Home Blog Page 331

ರೈತ ಸಂಘದಿಂದ ಮನವಿ

0

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಸಾಮೂಹಿಕ ನಾಯಕತ್ವ) ಸದಸ್ಯರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಇಲ್ಲದೆ ಹಾಕಿದ ಬಂಡವಾಳವೂ ವಾಪಸ್ ಬರದೆ ರೈತರು ಕಂಗಾಲಾಗಿದ್ದಾರೆ. ಸರ್ಕಾರ ರೈತರಿಗೆ ನೀಡುವ ಎಲ್ಲಾ ಬಿತ್ತನೆ ಬೀಜಗಳು ಹಾಗೂ ಔಷಧಿಗಳು ಸಂಪೂರ್ಣವಾಗಿ ಉಚಿತವಾಗಿ ನೀಡಬೇಕು.ರೈತರು ತಮ್ಮ ಬೆಳೆಗಳಿಗೆ ಫಸಲು ಭೀಮಾ ಯೋಜನೆ ಅಡಿಯಲ್ಲಿ ವಿಮೆ ಹಣವನ್ನು ಕಟ್ಟಿದ್ದು ಬೆಳೆ ಸರಿಯಾಗಿ ಬಾರದೇ ಇರುವ ಹಿನ್ನೆಲೆಯಲ್ಲಿ ವಿಮೆ ಹಣ ಕಟ್ಟಿದ ಎಲ್ಲಾ ರೈತರಿಗೂ ಸಕಾಲದಲ್ಲಿ ಅವರವರ ಖಾತೆಗಳಿಗೆ ಭೀಮ ಯೋಜನೆಯ ಹಣ ಪಾವತಿಸಲು ಕ್ರಮವಹಿಸಬೇಕು. ಪ್ರತಿಯೊಬ್ಬ ರೈತನಿಗೂ ಒಂದು ಎಕರೆಗೆ 5 ಕೆಜಿ ಮಾತ್ರ ಬಿತ್ತನೆ ರಾಗಿ ನೀಡುತ್ತಿದ್ದು ಒಂದು ಎಕರೆಗೆ ಕನಿಷ್ಠ 20 ಕೆಜಿ ನೀಡಲು ಕ್ರಮ ಕೈಗೊಳ್ಳಬೇಕು. ಕೃಷಿ ಹೊಂಡಗಳಿಗೆ ಪೇಪರ್ ಟಾರ್ಪಲ್ ಗಾಗಿ ಹಣ ಕಟ್ಟಿದ್ದು ಇದುವರೆಗೂ ಕೆಲವರಿಗೆ ಕೃಷಿ ಹೊಂಡ ಪೇಪರ್ ಗಳನ್ನು ನೀಡಿರುವುದಿಲ್ಲ ಕೂಡಲೇ ಕ್ರಮ ಕೈಗೊಳ್ಳಬೇಕು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆ ಅಡಿಯಲ್ಲಿ ರೈತರಿಗೆ ನೀಡುವ 10 ಸಾವಿರ ರೂ ಸಹಾಯಧನ ಇನ್ನು ಕೆಲ ರೈತರ ಖಾತೆಗಳಿಗೆ ಜಮಾ ಆಗಿರುವುದಿಲ್ಲ. ಅವರ ನೊಂದಣಿ ಆಗಿದೆ ಹಣ ಬಂದಿಲ್ಲ ಹಾಗೂ ಪ್ರಧಾನಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ ನೊಂದಣಿಯಾಗಿರುವ ಎಲ್ಲಾ ರೈತರಿಗೂ ಪಾವತಿಸಲು ಕ್ರಮ ವಹಿಸಬೇಕು. ಎಂದು ಮನವಿ ಪತ್ರವನ್ನು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ಅವರಿಗೆ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್, ಒಂದು ಎಕರೆಗೆ 5 ಕೆಜಿ ರಾಗಿಯನ್ನು ನೀಡುತ್ತಿದ್ದು ಬಿತ್ತನೆ ರಾಗಿಯನ್ನು ತಾಂತ್ರಿಕವಾಗಿ ಬಳಸಿಕೊಂಡರೆ ಹೆಚ್ಚಿನ ಫಸಲು ಬರುತ್ತದೆ. ಕೃಷಿ ಹೊಂಡಕ್ಕೆ ಪೇಪರ್ ಗಳು ಕೊರೊನಾ ಕಾರಣದಿಂದ ವಾಹನ ಓಡಾಟವಿಲ್ಲದ ಕಾರಣ ಬರಲು ತೊಂದರೆಯಾಗಿದ್ದು ಕೂಡಲೇ ನಮ್ಮ ಕೈಗೊಳ್ಳುವುದಾಗಿ ತಿಳಿಸಿದರು. ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆ ಅಡಿಯಲ್ಲಿ ನೀಡುತ್ತಿರುವ 10 ಸಾವಿರ ರೂ ಹಣ ಅರ್ಜಿ ಸಲ್ಲಿಸಿರುವ ಎಲ್ಲರಿಗೂ ಬರುತ್ತದೆ. ಈಗಾಗಲೇ ಶೇಕಡ 96 ರಷ್ಟು ಫಲಾನುಭವಿ ಗಳಿಗೆ ಸಿಕ್ಕಿರುತ್ತೆ, ಉಳಿದ ಶೇಕಡ 4 ಭಾಗ ತಾಂತ್ರಿಕ ದೋಷದಿಂದ ತಡವಾಗಿರುತ್ತದೆ. ಎಲ್ಲವೂ ಸರಿಪಡಿಸಿ ಕೂಡಲೇ ಕ್ರಮಕೈಗೊಳ್ಳುವುದಾಗಿ ಹೇಳಿದರು.
ಬಿ.ಕೆ.ಮುನಿಕೆಂಪಣ್ಣ, ಶೆಟ್ಟಿಹಳ್ಳಿ ಅಂಬರೀಶ್, ಅಭಿಲಾಷ್ ಗೌಡ, ನಾರಾಯಣಸ್ವಾಮಿ, ಭಕ್ತರಹಳ್ಳಿ ಪ್ರತೀಶ್, ಆಂಜಿನಪ್ಪ, ಅಶ್ವತ್ಥನಾರಾಯಣ, ಮಂಜುನಾಥ ಹಾಜರಿದ್ದರು.

ಕೋವಿಡ್ 19 ಕುರಿತಂತೆ ಭಿತ್ತಿಪತ್ರ ಅನಾವರಣ

0

ಕೋವಿಡ್ 19 ಕುರಿತಂತೆ ಜನಸಾಮಾನ್ಯರಿಗೆ ಹೆಚ್ಚೆಚ್ಚು ತಿಳುವಳಿಕೆ ಮೂಡಿಸುವ ಕೆಲಸ ಆಗಬೇಕಿದೆ ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳದಲ್ಲಿ ಗುರುವಾರ ಚೈಲ್ಡ್  ರೈಟ್ಸ್  ಟ್ರಸ್ಟ್  ಸಂಸ್ಥೆ ಹೊರತಂದಿರುವ ಕೋವಿಡ್ 19 ಕುರಿತಂತೆ ಮಾಹಿತಿಯುಳ್ಳ ಭಿತ್ತಿಪತ್ರಗಳನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ಕೋವಿಡ್ 19 ಸೋಂಕು ಬರದ ಹಾಗೆ ನಾವು ವೈದ್ಯರು, ಆರೋಗ್ಯ ಇಲಾಖೆಯವರು ತಿಳಿಸಿರುವ ಮಾರ್ಗಸೂಚಿ ಹಾಗೂ ಮುನ್ನೆಚ್ಚರಿಕೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಚೈಲ್ಡ್  ರೈಟ್ಸ್  ಟ್ರಸ್ಟ್  ಕಾರ್ಯಕ್ರಮ ಸಂಯೋಜಕ ವೆಂಕಟೇಶ್ ಮಾತನಾಡಿ, “ಭಿತ್ತಿಪತ್ರಗಳ ಮೂಲಕ ಸಮುದಾಯದಲ್ಲಿ, ಮಕ್ಕಳಲ್ಲಿ, ಹಿರಿಯರಲ್ಲಿ ಕೋವಿಡ್ 19 ಅಂದರೇನು, ಅದರ ಲಕ್ಷಣಗಳೇನು, ಹೇಗೆ ಹರಡುತ್ತದೆ, ಅದನ್ನು ತಡೆಗಟ್ಟುವುದು ಹೇಗೆ ಮುಂತಾದ ವಿಷಯಗಳನ್ನು ತಿಳಿಸುತ್ತಾ ಜನಜಾಗೃತಿಯನ್ನು ಮೂಡಿಸುವುದು ನಮ್ಮ ಉದ್ದೇಶವಾಗಿದೆ. ತಾಲ್ಲೂಕಿನ ಎಲ್ಲಾ ಸರ್ಕಾರಿ ಇಲಾಖೆಗಳ ಬಳಿ, ಜನ ಜಂಗುಳಿ ಸೇರುವಲ್ಲಿ ಈ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಅರಿವು ಮೂಡಿಸುತ್ತೇವೆ. ನಮ್ಮ ಚೈಲ್ಡ್  ರೈಟ್ಸ್  ಟ್ರಸ್ಟ್  ಸಂಸ್ಥೆಯ ಉದ್ದೇಶ ಎಲ್ಲಾ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಹೆಣ್ಣುಮಕ್ಕಳು 18 ವರ್ಷದೊಳಗೆ ವಿವಾಹ ಆಗಬಾರದು, ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ” ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಪೌರಾಯುಕ್ತ ತ್ಯಾಗರಾಜ್, ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಸ್ಥೆಯ ತಾಲ್ಲೂಕು ಯೋಜನಾಧಿಕಾರಿ ಸತೀಶ್, ಸಿಬ್ಬಂದಿ ಕಾಂತರಾಜ್ ಹಾಜರಿದ್ದರು.

ಬೆರಳತುದಿಯಲ್ಲಿ ಸಿಗಲಿದೆ ಇನ್ಮುಂದೆ ಬಿಸಿಯೂಟ ಯೋಜನೆಯ ಮಾಹಿತಿ

0

ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಜಾರಿಯಲ್ಲಿರುವ ಮಹತ್ವಾಕಾಂಕ್ಷೆಯ ಮಧ್ಯಾಹ್ನದ ಅಕ್ಷರದಾಸೋಹ ಬಿಸಿಯೂಟ ಯೋಜನೆಯ ಸಂಪೂರ್ಣ ಮಾಹಿತಿಯು ರಾಜ್ಯಮಟ್ಟದಲ್ಲಿ ಸ್ಯಾಟ್ಸ್ ಮೂಲಕ ಕ್ಷಣಾರ್ಧದಲ್ಲಿ ಲಭ್ಯವಾಗಲಿದೆ ಎಂದು ತಾಲ್ಲೂಕು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಆಂಜನೇಯ ತಿಳಿಸಿದರು.
ನಗರದ ಡಾಲ್ಫಿನ್ ಶಾಲೆಯಲ್ಲಿ ತಾಲ್ಲೂಕು ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ಸ್ಯಾಟ್ಸ್ ಎಂಡಿಎಂ ತಂತ್ರಾಂಶ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಎಸ್‌ಎಟಿಎಸ್ ಎಂಡಿಎಂ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು ಮುಖ್ಯಶಿಕ್ಷಕರು ಪ್ರತಿನಿತ್ಯವೂ ಮಕ್ಕಳ ಹಾಜರಾತಿ, ಅಡುಗೆ ಸಿಬ್ಬಂದಿ ಹಾಜರಾತಿ, ಬಿಸಿಯೂಟ ನಿರ್ವಹಣೆ, ಮಾಸಿಕ ದಿನಸಿ ಬೇಡಿಕೆ, ಶಾಲೆಯಲ್ಲಿ ಲಭ್ಯ ಮೂಲಸೌಕರ್ಯಗಳ ಕುರಿತು ಅಪ್‌ಲೋಡ್ ಮಾಡಬೇಕು. ರಾಜ್ಯಮಟ್ಟದಲ್ಲಿ ಕ್ಷಣಾರ್ಧದಲ್ಲಿ ಮಾಹಿತಿಯ ಸಂಗ್ರಹಣೆಯಾಗಲಿದೆ ಎಂದರು.
ಕಲಿಕೆಗೆ ಅವಕಾಶ: ಈಗಾಗಲೇ ತಾತ್ಕಾಲಿಕವಾಗಿ ತಂತ್ರಾಂಶದಲ್ಲಿ ಮಾಹಿತಿ, ನಮೂನೆಗಳನ್ನು ತುಂಬಲು ಅವಕಾಶ ನೀಡಲಾಗಿದ್ದು ಶೈಕ್ಷಣಿಕ ವರ್ಷಾರಂಭಕ್ಕೆ ಶಾಲೆಗಳು ಆರಂಭವಾಗುವಷ್ಟರಲ್ಲಿ ಮುಖ್ಯಶಿಕ್ಷಕರು ಸ್ಯಾಂಪಲ್ ಮಾಹಿತಿಗಳನ್ನು ತುಂಬಿ ಅಭ್ಯಾಸ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದ್ದು ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದರು.
ಕ್ಷೇತ್ರಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿ, ತಾಲ್ಲೂಕಿನ ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಮಹತ್ವಾಕಾಂಕ್ಷೆಯ ಬಿಸಿಯೂಟ ಯೋಜನೆಯಿಂದ ಮಕ್ಕಳಲ್ಲಿ ಸಪೌಷ್ಟಿಕತೆ ಹೆಚ್ಚುವುದರಿಂದ ಮಾನಸಿಕ, ದೈಹಿಕ ಸದೃಡತೆ ವೃದ್ಧಿಯಾಗುತ್ತಿದೆ. ಯೋಜನೆಯು ಶಾಲೆಗಳಲ್ಲಿ ಯಶಸ್ವಿಯಾಗಿ ಪ್ರಾಮಾನಿಕವಾಗಿ ಅನುಷ್ಟಾನಗೊಳಿಸುವಲ್ಲಿ ಬೋದಕವರ್ಗವು ಮುತುವರ್ಜಿ ವಹಿಸಬೇಕು ಎಂದರು.
ವಿನ್ಸ್ಟಾರ್ ಮಾಹಿತಿ ಸಂಗ್ರಹಣೆ: ಚಿಕ್ಕಬಳ್ಳಾಪುರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕಿ ಮಮತಾ ಮಾತನಾಡಿ, ಯೂನಿಸೆಫ್ ಮತ್ತು ಕೇಂದ್ರದ ಮಾನವಸಂಪನ್ಮೂಲ ಸಚಿವಾಲಯವು ಶಾಲೆಗಳಲ್ಲಿ ಲಭ್ಯವಿರುವ ಸ್ವಚ್ಚತೆ, ಕುಡಿಯುವನೀರು, ಕಷವಿಲೇವಾರಿ ಮತ್ತಿತರ ಮಾಹಿತಿಗಳನ್ನೊಳಗೊಂಡಂತೆ ವಿನ್ಸ್ಟಾರ್ ರ್ಯಾಂ ಕಿಂಗ್ ಟೂಲ್ ಮೂಲಕ ಮಾಹಿತಿ ಸಂಗ್ರಹಣೆ ಮಾಡುತ್ತಿದ್ದು ಜಿಲ್ಲೆಯ ಎಲ್ಲಾ ಶಾಲೆಗಳೂ ತಪ್ಪದೇ ಕೂಡಲೇ ಆಪ್‌ನ್ನು ಡೌನ್‌ಲೋಡ್ ಮಾಡಿಕೊಂಡು ಮಾಹಿತಿ ತುಂಬಬೇಕಿದೆ ಎಂದರು.
ಬಿಆರ್‌ಸಿಯ ಪ್ರಭಾರಿ ಕ್ಷೇತ್ರಸಂಪನ್ಮೂಲಾಧಿಕಾರಿ ತ್ಯಾಗರಾಜು, ಇಸಿಒ ಭಾಸ್ಕರಗೌಡ, ಪರಿಮಳಾ, ಸಂಪನ್ಮೂಲ ವ್ಯಕ್ತಿ ಎಲ್.ವೆಂಕಟರೆಡ್ಡಿ, ರಾಜು, ಚಂದ್ರಶೇಖರ್, ಪ್ರಭಾಕರ್, ಚಂದ್ರು, ತಾಲ್ಲೂಕಿನ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಹಾಜರಿದ್ದರು.

