ತ್ಯಾಗ ಬಲಿದಾನಗಳ ಸಂಕೇತವಾಗಿರುವಂತಹ ಬಕ್ರೀದ್ ಹಬ್ಬವನ್ನು ತಾಲ್ಲೂಕಿನಾದ್ಯಂತ ಮುಸ್ಲೀಮರು ಸೋಮವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ನಗರದ ಪ್ರಮುಖ ರಸ್ತೆಯಲ್ಲಿ ಮುಸ್ಲೀಮರು ಮೆರವಣಿಗೆ ನಡೆಸಿ ಬೈಪಾಸ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸೇರಿ ಸಕಲ ಮಾನವ ಕುಲದ ಒಳಿತಿಗಾಗಿ ಅಲ್ಲಾಹುವಿನಲ್ಲಿ ಪ್ರಾರ್ಥಿಸಿದರು.
ಪರಸ್ಪರ ಅಪ್ಪಿಕೊಳ್ಳುವ ಮೂಲಕ ಹಬ್ಬದ ಶುಭಾಶಯಗಳನ್ನು ಈ ಸಂದರ್ಭದಲ್ಲಿ ವಿನಿಮಯಿಸಿಕೊಂಡ ಜಮಾತ್ ಬಾಂಧವರು ನಗರದ ಪ್ರಮುಖ ಬೀದಿಗಳ ಮೂಲಕ ಸಾಗಿ ಈದ್ಗಾ ಮೈದಾನದಲ್ಲಿ ದುವಾ ನೆರವೇರಿಸಿದರು.
‘ಬಕ್ರೀದ್ ಹಬ್ಬವನ್ನು ಈದ್-ಅಲ್-ಅದಾ ಎಂದೂ ಕರೆಯುತ್ತಾರೆ. ಈದ್-ಅಲ್-ಅದಾ ಹಬ್ಬವನ್ನು ಮುಸ್ಲೀಮರು, ಮುಸ್ಲಿಂ ಮಾಸಿಕವಾದ ಝುಲ್-ಹಿಜ್ಜಾದ ಹತ್ತನೆಯ ದಿನದಂದು ಆಚರಿಸುತ್ತಾರೆ. ಈ ಶುಭದಿನದಂದು ಕುರಿಯನ್ನು ಬಲಿ ನೀಡುತ್ತಾರೆ ಹಾಗೂ ಮಸೀದಿಗಳಲ್ಲಿ ಪ್ರಾರ್ಥಿಸುತ್ತಾರೆ. ಹಸ್ರತ್ ಇಬ್ರಾಹಿಮ್ ಅಲ್ಲಾಹನಿಗೆ ಶರಣಾಗುವ ಅಗ್ನಿಪರೀಕ್ಷೆಯ ಸ್ಮರಣಾರ್ಥವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಬಲಿಗೊಳ್ಳುವ ಪಶುವಿನ ಮಾಂಸವನ್ನು ಬಳಸಿಕೊಳ್ಳುವುದರ ಕುರಿತು ಇಸ್ಲಾಂ ನಲ್ಲಿ ಕೆಲವು ಮಾರ್ಗದರ್ಶೀ ಸೂತ್ರಗಳಿವೆ. ಬಲಿಪಶುವಿನ ಮಾಂಸವನ್ನು ಮೂರು ಭಾಗಗಳಾಗಿ ವಿಭಾಗಿಸಿ, ದೊಡ್ಡಭಾಗವನ್ನು, ಅಶಕ್ತರಾದ ಅಥವಾ ಆ ದಿನದ ಊಟವನ್ನು ಗಳಿಸಲಾಗದ ಬಡವರಲ್ಲಿ ಹಂಚಬೇಕು. ಮಿಕ್ಕುಳಿದ ಎರಡು ಚಿಕ್ಕ ತುಂಡುಗಳನ್ನು ಗೆಳೆಯರು, ಬಂಧುಗಳು ಮತ್ತು ಕುಟುಂಬದ ಸದಸ್ಯರ ನಡುವೆ ಹಂಚಬೇಕು. ಇದು ಸಂಭ್ರಮದ ಹಾಗೂ ಭೂರಿಭೋಜನದ ಸಂದರ್ಭವಾಗಿದೆ. ಇವೆಲ್ಲಕ್ಕಿಂತಲೂ ಮಿಗಿಲಾಗಿ, ಈ ಹಬ್ಬವು ಏಕತೆ ಹಾಗೂ ಭ್ರಾತೃತ್ವದ ಆಚರಣೆಯಾಗಿದೆ’ ಎಂದು ಜಾಮೀಯಾ ಮಸೀದಿಯ ಧರ್ಮಗುರು ತಿಳಿಸಿದರು.
ರಾಜಕೀಯ ಮುಖಂಡರೂ ಸೇರಿದಂತೆ ವಿವಿಧ ಜನಾಂಗದವರೂ ಕೂಡಾ ಮುಸ್ಲಿಂ ಭಾಂಧವರಿಗೆ ಶುಭಾಶಯಗಳನ್ನು ಕೋರಿದರು. ಶಾಸಕ ವಿ.ಮುನಿಯಪ್ಪ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಮುಸ್ಲೀಮರಿಗೆ ಶುಭಕೋರಿದರು.
ತಾಲ್ಲೂಕಿನಾದ್ಯಂತ ಶ್ರದ್ಧಾ ಭಕ್ತಿಯಿಂದ ಬಕ್ರೀದ್ ಹಬ್ಬ ಆಚರಣೆ
ಬಿ.ಎಂ.ವಿ ಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್ ನ ಪಧಾಧಿಕಾರಿಗಳ ಪದಗ್ರಹಣ
ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ ಪ್ರೌಢಶಾಲೆಯ ಶ್ರೀ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಶನಿವಾರ ನಡೆದ ಇಂಟರಾಕ್ಟ್ ಕ್ಲಬ್ ನ ಪಧಾಧಿಕಾರಿಗಳು ಹಾಗೂ ಕಾರ್ಯಕಾರಿ ಮಂಡಲಿ ಸದಸ್ಯರ “ಪದಗ್ರಹಣ” ಕಾರ್ಯಕ್ರಮದಲ್ಲಿ ರೋಟರಿ ಬೆಂಗಳೂರು ಸೆಂಟಿನಿಯಲ್ ಅಧ್ಯಕ್ಷ ವಿವೇಕಾನಂದ ನಾಯಕ್ ಮಾತನಾಡಿದರು.
ಎಲ್ಲರೂ ಸೇವಾಮನೋಭಾವ ಬೆಳೆಸಿಕೊಂಡು ತಮ್ಮ ಕೈಲಾದಷ್ಟು ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಅವರು ತಿಳಿಸಿದರು.
೨೦೧೯-೨೦ನೇ ಸಾಲಿಗೆ ಬಿ.ಎಂ.ವಿ ಇಂಟರಾಕ್ಟ್ ಕ್ಲಬ್ ನ ಅಧ್ಯಕ್ಷೆಯಾಗಿ ಬಿ.ಎಸ್.ತೇಜಸ್ವಿನಿ, ಕಾರ್ಯದರ್ಶಿಯಾಗಿ ಬಿ.ಸಿರೀಶ, ಉಪಾಧ್ಯಕ್ಷ ಬಿ.ಎನ್.ಮನೋಹರ್, ಖಜಾಂಚಿ ಜಿ.ಲೇಖನ, ಸದಸ್ಯರಾಗಿ ಬಿ.ಎಂ.ಸೋನು, ಜಿ.ಭಾನುಶ್ರೀ, ಮತ್ತು ಬಿ.ಎನ್.ಪ್ರಜ್ವಲ್ ಆಯ್ಕೆಯಾದರು. ಆಯ್ಕೆಯಾದವರಿಗೆ ಹಿಂದಿನ ಅಧ್ಯಕ್ಷ ಪೂರ್ಣೇಶ್ ಮತ್ತು ಕಾರ್ಯದರ್ಶಿ ಮನುಶ್ರೀ ಅಧಿಕಾರ ಹಸ್ತಾಂತರಿಸಿದರು. ರೋಟರಿ ಬೆಂಗಳೂರು ಸೆಂಟಿನಿಯಲ್ ಅಧ್ಯಕ್ಷ ವಿವೇಕಾನಂದ ನಾಯಕ್ ಪ್ರತಿಜ್ಞಾವಿಧಿಯನ್ನು ಬೋದಿಸಿದರು.
ರೋಟರಿ ಸಂಸ್ಥೆ ಇಡೀ ಪ್ರಪಂಚದಲ್ಲೇ ಖ್ಯಾತಿ ಪಡೆದ ಸೇವಾ ಸಂಸ್ಥೆಯಾಗಿದೆ. ಭಕ್ತರಹಳ್ಳಿಯ ಬಿ.ಎಂ.ವಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕಳೆದ ಮೂರು ವರ್ಷಗಳಿಂದ “ಇಂಟರಾಕ್ಟ್ ಕ್ಲಬ್” ನ ಅಡಿಯಲ್ಲಿ ಮುಷ್ಠಿ ತುಂಬಾ ರಾಗಿ, ಮುಷ್ಠಿ ತುಂಬಾ ಅಕ್ಕಿ ಕಾರ್ಯಕ್ರಮದ ಜೊತೆಗೆ, ಪಲ್ಸ್ ಪೋಲಿಯೋ, ಪರಿಸರ ಸಂರಕ್ಷಣೆ, ಸ್ವಚ್ಚ ಗ್ರಾಮ, ಸ್ವಚ್ಚ ಶಾಲೆ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಿರುವುದು ಅಭಿನಂದನೀಯ ಎಂದು ಹೇಳಿದರು.
ಬಿ.ಎಂ.ವಿ ಸಂಸ್ಥೆಯ ಕಾರ್ಯದರ್ಶಿ ಎಲ್.ಕಾಳಪ್ಪ ಮಾತನಾಡಿ, ಬಿ.ಎಂ.ವಿ ಪ್ರೌಢಶಾಲೆಯ ಮಕ್ಕಳಲ್ಲಿ ಸೇವಾ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಮೂರು ವರ್ಷಗಳ ಹಿಂದೆ ರೋಟರಿ ಇಂಟರಾಕ್ಟ್ ಕ್ಲಬ್ಬನ್ನು ಸ್ಥಾಪಿಸಿದ್ದು, ಅವರಲ್ಲಿ ತಮ್ಮಲ್ಲಿರುವುದು ಇಲ್ಲದವರಿಗೆ ನೀಡುವ ಭಾವ ಬೆಳೆಸಲು ಸಫಲರಾಗಿದ್ದೇವೆ. ಈ ಕಾರ್ಯಕ್ರಮ ಸಾರ್ಥಕ ರೂಪ ಪಡೆದುಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ಬಿ.ಎಂ.ವಿ ಶಾಲೆಯ ೨೦೧೮ – ೧೯ ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ಬಿ.ಆರ್.ಮಾಯ ಮತ್ತು ಚೇತನ್ ಕುಮಾರ್ ಅವರಿಗೆ ರೋಟರಿ ಸಂಸ್ಥೆಯ ಎಂ.ಎಸ್.ಮಂಜುನಾಥ್ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.
ರೋಟರಿ ಬೆಂಗಳೂರು ಸೆಂಟಿನಿಯಲ್ ಪದಾಧಿಕಾರಿಗಳಾದ ನಂದಿನಿ ಜಗನ್ನಾಥ್, ಎನ್.ಟಿ.ಸಾಗರ್, ರಾಮಪ್ರಿಯ, ಪದ್ಮಿನಿ ರಾಮ್, ಎಂ.ಎಸ್.ಮಂಜುನಾಥ್, ರೇಖಾ ನಾಯಕ್, ರಾಜೇಂದ್ರ, ಬಿ.ಎಂ.ವಿ.ಸಂಥೆಯ ಅಧ್ಯಕ್ಷ ಬಿ.ವಿ.ಮುನೇಗೌಡ, ಟ್ರಸ್ಟಿಗಳಾದ ಸಂತೆ ನಾರಾಯಣಸ್ವಾಮಿ, ವೆಂಕಟಮೂರ್ತಿ, ಎ.ಎನ್.ದೇವರಾಜ್, ಮುನಿರಾಜ್, ಗ್ರಾಮ ಪಂಚಾಯಿತಿ ಸದಸ್ಯ ಆನಂದ್, ರೋಟರಿ ಇಂಟರಾಕ್ಟ್ ಕ್ಲಬ್ ಶಿಕ್ಷಕಿ ಉಷಾರಾಣಿ ಹಾಜರಿದ್ದರು.
ಪದ್ಮಶಾಲಿ ಸಮಾಜದ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
ನಗರದ ಕಾಳಿಕಾಂಬ ಕಮಠೇಶ್ವರಸ್ವಾಮಿ ದೇವಾಲಯದ ಸಮುದಾಯಭವನದಲ್ಲಿ ಭಾನುವಾರ ಜಿಲ್ಲಾ ಪದ್ಮಶಾಲಿ ನೌಕರರ ಸ್ವಯಂ ಸೇವಾ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ವ್ಯಾಪ್ತಿಯ ಪದ್ಮಶಾಲಿ ಸಮಾಜದ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಜಿಲ್ಲಾ ಪದ್ಮಶಾಲಿ ನೌಕರರ ಸ್ವಯಂ ಸೇವಾ ಬಳಗದ ಅಧ್ಯಕ್ಷ ಎಂ.ಶ್ರೀನಿವಾಸಮೂರ್ತಿ ಮಾತನಾಡಿದರು.
ಸಾಧನೆ ಸಾಧಕನ ಸೊತ್ತು. ನಿರಂತದ ಕ್ರಿಯಾಶಿಲತೆ, ಆತ್ಮಾಭಿಮಾನ ಹಾಗೂ ದೃಢ ಸಂಕಲ್ಪದ ಕಾರ್ಯಗಳಿಂದ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ಅವರು ತಿಳಿಸಿದರು.
