Home Blog Page 351

ರೇಷ್ಮೆಗೂಡು ಮಾರುಕಟ್ಟೆಯ ಆವರಣದಲ್ಲಿ ಸ್ವೀಪ್ ಮತದಾನ ಜಾಗೃತಿ ಕಾರ್ಯಕ್ರಮ

0

ಮತದಾನ ಮಾಡುವುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರ ಕರ್ತವ್ಯವಾಗಿದ್ದು ಏಪ್ರಿಲ್ ೧೮ ರಂದು ನಡೆಯಲಿರುವ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗುರುದತ್‌ ಹೆಗಡೆ ತಿಳಿಸಿದರು.
ನಗರದ ರೇಷ್ಮೆಗೂಡು ಮಾರುಕಟ್ಟೆಯ ಆವರಣದಲ್ಲಿ ಬುಧವಾರ ರೈತರು ಹಾಗೂ ರೀಲರುಗಳಿಗೆ ಆಯೋಜಿಸಿದ್ದ ಸ್ವೀಪ್ ಮತದಾನ ಜಾಗೃತಿ ಸಭೆಯಲ್ಲಿ ಮತದಾನದ ಕುರಿತು ಪ್ರತಿಜ್ಞಾವಿಧಿ ಭೋದಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಜನರಿಗೆ ಸಿಕ್ಕಿರುವ ಪರಮಾಧಿಕಾರ. ಅದನ್ನು ಚಲಾಯಿಸಲಿಕ್ಕೆ ಯಾರೂ ಹಿಂದುಳಿಯಬಾರದು. ಈ ಬಾರಿ ಶೇ ೧೦೦ ರಷ್ಟು ಮತದಾನ ಮಾಡಿಸಲಿಕ್ಕೆ ಅಗತ್ಯವಾಗಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ನಿರ್ಭಿತಿಯಿಂದ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಬೇಕು. ರೈತಾಪಿ ವರ್ಗದವರು ಮತದಾನದಿಂದ ದೂರ ಉಳಿಯಬಾರದು ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರ್, ನಗರಸಭಾ ಆಯುಕ್ತ ಹನುಮಂತರಾಜು, ನರೇಗಾ ಯೋಜನೆ ಸಹಾಯಕ ನಿರ್ದೇಶಕ ಶ್ರೀನಾಥ್‌ಗೌಡ, ಬೋದಗೂರು ವೆಂಕಟಸ್ವಾಮಿರೆಡ್ಡಿ, ಜನಾರ್ಧನಮೂರ್ತಿ, ಅನ್ಸರ್ ಹಾಜರಿದ್ದರು.

ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಬೆಂಬಲಿಗರ ಅಸಮಾಧಾನ

0

ನಗರದ ಕಾಂಗ್ರೆಸ್ ಭವನದಲ್ಲಿ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರ ಪರವಾಗಿ ಮತಯಾಚನೆ ಮಾಡಲು ಬುಧವಾರ ಆಯೋಜಿಸಿದ್ದ ಚುನಾವಣಾ ಪ್ರಚಾರದ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಅವರ ಬೆಂಬಲಿಗರ ಅಸಮಾಧಾನವು ಸಚಿವ ಡಿ.ಕೆ.ಶಿವಕುಮಾರ್ ಮತ್ತು ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರಿಗೆ ಮುಜುಗರವನ್ನುಂಟುಮಾಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, “ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ೨೦ ಕ್ಕೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕಾಗಿದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಿನ್ನಮತ ಮರೆತು ಮೈತ್ರಿ ಅಭ್ಯರ್ಥಿಯ ಗೆಲುವಿಗಾಗಿ ಕೆಲಸ ಮಾಡಬೇಕು ಎಂದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ, “ಕಾಂಗ್ರೆಸ್ ಪಕ್ಷವನ್ನು ಉಳಿಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಂಸದರು ನಮ್ಮನ್ನು ಕಡೆಗಣಿಸಿಬಿಟ್ಟರು. ಅವರದೇ ಒಂದು ಗುಂಪು ಆಗಿಬಿಟ್ಟಿದೆ. ಕಳೆದ ೭ ಚುನಾವಣೆಗಳಲ್ಲಿ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಅವರನ್ನು ಬೆಂಬಲಿಸಿದ್ದೇನೆ. ಕಾಂಗ್ರೆಸ್ ಪಕ್ಷ ಯಾರ ಜೇಬನಲ್ಲಿ ಇಲ್ಲ, ಇರಬಾರದು. ನಾನು ನಿಮ್ಮ ಹಂಗಿನಲ್ಲಿ ಇಲ್ಲ” ಎಂದು ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
“ನನಗೆ ದೇವರಂತಿದ್ದ ಮಾಜಿ ಲೋಕಸಭಾ ಸದಸ್ಯ ದಿ.ಕೃಷ್ಣರಾವ್ ಅವರೊಂದಿಗಿದ್ದ ಉತ್ತಮ ಸಂಬಂಧವನ್ನು ನೀವು ಉಳಿಸಿಕೊಳ್ಳಲಿಲ್ಲ. ನಿಮ್ಮ ಕಡೆಯ ಚುನಾವಣೆಯಾದರೆ ಹೇಳಿಬಿಡಿ, ಕಾಂಗ್ರೆಸ್‌ಗೆ ಓಟ್ ಹಾಕಿ ಸುಮ್ಮನಾಗಿ ಬಿಡುತ್ತೇವೆ. ನಿಮ್ಮ ನಡುವಳಿಕೆಗಳಿಂದ ಕಣ್ಣಲ್ಲಿ ರಕ್ತ ಬಂದಿದೆ. ನಮಗಿಂತ ಮುಂಚೆ ಜೆಡಿಎಸ್‌ನವರು ಪ್ರಚಾರದಲ್ಲಿ ತೊಡಗಿದ್ದಾರೆ. ನೀವು ಕಾಂಗ್ರೆಸ್ ನಾಯಕರೋ ಜೆಡಿಎಸ್ ನಾಯಕರೋ ಗೊತ್ತಾಗುತ್ತಿಲ್ಲ. ನಮ್ಮ ಕ್ಷೇತ್ರದ ಆರ್ಥಿಕ ಅಭಿವೃದ್ಧಿಗೆ ತೊಂದರೆ ಮಾಡಿದ್ದೀರಿ” ಎಂದು ಕೆ.ಎಚ್.ಮುನಿಯಪ್ಪ ಅವರ ಮೇಲೆ ಬೇಸರ ವ್ಯಕ್ತಪಡಿಸಿದರು.
ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿ, “ಮೊದಲ ಬಾರಿ ಲೋಕಸಭೆಗೆ ಟಿಕೆಟ್ ಕೊಡಿಸಿದ್ದು ನೀವೇ, ಎರಡನೇ ಬಾರಿಗೆ ಚುನಾವಣೆಯಲ್ಲಿ ನೀವೇ ಖರ್ಚು ಮಾಡಿ ಗೆಲ್ಲಿಸಿದ್ದೀರಿ ಈ ಕೀರ್ತಿ ನಿಮಗೆ ಸಲ್ಲಬೇಕು. ನಿಮ್ಮನ್ನು ಚುನಾವಣೆಯಲ್ಲಿ ಸೋಲಿಸಲಿಕ್ಕೆ ನಾನು ಎಂದೂ ಕೆಲಸ ಮಾಡಿದವನಲ್ಲ. ಈ ಬಗ್ಗೆ ಪ್ರಮಾಣ ಕೂಡ ಮಾಡಿದ್ದೆ. ವಿ. ಮುನಿಯಪ್ಪನವರಿಗೆ ಓಟ್ ಹಾಕಬೇಡಿ ಎಂದು ಎಲ್ಲೂ ಹೇಳಿಲ್ಲ. ಒಂದು ವೇಳೆ ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿಯಾಗುತ್ತೇನೆ, ಎಂದು ವಿ.ಮುನಿಯಪ್ಪ ಅವರ ಅಸಮಾಧಾನಕ್ಕೆ ಉತ್ತರಿಸಿದ ಅವರು, ನೀವು ನನ್ನ ತಪ್ಪುಗಳನ್ನು ಹೇಳಿ ನಂತರ ದೆಹಲಿಗೆ ಹೋಗಬೇಕಾಗಿತ್ತು. ನೀವು ತಪ್ಪು ಮಾಡಿದಿರಿ” ಎಂದರು.
ಚಿಲಕಲನೇರ್ಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಶಶಿಧರ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಮುನಿರಾಜು, ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಸುಬ್ರಮಣಿ ಹಾಜರಿದ್ದರು.

ರೇಣುಕಾ ಎಲ್ಲಮ್ಮ ದೇವಿಯ ಹಸಿ ಕರಗ ಮಹೋತ್ಸವ

0

ನಗರದಲ್ಲಿ ರೇಣುಕಾ ಎಲ್ಲಮ್ಮ ದೇವಿಯ ಹಸಿ ಕರಗ ಮಹೋತ್ಸವವನ್ನು ಶನಿವಾರ ರಾತ್ರಿ ವಿಜೃಂಭಣೆಯಿಂದ ಆಚರಿಸಲಾಯಿತು.
ಕರಗ ಮಹೋತ್ಸವವು ಯುಗಾದಿಯ ದಿನದಂದು ಧ್ವಜಾರೋಹಣದಿಂದ ಆರಂಭವಾಗಿ ಆರುದಿನಗಳ ಕಾಲ ಅನೇಕ ಪೂಜಾ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ. ಯುಗಾದಿಯ ದಿನ ರಾತ್ರಿ ನಡೆಯುವ ಹಸಿಕರಗದ ರಚನೆ ಬಹು ಕಟ್ಟುನಿಟ್ಟಾದ ಹಾಗೂ ಸಂಪ್ರದಾಯಬದ್ಧವಾದುದು.
ಎಂ.ಮುನಿಕೃಷ್ಣ ಅವರು ಈ ಬಾರಿ ಕರಗವನ್ನು ಹೊರುತ್ತಿದ್ದು, ಸಂಜೆಯ ಸುಮಾರಿಗೆ ಕರಗ ಹೊತ್ತು ನಡೆಯುವ ಅವರಿಗೆ ವಪನ ಸಂಸ್ಕಾರ ಮಾಡಿ, ಕಂಕಣ ಕಟ್ಟಿ, ಕೈತುಂಬ ಕರಿ ಬಳೆ ತೊಡಿಸಿ, ಅಚ್ಚ ಮಲ್ಲಿಗೆಯ ಜಡೆಕುಚ್ಚುಗಳಿಂದ ಸಿಂಗರಿಸಿ, ಅರಿಶಿನದ ಸೀರೆ, ಕುಪ್ಪುಸ ಉಡಿಸಿ, ಆಭರಣಗಳಿಂದ ಅಲಂಕರಿಸಿದ್ದರು. ಅನಂತರ ಶಕ್ತಿಸ್ವರೂಪನಾದ ಅವರನ್ನು ಧೂಪ ದೀಪಗಳಿಂದ ಮಂಗಳವಾದ್ಯಗಳೊಂದಿಗೆ ಶಾಸ್ತ್ರೋಕ್ತವಾದ ಪೂಜೆ ನಡೆಸಿ, ಕೈಯಲ್ಲಿ ಕತ್ತಿ ಹಿಡಿದ ಅಂಗರಕ್ಷಕರ ತಂಡದ ವೀರಕುಮಾರರ ಕಾವಲಿನಲ್ಲಿ ದೇವಸ್ಥಾನಕ್ಕೆ ಕರೆತಂದರು.
ಕರಗವನ್ನು ಹೊತ್ತಮೇಲೆ ಮತ್ತೊಮ್ಮೆ ವಿಶೇಷ ಮಂಗಳಾರತಿಯಾದ ನಂತರ ಸ್ತುತಿಪದ್ಯಗಳನ್ನು ಹೇಳುವ ಪೂಜಾರಿ ಹಾಗೂ ವೀರಕುಮಾರರ ರಕ್ಷಣೆಯಲ್ಲಿ ಗುಡಿಯ ಅಂಗಳ ಬಿಟ್ಟ ಕರಗ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬೆಳಗಿನ ಜಾವಕ್ಕೆ ಮತ್ತೆ ಗರ್ಭಗುಡಿ ಪ್ರವೇಶಿಸಿದರು.
ಕರಗವನ್ನು ಸ್ವಾಗತಿಸಲು ಬಹುತೇಕರು ಮನೆಗಳ ಮುಂದೆ ರಂಗವಲ್ಲಿಯನ್ನು ಇಟ್ಟಿದ್ದು, ಕರಗ ಬಂದ ಮೇಲೆ ಆರತಿ ಬೆಳಗಿ ಪೂಜಿಸಿ ಮಲ್ಲಿಗೆ ಹೂಗಳನ್ನು ಅರ್ಪಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳಿಂದ ಸಂಭ್ರಮಾಚರಣೆ

