Home Blog Page 348

ಬಹುಮತವಿಲ್ಲದೆ ಅತಂತ್ರ ಸ್ಥಿತಿಯಲ್ಲಿ ಶಿಡ್ಲಘಟ್ಟ ನಗರಸಭೆ

0

ಮೇ ೨೯ ರಂದು ನಗರಸಭೆಗೆ ನಡೆದ ಚುನಾವಣೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿ, ಒಟ್ಟು ೩೧ ಸ್ಥಾನಗಳಿರುವ ನಗರಸಭೆಯ ಯಾವುದೇ ಪ್ರಮುಖ ಪಕ್ಷಕ್ಕೂ ನಿಖರವಾದ ಬಹುಮತ ಸಿಗದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಕಾಂಗ್ರೆಸ್ – ೧೩, ಜೆಡಿಎಸ್ – ೧೦, ಬಿ.ಜೆ.ಪಿ – ೨, ಬಿ.ಎಸ್.ಪಿ – ೨, ಪಕ್ಷೇತರ – ೪ ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿವೆ. ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯಲು ೧೬ ಸ್ಥಾನಗಳು ಬೇಕಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ೩ ಸ್ಥಾನಗಳು ಹಾಗೂ ಜೆಡಿಎಸ್ ಗೆ ೬ ಸ್ಥಾನಗಳ ಕೊರತೆಯಿದೆ. ಪಕ್ಷೇತರ, ಬಿ.ಎಸ್.ಪಿ ಮತ್ತು ಬಿ.ಜೆ.ಪಿ ಪಕ್ಷದಿಂದ ಗೆದ್ದ ಅಭ್ಯರ್ಥಿಗಳ ಮೇಲೆ ಈಗ ಅಧಿಕಾರ ಚುಕ್ಕಾಣಿ ಹಿಡಿಯುವವರು ಅವಲಂಬಿತರಾಗಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನಗಳನ್ನು ಗಳಿಸಲು ಸಫಲವಾದರೂ ಬಹುಮತ ಪಡೆಯಲು ವಿಫಲವಾಗಿದೆ. ೧೯ ನೇ ವಾರ್ಡಿನ ಅಭ್ಯರ್ಥಿ ಫರೀದುನ್ನೀಸಾ ಅವರಿಗೆ ಕಾಂಗ್ರೆಸ್ ನಿಂದ ಬಿ ಫಾರಂ ನೀಡಿದ್ದರಾದರೂ ನಾಮಪತ್ರ ಪರಿಶೀಲನೆಯಲ್ಲಿ ಅಸಿಂಧುವಾದ ಕಾರಣ ಪಕ್ಷೇತರವಾಗಿ ನಿಂತು ಗೆದ್ದಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಬಿ ಫಾರಂ ಪಡೆಯುವಲ್ಲಿ ವಿಫಲವಾದ ೧೩ ನೇ ವಾರ್ಡ್ ಎಸ್ ಎ ನಾರಾಯಣಸ್ವಾಮಿ ಅವರು ಬಿ.ಜೆ.ಪಿ ಪಕ್ಷದಿಂದ ಬಿ ಫಾರಂ ಪಡೆದು ವಿಜೇತರಾಗಿದ್ದಾರೆ. ಮಾಜಿ ಶಾಸಕ ಎಂ.ರಾಜಣ್ಣ ಬೆಂಬಲಿಗರಾದ ೧೨ ನೇ ವಾರ್ಡಿನ ಮೌಲಾ ಮತ್ತು ೨೯ ನೇ ವಾರ್ಡಿನ ಅಫ್ಸರ್ ಪಾಷ ಅವರು ಕಾಂಗ್ರೆಸ್ ನಿಂದ ಬಿ ಫಾರಂ ಸಿಗದೆ ಬಿ.ಎಸ್.ಪಿ ಪಕ್ಷದಿಂದ ನಿಂತು ಗೆದ್ದಿದ್ದಾರೆ. ೧೪ ನೇ ವಾರ್ಡಿನ ವಿಜೇತ ಅಭ್ಯರ್ಥಿ ಜೈಬಾ ಶೊಹರತ್ ಸಹ ಕಾಂಗ್ರೆಸ್ ನಿಂದ ಬಿ ಫಾರಂ ವಂಚಿತರೇ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿದ್ದ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಪುಟ್ಟು ಅವರ ಬೆಂಬಲಿತ ಅಭ್ಯರ್ಥಿಗಳ ಪೈಕಿ ೧೮ ನೇ ವಾರ್ಡ್ ನ ಐ.ಶಬ್ಬೀರ್ ಪಕ್ಷೇತರರಾಗಿ ನಿಂತು ವಿಜೇತರಾಗಿದ್ದಾರೆ.
ಇನ್ನು ಮುಂದಿನ ದಿನಗಳಲ್ಲಿ ನಗರಸಭೆ ಅಧ್ಯಕ್ಷರ ಆಯ್ಕೆ ನಡೆಯಲಿದ್ದು ಯಾವ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯುತ್ತದೆ ಎಂದು ಕಾದು ನೋಡಬೇಕಿದೆ.

ಶಾಲೆ ಪ್ರಾರಂಭ – ಅಕ್ಷರ ಕಲಿಕೆಗೆ ಮರಳಿದ ಮಕ್ಕಳು, ಪ್ರೀತಿಯಿಂದ ಬರಮಾಡಿಕೊಂಡ ಶಿಕ್ಷಕರು

0

ತಾಲ್ಲೂಕಿನಾದ್ಯಂತ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಬುಧವಾರ ಪ್ರಾರಂಭಗೊಂಡವು. ಬೇಸಿಗೆ ರಜೆಯ ಮಜಾ ಅನುಭವಿಸಿದ್ದ ಮಕ್ಕಳು ಮತ್ತೆ ಶಾಲೆಗಳತ್ತ ಹೆಜ್ಜೆ ಹಾಕಿದರು. ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಹಲವು ರೀತಿಯ ಕಾರ್ಯಕ್ರಮಗಳನ್ನು ಶಾಲೆಯ ಮೊದಲ ದಿನದಂದು ಹಮ್ಮಿಕೊಳ್ಳಲಾಗಿತ್ತು.

Sidlaghatta Appegowdanahalli
ಅಪ್ಪೇಗೌಡನಹಳ್ಳಿಯಲ್ಲಿ ಶಾಲೆಗೆ ಮಗಳನ್ನು ಕರೆತರುತ್ತಿರುವ ತಾಯಿ
ಒಂದನೇ ತರಗತಿಗೆ ಸೇರಿಸಿಕೊಳ್ಳಲು ಶಿಕ್ಷಕರು ಮನೆಗಳಿಗೆ ಭೇಟಿ ನೀಡಿ ಪೋಷಕರಿಗೆ ಮನವೊಲಿಸಿ ಮಕ್ಕಳಿಗೆ ಸಿಹಿ ನೀಡಿ ಕೆಲವೆಡೆ ಕರೆತಂದರು. ಕೆಲವು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಚಾಕೊಲೇಟ್ ನೀಡಿದರೆ, ಕೆಲವೆಡೆ ಬಿಸಿಯೂಟಕ್ಕೆ ಪಾಯಸ ಮಾಡಲಾಗಿತ್ತು. ಹಲವು ಶಾಲೆಗಳಿಂದ ಗ್ರಾಮಗಳಲ್ಲಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಜಾಥಾ ನಡೆಸಿದರು.
ಕೆಲವೆಡೆ ಮಕ್ಕಳಿಗೆ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹೂಗುಚ್ಛ ನೀಡಿ ವಿಶಿಷ್ಟವಾಗಿ ಬರಮಾಡಿಕೊಂಡರೆ, ಕೆಲವೆಡೆ ಲಾಲಿಪಪ್ ಅಥವಾ ಚಾಕೊಲೇಟ್ ನೀಡಿ ಮಕ್ಕಳನ್ನು ಸ್ವಾಗತಿಸಲಾಯಿತು. ಮಕ್ಕಳಿಗೆ ಹಲವೆಡೆ ಮೊದಲ ದಿನವೇ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.
Sidlaghatta Government School Reopen
ಶಿಡ್ಲಘಟ್ಟ ಕೋಟೆ ಸರ್ಕಾರಿ ಬಾಲಕಿಯರ ಶಾಲೆಯ ಮಕ್ಕಳು ಮತ್ತು ಶಿಕ್ಷಕರು “ಆಂಗ್ಲ ಮಾಧ್ಯಮ” ಪ್ರಾರಂಭಿಸುತ್ತಿರುವುದಾಗಿ ಜಾಥಾ ನಡೆಸಿದರು
“ಮಕ್ಕಳು ಶಾಲೆಗೆ ಇಷ್ಟಪಟ್ಟು ಬರಬೇಕು. ಆಗ ಅವರ ಕಲಿಕೆ ಚೆನ್ನಾಗಿ ಸಾಗುತ್ತದೆ. ಆಡುತ್ತಾ ನಲಿಯುತ್ತಾ ಸಂತಸದಿಂದ ಅವರ ಕಲಿಕೆ ಆಗಬೇಕು ಎಂಬ ಉದ್ದೇಶದಿಂದ ಮಕ್ಕಳಿಗೆ ಈ ದಿನ ಸಿಹಿ ನೀಡಿ ಸ್ವಾಗತಿಸಿದೆವು. ಅಂಗನವಾಡಿ ಪೂರೈಸಿರುವ ಮಕ್ಕಳ ಪೋಷಕರೊಂದಿಗೆ ಮಾತನಾಡಿ ಅವರ ಮನೆಗಳಿಗೇ ಹೋಗಿ ಮಕ್ಕಳನ್ನು ಶಾಲೆಗೆ ದಾಖಲಿಸಿ ಕರೆತಂದೆವು” ಎಂದು ಅಪ್ಪೇಗೌಡನಹಳ್ಳಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ ತಿಳಿಸಿದರು.

ಶಿಡ್ಲಘಟ್ಟ ನಗರಸಭೆ ಚುನಾವಣೆ – ಶೇ 76.83% ಮತದಾನ

0

ಶಿಡ್ಲಘಟ್ಟ ನಗರಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಬುಧವಾರ ಬಹುತೇಕ ಶಾಂತಯುತವಾಗಿ ನಡೆದಿದ್ದು ನಗರಸಭೆಯ 31 ವಾರ್ಡುಗಳ ಸದಸ್ಯತ್ವಕ್ಕಾಗಿ ಕಣಕ್ಕಿಳಿದಿದ್ದ 115 ಮಂದಿ ಅಭ್ಯರ್ಥಿಗಳ ಭವಿಷ್ಯ 31ನೇ ತಾರೀಖು ತಿಳಿಯಲ್ಪಡಲಿದೆ.
ಬುಧವಾರ ಬೆಳಿಗ್ಗೆ ಏಳು ಗಂಟೆಗೆ ಮತದಾನ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ ಕೆಲವೆಡೆ ಬೆಳಿಗ್ಗೆಯೇ ಉತ್ಸಾಹ ಭರಿತರಾಗಿ ಬೇಗ ಬಂದು ಸರತಿಸಾಲುಗಳಲ್ಲಿ ನಿಂತು ಜನತೆ ಮತದಾನ ಮಾಡಿದರೆ, ಕೆಲವೆಡೆ ಮಧ್ಯಾಹ್ನದ ನಂತರ ಮತದಾನ ಪ್ರಕ್ರಿಯೆ ಬಿರುಸುಗೊಂಡಿತು.
ಚುನಾವಣೆ ಹಿನ್ನನಲೆಯಲ್ಲಿ ನಗರದ ಮುಖ್ಯ ರಸ್ತೆಗಳಲ್ಲಿರುವ ಬಹುತೇಕ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತರಾಗಿ ಮುಚ್ಚಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರಿಂದ ನಗರದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.
ಉತ್ಸಾಹದಿಂದ ಬೆಳಗಿನಿಂದಲೇ ಜನತೆ ಮತ ಚಲಾಯಿಸಲು ತಮ್ಮ ತಮ್ಮ ವಾರ್ಡುಗಳ ಮತಗಟ್ಟೆಗಳಲ್ಲಿ ಸಾಲುಗಟ್ಟಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಒಟ್ಟು ಶೇ 76.83% ಮತದಾನವಾಗಿದ್ದು, ಅತಿ ಹೆಚ್ಚು 86.38% 8ನೇ ವಾರ್ಡ್ ಹಾಗು ಅತಿ ಕಡಿಮೆ 65.92% 7ನೇ ವಾರ್ಡಿನಲ್ಲಿ ಮತದಾನವಾಗಿದೆ
ಮತದಾನದ ದಿನವಾದ ಬುಧವಾರ ಮತದಾರರನ್ನು ಮತಗಟ್ಟೆಗೆ ಕರೆತರಲು ಆಟೋ, ಕಾರುಗಳನ್ನು ಕಳುಹಿಸಿ ಕರೆತಂದ ಅಭ್ಯರ್ಥಿಗಳು ತಮ್ಮ ಪರ ಮತ ಹಾಕಿಸುಕೊಳ್ಳುವಲ್ಲಿ ನಿರತರಾಗಿದ್ದರು. ಮತದಾರರು ಮತಗಟ್ಟೆಯ ಸಮೀಪಕ್ಕೆ ಬರುತ್ತಿದ್ದಂತೆ ಮತದಾರನನ್ನು ಮುತ್ತಿಕೊಳ್ಳುತ್ತಿದ್ದ ವಿವಿಧ ಪಕ್ಷಗಳ ಅಭ್ಯರ್ಥಿಗಳು ತಮಗೆ ಒಂದು ಮತ ಹಾಕಿ ಅವಕಾಶ ನೀಡಿ ಎಂದು ಮನವಿ ಮಾಡುತ್ತಾ ನಮಸ್ಕಾರ ಹಾಕುವ ಜೊತೆಗೆ ಅಲ್ಲಲ್ಲಿ ಮತದಾರರಿಗೆ ನೀರು, ಜ್ಯೂಸ್, ಸೇರಿದಂತೆ ಮಜ್ಜಿಗೆಯಂತಹ ಪಾನೀಯಗಳನ್ನು ವಿತರಿಸಿ ಮತ ಯಾಚಿಸುತ್ತಿದ್ದುದು ವಿಶೇಷವಾಗಿತ್ತು.

