ತಾಲ್ಲೂಕು ಅರ್ಚಕರ ಸಂಘದ ಸದಸ್ಯರು ತಮ್ಮ ಸಮಸ್ಯೆಗಳನ್ನು ವಿವರಿಸಿ ಸರ್ಕಾರದಿಂದ ಅನುದಾನವನ್ನು ಕೊಡಿಸುವಂತೆ ಕೋರಿ ಶನಿವಾರ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದ ಮೂರ್ತಿ ಅವರಿಗೆ ಮನವಿಯನ್ನು ಸಲ್ಲಿಸಿದರು.
ನಗರದ ಮುತ್ತೂರು ಬೀದಿಯ ರಾಘವೇಂದ್ರಸ್ವಾಮಿ ದೇವಾಲಯದಲ್ಲಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮ ಮಂಡಳಿ ವತಿಯಿಂದ ಬಡ ಬ್ರಾಹ್ಮಣರಿಗೆ, ಅರ್ಚಕರಿಗೆ ಮತ್ತು ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆಂದು 50 ದಿನಸಿ ಕಿಟ್ ಗಳನ್ನು ತಂದು ವಿತರಿಸಿದ ಸಂದರ್ಭದಲ್ಲಿ ಅರ್ಚಕರು ತಮ್ಮ ತೊಂದರೆಗಳನ್ನು ಹೇಳಿಕೊಂಡರು.
ದೇವಸ್ಥಾನಗಳನ್ನು ತೆರೆಯುವಂತಿಲ್ಲವಾದುದರಿಂದ ಪುರೋಹಿತರು, ಆಗಮಿಕರು, ಉಪಾಂತರು ಯಾವುದೇ ಆದಾಯವಿಲ್ಲದೆ ಆರ್ಥಿಕವಾಗಿ ಜರ್ಜರಿತರಾಗಿದ್ದಾರೆ. ಇದಲ್ಲದೇ ಮುಜಾರಾಯಿ ಹೊರತುಪಡಿಸಿದಂತೆ ಬೇರೆ ದೇವಾಲಯಗಳಲ್ಲಿನ ಅರ್ಚಕರು ಮತ್ತು ಸಹಾಯಕರೂ ತೊಂದರೆಗೊಳಗಾಗಿದ್ದಾರೆ. ದಯಮಾಡಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮ ಮಂಡಳಿಯಿಂದ ಮತ್ತು ಸರ್ಕಾರದಿಂದ ಆರ್ಥಿಕ ನೆರವನ್ನು ಒದಗಿಸಿಕೊಡಬೇಕೆಂದು ಅರ್ಚಕರ ಸಂಘದವರು ವಿನಂತಿಸಿಕೊಂಡರು.
ಮನವಿಯನ್ನು ಸ್ವೀಕರಿಸಿದ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದ ಮೂರ್ತಿ ಅವರು ಮಾತನಾಡಿ, “ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮ ಮಂಡಳಿಯಲ್ಲಿಯೇ 30 ಕೋಟಿ ಹಣವಿದೆ. ಮುಖ್ಯಮಂತ್ರಿಗಳ ಅನುಮತಿ ಪಡೆದು ಲಾಕ್ ಡೌನ್ ಮುಗಿದ ನಂತರ ಅರ್ಚಕರು ಹಾಗೂ ಬಡ ಬ್ರಾಹ್ಮಣರ ಅಭಿವೃದ್ಧಿಗೆ ಯೋಜನೆಯನ್ನು ರೂಪಿಸಲಾಗುವುದು. ಸರ್ಕಾರದಿಂದಲೂ ಅನುದಾನ ಕೊಡಿಸಲು ಪ್ರಯತ್ನಿಸುತ್ತೇನೆ. ಶಿಡ್ಲಘಟ್ಟಕ್ಕೆ ಸಧ್ಯ 80 ದಿನಸಿ ಕಿಟ್ ವಿತರಿಸಿದ್ದು, ಇನ್ನೂ ಅಗತ್ಯವಿದ್ದಲ್ಲಿ ಕಳಿಸಿಕೊಡುತ್ತೇನೆ” ಎಂದು ಹೇಳಿದರು.
ತಾಲ್ಲೂಕು ಅರ್ಚಕರ ಸಂಘದ ಅಧ್ಯಕ್ಷ ವೈ.ಎನ್.ದಾಶರಥಿ, ಜಿಲ್ಲಾ ಉಪಾಧ್ಯಕ್ಷ ಶಿವಗುರುಶರ್ಮ, ಜಿಲ್ಲಾ ಬ್ರಾಹ್ಮಣ ಮಹಾಸಭಾ ಮಾಜಿ ಅಧ್ಯಕ್ಷ ಎಂ.ವಾಸುದೇವರಾವ್, ತಾಲ್ಲೂಕು ಅಧ್ಯಕ್ಷ ಎ.ಎಸ್.ರವಿ. ಶ್ರೀಕಾಂತ್, ಮುರಳಿ, ವಿ.ಕೃಷ್ಣ, ರಾಮಮೋಹನಶಾಸ್ತ್ರಿ, ಸತ್ಯನಾರಾಯಣರಾವ್, ಬಿ.ಕೃಷ್ಣಮೂರ್ತಿ ಹಾಜರಿದ್ದರು.
ಸರ್ಕಾರದಿಂದ ಅನುದಾನಕ್ಕಾಗಿ ಅರ್ಚಕರ ಮನವಿ
ಕೊಳವೆ ಬಾವಿ ಕೊರೆಯುವ ವಾಹನವನ್ನು ತಡೆದು ಪ್ರತಿಭಟನೆ
ಕೊಳವೆ ಬಾವಿಗಾಗಿ 1200 ಅಡಿಗಳಷ್ಟು ಆಳ ಕೊರೆದರೂ ನೀರು ಸಿಗದೇ ವಾಪಸು ಹೊರಟ ಬೋರ್‌ವೆಲ್ ವಾಹನವನ್ನು ತಡೆದು, ಮತ್ತೊಂದು ಕಡೆ ಕೊರೆಯುವಂತೆ ಗ್ರಾಮಸ್ಥರು ಒತ್ತಾಯಿಸಿ ಪ್ರತಿಭಟಿಸಿದ ಘಟನೆ ತಾಲ್ಲೂಕಿನ ಲಕ್ಕೇನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕೇನಹಳ್ಳಿ ಗ್ರಾಮದಲ್ಲಿ ಕಳೆದ ಆರು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆಯಿದೆ. ಜನರಿಗೆ ಕುಡಿಯುವ ನೀರು ಪೂರೈಸಲು ಖಾಸಗಿ ಕೊಳವೆಬಾವಿ ಮೂಲಕ ಗ್ರಾಮ ಪಂಚಾಯಿತಿಯವರು ಪೂರೈಸುತ್ತಿದ್ದರು. ಕಳೆದ ಕೆಲ ದಿನಗಳ ಹಿಂದೆ ಗ್ರಾಮ ಪಂಚಾಯಿತಿಯಿಂದ ಸ್ಥಳ ಗುರುತಿಸಿ ಕೊಳವೆ ಬಾವಿ ಕೊರೆಸಿದಾಗ ಕೊಳವೆಬಾವಿಯಲ್ಲಿ ನೀರು ಸಿಕ್ಕಿತ್ತು. ಇನ್ನೇನು ಗ್ರಾಮದ ಕೊಳವೆಬಾವಿಯಲ್ಲಿ ನೀರು ಸಿಕ್ಕಿದೆ ಎಂದು ಖಾಸಗಿ ಕೊಳವೆಬಾವಿಯಿಂದ ನೀರು ಪೂರೈಸುವುದನ್ನು ನಿಲ್ಲಿಸಿದರು. ಖಾಸಗಿ ಕೊಳವೆಬಾವಿಯ ಮಾಲೀಕ ತನ್ನ ಜಮೀನಿನಲ್ಲಿ ಬೆಳೆಯಿಟ್ಟಿದ್ದಾನೆ. ಗ್ರಾಮ ಪಂಚಾಯಿತಿಯಿಂದ ಪಂಪು ಮೋಟಾರ್ ಅಳವಡಿಸಿದ ಕೆಲವೇ ದಿನಗಳಲ್ಲಿ ನೀರು ಬರುತ್ತಿದ್ದ ಕೊಳವೆಬಾವಿ ಭತ್ತಿ ಹೋಗಿದೆ. ಇದೀಗ ಅದೇ ಕೊಳವೆಬಾವಿಯನ್ನು ಮತ್ತೆ ಪುನಃ 600 ಅಡಿ ಕೊರೆಸಿದರೂ ನೀರು ಸಿಕ್ಕಿಲ್ಲ. ಹಾಗಾಗಿ ಬೋರ್ ವೆಲ್ ವಾಹನ ವಾಪಸ್ ಹೊರಡಲು ಸಿದ್ದವಾಗುತ್ತಿದ್ದಂತೆ ಗ್ರಾಮಸ್ಥರು ಮತ್ತೊಂದು ಕೊಳವೆಬಾವಿ ಕೊರೆಯುವಂತೆ ಪಟ್ಟು ಹಿಡಿದು ವಾಹನವನ್ನು ತಡೆದು ಕೆಲ ಕಾಲ ಪ್ರತಿಭಟಿಸಿದರು.
ವಿಷಯ ತಿಳಿದ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ರಮೇಶ್ ಸ್ಥಳಕ್ಕೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿ ತಕ್ಷಣಕ್ಕೆ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮ ಜರುಗಿಸುವ ಭರವಸೆ ನೀಡಿದರಾದರೂ, ಗ್ರಾಮಸ್ಥರು ಟ್ಯಾಂಕರ್ ಮೂಲಕ ನೀರು ಪೂರೈಸುವುದು ಬೇಡ, ಗ್ರಾಮದಲ್ಲಿ ಮತ್ತೊಂದು ಕೊಳವೆಬಾವಿ ಕೊರೆಸುವಂತೆ ಬೇಡಿಕೆಯಿಟ್ಟರು. ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಒಂದೆರಡು ದಿನಗಳಲ್ಲಿ ಜಿಯಾಲಾಜಿಸ್ಟ್ ನ್ನು ಕರೆಸಿ ಪಾಯಿಂಟ್ ಗುರುತಿಸಿ ಕೊಳವೆಬಾವಿ ಬಾವಿ ಕೊರೆಸುವುದಾಗಿ ಭರವಸೆ ನೀಡಿದ ಮೇಲೆ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್, ಗ್ರಾಮಸ್ಥರಾದ ಎಲ್.ಎನ್.ವೆಂಕಟರಾಮರೆಡ್ಡಿ, ಎಲ್.ವಿ.ರಾಜಣ್ಣ, ಎಲ್.ನವೀನ್, ಎಲ್.ವಿ.ವೆಂಕಟರಾಮಿರೆಡ್ಡಿ ಹಾಜರಿದ್ದರು.
