Home Blog Page 333

ಎಸ್.ಬಿ.ಐ ಬ್ಯಾಂಕಿನ ಎಟಿಎಂ ಕಳ್ಳತನಕ್ಕೆ ಯತ್ನ

0

ನಗರದ ಅಶೋಕ ರಸ್ತೆಯಲ್ಲಿರುವ ಎಸ್.ಬಿ.ಐ ಬ್ಯಾಂಕಿನ ಎ.ಟಿ.ಎಂ. ಅನ್ನು ಶುಕ್ರವಾರ ರಾತ್ರಿ ಕಳ್ಳತನ ಮಾಡಲು ಪ್ರಯತ್ನಿಸಲಾಗಿದೆ. ಒಂದು ಬೀಗವನ್ನು ಮುರಿದುಹಾಕಿದ್ದು, ರಕ್ತದ ಕಲೆಯು ಅಲ್ಲಿ ಕಂಡುಬಂದಿದೆ.

 ಸ್ಥಳಕ್ಕೆ ಬ್ಯಾಂಕಿನ ವ್ಯವಸ್ಥಾಪಕ ಶಶಿಕುಮಾರ್ ಹಾಗೂ ಪೊಲೀಸರು ಭೇಟಿ ನೀಡಿದರು. “ಕಳವು ಮಾಡಲು ಪ್ರಯತ್ನ ನಡೆದಿದೆ. ಆದರೆ ಸಂಪೂರ್ಣವಾಗಿ ಎರಡೂ ಕಡೆ ಬೀಗಗಳನ್ನು ಮುರಿದಿಲ್ಲ. ಈ ಬಗ್ಗೆ ದೂರು ನೀಡಿದ್ದೇವೆ” ಎಂದು ಬ್ಯಾಂಕಿನ ವ್ಯವಸ್ಥಾಪಕ ಶಶಿಕುಮಾರ್ ತಿಳಿಸಿದರು.

 ರಕ್ತದ ಕಲೆಯನ್ನು ಕಂಡವರು ಬಹುಶಃ ಬೀಗ ಮುರಿಯುವಾಗ ಕಳ್ಳರಿಗೆ ಏಟಾಗಿರಬಹುದು. ಅದಕ್ಕೇ ಕಳ್ಳತನದ ಪ್ರಯತ್ನದಲ್ಲಿ ಸಫಲರಾಗಿಲ್ಲ. ಮುಖ್ಯ ರಸ್ತೆಯಲ್ಲಿರುವ ಎಟಿಎಂ ಕಳ್ಳತನಕ್ಕೆ ಯತ್ನಿಸಿರುವುದನ್ನು ಕಂಡಾಗ ಆತಂಕವಾಗುತ್ತದೆ. ಪೊಲೀಸರು ತಮ್ಮ ಗಸ್ತನ್ನು ಹೆಚ್ಚಿಸಬೇಕು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಆರೋಗ್ಯ ಸಿಬ್ಬಂದಿಗೆ ಸಮಾಜ ಋಣಿಯಾಗಿರಬೇಕು – ಬಂಕ್ ಮುನಿಯಪ್ಪ

0

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಸಮಾಜಸೇವಕ ಪೂಲಕುಂಟಹಳ್ಳಿ ರಘುನಾಥ ರೆಡ್ಡಿ ಅವರಿಂದ ನೀಡಲಾದ ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು ವಿತರಿಸಿ ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿದರು.

ಕೋವಿಡ್ 19(ಕೊರೊನಾ ವೈರಸ್) ತಡೆಗಟ್ಟುವ ನಿಟ್ಟಿನಲ್ಲಿ ತಮ್ಮ ಕುಟುಂಬದಿಂದ ದೂರವುಳಿದು ತಮ್ಮ ಜೀವವನ್ನು ಪಣಕ್ಕಿಟ್ಟು, ಹಗಲೂ ರಾತ್ರಿ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಸಮಾಜ ಋಣಿಯಾಗಿರಬೇಕು ಎಂದು ಅವರು ತಿಳಿಸಿದರು.

 ಇಡೀ ವಿಶ್ವ ಕಷ್ಟಕರ ಸನ್ನಿವೇಶವನ್ನು ಎದುರಿಸುತ್ತಿದೆ. ಆರೋಗ್ಯವೇ ಮಹಾಭಾಗ್ಯ ಎಂಬುದನ್ನು ನಾವೀಗ ಮನಗಾಣಬೇಕಿದೆ. ರೋಗವು ಬರದಿರುವಂತೆ ಎಚ್ಚರಿಕೆ ವಹಿಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.

 ಜೆಡಿಎಸ್ ಮುಖಂಡ ಪೂಲಕುಂಟ್ಲಹಳ್ಳಿ ರಘುನಾಥರೆಡ್ಡಿ ಮಾತನಾಡಿ, ಜೆಡಿಎಸ್ ಮುಖಂಡ ಬಿ.ಎನ್. ರವಿಕುಮಾರ್ ಅವರ ಮಾರ್ಗದರ್ಶನದಲ್ಲಿ ಗಂಜಿಗುಂಟೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 5 ಗ್ರಾಮ ಪಂಚಾಯಿತಿಗಳ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಲು ಯೋಜನೆ ರೂಪಿಸಲಾಗಿದೆ. ನಾವೆಲ್ಲರೂ ಸೌಖ್ಯವಾಗಿರಬೇಕೆಂದು ಆರೋಗ್ಯ ಸಿಬ್ಬಂದಿ ಯೋಧರಂತೆ ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಸುರಕ್ಷತೆಗಾಗಿ ಶ್ರಮಿಸುತ್ತಿರುವ ಆರೋಗ್ಯ ಸಿಬ್ಬಂದಿ, ಪೊಲೀಸ್ ಇಲಾಖೆ, ಪೌರಕಾರ್ಮಿಕರು ಮುಂತಾದವರಿಗೆ ಕಿಂಚಿತ್ ನೆರವಾಗುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.

 ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರು ಗ್ಲೌಸ್, ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು ಎಲ್ಲಾ ಆರೋಗ್ಯ ಸಿಬ್ಬಂದಿಗೆ ನೀಡುವಂತೆ ಕೋರಿ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು.

 ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾ ರಘು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶೋಭಾ ಶಶಿಕುಮಾರ್, ಸದಸ್ಯ ರಾಜಶೇಖರ್, ಗಂಜಿಗುಂಟೆ ನರಸಿಂಹಮೂರ್ತಿ, ರಾಂಬಾಬು, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಗಂಜಿಗುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಅವಿನಾಶ್, ಆರೋಗ್ಯ ಇಲಾಖೆಯ ಅಕ್ಕಲರೆಡ್ಡಿ, ಮುನಿರತ್ನಮ್ಮ, ನಂದಿನಿ, ಗೀತಾ, ಲೋಕೇಶ್, ಕೀರ್ತಿ, ಜನಾರ್ಧನ ಹಾಜರಿದ್ದರು.

ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ

0

ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸುವ ಕೆಲಸಕ್ಕೆ ಇಂದು ಚಾಲನೆ ನೀಡಲಾಗಿದೆ ಎಂದು ನಗರಸಭೆ ಸದಸ್ಯೆ ಸಿ.ಎಂ.ಸುಮಿತ್ರ ರಮೇಶ್ ಹೇಳಿದರು.
ಶ್ರೀ ಎಚ್.ಡಿ.ದೇವೇಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಸೇವಾಭಿವೃದ್ಧಿ ಚಾರಿಟೆಬಲ್ ಟ್ರಸ್ಟ್ ಹಾಗೂ ಎಸ್.ಎಂ.ಆರ್.ಬಾಯ್ಸ್ ವತಿಯಿಂದ ಸಿದ್ದಾರ್ಥನಗರದ ಗಂಗಮ್ಮ ದೇವಾಲಯದಲ್ಲಿ ಶುಕ್ರವಾರ ಪೂಜೆ ನೆರವೇರಿಸಿದ ನಂತರ ನಗರದ 7, 8, ಹಾಗು 9 ನೇ ವಾರ್ಡಿನ ಸುಮಾರು 1,500 ಕುಟುಂಬಗಳಿಗೆ ಆಹಾರ ದಾನ್ಯಗಳ ಕಿಟ್ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೊರೊನಾ ಸೋಂಕು ಹರಡದಂತೆ ಸರ್ಕಾರ ಜಾರಗೆ ತಂದಿರುವ ಲಾಕ್ ಡೌನ್‌ನಿಂದ ಬಹುತೇಕ ಬಡ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಅದರಲ್ಲಿಯೂ ನಗರದ 7, 8, ಹಾಗು 9 ನೇ ವಾರ್ಡಿನ ಬಹುತೇಕ ಜನತೆ ಕೂಲಿ ನಾಲಿ ಮಾಡಿ ಜೀವನ ನಡೆಸುವವರಾಗಿದ್ದಾರೆ. ಸಂಕಷ್ಟದಲ್ಲಿ ಅವರ ನೆರವಿಗೆ ನಿಲ್ಲಬೇಕೆಂಬ ನಿಟ್ಟಿನಲ್ಲಿ ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್‌ರ ಸೂಚನೆಯ ಮೇರೆಗೆ ಪ್ರತಿಯೊಂದು ಮನೆಗೂ ದಿನಸಿ ಕಿಟ್ ವಿತರಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ನಗರಸಭೆ ಪೌರಾಯುಕ್ತ ತ್ಯಾಗರಾಜ್ ಮಾತನಾಡಿ, ನಗರದ ಸಿದ್ದಾರ್ಥನಗರದ ಸುತ್ತಮುತ್ತಲಿನ ಮೂರು ವಾರ್ಡುಗಳ ಜನತೆಗೆ ನಗರಸಭೆ ಸದಸ್ಯೆ ಸುಮಿತ್ರಾ ರಮೇಶ್ ದಂಪತಿಗಳು ದಿನಸಿ ಕಿಟ್ ವಿತರಣೆ ಮಾಡುತ್ತಿರುವುದು ಸಂತೋಷದ ವಿಷಯ, ಇದೇ ರೀತಿ ನಗರದ ಎಲ್ಲಾ ವಾರ್ಡುಗಳ ಬಡ ಜನತೆಗೆ ದಿನಸಿ ಕಿಟ್ ವಿತರಿಸಲು ಸ್ಥಳೀಯ ಜನಪ್ರತಿನಿಧಿಗಳು ಮುಂದಾಗಲಿ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ ಮಾತನಾಡಿ, ಕೊರೋನಾ ಸೋಕು ಹರಡದಂತೆ ಜಾರಿಯಿರುವ ಲಾಕ್ ಡೌನ್ ಸಂದರ್ಭದಲ್ಲಿ ಜನರು ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳಲಿ ಎಂಬ ಉದ್ದೇಶದಿಂದ ದಿನಸಿ ಕಿಟ್ ವಿತರಿಸುತ್ತಿರುವ ಕಾರ್ಯ ಶ್ಲಾಘನೀಯ. ಇಂತಹ ಕಾರ್ಯಗಳು ಹೆಚ್ಚು ಹೆಚ್ಚಾಗಿ ನಡೆಯಲಿ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಎಸ್.ಎಂ.ರಮೇಶ್, ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ವಾಣಿ, ಸ್ಥಳೀಯ ಮುಖಂಡರಾದ ಎಂ.ಮುನಿಕೃಷ್ಣ, ಜೆ.ಮಧು, ದೇವರಾಜ್, ಎನ್.ಕೃಷ್ಣಪ್ಪ, ಆರ್.ಶ್ರೀನಿವಾಸ್, ಎನ್.ರಾಮದಾಸ್, ಎಂ.ಮಂಜುನಾಥ್, ಎನ್.ಪ್ರಕಾಶ್ ಹಾಜರಿದ್ದರು.