ನಗರಸಭೆ ಚುನಾವಣೆಗೆ ಸರ್ವ ಸಿದ್ಧತೆ

0

ನಗರದ ಸರ್ಕಾರಿ ಜೂನಿಯರ್ ಕಾಲೇಜ್ ಆವರಣದಲ್ಲಿ ಮಂಗಳವಾರ ಚುನಾವಣಾ ಮತಟ್ಟೆಗಳಿಗೆ ಚುನಾವಣಾ ಯಂತ್ರ ಹಾಗೂ ಸಲಕರಣೆಗಳನ್ನು ಅಧಿಕಾರಿಗಳಿಗೆ ವಿತರಣೆ ಮಾಡಿ ತಹಶೀಲ್ದಾರ್ ಎಸ್.ಅಜಿತ್‌ಕುಮಾರ್ ರೈ ಮಾತನಾಡಿದರು.
ಮೇ ೨೯ ರ ಬುದವಾರ ನಡೆಯುವ ಸ್ಥಳೀಯ ನಗರಸಭೆ ಚುನಾವಣೆಗೆ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿರುವುದಾಗಿ ಅವರು ತಿಳಿಸಿದರು.

ಸರ್ಕಾರಿ ಜೂನಿಯರ್ ಕಾಲೇಜ್ ಆವರಣದಲ್ಲಿ ಮಂಗಳವಾರ ಚುನಾವಣಾ ಮತಟ್ಟೆಗಳಿಗೆ ತೆರಳಲು ಕಾದು ಕುಳಿತಿರುವ ಸಿಬ್ಬಂದಿ
ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯ ೪೨ ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದ್ದು, ಚುನಾವಣೆ ಸಿಬ್ಬಂದಿಯಾಗಿ ೧೬೦ ಮಂದಿ ಸಿಬ್ಬಂದಿ ಸೇರಿದಂತೆ ೧೪೦ ಮಂದಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಬ್ಬಂದಿಗೆ ಅಗತ್ಯವಾಗಿರುವ ಮೂಲಸೌಕರ್ಯ ಸೇರಿದಂತೆ ಚುನಾವಣಾ ಸಿಬ್ಬಂದಿ ಹಾಗೂ ಸಾಮಗ್ರಿಯನ್ನು ಮತಗಟ್ಟೆಗೆ ಸಾಗಿಸಲು ವಾಹನ ವ್ಯವಸ್ಥೆ ಮಾಡಲಾಗಿದೆ ಎಂದರು.
ಸರ್ಕಲ್ ಇನ್ಸ್ ಪೆಕ್ಟರ್ ಆನಂದ್ ಕುಮಾರ್ ಮಾತನಾಡಿ, ನಗರಸಭೆ ಚುನಾವಣೆಯನ್ನು ಶಾಂತಿ ಹಾಗೂ ಸುವ್ಯವಸ್ಥೆಯಿಂದ ನಡೆಸಲು ಬೇಕಾದ ಅಗತ್ಯ ರಕ್ಷಣಾ ಕ್ರಮಗಳನ್ನು ಇಲಾಖೆಯಿಂದ ಕೈಗೊಳ್ಳಲಾಗಿದೆ. ನಗರದ ೪೨ ಬೂತ್‌ಗಳು ಹಾಗೂ ತಾಲ್ಲೂಕಿನ ಗಂಭೀರನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯ ಒಂದು ಬೂತ್ ಸೇರಿ ಒಟ್ಟು ೪೩ ಬೂತ್‌ಗಳಲ್ಲಿ ಬುಧವಾರ ಚುನಾವಣೆ ನಡೆಯಲಿದೆ. ಈ ಪೈಕಿ ೧೦ ಅತೀ ಸೂಕ್ಷ್ಮ ಮತಗಟ್ಟೆಗಳಾಗಿದ್ದು ೧೬ ಸೂಕ್ಷ್ಮ ಹಾಗೂ ೧೬ ಸಾಮಾನ್ಯ ಮತಗಟ್ಟೆಗಳಿವೆ. ಎಲ್ಲಾ ಮತಗಟ್ಟೆಗಳಿಗೂ ಅಗತ್ಯವಿರುವ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.
ಸಹಾಯಕ ಚುನಾವಣಾಧಿಕಾರಿ ಶಿವಕುಮಾರ್ ಮಾತನಾಡಿ, ನಗರಸಭೆ ವ್ಯಾಪ್ತಿಯ ೩೧ ವಾರ್ಡುಗಳಿಗೆ ಬುಧವಾರ ಚುನಾವಣೆ ನಡೆಯಲಿದ್ದು ಬೆಳಗ್ಗೆ ೦೭ ಗಂಟೆಯಿಂದ ಸಂಜೆ ೦೫ ಗಂಟೆಯವರಗೂ ಮತದಾನ ಪ್ರಕ್ರಿಯೆ ನಡೆಯಲಿದೆ. ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಸಲು ಬೇಕಾದ ಅಗತ್ಯ ಕ್ರಮಗಳನ್ನು ಈಗಾಗಲೇ ಕೈಗೊಂಡಿದ್ದು ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.

ನೂತನ ವಧೂವರರಿಂದ ಗಿಡ ನೆಡಿಸಿ “ವನಸಿರಿ ನುಡಿಸಿರಿ” ಕಾರ್ಯಕ್ರಮ ಆಚರಣೆ

0

ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಮಂಗಳವಾರ ನೂತನ ವಧೂವರರಿಂದ ಗಿಡ ನೆಡಿಸಿ “ವನಸಿರಿ ನುಡಿಸಿರಿ” ಕಾರ್ಯಕ್ರಮವನ್ನು ಆಚರಿಸಿ ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಜೀವನದಲ್ಲಿ ಬರುವ ಪ್ರತಿಯೊಂದು ಶುಭ ಘಳಿಗೆಗೂ ಸಾಕ್ಷಿಯಾಗಿ ಒಂದೊಂದು ಗಿಡ ನೆಡುವ ಸಂಕಲ್ಪವನ್ನು ನಾವುಗಳು ಮಾಡಬೇಕು ಎಂದು ಅವರು ತಿಳಿಸಿದರು.
ಪ್ರತಿಯೊಬ್ಬರೂ ತಮ್ಮ ಮಕ್ಕಳ ಹುಟ್ಟಿದ ದಿನದಂದು ಕನಿಷ್ಟ ಒಂದಾದರೂ ಗಿಡ ನೆಡಿ. ವಿವಾಹದ ಸಂದರ್ಭ, ವಾರ್ಷಿಕೋತ್ಸವ, ಹಿರಿಯರ ಆರಾಧನೆ ಮುಂತಾದ ಕೌಟುಂಬಿಕ ಸಂದರ್ಭಗಳಿಗೆಲ್ಲ ಒಂದೊಂದು ಗಿಡ ನೆನಪಾಗಿ ಉಳಿಯುವಂತಾಗಲಿ. ಇದರಿಂದ ಇತರರಿಗೂ ಪರಿಸರ ರಕ್ಷಣೆ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆ. ಶಾಲೆಗಳಲ್ಲಿ ಸಹ ಪ್ರತಿಯೊಬ್ಬ ವಿದ್ಯಾರ್ಥಿಯ ಹೆಸರಿನಲ್ಲಿ ಒಂದೊಂದು ಗಿಡ ನೆಟ್ಟು ಆ ವಿದ್ಯಾರ್ಥಿ ಅದನ್ನು ಪೋಷಿಸಲು ಪ್ರೇರೇಪಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಧುಮಗ ಮೇಲೂರು ವಿ.ಶ್ರೀಕಾಂತ್, ಮಧುಮಗಳು ಅಪ್ಪೇಗೌಡನಹಳ್ಳಿ ಎಸ್.ಸಂಗೀತಾ ಅವರಿಗೆ ಕಸಾಪ ವತಿಯಿಂದ ಶುಭಹಾರೈಸಿ ಪುಸ್ತಕವನ್ನು ನೀಡಲಾಯಿತು.
ಗ್ರಾಮ ಪಂಚಾಯಿತಿ ಪಿಡಿಒ ಅಂಜನ್ ಕುಮಾರ್, ಕಾರ್ಯದರ್ಶಿ ಶ್ರೀನಿವಾಸ್, ಕರವಸೂಲಿಗಾರ ಶ್ರೀನಿವಾಸ್, ಮೋಹನ್, ಮುನಿಯಪ್ಪ, ನಾರಾಯಣಸ್ವಾಮಿ, ದೇವರಾಜ್, ಮುನಿರಾಜು, ಮುನಿವೆಂಕಟಸ್ವಾಮಿ, ವೆಂಕಟೇಶ್, ತಿರುಮಳಪ್ಪ, ಕೃಷ್ಣಮೂರ್ತಿ, ನರಸಿಂಹಮೂರ್ತಿ, ಮುನಿರತ್ನಮ್ಮ, ವೆಂಕಟಮ್ಮ, ವರಲಕ್ಷ್ಮಿ, ದೇವಮ್ಮ, ಗಂಗಮ್ಮ, ವೆಂಕಟಲಕ್ಷ್ಮಮ್ಮ ಹಾಜರಿದ್ದರು.

ಬಿರುಗಾಳಿ, ಆಲಿಕಲ್ಲಿನ ಮಳೆಗೆ ಬೆಳೆ, ಆಸ್ತಿ ನಾಶ

0

ತಾಲ್ಲೂಕಿನ ವಿವಿದೆಡೆ ಎರಡು ದಿನಗಳಿಂದ ರಾತ್ರಿ ವೇಳೆ ಸುರಿದ ಬಿರುಗಾಳಿ, ಆಲಿಕಲ್ಲಿನ ಮಳೆಗೆ ದ್ರಾಕ್ಷಿ, ಮಾವು, ಹಿಪ್ಪುನೇರಳೆ ಮುಂತಾದ ಬೆಳೆಗಳು ಹಾಳಾಗಿದ್ದು, ರೈತರಿಗೆ ಅಪಾರ ನಷ್ಟವುಂಟಾಗಿದೆ. ತಾಲ್ಲೂಕಿನಾದ್ಯಂತ ಸುಮಾರು ೫೦ ವಿದ್ಯುತ್ ಕಂಬಗಳು ಉರುಳಿದ್ದು ವಿದ್ಯುತ್ ವ್ಯತ್ಯಯವೂ ಉಂಟಾಗಿದೆ.

ಅಪ್ಪೇಗೌಡನಹಳ್ಳಿಯಲ್ಲಿ ಛಾವಣಿ ಹಾರಿ ಹೋದ ಮನೆ
ಆಲಿಕಲ್ಲಿನ ಮಳೆಗೆ ಸೀಳುಬಿಟ್ಟ ದ್ರಾಕ್ಷಿ[/caption] ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಎರಡು ವಾಸದ ಮನೆಗಳು, ಎರಡು ಚಂದ್ರಂಕಿ ಶೇಡ್ ಗಳು ಹಾಗೂ ಮೂರು ದನದ ಶೇಡ್ ಗಳ ಛಾವಣಿಯ ಶೀಟ್ ಗಳು ಹಾರಿಹೋಗಿವೆ. ಸುಮಾರು ೧೭ ಮರಗಳು ಉರುಳಿದ್ದು, ಮರಗಳು ವಿದ್ಯುತ್ ತಂತಿಗಳ ಮೇಲೆ ಉರುಳಿ ಬಿದ್ದದ್ದರಿಂದ ವಿದ್ಯುತ್ ಕಂಬವೂ ಕೆಳಗೆ ಬಿದ್ದಿದೆ.
ಆಲಿಕಲ್ಲಿನ ಮಳೆಗೆ ಸೀಳುಬಿಟ್ಟ ದ್ರಾಕ್ಷಿ
ಆಲಿಕಲ್ಲಿನ ಮಳೆಗೆ ದ್ರಾಕ್ಷಿ ಸೀಳಿಹೋಗಿದ್ದರೆ, ಇನ್ನೂ ಪುಟ್ಟಪುಟ್ಟ ಕಾಯಿಗಳು ಉದುರಿಹೋಗಿವೆ. ಎಲೆಗಳು ಸೀಳಿವೆ. ಹಿಪ್ಪುನೇರಳೆ ಬೆಳೆ ಸಹ ಹಾಳಾಗಿ, ಪ್ರಯೋಜನಕ್ಕೆ ಬಾರದಂತಾಗಿದೆ. ಅಂಕತಟ್ಟಿಯಲ್ಲಿ ಎರಡು ವಿದ್ಯುತ್ ಕಂಬಗಳು ಬಿದ್ದಿದ್ದರೆ, ಮೇಲೂರಿನಲ್ಲಿ ಮೂರು ಕಂಬಗಳು ಉರುಳಿವೆ.
ವಿದ್ಯುತ್ ತಂತಿಗಳ ಮೇಲೆ ಉರುಳಿದ ಮರ
ಮೇಲೂರು ಗ್ರಾಮದ ವೃತ್ತದ ಬಳಿ ಮರವೊಂದು ಉರುಳಿ ಅಂಗಡಿ ಜಖಂಗೊಂಡಿದೆ. ಕಂಬದಹಳ್ಳಿ ರಸ್ತೆಯಲ್ಲಿ ಮರಗಳು ಉರುಳಿ ಎರಡು ವಿದ್ಯುತ್ ಕಂಬಗಳು ನೆಲಕಚ್ಚಿವೆ. ಶೀಗೆಹಳ್ಳಿ ಬಳಿ ಒಂದು ವಾಸದ ಮನೆ ಬಿದ್ದು ಹೋಗಿದೆ ಮತ್ತು ಟೊಮೆಟೋ ಬೆಳೆ ನಾಶವಾಗಿದೆ.
ಜಂಗಮಕೋಟೆ ಹೋಬಳಿಯ ಬಳುವನಹಳ್ಳಿ, ಜೆ.ವೆಂಕಟಾಪುರ, ಮಿತ್ತನಹಳ್ಳಿ, ಹೊಸಪೇಟೆಯ ಸುತ್ತಮುತ್ತ ಆಲಿಕಲ್ಲಿನ ಮಳೆಯಿಂದಾಗಿ ಹಿಪ್ಪುನೇರಳೆ ಬೆಳೆ ಸಂಪೂರ್ಣ ನಾಶವಾಗಿದೆ. ಮಾವಿನ ಫಸಲು ಸಹ ಸಾಕಷ್ಟು ಹಾನಿಯಾಗಿದೆ. ತರಕಾರಿ, ಹೂ ಹಣ್ಣಿನ ಬೆಳೆಗಳಿಗೂ ತೊಂದರೆಯಾಗಿದೆ.
ತಾಲ್ಲೂಕಿನಲ್ಲಿ ಮಳೆಯ ಹಾನಿಯನ್ನು ಪರಿಶೀಲಿಸಲು ರೇಷ್ಮೆ, ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಮಳೆಯ ಪರಿಣಾಮದಿಂದಾದ ನಷ್ಟದ ಅಂದಾಜನ್ನು ಪಟ್ಟಿ ಮಾಡುತ್ತಿದ್ದಾರೆ. ವಿದ್ಯುತ್ ಇಲಾಖೆಯವರು ಉರುಳಿ ಬಿದ್ದ ಮರಗಳನ್ನು ಪಕ್ಕಕ್ಕೆ ಸರಿಸಿ ಬಿದ್ದು ಹೋಗಿರುವ ಕಂಬಗಳನ್ನು ಸರಿಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಯಿಂದ ದೊಡ್ಡತೇಕಹಳ್ಳಿಯ ಕಲ್ಯಾಣಿಯ ಸ್ವಚ್ಛತೆ

