Home Blog Page 330

ಮಂತ್ರ ಮಾಂಗಲ್ಯದ ವಿವಾಹ

0

“ಒಲುಮೆ ಒಂದು ದಿವ್ಯರಕ್ಷೆ ಇಹ ಸಮಸ್ಯೆಗೆ, ಮದುವೆ ಅದಕೆ ಮಧುರದೀಕ್ಷೆ ಗೃಹತಪಸ್ಯೆಗೆ… ಶ್ರೀಯುತ ಮುರಳಿ ಮೋಹನ್ ಎಂ ಎಂಬ ವರನಾದ ನೀವು, ಶ್ರೀಮತಿ ಶ್ರೀದೇವಿ ಎಂ ಎಂಬ ವಧುವಾದ ನೀವು ಈ ದಿನದಂದು ದಂಪತಿಗಳೆಂಧು ಘೋಷಿಸುತ್ತೇವೆ” ಎಂದು ಹಿರಿಯರೊಬ್ಬರು ಹೇಳುತ್ತಿದ್ದಂತೆ ನೆರೆದಿದ್ದ ಕೆಲವೇ ಮಂದಿ, ತಾಳಿ ಕಟ್ಟಿದ ನವ ದಂಪತಿಗೆ ಬಿಡಿ ಹೂವನ್ನು ಹಾಕಿ ಆಶೀರ್ವದಿಸಿದರು.
ತಾಲ್ಲೂಕಿನ ಸದ್ದಹಳ್ಳಿ ಗ್ರಾಮದ ಬಂಡೆಮ್ಮ ದೇವಾಲಯದಲ್ಲಿ ಸೋಮವಾರ ಹೊಸಕೋಟೆ ತಾಲ್ಲೂಕಿನ ಶಿಕ್ಷಕ ಮುರುಳಿ ಮತ್ತು ಶಿಕ್ಷಕಿ ಶ್ರೀದೇವಿ ಸರಳವಾಗಿ ಕುವೆಂಪು ರವರ ಮಂತ್ರಮಾಂಗಲ್ಯ ವಿವಾಹ ಸಂಹಿತೆಯಂತೆ ಮದುವೆಯಾದರು.
ಎರಡೂ ಕುಟುಂಬಗಳ ಬೆರಳೆಣಿಕೆಯಷ್ಟು ಮಂದಿ ಮಾತ್ರವಿದ್ದರು. ಅಕ್ಷತೆ, ಹಾಲೆರೆಯುವುದನ್ನು ಸಹ ಮಾಡಲಿಲ್ಲ. ಹಿರಿಯರೊಬ್ಬರು ಕುವೆಂಪು ರವರ ಮಂತ್ರಮಾಂಗಲ್ಯ ಪುಸ್ತಕದಿಂದ ಮಂತ್ರಗಳನ್ನು ಮತ್ತು ಹಲವಾರು ಸನ್ನಡತೆಗಳ ಸಾಲುಗಳನ್ನು ಓದಿ ಗಂಡು ಹೆಣ್ಣಿನ ಕೈಲಿ ಓದಿಸಿದರು. ಗಂಡು – ಹೆಣ್ಣು ಪರಸ್ಪರ ಹೂವಿನ ಹಾರಗಳನ್ನು ಬದಲಾಯಿಸಿಕೊಂಡು, ಮಾಂಗಲ್ಯಧಾರಣೆಯ ಪವಿತ್ರ ಕಾರ್ಯವನ್ನು ನೆರವೇರಿಸಿದರು. ತಂದೆ – ತಾಯಿಯರು ಅವರಿಗೆ ಆಶಿರ್ವದಿಸಿದರು. ಹಾಗೆಯೇ ಹಿರಿಯರು, ಮದುವೆ ಬಂದಂತಹ ಬಾಂಧವರು, ಗೆಳೆಯರು ಹೂವನ್ನು ಎರಚಿ ಶುಭಾಶಯ ಕೋರಿದರು.
“ಕುವೆಂಪು ಅವರ ಪ್ರಭಾವ ನನ್ನ ಮೇಲೆ ಇತ್ತು. ಜತೆಗೆ ಸರಳವಾಗಿ ವಿವಾಹವಾಗಬೇಕೆಂಬ ಆಸೆಯೂ ಇತ್ತು. ಮದುವೆ ಖಾಸಗಿ ವಿಚಾರದಂತೆ ಅದೊಂದು ಭಾವಾನಾತ್ಮಕ ವಿಚಾರ. ಕವಿ ಕುವೆಂಪು ಅವರು ಜನರು ದುಂದುವೆಚ್ಚ, ಸಾಲಬಾಧೆ, ಪುರೋಹಿತಶಾಹಿ ಕಂದಾಚಾರ ಮುಂತಾದ ಎಲ್ಲಾ ಮೌಢ್ಯಗಳನ್ನೂ, ಒಣ ಪ್ರತಿಷ್ಠೆಗಳನ್ನೂ ಬದಿಗಿಟ್ಟು ಸರಳವಾಗಿ ಮದುವೆ ಮಾಡಿಕೊಂಡು ಬದುಕಬೇಕೆಂದು ಬಯಸಿದ್ದರು. ನನ್ನ ಆಶಯಕ್ಕೆ ನನ್ನ ಶ್ರೀಮತಿ ಹಾಗೂ ಎರಡೂ ಕುಟುಂಬದವರು ಸಮ್ಮತಿಸಿದರು” ಎಂದು ವರ ಮೋಹನ್ ತಿಳಿಸಿದರು.

ವಿಶ್ವ ಬಾಲಕಾರ್ಮಿಕರ ವಿರೋಧಿ ದಿನ

0

ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ಶುಕ್ರವಾರ “ವಿಶ್ವ ಬಾಲಕಾರ್ಮಿಕರ ವಿರೋಧಿ ದಿನ” ದ ಅಂಗವಾಗಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಟೋಗೆ ಮೈಕ್ ಅಳವಡಿಸಿ, ಆ ಮೂಲಕ ಬಾಲಕಾರ್ಮಿಕರನ್ನು ತಡೆಗಟ್ಟುವ ಕುರಿತಾದ ಜನಜಾಗೃತಿಯನ್ನು ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಿ ಜೆ.ಎಂ.ಎಫ್.ಸಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್ ಮಾತನಾಡಿದರು.
ಮಕ್ಕಳನ್ನು ಅಪಾಯಕಾರಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬಾರದು. ಬಾಲ್ಯದಲ್ಲಿ ಆಟವಾಡುತ್ತ , ತನ್ನ ಜೊತೆಗಾರರೊಂದಿಗೆ ಶಾಲೆಗೆ ಹೋಗಿ ಕಲಿಯಬೇಕಾದ ಮಕ್ಕಳು ಹಲವಾರು ಕಾರಣಗಳಿಂದ ಹಾಗೂ ಸಮಸ್ಯೆಗಳಿಂದ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇದು ಒಂದು ಸಾಮಾಜಿಕ ಪಿಡುಗು ಎಂದು ಅವರು ತಿಳಿಸಿದರು.
ಕಟ್ಟಡಗಳ ಕೆಲಸಗಳಲ್ಲಿ, ಅಂಗಡಿ ಮಳಿಗೆಗಳಲ್ಲಿ, ಗಾರ್ಮೆಂಟ್ಸ್ ಗಳಲ್ಲಿ, ಬೇಕರಿ, ಗ್ಯಾರೇಜ್‌, ಹೊಟೇಲ್‌, ಕಾರ್ಖಾನೆಗಳಲ್ಲಿ, ದೊಡ್ಡ ಮನೆಗಳಲ್ಲಿ ಕೆಲಸದಾಳುಗಳಾಗಿ ತಮ್ಮ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ‌ಕ್ಕೆ ಕಷ್ಟವಾಗುವಂಥ ಕೆಲಸಗಳನ್ನು ಮಕ್ಕಳು ಮಾಡುತ್ತಿದ್ದಾರೆ. ಇದರಿಂದ ಅವರು ಶಿಕ್ಷಣ ವಂಚಿತರಾಗುತ್ತಿದ್ದಾರೆ. ಪೌಷ್ಟಿಕ ಆಹಾರ ಕೊರತೆಯಿಂದಾಗಿ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಕೆಲವೊಮ್ಮ ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು, ಬಾಲ ಕಾರ್ಮಿಕ ಪದ್ಧತಿಯಿಂದ ಉಂಟಾಗುವ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜನಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ತಹಶೀಲ್ದಾರ್ ಕೆ.ಅರುಂಧತಿ ಮಾತನಾಡಿ ತಾಲ್ಲೂಕಿನಲ್ಲಿ ಮಕ್ಕಳನ್ನು ದುಡಿಸಿಕೊಳ್ಳುವುದು ಕಂಡುಬಂದಲ್ಲಿ ತಕ್ಷಣವೇ ಮಾಹಿತಿ ನೀಡಿ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಂಜುಕುಮಾರ್ ಎ.ಪಚ್ಚಾಪುರೆ, ಸಿವಿಲ್ ನ್ಯಾಯಾಧೀಶೆ ಡಿ.ರೋಹಿಣಿ, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ಕಾರ್ಯದರ್ಶಿ ಎಂ.ಬಿ.ಲೋಕೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ನಾಗವೇಣಿ, ಕಾರ್ಮಿಕ ನಿರೀಕ್ಷಕ ರಾಮಾಂಜಿನಪ್ಪ ಹಾಜರಿದ್ದರು.

