Home Blog Page 353

ಶಿಡ್ಲಘಟ್ಟದಲ್ಲಿ ಹಜರತ್ ನಿಜಾಮುದ್ದೀನ್ ಎಕ್ಸ್ ಪ್ರೆಸ್‌ ರೈಲಿಗೆ ಭವ್ಯ ಸ್ವಾಗತ

0

ಯಶವಂತಪುರ-ಚಿಕ್ಕಬಳ್ಳಾಪುರ-ಕೋಲಾರ-ದೆಹಲಿಗೆ ಹೋಗುವ ಈ ಹೊಸ ವಿಶೇಷ ರೈಲು ಹಜರತ್ ನಿಜಾಮುದ್ದೀನ್ ಎಕ್ಸ್ ಪ್ರೆಸ್‌ ಮಂಗಳವಾರ ನಗರಕ್ಕೆ ಮಧ್ಯಾಹ್ನ ಆಗಮಿಸಿದಾಗ ನೂರಾರು ಜನರು ಸ್ವಾಗತಿಸಿದರು.
ರೈಲಿನಲ್ಲಿ ಬಂದ ಸಂಸದ ಕೆ.ಎಚ್.ಮುನಿಯಪ್ಪ ಅವರನ್ನು ಅವರ ಬೆಂಬಲಿಗರು ಹಾರವನ್ನು ತೊಡಿಸಿ, ಜಯಘೋಷ ಮಾಡುವ ಮೂಲಕ ಸ್ವಾಗತಿಸಿದರು.
ರೈಲು, ಯಲಹಂಕ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಬಂಗಾರಪೇಟೆ, ಕಾಟ್‌ಪಾಡಿ, ರೇಣುಕುಂಟ, ವಿಜಯವಾಡ, ನಾಗಪುರ್‌, ಆಗ್ರಾ, ನಿಜಾಮುದ್ದೀನ್‌ ಮಾರ್ಗವಾಗಿ ದೆಹಲಿ ತಲುಪುತ್ತದೆ. ವಾರದಲ್ಲಿ ೨ ದಿನಗಳ ಕಾಲ ಸಂಚರಿಸುವ ಈ ಹೊಸ ಎಕ್ಸ್‌ಪ್ರೆಸ್‌ ರೈಲು ಪ್ರತಿ ಮಂಗಳವಾರ ಮತ್ತು ಶುಕ್ರವಾರ ಸಂಚರಿಸಲಿದೆ. ಯಶವಂತಪುರದಲ್ಲಿ ಮಧ್ಯಾಹ್ನ ೧೨.೩೦ಕ್ಕೆ ಹೊರಟು, ೧.೩೮ಕ್ಕೆ ಚಿಕ್ಕಬಳ್ಳಾಪುರ ಮಾರ್ಗವಾಗಿ ಶಿಡ್ಲಘಟ್ಟದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಲಿದೆ.
“ನಿಜಾಮುದ್ದೀನ್‌ ಎಕ್ಸ್ ಪ್ರೆಸ್‌ ರೈಲಿನಿಂದ ಶಿಡ್ಲಘಟ್ಟ ರೈಲ್ವೆ ನಿಲ್ದಾಣದಿಂದ ನೇರವಾಗಿ ರಾಷ್ಟ್ರ ರಾಜಧಾನಿ ದೆಹಲಿಗೆ ಮಾತ್ರವಲ್ಲದೆ. ತಿರುಪತಿ ತಿರುಮಲ ದೇವಸ್ಥಾನ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಿಗೆ ಹೋಗಬಹುದು. ಆದ್ದರಿಂದ ಈ ಹೊಸ ರೈಲು ಸೇವೆಯು ಜಿಲ್ಲೆಯ ಜನರ ಪಾಲಿಗೆ ವರದಾನವಾಗಲಿದೆ.” ಎಂದು ಲಕ್ಷ್ಮೀನಾರಾಯಣ(ಲಚ್ಚಿ) ತಿಳಿಸಿದರು.

ಗಾಂಧಿ-೧೫೦ ಸ್ಮರಣಾರ್ಥ ಸ್ವಚ್ಚತಾ ಅಭಿಯಾನ

0

ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳುರು ಗ್ರಾಮಾಂತರ ಜಿಲ್ಲಾ ನೆಹರು ಯುವ ಕೇಂದ್ರದ ವತಿಯಿಂದ ಆಯೋಜಿಸಿದ್ದ ಉಚಿತ ಬೈಸಿಕಲ್ ವಿತರಣೆ, ಗಾಂಧಿ-೧೫೦ ಸ್ಮರಣಾರ್ಥ ಸ್ವಚ್ಚತಾ ಅಭಿಯಾನದಲ್ಲಿ ಪಾಲ್ಗೊಂಡವರಿಗೆ ಪುರಸ್ಕಾರ, ಪ್ರತಿಭಾದಿನಾಚರಣೆ, ಡ್ರಾಯಿಂಗ್ ಗ್ರೇಡ್ ಪರೀಕ್ಷಾ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಬೈರಾರೆಡ್ಡಿ ಮಾತನಾಡಿದರು.
ಗ್ರಾಮೀಣ ಭಾಗದ ಮಕ್ಕಳು ಇಂದಿನ ಸ್ಪರ್ಧಾಯುಗದಲ್ಲಿ ನಗರಪ್ರದೇಶದಲ್ಲಿ ಕಲಿತ ಮಕ್ಕಳೊಂದಿಗೆ ಉನ್ನತಶಿಕ್ಷಣ, ಉದ್ಯೋಗಗಳಿಗಾಗಿ ಎದುರಿಸುವುದು ಕಷ್ಟಕರವಾಗಿದೆ. ಮಕ್ಕಳು ಕಲಿಕೆಯಲ್ಲಿ ಶಿಸ್ತು ಮೂಡಿಸಿಕೊಂಡು ಆತ್ಮವಿಶ್ವಾಸದಿಂದ ವ್ಯಾಸಂಗ ಮಾಡಬೇಕು ಎಂದು ಅವರು ತಿಳಿಸಿದರು.
ಮಕ್ಕಳಲ್ಲಿ ಸಮಯಪ್ರಜ್ಞೆ ಇರಬೇಕು. ಉತ್ತಮ ಗುರಿಯನ್ನು ಇಟ್ಟುಕೊಂಡು ಗುರುಗಳ ಮಾರ್ಗದರ್ಶನದಲ್ಲಿ ಶ್ರದ್ಧೆ ಮತ್ತು ನಿಷ್ಟೆಯಿಂದ ಕಲಿಯಬೇಕು. ಆಗ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾದ್ಯವಿದೆ ಎಂದರು.
ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಮಕ್ಕಳಲ್ಲಿ ಅಧ್ಯಯನಾಸಕ್ತಿ ಕ್ಷೀಣಿಸುತ್ತಿದೆ. ಮೌಲ್ಯಗಳು ಕುಸಿಯುತ್ತಿದ್ದು, ಪಠ್ಯದ ಜೊತೆಗೆ ಉತ್ತಮ ಮೌಲ್ಯಗಳನ್ನು ಬೆಳೆಸಬಲ್ಲ ಪುಸ್ತಕಗಳ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಮಕ್ಕಳು ಗುರು ಹಿರಿಯರಲ್ಲಿ ಗೌರವಾದರಗಳನ್ನು ತೋರುವ ಗುಣ ಬೆಳೆಸಿಕೊಳ್ಳಬೇಕು. ಪೋಷಕರೂ ಮಕ್ಕಳ ಕಲಿಕೆಯ ಕಡೆ ಹೆಚ್ಚು ಗಮನಹರಿಸಬೇಕು ಎಂದರು.
ಜಿಲ್ಲಾ ನೆಹರೂ ಯುವಕೇಂದ್ರದ ರಾಜ್ಯ ಸಂಯೋಜಕ ವಿ.ಪ್ರಶಾಂತ್ ಮಾತನಾಡಿ, ಪ್ರತಿಯೊಂದು ಮಗುವಿನಲ್ಲಿಯೂ ಆಜನ್ಮದತ್ತವಾಗಿ ಯಾವುದಾದರೊಂದು ಪ್ರತಿಭೆ ಸುಪ್ತವಾಗಿ ಅಡಕವಾಗಿರುತ್ತದೆ. ಪ್ರತಿಭೆಯಿದ್ದವರು ಎಲ್ಲಿಯಾದರೂ ಬದುಕಲು ಸುಲಭಸಾಧ್ಯವಾಗುವುದು ಎಂದರು.
೮ ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್‌ಗಳು, ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾಮಂಡಳಿಯು ಡ್ರಾಯಿಂಗ್ ಗ್ರೇಡ್ ಲೋಯರ್ ಮತ್ತು ಹೈಯರ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು, ಗಾಂಧಿ ಸಂಸ್ಕಾರ ಪರೀಕ್ಷಾ ಸ್ಪರ್ಧಿಗಳಿಗೆ ಪ್ರಶಸ್ತಿಪತ್ರಗಳನ್ನು ವಿತರಿಸಲಾಯಿತು, ಶಾಲಾಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಎಸ್‌ಡಿಎಂಸಿ ಅಧ್ಯಕ್ಷ ಎಸ್.ಎಂ.ಶಂಕರಪ್ಪ ಮಾತನಾಡಿದರು. ಗ್ರಾಮಪಂಚಾಯಿತಿ ಸದಸ್ಯ ಎನ್.ಅಶ್ವತ್ಥಪ್ಪ, ಷಣ್ಮುಗಪ್ಪ, ಸದಸ್ಯೆ ಭಾಗ್ಯಮ್ಮ ಅರುಣ್‌ಕುಮಾರ್, ಎಸ್.ಟಿ.ಬಚ್ಚೇಗೌಡ, ಮುನಿಕೃಷ್ಣಪ್ಪ, ಮುಖ್ಯಶಿಕ್ಷಕಿ ಉಮಾದೇವಿ, ಶಿಕ್ಷಕ ಎ.ಬಿ.ನಾಗರಾಜ, ಬಿ.ನಾಗರಾಜು, ಲಕ್ಷ್ಮಯ್ಯ, ಶಿಕ್ಷಕಿ ತಾಜೂನ್, ಅನಿತಾ, ಗ್ರಾಮಸ್ಥರು ಹಾಜರಿದ್ದರು.

