ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಕೆ.ಉಮೇಶ್‌ರೆಡ್ಡಿ ಅವರು ಕೊಯಮತ್ತೂರಿನ ಭಾರತಿಯಾರ್ ವಿಶ್ವವಿದ್ಯಾನಿಲಯದಿಂದ ಪಿ.ಎಚ್.ಡಿ ಪದವಿಯನ್ನು ಪಡೆದಿದ್ದಾರೆ.
ಮೈಸೂರು ವಿವಿಐಇಟಿ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸಿ.ನಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಕೆ.ಉಮೇಶ್‌ರೆಡ್ಡಿ ಅವರು “ಸ್ಟಡೀಸ್ ಆನ್ ಪಾಪ್ಯುಲೇಷನ್ ಡೋಸ್ ಡ್ಯೂ ಟು ನ್ಯಾಚುರಲ್ ಬ್ಯಾಕ್ ಗ್ರೌಂಡ್ ರೇಡಿಯೇಷನ್ ಇನ್ ಅಂಡ್ ಅರೌಂಡ್ ಕೋಲಾರ ಗೋಲ್ಡ್ ಫೀಲ್ಡ್ ಆಫ್ ಕೋಲಾರ ಡಿಸ್ಟ್ರಿಕ್ಟ್, ಕರ್ನಾಟಕ” ವಿಷಯದ ಕುರಿತು ಮಂಡಿಸಿದ ಮಹಾ ಪ್ರಭಂದಕ್ಕೆ ಪಿಎಚ್‌ಡಿ ಪದವಿ ನೀಡಲಾಗಿದೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಕೆ.ಉಮೇಶ್‌ರೆಡ್ಡಿ ಅವರಿಗೆ ಪಿ.ಎಚ್.ಡಿ
ಅಮ್ಮನಕೆರೆಯ ಒತ್ತುವರಿ ತೆರವು ಕಾರ್ಯಾಚರಣೆ
ನಗರದ ಹೊರವಲಯದ ಅಮ್ಮನಕೆರೆಯ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಶುಕ್ರವಾರ ವೀಕ್ಷಣೆ ಮಾಡಿ, ಅಧಿಕಾರಿಗಳಿಂದ ಮಾಹಿತಿ ಪಡೆದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಮಾತನಾಡಿದರು.
ಶಿಡ್ಲಘಟ್ಟದ ಹೊರವಲಯದಲ್ಲಿರುವ ಅಮ್ಮನಕೆರೆ ಅಚ್ಚುಕಟ್ಟು ಪ್ರದೇಶವು ಹನುಮಂತಪುರ, ನೆಲ್ಲೀಮರದಹಳ್ಳಿ, ಲಕ್ಕಹಳ್ಳಿ, ಪ್ಯಾಲಹಳ್ಳಿ, ಎಲ್.ಮುತ್ತುಗದಹಳ್ಳಿ, ಹರಳಹಳ್ಳಿ, ವರದನಾಯಕನಹಳ್ಳಿ. ಹಂಡಿಗನಾಳ ಗ್ರಾಮಗಳಿಗೆ ಹೊಂದಿಕೊಂಡಿದೆ. ಒಟ್ಟು ೯೭೭ ಎಕರೆ ವಿಸ್ತೀರ್ಣವಿರುವ ಕೆರೆಯಲ್ಲಿ ೩೧೩.೩೭ ಎಕರೆಯಷ್ಟು ಒತ್ತುವರಿಯಾಗಿದೆ. ಕೆರೆಯನ್ನು ಕೆರೆಯಾಗಿ ಉಳಿಸಲು ಒತ್ತುವರಿ ತೆರವು ಕಾರ್ಯ ನಡೆದಿದೆ ಎಂದು ಅವರು ತಿಳಿಸಿದರು.
ಹಲವಾರು ವರ್ಷಗಳಿಂದ ಮಳೆಯಿಲ್ಲದೆ, ನೀರು ಸಂಗ್ರಹಣೆಯಾಗದೆ ಬಹಳಷ್ಟು ಒತ್ತುವರಿಯಾಗಿದೆ. ಈಗ ಬೇಸಿಗೆಯಲ್ಲಿ ಬಹು ಮುಖ್ಯವಾದ ಒತ್ತುವರಿ ತೆರವು ಕಾರ್ಯವನ್ನು ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳು ನಡೆಸಿದ್ದಾರೆ ಎಂದರು.
ಕೆರೆಯನ್ನು ಉಳಿಸಿಕೊಳ್ಳುವುದರಿಂದ ನಗರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಸಾಕಷ್ಟು ಉಪಯೋಗವಾಗಲಿದೆ. ನೀರಿನ ಸಮಸ್ಯೆ ಜಿಲ್ಲೆಯ ಜನರನ್ನು ಬಾಧಿಸುತ್ತಿದೆ. ಎಚ್.ಎನ್ ವ್ಯಾಲಿ ನೀರು ಬಂದಾಗ ಹಿಡಿದಿಡಲು ಕೆರೆಗಳು ಯೋಗ್ಯವಾಗಿರಬೇಕು. ಕೆರೆಯಲ್ಲಿ ತೆಗೆಯುತ್ತಿರುವ ಮಣ್ಣನ್ನು ರೈತರು ಬೇಕಾದರೆ ತೆಗೆದುಕೊಂಡು ಹೋಗಬಹುದು ಎಂದು ಹೇಳಿದರು.
ಕುಂಟೆ ಪತ್ತೆ
ಶಿಡ್ಲಘಟ್ಟ ನಗರದಲ್ಲಿ ಕಲ್ಯಾಣಿಯೊಂದನ್ನು ಶುಚಿಗೊಳಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ಕುಂಟೆಯೊಂದನ್ನು ಪತ್ತೆ ಹಚ್ಚಿದ್ದು ಅನಧಿಕೃತ ಹೆಸರುಗಳು ಪಹಣಿಯಲ್ಲಿ ಬಂದಿರುವುದು ತಿಳಿದುಬಂದಿದೆ. ಅದನ್ನು ಸರ್ಕಾರದ ವಶಕ್ಕೆ ಪಡೆಯಲಿದ್ದೇವೆ. ಸಾರ್ವಜನಿಕ ಉದ್ದೇಶಕ್ಕಾಗಿ ಇರುವ ಸ್ಥಳಗಳನ್ನು ರಕ್ಷಿಸುವ ಕೆಲಸ ಮಾಡಲಾಗುವುದು ಎಂದರು.
ನೀರಿಗಾಗಿ ಅನುದಾನ
ಟ್ಯಾಂಕರ್ ಮೂಲಕ ಜಿಲ್ಲೆಯ ಬಹಳಷ್ಟು ಕಡೆ ನೀರು ಸರಬರಾಜು ಮಾಡುತ್ತಿದ್ದೇವೆ. ಟ್ಯಾಂಕರ್ ನೀರಿಗಾಗಿಯೇ ನಮ್ಮ ಜಿಲ್ಲೆಗೆ ವಿಶೇಷವಾಗಿ ೬ ಕೋಟಿ ರೂ ಅನುದಾನ ಬಂದಿದೆ. ಜಿಲ್ಲಾ ಪಂಚಾಯಿತಿಗೆ ಕೊಳವೆ ಬಾವಿ ಕೊರೆಸಲು ಹಾಗೂ ಮೋಟರ್ ವೈರ್ ಇತ್ಯಾದಿಗಾಗಿ ೯ ಕೋಟಿ ರೂ ಹಣ ಬಂದಿದೆ. ಎನ್.ಆರ್.ಡಿ.ಡಬ್ಲೂ.ಬಿ ಯೋಜನೆಯಲ್ಲಿ ಕುಡಿಯುವ ನೀರಿಗಾಗಿ ೭ ಕೋಟಿ ರೂ ಅನುದಾನ ಬಂದಿದೆ. ಈ ಅನುದಾನಗಳೆಲ್ಲ ಸಮರ್ಪಕವಾಗಿ ಖರ್ಚು ಆಗುತ್ತಿವೆ. ಸಮಸ್ಯೆಯೆಂದರೆ ಶೇ ೬೦ ರಷ್ಟು ಕೊಳವೆಬಾವಿಗಳಲ್ಲಿ ನೀರು ಸಿಗುತ್ತಿಲ್ಲ. ಕೆರೆ ಕುಂಟೆಗಳನ್ನು ಉಳಿಸಿಕೊಂಡು ನೀರು ಹಿಡಿದಿಡಲು ಯೋಗ್ಯವಾಗುವಂತೆ ರೂಪಿಸಿದಲ್ಲಿ ಅಂತರ್ಜಲ ಅಭಿವೃದ್ಧಿಯಾಗಿ ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ ಎಂದು ನುಡಿದರು.
ಗೋಶಾಲೆ ನಿರ್ಮಾಣ ಯೋಜನೆ
ಮೇವು ವಿತರಿಸುವ ಯೋಜನೆಯಿಲ್ಲ. ಪಶು ಇಲಾಖೆಯವರ ಮಾಹಿತಿಯ ಪ್ರಕಾರ ಸುಮಾರು ಆರು ವಾರಗಳಿಗಾಗುವಷ್ಟು ಮೇವು ಜಿಲ್ಲೆಯಲ್ಲಿದೆ. ಆದರೆ, ಗೋಶಾಲೆ ನಿರ್ಮಿಸುವ ಯೋಜನೆಯಿದೆ. ತಹಶಿಲ್ದಾರುಗಳಿಂದ ವರದಿಯನ್ನು ಪಡೆದು ಎಲ್ಲಿ ಅಗತ್ಯವಿದೆಯೋ ಅಲ್ಲಿ ಗೋಶಾಲೆ ತೆರೆದು, ಅಲ್ಲಿಗೆ ತರುವ ಜಾನುವಾರುಗಳಿಗೆ ಉಚಿತ ಚಿಕಿತ್ಸೆ, ಮೇವು ಹಾಗೂ ಲಸಿಕೆ ಹಾಕಿಸಲಾಗುತ್ತದೆ.
ಕಸಾಯಿಖಾನೆಗೆ ಸ್ಥಳ
ನಗರಸಭೆಗಳಲ್ಲಿ ಕಸಾಯಿಖಾನೆಗೆ ಸ್ಥಳವನ್ನು ಮೀಸಲಿಡುವ ಅಗತ್ಯವಿದೆ. ಎಲ್ಲೆಂದರಲ್ಲಿ ಮಾಂಸ ಕತ್ತರಿಸುವುದು ಮಾರಾಟ ಮಾಡುವುದನ್ನು ತಪ್ಪಿಸಿ ಯಾರಿಗೂ ತೊಂದರೆಯಾಗದಂತೆ ಒಂದೇ ಸ್ಥಳ ಮಾಡುವ ಬಗ್ಗೆ ತಹಶೀಲ್ದಾರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಕೆರೆಯಲ್ಲಿ ಗುಂಡಿಗಳನ್ನು ಮುಚ್ಚಲು ಮನವಿ
“ರೈಲ್ವೆಯವರು ಕೆರೆಯ ಕೆಲವು ಸ್ಥಳಗಳಲ್ಲಿ ಮಣ್ಣನ್ನು ತೆಗೆದಿದ್ದು ಆಳವಾಗಿ ಗುಂಡಿಗಳಾಗಿವೆ. ಈಗ ಹೇಗಿದ್ದರೂ ಕೆರೆಯಲ್ಲಿ ಮಣ್ಣು ತೆಗೆಯಲಾಗುತ್ತಿದೆ. ಆಳವಾದ ಗುಣಿಗಳನ್ನು ಕೆರೆಯ ಆಳಕ್ಕೆ ತಕ್ಕಷ್ಟು ಉಳಿಸಿಕೊಂಡು ಮುಚ್ಚಿಬಿಡಿ. ಮುಂದೆ ಎಚ್.ಎನ್.ವ್ಯಾಲಿ ನೀರು ಬಂದಾಗ ಜನ ಜಾನುವಾರುಗಳಿಗೆ ಪ್ರಾಣಾಪಾಯ ತಪ್ಪುತ್ತದೆ” ಎಂದು ಈ ಸಂದರ್ಭದಲ್ಲಿ ಹಂಡಿಗನಾಳ ಗ್ರಾಮ ಪಂಚಾಯಿತಿ ಸದಸ್ಯ ಜಯರಾಮ್ ಜಿಲ್ಲಾಧಿಕಾರಿಯನ್ನು ಮನವಿ ಮಾಡಿದರು.
