ನಗರದ ತಾಲ್ಲೂಕು ಕಚೇರಿ ಮುಂಭಾಗ ದಸಂಸ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಸಿ.ಎಂ.ಮುನೆಯ್ಯ ಮಾತನಾಡಿದರು.
ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ ಎಂಬ ಯುವತಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಕೊಲೆಗಡುಕರನ್ನು ಕೂಡಲೇ ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದರು.
ರಾಯಚೂರಿನ ಇಂಜನಿಯರಿಂಗ್ ವಿದ್ಯಾರ್ಥಿನಿ ಮಧು ಎಂಬ ಯುವತಿಯ ಹತ್ಯೆಯಿಂದ ಇಡೀ ರಾಜ್ಯವೇ ತಲೆ ತಗ್ಗಿಸುವಂತಾಗಿದೆ. ರಾಜ್ಯ ಹಾಗು ರಾಷ್ಟ್ರದಲ್ಲಿ ಹೆಣ್ಣು ಮಕ್ಕಳ ಮೇಲೆ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಅಮಾನವೀಯ ಕೃತ್ಯಗಳನ್ನು ತಡೆಯುವಲ್ಲಿ ಸರ್ಕಾರಗಳು ವಿಫಲವಾಗಿವೆ. ಸಮಾಜದಲ್ಲಿ ಹೆಣ್ಣು ಮಕ್ಕಳು ನಿರ್ಭೀತಿಯಿಂದ ಶಿಕ್ಷಣ ಪಡೆಯುವುದು ಸೇರಿದಂತೆ ಉದ್ಯೋಗ ಮತ್ತಿತರ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಇಂತಹ ಕೃತ್ಯಗಳು ಮರುಕಳಿಸದಂತೆ ಕಟ್ಟೆಚ್ಚರ ವಹಿಸುವುದು ಹಾಗೂ ಮಧು ಎಂಬ ಯುವತಿಯನ್ನು ಹತ್ಯೆ ಮಾಡಿರುವ ಕೊಲೆಗಡುಕರನ್ನು ಕೂಡಲೇ ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಗ್ರೇಡ್ ೨ ತಹಸೀಲ್ದಾರ್ ವೈ.ಎಲ್.ಹನುಮಂತರಾವ್ ರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ದಸಂಸ ತಾಲ್ಲೂಕು ಸಂಚಾಲಕ ಎನ್.ಎ.ವೆಂಕಟೇಶ್, ಮುಖಂಡರಾದ ಕಾಚಹಳ್ಳಿ ಮುನಿಕೃಷ್ಣಪ್ಪ, ದೊಡ್ಡ ತಿರುಮಳಯ್ಯ, ರವಿಕುಮಾರ್, ಲಕ್ಷ್ಮಿನಾರಾಯಣ, ಕೃಷ್ಣಮೂರ್ತಿ, ಮತ್ತಿತರರು ಭಾಗವಹಿಸಿದ್ದರು.
ಅತ್ಯಾಚಾರವೆಸಗಿರುವ ಕೊಲೆಗಡುಕರನ್ನು ಕೂಡಲೇ ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಬೇಕು
ಕರಗದಮ್ಮದೇವಿ ಹೂವಿನ ಕರಗ ಮಹೋತ್ಸವ
ನಗರದ ಮುತ್ತೂರು ಬೀದಿಯಲ್ಲಿರುವ ಕರಗದಮ್ಮದೇವಿ ಹೂವಿನ ಕರಗ ಮಹೋತ್ಸವವು ಶುಕ್ರವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.
ಕರಗದ ಪ್ರಯುಕ್ತ ಹೂವಿನ ವೃತ್ತ ಮತ್ತು ಮುತ್ತೂರು ಬೀದಿಯಲ್ಲಿ ವಾದ್ಯಗೋಷ್ಠಿ ಆಯೋಜಿಸಲಾಗಿತ್ತು. ಮುಳಬಾಗಿಲ ವೆಂಕಟೇಶ್ ರಾತ್ರಿಯಿಡೀ ಕರಗವನ್ನು ಹೊತ್ತು ನಾಡೋಜ ಮುನಿವೆಂಕಟಪ್ಪನವರ ತಮಟೆಯ ವಾದನ ತಂಡದೊಂದಿಗೆ ಊರೆಲ್ಲಾ ಸುತ್ತಿದಾಗ ದಾರಿಯುದ್ದಕ್ಕೂ ಮಲ್ಲಿಗೆ ಹೂಗಳನ್ನು ಅರ್ಪಿಸಿ, ಆರತಿ ಬೆಳಗುತ್ತಿದ್ದರು. ಕೆಲವೆಡೆ ಕರಗದ ಆಗಮನಕ್ಕಾಗಿ ರಸ್ತೆಯ ಮೇಲೆಲ್ಲಾ ರಂಗೋಲಿಯನ್ನು ಬಿಡಿಸಲಾಗಿತ್ತು. ರಸ್ತೆಯನ್ನು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಶಿರದ ಮೇಲೆ ಕಳಶ ಹೊತ್ತು ಕುಣಿಯುವ ಈ ಕಲೆ ಪ್ರಾಚೀನವಾದದ್ದು. ಕರಗದಾಚರಣೆ ಎಂದರೆ ಆದಿಶಕ್ತಿಯ ಆಚರಣೆ ಎಂದು ನಂಬಲಾಗಿದ್ದು ಆಕೆಯನ್ನು ಕರಗದಮ್ಮ ಎಂದೂ ಕರೆಯಲಾಗುತ್ತದೆ. ತಮಿಳುನಾಡಿನಿಂದ ೧೪ನೆಯ ಶತಮಾನದಲ್ಲಿ ನಂದಿದುರ್ಗದಲ್ಲಿ ಬಂದ ನೆಲೆಸಿದ ರಣಭೈರೇಗೌಡರ ಮೂಲಕ ಈ ಕರಗದ ಕಲೆ ನಮ್ಮ ನಾಡಿಗೆ ಬಂತೆಂದು ನಂಬಲಾಗಿದೆ.
ಮಣ್ಣಿನ ಮಡಿಕೆಗೆ ಜಲ ತುಂಬಿಸಲಾಗುತ್ತದೆ. ಆಮೇಲೆ ಅದಕ್ಕೆ ಅರಿಶಿನ, ಕುಂಕುಮ ಹೂಗಳಿಂದ ಅಲಂಕರಿಸಿ ಅದರ ಮೇಲೆ ಗೋಪುರದಂತೆ ಮಲ್ಲಿಗೆ ಹೂವಿನ ಹಾರಗಳನ್ನು ಇಳಿಬಿಡಲಾಗುತ್ತದೆ. ಇದುವೇ ಕರಗ.
ವೀರಕುಮಾರರು ಅಲಗು ಸೇವೆ ಮಾಡಿದರು. ಹಲಗೆ, ತಮಟೆ ವಾದ್ಯಗಳೊಂದಿಗೆ ಕರಗ ದೇವಾಲಯದ ಪ್ರದಕ್ಷಿಣೆ ಮಾಡಿ ನರ್ತಿಸಿತು. ಮುಂದೆ ಕತ್ತಿ ಹಿಡಿದ ವೀರಕುಮಾರರು, ಹಿಂದೆ ಕುಣಿಯುತ್ತಾ ಕರಗ ರಾತ್ರಿಯಿಡೀ ಊರೆಲ್ಲಾ ಸಂಚರಿಸಿತು. ಪ್ರತಿಯೊಬ್ಬರೂ ತಮ್ಮ ಮನೆಗಳ ಮುಂದೆ ರಂಗೋಲಿ ಹಾಕಿ ಅಲ್ಲಿಗೆ ಕರಗ ಬರುತ್ತಿದ್ದಂತೆ ಭಕ್ತಿಯಿಂದ ಆರತಿ ಬೆಳಗಿ ಮಲ್ಲಿಗೆ ಹೂಗಳನ್ನು ಸಮರ್ಪಿಸಿದರು. ಊರಿನ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಶನಿವಾರ ಒನಕೆ ಕರಗ ಮತ್ತು ಅಗ್ನಿಕುಂಡವನ್ನು ದೇವಸ್ಥಾನದ ಬಳಿ ನಡೆಸಲಾಯಿತು.
ಕಿಡಿಗೇಡಿಗಳಿಂದ ಹುಲ್ಲು ಬಣವೆಗಳಿಗೆ ಬೆಂಕಿ
ತಾಲ್ಲೂಕಿನ ಯಣ್ಣಂಗೂರು ಗ್ರಾಮದ ರೈತರಾದ ನಾರಾಯಣಸ್ವಾಮಿ, ರಾಮಮೂರ್ತಿ, ನಾಗರಾಜು, ಸುನಂದಮ್ಮ, ವಾಣಿಶ್ರೀ ರವರಿಗೆ ಸೇರಿದ ಹುಲ್ಲು ಬಣವೆಗಳಿಗೆ ಶುಕ್ರವಾರ ಬೆಳಗಿನ ಜಾವ ಯಾರೋ ಕಿಡಿಗೇಡಿಗಳು ಹಚ್ಚಿದ ಬೆಂಕಿಯಿಂದಾಗಿ ಸುಟ್ಟು ಕರಕಲಾಗಿದ್ದು, ಸುಮಾರು ಎರಡೂವರೆ ಲಕ್ಷ ರೂಗಳಷ್ಟು ನಷ್ಟ ಉಂಟಾಗಿದೆ.
ರೈತ ನಾರಾಯಣಸ್ವಾಮಿ ಅವರಿಗೆ ಸೇರಿರುವ ಜಮೀನಿನಲ್ಲಿ ಐದು ಮಂದಿಯಹುಲ್ಲು ಬಣವೆಗಳಿದ್ದವು. ಸ್ವಲ್ಪ ದೂರದಲ್ಲಿನ ಮನೆಯ ರವಿಕುಮಾರ್ ಅವರು ಬೆಂಕಿಯನ್ನು ನೋಡಿಕೊಂಡು ನಾರಾಯಣಸ್ವಾಮಿ ಅವರಿಗೆ ಫೋನ್ ಮಾಡಿ ತಿಳಿಸಿದರು. ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ಆದರೂ ಏನೂ ಪ್ರಯೋಜನವಾಗಲಿಲ್ಲ.
ಮೇಲೂರು ಗ್ರಾಮದ ಗಂಗಾದೇವಿಯ ಬ್ರಹ್ಮರಥೋತ್ಸವ
ಪುರಾಣ ಪ್ರಸಿದ್ದ ಶ್ರೀ ಗಂಗಾದೇವಿಯ ಬ್ರಹ್ಮರಥೋತ್ಸವ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಚೈತ್ರ ಶುದ್ಧ ಪೌರ್ಣಿಮೆ ಶುಕ್ರವಾರ ಅದ್ದೂರಿಯಾಗಿ ನೆರವೇರಿತು. ಗ್ರಾಮದ ಮುಖಂಡರುಗಳು ಹಾಗೂ ಯುವಕರು ರಥೋತ್ಸವಕ್ಕೆ ಚಾಲನೆ ನೀಡಿದರು. ರೆವಿನ್ಯೂ ಸೆಕ್ರೇಟರಿ ಕುಬೇರ ಗಿರಿಯನ್ನನವರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಮುನಾ ಧರ್ಮೇಂದ್ರ, ಮುಖಂಡ ಬಿ.ಎನ್.ರವಿಕುಮಾರ್, ಗ್ರಾಮದ ಹಿರಿಯರು ಹಾಗೂ ಯುವಕರು ರಥೋತ್ಸವಕ್ಕೆ ಚಾಲನೆ ನೀಡಿದರು.
