ಸೇನೆಯಲ್ಲಿ ಎಲ್ಲರೂ ಸಮಾನರು, ಅಲ್ಲಿ ಯಾವುದೇ ಜಾತಿ, ಧರ್ಮದ ಭೇದವಿಲ್ಲ. ಮಾತೃಭೂಮಿಯ ರಕ್ಷಣೆ ಮಾತ್ರ ಧ್ಯೇಯವಾಗಿರುತ್ತದೆ. ಇದೇ ರೀತಿಯ ಸಮಾನತೆ ಎಲ್ಲರಲ್ಲಿಯೂ ಮೂಡಬೇಕಿದೆ ಎಂದು ಕನ್ನಡ ಸಾರಸ್ವತ ಪರಿಚಾರಿಕೆ(ಕಸಾಪ) ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಗುರುವಾರ ವಿಜಯಪುರ ಪ್ರಗತಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಶಿಬಿರದಲ್ಲಿ “ಸಾಹಿತ್ಯ ಮತ್ತು ವೀರ ಯೋಧರು” ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಜ್ಞಾನದಿಂದ ಬುದ್ದಿವಂತ ನಾಗಬಹುದಾದರೂ, ತಿಳುವಳಿಕೆ ಬರುವುದು ವಿದ್ಯೆಯಿಂದ ಮಾತ್ರ. ಸಾಮಾಜಿಕವಾಗಿ ಹಿತವನ್ನು ಕಾಪಾಡುವ ಏಕೈಕ ಪ್ರಕಾರವೇ ಸಾಹಿತ್ಯ. ಕನ್ನಡ ಭಾಷೆ ಮತ್ತು ವರ್ಣ ಮಾಲೆ ತಾರ್ಕಿಕ ಮತ್ತು ವೈಜ್ಞಾನಿಕವಾಗಿಯೂ ೯೯.೯೯ ಪ್ರತಿಶತ ಪರಿಪೂರ್ಣವಾದುದು ಎಂದು ಸಾಬೀತಾಗಿದೆ. ಕಥೆ, ನಾಟಕ, ಹಾಸ್ಯ, ಪ್ರಬಂಧ, ವೈಜ್ಞಾನಿಕ ಸಾಹಿತ್ಯ, ಮಕ್ಕಳ ಸಾಹಿತ್ಯ, ಜಾನಪದ ಸಾಹಿತ್ಯ, ಜೀವನ ಚರಿತ್ರೆ, ಪ್ರವಾಸ ಸಾಹಿತ್ಯ, ದಾಸ ಸಾಹಿತ್ಯ, ವಚನ ಸಾಹಿತ್ಯ ಇನ್ನೂ ಮುಂತಾದವುಗಳು ಸಾಹಿತ್ಯದ ಪ್ರಕಾರಗಳು ಎಂದು ಗುರುತಿಸಲಾಗಿದೆ.
ಅಮೋಘ ವರ್ಷ ನೃಪತುಂಗ “ ಕವಿರಾಜಮಾರ್ಗ” ರಚಿಸುವಾಗ ಇಂಗ್ಲೀಷ್ ಭಾಷೆ ತೊಟ್ಟಿಲೊಳಗಿನ ಕೂಸಾಗಿತ್ತು. ಹಿಂದಿ ಭಾಷೆ ಹುಟ್ಟಿರಲೇ ಇಲ್ಲವಂತೆ. ಚಾರಿಯಟ್ ಮೈಮ್ ಎಂಬ ೨ ನೇ ಶತಮಾನದ ಗ್ರೀಕ್ ನಾಟಕವೊಂದು ಕನ್ನಡ ಸಾಲನ್ನು ಬಳಸಿದೆ ಎಂದು ಕನ್ನಡ ಸಾಹಿತ್ಯದ ಬಗ್ಗೆ ವಿವರಿಸಿದರು.
ಒಬ್ಬ ಸೈನಿಕ ಒಂದು ಸಂಘಟಿತ ಭೂಮಿ ಮೂಲದ ಸಶಸ್ತ್ರ ಪಡೆಯ ಭಾಗವಾಗಿ ಹೋರಾಡುತ್ತಾನೆ. ಸೈನಿಕ ಸಶಸ್ತ್ರ ಬಳಕೆಯಲ್ಲಿ ಜ್ಞಾನ ಮತ್ತು ಕೌಶಲ್ಯವನ್ನು ಪಡೆದಿರುತ್ತಾನೆ ಎಂದು ಸೈನಿಕರ ಕುರಿತಾಗಿ ವಿವರಿಸಿದರು.
ಎನ್.ಎಸ್.ಎಸ್.ಅಧಿಕಾರಿ ಮತ್ತು ಕನ್ನಡ ಪ್ರಾದ್ಯಾಪಕ ಶೆಟ್ಟಿ ನಾಯಕ್, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಪ್ರಸಾದ್, ನರಸಿಂಹ ಮೂರ್ತಿ, ಹರೀಶ್ ಮತ್ತು ಪ್ರಗತಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು.
ಅಪ್ಪೇಗೌಡನಹಳ್ಳಿಯಲ್ಲಿ ಎನ್.ಎಸ್.ಎಸ್ ಶಿಬಿರ
ರೈತ ಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳಿಂದ ಮನವಿ
ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಉತ್ತಮ ಸೇವೆ ಕಲ್ಪಿಸಬೇಕು. ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಬೇಕು ಹಾಗೂ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳು ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಅವರಿಗೆ ಗುರುವಾರ ಮನವಿಯನ್ನು ಸಲ್ಲಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಕೆಲ ವೈದ್ಯರು ಹಾಗೂ ಸಿಬ್ಬಂದಿ ಚಿಕಿತ್ಸೆ ಸಂದರ್ಭದಲ್ಲಿ, ಹೆರಿಗೆ ಹಾಗೂ ಸ್ಕ್ಯಾನಿಂಗ್ ಮಾಡಿಸಲು ಹಣವನ್ನು ಪಡೆಯುತ್ತಿದ್ದಾರೆ. ಸರ್ಕಾರಿ ಅನುದಾನಗಳು ಸದುಪಯೋಗವಾಗುತ್ತಿಲ್ಲ. ಆಯುಷ್ ಮಾನ್ ಭಾರತ್ ಆರೋಗ್ಯ ಕಾರ್ಡುಗಳನ್ನು ವಿತರಣೆಯ ವ್ಯವಸ್ಥೆ ಸರಿಯಾಗಿಲ್ಲದೆ, ಫಲಾನುಭವಿಗಳಿಗೆ ತಲುಪದಂತಾಗಿದೆ. ಆಸ್ಪತ್ರೆಯಲ್ಲಿ ಸ್ವಚ್ಛತೆ, ಮೂಲಭೂತ ಸೌಕರ್ಯಗಳು, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯ ಸಮರ್ಪಕವಾಗಿಲ್ಲ. ತಕ್ಷಣ ಈ ಬಗ್ಗೆ ಕ್ರಮ ಕೈಗೊಂಡು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಯ ಮೂಲಕ ಚಳುವಳಿ ಹಮ್ಮಿಕೊಳ್ಳುತ್ತೇವೆ ಎಂದು ವೈದ್ಯಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ವಾಣಿ ಅವರೊಂದಿಗೆ ಚರ್ಚಿಸಿ ಎಲ್ಲಾ ನ್ಯೂನತೆಗಳನ್ನು ಸರಿಪಡಿಸುತ್ತೇನೆ. ಚುನಾವಣೆ ಮುಗಿದ ನಂತರ ಆರೋಗ್ಯ ರಕ್ಷಾ ಸಮಿತಿಯ ಸಭೆಯಲ್ಲಿ ಅನುಮೋದನೆ ಪಡೆದು ಸಿಸಿ ಕ್ಯಾಮೆರಾ ಅಳವಡಿಸುವ ಹಾಗೂ ಕಾವಲುಗಾರನನ್ನು ನೇಮಿಸುವ ಮತ್ತು ವಾಹನ ನಿಲುಗಡೆಯ ವ್ಯವಸ್ಥೆಯನ್ನು ಸರಿಪಡಿಸುವ ಉದ್ದೇಶವಿದೆ ಎಂದು ಹೇಳಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ, ಎನ್.ನಾಗರಾಜ, ಸಿ.ಎನ್.ಶ್ರೀಧರ, ಎಂ.ಎಸ್.ಮಂಜುನಾಥ, ಕೋಟೆ ಚನ್ನೇಗೌಡ, ರಮೇಶ್, ಆನಂದ್, ಅಶ್ವತ್ಥನಾರಾಯಣ ಹಾಜರಿದ್ದರು.
ಪೂಜಮ್ಮದೇವಿ ಹೂವಿನ ಕರಗ ಮಹೋತ್ಸವ
ನಗರದ ಬೈಪಾಸ್ ರಸ್ತೆಯಲ್ಲಿರುವ ಶ್ರೀ ಪೂಜಮ್ಮದೇವಿ ಹೂವಿನ ಕರಗ ಮಹೋತ್ಸವ ಬುಧವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.
ಕರಗದ ಪ್ರಯುಕ್ತ ನಗರದ ವಿಶೇಷ ವಾದ್ಯಗೋಷ್ಠಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ದೀಪಾಲಂಕಾರಗಳ ಪೂಜಮ್ಮ ದೇವಿಯ ಮುತ್ತಿನ ಪಲ್ಲಕ್ಕಿ ಉತ್ಸವ ಸಹ ನಡೆಯಿತು.
ಕದಿರಿಹುಣ್ಣಿಮೆಯಂದು ಪ್ರತಿವರ್ಷವೂ ನಗರದ ಪೂಜಮ್ಮ ದೇವಿಯ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಕರಗವನ್ನು ನಡೆಸಲಾಗುತ್ತದೆ.
ಆಕರ್ಷಕ ತಮಟೆ ವಾದ್ಯ ಗಮನ ಸೆಳೆಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿತು. ಮನೆಗಳ ಮುಂದೆ ರಂಗೋಲಿ ಹಾಕಲಾಗಿತ್ತು. ಪ್ರತಿ ಮನೆಯವರು ಕರಗಕ್ಕೆ ಪೂಜೆ ಸಲ್ಲಿಸಿ ಹೂವನ್ನು ಅರ್ಪಿಸಿದರು.
ಶ್ರೀ ಬ್ಯಾಟರಾಯಸ್ವಾಮಿ ಬ್ರಹ್ಮ ರಥೋತ್ಸವ
ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಸಮೀಪದ ಬ್ಯಾಟರಾಯಸ್ವಾಮಿ ಬ್ರಹ್ಮ ರಥೋತ್ಸವ ಬುಧವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ನಗರ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದರು.
ರಥೋತ್ಸವಕ್ಕೆ ಶಾಸಕ ವಿ.ಮುನಿಯಪ್ಪ ಚಾಲನೆ ನೀಡಿದರು. ರಥೋತ್ಸವ ಅಂಗವಾಗಿ ದೇಗುಲದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ಬತ್ತಾಸು, ಸಿಹಿ ಖಾರದ ತಿಂಡಿಗಳು, ವಿವಿಧ ಹಣ್ಣುಗಳು, ತಂಪು ಪಾನೀಯ, ಕರಿದ ತಿಂಡಿ ತಿನಿಸು, ಮಕ್ಕಳಿಗೆ ಆಟಿಕೆ, ಅಚ್ಚೆ ಹಾಕುವವರು, ಬಳೆಗಾರರು ಉತ್ಸವಕ್ಕೆ ರಂಗು ತುಂಬಿದರು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತರಿಗೆ ಪಾನಕ, ಮಜ್ಜಿಗೆ ಹಾಗೂ ಹೆಸರು ಬೇಳೆ ವಿತರಿಸಲಾಯಿತು. ವಿವಿಧ ಗ್ರಾಮಸ್ಥರು ಹೆಸರುಬೇಳೆ ಪಾನಕ ವಿತರಿಸಿದರು.