0

ಸಮಗ್ರ ಕೃಷಿ ಆದಾರಿತ ನೀರಾವರಿ ಕೆ.ಸಿ.ವ್ಯಾಲಿ ಹಾಗು ಎಚ್.ಎನ್ ವ್ಯಾಲಿ ಯೋಜನೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿರುವುದು ಸ್ವಾಗತಾರ್ಹ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾದ್ಯಕ್ಷ ಭಕ್ತರಹಳ್ಳಿ ಭೈರೇಗೌಡ ಹೆಳಿದರು.
ನಗರದ ಬಸ್ ನಿಲ್ದಾಣದ ಬಳಿಯಿರುವ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಚೇರಿಯ ಮುಂಭಾಗದಲ್ಲಿ ಶುಕ್ರವಾರ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಆಚರಿಸಿ ಮಾತನಾಡಿದರು.
ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆ ಬರಡು ಪ್ರದೇಶವಾಗಿದ್ದು, ಈ ಬಾಗದ ಜನತೆ ಶಾಶ್ವತ ನೀರಾವರಿಗಾಗಿ ಹಲವಾರು ಹೋರಾಟಗಳನ್ನು ನಡೆಸಿದ ಪರಿಣಾಮ ಸುಮಾರು ೧೨೮೦ ಕೋಟಿ ರೂಗಳ ವೆಚ್ಚದಲ್ಲಿ ಕೆಸಿ ವ್ಯಾಲಿ ಹಾಗು ಸುಮಾರು ೮೯೨ ಕೋಟಿ ವೆಚ್ಚದಲ್ಲಿ ಎಚ್.ಎನ್ ವ್ಯಾಲಿ ಯೋಜನೆಯನ್ನು ರೂಪಿಸಲಾಗಿತ್ತು. ಮೊದಲನೆ ಹಂತದಲ್ಲಿ ಕೋಲಾರದ ಕೆರೆಗೆ ನೀರನ್ನು ಬಿಟ್ಟಾಗ ಕೆಲವರು ಸತ್ತ ಮೀನು ಸೇರಿದಂತೆ ಹಾವುಗಳನ್ನು ಹಾಕಿ ಜನರಿಗೆ ಕೆಸಿ ವ್ಯಾಲಿ ಯೋಜನೆ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಿ ರಾಜ್ಯ ಹೈಕೋರ್ಟ್ ನಲ್ಲಿ ದಾವೆ ಹೂಡಿ ವಿಫಲವಾದ ನಂತರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಇದೀಗ ವೈಜ್ಞಾನಿಕವಾಗಿ ನೀರನ್ನು ಪರೀಕ್ಷಿಸಿದಾಗ ಕೆಸಿ ವ್ಯಾಲಿ ಹಾಗು ಎಚ್.ಎನ್. ವ್ಯಾಲಿ ನೀರು ಪರಿಶುದ್ದವಾಗಿದ್ದು ದಾವೆ ಹೂಡಿದ್ದವರು ಅಗತ್ಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸದೇ ಇರುವುದರಿಂದ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಇದೀಗ ಹಲವು ದಿನಗಳಿಂದ ರೈತರಲ್ಲಿ ಕಾಡುತ್ತಿದ್ದ ನೀರಿನ ಸಮಸ್ಯೆ ತ್ವರಿತವಾಗಿ ಬಗೆಹರಿಯಲಿದ್ದು ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಪ್ರಾರಂಭವಾಗಲಿದೆ. ಇದರಿಂದ ಬಯಲುಸೀಮೆ ಭಾಗದ ರೈತರ ಜೀವನ ಹಸನಾಗಲಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ಮುನಿನಂಜಪ್ಪ, ಪದಾಧಿಕಾರಿಗಳಾದ ವೇಣುಗೋಪಾಲ್. ರಾಮಕೃಷ್ಣಪ್ಪ, ನರಸಿಂಹಮೂರ್ತಿ, ಬಿ.ವಿ.ಮುನೇಗೌಡ, ಎಸ್.ಎಂ.ನಾರಾಯಣಸ್ವಾಮಿ, ದೇವರಾಜು ಮತ್ತಿತರರು ಹಾಜರಿದ್ದರು.

ಪ್ರಾದೇಶಿಕ ಪಕ್ಷದಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ

0

ರಾಜ್ಯದಲ್ಲಿ ಬಲವಾದ ಪ್ರಾದೇಶಿಕ ಪಕ್ಷವೊಂದು ಅಧಿಕಾರಕ್ಕೆ ಬಂದಾಗ ಮಾತ್ರ ಅಭಿವೃದ್ದಿ ಸಾಧ್ಯ ಎಂದು ನಟ ಉಪೇಂದ್ರ ಹೇಳಿದರು.
ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯ ಪರ ಮತ ಪ್ರಚಾರ ನಡೆಸುವ ಮಾರ್ಗ ಮದ್ಯೆ ಶುಕ್ರವಾರ ನಗರದ ಬಸ್ ನಿಲ್ದಾಣದಲ್ಲಿ ಕಾರಿಳಿದು ನಾಗರೀಕರನ್ನುದ್ದೇಶಿಸಿ ಅವರು ಮಾತನಾಡಿದರು.
ಕೋಲಾರ ಲೋಕಸಭಾ ಚುನಾವಣೆಯ ಉತ್ತಮ ಪ್ರಜಾಕೀಯ ಪಕ್ಷದಿಂದ ಅಭ್ಯರ್ಥಿಯಾಗಿರುವ ಆಂಜಿನಪ್ಪರಿಗೆ ಹೆಚ್ಚಿನ ಮತ ನೀಡಿ ಬೆಂಬಲಿಸುವಂತೆ ಅವರು ಮನವಿ ಮಾಡಿದರು.
ನಮ್ಮ ಪಕ್ಷದ ಗುರುತು ಆಟೋ ರಿಕ್ಷಾ ಆಗಿದ್ದು ಮತದಾರರ ಮಾತೇ ಪಕ್ಷದ ವೇದವಾಕ್ಯ ಮತದಾರರು ಹೇಳಿದಂತೆ ಆಳ್ವಿಕೆ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಂಜಿನಪ್ಪ ಹಾಜರಿದ್ದರು.

ಫೋಷಕರಿಗೆ ಮತದಾನ ಮಾಡುವ ಬಗ್ಗೆ ಪತ್ರ ಬರೆದಿರುವ ವಸತಿ ನಿಲಯದ ವಿದ್ಯಾರ್ಥಿಗಳು

0

ಲೋಕಸಭೆ ಚುನಾವಣೆಯಲ್ಲಿ ಮತದಾನ ಹೆಚ್ಚಳಕ್ಕೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಗಳು ವಸತಿ ಶಾಲೆ, ವಿದ್ಯಾರ್ಥಿ ನಿಲಯದ ಮಕ್ಕಳಿಂದ ಪಾಲಕರಿಗೆ ಪತ್ರ ಬರೆಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ತಾಲ್ಲೂಕಿನ ಹನ್ನೊಂದನೇ ಮೈಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳು ಸಾಮೂಹಿಕವಾಗಿ ತಮ್ಮ ತಮ್ಮ ಪಾಲಕರಿಗೆ ಅಂಚೆ ಪತ್ರ ಬರೆದು ತಪ್ಪದೆ ಮತದಾನ ಮಾಡಲು ಮನವಿ ಮಾಡಿಕೊಂಡಿದ್ದಾರೆ. ದೇಶದ ಅಭಿವೃದ್ಧಿ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ತಪ್ಪದೇ ಮತದಾನ ಮಾಡಿ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಖಚಿತಪಡಿಸಿಕೊಳ್ಳಿ. ಒಂದೊಮ್ಮೆ ತಮ್ಮ ಹೆಸರು ಕೈಬಿಟ್ಟು ಹೋಗಿದ್ದರೆ ಈಗಲೇ ನೋಂದಾಯಿಸಿಕೊಳ್ಳಿ. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ಚುನಾವಣೆಯ ಮತದಾನದ ದಿನದಂದು ಉದಾಸೀನ ತೋರದೆ ಮತದಾನ ಮಾಡಿ ಎಂದು ಪತ್ರ ಬರೆದಿದ್ದಾರೆ.
ಮುಖ್ಯಶಿಕ್ಷಕಿ ತುಬ್ರಾ ಮುಬೀನ್ ಮಾತನಾಡಿ, ಪ್ರಜಾಪ್ರಭುತ್ವ ಯಶಸ್ವಿಗೊಳ್ಳಬೇಕಾದಲ್ಲಿ ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ವಿದ್ಯಾರ್ಥಿಗಳು ತಮ್ಮ ಊರಿಗೆ ಹೋದಾಗ ಪಾಲಕರು, ನೆರೆಹೊರೆಯವರಿಗೆ ಮತದಾನದ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಹತ್ತನೇ ತರಗತಿಯ ೫೮ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಕರಾದ ಮುರಳೀಧರ, ಈಶ್ವರರೆಡ್ಡಿ, ಗಂಗಾಧರ, ನಾಗರಾಜ ಹಾಜರಿದ್ದರು.