ಗ್ರೇಡ್ ೨ ತಹಶೀಲ್ದಾರ್ ಹನುಮಂತರಾವ್, ಎ.ಡಿ.ಎಲ್.ಆರ್ ಗಂಗಾಧರಪ್ಪ, ಮೋಜಣಿ ಮೇಲ್ವಿಚಾರಕ ವಸಂತಕುಮಾರ್, ಎಚ್.ಎನ್.ವ್ಯಾಲಿ ಎಂಜಿನಿಯರ್ ಪ್ರದೀಪ್, ಗ್ರಾಮ ಲೆಕ್ಕಿಗರಾದ ನಾಗರಾಜು, ನಾಗೇಂದ್ರ ಹಾಜರಿದ್ದರು.
ಶಂಕರಮಠದಲ್ಲಿ ಶಂಕರ ಜಯಂತಿ ಮಹೋತ್ಸವ ಮತ್ತು ಸಾಮೂಹಿಕ ಧರ್ಮೋಪನಯನ
ತಾಲ್ಲೂಕು ಬ್ರಾಹ್ಮಣ ಮಹಾಸಭಾ ಮತ್ತು ಶಂಕರ ಸೇವಾ ಟ್ರಸ್ಟ್ ವತಿಯಿಂದ ಶಂಕರ ಜಯಂತಿ ಮಹೋತ್ಸವ ಮತ್ತು ಸಾಮೂಹಿಕ ಧರ್ಮೋಪನಯನಗಳನ್ನು ಗುರುವಾರ ಏಕಾಂಬರೇಶ್ವರಸ್ವಾಮಿ ದೇವಾಲಯ ಮತ್ತು ಶಂಕರಮಠದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಕಳೆದ ನಾಲ್ಕು ದಿನಗಳಿಂದ ವಿವಿಧ ಪೂಜಾ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇವಾಲಯದಲ್ಲಿ ಆಯೋಜಿಸಲಾಗಿತ್ತು. ಗಾಯತ್ರಿ ಮಹಿಳಾ ಮಂಡಳಿಯವರಿಂದ ದೇವತಾ ಸ್ತೋತ್ರಗಳು, ಡಾ.ಡಿ.ಟಿ.ಸತ್ಯನಾರಾಯಣರಾವ್ ಹಾಗೂ ಸ್ಥಳೀಯ ಕಲಾವಿದರ ವೃಂದದವರಿಂದ ದೇವರ ನಾಮಗಳ ಗಾಯನ, ವಿಪ್ರ ಮಹಿಳೆಯರಿಂದ ಲಲಿತಾ ಸಹಸ್ರನಾಮ ಕುಂಕುಮಾರ್ಚನೆ, ವಕೀಲ ಟಿ.ಎಸ್.ವಿಜಯಶಂಕರ್ ಅವರಿಂದ “ಶಂಕರ ವಿಜಯ” ಉಪನ್ಯಾಸವನ್ನು ನಡೆಸಲಾಯಿತು.
ಗುರುವಾರ ಒಬ್ಬ ವಟುವಿಗೆ ಉಪನಯನ ಮತ್ತು ಬ್ರಹ್ಮೋಪದೇಶವನ್ನು ನೀಡಲಾಯಿತು. ದೇವಾಲಯದಲ್ಲಿ ಪಾನಕ ಪೂಜೆ, ಋತ್ವಿಕ್ ಸಮಾರಾಧನೆ ಮತ್ತು ಬ್ರಾಹ್ಮಣರಿಗೆ ಸಂತರ್ಪಣೆಯನ್ನು ನಡೆಸಲಾಯಿತು. ವಟುಗಳನ್ನು ಸತ್ಕರಿಸಲಾಯಿತು.
“ಕಳೆದ ಮೂವತ್ತೈದು ವರ್ಷಗಳಿಂದ ವಟುಗಳಿಗೆ ಧರ್ಮೋಪನಯನಗಳನ್ನು ತಾಲ್ಲೂಕು ಬ್ರಾಹ್ಮಣ ಮಹಾಸಭಾ ನಡೆಸುಕೊಂಡು ಬರುತ್ತಿದ್ದು, ಉಪನಯನ ದೀಕ್ಷೆ ನೀಡಿ, ಧರ್ಮದ ಏಳಿಗೆಗೆ ಮತ್ತು ಸಾಮಾಜಿಕ ಪ್ರಗತಿಗೆ ವಟುಗಳಿಗೆ ಮಾರ್ಗದರ್ಶನ ನೀಡುತ್ತಿದ್ದೇವೆ. ಶಂಕರರ ಜನ್ಮದಿನವನ್ನು ವಿಶ್ವದಾರ್ಶನಿಕರ ದಿನವನ್ನಾಗಿ ಆಚರಿಸಲಾಗುತ್ತಿದೆ” ಎಂದು ಬ್ರಾಹ್ಮಣ ಮಹಾಸಭಾ ತಾಲ್ಲೂಕು ಅಧ್ಯಕ್ಷ ಎ.ಎಸ್.ರವಿ ತಿಳಿಸಿದರು.
ಶಂಕರ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್.ಆರ್.ಶ್ರೀನಿವಾಸಮೂರ್ತಿ, ಕಾರ್ಯದರ್ಶಿ ಬಿ.ಆರ್.ಅನಂತಕೃಷ್ಣ, ರಾಘವೇಂದ್ರಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ವಾಸುದೇವರಾವ್, ಬ್ರಾಹ್ಮಣ ಮಹಾಸಭಾ ತಾಲ್ಲೂಕು ಅಧ್ಯಕ್ಷ ಎ.ಎಸ್.ರವಿ, ವಿ.ಕೃಷ್ಣ, ಬಿ.ಕೃಷ್ಣಮೂರ್ತಿ, ಎಸ್.ಆರ್.ಶ್ರೀನಾಥ್, ಬಿ.ಆರ್.ನಟರಾಜ್, ಎ.ಎಸ್.ವೆಂಕಟೇಶ್, ಎಚ್.ಶಂಕರ್, ಎಸ್.ಶ್ರೀಕಾಂತ್, ಎಸ್.ಸತೀಶ್, ಸುಬ್ರಮಣ್ಯಶಾಸ್ತ್ರಿ, ವಿಜಯನರಸಿಂಹಶಾಸ್ತ್ರಿ, ಎ.ಎಸ್.ಹರೀಶ್, ಕೆ.ವಿ.ಕೃಷ್ಣಮೂರ್ತಿ, ಅನಿಲ್ ಕುಮಾರ್, ಎಸ್.ವಿ.ನಾಗರಾಜರಾವ್, ವೈಶಾಖ್, ಲಕ್ಷ್ಮೀನಾರಾಯಣ್(ಲಚ್ಚಿ) ಹಾಜರಿದ್ದರು.
ಸರ್ಕಾರಿ ಗುಂಡು ತೋಪಿನ ಒತ್ತುವರಿ ತೆರವು ಕಾರ್ಯಾಚರಣೆ
ತಾಲ್ಲೂಕಿನ ವೀರಾಪುರ ಗ್ರಾಮಕ್ಕೆ ತಹಶೀಲ್ದಾರ್ ಎಸ್.ಅಜಿತ್ ಕುಮಾರ್ ರೈ ಹಾಗೂ ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್ ಗುರುವಾರ ಭೇಟಿ ನೀಡಿ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರದ ಸುತ್ತಲೂ ಇದ್ದ ಸರ್ಕಾರಿ ಗುಂಡು ತೋಪಿನ ಒತ್ತುವರಿ ತೆರವು ಕಾರ್ಯವನ್ನು ವೀಕ್ಷಿಸಿದರು.
ಗ್ರಾಮದ ಕೆಲವರು ಸರ್ಕಾರಿ ಗುಂಡು ತೋಪಿನಲ್ಲಿ ಗುಡಿಸಲು ಬಚ್ಚಲು ಮನೆಗಳನ್ನು ನಿರ್ಮಿಸಿದ್ದರು. ಗುಂಡಿ ನಿರ್ಮಾಣ ಮಾಡಿ ಕಸದ ತಿಪ್ಪೆ ಮಾಡಿಕೊಂಡಿದ್ದರು. ದನಕರುಗಳ ದೊಡ್ಡಿಯನ್ನು ಕೂಡ ನಿರ್ಮಿಸಿಕೊಂಡಿದ್ದರು.
ಈ ಎಲ್ಲ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದ್ದು ಇನ್ನುಳಿದ ಅಲ್ಪ ಸ್ವಲ್ಪ ಒತ್ತುವರಿನ್ನು ತೆರವುಗೊಳಿಸಿ ಎರಡು ದಿನಗಳಲ್ಲಿ ಗುಂಡು ತೋಪಿನ ನಾಲ್ಕೂ ದಿಕ್ಕುಗಳಲ್ಲಿ ಗುರುತಿನ ಕಲ್ಲುಗಳನ್ನು ನೆಡುವಂತೆ ಭೂ ಮಾಪಕರಿಗೆ ತಿಳಿಸಿದರು.
ಒತ್ತುವರಿ ತೆರವು ಮುಗಿಯುತ್ತಿದ್ದಂತೆ ಸುತ್ತಲೂ ಫೆನ್ಸಿಂಗ್ ಅಥವಾ ಕಾಂಪೌಂಡ್ ನಿರ್ಮಿಸಿ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಆಟದ ಮೈದಾನಕ್ಕೆ ಆ ಸ್ಥಳವನ್ನು ಮೀಸಲು ಇಡುವಂತೆ ಗ್ರಾಮಪಂಚಾಯಿತಿ ಪಿಡಿಒ ರಮಾಕಾಂತ್ ಅವರಿಗೆ ಸೂಚಿಸಿದರು.
ದನದ ಕೊಟ್ಟಿಗೆ ಹಾಗೂ ಗುಡಿಸಲು ಮನೆಯೊಂದು ಉಳಿದುಕೊಂಡಿದ್ದು ಅದರ ಮಾಲೀಕರಿಗೆ ಕೂಡಲೆ ಅದನ್ನು ತೆರವುಗೊಳಿಸಬೇಕು ಇಲ್ಲವಾದರೆ ಕ್ರಿಮಿನಲ್ ಕೇಸು ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.
ನಂತರ ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಧ್ಯಾಹ್ನದ ಬಿಸಿಯೂಟವನ್ನು ಪರಿಶೀಲಿಸಿದರು. ಎಷ್ಟು ಮಂದಿ ವಿದ್ಯಾರ್ಥಿಗಳು ಬರುತ್ತಿದ್ದಾರೆ, ಅಡುಗೆ ಏನು ಎಂಬುದರ ಬಗ್ಗೆ ಶಿಕ್ಷಕರಿಂದ ವಿವರ ಪಡೆದರು.
ಎಸ್‌ಡಿಎಂಸಿ ಅಧ್ಯಕ್ಷ ಗಂಗರಾಜ್, ಶಿಕ್ಷಕಿ ನಿರ್ಮಲ, ಗಾಮ ಲೆಕ್ಕಿಗರಾದ ಲಕ್ಷ್ಮೀನಾರಾಯಣ್, ಗ್ರಾಮದ ಮುಖಂಡರಾದ ಸಿ.ರಾಮಣ್ಣ, ಮುನಿನಂಜಪ್ಪ, ಲಕ್ಷ್ಮೀಪತಿ, ಆರ್.ಶ್ರೀನಿವಾಸ್, ಮಣಿ, ರಾಮಾಂಜಿ, ಮುನಿರಾಜು ಹಾಜರಿದ್ದರು.
ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ
ನಗರದ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬುಧವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಆಯೋಜಿಸಲಾಗಿದ್ದ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.
ಆಂಧ್ರ ಹಾಗೂ ತಮಿಳುನಾಡಿನ ಗಡಿಭಾಗದಲ್ಲಿರುವ ನಾವುಗಳು ಮಾತೃಭಾಷೆಗಿಂತ ಹೆಚ್ಚು ತೆಲುಗು, ತಮಿಳು ಭಾಷೆ ಬಳಸುವುದರಿಂದ ಕನ್ನಡ ಭಾಷೆ ಅಳಿವಿನ ಅಂಚಿನಲ್ಲಿದೆ. ಹಾಗಾಗಿ ಪ್ರತಿಯೊಬ್ಬರೂ ನಮ್ಮ ಮಾತೃಭಾಷೆಯಾದ ಕನ್ನಡವನ್ನು ಹೆಚ್ಚು ಹೆಚ್ಚು ಬಳಸುವ ಮೂಲಕ ಭಾಷೆಯನ್ನು ಉಳಿಸಿ ಬೆಳಸಬೇಕಾಗಿದೆ ಎಂದರು.
ಶಿಬಿರದಲ್ಲಿ ವಿವಿಧ ರೀತಿಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿಜೇತರಾದ ವಿದ್ಯಾರ್ಥಿಗಳಿಗೆ ಕಸಾಪ ವತಿಯಿಂದ ಪ್ರಶಂಸನಾ ಪತ್ರ ಮತ್ತು ಪುಸ್ತಕಗಳನ್ನು ವಿತರಿಸಲಾಯಿತು.
