ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಮದ್ಯ ಮಾರಾಟ 42 ದಿನಗಳ ಬಳಿಕ ಸೋಮವಾರ ಆರಂಭವಾಗಿದೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮದ್ಯ ಮಾರಾಟ ಮಾಡುತ್ತಿರುವಲ್ಲಿ ಬಹುತೇಕ ಕಡೆ ಅಂತರವನ್ನು ಕಾಯ್ದುಕೊಳ್ಳದಿರುವುದು ಕಂಡುಬಂದಿತ್ತು.
ತಾಲ್ಲೂಕಿನಲ್ಲಿ ನಾಲ್ಕು ಎಂ.ಎಸ್.ಐ.ಎಲ್ ಮತ್ತು 15 ವೈನ್ ಶಾಪ್ ಗಳಿವೆ. ಬೆಳಗ್ಗೆ 9 ಗಂಟೆಗೇ ತೆರೆಯುವ ಮದ್ಯದಂಗಡಿಗಳ ಮುಂದೆ ಬಳಗಿನ ಜಾವದಿಂದಲೇ ಮದ್ಯಪ್ರಿಯರು ಮದ್ಯವನ್ನು ಕೊಳ್ಳಲೆಂದು ಸಾಲುಗಟ್ಟಿ ನಿಂತಿದ್ದರು. ಕೆಲವೆಡೆಯಂತೂ ಜನರ ನೂಕುನುಗ್ಗಲನ್ನು ಪೊಲೀಸರು ಹತೋಟಿಗೆ ತರಬೇಕಾಯಿತು.
ಮಧ್ಯಾಹ್ನದ ಹೊತ್ತಿಗೆ ಕಡಿಮೆ ಬೆಲೆಯ ಮದ್ಯದ ದಾಸ್ತಾನು ಮುಗಿಯುತ್ತಿದ್ದಂತೆಯೇ ಮದ್ಯದ ಅಂಗಡಿಗಳ ಮುಂದಿನ ಜನಸಂದಣಿ ಕಡಿಮೆಯಾಯಿತು. ಬಿರುಬಿಸಿಲನ್ನೂ ಲೆಕ್ಕಿಸದೇ ಬೆಳಗ್ಗೆ ಸಾಲುಗಟ್ಟಿ ನಿಂತಿದ್ದ ಜನರ ಮದ್ಯಪ್ರೇಮ, ಆರು ಅಡಿಗಳ ಅಂತರವನ್ನು ಕಾಯ್ದುಕೊಳ್ಳಬೇಕೆಂಬ ನಿಯಮ ಪಾಲಿಸದಿರುವುದು ಸಾರ್ವಜನಿಕರ ಆಕ್ಷೇಪಣೆಗೆ ಕಾರಣವಾಗಿತ್ತು.
“ನಗರಸಭೆಯವರು ಹಾಗೂ ತಾಲ್ಲೂಕು ಆಡಳಿತ ಮಾಸ್ಕ್ ಧರಿಸದವರಿಗೆ ಕೇವಲ ಒಂದು ದಿನ ದಂಡ ವಿಧಿಸಿ ಸುಮ್ಮನಾದರೆ ಸಾಲದು ಪ್ರತಿದಿನವೂ ಕಾನೂನು ಪಾಲಿಸದವರಿಗೆ ಬಿಸಿ ಮುಟ್ಟಿಸಬೇಕು. ಈಗ ಅಂಗಡಿಗಳೆಲ್ಲವಕ್ಕೂ ತೆರೆಯಲು ಅನುಮತಿ ಕೊಡಲಾಗಿದೆ. ಅಂಗಡಿಗಳ ಬಳಿ ಗುಂಪುಗೂಡುವವರಿಗೆ ಕಡಿವಾಣ ಹಾಕಬೇಕು. ಟೀ ಅಂಗಡಿಗಳು ತೆರೆದಿರುತ್ತವೆ. ಜನರು ಗುಂಪುಗೂಡುತ್ತಾರೆ. ಲಾಕ್ ಡೌನ್ ಮಾಡಿದ್ದೆಲ್ಲಾ ನಗರದಲ್ಲೀಗ ವ್ಯರ್ಥವಾಗಿದೆ” ಎಂದು ಮಂಜುನಾಥ್ ತಿಳಿಸಿದರು.