ಪ್ಯಾರಾಸೆಟಮಾಲ್ ಖರೀದಿಸುವವರ ಮಾಹಿತಿ ಸಂಗ್ರಹಿಸಿ

0

ಔಷಧಿ ಅಂಗಡಿಗಳಿಗೆ ಮಾತ್ರೆ ಕೊಳ್ಳಲು ಬರುವವರಿಗೆ ಅರಿವು ಮೂಡಿಸಿ. ವೈದ್ಯರ ಚೀಟಿ ಇಲ್ಲದೆ ಔಷಧಿಗಳನ್ನು ಮಾರಬೇಡಿ ಎಂದು ಉಪ ಔಷಧ ನಿಯಂತ್ರಕ ಸುರೇಶ್ ಕೆಂಪಯ್ಯ ತಿಳಿಸಿದರು.

 ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಅವರ ನೇತೃತ್ವದಲ್ಲಿ ನಡೆದ ತಾಲ್ಲೂಕು ಔಷಧಿ ವ್ಯಾಪಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

 ಈ ಹಿಂದೆ ಕೆಲವಾರು ಔಷಧಿಗಳಿಗೆ ವಿನಾಯಿತಿ ಇತ್ತು. ಆದರೆ ಕೊರೊನಾ ತಡೆಗಟ್ಟುವಲ್ಲಿ ನಾವೂ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಕೆಲವೊಂದು ನಿರ್ದೇಶನಗಳನ್ನು ಕೊಟ್ಟಿದೆ ಅವನ್ನು ನಾವುಗಳು ಪಾಲಿಸಲೇಬೇಕು. ಮುಂದಿನ ಎರಡು ವಾರಗಳು ಕೊರೊನಾ ತಡೆಗಟ್ಟುವಲ್ಲಿ ಬಹಳ ಮುಖ್ಯವಾಗುತ್ತವೆ.

 ಕೆಮ್ಮು, ನೆಗಡಿ, ಜ್ವರ ಎಂದು ಬರುವವರನ್ನೆಲ್ಲಾ ಆದಷ್ಟೂ ವೈದ್ಯರ ಬಳಿಯೇ ಕಳುಹಿಸಿ. ವೈದ್ಯರ ಚೀಟಿ ಬಹು ಮುಖ್ಯ ಎಂದು ಅರಿವು ಮೂಡಿಸಿ. ಆದರೂ ಪಾರಾಸೆಟಮಾಲ್ ಮಾತ್ರೆ ಅಥವಾ ಅದರ ಸಂಯೋಜಿತ ಮಾತ್ರೆಯನ್ನು, ಆಸ್ತಮಾ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ಔಷಧಿ ಖರೀದಿಸಿದರೆ ಅವರ ಹೆಸರು ಮೊಬೈಲ್ ನಂಬರನ್ನು ಪಡೆಯಬೇಕು. ಮೊಬೈಲ್ ನಲ್ಲಿರುವ ಆಪ್ ನಲ್ಲಿ ಮಾತ್ರೆ ಖರಿದಿಸುವವರ ಹೆಸರು ಮೊಬೈಲ್ ಸಂಖ್ಯೆಯನ್ನು ತಕ್ಷಣ ನಮೂದಿಸಬೇಕು. ಆ ಮಾಹಿತಿ ಔಷಧ ನಿಯಂತ್ರಕರಿಗೆ, ಆರೋಗ್ಯಾಧಿಕಾರಿಗಳಿಗೆ ದೊರಕುತ್ತದೆ ಎಂದು ಹೇಳಿದರು.

 ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ನಮ್ಮ ತಾಲ್ಲೂಕಿನ ನೋಡಲ್ ಅಧಿಕಾರಿ ಡಾ.ವಾಣಿ ಅವರು ಔಷಧಿ ಅಂಗಡಿಗಳವರು ಆಪ್ ನಲ್ಲಿ ನಮೂದಿಸಿರುವ ಮಾಹಿತಿಯನ್ನು ಪಡೆಯುತ್ತಾರೆ. ಪ್ರತಿ ದಿನ ಮಾಹಿತಿ ಪಡೆದು ಯಾವ ಪ್ರದೇಶದಲ್ಲಿ ಹೆಚ್ಚು ಮಾತ್ರೆ ಪಡೆದಿದ್ದಾರೋ ಅಲ್ಲಿಗೆ ಹೋಗಿ ಚಿಕಿತ್ಸೆ ನೀಡಲು ಇದರಿಂದ ಅನುಕೂಲವಾಗುತ್ತದೆ. ಸೋಂಕನ್ನು ತಡೆಗಟ್ಟಲು ಇದು ಕೂಡ ಒಂದು ಮಾರ್ಗ ಎಂದು ಹೇಳಿದರು.

 ಜಿಲ್ಲಾ ಸಹಾಯಕ ಔಷಧ ನಿಯಂತ್ರಕ ವಿನೋದ್ ಕಾಂಬ್ಳಿ, ವೈದ್ಯಾಧಿಕಾರಿ ಡಾ.ವಾಣಿ, ನೋಡಲ್ ಅಧಿಕಾರಿ ಡಾ.ಮಂಜುನಾಥ್, ಔಷಧಿ ವ್ಯಾಪಾರಿಗಳ ಸಂಘದ ತಾಲ್ಲೂಕು ಅಧ್ಯಕ್ಷ ವಿ.ರ್ಸ್.ವಿ.ಗುಪ್ತ, ರಮೇಶ್ ಬಾಬು, ಮಂಜುನಾಥ್, ಸುರೇಶ್ ಹಾಜರಿದ್ದರು.

ರೈತರಿಂದ ತರಕಾರಿ ಖರೀದಿಸಿ ನಗರದಲ್ಲಿ ಮನೆಮನೆಗೆ ವಿತರಣೆ

0

ಕೊರೊನಾ ಲಾಕ್ ಡೌನ್ ಒಂದೆಡೆ ರೈತರನ್ನು ಕಷ್ಟಕ್ಕೆ ಸಿಲುಕಿಸಿದ್ದರೆ, ಮತ್ತೊಂದೆಡೆ ಸಾಮಾನ್ಯ ಜನರು, ದಿನಗೂಲಿ ಕಾರ್ಮಿಕರು, ಮದ್ಯಮವರ್ಗದವರನ್ನು ಸಹ ಹೈರಾಣಗೊಳಿಸಿದೆ. ಇಬ್ಬರ ನೋವನ್ನೂ ಕಡಿಮೆ ಮಾಡುವ ನಿಟ್ಟಿನಲ್ಲಿ ತಾಲ್ಲೂಕಿನ ರೈತರು ಬೆಳೆದಿರುವ ತರಕಾರಿಗಳನ್ನು ಕೊಂಡು ವರ್ಗೀಕರಿಸಿ ನಗರದ ಸುಮಾರು 15 ಸಾವಿರ ಕುತುಂಬಗಳಿಗೆ ಹಂಚುತ್ತಿದ್ದೇವೆ ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಪುಟ್ಟು ತಿಳಿಸಿದರು.

 ನಗರದ ಹೊರವಲಯದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ವಿವಿಧ ತರಕಾರಿಗಳ ಪ್ಯಾಕೆಟ್ ಗಳನ್ನು ನಗರದ ವಿವಿಧ ವಾರ್ಡ್ ಗಳಿಗೆ ಕಳುಹಿಸಿ ಅವರು ಮಾತನಾಡಿದರು.