ಉರ್ದು ಭವನಕ್ಕೆ ೨೦ ಲಕ್ಷ ರೂ ಮಂಜೂರು

0

ಉರ್ದು ಭವನ ನಿರ್ಮಿಸಲು ಶಾಸಕರ ನಿಧಿಯಿಂದ ೧೦ ಲಕ್ಷ ಹಾಗೂ ನಗರಸಭೆಯಿಂದ ೧೦ ಲಕ್ಷ ರೂಗಳನ್ನು ನೀಡುವುದಾಗಿ ಶಾಸಕ ವಿ.ಮುನಿಯಪ್ಪ ಭರವಸೆ ನೀಡಿದರು.
ನಗರದ ಮುಬಾರಕ್ ಕಲ್ಯಾಣ ಮಂಟಪದಲ್ಲಿ ಭಾನುವಾರ ಕರ್ನಾಟಕ ಉರ್ದು ಅಕಾಡೆಮಿ ವತಿಯಿಂದ ನಡೆದ ಉರ್ದು ಶೈಕ್ಷಣಿಕ ಸಮ್ಮೇಳನ ಮತ್ತು ಕವಿ ಗೋಷ್ಠಿ (ಮುಷಾಯೇರಾ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉರ್ದು ಭವನ ನಿರ್ಮಾಣ, ಹೊಸ ಉರ್ದು ಶಾಲೆಗಳ ಅಗತ್ಯತೆ, ಉರ್ದು ಶಿಕ್ಷಕರ ಕೊರತೆ, ಬಾಡಿಗೆ ಕಟ್ಟಡದಲ್ಲಿ ನಡೆಸುತ್ತಿರುವ ಉರ್ದು ಶಾಲೆಗಳಿಗೆ ಸ್ವಂತ ಕಟ್ಟಡ ಹಾಗೂ ಉರ್ದು ಅಂಗನವಾಡಿಯ ಬೇಡಿಕೆಗಳನ್ನು ಇಟ್ಟಿದ್ದಾರೆ. ಎಲ್ಲಾ ಬೇಡಿಕೆಗಳನ್ನೂ ಹಂತಹಂತವಾಗಿ ಈಡೇರಿಸಲಾಗುವುದು. ಮಕ್ಕಳಿಗೆ ಧಾರ್ಮಿಕ ಆಚಾರ ವಿಚಾರಗಳ ಜೊತೆಗೆ ಭಾಷೆಯನ್ನು ಸಹ ಸಮ್ರ್ಪಕವಾಗಿ ಕಲಿಸಬೇಕಿದೆ. ಭಾಷೆಯ ಸ್ಪಷ್ಟ ಉಚ್ಚಾರಣೆ ಮತ್ತು ಅದರ ಅರ್ಥವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು.
ಉರ್ದು ಅಕಾಡೆಮಿಯ ಅಧ್ಯಕ್ಷ ಮುಬಿನ್ ಮುನಾವರ್ ಮಾತನಾಡಿ, ಉರ್ದು ಭಾಷೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಉರ್ದು ಅಕಾಡೆಮಿ ವತಿಯಿಂದ ರಾಜ್ಯದ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಉರ್ದು ಕಲಿಕಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಸರ್ಕಾರ ಉರ್ದು ಭಾಷೆ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದೆಯಾದರೂ ಅದು ನಿರೀಕ್ಷಿತ ಮಟ್ಟದಲ್ಲಿಲ್ಲ. ಶಿಕ್ಷಕರ ಕೊರತೆ ಅಪಾರವಾಗಿದೆ. ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಮಕ್ಕಳಿಗೆ ಕಲಿಸಿ ಉತ್ತಮ ಪ್ರಜೆಗಳಾಗುವಂತೆ ರೂಪಿಸುವ ಅಗತ್ಯವಿದೆ ಎಂದು ಹೇಳಿದರು.
ಜಾಮಾ ಮಸೀದಿ ಇಮಾಮ್ ಮೌಲಾನಾ ನಜರ್ ಇಸ್ಲಾಮಿ, ಮದೀನಾ ಮಸೀದಿ ಇಮಾಮ್ ಮೌಲಾನಾ ಅಲ್ತಮಷ್, ನಗರಸಭೆ ಅಧ್ಯಕ್ಷ ಅಫ್ಸರ್ ಪಾಷ, ವಕ್ಫ್ ಬೋರ್ಡ್ ರಫೀವುಲ್ಲಾ, ಜಾಮಾ ಮಸೀದಿ ಅಧ್ಯಕ್ಷ ಸಯ್ಯದ್ ತಾಜ್ ಪಾಷ, ಉಪಾಧ್ಯಕ್ಷ ಅಮೀರ್ ಜಾನ್, ಕಾರ್ಯದರ್ಶಿ ಹೈದರ್ ವಲೀ ಪಾಷ, ಮದೀನ ಮಸೀದಿ ಅಧ್ಯಕ್ಷ ಎಚ್.ಎಸ್.ಫಯಾಜ್, ಕಾರ್ಯದರ್ಶಿ ನಿಸಾರ್ ಅಹಮದ್, ಅಮ್ಜದ್ ನವಾಜ್, ಅಬ್ದುಲ್ ಖಾಲಕ್, ಮುಸ್ಟಾಕ್ ಅಹಮದ್, ಯಾಸ್ಮೀನ್ ತಾಜ್, ಅಮಾನುಲ್ಲಾ, ಸಾದಿಕ್ ಪಾಷ, ಆಜಮ್ ಪಾಷ, ಅನ್ಸರ್ ಖಾನ್, ಮೌಲ, ಮೌಹ್ಸೀನಾ, ನಾತಿಕ್ ಅಲೀಪುರಿ, ಅನ್ಸರ್ ಪಾಷ ಹಾಜರಿದ್ದರು.

ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ

0

ತಾಲ್ಲೂಕಿನ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅವರು ಮಾತನಾಡಿದರು.
ವೈಜ್ಞಾನಿಕ ಮನೋಭಾವವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ನಿತ್ಯ ಜೀವನದಲ್ಲಿ ನಡೆಯುವ ಪ್ರತಿಯೊಂದು ಕ್ರಿಯೆಗೂ ವೈಜ್ಞಾನಿಕ ಕಾರಣಗಳಿರುತ್ತವೆ. ವಿಜ್ಞಾನದ ಮೂಲ ಪ್ರಕ್ರಿಯೆ ಆಧಾರದಲ್ಲಿ ಎಲ್ಲ ಕ್ರಿಯೆಗಳು ಜರುಗುತ್ತವೆ ಎಂದು ಅವರು ತಿಳಿಸಿದರು.
ವಿದ್ಯಾರ್ಥಿಗಳು ಪರಿಸರ ಸ್ನೇಹಿ ವೈಜ್ಞಾನಿಕ ಮನೋಭಾವ ಹೊಂದುವ ಮೂಲಕ ಪರಿಸರ ಕಾಪಾಡುವ ಕಾರ್ಯ ಮಾಡಬೇಕು. ವಿಜ್ಞಾನ ಎಂದರೆ ವಿಶಿಷ್ಟವಾದ ಜ್ಞಾನ ಪ್ರತಿಯೊಬ್ಬರು ವೆಜ್ಞಾನಿಕ ಮನೋಭಾವ ಜತೆಗೆ ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಪ್ರಶ್ನೆ ಮಾಡದೆ ಯಾವುದನ್ನು ಒಪ್ಪಿಕೊಳ್ಳಬಾರದು ಎಂದರು.
ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ವಿಜ್ಞಾನ ಪ್ರಯೋಗಗಳ ಹಾಗೂ ಮಾದರಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ವಿಜ್ಞಾನ ಪ್ರಯೋಗ ಮಾಡುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಶಿಕ್ಷಕರಾದ ಜೆ.ಶ್ರೀನಿವಾಸ್, ಕೆ. ಶಿವಶಂಕರ್, ಎಸ್. ಕಲಾಧರ್, ಟಿಜೆ ಸುನೀತಾ, ಎನ್ ಪದ್ಮಾವತಿ ಹಾಗೂ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಮಂಜುಳಾ ಹಾಜರಿದ್ದರು