ವಿಧವೆಯರು ಮತ್ತು ಅಶಕ್ತರಿಗೆ ನೆರವು
ವಿಧವೆಯರು ಮತ್ತು ದೈಹಿಕವಾಗಿ ಅಂಗವಿಕಲರು ಹಾಗೂ ಅತ್ಯಂತ ಬಡ ಕುಟುಂಬಗಳಿಗೆ ಮಂಗಳವಾರ ಸಿಲ್ಸಿಲಾ-ಇ-ಅಮೀರಿಯಾ, ಹಬೀಬಿ ಫೌಂಡೇಶನ್ ಶಿಡ್ಲಘಟ್ಟ ಶಾಖೆಯ ವತಿಯಿಂದ ಒಟ್ಟು 300 ದಿನಸಿ ಕಿಟ್‌ಗಳನ್ನು ವಿತರಿಸಲಾಯಿತು.
ಸಾಂಕೇತಿಕವಾಗಿ ಹನ್ನೂಂದು ಮಂದಿಗೆ ನಗರಸಭೆ ಪೌರಾಯುಕ್ತ ತ್ಯಾಗರಾಜ್ ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಷ್ಟಕರ ಸಂದರ್ಭದಲ್ಲಿ ಬಡವರಿಗೆ ಸಹಾಯ ಮಾಡುತ್ತಿರುವ ಸಂಘಟನೆಯ ಸದಸ್ಯರಿಗೆ ಅಭಿನಂದಿಸಿ, ಈ ಸೇವಾ ಕಾರ್ಯವನ್ನು ಮುಂದುವರೆಸುವಂತೆ ತಿಳಿಸಿ, ಸರ್ಕಾರದ ಎಲ್ಲಾ ಆದೇಶಗಳನ್ನು ಪಾಲಿಸುವಂತೆ ಜನರಿಗೆ ಸಲಹೆ ನೀಡಿದರು.
“ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ಯಾಕಿಂಗ್ ಸಂದರ್ಭದಲ್ಲಿ ತೊಡಗಿರುವ ಎಲ್ಲಾ ಸ್ವಯಂಸೇವಕರು ಮಾಸ್ಕ್ ಮತ್ತು ಕೈಗವಸುಗಳನ್ನು ಬಳಸಿದ್ದಾರೆ. ಒಂದು ನಿರ್ದಿಷ್ಟ ಸ್ಥಳದಲ್ಲಿ ಜನಸಂದಣಿಯನ್ನು ತಪ್ಪಿಸಲು ಮತ್ತು ಅಂತರವನ್ನು ಕಾಯ್ದುಕೊಳ್ಳಲು ನಾವು ಅಗತ್ಯವಿರುವ ಜನರ ಮನೆಗಳಿಗೇ ಹೋಗಿ ದಿನಸಿ ಕಿಟ್‌ಗಳನ್ನು ವಿತರಿಸಲು ನಿರ್ಧರಿಸಿದ್ದೇವೆ” ಎಂದು ಶಹಬುದ್ದೀನ್ ಮತ್ತು ಖದೀರ್ ಷರೀಫ್ ಹೇಳಿದರು.
ಸಲೀಂ ಶಸಾಬ್, ಅಮೀರ್ ಜಾನ್ ಶಸಾಬ್, ನೂರಾನಿ ಶಸಾಬ್, ನಗರಸಭೆ ಸದಸ್ಯ ಮೌಲಾ, ಶಹಬುದ್ದೀನ್, ಜಿ.ರೆಹಮಾನ್, ಖದೀರ್ ಷರೀಫ್, ಸಾದಿಕ್ ಪಾಷಾ ಮತ್ತು ಸಿಲ್ಸಿಲಾ-ಇ-ಅಮೀರಾ ಸದಸ್ಯರು ಹಾಜರಿದ್ದರು.
ಹದಿನಾಲ್ಕು ತಿಂಗಳ ವೇತನ ನೀಡುವಂತೆ ಪೌರಕಾರ್ಮಿಕರ ಮನವಿ
ಕಳೆದ ಹದಿನಾಲ್ಕು ತಿಂಗಳುಗಳಿಂದ ನಮಗೆ ವೇತನ ನೀಡಿಲ್ಲ. ನಮಗೆ ವೇತನವನ್ನು ಕೊಡಿಸಿ ಎಂದು ಪೌರಕಾರ್ಮಿಕರು ತಹಶೀಲ್ದಾರ್ ಕೆ.ಅರುಂಧತಿ ಅವರಿಗೆ ಮಂಗಳವಾರ ಮನವಿಯನ್ನು ಸಲ್ಲಿಸಿದರು.
ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಆಗಿದ್ದು, ಎಲ್ಲರೂ ಸುರಕ್ಷಿತವಾಗಿ ಮನೆಯೊಳಗಿದ್ದರೆ, ಪೌರಕಾರ್ಮಿಕರಾದ ನಾವು ನಮ್ಮ ಪ್ರಾಣವನ್ನು ಪಣಕ್ಕಿಟ್ಟು, ನಿರಂತರವಾಗಿ ನಗರವನ್ನು ಸ್ವಚ್ಛಗೊಳಿಸುತ್ತಿದ್ದೇವೆ. ಹೊರಗುತ್ತಿಗೆ ಪೌರಕಾರ್ಮಿಕರಾದ 19 ಜನರಿಗೆ ನಗರಸಭೆಯಿಂದ 14 ತಿಂಗಳಿನಿಂದ ವೇತನ ನೀಡಿಲ್ಲ. ನಾವುಗಳು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದೇವೆ. ನಮ್ಮ ಕುಟುಂಬಗಳನ್ನು ಪೋಷಿಸಲು ಕಷ್ಟಪಡುತ್ತಿದ್ದೇವೆ. ಇನ್ನು ಶಾಲೆಗಳು ಪ್ರಾರಂಭವಾದ ನಂತರ ಮಕ್ಕಳ ವಿದ್ಯಾಭ್ಯಾಸಕ್ಕೆ ಶಾಲಾ ಶುಲ್ಕ ಪಾವತಿಸಲು ನಮ್ಮ ಬಳಿ ಹಣವಿಲ್ಲ. ಇದರಿಂದಾಗಿ ನಾವು ಮಾನಸಿಕವಾಗಿ ನೊಂದು ದಿಕ್ಕು ತೋಚದಂತಾಗಿದೆ. ಆದ್ದರಿಂದ ತಾವು ದಯವಿಟ್ಟು ಪೌರಕಾರ್ಮಿಕರ ಬಗ್ಗೆ ಕಾಳಜಿ ವಹಿಸಿ ನಮ್ಮ ವೇತನವನ್ನು ಕೊಡಿಸಿಕೊಡಿ ಎಂದು ಮನವಿ ಮಾಡಿಕೊಂಡರು.
ತಹಶೀಲ್ದಾರ್ ಕೆ.ಅರುಂಧತಿ ಮನವಿಯನ್ನು ಸ್ವೀಕರಿಸಿ ಮಾತನಾಡಿ, ಪೌರಕಾರ್ಮಿಕರ ವೇತನದ ಸಮಸ್ಯೆಯ ಬಗ್ಗೆ ಪೌರಾಯುಕ್ತರೊಂದಿಗೆ ಚರ್ಚಿಸಿದ್ದೇನೆ. ಅವರು ಇತ್ತೀಚೆಗಷ್ಟೇ ಅಧಿಕಾರವನ್ನು ವಹಿಸಿಕೊಂಡಿರುವುದರಿಂದ ಈ ಕಾರ್ಯವನ್ನು ಜರೂರಾಗಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ನಿಮ್ಮ ಸಮಸ್ಯೆ ಶೀಘ್ರದಲ್ಲಿ ಬಗೆಹರಿಯಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ತ್ಯಾಗರಾಜ್ ಮಾತನಾಡಿ, ಮೇಲಧಿಕಾರಿಗಳನ್ನು ಭೇಟಿಯಾಗಲು ಹೋಗುತ್ತಿದ್ದು, ಎಷ್ಟು ತಿಂಗಳ ವೇತನ ಸಾಧ್ಯವಾಗುವುದೋ ಅಷ್ಟನ್ನು ಅತಿ ಶೀಘ್ರವಾಗಿ ನೀಡುತ್ತೇನೆ. ದಯವಿಟ್ಟು ಎಲ್ಲರೂ ನಿಮ್ಮ ಕೆಲಸವನ್ನು ಮುಂದುವರೆಸಿ. ನಿಮ್ಮ ವೇತನ ಕೊಡಿಸುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದರು.
ಪೌರಕಾರ್ಮಿಕರಾದ ಮಂಜುನಾಥ, ರವಿಕುಮಾರ್, ನಾಗರಾಜ, ನಾರಾಯಣಪ್ಪ, ಭಾಸ್ಕರ್, ಪವನ, ಆಂಜಿನಪ್ಪ, ವೆಂಕಟೇಶ, ವೇಣುಗೋಪಾಲ ಹಾಜರಿದ್ದರು.
ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಿದವರನ್ನು ಶಿಕ್ಷಿಸಿ
ಆಶಾ ಕಾರ್ಯಕರ್ತೆಯ ಮೇಲಿನ ಹಲ್ಲೆಯನ್ನು ಖಂಡಿಸಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂದು ಒತ್ತಾಯಿಸಿ ಮಂಗಳವಾರ ತಾಲ್ಲೂಕು ಆಡಳಿತಕ್ಕೆ ಹಾಗೂ ಪೊಲೀಸ್ ಇಲಾಖೆಗೆ ಮನವಿಯನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸರ್ಕಾರಿ ನೌಕರರ ಸಂಘದ ಸದಸ್ಯರು ನೀಡಿದರು.