 ಕೊರೊನಾ ತಡೆಗಟ್ಟಲು ಸರ್ಕಾರ ಲಾಕ್ ಡೌನ್ ಘೋಷಿಸುತ್ತಿದ್ದಂತೆಯೇ ತಾಲ್ಲೂಕಿನಲ್ಲಿ ಸುಮಾರು ಎಪ್ಪತ್ತು ಸಾವಿರ ಮಾಸ್ಕ್ ಮತ್ತು ಒಂದು ಲಕ್ಷ ಮುವ್ವತ್ತು ಸಾವಿರ ಸೋಪುಗಳನ್ನು ಮನೆಮನೆಗೆ ವಿತರಿಸಿದೆವು. ಇದೀಗ ನಮ್ಮ ಭಾಗದ ರೈತರು ಬೆಳೆದಿರುವ ತರಕಾರಿಗಳನ್ನು ಸಾಗಾಣಿಕೆ ಮಾಡಲಾಗದೇ ಮಾರಲಾಗದೇ ಪರಿತಪಿಸುತ್ತಿದ್ದಾರೆ. ಅದಕ್ಕಾಗಿ ಕಳೆದ ಒಂದು ವಾರದಿಂದ ರೈತರ ತೋಟಗಳಿಗೇ ತೆರಳಿ ಕ್ಯಾರೆಟ್, ಟೊಮೇಟೋ, ಈರುಳ್ಳಿ, ಕೋಸು, ಬದನೆ, ಮೆಣಸಿನಕಾಯಿ, ಸೊಪ್ಪು, ಕುಂಬಳಕಾಯಿಯನ್ನು ಖರೀದಿಸಿ ತಂದು ವರ್ಗೀಕರಿಸಿ ಪಾಕೆಟ್ ಮಾಡಿದ್ದೇವೆ. ಸ್ವಯಂಸೇವಕರು ಪ್ರತಿಯೊಂದು ಮನೆಗೂ ಹೋಗಿ ತರಕಾರಿ ವಿತರಿಸಲಿದ್ದಾರೆ ಎಂದು ಹೇಳಿದರು.

 ತರಕಾರಿಗಳನ್ನು ವಿತರಿಸುತ್ತಾ ಕೊರೊನಾ ಹೊಡೆದೋಡಿಸಬೇಕಾದರೆ ಪ್ರತಿಯೊಬ್ಬರೂ ಮನೆಗಳಲ್ಲಿಯೇ ಇರಿ, ಅಂತರ ಕಾಪಾಡಿಕೊಳ್ಳಿ, ಸ್ವಚ್ಛತೆ ಕಾಪಾಡಿಕೊಳ್ಳಿ ಎಂದು ಅರಿವು ಮೂಡಿಸಲಾಗುತ್ತಿದೆ ಎಂದರು.

 ಈ ಸಂದರ್ಭದಲ್ಲಿ ಆನೂರು ದೇವರಾಜ್, ವಿಶ್ವನಾಥ್, ನಾಗೇಶ್, ಮುನಿರಾಜು, ನಟರಾಜು, ಆನಂದ್ ಹಾಜರಿದ್ದರು.

ಪೊಲೀಸರಿಂದ ರಂಜಾನ್ ಪ್ರಯುಕ್ತ ಸೂಚನೆಗಳು

0

ರಂಜಾನ್ ಮಾಸ ಪ್ರಾರಂಭವಾಗುವುದರಿಂದ ಪೊಲೀಸರು ಮುಸ್ಲಿಂ ಬಾಂಧವರಿಗೆ ಕೊರೊನಾ ಹಿನ್ನೆಲೆಯಲ್ಲಿ ಕೆಲವೊಂದು ಸೂಚನೆಗಳಿರುವ ಕರಪತ್ರವನ್ನು ನಗರದಲ್ಲಿ ಹಂಚುತ್ತಿದ್ದಾರೆ.
ರಂಜಾನ್ ತಿಂಗಳಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಪ್ರಾರ್ಥನೆ ಮಾಡುವಂತಿಲ್ಲ, ಬದಲಿಗೆ ನಿಮ್ಮ ನಿಮ್ಮ ಮನೆಗಳಲ್ಲಿ ಅಂತರವನ್ನು ಕಾಯ್ದುಕೊಂಡು ಮಾಡಿಕೊಳ್ಳುವುದು. ರಂಜಾನ್ ಮಾಸದಲ್ಲಿ ಮಸೀದಿಯಲ್ಲಿ ಕೆಲಸ ಮಾಡುವ ಮೌಜಾನ್ ಅಥವಾ ಇಮಾಮ್ ಅವರು ಬೆಳಗ್ಗೆ ಮಾಡುವ ಸೆಹರಿ ಮುಕ್ತಾಯದ ಸಮಯ ಮತ್ತು ಇಫ್ತಿಯಾರ್ ಪ್ರಾರಂಭದ ಸಮಯವನ್ನು ಕನಿಷ್ಠ ಧ್ವನಿಯಲ್ಲಿ ಧ್ವನಿವರ್ಧಕದಲ್ಲಿ ತಿಳಿಸಬೇಕು. ಧ್ವನಿವರ್ಧಕವನ್ನು ಕೇವಲ ಸಮಯವನ್ನು ತಿಳಿಸಲು ಉಪಯೋಗಿಸಬಹುದೇ ವಿನಃ ನಮಾಜ್ ಮಾಡಲು ಉಪಯೋಗಿಸುವಂತಿಲ್ಲ.
ರಂಜಾನ್ ತಿಂಗಳಲ್ಲಿ ಮೊಹಲ್ಲಾ, ಮಸೀಸಿ, ಮದರಸಾ ಅಥವಾ ದರ್ಗಾಗಳಲ್ಲಿ ಯಾವುದೇ ರೀತಿಯ ಗಂಜಿ, ಜ್ಯೂಸ್, ತಿಂಡಿ ತಯಾರಿಸಿ ವಿತರಿಸುವಂತಿಲ್ಲ. ತಿಂಡಿಗಳ ಅಂಗಡಿಗಳನ್ನು ತೆರೆಯುವಂತಿಲ್ಲ. ಝಕಾತ್ ಸಂಬಂಧ ಮಾಡುತ್ತಿದ್ದ ದಾನಗಳನ್ನು ಜಿಲ್ಲಾಡಳಿತದ ಅನುಮತಿಯಿಲ್ಲದೆ ಮಾಡುವಂತಿಲ್ಲ. ದಾವತ್ ಅಥವಾ ಇಫ್ತಾರ್ ಕೂಟಗಳನ್ನು ಆಯೋಜಿಸುವಂತಿಲ್ಲ ಎಂದು ಕರಪತ್ರದಲ್ಲಿ ಮುದ್ರಿಸಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಕೋರುತ್ತಿದ್ದಾರೆ.

ನಿಧನ ವಾರ್ತೆ – ಎಚ್. ಸುಬ್ಬರಾಯಪ್ಪ

0

ನಗರ ಸಭೆ ಸದಸ್ಯ ಹಾಗೂ ಬಿಜೆಪಿ ನಗರ ಮಂಡಲಾಧ್ಯಕ್ಷ ಎಸ್.ರಾಘವೇಂದ್ರ(ಮಿಲ್ಟ್ರಿ ರಘು)ರವರ ತಂದೆ ನಿವೃತ್ತ ಮುಖ್ಯ ಶಿಕ್ಷಕ ಎಚ್.ಸುಬ್ಬರಾಯಪ್ಪ(78) ನಿಧನರಾಗಿದ್ದಾರೆ. ಕಳೆದ ಎರಡು ಮೂರು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳವಾರ ರಾತ್ರಿ 7 ಗಂಟೆಗೆ ಸ್ವಗೃಹದಲ್ಲಿಯೇ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ. ಅವರ ಅಂತ್ಯಸಂಸ್ಕಾರವನ್ನು ಅವರ ತೋಟದಲ್ಲಿ ಬುಧವಾರ ನೆರವೇರಿಸಲಾಯಿತು.

ಪೊಲೀಸರ ಮೇಲೆ ಹಲ್ಲೆ ಮಾಡಲು ಬಂದವನ ಬಂಧನ

0

ಪೊಲೀಸರ ಮೇಲೆ ಹಲ್ಲೆ ಮಾಡಲು ಬಂದವನ ಬಂಧನ
ಶಿಡ್ಲಘಟ್ಟ ಗ್ರಾಮಾಂತರ ಠಾಣಾ ಸಿಬಂದಿ ನಂದಕುಮಾರ್ ಮತ್ತು ಎಚ್.ಸಿ. ಹರೀಶ್ ಹೆಚ್ ಅವರು ಸೋಮವಾರ ವೈ.ಹಯಣಸೇನಹಳ್ಳಿ ಗ್ರಾಮದ ಬಳಿ ಇರುವ ಪೆಟ್ರೋಲ್ ಬಂಕ್ ನಲ್ಲಿ ಮಾಸ್ಕ್ ಹಾಕಿಕೊಳ್ಳಿ ಎಂದು ತಿಳಿಸಿದಕ್ಕೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಲು ಮುಂದಾದ ಶೀಗೇಹಳ್ಳಿಯ ಗೋಪಿನಾಥ್ ವಿರುದ್ಧ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ.
ಆಶಾ ಕಾರ್ಯಕರ್ತೆಯನ್ನು ನಿಂದಿಸಿದವರ ಮೇಲೆ ದೂರು ದಾಖಲು
ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯಿತಿಯ ಬಾಳೇಗೌಡನಹಳ್ಳಿ ಗ್ರಾಮದಲ್ಲಿ ಕೊರೊನದ ಬಗ್ಗೆ ಜಾಗೃತಿ ಹಾಗೂ ಮಾಹಿತಿ ನೀಡಲು ಹೋಗಿದ್ದ ಆಶಾಕಾರ್ಯಕರ್ತ ಕಲಾವತಿ ಅವರಿಗೆ ಇಂದ್ರಜಿತ್ ನಾಯಕ್ ಎಂಬ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಶಾಕಾರ್ಯಕರ್ತೆಯರ ಸಂಘದ ಸದಸ್ಯರು ಗಂಜಿಗುಂಟೆ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ನಿಂದಿಸಿರುವ ವ್ಯಕ್ತಿಯ ಮೇಲೆ ಕ್ರಮ ಕೈಗೊಂಡು ಆಶಾಕಾರ್ಯಕರ್ತರಿಗೆ ರಕ್ಷಣೆ ಒದಗಿಸಬೇಕೆಂದು ಮಂಗಳವಾರ ಪ್ರತಿಭಟನೆ ನಡೆಸಿದ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಅವರು ಬಂದು ಮಾಹಿತಿ ಪಡೆದು ಆಶಾ ಕಾರ್ಯಕರ್ತೆಯರೊಂದಿಗೆ ತೆರಳಿ ದಿಬ್ಬೂರಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದರು. ಪಿ.ಎಸ್.ಐ. ರಂಜನ್ ಕುಮಾರ್ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಶಾರ್ಟ್ ಸರ್ಕ್ಯೂಟ್ ನಿಂದ ಸುಟ್ಟು ಕರಕಲಾದ ದಿನಸಿ ಅಂಗಡಿ

0

ಶಿಡ್ಲಘಟ್ಟದ 18ನೇ ವಾರ್ಡ್ ಟಿ.ಎಂ.ಸಿ ಕಾಲೋನಿಯಲ್ಲಿ ಸುರೇಶ್ ಮತ್ತು ರಮೇಶ್ ಸಹೋದರರಿಗೆ ಸೇರಿರುವ ದಿನಸಿ ಅಂಗಡಿ ಶಾರ್ಟ್ ಸರ್ಕ್ಯೂಟ್ ನಿಂದ ಸುಟ್ಟು ಕರಕಲಾಗಿದ್ದು, ಸುಮಾರು 3-4 ಲಕ್ಷ ಮೊತ್ತದ ದಿನಸಿ ಪದಾರ್ಥಗಳು ಹಾಗೂ ಉಪಕರಣಗಳು ನಾಶವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಎಸ್ ಎನ್ ಕ್ರಿಯಾ ಟ್ರಸ್ಟ್ ನ ಅಧ್ಯಕ್ಷ ಅಂಜಿನಪ್ಪ ಪುಟ್ಟು, ಹಾನಿಗೊಳಗಾದ ಅಂಗಡಿ ಮಾಲೀಕರಿಗೆ 25 ಸಾವಿರ ರೂಗಳ ಹಣದ ಚೆಕ್ ನೀಡಿದರು.

ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳಿಂದ ತಹಶೀಲ್ದಾರ್ ಗೆ ಮನವಿ ಪತ್ರ ಸಲ್ಲಿಕೆ

0

ಕೊರೊನಾ ಸೋಂಕು ಹರಡದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿ ಮಾಡಿರುವ ಅಗತ್ಯ ಕ್ರಮಗಳನ್ನು ರೈತ ಸಂಘ ಸ್ವಾಗತಿಸುತ್ತದೆ. ಆದರೂ ಲಾಕ್ ಡೌನ್ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಸಿಕ್ಕಿರುವ ರೈತರಿಗೆ ಪರಿಹಾರೋಪಾಯ ಕಲ್ಪಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ(ಪುಟ್ಟಣ್ಣಯ್ಯ ಬಣ) ಪದಾಧಿಕಾರಿಗಳು ತಹಶೀಲ್ದಾರ್ ರ ಮೂಲಕ ಸೋಮವಾರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್ ಮಾತನಾಡಿ, ರೈತರಿಗೆ ಲಾಕ್ ಡೌನ್ ನಿಂದ ವಿನಾಯಿತಿ ಕಲ್ಪಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆಯಾದರೂ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿರುವ ಹಿನ್ನಲೆಯಲ್ಲಿ ಜಿಲ್ಲಾದ್ಯಂತ ರೈತರು ಬೆಳೆದ ಬೆಳೆಗಳು ಬೀದಿಗೆ ಹಾಕುವ ಸ್ಥಿತಿ ಬಂದೊದಗಿದೆ. ರಾಜ್ಯದ ಎಲ್ಲಾ ಗಡಿಗಳು ಬಂದ್ ಆಗಿದ್ದು ರೈತ ಬೆಳೆದ ಉತ್ಪನ್ನಗಳನ್ನು ಸಾಗಿಸಲು ತೊಂದರೆಯಾಗಿದೆ. ಬೆಳೆದ ಬೆಳೆಯನ್ನು ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ. ಹಾಗಾಗಿ ಸರ್ಕಾರವೇ ನೇರವಾಗಿ ರೈತರಿಂದ ಉತ್ಪನ್ನಗಳನ್ನು ಖರೀದಿಸಬೇಕು. ಇದಿಂದ ರೈತರಿಂದ ಮಧ್ಯವರ್ತಿಗಳು ಕೊಂಡು ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನು ತಡೆಗಟ್ಟಬಹುದು. ದ್ರಾಕ್ಷಿ, ದಾಳಿಂಬೆ, ಚೇಪೆಕಾಯಿ ಹಣ್ಣಾಗಿ ತೋಟದಲ್ಲಿಯೇ ಉರುಳಿ ಬೀಳುತ್ತಿವೆ. ತಕ್ಷಣ ಹಣ್ಣುಗಳನ್ನು ಸಂರಕ್ಷಿಸಲು ಉಚಿತವಾಗಿ ಕೋಲ್ಡ್ ಸ್ಟೋರೇಜ್ ತೆರೆಯಬೇಕು. ಕೃಷಿ ಅಲ್ಪಾವಧಿ ಸಾಲವನ್ನು ಕಟ್ಟಲು ಮೂರು ತಿಂಗಳ ಕಾಲ ವಿಸ್ತರಣೆ ಮಾಡಿರುವ ಸರ್ಕಾರ ಕೃಷಿ ಚಟುವಟಿಕೆಗಳಿಗಾಗಿ ಹೊಸ ಸಾಲ ನೀಡಲು ಕ್ರಮ ಜರುಗಿಸಬೇಕು ಎಂದು ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ತಹಶೀಲ್ದಾರ್ ಕೆ.ಅರುಂದತಿ ಅವರಿಗೆ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಕೆ.ಅರುಂಧತಿ ಮಾತನಾಡಿ, ರೈತರ ಬೇಡಿಕೆಯನ್ನು ಮೇಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಟಿ.ಕೆ.ಅರುಣ್‌ಕುಮಾರ್, ತಾಲ್ಲೂಕು ಉಪಾಧ್ಯಕ್ಷ ನಾಗರಾಜ್, ಕೆ.ಶಂಕರನಾರಾಯಣ, ತಾಲ್ಲೂಕು ಸಂಚಾಲಕ ಎಚ್.ಮುದ್ದುಕೃಷ್ಣ, ಕಾರ್ಯಾಧ್ಯಕ್ಷ ಮಾರುತಿ, ಗೌರವಾಧ್ಯಕ್ಷ ಚನ್ನೇಗೌಡ, ಕಾರ್ಯದರ್ಶಿ ಶ್ರೀಧರ್ ಹಾಜರಿದ್ದರು.

ಗ್ರಂಥಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ದಿನಸಿ ಪದಾರ್ಥ ವಿತರಣೆ

0

ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಕೈ ರಸೀದಿ ಆಧಾರದ ಮೇಲೆ ತಾಲ್ಲೂಕಿನ ವಿವಿಧ ಗ್ರಂಥಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 15 ಮಂದಿಗೆ ಅಗತ್ಯ ದಿನಸಿ ಪದಾರ್ಥಗಳಲ್ಲಿ ಜಿಲ್ಲಾ ಗ್ರಂಥಪಾಲಕ ಎಂ.ಶಂಕರಪ್ಪ ವಿತರಿಸಿದರು

