Home Blog Page 346

ಮಕ್ಕಳ ಚಲನಚಿತ್ರೋತ್ಸವಕ್ಕೆ ಚಾಲನೆ

0

ನಗರದ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಶುಕ್ರವಾರ ಮಕ್ಕಳ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿ ಶಿಕ್ಷಣ ಸಂಯೋಜಕ ಭಾಸ್ಕರ್ ಗೌಡ ಮಾತನಾಡಿದರು.
ಮಕ್ಕಳೇ ನಟಿಸಿರುವ ಚಲನಚಿತ್ರಗಳಲ್ಲಿ ಸಂಸ್ಕಾರ, ಪರಿಸರ, ಸಾಮಾಜಿಕ ಕಾಳಜಿಯನ್ನು ಮನರಂಜನೆ ಜತೆ ಪ್ರದರ್ಶಿಸುವುದರಿಂದ ಮಕ್ಕಳು ಸಮಾಜಮುಖಿಗಳಾಗಲು ಸಹಕಾರಿ. ಅದಕ್ಕಾಗಿ ಒಂದು ವಾರ ನಗರದಲ್ಲಿ ಮಕ್ಕಳ ಚಿತ್ರೋತ್ಸವವನ್ನು ಆಯೋಜಿಸಿರುವುದಾಗಿ ಅವರು ತಿಳಿಸಿದರು.
“ಪುಟಾಣಿ ಸಫಾರಿ” ಎಂಬ ಮಕ್ಕಳ ಚಲನಚಿತ್ರವನ್ನು ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ನಗರದ ವೆಂಕಟೇಶ್ವರ ಚಿತ್ರಮಂದಿರ, ಮಯೂರ ಚಿತ್ರಮಂದಿರ ಮತ್ತು ಎಚ್.ಕ್ರಾಸ್ ವೆಂಕಟೇಶ್ವರ ಚಿತ್ರಮಂದಿರಗಳಲ್ಲಿ ಪ್ರತಿದಿನ ಬೆಳಗ್ಗೆ ೮ ರಿಂದ ೧೦ ಗಂಟೆಯವರೆಗೆ ತೋರಿಸಲಾಗುತ್ತದೆ. ಸುಮಾರು ೫ ರಿಂದ ೬ ಸಾವಿರ ವಿದ್ಯಾರ್ಥಿಗಳು ಈ ಚಲನಚಿತ್ರವನ್ನು ವೀಕ್ಷಿಸಲಿದ್ದಾರೆ. ಚಲನಚಿತ್ರವು ಮಕ್ಕಳನ್ನು ಬೇಗ ಆಕರ್ಷಿರುತ್ತದೆ. ಅದರಿಂದಲೂ ಅವರಿಗೆ ಜ್ಞಾನಾರ್ಜನೆಯಾಗಲಿ ಎಂಬುದು ನಮ್ಮ ಉದ್ದೇಶ ಎಂದರು.
ನಮ್ಮದು ಒತ್ತಡದ ಬದುಕು. ಮಕ್ಕಳ ಬಗ್ಗೆ ಕಾಳಜಿ ಕಡಿಮೆ. ಸಾಫ್ಟ್ ವೇರ್ ದಂಪತಿಯ ಮಗನೊಬ್ಬ ಓದಿನಲ್ಲಿ ತುಂಬಾ ಜಾಣ. ಆದರೆ, ಅವನಿಗೆ ಅಪ್ಪ ಅಮ್ಮನ ಪ್ರೀತಿ ಸಿಗುವುದಿಲ್ಲ. ಅವನಿಗೆ ಕಾಡಿನಲ್ಲಿ ಸಫಾರಿ ಮಾಡುವ ಆಸೆ. ಇನ್ನೊಂದೆಡೆ ಅನಕ್ಷರಸ್ಥ ದಂಪತಿಯ ಮಗನಲ್ಲಿ ಕಾಡಿನ ಜ್ಞಾನ ಭಂಡಾರವೇ ಇರುತ್ತದೆ. ಇಬ್ಬರೂ ಕಾಡಿನಲ್ಲಿ ಸಂಧಿಸುತ್ತಾರೆ. ಅಲ್ಲಿ ಅವರು ಏನು ಕಲಿಯುವರು ಎಂಬುದೇ ಚಿತ್ರಕಥೆಯ ತಿರುಳು. ವಿದ್ಯಾರ್ಥಿಗಳಿಗೆ ಈ ಸಫಾರಿಯ ಮೂಲಕ ಕಲಿಕೆಯೂ ಆಗಲಿದೆ ಎಂದು ಅವರು ವಿವರಿಸಿದರು.
ಗರುಡಾದ್ರಿ ಶಾಲೆಯ ಮುಖ್ಯಶಿಕ್ಷಕ ಶ್ರೀನಿವಾಸ್, ವೆಂಕಟೇಶ್ವರ ಚಿತ್ರಮಂದಿರದ ವ್ಯವಸ್ಥಾಪಕ ಕಾರ್ತಿಕ್, ಗರುಡಾದ್ರಿ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.

ನಗರಸಭೆ ಪೌರಾಯುಕ್ತರ ವಿರುದ್ದ ಪ್ರತಿಭಟನೆ

0

ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ ಅವರ ಕಾರ್ಯವೈಖರಿಯನ್ನು ಖಂಡಿಸಿ ನಗರಸಭೆ ಕಾರ್ಯಾಲಯದ ಮುಂಭಾಗ ಸುಮಾರು ೧೪ ಮಂದಿ ಸದಸ್ಯರು ಸೇರಿದಂತೆ ಸಾರ್ವಜನಿಕರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿ ನಗರಸಭೆ ಸದಸ್ಯ ಎಸ್.ರಾಘವೇಂದ್ರ ಮಾತನಾಡಿ, ಶಿಡ್ಲಘಟ್ಟ ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿದ್ದು ಇಲ್ಲಿ ಕರ್ತವ್ಯ ನಿರ್ವಹಿಸಲು ಕೆಎಂಎಎಸ್ ಗ್ರೇಡ್ ಅಧಿಕಾರಿ ಬೇಕಾಗಿರುತ್ತದೆ. ಆದರೆ ಕಂದಾಯ ಅಧಿಕಾರಿ (ಆರ್.ಐ) ಗ್ರೇಡ್ ನಿಂದ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ವ್ಯಕ್ತಿಯನ್ನು ನಗರಸಭೆಗೆ ನಿಯೋಜಿಸಿರುವುದು ದುರದೃಷ್ಟ. ಈ ವ್ಯಕ್ತಿಗೆ ಚುನಾಯಿತ ನಗರಸಭೆ ಸದಸ್ಯರೊಂದಿಗೆ ಹೇಗೆ ಮಾತಾಡಬೇಕು ಎನ್ನುವುದೇ ಗೊತ್ತಿಲ್ಲ. ನಗರಸಭೆಗೆ ಸಂಬಂಧಿಸಿದ ಯಾವುದಾದರೂ ಸಮಸ್ಯೆಗಳನ್ನು ಕೇಳಲು ಹೋದ ನಗರಸಭೆಯ ಸದಸ್ಯರನ್ನು ಏಕವಚನದಲ್ಲಿ ನಿಂದಿಸುವ ಜೊತೆಗೆ ಕಚೇರಿಯಿಂದ ಹೊರಹೋಗುವಂತೆ ದೌರ್ಜನ್ಯವಾಗಿ ಮಾತನಾಡುತ್ತಾರೆ. ಈ ಅಧಿಕಾರಿ ತಾನು ಸಾರ್ವಜನಿಕರ ಸೇವಕ ಎಂಬುದನ್ನೂ ಮರೆತು ಯಾವುದೋ ಒಂದು ರಾಜಕೀಯ ಪಕ್ಷದ ಏಜೆಂಟರಂತೆ ವರ್ತಿಸುತ್ತಾರೆ. ಇವರ ಅಧಿಕಾರಾವಧಿಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿದ್ದು ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಯ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದರು.
ಮುಖಂಡ ಲಕ್ಷ್ಮಿನಾರಾಯಣ ಮಾತನಾಡಿ, ನಗರಸಭೆಗೆ ಪೌರಾಯುಕ್ತರಾಗಿ ಜಿ.ಎನ್.ಚಲಪತಿ ಬಂದಾಗಿನಿಂದಲೂ ನಗರದಲ್ಲಿ ಮಾಡಿರುವ ಕಳಪೆ ಕಾಮಗಾರಿಗಳೂ ಸೇರಿದಂತೆ ಅಕ್ರಮ ಬಿಲ್ ಮಾಡಿಕೊಂಡಿರುವುದರ ಬಗ್ಗೆ ಸೂಕ್ತ ತನಿಖೆಯಾಗಬೇಕು. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಸಂಬಳ ನೀಡದೇ ಸತಾಯಿಸುತ್ತಿರುವ ಈ ಅಧಿಕಾರಿಯ ವರ್ತನೆಯಿಂದ ಕೆಲ ಪೌರ ಕಾರ್ಮಿಕರು ಆತ್ಮಹತ್ಯೆ ಯತ್ನ ನಡೆಸಿದ್ದಾರೆ. ಆದರೂ ಅವರಿಗೆ ಸಂಬಳ ನೀಡದೇ ಕಿರುಕುಳ ನೀಡುತ್ತಾರೆ. ಹಿಂದಿನ ನಗರಸಭೆ ಆಡಳಿತ ಮಂಡಳಿ ಸದಸ್ಯರ ಸಭೆಯಲ್ಲಿ ನಗರೋತ್ಥಾನ ೩ ಯೋಜನೆಯಡಿ ನಗರದಲ್ಲಿ ವಿವಿಧ ಕಾಮಗಾರಿಗಳನ್ನು ಮಾಡಲು ಸದಸ್ಯರು ಅನುಮೋದನೆ ನೀಡಿದ್ದರೂ ಚುನಾವಣೆ ಮುಗಿದು ನೂತನ ಸದಸ್ಯರು ಆಯ್ಕೆಯಾದರೂ ಸಹ ಇದುವರೆಗೂ ಹಿಂದಿನ ಕಾಮಗಾರಿಗಳಿಗೆ ಚಾಲನೆ ನೀಡಿಲ್ಲ.
ತಾಲೂಕಿನ ಹಿತ್ತಲಹಳ್ಳಿ ಗ್ರಾಮದ ಬಳಿಯಿರುವ ಕಸ ವಿಲೇವಾರಿ ಘಟಕದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಘನ ತ್ಯಾಜ್ಯ ವಿಂಗಡಿಸುವ ಯಂತ್ರ ಅಳವಡಿಸುವಲ್ಲಿ ಭಾರೀ ಅವ್ಯವಹಾರ ನಡೆದಿದ್ದು ಹಳೆ ಕಬ್ಬಿಣದ ಶೀಟ್ ಹಾಗೂ ಸರಳುಗಳನ್ನು ಬಳಸಿ ಹಣ ಲಪಟಾಯಿಸಿದ್ದು ಇದರ ತನಿಖೆಯಾಗಬೇಕು ಎಂದರು.
೨೦೧೮ ರ ಅಕ್ಟೋಬರ್ ತಿಂಗಳ ನಗರಸಭೆ ಖರ್ಚಿನ ವಿವರದಲ್ಲಿ ಪೌರಾಯುಕ್ತರು ಎನ್.ಎಚ್ ೨೩೪ ಯೋಜನೆಯಡಿ ಕೊರೆಸಿರುವ ೩ ಕೊಳವೆಬಾವಿಗಳಿಗೆ ೭೮,೩೫೦೦೦ ಖರ್ಚು ತೋರಿಸಿದ್ದು ಒಂದು ಕೊಳವೆ ಬಾವಿ ಕೊರೆಸಲು ಸುಮಾರು ೨೬ ಲಕ್ಷ ಖರ್ಚು ಮಾಡಿದ್ದಾರೆಯೇ ಎನ್ನುವ ಅನುಮಾನವಿದೆ. ಹಾಗಾಗಿ ಇದರ ಸಂಪೂರ್ಣ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಮುಖಂಡ ಎಸ್.ಎಂ.ರಮೇಶ್ ಮಾತನಾಡಿ, ನಗರದಲ್ಲಿರುವ ನೀರಿನ ಲಭ್ಯತೆಗನುಸಾರವಾಗಿ ಪ್ರತಿ ವಾರ್ಡಿಗೂ ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡಬಹುದು. ಆದರೆ ಪೌರಾಯುಕ್ತರು ಹಾಗೂ ಅಧಿಕಾರಿಗಳು ಕುಡಿಯುವ ನೀರು ಪೂರೈಸಲು ಸಹ ಒಂದು ಪಕ್ಷದ ಏಜೆಂಟರಂತೆ ರಾಜಕೀಯ ಮಾಡುವ ಮೂಲಕ ಕೆಲ ವಾರ್ಡುಗಳಿಗೆ ತಿಂಗಳಿಗೊಮ್ಮೆ ನೀರು ಪೂರೈಸುತ್ತಿದ್ದಾರೆ. ಈ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ನಿಮ್ಮ ಮೇಲೆ ಕೇಸು ಹಾಕಿಸುತ್ತೇನೆ ಎಂದು ಬೆದರಿಸುವ ಮೂಲಕ ಗೂಂಡಾ ವರ್ತನೆ ಪ್ರದರ್ಶಿಸುತ್ತಾರೆ ಎಂದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ಮಾತನಾಡಿ, ನಗರದ ಸ್ವಚ್ಚತೆ ಕಾಪಾಡಬೇಕಾದ ನಗರಸಭೆ ಸಿಬ್ಬಂದಿಯೇ ನಗರದ ಯುಜಿಡಿ ಸಂಪರ್ಕವನ್ನು ಅಗೆದು ಚರಂಡಿಗೆ ಬಿಟ್ಟಿರುವುದರಿಂದ ನಗರದಾಧ್ಯಂತ ದುರ್ವಾಸನೆ ಬೀರುತ್ತಿದೆ. ಸೊಳ್ಳೆ ಕಾಟ ಹೆಚ್ಚಾಗಿದೆ. ಈ ಬಗ್ಗೆ ಅನೇಕ ಬಾರಿ ಮನವಿ ಮಾಡಿದರೂ ನಗರದ ಸ್ವಚ್ಚತೆ ಬಗ್ಗೆ ಕಾಳಜಿ ತೋರಿಸುತ್ತಿಲ್ಲ ಎಂದು ಆರೋಪಿಸಿದರು.
ಒಂದು ಪಕ್ಷದ ಕೆಲವೇ ಕೆಲ ಮುಖಂಡರ ಗುಂಪು ಕಟ್ಟಿಕೊಂಡು ನಗರಸಭೆ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳ ಹಾಗೂ ವಿವಿಧ ಅನುಧಾನಗಳಲ್ಲಿ ಅಕ್ರಮ ನಡೆಸಿ ಹಣ ಮಾಡುವ ದಂಧೆಗೆ ಇಳಿದಿರುವ ಜಿ.ಎನ್.ಚಲಪತಿ ರನ್ನು ಪೌರಾಯುಕ್ತ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ನಗರಸಭಾ ಸದಸ್ಯರಾದ ಲಕ್ಷ್ಮಯ್ಯ, ಎಂ.ವಿ.ವೆಂಕಟಸ್ವಾಮಿ, ಸುಮಿತ್ರರಮೇಶ್, ಸುಗುಣ ಲಕ್ಷ್ಮಿನಾರಾಯಣ, ಎಸ್.ರಾಘವೇಂದ್ರ, ನಾರಾಯಣಸ್ವಾಮಿ, ಸುರೇಶ್, ಮುಖಂಡರಾದ ನಂದುಕಿಶನ್, ಜಬೀವುಲ್ಲಾ, ಕೆಂಪರೆಡ್ಡಿ, ಎಲ್.ಮಂಜುನಾಥ್, ಶ್ರೀಧರ್, ರಾಮಚಂದ್ರಪ್ಪ, ಸಿಕಂದರ್, ವೆಂಕಟರಾಜು ಪ್ರತಿಬಟನೆಯಲ್ಲಿ ಪಾಲ್ಗೊಂಡಿದ್ದರು.