ಉಪನೋಂದಣಾಧಿಕಾರಿಯ ವಿರುದ್ಧ ರೈತ ಸಂಘದ ಸದಸ್ಯರ ಪ್ರತಿಭಟನೆ

0

ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿ ಉಪನೋಂದಣಾಧಿಕಾರಿ ಸುಗಟೂರು ಗ್ರಾಮದ ಜಮೀನನ್ನು ನೋಂದಣಿ ಮಾಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನಗರದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿ, ಉಪನೋಂದಣಾಧಿಕಾರಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ ಮಾತನಾಡಿ, ಸುಗಟೂರು ಗ್ರಾಮದ ಎನ್.ಮುನೇಗೌಡ ಎಂಬುವವರ ಜಮೀನಿನಲ್ಲಿ ರೈತ ಕೃಷಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಸರ್ವೆ ನಂಬರ್ ೯೦/೩ ರಲ್ಲಿ ೨.ಎಕರೆ ೫ ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಯಥಾಸ್ಥಿತಿಯಲ್ಲಿ ಮುಂದುವರೆಸಿಕೊಂಡು ಹೋಗುವಂತೆ ನ್ಯಾಯಾಲಯದಿಂದ ಆದೇಶ ನೀಡದ್ದರೂ ಕೂಡಾ ಆದೇಶವನ್ನು ಉಲ್ಲಂಘನೆ ಮಾಡಿ ನೋಂದಣಿ ಮಾಡಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರ ಮುಖಾಂತರ ಮನವಿ ಪತ್ರ ಸಲ್ಲಿಸಿದರು.
ರೈತಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಟಿ.ಕೆ.ಅರುಣ್ ಕುಮಾರರ್, ಕೋಟೆ ಚನ್ನೇಗೌಡ, ಎನ್.ನಾಗರಾಜ್, ಮುದುರಾಜ್, ಶಂಕರನಾರಾಯಣ ಹಾಜದ್ದರು.

ದೇಶ ಉಳಿದರೆ ಮಾತ್ರವೇ ರಾಜಕೀಯ ಪಕ್ಷಗಳು ಉಳಿಯುತ್ತವೆ – ಛಲವಾದಿ ನಾರಾಯಣಸ್ವಾಮಿ

0

ದೇಶ ದೊಡ್ಡದು, ರಾಜಕೀಯವಲ್ಲ. ನಮ್ಮ ದೇಶ ಮೋದಿಯವರ ನೇತೃತ್ವದಲ್ಲಿ ಸುಭದ್ರವಾಗಿದೆ. ಶ್ರದ್ಧೆಯಿಂದ ಆಡಳಿತ ನಡೆಸಿ ಅವರು ಜನರ ಆಶೋತ್ತರಗಳಿಗೆ ಸ್ಪಂದಿಸಿ, ಉತ್ತಮ ಆಡಳಿತ ಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಸಹವಕ್ತಾರ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ೨೦೧೯ ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಗೆಲುವು ಪಡೆಯುವುದು ನಿಶ್ಚಯ. ಸತತವಾಗಿ ೭ ಬಾರಿ ಕೋಲಾರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗುತ್ತಿರುವ ಕಾಂಗ್ರೆಸ್ ಅಭ್ಯರ್ಥಿಯಿಂದ ಕ್ಷೇತ್ರದ ಅಭಿವೃದ್ಧಿಯ ಬದಲಿಗೆ ಅವರ ವೈಯಕ್ತಿಕ ಅಭಿವೃದ್ಧಿಯಾಗಿದೆ. ಈ ನಿಟ್ಟಿನಲ್ಲಿ ಅವರ ದುರಾಡಳಿತದಿಂದ ಬೇಸತ್ತಿರುವ ಜನರು ಬದಲಾವಣೆಯನ್ನು ಬಯಸಿದ್ದಾರೆ. ನಾವೆಲ್ಲರೂ ಸಾಮೂಹಿಕ ಸಂಘಟನೆಯಲ್ಲಿ ಚುನಾವಣೆ ಎದುರಿಸುತ್ತೇವೆ ಎಂದರು.
ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಸಮರ್ಥವಾಗಿ ಎದುರಿಸಲಿಕ್ಕೆ ಕೇಂದ್ರ ಸರ್ಕಾರ ಸಮರ್ಥವಾಗಿದೆ. ಪುಲ್ವಾಮಾ ದಾಳಿಗೆ ಪ್ರತಿಯಾಗಿ ನಮ್ಮ ದೇಶದ ಸೈನಿಕರ ಸಮರ್ಥವಾಗಿ ಪಾಕಿಸ್ತಾನಕ್ಕೆ ಉತ್ತರಿಸಿದ್ದಾರೆ. ಪಾಕಿಸ್ತಾನವನ್ನು ಇತರ ದೇಶಗಳು ಬೆಂಬಲಿಸದಂತೆ ಪ್ರಧಾನಿ ಮೋದಿಯವರು ಎಲ್ಲಾ ದೇಶಗಳೊಂದಿಗೆ ಉತ್ತಮ ಬಾಂಧವ್ಯವನ್ನು ಬೆಂಬಲವನ್ನು ಗಳಿಸಿ ಪ್ರೀತಿಯ ಬೇಲಿ ಹಾಕಿಬಿಟ್ಟಿದ್ದಾರೆ.
ಈ ಹಿಂದೆ ಮುಂಬೈ ದಾಳಿ ಸೇರಿದಂತೆ ಹಲವಾರು ಬಾರಿ ಉಗ್ರರು ಮಾಡಿರುವ ದಾಳಿಗಳ ಸಮಯಗಳಲ್ಲಿ ಅಂದಿನ ಸರ್ಕಾರಗಳು ಕಠಿಣವಾದ ನಿರ್ಧಾರಗಳನ್ನು ಕೈಗೊಂಡಿದ್ದಿದ್ದರೆ, ಇಂದು ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಟೀಕಿಸುವವರು ಭಯೋತ್ಪಾದನೆ ಹೆಚ್ಚಲು ಯಾರು ಕಾರಣ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಚುನಾವಣೆ ಸಮೀಪದಲ್ಲಿರುವ ಸಮಯದಲ್ಲೆ ನಮ್ಮ ಸಹನೆಯನ್ನು ಕೆಣಕುವಂತಹ ಪ್ರಯತ್ನಗಳಾಗುತ್ತಿವೆ. ನಮ್ಮೆಲ್ಲರ ಆದ್ಯತೆ ದೇಶವಾಗಬೇಕು. ದೇಶ ಉಳಿದರೆ ಮಾತ್ರವೇ ರಾಜಕೀಯ ಪಕ್ಷಗಳು ಉಳಿಯುತ್ತವೆ. ಆದ್ದರಿಂದ ರಾಜಕೀಯ ಬಿಟ್ಟು ಎಲ್ಲಾ ಪಕ್ಷಗಳು ದೇಶದ ವಿಚಾರದಲ್ಲಿ ಒಂದಾಗಬೇಕು ಎಂದರು.
ಬಿಜೆಪಿ ಮುಖಂಡ ಎಸ್.ಬಿ. ಮುನಿವೆಂಕಟಪ್ಪ ಮಾತನಾಡಿ, ಕೇಂದ್ರ ಸರ್ಕಾರದ ಜನಪರವಾದ ಯೋಜನೆಗಳು ನಮಗೆ ಶ್ರೀ ರಕ್ಷೆಯಾಗಲಿವೆ. ಪಕ್ಷದ ಮುಖಂಡರು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡು ಮನೆ ಮನೆಗೂ ಯೋಜನೆಗಳ ಕುರಿತು ತಲುಪಿಸಬೇಕಾಗಿದೆ. ಈಗಾಗಲೇ ಕಮಲ ಜ್ಯೋತಿ ಬೆಳಗಿಸುವ ಕಾರ್ಯಕ್ರಮ ಆರಂಭವಾಗಿದೆ. ಪ್ರಧಾನಿ ಮೋದಿಯವರು ೧೫ ಕೋಟಿ ಕಾರ್ಯಕರ್ತರೊಂದಿಗೆ ಏಕಕಾಲದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದಿಸಲಿದ್ದಾರೆ. ಜನರಿಗೆ ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ತಿಳಿಸಲು ಬೈಕ್ ರಾಲಿ ನಡೆಸಲಿದ್ದೇವೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆರ್.ಸುರೇಂದ್ರಗೌಡ, ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್, , ದಾಮೋದರ್, ಸುಜಾತಮ್ಮ, ಮಂಜುಳಮ್ಮ ಹಾಜರಿದ್ದರು.