ಕೋವಿಡ್ – 19 ಸೋಂಕಿನ ನಿಯಂತ್ರಣಕ್ಕಾಗಿ ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಬಾಳೇಗೌಡನಹಳ್ಳಿ ಮತ್ತು ಗಂಗನಹಳ್ಳಿ ಗ್ರಾಮಗಳಲ್ಲಿ ಆಶಾ ಕಾರ್ಯಕರ್ತೆಯರು ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ವಿನಾಕಾರಣ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ರೀತಿ ದೌರ್ಜನ್ಯವೆಸಗಿದವರ ವಿರುದ್ಧ Disaster Management Act 2005 Section 51 & Section 188 ಅಡಿಯಲ್ಲಿ ಕಾನೂನು ಕ್ರಮ ಜರುಗಿಸಬೇಕೆಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಒತ್ತಾಯಿಸಿದರು.
ಈವರೆಗೆ ತಾಲ್ಲೂಕಿನಲ್ಲಿ ಎರಡು ಬಾರಿ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆದಿದೆ. ತಮ್ಮ ಪ್ರಾಣವನ್ನು ಪಣಕ್ಕಿಟ್ಟು, ಇತರರ ಆರೋಗ್ಯ ರಕ್ಷಣೆಗೆಂದು ಸೇವೆ ಸಲ್ಲಿಸುವವರಿಗೆ ಸೂಕ್ತ ರಕ್ಷಣೆ ನೀಡಬೇಕು. ಎಷ್ಟೇ ಒತ್ತಡ ಬಂದರೂ ಪರಿಗಣಿಸದೆ ತಪ್ಪೆಸಗಿದವರಿಗೆ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ತಹಶೀಲ್ದಾರರಲ್ಲಿ ಮನವಿ ಮಾಡಿದರು.
ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸುಬ್ಬಾರೆಡ್ಡಿ ಮಾತನಾಡಿ, ಸೋಮವಾರ ಗಂಗಹಳ್ಳಿ ಗ್ರಾಮದ ಆಶಾ ಕಾರ್ಯಕರ್ತೆಯಾದ ರವಣಮ್ಮ ಅವರು ಪೂಲಕುಂಟ್ಲಹಳ್ಳಿ ಗ್ರಾಮದಲ್ಲಿ ಸರ್ವೆ ಕಾರ್ಯದಲ್ಲಿ ನಿರತರಾಗಿದ್ದಾಗ ಪೂಲಕುಂಟ್ಲಹಳ್ಳಿ ಗ್ರಾಮದ ವ್ಶಕ್ತಿ ಕುಡಿದು ಹಲ್ಲೆ ಮಾಡಿದ್ದಾನೆ. ಅಡ್ಡ ಹೋದ ಆಕೆಯ ಗಂಡನನ್ನು ಕೂಡ ಹೊಡೆದಿದ್ದಾನೆ. ಇಬ್ಬರೂಚಿಂಚಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಹಲ್ಲೆ ಮಾಡಿದವರಿಗೆ ಶಿಕ್ಷೆ ಆಗಲೇ ಬೇಕು ಎಂದು ಆಗ್ರಹಿಸಿದರು.
ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸರ್ಕಾರಿ ನೌಕರರ ಸಂಘದ ಸದಸ್ಯರು ತಹಶೀಲ್ದಾರ್ ಕೆ.ಅರುಂಧತಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಆಹಾರ ಮತ್ತು ತರಕಾರಿ ಕಿಟ್ ವಿತರಣೆ
ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನದ ಅಂಗವಾಗಿ ಮಂಗಳವಾರ ಶಿಡ್ಲಘಟ್ಟ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಂಡಿಗನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 20 ಮಂದಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಆಹಾರ ಮತ್ತು ತರಕಾರಿ ಕಿಟ್ ಗಳನ್ನು ವಿತರಿಸಿದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಸದಸ್ಯರಾದ ಮುನಿರೆಡ್ಡಿ, ನರಸಿಂಹ ಮೂರ್ತಿ, ಗೋಪಾಲ್ ಹಾಜರಿದ್ದರು
ಮದ್ಯಕೊಳ್ಳಲು ಸಾಲುಗಟ್ಟಿ ನಿಂತ ಮದ್ಯಪ್ರಿಯರು
ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಮದ್ಯ ಮಾರಾಟ 42 ದಿನಗಳ ಬಳಿಕ ಸೋಮವಾರ ಆರಂಭವಾಗಿದೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮದ್ಯ ಮಾರಾಟ ಮಾಡುತ್ತಿರುವಲ್ಲಿ ಬಹುತೇಕ ಕಡೆ ಅಂತರವನ್ನು ಕಾಯ್ದುಕೊಳ್ಳದಿರುವುದು ಕಂಡುಬಂದಿತ್ತು.
ತಾಲ್ಲೂಕಿನಲ್ಲಿ ನಾಲ್ಕು ಎಂ.ಎಸ್.ಐ.ಎಲ್ ಮತ್ತು 15 ವೈನ್ ಶಾಪ್ ಗಳಿವೆ. ಬೆಳಗ್ಗೆ 9 ಗಂಟೆಗೇ ತೆರೆಯುವ ಮದ್ಯದಂಗಡಿಗಳ ಮುಂದೆ ಬಳಗಿನ ಜಾವದಿಂದಲೇ ಮದ್ಯಪ್ರಿಯರು ಮದ್ಯವನ್ನು ಕೊಳ್ಳಲೆಂದು ಸಾಲುಗಟ್ಟಿ ನಿಂತಿದ್ದರು. ಕೆಲವೆಡೆಯಂತೂ ಜನರ ನೂಕುನುಗ್ಗಲನ್ನು ಪೊಲೀಸರು ಹತೋಟಿಗೆ ತರಬೇಕಾಯಿತು.
ಮಧ್ಯಾಹ್ನದ ಹೊತ್ತಿಗೆ ಕಡಿಮೆ ಬೆಲೆಯ ಮದ್ಯದ ದಾಸ್ತಾನು ಮುಗಿಯುತ್ತಿದ್ದಂತೆಯೇ ಮದ್ಯದ ಅಂಗಡಿಗಳ ಮುಂದಿನ ಜನಸಂದಣಿ ಕಡಿಮೆಯಾಯಿತು. ಬಿರುಬಿಸಿಲನ್ನೂ ಲೆಕ್ಕಿಸದೇ ಬೆಳಗ್ಗೆ ಸಾಲುಗಟ್ಟಿ ನಿಂತಿದ್ದ ಜನರ ಮದ್ಯಪ್ರೇಮ, ಆರು ಅಡಿಗಳ ಅಂತರವನ್ನು ಕಾಯ್ದುಕೊಳ್ಳಬೇಕೆಂಬ ನಿಯಮ ಪಾಲಿಸದಿರುವುದು ಸಾರ್ವಜನಿಕರ ಆಕ್ಷೇಪಣೆಗೆ ಕಾರಣವಾಗಿತ್ತು.
“ನಗರಸಭೆಯವರು ಹಾಗೂ ತಾಲ್ಲೂಕು ಆಡಳಿತ ಮಾಸ್ಕ್ ಧರಿಸದವರಿಗೆ ಕೇವಲ ಒಂದು ದಿನ ದಂಡ ವಿಧಿಸಿ ಸುಮ್ಮನಾದರೆ ಸಾಲದು ಪ್ರತಿದಿನವೂ ಕಾನೂನು ಪಾಲಿಸದವರಿಗೆ ಬಿಸಿ ಮುಟ್ಟಿಸಬೇಕು. ಈಗ ಅಂಗಡಿಗಳೆಲ್ಲವಕ್ಕೂ ತೆರೆಯಲು ಅನುಮತಿ ಕೊಡಲಾಗಿದೆ. ಅಂಗಡಿಗಳ ಬಳಿ ಗುಂಪುಗೂಡುವವರಿಗೆ ಕಡಿವಾಣ ಹಾಕಬೇಕು. ಟೀ ಅಂಗಡಿಗಳು ತೆರೆದಿರುತ್ತವೆ. ಜನರು ಗುಂಪುಗೂಡುತ್ತಾರೆ. ಲಾಕ್ ಡೌನ್ ಮಾಡಿದ್ದೆಲ್ಲಾ ನಗರದಲ್ಲೀಗ ವ್ಯರ್ಥವಾಗಿದೆ” ಎಂದು ಮಂಜುನಾಥ್ ತಿಳಿಸಿದರು.
ಕುಡಿತ ಬಿಟ್ಟು ಕುರಿ ಸಾಕಾಣಿಕೆಗೆ ತೊಡಗಿದ ಅಪ್ಪೇಗೌಡನಹಳ್ಳಿಯ ಚಿಕ್ಕಮುನಿಯಪ್ಪ
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಚಿಕ್ಕಮುನಿಯಪ್ಪ ಲಾಕ್ ಡೌನ್ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಸ್ಥಗಿತಗೊಂಡಿದ್ದರಿಂದ ಪ್ರತಿದಿನ ಕುಡಿಯುತ್ತಿದ್ದವರು, ಕುಡಿತ ಬಿಡಬೇಕಾಯಿತು. ಅದರಿಂದಾಗಿ ಉಳಿಸಿಟ್ಟ ಹಣದಲ್ಲಿ ಒಂದು ಕುರಿ ಮತ್ತು ಕುರಿಮರಿಯನ್ನು ಕೊಂಡು ತಂದಿದ್ದಾರೆ.