0

ತಾಲ್ಲೂಕಿನ ದೊಡ್ಡತೇಕಹಳ್ಳಿಯ ದಾಸಪ್ಪನಬಾವಿ ಎಂದೇ ಕರೆಯುವ ಕಲ್ಯಾಣಿಯನ್ನು ಬಶೆಟ್ಟಹಳ್ಳಿ ಹೋಬಳಿ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಯಿಂದ ಶ್ರಮದಾನದ ಮೂಲಕ ಸ್ವಚ್ಛತೆ ಕೆಲಸವನ್ನು ಮಾಡಲಾಯಿತು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶಿವಕುಮಾರ್ ಮಾತನಾಡಿ, “ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾಲ್ಲೂಕಿನ ಕಲ್ಯಾಣಿಗಳು ನೀರು ಹಿಡಿದಿಡಲು ಯೋಗ್ಯವಾಗುವ ರೀತಿಯಲ್ಲಿ ಸ್ವಚ್ಛಗೊಳಿಸುತ್ತಿದ್ದೇವೆ. ಜಿಲ್ಲೆಯಲ್ಲಿ ನೀರಿನ ಕೊರತೆ ಉಂಟಾಗಿದ್ದು, ಸಾವಿರಾರು ಆಡಿ ಕೊರೆದರೂ ನೀರು ಸಿಗುವುದು ಕಷ್ಟವಾಗಿದೆ. ಸಿಕ್ಕ ಅಲ್ಪ ಸ್ವಲ್ಪ ನೀರು ಫ್ಲೋರೈಡ್ ನೀರಾಗಿದ್ದು, ಆ ನೀರನ್ನು ಉಪಯೋಗಿಸಲು ಯೋಗ್ಯವಾಗಿಲ್ಲ. ಇದಕ್ಕೆ ಮೂಲ ಕಾರಣ ಅಂತರ್ಜಲ ನೀರಿನ ಮಟ್ಟ ಕುಸಿತ. ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಜಿಲ್ಲೆಯಾದ್ಯಂತ ಇರುವ ಕಲ್ಯಾಣಿಗಳು, ಕುಂಟೆಗಳು, ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ಶುಚಿಗೊಳಿಸಲು ಮುಂದಾಗಿದ್ದೇವೆ. ತಾಲ್ಲೂಕಿನ ಪಟ್ಟಣ, ಗ್ರಾಮಗಳು ಸೇರಿದಂತೆ ಎಲ್ಲಾ ಕಡೆ ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಾಗಿದೆ” ಎಂದು ತಿಳಿಸಿದರು.
ತಾಲ್ಲೂಕಿನ ದೊಡ್ಡತೇಕ ಹಳ್ಳಿಯ ಕಲ್ಯಾಣಿಯು ಸುಮಾರು ೨೦೦-೩೦೦ ವರ್ಷಗಳ ಇತಿಹಾಸ ಹೊಂದಿದೆ. ಈ ಕಲ್ಯಾಣಿಯ ಸುತ್ತ ಆಂಜನೇಯ ಸ್ವಾಮಿ, ಚೆನ್ನಕೇಶವ ಸ್ವಾಮಿ, ವೀರಭದ್ರ ಸ್ವಾಮಿ, ದೇವಾಲಯಗಳಿವೆ. ಈ ಕಲ್ಯಾಣಿಯ ಹಾಗೂ ದೇವಾಲಯಗಳ ಸುತ್ತಮುತ್ತ ಹಳೆಯ ಶಿಲಾಶಾಸಗಳ ಕಲ್ಲುಗಳು ಪತ್ತೆಯಾಗಿವೆ. ಕಲ್ಯಾಣಿಯು ನೋಡಲು ಸುಂದರವಾಗಿದೆ ಎಂದು ತಿಳಿಸಿದರು.
ತಾಲ್ಲೂಕು ನರೇಗಾ ಯೋಜನಾದಿಕಾರಿ ಶ್ರೀನಾಥ್ ಗೌಡ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶಿವಾನಂದ್, ಪಿ.ಡಿ.ಒ ತನ್ವೀರ್, ಕಾತ್ಯಾಯಿನಿ ,ಯಮುನಾರಾಣಿ, ಕಾರ್ಯದರ್ಶಿ ನಾಗರಾಜ್, ಮದ್ದರೆಡ್ಡಿ, ರಮೇಶ್, ಸುದಾಕರ್, ಗ್ರಾಮಸ್ಥರಾದ ಗುಮ್ಮರೆಡ್ಡಿ, ದ್ಯಾವಪ್ಪ ಹಾಜರಿದ್ದರು.

ಉಚಿತ ಕಣ್ಣಿನ ಪೊರೆ ತಪಾಸಣಾ ಶಿಬಿರ

0

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ನಂದೀಶ್ವರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಉಚಿತ ಕಣ್ಣಿನ ಪೊರೆ ತಪಾಸಣಾ ಶಿಬಿರದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿದರು.
ಪಂಚೇಂದ್ರಿಯಗಳಲ್ಲಿ ಕಣ್ಣು ಮುಖ್ಯ ಅಂಗವಾಗಿದ್ದು, ಕಣ್ಣಿನ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಕಣ್ಣಿನ ತಪಾಸಣೆಯನ್ನು ಕಾಲಕಾಲಕ್ಕೆ ಎಲ್ಲರೂ ಮಾಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ದೃಷ್ಠಿದೋಷ, ಕಣ್ಣಿನ ಪೊರೆ, ಕಣ್ಣಿನಲ್ಲಿ ನೀರು ಸೋರುವಿಕೆ, ಅಭ್ಯಾಸದ ಸಮಯದಲ್ಲಿ ದೃಷ್ಟಿ ಮಂದವಾಗುವುದು, ಮುಂತಾದ ಸಮಸ್ಯೆಗಳ ನಿವಾರಣೆಗಾಗಿ ಆಗಾಗ ಕಣ್ಣಿನ ತಪಾಸಣೆಗೆ ಒಳಪಟ್ಟಾಗ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿಯೇ ಕಣ್ಣಿನ ಪೊರೆ ಚಿಕಿತ್ಸೆ ಘಟಕ ಆರಂಭಿಸಲು ಅಗತ್ಯ ಕ್ರಮ ಕೈಗೊಂಡಿದ್ದು ಮುಂಬರುವ ದಿನಗಳಲ್ಲಿ ಇಲ್ಲಿಯೇ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದರು.
ನಂದೀಶ್ವರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನೇತ್ರ ತಜ್ಞ ಡಾ.ನವನೀತ್ ಮಾತನಾಡಿ, ಬಹಳಷ್ಟು ಜನ ದೃಷ್ಟಿ ಕಡಿಮೆಯಾಗಿ, ಪೊರೆಯಿದೆ ಎಂದೂ ತಿಳಿದರೂ ಹತ್ತಾರು ವರ್ಷಗಳಗಟ್ಟಲೇ ಹಾಗೆಯೇ ಇರುತ್ತಾರೆ. ಬದಲಿಗೆ ದೃಷ್ಟಿ ಕಡಿಮೆಯಾದ ತಕ್ಷಣವೇ ತಪಾಸಣೆ ನಡೆಸಿದಲ್ಲಿ ಕಣ್ಣಿನ ಸಮಸ್ಯೆ ಸರಿಹೋಗುವ ಜೊತೆಗೆ ನಮಗೂ ಶಸ್ತ್ರಚಿಕಿತ್ಸೆ ಮಾಡಲು ಸುಲಭವಾಗುತ್ತದೆ. ಸರ್ಕಾರದ ವಿವಿಧ ಸವಲತ್ತುಗಳನ್ನು ಬಳಸಿಕೊಂಡು ಆರೋಗ್ಯದ ಬಗ್ಗೆ ಎಲ್ಲರೂ ಹೆಚ್ಚು ಕಾಳಜಿವಹಿಸಬೇಕು ಎಂದರು.
ಸಾರ್ವಜನಿಕ ಆಸ್ಪತ್ರೆಯ ನೇತ್ರ ತಜ್ಞೆ ಡಾ.ಅನುಷ, ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಗುರುರಾಜ್‌ರಾವ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎ.ವೆಂಕೋಬರಾವ್ ಹಾಜರಿದ್ದರು.

ಲೋಕಸಭಾ ಚುನಾವಣೆ ಫಲಿತಾಂಶ – ಮೋದಿಗೆ ಬಹುಮತ ನೀಡಿದ ಶಿಡ್ಲಘಟ್ಟದ ಜನತೆ

0

ಶಿಡ್ಲಘಟ್ಟ ತಾಲ್ಲೂಕಿನವರೇ ಆದ ಸೋಲಿಲ್ಲದ ಸರದಾರ ಎಂದೇ ಹೆಸರಾಗಿರುವ ಕೆ.ಎಚ್.ಮುನಿಯಪ್ಪ ವಿರುದ್ದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಸುಮಾರು ೨,೦೯,೭೦೪ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು ತಿಳಿದೊಡನೆಯೇ ಬಿಜೆಪಿ ಪಕ್ಷದ ಕಾರ್ಯಕರ್ತರಲ್ಲದೆ ವಿವಿಧ ವರ್ಗದ ಜನರೂ ಸಹ ಸಂಭ್ರಮ ಆಚರಣೆ ನಡೆಸಿದರು.
ಬಿಜೆಪಿ ಕಾರ್ಯಕರ್ತರು ಕೋಟೆ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ, ಬೈಕ್ ನಲ್ಲಿ “ಮೋದಿ, ಮೋದಿ” ಎಂದು ಘೋಷಣೆ ಕೂಗುತ್ತಾ ಪ್ರಮುಖ ರಸ್ತೆಯಲ್ಲಿ ಸಾಗಿದರು. ಆಟೋ ಚಾಲಕರು ರೈಲ್ವೆ ನಿಲ್ದಾಣದ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ವಿಜಯಲಕ್ಷ್ಮಿ ವೃತ್ತ ಹಾಗೂ ಉಲ್ಲೂರುಪೇಟೆಯಲ್ಲಿ ಕೆಲವಾರು ಯುವಕರು ಸ್ವಯಂಪ್ರೇರಿತರಾಗಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ತಾಲ್ಲೂಕಿನ ಕಂಬದಹಳ್ಳಿಯವರಾದ ಕೆ.ಎಚ್.ಮುನಿಯಪ್ಪ ಅವರನ್ನು ಏಳು ಬಾರಿ ಸಂಸದರಾಗಲು ಬೆಂಬಲಿಸಿದ್ದ ಶಿಡ್ಲಘಟ್ಟ ಕ್ಷೇತ್ರದ ಜನರು ಈ ಬಾರಿ ಮುಖ ಪರಿಚಯವೂ ಇಲ್ಲದ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಅವರಿಗೆ ಹೆಚ್ಚಿನ ಮತ ನೀಡಿದ್ದಾರೆ. ಕೆ.ಎಚ್.ಮುನಿಯಪ್ಪ ಅವರ ಮೇಲಿನ ಕೋಪ ಅಥವಾ ವಿರೋಧಿ ಅಲೆಯು ಈ ಫಲಿತಾಂಶಕ್ಕೆ ಕಾರಣವಾಗಿದೆ ಎಂಬುದಾಗಿ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಬಿಜೆಪಿ ಪಕ್ಷದ ಗೆಲುವಿಗಿನ ಜೊತೆಗೆ ಜನರು ಕೆ.ಎಚ್.ಸೋಲಿಗೂ ಸಂಭ್ರಮ ಆಚರಿಸಿದ್ದು ಕಂಡುಬಂದಿತು.