ಸಮಾರಂಭದಲ್ಲಿ ಅಕ್ಷರದಾಸೋಹ ಸಹಾಯಕ ನಿರ್ದೇಶಕ ಆಂಜನೇಯ, ಉಲ್ಲೂರುಪೇಟೆ ಶಾಲೆಯ ಮುಖ್ಯಶಿಕ್ಷಕ ಎನ್.ಕೃಷ್ಣಮೂರ್ತಿ, ಕಸಾಪ ನಗರ ಘಟಕ ಅಧ್ಯಕ್ಷ ಸಿ.ಎನ್.ಮುನಿರಾಜು, ಶಿಕ್ಷಣ ಇಲಾಖೆಯ ಭಾಸ್ಕರಗೌಡ, ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ತರಬೇತಿ ಆಯುಕ್ತ ಪ್ರಕಾಶ್, ಮುನಿರಾಜು, ಅಕ್ಕಯ್ಯಮ್ಮ, ನಿತ್ಯಶ್ರೀ ಹಾಜರಿದ್ದರು.
ದ್ಯಾವಪ್ಪನಗುಡಿಯಲ್ಲಿ ಕುರುಕ್ಷೇತ್ರ ಯುದ್ಧ ನಾಟಕ
ದ್ಯಾವಪ್ಪನಗುಡಿಯ ದ್ಯಾವಪ್ಪ ತಾತ ಕೃಪಾಪೋಷಿತ ನಾಟಕ ಮಂಡಳಿ, ಶ್ರೀ ವೇಣುಗೋಪಾಲಸ್ವಾಮಿ ಡ್ರಾಮ ಸೀನರಿ ಅಮಿಟಗಾನಹಳ್ಳಿ ಅಶ್ವತ್ಥಪ್ಪ ಅವರ ರಂಗಸಜ್ಜಿಕೆಯಲ್ಲಿ ನಡೆದ ಪೌರಾಣಿಕ ನಾಟಕ “ಕುರುಕ್ಷೇತ್ರ”ವನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳಿಂದೆಲ್ಲ ಜನರು ಆಗಮಿಸಿದ್ದರು. ರಾತ್ರಿ ೯ ಗಂಟೆಯಿಂದ ಬೆಳಗಿನ ಜಾವ ೨ ಗಂಟೆಯವರೆಗೂ ನಡೆದ ನಾಟಕವನ್ನು ಜನರು ನೋಡಿ ಆನಂದಿಸಿದರು.
ನಾಟಕಕ್ಕೆ ವಾದ್ಯಗೋಷ್ಠಿಯನ್ನು ದೊಡ್ಡತೇಕಹಳ್ಳಿ ಹಾರ್ಮೋನಿಯಮ್ ದ್ಯಾವಪ್ಪ, ವೆಂಕಟಗಿರಿಕೋಟೆ ಸೋಲ್ಯಾಕ್ ಸುಬ್ರಮಣ್ಯಾಚಾರ್, ತಬಲ ಚಂಡೂರು ಮಹೇಶ್, ಘಟಂ ಅಬ್ಲೂಡು ಚನ್ನಕೃಷ್ಣಪ್ಪ ನಡೆಸಿಕೊಟ್ಟರು.
ಕುಂತಿ ಮತ್ತು ದ್ರೌಪದಿ ಪಾತ್ರವನ್ನು ದ್ಯಾವಪ್ಪನಗುಡಿ ಜಯಮ್ಮ, ಉತ್ತರೆ ಪಾತ್ರಧಾರಿ ಜಯಂತಿಗ್ರಾಮದ ಮಂಜುಶ್ರೀ, ಸತ್ಯಭಾಮೆಯಾಗಿ ಜಯಂತಿಗ್ರಾಮದ ಕನಕದುರ್ಗ ತಮ್ಮ ನೃತ್ಯ ಹಾಗೂ ಗಾಯನದಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ನಾರದ, ಶ್ರೀಕೃಷ್ಣ, ಪಂಚಪಾಂಡವರು, ಭೀಷ್ಮ, ದುರ್ಯೋಧನ, ದುಶ್ಯಾಸನ, ಶಕುನಿ, ವಿಧುರ, ಅಶ್ವತ್ಥಾಮ, ಅಭಿಮನ್ಯು, ದ್ರೋಣಾಚಾರ್ಯ ಪಾತ್ರಗಳನ್ನು ಸ್ಥಳೀಯರೇ ಮಾಡಿದ್ದುದು ವಿಶೇಷವಾಗಿತ್ತು.
ದೊಡ್ಡತೇಕಹಳ್ಳಿ ಹಾರ್ಮೋನಿಯಮ್ ದ್ಯಾವಪ್ಪ ಅವರ ನಿರ್ದೇಶನದಲ್ಲಿ ಮೂಡಿ ಬಂದ ಈ ಪೌರಾಣಿಕ ನಾಟಕಕ್ಕೆ ಕಳೆದ ಆರು ತಿಂಗಳಿನಿಂದ ತಾಲೀಮು ನಡೆದಿತ್ತು. ಸ್ಥಳೀಯರೇ ಎಲ್ಲ ಪಾತ್ರಗಳ ಸಂಭಾಷಣೆ, ಹಾಡು, ಹಾವಭಾವಗಳನ್ನು ಅಭ್ಯಾಸ ಮಾಡಿ ಕರಗತ ಮಾಡಿಕೊಂಡು ಪರಿಣಿತ ಕಲಾವಿದರಂತೆ ನಟಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡರು.
ನಟರಿಗೆ ಬಣ್ಣ ಹಚ್ಚಿ ಪಾತ್ರಕ್ಕೆ ತಕ್ಕ ವೇಷಭೂಷಣಗಳೊಂದಿಗೆ ರಂಗದ ಮೇಲೆ ವಿಜೃಂಭಿಸಲು ಮೇಕಪ್ ನಾರಾಯಣಸ್ವಾಮಿ ಸಹಕರಿಸಿದರು. “ಕಳೆದ ೩೫ ವರ್ಷಗಳಿಂದಲೂ ನಟರಿಗೆ ಮೇಕಪ್ ಮಾಡುವುದೇ ನನ್ನ ಕೆಲಸವಾಗಿದೆ. ನನ್ನ ತಂದೆ ಮೇಕಪ್ ವೆಂಕಟೇಶಪ್ಪ ಅವರಿಂದ ಈ ವಿದ್ಯೆಯನ್ನು ಕಲಿತೆ. ಮೊದಲಾದರೆ ವಾರಕ್ಕೊಂದು ಅಥವಾ ಎರಡು ನಾಟಕ ನಡೆಯುತ್ತಿತ್ತು. ನಾವು ಸೀನರಿ ಬಾಡಿಗೆಗೆ ಕೊಡುತ್ತಿದ್ದೆವು. ಈಗ ನಾಟಕಗಳು ಬಲು ಅಪರೂಪ. ಈ ಕಲೆ ನಶಿಸುವ ಹಂತಕ್ಕೆ ಬರುತ್ತಿದೆ. ವರ್ಷಕ್ಕೆ ಒಂದು ಅಥವಾ ಎರಡು ನಾಟಕಗಳು ನಡೆದರೆ ಹೆಚ್ಚು ಎನ್ನುವಂತಾಗಿದೆ. ಪೌರಾಣಿಕ ನಾಟಕಗಳ ಮೂಲಕ ನಮ್ಮ ಸಂಸ್ಕೃತಿ, ಪುರಾಣ ಕಥೆಗಳು ಈಗಿನ ಪೀಳಿಗೆಗೆ ತಲುಪಬೇಕಿದೆ” ಎಂದು ಮೇಕಪ್ ನಾರಾಯಣಸ್ವಾಮಿ ತಿಳಿಸಿದರು.
ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದಲ್ಲಿ ಬಸವೇಶ್ವರ ಜಯಂತ್ಯುತ್ಸವದ ಕಾರ್ಯಕ್ರಮ
ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಬಸವೇಶ್ವರ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ವಿಜಯಪುರ ಬಸವ ಕಲ್ಯಾಣ ಮಠದ ಶ್ರೀ ಮಹದೇವಸ್ವಾಮಿಗಳು ಮಾತನಾಡಿದರು.
ವಚನಗಳ ಮೂಲಕ ಅಸಮಾನತೆಯ ವಿರುದ್ಧ ಸಮರ ಸಾರಿದ ಜಗಜ್ಯೋತಿ ಬಸವೇಶ್ವರರು ಈ ನಾಡು ಕಂಡ ಮಹಾನ್ ಕ್ರಾಂತಿಕಾರಿ, ಮಾನವತಾವಾದಿ, ಸ್ತ್ರೀ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದವರು ಎಂದು ಅವರು ತಿಳಿಸಿದರು.
ಮನುಜ ಜಾತಿ ಒಂದೇ ಎಂಬುವದನ್ನು ಸಾರುವುದರ ಮೂಲಕ ಹೊಸ ಬೆಳಕು ನೀಡಿದ ಬಸವಣ್ಣನವರ ಆದರ್ಶ ಸಮಾಜದ ಕಲ್ಪನೆ ಅದ್ಭುತವಾಗಿದೆ. ಸರ್ವರು ಸಮಾನರು ಎಂಬ ಧ್ಯೇಯದೊಂದಿಗೆ ಅಸಮಾನತೆ ವಿರುದ್ಧ ಜಾಗೃತಿ ಮೂಡಿಸುವುದರ ಜೊತೆಯಲ್ಲಿ ಹೊಸ ಬದುಕಿನ ಕಲ್ಪನೆಯನ್ನು ಮಾನವತಾವದಿ ಬಸವಣ್ಣನವರು ನೀಡಿದ್ದಾರೆ ಎಂದು ಹೇಳಿದರು.
ಬಸವಣ್ಣನವರ ಆದರ್ಶ ವಿಚಾರಧಾರೆಗಳ ಪಾಲನೆಯೊಂದಿಗೆ ಪ್ರತಿಯೊಬ್ಬರು ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಶೋಷಿತರ ಧ್ವನಿಯಾಗುವುದರ ಮೂಲಕ ಸಮಾಜದಲ್ಲಿ ಹೊಸ ಶಕೆಯನ್ನು ಆರಂಭಿಸಿದರು.ಅನುಭವ ಮಂಟಪದ ಮೂಲಕ ಹೊಸ ದಿಕ್ಕನ್ನು ನಾಗರಿಕ ಸಮಾಜಕ್ಕೆ ನೀಡಿದ ದಾರ್ಶನಿಕ ಬಸವಣ್ಣನವರು ಎಂದರು.
ಶ್ರೀ ಬಸವೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಸಿ.ನಂದೀಶ್ ಮಾತನಾಡಿ, ಜಾತಿಯ ಸಂಕೋಲೆಯನ್ನು ಬಿಡುಗಡೆಗೊಳಿಸಿ ಸಾಮಾಜಿಕ ಬದಲಾವಣೆ ಹಾಗೂ ಶೋಷಿತರ ಧ್ವನಿಯಾಗಿ ಬಸವಣ್ಣನವರು ಅವತರಿಸಿದ್ದರು. ಬಸವಣ್ಣವರ ಆದರ್ಶ ಬದುಕು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಸವಣ್ಣನವರ ವಚನಗಳು ಸಾರ್ವಕಾಲಿಕವಾಗಿದ್ದು, ಅವರ ಸಂದೇಶಗಳು ಮತ್ತು ತತ್ತ್ವಾದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು. ಸಾಮಾಜಿಕ ಪರಿವರ್ತನೆಯ ಹರಿಕಾರ ಬಸವಣ್ಣ ಅವರ ವಚನ ಗಳನ್ನು ಮಕ್ಕಳಿಗೆ ತಲುಪಿಸುವ ಮೂಲಕ ಉತ್ತಮ ಪ್ರಜೆಗಳಾಗಿ ರೂಪು ಗೊಳ್ಳುವಂತಾಗಲು ಎಲ್ಲರೂ ಶ್ರಮಿಸಬೇಕಿದೆ. ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನತೆಯಿಂದ ಬದುಕು ನಡೆಸಲು ಅವರ ವಚನಗಳು ಸಹಕಾರಿ ಎಂದು ಅಭಿಪ್ರಾಯಪಟ್ಟರು.
ಮಹಿಳೆಯರು ತಂಬಿಟ್ಟು ದೀಪಗಳನ್ನು ಬೆಳಗಿ ಪೂಜೆ ಸಲ್ಲಿಸಿದರು. ಮಹಾಮಂಗಳಾರತಿಯ ನಂತರ ಪಾನಕ ಮತ್ತು ಅನ್ನದಾಸೋಹವನ್ನು ನಡೆಸಲಾಯಿತು.
ಜಯದೇವಪ್ಪ, ಶಂಕರ್, ಶ್ರೀಕಾಂತ್, ಬಸವರಾಜ್, ವಿಜಯಕುಮಾರ್, ನಾಗರಾಜ್ ಹಾಜರಿದ್ದರು.