ಎ.ಪಿ.ಎಂ.ಸಿ ಕಾಯ್ದೆ ಸುಗ್ರೀವಾಜ್ಞೆ ವಾಪಸ್ ಪಡೆಯಲು ರೈತ ಸಂಘದಿಂದ ಮನವಿ

0

ಶಿಡ್ಲಘಟ್ಟ : ಎ.ಪಿ.ಎಂ.ಸಿ ಕಾಯ್ದೆ ಸುಗ್ರೀವಾಜ್ಞೆ ವಾಪಸ್ ಪಡೆಯುವುದು ಹಾಗೂ ಮತ್ತಿತರ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಕೆ.ಎಸ್.ಪುಟ್ಟಣ್ಣಯ್ಯ ಬಣ) ಸದಸ್ಯರು ಮಂಗಳವಾರ ಸ್ಥಾನಿಕ ತಹಶೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರ ಕಾರ್ಪೊರೇಟ್ ಕಂಪೆನಿಗಳ ಲೂಟಿಗೆ ಕೃಷಿ ಉತ್ಪನ್ನಗಳ ಮಾರುಕಟ್ಟೆಯನ್ನು ಮುಕ್ತಿಗೊಳಿಸಲು ಜನ ವಿರೋಧದ ನಡುವೆಯೂ ಎ.ಪಿ.ಎಂ.ಸಿ ಕಾಯ್ದೆಗೆ ತಿದ್ದುಪಡಿ ಸುಗ್ರೀವಾಜ್ಞೆ ಹೊರಡಿಸಿದೆ. ಈ ಬಗ್ಗೆ ತೀವ್ರ ವಿರೋಧವನ್ನು ಈಗಾಗಲೇ ರೈತರು ಮತ್ತು ಕೃಷಿ ಕೂಲಿಕಾರರು ದಾಖಲಿಸಿದ್ದರೂ ಅದಕ್ಕೆ ಕಿಂಚಿತ್ತು ಬೆಲೆ ನೀಡದೇ ಹಾಗೂ ಯಾವುದೇ ಚರ್ಚೆ ನಡೆಸದೇ ಏಕಾಏಕೀ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಕಾಯ್ದೆಗೆ ತಿದ್ದುಪಡಿ ಕ್ರಮವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಕೆ.ಎಸ್.ಪುಟ್ಟಣ್ಣಯ್ಯ ಬಣ) ಬಲವಾಗಿ ವಿರೋಧಿಸುತ್ತದೆ.
ರಾಜ್ಯ ಸರ್ಕಾರ ಈ ಕೂಡಲೇ ಕಾರ್ಪೊರೇಟ್ ಪರವಾದ ಈ ಸುಗ್ರೀವಾಜ್ಞೆಯನ್ನು ವಾಪಸ್ಸು ಪಡೆಯಬೇಕು. ಬಡತನ, ಹಸಿವು, ನಿರುದ್ಯೋಗ ತಾಂಡವವಾಡುತ್ತಿರುವ ಈ ಸಂದರ್ಭದಲ್ಲಿ ಬಿ.ಪಿ.ಎಲ್ ಎ.ಪಿ.ಎಲ್ ಎನ್ನುವ ತಾರತಮ್ಯವಿಲ್ಲದೆ ಕನಿಷ್ಟ ಒಂದು ವರ್ಷ ರೇಷನ್ ನೀಡಬೇಕು. ರೈತರು, ಕೃಷಿ ಕೂಲಿಕಾರ್ಮಿಕರು, ಕಸುಬುದಾರರು ಮತ್ತು ಸ್ತ್ರೀಶಕ್ತಿ ಗುಂಪುಗಳ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಬೇಕು. ಕೃಷಿ ಸಾಲಗಳ ವಸೂಲಾತಿಯನ್ನು ನಿಲ್ಲಿಸಬೇಕು ಹಾಗೂ ಮುಂಗಾರು ಹಿನ್ನೆಲೆಯಲ್ಲಿ ಹೊಸ ಸಾಲಗಳನ್ನು ಕೂಡಲೇ ನೀಡಬೇಕು ಇನ್ನೂ ಮುಂತಾದ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಮುಖ್ಯಮಂತ್ರಿಗಳಿಗೆ ಸ್ಥಾನಿಕ ತಹಶೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಕೆ.ಎಸ್.ಪುಟ್ಟಣ್ಣಯ್ಯ ಬಣ) ಜಿಲ್ಲಾ ಉಪಾಧ್ಯಕ್ಷ ಟಿ.ಕೆ.ಅರುಣ್ ಕುಮಾರ್, ತಾಲ್ಲೂಕು ಅಧ್ಯಕ್ಷ ರವಿಪ್ರಸಾದ್, ಅನಿತಾ, ಚಿಕ್ಕವೆಂಕಟರಾಯಪ್ಪ, ಶ್ರೀಧರ್, ಕೋಟೆ ಚನ್ನೇಗೌಡ, ಸೊಣ್ಣೇಗೌಡ, ಸತೀಶ್ ಕುಮಾರ್ ಹಾಜರಿದ್ದರು.

ಬಡ್ಡಿ ಮಾಫಿಯಾದಿಂದ ಬಡವರನ್ನು ದೂರವಿರಿಸಲು ಬಡ್ಡಿ ರಹಿತ ಸಾಲ

0

ಬಡ್ಡಿ ಮಾಫಿಯಾದಿಂದ ಬಡಕುಟುಂಬಗಳನ್ನು ಬಿಡಿಸಲೆಂದು ಡಿಸಿಸಿ ಬ್ಯಾಂಕ್ ಬಡ್ಡಿ ರಹಿತ ಸಾಲವನ್ನು ಸ್ತ್ರೀಶಕ್ತಿ ಸಂಘಗಳಿಗೆ ನೀಡುತ್ತಿದೆ. ಇದು ಸಾಲವಲ್ಲ ತಾಯಂದಿರಿಗೆ ಮಡಿಲು ತುಂಬುವ ಕಾರ್ಯಕ್ರಮ. ಪಡೆದ ಹಣವನ್ನು ಪ್ರಾಮಾಣಿಕವಾಗಿ ನಮ್ಮ ಹೆಣ್ಣುಮಕ್ಕಳು ಕಟ್ಟುತ್ತಾರೆ ಎಂಬ ದೃಢ ನಂಬಿಕೆ ನಮ್ಮದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಬಳಿಯಿರುವ ಶ್ರೀ ಸಾಯಿಬಾಬ ಮಂದಿರದ ಸಭಾಂಗಣದಲ್ಲಿ ಮಂಗಳವಾರ ಮಳ್ಳೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಸುಮಾರು 31 ಸ್ವಸಹಾಯ ಸಂಘಗಳಿಗೆ 1 ಕೋಟಿ 25 ಲಕ್ಷ 72 ಸಾವಿರ ರೂಗಳನ್ನು ಬಡ್ಡಿ ರಹಿತವಾಗಿ ಸಾಲ ವಿತರಿಸಿ ಅವರು ಮಾತನಾಡಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಮತ್ತು ಮಹಿಳೆಯರಲ್ಲಿ ಆರ್ಥಿಕ ಚೈತನ್ಯ ತುಂಬುವ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದೆ. ಸಂಕಷ್ಟದ ಸಮಯದಲ್ಲಿ ಜನರಿಗೆ ನೆರವಾಗಬೇಕು ಎನ್ನುವ ಉದ್ದೇಶದಿಂದ ಡಿಸಿಸಿ ಬ್ಯಾಂಕ್ ವತಿಯಿಂದ ಸ್ವಸಹಾಯ ಸಂಘಗಳಿಗೆ ಬಡ್ಡಿ ರಹಿತ ಸಾಲ ವಿತರಣೆ ಮಾಡಲಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲಸೌಲಭ್ಯ ಪಡೆದರೆ, ಪಡೆದ ಸಾಲಕ್ಕೆ ಬಡ್ಡಿಯನ್ನು ಕಟ್ಟಬೇಕು, ಡಿಸಿಸಿ ಬ್ಯಾಂಕಿನಿಂದ ನೀಡುತ್ತಿರುವ ಸಾಲಕ್ಕೆ ಯಾವುದೇ ಬಡ್ಡಿಯಿಲ್ಲ. ಹಾಗಾಗಿ ತಾವು ಪಡೆಯುವ ಸಾಲದ ಹಣವನ್ನು ನಿಗಧಿತ ಉದ್ದೇಶಕ್ಕೆ ಬಳಸಿಕೊಂಡಲ್ಲಿ ಸಾಲದ ಮರುಪಾವತಿ ಸುಲಭವಾಗುತ್ತದೆ ಎಂದರು.
ತಾಲ್ಲೂಕಿನಾಧ್ಯಂತ ಇರುವ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆ ತೆಗೆಯುವ ಬದಲಿಗೆ ಪ್ರತಿಯೊಬ್ಬರೂ ಡಿಸಿಸಿ ಬ್ಯಾಂಕ್ ನಲ್ಲಿ ವೈಯಕ್ತಿಕ ಖಾತೆ ತೆರೆಯುವ ಮೂಲಕ ವ್ಯವಹರಿಸಿದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಣ್ಣುಮಕ್ಕಳಿಗೆ ಸಾಲ ವಿತರಿಸಲು ಸಾಧ್ಯವಾಗುತ್ತದೆ ಎಂದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ ಆರ್ಥಿಕ ಸಂಕಷ್ಟದ ನಡುವೆಯೂ ಡಿಸಿಸಿ ಬ್ಯಾಂಕಿನಿಂದ ಗ್ರಾಮೀಣ ಭಾಗದ ಸ್ವಸಹಾಯ ಸಂಘಗಳಿಗೆ ಒದಗಿಸುತ್ತಿರುವ ಬಡ್ಡಿರಹಿತ ಸಾಲವನ್ನು ಮಹಿಳೆಯರು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.
ಈ ಸಂದರ್ಭದಲ್ಲಿ ಮಳ್ಳೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ 31 ಮಹಿಳಾ ಸ್ವಸಹಾಯ ಸಂಘಗಳಿಗೆ 1 ಕೋಟಿ 25 ಲಕ್ಷ 72 ಸಾವಿರ ರೂಗಳ ಸಾಲ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ಮಳ್ಳೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಜಿ.ಎಂ.ರಾಮಿರೆಡ್ಡಿ, ಉಪಾಧ್ಯಕ್ಷ ಸಿ.ನಾರಾಯಣಸ್ವಾಮಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಆನಂದ್, ಮಾಜಿ ಹಾಪ್ ಕಾಮ್ಸ್ ಅಧ್ಯಕ್ಷ ಬಿ.ವಿ.ಮುನೇಗೌಡ, ಬಿ.ಎಂ.ವೆಂಕಟರೆಡ್ಡಿ, ಎಂ.ಆರ್.ಮುನಿಕೃಷ್ಣಪ್ಪ, ವೆಂಕಟಮೂರ್ತಿ, ಎಂ.ಎನ್.ನಾಗರಾಜ್, ಮಳ್ಳೂರು ಎಸ್ ಎಫ್ ಸಿ ಎಸ್ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ಚಿದಾನಂದ, ಸಂಜೀವಮ್ಮ ಹಾಜರಿದ್ದರು.

