ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸುಂದರಲಾಲ್ ಬಹುಗುಣ ಇಕೋಕ್ಲಬ್ ವತಿಯಿಂದ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿದರು.
ಪರಿಸರವನ್ನು ಹಾಳುಮಾಡದೇ ಮುಂದಿನ ಪೀಳಿಗೆಗೆ ಯಥಾವತ್ತಾಗಿ ಉಳಿಸುವತ್ತ ನಾವು ಶ್ರಮಿಸಬೇಕಿದೆ. ಗಿಡ ಮರಗಳ ಸಂರಕ್ಷಣೆಯು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು. ಶಾಲೆಗಳಲ್ಲಿ ಪರಿಸರ ಸ್ನೇಹಿ ವಾತಾವರಣ ನಿರ್ಮಾಣವಾಗಬೇಕು. ಸಸ್ಯಸಂಪತ್ತು ಹೆಚ್ಚುವುದರಿಂದ ಪ್ರಾಣಿ, ಪಕ್ಷಿಸಂಕುಲ ಸುಸ್ಥಿತಿಯ ಜೀವನ ನಡೆಸಲು ಸಾಧ್ಯವಾಗುವುದು ಎಂದು ಅವರು ತಿಳಿಸಿದರು.
ಪರಿಸರ ಶಿಕ್ಷಣವು ಕಾಟಾಚಾರದ ಶಿಕ್ಷಣದ ಪಠ್ಯವಸ್ತುವಾಗದೇ ಇತರೆ ವಿಷಯಗಳಂತೆ ಮಕ್ಕಳಲ್ಲಿ ಪರಿಸರ ಸಂರಕ್ಷಣೆಯ ಅಗತ್ಯವನ್ನು ತಿಳಿಸಿಕೊಡುವ ಕಡ್ಡಾಯ ವಿಷಯವಾಗಿ ಬೋಧನೆಯಾಗಬೇಕು. ಮಕ್ಕಳಿಗೆ ಪ್ರಾಯೋಗಿಕವಾಗಿ ಸಸಿಗಳನ್ನು ನೆಡುವ, ಪೋಷಿಸುವ ಚಟುವಟಿಕೆಗಳು ನಡೆಯಬೇಕು ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಎಂ.ಶಂಕರಪ್ಪ ಮಾತನಾಡಿ, ಮಾನವನು ತನ್ನ ಸ್ವಾರ್ಥಕ್ಕಾಗಿ ಕಾಡನ್ನು ನಾಶಪಡಿಸಿ ಮಾಡುತ್ತಿರುವ ಕಾಂಕ್ರೀಟೀಕರಣ, ಸಿಮೆಂಟೀಕರಣಗಳಿಂದ ಜಾಗತಿಕ ತಾಪಮಾನ ಹೆಚ್ಚುವುದಲ್ಲದೇ ನೀರು ಇಂಗಿಸಿಕೊಳ್ಳುವ ಭೂಮಿಯೇ ಇಲ್ಲವಾಗುತ್ತಿದೆ. ಅಂತರ್ಜಲ ಮಟ್ಟವೂ ಕುಸಿಯುತ್ತಿದ್ದು ನೀರಿಗಾಗಿ ಯುದ್ಧಗಳು ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದರು.
ಶಾಲೆಯ ಹಳೆಯ ವಿದ್ಯಾರ್ಥಿ ಮೆಹಬೂಬ್‌ಪಾಶಾ, ಶಿಕ್ಷಕ ಎ.ಬಿ.ನಾಗರಾಜ ಮಾತನಾಡಿದರು.
ಮಾಹಿತಿ ಸಂಗ್ರಹ: ಕೊರೋನಾ ಹಿನ್ನೆಲೆಯಲ್ಲಿ ಶೈಕ್ಷಣಿಕ ಸಾಲಿಗೆ ತರಗತಿಗಳು ಆರಂಭಿಸುವ, ಶಾಲಾ ಆವರಣದಲ್ಲಿ ಕೊರೋನಾ ಜಾಗೃತಿ ಸುರಕ್ಷತಾ ಕಾರ್ಯಗಳನ್ನು ಹಮ್ಮಿಕೊಳ್ಳುವ ಬಗೆಗೆ ಪೋಷಕರು, ಎಸ್‌ಡಿಎಂಸಿ ಪದಾಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲು ಸಭೆಯನ್ನು ನಡೆಸಲಾಯಿತು. ಎಸ್‌ಡಿಎಂಸಿ ಪದಾಧಿಕಾರಿಗಳು, ಪೋಷಕರು, ಶಿಕ್ಷಕವೃಂದದವರು ಪಾಲ್ಗೊಂಡಿದ್ದರು.
ಮುಖ್ಯಶಿಕ್ಷಕಿ ಉಮಾದೇವಿ, ಶಿಕ್ಷಕಿ ಎಚ್.ತಾಜೂನ್, ಶಿಕ್ಷಕ ಬಿ.ನಾಗರಾಜು, ಲಕ್ಷ್ಮಯ್ಯ, ಹಳೆಯ ವಿದ್ಯಾರ್ಥಿ ಸುನಿಲ್, ವೇಣುಗೋಪಾಲ್, ಕಾರ್ತೀಕ್, ಎಸ್‌ಡಿಎಂಸಿ ಸದಸ್ಯರು ಹಾಜರಿದ್ದರು.
- Advertisement -
- Advertisement -
- Advertisement -