ಬಿಜೆಪಿ ಕಾರ್ಯಕರ್ತರಿಂದ ಕರಪತ್ರ ವಿತರಣೆ

0

ಕಳೆದ ಆರು ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ದೇಶಕ್ಕಾಗಿ ಕೈಗೊಂಡಿರುವ ಯೋಜನೆಗಳ ಬಗ್ಗೆ ದೇಶದ ಕಟ್ಟಕಡೆಯ ವ್ಯಕ್ತಿಗೂ ತಿಳಿಯಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸಾಧನೆಗಳ ಕರಪತ್ರಗಳನ್ನು ಮನೆ ಮನೆಗೂ ವಿತರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರಗೌಡ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2 ನೇ ಅವಧಿಯ ಒಂದು ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ನಗರದ ಕೋಟೆ ವೃತ್ತದ ಬಳಿಯಿರುವ ಶ್ರೀರಾಮ ದೇವಾಲಯದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಶುಕ್ರವಾರ ಪೂಜೆ ಸಲ್ಲಿಸಿದ ನಂತರ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಎರಡನೇ ಅವಧಿಯ ಮೊದಲ ವರ್ಷದಲ್ಲಿ ದಶಕಗಳಿಂದ ದೇಶದಲ್ಲಿ ಕಾಡುತ್ತಿದ್ದ ಸವಾಲುಗಳಲ್ಲೊಂದಾದ ಆರ್ಟಿಕಲ್ 370 ರದ್ದತಿ, ಪೌರತ್ವ ತಿದ್ದುಪಡಿ ವಿಧೇಯಕ, ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ, ತ್ರಿವಳಿ ತಲಾಖ್ ಸೇರಿದಂತೆ ಅನಿರೀಕ್ಷಿತವಾಗಿ ದೇಶಕ್ಕೆ ವಕ್ಕರಿಸಿದ ಕೋವಿಡ್ 19 ಹರಡದಂತೆ ಕೈಗೊಂಡ ಕ್ರಮಗಳು ಶ್ಲಾಘನೀಯ, ಇಂತಹ ಮಹತ್ತರ ಯೋಜನೆಗಳು ದೇಶದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎನ್ನುವ ದೃಷ್ಠಿಯಿಂದ ಕರಪತ್ರ ವಿತರಣೆ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ನಗರದ ಮುಖ್ಯರಸ್ತೆಗಳಲ್ಲಿ ಸಂಚರಿಸಿದ ಬಿಜೆಪಿ ಪದಾಧಿಕಾರಿಗಳು ಅಂಗಡಿ ಅಂಗಡಿಗೂ ತೆರಳಿ ಕರಪತ್ರ ವಿತರಿಸಿದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಎಸ್.ರಾಘವೇಂದ್ರ, ಮಾಜಿ ಅಧ್ಯಕ್ಷ ಬಿ.ಸಿ.ನಂದೀಶ್, ರಮೇಶ್‌ಬಾಯಿರಿ, ಸುರೇಶ್, ಅರಿಕೆರೆ ಮುನಿರಾಜು, ಶ್ರೀಧರ್, ಮುಕೇಶ್, ನರೇಶ್ ಹಾಜರಿದ್ದರು.

ಪಾರ್ಶ್ವವಾಯು ಪೀಡಿತೆಗೆ ನೆರವು

0

ನಗರದ ಕನಕನಗರದ ನಿವಾಸಿ ಪಾರ್ಶ್ವವಾಯು ಪೀಡಿತೆ ಗೀತಾ ಅವರ ಮನೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಅವರೊಂದಿಗೆ ಶುಕ್ರವಾರ ಭೇಟಿ ನೀಡಿ ಚಿಕಿತ್ಸೆಗೆ ನೆರವು ನೀಡುವುದಾಗಿ ತಿಳಿಸಿದರು.
ಅತಿಥಿ ಉಪನ್ಯಾಸಕಿಯಾಗಿದ್ದ ಗೀತಾ ಕಳೆದ ಒಂದೂವರೆ ವರ್ಷಗಳಿಂದ ಪಾರ್ಶ್ವವಾಯುವಿನಿಂದಾಗಿ ಒಂದು ಕೈ ಮತ್ತು ಒಂದು ಕಾಲು ಸ್ವಾಧೀನವಿಲ್ಲದೆ ಕಷ್ಟಪಡುತ್ತಿದ್ದರು. ಚಿಕಿತ್ಸೆಗೆ ಹೆಚ್ಚು ವೆಚ್ಚವಿರುವುದರಿಂದ ಸಹಾಯಹಸ್ತಕ್ಕಾಗಿ ಮನವಿ ಸಲ್ಲಿಸಿದ್ದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಅವರು ಗೀತಾ ಅವರ ತಂದೆ ಆಂಜಿನಪ್ಪ ತಾಯಿ ಅಶ್ವತಮ್ಮ ಅವರಿಗೆ ಹತ್ತು ಸಾವಿರ ರೂಗಳನ್ನು ನೀಡಿ, ಚಿಕ್ಕಬಳ್ಳಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದರು. ಚಿಕಿತ್ಸೆಗಾಗಿ ಅಥವಾ ಔಷಧಿಗಾಗಿ ಹೆಚ್ಚಿನ ಖರ್ಚು ಬಂದರೂ ಸಹಾಯ ಮಾಡುವುದಾಗಿ ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಲೋಕೇಶ್, ಮುನಿಲಕ್ಷ್ಮಮ್ಮ ಹಾಜರಿದ್ದರು.

SSLC Helpline

0

2019 – 20 ನೇ ಸಾಲಿನ SSLC ಪರೀಕ್ಷೆ ಜೂನ್ 25 ರಿಂದ ಜುಲೈ 4 ರವರೆಗೆ ನಡೆಯಲಿದೆ. ಪರೀಕ್ಷೆಗೆ ಯಾವುದೇ ರೀತಿಯ ಅಡೆತಡೆ ಬಾರದಂತೆ ನೋಡಿಕೊಳ್ಳಲು, ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಅನುಕೂಲ ಕಲ್ಪಿಸುವ ಸಲುವಾಗಿ ಈ ಕೆಳಕಂಡ ಸಹಾಯವಾಣಿಗಳನ್ನು ತಾಲ್ಲೂಕು ಹಂತದಲ್ಲಿ ಹಾಗೂ ಪರೀಕ್ಞಾ ಕೇಂದ್ರದ ಹಂತದಲ್ಲಿ ಆರಂಭಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲ್ಲೂಕು SSLC ನೋಡಲ್ ಅಧಿಕಾರಿಗಳ ದೂರವಾಣಿ ಸಂಖ್ಯೆ 8217037501.

ಪರೀಕ್ಷಾ ಕೇಂದ್ರ
  • ಕೆ.ಪಿ.ಎಸ್ ಸ.ಪ್ರೌ.ಶಾಲೆ, ಬಶೆಟ್ಟಹಳ್ಳಿ, ಮುಖ್ಯಸ್ಥರ ದೂರವಾಣಿ (9886603673 ; 7899444374)
  • ಮೊರಾರ್ಜಿ ದೇಸಾಯಿ ಪ್ರೌಢ ಶಾಲೆ, 11 ನೇ ಮೈಲಿ (9448807991 ; 9886603673)
  • ಸರ್ಕಾರಿ ಪ್ರೌಢ ಶಾಲೆ, ಮೇಲೂರು (9449502138)
  • ಸುಮುಖ ಪ್ರೌಢ ಶಾಲೆ, ಎಚ್‌.ಕ್ರಾಸ್ (9632959264 ; 9108178451)
  • ಸರ್ಕಾರಿ ಪ್ರೌಢ ಶಾಲೆ, ಜಂಗಮಕೋಟೆ (9108178451 ; 9632959264)
  • ಸರ್ಕಾರಿ ಪ್ರೌಢ ಶಾಲೆ, ಶಿಡ್ಲಘಟ್ಟ (9900825536 ; 9538479276)
  • ಡಾಲ್ಪಿನ್ ಪ್ರೌಢ ಶಾಲೆ, ನಲ್ಲಿಮರದಹಳ್ಳಿ, ಶಿಡ್ಲಘಟ್ಟ (9538479276 ; 8970949466)
  • ಎಸ್.ಆರ್.ಇ.ಟಿ ಪ್ರೌಢ ಶಾಲೆ, ಕದಿರಿನಾಯಕನಹಳ್ಳಿ (9844347772 ; 9902341418)
  • ಬಿ.ಜಿ.ಎಸ್.ಪ್ರೌಢ ಶಾಲೆ,ಹನುಮಂತಪುರ (9741024747 ; 9900416205)
  • ವಾಸವಿ ಪ್ರೌಢ ಶಾಲೆ, ಶಿಡ್ಲಘಟ್ಟ (8951420230 ; 9741235047)

ಮುಂಬೈನಿಂದ ಶಿಡ್ಲಘಟ್ಟಕ್ಕೆ ಆಗಮಿಸಿದ ಆರು ಮಂದಿ ಕ್ವಾರಂಟೈನ್

0

ಶಿಡ್ಲಘಟ್ಟಕ್ಕೆ ಮುಂಬೈಯಿಂದ ಆಗಮಿಸಿರುವ ಆರು ಮಂದಿಯನ್ನು ಆರೋಗ್ಯ ಇಲಾಖೆಯವರು ಬಿ.ಸಿ.ಎಂ ಹಾಸ್ಟೆಲ್ ನಲ್ಲಿ ಕ್ವಾರೆಂಟೈನ್ ಮಾಡಿದ್ದಾರೆ.
ಬುಧವಾರ ಮುಂಬೈಯಿಂದ ಬೆಂಗಳೂರಿಗೆ ಉದ್ಯಾನ ಎಕ್ಸ್ ಪ್ರೆಸ್ಸ್ ರೈಲಿನಲ್ಲಿ ಆಗಮಿಸಿದ್ದ ಶಿಡ್ಲಘಟ್ಟ ಮೂಲದವರು ಮಧ್ಯಾಹ್ನ ನಗರಕ್ಕೆ ಆಗಮಿಸಿದ್ದರು. ನಗರದ ಬಸ್ ನಿಲ್ದಾಣದ ಬಳಿಯಿರುವ ದರ್ಗಾದ ಬಳಿ ವಾಸವಿರುವ ಅವರ ಮನೆಗೆ ಗುರುವಾರ ಶಿಡ್ಲಘಟ್ಟ ತಾಲ್ಲೂಕು ಕೊರೊನ ಟಾಸ್ಕ್ ಫೋರ್ಸ್ ತಂಡ ಭೇಟಿ ನೀಡಿದ್ದರು. ನಂತರ ಅವರ ಆರೋಗ್ಯ ಪರೀಕ್ಷಿಸಿ ನಗರದ ಬಿಸಿಎಂ ಹಾಸ್ಟೆಲ್ ನಲ್ಲಿ ಕ್ವಾರೆಂಟೈನ್ ಮಾಡಿದ್ದಾರೆ. ಐದನೇ ದಿನ ಅವರ ಸ್ವಾಬ್ ಪರೀಕ್ಷೆ ನಡೆಸಲಾಗುವುದೆಂದು ಆರೋಗ್ಯ ಸಿಬ್ಬಂದಿ ತಿಳಿಸಿದ್ದಾರೆ.