ಎಸ್.ಎನ್. ಕ್ರಿಯಾ ಟ್ರಸ್ಟ್ ವತಿಯಿಂದ ಆಟೋ ಚಾಲಕರಿಗೆ ದಿನಸಿ ಕಿಟ್ ವಿತರಣೆ

0

ಹೊಟ್ಟೆಪಾಡಿಗಾಗಿ ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದ ತಾಲ್ಲೂಕಿನ ಆಟೋ ಚಾಲರಿಗೆ ಲಾಕ್ ಡೌನ್ ನಿಂದಾಗಿ ಬಹಳ ತೊಂದರೆಯಾಗಿದೆ. ಇದನ್ನು ಮನಗಂಡು ನಮ್ಮ ಟ್ರಸ್ಟ್ ನಿಂದ ತಾಲ್ಲೂಕಿನ ಆಟೋ ಚಾಲಕರಿಗೆ ದಿನಸಿ ಕಿಟ್ ಗಳನ್ನು ನೀಡುತ್ತಿದ್ದೇವೆ ಎಂದು ಎಸ್. ಎನ್. ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಪುಟ್ಟು ತಿಳಿಸಿದರು.
ದಿಬ್ಬೂರಹಳ್ಳಿ ರಸ್ತೆಯಲ್ಲಿ ಇರುವ ಮೈದಾನದಲ್ಲಿ ನಗರ ಸೇರಿದಂತೆ ತಾಲ್ಲೂಕಿನ ಜಂಗಮಕೋಟೆ, ದಿಬ್ಬೂರಹಳ್ಳಿ ಸಾದಲಿಯ ಸುಮಾರು ಐದುನೂರಕ್ಕೂ ಹೆಚ್ಚು ಮಂದಿ ಆಟೋ ಚಾಲಕರಿಗೆ ದಿನಸಿ ಕಿಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು.
ಸರ್ಕಾರ ಆಟೋ ಚಾಲಕರಿಗೆ ಹಲವು ಪ್ಯಾಕೇಜುಗಳನ್ನು ಜಾರಿ ಮಾಡುತ್ತಿದೆ. ಆದರೂ ಹಲವರು ಅದರಿಂದ ವಂಚಿತರಾಗುತ್ತಿದ್ದಾರೆ. ಶಿಡ್ಲಘಟ್ಟ ಹೆಚ್ಚಿನ ಗ್ರಾಮೀಣ ಪ್ರದೇಶ ಹೊಂದಿರುವುದರಿಂದ ಬಡವರಿಗೆ ಮತ್ತು ಅಗತ್ಯವುಳ್ಳವರಿಗೆ ದಿನಸಿ ಕಿಟ್‌ಗಳನ್ನು ನೀಡುತ್ತಿದ್ದೇವೆ.
ಸರ್ಕಾರ ಲಾಕ್ ಡೌನ್ ಅನ್ನು ಮತ್ತಷ್ಟು ಸಡಿಲಗೊಳಿಸಿದೆ ಹಾಗಂತ ನಾವು ಇಚ್ಛಾನುಸಾರ ಹೊರಗಡೆ ಓಡಾಡಬಾರದು. ಮಾಸ್ಕ್ ಹಾಗೂ ಸ್ಯಾನಿಟೈಸರ್ ಅನ್ನು ಕಡ್ಡಾಯವಾಗಿ ಬಳಸಬೇಕು. ನಮ್ಮ ಅಕ್ಕ ಪಕ್ಕದವರು ಮಾಸ್ಕ್ ಧರಿಸದೆ ಹೊರಗಡೆ ಓಡಾಡುತ್ತಿದ್ದಾರೆ ಅವರಿಗೆ ತಿಳಿ ಹೇಳಬೇಕೆಂದರು.
ಈ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಅಪ್ಪು, ಎಸ್ ಎನ್ ಕ್ರಿಯಾ ಟ್ರಸ್ಟ್ ಸದಸ್ಯರಾದ ಆನೂರು ದೇವರಾಜ್, ವಿಶ್ವನಾಥ್, ಮಳಮಾಚನಹಳ್ಳಿ ಮುನಿರಾಜು, ರಮೇಶ್, ತಾದುರು ಮಹೇಶ್, ಸುರೇಶ್, ಜಂಗಮಕೋಟೆ ಬಾಬು, ವಿಜಯ್ ಕುಮಾರ್, ನಾರಾಯಣ ಸ್ವಾಮಿ, ಸುಬ್ರಮಣಿ, ಮುನಿರಾಜು ಹಾಜರಿದ್ದರು.

ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿ “ಈದ್” ಸಂಭ್ರಮಾಚರಣೆ

0

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ರಂಜಾನ್ ಎಂದರೆ ಸದಾ ವಿಶೇಷವಾಗಿರುತ್ತದೆ. ಆದರೆ ಈ ಬಾರಿ ಕೊರೊನಾ ವೈರಾಣು ಹಬ್ಬದ ಸಂಭ್ರಮವನ್ನು ಕಿತ್ತುಕೊಂಡಿದೆ. ಉಪವಾಸವಿದ್ದು ಆರೋಗ್ಯವನ್ನು ವೃದ್ಧಿಸಿಕೊಳ್ಳುವುದು ರಂಜಾನ್ ತಿಂಗಳ ಮುಖ್ಯ ಉದ್ದೇಶ. ಹೀಗಾಗಿ ಆರೋಗ್ಯಕ್ಕೆ ಪ್ರಾಧಾನ್ಯತೆಯನ್ನು ಕೊಟ್ಟ ತಾಲ್ಲೂಕಿನ ಮಸೀದಿಯ ಮುಖ್ಯಸ್ಥರು ಈ ಬಾರಿ ಸಾಮೂಹಿಕ ಪ್ರಾರ್ಥನೆ ಕೈಬಿಟ್ಟು ಮನೆಯಲ್ಲಿಯೇ ಭಕ್ತಿ ಸಮರ್ಪಿಸಲು ನಿರ್ಧರಿಸಿದ್ದಾರೆ.
ಪ್ರತೀ ವರ್ಷ ಈದ್ ಉಲ್ ಫಿತ್ರ್ ಗೆ ಭರ್ಜರಿ ತಯಾರಿ ನಡೆಸಲಾಗುತ್ತಿತ್ತು. ಎಲ್ಲಾ ಮಸೀದಿ, ದರ್ಗಾಗಳು ಸಂಭ್ರಮಕ್ಕೆ ಸಾಕ್ಷಿಯಾಗಿ ನಿಲ್ಲುತ್ತಿದ್ದವು. ಬಟ್ಟೆ, ಹಣ್ಣು, ಖರ್ಜೂರಗಳ ಅಂಗಡಿಗಳು ಮಸೀದಿಗಳ ಮುಂದೆ ಎದ್ದು ನಿಲ್ಲುತ್ತಿದ್ದವು. ಖರೀದಿಯ ಭರಾಟೆಯಂತೂ ಹಬ್ಬದ ಹಿಂದಿನ ದಿನ ಮಧ್ಯರಾತ್ರಿಯವರೆಗೂ ಸಾಗಿರುತ್ತಿತ್ತು.
ಈ ಬಾರಿ ಲಾಕ್ ಡೌನ್ ಹಾಗೂ ನಿಷೇಧಾಜ್ಞೆಯ ಕಾರಣದಿಂದ ಯಾವುದೇ ವ್ಯಾಪಾರ ವಹಿವಾಟು ನಡೆಯಲಿಲ್ಲ. “ಬಟ್ಟೆ ಖರೀದಿ ಹಾಗೂ ಇಫ್ತಾರ್ ಗೆ ಖರ್ಚು ಮಾಡುತ್ತಿದ್ದ ಹಣವನ್ನು ಬಡವರಿಗೆ ನೆರವಾಗಲು ಮತ್ತು ಕೊರೊನಾ ಪರಿಹಾರ ನಿಧಿಗೆ ನೀಡಲು ಬಹುಪಾಲು ಮಸೀದಿ ಮುಖಂಡರು ನಿರ್ಧರಿಸಿದ್ದಾರೆ. ಅಖಿಲ ಭಾರತ ಉಲ್ಮಾಗಳ ಒಕ್ಕೂಟ ಹಾಗೂ ಜಮಾಯಿತಿಗಳಿಂದ ಎಲ್ಲ ಮುಸ್ಲಿಮರಿಗೂ ಸಂದೇಶ ಬಂದಿದ್ದು, ವಿಜೃಂಭಣೆ ಆಚರಣೆ ಬೇಡ, ಜಕಾತ್ ದಾನಕ್ಕೆ ಆದ್ಯತೆ ನೀಡಿ, ಸಾಧ್ಯವಾದರೆ ಬಡವರಿಗೆ ಹೆಚ್ಚು ದಾನ ಮಾಡುವಂತೆ ಸೂಚಿಸಿದ್ದಾರೆ” ಎನ್ನುತ್ತಾರೆ ಧಾರ್ಮಿಕ ಮುಖಂಡರು. ಹಾಗಾಗಿ ಬಹುತೇಕರು ಹೊಸಬಟ್ಟೆ ಖರೀದಿಸದೆಯೇ ಮನೆಯಲ್ಲಿ ಈದ್ ಆಚರಣೆ ಮಾಡಿದ್ದಾರೆ.

ಮಾಜಿ ಸಂಸದರಿಂದ ಮುಸ್ಲಿಮರಿಗೆ ದಿನಸಿ ಕಿಟ್ ವಿತರಣೆ

0

ಭಾನುವಾರ ಅಗತ್ಯ ಸೇವೆಗಳನ್ನು ಹೊರತುಪಡಿಸಿ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ತಮ್ಮ ಬೆಂಬಲಿಗರೊಡನೆ ನಗರದ ಬಸ್ ನಿಲ್ದಾಣದ ಬಳಿಯಿರುವ ವೆಂಕಟರಾಯಪ್ಪ ಅವರ ಕಾರ್ಖಾನೆಯಲ್ಲಿ ಮುಸ್ಲಿಂ ಸಮುದಾಯದ ಬಡವರಿಗೆ ರಂಜಾನ್ ಹಬ್ಬದ ಅಂಗವಾಗಿ ಆಹಾರದ ಕಿಟ್ ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರು ಮಾತನಾಡಿ, “ಕೇಂದ್ರದ ಬಿಜೆಪಿ ಸರ್ಕಾರ, ದೇಶವನ್ನು ತೀರಾ ಕೆಳಮಟ್ಟಕ್ಕೆ ತಂದಿದೆ. ದೊಡ್ಡ ಸಾಹುಕಾರರಿಗೆ 15 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಬಡವರಿಗೆ 15 ಲಕ್ಷ ಕೊಡ್ತೀವಿ ಎಂದು ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ದೇಶ ಉಳಿಸಬೇಕು, ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕಾಗಿದೆ. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಡಿಯಲ್ಲಿ ಕೆಲಸ ಮಾಡುವಂತಾಗಬೇಕು. ಜನಪರವಾದ ಕೆಲಸಗಳು ಮಾಡುವುದರ ಬದಲಿಗೆ ಧರ್ಮಗಳ ಹೆಸರಿನಲ್ಲಿ ರಾಜಕೀಯ ಮಾಡಲಿಕ್ಕೆ ಹೊರಟಿದೆ ಕೇಂದ್ರ ಸರ್ಕಾರ” ಎಂದು ಕೇಂದ್ರ ಸರ್ಕಾರವನ್ನು ದೂರಿದರು.
“ರೇಷ್ಮೆನೂಲಿನ ಬೆಲೆ 4500 ರಿಂದ 2000 ಕ್ಕೆ ಬಂದಿದೆ. ಗೂಡು 500 ರಿಂದ 200 ಕ್ಕೆ ಇಳಿಕೆಯಾಗಿದೆ. ಇದನ್ನು ಸರಿದೂಗಿಸಲಿಕ್ಕೆ ಸಾಧ್ಯವಾಗುತ್ತಿಲ್ಲ. ಹಣ್ಣು ತರಕಾರಿಗಳ ಖರೀದಿಗಾಗಿ ಹಾಪ್ ಕಾಮ್ಸ್ ಗಳಿಗೆ ಶಕ್ತಿ ತುಂಬಿಸಬೇಕು” ಎಂದು ಒತ್ತಾಯಿಸಿದರು.
ಕೋಲಾರ ನಗರಸಭೆ ಸದಸ್ಯ ಮುಬಾರಕ್ ಮಾತನಾಡಿ, ದೇಶದಲ್ಲಿದ್ದ ಬಿಜೆಪಿ ಅಲೆಯಿಂದ ಕೆ.ಎಚ್.ಮುನಿಯಪ್ಪ ಅವರು ಸೋತಿದ್ದಾರೆಯೇ ಹೊರತು, ಯಾರೂ ಸೋಲಿಸಿಲ್ಲ. ಕೊರೊನಾ ರೋಗ ಜಾತಿ, ಮತ, ಧರ್ಮಗಳನ್ನು ನೋಡಿಕೊಂಡು ಬರುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಆರ್ಥಿಕ ವ್ಯವಸ್ಥೆ ತೀರಾ ಹದಗೆಟ್ಟಿದ್ದು, ದೇಶದ ಪ್ರಗತಿಯಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್, ಕಂಬದಹಳ್ಳಿ ಜಗದೀಶ್, ಸನಾವುಲ್ಲಾ, ಬಿ.ವಿ.ಮುನೇಗೌಡ, ರಮೇಶ್, ರಾಮಯ್ಯ, ವೇಣು, ಅಶ್ವಥನಾರಾಯಣರೆಡ್ಡಿ, ನಗರಸಭಾ ಸದಸ್ಯರಾದ ನರಸಿಂಹಮೂರ್ತಿ, ಕೃಷ್ಣಮೂರ್ತಿ, ಬಂಗಾರಪ್ಪ, ಕಂಬದಹಳ್ಳಿ ಜಗದೀಶ್, ಕೆ.ಎನ್.ಮುನೀಂದ್ರ, ಚಂದ್ರು, ಮಂಜುನಾಥ್, ಮುನಿಯಪ್ಪ, ಕಮಲಮ್ಮ, ಅಪ್ಸರ್ ಪಾಷ, ತಾಜ್ ಪಾಷ ಹಾಜರಿದ್ದರು.