ಪದ್ಮಶಾಲಿ ಸಮಾಜದಿಂದ ಹನ್ನೊಂದು ವರ್ಷದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇವೆ. ಪದ್ಮಶಾಲಿ ಸಮಾಜದ ಜನರು ಬಹಳ ಹಿಂದೆ ಉಳಿದಿದ್ದು, ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಇಂದಿನ ಸಮಾಜದಲ್ಲಿ ವಿದ್ಯೆ ಬಹಳ ಮುಖ್ಯವಾಗಿದ್ದು, ಎಲ್ಲರೂ ಕಷ್ಟಪಟ್ಟು ಓದಿ. ಮಕ್ಕಳು ಇನ್ನು ಮುಂದೆ ಚೆನ್ನಾಗಿ ಓದಿ ಹೆಚ್ಚು ಅಂಕಗಳನ್ನು ಪಡೆದು ಶಾಲೆಗೆ, ತಂದೆ ತಾಯಿಗಳಿಗೆ ಕೀರ್ತಿ ತನ್ನಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಒಟ್ಟು ೧೮ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು. ಶಿಕ್ಷಣ ಇಲಾಖೆಯ ಪರಿವೀಕ್ಷಕ ಸಿ.ಕೃಷ್ಣಮೂರ್ತಿ ಹಾಗೂ ಪ್ರತಿಭಾ ಪುರಸ್ಕಾರದಲ್ಲಿ ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ಪ್ರಾಯೋಜಿಸಿದ್ದ ನಿವೃತ್ತ ಕೆ.ಇ.ಬಿ ಅಧಿಕಾರಿ ಎಂ.ಆರ್.ಹನುಮಂತಯ್ಯ ದಂಪತಿಯನ್ನು ಸನ್ಮಾನಿಸಲಾಯಿತು.
ನಗರಸಭಾ ಸದಸ್ಯ ಎಲ್.ಅನಿಲ್ ಕುಮಾರ್, ತಾಲ್ಲೂಕು ಪದ್ಮಶಾಲಿ ಸಂಘದ ಅಧ್ಯಕ್ಷ ಎಸ್.ಕೆ.ನಾಗರಾಜ್, ನಿವೃತ್ತ ಪ್ರಾಂಶುಪಾಲ ರಾಮಚಂದ್ರಪ್ಪ, ಅಭಿಯೋಜನಾಧಿಕಾರಿ ಸುಧಾ, ಟಿ.ಎಸ್.ಶ್ರೀನಿವಾಸಮೂರ್ತಿ, ಅನ್ನಪೂರ್ಣಮ್ಮ, ಅಮರನಾಥ, ರೆಡ್ಡಿ ರಮೇಶ್, ಶ್ರೀನಿವಾಸ್, ಗೋಪಾಲಕೃಷ್ಣ, ನಾಗರಾಜ್, ವೆಂಕಟಾಚಲಪತಿ ಹಾಜರಿದ್ದರು.
ಸಡಗರ ಸಂಭ್ರಮದಿಂದ ವರಮಹಾಲಕ್ಷ್ಮಿ ಪೂಜೆ ಆಚರಣೆ
ತಾಲ್ಲೂಕಿನಾದ್ಯಂತ ವರಮಹಾಲಕ್ಷ್ಮಿ ಪೂಜೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಶ್ರಾವಣದ ಎರಡನೆಯ ಶುಕ್ರವಾರ, ಅಥವಾ ಹುಣ್ಣಿಮೆಯ ಹಿಂದೆ ಬೀಳುವ ಶುಕ್ರವಾರದಂದು ವರಮಹಾಲಕ್ಷ್ಮೀ ವ್ರತವನ್ನು ಆಚರಿಸಲಾಗುತ್ತದೆ.
ಮನೆಗಳಲ್ಲಿ ಮಹಿಳೆಯರು ಲಕ್ಷ್ಮೀ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ, ವಿಶೇಷ ರೀತಿಯಲ್ಲಿ ಅಲಂಕರಿಸಿ ಪೂಜಿಸಿದರು. ದೇವಿಯ ಮೂರ್ತಿ ಮುಂಭಾಗ ಹಣ್ಣುಗಳು ಹಾಗೂ ವಿಶೇಷ ತಿಂಡಿ ತಿನಿಸುಗಳನ್ನು ಇಡಲಾಗಿತ್ತು. ಹಬ್ಬದ ಪ್ರಯುಕ್ತ ಬಹುತೇಕರ ಮನೆಗಳಲ್ಲಿ ಸಿಹಿ ತಿನಿಸು ಮಾಡಲಾಗಿತ್ತು. ನಗರದ ಬಹುತೇಕ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು. ತಳಿರು ತೋರಣಗಳಿಂದ ಮನೆಯನ್ನು ಸಿಂಗರಿಸಿ, ಹೆಣ್ಣುಮಕ್ಕಳು ಹೊಸ ಬಟ್ಟೆ ಧರಿಸಿ ಲಕ್ಷ್ಮೀ ವ್ರತದ ಮೂಲಕ ಸಂಭ್ರಮಿಸಿದರು.
ಈ ಉತ್ಸವದ ನಿಮಿತ್ತ ಕೆಲ ಮಹಿಳೆಯರು ಸಾಯಂಕಾಲದವರೆಗೂ ಉಪವಾಸನಿಯಮದಲ್ಲಿದ್ದು ಕಲಶಾದಿಗಳಲ್ಲಿ ಜಗನ್ಮಾತೆಯನ್ನು ಆವಾಹಿಸಿ ಆರಾಧಿಸಿದರೆ, ಆ ನಿಯಮವಿಲ್ಲದೆ ದೇವಿಪೂಜೆ ಮಾಡಿ ಹಬ್ಬವನ್ನು ಅನೇಕರು ಆಚರಿಸಿದರು.. ವ್ರತನಿಷ್ಠೆಯುಳ್ಳವರು ಸಂಕಲ್ಪಸಮೇತ ದೇವಿಯನ್ನು ಕಲಶ ವಿಗ್ರಹಾದಿಗಳಲ್ಲಿ ಆವಾಹಿಸಿ ಪೂಜೆ ಮಾಡಿದರು. ಸಕುಟುಂಬರಾದ ತಮಗೆ ಆಯುಸ್ಸು, ಆರೋಗ್ಯ, ಸಂತಾನ, ಐಶ್ವರ್ಯ, ಕ್ಷೇಮ, ಸ್ಥೈರ್ಯ ವಿಜಯಾದಿ ಸಮಸ್ತ ಶುಭಫಲಗಳೂ ಕೈಗೂಡಲಿ ಎಂದು ಮಂಗಲವಾದ ಸಂಕಲ್ಪ ಮಾಡಿದರು.
ಸಂಜೆಯಾಗುತ್ತಲೇ ಗೃಹಿಣಿಯರು ಮಕ್ಕಳೊಂದಿಗೆ ನೆರೆಹೊರೆಯ ಮನೆಗಳಿಗೆ ಹೋಗಿ ಕುಂಕುಮ ಸ್ವೀಕರಿಸುತ್ತಿದ್ದ, ಮುತ್ತೈದೆಯರಿಗೆ ಬಾಗಿನ ಕೊಟ್ಟು, ಮಡಿಲಕ್ಕಿ ತುಂಬಿ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂದಿತು.
ಮನೆಯಂಗಳದಲ್ಲಿ ನುಡಿಸಿರಿ ಕಾರ್ಯಕ್ರಮ
ಕನ್ನಡ ನಾಡು, ನುಡಿ, ಭಾಷೆಯ ಉಳಿಸುವಂತಹ ಮಹತ್ತರ ಜವಾಬ್ದಾರಿ ಇಂದಿನ ಯುವಜನತೆಯ ಮೇಲಿದೆ ಎಂದು ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಅರಿಕೆರೆ ಮುನಿರಾಜು ಹೇಳಿದರು.
ತಾಲ್ಲೂಕಿನ ಚೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಿಕೆರೆ ಗ್ರಾಮದ ಮುನಿರಾಜು ಅವರ ಮನೆಯಲ್ಲಿ ತಾಲ್ಲೂಕು ಕಸಾಪ ವತಿಯಿಂದ ಬುಧವಾರ ಸಂಜೆ ಆಯೋಜಿಸಿದ್ದ “ಮನೆಯಂಗಳದಲ್ಲಿ ನುಡಿಸಿರಿ” ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಪೋಷಕರ ಇಂಗ್ಲೀಷ್ ವ್ಯಾಮೋಹದಿಂದ ಕನ್ನಡ ಶಾಲೆಗಳಲ್ಲಿ ಓದುವ ಮಕ್ಕಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಪ್ರತಿಯೊಬ್ಬರೂ ಸರ್ಕಾರಿ ಕನ್ನಡ ಶಾಲೆಗಳ ಉಳಿವಿಗೆ ಮುಂದಾಗಬೇಕು. ಮಕ್ಕಳಿಗೆ ಪೋಷಕರಿಂದ ನಾಡಿನ ಹಾಗೂ ಮಾತೃಭಾಷೆಯ ಬಗ್ಗೆ ತಿಳಿಸುವ ಕೆಲಸವಾಗಬೇಕು. ಈ ಹಿಂದೆ ಕೇವಲ ನಗರಕ್ಕೆ ಮಾತ್ರ ಸೀಮಿತವಾಗಿದ್ದ ಕನ್ನಡ ಸಾಹಿತ್ಯ ಪರಿಷತ್ ಇದೀಗ ಗ್ರಾಮೀಣ ಪ್ರದೇಶಗಳಿಗೂ ಹರಡಿ ಗ್ರಾಮೀಣ ಭಾಗದ ಪ್ರತಿಭಾವಂತರನ್ನು ಗುರುತಿಸಿ ಬೆಳೆಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜು ಮಾತನಾಡಿ, ಕನ್ನಡದ ಕಂಪು ಮನೆಮನಗಳಲ್ಲಿ ಹರಡಬೇಕು. ಈ ನಿಟ್ಟಿನಲ್ಲಿ ಮನೆಯಂಗಳದಲ್ಲಿ ನುಡಿಸಿರಿ ಅಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮನೆಗಳಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದೆ. ಕನ್ನಡದ ಸೊಗಡು ಹರಡುವಲ್ಲಿ ಮತ್ತು ಮನೆಗೆ ಬಂದ ಕನ್ನಡ ಅಭಿಮಾನಿಗಳಿಗೆ ಸತ್ಕರಿಸುವ ಮೂಲಕ ನಮ್ಮ ತಾಲ್ಲೂಕಿನ ಹಲವಾರು ಕುಟುಂಬದವರು ಮಾದರಿಯಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಅರಿಕೆರೆ ಮುನಿರಾಜು ಅವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು.
ನಗರಸಭೆ ಸದಸ್ಯ ನಾರಾಯಣಸ್ವಾಮಿ, ಸಂಘ ಸಂಸ್ಥೆಗಳ ಪ್ರತಿನಿಧಿ ಶಂಕರ್, ನಗರ ಘಟಕದ ಅಧ್ಯಕ್ಷ ಸಿ.ಎನ್.ಮುನಿರಾಜು, ಉಪನ್ಯಾಸಕ ಮುನಿರಾಜು, ಶಿಕ್ಷಕ ನಂಜುಂಡಪ್ಪ, ಗ್ರಾಮಸ್ಥರಾದ ನಾಗರಾಜ್, ಶ್ರೀನಿವಾಸ್, ಕೃಷ್ಣಪ್ಪ, ಮಂಜುನಾಥ್, ಆಂಜನೇಯರೆಡ್ಡಿ, ಅಭಿಷೇಕ್, ಪ್ರಭಾಕರ್, ನಾಗೇಶ್, ಚರಣ್, ಶಿವರಾಜ್, ನಂದಕುಮಾರ್, ಜಗದೀಶ್, ಸಂತೋಷ್, ಮುನಿರೆಡ್ಡಿ ಹಾಜರಿದ್ದರು.
ವಿಶ್ವ ನಿರ್ಮಾಣ ಸೇನೆಯ ತಾಲ್ಲೂಕು ಶಾಖೆಯನ್ನು ಉದ್ಘಾಟನಾ ಸಮಾರಂಭ
ನಗರದ ಗಾಂಧಿನಗರದಲ್ಲಿ ಕರ್ನಾಟಕ ವಿಶ್ವ ನಿರ್ಮಾಣ ಸೇನೆಯ ತಾಲ್ಲೂಕು ಶಾಖೆಯನ್ನು ಉದ್ಘಾಟಿಸಿ ಕರ್ನಾಟಕ ಪ್ರಜಾ ಶಕ್ತಿ ಸಮಿತಿಯ ರಾಜ್ಯಾಧ್ಯಕ್ಷ ಪಿ.ಜಿ.ವಿಶ್ವನಾಥ್ ಮಾತನಾಡಿದರು. ಸಂಘಟನೆಗಳು ನೊಂದವರ ಧ್ವನಿಯಾಗಿ ಕಾರ್ಯನಿರ್ವಹಿಸಬೇಕು. ಎಲ್ಲಿ ಅನ್ಯಾಯ ಆಗುತ್ತದೆ ಅಲ್ಲಿ ಹೋರಾಟದ ಮೂಲಕ ನೊಂದವರಿಗೆ ನ್ಯಾಯ ಕಲ್ಪಿಸಿ ಸಾಮಾಜಿಕ ಕಳಿಕಳಿಯನ್ನು ಮೆರೆಯಬೇಕೆಂದರು.