ಕಳೆದ ಎರಡು ದಿನಗಳಿಂದ ಕುರಿಗಳಿಗೆ ಮೇವು ತಿನ್ನಿಸುತ್ತಾ ಅದರ ಲಾಲನೆ ಪಾಲನೆಯಲ್ಲಿ ತೊಡಗಿಸಿಕೊಮ್ಡಿರುವ ಚಿಕ್ಕಮುನಿಯಪ್ಪ, “ಎಣ್ಣೆ ಸಿಗದಂತಾದೊಡನೆ ಕೈಕಾಲು ಆಡಲಿಲ್ಲ. ಕೈಗಳು ಅದುರ ತೊಡಗಿದವು. ಏನು ಮಾಡಲೂ ತೋಚಲಿಲ್ಲ. ಕೂಲಿ ಕೆಲಸಕ್ಕೆ ಹೋಗತೊಡಗಿದೆ. ಮೊದಲಾದರೆ ಸಂಜೆಯಾದೊಡನೆ ಕುಡಿತಕ್ಕೆ ದುಡಿದ ಹಣವೆಲ್ಲಾ ಹೋಗುತ್ತಿತ್ತು. ಅದಿಲ್ಲದ್ದರಿಂದ ದುಡ್ಡೆಲ್ಲಾ ಜಮೆಯಾಗತೊಡಗಿತು. ಮೊನ್ನೆ ಹೋಗಿ 6,300 ರೂಗಳನ್ನು ಕೊಟ್ಟು ಒಂದು ಕುರಿ ಮತ್ತು ಒಂದು ಕುರಿಮರಿಯನ್ನು ತಂದೆ. ಅವನ್ನು ಪೋಷಣೆ ಮಾಡುತ್ತಿರುವಾಗ ಒಂದು ರೀತಿಯ ಬಾಂಧವ್ಯ ಮೂಡಿದೆ. ಇನ್ನು ಮುಂದೆ ನಾನು ಕುಡಿಯುವುದಿಲ್ಲ, ಕುರಿಗಳನ್ನೇ ಸಾಕಿ, ಹತ್ತಾರು ಕುರಿಗಳನ್ನು ಅಭಿವೃದ್ಧಿ ಮಾಡಿ ಜೀವನ ಸಾಗಿಸುತ್ತೇನೆ. ಅದೇ ನನ್ನ ಗುರಿ” ಎಂದು ಚಿಕ್ಕಮುನಿಯಪ್ಪ ಹೇಳಿದರು.
“ಕಳೆದ ಒಂದೂವರೆ ತಿಂಗಳಿನಿಂದ ಮದ್ಯ ಮಾರಾಟ ಇಲ್ಲದ ಕಾರಣ ಗ್ರಾಮಗಳಲ್ಲಿ ನೆಮ್ಮದಿ, ಶಾಂತಿ ಇತ್ತು. ಕುಡಿದು ಗಲಾಟೆ, ಜಗಳ ಮಾಡುತ್ತಿದ್ದವರು, ಸಾಲ ಕೇಳುವವರು ಇಲ್ಲವಾಗಿದ್ದರು. ಕುಡಿತದ ಚಟವಿದ್ದವರು ಮೂರು ಹೊತ್ತೂ ಚೆನ್ನಾಗಿ ತಿನ್ನುವ ಮೂಲಕ ಆರೋಗ್ಯವನ್ನು ಸುಧಾರಿಸಿಕೊಂಡಿದ್ದರು. ಕೌಟುಂಬಿಕ ವಾತಾವರಣ ಸುಧಾರಿಸಿತ್ತು. ಕುಡಿತದ ಚಟವಿದ್ದ ಚಿಕ್ಕಮುನಿಯಪ್ಪ, ಉಳಿಸಿದ ಹಣದಲ್ಲಿ ಕುರಿಸಾಕಣಿಕೆದಾರನಾದುದು ಸಕಾರಾತ್ಮಕ ಬೆಳವಣಿಗೆ. ಇಂಥಹವರನ್ನು ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ” ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಎ.ಎಂ.ತ್ಯಾಗರಾಜ್ ತಿಳಿಸಿದರು.
ಮಧ್ಯ ಮಾರಾಟಕ್ಕೆ Green Signal, ಸಿದ್ದಗೊಳ್ಳುತ್ತಿದೆ MSIL ಮಳಿಗೆ
ನಿರ್ಭಂದಿತ ವಲಗಳನ್ನು ಹೊರತುಪಡಿಸಿದಂತೆ ಉಳಿದೆಲ್ಲಾ ಕಡೆಗಳಲ್ಲಿ ಸೋಮವಾರದಿಂದ ಮಧ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿರುವ ಹಿನ್ನಲೆಯಲ್ಲಿ ಮದ್ಯ ಮಾರಾಟಕ್ಕೆ ಸೂಚಿಸಿರುವ ಎಲ್ಲಾ ಸೂಚನೆಗಳನ್ನು ಪಾಲಿಸುವ ಮೂಲಕ ತಾಲ್ಲೂಕಿನ ಚೌಡಸಂದ್ರದ ಬಳಿಯಿರುವ ಎಂ ಎಸ್ ಐ ಎಲ್ ಮಳಿಗೆ ಸಿದ್ದಗೊಳ್ಳುತ್ತಿದೆ.
ಕಳೆದ 42 ದಿಗಳ ನಂತರ ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವ ರಾಜ್ಯ ಸರ್ಕಾರ ಮದ್ಯ ಮಾರಾಟ ಮಾಡುವವರಿಗೆ ಹಲವು ಸೂಚನೆಗಳನ್ನು ನೀಡಿದೆ. ಮದ್ಯ ಖರೀದಿಸುವ ಗ್ರಾಹಕರ ನಡುವೆ ಆರು ಅಡಿ ಅಂತರ ಕಾಪಾಡುವುದು ಸೇರಿದಂತೆ ಕಡ್ಡಾಯವಾಗಿ ಮಾಸ್ಕ್ ಧರಿಸಿದವರಿಗೆ ಮಾತ್ರ ಮದ್ಯ ಮಾರಾಟ ಮಾಡಬೇಕು, ಹಾಗೂ ಮಳಿಗೆಯಲ್ಲಿ ಕೆಲಸ ಮಾಡುವ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಎಂಬಿತ್ಯಾದಿ ಸೂಚನೆಗಳನ್ನು ಪಾಲಿಸಲು ಮದ್ಯ ಮಾರಾಟ ಕೇಂದ್ರದವರು ಸನ್ನದ್ದರಾಗುತ್ತಿದ್ದಾರೆ.
ಕೆಲವೆಡೆ ಸಾಮಾಜಿಕ ಅಂತರ ಕಾಪಾಡಲು ಬಣ್ಣದಿಂದ ಬಾಕ್ಸ್ ಗಳನ್ನು ಬರೆಸಿದರೆ ಇನ್ನು ಕೆಲವೆಡೆ ಮದ್ಯ ಖರೀದಿಸುವವರ ಸಂಖ್ಯೆ ಜಾಸ್ತಿಯಾಗಿ ಗೊಂದಲವುಂಟಾಗಬಹುದು ಎಂಬ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಾಲಿನಲ್ಲಿ ಬರಲು ಅನುಕೂಲವಾಗುವಂತೆ ಮರಗಳಿಂದ ತಡೆಗೋಡೆಗಳನ್ನು ನಿರ್ಮಿಸುವ ಮೂಲಕ ಮದ್ಯ ಮಾರಾಟಕ್ಕೆ ಅಣಿಯಾಗುತ್ತಿದ್ದಾರೆ.
ತಾಲ್ಲೂಕು ಕಸಾಪ ವತಿಯಿಂದ ನಿತ್ಯೋತ್ಸವ ಕವಿಗೆ ಭಾವಪೂರ್ಣ ಶ್ರದ್ಧಾಂಜಲಿ
ತಾಲ್ಲೂಕಿನ ಹಂಡಿಗನಾಳ ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ತಾಲ್ಲೂಕು ಕಸಾಪ ವತಿಯಿಂದ ಭಾನುವಾರ ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮದ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿ ಕಸಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಅತ್ಯುತ್ತಮ ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೆ ನೀಡಿದ ಕೆ.ಎಸ್.ನಿಸಾರ್ ಅಹಮದ್ ಅವರು, ನಿತ್ಯೋತ್ಸವ ಕವಿ ಎಂದೇ ಪ್ರಖ್ಯಾತಿ ಪಡೆದು ಕನ್ನಡಿಗರ ಮನೆಮಾತಾಗಿದ್ದರು ಎಂದು ಅವರು ತಿಳಿಸಿದರು.
ಯಾವ ಪಂಥ, ಪಂಗಡಕ್ಕೆ ಕಟ್ಟಿಕೊಳ್ಳದೆ ಸ್ವಚ್ಛಂದವಾಗಿ ಹಕ್ಕಿಯಂತೆ ಕಾವ್ಯ ಕಟ್ಟುತ್ತಾ ಸರ್ವಜನ ಪ್ರಿಯರಾಗಿದ್ದ ನಿಸಾರ್ ಅಹ್ಮದ್ ಅವರ ನಮ್ಮನ್ನು ಅಗಲಿದರೂ ಅವರ ಕಾವ್ಯದ ಮೂಲಕ ನೆಮ್ಮ ನೆನಪಲ್ಲಿ ಸದಾ ಜೀವಂತವಾಗಿದ್ದಾರೆ. ನವೋದಯ ಹಾಗೂ ನವ್ಯ ಕಾವ್ಯ ಪರಂಪರೆಗಳಲ್ಲಿ ಉತ್ತಮ ಅಂಶಗಳನ್ನು ಪಡೆದು, ತಮ್ಮ ಕಾವ್ಯಗಳಲ್ಲಿ ಪ್ರಯೋಗಿಸಿ ತಮ್ಮದೇ ಆದ ವೈಶಿಷ್ಟ್ಯವನ್ನು ಬೆಳೆಸಿದ ಶ್ರೇಷ್ಠ ಕವಿಗಳಲ್ಲೊಬ್ಬರಾಗಿದ್ದಾರೆ. ಅವರ ಜನ್ಮಸ್ಥಳ ದೇವನಹಳ್ಳಿ.
ಸುಮಾರು 25 ಕೃತಿಗಳನ್ನು ರಚಿಸಿದ ಅವರು ಅನೇಕ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪಡೆದವರು. ಗಾಂಧಿಬಜಾರ್ ಹಾಗೂ ನಿತ್ಯೋತ್ಸವದ ಮೂಲಕ ಜನರ ಮನದ ಬಾಗಿಲು ತೆರೆದವರು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕೆಂಪೇಗೌಡ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ, ಪಂಪ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೆ ಭಾಜನರಾಗಿದ್ದ ಅವರು ಕನ್ನಡದ ಎಲ್ಲ ಪ್ರಾಕಾರಗಳನ್ನು ಶ್ರೀಮಂತಗೊಳಿಸಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಡಿಒ ಅಂಜನ್ ಕುಮಾರ್, ನಾರಾಯಣಸ್ವಾಮಿ, ಮದ್ದಿರೆಡ್ಡಿ ಹಾಜರಿದ್ದರು
ಇನ್ಫೋಸಿಸ್ ಫೌಂಡೇಷನ್ ನಿಂದ ಶಿಡ್ಲಘಟ್ಟಕ್ಕೆ ಆಗಮಿಸಿದ ಪರಿಹಾರ ಸಾಮಗ್ರಿಗಳು
ನಗರದ ಮುತ್ತೂರು ಬೀದಿಯಲ್ಲಿ ಶುಕ್ರವಾರ ಇನ್ಫೋಸಿಸ್ ಫೌಂಡೇಷನ್ ವತಿಯಿಂದ ಆಹಾರದ ಕಿಟ್ ಗಳನ್ನು ರಿಚ್ ಮಂಡ್ ಸೊಸೈಟಿ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್ ಹಾಗೂ ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಅವರಿಗೆ ಹಸ್ತಾಂತರಿಸಿ ಇನ್ಫೋಸಿಸ್ ಫೌಂಡೇಷನ್ ನ ರಮೇಶ್ ರೆಡ್ಡಿ ಮಾತನಾಡಿದರು.