ವಲಸಿಗರನ್ನು ವಾಪಸ್ ಕಳುಹಿಸಿದ ಆಯುಕ್ತರು

0

ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಎಲ್ಲಾ ತಾಲ್ಲೂಕುಗಳಲ್ಲಿಯೂ ಲಾಕ್ ಡೌನ್, ಸೀಲ್ ಡೌನ್ ಜಾರಿಯಲ್ಲಿದ್ದರೂ ಬೆಂಗಳೂರಿನಿಂದ ನಗರಕ್ಕೆ ರಾತ್ರೋ ರಾತ್ರಿ ವಲಸೆ ಬಂದು ಮನೆಯಲ್ಲಿ ಸೇರಿಕೊಂಡಿದ್ದ 8 ಮಂದಿಯನ್ನು ನಗರಸಭೆ ಆಯುಕ್ತ ತ್ಯಾಗರಾಜ್, ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಪೊಲೀಸರು ವಲಸಿಗರು ಬಂದಿದ್ದ ಅವರ ವಾಹನದಲ್ಲಿಯೇ ಶನಿವಾರ ವಾಪಸ್ ಬಂದಕಡೆಗೆ ಕಳುಹಿಸಿದರು.
ನಗರದ ಖಾಜಿ ರಸ್ತೆಯ ಮನೆಗೆ ಶುಕ್ರವಾರ ತಡರಾತ್ರಿ 3 ಗಂಟೆ ಸಮಯದಲ್ಲಿ ಕ್ವಾಲಿಸ್ ವಾಹನದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 8 ಮಂದಿ ಸಂಬಂಧಿಕರು ಬಂದಿದ್ದು, ಅಕ್ಕ ಪಕ್ಕದ ಜನತೆ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದರು.
ವಿಷಯ ತಿಳಿಯುತ್ತಿದ್ದಂತೆ ಶನಿವಾರ ಬೆಳಗ್ಗೆ ನಗರಸಭೆ ಪೌರಾಯುಕ್ತ ತ್ಯಾಗರಾಜ್, ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಎಲ್ಲಾ ಎಂಟು ಮಂದಿಯ ಆರೋಗ್ಯ ತಪಾಸಣೆ ನಡೆಸಿದರು. ನಂತರ ಎಲ್ಲಿಂದ ಬಂದಿರುವಿರೋ ಅಲ್ಲಿಗೆ ಹೊರಡುವಂತೆ ಸೂಚಿಸಿದರು. ಬೆಂಗಳೂರಿನ ಜಯನಗರದ ಸೋಮೇಶ್ವರ ಬಡಾವಣೆಯಿಂದ ಬಂದಿರುವುದಾಗಿ ವಲಸಿಗರು ಮಾಹಿತಿ ನೀಡಿದರು.
ನೆರೆಹೊರೆಯವರಲ್ಲಿ ಆತಂಕ :
ಜಿಲ್ಲಾ ಕೇಂದ್ರ ಸ್ಥಾನ ಚಿಕ್ಕಬಳ್ಳಾಪುರದಲ್ಲಿ ಶುಕ್ರವಾರ ಒಂದೇ ದಿನ 3 ಕೊರೋನಾ ಪ್ರಕರಣಗಳು ಪತ್ತೆಯಾಗಿರುವ ಸುದ್ದಿ ತಿಳಿದು ಭಯಬೀತರಾಗಿರುವ ಜನತೆಗೆ ಬಿಗಿ ಲಾಕ್‌ಡೌನ್, ಸೀಲ್ ಡೌನ್ ನಡುವೆಯೂ ರಾತ್ರೋ ರಾತ್ರಿ ಆಗುಂತಕರು ಬೆಂಗಳೂರಿನಿಂದ ಶಿಡ್ಲಘಟ್ಟಕ್ಕೆ ಬಂದಿದ್ದಾದರೂ ಹೇಗೆ ಎಂಬ ಪ್ರಶ್ನೆ ಮೂಡಿದ್ದು, ಹೊರಗಿನವರು ಬರುವುದರಿಂದ ಕೊರೊನಾ ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಜನರಲ್ಲಿ ಆತಂಕವನ್ನುಂಟು ಮಾಡಿದೆ.
ಮಾತಿನ ಚಕಮಕಿ :
ರಾತ್ರೋ ರಾತ್ರಿ ಬೆಂಗಳೂರಿನಿಂದ ನಗರಕ್ಕೆ ಬಂದಿದ್ದ ವಲಸಿಗರನ್ನು ಭೇಟಿ ಮಾಡಲು ಹೊರಟ ಅಧಿಕಾರಿಗಳು ಹಾಗೂ ವಲಸಿಗರ ಸಂಬಂಧಿಕರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ತಿಂಗಳುಗಟ್ಟಲೇ ಕೆಲಸ ಕಾರ್ಯ ಇಲ್ಲದೇ ಮಕ್ಕಳು ಬೇರೆಲ್ಲೋ ಹಸಿವಿನಿಂದ ಬಳಲುತ್ತಿದ್ದು ರಾತ್ರಿಯಷ್ಟೇ ಮನೆಗೆ ಬಂದಿದ್ದಾರೆ. ಇದೀಗ ತಾವು ಬಂದು ನಮ್ಮ ಮನೆ ಮಕ್ಕಳನ್ನು ಹೊರಗೆ ಕಳುಹಿಸಿತ್ತಿದ್ದೀರಿ. ಅವರು ಎಲ್ಲಿ ಹೋಗಬೇಕು, ಏನು ಮಾಡಬೇಕು ಎಂದು ಖ್ಯಾತೆ ತೆಗೆದರು.
ಅಧಿಕಾರಗಳು, ನಾವು ಬಂದಿರುವುದು ನಿಮ್ಮ ಆರೋಗ್ಯ ಕಾಪಾಡುವ ಜೊತೆಗೆ ನಗರದ ಜನತೆಯ ಆರೋಗ್ಯ ಕಾಪಾಡುವ ಸಲುವಾಗಿ ದಯವಿಟ್ಟು ಲಾಕ್ ಡೌನ್ ಅವಧಿ ಮುಗಿಯುವವರೆಗೂ ಎಲ್ಲರುತ್ತೀರೋ ಅಲ್ಲಿಯೇ ಇರಿ, ಒಂದೆಡೆಯಿಂದ ಮತ್ತೊಂದೆಡೆಗೆ ಸಂಚರಿಸಿ ಕೊರೋನಾ ಹರಡಬೇಡಿ ಎಂದು ಮನವರಿಕೆ ಮಾಡಿಕೊಟ್ಟರು. ಅವರಿಗೆ ತಿಂಡಿ, ಊಟ ಕೊಟ್ಟು, ಆಹಾರ ಧಾನ್ಯಗಳ ಕಿಟ್ ನೀಡಿ, ರಾತ್ರಿ ಬಂದಿದ್ದ ಅದೇ ಕ್ವಾಲಿಸ್ ವಾಹನದಲ್ಲಿ ಎಂಟು ಮಂದಿಯನ್ನು ವಾಪಸ್ ಕಳುಹಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಸಿಬ್ಬಂದಿ ಪಿ.ಮುರಳಿ, ಆರೋಗ್ಯ ಇಲಾಖೆಯ ಶುಶ್ರೂಷಕಿ ವಿಜಯಾ, ಸಿಬ್ಬಂದಿ ಬಿ.ಲೋಕೇಶ್, ವಿ.ಕೀರ್ತಿ ಹಾಜರಿದ್ದರು.

ಸರ್ಕಾರಿ ಶಾಲೆಯ ಶಿಕ್ಷಕರಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಆನ್ ಲೈನ್ ತರಗತಿ ಪ್ರಾರಂಭ

0

ತಾಲ್ಲೂಕಿನ ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ತಮ್ಮ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಆನ್ ಲೈನ್ ಮೂಲಕ ತರಗತಿಗಳನ್ನು ಪ್ರಾರಂಭಿಸಿದ್ದಾರೆ.
ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಿರುವ ಕಾರಣದಿಂದ ವಿದ್ಯಾರ್ಥಿಗಳು ವರ್ಷವಿಡೀ ಕಲಿತ ಪಾಠಗಳನ್ನು ಮರೆತುಹೋಗಬಹುದು. ಆದ್ದರಿಂದ ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ಆನ್ ಲೈನ್ ಮೂಲಕ ಪಾಠ ಮಾಡಲು ಮುಂದಾಗಿದ್ದಾರೆ.
“ಸ್ಮಾರ್ಟ್ ಫೋನ್ ಹೊಂದಿರುವ ವಿದ್ಯಾರ್ಥಿಗಳ ವ್ಯಾಟ್ಸಪ್ ಗ್ರೂಪ್ ಮಾಡಿ ಅವರಿಗೆ ಜೂಮ್ ಆಪ್ ಡೌನ್ ಲೋಡ್ ಮಾಡಿಕೊಳ್ಳಲು ತಿಳಿಸಲಾಗಿದೆ. ಆನ್ ಲೈನ್ ಬೋಧನೆಯ ವಿಷಯ, ಅವಧಿ, ಮೀಟಿಂಗ್ ಐಡಿ ಮತ್ತು ಪಾಸ್ ವರ್ಡನ್ನು ವ್ಯಾಟ್ಸಪ್ ಗ್ರೂಪ್ ಗೆ ಕಳುಹಿಸಿ ನಿಗಧಿತ ಸಮಯಕ್ಕೆ ಸರಿಯಾಗಿ ಆನ್ ಲೈನ್ ತರಗತಿಯಲ್ಲಿ ಭಾಗವಹಿಸಲು ತಿಳಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಶಿಕ್ಷಕರ ಸಂಪರ್ಕದಲ್ಲಿರುತ್ತಾರೆ. ವೇಳಪಟ್ಟಿಯಂತೆ ಪ್ರತಿದಿನ ಮಧ್ಯಾಹ್ನ 3 ಗಂಟೆಗೆ ಒಂದು ವಿಷಯದ ತರಗತಿ ನಡೆಸುತ್ತಿದ್ದೇವೆ” ಎಂದು ಮುಖ್ಯ ಶಿಕ್ಷಕಿ ಹೇಮಾವತಿ ತಿಳಿಸಿದರು.
“50 ಮಂದಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಇದ್ದಾರೆ. ಅವರಲ್ಲಿ 16 ಮಕ್ಕಳ ಬಳಿ ಸ್ಮಾರ್ಟ್ ಫೋನ್ ಇಲ್ಲ. ಅವರನ್ನು ಸ್ಮಾರ್ಟ್ ಫೋನ್ ಇರುವ ಮಕ್ಕಳೊಂದಿಗೆ ಜೊತೆಗೂಡಿಸಿದ್ದೇವೆ. ಕಳೆದ ಎರಡು ದಿನಗಳಿಂದ ಕನ್ನಡ ಮತ್ತು ಹಿಂದಿ ತರಗತಿಗಳನ್ನು ನಡೆಸಿದೆವು. ಶುಕ್ರವಾರ ಆಂಗ್ಲ ಭಾಷಾ ವಿಷಯ ಶಿಕ್ಷಕಿ ವಿಜಯಶ್ರೀ ಅವರು ಪ್ರಶ್ನೆಪತ್ರಿಕೆಯ ವಿನ್ಯಾಸ ಹಾಗೂ ಪಾಠ ಪದ್ಯಗಳಲ್ಲಿ ಬರುವ ಸಂಭವನೀಯ ಪ್ರಶ್ನೆಗಳ ಬಗ್ಗೆ ತಿಳಿಸಿದರು .ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಅನುಮಾನಗಳನ್ನು ಪರಿಹರಿಸಿಕೊಂಡರು. ಈ ಆನ್ ಲೈನ್ ತರಗತಿಯಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ನೋಡೆಲ್ ಅಧಿಕಾರಿಗಳು ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಇಂಗ್ಲೀಷ್ ವಿಷಯ ಪರಿವೀಕ್ಷಕಿ ಕೃಷ್ಣಕುಮಾರಿ ಅವರು ಭಾಗವಹಿಸಿದ್ದರು” ಎಂದು ಅವರು ವಿವರಿಸಿದರು.