ಬೀದಿ ನಾಟಕದ ಮೂಲಕ ಮತದಾನದ ಬಗ್ಗೆ ಅರಿವು

0

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮತದಾನದ ಮಹತ್ವದ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಶಿಡ್ಲಘಟ್ಟದ ಬಸ್ ನಿಲ್ದಾಣದಲ್ಲಿ ಬುಧವಾರ ಬೀದಿನಾಟಕ ಪ್ರದರ್ಶನ ಮತ್ತು ಜಾನಪದ ಗೀತೆಗಳ ಮೂಲಕ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಡ್ಡಾಯ ಮತದಾನದ ಮಹತ್ವ, ಯಾವುದೇ ಆಮಿಷಗಳಿಗೆ ಬಲಿಯಾಗದೇ ಮತದಾನ ಮಾಡುವ ಬಗ್ಗೆ, ಮತದಾನ ಮಾಡುವ ಮುನ್ನ ಎಂತಹ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು, ಅಮಿಷಗಳನ್ನು ಕಂಡಲ್ಲಿ ಮತದಾರರು ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾನಪದ ಗೀತೆ, ಬೀದಿ ನಾಟಕ ಮೂಲಕ ಜಾಗೃತಿ ಮೂಡಿಸಲಾಯಿತು.
ಮತದಾನ ಸಂವಿಧಾನಾತ್ಮಕ ಹಕ್ಕಾಗಿದ್ದು, ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಬಲವರ್ಧನೆ ಮಾಡಬೇಕು ಪ್ರಜಾಪ್ರಭುತ್ವದಲ್ಲಿ ಮತಹಕ್ಕು ಚಲಾಯಿಸುವುದು ೧೮ ವರ್ಷ ತುಂಬಿದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾದ ಮತದಾರರು ಚುನಾವಣೆಯಲ್ಲಿ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದರು.
ಪ್ರಜಾಪ್ರಭುತ್ವದಲ್ಲಿ ಮತದಾನ ಮಹತ್ವ ಕಾರ್ಯವಾಗಿದ್ದು ಈ ಕಾರ್ಯವನ್ನು ಕಡ್ಡಾಯವಾಗಿ ಮಾಡಲೇಬೇಕು ಎಂಬುದನ್ನು ಬೀದಿ ನಾಟಕದ ಮೂಲಕ ಸಿದ್ದಾರ್ಥ ಕಲಾತಂಡದ ಕಲಾವಿದರು ಮನೋಜ್ಞವಾಗಿ ಅಭಿನಯಿಸಿ ಅರಿವು ಮೂಡಿಸಿದರು.
“ತಾಲ್ಲೂಕಿನಾದ್ಯಂತ ಹತ್ತು ಕಡೆ ಒಂದು ವಾರದ ಕಾಲ ಮತದಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ನಮ್ಮ ಜಿಲ್ಲೆಯ ಜನರು ಅತಿ ಹೆಚ್ಚು ಮತದಾನ ಮಾಡಿ ಪ್ರಜಾತಂತ್ರದ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುವು ನಮ್ಮ ಉದ್ದೇಶವಾಗಿದೆ” ಎಂದು ಸ್ವೀಪ್ ಪ್ರಚಾರ ಸಮಿತಿ ತಾಲ್ಲೂಕು ಅಧ್ಯಕ್ಷ ಹಾಗೂ ತಾಲ್ಲೂಕು ಪಂಚಾಯಿತಿ ಇಒ ಬಿ.ಶಿವಕುಮಾರ್ ತಿಳಿಸಿದರು.
ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಬೋಜಣ್ಣ, ನಗರಸಭೆ ಆಯುಕ್ತ ಹನುಮಂತರಾಜು, ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಶ್ರೀನಾಥ್ ಗೌಡ, ಸಿದ್ದಾರ್ಥ ಕಲಾತಂಡದ ಕಲಾವಿದರು ಹಾಜರಿದ್ದರು.

ಕನ್ನಮಂಗಲ ಸರ್ಕಾರಿ ಶಾಲೆಗೆ ಕಂಪ್ಯೂಟರುಗಳು

0

ತಾಲ್ಲೂಕಿನ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರು ನಾಲ್ಕು ಕಂಪ್ಯೂಟರ್ ಗಳು, ಬ್ಯಾಟರಿ ಮತ್ತು ಸೋಲಾರ್ ಯುಪಿಎಸ್ ಪ್ಯಾನಲ್ ಕಳುಹಿಸಿದ್ದಾರೆ.
“ನಮ್ಮ ಶಾಲೆಯ ಮಕ್ಕಳ ಹಬ್ಬವನ್ನು ಫೆಬ್ರುವರಿ ೧೧ ರಂದು ಆಚರಿಸಿದ್ದೆವು. ಅದಕ್ಕೆ ಜಿಲ್ಲಾಧಿಕಾರಿಯವರನ್ನು ಆಹ್ವಾನಿಸಲು ಹೋಗಿದ್ದೆವು. ನಮ್ಮ ಮಕ್ಕಳ ಬರಹಗಳ ಸಂಕಲನ “ಶಾಮಂತಿ” ಪುಸ್ತಕವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿ ಶಾಲೆಗೆ ಬರಲು ಒಪ್ಪಿದರು. ಬಂದವರು ನಮ್ಮ ಶಾಲೆಯ ವಾತಾವರಣ, ಸಮುದಾಯದೊಂದಿಗಿನ ಸೌಹಾರ್ಧ ಸಂಬಂಧ ಕಂಡರು. ಆ ವೇಳೆ ನಾವು ಶಾಲೆಗೆ ಕಂಪ್ಯೂಟರ್ ಬೇಕೆಂದು ಮನವಿ ಸಲ್ಲಿಸಿದೆವು. ಅವರು ಕೊಡಿಸುವುದಾಗಿ ಭರವಸೆ ನೀಡಿದ್ದರು. ಈಚೆಗೆ ನಿರ್ಮಿತಿ ಕೇಂದ್ರದ ಮೂಲಕ ಶಾಲೆಗೆ ನಾಲ್ಕು ಕಂಪ್ಯೂಟರ್ ಗಳು, ಟೇಬಲ್ ಗಳು, ೨ ಬ್ಯಾಟರಿ, ೨ ಸೋಲಾರ್ ಪ್ಯಾನಲ್, ಒಂದು ಯುಪಿಎಸ್ ಕಳುಹಿಸಿಕೊಟ್ಟಿದ್ದಲ್ಲದೆ. ಸಂಬಂಧಿಸಿದವರು ಬಂದು ಎಲ್ಲವನ್ನೂ ಸಮರ್ಪಕವಾಗಿ ಅಳವಡಿಸಿಕೊಟ್ಟಿದ್ದಾರೆ” ಎಂದು ಮುಖ್ಯ ಶಿಕ್ಷಕ ಕೆ.ವಿ.ಚೌಡರೆಡ್ಡಿ ತಿಳಿಸಿದರು.
“ಕಂಪ್ಯೂಟರ್ ಗಳು ಶಾಲೆಗೆ ಬಂದಿರುವುದರಿಂದ ಮಕ್ಕಳು ಮತ್ತು ಶಿಕ್ಷಕರಲ್ಲಿ ಉತ್ಸಾಹ ಮೂಡಿದೆ. ಕಂಪ್ಯೂಟರ್ ಕಲಿಕೆಗೆ ಹಾಗೂ ಪಾಠಕ್ಕೆ ಸಂಬಂಧಿಸಿದ ವೀಡಿಯೋ ತೋರಿಸಲು ಕಲಿಕೋಪಕರಣದಂತೆ ಬಳಸಲು ಅನುಕೂಲವಾಗುತ್ತದೆ. ಸೋಲಾರ್ ಯುಪಿಎಸ್ ಕೊಟ್ಟಿರುವುದರಿಂದ ವಿದ್ಯುತ್ ಮೇಲೆ ಅವಲಂಬನೆಯಿಲ್ಲ. ಮಕ್ಕಳು ಸಂತೋಷಪಟ್ಟು ಜಿಲ್ಲಾಧಿಕಾರಿಗಳಿಗೆ ಕೃತಜ್ಞತೆಯನ್ನು ತಿಳಿಸಿದ್ದಾರೆ. ನಮ್ಮ ಶಾಲೆಗೆ ಈ ರೀತಿಯಲ್ಲಿ ಸಹಕಾರ ಸಿಗುವಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಹಾಗೂ ಸ್ನೇಹ ಯುವಕರ ಸಂಘದ ಸದಸ್ಯರ ಸಹಕಾರ ಮರೆಯಲಾಗದು” ಎಂದು ಅವರು ಹೇಳಿದರು.

ತಂದೆ ಅಗಲಿದ ನೋವಿನಲ್ಲಿಯೂ ವಿಜ್ಞಾನ ಪರೀಕ್ಷೆಯನ್ನು ಬರೆದ ವಿದ್ಯಾರ್ಥಿನಿ

0

ತಂದೆ ತೀರಿಕೊಂಡ ದುಃಖದಲ್ಲಿಯೂ ಚೆನ್ನಾಗಿ ಓದಬೇಕೆಂಬ ತಂದೆಯ ಆಸೆಯನ್ನು ಈಡೇರಿಸಲು ಬಾಲಕಿಯು ಎಸ್.ಎಸ್.ಎಲ್.ಸಿ ವಿಜ್ಞಾನ ಪರೀಕ್ಷೆಯನ್ನು ಬರೆದಿರುವ ಮನಮಿಡಿಯುವ ಸಂಗತಿ ಮಂಗಳವಾರ ನಡೆದಿದೆ.
ನಗರದ ಕ್ರೆಸೆಂಟ್ ಶಾಲೆಯ ವಿದ್ಯಾರ್ಥಿನಿ ನವಾಜ್ ಉನ್ನೀಸಾ ವಿಜ್ಞಾನ ವಿಷಯಕ್ಕಾಗಿ ಓದಿ ಸಿದ್ದತೆ ಮಾಡಿಕೊಂಡಿರುವಾಗ ಆಕೆಯ ತಂದೆ ತಬರಖಲ್ಲಾಹ್ (೪೫) ಬೆಳಗಿನ ಜಾವ ನಿಧನರಾಗಿದ್ದಾರೆ. ಮಧ್ಯ ರಾತ್ರಿ ಕಾಣಿಸಿಕೊಂಡ ಎದೆನೋವಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರು ಬೆಂಗಳೂರಿಗೆ ಕರೆದುಕೊಂಡು ಹೋಗಲು ತಿಳಿಸಿದ್ದಾರೆ. ಆಂಬುಲೆನ್ಸ್ ನಲ್ಲಿಯೇ ಅವರು ಮೃತಪಟ್ಟಿದ್ದಾರೆ.
“ರಾತ್ರಿಯಿಡೀ ನಿದ್ದೆಯಿಲ್ಲದೆ, ತಂದೆ ಕಳೆದುಕೊಂಡ ನೋವಿನಿಂದ ಅಳುತ್ತಿದ್ದ ನಮ್ಮ ಶಾಲೆಯ ವಿದ್ಯಾರ್ಥಿನಿ ನವಾಜ್ ಉನ್ನೀಸಾಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದೆ. ಪರೀಕ್ಷೆ ಇನ್ನೊಮ್ಮೆ ಬರೆದರಾಯಿತು ಬಿಡಮ್ಮ ಅಂದೆ. ಆದರೆ ಈ ಮಗು ಆ ದುಃಖದಲ್ಲಿಯೂ ಪರೀಕ್ಷೆ ಬರೆಯುವೆನೆಂದಳು. ಆಕೆಯ ಧೈರ್ಯ ಮತ್ತು ತಂದೆಯ ಆಸೆಯನ್ನು ನೆರವೇರಿಸಬೇಕೆಂಬ ಅಧಮ್ಯ ಛಲ ಎಲ್ಲರಿಗೂ ಸ್ಫೂರ್ತಿಯಾಗಬೇಕು. ಮನೆಯಲ್ಲಿ ತಂದೆಯ ಜೀವವಿಲ್ಲದ ದೇಹವಿರುವಾಗ ಅಳುತ್ತಾ ಆಕೆ ಪರೀಕ್ಷೆ ಬರೆಯುವುದನ್ನು ಕಂಡು ನನ್ನ ಕಣ್ಣಲ್ಲೂ ನೀರು ಬಂತು. ಮಗು ಪರೀಕ್ಷೆ ಬರೆದು ಬಂದ ನಂತರ ಆ ತಂದೆಯ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು” ಎಂದು ದುಃಖಪೂರಿತವಾಗಿ ಕ್ರೆಸೆಂಟ್ ಶಾಲೆಯ ಮುಖ್ಯಸ್ಥ ತಮೀಮ್ ಅನ್ಸಾರಿ ತಿಳಿಸಿದರು.