ಸುಜ್ಞಾನನಿಧಿ ವಿದ್ಯಾರ್ಥಿವೇತನ

0

ನಗರದ ಚಿಂತಾಮಣಿ ರಸ್ತೆಯಲ್ಲಿರುವ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಚೇರಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ 2019-20 ನೇ ಸಾಲಿನ 2 ನೇ ಹಂತದ ಸುಜ್ಞಾನನಿಧಿ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶೋಭ ಶಶಿಕುಮಾರ್ ಮಾತನಾಡಿದರು.
ಗ್ರಾಮೀಣ ಪ್ರದೇಶಗಳ ಅಭಿವೃದ್ದಿ ಸೇರಿದಂತೆ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪಾತ್ರ ಅತ್ಯಂತ ಮಹತ್ವವಾದದ್ದು ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ನೂರಾರು ಜನಪರ ಕಾರ್ಯಕ್ರಮಗಳನ್ನು ಮಾಡುವ ಜೊತೆಗೆ ಸುಜ್ಞಾನನಿಧಿ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸುತ್ತಿದ್ದು ಶಿಷ್ಯವೇತನವನ್ನು ಪಡೆದುಕೊಂಡ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಬೆಳೆಯುವ ಜೊತೆಗೆ ಸಮಾಜದಲ್ಲಿ ಮಾದರಿಯಾಗಿ ಬೆಳೆಯಬೇಕು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ವಸಂತ್.ಬಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಈಗಾಗಲೇ ರಾಜ್ಯಾಧ್ಯಂತ 36,000 ವಿದ್ಯಾರ್ಥಿಗಳಿಗೆ ಸುಮಾರು 45 ಕೋಟಿ ರೂನಷ್ಟು ಶಿಷ್ಯವೇತನ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ತಾಲೂಕಿನಾಧ್ಯಂತ ಸುಮಾರು 39 ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಿದ್ದು ವಿದ್ಯಾರ್ಥಿಗಳ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
9 ಮಂದಿ ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಮಂಜೂರಾತಿ ಪತ್ರ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇಧಿಕೆ ಸದಸ್ಯ ಎ.ಎಂ.ತ್ಯಾಗರಾಜ್, ಗ್ರಾಮಾಭಿವೃದ್ದಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್‌ಕುಮಾರ್, ಕೃಷಿ ಮೇಲ್ವಿಚಾರಕ ಹರೀಶ್ ಹಾಜರಿದ್ದರು.

ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ

0

ಶಿಡ್ಲಘಟ್ಟ : ಕೊರೊನಾ ಸೋಂಕು ನಿಯಂತ್ರಿಸಲು ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಸಾಮೂಹಿಕ ಪ್ರಾರ್ಥನೆಯನ್ನು ನಿಷೇಧಿಸಲಾಗಿದೆ. ಮಾಸ್ಕ್ ಧರಿಸಿ, ಅಂತರವನ್ನು ಕಾಯ್ದುಕೊಂಡು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಮುಸ್ಲಿಂ ಬಾಂಧವರು ತಮ್ಮ ತಮ್ಮ ಮನೆಗಳಲ್ಲಿಯೇ ರಂಜಾನ್ ಹಬ್ಬವನ್ನು ಆಚರಿಸಿಕೊಳ್ಳಿ ಎಂದು ಕೋವಿಡ್ 19 ನ ತಾಲ್ಲೂಕು ನೋಡಲ್ ಅಧಿಕಾರಿ ಶಿವಕುಮಾರ್ ಮನವಿ ಮಾಡಿದರು.
ತಾಲ್ಲೂಕು ಕಚೇರಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಾಮೂಹಿಕ ಪೂಜೆ, ಪ್ರಾರ್ಥನೆ ಮೊದಲಾದ ಚಟುವಟಿಕೆಗಳಿಗೆ ಅವಕಾಶವಿಲ್ಲದ ಕಾರಣ ಮುಸ್ಲೀಮರು ಮನೆಗಳಲ್ಲಿಯೇ ರಂಜಾನ್ ಹಬ್ಬವನ್ನು ಆಚರಿಸಿಕೊಳ್ಳಬೇಕಿದೆ. ಹೊರ ಜಿಲ್ಲೆ ಅಥವಾ ರಾಜ್ಯಗಳಿಂದ ತಮ್ಮ ಬಂಧು ಮಿತ್ರರನ್ನು ಹಬ್ಬಕ್ಕೆ ಆಹ್ವಾನಿಸಬೇಡಿ. ನೀವು ಸುರಕ್ಷಿತವಾಗಿರಿ ಮತ್ತು ನಿಮ್ಮ ಕುಟುಂಬದವರ ಸುರಕ್ಷತೆಗೆ ಕಾಳಜಿ ವಹಿಸಿ ಎಂದು ಕೋರಿದರು.
ತಹಶೀಲ್ದಾರ್ ಕೆ.ಅರುಂಧತಿ ಮಾತನಾಡಿ, ಮೇ 24 ರಂದು ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಯುವುದಿಲ್ಲ. ಅಂದು ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲ ವ್ಯವಹಾರ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ ಎಂದರು.
ಇನ್ಸಿಟ್ಯೂಟ್ ಕ್ವಾರಂಟೈನ್ ನಲ್ಲಿ 17 ಮಂದಿ ಹಾಗೂ ಹೋಂ ಕ್ವಾರಂಟೈನ್ ನಲ್ಲಿ 117 ಮಂದಿ ಇದ್ದಾರೆ. ಹೊರ ರಾಜ್ಯಗಳಿಂದ ಬರುವ ವಲಸಿಗರನ್ನು ಕ್ವಾರಂಟೈನ್ ಮಾಡಲು ಹತ್ತು ವಿದ್ಯಾರ್ಥಿನಿಲಯಗಳನ್ನು ಸಜ್ಜುಗೊಳಿಸಲಾಗಿದೆ. ಹೊರ ಜಿಲ್ಲೆ ಅಥವಾ ಹೊರ ರಾಜ್ಯದಿಂದ ಯಾರಾದರೂ ಬಂದಲ್ಲಿ ಅಂತಹವರ ಬಗ್ಗೆ ಮಾಹಿತಿ ಕೊಡಿ ಎಂದು ಸಾರ್ವಜನಿಕರಲ್ಲಿ ವಿನಂತಿ ಮಾಡಿದರು.
ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ಮಾತನಾಡಿ, ಜನರು ಮಾಸ್ಕ್ ಧರಿಸದೇ ಓಡಾಡುವುದು, ಬೈಕ್ ನಲ್ಲಿ ಇಬ್ಬರು, ನಾಲ್ಕು ಚಕ್ರ ವಾಹನದಲ್ಲಿ ನಾಲ್ವರಿಗಿಂತಲೂ ಹೆಚ್ಚು ಮಂದಿ ಸಂಚರಿಸುವುದು ಗಮನಕ್ಕೆ ಬಂದಿದೆ. ಅಂತಹವರಿಗೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಆಡಳಿತ ವೈದ್ಯಾಧಿಕಾರಿ ಡಾ.ವಾಣಿ ಹಾಜರಿದ್ದರು.

ರೈತರ ಹಕ್ಕೊತ್ತಾಯಗಳನ್ನು ಈಡೇರಿಸಲು ಮನವಿ

0

ಹೈನುಗಾರಿಕೆಯಿಂದ ಜೀವನ ಸಾಗಿಸುತ್ತಿರುವ ರೈತರ ಹಕ್ಕೊತ್ತಾಯಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ರೈತ ಸಂಘದ ಮುಖಂಡರು ಶುಕ್ರವಾರ ಕೋಚಿಮುಲ್ ಉಪವ್ಯವಸ್ಥಾಪಕ ಚಂದ್ರಶೇಖರ್ ಅವರಿಗೆ ಮನವಿಯನ್ನು ಸಲ್ಲಿಸಿದರು.
ತಾಲ್ಲೂಕಿನಲ್ಲಿ ಲಾಕ್ ಡೌನ್ ದಿನದಿಂದ ಬೂಸಾ, ಹಿಂಡಿ, ಫೀಡ್ ಗಳ ಬೆಲೆ ಗಗನಕ್ಕೇರಿದೆ. ಒಂದೊಂದು ಕಡೆ ಒಂದೊಂದು ಬೆಲೆಯಿದೆ. ಅಂಗಡಿಗಳ ಮುಂದೆ ದರ ಪಟ್ಟಗಳ ಫಲಕವನ್ನು ಹಾಕಲು ಕ್ರಮ ಕೈಗೊಳ್ಳಬೇಕು ಮತ್ತು ರೈತರ ಬಳಿ ಹೆಚ್ಚಿನ ಬೆಲೆ ಪಡೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸೀಮೆಹಸು ಅಥವಾ ಎಮ್ಮೆಗಳು ಕೆಳಗೆ ಬಿದ್ದಾಗ ಮೇಲೆತ್ತುವ ಯಂತ್ರವನ್ನು ಕೋಚಿಮುಲ್ ವತಿಯಿಂದ ತರಿಸಬೇಕು. ತಾಲ್ಲೂಕಿನಲ್ಲಿ ಏಪ್ರಿಲ್ ತಿಂಗಳಿನಲ್ಲಿ ಕಾಲು ಬಾಯಿ ಜ್ವರದ ಲಸಿಕೆ ಹಾಕಬೇಕಿತ್ತು. ಆದರೆ ಇದುವರೆಗೂ ಹಾಕಿಲ್ಲ, ತಕ್ಷಣ ಹಾಕಿಸಬೇಕು. ಕುರಿ ಮೇಕೆ ಹಸು ಎಮ್ಮೆಗಳಿಗೆ ಏನಾದರೂ ಮೂಳೆ ಹಾಗೂ ನರಗಳಿಗೆ ಸಮಸ್ಯೆ ಆದಾಗ ಸಂಬಂಧಪಟ್ಟ ಎಂ.ಪಿ.ಸಿ.ಎಸ್ ಜವಾಬ್ದಾರಿ ತೆಗೆದುಕೊಂಡು ಸ್ಕ್ಯಾನಿಂಗ್, ಎಕ್ಸ್ ರೇ ಮಾಡಿಸಿ ಸೂಕ್ತ ಚಿಕಿತ್ಸೆ ಕೊಡಿಸಲು ಕ್ರಮ ವಹಿಸಬೇಕು ಎಂದು ಮನವಿ ಸಲ್ಲಿಸಿದರು.
ರೈತ ಸಂಘದ ಮುಖಂಡರು ಉಪ ತಹಶೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ರೈತರ ಸಮಸ್ಯೆ ಬಗ್ಗೆ ದೂರು ನೀಡಲು ಬಂದ ರೈತ ಮಹಿಳೆ ನಳಿನಿ ಅವ್ರೊಂದಿಗೆ ಅನುಚಿತವಾಗಿ ವರ್ತಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ದರ್ಪ ತೋರಿದ ಸಚಿವ ಮಧುಸ್ವಾಮಿ ವಿರುದ್ಧ ಕ್ರಮ ಜರುಗಿಸಬೇಕೆಂದು ಮನವಿ ಸಲ್ಲಿಸಿದರು.
ರೈತ ಸಂಘದ ಬೆಳ್ಳೂಟಿ ಮುನಿಕೆಂಪಣ್ಣ, ಭಕ್ತರಹಳ್ಳಿ ಪ್ರತೀಶ್, ರಮೇಶ್ ಕುಮಾರ್, ವೆಂಕಟೇಶಪ್ಪ, ಅಂಬರೀಷ, ನಾರಾಯಣಸ್ವಾಮಿ ಹಾಜರಿದ್ದರು.

ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು – ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ

0

ತಾಲ್ಲೂಕಿನ ವೈ ಹುಣಸೇನಹಳ್ಳಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆವರಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ವೈ.ಹುಣಸೇನಹಳ್ಳಿ ಎಸ್.ಎಫ್.ಸಿ.ಎಸ್ ಹಾಗೂ ಆನೇಮಡುಗು ವ್ಯವಸಾಯ ಸಹಕಾರ ಸಂಘದ ಸ್ವ ಸಹಾಯ ಸಂಘಗಳಿಗೆ ಸಾಲ ವಿತರಣಾ ಸಮಾರಂಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿದರು.
ಮಹಿಳೆಯರು ಆರ್ಥಿಕವಾಗಿ ಸಬಲರಾದಾಗ ಮಾತ್ರ ಹೊಸ ಸಮಾಜ ನಿರ್ಮಾಣ ಮಾಡಲು ಸಾಧ್ಯ, ಆ ನಿಟ್ಟಿನಲ್ಲಿ ತಾಲ್ಲೂಕಿನಾದ್ಯಂತ ಸುಮಾರು ಒಂದು ಲಕ್ಷ ಹೆಣ್ಣು ಮಕ್ಕಳಿಗೆ ಬಡ್ಡಿ ರಹಿತ ಸಾಲ ನೀಡಲು ಡಿಸಿಸಿ ಬ್ಯಾಂಕ್ ಈಗಾಗಲೇ ಚಾಲನೆ ನೀಡಿದೆ ಎಂದು ತಿಳಿಸಿದರು.
ಸಂಕಷ್ಟದ ಸಮಯದಲ್ಲಿ ಜನರಿಗೆ ನೆರವಾಗಬೇಕು ಎನ್ನುವ ಉದ್ದೇಶದಿಂದ ಡಿಸಿಸಿ ಬ್ಯಾಂಕ್ ವತಿಯಿಂದ ಬಡ್ಡಿ ರಹಿತ ಸಾಲ ವಿತರಣೆ ಮಾಡಲಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲಸೌಲಭ್ಯ ಪಡೆದುಕೊಂಡಲ್ಲಿ ಪಡೆದ ಸಾಲಕ್ಕೆ ಬಡ್ಡಿಯನ್ನು ಕಟ್ಟಬೇಕು, ಡಿಸಿಸಿ ಬ್ಯಾಂಕಿನಿಂದ ನೀಡುತ್ತಿರುವ ಸಾಲಕ್ಕೆ ಯಾವುದೇ ಬಡ್ಡಿಯಿಲ್ಲ.
ಹಾಗಾಗಿ ತಾವು ಪಡೆಯುವ ಸಾಲದ ಹಣವನ್ನು ನಿಗಧಿತ ಉದ್ದೇಶಕ್ಕೆ ಬಳಸಿಕೊಂಡಲ್ಲಿ ಸಾಲದ ಮರುಪಾವತಿ ಸುಲಭವಾಗುತ್ತದೆ ಎಂದರು.ಶಾಸಕ ವಿ.ಮುನಿಯಪ್ಪ ಮಾತನಾಡಿ, ಆರ್ಥಿಕ ಸಂಕಷ್ಟದ ನಡುವೆಯೂ ಡಿಸಿಸಿ ಬ್ಯಾಂಕಿನಿಂದ ಗ್ರಾಮೀಣ ಭಾಗದ ಸ್ವಸಹಾಯ ಸಂಘಗಳಿಗೆ ಒದಗಿಸುತ್ತಿರುವ ಬಡ್ಡಿರಹಿತ ಸಾಲವನ್ನು ಮಹಿಳೆಯರು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.
ಈ ಸಂದರ್ಭದಲ್ಲಿ ವೈ ಹುಣಸೇನಹಳ್ಳಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ 12 ಮಹಿಳಾ ಸ್ವಸಹಾಯ ಸಂಘಗಳಿಗೆ 39 ಲಕ್ಷ 60 ಸಾವಿರ ಹಾಗೂ ಆನೇಮಡುಗು ವ್ಯವಸಾಯ ಸೇವಾ ಸಹಕಾರ ಸಂಘದ 9 ಸಂಘಗಳಿಗೆ 31 ಲಕ್ಷ 70 ಸಾವಿರ ಸಾಲ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ಜಿಲ್ಲಾ ಪಂಚಾಯಿತಿ ಸದಸ್ಯ ಎ.ಎಂ.ಜಯರಾಮರೆಡ್ಡಿ, ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್, ವೈ ಹುಣಸೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರಿಪ್ರಸಾದ್, ಎಸ್ ಎಫ್ ಸಿ ಎಸ್ ಅಧ್ಯಕ್ಷ ಬಸವರಾಜ್, ಉಪಾಧ್ಯಕ್ಷ ಕ್ಯಾತಣ್ಣ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಆನಂದ್, ವೈ ಹುಣಸೇನಹಳ್ಳಿ ಎಸ್‌ಎಫ್‌ಸಿಎಸ್ ಕಾರ್ಯನಿರ್ವಹಣಾಧಿಕಾರಿ ಅಕ್ಕಲಪ್ಪ, ಆನೇಮಡುಗು ಕಾರ್ಯ ನಿರ್ವಹಣಾಧಿಕಾರಿ ಸದಾಶಿವರೆಡ್ಡಿ, ಕೆ.ಎಂ.ವೆಂಕಟೇಶ್, ಸುಬ್ರಮಣಿ, ಹಾಜರಿದ್ದರು.

ರೈತರಿಗೆ ಆಸರೆಯಾದ ಕೃಷಿ ಯಂತ್ರಧಾರೆ

0

ಪ್ರತಿಯೊಬ್ಬ ರೈತರೂ ಆಧುನಿಕ ಯಂತ್ರೋಪಕರಣಗಳನ್ನು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಕೃಷಿಯನ್ನು ಮಾಡುವ ಮೂಲಕ ಹೆಚ್ಚು ಉತ್ಪಾದನೆ ಮಾಡುವಂತಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಕೃಷಿ ಯಂತ್ರಧಾರೆ ಪ್ರಭಂದಕ ಬೋರಣ್ಣ ತಿಳಿಸಿದರು.
ಜಂಗಮಕೋಟೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಹೊಸಪೇಟೆಯಲ್ಲಿ ಕರ್ನಾಟಕ ಸರ್ಕಾರದ ಕೃಷಿ ಇಲಾಖೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಸಹಭಾಗಿತ್ವದಲ್ಲಿ ಕಳೆದ 5 ವರ್ಷಗಳಿಂದ ನಿರಂತರವಾಗಿ ರೈತರ ಕೃಷಿ ಚಟುವಟಿಕೆಗಳಾದ ಉಳುಮೆ, ಬಿತ್ತನೆ, ಕಟಾವು, ಔಷಧಿ ಸಿಂಪರಣೆ ಹಾಗೂ ಇನ್ನಿತರ ಕೃಷಿ ಕಾರ್ಯಗಳಿಗೆ ಕಡಿಮೆ ಬಾಡಿಗೆ ದರದಲ್ಲಿ ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಒದಗಿಸುತ್ತಿದ್ದೇವೆ. ಇದರಿಂದ ರೈತರಿಗೆ ಸಾಕಷ್ಟು ಉಪಯೋಗವಾಗಿದೆ ಎಂದರು.
ಪ್ರಸ್ತುತ ಮುಂಗಾರಿನ ಹಂಗಾಮಿನಲ್ಲಿ ಮಿನಿ ಟ್ರಾಕ್ಟರ್, ಟಿಲ್ಲರ್, ಟ್ರಾಕ್ಟರ್, ಕಲ್ಟಿವೇಟರ್, ಬಿತ್ತನೆ ಕೂರಿಗೆ ಯಂತ್ರ, ಲೆವೆಲರ್, ಹಲುಬೆ, ಡಿಸ್ಕ್, ರೋಟವೇಟರ್, ಡಿಗ್ಗರ್ ಯಂತ್ರಗಳು ಮತ್ತು ಕಟಾವು ಹಾಗೂ ಒಕ್ಕಣೆ ಸಂದರ್ಭದಲ್ಲಿ ಹಾರ್ವೇಸ್ಟರ್ ರೀಪರ್, ರೀಪರ್ ಕಂಬೈಂಡರ್, ಹುಲ್ಲು ಸಹಿತ ಒಕ್ಕಣೆ ಯಂತ್ರ ಹಾಗೂ ಮಲ್ಟಿಕ್ರಾಪ್ ತ್ರೆಶರ್ ಯಂತ್ರಗಳು ಬಾಡಿಗೆಗೆ ಲಭ್ಯವಿದೆ. ಸದಾಸೇವೆಯಲ್ಲಿ ನಿಮ್ಮ ಕೃಷಿ ಯಂತ್ರಧಾರೆಯಿದೆ. ಸದುಪಯೋಗಪಡಿಸಿಕೊಳ್ಳಿ ಎಂದು ರೈತರಲ್ಲಿ ಮನವಿ ಮಾಡಿದರು.

ಲಾಕ್ ಡೌನ್ ಸಮಯದಲ್ಲಿ ಕಾರ್ಯನಿರ್ವಹಿಸಿದ ಕೃಷಿ ಯಂತ್ರಧಾರೆ:

ಕೋವಿಡ್-19 ಪರಿಣಾಮದಿಂದ ಭಾರತ ಸರ್ಕಾರ ಮಾರ್ಚ್ 23 ರಂದು ಇಡೀ ದೇಶವನ್ನು ಲಾಕ್‌ಡೌನ್ ಮಾಡಿ ಆದೇಶಿಸಿತ್ತು. ರೈತರಿಗೆ ಸೇವೆ ನೀಡುವ ಉದ್ದೇಶದಿಂದ ಸರ್ಕಾರದಿಂದ ಅನುಮತಿ ಪಡೆದುಕೊಂಡು ದಿನಾಂಕ ಏಪ್ರಿಲ್ I ರಿಂದ ಸೇವೆಯನ್ನು ಆರಂಭಿಸಿ 530 ರೈತರಿಗೆ 1400 ಗಂಟೆಗಳ ಕೆಲಸವನ್ನು ನಿರ್ವಹಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ.
ಸಂಪರ್ಕ : ಕೃಷಿ ಯಂತ್ರಧಾರೆ ಪ್ರಭಂದಕರಾದ ಬೋರಣ್ಣ (ದೂರವಾಣಿ ಸಂಖ್ಯೆ-7795648421)