ತಾಲ್ಲೂಕಿನ ಪುರಾಣ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ಮೇಲೂರಿನ ಶ್ರೀ ಗಂಗಾದೇವಿಯ ಬ್ರಹ್ಮರಥೋತ್ಸವದ ಅಂಗವಾಗಿ ದೇವಾಲಯವನ್ನು ಹೂವಿನ ಅಲಂಕಾರದಿಂದ ಶೃಂಗಾರ ಮಾಡಲಾಗಿತ್ತು, ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ವಿಜೃಂಭಣೆಯಿಂದ ಬ್ರಹ್ಮರಥೋತ್ಸವ ಕಾರ್ಯಕ್ರಮವನ್ನು ನೆರವೇರಿಸಲಾಯಿತು, ಮಂಗಳವಾದ್ಯಗಳು, ತಮಟೆಗಳ ವಾದನ ರಥೋತ್ಸವಕ್ಕೆ ಮೆರುಗನ್ನು ತಂದಿತ್ತು.
ಬ್ರಹ್ಮರಥೋತ್ಸವದ ಅಂಗವಾಗಿ ಹೋಮಕುಂಡವನ್ನು ಸ್ಥಾಪನೆ ಮಾಡಿ, ಲೋಕ ಕಲ್ಯಾಣಾರ್ಥವಾಗಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು, ಗಂಗಾದೇವಿಗೆ ವಿಶೇಷ ಹೂವಿನ ಅಲಂಕಾರಗಳೊಂದಿಗೆ ಪೂಜೆಗಳನ್ನು ಸಮರ್ಪಣೆ ಮಾಡಲಾಯಿತು, ನೆರೆದಿದ್ದ ಭಕ್ತಾದಿಗಳು ರಥಕ್ಕೆ ದವನದೊಂದಿಗಿನ ಬಾಳೇ ಹಣ್ಣು ಎಸೆಯುವುದರ ಮೂಲಕ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು, ಸುತ್ತಮುತ್ತಲಿನ ಹಳ್ಳಿಗಳಿಂದ ಬಂದಿದ್ದ ಭಕ್ತಾದಿಗಳಿಗೆ ಕೋಸಂಬರಿ ಪಾನಕಗಳನ್ನು ವಿತರಿಸಲಾಯಿತು. ದೇವಾಲಯದಿಂದ ಭಕ್ತಾದಿಗಳಿಗೆ ಸಿಹಿಯೊಂದಿಗೆ ಅನ್ನಸಂತರ್ಪಣೆಯನ್ನು ಸಹ ಏರ್ಪಡಿಸಲಾಗಿತ್ತು. ಬತ್ತಾಸು, ಬುರುಗು, ಖಾರ, ವಿವಿಧ ಸಿಹಿ ಖಾದ್ಯಗಳು, ಹಣ್ಣುಗಳು, ತಂಪು ಪಾನೀಯಗಳು ಮೊದಲಾದ ಆಕರ್ಷಕ ಅಂಗಡಿಗಳು ಜನರನ್ನು ಆಕರ್ಷಿಸುತ್ತಿದ್ದವು.
ಗ್ರಾಮದ ಮುಖಂಡರಾದ ಬಿ.ಎನ್.ರವಿಕುಮಾರ್, ಆರ್.ಎ.ಉಮೇಶ್, ಕೆ.ಎಸ್.ಮಂಜುನಾಥ್, ಸುದರ್ಶನ್, ಧರ್ಮೇಂದ್ರ, ಸುಧೀರ್, ಶ್ರೀನಿವಾಸಮೂರ್ತಿ(ಪುಲಿ), ಕೆ.ಎನ್.ಬಚ್ಚೇಗೌಡ, ರಾಮಕೃಷ್ಣಪ್ಪ, ಶಿವಕುಮಾರ್, ಜೇಜೇಗೌಡ, ಅಶ್ವಥ್ಥಪ್ಪ, ಮುನಿಶಾಮಪ್ಪ, ಎಂ.ಜೆ.ಶ್ರೀನಿವಾಸ್, ಪ್ರಧಾನ ಆಗಮೀಕರಾದ ಎಂ.ಎಸ್.ನಾರಾಯಣಮೂರ್ತಿ, ಗಂಗಾದೇವಿ ಭಕ್ತಮಂಡಲಿ ಮತ್ತು ದೇವಾಲಯದ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮದ ಯುವಜನರು ಹಾಜರಿದ್ದರು.
ಲೋಕಸಭಾ ಚುನಾವಣೆ – ಕುಸಿತ ಕಂಡ ಶೇಕಡಾವಾರು ಮತದಾನ
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣೆಯ ಮತದಾನ ಶಾಂತಿಯುತವಾಗಿ ನಡೆದಿದೆ. ಮತಚಲಾಯಿಸಲು ನಿಧಾನಗತಿಯಿಂದಲೇ ಜನರು ಬರತೊಡಗಿದರು. ಕೆಲವೆಡೆ ಹಿರಿಯರನ್ನು ಮತ್ತು ಅಂಗವಿಕಲರನ್ನು ಕರೆದುಕೊಂಡು ಬರಲಾಯಿತು. ಸಖಿ ಬೂತ್ ಗಳನ್ನು ಹೊರತುಪಡಿಸಿದರೆ, ತಿಮ್ಮನಾಯಕನಹಳ್ಲಿಯಲ್ಲಿ ಮತದಾನದ ಬೂತನ್ನು ಸುಂದರವಾಗಿ ಅಲಂಕರಿಸಲಾಗಿತ್ತು.
ಹಂಡಿಗನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮೀಣ ವಿಕಲಚೇತನ ಪುನರ್ವಸತಿ ಕಾರ್ಯಕರ್ತೆ ಭಾಗ್ಯಮ್ಮ ಅವರು ಅಂಗವಿಕಲರು ಹಾಗೂ ಬುದ್ದಿಮಾಂಧ್ಯ ಮತದಾರರನ್ನು ಆಟೋದಲ್ಲಿ ಅವರ ಕುಟುಂಬದ ಸದಸ್ಯರೊಂದಿಗೆ ಕರೆತಂದು ಮತದಾನ ಮಾಡಲು ಸಹಕರಿಸಿದರು.
ಮುಂಜಾನೆಯಿಂದಲೂ ನಗರದ ಮುಖ್ಯ ರಸ್ತೆಗಳಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಗ್ರಾಮೀಣ ಪ್ರದೇಶದ ಜನತೆ ನಗರಕ್ಕೆ ಬಾರದೇ ಇದ್ದುದರಿಂದ ನಗರದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.
ಚುನಾವಣೆಯ ದಿನ ಬೆಳಿಗ್ಗೆ ಏಳು ಗಂಟೆಗೆ ಮತದಾನದ ಪ್ರಕ್ರಿಯೆ ಪ್ರಾರಂಭವಾಯಿತು. ಕ್ಷೇತ್ರದ ಕೆಲವು ಬೂತ್ ಗಳಲ್ಲಿ ಮತಯಂತ್ರವನ್ನು ಅಧಿಕಾರಿಗಳು ನಿಧಾನವಾಗಿ ಪರಿಶೀಲನೆ ನಡೆಸಿ ಚಾಲನೆ ನೀಡಿದ್ದು ಗಮನಕ್ಕೆ ಬಂತು.
ಕೆಲವೆಡೆ ಮತದಾನ ಪ್ರಕ್ರಿಯೆ ಶುರುವಾಗುತ್ತಿದ್ದಂತೆ ಜನರು ಬೆಳಿಗ್ಗೆಯೇ ಉತ್ಸಾಹ ಭರಿತರಾಗಿ ಬೇಗ ಬಂದು ಸರತಿಸಾಲುಗಳಲ್ಲಿ ನಿಂತು ಮತದಾನ ಮಾಡಿದರೆ, ಕೆಲವೆಡೆ ಮಧ್ಯಾಹ್ನದ ವರೆಗೂ ಜನರು ಬರುವುದು ಕಡಿಮೆಯಾಗಿತ್ತು.
ಶಾಸಕ ವಿ.ಮುನಿಯಪ್ಪ ಸ್ವಗ್ರಾಮ ಹಂಡಿಗನಾಳ ಗ್ರಾಮದಲ್ಲಿ ಮತಚಲಾಯಿಸಿದರೆ, ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್ ಸ್ವಗ್ರಾಮ ಮೇಲೂರಿನಲ್ಲಿ ಮತಚಲಾಯಿಸಿದರು.
ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಶೇ 78.42 ರಷ್ಟು ಮಾತ್ರ ಮತದಾನವಾಗಿತ್ತು. ವಿಧಾನಸಭೆ ಚುನಾವಣೆಯಲ್ಲಿ ಶೇ 85.45 ರಷ್ಟು ಆಗಿದ್ದ ಮತದಾನ ಈ ಬಾರಿ ಸಾಕಷ್ಟು ಇಳಿಮುಖ ಕಂಡಿದೆ.
ಶ್ರೀ ಕರಗದಮ್ಮದೇವಿಯ ಹಸಿ ಕರಗ ಮಹೋತ್ಸವ
ನಗರದ ಮುತ್ತೂರು ಬೀದಿಯ ಶ್ರೀ ಕರಗದಮ್ಮದೇವಿಯ ಕರಗವು ಚೈತ್ರ ಮಾಸ ಶುದ್ಧ ಬಹುಳ ತ್ರಯೋದಶಿ ಬುಧವಾರ ಧ್ವಜಾರೋಹಣದಿಂದ ಆರಂಭವಾಗಿ ಭಾನುವಾರದವರೆಗೆ ಅನೇಕ ಪೂಜಾ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ.
ಈ ಬಾರಿ ಕರಗವನ್ನು ಮುಳಬಾಗಿಲು ವೆಂಕಟೇಶ್ ಹೊತ್ತಿದ್ದರು. ಸಂಜೆಯ ಸುಮಾರಿಗೆ ಕರಗ ಹೊತ್ತು ನಡೆಯುವ ವ್ಯಕ್ತಿಗೆ ವಪನ ಸಂಸ್ಕಾರ ಮಾಡಿ, ಕಂಕಣ ಕಟ್ಟಿ, ಕೈತುಂಬ ಕರಿ ಬಳೆ ತೊಡಿಸಿ, ಅಚ್ಚ ಮಲ್ಲಿಗೆಯ ಜಡೆಕುಚ್ಚುಗಳಿಂದ ಸಿಂಗರಿಸಿ, ಅರಿಶಿನದ ಸೀರೆ, ಕುಪ್ಪುಸ ಉಡಿಸಿ, ಆಭರಣಗಳಿಂದ ಅಲಂಕರಿಸಿದರು. ಕರಗ ಹೊರುವ ವ್ಯಕ್ತಿ ನವವಧುವಿನಂತೆ ಶೋಭಿಸುತ್ತಿದ್ದರು.
ಅನಂತರ ಶಕ್ತಿಸ್ವರೂಪನಾದ ಆ ವ್ಯಕ್ತಿಗೆ ಧೂಪ ದೀಪಗಳಿಂದ ಮಂಗಳವಾದ್ಯಗಳೊಂದಿಗೆ ಶಾಸ್ತ್ರೋಕ್ತವಾದ ಪೂಜೆ ನಡೆಯಿತು. ಹಣೆಗೆ ನಾಮ, ನಡುಪಟ್ಟಿ ಧರಿಸಿ ಕೈಯಲ್ಲಿ ಕತ್ತಿ ಹಿಡಿದ ಅಂಗರಕ್ಷಕರ ತಂಡದ ವೀರಕುಮಾರರ ಕಾವಲಿನಲ್ಲಿ ಕರಗ ಹೊರುವ ವ್ಯಕ್ತಿಯನ್ನು ನಡೆಮಡಿಯೊಂದಿಗೆ ದೇವಸ್ಥಾನಕ್ಕೆ ಕರೆತಂದರು. ಅಷ್ಟರಲ್ಲಿ ಅರಿಶಿನ, ಕುಂಕುಮ ಮಲ್ಲಿಗೆ ಹೂವಿನಿಂದ ಅಲಂಕೃತವಾದ ಹಸಿಕರಗ ಸಿದ್ಧವಾಗಿತ್ತು. ಕರಗದ ಮೇಲೆ ಗೋಪುರದಂತೆ ಮಲ್ಲಿಗೆ ಹೂವಿನ ಅಲಂಕಾರವಿದ್ದು ತುದಿಯಿಂದ ಇಳಿಬಿಟ್ಟ ಹೂ ಸರಗಳನ್ನು ಹೊರುವವರ ಭುಜದಿಂದ ಕೆಳಕ್ಕೆ ಮಾಲೆಯಂತೆ ಹರಡಿಕೊಳ್ಳುವ ರೀತಿಯಲ್ಲಿ ಕಟ್ಟಿದ್ದರು.