ಸುತ್ತಮುತ್ತಲಿನ ಗ್ರಾಮಗಳು ಹಾಗೂ ತಾಲ್ಲೂಕಿನ ವಿವಿಧ ಭಾಗಗಳಿಂದ ನೂರಾರು ಭಕ್ತರು ಆಗಮಿಸಿ ದೇವರ ಪೂಜೆಯಲ್ಲಿ ಪಾಲ್ಗೊಂಡರು.
ಗುರುವಾರದಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಪ್ರಾರಂಭ
ತಾಲ್ಲೂಕಿನಲ್ಲಿ ಗುರುವಾರ ಪ್ರಾರಂಭವಾಗಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು, ಪರೀಕ್ಷಾ ಪಾವಿತ್ರತೆ, ಪಾರದರ್ಶಕತೆ ಹಾಗೂ ಮಕ್ಕಳ ಹಿತದೃಷ್ಠಿಯಿಂದ ಯಶಸ್ವಿಯಾಗಿ ನಿರ್ವಹಿಸಲು ಅಗತ್ಯ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿದ್ದು, ವಿವಿಧ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ತಿಳಿಸಿದ್ದರೆ.
ಪ್ರಸಕ್ತ ಸಾಲಿನಲ್ಲಿ ತಾಲ್ಲೂಕಿನಲ್ಲಿ ೧೨೯೨ ಬಾಲಕರು, ೧೨೪೯ ಬಾಲಕಿಯರು, ಒಟ್ಟು ೨೫೪೧ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಕರ್ನಾಟಕ ಪ್ರೌಢ ಶಿಕ್ಷಣಾ ಮಂಡಳಿಯ ನಿಯಮಗಳ ಅನ್ವಯ ಪರೀಕ್ಷಾಕೇಂದ್ರಗಳನ್ನು ರಚಿಸಿದ್ದೇವೆ. ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಪರಿಶೀಲಿಸಿ ದೃಢಪಡಿಸಿಕೊಳ್ಳಲಾಗಿದೆ. ಪರೀಕ್ಷೆಯು ಸುಗಮವಾಗಿ ನಡೆಯಲು ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಪಂಚಾಯಿತಿಯ ಪತ್ರ ಮುಖೇನ ಸಹಕಾರ ಪಡೆಯಲಾಗಿದೆ. ಪರೀಕ್ಷಾ ಅಕ್ರಮವನ್ನು ತಡೆಗಟ್ಟಲು ಹಾಗೂ ಶಾಂತಿಯುತವಾಗಿ ನಡೆಯಲು ತಾಲ್ಲೂಕಿನ ಪೊಲೀಸ್ ವ್ಯವಸ್ಥೆಯ ಸಹಾಯವನ್ನು ಸಹ ಕೋರಲಾಗಿದೆ.
ಪರೀಕ್ಷೆಯಲ್ಲಿ ಯಾವುದೇ ಲೋಪ ಆಗದಂತೆ ಪರೀಕ್ಷಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಮುಖ್ಯಅಧೀಕ್ಷರು.ಕಸ್ಟೋಡಿಯನ್ ಗಳ ಸರಣಿ ಸಭೆಗಳನ್ನು ನಡೆಸಿ ಅವರವರ ಕರ್ತವ್ಯಗಳ ಬಗ್ಗೆ ಮನವರಿಕೆಮಾಡಿಕೊಟ್ಟಿದ್ದು, ಪರೀಕ್ಷೆಗೆ ಸಂಬಂಧಿಸಿದ ಗೌಪ್ಯ ಸಾಮಾಗ್ರಿಗಳನ್ನು ಸಕಾಲದಲ್ಲಿ ಒದಗಿಸಿ, ಪರೀಕ್ಷಾಕೇಂದ್ರಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಸಂಬಂಧಿಸಿದ ಮುಖ್ಯಅಧೀಕ್ಷರುಗಳಿಗೆ ಸೂಚಿಸಲಾಗಿದೆ.
ತಾಲ್ಲೂಕಿನಲ್ಲಿ ಪ್ರಸ್ತುತ ವರ್ಷ ೧೦ ಪರೀಕ್ಷಾಕೇಂದ್ರಗಳನ್ನು ರಚಿಸಿದ್ದು, ಪ್ರತಿ ಪರಿಕ್ಷಾಕೇಂದ್ರಕ್ಕೆ ಅಗತ್ಯ ಸಂಖ್ಯೆಯ ಕೊಠಡಿ ಮೇಲ್ವಿಚಾಕರನ್ನು ನೇಮಕಮಾಡಿ ಆದೇಶಿಸಿದೆ. ತಾಲ್ಲೂಕಿನಾದ್ಯಂತ ಒಟ್ಟು ೧೭೦ ಕೊಠಡಿ ಮೇಲ್ವಿಚಾಕರನ್ನು ನಿಯೋಜಿಸಿದೆ. ಮಾರ್ಗಾಧಿಕಾರಿಗಳನ್ನು ಹಾಗೂ ಸ್ಥಾನಿಕ ಜಾಗೃತ ದಳದ ಸಿಬ್ಬಂದಿಯನ್ನು ನೇಮಕ ಮಾಡಿ ನಿಯಮಾನುಸಾರ ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಸಂಪೂರ್ಣ ಸಹಕಾರವನ್ನು ನೀಡಲಾಗಿದೆ.
ಬಿಸಿಲಿನ ತಾಪ ಹೆಚ್ಚಿರುವುದರಿಂದ ಪರೀಕ್ಷಾರ್ಥಿಗಳ ಆರೋಗ್ಯದಲ್ಲಿ ಏರುಪೇರು ಆದಲ್ಲಿ ತರ್ತು ವೈದ್ಯೋಪಚಾರಕ್ಕಾಗಿ ಎ.ಎನ್.ಎಂ ಗಳನ್ನು ಪ್ರತಿ ಪರೀಕ್ಷಾಕೇಂದ್ರಕ್ಕೆ ನಿಯೋಜಿಸಲು ತಾಲ್ಲೂಕು ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಯವರನ್ನು ಕೋರಿರುವುದಾಗಿ ಅವರು ತಿಳಿಸಿದರು.
ಸ್ತ್ರೀ ಶಕ್ತಿ ಭವನದಲ್ಲಿ ವಿಶೇಷ ಮಕ್ಕಳ “ಮಕ್ಕಳೋತ್ಸವ” ಕಾರ್ಯಕ್ರಮ
ವಿಶೇಷ ಚೇತನರ ಆರೈಕೆ ಮಾಡುವುದರಲ್ಲಿ ತೊಡಗಿಸಿಕೊಂಡಿರುವವರ ತಾಳ್ಮೆ ಮೆಚ್ಚುವಂತಹದ್ದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶಿವಕುಮಾರ್ ತಿಳಿಸಿದರು.
ನಗರದ ಸ್ತ್ರೀ ಶಕ್ತಿ ಭವನದಲ್ಲಿ ಮಂಗಳವಾರ ಜಿಲ್ಲಾ ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಿದ್ದ ಅಂಗವಿಕಲ ಮಕ್ಕಳ “ಮಕ್ಕಳೋತ್ಸವ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಲಾ ವಾರ್ಷಿಕೋತ್ಸವ ಮತ್ತಿತರ ಕಾರ್ಯಕ್ರಮಗಳಲ್ಲಿ ಮಕ್ಕಳ ಪ್ರತಿಭೆ ಪ್ರೋತ್ಸಾಹಿಸಲಾಗುತ್ತದೆ. ಆದರೆ ಅಂಗವಿಕಲ ಮಕ್ಕಳು ಇದರಿಂದ ಹೊರಗುಳಿಯುತ್ತಾರೆ. ಹಾಗಾಗಿ ಅಂಗವಿಕಲ ಮಕ್ಕಳನ್ನು ಪ್ರೋತ್ಸಾಹಿಸಲು ವಿಶೇಷ ಮಕ್ಕಳ ಮಕ್ಕಳೋತ್ಸವ ಆಚರಿಸಲಾಗುತ್ತಿದೆ. ವಿಶೇಷ ಚೇತನ ಮಕ್ಕಳು ಸಂಗೀತ, ನೃತ್ಯ ಕಾರ್ಯಕ್ರಮಗಳಲ್ಲಿ ಸಾಧನೆ ಮಾಡಿರುವುದನ್ನು ಕಾಣಬಹುದು. ಇವರ ಸಾಧನೆ ಇತರರಿಗೆ ಮಾದರಿಯಾಗಬೇಕು ಎಂದು ಹೇಳಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಆರೋಗ್ಯವಂತ ಮಗುವನ್ನು ಹೆತ್ತು ಪಾಲಿಸುವುದು ಎಲ್ಲಾ ದಂಪತಿಗಳ ಬಯಕೆ. ಭಾವೀ ತಂದೆ-ತಾಯಿಯರ ಮಾನಸಿಕ ಹಾಗೂ ದೈಹಿಕ ಆರೋಗ್ಯ, ಹುಟ್ಟುವ ಮಗುವಿನ ಮೇಲೆ ಪ್ರಭಾವ ಬೀರುವುದು ಖಚಿತವಾಗಿದ್ದು, ಈಗ ಗರ್ಭಪೂರ್ವ ಆರೈಕೆ ಕೂಡ ಪ್ರಾಮುಖ್ಯತೆಯನ್ನು ಹೊಂದಿದೆ. ಮಹಿಳೆಯ ಆರೋಗ್ಯ ರಕ್ಷಣೆ, ಆಹಾರ ಸೇವನೆ ಮುಂತಾದ ಚಟುವಟಿಕೆಗಳು ಮಗುವಿನ ಸ್ವಾಸ್ಥ್ಯದ ಮೇಲೆ ಪ್ರಭಾವ ಬೀರಬಲ್ಲವು. ಈ ಬಗ್ಗೆ ಆಶಾಕಾರ್ಯಕರ್ತೆಯರ, ವೈದ್ಯರ ನೆರವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಿಡಿಪಿಒ ಲಕ್ಷ್ಮಿದೇವಮ್ಮ ಮಾತನಾಡಿ, ಅಂಗವಿಕಲರು ಎಲ್ಲ ಸೌಲಭ್ಯ ಪಡೆಯಲು ಅರ್ಹರಾಗಿದ್ದು, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾಗಿದೆ ಎಂದು ಹೇಳಿದರು.
ವಿಶೇಷ ಮಕ್ಕಳಿಗಾಗಿ ಆಯೋಜಿಸಿದ್ದ ಚಿತ್ರಕಲೆ, ವೇಷಭೂಷಣ ಮುಂತಾದ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಪ್ರಶಂಸಾ ಪತ್ರ ಹಾಗೂ ೩೦೦ ರೂ ನಗದು ಬಹುಮಾನವನ್ನು ವಿತರಿಸಲಾಯಿತು.
ಜಿಲ್ಲಾ ಅಂಗವಿಕಲರ ಇಲಾಖೆ ಅಧಿಕಾರಿ ಜ್ಯೋತಿ, ಆಶಾಕಿರಣ ಅಂಧಮಕ್ಕಳ ಶಾಲೆಯ ವ್ಯವಸ್ಥಾಪಕ ಗೋಪಾಲಪ್ಪ, ಶಿಖ್ಶಕರಾದ ಶೋಭ, ಚಂದ್ರಕಲಾ, ಅನ್ನಪೂರ್ಣ, ಜಗದೀಶ್, ಗೋಪಾಲ್, ಮಹೇಶ್, ಚಿತ್ರಕಲಾ ಶಿಕ್ಷಕರಾದ ಅಶ್ವತ್ಥನಾರಾಯಣ, ಶಶಿಧರ ಹಾಜರಿದ್ದರು.
