Home Blog Page 347

ವಿಶ್ವ ಪರಿಸರ ದಿನಾಚರಣೆ ಹಾಗೂ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮ

0

ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಶಾಲೆಯ ಆವರಣದಲ್ಲಿ ನೆಟ್ಟ ಗಿಡವನ್ನು ಪೋಷಿಸುವುದು ಬಹಳ ಮುಖ್ಯ ಎಂದು ಅವರು ತಿಳಿಸಿದರು.
ಗಿಡ ನೆಟ್ಟು ಪೋಷಿಸುವ ಕೆಲಸ ಕೇವಲ ಅರಣ್ಯ ಇಲಾಖೆಯದ್ದಲ್ಲ, ಸಮಾಜದ ಪ್ರತಿ ಪ್ರಜೆಯ ಆದ್ಯ ಕರ್ತವ್ಯವಾಗಬೇಕು. ಶಾಲಾ ಮಕ್ಕಳು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಗಿಡಗಳನ್ನು ಪೋಷಿಸಲು ತಮ್ಮ ಸಮಯ ಮೀಸಲಿಡಬೇಕು. ಅಲ್ಲದೇ ಪರಿಸರ ಉಳಿವಿನ ಬಗ್ಗೆ ಇತರರಿಗೂ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಶಿಡ್ಲಘಟ್ಟ ಬಿ ವಿಭಾಗದ ಮೇಲ್ವಿಚಾರಕಿ ಜ್ಯೋತಿ ಮಾತನಾಡಿ, ಇಂದು ನಾವು ಸಸಿಗಳನ್ನು ನೆಟ್ಟು ಪೋಷಣೆ ಮಾಡಿದರೆ ಮುಂದಿನ ದಿನಗಳಲ್ಲಿ ಅವು ನಮಗೆ ಪ್ರಾಣವಾಯು ನೀಡುವ ಜತೆಗೆ ನಮ್ಮ ಆರೋಗ್ಯ ಕಾಪಾಡುತ್ತವೆ. ಪರಿಸರದ ಬಗ್ಗೆ ಕಾಳಜಿ ವಹಿಸಬೇಕಾದ ನಾವು ಎಲ್ಲಾ ಜವಾಬ್ದಾರಿಯನ್ನು ಸರಕಾರಕ್ಕೆ ವಹಿಸಿ ಸುಮ್ಮನಾದರೆ ಇದರಿಂದ ಮುಂದಿನ ದಿನಗಳಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ. ಶುದ್ಧ ಗಾಳಿಯನ್ನು ಹಣ ಕೊಟ್ಟು ಪಡೆಯುವ ಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಶಾಲಾ ಆವರಣದಲ್ಲಿ ವಿವಿಧ ಸಸಿಗಳನ್ನು ನೆಡಲಾಯಿತು.
ಎಸ್.ಡಿ.ಎಂ.ಸಿ ಅಧ್ಯಕ್ಷೆ ಪುಷ್ಪ ರಾಮಚಂದ್ರ, ಸದಸ್ಯ ಹನುಮಂತರೆಡ್ಡಿ, ಮುಖ್ಯ ಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ, ಶಿಕ್ಷಕರಾದ ಎಸ್.ಚಾಂದ್ ಪಾಷ, ಎಂ.ಭಾರತಿ, ಅಶೋಕ್, ಸಿಬ್ಬಂದಿ ವೆಂಕಟಮ್ಮ, ಲೀಲಮ್ಮ ಹಾಜರಿದ್ದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರ

0

ನಗರದ ಕ್ರೆಸೆಂಟ್ ವಿದ್ಯಾಸಂಸ್ಥೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮರುಮೌಲ್ಯಮಾಪನದ ನಂತರ ತಾಲ್ಲೂಕಿಗೆ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ಹಾಗೂ ೬೦೦ ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿದರು.
ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸುವುದರ ಹಿನ್ನೆಲೆಯಲ್ಲಿ ಅವರನ್ನು ಪ್ರೋತ್ಸಾಹಿಸುವುದರ ಜೊತೆಯಲ್ಲಿ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಸದಾಶಯವಿದೆ ಎಂದು ಅವರು ತಿಳಿಸಿದರು.
ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ. ಓದುವ ವಿದ್ಯಾರ್ಥಿಗಳಿಗೆ ವಿದ್ಯೆ ಒಲಿಯಬೇಕಾದರೆ ಶಿಸ್ತು, ಶ್ರದ್ಧೆ, ಅದಮ್ಯ ಕಲಿಕೋತ್ಸಾಹ ಮತ್ತು ಶ್ರಮವನ್ನು ಅದು ಬೇಡುತ್ತದೆ. ಎಲ್ಲರ ಬಳಿಯಿರುವುದೂ ಅದೇ ಸಮಯ. ಆದರೆ ಯಾರು ಯಾವುದಕ್ಕೆ ಸಮಯವನ್ನು ಮೀಸಲಿಡುತ್ತಾರೆ ಎಂಬುದು ಅವರ ಗುರಿಯನ್ನು ತಲುಪುವ ವೇಗವನ್ನು ನಿರ್ಧರಿಸುತ್ತದೆ. ಈ ರೀತಿಯ ಪ್ರತಿಭಾ ಪುರಸ್ಕಾರ ಇತರ ವಿದ್ಯಾರ್ಥಿಗಳ ಮುಂದೆ ನಡೆಸುವ ಉದ್ದೇಶ ಅವರಿಗೂ ಇವರಂತಾಗುವ ಛಲ, ಹುಮ್ಮಸ್ಸು, ಉತ್ಸಾಹ ಮತ್ತು ಆಸಕ್ತಿ ಮೂಡಲಿ ಎಂಬುದಾಗಿದೆ. ಈಗ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧವಾಗುತ್ತಿರುವ ವಿದ್ಯಾರ್ಥಿಗಳುಈಗಿನವರ ದಾಖಲೆಗಳನ್ನು ಮುರಿಯುವಂತಾಗಲಿ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಶೇ ೧೦೦ ರಷ್ಟು ಅಂಕಗಳನ್ನು ಪಡೆಯಲು ಕಾರಣರಾದ ಶಿಕ್ಷಕರನ್ನು ಸಹ ಗೌರವಿಸುವ ಕೆಲಸವಾಗಲಿ ಎಂದು ಹೇಳಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮರುಮೌಲ್ಯಮಾಪನದ ನಂತರ ೬೧೯ ಅಂಕಗಳನ್ನು ಗಳಿಸಿ ಬಿ.ಕೆ.ಚಂದನಾ ತಾಲ್ಲೂಕಿಗೆ ಪ್ರಥಮಳಾಗಿ. ಇಂಗ್ಲಿಷ್, ಹಿಂದಿ, ಗಣಿತ, ಸಮಾಜ ವಿಜ್ಞಾನ ವಿಷಯಗಳಲ್ಲಿ ಶೇ ೧೦೦ ಅಂಕಗಳನ್ನು ಪಡೆದಿದ್ದಾಳೆ. ಶಾಲೆಯ ವತಿಯಿಂದ ಬಿ.ಕೆ.ಚಂದನಾ ಗೆ ಪ್ರಶಸ್ತಿ ಫಲಕ, ಪುಸ್ತಕ ಮತ್ತು ಆರು ಸಾವಿರ ರೂ ನಗದನ್ನು ನೀಡಿ ಪುರಸ್ಕರಿಸಲಾಯಿತು. ಶಾಲೆಗೆ ದ್ವಿತೀಯನಾದ ಬಿ.ಆರ್.ಯಶ್ವಂತ್ ಗೆ ಪ್ರಶಸ್ತಿ ಫಲಕ, ಪುಸ್ತಕ ಮತ್ತು ನಾಲ್ಕು ಸಾವಿರ ರೂ ನಗದನ್ನು ನೀಡಿ, ವಿದ್ಯಾರ್ಥಿಗಳಾದ ಅರುಣ್ ಕುಮಾರ್, ರಾಹುಲ್ ಭಾರಧ್ವಾಜ್, ಸಾಗರ್ ರಾವಲ್, ಎಂ.ಎಂ.ಸ್ಕಂದನ್ ಅವರಿಗೆ ಒಂದು ಸಾವಿರ ರೂ ನೀಡಿ ಪುರಸ್ಕರಿಸಲಾಯಿತು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಕ್ರಮ ಮತ್ತು ಪರಿಶ್ರಮದ ಕುರಿತಾಗಿ ಅನುಭವಗಳನ್ನು ಹಂಚಿಕೊಂಡರು.
ಕ್ರೆಸೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಮಹಮ್ಮದ್ ಯೂಸುಫ್, ಕಾರ್ಯದರ್ಶಿ ತಮೀಮ್ ಅನ್ಸಾರಿ, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಅಧಿಕಾರಿ ನಟರಾಜ್, ಕಸಾಪ ನಗರ ಘಟಕದ ಅಧ್ಯಕ್ಷ ಸಿ.ಎನ್.ಮುನಿರಾಜು, ಶಿಕ್ಷಕರಾದ ಭಾಸ್ಕರ್, ಸುಬ್ರಮಣ್ಯ,ರಾಮಚಂದ್ರ, ಮೂರ್ತಿ ಹಾಜರಿದ್ದರು.

ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನಾಚರಣೆ

0

ನಗರದ ಸರ್ಕಾರಿ ಪ್ರೌಡಶಾಲಾ ಆವರಣದಲ್ಲಿ ಗುರುವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ ಹಾಗು ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ “ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನಾಚರಣೆ” ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಜೆಎಂಎಫ್‌ಸಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್ ಮಾತನಾಡಿದರು.
ಅಪ್ರಾಪ್ತ ವಯಸ್ಕರರನ್ನು ಕಾರ್ಖಾನೆ ಮತ್ತಿತರೆ ಕಡೆ ದುಡಿಮೆ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಕೇವಲ ಕಾನೂನು ದೃಷ್ಟಿಯಿಂದ ಅಪರಾಧ ಅಷ್ಟೇ ಅಲ್ಲದೆ, ಸಾಮಾಜಿಕವಾಗಿಯೂ ದುಷ್ಪರಿಣಾಮ ಬೀರಲಿದೆ ಎಂದು ಅವರು ತಿಳಿಸಿದರು.
ಬಾಲ ಕಾರ್ಮಿಕ ಪದ್ಧತಿಗೆ ಬಡತನ, ಅನಕ್ಷರತೆ, ಮೂಢನಂಬಿಕೆ ಮೊದಲಾದ ಏನೇ ಕಾರಣಗಳಿರಬಹದು. ಅವೆಲ್ಲವನ್ನೂ ಮೀರಿ ನಾವು ನೀವೆಲ್ಲರೂ ಸೇರಿ ಈ ಅನಿಷ್ಟ ಪದ್ಧತಿಯನ್ನು ನಿರ್ನಾಮ ಮಾಡಲು ಮುಂದಾಗಬೇಕಿದೆ. ಈ ಪದ್ಧತಿಯನ್ನು ಕೇವಲ ಕಾರ್ಮಿಕ ಇಲಾಖೆ ಅಥವ ಕಾನೂನಿನಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಸಮಾಜದ ಎಲ್ಲರೂ ಕೈಜೋಡಿಸಿ ಅನಿಷ್ಟ ಪದ್ಧತಿಗೆ ತಿಲಾಂಜಲಿ ಇಡಬೇಕಿದೆ. ಈ ದೇಶದ ಭವಿಷ್ಯದ ಪ್ರಜೆಗಳನ್ನು ಉತ್ತಮವಾಗಿ ರೂಪಿಸಲು ಎಲ್ಲರಿಗೂ ಉತ್ತಮ ಶಿಕ್ಷಣ ಸಿಗುವಂತಹ ವಾತಾವರಣ ನಿರ್ಮಿಸಬೇಕಿದೆ ಎಂದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ ಮಾತನಾಡಿ, ಹದಿನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ತೆಗೆದುಕೊಂಡರೆ ಅದು ಶಿಕ್ಷಾರ್ಹ ಅಪರಾಧ. ಅಂತಹ ಸಂದರ್ಭದಲ್ಲಿ ಕೆಲಸಕ್ಕೆ ತೆಗೆದುಕೊಂಡವರಿಗೆ ದಂಡದ ಜತೆಗೆ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಬಹುದು. ಬಾಲಕರನ್ನು ನೇಮಿಸಿಕೊಳ್ಳುವುದು ಎಷ್ಟು ತಪ್ಪೋ ದುಡಿಮೆಗೆ ದೂಡುವುದು ಕೂಡ ಅಷ್ಟೇ ಅಪರಾಧ. ನೇಮಕ ಮಾಡಿಕೊಳ್ಳುವ ಮಾಲೀಕರು ಹಾಗೂ ಅದಕ್ಕೆ ಅವಕಾಶ ಕೊಡುವ ಪೋಷಕರೂ ಸಹ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ ಎಂದರು.
ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಂಜುಕುಮಾರ್ ಎ ಪಚ್ಚಾಪುರೆ, ಸಿವಿಲ್ ನ್ಯಾಯಾಧೀಶರಾದ ಡಿ.ರೋಹಿಣಿ, ಸಹಾಯಕ ಸರ್ಕಾರಿ ಅಭಿಯೋಜಕಿ ಎಸ್.ಕುಮುದಿನಿ, ವಕೀಲರ ಸಂಘದ ಕಾರ್ಯದರ್ಶಿ ಎಂ.ಬಿ.ಲೋಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್, ಕಾರ್ಮಿಕ ನಿರೀಕ್ಷಕಿ ಕಲಾವಾಣಿ ಹಾಜರಿದ್ದರು.

ಆಧಾರ್ ಕಾರ್ಡು ನೋಂದಣಿ ಹಾಗೂ ತಿದ್ದುಪಡಿ ವ್ಯವಸ್ಥೆಗೆ ಒತ್ತಾಯ

0

ನಗರದ ವಿವಿಧ ವಾರ್ಡುಗಳು ಹಾಗೂ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಆಧಾರ್ ಕಾರ್ಡು ನೋಂದಣಿ ಹಾಗೂ ತಿದ್ದುಪಡಿ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಕರವೇ ತಾಲ್ಲೂಕು ಅಧ್ಯಕ್ಷ ಶ್ರೀಧರ್ ಒತ್ತಾಯಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ (ಎಚ್.ಶಿವರಾಮೇಗೌಡರ ಬಣ), ಕರವೇ ಸ್ವಾಭಿಮಾನಿ ಬಣ ಹಾಗೂ ಕರ್ನಾಟಕ ಜನಸೈನ್ಯ ಸಹಯೋಗದಲ್ಲಿ ಬುಧವಾರ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತೀಚೆಗೆ ಪಡಿತರ ಪಡೆಯಲು ಹಾಗೂ ವಿದ್ಯಾರ್ಥಿಗಳ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಅಗತ್ಯವಿರುವುದರಿಂದ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ ಕೇಂದ್ರಗಳ ಅಗತ್ಯತೆ ಸಾಕಷ್ಟಿದೆ. ಆದರೆ ತಾಲ್ಲೂಕಿನಾಧ್ಯಂತ ಆಧಾರ್ ತಿದ್ದುಪಡಿ ಮಾಡಿಸಲು ಯಾವುದೇ ಕೇಂದ್ರಗಳಿಲ್ಲ. ನಗರದ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಒಂದರಲ್ಲಿ ಆಧಾರ್ ಕಾರ್ಡ್ ನೋಂದಣಿ ಮಾಡಿಸುವ ವ್ಯವಸ್ಥೆ ಮಾಡಲಾಗಿದೆಯಾದರೂ ಸೂಕ್ತ ಸಿಬ್ಬಂದಿಯ ಕೊರತೆಯಿಂದ ಅಲ್ಲಿಯೂ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಕಾರ್ಯ ಆಗುತ್ತಿಲ್ಲ. ಹಾಗಾಗಿ ಪ್ರತಿನಿತ್ಯ ತಾಲ್ಲೂಕಿನ ಜನತೆ ಆಧಾರ್ ಕೇಂದ್ರಗಳ ಹುಡುಕಾಟದಲ್ಲಿಯೇ ಕಾಲ ಕಳೆಯುವಂತಾಗಿದೆ.
ಹಾಗಾಗಿ ತಾಲ್ಲೂಕು ಆಡಳಿತ ಕೂಡಲೇ ಎಚ್ಚೆತ್ತುಕೊಂಡು ನಗರದ ೩೧ ವಾರ್ಡುಗಳಿಗೆ ವಾರ್ಡುವಾರು ಒಂದೊಂದು ಆಧಾರ್ ನೋಂದಣಿ ಕೇಂದ್ರ ಹಾಗೂ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಜನತೆಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ಕಸಬಾ ರಾಜಸ್ವ ನಿರೀಕ್ಷಕ ವಿಶ್ವನಾಥ್ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ಜನಸೈನ್ಯದ ಅಧ್ಯಕ್ಷ ಎಂ.ಸೋಮಶೇಖರ್, ನಗರ ಘಟಕದ ನಾಗೇಶ್, ಪದಾಧಿಕಾರಿಗಳಾದ ಕುಮಾರ, ಶ್ರೀನಾಥ್, ವೇಣು, ಕರವೇ ಯುವ ಘಟಕದ ಅಧ್ಯಕ್ಷ ರವಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಶಿವಕುಮಾರ್, ಪದಾಧಿಕಾರಿಗಳಾದ ಮಂಜುನಾಥ, ಕೆ.ವಿ.ಗಂಗಾಧರ್, ಕರವೇ ಸ್ವಾಭಿಮಾನಿ ಬಣದ ತಾಲ್ಲೂಕು ಅಧ್ಯಕ್ಷ ಕೆ.ವಿ.ಮಂಜುನಾಥ, ಉಪಾಧ್ಯಕ್ಷ ಮುರಳೀ ಮೋಹನ್, ನಗರ ಘಟಕದ ಮೋಹನ್, ಮುನಿರಾಜು, ಅಂಜದ್ ಹಾಜರಿದ್ದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕರ್ನಾಡ್‌ ಅವರಿಗೆ ಶ್ರದ್ದಾಂಜಲಿ

0

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್‌ರ ಅಗಲಿಕೆ ಇಡೀ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಸಾಪ ಜಿಲ್ಲಾಧ್ಯಕ್ಷ ಕೈವಾರ ಶ್ರೀನಿವಾಸ್ ಹೇಳಿದರು.
ತಾಲ್ಲೂಕಿನ ಯಣ್ಣಂಗೂರು ಗ್ರಾಮದ ಹಾಲು ಉತ್ಪಾದಕರ ಸಹಾಕರ ಸಂಘದ ಆವರಣದಲ್ಲಿ ಕಸಾಪ ಪದಾಧಿಕಾರಿಗಳೊಂದಿಗೆ ಸೋಮವಾರ ಗಿರೀಶ್ ಕರ್ನಾಡ್‌ರಿಗೆ ಶ್ರದ್ದಾಂಜಲಿ ಸಲ್ಲಿಸಿ ಮಾತನಾಡಿದರು.
ಗಿರೀಶ್ ಕಾರ್ನಾಡ್ ಅವರು ಸಾಹಿತಿಯಾಗಿ ಅಲ್ಲದೇ ಚಿತ್ರರಂಗದಲ್ಲಿಯೂ ಗಣನೀಯ ಸೇವೆ ಸಲ್ಲಿಸಿ ದೇಶದ ಪ್ರತಿಷ್ಠಿತ ಪದ್ಮಶ್ರೀ ಸೇರಿದಂತೆ ವಿವಿಧ ಪುರಸ್ಕಾರಗಳಿಗೆ ಭಾಜನರಾಗಿದ್ದರು. ಕನ್ನಡ ಸಾಹಿತ್ಯ ಲೋಕಕ್ಕೆ ತನ್ನದೇ ಆದ ಜನಪದ, ಐತಿಹಾಸಿಕ, ಪುರಾಣ ವಸ್ತುಗಳನ್ನೊಳಗೊಂಡ ನಾಟಕಗಳ ರಚನೆಯ ಮೂಲಕ ನಾಡಿನ ಮನೆ ಮಾತಾಗಿದ್ದರು ಎಂದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕರ್ನಾಡ್‌ರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ನಡೆಸುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್, ಕಸಾಪ ಜಿಲ್ಲಾ ಖಜಾಂಚಿ ನಂಜುಂಡಪ್ಪ, ವೈದ್ಯ ಡಾ.ಮಂಜುನಾಥ್, ಕಸಾಪ ಪದಾಧಿಕಾರಿಗಳಾದ ಅಶೋಕ್, ಪ್ರಭು, ಶ್ರೀಧರ್, ಗ್ರಾಮಸ್ಥರಾದ ನಾಗೇಶ್, ಕೃಷ್ಣಪ್ಪ, ಮಕ್ಸೂದ್, ಪಿಳ್ಳನಾರಾಯಣಪ್ಪ, ನಂಜುಡಪ್ಪ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಹಂಡಿಗನಾಳ ಎಂ.ಪಿ.ಸಿ.ಎಸ್ ಕಟ್ಟಡಕ್ಕೆ ೨೫ ಲಕ್ಷ ರೂ; ಶಾಸಕ ವಿ.ಮುನಿಯಪ್ಪ ಭರವಸೆ

