Home Blog Page 334

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಕೂಲಿಕಾರ್ಮಿಕರಿಗೆ ದಿನಸಿ ವಿತರಣೆ

0

ಶಿಡ್ಲಘಟ್ಟ ತಾಲ್ಲೂಕಿನ ವಿವಿದೆಡೆ ಇರುವ ಕೂಲಿಕಾರ್ಮಿಕರಿಗೆ ಅಗತ್ಯವಿರುವ ದಿನಸಿ ಹಾಗೂ ಆಹಾರ ಪದಾರ್ಥಗಳನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಶನಿವಾರ ವಿತರಿಸಲಾಯಿತು.
ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಕೆ.ಅಮರನಾರಾಯಣ ಮಾತನಾಡಿ, “ಉಚ್ಛ ನ್ಯಾಯಾಲಯದ ಆಡಳಿತಾತ್ಮಕ ನ್ಯಾಯಾಧೀಶರಾದ ಎಸ್.ಸುರೇಂದ್ರ ಯಾದವ್ ಅವರ ನಿರ್ದೇಶನದ ಮೇರೆಗೆ ಶಿಡ್ಲಘಟ್ಟ ತಾಲ್ಲೂಕಿನ ಕಟ್ಟಡ ಕೂಲಿ ಕಾರ್ಮಿಕರಿರುವ ಸ್ಥಳಗಳಿಗೆ ಶುಕ್ರವಾರ ಭೇಟಿ ಕೊಟ್ಟೆವು. ಅವರಿಗೆ ತಾಲ್ಲೂಕು ಆಡಳಿತ ನೀಡುತ್ತಿರುವ ನೆರವಿನ ಬಗ್ಗೆ ವಿಚಾರಿಸಿ ಇನ್ನು ಏನು ಬೇಕೆಂಬುದನ್ನು ವಿಚಾರಿಸಿದೆವು. ಈ ಕೂಲಿ ಕಾರ್ಮಿಕರು ಆಂಧ್ರಪ್ರದೇಶ, ಉತ್ತರಪ್ರದೇಶ, ಒರಿಸ್ಸಾ, ಜಾರ್ಖಂಡ್, ಬಿಹಾರ ರಾಜ್ಯಗಳಿಂದ ಬಂದಿದ್ದು, ಅವರ ಆಹಾರ ಪದ್ಧತಿಗೆ ಅನುಗುಣವಾಗಿ ದಿನಸಿ ಹಾಗೂ ಆಹಾರ ಪದಾರ್ಥಗಳನ್ನು ನೀಡುತ್ತಿದ್ದೇವೆ” ಎಂದು ಹೇಳಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ವಿವಿಧ ರಾಜ್ಯಗಳಿಂದ ಬಂದಿರುವ 75 ಮಂದಿ ಇಂದಿರಾ ವಸತಿ ಶಾಲೆ ಕಟ್ಟಡ ಕಾಮಗಾರಿಯ ಕೂಲಿ ಕಾರ್ಮಿಕರು, ನಗರದ ಪ್ರವಾಸಿ ಮಂದಿರದ ಬಳಿ ಇರುವ ಒಂದು ಕುಟುಂಬ, ಪ್ರಥಮ ದರ್ಜೆ ಕಾಲೇಜಿನಲ್ಲಿರುವ ಆರು ಮಂದಿ ಕಾರ್ಮಿಕರು ಹಾಗೂ ಬೈಪಾಸ್ ರಸ್ತೆಯಲ್ಲಿ ಕೋಚಿಮುಲ್ ಕಚೇರಿಯ ಬಳಿ ಇದ್ದ ಹತ್ತು ಮಂದಿ ಕೂಲಿ ಕಾರ್ಮಿಕರಿಗೆ ಅಗತ್ಯ ದಿನಸಿ ಮತ್ತು ಆಹಾರ ಪದಾರ್ಥಗಳನ್ನು ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ದೇವರಾಜ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ಎನ್.ರೂಪಾ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್, ನ್ಯಾಯಾಧೀಶರಾದ ಸಂಜುಕುಮಾರ್ ಎ ಪಚ್ಚಾಪುರೆ, ಡಿ.ರೋಹಿಣಿ, ತಹಶಿಲ್ದಾರ್ ಕೆ.ಅರುಂಧತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಕಾರ್ಮಿಕ ನಿರೀಕ್ಷಕರಾದ ರಾಮಾಂಜಿನಪ್ಪ, ಕಲಾವತಿ, ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ಹಾಜರಿದ್ದರು.

ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಸಚಿವ ಡಾ.ಸುಧಾಕರ್ ಭೇಟಿ

0

ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯ ಪ್ರವೇಶ ಧ್ವಾರದಲ್ಲಿ ಶುಕ್ರವಾರ ಕೊರೊನಾ ಸೋಂಕು ನಿವಾರಕ ಟನಲ್ ಉದ್ಘಾಟಿಸಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮಾತನಾಡಿದರು.

ಅತಿ ದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಿರುವುದರಿಂದ ಕೊರೊನಾ ಸೋಂಕು ಹರಡದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಈ ಬಗ್ಗೆ ಸಮಾಲೋಚನೆ ನಡೆಸಿದ್ದೇವೆ. ರೇಷ್ಮೆ ಗೂಡಿನ ಮಾರುಕಟ್ಟೆಗೆ ಆಗಮಿಸುವ ರೈತರು ಹಾಗೂ ರೀಲರುಗಳ ಸಮಸ್ಯೆಯನ್ನೂ ಕೇಳಿದ್ದು ಅವನ್ನು ಪರಿಶಿಲಿಸುವುದಾಗಿ ಅವರು ತಿಳಿಸಿದರು.

 ಒಂದೆಡೆ ರೇಷ್ಮೆ ಗೂಡಿನ ಬೆಲೆ ಕುಸಿದಿದೆ, ಮತ್ತೊಂದೆಡೆ ಕಚ್ಚಾ ರೇಷ್ಮೆಯನ್ನು ಬೇರೆ ಜಿಲ್ಲೆಗಳಿಗೆ ಮಾರಾಟ ಮಾಡಲಾಗದೆ ರೀಲರುಗಳ ಬಳಿ ಹಣದ ಕೊರತೆಯಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ರೇಷ್ಮೆ ಸಚಿವರೊಂದಿಗೆ ಸಮಾಲೋಚಿಸುತ್ತೇನೆ. ರಾಮನಗರದಲ್ಲಿ ಸರ್ಕಾರದ ಕೆ.ಎಸ್.ಎಂ.ಬಿ ವತಿಯಿಂದ ರೇಷ್ಮೆ ಖರೀದಿಸಲು ಪ್ರಾರಂಭಿಸಿರುವಂತೆ ಶಿಡ್ಲಘಟ್ಟದಲ್ಲೂ ಪ್ರಾರಂಭಿಸಲು ತಿಳಿಸುತ್ತೇನೆ ಎಂದು ಭರವಸೆ ನೀಡಿದರು.

 ಈ ಸಂದರ್ಭದಲ್ಲಿ ರೀಲರುಗಳ ಸಂಘದ ಸದಸ್ಯರು ರೇಷ್ಮೆ ಗೂಡಿನಿಂದ ಕಚ್ಚಾ ರೇಷ್ಮೆ ತೆಗೆದು ಮನೆಯಲ್ಲಿ ದಾಸ್ತಾನು ಮಾಡಿದ್ದೇವೆ. ಮಗ್ಗಗಳನ್ನು ನಿಲ್ಲಿಸಿರುವುದರಿಂದ ಖರೀದಿ ಮಾಡುತ್ತಿಲ್ಲ. ಲಾಕ್ ಡೌನ್ ಎಷ್ಟು ದಿನ ಮುಂದುವರೆಯುತ್ತದೆ ಎಂಬುದರ ಬಗ್ಗೆ ಅನಿಶ್ಚಿತತೆ ಇದೆ. ದಯಮಾಡಿ ಸರ್ಕಾರದಿಂದ ರೇಷ್ಮೆ ನೂಲಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ಅದರ ಶೇ 80 ರಷ್ಟು ಬಡ್ಡಿ ರಹಿತವಾಗಿ ಒತ್ತೆ ಇಟ್ಟುಕೊಂಡು ಹಣವನ್ನು ಕೊಡಿಸುವಂತೆ ಮನವಿ ಸಲ್ಲಿಸಿದರು.

 ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ಸಿಇಒ ಫೌಜಿಯಾ ತರನ್ನುಮ್, ರೇಷ್ಮೆ ಗೂಡಿನ ಮಾರುಕಟ್ಟೆ ಉಪನಿರ್ದೇಶಕ ಸುಭಾಷ್ ಸಾತೇನಹಳ್ಳಿ, ಪೊಲೀಸ್ ಎಸ್.ಪಿ ಮಿಥುನ್ ಕುಮಾರ್, ತಹಶೀಲ್ದಾರ್ ಕೆ.ಅರುಂಧತಿ, ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ಪಕ್ಷದ ರಾಮಲಿಂಗಪ್ಪ, ಬಿ.ಸಿ.ನಂದೀಶ್, ಸುರೇಂದ್ರಗೌಡ, ರಾಘವೇಂದ್ರ ಹಾಜರಿದ್ದರು.

ಮಾರುಕಟ್ಟೆಯಿಲ್ಲದೆ ಗಿಡ ಸಮೇತ ಉಳುಮೆ ಮಾಡಿದ ಹೂ ಬೆಳೆದ ರೈತ

0

ಕೊರೊನಾ ತಡೆಗಟ್ಟಲು ಮಾಡಿರುವ ಲಾಕ್ ಔಟ್ ಪರಿಣಾಮ ಮಾರುಕಟ್ಟೆಯಿಲ್ಲದೆ ಹಲವಾರು ರೈತರು ಕಂಗೆಟ್ಟಿದ್ದಾರೆ. ತಾಲ್ಲೂಕಿನ ತಲದುಮ್ಮನಹಳ್ಳಿ ಗ್ರಾಮದ ರೈತ ಬಚ್ಚೇಗೌಡ ತಾನು ಬೆಳೆದಿದ್ದ ಚೆಂಡು ಹೂವಿನ ಗಿಡಗಳನ್ನು ಹೂವಿನ ಸಮೇತ ರೋಟರಿ ಹಾಕಿ ಉತ್ತುಬಿಟ್ಟಿದ್ದಾರೆ.

 ಎರಡು ಎಕರೆ ಪ್ರದೇಶದಲ್ಲಿ ರೈತ ಬಚ್ಚೇಗೌಡ ಚೆಂಡು ಹೂಗಿಡಗಳನ್ನು ಬೆಳೆದಿದ್ದರು. ಒಮ್ಮೆ ಮಾತ್ರ ಹೂಗಳ ಕಟಾವು ಮಾಡಿದ್ದರು. ಅಷ್ಟರಲ್ಲಿ ಕೊರೊನಾ ಮಾರಿ ಆವರಿಸಿತು. ಅದನ್ನು ತಡೆಯಲು ಎಲ್ಲೆಡೆ ಲಾಕ್ ಔಟ್ ಮಾಡಲಾಯಿತು. ಅದರ ಪರಿಣಾಮ ಹೂಗಳನ್ನು ಬೆಳೆದವರ ಮೇಲೆ ಆಯಿತು. ಹೂವನ್ನು ಕೀಳುವ ಕೂಲಿ ಕೂಡ ಗಿಟ್ಟುವುದಿಲ್ಲವೆಂದು ಅವರು ಹಾಗೆಯೇ ಬಿಟ್ಟರು. ಈಗ ಗಿಡ ಸಮೇತ ಉಳುಮೆ ಮಾಡುತ್ತಿದ್ದಾರೆ.

 “ನಾರಿಗೆ 50 ಸಾವಿರ ರೂ, ಗೊಬ್ಬರಕ್ಕೆ 40 ಸಾವಿರ ರೂ, ಕೂಲಿ ಔಷಧಿಗೆ 30 ಸಾವಿರ ರೂ ಖರ್ಚು ಮಾಡಿರುವೆ. ಈಗ ಹೂವನ್ನು ಕೇಳುವವರಿಲ್ಲ. ಅದಕ್ಕೆ ಟ್ರಾಕ್ಟರಿಗೆ ರೋಟರಿ ಹಾಕಿ ಉತ್ತುತ್ತಿರುವೆ. ಇದಲ್ಲದೆ, ಒಂದು ಎಕರೆಯಲ್ಲಿ ಐಶ್ವರ್ಯ ತಳಿಯ ಶಾಮಂತಿ ಹೂ ಬೆಳೆದಿರುವೆ, ಅದು ಇನ್ನೂ ಹೂ ಬಿಟ್ಟಿಲ್ಲ. ಮಾರಿಗೋಲ್ಡ್ ಹೂವನ್ನು ಸಹ ಮುವ್ವತ್ತು ಗುಂಟೆಯಲ್ಲಿ ಬೆಳೆದಿರುವೆ. ಜೊತೆಗೆ ಒಂದೂಕಾಲು ಎಕರೆಯಲ್ಲಿ ಚೆಂಡು ಹೂವಿನ ನಾರು ಹಾಕಲೆಂದು ಭೂಮಿಯನ್ನು ಸಿದ್ಧಪಡಿಸಿರುವೆ. ಒಟ್ಟಾರೆ ಹತ್ತರಿಂದ ಹದಿನೈದು ಲಕ್ಷ ನಷ್ಟ ಆಗುತ್ತಿದೆ. ರೈತರು ಎಚ್ಚೆತ್ತುಕೊಳ್ಳುವುದು ಕಷ್ಟವಿದೆ” ಎಂದು ರೈತ ಬಚ್ಚೇಗೌಡ ತಿಳಿಸಿದರು.