ಸಾಧಕರ ದಾರಿಯಿಂದ ಪ್ರೇರಣೆ ಹೊಂದಬೇಕು – ಎಂ.ಪಾಪಿರೆಡ್ಡಿ

0

ನಗರದ ನ್ಯಾಯಾಲಯದ ಸಂಕೀರ್ಣದಲ್ಲಿ ಶನಿವಾರ ತಾಲ್ಲೂಕು ವಕೀಲರ ಸಂಘದಿಂದ ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯದ ನ್ಯಾಯಾಂಗದ ಸದಸ್ಯರಾಗಿ ನೇಮಕಗೊಂಡಿರುವ ಹಿರಿಯ ವಕೀಲ ಟಿ.ನಾರಾಯಣಸ್ವಾಮಿ ಹಾಗೂ ನ್ಯಾಯಾಧೀಶೆಯಾದ ತಾಲ್ಲೂಕಿನ ಚಾಂದಿನಿ ಅವರನ್ನು ಸನ್ಮಾನಿಸಿ ತಾಲ್ಲೂಕು ವಕೀಲರ ಸಂಘದ ಗೌರವಾಧ್ಯಕ್ಷ ಎಂ.ಪಾಪಿರೆಡ್ಡಿ ಮಾತನಾಡಿದರು.
ತಾಲ್ಲೂಕಿಗೆ, ಜಿಲ್ಲೆಗೆ ಕೀರ್ತಿ ತಂದಿರುವ ಸಾಧಕರ ಮಾರ್ಗದರ್ಶನದಲ್ಲಿ ಹಾಗೂ ಇವರು ನಡೆದ ದಾರಿಯಿಂದ ಯುವ ವಕೀಲರು ಪ್ರೇರಣೆ ಹೊಂದಬೇಕು ಎಂದು ಅವರು ತಿಲಿಸಿದರು.
ನಮ್ಮ ನಡುವೆಯೇ ಇದ್ದವರು ಸಾಧನೆ ಮಾಡಿ ಉನ್ನತ ಸ್ಥಾನಕ್ಕೆ ತಲುಪಿದಾಗ ಅದು ನಿಜಕ್ಕೂ ಹೆಮ್ಮೆ ಪಡುವ ಸಂಗತಿ. ಇವರು ನಡೆದ ಹಾದಿ, ಪಟ್ಟ ಶ್ರಮ ಈಗಿನ ಯುವ ವಕೀಲರಿಗೆ ಮಾರ್ಗಸೂಚಿಯಂತೆ. ನಮ್ಮ ಜಿಲ್ಲೆಗೇ ಇವರು ಕೀರ್ತಿ ತಂದಿದ್ದಾರೆ ಎಂದರು.
ಹಿರಿಯ ವಕೀಲರಾಗಿದ್ದ ಟಿ.ನಾರಾಯಣಸ್ವಾಮಿ ಅವರದ್ದು ಹೋರಾಟದ ಹಾದಿ. ವಕೀಲರಾಗಿ ವೃತ್ತಿಯನ್ನು ಪ್ರಾರಂಭಿಸಿ, ನ್ಯಾಯಮೂರ್ತಿಗಳಾದ ಗೋಪಾಲಗೌಡರ ಕಚೇರಿಯಲ್ಲಿ. ಶಿಸ್ತು, ಬದ್ಧತೆ, ನ್ಯಾಯಪರತೆ, ಶ್ರಮ, ನಿಷ್ಠೆ ಮುಂತಾದ ಸದ್ಗುಣಗಳನ್ನು ಕಲಿತವರು. ಜಾತಿಯನ್ನು ಮೀರಿ ಸಮಾಜದ ಬಡವರಿಗೆ ನೆರವಾಗುವ ಮನಸ್ಸುಳ್ಳವರು. ಅವರ ಧ್ಯೇಯ ಮತ್ತು ನಿಷ್ಠೆಯ ಹಾದಿ ಅವರಿಗೆ ಉನ್ನತ ಸ್ಥಾನವನ್ನು ಕಲ್ಪಿಸಿದೆ.
ನಗರದ ಹಿರಿಯ ವಕೀಲ ಹಾಗೂ ನೋಟರಿ ಬಿ.ನೌಷಾದ್ ಅಲೀ ಮತ್ತು ನಿವೃತ್ತ ಎ.ಸಿ.ಡಿ.ಪಿ.ಒ ಎಸ್‌.ಕೆ.ತಾಜುನ್ನಿಸಾ ದಂಪತಿಯ ಪುತ್ರಿ ಎನ್‌.ಚಾಂದಿನಿ ಅವರು ಮಾಸ್ಟರ್‌ ಆಫ್‌ ಲಾ ನಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿದ್ದರು. ಈಗ ನ್ಯಾಯಾಧೀಶರ ಪರೀಕ್ಷೆಯನ್ನು ತೇರ್ಗಡೆ ಹೊಂದುವ ಮೂಲಕ ನಮ್ಮ ತಾಲ್ಲೂಕಿಗೇ ಕೀರ್ತಿಯನ್ನು ತಂದಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ವಕೀಲರ ಸಂಘದಿಂದ ನ್ಯಾಯಾಲಯದ ನ್ಯಾಯಾಂಗದ ಸದಸ್ಯರಾಗಿ ನೇಮಕಗೊಂಡಿರುವ ಹಿರಿಯ ವಕೀಲ ಟಿ.ನಾರಾಯಣಸ್ವಾಮಿ ಮತ್ತು ಅವರ ಪತ್ನಿ ಎನ್.ಡಿ.ರಮಾದೇವಿ ಹಾಗೂ ನ್ಯಾಯಾಧೀಶೆ ಚಾಂದನಿ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್, ಸಿವಿಲ್ ನ್ಯಾಯಾಧೀಶರಾದ ಸಂಜುಕುಮಾರ್ ಎ.ಪಚ್ಚಾಪುರೆ, ಡಿ.ರೋಹಿಣಿ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ವಕೀಲರಾದ ಪಾಟೀಲ್, ಲೋಕೇಶ್, ಬೈರಾರೆಡ್ಡಿ, ಸಿ.ಜಿ.ಭಾಸ್ಕರ್ ಹಾಜರಿದ್ದರು.

ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

0

ನಗರದ ಕೋಟೆ ವೃತ್ತದಲ್ಲಿ ಶನಿವಾರ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್ ಮಾತನಾಡಿದರು.
ಭ್ರಷ್ಟಚಾರ ಮತ್ತು ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರು ತಮ್ಮ ಮುಖಂಡರ ನಿಲುವನ್ನು ಒಪ್ಪಿಕೊಳ್ಳಲಿಲ್ಲ. ಈ ಕಾರ್ಯಕರ್ತರೆಲ್ಲ ತಮ್ಮ ಅಭಿಪ್ರಾಯವನ್ನು ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ಭ್ರಷ್ಟ ರಾಜ್ಯ ಸರ್ಕಾರದ ಆಯಸ್ಸು ಸಧ್ಯದಲ್ಲಿಯೇ ಮುಗಿಯಲಿದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿ ಈಗಾಗಲೇ ಅತೃಪ್ತಿ ಭುಗಿಲೇಳಲಿದೆ. ಸಧ್ಯದಲ್ಲಿಯೇ ಜನಪರ ಆಡಳಿತವನ್ನು ನೀಡುವ ಯಡಿಯೂರಪ್ಪನವರ ಸರ್ಕಾರ ರಾಜ್ಯದಲ್ಲಿ ರಚಿಸುವುದು ನಿಶ್ಚಿತ ಎಂದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಒಂದು ಲಕ್ಷದಷ್ಟು ಸದಸ್ಯರನ್ನು ಮಾಡಿಸುವ ಗುರಿಯನ್ನಿಟ್ಟುಕೊಂಡು ಬಿಜೆಪಿ ಸದಸ್ಯತ್ವ ಅಭಿಯಾನ ಪ್ರಾರಂಭಿಸಿದ್ದೇವೆ. ಆಗಸ್ಟ್ ೧೧ ರವರೆಗೂ ಅಭಿಯಾನ ನಡೆಯಲಿದೆ. ೮೯೮೦೮೦೮೦೮೦ ಸಂಖ್ಯೆಗೆ ಕರೆ ಮಾಡಿದರೆ ಸಾಕು. ಅದರಿಂದ ಒಂದು ಲಿಂಕ್ ಬರುತ್ತದೆ. ಅದರಲ್ಲಿ ಮಾಹಿತಿಯನ್ನು ತುಂಬುವ ಮೂಲಕ ಬಿಜೆಪಿ ಸದಸ್ಯರಾಗಬಹುದು. ಪಕ್ಷದಿಂದ ಅಧಿಕೃತ ಸಂಖ್ಯೆಯೊಂದು ಸಿಗುತ್ತದೆ. ಯುವಕರು, ಮಹಿಳೆಯರ ಸದಸ್ಯತ್ವಕ್ಕೆ ಆದ್ಯತೆ ನೀಡಬೇಕು. ಇದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಆಧಾರವಾಗುತ್ತದೆ ಎಂದರು.
ನಗರಸಭಾ ಸದಸ್ಯರಾದ ರಾಘವೇಂದ್ರ, ನಾರಾಯಣಸ್ವಾಮಿ, ಸುರೇಶ್, ಕೆಂಪರೆಡ್ಡಿ, ದಾಮೋದರ್, ರವಿಚಂದ್ರ, ಬೈರಾರೆಡ್ಡಿ, ರಾಮಚಂದ್ರ, ನಟರಾಜ್, ನರೇಶ್, ಶ್ರೀರಾಮ್, ಪುರುಷೋತ್ತಮ್, ಮುಖೇಶ್, ಮಂಜುನಾಥ್, ಸೋಮು ಹಾಜರಿದ್ದರು.

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಜನ್ಮದಿನಾಚರಣೆ ಮತ್ತು ಆಜಾದ್ ಹಿಂದ್ ಫೌಜ್ ಸಂಸ್ಥಾಪನಾ ದಿನ

0

ಸಾಹಿತ್ಯ ಮತ್ತು ದೇಶಭಕ್ತಿ ಎರದೂ ಸಹ ಎಳೆಯ ವಯಸ್ಸಿನಿಂದಲೇ ಮಕ್ಕಳಿಗೆ ತಿಳಿಸುವ ಕೆಲಸ ಕಸಾಪ ವತಿಯಿಂದ ಮಾಡಲಾಗುತ್ತಿದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ತಿಳಿಸಿದರು.
ತಾಲ್ಲೂಕಿನ ಕಂಬದಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಕಸಾಪ ವತಿಯಿಂದ ಆಯೋಜಿಸಲಾಗಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಜನ್ಮದಿನಾಚರಣೆ ಮತ್ತು ಆಜಾದ್ ಹಿಂದ್ ಫೌಜ್ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸಾಹಿತ್ಯ ಸೃಷ್ಟಿ ಸಮೃದ್ಧವಾದುದು. ಪ್ರಬಂಧ, ಕಥೆ, ಕಾದಂಬರಿ, ಪ್ರವಾಸ ಕಥನ, ವಿಮರ್ಶೆ, ಜೀವನ ಚಿತ್ರ, ಭಾಷಾಂತರ – ಹೀಗೆ ಅನೇಕ ಪ್ರಕಾರಗಳಿಗೆ ಅವರ ಕೊಡುಗೆ ಸಂದಿದೆ. ಗೊರೂರರ ಸಿದ್ಧಿ, ಪ್ರಸಿದ್ಧಿಗಳಿಗೆ ಮುಖ್ಯವಾದ ಆಧಾರ, ಅವರ ಪ್ರಬಂಧಗಳು. ಅವರು ತಮ್ಮ ಪ್ರಬಂಧ ಸಾಹಿತ್ಯದಿಂದ ನಾಡನ್ನು ನಗಿಸಿ ನಲಿಸಿದ್ದಾರೆ ಎಂದು ಹೇಳಿದರು.
ಶಿಕ್ಷಕ ಸುಂದರಾಚಾರಿ ಮಾತನಾಡಿ, 50,000ಕ್ಕೂ ಹೆಚ್ಚು ಸೈನಿಕರಿದ್ದ ಆಜಾದ್ ಹಿಂದ್ ಸೈನ್ಯದ ಹೋರಾಟ ನಮ್ಮ ಸ್ವಾತಂತ್ರ್ಯ ಆಂದೋಲನದ ಬಹುಮುಖ್ಯ ಅಧ್ಯಾಯಗಳಲ್ಲೊಂದು. ಆದರೆ ನಮ್ಮ ಇತಿಹಾಸದ ಪುಟಗಳಲ್ಲಿ ಈ ಹೆಚ್ಚು ವಿವರ ಇಲ್ಲದಿರುವುದು ದೌರ್ಭಾಗ್ಯವೇ ಸರಿ. ಆಜಾದ್ ಹಿಂದ್ ಸ್ಥಾಪನಾ ದಿನದಂದು ಆ ಸೈನ್ಯ ಮತ್ತು ಅದರ ವೀರಸೇನಾನಿಗಳ ಬಲಿದಾನವನ್ನು ನೆನೆಯುವುದು ನಮ್ಮೆಲ್ಲರ ಆದ್ಯಕರ್ತವ್ಯ ಎಂದು ಹೇಳಿದರು.
ಕಸಾಪ ವತಿಯಿಂದ ಮುಖ್ಯಶಿಕ್ಷಕಿ ಎನ್.ಈಶ್ವರಮ್ಮ ಅವರನ್ನು ಸನ್ಮಾನಿಸಲಾಯಿತು.
ನಿವೃತ್ತ ಶಿಕ್ಷಕ ಲೋಕನಾಥ್, ಕಸಾಪ ಸಂಘ ಸಂಸ್ಥೆಗಳ ಪ್ರತಿನಿಧಿ ಶಂಕರ್, ಮಂಜುನಾಥ್ ಹಾಜರಿದ್ದರು.

ಮಾನವೀಯತೆಯ ಉಳಿವಿಗಾಗಿ ಮನವಿ

0

ಮಾನವೀಯತೆಯನ್ನು ಉಳಿಸಬೇಕು ಮತ್ತು ರಾಷ್ಟ್ರಮಟ್ಟದಲ್ಲಿ ಆಗುತ್ತಿರುವ ಅನ್ಯಾಯ ಹಾಗೂ ಅತ್ಯಾಚಾರ ಪ್ರಕರಣಗಳಿಗೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ವಿವಿಧ ಮುಸ್ಲಿಂ ಸಂಘಟನೆಗಳು ಶುಕ್ರವಾರ ತಹಶೀಲ್ದಾರ್ ಎಂ.ದಯಾನಂದ್ ಅವರಿಗೆ ಮನವಿ ಸಲ್ಲಿಸಿದರು.
ರಾಷ್ಟ್ರ ಮತ್ತು ರಾಜ್ಯಗಳಲ್ಲಿ ಆಗುತ್ತಿರುವ ಅನ್ಯಾಯ ಅಕ್ರಮಗಳಿಗೆ ಕಡಿವಾಣ ಹಾಕಲು ಹೊಸ ಕಾನೂನು ಜಾರಿ ಮಾಡಬೇಕು. ಉತ್ತರ ಪ್ರದೇಶದ ಉನ್ನಾವ್, ರಾಜ್ಯದ ಪುತ್ತೂರು ಮತ್ತು ತೆಲಂಗಾಣದಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನಡೆದಿದೆ. ಉತ್ತರಪ್ರದೇಶದಲ್ಲಿ, ಗುಂಡ್ಲುಪೇಟೆಯಲ್ಲಿ, ಜಾರ್ಖಂಡ್, ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಗುಂಪುಗೂಡಿ ಹಲ್ಲೆ, ಕೊಲೆ ಮುಂತಾದ ಅಮಾನವೀಯ ಘಟನೆಗಳು ಜರುಗಿವೆ. ಧರ್ಮ, ದೇಶಪ್ರೇಮದ ಹೆಸರಿನಲ್ಲಿ ಹಲ್ಲೆ, ದೌರ್ಜನ್ಯ ನಡೆದಿದೆ. ದೇಶದ ಪವಿತ್ರ ಸ್ಥಳ ಸಂಸತ್ ಭವನದಲ್ಲಿ ವಿವಿಧ ಸಂಸದರು ಧರ್ಮದ ಘೋಷಣೆಗಳನ್ನು ಮಾಡುವ ಮೂಲಕ ಪವಿತ್ರ ಸ್ಥಳವನ್ನು ಅಪವಿತ್ರಗೊಳಿಸಿದ್ದಾರೆ.
ಎಲ್ಲಾ ರಾಜ್ಯದ ರಾಜ್ಯಪಾಲರುಗಳು ಹಾಗೂ ರಾಷ್ಟ್ರಪತಿಯವರು ರಾಜ್ಯ ಸರ್ಕಾರಗಳಿಗೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡಬೇಕು ಎಂದು ಕೋರಿ ಮನವಿಯನ್ನು ಸಲ್ಲಿಸಿದರು.
ಜಾಮಿಯಾ ಮಸೀದಿ ಅಧ್ಯಕ್ಷ ಸಯ್ಯದ್ ತಾಜ್ ಪಾಷ, ಉಪಾಧ್ಯಕ್ಷ ಅಮೀರ್ ಜಾನ್, ಕಾರ್ಯದರ್ಶಿ ಎಸ್.ಹೈದರ್ ವಲೀ ಪಾಷ, ಟಿಪ್ಪು ಸುಲ್ತಾನ್ ಸಂಘರ್ಷ ಸಮಿತಿಯ ಅಧ್ಯಕ್ಷ ಮೌಲಾ, ಯೂನಿಟಿ ಸಿಲ್ ಸಿಲಾ ಅಕ್ರಂಪಾಷ, ಮೇಲೂರು ಅಜೀಜ್, ಎಚ್.ಎಸ್.ಫಯಾಜ್, ಕರ್ನಾಟಕ ವಿಶ್ವ ನಿರ್ಮಾಣ ಸೇನೆ ಮುಕಂಮಿಲ್, ಯಾರಬ್ ಪಾಷ, ಬಾಬು ಹುಸೇನ್ ಹಾಜರಿದ್ದರು.

ಮಹಾಕಾಳ ಸರ್ಪಯಾಗ ಹಾಗೂ ಶ್ರೀಲಕ್ಷ್ಮೀ ಪೂಜೆ

0

ಹಂಡಿಗನಾಳದ ಕೆ.ವಿ.ಭವನದಲ್ಲಿ ಶುಕ್ರವಾರ ಆಶ್ಲೇಷ ನಕ್ಷತ್ರ ಕರ್ಕಾಟಕ ರಾಶಿಯಲ್ಲಿ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಉಚಿತವಾಗಿ ಮಹಾಕಾಳ ಸರ್ಪಯಾಗ ಹಾಗೂ ಶ್ರೀಲಕ್ಷ್ಮೀ ಪೂಜೆಯನ್ನು ನಡೆಸಲಾಯಿತು. ನೂರಾರು ಮಂದಿ ಕುಟುಂಬ ಸಮೇತರಾಗಿ ಪೂಜೆ ಮತ್ತು ಯಾಗದಲ್ಲಿ ಪಾಲ್ಗೊಂಡಿದ್ದರು.
ಲೋಕಕಲ್ಯಾಣಾರ್ಥವಾಗಿ ಯಾಗ ಮತ್ತು ಪೂಜೆಯನ್ನು ಮಾಡುತ್ತಿದ್ದೇವೆ. ಮಳೆಯಾಗಲಿ, ಪೂಜೆ ಮಾಡಲಿಚ್ಚಿಸುವ ಬಡವರಿಗೆ ಅನುಕೂಲವಾಗಲಿ ಮತ್ತು ಊರಿಗೆ, ತಾಲ್ಲೂಕಿಗೆ ಒಳ್ಳೆಯದಾಗಲಿ, ನಾಡು ಸುಭಿಕ್ಷವಾಗಲಿ ಎಂಬ ಉದ್ದೇಶದಿಂದ ಈ ಬೃಹತ್ ಸರ್ಪಯಾಗ ಮತ್ತು ಲಕ್ಷ್ಮೀಪೂಜೆಯನ್ನು ಮಾಡುತ್ತಿರುವುದಾಗಿ ಶ್ರೀ ಜೋಡಿ ಮುನೇಶ್ವರ ಸ್ವಾಮಿ ದೇವಸ್ಥಾನದ ಶ್ರೀ ಶಿವಶಂಕರ ಗುರೂಜಿ ಹೇಳಿದರು.
ಲೋಕಕಲ್ಯಾಣಕ್ಕಾಗಿ ನಡೆಸುವ ಮಹಾಕಾಳ ಸರ್ಪಯಾಗದಲ್ಲಿ ಸರ್ಪದೋಷವುಳ್ಳವರು ಪೂಜೆ ಸಲ್ಲಿಸಿ ದೋಷ ನಿವಾರಿಸಿಕೊಳ್ಳಬಹುದಾಗಿದೆ. ಪೂಜಾಕಾರ್ಯದಲ್ಲಿ ಭಾಗಿಯಾದವರು ತಮಗೂ, ಊರಿಗೂ ಮತ್ತು ತಾಲ್ಲೂಕಿಗೂ ಒಳಿತನ್ನು ಕೋರಬೇಕೆಂದು ಕೋರಿದರು.
ಪೂಜೆಯ ಸೇವಾಕರ್ತ ಆರ್.ಎನ್.ಆರ್ ಪ್ರಾವಿಜನ್ ಸ್ಟೋರ್ಸ್ ಆರ್.ನಾಗರಾಜ್ ಮಾತನಾಡಿ, ಈ ವಿಶಿಷ್ಟ ಯಾಗ ಮತ್ತು ಪೂಜೆಯು ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾಡುತ್ತಿದ್ದೇವೆ. ಮೈಸೂರು, ಕೊಳ್ಳೇಗಾಲ, ಚಿಂತಾಮಣಿ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಶಿಡ್ಲಘಟ್ಟ ತಾಲ್ಲೂಕಿನಿಂದ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ. ಲೋಕಕಲ್ಯಾಣ, ಮದುವೆ ವಿಳಂಬಕ್ಕೆ ಅಡೆತಡೆ, ಕುಜಶಾಂತಿ ನಿವಾರಣೆ ಉದ್ದೇಶದಿಂದ ಉಚಿತವಾಗಿ ಮಹಾಕಾಳ ಸರ್ಪಯಾಗ ಹಾಗೂ ಶ್ರೀಲಕ್ಷ್ಮೀ ಪೂಜೆಯನ್ನು ನಡೆಸಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಪೂಜೆಯಲ್ಲಿ ಭಾಗವಹಿಸಿರುವವರಿಗೆ ತಿಂಡಿ ಹಾಗೂ ಪ್ರಸಾದವನ್ನು ವ್ಯವಸ್ಥೆ ಮಾಡಲಾಗಿತ್ತು.
ಶಾಸಕ ವಿ.ಮುನಿಯಪ್ಪ, ದೇವನಹಳ್ಳಿ ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ, ಮಾಜಿ ಶಾಸಕ ಎಂ.ರಾಜಣ್ಣ, ತಹಶೀಲ್ದಾರ್ ಎಂ.ದಯಾನಂದ್, ನಗರಸಭಾ ಸದಸ್ಯರಾದ ಮಂಜುನಾಥ್, ಎಲ್.ಅನಿಲ್ ಕುಮಾರ್, ಆಯುಕ್ತ ಚಲಪತಿ, ಚಲನಚಿತ್ರ ನಿರ್ದೇಶಕ ಆರ್.ಚಂದ್ರು, ರೆಡ್ ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್, ಶೈಲಜಾ ಮುನಿಸ್ವಾಮಿ, ರಾಮಚಂದ್ರಗೌಡ, ಸರ್ಕಲ್ ಇನ್ಸ್ ಪೆಕ್ಟರ್ ಆನಂದ್ ಕುಮಾರ್, ನಗರ್ತ ಮಂಡಳಿ ಅಧ್ಯಕ್ಷ ಕೆ.ಆರ್.ಶಿವಶಂಕರ್, ಆರ್.ಮಲ್ಲಿಕಾರ್ಜುನ, ಮುಖೇಶ್, ಮಂಜುನಾಥ, ಮುರಳಿ, ಆರ್.ಎನ್.ಮನೋಜ್, ಬಿ.ಸಿ.ನಂದೀಶ್ ಹಾಜರಿದ್ದರು.

ಕಸಾಪ ವತಿಯಿಂದ “ತತ್ವಾಮೃತ” ಕಾರ್ಯಕ್ರಮ

0

ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗೇಟ್ ನ ಬಯಲಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಕಸಾಪ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ನಡೆದ “ತತ್ವಾಮೃತ” ಕಾರ್ಯಕ್ರಮವನ್ನು ಉದ್ಘಾಟಿಸಿ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್ ಮಾತನಾಡಿದರು.
ದಾಸರ ಪದಗಳು, ಕೈವಾರ ತಾತಯ್ಯನವರ ತತ್ವಪದಗಳು, ಕೀರ್ತನೆಗಳನ್ನು ಹಾಡುವ ಗಾಯಕರನ್ನು ಗೌರವಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಗೌರವಿಸಿ ಜನರಿಗೆ ಹತ್ತಿರವಾಗಿಸುವ ಕೆಲಸವನ್ನು ಕಸಾಪ ಮಾಡುತ್ತಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಾದ್ಯಂತ ಪ್ರತಿ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ “ತತ್ವಾಮೃತ” ಕಾರ್ಯಕ್ರಮವನ್ನು ನಡೆಸುವ ಉದ್ದೇಶವಿದೆ. ಈ ಮೂಲಕ ಪ್ರತಿಯೊಂದು ಹಳ್ಳಿಯಲ್ಲೂ ಎಲೆ ಮರೆಯ ಕಾಯಿಯಂತೆ ಇರುವ ಗಾಯಕರಿಗೆ ಕಸಾಪ ಗೌರವ ಸಲ್ಲಿಸುತ್ತದೆ. ಆಧುನಿಕತೆಯು ನಮ್ಮನ್ನು ಆವರಿಸಿಕೊಳ್ಳುತ್ತಾ ದೇಸೀ ಸಾಹಿತ್ಯದ ಶಕ್ತಿ ಮತ್ತು ಬೇರುಗಳಾದ ತತ್ವಪದ, ದಾಸರ ಪದ ಮತ್ತು ಜನಪದ ಗೀತೆಗಾಯನಗಳು ಮರೆಯಾಗುತ್ತಿವೆ. ಅದನ್ನು ಹೆಚ್ಚು ಪ್ರಚುರಗೊಳಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮೊಟ್ಟಮೊದಲ ಕಾರ್ಯಕ್ರಮವನ್ನು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ನಡೆಸಲಾಗುತ್ತಿದೆ. ತತ್ವ ಪದಗಳ ಗಾಯಕ ಗಮಕಗಳ ಕಿಮ್ಮತ್ತಿಗೆ ಎಲ್ಲರೂ ಕಿವಿಗೊಡುವಂತಾಗಬೇಕು ಎಂದರು.
ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ಪ್ರತಿಯೊಂದು ಹಳ್ಳಿಯಲ್ಲೂ ಯಾವುದೇ ಫಲಾಪೇಕ್ಷೆಯಿಲ್ಲದೆ ಕಲೆಯ ಆಸಕ್ತಿಯಿಂದ ತಮ್ಮ ಪಾಡಿಗೆ ತಾವು ಭಜನೆ, ತತ್ವಪದ ನಡೆಸಿಕೊಂಡು ಬರುವವರಿದ್ದಾರೆ. ಅವರನ್ನು ಗುರುತಿಸಿ ಗೌರವಿಸುವ ಮೂಲಕ ಅವರ ಕಲೆ ಹಾಗೂ ಜಾನಪದ ಸಾಹಿತ್ಯವನ್ನು ನಾವು ಕಸಾಪ ಮೂಲಕ ಗೌರವಿಸುತ್ತಿದ್ದೇವೆ. ಯುವ ಪೀಳಿಗೆ ಕೂಡ ಕಲೆಯತ್ತ ಆಕರ್ಷಿತರಾಗಲು ನಾವು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಂಭತ್ತು ಮಂದಿ ಕಲಾವಿದರನ್ನು ಕಸಾಪ ವತಿಯಿಂದ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಲಾಯಿತು.
ಚಿಂತಾಮಣಿ ತಾಲ್ಲೂಕು ಕಸಾಪ ಅಧ್ಯಕ್ಷ ಪಾಪಣ್ಣ, ಕೆ.ಪಿ.ಸಿ.ಸಿ ಸದಸ್ಯ ಶ್ರೀನಿವಾಸ್, ಶಂಕರ್, ವೀರಪ್ಪ, ವೆಂಕಟರಾಯಪ್ಪ, ಮುನಿಆಂಜಿನಪ್ಪ, ತಿಪ್ಪೇನಹಳ್ಳಿ ರಾಘವೇಂದ್ರ ಭಾಗವತರ್, ನಾಮದೇವ್, ಎ.ಎನ್.ಮುನಿನಾರಾಯಣಪ್ಪ, ರಾಜಗೋಪಾಲ್, ಅಪ್ಪಾಜಿಗೌಡ, ರೋಹಿಣಿ ಕುಮಾರ್, ಹನುಮಂತರಾಯಪ್ಪ, ರಾಮಚಂದ್ರಪ್ಪ, ಮಂಜುನಾಥ್, ನರಸಿಂಹಮೂರ್ತಿ, ಮರಿಯಣ್ಣ, ವೀರೇಗೌಡ, ರಮೇಶ್ ಹಾಜರಿದ್ದರು.

ಶನೇಶ್ವರಸ್ವಾಮಿಯ ಬ್ರಹ್ಮರಥೋತ್ಸವ

0

ನಗರದ ಕೆ.ಎಚ್.ಬಿ ಕಾಲೋನಿಯ ಗಾಯತ್ರಿನಗರದಲ್ಲಿನ ಮಹಾಗಣಪತಿ, ಗಾಯತ್ರಿದೇವಿ ಮತ್ತು ಶನೇಶ್ವರಸ್ವಾಮಿ ದೇವಾಲಯದಲ್ಲಿ ಮಂಗಳವಾರ ಮಹಾಲಕ್ಷ್ಮಿಯಾಗ ಹಾಗೂ ೨೧ನೇ ವರ್ಷದ ಶನೇಶ್ವರ ಜಯಂತಿ, 108 ಲೀಟರ್ ಕ್ಷೀರಾಭಿಷೇಕ ಹಾಗೂ ಬ್ರಹ್ಮರಥೋತ್ಸವವನ್ನು ಆಯೋಜಿಸಲಾಗಿತ್ತು.
ಶನೇಶ್ವರ ಜಯಂತಿ ಪ್ರಯುಕ್ತ ಸಾಮೂಹಿಕ ಎಳ್ಳು ದೀಪೋತ್ಸವ, ಶನೇಶ್ವರಸ್ವಾಮಿಯ ಹೋಮ, ತೈಲಾಭಿಷೇಕ, 108 ಲೀಟರ್ ಹಾಲು ಮತ್ತು 108 ಲೀಟರ್ ಮೊಸರು ಅಭಿಷೇಕ, ಪಂಚಾಮೃತಾಭಿಷೇಕ, ಶಾಲ್ಯಾನ್ನ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಮಾಡಲಾಯಿತು.
ನಾಲ್ಕು ದಿನಗಳ ಕಾಲ ನಡೆಯುವ ವಿವಿಧ ಪೂಜಾ ಕಾರ್ಯಕ್ರಮಗಳು ಸೋಮವಾರ ಪ್ರಾರಂಭಗೊಂಡಿದ್ದು, ಗುರುವಾರದ ತನಕ ಸಾಗಲಿದೆ. ಈ ಪೂಜಾ ಕಾರ್ಯಗಳ ನಡುವೆ ಮಂಗಳವಾರ ಕೆ.ಎಚ್.ಬಿ. ಕಾಲೋನಿಯ ಮುಖ್ಯರಸ್ತೆಗಳಲ್ಲಿ ಬ್ರಹ್ಮರಥೋತ್ಸವದ ಮೆರವಣಿಗೆಯನ್ನು ಮಾಡಲಾಯಿತು. ನೂರಾರು ಭಕ್ತರು ನೆರೆದಿದ್ದರು. ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಪ್ರಧಾನ ಅರ್ಚಕ ವಿ.ಎನ್.ರಾಮಮೋಹನ್ ಶಾಸ್ತ್ರಿ, ನಗರಸಭಾ ಸದಸ್ಯರಾದ ನಾರಾಯಣಸ್ವಾಮಿ, ಸುಗುಣ ಲಕ್ಷ್ಮಿನಾರಾಯಣ್, ನಗರ್ತಮಂಡಳಿಯ ಶಿವಶಂಕರ್, ವಸಂತಕುಮಾರ್, ತೀರ್ಥಂಕರ, ಡಾ.ಸತ್ಯನಾರಾಯಣ್ ಹಾಜರಿದ್ದರು.

ಕೋಚಿಮುಲ್ ನೂತನ ನಿರ್ದೇಶಕರಿಗೆ ಅಭಿನಂದನಾ ಸಮಾರಂಭ

0

ತಾಲ್ಲೂಕಿನಲ್ಲಿ ನೀರಿನ ಕೊರತೆಯಿಂದಾಗಿ ರೇಷ್ಮೆ ಬೆಳೆಯು ಕುಸಿಯುತ್ತಿದೆ. ಉಳಿದಿರುವ ಏಕೈಕ ದಾರಿ ಹೈನುಗಾರಿಕೆಯಾದ್ದರಿಂದ ಈ ಉದ್ಯಮವನ್ನು ಎಲ್ಲರ ಸಹಕಾರದಿಂದ ಉಳಿಸಿಕೊಂಡು ಹೋಗಬೇಕಾದಂತಹ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್ ತಿಳಿಸಿದರು.
ನಗರದ ಕೋಚಿಮುಲ್ ಶಿಬಿರ ಘಟಕದ ಕಚೇರಿ ಸಭಾಂಗಣದಲ್ಲಿ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಂಘದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ಕೋಚಿಮುಲ್ ನೂತನ ನಿರ್ದೇಶಕರಿಗೆ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಹಾಲು ಉತ್ಪಾದಕರ ಸಹಕಾರ ಸಂಘಗಳು ಅಭಿವೃದ್ದಿಯಾಗಬೇಕಾದರೆ ಅಲ್ಲಿ ಕೆಲಸ ಮಾಡುವಂತಹ ಸಿಬ್ಬಂದಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವುದರೊಂದಿಗೆ ಹಾಲಿನ ಗುಣಮಟ್ಟ ಕಾಪಾಡಬೇಕು ಎಂದರು.
ವಿವಿಧ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಅನುಭವ ಹೊಂದಿದ್ದು ಕೋಚಿಮುಲ್‌ನ ನಿರ್ದೇಶಕನಾಗಿ ನನ್ನ ಅಧಿಕಾರಾವಧಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಏಳಿಗೆಗಾಗಿ ಶ್ರಮಿಸುತ್ತೇನೆ ಎಂದರು.
ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಜಿ.ಎಂ.ತಿಪ್ಪಾರೆಡ್ಡಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ನಾವು ಬೇರೆ ರಾಜ್ಯ ಮತ್ತು ರಾಷ್ಟ್ರದೊಂದಿಗೆ ಸ್ಪರ್ಧೆ ಮಾಡಬೇಕಾದರೆ ಉತ್ಪಾದನೆಯ ಜೊತೆ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಹಾಲಿನ ಉತ್ಪಾದನೆಯ ಜೊತೆಗೆ ಗುಣಮಟ್ಟ ಕಾಪಾಡಲು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರೂ ಹಾಗೂ ಕಾರ್ಯದರ್ಶಿಗಳು ತಮ್ಮ ಕರ್ತವ್ಯ ನಿರ್ವಹಿಸಬೇಕು. ಇನ್ನು ತಾಲ್ಲೂಕಿನ ಸಾದಲಿ ಹೋಬಳಿಯ ಎಸ್.ಗೊಲ್ಲಹಳ್ಳಿ ಬಳಿ ನಿರ್ಮಿಸಲು ಉದ್ದೇಶಿಸಿರುವ ಪಶು ಆಹಾರ ಘಟಕದಿಂದ ಸ್ಥಳೀಯರಿಗೆ ಉದ್ಯೋಗ ಸಿಗುವುದರಿಂದ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಲು ನೂತನ ನಿರ್ದೇಶಕರು ಕ್ರಮ ಜರುಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಶಿಬಿರ ಘಟಕದ ಉಪವ್ಯವಸ್ಥಾಪಕ ಡಾ.ಚಂದ್ರಶೇಖರ್, ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಂಘದ ಅಧ್ಯಕ್ಷ ಬೋದಗೂರು ಚಂದ್ರೇಗೌಡ, ಉಪಾಧ್ಯಕ್ಷ ರಾಮದಾಸ್, ಶಿಬಿರ ಘಟಕದ ಸಿಬ್ಬಂದಿ ಕುಮ್ಮಣ್ಣ, ವಿಸ್ತರಣಾಧಿಕಾರಿಗಳಾದ ಉಮೇಶ್‌ರೆಡ್ಡಿ, ಶಂಕರ್, ಜಯಚಂದ್ರ, ನರಸಿಂಹಯ್ಯ ಹಾಜರಿದ್ದರು.

ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ ಜನ್ಮದಿನಾಚರಣೆ ಕಾರ್ಯಕ್ರಮ

0

ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಕಸಾಪ ವತಿಯಿಂದ ಆಯೋಜಿಸಿದ್ದ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ತ್ತೊಂಬತ್ತನೇ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಭಾರತೀಯರಲ್ಲಿ ತಮ್ಮ ಮೊನಚು ಬರಹ, ಹಾಡುಗಳ ಮುಖಾಂತರ ಕಿಚ್ಚು ತುಂಬಿದವರು ಬಂಗಾಳಿ ಕವಿ, ಕಾದಂಬರಿಕಾರ, ಪತ್ರಕರ್ತ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಎಂದು ಅವರು ತಿಳಿಸಿದರು.
“ವಂದೇ ಮಾತರಂ” ಅಂದರೆ “ತಾಯಿ ವಂದಿಸುವೆ” ಎಂದು. ಈ ಮಾತಿನ ಮೋಡಿಗೆ ಮರುಳಾಗಿ ಲೆಕ್ಕವಿಲ್ಲದಷ್ಟು ಜನ ನಗುನಗುತ್ತಾ ನೇಣು ಗಂಭವನ್ನೇರಿ ಹುತಾತ್ಮರಾಗಿದ್ದಾರೆ. ರಕ್ತದ ಕಣಕಣಗಳಲ್ಲಿ ಕ್ಷಣ ಮಾತ್ರದಲ್ಲಿ ದೇಶಭಕ್ತಿಯ ಆವಾಹನೆ ಮಾಡಿ, ಶತಮಾನಗಳ ಕಾಲ ಭದ್ರವಾಗಿ ಬೇರೂರಿದ್ದ ಬ್ರಿಟಿಷ್ ಸಾಮ್ರಾಜ್ಯದ ಬುಡವನ್ನೇ ಅಲ್ಲಾಡಿಸಿದ್ದ ರಣಮಂತ್ರ ವಂದೇ ಮಾತರಂ. ಇಂದು ಈ ರಣಮಂತ್ರದ ಜನ್ಮದಾತನಾದ ಬಂಕಿಮ ಚಂದ್ರರ ಜನ್ಮದಿನ.
ಮಹರ್ಷಿ ಅರವಿಂದರು ಹೇಳುವಂತೆ, “ಭಾರತ ಕೇವಲ ಒಂದು ಭೂಪ್ರದೇಶವಲ್ಲ, ಅದು ಒಂದು ಶಕ್ತಿಯ ಸ್ವರೂಪ’. ಆದರೆ ಈ ಶಕ್ತಿ ಸ್ವರೂಪಿಣಿಯ ಆರಾಧನೆಯಾಗಬೇಕಿದೆ. ಭಾರತೀಯರು ಜಾತಿ, ಪ್ರಾಂತ್ಯ, ಭಾಷೆ, ಧರ್ಮವನ್ನು ಮೀರಿ ರಾಷ್ಟ್ರೀಯತೆಯನ್ನು ಒಪ್ಪಬೇಕಾಗಿದೆ. ಹಾಗೆ ಆದಾಗಲೇ, ಭಾರತದ ಪುನರುತ್ಥಾನ ಸಾಧ್ಯ. ಇದಕ್ಕೆ ವಂದೇಮಾತರಂ ಸ್ಫೂರ್ತಿಯಾಗುತ್ತದೆ ಎಂದು ಹೇಳಿದರು.
ಮುಖ್ಯಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ ಮತ್ತು ಶಿಕ್ಷಕ ಚಾಂದ್ ಪಾಷ ಅವರು ಬಂಕಿಮ ಚಂದ್ರರ ಜೀವನ, ಸಾಹಿತ್ಯದ ಬಗ್ಗೆ ವಿವರಿಸಿದರು. ಸಿಬ್ಬಂದಿ ವೆಂಕಟಮ್ಮ ಹಾಜರಿದ್ದರು.

ತಾಲ್ಲೂಕು ಆಡಳಿತದ ವತಿಯಿಂದ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತ್ಯುತ್ಸವ ಆಚರಣೆ

0

ಬೆಂಗಳೂರು ನಗರವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಲ್ಲಿ ಭದ್ರಬುನಾದಿ ಹಾಕಿದ ನಾಡಪ್ರಭು ಕೆಂಪೇಗೌಡರನ್ನು ಯಾವುದೇ ಒಂದು ಸಮಾದಾಯಕ್ಕೆ ಸೀಮಿತಗೊಳಿಸದೇ ಎಲ್ಲರೂ ಗೌರವಿಸುವಂತಹ ಕೆಲಸವಾಗಬೇಕು ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ನಗರದ ಕಂದಾಯ ಭವನದ ಮುಂಭಾಗದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಎಲ್ಲಾ ಸಮುದಾಯಗಳ ಎಲ್ಲಾ ಕಸುಬುಗಳಿಗೆ ಮನ್ನಣೆ ಸಿಕ್ಕಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂಬ ಸತ್ಯವನ್ನಿರಿತು ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಿರ್ಮಾಣ ಮಾಡಿದ್ದಾರೆ. ವಿವಿಧ ಸಮುದಾಯದವರಿಗೆ ಅವರದೇ ಆದಂತಹ ಪೇಟೆಗಳನ್ನು ನಿರ್ಮಿಸಿ ಆರ್ಥಿಕ ಸಬಲೀಕರಣಕ್ಕೆ ಅವಕಾಶ ಮಾಡಿಕೊಡುವ ಮೂಲಕ ಸಮಾಜದ ಎಲ್ಲಾ ವರ್ಗಗಳ ಪ್ರೀತಿ ಗಳಿಸಿದ್ದ ನಾಡಪ್ರಭು ಕೆಂಪೇಗೌಡರು ಮುಂದಿನ ಪೀಳಿಗೆಗಾಗಿ ಸಾವಿರಾರು ಕೆರೆ, ಕುಂಟೆ, ಕಲ್ಯಾಣಿಗಳನ್ನು ನಿರ್ಮಿಸುವ ಮೂಲಕ ನಾಡಿಗೆ ಮಾದರಿಯಾಗಿದ್ದಾರೆ ಎಂದರು.
ಸರ್ಕಾರ ಒಳ್ಳೆಯ ಸದುದ್ದೇಶ ಇಟ್ಟುಕೊಂಡು ಮಹಾತ್ಮರ ಜಯಂತಿಗಳನ್ನು ಆಚರಿಸುತ್ತಿದೆಯಾದರೂ ಜಯಂತಿಗಳಲ್ಲಿ ಆಯಾ ಸಮುದಾಯದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸದೇ ಇರುವುದು ನಿಜಕ್ಕೂ ದುರಾದೃಷ್ಟಕರ. ಆಯಾ ಸಮಾಜದಲ್ಲಿ ಏನೇನು ಕೊರತೆಯಿದೆ, ಸಮಾಜದ ಏಳಿಗೆಗಾಗಿ ಏನು ಮಾಡಬೇಕು ಎನ್ನುವುದನ್ನು ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನಗಳಾಗಬೇಕು. ನಿರೀಕ್ಷಿತ ಮಟ್ಟದಲ್ಲಿ ಸಮುದಾಯದ ಬೆಳವಣಿಗೆಯಾಗಬೇಕಾದರೆ ಎಲ್ಲರೂ ಸಂಘಟಿತರಾಗಬೇಕು ಎಂದರು.
ತಹಶೀಲ್ದಾರ್ ಎಸ್.ಅಜಿತ್‌ಕುಮಾರ್ ರೈ ಮಾತನಾಡಿ, ಕೆರೆ, ಕುಂಟೆ, ಕಲ್ಯಾಣಿಗಳಿಂದ ಎಲ್ಲಾ ವರ್ಗದ ಜನರು ಸಾಮರಸ್ಯವಾಗಿ ಜೀವಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕಿಕೊಟ್ಟಂತಹ ನಾಡಪ್ರಭು ಕೆಂಪೇಗೌಡರನ್ನು ಎಲ್ಲರೂ ಸ್ಮರಿಸುವ ಕೆಲಸ ಆಗಬೇಕು ಎಂದರು.
ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ಗುರುವಾರ ಬೆಳಗ್ಗೆ ತಾಲ್ಲೂಕಿನ ಬೋದಗೂರು ಗ್ರಾಮದ ಬಳಿ ಶಾಸಕ ವಿ.ಮುನಿಯಪ್ಪ ಹಾಗೂ ಗಣ್ಯರು ಸಸಿಗಳನ್ನು ನೆಟ್ಟರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಇಓ ಬಿ.ಶಿವಕುಮಾರ್, ನೂತನ ತಹಶೀಲ್ದಾರ್ ಎಂ.ದಯಾನಂದ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಪೌರಾಯುಕ್ತ ಜಿ.ಎನ್.ಚಲಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್, ಸರ್ಕಲ್ ಇನ್ಸ್ ಪೆಕ್ಟರ್ ಆನಂದ್‌ಕುಮಾರ್, ಕೋಚಿಮುಲ್ ನಿರ್ದೇಶಕ ಶ್ರೀನಿವಾಸ್, ಭಕ್ತರಹಳ್ಳಿ ಬೈರೇಗೌಡ, ಜೆ.ವಿ.ವೆಂಕಟಸ್ವಾಮಿ, ಕೆಂಪಣ್ಣ ಹಾಜರಿದ್ದರು.

ವೈ.ಹುಣಸೇನಹಳ್ಳಿಯ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರ

0

ತಾಲ್ಲೂಕಿನ ವೈ.ಹುಣಸೇನಹಳ್ಳಿಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ಆರೋಗ್ಯ ಇಲಾಖೆ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್ ಮಾತನಾಡಿದರು.
ಜಿಲ್ಲೆಯಲ್ಲಿನ ವಿವಿಧ ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ರಕ್ತದ ಅವಶ್ಯಕತೆ ಇದ್ದು, ಅದಕ್ಕಾಗಿ ತಾಲ್ಲೂಕಿನ ಹಲವು ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸುತ್ತಿದ್ದೇವೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್ ಅವರು ತಿಲಿಸಿದರು.
ರೆಡ್‌ಕ್ರಾಸ್‌ ಸಂಸ್ಥೆ ಜಿಲ್ಲಾ ಶಾಖೆಯು ಶಿಬಿರ ಆಯೋಜನೆ ಸೇರಿದಂತೆ ವಿವಿಧ ಚಟುವಟಿಕೆಯಲ್ಲಿ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ. ಹೆಚ್ಚು ಮಂದಿ ರಕ್ತದಾನಕ್ಕೆ ಮುಂದಾಗಬೇಕು. ಈ ಮೂಲಕ ರಕ್ತದ ಕೊರತೆ ನಿವಾರಣೆಗೆ ನೆರವಾಗಬೇಕು. ಯುವ ಸಮುದಾಯ ಈ ಕುರಿತು ಹೆಚ್ಚು ಗಮನ ಹರಿಸಬೇಕು ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶಮೂರ್ತಿ ಮಾತನಾಡಿ, ರಕ್ತದಾನದಿಂದ ಒಂದು ಜೀವವನ್ನು ಉಳಿಸಬಹುದಾಗಿದೆ. ಇಂತಹ ಮಹತ್ಕಾರ್ಯಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕಿದೆ. ರಕ್ತದಾನದ ಬಗ್ಗೆ ಹಲವರಲ್ಲಿ ತಪ್ಪು ಕಲ್ಪನೆ ಇದ್ದು, ಅರಿವು ಮೂಡಿಸಬೇಕಾದ ಅವಶ್ಯಕತೆ ಇದೆ. ಇದು ಆರೋಗ್ಯದ ಮೇಲೆ ಯಾವುದೆ ದುಷ್ಪರಿಣಾಮ ಬೀರುವುದಿಲ್ಲ. ರಕ್ತದಾನದಿಂದ ಉತ್ತಮ ಆರೋಗ್ಯ ಹೊಂದಬಹುದೆಂಬುದರ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದರು.
ವೈ.ಹುಣಸೇನಹಳ್ಳಿ ಆಡಳಿತ ವೈದ್ಯಾಧಿಕಾರಿ ಡಾ.ಮಂಜುನಾಥಪ್ರಸಾದ್, ಡಾ.ಮಾರುತಿನಂದನ್, ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರಿಪ್ರಸಾದ್, ಪಿಡಿಒ ಸಿದ್ದಣ್ಣ, ಕೊತ್ತನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ, ಪಿಡಿಒ ಅಶ್ವತ್ಥನಾರಾಯಣ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಡಾ.ಪ್ರಸಾದ್, ಆಸ್ಪತ್ರೆಯ ಸಿಬ್ಬಂದಿಗಳಾದ ಸಿದ್ದಾರ್ಥಿ, ಹನುಮಂತಗೌಡ, ನಳಿನ, ಪ್ರಯೋಗಶಾಲಾ ತಂತ್ರಜ್ಞ ಟಿ.ಟಿ.ನರಸಿಂಹಪ್ಪ, ಆಶಾ ಕಾರ್ಯಕರ್ತೆಯರು ಹಾಜರಿದ್ದರು.

ರೇಷ್ಮೆ ಬೆಳೆಗಾರರ ಸಮಸ್ಯೆಗಳನ್ನು ಸರಿಪಡಿಸಲು ಮನವಿ

0

ನಗರದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಮಂಗಳವಾರ ಭೇಟಿ ನೀಡಿದ್ದ ರೇಷ್ಮೆ ಇಲಾಖೆಯ ಆಯುಕ್ತ ಸಿ.ಜಿ.ವೃಷಭೇಂದ್ರ ಮೂರ್ತಿ ಅವರಿಗೆ ರೇಷ್ಮೆ ಬೆಳೆಗಾರರು, ರೀಲರುಗಳು ಹಾಗೂ ರೈತ ಮುಖಂಡರು ತಮ್ಮ ಸಮಸ್ಯೆಗಳನ್ನು ವಿವರಿಸಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ರೇಷ್ಮೆ ಬೆಳೆಗಾರರಿಗೆ ಮೊಟ್ಟೆ ಧಾರಣೆ ಹೆಚ್ಚಳವಾಗಿದೆ. ನೂರು ರೇಷ್ಮೆ ಮೊಟ್ಟೆಗೆ ೩,೫೦೦ ರಿಂದ ೩,೮೦೦ ರೂ ಇದೆ. ಅದನ್ನು ಕಡಿಮೆ ಮಾಡಬೇಕು. ಹನಿ ನೀರಾವರಿ ಸಲಕರಣೆಗಳನ್ನು ಐದು ವರ್ಷಕ್ಕೊಮ್ಮೆ ಹೊಸತು ನೀಡಬೇಕು. ಹುಳುಮನೆ, ಶೆಡ್ ನಿರ್ಮಾಣಕ್ಕೆ ಹೆಚ್ಚು ಹಣ ನೀಡಿ. ಆಧುನಿಕ ಯಂತ್ರೋಪಕರಣಗಳನ್ನು ರೇಷ್ಮೆ ಬೆಳೆಗಾರರಿಗೆ ಒದಗಿಸಿ. ರೇಷ್ಮೆ ಗೂಡಿನ ಧಾರಣೆ ಕುಸಿದಾಗ ಒಂದು ಕೆ.ಜಿಗೆ ೧೦೦ ರೂ ಕೊಡಬೇಕು. ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಕುಡಿಯುವ ನೀರು, ಶೌಚಾಲಯ ಮುಂತಾದ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಿ. ಮಳೆಗಾಲದಲ್ಲಿ ರೇಷ್ಮೆ ಗೂಡು ಬಿಚ್ಚಾಣಿಕೆಯ ಪರೀಕ್ಷಣೆಯ ನೆಪದಲ್ಲಿ ರೀಲರುಗಳು ಕೇ.ಜಿಗಟ್ಟಲೆ ರೇಷ್ಮೆ ಗೂಡನ್ನು ರೈತರಿಂದ ಪಡೆದು ತೆಗೆದುಕೊಂಡು ಹೋಗುವ ಕೆಟ್ಟ ಅಭ್ಯಾಸವಿದೆ. ಅದನ್ನು ತಪ್ಪಿಸಲು ರೇಷ್ಮೆ ಗೂಡಿನ ಮಾರುಕಟ್ಟೆಯ ಒಳಗೆ ಪರೀಕ್ಷೆ ಮಾಡುವ ವ್ಯವಸ್ಥೆಯನ್ನು ಕಲ್ಪಿಸಬೇಕು. ಚಿಕ್ಕಬಳ್ಳಾಪುರದಲ್ಲಿ ರೇಷ್ಮೆ ಗೂಡಿನ ಮಾರುಕಟ್ಟೆಯ ಮುಂಭಾಗದಲ್ಲಿನ ಎರಡು ಎಕರೆ ಜಾಗದಲ್ಲಿ ರೇಷ್ಮೆ ಕೃಷಿ ಭವನ ನಿರ್ಮಿಸಬೇಕು. ಮಾರುಕಟ್ಟೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರಿಗೆ ಪ್ರತಿ ತಿಂಗಳು ಸಂಬಳ ನಿಗದಿತವಾಗಿ ನೀಡಿ ಎಂಬ ಬೇಡಿಕೆಗಳನ್ನು ಮುಂದಿಟ್ಟರು.
ರೇಷ್ಮೆ ಇಲಾಖೆಯ ಆಯುಕ್ತ ಸಿ.ಜಿ.ವೃಷಭೇಂದ್ರ ಮೂರ್ತಿ ಮಾತನಾಡಿ, ನಾನು ಅಧಿಕಾರವನ್ನು ವಹಿಸಿಕೊಂಡು ಕೇವಲ ಮೂರು ದಿನಗಳಾಗಿವೆ. ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿನ ರೇಷ್ಮೆ ಬೆಳೆಗಾರರು, ರೀಲರುಗಳು ಹಾಗೂ ರೈತ ಮುಖಂಡರ ಬೇಡಿಕೆಗಳು, ಸಮಸ್ಯೆಗಳನ್ನೆಲ್ಲಾ ದಾಖಲಿಸಿಕೊಂಡಿದ್ದೇನೆ. ಹಂತಹಂತವಾಗಿ ಎಲ್ಲಾ ಬೇಡಿಕೆಗಳನ್ನೂ ಈಡೇರಿಸುವೆನೆಂದು ಭರವಸೆ ನೀಡಿದರು.
ರೇಷ್ಮೆ ಗೂಡಿನ ಮಾರುಕಟ್ಟೆಯ ಆವರಣದಲ್ಲಿರುವ ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿಯ ಮಳಿಗೆಗೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸಿದರು. ಕೆಲವು ರೇಷ್ಮೆ ಬಿಚ್ಚಾಣಿಕಾ ಘಟಕಗಳನ್ನು ಭೇಟಿ ನೀಡಿದರು. ಆ ಸಂದರ್ಭದಲ್ಲಿ ರೈತಸಂಘದ ಜಿಲ್ಲಾ ಉಪಾಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ ಮತ್ತು ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್ ಮಾತನಾಡಿ, ನಮ್ಮಲ್ಲಿನ ರೇಷ್ಮೆ ಗೂಡನ್ನು ಸರ್ಕಾರದ ವತಿಯಿಂದ ಖರೀದಿಸಿ ಕೆ.ಎಸ್.ಐ.ಸಿ ರೇಷ್ಮೆ ಉತ್ಪಾದನೆ ಹಾಗೂ ಸೀರೆ ತಯಾರಿ ಮಾಡಲಾಗುತ್ತಿದೆ. ಆ ಮಗ್ಗಗಳ ಕಾರ್ಖಾನೆಗಳನ್ನು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮಾಡಿ ಇಲ್ಲಿನ ಆರ್ಥಿಕತೆ ಇನ್ನಷ್ಟು ಅಭಿವೃದ್ಧಿಯಾಗುತ್ತದೆ. ರೇಷ್ಮೆ ಗೂಡಿನ ಮಾರುಕಟ್ಟೆಯಂತೆ ಕಚ್ಚಾ ರೇಷ್ಮೆಯ ಮಾರುಕಟ್ಟೆಯನ್ನು ಮಾಡಿ. ಸೂರತ್, ಧರ್ಮಾವರಂ, ಕಂಚಿ ಮುಂತಾದೆಡೆಗಳಿಂದ ರೇಷ್ಮೆ ಖರೀದಿಸಲು ನಮ್ಮಲ್ಲಿಗೆ ಬರುವಂತೆ ಮಾಡುವ ಮೂಲಕ ತಾಲ್ಲೂಕು ಇನ್ನಷ್ಟು ಬೆಳವಣಿಗೆ ಕಾಣುತ್ತದೆ ಎಂದು ಸಲಹೆ ನೀಡಿದರು.
ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಎಸ್.ವಿ.ಕುಮಾರ್, ಉಪನಿರ್ದೇಶಕ ಸುಭಾಷ್ ಬಿ.ಸಾತೇನಹಳ್ಳಿ, ಸಹಾಯಕ ನಿರ್ದೇಶಕ ಬೋಜಣ್ಣ, ರೈತಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಎಸ್.ಎಂ.ನಾರಾಯಣಸ್ವಾಮಿ, ಕೆಂಪರೆಡ್ಡಿ, ರಾಮಚಂದ್ರಪ್ಪ, ದೇವರಾಜ್, ವೇಣುಗೋಪಾಲ್, ಮುನಿನಂಜಪ್ಪ, ಕೃಷ್ಣಪ್ಪ, ರಮೇಶ್, ಮೂರ್ತಿ, ಕೆಂಪಣ್ಣ, ಚನ್ನಕೇಶವ, ರಾಮಕೃಷ್ಣಪ್ಪ ಹಾಜರಿದ್ದರು.