ರಾಜ್ಯದಾದ್ಯಂತ ಬಡವರಿಗೆ ಕೋವಿಡ್ 19 ಪರಿಹಾರ ಸಾಮಗ್ರಿಗಳನ್ನು ಇನ್ಫೋಸಿಸ್ ಫೌಂಡೇಷನ್ ವತಿಯಿಂದ ನೀಡುತ್ತಿದ್ದು, ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರು ಹುಟ್ಟೂರಾದ ಶಿಡ್ಲಘಟ್ಟ ತಾಲ್ಲೂಕಿನಲ್ಲಿನ ಬಡ ಕೂಲಿ ಕಾರ್ಮಿಕರು ಹಾಗೂ ಆಹಾರದ ಅಗತ್ಯವಿರುವವರಿಗೆ ವಿತರಿಸಲು ಮೊದಲ ಹಂತದಲ್ಲಿ 500 ಆಹಾರದ ಕಿಟ್ ಅನ್ನು ಹಸ್ತಾಂತರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ರೇಷ್ಮೆಯನ್ನು ನಂಬಿ ಬದುಕುತ್ತಿರುವ ಕೂಲಿ ಕಾರ್ಮಿಕರು ಹಾಗೂ ದಿನಗೂಲಿ ನೌಕರರು, ವೃದ್ಧರು, ಅಸಹಾಯಕರು ಮುಂತಾದವರನ್ನು ಗುರುತಿಸಿ ಸಮರ್ಪಕವಾಗಿ ವಿತರಿಸಿ. ಮುಂದಿನ ಹಂತದಲ್ಲಿ ಇನ್ನಷ್ಟು ಕಿಟ್ ಗಳನ್ನು ಕಳುಹಿಸುವುದಾಗಿ ಅವರು ಹೇಳಿದರು.
ರಿಚ್ ಮಂಡ್ ಸೊಸೈಟಿ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್ ಮಾತನಾಡಿ, ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿಯವರು ಶಿಡ್ಲಘಟ್ಟ ತಾಲ್ಲೂಕಿನ ಬಡಜನರಿಗೆ ತಲುಪಿಸುವಂತೆ ತಿಳಿಸಿ ಆಹಾರದ ಕಿಟ್ ಗಳನ್ನು ಕಳುಹಿಸಿದ್ದಾರೆ. ತಹಶಿಲ್ದಾರ್ ಅವರ ಉಪಸ್ಥಿತಿಯಲ್ಲಿ ಬಡಜನರಿಗೆ ವಿತರಣೆ ಮಾಡುವುದಾಗಿ ಹೇಳಿದರು.
ಇನ್ಫೋಸಿಸ್ ಫೌಂಡೇಷನ್ ನ ಬಾಬಣ್ಣ, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಎ.ಆರ್.ನಾಗರತ್ನಮ್ಮ, ವೈಶಾಖ್ ಹಾಜರಿದ್ದರು
ಕರೋನಾ ತಂದಿಟ್ಟ ಸಂಕಷ್ಟದಲ್ಲಿ ಮಾನವೀಯತೆ ಬಹಳ ಮುಖ್ಯ – ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್
ನಗರದ ಕೋಟೆ ವೃತ್ತದಲ್ಲಿ ಬೈತುಲ್ ಮಾಲ್ ಸಹಾಯ ಕೇಂದ್ರದಲ್ಲಿ ಗುರುವಾರ ಮರ್ಕಜ್ ಎ ಇತ್ತೆಹಾದುಲ್ ಮುಸ್ಲಿಮೀನ್ (ಬೈತುಲ್ ಮಾಲ್ ಮತ್ತು ಜಕಾತ್ ಫೌಂಡೇಶನ್), ಮದೀನತುಲ್ ಉಲೂಮ್ ವೆಲ್ಫೇರ್ ಟ್ರಸ್ಟ್, ಮದೀನಾ ಮಸ್ಜಿದ್ ಆಡಳಿತ ಮಂಡಳಿ, ಟೀಮ್ ಸಿಲ್ಕಿಸ್ತಾನ್ (ಸ್ವಯಂ ಸೇವಕರ ಬಳಗ)ದ ವತಿಯಿಂದ ಅತ್ಯಂತ ಬಡ ಕುಟುಂಬಗಳಿಗೆ ಒಂದು ತಿಂಗಳಿಗಾಗುವಷ್ಟು ಆಹಾರ ಪದಾರ್ಥಗಳ ಕಿಟ್ ವಿತರಿಸಿ ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್ ಮಾತನಾಡಿದರು.
ಮಾನವೀಯತೆಯು ನಮ್ಮ ಸಂಸ್ಕೃತಿಯ, ಬದುಕಿನ ಭಾಗವಾಗಿದೆ. ಅದಕ್ಕಾಗಿಯೇ ಕೊರೊನಾ ತಂದಿಟ್ಟ ಸಂಕಷ್ಟಕರ ದಿನಗಳಲ್ಲಿ ಉಳ್ಳವರು, ಇಲ್ಲದವರಿಗೆ ನೆರವಾಗುತ್ತಿದ್ದಾರೆ. ಸರ್ಕಾರವನ್ನೇ ನೆಚ್ಚಿಕೊಂಡು ಕೂರದೆ ಸಂಘಸಂಸ್ಥೆಗಳು ಬಡವರಿಗೆ ಸಹಾಯಹಸ್ತವನ್ನು ಚಾಚುತ್ತಿದ್ದಾರೆ ಎಂದು ಅವರು ತಿಳಿಸಿದರು.
ಶಿಡ್ಲಘಟ್ಟದಲ್ಲಿ ರೇಷ್ಮೆಯನ್ನು ನಂಬಿ ಬದುಕುವ ನೂರಾರು ಕೆಲಸಗಾರರಿದ್ದಾರೆ. ಅವರುಗಳೀಗ ನಿರುದ್ಯೋಗಿಗಳಾಗಿದ್ದಾರೆ. ಅವರ ಕುಟುಂಬಗಳಿಗೆ ನೆರವಾಗುತ್ತಿರುವುದು ಅಭಿನಂದನೀಯ ಎಂದರು.
ಯೂನಿಟಿ ಸಿಲ್ ಸಿಲಾ ಅಧ್ಯಕ್ಷ ಮಹಮ್ಮದ್ ಅಸದ್ ಮಾತನಾಡಿ, ” ಟೀಮ್ ಸಿಲ್ಕಿಸ್ತಾನ್ ಸ್ವಯಂ ಸೇವಕರ ತಂಡದ ಮೂಲಕ ನಾವು ನಗರದಾದ್ಯಂತ ಸಮೀಕ್ಷೆ ನಡೆಸಿದ್ದೇವೆ. ಆಹಾರ ಪದಾರ್ಥಗಳು, ತರಕಾರಿ, ಔಷಧಿ ಅಗತ್ಯವಿರುವವರ ಪಟ್ಟಿ ತಯಾರಿಸಿದ್ದು, ಲಾಕ್ ಡೌನ್ ನಿಂದ ಕಷ್ಟಪಡುತ್ತಿರುವ 1058 ಬಡ ಕುಟುಂಬಗಳನ್ನು ನಾವು ಗುರುತಿಸಿದ್ದೇವೆ. ಮೊದಲ ಹಂತದಲ್ಲಿ 350 ಕುಟುಂಬಗಳಿಗೆ ಸಕ್ಕರೆ, ಅಕ್ಕಿ, ಮೈದಾ, ಬೇಳೆ, ಎಣ್ಣೆ, ರಾಗಿಹಿಟ್ಟು ಮೊದಲಾದ ಎಂಟು ಆಹಾರ ಪದಾರ್ಥಗಳ ಕಿಟ್ ವಿತರಿಸುತ್ತಿದ್ದೇವೆ. ಸ್ವಯಂ ಸೇವಕರು ಗುರುತಿಸಿರುವ ಮನೆಗಳಿಗೇ ತೆರಳಿ ಅವಶ್ಯಕ ವಸ್ತುಗಳನ್ನು ವಿತರಿಸಿ ಬರುತ್ತೇವೆ” ಎಂದು ಹೇಳಿದರು.
ತಹಶೀಲ್ದಾರ್ ಕೆ.ಅರುಂಧತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ನಗರಸಭೆ ಪೌರಾಯುಕ್ತ ತ್ಯಾಗರಾಜ್, ವಾರ್ಡ್ ನಂ 7 ರ ನಗರಸಭೆ ನೋಡಲ್ ಅಧಿಕಾರಿ ಸುಧಾ, ಸಬ್ ಇನ್ಸ್ ಪೆಕ್ಟರ್ ಲಿಯಾಖತುಲ್ಲಾ, ಮದೀನ ಮಸೀದಿ ಆಡಳಿತ ಮಂಡಳಿ ಸದಸ್ಯರಾದ ಎಚ್.ಎಸ್ ಫಯಾಜ್ ಅಹ್ಮದ್, ನಿಸಾರ್ ಅಹ್ಮದ್, ಸಾದಿಖ್ ಆಹ್ಮದ್, ಟೀಮ್ ಸಿಲ್ಕಿಸ್ತಾನ್ ಸ್ವಯಂ ಸೇವಕರಾದ ಮೊಹಮ್ಮದ್ ಅಸದ್, ಅಫ್ಸರ್ ಪಾಷ, ಖಾಜಾ ಷರೀಫ್, ಮುಜಾಹಿದ್ ಖಾನ್, ಫರೀದ್ ಖಾನ್, ಯೂನಿಟಿ ಸಿಲ್‌ಸಿಲಾ ಉಪಾಧ್ಯಕ್ಷ ಅಕ್ರಮ್ ಹಾಜರಿದ್ದರು.
ನೆಲಮಂಗಲದಿಂದ ನಾಗಮಂಗಲಕ್ಕೆ ಬಂದಿದ್ದ ಮದನಪಲ್ಲಿ ನಿವಾಸಿಗಳು
ಲಾಕ್ ಡೌನ್ ವಿಸ್ತರಣೆಯಾಗುತ್ತಿದ್ದಂತೆಯೇ ನಗರಗಳಿಂದ ರಾತ್ರಿಹೊತ್ತಿನಲ್ಲಿ ವಲಸಿಗರು ಆಗಮಿಸುತ್ತಿದ್ದಾರೆ. ಮಂಗಳವಾರ ಬೆಳಗಿನ ಜಾವ ತಾಲ್ಲುಕಿನ ನಾಗಮಂಗಲಕ್ಕೆ ಎರಡು ಸಂಸಾರಗಳು ಬೆಂಗಳೂರಿನ ನೆಲಮಂಗಲದಿಂದ ಆಗಮಿಸಿವೆ.
ನಾಗಮಂಗಲ ಮೂಲದ ಒಂದು ಸಂಸಾರ ಅಂದರೆ ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು ಬೆಂಗಳೂರಿನಲ್ಲಿ ಜೀವನ ನಡೆಸಲು ದುಸ್ತರವಾಗಿ ತಮ್ಮ ತಾಯಿಯ ಮನೆಗೆ ಬಂದಿದ್ದಾರೆ. ಅವರೊಂದಿಗೆ ಮದನಪಲ್ಲಿ ಮೂಲದ ಕುಟುಂಬ ಅಂದರೆ ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು ಕೂಡ ಬಂದಿದ್ದಾರೆ. ಎರಡು ಕುಟುಂಬಗಳು ಎರಡು ಬೈಕ್ ಗಳಲ್ಲಿ ಬೆಳಗಿನ ಜಾವ ಬಂದಿದ್ದನ್ನು ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಆರೋಗ್ಯ ಇಲಾಖೆಯವರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಜಂಗಮಕೋಟೆ ಆರೋಗ್ಯ ವೈದ್ಯಾಧಿಕಾರಿ ಅಂಬಿಕಾ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯಿತಿ ಅಧಿಕಾರಿ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಲಸಿಗರ ಆರೋಗ್ಯ ತಪಾಸಣೆ ನಡೆಸಿ ಮಾಹಿತಿಯನ್ನು ಸಂಗ್ರಹಿಸಿದರು.
“ನೀವುಗಳು ಮನೆ ಬಿಟ್ಟು ಹದಿನಾಲ್ಕು ದಿನಗಳು ಎಲ್ಲಿಯೂ ಹೋಗುವಂತಿಲ್ಲ” ಎಂದು ಅವರನ್ನು ಆರೋಗ್ಯ ಸಿಬ್ಬಂದಿ ಕ್ವಾರಂಟೈನ್ ಮಾಡಿದರು. ಮದನಪಲ್ಲಿ ಮೂಲದ ಕುಟುಂಬದವರನ್ನೂ ಸಹ ಗ್ರಾಮಸ್ಥರು ಹಾಗೂ ಆರೋಗ್ಯ ಸಿಬ್ಬಂದಿ ಊಟ ಕೊಡುತ್ತೇವೆ ಇಲ್ಲಿಯೇ ಕ್ವಾರಂಟೈನ್ ನಲ್ಲಿ ಇದ್ದುಬಿಡಿ ಎಂದರು. ಆದರೆ ಆ ವ್ಯಕ್ತಿಯು ತನಗೆ ಜನವರಿ 24 ಕೆಲಸದಿಂದ ತೆಗೆದು ಹಾಕಿದರು. ಪಿ.ಎಫ್ ಕೂಡ ಬರಲಿಲ್ಲ. ಆಗಿನಿಂದ ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದೆ. ಲಾಕ್ ಡೌನ್ ಆದ ಮೇಲೆ ನಮ್ಮ ಪರಿಸ್ಥಿತಿ ಚಿಂತಾಜನಕವಾಯಿತು. ಮದನಪಲ್ಲಿಯಲ್ಲಿ ನಮ್ಮ ತಾಯಿ ಮನೆಯಿದೆ ಅಲ್ಲಿಗೇ ಹೋಗುತ್ತೇವೆ ಎಂದು ಕೇಳಿಕೊಂಡರು. ಹಾಗಾಗಿ ಅವರಿಗೆ ಊಟ ನೀಡಿ, ಆರೋಗ್ಯ ಪರೀಕ್ಷಿಸಿ ನಂತರ ಸ್ಥಳಬಿಟ್ಟು ಹೋಗಲು ತಿಳಿಸಿದರು.
ನ್ಯಾಯಪರ ವೇದಿಕೆಯಿಂದ ಸೇವಾ ಕಾರ್ಯ
ತಾಲ್ಲೂಕಿನಾದ್ಯಂತ ನೂರಾರು ಮಂದಿ ನಿರ್ಗತಿಕರು, ಬಡವರು ಇದ್ದಾರೆ. ಅವರಿಗೆ ನ್ಯಾಯಪರ ವೇದಿಕೆಯ ಸದಸ್ಯರು ಪ್ರತಿದಿನ ಉತ್ತಮ ಗುಣಮಟ್ಟದ ಆಹಾರವನ್ನು ಕೊಡುತ್ತಿದ್ದಾರೆ ಎಂದು ತಹಶೀಲ್ದಾರ್ ಕೆ.ಅರುಂಧತಿ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಮಂಗಳವಾರ ರೇಷ್ಮೆ ಗೂಡಿನ ಮಾರುಕಟ್ಟೆಗೆ ಬರುವವರಿಗೆ ಅನುಕೂಲವಾಗಲೆಂದು ನ್ಯಾಯಪರ ವೇದಿಕೆ ವತಿಯಿಂದ ನೀಡಲಾದ 30 ಲೀಟರ್ ಸ್ಯಾನಿಟೈಜರ್ ಮತ್ತು ಒಂದು ಸಾವಿರ ಮಾಸ್ಕ್ ಗಳನ್ನು ರೇಷ್ಮೆ ಗೂಡಿನ ಮಾರುಕಟ್ಟೆಯ ಉಪನಿರ್ದೇಶಕರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಇರುವವರು ಇಲ್ಲದವರು ಎಲ್ಲರೂ ಇರುತ್ತಾರೆ. ಆದರೆ ಅವಶ್ಯಕವಿರುವವರಿಗೆ, ಹಸಿದವರಿಗೆ ಆಹಾರ ನೀಡುವುದು ಕರ್ತವ್ಯವಾಗುತ್ತದೆ. ತಾಲ್ಲೂಕಿನಲ್ಲಿ ಊಟದ ತೊಂದರೆಯಿರುವವರನ್ನು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಗೂ ನಗರದ ವ್ಯಾಪ್ತಿಯಲ್ಲಿ ಗುರುತಿಸಿದ್ದು, ಅವರಿಗೆ ಸಾಮಾಜಿಕ ಕಳಕಳಿಯುಳ್ಳ ಯುವಕರ ಮೂಲಕ ಆಹಾರವನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.
ನ್ಯಾಯಪರ ವೇದಿಕೆಯ ಬೆಂಗಳೂರು ಗ್ರಾಮಾಂತರ ಘಟಕದ ಅಧ್ಯಕ್ಷ ಭರತ್ ಮಾತನಾಡಿ, ಲಾಕ್ ಡೌನ್ ಮುಗಿಯುವವರೆಗೂ ಅಶಕ್ತರು, ವೃದ್ಧರು, ನಿರ್ಗತಿಕರು ಹಾಗೂ ಊಟದ ಅವಶ್ಯಕತೆಯಿರುವವರಿಗೆ ಆಹಾರವನ್ನು ನೀಡುತ್ತೇವೆ. ರೇಷ್ಮೆ ಗೂಡಿನ ಮಾರುಕಟ್ಟೆಗೆ ಬರುವವರು ತಪ್ಪದೇ ಸ್ಯಾನಿಟೈಜರ್ ನಿಂದ ಕೈ ಸ್ವಚ್ಛಗೊಳಿಸಿಕೊಂಡು ಬರಬೇಕು ಮತ್ತು ಮಾಸ್ಕ್ ಧರಿಸಬೇಕು ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ರೇಷ್ಮೆ ಗೂಡಿನ ಮಾರುಕಟ್ಟೆಯ ಉಪನಿರ್ದೇಶಕ ಸುಭಾಷ್ ಸಾತೇನಹಳ್ಳಿ, ನ್ಯಾಯಪರ ವೇದಿಕೆಯ ದೀಪು, ವಿನಯ್, ಸುರೇಶ್, ಸುಹೇಲ್ ಸಾಮ್ರಾಟ್ ಹಾಜರಿದ್ದರು.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ರೈತರಿಂದ ಸರ್ಕಾರಕ್ಕೆ ಮನವಿ
ಲಾಕ್‌ಡೌನ್ ಹಿನ್ನಲೆಯಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿರುವ ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಲಿಕ್ಕಾಗದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿ ಕೆಲವು ರೈತ ಮುಖಂಡರು ತಹಶೀಲ್ದಾರ್ ಕೆ.ಅರುಂಧತಿ ಮೂಲಕ ಸರ್ಕಾರಕ್ಕೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.