ರಾಷ್ಟ್ರ ಪ್ರಶಸ್ತಿ ವಿಜೇತ ಗಣಿತ ಶಿಕ್ಷಕರಿಂದ ಆನ್ ಲೈನ್ ಪುನರಾವರ್ತನಾ ತರಗತಿಗಳು ಪ್ರಾರಂಭ

0

ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ ಎಂ.ಶಿವಕುಮಾರ್ ಅವರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಗಣಿತ ಆನ್ ಲೈನ್ ಪುನರಾವರ್ತನಾ ತರಗತಿಯನ್ನು ಶುಕ್ರವಾರ ಪ್ರಾರಂಭ ಮಾಡಿದ್ದಾರೆ.
ವಿದ್ಯಾರ್ಥಿಗಳು ಮನೆಯಲ್ಲಿಯೇ ಇದ್ದು ಈ ತಿಂಗಳ ಪೂರ್ತಿ  ಪ್ರತಿದಿನ ಬೆಳಗ್ಗೆ 9 ರಿಂದ 10 ಗಂಟೆ ವರೆಗೂ ಗಣಿತ ತರಗತಿಗೆ ಹತ್ತನೇ ತರಗತಿಯ ಯಾವುದೇ ವಿದ್ಯಾರ್ಥಿ ಲಾಗಿನ್ ಆಗಿ ತರಗತಿಯಲ್ಲಿ ಭಾಗವಹಿಸಿ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.
ತರಬೇತಿ ನೀಡಿ ಮಾತನಾಡಿದ ಶಿಕ್ಷಕ ಎಂ.ಶಿವಕುಮಾರ್, “ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಸಲಹೆ ಅನ್ವಯ ಆನ್ ಲೈನ್ ತರಗತಿಗಳನ್ನು ಹಮ್ಮಿಕೊಂಡಿದ್ದು, ಪ್ರತಿ ವಿದ್ಯಾರ್ಥಿಯೂ ತಮ್ಮ ಬಳಿ ಇರುವ ಮೊಬೈಲ್ ನಲ್ಲಿ ಈ ತರಗತಿಗೆ ಲಾಗಿನ್ ಆಗಬಹುದು.
ಕೊರೊನಾ ಸೋಂಕು ಹರಡದಂತೆ ಲಾಕ್ ಡೌನ್ ಮಾಡಿರುವುದರಿಂದ ರಜಾ ಅವಧಿಯಂತಾಗಿದ್ದು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ತಾವುಗಳು ವರ್ಷ ಪೂರ್ತಿ ಓದಿರುವುದನ್ನು ಮರೆಯುವಂತಾಗಿದೆ. ಫೇಸ್ ಬುಕ್, ವಾಟ್ಸ್ಅಪ್ ಗಳಲ್ಲಿ ವಿದ್ಯಾರ್ಥಿಗಳನ್ನು ಒಟ್ಟಿಗೆ ಕಾಣಲಿಕ್ಕೆ ಸಾಧ್ಯವಿಲ್ಲ ಮತ್ತು ಅವರೊಂದಿಗೆ ಸಂವಾದಿಸಲು ಸಹ ಸಾಧ್ಯ ಇಲ್ಲ. ಆದರೆ ಜೂಮ್ ಅಫ್ ನ ಮೂಲಕ ಒಂದೇ ಬಾರಿ ಅನೇಕ ವಿದ್ಯಾರ್ಥಿಗಳನ್ನು ಸಂಪರ್ಕಿಸಬಹುದು ಮತ್ತು ಅವರ ಪ್ರಶ್ನೆಗಳಿಗೆ ಉತ್ತರಿಸಬಹುದು ಹಾಗೂ ತರಗತಿಯ ಸಹ ಪರಸ್ಪರ ಸಂವಾದಿಸುವ ರೀತಿಯಿದ್ದು ಪರಿಣಾಮಕಾರಿಯಾಗಿರುತ್ತದೆ. ಇದಾದ ನಂತರ ಮಕ್ಕಳಿಗೆ ಚಟುವಟಿಕೆ ನೀಡಲಾಗುತ್ತದೆ. ಚಟುವಟಿಕೆಯನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಅದನ್ನು ಫೋಟೋ ತೆಗೆದು ಮುಖ್ಯಶಿಕ್ಷಕರ ಹಾಗೂ ಶಿಕ್ಷಕರ ವಾಟ್ಸ್ ಅಪ್ ಗೆ ಕಳುಹಿಸಬೇಕು.  ಶಿಕ್ಷಕರು ಅದನ್ನು ಪರಿಶೀಲಿಸಿ ತಪ್ಪುಗಳು ಇದ್ದಲ್ಲಿ ಅದನ್ನು ಸರಿಪಡಿಸಿ ಮಾರ್ಗದರ್ಶನ ನೀಡಲಾಗುತ್ತದೆ. ಇದು ಕೇವಲ ಚೀಮಂಗಲ ಶಾಲೆಯ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಂಡು ಈ ಲಾಕ್ ಡೌನ್ ಅವಧಿಯಲ್ಲಿ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು ಪಬ್ಲಿಕ್ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಎಂದು ಹೇಳಿದರು.
ಆಸಕ್ತ ವಿದ್ಯಾರ್ಥಿಗಳು ಈ ಕೆಳಕಂಡ ಮೊಬೈಲ್ ನಂಬರ್ ಗೆ ಮೆಸೇಜ್ ಕಳಿಸಿದರೆ ಅವರಿಗೆ ಲಾಗಿನ್ ಲಿಂಕನ್ನು ಕಳುಹಿಸಿಕೊಡಲಾಗುವುದು.
ಮೊಬೈಲ್ ಸಂಖ್ಯೆ 9449702666.

ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಶಾಸಕ ವಿ.ಮುನಿಯಪ್ಪ ಅವರಿಂದ ಪ್ರಗತಿ ಪರಿಶೀಲನೆ

0

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳೊಂದಿಗೆ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು. ತಾಲ್ಲೂಕಿನ ಯಾವ ಗ್ರಾಮಗಳಲ್ಲಿ ಅತಿ ಹೆಚ್ಚು ಸಮಸ್ಯೆಯಿದೆಯೆಂದು ಸ್ವತಃ ಪಿಡಿಒಗಳು ಪರಿಶೀಲಿಸಿ ತಾಲ್ಲೂಕು ಪಂಚಾಯಿತಿ ಇಓ ಅವರಿಗೆ ಕೂಡಲೇ ಮಾಹಿತಿ ನೀಡಬೇಕೆಂದು ಶಾಸಕ ವಿ.ಮುನಿಯಪ್ಪ ಹೇಳಿದರು.

 ತಾಲ್ಲೂಕಿನಲ್ಲಿ ಕೊರೊನಾ ಸೋಂಕಿನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪ್ರಥಮ ಆದ್ಯತೆ ನೀಡಬೇಕೆಂದು ಅವರು ತಿಳಿಸಿದರು.

  ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಈಗಾಗಲೇ ಕೊರೆಸಿರುವ ಕೊಳವೆಬಾವಿಗಳು ಬತ್ತಿಹೋಗುತ್ತಿವೆ. ಗ್ರಾಮ ಪಂಚಾಯಿತಿ ಪಿಡಿಒ ಗಳು ಗ್ರಾಮದಲ್ಲಿರುವ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಬೇಕು. ತೀರಾ ಸಮಸ್ಯೆಯಿದ್ದರೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ ಜನಗಳಿಗೆ ಅನುಕೂಲ ಕಲ್ಪಿಸಬೇಕೆಂದರು.

ಇ.ತಿಮ್ಮಸಂದ್ರ, ಮೇಲೂರು, ಮಳ್ಳೂರು, ವೈ.ಹುಣಸೇನಹಳ್ಳಿ, ಆನೂರು, ತುಮ್ಮನಹಳ್ಳಿ, ದಿಬ್ಬೂರಹಳ್ಳಿ, ಕುಂಬಿಗಾನಹಳ್ಳಿ, ಕುಂದಲಗುರ್ಕಿ, ಚೀಮಂಗಲ, ಅಬ್ಲೂಡು, ಹಂಡಿಗನಾಳ, ಜಂಗಮಕೋಟೆ, ಹೊಸಪೇಟೆ, ಎಸ್.ದೇವಗಾನಹಳ್ಳಿ, ಸಾದಲಿ, ತಲಕಾಯಲಬೆಟ್ಟ, ಗಂಜಿಗುಂಟೆ, ಮಳಮಾಚನಹಳ್ಳಿ, ಕೊತ್ತನೂರು, ನಾಗಮಂಗಲ, ಪಲೀಚೇರ್ಲು, ಬಶೆಟ್ಟಹಳ್ಳಿ, ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು.

  ವಲಸೆ ಬಂದಿರುವ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಿ. ಪಡಿತರ ವಿತರಿಸಲು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ. ಓಟಿಪಿ ಇಲ್ಲದೇ ಪಡಿತರದಾರರ ಸಹಿ ಪಡೆದುಕೊಂಡು ಪಡಿತರ ವಿತರಿಸಲು ಸರ್ಕಾರ ಆದೇಶಿಸಿದ್ದರೂ ಸಹ ಆಹಾರ ಇಲಾಖೆಯ ಅಧಿಕಾರಿಗಳು ಪಾಲಿಸುತ್ತಿಲ್ಲವೆಂದು ದೂರು ಸಾಮಾನ್ಯವಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಿ ಎಂದರು.

ಸಭೆಯಲ್ಲಿ ತಹಶೀಲ್ದಾರ್ ಕೆ.ಅರುಂಧತಿ, ತಾಲೂಕು ಪಂಚಾಯಿತಿ ಇಓ ಶಿವಕುಮಾರ್, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಚಂದ್ರಪ್ಪ, ನಗರಸಭೆಯ ಪೌರಾಯುಕ್ತ ತ್ಯಾಗರಾಜ್, ಕುಡಿಯುವ ನೀರು ಮತ್ತು ಗ್ರಾಮ ನೈರ್ಮಲ್ಯ ಇಲಾಖೆಯ ಎಇಇ ಲೋಕೇಶ್, ಬಿಇಓ ಆರ್.ಶ್ರೀನಿವಾಸ್, ತಾಲ್ಲೂಕು ಕೃಷಿ ಅಧಿಕಾರಿ ಡಾ.ಮಂಜುನಾಥ್ ಹಾಗೂ ವಿವಿಧ ಗ್ರಾಮ ಪಂಚಾಯಿತಿಗಳ ಅಭಿವೃಧ್ಧಿ ಅಧಿಕಾರಿಗಳು ಹಾಜರಿದ್ದರು.

ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಪಂಚಾಯಿತಿ ಸಿಇಓ ಭೇಟಿ, ಪರಿಶೀಲನೆ

0

ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವ್ಯಾಪಕವಾಗಿ ಜನಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ. ನಾಗರಿಕರು ಮನೆಯಲ್ಲಿದ್ದು ಸಹಕರಿಸಬೇಕೆಂದು ಜಿಲ್ಲಾ ಪಂಚಾಯಿತಿ ಸಿಇಓ ಫೌಝೀಯಾ ತರುನ್ನುಮ್ ಮನವಿ ಮಾಡಿದರು.

          ನಗರದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿರುವ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮತ್ತು ಗ್ರಾಮಗಳಲ್ಲಿ ಕೊರೊನಾ ಕಾರ್ಯಪಡೆಯನ್ನು ರಚಿಸಿ ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಲಾಗುತ್ತದೆ. ನಾಗರಿಕರು ಸಹ ಆರೋಗ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಸಹಕರಿಸಿ ಕೊರೊನಾ ಸೋಂಕಿನ ವಿರುಧ್ಧ ಕೈಗೊಂಡಿರುವ ಹೋರಾಟದಲ್ಲಿ ಕೈಜೋಡಿಸಬೇಕೆಂದರು.

          ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಜ್ವರ-ನೆಗಡಿ ಅಥವಾ ಕೆಮ್ಮುವೆಂದು ಬರುವ ರೋಗಿಗಳಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಬೇಕು. ಆಸ್ಪತ್ರೆಯನ್ನು ಸ್ವಚ್ಛವಾಗಿಟ್ಟುಕೊಂಡು ರೋಗಿಗಳು ಹೊರತುಪಡಿಸಿ ಬೇರೆಯವರೆಗೆ ಆಸ್ಪತ್ರೆಯಲ್ಲಿ ಇರಲು ಅವಕಾಶ ಕಲ್ಪಿಸಬಾರದು. ಕೊರೊನಾ ಸೋಂಕು ಹೇಗೆ ಹರಡುತ್ತದೆ ಎಂಬುದರ ಕುರಿತು ಅರಿವು ಮೂಡಿಸುವ ಫಲಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

          ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು 13 ಮಂದಿಗೆ ಡಯಾಲಿಸಿಸ್ ಮಾಡಲಾಗುತ್ತದೆ. ಆಸ್ಪತ್ರೆಯಲ್ಲಿ ನೀರಿನ ಅಭಾವ ಹೆಚ್ಚಾಗಿದ್ದು ಟ್ಯಾಂಕರ್ ಮೂಲಕ ಸಮಸ್ಯೆ ನೀಗಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಾಣಿ ಮಾಹಿತಿ ನೀಡಿದರು. ಇತ್ತೀಚಿಗೆ ಕೊರೆಸಿದ್ದ ಕೊಳವೆಬಾವಿಯಲ್ಲಿ ನೀರು ಲಭಿಸಿತ್ತು, ಜೊತೆಗೆ ಆಸ್ಪತ್ರೆಗೆ ನೀರು ಸರಬರಾಜು ಮಾಡಲು ನೇರವಾಗಿ ಪೈಪ್‌ಲೈನ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈಗ ಕೊಳವೆಬಾವಿಯಲ್ಲಿ ನೀರು ಬತ್ತಿದೆ. ನಗರಸಭೆಯ ಮೂಲಕ ಸಮಪರ್ಕವಾಗಿ ನೀರು ಸರಬರಾಜು ಆಗುತ್ತಿಲ್ಲವೆಂದರು.

          ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ಆಸ್ಪತ್ರೆಯಲ್ಲಿ ಖಾಲಿಯಿರುವ ತಜ್ಞ ವೈದ್ಯರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುವುದು. ಬಡವರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕೆಂದರು.

          ಇದೇ ವೇಳೆಯಲ್ಲಿ ಆಸ್ಪತ್ರೆಯ ಎಲ್ಲಾ ವಾರ್ಡ್‌ಗಳು, ಟ್ರಾಮಾಕೇರ್ ಘಟಕವನ್ನು ಪರಿಶೀಲಿಸಿ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದು ತಾಕೀತು ಮಾಡಿ ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪ್ರಥಮ ಆದ್ಯತೆ ನೀಡಲಾಗುವುದೆಂದರು.

          ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ ಹಾಜರಿದ್ದರು.