ಚುನಾವಣೆ ಬಹಿಷ್ಕರಿಸುವುದಿಲ್ಲ ಎಂದ ಕಾಕಚೊಕ್ಕಂಡಹಳ್ಳಿ ಗ್ರಾಮದ ಮತ್ತೊಂದು ಗುಂಪು
ತಾಲ್ಲೂಕಿನ ಕಾಕಚೊಕ್ಕಂಡಹಳ್ಳಿ ಗ್ರಾಮಸ್ಥರು ರಸ್ತೆ ಹಾಗೂ ಮೂಲಭೂತ ಸೌಕರ್ಯ ಒದಗಿಸದಿರುವುದರಿಂದ ಲೋಕಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಸೋಮವಾರ ಪತ್ರವನ್ನು ಗ್ರೇಡ್ ೨ ತಹಶೀಲ್ದಾರರಿಗೆ ಸಲ್ಲಿಸಿದ್ದರು. ಆದರೆ ಅದೇ ಗ್ರಾಮದ ಕೆಲವರೊಂದಿಗೆ ಮಂಗಳವಾರ ಕಾಂಗ್ರೆಸ್ ಮುಖಂಡರು ಆಗಮಿಸಿ ಚುನಾವಣೆಯಲ್ಲಿ ಮತ ಚಲಾಯಿಸುತ್ತೇವೆ ಎಂಬುದಾಗಿ ಪತ್ರವನ್ನು ಗ್ರೇಡ್ ೨ ತಹಶೀಲ್ದಾರ್ ಹನುಮಂತರಾವ್ ಅವರಿಗೆ ಸಲ್ಲಿಸಿದರು.
“ಜಂಗಮಕೋಟೆ ಕಾಕಚೊಕ್ಕಂಡಹಳ್ಳಿ ಗ್ರಾಮದ ನಿವಾಸಿಗಳಾದ ನಾವು ತಿಳಿಸುವುದೇನೆಂದರೆ, ನಮ್ಮ ಗ್ರಾಮದ ಕೆಲವರು ಚುನಾವಣಾ ಬಹಿಷ್ಕಾರದ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಅದು ಸುಳ್ಳಿನಿಂದ ಕೂಡಿದ ಮಾಹಿತಿ ಮತ್ತು ರಾಜಕೀಯ ಕುತಂತ್ರದಿಂದ ಕೂಡಿದೆ. ಅಂಕತಟ್ಟಿ ಗೇಟ್ ನಿಂದ ಕಾಕಚೊಕ್ಕಂಡಹಳ್ಳಿ ಗ್ರಾಮದವರೆಗೆ ಮತ್ತು ಭಕ್ತರಹಳ್ಳಿಯಿಂದ ಮಳಮಾಚನಹಳ್ಳಿಯವರೆಗೆ ರಸ್ತೆಯನ್ನು ಸಂಸದ ಕೆ.ಎಚ್.ಮುನಿಯಪ್ಪ ಮಂಜೂರು ಮಾಡಿಸಿದ್ದು ಟೆಂಡರ್ ಪ್ರಕ್ರಿಯೆಯಲ್ಲಿದೆ. ಚುನಾವಣೆ ನೀತಿ ಸಂಹಿತೆಯಿಂದಾಗಿ ಶಾಸಕರಿಂದ ಗುದ್ದಲಿ ಪೂಜೆ ನಡೆಸುವುದನ್ನು ಮುಂದೂಡಿದೆ. ನಾವುಗಳು ಯಾವುದೇ ಕಾರಣಕ್ಕೂ ಚುನಾವಣೆಯನ್ನು ಬಹಿಷ್ಕರಿಸುವುದಿಲ್ಲ” ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ರಾಜ್ಯ ಸಂಚಲಕ ಟಿ.ನಾರಾಯಣಸ್ವಾಮಿ, ಎಸ್.ಎಂ.ನಾರಾಯಣಸ್ವಾಮಿ, ಕಾಕಚೊಕ್ಕಂಡಹಳ್ಳಿ ಗ್ರಾಮದ ಎನ್.ಪಿ.ವೆಂಕಟೇಶ್, ವೆಂಕಟೇಶಪ್ಪ, ಮಂಜು, ಆರ್.ವೆಂಕಟೇಗೌಡ, ಬಿ.ಕೃಷ್ಣಪ್ಪ, ರಾಮಾಂಜಿ, ನಾಗೇಶ್, ಪುನೀತ್, ಸುಮಂತ್ ಗೌಡ ಹಾಜರಿದ್ದರು.
ಕಾಕಚೊಕ್ಕಂಡಹಳ್ಳಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ
ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮಪಂಚಾಯಿತಿಯ ಕಾಕಚೊಕ್ಕಂಡಹಳ್ಳಿ ಗ್ರಾಮಸ್ಥರು ಲೋಕಸಭೆ ಚುನಾವಣೆ ಬಹಿಷ್ಕರಿಸುತ್ತಿರುವುದಾಗಿ ಗ್ರೇಡ್ ೨ ತಹಶೀಲ್ದಾರ್ ಹನುಮಂತರಾವ್ ಅವರಿಗೆ ಸೋಮವಾರ ಪತ್ರವನ್ನು ನೀಡಿದ್ದಾರೆ.
ಚುನಾಯಿತ ಜನಪ್ರತಿನಿಧಿಗಳು ನಮ್ಮ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ಮತ್ತು ರಸ್ತೆ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ. ಆದರಿಂದ ಏಪ್ರಿಲ್ ೧೮ ರಂದು ನಡೆಯುವ ಲೋಕಸಭಾ ಚುನಾವಣೆಯನ್ನು ಗ್ರಾಮಸ್ಥರೆಲ್ಲ ಸೇರಿ ಬಹಿಷ್ಕರಿಸುತ್ತಿದ್ದೇವೆ.
ಕಾಕಚೊಕ್ಕಂಡಹಳ್ಳಿ ಗ್ರಾಮದಿಂದ ಅಂಕತಟ್ಟಿ ಗೇಟ್ ವರೆಗೂ ರಸ್ತೆ ಸಾಕಷ್ಟು ಹದಗೆಟ್ಟಿದೆ. ಸುಮಾರು ನಾಲ್ಕೈದು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಬಹಳಷ್ಟು ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗಲು ಈ ರಸ್ತೆಯನ್ನು ಉಪಯೋಗಿಸುವರು. ಕೆರೆ ಮಧ್ಯದ ರಸ್ತೆಯಿದು. ಉತ್ತಮ ಗುಣಮಟ್ಟದ ಡಾಂಬರೀಕರಣ ಮಾಡಬೇಕು. ರಸ್ತೆ ಪೂರಾ ಹಳ್ಳ ಕೊಳ್ಳಗಳಿಂದ ಕೂಡಿರುವುದರಿಂದ ಹಲವಾರು ಅಪಘಾತಗಳು ಸಂಭವಿಸಿವೆ. ಈ ಬಗ್ಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಏನೂ ಪ್ರಯೋಜನವಾಗಿಲ್ಲ. ನಮ್ಮ ಬಗ್ಗೆ ನಿರ್ಲಕ್ಷ್ಯ ತೋರಿರುವ ಜನಪ್ರತಿನಿಧಿಗಳು ನಮಗೆ ಬೇಕಿಲ್ಲ ಎಂದು ಹೇಳಿದರು.
ಕಾಕಚೊಕ್ಕಂಡಹಳ್ಳಿ ಗ್ರಾಮಸ್ಥರಾದ ರಾಮಯ್ಯ, ಮುನಿಯಪ್ಪ, ಪ್ರಕಾಶ್, ಮುರಳೀಧರ್, ವೆಂಕಟಮೂರ್ತಿ, ಮುನಿಯಪ್ಪ, ಮಹೇಶ್, ಗಂಗಾಧರ್, ಮುರಳಿಕೃಷ್ಣ, ಮನೋಹರ್, ರಾಜೇಂದ್ರ, ಹರೀಶ್, ಬಸವರಾಜು, ರವಿಕುಮಾರ್, ಸಂಪತ್, ರೈತಸಂಘದ ಭಕ್ತರಹಳ್ಳಿ ಪ್ರತೀಶ್, ಬೆಳ್ಳೂಟಿ ಮುನಿಕೆಂಪಣ್ಣ, ಡಿ.ವಿ.ನಾರಾಯಣಸ್ವಾಮಿ, ಅಶ್ವತ್ಥನಾರಾಯಣ, ಕೆ.ಎಚ್.ದೇವರಾಜ್, ಶ್ರೀರಾಮಪ್ಪ ಹಾಜರಿದ್ದರು.
ಚುನಾವಣೆಯಲ್ಲಿ ಲೋಪವೆಸಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ
ಪಾರದರ್ಶಕ, ನಿರ್ಭೀತಿಯ ವಾತಾವರಣದಲ್ಲಿ ಚುನಾವಣೆ ನಡೆಸಲಿಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಚುನಾವಣೆಯಲ್ಲಿ ಲೋಪವೆಸಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಶಿವಕುಮಾರ್ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೯ ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದೆ. ೧೮ ವರ್ಷಗಳು ಪೂರ್ಣಗೊಂಡಿರುವ ಯುವಜನರು ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲಿಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ.
ಮತದಾರರು ನಿರ್ಭೀತಿಯಿಂದ ಮತಚಲಾಯಿಸಲಿಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಭದ್ರತೆಗಳನ್ನು ಒದಗಿಸುವ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಅಕ್ರಮಗಳ ಬಗ್ಗೆ ಜನರು ನೇರವಾಗಿ “ಸಿ.ವಿಜಿಲ್” ಆಪ್ ಮೂಲಕ ೫ ನಿಮಿಷಗಳಲ್ಲಿ ದೂರು ದಾಖಲಿಸಬಹುದು. ದೂರು ದಾಖಲಾದ ೧೦೦ ನಿಮಿಷಗಳಲ್ಲಿ ನಮ್ಮ ತಂಡ ದೂರಗಳ ಬಗ್ಗೆ ಕ್ರಮ ವಹಿಸಲಿದೆ. ದೂರು ನೀಡಿದವರ ಮಾಹಿತಿಗಳನ್ನು ಗೌಪ್ಯವಾಗಿಡಲಾಗುತ್ತದೆ. ಯಾರೂ ಇದನ್ನು ದುರುಪಯೋಗ ಮಾಡಿಕೊಳ್ಳಬಾರದು.
ಚುನಾವಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವಾಹನಗಳಲ್ಲಿ ಜಿ.ಪಿ.ಎಸ್.ವ್ಯವಸ್ಥೆ ಅಳವಡಿಸಲಾಗಿದೆ. ತಾಲ್ಲೂಕಿನಲ್ಲಿ ಒಟ್ಟು ೧,೯೮,೧೮೯ ಮಂದಿ ಮತದಾರರು ಇದ್ದಾರೆ. ೯೯೮೪೦ ಮಂದಿ ಪುರುಷರು, ೯೮೩೩೯ ಮಂದಿ ಮಹಿಳೆಯರು, ೧೦ ಮಂದಿ ಇತರೆ ಮತದಾರರಿದ್ದಾರೆ. ೨೪೨ ಮತಗಟ್ಟೆಗಳಿವೆ. ೧ ಹೆಚ್ಚುವರಿ ಮತಗಟ್ಟೆ ಮಾಡಲಾಗಿದೆ. ೫ ಅತಿಸೂಕ್ಷ್ಮ ಮತಗಟ್ಟೆಗಳು, ಸಮಸ್ಯಾತ್ಮಕ ಮತಗಟ್ಟೆಗಳು ೫೭, ಸೂಕ್ಷ್ಮ ಮತಗಟ್ಟೆಗಳು ೫೩, ಸಾಧಾರಣ ಮತಗಟ್ಟೆಗಳು ೧೩೨, ಎಲ್ಲಾ ಮತಗಟ್ಟೆಗಳಲ್ಲಿ ಇ.ವಿ.ಎಂ.ಯಂತ್ರಗಳ ಮೂಲಕ ಮತದಾನವಾಗಲಿದ್ದು ಅಭ್ಯರ್ಥಿಗಳು ಅಂತಿಮವಾದ ನಂತರ ಇ.ವಿ.ಎಂಗಳು ಸಿದ್ದಗೊಳ್ಳಲಿವೆ ಎಂದರು.
ತಹಶೀಲ್ದಾರ್ ಅಜಿತ್‌ಕುಮಾರ್ ರೈ ಮಾತನಾಡಿ, ಚುನಾವಣೆ ಅಕ್ರಮಗಳಲ್ಲಿ ತೊಡಗಿರುವವರು ಎಷ್ಟೇ ಪ್ರಭಾವಿಗಳಿದ್ದರೂ ಅಂತಹವರ ಮೇಲೆ ನೇರವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಮತದಾರರ ಮೇಲೆ ಇಂತಹ ಪಕ್ಷಕ್ಕೆ ಮತ ಹಾಕಬೇಕು ಎಂದು ಒತ್ತಡ ಹೇರುವುದು, ಆಮಿಷಗಳನ್ನು ಒಡ್ಡುವುದನ್ನು ಮಾಡುವಂತಿಲ್ಲ, ಬಲಾಡ್ಯರು, ದುರ್ಬಲ ವರ್ಗದವರ ಮೇಲೆ ದೌರ್ಜನ್ಯ ನಡೆಸಿ ಮತದಾನ ಮಾಡಿಸುವಂತಹ ಘಟನೆಗಳ ನಡೆಯದಂತೆ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಚುನಾವಣೆ ಅಕ್ರಮಗಳ ಕುರಿತು ಕಂಡು ಬಂದರೆ ದೂರು ಸಲ್ಲಿಸಬಹುದು.
ಸಹಾಯಕ ಚುನಾವಣೆ ಅಧಿಕಾರಿ ೯೪೪೮೮೦೮೩೫೬, ಕಚೇರಿ ೦೮೧೫೮ ೨೫೬೭೬೪, ಕಂಟ್ರೋಲ್ ರೂಂ ಸಂಖ್ಯೆ ೦೮೧೫೮೨೫೬೭೬೩ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದರು. ನಗರಸಭಾ ಆಯುಕ್ತ ಜಿ.ಎನ್.ಚಲಪತಿ ಹಾಜರಿದ್ದರು.
ಬಿಜೆಪಿ ಕಾರ್ಯಕರ್ತರು ಹಾಗೂ ಸಂಸದ ಕೆ.ಎಚ್. ಮುನಿಯಪ್ಪ ಅವರ ಬೆಂಬಲಿಗರ ನಡುವೆ ಚಕಮಕಿ
ನಗರದ ಪೊಲೀಸ್ ಠಾಣೆಯ ಮುಂದೆ ಶನಿವಾರ ಬಿಜೆಪಿ ಕಾರ್ಯಕರ್ತರು ಹಾಗೂ ಸಂಸದ ಕೆ.ಎಚ್. ಮುನಿಯಪ್ಪ ಅವರ ಬೆಂಬಲಿಗರ ನಡುವೆ ಮಾತಿನ ಚಕಮಕಿ ಹಾಗೂ ಘರ್ಷಣೆ ನಡೆಯಿತು.
“ಸಂಸದ ಕೆ.ಎಚ್. ಮುನಿಯಪ್ಪ ಅವರಿಂದ ೪೧೦ ಎಕರೆ ಭೂಕಬಳಿಕೆಯ ಬಗ್ಗೆ ಮಾಧ್ಯಮವೊಂದರಲ್ಲಿ ವರದಿ ಪ್ರಸಾರವಾಗಿದೆ. ಈ ವರದಿಯನ್ನು ಕಂಡು ರಾಜ್ಯವೇ ಬೆಚ್ಚುಬಿದ್ದಿದೆ. ಈ ಭೂಕಬಳಿಕೆಯ ವಿರುದ್ಧ ದೂರು ದಾಖಲಿಸಬೇಕು’ ಎಂದು ಬಿಜೆಪಿ ಕಾರ್ಯಕರ್ತರು ನಗರದ ಪೊಲೀಸ್ ಠಾಣೆಗೆ ದೂರು ನೀಡಲು ಹೋದರು. ಆದರೆ, ಸರ್ಕಲ್ ಇನ್ಸ್ ಪೆಕ್ಟರ್ ಇರದಿದ್ದುದರಿಂದ, ಇದು ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವುದರಿಂದ ಅಲ್ಲಿ ದೂರನ್ನು ನೀಡುವಂತೆ ನಗರ ಪೊಲೀಸರು ತಿಳಿಸಿದರು. ಈ ಸಂದರ್ಭದಲ್ಲಿ ಠಾಣೆಯ ಮುಂದೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಬಿಜೆಪಿ ಕಾರ್ಯಕರ್ತರ ವಿರುದ್ಧ ಕೆ.ಎಚ್. ಮುನಿಯಪ್ಪ ಅವರ ಬೆಂಬಲಿಗರು “ನೀವು ಕೆ.ಎಚ್. ಮುನಿಯಪ್ಪ ಅವರ ಬಗ್ಗೆ ನಿಂದನೆ ಮಾಡಿ ಮಾತನಾಡುವುದು ಸರಿಯಲ್ಲ” ಎಂದು ಜಗಳಕ್ಕೆ ನಿಂತರು. ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಘರ್ಷಣೆಯ ಹಂತಕ್ಕೆ ಹೋಗುವಷ್ಟರಲ್ಲಿ ಪೊಲೀಸರು ಇಬ್ಬರನ್ನೂ ಬಿಡಿಸಿ ಕಳುಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಪಕ್ಷದ ಬಿ.ಬಿ.ಎಂ.ಪಿ ಸದಸ್ಯ ಎಸ್.ಮುನಿಸ್ವಾಮಿ, “ ೩೦ ವರ್ಷಗಳ ಹಿಂದೆ ನಿರ್ಗತಿಕರೆಂದು ೪ ಎಕರೆ ಸರ್ಕಾರದಿಂದ ಮಂಜೂರು ಮಾಡಿಸಿಕೊಂಡಿದ್ದ ಕೆ.ಎಚ್. ಮುನಿಯಪ್ಪ ಅವರು ಈಗ ೪೧೦ ಎಕರೆ ಸರ್ಕಾರಿ ಜಮೀನನ್ನು ಕಬಳಿಸಿರುವುದು ಬೆಳಕಿಗೆ ಬಂದಿದೆ. ಸಂಸದರಾಗಿ ಕ್ಷೇತ್ರವನ್ನು ನಿರ್ಲಕ್ಷಿಸಿದ್ದ ಅವರು ಶಿಡ್ಲಘಟ್ಟ ತಾಲ್ಲೂಕಿನ ಗೊರಮಿಳ್ಳಹಳ್ಳಿಯಲ್ಲಿ ನೂರಾರು ಎಕರೆ ಸರ್ಕಾರಿ ಜಮೀನನ್ನು ಕಬಳಿಸಿದ್ದಾರೆ. ಈ ಭೂಕಬಳಿಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ನಾವು ದೂರು ನೀಡಲು ಬಂದಿದ್ದೆವು” ಎಂದು ತಿಳಿಸಿದರು.
ಸಂಸದ ಕೆ.ಎಚ್. ಮುನಿಯಪ್ಪ ಅವರ ಬೆಂಬಲಿಗ ಕೆ.ಪಿ.ಸಿ.ಸಿ ಸದಸ್ಯ ಜಿ.ಎನ್.ನಾರಾಯಣಸ್ವಾಮಿ ಮಾತನಾಡಿ, “ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆ ಕಾಂಪೋಂಡ್ ಒಳಗೆ ಸಂಸದ ಕೆ.ಎಚ್.ಮುನಿಯಪ್ಪ ಅವರ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿ ಅವರನ್ನು ನಿಂದಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣೆ ಶಿರಸ್ತೆದಾರ್ ಅಶೋಕ್ ಅವರಿಗೆ ಮನವಿಯನ್ನು ಸಲ್ಲಿಸಿದ್ದೇವೆ” ಎಂದು ತಿಳಿಸಿದರು.
ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರಗೌಡ, ಗೋವಿಂದ, ಶ್ರೀಧರ್, ಬೈರಾರೆಡ್ಡಿ, ಸಂಸದ ಕೆ.ಎಚ್.ಮುನಿಯಪ್ಪ ಅವರ ಬೆಂಬಲಿಗರಾದ ಕೆ.ಪಿ.ಸಿ.ಸಿ ರಾಜ್ಯ ಸಂಚಲಕ ಟಿ.ನಾರಾಯಣಸ್ವಾಮಿ, ಎನ್.ಎಸ್.ಯು.ಐ ರಾಜ್ಯ ಸಂಚಾಲಕ ಮುನೀಂದ್ರ, ಕೃಷ್ಣಪ್ಪ ಹಾಜರಿದ್ದರು.
ಫುಟ್ ಪಾತ್ ತೆರವು ಕಾರ್ಯಾಚರಣೆ
ನಗರದ ಬಸ್ ನಿಲ್ದಾಣದಿಂದ ದಿಬ್ಬೂರಹಳ್ಳಿಗೆ ಸಂಪರ್ಕ ಕಲ್ಪಿಸುವ ಪ್ರವಾಸಿ ಮಂದಿರ ರಸ್ತೆಯ ಇಕ್ಕೆಲಗಳಲ್ಲಿ ಪಾದಚಾರಿಗಳು ಸಂಚರಿಸುವ ಫುಟ್ ಪಾತ್ ಮೇಲೆ ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳನ್ನು ನಗರಸಭೆ ಹಾಗೂ ನಗರಠಾಣೆ ಪೊಲೀಸ್ ಸಿಬ್ಬಂದಿ ಶುಕ್ರವಾರ ತೆರವುಗೊಳಿಸಿದರು.
ಫುಟ್‌ಪಾತ್ ವ್ಯಾಪಾರಸ್ಥರ ತೆರವು ಕಾಮಗಾರಿಗೆ ಚಾಲನೆ ನೀಡಿದ ನಗರಸಭೆ ಸಿಬ್ಬಂದಿ ಹಾಗೂ ನಗರಠಾಣೆ ಪೊಲೀಸರು ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿವರೆಗಿನ ಫುಟ್ ಪಾತ್ ಮೇಲಿನ ಅಂಗಡಿ ಮುಂಗಟ್ಟು ಹಾಗೂ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದವರಿಗೆ ದಂಡ ವಿಧಿಸಿದರು.
ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ ಮಾತನಾಡಿ, ನಗರದ ಮುಖ್ಯರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಮಾಡುವುದು ಹಾಗೂ ಬಹುತೇಕ ಅಂಗಡಿಗಳವರು ತಮ್ಮ ಅಂಗಡಿ ಸರಕನ್ನು ಅಂಗಡಿಯಿಂದ ಹೊರಗಡೆ ರಸ್ತೆಯಲ್ಲಿ ಹಾಕುವುದರಿಂದ ನಗರದ ಮುಖ್ಯರಸ್ತೆಗಳಲ್ಲಿ ಸಂಚರಿಸುವುದು ಕಷ್ಟಕರವಾಗುತ್ತದೆ. ಈ ಬಗ್ಗೆ ನಾಗರಿಕರು ಹಲವಾರು ಭಾರಿ ನಗರಸಭೆಗೆ ಮನವಿ ಮಾಡಿದ ಹಿನ್ನಲೆಯಲ್ಲಿ ಸಿಬ್ಬಂದಿಯೊಂದಿಗೆ ಫುಟ್‌ಪಾತ್ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಪಾದಚಾರಿ ಮಾರ್ಗದಲ್ಲಿ ಯಾವುದೇ ನಾಮಫಲಕ ಹಾಗೂ ಅಂಗಡಿ ಸರಕುಗಳನ್ನು ಇಡದೇ ಪಾದಚಾರಿಗಳು ಸುಗಮವಾಗಿ ಸಂಚರಿಸಲು ಅಂಗಡಿ ಮಾಲೀಕರು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ನಗರಠಾಣೆ ಪಿಎಸ್ಸೈ ಅವಿನಾಶ್ ವೀರ್, ಎಎಸ್ಸೈಗಳಾದ ಕೃಷ್ಣಪ್ಪ, ವೆಂಕಟರಾಮ್, ನಗರಸಭೆ ಆರೋಗ್ಯ ನಿರೀಕ್ಷಕ ಆಂಜಿನಪ್ಪ ಹಾಜರಿದ್ದರು.
ಚುನಾವಣೆ ನೀತಿ ಸಂಹಿತೆ – ವಾದ್ಯಗೋಷ್ಠಿ ಹಾಗೂ ಪ್ರಸಾದ ವಿತರಣೆ ಸಂಪೂರ್ಣ ನಿಷೇಧ
ಚುನಾವಣೆ ನೀತಿ ಸಂಹಿತೆ ಜಾರಿಯಿರುವ ಹಿನ್ನಲೆಯಲ್ಲಿ ನಗರದಲ್ಲಿ ನಡೆಯಲಿರುವ ವಿವಿಧ ಕರಗ ಮಹೋತ್ಸವ ಸಮಾರಂಭಗಳಲ್ಲಿ ವಾದ್ಯಗೋಷ್ಠಿ ಹಾಗೂ ಪ್ರಸಾದ ವಿತರಣೆ ಸಂಪೂರ್ಣ ನಿಷೇಧಿಸಲಾಗಿದೆ ಎಂದು ತಹಶೀಲ್ದಾರ್ ಎಸ್.ಅಜಿತ್‌ಕುಮಾರ್ ರೈ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಶ್ರೀ ಪೂಜಮ್ಮ ದೇವಿ ಭಕ್ತಮಂಡಳಿ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಈಗಾಗಲೇ ಲೋಕಸಭೆ ಚುನಾವಣೆಯ ನೀತಿಸಂಹಿತೆ ಜಾರಿಯಾಗಿರುವುದರಿಂದ ಯಾವುದೇ ಜಾತ್ರೆ, ಕರಗ ಮಹೋತ್ಸವಗಳಿಗೆ ವಾದ್ಯಘೋಷ್ಠಿ ಏರ್ಪಡಿಸಲು ಅನುಮತಿ ನೀಡಲಾಗುವುದಿಲ್ಲ. ವೇದಿಕೆ ನಿರ್ಮಿಸಿ ವಿವಿಧ ರಾಜಕಾರಣಿಗಳನ್ನು ಆಹ್ವಾನಿಸಿ ಅವರಿಗೆ ಸನ್ಮಾನ ಮತ್ತು ಅವರಿಂದ ಭಾಷಣ ಮಾಡಿಸಿದರೆ, ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗುವುದು. ಆ ಖರ್ಚು ವೆಚ್ಚಗಳನ್ನು ಅಭ್ಯರ್ಥಿಯ ಖಾತೆಗೆ ಸೇರಿಸಲಾಗುವುದು. ಹಾಗಾಗಿ ಕರಗ ಹಾಗೂ ಇತರೆ ಧಾರ್ಮಿಕ ಕಾರ್ಯಕ್ರಮಗಳನ್ನು ಸಮಯಕ್ಕೆ ಸರಿಯಾಗಿ ಸರಳವಾಗಿ ಆಚರಿಸುವ ಮೂಲಕ ಚುನಾವಣೆ ನೀತಿಸಂಹಿತೆ ಉಲ್ಲಂಘನೆಯಾಗದಂತೆ ನಡೆಸಲು ಜನತೆ ಸಹಕರಿಸಬೇಕು. ಈಚೆಗೆ ನೆರೆಯ ಚಿಂತಾಮಣಿಯಲ್ಲಿ ನಡೆದ ಪ್ರಸಾದ ದುರಂತದ ಹಿನ್ನಲೆಯಲ್ಲಿ ಯಾರೊಬ್ಬರೂ ಪ್ರಸಾದ ಹಂಚಿಕೆ ಮಾಡಬಾರದು ಎಂದರು.
ಸರ್ಕಲ್ ಇನ್ಸ್ ಪೆಕ್ಟರ್ ಜಿ.ಎನ್.ಆನಂದಕುಮಾರ್ ಮಾತನಾಡಿ, ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಸಭೆ ಸಮಾರಂಭಗಳು ಮಾಡಬೇಕಾದಲ್ಲಿ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಸಭೆ ನಡೆಸಲು ಅನುಮತಿ ನೀಡಲಾಗುವುದಿಲ್ಲ. ಮೈಕ್ ಬಳಸಲು ಬೆಳಗ್ಗೆ ೬ ರಿಂದ ರಾತ್ರಿ ೧೦ ಗಂಟೆಯವರೆಗೂ ಮಾತ್ರ ಅನುಮತಿ ನೀಡಲಾಗುತ್ತದೆ. ಹಾಗಾಗಿ ಧಾರ್ಮಿಕ ಕಾರ್ಯಗಳನ್ನು ನಿಗದಿತ ಸಮಯದೊಳಗೆ ಶಾಂತಿಯುತವಾಗಿ ಮುಗಿಸಲು ಜನತೆ ಪೊಲೀಸರೊಂದಿಗೆ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ಜಿ.ಎನ್.ಚಲಪತಿ, ನಗರಠಾಣೆ ಪಿಎಸ್ಸೈ ಅವಿನಾಶ್‌ವೀರ್, ಮುಖಂಡರಾದ ಚಿಕ್ಕಮುನಿಯಪ್ಪ, ಎಸ್.ಎಂ.ರಮೇಶ್, ಮುನಿನರಸಿಂಹ, ಕೃಷ್ಣಮೂರ್ತಿ ಹಾಜರಿದ್ದರು.
ಮಕ್ಕಳನ್ನು ಬೆಳೆಸುವ ರೀತಿಯಲ್ಲಿ ದೇಶದ ಪ್ರಗತಿ, ಅಭಿವೃದ್ಧಿ ಅಡಗಿದೆ
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಸಿ.ಆರ್.ಟಿ, ಆರ್.ಟಿ.ಇ ಕಾರ್ಯಪಡೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರ್.ಐ.ಎಂ. ಸಹಯೋಗದಲ್ಲಿ ನಡೆದ “ಬಾಲ/ಯುವ ಮಕ್ಕಳ ಮೇಳ – ಮಕ್ಕಳ ಹಕ್ಕುಗಳ ಧ್ವನಿ” ಕಾರ್ಯಕ್ರಮದಲ್ಲಿ ಚೈಲ್ಡ್ ರೈಟ್ಸ್ ಟ್ರಸ್ಟ್ ನಾಗಸಿಂಹ ಜಿ.ರಾವ್ ಮಾತನಾಡಿದರು.
ಮಕ್ಕಳ ಹಕ್ಕುಗಳ ರಕ್ಷಣೆ ಸಂಬಂಧ ವಿಶ್ವಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಹಲವಾರು ವರ್ಷ ಕಳೆದಿದೆ. ಆದರೆ, ಇಂದಿಗೂ ಮಕ್ಕಳ ಮೇಲಿನ ದೌರ್ಜನ್ಯ ನಿಂತಿಲ್ಲ ಎಂದು ಅವರು ತಿಳಿಸಿದರು.
ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇಂದಿನ ಮಕ್ಕಳು ನಾಳೆಯ ಪ್ರಜೆಗಳಲ್ಲ, ಅವರು ಇಂದಿನ ಪ್ರಜೆಗಳು. ಅವರನ್ನು ಬೆಳೆಸುವ ರೀತಿಯಲ್ಲಿ ದೇಶದ ಪ್ರಗತಿ, ಅಭಿವೃದ್ಧಿ ಅಡಗಿದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಚಂದ್ರಾನಾಯಕ್ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಜತೆಗೆ ವಿವಿಧ ಇಲಾಖೆಗಳು ಹಾಗೂ ಸಂಘ-ಸಂಸ್ಥೆಗಳು ಕೈಜೋಡಿಸಿ ಕೆಲಸ ಮಾಡಿದಾಗ ಮಾತ್ರ ನ್ಯಾಯ ಒದಗಿಸಲು ಸಾಧ್ಯ. ಈ ದೇಶದ ಸಂಪತ್ತು ಹಾಗೂ ಶಕ್ತಿಯಾದ ಮಕ್ಕಳಿಗೆ ಶಿಕ್ಷಣ ನೀಡುವುದು, ಬಾಲ್ಯ ಕಾಪಾಡುವುದು ಹಾಗೂ ಕೌಶಲ್ಯ ನೀಡಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ತಮ್ಮ ಅನುಭವ ಹಾಗೂ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಚಿತ್ರಲೇಖನ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಉತ್ತಮ ಮಕ್ಕಳ ಹಕ್ಕುಗಳ ಸಂಘ, ಮಕ್ಕಳ ಸ್ನೇಹಿ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಮೇರಿ ಚಲ್ಲದೊರೈ, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸುವರ್ಣ, ಇಂಡಿಯಾ ಲಿಟ್ರೆಸಿ ಪ್ರಾಜೆಕ್ಟ್ ವಿಕ್ಟರ್ ಟಾರೋ ಪೆರ್ ಮುಡೆ, ಎ.ಡಿ.ಡಿ.ಇಂಡಿಯಾ ಸಂಯೋಜಕ ಜಾನ್ ಮುರ್ರೆ, ಆಶಾಕಿರಣ ಅಂಧಮಕ್ಕಳ ಶಾಲೆಯ ಮುಖ್ಯ ಶಿಕ್ಷಕ ಗೋಪಾಲ್, ಬಿ.ಆರ್.ಸಿ ಪ್ರಕಾಶ್, ವೆಂಕಟೇಶ್, ಆಂಜಿನಪ್ಪ, ಗಿರಿಜಾಂಬಿಕೆ, ಪ್ರಾಧ್ಯಾಪಕ ಡಾ.ವಿ.ವೆಂಕಟೇಶ್, ಆರ್.ಟಿ.ಇ. ಕಾರ್ಯಪಡೆ ಸಂಚಾಲಕ ಜೆ.ಸತೀಶ್ ಹಾಜರಿದ್ದರು.