ದ್ರಾಕ್ಷಿ ತೋಟದಲ್ಲಿ ಕಂಡುಬಂದ ಕಡ್ಡಿ ಜೇನು

0

ಜೇನುತುಪ್ಪ ಸಂಗ್ರಹಿಸುವ ಜೇನ್ನೊಣಗಳಲ್ಲಿ ಹೆಜ್ಜೇನು, ಕೋಲು ಜೇನು, ಮಿಸ್ರಿ, ತುಡುವೆಜೇನು ಎಂಬ ಜಾತಿಯವು ನಮ್ಮ ಭಾಗದಲ್ಲಿವೆ. ಇವುಗಳಲ್ಲಿ ತುಡುವಿ ಬಿಟ್ಟರೆ ಉಳಿದವು ಒಂದೇ ಕಡೆ ಸ್ಥಿರವಾಗಿರುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ನಗರೀಕರಣದ ಹೊಡೆತಕ್ಕೆ ಹೆಜ್ಜೇನು ಹಾಗೂ ಇತರೆ ಸ್ವಾಭಾವಿಕ ಜೇನು ನೊಣಗಳ ಸಂಖ್ಯೆ ಕಡಿಮೆಯಾಗುತ್ತಿದೆ.

ತಾಲ್ಲೂಕಿನಲ್ಲಿ ಹಿಂದೆ ಹೇರಳವಾಗಿ ಕಾಣಸಿಗುತ್ತಿದ್ದ ಜೇನುಗೂಡುಗಳು ಈಗೀಗ ವಿರಳವಾಗಿವೆ. ಈಚೆಗೆ ಲಾಕ್ ಡೌನ್ ಪರಿಣಾಮದಿಂದ ಔಷಧಿಗಳನ್ನು ಸಿಂಪಡಿಸುವುದು ನಿಧಾನವಾದ ಕಾರಣ ಕೆಲವು ದ್ರಾಕ್ಷಿ ತೋಟಗಳಲ್ಲಿ ಕಡ್ಡಿ ಜೇನು ಕಂಡುಬಂದಿದೆ.

ಕೋಲು ಜೇನು ಅಥವಾ ಕಡ್ಡಿ ಜೇನು ಎಂಬ ಹೆಸರು ಬಂದಿರುವುದೇ ಅದು ಕೋಲಿನ ಆಸರೆಯಲ್ಲಿ ಗೂಡು ಕಟ್ಟುವುದಕ್ಕೆ. ಕೋಲು ಜೇನುಗಳು ಗೂಡು ಕಟ್ಟಲು ಹೆಚ್ಚಾಗಿ, ಪೊದೆಗಳು ಹಾಗೂ ಮರಗಳ ತೆಳುವಾದ ಕೊಂಬೆಗಳನ್ನು ಆರಿಸಿ ಕೊಳ್ಳುತ್ತವೆ ಹಾಗೂ ಆ ಕೊಂಬೆಯನ್ನು ಒಳಗೊಂಡು ಎರಿಯನ್ನು ರಚಿಸುತ್ತವೆ. ಕೊಂಬೆಯನ್ನು ಒಳಗೊಂಡ ಎರಿಯ ಮೇಲ್ಬಾಗ ಹೆಚ್ಚು ದಪ್ಪವಾಗಿರುತ್ತದೆ. ಕೆಳಭಾಗಕ್ಕೆ ಬಂದಂತೆಲ್ಲಾ ಎರಿಯು ತೆಳುವಾಗಿರುತ್ತದೆ. ಮೇಲ್ಬಾಗದ ಕಣಗಳಲ್ಲಿಯೇ ಜೇನು ತುಪ್ಪದ ಸಂಗ್ರಹಣೆ ಮಾಡುತ್ತವೆ.

“ಎರಿಯಲ್ಲಿ ಜೇನಿನ ಭಾಗವನ್ನು ಮಾತ್ರ ಕತ್ತರಿಸಿ ತೆಗೆದು ಮೊಟ್ಟೆ ಮರಿಗಳಿರುವ ಭಾಗವನ್ನು ಅವುಗಳ ಸಹಜ ವಾಸಸ್ಥಾನಗಳಲ್ಲಿ ಇರಿಸುವ ವಿಧಾನವನ್ನು ಅನುಸರಿಸಬೇಕು. ಕೆಳಗೆ ಬಟ್ಟಲು ಇಟ್ಟುಕೊಂಡು, ಚಾಕುವಿನಿಂದ ಕೋಲಿನ ಮೇಲು ಭಾಗದ ಬಳಿಯಿಂದ ಕೋಲಿಗೆ ತಾಗದಂತೆ ಏರಿಯನ್ನು ಕತ್ತರಿಸಿ, ಉಳಿಕೆಯನ್ನು ಅವುಗಳ ಹಕ್ಕಿನ ಜೇನು ಎಂಬಂತೆ ಅಲ್ಲಿಯೇ ಉಳಿಸಬೇಕು” ಎಂದು ಈ ಜೇನನ್ನು ಕೀಳುವ ಬಗೆಯನ್ನು ತೋಟಗಾರಿಕಾ ಸಹಾಯಕ ನಿರ್ದೇಶಕ ರಮೇಶ್ ವಿವರಿಸಿದರು.

“ಪ್ರತೀ ಕುಟುಂಬದಿಂದ ಒಂದು ಕಿಲೋಗ್ರಾಂಗಳಷ್ಟು ಮಾತ್ರ ಜೇನು ತುಪ್ಪವನ್ನು ಕೊಡಬಲ್ಲ ಈ ಜೇನುನೊಣಗಳು ಮುಖ್ಯವಾಗಿ ನಮ್ಮ ಬೆಳೆಗಳ ಪರಾಗಸ್ಪರ್ಶ ಕ್ರಿಯೆಯಲ್ಲಿ ಸಹಕಾರಿಯಾಗುತ್ತವೆ. ತಮ್ಮ ಗೂಡಿನಿಂದ 0.5 ಕಿ.ಮೀ ದೂರದವರೆಗಿನ ಪ್ರದೇಶದಲ್ಲಿ ಆಹಾರ ಸಂಗ್ರಹಿಸುವ ಇವು ಉಷ್ಣವಲಯ ಮತ್ತು ಒಣ ತಗ್ಗುಪ್ರದೇಶ ಇತ್ಯಾದಿ ಹವಾಮಾನಗಳಲ್ಲಿ ಒಗ್ಗಿ ಕೊಳ್ಳುವುದರಿಂದ ಹಾಗೂ ವಲಸೆ ಹೋದರೂ ಅತೀ ಸಮೀಪದ ಸ್ಥಳದಲ್ಲಿಯೇ ನೆಲೆಸುವುದರಿಂದ ಆಯಾ ಪ್ರದೇಶದ ಬೆಳೆಗಳ ಪರಾಗಸ್ಪರ್ಶವನ್ನು ಅತ್ಯಂತ ಯಶಸ್ವಿಯಾಗಿ ಇವು ನಿರ್ವಹಿಸುತ್ತವೆ” ಎಂದು ಅವರು ಹೇಳಿದರು.

ಶಾಲೆಗಳಲ್ಲಿ ಪರಿಸರ ಸ್ನೇಹಿ ವಾತಾವರಣ ನಿರ್ಮಾಣವಾಗಬೇಕು

0

ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸುಂದರಲಾಲ್ ಬಹುಗುಣ ಇಕೋಕ್ಲಬ್ ವತಿಯಿಂದ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿದರು.
ಪರಿಸರವನ್ನು ಹಾಳುಮಾಡದೇ ಮುಂದಿನ ಪೀಳಿಗೆಗೆ ಯಥಾವತ್ತಾಗಿ ಉಳಿಸುವತ್ತ ನಾವು ಶ್ರಮಿಸಬೇಕಿದೆ. ಗಿಡ ಮರಗಳ ಸಂರಕ್ಷಣೆಯು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು. ಶಾಲೆಗಳಲ್ಲಿ ಪರಿಸರ ಸ್ನೇಹಿ ವಾತಾವರಣ ನಿರ್ಮಾಣವಾಗಬೇಕು. ಸಸ್ಯಸಂಪತ್ತು ಹೆಚ್ಚುವುದರಿಂದ ಪ್ರಾಣಿ, ಪಕ್ಷಿಸಂಕುಲ ಸುಸ್ಥಿತಿಯ ಜೀವನ ನಡೆಸಲು ಸಾಧ್ಯವಾಗುವುದು ಎಂದು ಅವರು ತಿಳಿಸಿದರು.
ಪರಿಸರ ಶಿಕ್ಷಣವು ಕಾಟಾಚಾರದ ಶಿಕ್ಷಣದ ಪಠ್ಯವಸ್ತುವಾಗದೇ ಇತರೆ ವಿಷಯಗಳಂತೆ ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಅಗತ್ಯವನ್ನು ತಿಳಿಸಿಕೊಡುವ ಕಡ್ಡಾಯ ವಿಷಯವಾಗಿ ಬೋಧನೆಯಾಗಬೇಕು. ಮಕ್ಕಳಿಗೆ ಪ್ರಾಯೋಗಿಕವಾಗಿ ಸಸಿಗಳನ್ನು ನೆಡುವ, ಪೋಷಿಸುವ ಚಟುವಟಿಕೆಗಳು ನಡೆಯಬೇಕು ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಎಂ.ಶಂಕರಪ್ಪ ಮಾತನಾಡಿ, ಮಾನವನು ತನ್ನ ಸ್ವಾರ್ಥಕ್ಕಾಗಿ ಕಾಡನ್ನು ನಾಶಪಡಿಸಿ ಮಾಡುತ್ತಿರುವ ಕಾಂಕ್ರೀಟೀಕರಣ, ಸಿಮೆಂಟೀಕರಣಗಳಿಂದ ಜಾಗತಿಕ ತಾಪಮಾನ ಹೆಚ್ಚುವುದಲ್ಲದೇ ನೀರು ಇಂಗಿಸಿಕೊಳ್ಳುವ ಭೂಮಿಯೇ ಇಲ್ಲವಾಗುತ್ತಿದೆ. ಅಂತರ್ಜಲ ಮಟ್ಟವೂ ಕುಸಿಯುತ್ತಿದ್ದು ನೀರಿಗಾಗಿ ಯುದ್ಧಗಳು ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದರು.
ಶಾಲೆಯ ಹಳೆಯ ವಿದ್ಯಾರ್ಥಿ ಮೆಹಬೂಬ್‌ಪಾಶಾ, ಶಿಕ್ಷಕ ಎ.ಬಿ.ನಾಗರಾಜ ಮಾತನಾಡಿದರು.
ಮಾಹಿತಿ ಸಂಗ್ರಹ: ಕೊರೋನಾ ಹಿನ್ನೆಲೆಯಲ್ಲಿ ಶೈಕ್ಷಣಿಕ ಸಾಲಿಗೆ ತರಗತಿಗಳು ಆರಂಭಿಸುವ, ಶಾಲಾ ಆವರಣದಲ್ಲಿ ಕೊರೋನಾ ಜಾಗೃತಿ ಸುರಕ್ಷತಾ ಕಾರ್ಯಗಳನ್ನು ಹಮ್ಮಿಕೊಳ್ಳುವ ಬಗೆಗೆ ಪೋಷಕರು, ಎಸ್‌ಡಿಎಂಸಿ ಪದಾಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲು ಸಭೆಯನ್ನು ನಡೆಸಲಾಯಿತು. ಎಸ್‌ಡಿಎಂಸಿ ಪದಾಧಿಕಾರಿಗಳು, ಪೋಷಕರು, ಶಿಕ್ಷಕವೃಂದದವರು ಪಾಲ್ಗೊಂಡಿದ್ದರು.
ಮುಖ್ಯಶಿಕ್ಷಕಿ ಉಮಾದೇವಿ, ಶಿಕ್ಷಕಿ ಎಚ್.ತಾಜೂನ್, ಶಿಕ್ಷಕ ಬಿ.ನಾಗರಾಜು, ಲಕ್ಷ್ಮಯ್ಯ, ಹಳೆಯ ವಿದ್ಯಾರ್ಥಿ ಸುನಿಲ್, ವೇಣುಗೋಪಾಲ್, ಕಾರ್ತೀಕ್, ಎಸ್‌ಡಿಎಂಸಿ ಸದಸ್ಯರು ಹಾಜರಿದ್ದರು.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ

0

ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸೂಕ್ತ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶಿವಕುಮಾರ್ ತಿಳಿಸಿದರು.
ನಗರದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿಯಲ್ಲಿ ಕೊರೊನಾ ಕುರಿತಾದ ಜಾಗೃತಿ ಮೂಡಿಸುವ “ಕೋವಿಡ್ 19 ಮಾಹಿತಿ ಪತ್ರ” ವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕೊರೊನಾ ವೈರಾಣು ಎಲ್ಲಿರುತ್ತದೆ ಎಂಬುದು ನಮಗೆ ಕಾಣುವುದಿಲ್ಲ. ಹಾಗಾಗಿ ನಮ್ಮೆಲ್ಲರ ಆರೋಗ್ಯಕ್ಕಾಗಿ ಮುನ್ನೆಚ್ಚರಿಕೆ ಅಗತ್ಯ. ಈ ಕುರಿತಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಐದು ಸಾವಿರ ಭಿತ್ತಿಪತ್ರಗಳ ಮೂಲಕ ತಾಲ್ಲೂಕಿನಾದ್ಯಂತ ಅರಿವು ಮೂಡಿಸುತ್ತಿರುವುದು ಅಭಿನಂದನೀಯ ಸಂಗತಿ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಶಾಖೆಯ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಮಾತನಾಡಿ, ಕೊರೊನಾ ವೈರಾಣುವನ್ನು ಆಂತರಿಕವಾಗಿ ಮತ್ತು ಬಹಿರಂಗವಾಗಿ ಹಿಮ್ಮೆಟ್ಟಿಸಬೇಕಿದೆ. ಆಂತರಿಕವೆಂದರೆ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದು. ಬಹಿರಂಗವೆಂದರೆ, ಮಾಸ್ಕ್ ಧರಿಸುವುದು, ಸ್ವಚ್ಛತೆ, ಅಂತರ ಕಾಯ್ದುಕೊಳ್ಳುವುದು ಮುಂತಾದ ಮುನ್ನೆಚ್ಚರಿಕೆಗಳು. ಈ ನಿಟ್ಟಿನಲ್ಲಿ ಹತ್ತು ಲಕ್ಷ “ಕೋವಿಡ್ 19 ಮಾಹಿತಿ ಪತ್ರ” ವನ್ನು ರಾಜ್ಯದಾದ್ಯಂತ ಹಂಚಲಾಗುತ್ತಿದೆ ಎಂದರು.
ಜನಜಾಗೃತಿ ವೇದಿಕೆ ಸದಸ್ಯ ಎ.ಎಂ.ತ್ಯಾಗರಾಜ್, ಕಾರ್ಯಕರ್ತರು ಕಿರಣ್, ಚೇತನ್, ಸುಮ, ಜ್ಯೋತಿ, ಲಕ್ಷ್ಮಿ ಹಾಜರಿದ್ದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಮಾಸ್ಕ್ ತಯಾರಿ

0

ಜೂನ್ 25ನೇ ತಾರೀಕಿನಿಂದ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗಾಗಿ ರಾಜ್ಯಾದ್ಯಂತ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಉಚಿತವಾಗಿ ಮಾಸ್ಕ್ ಗಳನ್ನು ವಿತರಿಸುವ ಯೋಜನೆ ರೂಪಿಸಲಾಗಿದೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿಯೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತಾಲ್ಲೂಕು ಕಾರ್ಯದರ್ಶಿ ಪ್ರಕಾಶ್ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಮಾಸ್ಕ್ ತಯಾರಿಸುತ್ತಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸುಮಾರು ಎರಡು ಸಾವಿರದ ಆರು ನೂರು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಎಲ್ಲರಿಗೂ ಉಚಿತವಾಗಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಮಾಸ್ಕ್ ಗಳನ್ನು ವಿತರಿಸುವ ಸಲುವಾಗಿ ತಾಲ್ಲೂಕಿನ ವಿವಿಧ ಶಾಲೆಗಳ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮಾಸ್ಕ್ ಗಳ ತಯಾರಿಕಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ಪರೀಕ್ಷೆ ಬರೆಯಲು ಬರುವಂತಹ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಮಾಸ್ಕ್ ಗಳನ್ನು ವಿತರಿಸುವುದು ಸ್ಯಾನಿಟೈಸರ್ ನೀಡುವುದು ಮುಖ್ಯವಾಗಿದೆ. ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರು ರಾಜ್ಯ ಹಂತದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ನೆರವನ್ನು ಕೋರಿ ಉಚಿತವಾಗಿ ರಾಜ್ಯಾದ್ಯಂತ ಎಲ್ಲ ವಿದ್ಯಾರ್ಥಿಗಳಿಗೂ ಮಾಸ್ಕ್ ಗಳನ್ನು ತಯಾರಿಸಿ ಕೊಡುವಂತೆ ಕೋರಿದ್ದಾರೆ. ಅದರಂತೆ ಜಿಲ್ಲಾ ಹಂತ ಮತ್ತು ಎಲ್ಲಾ ತಾಲ್ಲೂಕು ಹಂತಗಳಲ್ಲಿ ಆಯಾ ಜಿಲ್ಲೆಗೆ ಅವಶ್ಯಕವಾಗಿರುವಂತಹ ಮಾಸ್ಕ್ ಗಳನ್ನು ಜಿಲ್ಲಾ ಹಂತದಲ್ಲಿಯೇ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಾಗೂ ಪದಾಧಿಕಾರಿಗಳು ಸೇರಿ ಹಲವಾರು ದಾನಿಗಳ ಸಹಾಯವನ್ನು ಪಡೆದು ತಯಾರಿಸುತ್ತಿದ್ದಾರೆ.
“ಮಾಸ್ಕ್ ಗಳ ತಯಾರಿಕೆಗಾಗಿ ತಾಲ್ಲೂಕಿನ ಸಮಾಜ ಸೇವಕರಾದ ಆಂಜನಪ್ಪ ಪುಟ್ಟು ಅವರು ನೂರು ಮೀಟರ್ ಬಟ್ಟೆಯನ್ನು ಕೊಡಿಸಿ ಸಹಕರಿಸಿದ್ದಾರೆ. ಕೊರೊನಾ ವೈರಸ್ ತಡೆಗಟ್ಟಲು ಮಾಡುತ್ತಿರುವ ಇಂತಹ ಸಮಾಜಮುಖಿ ಕಾರ್ಯಕ್ಕಾಗಿ ನಿಸ್ವಾರ್ಥವಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತೊಡಗಿಸಿಕೊಂಡಿದ್ದಾರೆ. ಇಡೀ ಜಿಲ್ಲೆಯಲ್ಲಿ ದಾನಿಗಳಿಂದ ಬಟ್ಟೆಗಳನ್ನು ಸಂಗ್ರಹಿಸಿ ಸುಮಾರು ಇಪ್ಪತ್ತು ಸಾವಿರ ಮಾಸ್ಕ್ ಗಳ ತಯಾರಿಕೆಯ ಗುರಿಯನ್ನು ಹೊಂದಲಾಗಿದ್ದು, ಈಗಾಗಲೇ ಹನ್ನೆರಡು ಸಾವಿರದಷ್ಟು ಮಾಸ್ಕ್ ಗಳು ತಯಾರಾಗಿವೆ” ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ತರಬೇತಿ ಆಯುಕ್ತ ಸಿ.ಬಿ.ಪ್ರಕಾಶ್ ತಿಳಿಸಿದ್ದಾರೆ.