ನಗರಸಭೆ ಮತ್ತು ಪೊಲೀಸರಿಂದ ಶಿಡ್ಲಘಟ್ಟ ನಗರ ಸೀಲ್ ಡೌನ್

0

ಶಿಡ್ಲಘಟ್ಟ ನಗರದಲ್ಲಿ ನಗರಸಭೆ ಹಾಗೂ ಪೊಲೀಸ್ ಇಲಾಖೆ ಜೊತೆಗೂಡಿ ಶುಕ್ರವಾರ ಸೀಲ್ ಡೌನ್ ಕಾರ್ಯವನ್ನು ಪ್ರಾರಂಭಿಸಿದರು.
ನಗರದ ಎರಡು ಪ್ರಮುಖ ರಸ್ತೆಗಳಾದ ಟಿ.ಬಿ.ರಸ್ತೆ ಹಾಗೂ ಅಶೋಕ ರಸ್ತೆಗಳಿಗೆ ಹೊಂದಿಕೊಂಡ ಎಲ್ಲಾ ಅಡ್ಡರಸ್ತೆಗಳಿಗೂ ಕೋಲುಗಳನ್ನು ಹಾಗೂ ಟೇಪನ್ನು ಅಡ್ಡವಾಗಿ ಕಟ್ಟುವ ಮೂಲಕ ವಾಹನ ಸಂಚಾರಕ್ಕೆ ನಿರ್ಬಂಧಿಸುವ ಕೆಲಸವನ್ನು ಮಾಡಿದರು. ಎಲ್ಲಾ ದಿಕ್ಕುಗಳಲ್ಲಿಯೂ ನಗರವನ್ನು ಪ್ರವೇಶಿಸುವ ಕಡೆ ಅಡೆತಡೆಗಳನ್ನು ಇರಿಸಿ ಅಲ್ಲಿ ಪೊಲೀಸರ ಮೂಲಕ ಪರಿಶೀಲನೆ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ಮಾತನಾಡಿ, “ಅನಾವಶ್ಯಕವಾಗಿ ಓಡಾಡುವ ಜನರು ಹಾಗೂ ವಾಹನಗಳನ್ನು ನಿರ್ಬಂಧಿಸುವ ಸಲುವಾಗಿ ಈ ದಿನ ಮುಖ್ಯ ರಸ್ತೆಗಳನ್ನು ಹೊರತುಪಡಿಸಿ ಅಡ್ಡರಸ್ತೆಗಳನ್ನೆಲ್ಲಾ ಬಂದ್ ಮಾಡಿದ್ದೇವೆ. ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಂಡಿದ್ದು ಜನರು ಮನೆಗಳಲ್ಲಿಯೇ ಇದ್ದು ಸಹಕರಿಸಬೇಕು. ಮುಖ್ಯರಸ್ತೆಗಳಲ್ಲಿ ಪರಿಶೀಲನೆಗಾಗಿ ಪೊಲೀಸ್ ಕಾವಲು ಇರುತ್ತದೆ. ಅನಾವಶ್ಯಕವಾಗಿ ಓಡಾಡುವವರನ್ನು ತಡೆದು ಅವರ ವಾಹನವನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳಲಿದ್ದಾರೆ. ಅನಾವಶ್ಯಕವಾಗಿ ಓಡಾಡದಿರಿ. ಅತ್ಯವಶ್ಯಕ ವಸ್ತುಗಳಿಗೆ ಮಾತ್ರ ಹೊರಗೆ ಬನ್ನಿ” ಎಂದು ಹೇಳಿದರು.
ನಗರಸಭೆ ಪೌರಾಯುಕ್ತ ತ್ಯಾಗರಾಜ್ ಮಾತನಾಡಿ, “ಗುಂಪುಗೂಡುವುದು, ಅನಗತ್ಯವಾಗಿ ಸಂಚರಿಸುವುದೂ ಹೆಚ್ಚಾಗಿತ್ತು. ಕೊರೊನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಜನರು ಅನಗತ್ಯವಾಗಿ ಸಂಚರಿಸುವುದನ್ನು ತಡೆಗಟ್ಟಲು ಎಲ್ಲಾ ಅಡ್ಡರಸ್ತೆಗಳನ್ನೂ ಮುಚ್ಚಲಾಗುತ್ತಿದೆ. ಮುಖ್ಯ ರಸ್ತೆಗಳಲ್ಲಿ ಕಾವಲು ಹಾಕಲಾಗುತ್ತಿದೆ. ಸಕಾರಣವಿದ್ದಲ್ಲಿ ಮಾತ್ರ ಹೊರಗೆ ಬನ್ನಿ, ಇಲ್ಲವಾದಲ್ಲಿ ಮನೆಯಲ್ಲಿಯೇ ಇರಿ” ಎಂದರು.

ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ

0

ಮಹಾಮಾರಿ ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಲು ಲಾಕ್‌ಡೌನ್ ಜಾರಿಗೊಳಿಸಿದ ದಿನದಿಂದಲೂ ನಗರದಾದ್ಯಂತ ಸ್ವಚ್ಛತೆ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರ ಆರೋಗ್ಯವನ್ನು ಕಾಪಾಡುವುದು ಹಾಗೂ ಅವರಿಗೆ ಸೂಕ್ತ ಆರೋಗ್ಯ ನೆರವು ನೀಡುವುದು ತಾಲ್ಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆಯ ಕರ್ತವ್ಯವಾಗಿದೆ ಎಂದು ತಹಶಿಲ್ದಾರ್ ಕೆ.ಅರುಂಧತಿ ತಿಳಿಸಿದರು.
ನಗರದ ನಗರಸಭೆಯಲ್ಲಿ ಶುಕ್ರವಾರ ತಾಲ್ಲೂಕು ಆಡಳಿತದ ವತಿಯಿಂದ ಪೌರಕಾರ್ಮಿಕರು ಹಾಗೂ ನಗರಸಭೆಯ ಸಿಬ್ಬಂದಿಗೆ ಆರೋಗ್ಯ ಇಲಾಖೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದ್ದು, ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೊರೊನಾ ಸೋಂಕಿನ ವಿರುದ್ಧ ನಡೆಯುತ್ತಿರುವ ಸಂಘರ್ಷದಲ್ಲಿ ನಗರದ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಅತ್ಯಂತ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರ ಆರೋಗ್ಯವನ್ನು ಈ ದಿನ ತಪಾಸಣೆ ಮಾಡಿಸಲಾಗುತ್ತಿದೆ. ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ನಗರಸಭೆ ಹಾಗೂ ತಾಲ್ಲೂಕು ಆಡಳಿತ ಕೊರೊನಾ ಹೊಡೆದೋಡಿಸಲು ಕರ್ತವ್ಯನಿಷ್ಠೆಯಿಂದ ಕೆಲಸ ಮಾಡುತ್ತಿದ್ದು, ಸಾರ್ವಜನಿಕರು ಮನೆಯಲ್ಲಿಯೇ ಇರುವ ಮೂಲಕ ಸಹಕರಿಸಬೇಕು ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದೇವೆ. ದಯವಿಟ್ಟು ನೀವುಗಳು ಯಾರೂ ಮನೆಯಿಂದ ಹೊರಬರಬೇಡಿ. ಅವಶ್ಯಕ ವಸ್ತುಗಳಿಗೆ ಮಾತ್ರ ಮಾಸ್ಕ್ ಧರಿಸಿ ಹೊರಬಂದು ತೆಗೆದುಕೊಂಡು ತಕ್ಷಣ ಮನೆಗೆ ಹೋಗಿ. ಸ್ಯಾನಿಟೈಸರ್ ಬಳಸಿ. ಮಕ್ಕಳನ್ನು ವೃದ್ಧರನ್ನು ಮನೆಯಿಂದ ಹೊರಕ್ಕೆ ಕಳಿಸಬೇಡಿ. ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ. ಕೈಗಳನ್ನು ತೊಳೆಯುತ್ತಿರಿ ಎಂದು ಹೇಳಿದರು.
ನಗರಸಭೆ ಪೌರಾಯುಕ್ತ ತ್ಯಾಗರಾಜ್, ನಗರಸಭಾ ಸದಸ್ಯರು, ಸಿಬ್ಬಂದಿ, ಪೌರಕಾರ್ಮಿಕರು ಹಾಜರಿದ್ದರು.

ಅಂತರ ಕಾಯ್ದುಕೊಳ್ಳದೆ ನಡೆಸಿದ ಕಚ್ಚಾ ರೇಷ್ಮೆ ವ್ಯಾಪಾರ

0

ಶಿಡ್ಲಘಟ್ಟದ ಬೆಸ್ಕಾಂ ಕಚೇರಿ ಬಳಿ ಇರುವ “ಮೂರು ದಾರಿ” (ಮೂರು ರಸ್ತೆಗಳು ಒಂದು ಗೂಡುವ ಸ್ಥಳ) ದಲ್ಲಿ ಕಳೆದ ಮೂರು ದಶಕಗಳಿಂದ ನಡೆಯುತ್ತಿದ್ದ ಕಚ್ಚಾ ರೇಷ್ಮೆ ವ್ಯಾಪಾರವನ್ನು ನಗರದ ಬಸ್ ನಿಲ್ದಾಣಕ್ಕೆ ಶುಕ್ರವಾರ ಸ್ಥಳಾಂತರಗೊಳಿಸಿದ್ದು, ಅಲ್ಲಿ ಶುಕ್ರವಾರ ಕಚ್ಚಾ ರೇಷ್ಮೆ ವ್ಯಾಪಾರ ನಡೆಯಿತು.
ಅಂತರವನ್ನು ಕಾಯ್ದುಕೊಳ್ಳಲು ತಾಲ್ಲೂಕು ಆಡಳಿತ ನೆಲದ ಮೇಲೆ ಗುರುತುಗಳನ್ನು ಹಾಕಿದ್ದರೂ ಕಚ್ಚಾ ರೇಷ್ಮೆ ಕೊಳ್ಳುವವರು ಮತ್ತು ಮಾರುವವರು ಅಂತರವನ್ನು ಕಾಯ್ದುಕೊಳ್ಳದೆ ಗುಂಪುಗೂಡಿ ವ್ಯಾಪಾರ ನಡೆಸಿದ್ದರು.
ಸಣ್ಣ ಪ್ರಮಾಣದಲ್ಲಿ ರೇಷ್ಮೆ ನೂಲನ್ನು ಬಿಚ್ಚಾಣಿಕೆ ಮಾಡುವವರು ಕಚ್ಚಾ ರೇಷ್ಮೆ ವ್ಯಾಪಾರವನ್ನು ಇಲ್ಲಿ ಮಾಡುತ್ತಿದ್ದರು. ಅಂತರ ಕಾಯ್ದುಕೊಳ್ಳದೆ ನಡೆಸುತ್ತಿದ್ದ ಈ ವ್ಯಾಪಾರದಿಂದ ಜನರು ಆತಂಕಗೊಂಡಿದ್ದರು. ಅದಕ್ಕಾಗಿ ತಾಲ್ಲೂಕು ಆಡಳಿತ ವಿವಿದೆಡೆ ಸ್ಥಳವನ್ನು ಪರಿಶೀಲನೆ ನಡೆಸಿದ ನಂತರ ಈಗ ಸಾರಿಗೆ ಸಂಚಾರವಿಲ್ಲದಿರುವುದರಿಂದ ನಗರದ ಬಸ್ ನಿಲ್ದಾಣವನ್ನು ಈ ವ್ಯಾಪಾರಕ್ಕೆ ಸೂಕ್ತ ಸ್ಥಳವೆಂದು ನಿರ್ಧರಿಸಿದೆ.
“ಮೂರು ದಾರಿಯಲ್ಲಿ ರೇಷ್ಮೆ ವಹಿವಾಟು ನಡೆಸುವಾಗ ಅಲ್ಲಿ ಸ್ಥಳ ಕಡಿಮೆಯಿರುವುದರಿಂದ ಅಂತರವನ್ನು ಕಾಯ್ದುಕೊಳ್ಳಲು ಕಷ್ಟವಾಗುತ್ತದೆ. ಈ ಕಾರಣದಿಂದ ತಾಲ್ಲೂಕು ಆಡಳಿತದವರು ನಗರದ ಬಸ್ ನಿಲ್ದಾಣದಲ್ಲಿ ವಿಶಾಲವಾದ ಜಾಗ ಇದೆಯೆಂದು ಇಲ್ಲಿ ವ್ಯಾಪಾರ ನಡೆಸುವಂತೆ ಸೂಚಿಸಿದ್ದಾರೆ. ಇವತ್ತಷ್ಟೇ ಇಲ್ಲಿ ವ್ಯಾಪಾರ ವಹಿವಾಟು ಪ್ರಾರಂಭವಾಗಿರುವುದರಿಂದ ಜನರು ಗುಂಪುಗೂಡುತ್ತಿದ್ದಾರೆ. ನಾವುಗಳು ತಿಳಿಹೇಳುತ್ತಿದ್ದೇವೆ. ಅಂತರವನ್ನು ಕಾಯ್ದುಕೊಳ್ಳಿ ಎಂದು ಮನವಿ ಮಾಡುತ್ತಿದ್ದೇವೆ” ಎಂದು ರೀಲರ್ ಸಂಘದ ಅಧ್ಯಕ್ಷ ಅನ್ಸರ್ ಖಾನ್ ತಿಳಿಸಿದರು.

ಕೊರೊನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೊಸ ಸಿಂಪಡನಾ ಯಂತ್ರಗಳ ಬಳಕೆ

0

ಕೊರೊನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರಸಭೆಯ ವತಿಯಿಂದ ತರಿಸಲಾದ ಸಿಂಪಡನಾ ಯಂತ್ರಗಳ ಬಳಕೆಯ ಬಗ್ಗೆ ಪೌರಕಾರ್ಮಿಕರಿಗೆ ತರಬೇತಿ ನೀಡಿ ಪೌರಾಯುಕ್ತ ತ್ಯಾಗರಾಜ್ ಮಾತನಾಡಿದರು.
ಮೆಲಾಥಿನ್‌ ದ್ರಾವಣ ಸಿಂಪಡಣೆಯನ್ನು ಮಾಡಲು ನಾಲ್ಕು ಚಾರ್ಜಿಂಗ್ ಸ್ಪ್ರೇ ಯಂತ್ರವನ್ನು ನಗರಸಭೆಯಿಂದ ತರಿಸಲಾಗಿದೆ. ಪ್ರತಿದಿನವೂ ಮೂರು ವಾರ್ಡುಗಳಲ್ಲಿ ಗಲ್ಲಿಗಲ್ಲಿಯಲ್ಲಿ, ಚರಂಡಿಗಳಲ್ಲಿ ಸಿಂಪಡಣೆ ಮಾಡಿಸುವುದಾಗಿ ಅವರು ತಿಳಿಸಿದರು.
ಸಳವಾಗಿ ಬಳಸಬಹುದಾದ ಕಡಿಮೆ ತೂಕದ ಈ ಸಿಂಪಡನಾ ಯಂತ್ರಗಳನ್ನು ಎಲ್ಲಾ ಚರಂಡಿಗಳಿಗೂ, ಸಂದಿಗೊಂದಿ, ಗಲ್ಲಿಗಳಿಗೂ ತೆಗೆದುಕೊಮ್ಡು ಹೋಗಿ ಸಿಂಪಡಿಸಬಹುದು. ದಿನಕ್ಕೆ ಮೂರು ವಾರ್ಡುಗಳಂತೆ ಎಲ್ಲಾ ವಾರ್ಡುಗಳಿಗೂ ಈ ಯಂತ್ರದ ಮೂಲಕ ಸೋಂಕು ನಿವ್ರಕವನ್ನು ಸಿಂಪಡನೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಇನ್ನಷ್ಟು ಈ ರೀತಿಯ ಯಂತ್ರಗಳನ್ನು ತರಿಸಲಾಗುವುದು ಎಂದು ಹೇಳಿದರು.
ನಗರಸಭೆ ಸಿಬ್ಬಂದಿ ಮುರಳಿ, ಸುಧಾ, ದಿಲೀಪ್, ಸದಸ್ಯರಾದ ರಾಘವೇಂದ್ರ, ಶಬ್ಬೀರ್ ಹಾಜರಿದ್ದರು.

ಅಜಿತ್ ಕೌಂಡಿನ್ಯರ “ಬ್ಲಾಸಮ್” ಕಲಾಕೃತಿಗೆ ಪ್ರಶಸ್ತಿ

0

ರಾಜಸ್ಥಾನದ ಜೈಪುರ ಮೂಲದ ಆಬ್ಸಲ್ಯೂಟ್ ಆರ್ಟ್ಸ್ ಗ್ಯಾಲರಿಯವರು ಆಯೋಜಿಸಿದ್ದ ಅಖಿಲ ಭಾರತ ಕಲಾ ಸ್ಪರ್ಧೆಯ ಡಿಜಿಟಲ್ ಆರ್ಟ್ ವಿಭಾಗದಲ್ಲಿ ಶಿಡ್ಲಘಟ್ಟದ ಹೌಸಿಂಗ್ ಬೋರ್ಡ್ ನಿವಾಸಿ ಅಜಿತ್ ಕೌಂಡಿನ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ.
ಆಕ್ರೈಲಿಕ್, ಆಯಿಲ್ ಪೈಂಟಿಂಗ್, ಮಿನಿಯೇಚರ್, ಮ್ಯೂರಲ್, ವಿಷನ್ ತ್ರಿಡಿ, ಚಾರ್ ಕೋಲ್, ಪೆನ್ಸಿಲ್ ಸ್ಕೆಚ್, ವಾಟರ್ ಕಲರ್, ಪ್ಯಾಲೆಟ್ ನೈಫ್, ಅಬ್ ಸ್ಟ್ರ್ಯಾಕ್ಟ್, ಡಿಜಿಟಲ್ ಆರ್ಟ್ ಮತ್ತಿತರ ಪ್ರಕಾರಗಳ ಆನ್ ಲೈನ್ ಇತ್ರಕಲಾ ಸ್ಪರ್ಧೆಗೆ ದೇಶದ ನಾನಾ ಭಾಗಗಳಿಂದ ಸಾವಿರಾರು ಮಂದಿ ಸ್ಪರ್ಧಿಸಿದ್ದರು. ಅಜಿತ್ ಕೌಂಡಿನ್ಯ, ತಮ್ಮ “ಬ್ಲಾಸಮ್” ಎಂಬ ಕಲಾಕೃತಿಯನ್ನು ಡಿಜಿಟಲ್ ಆರ್ಟ್ ವಿಭಾಗದಲ್ಲಿ ಸ್ಪರ್ಧೆಗೆ ಕಳುಹಿಸಿದ್ದು, ಅದಕ್ಕೆ ಪ್ರಶಸ್ತಿ ಪಡೆದಿದ್ದಾರೆ. ಡಿಜಿಟಲ್ ಮಾಧ್ಯಮದ ಮೂಲಕ ಕಲಾಕೃತಿಯನ್ನು ಸ್ಕ್ಯಾನ್ ಮಾಡಿ ಆನ್ ಲೈನ್ ಮೂಲಕ ಸ್ಪರ್ಧೆಗೆ ಕಳುಹಿಸುವ ಅವಕಾಶವಿತ್ತು.
ನಾಗಾರ್ಜುನ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಅಜಿತ್ ಕೌಂಡಿನ್ಯ, ಪುಸ್ತಕಗಳಿಗೆ ಮುಖಪುಟ ವಿನ್ಯಾಸ, ಕೆಲ ಮಾಸ ಪತ್ರಿಕೆಗಳಿಗೆ ಕಾನ್ಸೆಪ್ಟ್ ಆರ್ಟ್(ರೇಖಾ ಚಿತ್ರಗಳು), ಡಿಜಿಟಲ್ ಚಿತ್ರರಚನೆಯ ಹವ್ಯಾಸವನ್ನು ಹೊಂದಿದ್ದಾರೆ.

ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯಿಂದ ರೇಷ್ಮೆ ಒತ್ತೆಯಿಟ್ಟುಕೊಳ್ಳುವ ಯೋಜನೆ ಆರಂಭ

0

ನಗರದ ಬಸ್ ನಿಲ್ದಾಣದ ಬಳಿಯಿರುವ ರೇಷ್ಮೆ ಬಿತ್ತನೆ ಕೋಠಿ ಕಟ್ಟಡದಲ್ಲಿ ಕೆ.ಎಸ್.ಎಂ.ಬಿ (ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ) ವತಿಯಿಂದ ರೀಲರುಗಳಿಂದ ರೇಷ್ಮೆ ಅಡವಿಟ್ಟುಕೊಂಡು ಹಣ ನೀಡುವ ಪ್ರಕ್ರಿಯೆ ಪ್ರಾರಂಭವಾದ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿದರು.
ರೇಷ್ಮೆ ಗೂಡನ್ನು ಕೊಳ್ಳುವ ರೀಲರುಗಳ ಬಳಿ ಹಣವಿಲ್ಲ, ಅದಕ್ಕಾಗಿ ರೇಷ್ಮೆ ಗೂಡಿನ ಧಾರಣೆ ಕುಸಿದು ರೈತರು ಕಂಗಾಲಾಗಿದ್ದಾರೆ. ಸರ್ಕಾರ ಮಧ್ಯಪ್ರವೇಶಿಸಬೇಕೆಂದು ರೈತ ಸಂಘ ಒತ್ತಾಯಿಸಿದ ಹಿನ್ನೆಲೆಯಲ್ಲಿ ಈ ದಿನ ಸರ್ಕಾರ ರೇಷ್ಮೆಯನ್ನು ಅಡಮಾನವಾಗಿ ಇಟ್ಟುಕೊಂಡು ಹಣ ನೀಡಲು ಮುಂದಾಗಿದೆ ಎಂದು ಅವರು ತಿಳಿಸಿದರು.
ಕೊರೊನಾ ಎಂಬ ಮಹಾಮಾರಿಯಿಂದ ರೈತಕುಲ ನಶಿಸಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರೇಷ್ಮೆ ಬೆಳೆಗಾರರೂ ಇದಕ್ಕೆ ಹೊರತಾಗಿಲ್ಲ. ರೇಷ್ಮೆ ಬೆಳೆಗಾರರಿಗೆ ಹಣ ಬರುವುದು ರೀಲರುಗಳಿಂದ. ರೀಲರುಗಳು ತಮ್ಮ ರೇಷ್ಮೆಯನ್ನು ವಿವಿಧ ರಾಜ್ಯ, ಜಿಲ್ಲೆಗಳಿಗೆ ತೆಗೆದುಕೊಂಡು ಹೋಗಿ ಮಾರಲಾಗದೇ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅದಕ್ಕಾಗಿ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ರಾಜ್ಯ ರೈತ ಸಂಘ ಮನವಿ ಮಾಡಿತ್ತು. ಅದನ್ನು ಪುರಸ್ಕರಿಸಿದ ಸರ್ಕಾರ ಕೆ.ಎಸ್.ಎಂ.ಬಿ ಯಲ್ಲಿರುವ ಒಂಬತ್ತು ಕೋಟಿ ಹಣವನ್ನು ಹಂತಹಂತವಾಗಿ ಬಿಡುಗಡೆ ಮಾಡಿ ರೀಲರುಗಳಿಗೆ ನೆರವಾಗುವುದಾಗಿ ತಿಳಿಸಿದ್ದಾರೆ.
ಆಂಧ್ರ ಸರ್ಕಾರ ರೈತರ ತರಕಾರಿ ಕೊಳ್ಳಲೆಂದು 35 ಕೋಟಿ ಹಣ ಮೀಸಲಿರಿಸಿದೆ. ರೇಷ್ಮೆ ಕೊಳ್ಳಲು 25 ಕೋಟಿ ಹಣ ನೀಡಬೇಕೆಂದು ನಾವು ಒತ್ತಾಯಿಸಿದೆವು. ಸಧ್ಯಕ್ಕೆ ಒಂಬತ್ತು ಕೋಟಿ ರೂ ನೀಡುತ್ತಿದ್ದೇವೆ. ಅಗತ್ಯಬಿದ್ದಲ್ಲಿ ಇನ್ನಷ್ಟು ಕೊಡುವುದಾಗಿ ಭರವಸೆ ನೀಡಿದ್ದಾರೆ. ಕೆ.ಎಸ್.ಎಂ.ಬಿ ವತಿಯಿಂದ ಅಧಿಕಾರಿಯೊಬ್ಬರನ್ನು ನೇಮಿಸಿದ್ದು, ಪ್ರತಿ ದಿನ 50 ಲಕ್ಷ ರೂಗಳಷ್ಟು ರೇಷ್ಮೆಯನ್ನು ಅವರು ಅಡವಿಟ್ಟುಕೊಂಡು ಹಣ ನೀಡಲಿದ್ದಾರೆ ಎಂದು ಹೇಳಿದರು.
ಕೆ.ಎಸ್.ಎಂ.ಬಿ ಅಧಿಕಾರಿ ನಂಜಪ್ಪ ಮಾತನಾಡಿ, ಸರ್ಕಾರದ ಆದೇಶದ ಮೇರೆಗೆ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಂದ ರೇಷ್ಮೆ ನೂಲನ್ನು ಒತ್ತೆಯಿಟ್ಟುಕೊಂಡು ಶೇ 70 ರಷ್ಟು ಹಣ ನೀಡುವ ಯೋಜನೆಯನ್ನು ಪ್ರಾರಂಭಿಸುತ್ತಿದ್ದೇವೆ. ಸರ್ಕಾರ ರೇಷ್ಮೆಗೆ ನಿಗಧಿಪಡಿಸಿರುವ ಬೆಲೆಯಂತೆ ಒಬ್ಬ ರೀಲರಿಗೆ ಗರಿಷ್ಠ ಒಂದು ಲಕ್ಷ ರೂಗಳವರೆಗೆ ಮಾತ್ರ ನೀಡಲಾಗುತ್ತದೆ. ಒತ್ತೆಯ ಅವಧಿ 90 ದಿನಗಳಾಗಿದ್ದು, ಇದಕ್ಕೆ ಸರಳ ಬಡ್ಡಿ ಹಾಗೂ ಸೇವಾ ಶುಲ್ಕವನ್ನು ವಿಧಿಸಲಾಗುವುದು ಎಂದು ತಿಳಿಸಿದರು.

ಎನ್.ಎಸ್.ಯು.ಐ ವಿದ್ಯಾರ್ಥಿ ಘಟಕದಿಂದ ರಿಯಾಯಿತಿ ದರದಲ್ಲಿ ತರಕಾರಿ ಮಾರಾಟ

0

ಶಿಡ್ಲಘಟ್ಟದಲ್ಲಿ ಎನ್.ಎಸ್.ಯು.ಐ ವಿದ್ಯಾರ್ಥಿ ಘಟಕದ ರಾಜ್ಯ ಸಂಚಾಲಕ ಕುಂದಲಗುರ್ಕಿ ಮುನೀಂದ್ರ ರೈತರಿಂದ ತರಕಾರಿಗಳನ್ನು ನೇರವಾಗಿ ಖರೀದಿ ಮಾಡಿ ಅದೇ ಬೆಲೆಗೆ ಜನರಿಗೆ ಮಾರಾಟ ಮಾಡುತ್ತಿದ್ದಾರೆ.
“ಕೊರೊನಾ ರೋಗ ಹರಡುವುದನ್ನು ತಪ್ಪಿಸಲೆಂದು ಲಾಕ್ ಡೌನ್ ಮಾಡಿರುವ ಪರಿಣಾಮ ಅನೇಕ ರೈತರು ತಾವು ಬೆಳೆದ ಬೆಳೆಗಳನ್ನು ಮಾರಲು ಕಷ್ಟಪಡುತ್ತಿದ್ದಾರೆ. ವ್ಯಾಪಾರಿಗಳು ತರಕಾರಿ ತಂದು ಹೆಚ್ಚಿನ ಬೆಲೆಗೆ ಮಾರುತ್ತಿರುವುದರಿಂದ ಕೊಳ್ಳುವ ಗ್ರಾಹಕರಿಗೂ ಹೊರೆಯಾಗುತ್ತಿದೆ. ಇದನ್ನು ಸ್ವಲ್ಪಮಟ್ಟಿಗಾದರೂ ತಪ್ಪಿಸುವ ನಿಟ್ಟಿನಲ್ಲಿ ಎನ್.ಎಸ್.ಯು.ಐ ವಿದ್ಯಾರ್ಥಿ ಘಟಕ ಕೆಲಸ ಮಾಡುತ್ತಿದೆ. ಎನ್.ಎಸ್.ಯು.ಐ ವಿದ್ಯಾರ್ಥಿ ಘಟಕದ 49 ನೇ ವರ್ಷಾಚರಣೆಯ ಪ್ರಯುಕ್ತ ರಿಯಾಯಿತಿ ದರದಲ್ಲಿ ತರಕಾರಿ ಮಾರುತ್ತಾ ಅತ್ತ ರೈತರು, ಇತ್ತ ಗ್ರಾಹಕರಿಗೂ ನೆರವಾಗುತ್ತಿದ್ದೇವೆ” ಎಂದು ಕುಂದಲಗುರ್ಕಿ ಮುನೀಂದ್ರ ತಿಳಿಸಿದರು.
“ಪ್ರತಿದಿನ ಮುಂಜಾನೆ ಚಿಂತಾಮಣಿಗೆ ಹೋಗಿ ಅಲ್ಲಿ ರೈತರಿಂದ ತರಕಾರಿಗಳನ್ನು ಕೊಳ್ಳುತ್ತೇನೆ. ನಗರದ ಅಶೋಕ ರಸ್ತೆಯ ಶಿವಕುಮಾರಸ್ವಾಮಿ ವೃತ್ತದಲ್ಲಿ ಬೆಳಗಿನ ಹೊತ್ತು ರೈತರಿಂದ ಕೊಂಡು ತಂದಿರುವ ಬೆಲೆಗೇ ಮಾರುತ್ತೇನೆ. ನಂತರ ಪೊಲೀಸ್ ಕ್ವಾಟ್ರಸ್, ಆಸ್ಪತ್ರೆ ಕ್ವಾಟ್ರಸ್ ಸೇರಿದಂತೆ ವಿವಿದ ಬಡಾವಣೆಗಳಲ್ಲಿ ಸಂಚರಿಸಿ ತರಕಾರಿಯನ್ನು ರಿಯಾಯಿತಿ ಬೆಲೆಗೆ ಮಾರುತ್ತೇನೆ. ಉಳಿದು ಹೋಗಿದ್ದನ್ನು ಬಡವರಿಗೆ ಉಚಿತವಾಗಿ ನೀಡುತ್ತಿದ್ದೇವೆ. ಅಧಿಕಾರಿಗಳು ಮತ್ತು ಜನರಿಂದ ಉತ್ತಮ ಸ್ಪಂದನೆಯಿದೆ” ಎಂದು ಅವರು ಹೇಳಿದರು.

error: Content is protected !!