ಸಂತಕವಿ ಸರ್ವಜ್ಞ ಜಯಂತ್ಯುತ್ಸವ ಕಾರ್ಯಕ್ರಮ

0

ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಬುಧವಾರ ತಾಲ್ಲೂಕು ಆಡಳಿತದ ವತಿಯಿಂದ ನಡೆದ ಸಂತಕವಿ ಸರ್ವಜ್ಞ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸರ್ವಜ್ಞನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗ್ರೇಡ್ ೨ ತಹಸೀಲ್ದಾರ್ ವೈ.ಎಲ್.ಹನುಮಂತರಾವ್ ಮಾತನಾಡಿದರು.
ಸರ್ವಜ್ಞರು ಜನರ ಆಡುಭಾಷೆಯಲ್ಲಿ ತ್ರಿಪದಿಗಳನ್ನು ರಚಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸರ್ವಜ್ಞರ ತ್ರಿಪದಿಗಳು ಹಲವು ಭಾಷೆಗಳಿಗೆ ಭಾಷಾಂತರಗೊಂಡಿದ್ದು, ಭಾಷೆ ಮತ್ತು ಗಡಿಗಳ ಎಲ್ಲೆ ಮೀರಿ ಕರ್ನಾಟಕದ ಕೀರ್ತಿಯನ್ನು ಬೆಳಗಿಸಿವೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ರಾಜಸ್ವ ನಿರೀಕ್ಷಕ ವಿಶ್ವನಾಥ್, ದೈಹಿಕ ಶಿಕ್ಷಕ ರಂಗನಾಥ್, ಟಿಪ್ಪು ಸೆಕ್ಯುಲರ್ ಸೇನೆಯ ಮೌಲಾ ಉಪಸ್ಥಿತರಿದ್ದರು.

ಕಾರ್ಯವೈಖರಿ ಸುಧಾರಿಸದಿದ್ದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು – ಶಾಸಕ ವಿ.ಮುನಿಯಪ್ಪ

0

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುದವಾರ ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಶುದ್ದಕುಡಿಯುವ ನೀರು ಪೂರೈಕೆ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಕ್ಷೇತ್ರದ ಜನತೆಗೆ ತಲುಪಿಸುವಂತಹ ಮಹತ್ತರವಾದ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಅಧಿಕಾರಿಗಳ ಬದ್ಧತೆಯಿಂದಲೇ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.
ತಾಲ್ಲೂಕು ಮಟ್ಟದ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿಬರುತ್ತಿದ್ದು, ಅದನ್ನು ಸರಿಪಡಿಸಿಕೊಂಡು ಕೆಲಸ ಮಾಡಿದರೆ ಉತ್ತಮ ಇಲ್ಲವಾದಲ್ಲಿ ಶಿಸ್ತು ಕ್ರಮ ಜರುಗಿಸುವುದು ಅನಿವಾರ್ಯವಾಗಿರುತ್ತದೆ ಎಂದರು.
ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಲಕ್ಷಾಂತರ ರೂಗಳ ಕಾಮಗಾರಿಗಳು ಅಪೂರ್ಣವಾಗಿ ಉಳಿದಿವೆ. ಕೂಡಲೇ ಸಂಬಂದಪಟ್ಟ ಅಧಿಕಾರಿಗಳು ಕಾಮಗಾರಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ತಾಕೀತು ಮಾಡಿದರು. ಟೆಂಡರ್ ಮುಗಿದು ಕಾಮಗಾರಿ ಆರಂಭವಾದ ನಂತರ ಗುತ್ತಿಗೆದಾರರು ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಬಗ್ಗೆ ಅಧಿಕಾರಿಗಳು ಮೇಲುಸ್ತುವಾರಿ ವಹಿಸಿ ಕೆಲಸ ಮಾಡಬೇಕು. ೨೦೧೭-೧೮ ನೇ ಸಾಲಿನಲ್ಲಿ ಆರಂಭವಾಗಿರುವ ಬಹಳಷ್ಟು ಕಾಮಗಾರಿಗಳು ಈವರೆಗೂ ಪೂರ್ಣಗೊಂಡಿಲ್ಲ. ಅನುದಾನ ಬಿಡುಗಡೆಯಾಗುವದಷ್ಟೆ ಮುಖ್ಯವಲ್ಲ. ಕಾಮಗಾರಿ ಪೂರ್ಣಗೊಳಿಸುವಲ್ಲಿ ಅಧಿಕಾರಿಗಳು ನೇರ ಹೊಣೆಗಾರರಾಗಿರುತ್ತಾರೆ. ಯಾವುದೇ ಕಾಮಗಾರಿಯಾಗಲಿ ಕಾಲಮಿತಿಯೊಳಗೆ ಪುರ್ಣಗೊಳಿಸುವಂತೆ ಸೂಚಿಸಿದರು.
ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳಲ್ಲಿ ಆಗಿರುವ ಪ್ರಗತಿಯ ಕುರಿತು ಮಾಹಿತಿ ಪಡೆದುಕೊಂಡ ಅವರು, ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅರ್ಹಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಅಧಿಕಾರಿಯೂ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಗ್ರಾಮೀಣ ಪ್ರದೇಶದ ಹಳ್ಳಿ ಹಳ್ಳಿಗೂ ಶುದ್ದ ಕುಡಿಯುವ ನೀರು ಪೂರೈಕೆ ಮಾಡುವುದರ ಜೊತೆಗೆ ಲಭ್ಯತೆಯಿರುವ ನೀರನ್ನು ಸಮರ್ಪಕವಾಗಿ ವಿತರಣೆ ಮಾಡಲು ಅಧಿಕಾರಿಗಳು ಮುಂದಾಗಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಶಿವಕುಮಾರ್, ನಗರಸಭೆ ಆಯುಕ್ತ ಚಲಪತಿ, ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಗೈರು ಹಾಜರಾದ ಸದಸ್ಯರು, ಮುಂದೂಡಲ್ಪಟ್ಟ ನಗರಸಭೆಯ ಆಯ-ವ್ಯಯ ಸಭೆ

0

೨೧ ಮಂದಿ ಸದಸ್ಯರು ಗೈರು ಹಾಜರಾದ ಕಾರಣ ನಗರಸಭೆ ಅಧ್ಯಕ್ಷ ಅಪ್ಸರ್‌ಪಾಷ ಅಧ್ಯಕ್ಷತೆಯಲ್ಲಿ ಮಂಗಳವಾರ ಕರೆಯಲಾಗಿದ್ದ ೨೦೧೯-೨೦ ನೇ ಸಾಲಿನ ನಗರಸಭೆ ಆಯ-ವ್ಯಯ ಸಭೆಯನ್ನು ಫೆ ೨೬ ಕ್ಕೆ ಮುಂದೂಡಲಾಯಿತು.
ನಗರಸಭೆ ಅಧ್ಯಕ್ಷ ಅಪ್ಸರ್‌ಪಾಷ ಉಪಾಧ್ಯಕ್ಷೆ ಪ್ರಭಾವತಿ ಸುರೇಶ್ ಸೇರಿದಂತೆ ಒಟ್ಟು ಆರು ಸದಸ್ಯರು ಮಾತ್ರ ಸಭೆಯಲ್ಲಿ ಹಾಜರಿದ್ದು, ಇನ್ನುಳಿದ ಸದಸ್ಯರು ಬರುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ಅಧಿಕಾರಿಗಳು ಸೇರಿದಂತೆ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಕೆಲ ಸದಸ್ಯರು ಸುಮಾರು ಒಂದು ತಾಸು ಕಾದು ಕುಳಿತರಾದರೂ ಉಳಿದ ಸದಸ್ಯರು ಬಾರದ ಕಾರಣ ಸಭೆಯನ್ನು ಮುಂದೂಡಲಾಯಿತು.
ಈ ಬಗ್ಗೆ ಅಧ್ಯಕ್ಷ ಅಪ್ಸರ್‌ಪಾಷ ಮಾತನಾಡಿ ನಗರಸಭೆ ಸದಸ್ಯರು ಸಭೆಗೆ ಹಾಜರಾಗಿ ನಗರಸಭೆಯಲ್ಲಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕು. ಅದನ್ನು ಬಿಟ್ಟು ರಸ್ತೆಯಲ್ಲಿ ಆರೋಪಗಳನ್ನು ಮಾಡಿಕೊಂಡು ತಿರುಗಾಡುವುದರಿಂದ ಏನೂ ಪ್ರಯೋಜನವಿಲ್ಲ. ಪ್ರತಿಯೊಬ್ಬ ಗೌರವಾನ್ವಿತ ಸದಸ್ಯರು ಸಭೆಗೆ ಹಾಜರಾಗಿ ಕುಂದು ಕೊರತೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಿಕೊಳ್ಳಬೇಕು. ಇದೀಗ ನಡೆಯಬೇಕಿದ್ದ ಸಭೆಯನ್ನು ಮುಂದೂಡಲಾಗಿದ್ದು ಮುಂದಿನ ಸಭೆಗೆ ಎಲ್ಲರೂ ಬರುವಂತೆ ಮತ್ತೊಮ್ಮೆ ಮನವಿ ಮಾಡಲಾಗುವುದು ಎಂದರು.
ಈ ಬಗ್ಗೆ ಗೈರು ಹಾಜರಾಗಿದ್ದ ಸದಸ್ಯರ ಪರವಾಗಿ ೧ ನೇ ವಾರ್ಡಿನ ಸದಸ್ಯ ಲಕ್ಷ್ಮಯ್ಯ ಮಾತನಾಡಿ “ನಗರಸಭೆ ಸದಸ್ಯರಾಗಿ ನಮ್ಮ ವಾರ್ಡುಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಸಲಾಗುತ್ತಿಲ್ಲ, ಈ ಬಗ್ಗೆ ಅಧ್ಯಕ್ಷರೂ ಹಾಗು ಪೌರಾಯುಕ್ತರೊಂದಿಗೆ ಸಾಕಷ್ಟು ಭಾರಿ ಚರ್ಚಿಸಲಾಗಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ. ನಾವೇನೇ ಮಾತನಾಡಲಿ ಅದಕ್ಕೆ ತದ್ವಿರುದ್ದವಾಗಿ ಮಾತನಾಡುವ ಅಧಿಕಾರಿಗಳಿಂದ ನಗರದಲ್ಲಿ ಯಾವುದೇ ಅಭಿವೃದ್ದಿ ಕೆಲಸಗಳಾಗುತ್ತಿಲ್ಲ. ಹಾಗಾಗಿ ನಾವುಗಳು ಯಾವುದೇ ಸಭೆಗಳಲ್ಲಿ ಪಾಲ್ಗೊಳ್ಳುವುದಿಲ್ಲ” ಎಂದು ಹೇಳಿದರು.
ಸಭೆ ಮುಂದೂಡುವ ಮೊದಲು ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಆಚರಿಸುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಛತ್ರಪತಿ ಶಿವಾಜಿ ಜಯಂತ್ಯುತ್ಸವ ಕಾರ್ಯಕ್ರಮ