ನರೇಗಾ ಬದು ಮಾಸಾಚರಣೆ

0

ಮುಂಗಾರು ಮಳೆ ಪೂರ್ವದಲ್ಲಿ ನೆಲಕ್ಕೆ ಬಿದ್ದ ನೀರನ್ನು ಇಂಗಿಸಿಕೊಳ್ಳಲು ಹೊಲದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಬದು ನಿರ್ಮಾಣ ಮಾಸಾಚರಣೆ ಅಭಿಯಾನ ಜೂನ್ 19 ರವರೆಗೂ ಜಾರಿಯಲ್ಲಿದೆ. ಪ್ರತಿ ಎಕರೆಗೆ 16 ಸಾವಿರ ರೂಗಳನ್ನು ಸರ್ಕಾರ ನೀಡುತ್ತದೆ. ರೈತರು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶಿವಕುಮಾರ್ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬದುಗಳಲ್ಲಿ ನೀರು ನಿಲ್ಲುವುದರಿಂದ ಭೂಮಿಯ ತೇವಾಂಶ ಹೆಚ್ಚುತ್ತದೆ. ಬೆಳೆ ಇಳುವರಿ ಸಹ ಹೆಚ್ಚಾಗಿ ರೈತರಿಗೆ ಲಾಭವಾಗುತ್ತದೆ. ಸ್ವಂತ ಜಮೀನಿನಲ್ಲಿ ಕೆಲಸ ಮಾಡುವುದಕ್ಕೆ ದಿನವೊಂದಕ್ಕೆ 275 ರೂ ಹಾಗೂ ಸಲಕರಣೆ ವೆಚ್ಚ 10 ರೂ ಸೇರಿದಂತೆ 285 ರೂ ದಿನಗೂಲಿ ಸಿಗುತ್ತದೆ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿಯ ತಾತಹಳ್ಳಿ ಗ್ರಾಮದ 100 ಎಕರೆ ಅರಣ್ಯ ಪ್ರದೇಶದಲ್ಲಿ ನರೇಗಾ ಯೋಜನೆಯಡಿ 14 ಕಾಮಗಾರಿಗಳನ್ನು ನಡೆಸಿದ್ದೇವೆ. ಒಟ್ಟು ಯೋಜನೆಯ ಅಂದಾಜು ಮೊತ್ತ 64.304 ಲಕ್ಷ ರೂಗಳಾಗಿದ್ದು, ಇದುವರೆಗೂ ಪಾವತಿಯಾದ ಮೊತ್ತ 14.4845 ಲಕ್ಷ ರೂಗಳು, ಪ್ರತಿಯೊಂದು ಕೆಲಸವೂ ಪಾರದರ್ಶಕವಾಗಿ ನಡೆದಿದೆ. ಆನ್ ಲೈನ್ ನಲ್ಲಿ ದಾಖಲಾಗಿದೆ ಎಂದು ಹೇಳಿದರು.
ನೂರು ಎಕರೆಯಲ್ಲಿದ್ದ ನೀಲಗಿರಿ ಮರಗಳ ಮಾರಾಟದಿಂದ 32 ಲಕ್ಷ ರೂಗಳು ಆದಾಯ ಬಂದಿತ್ತು. ಎರಡು ಕೊಳವೆ ಬಾವಿಗಳನ್ನು ಕೊರೆಸಲು 5.1 ಲಕ್ಷ ರೂಗಳನ್ನು ಖರ್ಚು ಮಾಡಲಾಗಿದೆ. ನರೇಗಾದಲ್ಲಿ ಒಟ್ಟಾರೆ ಈ ಯೋಜನೆಯಲ್ಲಿ ಹೆಚ್ಚೆಂದರೆ 23 ಲಕ್ಷ ರೂಗಳಷ್ಟೇ ಖರ್ಚು ಮಾಡಬಹುದಷ್ಟೇ. ತಾಲ್ಲೂಕು ಪಂಚಾಯಿತಿ ಅನುದಾನದಿಂದ 17 ಲಕ್ಷ ರೂ ಖರ್ಚು ಮಾಡಲಿದ್ದೇವೆ. 40 ಲಕ್ಷ ರೂಗಳಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸುವ ಉದ್ದೇಶವಿದೆ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಶೇಖರ್ ಮಾತನಾಡಿ, ಕೃಷಿ ಹೊಂಡಗಳಲ್ಲಿ ಪ್ಲಾಸ್ಟಿಕ್ ಪೇಪರ್ ಹೊದಿಸಿ ಮಳೆ ನೀರನ್ನು ಹಿಡಿದಿಡಲು ವ್ಯವಸ್ಥೆ ಮಾಡುವುದು, ಹನಿ ನೀರಾವರಿ ಅಳವಡಿಸುವುದು, ಹಾಕಿರುವ ಗಿಡಗಳು ಮರಗಳಾಗುವವರೆಗೂ ನಡುವೆ ಅವರೆ, ತೊಗರಿ, ರಾಗಿ ಮುಂತಾದ ಬೆಳೆಗಳನ್ನು ಬೆಳೆಯುವ ಉದ್ದೇಶವಿದೆ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ನರೇಗಾ ಯೋಜನಾಧಿಕಾರಿ ಚಂದ್ರಪ್ಪ ಹಾಜರಿದ್ದರು.

ಡಾಲ್ಫಿನ್ ಕಾಲೇಜಿನ ಆವರಣದಲ್ಲಿ ನಡೆದ ಕಾರ್ಯಕ್ರಮದ ಆಯೋಜಕರ ಮೇಲೆ ದೂರು ದಾಖಲು

0

ಕೋವಿಡ್ 19 ತಡೆಗಟ್ಟಲು ವಿಧಿಸಿರುವ ನಿರ್ಬಂಧಗಳನ್ನು ಪಾಲಿಸದೇ ಟೌನ್ ಎಸ್.ಎಫ್.ಸಿ.ಎಸ್ ಸಂಘದವರು ಕಾರ್ಯಕ್ರಮ ಆಯೋಜನೆ ಮಾಡಿರುವ ಬಗ್ಗೆ ತಹಶೀಲ್ದಾರ್ ಅವರು ಪೊಲೀಸರಿಗೆ ದೂರು ನೀಡಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ.
ಶಿಡ್ಲಘಟ್ಟದ ಡಾಲ್ಫಿನ್ ಕಾಲೇಜಿನ ಆವರಣದಲ್ಲಿ ಮೇ 27 ರಂದು ಟೌನ್ ರೇಷ್ಮೆ ಬೆಳೆಗಾರರ ಹಾಗೂ ರೈತರ ವ್ಯವಸಾಯ ಸೇವಾ ಸಹಕಾರ ಸಂಘ(ಎಸ್.ಎಫ್.ಸಿ.ಎಸ್ )ದ ವತಿಯಿಂದ 42 ಸಂಘಗಳಿಗೆ 2 ಕೋಟಿ 25 ಲಕ್ಷ ಬಡ್ಡಿರಹಿತ ಸಾಲ ವಿತರಣೆ ಮಾಡಲಾಗಿತ್ತು. ಸುಮಾರು 500 ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಾರ್ಯಕ್ರಮಕ್ಕೆ ಅನುಮತಿ ಪಡೆಯದಿರುವುದು, ಅಂತರ ಕಾಯ್ದುಕೊಳ್ಳದಿರುವುದು ಹಾಗೂ ಮಾಸ್ಕ್ ಧರಿಸದೇ ಕೋವಿಡ್ 19 ತಡೆಗಟ್ಟಲು ವಿಧಿಸಿರುವ ನಿರ್ಬಂಧಗಳನ್ನು ಪಾಲಿಸದಿರುವ ಬಗ್ಗೆ ಆಯೋಜಕರ ಮೇಲೆ 269,188 IPC ವಿಪತ್ತು ನಿರ್ವಹಣೆ ಕಾಯ್ದೆಯ ಅಡಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಡಿಸಿಸಿ ಬ್ಯಾಂಕಿನ ವತಿಯಿಂದ ರೈತರ ವ್ಯವಸಾಯ ಸೇವಾ ಸಹಕಾರ ಸಂಘಗಳ ಮೂಲಕ ಸ್ತ್ರೀಶಕ್ತಿ ಸಂಘಗಳಿಗೆ ನೀಡುತ್ತಿರುವ ಬಡ್ಡಿ ರಹಿತ ಸಾಲ ವಿತರಣಾ ಕಾರ್ಯಕ್ರಮ ಸಾದಲಿ, ವೈ.ಹುಣಸೇನಹಳ್ಳಿ, ಮಳ್ಳೂರು, ನಗರದ ಡಾಲ್ಫಿನ್ ವಿದ್ಯಾ ಸಂಸ್ಥೆ ಮತ್ತು ಮಳಮಾಚನಹಳ್ಳಿಯಲ್ಲಿ ಸೇರಿ ಇದುವರೆಗೂ ತಾಲ್ಲೂಕಿನಲ್ಲಿ ಐದು ಕಡೆ ನಡೆದಿದೆ. ಎಲ್ಲೆಡೆ ನೂರಾರು ಸಂಖ್ಯೆಯಲ್ಲಿ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಭಾಗವಹಿಸಿದ್ದರು. ಕೇವಲ ಒಂದು ಕಾರ್ಯಕ್ರಮದ ಬಗ್ಗೆ ಮಾತ್ರ ದೂರು ನೀಡಿರುವ ತಾಲ್ಲೂಕು ಆಡಳಿತ ಉಳಿದ ಕಾರ್ಯಕ್ರಮಗಳ ಬಗ್ಗೆ ಏನು ಕ್ರಮ ಕೈಗೊಳ್ಳಬಹುದು ಎಂಬುದು ಕಾದು ನೋಡಬೇಕಿದೆ.

ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾಗಿ ಭಕ್ತರಹಳ್ಳಿಯ ಬಿ.ವಿ.ಗಂಗಾಧರ್ ಆಯ್ಕೆ

0

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಹಕಾರಿ ಸಂಘಗಳ ಉಪ‌ ನಿಬಂಧಕರಾಗಿ ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯ ಬಿ.ವಿ.ಗಂಗಾಧರ್ ಆಯ್ಕೆಯಾಗಿದ್ದಾರೆ. ಸೋಮವಾರದಿಂದ ಅವರು ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸುವರು.
ರೈತ ಕುಟುಂಬದ, ಗ್ರಾಮೀಣ ಹಿನ್ನೆಲೆಯವರಾದ ಭಕ್ತರಹಳ್ಳಿಯ ಬಿ.ವಿ.ಗಂಗಾಧರ್, ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಓದಿದ್ದು ಭಕ್ತರಹಳ್ಳಿಯ ಬಿ.ಎಂ.ವಿ ಶಾಲೆಯಲ್ಲಿ. ಪಿಯುಸಿಯನ್ನು ಮಳ್ಳೂರಿನ ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಓದಿದ ನಂತರ ಬಿ.ಎಸ್.ಸಿ (ಎಜಿ) ವ್ಯಾಸಂಗ ಮಾಡಿದ್ದಾರೆ.
2011 ರಲ್ಲಿಯೇ ಕೆಪಿಎಸ್‌ಸಿ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ, ಆಗಿನ ರಾಜಕೀಯ ಕಾರಣಗಳಿಂದಾಗಿ ಆಯ್ಕೆ ಪಟ್ಟಿಯೇ ರದ್ದುಪಡಿಸಲಾಗಿತ್ತು. 2015 ರಲ್ಲಿ ಪುನಃ ಕೆಪಿಎಸ್‌ಸಿ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಈ ನಡುವೆ ಐ.ಎ.ಎಸ್ ಪ್ರಾಥಮಿಕ ಹಂತವನ್ನು ಪೂರೈಸಿ 2012 ರಲ್ಲಿ ಅಸಿಸ್ಟೆಂಟ್ ಕಮ್ಯಾಂಡೆಟ್ ಕೂಡ ಆಗುವ ಹಂತದಲ್ಲಿದ್ದರು. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ನಡೆದ ಸಂದರ್ಶನಕ್ಕೆ ಹಾಜರಾಗಿದ್ದರು. ಇದೀಗ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾಗಿ ಆಯ್ಕೆಯಾಗಿರುವ ಆದೇಶ ಪ್ರತಿ ಲಭಿಸಿದೆ. ಸೋಮವಾರದಿಂದ ತಮ್ಮ ಸೇವೆಯನ್ನು ಪ್ರಾರಂಭಿಸಲಿದ್ದಾರೆ.
“ಬೆಂಗಳೂರಿನಲ್ಲಿ ಟಾಪರ್ ಐ.ಎ.ಎಸ್ ಎಂಬ ಶಿಕ್ಷಣ ಸಂಸ್ಥೆಯಲ್ಲಿ ಪಾಠ ಮಾಡುತ್ತಾ, ಓದುತ್ತಾ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡೆ. ಬಾಲ್ಯದಿಂದಲೇ ಪ್ರಾಮಾಣಿಕತೆ ಹಾಗೂ ವೈಚಾರಿಕತೆಯನ್ನು ಕಲಿಸಿದ ನನ್ನ ಬಿ.ಎಂ.ವಿ.ಶಾಲೆಯ ವಾತಾವರಣ, ಹಾಗೂ ಮುಂದಿನ ಹಂತದಲ್ಲಿ ಕಲಿಯುತ್ತಾ ಸಾಗಿದಂತೆ ಗುರಿಯು ಕಾಣಹತ್ತಿತು. ನನ್ನ ಚಿಕ್ಕಪ್ಪ ಬಿ.ಎಂ.ವಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಲ್.ಕಾಳಪ್ಪ ನನ್ನ ವಿದ್ಯಾಭ್ಯಾಸಕ್ಕೆ ಆರ್ಥಿಕ ಬೆಂಬಲ ನೀಡಿದರು. ನನ್ನ ನಿರಂತರ ಅಧ್ಯಯನ, ಪರಿಶ್ರಮ, ಜ್ಞಾನ ಸಂಪಾದನೆ, ಪಾಠ ಮಾಡುತ್ತಿದ್ದುದು ಸಹಕಾರಿಯಾಯಿತು. ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದಿರುವುದರಿಂದ ಕಷ್ಟದ ಅರಿವಿದೆ” ಎಂದು ಭಕ್ತರಹಳ್ಳಿಯ ಬಿ.ವಿ.ಗಂಗಾಧರ್ ತಿಳಿಸಿದರು.

ಕೊರೊನಾ ಪಾಸಿಟೀವ್ ವ್ಯಕ್ತಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು

0

ಕೊರೊನಾ ಪಾಸಿಟೀವ್ ಬಂದಿರುವ ವ್ಯಕ್ತಿಯ ಕುಟುಂಬದ ಆರು ಮಂದಿ ಸದಸ್ಯರು ಹಾಗೂ ಆ ವ್ಯಕ್ತಿಯೊಂದಿಗೆ ಅಜ್ಮೇರ್ ಗೆ ಹೋಗಿ ಬಂದಿದ್ದ ವ್ಯಕ್ತಿಯನ್ನು ನಗರದ ಹೊರವಲಯದ ಬಿ.ಸಿ.ಎಂ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಅವರ ಸ್ವಾಬ್ ಪರೀಕ್ಷೆ ಕೂಡ ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೊರೊನಾ ಪಾಸಿಟೀವ್ ವ್ಯಕ್ತಿ ಶನಿವಾರ ರಾತ್ರಿ ತನ್ನ ಮನೆಗೆ ಬಂದು ಹೋಗಿರುವ ಮಾಹಿತಿಯ ಮೇರೆಗೆ ಆತನ ಕುಟುಂಬದವರನ್ನು ಕ್ವಾರಂಟೈನ್ ಮಾಡಲಾಗಿದೆ. ಕೊರೊನಾ ಪಾಸಿಟೀವ್ ವ್ಯಕ್ತಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಹಿನ್ನೆಲೆ :
ಇಬ್ಬರು ಶಿಡ್ಲಘಟ್ಟದ ನಿವಾಸಿಗಳು ಅಜ್ಮೇರ್ ಗೆ ಹೋಗಿದ್ದರು. ಲಾಕ್ ಡೌನ್ ಮುಂಚೆ ಹೋದ ಅವರು ಲಾಕ್ ಡೌನ್ ಆದಾಗ ಅಲ್ಲಿಯೇ ಉಳಿದುಬಿಟ್ಟಿದ್ದರು. ಮೇ 22 ರಂದು ಅವರು ಬೆಂಗಳೂರಿಗೆ ಬಂದ ಅವರನ್ನು ಏಳು ದಿನಗಳ ಕಾಲ ಕ್ವಾರಂಟೈನ್ ಮಾಡಲಾಗಿತ್ತು. ಅವರಲ್ಲಿ ಒಬ್ಬರಿಗೆ ಕೊರೊನಾ ನೆಗೆಟೀವ್ ಆಗಿದ್ದರೆ, ಮತ್ತೊಬ್ಬರಿಗೆ ಪಾಸಿಟೀವ್ ಎಂದು ವರದಿ ಬಂದಿದೆ.

ಮುಂಪಂಕ್ತಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಛತ್ರಿ ವಿತರಣೆ

0

ಮುಂದಿನ ದಿನಗಳಲ್ಲಿ ಕೋವಿಡ್ 19 ಮಹಾಮಾರಿಯ ವಿರುದ್ದ ಹೋರಾಡಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದು ಪಂಚಾಯಿತಿ ಅಭಿವೃದ್ದಿ ಅಧಿಕಾರಿ ತನ್ವೀರ್ ಅಹಮ್ಮದ್ ತಿಳಿಸಿದರು.
ತಾಲ್ಲೂಕಿನ ಈ ತಿಮ್ಮಸಂದ್ರ ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕೋವಿಡ್ 19 ವಾರದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕಳೆದ ಎರಡು ತಿಂಗಳುಗಳಿಂದ ಕೋವಿಡ್ 19 ಮಹಾಮಾರಿಯ ವಿರುದ್ದ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಮನೋಸ್ಥೈರ್ಯ ತುಂಬುವುದು ಸೇರಿದಂತೆ ಮುಂದಿನ ದಿನಗಳಲ್ಲಿ ಕೊರೋನಾ ವಿರುದ್ದ ಹೋರಾಡಲು ಮತ್ತಷ್ಟು ಪ್ರೋತ್ಸಾಹ ನೀಡುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಜಲಗಾರರು ಬಿಸಿಲಿನಲ್ಲಿ ಓಡಾಡುವುದರಿಂದ ಬಿಸಿಲು ಹಾಗೂ ಮಳೆಯಿಂದ ರಕ್ಷಣೆ ಹಾಗು ಮುಖ್ಯವಾಗಿ ಛತ್ರಿ ಬಳಸುವುದರಿಂದ ಅಂತರ ಕಾಯ್ದುಕೊಂಡು ಕೆಲಸ ನಿರ್ವಹಿಬಹುದು ಎನ್ನುವ ಉದ್ದೇಶದಿಂದ ತಲಾ ಒಂದೊಂದು ಛತ್ರಿ ನೀಡುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ವಿ.ದೇವರಾಜ, ನೋಡೆಲ್ ಅಧಿಕಾರಿ ಹಾಗೂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆಂಜನೇಯ, ತಾಲ್ಲೂಕು ಪಂಚಾಯಿತಿ ಸದಸ್ಯೆ ವಹೀದಾಬೇಗಂ, ವೈದ್ಯಾಧಿಕಾರಿ ಮುರಳಿ, ಗ್ರಾಮ ಪಂಚಾಯಿತಿ ಸದಸ್ಯರಾದ ಮಾಲಾಸಾಭಿ, ಮಂಜುನಾಥ, ಜಯರಾಮರೆಡ್ಡಿ, ಬೈರಾರೆಡ್ಡಿ, ಗಂಗಾಧರ, ಮುನಿಲಕ್ಷ್ಮಪ್ಪ, ನಾರಾಯಣಸ್ವಾಮಿ, ನಾಗರಾಜ, ಕೃಷ್ಣಪ್ಪ, ಶ್ರೀರಾಮರೆಡ್ಡಿ ಹಾಜರಿದ್ದರು.

ಸಂಘಟಿತ ಚಟುವಟಿಕೆಗಳನ್ನು ರೂಪಿಸುವಲ್ಲಿ ಶಿಕ್ಷಕನ ಪಾತ್ರವಿದೆ

0

ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿ ರಚನಾತ್ಮಕವಾದ ಸಂಘಟಿತ ಚಟುವಟಿಕೆಗಳನ್ನು ರೂಪಿಸಿ ಅನುಷ್ಟಾನಗೊಳಿಸುವಲ್ಲಿ ಪ್ರತಿಯೊಬ್ಬ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ನಿವೃತ್ತ ದೈಹಿಕಶಿಕ್ಷಣ ಶಿಕ್ಷಕ ಎಂ.ಎನ್.ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬಲ್ಲ ಮಾನವಸಂಪನ್ಮೂಲವನ್ನು ಸೃಜಿಸಿ ಉತ್ತಮ ಸಮಾಜನಿರ್ಮಾಣಕಾರ್ಯದಲ್ಲಿ ಶಿಕ್ಷಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಪ್ರಾಮಾಣಿಕತೆ, ನಿಷ್ಪೃಹತೆ, ನಿರಹಂಕಾರದಂತಹ ಗುಣಗಳೇ ಶಿಕ್ಷಕನ ಮೌಲ್ಯಗಳು ಎಂದರು.
ನಿವೃತ್ತ ಮುಖ್ಯಶಿಕ್ಷಕ ಜಿ.ಎಂ.ಪರಮನಟ್ಟಿ ಮಾತನಾಡಿ, ಉತ್ತಮ ಬದುಕಿನ ಮೌಲ್ಯಗಳು ಅಡಗಿರುವುದನ್ನು ಎಲ್ಲರೂ ಅರಿತು ಸಾರ್ಥಕಜೀವನ ನಡೆಸುವ ಸೂತ್ರಗಳನ್ನು ಅರಿತುಕೊಳ್ಳಬೇಕು. ವೃತ್ತಿಸೇವೆಯಲ್ಲಿ ಪ್ರೀತಿ, ಸದ್ಗುಣಗಳಂತಹ ಸಕಾರಾತ್ಮಭಾವನೆಗಳನ್ನು ತುಂಬಬಲ್ಲ ಚೈತನ್ಯವಿರಬೇಕು ಎಂದರು.
ಪ್ರಬಾರಿಮುಖ್ಯಶಿಕ್ಷಕ ಬೈರಾರೆಡ್ಡಿ ಮಾತನಾಡಿ, ದೇಶದ ಇತಿಹಾಸ, ಅಧ್ಯಾತ್ಮಿಕ, ಧಾರ್ಮಿಕ, ಪೌರಾಣಿಕ ಮತ್ತು ನೈತಿಕ ಪರಂಪರೆಯನ್ನು, ಸಂಸ್ಕೃತಿ ಮತ್ತು ಸಂಸ್ಕಾರವನ್ನು ಪೀಳಿಗೆಯಿಂದ ಪೀಳಿಗೆಗೆ ರವಾನಿಸುವ ಕಾರ್ಯವು ಶಿಕ್ಷಕರಿಂದಾಗಬೇಕಿದೆ ಎಂದರು.
ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಬದುಕಿನ ಜಂಜಾಟದಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಎಲ್ಲರೂ ತಮ್ಮತಮ್ಮ ಕಾರ್ಯಗಳಲ್ಲಿಯೇ ತಲ್ಲೀನರಾಗುವ ಜೊತೆಗೆ ನಮ್ಮಲ್ಲಿ ಅಡಗಿರುವ ಅಂಧಕಾರವನ್ನು ಹೋಗಲಾಡಿಸಿಕೊಂಡು ಉತ್ತಮ ಬದುಕಿನ ಮಾರ್ಗಗಳನ್ನು ಅರಿಯಬೇಕು ಎಂದರು.
ವಯೋನಿವೃತ್ತಿ ಹೊಂದಿದ ದೈಹಿಕಶಿಕ್ಷಣ ಶಿಕ್ಷಕ ಎಂ.ಎನ್.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಎಂ.ಎನ್.ನಾರಾಯಣಸ್ವಾಮಿ, ಶಿಕ್ಷಕಿ ಜಿ.ಎನ್.ಲತಾ, ನಾಗರತ್ನ ದುರಗಣ್ಣನವರ್, ಕುಮಾರಿ, ತಾಲೂಕು ಸರ್ಕಾರಿ ನೌಕರರ ಸಂಗದ ಗೌರವಾಧ್ಯಕ್ಷ ಟಿ.ವಿಜಯಕುಮಾರ್, ನಿವೃತ್ತ ಬ್ಯಾಂಕ್‌ಮ್ಯಾನೇಜರ್ ಟಿ.ಮಂಜುನಾಥ್, ನಿವೃತ್ತ ಅಂಚೆನೌಕರ ರಾಮಾಂಜಿನಯ್ಯ, ನಿವೃತ್ತ ತೋಟಗಾರಿಕಾ ಇಲಾಖಾಧಿಕಾರಿ ರಂಗಯ್ಯ, ಮಂಗಳಾ, ಸಿಂಧೂ, ಶಿಕ್ಷಕ ಮಂಜುನಾಥ್ ಹಾಜರಿದ್ದರು.

ಯೂಟ್ಯೂಬ್ ಚಾನಲ್ ಪ್ರಾರಂಭಿಸಿದ ಪೆಂಡ್ಲಿವಾರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ

0

ಕೊರೊನಾ ಲಾಕ್ ಡೌನ್ ಪರಿಣಾಮವಾಗಿ ಕಾಲೇಜು ಮತ್ತು ಪ್ರೌಡಶಾಲೆಯ ಶಿಕ್ಷಕರು ಈಗಾಗಲೇ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಪಾಠ ಮಾಡುತ್ತಿದ್ದಾರೆ. ಇವರ ನಡುವೆ ಅಲ್ಲಲ್ಲಿ ಕೆಲವು ಕ್ರಿಯಾಶೀಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಶಾಲೆಯ, ವಿದ್ಯಾರ್ಥಿಗಳ ಬೆಳವಣಿಗೆಗೆ ಬಗ್ಗೆ ಕೆಲಸ ಮಾಡುತ್ತಿದ್ದಾರೆ.
ಜೂನ್ ಒಂದು ಬಂತೆಂದರೆ ಶಾಲೆ ಪ್ರಾರಂಭವೆಂದೇ ಭಾವಿಸಲಾಗುತ್ತಿತ್ತು. ಆದರೆ ಈ ಬಾರಿ ಶಾಲೆಯ ಪ್ರಾರಂಭ ವಿಳಂಬವಾಗುತ್ತಿದೆ. ಆದರೆ ಶಿಕ್ಷಣಕ್ಕೆ ಪೂರಕವಾಗಿ ಸರ್ಕಾರಿ ಶಾಲೆಯಲ್ಲಿ ಏನೆಲ್ಲಾ ಇರಬೇಕು, ಹೇಗೆಲ್ಲಾ ಕಾರ್ಯಚಟುವಟಿಕೆಗಳನ್ನು ನಡೆಸಬಹುದು ಎಂಬುದನ್ನು ಶಿಡ್ಲಘಟ್ಟ ತಾಲ್ಲೂಕಿನ ಪೆಂಡ್ಲಿವಾರಹಳ್ಳಿಯ ಶಿಕ್ಷಕಿ ಉಷಾ ಯೂಟ್ಯೂಬ್ ಚಾನಲ್ ಮಾಡುವ ಮೂಲಕ ದಾಖಲಿಸುತ್ತಿದ್ದಾರೆ. ತಮ್ಮ ಪುಟ್ಟ ಶಾಲೆ, ಮಕ್ಕಳ ಮನಸ್ಸುಗಳನ್ನು ಇಡಿ ಜಗತ್ತಿನ ಮುಂದೆ ತೆರೆದಿರಿಸಿದ್ದಾರೆ.
ಇದುವರೆಗೂ ಫೇಸ್ ಬುಕ್ ಮತ್ತು ವ್ಯಾಟ್ಸಪ್ ಗಳಲ್ಲಿ ಸೀಮಿತವಾಗಿ ತಲುಪುತ್ತಿದ್ದ ಚಿತ್ರಗಳು ಇದೀಗ ವೀಡಿಯೋ ಮೂಲಕ ಮೊದಲ ಬಾರಿಗೆ ಯೂಟ್ಯೂಬ್ ಮೂಲಕ ಪ್ರಚುರಗೊಳ್ಳುತ್ತಿದೆ. ತಮ್ಮ ಶಾಲೆಯ, ಮಕ್ಕಳ ಪ್ರತಿಯೊಂದು ಸಂಗತಿಗಳನ್ನೂ ಇದರಲ್ಲಿ ದಾಖಲಿಸುತ್ತಿದ್ದಾರೆ. ನಲಿಯುತ್ತಾ ಕಲಿಯುವ ಮಕ್ಕಳಿಗೆ ಇದೂ ಕೂಡ ಕಲಿಕೆಯ ಮಾರ್ಗವಾಗುತ್ತಿದೆ. ಹಿರಿಯ ವಿದ್ಯಾರ್ಥಿಗಳಿಗೆ ಅಭಿಮಾನದ ಸಂಗತಿಯಾದರೆ, ಮಕ್ಕಳ ಪೋಷಕರಿಗೆ ಹೆಮ್ಮೆಯ ವಿಷಯವಾಗಿದೆ. ನಮ್ಮ ಶಾಲೆ, ನಮ್ಮ ಮಕ್ಕಳ ಆಟ, ನೃತ್ಯ, ಮಾತು ಮೊಬೈಲ್ ಮೂಲಕ ಎಲ್ಲೆಡೆ ನೋಡಬಹುದಾಗಿದೆ ಎಂಬ ಸಂಭ್ರಮ ಗ್ರಾಮಸ್ಥರದ್ದಾಗಿದೆ.
“ನಮ್ಮ ಸಿ.ಆರ್.ಪಿ ಚಂದ್ರಶೇಖರ್ ಅವರು ನಮ್ಮ ಕ್ಲಸ್ಟರ್ ನಲ್ಲಿ ನಮ್ಮ ಶಾಲೆಯನ್ನು ಆಯ್ಕೆ ಮಾಡಿಕೊಂಡು, ನಮ್ಮ ಶಾಲೆಯ ಚಟುವಟಿಕೆಗಳನ್ನು ಸಿಡಿಯಲ್ಲಿ ಹಾಕಿ ಕೊಡಲು ತಿಳಿಸಿದರು. ನಾನು ಒಂದು ಆಪ್ ಬಳಸಿ ವೀಡಿಯೋ ಮಾಡಿ ಕೊಟ್ಟೆ. ಉಷಾ ಗಂಗೆ ಎಂಬ ಹೆಸರಿನಲ್ಲಿ ಯೂಟ್ಯೂಬ್ ಚಾನಲ್ ಮಾಡಿ ಅದನ್ನು ಅಪ್ ಲೋಡ್ ಮಾಡಿದೆ. ನಮ್ಮ ಶಾಲೆಯನ್ನು ಕೇಂದ್ರಿತವಾಗಿರಿಸಿಕೊಂಡು ಮುಂದೆ ಶಿಕ್ಷಕರಿಗೆ, ಶಿಕ್ಷಣಕ್ಕೆ, ವಿದ್ಯಾರ್ಥಿಗಳಿಗೆ ಸಹಾಯವಾಗುವ ನಾಟಕ, ಸಂಭಾಷಣೆ, ವಿಜ್ಞಾನ ಪ್ರಯೋಗಗಳು, ಪುಸ್ತಕ ವಿಮರ್ಶೆ ಮುಂತಾದ ಸಂಗತಿಗಳನ್ನು ಈ ಚಾನಲ್ ನಲ್ಲಿ ಅಪ್ ಲೋಡ್ ಮಾಡುವ ಆಲೋಚನೆಯಿದೆ” ಎಂದು ಶಿಕ್ಷಕಿ ಉಷಾ ತಿಳಿಸಿದರು.
ಈ ಯೂಟ್ಯೂಬ್ ಚಾನಲ್ ವಿಳಾಸ : https://www.youtube.com/watch?v=PLZBZgeJWr8&feature=youtu.be