ಕನ್ನಡ ಧ್ವಜದ ವಿನ್ಯಾಸಕ ಮ.ರಾಮಮೂರ್ತಿ ಅವರ ಜನ್ಮದಿನಾಚರಣೆ
ತಾಲ್ಲೂಕಿನ ಯಣ್ಣಂಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಕಸಾಪ ವತಿಯಿಂದ ಕನ್ನಡ ಧ್ವಜದ ವಿನ್ಯಾಸವನ್ನು ರೂಪಿಸಿದ ಮ.ರಾಮಮೂರ್ತಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಕನ್ನಡ ಭಾವುಟವನ್ನು ಸೃಜಿಸಿದ ಮಹನೀಯ ಮ. ರಾಮಮೂರ್ತಿ ಅವರು ಕನ್ನಡಿಗರು ತಲೆ ಎತ್ತಿ ಗೌರವದಿಂದ ಬಾಳುವ ಹಾಗೆ, ಕನ್ನಡದ ಬಾವುಟವು ನಿರಂತರ ಹಾರಾಡುವ ಹಾಗೆ ತಮ್ಮ ಕೊನೆಯ ಉಸಿರಿರುವವರೆಗೂ ಕನ್ನಡ ನಾಡು ನುಡಿಗಾಗಿ ಶ್ರಮಿಸಿದರು ಎಂದು ಅವರು ತಿಳಿಸಿದರು.
ಅರವತ್ತರ ದಶಕದಲ್ಲಿ ಅನ್ಯಭಾಷಿಗರ ಪ್ರಾಬಲ್ಯದಿಂದ ಬೆಂಗಳೂರು ನಗರದಲ್ಲಿ ಕನ್ನಡಕ್ಕೆ ಹೀನಾಯ ಸ್ಥಿತಿ ಒದಗಿದಾಗ ಕನ್ನಡದ ವಾತಾವರಣವನ್ನು ಮೂಡಿಸಲು, ಕನ್ನಡಿಗರನ್ನು ಎಚ್ಚರಿಸಲು ಹುಟ್ಟಿಕೊಂಡದ್ದೇ ಕನ್ನಡ ಚಳವಳಿ. ಹೀಗೆ ಹೋರಾಟ ಮಾಡಲು ಪ್ರಾರಂಭಿಸಿದವರಲ್ಲಿ ಹಿರಿಯರ ಜೊತೆಗೆ ಕೈಜೋಡಿಸಿದವರು ಮ.ರಾಮಮೂರ್ತಿ.
ಅವರು ರಚಿಸಿದ ಪತ್ತೇದಾರಿ ಕಾದಂಬರಿಗಳ ಸಂಖ್ಯೆ ೧೫೦ಕ್ಕೂ ಹೆಚ್ಚು. ಈ ಪತ್ತೇದಾರಿ ಕಾದಂಬರಿಗಳ ಜೊತೆಗೆ ಅವರು ಹಲವಾರು ಐತಿಹಾಸಿಕ ಕಾದಂಬರಿಗಳನ್ನೂ ರಚಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ “ನಗರ”ದಲ್ಲಿ ನಡೆದ ರೈತ ಬಂಡಾಯ ಕುರಿತಾಗಿ ಇವರು ಬರೆದಿರುವ “ರಾಜದಂಡ” ಚಾರಿತ್ರಿಕವಾಗಿ ಅದ್ವಿತೀಯ ಕಾದಂಬರಿ ಎನಿಸಿದೆ.
ನಮ್ಮ ಸಾರ್ವಜನಿಕ ಜೀವನದಲ್ಲಿ ಕನ್ನಡ ಭಾಷೆ ಹೆಮ್ಮೆ ಪಡುವಂತೆ ಉಳಿದಿದೆ ಎಂದರೆ ಮ. ರಾಮಮೂರ್ತಿ ಅಂತಹ ಹಿರಿಯರ ಕೊಡುಗೆಯಿಂದ ಎಂದು ನೆನೆಯುವುದು ನಮ್ಮೆಲ್ಲರ ಕರ್ತವ್ಯ ಮತ್ತು ಧರ್ಮ ಎಂದು ಹೇಳಿದರು.
ಶಿಕ್ಷಕಿ ಮಂಜುಳಮ್ಮ ಮಾತನಾಡಿ, ಕನ್ನಡ ಹೋರಾಟಗಾರ ಮ. ರಾಮಮೂರ್ತಿ ವಿನ್ಯಾಸ ಮಾಡಿದ್ದ ಹಳದಿ ಮತ್ತು ಕೆಂಪು ಧ್ವಜ ಜನರನ್ನು ಭಾವನಾತ್ಮಕವಾಗಿ ಬೆಸೆದಿದೆ. ಕನ್ನಡದ ಬಾವುಟ ಕೇವಲ ಬಣ್ಣದ ಬಾವುಟವಲ್ಲ. ಅದು ಕನ್ನಡಿಗರ ಭಾವೈಕ್ಯತೆಯ ಸಂಕೇತ. ನಮ್ಮ ಹಿರಿಯರು ಮಾಡಿಕೊಟ್ಟ ಹಳದಿ ಕೆಂಪು ಧ್ವಜ ನಮ್ಮೆಲ್ಲ ಕನ್ನಡಿಗರ ಏಕತೆಯ ಸಂಕೇತವೂ ಹೌದು ಎಂದರು.
ಈ ಸಂದರ್ಭದಲ್ಲಿ ಕಸಾಪ ವತಿಯಿಂದ ಶಿಕ್ಷಕರಿಗೆ ಪುಸ್ತಕಗಳನ್ನು ನೀಡಲಾಯಿತು.
ಕಸಾಪ ನಗರ ಘಟಕದ ಅಧ್ಯಕ್ಷ ಸಿ.ಎನ್.ಮುನಿರಾಜು, ಸಂಘ ಸಂಸ್ಥೆಗಳ ಪ್ರತಿನಿಧಿ ಶಂಕರ್, ಮಂಜುನಾಥ್, ಶಿಕ್ಷಕಿ ಪ್ರೇಮಾ, ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ರಾಮಾಂಜಿನಪ್ಪ, ಅಶೋಕ್, ನಾಗೇಶ್, ರಘು, ಅಭಿಷೇಕ್, ಅಜಯ್ ಹಾಜರಿದ್ದರು.
ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ ೨೦ ನೇ ತಿಂಗಳ ಕಾರ್ಯಕ್ರಮ
ನಗರ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ಕನ್ನಡ ಸಾರಸ್ವತ ಪರಿಚಾರಿಕೆ, ಕೇಂದ್ರ ಗ್ರಂಥಾಲಯದ ಸಹಯೋಗದೊಂದಿಗೆ ಆಯೋಜಿಸಿದ್ದ “ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ” ೨೦ ನೇ ತಿಂಗಳ ಕಾರ್ಯಕ್ರಮದಲ್ಲಿ ಸಾಹಿತಿ ಕಾಗತಿ.ವಿ.ವೆಂಕಟರತ್ನಂ ಮಾತನಾಡಿದರು.
ಸಾಹಿತಿಯು ಸುಮದಂತೆ ಇರಬೇಕು. ತಾನು ಹೊರಸೂಸುವ ಸುಗಂಧವು ಇತರರಿಗೂ ಮನಪರಿವರ್ತನೆಗೆ, ಕಲಾಸ್ವಾದನೆಗೆ ತೊಡಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ವಿವಿಧ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಬರೆಯಲು ಪ್ರೇರೇಪಿಸಿ, ಆ ಬರಹಗಳ ಸಂಕಲನವನ್ನು ಹೊರತಂದಿದ್ದೇನೆ ಎಂದು ಅವರು ತಿಳಿಸಿದರು.
ಸರ್ಕಾರಿ ಉದ್ಯೋಗದಿಂದ ನಿವೃತ್ತನಾದ ನಂತರ ಸಾಹಿತ್ಯದ ಚಟುವಟಿಕೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡೆ. ಕನ್ನಡ ಸಾಹಿತ್ಯ ವೇದಿಕೆ ಮತ್ತು ಚುಟುಕು ಸಾಹಿತ್ಯ ಪರಿಷತ್ತಿನ ಅಡಿಯಲ್ಲಿ ನಿರಂತರವಾಗಿ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇನೆ. ನನ್ನ ಬರಹಗಳನ್ನಷ್ಟೇ ಅಲ್ಲದೆ ಹೊಸಬರಿಗೆ, ವಿದ್ಯಾರ್ಥಿಗಳಿಗೆ ಬರವಣಿಗೆಗೆ ಪ್ರೇರೇಪಿಸಲು ಕೆಲವಾರು ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸಿ ಯುವ ಬರಹಗಾರರ ಬರವಣಿಗೆಗಳನ್ನು ಸಂಕಲಿಸಿ ಪುಸ್ತಕ ಮಾಡಿದ್ದೇನೆ. ಶಾಲಾ ಅಂಗಳದಲ್ಲಿ ಕವಿ ಕಾವ್ಯ ಕಾರ್ಯಕ್ರಮ, ಧಾರ್ಮಿಕ ಪಠಣ, ವಚನಾಮೃತ ಮೊದಲಾದ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಕಿಡಿ ಹೊತ್ತಿಸುವ ಪ್ರಯತ್ನ ಮಾಡಿರುವುದಾಗಿ ಹೇಳಿದರು.
ಕನ್ನಡ ಸಾರಸ್ವತ ಪರಿಚಾರಿಕೆ(ಕಸಾಪ) ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಸುಮಾರು ಇಪ್ಪತ್ತು ತಿಂಗಳಿನಿಂದ ಇಪ್ಪತ್ತು ಲೇಖಕರು ಹಾಗೂ ಅವರ ಕೃತಿಗಳನ್ನು ಓದುಗರಿಗೆ ಪರಿಚಯಿಸಲಾಗಿದೆ. ಲೇಖಕರು ತಮ್ಮ ಕೃತಿರಚನೆಯ ಹಿಂದಿನ ನೋವು ನಲಿವುಗಳನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿ, ಸಾಹಿತಿ ಕಾಗತಿ.ವಿ.ವೆಂಕಟರತ್ನಂ ಅವರ ಪರಿಚಯವನ್ನು ಮಾಡಿಕೊಟ್ಟರು.
ಹಿರಿಯ ಸಾಹಿತಿ ಶಿವರಾಮ್ ಮಾತನಾಡಿ, ಎಲೆ ಮರೆಯ ಕಾಯಿಗಳಂತೆ ತಮ್ಮ ಪಾಡಿಗೆ ತಾವು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿರುವವರನ್ನು ಪರಿಚಯಿಸುವ ಈ ವಿನೂತನ ಕಾರ್ಯಕ್ರಮ ಬೇರೆಲ್ಲೂ ನಡೆಯುತ್ತಿಲ್ಲ. ನಿಜವಾದ ಅರ್ಥದಲ್ಲಿ ಸಾಹಿತ್ಯದ ಪರಿಚಾರಿಕೆಯನ್ನು ಈ ಕಾರ್ಯಕ್ರಮದ ಮೂಲಕ ನಡೆಸಲಾಗುತ್ತಿದೆ ಎಂದು ಹೇಳಿದರು.
ಸಾಹಿತಿ ಕಾಗತಿ.ವಿ.ವೆಂಕಟರತ್ನಂ ಅವರು ಗ್ರಂಥಾಲಯಕ್ಕೆ ತಾವು ರಚಿಸಿರುವ ೧೬ ಕೃತಿಗಳನ್ನು ಕೊಡುಗೆಯಾಗಿ ನೀಡಿದರು. ಜಾನಪದ ಕಲಾವಿದ ದೇವರಮಳ್ಳೂರು ಮಹೇಶ್ ಜನಪದ ಗೀತೆಗಳನ್ನು ಹಾಡಿದರು.
