32.1 C
Sidlaghatta
Friday, March 29, 2024

ರೈತ ಸಚಿವರುಗಳ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರ

- Advertisement -
- Advertisement -

ರೈತರು ತಾವು ಬೆಳೆದ ನೆಳೆಗೆ ಸೂಕ್ತ ಬೆಲೆ ಸಿಗದೇ ಮಾಡಿದ ಸಾಲ ತೀರಿಸಲಾಗದ ಸ್ಥಿತಿಗೆ ತಲುಪಿದ್ದಾರೆ. ರೈತರ ಕಷ್ಟ ಸರ್ಕಾರಕ್ಕೆ ಮುಟ್ಟಬೇಕಾದರೆ ರೈತರೆಲ್ಲರು ಸಂಘಟಿತರಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆಯಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ತಾಲ್ಲೂಕಿನ ಮಳ್ಳೂರು ಬಳಿಯಿರುವ ಭಟ್ರೇನಹಳ್ಳಿ ಶ್ರೀ ಸಾಯಿನಾಥ ಜ್ಞಾನಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಶನಿವಾರ ಆಯೋಜಿಸಿದ್ದ ರೈತ ಸಚಿವರುಗಳ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದ ರೈತರ ಸ್ಥಿತಿ ಇಂದು ಅಯೋಮಯವಾಗಿದೆ. ಒಂದೆಡೆ ಅತಿವೃಷ್ಟಿ, ಮತ್ತೊಂದೆಡೆ ಅನಾವೃಷ್ಟಿ. ಇದರ ನಡುವೆ ಬೆಳೆಯುವ ಬೆಳೆಗಳಿಗೆ ತಗಲುವ ರೋಗ ಬಾಧೆ, ಕೀಟಗಳ ಹಾವಳಿಯಿಂದ ರಕ್ಷಿಸಿಕೊಂಡು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೇ ಇರುವುದರಿಂದ ರೈತರು ಕಂಗೆಟ್ಟು ದಿಕ್ಕು ತೋಚದಂತಾಗಿದ್ದಾರೆ. ಇಂತಹ ರೈತರ ರಕ್ಷಣೆಗೆ ಮುಂದಾಗಬೇಕಾದ ಸರ್ಕಾರಗಳ ನಿರ್ಲಕ್ಷ್ಯದಿಂದ ರೈತರು ವಿಧಿಯಿಲ್ಲದೆ ಆತ್ಮಹತ್ಯೆಯಂತಹ ಕೃತ್ಯಕ್ಕೆ ಮುಂದಾಗುತ್ತಿದ್ದಾರೆ. ಇದಕ್ಕೆ ಸರ್ಕಾರಗಳ ನಿರ್ಲಕ್ಷ್ಯ ಧೋರಣೆಯೇ ಮುಖ್ಯ ಕಾರಣ ಎಂದು ದೂರಿದರು.
ಬೆಂಗಳೂರಿನ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ನಟರಾಜ್ ಹುಳಿಯಾರ್ ಅವರು ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಅವರ ಚಿಂತನೆ ವಿಷಯಾಧಾರಿತವಾಗಿ ನಡೆದ ಗೋಷ್ಟಿಯಲ್ಲಿ ಮಾತನಾಡಿ, ದೇಶದಲ್ಲಿ ೧೦೦ ಮಂದಿ ಉದ್ಯಮಿಗಳು ೪.೫ ಲಕ್ಷ ಕೋಟಿ ಸಾಲವನ್ನು ಪಡೆದುಕೊಂಡಿರುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೀಡಿರುವ ವರದಿ ಹೇಳುತ್ತಿದೆ. ಅವರ ಹೆಸರುಗಳನ್ನು ಬಹಿರಂಗಪಡಿಸುತ್ತಿಲ್ಲ. ಆದರೆ ರೈತರು ತೆಗೆದುಕೊಂಡಿರುವ ೧ ಲಕ್ಷ, ೨ ಲಕ್ಷ ರೂಪಾಯಿಗಳಿಗೆ ಬ್ಯಾಂಕುಗಳಿಂದ ನೊಟೀಸ್‌ಗಳನ್ನು ಕಳುಹಿಸುತ್ತಾರೆ. ಜಪ್ತಿ ಮಾಡುವ ಬೆದರಿಕೆ ಹಾಕುತ್ತಾರೆ. ಇಂತಹ ಘಟನಾವಳಿಗಳಿಂದ ಪ್ರೇರಿತರಾಗಿ ರೈತ ಚಳುವಳಿಯನ್ನು ಕಟ್ಟಿದ ಪ್ರೊ.ನಂಜುಂಡಸ್ವಾಮಿ ಅವರು ಅನೇಕ ಸರ್ಕಾರಗಳನ್ನು ಸರಿದಾರಿಗೆ ತರುವ ಪ್ರಯತ್ನಗಳನ್ನು ಮಾಡಿದ್ದರು.