ಜೆಡಿಎಸ್ ಕಾರ್ಯಕರ್ತರ ಸಭೆ – ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿರಲು ನಿರ್ಧಾರ

0

ತಾಲ್ಲೂಕಿನ ವರದನಾಯಕನಹಳ್ಳಿಯ ಪಟಾಲಮ್ಮ ದೇವಾಲಯದ ಆವರಣದಲ್ಲಿ ಸೋಮವಾರ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ, ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಒಕ್ಕೊರಲಿನಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರನ್ನು ಬೆಂಬಲಿಸಲು ತೀರ್ಮಾನಿಸಲಾಯಿತು.
“ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆದೇಶ ಪಾಲಿಸುವುದು ನಮ್ಮ ಕರ್ತವ್ಯ. ಅವರ ಸೂಚನೆಯಂತೆ ನಮ್ಮ ತಾಲ್ಲೂಕಿನವರೇ ಆದ ಕೆ.ಎಚ್.ಮುನಿಯಪ್ಪ ಅವರನ್ನು ಅತಿ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕಿದೆ. ಕಾಂಗ್ರೆಸ್ ಅನ್ನು ಇಷ್ಟು ದಿನ ವಿರೋಧಿಸಿದ್ದವರು ನಾವು. ಆದರೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಜನಹಿತವನ್ನು ಉದ್ದೇಶವಿಟ್ಟುಕೊಂಡು ಹಿರಿಯರು ಮಾಡಿದ ತೀರ್ಮಾನಕ್ಕೆ ನಾವು ಬದ್ಧರಾಗಿರಬೇಕು. ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ನನ್ನ ಮರ್ಯಾದೆಯನ್ನು ಉಳಿಸಿ” ಎಂದು ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
“ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಬಡವರು ತಮ್ಮ ಖಾತೆಗೆ ಹಾಣ ಹಾಕಿ ಎಂದಿರಲಿಲ್ಲ, ಆದರೆ ಅವರೇ ಹೊರದೇಶದಿಂದ ಕಪ್ಪು ಹಣ ತಂದು ಬಡವರ ಖಾತೆಗೆ ಸುರಿಯುತ್ತೇನೆಂದಿದ್ದರು. ನದಿ ಜೋಡಣೆ ಮಾಡುತ್ತೇನೆಂದಿದ್ದರು. ಶ್ರೀರಾಮ ಮಂದಿರ ನಿರ್ಮಾಣ ಬಿಜೆಪಿ ಚುನಾವಣಾ ಅಜೆಂಡಾ ಆಗಿದೆ. “ಹಿಂದುತ್ವ”ವನ್ನು ಜನರ ಮನಸ್ಸಿನಲ್ಲಿ ಹುಟ್ಟಾಕಿ ಹಿಟ್ಲರ್ ಆಡಳಿತ ನಡೆಸಿದ್ದಾರೆ. ದೇಶದ ಬಡವರ ಮೇಲೆ ಅವರಿಗೆ ನಿಜವಾದ ಕಳಕಳಿ ಇದ್ದರೆ, ರೈತರೊಂದಿಗೆ ಸಂವಾದಿಸಲಿ. ಅದನ್ನು ಬಿಟ್ಟು ಅವರು ಕಾರ್ಪೊರೇಟ್ ಕಂಪೆನಿಯವರೊಂದಿಗೆ ಸಂವಾದಿಸುತ್ತಾರೆ. ಮೋದಿಯವರ ಆಡಳಿತದ ವಿರುದ್ಧ ಹೋರಾಡಲು ಮಹಾಘಟಬಂಧನ್ ಮೂಲಕ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಸಮರ್ಥರಾಗಿದ್ದಾರೆ” ಎಂದು ನುಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, “ನಾವು ಕಾಂಗ್ರೆಸ್ ಗೆ ಮತ ನೀಡುತ್ತಿಲ್ಲ. ಸಮ್ಮಿಶ್ರ ಸರ್ಕಾರದ ಅಭ್ಯರ್ಥಿಗೆ ಮತ ಕೊಡುತ್ತಿದ್ದೇವೆ. ಬಿ.ಎನ್.ರವಿಕುಮಾರ್, ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೋಸ್ಕರ ಮತನೀಡುತ್ತೇವೆ. ನಮ್ಮ ಶಕ್ತಿ ತೋರಿಸುವ ಮೂಲಕ ಹಿರಿಯರ ಆದೇಶ ಮತ್ತು ಆದರ್ಶ ಪಾಲನೆಯನ್ನು ಮಾಡುವುದನ್ನು ತೋರಿಸಿಕೊಡಬೇಕಿದೆ. ನಮ್ಮ ನಾಯಕರಾದ ಬಿ.ಎನ್.ರವಿಕುಮಾರ್ ಅವರಿಗೆ ಗೌರವ ತಂದುಕೊಡುವ ಕೆಲಸವನ್ನು ಮಾಡುವುದಾಗಿ ಕಾರ್ಯಕರ್ತರ ಪರವಾಗಿ ಭರವಸೆ ನೀಡುತ್ತೇನೆ” ಎಂದು ಹೇಳಿದರು.
ಜಾಮಿಯಾ ಮಸೀದಿ ಕಾರ್ಯದರ್ಶಿ ಹೈದರಾಲಿ ಮಾತನಾಡಿ, ಬಿ.ಜೆ.ಪಿ ಪಕ್ಷವನ್ನು ಸೋಲಿಸುವುದು ಹಾಗೂ ಬಿ.ಎನ್.ರವಿಕುಮಾರ್ ಅವರನ್ನು ಬೆಂಬಲಿಸುವ ಉದ್ದೇಶದಿಂದ ಕೆ.ಎಚ್.ಮುನಿಯಪ್ಪ ಅವರಿಗೆ ಮತನೀಡುವುದಾಗಿ ಘೋಷಿಸಿದರು.
ನಂದನವನಂ ಶ್ರೀರಾಮರೆಡ್ಡಿ ಮಾತನಾಡಿ, ಸಮ್ಮಿಶ್ರ ಸರ್ಕಾರವಿದ್ದರೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರಿಗಾಗಿ, ಬಡವರಿಗಾಗಿ ಹಲವು ಯೋಜನೆಗಳನ್ನು ರೂಪಿಸಲು ಯಶಸ್ವಿಯಾಗಿದ್ದಾರೆ. ಹೊಂದಾಣಿಕೆ ಮಾಡಿಕೊಂಡು ವಿರೋಧಿಗಳ ತಂತ್ರಗಾರಿಕೆಯ ನಡುವೆಯೂ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ಪಕ್ಷದ ಹಿರಿಯರ ಸೂಚನೆಯ ಮೇರೆಗೆ ನಮ್ಮ ಮತವನ್ನು ಚಲಯಿಸಬೇಕಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮುಂದುವರೆಯಬೇಕು ಮತ್ತು ಕ್ಷೇತ್ರದಲ್ಲಿ ಬಿ.ಎನ್.ರವಿಕುಮಾರ್ ಅವರನ್ನು ಬೆಂಬಲಿಸಬೇಕು ಅದಕ್ಕಾಗಿ ನಮ್ಮ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಎಂದು ಹೇಳಿದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಬಿ.ವೆಂಕಟೇಶ್, ಮುಖಂಡರಾದ ಆದಿಲ್ ಪಾಷ, ಹುಜಗೂರು ಎಂ.ರಾಮಣ್ಣ, ಮುತ್ತೂರು ಕೆಂಪೇಗೌಡ, ಜೆ.ವಿ.ಸದಾಶಿವ, ಸಲೀಂ ಅಹಮದ್, ಹೊಸಪೇಟೆ ಶಶಿಕುಮಾರ್, ಕದಿರಿ ಯೂಸುಫ್, ಎಂ.ವಿ.ಗೋಪಾಲಪ್ಪ, ಕೆ.ಲಕ್ಷ್ಮೀನಾರಾಯಣರೆಡ್ಡಿ, ರಾಜಶೇಖರ್, ಆರ್.ಎ.ಉಮೇಶ್, ಅಮೀರ್ ಜಾನ್, ತಾದೂರು ರಘು, ಮುಗಿಲಡಿಪಿ ನಂಜಪ್ಪ ಹಾಜರಿದ್ದರು.

ಮತದಾನ ಜಾಗೃತಿ ರಥಕ್ಕೆ ಚಾಲನೆ

0

ಕ್ಷೇತ್ರದ ಯಾರೊಬ್ಬರೂ ಮತದಾನದಿಂದ ದೂರವುಳಿಯಬಾರದು, ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಶೇ ೧೦೦ ರಷ್ಟು ಮತದಾನವಾಗಬೇಕು ಎಂಬ ನಿಟ್ಟಿನಲ್ಲಿ ಮತದಾನ ಜಾಗೃತಿ ರಥದ ಮೂಲಕ ಜನರಲ್ಲಿ ಮನವರಿಕೆ ಮಾಡಿಕೊಡಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಇಓ, ಸ್ವೀಪ್ ಸಮಿತಿ ಅಧ್ಯಕ್ಷ ಬಿ.ಶಿವಕುಮಾರ್ ಹೇಳಿದರು.
ನಗರದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಸೋಮವಾರ ಮತದಾನ ಜಾಗೃತಿ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
೨೦೧೯ ನೇ ಸಾಲಿನ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರಾದ್ಯಂತ ಸಂಚರಿಸುವ ಮತದಾನ ರಥ ಜನರಲ್ಲಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತದೆ.
ಸಹಾಯಕ ಚುನಾವಣಾಧಿಕಾರಿ ಶಿವಕುಮಾರ್, ತಹಶೀಲ್ದಾರ್ ಎಸ್.ಅಜಿತ್‌ಕುಮಾರ್ ರೈ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಸಿ.ಎಸ್.ಶ್ರೀನಾಥಗೌಡ ಹಾಜರಿದ್ದರು

ನಟರಾಜೋತ್ಸವ ಮತ್ತು ಗಾನಾಂಜಲಿ ಸಂಗೀತ ಕಾರ್ಯಕ್ರಮ

0

ಸಂಗೀತ ನಾಟ್ಯ ಸಂಸ್ಕೃತಿಗಳು ಇಡೀ ವಿಶ್ವ ಜನಾಂಗವನ್ನು ಅನಾದಿಕಾಲದಿಂದಲೂ ಪೊರೆಯುತ್ತ ಬಂದಿದೆ. ಈ ಸಂಗೀತವನ್ನು ಸಮಾಜಕ್ಕೆ ದಯಪಾಲಿಸಿದ ನಮ್ಮ ಅನಾದಿ ಪರಂಪರೆಗೆ, ಇಂದಿಗೂ ಸಂಗೀತವನ್ನು ಭಕ್ತಿ ಶ್ರದ್ಧೆಗಳಿಂದ ಕಲಿತು ಎಲ್ಲೆಲ್ಲೂ ಗಾನ ಗಂಗೆಯನ್ನು ಹರಿಸುತ್ತಿರುವ ಆಚಾರ್ಯ ಪರಂಪರೆಗೆ, ಕಲಾವಿದ ಪರಂಪರೆ ಮತ್ತು ಕಲಾರಸಿಕ ಪರಂಪರೆಗಳಿಗೆ ನಾವು ಕೃತಜ್ಞರಾಗಿರೋಣ ಎಂದು ಮಾಜಿ ಯೋಧ ಎಸ್‌.ವಿ.ಅಯ್ಯರ್‌ ತಿಳಿಸಿದರು.
ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಶ್ರೀ ಮಯೂರಿ ನಾಟ್ಯಕಲಾ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಟರಾಜೋತ್ಸವ ಮತ್ತು ಗಾನಾಂಜಲಿ ಸಂಗೀತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಒಂದು ಕಾಲದಲ್ಲಿ ದೇಗುಲಗಳೇ ಸಂಗೀತ ಸಂಸ್ಕೃತಿಗಳನ್ನು ಪಸರಿಸುವ ಕೇಂದ್ರಗಳಾಗಿದ್ದವು. ಇಂದಿನ ಒತ್ತಡದ ಪ್ರಾಪಂಚಿಕ ಬದುಕಿನಲ್ಲಿ ಸಂಗೀತವೆಂಬುದೊಂದೇ ನಮಗೆ ಸುಲಭವಾಗಿ ದಕ್ಕುವ ವಿಶ್ರಾಂತ ತಾಣ. ಇವೆಲ್ಲದರ ಜೊತೆಗೆ ನಮ್ಮ ಪ್ರಕೃತಿಯಲ್ಲಿ ಹಾಸುಹೊಕ್ಕಾಗಿರುವ ಸಂಗೀತ ನಮ್ಮ ಬದುಕಿನಿಂದ ಕಳೆದುಹೋಗದಂತೆ ಎಚ್ಚರವಹಿಸಿ ನಮ್ಮ ಮತ್ತು ಮುಂದಿನ ತಲೆಮಾರುಗಳ ಬದುಕು ಸಂಗೀತವೆಂಬ ಶ್ರೇಷ್ಠತೆಯನ್ನು ಎಂದೆಂದೂ ಅನುಭಾವಿಸುವ ಅವಕಾಶವನ್ನು ಜೀವಂತವಾಗಿರಿಸಲು ಪ್ರಯತ್ನವನ್ನು ಸಹಾ ಈ ಆಚರಣೆ ಪ್ರೇರೇಪಿಸುವಂತದ್ದಾಗಿದೆ ಎಂದು ಹೇಳಿದರು.
ವಿದುಷಿ ಎಸ್.ವಿ.ಭಾಗ್ಯಲಕ್ಷ್ಮಿ ಅಯ್ಯರ್ ಮಾತನಾಡಿ, ನೃತ್ಯ ಹಾಗೂ ಸಂಗೀತದಂತಹ ಕಲಾ ಕ್ಷೇತ್ರಗಳಿಂದ ಗುರು ಶಿಷ್ಯ ಪರಂಪರೆಯ ಪಾವಿತ್ರ್ಯತೆ ಇನ್ನೂ ಉಳಿದಿದೆ. ಮಕ್ಕಳಿಗೆ ಎಳೆಯ ವಯಸ್ಸಿನಿಂದಲೇ ವಿವಿಧ ಕಲೆಗಳನ್ನು ಕಲಿಯಲು ಪ್ರೋತ್ಸಾಹಿಸಬೇಕು. ಇದರಿಂದ ಕನಿಷ್ಠ ಕಲೆಯನ್ನು ಆಸ್ವಾದಿಸುವ ಮನಸ್ಥಿತಿ ಅವರಲ್ಲಿ ರೂಢಿಸಿದಂತಾಗುತ್ತದೆ ಎಂದು ನುಡಿದರು.
ಬೆಳಿಗ್ಗೆಯಿಂದ ನಡೆದ ಗಾನಾಂಜಲಿ ಸಂಗೀತ ಕಾರ್ಯಕ್ರಮದಲ್ಲಿ ಶೋಭಿತ, ಭುವನ, ನಾಗಮಣಿ, ಶೈಲಜ, ಮಿಲನ, ಯಶಿತ, ನಿತ್ಯಶ್ರೀ, ಪಲ್ಲವಿ, ಮಾನಸ, ಪೂರ್ಣಶ್ರೀ, ಅನನ್ಯರಾಜು, ಅನನ್ಯ, ಕುಸುಮ, ಶ್ರಾವಣಿ, ಮಹಾಲಕ್ಷ್ಮಿ, ತನ್ಮಯಿಸಿಂಗ್, ವಾಸವಿ, ಹಿಮಬಿಂದು, ತನುಶ್ರೀ, ಎಸ್.ವಿ.ಭಾಗ್ಯಲಕ್ಷ್ಮಿ ಅಯ್ಯರ್, ಮಂಜುಳಾ ಜಗದೀಶ್, ಚಿಂತಲಪಲ್ಲಿ ಸೋಮಶೇಖರ್, ಸಂಗೀತವನ್ನು ನಡೆಸಿಕೊಟ್ಟರೆ, ಸಂಜೆ ನಾಟ್ಯಾಂಜಲಿ ಭರತನಾಟ್ಯ ಕಾರ್ಯಕ್ರಮದಲ್ಲಿ ಪರಿಣಿತ, ನಿಹಾರಿಕ, ಭುವನ, ಶೋಭಿತ, ಶ್ವೇತ, ಹರಿಣಿ, ವನಿತ, ಪಲ್ಲವಿ, ಮಿಲನ, ಯಶಿತ, ನಿತ್ಯಶ್ರೀ, ಪೂರ್ಣಶ್ರೀ, ಮಾನಸ, ಪಲ್ಲವಿ, ನವನೀತ, ಯಶಸ್ವಿನಿ, ಭರಣಿ, ಕುಸುಮ, ಶ್ರಾವಣಿ, ವಾಸವಿ, ಅನನ್ಯರಾಜು, ಮಹಾಲಕ್ಷ್ಮಿ, ತನ್ಮಯಿಸಿಂಗ್, ಗುಣಶ್ರೀ, ಹರ್ಷಿತ, ಪರಿಣಿತ, ತನುವಿ ಮುಂತಾದವರಿಂದ ನೃತ್ಯ ಪ್ರದರ್ಶನ ನಡೆಯಿತು. ವಿದ್ವಾನ್ ಕಿಶೋರ್ ಕುಮಾರ್ ಹಾಜರಿದ್ದರು

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಏಪ್ರಿಲ್ ೧ ರಂದು ಜೆಡಿಎಸ್ ಕಾರ್ಯಕರ್ತರ ಸಭೆ

0

ಏಪ್ರಿಲ್ ೧೮ ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಿರ್ದೇಶನದ ಮೇರೆಗೆ ಏಪ್ರಿಲ್ ೧ ರಂದು ಬೆಳಿಗ್ಗೆ ೧೧ ಗಂಟೆಗೆ ಪಕ್ಷದ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಣೆಗಾಗಿ ಸಭೆ ಕರೆಯಲಾಗಿದೆ ಎಂದು ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ವರದನಾಯಕನಹಳ್ಳಿಯ ಪಟಾಲಮ್ಮ ದೇವಾಲಯದ ಕಲ್ಯಾಣಮಂಟಪದಲ್ಲಿ ಏಪ್ರಿಲ್ ೧ ರಂದು ಸಭೆಯನ್ನು ಕರೆದಿದ್ದೇವೆ. ನಮ್ಮ ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ. ಅವರ ಅಭಿಪ್ರಾಯ ಪಡೆದುಕೊಳ್ಳಲು ಈ ಸಭೆಯಲ್ಲಿ ಕರೆಯಲಾಗಿದೆ. ನಮ್ಮ ಪಕ್ಷದ ಹೈಕಮಾಂಡ್ ಸೂಚನೆಯನ್ನು ಪಕ್ಷದ ಕಾರ್ಯಕರ್ತರು ಪಾಲನೆ ಮಾಡಲಿದ್ದೇವೆ. ದೇವೇಗೌಡರು ರಾಷ್ಟ್ರಮಟ್ಟದಲ್ಲಿ ಘಟಬಂಧನ್ ನೇತೃತ್ವ ವಹಿಸಿಕೊಂಡಿರುವುದರಿಂದ ಅವರ ಕೈ ಬಲಪಡಿಸುವುದು, ವರಿಷ್ಠರ ಆದೇಶವನ್ನು ಕಾರ್ಯಕರ್ತರಿಗೆ ತಿಳಿಸಿ ಅಭಿಪ್ರಾಯ, ಚರ್ಚೆ ಮಾಡಿ ಎಲ್ಲರ ಮನದಿಂಗಿತವನ್ನು ತಿಳಿದುಕೊಂಡು ಅದರಂತೆ ಮುನ್ನಡೆಯುವುದು ಕೂಡಾ ನಮ್ಮ ಉದ್ದೇಶವಾಗಿದೆ ಎಂದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಬಿ.ವೆಂಕಟೇಶ್ ಮಾತನಾಡಿ, ಮೈತ್ರಿಪಾಲನೆಗಾಗಿ ಪಕ್ಷದ ಕಾರ್ಯಕರ್ತರನ್ನು ಸಭೆ ಕರೆಯಲಾಗಿದೆ. ಸಭೆಯಲ್ಲಿ ಮುಂದೆ ಚುನಾವಣೆಯಲ್ಲಿ ನಾವು ಹೇಗೆ ಕೆಲಸ ಮಾಡಬೇಕು ಎನ್ನುವ ತೀರ್ಮಾನಗಳನ್ನು ಎಲ್ಲರ ಅಭಿಪ್ರಾಯ ಸಂಗ್ರಹಣೆಯ ಮೂಲಕ ಮಾಡಲಾಗುತ್ತದೆ ಎಂದರು.
ಜೆಡಿಎಸ್ ಮುಖಂಡ ಹುಜಗೂರು ರಾಮಣ್ಣ ಮಾತನಾಡಿ, ಜನಪ್ರತಿನಿಧಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ನಮಗೆ ಶಕ್ತಿಯಾಗಿದ್ದಾರೆ. ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿಕೊಂಡು ನಮ್ಮ ಪಕ್ಷದ ನಾಯಕರ ನೇತೃತ್ವದಲ್ಲಿ ಮುಂದಿನ ರೂಪುರೇಷೆಗಳನ್ನು ಮಾಡುತ್ತೇವೆ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಸದಸ್ಯ ರಾಜಶೇಖರ್, ತಾದೂರು ರಘು, ಮುಗಿಲಡಿಪಿ ನಂಜಪ್ಪ, ಆದಿಲ್ ಪಾಷ, ಸಿಖಂದರ್, ಆರ್.ಎ.ಉಮೇಶ್ ಹಾಜರಿದ್ದರು.