0

ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕು ಆಡಳಿತ ವತಿಯಿಂದ ನಡೆದ ಛತ್ರಪತಿ ಶಿವಾಜಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ತಹಸೀಲ್ದಾರ್ ಎಸ್.ಅಜಿತ್‌ಕುಮಾರ್ ರೈ ಮಾತನಾಡಿದರು.
ಶಿವಾಜಿಯು ಅಪ್ರತಿಮ ದೇಶಭಕ್ತರಾಗಿದ್ದು ಅವರ ಧೈರ್ಯ, ಸಾಹಸಕ್ಕೆ ಪ್ರತೀಕವಾದ ಜೀವನ ನಮ್ಮೆಲ್ಲರಿಗೂ ಮಾದರಿಯಾಗಬೇಕಿದೆ ಎಂದು ಅವರು ಹೇಳಿದರು.
ಛತ್ರಪತಿ ಶಿವಾಜಿಯಲ್ಲಿದ್ದ ಮಾನವೀಯ ಮೌಲ್ಯಗಳು ಹಾಗೂ ನಿಸ್ವಾರ್ಥ ಬದುಕು ಪ್ರತಿಯೊಬ್ಬರಿಗೂ ಆದರ್ಶಪ್ರಾಯವಾಗಬೇಕು. ಸಹನೆ, ಸಹಿಷ್ಣುತೆ ಮತ್ತು ಜಾತ್ಯಾತೀತತೆಯ ಗುಣಗಳಿಂದ ಶಿವಾಜಿಯು ಪ್ರಸಿದ್ಧರಾಗಿದ್ದರು. ತನ್ನ ಸಾಮ್ರಾಜ್ಯ ವಿಸ್ತರಣೆ, ಪರಿಣಾಮಕಾರಿ ದೂರದೃಷ್ಟಿಯ ನಾಯಕತ್ವ ಗುಣಗಳಿಂದಾಗಿ ಶಿವಾಜಿ ಮಹರಾಜರು ಮರಾಠ ಸಾಮ್ರಾಜ್ಯದ ಸಂಸ್ಥಾಪಕರೆಂಬ ಕೀರ್ತಿಗೆ ಪಾತ್ರರಾಗಿದ್ದರು ಎಂದರು.
ಕಾರ್ಯಕ್ರಮದಲ್ಲಿ ಹಾಪ್‌ಕಾಮ್ಸ್ ಅಧ್ಯಕ್ಷ ಚಂದ್ರೇಗೌಡ, ದೈಹಿಕ ಶಿಕ್ಷಕ ರಂಗನಾಥ್ ಹಾಜರಿದ್ದರು.

ವಕೀಲರಿಂದ ಭಯೋತ್ಪಾದಕರ ಕೃತ್ಯ ಖಂಡನೆ

0

ಭಯೋತ್ಪಾದಕರ ಕೃತ್ಯವನ್ನು ಖಂಡಿಸಿ ಶನಿವಾರ ನ್ಯಾಯಾಲಯದ ಕಲಾಪಗಳಿಂದ ಹೊರಗುಳಿದು ಶಿಡ್ಲಘಟ್ಟದ ವಕೀಲರು ಪ್ರಾಣತ್ಯಾಗ ಮಾಡಿದ ಯೋಧರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿ ಪ್ರಧಾನಿಯವರಿಗೆ ತಲುಪಿಸುವಂತೆ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರಿಗೆ ಮನವಿಯನ್ನು ಸಲ್ಲಿಸಿದರು.
ಪಾಕಿಸ್ತಾನ ಬೆಂಬಲಿತ ಜೈಶೇ ಮಹಮ್ಮದ್ ಭಯೋತ್ಪಾದಕ ಸಂಘಟನೆಯ ಉಗ್ರಪಾಪಿ ಆದಿಲ್ ಅಹಮದ್ ದಾರ್ ಎಂಬುವವನು ಕಾಶ್ಮೀರದ ಪುಲ್ವಾಮದಲ್ಲಿ ಸ್ಫೋಟಕಗಳೊಂದಿಗೆ ಸಿ.ಆರ್.ಪಿ.ಎಫ್ ಯೋಧರಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ಹಲವಾರು ಯೋಧರ ಹತ್ಯೆಗೆ ಕಾರಣನಾಗಿದ್ದಾನೆ. ಈ ಭಯೋತ್ಪಾದಕ ಸಂಘಟನೆಗಳ ಹುಟ್ಟಡಗಿಸಬೇಕು. ದೇಶದ ಒಳಗೆ ಭಯೋತ್ಪಾದಕರನ್ನು ತಯಾರು ಮಾಡಿ ದೇಶದ ಏಕತೆ, ಸಾರ್ವಭೌಮತೆ ಮತ್ತು ಅಖಂಡತೆಗೆ ಸವಾಲು ಎಸಗಿ ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ದೇವರನ್ನು ಒಡೆಯುವ ಹುನ್ನಾರವನ್ನು ನಿರಂತರವಾಗಿ ಮಾಡುತ್ತಿರುವ ಪಾಕಿಸ್ತಾನದ ಪಾಪಿ ಕೃತ್ಯವನ್ನು ಖಂಡಿಸುತ್ತೇವೆ. ಭಯೋತ್ಪಾದಕ ಕೃತ್ಯಗಳನ್ನು ಎಸಗುವ ಸಂಘಟನೆಗಳನ್ನು ಕೂಡಲೇ ನಿಷೇಧಿಸಬೇಕು. ಮುಂದಿ ಇಂಥಹ ಕೃತ್ಯಗಳು ದೇಶದಲ್ಲಿ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಸೂಕ್ತ ಕಾನೂನು ರಚಿಸಿ, ಅವಶ್ಯಕವಾದಲ್ಲಿ ಸಂವಿಧಾನದಲ್ಲಿ ತಿದ್ದುಪಡಿ ತನ್ನಿ. ಸಾರ್ವಜನಿಕ ನೆಮ್ಮದಿಗಾಗಿ ದೇಶವನ್ನು ಮತ್ತಷ್ಟು ಬಲಪಡಿಸುವ ಯಾವುದೇ ಸರ್ಕಾರದ ಕ್ರಮಕ್ಕೆ ನಾವು ಬೆಂಬಲಿಸುತ್ತೇವೆ ಎಂಬುದಾಗಿ ಮನವಿಯನ್ನು ಸಲ್ಲಿಸಿದರು.
ವಕೀಲರಾದ ಬಿ.ಕೆ.ವೆಂಕಟೇಶ್, ವೇಣುಗೋಪಾಲ್, ಲಕ್ಷ್ಮಿ, ವಿಶ್ವನಾಥ್, ನಾಗರಾಜ್, ಜೆ.ವೆಂಕಟೇಶ್, ಸತ್ಯನಾರಾಯಣಗೌಡ, ಎಸ್.ಅಶೋಕ್, ವಿ.ಸುಬ್ರಮಣಿ, ಎ.ನಾರಾಯಣಸ್ವಾಮಿ, ರವೀಂದ್ರನಾಥ, ಶರತ್ ಹಾಜರಿದ್ದರು.

ಮೇಲೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಕೃಷಿ ಪಾಠ

0

ಸಿ.ಎಂ.ಸಿ.ಎ ಸಂಘಟನೆಯ ವತಿಯಿಂದ ಮೇಲೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಹಿತ್ತಲಹಳ್ಳಿಯ ಕೃಷಿಸಾಧಕರೂ, ರಾಜ್ಯಕೃಷಿಪಂಡಿತ ಪುರಸ್ಕೃತರೂ ಆದ ಎಚ್. ಜಿ ಗೋಪಾಲಗೌಡರ ರೇಷ್ಮೆ ಹಾಗೂ ಸಮಗ್ರ ಕೃಷಿ ಬೆಳೆಯ ತೋಟಕ್ಕೆ ಶನಿವಾರ ಕರೆದುಕೊಂಡು ಹೋಗಿ ವಿದ್ಯಾರ್ಥಿಗಳಿಗೆ ಕೃಷಿ ಪಾಠವನ್ನು ಕಲಿಸಲಾಯಿತು.
ಪ್ರಗತಿಪರ ರೈತ ಎಚ್. ಜಿ ಗೋಪಾಲಗೌಡ ಮಕ್ಕಳೊಂದಿಗೆ ಮಾತನಾಡಿ, ಯಾವುದೇ ರಾಸಾಯನಿಕಗಳ ಬಳಕೆಯಿಲ್ಲದೆ, ಸೆಣಬು ಮತ್ತಿತರ ಗೊಬ್ಬರದ ಹುಲ್ಲನ್ನು ಬೆಳೆಸಿ, ಭೂಮಿಯಲ್ಲಿಯೇ ಕೊಳೆಸಿ ಮಿತವ್ಯಯದಲ್ಲಿ ಭರ್ಜರಿ ಇಳುವರಿ ಪಡೆಯುತ್ತಿರುವ ಗುಟ್ಟನ್ನೂ, ಪರಿಶ್ರಮವನ್ನೂ ಹಂಚಿಕೊಂಡರು. ವಿದ್ಯಾಭ್ಯಾಸದ ನಂತರ ಎಲ್ಲರೂ ಬೇರೆಡೆ ಕೆಲಸಕ್ಕಾಗಿ ಅಲೆಯದೆ ಜಮೀನಿರುವವರೆಲ್ಲ ಕೃಷಿಕರಾಗುವಂತೆ ಕಿವಿಮಾತು ಹೇಳಿದರು.
ತೋಟದೊಳಗೆ ಮಾವು, ಹಲಸು, ಲಿಂಬೆ, ದಾಳಿಂಬೆ, ಮೂಸಂಬಿ, ಪರಂಗಿ, ನೇರಳೆ, ಸೀಬೆ, ಸೀತಾಫಲ, ವಿಧ ವಿಧ ಕಾಯಿ ಪಲ್ಲೆ, ಶ್ರೀಲಂಕಾದಿಂದ ತರಿಸಿದ ಸಾಂಬಾರ ಚಕ್ಕೆ, ಮೂವ್ವತ್ತಕ್ಕೂ ಹೆಚ್ಚಿನ ಬೆಳೆಗಳನ್ನು ಕಂಡು ವಿದ್ಯಾರ್ಥಿಗಳು ಮೂಕವಿಸ್ಮಿತರಾದರು.
ವಿದ್ಯಾರ್ಥಿಗಳು ಈ ದಿನದ ವಿಶಿಷ್ಟ ಅನುಭವವನ್ನು ಪೋಷಕರೊಂದಿಗೆ ಹಂಚಿಕೊಂಡು ಅಳವಡಿಸಿಕೊಳ್ಳುವುದಾಗಿ ತಿಳಿಸಿದರಲ್ಲದೆ, ಪ್ರತಿಯೊಬ್ಬರೂ ಒಂದು ಗಿಡ ನೆಟ್ಟು ಸಂರಕ್ಷಿಸಿ, ಪೋಷಿಸಿಕೊಂಡು ಬರುವುದಾಗಿ ಪ್ರತಿಜ್ಞೆ ಮಾಡಿದರು.
ಸಿ ಎಂ ಸಿ ಎ ಎಜುಕೇಟರ್ ಎಚ್. ವಿ ಅನಂತಲಕ್ಷ್ಮಿ. ಶಾಲಾ ಶಿಕ್ಷಕರಾದ ಪೊನ್ನಮ್ಮ, ವೆಂಕಟಶಿವಾರೆಡ್ಡಿ ಹಾಜರಿದ್ದರು.

ಶ್ರೀ ವೇಣುಗೋಪಾಲಸ್ವಾಮಿಯ ಬ್ರಹ್ಮರಥೋತ್ಸವ

0

“ಊರದೇವರು” ಎಂದೇ ಪ್ರಸಿದ್ಧವಾದ ಶ್ರೀ ವೇಣುಗೋಪಾಲಸ್ವಾಮಿ ವೇಣುಗೋಪಾಲಸ್ವಾಮಿಯ ಬ್ರಹ್ಮರಥೋತ್ಸವ ಕಾರ್ಯಕ್ರಮ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ದೇವಾಲಯದಲ್ಲಿ ಬ್ರಹ್ಮರಥೋತ್ಸವ ಸಹಿತ ಎಲ್ಲ ಕೈಂಕರ್ಯಗಳು ಪಾಂಚರಾತ್ರಾಗಮ ಪದ್ಧತಿಯಲ್ಲಿ ಕೈಗೊಳ್ಳಲಾಯಿತು. ದೇಗುಲದಲ್ಲಿ ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ತಹಶೀಲ್ದಾರ್ ಎಸ್.ಅಜಿತ್‌ಕುಮಾರ್ ರೈ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ತಮಟೆ ವಾದನ, ಮಂಗಳ ವಾದ್ಯಗಳ ಮಧ್ಯೆ ರಥವನ್ನು ಅಶೋಕ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು. ಮಹಿಳೆಯರು ತೆಂಗಿನಕಾಯಿ ಒಡೆದು, ಪೂಜೆ ಸಲ್ಲಿಸಿ, ಆರತಿ ಮಾಡಿದರು. ಮಯೂರ ವೃತ್ತದಲ್ಲಿ ಪಾನಕ ಮತ್ತು ಹೆಸರುಬೇಳೆ ಕೋಸಂಬರಿ ಹಂಚಲಾಯಿತು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಈ ಹಿಂದೆ ನಗರದ ಅಶೋಕ ರಸ್ತೆಯು ಕಿರಿದಾಗಿತ್ತು. ಆ ಕಾರಣಕ್ಕೆ ದೊಡ್ಡದಾದ ಬ್ರಹ್ಮ ರಥವನ್ನು ರಸ್ತೆ ಕೊನೆಯಲ್ಲಿ ತಿರುಗಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ದೇವರನ್ನೇ ತಿರುಗಿಸಿ ರಥವನ್ನು ಹಿಂಬದಿಯಿಂದ ಎಳೆದು ತರಲಾಗುತ್ತಿತ್ತು. ಹೀಗಾಗಿ “ಶಿಡ್ಲಘಟ್ಟ ದೇವರು ಹಿಂದುಮುಂದು” ಎಂಬ ಮಾತು ಚಾಲ್ತಿಗೆ ಬಂದಿತು ಎಂದು ಭಕ್ತರೊಬ್ಬರು ನೆನಪಿಸಿಕೊಂಡರು.
ಈ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ಶಿರಡಿ ಸಾಯಿಬಾಬಾರವರ ಸ್ಥಿರಬಿಂಬ ಪ್ರತಿಷ್ಠಾಪನಾ ಮಹೋತ್ಸವವನ್ನೂ ನಡೆಸಲಾಯಿತು. ಸಾಯಿಬಾಬಾ ಸ್ಥಿರಬಿಂಬವನ್ನು ವಿವಿಧ ಪೂಜಾ ಕಾರ್ಯಗಳೊಂದಿಗೆ ಶ್ರದ್ಧಾಭಕ್ತಿಯಿಂದ ಪ್ರತಿಷ್ಠಾಪನೆ ಮಾಡಲಾಯಿತು.
ವೇಣುಗೋಪಾಲಸ್ವಾಮಿ ದೇಗುಲದಲ್ಲಿ ಮಂಗಳವಾರದಿಂದ ಆರಂಭವಾದ ಪೂಜಾ ಕಾರ್ಯಕ್ರಮಗಳು ಒಂದು ವಾರದ ಕಾಲ ನಡೆಯಲಿದ್ದು, ನಗರದ ಎಲ್ಲ ಸಮುದಾಯಗಳ ಜನಾಂಗದವರು ವಿವಿಧ ಕೈಂಕರ್ಯಗಳಲ್ಲಿ ಭಾಗಿಯಾಗುವುದು ವಿಶೇಷವಾಗಿದೆ.
ನಗರಸಭೆ ಆಯುಕ್ತ ಜಿ.ಎನ್.ಚಲಪತಿ, ಅರ್ಚಕ ವೈ.ಎನ್.ದಾಶರಥಿ ಭಟ್ಟಾಚಾರ್ಯ, ಶ್ರೀ ವೇಣುಗೋಪಾಲಸ್ವಾಮಿ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಬಿ.ಪಿ.ರಾಘವೇಂದ್ರ, ಬಾಲಕೃಷ್ಣ, ಬಂಗಾರು ಶ್ರೀನಿವಾಸ್ ಹಾಜರಿದ್ದರು.