ಹಿತ್ತಲಹಳ್ಳಿಯ ಎಚ್.ಜಿ.ಗೋವಿಂದೇಗೌಡ ಅವರಿಗೆ ಪಿ.ಎಚ್.ಡಿ ಪದವಿ
ತಾಲ್ಲೂಕಿನ ಹಿತ್ತಲಹಳ್ಳಿಯ ಎಚ್.ಜಿ.ಗೋವಿಂದೇಗೌಡ ಅವರು ಕೊಯಿಮತ್ತೂರಿನ ಭಾರತಿಯಾರ್ ವಿಶ್ವವಿದ್ಯಾನಿಲಯದಿಂದ ಡಾಕ್ಟರ್ ಆಫ್ ಫಿಲಾಸಫಿ(ಪಿ.ಎಚ್.ಡಿ) ಪದವಿಯನ್ನು ಪಡೆದಿದ್ದಾರೆ.
ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಡೀನ್ ಡಾ.ವೈ.ರಾಜಾರಾಮ್ ಅವರ ಮಾರ್ಗದರ್ಶನದಲ್ಲಿ ಎಚ್.ಜಿ.ಗೋವಿಂದೇಗೌಡ ಅವರು “ದಿ ಸ್ಟಡಿ ಆಫ್ ಪಾವರ್ಟಿ ಅಲ್ಲೀವಿಯೇಷನ್ ಆಫ್ ಅರ್ಬನ್ ಪೂರ್ ಥ್ರೂ ಮೈಕ್ರೋ ಫೈನಾನ್ಸ್ ಇನ್ ಕರ್ನಾಟಕ” ವಿಷಯದ ಕುರಿತಾಗಿ ಅಧ್ಯಯನ ನಡೆಸಿ ಥೀಸಿಸ್ ಮಂಡಿಸಿದ್ದಾರೆ.
ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಕೃತಿಯೊಂದಿಗೆ ಮೋಜಿನ ಕಲಿಕೆ
ತಾಲ್ಲೂಕಿನ ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಸಿ.ಆರ್.ಟಿ., ಎಫ್.ಸಿ.ಡಬ್ಲೂ., ಆರ್.ಟಿ.ಇ ಕಾರ್ಯಪಡೆ, ಐ.ಎಲ್.ಪಿ, ಉಸಿರಿಗಾಗಿ ಹಸಿರು ಹಾಗೂ ಶಾಲೆಯ ಸಹಯೋಗದಲ್ಲಿ ಪ್ರಾರಂಭವಾದ ಚಿಣ್ಣರ ಬೇಸಿಗೆ ಸಂಭ್ರಮ (ಪ್ರಕೃತಿಯೊಂದಿಗೆ ಮೋಜಿನ ಕಲಿಕೆ)ದಲ್ಲಿ ಸಾಯಿಲ್ ವಾಸು ಅವರು ಮಕ್ಕಳಿಗೆ ಮಣ್ಣಿನ ಕುರಿತಾಗಿ ಪ್ರಾತ್ಯಕ್ಷಿಕೆಗಳೊಂದಿಗೆ ವಿವರಿಸಿದರು.
ಸದಾ ಮಣ್ಣಿನ ಸಂಪರ್ಕದಲ್ಲಿರುವ ಮಕ್ಕಳು ಮಣ್ಣಿನ ಬಗ್ಗೆ ತಿಳಿದುಕೊಳ್ಳುವ ಸಾಕಷ್ಟು ವಿಷಯಗಳಿವೆ. ಮಣ್ಣಿನ ಕುರಿತಾಗಿ ಜ್ಞಾನ ಹೆಚ್ಚಿದಂತೆ ಮಣ್ಣಿನೊಂದಿಗಿನ ನಮ್ಮ ಸಂಬಂಧ ಇನ್ನಷ್ಟು ಗಟ್ಟಿಗೊಳ್ಳುತ್ತದೆ ಎಂದು ಅವರು ತಿಳಿಸಿದರು.
ಮಣ್ಣಿನ ವಿಧಗಳು, ಮಣ್ಣಿನ ಉಪಯೋಗ, ಮಣ್ಣಿನ ಮಾಲಿನ್ಯದ ಕುರಿತಾಗಿ ಪ್ರಾತ್ಯಕ್ಷಿಕೆಗಳ ಮೂಲಕ ಮಕ್ಕಳಿಗೆ ಮಾಹಿತಿ ನೀಡಿದರು.
ಸಿ.ಆರ್.ಟಿ ಜಿಲ್ಲಾ ಸಂಯೋಜಕ ಸಂತೋಷ್ ಮತ್ತು ತಾಲ್ಲೂಕು ಸಂಯೋಜಕ ಸತೀಶ್ ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡಿದರು. ಬಿ.ಆರ್.ಸಿ ಸಮನ್ವಯಾಧಿಕಾರಿ ಎಂ.ತ್ಯಾಗರಾಜ್ ಶಾಲೆಯ ಪಠ್ಯೇತರ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಅಕ್ಷರ ದಾಸೋಹ ಸಹಾಯ ನಿರ್ದೇಶಕ ಆಂಜನೇಯ ಮಾತನಾಡಿ, ಬಿಸಿಯೂಟ ಜಾರಿಯಲ್ಲಿರುವಾಗ ಮಕ್ಕಳು ಅದರೊಂದಿಗೆ ಬೇಸಿಗೆ ಶಿಬಿರಗಳಲ್ಲಿ ಸಂತಸದಿಂದ ಕಲಿಯುತ್ತಿರುವುದು ಅಭಿನಂದನೀಯ ಎಂದರು.
ಶಿಕ್ಷಕ ಎಂ.ದೇವರಾಜ್, ಜೈ ಭಾರತ್ ಯುವಕ ಸಂಘದ ಅಧ್ಯಕ್ಷ ಮಂಜುನಾಥ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮದ್ದಿರೆಡ್ಡಿ, ಸಾಯಿಲ್ ಆರ್ಗನೈಸೇಷನ್ ಆನಂದ್, ಸಿ.ಆರ್.ಟಿ ಟ್ರಸ್ಟ್ ನ ಕಾಂತರಾಜು ಹಾಜರಿದ್ದರು.
ಕರ್ನಾಟಕ ಏಕೀಕರಣ ಹೋರಾಟಕ್ಕೆ ಸಮಗ್ರತೆ ಒದಗಿಸಿದ ಕಸಾಪ – ಚಂದ್ರಶೇಖರ ಬಿ ಹಡಪದ್
ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮುದಾಯ ಭವನದಲ್ಲಿ ಭಾನುವಾರ ತಾಲ್ಲೂಕು ಕಸಾಪ ವತಿಯಿಂದ ಆಯೋಜಿಸಿದ್ದ ೧೦೫ನೇ ಕಸಾಪ ಸಂಸ್ಥಾಪನಾ ದಿನಾಚರಣೆಯ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಬಿ ಹಡಪದ್ ಮಾತನಾಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಫಲವಾಗಿ ಕನ್ನಡ ಸಾಹಿತ್ಯ ಪರಿಷತ್ತು ಉದಯವಾಗಿ, ಕರ್ನಾಟಕ ಏಕೀಕರಣ ಹೋರಾಟಕ್ಕೆ ಸಮಗ್ರತೆ ಒದಗಿಸಿತು. ಕನ್ನಡದ ಅಶ್ವಿನಿ ದೇವತೆಗಳಾದ ಎ.ಆರ್.ಕೃಷ್ಣಶಾಸ್ತ್ರೀ ಮತ್ತು ಟಿ.ಎಸ್.ವೆಂಕಣ್ಣಯ್ಯ ಅವರ ಕೊಡುಗೆಯೂ ಅನನ್ಯವಾದದ್ದು ಎಂದು ಅವರು ತಿಳಿಸಿದರು.
ಟಿಪ್ಪುವಿನ ನಂತರದ ಕಾಲದಲ್ಲಿ ಒಡೆದುಹೋಗಿದ್ದ ಕನ್ನಡ ನಾಡು, ಬ್ರಿಟಿಷರ ಕಾಲದಲ್ಲಿ ಇನ್ನಷ್ಟು ಹರಿದು ಹಂಚಿ ಹೋಯಿತು. ಇದರಿಂದ ಕನ್ನಡ ನಾಡಿನಲ್ಲಿ ಕನ್ನಡಿಗರೇ ಅನಾಥರಾಗುವಂತಾಗಿತ್ತು. ಈ ಸಂದರ್ಭದಲ್ಲಿ ಧಾರವಾಡದಲ್ಲಿ ರಾಮಚಂದ್ರ ಹಣಮಂತರಾವ ದೇಶಪಾಂಡೆ ಮತ್ತು ಸಮಾನ ಮನಸ್ಕರಿಂದ ಪ್ರಾರಂಭವಾದ ಕರ್ನಾಟಕ ವಿದ್ಯಾವರ್ಧಕ ಸಂಘ ಕನ್ನಡಕ್ಕೆ ಹೊಸ ಚೈತನ್ಯವನ್ನು ತುಂಬಿತು. ಕನ್ನಡಿಗರು ಅಸ್ಪೃಶ್ಯರಂತೆ ಅಡಗಿಕೊಳ್ಳಬೇಕಿದ್ದ ಸಮಯದಲ್ಲಿ ದೇಶಪಾಂಡೆಯವರು ಹೋರಾಟಗಳನ್ನು ರೂಪಿಸಿದರು. ಸಿರಿಗನ್ನಡಂ ಗೆಲ್ಗೆ ಎಂಬ ಸಪ್ತಾಕ್ಷರಿ ಮಂತ್ರದೊಂದಿಗೆ ಕರ್ನಾಟಕದ ಏಕೀಕರಣದ ಮೊದಲ ಕಿಡಿ ಹೊತ್ತಿಸಿದರು. ಧಾರವಾಡದಲ್ಲಿ ಎದ್ದು ನಿಂತ ವಿದ್ಯಾವರ್ಧಕ ಸಂಘವೇ ಮುಂದೆ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತೆಂಬ ಸಂಸ್ಥೆ ಉದಯವಾಗಲು ಕಾರಣವಾದದ್ದು ಎಂದು ವಿವರಿಸಿದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್ ಮಾತನಾಡಿ, ಕನ್ನಡ ಕರ್ನಾಟಕದ ಸಾರ್ವಭೌಮ ಭಾಷೆ. ಕರ್ನಾಟಕದಲ್ಲಿಯೇ ಕನ್ನಡ ಅಲ್ಪ ಸಂಖ್ಯಾತ ಭಾಷೆಯಾಗಿ ಕಳೆದು ಹೋದರೆ ಮತ್ತೆಲ್ಲಿಯೂ ಬೆಳೆಯಲು ಸಾಧ್ಯವಿಲ್ಲ. ಕನ್ನಡವನ್ನು ಆಡು ಭಾಷೆಯಾಗಿ ಬಳಸುವ ಮೂಲಕ ಪ್ರತಿ ಮನೆ ಮನಗಳಲ್ಲಿ ಬೆಳಗುವಂತೆ ಮಾಡಬೇಕು ಎಂದರು.
ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ಸುಲಲಿತವಾದ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸಮೃದ್ಧ ಸಾಹಿತ್ಯ ನಿರ್ಮಾಣಗೊಂಡಿದೆ. ಆಂಗ್ಲ ಭಾಷೆಯ ಪ್ರಭಾವದ ನಡುವೆಯೂ ಕನ್ನಡ ಸತ್ವಯುತವಾಗಿ ಬೆಳೆಯುತ್ತಿದೆ ಎಂದು ಹೇಳಿದರು.
ವಿಜಯಪುರ ಪ್ರಗತಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಕನ್ನಡಿಗ ಬಸವರಾಜು ಕಸಾಪ ಬೆಳೆದು ಬಂದ ಹಾದಿಯ ಕುರಿತು ಮಾತನಾಡಿದರು. ರೇಷ್ಮೆ ಇಲಾಖೆ ನಿವೃತ್ತ ಉಪನಿರ್ದೇಶಕ ಹಾಗೂ ಕನ್ನಡ ಪರಿಚಾರಕ ಎಚ್.ಆರ್.ಅಮರನಾಥ ಅವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು.
ಮೇಲೂರು ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು, ಕಸಾಪ ಗೌರವ ಕಾರ್ಯದರ್ಶಿ ಎಚ್.ಸತೀಶ್, ನಗರ ಘಟಕದ ಅಧ್ಯಕ್ಷ ಸಿ.ಎನ್.ಮುನಿರಾಜು, ಸಂಘಸಂಸ್ಥೆಗಳ ಪ್ರತಿನಿಧಿ ಶಂಕರ್, ಮುನಿಯಪ್ಪ, ದಾಕ್ಷಾಯಿಣಿ, ಸುಧೀರ್, ಆರ್.ಎ.ಉಮೇಶ್, ಧರ್ಮೇಂದ್ರ, ಸುದರ್ಶನ್, ರಾಮಾಂಜಿನಪ್ಪ, ನಾಮದೇವ್, ಪ್ರತೀಶ್, ಕೆಂಪಣ್ಣ, ಅಭಿಷೇಕ್, ಮಹೇಂದ್ರ, ವೆಂಕಟರಮಣರೆಡ್ಡಿ ಹಾಜರಿದ್ದರು.
ಅಕ್ರಮ ಮದ್ಯಮಾರಾಟಕ್ಕೆ ಕೂಡಲೇ ಕಡಿವಾಣ ಹಾಕಲು ಕ್ರಮ – ಡಿವೈಎಸ್‌ಪಿ .ಶ್ರೀನಿವಾಸ್
ನಗರದ ಕಂದಾಯ ಭವನದ ಮುಂಭಾಗದಲ್ಲಿ ಭಾನುವಾರ ಪೊಲೀಸ್ ಇಲಾಖೆಯಿಂದ ಆಯೋಜಿಸಲಾಗಿದ್ದ ದಲಿತರ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ಚಿಂತಾಮಣಿ ಉಪವಿಭಾಗದ ಡಿವೈಎಸ್‌ಪಿ.ಶ್ರೀನಿವಾಸ್ ಮಾತನಾಡಿದರು.
ತಾಲ್ಲೂಕಿನಾದ್ಯಂತ ಇರುವ ಗ್ರಾಮೀಣ ಪ್ರದೇಶದ ದಲಿತ ಕೇರಿಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯಮಾರಾಟಕ್ಕೆ ಕೂಡಲೇ ಕಡಿವಾಣ ಹಾಕಲು ಅಗತ್ಯ ಕ್ರಮಗಳನ್ನು ಜರುಗಿಸುವುದಾಗಿ ಅವರು ಹೇಳಿದರು.
ಅಕ್ರಮ ಮದ್ಯಮಾರಾಟದ ಬಗ್ಗೆ ಪೊಲೀಸ್ ಇಲಾಖೆ ತೆಗೆದುಕೊಳ್ಳುವ ಕಠಿಣವಾದ ತೀರ್ಮಾನಗಳಿಗೆ ನಾಗರಿಕರೂ ಸೇರಿದಂತೆ ಮುಖಂಡರು ಸಹಕರಿಸಬೇಕು ಎಂದರು.
ಅಕ್ರಮ ಮದ್ಯ ಮಾರುವವರಿಗೆ ಪೊಲೀಸರೇ ಮಾಹಿತಿ ನೀಡುತ್ತಾರೆ ಎಂಬ ದೂರಿಗೆ ಉತ್ತರಿಸಿದ ಅವರು, ತಾಲ್ಲೂಕಿನಾದ್ಯಂತ ಇರುವ ಕಾಲೋನಿಗಳ ಅಂಗಡಿಗಳಿಗೆ ಸ್ವತಃ ಪಿಎಸ್ಸೈ ನೇತೃತ್ವದಲ್ಲಿ ಸಿಬ್ಬಂದಿ ಭೇಟಿ ನೀಡಿ ವಾರದೊಳಗೆ ಅಕ್ರಮ ಮದ್ಯ ಮಾರುವವರ ವಿರುದ್ದ ಕ್ರಮ ಜರುಗಿಸಲಾಗುತ್ತದೆ. ಅಕ್ರಮ ಮದ್ಯ ಮಾರಾಟ ಮಾಡುವ ಬಗ್ಗೆ ಯಾವುದೇ ಪೊಲೀಸ್ ಪೇದೆಗಳಿಗೆ ಮಾಹಿತಿ ನೀಡದೇ ಸಂಬಂದಪಟ್ಟ ಪಿಎಸ್ಸೈ ಅಥವ ಸರ್ಕಲ್ ಇನ್ಸ್ ಪೆಕ್ಟರ್ ಗೆ ಮಾಹಿತಿ ನೀಡಿ ಎಂದರು.
ಇನ್ನು ಇತ್ತೀಚೆಗೆ ರಾತ್ರಿ ವೇಳೆ ಪೊಲೀಸ್ ಬೀಟ್ ಬರುತ್ತಿಲ್ಲ ಎಂಬ ದೂರಿಗೆ ಕಡ್ಡಾಯವಾಗಿ ಬೀಟ್ ಮಾಡಲು ಸೂಚನೆ ನೀಡಿದರು.
ದಲಿತರ ಮೇಲೆ ದೌರ್ಜನ್ಯವಾದಾಗ ದೂರು ನೀಡಿದರೆ ಸ್ವತಃ ಪೊಲೀಸರೇ ದಲಿತರ ವಿರುದ್ದ ದೂರು ದಾಖಲಿಸುವಂತೆ ದೌರ್ಜನ್ಯಮಾಡಿದವರಿಗೆ ಪ್ರೇರೇಪಿಸುತ್ತಾರೆ. ಜನರನ್ನು ರಕ್ಷಿಸಬೇಕಾದ ಪೊಲೀಸರೇ ಈ ರೀತಿ ಮಾಡಿದರೆ ನಮಗೆ ನ್ಯಾಯ ಎಲ್ಲಿಂದ ಸಿಗುತ್ತೆ ಎಂಬ ದಲಿತ ಮುಖಂಡರ ವಾದಕ್ಕೆ, ಮುಂದಿನ ದಿನಗಳಲ್ಲಿ ಅಂತಹ ಯಾವುದೇ ಘಟನೆ ನಡೆಯದಂತೆ ನೋಡಿಕೊಳ್ಳುವುದು ಹಾಗೂ ದಲಿತರ ವ್ಯಾಜ್ಯಗಳನ್ನು ಬಗೆಹರಿಸಿ ಅವರಿಗೆ ಸೂಕ್ತ ರಕ್ಷಣೆ ನೀಡುವ ಕೆಲಸವನ್ನು ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕವಾಗಿ ಮಾಡಲಿದ್ದಾರೆ ಎಂದರು.
ನಗರಠಾಣೆ ಪಿಎಸ್ಸೈ ಅವಿನಾಶ್, ಗ್ರಾಮಾಂತರ ಠಾಣೆ ಪಿಎಸ್ಸೈ ಹರೀಶ್‌ಗೌಡ, ದಿಬ್ಬೂರಹಳ್ಳಿ ಠಾಣೆಯ ಪಿಎಸ್ಸೈ ರಂಜನ್‌ಕುಮಾರ್, ದಲಿತ ಮುಖಂಡರಾದ ಮುನೆಯ್ಯ, ದ್ಯಾವಕೃಷ್ಣ, ಎನ್.ಎ.ವೆಂಕಟೇಶ್, ದಡಂಘಟ್ಟ ತಿರುಮಲೇಶ್, ಲಕ್ಷ್ಮಿನಾರಾಯಣ, ಕೃಷ್ಣಮೂರ್ತಿ, ಸುರೇಶ್ ಹಾಜರಿದ್ದರು.
ನಗರಸಭೆ ಚುನಾವಣೆ ಘೋಷಣೆ – ಟಿಕೆಟ್‌ಗಾಗಿ ನಾಯಕರ ಮೊರೆ ಹೋರಾಟ ಆಕಾಂಕ್ಷಿಗಳು
ಸ್ಥಳೀಯ ಸಂಸ್ಥೆಗಳ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಶುಕ್ರವಾರ ಬೆಳಗ್ಗೆಯೇ ಆಕಾಂಕ್ಷಿಗಳು ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ಮನೆ ಕಡೆ ಮುಖ ಮಾಡಿ ತಮಗೆ ಟಿಕೆಟ್ ನೀಡುವಂತೆ ದುಂಬಾಲು ಬಿದ್ದಿದ್ದಾರೆ. ಇನ್ನು ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮೋದಿಯ ಅಲೆಯಿಂದ ಬಿಜೆಪಿ ಅಭ್ಯರ್ಥಿಯ ಪರ ಒಂದಷ್ಟು ಮತಗಳು ಬಿದ್ದಿರುವ ಹಿನ್ನಲೆಯಲ್ಲಿ ಬಿಜೆಪಿಯಿಂದ ನಗರಸಭೆಗೆ ಸ್ಫರ್ದಿಸುವ ಆಕಾಂಕ್ಷಿಗಳು ಸಹ ಹೆಚ್ಚಾಗಿದ್ದಾರೆ. ಕುಡಿಯುವ ನೀರಿನ ಅಭಾವ ಹಾಗೂ ಸ್ವಚ್ಛತೆಯ ಕೊರತೆಯ ಸಮಸ್ಯೆಯಿಂದ ಬಳಲುತ್ತಿರುವ ರೋಗಗ್ರಸ್ಥ ನಗರಕ್ಕೆ ಚಿಕಿತ್ಸೆ ನೀಡುವೆವು ಎಂಬ ಭರವಸೆಯೊಂದಿಗೆ ಆಕಾಂಕ್ಷಿಗಳು ಹುಟ್ಟಿಕೊಂಡಿದ್ದಾರೆ. ಟಿಕೆಟ್ ಗಾಗಿ ತಮ್ಮ ತಮ್ಮ ಪಕ್ಷಗಳ ಮುಖಂಡರ ಮನವೊಲಿಸುವ ಕಾರ್ಯ ಭರದಿಂದ ಸಾಗಿದೆ.
ಮರೀಚಿಕೆಯಾದ ಮೂಲಭೂತ ಸೌಕರ್ಯ:
ಈ ಹಿಂದೆ ಒಟ್ಟು ೨೭ ವಾರ್ಡ್‌ಗಳನ್ನು ಹೊಂದಿದ್ದ ಶಿಡ್ಲಘಟ್ಟ ಪುರಸಭೆ ೩೧ ವಾರ್ಡ್‌ಗಳಾಗಿ ವಿಭಜನೆಗೊಂಡು ನಗರಸಭೆಯಾಗಿ ಮೇಲ್ದರ್ಜೆಗೇರಿದಾಗ ನಗರ ಇನ್ನಾದರೂ ಅಭಿವೃದ್ದಿಯಾಗಬಹುದು ಎನ್ನುವ ನಿರೀಕ್ಷೆ ಜನತೆಯಲ್ಲಿತ್ತು. ಆದರೆ ನಗರಸಭೆಗೆ ಆಯ್ಕೆಯಾಗಿ ಹೋದ ಸದಸ್ಯರೂ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರ ಅಭಿವೃದ್ದಿಯಾಗುವುದಿರಲಿ ಕನಿಷ್ಠ ನಗರದ ಜನತೆಗೆ ಸಮರ್ಪಕ ಕುಡಿಯುವ ನೀರು ಪೂರೈಸಲಿಕ್ಕೆ ಸಹ ಆಗಲಿಲ್ಲ.
ಕಳೆದ ಅವಧಿಯಲ್ಲಿ ನಗರೋತ್ಥಾನ ಯೋಜನೆಯಡಿ ಬಿಡುಗಡೆಯಾದ ಅನುಧಾನದಲ್ಲಿ ನೂತನ ನಗರಸಭೆ ಕಾರ್ಯಾಲಯ ನಿರ್ಮಾಣ ಮಾಡಲೆಂದು ಸ್ಥಳ ಗುರುತಿಸಿ ಅಲ್ಲಿದ್ದ ಹಳೆ ಮಳಿಗೆಯನ್ನು ಕೆಡವಲಾಯಿತು. ಆದರೆ ಈವರೆಗೂ ಕಟ್ಟಡ ನಿರ್ಮಾಣದ ಕಾಮಗಾರಿ ಶುರುಮಾಡಲಿಲ್ಲ. ಅಧಿಕಾರಿಗಳ ಪ್ರಕಾರ ನೂರಾರು ಕೊಳವೆಬಾವಿ ಕೊರೆಸಿದರಾದರೂ ಬಹುತೇಕ ಕೊಳವೆಬಾವಿಗಳಲ್ಲಿ ನೀರು ಸಿಗಲಿಲ್ಲ ಎಂಬ ಉತ್ತರ ಕೊಡುತ್ತಿದ್ದಾರೆ.