ವೀರಕುಮಾರರ ರಕ್ಷಣೆಯಲ್ಲಿ ಗುಡಿಯ ಅಂಗಳ ಬಿಟ್ಟ ಕರಗ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬೆಳಗಿನ ಜಾವಕ್ಕೆ ಮತ್ತೆ ಗರ್ಭಗುಡಿ ಪ್ರವೇಶಿಸಿತು. ದಾರಿಯುದ್ದಕ್ಕೂ ಭಕ್ತಾದಿಗಳಿಂದ ಪೂಜೆ ಸೇವೆ ನಡೆಯಿತು. ನಗರದ ಹಲವಾರು ಬೀದಿಗಳಲ್ಲಿ ವಿದ್ಯುತ್ ಅಲಂಕಾರ ಮಾಡಿ ಮಜ್ಜಿಗೆ ಪಾನಕಗಳ ವ್ಯವಸ್ಥೆಗಳನ್ನೂ ವಿವಿಧ ದಾನಿಗಳು ಮಾಡಿದ್ದರು. ಮಹಿಳೆಯರು ಕರಗಲ್ಲೆ ಪೂಜೆ ಸಲ್ಲಿಸಿ ಮಲ್ಲಿಗೆ ಹೂವನ್ನು ಸಮರ್ಪಿಸಿದರು.
ಶಿಡ್ಲಘಟ್ಟ ಕ್ಷೇತ್ರದ 242 ಮತದಾನ ಕೇಂದ್ರಗಳಲ್ಲಿ ನಾಳೆ ಮತದಾನ
ಲೋಕಸಭಾ ಚುನಾವಣೆಯ ಪ್ರಯುಕ್ತ ಸರ್ವಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿ ಸಹಾಯಕ ಚುನಾವಣಾಧಿಕಾರಿ ಶಿವಕುಮಾರ್ ತಿಳಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಬುಧವಾರ ಸುಮಾರು ೭೦೦ ಮಂದಿ ಪೋಲಿಂಗ್ ಅಧಿಕಾರಿಗಳಿಗೆ ಚುನಾವಣೆಗೆ ಸಂಬಂಧಿಸಿದ ಸಲಕರಣೆಗಳು ಹಾಗೂ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.
ಶಿಡ್ಲಘಟ್ಟ ಕ್ಷೇತ್ರದ ೨೪೨ ಮತದಾನ ಕೇಂದ್ರಗಳಲ್ಲಿ ಪೋಲಿಂಗ್ ಅಧಿಕಾರಿಗಳಿಗೆ ಬೇಕಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಶೌಚಾಲಯ, ನೀರು, ಫ್ಯಾನು, ಮೇಜು ಎಲ್ಲದರ ವ್ಯವಸ್ಥೆ ಮಾಡಲಾಗಿದೆ. ಎಲೆಕ್ಟ್ರಾನಿಕ್ ಮತಯಂತ್ರದ ಜೊತೆಯಲ್ಲಿ ಅಧಿಕಾರಿಗಳಿಗೆ ಬೇಕಾದ ಎಲ್ಲ ಸಾಮಗ್ರಿಗಳನ್ನು ನೀಡಿ ಅವರ ಅನುಮಾನಗಳನ್ನು ಪರಿಹರಿಸಲಾಗಿದೆ. ಐದು ಸಖಿ ಬೂತ್ ಗಳನ್ನು ಸ್ಥಾಪಿಸಿದ್ದು ಅದರಲ್ಲಿ ಪೋಲಿಂಗ್ ಅಧಿಕಾರಿಗಳೆಲ್ಲರೂ ಮಹಿಳೆಯರೇ ಇರುತ್ತಾರೆ. ಅವರಿಗಾಗಿ ವಿಶೇಷ ಸೌಲಭ್ಯಗಳನ್ನು ನೀಡಿದ್ದೇವೆ.
ಶಾಂತಿ ಹಾಗೂ ಸುರಕ್ಷಿತವಾಗಿ ಮತದಾನ ಪ್ರಕ್ರಿಯೆ ನಡೆಯಬೇಕೆಂಬ ಉದ್ದೇಶದಿಂದ ೩೮೫ ಪೊಲೀಸ್ ಸಿಬ್ಬಂದಿ ನೇಮಕಗೊಂಡಿದ್ದಾರೆ. ಎಲ್ಲ ಪೋಲಿಂಗ್ ಅಧಿಕಾರಿಗಳನ್ನು ಅವರು ಕಾರ್ಯನಿರ್ವಹಿಸಬೇಕಾಗಿರುವ ಬೂತ್ ಗಳಿಗೆ ಹೋಗಿ ಬರಲು ಒಟ್ಟು ೪೦ ಕೆ.ಎಸ್.ಆರ್.ಟಿ.ಸಿ ಬಸ್ ಗಳನ್ನು ನಿಯೋಜಿಸಲಾಗಿದೆ ಎಂದು ವಿವರ ನೀಡಿದರು.
ಪೋಲಿಂಗ್ ಅಧಿಕಾರಿಗಳಿಗೆಂದು ಮಾಡಿಸಲಾಗಿದ್ದ ಒಬ್ಬಟ್ಟು, ಪಲಾವ್ ಮುಂತಾದ ತಿಂಡಿಗಳನ್ನು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮತ್ತು ತಂಡ ಬಂದು ಪರಿಶೀಲಿಸಿದರು.
ತಾಲ್ಲೂಕು ಪಂಚಾಯಿತಿ ಇಓ ಬಿ.ಶಿವಕುಮಾರ್, ತಹಶೀಲ್ದಾರ್ ಎಸ್.ಅಜಿತ್‌ಕುಮಾರ್ ರೈ ಹಾಜರಿದ್ದರು.
ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮೇಣದ ಬತ್ತಿ ಜಾಥಾ ಕಾರ್ಯಕ್ರಮ
ನಗರದ ಕೋಟೆ ವೃತ್ತದಲ್ಲಿ ಸೋಮವಾರ ಸಂಜೆ ತಾಲ್ಲೂಕು ಸ್ವೀಪ್ ಸಮಿತಿಯಿಂದ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆಯೋಜಿಸಲಾಗಿದ್ದ ಮೇಣದ ಬತ್ತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಸಿ.ಎಸ್.ಶ್ರೀನಾಥಗೌಡ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಜನರಿಗೆ ಸಿಕ್ಕಿರುವ ಪರಮಾಧಿಕಾರ ಅದನ್ನು ಚಲಾಯಿಸಲಿಕ್ಕೆ ಯಾರೂ ಹಿಂದುಳಿಯಬಾರದು ಎಂದು ಅವರು ಹೇಳಿದರು.
ಮತದಾನ ಮಾಡುವುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರ ಕರ್ತವ್ಯವಾಗಿದೆ. ಏಪ್ರಿಲ್ ೧೮ ರ ಗುರುವಾರ ನಡೆಯಲಿರುವ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು ಎಂದರು.
ನಾಗರಿಕರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲು ಚುನಾವಣೆ ಸಹಕಾರಿಯಾಗಿರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಮತಗಟ್ಟೆಗೆ ತಮ್ಮ ಗುರುತಿನ ಚೀಟಿಯೊಂದಿಗೆ ಬಂದು ಉತ್ತಮ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ನಗರದ ನಗರಸಭೆ ಮುಂಭಾಗದಿಂದ ತಾಲ್ಲೂಕು ಕಚೇರಿಯವರೆಗೂ ಮೇಣದಬತ್ತಿ ಜಾಥಾ ಮೂಲಕ ಸಾಗಿ ಮತದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಹನುಮಂತರಾಜು, ಸಿಡಿಪಿಓ ಲಕ್ಷ್ಮಿದೇವಮ್ಮ, ತಾಲ್ಲೂಕು ಪಂಚಾಯಿತಿ ಮೇಲ್ವಿಚಾರಕ ಪ್ರಸಾದ್ ಹಾಜರಿದ್ದರು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು
ಗ್ರಾಮೀಣ ಹಿನ್ನೆಲೆ ಹಾಗೂ ಕೌಟುಂಬಿಕ ಕಷ್ಟಗಳ ಹಿನ್ನೆಲೆಯಿರುವ ವಿದ್ಯಾರ್ಥಿಗಳು ಛಲದಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆಯುವ ಮೂಲಕ ತಮ್ಮ ಕಷ್ಟಕಾರ್ಪಣ್ಯಗಳಿಗೆ ತಕ್ಕ ಉತ್ತರವನ್ನು ಕೊಟ್ಟಿದ್ದಾರೆ.
ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾದ್ರಿ ಕಾಲೇಜಿನ ಅರುಣ್ ಕೊಠಾರಿ(೫೮೨) ತಂದೆ ಹೋಟೆಲ್ ನಡೆಸುತ್ತಿದ್ದರೆ, ರಕ್ಷಿತ್(೫೭೬) ತಂದೆ ರೇಷ್ಮೆ ವ್ಯಾಪಾರ ಮಾಡುವರು. ಬಿ.ಜಿ.ಎಸ್ ವಿದ್ಯಾಸಂಸ್ಥೆಯ ಭಾರತೀಶ(೫೭೫)ನಿಗೆ ತಂದೆಯಿಲ್ಲ, ತಾಯಿ ಪಲಿಚೇರ್ಲು ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಾರೆ. ಜಿ.ಲಹರಿ(೫೭೨) ತಂದೆ ಹೋಟೆಲಿನಲ್ಲಿ ಕೆಲಸ ಮಾಡಿದರೆ, ತಾಯಿ ಬಟ್ಟೆ ಹೊಲೆಯುವರು. ಗಂಗನಹಳ್ಳಿಯ ಅಪೂರ್ವ(೫೭೫) ರೈತ ಕುಟುಂಬದವರು. ಆರ್ಯನ್ ಪಾಷ(೫೭೪) ತಂದೆ ಕೂಲಿ ಕೆಲಸ ಮಾಡುತ್ತಾರೆ. ಕೊತ್ತನೂರು ಗ್ರಾಮದ ಅರ್ಚನ(೫೬೧) ಕುಟುಂಬ ಹೈನುಗಾರಿಕೆಯ ಮೇಲೆ ಅವಲಂಬಿತರು. ಶಿಡ್ಲಘಟ್ಟದ ರಷ್ಮಿ(೫೫೩)ಗೆ ತಂದೆಯಿಲ್ಲ.
“ವಿಶೇಷವೆಂದರೆ ಈ ಬಾರಿ ಹೆಚ್ಚು ಅಂಕಗಳನ್ನು ಪಡೆದ ಬಹುತೇಕ ವಿದ್ಯಾರ್ಥಿಗಳು ಕೌಟುಂಬಿಕವಾಗಿ, ಆರ್ಥಿಕವಾಗಿ ಕಷ್ಟಗಳನ್ನು ಮೆಟ್ಟಿನಿಂತವರಾಗಿದ್ದಾರೆ. ಈ ಪ್ರತಿಭಾವಂತ ಮಕ್ಕಳಿಗೆ ಸೂಕ್ತ ನೆರವು ಮತ್ತು ಪ್ರೋತ್ಸಾಹದ ಅಗತ್ಯವಿದೆ” ಎಂದು ಬಿಜಿಎಸ್ ಪ್ರಾಂಶುಪಾಲ ಮಹದೇವ್ ತಿಳಿಸಿದರು.
ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು
ಎಸ್.ವಿ.ಅರುಣ್ ಕೊಠಾರಿ, ವಿದ್ಯಾದ್ರಿ ಕಾಲೇಜು, ೫೮೨, ವಿಜ್ಞಾನ
ಜೆ.ರಕ್ಷಿತ್, ವಿದ್ಯಾದ್ರಿ ಕಾಲೇಜು, ೫೭೬, ವಿಜ್ಞಾನ
ಜಿ.ಎಸ್.ಅಪೂರ್ವ, ವಿದ್ಯಾದ್ರಿ ಕಾಲೇಜು, ೫೭೫, ವಿಜ್ಞಾನ
ಎಸ್.ಆರ್ಯನ್ ಪಾಷ, ವಿದ್ಯಾದ್ರಿ ಕಾಲೇಜು, ೫೭೪, ವಿಜ್ಞಾನ
ಎಂ.ಅನೂಷ, ವಿದ್ಯಾದ್ರಿ ಕಾಲೇಜು, ೫೭೩, ವಿಜ್ಞಾನ
ಕೆ.ಆರ್.ತನುಶ್ರೀ, ವಿದ್ಯಾದ್ರಿ ಕಾಲೇಜು, ೫೬೭, ವಿಜ್ಞಾನ
ಕೆ.ಪಿ.ರಂಜಿತ್ ಕುಮಾರ್, ವಿದ್ಯಾದ್ರಿ ಕಾಲೇಜು, ೫೬೫, ವಿಜ್ಞಾನ
ಆರ್.ಪೃಥ್ವಿ, ವಿದ್ಯಾದ್ರಿ ಕಾಲೇಜು, ೫೬೪, ವಿಜ್ಞಾನ
ಎಸ್.ಎಂ.ಭಾರತೀಷ, ಬಿ.ಜಿ.ಎಸ್.ಕಾಲೇಜು, ೫೭೫, ವಿಜ್ಞಾನ
ಜಿ.ಲಹರಿ, ಬಿ.ಜಿ.ಎಸ್.ಕಾಲೇಜು, ೫೭೨, ವಿಜ್ಞಾನ
ಎಸ್.ಬಿ.ಮುಜಾಮಿಲ್ ಪಾಷ, ಬಿ.ಜಿ.ಎಸ್.ಕಾಲೇಜು, ೫೫೧, ವಿಜ್ಞಾನ
ಕೆ.ಎನ್.ಅರ್ಚನ, ಬಿ.ಜಿ.ಎಸ್.ಕಾಲೇಜು, ೫೬೧, ವಿಜ್ಞಾನ
ಆರ್.ರಷ್ಮಿ, ಬಿ.ಜಿ.ಎಸ್.ಕಾಲೇಜು, ೫೫೩, ವಿಜ್ಞಾನ
ಎನ್.ವಿ.ಐಶ್ವರ್ಯ, ಸ್ವಾಮಿ ವಿವೇಕಾನಂದ ಕಾಲೇಜು ಮಳ್ಳೂರು, ೫೪೫, ಕಲೆ
ಎಂ.ಆರ್.ನಂದಿನಿ, ಸ್ವಾಮಿ ವಿವೇಕಾನಂದ ಕಾಲೇಜು ಮಳ್ಳೂರು, ೫೭೬, ವಾಣಿಜ್ಯ
ಹಣದ ಹಂಚಿಕೆಯಲ್ಲಿ ತಾರತಮ್ಯ, ಕೆ.ಎಚ್.ಮುನಿಯಪ್ಪ ಅವರನ್ನು ಆಕ್ಷೇಪಿಸಿದ ಮುಖಂಡರು
ನಗರದಲ್ಲಿ ಸೋಮವಾರ ದಿಬ್ಬೂರಹಳ್ಳಿ ರಸ್ತೆಯಲ್ಲಿ ಇರುವ ಅಮೀರ್ ಬಾಬಾ ದರ್ಗಾಗೆ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಹಾಗೂ ಶಾಸಕ ವಿ.ಮುನಿಯಪ್ಪ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಅಲ್ಪಸಂಖ್ಯಾತ ಮುಸ್ಲೀಂ ಮುಖಂಡರು ಹಾಗೂ ನಗರ ಸಭಾ ಸದಸ್ಯರು ತಮ್ಮನ್ನು ಕಡೆಗಣಿಸಿದ್ದೀರೆಂದು ಕೆ.ಎಚ್.ಮುನಿಯಪ್ಪ ಅವರನ್ನು ಅಲ್ಪಸಂಖ್ಯಾತ ಮುಖಂಡರು ಆರೋಪಿಸಿದರು.
“ಪ್ರತಿ ಬೂತ್ ಗೂ ಪ್ರತಿಯೊಂದು ಪಂಚಾಯಿತಿಗೂ ಹಣ ಹೋಗಿದೆ. ನೆನ್ನೆ ಮೊನ್ನೆಗೆ ಮೈತ್ರಿ ಮಾಡಿಕೊಂಡ ಜೆಡಿಎಸ್ ಪಕ್ಷದವರಿಗೆ ಹಣ ನೀಡಿದ್ದೀರಿ. ಅಲ್ಪಸಂಖ್ಯಾತ ಮುಸ್ಲೀಮರನ್ನು ಯಾಕೆ ಕಡೆಗಣಿಸಿದ್ದೀರಿ” ಎಂದು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರನ್ನು ಅಲ್ಪಸಂಖ್ಯಾತ ಮುಖಂಡರು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಲು ಶ್ರಮಿಸಿರುವ ನಮಗಿಂತೆ ನಿಮಗೆ ಜೆಡಿಎಸ್ ನವರೇ ಮುಖ್ಯರಾಗಿಬಿಟ್ಟರೆ ಹೇಗೆ. ನಿಷ್ಠಾವಂತ ಕಾರ್ಯಕರ್ತರನ್ನು ಏಕೆ ಕಡೆಗಣನೆ ಮಾಡಿದಿರಿ. ಜೆಡಿಎಸ್ ಪಕ್ಷದ ಮುಖಂಡರಿಗೆ ಈಗಾಗಲೇ ಹಣ ನೀಡಿದ್ದು, ಇದುವರೆಗೂ ಮೂಲ ಕಾಂಗ್ರೆಸಿಗರಿಗೆ ಹಾಗೂ ಪಕ್ಷವನ್ನು ಕಟ್ಟಿ ಬೆಳೆಸಿದ ಅಲ್ಪಸಂಖ್ಯಾತ ಮುಖಂಡರಿಗೆ ಒಂದು ಬೀಡಿಕಾಸನ್ನು ಸಹ ನೀಡಿಲ್ಲ ಎಂದು ಶಾಸಕ ವಿ.ಮುನಿಯಪ್ಪರವರ ಸಮ್ಮುಖದಲ್ಲಿ ಮುಂದೆ ನೇರವಾಗಿ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಹಣದ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕ ವಿ.ಮುನಿಯಪ್ಪ ಮಾತನಾಡಿ, ೩೫ ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳಸಿದ ನಿಷ್ಟವಂತ ಕಾಂಗ್ರೆಸಿಗರನ್ನು ಕಡೆಗಣಿಸುವುದು ಸರಿಯಲ್ಲ ಎಂದು ನಾನು ಈಗಾಗಲೇ ಕೆ.ಎಚ್.ಮುನಿಯಪ್ಪನವರಿಗೆ ಹೇಳಿದ್ದೇನೆ. ನೆನ್ನೆಮೊನ್ನೆಗೆ ಮೈತ್ರಿ ಮಾಡಿಕೊಂಡು ಬಂದಿರುವಂತಹ ಜೆಡಿಎಸ್ ಪಕ್ಷದ ಮುಖಂಡರೊಂದಿಗೆ ಕೈಜೊಡಿಸಿಕೊಂಡು ಅವರನ್ನು ಒಲೈಸುತ್ತಾ ಹಣ ನೀಡುತ್ತಾ ನಮ್ಮ ಕಾರ್ಯಕರ್ತರನ್ನು ಕಡೆಗಣಿಸುವುದು ಸರಿಯಲ್ಲ ಎಂದು ಕೆ.ಎಚ್.ಮುನಿಯಪ್ಪರವರಿಗೆ ಹೇಳಿದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಮುಖಂಡರು ಹಾಗೂ ನಗರ ಸಭಾ ಸದಸ್ಯರು ಹಾಜರಿದ್ದರು.
ಸ್ಕೌಟ್ಸ್ ಮತ್ತು ಗೈಡ್ಸ್ ತಂಡದಿಂದ ಮತಚಲಾಯಿಸಲು ಕೋರಿ ಜನಜಾಗೃತಿ
ಸುಮಾರು ೨೦ ಮಂದಿ ಸ್ಕೌಟ್ಸ್ ಮತ್ತು ಗೈಡ್ಸ್ ರೋವರ್ಸ್ ತಂಡದ ಸದಸ್ಯರು ಸೋಮವಾರ ಸೈಕಲ್ ತುಳಿಯುತ್ತಾ ನಗರದೆಲ್ಲೆಡೆ ಜನರಿಗೆ ಮತದಾನದ ಕುರಿತಾಗಿ ಕರಪತ್ರವನ್ನು ನೀಡುತ್ತಾ, ಖಡ್ಡಾಯವಾಗಿ ಮತದಾನ ಮಾಡುವಂತೆ ಕೋರಿದರು.
“ನಾವು ಮೂರು ದಿನಗಳ ಸೈಕಲ್ ಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ. ಜಿಲ್ಲೆಯ ವಿವಿಧ ಭಾಗಗಳ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ನಮ್ಮ ತಂಡದಲ್ಲಿದ್ದಾರೆ. ಜಿಲ್ಲಾ ಸ್ವೀಪ್ ಸಮಿತಿಯ ಪರವಾಗಿ ನಾವು ಜನರಲ್ಲಿ ಮತದಾನದ ಕುರಿತಾಗಿ ಅರಿವು ಮೂಡಿಸುತ್ತಾ, ಖಡ್ಡಾಯವಾಗಿ ಮತದಾನ ಮಾಡುವಂತೆ ಕೋರುತ್ತಿದ್ದೇವೆ. ಗುಡಿಬಂಡೆಯಿಂದ ಹೊರಟು ಗೌರಿಬಿದನೂರು, ಬಾಗೇಪಲ್ಲಿ, ಸಾದಲಿ, ಚಿಂತಾಮಣಿ ನೋಡಿಕೊಂಡು ಶಿಡ್ಲಘಟ್ಟಕ್ಕೆ ಬಂದಿದ್ದೇವೆ. ನಮ್ಮ ಕಾರ್ಯಕ್ಕೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ” ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಆಯುಕ್ತ ಪ್ರಕಾಶ್ ತಿಳಿಸಿದರು.
ಪಟಾಲಮ್ಮ ಮತ್ತು ವೀರಸೊಣ್ಣಮ್ಮ ದೇವಿಯವರ ರಥೋತ್ಸವ
ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದಲ್ಲಿ ಪಟಾಲಮ್ಮ ಮತ್ತು ವೀರಸೊಣ್ಣಮ್ಮ ದೇವಿಯವರ ೨೩ನೇ ವರ್ಷದ ರಥೋತ್ಸವ ಮತ್ತು ಉಟ್ಲು ಮಹೋತ್ಸವವನ್ನು ಸೋಮವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಪ್ರಧಾನ ಹೋಮ, ಮಹಾಕುಂಬಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದವನ್ನು ವಿನಿಯೋಗಿಸಲಾಯಿತು. ಗ್ರಾಮದ ಕರಗದ ಮನೆ ಬಳಿಯಿಂದ ರಥೋತ್ಸವ ಪ್ರಾರಂಭವಾಗಿ ದೇವಸ್ಥಾನದವರೆಗೂ ವಿವಿಧ ವಾದ್ಯವೃಂದದ ಸಮೇತ ತರಲಾಯಿತು. ರಥೋತ್ಸವದ ಸಂದರ್ಭದಲ್ಲಿ ವಿವಿಧ ವೇಷಭೂಷಣಗಳಿಂದ ಕೂಡಿದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕ್ಷೀರ ಉಟ್ಲು ಹಾಗೂ ಕಾಯಿ ಉಟ್ಲು ಮಹೋತ್ಸವವನ್ನು ನಡೆಸಲಾಯಿತು. ಭಕ್ತರಿಗೆ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಗ್ರಾಮಸ್ಥರಿಂದ ಪಾನಕ ಹಾಗೂ ಮಜ್ಜಿಗೆ ಬಂಡಿಯನ್ನು ವ್ಯವಸ್ಥೆ ಮಾಡಿದ್ದು, ಭಕ್ತರಿಗೆಲ್ಲಾ ವಿತರಿಸಲಾಯಿತು. ದೇವರಿಗೆ ಅರ್ಪಿಸಿರುವ ಬೆಲೆ ಬಾಳುವ ಸೀರೆಗಳನ್ನು ಮಾರಾಟಕ್ಕಿಡಲಾಗಿದ್ದು, ಅದನ್ನು ಕೊಳ್ಳಲು ಮಹಿಳೆಯರು ಮುಗಿಬಿದ್ದಿದ್ದರು.
ತಾಲ್ಲೂಕಿನ ಚೀಮನಹಳ್ಳಿ, ಗುಡಿಹಳ್ಳಿ, ಅಬ್ಲೂಡು, ಶೆಟ್ಟಿಹಳ್ಳಿ, ಮಲ್ಲಹಳ್ಳಿ, ಕೋಟಹಳ್ಳಿ, ಕೆಂಪನಹಳ್ಳಿ, ಚಾಗೆ, ತಾತಹಳ್ಳಿ, ದೇವರಮಳ್ಳೂರು, ತಲದುಮ್ಮನಹಳ್ಳಿ, ಸೊಣ್ಣೇನಹಳ್ಳಿ, ಅಮ್ಮನಲ್ಲೂರು, ಬೂದಾಳ, ವೀರಾಪುರ, ಇದ್ಲೂಡು, ಕುತ್ತಾಂಡಹಳ್ಳಿ, ಹನುಮಂತಪುರ, ಹಂಡಿಗನಾಳ, ಎಲ್.ಮುತ್ತುಗದಹಳ್ಳಿ, ಪೆಯಿಲಹಳ್ಳಿ, ಎಲ್ಲಹಳ್ಳಿ, ಕೊಂಡೇನಹಳ್ಳಿ, ಪರಸದಿನ್ನೆ, ರಾಮಚಂದ್ರಹೊಸೂರು, ಲಕ್ಕಹಳ್ಳಿ, ಹರಳಹಳ್ಳಿ, ಹಿರೇಬಲ್ಲ, ತಾದೂರು, ಆನೂರು, ತಿಪ್ಪೇನಹಳ್ಳಿ, ತಳಗವಾರ ಮುಂತಾದ ಗ್ರಾಮಗಳಿಂದ ಭಕ್ತರು ಆಗಮಿಸಿ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದರು.
ಶ್ರೀರಾಮನವಮಿ ಅಂಗವಾಗಿ ಸಂಗೀತೋತ್ಸವ ಕಾರ್ಯಕ್ರಮ
ನಗರದ ಉಲ್ಲೂರುಪೇಟೆಯ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀ ವೀರಾಂಜನೇಯಸ್ವಾಮಿ ಭಕ್ತಮಂಡಳಿಯಿಂದ ೨೩ನೇ ವರ್ಷದ ಸಂಗೀತೋತ್ಸವ ಕಾರ್ಯಕ್ರಮವನ್ನು ಶನಿವಾರದಿಂದ ಮಂಗಳವಾರದವರೆಗೂ ನಾಲ್ಕು ದಿನಗಳ ಕಾಲ ಹಮ್ಮಿಕೊಂಡಿದ್ದು, ಪ್ರತಿ ದಿನ ಶ್ರೀ ಪುರಂದರದಾಸರ, ಶ್ರೀ ಕನಕದಾಸರ, ಶ್ರೀ ತ್ಯಾಗರಾಜರ ಹಾಗೂ ಶ್ರೀ ಯೋಗಿ ನಾರೇಯಣ ತಾತಯ್ಯನವರ ಕೃತಿಗಳೊಂದಿಗೆ ಸಂಗೀತ ಕಚೇರಿಗಳು ನಡೆಯುತ್ತಿವೆ.
ಶನಿವಾರ ಸಂಜೆ ನಡೆದ ಶಾಸ್ತ್ರೀಯ ಸಂಗೀತ ಕಚೇರಿಯನ್ನು ನಡೆಸಿಕೊಟ್ಟ ಬೆಂಗಳೂರಿನ ವಿದ್ವಾನ್ ಡಾ.ಶ್ರೀನಿವಾಸಮೂರ್ತಿ, ಪಿಟೀಲು ವಿದ್ವಾನ್ ಸಂಜೀವಕುಮಾರ್, ಮೃದಂಗ ವಿದ್ವಾನ್ ಬೆಟ್ಟಾ ವೆಂಕಟೇಶ್ ಹಾಗೂ ಖಂಜಿರ ವಿದ್ವಾನ್ ಎಸ್.ವಿ.ನಾರಾಯಣಸ್ವಾಮಿ ಅವರನ್ನು ದೇವಾಲಯ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಪುಷ್ಪನಮನ
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿ ಡಾ.ವಿಜಯ್ ಕುಮಾರ್ ಮಾತನಾಡಿದರು.
ಅಂಬೇಡ್ಕರ್ ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಭಾರತೀಯ ನಾಯಕರಲ್ಲೊಬ್ಬರು. ಭಾರತದ ಸಂವಿಧಾನವನ್ನು ರಚಿಸಿದ ಇವರನ್ನು ಭಾರತದ ಸಂವಿಧಾನ ಶಿಲ್ಪಿ ಎಂದು ಕರೆಯಲಾಗುತ್ತದೆ ಎಂದು ಅವರು ತಿಳಿಸಿದರು.
ಪ್ರತಿಯೊಬ್ಬ ಭಾರತೀಯನೂ ಆತ್ಮ ಗೌರವದಿಂದ ಬದುಕಬೇಕೆಂಬುದು ಆ ಮಹಾಪುರುಷನ ಕನಸಾಗಿತ್ತು.ವಿದೇಶಿಯರ ಆಳ್ವಿಕೆಯಿಂದ ಬಿಡುಗಡೆ ಪಡೆದ ಭಾರತವು ನಿಜವಾಗಿಯೂ ಸ್ವತಂತ್ರ ದೇಶವಾಗಬೇಕಾದರೆ, ಜಾತೀಯತೆ ಮತ್ತು ಬಡತನದಿಂದ ಬಿಡುಗಡೆ ಪಡೆಯಬೇಕೆನ್ನುವುದು ಅವರ ದ್ಯೇಯವಾಗಿತ್ತು. ಭಾರತಿಯರೆಲ್ಲರು ಜಾತಿ-ಭೇದ ಮತ್ತು ಕೋಮುಭಾವನೆಯನ್ನು ಬಿಟ್ಟು ಒಂದೇ ತಾಯಿಯ ಮಕ್ಕಳಾಗಿ ಬಾಳಬೇಕೆನ್ನುವುದು ಅವರ ಮನದಾಳದ ಮಹಾಬಯಕೆಯಾಗಿತ್ತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವಪ್ಪ ಅವರು ಅಂಬೇಡ್ಕರ್ ಕುರಿತಂತೆ ಭಾವಗೀತೆಗಳನ್ನು ಹಾಡಿದರು.
ಡಾ.ತಿಮ್ಮೇಗೌಡ, ಆಸ್ಪತ್ರೆಯ ಸಿಬ್ಬಂದಿಗಳಾದ ಅಕ್ಕಲರೆಡ್ಡಿ, ಲೋಕೇಶ್, ಸಿ.ವಿಜಯ, ಲಲಿತಮ್ಮ, ಆಶಾಕಾರ್ಯಕರ್ತೆಯರು ಹಾಜರಿದ್ದರು.
ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಶ್ರೀ ರಾಮನವಮಿ ಆಚರಣೆ
ತಾಲ್ಲೂಕಿನಾದ್ಯಂತ ಶ್ರೀರಾಮನವಮಿಯನ್ನು ವಿವಿಧ ರಾಮ ದೇವಾಲಯಗಳಲ್ಲಿ ವಿಶೇಷ ಪೂಜೆಸಲ್ಲಿಸಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಜಂಗಮಕೋಟೆ, ನಾಗಮಂಗಲ, ಚೌಡಸಂದ್ರ, ಅಪ್ಪೇಗೌಡನಹಳ್ಳಿ ಗೇಟ್, ಮೇಲೂರು, ಹುಣಸೇನಹಳ್ಳಿ ಸ್ಟೇಷನ್, ಎಚ್.ಕ್ರಾಸ್, ಮಳಮಾಚನಹಳ್ಳಿ ಮುಂತಾದೆಡೆ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ನಡೆಸಿ ಭಕ್ತರಿಗೆ ಸೌತೆಕಾಯಿ ಹೆಸರುಬೇಳೆ ಮತ್ತು ಪಾನಕವನ್ನು ವಿತರಿಸಿದರು.
ನಗರದ ಕೋಟೆ ವೃತ್ತದ ಶ್ರೀರಾಮ ದೇವಾಲಯ, ಉಲ್ಲೂರುಪೇಟೆಯ ಭಜನೆ ಮಂದಿರ ಹಾಗೂ ಚಿಂತಾಮಣಿ ರಸ್ತೆಯಲ್ಲಿರುವ ವೀರಾಂಜನೇಯಸ್ವಾಮಿ ದೇವಾಲಯಗಳಲ್ಲಿ ರಾಮನವಮಿಯ ಪ್ರಯುಕ್ತ ಪೂಜಾಕಾರ್ಯಕ್ರಮಗಳು ನಡೆದವು.
ಚಿಂತಾಮಣಿ ರಸ್ತೆಯಲ್ಲಿರುವ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಸೀತಾ ರಾಮ ಲಕ್ಷ್ಮಣಆಂಜನೇಯಸ್ವಾಮಿ ಮತ್ತು ವೀರಾಂಜನೇಯಸ್ವಾಮಿ ಉತ್ಸವ ವಿಗ್ರಹಗಳಿಗೆ ಅಭಿಷೇಕವನ್ನು ನಡೆಸಲಾಯಿತು. ವೀರಾಂಜನೇಯಸ್ವಾಮಿಗೆ ಅಭಿಷೇಕ, ಪೂಜೆ, ವಿಶೇಷ ಅಲಂಕಾರ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು. ಸೀತಾರಾಮ ಕಲ್ಯಾಣೋತ್ಸವಕ್ಕೆ ನೂರಾರು ಜನರು ಸಾಕ್ಷಿಯಾದರು. ಉಟ್ಲು ಕಂಬದ ಪೂಜೆ, ಕ್ಷೀರ ಉಟ್ಲು ಮಹೋತ್ಸವ ಹಾಗೂ ಮನರಂಜನಾ ಉಟ್ಲೋತ್ಸವವನ್ನು ನಡೆಸಿದರು.
ಮೋದಿಯವರನ್ನು ಪ್ರಧಾನಿಯನ್ನಾಗಿಸಲು ಭಾರತೀಯರೆಲ್ಲರೂ ಸಂಕಲ್ಪ ಮಾಡಬೇಕಿದೆ – ಚಕ್ರವರ್ತಿ ಸೂಲಿಬೆಲೆ
ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಟೀಂ ಮೋದಿ ಕಾರ್ಯಕರ್ತರು ಆಯೋಜಿಸಿದ್ದ “ದೇಶಕ್ಕಾಗಿ ಮೋದಿ ಮೋದಿಗಾಗಿ ನಾವು”ಕಾರ್ಯಕ್ರಮದಲ್ಲಿ ಟೀಂ ಮೋದಿ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು.