ಹುತಾತ್ಮ ಯೋಧರ ಬಲಿದಾನಕ್ಕೆ ಮೌನಾಚರಣೆ

0

“ಜಮ್ಮು ಕಾಶ್ಮೀರದ ಅನಂತಪುರದಲ್ಲಿ ಉಗ್ರರ ಆತ್ಮಹತ್ಯಾ ದಾಳಿಯಲ್ಲಿ ೪೪ ಮಂದಿ ಯೋಧರು ಪ್ರಾಣಾರ್ಪಣೆ ಮಾಡಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ. ಶಾಲಾ ಮಕ್ಕಳಿಗೆ ದೇಶಸೇವೆ, ಸೈನಿಕರ ವಿಚಾರ ಹಾಗೂ ಈ ದುರ್ಘಟನೆಯಲ್ಲಿ ನಮ್ಮ ರಾಜ್ಯದ ಮಂಡ್ಯ ಜಿಲ್ಲೆಯ ಗುರು ಎಂಬ ಯೋಧ ಕೂಡ ವೀರಮರಣವನ್ನಪ್ಪಿರುವ ವಿಚಾರವನ್ನು ತಿಳಿಸಿದೆವು. ಯೋಧರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ನಡೆಸಿದೆವು” ಎಂದು ಮುಖ್ಯ ಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹುತಾತ್ಮ ಯೋಧರ ಬಲಿದಾನಕ್ಕೆ ಮೌನಾಚರಣೆ ಮೂಲಕ ಗೌರವ ಸಲ್ಲಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್, ಶಿಕ್ಷಕರಾದ ಎಸ್.ಚಾಂದ್ ಪಾಷ, ಎಂ.ಎಂ.ಅಶೋಕ್, ಎಂ.ಭಾರತಿ ಸಿಬ್ಬಂದಿ ವೆಂಕಟಮ್ಮ, ಹನುಮಂತರೆಡ್ಡಿ ಹಾಜರಿದ್ದರು.

ಶಿಕ್ಷಕರಿಗೆ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಮಾಹಿತಿ ಶಿಬಿರ

0

ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಶಿಕ್ಷಕರಿಗೆ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಆಯೋಜಿಸಿದ್ದ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಮಾಹಿತಿ ಶಿಬಿರದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯ ಬಗ್ಗೆ ತಿಳಿದುಕೊಳ್ಳುವುದು ಹಾಗೂ ಗೌರವ ಸೂಚಿಸುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.
ಪಿಂಗಳಿ ವೆಂಕಯ್ಯನವರಿಂದ ರೂಪುಗೊಂಡ ನಮ್ಮ ಧ್ವಜಕ್ಕೆ ಅದರದ್ದೇ ಆದ ಕೆಲವು ವಿಶೇಷತೆಗಳಿವೆ. ಧ್ವಜದ ವಿನ್ಯಾಸ, ಅಳತೆ, ಹಿರಿಮೆ ಸೇರಿದಂರೆ ನಮ್ಮ ರಾಷ್ಟ್ರಧ್ವಜದ ಬಗೆಗಿನ ಅನೇಕ ವಿಚಾರಗಳನ್ನು ನಾವುಗಳು ತಿಳಿದಿರಲೇಬೇಕು ಎಂದು ಹೇಳಿದರು.
ಬಿ.ಆರ್.ಸಿ ಸಮನ್ವಯಾಧಿಕಾರಿ ಎನ್.ತ್ಯಾಗರಾಜ್ ಮಾತನಾಡಿ, ದೇಶಪ್ರೇಮದ ಸಂಕೇತವಾಗಿರುವ ನಮ್ಮ ತ್ರಿವರ್ಣ ಧ್ವಜ ಹಲವು ವಿಶೇಷತೆಗಳಿಂದ ಕೂಡಿದೆ. ಹಲವು ಸ್ವಾತಂತ್ರ್ಯ ಹೋರಾಟಗಾರರು, ಮಹಾನ್ ನಾಯಕರು ಸೇರಿ ನಮ್ಮ ರಾಷ್ಟ್ರಧ್ವಜಕ್ಕೆ ಸುಂದರ ರೂಪ ನೀಡಿದ್ದಾರೆ. ಪ್ರತಿಯೊಬ್ಬ ಶಿಕ್ಷಕರಿಗೂ ರಾಷ್ಟ್ರಧ್ವಜದ ಮಾಹಿತಿ, ಕಲ್ಪನೆ ಇರಬೇಕು ಎಂದರು.
ಭಾರತ ಸೇವಾದಳದ ಜಿಲ್ಲಾ ಸಮಿತಿ ಸದಸ್ಯ ಸತೀಶ್, ಜಿಲ್ಲಾ ಸಂಘಟಕ ಪ್ರಕಾಶ್ ಮತ್ತು ರಾಜ್ಯ ಸಂಪನ್ಮೂಲ ಶಿಕ್ಷಕ ವೆಂಕಟರೆಡ್ಡಿ ಅವರು ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜದ ಅಂಗೀಕಾರದ ದಿನಾಂಕ ಅನುಮೋದನೆ ಮುಂತಾದ ವಿಚಾರಗಳ ಕುರಿತಂತೆ ಸಂಪೂರ್ಣ ಮಾಹಿತಿ ತಿಳಿಸಿದರು.
ಇ.ಸಿ.ಒ ಭಾಸ್ಕರಗೌಡ, ಶಿಕ್ಷಕಿ ಅನ್ನಪೂರ್ಣ ಹಾಜರಿದ್ದರು.