ರೈತ ಮುಖಂಡ ಬಿ.ಮುನಿಕೆಂಪಣ್ಣ ಮಾತನಾಡಿ, ರಾಜ್ಯದ ರೇಷ್ಮೆಬೆಳೆಗಾರರಿಗೆ ಸರ್ಕಾರ ಸೂಕ್ತವಾದ ಪರಿಹಾರ ನೀಡಬೇಕು. ಸರ್ಕಾರದಿಂದ ಉಚಿತವಾಗಿ ನೀಡುತ್ತಿರುವ ಹಾಲು ನಗರ ಪ್ರದೇಶಗಳಿಗೆ ಮಾತ್ರ ಸಮೀತವಾಗಿದ್ದು ಗ್ರಾಮಾಂತರ ಪ್ರದೇಶಗಳಿಗೂ ವಿಸ್ತರಿಸಬೇಕು, ದ್ರಾಕ್ಷಿ, ದಾಳಿಂಬೆ, ಸೀಬೆಹಣ್ಣು ಮುಂತಾದ ಬೆಳೆಗಳು ಕಟಾವಾಗದೆ ಹಣ್ಣಾಗಿ ಉದುರುತ್ತಿವೆ. ಆದ್ದರಿಂದ ತಕ್ಷಣ ಮಾರುಕಟ್ಟೆಯ ವ್ಯವಸ್ಥೆ ಮಾಡಬೇಕು. ಜಿಲ್ಲೆಯಲ್ಲಿ ಕೋಲ್ಡ್ ಸ್ಟೊರೇಜ್ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.
ಹೈನುಗಾರಿಕೆಯಲ್ಲಿ ತೊಡಗಿಸಿ ಕೊಂಡಿರುವ ರೈತರು ಪಶುಆಹಾರಕ್ಕಾಗಿ ದುಬಾರಿ ಬೆಲೆ ನೀಡುತ್ತಿದ್ದು ತಕ್ಷಣ ಎಂ.ಆರ್.ಪಿ.ಬೆಲೆಗೆ ಸಿಗುವಂತೆ ಕ್ರಮ ಕೈಗೊಳ್ಳಬೇಕು. 300 ರೂಪಾಯಿಗೆ ಮಾರಾಟವಾಗುತ್ತಿರುವ ರೇಷ್ಮೆಗೂಡಿನ ಬೆಲೆ ಏರಿಕೆ ಮಾಡಲು ಕ್ರಮ ಕೈಗೊಳ್ಳಬೇಕು, ಸರ್ಕಾರವೇ ಖರೀದಿ ಮಾಡಬೇಕು, ತಾಲ್ಲೂಕಿನಲ್ಲಿ ಮಾದಕ ದ್ರವ್ಯಗಳ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಅದರಿಂದ ಬಹಳಷ್ಟು ಮಂದಿ ಯುವಕರು ಚಟಕ್ಕೆ ಬಲಿಯಾಗುತ್ತಿದ್ದಾರೆ. ಕೂಡಲೇ ಅದಕ್ಕೆ ಕಡಿವಾಣ ಹಾಕಬೇಕು, ಕೃಷಿ ಚಟುವಟಿಕೆಗಳಿಗೆ ಹೊಸಸಾಲ ನೀಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು, ರಸಗೊಬ್ಬರಗಳು ಗ್ರಾಮ ಪಂಚಾಯಿತಿಯಲ್ಲಿ ಸಿಗುವಂತೆ ನೋಡಿಕೊಳ್ಳಬೇಕು, ಪಡಿತರ ಚೀಟಿಗಳು ಇಲ್ಲದವರಿಗೂ ಆಹಾರ ಸಾಮಾಗ್ರಿಗಳು ವಿತರಣೆಯಾಗಬೇಕು, ಟೋಲ್ ನಲ್ಲಿ ರೈತರಿಂದ ವಸೂಲಿ ಮಾಡುತ್ತಿರುವ ಟೋಲ್ ಶುಲ್ಕದಿಂದ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರ ಸ್ವೀಕರಿಸಿದ ತಹಶೀಲ್ದಾರ್ ಕೆ.ಅರುಂಧತಿ ಮಾತನಾಡಿ, ರೈತ ಮುಖಂಡರು ಕೊಟ್ಟಿರುವ ಮನವಿಯಲ್ಲಿ ನಮ್ಮ ಇಲಾಖೆಯ ಹಂತದಲ್ಲಿರುವ ಸಮಸ್ಯೆಗಳನ್ನು ನಾವು ಈಡೇರಿಸುತ್ತೇವೆ. ಉಳಿದ ಬೇಡಿಕೆಗಳನ್ನು ಮೇಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದರು.
ರೈತ ಮುಖಂಡರಾದ ಪ್ರತೀಶ್, ಅಂಬರೀಶ್, ಡಿ.ವಿ.ನಾರಾಯಣಸ್ವಾಮಿ ಹಾಜರಿದ್ದರು.
ಅಂತರ್ಜಲ ವೃದ್ಧಿಸುವುದೇ ನಮ್ಮ ಗುರಿ – ಕೆ.ಎಸ್.ಈಶ್ವರಪ್ಪ
ಪಂಡಿತ್ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲೀವಿಂಗ್ ಜೊತೆ ಸರ್ಕಾರ ಒಪ್ಪಂದ ಮಾಡಿಕೊಂಡಿದ್ದು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳು ಸೇರಿದಂತೆ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಅಂತರ್ಜಲ ವೃದ್ಧಿಸಲು ಹಲವು ಕಾಮಗಾರಿಗಳನ್ನು ನಡೆಸಲಾಗುವುದು ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ತಾಲ್ಲೂಕಿನ ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇಮಾರ್ಲಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಗ್ರಾಮೀಣ ಉದ್ಯಾನವನವನ್ನು ಉದ್ಘಾಟಿಸಿ ನಂತರ ವಿವಿದೆಡೆ ನರೇಗಾ ಯೋಜನೆಯಡಿ ನಡೆದಿರುವ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ಅವರು ಮಾತನಾಡಿದರು.
ನಮ್ಮ ಅಧಿಕಾರಿಗಳು ಮತ್ತು ಜನ ನರೇಗಾ ವಿಚಾರದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ವಿಶ್ವಾಸ ನನಗಿದೆ. ನಮ್ಮ ಪಕ್ಷದ ಮುಖ್ಯ ಉದ್ದೇಶ ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ಕಾಮಗಾರಿಗಳನ್ನು ನಡೆಸುವುದಾಗಿದೆ. ಜನರು ಕೆಲಸವಿಲ್ಲದೇ ಕಷ್ಟಪಡುತ್ತಿದ್ದಾರೆ. ಅವರಿಗೆ ನರೇಗಾ ಮೂಲಕ ಕೆಲಸ ಕೊಡುವುದು, ಅಂತರ ಕಾಯ್ದುಕೊಂಡು ಕೆಲಸ ಮಾಡಿ ಎಂದು ಧೈರ್ಯ ತುಂಬಿ ಜನರಿಗೆ ಕೆಲಸ ಕೊಡಲಾಗುತ್ತಿದೆ. 6,021 ಗ್ರಾಮ ಪಂಚಾಯಿತಿಗಳಲ್ಲಿ 5,400 ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನಡೆಸಲಾಗುತ್ತಿದೆ. ಜನರು ಸಂತುಷ್ಟರಾಗಿದ್ದಾರೆ ಎಂದರು.
ಶಿಡ್ಲಘಟ್ಟ ತಾಲ್ಲೂಕಿನ ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹೇಮಾರ್ಲಹಳ್ಳಿ ಗ್ರಾಮದಲ್ಲಿ ಹತ್ತು ಲಕ್ಷ ರೂಗಳ ನಿರ್ಮಿಸಿರುವ ಗ್ರಾಮೀಣ ಉದ್ಯಾನವನ ಉದ್ಘಾಟನೆ ಮಾಡಿ, ಸರ್ಕಾರಿ ಆಸ್ಪತ್ರೆಗೆ ಅಳವಡಿಸಿರುವ ಮಳೆನೀರು ಕೊಯ್ಲು, ಚೀಮಂಗಲ ಸರ್ಕಾರಿ ಪ್ರೌಡಶಾಲಾ ಕಾಂಪೌಂಡ್, ಮಳೆ ನೀರು ಕೊಯ್ಲು ಪದ್ದತಿ ವೀಕ್ಷಣೆ, ಮಳಮಾಚನಹಳ್ಳಿ ಗ್ರಾಮ ಪಂಚಾಯತಿಯ ಚಿಕ್ಕದಾಸರಹಳ್ಳಿ ಬಳಿ ನಾಲಾಬದು ನಿರ್ಮಾಣ ಕಾಮಗಾರಿ ವೀಕ್ಷಣೆ, ಅಬ್ಲೂಡು ಗ್ರಾಮ ಪಂಚಾಯತಿಯ ಚೀಮನಹಳ್ಳಿ ಗ್ರಾಮದಲ್ಲಿ ಕುಂಟೆ ಕಾಮಗಾರಿ ವೀಕ್ಷಣೆ ಮಾಡಿದರು.
ಸಂಸದ ಎಸ್.ಮುನಿಸ್ವಾಮಿ, ಶಾಸಕ ವಿ.ಮುನಿಯಪ್ಪ, ಆರ್.ಡಿ.ಪಿ.ಆರ್.ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಖ್, ಆಯುಕ್ತ ಅನಿರುಧ್ ಶ್ರವಣ್, ಜಿಲ್ಲಾ ಪಂಚಾಯಿತಿ ಸಿಇಓ ಫೌಝೀಯಾ ತರುನ್ನುಮ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚಿಕ್ಕನರಸಿಂಹಪ್ಪ, ಸದಸ್ಯೆ ತನುಜಾ ರಘು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶೋಭಾ ಶಶಿಕುಮಾರ್, ಇಓ ಬಿ.ಶಿವಕುಮಾರ್, ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಂಜಿನಪ್ಪ, ಪಿಡಿಒ ನೈನಾ ನಿಖತ್ ಆರಾ, ಚೀಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ, ಪಿಡಿಒ ಹರೀಶ್, ಹಾಗೂ ಸದಸ್ಯರು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಮಲಿಂಗಪ್ಪ, ಬಿ.ಸಿ.ನಂದೀಶ್, ಸುರೇಂದ್ರಗೌಡ, ಸುರೇಶ್ ಹಾಜರಿದ್ದರು.
ಮೂರನೇ ವಾರ್ಡಿನ ನಗರಸಭಾ ಸದಸ್ಯರಿಂದ ಪಡಿತರ ಕಿಟ್ ವಿತರಣೆ
ನಗರದ ವಾಸವಿ ಶಾಲಾ ಆವರಣದಲ್ಲಿ ಮೂರನೇ ವಾರ್ಡಿನ 150 ಬಡ ಕುಟುಂಬಗಳಿಗೆ ಭಾನುವಾರ ದಿನಸಿ ಪದಾರ್ಥಗಳ ಕಿಟ್ ವಿತರಿಸಿ ನಗರಸಭಾ ಸದಸ್ಯೆ ಚಿತ್ರಾ ಮನೋಹರ್ ಮಾತನಾಡಿದರು.