ಹೊರಜಿಲ್ಲೆ ರಾಜ್ಯಗಳಿಂದ ಬರುವವರ ಮಾಹಿತಿ ಕೊಡಿ – ಡಾ.ವೆಂಕಟೇಶಮೂರ್ತಿ

0

ಶಿಡ್ಲಘಟ್ಟ : ಹೊರ ಜಿಲ್ಲೆ ಅಥವಾ ಹೊರ ರಾಜ್ಯಗಳಿಂದ ಯಾರೇ ಆಗಲೀ ಬಂದಾಗ ಅವರ ಬಗ್ಗೆ ನೆರೆಹೊರೆಯವರು ತಕ್ಷಣ ತಹಶೀಲ್ದಾರ್, ಆರೋಗ್ಯ ಇಲಾಖೆ, ಕಾಲ್ ಸೆಂಟರ್(08158 256763) ಅಥವಾ ಪೊಲೀಸರಿಗೆ ಮಾಹಿತಿ ಕೊಡಿ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ಮುಂತಾದ ಯಾವುದೇ ರಾಜ್ಯದಿಂದ ಬಂದಿದ್ದರೂ ಅವರನ್ನು ಖಡ್ಡಾಯವಾಗಿ ಇನ್ಸಿಟ್ಯೂಟ್ ಕ್ವಾರಂಟೈನ್ ಮಾಡಲಾಗುವುದು, ಹೊರಜಿಲ್ಲೆಯವರಿಗೆ ತಪಸಣೆ ಮಾಡಿ ಹೋಮ್ ಕ್ವಾರಂಟೈನ್ ಮಾಡಲಾಗುವುದು. ಹೊರಜಿಲ್ಲೆ ಹಾಗೂ ಹೊರರಾಜ್ಯಗಳಿಂದ ಬಂದವರು ಸ್ವಯಂ ಪ್ರೇರಿತರಾಗಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ಇಲ್ಲವಾದಲ್ಲಿ ಸಂಬಂಧಿಸಿದ ಇಲಾಖೆಯವರು ಬಂದು ವಶಕ್ಕೆ ಪಡೆದು ಕ್ವಾರಂಟೈನ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಮ್ಮ ಅಕ್ಕಪಕ್ಕದ ಮನೆಗಳಿಗೆ ಬರುವ ಹೊರಜಿಲ್ಲೆ ಅಥವಾ ಹೊರರಾಜ್ಯಗಳಿಂದ ಬಂದವರ ಮಾಹಿತಿಯನ್ನು ನೀಡಿದವರ ಹೆಸರನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸುವುದಿಲ್ಲ. ಹಾಗಾಗಿ ಎಲ್ಲರ ಒಳಿತಿಗಾಗಿ ಇಂತಹವರ ಮಾಹಿತಿಯನ್ನು ನೀಡಿ ಎಂದು ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದರು.
ಸರ್ಕಾರದ ಮಾರ್ಗಸೂಚಿಯಂತೆ ಈಗಾಗಲೇ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಹಾಗಾಗಿ ಸರ್ಕಾರದ ಸೂಚನೆಯಂತೆ ಹೊರರಾಜ್ಯಗಳಿಂದ ಬರುವ ಎಲ್ಲಾ ಪ್ರಯಾಣಿಕರ ಮಾಹಿತಿಯನ್ನು ಪಡೆಯಬೇಕಿದೆ. ಕ್ವಾರಂಟೈನ್ ಮಾಡಿ, ಐದರಿಂದ ಏಳನೇ ದಿನದೊಳಗೆ ಒಂದು ಸ್ವಾಬ್ ತೆಗೆದು, ನಂತರ 12 ನೇ ದಿನ ಮತ್ತೊಂದು ಸ್ವಾಬ್ ತೆಗೆದು ಪರೀಕ್ಷೆ ನಡೆಸುತ್ತೇವೆ. ಸೋಂಕಿಲ್ಲವೆಂಬುದು ಖಾತರಿಯಾದೊಡನೆ ಅವರನ್ನು ಅವರ ಮನೆಗಳಿಗೆ ಕಳುಹಿಸಿಕೊಡುತ್ತೇವೆ. ಮನೆಗಳಲ್ಲಿ ಹೇಗಿರಬೇಕು ಎಂದು ಮುನ್ನೆಚ್ಚರಿಕೆ ಕ್ರಮಗಳನ್ನು ಸಹ ತಿಳಿಸಿಕೊಡುತ್ತೇವೆ.
ಹೊರ ಜಿಲ್ಲೆಗಳಿಂದ ಬಂದವರ ಬಗ್ಗೆಯೂ ನಿಗಾ ವಹಿಸಿ ಅವರನ್ನು ಹೋಂ ಕ್ವಾರಂಟೈನ್ ಮಾಡಬೇಕೆಂಬ ಸರ್ಕಾರಿ ಸೂಚನೆಯಿದೆ. ಅವರು ನಿಯಮ ಮೀರಿ ಹೊರಗಡೆ ಓಡಾಡುವುದು ಕಂಡು ಬಂದಲ್ಲಿ ಪೊಲೀಸರ ಸಹಕಾರದಿಂದ ಇನ್ಸಿಟ್ಯೂಟ್ ಕ್ವಾರಂಟೈನ್ ಮಾಡಲಾಗುವುದು ಎಂದರು.
ಜ್ವರ, ಕೆಮ್ಮು, ನೆಗಡಿ ಏನೇ ಬಂದರೂ ಸರ್ಕಾರಿ ವೈದ್ಯರ ಬಳಿ ಬಂದು ಚಿಕಿತ್ಸೆ ಪಡೆಯಿರಿ. ಅನುಮಾನವಿದ್ದಲ್ಲಿ ಸ್ವಾಬ್ ತೆಗೆದು ಪರೀಕ್ಷೆ ನಡೆಸುತ್ತೇವೆ. ಪಾಸಿಟೀವ್ ಬಂದರೆ ಕ್ವಾರಂಟೈನ್ ಆಗಿ, ನಮ್ಮೊಂದಿಗೆ ಸಹಕರಿಸಿ. ಸೂಕ್ತ ಚಿಕಿತ್ಸೆ ನೀಡುತ್ತೇವೆ. ನಾನೊಬ್ಬನೇ ಚೆನ್ನಾಗಿರಬೇಕು ಎಂಬ ಮನಸ್ಥಿತಿಯಿಂದ ಹೊರಬನ್ನಿ, ಸಮುದಾಯ ಚೆನ್ನಾಗಿರಬೇಕು ಎಂದು ಯೋಚಿಸುವ ಕಾಲ ಬಂದಿದೆ. ವೈರಸ್ ನೊಂದಿಗೇ ಹೊಂದಾಣಿಕೆ ಮಾಡಿಕೊಂಡು ಸಾಕಷ್ಟು ತಿಂಗಳುಗಳ ಕಾಲ ಬದುಕಬೇಕಿದೆ. ಮಾಸ್ಕ್ ಧರಿಸಿ, ಅನಗತ್ಯವಾಗಿ ಓಡಾಡಬೇಡಿ, ಅಂತರ ಕಾಯ್ದುಕೊಳ್ಳಿ, ಸ್ವಚ್ಚತೆಯನ್ನು ರೂಢಿಸಿಕೊಳ್ಳಿ ಎಂದು ಕೋರಿದರು.
 

 

ಅಂಗಡಿಗಳ ಹರಾಜು ಪ್ರಕ್ರಿಯೆ ಮೇ 28 ಕ್ಕೆ ಮುಂದೂಡಿಕೆ

0

ನಗರದ ಸಾರಿಗೆ ಬಸ್ ನಿಲ್ದಾಣದ ಬಳಿಯಿರುವ ನಗರಸಭೆ ನಿಧಿಯಿಂದ ನಿರ್ಮಿಸಲಾಗಿರುವ ಹಳೆಯ ನೆಲ ಅಂತಸ್ತಿನ 5 ಅಂಗಡಿ, ಸಂತೆ ಬೀದಿಯ 13 ಅಂಗಡಿ ಹಾಗೂ ಅಶೋಕ ರಸ್ತೆಯ 4 ಅಂಗಡಿ, ಅಂಚೆ ಕಚೇರಿಯ ರಸ್ತೆಯಲ್ಲಿರುವ ಒಂದು ಅಂಗಡಿ ಸೇರಿದಂತೆ 23 ಅಂಗಡಿಗಳ ಹರಾಜು ಪ್ರಕ್ರಿಯೆ ಇದೇ ಮೇ 28 ಕ್ಕೆ ಮುಂದೂಡಲಾಯಿತು.
ನಗರಸಭೆ ಪೌರಾಯುಕ್ತ ತ್ಯಾಗರಾಜ್ ಅಧ್ಯಕ್ಷತೆಯಲ್ಲಿ ಬುಧವಾರ ನಗರಸಭೆಗೆ ಸೇರಿದ ಸುಮಾರು 23 ಅಂಗಡಿ ಮಳಿಗೆಗಗಳ ಹರಾಜು ಪ್ರಕ್ರಿಯೆ ಏರ್ಪಡಿಸಲಾಗಿತ್ತಾದರೂ ಕೊರೋನಾ ಹಿನ್ನಲೆಯಲ್ಲಿ ನಗರದ ವ್ಯಾಪಾರಿಗಳು ಹಾಗೂ ಜನತೆ ಸಂಕಷ್ಟದಲ್ಲಿರುವಾಗ ಹರಾಜು ಪ್ರಕ್ರಿಯೆ ನಡೆಸುವುದು ಸೂಕ್ತವಲ್ಲ, ಹಾಗಾಗಿ ಹರಾಜು ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ಈ ಹಿಂದಿನಿಂದ ನಗರಸಭೆಗೆ ಸೇರಿದ ಅಂಗಡಿಗಳಲ್ಲಿ ವ್ಯಾಪಾರ ಮಾಡುತ್ತಿರುವವರ ಮನವಿಯ ಮೇರೆಗೆ ಒಂದು ವಾರದ ಕಾಲಾವಕಾಶ ನೀಡಿ ಮುಂದೂಡಲಾಯಿತು.
ನಗರದ ಸಂತೆ ಮೈದಾನದಲ್ಲಿರುವ 13 ಅಂಗಡಿಗಳು ಸೇರಿದಂತೆ ಬಸ್ ನಿಲ್ದಾಣದ ಬಳಿಯಿರುವ 5 ಅಂಗಡಿಗಳಲ್ಲಿ ಕೆಲ ಅಂಗಡಿಗಳನ್ನು ಹರಾಜಿನಲ್ಲಿ ಪಡೆಯಲು ಕೆಲವರು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಡಿಡಿ ತೆಗೆಯುವ ಮೂಲಕ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರಾದರೂ ಅಶೋಕ ರಸ್ತೆಯ ನಾಲ್ಕು ಅಂಗಡಿಗಳ ಪೈಕಿ ಯಾವೊಂದು ಅಂಗಡಿ ಪಡೆಯಲು ಯಾರೊಬ್ಬರೂ ಮುಂದಾಗಿರಲಿಲ್ಲ.
ಹರಾಜು ಪ್ರಕ್ರಿಯೆ ಮುಂದೂಡಬೇಕು ಎಂದು ಕೆಲವರು ಒತ್ತಾಯಿಸಿದರೆ ಮತ್ತೆ ಕೆಲವರು ಹರಾಜು ಪ್ರಕ್ರಿಯೆ ನಡೆಯಲೇಬೇಕು ಎಂದು ಹಠ ಹಿಡಿದು ಪರಸ್ಪರ ಮಾತಿನ ಚಕಮಕಿಗೆ ಇಳಿದಾಗ ಮಧ್ಯ ಪ್ರವೇಶಿಸಿದ ಪೊಲೀಸರು ಎಲ್ಲರನ್ನು ಸಮಾಧಾನಪಡಿಸಿದರು.
ಪೌರಾಯುಕ್ತ ತ್ಯಾಗರಾಜ್ ಮಾತನಾಡಿ, ಕಳೆದ ಹಲವು ತಿಂಗಳುಗಳಿಂದ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ವೇತನ ನೀಡಿಲ್ಲ. ಈ ಬಗ್ಗೆ ಈಗಾಗಲೇ ಹಲವಾರು ಭಾರಿ ಪೌರ ಕಾರ್ಮಿಕರು ತಮ್ಮಲ್ಲಿ ಮನವಿ ಮಾಡಿಕೊಂಡಿದ್ದಾರೆ. ನಗರಸಭೆಯಲ್ಲಿ ಹಣವಿಲ್ಲ. ಹಾಗಾಗಿ ಇರುವ ಅಂಗಡಿಗಳನ್ನು ಹರಾಜು ಮೂಲಕ ವಿಲೇ ಮಾಡಿ ಬರುವ ಹಣದಲ್ಲಿ ಪೌರ ಕಾರ್ಮಿಕರಿಗೆ ವೇತನ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಮೇಲಾಧಿಕಾರಿಗಳ ಸೂಚನೆಯ ಮೇರೆಗೆ ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ. ದಯವಿಟ್ಟು ಸಹಕರಿಸಿ ಎಂದು ಮನವಿ ಮಾಡಿದರು.
ಕಳೆದ ಕಲವು ವರ್ಷಗಳಿಂದ ಅದೇ ಅಂಗಡಿಗಳನ್ನು ನಂಬಿ ಜೀವನ ಸಾಗಿಸುತ್ತಿದ್ದೇವೆ. ಇದೀಗ ಏಕಾ ಏಕಿ ಹರಾಜು ಪ್ರಕ್ರಿಯೆ ನಡೆಸುತ್ತಿರುವುದು ಸರಿಯಲ್ಲ. ನಮಗೆ ಸ್ವಲ್ಪ ಕಾಲಾವಕಾಶ ನೀಡಿದಲ್ಲಿ ನಾವೇ ಠೇವಣಿ ಹಣವನ್ನು ಕಟ್ಟಿ ಹರಾಜಿನಲ್ಲಿ ಬಾಗವಹಿಸುತ್ತೇವೆ ಎಂದು ಬಾಡಿಗೆದಾರರು ಪಟ್ಟುಹಿಡಿದರು.
ದೂರವಾಣಿಯ ಮೂಲಕ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿದ ಪೌರಾಯುಕ್ತರ ಅವರ ಸೂಚನೆಯಂತೆ ಒಂದು ವಾರದ ಕಲಾವಕಾಶ ನೀಡಲಾಗುತ್ತದೆ ಮುಂದಿನ ಮೇ 28 ಕ್ಕೆ ನಡೆಯಲಿರುವ ಹರಾಜಿಗೆ ಎಲ್ಲರೂ ಸಹಕರಿಸುವಂತೆ ಪೌರಾಯುಕ್ತ ತ್ಯಾಗರಾಜ್ ಕೋರಿ ಹರಾಜು ಪ್ರಕ್ರಿಯೆಯನ್ನು ಮುಂದೂಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಲಕ್ಷ್ಮಯ್ಯ, ಟಿ.ಮಂಜುನಾಥ್, ಎ.ಎಸ್.ನಾರಾಯಣಸ್ವಾಮಿ, ಮೌಲಾ, ಕೃಷ್ಣಮೂರ್ತಿ ಮುಖಂಡರಾದ ಬೆಳ್ಳೂಟಿ ಶ್ರೀರಾಮಣ್ಣ, ಲಕ್ಷ್ಮಿನಾರಾಯಣ(ಲಚ್ಚಿ), ನಗರಸಭೆ ಸಿಬ್ಬಂದಿ ವೆಂಕಟೇಶ್, ಮಧು ಹಾಜರಿದ್ದರು.

