Home Blog Page 335

ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ಒಂದು ಲಕ್ಷ ಮಾಸ್ಕ್ ಮತ್ತು ಸೋಪುಗಳ ವಿತರಣೆ

0

ಕರೋನಾ ಸೋಂಕು ಹರಡದಂತೆ ತಡೆಯಲು ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 1 ಲಕ್ಷ ಮಾಸ್ಕ್ ಹಾಗೂ 1 ಲಕ್ಷ ಸೋಪುಗಳನ್ನು ವಿತರಿಸುತ್ತಿದ್ದೇವೆ ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ (ಪುಟ್ಟು) ತಿಳಿಸಿದರು.
ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ಶುಕ್ರವಾರ ನಗರದ ವಿವಿಧ ವಾರ್ಡುಗಳಲ್ಲಿ ಮನೆ ಮನೆಗೂ ತೆರಳಿ ಉಚಿತ ಮಾಸ್ಕ್ ಹಾಗು ಸೋಪು ವಿತರಣೆ ಮಾಡಿ ಅವರು ಮಾತನಾಡಿದರು.
ಆರೋಗ್ಯವೊಂದಿದ್ದರೆ ಜೀವನದಲ್ಲಿ ಏನಾದರೂ ಸಾಧಿಸಬಹುದು ಆ ನಿಟ್ಟಿನಲ್ಲಿ ನಾಗರಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಜೊತೆಗೆ ವೈಯಕ್ತಿಕ ಸ್ವಚ್ಚತೆ ಕಾಪಾಡಿಕೊಳ್ಳುವುದರಿಂದ ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಬಹುದು. ದೇಶಾದ್ಯಂತ ಕರೋನಾ ಸೋಂಕು ಹರಡದಂತೆ ಜಾರಿಗೆ ತಂದಿರುವ ಲಾಕ್ ಡೌನ್‌ಗೆ ಜನತೆ ಉತ್ತಮವಾಗಿ ಸ್ಪಂದಿಸುತ್ತಿರುವುದು ಶ್ಲಾಘನೀಯ. ಸರ್ಕಾರದ ರೀತಿ ನೀತಿಗಳನ್ನು ಗೌರವಿಸುವ ಜೊತೆಗೆ ಪಾಲಿಸುವುದು ನಮ್ಮೆಲ್ಲರ ಕರ್ತವ್ಯ. ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಕರೋನಾ ವೈರಸ್ ನಿಂದಾದ ನಷ್ಟವನ್ನು ಕಂಡಿರುವ ನಾವುಗಳು ಅತ್ಯಂತ ಮುನ್ನೆಚ್ಚರಿಕೆಯಿಂದ ಇರುವುದು ಸೂಕ್ತ ಎಂದರು
ಕೊರೊನಾ ಸೋಂಕಿನ ವಿರುದ್ಧ ನಡೆಯುತ್ತಿರುವ ಸಂಘರ್ಷದಲ್ಲಿ ಒಂದೆಡೆ ವೈದ್ಯರು ಮತ್ತೊಂದೆಡೆ ಪೊಲೀಸರು ಸೇರಿದಂತೆ ಸಾವಿರಾರು ಸ್ವಯಂ ಸೇವಕರು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುಮಾರು 130 ಕೋಟಿ ಜನಸಂಖ್ಯೆಯಿರುವ ದೇಶದಲ್ಲಿ 21 ದಿನಗಳ ಕಾಲ ಲಾಕ್ ಡೌನ್ ಮಾಡುವುದು ಎಂದರೆ ತಮಾಷೆಯ ಮಾತಲ್ಲ. ಇಂತಹ ಸಮಯದಲ್ಲಿ ಜನರು ತಮ್ಮ ತಮ್ಮ ಮನೆಗಳಲ್ಲಿಯೇ ಉಳಿದುಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಎಸ್.ಎನ್.ಕ್ರಿಯಾ ಟ್ರಸ್ಟ್ ಸದಸ್ಯರಾದ ಆನೂರು ದೇವರಾಜ್, ವಿಶ್ವನಾಥ್, ಅಫ್ಸರ್‌ಪಾಷ, ವೆಂಕಟೇಶ್, ಜಮೀರ್, ಸಾದಿಕ್, ಆನಂದ್ ಹಾಜರಿದ್ದರು.

ನಗರಸಭೆ ಮುಖಾಂತರ ಬಡಜನರಿಗೆ ಹಾಲು ವಿತರಣೆ

0

ಶಿಡ್ಲಘಟ್ಟದ ಕೊಳಗೇರಿಯ ಬಡಜನರಿಗಾಗಿ ಸರ್ಕಾರದವರು ಕೆ.ಎಂ.ಎಫ್ ಮೂಲಕ ಮೂರು ಸಾವಿರ ಲೀಟರ್ ಹಾಲನ್ನು ನೀಡುತ್ತಿದ್ದಾರೆ. ಅದನ್ನು ನಗರಸಭೆಯ ಸದಸ್ಯರು ಹಾಗೂ ಸ್ವಯಂ ಸೇವಕರ ಮುಖಾಂತರ ತಲುಪಿಸುತ್ತಿದ್ದೇವೆ ಎಂದು ನಗರಸಭೆ ಪೌರಾಯುಕ್ತ ತ್ಯಾಗರಾಜ್ ತಿಳಿಸಿದರು.
ನಗರಸಭೆ ಮುಂಭಾಗದಲ್ಲಿ ಶುಕ್ರವಾರ ಮುಂಜಾನೆ ಸರ್ಕಾರದ ನೆರವಿನಿಂದ ಕೆ.ಎಂ.ಎಫ್ ನೀಡಿದ ಮೂರು ಸಾವಿರ ಲೀಟರ್ ಹಾಲನ್ನು ಪಡೆದು ಅವರು ಮಾತನಾಡಿದರು.
ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಮಾಡಿರುವುದರಿಂದ ಕೊಳಗೇರಿಯಲ್ಲಿ ವಾಸಿಸುವ ಬಡವರಿಗೆ ಹಾಗೂ ದಿನಗೂಲಿ ಮಾಡುವವರಿಗೆ ಆರ್ಥಿಕ ಸಂಕಷ್ಟ ಉಂಟಾಗಿದೆ. ಇದರಿಂದಾಗಿ ಸರ್ಕಾರ ಅವರಿಗೆ ನೆರವು ನೀಡಲು ಮುಂದಾಗಿದೆ. ನಾವು ನಗರದಲ್ಲಿ ರಾಜೀವ್ ಗಾಂಧಿ ಆಶ್ರಯ ಬಡಾವಣೆ, ಕಾರ್ಮಿಕ ನಗರ, ಕಾಲೋನಿಗಳಲ್ಲಿ ಮೂರು ಸಾವಿರ ಬಡ ಕುಟುಂಬಗಳನ್ನು ಗುರುತಿಸಿದ್ದು, ಅವರಿಗೆ ಕುಟುಂಬಕ್ಕೆ ಒಂದು ಲೀಟರ್ ಹಾಲಿನ ಪ್ಯಾಕೆಟ್ ವಿತರಿಸುತ್ತಿದ್ದೇವೆ. ಇದು ಲಾಕ್ ಡೌನ್ ಎಷ್ಟು ದಿನಗಳಿರುತ್ತದೆಯೋ ಅಷ್ಟೂ ದಿನಗಳು ಹಾಲು ಸರಬರಾಜಾಗುತ್ತದೆ ಎಂದು ಹೇಳಿದರು.
ಕೆಎಂಎಫ್ ನ ಅಧಿಕಾರಿಗಳಾದ ಚಂದ್ರಶೇಖರ್, ಉಮೇಶ್, ನಗರಸಭೆಯ ಆರೋಗ್ಯ ನಿರೀಕ್ಷಕಿ ಶೋಭಾ, ದಿಲೀಪ್, ಮುರಳಿ, ನಗರಸಭೆ ಸದಸ್ಯರಾದ ವೆಂಕಟಸ್ವಾಮಿ, ರಮೇಶ್ ಹಾಜರಿದ್ದರು.

ಕೊತ್ತನೂರು ಬಳಿ ಹೊಲ, ತೋಟಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಟ್ರಂಚ್, ರೈತರ ಪರದಾಟ

0

ರಸ್ತೆಯಲ್ಲಿ ಯಾರೂ ಓಡಾಡದಿರಲೆಂದು ರಸ್ತೆಯನ್ನು ಜೆಸಿಬಿಯಿಂದ ಅಗೆದು ಟ್ರಂಚ್ ಮಾಡಿದ್ದು, ಅಕ್ಕಪಕ್ಕದ ರೈತರು ಈ ದಾರಿಯಲ್ಲಿ ಸಂಚರಿಸಲು ಆಗದೆ ತಮ್ಮ ಜಮೀನುಗಳಿಗೆ ಹೋಗಲಾಗದೇ ಪರಿತಪಿಸುವಂತಾಗಿದೆ.
ತಾಲ್ಲೂಕಿನ ಕೊತ್ತನೂರು ಗ್ರಾಮದ ಕಾಲೋನಿಯ ಗೋವಿಂದಪ್ಪ ಅವರ ಮನೆಯಿಂದ ಓಡೇಶನಪಡೆ ಕುಂಟೆ ಹಾಗೂ ಅಲ್ಲಿಂದ ಗೊರಮಡುಗು, ತುಮ್ಮನಹಳ್ಳಿಗೂ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅದೇ ಗ್ರಾಮದ ಕೆಲವರು ಟ್ರಂಚ್ ನಿರ್ಮಿಸಿ ಜನರು ಓಡಾಡದಂತೆ ಮಾಡಿದ್ದಾರೆ ಎಂದು ಕೊತ್ತನೂರು ಕೆ.ಸಿ.ಜ್ಞಾನೇಶ್ ಮುಂತಾದವರು ದೂರಿದ್ದಾರೆ.
ಈ ಹಿಂದೆ ಇಲ್ಲಿ ರಸ್ತೆ ಇತ್ತಾದರೂ ಅಕ್ಕಪಕ್ಕದವರು ಒತ್ತುವರಿ ಮಾಡಿ ರಸ್ತೆ ಇಲ್ಲದಂತೆ ಮಾಡಿದ್ದರು. ನಂತರ ಆ ಭಾಗದ ರೈತರು ದೂರು ಕೊಟ್ಟ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸಿ ಒತ್ತುವರಿ ತೆರವುಗೊಳಿಸಿ ರಸ್ತೆ ನಿರ್ಮಿಸಿದ್ದರು.
ಆದರೆ ಇದೀಗ ಅದೇ ರಸ್ತೆಯಲ್ಲಿ ಟ್ರಂಚ್ ನಿರ್ಮಿಸಿ ಸಂಚಾರಕ್ಕೆ ಅಡ್ಡಿಪಡಿಸಿದ್ದು ಅನೇಕ ಮಂದಿಯ ಹೊಲ ತೋಟಗಳಿಗೆ ಹೋಗುವ ದಾರಿಯನ್ನು ಮುಚ್ಚಿದಂತಾಗಿದೆ ಎಂದು ಅಲ್ಲಿನ ರೈತರು ಹಾಗೂ ಗ್ರಾಮಸ್ಥರು ನೋವನ್ನು ವ್ಯಕ್ತಪಡಿಸಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ರಸ್ತೆ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ಆರೋಪಕ್ಕೆ ಪ್ರತಿಕ್ರಿಯಿಸಿರುವ ಜಯಪ್ರಕಾಶ್, ಈಗಾಗಲೇ ಓಡಾಡಲು ರಸ್ತೆ ಇದ್ದರೂ ಕೆ.ಸಿ.ಜ್ಞಾನೇಶ್ ಮುಂತಾದವರು ಸರ್ಕಾರದ ಯಾವುದೇ ಆದೇಶ ಹಾಗೂ ಅನುದಾನವಿಲ್ಲದೆ ೧೦೦ ಕ್ಕೂ ಹೆಚ್ಚು ಮರಗಳನ್ನು ಕಡಿದು, ಬೆಲೆ ನಾಶ ಮಾಡಿ ರಸ್ತೆ ಮಾಡಲು ಮುಂದಾಗಿದ್ದರು ಎಂದು ಪ್ರತ್ಯಾರೋಪಿಸಿದ್ದಾರೆ. ಈಗಿರುವ ರಸ್ತೆಯನ್ನೇ ಅಧಿಕೃತಗೊಳಿಸಬೇಕೆಂದು ಸರ್ಕಾರಕ್ಕೆ ವಿನಂತಿಸಿಕೊಂಡಿದ್ದು, ಈ ಪ್ರಕರಣ ಜಿಲ್ಲಾಧಿಕಾರಿಯ ನ್ಯಯಾಲಯದಲ್ಲಿದೆ ಎಂದು ತಿಳಿಸಿದ್ದಾರೆ.

ಕೊರೊನಾ ಭೀತಿಯ ನಡುವೆ ರೇಷ್ಮೆ ಗೂಡಿನ ಮಾರುಕಟ್ಟೆ ಪ್ರಾರಂಭ

0

ರೆಡ್ ಜೋನ್ ಎಂದು ಚಿಕ್ಕಬಳ್ಳಾಪುರ ಜಿಲ್ಲೆ ಘೋಷಣೆಯಾಗಿದ್ದರೂ ಜನರು ಹೆಚ್ಚಾಗಿ ಸೇರುವ ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ವಹಿವಾಟನ್ನು ಗುರುವಾರ ಸರ್ಕಾರದ ಆದೇಶದ ಮೇರೆಗೆ ಪ್ರಾರಂಭಿಸಲಾಯಿತು. ಒಟ್ಟು 185 ಲಾಟ್ ಅಂದರೆ ಸುಮಾರು 11 ರಿಂದ 12 ಟನ್ ರೇಷ್ಮೆ ಗೂಡನ್ನು ವಿವಿಧ ಭಾಗಗಳಿಂದ ರೈತರು ತಂದಿದ್ದರು.
ಕೆಲವು ರೀಲರುಗಳು ಕೊರೊನಾ ಭೀತಿಯಿಂದ, “ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಮುಚ್ಚಿ, ಸಾವಿರಾರು ಮಂದಿ ಸೇರಿದರೆ ರೋಗ ಹರಡಲು ಸಹಾಯ ಮಾಡಿದಂತಾಗುತ್ತದೆ. ಹರಾಜು ಪ್ರಕ್ರಿಯೆಯಲ್ಲಿ ನಾವು ಭಾಗಿಯಾಗುವುದಿಲ್ಲ” ಎಂದು ಹೊರಗುಳಿದರೆ, ಕೆಲವರು ನಮಗೆ ರೇಷ್ಮೆ ಗೂಡು ಬೇಕು, ನಾವು ಖರೀದಿಸುತ್ತೇವೆ ಎನ್ನುತ್ತಾ ಹರಾಜಿನಲ್ಲಿ ಭಾಗವಹಿಸಿದರು.
“ಪ್ರತಿನಿತ್ಯ ಸಾವಿರಾರು ಜನರು ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಒಟ್ಟಿಗೆ ಸೇರುವ ಅವಕಾಶವಿರುವುದರಿಂದ ಜನರಲ್ಲಿ ಸೋಂಕು ಹರಡುವ ಆತಂಕವಿದೆ. ಈಗಾಗಲೇ ಹೆಚ್ಚು ಸೋಂಕಿತರನ್ನು ಹೊಂದಿರುವ ಗೌರಿಬಿದನೂರು ಹಾಗೂ ಆಂಧ್ರದ ಹಿಂದೂಪುರದಿಂದ ಅಧಿಕ ರೇಷ್ಮೆ ಗೂಡು ಈ ದಿನ ರೈತರು ತಂದಿದ್ದಾರೆ. ಮಾರುಕಟ್ಟೆಯಲ್ಲಿ ನೀರಿನ ಅಭಾವವಿದೆ. ಶುಚಿತ್ವದ ಕೊರತೆಯಿದೆ. ಸೋಂಕು ಹರಡುವ ಭೀತಿ ನಮ್ಮದು.
ಇಲ್ಲಿಯವರೆಗೂ ಯಾವುದೇ ಕೊರೋನ ಸೋಂಕು ಶಂಕಿತರಿಲ್ಲದೆ ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿದ್ದ ಶಿಡ್ಲಘಟ್ಟ ತಾಲ್ಲೂಕು, ಅಧಿಕಾರಿಗಳ ಈ ನಿರ್ಣಯದಿಂದ ಅಪಾಯದ ಸ್ಥಿತಿ ತಲುಪುವ ಸಂಭವವಿದೆ. ಶಿಡ್ಲಘಟ್ಟದಲ್ಲಿ ಸೋಂಕು ಹರಡಿದರೆ ಅದಕ್ಕೆ ಸರ್ಕಾರವೇ ನೇರ ಹೊಣೆ” ಎಂದು ರಾಜ್ಯ ರೀಲರುಗಳ ಸಂಘದ ಉಪಾಧ್ಯಕ್ಷ ರಾಮಕೃಷ್ಣಪ್ಪ ದೂರಿದರು.
ರೇಷ್ಮೆ ಗೂಡಿನ ಮಾರುಕಟ್ಟೆ ಉಪನಿರ್ದೇಶಕ ಸುಭಾಷ್ ಸಾತೇನಹಳ್ಳಿ ಮಾತನಾಡಿ, “ಸರ್ಕಾರದ ಆದೇಶದ ಮೇರೆಗೆ ನಾವು ಈ ದಿನ ರೇಷ್ಮೆ ಗೂಡಿನ ವಹಿವಾಟನ್ನು ನಡೆಸಿದ್ದೇವೆ. ಮುಂಜಾಗ್ರತೆ ಕ್ರಮಗಳಾಗಿ ಎಲ್ಲರಿಗೂ ಮಾಸ್ಕ್ ಧರಿಸಿ ಬರಬೇಕು ಎಂದು ತಿಳಿಹೇಳಿದ್ದೇವೆ. ಗುರುತಿನ ಚೀಟಿ ಇದ್ದವರು ಮಾತ್ರ ಮಾರುಕಟ್ಟೆಯನ್ನು ಪ್ರವೇಶಿಸಬೇಕು. ಗೇಟನ್ನು ಪ್ರವೇಶಿಸುವಾಗ ಕೈಗಳನ್ನು ಸ್ಯಾನಿಟೈಸರ್ ನಿಂದ ಸ್ವಚ್ಛಗೊಳಿಸಿಕೊಂಡು ಬರಬೇಕು. ಒಂದೊಂದು ರೇಷ್ಮೆ ಗೂಡಿನ ಲಾಟಿಗೂ ಅಂತರವಿರುವಂತೆ ಒಂದು ಬಿಟ್ಟು ಒಂದು ಬಿನ್ ಹಂಚಿಕೆ ಮಾಡಿದ್ದೇವೆ. ಹರಾಜು ಕೂಗುವವರು ಸಹ ದೂರ ದೂರ ನಿಲ್ಲುವಂತೆ ಗುರುತುಗಳನ್ನು ಹಾಕಿದ್ದೇವೆ. ಸಾಮಾಜಿಕ ಅಂತರ ಕಾಯ್ದುಕೊಂಡೇ ಮಾರುಕಟ್ಟೆ ವಹಿವಾಟನ್ನು ನಡೆಸಲು ಪ್ರಯತ್ನಿಸುತ್ತಿದ್ದೇವೆ” ಎಂದರು
ತಹಶೀಲ್ದಾರ್ ಕೆ.ಅರುಂಧತಿ ಮಾತನಾಡಿ, “ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ನೆರವಾಗುತ್ತಿದ್ದಾರೆ. ಪ್ರತಿಯೊಬ್ಬರನ್ನೂ ಪರೀಕ್ಷಿಸಿ ಒಳಗೆ ಬಿಡಬೇಕೆಂದು ಸೂಚಿಸಿದ್ದೇವೆ” ಎಂದು ಹೇಳಿದರು.

ಕೊರೊನಾ ಹರಡಿ ಅನಾಹುತ ಆಗುವ ಮುನ್ನವೇ ಮಾರುಕಟ್ಟೆ ಮುಚ್ಚಿಸಿ – ಯಲುವಹಳ್ಳಿ ಸೊಣ್ಣೇಗೌಡ

0

ಸರ್ಕಾರ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಕೊರೊನಾ ಹಾಟ್‌ಸ್ಪಾಟ್ ಎಂದು ಘೋಷಣೆ ಮಾಡಿದೆ. ಈ ಸಂದರ್ಭದಲ್ಲಿ ರೇಷ್ಮೆ ಗೂಡು ಮಾರುಕಟ್ಟೆಗಳನ್ನು ತೆರೆಯುವುದು ನಿಜಕ್ಕೂ ಅಪಾಯಕಾರಿ. ರೇಷ್ಮೆ ಗೂಡು ಮಾರುಕಟ್ಟೆಗಳು ಎಪಿಎಂಸಿ ಮಾರುಕಟ್ಟೆಗಳಂತಲ್ಲ. ರೀಲರ್ ಗಳು ಹಾಗೂ ರೈತರು ಮುಖಾಮುಖಿ ಆಗುವುದರಿಂದ ರೋಗವು ಪ್ರತಿ ಹಳ್ಳಿಗಳಿಗೂ ವ್ಯಾಪಿಸುವ ಆತಂಕ ಎದುರಾಗಿದೆ ಎಂದು ಜಿಲ್ಲಾ ರೇಷ್ಮೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಯಲುವಹಳ್ಳಿಸೊಣ್ಣೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಮಾರುಕಟ್ಟೆ ಅಧಿಕಾರಿಗಳು ರೈತರು ಮತ್ತು ರೀಲರುಗಳ ಮಧ್ಯೆ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ. ರೀಲರುಗಳ ಪೋನ್ ಸಂಖ್ಯೆಗಳನ್ನು ರೈತರಿಗೆ ನೀಡುವುದರ ಮೂಲಕ ವಹಿವಾಟು ನಡೆಸಲಾಗುತ್ತಿದೆ. ಈ ಬಿಕ್ಕಟ್ಟಿನಲ್ಲಿ ಸಹಜವಾಗಿ ಕೆಜಿ ಗೂಡಿಗೆ ಐವತ್ತು ರೂ ಕಡಿಮೆ ಯಾಗಿದೆ. ಈ ಸಮಸ್ಯೆಯನ್ನು ವ್ಯವಹಾರಿಕವಾಗಿ ನೋಡದೆ ಆರೋಗ್ಯ ದೃಷ್ಟಿಯಿಂದ ಮಾರುಕಟ್ಟೆಗಳನ್ನು ಬಂದ್ ಮಾಡುವುದೇ ಸೂಕ್ತವಾಗಿ ಇರುತ್ತದೆ. ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಕಾರಣ ಸರ್ಕಾರ ಭಾವನಾತ್ಮಕವಾಗಿ ಯೋಚನೆ ಮಾಡಿ ರೇಷ್ಮೆ ಗೂಡು ಮಾರುಕಟ್ಟೆಗಳನ್ನು ಪುನಃ ಪ್ರಾರಂಭಿಸಲು ನಿರ್ಣಯ ಕೈಗೊಂಡಿರುವುದು ರೈತರ ಆರೋಗ್ಯ ದೃಷ್ಟಿಯಿಂದ ಅಪಾಯಕಾರಿ ನಿರ್ಧಾರವಾಗಿರುತ್ತದೆ. ಕೊರೊನಾ ಹರಡಿ ಅನಾಹುತ ಆದ ಪಶ್ಚಾತ್ತಾಪ ಪಡುವುದರ ಬದಲು ಮಾರುಕಟ್ಟೆಯನ್ನು ಮುಚ್ಚಿಸಿ ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕೊರೋನ ಭೀತಿಯ ನಡುವೆ ವಲಸಿಗರ ಹೆಚ್ಚಳ; ಗುರುತಿಸಿ ವಾಪಸ್ ಕಳುಹಿಸುತ್ತಿರುವ ಅಧಿಕಾರಿಗಳು

0

ನಗರಕ್ಕೆ ಬೇರೆ ಊರುಗಳಿಂದ ಬಂದವರನ್ನು ನಗರಸಭೆ ಪೌರಾಯುಕ್ತ ತ್ಯಾಗರಾಜ್, ಆರೋಗ್ಯ ನಿರೀಕ್ಷಕಿ ಶೋಭಾ ಹಾಗೂ ಸಿಬ್ಬಂದಿ, ಆರೋಗ್ಯ ಇಲಾಖೆ ಮತ್ತು ಪೊಲೀಸರ ಜೊತೆಗೂಡಿ ವಾಪಸ್ ಕಳುಹಿಸುತ್ತಿದ್ದಾರೆ.
ಕೊರೊನಾ ಭೀತಿ ಹಿನ್ನಲೆಯಲ್ಲಿ ಇಡೀ ದೇಶವನ್ನೇ ಲಾಕ್ ಔಟ್ ಮಾಡಿ, ಎಲ್ಲರೂ ತಾವಿರುವಲ್ಲಿಯೇ ಇರಿ ಎಂದು ತಿಳಿಸಿದ್ದರೂ, ಕೆಲವರು ಪರ ಊರುಗಳಿಂದ ನಗರಕ್ಕೆ ಬರುವುದು ನಡೆಯುತ್ತಿದೆ. ಅಂಥವರನ್ನು ನಗರಸಭೆ, ಆರೋಗ್ಯ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿ ವಿಚಾರಣೆ ನಡೆಸಿ ಅವರನ್ನು ವಾಪಸ್ ಕಳುಹಿಸುತ್ತಿದ್ದಾರೆ.
ಸೋಮವಾರ ಕಾಮಾಟಿಗರಪೇಟೆಗೆ ನಾಲ್ಕು ಜನ ಬೆಂಗಳೂರಿನಿಂದ ಆಗಮಿಸಿದ್ದರು, ಕೋಟೆವೃತ್ತದ ಬಳಿಯ ರಸ್ತೆಯಲ್ಲಿ ಗೌರಿಬಿದನೂರಿನ ಡಿ.ಪಾಳ್ಯದಿಂದ ನಾಲ್ವರು ಬಂದಿದ್ದರು. ಅವರ ಆರೋಗ್ಯವನ್ನು ಪರೀಕ್ಷಿಸಿ ಅವರ ಮಾಹಿತಿ ಪಡೆದು, ತಕ್ಷಣವೇ ಅವರು ವಾಪಸ್ ತೆರಳುವಂತೆ ಸೂಚಿಸಿ ಕಳುಹಿಸಲಾಯಿತು. ಮಂಗಳವಾರ ಕ್ರೆಸೆಂಟ್ ಶಾಲೆಯ ಬಳಿ ಹಿಂದೂಪುರದಿಂದ ಬಂದಿದ್ದ ಇಬ್ಬರನ್ನು ಹಾಗೂ ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರನ್ನು ವಾಪಸ್ ಅವರ ಸ್ಥಳಗಳಿಗೆ ಕಳುಹಿಸಿದರು.
“ಯಾರೇ ಪರಸ್ಥಳಗಳಿಂದ ಬಂದಿದ್ದು ತಿಳಿದರೂ ನಗರಸಭೆಯವರ ಗಮನಕ್ಕೆ ತನ್ನಿ. ಕೊರೊನಾ ಎಂಬ ಸೋಂಕು ರೋಗ ತಡೆಗಟ್ಟಬೇಕೆಂದು ಸರ್ಕಾರ ಎಲ್ಲರನ್ನೂ ತಾವಿರುವಲ್ಲಿಯೇ ಇರಿ ಎಂದು ತಿಳಿಸಲಾಗುತ್ತಿದೆ. ಅನಗತ್ಯವಾಗಿ ಸಂಚರಿಸಬಾರದು” ಎಂದು ನಗರಸಭೆ ಪೌರಾಯುಕ್ತ ತ್ಯಾಗರಾಜ್ ತಿಳಿಸಿದರು.

ಸಂಕಷ್ಟದಲ್ಲಿ ಪುಷ್ಪೋದ್ಯಮ: ನಷ್ಟದಲ್ಲಿ ಹೂ ಗಿಡಗಳನ್ನು ಬೆಳೆದ ರೈತರು

0

ತಾಲ್ಲೂಕಿನಲ್ಲಿ ಹೂಬೆಳೆದ ರೈತರು ಅಪಾರ ನಷ್ಟದಲ್ಲಿದ್ದಾರೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸಂತೆ, ಮಾರುಕಟ್ಟೆಗಳು ರದ್ದಾಗಿರುವ ಕಾರಣ ಹೂ ಬೆಳೆದವರು ತಲ್ಲಣಗೊಂಡಿದ್ದಾರೆ. ಹಲವರು ಬುಡಸಮೇತ ಗಿಡವನ್ನೇ ಕತ್ತರಿಸಿ ಹಾಕುತ್ತಿದ್ದರೆ, ಇನ್ನು ಕೆಲವರು ಹೂಗಳನ್ನು ಕೀಳದೆಯೇ ಹಾಗೆಯೇ ಗಿಡದಲ್ಲಿ ಬಿಟ್ಟುಬಿಟ್ಟಿದ್ದಾರೆ.
ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಹಬ್ಬ ಮತ್ತು ಜಾತ್ರೆಗಳು ಹೆಚ್ಚು. ಈ ವೇಳೆ ಹೂವಿನ ಬೆಲೆಯೂ ಅಧಿಕ. ಅದಕ್ಕಾಗಿ ಈ ಸಂದರ್ಭಕ್ಕೆ ತಕ್ಕಂತೆ ಹೂ ಬಿಡುವಂತೆ ರೈತರು ಅದಕ್ಕೆ ತಕ್ಕಂತೆ ಹೂ ಬೆಳೆಯುತ್ತಾರೆ. ಆದರೆ ಈ ಬಾರಿ ಕೊರೊನಾದಿಂದ ಜಾತ್ರೆಗಳೆಲ್ಲವೂ ರದ್ದಾಗಿರುವುದರಿಂದ, ಮಾರುಕಟ್ಟೆಯಿಲ್ಲದ ಕಾರಣ ರೈತರು ದಿಕ್ಕೇ ತೋಚದ ಪರಿಸ್ಥಿತಿಯಲ್ಲಿದ್ದಾರೆ.
ಮದುವೆ, ಗೃಹಪ್ರವೇಶ, ದೇವರ ಆಚರಣೆಗಳು ಎಲ್ಲವೂ ನಿಂತುಹೋಗಿ ಹೂಕೊಳ್ಳುವವರೇ ಇಲ್ಲವಾಗಿದ್ದಾರೆ. ಕೊರೊನಾ ಪರಿಣಾಮವಾಗಿ ಕೆಲವು ಹೂ ಬೆಳೆಗಾರರು ಹೂಗಳನ್ನು ಕೀಳಿಸದೇ ತೋಟದಲ್ಲಿಯೇ ಬಿಟ್ಟಿದ್ದು, ಯಾರು ಬೇಕಾದರೂ ಬಂದು ಕಿತ್ತುಕೊಂಡು ಹೋಗಿ ಎನ್ನುತ್ತಿದ್ದಾರೆ.
ಗುಲಾಬಿ ಗಿಡಗಳನ್ನು ಬುಡದಿಂದ ಕಿತ್ತೊಗೆದ ರೈತ:
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಆರ್.ಮುನಿಆಂಜಿನಪ್ಪ ಅವರು ಒಂದೂವರೆ ಎಕರೆ ಗುಲಾಬಿ ಬೆಳೆದಿದ್ದು, ತೋಟ ನಿರ್ವಹಣೆ ಮಾಡಲು ಆಗದೆ, ನಷ್ಟದಿಂದ ಪಾರಾಗಲು ಬುಡಸಮೇತ ಗಿಡಗಳನ್ನು ತೆಗೆದು ಹಾಕುತ್ತಿದ್ದಾರೆ.
“ಕೊರೋನಾ ಪರಿಣಾಮ ರೈತನಿಗೆ ತುಂಬಲಾರದ ನಷ್ಟವಾಗುತ್ತಿದೆ. ಸರ್ಕಾರ ರೈತನ ಕಷ್ಟಕ್ಕೆ ನೆರವಾಗಬೇಕು. ಪ್ರತಿ ದಿನ 80 ರಿಂದ 100 ಕೆಜಿ ಹೂ ಸಿಗುತ್ತಿತ್ತು. ಎರಡು ದಿನ ಮಾರುಕಟ್ಟೆಗೆ ಹೂಗಳನ್ನು ತೆಗೆದುಕೊಂಡು ಹೋಗಿ ಅಲ್ಲೇ ಸುರಿದು ಬಂದೆವು. ನಾಲ್ಕು ದಿನಕ್ಕೊಮ್ಮೆ ಮೂರು ಸಾವಿರ ರೂಗಳ ಔಷಧಿಯನ್ನು ಸಿಂಪಡಿಸಬೇಕು. ಇಲ್ಲವಾದಲ್ಲಿ ರೋಗ ಆವರಿಸುತ್ತದೆ. ಈಗ ಕಿತ್ತ ಹೂವಿನ ಕೂಲಿ ಸಿಗುವುದಿಲ್ಲ. ಹಾಗೇ ಬಿಟ್ಟರೆ ರೋಗ ಮುತ್ತಿಕೊಳ್ಳುತ್ತದೆ. ಇಷ್ಟು ದೊಡ್ಡ ಗಿಡ ಬೆಳೆಸಲು ಒಂದೂವರೆ ವರ್ಷ ಬೇಕಾಯಿತು. ಇನ್ನು ನಾವು ಹೇಗೆ ಸುಧಾರಿಸಿಕೊಳ್ಳುವುದೋ ತಿಳಿಯದಾಗಿದೆ” ಎಂದು ಮುನಿಆಂಜಿನಪ್ಪ ತಿಳಿಸಿದರು.
ಫಲವಿತ್ತ ಚೆಂಡುಹೂ ಗಿಡ, ಬೇಡಿಕೆಯಿಲ್ಲದೆ ಸೊರಗಿದ ರೈತ:
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಹರೀಶ್ ಒಂದು ಎಕರೆಯಲ್ಲಿ ಚೆಂಡು ಹೂ ಮತ್ತು ಒಂದೂ ಕಾಲು ಎಕರೆಯಲ್ಲಿ ಗುಲಾಬಿ ಹೂ ಬೆಳೆದಿದ್ದು, ಗುಲಾಬಿ ಹೂಗಳನ್ನು ಕಿತ್ತು ಅಲ್ಲಲ್ಲೇ ಬಿಸಾಡಿದ್ದರೆ, ಚೆಂಡು ಹೂಗಳನ್ನು ಕೀಳದೇ ಗಿಡದಲ್ಲಿಯೇ ಬಿಟ್ಟಿದ್ದು, ರೋಟರಿ ಹಾಕಿ ಗಿಡದ ಸಮೇತ ಉಳುವ ತೀರ್ಮಾನಕ್ಕೆ ಬಂದಿದ್ದಾರೆ.
“ಐದು ದಿನಕ್ಕೊಮ್ಮೆ 700 ರಿಂದ 800 ಕೆಜಿ ಚೆಂಡು ಹೂ ಸಿಗುತ್ತಿತ್ತು. ಯುಗಾದಿ ಶ್ರೀರಾಮನವಮಿಗೆ ಒಳ್ಳೆ ಬೆಲೆ ಸಿಗುವ ನಿರೀಕ್ಷೆಯಿತ್ತು. ಆದರೆ ಈಗ ಕೊರೊನಾ ಪರಿಣಾಮ ಹೂವನ್ನು ಕೇಳುವವರೇ ಇಲ್ಲವಾಗಿದೆ. ಯಾರು ಬೇಕಾದರೂ ಬಂದು ಹೂವನ್ನು ಉಚಿತವಾಗಿ ಕಿತ್ತುಕೊಂಡು ಹೋಗಿ ಎಂದಿದ್ದೇನೆ. ಅರಳಿದ ಗುಲಾಬಿ ಹೂಗಳು ಗಿಡದಿಂದ ಸಾರವನ್ನು ಪಡೆಯುವುದನ್ನು ತಡೆಯಲು ಕಿತ್ತು ಕೆಳಗೆ ಬಿಸಾಡಬೇಕಾಗಿ ಬಂದಿದೆ. ಚೆಂಡು ಹೂಗಿಡವನ್ನು ರೋಟರಿ ಹಾಕಿ ಉಳಲು ತೀರ್ಮಾನಿಸಿದ್ದೇನೆ” ಎಂದು ತಮ್ಮ ಪರಿಸ್ಥಿತಿಯನ್ನು ಹರೀಶ್ ವಿವರಿಸಿದರು.

ಹಳ್ಳಿಹಳ್ಳಿಗೂ ಕೊರೊನಾ ಕುರಿತ ಮಾಹಿತಿ ಪ್ರಚಾರ

0

ರೇಷ್ಮೆ ಬೆಳೆಗಾರರ ಹಿತರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಮಳ್ಳೂರು ಹರೀಶ್ ಅವರು ಕೊರೊನಾ ಕಾಯಿಲೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಧ್ವನಿವರ್ಧಕವನ್ನು ಅಳವಡಿಸಿ ತಮ್ಮ ಸ್ವಂತ ವಾಹನವನ್ನು ತಾಲ್ಲೂಕಿನಾದ್ಯಂತ ಪ್ರಚಾರ ಕಾರ್ಯಕ್ಕೆ ನಿಯೋಜಿಸಿದ್ದಾರೆ.
“ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಲ್ಲಿ ಮನವಿ ಮಾಡಿ, ಕೊರೊನಾ ಸೋಂಕು ಜಿಲ್ಲೆಯಲ್ಲಿ ಕಂಡು ಬಂದ ಪರಿಣಾಮವಾಗಿ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಲು ಅನುಮತಿ ಕೋರಿದೆ. ಅವನು ಅನುಮತಿ ಕೊಟ್ಟ ಮೇಲೆ ಹಳ್ಳಿಹಳ್ಳಿಗೂ ಕೊರೊನಾ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ವಿವರಿಸಲಾಗುತ್ತಿದೆ” ಎಂದು ಮಳ್ಳೂರು ಹರೀಶ್ ತಿಳಿಸಿದರು.
“ಬದುಕಿದ್ದರೆ, ಬದುಕು”, “ಎಚ್ಚರಿಕೆಯಿಂದಿರಿ, ಸುರಕ್ಷಿತವಾಗಿರಿ” ಎಂದು ಹೇಳುತ್ತಾ ಜನರು ಕೊರೊನಾ ಕುರಿತಂತೆ ಮುಂಜಾಗ್ರತೆಗೆ ಸರಳ ಸೂತ್ರಗಳನ್ನು ತಿಳಿಸಿದ್ದೇವೆ. ಕೊರೊನಾ ಸೋಂಕಿನ ಲಕ್ಷಣಗಳು, ಅದು ಹರಡುವ ಬಗೆ, ಅದಕ್ಕಾಗಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ದ್ವನಿವರ್ಧಕದ ಮೂಲಕ ತಿಳಿಸಲಾಗುತ್ತಿದೆ. ಪ್ರತಿಯೊಂದು ಹಳ್ಳಿಗಳಿಗೂ ವಾಹನ ಸಂಚರಿಸಿ ಜನರಿಗೆ ಮಾಹಿತಿ ನೀಡಲಾಗುತ್ತಿದೆ. ಸೋಪು ಬಳಸಿ ಕೈತೊಳೆದುಕೊಳ್ಳುತ್ತಿರಿ, ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಪ್ರತಿಯೊಬ್ಬರಿಗೂ ತಿಳಿಸುವುದು ನಮ್ಮ ಉದ್ದೇಶ. ಶಾಶ್ವತ ನೀರಾವರಿ ಹೋರಾಟ ಸಮಿತಿ, ಯುವಶಕ್ತಿ ಸಹ ಇದಕ್ಕೆ ಸಹಕರಿಸಿದೆ” ಎಂದು ಅವರು ವಿವರಿಸಿದರು.

ಕೊರೊನಾ ಮಹಾಮಾರಿಯನ್ನು ತಡೆಗಟ್ಟಲು ಸಜ್ಜಾದ ಯಣ್ಣೂರು ಗ್ರಾಮಸ್ಥರು

0

ತಾಲ್ಲೂಕಿನ ಚೀಮಂಗಲ ಪಂಚಾಯಿತಿಯ ಯಣ್ಣೂರು ಗ್ರಾಮದಲ್ಲಿ ಗ್ರಾಮಸ್ಥರೆಲ್ಲ ಒಗ್ಗೂಡಿ ಕೊರೊನಾ ಮಹಾಮಾರಿಯನ್ನು ತಡೆಗಟ್ಟಲು ಹಲವು ನಿಯಮಗಳನ್ನು ಹಾಕಿಕೊಂಡಿದ್ದಾರೆ.
ಬೆಂಗಳೂರು ಅಥವಾ ಇತರೆಡೆಗಳಿಂದ ಗ್ರಾಮಕ್ಕೆ ಹೊರಗಿನವರು ಬರದಂತೆ ಎಲ್ಲಾ ಸಂಪರ್ಕ ರಸ್ತೆಗಳಿಗೂ ಮುಳ್ಳುಬೇಲಿ ಹಾಕಿದ್ದಾರೆ. ಹಾಲು ಒಕ್ಕೂಟದ ಸಹಕಾರ ಸಂಘದಲ್ಲಿ ಹಾಲು ಹಾಕಲು ಬರುವವರು ಇಂದು ಮೀಟರ್ ಅಂತರವನ್ನು ಕಾಯ್ದುಕೊಳ್ಳುವಂತೆ ಗುರುತುಗಳನ್ನು ಹಾಕಿದ್ದು, ಅದನ್ನು ಎಲ್ಲರೂ ಖಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಯಾರೂ ಮನೆಗಳಿಂದ ಅನವಶ್ಯಕವಾಗಿ ಹೊರಬರಬಾರದು, ಗುಂಪುಗೂಡಬಾರದೆಂದು ತಿಳಿಸಲಾಗಿದೆ.
ಗ್ರಾಮವನ್ನು ಸ್ವಚ್ಛಗೊಳಿಸಲಾಗಿದ್ದು, ಚರಂಡಿಗಳಿಗೆ ಬ್ಲೀಚಿಂಗ್ ಪೌಡರ್ ಸಿಂಪಡಿಸಲಾಗಿದೆ.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಮಾಸ್ಕ್ ಮತ್ತು ಸೋಪು ವಿತರಣೆ

0

ಶಿಡ್ಲಘಟ್ಟದ ಬೆಳ್ಳೂಟಿ ಗೇಟ್ ನಲ್ಲಿರುವ ದಿ ರಿಚ್ಮಂಡ್ ಫೆಲೋಶಿಪ್ ಸೊಸೈಟಿ ಪ್ರಗತಿ ಗ್ರಾಮೀಣ ಶಾಖೆಗೆ ಪ್ರತಿ ತಿಂಗಳ ಕಡೆಯ ಭಾನುವಾರ ಉಚಿತವಾಗಿ ಔಷಧಿ ಹಾಗೂ ಚಿಕಿತ್ಸೆ ಪಡೆಯಲೆಂದು ಆಗಮಿಸಿದ್ದ ಮಾನಸಿಕ ರೋಗಿಗಳಿಗೆ ಹಾಗೂ ಅವರ ಕುಟುಂಬದವರಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್ ಅವರು ಮಾಸ್ಕ್ ಮತ್ತು ಸೋಪು ನೀಡಿದರು

ಶಿಡ್ಲಘಟ್ಟ ತಾಲ್ಲೂಕು ಆಡಳಿತದಿಂದ “ಕಂಟ್ರೋಲ್ ರೂಮ್” ರಚನೆ

0

ತಾಲ್ಲೂಕು ಆಡಳಿತದಿಂದ ತಾಲ್ಲೂಕು ಕಚೇರಿಯಲ್ಲಿ “ಕಂಟ್ರೋಲ್ ರೂಮ್” ತೆರೆಯಲಾಗಿದೆ. ಹೆಲ್ಪ್ ಲೈನ್ ಸಂಖ್ಯೆ – 08158 256763 ಆಗಿದ್ದು, ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ. ಕೊರೊನಾಗೆ ಸಂಬಂಧಿಸಿದಂತೆ ಏನೇ ತೊಂದರೆಗಳು ಆದರೂ ದೂರವಾಣಿ ಮೂಲಕ ಕರೆ ಮಾಡಿ ಪರಿಹಾರ ಕಂಡುಕೊಳ್ಳುವಂತೆ ತಹಶೀಲ್ದಾರ್ ಕೆ.ಅರುಂಧತಿ ತಿಳಿಸಿದರು.
ತಾಲ್ಲೂಕು ಕಚೇರಿಯಲ್ಲಿ ಶನಿವಾರ “ಕಂಟ್ರೋಲ್ ರೂಮ್” ಗೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲ್ಲೂಕು ಕಚೇರಿ, ನಗರಸಭೆ, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಭಾಗಿತ್ವದಲ್ಲಿ “ಕಂಟ್ರೋಲ್ ರೂಮ್” ತೆರೆಯಲಾಗಿದ್ದು, ಹೆಲ್ಪ್ ಲೈನ್ ದೂರವಾಣಿ ಸಂಖ್ಯೆಯನ್ನು ನೀಡುತ್ತಿದ್ದೇವೆ. ಯಾವುದೇ ರೀತಿಯ ಕುಂದುಕೊರತೆಗಳು, ಅಗತ್ಯ ವಸ್ತುಗಳು ಮುಂತಾದವುಗಳ ಬಗ್ಗೆ ತಿಳಿಸಿ ಸೇವೆ ಪಡೆಯಬಹುದು. ಕೊರೊನಾ ಸೋಂಕಿನ ರೋಗಲಕ್ಷಣಗಳು ನಿಮ್ಮ ನೆರೆಹೊರೆಯವರಲ್ಲಿ ಕಂಡುಬಂದಲ್ಲಿ ತಿಳಿಸಬಹುದು. ಹೊರಗಡೆಯಿಂದ ಯಾರೇ ಹೊಸಬರು ಬಂದಲ್ಲಿ ತಿಳಿಸಿ. ನಿಮ್ಮ ಪ್ರದೇಶದಲ್ಲಿ ನಾಕ್ ಔಟ್ ಅಥವಾ ಕರ್ಫ್ಯೂ ಉಲ್ಲಂಘಿಸಿರುವುದು ಕಂಡುಬಂದಲ್ಲಿ ಮಾಹಿತಿ ಕೊಡಿ. ಅಶಕ್ತರು, ವೃದ್ಧರು ಅಥವಾ ಸಹಾಯದ ಅಗತ್ಯವಿರುವವರು ಏನೇ ವಸ್ತುಗಳು ಬೇಕಿದ್ದರೂ ಫೋನ್ ಮಾಡಿ ತಿಳಿಸಿ, ಸೇವಾ ಮನೋಭಾವವುಳ್ಳ ವಿವಿಧ ಸಂಘಟನೆಗಳ ಸದಸ್ಯರ ನೆರವನ್ನು ಪಡೆದು ನೆರವು ನೀಡಲಾಗುವುದು ಎಂದು ಹೇಳಿದರು.
ನಗರಸಭೆಯವರಿಂದ ನಿಶ್ಶಕ್ತರು, ನಿರ್ಗತಿಕರು ಹಾಗೂ ಭಿಕ್ಷುಕರಿಗೆ ಇಂದಿರಾ ಕ್ಯಾಂಟೀನಿನಲ್ಲಿ ಊಟದ ವ್ಯವಸ್ಥೆ ಮಾಡಿಕೊಡಲಾಗಿದೆ. ಶಿಡ್ಲಘಟ್ಟದ ನಾಲ್ಕು ಕಡೆಗಳಲ್ಲಿ ಸ್ಥಳಗಳನ್ನು ಗುರುತಿಸಲಾಗಿದೆ. ಅಲ್ಲಿ ತರಕಾರಿ, ಹಣ್ಣು, ಹೂವು, ದಿನಸಿ ಸಾಮಾನುಗಳನ್ನು ಜನರು ಕೊಳ್ಳಬಹುದು. ಅದೇ ರೀತಿ ಪ್ರತಿಯೊಂದು ವಾರ್ಡುಗಳಲ್ಲಿಯೂ ತಳ್ಳುವ ಗಾಡಿಗಳಿಗೆ ಜಾಗ ಗುರುತಿಸಿ ಕೊಟ್ಟಿದ್ದೇವೆ. ಅಲ್ಲಿ ಜನರು ಕೊಳ್ಳಬಹುದು. ಮನೆಯಿಂದ ಒಬ್ಬರು ಮಾತ್ರ ಹೋಗಿ ಹಾಗೂ ಇತರರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೇಳಿದರು.
ನಗರಸಭೆಯ ವತಿಯಿಂದ ಸ್ವಯಂ ಸೇವಕರ ಪಡೆಯನ್ನು ಸಿದ್ಧಮಾಡಿಕೊಳ್ಳಲಾಗಿದೆ. ಹಿರಿಯ ನಾಗರೀಕರು, ಅಶಕ್ತರು, ಅಗತ್ಯವಿರುವವರಿಗೆ ಅವರು ನೆರವಾಗಲಿದ್ದಾರೆ. ತರಕಾರಿ, ಔಷಧಿ, ಮುಂತಾದ ಅಗತ್ಯ ವಸ್ತುಗಳನ್ನು ಸಹ ಅವರು ತಂದುಕೊಡುವರು. ಕೆಲವು ಔಷಧಿ ಅಂಗಡಿಗಳವರು ಮನೆಗೆ ಔಷಧಿಗಳನ್ನು ಕಳುಹಿಸಿಕೊಡಲು ಕೂಡ ಸಿದ್ಧರಿದ್ದಾರೆ ಎಂದರು

ಮಸೀದಿಗಳಲ್ಲಿ ನೂರಾರು ಮಂದಿ ಸೇರಿ ಪ್ರಾರ್ಥನೆ – ಮುಖ್ಯಸ್ಥರಿಗೆ ತಹಶೀಲ್ದಾರರಿಂದ ಎಚ್ಚರಿಕೆ

0

ಕೊರೊನಾ ಭೀತಿಯಿಂದ ಮಸೀದಿ, ಚರ್ಚು ಮತ್ತು ದೇವಾಲಯಗಳನ್ನು ಜನರು ಸೇರುವುದನ್ನು ನಿರ್ಬಂಧಿಸಿದ್ದರೂ ತಾಲ್ಲೂಕಿನ ಜಂಗಮಕೋಟೆಯ ಎರಡು ಮಸೀದಿಗಳಲ್ಲಿ ನೂರಾರು ಮಂದಿ ಸೇರಿ ಪ್ರಾರ್ಥನೆ ಮಾಡುತ್ತಿರುವ ದೂರು ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಕೆ.ಅರುಂಧತಿ ಅವರು ಮಸೀದಿ ಮುಖ್ಯಸ್ಥರನ್ನು ನಾಡಕಚೇರಿಗೆ ಕರೆಸಿ ಶನಿವಾರ ಎಚ್ಚರಿಕೆ ನೀಡಿದರು.
ಕೊರೋನಾ ರೋಗದ ಬಗ್ಗೆ ಎಲ್ಲಾ ರೀತಿಯಲ್ಲೂ ಮಾಹಿತಿ ನೀಡಲಾಗುತ್ತಿದೆ. ಜನರು ಗುಂಪುಗೂಡಬಾರದು ಎಂದು ತಿಳುವಳಿಕೆ ನೀಡಿದ್ದರೂ ಮಸೀದಿಗಳಲ್ಲಿ ಏಕೆ ಬಂದು ಪ್ರಾಥನೆ ನಡೆಸಲು ಅವಕಾಶ ಮಾಡಿಕೊಟ್ಟಿರುವಿರಿ. ಅನಾಹುತ ಸಂಭವಿಸುವ ಮುನ್ನ ಎಚ್ಚರಿಕೆ ವಹಿಸಬೇಕೆಂದು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ನೀವು ಸಹಕರಿಸದಿದ್ದರೆ ಹೇಗೆ ಎಂದು ಅವರಿಗೆ ಬುದ್ದಿವಾದ ಹೇಳಿದರು.
ಮಸೀದಿ ಮುಖಂಡರು, ಇನ್ನು ಮುಂದೆ ಜನರು ಮಸೀದಿಗೆ ಬರದೇ ಮನೆಯಲ್ಲಿ ಪ್ರಾರ್ಥಿಸಲು ತಿಳುವಳಿಕೆ ನೀಡುತ್ತೇವೆ. ಜನರು ಗುಂಪುಗೂಡಬಾರದೆಂದು ತಿಳಿಸುವುದಾಗಿ ಹೇಳಿದರು.

ರೇಷ್ಮೆ ಗೂಡಿನ ಮಾರುಕಟ್ಟೆ ವಹಿವಾಟನ್ನು ನಿರ್ಬಂಧಿಸಲು ಜಿಲ್ಲಾಧಿಕಾರಿಗಳಿಗೆ ಮನವಿ

0

“ಕೊರೋನಾ ಸೋಂಕಿನಿಂದ ನಮ್ಮ ದೇಶ ಮುಕ್ತವಾಗುವವರೆವಿಗೂ ಶಿಡ್ಲಘಟ್ಟ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯ ಮತ್ತು ನಮ್ಮ ಜಿಲ್ಲೆಯ ಎಲ್ಲಾ ರೇಷ್ಮೆ ಗೂಡಿನ ಮಾರುಕಟ್ಟೆಗಳ ವಹಿವಾಟು ನಿರ್ಭಂಧಿಸಬೇಕು. ನಮ್ಮ ದೇಶ ಮತ್ತು ರಾಜ್ಯ ಕೊರೋನಾ 3 ನೇ ಹಂತಕ್ಕೆ ತಲುಪಿದೆ. ಈ ಪ್ರಾಕೃತಿಕ ವಿಕೋಪದಿಂದ ರೇಷ್ಮೆ ಬೆಳೆಗಾರರೂ ಸಾವಿರಾರು ಕೋಟಿ ನಷ್ಟದಲ್ಲಿದ್ದೇವೆ. ನಾವೀಗ ಬೆಳೆದಿರುವ ಗೂಡುಗಳನ್ನು ಒಂದು ಕೆ.ಜಿಗೆ ಕೇವಲ 100 ರೂನಿಂದ 250 ರೂಗಳಿಗೆ ನೂಲು ಬಿಚ್ಚಾಣಿಕೆದಾರರಿಗೆ ರೈತರೇ ನೇರವಾಗಿ ಮನೆಗಳಲ್ಲಿ ಇಲಾಖಾ ಅಧಿಕಾರಿಗಳ ಸಲಹೆ -ಸಹಕಾರದಿಂದ ಮಾರಾಟ ಮಾಡುತ್ತಿದ್ದೇವೆ .ಇನ್ನು ಮುಂದೆ ಕೊರೋನಾ ಸೋಂಕು ನಿವಾರಣೆ ಆಗುವವರೆಗೂ ಹುಳ ಸಾಕಾಣಿಕೆ ನಿಲ್ಲಿಸಬೇಕಾಗಿ ಬರಬಹುದು.

ಮಳ್ಳೂರು ಶಿವಣ್ಣ

ಒಂದು ವೇಳೆ ರೇಷ್ಮೆ ಮಾರುಕಟ್ಟೆಯ ವಹಿವಾಟಿಗೆ ಅವಕಾಶ ಕೊಟ್ಟರೆ, ಪ್ರತಿ ನಿತ್ಯ ವಹಿವಾಟಿಗೆ ರೈತರು ಮತ್ತು ರೀಲರ್ ಗಳು 2500-3000 ಮಂದಿ ಮಾರುಕಟ್ಟೆಯ ವಹಿವಾಟಿನಲ್ಲಿ ಒಂದೇ ಕಡೆ ಸೇರಿದರೆ, ಯಾವುದೇ ಸಂಶಯವಿಲ್ಲದೆ 3 ನೇ ಹಂತದ ಸೋಂಕು ಉಂಟಾದರೆ ಸೋಂಕಿನ ಪ್ರಮಾಣ ಊಹೆಗೂ ನಿಲುಕುವುದಿಲ್ಲ. ಆದುದರಿಂದ ತಾವುಗಳು ದಯಮಾಡಿ ನಮ್ಮ ಜೀವ ಮತ್ತು ಜೀವನಗಳನ್ನ ಉಳಿಸುವ ಸಲುವಾಗಿ, ಶಿಡ್ಲಘಟ್ಟ ಮತ್ತು ನಮ್ಮ ಜಿಲ್ಲೆಯ ಎಲ್ಲಾ ರೇಷ್ಮೆ ಗೂಡಿನ ಮಾರುಕಟ್ಟೆ ಗಳಲ್ಲಿನ ವಹಿವಾಟನ್ನ ಅನಿರ್ದಿಷ್ಟ ಅವಧಿಯವರೆಗೆ ನಿರ್ಭಂದಿಸಿ ಆದೇಶ ಹೊರಡಿಸಲು ರಾಜ್ಯದ ರೇಷ್ಮೆ ಬೆಳೆಗಾರರ ಹಿತದೃಷ್ಟಿಯಿಂದ ತಮ್ಮನ್ನು ಪ್ರಾರ್ಥಿಸಿಕೊಳ್ಳುತ್ತೇನೆ” ಎಂದು ಕರ್ನಾಟಕ ರಾಜ್ಯ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ರಾಜ್ಯ ಸಂಚಾಲಕರ ಮಳ್ಳೂರು ಶಿವಣ್ಣ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆದು ವಿನಂತಿಸಿಕೊಂಡಿದ್ದಾರೆ.

ಶಿಡ್ಲಘಟ್ಟ ಗೂಡು ಮಾರುಕಟ್ಟೆ ಬಂದ್ ಮುಂದುವರಿಕೆ

0

ಕೊರೋನ ಸೋಂಕು ಜಿಲ್ಲೆಯಲ್ಲಿ ಹರಡುತ್ತಿರುವ ಕಾರಣ ಜನರ ಆರೋಗ್ಯದ ಹಿತದೃಷ್ಟಿಯಿಂದ ಗೂಡು ಮಾರುಕಟ್ಟೆಯನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಮಾರುಕಟ್ಟೆಯ ಉಪನಿರ್ದೇಶಕ ಸುಭಾಷ್ ಸಾತೇನಹಳ್ಳಿ ತಿಳಿಸಿದ್ದಾರೆ.
ಬೆಳೆದ ಗೂಡನ್ನು ಮಾರಾಟ ಮಾಡಲು ರೈತರಿಗೆ ತೊಂದರೆಯಾಗುತ್ತಿದೆ, ಹಾಗೂ ಬೆಲೆ ಸರಿಯಾಗಿ ಸಿಗುತ್ತಿಲ್ಲ ಎಂಬ ಕಾರಣಕ್ಕೆ ರೈತರು ಮಾರುಕಟ್ಟೆಯನ್ನು ತೆರೆಯಲು ಕೇಳಿದ್ದರು.
ಈ ಕುರಿತು ತಾಲ್ಲೂಕು ಆಡಳಿತ, ನಗರಸಭೆ, ರೀಲರುಗಳು ಹಾಗೂ ರೈತರ ಜೊತೆಗೆ ಸಮಾಲೋಚನೆ ಮಾಡಿದ ಮಾರುಕಟ್ಟೆ ಆಡಳಿತ, ರಾಜ್ಯಾದ್ಯಂತ ಬಹುತೇಕ ಗೂಡು ಮಾರುಕಟ್ಟೆಗಳು ಮುಚ್ಚಿದ್ದು, ಬಹಳಷ್ಟು ರೈತರು ಇಲ್ಲಿಗೆ ಮಾರಾಟ ಮಾಡಲು ಬರುವ ಸಂಭವವಿರುವದರಿಂದ ಸೋಂಕು ಹರಡುವ ಭೀತಿ ಹೆಚ್ಚಾಗಿರುತ್ತದೆ.
ಆದ್ದರಿಂದ ಜನರ ಆರೋಗ್ಯದ ಹಿತದೃಷ್ಟಿಯಿಂದ ಗೂಡು ಮಾರುಕಟ್ಟೆ ವ್ಯವಹಾರ ಸ್ಥಗಿತವನ್ನು ಮುಂದುವರೆಸಲು ನಿರ್ಧರಿಸಲಾಯಿತು ಎಂದು ಮಾರುಕಟ್ಟೆಯ ಉಪನಿರ್ದೇಶಕ ಸುಭಾಷ್ ಸಾತೇನಹಳ್ಳಿ ತಿಳಿಸಿದರು.

ಸಂಪೂರ್ಣ ರಸ್ತೆ ಬಂದ್ ಮಾಡಿದ ಸುಗಟೂರು ಜನತೆ

0

ಭಾರತ ಲಾಕ್‌ಡೌನ್ ಹಿನ್ನೆಲೆಯಲ್ಲಿ ತಾಲ್ಲೂಕಿನ ಸುಗಟೂರು ಜನರು ಗ್ರಾಮದ ರಸ್ತೆಗಳನ್ನೆಲ್ಲಾ ಸಂಪೂರ್ಣ ಬಂದ್ ಮಾಡಿದ್ದಾರೆ.
ಈ ಹಿಂದೆ ಪ್ಲೇಗ್, ಸಿಡುಬು, ದಡಾರದಂತಹ ಮಾರಕ ಸಾಂಕ್ರಾಮಿಕ ಕಾಯಿಲೆಗಳು ಹರಡಿದ್ದ ವೇಳೆ ಇಡೀ ಊರನ್ನೆ ತ್ಯಜಿಸಿ ಹೊರಗೆ ಬದುಕಿದ್ದ ಹಿರಿಯ ಅನುಭವಿಗಳು ಕೊರೊನಾ ಸೋಂಕು ಹರಡದಿರಲು ಊರಿನ ಹೊರಗಿನಿಂದ ಒಳಗೆ, ಊರಿನಿಂದ ಹೊರಗೆ ಯಾರೂ ಹೋಗದಂತೆ ಸಂಪೂರ್ಣ ನಿರ್ಬಂಧ ಹೇರಿದ್ದಾರೆ.
ಈಗಾಗಲೇ ಊರಿನಲ್ಲಿ ತಮಟೆ ಬಾರಿಸಿ ಜಾಗೃತಿ ಮೂಡಿಸಲಾಗಿದೆ. ಯಾರೂ ಇಬ್ಬರಿಗಿಂತ ಹೆಚ್ಚುಮಂದಿ ಒಂದೆಡೆ ಗುಂಪು ಸೇರಬಾರದು. ಮನೆಯಿಂದ ಹೊರಗೆ ಹೆಚ್ಚು ಬರಬಾರದು. ವಾಹನಗಳಲ್ಲಿ ಯಾರೂ ಸಂಚರಿಸಬಾರದು ಎಂದು ಅರಿವು ಮುಡಿಸಲಾಗಿದೆ. ಮನೆಗಳ ಬಳಿ ಸ್ವಯಂ ಆಸಕ್ತಿಯಿಂದ ಸ್ವಚ್ಚತೆ ಕಾಯ್ದುಕೊಳ್ಳಬೇಕು. ಪರಸ್ಪರ ಸಾಮಾಜಿಕ ಅಂತಕಾಯ್ದುಕೊಳ್ಳಬೇಕು ಎನ್ನುತ್ತಾರೆ ಹಿರಿಯರಾದ ನಾರಾಯಣಸ್ವಾಮಿ.
ಗ್ರಾಮಪಂಚಾಯಿತಿ ಸದಸ್ಯ ಶಿವಶಂಕರಪ್ಪ ಮಾತನಾಡಿ, ಯಾರೂ ಅನವಶ್ಯಕವಾಗಿ ರಸ್ತೆಗಳಲ್ಲಿ ಬಾರದೇ ಮನೆಯಲ್ಲಿಯೇ ಇರಬೇಕು. ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸುವ ಸೈನಿಕರಂತೆ ಎಲ್ಲರೂ ಅವರವರ ಕರ್ತವ್ಯವನ್ನು ಕೊರೊನಾ ವೈರಸ್ ತೊಲಗಿಸಲು ಸೈನಿಕರಂತೆ ಸೇವೆ ಸಲ್ಲಿಸಬೇಕಿದೆ. ಸ್ವಯಂಜಾಗೃತಿ ಪಡೆದು ಮೋದಿಯವರ, ರಾಜ್ಯಸರ್ಕಾರದ ಕೊರೊನಾ ಹೋಗಲಾಡಿಸುವ ಆಶಯಗಳನ್ನು ಈಡೇರಿಸಬೇಕು. ಇದೇ ನಾವು ದೇಶಕ್ಕಾಗಿ ಸಲ್ಲಿಸುವ ಅಳಿಲುಸೇವೆ ಎಂದು ಭಾವಿಸಬೇಕು ಎಂದರು.
ವರ್ತಕ ಸತೀಶ್ ಮಾತನಾಡಿ, ಎಲ್ಲರಿಗೂ ಅಗತ್ಯವಸ್ತುಗಳೆಲ್ಲಾ ಸಿಗುವಂತೆ ಕ್ರಮಕೈಗೊಳ್ಳಲಾಗುವುದು. ಯಾರೂ ಈ ವಿಷಯದಲ್ಲಿ ಗಾಬರಿ, ಆತಂಕ ಪಡಬಾರದು. ಎಲ್ಲರೂ ಮಾಸ್ಕ್ ಗಳನ್ನು ಧರಿಸಬೇಕು. ಹೀಗೆ ದಗ್ಬಂಧನ ಹೇರಿಕೊಳ್ಳುವುದು ನಮ್ಮ ಊರಿಗೆ ಹೊಸತೇನಲ್ಲ. ವರ್ಷಕ್ಕೊಮ್ಮೆ ನಡೆಯುವ ಇತಿಹಾಸಪ್ರಸಿದ್ಧ ಶ್ರೀ ಸತ್ಯಮ್ಮದೇವಿ ದೇವರ ಮಹಾಮಜ್ಜನ ಕಾರ್ಯಕ್ರಮದ ವೇಳೆ ಒಂದುದಿನ ಪೂರ್ತಿ ಗ್ರಾಮದಲ್ಲಿ ಯಾರೂ ಓಡಾಡದೇ ಅಭ್ಯಾಸವಾಗಿದೆ ಎಂದರು.
ಗ್ರಾಮಪಂಚಾಯಿತಿ ಸದಸ್ಯ ಡಿ.ದೇವರಾಜು ಮಾತನಾಡಿ, ಅಗತ್ಯಸಂದರ್ಭಗಳಲ್ಲಿಯೂ ಚಿಕ್ಕಮಕ್ಕಳು, ವೃದ್ಧರು ಹೊರಬಾರದಂತೆ ನೋಡಿಕೊಳ್ಳಬೇಕು. ಪ್ರತಿಯೊಬ್ಬರ ರೋಗನಿರೋಧಕಶಕ್ತಿಯನ್ನು ಹೆಚ್ಚಿಸಿಕೊಳ್ಳಲುಪೌಷ್ಟಿಕಾಂಶಯುತ ಆಹಾರವನ್ನು ಸೇವಿಸಬೇಕು. ಎಲ್ಲರೂ ಕಷ್ಟಸುಖಗಳಿಗೆ ಗ್ರಾಮಸ್ಥರು ಪರಸ್ಪರ ವಿನಿಮಯ ಮಾಡಿಕೊಳ್ಳಲು ಮುಂದಾಗಿರುವುದು ಪ್ರಶಂಸನೀಯ ಎಂದರು.
ರಸ್ತೆಗಳಿಗೆ ಅಡ್ಡಲಾಗಿ ಮರ, ಮುಳ್ಳು ಹಾಕುವ ಸಂದರ್ಭದಲ್ಲಿ ಗ್ರಾಮಸ್ಥರಾದ ಚಿಕ್ಕಬಸವರಾಜು, ಸತೀಶ್, ಎಸ್.ಆರ್.ನಾಗೇಶ್, ಎನ್.ಪಿ.ನಾಗರಾಜಪ್ಪ, ಗ್ರಾಮಪಂಚಾಯತಿ ಸದಸ್ಯರುಗಳು ಇದ್ದರು.

ಕೊರೊನಾ ಸೋಂಕನ್ನು ತಡೆಗಟ್ಟುಲು ಗ್ರಾಮ ಮಟ್ಟದ ಕಾರ್ಯಪಡೆ ರಚನೆ

0

ಕೊರೊನಾ ಸೋಂಕನ್ನು ತಡೆಗಟ್ಟುವ ಉದ್ದೇಶದಿಂದ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಮಟ್ಟದ ಕಾರ್ಯಪಡೆ ರಚನೆ ಮಾಡಲು ತಾಲ್ಲೂಕು ಆಡಳಿತ ಸೂಚನೆ ನೀಡಿದೆ. ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ನೀಡುವ ಸೂಚನೆಗಳನ್ನು ಗ್ರಾಮೀಣ ಮಟ್ಟದಲ್ಲಿ ಪಾಲಿಸುವಂತೆ ಮಾಡಲು ಈ ಪಡೆ ಕಾರ್ಯಪ್ರವೃತ್ತರಾಗಬೇಕಿದೆ.
ಗ್ರಾಮ ಮಟ್ಟದ ಕಾರ್ಯಪಡೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಗ್ರಾಮ ಲೆಕ್ಕಾಧಿಕಾರಿ, ಬೀಟ್ ಪೊಲೀಸ್, ಆರೋಗ್ಯ ಕೇಂದ್ರದ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾಕಾರ್ಯಕರ್ತೆ, ನೋಂದಾಯಿತ ಸ್ಥಳೀಯ ವೈದ್ಯ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇರುತ್ತಾರೆ.
ಗ್ರಾಮಗಳಲ್ಲಿ 5 ಕ್ಕಿಂತ ಹೆಚ್ಚು ಮಂದಿ ಒಂದೆಡೆ ಸೇರಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಅತ್ಯಾವಶ್ಯಕ ವಸ್ತುಗಳ ಖರೀದಿ ಸಮಯದಲ್ಲಿ ಅಂತರ ಕಾಯ್ದುಕೊಳ್ಳುವಂತೆ ತಿಳಿಸಬೇಕು. ಕೊರೊನಾ ಬಗ್ಗೆ ಸುಳ್ಳು ವದಂತಿಗಳನ್ನು ಹರಡದಂತೆ ನೋಡಿಕೊಳ್ಳಬೇಕು. ಮದುವೆ, ಜಾತ್ರೆ, ಸಂತೆ ಮುಂತಾದ ಗುಂಪು ಚಟುವಟಿಕೆಗಳನ್ನು ಈ ಪಡೆ ತಡೆಯಬೇಕಿದೆ.
ಇದರೊಂದಿಗೆ ಗ್ರಾಮದ ಹಿರಿಯರ ಆರೋಗ್ಯವನ್ನು ಗಮನಿಸುತ್ತಿರಬೇಕು. ಯಾರಿಗೇ ಆಗಲಿ ಕೊರೊನಾ ವೈರಸ್ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಚರಂಡಿಗಳ ಸ್ವಚ್ಛತೆ, ಕಸ ವಿಲೇವಾರಿ, ಹೊರಗಿನಿಂದ ಬರುವವರ ವಿವರ, ಮಾಹಿತಿ, ಶುಚಿತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಶೂದ್ಧ ನೀರಿನ ವ್ಯವಸ್ಥೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಾಬೂನಿನಿಂದ ಕೈ ತೊಳೆಯುವ ವ್ಯವಸ್ಥೆ ಮಾಡಬೇಕು. ಗ್ರಾಮ ಪಂಚಾಯಿತಿಯಿಂದ 14 ನೇ ಹಣಕಾಸಿನ ಅನುದಾನದಲ್ಲಿ ಸ್ಯಾನಿಟೈಸರ್, ಮಾಸ್ಕ್, ಸಾಬೂನು ಮುಂತಾದ ಸ್ವಚ್ಛತಾ ಪರಿಕರಗಳನ್ನು ಖರೀದಿಸಬೇಕು.
“ಯಾವತ್ತು ಪಾಸಿಟೀವ್ ಕೇಸ್ ನಮ್ಮ ಭಾರತದಲ್ಲಿ ವರದಿಯಾಗುವುದಿಲ್ಲವೋ ಆ ಕ್ಷಣದಿಂದ ಎರಡು ತಿಂಗಳುಗಳ ಕಾಲ ಭಾರಿ ಹುಷಾರಾಗಿರಬೇಕು. ಏಕೆಂದರೆ, ಹದಿನಾಲ್ಕು ದಿನಗಳು ರೋಗಿಯನ್ನು, ಉಳಿದ ಹದಿನಾಲ್ಕು ದಿನ ಅವರ ಕುಟುಂಬದ ಸದಸ್ಯರನ್ನು ನೋಡಿಕೊಳ್ಳಬೇಕು. ಈ ಒಂದು ತಿಂಗಳ ನಂತರ ಇನ್ನೊಂದು ತಿಂಗಳ ಅವಧಿಯಲ್ಲಿ ಯಾವುದೂ ಹೊಸ ಕೇಸ್ ಬರಲಿಲ್ಲವೆಂದರೆ ಆಗ ನಾವು ನಿರಾಳವಾಗಿ ನಿಟ್ಟುಸಿರು ಬಿಡಬಹುದು. ಇಡೀ ವಿಶ್ವ ಭಾರತದೆಡೆಗೆ ನೋಡುತ್ತಿದೆ, ಏಕೆಂದರೆ 138 ಕೋಟಿ ಜನಸಂಖ್ಯೆಯಿರುವುದರಿಂದ ಹೇಗೆಲ್ಲಾ ಕ್ರಮ ಕೈಗೊಳ್ಳುತ್ತಿದ್ದಾರೆ ಅಂತ. ಅದನ್ನು ನಾವು ಸವಾಲಾಗಿ ಸ್ವಿಕರಿಸಿ ಕೆಲಸ ಮಾಡುತ್ತಿದ್ದೇವೆ. ತಾಲ್ಲೂಕಿನ ಯಾವುದೇ ಭಾಗಕ್ಕೂ ಯಾರೇ ಹೊಸಬರು ಎಲ್ಲಿಂದಲೇ ಬರಲಿ ತಕ್ಷಣವೇ ನಮಗೆ ಮಾಹಿತಿಯನ್ನು ನೀಡಲಿ. ಆತಂಕಕ್ಕೊಳಗಾಗುವುದು ಬೇಡ” ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ತಿಳಿಸಿದರು.

ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಪುನಃ ತೆರೆಯಲು ಆದೇಶ: ಆತಂಕಗೊಂಡ ಜನರು

0

ಕೊರೊನಾ ಭೀತಿಯಿಂದ ಮುಚ್ಚಲಾಗಿದ್ದ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಪುನಃ ತೆರೆಯುವಂತೆ ಸರ್ಕಾರ ಆದೇಶಿಸಿದೆ. ಈ ಬಗ್ಗೆ ಆದೇಶವನ್ನು ಹೊರಡಿಸಿರುವ ರಾಜ್ಯ ಮುಖ್ಯ ಕಾರ್ಯದರ್ಶಿ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಟಿ.ಎಂ.ವಿಜಯ ಭಾಸ್ಕರ್ ರೇಷ್ಮೆ ಗೂಡು ಮಾರುಕಟ್ಟೆಯನ್ನು ನಿರ್ಬಂಧನೆ(ಲಾಕ್ ಡೌನ್)ಯಿಂದ ವಿನಾಯಿತಿ ನೀಡಿದ್ದಾರೆ.
ಸಾವಿರಾರು ಮಂದಿ ಒಂದೆಡೆ ಸೇರುವ ರೇಷ್ಮೆ ಗೂಡಿನ ಮಾರುಕಟ್ಟೆ ಅಸುರಕ್ಷಿತ ಪ್ರದೇಶವಾಗಿದೆ. ಒಬ್ಬ ಸೋಂಕಿತ ವ್ಯಕ್ತಿ ಬಂದರೂ ಇಡೀ ತಾಲ್ಲೂಕು ಹಾಗೂ ಜಿಲ್ಲೆಯಾದ್ಯಂತ ರೋಗ ಮಹಾಮಾರಿಯಂತೆ ಹಬ್ಬುತ್ತದೆ ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಆದರೆ ರೇಷ್ಮೆ ಬೆಳೆಗಾರರು ನಮಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ರೀಲರುಗಳ ಬಳಿ ನೇರವಾಗಿ ಮಾರಾಟ ಮಾಡಲು ಹೋದರೆ ತೀರಾ ಕಡಿಮೆ ಹಣಕ್ಕೆ ಕೇಳುತ್ತಿದ್ದಾರೆ. ಕನಿಷ್ಟ ಮಾರುಕಟ್ಟೆ ಇದ್ದರೆ ನಮ್ಮ ಬೆಳೆಗೆ ಬೆಲೆ ಬರುತ್ತದೆ ಎನ್ನುತ್ತಾರೆ.

ಸರ್ಕಾರದ ಆದೇಶ

“ರೇಷ್ಮೆ ಗೂಡನ್ನು ಒಂದು ಕೆಜಿಗೆ 150 ರಿಂದ 200 ರೂವರೆಗೆ ಕೇಳುತ್ತಿದ್ದಾರೆ. ರೇಷ್ಮೆ ಬೆಳೆಗಾರರ ಸಂಕಷ್ಟವನ್ನು ನಮ್ಮ ರಾಜ್ಯ ಕಾರ್ಯದರ್ಶಿಯವರ ಗಮನಕ್ಕೆ ತಂದಿದ್ದೆವು. ಅವರು ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಮುಂದುವರೆಸುವಂತೆ ಆದೇಶಿಸಿದ್ದಾರೆ. ಮಾರುಕಟ್ಟೆಯಲ್ಲಿ ಸ್ವಚ್ಛತೆಯನ್ನು ಕಾಪಾಡಲು ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ಜಿಲ್ಲಾಡಳಿತವನ್ನು ಕೋರಿದ್ದೇವೆ. ಮಾರುಕಟ್ಟೆಯನ್ನು ತೆರೆಯುವುದಕ್ಕಿಂತ ಮುಖ್ಯವಾಗಿ ರೀಲರುಗಳಿಗೆ ಸರ್ಕಾರ ಹಣದ ನೆರವನ್ನು ನೀಡಬೇಕು. ಆಗಷ್ಟೆ ರೈತರಿಗೆ ಅನುಕೂಲವಾಗುತ್ತದೆ.
ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಪ್ರವೇಶಿಸುವ ರೈತರು ಮತ್ತು ರೀಲರುಗಳನ್ನು ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷಿಸಿ ಒಳಬಿಡಬೇಕು. ಮುಖಕ್ಕೆ ಮಾಸ್ಕ್ ಅಥವಾ ಬಟ್ಟೆಯನ್ನು ಕಟ್ಟಿರಬೇಕು. ರೇಷ್ಮೆ ಗೂಡುಗಳ ಲಾಟ್ ಗಳನ್ನು ಅಂತರ ಕಾಯ್ದುಕೊಳ್ಳುವಂತೆ ಹಾಕಿಸಬೇಕು. ಜನಸಂದಣಿ ಕಡಿಮೆ ಇರುವಂತೆ, ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ನಡೆದುಕೊಳ್ಳಬೇಕು. ಚೆಕ್ ಪೋಸ್ಟ್ ನಲ್ಲಿ ತಡೆಹಿಡಿದರೆ ಹೊರರಾಜ್ಯದ ರೇಷ್ಮೆ ಗೂಡುಗಳು ಬರುವುದಿಲ್ಲ. ಕೇವಲ ಜಿಲ್ಲೆಯ ರೈತರಿಗೆ ಸೀಮಿತವಾಗಿ ಮಾರುಕಟ್ಟೆ ನಡೆಯುತ್ತದೆ” ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕು ಸಿಲ್ಕ್ ರೀಲರ್ಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಅನ್ಸರ್ ಖಾನ್ ಅವರು ಈ ಬಗ್ಗೆ ಮಾತನಾಡಿ, “ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸಾವಿರಾರು ಮಂದಿ ಒಂದೆಡೆ ಸೇರುತ್ತಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ಮನೆ ಬಿಟ್ಟು ಕದಲದಂತೆ ದೇಶದೆಲ್ಲೆಡೆ ಸಂದೇಶ ರವಾನಿಸಲಾಗಿದೆ. ಆದರೆ ಶಿಡ್ಲಘಟ್ಟ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಇದು ಏಕೆ ಅನ್ವಯವಾಗುತ್ತಿಲ್ಲ. ಶಿಡ್ಲಘಟ್ಟದಿಂದಲೇ ಕೊರೊನಾ ಎಲ್ಲೆಡೆ ವ್ಯಾಪಿಸಿದರೆ ಎಂಬ ಭಯ ಆತಂಕ ಕಾಡುತ್ತಿದೆ.
ಮಾರುಕಟ್ಟೆಯಲ್ಲಿ ಸ್ವಚ್ಛತೆಯಿಲ್ಲ. ಕಳೆದ ವಾರವೇ ತಾಲ್ಲೂಕು ಆರೋಗ್ಯಾಧಿಕಾರಿಗಳು ರೇಷ್ಮೆ ಮಾರುಕಟ್ಟೆಯಲ್ಲಿ ವಹಿವಾಟು ನಡೆಸುವವರಿಗೆ ಅನುಕೂಲವಾಗಲೆಂದು ಸ್ಯಾನಿಟೈಸರ್ ಗಳು, ಲಿಕ್ವಿಡ್ ಸೋಪ್, ಥರ್ಮಲ್ ಸ್ಕ್ಯಾನರ್ ಗಳು, ಬ್ಲೀಚಿಂಗ್ ಪೌಡರ್ ತರಿಸಿಡಬೇಕೆಂದು ಪತ್ರವನ್ನು ಉಪನಿರ್ದೇಶಕರಿಗೆ ನೀಡಿದ್ದರೂ ಯಾವ ಪ್ರಯೋಜನವೂ ಆಗಿಲ್ಲ. ಅಲ್ಲಿ ಕೈತೊಳೆಯಲು ನೀರಿನ ವ್ಯವಸ್ಥೆಯಿಲ್ಲ.
ಜಿಲ್ಲೆಯಲ್ಲಿ ಮೂರು ಕೊರೊನಾ ರೋಗಿಗಳಿರುವುದು ದೃಢಪಟ್ಟಿದೆ. ಏನಾದರೂ ತೊಂದರೆಯಾದರೆ ಯಾರು ಹೊಣೆ. ಆದ್ದರಿಂದ ರೇಷ್ಮೆ ಗೂಡಿನ ಮಾರುಕಟ್ಟೆ ಮುಚ್ಚುವುದು ಕ್ಷೇಮ. ರೈತರಿಗೆ ತೊಂದರೆ ಆಗುವುದನ್ನು ತಪ್ಪಿಸಲು ಸರ್ಕಾರವೇ ರೇಷ್ಮೆ ಗೂಡನ್ನು ಖರೀದಿಸಿ ವೇರ್ ಹೌಸ್ ನಲ್ಲಿಡಲಿ ಅಥವಾ ರೈತರೇ ಸ್ಟೀಮ್ ಕೊಟ್ಟು ಹುಳುವನ್ನು ಸಾಯಿಸಿ ಗೂಡನ್ನು ಎತ್ತಿಡಲಿ. ಹಲವು ಮಂದಿ ಒಂದೆಡೆ ಇರುವುದರಿಂದ ಮನೆಗಳಲ್ಲಿನ ರೇಷ್ಮೆ ಘಟಕಗಳನ್ನು ಕೂಡ ನಿಲ್ಲಿಸುವಂತೆ ಸೂಚಿಸಲಾಗುತ್ತಿದೆ. ನಮಗೂ ಖಚ್ಚಾ ರೇಷ್ಮೆ ಮಾರಲಾಗುತ್ತಿಲ್ಲ” ಎಂದು ತಿಳಿಸಿದರು.
ರೈತಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್ ಅವರು,”ಮಾರುಕಟ್ಟೆಯ ಒಳಗೆ 200 ಲಾಟ್ ಗಿಂತ ಹೆಚ್ಚು ಪ್ರವೇಶಿಸದಂತೆ ನಿರ್ಬಂಧ ವಿಧಿಸಲಿ. ಜನರುಊಬ್ಬರಿಂದೊಬ್ಬರು ಅಂತರ ಕಾಯ್ದುಕೊಳ್ಳುವಂತೆ ತಿಳಿಸಲಿ. ಸ್ವಚ್ಛತೆಗೆ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಂಡು ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ನಡೆಸಲಿ” ಎಂದು ಸಲಹೆ ನೀಡಿದರು.

ಕೊರೊನಾ ಗೋಬ್ಯಾಕ್ ಘೋಷಣೆ ಕೂಗಿದ ಹೊಸಪೇಟೆ, ಎದ್ದಲತಿಪ್ಪೇನಹಳ್ಳಿ ಗ್ರಾಮಗಳ ಯುವಕರು

0

ಕೊರೊನಾ ಸೋಂಕು ಗ್ರಾಮೀಣ ಪ್ರದೇಶಗಳಿಗೆ ಹಬ್ಬಬಾರದು ಎನ್ನುವ ಉದ್ದೇಶದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಬೇಲಿ ನಿರ್ಮಾಣ ಮಾಡುವ ಜೊತೆಗೆ ಜನತೆಗೆ ಕೊರೊನಾ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಬಗ್ಗೆ ಅರಿವು ಮೂಡಿಸುವ ಕೆಲಸಕ್ಕೆ ಯುವಕರು ಮುಂದಾಗಿದ್ದಾರೆ.
ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಪೇಟೆ, ಎದ್ದಲತಿಪ್ಪೇನಹಳ್ಳಿ ಗ್ರಾಮಗಳ ಯುವಕರು ತಮ್ಮ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಅಡ್ಡಲಾಗಿ ಬೇಲಿ ನಿರ್ಮಾಣ ಮಾಡಿ ಕೊರೊನಾ ಸೋಂಕಿತರು ಹಾಗೂ ರೋಗ ಹರಡುವ ಯಾರಿಗೂ ನಮ್ಮ ಗ್ರಾಮಗಳಿಗೆ ಪ್ರವೇಶವಿಲ್ಲ ಮತ್ತು ಕರೋನಾ ಗೋಬ್ಯಾಕ್ ಎಂಬ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಹೊಸಪೇಟೆ ಗ್ರಾಮ ಪಂಚಾಯಿತಿ ಸದಸ್ಯ ಮುನಿಆಂಜಿನಪ್ಪ ಮಾತನಾಡಿ, ವಿಶ್ವದಾದ್ಯಂತ ಮಹಾಮಾರಿಯಂತೆ ಆವರಿಸಿರುವ ಕರೋನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಏಪ್ರಿಲ್ 14 ರವರೆಗೂ ವಿಧಿಸಿರುವ ಲಾಕ್ ಡೌನ್ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿ ಉಳಿದುಕೊಳ್ಳುವ ಮೂಲಕ ಆರೋಗ್ಯವಂತ ಭಾರತದ ನಿರ್ಮಾಣಕ್ಕೆ ಕೈ ಜೋಡಿಸಬೇಕು. ಪ್ರತಿಯೊಬ್ಬರೂ ವೈಯಕ್ತಿಕ ಸ್ವಚ್ಚತೆ ಸೇರಿದಂತೆ ಮಾಸ್ಕ್ ಧರಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಹೊಸಪೇಟೆ ಗ್ರಾಮದ ಯುವ ಮುಖಂಡರಾದ ಮುರಳಿ, ಚನ್ನಕೇಶವ, ಗಣೇಶ್, ಶಿವ, ಚನ್ನರಾಯ, ಚನ್ನಕೃಷ್ಣ ಪಾಲ್ಗೊಂಡಿದ್ದರು.