ಪಿಆರ್‌ಒ ಮತ್ತು ಎಪಿಆರ್‌ಒ ಗಳಿಗೆ ತರಬೇತಿ

0

ಕೋಲಾರ ಲೋಕಸಭಾ ಕ್ಷೇತ್ರ, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಮೊದಲ ಹಂತದ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ. ಚುನಾವಣೆಯನ್ನು ಆಂತಿಯುತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಚುನಾವಣಾ ಸಿಬ್ಬಂದಿ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಚುನಾವಣಾದಿಕಾರಿ ಶಿವಕುಮಾರ್ ತಿಳಿಸಿದರು.
ನಗರದ ಪದವಿ ಪೂರ್ವ ಕಾಲೇಜಿನಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಗುರುವಾರ ಪಿಆರ್‌ಒ ಮತ್ತು ಎಪಿಆರ್‌ಒ ಗಳ ಮೊದಲ ಹಂತದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ತರಬೇತಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು, ಯಾವುದೇ ರೀತಿಯ ಸಂಶಯ ಬಂದಲ್ಲಿ ಬಗೆಹರಿಸಿಕೊಳ್ಳಿ. ಎಂದು ಹೇಳಿದರು.
ತಹಿಶೀಲ್ದಾರ್ ಅಜಿತ್ ಕುಮಾರ್ ರೈ ಮಾತನಾಡಿ, ಒಟ್ಟಾರೆ ಸುಮಾರು ೪೫೦ ಮಂದಿ ಪಿಆರ್‌ಒ ಮತ್ತು ಎಪಿಆರ್‌ಒ ಗಳಿಗೆ ತರಬೇತಿಯನ್ನು ನೀಡಲಾಗುವುದು. ಅವರಿಗೆ ಊಟ ಮತ್ತಿತರ ಸೌಲಭ್ಯಗಳನ್ನು ಒದಗಿಸಲಾಗಿದೆ ಪ್ರತಿಯೊಂದು ಕೊಠಡಿಗೂ ಒಬ್ಬ ತರಬೇತುದಾರರಿದ್ದು, ಪ್ರಾತ್ಯಕ್ಷಿಕವಾಗಿ ತರಬೇತಿ ನೀಡಲಿದ್ದಾರೆ. ತರಬೇತಿಗೆ ಗೈರುಹಾಜರಾದ ಸಿಬ್ಬಂದಿಯ ಪಟ್ಟಿಯನ್ನು ತಯಾರಿಸಿ ಜಿಲ್ಲಾದಿಕಾರಿಗಳಿಗೆ ನೀಡಲಾಗುವುದು ಎಂದು ಹೇಳಿದರು.
ಲೋಕಸಭಾ ಚುನಾವಣೆಗೆ ತರಬೇತಿಯಲ್ಲಿ ಅಣಕು ಮತದಾನ, ಪೋಲಿಂಗ್ ಏಜೆಂಟರ ನೇಮಕಾತಿ, ಅಧಿಕಾರಿಯ ಜನಾಬ್ದಾರಿಗಳು, ಆಕ್ಷೇಪಿತ/ಟೆಂಡರ್/ಇಡಿಸಿ/ಪಿಸಿ/ಪ್ರಾಕ್ಸಿ/ಟೆಸ್ಟ್ ಮತಗಳು, ಸಾಧನಾ ಪರೀಕ್ಷೆ, ವೀಡಿಯೋ ಪ್ರದರ್ಶನ ಮತ್ತು ಯಂತ್ರಗಳ ಪ್ರಯೋಗಿಕ ಚಟುವಟಿಕೆ, ಪ್ರಶ್ನಾವಳಿ/ಸಂಶಯ ನಿವಾರಣೆ, ಅವಧಿ ಹಾಗೂ ಇನ್ನೂ ಮುಂತಾದ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೋಲಾರ ಲೋಕಸಭಾ ಚುನಾವಣಾ ವೀಕ್ಷಕ ಇಕ್ಬಾಲ್ ಆಲಂ ಅನ್ಸಾರಿ, ಸರ್ಕಲ್ ಇನ್ಸ್ ಪೆಕ್ಟರ್ ಆನಂದ್, ಗ್ರೇಡ್ ೨ ತಹಿಸಿಲ್ದಾರ್ ಹನುಮಂತರಾವ್, ನಗರ ಸಭೆ ಆಯುಕ್ತ ಚಲಪತಿ ಶ್ರೀನಾಥ್‌ಗೌಡ ಹಾಜರಿದ್ದರು.

ಅಪ್ಪೇಗೌಡನಹಳ್ಳಿಯಲ್ಲಿ “ಗಾನಸಿರಿ” ಕಾರ್ಯಕ್ರಮ

0

ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಮಂಗಳವಾರ ಸಂಜೆ ತಾಲ್ಲೂಕು ಕಸಾಪ ಹಮ್ಮಿಕೊಂಡಿದ್ದ “ಗಾನಸಿರಿ” ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂತ್ಯಾಗರಾಜ್ ಮಾತನಾಡಿದರು.
ನಾಟಕ, ಭಜನೆ, ಹರಿಕಥೆ, ಜಾನಪದ ಕಲೆಗಳು ಹಳ್ಳಿಗಳಲ್ಲಿ ಹಿಂದೆ ಜನಜೀವನದಲ್ಲಿ ಬೆರೆತುಹೋಗಿದ್ದವು. ಈಗಿನ ಯುವ ಪೀಳಿಗೆ ಈ ಕಲೆಗಳತ್ತ ಆಕರ್ಷಿತರಾಗುತ್ತಿಲ್ಲ. ಯುವಪೀಳಿಗೆಗೆ ಗ್ರಾಮೀಣ ಕಲೆಗಳನ್ನು ಪರಿಚಯಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಜನಪದರ ಕಲೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಹಾಗೂ ಹಳ್ಳಿಗಳಲ್ಲಿ ಎಲೆಮರೆ ಕಾಯಿಗಳಂತಿರುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಲು “ಗಾನಸಿರಿ” ಕಾರ್ಯಕ್ರಮವನ್ನು ಹಳ್ಳಿಗಳಲ್ಲಿ ನಡೆಸುತ್ತಿದ್ದೇವೆ. ನಮ್ಮ ಸ್ಥಳೀಯ ಕಲಾವಿದರು ನಮ್ಮ ಹೆಮ್ಮೆಯ ಸಾಂಸ್ಕೃತಿಕ ಪ್ರತಿನಿಧಿಗಳು ಎಂದರು.
ಶ್ರೀ ದುರ್ಗಾಮಹೇಶ್ವರಿ ಮಿತ್ರ ವೃಂದದ ಎಂ.ಕೆ.ವೆಂಕಟೇಶಮೂರ್ತಿ(ಹಾರ್ಮೋನಿಯಮ್), ಎಚ್.ಎಂ.ಸುರೇಶ್(ತಬಲ), ಎಂ.ಕೆ.ನಾಗರಾಜ್(ಕೀಬೋರ್ಡ್), ಮುನಿರಾಜು(ಘಟಂ), ಹರೀಶ್(ತಾಳವಾದ್ಯ), ನವೀನ್ ಕುಮಾರ್, ವೈ.ಎನ್.ಪಿಳ್ಳೇಗೌಡ, ಎಂ.ವಿ.ಅನಿಲ್ ಕುಮಾರ್ ಜಾನಪದ ಗೀತೆಗಳನ್ನು ಹಾಡಿ ಜನರನ್ನು ರಂಜಿಸಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್, ಕಾರ್ಯದರ್ಶಿ ಚಾಂದ್ ಪಾಷ, ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.

ಬುದ್ದಿವಂತ ಮಕ್ಕಳ ವ್ಯವಹಾರಿಕ ಚಿಂತನೆ; ಶಾಲಾಭಿವೃದ್ದಿಗೆ ನೆರವು

0

ತಾಲ್ಲೂಕಿನ ತಾತಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಮ್ಮ ಶಾಲೆಯ ಆವರಣದಲ್ಲಿರುವ ಹೊಂಗೆ ಮರದಿಂದ ಬೀಜಗಳನ್ನು ಸಂಗ್ರಹಿಸಿ ಮಾರುವ ಮೂಲಕ ವ್ಯವಹಾರಿಕ ಬುದ್ದಿಯನ್ನು ಪ್ರದರ್ಶಿಸಿದ್ದಾರೆ.
ತಾತಹಳ್ಳಿಯ ಸರ್ಕಾರಿ ಶಾಲೆಯ ಆವರಣದಲ್ಲಿನ ಹೊಂಗೆ ಮರವು ಪ್ರತಿವರ್ಷವೂ ಭರ್ಜರಿ ಕಾಯಿಗಳನ್ನು ಬಿಡುತ್ತಿತ್ತು. ಯಾರೋ ಹಳ್ಳಿಯವರು ಬಂದು ಅದನ್ನು ಬಿಡಿಸಿಕೊಂಡು ಹೋಗುತ್ತಿದ್ದರು. ಆದರೆ, ಈ ವರ್ಷ ವಿದ್ಯಾರ್ಥಿಗಳು ಶಿಕ್ಷಕರಿಗೆ “ನಾವೇ ಕಾಯಿಗಳನ್ನು ಉದುರಿಸಿ ಸಂಗ್ರಹಿಸೋಣ. ಅದನ್ನು ಮಾರಿ ಬಂದ ಹಣವನ್ನು ಶಾಲೆಗೆ ಬಳಸೋಣ” ಎಂಬುದಾಗಿ ಮನವಿ ಮಾಡಿದ್ದಾರೆ. ಖುಷಿಯಿಂದ ಒಪ್ಪಿದ ಶಿಕ್ಷಕರು ಮಕ್ಕಳ ಜೊತೆಗೂಡಿದ್ದಾರೆ. ಕೆಲ ಗ್ರಾಮಸ್ಥರೂ ಸಹಾಯ ಮಾಡಿದ್ದಾರೆ.
“ಎಲ್ಲರೂ ಒಗ್ಗೂಡಿ ಹೊಂಗೆ ಕಾಯಿಗಳನ್ನು ಸಂಗ್ರಹಿಸಿದೆವು. ನಾಲ್ಕೂವರೆ ಮೂಟೆಯಷ್ಟು ಸಿಕ್ಕಿತು. ನಮ್ಮ ಹಳ್ಳಿಯವರೊಬ್ಬರು ಅದನ್ನು ಮಿಲ್ ಮಾಡಿಸಿ, ಗುಲಾಬಿ ಗಿಡಗಳಿಗೆ ಗೊಬ್ಬರವಾಗಿ ಬಳಸುವುದಾಗಿ ತಿಳಿಸಿ ಒಂದೂವರೆ ಸಾವಿರ ರೂ ನೀಡಿ ಖರೀದಿಸಿದರು. ಮಕ್ಕಳ ಅಭಿಲಾಷೆಯಂತೆ ಶಾಲೆಗೆ ಉಪಯುಕ್ತವಾಗುವಂತೆ ಹಣವನ್ನು ಬಳಸಲಾಗುವುದು. ಇದರಿಂದ ಮಕ್ಕಳಿಗೆ ಬೀಜ ಸಂಗ್ರಹಣೆ, ವಾಣಿಜ್ಯ, ಹೊಂಗೆಯ ಬೀಜದ ಉಪಯುಕ್ತತೆಗಳು, ಶ್ರಮಜೀವನ, ಸ್ವಾಭಿಮಾನ ಮುಂತಾದ ಪಾಠಗಳು ಕಲಿಯುವಂತಾದುದು ಮರೆಯಲಾಗದು” ಎಂದು ಮುಖ್ಯ ಶಿಕ್ಷಕಿ ಎಚ್.ಎಂ.ಸರಸ್ವತಮ್ಮ ತಿಳಿಸಿದರು.
ಶಿಕ್ಷಕರಾದ ಎಂ.ದೇವರಾಜ್, ಎಚ್.ಆರ್.ಮಂಜುನಾಥ್, ಡಿ.ಎಸ್.ಶ್ರೀಕಾಂತ್, ಕೆ.ನಾಗರಾಜ್ ಹಾಜರಿದ್ದರು.

ವಿಶ್ವ ಕ್ಷಯರೋಗ ದಿನಾಚರಣೆಯ ಅಂಗವಾಗಿ ಜಾಥಾ

0

ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸೋಮವಾರ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆಯಿಂದ ವಿಶ್ವ ಕ್ಷಯರೋಗ ದಿನಾಚರಣೆಯ ಅಂಗವಾಗಿ “ನಮ್ಮ ನಡೆ ಕ್ಷಯ ಮುಕ್ತ ಭಾರತದ ಕಡೆಗೆ” ಎಂಬ ಘೋಷವಾಕ್ಯದೊಂದಿಗೆ ಹೊರಟ ಜಾಥಾಗೆ ಚಾಲನೆ ನೀಡಿ ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿದರು.
ಕ್ಷಯರೋಗ ಒಂದು ಮಾರಾಣಾಂತಿಕ ಕಾಯಿಲೆಯಲ್ಲ, ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಉಚಿತ ಚಿಕಿತ್ಸೆ ಲಭ್ಯವಿದ್ದು ರೋಗದ ಲಕ್ಷಣಗಳು ಕಾಣಿಸಿಕೊಂಡವರು ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಅವರು ತಿಳಿಸಿದರು.
ಈ ಹಿಂದೆ ಕ್ಷಯ ರೋಗಕ್ಕೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ರೋಗ ಹೆಚ್ಚಿರುವ ಸ್ಥಳಗಳನ್ನು ಗುರುತಿಸಿ ರೋಗಿಗಳ ಮನೆಗೆ ಹೋಗಿ ಸೂಕ್ತ ಔಷಧಿ ನೀಡುವ ಕಾರ್ಯ ಪ್ರಾರಂಭವಾಗಿದೆ. ರೋಗವನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿ, ರೋಗಿಗೆ ಸೂಕ್ತ ಮಾರ್ಗದರ್ಶನ ಮತ್ತು ಚಿಕಿತ್ಸೆ ನೀಡುವ ಮೂಲಕ ಕ್ಷಯರೋಗವನ್ನು ನಿಯಂತ್ರಿಸುವ ಉದ್ದೇಶದಿಂದ ಆರಂಭಿಸಿರುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೇಳಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ವಾಣಿ ಮಾತನಾಡಿ, ಕ್ಷಯರೋಗ ಬಂದಿದೆ ಎನ್ನುವ ಕೀಳರಿಮೆಯನ್ನು ಬಿಟ್ಟು, ರೋಗವನ್ನು ನಿಯಂತ್ರಣ ಮಾಡಿಕೊಳ್ಳುವುದರ ಜೊತೆಗೆ, ರೋಗಗಳು ಹರಡದಂತೆ ಮುಂಜಾಗ್ರತೆ ವಹಿಸುವುದು ಸೂಕ್ತ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗ ಪತ್ತೆ ಮಾಡಲು ಪರೀಕ್ಷೆಗಳು ಹಾಗೂ ಚಿಕಿತ್ಸೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ವೈದ್ಯರೊಂದಿಗೆ ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳುವಾಗ ಮುಜುಗರ ಪಡದೆ ರೋಗಗಳನ್ನು ನಿಯಂತ್ರಣ ಮಾಡಿಕೊಳ್ಳಬೇಕು ಎಂದರು.
ಕ್ಷಯರೋಗಕ್ಕೆ ಎಲ್ಲಾ ಡಾಟ್‌ಕೆಂದ್ರಗಳಲ್ಲಿ ಉಚಿತವಾಗಿ ಔಷಧಿಗಳನ್ನು ನೀಡಲಾಗುತ್ತಿದೆ. ಕ್ಷಯರೋಗ ಪತ್ತೆಗೆ ಹೊಸ ಹೊಸ ಸಲಕರಣೆಗಳು ಲಭ್ಯವಿದ್ದು ಅವುಗಳ ಉಪಯೋಗ ಮಾಡುವದರ ಮೂಲಕ ಆದಷ್ಟು ಬೇಗನೆ ಕ್ಷಯರೋಗ ಪತ್ತೆ ಹಚ್ಚಬಹುದು ಎಂದು ಹೇಳಿದರು.
ಹಿರಿಯ ಆರೋಗ್ಯ ಚಿಕಿತ್ಸಾ ಮೇಲ್ವಿಚಾರಕ ನರಸಿಂಹಮೂರ್ತಿ ಮಾತನಾಡಿ, ಕ್ಷಯರೋಗಕ್ಕೆ ನಿಯಮ ಚಿಕಿತ್ಸೆ, ಆಹಾರ ಹಾಗೂ ಸ್ವಚ್ಛತೆಯು ಬಹಳ ಮುಖ್ಯ. ನಿಯಮಿತ ಹಾಗೂ ನಿರಂತರವಾಗಿ ಸೂಕ್ತ ಚಿಕಿತ್ಸೆಯನ್ನು ಪಡೆದರೆ ಕ್ಷಯರೋಗದಿಂದ ಸಂಪೂರ್ಣ ಗುಣಮುಖರಾಗಲು ಸಾಧ್ಯವಿದೆ. ಕ್ಷಯರೋಗಕ್ಕೆ ಸೂಕ್ತ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದಾದರೂ ಈ ಬಗ್ಗೆ ಎಚ್ಚರ ವಹಿಸುವುದು ಅತ್ಯಗತ್ಯವಾಗಿದೆ. ಕ್ಷಯರೋಗ(ಟಿಬಿ) ಎಂದರೆ ಹಿಂದೆ ಭಯಪಡುವ ವಾತಾವರಣವಿತ್ತು. ಆದರೆ ಇಂದು ವೈದ್ಯಕೀಯ ಜಗತ್ತಿನಲ್ಲಿ ಆಗಿರುವ ಮಹತ್ತರ ಬದಲಾವಣೆಯಿಂದಾಗಿ ಗುಣಪಡಿಸುವ ಸಾಮರ್ಥ್ಯ ಮತ್ತು ಔಷಧಿ ಇದೆ ಎಂದರು.
ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ಜಾಗೃತಿ ಮೂಡಿಸುವ ಜಾಥಾ ನಡೆಸಿದರು.
ಸಾರ್ವಜನಿಕ ಆಸ್ಪತ್ರೆಯ ಹಿರಿಯ ಆರೋಗ್ಯ ಮೇಲ್ವಿಚಾರಕಿ ಮುನಿರತ್ನಮ್ಮ, ಲೋಕೇಶ್, ಚಾಂದ್‌ಪಾಷ, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಜರಿದ್ದರು.

ಪಶು ಆರೋಗ್ಯ ತಪಾಸಣಾ ಶಿಬಿರ

0

ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಶನಿವಾರ ವಿಜಯಪುರ ಪ್ರಗತಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಹಮ್ಮಿಕೊಂಡಿದ್ದ ಎನ್.ಎಸ್.ಎಸ್ ಶಿಬಿರದಲ್ಲಿ ಉಚಿತ ಪಶು ತಪಾಸಣಾ ಶಿಬಿರದಲ್ಲಿ ನಿವೃತ್ತ ಪ್ರಾಧ್ಯಾಪಕ ಹಾಗೂ ಪ್ರಾಣಿ ಪ್ರಸೂತಿ ತಜ್ಞ ಡಾ.ಮರಗೂಬ್ ಹುಸೇನ್ ಮಾತನಾಡಿದರು.
ಗ್ರಾಮೀಣಭಾಗದ ಜೀವನಾಧಾರವಾಗಿರುವ ಹೈನುಗಾರಿಕೆಯನ್ನು ಕ್ರಮಬದ್ಧವಾಗಿ ಮತ್ತು ವೈಜ್ಞಾನಿಕ ಮಾದರಿಯಲ್ಲಿ ಮಾಡಬೇಕು. ಇಲ್ಲವಾದಲ್ಲಿ ನಷ್ಟಗಳ ಸರಮಾಲೆಯೇ ಉಂಟಾಗುತ್ತದೆ ಎಂದು ಅವರು ತಿಳಿಸಿದರು.
ಬಹುತೇಕ ಗ್ರಾಮೀಣರಿಗೆ ಹೈನುಗಾರಿಕೆ ಜೀವನಾಧಾರ. ಅವರ ದೈನಂದಿನ ಜೀವನಾವಶ್ಯಕತೆಗೆ ಅವಶ್ಯಕವಾದ ಹಣ ಇದರಿಂದಲೇ ದೊರೆಯುತ್ತದೆ. ಒಂದು ವೇಳೆ ಜಾನುವಾರುಗಳಿಗೆ ತಗುಲುವ ಸಾಂಕ್ರಾಮಿಕ ರೋಗಗಳ ಬಗ್ಗೆ ಮುಂಚಿತವಾಗಿ ತಿಳಿಯದಿದ್ದರೆ ಆಗುವ ನಷ್ಟ ಅಪಾರ. ಉಚಿತ ಪಶು ಆರೋಗ್ಯ ತಪಾಸಣಾ ಶಿಬಿರವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಈ ಶಿಬಿರದಲ್ಲಿ ಜಂತು ನಿವಾರಣೆ, ಬರಡು ರಾಸಿಗೆ ಚಿಕಿತ್ಸೆ, ಗರ್ಭ ಪರೀಕ್ಷೆ, ಲಸಿಕೆಗಳ ಮಾಹಿತಿ ಮತ್ತು ಚಿಕಿತ್ಸೆ ನೀಡಲಾಯಿತು. ೧೩೨ ಹಸುಗಳು, ೫೬ ಬರಡು ರಾಸು, ೮ ಕರುಗಳು ಸೇರಿದಂತೆ ೪೦ ಪಡ್ಡೆಗಳಿಗೆ ಚಿಕಿತ್ಸೆ ನೀಡಲಾಯಿತು. ವಿಟಮಿನ್ ಇಂಜಕ್ಷನ್ ಮತ್ತು ಮಿನರಲ್ ಮಿಕ್ಸ್ ಚರ್ ಉಚಿತವಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಕೋಚಿಮುಲ್ ಶಿಬಿರ ಘಟಕದ ಉಪವ್ಯವಸ್ಥಾಪಕ ಡಾ.ಚಂದ್ರಶೇಖರ್, ಪಶು ವೈದ್ಯರಾದ ಡಾ.ಹರೀಶ್, ಎಂ.ಎಸ್.ಸಿದ್ದೇಶ್, ಪಶು ಕೃತಕ ಗರ್ಭಧಾರಣೆ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಅಪ್ಪಾಜಿಗೌಡ, ಎಂಪಿಸಿಎಸ್ ಅಧ್ಯಕ್ಷ ಮುನಿವೆಂಕಟಸ್ವಾಮಪ್ಪ, ಮಾಜಿ ಅಧ್ಯಕ್ಷ ರವಿಪ್ರಕಾಶ್, ಎಂಪಿಸಿಎಸ್ ಕಾರ್ಯದರ್ಶಿ ಗೋವಿಂದರಾಜು, ಪ್ರಗತಿ ಕಾಲೇಜು ಎನ್ ಎಸ್ ಎಸ್ ಅಧಿಕಾರಿ ಆರ್.ಶೆಟ್ಟಿನಾಯಕ್, ಕಸಾಪ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಹಾಜರಿದ್ದರು