“ಕಾಂಗ್ರೆಸ್ ಅಥವಾ ಬಿಜೆಪಿ ಯಾವುದೇ ಪಕ್ಷ ನನಗೆ ಮುಖ್ಯವಲ್ಲ. ನನ್ನ ದೇಶ ನನಗೆ ಬಹುಮುಖ್ಯ. ದೇಶವನ್ನು ಮುನ್ನಡೆಸಬಲ್ಲ ಸಾಮರ್ಥ್ಯ ಹೊಂದಿರುವ ಸಮರ್ಥ ನಾಯಕರೆಂದರೆ ನರೇಂದ್ರ ಮೋದಿ. ರಾಹುಲ್ ಗಾಂಧಿ ಯಾವುದೇ ರೀತಿಯಲ್ಲೂ ಪ್ರಧಾನಿ ಸ್ಥಾನಕ್ಕೆ ಯೋಗ್ಯ ವ್ಯಕ್ತಿ ಅಲ್ಲವೇ ಅಲ್ಲ. ಹಾಗಾಗಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಭಾರತೀಯರೆಲ್ಲರೂ ಸಂಕಲ್ಪ ಮಾಡಬೇಕಿದೆ” ಎಂದು ಅವರು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಿಂದ ಭಾರತ ಪ್ರಭಾವಿಶಾಲಿ ಎಂದು ಗುರುತಿಸಿಕೊಂಡಿದೆ. ಪ್ರತಿಯೊಂದು ರಾಷ್ಟ್ರವೂ ನಮ್ಮ ದೇಶವನ್ನು ದೇಶವಾಸಿಗಳನ್ನು ಗೌರವದಿಂದ ಕಾಣುವಂತಾಗಿದೆ. ಕಾಂಗ್ರೆಸ್ ಪ್ರಧಾನಿಗಳಾದ ಜವಾಹರಲಾಲ್ ನೆಹರು ಮತ್ತು ಇಂದಿರಾಗಾಂಧಿ ತಮಗೆ ತಾವೇ ಭಾರತರತ್ನ ಪ್ರಶಸ್ತಿ ಕೊಟ್ಟುಕೊಂಡರು. ಆದರೆ ಜಗತ್ತೇ ಮೆಚ್ಚಿ ಕೊಂಡಾಡಿ ನರೇಂದ್ರ ಮೋದಿಯವರಿಗೆ ದಕ್ಷಿಣ ಕೊರಿಯಾದ ಶಾಂತಿ ಪ್ರಶಸ್ತಿ, ವಿಶ್ವ ಸಂಸ್ಥೆಯ ಅತ್ಯುನ್ನತ ಪರಿಸರ ಗೌರವ, ಸಂಯುಕ್ತ ಅರಬ್ ಗಣರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ, ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿವೆ. ಭಾರತವನ್ನು ಇಡೀ ಜಗತ್ತು ಗೌರವದಿಂದ ಕಾಣುವಂತೆ ಮಾಡಿದ ಕೀರ್ತಿ ನರೇಂದ್ರ ಮೋದಿಯವರದ್ದು ಎಂದರು.
ಯಾವುದೇ ಲೋಕಸಭಾ ಕ್ಷೇತ್ರದಲ್ಲಿ ಒಬ್ಬರೇ ವ್ಯಕ್ತಿ ಐದು ಬಾರಿ ಗೆದ್ದರೆಂದರೆ ಅವರು ಅಲ್ಲಿ ಜನರಿಗೆ ಪ್ರಧಾನಮಂತ್ರಿಯಿದ್ದಂತೆ. ಏಕೆಂದರೆ, ಆ ವ್ಯಕ್ತಿ ಪಾರ್ಲಿಮೆಂಟ್ ನಲ್ಲಿ ಹಿರಿಯ ಸದಸ್ಯರಾಗಿರುವುದರಿಂದ ಅವರ ಕೆಲಸಗಳೆಲ್ಲವೂ ಅಡೆತಡೆಗಳಿಲ್ಲದಂತೆ ನೆರವೇರುತ್ತವೆ. ಏಳು ಬಾರಿ ಕಾಂಗ್ರೆಸ್ ನ ಕೆ.ಎಚ್.ಮುನಿಯಪ್ಪ ಅವರನ್ನು ಗೆಲ್ಲಿಸಿದ್ದೀರಿ. ಆದರೆ, ಕೋಲಾರ ಅತ್ಯಂತ ಹಿಂದುಳಿದ ಕ್ಷೇತ್ರವೆಂದು ಹೆಸರಾಗಿದೆ. ನಿಮಗೆ ಬದಲಾವಣೆ ಬೇಡವೇ? ಈಗಲಾದರೂ ಇಂಥಹವರಿಗೆ ತಕ್ಕ ಪಾಠ ಕಲಿಸಿ. ಮೋದಿಯವರು ಪ್ರಧಾನಿಯಾಗುವಲ್ಲಿ ಸೇರುವ ಕಮಲಗಳಲ್ಲಿ ಕೋಲಾರದ ಕಮಲವೂ ಒಂದಿರುವಂತೆ ನೋಡಿಕೊಳ್ಳಿ ಎಂದು ನುಡಿದರು.
ಹಜ್ ಯಾತ್ರೆಗೆ ನೀಡುತ್ತಿದ್ದ ಸಹಾಯಧನವನ್ನು ನಿಲ್ಲಿಸಿದ ಮೋದಿಯವರು ಅದೇ ಹಣವನ್ನು ಮುಸ್ಲೀಂ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಿಟ್ಟಿದ್ದು ವ್ಯಾಪಕವಾಗಿ ಸ್ವಾಗತಿಸಲಾಗಿದೆ. ಇತರರ ಹಣದಲ್ಲಿ ಪವಿತ್ರ ಹಜ್ ಯಾತ್ರೆ ಮಾಡಬಾರದೆಂದು ಕುರಾನಿನಲ್ಲಿಯೇ ಇದೆ. ಅದೇ ಹಣವನ್ನು ಮುಸ್ಲೀಂ ಹೆಣ್ಣುಮಕ್ಕಳ ಆತ್ಮಾಭಿಮಾನಕ್ಕೆ ನೀಡಿರುವುದನ್ನು ಮುಸ್ಲೀಂ ಮುಖಂಡರೇ ಶ್ಲಾಘಿಸಿದ್ದಾರೆ.
ಈ ದೇಶದ ಸಾರ್ವಭೌಮತೆಯನ್ನು ಉಳಿಸಿಕೊಳ್ಳಲು, ಜಾಗತಿಕ ಮಟ್ಟದಲ್ಲಿ ಭಾರತವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ರೂಪಿಸಲು ಮೋದಿಯಂಥಹ ದೇಶ ಭಕ್ತರು ಅಗತ್ಯ. ಮೋದಿಜಿಯವರ ಆಡಳಿತ ವ್ಯವಸ್ಥೆಯಲ್ಲಿ ಭಾರತ ಸಾಧಿಸಿರುವ ಮಹತ್ವದ ಮೈಲಿಗಲ್ಲು ಜನರ ಮುಂದಿದೆ. ಪ್ರಧಾನಿಯಾಗುತ್ತಿದ್ದಂತೆ ಮೋದಿಜಿಯವರು ಸೈನಿಕರ ಬಗ್ಗೆ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಸೈನಿಕರಿಗೂ ಕೂಡಾ ಇಂಥಹ ಪ್ರಧಾನಿಯೊಬ್ಬರ ಅವಶ್ಯಕತೆ ಇತ್ತು. ಅದನ್ನು ಭಾರತೀಯ ಸೈನಿಕರೇ ಹೇಳಿ ಕೊಂಡಾಡಿದ್ದಾರೆ. ಪ್ರತಿಯೊಂದು ದೇಶದಲ್ಲಿಯೂ ಇರುವ ಯುದ್ಧ ಸ್ಮಾರಕಗಳ ಬಗ್ಗೆ ಕನಸು ಕಂಡ ಮೋದಿಯವರು ವಾರ್ ಮೆಮೋರಿಯಲ್ ನಿರ್ಮಾಣ ಮಾಡಿ ಇಂದು ದೇಶಕ್ಕೆ ಸಮರ್ಪಿಸಿದ್ದಾರೆ. ಕಳೆದ ೭೦ ವರ್ಷದಲ್ಲಿ ಆಗದಿರುವ ಕಾರ್ಯ ಇವತ್ತು ಮೋದಿಯವರಿಂದ ಆಗಿದೆ ಎನ್ನುವುದು ನಾವು ಗಮನಿಸಬೇಕಾಗಿದೆ. ಸ್ವಚ್ಛ ಭಾರತ, ಬಯಲು ಶೌಚಾಲಯ ಮುಕ್ತ ಭಾರತ, ಪ್ರತಿಯೊಂದು ಗ್ರಾಮಕ್ಕೂ ವಿದ್ಯುತ್, ಗ್ಯಾಸ್, ಹೆಣ್ಣು ಮಕ್ಕಳ ಅಭ್ಯುದಯಕ್ಕಾಗಿ ಬೇಟಿ ಬಚಾವೋ ಬೇಟಿ ಪಡಾವೋ, ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ, ಸಬ್ಸಿಡಿ ಹಣ ನೇರವಾಗಿ ಫಲಾನುಭವಿಯ ಖಾತೆಗೆ ವರ್ಗಾವಣೆ, ವಿಮೆ, ಮೇಕ್ ಇನ್ ಇಂಡಿಯಾ, ಅಟಲ್ ಪಿಂಚಣಿ ಯೋಜನೆ ಮುಂತಾದ ಜನಪರ ಯೋಜನೆಗಳನ್ನು ನೀಡಿದ್ದಾರೆ ಎಂದರು.
ಸಿಂಗಾಪೂರಿನಲ್ಲಿ ಪ್ರಸಾಧನ ಶಾಸ್ತ್ರಜ್ಞೆಯಾಗಿರುವ ಭಾವನಾ ಶಿವಾನಂದ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ವಿದೇಶದಲ್ಲಿ ನೆಲೆಸಿರುವ, ದುಡಿಯುತ್ತಿರುವ ಭಾರತೀಯರ ಆತ್ಮಸ್ಥೈರ್ಯ ಹೆಚ್ಚಿಸಿದ್ದಾರೆ. ದೇಶ ಬಿಟ್ಟು ದೂರದೂರದ ದೇಶಗಳಲ್ಲಿ ದುಡಿಯುವವರಿಗೆ ಆ ದೇಶದವರು ಗೌರವದಿಂದ ಕಾಣುವಂತೆ ಮೋದಿಯವರು ಮಾಡಿದ್ದಾರೆ. ಇದನ್ನೆಲ್ಲಾ ತಿಳಿಸಲು ಎರಡು ತಿಂಗಳ ಕಾಲ ಕೆಲಸಕ್ಕೆ ರಜೆ ಹಾಕಿ ಟೀಂ ಮೋದಿಯೊಂದಿಗೆ ಹಳ್ಳಿ ಹಳ್ಳಿ ಸುತ್ತುತ್ತಿದ್ದೇನೆ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಟೀಂ ಮೋದಿ ಕಾರ್ಯಕರ್ತರು ಹಾಜರಿದ್ದರು.
ಅಕ್ರಮ ಮದ್ಯ ವಶ
ಅಬಕಾರಿ ಇನ್ಸ್ ಪೆಕ್ಟರ್ ಮಹೇಶ್ ಮತ್ತು ಸಿಬ್ಬಂದಿ ನಗರದ ಚಿಂತಾಮಣಿ ರಸ್ತೆಯಲ್ಲಿರುವ ಉಲ್ಲೂರುಪೇಟೆ ಸರ್ಕಾರಿ ಶಾಲೆಯ ಬಳಿ ಗುರುವಾರ ರಾತ್ರಿ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ೨೫.೯೨ ಲೀಟರ್ ಮದ್ಯವನ್ನು ಸಾಗಾಣಿಕೆ ಮಾಡುತ್ತಿರುವುದನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.
ಮದ್ಯ ಸಾಗಿಸುತ್ತಿದ್ದ ವೀರಾಪುರದ ಮಂಜುನಾಥ್ ಎನ್ನುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ. ದ್ವಿಚಕ್ರ ವಾಹನ ಹಾಗೂ ಮದ್ಯವನ್ನು ವಶಪಡಿಸಿಕೊಂಡಿದ್ದೇವೆ ಎಂದು ಅಬಕಾರಿ ಇನ್ಸ್ ಪೆಕ್ಟರ್ ಮಹೇಶ್ ತಿಳಿಸಿದ್ದಾರೆ.
ಸಬ್ ಇನ್ಸ್ ಪೆಕ್ಟರ್ ನಾಗರಾಜ್, ಸಿಬ್ಬಂದಿ ನಿತಿನ್ ಹಾಜರಿದ್ದರು.
ಅಭಿವೃದ್ಧಿ ಶೂನ್ಯ ಕ್ಷೇತ್ರವನ್ನಾಗಿ ಮಾಡಿದ ಕೆ.ಎಚ್.ಮುನಿಯಪ್ಪನಿಗೆ ಪಾಠ ಕಲಿಸಿ – ಎನ್.ಮುನಿಸ್ವಾಮಿ
ಕ್ಷೇತ್ರಕ್ಕೆ ನೀರನ್ನು ತರಲು ಪ್ರಯತ್ನಿಸದೇ, ನೂರಾರು ಎಕರೆಗಳ ಜಮೀನಿನ ಒಡೆತನ ಮಾಡಿಕೊಂಡು ಕೋಲಾರವನ್ನು ಅಭಿವೃದ್ಧಿ ಶೂನ್ಯ ಕ್ಷೇತ್ರವನ್ನಾಗಿ ಮಾಡಿದ ಕೀರ್ತಿ ೭ ಬಾರಿ ಕೋಲಾರ ಲೋಕಸಭಾ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾದ ಸಂಸದ ಕೆ.ಎಚ್.ಮುನಿಯಪ್ಪ ಅವರಿಗೆ ಸಲ್ಲುತ್ತದೆ. ಜನರೇ ಈ ಬಾರಿ ಈ ವ್ಯಕ್ತಿಗೆ ತಕ್ಕ ಪಾಠ ಕಲಿಸಿ ಎಂದು ಬಿಜೆಪಿ ಅಭ್ಯರ್ಥಿ ಎನ್.ಮುನಿಸ್ವಾಮಿ ವಾಗ್ದಾಳಿ ನಡೆಸಿದರು.
ನಗರ ಸೇರಿದಂತೆ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ರೋಡ್ ಶೋ ಮೂಲಕ ಶುಕ್ರವಾರ ಮತಯಾಚನೆ ಮಾಡಿದ ಅವರು, ಈ ಬಾರಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು.
ಲೋಕಸಭಾ ಚುನಾವಣೆಗೆ ಪ್ರಥಮ ಬಾರಿಗೆ ಸ್ಪರ್ಧಿಸುವ ಮುನ್ನಾ ಭೂ ಮಂಜೂರಾತಿಗಾಗಿ ಅರ್ಜಿ ಹಾಕಿಕೊಂಡಿದ್ದ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರು ಇಂದು ನೂರಾರು ಎಕರೆ ಜಮೀನುಗಳ ಒಡೆಯನಾಗಿದ್ದಾರೆ. ಇಷ್ಟೊಂದು ಭೂಮಿ ಎಲ್ಲಿಂದ ಬಂತು. ಕೋಲಾರ ಕ್ಷೇತ್ರದಲ್ಲಿ ಒಂದು ಕರೆಯಲ್ಲಿಯೂ ಒಂದು ಹನಿ ನೀರಿಲ್ಲ. ಇಂತಹ ಪರಿಸ್ಥಿತಿಗೆ ಕಾರಣ ಯಾರು? ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಗಳಿದ್ದಾಗಲೇ ಕ್ಷೇತ್ರದ ಅಭಿವೃದ್ಧಿಗಾಗಿ ಅವರು ಏನೂ ಮಾಡಲಿಲ್ಲ. ಇಲ್ಲಿಂದ ಯುವಕರು ಉದ್ಯೋಗಕ್ಕಾಗಿ ವಲಸೆ ಹೋಗುತ್ತಿದ್ದಾರೆ. ೮ ನೇ ಬಾರಿಗೆ ಗೆಲ್ಲಿಸಿಕಳುಹಿಸಿದರೆ ಏನು ಮಾಡುತ್ತಾರೆ. ಅವರು ೨೮ ವರ್ಷಗಳಿಂದ ಮಾಡದಿರುವ ಅಭಿವೃದ್ಧಿ ಕೆಲಸಗಳನ್ನು ನಾನು ೫ ವರ್ಷಗಳಲ್ಲಿ ಪೂರ್ಣಗೊಳಿಸುತ್ತೇನೆ. ೭ ಬಾರಿ ಚುನಾವಣೆಗಳಲ್ಲಿ ಗೆದ್ದು, ತನ್ನ ಮಗಳನ್ನು ಶಾಸಕಿ ಮಾಡಿದ್ದು, ತನ್ನ ಅಣ್ಣನ ಮಗನನ್ನು ಜಿಲ್ಲಾ ಪಂಚಾಯಿತಿ ಸದಸ್ಯನನ್ನಾಗಿ ಮಾಡಿದ್ದು ಅವರ ಅಮೋಘ ಸಾಧನೆ.
ಈ ಬಾರಿಯೂ ಮೋದಿ ಪ್ರಧಾನಿಯಾಗಲಿದ್ದಾರೆ. ಅದನ್ನು ತಪ್ಪಿಸಲಿಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಪುಲ್ವಾಮಾ ದಾಳಿಗೆ ಕೊಟ್ಟಿರುವ ಪ್ರತ್ಯುತ್ತರವನ್ನು ನೋಡಿದರೆ ಮೋದಿ ತಾಕತ್ತು ಎಂತಹದ್ದು ಎಂದು ಗೊತ್ತಾಗುತ್ತದೆ ಎಂದರು.
ಚಿಂತಾಮಣಿ ಮಾಜಿ ಶಾಸಕ ಡಾ.ಸುಧಾಕರ್ ಮಾತನಾಡಿ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಸಾಕಷ್ಟು ಅಭಿವೃದ್ಧಿಪರವಾದ ಯೋಜನೆಗಳನ್ನು ಜಾರಿಗೆ ತಂದಿದೆ. ನಿರಂತರವಾಗಿ ಗೆಲುವು ಸಾಧಿಸುತ್ತಿರುವ ಕೆ.ಎಚ್.ಮುನಿಯಪ್ಪ ಅವರಿಗೆ ಈ ಬಾರಿ ಸೋಲು ಕಟ್ಟಿಟ್ಟ ಬುತ್ತಿಯಾಗಿದೆ. ಹೋದ ಕಡೆಯಲ್ಲೆಲ್ಲಾ ಬಿಜೆಪಿ ಅಭ್ಯರ್ಥಿಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಕೆ.ಎಚ್.ಮುನಿಯಪ್ಪ ಕ್ಷೇತ್ರದಲ್ಲಿ ಸರ್ವಾಧಿಕಾರಿಯಂತೆ ವರ್ತನೆ ಮಾಡುತ್ತಿದ್ದಾರೆ. ಅವರಿಗೆ ರಾಜಕೀಯವಾಗಿ ಅವಕಾಶ ಮಾಡಿಕೊಟ್ಟವರನ್ನೆ ತುಳಿದುಬಿಟ್ಟಿದ್ದಾರೆ. ಇಂದು ಬೃಹದಾಕಾರವಾಗಿ ಬೆಳೆದು ನಿಂತಿದ್ದಾರೆ. ಈ ಬಾರಿ ಸರಿಯಾಗಿ ಬುದ್ದಿ ಕಲಿಸಿ ಎಂದರು.
ತೆರೆದ ವಾಹನದಲ್ಲಿ ತಮಟೆ ವಾದನಗಳೊಂದಿಗೆ ರೋಡ್ ಶೋ ನಡೆಸಿದರು. ಅಪಾರ ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು. ನಗರದ ಹೂವಿನ ಸರ್ಕಲ್‌ನಲ್ಲಿರುವ ನಗರೇಶ್ವರಸ್ವಾಮಿ ದೇವಾಲಯದಲ್ಲಿ ಮುಖಂಡರು ಪೂಜೆ ಸಲ್ಲಿಸಿದರು.
ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್, ಮುಖಂಡರಾದ ಡಿ.ಆರ್.ಶಿವಕುಮಾರಗೌಡ, ಶ್ರೀಧರ್, ಸುಜಾತಮ್ಮ, ಮಂಜುಳಮ್ಮ, ನರೇಶ್, ರವಿಕುಮಾರ್, ಡಾ.ಡಿ.ಟಿ.ಸತ್ಯನಾರಾಯಣರಾವ್ ಹಾಜರಿದ್ದರು.
ಅಭ್ಯರ್ಥಿಯ ವ್ಯಕ್ತಿತ್ವ, ವರ್ಚಸ್ಸು, ಹಿನ್ನೆಲೆಯನ್ನು ನೋಡಿ ಮತ ನೀಡಬೇಕು – ಆಂಜಿನಪ್ಪ ಪುಟ್ಟು
ಜನರು ಮತ ನೀಡಬೇಕಾದರೆ, ಅಭ್ಯರ್ಥಿಯ ವ್ಯಕ್ತಿತ್ವ, ವರ್ಚಸ್ಸು, ಅವರ ಹಿನ್ನೆಲೆಯನ್ನು ಕಂಡು ಮತ ನೀಡಬೇಕು. ಬಿಜೆಪಿ ಅಭ್ಯರ್ಥಿಯ ಮುಖಪರಿಚಯ ಕ್ಷೇತ್ರದ ಜನತೆಗೆ ಇಲ್ಲ. ಅವರು ಕೇವಲ ಮೋದಿಯ ಹೆಸರೇಳಿಕೊಂಡು ಮತ ಕೇಳುತ್ತಿದ್ದಾರೆ. ಅವರಿಗೆ ರಾಜಕೀಯ ಅನುಭವ ಕಡಿಮೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಪ್ರಜಾತಂತ್ರ ಉಳಿಯುತ್ತೋ ಇಲ್ಲವೋ ಎನ್ನುವ ಆತಂಕ ಕಾಡುತ್ತಿದೆ ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಪುಟ್ಟು ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಾರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಮಾತಿನಲ್ಲಿ, ನಡವಳಿಕೆಯಲ್ಲಿ ಪ್ರಬುಧ್ದತೆ ಕಾಣುತ್ತಿಲ್ಲ. ಕೆ.ಜಿ.ಎಫ್‌ನ ಬೆಮೆಲ್ ಮುಂದೆ ಚುನಾವಣಾ ಅಧಿಕಾರಿಗಳ ಮುಂದೆ ತೋರಿಸಿರುವ ದರ್ಪದಿಂದ ಅವರ ನಿಜವಾದ ವ್ಯಕ್ತಿತ್ವ ತೋರಿಸಿದ್ದಾರೆ. ಆದ್ದರಿಂದ ಇಂತಹ ಅಭ್ಯರ್ಥಿಗಳನ್ನು ದೂರವಿಡುವುದು ಸೂಕ್ತ ಎಂದು ಹೇಳಿದರು.
ಕೋಲಾರ ಲೋಕಸಬಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕೆ.ಎಚ್.ಮುನಿಯಪ್ಪ ಅವರು ಜನರಿಗೆ ಹತ್ತಿರವಾಗಿ, ಸಾರ್ವಜನಿಕರೊಂದಿಗೆ ಬೆರೆಯುವ ರೀತಿ ಅವರ ಗೆಲುವಿಗೆ ಸಹಕಾರಿಯಾಗುತ್ತದೆ. ಅವರ ದೂರದೃಷ್ಟಿ, ಅನುಭವ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಅಗತ್ಯವಿದೆ. ಭವಿಷ್ಯದಲ್ಲಿ ಶಿಡ್ಲಘಟ್ಟ ಕ್ಷೇತ್ರವನ್ನು ಮಾದರಿಯನ್ನಾಗಿಸುವ ಭರವಸೆ ನೀಡಿದ್ದಾರೆ. ರಾಹುಲ್ ಗಾಂಧಿ ಅವರ ಪ್ರಣಾಳಿಕೆಯಲ್ಲಿ ಬಡವರು, ಹಿಂದುಳಿದವರು, ಮಹಿಳೆಯರ ಕುರಿತಾದ ಚಿಂತನೆಗಳಿವೆ. ತಿಂಗಳಿಗೆ ೬ ಸಾವಿರ, ಮಹಿಳಾ ಸಬಲೀಕರಣ, ಬಡತನ ನಿರ್ಮೂಲನೆಯ ಬದ್ಧತೆ ಇಟ್ಟುಕೊಂಡಿದ್ದಾರೆ ಎಂದರು.