ಒಡೆಯರ್ ಕಾಲದಲ್ಲಿ ಜಾರಿಗೆ ತಂದಿದ್ದ ತೆರಿಗೆ ಕಟ್ಟುವ ಪದ್ಧತಿಯನ್ನು ವಿರೋಧಿಸಿದ್ದ ನಂಜುಂಡಸ್ವಾಮಿ ಅವರು, ನಿರಂತರವಾಗಿ ಹೋರಾಟಗಳನ್ನು ಮಾಡಿಕೊಂಡು ಬರುವ ಮೂಲಕ ಕೇವಲ ಕರ್ನಾಟಕ ರಾಜ್ಯವಲ್ಲದೆ ದೇಶದಲ್ಲಿ ಎಲ್ಲಾ ವರ್ಗದ ರೈತರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಹೋರಾಟ ಮಾಡಿದ್ದಾರೆ. ಅವರಲ್ಲಿದ್ದ ಹೋರಾಟದ ಕಿಚ್ಚು ಎಲ್ಲಾ ರೈತರಲ್ಲಿ ಬರಬೇಕು.
ಎಲ್ಲಾ ಜಾತಿ ವರ್ಗದ ರೈತರು ಸಮಾನವಾದ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ರೈತರಿಗೆ ಜಾತಿ, ಮತ, ಧರ್ಮಗಳೆಂಬ ಭೇದಭಾವವಿರಬಾರದು. ಸಂಘಟನೆಗಳು, ಎಲ್ಲಾ ಜಾತಿ, ವರ್ಗದ ರೈತರು ಹಾಗೂ ಅಸಂಘಟಿತ ವಲಯದಲ್ಲಿರುವ ಕಾರ್ಮಿಕ ಸಂಘಟನೆಗಳನ್ನು ಒಟ್ಟುಗೂಡಿಸಿಕೊಂಡು ಸಂಘಟನೆ ಮಾಡಿಕೊಂಡರೇ ಮಾತ್ರವೇ ರೈತರ ಕೂಗಿಗೆ ಬೆಲೆ ಸಿಗುತ್ತದೆ. ರೈತರು ಸರಳ ವಿವಾಹಗಳ ಕಡೆಗೆ ಹೆಚ್ಚಿನ ಚಿಂತನೆ ನಡೆಸಬೇಕು ಎಂದರು.
ರೈತ ಚಳುವಳಿ ಮಾಸಪತ್ರಿಕೆ ಸಂಪಾದಕ ಡಾ.ರವಿಕುಮಾರ್‌ಬಾಗಿ ಮಾತನಾಡಿ, ರೈತರ ಸಾಲ ಮನ್ನಾದಿಂದ ಯಾವುದೇ ಶಾಶ್ವತ ಪರಿಹಾರ ದೊರೆಯುವುದಿಲ್ಲ. ಬದಲಿಗೆ ರೈತರಿಗೆ ಕಡಿಮೆ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ, ಉಳುಮೆ ಪರಿಕರಗಳು, ಸಕಾಲಕ್ಕೆ ಮಣ್ಣು ಪರೀಕ್ಷೆ ಮಾಡಿ ಯಾವ ಬೆಳೆಯನ್ನು ಬಿತ್ತಬೇಕು, ಏಕ ಬೆಳೆಯ ಬದಲಿಗೆ ಬಹುಬೆಳೆಯನ್ನು ಬೆಳೆಯುವ ಕೌಶಲ್ಯಗಳ ಅರಿವನ್ನು ಮೂಡಿಸುವ ಕೆಲಸವಾಗಬೇಕು. ಬೆಳೆಗೆ ಉತ್ತಮ ಮಾರುಕಟ್ಟೆಯನ್ನು ತೆರೆದು ಆರ್ಥಿಕ ಲಾಭಕ್ಕೆ ಸಹಕರಿಸಬೇಕು. ಈ ರೀತಿಯಲ್ಲಿ ವ್ಯವಸ್ಥೆ ಮಾಡಿದರೆ ಯಾವ ರೈತರು ಯಾರ ಬಳಿಯೂ ಕೈಚಾಚುವುದಿಲ್ಲ. ಸ್ವಾವಲಂಬಿಯಾಗಿ ಜೀವನ ನಡೆಸುತ್ತಾರೆ. ಈ ಬಗ್ಗೆ ಜನಪ್ರತಿನಿಧಿಗಳು ಆಲೋಚಿಸಿ ಕಾರ್ಯಪ್ರವೃತ್ತರಾಗಬೇಕು ಎಂದರು.
ರೈತ ಸಚಿವರುಗಳ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರವನ್ನು ಧ್ವಜಾರೋಹಣ ಹಾಗೂ ಸಸಿ ನೆಡುವ ಮೂಲಕ ಉದ್ಘಾಟನೆ ಮಾಡಲಾಯಿತು.
ರಾಜ್ಯ ರೈತ ಸಂಘ ಹಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ತಾದೂರು ಮಂಜುನಾಥ್ ಹಾಜರಿದ್ದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!