ಶಿಡ್ಲಘಟ್ಟದಿಂದ ಪರೀಕ್ಷೆಗೆ ಒಳಪಟ್ಟಿದ್ದ ಹದಿನೈದು ಮಂದಿ ಕೊರೊನಾ ನೆಗೆಟೀವ್

0

ಶಿಡ್ಲಘಟ್ಟ ತಾಲ್ಲೂಕಿನ ಜನತೆ ಅನಗತ್ಯವಾಗಿ ಆತಂಕ ಪಡಬೇಡಿ. ಆದರೂ ಯಾರೂ ಅನಗತ್ಯವಾಗಿ ಮನೆ ಬಿಟ್ಟು ಹೊರಬರಬೇಡಿ. ಮಾಸ್ಕ್ ಧರಿಸಿ, ಸ್ವಚ್ಛತೆ ಕಾಪಾಡಿಕೊಳ್ಳಿ, ಪರ ಊರು, ರಾಜ್ಯದಿಂದ ಯಾರಾದರೂ ಬಂದಿರುವುದನ್ನು ಕಂಡುಬಂದರೆ ತಾಲ್ಲೂಕು ಆಡಳಿತಕ್ಕೆ ಮಾಹಿತಿ ನೀಡಿ, ಅಥವಾ ಕರೆದುಕೊಂಡು ಬಂದು ಅವರ ಆರೋಗ್ಯ ಪರೀಕ್ಷೆ ಮಾಡಿಸಿ ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಈಗ ಮನೆಗಳಲ್ಲಿ ಕ್ವಾರಂಟೈನ್ ಮಾಡಿರುವವರಿಗೆ ಆರೋಗ್ಯ ಪರೀಕ್ಷೆ ಮಾಡಿ, ಸಾಂತ್ವನ ಹೇಳಿ. ಆರೋಗ್ಯದ ಬಗ್ಗೆ ಸೂಕ್ತ ನಿರ್ದೇಶನಗಳನ್ನು ತಿಳಿಸಲಾಗಿದೆ. ಅವರಿಗೆ ಕೊರೊನಾ ಸೋಂಕಿಲ್ಲವೆಂದು ವರದಿ ಬಂದಿದೆಯಾದರೂ ಅವರಿಗೆ ಮತ್ತೊಮ್ಮೆ 24 ನೇ ತಾರೀಖಿನಂದು ಮತ್ತೊಮ್ಮೆ ಪರೀಕ್ಷೆ ನಡೆಸಲಾಗುವುದು. ನಾವುಗಳು ಮೈಮರೆಯುವಂತಿಲ್ಲ. ಹೊರಗಿನಿಂದ ಯಾರೇ ಬಂದರೂ ಖಡ್ಡಾಯವಾಗಿ ಪರೀಕ್ಷೆಗೆ ಒಳಪಡಬೇಕು ಎಂದು ಹೇಳಿದರು.
ದಿನಸಿ ಕಿಟ್ ಯಾರೇ ವಿತರಣೆ ಮಾಡಿದರೂ ಮೊದಲು ತಾಲ್ಲೂಕು ಆಡಳಿತದ ಅನುಮತಿ ಪಡೆಯಬೇಕು. ಅಂತರರಾಜ್ಯಗಳಿಂದ ಆಗಮಿಸುವವರನ್ನು ಕಡ್ಡಾಯವಾಗಿ ಕ್ವಾರಂಟೈನ್ ಮಾಡುವಂತೆ ಸರ್ಕಾರ ಸೂಚನೆ ಹೊರಡಿಸಿದೆ. ಹಾಗೆಯೇ ಅವರ ಗಂಟಲು ಮಾದರಿ ಪರೀಕ್ಷೆಯನ್ನು ಸಹ ಮಾಡಬೇಕಾಗುತ್ತದೆ. ಅಕಸ್ಮಾತ್ ಕ್ವಾರಂಟೈನ್ ಆದವರು ಅಂದರೆ ಕೈಮೇಲೆ ಸೀಲ್ ಇರುವವರು ಹೊರಗಡೆ ಓಡಾಡುವುದು ಕಂಡುಬಂದರೆ ಪೊಲೀಸರಿಗೆ ತಿಳಿಸಿ ಎಂದರು.
ನೋಡಲ್ ಅಧಿಕಾರಿ ಶಿವಕುಮಾರ್ ಮಾತನಾಡಿ, ಈಗ ಶಿಡ್ಲಘಟ್ಟದ ಹೊರವಲಯದ ಬಿ.ಸಿ.ಎಂ ವಿದ್ಯಾರ್ಥಿನಿಲಯದಲ್ಲಿ 34 ಮಂದಿ ಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಗಿದ್ದು ಅವರಿಗೆ ಸ್ಥಳೀಯವಾಗಿಯೇ ಉತ್ತಮ ಆಹಾರವನ್ನು ತಯಾರಿಸಿ ಕೊಡಲಾಗುತ್ತಿದೆ. ಆರೋಗ್ಯ ಸೇತು ಆಪ್ ಅನ್ನು ಪ್ರತಿಯೊಬ್ಬರೂ ತಮ್ಮ ಮೊಬೈಲ್ ನಲ್ಲಿ ಹಾಕಿಕೊಳ್ಳಿ ಎಂದರು.
ಆರೋಗ್ಯಾಧಿಕಾರಿ ಡಾ.ವಾಣಿ ಮಾತನಾಡಿ, ಗಂಟಲು ಮಾದರಿ ಪರೀಕ್ಷೆಗೆ ಒಬ್ಬೊಬ್ಬರಿಗೂ ಆರು ಸಾವಿರ ರೂ ಖರ್ಚಾಗುತ್ತದೆ. ಇದರೊಂದಿಗೆ ಆರೋಗ್ಯ ಸಿಬ್ಬಂದಿ ಬಳಸುವ ಪಿಪಿಇ ಕಿಟ್ ಸೇರಿದರೆ ಹತ್ತು ಸಾವಿರ ರೂ ಖರ್ಚಾಗುತ್ತದೆ. ಸರ್ಕಾರ ಮಾಡುವ ಈ ಖರ್ಚು ಪ್ರತಿಯೊಬ್ಬ ನಾಗರಿಕರ ಮೇಲೂ ಹೊರೆಯಾಗುವುದರಿಂದ ಎಲ್ಲರೂ ಸ್ವಯಂ ಕೊರೊನಾ ವಾರಿಯರ್ ಗಳಂತೆ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಬೇಕು. ಕೊರೊನಾ ಬರದಂತೆ ತಡೆಯುವಲ್ಲಿ ಸಹಕರಿಸಬೇಕು ಎಂದು ನುಡಿದರು.
ನಗರಸಭೆ ಪೌರಾಯುಕ್ತ ತ್ಯಾಗರಾಜ್ ಮಾತನಾಡಿ, ತಾಲ್ಲೂಕು ಆಡಳಿತ, ಆರೋಗ್ಯ ಇಲಾಖೆ, ಪೊಲೀಸರು ಮತ್ತು ನಗರಸಭೆಯವರು ಎಲ್ಲರೂ ಜೊತೆಗೂಡಿ ಕೊರೊನಾ ಶಿಡ್ಲಘಟ್ಟ ತಾಲ್ಲೂಕಿಗೆ ಬರದಂತೆ ಶ್ರಮಿಸುತ್ತಿದ್ದೇವೆ. ನಾಗರಿಕರೂ ಸಹಕಾರ ನೀಡಿ. ಸ್ವಚ್ಛತೆಗೆ ಆದ್ಯತೆ ನೀಡಿ. ಕ್ರೆಸೆಂಟ್ ಶಾಲೆಯವರು ತಾಲ್ಲೂಕು ಆಡಳಿತಕ್ಕೆ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಉಪಯೋಗವಾಗಲೆಂದು ತಮ್ಮ ಶಾಲೆಯ ವಾಹನವನ್ನು ಉಚಿತವಾಗಿ ನೀಡಿದ್ದಾರೆ ಎಂದರು.

ನಿವೃತ್ತ ಮುಖ್ಯಶಿಕ್ಷಕರ ಸನ್ಮಾನ ಕಾರ್ಯಕ್ರಮ

0

ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ನಿವೃತ್ತಮುಖ್ಯಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಿವೃತ್ತ ಮುಖ್ಯಶಿಕ್ಷಕ ಜಿ.ಎಂ.ಪರಮನಟ್ಟಿ ಮಾತನಾಡಿದರು.
ಗ್ರಾಮೀಣ ಭಾಗದ ಮಕ್ಕಳು ಇಂದಿನ ಸಂದರ್ಭದಲ್ಲಿ ನಗರಪ್ರದೇಶದಲ್ಲಿ ಕಲಿತ ಮಕ್ಕಳೊಂದಿಗೆ ಉನ್ನತಶಿಕ್ಷಣ, ಉದ್ಯೋಗಗಳಿಗಾಗಿ ಸ್ಪರ್ಧಿಸುವುದು ಕಷ್ಟಕರವಾಗಿದೆ. ಮಕ್ಕಳು ಕಲಿಕೆಯಲ್ಲಿ ಶಿಸ್ತು ಮೂಡಿಸಿಕೊಂಡು ಆತ್ಮವಿಶ್ವಾಸದಿಂದ ವ್ಯಾಸಂಗ ಮಾಡುವಂತೆ ಪ್ರೇರೇಪಿಸುವ, ಸಜ್ಜುಗೊಳಿಸುವ ಜವಾಭ್ದಾರಿಯು ಶಿಕ್ಷಕರ ಮೇಲಿದೆ ಎಂದು ಅವರು ತಿಳಿಸಿದರು.
ತಾವು ಸಲ್ಲಿಸುತ್ತಿರುವ ಸೇವೆಯಲ್ಲಿ ವೃತ್ತಿಬದ್ಧತೆ, ಸಮಯಪ್ರಜ್ಞೆ ಇದ್ದರೆ ಯಾವುದೇ ವೃತ್ತಿಯಲ್ಲಿ ಉತ್ತಮಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಸರ್ಕಾರಿ ನೌಕರನಲ್ಲಿ ಪ್ರಾಮಾಣಿಕತೆಯಿರಬೇಕು. ಮಾಡುವ ಕೆಲಸದಲ್ಲಿ ಪಾರದರ್ಶಕತೆ ಇದ್ದರೆ ಯಾವುದೇ ಅನುಮಾನಗಳಿಗೆ ಆಸ್ಪದವಿರುವುದಿಲ್ಲ. ಆಗ ಮಾತ್ರ ನಿವೃತ್ತಿಯ ನಂತರ ಮಾನಸಿಕ ನೆಮ್ಮದಿಯಿಂದ ಬದುಕು ಸಾಗಿಸಲು ಸಾಧ್ಯವಾಗುತ್ತದೆ ಎಂದರು.
ಮುಖ್ಯಶಿಕ್ಷಕ ಬೈರಾರೆಡ್ಡಿ ಮಾತನಾಡಿ, ಸರ್ಕಾರಿ ನೌಕರರು ಸೇವಾವಧಿಯಲ್ಲಿ ತಾವು ಮಾಡಿದ ಉತ್ತಮಸೇವೆಯೇ ನಿವೃತ್ತಿಯ ನಂತರವೂ ಎಲ್ಲರ ಮನಸ್ಸಿನಲ್ಲಿ ಉಳಿಯಲು ಸಹಕಾರಿಯಾಗುವುದು. ತಮ್ಮಿಂದ ಸಮಾಜಕ್ಕೆ ಆಗಬಹುದಾದ ಅನುಕೂಲಗಳನ್ನು ನಿಸ್ವಾರ್ಥ ಮನೋಭಾವದಿಂದ ಮಾಡಬೇಕು ಎಂದರು.
ಪ್ರೌಢಶಾಲಾ ಮುಖ್ಯಶಿಕ್ಷಕರಾಗಿ ಸೇವೆಸಲ್ಲಿಸಿ ವಯೋನಿವೃತ್ತರಾದ ಜಿ.ಎಂ.ಪರಮನಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸಾರ್ವಜನಿಕಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಪ್ರಥಮದರ್ಜೆ ಸಹಾಯಕ ರಾಮಕೃಷ್ಣಪ್ಪ, ವೇಣುಗೋಪಾಲ್, ಶಿಕ್ಷಕ ಎಂ.ನಾರಾಯಣಸ್ವಾಮಿ, ಎಂ.ಎನ್.ಮಂಜುನಾಥ್, ಶಿಕ್ಷಕಿ ನಾಗರತ್ನ ಹಾಜರಿದ್ದರು.

ವೇತನ ನೀಡುವಂತೆ ಪೌರಕಾರ್ಮಿಕರ ಪ್ರತಿಭಟನೆ

0

ಕಳೆದ ಹದಿನಾಲ್ಕು ತಿಂಗಳುಗಳಿಂದ ನಮಗೆ ವೇತನ ನೀಡಿಲ್ಲ. ನಮಗೆ ವೇತನವನ್ನು ನೀಡಿ ಎಂದು ಪೌರಕಾರ್ಮಿಕರು ನಗರಸಭೆಯ ಮುಂದೆ ಸೋಮವಾರ ಪ್ರತಿಭಟಿಸಿದರು.
ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಆಗಿದ್ದು, ಎಲ್ಲರೂ ಸುರಕ್ಷಿತವಾಗಿ ಮನೆಯೊಳಗಿದ್ದರೆ, ಪೌರಕಾರ್ಮಿಕರಾದ ನಾವು ನಮ್ಮ ಪ್ರಾಣವನ್ನು ಪಣಕ್ಕಿಟ್ಟು, ನಿರಂತರವಾಗಿ ನಗರವನ್ನು ಸ್ವಚ್ಛಗೊಳಿಸುತ್ತಿದ್ದೇವೆ. ಹೊರಗುತ್ತಿಗೆ ಪೌರಕಾರ್ಮಿಕರಾದ 19 ಜನರಿಗೆ ನಗರಸಭೆಯಿಂದ 14 ತಿಂಗಳಿನಿಂದ ವೇತನ ನೀಡಿಲ್ಲ. ಉಳಿದವರಿಗೆ ಆರು ತಿಂಗಳಿನಿಂದ ವೇತನ ನೀಡಿಲ್ಲ. ನಾವುಗಳು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದೇವೆ. ನಮ್ಮ ಕುಟುಂಬಗಳನ್ನು ಪೋಷಿಸಲು ಕಷ್ಟಪಡುತ್ತಿದ್ದೇವೆ. ಮಕ್ಕಳ ವಿದ್ಯಾಭ್ಯಾಸಕ್ಕೆ ನಮ್ಮ ಬಳಿ ಹಣವಿಲ್ಲ. ಇದರಿಂದಾಗಿ ನಾವು ಮಾನಸಿಕವಾಗಿ ನೊಂದು ದಿಕ್ಕು ತೋಚದಂತಾಗಿದೆ. ನಮ್ಮ ಸಮಸ್ಯೆಗಳನ್ನು ಹೇಳಿ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ನಮ್ಮ ವೇತನವನ್ನು ಕೊಡಿ ಎಂದು ಒತ್ತಾಯಿಸಿದರು.
“ಪೌರಕಾರ್ಮಿಕರು ನಮ್ಮ ನಗರದ ನರನಾಡಿಗಳಿದ್ದಂತೆ. ಅವರಿಗೆ ಬುಧವಾರದೊಳಗೆ ಮೂರು ತಿಂಗಳ ವೇತನ ನೀಡುತ್ತೇವೆ. ಮುಂದಿನ ತಿಂಗಳಿನಲ್ಲಿ ಉಳಿದ ವೇತನವನ್ನು ಹೊಂದಿಸಿ ಕೊಡಲು ವ್ಯವಸ್ಥೆ ಮಾಡುತ್ತೇವೆ” ಎಂದು ಪೌರಾಯುಕ್ತ ತ್ಯಾಗರಾಜ್ ಭರವಸೆ ನೀಡಿದ ನಂತರ ಪ್ರತಿಭಟನಾಕಾರರ ಹಿಂದಿರುಗಿದರು.