ವಿದೇಶಕ್ಕೆ ರಫ್ತಾಗದೇ ಮನೆಯಲ್ಲಿಯೇ ಉಳಿದ ಗುಲಾಬಿ

0

ಕೊರೊನಾ ವೈರಸ್ ತಡೆಗಟ್ಟಲು ರಾಜ್ಯಗಳ ನಡುವೆ, ದೇಶಗಳ ನಡುವೆ ಸಾರಿಗೆ, ರೈಲು, ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿದ ಪರಿಣಾಮ ಹಂಡಿಗನಾಳ ಗ್ರಾಮದ ರೈತ ಮಹೇಂದ್ರ ತಾವು ಬೆಳೆದಿರುವ ಸುಂದರ ಗುಲಾಬಿ ಹೂಗಳನ್ನು ವಿದೇಶಕ್ಕೆ ಕಳುಹಿಸಲಾಗದೇ ಮನೆಯಲ್ಲಿಯೇ ಇರಿಸಿಕೊಂಡು ನಷ್ಟವನ್ನು ಹೊಂದಬೇಕಾಗಿದೆ.

 ರೈತ ಮಹೇಂದ್ರ ಒಂದು ಎಕರೆ ಪಾಲಿಹೌಸ್ ನಲ್ಲಿ ವಿದೇಶಕ್ಕೆ ರಫ್ತು ಮಾಡುವ ತಾಜ್ ಮಹಲ್ ಎಂಬ ಗುಲಾಬಿ ತಳಿಯನ್ನು ಬೆಳೆದಿದ್ದಾರೆ. ಪಾಲಿಹೌಸ್ ನಿರ್ಮಾಣಕ್ಕೆ, ಗಿಡ ನೆಟ್ಟು ಬೆಳೆಸಲು, ಔಷಧಿ, ಗೊಬ್ಬರಕ್ಕೆಂದು ಸುಮಾರು 40 ಲಕ್ಷ ರೂ ಖರ್ಚು ಮಾಡಿದ್ದಾರೆ. ನಳನಳಿಸುತ್ತಿರುವ ಗುಲಾಬಿ ಹೂಗಳನ್ನು ತಮ್ಮ ಮುಂದಿರಿಸಿಕೊಂಡು ಏನು ಮಾಡಲೂ ತೋಚದೆ ಕಂಗಾಲಾಗಿದ್ದಾರೆ. ಗಿಡವನ್ನೇ ಕತ್ತರಿಸಲು ಅವರು ತೀರ್ಮಾನಿಸಿದ್ದಾರೆ.

 “ದಿನಬಿಟ್ಟು ದಿನ ನಾಲ್ಕು ಸಾವಿರ ಹೂಗಳನ್ನು ಕಟಾವು ಮಾಡುತ್ತಿದ್ದೆವು. ಹೆಬ್ಬಾಳದ ಐಫ್ಯಾಬ್ ಎಂಬ ಕಂಪೆನಿಯೊಂದಕ್ಕೆ ಪ್ಯಾಕ್ ಮಾಡಿ ಕಳುಹಿಸುತ್ತಿದ್ದೆ. ಅವರು ವಿದೇಶಗಳಿಗೆ ರಫ್ತು ಮಾಡುತ್ತಿದ್ದರು. ಕೊರೊನಾ ಭೀತಿಯಿಂದಾಗಿ ವಿಮಾನಗಳ ಸಾಗಾಟ ನಿಂತಿದೆ. ಹಾಗಾಗಿ ಗುಲಾಬಿ ಹೂಗಳನ್ನು ಕಿತ್ತು ಹಾಗೇ ಇಡಬೇಕಾಗಿದೆ. ಇದರಿಂದ ಒಂದು ತಿಂಗಳಿಗೆ ಎಂಬತ್ತರಿಂದ ತೊಂಬತ್ತು ಸಾವಿರ ರೂಗಳ ನಷ್ಟ ಆಗುತ್ತಿದೆ.

 “ಒಂದು ಹೂ ಬೆಳೆಯಲು 45 ದಿನ ಬೇಕಾಗುತ್ತದೆ. ಮೊಗ್ಗಿರುವಾಗಲೇ ಅದು ನಿರ್ದಿಷ್ಟ ಆಕಾರವನ್ನು ಪಡೆಯಲು ಬಡ್ ಕ್ಯಾಪ್ ಹಾಕುತ್ತೇವೆ. ಅದಾದ ಆರು ದಿನಗಳಾದ ಮೇಲೆ ನಿರ್ದಿಷ್ಟ ಉದ್ದದ ಅಳತೆಗೆ ತಕ್ಕಂತೆ ಕತ್ತರಿಸಿ, ಜೋಡಿಸಿ ಪ್ಯಾಕ್ ಮಾಡೂತ್ತೇವೆ. ಲಾಕ್ ಡೌನ್ ನಿಂದಾಗಿ ವಿದೇಶಕ್ಕೆ ಈಗ ಹೂವನ್ನು ರಫ್ತು ಮಾಡುವಂತಿಲ್ಲ. ಒಂದು ಹೂವನ್ನು ಮೂರೂವರೆಯಿಂದ ನಾಲ್ಕು ರೂಗಳಿಗೆ ಮಾರುತ್ತಿದ್ದೆವು. ಈಗ ಇವನ್ನು ಕೇಳುವವರೇ ಇಲ್ಲ” ಎಂದು ರೈತ ಮಹೇಂದ್ರ ತಿಳಿಸಿದರು.

 “ರಸಗೊಬ್ಬರ, ಔಷಧಿ, ಕೂಲಿ ಮುಂತಾದವುಗಳು ಸೇರಿಸಿದರೆ ಒಂದು ತಿಂಗಳಿಗೆ ಗುಲಾಬಿ ಗಿಡಗಳ ನಿರ್ವಹಣೆ ಖರ್ಚೇ 50 ಸಾವಿರ ರೂಗಳಷ್ಟಿದೆ. ಈಗ ಆಗಿರುವ ನಷ್ಟದ ಜೊತೆಗೆ ಅದೂ ಸೇರುವುದನ್ನು ತಪ್ಪಿಸಲು ಗುಲಾಬಿ ಗಿಡಗಳನ್ನು ನೆಲದಿಂದ ಒಂದೂವರೆ ಅಡಿ ಬಿಟ್ಟು ಕತ್ತರಿಸುತ್ತಿದ್ದೇವೆ. ಅದು ಚಿಗುರಿ ಹೂ ಬಿಡಲು ಕನಿಷ್ಠ ಮೂರು ತಿಂಗಳು ಬೇಕಾಗುತ್ತದೆ” ಎಂದು ಅವರು ನೋವಿನಿಂದ ಹೇಳಿದರು.

ಕೊಳ್ಳುವವರಿಲ್ಲದೆ ಗಿಡದಲ್ಲೇ ಹಣ್ಣಾಗುತ್ತಿದೆ ಕ್ಯಾಪ್ಸಿಕಮ್

0

ಕೊರೊನಾ ತಡೆಗಟ್ಟಲೆಂದು ಎಲ್ಲೆಡೆ ಲಾಕ್ ಡೌನ್ ಮಾಡಿರುವ ಪರಿಣಾಮ ರೈತರನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಿದೆ. ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳದ ರೈತ ಜಯರಾಮ್ ಉತ್ತಮ ಗುಣಮಟ್ಟದ ಕ್ಯಾಪ್ಸಿಕಮ್ (ದೊಣ್ಣೆ ಮೆಣಸಿನಕಾಯಿ) ಬೆಳೆದಿದ್ದು, ಸಾಗಾಣಿಕೆಗೆ ವಾಹನಗಳಿಲ್ಲದೆ, ಮಾರುಕಟ್ಟೆ ವ್ಯವಸ್ಥೆಯಿಲ್ಲದೆ ಕಂಗಾಲಾಗಿದ್ದಾರೆ.

 ಹಂಡಿಗನಾಳದ ರೈತ ಜಯರಾಮ್ ಅವರು ಮೂರು ಎಕರೆಯಲ್ಲಿ ಕ್ಯಾಪ್ಸಿಕಮ್ (ದೊಣ್ಣೆ ಮೆಣಸಿನಕಾಯಿ) ಬೆಳೆದಿದ್ದಾರೆ. ಒಂದು ವಾರಕ್ಕೆ ಹತ್ತು ಟನ್ನಿನಷ್ಟು ಕ್ಯಾಪ್ಸಿಕಮ್ ಬೆಳೆ ಬರುತ್ತಿದೆ. ಎರಡು ಬಾರಿ ಕಿತ್ತು ಚೆನ್ನೈಗೆ ಕಳುಹಿಸಿದ್ದಾರೆ. ಈಗ ಮೂರನೇ ವಾರದ ಫಸಲು ಕಿತ್ತರೆ ಕೂಲಿ ಸಹ ಸಿಗದೆಂದು ಗಿಡದಲ್ಲಿಯೇ ಬಿಟ್ಟಿದ್ದು, ಹಣ್ಣಾಗಿ ಅವು ಉದುರುವ ಹಂತಕ್ಕೆ ಬಂದು ನಿಂತಿವೆ.

 “ಮೂವತ್ತು ಸಾವಿರ ನಾರನ್ನು ನೆಟ್ಟು ದೊಣ್ಣೆ ಮೆಣಸಿನಕಾಯಿ ಗಿಡಗಳನ್ನು ಬೆಳೆದಿರುವೆ. ಶೇಡ್ ನೆಟ್, ಹನಿ ನೀರಾವರಿ, ಕೂಲಿ, ರಸಗೊಬ್ಬರ, ಔಷಧಿ ಎಲ್ಲ ಸೇರಿ ಸುಮಾರು ಹದಿನೈದು ಲಕ್ಷ ರೂ ಖರ್ಚಾಗಿದೆ. ಮೊದಲ ಬಾರಿ ಫಸಲನ್ನು ಕಿತ್ತು ಚೆನ್ನೈಗೆ ಕಳುಹಿಸಿದಾಗ 15 ರಿಂದ 20 ರೂ ಬೆಲೆ ಇತ್ತು. ಈಗ ಕೇಳುವವರೇ ಇಲ್ಲವಾಗಿದೆ. ಕೊರೊನಾ ಲಾಕ್ ಡೌನ್ ನಿಂದಾಗಿ ತೋಟಕ್ಕೆ ಔಷಧಿ, ಗೊಬ್ಬರ ತರುವುದು ಕೂಡ ಈಗ ರೈತರಿಗೆ ಕಷ್ಟವಾಗುತ್ತಿದೆ.

 ಕೊರೊನಾ ಮಹಾಮಾರಿ ರೈತನನ್ನು ಬದುಕಿರುವಂತೆಯೇ ಕೊಂದುಹಾಕುತ್ತಿದೆ. ಅತ್ಯುತ್ತಮವಾಗಿ ಬೆಳೆ ಬೆಳೆದಿದ್ದರೂ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲಾಗದೇ, ಮಾರಲಾಗದೇ ಕಂಗಾಲಾಗಿದ್ದೇನೆ. ತನ್ನ ಶ್ರಮದ ಕೂಲಿ ಸಹ ರೈತನಿಗೆ ಈಗ ಸಿಗದಾಗಿದೆ. ನಮಗೆ ಪರಿಹಾರವಾಗಲೀ ಸಹಾಯಧನವಾಗಲೀ ಬೇಕಾಗಿಲ್ಲ. ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಟ್ಟರೆ ಸಾಕು. ನಾವು ಹಾಕಿರುವ ಬಂಡವಾಳದ ಸ್ವಲ್ಪ ಭಾಗವನ್ನಾದರೂ ಹಿಂದಕ್ಕೆ ಪಡೆಯಬಹುದು” ಎಂದು ರೈತ ಜಯರಾಮ್ ತಮ್ಮ ಕಷ್ಟವನ್ನು ವಿವರಿಸಿದರು.

 “ಕೊರೊನಾ ತಡೆಗಟ್ಟಲು ಸರ್ಕಾರ ಲಾಕ್ ಡೌನ್ ಮಾಡಿರುವುದರಿಂದ ತೊಂದರೆಗೊಳಗಾದ ಬಡ ಕೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ ಅನೇಕ ದಾನಿಗಳು ನೆರವಾಗುತ್ತಿದ್ದಾರೆ. ಆ ದಾನಿಗಳು ನಮ್ಮಂತಹ ರೈತರ ಬೆಳೆಗಳನ್ನು ಕನಿಷ್ಠ ಬೆಲೆಯಾದರೂ ಕೊಟ್ಟು ಖರೀದಿಸಿ, ದಾನ ಮಾಡಲಿ. ಇದರಿಂದ ಕಷ್ಟದಲ್ಲಿರುವ ರೈತರಿಗೂ ನುಕೂಲವಾಗುತ್ತದೆ” ಎಂದು ಅವ್ಬರು ಹೇಳಿದರು.

ಪತ್ರಕರ್ತನ ಮೇಲೆ ದೂರು ದಾಖಲು

0

ವೈದ್ಯಕೀಯ ಪರಿವೀಕ್ಷಣೆಯಲ್ಲಿದ್ದ ವ್ಯಕ್ತಿಯನ್ನು ವೈದ್ಯಾಧಿಕಾರಿಗಳ ಅನುಮತಿ ಪಡೆಯದೇ ನಿರ್ಬಂಧಿತ ಪ್ರದೇಶಕ್ಕೆ ತೆರಳಿ ಸಂದರ್ಶಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರಪಡಿಸಿ ಗೌಪ್ಯತೆಗೆ ಭಂಗ ತಂದಿದ್ದಾರೆ ಎಂದು ಪತ್ರಿಕಾ ವರದಿಗಾರ ಕೋಟಹಳ್ಳಿಯ ಕೆ.ಎ.ಅನಿಲ್ ಕುಮಾರ್ ಅವರ ವಿರುದ್ಧ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಪೊಲೀಸರಿಗೆ ದೂರು ನೀಡಿದ್ದಾರೆ.