ನೀರಾವರಿ ತಜ್ಞ ಡಾ.ಜಿ.ಎಸ್.ಪರಮಶಿವಯ್ಯ ಅವರ ೧೦೧ ನೇ ಜನ್ಮದಿನಾಚರಣೆ ಕಾರ್ಯಕ್ರಮ

0

ತಾಲ್ಲೂಕಿನ ಮಳ್ಳೂರು ಗ್ರಾಮದ ಡೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ನೀರಾವರಿ ತಜ್ಞ ಡಾ.ಜಿ.ಎಸ್.ಪರಮಶಿವಯ್ಯ ಅವರ ೧೦೧ ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಕೇಂದ್ರೀಯ ಅಂತರ್ಜಲ ಮಂಡಳಿ ಭೂ ಜಲ ವಿಜ್ಞಾನಿ ಡಾ.ವಿ.ಎಸ್. ಪ್ರಕಾಶ್ ಮಾತನಾಡಿದರು.
ಸರ್ಕಾರಗಳು ಬದ್ಧತೆಯಿಂದ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಾದರೆ, ನೀರಿನ ಕೊರತೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯಿರಬೇಕು. ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮುನ್ನಾ ವಿಚಾರ ಮಂಥನಗಳಾಗಬೇಕು ಎಂದು ಅವರು ಹೇಳಿದರು.
ನೀರಾವರಿ ಯೋಜನೆಯೆಂಬ ಗಂಭೀರವಾದ ಸಮಸ್ಯೆಯ ಕುರಿತು ಚರ್ಚೆಗಳಾಗಬೇಕು. ಸಾಧಕ ಭಾಧಕಗಳ ಕುರಿತು ವಿಮರ್ಶೆಗಳಾಗಬೇಕು. ಜನರಿಗೆ ಸಂಪೂರ್ಣವಾದ ಮಾಹಿತಿ ಲಭ್ಯವಾಗಬೇಕು. ದುರಾದೃಷ್ಟವೆಂದರೆ ಯೋಜನೆಗಳ ಅನುಷ್ಠಾನದ ಕುರಿತು ಪ್ರಶ್ನೆ ಮಾಡುವಂತಹ ಮನೋಭಾವನೆಯನ್ನು ಜನರು ಕಳೆದುಕೊಂಡಿದ್ದಾರೆ. ಬಯಲು ಸೀಮೆಯ ಭಾಗಗಳಿಗೆ ನೀರು ಹರಿಸುವ ಕನಸನ್ನು ಕಂಡಿದ್ದ ಪರಮಶಿವಯ್ಯ ಅವರ ಕನಸು ನನಸಾಗಬೇಕಾದರೆ ನಾವೆಲ್ಲರೂ ಅಂತರ್ಜಲದ ಮಟ್ಟದ ಏರಿಳಿತಗಳನ್ನು ಪರಿಶೀಲಿಸಬೇಕು. ನಾವೇ ಸ್ವತಃ ವಿಜ್ಞಾನಿಗಳಾಗಿ ಕೆಲಸ ಮಾಡಬೇಕು. ಅಂತರ್ಜಲದಿಂದ ಸಿಗುತ್ತಿರುವ ನೀರಿನಲ್ಲಿರುವ ಅಂಶಗಳ ಬಗ್ಗೆ ಅರ್ಥ ಮಾಡಿಕೊಳ್ಳಬೇಕು.
ಇಸ್ರೇಲ್‌ಗಿಂತ ಕೋಲಾರದಲ್ಲಿ ನೀರಿನ ಭವಣೆ ಹೆಚ್ಚಾಗಿದೆ. ನೀರಿನ ಭವಣೆ ಇಷ್ಟೊಂದು ಗಂಭೀರವಾಗಿದ್ದರೂ ಉತ್ಪಾದನೆ ಕುಂಠಿತವಾಗಿಲ್ಲ. ರೈತರಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಿಲ್ಲ. ಹೀಗಿದ್ದರೂ ಸರ್ಕಾರ ಇಸ್ರೇಲ್ ಮಾದರಿಯನ್ನು ತೋರಿಸುತ್ತಿರುವುದು ಹಾಸ್ಯಾಸ್ಪದವಾಗಿದೆ.
ಮಳೆಯ ನೀರು ಸಂಗ್ರಹ ಎಲ್ಲಿ ಆಗುತ್ತಿದೆ. ಎಷ್ಟರ ಪ್ರಮಾಣದಲ್ಲಿ ಆಗುತ್ತಿದೆ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು. ನೀರು ಹೇಗೆ ಬರಲಿಕ್ಕೆ ಸಾಧ್ಯ? ನಮ್ಮಲ್ಲಿ ನೀರಿನ ಅವಶ್ಯಕತೆ ಎಷ್ಟಿದೆ, ಎನ್ನುವ ಕುರಿತು ಪೂರ್ಣ ಪ್ರಮಾಣದ ದತ್ತಾಂಶ ಸೃಷ್ಟಿಯಾಗಬೇಕಾಗಿದೆ. ವಾರ್ಷಿಕವಾಗಿ, ಮಾಸಿಕವಾಗಿ ಎಷ್ಟು ನೀರು ಬೇಕು ಎನ್ನುವ ಬಗ್ಗೆ ಖಾತರಿಯಾಗಬೇಕು. ಈ ಬಗ್ಗೆ ವಿದ್ಯಾವಂತರು ಒಂದಾಗಿ ಕೆಲಸ ಮಾಡಬೇಕು. ಆಗ ಮಾತ್ರ ಸರ್ಕಾರಗಳು ನಿಮ್ಮ ಮಾತು ಕೇಳುತ್ತವೆ. ಇಲ್ಲವಾದರೆ ಸುಳ್ಳು ಭರವಸೆಗಳನ್ನು ಕೊಟ್ಟು ನಿಮ್ಮನ್ನು ಯಾಮಾರಿಸುತ್ತಾರೆ ಎಂದರು.
ನೀರಾವರಿ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಆಂಜನೇಯರೆಡ್ಡಿ ಮಾತನಾಡಿ, ಬಯಲು ಸೀಮೆ ಭಾಗಗಳಲ್ಲಿ ಕೆರೆಗಳಿಗೆ ನೀರು ತುಂಬಬೇಕು, ನೀರಿಗಾಗಿ ಬಸವಳಿದು ಹೋಗಿರುವ ಭೂಮಿಗಳು ಫಲವತ್ತಾಗಬೇಕು. ನಮ್ಮ ಮಕ್ಕಳು ಭವಿಷ್ಯದಲ್ಲಿ ನೀರಿನ ಅಭಾವ ಎದುರಿಸಬಾರದು ಎನ್ನುವ ಕಾರಣದಿಂದ ನಮ್ಮ ಹೋರಾಟವಿದೆ. ನೀರು ಕೊಡ್ತೇವೆ ಎಂದರೆ ಅದಕ್ಕಿಂತ ಸಂತೋಷದ ವಿಚಾರ ಮತ್ತೊಂದಿಲ್ಲ, ಕೆ.ಸಿ.ವ್ಯಾಲಿ ಯೋಜನೆ, ಎಚ್.ಎನ್.ವ್ಯಾಲಿ ಯೋಜನೆಗೆ ನಮ್ಮ ವಿರೋಧವಿಲ್ಲ. ಅದನ್ನು ಮೂರು ಹಂತದಲ್ಲಿ ಶುದ್ಧೀಕರಿಸಿ ಕೊಡದಿದ್ದರೆ, ನಾವು ಮತ್ತು ಭವಿಷ್ಯದ ಜನರು ಸಾಕಷ್ಟು ಭವಣೆ ಅನುಭವಿಸಬೇಕಾಗುತ್ತದೆ ಎನ್ನುವುದನ್ನು ಅಂಕಿ ಅಂಶಗಳ ಸಮೇತವಾಗಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟ ನಂತರವೇ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಸರ್ಕಾರ, ಈಗಲೂ ಮೂರು ಹಂತದಲ್ಲಿ ಶುದ್ಧೀಕರಿಸಿ, ಶುದ್ಧವಾದ ನೀರು ಕೊಡುತ್ತಿರುವುದಾಗಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವುದನ್ನು ಬಿಟ್ಟು, ರಾಜಕಾರಣಕ್ಕಾಗಿ ಹೋರಾಟಗಾರರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಮಾಡಬಾರದು. ಕೋಲಾರದ ಕಡೆಗೆ ಈಗಾಗಲೇ ಹರಿಸಿರುವ ನೀರಿನಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಈಗಾಗಲೇ ಜನರಿಗೆ ಗೊತ್ತಿದೆ. ಶುದ್ಧವಾದ ನೀರು ಕೇಳಲಿಕ್ಕೆ ನಮಗೆ ಹಕ್ಕಿದೆ ಎಂದರು.
ಯುವಶಕ್ತಿ ಸಂಚಾಲಕ ವಿಜಯಭಾವರೆಡ್ಡಿ ಮಾತನಾಡಿ, ನಾವು ಚುನಾವಣೆಗಳಲ್ಲಿ ಆಯ್ಕೆ ಮಾಡಿ ಕಳುಹಿಸುತ್ತಿರುವ ಜನಪ್ರತಿನಿಧಿಗಳು ನಮ್ಮ ಅಗತ್ಯತೆಗಳನ್ನು ಅರ್ಥ ಮಾಡಿಕೊಂಡಿಲ್ಲ. ಕೆಲ ರೈತ ಮುಖಂಡರು, ಸದ್ಯದ ಪರಿಸ್ಥಿತಿಯಲ್ಲಿನ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳದೆ ಸಾಮಾಜಿಕ ಜಾಲತಾಣಗಳಲ್ಲಿ ತಮಗಿಷ್ಟ ಬಂದ ಹಾಗೇ ಮಾತನಾಡುತ್ತಿದ್ದಾರೆ. ಹೋರಾಟಗಳನ್ನು ಮೊಟಕುಗೊಳಿಸಲಿಕ್ಕೆ ರಾಜಕಾರಣಿಗಳ ಕೈಗೊಂಬೆಗಳಂತೆ ಕುಣಿಯುವವರು ಅವರ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು. ಯುವಕರು ಎಚ್ಚರವಾಗಬೇಕು. ನಮಗೆ ಸಿಗಬೇಕಾಗಿರುವ ಶುದ್ಧ ನೀರು ಪಡೆಯಲು ಕೈ ಜೋಡಿಸಬೇಕು ಎಂದರು.
ಡೇರಿಯ ವತಿಯಿಂದ ವಿಜ್ಞಾನಿ ಪ್ರಕಾಶ್ ಹಾಗೂ ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ ದಂಪತಿಗಳನ್ನು ಸನ್ಮಾನಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಮ್ಮಶಿವಕುಮಾರ್, ಉಪಾಧ್ಯಕ್ಷ ಗೋಪಾಲಪ್ಪ, ನೀರಾವರಿ ಹೋರಾಟಗಾರ ಮಳ್ಳೂರು ಹರೀಶ್, ಸುರೇಶ್ ಬಾಬು, ಪಿಳ್ಳವೆಂಕಟಸ್ವಾಮಪ್ಪ, ಉಪನ್ಯಾಸಕ ರವೀಂದ್ರ, ಭೈರೇಗೌಡ, ಗೋಪಣ್ಣ, ಮಂಜುನಾಥ್ ಬಾಬು, ಎಂ.ಎನ್.ಗೋಪಾಲಪ್ಪ, ರಾಜೇಶ್, ಸೋಮಣ್ಣ, ಗ್ರಾಮದ ಮುