ಪೂಜೆಯಲ್ಲಿ ಪಾಲ್ಗೊಂಡರು.
ರಥೋತ್ಸವಕ್ಕೆ ತಹಶೀಲ್ದಾರ್ ಅರುಂಧತಿ ಚಾಲನೆ ನೀಡಿದರು. ಗ್ರೇಡ್ 2 ತಹಶೀಲ್ದಾರ್ ಹನುಮಂತ ರಾವ್ , ಆರ್.ಐ.ವಿಶ್ವನಾಥ, ಬ್ಯಾಟರಾಯಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಪಣ್ಣ, ಶ್ರೀ ಬ್ಯಾಟರಾಯಸ್ವಾಮಿ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಶ್ರೀನಿವಾಸ್, ಧರ್ಮದರ್ಶಿ ಪುಟ್ಟರಾಜು, ಬೆಟ್ಟಕೋಟೆ ಹರೀಶ್, ತಾಳಂಕಿ ನರಸರಾಜಗುಪ್ತ ಕುಟುಂಬ, ದೇವಸ್ಥಾನದ ಧರ್ಮದರ್ಶಿಗಳಾದ ಚಿಕ್ಕ ಗಂಗಪ್ಪ ಕುಟುಂಬ, ಆಂಜಿನಪ್ಪ (ಪುಟ್ಟು), ಆನೂರು ದೇವರಾಜ್, ಮುಗಿಲಡಿಪಿ ಚಂದ್ರಪ್ಪ, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ವೈಶಾಕ್, ಕೃಷ್ಣಮೂರ್ತಿ, ಎಂ. ಎಚ್. ರಾಮಾಂಜಿನಪ್ಪ, ಸುನೀಲ್ ಕುಮಾರ್, ದಾಮೋದರ್, ರಾಜಣ್ಣ, ನಂಜಪ್ಪ, ಎನ್. ದೇವರಾಜ್ ಹಾಜರಿದ್ದರು.
ಅಪ್ಪೇಗೌಡನಹಳ್ಳಿಯ ಸಾತ್ವಿಕ್ ಗೆ 2019-20 ನೇ ಸಾಲಿನ “ಹೊಯ್ಸಳ ಶೌರ್ಯ” ಪ್ರಶಸ್ತಿ ಪ್ರದಾನ
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಬಾಲಕ ಆರು ವರ್ಷದ ಸಾತ್ವಿಕ್ ಗೆ ಭಾನುವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 2019-20 ನೇ ಸಾಲಿನ “ಹೊಯ್ಸಳ ಶೌರ್ಯ” ಪ್ರಶಸ್ತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಸಚಿವೆ ಶಶಿಕಲಾ ಅ ಜೊಲ್ಲೆ ಪ್ರದಾನ ಮಾಡಿದರು.
ಅಪ್ಪೇಗೌಡನಹಳ್ಳಿಯ ವಿಜಯಕುಮಾರ್ ಮತ್ತು ಮಂಜುಳ ದಂಪತಿಯ ಮಗನಾದ ಸಾತ್ವಿಕ್, ನಿರ್ಮಾಣ ಹಂತದಲ್ಲಿರುವ ಕಟ್ಟಡದ ಬಳಿಯಿರುವ ನೀರಿನ ತೊಟ್ಟಿಗೆ ಆಯತಪ್ಪಿ ಬಿದ್ದ ಪೂರ್ವಿಕ ಎಂಬ ಬಾಲಕಿಯನ್ನು ರಕ್ಷಿಸಿದ್ದ. ತೊಟ್ಟಿಯಲ್ಲಿ ಬಿದ್ದ ಬಾಲಕಿಯನ್ನು ಕಂಡೊಡನೆ ಭಯಪಡದೆ, ಆ ಮಗುವಿನ ಕೈ ನೀರಿನಿಂದ ಮೇಲೆ ಬಂದ ತಕ್ಷಣ ಬುದ್ಧಿ ಉಪಯೋಗಿಸಿ ಕೈ ಹಿಡಿದು ನೀರಿನಿಂದ ಮೇಲೆತ್ತಿ ಪ್ರಾಣಾಪಾಯದಿಂದ ರಕ್ಷಿಸಿ, ಧೈರ್ಯ ಸಾಹಸ ಪ್ರದರ್ಶಿಸಿದ್ದ. ಈ ಘಟನೆ ನಡೆದದ್ದು 2018 ರ ಜುಲೈ 25 ರಂದು. ಸಾತ್ವಿಕ್ ನ ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ಮೆಚ್ಚಿ ಸರ್ಕಾರ “ಹೊಯ್ಸಳ ಶೌರ್ಯ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಪ್ರಶಂಸಾ ಪತ್ರ, ನೆನಪಿನ ಕಾಣಿಕೆ ಹಾಗೂ ಹತ್ತು ಸಾವಿರ ರೂಗಳ ಚೆಕ್ ನೀಡಲಾಗಿದೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಕೆ.ಎ.ದಯಾನಂದ್ ಹಾಜರಿದ್ದರು.