ಸಮಾಜದಲ್ಲಿ ನಡೆಯುವ ಅನ್ಯಾಯಗಳು ಮತ್ತು ದೌಜನ್ಯ-ದಬ್ಬಾಳಿಕೆ ವಿರುಧ್ಧ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಅವರು ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸುವ ಯೋಜನೆಗಳು ಕೆಲವೇ ಮಂದಿಯ ಪಾಲಾಗುತ್ತಿದೆ. ಸರ್ಕಾರಿ ಯೋಜನೆಗಳ ಕುರಿತು ಜನಸಾಮಾನ್ಯರಿಗೆ ಅರಿವು ಮತ್ತು ಜಾಗೃತಿ ಮೂಡಿಸುವಂತಹ ಕೆಲಸ ನಡೆಯಬೇಕು. ಸಂಘಟನೆಗಳ ಪದಾಧಿಕಾರಿಗಳು ಸಮಾಜಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸಂಘಟನೆಗೆ ಉತ್ತಮ ಹೆಸರು ಬರುತ್ತದೆ ಎಂದರು.
ಕರ್ನಾಟಕ ವಿಶ್ವ ನಿರ್ಮಾಣ ಸೇನೆಯ ರಾಜ್ಯ ಉಪಾಧ್ಯಕ್ಷ ಬಾಬು ಹುಸೇನ್ ಮಾತನಾಡಿ, ಸಂವಿಧಾನತ್ಮಕವಾಗಿ ಎಲ್ಲಾ ವರ್ಗಗಳಿಗೆ ದೊರೆಯಬೇಕಾದ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಸಂಘಟನೆ ಕಾರ್ಯನಿರ್ವಹಿಸುತ್ತದೆ. ರಾಜ್ಯದಲ್ಲಿ ಎಲ್ಲಾ ಜಿಲ್ಲೆ-ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಸಂಘಟನೆಯನ್ನು ಬಲಪಡಿಸಲಾಗುವುದು. ದೀನ ದಲಿತರು, ಅಲ್ಪಸಂಖ್ಯಾತರು,ಹಿಂದುಳಿದ ವರ್ಗ ಸಹಿತ ಎಲ್ಲಾ ಜಾತಿ ಬಡವರ ಪರವಾಗಿ ಸಂಘಟನೆ ಕಾರ್ಯನಿರ್ವಹಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ನಗರ ಪೋಲಿಸ್ ಠಾಣೆಯ ಎಎಸ್‌ಐ ಕೃಷ್ಣಪ್ಪ, ಕರ್ನಾಟಕ ವಿಶ್ವ ನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷ ಚಂದ್ರಕೀರ್ತಿ, ತಾಲ್ಲೂಕು ಅಧ್ಯಕ್ಷ ಎಂ.ಎಸ್.ಮುಕಮಿಲ್ ಪಾಷ, ಕೆ.ಪ್ಯಾರೇಜಾನ್, ಸಿ.ಎಸ್.ಅಫ್ಸರ್ ಪಾಷ, ನೂರಾನಿ ಮಸೀದಿಯ ಕಾರ್ಯದರ್ಶಿ ಸರ್ದಾರ್, ಡಿ.ಮಹಬೂಬ್ ಪಾಷ, ಲೋಕೇಶ್ ಹಾಜರಿದ್ದರು.
ಓಂ ಶಕ್ತಿ ಅಮ್ಮನವರ ಆಷಾಡ ಮಾಸದ ಗಂಜಿ ಪೂಜಾ ಮಹೋತ್ಸವ
ನಗರದ ಹೃದಯಭಾಗದಲ್ಲಿರುವ ಗ್ರಾಮದೇವತೆ ಶ್ರೀ ಗಂಗಮ್ಮದೇವಿ ದೇವಾಲಯದಲ್ಲಿ ಭಾನುವಾರ ಭಗವತಿ ಜ್ಞಾನಾಕ್ಷಿ ಶ್ರೀ ರಾಜರಾಜೇಶ್ವರಿ ಸೇವಾ ಟ್ರಸ್ಟ್ ವತಿಯಿಂದ ಎರಡನೇ ವರ್ಷದ ಓಂ ಶಕ್ತಿ ಅಮ್ಮನವರ ಆಷಾಡ ಮಾಸದ ಗಂಜಿ ಪೂಜಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ದೇವಾಲಯದಲ್ಲಿ ಅಮ್ಮನವರಿಗೆ ಪೂರ್ಣಕುಂಭದೊಂದಿಗೆ ವಸ್ತ್ರ ಮತ್ತು ಮಡಲಕ್ಕಿ ಸೇವೆ, ಕುಂಕುಮಾರ್ಚನೆ ಮತ್ತು ಮಹಾಮಂಗಳಾರತಿ, ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಅಮ್ಮನವರ ಪಲ್ಲಕ್ಕಿಯನ್ನು ದೇವಾಲಯದಿಂದ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಗಾಂಧಿನಗರದಲ್ಲಿನ ಮುನೇಶ್ವರಸ್ವಾಮಿ ದೇವಾಲಯದಲ್ಲಿ ಅಮ್ಮನವರಿಗೆ ಮಡಲಕ್ಕಿ ಸೇವೆ, ಭಕ್ತರಿಗೆ ಪಾನಕ ಮತ್ತು ಹೆಸರುಬೇಳೆ ವಿತರಿಸಲಾಯಿತು.
ಮೆರವಣಿಗೆಯಲ್ಲಿ ಕೋಲಾಟ, ತಮಿಳುನಾಡು ಪಂಬುವಾದ್ಯ, ಕೇರಳದ ಚಂಡೆವಾದ್ಯ, ಪಂಡರಿ ಭಜನೆ, ಡೊಳ್ಳು ಕುಣಿತ, ಮಂಗಳ ವಾದ್ಯ, ಹಲಗೆ ವಾದ್ಯ ವಿಶೇಷ ಆಕರ್ಷಣೆಯಾಗಿತ್ತು. ಗ್ರಾಮದೇವತೆ ಶ್ರೀ ಗಂಗಮ್ಮದೇವಿ ದೇವಾಲಯದಿಂದ ಕಾಮಾಟಿಗರಪೇಟೆ, ಅಶೋಕ ರಸ್ತೆ, ಕೋಟೆ ವೃತ್ತ, ಟಿ.ಬಿ.ರಸ್ತೆ, ಹಳೆ ಆಸ್ಪತ್ರೆ ರಸ್ತೆ, ಕೆಮ್ಮಣ್ಣನ ಬಾಗಿಲು, ಗಾಂಧಿ ನಗರ, ಮುನೇಶ್ವರ ದೇವಾಲಯ, ಉಲ್ಲೂರುಪೇಟೆ, ಅಶೋಕ ರಸ್ತೆಯ ಮೂಲಕ ಮೆರವಣಿಗೆ ದೇವಾಲಯವನ್ನು ತಲುಪಿತು.
“ಊರಿನ ಕ್ಷೇಮಾಭಿವೃದ್ಧಿ ಹಾಗೂ ಶ್ರೇಯಸ್ಸನ್ನು ಕೋರಿ ಓಂ ಶಕ್ತಿ ಅಮ್ಮನವರ ಆಷಾಡ ಮಾಸದ ಗಂಜಿ ಪೂಜಾ ಮಹೋತ್ಸವವನ್ನು ಹಮ್ಮಿಕೊಂಡಿದ್ದೇವೆ. ಈ ಪೂಜಾ ಮಹೋತ್ಸವದಲ್ಲಿ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರೆಲ್ಲರೂ ಭಾಗವಹಿಸಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ” ಎಂದು ಮುರಳಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ವಸಂತ್ ಕುಮಾರ್, ಉಪಾಧ್ಯಕ್ಷರಾದ ಗಣೇಶ್, ಸೇವಾಕರ್ತರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.
ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆ
ತಾಲ್ಲೂಕು ಆಡಳಿತದಿಂದ ಈ ಭಾರಿಯ ೭೩ ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ಉದ್ದೇಶಿಸಲಾಗಿದ್ದು, ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಹಶೀಲ್ದಾರ್ ಎಂ.ದಯಾನಂದ್ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ, ಡಿ.ದೇವರಾಜ ಅರಸು ಜಯಂತಿ ಹಾಗೂ ಶ್ರೀ ಕೃಷ್ಣ ಜಯಂತಿ ಆಚರಿಸಲು ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತೀಯ ಸಂವಿದಾನದಡಿ ಸರ್ಕಾರಿ ಹುದ್ದೆಯಲ್ಲಿರುವ ಪ್ರತಿಯೊಬ್ಬ ತಾಲ್ಲೂಕು ಮಟ್ಟದ ಸರ್ಕಾರಿ ಅಧಿಕಾರಿಯೂ ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಸರ್ಕಾರಿ ರಜೆಯಿದೆ ಎಂಬ ಕಾರಣಕ್ಕೆ ಕುಟುಂಬದವರ ಹಾಗೂ ಸ್ನೇಹಿತರ ಜೊತೆ ಪ್ರವಾಸ ಹೋಗುವುದು ಬಿಟ್ಟು ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಳ್ಳಬೇಕು. ತುರ್ತು ಸಾವು ನೋವುಗಳು ಸಂಭವಿಸದ ಹೊರತು ಉದ್ದೇಶಪೂರ್ವಕವಾಗಿ ಯಾವುದೇ ಅಧಿಕಾರಿ ಕಾರ್ಯಕ್ರಮಕ್ಕೆ ಗೈರು ಹಾಜರಾದಲ್ಲಿ ಅಂತಹ ಅಧಿಕಾರಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಭೆಯಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಗುವುದು. ಹಾಗಾಗಿ ಯಾರೊಬ್ಬರೂ ಗೈರು ಹಾಜರಾಗದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.
ತಾಲ್ಲೂಕಿನ ವಿವಿಧ ಇಲಾಖೆಗಳಿಗೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಲವು ಜವಾಬ್ದಾರಿಗಳನ್ನು ವಹಿಸಿದ ಅವರು ಆಗಸ್ಟ್ ೧೪ ರ ರಾತ್ರಿ ಎಲ್ಲಾ ಸರ್ಕಾರಿ ಕಚೇರಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸುವುದರೊಂದಿಗೆ ಬೆಳಗ್ಗೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿಯೂ ಧ್ವಜಾರೋಹಣ ನೆರವೇರಿಸಿ ನಂತರ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯುವ ನಗರದ ನೆಹರೂ ಕ್ರೀಡಾಂಗಣಕ್ಕೆ ಎಲ್ಲರೂ ಹಾಜರಾಗುವಂತೆ ಮನವಿ ಮಾಡಿದರು.
ಆಗಸ್ಟ್ ೧೫ ರಂದು ಬೆಳಗ್ಗೆ ೯ ಗಂಟೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ದ್ವಜಾರೋಹಣ ನಡೆಸುವುದರೊಂದಿಗೆ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಲು ನಿರ್ಧರಿಸಲಾಯಿತು.
ಇದೇ ಆಗಸ್ಟ್ ೨೦ ರ ಮಂಗಳವಾರ ಬೆಳಗ್ಗೆ ೧೧ ಗಂಟೆಗೆ ಡಿ.ದೇವರಾಜ ಅರಸು ಜಯಂತಿ ಹಾಗೂ ಆಗಸ್ಟ್ ೨೩ ರ ಶುಕ್ರವಾರ ಬೆಳಗ್ಗೆ ೧೧ ಗಂಟೆಗೆ ಶ್ರೀ ಕೃಷ್ಣ ಜಯಂತಿಯನ್ನು ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಆಚರಿಸಲು ತೀರ್ಮಾನಿಸಲಾಯಿತು.
ತಾಲ್ಲೂಕು ಪಂಚಾಯಿತಿ ಇಓ ಬಿ.ಶಿವಕುಮಾರ್, ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಗ್ರಾಮಾಂತರ ಠಾಣೆ ಪಿಎಸ್ಸೈ ಹರೀಶ್, ಶಿರಸ್ತೇದಾರ್ ಕೆ.ಎನ್.ಮಂಜುನಾಥ್ ಹಾಜರಿದ್ದರು.
ಮಹಿಳೆಯರ ರಕ್ಷಣೆಗೆ ಒನಕೆ ಓಬವ್ವ ಮಹಿಳಾ ಪೊಲೀಸ್ ಪಡೆ
ಹೆಣ್ಣುಮಕ್ಕಳು ನಿರ್ಭೀತಿಯಿಂದ ಓಡಾಡಲು, ಪುಂಡಪೋಕರಿಗಳು, ಬೀದಿಕಾಮುಕರ ಕಾಟದಿಂದ ರಕ್ಷಣೆ ಪಡೆಯಲು ಒನಕೆ ಓಬವ್ವ ಮಹಿಳಾ ಪೊಲೀಸ್ ಪಡೆ ರಚಿಸಲಾಗಿದೆ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಜಿ.ಆನಂದಕುಮಾರ್ ತಿಳಿಸಿದರು.
ನಗರ ಪೊಲೀಸ್ ಠಾಣೆ ಆವರಣದಲ್ಲಿ ಬುಧವಾರ ಒನಕೆ ಓಬವ್ವ ಪಡೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಗರ, ಶಿಡ್ಲಘಟ್ಟ ಗ್ರಾಮಾಂತರ ಹಾಗೂ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮಹಿಳೆಯರು, ಹೆಣ್ಣುಮಕ್ಕಳ ರಕ್ಷಣೆಗಾಗಿ ಒಂಬತ್ತು ಮಂದಿ ಮಹಿಳಾ ಪೇದೆಗಳು ಹಾಗೂ ಓರ್ವ ಎಎಸ್ಸೈ ನೇತೃತ್ವದ ಒನಕೆ ಓಬವ್ವ ತಂಡ ರಚಿಸಲಾಗಿದೆ ಎಂದರು.
ನಗರದಲ್ಲಿ ಪುಂಡಪೋಕರಿಗಳಿಗೆ ಹಾಗೂ ಬೀದಿಕಾಮುಕರನ್ನು ಮಟ್ಟಹಾಕಲು ನಗರಠಾಣೆಯಲ್ಲಿ ಲಭ್ಯವಿರುವ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಬಳಸಿಕೊಂಡು ವಿಶೇಷವಾಗಿ ಒನಕ್ಕೆ ಓಬವ್ವ ಮಹಿಳಾ ಪೊಲೀಸ್ ಪಡೆ ರಚನೆ ಮಾಡಲಾಗಿದೆ.
ನಗರದ ಸರಕಾರಿ ಮಹಿಳಾ ಕಾಲೇಜು ಸೇರಿದಂತೆ ಹಲವು ಶಾಲಾ ಕಾಲೇಜುಗಳಿಗೆ ಈ ಪಡೆ ಭೇಟಿ ನೀಡಿ, ವಿದ್ಯಾರ್ಥಿನಿಯರು ಪುಂಡಪೋಕರಿಗಳಿಂದ ರಕ್ಷ ಣೆ ಮಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಲಾಗುವುದು. ಅಲ್ಲದೇ, ಶಾಲೆ ಕಾಲೇಜುಗಳಿಗೆ ತೆರಳುವ ಮಾರ್ಗ ಮಧ್ಯೆ ಯಾರಾದರೂ ಪೋಕರಿಗಳು ಚುಡಾಯಿಸಿದರೇ ಧೈರ್ಯದಿಂದ ಎದುರಿಸಿ, ಒನಕೆ ಓಬವ್ವ ಮಹಿಳಾ ಪೊಲೀಸ್ ಪಡೆಗೆ ಮಾಹಿತಿ ನೀಡುವಂತೆ ತಿಳಿಸಿದರು.
ನಗರದ ಶಾಲಾ, ಕಾಲೇಜುಗಳಿಗೆ ಹೋಗುವ ಹೆಣ್ಣು ಮಕ್ಕಳು ರಸ್ತೆಯಲ್ಲಿ ಯಾರಾದರೂ ಕಿಡಿಗೇಡಿಗಳು ಚುಡಾಯಿಸಿದರೆ ಕೂಡಲೇ ಓಬವ್ವ ಪಡೆಗೆ ಕರೆ ಮಾಡಿದಲ್ಲಿ ಸ್ಥಳಕ್ಕೆ ಓಬವ್ವ ಪಡೆಯ ಸಿಬ್ಬಂದಿ ಬಂದು ಕಿಡಿಗೇಡಿಗಳಿಗೆ ಕಾನೂನು ರೀತ್ಯ ಶಿಕ್ಷೆ ನೀಡಲು ಸಹಕಾರಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನಗರಠಾಣೆ ಪಿಎಸ್ಸೈ ಲಿಯಾಕತ್‌ಉಲ್ಲಾ, ದಿಬ್ಬೂರಹಳ್ಳಿ ಠಾಣೆ ಪಿಎಸ್ಸೈ ರಂಜನ್‌ಕುಮಾರ್ ಹಾಜರಿದ್ದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಎಂಟನೇ ಸಾಹಿತ್ಯ ಸಮ್ಮೇಳನ
ನಗರದ ವಾಸವಿ ಕಲ್ಯಾಣಮಂಟಪದಲ್ಲಿ ಮಂಗಳವಾರ ನೇಗಿಲ ಯೋಗಿ ಅನ್ನದಾತ ವೇದಿಕೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಎಂಟನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಸಮ್ಮೇಳನಾಧ್ಯಕ್ಷೆ ದೇವರಮಳ್ಳೂರು ವಿ.ಯಶೋದಮ್ಮ ಮಾತನಾಡಿದರು.
ಶಿಡ್ಲಘಟ್ಟವನ್ನು ಕಟ್ಟಿದ್ದೇ ಒಬ್ಬ ಮಹಿಳೆ. ಸುಮಾರು ೪೯೩ ವರ್ಷಗಳ ಹಿಂದೆ ಉಜ್ಜನಿ ಮೂಲದ ಕೆಂಪೇಗೌಡನ ಮಡದಿ ಹಲಸೂರಮ್ಮ ಈ ಊರನ್ನು ಕಟ್ಟಿಸಿ ತನ್ನ ಮಾವನಾದ ಸಿಡಿಲಗೌಡನ ಹೆಸರಿನಿಂದ ಕರೆದಳು. ಜನರ ಬದುಕಿಗೆ ಅವಶ್ಯವಾದ ನೀರಿಗಾಗಿ ಆ ತಾಯಿ ದೂರದೃಷ್ಟಿಯಿಂದ ಕಟ್ಟಿಸಿದ ಎರಡು ಕೆರೆಯನ್ನು ನಾವು ಉಳಿಸಿಕೊಳ್ಳುವುದೇ ಆ ತಾಯಿಗೆ ನಾವು ನೀಡುವ ದೊಡ್ಡ ಕೊಡುಗೆ ಎಂದು ಅವರು ತಿಳಿಸಿದರು.
ನಮ್ಮ ಬಹುತೇಕ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಗ್ರಾಹಕ ನೀಡುವ ಬೆಲೆಯಲ್ಲಿ ಶೇ ೩೦ ರಷ್ಟು ಪ್ರಮಾಣವೂ ರೈತರಿಗೆ ಸಿಗುತ್ತಿಲ್ಲ. ಈ ಅಂತರವನ್ನು ತಗ್ಗಿಸಿದರೆ ರೈತರ ಆದಾಯವನ್ನು ಗಮನಾರ್ಹವಾಗಿ ಹೆಚ್ಚಿಸಬಹುದಾಗಿದೆ. ನಮ್ಮ ಕೃಷಿ ಅರ್ಥ ವ್ಯವಸ್ಥೆಯ ಅತಿ ದೊಡ್ಡ ಸಮಸ್ಯೆ ಎಂದರೆ ಉತ್ಪಾದನೆ ಮತ್ತು ಬೆಲೆಗಳ ತೀವ್ರ ಏರಿಳಿಕೆ ಹಾಗೂ ಅನಿಶ್ಚಿತತೆ. ಸದಾ ಮಳೆ ಮತ್ತು ಮಾರುಕಟ್ಟೆಯಲ್ಲಿ ಜೂಜಾಡುತ್ತಿರುವ ರೈತಾಪಿ ವರ್ಗಕ್ಕೆ ನಿಶ್ಚಿತ ಆದಾಯ, ಅದರ ಊಹೆ ಹಾಗೂ ಮುನ್ನಂದಾಜು ಅಸಾಧ್ಯವಾಗಿದೆ.
ನಮ್ಮ ಮಣ್ಣಿನಲ್ಲಿ ಕಲೆಯಿದೆ. ಅದನ್ನು ಪೋಷಿಸಲು ಪೂರಕ ವಾತಾವರಣವನ್ನು ಕಲ್ಪಿಸಬೇಕಿದೆ. ನಗರ ಸೇರಿದಂತೆ ಪ್ರತಿಯೊಂದು ಪ್ರಮುಖ ಗ್ರಾಮದಲ್ಲೂ ರಂಗಭೂಮಿಗೆ, ಕಲೆಗೆ ಅತ್ಯಗತ್ಯವಾದ ರಂಗಮಂದಿರವನ್ನು ನಿರ್ಮಿಸಬೇಕು. ಕಲೆಗೆ ಪ್ರಸಿದ್ಧವಾದ ಶಿಡ್ಲಘಟ್ಟದಲ್ಲಿ ಇದುವರೆಗೂ ರಂಗಮಂದಿರ ನಿರ್ಮಿಸಿಲ್ಲ. ಈಗಲಾದರೂ ಕಲಾಸೇವೆಗೆ ದೇವಾಲಯದಂತಿರುವ ರಂಗಮಂದಿರದ ನಿರ್ಮಾಣವಾಗಲಿ ಎಂದು ಈ ವೇದಿಕೆಯ ಮೂಲಕ ಆಶಿಸುತ್ತೇನೆ. ತಾಲ್ಲೂಕಿನ ಪ್ರಮುಖ ದೇಗುಲಗಳು ಕಲೆಯನ್ನು ಬೆಳೆಸುವ ಪ್ರೋತ್ಸಾಹಿಸುವ ಸಾಂಸ್ಕೃತಿಕ ಕೇಂದ್ರಗಳಾಗಲಿ ಎಂದು ಬಯಸುವುದಾಗಿ ನುಡಿದರು.
ಕೆರೆ ಕಾಲುವೆಗಳನ್ನು ರಕ್ಷಿಸಿಕೊಳ್ಳಬೇಕು. ನೀರು ನಿಧಿ ಎನ್ನುವ ತಜ್ಞರ ನುಡಿಯ ಸತ್ಯ ಅರಿವಾಗತೊಡಗಿದೆ. ಈಗಲಾದರೂ ಎಚ್ಚೆತ್ತು ಮಳೆ ನೀರು ಸಂಗ್ರಹಕ್ಕೆ ಎಲ್ಲರೂ ಮನಸ್ಸು ಮಾಡಬೇಕಿದೆ. ಮನೆಗಳ ಮಾಡಿನ ಮೇಲೆ ಬೀಳುವ ಮಳೆ ನೀರನ್ನು ಪೈಪ್ ಗಳ ಮೂಲಕ ಹಾಯಿಸಿ ಮನೆಯ ಆಸುಪಾಸಿನಲ್ಲಿ ಒಂದು ತೊಟ್ಟಿ ನಿರ್ಮಿಸಿ, ಅದರಲ್ಲಿ ಸಂಗ್ರಹವಾಗುವ ನೀರನ್ನು ಉಪಯೋಗಿಸಬೇಕು.
ಜಲ ಮರುಪೂರಣ ಅತ್ಯಗತ್ಯ. ಬೀಳುವ ಮಳೆಯನ್ನು ಇಂಗಿಸಬೇಕು. ಇದು ನಮ್ಮ ವಾಸದ ಮನೆ, ಆವರಣ, ತೋಟ, ಮೈದಾನ, ಬಯಲುಗಳಲ್ಲಿ ಮಾಡಬೇಕು. ಇದರಿಂದ ಅಂತರ್ಜಲ ವೃದ್ಧಿಯಾಗಿ ನೀರಿನ ಬವಣೆ ಹೋಗಲಾಡಿಸಬಹುದು. ಬಿದ್ದ ಮಳೆ ನೀರು ರಭಸದಿಂದ ಹರಿದುಹೋಗದಂತೆ ಚಿಕ್ಕ ಚಿಕ್ಕ ಬದುಗಳನ್ನು ಹಾಕಿ, ಅಲ್ಲಲ್ಲಿ ಚಿಕ್ಕ ಚಿಕ್ಕ ಇಂಗು ಗುಂಡಿಗಳನ್ನು ಅನುಕೂಲಕ್ಕೆ ತಕ್ಕಂತೆ ನಿರ್ಮಿಸಬೇಕು.
ಪ್ರತಿಯೊಬ್ಬರೂ ಒಂದೊಂದು ಸಸಿ ನೆಟ್ಟು ಕಾಪಾಡುತ್ತಾ ಪರಿಸರ ರಕ್ಷಣೆಗೆ ಕಾಳಜಿ ವಹಿಸಬೇಕು. ಪರಿಸರ ಉಳಿದಲ್ಲಿ ಮಳೆ ಬರುತ್ತದೆ, ನೀರು ಇಂಗಿಸಿದಲ್ಲಿ ನಮ್ಮ ಬಾಳು ಬಂಗಾರವಾಗುತ್ತದೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳನ್ನು ಗಟ್ಟಿಗೊಳಿಸಲು ಎಲ್ಲರೂ ಒಗ್ಗೂಡಬೇಕು. ನಮ್ಮ ಭಾಷೆಯನ್ನು ಮಕ್ಕಳಿಗೆ ಇಷ್ಟವಾಗುವಂತೆ ಕಲಿಸಲು ಕಲಾ ಮಾಧ್ಯಮವನ್ನು ಪೂರಕವಾಗಿ ಬಳಸಿಕೊಳ್ಳಬೇಕು. ಇದು ಮಕ್ಕಳ ಪ್ರತಿಭೆ ಹೊರಬರಲು ಕಾರಣವಾಗುತ್ತದೆ ಎಂದರು.
ಚಾಲನೆ
ವಾಸವಿ ಕಲ್ಯಾಣ ಮಂಟಪದ ಬೆಳಗ್ಗೆ ತಹಶೀಲ್ದಾರ್ ಎಂ.ದಯಾನಂದ ರಾಷ್ಟ್ರ ಧ್ವಜಾರೋಹಣ, ಗ್ರೇಡ್ ೨ ತಹಶೀಲ್ದಾರ್ ಹನುಮಂತರಾವ್ ನಾಡಧ್ವಜಾರೋಹಣ ಮತ್ತು ಕಸಾಪ ತಾಲ್ಲೂಕು ಅಧ್ಯಕ್ಷ .ಎಂ.ತ್ಯಾಗರಾಜ್ ಪರಿಷತ್ತಿನ ಧ್ವಜಾರೋಹಣ ಮಾಡುವುದರೊಂದಿಗೆ ಸಮ್ಮೇಳನ ಪ್ರಾರಂಭವಾಯಿತು. ನಾಡಗೀತೆ ಹಾಗೂ ರಾಷ್ಟ್ರಗೀತೆಯನ್ನು ನಗರದ ಶ್ರೀ ವಾಸವಿ ವಿದ್ಯಾ ಸಂಸ್ಥೆಯ ಶಾಲಾ ಮಕ್ಕಳು ನೆರವೇರಿಸಿದರೆ ನಾಡಗೀತೆಯನ್ನು ಟಿ.ನಾರಾಯಣಸ್ವಾಮಿ ತಂಡ ನಡೆಸಿಕೊಟ್ಟರು.
ಸಮ್ಮೇಳನಾಧ್ಯಕ್ಷೆ ದೇವರಮಳ್ಳೂರು ವಿ.ಯಶೋದಮ್ಮ ಅವರನ್ನು ತೆರೆದ ಜೀಪಿನಲ್ಲಿ ನಗರದ ಬಸ್ ನಿಲ್ದಾಣದಿಂದ ಕರೆತರಲಾಯಿತು. ಮೆರವಣಿಗೆಗೆ ಸರ್ಕಲ್ ಇನ್ಸ್ ಪೆಕ್ಟರ್ ಜಿ.ಎನ್.ಆನಂದಕುಮಾರ್ ಚಾಲನೆ ನೀಡಿದರು.
ಪೂರ್ಣಕುಂಭ ಹೊತ್ತ ಮಹಿಳೆಯರು, ವಿವಿಧ ಶಾಲೆಗಳ ವಾದ್ಯವೃಂದಗಳು, ವಾಲಗ ಡೋಲುಗಳ ಮಂಗಳವಾದ್ಯ, ವೀರಗಾಸೆ ಕಲಾತಂಡಗಳೊಂದಿಗೆ ಆಗಮಿಸಿದ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ರಸ್ತೆಯುದ್ದಕ್ಕೂ ಜನರು ನಿಂತು ನೋಡಿದರು. ಹೂವನ್ನು ಚೆಲ್ಲಿ ಅವರನ್ನು ಸ್ವಾಗತಿಸಿದರು.
ಸಾಧಕರಿಗೆ ಸನ್ಮಾನ
ಕಸಾಪ ವತಿಯಿಂದ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಸನ್ಮಾನಿಸಿ ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಎಲೆಮರೆಯ ಕಾಯಿಗಳಂತೆ ತಮ್ಮ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವವರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ನಾಡಿನ ಇತಿಹಾಸವನ್ನು ಗಮನಿಸಿದಾಗ ಈ ನಾಡನ್ನು ಕಟ್ಟಿದ್ದು ರಾಜಕೀಯ ನಾಯಕರು ಮಾತ್ರವಲ್ಲ, ರೈತರು, ಧಾರ್ಮಿಕ ನಾಯಕರು, ವಿಜ್ಞಾನಿಗಳು, ಬುದ್ದಿಜೀವಿಗಳು, ಕಲಾವಿದರು ಹೀಗೆ ಸಮಾಜದ ಎಲ್ಲಾ ವರ್ಗದವರೂ ನಾಡಿನ ನಿರ್ಮಾಣ ಕಾರ್ಯಕ್ಕೆ ತಮ್ಮ ಕೊಡುಗೆ ನೀಡಿದ್ದಾರೆ. ನಮ್ಮ ಸಮಾಜ ಈ ಎಲ್ಲರ ಕೊಡುಗೆಗಳ ಒಟ್ಟು ಮೊತ್ತವಾಗಿದೆ ಎಂದರು.
ನಿತಿನ್ ಗೌಡ, ಎಂ.ಎಸ್ಸಿ (ಬಂಗಾರದ ಪದಕ), ಅರುಣ್ ಕುಮಾರ್ (ಕ್ರೀಡೆ), ಡಾ.ಪ್ರಮೋದ್ (ವೈದ್ಯಕೀಯ), ಹುಜಗೂರು ರಾಮಣ್ಣ (ಕೃಷಿ ಪಂಡಿತರು), ಎನ್.ಶ್ರೀಕಾಂತ್ (ಶಿಕ್ಷಣ), ಎಂ.ಎಸ್.ವೆಂಕಟೇಶಮೂರ್ತಿ (ಧಾರ್ಮಿಕ), ಗಾಯಿತ್ರಮ್ಮ (ಅಂಗನವಾಡಿ ಸೇವೆ), ಶಾಂತಮ್ಮ (ಅಂಧಮಕ್ಕಳ ಶಾಲೆಯಲ್ಲಿ ಸೇವೆ), ಅಬ್ಲೂಡು ಚನ್ನಕೃಷ್ಣಪ್ಪ (ಕೇಳಿಕೆ ಕಲಾವಿದ), ಅರುಣ್ ಕುಮಾರ್ (ಯೋಧ, ಭಾರತೀಯ ಸೇನೆ) ಅವರನ್ನು ಸನ್ಮಾನಿಸಲಾಯಿತು.
ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಶೋದಮ್ಮ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್, ಡಾ.ಡಿ.ಟಿ.ಸತ್ಯನಾರಾಯಣರಾವ್, ಅಗಜಾನನಮೂರ್ತಿ, ಕಸಾಪ ಕಾರ್ಯದರ್ಶಿಗಳಾದ ಎಸ್.ಸತೀಶ್, ಚಾಂದ್ ಪಾಷ, ಕೋಶಾಧ್ಯಕ್ಷ ಸುಧೀರ್, ಮಹಿಳಾ ಪ್ರತಿನಿಧಿ ದಾಕ್ಷಾಯಿಣಿ, ಶಂಕರ್, ಪ್ರಭು, ಆಂಜಿ, ನಾರಾಯಣಸ್ವಾಮಿ, ಶ್ರೀಕಾಂತ್, ಕೃಷ್ಣ ಹಾಜರಿದ್ದರು.
ಉಚಿತ ಚರ್ಮ ರೋಗ ಚಿಕಿತ್ಸಾ ಶಿಬಿರ
ಸಮುದಾಯ ಚರ್ಮ ವೈದ್ಯರ ಸಂಘ ಹಾಗೂ ಗ್ರಾಮಾಂತರ ಟ್ರಸ್ಟ್ ವತಿಯಿಂದ ಭಾನುವಾರ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ಮುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಉಚಿತ ಚರ್ಮ ರೋಗ ಚಿಕಿತ್ಸಾ ಶಿಬಿರದಲ್ಲಿ ಸಮುದಾಯ ಚರ್ಮ ವೈದ್ಯರ ಸಂಘದ ಅಧ್ಯಕ್ಷೆ ಡಾ.ಟಿ.ಎಸ್.ವಿದ್ಯಾ ಮಾತನಾಡಿದರು.
ಚರ್ಮರೋಗ ಪ್ರಸ್ತುತ ಪ್ರಮುಖವಾಗಿ ಕಾಡುವಂತಹ ಸಮಸ್ಯೆಯಾಗಿದೆ. ಚರ್ಮರೋಗಕ್ಕೆ ಆರಂಭದಲ್ಲಿ ಉತ್ತಮ ಚಿಕಿತ್ಸೆ ನೀಡಿದಾಗ ಇದರಿಂದ ನಿವಾರಣೆ ಸಾಧ್ಯ ಎಂದು ಅವರು ತಿಳಿಸಿದರು.
ಈ ಉಚಿತ ಶಿಬಿರದಲ್ಲಿ ಪರಿಣಿತ ತಜ್ಞರಿಂದ ಮೊಡವೆ, ಬಿಳಿಮಚ್ಚೆ, ತಲೆಹೊಟ್ಟು, ಕೂದಲುದುರುವಿಕೆ, ಕುಷ್ಟರೋಗ, ಗುಪ್ತರೋಗ, ಇಸುಬು, ಗಜಕರ್ಣ, ಕಪ್ಪುಕಲೆ, ತೊನ್ನು, ಸಿಬ್ಬು, ಐತಿಗೆ, ಲೈಂಗಿಕ ಸಮಸ್ಯೆ, ಸರ್ಪಹುಣ್ಣು, ಸೋರಿಯಾಸಿಸ್, ಚರ್ಮರೋಗಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಕಾಯಿಲೆ ಗಳಿಗೆ ಉಚಿತ ತಪಾಸಣೆ ಹಾಗೂ ಔಷಧಿಯನ್ನು ಒದಗಿಸಲಾಗುತ್ತಿದೆ ಎಂದು ವಿವರಿಸಿದರು.
ಶಿಡ್ಲಘಟ್ಟದಲ್ಲಿ ಸುಮಾರು ೨೦೦ ಮಂದಿ ಹಾಗೂ ಮುತ್ತೂರಿನಲ್ಲಿ ೧೫೦ ಮಂದಿ ಈ ಉಚಿತ ಚಿಕಿತ್ಸೆಯಲ್ಲಿ ತಜ್ಞ ವೈದ್ಯರಿಂದ ಪರೀಕ್ಷಿಸಿಕೊಂಡರು.
ನಗರದ ಬಸ್ ನಿಲ್ದಾಣದ ಬಳಿ ವಿವಿಧ ಚರ್ಮ ಸೋಂಕುಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಬೀದಿ ನಾಟಕವನ್ನು ಆಯೋಜಿಸಲಾಗಿತ್ತು.
ಡಾ.ಪ್ರಭಾಕರ್ ಸಂಗೊಳ್ಳಿ, ಗ್ರಾಮಾಂತರ ಟ್ರಸ್ಟ್ ನ ಉಷಾಶೆಟ್ಟಿ, ಅಭಿಷೇಕ್, ಅನಂತಲಕ್ಷ್ಮಿ, ಮುನಿರಾಜು ಹಾಜರಿದ್ದರು.
ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭ
ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ವತಿಯಿಂದ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ವೇದಿಕೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಡಿ.ವಿ.ಗುರುಪ್ರಸಾದ್ ಮಾತನಾಡಿದರು.
ಸಾಧನೆಯ ಹಾದಿ ಸುಗಮವಲ್ಲ. ಛಲವಿದ್ದವರು ಮಾತ್ರ ಆ ಹಾದಿಯಲ್ಲಿ ಸಾಗಲು ಸಾಧ್ಯ. ಮರಳಿ ಯತ್ನವ ಮಾಡು ಎಂಬ ಮಾತಿನಂತೆ ನಿರಂತರ ಪ್ರಯತ್ನದಿಂದ ಮಾತ್ರ ಯಶಸ್ಸು ಸಿಗಬಲ್ಲದು ಎಂದು ಅವರು ತಿಳಿಸಿದರು.
ಒಳ್ಳೆಯ ಗುಣವನ್ನು ಯಾರಲ್ಲೇ ಕಂಡರೂ ಗೌರವಿಸಿ, ಅನುಸರಿಸಬೇಕು. ಗುಣಕ್ಕೆ ಮತ್ಸರ ಬೇಡ. ಪೋಷಕರು ಮಕ್ಕಳಿಗೆ ಒತ್ತಡ ಹಾಕದೇ ಅವರ ವಿಷಯಾಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಿ. ನನ್ನ ಬದುಕಿನಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿಯಲ್ಲಿ ಕಡಿಮೆ ಅಂಕಗಳನ್ನು ಗಳಿಸಿದ್ದರೂ ಮುಂದೆ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದಪದಕವನ್ನು ಪಡೆದೆ. ಡಾ.ಎಚ್.ನರಸಿಂಹಯ್ಯ ಅವರಿಂದ ಸ್ವಾವಲಂಬನೆ, ಮಾನವೀಯ ಹಾಗೂ ಗಾಂಧೀ ತತ್ವಗಳನ್ನು ಕಲಿತೆ. ಮೊದಲು ಪತ್ರಕರ್ತನಾಗಿದ್ದು, ನಂತರ ಯು.ಪಿ.ಎಸ್.ಸಿ ಪರೀಕ್ಷೆ ಪಾಸ್ ಮಾಡಿ ಐ.ಪಿ.ಎಸ್ ಆದೆ. ನನ್ನ ಬದುಕಿನ ಚಿತ್ರಣ ನೀಡುತ್ತಿರುವ ಉದ್ದೇಶ ನಿರಂತರ ಪ್ರಯತ್ನ ಮತ್ತು ಛಲದಿಂದ ಸಾಧಕರಾಗಲು ಸಾಧ್ಯ ಎಂಬುದನ್ನು ಈಗಿನ ವಿದ್ಯಾರ್ಥಿಗಳಿಗೆ ತಿಳಿಸುವುದಾಗಿದೆ ಎಂದು ನುಡಿದರು.
ಬಸವನಗುಡಿ ಕ್ಷೇತ್ರದ ವಿಧಾನಸಭಾ ಸದಸ್ಯ ರವಿಸುಬ್ರಮಣ್ಯ ಮಾತನಾಡಿ, ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಬ್ರಾಹ್ಮಣ ಸಮುದಾಯದ ಆಶಯದಂತೆ ಈ ದಿನ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ವತಿಯಿಂದ ಎಲ್ಲಾ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸುತ್ತಿರುವುದು ಅಭಿನಂದನೀಯ. ವಿದ್ಯಾರ್ಥಿಗಳಿಗೆ ಪ್ರೇರಣೆ ಸಿಗಲೆಂದು ವಿವಿಧ ಕ್ಷೇತ್ರಗಳ ಸಾಧಕರನ್ನು ಸಹ ಕರೆಸಿ ಸನ್ಮಾನಿಸಲಾಗುತ್ತಿದೆ. ಸಾಧಕರಿಂದ ಪ್ರೇರಣೆ ಪಡೆಯಿರಿ. ಮಾರ್ಗದರ್ಶನ ಪಡೆಯಿರಿ, ಅನುಕರಣೆ ಮಾಡಿ. ಗುರಿಯೆಡೆಗೆ ಸದಾ ಕನಸನ್ನು ಕಾಣಿ. ಪ್ರಯತ್ನ ಬಿಡದಿರಿ. ಕೀಳರಿಮೆಯಿಂದ ಹೊರಬನ್ನಿ. ಮಾಡುವ ಕೆಲಸದಲ್ಲಿ ಶ್ರದ್ಧೆ, ನಿಷ್ಠೆ ಮತ್ತು ನೈತಿಕ ಮೌಲ್ಯ ಇರಬೇಕು. ತಂದೆ ತಾಯಿ ಗುರುಗಳು ಹೆಮ್ಮೆ ಪಡುವ ಸಾಧನೆ ಮಾಡಬೇಕು. ವಿದ್ಯಾರ್ಥಿ ಜೀವನ ತಪಸ್ಸಿದ್ದಂತೆ. ವಿದೇಶಿ ವಿದ್ಯಾರ್ಥಿಗಳು ನಮ್ಮ ದೇಶದಲ್ಲಿ ಬಂದು ಓದುವ ವಾತಾವರಣ ಮುಂದಿನ ದಿನಗಳಲ್ಲಿ ಆಗಬೇಕೆಂದು ನಮ್ಮ ಪ್ರಧಾನಿಗಳು ಕಾರ್ಯಯೋಜನೆ ಹಮ್ಮಿಕೊಂಡಿದ್ದಾರೆ. ಮುಂದಿನ ಸುವರ್ಣಕಾಲಕ್ಕೆ ವಿದ್ಯಾರ್ಥಿಗಳು ಸನ್ನದ್ಧರಾಗಿ ಎಂದರು.
ಬೆಳಗ್ಗೆ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಸತ್ಯನಾರಾಯಣಸ್ವಾಮಿ ಪೂಜಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇಪ್ಪತ್ತಮೂರು ಮಂದಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಪದವಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಜನಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ.ಎನ್.ಶ್ರೀನಿವಾಸಮೂರ್ತಿ, ಡಾ.ಡಿ.ಟಿ.ಸತ್ಯನಾರಾಯಣರಾವ್, ಬಿ.ಎನ್.ಸುಧಾಕರ್, ಪಿ.ಶ್ರೀಪತಿ ಮತ್ತು ಬಿ.ಕೆ.ರಮೇಶ್ ಅವರನ್ನು ಸನ್ಮಾನಿಸಲಾಯಿತು.
ವಿಧಾನಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಡಾ.ಡಿ.ಟಿ.ಸತ್ಯನಾರಾಯಣರಾವ್, ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎಸ್.ಅಟ್ಟೂರು ವೆಂಕಟೇಶ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್, ಎಂ.ವಾಸುದೇವರಾವ್, ಎ.ಎಸ್.ರವಿ, ವಿ.ಕೃಷ್ಣ, ಎನ್.ಶ್ರೀಕಾಂತ್, ಎಸ್.ಸತೀಶ್, ಎಚ್.ವಿ.ನಾಗೇಂದ್ರ, ಪಿ.ಶ್ರೀಕಾಂತ್, ಎಸ್.ಆರ್.ಸಕಲೇಶಕುಮಾರ್, ನಗರಸಭಾ ಸದಸ್ಯೆ ಚಿತ್ರಾ ಮನೋಹರ್, ಲಕ್ಷ್ಮೀನಾರಾಯಣ್ ಹಾಜರಿದ್ದರು.
ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ
ತಾಲ್ಲೂಕಿನ ಜೆ.ವೆಂಕಟಾಪುರ ಗ್ರಾಮದ ಸರ್ಕಾರಿ ಶಾಲಾ ಆವರಣದ ವಿಶ್ವೇಶ್ವರಯ್ಯ ರಂಗಮಂದಿರದಲ್ಲಿ “ಜೈಹಿಂದ್ ಯೋಧ ನಮನ ಬಳಗ” ಆಯೋಜಿಸಿದ್ದ 20ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಗಿಲ್ ಯೋಧ ಬಂಗಾರಪೇಟೆಯ ಶ್ರೀನಿವಾಸ್ ಮಾತನಾಡಿದರು.
ಯೋಧರ ಕುಟುಂಬದವರಿಗೆ ನನ್ನ ದೊಡ್ಡ ಸೆಲ್ಯೂಟ್. ತಮ್ಮ ಮಕ್ಕಳನ್ನು ದೇಶರಕ್ಷಣೆಗಾಗಿ ಕಳುಹಿಸಿರುವ ತಾಯಂದಿರು ಹಾಗೂ ಕುಟುಂಬದ ತ್ಯಾಗವನ್ನೂ ಮರೆಯಬಾರದು ಎಂದು ಅವರು ತಿಳಿಸಿದರು.
20 ವರ್ಷಗಳ ಹಿಂದೆ ಕಾರ್ಗಿಲ್ನಲ್ಲಿ ಶತ್ರು ಪಾಳಯವನ್ನು ಸದೆಬಡಿದಿದ್ದೆವು. ಈ ಯುದ್ಧದಲ್ಲಿ ಅನೇಕ ಸೈನಿಕರು ಪ್ರಾಣತ್ಯಾಗ ಮಾಡಿದ್ದರು. ಅವರ ಬಲಿದಾನವನ್ನು ಸ್ಮರಿಸಿಕೊಳ್ಳುವ ಸಲುವಾಗಿ ಈ ದಿನದಂದು ಪ್ರತಿವರ್ಷ ಕಾರ್ಗಿಲ್ ವಿಜಯೋತ್ಸವ ದಿವಸ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ದೇಶಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರ ಕುಟುಂಬಕ್ಕೂ ನಾವು ಗೌರವವನ್ನು ಸಲ್ಲಿಸಬೇಕು ಎಂದರು.
ಕಾರ್ಗಿಲ್ ಯೋಧ ಕೋಲಾರದ ಸೋಮಣ್ಣ ಮಾತನಾಡಿ, ಜೆ.ವೆಂಕಟಾಪುರ ಗ್ರಾಮದ “ಜೈಹಿಂದ್ ಯೋಧ ನಮನ ಬಳಗ”ದ ಸದಸ್ಯರಿಗೆ ಯೋಧರೆಂದರೆ ಆತ್ಮೀಯತೆ, ಪ್ರೀತಿ, ಗೌರವ ಮತ್ತು ಆದರ. ವಿಮಾನ ನಿಲ್ದಾಣ ಅಥವಾ ರೈಲಿನಲ್ಲಿ ಬಂದಿಳಿಯುವ ಸೈನಿಕರನ್ನು ಆತ್ಮೀಯವಾಗಿ ಬರಮಾಡಿಕೊಂಡು ಪ್ರೀತಿಯ ಮಳೆ ಸುರಿಸುತ್ತಾರೆ. ಯೋಧರಿಗೆ ಇವರ ಪ್ರೀತ್ಯಾದರದಿಂದ ತಮ್ಮ ನೋವು, ಕಷ್ಟ, ದುಗುಡ, ಆತಂಕ ಮಾಯವಾಗುತ್ತದೆ. ಇನ್ನಷ್ಟು ದೇಶಸೇವೆ ಮಾಡಲು ಹುಮ್ಮಸ್ಸು ಬರುತ್ತದೆ. ಈ ದಿನ ಹದಿನೇಳು ಮಂದಿ ಯೋಧರನ್ನು ಕರೆಸಿ ಆತ್ಮೀಯವಾಗಿ ಗೌರವಿಸಿದ್ದಾರೆ ಎಂದರು.
ಭಾರತೀಯ ಸೈನ್ಯದ ಶೌರ್ಯ, ಸೈನಿಕರ ಸಾಹಸವನ್ನು ಜಗತ್ತಿಗೆ ಪರಿಚಯಿಸಿದ್ದು ಕಾರ್ಗಿಲ್ ಯುದ್ಧ. ಚಿಕ್ಕವಯಸ್ಸಿನಿಂದಲೇ ಮಕ್ಕಳಲ್ಲಿ ದೇಶಾಭಿಮಾನ ಮೂಡಿಸಬೇಕು. ದೇಶಕ್ಕೆ ಎರಡು ರೀತಿಯ ಶತೃಗಳಿರುತ್ತಾರೆ. ಗಡಿಯಲ್ಲಿ ತೊಂದರೆ ಕೊಡುವವರು ಹಾಗೂ ದೇಶದೊಳಗೆ ಭಯೋತ್ಪಾದನೆ ಹುಟ್ಟುಹಾಕುವವರು. ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರನ್ನು ಸ್ಥಳೀಯರೇ ಗುರುತಿಸಿ ಕಾನೂನಿನ ವಶಕ್ಕೆ ಒಪ್ಪಿಸಬೇಕು. ಪ್ರತಿಯೊಬ್ಬರೂ ದೇಶರಕ್ಷಣೆಗೆ ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡಬೇಕು. ಸೇನೆಯಲ್ಲಿ ಶಿಸ್ತು ನಮ್ಮ ಜೀವಾಳ. ಅದನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಿ ಎಂದು ಹೇಳಿದರು.
ಯೋಧರಾದ ಬಾದಮಿ ಶಿವಣ್ಣ, ಬಂಗಾರಪೇಟೆ ಶ್ರೀನಿವಾಸ್, ಜಂಗಮಕೋಟೆ ಅರುಣ್, ಶ್ರೀನಿವಾಸಪುರ ಸುರೇಶ್, ಕುರುಬರಹಳ್ಳಿ ರವಿಭೀಮಣ್ಣ, ಬೆಂಗಳೂರು ನಿತೇಶ್, ರವಿನಾಯಕ್, ಶ್ರೀನಿವಾಸಪುರ ಸುರೇಶ್, ಬೂದಿಗೆರೆ ಮುರಳಿ, ಮಂಜುನಾಥ್, ಕೊಡಗಿನ ಕುಶಾಲಪ್ಪ, ಜಾತವಾರ ಚಂದ್ರಶೇಖರ್, ಭಾಷಾ, ರವಿ, ಸೋಮಣ್ಣ, ವಿಶ್ವನಾಥ್ ಅವರನ್ನು ಕಾರ್ಯಕ್ರಮಕ್ಕೆ ಜೆ.ವೆಂಕಟಾಪುರ ಗ್ರಾಮದಲ್ಲಿ ಮೆರವಣಿಗೆಯ ಮೂಲಕ ಕರೆತರಲಾಯಿತು. ಮೆರವಣಿಗೆಯುದ್ದಕ್ಕೂ ಹೂವನ್ನು ಚೆಲ್ಲಿ ಯೋಧರನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು. ವಿಜಯಪುರದ ಸೇವಾಭಾರತಿ ಸದಸ್ಯರು ನೀರಿನ ವ್ಯವಸ್ಥೆ ಮಾಡಿದ್ದರೆ, ಸಯ್ಯದ್ ಜಾವೀದ್ ಶಾಮಿಯಾನಾ ಮತ್ತಿತರ ವ್ಯವಸ್ಥೆ ಮಾಡಿದ್ದರು.
ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಘುನಾಥ್, ಸದಸ್ಯರಾದ ಮಿತ್ತನಹಳ್ಳಿ ಹರೀಶ್, ಎನ್..ನಾಗೇಶ್, ವಿಜಯಕುಮಾರ್, ಮುಕುಂದರಾಧಾ ರಮೇಶ್, ಸುರೇಶ್, ಮುನೇಗೌಡ, ಪುನೀತ್ ಕುಮಾರ್, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಲಕ್ಷ್ಮೀನಾರಾಯಣ, ಪ್ರಶಾಂತ್ ರಾಮಸ್ವಾಮಿ, ಮುಖ್ಯ ಶಿಕ್ಷಕಿ ಗೀತಾ, ಪಶುವೈದ್ಯಾಧಿಕಾರಿ ಅರುಣ್, ಜೈಹಿಂದ್ ಯೋಧ ನಮನ ಬಳಗದ ಸದಸ್ಯರು, ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು.
"ಕಾರ್ಗಿಲ್ ವಿಜಯ್’ ದಿವಸದ ಅಂಗವಾಗಿ ಚಿತ್ರಕಲಾ ಹಾಗೂ ಚರ್ಚಾ ಸ್ಪರ್ಧೆ
ತಾಲ್ಲೂಕಿನ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್‌ನ ಸುಂಡ್ರಳ್ಳಿ ಕ್ಯಾಂಪ್ ಬಳಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ “ಕಾರ್ಗಿಲ್ ವಿಜಯ್” ದಿವಸದ ಅಂಗವಾಗಿ ಮಕ್ಕಳಿಗಾಗಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆ ಹಾಗೂ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ರಿಜನಲ್ ಮ್ಯಾನೇಜರ್ ಕಿಶೋರ್ ಕುಮಾರ್ ಮಾತನಾಡಿದರು.
ಗ್ರಾಮೀಣ ಪ್ರದೇಶದಿಂದ ಬಂದವರೂ ಸಹ ಉತ್ತಮ ಗುರಿಯೊಂದಿದ್ದರೆ, ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂಬುದಕ್ಕೆ ದೇಶದಲ್ಲಿ ಸಾವಿರಾರು ಉದಾಹರಣೆಗಳು ಕಂಡು ಬರುತ್ತಿದೆ. ಗ್ರಾಮೀಣ ಹಾಗೂ ಪಟ್ಟಣವೆಂಬ ಭೇದ ಭಾವ ಸಾಧಕರಿಗೆ ಅನ್ವಯಿಸುವುದಿಲ್ಲವೆಂದು ಅವರು ತಿಳಿಸಿದರು.
ಐ.ಟಿ.ಪಿ.ಬಿ ಕಮ್ಯಾಂಡೆಂಟ್ ಸೆಂದಿಲ್ ಕುಮಾರ್ ಮಾತನಾಡಿ, ನಮ್ಮ ದೇಶಕ್ಕಾಗಿ ಪ್ರಾಣ ತೆತ್ತ ಸೈನಿಕರನ್ನು ಜನತೆ ಸದಾ ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ. ಪಾಕಿಸ್ತಾನದ ವಿರುದ್ದ ಕಾರ್ಗಿಲ್ ಯುದ್ದದಲ್ಲಿ ಭಾರತ ವಿಜಯ ಸಾಧಿಸುವುದರ ಹಿಂದೆ ನೂರಾರು ಜನ ಸೈನಿಕರ ಬಲಿದಾನವಾಗಿರುವುದನ್ನೂ ಸಹ ಮರೆಯಬಾರದೆಂದು. ಸೇನೆಯಲ್ಲಿ ಸೇರಿ ದೇಶಕ್ಕಾಗಿ ಸೇವೆ ಸಲ್ಲಿಸುವುದು ಹೆತ್ತ ತಾಯಿಗೆ ಸೇವೆ ಸಲ್ಲಿಸಿದಷ್ಟೇ ಸಮಾನವಾದದ್ದು. ಆದ್ದರಿಂದ ಮಕ್ಕಳು ದೇಶ ಸೇವೆಗಾಗಿ ಸೈನ್ಯ ಸೇರುವ ಮೂಲಕ ದೇಶ ಸೇವೆ ಸಲ್ಲಿಸಲು ಒಂದು ದಾರಿಯಾಗುತ್ತದೆ ಎಂದು ಹೇಳಿದರು.
ವಿಜಯಪುರ ಟೌನ್ ಎಸ್.ಬಿ.ಐ ಬ್ಯಾಂಕ್‌ನ ವ್ಯವಸ್ಥಾಪಕಿ ಅನಿ ಪ್ರಮೋದ್, ಐ.ಟಿ.ಪಿ.ಬಿ ಯ ಚೀಫ್ ಮೆಡಿಕಲ್ ಆಫೀಸರ್ ಡಾ.ಸಿ.ರಾಜ್‌ಕುಮಾರ್, ಅಸಿಸ್ಟೆಂಟ್ ಕಮ್ಯಾಂಡೆಂಟ್‌ಗಳಾದ ರಮೇಶ್ ಚಂದ್ರ ಶರ್ಮ, ಶ್ರೀಧರ್ ಬಾಬು, ಕಮಲೇಶ್ ಕುಮಾರ್ ಸಿಂಗ್, ಪ್ರದೀಪ್ ಚೌರಾಸಿಯ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರಾದ ಮೂರ್ತಪ್ಪ ಹಾಗೂ ಶಿಕ್ಷಕರು ಹಾಜರಿದ್ದರು.
ಶಿಡ್ಲಘಟ್ಟದಲ್ಲಿ ಜಾತ್ರಾ ಮಹೋತ್ಸವ
ನಗರದ ಉಲ್ಲೂರುಪೇಟೆಯ ಮಾರಮ್ಮ ದೇವಿ, ಕಾಮಾಟಿಗರ ಪೇಟೆಯಲ್ಲಿರುವ ಗ್ರಾಮದೇವತೆ ಗಂಗಮ್ಮದೇವಿ ಹಾಗೂ ಕರಗದಮ್ಮ ದೇವಿಯ ಜಾತ್ರಾ ಮಹೋತ್ಸವ ಮಂಗಳವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಜಾತ್ರೆಯ ಅಂಗವಾಗಿ ಉಲ್ಲೂರುಪೇಟೆಯ ಮಾರಮ್ಮ ದೇವಿ, ಗ್ರಾಮದೇವತೆ ಶ್ರೀಗಂಗಮ್ಮ ದೇವಿ ಹಾಗೂ ಕರಗದಮ್ಮ ದೇವಿಯ ದೇವಾಲಯಗಳನ್ನು ಬಣ್ಣದಿಂದ ಹಾಗೂ ನಾನಾ ವಿಧದ ಹೂಗಳಿಂದ ಸಿಂಗಾರಗೊಳಿಸಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಮಾವು ಬೇವು ಬಾಳೆ ದಿಂಡಿನ ತಳಿರು ತೋರಣಗಳಿಂದ ದೇವಾಲಯಗಳು ಕಂಗೊಳಿಸುತ್ತಿತ್ತು.
ಸೋಮವಾರ ಗಂಡು ದೇವರುಗಳಾದ ಶ್ರೀರಾಮ, ಬಸವಣ್ಣ ದೇವರುಗಳಿಗೆ ದೀಪೋತ್ಸವವನ್ನು ನೆರವೇರಿಸಿದ ಮಹಿಳೆಯರು, ದೇವಾಲಯಗಳಲ್ಲಿ ಗಂಗಾ ಪೂಜೆಯೊಂದಿಗೆ ಜಾತ್ರಾ ಮಹೋತ್ಸವದ ಪೂಜೆಯನ್ನು ಆರಂಭಿಸಿದ್ದರು. ನಾನಾ ಹೋಮ ಹವನ ಹಾಗೂ ವಿದವಿಧದ ಪೂಜೆಗಳನ್ನು ನೆರವೇರಿದ್ದು ಮಂಗಳವಾರ ದೀಪೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ನಗರದಲ್ಲಿ ಹೆಣ್ಣುಮಕ್ಕಳು, ಮುತ್ತೈದೆಯರು ಅಲಂಕೃತರಾಗಿ ಅಂದ ಚೆಂದದ ಹೂವುಗಳಿಂದ ಅಲಂಕರಿಸಿದ ತಂಬಿಟ್ಟಿನ ದೀಪಗಳನ್ನು ತಲೆ ಮೇಲೆ ಹೊತ್ತು ಮೆರವಣಿಗೆಯಲ್ಲಿ ಆಗಮಿಸಿ ಮೂರು ದೇವತೆಯರಿಗೂ ಆರತಿ ಬೆಳಗಿದರು.
ತಮ್ಮ ಇಷ್ಟಾರ್ಥಗಳು ಈಡೇರಲಿ, ಕಾಲ ಕಾಲಕ್ಕೆ ಮಳೆಯಾಗಿ ಮಳೆಯಿಂದ ಬೆಳೆಯಾಗಿ ಎಲ್ಲರ ಮನೆ ಮನೆಗಳಲ್ಲೂ ದವಸ ದಾನ್ಯ ತುಂಬಲಿ. ಸುಖ ಶಾಂತಿ ನೆಮ್ಮದಿ ನೆಲಸಲಿ ಎಂದು ಭಗವಂತನಲ್ಲಿ ಕೈ ಮುಗಿದು ಪ್ರಾರ್ಥಿಸಿದರು. ಮೂರು ದೇವಿಯರಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಮಾಡಿ ನೈವೇದ್ಯ ಅರ್ಪಿಸಿ ಎಲ್ಲ ಭಕ್ತರಿಗೂ ತೀರ್ಥ ಪ್ರಸಾದವನ್ನು ವಿತರಿಸಲಾಯಿತು.
“ಮಾರಮ್ಮ, ಗಂಗಮ್ಮ ಹಾಗೂ ಕರಗದಮ್ಮ ದೇವಿಯ ದೀಪೋತ್ಸವಗಳನ್ನು ಮಾಡುವುದರಿಂದ ತಾಲ್ಲೂಕಿನಲ್ಲಿ ಉತ್ತಮವಾದ ಮಳೆಯಾಗುವುದರ ನಗರಕ್ಕೆ ಹೊಂದಿಕೊಂಡ ಕೆರೆಗಳು ಸಂಪೂರ್ಣವಾಗಿ ತುಂಬಿ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಯಾಗಲಿ. ನಾಡು ಸುಭಿಕ್ಷವಾಗಲಿ ಎಂಬ ಸದಾಶಯದಿಂದ ಎಲ್ಲರೂ ಒಗ್ಗೂಡಿ ಈ ಆಚರಣೆಯನ್ನು ನಡೆಸಿದ್ದೇವೆ” ಎಂದು ಉಲ್ಲೂರುಪೇಟೆಯ ಪುರುಷೋತ್ತಮ್ ತಿಳಿಸಿದರು.
ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ರಂಗಭೂಮಿ ಕಲಾವಿದೆ ದೇವರಮಳ್ಳೂರು ಯಶೋದಮ್ಮ ಆಯ್ಕೆ
ತಾಲ್ಲೂಕಿನಲ್ಲಿ ಜುಲೈ ೩೦ ರಂದು ನಡೆಯಲಿರುವ ಎಂಟನೇ ಸಾಹಿತ್ಯ ಸಮ್ಮೇಳನವನ್ನು ಮಹಿಳೆಯರು ಮತ್ತು ರಂಗಭೂಮಿಗೆ ಸಮರ್ಪಿಸಲು ಕಸಾಪ ತಾಲ್ಲೂಕು ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ಹಿರಿಯ ರಂಗಭೂಮಿ ಕಲಾವಿದೆ ದೇವರಮಳ್ಳೂರು ಯಶೋದಮ್ಮ ಅವರನ್ನು ಕಸಾಪ ತಾಲ್ಲೂಕು ಕಾರ್ಯಕಾರಿ ಸಮಿತಿ ಸದಸ್ಯರು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ತಾಲ್ಲೂಕು ಕಸಾಪ ಕಾರ್ಯಕಾರಿ ಸಮಿತಿಯ ಸಭೆಯ ನಂತರ ಅವರು ಮಾತನಾಡಿದರು.
ಇದುವರೆಗೂ ಏಳು ಸಾಹಿತ್ಯ ಸಮ್ಮೇಳನಗಳು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ನಡೆದಿವೆ. ಇದೇ ಪ್ರಥಮ ಬಾರಿಗೆ ಮಹಿಳೆಯೊಬ್ಬರನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೇವೆ. ಗ್ರಾಮೀಣ ಭಾಗಕ್ಕೆ, ಮಹಿಳೆಯರಿಗೆ ಮತ್ತು ರಂಗಭೂಮಿಗೆ ಈ ಮೂಲಕ ಕಸಾಪ ಆದ್ಯತೆಯನ್ನು ನೀಡಿದೆ.
ಜಿಲ್ಲೆಯ ಏಕೈಕ ರಂಗಭೂಮಿ ಕಲಾವಿದೆಯಾದ ದೇವರಮಳ್ಳೂರು ಯಶೋದಮ್ಮ, ೪೫ ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದಾರೆ. ಕಿರುತೆರೆ ಮತ್ತು ಚಲನಚಿತ್ರದಲ್ಲೂ ಇವರು ನಟಿಸಿದ್ದು, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ ಎಂದು ತಿಳಿಸಿದರು.
ಗುರುವಾರ ಸಂಜೆ ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಸಮ್ಮೇಳನಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ನಡೆದ ಪೂರ್ವಭಾವಿ ಸಭೆಯಲ್ಲಿ ತಾಲ್ಲೂಕಿನ ಹಲವಾರು ಮಂದಿ ಸಾಧಕರ ಹೆಸರನ್ನು ಸಾಹಿತ್ಯಾಭಿಮಾನಿಗಳು ಸೂಚಿಸಿದ್ದರು. ಅವರಲ್ಲಿ ಬಹುತೇಕರು ಈ ಬಾರಿ ಮಹಿಳೆಯರಿಗೆ ಆದ್ಯತೆ ನೀಡಿ ಎಂದು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಕಾರಿ ಸಮಿತಿ ಆಯ್ಕೆ ಮಾಡಿದೆ ಎಂದರು.
ಕಸಾಪ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಕಾರ್ಯದರ್ಶಿಗಳಾದ ಚಾಂದ್ ಪಾಷ, ಸತೀಶ್, ಸಂಘ ಸಂಸ್ಥೆಗಳ ಪ್ರತಿನಿಧಿ ಶಂಕರ್, ಮುನಿಯಪ್ಪ, ದಾಕ್ಷಾಯಿಣಿ, ಸುಧೀರ್, ಮಂಜುನಾಥ್ ಹಾಜರಿದ್ದರು.
ತಹಶೀಲ್ದಾರ್ ಅವರಿಂದ ಫೋನ್ ಇನ್ ಕಾರ್ಯಕ್ರಮ
ನಗರದ ತಾಲ್ಲೂಕು ಕಚೇರಿಯಲ್ಲಿ ಶನಿವಾರ ನಡೆದ ತಹಶೀಲ್ದಾರ್ ಎಂ.ದಯಾನಂದ್ ಅವರೊಂದಿಗಿನ ಫೋನ್ ಇನ್ ಕಾರ್ಯಕ್ರಮ ಕಂದಾಯ ಇಲಾಖೆ ಹಾಗೂ ನಗರಸಭೆಗೆ ಸಂಬಂದಿಸಿದಂತೆ ನಾಗರಿಕರು ನೇರ ಅಹವಾಲು ಸಲ್ಲಿಸಲು ವೇದಿಕೆಯಾಗಿತ್ತು.
ಇದೇ ಮೊಟ್ಟ ಮೊದಲ ಭಾರಿಗೆ ಶನಿವಾರ ಬೆಳಗ್ಗೆ ೧೦ ರಿಂದ ೧೧ ರವರೆಗಿನ ಒಂದು ಗಂಟೆಯ ಸಮಯದಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸುಮಾರು ೧೬ ಕರೆಗಳನ್ನು ಸ್ವೀಕರಿಸಿದ ತಹಶೀಲ್ದಾರ್ ಸಮಾಧಾನದಿಂದ ಸಾರ್ವಜನಿಕರ ಸಮಸ್ಯೆ ಆಲಿಸಿ, ಇತ್ಯರ್ಥಕ್ಕೆ ಸೂಕ್ತ ಪರಿಹಾರ ಸಲಹೆಗಳನ್ನು ನೀಡಿದರು.