ದೇಶದಲ್ಲಿ ಭ್ರಮನಿರಸನ ಆಡಳಿತವನ್ನು ಮೋದಿಯವರು ನೀಡಿದ್ದಾರೆ. ದೇಶದ ಜನರ ಕನಸುಗಳನ್ನು ಈಡೇರಿಸಲಿಲ್ಲ. ಉದ್ಯೋಗಗಳು ನೀಡಿಲ್ಲ. ಪಕೋಡ ಮಾರಿ ಜೀವನ ಮಾಡಿ ಎಂದು ಹೇಳುವ ಮೂಲಕ ಯುವಜನತೆಯನ್ನು ಅಪಮಾನಗೊಳಿಸಿದ್ದಾರೆ. ತಾಂತ್ರಿಕ ವಿದ್ಯಾಭ್ಯಾಸಕ್ಕೆ ತಕ್ಕಂತೆ ಉದ್ಯೋಗ ನೀಡಲಿಲ್ಲ. ದೇಶಕ್ಕೆ ಕಪ್ಪು ಹಣ ತರಲಿಲ್ಲ. ಸ್ಮಾರ್ಟ್ ಸಿಟಿಗಳನ್ನು ನಿರ್ಮಾಣ ಮಾಡಲಿಲ್ಲ. ಪ್ರಚೋದನಕಾರಿ ಭಾಷಣಗಳ ಮೂಲಕ ಯುವಜನರನ್ನು ಪ್ರಚೋದಿಸುತ್ತಾ, ಹಿಂದುತ್ವವನ್ನೆ ಮೂಲ ಅಜೆಂಡಾವನ್ನಾಗಿ ಇಟ್ಟುಕೊಂಡು ದ್ವೇಷ, ವೈಷಮ್ಯವನ್ನು ಜನರಲ್ಲಿ ಬಿತ್ತುತ್ತಿದ್ದಾರೆ. ಮೋದಿ ಚೌಕಿದಾರ್ ಅಂತಾ ಹೇಳ್ತಾರೆ. ರಫೆಲ್ ಕಡತಗಳು ಕಳುವಾಗಿವೆ ಎನ್ನುತ್ತಾರೆ. ಕಡತಗಳನ್ನು ರಕ್ಷಣೆ ಮಾಡಲಿಕ್ಕೆ ಸಾಧ್ಯವಾಗದಿರುವ ಇವರು ದೇಶವನ್ನು ಹೇಗೆ ಕಾಪಾಡ್ತಾರೆ?
ಪುಲ್ವಾಮಾದಲ್ಲಿ ಯೋಧರ ಸಾವಾಯಿತು. ಗುಪ್ತಚರ ಇಲಾಖೆ ವಿಫಲವಾಗಿದೆಯಾ? ಬಿಜೆಪಿಗೆ ಮತ ನೀಡಿದರೆ ದೇಶಾಭಿಮಾನಿಗಳು ಎಂದು ಬಿಂಬಿಸಲಾಗುತ್ತಿದೆ. ನೀಡದಿದ್ದರೆ ದೇಶದ್ರೋಹಿಗಳು ಎನ್ನುತ್ತಾರೆ. ವಾಸ್ತವತೆಯನ್ನು ಜನರು ಅರಿಯಬೇಕು. ಲೇಸರ್ ಬೇಲಿ ಹಾಕಲಿಲ್ಲ. ಬುಲೇಟ್ ಟ್ರೈನ್ ಬರಲಿಲ್ಲ, ರೈತರಿಗೆ ಪಿಂಚಣಿಯ ನಾಟಕವಾಡ್ತಿದ್ದಾರೆ. ಪುನಃ ದೇಶದಲ್ಲಿ ಬಿಜೆಪಿ ಬಂದರೆ ಕೋಮುಗಲಭೆಗಳು ಆಗುವ ಸಾಧ್ಯತೆಗಳು ಹೆಚ್ಚಾಗಿವೆ. ಸಂವಿಧಾನದ ತಿದ್ದುವ ಬಗ್ಗೆ ಮಾತನಾಡುವರು, ಅಲ್ಪಸಂಖ್ಯಾತರ ಬಗ್ಗೆ ತುಚ್ಚವಾಗಿ ಮಾತನಾಡ್ತಾರೆ. ಜ್ಯಾತ್ಯಾತೀತ ಶಕ್ತಿಗಳು ಒಂದಾಗಬೇಕು ಈ ನಿಟ್ಟಿನಲ್ಲಿ ಕೆ.ಎಚ್.ಮುನಿಯಪ್ಪ ಅವರನ್ನು ಆಯ್ಕೆ ಮಾಡಬೇಕಾಗಿದೆ ಎಂದರು.
ಮುಖಂಡರಾದ ಹಿತ್ತಲಹಳ್ಳಿ ಕೃಷ್ಣಪ್ಪ, ಆನೂರು ದೇವರಾಜ್, ಅಶ್ವಥ್ಥರೆಡ್ಡಿ, ಅಪ್ಸರ್ ಪಾಷ ಹಾಜರಿದ್ದರು.
ಕೋಮುವಾದಿ ಪಕ್ಷವನ್ನು ಅಧಿಕಾರಕ್ಕೆ ತರಬಾರದು – ಬಿ.ಎನ್.ರವಿಕುಮಾರ್
ರಾಜ್ಯದಲ್ಲಿ ಕೋಮುವಾದಿ ಪಕ್ಷವನ್ನು ಅಧಿಕಾರಕ್ಕೆ ತರಬಾರದು ಎಂಬ ಉದ್ದೇಶದಿಂದ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ಆಡಳಿತ ನಡೆಸುತ್ತಿದೆ. ಅದೇ ಕಾರಣದಿಂದ ನಾವು ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪನವರನ್ನು ಬೆಂಬಲಿಸುತ್ತಿದ್ದೇವೆ ಎಂದು ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ವೈ ಹುಣಸೇನಹಳ್ಳಿ ಗ್ರಾಮದಲ್ಲಿ ಗುರುವಾರ ಕೋಲಾರ ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಪರ ಹೋಬಳಿ ಮಟ್ಟದ ಜೆಡಿಎಸ್ ಪಕ್ಷದ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಆದೇಶವನ್ನು ಪಾಲಿಸುವುದು ಪಕ್ಷದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕಳೆದ ೨೦ ವರ್ಷಗಳಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿಕೊಂಡು ರಾಜಕೀಯ ಮಾಡಿದ ನಾವುಗಳು ಇದೀಗ ರಾಜ್ಯ ಹಾಗೂ ರಾಷ್ಟ್ರದ ಜನಹಿತವನ್ನು ಉದ್ದೇಶವಾಗಿಟ್ಟುಕೊಂಡು ಮೈತ್ರಿ ಅಭ್ಯರ್ಥಿಗೆ ಬೆಂಬಲಿಸುವ ಮೂಲಕ ಮೈತ್ರಿ ಸರ್ಕಾರದ ಉಳಿವಿಗೆ ಶ್ರಮಿಸಬೇಕು ಎಂದರು.
ಕೋಲಾರ ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ, ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿ, ರಾಜ್ಯದಲ್ಲಿ ಕೋಮುವಾದಿ ಪಕ್ಷ ಅಧಿಕಾರ ಹಿಡಿಯುವುದನ್ನು ತಡೆಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ರಚಿಸಿದೆ. ಮೈತ್ರಿ ಸರ್ಕಾರದ ಮುಖ್ಯಮಂತ್ರಿ ರಾಜ್ಯದ ಸಮಸ್ತ ರೈತರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದಾರೆ. ಮೈತ್ರಿ ಸರ್ಕಾರದ ಆಡಳಿತಾವಧಿಯಲ್ಲಿ ಬಂದಿರುವ ಈ ಚುನಾವಣೆಯಲ್ಲಿ ರಾಜ್ಯದ ೨೧ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಿದರೆ ಉಳಿದ ೭ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಾಜ್ಯದಲ್ಲಿ ಕೋಮುವಾದಿ ಪಕ್ಷಗಳಿಗೆ ಬುದ್ದಿ ಕಲಿಸಬೇಕಾದರೆ ರಾಜ್ಯದ ಎಲ್ಲಾ ೨೮ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದರು.
ಮೂಲತಃ ನಾನು ಕಾಂಗ್ರೆಸ್ ಅಭ್ಯರ್ಥಿಯಾದರೂ ಈ ಭಾರಿಯ ಚುನಾವಣೆಯಲ್ಲಿ ನನಗೆ ಜೆಡಿಎಸ್ ಕಾರ್ಯಕರ್ತರು ಮತನೀಡುವುದರಿಂದ ಮುಂದಿನ ದಿನಗಳಲ್ಲಿ ಕ್ಷೇತ್ರದ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರನ್ನು ತಮ್ಮ ಎರಡು ಕಣ್ಣುಗಳಂತೆ ನೋಡಿಕೊಳ್ಳುತ್ತೇನೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, “ನಾವು ಕಾಂಗ್ರೆಸ್ ಗೆ ಮತ ನೀಡುತ್ತಿಲ್ಲ. ಸಮ್ಮಿಶ್ರ ಸರ್ಕಾರದ ಮೈತ್ರಿ ಅಭ್ಯರ್ಥಿಗೆ ಮತ ಕೊಡುತ್ತಿದ್ದೇವೆ. ಬಿ.ಎನ್.ರವಿಕುಮಾರ್, ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೋಸ್ಕರ ಮತನೀಡುತ್ತೇವೆ. ಕ್ಷೇತ್ರದಲ್ಲಿ ಸುಮಾರು ೬೦ ಸಾವಿರಕ್ಕೂ ಹೆಚ್ಚು ಮತಗಳನ್ನು ನೀಡುವ ಮೂಲಕ ನಮ್ಮ ನಾಯಕರಾದ ಬಿ.ಎನ್.ರವಿಕುಮಾರ್ ಅವರಿಗೆ ಗೌರವ ತಂದುಕೊಡುವ ಕೆಲಸವನ್ನು ಕಾರ್ಯಕರ್ತರ ಮಾಡಬೇಕು ಎಂದರು.
ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಪರ ಜೆಡಿಎಸ್ ಪಕ್ಷದ ಮುಖಂಡರು ಗುರುವಾರ ತಾಲ್ಲೂಕಿನ ಸಾದಲಿ, ಬಶೆಟ್ಟಹಳ್ಳಿ, ಜಂಗಮಕೋಟೆ, ಕಸಬಾಹೋಬಳಿ ಸೇರಿದಂತೆ ಶಿಡ್ಲಘಟ್ಟ ಟೌನ್ ನಲ್ಲಿ ಚುನಾವಣೆ ಪ್ರಚಾರ ಸಭೆಗಳನ್ನು ನಡೆಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಿ.ಬಿ.ವೆಂಕಟೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಮಾಜಿ ಶಾಸಕಿ ಅನಸೂಯಮ್ಮ, ಮುಖಂಡರಾದ ಪಿ.ವಿ.ನಾಗರಾಜ್, ಹುಜಗೂರು ರಾಮಯ್ಯ, ನಂದನವನಂ ಶ್ರೀರಾಮರೆಡ್ಡಿ, ಮುಗಿಲಡಿಪಿ ನಂಜಪ್ಪ, ಸಿ.ಎಂ.ಗೋಪಾಲ್ ಹಾಜರಿದ್ದರು.