ಶಿಡ್ಲಘಟ್ಟ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆಗೆ ಹಲವು ಕಾರಣಗಳು

ಸಾಮಾನ್ಯವಾಗಿ ಶಿಡ್ಲಘಟ್ಟ ಕ್ಷೇತ್ರದ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುತ್ತಿದ್ದರು. ಆದರೆ, ವಿಸ್ಮಯವೆಂಬಂತೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮುಖ ಪರಿಚಯವೇ ಇಲ್ಲದಿದ್ದರೂ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರಿಗಿಂತ ೧೭,೩೦೮ ಮತಗಳು ಹೆಚ್ಚು ನೀಡಿದ್ದಾರೆ.
ಕಾಂಗ್ರೆಸ್ ಅಥವಾ ಜೆ.ಡಿ.ಎಸ್ ಪಕ್ಷಕ್ಕೆ ಮಾತ್ರ ತಮ್ಮ ಒಲವನ್ನು ಪ್ರದರ್ಶಿಸುತ್ತಾ ಬಂದಿದ್ದ ಶಿಡ್ಲಘಟ್ಟ ಕ್ಷೇತ್ರದ ಮತದಾರರು, ಕೆ.ಎಚ್.ಮುನಿಯಪ್ಪ ಜೆ.ಡಿ.ಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿದ್ದರೂ ಎರಡೂ ಪಕ್ಷಗಳ ಬೆಂಬಲಿಗರು ಈ ಬಾರಿ ಬಿಜೆಪಿ ಬೆಂಬಲಿಸಿರುವುದು ಇದರಿಂದ ಸ್ಪಷ್ಟವಾಗಿದೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಶಿಡ್ಲಘಟ್ಟ ಕ್ಷೇತ್ರದ ಒಟ್ಟು ಮತಗಳ ಸಂಖ್ಯೆ ೧,೫೬,೨೩೦. ಕಳೆದ ಏಳು ಬಾರಿ ಸತತವಾಗಿ ಸಂಸದರಾಗಿದ್ದ ಶಿಡ್ಲಘಟ್ಟ ತಾಲ್ಲೂಕಿನವರೇ ಆದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರಿಗೆ ೬೫,೬೧೯ ಮತಗಳು ಬಿದ್ದರೆ, ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಅವರಿಗೆ ೮೨,೯೨೭ ಮತಗಳು ಬಿದ್ದಿವೆ.
ಬಿಜೆಪಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಹಾಗೂ ಶಿಡ್ಲಘಟ್ಟ ಕ್ಷೇತ್ರದಲ್ಲಿ ಹೆಚ್ಚು ಮತಗಳು ಬೆಜೆಪಿ ಬೀಳಲು ಹಲವು ಕಾರಣಗಳನ್ನು ವಿಶ್ಲೇಷಕರು ಹೇಳುತ್ತಾರೆ.

ಸೇಡು ತೀರಿಸಿಕೊಂಡ ಶಾಸಕ ವಿ.ಮುನಿಯಪ್ಪ

“ಲೋಕಸಭಾ ಚುನಾವಣೆಯಲ್ಲಿ ನನ್ನ ಬೆಂಬಲ ಕಾಂಗ್ರೆಸ್ ಗೆ, ಕೆ.ಎಚ್.ಮುನಿಯಪ್ಪಗೆ ಅಲ್ಲ” ಎಂದು ಲೋಕಸಭೆ ಚುನಾವಣೆಯ ಮುಂಚೆಯೇ ಅಡ್ಡಗೋಡೆಯ ಮೇಲೆ ದೀಪವಿರಿಸಿದಂತೆ ಮಾತನಾಡಿದ್ದ ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಮತ್ತು ಏಳು ಬಾರಿ ಸಂಸದರಾಗಿದ್ದ ಕೆ.ಎಚ್.ಮುನಿಯಪ್ಪ ಅವರ ನಡುವಿನ ವೈಮನಸ್ಯ ಬಹಿರಂಗ ಸತ್ಯವಾಗಿತ್ತು. ಕೆ.ಎಚ್.ಮುನಿಯಪ್ಪ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೇಟು ಕೊಡದಂತೆ ದೆಹಲಿಗೆ ಹೋಗಿದ್ದ ಕೋಲಾರ ಕ್ಷೇತ್ರದ ಶಾಸಕರು ಹಾಗೂ ಹಿರಿಯ ಮುಖಂಡರೊಂದಿಗೆ ಶಾಸಕ ವಿ.ಮುನಿಯಪ್ಪ ಸಹ ಇದ್ದರು.
“ಕೆ.ಎಚ್.ಮುನಿಯಪ್ಪ ಸಂಸದರಾದ ನಂತರ ಸಂಸದರ ನಿಧಿಯಿಂದ ಕ್ಷೇತ್ರಕ್ಕೆ ಏನೆಲ್ಲಾ ಕೊಡುಗೆ ನೀಡಿದ್ದಾರೆ ಎಂಬುದು ಶಾಸಕನಾದ ನನಗೆ ಗೊತ್ತಿಲ್ಲ. ಇನ್ನು ಕ್ಷೇತ್ರದ ಜನರಿಗೇನು ಗೊತ್ತಿರುತ್ತದೆ. ಸಂಸದರ ನಿಧಿಯನ್ನು ಕೇವಲ ಅವರ ಹಿಂಬಾಲಕರಿಗೆ ಮಾತ್ರ ನೀಡುವ ಮೂಲಕ ಸ್ಥಳೀಯ ಶಾಸಕರನ್ನು ಮೂಲೆ ಗುಂಪು ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ” ಎಂದು ಚುನಾವಣೆಗೆ ಮುನ್ನವೇ ಶಾಸಕ ವಿ.ಮುನಿಯಪ್ಪ ಆರೋಪಿಸಿದ್ದರು.
“ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಅವರು ಶಾಸಕ ವಿ.ಮುನಿಯಪ್ಪ ಅವರ ಮಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಈ ಬಾರಿ ಅವರು ನಮ್ಮ ಪಕ್ಷಕ್ಕೆ ಬೆಂಬಲಿಸಲಿದ್ದಾರೆ” ಎಂದು ಬಿಜೆಪಿ ಕಾರ್ಯಕರ್ತರು ಚುನಾವಣೆಗೆ ಮುನ್ನವೇ ಮಾತನಾಡಿಕೊಂಡರು. ಅದರಂತೆಯೇ ಶಾಸಕ ವಿ.ಮುನಿಯಪ್ಪ ಅವರ ಬೆಂಬಲಿಗರು ಬಿಜೆಪಿ ಗೆ ಮತ ಹಾಕುವಂತೆ ಕಾಂಗ್ರೆಸಿಗರಿಗೆ ಹೇಳುತ್ತಿದ್ದುದೂ ಬಹಿರಂಗವಾಯಿತು. ಬಿಜೆಪಿ ಹೆಚ್ಚು ಮತ ಗಳಿಸಲು ಇದು ಪ್ರಮುಖ ಕಾರಣವೆನ್ನುತ್ತಾರೆ ವಿಶ್ಲೇಷಕರು.

ಕ್ಷೇತ್ರ ಅಭಿವೃದ್ಧಿ ಮಾಡಿಲ್ಲ ಎಂಬ ಕೋಪ

ನೀರಿನ ಸಮಸ್ಯೆ ಶಿಡ್ಲಘಟ್ಟ ಕ್ಷೇತ್ರವನ್ನು ಸಾಕಷ್ಟು ಕಾಡುತ್ತಿದೆ. ಯಾವುದೇ ಕೈಗಾರಿಕೆಯಾಗಲೀ, ಶಿಕ್ಷಣ ಸಂಸ್ಥೆಗಳಾಗಲೀ, ಆರ್ಥಿಕ ಬೆಳವಣಿಗೆಗೆ ಸಹಾಯಕವಾದ ಯೋಜನೆಗಳನ್ನು ರೂಪಿಸಿಲ್ಲ. ಏಳು ಬಾರಿ ಸಂಸದರಾದರೂ ಕೋಲಾರ ಕ್ಷೇತ್ರ ಅದೇ ಸಮಸ್ಯೆಗಳಿಂದ ನಲುಗುತ್ತಿದೆ. ಪ್ರತಿ ಬಾರಿಯೂ ನೀರು ತರುತ್ತೇನೆ ಎಂದೇ ಹೇಳುತ್ತಾರೆ ಎಂಬ ಆರೋಪ ಜನರದ್ದು. ರೈಲಿನ ಕಾಮಗಾರಿಯಲ್ಲಿ ಪ್ರತಿಯೊಂದು ಅಂಡರ್ ಪಾಸ್ ಕೂಡ ಕಳಪೆಯಿಂದ ಕೂಡಿದ್ದು ಸಾಕಷ್ಟು ಅವ್ಯವಹಾರದ ಆರೋಪವಿದೆ. ಜಮೀನಿನ ಹಗರಣವನ್ನು ಚುನಾವಣೆಯ ಸಂದರ್ಭದಲ್ಲಿ ಬೆಳಕಿಗೆ ತಂದಿದ್ದು, ಜನರಿಗೆ ಅವರ ಸ್ವಾರ್ಥ ರಾಜಕಾರಣದ ಬಗ್ಗೆ ಸಿಟ್ಟು ಬರಿಸಿತ್ತು.

ಪ್ರಯೋಜನವಾಗದ ಜೆಡಿಎಸ್ ಮೈತ್ರಿ

ಶಾಸಕ ವಿ.ಮುನಿಯಪ್ಪ ಅವರಿಂದ ಬೆಂಬಲ ಸಿಗುವುದಿಲ್ಲ ಎಂದು ತಿಳಿದೊಡನೆ ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರರ ಬೆಂಬಲ ಕೋರಿದ್ದರು ಕೆ.ಎಚ್.ಮುನಿಯಪ್ಪ. ರಾಜ್ಯ ಸರ್ಕಾರದ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಅವರ ಸೂಚನೆಯ ಮೇರೆಗೆ ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ಹಲವಾರು ಪ್ರಚಾರ ಸಭೆ ನಡೆಸಿದರು. ಆದರೆ, ಈ ಬಗ್ಗೆ ಜೆಡಿಎಸ್ ಪಕ್ಷದವರಿಂದಲೇ ಅದಕ್ಕೆ ವಿರೋಧ ವ್ಯಕ್ತವಾಗಿತ್ತು. ಚುನಾವಣೆ ಫಲಿತಾಂಶ ನೋಡಿದಾಗ ಜೆಡಿಎಸ್ ಕಾರ್ಯಕರ್ತರು ಮೈತ್ರಿ ನೀತಿಗೆ ತಿಲಾಂಜಲಿಯಿಟ್ಟಿರುವುದು ಕಂಡುಬರುತ್ತಿದೆ.

ಪುಲ್ವಾಮ ದಾಳಿ

ನೀರಿನಲ್ಲಿ ಬಿದ್ದ ಕಲ್ಲು ತನ್ನ ಕಂಪನವನ್ನು ಸುತ್ತಲೂ ಮೂಡಿಸುವಂತೆ ಪುಲ್ವಾಮದಲ್ಲಿ 40 ಮಂದಿ ಯೋಧರು ಹುತಾತ್ಮರಾದ ಬಳಿಕ ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ಸೇಡು ತೀರಿಸಿಕೊಂಡ ರೀತಿ ಮೋದಿಯವರ ಬಗ್ಗೆ ಅದುವರೆಗೂ ಇದ್ದ ಭಾವನೆಯನ್ನೇ ಬದಲಿಸಿತು. ಪ್ರತಿಯೊಂದು ಹಳ್ಳಿಗಳಲ್ಲೂ ಮೋದಿಯ ಅಲೆ ಮೂಡಿಬಿಟ್ಟಿತು. ಅದನ್ನು ತಡೆಯಲು ಯಾರ ಕೈಲೂ ಆಗದೇ ಹೋಯಿತು. ಇಲ್ಲಿ ಯಾವ ಪಕ್ಷವೇ ಇರಲಿ ಕೇಂದ್ರದಲ್ಲಿ ಮೋದಿಯೇ ಬರಲಿ ಎಂದು ಎಲ್ಲಾ ವರ್ಗದ ಜನರ ಮನದಲ್ಲೂ ಹುಟ್ಟಿದ ಅಲೆ ಬಿಜೆಪಿ ಅಭ್ಯರ್ಥಿಗೆ ವರವಾಯಿತು.