ರೈತ ಸಚಿವರುಗಳ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರ

0

ರೈತರು ತಾವು ಬೆಳೆದ ನೆಳೆಗೆ ಸೂಕ್ತ ಬೆಲೆ ಸಿಗದೇ ಮಾಡಿದ ಸಾಲ ತೀರಿಸಲಾಗದ ಸ್ಥಿತಿಗೆ ತಲುಪಿದ್ದಾರೆ. ರೈತರ ಕಷ್ಟ ಸರ್ಕಾರಕ್ಕೆ ಮುಟ್ಟಬೇಕಾದರೆ ರೈತರೆಲ್ಲರು ಸಂಘಟಿತರಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆಯಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ತಾಲ್ಲೂಕಿನ ಮಳ್ಳೂರು ಬಳಿಯಿರುವ ಭಟ್ರೇನಹಳ್ಳಿ ಶ್ರೀ ಸಾಯಿನಾಥ ಜ್ಞಾನಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಶನಿವಾರ ಆಯೋಜಿಸಿದ್ದ ರೈತ ಸಚಿವರುಗಳ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದ ರೈತರ ಸ್ಥಿತಿ ಇಂದು ಅಯೋಮಯವಾಗಿದೆ. ಒಂದೆಡೆ ಅತಿವೃಷ್ಟಿ, ಮತ್ತೊಂದೆಡೆ ಅನಾವೃಷ್ಟಿ. ಇದರ ನಡುವೆ ಬೆಳೆಯುವ ಬೆಳೆಗಳಿಗೆ ತಗಲುವ ರೋಗ ಬಾಧೆ, ಕೀಟಗಳ ಹಾವಳಿಯಿಂದ ರಕ್ಷಿಸಿಕೊಂಡು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೇ ಇರುವುದರಿಂದ ರೈತರು ಕಂಗೆಟ್ಟು ದಿಕ್ಕು ತೋಚದಂತಾಗಿದ್ದಾರೆ. ಇಂತಹ ರೈತರ ರಕ್ಷಣೆಗೆ ಮುಂದಾಗಬೇಕಾದ ಸರ್ಕಾರಗಳ ನಿರ್ಲಕ್ಷ್ಯದಿಂದ ರೈತರು ವಿಧಿಯಿಲ್ಲದೆ ಆತ್ಮಹತ್ಯೆಯಂತಹ ಕೃತ್ಯಕ್ಕೆ ಮುಂದಾಗುತ್ತಿದ್ದಾರೆ. ಇದಕ್ಕೆ ಸರ್ಕಾರಗಳ ನಿರ್ಲಕ್ಷ್ಯ ಧೋರಣೆಯೇ ಮುಖ್ಯ ಕಾರಣ ಎಂದು ದೂರಿದರು.
ಬೆಂಗಳೂರಿನ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ನಟರಾಜ್ ಹುಳಿಯಾರ್ ಅವರು ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಅವರ ಚಿಂತನೆ ವಿಷಯಾಧಾರಿತವಾಗಿ ನಡೆದ ಗೋಷ್ಟಿಯಲ್ಲಿ ಮಾತನಾಡಿ, ದೇಶದಲ್ಲಿ ೧೦೦ ಮಂದಿ ಉದ್ಯಮಿಗಳು ೪.೫ ಲಕ್ಷ ಕೋಟಿ ಸಾಲವನ್ನು ಪಡೆದುಕೊಂಡಿರುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೀಡಿರುವ ವರದಿ ಹೇಳುತ್ತಿದೆ. ಅವರ ಹೆಸರುಗಳನ್ನು ಬಹಿರಂಗಪಡಿಸುತ್ತಿಲ್ಲ. ಆದರೆ ರೈತರು ತೆಗೆದುಕೊಂಡಿರುವ ೧ ಲಕ್ಷ, ೨ ಲಕ್ಷ ರೂಪಾಯಿಗಳಿಗೆ ಬ್ಯಾಂಕುಗಳಿಂದ ನೊಟೀಸ್‌ಗಳನ್ನು ಕಳುಹಿಸುತ್ತಾರೆ. ಜಪ್ತಿ ಮಾಡುವ ಬೆದರಿಕೆ ಹಾಕುತ್ತಾರೆ. ಇಂತಹ ಘಟನಾವಳಿಗಳಿಂದ ಪ್ರೇರಿತರಾಗಿ ರೈತ ಚಳುವಳಿಯನ್ನು ಕಟ್ಟಿದ ಪ್ರೊ.ನಂಜುಂಡಸ್ವಾಮಿ ಅವರು ಅನೇಕ ಸರ್ಕಾರಗಳನ್ನು ಸರಿದಾರಿಗೆ ತರುವ ಪ್ರಯತ್ನಗಳನ್ನು ಮಾಡಿದ್ದರು.
ಒಡೆಯರ್ ಕಾಲದಲ್ಲಿ ಜಾರಿಗೆ ತಂದಿದ್ದ ತೆರಿಗೆ ಕಟ್ಟುವ ಪದ್ಧತಿಯನ್ನು ವಿರೋಧಿಸಿದ್ದ ನಂಜುಂಡಸ್ವಾಮಿ ಅವರು, ನಿರಂತರವಾಗಿ ಹೋರಾಟಗಳನ್ನು ಮಾಡಿಕೊಂಡು ಬರುವ ಮೂಲಕ ಕೇವಲ ಕರ್ನಾಟಕ ರಾಜ್ಯವಲ್ಲದೆ ದೇಶದಲ್ಲಿ ಎಲ್ಲಾ ವರ್ಗದ ರೈತರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಹೋರಾಟ ಮಾಡಿದ್ದಾರೆ. ಅವರಲ್ಲಿದ್ದ ಹೋರಾಟದ ಕಿಚ್ಚು ಎಲ್ಲಾ ರೈತರಲ್ಲಿ ಬರಬೇಕು.
ಎಲ್ಲಾ ಜಾತಿ ವರ್ಗದ ರೈತರು ಸಮಾನವಾದ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ರೈತರಿಗೆ ಜಾತಿ, ಮತ, ಧರ್ಮಗಳೆಂಬ ಭೇದಭಾವವಿರಬಾರದು. ಸಂಘಟನೆಗಳು, ಎಲ್ಲಾ ಜಾತಿ, ವರ್ಗದ ರೈತರು ಹಾಗೂ ಅಸಂಘಟಿತ ವಲಯದಲ್ಲಿರುವ ಕಾರ್ಮಿಕ ಸಂಘಟನೆಗಳನ್ನು ಒಟ್ಟುಗೂಡಿಸಿಕೊಂಡು ಸಂಘಟನೆ ಮಾಡಿಕೊಂಡರೇ ಮಾತ್ರವೇ ರೈತರ ಕೂಗಿಗೆ ಬೆಲೆ ಸಿಗುತ್ತದೆ. ರೈತರು ಸರಳ ವಿವಾಹಗಳ ಕಡೆಗೆ ಹೆಚ್ಚಿನ ಚಿಂತನೆ ನಡೆಸಬೇಕು ಎಂದರು.
ರೈತ ಚಳುವಳಿ ಮಾಸಪತ್ರಿಕೆ ಸಂಪಾದಕ ಡಾ.ರವಿಕುಮಾರ್‌ಬಾಗಿ ಮಾತನಾಡಿ, ರೈತರ ಸಾಲ ಮನ್ನಾದಿಂದ ಯಾವುದೇ ಶಾಶ್ವತ ಪರಿಹಾರ ದೊರೆಯುವುದಿಲ್ಲ. ಬದಲಿಗೆ ರೈತರಿಗೆ ಕಡಿಮೆ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ, ಉಳುಮೆ ಪರಿಕರಗಳು, ಸಕಾಲಕ್ಕೆ ಮಣ್ಣು ಪರೀಕ್ಷೆ ಮಾಡಿ ಯಾವ ಬೆಳೆಯನ್ನು ಬಿತ್ತಬೇಕು, ಏಕ ಬೆಳೆಯ ಬದಲಿಗೆ ಬಹುಬೆಳೆಯನ್ನು ಬೆಳೆಯುವ ಕೌಶಲ್ಯಗಳ ಅರಿವನ್ನು ಮೂಡಿಸುವ ಕೆಲಸವಾಗಬೇಕು. ಬೆಳೆಗೆ ಉತ್ತಮ ಮಾರುಕಟ್ಟೆಯನ್ನು ತೆರೆದು ಆರ್ಥಿಕ ಲಾಭಕ್ಕೆ ಸಹಕರಿಸಬೇಕು. ಈ ರೀತಿಯಲ್ಲಿ ವ್ಯವಸ್ಥೆ ಮಾಡಿದರೆ ಯಾವ ರೈತರು ಯಾರ ಬಳಿಯೂ ಕೈಚಾಚುವುದಿಲ್ಲ. ಸ್ವಾವಲಂಬಿಯಾಗಿ ಜೀವನ ನಡೆಸುತ್ತಾರೆ. ಈ ಬಗ್ಗೆ ಜನಪ್ರತಿನಿಧಿಗಳು ಆಲೋಚಿಸಿ ಕಾರ್ಯಪ್ರವೃತ್ತರಾಗಬೇಕು ಎಂದರು.
ರೈತ ಸಚಿವರುಗಳ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರವನ್ನು ಧ್ವಜಾರೋಹಣ ಹಾಗೂ ಸಸಿ ನೆಡುವ ಮೂಲಕ ಉದ್ಘಾಟನೆ ಮಾಡಲಾಯಿತು.
ರಾಜ್ಯ ರೈತ ಸಂಘ ಹಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ತಾದೂರು ಮಂಜುನಾಥ್ ಹಾಜರಿದ್ದರು.

೫ ನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ

0

ಯೋಗ ಯಾವುದೇ ಧರ್ಮ, ಪಂಥ ಅಥವಾ ಮತಕ್ಕೆ ಸೀಮಿತವಲ್ಲ. ಅದೊಂದು ಜೀವನ ಪದ್ಧತಿ. ದೇಹ ಮತ್ತು ಮನಸ್ಸು ಆರೋಗ್ಯವಾಗಿರಿಸಿಕೊಳ್ಳಲು ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡುವುದನ್ನು ರೂಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಎಸ್.ಅಜಿತ್ ಕುಮಾರ್ ರೈ ತಿಳಿಸಿದರು.
ನಗರದ ಕೋಟೆ ವೃತ್ತದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ೫ ನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಯೋಗಾಸನ ಪ್ರದರ್ಶನ, ಮತ್ತು ಶೋಭಾಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯೋಗ ಕೇವಲ ದೈಹಿಕ ವ್ಯಾಯಾಮ ಮಾತ್ರವಲ್ಲ, ಶರೀರ, ಬುದ್ಧಿ, ಮನಸ್ಸು ಸಮತೋಲನ ಸಾಧಿಸುವ ಜೀವನ ವಿಧಾನವಾಗಿದೆ. ಹಾಗಾಗಿ ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಯೋಗ ಮಾಡುವುದನ್ನು ರೂಡಿಸಿಕೊಳ್ಳಿ ಎಂದರು.
ಶ್ರೀ ಪತಂಜಲಿ ಯೋಗ ಸಮಿತಿಯ ಸೌಪರ್ಣಿಕಾ ವಲಯ ಸಂಯೋಜಕ ಪಿ.ಶ್ರೀಕಾಂತ್ ಮಾತನಾಡಿ, ವಿಶ್ವದ ನೂರಾರು ರಾಷ್ಟ್ರಗಳಲ್ಲಿ ಇಂದು ‘ವಿಶ್ವ ಯೋಗ ದಿನಾಚರಣೆ’ ನಡೆಸಲಾಗುತ್ತಿರುವುದು ಯೋಗದ ಹಿರಿಮೆಯನ್ನು ತಿಳಿಸುತ್ತದೆ. ಭಾರತೀಯ ಯೋಗ ಪದ್ಧತಿಗೆ ವಿಶ್ವಮಾನ್ಯತೆ ದೊರಕಿರುವುದು ಹೆಮ್ಮೆಯ ಸಂಗತಿ. ಒತ್ತಡ ಬದುಕಿನಿಂದ ಮತ್ತು ಆಧುನಿಕ ಆಹಾರ ಪದ್ಧತಿಯಿಂದಾಗಿ ನಾನಾ ಖಾಯಿಲೆಗಳಿಂದ ಜನರು ಬಳಲುತ್ತಿದ್ದು, ಇದಕ್ಕೆ ಯೋಗ ಪರಿಹಾರವಾಗಲಿದೆ. ದೇಹ ದೇವಾಲಯವಿದ್ದಂತೆ ಅದನ್ನು ಶುದ್ಧಿಯಾಗಿಟ್ಟುಕೊಳ್ಳುವುದೇ ಯೋಗ ಎಂದರು.
ಈ ಸಂದರ್ಭದಲ್ಲಿ ಸೂರ್ಯ ನಮಸ್ಕಾರ ಸೇರಿದಂತೆ ವಿವಿಧ ಆಸನಗಳನ್ನು ಯೋಗಪಟುಗಳು ಮಾಡಿದರು. ಪ್ರಾಣಾಯಾಮ ಸಹ ಯೋಗಾಸನದ ನಂತರ ಮಾಡಲಾಯಿತು. ಮುಖ್ಯ ರಸ್ತೆಯಲ್ಲಿ ಯೋಗ ಪಟುಗಳಿಂದ ಶೋಭಾಯಾತ್ರೆಯನ್ನು ಆಯೋಜಿಸಲಾಗಿತ್ತು. ನಂತರ ಪ್ರಸಾದವನ್ನು ವಿತರಿಸಲಾಯಿತು.

ಗಂಗಮ್ಮದೇವಿ ಕರಗ ಮಹೋತ್ಸವ

0

ನಗರದ ಕಾಮಾಟಿಗರ ಪೇಟೆಯಲ್ಲಿರುವ ಗ್ರಾಮದೇವತೆ ಶ್ರೀ ಗಂಗಮ್ಮ ದೇವಾಲಯದ ಸೇವಾ ಸಮಿತಿ ವತಿಯಿಂದ ಸೋಮವಾರ ರಾತ್ರಿ ಶ್ರೀ ದ್ರೌಪದಮ್ಮನವರ ಪ್ರಥಮ ವರ್ಷದ ಹೂವಿನ ಕರಗ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕರಗದ ಪ್ರಯುಕ್ತ ನಗರದ ವಿಶೇಷ ವಾದ್ಯಗೋಷ್ಠಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಆಕರ್ಷಕ ತಮಟೆ ವಾದ್ಯ ಗಮನ ಸೆಳೆಯಿತು. ವೀರಕುಮಾರರು ಅಲಗು ಸೇವೆ ಮಾಡಿದರು. ಹಲಗೆ, ತಮಟೆ ವಾದ್ಯಗಳೊಂದಿಗೆ ಕರಗ ದೇವಾಲಯದ ಪ್ರದಕ್ಷಿಣೆ ಮಾಡಿ ನರ್ತಿಸಿತು. ಮುಂದೆ ಕತ್ತಿ ಹಿಡಿದ ವೀರಕುಮಾರರು, ಹಿಂದೆ ಕುಣಿಯುತ್ತಾ ಕರಗ ರಾತ್ರಿಯಿಡೀ ಊರೆಲ್ಲಾ ಸಂಚರಿಸಿತು. ಕರಗವನ್ನು ಮುಳಬಾಗಿಲು ನಾಗರಾಜು ಹೊತ್ತಿದ್ದರು. ಪ್ರತಿಯೊಬ್ಬರೂ ತಮ್ಮ ಮನೆಗಳ ಮುಂದೆ ರಂಗೋಲಿ ಹಾಕಿ ಅಲ್ಲಿಗೆ ಕರಗ ಬರುತ್ತಿದ್ದಂತೆ ಭಕ್ತಿಯಿಂದ ಆರತಿ ಬೆಳಗಿ ಮಲ್ಲಿಗೆ ಹೂಗಳನ್ನು ಸಮರ್ಪಿಸಿದರು. ಊರಿನ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಶನಿವಾರ ಒನಕೆ ಕರಗ ಮತ್ತು ಅಗ್ನಿಕುಂಡವನ್ನು ದೇವಸ್ಥಾನದ ಬಳಿ ನಡೆಸಲಾಯಿತು.

ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಆಗ್ರಹ

0

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ತಾಲ್ಲೂಕು ವಾಲ್ಮೀಕ ನಾಯಕ ಮಹಾಸಭಾ ಹಾಗೂ ವಾಲ್ಮೀಕಿ ಯುವಸೇನೆ ವತಿಯಿಂದ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಅಧ್ಯಕ್ಷ ರಾಮಚಂದ್ರಪ್ಪ ಮಾತನಾಡಿದರು.
ಪರಿಶಿಷ್ಠ ವರ್ಗದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಶೇ ೭.೫ ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳು ಚಾಲನೆ ನೀಡಿರುವ ಬೃಹತ್ ಪಾದಯಾತ್ರೆಗೆ ಬೆಂಬಲ ವ್ಯಕ್ತಪಡಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲ್ಲೂಕು ಘಟಕ ಹಾಗೂ ವಾಲ್ಮೀಕಿ ಯುವಸೇನೆಯ ಪದಾಧಿಕಾರಿಗಳು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದೇವೆ ಎಂದು ಅವರು ತಿಳಿಸಿದರು.
ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳು ಕಳೆದ ಜೂನ್ ೯ ರಂದು ಪಾದಯಾತ್ರೆಗೆ ಚಾಲನೆ ನೀಡಿದ್ದು ದಾವಣಗೆರೆ, ಚಿತ್ರದುರ್ಗ, ಶಿರಾ ಮೂಲಕ ಮಂಗಳವಾರ ತುಮಕೂರಿಗೆ ಆಗಮಿಸಿದ್ದಾರೆ. ಎಲ್ಲಾ ಕಡೆ ಸಮುದಾಯದ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಪಾದಯಾತ್ರೆ ಬುಧವಾರ ನೆಲಮಂಗಲಕ್ಕೆ ತಲುಪಲಿದ್ದು ತಾಲ್ಲೂಕು ವಾಲ್ಮೀಕಿ ಸಂಘದ ನೂರಾರು ಪದಾಧಿಕಾರಿಗಳು ಅಲ್ಲಿಂದ ಸ್ವಾಮೀಜಿಗಳ ಪಾದಯಾತ್ರೆಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಲಿದ್ದೇವೆ ಎಂದರು.
ತಾಲ್ಲೂಕು ವಾಲ್ಮೀಕಿ ಯುವಸೇನೆಯ ಅಧ್ಯಕ್ಷ ಮುತ್ತೂರು ವೆಂಕಟೇಶ್ ಮಾತನಾಡಿ, ಕಳೆದ ಹತ್ತು ದಿನಗಳಿಂದ ನಮ್ಮ ಸಮುದಾಯದ ಸ್ವಾಮೀಜಿಗಳು ಪಾದಯಾತ್ರೆ ಮಾಡುತ್ತಿದ್ದರೂ ಸರ್ಕಾರ ಎಚ್ಚೆತ್ತುಕೊಳ್ಳದಿರುವುದು ದುರಂತ. ರಾಜ್ಯಾದ್ಯಂತ ಸುಮಾರು ೭೦ ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿರುವ ವಾಲ್ಮೀಕಿ ಸಮುದಾಯಕ್ಕೆ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಸಿಗುತ್ತಿಲ್ಲ. ಶೇ ೩ ರಷ್ಟು ಮಾತ್ರ ಮೀಸಲಾತಿ ಸಿಗುತ್ತಿದ್ದು ಅದನ್ನು ಶೇ ೭.೫ ರಷ್ಟು ಹೆಚ್ಚಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸ್ವಾಮೀಜಿಗಳು ಕೈಗೊಂಡಿರುವ ಪಾದಯಾತ್ರೆಯಲ್ಲಿ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ತಾಲ್ಲೂಕು ಪದಾಧಿಕಾರಿಗಳಾದ ಶ್ರೀನಾಥ್, ಕುಂದಲಗುರ್ಕಿ ಮುನಿಯಪ್ಪ, ಮುನಿರಾಜು, ಯುವಸೇನೆಯ ಸಿ.ಆನಂದ, ನರಸಿಂಹಪ್ಪ ಹಾಜರಿದ್ದರು.

ಪಡಿತರಚೀಟಿಗಳ ಇ-ಕೆವೈಸಿ ನಿಯಮ; ಸಾರ್ವಜನಿಕರ ನಾನಾ ತೊಂದರೆಗಳು

0

ಪಡಿತರ ಚೀಟಿಗಳನ್ನು ಸಕ್ರಮಗೊಳಿಸಿಕೊಳ್ಳಲಿಕ್ಕಾಗಿ ರಾಜ್ಯ ಸರ್ಕಾರ, ನ್ಯಾಯಬೆಲೆ ಅಂಗಡಿಗಳಲ್ಲಿ ಕುಟುಂಬದ ಸದಸ್ಯರೆಲ್ಲರೂ ಬಯೋಮೆಟ್ರಿಕ್ ನೀಡುವಂತೆ ಆದೇಶ ಹೊರಡಿಸಿದ್ದು, ಇದರಿಂದ ಸಾಕಷ್ಟು ಸಮಸ್ಯೆಗಳು ಉದ್ಭವವಾಗುತ್ತಿದೆ. ಸಮಸ್ಯೆಗಳನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕರ್ನಾಟಕ ಮಾದಿಗ ದಂಡೋರ ತಾಲ್ಲೂಕು ಅಧ್ಯಕ್ಷ ಗುರುಮೂರ್ತಿ ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ತಾಲ್ಲೂಕಿನಲ್ಲಿ ಈಗಾಗಲೇ ಪಡಿತರಚೀಟಿಗಳನ್ನು ಸೈಬರ್ ಸೆಂಟರ್‌ಗಳಲ್ಲಿ ನವೀಕರಣ ಮಾಡಿಸುವ ಸಮಯದಲ್ಲಿ ಮರಣ ಹೊಂದಿರುವವರು ಮತ್ತು ಮದುವೆ ಆಗಿ ಗಂಡನ ಮನೆಗೆ ಹೋದವರನ್ನು ಬಿಟ್ಟು ಉಳಿದ ಕುಟುಂಬದ ಎಲ್ಲಾ ಸದಸ್ಯರು ಬೆರಳಚ್ಚುಗಳನ್ನು ನೀಡಬೇಕು. ಈ ವೇಳೆ ಕುಟುಂಬದವರಲ್ಲಿ ಇರುವವರೆಲ್ಲರೂ ಬೆರಳಚ್ಚುಗಳನ್ನು ನೀಡಬೇಕು.
ಕುಟುಂಬದ ಸದಸ್ಯರ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಭರ್ತಿ ಮಾಡಿ, ನವೀಕರಿಸಿದ ನಂತರ ಬರುವ ರಸೀದಿಯನ್ನು ಮುದ್ರಣ ಚೀಟಿಯನ್ನು ತೆಗೆದುಕೊಂಡು ಆಹಾರ ನಿರೀಕ್ಷರ ಕಚೇರಿಗೆ ಹೋದರೆ ಅಲ್ಲಿ ಇ-ಕೆವೈಸಿ ಎಸ್ ಎಂದು ತೋರಿಸುತ್ತದೆ. ಈ ಪ್ರಕ್ರಿಯೆ ಮುಗಿದ ನಂತರ ಪುನಃ ನ್ಯಾಯಬೆಲೆ ಅಂಗಡಿಗಳಿಗೆ ವಾಪಸ್ಸು ಬಂದು ಇ-ಕೆವೈಸಿ ಮಾಡಿಸಬೇಕು ಎಂದು ಆನ್‌ಲೈನ್‌ನಲ್ಲಿ ಬರುತ್ತಿದೆ.
ಬಡವರು, ಕೂಲಿ ಕಾರ್ಮಿಕರು, ಶಾಲಾ ಕಾಲೇಜುಗಳಲ್ಲಿ ಬೇರೆ ಬೇರೆ ಕಡೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು, ವೃದ್ಧರೂ ಸೇರಿದಂತೆ ಮನೆ ಮಂದಿಯೆಲ್ಲಾ ನ್ಯಾಯಬೆಲೆ ಅಂಗಡಿಗಳ ಮುಂದೆ ಸಾಲಿನಲ್ಲಿ ದಿನವಿಡೀ ನಿಂತರೂ ಸರ್ವರ್ ಸಮಸ್ಯೆಯಿಂದಾಗಿ ಪದೇ ಪದೇ ಅಲೆದಾಡಬೇಕಾಗಿದೆ.
ಆಧಾರ್‌ಕಾರ್ಡ್‌ನಲ್ಲಿ ೫ ವರ್ಷದ ಹಿಂದೆ ತೆಗೆಸಿರುವ ಬೆರಳಚ್ಚುಗಳು ಈಗ ತಾಳೆಯಾಗುತ್ತಿಲ್ಲ. ಅಂತಹ ಮಕ್ಕಳಿಗೆ ಪುನಃ ಆಧಾರ್‌ಕಾರ್ಡುಗಳನ್ನು ಮಾಡಿಸಬೇಕಾದರೆ ಆಧಾರ್ ಸೇವಾ ಕೇಂದ್ರಗಳು ಗ್ರಾಮೀಣ ಭಾಗದಲ್ಲಿ ಇಲ್ಲದ ಕಾರಣ ತೊಂದರೆಯಾಗುತ್ತಿದೆ.
ಮದುವೆಯಾಗಿರುವ ಹೆಣ್ಣು ಮಕ್ಕಳು ಗಂಡನ ಮನೆಯವರ ಪಡಿತರ ಚೀಟಿಯಲ್ಲಿ ಸೇರಿಸಬೇಕಾದರೆ ಅವರ ಆದಾಯ ಪ್ರಮಾಣ ಪತ್ರವನ್ನು ಕೇಳಲಾಗುತ್ತಿದೆ. ಗಂಡನ ಮನೆ ವಿಳಾಸದಲ್ಲಿ ಆದಾಯ ಪ್ರಮಾಣಪತ್ರ ಮಾಡಿಸಲು ಹೋದರೆ ಕಂದಾಯ ಇಲಾಖೆಯವರು ಆ ವಿಳಾಸದಲ್ಲಿರುವ ಹೆಸರು ಮತ್ತು ಬಾವಚಿತ್ರ ಇರುವ ಪಡಿತರ ಚೀಟಿ ಕೇಳುತ್ತಾರೆ. ತಂದೆ-ತಾಯಿ ಪಡಿತರ ಚೀಟಿಯಿಂದ ಆದಾಯ ಪ್ರಮಾಣ ಪತ್ರವನ್ನು ಗಂಡನ ಪಡಿತರ ಚೀಟಿಗೆ ವರ್ಗಾವಣೆ ಮಾಡಿಸಿಕೊಡುವ ವ್ಯವಸ್ಥೆಯಾಗಬೇಕು.
ಸರ್ವರ್‌ಗಳ ಸಮಸ್ಯೆಗಳಿಂದಾಗಿ ಜನರು ದಿನವಿಡೀ ನ್ಯಾಯಬೆಲೆ ಅಂಗಡಿಗಳ ಮುಂದೆ, ಕೂಲಿ ಕೆಲಸವನ್ನು ಬಿಟ್ಟು ಸಾಲಿನಲ್ಲೆ ಇದ್ದು ಸಂಜೆ ೪ ಗಂಟೆಗೆ ಬಂದದಾರಿಗೆ ಸುಂಕವಿಲ್ಲದಂತೆ ವಾಪಸ್ಸಾಗುವಂತಾಗಿದ್ದು, ಸರ್ಕಾರ ಈ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.
ಆಹಾರ ಇಲಾಖೆಯ ಇನ್‌ಸ್ಪೆಕ್ಟರ್ ತ್ರಿವೇಣಿ ಮಾತನಾಡಿ, ರಾಜ್ಯಾದ್ಯಂತ ಒಂದೇ ರೀತಿ ನಿಯಮ ಜಾರಿಯಲ್ಲಿದೆ. ಸರ್ವರ್ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಇದುವರೆಗೂ ನಮ್ಮ ಕಚೇರಿಯಲ್ಲೆ ಜಿ.ಎಸ್.ಸಿ.ಮಾಡಲಿಕ್ಕೆ ಸಾಧ್ಯವಾಗುತ್ತಿಲ್ಲ. ಬೆಳಿಗ್ಗೆ ೧೦ ಗಂಟೆಯಿಂದ ೪ ಗಂಟೆಯ ತನಕ ಮಾಡಲಿಕ್ಕೆ ಅವಕಾಶ ನೀಡಿದ್ದಾರೆ. ಸರ್ವರ್ ಸಮಸ್ಯೆಯಿಂದ ಏನೂ ಮಾಡಲಿಕ್ಕೆ ಆಗುತ್ತಿಲ್ಲ ಎಂದರು.

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

0

ತಾಲ್ಲೂಕಿನ ಬಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದ್ಯಾವರಹಳ್ಳಿಯಿಂದ ಕಂಬಾಲಹಳ್ಳಿ ಗ್ರಾಮದವರೆಗೆ ೭೦ ಲಕ್ಷದ ವೆಚ್ಚದಲ್ಲಿ ರಸ್ತೆ ಮರು ಡಾಂಬರೀಕರಣ ಕಾಮಗಾರಿ, ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದ್ದೇಗಾರಹಳ್ಳಿಗೆ ೧ ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ೪೦ ಲಕ್ಷ ವೆಚ್ಚದಲ್ಲಿ ಎಸ್.ದೇವಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಕಪ್ಪನಹಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿ ಹಾಗು ೧೫ ಲಕ್ಷ ರೂ ವೆಚ್ಚದಲ್ಲಿ ಎಸ್.ಗುಂಡ್ಲಹಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಗುದ್ದಲಿಪೂಜೆ ನೆರವೇರಿಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಸರ್ಕಾರಿ ಯೋಜನೆಗಳನ್ನು ಜನರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವಂತಹ ರಸ್ತೆಗಳ ನಿರ್ಮಾಣಕ್ಕೂ ವಿಶೇಷ ಆದ್ಯತೆ ನೀಡಲಾಗುತ್ತಿದ್ದು, ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಗುಣಮಟ್ಟದಿಂದ ಪೂರ್ಣಗೊಳಿಸುವ ಮೂಲಕ ಅಭಿವೃದ್ಧಿಗೆ ಸಹಕಾರ ನೀಡಬೇಕು. ಸ್ಥಳೀಯ ಜನರೂ ಕೂಡಾ ಸ್ಥಳೀಯ ಕಾಮಗಾರಿಗಳ ಬಗ್ಗೆ ಗಮನಹರಿಸುವ ಜೊತೆಗೆ ಹಳ್ಳಿಗಳಲ್ಲಿ ಸ್ವಚ್ಚತೆಯನ್ನು ಕಾಪಾಡಲು ಮುಂದಾಗಬೇಕು ಎಂದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಮುನಿಯಪ್ಪ, ಮುಖಂಡರಾದ ದೊಡ್ಡತೇಕಹಳ್ಳಿ ಗೋಪಾಲರೆಡ್ಡಿ, ಗೊರಮಿಲ್ಲಹಳ್ಳಿ ವೆಂಕಟೇಶ್, ಗುತ್ತಿಗೆದಾರ ಟಿ.ಕೆ.ನಟರಾಜ್ ಹಾಜರಿದ್ದರು.