ನಗರ ಸಮೀಪದ ರೈತರಿಂದ ಖಾಸಗಿ ಕೊಳವೆಬಾವಿಗಳಿಂದ ನೀರು ಪಡೆಯಲು ಅವಕಾಶವಿದ್ದರೂ ನಗರಸಭೆ ಅಧಿಕಾರಿಗಳು ಈ ಕೆಲಸ ಮಾಡಿಲ್ಲ. ಹಾಗಾಗಿ ಜನತೆಗೆ ಸಮರ್ಪಕ ನೀರು ಪೂರೈಸಲು ನಗರಸಭೆ ವಿಫಲವಾಗಿದೆ. ನೀರು ಬಿಟ್ಟರೂ ಅದು ಕಲುಷಿತವಾಗಿದೆ. ಗುತ್ತಿಗೆ ನೌಕರರ ಮುಷ್ಕರ ಹಾಗೂ ಅಧ್ಯಕ್ಷ ಆಡಳಿತದಿಂದಾಗಿ ನೀರಿನ ಸರಬರಾಜು ಹಾಗೂ ಕಸ ವಿಲೇವಾರಿ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ನಗರದ ಮುಖ್ಯರಸ್ತೆಯ ಇಕ್ಕೆಲಗಳಲ್ಲಿಯೂ ಕಸದರಾಶಿಗಳು ಸಾಕಷ್ಟಿವೆ ಎಂದು ನಾಗರಿಕರು ದೂರುತ್ತಿದ್ದಾರೆ. ಇನ್ನು ನಗರದಲ್ಲಿರುವ ಎರಡು ಮುಖ್ಯ ರಸ್ತೆಗಳಿಗೆ ಅಲ್ಪ ಸ್ವಲ್ಪ ಡಾಂಬರು ಕಾಮಗಾರಿ ನಡೆದಿದೆಯಾದರೂ ಗುಣಮಟ್ಟದ ಕಾಮಗಾರಿ ನಡೆದಿಲ್ಲ ಎಂಬ ಆರೋಪವಿದೆ.
ಅಧ್ಯಕ್ಷ ಸ್ಥಾನ ಗೊಂದಲ, ರಾಜಕೀಯ ದೊಂಬರಾಟದಲ್ಲಿ ಮುಗಿದ ಕಾರ್ಯಾವದಿ
ಕಳೆದ ೨೦೧೩ ರ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ೧೪ ಸದಸ್ಯರು, ಜೆಡಿಎಸ್ ಬೆಂಬಲಿತ ೧೧ ಸದಸ್ಯರು ಸೇರಿದಂತೆ ೧ ಬಿಜೆಪಿ ಹಾಗು ೧ ಪಕ್ಷೇತರ ಸದಸ್ಯರು ಜಯಶೀಲರಾಗಿದ್ದರು. ಮೊದಲ ಅವಧಿಗೆ ಕಾಂಗ್ರೆಸ್ ಸದಸ್ಯರು ಅಧ್ಯಕ್ಷರಾಗುವಲ್ಲಿ ಯಶಸ್ವಿಯಾದರೆ, ಎರಡನೇ ಅವಧಿಗೆ ಅಡ್ಡಮತದಾನದಿಂದ ಜೆಡಿಎಸ್ ಸದಸ್ಯ ಅಧ್ಯಕ್ಷರಾಗಿ ಆಯ್ಕೆಯಾದರು. ಇದು ಇಷ್ಟಕ್ಕೆ ನಿಲ್ಲದೇ ತಾವೇ ಬೆಂಬಲಿಸಿ ಅಧ್ಯಕ್ಷರನ್ನಾಗಿ ಮಾಡಿದವರನ್ನು ಅದೇ ಸದಸ್ಯರು ಮತ್ತೇ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರಾದರೂ ನಂತರ ಕೋರ್ಟ್ ಆದೇಶದ ಮೇಲೆ ಅದೇ ವ್ಯಕ್ತಿ ಅಧ್ಯಕ್ಷರಾಗಿ ಮುಂದುವರೆದರು. ಕಳೆದ ಐದು ವರ್ಷಗಳ ನಗರಸಭೆ ಆಡಳಿತಾವಧಿಯಲ್ಲಿ ನಗರದ ಜನತೆಯ ಪರವಾಗಿ ಯೋಚಿಸುವುದಕ್ಕಿಂತ ತಮ್ಮ ಸ್ವಪ್ರತಿಷ್ಠೆ, ಹಠ, ಅಧಿಕಾರ ಉಳಿಸಿಕೊಳ್ಳುವಲ್ಲಿ ಜನಪ್ರತಿನಿಧಿಗಳು ನಿರತರಾಗಿದ್ದನ್ನು ನಗರದ ಜನತೆ ನೋಡಿ ಬೇಸತ್ತಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಜಿದ್ದಿಗಾಗಿ ಸ್ವಪಕ್ಷ ವಿರೋಧಿ ನೀತಿ, ಗೊಂದಲದಲ್ಲಿ ಮತದಾರರು
ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸುತ್ತಿದೆಯಾದರೂ ನಗರದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಮೈತ್ರಿಯಾಗಿಲ್ಲ ಎಂಬುದಕ್ಕೆ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆ ನಿದರ್ಶನವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತಯಾಚನೆ ಮಾಡಿದ್ದರು. ಆದರೆ ಕೆ.ಎಚ್.ಮುನಿಯಪ್ಪ ಅವರ ವಿರುದ್ಧವಾಗಿ ಶಾಸಕ ವಿ.ಮುನಿಯಪ್ಪ ಅವರ ಬೆಂಬಲಿಗರು ಬಿಜೆಪಿ ಪರ ಮತಯಾಚಿಸಿದ್ದು ಗುಟ್ಟಾಗಿ ಉಳಿದಿಲ್ಲ. ಹಾಗಾಗಿ ನಗರಸಭೆ ಚುನಾವಣೆಯಲ್ಲಿ ಮೈತ್ರಿ ಎನ್ನುವುದು ದೂರದ ಮಾತಾಗಿ ಕಾಣುತ್ತಿದೆ.
ಎಂಟು ಸರ್ಕಾರಿ ಇಲಾಖೆಗಳ ಕಟ್ಟಡಗಳಿಗಾಗಿ ಜಾಮೀನು ಗುರುತಿಸಿದ ತಾಲ್ಲೂಕು ಆಡಳಿತ
ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ವೆ ನಂ ೧೦ ರಲ್ಲಿ ಸುಮಾರು ಎಂಟು ಸರ್ಕಾರಿ ಇಲಾಖೆಗಳ ಕಟ್ಟಡಗಳಿಗಾಗಿ ಜಮೀನನ್ನು ಮಂಜೂರು ಮಾಡಲಾಗಿದೆ. ಶುಕ್ರವಾರ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರ ನೇತೃತ್ವದಲ್ಲಿ ವಿವಿಧ ಇಲಾಖೆಗಳಿಗೆ ಸ್ಥಳವನ್ನು ಗುರುತಿಸುವ ಕಾರ್ಯ ನಡೆಯಿತು.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಕಟ್ಟಡ ಮತ್ತು ತಾಲ್ಲೂಕು ಬಾಲ ಭವನ, ಉಗ್ರಾಣ ನಿರ್ಮಾಣಕ್ಕಾಗಿ ೧ ಎಕರೆ, ಸರ್ಕಾರಿ ಮೌಲಾನಾ ಆಜಾದ್ ಇಂಗ್ಲಿಷ್ ಮಾದರಿ ಶಾಲಾ ಕಟ್ಟಡ ಮತ್ತು ಆಟದ ಮೈದಾನಕ್ಕಾಗಿ ೧ ಎಕರೆ, ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಕಚೇರಿ ಕಟ್ಟಡ ನಿರ್ಮಾಣಕ್ಕೆ ೪ ಎಕರೆ, ಅಬಕಾರಿ ನಿರೀಕ್ಷಕರ ಕಟ್ಟಡಕ್ಕಾಗಿ ೧೦ ಗುಂಟೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳ ಕಚೇರಿ ಕಟ್ಟಡಕ್ಕಾಗಿ ಮತ್ತು ದೇವರಾಜ ಅರಸು ಭವನ ನಿರ್ಮಾಣಕ್ಕಾಗಿ ೧೦ ಗುಂಟೆ, ಉಪನೋಂದಣಾಧಿಕಾರಿಗಳ ಕಚೇರಿ ನಿರ್ಮಾಣಕ್ಕಾಗಿ ೨೫ ಗುಂಟೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ ೨೦ ಗುಂಟೆ, ಕೃಷಿ ಇಲಾಖೆ ಕಚೇರಿ ಕಟ್ಟಡ ಹಾಗೂ ರೈತ ಸಂಪರ್ಕ ಕೇಂದ್ರ ಕಟ್ಟಡ ನಿರ್ಮಾಣಕ್ಕಾಗಿ ೨೦ ಗುಂಟೆ ಸೇರಿದಂತೆ ಒಟ್ಟಾರೆ ೮ ಎಕರೆ ೫ ಗುಂಟೆ ಜಮೀನನ್ನು ಗುರುತಿಸಲಾಯಿತು.
ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ವೆ ನಂ ೧೦ ರಲ್ಲಿ ಒಟ್ಟು ವಿಸ್ತೀರ್ಣ ೩೨೫ ಎಕರೆ ಜಮೀನಿದ್ದು ಸರ್ಕಾರಿ ಗೋಮಾಳ ಎಂಬುದಾಗಿ ವರ್ಗೀಕರಣಗೊಂಡಿದೆ. ಈ ಪೈಕಿ ಆರ್.ಟಿ.ಸಿ ಕಾಲಂ ನಂ ೯ ರಲ್ಲಿ ೧೮೯.೨೫ ಎಕರೆ ಗೋಮಾಳ ಜಮೀನು ಲಭ್ಯವಿದೆ. ಆ ಪೈಕಿ ವಿವಿಧ ಇಲಾಖೆಗಳಿಗೆ ಜಮೀನನ್ನು ಗುರುತಿಸಿ ಭೂಮಾಪಕರಿಂದ ನಕ್ಷೆ ತಯಾರಿಸಲಾಗಿದೆ.
ತಹಶೀಲ್ದಾರ್ ಅಜಿತ್ ಕುಮಾರ್ ರೈ, ಸರ್ಕಲ್ ಇನ್ಸ್ ಪೆಕ್ಟರ್ ಆನಂದ್ ಕುಮಾರ್, ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ಸಿ.ಎಚ್.ಚಿನ್ಮಯಿಗೆ ಅಭಿನಂದನೆ
ತಾಲ್ಲೂಕಿನ ಚೀಮನಹಳ್ಳಿ ಗ್ರಾಮದ ವಿದ್ಯಾರ್ಥಿನಿ ಸಿ.ಎಚ್.ಚಿನ್ಮಯಿ ಅವರ ಮನೆಗೆ ಗುರುವಾರ ಭೇಟಿ ನೀಡಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ವಿದ್ಯಾರ್ಥಿನಿಯನ್ನು ಅಭಿನಂದಿಸಿ ಮಾತನಾಡಿದರು.
೨೦೧೮-೧೯ ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ೬೧೮ ಅಂಕ ಪಡೆಯುವ ಮೂಲಕ ತಾಲ್ಲೂಕಿಗೆ ಮೊದಲ ಸ್ಥಾನ ಪಡೆದಿರುವ ಬಿಜಿಎಸ್ ವಿದ್ಯಾಸಂಸ್ಥೆಯ ಸಿ.ಎಚ್.ಚಿನ್ಮಯಿ ಅವರ ಮುಂದಿನ ಜೀವನದ ಕನಸು ನನಸಾಗಲಿ ಎಂದು ಅವರು ಹಾರೈಸಿದರು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯೋರ್ವಳು ೬೨೫ ಅಂಕಗಳಿಗೆ ೬೧೮ ಪಡೆದಿರುವುದು ನಿಜಕ್ಕೂ ಸಂತಸದ ವಿಷಯವಾಗಿದೆ. ವಿದ್ಯಾರ್ಥಿನಿಯ ಸಾಧನೆಗೆ ಪ್ರೇರೇಪಣೆ ನೀಡಿದ ಪೋಷಕರು ಹಾಗೂ ಶಿಕ್ಷಕರ ಶ್ರಮ ಶ್ಲಾಘನೀಯ. ಚಿನ್ಮಯಿಯ ವೈದ್ಯೆಯಾಗುವ ಕನಸು ನನಸಾಗಲಿ ಎಂದು ಹಾರೈಸಿದರು.
ವಿದ್ಯಾರ್ಥಿನಿ ಸಿ.ಎಚ್.ಚಿನ್ಮಯಿ ಮಾತನಾಡಿ, ನನ್ನ ಯಶಸ್ಸಿಗೆ ನನ್ನ ಪೋಷಕರೂ ಹಾಗೂ ಬಿಜಿಎಸ್ ವಿದ್ಯಾಸಂಸ್ಥೆಯ ಎಲ್ಲಾ ಶಿಕ್ಷಕರು ನೀಡಿದ ಪ್ರೋತ್ಸಾಹವೇ ಕಾರಣ. ಮುಂದಿನ ದಿನಗಳಲ್ಲಿ ವೈದ್ಯಕೀಯ ವಿಭಾಗದಲ್ಲಿ ವ್ಯಾಸಂಗ ಮಾಡಿ ಉತ್ತಮ ವೈದ್ಯೆಯಾಗುವ ಕನಸು ಹೊಂದಿದ್ದು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಬಿಜಿಎಸ್ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಆರ್.ಮಹದೇವ್, ವಿದ್ಯಾರ್ಥಿನಿಯ ತಂದೆ ಹರಿಪ್ರಸಾದ್, ಬಿಜಿಎಸ್ ಸಂಸ್ಥೆಯ ಶಿಕ್ಷಕರು ಹಾಜರಿದ್ದರು.
ಶಿಡ್ಲಘಟ್ಟದ ಯುವ ಕಲಾವಿದರ ಆಲ್ಬಮ್ ಹಾಡು ಬಿಡುಗಡೆ
ಶಿಡ್ಲಘಟ್ಟ ಮೂಲದ ಯುವಕರು ಸೀಮಿತ ಅವಕಾಶಗಳನ್ನೇ ಬಳಸಿಕೊಂಡು ಹಾಡೊಂದನ್ನು ರಚಿಸಿ, ನಿರ್ದೇಶಿಸಿ ಶೂಟಿಂಗ್ ನಡೆಸಿ ಪೇಸ್ ಡಿಜಿಟಲ್ ಆಡಿಯೋ ಸಹಯೋಗದೊಂದಿಗೆ ಬಿಡುಗಡೆಗೊಳಿಸಿದ್ದಾರೆ.
ನಗರದ ಉಲ್ಲೂರುಪೇಟೆಯ ನಿವಾಸಿ ಕೆ.ಎಸ್.ಪುನೀತ್ ಕುಮಾರ್ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಬಿ.ಎಸ್ಸಿ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು, ತಾನು ಹಾಗೂ ಸ್ನೇಹಿತರು ಜೊತೆಗೂಡಿ ರಚಿಸಿ, ನಿರ್ಮಿಸಿ, ನಿರ್ದೇಶಿಸಿರುವ “ಕಾಲವೆಂಬೋ ಕಾಲದಲ್ಲಿ” ಎಂಬ ಹಾಡನ್ನು ಬುಧವಾರ ಬಿಡುಗಡೆಗೊಳಿಸಲಾಯಿತು.
“ನಾನು ಬರೆದ ಹಾಡನ್ನು ಗುನುಗುನಿಸುವಾಗ ಕೆಲ ಸ್ನೇಹಿತರು ಈ ಹಾಡನ್ನು ರೆಕಾರ್ಡ್ ಮಾಡಿಸು ಎನ್ನುತ್ತಿದ್ದರು. ಹೇಗೆ ಮಾಡಿಸಬೇಕೆಂದು ತಿಳಿದಿರಲಿಲ್ಲ. ಲಿಖಿತ್ ಶ್ರೀಧರ್ ಎಂಬುವವರ ಮೂಲಕ ಅತಿಶೈ ಜೈನ್ ಅವರ ಪರಿಚಯವಾಯಿತು. ಅವರು ಹಾಡಿಗೆ ಸಂಗೀತ ನೀಡಿ ಸ್ವತಃ ಹಾಡಿ ಅದಕ್ಕೆ ಜೀವತುಂಬಿದರು. ಈ ಸಂದರ್ಭದಲ್ಲಿ ಶರತ್ ಎನ್ನುವವರು ಸಹ ಸಹಾಯ ಮಾಡಿದರು. ಲಿಖಿತ್ ಕುಮಾರ್ ಶ್ರೀಧರ್ ಅವರು ೪ ನಿಮಿಷ ೧೬ ಸೆಕೆಂಡ್ ಗಳ ಸುಶ್ರಾವ್ಯವಾದ ಹಾಡನ್ನು ಸಿದ್ಧಪಡಿಸಿಕೊಟ್ಟರು.
ಹಾಡನ್ನು ಚಿತ್ರೀಕರಣ ಮಾಡಲು ನಟರಿಗಾಗಿ ಫೇಸ್ ಬುಕ್ ಮೂಲಕ ಆಹ್ವಾನಿಸಿದೆ. ಸುಮಾರು ೪೦೦೦ ಕರೆಗಳು ಬಂದವು. ಮನೋಹರ್ ಬ್ರಹ್ಮಾವರ ಮತ್ತು ಎಂ.ವಿ.ಪ್ರಜ್ವಲ ಎಂಬ ಯುವ ಪ್ರತಿಭೆಗಳಿಗೆ ನಟಿಸಲು ಅವಕಾಶ ನೀಡಿದೆ. ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಶ್ರೀಸಾಯಿ ಲೇ ಔಟ್ ನಲ್ಲಿ ನನ್ನ ಕಲ್ಪನೆಯಂತೆ ಹಾಡನ್ನು ಚಿತ್ರೀಕರಣ ಮಾಡಿದೆ. ಕೆನಾನ್ ೫ ಡಿ ಮಾರ್ಕ್ ೪ ಕ್ಯಾಮೆರಾ ಬಳಸಿ ಚಲಪತಿ ಅವರು ವೀಡಿಯೋ ಚಿತ್ರೀಕರಣ ಮಾಡಿಕೊಟ್ಟರು. ಸಂತೋಷ್ ಅವರು ನೃತ್ಯ ಸಂಯೋಜಿಸಿದರು. ಹರೀಶ್ ಅವರು ಆರ್ಥಿಕ ನೆರವನ್ನು ನೀಡಿದರು. ಈ ಆಲ್ಬಮ್ ಹಾಡನ್ನು ಬಿಡುಗಡೆ ಮಾಡಿ ಪ್ರಚಾರ ಮಾಡಿಕೊಡಲು ಪೇಸ್ ಡಿಜಿಟಲ್ ಮ್ಯೂಸಿಕ್ ಕಂಪೆನಿ ಮುಂದೆ ಬಂದಿದ್ದಾರೆ. ಈ ಅನುಭವದಿಂದ ಹೊಸ ಆಲೋಚನೆಗಳು ಮನಸ್ಸಿನಲ್ಲಿ ಮೂಡಿವೆ. ಮುಂದೆ ಅವಕಾಶಗಳು ಲಭಿಸಿದಲ್ಲಿ ಹಾಡು, ಸಾಕ್ಷ್ಯಚಿತ್ರ, ಕಿರುಚಿತ್ರಗಳ ನಿರ್ಮಾಣ, ನಿರ್ದೇಶನ ಮಾಡುವ ಬಯಕೆಯಿದೆ” ಎಂದು ಪುನೀತ್ ಕುಮಾರ್ ತಿಳಿಸಿದರು.
“ಕಾಲವೆಂಬೋ ಕಾಲದಲ್ಲಿ” ಹಾಡು ಯೂಟ್ಯೂಬ್ ನಲ್ಲಿ ಪೇಸ್ ಆಡಿಯೋ ಡಿಜಿಟಲ್ ಚಾನೆಲ್ ನಲ್ಲಿ ವೀಕ್ಷಿಸಬಹುದಾಗಿದೆ.
https://youtu.be/2b5mNTD5Xxk
ಶೇ ೧೦೦ ರಷ್ಟು ಫಲಿತಾಂಶ ಪಡೆದ ಆಶಾಕಿರಣ ಅಂಧ ಮಕ್ಕಳ ಶಾಲೆ
ಶಿಡ್ಲಘಟ್ಟದ ಆಶಾಕಿರಣ ಅಂಧ ಮಕ್ಕಳ ಶಾಲೆಯ ಎಂಟು ಮಂದಿ ವಿದ್ಯಾರ್ಥಿಗಳು ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಬರೆದಿದ್ದು, ಎಲ್ಲರೂ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
1992 ರಿಂದ ಪ್ರಾರಂಭವಾದ ಅಂಧಮಕ್ಕಳ ಶಾಲೆಯು ತಾಲ್ಲೂಕು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಅಂಧ ಮಕ್ಕಳಿಗೆ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುತ್ತಿದೆ. 2009 ರಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ಮೊದಲು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಬರೆದರು. ಅಂದಿನಿಂದ ಈ ಶಾಲೆಯು ಪ್ರತಿ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ 100 ರಷ್ಟು ಫಲಿತಾಂಶವನ್ನು ಪಡೆಯುತ್ತಿದ್ದು ಮಾದರಿಯಾಗಿದೆ.
‘ಕಣ್ಣಿರದಿದ್ದರೂ ಮಕ್ಕಳಲ್ಲಿ ಅಪಾರ ಪ್ರತಿಭೆಯನ್ನು ಹೊಂದಿರುತ್ತಾರೆ. ಹೆಚ್ಚು ಅಂಕಗಳನ್ನು ಪಡೆದು ಮಕ್ಕಳು ಆತ್ಮವಿಶ್ವಾಸದಿಂದ ಮುಂದೆ ಟೀಚರಾಗುತ್ತೇನೆ, ಸ್ವಂತ ಉದ್ಯೋಗವನ್ನು ಕೈಗೊಳ್ಳುತ್ತೇನೆ ಎಂದೆಲ್ಲಾ ಹೇಳುವುದನ್ನು ಕಂಡಾಗ ಹೆಮ್ಮೆ ಎನಿಸುತ್ತದೆ” ಎಂದು ಶಾಲೆಯ ಸಂಯೋಜಕ ಗೋಪಾಲಯ್ಯ ತಿಳಿಸಿದರು.
ಈ ಬಾರಿ ಎಂಟು ಮಂದಿ ಅಂಧ ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳು:
ಪಿ. ಗೌತಮಿ(೪೬೨), ಆರ್.ಹರೀಶ್(೪೬೨), ಸಂದೀಪ್(೪೫೪), ನಾಗಾರ್ಜುನ(೪೪೭), ಬಸವರಾಜು(೪೧೯), ಆರ್.ಜ್ಯೋತಿ(೪೧೪), ಎಲ್.ಸುನಿಲ್(೪೦೦), ಬಿ.ಪವನ್(೩೯೬)
ಅನುಮಾನಾಸ್ಪದ ವ್ಯಕ್ತಿಗಳು ಕಂಡಲ್ಲಿ ಪೊಲೀಸರಿಗೆ ತಿಳಿಸಿ – ಸರ್ಕಲ್ ಇನ್ಸ್ ಪೆಕ್ಟರ್ ಆನಂದ್ ಕುಮಾರ್
ತಾಲ್ಲೂಕಿನಲ್ಲಿ ಯಾರೇ ಅನುಮಾನಾಸ್ಪದ ವ್ಯಕ್ತಿಗಳು ಕಂಡಲ್ಲಿ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿ. ಪ್ರಾರ್ಥನಾ ಸ್ಥಳಗಳು, ದೇವಾಲಯಗಳು ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಸಿಸಿ ಟಿವಿ, ಕ್ಯಾಮೆರಾ ಹಾಗೂ ಮೆಟಲ್ ಡಿಟೆಕ್ಟರ್ ಅಳವಡಿಸಿಕೊಳ್ಳಬೇಕೆಂದು ಸರ್ಕಲ್ ಇನ್ಸ್ ಪೆಕ್ಟರ್ ಆನಂದ್ ಕುಮಾರ್ ತಿಳಿಸಿದರು.
ನಗರದ ಕಂದಾಯ ಭವನದ ಆವರಣದಲ್ಲಿ ಸೋಮವಾರ ಈಚೆಗೆ ಶ್ರೀಲಂಕಾದಲ್ಲಿ ನಡೆದ ಬಾಂಬ್ ಧಾಳಿ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ನಾಗರಿಕರೊಂದಿಗಿನ ಸಭೆಯಲ್ಲಿ ಅವರು ಮಾತನಾಡಿದರು.
ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಸಾರ್ವಜನಿಕರು ಪೊಲೀಸರಿಗೆ ನೆರವಾಗಬೇಕು. ಮಸೀದಿ, ದೇವಾಲಯ ಮತ್ತು ಚರ್ಚ್ ಗಳಲ್ಲಿ ಸಿಸಿ ಟೀವಿ ಕ್ಯಾಮೆರಾ ಅಳವಡಿಸಿ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಸಹಕರಿಸಬೇಕು. ನಗರದ ಪ್ರಮುಖ ಸ್ಥಳಗಳಲ್ಲಿ ಸಿಸಿ ಟೀವಿ ಕ್ಯಾಮೆರಾ ಅಳವಡಿಸಲೆಂದು ಜಿಲ್ಲಾಧಿಕಾರಿಗಳು ನಗರಸಭೆ ಮೂಲಕ ೨೦ ಲಕ್ಷ ಮಂಜೂರು ಮಾಡಿದ್ದಾರೆ. ಅತಿ ಶೀಘ್ರದಲ್ಲಿ ಅಳವಡಿಸಲಾಗುವುದು ಎಂದರು.
ನಗರದಲ್ಲಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಬಿಗಿ ಕ್ರಮ ಕೈಗೊಳ್ಳಲಾಗಿದೆ. ಬೈಕ್ ಮತ್ತು ಆಟೋ ಚಾಲಕರು ಲೈಸೆನ್ಸ್ ಮತ್ತು ವಾಹನಗಳ ದಾಖಲೆಯನ್ನು ಖಡ್ಡಾಯವಾಗಿಟ್ಟುಕೊಳ್ಳಬೇಕು. ಪೊಲೀಸ್ ಇಲಾಖೆಯಿಂದ ೫೦ ಮಂದಿ ಆಟೋ ಚಾಲಕರಿಗೆ ಉಚಿತವಾಗಿ ವಾಹನ ಪರವಾನಗಿಯನ್ನು ಮಾಡಿಸಿಕೊಡಲಾಗುವುದು. ಜೀವ ಭದ್ರತೆಗಾಗಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು ಖಡ್ಡಾಯ. ಗ್ರಾಮಗಳಲ್ಲಿ ದೇವಾಲಯಗಳಲ್ಲಿ ಕಳ್ಳತನ ನಡೆಯುತ್ತಿರುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಪೊಲೀಸರು ಜನಸ್ನೇಹಿಗಳಾಗಿರುವುದರಿಂದ ನಾಗರಿಕರು ಸಹಕರಿಸಬೇಕು ಎಂದು ಹೇಳಿದರು.
ನಗರ ಪೊಲೀಸ್ ಠಾಣೆ ಪಿಎಸೈ ಅವಿನಾಶ್, ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಪಿಎಸೈ ರಂಜಿತ್ ಕುಮಾರ್, ವಿವಿಧ ಸಂಘ ಸಂಸ್ಥೆಗಳ, ದೇವಾಲಯ, ಮಸೀದಿ, ಚರ್ಚ್ ಮುಖ್ಯಸ್ಥರು ಹಾಜರಿದ್ದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ – ಬಿ.ಜಿ.ಎಸ್ ಪ್ರೌಢಶಾಲೆಯ ಸಿ.ಎಚ್.ಚಿನ್ಮಯಿ ತಾಲ್ಲೂಕಿಗೆ ಪ್ರಥಮ
ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ತಾಲ್ಲೂಕಿನ ೨,೦೯೭ ವಿದ್ಯಾರ್ಥಿಗಳು ಉತ್ತೀರ್ಣರಾಗಿ, ಶೇ ೮೭.೯೨ ರಷ್ಟು ಫಲಿತಾಂಶ ದಾಖಲಾಗಿದೆ. ಬಿ.ಜಿ.ಎಸ್ ಪ್ರೌಢಶಾಲೆಯ ಸಿ.ಎಚ್.ಚಿನ್ಮಯಿ(೬೧೮) ತಾಲ್ಲೂಕಿಗೆ ಪ್ರಥಮ, ಜ್ಯೋತಿ ಪ್ರೌಢಶಾಲೆ, ಜಂಗಮಕೋಟೆ ಕ್ರಾಸ್ ನ ಎಸ್.ಕೀರ್ತನ (೬೧೭) ದ್ವಿತೀಯ ಮತ್ತು ದಿ ಕ್ರೆಸೆಂಟ್ ಪ್ರೌಢಶಾಲೆಯ ಬಿ.ಆರ್.ಯಶ್ವಂತ್(೬೧೫) ತೃತೀಯರಾಗಿದ್ದಾರೆ.
ತಾಲ್ಲೂಕಿನ ೧೭ ಸರ್ಕಾರಿ ಪ್ರೌಢಶಾಲೆಗಳು, ೨ ವಸತಿ ಶಾಲೆಗಳು, ೭ ಅನುದಾನಿತ ಪ್ರೌಢಶಾಲೆಗಳು ಮತ್ತು ೨೩ ಅನುದಾನರಹಿತ ಪ್ರೌಢಶಾಲೆಗಳಿಂದ ಒಟ್ಟು ೨,೩೮೫ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು.
ಒಟ್ಟು ೧೬ ಶಾಲೆಗಳು ಶೇ ೧೦೦ ಫಲಿತಾಂಶವನ್ನು ಪಡೆದಿವೆ. ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಂದ ಒಟ್ಟು ೧೧೩ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲರೂ ಉತ್ತೀರ್ಣರಾಗಿ ಶೇ ೧೦೦ ರಷ್ಟು ಫಲಿತಾಂಶ ದಾಖಲಿಸಿವೆ. ಶಾರದಾ ಆಂಗ್ಲ ಪ್ರೌಢಶಾಲೆ, ದಿ ಕ್ರೆಸೆಂಟ್ ಪ್ರೌಢಶಾಲೆ, ವಾಸವಿ ಪ್ರೌಢಶಾಲೆ, ಜ್ಯೋತಿ ಪ್ರೌಢಶಾಲೆ ಜಂಗಮಕೋಟೆ ಕ್ರಾಸ್, ಆಶಾಕಿರಣ ಅಂಧ ಮಕ್ಕಳ ಶಾಲೆ, ಯೂನಿವರ್ಸಲ್ ಪ್ರೌಢಶಾಲೆ ವರದನಾಯಕನಹಳ್ಳಿ, ಬಿ.ಜಿ.ಎಸ್ ಹನುಮಂತಪುರ, ಡಾಲ್ಫಿನ್ ಪ್ರೌಢಶಾಲೆ, ಚೇತನ ಪ್ರೌಢಶಾಲೆ ತುಮ್ಮನಹಳ್ಳಿ, ರಾಯಲ್ ಪ್ರೌಢಶಾಲೆ ಬೂದಾಳ, ಪಂಚಮುಖಿ ಆಂಗ್ಲ ಪ್ರೌಢಶಾಲೆ ಎಚ್.ಕ್ರಾಸ್, ನವೋದಯ ಪ್ರೌಢಶಾಲೆ ನಡಿಪಿನಾಯಕನಹಳ್ಳಿ, ಲಕ್ಷ್ಮೀ ವಿದ್ಯಾನಿಕೇತನ ಚಿಕ್ಕದಾಸರಹಳ್ಳಿ, ಸೇಂಟ್ ಥಾಮಸ್ ಮೇಲೂರು ಶಾಲೆಗಳು ಶೇ ೧೦೦ ಫಲಿತಾಂಶ ಪಡೆದಿವೆ.
ರೈತರಿಗೆ ತರಕಾರಿ ಬೀಜಗಳ ಕಿಟ್ ವಿತರಣೆ
ರೈತರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತಂತೆ ಅಧಿಕಾರಿಗಳು ಸಮರ್ಪಕವಾಗಿ ಮಾಹಿತಿ ನೀಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ(ಪುಟ್ಟಣ್ಣಯ್ಯ ಬಣ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ ತಿಳಿಸಿದರು.
ನಗರದ ತೋಟಗಾರಿಕಾ ಇಲಾಖೆ ಆವರಣದಲ್ಲಿ ಸೋಮವಾರ ರೈತರಿಗೆ ವಿವಿಧ ಬೀಜಗಳ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನ ದಿಬ್ಬೂರಹಳ್ಳಿ, ಸಾದಲಿ ಭಾಗದ ಜನರಿಗೆ ಮಾಹಿತಿಯೇ ಇಲ್ಲ. ನಾವು ರೈತ ಸಂಘದಿಂದ ಮಾಹಿತಿ ನೀಡಿ ರೈತರನ್ನು ಕರೆದುಕೊಂಡು ಬಂದಿದ್ದೇವೆ. ಹೋಬಳಿ ಮಟ್ಟದಲ್ಲಿ ರೈತರಿಗೆ ಅಧಿಕಾರಿಗಳು ಮಾಹಿತಿ ನೀಡಬೇಕು. ಈ ದಿನ ಸುಮಾರು ೪೫೦ ರೂ ಬೆಲೆ ಬಾಳುವ ಹೀರೇಕಾಯಿ, ಸೋರೇಕಾಯಿ, ಬದನೇಕಾಯಿ, ಹಾಗಲಕಾಯಿ, ಮೆಣಸಿನಕಾಯಿ ಬೀಜಗಳನ್ನು, ಅಂದರೆ ೨೦೦೦ ರೂ ಬೆಲೆ ಬಾಳುವ ಕಿಟ್ ಪ್ರತಿಯೊಬ್ಬ ರೈತರಿಗೆ ನೀಡಲಾಗುತ್ತಿದೆ. ನೂರು ಮಂದಿ ರೈತರಿಗೆ ಈ ದಿನ ಈ ಸೌಲಭ್ಯ ಸಿಗುತ್ತಿದೆ. ತಾಲ್ಲೂಕಿನ ೬೫೦ ಮಂದಿ ರೈತರು ಈ ಸೌಲಭ್ಯ ಪಡೆಯಬಹುದಾಗಿದೆ ಎಂದು ಹೇಳಿದರು.
ತೋಟಗಾರಿಕಾ ಇಲಾಖೆ ಅಧಿಕಾರಿಗಳಾದ ರವಿಕುಮಾರ್, ಪ್ರಿಯಾಂಕ, ಲಕ್ಷ್ಮೀನಾರಾಯಣ, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ(ಪುಟ್ಟಣ್ಣಯ್ಯ ಬಣ) ಜಿಲ್ಲಾ ಉಪಾಧ್ಯಕ್ಷ ಟಿ.ಕೆ.ಅರುಣ್ ಕುಮಾರ್, ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಕೋಟೆ ಚನ್ನೇಗೌಡ, ಶಂಕರ್ ನಾರಾಯಣ್, ದೊಣ್ಣಹಳ್ಳಿ ರಮೇಶ್, ಆನಂದ್, ವೆಂಕಟರೆಡ್ಡಿ, ಲಗುಮಪ್ಪ, ಸುರೇಶ್, ಚೌಡಸಂದ್ರ ಶ್ರೀನಿವಾಸ್, ಅಂಗತಟ್ಟಿ ದೇವರಾಜ್, ಸುಗಟೂರು ಆನಂದಪ್ಪ, ಯಣ್ಣಂಗೂರು ಗೋವಿಂದಪ್ಪ ಹಾಜರಿದ್ದರು.
ಮಾನವ ಹಕ್ಕುಗಳ ಸಂಸ್ಥೆ ವತಿಯಿಂದ ದೂರು ಸ್ವೀಕಾರ
ನಗರದ ಅಶೋಕ ರಸ್ತೆಯ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಸೋಮವಾರ ಭಾರತೀಯ ಮಾನವ ಹಕ್ಕುಗಳ ಸಂಸ್ಥೆ ವತಿಯಿಂದ ಸಾರ್ವಜನಿಕರಿಂದ ಕುಂದುಕೊರತೆಗಳ ದೂರುಗಳನ್ನು ಸ್ವೀಕರಿಸಲಾಯಿತು.
ಗ್ರಾಮ ಪಂಚಾಯಿತಿ ಪಿಡಿಒ ಗಳು ಕುಂದುಕೊರತೆಗಳ ಅರ್ಜಿಯನ್ನು ಕೊಟ್ಟರೆ ಸಭೆಯಲ್ಲಿ ಪ್ರಸ್ತಾಪಿಸುವುದಿಲ್ಲ. ತಾಲ್ಲೂಕು ಕಚೇರಿಗಳಲ್ಲಿ ಸಕಾಲ ಅರ್ಜಿಗೆ ಸ್ಪಂದಿಸುತ್ತಿಲ್ಲ, ಮುಂತಾದ ದೂರುಗಳನ್ನು ಅರ್ಜಿದಾರರು ಸಲ್ಲಿಸಿದರು.
ಭಾರತೀಯ ಮಾನವ ಹಕ್ಕುಗಳ ಸಂಸ್ಥೆ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಂ.ಬೈರೇಗೌಡ ಮಾತನಾಡಿ, “ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ತಾಲ್ಲೂಕು ಕಚೇರಿಗೆ ಸಂಬಂಧಿಸಿದಂತೆ ದೂರುಗಳು ಬಂದಿವೆ. ಈಗಾಗಲೇ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗಳಿಗೆ ವಿಷಯ ತಿಳಿಸಿದ್ದು, ಲಿಖಿತ ಮನವಿಯನ್ನು ಸಹ ನೀಡಲಿದ್ದೇವೆ” ಎಂದು ತಿಳಿಸಿದರು.
ಭಾರತೀಯ ಮಾನವ ಹಕ್ಕುಗಳ ಸಂಸ್ಥೆ ಜಿಲ್ಲಾ ಘಟಕದ ಜಿಲ್ಲಾ ಉಸ್ತುವಾರಿ ಡಿ.ಅನಿಲಾ, ಉಪಾಧ್ಯಕ್ಷರಾದ ಸಣ್ಣಮ್ಮ, ನಿಜಾಮುದ್ದೀನ್, ಛಾಯಾಂಕ್ ಹಾಜರಿದ್ದರು.