 ನ್ಯಾಯಾಲಯ ಹಾಗೂ ಸರ್ಕಾರಿ ಆದೇಶದ ಉಲ್ಲಂಘನೆ ಮಾಡಿರುವುದಲ್ಲದೆ, ಕೆ.ಎ.ಅನಿಲ್ ಕುಮಾರ್ ಅವರ ನಿರ್ಲಕ್ಷ್ಯದ ಕಾರಣದಿಂದ ಸಮುದಾಯಕ್ಕೆ ಕೊರೊನಾ ಸೋಂಕು ಹರಡುವ ಸಂಭವವಿರುತ್ತದೆ. ನಿಯಮಾನುಸಾರ ಇವರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಕೋರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಿಜೆಪಿ ಯುವಮೋರ್ಚಾದಿಂದ ಉಚಿತ ಔಷಧಿ ವಿತರಣೆ

0

ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಅಭಿಮಾನಿಗಳು ಹಾಗೂ ತಾಲ್ಲೂಕು ಬಿಜೆಪಿ ಪದಾಧಿಕಾರಿಗಳು ಬುಧವಾರ ನಗರದ ವಿವಿದೆಡೆ ಬಡವರಿಗೆ ಅಗತ್ಯವಾದ ಔಷಧಿಗಳನ್ನು ಹಾಘೂ ಪೌರ ಕಾರ್ಮಿಕರು ಮತ್ತು ನೀರು ವಿತರಣಾ ವಿಭಾಗದ ಕಾರ್ಮಿಕರಿಗೆ ಸೋಪು ಮತ್ತು ಮಾಸ್ಕ್ ಗಳನ್ನು ಉಚಿತವಾಗಿ ವಿತರಣೆ ಮಾಡಿದರು.
 ಔಷಧಿ ವಿತರಣೆಯ ಉಸ್ತುವಾರಿ ಹಾಗು ಬಿಜೆಪಿ ಜಿಲ್ಲಾ ಮುಖಂಡ ಸಿ.ಪಿ.ಮಂಜುನಾಥಗೌಡ ಮಾತನಾಡಿ, ದೇಶಾಧ್ಯಂತ ಆವರಿಸಿರುವ ಕರೋನಾ ಮಹಾಮಾರಿಯನ್ನು ಹೊಡೆದೋಡಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಪಕ್ಷದ ವತಿಯಿಂದ ಕಡು ಬಡವರನ್ನು ಗುರುತಿಸಿ ಅವರಿಗೆ ಅಗತ್ಯವಿರುವ ಔಷಧಿಗಳನ್ನು ಜಿಲ್ಲಾಧ್ಯಂತ ಪೂರೈಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ನಗರಸಭೆಯ ಪೌರಕಾರ್ಮಿಕರಿಗೆ ಮಾಸ್ಕ್ ಹಾಗು ಸೋಪುಗಳನ್ನು ವಿತರಿಸಲಾಯಿತು.
ಬಿಜೆಪಿ ನಗರ ಮಂಡಲಾಧ್ಯಕ್ಷ ಎಸ್.ರಾಘವೇಂದ್ರಗ್ರಾಮಾಂತರ ಮಂಡಲಾಧ್ಯಕ್ಷ ಸುರೇಂದ್ರಗೌಡಮಾಜಿ ಅಧ್ಯಕ್ಷ ಬಿ.ಸಿ.ನಂದೀಶ್ನಗರಸಭೆ ಸದಸ್ಯ ನಾರಾಯಣಸ್ವಾಮಿಬಿಜೆಪಿ ಸದಸ್ಯರಾದ ನರೇಶ್, ರವಿಚಂದ್ರ, ರಜನೀಕಾಂತ್ಬಾಬುನಟರಾಜ್ಮಂಜುಳಮ್ಮಕೃಷ್ಣಾರೆಡ್ಡಿ ಹಾಜರಿದ್ದರು.

ಮನೆಯಲ್ಲಿ ಬೆಳೆದ ಬ್ರೆಜಿಲ್ ನ ಪ್ಯಾಶನ್ ಫ್ರೂಟ್

0

ಪ್ಯಾಶನ್ ಫ್ರೋಟ್ ಎಂದು ಕರೆಯಲ್ಪಡುವ ವಿಲಕ್ಷಣವಾದ ಹಣ್ಣನ್ನು ನಗರದ ಇದ್ಲೂಡು ರಸ್ತೆಯಲ್ಲಿರುವ ಶೆಟ್ಟಪ್ಪನವರ ಶಂಕರ್ ತಮ್ಮ ಮನೆಯ ಆವರಣದ ಹೂತೋಟದಲ್ಲಿ ಬೆಳೆದಿದ್ದಾರೆ. ಈ ಗಿಡದ ಬಳ್ಳಿಯು ಹತ್ತಾರು ಮೀಟರ್ ಉದ್ದಕ್ಕೂ ಹಬ್ಬಿ ಸುಮಾರು ಎಂಬತ್ತಕ್ಕೂ ಹೆಚ್ಚು ಹಣ್ಣುಗಳು ಬಿಟ್ಟಿವೆ. ಬೇಸಿಗೆಯ ಹಣ್ಣೆಂದೇ ಹೆಸರಾದ ರಸಭರಿತ ಹಣ್ಣುಗಳು ಆರೋಗ್ಯವರ್ಧಕ ಎಂದೇ ಪ್ರಸಿದ್ಧ.
ಈ ಹಣ್ಣನ್ನು ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಹವಾಯಿಯನ್ ದ್ವೀಪಗಳು, ಥೈಲ್ಯಾಂಡ್ ಮತ್ತು ದಕ್ಷಿಣ ಅಮೆರಿಕಾದಲ್ಲಿ ಕೈಗಾರಿಕಾ ಪ್ರಮಾಣದಲ್ಲಿ ಬೆಳೆಸಲಾಗುತ್ತದೆ. ಅದರ ತಾಯ್ನಾಡು ಬ್ರೆಜಿಲ್.
passion fruitಪ್ಯಾಶನ್ ಹಣ್ಣಿನ ಹೂವುಗಳು ತುಂಬಾ ದೊಡ್ಡದಲ್ಲ, ಆದರೆ ಸುಂದರವಾದುದು. ಪ್ಯಾಶನ್ ಹಣ್ಣು ಪ್ಯಾಸಿಫ್ಲೋರಾ – ಸಸ್ಯಗಳ ಕುಟುಂಬಕ್ಕೆ ಸೇರಿದೆ, ಇದು ಹಲವಾರು ಶತಮಾನಗಳ ಹಿಂದೆ “ಭಾವೋದ್ರೇಕ ಮತ್ತು ಸಂಕಟದ ಹೂವು” – ಪ್ಯಾಶನ್ ಹೂವು ಎಂಬ ದುಃಖದ ಹೆಸರನ್ನು ಪಡೆಯಿತು. 80 ದಿನಗಳವರೆಗೆ ಪರಾಗಸ್ಪರ್ಶದ ನಂತರ, ಹೂವಿನ ಸ್ಥಳದಲ್ಲಿ ಪರಿಮಳಯುಕ್ತ ಹಣ್ಣು ರೂಪುಗೊಳ್ಳುತ್ತದೆ. ಪ್ಯಾಶನ್ ಹಣ್ಣನ್ನು ಅದರ ಶ್ರೀಮಂತ ರುಚಿ, ರೋಮಾಂಚಕ ಸುವಾಸನೆ ಮತ್ತು ಅದ್ಭುತ ನೋಟಕ್ಕಾಗಿ “ಉತ್ಸಾಹದ ಹಣ್ಣು” ಎಂದು ಕರೆಯಲಾಯಿತು.
ಈ ಹಣ್ಣು ಪೋಷಕಾಂಶಗಳ ಉಗ್ರಾಣವಾಗಿದೆ. ಇದರಲ್ಲಿ ಬಿ, ಎ, ಇ ಮತ್ತು ಸಿ ಗುಂಪುಗಳ ಪ್ರಮುಖ ಜೀವಸತ್ವಗಳಿವೆ, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಇದರಲ್ಲಿರುವ ಇತರ ಅಂಶಗಳು.
ಮಾಗಿದ ಪ್ಯಾಶನ್ ಹಣ್ಣು ಶೇ 50 ರಷ್ಟು ರಸವನ್ನು ಹೊಂದಿರುತ್ತದೆ. ಇದು ಲಘು ಮೂತ್ರವರ್ಧಕ ಮತ್ತು ವಿರೇಚಕ ಪರಿಣಾಮವನ್ನು ನೀಡುತ್ತದೆ. ಹಣ್ಣಿನ ತಿರುಳು ಹಳದಿ-ಕಿತ್ತಳೆ ಬಣ್ಣವಿದ್ದು, ಒಳಗೆ ರಸಭರಿತ, ಸಿಹಿ ಮತ್ತು ಹುಳಿ, ಹೆಚ್ಚಿನ ಸಂಖ್ಯೆಯ ಬೀಜಗಳನ್ನು ಹೊಂದಿದೆ. ಪ್ಯಾಶನ್ ಹಣ್ಣು ಅದ್ಭುತ ಸುವಾಸನೆ, ಅಸಾಮಾನ್ಯ, ಸಿಹಿ ಮತ್ತು ಹುಳಿ ರುಚಿಯನ್ನು ಮಾತ್ರವಲ್ಲ, ಅಸಾಧಾರಣ ಪ್ರಯೋಜನಕಾರಿ ಗುಣಗಳನ್ನು ಸಹ ಹೊಂದಿದೆ.
‘ನಾನು ಅದಕ್ಕಾಗಿ ಒಂದಿಷ್ಟೂ ಶ್ರಮಪಡಲಿಲ್ಲ. ಮೊದಲು ಯಾವುದೋ ಬಳ್ಳಿ ಎಂದು ಉದಾಸೀನ ಮಾಡಿದೆ. ನಮ್ಮ ಸಂಬಂಧಿಕರೊಬ್ಬರು ಬಂದಾಗ ನೋಡಿ ಈ ಹಣ್ಣಿನ ಬಗ್ಗೆ ವಿವರಿಸಿದರು. ಆಗ ಸ್ವಲ್ಪ ಗೊಬ್ಬರ, ನೀರು ಹಾಕಿದೆ. ಬಳ್ಳಿ ಹಬ್ಬಿದಂತೆ ಅದಕ್ಕೆ ಸೂಕ್ತ ಆಶ್ರಯವನ್ನು ಒದಗಿಸಿದೆ. ಈಗ ಪ್ಯಾಶನ್ ಫ್ರೂಟ್ ಬಳ್ಳಿಯಲ್ಲಿ ಬೇಕಾದಷ್ಟು ಹಣ್ಣುಗಳು ಬಿಟ್ಟಿವೆ. ಈ ಹಣ್ಣಿನ ಶರಬತ್ತು ರುಚಿಕರ. ದರಿಂದ ಮಂದರಸ (ಸ್ಕ್ವಾಶ್) ಮಾಡಿಟ್ಟು ಬೇಕಾದಾಗ ಬಳಸಬಹುದು. ಜ್ಯಾಮ್ ಮಾಡಬಹುದು. ಒಳ್ಳೆಯ ಪರಿಮಳ, ಬಣ್ಣ. ಇದನ್ನು ನಮ್ಮ ಭಾಗದಲ್ಲಿ ಯಾರೂ ವಾಣಿಜ್ಯ ದೃಷ್ಟಿಯಿಂದ ಬೆಳೆಯುವುದಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ಡೆಂಗಿ ಜ್ವರ ವ್ಯಾಪಕವಾಗಿ ಬಂದಾಗ ಅದು ಹೇಗೋ ಈ ಜ್ವರ ಬಾಧಿತರಿಗೆ ಪ್ಯಾಶನ್ ಫ್ರೂಟ್ ಅತಿ ಒಳ್ಳೆ ಆಹಾರ, ಅದರಿಂದಾಗಿ ಇಳಿದುಹೋದ ಪ್ಲೇಟ್ಲೆಟ್ ಕೌಂಟ್ ಹೆಚ್ಚುತ್ತದೆ ಎಂಬ ಸುದ್ದಿ ಹರಡಿತು. ಜನ ಬಳಸಲೂ ತೊಡಗಿದರು” ಎಂದು ಶೆಟ್ಟಪ್ಪನವರ ಶಂಕರ್ ತಿಳಿಸಿದರು.

ವ್ಯಾಟ್ಸಪ್, ಫೇಸ್ ಬುಕ್ ಮುಖಾಂತರ ದ್ರಾಕ್ಷಿ ಮಾರಾಟಕ್ಕೆ ಮುಂದಾದ ರೈತ

0

ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ರೈತ ಶೇಖರ್, ಶರತ್ (ಕಪ್ಪು ಬಣ್ಣದ ಬೀಜರಹಿತ) ದ್ರಾಕ್ಷಿ ತಳಿಯ ಉತ್ತಮ ಫಸಲನ್ನು ಬೆಳೆದಿದ್ದು, ಕೊರೊನಾ ಪರಿಣಾಮದಿಂದ ವ್ಯಾಪಾರಿಗಳು ಬರದ ಕಾರಣ ಕಂಗಾಲಾಗಿದ್ದರು. ಆದರೂ ಎದೆಗುಂದದೆ ವ್ಯಾಟ್ಸಪ್ ಹಾಗೂ ಫೇಸ್ ಬುಕ್ ಮುಖಾಂತರ ದ್ರಾಕ್ಷಿ ಮಾರಾಟಕ್ಕೆ ಮುಂದಾಗಿದ್ದಾರೆ.
ತಾವು ಬೆಳೆದಿರುವ ದ್ರಾಕ್ಷಿ ಹಣ್ಣಿನ ಚಿತ್ರವನ್ನು ಫೇಸ್ ಬುಕ್ ಮತ್ತು ವ್ಯಾಟ್ಸಪ್ ಮೂಲಕ ಸ್ನೇಹಿತರಿಗೆ ನೆರವಾಗಲು, ಗ್ರಾಹಕರನ್ನು ಹುಡುಕಿಕೊಡುವಂತೆ ತಮ್ಮ ದೂರವಾಣಿ ಸಂಖ್ಯೆಯೊಂದಿಗೆ ಹಾಕಿದ್ದಾರೆ. ಬೆಂಗಳೂರಿನಲ್ಲಿ ಕೊಳ್ಳುವವರಿದ್ದರೆ ತಂದು ಕೊಡುವುದಾಗಿ ತಿಳಿಸಿದ್ದಾರೆ. ಅದನ್ನು ನೋಡಿ ಕೆಲವಾರು ಅಪಾರ್ಟ್ ಮೆಂಟುಗಳಿಂದ ಇವರಿಗೆ ಕರೆ ಬಂದಿದೆ. ಹಾಗಾಗಿ ಪ್ರತಿದಿನ ಎರಡು ಕೆ.ಜಿ. ದ್ರಾಕ್ಷಿಯ ಹಣ್ಣನ್ನು ಬಾಕ್ಸ್ ಮಾಡಿ ಪ್ಯಾಕ್ ಮಾಡಿ ಬೆಂಗಳೂರಿಗೆ ಹೋಗಿ ನೇರವಾಗಿ ಗ್ರಾಹಕರಿಗೆ ತಲುಪಿಸುತ್ತಿದ್ದಾರೆ.
“ಒಂದು ಎಕರೆಯಲ್ಲಿ ಶರತ್ ದ್ರಾಕ್ಷಿ ತಳಿಯನ್ನು ಬೆಳೆದಿರುವೆ. ಇದು ವಾರ್ಷಿಕ ಬೆಳೆ. ಸುಮಾರು 8 ರಿಂದ 10 ಲಕ್ಷ ರೂಗಳನ್ನು ಖರ್ಚು ಮಾಡಿರುವೆ. ಕೊರೊನಾ ಪರಿಣಾಮದಿಂದ ದ್ರಾಕ್ಷಿಯನ್ನು ಕೊಳ್ಳುವವರಿಲ್ಲ, ಕೊಯ್ಯುವವರೂ ಇಲ್ಲದಂತಾಯಿತು. ಆಗ ಫೇಸ್ ಬುಕ್ ಮತ್ತು ವ್ಯಾಟ್ಸಪ್ ಮೂಲಕ ಪ್ರಯತ್ನಿಸಿದೆ. ಬೆಂಗಳೂರಿನಲ್ಲಿ ಕೆಲವು ಅಪಾರ್ಟುಮೆಂಟುಗಳಲ್ಲಿ ಅಲ್ಲಿನ ಸಂಘದವರು ಫೋನ್ ಮಾಡಿ ದ್ರಾಕ್ಷಿ ಕೊಳ್ಳುವುದಾಗಿ ಹೇಳಿದರು. ಅದಕ್ಕಾಗಿ ಎರಡು ಕೇಜಿ ಪ್ಯಾಕ್ ಮಾಡಿ ಕಾರಿನಲ್ಲಿ ಕೊಂಡೊಯ್ದು ಮಾರುತ್ತಿದ್ದೇನೆ” ಎಂದು ರೈತ ಶೇಖರ್ ತಿಳಿಸಿದರು.
“ದ್ರಾಕ್ಷಿ ಹಾಳಾಗದಂತೆ ಪ್ಯಾಕ್ ಮಾಡಲು ಬಾಕ್ಸ್ ಸಿಗುವುದೇ ಕಷ್ಟಕರವಾಗಿದೆ. ಅದರ ಬೆಲೆ ಒಂದೊಂದಕ್ಕೂ 15 ರೂಗಳಾಗುತ್ತದೆ. ಒಂದು ಬಾರಿ 50 ರಿಂದ 80 ಬಾಕ್ಸ್ ದ್ರಾಕ್ಷಿಯನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಬರುತ್ತಿದ್ದೇನೆ. ಕೊಳವೆ ಬಾವಿಯಲ್ಲಿ ನೀರು ಇಲ್ಲದೆ, ಟ್ಯಾಂಕರ್ ಮೂಲಕ ನೀರು ಹರಿಸಿ ಬೆಳೆ ಬೆಳೆದಿದ್ದು, ಇದೀಗ ಕೇಳಿದಷ್ಟಕ್ಕೆ ದ್ರಾಕ್ಷಿ ಮಾರುವಂತಾಗಿದೆ. ನಾವು ಅನಾಥರು ಎಂಬ ಭಾವ ಮೂಡುತ್ತಿದೆ” ಎಂದು ನೋವಿನಿಂದ ಅವರು ಹೇಳಿದರು.

ರೈತರ ಬೆಳೆದ ತಾಜಾ ದ್ರಾಕ್ಷಿ ನೇರ ಮಾರಾಟಕ್ಕೆ ನೆರವು

0

ರೈತರು ಬೆಳೆದ ದ್ರಾಕ್ಷಿ ಬೆಳೆ ಕಟಾವಿಗೆ ಬಂದಿದೆ. ಆದರೆ ಕೊಳ್ಳುವವರಿಲ್ಲದ ಕಂಗಾಲಾದ ರೈತರ ನೆರವಿಗೆ ತಾಲ್ಲೂಕಿನ ಭಕ್ತರಹಳ್ಳಿ ಮೂಲದ ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು ಮುಂದಾಗಿದ್ದಾರೆ.
ಗ್ರಾಹಕರೊಡನೆ ರೈತರಿಗೆ ನೇರ ಸಂಪರ್ಕವಿಲ್ಲ. ಹೀಗಾಗಿ ದಲ್ಲಾಳಿಗಳ ಮೇಲೆ ಅವಲಂಬಿತರಾಗಿದ್ದ ರೈತರಿಗೆ ಇಂದು ದಿಕ್ಕು ತೋಚದಂತಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇವರು ಪ್ರಯತ್ನ ಪಟ್ಟಿದ್ದಾರೆ.
“ಪ್ರಾರಂಭಿಕವಾಗಿ ಬೆಂಗಳೂರಿನ ವಿವಿಧ ಬಡಾವಣೆ ನಿವಾಸಿಗಳ ಸಂಘಗಳೊಂದಿಗೆ ಮಾತುಕತೆ ನಡೆಸಿ ರೈತರಿಗೆ ನೆರವಾಗುವಂತೆ ಮನವಿ ಮಾಡಿದೆವು. ಅದೇ ರೀತಿ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರೊಡನೆ ಚರ್ಚಿಸಿ ಅವರಿಗೂ ನಷ್ಟವಾಗದಂತೆ ಗ್ರಾಹಕರಿಗೂ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗುವಂತೆ ಪ್ರತಿ ಕೆ.ಜಿ. ಶರದ್ ತಳಿಯ ದ್ರಾಕ್ಷಿಗೆ 55 ರೂಪಾಯಿಯಂತೆ ಮಾರಾಟ ಮಾಡಲು ವ್ಯವಸ್ಥೆಗೊಳಿಸಿದೆವು” ಎಂದು ಭಕ್ತರಹಳ್ಳಿ ಅಂಬರೀಷ್ ತಿಳಿಸಿದರು.
“ಮೊದಲ ಪ್ರಯತ್ನವಾಗಿ ಮಂಗಳವಾರ ಬೆಂಗಳೂರಿನ ಸಹಕಾರ ನಗರ ನಿವಾಸಿಗಳ ಸಂಘದ ಸಹಯೋಗದಲ್ಲಿ ಗ್ರಾಹಕರಿಗೆ ನೇರವಾಗಿ ಕಡಿಮೆ ಬೆಲೆಯಲ್ಲಿ ದ್ರಾಕ್ಷಿ ಹಣ್ಣು ಮಾರಾಟ ಮಾಡಲು ಚಾಲನೆ ನೀಡಲಾಯಿತು. ಇದೇ ಹಣ್ಣಿಗೆ ಹೊರಗಿನ ವಿವಿಧ ಮಾರಾಟ ಕೇಂದ್ರಗಳಲ್ಲಿ 100 ರಿಂದ 120 ರೂಪಾಯಿ ಬೆಲೆ ಇದೆ. ರೈತರು ಮೊದಲೇ ತೂಕ ಮಾಡಿ ತಂದ ದ್ರಾಕ್ಷಿಯನ್ನು ಬೆಳಗ್ಗೆ 7 ರಿಂದ 9 ರವರೆಗೆ ಮಾತ್ರ ಮಾರಾಟಕ್ಕೆ ಇಟ್ಟಿದ್ದರು.
ಕರೋನಾ ಸೋಂಕು ತಡೆಗಟ್ಟಲು ಗ್ರಾಹಕರು ಸಾಮಾಜಿಕ ಅಂತರವನ್ನೂ ಸಹ ಕಾಪಾಡುವಲ್ಲಿ ಜಾಗ್ರತೆ ವಹಿಸಲಾಗಿದೆ. ಈ ವ್ಯವಸ್ಥೆಯು ಕರೋನಾ ಲಾಕ್ ಡೌನ್ ಮುಗಿಯುವ ವರೆಗೂ ಮುಂದುವರೆಯಲಿದೆ. ಈ ಮೊದಲು ಹೆಚ್ಚಿನ ಲಾಭ ಮಧ್ಯವರ್ತಿಗಳ ಪಾಲಾಗುತ್ತಿತ್ತು. ನೇರ ಮಾರಾಟದಿಂದ ಕಡಿಮೆ ಬೆಲೆಯಲ್ಲಿ ತಾಜಾ ಹಣ್ಣುಗಳು ಸಿಗುತ್ತಿರುವುದರಿಂದ ಅನೇಕ ಗ್ರಾಹಕರು ಸಂತಸ ವ್ಯಕ್ತಪಡಿಸಿದರು” ಎಂದು ಅವರು ಹೇಳಿದರು.
ಇದೇ ರೀತಿ ಹೆಬ್ಬಾಳ ಕೆಂಪಾಪುರ ಬಡಾವಣೆ ನಿವಾಸಿಗಳೊಂದಿಗೂ ಮಾತುಕತೆಯಾಗಿದ್ದು ಬುಧವಾರದಿಂದ ಅಲ್ಲಿಯೂ ಮಾರಾಟಕ್ಕೆ ವ್ಯವಸ್ಥೆಗೊಳಿಸಲಾಗಿದೆ. ವಿವಿಧ ಬಡಾವಣೆ ನಿವಾಸಿಗಳು ಈ ವ್ಯವಸ್ಥೆಗೆ ಕೈ ಜೋಡಿಸುವುದಾಗಿ ಇವರಿಗೆ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಡಾ. ಕೆ. ನಾರಾಯಣ ಗೌಡ, ಸದಸ್ಯರಾದ ಡಾ. ಬಿ.ಕೆ. ಕೃಷ್ಣಮೂರ್ತಿ, ಡಾ.ಗೋಪಾಲ್, ಡಾ. ಕುಮಾರ್ , ಭಕ್ತರಹಳ್ಳಿ ಅಂಬರೀಷ್ ಹಾಗೂ ನಿವಾಸಿಗಳ ಸಂಘದ ಸಂತೋಷ್, ಸಂತೆ ನಾರಾಯಣಸ್ವಾಮಿ ಹಾಜರಿದ್ದರು.

ಕೃಷಿ ಉತ್ಪನ್ನ ಮಾರುಕಟ್ಟೆಗೆ ಹಲವು ದಾರಿಗಳು – ಭಕ್ತರಹಳ್ಳಿ ಅಂಬರೀಷ್

0

ಕರೋನಾ ವೈರಸ್ ಯಾವ ಯಾವ ಜಿಲ್ಲೆಯಲ್ಲಿ ಎಷ್ಟು ಎಷ್ಟು ಇದೆ ಎಂಬುದನ್ನ ನಿಖರವಾಗಿ ತೋರಿಸುವ ಭೂಪಟವನ್ನು ತೋರಿಸುವ ತಂತ್ರಜ್ಞಾನವನ್ನು ಹೇಗೆ ತ್ವರಿತವಾಗಿ ಅಭಿವೃದ್ಧಿ ಪಡಿಸಿದ್ದರೋ ಅದೇ ರೀತಿಯಾಗಿ ಕೃಷಿ ಪೂರಕವಾಗಿಯೂ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದಾಗಿದೆ ಎನ್ನುತ್ತಾರೆ ಭಕ್ತರಹಳ್ಳಿ ಅಂಬರೀಷ್.
ಯಾವ ಯಾವ ಜಿಲ್ಲೆ ಮತ್ತು ತಾಲ್ಲೂಕಿನಲ್ಲಿ ಯಾವ ಯಾವ ಬೆಳೆ ಕಟಾವಿಗೆ ಸಿದ್ದವಿದೆ. ಆ ಜಾಗದ ರೈತನ ದೂರವಾಣಿ ಸಂಖ್ಯೆ ಸಮೇತ ಮ್ಯಾಪ್ ನಲ್ಲಿ ತೋರುವಂತಾದರೆ ಸುತ್ತಮುತ್ತಲ ನಗರ ಪ್ರದೇಶದ ಗ್ರಾಹಕರು ನೇರವಾಗಿ ರೈತರನ್ನು ಸಂಪರ್ಕಿಸಿ ತಮಗೆ ಅಗತ್ಯವಾದಷ್ಟು ಹಣ್ಣು ತರಕಾರಿಗಳನ್ನ ಪಡೆಯಲು ಅನುಕೂಲವಾಗುತ್ತದೆ.
ಇನ್ನು ಸಾಗಣೆ ವಿಚಾರಕ್ಕೆ ಬಂದರೆ,ಹೇಗೂ ಓಲಾ ಅಥವಾ ಉಬರ್ ಸಂಸ್ಥೆಗಳು ಸಾಗಾಣಿಕಾ ವಾಹನಗಳ ಆಪ್ ಅಭಿವೃದ್ಧಿ ಪಡಿಸಿವೆ. ಅಥವಾ ಸ್ವಿಗ್ಗಿ ಸಂಸ್ಥೆ ಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಡೆಲಿವರಿ ಮಾಡುವವರನ್ನ ನೇಮಿಸಿಕೊಂಡರೆ ಅನುಕೂಲ. ರೈತರ ಉತ್ಪನ್ನಕ್ಕೆ ಸಾಗಣೆ ಸುಲಭ.
ಇದರಿಂದ ಗ್ರಾಮೀಣ ಪ್ರದೇಶದ ಅನೇಕ ಯುವಕರಿಗೆ ಉದ್ಯೋಗ ಸಿಗುತ್ತದೆ. ಟ್ರಕ್ ವಾಹನ ಹೊಂದಿದವರಿಗೆ ಸ್ವಾವಲಂಬಿ ಹಣ ಸಂಪಾದನೆಗೆ ದಾರಿ ಸಿಕ್ಕಂತಾಗುತ್ತದೆ.
ಇಲ್ಲಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಣ್ಣು ತರಕಾರಿಯನ್ನು ಮಾತ್ರ ತಲುಪಿಸಲು ರೈತರು ಗ್ರೇಡಿಂಗ್ ಮಾಡುವುದು ಕಡ್ಡಾಯ. ಒಂದು ಬಾರಿ ಗ್ರಾಹಕರಿಗೆ ಗುಣಮಟ್ಟದ ಬಗ್ಗೆ ನಂಬಿಕೆ ಬಂದರೆ ಮುಂದೆಯೂ ಹೀಗೆ ಬೇಡಿಕೆ ಹೆಚ್ಚುತ್ತೆ. ರೈತರು ಕೇವಲ ಒಂದೆ ಬೆಳೆ ಬೆಳೆಸುವ ಬದಲಿಗೆ ವರ್ಷ ಪೂರ್ತಿ ನಿರಂತರ ಸರಬರಾಜು ಮಾಡಲು ಆಯಾ ಕಾಲಕ್ಕೆ ಸೂಕ್ತ ವಿವಿಧ ತರಕಾರಿಗಳನ್ನ ಬೆಳೆಯುವಂತೆ ಯೋಜನೆ ರೂಪಿಸಿಕೊಳ್ಳಲು ಇಲಾಖೆಗಳ ಅಧಿಕಾರಿಗಳು ಸಲಹೆ ಸೂಚನೆ ನೀಡಬೇಕು.
ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಗೊಬ್ಬ ಅಥವಾ ಇಬ್ಬರನ್ನು ಮಾಹಿತಿ ಪೂರೈಕೆದಾರರಾಗಿ ನೇಮಿಸಿ. ಅವರಲ್ಲಿರುವ ಮೊಬೈಲ್ ನೆಟ್ ವರ್ಕ್ ಬಳಸಿ ದಿನಕ್ಕೊಮ್ಮೆ ಮಾಹಿತಿ ಸಂಗ್ರಹಿಸಿ ತಂತ್ರಾಂಶಕ್ಕೆ ಸೇರಿಸುವುದು. ಹಳ್ಳಿಗಳಲ್ಲಿ ಕೈಗೊಳ್ಳುವ ಕೃಷಿ ಚಟುವಟಿಕೆಗಳು ಅಂದರೆ ಆ ದಿನ ಕೈಗೊಂಡ ಬಿತ್ತನೆ, ಬೆಳೆಯ ಹಂತ ಅಥವಾ ಆ ದಿನ ಕಟಾವಾಗಬಹುದಾದ ಅಂದಾಜು ಉತ್ಪನ್ನದ ಬಗ್ಗೆ ಮಾಹಿತಿ ಸಂಗ್ರಹಿಸುವುದು. ಇದರಿಂದ ಹಳ್ಳಿಗಳಲ್ಲಿ ಅರೆಕಾಲಿಕ ಅಥವಾ ಪೂರ್ಣಾವಧಿ ಉದ್ಯೋಗ ಲಭಿಸುತ್ತೆ.
ಮಾರುಕಟ್ಟೆ ತಜ್ಞರು ಬೇಡಿಕೆ ಮತ್ತು ಪೂರೈಕೆಯನ್ನು ಆಧರಿಸಿ ಬೆಲೆ ನಿಗಧಿ ಮಾಡಲು ನೆರವಾಗಬೇಕು. ಒಮ್ಮೆ ಈ ವ್ಯವಸ್ಥೆ ಚಾಲ್ತಿಯಾದರೆ ಬಹುಶಃ ರೈತರಿಗೆ ಮಾರುಕಟ್ಟೆ ಸಮಸ್ಯೆ ನೀಗಿಸುವಲ್ಲಿ ನೆರವಾಗಲಿದೆ. ದಲ್ಲಾಳಿ ವ್ಯವಸ್ಥೆಯನ್ನು ಅಲ್ಪ ಮಟ್ಟಿಗೆ ಕಡಿಮೆಗೊಳಸಬಹುದು.
ಒಟ್ಟಾರೆ ರೈತರಿಗೆ ಹೆಚ್ಚಿನ ಬೆಲೆ ಸಿಗುತ್ತದೆ. ಗ್ರಾಹಕರಿಗೆ ಸೂಕ್ತ ಬೆಲೆಯಲ್ಲಿ ಉತ್ಪನ್ನ ಲಭ್ಯವಾಗುತ್ತದೆ. ಇದು ಕಷ್ಟದಾಯಕವಾದ ಕೆಲಸವಲ್ಲ. ಪ್ರಯತ್ನ ಪಟ್ಟರೆ ಎಲ್ಲವೂ ಸಾಧ್ಯ ಎಂದು ಅವರು ತಿಳಿಸಿದರು.

ನೋವೆಲ್ ಕೊರೊನಾ ವೈರಸ್ ಜಾಗೃತಿ ಅಭಿಯಾನ – ಕೊರೊನಾ ಜಾಗೃತಿ ವಾಹನಕ್ಕೆ ಚಾಲನೆ

0

ನಗರದ ಮುತ್ತೂರು ಭೀದಿಯ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನದ ಬಳಿ ಸೋಮವಾರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ , ಕಾರ್ಮಿಕ ಇಲಾಖೆ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದೊಂದಿಗೆ ಜನಜಾಗೃತಿಗಾಗಿ ಹೊರಟ ಕೊರೊನಾ ಜಾಗೃತಿ ವಾಹನಕ್ಕೆ ಚಾಲನೆ ನೀಡಿ ನಗರಸಭೆ ಪೌರಾಯುಕ್ತ ತ್ಯಾಗರಾಜ್ ಮಾತನಾಡಿದರು.
ಕೊರೊನಾ ವೈರಸ್ ಕುರಿತಾಗಿ ನಗರ ಹಾಗೂ ಹಳ್ಳಿಹಳ್ಳಿಗಳಲ್ಲೂ ಜಾಗೃತಿ ಮೂಡಿಸಬೇಕಿದೆ. ಅರಿವು ಮೂಡಿಸುತ್ತಿರುವ ತಾಲ್ಲೂಕು ಕೊರೊನಾ ಸೈನಿಕರ ತಂಡಕ್ಕೆ ಎಲ್ಲರೂ ಸಹಕರಿಸಿ ಎಂದು ಅವರು ತಿಳಿಸಿದರು.
ತಾಲ್ಲೂಕಿನಾದ್ಯಂತ ನೋವೆಲ್ ಕೊರೊನಾ ವೈರಸ್ ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ನಾಗರಿಕರಿಗೆ ಜಾಗೃತಿ ಮೂಡಿಸಿ ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಗುರುರಾಜ ರಾವ್ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕೊರೊನಾ ವೈರಸ್ ಜಾಗೃತಿ ಅಭಿಯಾನವನ್ನು ಮಾಡುತ್ತಿದ್ದು, ಈ ದಿನ ಶಿಡ್ಲಘಟ್ಟ ತಾಲ್ಲೂಕಿಗೆ ಜಾಗೃತಿ ಮೂಡಿಸಲು ವಾಹನವು ಬಂದಿದೆ. ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ಮಾಹಿತಿ ಸಿಗುತ್ತದೆ ಎಂದರು.
ತಾಲ್ಲೂಕು ರೆಡ್ ಕ್ರಾಸ್ ಸಂಸ್ಥೆಯ ಸಂಯೋಜಕ ಬಿ.ಆರ್.ಅನಂತಕೃಷ್ಣ ಮಾತನಾಡಿ, ಕೊರೊನಾ ವೈರಸ್ ಬಗ್ಗೆ ಜಾಗೃತಿ ಉಂಟು ಮಾಡಲು ಕರಪತ್ರ ಮತ್ತು ಧ್ವನಿವರ್ದಕದ ಮೂಲಕ ಶಿಡ್ಲಘಟ್ಟ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಈ ಜಾಗೃತಿ ವಾಹನ ಸಂಚರಿಸಿ ತಾಲ್ಲೂಕಿನ ಕೊರೊನಾ ಸೈನಿಕರ ಮುಖಾಂತರ ಮಾಹಿತಿಯನ್ನು ನೀಡಿ ಅರಿವನ್ನು ಮೂಡಿಸಲಿದೆ ಎಂದರು.
ನಗರಸಭೆ ಸದಸ್ಯರಾದ ಅನಿಲ್ ಕುಮಾರ್, ಮಂಜುನಾಥ, ಮಾಜಿ ಪುರಸಭಾ ಸದಸ್ಯ ಎನ್ ಲಕ್ಷ್ಮೀ ನಾರಾಯಣ(ಲಚ್ಚಿ), ಕರೋನ ಸೈನಿಕರಾದ ಮಂಜುನಾಥ್, ಅಶೋಕ್, ಸುರೇಶ, ವಿಶ್ವನಾಥ್ ಹಾಜರಿದ್ದರು.

ಅಲೆಮಾರಿಗಳು ಹಾಗೂ ಹೊರಾಜ್ಯದಿಂದ ಬಂದವರ ಸ್ಥಿತಿಗತಿ ಅವಲೋಕನ

0

ತಾಲ್ಲೂಕಿನ ವಿವಿದೆಡೆ ಅಲೆಮಾರಿಗಳು ಹಾಗೂ ಹೊರರಾಜ್ಯದಿಂದ ಬಂದ ಕೂಲಿಕಾರ್ಮಿಕರು ಲಾಕ್ ಡೌನ್ ಕಾರಣದಿಂದ ಟೆಂಟ್ ಹಾಕಿಕೊಂಡು ವಾಸಿಸುತ್ತಿದ್ದು, ಅವರ ಸ್ಥಿತಿಗತಿ ಹಾಗೂ ಊಟದ ಕುರಿತಾಗಿ ತಹಶೀಲ್ದಾರ್ ಕೆ.ಅರುಂಧತಿ ಹಾಗೂ ತಾಲ್ಲೂಕು ನೋಡಲ್ ಅಧಿಕಾರಿ ಶಿವಕುಮಾರ್ ಪರಿಶೀಲಿಸಿದರು.
“ತಾಲ್ಲೂಕಿನ ಎಚ್.ಕ್ರಾಸ್ ನಲ್ಲಿ ಗಿಡಮೂಲಿಕೆಗಳನ್ನು ಮಾರುವ ವೃತ್ತಿಯ ಉತ್ತರಭಾರತದ ಮೂಲದ 79 ಜನ ಅಲೆಮಾರಿ ಕುಟುಂಬದ ಸದಸ್ಯರಿದ್ದಾರೆ. ಅವರದೇ ಟೆಂಟ್ ಗಳಲ್ಲಿ ಅವರು ವಾಸಿಸುತ್ತಿದ್ದಾರೆ. ಅವರಿಗೆ ಬೆಳಗಿನ ಹೊತ್ತು ಹಾಲು ಪೂರೈಕೆಯಾಗುತ್ತಿದೆ. ಎನ್.ಜಿ.ಒ ಮುಖಾಂತರ ಪ್ಯಾಕ್ ಮಾಡಿರುವ ಊಟವನ್ನು ಮಧ್ಯಾಹ್ನ ನೀಡುತ್ತಿದೆ. ಉಳಿದಂತೆ ಗ್ರಾಮ ಪಂಚಾಯಿತಿಯಿಂದ ಅವರಿಗೆ ಅಕ್ಕಿ, ಬೇಳೆ ಹಾಗೂ ನೀರನ್ನು ಒದಗಿಸಲಾಗುತ್ತಿದೆ” ಎಂದು ತಾಲ್ಲೂಕು ನೋಡಲ್ ಅಧಿಕಾರಿ ಶಿವಕುಮಾರ್ ಮಾಹಿತಿ ನೀಡಿದರು.
“ತಾಲ್ಲೂಕಿನ ದಿಬ್ಬೂರಹಳ್ಳಿಯಲ್ಲಿ ಎರಡು ಮೂರು ಕಡೆ ಒಟ್ಟು 32 ಮಂದಿ ನಮ್ಮ ರಾಜ್ಯದವರೇ ಅಲೆಮಾರಿ ಜನರಿದ್ದಾರೆ. ಬೀದಿಬೀದಿ ತಿರುಗಿ ಮಕ್ಕಳ ಆಟಿಕೆಗಳು, ದಿನೋಪಯೋಗಿ ಸಾಮಾನುಗಳನ್ನು ಮಾರುವ ವೃತ್ತಿಯವರು ವರು. ಅವರಿಗೂ ಬೆಳಗಿನ ಹಾಲು, ಪ್ಯಾಕ್ ಮಾಡಿರುವ ಊಟ ಮತ್ತು ಅಕ್ಕಿ ನೀರನ್ನು ಗ್ರಾಮ ಪಂಚಾಯಿತಿಯವರು ನೀಡುತ್ತಿದ್ದಾರೆ.
ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿಯ ಅಪ್ಪೇಗೌಡನಹಳ್ಳಿಯಲ್ಲಿ ಇಂದಿರಾ ವಸತಿ ಶಾಲೆ ಕಟ್ಟಡ ಕಾಮಗಾರಿಯ 70 ಜನ ಕೂಲಿ ಕಾರ್ಮಿಕರಿದ್ದಾರೆ. ಈ ಕೂಲಿ ಕಾರ್ಮಿಕರು ಆಂಧ್ರಪ್ರದೇಶ, ಉತ್ತರಪ್ರದೇಶ, ಒರಿಸ್ಸಾ, ಜಾರ್ಖಂಡ್, ಬಿಹಾರ ರಾಜ್ಯಗಳಿಂದ ಬಂದಿದ್ದಾರೆ, ಅವರು ಉಳಿಯಲೆಂದು ಗುತ್ತಿಗೆದಾರರು ಶೆಡ್ ಮಾಡಿಕೊಟ್ಟಿದ್ದಾರೆ. ಗ್ರಾಮ ಪಂಚಾಯಿತಿಯವರು ಅವರಿಗೆ ಅಕ್ಕಿ ನೀಡಿದ್ದಾರೆ. ಅಲ್ಲದೆ ವಸತಿ ಶಾಲೆಯ ಗುತ್ತಿಗೆದಾರರು ಒಂದು ವಾರಕ್ಕೆ ಒಬ್ಬರಿಗೆ ಒಂದು ಸಾವಿರ ರೂಗಳನ್ನು ಕೊಡುತ್ತಿದ್ದಾರೆ. ಹಾಗಾಗಿ ಅವರಿಗೆ ಏನೂ ಸಮಸ್ಯೆಯಿಲ್ಲ.
ಶಿಡ್ಲಘಟ್ಟದ ಸಮಾಜ ಕಲ್ಯಾಣ ಇಲಾಖೆಯ ಬಿ.ಸಿ.ಎಂ ಹಾಸ್ಟೆಲಿನಲ್ಲಿ ಎಂಟು ಮಂದಿ ಹಕ್ಕಿಪಿಕ್ಕಿಯವರು, ನಿರ್ಗತಿಕರು, ಭಿಕ್ಷುಕರು ಇದ್ದಾರೆ. ಅವರಿಗೆ ಮೂರು ಹೊತ್ತು ಊಟ, ತಿಂಡಿ ಕೊಡಲಾಗುತ್ತಿದೆ.
ಶಿಡ್ಲಘಟ್ಟದ ಮಸೀದಿಯಲ್ಲಿ ಗುಜರಾತ್ ನಿಂದ ಬಂದ 12 ಮಂದಿ ಉಳಿದಿದ್ದಾರೆ. ನಮ್ಮಲ್ಲಿ ಗಂಡಸರು ವ್ರತ ಇದ್ದು ಮಾಲೆ ಹಾಕಿ ದೇವಸ್ಥಾನಕ್ಕೆ ಹೋಗುವಂತೆ ಮುಸ್ಲೀಮರಲ್ಲಿಯೂ ಇದೆಯಂತೆ. ಆ ಪದ್ಧತಿಯಂತೆ ಎರಡು ತಿಂಗಳ ಮಟ್ಟಿಗೆ ಅವರು ಬಂದಿದ್ದು, ಅವರೇ ಅಡುಗೆ ಮಾಡಿಕೊಂಡು ತಿನ್ನುತ್ತಿದ್ದಾರೆ. ದಿನಸಿ ವಸ್ತುಗಳಿಗೆ ಕೊರತೆಯಿಲ್ಲ, ಏನೂ ಬೇಡ ಎಂದು ಅವರು ಹೇಳಿದರು. ತಾಲ್ಲೂಕು ಆರೋಗ್ಯಾಧಿಕಾರಿಗಳು ಸ್ವಾಬ್ ಪರೀಕ್ಷೆಗೆ ಅವರ ಗಂಟಲು ದ್ರವವನ್ನು ತೆಗೆದುಕೊಂಡು ಲ್ಯಾಬ್ ಗೆ ಕಳುಹಿಸಿದ್ದಾರೆ” ಎಂದು ಮಾಹಿತಿ ನೀಡಿದರು.
“ಯಾರೂ ಸ್ಥಳಬಿಟ್ಟು ಬೇರೆಡೆಗೆ ಹೋಗಬಾರದು. ಹೊರಗೆ ತಿರುಗಾಡದೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಅವರಿಗೆ ಸೂಚಿಸಿದ್ದೇವೆ” ಎಂದು ತಹಶೀಲ್ದಾರ್ ಕೆ.ಅರುಂಧತಿ ತಿಳಿಸಿದರು.

ಇಂದಿರಾ ವಸತಿ ಶಾಲೆ ಕಟ್ಟಡ ಕಾಮಗಾರಿಯ 75 ಜನ ಕೂಲಿ ಕಾರ್ಮಿಕರಿಗೆ ಅಕ್ಕಿ ವಿತರಣೆ

0

ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿಯ ಕೋವಿಡ್ 19 ಕಾರ್ಯಪಡೆಯ ಸದಸ್ಯರು ಶನಿವಾರ ಅಪ್ಪೇಗೌಡನಹಳ್ಳಿಯಲ್ಲಿ ಇಂದಿರಾ ವಸತಿ ಶಾಲೆ ಕಟ್ಟಡ ಕಾಮಗಾರಿಯ 75 ಜನ ಕೂಲಿ ಕಾರ್ಮಿಕರಿಗೆ ಅಕ್ಕಿಯನ್ನು ವಿತರಿಸಿದರು.
ಈ ಕೂಲಿ ಕಾರ್ಮಿಕರು ಆಂಧ್ರಪ್ರದೇಶ, ಉತ್ತರಪ್ರದೇಶ, ಒರಿಸ್ಸಾ, ಜಾರ್ಖಂಡ್, ಬಿಹಾರ ರಾಜ್ಯಗಳಿಂದ ಬಂದಿದ್ದು, ಲಾಕ್ ಡೌನ್ ಆದ ಕಾರಣ ಅಪ್ಪೇಗೌಡನಹಳ್ಳಿಯಲ್ಲಿಯೇ ಬೀಡು ಬಿಟ್ಟಿದ್ದಾರೆ. ತಾಲ್ಲೂಕು ಆಡಳಿತದ ವತಿಯಿಂದ ಕೂಲಿ ಕಾರ್ಮಿಕರಿಗೆಂದು ಅಕ್ಕಿಯನ್ನು ನೀಡಿದ್ದು, ಪ್ರತಿ ಕೂಲಿ ಕಾರ್ಮಿಕರಿಗೂ ತಲಾ ಮೂರು ಕೇಜಿ ಅಕ್ಕಿಯನ್ನು ಹಂಡಿಗನಾಳ ಗ್ರಾಮ ಪಂಚಾಯಿತಿಯ ಕೋವಿಡ್ 19 ಕಾರ್ಯಪಡೆಯವರು ನೀಡಿದರು.
ಅಕ್ಕಿಯನ್ನು ವಿತರಿಸುವಾಗ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿದ್ದು, ಗುರುತುಗಳನ್ನು ಹಾಕಿ ಕಾರ್ಮಿಕರನ್ನು ಸಾಲಾಗಿ ನಿಲ್ಲಿಸಿ ಅಕ್ಕಿ ನೀಡಲಾಯಿತು.
ಗ್ರಾಮ ಪಂಚಾಯಿತಿ ಪಿಡಿಒ ಅಂಜನ್ ಕುಮಾರ್, ಕಾರ್ಯದರ್ಶಿ ಎಚ್.ಎನ್. ಶ್ರೀನಿವಾಸ್, ಕರವಸೂಲಿಗಾರ ಎಂ.ಶ್ರೀನಿವಾಸ್, ನರೇಗಾ ತಾಂತ್ರಿಕ ಎಂಜಿನಿಯರ್ ಗೌತಮ್ ಕುಮಾರ್, ಮೋಹನ್, ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್, ಆಶಾ ಕಾರ್ಯಕರ್ತೆ ಟಿ.ಪ್ರೇಮಾ, ಅಂಬರೀಶ್, ಜಲಗಾರ ಮುನಿರಾಜು, ವೆಂಕಟೇಶ್, ತಿರುಮಲರೆಡ್ಡಿ ಹಾಜರಿದ್ದರು.

ರೇಷ್ಮೆ ಗೂಡಿನ ಮಾರುಕಟ್ಟೆಗೆ ಜಿಲ್ಲಾಧಿಕಾರಿ ಆರ್.ಲತಾ ಭೇಟಿ

0

ನಗರದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿದರು.
ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಇವತ್ತಿನ ಪರಿಸ್ಥಿತಿಯನ್ನು ಪರಿಶೀಲಿಸಿದಾಗ ಯಾವುದೇ ಸಮಸ್ಯೆ ಕಂಡುಬರಲಿಲ್ಲ. ಸಾಮಾಜಿಕ ಅಂತರವಾನ್ನು ಕಾಯ್ದುಕೊಂಡಿದ್ದಾರೆ. ನಿರಂತರವಾಗಿ ಗಮನಿಸುತ್ತಿರುತ್ತೇವೆ. ಮುಂದೆ ಏನಾದರೂ ಜನರು ಹೆಚ್ಚಾಗಿ ಬಂದಲ್ಲಿ ಆಗ ಪರೀಶಿಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಪೊಲೀಸ್ ಎಸ್.ಪಿ ಅವರೊಂದಿಗೆ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಪರೀಶೀಲನೆ ನಡೆಸಿದೆವು. ಒಂದು ಟ್ರೇ ಬಿಟ್ಟು ಮತ್ತೊಂದು ಟ್ರೇಗೆ ಗೂಡು ಹಾಕಿಸುತ್ತಿದ್ದು, ಮೇಲ್ನೋಟಕ್ಕೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿರುವುದು ಕಂಡುಬಂದಿದೆ. ಸಧ್ಯಕ್ಕೆ ಏನೂ ಸಮಸ್ಯೆಯಿಲ್ಲ. ರೇಷ್ಮೆ ಗೂಡಿನ ಮಾರುಕಟ್ಟೆ ಪ್ರವೇಶಿಸುವಾಗಲೇ ಮಾಸ್ಕ್ ಧರಿಸಬೇಕೆನ್ನುವುದು, ಸ್ಯಾನಿಟೈಸರ್ ನೀಡುವುದು, ಗುರುತಿನ ಚೀಟಿ ಇದ್ದವರು ಮಾತ್ರ ಪ್ರವೇಶ, ಆರೋಗ್ಯ ಸಿಬ್ಬಂದಿಯಿಂದ ಪರೀಕ್ಷೆ, ಸಾಮಾಜಿಕ ಅಂತರ ಮುಂತಾದವುಗಳನ್ನು ಖಡ್ಡಾಯವಾಗಿ ನಡೆಸಲಾಗುತ್ತಿದೆ. ಯಾರೂ ಆತಂಕ ಪಡುವ ಅವಶ್ಯಕತೆಯಿಲ್ಲ. ಹಾಗೆಯೇ ಎಲ್ಲರೂ ಖಡ್ಡಾಯವಾಗಿ ನಿಯಮಗಳನ್ನು ಪಾಲಿಸಲೇ ಬೇಕು ಎಂದರು.
ಗೌರಿಬಿದನೂರಿನಲ್ಲಿ ಹತ್ತು ಮಂದಿ ಕೊರೊನಾ ಪೀಡಿತರಲ್ಲಿ ಒಬ್ಬರು ಮೃತಪಟ್ಟಿದ್ದರು. ಅವರ ಸಂಪರ್ಕ ಹೊಂದಿದ್ದ ಅಷ್ಟೂ ಜನರ ಪರೀಕ್ಷೆಯನ್ನು ನಡೆಸಿದ್ದೆವು. ಅವರುಗಳಿಗೆ ಸೋಂಕು ಹರಡಿಲ್ಲ ಎಂಬುದು ತಿಳಿದುಬಂದಿದೆ. ಹಾಗೆಂದು ನಾವುಗಳು ಉದಾಸೀನ ಮಾಡುವಂತಿಲ್ಲ. ಏಪ್ರಿಲ್ 14 ರವರೆಗೂ ಲಾಕ್ ಡೌನ್ ನಿಯಮಗಳನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದರು.
ನಮ್ಮಲ್ಲಿನ ದ್ರಾಕ್ಷಿ ಬೆಳೆಗಾರರು ಬೆಂಗಳೂರಿಗಿಂತ ಹೆಚ್ಚಾಗಿ ಪಶ್ಚಿಮ ಬಂಗಾಳ, ಜಮ್ಮು ಕಾಶ್ಮೀರ ಮುಂತಾದ ರಾಜ್ಯಗಳಿಗೆ ಕಳುಹಿಸುತ್ತಿದ್ದರು. ಈಗ ಕೊರೊನಾ ಭೀತಿಯಿಂದ ಬೇರೆ ರಾಜ್ಯಗಳಲ್ಲಿ ಗ್ರಾಹಕರು ಸಿಗುತ್ತಿಲ್ಲ. ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತೋಟಗಾರಿಕಾ ಸಚಿವರು ಬೆಂಗಳೂರಿನಲ್ಲಿ ಮಾರುಕಟ್ಟೆಯನ್ನು ರೂಪಿಸಿದ್ದು, ಇನ್ನೆರಡು ದಿನಗಳಲ್ಲಿ ದ್ರಾಕ್ಷಿಯನ್ನು ಎಲ್ಲಿಗೆ ಕಳುಹಿಸಬೇಕೆಂದು ತಿಳಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ತಂಡವೊಂದನ್ನು ರಚಿಸಿದ್ದು, ಆ ತಂಡ ಮಾರುಕಟ್ಟೆ ಸಿಗದ ರೈತರಿಗೆ ಮತ್ತು ಅಗತ್ಯವಿರುವವರಿಗೆ ಕೊಂಡಿಯಂತೆ ಕಾರ್ಯನಿರ್ವಹಿಸುತ್ತದೆ. ರೈತರು ಬೆಳೆದ ಯಾವುದೇ ಬೆಳೆ ನಷ್ಟವಾಗದಂತೆ ನೋಡಿಕೊಳ್ಳುತ್ತೇವೆ ಎಂದರು.
ಜಿಲ್ಲೆಯಲ್ಲಿ ಮೂರು ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಇನ್ನುಳಿದ ಮೂರು ತಾಲ್ಲೂಕುಗಳನ್ನೂ ಸಹ ಬರ ಪೀಡಿತವೆಂದು ಘೋಷಿಸುವಂತೆ ಸರ್ಕಾರಕ್ಕೆ ವರದಿ ಕಳುಹಿಸಿದ್ದೇನೆ. ಎಲ್ಲೆಲ್ಲಿ ನೀರಿನ ಕೊರತೆಯಿದೆಯೋ ಅಲ್ಲಿ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡುವಂತೆ ಆಯಾ ತಾಲ್ಲೂಕಿನ ತಹಶೀಲ್ದಾರ್ ಹಾಗೂ ಇಒ ಅವರಿಗೆ ಸೂಚಿಸಿದ್ದೇನೆ ಎಂದು ನುಡಿದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ, ನಮ್ಮೆಲ್ಲಾ ಅಧಿಕಾರಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರುವುದರಿಂದ ಕೊರೊನಾ ಮಾರಿ ಶಿಡ್ಲಘಟ್ಟ ತಾಲ್ಲೂಕನ್ನು ಪ್ರವೇಶಿಸಿಲ್ಲ. ಬರುವುದೂ ಬೇಡ. ಸರ್ಕಾರ ಹಾಗೂ ಆರೋಗ್ಯ ಇಲಾಖೆ ನೀಡಿರುವ ಸೂಚನೆಗಳನ್ನು ಜನರೆಲ್ಲರೂ ತಪ್ಪದೇ ಪಾಲಿಸಬೇಕು ಎಂದರು.
ಪೊಲೀಸ್ ಎಸ್.ಪಿ. ಜಿ.ಕೆ.ಮಿಥುನ್ ಕುಮಾರ್, ತಹಶೀಲ್ದಾರ್ ಕೆ.ಅರುಂಧತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಪೌರಾಯುಕ್ತ ತ್ಯಾಗರಾಜ್, ಆರ್.ಐ.ವಿಶ್ವನಾಥ್, ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್, ಸಬ್ ಇನ್ಸ್ ಪೆಕ್ಟರ್ ಲಿಯಾಖತ್ತುಲ್ಲ, ರೇಷ್ಮೆ ಗೂಡಿನ ಮಾರುಕಟ್ಟೆ ಉಪನಿರ್ದೇಶಕ ಸುಭಾಷ್ ಸಾತೇನಹಳ್ಳಿ ಹಾಜರಿದ್ದರು.

ಕಾನೂನು ಸೇವಾ ಸಮಿತಿಯಿಂದ ಕೊರೊನಾ ಬಗ್ಗೆ ಜನ ಜಾಗೃತಿ

0

ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲ್ಲೂಕು ವಕೀಲರ ಸಂಘದಿಂದ ಶನಿವಾರ ಕೊರೊನಾ ವೈರಸ್‌ ಸೋಂಕು ತಡೆಗಟ್ಟುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ವಿಶೇಷ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಜೆ.ಎಂ.ಎಫ್.ಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್ ಮಾತನಾಡಿದರು.
ವಿಶ್ವವ್ಯಾಪಿ ಹಬ್ಬುತ್ತಿರುವ ಕರೋನ ವೈರಸ್ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ರೋಗ ತಡೆಗಟ್ಟಲು ಏನೆಲ್ಲ ಮುಂಜಾಗೃತೆಯನ್ನು ವಹಿಸಬೇಕೆಂದು ತಿಳಿಸಲು ನಗರ ಹಾಗೂ ತಾಲ್ಲೂಕಿನಾದ್ಯಂತ ವ್ಯಾಪಕ ಪ್ರಚಾರ ಕಾರ್ಯವನ್ನು ಹಮ್ಮಿಕೊಂಡಿರುವುದಾಗಿ ಅವರು ತಿಳಿಸಿದರು.
ಜನರಲ್ಲಿ ವೈರಸ್ ಬಗ್ಗೆ ಹೆಚ್ಚು ಹೆಚ್ಚು ಅರಿವು ಮೂಡಿಸುವುದೊಂದೇ ಸದ್ಯಕ್ಕೆ ಇರುವ ಪರಿಣಾಮಕಾರಿ ಮಾರ್ಗ. ಹಳ್ಳಿಗಳಲ್ಲಿ ತಮಟೆ ಹೊಡೆಸುತ್ತಾ ಸಾಮಾಂಜಿಕ ಅಂತರವನ್ನು ಕಾಪಾಡಿಕೊಳ್ಳುವುದು, ಸ್ವಚ್ಛತೆಯ ಬಗ್ಗೆ ಗಮನ ಕೊಡುವುದು, ಅನಗತ್ಯವಾಗಿ ಹೊರಗೆ ಹೋಗದೆ ಇರುವುದರ ಬಗ್ಗೆ ತಿಳಿಹೇಳಲಾಗುತ್ತಿದೆ. ನಗರದಲ್ಲಿ ಆಟೋ ಮೂಲಕ ಧ್ವನಿವರ್ಧಕದಲ್ಲಿ ಪ್ರಚಾರ ನಡೆಸುತ್ತಿದ್ದೇವೆ. ಕರಪತ್ರಗಳನ್ನು ಹಂಚಲಾಗುತ್ತದೆ ಎಂದರು.
ತಾಲ್ಲುಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಯಾವುದೇ ಶಂಕಿತ ಪ್ರಕರಣಗಳು ಇಲ್ಲ. ಆದರೂ ಲಾಕ್ ಡೌನ್ ಗೆ ಸಾರ್ವಜನಿಕರು ಸಹಕರಿಸಬೇಕು. ಕೊರೊನಾ ವೈರಸ್‌ ಲಕ್ಷಣಗಳಾದ ತೀವ್ರ ಜ್ವರ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ ಹಾಗೂ ಭೇದಿಯ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಆಸ್ಪತ್ರೆಯ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮುಂಜಾಗ್ರತಾ ದೃಷ್ಟಿಯಿಂದ ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ್ರವನ್ನು ಅಡ್ಡ ಹಿಡಿಯಬೇಕು. ಸಾರ್ವಜನಿಕ ಸ್ಥಳದಲ್ಲಿ ಉಗಳಬಾರದು. ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳಬೇಕು. ಸ್ವಚ್ಛತೆ ಕಾಪಾಡಬೇಕು. ರೋಗದ ಲಕ್ಷಣ ಹೊಂದಿರುವವರು ಜನರೊಂದಿಗೆ ನಿಕಟ ಸಂಪರ್ಕ ಹೊಂದಬಾರದು ಎಂದು ಹೇಳಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಸಂಜುಕುಮಾರ್ ಎ.ಪಚ್ಚಾಪುರೆ, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ ಗೌಡ, ಕಾರ್ಯದರ್ಶಿ ಲೋಕೇಶ್, ವಕೀಲರಾದ ಸುಬ್ರಮಣಿ, ಭಾಸ್ಕರ್, ವೀಣಾ, ಮಂಜುನಾಥ್, ರಾಮಕೃಷ್ಣ, ಜಿಲ್ಲಾ ಮಕ್ಕಳ ತಜ್ಞ ಡಾ.ಚನ್ನಕೇಶವರೆಡ್ಡಿ, ಆರೋಗ್ಯ ಇಲಾಖೆಯ ಲೋಕೇಶ್, ವಿಜಯ, ಮುನಿರತ್ನಮ್ಮ, ಗೀತಾ, ನರಸಿಂಹಮೂರ್ತಿ, ಜೀವಿಕಾ, ಕವಿತಾ ಹಾಜರಿದ್ದರು.

ರೇಷ್ಮೆಗೂಡಿನ ಮಾರುಕಟ್ಟೆಯು ಅಪಾಯಕಾರಿ ಸ್ಥಳದಂತಿದೆ : ಸಂಸದ ಎಸ್.ಮುನಿಸ್ವಾಮಿ

0

ನಗರದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಶುಕ್ರವಾರ ಭೇಟಿ ನೀಡಿ ರೈತರು, ರೀಲರುಗಳು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದು ಸಂಸದ ಎಸ್.ಮುನಿಸ್ವಾಮಿ ಮಾತನಾಡಿದರು.
“ಒಂದು ಸಾವಿರ ಜನ ನಿಲ್ಲಲು ಎಲ್ರೀ ಜಾಗವಿದೆ, ಜನರು ಗುಂಪುಗೂಡಬಾರದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಎಲ್ಲೆಡೆ ಹೇಳುತ್ತಿದ್ದೇವೆ. ಆದರೆ ಅದನ್ನು ಆಚರಣೆಗೆ ತರದ ರೇಷ್ಮೆ ಗೂಡಿನ ಮಾರುಕಟ್ಟೆ ಅಪಾಯಕಾರಿ ಎಂದು ಕಂಡುಬರುತ್ತಿದೆ” ಎಂದು ಅವರು ತಿಳಿಸಿದರು.
ಈ ಬಗ್ಗೆ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸುತ್ತೇನೆ. ಒಂದು ಸಾವಿರಕ್ಕೂ ಹೆಚ್ಚು ಜನ ಸೇರುವುದರಿಂದ ಹೇಗೆ ತಾನೆ ಜನರನ್ನು ನಿಯಂತ್ರಿಸಲು ಸಾಧ್ಯವಿದೆ. ತಹಶೀಲ್ದಾರರು ಇಡಿ ತಾಲ್ಲೂಕನ್ನು ನಿಭಾಯಿಸಬೇಕು. ಆದರೆ ಇಲ್ಲಿನ ಸ್ಥಿತಿ ನೋಡಿದರೆ ರೇಷ್ಮೆ ಗೂಡಿನ ಮಾರುಕಟ್ಟೆಗೇ ಅವರನ್ನು ಸೀಮಿತಗೊಳಿಸುವಂತಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ರಾಜ್ಯ ಸಂಚಾಲಕರ ಮಳ್ಳೂರು ಶಿವಣ್ಣ ಮಾತನಾಡಿ, “ಪ್ರತಿ ದಿನ ಎರಡರಿಂದ ಮೂರು ಸಾವಿರ ಜನ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸೇರುತ್ತಾರೆ. ಸಮಸ್ಯೆಗಳು ಇವೆ, ರೇಷ್ಮೆ ಬೆಳೆಗಾರರಿಗೆ ನಷ್ಟ ಆಗುತ್ತಿದೆ. ಆದರೆ ಎಲ್ಲರಿಗೂ ಅಧಿಕಾರಿಗಳು ರೀಲರುಗಳ ಸಂಪರ್ಕ ಮಾಡಿಸಿ ರೇಷ್ಮೆ ಗೂಡನ್ನು ಅವರ ಮನೆಗಳಿಗೇ ಹೋಗಿ ಮಾರಿ ಬರುವ ವ್ಯವಸ್ಥೆ ಒಂದು ವಾರ ಕಾಲ ನಡೆಯಿತು. ಆದರೆ ಮಾರುಕಟ್ಟೆ ತೆರೆದ ಕಾರಣ ಈಗ ಮತ್ತೆ ಸಾವಿರಾರು ಜನರು ಒಂದೆಡೆ ಸೇರುವ ಪ್ರಸಂಗ ಉಂಟಾಗಿದೆ. ಕೊರೊನಾ ವೈರಸ್ ಆಸ್ಫೋಟಗೊಂಡಲ್ಲಿ ಅದನ್ನು ಯಾರೂ ತಡೆಯಲಾಗದು ಮತ್ತು ಸಾಂಕ್ರಾಮಿಕವಾಗಿ ಹಬ್ಬಲು ರೇಷ್ಮೆ ಗೂಡಿನ ಮಾರುಕಟ್ಟೆ ರಹದಾರಿಯಾಗಲಿದೆ. ಶಿಡ್ಲಘಟ್ಟ ತಾಲ್ಲೂಕು ನಾಮಾವಶೇಷ ಆಗುತ್ತದೆ. ದಯಮಾಡಿ ಮಾರುಕಟ್ಟೆಯನ್ನು ಮುಚ್ಚಿಸಿ” ಎಂದು ವಿನಂತಿಸಿದರು.
ತಾಲ್ಲೂಕು ಸಿಲ್ಕ್ ರೀಲರ್ಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಅನ್ಸರ್ ಖಾನ್ ಹಾಗೂ ಕೆಲವು ರೀಲರುಗಳು ಹಾಗೂ ರೇಷ್ಮೆ ಬೆಳೆಗಾರರು ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಮುಚ್ಚಿಸಿ, ಅಧಿಕಾರಿಗಳ ಮುಖಾಂತರ ರೇಷ್ಮೆ ಗೂಡನ್ನು ರೀಲರುಗಳಿಗೆ ಮಾರುವ ವ್ಯವಸ್ಥೆಯನ್ನು ಕೊರೊನಾ ಭೀತಿ ಕಡಿಮೆಯಾಗುವವರೆಗೂ ಮುಂದುವರೆಸುವಂತೆ ಕೋರಿದರು. ಸರ್ಕಾರದ ಕೆ.ಎಸ್.ಎಂ.ಬಿ ಮುಖಾಂತರ ಕಚ್ಚಾ ರೇಷ್ಮೆ ಖರೀದಿಸುವ ಮೂಲಕ ರೀಲರುಗಳಿಗೆ ನೆರವಾಗಬೇಕೆಂದು ಮನವಿ ಮಾಡಿದರು.
ಜಮಾತ್‌ ಸಮಾವೇಶ : ದಿಲ್ಲಿಯಲ್ಲಿ ನಡೆದ ತಬ್ಲಿಘಿ ಜಮಾತ್‌ ಸಮಾವೇಶದಲ್ಲಿ ಪಾಲ್ಗೊಂಡವರ ಬಗ್ಗೆ ಮಾಹಿತಿ ನೀಡುವಂತೆ ಸಂಸದ ಎಸ್.ಮುನಿಸ್ವಾಮಿ ಅವರು ಕೇಳಿದಾಗ, ತಹಶೀಲ್ದಾರ್ ಕೆ.ಅರುಂಧತಿಯವರು ಶಿಡ್ಲಘಟ್ಟ ತಾಲ್ಲೂಕಿನ ಇಬ್ಬರು ಹೋಗಿಬಂದಿದ್ದಾರೆ. ಆದರೆ ಅವರು ಸಮಾವೇಶದಲ್ಲಿ ಭಾಗಿಯಾಗಿಲ್ಲ, ವಿಮಾನದಲ್ಲಿ ವಾಪಸಾಗಿದ್ದಾರೆ ಎಂದರು. “ರೈಲಿನಲ್ಲಿ, ಲಾರಿಗಳಲ್ಲಿ ಬಂದವರ ಬಗ್ಗೆ ನಿಮ್ಮ ಬಳಿ ಮಾಹಿತಿ ಇದೆಯಾ. ಆಟೋದಲ್ಲಿ ಹಾಗೂ ಮುಸ್ಲೀಂ ಧಾರ್ಮಿಕ ಮುಖಂಡರಿಗೆ ತಿಳಿಸಿ. ಸಮಾವೇಶಕ್ಕೆ ಹೋಗಿ ಬಂದವರಿಂದ ಅವರ ಕುಟುಂಬ ನೆರೆಹೊರೆಯವರು, ಸಮಾಜವೇ ಸೋಂಕು ಪೀಡಿತರಾಗುತ್ತಾರೆ. ಮೊದಲೇ ತಿಳಿಸಿ ಸೂಕ್ತ ಚಿಕಿತ್ಸೆ ಪಡೆಯುವಂತೆ ಮನವರಿಕೆ ಮಾಡಿಕೊಡಿ ಎಂದರು.
ಗುಟ್ಕಾ ಪ್ಯಾಕೆಟ್ ಸುಡಿ : ತೋಟಕ್ಕೆ ಪೌಷಧಿ ಸಿಂಪಡಿಸುವ ಟ್ರಾಕ್ಟರ್, ಅಗ್ನಿಶಾಮಕದಳದ ವಾಹನ, ಎಲ್ಲವನ್ನೂ ಬಳಸಿಕೊಂಡು ಸೋಂಕು ನಿವಾರಕಗಳನ್ನು ನಗರದೆಲ್ಲೆಡೆ ಸಿಂಪಡಿಸುತ್ತಿರಿ. ಗುಟ್ಕಾ ಮಾರಾಟ ಹೆಚ್ಚಿರುವ ದೂರು ಬಂದಿದೆ. ಧಾಳಿ ಮಾಡಿ ವಶಪಡಿಸಿಕೊಂಡಿದ್ದನ್ನು ಸುಟ್ಟುಹಾಕಿ ಎಂದು ಸಂಸದ ಎಸ್.ಮುನಿಸ್ವಾಮಿ ನಗರಸಭೆ ಪೌರಾಯುಕ್ತ ತ್ಯಾಗರಾಜ್ ಅವರಿಗೆ ತಿಳಿಸಿದರು.
ರೇಷ್ಮೆ ಗೂಡಿನ ಮಾರುಕಟ್ಟೆ ಉಪನಿರ್ದೇಶಕ ಸುಭಾಷ್ ಸಾತೇನಹಳ್ಳಿ, ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್ ಹಾಜರಿದ್ದರು.