ಸ್ಮೈಲ್ ಫೌಂಡೇಶನ್ ನಿಂದ ಭಕ್ತರಹಳ್ಳಿಗೆ 8 ಲಕ್ಷ ಮೌಲ್ಯದ 20 ಟನ್ ದವಸ ಧಾನ್ಯ

0

ಪಂಜಾಬ್, ಹರಿಯಾಣ, ದೆಹಲಿಯಲ್ಲಿ ಮಾತ್ರ ಕೋವಿಡ್ 19 ಸಂತ್ರಸ್ತರಿಗೆ ಸಹಾಯ ಮಾಡುತ್ತಿದ್ದ ಸ್ಮೈಲ್ ಫೌಂಡೇಶನ್ ಸಂಸ್ಥೆ ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಗೆ ಸುಮಾರು 8 ಲಕ್ಷ ಮೌಲ್ಯದ 20 ಟನ್ ದವಸ ಧಾನ್ಯಗಳನ್ನು ಭಾನುವಾರ ಕಳುಹಿಸಿಕೊಟ್ಟಿದೆ ಎಂದು ಭಕ್ತರಹಳ್ಳಿಯ ಬಿಎಂವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಲ್.ಕಾಳಪ್ಪ ತಿಳಿಸಿದ್ದಾರೆ.
ಕಳೆದ ಒಂದುವರೆ ತಿಂಗಳಿನಿಂದ ಕೊರೊನಾ ವೈರಸ್ ನ ಹಾವಳಿಯಿಂದಾಗಿ ಇಡೀ ದೇಶದಾದ್ಯಂತ ಲಾಕ್ ಡೌನ್ ಘೋಷಣೆಯಾಗಿ ಬಡವರು ಅದರಲ್ಲೂ ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ವಿಶೇಷವಾಗಿ ಎಲ್ಲ ರೀತಿಯ ಅಸಂಘಟಿತ ಕಾರ್ಮಿಕರ ಬದುಕು ಹೀನಾಯವಾಗಿಬಿಟ್ಟಿದೆ. ಕೆಲಸ ಇಲ್ಲ, ಕೂಲಿ ಇಲ್ಲ, ಹೊಟ್ಟೆಗೆ ಅನ್ನ ಇಲ್ಲದೆ ದಿಕ್ಕೇ ತೋಚದಾಗಿದೆ. ಬರೇ ನಗರಪ್ರದೇಶದ ಈ ವರ್ಗದ ಜನರಿಗೆ ಕೆಲವು ದಾನಿಗಳು ಸಹಾಯ ಮಾಡುತ್ತಿರುವುದು ಬಿಟ್ಟರೆ ಗ್ರಾಮೀಣ ಪ್ರದೇಶಗಳಲ್ಲಿನ ಲಾಕ್ ಡೌನ್ ಸಂತ್ರಸ್ತರ ಸಂಕಷ್ಟಕ್ಕೆ ಅಷ್ಟು ಹೆಚ್ಚಿನ ಸಹಾಯ ಸಿಗುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಭಕ್ತರಹಳ್ಳಿ, ಕಾಕಚೋಕ್ಕೊಂಡಹಳ್ಳಿ, ತೊಟ್ಲಗಾನಹಳ್ಳಿ, ಬೆಳ್ಳೂಟಿ, ಬಸವಾಪಟ್ಟಣಗಳಿಂದ ನಮ್ಮ ಶಾಲೆಗೆ ಬರುವ ವಿದ್ಯಾರ್ಥಿಗಳ ಬಡ ತಂದೆ ತಾಯಿಯರ ಬವಣೆ ಕೇಳಿ ನನ್ನ ಮನಸ್ಸಿಗೆ ನೋವಾಯಿತು. ಕೊರೊನಾ ವಾರಿಯರ್ ಆಗಿ ಲಾಕ್ ಡೌನ್ ಆದಂದಿನಿಂದ ಸಂತ್ರಸ್ತರಿಗೆ ನೆರವು ಕಲ್ಪಿಸುವಲ್ಲಿ ಬೆಂಗಳೂರಿನಲ್ಲಿ ಸಕ್ರಿಯಾಗಿದ್ದ ನನಗೆ ನಮ್ಮೂರು ಮತ್ತು ನಮ್ಮ ಶಾಲೆಯ ಬಡ ಪೋಷಕರಿಗೆ ಸಹಾಯ ಹಸ್ತ ನೀಡಬೇಕೆಂದು ನಿರ್ಧರಿಸಿ ಸ್ಮೈಲ್ ಫೌಂಡೇಶನ್ ಮತ್ತು ಇನ್ನಿತರ ಕೆಲವು ಸ್ವಯಂ ಸೇವಾ ಸಂಸ್ಥೆಗಳಿಗೆ ಸಹಾಯಕ್ಕಾಗಿ ಬರೆದೆ. ನನ್ನ ಅವರೊಂದಿಗಿನ 10 ವರ್ಷಗಳ ಸಂಬಂಧದಿಂದಾಗಿ ಸ್ಮೈಲ್ ಫೌಂಡೇಶನ್ ಅವರು ನನಗೆ ಸಹಾಯ ಮಾಡಲು ಮುಂದೆ ಬಂದರು.
ಪಂಜಾಬ್, ಹರಿಯಾಣ, ದೆಹಲಿ ಯಲ್ಲಿ ಮಾತ್ರ ಕೊರೊನಾ ಸಂತ್ರಸ್ತರಿಗೆ ಸಹಾಯ ಮಾಡುತ್ತಿದ್ದ ಈ ಸಂಸ್ಥೆ ನನ್ನ ಬೇಡಿಕೆಯನ್ನು ಮನ್ನಿಸಿ ದಕ್ಷಿಣ ಭಾರತದ ಭಕ್ತರಹಳ್ಳಿಗೆ ಸುಮಾರು 8 ಲಕ್ಷ ಮೌಲ್ಯದ 20 ಟನ್ ದವಸ ದಾನ್ಯಗಳನ್ನು ಕಳುಹಿಸಿದ್ದಾರೆ. ಅವೆಲ್ಲವನ್ನು 500 ಕಿಟ್ ಗಳನ್ನಾಗಿ ನಮ್ಮ ಶಾಲೆಯ ಶಿಕ್ಷಕರು ಸಿದ್ದಪಡಿಸಿದ್ದು ಬುಧವಾರದಿಂದ ಕೋವಿಡ್ 19 ನಿಯಮಗಳನ್ನು ಪಾಲಿಸುವುದರೊಂದಿಗೆ ವಿತರಿಸಲಾಗುವುದು. ಅರ್ಹ ಫಲಾನುಭವಿಗಳ ಪಟ್ಟಿಯನ್ನು ಈಗಾಗಲೇ ತಯಾರಿಸಲಾಗಿದೆ ಎಂದು ಅವರು ವಿವರಿಸಿದರು.

ಮಾಸ್ಕ್ ಧರಿಸದಿರುವವರಿಗೆ ದಂಡ ವಿಧಿಸುತ್ತಿರುವ ಅಧಿಕಾರಿಗಳು

0

ಕಳೆದ ಎಂಟು ದಿನಗಳಿಂದ ನಗರಸಭೆಯ ಅಧಿಕಾರಿಗಳು ಮಾಸ್ಕ್ ಧರಿಸದೇ ಸಂಚರಿಸುವವರನ್ನು ತಡೆದು ದಂಡ ವಿಧಿಸುತ್ತಿದ್ದಾರೆ. ಇದುವರೆಗೂ ಸುಮಾರು 30 ಸಾವಿರ ರೂಗಳಷ್ಟು ಹಣವನ್ನು ದಂಡದ ರೂಪದಲ್ಲಿ ಸಂಗ್ರಹಿಸಲಾಗಿದೆ.
ನಗರದ ವಿವಿಧ ಕಡೆಗಳಲ್ಲಿ ನಿಂತು ಅನಗತ್ಯವಾಗಿ ಓಡಾಡುವವರನ್ನು, ಮದ್ಯಸೇವಿಸಿ ವಾಹನ ಚಾಲನೆ ಮಾಡುವವರನ್ನು, ಮೂವರು ನಾಲ್ವರು ಮಂದಿ ದ್ವಿಚಕ್ರ ವಾಹನದಲ್ಲಿ ಸಂಚರಿಸುವವರನ್ನು ಹಾಗೂ ಮಾಸ್ಕ್ ಧರಿಸದಿರುವವರನ್ನು ತಡೆದು ದಂಡ ವಿಧಿಸುತ್ತಿದ್ದಾರೆ.
“ಸರ್ಕಾರದ ಆದೇಶದ ಮೇರೆಗೆ ನಾವುಗಳು ದಂಡ ವಿಧಿಸುತ್ತಿದ್ದೇವೆ. ನಾವು ಸಾಕಷ್ಟು ಅರಿವು ಮೂಡಿಸುತ್ತಿದ್ದರೂ ಅನವಶ್ಯಕವಾಗಿ ಓಡಾಡುವವರು, ಅಂತರ ಕಾಯ್ದುಕೊಳ್ಳದಿರುವವರು, ತ್ರಿಬಲ್ ರೈಡ್, ಮದ್ಯಸೇವಿಸಿ ವಾಹನ ಚಾಲನೆ ಮಾಡುವವರು ಕಂಡುಬರುತ್ತಿದ್ದಾರೆ. ಮಾಸ್ಕ್ ಧರಿಸಬೇಕೆಂದು ಸಾಕಷ್ಟು ತಿಳುವಳಿಕೆ ನೀಡಿದ್ದರೂ ಹಾಗೆಯೇ ಸಂಚರಿಸುತ್ತಾರೆ. ಕಳೆದ ಎಂಟು ದಿನಗಳಿಂದ ದಂಡ ವಿಧಿಸುತ್ತಿದ್ದೇವೆ. ಅವಶ್ಯಕತೆಯಿದ್ದರೆ ಮಾತ್ರ ಹೊರಗೆ ಬನ್ನಿ, ಇಲ್ಲದಿದ್ದರೆ ಮನೆಗಳಲ್ಲಿಯೇ ಇರಿ ಎಂದು ತಿಳಿಹೇಳುತ್ತಿದ್ದೇವೆ” ಎಂದು ಆರೋಗ್ಯ ನಿರೀಕ್ಷಕಿ ಶೋಭಾ ತಿಳಿಸಿದರು.
“ನಾವುಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಪೊಲೀಸರು ದಂಡ ವಿಧಿಸಬೇಕು, ನಗರಸಭೆಯವರು ಏಕೆ ದಂಡ ವಿಧಿಸುತ್ತೀರಿ ಎಂದು ಪ್ರಶ್ನಿಸುತ್ತಾರೆ. ಕಸ ತೆಗೆಯಲು, ತ್ಯಾಜ್ಯ ನಿರ್ವಹಣೆ ಮಾಡಲು, ಕುಡಿಯುವ ನೀರಿಗೆ, ಕಡೆಗೆ ಸತ್ತಾಗಲೂ ನಗರಸಭೆಯವರು ಬೇಕು, ಬದುಕಿರುವಾಗಲೂ ನಗರಸಭೆಯವರು ಬೇಕು. ಆದರೆ ನಿಮ್ಮ ಸೌಖ್ಯಕ್ಕೆ, ಆರೋಗ್ಯಕ್ಕೆ, ಸರ್ಕಾರದ ಆದೇಶ ಪಾಲಿಸಿ ಎಂದು ಹೇಳಲು ನಗರಸಭೆಯವರು ಬೇಕಾಗುವುದಿಲ್ಲವಾ. ನಾವು ಅಧಿಕಾರಿಗಳು ಕೆಲಸ ಮಾಡುತ್ತಿರುವುದು ಸಾರ್ವಜನಿಕರ ಸುರಕ್ಷತೆಗೆ. ಸೋಂಕು ಬರದಂತೆ ಕಾಪಾಡಲು ನಾವು ಹಗಲಿರುಳು ಶ್ರಮಿಸುತ್ತಿದ್ದೇವೆ. ಪೊಲೀಸ್, ಆರೋಗ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ನಮ್ಮೊಂದಿಗಿದ್ದಾರೆ. ಸಾರ್ವಜನಿಕರು ಇದನ್ನು ಅರ್ಥ ಮಾಡಿಕೊಳ್ಳಬೇಕು” ಎಂದು ಅವರು ಹೇಳಿದರು.