ಜಾನಪದ ಕಲಾವಿದ ದೇವರಮಳ್ಳೂರು ಮಹೇಶ್, ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್, ಗ್ರಂಥಪಾಲಕಿ ರಾಮಲೀಲಾ ಸಿಬ್ಬಂದಿ ಬಾಂದವ್ಯ, ಚಿತ್ರನಟ ಮುನಿರಾಜು, ಸುಂದರನ್, ಅಜಿತ್ ಕೌಂಡಿನ್ಯ, ವೃಷಭೇಂದ್ರಪ್ಪ, ಅಭಿಷೇಕ್, ವಿ.ವೆಂಕಟರಮಣ, ಗೋಪಾಲಕೃಷ್ಣ, ಮುಕ್ತಿಯಾರ್, ಮಕ್ಸೂದ್, ಲಕ್ಷ್ಮೀಕಾಂತ್, ವಿ.ಕೃಷ್ಣ ಹಾಜರಿದ್ದರು.
ನೂತನ ಕೈಗಾರಿಕೆ ತರಬೇತಿ ಸಂಸ್ಥೆಯ ಉದ್ಘಾಟನೆ
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಪ್ಪೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನೂತನವಾಗಿ ನಿರ್ಮಿಸಲಾಗಿರುವ ಕೈಗಾರಿಕೆ ತರಬೇತಿ ಸಂಸ್ಥೆಯ ಉದ್ಘಾಟನೆ ನೆರವೇರಿಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ನಮ್ಮ ಭಾಗದ ಯುವಜನರು ತಾಂತ್ರಿಕ ತರಬೇತಿಯನ್ನು ಪಡೆದು ಒಳ್ಳೆಯ ಕೆಲಸ ಗಿಟ್ಟಿಸಿಕೊಳ್ಳಬೇಕು. ಶ್ರದ್ದೆ ಮತ್ತು ಆಸಕ್ತಿಯಿಂದ ವಿದ್ಯಾಭ್ಯಾಸ ಮಾಡಿದಾಗ ಮಾತ್ರ ಉದ್ಯೋಗಗಳು ತಮ್ಮ ಮನೆ ಬಾಗಿಲಿಗೆ ಹುಡುಕಿಕೊಂಡು ಬರುತ್ತವೆ ಎಂದು ಅವರು ತಿಳಿಸಿದರು.
ಗುಣಮಟ್ಟದ ಶಿಕ್ಷಣ ಪಡೆದ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ವಿವಿಧ ಕಂಪನಿಗಳು ಬಂದು ಉದ್ಯೋಗ ನೀಡುತ್ತಾರೆ. ಹಾಗಾಗಿ ಎಸ್ ಎಸ್ ಎಲ್ ಸಿ ನಂತರ ಎರಡು ವರ್ಷಗಳ ಕಾಲ ಐಟಿಐ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಶಿಸ್ತು ಮತ್ತು ಶ್ರದ್ದಾ ಭಕ್ತಿಯಿಂದ ವಿದ್ಯಾಭ್ಯಾಸ ಮಾಡಬೇಕು ಎಂದರು.
ಈ ಹಿಂದೆ ತಾಲ್ಲೂಕಿನ ಐಟಿಐ ವಿದ್ಯಾರ್ಥಿಗಳು ಹೊರಗಡೆ ಹೋಗಿ ಐಟಿಐ ಓದುವ ಪರಿಸ್ಥಿತಿಯಿತ್ತು. ಅದನ್ನು ಮನಗಂಡು ತಾಲ್ಲೂಕಿನ ತಿಪ್ಪೇನಹಳ್ಳಿ ಬಳಿ ಸುಸಜ್ಜಿತ ಐಟಿಐ ಕಾಲೇಜು ನಿರ್ಮಿಸಲಾಗಿದೆ. ಕಾಲೇಜಿಗೆ ಅಗತ್ಯವಿರುವ ಕಾಂಪೌಂಡ್ ಸೇರಿದಂತೆ ನೀರು ಪೂರೈಸಲು ಕೊಳವೆಬಾವಿ ಕೊರೆಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಎನ್.ಮುನಿಯಪ್ಪ, ಎಸ್.ಎಂ.ನಾರಾಯಣಸ್ವಾಮಿ, ಆರ್.ಶ್ರೀನಿವಾಸ್, ರೈತಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಬಿ.ವಿ.ಮುನೇಗೌಡ ಹಾಜರಿದ್ದರು.
ವಿಧ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮ
ನಗರದ ಶ್ರೀ ಸರಸ್ವತಿ ಕಾನ್ವೆಂಟ್ ಶಾಲೆಯಲ್ಲಿ ಶನಿವಾರ ಶಾಲಾ ವಿಧ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷ ಎನ್.ಶ್ರೀಕಾಂತ್ ಮಾತನಾಡಿದರು.
ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಮತ್ತು ಶಾಲೆಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಸರ್ಕಾರ ಸೈಕಲ್ ವಿತರಿಸುತ್ತಿದ್ದು ಮಕ್ಕಳು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಶಾಲೆಯ ಆಡಳಿತಾಧಿಕಾರಿ ಸೋಮಶೇಖರ್ ಮಾತನಾಡಿ, ಪ್ರತಿಭೆ ಎಲ್ಲರಲ್ಲೂ ಇರುತ್ತದೆ. ಉತ್ತಮವಾಗಿ ವಿದ್ಯಾಭ್ಯಾಸ ಮಾಡಿದರೆ ಭವಿಷ್ಯದಲ್ಲಿ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರದ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಉತ್ತಮವಾಗಿ ವ್ಯಾಸಂಗ ಮಾಡಬೇಕು ಎಂದರು.
ಸುಮಾರು ೧೫೦ ಮಂದಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಲಾಯಿತು.
ಶಾಲೆಯ ಮುಖ್ಯಶಿಕ್ಷಕ ಜಿ.ಎನ್. ಶಿವಣ್ಣ, ವಾಸುದೇವ ಮೂರ್ತಿ, ದೈಹಿಕ ಶಿಕ್ಷಕರಾದ ಎಚ್.ವೆಂಕಟೇಶಪ್ಪ, ಎಮ್.ಎನ್.ನರಸಿಂಹಮೂರ್ತಿ, ಶಿಕ್ಷಕ ನಾಗರಾಜ್ ಹಾಜರಿದ್ದರು.
ಜಿಲ್ಲಾ ಯುವ ಜನ ಸಮಾವೇಶ
ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಬುಧವಾರ ಸರ್ವೋದಯ ಸ್ವಯಂ ಸೇವಾ ಸಂಸ್ಥೆ, ಜಿಲ್ಲಾ ಯುವ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಯುವ ಜನ ಸಮಾವೇಶದಲ್ಲಿ ಭಾಗವಹಿಸಿ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಸ್.ಸಿದ್ದರಾಮಪ್ಪ ಮಾತನಾಡಿದರು.
ಇಂದಿನ ಯುವಜನತೆ ಸಾಮಾಜಿಕ ಬದ್ಧತೆಯುಳ್ಳ ಗುರಿಯನ್ನು ಹಾಕಿಕೊಂಡು ಗುರಿಯತ್ತ ನಡೆದಾಗ ಸದೃಡ ಭಾರತವನ್ನು ಕಟ್ಟಲು ಸಾಧ್ಯ ಎಂದು ಅವರು ತಿಳಿಸಿದರು.
ನಮ್ಮ ದೇಶದಲ್ಲಿ ಯುವ ಜನತೆ ಹೆಚ್ಚಾಗಿದ್ದಾರೆ. ಯುವಜನತೆ ಮೇಲೆ ಜವಾಬ್ದಾರಿ ಸಹ ಹೆಚ್ಚಾಗಿದೆ. ಅವರಿಗೆ ತರಬೇತಿ ನೀಡುವ ಮೂಲಕ ದೇಶವನ್ನು ಕಟ್ಟುವ ಕೆಲಸ ಮಾಡುವುದು ನೆಹರೂ ಯುವ ಕೇಂದ್ರದ ಉದ್ದೇಶವಾಗಿದೆ. ಮೊದಲು ಯುವಕರು ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು, ತಂದೆ ತಾಯಿಗಳಿಗೆ, ಹಿರಿಯರಿಗೆ ಗೌರವ ನೀಡಬೇಕು. ವಯೋವೃದ್ದರಿಗೆ, ಅಂಗವಿಲರಿಗೆ, ಹಿರಿಯರಿಗೆ ತಮ್ಮ ಕೈಯಲ್ಲಾದ ಸಹಾಯವನ್ನು ಮಾಡಬೇಕು ಎಂದು ಹೇಳಿದರು.
ಸ್ವಾಮಿ ವಿವೇಕಾನಂದರು, ಆತ್ಮವಿಶ್ವಾಸವುಳ್ಳ ೧೦೦ ಜನ ಯುವಕರನ್ನು ನನಗೆ ಕೊಡಿ ದೇಶವನ್ನು ಬದಲಾಯಿಸಿ ನೋಡಿಸುತ್ತೇನೆ ಎಂದು ಹೇಳಿದ್ದ ಮಾತಿನ ಉದ್ದೇಶವನ್ನು ಅರಿಯಬೇಕಿದೆ. ಸ್ವಾಮಿ ವಿವೇಕಾನಂದರ ಸಾಧನೆ, ಬೋಧನೆಗಳನ್ನು ಇಂದಿನ ಯುವಜನತೆ ಮೈಗೂಡಿಸಿಕೊಂಡಲ್ಲಿ ದೇಶದ ಇತಿಹಾಸವನ್ನು ಸುವರ್ಣಾಕ್ಷರಗಳಲ್ಲಿ ಬರೆಯಲು ಸಾಧ್ಯ ಎಂದು ನುಡಿದರು.
ಈ ಸಂದರ್ಭದಲ್ಲಿ ೨೦೧೭-೧೮ನೇ ಸಾಲಿನ ಸಾಮಾಜಿಕ ಹಾಗೂ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಪ್ರಕೃತಿ ಕ್ರೀಡಾ ಮತ್ತು ಸಾಂಸೃತಿಕ ಕಲಾ ಸಂಸ್ಥೆ ಮಾರ್ಜೆನಹಳ್ಳಿಯ ಮುನಿಸ್ವಾಮಿ ಅವರಿಗೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ ಯುವ ಸಂಘ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿಯು ೨೫ ಸಾವಿರ ರೂ ನಗದು ಮತ್ತು ಪ್ರಮಾಣ ಪತ್ರ ಒಳಗೊಂಡಿದೆ.
ಪ್ರಕೃತಿ ಕ್ರೀಡಾ ಮತ್ತು ಸಾಂಸೃತಿಕ ಕಲಾ ಸಂಸ್ಥೆ ಮಾರ್ಜೆನಹಳ್ಳಿಯ ಮುನಿಸ್ವಾಮಿ, ಜೈ ಭುವನೇಶ್ವರಿ ಕಲಾ ಸಂಸ್ಥೆಯ ಮಾಲೂರು ಎಂ.ಎಲ್.ರವಿ, ಕನ್ನಡ ಯುವಶಕ್ತಿ ಸಂಘದ ಕೋಲಾರ ಮಾನಸ್ ಇವರುಗಳಿಗೆ ಮೇ ೨೦೧೮ ರಿಂದ ಜುಲೈ ೨೦೧೮ನೇ ಸ್ವಚ್ಛ ಬೇಸಿಗೆ ಪ್ರಯೋಜಿಕ ಕಾರ್ಯಕ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಮೂರು ತಂಡಗಳೆಂದು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಗೌಸಿಯಾ ಯುವಕ ಸಂಘ ಮಾರ್ಜೆನಹಳ್ಳಿ, ಸ್ಪಂದನ ಗ್ರಾಮೀಣಾಭಿವೃದ್ಧಿ ಮತ್ತು ಶೈಕ್ಷಣಿಕ ಸಂಸ್ಥೆ, ಉಜ್ವಲ ಗ್ರಾಮೀಣಾವೃದ್ಧಿ ಸಂಸ್ಥೆ ಗುಡಿಬಂಡೆ, ಸ್ವಾಮಿ ವಿವೇಕಾನಂದ ಯುವ ಸಂಸ್ಥೆ ಶಿಡ್ಲಘಟ್ಟ ಇವರಿಗೆ ಕ್ರೀಡಾ ಸಮಾಗ್ರಿಗಳನ್ನು ವಿತರಿಸಲಾಯಿತು.