0

ತಾಲ್ಲೂಕಿನ ಹಂಡಿಗನಾಳದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಟ್ಟಡಕ್ಕೆ ಗುದ್ದಲಿಪೂಜೆಯನ್ನು ಭಾನುವಾರ ನೆರವೇರಿಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವು ಚೆನ್ನಾಗಿ ಕಾರ್ಯನಿರ್ವಹಿಸಿ ೪೫ ಲಕ್ಷ ರೂಗಳನ್ನು ಉಳಿತಾಯ ಮಾಡಿದ್ದಾರೆ. ಶಾಸಕರ ಅನುದಾನದಿಂದ ೨೫ ಲಕ್ಷರೂಗಳನ್ನು ಸುಸಜ್ಜಿತ ಕಟ್ಟಡ ನಿರ್ಮಾಣಕ್ಕಾಗಿ ನೀಡುತ್ತೇನೆ ಎಂದು ಅವರು ಭರವಸೆ ನೀಡಿದರು.
ಹೆಣ್ಣುಮಕ್ಕಳೇ ನಡೆಸುವ ಸಹಕಾರ ಸಂಘಗಳು ಯಶಸ್ವಿಯಾಗಿವೆ. ಅದಕ್ಕೆ ಉದಾಹರಣೆಯಾಗಿ ಹಂಡಿಗನಾಳದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದವರು ಅತ್ಯುತ್ತಮವಾಗಿ ಸಂಘವನ್ನು ನಡೆಸಿಕೊಂಡು ಇತರರಿಗೆ ಮಾದರಿಯೆನಿಸಿದ್ದಾರೆ. ಸುಮಾರು ೭೫ ಲಕ್ಷ ರೂ ವೆಚ್ಚದಲ್ಲಿ ಅತ್ಯುತ್ತಮ ಕಟ್ಟಡವನ್ನು ಕಟ್ಟಲು ಹೊರಟಿರುವುದು ಅಭಿನಂದನೀಯ. ಅವರು ಉಳಿತಾಯ ಮಾಡಿರುವ ಹಣದ ಜೊತೆಗೆ ನನ್ನ ನಿಧಿಯಿಂದ ೨೫ ಲಕ್ಷ ರೂ ನೀಡುತ್ತೇನೆ. ಕೆ.ಎಂ.ಎಫ್ ಹಾಗೂ ಕೋಚಿಮುಲ್ ನಿಂದ ತಲಾ ೩ ಲಕ್ಷ ರೂಗಳನ್ನು ನೀಡುವರು. ಗುಣಮಟ್ಟಕ್ಕೆ ರಾಜಿಯಾಗದೆ ದೂರದೃಷ್ಟಿಯಿಂದ ಸುಸಜ್ಜಿತ ಕಟ್ಟಡವನ್ನು ಕಟ್ಟಿ ಎಂದು ಹೇಳಿದರು.
ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಸುಜಾತಮ್ಮ ನಾಗರಾಜು, ಕಾರ್ಯದರ್ಶಿ ರೂಪಮ್ಮ, ಸದಸ್ಯರಾದ ಬೈರಮ್ಮ, ವಿ.ಅನಿತಾ, ಪಾರಿಜಾತ, ಅನಿತಾ, ಚಿಕ್ಕಮ್ಮ, ವೆಂಕಟಲಕ್ಷ್ಮಮ್ಮ, ಮುನಿರತ್ನಮ್ಮ, ಜಯಮ್ಮ, ಮಂಜುಳಮ್ಮ, ಕೋಚಿಮುಲ್ ನಿರ್ದೇಶಕ ಶ್ರೀನಿವಾಸ್, ವಿಸ್ತರಣಾಧಿಕಾರಿ ಶ್ರೀನಿವಾಸ್, ಗುಲಾಬ್ ಜಾನ್, ಗ್ರಾಮ ಪಂಚಾಯಿತಿ ಸದಸ್ಯ ಜಯರಾಮ್, ವಿ.ನಾಗರಾಜು, ರಾಮಾಂಜಿನಪ್ಪ ಹಾಜರಿದ್ದರು.

ಬಯಲುಸೀಮೆ ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾವಳಿ

0

ಗ್ರಾಮೀಣ ಭಾಗದ ಯುವಕರನ್ನು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವ ಸಲುವಾಗಿ ಬಯಲುಸೀಮೆ ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ ಎಂದು ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಯುವಶಕ್ತಿ ರಾಜ್ಯ ಉಪಾಧ್ಯಕ್ಷ ವಿಜಯಭಾವರೆಡ್ಡಿ ತಿಳಿಸಿದರು.
ಬೆಂಗಳೂರಿನಲ್ಲಿ ವಿವಿಧ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಬಯಲುಸೀಮೆ ಭಾಗದ ಯುವಕರ ತಂಡದಿಂದ ರಚನೆ ಮಾಡಿರುವ ಯುವಶಕ್ತಿಯ ಮೂಲಕ ಈಗಾಗಲೇ ಜಿಲ್ಲೆಯಾದ್ಯಂತ ಸುಮಾರು ೨೦ ಸಾವಿರ ಸಸಿಗಳನ್ನು ನೆಟ್ಟು ಪೋಷಣೆ ಮಾಡಲಾಗುತ್ತಿದೆ. ಈ ಭಾಗದ ಶಾಶ್ವತ ನೀರಾವರಿ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು, ಬಹಳಷ್ಟು ಯುವಕರನ್ನು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇದೀಗ ಯುವಜನರಲ್ಲಿ ಕ್ರೀಡಾಮನೋಭಾವ ಬೆಳೆಸುವುದರ ಜೊತೆಗೆ ಹಳ್ಳಿಗಳಲ್ಲಿ ನಮ್ಮ ಸಾಮಾಜಿಕ ಕಾರ್ಯಕ್ರಮಗಳಿಗೆ ಯುವಕರ ಸಹಭಾಗಿತ್ವ ಪಡೆದುಕೊಳ್ಳಲು ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು.
ಮುಂದಿನ ಜುಲೈ ೦೬ ಮತ್ತು ೦೭ ರಂದು ಚಿಲಕಲನೇರ್ಪು ಅಕ್ಷರ ಫೌಂಡೇಶನ್ ಹಾಗು ಯುವಶಕ್ತಿ ಸಹಯೋಗದಲ್ಲಿ ಅಕ್ಷರ ಶಾಲೆ (ಸಿ.ಇ.ಟಿ.ಮೈದಾನ) ಮೈದಾನದಲ್ಲಿ ನಡೆಯಲಿರುವ ವಾಲಿಬಾಲ್ ಪಂದ್ಯಾವಳಿಗಳಲ್ಲಿ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ತಂಡಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಮೊದಲು ನೋಂದಣಿ ಮಾಡಿಕೊಳ್ಳುವ ೪೦ ತಂಡಗಳಿಗೆ ಆಧ್ಯತೆ ನೀಡಲಾಗುತ್ತದೆ. ಈ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡುವ ಉತ್ತಮ ಆಟಗಾರರನ್ನು ಗುರುತಿಸಿ ಅಮೆರಿಕಾದಲ್ಲಿ ಅನಿವಾಸಿ ಭಾರತೀಯರಿಂದ ಆಯೋಜನೆಗೊಳ್ಳುತ್ತಿರುವ ಅಕ್ಕ ಟೂರ್ನಿಮೆಂಟ್‌ನಲ್ಲಿ ಭಾಗವಹಿಸಲಿಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಹೆಚ್ಚಿನ ಮಾಹಿತಿಗಾಗಿ ಶಿಡ್ಲಘಟ್ಟ ತಾಲ್ಲೂಕಿನ ತಂಡಗಳು, ೯೫೩೮೫೫೪೫೫೫, ೯೪೪೯೫೨೯೧೩೯ ಸಂಖ್ಯೆಗಳಿಗೆ ಸಂಪರ್ಕ ಮಾಡಬಹುದು ಎಂದರು.
ಯುವಶಕ್ತಿಯ ಪದಾಧಿಕಾರಿಗಳಾದ ಮುನಿರೆಡ್ಡಿ, ಮಂಜುನಾಥ್, ಬಿ.ವಿ.ರಾಘವೇಂದ್ರ, ಮಂಜುನಾಥ್ ಹಾಜರಿದ್ದರು.

ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭ

0

ನಗರದ ಕೋಟೆ ವೃತ್ತದಲ್ಲಿರುವ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಿಕ್ಷಣ ಪ್ರಾರಂಭಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿದರು.
ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸುವ ಉದ್ದೇಶದಿಂದ ಮತ್ತು ಪೋಷಕರ ಅಪೇಕ್ಷೆಯ ಮೇರೆಗೆ ತಾಲ್ಲೂಕಿನ ನಾಲ್ಕು ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸುತ್ತಿರುವುದಾಗಿ ಅವರು ತಿಳಿಸಿದರು.
ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗಿದೆ. ಶಿಕ್ಷಕರಿಗೆ ಇಂಗ್ಲಿಷ್‌ ಬೋಧನೆಯ ಕುರಿತು ವಿಶೇಷ ತರಬೇತಿ ನೀಡಲಾಗಿದೆ. ಮಾಸ್ಟರ್‌ ಆಫ್ ರಿಸೋರ್ಸ್‌ ಪರ್ಸನ್‌(ಎಂಆರ್‌ಪಿ) ತರಬೇತಿಯಡಿ ಶಿಕ್ಷಕರನ್ನು ಸಿದ್ಧಪಡಿಸಲಾಗಿದೆ. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಶಾಲೆಯನ್ನು ಆಯ್ಕೆ ಮಾಡಿದ್ದೇವೆ. ಕೋಟೆ ವೃತ್ತದಲ್ಲಿರುವ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ, ದೊಡ್ಡತೇಕಹಳ್ಳಿ, ಸಾದಲಿ ಮತ್ತು ಬಶೆಟ್ಟಹಳ್ಳಿ ಶಾಲೆಗಳನ್ನು ಆಯ್ಕೆ ಮಾಡಿದ್ದೇವೆ. ಮಕ್ಕಳ ಸಂಖ್ಯೆ ಹೆಚ್ಚಬೇಕಿದೆ. ತರಬೇತಿ ಪಡೆದಿರುವ ಬುದ್ದಿವಂತ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿದ್ದಾರೆ. ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದರು.
ಪೋಷಕರು ಮಕ್ಕಳನ್ನು ಈ ಶಾಲೆಗಳಲ್ಲಿ ಕನ್ನಡ ಅಥವಾ ಆಂಗ್ಲ ಮಾಧ್ಯಮದಲ್ಲಿ ಸೇರಿಸಲು ಅವಕಾಶ ಇರುತ್ತದೆ. ಅಲ್ಲದೆ ಕಳೆದ 10 ವರ್ಷದಲ್ಲಿ ಕಡಿಮೆ ಮಕ್ಕಳಿರುವ ಕನ್ನಡ ಶಾಲೆಗಳನ್ನು ಮುಚ್ಚಲಾಗಿದೆ. ಆದ್ದರಿಂದ ಇದನ್ನು ಗಂಭಿರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಕಳೆದ ವರ್ಷವೇ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸುವ ಬಗ್ಗೆ ನಿರ್ಧರಿಸಿತ್ತು. ಈ ವರ್ಷದಿಂದ ಅದು ಜಾರಿಯಾಗುತ್ತಿದೆ. ಒಟ್ಟಾರೆ ಸರ್ಕಾರಿ ಶಾಲೆಗಳನ್ನು ಉಳಿಸಬೇಕು. ಖಾಸಗಿ ಶಾಲೆಗಳಿಗೆ ತಕ್ಕ ಪೈಪೋಟಿ ನೀಡಬೇಕೆಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ನಡೆಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಗಿಡವನ್ನು ನೆಡಲಾಯಿತು. ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ನೀಡಲಾಯಿತು.
ಶಿಕ್ಷಕರಾದ ಪ್ರಕಾಶ್, ಪ್ರಭಾಕರ್, ವೆಂಕಟೇಶ್, ವೀಣಾ, ಲತಾ, ಮಂಜುಳಾ, ಪ್ರಭಾವತಿ, ಎಸ್.ಡಿ.ಎಂ.ಸಿ ಅಧ್ಯಕ್ಷ ವೆಂಕಟೇಶ್, ಸಿಬ್ಬಂದಿ ಮುನಿಲಕ್ಷ್ಮಮ್ಮ ಹಾಜರಿದ್ದರು.

ನಗರಸಭೆಯ ಚುನಾವಣೆಯಲ್ಲಿ ವಿಜೇತರಾದ ಜೆಡಿಎಸ್ ಅಭ್ಯರ್ಥಿಗಳಿಗೆ ಸನ್ಮಾನ

0

ಶಿಡ್ಲಘಟ್ಟದ ನಗರಸಭೆಯ ಚುನಾವಣೆಯಲ್ಲಿ ವಿಜೇತರಾದ ಜೆಡಿಎಸ್ ಅಭ್ಯರ್ಥಿಗಳನ್ನು ಶುಕ್ರವಾರ ಅರಮನೆ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಮಾತನಾಡಿದರು.
ಚುನಾವಣೆಗಯಲ್ಲಿ ಜನರ ತೀರ್ಪನ್ನು ಸ್ವಾಗತಿಸೋಣ. ಪಕ್ಷವನ್ನು ಬಲಪಡಿಸಲು ಈಗಿನಿಂದಲೇ ಕಾರ್ಯಪ್ರವೃತ್ತರಾಗಿ. ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಜನರ ಕಷ್ಟಸುಖಗಳಿಗೆ ದನಿಯಾಗಬೇಕು ಎಂದು ಅವರು ತಿಳಿಸಿದರು.
ನಮ್ಮ ಪಕ್ಷದ ಕೆಲವು ಕಾರ್ಯಕರ್ತರು ಅತ್ಯಲ್ಪ ಮತಗಳಿಂದ ಸೋತಿದ್ದೀರಿ. ಆದರೂ ಧೈರ್ಯ ಕಳೆದುಕೊಳ್ಳದೆ ಜನರ ಸೇವೆಯನ್ನು ಮಾಡಿ. ಅವರ ಕುಂದುಕೊರತೆಗಳನ್ನು ನೀಗಿಸುತ್ತಾ ಪಕ್ಷವನ್ನು ಗಟ್ಟಿಗೊಳಿಸಿ ಎಂದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲೂ ಗ್ರಾಮ ವಾಸ್ತವ್ಯ ಮಾಡುತ್ತೇನೆ. ಗ್ರಾಮ ವಾಸ್ತವ್ಯ ಮಾಡಲು ಹೊರಟಿರುವುದು ಮಾನವೀಯ ಕಳಕಳಿ, ನೈಜ ಅಂತಃಕರಣದಿಂದ. ಇದರ ಮುಖ್ಯ ಗುರಿ, ಆಡಳಿತ ಯಂತ್ರದ ಕಾರ್ಯವೈಖರಿ ಅರಿಯುವುದು. ಸರ್ಕಾರ ರೂಪಿಸಿದ ಯೋಜನೆ ಫಲಕಾರಿಯೇ, ಜನರ ಅಭಿಪ್ರಾಯವೇನು ಎಂಬುದನ್ನು ಅರಿಯುವುದಾಗಿದೆ. ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದವರು ಮತ್ತು ಸೋತವರೂ ಸಹ ಜನರ ನೋವು, ಕಷ್ಟ, ಸಮಸ್ಯೆಗೆ ಸ್ಪಂದಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಡ್ಲಘಟ್ಟ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿಗಳನ್ನು ಗೌರವಿಸಲಾಯಿತು. ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್, ತಾಲ್ಲೂಕು ಪಂಚಾಯಿತಿ ಸದಸ್ಯ ರಾಜಶೇಖರ್, ಲಕ್ಷ್ಮೀನಾರಾಯಣರೆಡ್ಡಿ, ತಾದೂರು ರಘು, ರಾಜೇಶ್, ಸುರೇಶ್ ಹಾಜರಿದ್ದರು.

ಶಾಲಾ ಪ್ರಾರಂಭೋತ್ಸವ ಹಾಗೂ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಅಭಿನಂದನಾ ಸಮಾರಂಭ

0

ನಗರದ ಕೋಟೆ ವೃತ್ತದಲ್ಲಿರುವ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ನಡೆದ ತಾಲ್ಲೂಕು ಹಂತದ ಶಾಲಾ ಪ್ರಾರಂಭೋತ್ಸವ ಹಾಗೂ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಅಭಿನಂದನಾ ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿದರು.
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ನಮ್ಮ ತಾಲ್ಲೂಕು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವುದು ಎಲ್ಲಾ ಶಿಕ್ಷಕರ ಸಂಘಿಕ ಪರಿಶ್ರಮದ ಫಲ ಎಂದು ಅವರು ತಿಳಿಸಿದರು.
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯ ಮಟ್ಟದಲ್ಲಿ ನಮ್ಮ ತಾಲ್ಲೂಕು ೩೯ ನೇ ಸ್ಥಾನದಲ್ಲಿದೆ. ಈ ವರ್ಷ ನಾವುಗಳು ಇನ್ನಷ್ಟು ಪರಿಶ್ರಮದ ಮೂಲಕ ಏರುಗತಿಯತ್ತ ಸಾಗಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಒತ್ತಡ ಹೇರದೆ ಕಲಿಕೆಯ ಪ್ರಗತಿಯನ್ನು ಸಾಧಿಸುವುದು ಸವಾಲಿನ ಕೆಲಸ. ಹಲವು ರೀತಿಯ ಒತ್ತಡಗಳ ನಡುವೆಯೂ ಶಿಕ್ಷಕರು ಕೆಲಸ ಮಾಡಬೇಕಿದೆ. ನಮ್ಮ ಮೌಲ್ಯಮಾಪನವನ್ನು ಮಕ್ಕಳ ಅಂಕಗಳಿಂದ ಮಾಡುವುದಿಲ್ಲವಾದರೂ, ಅಂಕೆ ಸಂಖ್ಯೆಗಳೇ ಮುಖ್ಯವಾಗುತ್ತದೆ. ನಮ್ಮ ಸೇವೆಯನ್ನು ಒರೆಗೆ ಹಚ್ಚುವ ಕೆಲಸ ಆಗುತ್ತಿದೆ. ಶಿಕ್ಷಕರು ಇದನ್ನು ಸವಾಲಾಗಿ ಪರಿಗಣಿಸಿ, ಮಕ್ಕಳ ಕಲಿಕೆ ಮತ್ತು ಅಂಕ ಗಳಿಗೆ ಹೆಚ್ಚಿಸಲು ತಮ್ಮ ಅನುಭವ ಮತ್ತು ತಂತ್ರಜ್ಞಾನದ ಉಪಯೋಗ ಪಡೆದು ಹೊಸ ಮಾರ್ಗಗಳ ಅನ್ವೇಷಕರಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಶೇ ೧೦೦, ಶೇ ೮೫ ಕ್ಕಿಂತ ಹೆಚ್ಚು ಮತ್ತು ಶೇ ೮೫ ರವರೆಗೂ ಫಲಿತಾಂಶ ದಾಖಲಿಸಿದ ಶಾಲೆಗಳ ಮುಖ್ಯ ಶಿಕ್ಷಕರಿಗೆ ಅಭಿನಂದನಾ ಪತ್ರವನ್ನು ನೀಡಲಾಯಿತು. ಸಾಂಕೇತಿಕವಾಗಿ ಕೆಲವು ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ಮತ್ತು ಶೂ ವಿತರಿಸಲಾಯಿತು. ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ತಾವು ತಯಾರಿಸಿದ ಬೀಜದ ಉಂಡೆಗಳನ್ನು ಎಲ್ಲಾ ಮುಖ್ಯಶಿಕ್ಷಕರಿಗೂ ನೀಡಿ ಶಾಲೆಗಳಲ್ಲಿ ನೆಡುವಂತೆ ವಿನಂತಿಸಿದರು.
ಶಿಕ್ಷಣ ಸಂಯೋಜಕ ಶಿಕ್ಷಕರಾದ ಬೈರಾರೆಡ್ಡಿ, ಶಿಕ್ಷಕರಾದ ಬೈರಾರೆಡ್ಡಿ, ಎಲ್.ವಿ.ವೆಂಕಟರೆಡ್ಡಿ, ಸಿ.ಎಂ.ಮುನಿರಾಜು, ನಾರಾಯಣಸ್ವಾಮಿ, ಮಂಜುನಾಥ್, ಪಿಳ್ಳಣ್ಣ, ಗೋಪಿನಾಥ್, ಪರಮರೆಡ್ಡಿ ಹಾಜರಿದ್ದರು.

ಪರಿಶಿಷ್ಠ ವರ್ಗಗಳ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಕಲ್ಪಿಸಲು ಒತ್ತಾಯ

0

ರಾಜ್ಯದ ಒಟ್ಟು ಜನಸಂಖ್ಯೆಯ ಶೇ ೦೭ ರಷ್ಟಿರುವ ಪರಿಶಿಷ್ಠ ವರ್ಗಗಳ ಜನಸಂಖ್ಯೆಗನುಗುಣವಾಗಿ ಸರ್ಕಾರಿ ಹುದ್ದೆಗಳಲ್ಲಿ ಹಾಗೂ ಶೈಕ್ಷಣಿಕ ರಂಗದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ತಾಲ್ಲೂಕು ಘಟಕ ಹಾಗೂ ಮಹರ್ಷಿ ವಾಲ್ಮೀಕಿ ನಾಯಕ ಯುವಸೇನೆ ಪದಾಧಿಕಾರಿಗಳು ಸರ್ಕಾರಕ್ಕೆ ತಹಸೀಲ್ದಾರ್‌ರ ಮೂಲಕ ಗುರುವಾರ ಮನವಿ ಪತ್ರ ಸಲ್ಲಿಸಿದರು.
ರಾಜ್ಯಾದ್ಯಂತ ಸುಮಾರು ೭೦ ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿರುವ ವಾಲ್ಮೀಕಿ ಸಮುದಾಯಕ್ಕೆ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಸಿಗುತ್ತಿಲ್ಲ. ಶೇ ೩ ರಷ್ಟು ಮಾತ್ರ ಮೀಸಲಾತಿ ಸಿಗುತ್ತಿದ್ದು ಅದನ್ನು ಶೇ ೭.೫ ರಷ್ಟು ಹೆಚ್ಚಿಸುವ ಅಗತ್ಯವಿದೆ. ಕೆಲ ಮೇಲ್ವರ್ಗದ ಜನ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಬಳಸಿಕೊಂಡು ಪರಿಶಿಷ್ಠ ವರ್ಗದ ಜನತೆಗೆ ಮೀಸಲಿರಿಸಿರುವ ಸವಲತ್ತುಗಳನ್ನು ಬಳಸಿಕೊಳ್ಳುತ್ತಿರುವುದು ಸಮುದಾಯದ ಗಮನಕ್ಕೆ ಬಂದಿದೆ. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವವರ ವಿರುದ್ಧ ಕೂಡಲೇ ರಾಜ್ಯ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು. ಮತ್ತು ಪ್ರತ್ಯೇಕ ಪರಿಶಿಷ್ಠ ವರ್ಗದ ಸಚಿವಾಲಯವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿ ಸರ್ಕಾರಕ್ಕೆ ಶಿರಸ್ತೇದಾರ್ ಮಂಜುನಾಥ್‌ರ ಮೂಲಕ ಮನವಿ ಪತ್ರ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಿರಸ್ತೇದಾರ್ ಮಂಜುನಾಥ್ ಮನವಿಪತ್ರವನ್ನು ಮೇಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ತಾಲ್ಲೂಕು ಅಧ್ಯಕ್ಷ ರಾಮಚಂದ್ರಪ್ಪ, ಮಹರ್ಷಿ ವಾಲ್ಮೀಕಿ ನಾಯಕ ಯುವಸೇನೆ ಅಧ್ಯಕ್ಷ ಮುತ್ತೂರು ವೆಂಕಟೇಶ್, ಉಪಾಧ್ಯಕ್ಷರಾದ ಮುನೇಶ್‌ನಾಯಕ, ಸಿ.ಆನಂದ, ಕಾರ್ಯದರ್ಶಿ ಕೆ.ಸಿ.ನರಸಿಂಹಯ್ಯ, ಪದಾಧಿಕಾರಿಗಳಾದ ಬಿ.ಕೆ.ಬಾಬು ಹಾಜರಿದ್ದರು.

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜನ್ಮದಿನಾಚರಣೆ

0

ತಾಲ್ಲೂಕಿನ ದೊಡ್ಡದಾಸೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಕಸಾಪ ವತಿಯಿಂದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಕನ್ನಡಕ್ಕೆ ಸಣ್ಣಕಥೆಗಳು ಎಂಬ ಮಹತ್ವದ ಪ್ರಕಾರವನ್ನು ಪರಿಚಯಿಸಿದವರು ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್. “ಮಾಸ್ತಿ, ಕನ್ನಡದ ಆಸ್ತಿ” ಎಂದೇ ಅವರನ್ನು ಹೆಮ್ಮೆಯಿಂದ ಸ್ಮರಿಸುವುದು ಕರ್ನಾಟಕದಲ್ಲಿ ಒಂದು ಪರಂಪರೆಯೇ ಆಗಿದೆ ಎಂದು ಅವರು ತಿಳಿಸಿದರು.
ಕನ್ನಡ ಸಾಹಿತ್ಯ ಪರಂಪರೆಯ ಶ್ರೇಷ್ಠ ನಿರ್ಮಾಪಕರುಗಳಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಮುಖರು. “ಶ್ರೀನಿವಾಸ” ಎಂಬುದು ಅವರ ಕಾವ್ಯನಾಮ. ಅವರ ಹೆಸರಿನ ಜೊತೆ ಇರುವ ಅವರ ಹುಟ್ಟೂರಿನ ಹೆಸರು “ಮಾಸ್ತಿ” ಅವರ ಕಾವ್ಯನಾಮದಂತೆಯೇ ಪ್ರಸಿದ್ಧಿ ಪಡೆದಿದೆ ಎಂದು ಹೇಳಿದರು.
ಮಾಸ್ತಿ ಅವರು ಕನ್ನಡಿಗರಿಗೆ ಒಂದು ಆದರ್ಶ. ಎಂಥ ಕಷ್ಟ ಕಾಲದಲ್ಲೂ ಅವರು ಜೀವನವನ್ನೆದುರಿಸಿದರು. ಸಾಹಿತ್ಯ ರಚಿಸಿದಂತೆಯೇ ಸಾಹಿತ್ಯ ಪೋಷಕರಾದರು. ಜಿ ಪಿ ರಾಜರತ್ನಂ, ದ ರಾ ಬೇಂದ್ರೆಯಂತಹವರಿಗೆ ಅವರು ಆದರ್ಶರಾಗಿದ್ದರು. ಅವರು ರಚಿಸಿದ ಕೃತಿಗಳ ಸಂಖ್ಯೆ ೧೨೩. ಅವರು ಬರೆದ ಕಾದಂಬರಿಗಳು ಎರಡು. ಜ್ಞಾನಪೀಠ ಪ್ರಶಸ್ತಿ ಗಳಿಸಿದ ಕೃತಿ ಚಿಕವೀರ ರಾಜೇಂದ್ರ – ಕೊಡಗಿನ ಕಡೆಯ ರಾಜ ಚಿಕವೀರ ರಾಜೇಂದ್ರನನ್ನು ಕುರಿತದ್ದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಕಸಾಪ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಗೌರವಿಸಿ, ಅಭಿನಂದನಾ ಪತ್ರ ಹಾಗೂ ಪುಸ್ತಕವನ್ನು ನೀಡಲಾಯಿತು.
ಕಸಾಪ ಮಹಿಳಾ ಪ್ರತಿನಿಧಿ ದಾಕ್ಷಾಯಿಣಿ, ಎಸ್.ಡಿ.ಎಂ.ಸಿ ಅಧ್ಯಕ್ಷ ರಾಮಚಂದ್ರ, ಶ್ರೀನಿವಾಸ, ಗ್ರಾಮ ಪಂಚಾಯಿತಿ ಸದಸ್ಯ ಗುರುಮೂರ್ತಿ, ಶಿಕ್ಷಕರಾದ ಶ್ರೀಕಾಂತ್, ಮಹೇಶ್, ಗ್ರಾಮಸ್ಥರು ಹಾಜರಿದ್ದರು.

ಶಿಡ್ಲಘಟ್ಟದಲ್ಲಿ ಸಡಗರ ಸಂಭ್ರಮದಿಂದ ರಂಜಾನ್ ಆಚರಣೆ

0

ಶ್ರದ್ಧಾಭಕ್ತಿಯ ಸಂಕೇತವಾದ ರಂಜಾನ್ ಹಬ್ಬವನ್ನು ಸಹಸ್ರಾರು ಮುಸ್ಲಿಂ ಬಾಂಧವರು ಬುಧವಾರ ಸಂಭ್ರಮದಿಂದ ತಾಲ್ಲೂಕಿನಾದ್ಯಂತ ಆಚರಿಸಿದರು. ಒಂದು ತಿಂಗಳ ಕಾಲ ಕೈಗೊಂಡ ರೋಜಾ (ಉಪವಾಸ ಆಚರಣೆ) ಕೊನೆಗೊಳಿಸಿ ಬುಧವಾರ ರಂಜಾನ್ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು.
ಸಂಪ್ರದಾಯದಂತೆ ಮೆರವಣಿಗೆಯಲ್ಲಿ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೀಲಾದ್ ಬಾಗ್ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡ ನಂತರ ನಿಧನ ಹೊಂದಿದ ಪೂರ್ವಜರ ಸಮಾಧಿಗಳ ಬಳಿ ಪ್ರಾರ್ಥನೆ ಸಲ್ಲಿಸಿದರು.
ಪವಿತ್ರ ರಂಜಾನ್ ಮಾಸವನ್ನು ಧಾರ್ಮಿಕ ತಿಂಗಳು. ಉಪವಾಸದ ತಿಂಗಳೆಂದೇ ಕರೆಯುತ್ತಾರೆ. ರಂಜಾನ್ ಹಬ್ಬಕ್ಕೂ ಒಂದು ತಿಂಗಳು ಮುನ್ನ ಅವರು ಕೈಗೊಳ್ಳುವ ರೋಜಾ ಆಚರಣೆಯಲ್ಲಿ ಹಿರಿಯರು ಮತ್ತು ಕಿರಿಯರು ಬೇಧವಿಲ್ಲದೆ ಪಾಲ್ಗೊಂಡು ತಿಂಗಳು ಪೂರ್ತಿ ಕುರಾನ್ ಪಠಿಸುತ್ತಾರೆ. ಎಲ್ಲರ ಸುಖ-ಸಂತೋಷ- ನೆಮ್ಮದಿಗಾಗಿ ಅಲ್ಲಾಹುವಿನಲ್ಲಿ ಬಿನ್ನವಿಸಿಕೊಳ್ಳುತ್ತಾರೆ. ಬಡವರಿಗೆ ಮತ್ತು ಸಂಕಷ್ಟದಲ್ಲಿದ್ದವರಿಗೆ ನೆರವು, ದಾನ ನೀಡುತ್ತಾರೆ.
“ರಂಜಾನ್ ಉಪವಾಸ, ಮುಸ್ಲಿಮನೆನಿಸಿಕೊಳ್ಳಬೇಕಾದರೆ ಪಾಲಿಸಬೇಕಾದ ಐದು ಕರ್ತವ್ಯಗಳಲ್ಲಿ ಒಂದು. ಉಪವಾಸವನ್ನು ಅರಬಿಕ್ ಭಾಷೆಯಲ್ಲಿ “ಸೌಮ್” ಎಂದರೆ, ಪರ್ಷಿಯನ್ ಮತ್ತು ಉರ್ದು ಭಾಷೆಯಲ್ಲಿ “ರೋಜಾ” ಎಂದು ಕರೆಯಲಾಗುತ್ತದೆ. ಇಸ್ಲಾಮ್ ಧರ್ಮದ ಅನುಯಾಯಿಗಳು ಕಡ್ಡಾಯವಾಗಿ ವರ್ಷದ ಒಂಭತ್ತನೆಯ ತಿಂಗಳಾದ ರಂಜಾನ್ ತಿಂಗಳು ಪೂರ್ತಿ ಹಗಲು ಉಪವಾಸವನ್ನು ಆಚರಿಸಬೇಕಾಗುತ್ತದೆ. ಈ ತಿಂಗಳಿನಲ್ಲಿ ಉಪವಾಸ, ದಾನ ಧರ್ಮ ಮಾಡುವುದರಿಂದ ಅರಿಶಡ್ವರ್ಗಗಳೇ ಮುಂತಾದ ಆಂತರ್ಯದ ಕಲ್ಮಶಗಳನ್ನು ಸುಟ್ಟು ಹೃದಯವನ್ನು ಪವಿತ್ರಗೊಳಿಸುತ್ತದೆ.
ಈ ಆಚರಣೆಯನ್ನು ನಿಯಮ, ಶಿಸ್ತುಗಳಿಗೆ ಬದ್ಧವಾಗಿಸಿ ಸರಳವಾಗಿ ಆಚರಿಸುವಂತೆ ಮುಸ್ಲಿಮರಿಗೆ ಪ್ರವಾದಿಯವರು ಕಡ್ಡಾಯಗೊಳಿಸಿದರು. ದಾನವನ್ನು ಕೂಡ ಉಳ್ಳವರು ಕ್ರಮಬದ್ಧವಾಗಿ ಮತ್ತು ನಿಯಮಬದ್ಧವಾಗಿ, ಬಡಬಗ್ಗರಿಗೆ ಇಂತಿಷ್ಟು ಪಾಲು ತಮ್ಮ ಧನಕನಕಗಳಿಂದ ನೀಡಬೇಕೆಂದು ನಿಯಮವನ್ನು ರೂಢಿಯನ್ನು ತಂದರು” ಎಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ಬೋಧನೆ ಮಾಡಿದ ಧರ್ಮಗುರುಗಳು ತಿಳಿಸಿದರು.

“ರಾಜ ಋಷಿ” ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನಾಚರಣೆ

0

ತಾಲ್ಲೂಕಿನ ಸುಗುಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಕಸಾಪ ವತಿಯಿಂದ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾತ್ಮಾ ಗಾಂಧೀಜಿಯವರಿಂದ “ರಾಜ ಋಷಿ” ಎಂದು ಕರೆಸಿಕೊಂಡು, ಜನಸಾಮಾನ್ಯರಿಂದ “ಕೃಷ್ಣರಾಜ ಭೂಪ, ಮನೆ ಮನೆ ದೀಪ” ಎಂಬ ಹಾಡಿನ ಮೂಲಕ ಜನಪ್ರಿಯರಾದವರು ಮೈಸೂರು ಯದುವಂಶದ 24ನೇ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ತಿಳಿಸಿದರು.
ಸಾಹಿತ್ಯ, ಸಂಗೀತ, ವಾಸ್ತು ಶಿಲ್ಪಗಳ ಅಭಿವೃದ್ಧಿಗೆ ಪ್ರಾಮುಖ್ಯತೆಯನ್ನು ಕೊಟ್ಟು 1915 ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಮಹಾರಾಜರು ಪ್ರಾರಂಭಿಸಿದರು. ಹೊಸ ರೈಲು ದಾರಿಗಳ ನಿರ್ಮಾಣ, ೧೯೦೭ರಲ್ಲಿ “ವಾಣೀವಿಲಾಸ ಸಾಗರ” ಕಟ್ಟಲ್ಪಟ್ಟಿತು. ೧೯೧೧ ರಲ್ಲಿ ಆರಂಭವಾದ “ಕೃಷ್ಣರಾಜ ಸಾಗರ” ಭಾರತದ ಮೊಟ್ಟ ಮೊದಲ ಬೃಹತ್ ಜಲಾಶಯ. ೧೯೦೦ರಲ್ಲಿಯೇ ಶಿವನ ಸಮುದ್ರದ ಬಳಿ ಕಾವೇರಿ ನದಿ ಯಿಂದ ಜಲ ವಿದ್ಯುತ್ ಕೇಂದ್ರ ಆರಂಭವಾಯಿತು. ಇದು ಭಾರತದ ಮೊದಲ ಜಲ ವಿದ್ಯುತ್ ಕೇಂದ್ರ. ಏಷ್ಯಾ ಖಂಡದಲ್ಲೇ ಮೊದಲ ಜಲ ವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದ ಕೀರ್ತಿ ನಾಲ್ವಡಿಯವರದು. ಇದರ ಫಲಿತಾಂಶವಾಗಿ ೧೯೦೫ ಆಗಸ್ಟ್ ೩ ರಂದು ಪ್ರಥಮವಾಗಿ ಬೆಂಗಳೂರಿನಲ್ಲಿ ದೀಪಗಳು ಬೆಳಗಿದವು.
ಭದ್ರಾವತಿಯ ಮೈಸೂರು ಕಬ್ಬಿಣದ ಕಾರ್ಖಾನೆ, ಬೆಂಗಳೂರಿನ ಸಾಬೂನು ಕಾರ್ಖಾನೆ, ಮೈಸೂರಿನ ಗಂಧದೆಣ್ಣೆ ಕಾರ್ಖಾನೆ ಸೇರಿದಂತೆ ಹಲವು ಕೈಗಾರಿಕ ಅಭಿವೃದ್ದಿಗಳು ಇವರಿಂದ ನಡೆದವು ಎಂದು ವಿವರಿಸಿದರು.
ಶಿಕ್ಷಕ ರುದ್ರೇಶಮೂರ್ತಿ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನದ ಸರ್ವತೋಮುಖ ಅಭಿವೃದ್ಧಿಗೆ ಹೊಸ ದಿಕ್ಕನ್ನು ತೋರಿದ ಮಹನೀಯರು. ಇವರ ಆಳ್ವಿಕೆ ೧೯೦೨ ರಿಂದ ೧೯೪೦ ರವರೆಗೆ ನಡೆಯಿತು. ಎಲ್ಲಾ ಸಮುದಾಯದ ಜನರಿಗೆ ಸರ್ಕಾರಿ ಉದ್ಯೋಗದಲ್ಲಿ ಪ್ರತಿನಿಧ್ಯ ದೊರಕುವಂತೆ ಮಾಡಿದ್ದರು. ೧೯೨೧ರಲ್ಲಿ ಪ್ರಥಮ ಭಾರಿಗೆ ಎಲ್ಲಾ ಹಿಂದುಳಿದ ಸಮುದಾಯಗಳಿಗೆ ಶೇ ೭೫ರಷ್ಟು ಮೀಸಲಾತಿ ನೀಡಲು ಆದೇಶ ಹೊರಡಿಸಿದರು. ಹಾಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು “ಮೀಸಲಾತಿಯ ಜನಕ” ಎನ್ನುತ್ತಾರೆ. ಸ್ಥಳೀಯ ಸಂಸ್ಥೆಗಳನ್ನು ರಚಿಸಿ, ಆಡಳಿತ ವಿಕೇಂದ್ರೀಕರಣಕ್ಕೆ ಅನುವು ಮಾಡಿ ಕೊಟ್ಟರು. ರಾಜ್ಯದ ಸಣ್ಣ ಸಣ್ಣ ಪಟ್ಟಣಗಳಲ್ಲಿಯೂ ಸಹ ಮುನಿಸಿಪಾಲಿಟಿಗಳು ರಚನೆಯಾದವು. ಹಳ್ಳಿಗಳಲ್ಲಿ ಪ್ರಥಮ ಬಾರಿಗೆ ಗ್ರಾಮ ಪಂಚಾಯಿತಿಗಳು ಕಾರ್ಯ ನಿರ್ವಹಿಸಲು ಆರಂಭ ಮಾಡಿದುದರಿಂದ, ಗ್ರಾಮೀಣ ಪ್ರದೇಶಗಳಲ್ಲಿ ಆಡಳಿತದಲ್ಲಿ ಜನರ ಭಾಗವಹಿಸುವಿಕೆಗೆ ಅಪಾರ ಉತ್ತೇಜನ ನೀಡಲಾಯಿತು ಎಂದರು.
ಶಿಕ್ಷಕ ಎ.ಬಿ.ನಾಗರಾಜ್ ಮಾತನಾಡಿ, ಹಲವು ಸಾಮಾಜಿಕ ಕಾನೂನುಗಳು ಜಾರಿಗೊಳಿಸಿದ ಕೀರ್ತಿ ನಾಲ್ವಡಿಯವರದ್ದು. ದೇವದಾಸಿ ಪದ್ಧತಿ ನಿಷೇಧ, ಬಸವಿ ಪದ್ಧತಿ ರದ್ಧತಿ, “ಗೆಜ್ಜೆಪೂಜೆ” ಪದ್ಧತಿ ಸಂಪೂರ್ಣ ನಿರ್ಮೂಲನೆ, ವೇಶ್ಯಾವೃತ್ತಿ ತಡೆಗಟ್ಟುವ ಕಾಯ್ದೆ, ವಿಧವೆಯರಿಗೆ ಮರುವಿವಾಹ ಮಾಡಿಕೊಳ್ಳುವ ಕಾಯ್ದೆ, ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ಜಾರಿ, ಶಾಲಾ ಪ್ರವೇಶಕ್ಕೆ ಜಾತಿ ಪರಿಗಣನೆಯ ನಿಷೇಧ, ಮಾಧ್ಯಮಿಕ ಶಾಲಾ ಮಟ್ಟದಲ್ಲಿ ಶಿಕ್ಷಣ ಶುಲ್ಕ ರದ್ಧತಿ, ೧೯೨೭ ರಲ್ಲಿ ಸ್ತ್ರೀಯರಿಗೆ ಮತದಾನದ ಹಕ್ಕನ್ನು ಮೊಟ್ಟಮೊದಲ ಬಾರಿಗೆ ಕಲ್ಪಿಸಿಕೊಟ್ಟರು, ೧೯೦೫ ರಲ್ಲಿ ಸಹಕಾರಿ ಕಾರ್ಮಿಕ ಪರಿಹಾರ ಕಾಯ್ದೆಯನ್ನು ಜಾರಿಗೆ ತಂದರು ಎಂದು ಹೇಳಿದರು.
ಕಸಾಪ ವತಿಯಿಂದ ಶಿಕ್ಷಕ ರುದ್ರೇಶಮೂರ್ತಿ ಅವರನ್ನು ಸನ್ಮಾನಿಸಲಾಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಶಂಕರಪ್ಪ, ಉಪಾಧ್ಯಕ್ಷ ಜಗದೀಶ್, ಸದಸ್ಯೆ ಕೆ.ವಿನುತಾ, ತಾಲ್ಲೂಕು ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ, ಶಿಕ್ಷಕರಾದ ಎಂ.ಉಮಾದೇವಿ, ನಾಗರಾಜ್, ಎಚ್.ತಾಜೂನ್, ಎಂ.ವೈ ಲಕ್ಷ್ಮಯ್ಯ ಹಾಜರಿದ್ದರು.

ತಾಲ್ಲೂಕು ಕಸಾಪ ವತಿಯಿಂದ ಸಾಲುಮರದ ತಿಮ್ಮಕ್ಕ ಅವರಿಗೆ ಗೌರವ ಸಮರ್ಪಣೆ

0

ಪರಿಸರ ದಿನಾಚರಣೆಯ ಪ್ರಯುಕ್ತ ಶಿಡ್ಲಘಟ್ಟ ತಾಲ್ಲೂಕು ಕಸಾಪ ವತಿಯಿಂದ ಸಾಲುಮರದ ತಿಮ್ಮಕ್ಕ ಅವರ ಮನೆಯಲ್ಲಿ ಅವರನ್ನು ಗೌರವಿಸಿ ಕಸಾಪ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಸಾಲುಮರದ ತಿಮ್ಮಕ್ಕ ನಮ್ಮ “ಪರಿಸರ ಪ್ರಜ್ಞೆ”ಯನ್ನು ಜಾಗೃತಗೊಳಿಸಿದ ಮಹಾ ವೃಕ್ಷಮಾತೆ ಎಂದು ಅವರು ತಿಳಿಸಿದರು.
ಸಾಲುಮರದ ತಿಮ್ಮಕ್ಕ ಅವರು ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿದ ಪರಿಸರವಾದಿ. ಪದ್ಮಶ್ರೀ ಪುರಸ್ಕೃತರಾದ ಇವರು ನಮ್ಮೆಲ್ಲರ ಹೆಮ್ಮೆ ಹಾಗೂ ಆದರ್ಶವಾದ ಪರಿಸರವಾದಿ. ಕಸಾಪ ವತಿಯಿಂದ ಆಚರಿಸುವ ಪರಿಸರ ದಿನಾಚರಣೆ ಹಾಗೂ ಪರಿಸರ ಸಂಬಂಧಿತ ಕಾರ್ಯಕ್ರಮಗಳಿಗೆ ಮುನ್ನುಡಿಯಾಗಿ ಸಾಲು ಮರದ ತಿಮ್ಮಕ್ಕನವರನ್ನು ಗೌರವಿಸಿ ಆಶೀರ್ವಾದ ಪಡೆದಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಸಾಪ ವತಿಯಿಂದ ಶಾಲು ಹೊದಿಸಿ, ಹಾರ, ಹಣ್ಣು ಹಾಗೂ ಪುಸ್ತಕವನ್ನು ನೀಡಿ ಸಾಲುಮರದ ತಿಮ್ಮಕ್ಕ ಅವರನ್ನು ಗೌರವಿಸಲಾಯಿತು.
ಕಸಾಪ ಸದಸ್ಯ ಬೈರಾರೆಡ್ಡಿ, ಸಾಲುಮರದ ತಿಮ್ಮಕ್ಕ ಅವರ ಸಾಕು ಮಗ ಉಮೇಶ್ ಹಾಜರಿದ್ದರು.

ರೈತ ಸಂಘದಿಂದ ಜೂನ್ ೧೦ ರಂದು “ಹೆದ್ದಾರಿ ಬಂದ್‌“ ಗೆ ಕರೆ

0

ನಗರದ ಬಸ್ ನಿಲ್ದಾಣದ ಬಳಿಯಿರುವ ರೈತ ಸಂಘದ ಕಚೇರಿಯಲ್ಲಿ ಸೋಮವಾರ ರೈತರ ಸಭೆ ನಡೆಸಿ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿದರು.
ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ರೈತ ಸಂಘ ಹಸಿರುಸೇನೆ ವತಿಯಿಂದ ಜೂನ್ ೧೦ ರ ಸೋಮವಾರ ರಾಷ್ಟ್ರೀಯ ಹೆದ್ದಾರಿ-೭ ರ ಚದಲಪುರ ಕ್ರಾಸ್ ಬಳಿ “ಹೆದ್ದಾರಿ ಬಂದ್‌“ ಗೆ ಕರೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಭೂ ಸ್ವಾದೀನ ಕಾಯ್ದೆ ತಂದಿರುವ ತಿದ್ದುಪಡಿಯನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು. ಬರದಿಂದ ಬಳಲುತ್ತಿರುವ ಬಯಲುಸೀಮೆ ಭಾಗದ ಜನತೆ ಹಾಗೂ ರೈತರು ನಗರಗಳ ಕಡೆ ವಲಸೆ ಹೋಗುತ್ತಿದ್ದರೂ ಜನಪ್ರತಿನಿಧಿಗಳು ಅಭಿವೃದ್ದಿ ಕಾರ್ಯ ಮರೆತು ತಮ್ಮ ಅಧಿಕಾರದ ಕುರ್ಚಿ ಉಳಿಸಿಕೊಳ್ಳಲು ಯತ್ನಿಸುವ ಮೂಲಕ ರಾಜ್ಯದ ರೈತ ಹಾಗೂ ಜನತೆಯನ್ನು ಮರೆತಿದ್ದಾರೆ.
ಇನ್ನು ೨೦೧೪ ರಲ್ಲಿ ಜಾರಿಗೆ ಬಂದ ಭೂಸ್ವಾಧೀನ ಸಂಪೂರ್ಣವಾಗಿ ಸಾರ್ವಜನಿಕ ಉದ್ದೇಶಗಳಿಗೆ ಸೀಮಿತವಾಗಿರಬೇಕು. ನಗರ ಪ್ರದೇಶಕ್ಕೆ ಒಳಪಟ್ಟಿದ್ದರೆ ಮಾರುಕಟ್ಟೆ ಧರದ ಎರಡು ಪಟ್ಟು ನೀಡಬೇಕು. ಸ್ವಾದೀನ ಪಡಿಸಿಕೊಂಡ ಭೂಮಿಯನ್ನು ಐದು ವರ್ಷದೊಳಗೆ ಉದ್ದೇಶಿತ ಯೋಜನೆಗಳಿಗೆ ಬಳಸಿಕೊಳ್ಳಬೇಕು, ಇಲ್ಲವಾದಲ್ಲಿ ರೈತರಿಗೆ ಆ ಭೂಮಿ ವಾಪಸ್ ನೀಡಬೇಕು ಎಂಬ ನಿಯಮವಿದೆಯಾದರೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಮ್ಮಿಶ್ರ ಸರ್ಕಾರ ಈ ಎಲ್ಲಾ ಅಂಶಗಳನ್ನು ಮರೆಯುವ ಮೂಲಕ ರಾಜ್ಯದ ರೈತ ಸಮುದಾಯಕ್ಕೆ ದ್ರೋಹವೆಸಗುತ್ತಿದೆ ಎಂದರು.
ರೈತ ಸಂಘದ ಗೌರವಾಧ್ಯಕ್ಷ ಎಸ್.ಎಂ.ನಾರಾಯಣಸ್ವಾಮಿ ಮಾತನಾಡಿ, ರೈತರ ವಿವಿಧ ಬೇಡಿಕೆಗಳನ್ನು ಪೂರೈಸಬೇಕು ಎಂದು ಒತ್ತಾಯಿಸಿ ಇದೇ ಜೂನ್ ೧೦ ರಂದು ಕರೆ ನೀಡಿರುವ ಹೆದ್ದಾರಿ ಬಂದ್ ನಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಸೇರಿದಂತೆ ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತಸಂಘದ ಜಿಲ್ಲಾ ಉಪಾಧ್ಯಕ್ಷ ಸತ್ಯನಾರಾಯಣ, ಗೌರವಾಧ್ಯಕ್ಷ ಜೆ.ವಿ.ಕೃಷ್ಣಪ್ಪ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಪದಾಧಿಕಾರಿಗಳಾದ ರಾಮಚಂದ್ರಪ್ಪ, ಮುನಿನಂಜಪ್ಪ ಹಾಜರಿದ್ದರು.

ಪಕ್ಷವನ್ನು ಸಂಘಟಿಸುತ್ತೇನೆ – ನಿಖಿಲ್ ಕುಮಾರಸ್ವಾಮಿ

0

ಬುಳ್ಳಳ್ಳಿಯ ಸುನಿಲ್ ಅವರ ಮನೆಗೆ ಭಾನುವಾರ ಭೇಟಿ ನೀಡಿದ್ದ ಅವರು ತಾಲ್ಲೂಕಿನ ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ಹಾಗೂ ಕಾರ್ಯಕರ್ತರನ್ನುದ್ದೇಶಿಸಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು.
ಸೋಲಿನಿಂದ ಪಾಠ ಕಲಿತಿರುವೆ. ಮುಂದಿನ ದಿನಗಳಲ್ಲಿ ನನ್ನ ತಾತ ಎಚ್.ಡಿ.ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷಸಂಘಟನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವೆ ಎಂದು ತಿಳಿಸಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೂ ಮೇಲೂರು ಬಿ.ಎನ್.ರವಿಕುಮಾರ್ ಅವರ ಜೊತೆಗೂಡಿ ಪ್ರವಾಸ ಕೈಗೊಳ್ಳುತ್ತೇನೆ. ಪಕ್ಷದ ಕಾರ್ಯಕರ್ತರು ದೃತಿಗೆಡಬಾರದು. ಒಂದು ಸೋಲು ಹಲವು ಜೀವನ ಪಾಠವನ್ನು ಕಲಿಸುತ್ತದೆ. ಕಾರ್ಯಕರ್ತರನ್ನು ಗಟ್ಟಿಗೊಳಿಸಲು, ಆತ್ಮಸ್ಥೈರ್ಯ ತುಂಬಲು ಹಾಗೂ ಪಕ್ಷವನ್ನು ಗಟ್ಟಿಗೊಳಿಸಲು ಖುದ್ದಾಗಿ ಎಲ್ಲೆಡೆ ಸಂಚರಿಸುತ್ತೇನೆ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ರಾಜಶೇಖರ್, ತಾದೂರು ರಘು, ಧರ್ಮೇಂದ್ರ, ಎಸ್.ಎಂ.ಎಸ್.ಶ್ರೀನಿವಾಸ್, ಮಳ್ಳೂರು ರಾಜೇಶ್, ಗಜೇಂದ್ರ ಹಾಜರಿದ್ದರು.

ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಸದಸ್ಯರಿಂದ ಧರಣಿ

0

ಸೇವಾನಿರತ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರನ್ನು ೬ ರಿಂದ ೮ ರ ವೃಂದಕ್ಕೆ ಪದನಾಮಕರಿಸುವಂತೆ ಒತ್ತಾಯಿಸಿ ಹಾಗೂ ೨೦೧೭ ರ ಸಿ ಮತ್ತು ಆರ್ ನಿಯಮವನ್ನು ತಿದ್ದುಪಡಿಗೆ ಆಗ್ರಹಿಸಿ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂದೆ ಶನಿವಾರ ಸಾಂಕೇತಿಕ ಧರಣಿಯನ್ನು ನಡೆಸಿ ನಂತರ ಮನವಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಅವರಿಗೆ ಸಲ್ಲಿಸಿದರು.
ರಾಜ್ಯದಲ್ಲಿ ೮೨ ಸಾವಿರಕ್ಕಿಂತ ಅಧಿಕ ಮಂದಿ ಪದವಿಧರರಾಗಿರುವ ಪ್ರಾಥಮಿಕ ಶಾಲೆಗಳ ಶಿಕ್ಷಕರಿದ್ದು, ಅವರು ಕಳೆದ ೧೪ ವರ್ಷಗಳಿಂದ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಅವರನ್ನು ಮುಂಬಡ್ತಿಗೆ ಪರಿಗಣಿಸದೇ ೬ ರಿಂದ ೮ ನೇ ತರಗತಿಗೆ ಹೊಸದಾಗಿ ಎರಡು ಬಾರಿ ನೇಮಕ ಮಾಡಿ ಈಗ ಮತ್ತೆ ಮೂರನೇ ಬಾರಿಗೆ ನೇಮಕಾತಿ ನಡೆಯುತ್ತಿದೆ. ಈ ಬಗ್ಗೆ ಇಲಾಖೆಯ ಮುಖ್ಯಸ್ಥರು ಹಾಗೂ ಮಾನ್ಯ ಸಚಿವರನ್ನು ಕಂಡು ಮನವರಿಕೆ ಮಾಡಿದ್ದೇವೆ. ಫೆಬ್ರುವರಿ ೫ ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ೨೫ ಸಾವಿರ ಮಂದಿ ಶಿಕ್ಷಕರು ಉಪವಾಸ ಸತ್ಯಾಗ್ರಹ ಮಾಡಿ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿ ನ್ಯಾಯಕ್ಕಾಗಿ ಒತ್ತಾಯಿಸಿದ್ದೇವೆ. ಆದರೂ ಈವರೆಗೂ ನಮಗೆ ನ್ಯಾಯ ದೊರೆತಿಲ್ಲ. ಹಾಗಾಗಿ ಈ ದಿನ ಸಾಂಕೇತಿಕವಾಗಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ನಮ್ಮನ್ನೆಲ್ಲಾ ಪದವೀಧರ ಶಿಕ್ಷರೆಂದು ಪರಿಗಣಿಸಬೇಕು. ಇಲ್ಲವಾದಲ್ಲಿ ನಾವು ನಮ್ಮ ಹೊಸ ವೃಂದ ನಿಯಮದಂತೆ ೧ ರಿಂದ ೫ ನೇ ತರಗತಿಯನ್ನು ಮಾತ್ರ ಭೋದಿಸುತ್ತೇವೆ. ೬ ರಿಂದ ೮ ನೇ ತರಗತಿಗಳ ಭೋದನೆಯನ್ನು ಬಹಿಷ್ಕರಿಸುತ್ತೇವೆ ಎಂದರು.
ಮನವಿಯನ್ನು ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್, ಶಿಕ್ಷಕರ ಬೇಡಿಕೆ ನ್ಯಾಯಯುತವಾಗಿದೆ. ಇಲಾಖೆಗೆ ಹಾಗೂ ಸರ್ಕಾರಕ್ಕೆ ಕಳುಹಿಸಿಕೊಡುವುದಾಗಿ ತಿಳಿಸಿದರು.
ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಮುಜಾಫಿರ್, ಉಪಾಧ್ಯಕ್ಷೆ ಕೆ.ಸುಮಾ, ಕಾರ್ಯದರ್ಶಿ ಬಿ.ಸಿ.ಶಿವಪ್ಪ, ಕೋಶಾಧ್ಯಕ್ಷ ಮಂಜುನಾಥ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ಮುನಿರಾಜು, ಮುನಿಯಪ್ಪ, ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ವಿ.ಎನ್.ಗಜೇಂದ್ರ, ನಾರಾಯಣಸ್ವಾಮಿ, ಸುರೇಶ್ ಹಾಜರಿದ್ದರು.

ಕೋಚಿಮುಲ್ ನಿಂದ ವಿಶ್ವ ಹಾಲು ದಿನಾಚರಣೆ

0

ವಿಶ್ವ ಹಾಲು ದಿನಾಚರಣೆ ಹಾಗೂ ಎಂ.ವಿ.ಕೃಷ್ಣಪ್ಪ ಅವರ ಜನ್ಮದಿನಾಚರಣೆ ಅಂಗವಾಗಿ ಶನಿವಾರ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋಚಿಮುಲ್ ವತಿಯಿಂದ ಒಳರೋಗಿಗಳಿಗೆ ಹಾಲು ವಿತರಿಸಲಾಯಿತು.
ಉಪವ್ಯವಸ್ಥಾಪಕ ಡಾ.ಚಂದ್ರಶೇಖರ್ ಮಾತನಾಡಿ, “ಹಾಲು ಪೌಷ್ಟಿಕ ಆಹಾರವಾಗಿದ್ದು, ಸಾರ್ವಜನಿಕರಲ್ಲಿ ಹಾಗೂ ಮಕ್ಕಳಲ್ಲಿ ಹಾಲು ಸರ್ವೋತ್ತಮ ಆಹಾರ ಎನ್ನುವ ಬಗ್ಗೆ ಜನಜಾಗೃತಿ ಮೂಡಿಸಲು ಈ ಕಾರ್ಯ ನಡೆಸಲಾಗುತ್ತಿದೆ. ಹಾಲಿನಲ್ಲಿ ಮನುಷ್ಯನ ದೇಹಕ್ಕೆ ಅತ್ಯಗತ್ಯವಾಗಿ ಬೇಕಾದ ಜೀವಸತ್ವಗಳು ಮಿಟಮಿನ್, ಪ್ರೋಟೀನ್ ಗಳಿವೆ. ಹಾಲು ವಿಟಮಿನ್ ‘ಡಿ’ಯಿಂದ ಶ್ರೀಮಂತವಾಗಿರುತ್ತದೆ. ಕ್ಯಾನ್ಸರ್ ಹತ್ತಿಕ್ಕುವ ಸಾಮರ್ಥ್ಯ ಹೊಂದಿರುವ ಸಂಗತಿಗಳಲ್ಲಿ ವಿಟಮಿನ್ ಡಿ ಸಹ ಒಂದು. ಹಾಲು ಒಕ್ಕೂಟದಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು ವಿತರಿಸಿ ಜನಜಾಗೃತಿ ಮೂಡಿಸುವ ಮೂಲಕ ಈ ದಿನ ವಿಶ್ವ ಹಾಲು ದಿನವನ್ನು ಆಚರಿಸುತ್ತಿದ್ದೇವೆ” ಎಂದರು.
ಹಾಲನ್ನು ರೋಗಿಗಳಿಗೆ ವಿತರಿಸಿದ ಶಾಸಕ ವಿ.ಮುನಿಯಪ್ಪ, “ನಂದಿನಿ ಹಾಲು ಹಾಗು ಹಾಲಿನ ಉತ್ಪನ್ನಗಳನ್ನು ಜನರು ಹೆಚ್ಚಾಗಿ ಬಳಸಿ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಹಾಲು ಉತ್ಪಾದಕರು ಹಾಗೂ ಸಹಕಾರ ಸಂಘಗಳ ಉಳಿವಿಗಾಗಿ ಸಹಕರಿಸಬೇಕು” ಎಂದು ಹೇಳಿದರು.
ಹಾಪ್ ಕಾಮ್ಸ್ ಅಧ್ಯಕ್ಷ ಚಂದ್ರೇಗೌಡ, ಕೋಚಿಮುಲ್ ನಿರ್ದೇಶಕ ಶ್ರೀನಿವಾಸ್, ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಕೋಚಿಮುಲ್ ಶಿಬಿರ ಕಚೇರಿಯ ವಿಸ್ತರಣಾಧಿಕಾರಿಗಳಾದ ಉಮೇಶ್ ರೆಡ್ಡಿ, ಶ್ರೀನಿವಾಸ್, ಅಧಿಕಾರಿಗಳಾದ ನರಸಿಂಹಯ್ಯ, ಕುಮ್ಮಣ್ಣ, ರಾಮ್ ದಾಸ್, ಸಂತೋಷ್, ಶಂಕರ್, ವೈದ್ಯರಾದ ಡಾ.ತಿಮ್ಮೇಗೌಡ, ಡಾ.ನಾಗರಾಜ್ ಹಾಜರಿದ್ದರು.

ಕರವೇ ಸ್ವಾಭಿಮಾನಿ ಬಣದಿಂದ ರಕ್ತದಾನ ಶಿಬಿರ

0

ನಗರದ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಕರವೇ ಸ್ವಾಭಿಮಾನಿ ಬಣ ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಕರವೇ ಸ್ವಾಭಿಮಾನಿ ಬಣ ರಾಜ್ಯಾಧ್ಯಕ್ಷ ಪಿ.ಕೃಷ್ಣೇಗೌಡ ಅವರ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಅಗ್ರಹಾರ ಮೋಹನ್ ಮಾತನಾಡಿದರು.
ಕರವೇ ಸ್ವಾಭಿಮಾನಿ ಬಣದಿಂದ ಕಳೆದ ಹನ್ನೊಂದು ವರ್ಷಗಳಿಂದ ವಿವಿಧ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದು, ರಕ್ತದಾನ ಶಿಬಿರವನ್ನೂ ಸಹ ಕಾಲಕಾಲಕ್ಕೆ ನಡೆಸುತ್ತಿರುವುದಾಗಿ ಅವರು ತಿಳಿಸಿದರು.
ಕರವೇ ಸ್ವಾಭಿಮಾನಿ ಬಣ ತಾಲ್ಲೂಕು ಅಧ್ಯಕ್ಷ ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿನ ವಿವಿಧ ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ರಕ್ತದ ಬೇಡಿಕೆಯಿದೆ. ನಮ್ಮಲ್ಲಿನ ದಾನಿಗಳು ರಕ್ತ ದಾನ ಮಾಡುವ ಮೂಲಕ ನಮ್ಮ ಭಾಗದ ರೋಗಿಗಳಿಗೆ ನೆರವಾಗಬೇಕಿದೆ. ಕರವೇ ಸ್ವಾಭಿಮಾನಿ ಬಣದಿಂದ ಕಾರ್ಮಿಕ, ರೈತ ಶೋಷಿತ, ಕನ್ನಡ ಪರ ಸಂಘಟನೆಯಾಗಿದೆ. ನೆಲ, ಜಲ, ಭಾಷೆಯ ಜೊತೆಗೆ ಸಾಮಾಜಿಕ ಕಾರ್ಯಗಳನ್ನೂ ಸಹ ಮಾಡುವ ಮೂಲಕ ಸಂಘಟನೆಯನ್ನು ಮುನ್ನಡೆಸುತ್ತಿರುವುದಾಗಿ ಹೇಳಿದರು.
ಕರವೇ ಸ್ವಾಭಿಮಾನಿ ಬಣದ ತಾಲ್ಲೂಕು ಉಪಾಧ್ಯಕ್ಷ ಮುರಳಿ, ಕಾರ್ಯದರ್ಶಿ ಎಸ್.ಎಂ.ಮಂಜುನಾಥ್, ನಗರ ಘಟಕದ ಅಧ್ಯಕ್ಷ ಸತೀಶ್, ಚಿಂತಾಮಣಿ ತಾಲ್ಲೂಕು ಅಧ್ಯಕ್ಷ ನಾರಾಯಣರೆಡ್ಡಿ, ಉಪಾಧ್ಯಕ್ಷ ಧನಂಜಯ, ನವೀನ್, ಕೆ.ಎಂ.ನರಸಿಂಹಮೂರ್ತಿ, ಪೇಯಿಂಟ್ ಸಂಘದ ಅಧ್ಯಕ್ಷ ಸಲೀಂ ಪಾಷ, ಗೌರವಾಧ್ಯಕ್ಷ ಬಾಬು, ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್, ಡಾ.ಮಹಂತೇಶ್, ಸಿಬ್ಬಂದಿ ಕೃಷ್ಣವೇಣಿ, ಶ್ರೀನಾಥ್ ಹಾಜರಿದ್ದರು.