“ಕಂಟ್ರೋಲ್ ರೂಮ್” ಮೂಲಕ ಜನರ ತುರ್ತು ಅಗತ್ಯ ನಿವಾರಣೆಗೆ ತಾಲ್ಲೂಕು ಆಡಳಿತ ಕ್ರಮ

0

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಎಸ್.ಡಿ.ಎಲ್. ಸರ್ವಲೆನ್ಸ್ ಟೀಮ್ (ಕಣ್ಗಾವಲು ಘಟಕ)ದ ಸದಸ್ಯರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ತಾಲ್ಲೂಕು ಆಡಳಿತದಿಂದ “ಕಂಟ್ರೋಲ್ ರೂಮ್” ತೆರೆಯಲಾಗುವುದು. ದಿನದ 24 ಗಂಟೆಗಳ ಕಾಲ ಅದು ಕಾರ್ಯನಿರ್ವಹಿಸಲಿದೆ. ಸೇವಾ ಮನೋಭಾವವುಳ್ಳ ವಿವಿಧ ಸಂಘಟನೆಗಳ ಸದಸ್ಯರ ನೆರವನ್ನು ಪಡೆದು, ಅಶಕ್ತರು, ವೃದ್ಧರು ಮುಂತಾದವರುಗಳಿಗೆ ಅಗತ್ಯ ವಸ್ತುಗಳನ್ನು ತಲುಪಿಸುವ ವ್ಯವಸ್ಥೆ ಮಾಡುವುದಾಗಿ ತಹಶೀಲ್ದಾರ್ ಕೆ.ಅರುಂಧತಿ ತಿಳಿಸಿದರು.
“ಕಂಟ್ರೋಲ್ ರೂಮ್” ದೂರವಾಣಿ ಸಂಖ್ಯೆಯನ್ನು ಸಾರ್ವಜನಿಕರಿಗೆ ತಿಳಿಸಲಾಗುವುದು. ಯಾವುದೇ ರೀತಿಯ ಕುಂದುಕೊರತೆಗಳು, ಅಗತ್ಯ ವಸ್ತುಗಳು ಮುಂತಾದವುಗಳ ಬಗ್ಗೆ ತಿಳಿಸಿ ಸೇವೆ ಪಡೆಯಬಹುದು ಎಂದು ಅವರು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ನಮ್ಮ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹೊರದೇಶದಿಂದ ಬಂದಿರುವ ಯಾವುದೇ ವ್ಯಕ್ತಿಗೂ ಕೊರೊನಾ ಸೋಂಕಿನ ರೋಗಲಕ್ಷಣಗಳು ಕಂಡುಬಂದಿಲ್ಲ. ಜನರು ಆತಂಕ ಪಡುವ ಅಗತ್ಯವಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ನಮ್ಮಗಳ ಆರೋಗ್ಯದ ದೃಷ್ಟಿಯಿಂದ ಸರ್ಕಾರ 21 ದಿನಗಳ ಕಾಲ ವಿಧಿಸಿರುವ ಗೃಹಬಂಧನಕ್ಕೆ ಬದ್ಧರಾಗಿರೋಣ. ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸೋಣ. ಜಂಗಮಕೋಟೆ, ದೊಡ್ಡದಾಸೇನಹಳ್ಳಿ ಗ್ರಾಮಗಳಲ್ಲಿ ಹುಡುಗರು, ಯುವಕರು ಹೊರಗೆ ಆಡುತ್ತಿದ್ದರಂತೆ. ಇದು ಅಕ್ಷಮ್ಯ ಅಪರಾಧ ಎಂದರು.
ತಳ್ಳುವ ಗಾಡಿಗಳಲ್ಲಿ ಎಲ್ಲೆಂದರಲ್ಲಿ ಹೋಗಿ ತರಕಾರಿ ಮತ್ತು ಹಣ್ಣುಗಳನ್ನು ಮಾರುವಂತಿಲ್ಲ. ಪ್ರತಿಯೊಂದು ವಾರ್ಡುಗಳಿಗೂ ಅನುಕೂಲವಾಗುವ ಹಾಗೆ ಅವರಿಗೆ ಸ್ಥಳವನ್ನು ನಿಗದಿಪಡಿಸಲಾಗುವುದು. ಅವರು ಆ ಸ್ಥಳದಲ್ಲಿಯೇ ಇದ್ದು ವ್ಯಾಪಾರ ಮಾಡಬೇಕು. ಜನರು ಕೊಳ್ಳಲು ಬರುವಾಗ ಸೋಷಿಯಲ್ ಡಿಸ್ಟೆನ್ಸ್ ಕಾಪಾಡಿಕೊಳ್ಳಬೇಕು. ಅಗತ್ಯ ವಸ್ತುಗಳನ್ನು ಕೊಳ್ಳಲು ಮನೆಗಳಿಂದ ಕೇವಲ ಒಬ್ಬರು ಮಾತ್ರ ಹೊರಬರಬೇಕು. ಮಕ್ಕಳನ್ನು ಕರೆತರುವುದಾಗಲೀ, ಕಳುಹಿಸುವುದಾಗಲೀ ಮಾಡಬಾರದು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್ ಮಾತನಾಡಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂತೆಯನ್ನು ನಡೆಸಲು ಕೆಲವೊಂದು ಮಾರ್ಗಸೂಚಿಗಳನ್ನು ವಿಧಿಸಲಾಗುವುದು. ರೈತರು ತಮ್ಮ ಉತ್ಪನ್ನಗಳನ್ನು ಮಾರ್ತಲು ಸಮಯವನ್ನು ನಿಗದಿಪಡಿಸಲಾಗುವುದು. ಹಾಗೆಯೇ ಜನರು ಕೊಳ್ಳಲು ಬಂದಾಗ ದೂರ ದೂರ ನಿಂತು ಸೋಷಿಯಲ್ ಡಿಸ್ಟೆನ್ಸ್ ಉಳಿಸಿಕೊಳ್ಳಬೇಕು.
ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಬಹಳಷ್ಟಿದೆ. ಕೆಲವೊಂದು ದುರಸ್ತಿ ಕಾರ್ಯಗಳಿಗೆ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಿಂದ ಹಳ್ಳಿಗಳಿಗೆ ಹೋಗಲು ತೊಂದರೆಯಾಗುತ್ತಿದೆ. ಈ ಸಮಸ್ಯೆಯನ್ನು ನೀಗಿಸಲು ನಾವು ಸಂಬಂಧಪಟ್ಟವರಿಗೆ ಐ.ಡಿ ಕಾರ್ಡ್ ವಿತರಿಸುತ್ತಿದ್ದೇವೆ. ಹಾರ್ಡ್ ವೇರ್ ಅಂಗಡಿಗಳಲ್ಲಿ ಪೈಪ್, ಕಾಲರ್, ನಟ್ಟು ಬೋಲ್ಟು ಮುಂತಾದ ಹಲವು ವಸ್ತುಗಳ ಅಗತ್ಯವಿರುತ್ತದೆ. ಈ ಸಮಸ್ಯೆಯನ್ನು “ಕಂಟ್ರೋಲ್ ರೂಮ್” ಮೂಲಕ ಬಗೆಹರಿಸಲಾಗುವುದು ಎಂದು ಹೇಳಿದರು.

ಟಾಸ್ಕ್ ಫೋರ್ಸ್ ರಚನೆ :

ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಒಂದೊಂದು ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು, ಪಿ.ಡಿ.ಒ, ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನೊಳಗೊಂಡ ತಂಡವಿದು. ಹೊರಗಿನಿಂದ ಯಾರೇ ಗ್ರಾಮಕ್ಕೆ ಬರಲಿ ಹೋಗಲಿ ಅವರ ಬಗ್ಗೆ ಈ ತಂಡ ನಿಗಾ ವಹಿಸಿ, ಮಾಹಿತಿಯನ್ನು ಕೇಂದ್ರ ಸ್ಥಾನಕ್ಕೆ ನೀಡುತ್ತಿರಬೇಕು. ಕೊರೊನಾ ರೋಗಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದರು.
ನಗರಸಭೆಯ ವತಿಯಿಂದಲೂ ಪ್ರತಿಯೊಂದು ವಾರ್ಡ್ ನಲ್ಲಿಯೂ ಚುನಾಯಿತ ಜನಪ್ರತಿನಿಧಿಗಳಿರುವ ಟಾಸ್ಕ್ ಫೋರ್ಸ್ ರಚಿಸಬೇಕು. ಈ ತಂಡ ಜನರು ಅತ್ಯಗತ್ಯ ವಸ್ತುಗಳನ್ನು ಕೊಳ್ಳಲು ಮಾತ್ರವಷ್ಟೇ ಹೊರಗೆ ಬರುವಂತೆ ನೋಡಿಕೊಳ್ಳಬೇಕು. ಉಳಿದಂತೆ ಮನೆಯಲ್ಲಿಯೇ ಇರುವಂತೆ ತಿಳಿಸಬೇಕು. ಯಾವುದೇ ವ್ಯಾಕ್ತಿ ಹೊರಗಿನಿಂದ ಬಂದನೆಂದರೆ ಗಮನಿಸಿ, ಕೇಂದ್ರಸ್ಥಾನಕ್ಕೆ ಮಹಿತಿ ನೀಡಬೇಕು ಎಂದು ಹೇಳಿದರು.
ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್, ನಗರಸಭೆ ಪೌರಾಯುಕ್ತ ತ್ಯಾಗರಾಜ್, ಆಸ್ಪತ್ರೆ ವೈದ್ಯಾಧಿಕಾರಿ ಡಾ.ವಣಿ, ನಗರಭೆ ಆರೋಗ್ಯಾಧಿಕಾರಿ ಶೋಭಾ, ಸಿ.ಡಿ.ಪಿ.ಒ ನಾಗಮಣಿ ಹಾಜರಿದ್ದರು.

ವರ್ಷದ ತೊಡಕು : ಮಾಂಸ ಕೊಳ್ಳಲು ಮುಗಿಬಿದ್ದ ಜನರು

0

ಯುಗಾದಿ ಹಬ್ಬದ ಮಾರನೆಯ ದಿನವನ್ನು ವರ್ಷದ ತೊಡಕು ಎಂದು ಆಚರಿಸಲಾಗುತ್ತದೆ. ವರ್ಷದ ತೊಡಕು ಎನ್ನುವುದು ಹೊಸ ಕಾರ್ಯಗಳಿಗೆ ತೊಡಗಿಸಿಕೊಳ್ಳುವ ದಿನವಾಗಿದ್ದು, ಅಂದು ವರ್ಷಪೂರ್ತಿಯಾವುದೇ ತೊಡಕುಗಳು ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳಲಾಗುತ್ತದೆ. ಹೀಗಾಗಿ ವರ್ಷ ತೊಡಕಿಗೂ ಯುಗಾದಿ ದಿನದಷ್ಟೇ ಪ್ರಾಮುಖ್ಯತೆ. ಈ ದಿನದಂದು ಕುರಿ ಕೋಳಿ ಮಾಂಸದ ಅಡುಗೆ ಮಾಡಿ ವರ್ಷದ ತೊಡಕು ಆಚರಿಸುವುದು ಸಾಮಾನ್ಯ. ಸಂಬಂಧಿಗಳನ್ನು ಹಾಗೂ ಸ್ನೇಹಿತರನ್ನು ಊಟಕ್ಕೆ ಕರೆಯುವುದು ವಾಡಿಕೆ.
ಕೊರೊನಾ ವೈರಸ್ ತಡೆಗೆ ರಾಷ್ಟ್ರಾದ್ಯಂತ 21 ದಿನಗಳ ವರೆಗೆ ಲಾಕ್‌ಡೌನ್‌ ಘೋಷಣೆ ನಡುವೆಯೂ ಹಿಂದೂಗಳ ಹೊಸ ವರ್ಷದ ಮೊದಲ ಹಬ್ಬ ಯುಗಾದಿ ಹಬ್ಬದ ಮರುದಿನ ಆಚರಿಸುವ ವರ್ಷದ ತೊಡಕಿಗೆ ನಗರ ಹಾಗೂ ತಾಲ್ಲೂಕಿನ ಕೆಲವೆಡೆ ಮಾಂಸ ಕೊಳ್ಳಲು ಜನರು ಮುಗಿಬಿದ್ದಿದ್ದರು.
ಜನರು ಮಾಂಸಕ್ಕಾಗಿ ನುಗ್ಗಬಾರದೆಂದು ಜನರು ಕೊಳ್ಳಲು ತಾಲ್ಲೂಕು ಆಡಳಿತ ಬೆಳಗ್ಗೆ ಸಮಯವನ್ನು ನಿಗದಿಪಡಿಸಿ, ನಿರ್ದಿಷ್ಟ ದೂರದಲ್ಲಿ ನಿಂತು ವ್ಯಾಪಾರ ಮಾಡುವಂತೆ ತಿಳಿಹೇಳಿದ್ದರೂ ಕೇಳುವ ವ್ಯವಧಾನ ಜನರಲ್ಲಿ ಇಲ್ಲವಾಗಿತ್ತು. ಹಲವೆಡೆ ಜನರ ನೂಕುನುಗ್ಗಲನ್ನು ಪೊಲೀಸರು ನಿಯಂತ್ರಿಸಬೇಕಾಯಿತು.
ತಾಲ್ಲೂಕಿನ ಮೇಲೂರು ಗ್ರಾಮದಲ್ಲಿನ ಮೂರು ಮಾಂಸದ ಅಂಗಡಿಗಳಿಗೆ ಹಿಂದಿನಿಂದಲೂ ವಿವಿಧ ತಾಲ್ಲುಕು ಹಾಗೂ ಜಿಲ್ಲೆಗಳ ಗ್ರಾಹಕರಿದ್ದಾರೆ. ಆದರೆ ಸರ್ಕಾರ ನಿರ್ಬಂಧವಿರಿಸಿರುವುದರಿಂದ ಸುತ್ತಮುತ್ತಲಿನ ಗ್ರಾಮಗಳ ಗ್ರಾಹಕರು ಆಗಮಿಸಿದ್ದರು. ಗ್ರಾಮ ಪಂಚಾಯಿತಿಯ ವತಿಯಿಂದ ಕೆಲವು ಸದಸ್ಯರು ಖುದ್ದಾಗಿ ನಿಂತು ಜನರು ನಿರ್ದಿಷ್ಟ ದೂರದಲ್ಲಿ ನಿಂತು ವ್ಯಾಪಾರ ಮಾಡುವಂತೆ ನೋಡಿಕೊಂಡರು.