ಶಿಡ್ಲಘಟ್ಟದ ವ್ಯಕ್ತಿ ಕೊರೊನಾ ಪಾಸಿಟೀವ್

0

ಇದುವರೆಗೂ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕೊರೊನಾ ಬರದೇ ಗ್ರೀನ್ ಜೋನ್ ಆಗಿತ್ತು. ಆದರೆ ಇದೀಗ ಶಿಡ್ಲಘಟ್ಟದ ನಿವಾಸಿಯೊಬ್ಬರು ಕೊರೊನಾ ಪಾಸಿಟೀವ್ ಆಗಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಲಾಕ್ ಡೌನ್ ಮುಂಚೆ ಇಬ್ಬರು ಶಿಡ್ಲಘಟ್ಟದ ನಿವಾಸಿಗಳು ಅಜ್ಮೇರ್ ಗೆ ಹೋಗಿ ಲಾಕ್ ಡೌನ್ ಆದಾಗ ಅಲ್ಲಿಯೇ ಉಳಿದುಬಿಟ್ಟಿದ್ದರು. ಮೇ 22 ರಂದು ಬೆಂಗಳೂರಿಗೆ ಬಂದ ಅವರನ್ನು ಏಳು ದಿನಗಳ ಕಾಲ ಕ್ವಾರಂಟೈನ್ ಮಾಡಲಾಗಿದೆ. ಅವರಲ್ಲಿ ಒಬ್ಬರು ಕೊರೊನಾ ನೆಗೆಟೀವ್ ಆಗಿದ್ದರೆ, ಮತ್ತೊಬ್ಬರು ಪಾಸಿಟೀವ್ ಎಂದು ವರದಿ ಬಂದಿದೆ. ಹಾಗಾಗಿ ಅವರನ್ನು ಬೆಂಗಳೂರಿನ ಕ್ವಾರಂಟೈನ್ ಕೇಂದ್ರದಿಂದ ಕಳುಹಿಸಿದೊಡನೆ ಇಲ್ಲಿ ಕ್ವಾರಂಟೈನ್ ಮಾಡಲಾಗುವುದು ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.

ಆರ್ ಟಿ ಇ ಹಣ ಮರುಪಾವತಿ ಮಾಡುವಂತೆ ಮನವಿ

0

ಖಾಸಗಿ ಶಾಲೆಗಳಿಗೆ ಬರಬೇಕಾಗಿರುವ 2019-20 ನೇ ಸಾಲಿನ ಆರ್ ಟಿ ಇ ಹಣ ಮರುಪಾವತಿ ಮಾಡುವುದು ಹಾಗೂ ಕೋವಿಡ್ 19 ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಖಾಸಗಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ತಾಲ್ಲೂಕು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ವಿಸ್ಡಂ ನಾಗರಾಜ್ ಒತ್ತಾಯಿಸಿದರು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ತಾಲ್ಲೂಕು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ಕೋವಿಡ್ 19 ಮಹಾಮಾರಿಯನ್ನು ಹತೋಟಿಗೆ ತರುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿದ ಲಾಕ್ ಡೌನ್ ನಿಂದ ಖಾಸಗಿ ಶಾಲೆಗಳಿಗೆ ಬರಬೇಕಾಗಿದ್ದ ಶೇ 30 ರಷ್ಟು ಭೋದನಾ ಶುಲ್ಕ ಪಾವತಿಯಾಗಿರುವುದಿಲ್ಲ. ಅಲ್ಲದೇ ಸರ್ಕಾರ ಶುಲ್ಕ ವಸೂಲಿಗೆ ಪೋಷಕರಿಗೆ ಒತ್ತಾಯ ಮಾಡಬಾರದು ಎಂಬ ಆದೇಶ ಮಾಡಿರುವುದರಿಂದ ಯಾವೊಬ್ಬ ಪೋಷಕರು ಮಕ್ಕಳ ಶುಲ್ಕ ಪಾವತಿಸಲು ಮುಂದೆ ಬರುತ್ತಿಲ್ಲ. ಸಾಲದ್ದಕ್ಕೆ ಸರ್ಕಾರದಿಂದ ನಮಗೆ ಬರಬೇಕಾಗಿರುವ ಆರ್ ಟಿ ಇ ಬಾಕಿ ಹಣ ಸಹ ಪಾವತಿಸಿರುವುದಿಲ್ಲ. ಹಾಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಬಹಳಷ್ಟು ಕಷ್ಟ ಅನುಭವಿಸುವಂತಾಗಿದೆ. ಕೂಲಡೇ ಸರ್ಕಾರ ಬೇರೆಲ್ಲಾ ವಲಯಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿರುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹಾಗೂ ಸಿಬ್ಬಂದಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಕೋರಿ ಮನವಿ ಪತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಾಸವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ನಾರಾಯಣಮೂರ್ತಿ, ಪ್ರೆಸಿಡೆನ್ಸಿ ಶಾಲೆಯ ಮುಖ್ಯಸ್ಥ ಇಮ್ರಾನ್‌ಪಾಷ, ಯುನಿವರ್ಸಲ್ ಶಾಲೆಯ ಆಡಳಿತಾಧಿಕಾರಿ ಶಾಂತರಾಜು ಹಾಜರಿದ್ದರು.

ಬಾಬು ಜಗಜೀವನ್ ರಾಮ್ ಸಮುದಾಯ ಭವನಕ್ಕೆ ಭೂಮಿ ಪೂಜೆ

0

ಭಕ್ತರಹಳ್ಳಿ ಗ್ರಾಮದಲ್ಲಿ ಒಂದು ವರ್ಷದ ಅವಧಿಯಲ್ಲಿ ಮೂರು ಕೊಳವೆ ಬಾವಿಗಳನ್ನು ಕೊರೆಸಿದ್ದರೂ ನೀರು ಸಿಗದಂತಾಗಿದೆ. ಇದೀಗ ಮತ್ತೊಂದು ಕೊಳವೆ ಬಾವಿಯನ್ನು ಶೀಘ್ರವಾಗಿ ಕೊರೆಸಲಾಗುವುದು. ಅಂತರ್ಜಲ ವೃದ್ಧಿಯಾಗಲಿ ಎಂದು ಎಚ್.ಎನ್.ವ್ಯಾಲಿ ನೀರಿಗೆ ಎದುರುನೋಡುತ್ತಿದ್ದೇವೆ ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಭಕ್ತರಹಳ್ಳಿಯಲ್ಲಿ ಶುಕ್ರವಾರ ಹತ್ತು ಲಕ್ಷ ರೂಗಳ ವೆಚ್ಚದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಿಸುತ್ತಿರುವ ಬಾಬು ಜಗಜೀವನ್ ರಾಮ್ ಸಮುದಾಯ ಭವನಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಹಲವು ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕದ ದುರಸ್ಥಿ ಕಾರ್ಯ ನಡೆದಿಲ್ಲವೆಂದು ದೂರು ಬಂದಿದೆ. ಆಯಾ ಗ್ರಾಮ ಪಂಚಾಯಿತಿಯವರು ಜವಾಬ್ದಾರಿ ತೆಗೆದುಕೊಂಡು ದುರಸ್ಥಿ ಮಾಡಿಸಿ, ಕುಡಿಯುವ ನೀರಿಗೆ ಆದ್ಯತೆ ಕೊಡಿ ಎಂದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಚಿದಾನಂದಗೌಡ, ಮುನಿಕೃಷ್ಣಪ್ಪ, ಮುಖಂಡರಾದ ಬಿ.ವಿ.ಮುನೇಗೌಡ, ಸುಬ್ರಮಣಿ, ಎಂ.ವೆಂಕಟಮೂರ್ತಿ, ಬಿ.ವಿ.ಕೃಷ್ಣಪ್ಪ, ನಂಜುಂಡಾರಾಧ್ಯ, ಬಿ.ಕೆ.ರಾಮಚಂದ್ರಪ್ಪ, ದೇವರಾಜ್, ಲಕ್ಷ್ಮೀನಾರಾಯಣ, ಹೇಮಂತ್ ಕುಮಾರ್, ಪ್ರತೀಶ್, ಮಧು, ಓಬಳಪ್ಪ, ಚನ್ನಕೃಷ್ಣ, ಪಿ.ಡಿ.ಒ ಜಮುನಾ ಹಾಜರಿದ್ದರು.