ಐ.ಟಿ.ಐ ಕಾಲೇಜಿನ ಪ್ರಾಂಶುಪಾಲ ಶ್ರೀಧರ್, ಉಪನ್ಯಾಸಕ ಮಂಜುನಾಥ್, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರನಾಯಕ್, ಶ್ರೀಹರಿ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಪಿ.ಶ್ರೀಕಾಂತ್, ಸರ್ವೋದಯ ಸ್ವಯಂ ಸೇವಾ ಸಂಸ್ಥೆಯ ತಾಲ್ಲೂಕು ಅಧ್ಯಕ್ಷೆ ಜಿ.ವಿ.ಗಾಯಿತ್ರಿ, ಕಾರ್ಯದರ್ಶಿ ಕೆ.ನರೇಶ್‌ಕುಮಾರ್, ಪ್ರವೀಣ್, ಗಣೇಶ್, ಸತೀಶ್, ಅಬ್ಲೂಡು ಗಿರೀಶ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಶಿಡ್ಲಘಟ್ಟ ತಾಲ್ಲೂಕಿನ ನಾಲ್ಕನೆಯ “ಕೃಷಿ ಪಂಡಿತ” – ಹುಜಗೂರು ರಾಮಯ್ಯ
ಶಿಡ್ಲಘಟ್ಟ ತಾಲ್ಲೂಕಿನ ಹುಜಗೂರು ಗ್ರಾಮದ ಪ್ರಗತಿಪರ ರೈತ ಎಂ.ರಾಮಯ್ಯ ಅವರಿಗೆ ರಾಜ್ಯ ಸರ್ಕಾರ ನೀಡುವ “ಕೃಷಿ ಪಂಡಿತ” ಪ್ರಶಸ್ತಿ ಲಭಿಸಿದೆ. ಹುಜಗೂರು ರಾಮಯ್ಯನವರು ಈ ಪ್ರಶಸ್ತಿ ಪಡೆಯುವುದರೊಂದಿಗೆ ತಾಲ್ಲೂಕಿನಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದವರಲ್ಲಿ ನಾಲ್ಕನೆಯವರಾಗಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಕೃಷಿ ಇಲಾಖೆಯಿಂದ ನಡೆದ ಸಮಾರಂಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಿದ ಸಂದರ್ಭದಲ್ಲಿ ೨೦೧೬-೧೭ ನೇ ಸಾಲಿನ ಕೃಷಿ ಪಂಡಿತ ಪ್ರಶಸ್ತಿಯನ್ನು ಹುಜಗೂರು ರಾಮಯ್ಯ ಅವರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಕೃಷಿ ಸಚಿವ ಶಿವಶಂಕರ ರೆಡ್ಡಿ ಪ್ರಧಾನ ಮಾಡಿದರು.
ದ್ರಾಕ್ಷಿ, ದಾಳಿಂಬೆ, ಗುಲಾಬಿ, ಪಾಲಿ ಹೌಸ್ ನಲ್ಲಿ ದೊಣ್ಣಮೆಣಸಿನಕಾಯಿ, ಆಲೂಗಡ್ಡೆ, ಕ್ಯಾರೆಟ್, ಟೊಮೆಟೋ, ಹೈನುಗಾರಿಕೆ ಸೇರಿದಂತೆ ಸಮಗ್ರ ಕೃಷಿ ಪದ್ಧತಿಯಲ್ಲಿ ಅವರ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ಗೌರವಿಸಿದೆ.
ಹತ್ತನೇ ತರಗತಿಯವರೆಗೂ ಓದಿರುವ ಹುಜಗೂರು ರಾಮಯ್ಯನವರು ೨೩.೨೦ ಎಕರೆ ಜಮೀನನ್ನು ಹೊಂದಿದ್ದಾರೆ. ವಿವಿಧ ಬಗೆಯ ಆಧುನಿಕ ಕೃಷಿ ಉಪಕರಣಗಳನ್ನು ಅಳವಡಿಸಿಕೊಂಡಿದ್ದಾರೆ. ಸ್ಥಳೀಯ ಜಾತಿಯ ಎಮ್ಮೆ, ಎತ್ತು, ಕುರಿ ಮತ್ತು ಮೇಕೆ ಸಹ ಹೊಂದಿದ್ದಾರೆ. ಮುಖ್ಯ ಬೆಳೆಗಳಾಗಿ ದ್ರಾಕ್ಷಿ, ದಾಳಿಂಬೆ, ಆಲೂಗಡ್ಡೆ, ಕ್ಯಾರೆಟ್, ಟೊಮೆಟೋ, ರಾಗಿ, ಭತ್ತ, ಅವರೆ, ಹುಣಸೆ ಮತ್ತು ಗುಲಾಬಿ ಬೆಳೆಯುವರು.
ಕಡಿಮೆ ನೀರಿನಲ್ಲಿ ತುಂತುರು ನೀರಾವರಿಯನ್ನು ಬಳಸಿ ಏರೋಬಿಕ್ ಪದ್ಧತಿಯಲ್ಲಿ ಭತ್ತ ಬೆಳೆದು ಮಾದರಿಯಾಗಿದ್ದಾರೆ. ಕ್ಯಾಪ್ಸಿಕಮ್ ಬೆಳೆಯನ್ನು ತೆರೆದ ವಾತಾವರಣದಲ್ಲಿ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಂಡು ರಕ್ಷಿತ ಕೃಷಿಗಿಂತಲೂ ಹೆಚ್ಚಿನದಾಗಿ ಪಡೆದಿದ್ದಾರೆ. ದ್ರಾಕ್ಷಿ ರೂಟ್ ಸ್ಟಾಕ್ ಗೆ ಕಸಿ ಮಾಡಿ ನೂತನವಾಗಿ ಮಾಡಿದ ಏರುಮಡಿ ಪದ್ಧತಿಯಿಂದ ಹೆಚ್ಚಿನ ಲಾಭ ಪಡೆದಿದ್ದಾರೆ. ಕ್ಯಾರೆಟ್ ಮತ್ತು ಆಲೂಗಡ್ಡೆ ಬೆಳೆಯಲ್ಲಿ ವೈಜ್ಞಾನಿಕ ತಾಂತ್ರಿಕತೆಯಿಂದ ಹೆಚ್ಚಿನ ಇಳುವರಿ ಪಡೆದಿದ್ದಾರೆ. ಭೂ ಫಲವತ್ತತೆಯನ್ನು ಕಾಪಾಡಲು ಹಸಿರೆಲೆ ಗೊಬ್ಬರವಾಗಿ ಆಪ್ ಸೆಣಬು ಬೆಳೆದು ಭೂಮಿಗೆ ಸೇರಿಸಿ ಉತ್ತಮ ಫಲಿತಾಂಶ ಪಡೆದಿದ್ದಾರೆ. ಸಮಗ್ರ ಪೋಷಕಾಂಶಗಳ ನಿರ್ವಹಣಾ ಕ್ರಮಗಳ ಜೊತೆಗೆ ಮಾವು ಸ್ಪೆಷಲ್ ನ ಸಿಂಪಡನೆಯಿಂದ ಹೆಚ್ಚಿನ ಗುಣಮಟ್ಟದ ಉತ್ಪಾದನೆಯನ್ನು ಪಡೆದಿದ್ದಾರೆ. ಸಮಗ್ರ ಪೀಡೆ ನಿರ್ವಹಣೆಯಲ್ಲಿ ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಅನೇಕ ರೈತರು ಮತ್ತು ಹಲವಾರು ಕೃಷಿ ವಿಜ್ಞಾನಿಗಳು ಇವರ ತೋಟಕ್ಕೆ ಭೇಟಿ ನೀಡಿದ್ದಾರೆ.
ಗುಡಿಹಳ್ಳಿಯಲ್ಲಿ ಶ್ರೀ ಪಾರ್ವತಾಂಬ ಸಮೇತ ಶ್ರೀ ಸೋಮೇಶ್ವರಸ್ವಾಮಿ ಬ್ರಹ್ಮರಥೋತ್ಸವ
ತಾಲ್ಲೂಕಿನ ಗುಡಿಹಳ್ಳಿಯ ಶ್ರೀಪಾರ್ವತಾಂಬ ಸಮೇತ ಶ್ರೀಸೋಮೇಶ್ವರಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವವನ್ನು ಮಂಗಳವಾರ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು. ಸುತ್ತ ಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಬ್ರಹ್ಮರಥೋತ್ಸವಕ್ಕೆ ಸಾಕ್ಷಿಯಾದರು.
ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡಿಹಳ್ಳಿ ಗ್ರಾಮದ ಶ್ರೀಪಾರ್ವತಾಂಬ ಸಮೇತ ಶ್ರೀಸೋಮೇಶ್ವರಸ್ವಾಮಿ ದೇವಾಲಯದ ೧೧ ನೇ ವರ್ಷದ ಬ್ರಹ್ಮ ರಥೋತ್ಸವದ ಅಂಗವಾಗಿ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಸಿಂಗರಿಸಲಾಗಿತ್ತು. ವಿಶೇಷ ಪೂಜೆ, ಹೋಮ, ಹವನ, ಕಳಶ ಪೂಜೆ, ಗಣಪತಿ ಪೂಜೆ ನಡೆಸಿ ಮಹಾ ಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಉತ್ಸವ ಮೂರ್ತಿಯನ್ನು ಅಲಂಕೃತ ಹೂವಿನ ತೇರಿನಲ್ಲಿ ಪ್ರತಿಷ್ಠಾಪಿಸಿ ಊರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ಮಾಡಲಾಯಿತು. ಕರಡಿ ವೇಷ, ಗಾರುಡಿ ಗೊಂಬೆ, ತಮಟೆ, ನಾದಸ್ವರ, ವೀರಗಾಸೆ ಇನ್ನಿತರೆ ಜನಪದ ಕಲಾತಂಡಗಳು ರಥೋತ್ಸವಕ್ಕೆ ಕಳೆ ತಂದಿದ್ದವು.
ರಥೋತ್ಸವಕ್ಕೆ ರಾಜಸ್ವ ನಿರೀಕ್ಷಕ ವಿಶ್ವನಾಥ್ ಚಾಲನೆ ನೀಡಿದರು.
ಮುಖಂಡರಾದ ಚನ್ನಕೃಷ್ಣಪ್ಪ, ಮುನಿವೆಂಕಟಸ್ವಾಮಿ, ಶ್ರೀರಾಮಪ್ಪ, ಬಚ್ಚರಾಯಪ್ಪ, ದ್ಯಾವಪ್ಪ, ನರಸಿಂಹಮೂರ್ತಿ, ದೇವರಾಜ್, ಚಂದ್ರು, ಜೆ.ಎಸ್.ವೆಂಕಟಸ್ವಾಮಿ, ಎಸ್.ಎಂ.ರವಿಪ್ರಕಾಶ್ ಹಾಜರಿದ್ದರು.