ಕಾಕಚೊಕ್ಕಂಡಹಳ್ಳಿ ಗ್ರಾಮಕ್ಕೆ ಅಧಿಕಾರಿಗಳ ಭೇಟಿ

0

ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮಪಂಚಾಯಿತಿಯ ಕಾಕಚೊಕ್ಕಂಡಹಳ್ಳಿ ಗ್ರಾಮಸ್ಥರು ಲೋಕಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ ಹಿನ್ನಲೆಯಲ್ಲಿ ಶನಿವಾರ ಗ್ರಾಮಕ್ಕೆ ಅಪರ ಜಿಲ್ಲಾಧಿಕಾರಿ ಆರತಿ ಆನಂದ್ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಗ್ರಾಮಸ್ಥರ ಬೇಡಿಕೆಗಳನ್ನು ಆಲಿಸಿದರು.
ನಮ್ಮ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ಮತ್ತು ರಸ್ತೆ ಸೌಲಭ್ಯಗಳನ್ನು ಒದಗಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಹಾಗಾಗಿ ಏಪ್ರಿಲ್ ೧೮ ರಂದು ನಡೆಯುವ ಲೋಕಸಭಾ ಚುನಾವಣೆಯನ್ನು ಗ್ರಾಮಸ್ಥರೆಲ್ಲ ಸೇರಿ ಬಹಿಷ್ಕರಿಸುತ್ತಿದ್ದೇವೆ ಎಂದು ಇತ್ತೀಚೆಗೆ ತಹಸೀಲ್ದಾರ್‌ರಿಗೆ ಗ್ರಾಮಸ್ಥರು ಪತ್ರವನ್ನು ನೀಡಿದ್ದರು.
ಗ್ರಾಮದ ಬಹಳಷ್ಟು ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗುವ ಹಾಗೂ ಸುತ್ತಮುತ್ತಲ ನಾಲ್ಕೈದು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕಾಕಚೊಕ್ಕಂಡಹಳ್ಳಿ ಮತ್ತು ಅಂಕತಟ್ಟಿ ನಡುವಿನ ರಸ್ತೆ ತೀರಾ ಹಾಳಾಗಿದೆ. ಕೂಡಲೇ ಸರಿಪಡಿಸಬೇಕು. ಗ್ರಾಮದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವವರೆಗೂ ಯಾವುದೇ ಚುನಾವಣೆಯಲ್ಲಿ ಮತ ಚಲಾಯಿಸುವುದಿಲ್ಲ ಎಂದು ಗ್ರಾಮಸ್ಥರು ಮನವಿ ಸಲ್ಲಿಸಿದ್ದರು.
ಅಪರ ಜಿಲ್ಲಾಧಿಕಾರಿ ಆರತಿ ಆನಂದ್ ಹಾಗೂ ಅಧಿಕಾರಿಗಳ ತಂಡ ಶನಿವಾರ ಗ್ರಾಮಕ್ಕೆ ಭೇಟಿ ನೀಡಿ ಯಾವುದೇ ಕಾರಣಕ್ಕೂ ಚುನಾವಣೆ ಬಹಿಷ್ಕರಿಸುವ ತೀರ್ಮಾನ ತೆಗೆದುಕೊಳ್ಳಬೇಡಿ. ಪ್ರತಿಯೊಬ್ಬರೂ ಮತ ಚಲಾಯಿಸಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು. ಕುಡಿಯುವ ನೀರಿನ ಸಮಸ್ಯೆಯನ್ನು ಕೂಡಲೇ ಬಗೆಹರಿಸಲಾಗುವುದು. ರಸ್ತೆ ಕಾಮಗಾರಿಯನ್ನು ಚುನಾವಣೆಯ ನಂತರ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಹಾಯಕ ಚುನಾವಣಾಧಿಕಾರಿ ಶಿವಕುಮಾರ್, ತಾಲ್ಲೂಕು ಪಂಚಾಯಿತಿ ಇಓ ಬಿ.ಶಿವಕುಮಾರ್, ತಹಶೀಲ್ದಾರ್ ಎಸ್.ಅಜಿತ್‌ಕುಮಾರ್ ರೈ, ಗ್ರಾಮಾಂತರ ಠಾಣೆ ಪಿಎಸ್ಸೈ ಹರೀಶ್, ಕಾಕಚೊಕ್ಕಂಡಹಳ್ಳಿ ಗ್ರಾಮಸ್ಥರಾದ ರಾಮಯ್ಯ, ಮುನಿಯಪ್ಪ, ಪ್ರಕಾಶ್, ಮುರಳೀಧರ್, ವೆಂಕಟಮೂರ್ತಿ, ಮುನಿಯಪ್ಪ, ಪಿಳ್ಳಸೊಣ್ಣಪ್ಪ, ಪ್ರವೀಣ್‌ಕುಮಾರ್, ನಾರಾಯಣಗೌಡ, ಬಿ.ಎನ್.ನಾರಾಯಣಸ್ವಾಮಿ ಹಾಜರಿದ್ದರು.

ವಿಶ್ವ ನೀರಿನ ದಿನಾಚರಣೆ ಕಾರ್ಯಕ್ರಮ

0

ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಸಾಮಾಜಿಕ ಅರಣ್ಯ ವಲಯದ ನರ್ಸರಿ ಆವರಣದಲ್ಲಿ ಶುಕ್ರವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಮ್ಮಿಕೊಂಡಿದ್ದ “ವಿಶ್ವ ನೀರಿನ ದಿನಾಚರಣೆ” ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗುರುದತ್ ಹೆಗೆಡೆ ಮಾತನಾಡಿದರು.
ಮಳೆನೀರು ಕೊಯ್ಲು ಮತ್ತು ಹಸುರೀಕರಣಕ್ಕೆ ನಾವೀಗ ಮನಸ್ಸು ಮಾಡದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ. ಪ್ರತಿಯೊಂದು ಹನಿ ನೀರೂ ಅಮೂಲ್ಯವಾದುದು. ಜವಾಬ್ದಾರಿಯುತವಾಗಿ ನೀರನ್ನು ಬಳಸಬೇಕು ಮತ್ತು ಸಾಧ್ಯತೆ ಮೀರಿ ಹಸುರೀಕರಣ ಕಾರ್ಯವನ್ನು ಎಲ್ಲರೂ ಮಾಡುವಂತಾಗಬೇಕು ಎಂದು ಅವರು ತಿಳಿಸಿದರು.
ಈಗಾಗಲೇ ಜಿಲ್ಲೆಯ ಬಹುತೇಕ ಕೆರೆಗಳು ಬತ್ತಿವೆ. ನೀರಿನ ತೊಂದರೆಯನ್ನು ಜನರು ಅನುಭವಿಸುವಂತಾಗಿದೆ. ಯಾವುದೇ ನೀರಿನ ಯೋಜನೆ ಪರಿಪೂರ್ಣಗೊಂಡರೂ ಜಿಲ್ಲೆಯ ಸಂಪೂರ್ಣ ನೀರಿನ ಬವಣೆಯನ್ನು ಪರಿಹರಿಸಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬರೂ ನೀರಿನ ಕುರಿತಾಗಿ ಕಾಳಜಿ ವಹಿಸಬೇಕು. ಕನಿಷ್ಠ ತಮ್ಮ ಸೂರಿನ ಮೇಲೆ ಬೀಳುವ ಮಳೆ ನೀರನ್ನು ಹಿಡಿದಿಟ್ಟುಕೊಂಡರೂ ಸಾಕಷ್ಟು ದಿನಕ್ಕೆ ಆಗುವಷ್ಟು ನೀರು ಸಿಗುತ್ತದೆ. ಎಷ್ಟು ಸಾಢ್ಯವೋ ಅಷ್ಟು ಗಿಡಗಳನ್ನು ನೆಡುತ್ತಾ ಹೋಗಿ. ಇದು ಮಾತ್ರವೇ ನಮ್ಮ ಮುಂದಿನ ಪೀಳಿಗೆಗೆ ನಾವು ಕೊಡಬಲ್ಲ ಅತ್ಯುತ್ತಮ ಕಾಣಿಕೆ ಎಂದರು.
ಚುನಾವಣೆ ಸಮೀಪಿಸಿದೆ. ನಿಶ್ಕಲ್ಮಷ ಮನಸ್ಸಿನಿಂದ ಯಾವುದೇ ಆಮಿಷಕ್ಕೆ ಒಳಗಾಗದಂತೆ, ಜಾತಿ, ಹಣವನ್ನು ಮೀರಿ ನಿಲ್ಲುವಂತವರಾಗಿ. ಉತ್ತಮ ಮನಸ್ಥಿತಿ ಉಳ್ಳವರನ್ನು, ಜನಸೇವೆ ಮಾಡುವವರನ್ನು, ಕೆಲಸ ಮಾಡುವವರನ್ನು ಆರಿಸೋಣ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಶಿವಕುಮಾರ್ ಮಾತನಾಡಿ, ಜೀವ ವ್ಯವಸ್ಥೆ ನಿಂತಿರುವುದೇ ನೀರಿನ ಆಧಾರದ ಮೇಲೆ. ನೀರು ಮಾನವನ ಪಾಲಿನ ಜೀವ ಜಲ. ಬಡವರು ಬಲ್ಲಿದರೆಂಬ ಭೇದವಿಲ್ಲದೆ ಪ್ರತಿಯೊಬ್ಬರ ಮನೆಯ ಮೇಲೂ ಅವರ ಇಡೀ ಕುಟುಂಬಕ್ಕೆ ಒಂದು ವರ್ಷಕ್ಕೆ ಅಗತ್ಯ ಇರುವುದಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ನೀರು ಮಳೆಯ ರೂಪದಲ್ಲಿ ಛಾವಣಿಯ ಮೇಲೆ ಸುರಿಯುತ್ತಿದ್ದು ಆ ನೀರನ್ನು ಅವರವರ ಬಾವಿ ಅಥವಾ ಇಂಗು ಗುಂಡಿಗಳಿಗೆ ಮರು ಪೂರಣಗೊಳಿಸಿದಲ್ಲಿ ಬೇಸಗೆಯಲ್ಲಿ ಎದುರಾಗುವ ನೀರಿನ ಸಮಸ್ಯೆಯನ್ನು ಹೋಗಲಾಡಿಸಬಹುದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಎಂ.ಎಚ್.ನಾಗೇಶ್, ಸಹಾಯಕ ಯೋಜನಾಧಿಕಾರಿ ಮುನಿರಾಜು, ಜಿಲ್ಲಾ ಅರಣ್ಯ ಅಧಿಕಾರಿ ಶ್ರೀನಾಥ್ ಮಾತನಾಡಿದರು.
ಈ ಸಂದರ್ಭದಲ್ಲಿ ಜಲಸಾಕ್ಷರತೆ ಕುರಿತಂತೆ ಪ್ರತಿಜ್ಞಾ ವಿಧಿ ಮತ್ತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಇ.ಎಂ.ವಿ ಮತಯಂತ್ರದ ಪ್ರಾತ್ಯಕ್ಷಿಕೆಯನ್ನು ತೋರಿಸಿ, ಭಾಗವಹಿಸಿದ್ದ ಪಿ.ಡಿ.ಒ, ಜಲಗಾರರು ಮತ್ತು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಿದರು.
ವಲಯ ಅರಣ್ಯಾಧಿಕಾರಿ ವಿ.ಮುನಿಯಪ್ಪ, ನಗರಸಭೆ ಆಯುಕ್ತ ಚಲಪತಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆಂಜನೇಯ ಹಾಜರಿದ್ದರು.