ಪರ – ವಿರೋಧ ಪ್ರಚಾರ

ಕಾಂಗ್ರೆಸ್ ಪಕ್ಷದ ಒಳ ಜಗಳದ ಪರಿಣಾಮವಾಗಿ ವಿ.ಮುನಿಯಪ್ಪ ಬೆಂಬಲಿಗರು ಶಿಡ್ಲಘಟ್ಟ ಕ್ಷೇತ್ರದಲ್ಲಿ ಕೆ.ಎಚ್.ಮುನಿಯಪ್ಪ ಅವರ ವಿರುದ್ಧವಾಗಿ ಪ್ರಚಾರ ನಡೆಸಿದರೆ, ಜೆಡಿಎಸ್ ಕಾರ್ಯಕರ್ತರು ಮೋದಿಗೆ ಮತ ಹಾಕಲು ಪ್ರಚಾರ ನಡೆಸಿದ್ದು ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಮುಖ ಪರಿಚಯವಿಲ್ಲದಿದ್ದರೂ ಹೆಚ್ಚು ಮತಗಳನ್ನು ಪಡೆಯುವಲ್ಲಿ ಕಾರಣವಾಯಿತು.
ಒಟ್ಟಾರೆ, ಶಿಡ್ಲಘಟ್ಟ ಕ್ಷೇತ್ರದಲ್ಲಿ ಸ್ಥಳೀಯ ಕಾಂಗ್ರೆಸ್ ಶಾಸಕ ವಿ.ಮುನಿಯಪ್ಪ ಅವರೊಂದಿಗಿನ ವೈಮನಸ್ಯ, ಜಮೀನಿನ ಹಗರಣ, ಅಭಿವೃದ್ಧಿ ಮಾಡದೆ, ನೀರಿನ ಯೋಜನೆ ರೂಪಿಸದೇ ಅಧಿಕಾರ ಅನುಭವಿಸಿದ್ದು ಹಾಗೂ ಮೋದಿ ಅಲೆಯು ಕೆ.ಎಚ್.ಮುನಿಯಪ್ಪ ಅವರ ಹಿನ್ನಡೆಗೆ ಕಾರಣವೆನ್ನಲಾಗುತ್ತಿದೆ.

ಬಿಜಿಎಸ್ ವಿದ್ಯಾಸಂಸ್ಥೆಯಲ್ಲಿ “ಸ್ವಸ್ತಿ – ೨೦೧೯” ಕಾರ್ಯಕ್ರಮ

0

ತಾಲ್ಲೂಕಿನ ಹನುಮಂತಪುರ ಗೇಟ್ ಬಳಿಯ ಬಿಜಿಎಸ್ ವಿದ್ಯಾಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ “ಸ್ವಸ್ತಿ – ೨೦೧೯” ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಜ್ಞಾನಾರ್ಜನೆಯೊಂದಿಗೆ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಸಾಮಾಜಿಕ ಬದ್ಧತೆ, ದೇಶಾಭಿಮಾನ, ಕೌಟುಂಬಿಕೆ ಮೌಲ್ಯಗಳು ಮೊದಲಾದ ಸಂಸ್ಕಾರವನ್ನು ಮಕ್ಕಳಿಗೆ ಕಲಿಸುವುದು ನಮ್ಮ ಮುಖ್ಯ ಉದ್ದೇಶ ಎಂದು ಅವರು ತಿಳಿಸಿದರು.
ಅಂಕ ಗಳಿಕೆಗೆ ಹೇಗೆ ಪ್ರಾಮುಖ್ಯತೆ ನೀಡಬೇಕೋ, ಹಾಗೆಯೇ, ಅದರೊಂದಿಗೆ ಉತ್ತಮ ಸಂಸ್ಕಾರವನ್ನು ಹೊಂದುವುದಕ್ಕೂ ಒತ್ತು ನೀಡಬೇಕು. ಹೃದಯವಂತರಾದವರು, ಮಾನವೀಯ ಗುಣವುಳ್ಳವರು, ಸರ್ವ ಧರ್ಮ ಸಹಿಷ್ಣುಗಳು, ಪರೋಪಕಾರ ಗುಣವುಳ್ಳವರು ಈಗಿನ ಸಮಾಜಕ್ಕೆ ಅತ್ಯಗತ್ಯ. ಮೌಲ್ಯವುಳ್ಳವರು ವೈದ್ಯರಾಗಲಿ, ಎಂಜಿನಿಯರುಗಳಾಗಲಿ, ಕಲೆಕ್ಟರಾಗಲಿ, ಪ್ರಾಧ್ಯಾಪಕರಾಗಲಿ, ಸೈನಿಕರಾಗಲಿ ಹಾಗೂ ವಿವಿಧ ಕ್ಷೇತ್ರಗಳಿಗೆ ಹೋಗುವಂತಾಗಲಿ ಎಂಬ ಅಭಿಲಾಶೆಯಿಂದ ವಿದ್ಯೆಯೊಂದಿಗೆ ಸಂಸ್ಕಾರ ಬೆಳೆಸಲೂ ಆಧ್ಯತೆ ನೀಡುತ್ತಿರುವುದಾಗಿ ಹೇಳಿದರು.
ಪ್ರಾಂಶುಪಾಲ ಮಹದೇವ್ ಮಾತನಾಡಿ, ಮಕ್ಕಳ ಭವಿಷ್ಯ ಉತ್ತಮವಾಗಬೇಕಾದರೆ ಮಕ್ಕಳೊಂದಿಗೆ ಪೋಷಕರೂ ಸಹ ಕೆಲವು ತ್ಯಾಗಗಳನ್ನು ಮಾಡಬೇಕಿದೆ. ಮಕ್ಕಳ ಹಾಜರಾತಿ, ನಿಯಮ ಬದ್ಧತೆ, ಪೋಷಕರ ಸಭೆ, ಅಧ್ಯಾಪಕರೊಂದಿಗೆ ಸಮಾಲೋಚನೆ ಮುಂತಾದವುಗಳಲ್ಲಿ ಪೋಷಕರು ತಪ್ಪದೆ ಪಾಲ್ಗೊಳ್ಳಬೇಕು. ಕಟ್ಟಡಕ್ಕೆ ಅತ್ಯಗತ್ಯವಾದ ಪಾಯದ ರೀತಿ ಮಕ್ಕಳ ಜೀವನದಲ್ಲಿ ಪಿಯುಸಿ ಹಂತವು ಸಹ ಬಹು ಮುಖ್ಯ ಘಟ್ಟ. ಬೆಳೆಯುವ ಗಿಡಕ್ಕೆ ಮಣ್ಣು, ನೀರು, ಗೊಬ್ಬರ, ತಡೆ ಬೇಲಿ, ಆಸರೆಯ ಕಡ್ಡಿ ಹೇಗೆ ಅಗತ್ಯವೋ, ಅದೇ ರೀತಿಯಲ್ಲಿ ಪಿಯುಸಿ ಹಂತದ ಮಕ್ಕಳಿಗೆ ಹಲವು ನಿಯಂತ್ರಣಗಳು, ಮಾರ್ಗದರ್ಶನ, ಪ್ರೇರಣೆ, ಮಾಹಿತಿ, ಜ್ಞಾನ ಎಲ್ಲವನ್ನೂ ಒದಗಿಸಲಾಗುತ್ತದೆ ಎಂದು ವಿವರಿಸಿದರು.
ಡಿಡಿಪಿಯು ಸೀತಾರಾಮರೆಡ್ಡಿ ಮಾತನಾಡಿ, ಇಷ್ಟಪಟ್ಟು ಓದಿ, ಕಷ್ಟಪಟ್ಟು ಓದಬೇಡಿ. ಹಂತಹಂತವಾಗಿ ನಿಮ್ಮ ದೌರ್ಬಲ್ಯಗಳನ್ನು ಮೀರುತ್ತಾ ಮೇಲೇರಿ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಸರ್ಕಲ್ ಇನ್ಸ್ ಪೆಕ್ಟರ್ ಆನಂದಕುಮಾರ್ ಮಾತನಾಡಿ, ಟಿ.ವಿ. ಮತ್ತು ಮೊಬೈಲ್ ನಿಂದ ಮಕ್ಕಳು ಆದಷ್ಟೂ ದೂರವಿರಿ. ಚಂಚಲವಾದ ಮನಸ್ಸನ್ನು ಕೆಟ್ಟ ದಾರಿಯೆಡೆಗೆ ಕರೆದೊಯ್ಯುವ ಮೊಬೈಲ್ ದುಷ್ಪರಿಣಾಮಗಳ ಬಗ್ಗೆ ಪೋಷಕರು ಮೊದಲು ತಿಳಿಯಿರಿ ಮತ್ತು ಮಕ್ಕಳನ್ನು ಅವುಗಳಿಂದ ದೂರವಿರಿಸಿ ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಮಧುಸೂದನ್, ಪಿಯುಸಿ ವಿದ್ಯಾರ್ಥಿಗಳಿಗೆ ಮುಂದಿನ ಕೋರ್ಸುಗಳಿಗೆ ಸೇರಲು ಎದುರಿಸುವ ಪರೀಕ್ಷೆಗಳ ಕುರಿತಂತೆ ಸಂಪೂರ್ಣ ಮಾಹಿತಿಯನ್ನು ಸ್ಲೈಡ್ ಶೋ ಮೂಲಕ ತೋರಿಸಿ ವಿವರಿಸಿದರು.
ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ ಸಮಾರಂಭ

0

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಚಂದ್ರಾನಾಯಕ್ ಮಾತನಾಡಿದರು.
ನಮ್ಮ ನೆಲದ ಮೌಲ್ಯಗಳನ್ನು ಯುವ ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೇಶದ ಘನತೆ ಮತ್ತು ಸಂಸ್ಕೃತಿಯ ಬಗ್ಗೆ ಅರಿತಷ್ಟೂ ಮುಂದಿನ ಬದಿಕಿನ ಗುರಿ ಮತ್ತು ದಾರಿಯ ಕುರಿತು ಸ್ಪಷ್ಟತೆ ಸಿಗುತ್ತದೆ. ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಯುವ ಜನರ ಪಾತ್ರ ಮಹತ್ವದ್ದು ಎಂದು ಅವರು ತಿಳಿಸಿದರು.
ಮೌಲ್ಯಗಳ ಕುಸಿತದಿಂದ ಯುವ ಜನರಿಗೆ ಮುಂದಿನ ಗುರಿಯ ಬಗ್ಗೆ ಗೊಂದಲ ಮೂಡುತ್ತದೆ, ತಪ್ಪು ದಾರಿ ತುಳಿಯುವಂತಾಗುತ್ತದೆ. ಉತ್ತಮ ಸಂಸ್ಕಾರ, ಮೌಲ್ಯಗಳು, ಪುಸ್ತಕ ಜ್ಞಾನ ಬೆಳೆಸಿಕೊಂಡಲ್ಲಿ ಭವಿತವ್ಯವನ್ನು ರೂಪಿಸಿಕೊಳ್ಳಲು ಸುಲಭವಾಗುತ್ತದೆ ಎಂದು ಹೇಳಿದರು.
ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಹಾಗೂ ಸಾಂಸ್ಕೃತಿಕ ಸಮಿತಿಯ ಸಂಚಾಲಕ ಡಾ.ವಿ.ವೆಂಕಟೇಶ್ ಮಾತನಾಡಿ, ಯುವಕರು ಶ್ರಮ ವಹಿಸಿದರೆ ಬಹಳಷ್ಟು ಎತ್ತರಕ್ಕೆ ಬೆಳೆಯಬಹುದು.ಇದಕ್ಕೆ ಸಾಧಿಸುವ ಛಲ ಮತ್ತು ಪರಿಶ್ರಮ ಇರಬೇಕು. ಪ್ರತಿಯೊಬ್ಬರಲ್ಲೂ ನಾಯಕತ್ವದ ಗುಣ ಇರುತ್ತದೆ ಅದನ್ನು ಸ್ವತಃ ಅವರೇ ಹೊರ ತೆಗೆಯಬೇಕು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜದ ತುಡುಯುವ ಮನಸ್ಸ ಇದ್ದಾಗ ಅಂತಹ ನಾಯಕತ್ವದ ಗುಣ ಹೊರ ಬರುತ್ತದೆ.ಅದನ್ನು ಸಮಾಜ ಗುರುತಿಸುತ್ತದೆ ಎಂದರು.
ಕ್ರೀಡೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವೆಂಕಟರವಣಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಕೆ.ಶ್ರೀಹರಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮುರಳಿ ಆನಂದ್, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ.ರಾಮಚಂದ್ರಪ್ಪ ಹಾಜರಿದ್ದರು.

ಶಿಡ್ಲಘಟ್ಟ ನಗರಸಭೆ ಚುನಾವಣೆ – ಕಣದಲ್ಲಿ ೧೧೫ ಅಭ್ಯರ್ಥಿಗಳು

0

ಶಿಡ್ಲಘಟ್ಟ ನಗರಸಭೆ ಚುನಾವಣೆಗೆ ಸ್ಪರ್ದಿಸಿರುವ ಅಭ್ಯರ್ಥಿಗಳ ಪ್ರಚಾರ ಕಾರ್ಯ ಭರದಿಂದ ಸಾಗಿದ್ದು, ೩೧ ಸ್ಥಾನಗಳಿಗೆ ಒಟ್ಟು ೧೧೫ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಸೆಣೆಸಲಿದ್ದಾರೆ. ತಮ್ಮ ರಾಜಕೀಯ ಅದೃಷ್ಟ ಪರೀಕ್ಷೆಗಾಗಿ ಕಾಂಗ್ರೆಸ್‌ನಿಂದ ೩೧, ಜೆಡಿಎಸ್ ೩೧, ಬಿಜೆಪಿ ೧೨, ಬಿಎಸ್‌ಪಿ ೦೬, ಎಸ್‌ಪಿ ೦೧, ಕೆಜೆಪಿ ೦೧, ಆರ್‌ಡಿಪಿಐ ೦೧ ಮತ್ತು ಪಕ್ಷೇತರರು ೩೨ ಮಂದಿ ಕಣದಲ್ಲಿದ್ದಾರೆ.
ನಗರದ ವಾರ್ಡ್ ಸಂಖ್ಯೆಯ ೦೨, ೦೯, ೧೦, ೧೬, ೧೭ ಮತ್ತು ೨೪ ರಲ್ಲಿ ತಲಾ ಇಬ್ಬರು ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದು ಇಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿಯಿದೆ. ವಾರ್ಡ್ ಸಂಖ್ಯೆ ೧೧, ೧೩, ೨೨, ೨೩, ೩೦ ಮತ್ತು ೩೧ ರಲ್ಲಿ ತಲಾ ಮೂವರು ಅಭ್ಯರ್ಥಿಗಳು ಕಣದಲ್ಲಿದ್ದು ಕಾಂಗ್ರೆಸ್, ಜೆಡಿಎಸ್ ಹಾಗು ಬಿಜೆಪಿ ನಡುವೆ ಹಣಾಹಣಿ ನಡೆಯಲಿದೆ. ಇನ್ನುಳಿದ ವಾರ್ಡುಗಳಲ್ಲಿ ನಾಲ್ಕು ಮತ್ತು ನಾಲ್ಕಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ವಾರ್ಡ್ ಸಂಖ್ಯೆ, ವಾರ್ಡ್ ಹೆಸರು, ಅಭ್ಯರ್ಥಿ ಹೆಸರು, ಪಕ್ಷದ ವಿವರ ಕ್ರಮವಾಗಿ ಕೆಳಗಿನಂತಿದೆ.
ವಾರ್ಡ್ ೧ : ಪದ್ಮಿನಿ (ಜೆಡಿಎಸ್), ಬಿ.ಸವಿತಾ (ಕಾಂಗ್ರೆಸ್), ಸಿಂಧುಶ್ರೀ.ಕೆ.(ಬಿಜೆಪಿ), ಎನ್.ರಾಧ (ಪಕ್ಷೇತರ)
ವಾರ್ಡ್ ೨ : ಎಂ.ಬ್ಯಾಟರಾಯಪ್ಪ (ಕಾಂಗ್ರೆಸ್), ಸುರೇಶ.ಕೆ.(ಜೆಡಿಎಸ್)
ವಾರ್ಡ್ ೩ : ಎಸ್.ಚಿತ್ರ (ಕಾಂಗ್ರೆಸ್), ಲಕ್ಷ್ಮೀ.ಎನ್. (ಜೆಡಿಎಸ್), ಲಲಿತಮ್ಮ (ಬಿಜೆಪಿ), ನಾಗಮಣಿ.ಜೆ.ಎಂ (ಪಕ್ಷೇತರ), ಲಕ್ಷ್ಮಮ್ಮ (ಪಕ್ಷೇತರ)
ವಾರ್ಡ್ ೪ : ಪೈರೋಜ್ ಪಾಷ (ಬಿ.ಎಸ್.ಪಿ), ಲಕ್ಷ್ಮಯ್ಯ (ಜೆಡಿಎಸ್), ಜೆ. ಶ್ರೀರಾಮಯ್ಯ (ಕಾಂಗ್ರೆಸ್), ಮಹಮ್ಮದ್ ಪಾಷ (ಪಕ್ಷೇತರ), ಶಿವಕುಮಾರ್. ಎಂ.(ಪಕ್ಷೇತರ), ಬಿ.ಸಲಾಂ (ಪಕ್ಷೇತರ)
ವಾರ್ಡ್ ೫ : ಆಯೀಷಾ ಸುಲ್ತಾನ (ಜೆಡಿಎಸ್), ಶಕೀಲಬೇಗಂ (ಕಾಂಗ್ರೆಸ್), ಗೋಹರ್ ಜಾನ್ (ಪಕ್ಷೇತರ)
ವಾರ್ಡ್ ೬ : ವಿ.ನರಸಿಂಹ ಮೂರ್ತಿ (ಜೆಡಿಎಸ್), ಮುನಿರಾಜ.ಎಂ. (ಕಾಂಗ್ರೆಸ್), ರಾಮಚಂದ್ರ.ಎ. (ಬಿ.ಎಸ್.ಪಿ), ಪ್ರದೀಪ.ಎನ್. (ಪಕ್ಷೇತರ)
ವಾರ್ಡ್ ೭ : ಜಿ.ಗೌರಮ್ಮ (ಜೆಡಿಎಸ್), ಶಿವಮ್ಮ (ಕಾಂಗ್ರೆಸ್), ಕೆ.ಎಂ.ಮುನಿರತ್ನಮ್ಮ (ಪಕ್ಷೇತರ)
ವಾರ್ಡ್ ೮ : ಜಿ.ಪದ್ಮ (ಬಿ.ಎಸ್.ಪಿ), ಮಂಜುಶ್ರೀ.ಸಿ. (ಬಿಜೆಪಿ), ವಿಜಯ (ಕಾಂಗ್ರೆಸ್), ಸಿ.ಎಂ.ಸುಮಿತ್ರ ರಮೇಶ್ (ಜೆಡಿಎಸ್), ಪ್ರಿಯಾಂಕ.ಜಿ. (ಪಕ್ಷೇತರ), ಮೀನಾಕ್ಷಿ.ಕೆ. (ಪಕ್ಷೇತರ)
ವಾರ್ಡ್ ೯ : ಎಂ ಮುರಳಿ (ಕಾಂಗ್ರೆಸ್), ಎಂ ವಿ ವೆಂಕಟಸ್ವಾಮಿ (ಜೆಡಿಎಸ್)
ವಾರ್ಡ್ ೧೦ : ಎಸ್.ಎಂ ಮಂಜುನಾಥ (ಕಾಂಗ್ರೆಸ್), ಎಸ್ ಹೈದರ್‌ವಲಿ ಪಾಷ (ಜೆಡಿಎಸ್)
ವಾರ್ಡ್ ೧೧ : ಅನಿಲ್‌ಕುಮಾರ್ ಎಲ್ (ಕಾಂಗ್ರೆಸ್), ಜಗದೀಶ್ ಬಿ (ಬಿಜೆಪಿ), ಶಶಿಧರ್ ಎಸ್ (ಜೆಡಿಎಸ್)
ವಾರ್ಡ್ ೧೨ : ಸಿ.ಎಂ ಬಾಬು (ಜೆಡಿಎಸ್), ಮುಸಾವರ್ (ಕಾಂಗ್ರೆಸ್), ಮೌಲ (ಬಿ.ಎಸ್.ಪಿ), ಖಾದರ್ ಪಾಷ (ಪಕ್ಷೇತರ), ಮುಭಾರಕ್ ಖಾನ್ (ಪಕ್ಷೇತರ), ಸಾದಿಕ್ ಪಾಷ (ಪಕ್ಷೇತರ)
ವಾರ್ಡ್ ೧೩ : ಉಮರ್ ಶಾಹಿದ್ ಎಂ (ಕಾಂಗ್ರೆಸ್), ಎಸ್ ಎ ನಾರಾಯಣಸ್ವಾಮಿ (ಬಿ.ಜೆ.ಪಿ), ಸೈಯದ್ ಸನಾವುಲ್ಲಾ (ಜೆಡಿಎಸ್)
ವಾರ್ಡ್ ೧೪ : ನೂರ್ ಜಾನ್ (ಬಿ.ಜೆ.ಪಿ), ಶಾಹಿದಾ (ಕಾಂಗ್ರೆಸ್), ಹಬೀಬ್ ಜಾನ್ (ಜೆಡಿಎಸ್), ಜೈಬಾ ಶೊಹರತ್ (ಪಕ್ಷೇತರ), ರತ್ನಮ್ಮ (ಪಕ್ಷೇತರ), ಸುಷ್ಮಾ ಎಂ (ಪಕ್ಷೇತರ)
ವಾರ್ಡ್ ೧೫ : ಜಿ.ಎನ್ ಮಂಜುಳ (ಜೆಡಿಎಸ್), ಲಕ್ಷ್ಮೀದೇವಮ್ಮ (ಕಾಂಗ್ರೆಸ್), ಶಾರದ ನಾಗೇಶ್ (ಬಿ.ಜೆ.ಪಿ), ತಸ್ಲಿಂ ಫಾತಿಮಾ (ಪಕ್ಷೇತರ), ಭಾಗ್ಯಲಕ್ಷ್ಮೀ ಶ್ರೀನಿವಾಸ (ಪಕ್ಷೇತರ), ಆರ್ ವಸಂತ (ಪಕ್ಷೇತರ)
ವಾರ್ಡ್ ೧೬ : ಎನ್ ಕೃಷ್ಣಮೂರ್ತಿ (ಕಾಂಗ್ರೆಸ್), ಮುನಿಕೃಷ್ಣಪ್ಪ (ಜೆಡಿಎಸ್)
ವಾರ್ಡ್ ೧೭ : ಅಲ್ಲ ಬಕಷ್ (ಜೆಡಿಎಸ್), ತನ್ವೀರ್ ಪಾಷ (ಕಾಂಗ್ರೆಸ್)
ವಾರ್ಡ್ ೧೮ : ನವಾಜ್ ಪಾಷ (ಕಾಂಗ್ರೆಸ್), ಎಸ್. ಷಫೀ (ಜೆಡಿಎಸ್), ಐ. ಶಬ್ಬೀರ್ (ಪಕ್ಷೇತರ)
ವಾರ್ಡ್ ೧೯ : ನಾಜೀಂ (ಜೆಡಿಎಸ್), ಸಲ್ಮ್ (ಕಾಂಗ್ರೆಸ್), ಫರೀದುನ್ನೀಸಾ (ಪಕ್ಷೇತರ), ಶಬ್ರೀನ್ (ಪಕ್ಷೇತರ)
ವಾರ್ಡ್ ೨೦ : ಅಮೀನ ಖಾತೂನ್ (ಜೆಡಿಎಸ್), ಪಿರ್ದೋಸ್ ಪರ್ವೀನ್ ತಾಜ್ (ಕಾಂಗ್ರೆಸ್), ಎಸ್. ಯಾಸ್ಮಿನ್ ತಾಜ್ (ಪಕ್ಷೇತರ)
ವಾರ್ಡ್ ೨೧ : ಎಂ. ಗಂಗಮ್ಮ (ಕಾಂಗ್ರೆಸ್), ಎನ್. ಸುಗುಣ (ಜೆಡಿಎಸ್), ಸುಮ ಪುರುಶೋತ್ತಮ್ ಮೋದಿ (ಬಿ.ಜೆ.ಪಿ), ಜಿ. ಗೌರಮ್ಮ (ಪಕ್ಷೇತರ)
ವಾರ್ಡ್ ೨೨ : ಕೃಷ್ಣಪ್ಪ (ಕಿಟ್ಟಿ) ಮೋದಿ (ಬಿ.ಜೆ.ಪಿ), ಮಂಜುನಾಥ ಟಿ (ಕಾಂಗ್ರೆಸ್), ರಾಜೇಂದ್ರ (ಜೆಡಿಎಸ್)
ವಾರ್ಡ್ ೨೩ : ಪುರುಷೋತ್ತಮ ಆರ್ (ಜೆಡಿಎಸ್), ರಘು (ಬಿ.ಜೆ.ಪಿ), ರಾಜ್‌ಕುಮಾರ್ (ಕಾಂಗ್ರೆಸ್)
ವಾರ್ಡ್ ೨೪ : ನಗೀನಾ (ಕಾಂಗ್ರೆಸ್), ಮುಸ್ತರುನ್ನಿಸಾ (ಜೆಡಿಎಸ್)
ವಾರ್ಡ್ ೨೫ : ರಿಯಾಜ್ ಖಾನ್ (ಜೆಡಿಎಸ್), ರಿಯಾಜ್ ಪಾಷ (ಕಾಂಗ್ರೆಸ್), ಹುಸೇನ್ ಸಾಬ್. ಎಲ್ (ಬಾಬು) (ಪಕ್ಷೇತರ)
ವಾರ್ಡ್ ೨೬ : ಗಂಗಮ್ಮರಾಜು (ಬಿ.ಎಸ್.ಪಿ), ವಹೀದ್‌ಕೌಸರ್ (ಜೆಡಿಎಸ್), ಸಲ್ಮಾತಾಜ್ (ಕಾಂಗ್ರೆಸ್), ನಸೀಮ್‌ತಾಜ್ (ಪಕ್ಷೇತರ), ಬೀಬೀಜಾನ್ (ಪಕ್ಷೇತರ)
ವಾರ್ಡ್ ೨೭ : ಗುಲ್ನಾಜ್ (ಕಾಂಗ್ರೆಸ್), ಫರಹಾನತಾಜ್ (ಜೆಡಿಎಸ್), ರಾಜೀಕಾಬಾನು (ಪಕ್ಷೇತರ), ಶಬೀನ್‌ತಾಜ್ (ಪಕ್ಷೇತರ)
ವಾರ್ಡ್ ೨೮ : ಜಬೀಉಲ್ಲಾ (ಕಾಂಗ್ರೆಸ್), ಪರೂಕ್‌ಪಾಷ (ಜೆಡಿಎಸ್), ಮೊಹಮ್ಮದ್ ಫರೀದುದ್ದೀನ್ (ಪಕ್ಷೇತರ), ಅಕ್ಬರ್ (ಪಕ್ಷೇತರ), ಹಿದಾಯತ್‌ಪಾಷ (ಪಕ್ಷೇತರ),
ವಾರ್ಡ್ ೨೯ : ಅಪ್ಸರ್‌ಪಾಷ (ಬಿ.ಎಸ್.ಪಿ), ಬಿ.ಮುಬಾರಕ್ ಖಾನ್ (ಜೆಡಿಎಸ್), ಸಮೀರ್‌ಖಾನ್ (ಕಾಂಗ್ರೆಸ್), ಅಪ್ಸರ್‌ಪಾಷ (ಪಕ್ಷೇತರ), ಎಂ.ಡಿ.ನೂರುಲ್ಲಾ (ಪಕ್ಷೇತರ)
ವಾರ್ಡ್ ೩೦ : ಗಾಯಿತ್ರಿ.ಪಿ (ಕಾಂಗ್ರೆಸ್), ಮಂಜುಳ.ಸಿ (ಬಿ.ಜೆ.ಪಿ), ಇ.ರೂಪ (ಜೆಡಿಎಸ್)
ವಾರ್ಡ್ ೩೧ : ಭಾಸ್ಕರ್ (ಬಿ.ಜೆ.ಪಿ), ಎ. ವಿ. ಶ್ರೀನಾಥ್ (ಜೆಡಿಎಸ್), ಎಂ. ಶ್ರೀನಿವಾಸ (ಕಾಂಗ್ರೆಸ್)

ನಗರಸಭೆ ಚುನಾವಣೆ ಪ್ರಯುಕ್ತ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ

0

ನಗರಸಭೆ ಚುನಾವಣೆಯ ಹಿನ್ನೆಲೆಯಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಬಾಗೇಪಲ್ಲಿ ಹಾಗೂ ನಗರದ ಚುನಾವಣೆಯ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸಲಿರುವ ಅಧಿಕಾರಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ತಹಶೀಲ್ದಾರ್ ಎಸ್.ಅಜಿತ್‌ಕುಮಾರ್ ರೈ ಮಾತನಾಡಿದರು.
ನಗರಸಭೆ ಚುನಾವಣೆಯು ನಿರ್ಭೀತಿ ಹಾಗೂ ನಿಷ್ಪಕ್ಷಪಾತವಾಗಿ ನಡೆಯಲಿಕ್ಕೆ ಅಧಿಕಾರಿಗಳು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ತಿಳಿಸಿದರು.
ಮತಗಟ್ಟೆಗೆ ಬರುವಂತಹ ಮತದಾರರ ಗುರುತಿನ ಚೀಟಿ, ಮತದಾರರ ಪಟ್ಟಿಯಲ್ಲಿನ ಹೆಸರು, ವಿಳಾಸದ ಕುರಿತು ಖಾತರಿ ಪಡಿಸಿಕೊಂಡ ನಂತರ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು. ಮತದಾನ ಮಾಡಿದ ಮತದಾರ ಬೇರೆಡೆ ಮತದಾನ ಮಾಡದಂತೆ ತಡೆಯಲು ಬೆರಳಿಗೆ ಶಾಯಿ ಹಾಕಬೇಕು.
ಮತದಾರರು ಗೌಪ್ಯತೆಯಿಂದ ಮತದಾನ ಮಾಡಲಿಕ್ಕೆ ಸೂಕ್ತ ಬೆಳಕಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಮತಗಟ್ಟೆಗಳಲ್ಲಿ ಮೊಬೈಲ್‌ಗಳು ತರುವುದು, ತಾವು ಮಾಡಿದ ಮತದಾನವನ್ನು ಏಜೆಂಟರಿಗೆ ತೋರಿಸುವುದು ಅಥವಾ ಮೊಬೈಲ್‌ಗಳಲ್ಲಿ ಅದನ್ನು ಸೆರೆಹಿಡಿಯಲು ಅವಕಾಶ ಇಲ್ಲದಂತೆ ಜಾಗ್ರತೆ ವಹಿಸಬೇಕು ಎಂದರು.
ಸಹಾಯಕ ಚುನಾವಣಾ ಅಧಿಕಾರಿ ಶಿವಕುಮಾರ್, ಉಪನ್ಯಾಸಕ ಹಾಗೂ ಮುಖ್ಯ ತರಬೇತುದಾರ ಮುನಿರಾಜು ಹಾಜರಿದ್ದರು.

ಪೌರ ಕಾರ್ಮಿಕರಿಗೆ ಪಾದಪೂಜೆ

0

ನಗರ, ಪಟ್ಟಣಗಳ ನೈರ್ಮಲ್ಯ ಮತ್ತು ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಗುರುತರ ಕೆಲಸ ನಿರ್ವಹಿಸುವ ನಮ್ಮ ನಡುವಿನ ಪೌರ ಕಾರ್ಮಿಕರ ಆರೋಗ್ಯ ಮತ್ತು ಕಲ್ಯಾಣ ಹೇಳಿಕೊಳ್ಳುವಷ್ಟು ಸುಧಾರಣೆ ಕಂಡಿಲ್ಲ. ಅವರನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮುಖಂಡ ದೇವರಾಜ್(ದೇವಿ) ತಿಳಿಸಿದರು.
ನಗರದ ಮೂರನೇ ವಾರ್ಡಿನಲ್ಲಿ ರೇಣುಕಾ ಎಲ್ಲಮ್ಮ ದೇವಾಲಯದ ಬಳಿ ಭಾನುವಾರ ನಾಲ್ವರು ಪೌರಕಾರ್ಮಿಕರಿಗೆ ಪಾದಪೂಜೆಯನ್ನು ಮಾಡಿ, “ಹಸಿರೇ ಉಸಿರು – ಮನೆಗೊಂದು ಗಿಡ, ಊರಿಗೊಂದು ವನ” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
“ಮಳೆಯಿರಲಿ, ಚಳಿಯಿರಲಿ, ಊರು ಮಾತ್ರ ಸ್ವಚ್ಛವಿರಲಿ” ಎಂದು ಎಲ್ಲರೂ ಬಯಸುತ್ತಾರೆ. ಆದರೆ, ಊರನ್ನು ಸ್ವಚ್ಛಗೊಳಿಸುವವರು ಯಾರು, ಅವರ ಬವಣೆ ಏನು ಎಂಬುದರ ಬಗ್ಗೆ ಯಾರೂ ಚಿಂತಿಸುವುದಿಲ್ಲ. ಸಾರ್ವಜನಿಕರು ನಿಶ್ಚಿಂತೆಯಿಂದ ಮನೆಯಲ್ಲಿ ಮಲಗಿರುವಾಗ ಪೌರಕಾರ್ಮಿಕರು ಬೆಳಗಿನ ಜಾವವೇ ಎದ್ದು ನಗರವನ್ನು ಸ್ವಚ್ಛಗೊಳಿಸುವರು. ಊರನ್ನು ನಮ್ಮ ಊರು, ನಮ್ಮ ಜನ, ನಾವೆಲ್ಲ ಒಂದೇ ಎಂಬ ಭಾವನೆಯನ್ನು ಶ್ರಮಿಕರನ್ನು ಗೌರವಿಸುವ ಮೂಲಕ ತೋರಿಸುತ್ತಿರುವುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಪೌರಕಾರ್ಮಿಕರಾದ ಮುನಿರತ್ನಮ್ಮ, ಲಕ್ಷ್ಮಮ್ಮ, ಅಣ್ಣಯ್ಯಪ್ಪ ಮತ್ತು ಶ್ರೀರಾಮಣ್ಣ ಅವರಿಗೆ ಮುಖಂಡ ದೇವರಾಜ್(ದೇವಿ) ಪಾದಪೂಜೆ ನೆರವೇರಿಸಿದರು. ಮೂರನೇ ವಾರ್ಡಿನಲ್ಲಿ ಮನೆಗಳ ಬಳಿ ಗಿಡವನ್ನು ನೆಟ್ಟು ಪೋಷಿಸಿ ಪರಿಸರಕ್ಕೆ ತಮ್ಮ ಕಿರು ಕಾಣಿಕೆಯನ್ನು ಪ್ರತಿಯೊಬ್ಬರೂ ಸಲ್ಲಿಸುವಂತೆ ಕೋರಿ ಗಸಗಸೆ, ನೇರಳೆ, ಮಹಾಗನಿ ಗಿಡಗಳನ್ನು ಮನೆಮನೆಗೂ ವಿತರಿಸಿದರು.
ರಂಜಿತ್, ಮಂಜುನಾಥ್, ಶ್ರವಣ್ ಹಾಜರಿದ್ದರು.

ರೈತರ ಮನವೊಲಿಸಿದ ತಹಶೀಲ್ದಾರ್, ರಸ್ತೆ ಕಾಮಗಾರಿಗೆ ರೈತರ ಒಪ್ಪಿಗೆ

0

ತಾಲ್ಲೂಕಿನ ದೇವರಮಳ್ಳೂರು ಮತ್ತು ಕುತ್ತಾಂಡಹಳ್ಳಿ ಗ್ರಾಮಗಳ ನಡುವೆ ಮುಚ್ಚಿಹೋಗಿದ್ದ ರಸ್ತೆಯನ್ನು ಸರಿಪಡಿಸುವ ಸಮಯದಲ್ಲಿ ಅಡ್ಡಿಪಡಿಸಿದ ರೈತರ ಮನವೊಲಿಸಿದ ತಹಶೀಲ್ದಾರ್ ಅಜಿತ್ ಕುಮಾರ್ ರೈ ರಸ್ತೆ ಕಾಮಗಾರಿ ನಡೆಸಲು ಅನುವು ಮಾಡಿಕೊಟ್ಟರು.
ದೇವರಮಳ್ಳೂರು ಕೆರೆಯಲ್ಲಿ ತಾಲ್ಲೂಕು ಆಡಳಿತದಿಂದ ಹೂಳನ್ನು ತೆಗೆಯುತ್ತಿದ್ದು, ಹೂಳಿನ ಮಣ್ಣನ್ನು ಮುಚ್ಚಿಹೋಗಿದ್ದ ರಸ್ತೆಯನ್ನು ಸರಿಪಡಿಸುವ ಕೆಲಸಕ್ಕೆ ಬಳಸಲಾಗುತ್ತಿದೆ. ಆ ಮಾರ್ಗದ ಅಕ್ಕಪಕ್ಕದ ಕೆಲವು ರೈತರು ರಸ್ತೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರು. ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರು ಅಧಿಕಾರಿಗಳೊಂದಿಗೆ ಕೈಜೋಡಿಸಲು ಮನವಿ ಮಾಡಿದ ತಹಶೀಲ್ದಾರರು, ಎರಡೂ ಬದಿಯ ರೈತರಿಗೆ ವಸ್ತುಸ್ಥಿತಿಯನ್ನು ವಿವರಿಸಿದರು. ರಸ್ತೆಯಿದ್ದರೆ ಎಲ್ಲರಿಗೂ ಅನುಕೂಲಕರವೆಂದು ಅರ್ಥಮಾಡಿಸಿದರು. ಅಗಲವಾದ ರಸ್ತೆ ನಿರ್ಮಿಸಲು ತಹಶೀಲ್ದಾರ್ ಅವರು ರೈತರ ಒಪ್ಪಿಗೆ ಪಡೆದರು.
ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಆನಂದ್ ಕುಮಾರ್, ಭೂ ಮಾಪನ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ, ಪಿಡಿಒ ರಮಾಕಾಂತ್, ರೈತರು ಹಾಜರಿದ್ದರು.

ಜೈ ಹನುಮಾನ್ ಕಪ್ ೨೦೧೯ – ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್

0

ತಾಲ್ಲೂಕಿನ ಹನುಮಂತಪುರದ ಜೈ ಹನುಮಾನ್ ಕ್ರಿಕೆಟರ್ಸ್ ಮತ್ತು ಹನುಮಂತಪುರ ಗ್ರಾಮದ ಕ್ರೀಡಾಭಿಮಾನಿಗಳು ಮತ್ತು ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ಎರಡನೇ ವರ್ಷದ ಕ್ರಿಕೆಟ್ ಪಂದ್ಯಾವಳಿ “ಜೈ ಹನುಮಾನ್ ಕಪ್ ೨೦೧೯” ಗ್ರಾಮಾಂತರ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಹನುಮಂತಪುರದ ಆಟದ ಮೈದಾನದಲ್ಲಿ ಈಚೆಗೆ ನಡೆಯಿತು.
ತಾಲ್ಲೂಕಿನ ಎಲ್.ಮುತ್ತುಗದಹಳ್ಳಿಯ ಎಂ.ಆರ್.ಸಾಗರ್ ನೇತೃತ್ವದ ತಂಡ ಪ್ರಥಮ ಬಹುಮಾನ ೧೨ ಸಾವಿರ ರೂಗಳನ್ನು ತನ್ನದಾಗಿಸಿಕೊಂಡು ಆಕರ್ಷಕ ಟ್ರೋಫಿಯನ್ನು ಪಡೆಯಿತು. ದ್ವಿತೀಯ ಸ್ಥಾನವನ್ನು ಹನುಮಂತಪುರದ ರವಿ ನೇತೃತ್ವದ ತಂಡ ಪಡೆದು ೮ ಸಾವಿರ ರೂಗಳನ್ನು ತನ್ನದಾಗಿಸಿಕೊಂಡು ಆಕರ್ಷಕ ಟ್ರೋಫಿಯನ್ನು ಪಡೆಯಿತು.
ಬಹುಮಾನವನ್ನು ಹನುಮಂತಪುರದ ವಿಜಯಕುಮಾರ್ ಪ್ರಾಯೋಜಿಸಿದ್ದರು.

ಶ್ರೀಮತ್‌ ವಿರಾಟ್‌ ವೀರಬ್ರಹ್ಮೇಂದ್ರ ಸ್ವಾಮಿಯವರ ಆರಾಧನೆ

0

ನಗರದ ಒಂದನೇ ನಗರ್ತಪೇಟೆಯ ಕಾಳಿಕಾಂಬ ಕಮಠೇಶ್ವರ ದೇವಾಲಯದಲ್ಲಿ ಮಂಗಳವಾರ ಕಾಳಿಕಾಂಬ ಕಮಠೇಶ್ವರಸ್ವಾಮಿ ಸೇವಾ ಟ್ರಸ್ಟ್, ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘ, ಕಾಳಿಕಾಂಬ ಮಹಿಳಾ ಮಂಡಲಿ, ಕಾಳಿಕಾಂಬ ಕಮಠೇಶ್ವರ ಯುವಕ ಮಂಡಲಿ ವತಿಯಿಂದ ೨೩ನೇ ವರ್ಷದ ಶ್ರೀಮತ್‌ ವಿರಾಟ್‌ ವೀರಬ್ರಹ್ಮೇಂದ್ರ ಸ್ವಾಮಿಯವರ ಆರಾಧನೆ, ಸಾಮೂಹಿಕ ಉಪನಯನಗಳು ಹಾಗೂ ಅನ್ನದಾಸೋಹವನ್ನು ಆಯೋಜಿಸಲಾಗಿತ್ತು.
ಕಾಳಿಕಾಂಬ ಕಮಠೇಶ್ವರಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಕೆ.ಮುನಿರತ್ನಾಚಾರ್ ಮಾತನಾಡಿ,‘ಚಿನ್ನ, ಬೆಳ್ಳಿ, ಮರಗೆಲಸ, ಕಮ್ಮಾರಿಕೆ, ಶಿಲ್ಪಕಲೆ ಮತ್ತಿತರ ಕುಶಲಕರ್ಮಿ ಸಮುದಾಯಗಳ ಅಭಿವೃದ್ಧಿಗಾಗಿ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು, ಅದರಿಂದ ಸಿಗುವ ಸೌಲಭ್ಯಗಳನ್ನು ಬಡ ಜನರಿಗೆ ತಲುಪಿಸುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.
ದೇವಾಲಯದಲ್ಲಿ ಮೂಲ ವಿಗ್ರಹಗಳಿಗೆ ಅಭಿಷೇಕ, ಸಾಮೂಹಿಕ ಉಪನಯನಗಳು, ವಿರಾಟ್ ವೀರಬ್ರಹ್ಮೇಂದ್ರಸ್ವಾಮಿ ಯಜ್ಞ, ಹೋಮ, ವಿಶ್ವಕರ್ಮ ಯಜ್ಞ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದಗಳ ವಿನಿಯೋಗ ನಡೆಯಿತು. ಎಂಟು ಮಂದಿಗೆ ಉಪನಯನ ಮಾಡಲಾಯಿತು. ಹಿರಿಯರಾದ ಬಸಮ್ಮ ಮತ್ತು ಕೆ.ಇ.ಬಿ ಸುಂದರಾಚಾರಿ ಅವರನ್ನು ಗೌರವಿಸಲಾಯಿತು.
ಕಾಳಿಕಾಂಬ ಭಕ್ತಮಂಡಳಿ, ಶ್ರೀ ಮಾರುತಿ ಸಂಗೀತ ಅಕಾಡೆಮಿ ವಿದ್ಯಾರ್ಥಿಗಳು, ಸಂಗೀತ ವಿದುಷಿ ಮಂಜುಳಾ ಜಗದೀಶ್ ಮತ್ತು ಲಕ್ಷ್ಮೀನಾರಾಯಣಮ್ಮ ಅವರಿಂದ ಭಜನೆ ಕಾರ್ಯಕ್ರಮ ನಡೆಯಿತು.
ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮರನಾರಾಯಣಾಚಾರ್, ಆರ್.ಜಗದೀಶ್ ಕುಮಾರ್, ಕೃಷ್ಣಾಚಾರ್, ಜನಾರ್ಫ಼ಹನಮೂರ್ತಿ, ಕೆ.ಇ.ಬಿ ಸುಂದರಾಚಾರಿ, ಎಸ್.ಶ್ರೀನಿವಾಸಾಚಾರ್, ಗೌರೀಶಂಕರ್, ರಮೇಶ್, ಕೆ.ಶ್ರೀನಿವಾಸಾಚಾರ್, ಹಾಜರಿದ್ದರು.

ಕೋಚಿಮುಲ್ ಆಡಳಿತ ಮಂಡಳಿ ಚುನಾವಣೆ – ಆರ್.ಶ್ರೀನಿವಾಸ್ ಗೆಲುವು

0

ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆರ್.ಶ್ರೀನಿವಾಸ್ ಜಯಶಾಲಿಯಾಗಿದ್ದಾರೆ.
ಕೋಚಿಮುಲ್ ನ ಹಾಲಿ ನಿರ್ದೇಶಕರಾಗಿದ್ದ ಜೆಡಿಎಸ್ ಬೆಂಬಲಿತ ಬಂಕ್ ಮುನಿಯಪ್ಪ ಅವರ ವಿರುದ್ಧ ಒಂದೇ ಒಂದು ಮತದ ಅಂತರದಲ್ಲಿ ಗೆಲುವನ್ನು ಸಾಧಿಸಿ ಕೆ.ಮುತ್ತುಗದಹಳ್ಳಿಯ ಆರ್.ಶ್ರೀನಿವಾಸ್ ಕೋಚಿಮುಲ್ ನಿರ್ದೇಶಕರಾಗಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನಿಂದ ಒಟ್ಟು ೧೭೪ ಮತದಾರರು ಮತ ಚಲಾಯಿಸಿದ್ದು, ಈ ಪೈಕಿ ಒಂದು ಮತ ಕುಲಗೆಟ್ಟಿದೆ. ಆರ್.ಶ್ರೀನಿವಾಸ್ ಗೆ ೮೭ ಮತಗಳನ್ನು ಪಡೆದರೆ, ಬಂಕ್ ಮುನಿಯಪ್ಪ ಅವರು ೮೬ ಮತಗಳನ್ನು ಪಡೆದಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ೧೯ ಮಹಿಳಾ ಸಹಕಾರ ಸಂಘಗಳು ಸೇರಿದಂತೆ ಒಟ್ಟು ೨೧೩ ಹಾಲು ಉತ್ಪಾದಕ ಸಂಘಗಳಿವೆ. ಈ ಪೈಕಿ ಒಟ್ಟು ೧೭೪ ಸಂಘಗಳು ಮಾತ್ರ ಮತದಾನದ ಅರ್ಹತೆ ಪಡೆದಿದ್ದವು.

ಉಲ್ಲೂರುಪೇಟೆಯ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಭಾವನಾ ಮಹರ್ಷಿ ಜಯಂತ್ಯುತ್ಸವ

0

ನಗರದ ಉಲ್ಲೂರುಪೇಟೆಯ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಶನಿವಾರ ಭಾವನಾ ಮಹರ್ಷಿ ಜಯಂತ್ಯುತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಗಂಗಾಪೂಜೆ, ಕಳಶಸ್ಥಾಪನೆ, ಭಾವನಾ ಮಹರ್ಷಿ ಮತ್ತು ಭದ್ರಾವತಿ ದೇವಿಯ ಕಲ್ಯಾಣೋತ್ಸವ, ಲಾಜಾ ಹೋಮ, ವಿಶೇಷ ಪೂಜೆಯನ್ನು ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿತ್ತು. ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದವನ್ನು ವಿನಿಯೋಗಿಸಲಾಯಿತು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ಸಮುದಾಯದ ವಿದ್ಯಾರ್ಥಿಗಳಾದ ಉಲ್ಲೂರುಪೇಟೆಯ ಆರ್.ಕಿರಣ್, ಮಾರುತಿನಗರದ ಲಿಖಿತ, ಗಾಂಧಿನಗರದ ಸೌಮ್ಯಶ್ರೀ, ಜಂಗಮಕೋಟೆಯ ವೈ.ಸಿ.ಪಲ್ಲವಿ ಅವರಿಗೆ ಪ್ರತಿಭಾ ಪುರಸ್ಕಾರ ಮಾಡಿ ಸನ್ಮಾನಿಸಲಾಯಿತು. ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಸಂಗೀತ ಕಚೇರಿಯನ್ನು ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು. ಹಾಡುಹಾರಿಕೆ – ವಿದ್ವಾನ್‌ ಎಸ್‌.ವಿ.ರಾಮಮೂರ್ತಿ, ಪಿಟೀಲು ವಿದ್ವಾನ್‌ ಆರ್‌.ಜಗದೀಶ್‌ಕುಮಾರ್‌, ಮೃದಂಗ ವಿದ್ವಾನ್‌ ಎಸ್‌.ಎನ್‌.ಲಕ್ಷ್ಮೀನಾರಾಯಣ, ಖಂಜಿರ ಕೆ.ವಿ.ಕೃಷ್ಣಮೂರ್ತಿ ನುಡಿಸಿದರು.
ಸಂಜೆಗೆ ವೀರಾಂಜನೇಯಸ್ವಾಮಿ, ಭದ್ರಾವತಿ ಹಾಗೂ ಭಾವನಾ ಮಹರ್ಷಿಗಳ ಉತ್ಸವ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಿದ್ದ ಹೂವಿನ ಪಲ್ಲಕ್ಕಿಯಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ತಮಟೆ ವಾದ್ಯ ವೃಂದದೊಂದಿಗೆ ಮೆರವಣಿಗೆ ಮಾಡಲಾಯಿತು.
ತಾಲ್ಲೂಕು ಪದ್ಮಶಾಲಿ ಸಂಘದ ಅಧ್ಯಕ್ಷ ಎಸ್.ಕೆ.ನಾಗರಾಜ್, ಬಿ.ಲಕ್ಷ್ಮೀನಾರಾಯಣಪ್ಪ, ಬಾಬು.ಟಿ. ಲಕ್ಷ್ಮೀನಾರಾಯಣಪ್ಪ, ಗೋಪಾಲ್, ಸಿ. ಲಕ್ಷ್ಮೀನಾರಾಯಣ, ಪುರುಷೋತ್ತಮ್, ದಾಸಪ್ಪನವರ ಪಾರ್ಥಸಾರಥಿ, ಪದ್ಮಶಾಲಿ ಯುವಜನ ಸೇವಾ ಸಂಘದ ಅಧ್ಯಕ್ಷ ನಾಗೇಶ್, ಅನಿಲ್, ನಾಗರಾಜ್, ಮುರಳಿ, ಪ್ರದೀಪ್, ಪವನ್ ಕುಮಾರ್ ಹಾಜರಿದ್ದರು.

ಹಿತ್ತಲಹಳ್ಳಿಯ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಪ್ರತಿಷ್ಠಾಪನಾ ಮಹೋತ್ಸವ

0

ತಾಲ್ಲೂಕಿನ ಹಿತ್ತಲಹಳ್ಳಿಯಲ್ಲಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಪ್ರತಿಷ್ಠಾಪನಾ ಮಹೋತ್ಸವವನ್ನು ಶುಕ್ರವಾರ ವಿಜೃಂಭಣೆಯಿಂದ ನಡೆಸಲಾಯಿತು. ಶುಭ ಮಿಥುನ ಲಗ್ನ ಸಮಯ ಶುಭ ಮುಹೂರ್ತದಲ್ಲಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಮುಖ್ಯಪ್ರಾಣದೇವರ, ಮಹಾಗಣಪತಿ ಹಾಗೂ ಆಂಜನೇಯಸ್ವಾಮಿ ದೇವರುಗಳ ಪ್ರತಿಷ್ಠಾಪನೆಯನ್ನು ನಡೆಸಲಾಯಿತು.
ಗುರುವಾರ ಪ್ರತಿಷ್ಠಾಪನಾ ಹೋಮ, ವಾಸ್ತು ಹೋಮ, ಸುದರ್ಶನ ಹೋಮವನ್ನು ಶ್ರದ್ಧಾ ಭಕ್ತಿಯಿಂದ ನಡೆಸಲಾಯಿತು. ಮೈಸೂರಿನ ಪಂಡಿತ ಮಾಧವಾಚಾರ್ಯ ಮತ್ತು ತಂಡದವರ ನೇತೃತ್ವದಲ್ಲಿ ಪೂಜೆ, ಹೋಮಗಳು ನಡೆದವು. ಗ್ರಾಮಸ್ಥರು ಪೂಜಾ ವಿಧಿಗಳಲ್ಲಿ ಭಾಗಿಯಾಗಿದ್ದರು. ಪ್ರತಿಷ್ಠಾಪನಾ ಪೂಜೆಯಲ್ಲಿ ಸುತ್ತ ಮುತ್ತಲಿನ ಗ್ರಾಮಗಳು ಹಾಗೂ ನಗರಗಳಿಂದ ಭಕ್ತರು ಆಗಮಿಸಿದ್ದರು.
ಮಹಾಪೂಜೆ, ಮಹಾಮಂಗಳಾರತಿಯ ನಂತರ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಸಂಸದ, ಕೋಲಾರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ, ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಪುಟ್ಟು, ಎ.ಪಿ.ಎಂ.ಸಿ ಉಪಾಧ್ಯಕ್ಷ ಬೆಳ್ಳೂಟಿ ವೆಂಕಟೇಶ್, ನಿವೃತ್ತ ಕೆ.ಎಸ್.ಆರ್.ಟಿ.ಸಿ ಅಧಿಕಾರಿ ತಾದೂರು ವೆಂಕಟರೆಡ್ಡಿ, ಕಂಬದಹಳ್ಳಿ ನಾರಾಯಣರೆಡ್ಡಿ ಅವರನ್ನು ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಎಚ್.ಎಂ.ಕೃಷ್ಣಪ್ಪ, ಸದಸ್ಯರು, ಪ್ರಧಾನ ಅರ್ಚಕ ಬಿ.ಕೃಷ್ಣಮೂರ್ತಿ, ಗ್ರಾಮಸ್ಥರು ಹಾಜರಿದ್ದರು.