ಕೊರೊನಾ ಹಿಮ್ಮೆಟ್ಟಿಸುವ ಉದ್ದೇಶದಿಂದ ಸರ್ಕಾರ ಲಾಕ್ ಡೌನ್ ಮಾಡಿದೆ. ಆದರೆ ಇದರಿಂದಾಗಿ ಸಾಕಷ್ಟು ಮಂದಿ ಆರ್ಥಿಕವಾಗಿ ತೊಂದರೆಗೊಳಗಾಗಿದ್ದಾರೆ. ಅವರಿಗೆ ನೆರವಾಗುವ ಉದ್ದೇಶದಿಂದ ಅಗತ್ಯ ದಿನಸಿ ಪದಾರ್ಥಗಳನ್ನು ವಿತರಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಊಹೆಗೂ ನಿಲುಕದ ಈ ರೋಗ ವಿಶ್ವವೆಲ್ಲಾ ವ್ಯಾಪಿಸಿದೆ. ಅದಕ್ಕೆ ಔಷಧಿ ಕಂಡುಹಿಡಿಯುವವರೆಗೂ ಕಷ್ಟವಾದರೂ ಸರಿ ರೋಗ ಬರದಂತೆ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸರ್ಕಾರ ಹಾಗೂ ಆರೋಗ್ಯ ಇಲಾಖೆ ನೀಡುವ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು ಎಂದು ಹೇಳಿದರು.
ನಗರಸಭಾ ಸದಸ್ಯರಾದ ಎಲ್.ಅನಿಲ್ ಕುಮಾರ್, ಮುನಿರಾಜು, ಮಂಜುನಾಥ್, ಕೃಷ್ಣಮೂರ್ತಿ, ನಗರಸಭಾ ಸಿಬ್ಬಂದಿ ಮುರಳಿ, ಮಧುಲತಾ, ವೇದಮೂರ್ತಿ ಹಾಜರಿದ್ದರು.
ಸಚಿವರಿಂದ ಉದ್ಘಾಟನೆಗೊಳ್ಳಲು ಗ್ರಾಮೀಣ ಉದ್ಯಾನವನ ಸಜ್ಜು
ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ನರೇಗಾ ಯೋಜನೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲು ಮತ್ತು ವೀಕ್ಷಣೆ ಮಾಡಲು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಸೋಮವಾರ ಆಗಮಿಸಲಿದ್ದಾರೆ.
ಹೇಮಾರ್ಲಹಳ್ಳಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಾಣವಾದ ಗ್ರಾಮೀಣ ಉದ್ಯಾನವನವನ್ನು ಸಚಿವರು ಉದ್ಘಾಟಿಸಲಿದ್ದು, ಅದಕ್ಕಾಗಿ ಸಿದ್ಧತೆಗಳು ನಡೆದಿವೆ.
ತಾಲ್ಲೂಕಿನ ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹೇಮಾರ್ಲಹಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಗ್ರಾಮೀಣ ಉದ್ಯಾನವನ ಉದ್ಘಾಟನೆ, ಚೀಮಂಗಲ ಸರ್ಕಾರಿ ಶಾಲಾ ಕಾಂಪೌಂಡ್, ಮಳೆ ನೀರು ಕೊಯ್ಲು ಪದ್ದತಿ ವೀಕ್ಷಣೆ, ಮಳಮಾಚನಹಳ್ಳಿ ಗ್ರಾಮ ಪಂಚಾಯತಿಯ ಚಿಕ್ಕದಾಸರಹಳ್ಳಿ ಬಳಿ ನಾಲಾಬದು ನಿರ್ಮಾಣ ಕಾಮಗಾರಿ ವೀಕ್ಷಣೆ, ಆನೂರು ಗ್ರಾಮ ಪಂಚಾಯತಿಯ ಬೆಳ್ಳೂಟಿ ಗ್ರಾಮದಲ್ಲಿ ಕಲ್ಯಾಣಿ ವೀಕ್ಷಣೆ, ಅಬ್ಲೂಡು ಗ್ರಾಮ ಪಂಚಾಯತಿಯ ಚೀಮನಹಳ್ಳಿ ಗ್ರಾಮದಲ್ಲಿ ಕುಂಟೆ ಕಾಮಗಾರಿ ವೀಕ್ಷಣೆ ಮಾಡಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ಸಂಸದ ಎಸ್.ಮುನಿಸ್ವಾಮಿ,ಶಾಸಕ ವಿ.ಮುನಿಯಪ್ಪ, ಆರ್.ಡಿ.ಪಿ.ಆರ್.ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಖ್, ಆಯುಕ್ತ ಅನಿರುಧ್ ಶ್ರವಣ್, ಜಿಲ್ಲಾ ಪಂಚಾಯಿತಿ ಸಿಇಓ ಫೌಝೀಯಾ ತರುನ್ನುಮ್, ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲ್ಲೂಕು ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಭಾಗವಹಿಸಲಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಇಓ ಬಿ.ಶಿವಕುಮಾರ್ ತಿಳಿಸಿದ್ದಾರೆ.
ಕಾಡು ಮೊಲಗಳನ್ನು ಬೇಟೆ ಆಡಿದವರ ಬಂಧನ
ತಾಲ್ಲೂಕಿನ ಅಮ್ಮಗಾರಹಳ್ಳಿ ಬಳಿ ಮೂರು ಕಾಡು ಮೊಲಗಳನ್ನು ಬೇಟೆ ಆಡಿದ್ದ ಮೂವರು ವ್ಯಕ್ತಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬೈಯಪ್ಪನಹಳ್ಳಿಯ ವೆಂಕಟೇಶ(37), ನಲ್ಲರಾಳ್ಳಹಳ್ಳಿಯ ವಿಜಯಕುಮಾರ್(26) ಮತ್ತು ವೆಂಕಟೇಶ(27) ಎಂಬುವವರನ್ನು ಬಂಧಿಸಿ, ಸತ್ತ ಮೊಲಗಳನ್ನು ಹಾಗೂ ಕೊಲ್ಲಲು ಬಳಸಿದ ಆಯುಧವನ್ನು ವಶಕ್ಕೆ ಪಡೆದು, ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಡಿ ಮೊಕದ್ದಮೆಯನ್ನು ದಾಖಲಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಶ್ರೀಲಕ್ಷ್ಮಿ ತಿಳಿಸಿದ್ದಾರೆ.
ಆಶಾಕಾರ್ಯಕರ್ತೆಯರ ಸಲಹೆ ಸೂಚನೆ ಪಾಲಿಸಿ – ತನುಜಾ ರಘು
ತಾಲ್ಲೂಕಿನ ಮೇಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಿಬ್ಬಂದಿ ಹಾಗೂ ಆಶಾಕಾರ್ಯಕರ್ತೆಯರಿಗೆ ಎಚ್.ಡಿ.ದೇವೇಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಸೇವಾಭಿವೃದ್ಧಿ ಚಾರಿಟೆಬಲ್ ಟ್ರಸ್ಟ್ ಹಾಗೂ ಬಿ.ಎನ್.ರವಿಕುಮಾರ್ ಅಭಿಮಾನ ಬಳಗದಿಂದ ಶನಿವಾರ ಆಹಾರ ದಾನ್ಯಗಳ ಕಿಟ್ ವಿತರಿಸಿ ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾ ರಘು ಮಾತನಾಡಿದರು.
ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ನಿರಂತರವಾಗಿ ದುಡಿಯುತ್ತಿದ್ದಾರೆ. ಸಾರ್ವಜನಿಕರು ಅವರ ಸಲಹೆ, ಸೂಚನೆಗಳನ್ನು ತಪ್ಪದೇ ಪಾಲಿಸುವ ಮೂಲಕ ಮನೆಯಲ್ಲಿಯೇ ಉಳಿದುಕೊಂಡು ಕೊರೋನಾ ತಡೆಗಟ್ಟಲು ಸಹಕರಿಸಬೇಕು ಎಂದು ತಿಳಿಸಿದರು.
ಆರೋಗ್ಯ ಸಿಬ್ಬಂದಿ ಸೇರಿದಂತೆ ಆಶಾ ಕಾರ್ಯಕರ್ತೆಯರು ಕಳೆದ ಒಂದು ತಿಂಗಳಿನಿಂದ ಮನೆ, ಮಕ್ಕಳು ಕುಟುಂಬಗಳನ್ನು ಬಿಟ್ಟು ನಮಗಾಗಿ ದುಡಿಯುತ್ತಿದ್ದಾರೆ. ಇವರ ಕಾರ್ಯಕ್ಕೆ ಯಾವುದೇ ಬೆಲೆ ಕಟ್ಟಲಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ನಮಗಾಗಿ ದುಡಿಯುತ್ತಿರುವ ಆರೋಗ್ಯ ಸಿಬ್ಬಂದಿಗೆ ನಾವೆಲ್ಲಾ ಕೃತಜ್ಞರಾಗಿರಬೇಕು ಎಂದರು.
ಈ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಇರುವ 12 ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಿಬ್ಬಂದಿ ಹಾಗೂ ಆಶಾಕಾರ್ಯಕರ್ತೆಯರಿಗೆ ಎಚ್.ಡಿ.ದೇವೇಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಸೇವಾಭಿವೃದ್ಧಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಅಗತ್ಯ ಆಹಾರ ದಾನ್ಯಗಳ ಕಿಟ್ ವಿತರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮೇಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ 35 ಮಂದಿ ಆಶಾ ಕಾರ್ಯಕರ್ತೆಯರಿಗೆ ಟ್ರಸ್ಟ್ ವತಿಯಿಂದ ಆಹಾರ ಕಿಟ್ ಜೊತೆಗೆ ತಲಾ 500 ರೂ ನಗದು ಸಹ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ರಾಜಶೇಖರ್, ಡಾ.ಉಮೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಮುನಾ ಧರ್ಮೇಂದ್ರ, ಮಾಜಿ ಅಧ್ಯಕ್ಷ ಆರ್.ಎ.ಉಮೇಶ್ ಹಾಜರಿದ್ದರು.