ಸಕಾಲ ಶಾಖೆಯಲ್ಲಿ ಅರ್ಜಿ ಸಲ್ಲಿಸಲು ಪ್ರತ್ಯೇಕ ಕೌಂಟರ್ ಮಾಡುವುದು, ವಿಕಲಚೇತನರಿಗೆ ಪಿಂಚಣಿ ವಿತರಿಸುವಲ್ಲಿ ವಿಳಂಬವಾಗುತ್ತಿರುವುದು, ಪಿಂಚಣಿ ವಿತರಣೆಯಲ್ಲಿ ಪೋಸ್ಟ್ ಮ್ಯಾನ್‌ಗಳು ಲಂಚ ಪಡೆಯುವದು, ವಿಕಲಚೇತನರು ಪಿಂಚಣಿಗಾಗಿ ಅರ್ಜಿ ಸಲ್ಲಿಸಲು ಪ್ರತ್ಯೇಕ ಕೌಂಟರ್ ಸ್ಥಾಪಿಸಬೇಕು. ಕ್ರಯಪತ್ರದಂತೆ ಖಾತೆ ಮಾಡುವುದು, ಇನಾಂತಿ ಜಮೀನಿನ ಖಾತೆ ಮಾಡುವುದು, ಅಬ್ಲೂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂದಾಯ ಅದಾಲತ್ ಹಮ್ಮಿಕೊಳ್ಳುವುದು ಹಾಗೂ ನಗರಸಭೆಗೆ ಸಂಬಂದಿಸಿದಂತೆ ನಗರಸಭೆ ಪೌರಾಯುಕ್ತರ ಕಾರ್ಯವೈಖರಿ ಹಾಗೂ ನಗರದಲ್ಲಿರುವ ಕುಡಿಯುವ ನೀರಿನ ಸಮಸ್ಯೆಗಳು ತಹಶೀಲ್ದಾರ್‌ರ ಮುಂದೆ ದೂರವಾಣಿ ಮೂಲಕ ಅನಾವರಣಗೊಂಡವು.
ಕಚೇರಿಯ ಸಕಾಲ ಶಾಖೆಯಲ್ಲಿ ವಿಕಲಚೇತನರು ಅರ್ಜಿ ಸಲ್ಲಿಸಲು ಪರದಾಡುವ ಸ್ಥಿತಿಯಿದೆ ಎಂಬ ದೂರೊಂದನ್ನು ದೂರವಾಣಿ ಮೂಲಕ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್‌ರು ಕಚೇರಿಗೆ ವಿವಿಧ ಕೆಲಸಗಳ ನಿಮಿತ್ತ ಬರುವ ವೃದ್ದರೂ ಹಾಗೂ ವಿಕಲಚೇತನರಿಗೆ ಪ್ರಥಮ ಪ್ರಾಶಸ್ತ್ಯ ನೀಡುವಂತೆ ಸ್ಥಳದಲ್ಲಿದ್ದ ಸಿಬ್ಬಂದಿಗೆ ಸೂಚಿಸಿದರು.
ಈ ಬಗ್ಗೆ ತಹಶೀಲ್ದಾರ್ ಎಂ.ದಯಾನಂದ್ ಮಾತನಾಡಿ, ಜನಸ್ನೇಹಿ ಆಡಳಿತ ನೀಡಬೇಕು ಎಂಬ ಉದ್ದೇಶದಿಂದ ಇದೇ ಮೊದಲ ಬಾರಿಗೆ ತಾಲೂಕು ಕಚೇರಿಯಲ್ಲಿ ಆಯೋಜಿಸಲಾದ ಫೋನ್ ಇನ್ ಕಾರ್ಯಕ್ರಮಕ್ಕೆ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಜನರನ್ನು ತಲುಪುವ ಉದ್ದೇಶದಿಂದ ಪ್ರತಿ ತಿಂಗಳ ಮೂರನೇ ಶನಿವಾರ ಕಚೇರಿಯಲ್ಲಿ ಫೋನ್ ಇನ್ ಕಾರ್ಯಕ್ರಮ ಮಾಡುವುದು ಸೇರಿದಂತೆ ತಂತ್ರಜ್ಞಾನ ಬಳಸಿಕೊಂಡು ವಿನೂತನ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ನಾಗರಿಕರ ಸೇವೆ ಮಾಡಲು ಉತ್ಸುಕನಾಗಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಗ್ರೇಡ್ ೨ ತಹಶೀಲ್ದಾರ್ ವೈ.ಎಲ್.ಹನುಮಂತರಾವ್, ಶಿರಸ್ತೇದಾರ್ ಕೆ.ಎನ್.ಮಂಜುನಾಥ್, ಕಸಬಾ ರಾಜಸ್ವ ನಿರೀಕ್ಷಕ ವಿಶ್ವನಾಥ್, ಜಂಗಮಕೋಟೆ ರಾಜಸ್ವ ನಿರೀಕ್ಷಕ ಸುಪ್ರೀತ್, ಬಶೆಟ್ಟಹಳ್ಳಿ ರಾಜಸ್ವ ನಿರೀಕ್ಷಕ ನರಸಿಂಹಯ್ಯ, ಗ್ರಾಮಲೆಕ್ಕಿಗ ಪ್ರೀತಂ ಹಾಜರಿದ್ದರು.
ನಾಗಮಂಗಲದ ಶ್ರೀನಿವಾಸ ಅವರಿಗೆ ಪಿ.ಎಚ್.ಡಿ
ತಾಲ್ಲೂಕಿನ ನಾಗಮಂಗಲ ಗ್ರಾಮದ ವೆಂಕಟರಮಣಪ್ಪ ಮತ್ತು ನಾರಾಯಣಮ್ಮ ದಂಪತಿಯ ಮಗ ಶ್ರೀನಿವಾಸ ಅವರಿಗೆ ತಮಿಳುನಾಡಿನ ತಿರುಚನಾಪಳ್ಳಿಯ ಭಾರತೀದಾಸನ್ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.
ತಿರುಚನಾಪಳ್ಳಿಯ ಸೆಂಟ್ ಜೋಸೆಫ್ ಕಾಲೇಜಿನ ಗ್ರಂಥಪಾಲಕ ಡಾ.ಎಂ.ದೊರೈರಾಜನ್ ಅವರ ಮಾರ್ಗದರ್ಶನದಲ್ಲಿ, “ಮ್ಯಾಪಿಂಗ್ ಆಫ್ ರಿಸರ್ಚ್ ಪ್ರೊಡಕ್ಟಿವಿಟಿ ಇನ್ ಗ್ರೀನ್ ಎಕನಾಮಿಕ್ಸ್ : ಎ ಬಿಬ್ಲಿಯೋಮೆಟ್ರಿಕ್ ಸ್ಟಡಿ” ಎಂಬ ಪ್ರಬಂಧವನ್ನು ಅವರು ಪಿ.ಎಚ್.ಡಿ ಗಾಗಿ ಮಂಡಿಸಿದ್ದಾರೆ. ಶ್ರೀನಿವಾಸ ಅವರು ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಸಿದ್ದಹಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮಕ್ಕಳಿಂದ ಪುಸ್ತಕ ಅವಲೋಕನ ಕಾರ್ಯಕ್ರಮ
ತಾಲ್ಲೂಕಿನ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪುಸ್ತಕ ಅವಲೋಕನ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿ ವೀಣಾ ಮಾತನಾಡಿದರು.
ಮಕ್ಕಳಲ್ಲಿ ಓದುವ ಹವ್ಯಾಸವನ್ನು ಪ್ರೋತ್ಸಾಹಿಸಬೇಕು. ಅಂಕಗಳಿಗೆ ಮಾತ್ರ ಓದನ್ನು ಸಿಮೀತಗೊಳಿಸದೆ ಜ್ಞಾನಕ್ಕಾಗಿ ಓದಬೇಕು ಎಂದು ಅವರು ತಿಳಿಸಿದರು.
ಒಳ್ಳೆಯ ಪುಸ್ತಕ ಓದು ಮನುಷ್ಯನಿಗೆ ಸಂದಿಗ್ಧ ಪರಿಸ್ಥಿತಿಯಲ್ಲಿ ಧೈರ್ಯವನ್ನು, ಅಯೋಮಯ ಸ್ಥಿತಿಯಲ್ಲಿ ಮಾರ್ಗದರ್ಶನವನ್ನೂ ಮಾಡುತ್ತದೆ. ಪುಸ್ತಕಗಳನ್ನು ಓದುವುದರಿಂದ ಮಕ್ಕಳಲ್ಲಿ ಜ್ಞಾನ, ಏಕಾಗ್ರತೆ ಹಾಗೂ ಅಭಿವ್ಯಕ್ತಿ ಕೌಶಲ್ಯಗಳು ಬೆಳೆಯುತ್ತವೆ. ಮುಂದೆ ಮಕ್ಕಳಲ್ಲೂ ಸಾಹಿತ್ಯ ಅಭಿರುಚಿ ಬೆಳೆದು ಒಳ್ಳೆಯ ಪ್ರಜೆಗಳಾಗುತ್ತಾರೆ ಎಂದು ಹೇಳಿದರು.
ತೆಲುಗಿನ ಸಲೀಂ ಅವರು ಬರೆದಿರುವ ಮಕ್ಕಳ ಕಾದಂಬರಿಗಳ ಕನ್ನಡ ಅನುವಾದಗಳಾದ “ಮೇಧ 017” ಹಾಗೂ “ಅಪರಾಜಿತ” ಪುಸ್ತಕಗಳ ಬಗ್ಗೆ ಶಾಲೆಯ 8 ವಿದ್ಯಾರ್ಥಿಗಳಾದ ಐಶ್ವರ್ಯ, ಚೇತನ್, ಚೇತನ್ ಕುಮಾರ್, ಮೌನಿಕ, ಜೀವನ್ ಕುಮಾರ್, ಜಯಸಿಂಹ, ನರಸಿಂಹಮೂರ್ತಿ ಹಾಗೂ ಅರುಣ್ ತಮ್ಮ ಅನಿಸಿಕೆಗಳನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರ್ಥಿನಿ ಮಾನಸ ವಹಿಸಿಕೊಂಡಿದ್ದರು. ಮಕ್ಕಳ ಕಾದಂಬರಿಗಳನ್ನು ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಿರುವ ಲೇಖಕ ಧನಪಾಲ ನಾಗರಾಜಪ್ಪ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಿರುವ ಲೇಖಕ ಧನಪಾಲ ನಾಗರಾಜಪ್ಪ, ಮುಖ್ಯ ಶಿಕ್ಷಕ ಕೆ.ವಿ.ಚೌಡರೆಡ್ಡಿ, ಶಿಕ್ಷಕರಾದ ಜೆ. ಶ್ರೀನಿವಾಸ, ಕೆ.ಶಿವಶಂಕರ, ಡಿ.ಜೆ.ಸುನೀತ, ಎಂ.ಪದ್ಮಾವತಿ ಹಾಗೂ ಎಸ್.ಕಲಾಧರ ಹಾಜರಿದ್ದರು. ವಿದ್ಯಾರ್ಥಿನಿ ಮಾನಸ ಅಧ್ಯಕ್ಷತೆ ವಹಿಸಿದ್ದರು.
ಭಟ್ರೇನಹಳ್ಳಿಯ ಸಾಯಿನಾಥ ಜ್ಞಾನಮಂದಿರದಲ್ಲಿ ಶ್ರೀರಾಮನಾಮ ಅಖಂಡ ಭಜನೆ
ಶ್ರೀರಾಮ ಜಯರಾಮ ಜಯ ಜಯ ರಾಮ ಎಂಬುದು ತಾರಕ ಮಂತ್ರ. ಇದನ್ನು ಜಪಿಸುವುದರಿಂದ ಜನ್ಮಾಂತರದ ಪಾಪಗಳು ಕರಗಿ ಹೋಗುತ್ತವೆ. ನಮ್ಮಲ್ಲಿ ರಾಮ ನಾಮ ಭಜನೆಯಿಂದ ಏಕಾಗ್ರತೆ, ಸಹನೆ, ತಾಳ್ಮೆಯ ಗುಣ ಹೆಚ್ಚುತ್ತದೆ. ಮನಸ್ಸಿಗೆ ಪ್ರಶಾಂತತೆ ಸಿಗುತ್ತದೆ. ನಮ್ಮ ದೇಹದಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಿ ಅಂದುಕೊಂಡ ಕೆಲಸದಲ್ಲಿ ಸಫಲತೆ ಕಾಣುತ್ತೇವೆ ಎಂದು ಶ್ರೀ ಸಾಯಿನಾಥ ಜ್ಞಾನಮಂದಿರದ ಮುಖ್ಯಸ್ಥ ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಸಮೀಪದ ಭಟ್ರೇನಹಳ್ಳಿಯ ಸಾಯಿನಾಥ ಜ್ಞಾನಮಂದಿರದಲ್ಲಿ ಭಾನುವಾರ ಮುಂಜಾನೆ ಪ್ರಾರಂಭವಾದ ಶ್ರೀರಾಮನಾಮದ ಅಖಂಡ ಭಜನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಂಗಳವಾರ ಮಧ್ಯಾಹ್ನದವರೆಗೂ ಶ್ರೀರಾಮನಾಮದ ಅಖಂಡ ಭಜನೆ ಕಾರ್ಯಕ್ರಮ ನಡೆಯಲಿದೆ. ಪ್ರತಿ ಲಕ್ಷ ರಾಮನಾಮ ಜಪದ ನಂತರವೂ ಪ್ರತ್ಯೇಕ ಪೂಜೆ, ನೈವೇದ್ಯ ಸಮರ್ಪಣೆ ಮಾಡಲಾಗುವುದು. ರಾಮ ನಾಮ ಜಪಿಸುವುದು ಗಾಂಧೀಜಿಯವರಿಗೂ ಪ್ರಿಯವಾಗಿತ್ತು. ಯಾವ ಭೇದಭಾವವಿಲ್ಲದೆ ಎಲ್ಲರೂ ಸುಲಭವಾಗಿ ಜಪಿಸುವ ರಾಮ ಮಂತ್ರ ಜಪಿಸುವುದರಿಮ್ದ ರಾಮನ ಆದರ್ಶಗಳು ನಮ್ಮಲ್ಲಿ ಹುಟ್ಟುತ್ತವೆ ಎಂದು ಹೇಳಿದರು.
ರಾಮ ಕೋಟಿಯ ಭಜನಾ ತಂಡದವರಿಂದ ಶ್ರೀರಾಮ ಜಯರಾಮ ಜಯ ಜಯ ರಾಮ ಎಂಬ ಜಪ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಶ್ರೀರಾಮ, ಸೀತೆ, ಲಕ್ಷ್ಮಣ, ಹನುಮಂತರ ಮೂರ್ತಿಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.