ಕಸಾಪ ತಾಲ್ಲೂಕು ಘಟಕದ ವತಿಯಿಂದ ಮಹಿಳಾ ದಿನಾಚರಣೆ
ತಾಲ್ಲೂಕಿನ ಕಾಚಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಮಹಿಳಾ ದಿನಾಚರಣೆ ಹಾಗೂ ಅಮ್ಮನ ಕೈತುತ್ತು ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶಾಲೆಯ ವಿದ್ಯಾರ್ಥಿಗಳ ತಾಯಂದಿರು ವಿವಿಧ ತಿಂಡಿ ತಿನಿಸುಗಳನ್ನು ತಯಾರಿಸಿಕೊಂಡು ತಂದಿದ್ದರು. ಎಲ್ಲ ಮಕ್ಕಳಿಗೂ ಕೈತುತ್ತನ್ನು ತಾಯಂದಿರು ನೀಡಿದರು. ಪುಟಾಣಿ ಮಕ್ಕಳಿಗೆ ತಿನ್ನಿಸಿದರು. ತರಹೇವಾರಿ ತಿಂಡಿ ತಿನಿಸುಗಳನ್ನು ಮಕ್ಕಳು ಖುಷಿಯಿಂದ ತಿಂದರು.
“ಹಿಂದೆ ಒಟ್ಟು ಕುಟುಂಬದಲ್ಲಿ ಮಕ್ಕಳನ್ನೆಲ್ಲಾ ಕೂರಿಸಿಕೊಂಡು ಕುಟುಂಬದ ಹಿರಿಯ ಮಹಿಳೆ ಕೈತುತ್ತನ್ನು ಕೊಡುತ್ತಿದ್ದರು. ಮಕ್ಕಳೆಲ್ಲಾ ಆಗ ಹೆಚ್ಚೆಚ್ಚು ತಿನ್ನುತ್ತಿದರು. ಈಗಿನ ತಲೆಮಾರಿಗೆ ಈ ಸಂಪ್ರದಾಯ ಮಾತೃಪ್ರೇಮ, ಬಾಂಧ್ಯವ್ಯ, ಸಮಾನತೆ ತಿಳಿಯಬೇಕು. ಆ ಮೂಲಕ ಅವರಲ್ಲಿ ತಾಯಿಯ ಬಗ್ಗೆ ಗೌರವ ಹೆಚ್ಚ್ಸಬೇಕು. ಎಂಬ ಉದ್ದೇಶದಿಂದ ಈ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡೆವು. ಗ್ರಾಮಸ್ಥರು, ಮಕ್ಕಳ ಪೋಷಕರು ಸಕಾರಾತ್ಮಕವಾಗಿ ಸ್ಪಂದಿಸಿದರು” ಎಂದು ಮುಖ್ಯಶಿಕ್ಷಕಿ ಆರ್.ರಾಜೇಶ್ವರಿ ತಿಳಿಸಿದರು.
ಈ ಸಂದರ್ಭದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಕಸಾಪ ತಾಲ್ಲೂಕು ಘಟಕದ ವತಿಯಿಂದ ಭಾರತಾಂಬೆ ಮಹಿಳಾ ರೈತ ಒಕ್ಕೂಟದ ಅಧ್ಯಕ್ಷೆ ರತ್ನಮ್ಮ ಅವರನ್ನು ಸನ್ಮಾನಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಮ್ಮ ಶಿವಕುಮಾರ್, ಉಪಾಧ್ಯಕ್ಷ ಗೋಪಾಲಪ್ಪ, ಸದಸ್ಯೆ ಕಾಚಹಳ್ಳಿ ಮುನಿಯಮ್ಮ, ಎಸ್.ಡಿ.ಎಂ.ಸಿ ಅಧ್ಯಕ್ಷ ನರಸಿಂಹಮೂರ್ತಿ, ಉಪಾಧ್ಯಕ್ಷೆ ನಾಗರತ್ನ, ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್, ಅಂಗನವಾಡಿ ಕಾರ್ಯಕರ್ತೆ ಸುಜಾತ, ಗ್ರಾಮದ ರಾಜಣ್ಣ, ಬಿ.ಆರ್.ಪಿ. ಶಾರದಾಂಬ, ಸಿ.ಆರ್.ಪಿ. ಚಂದ್ರಶೇಖರ್, ಶಿಕ್ಷಕರಾದ ಜಗದೀಶ್, ಅರುಣ, ಮಂಜುನಾಥ್, ಕೆ.ಮುನಿಯಪ್ಪ, ಕೆ.ಸುಮ, ಮುಖ್ಯಶಿಕ್ಷಕಿ ಆರ್.ರಾಜೇಶ್ವರಿ, ಶಿಕ್ಷಕ ವಿ.ಚಂದ್ರಶೇಖರ್ ಹಾಜರಿದ್ದರು.

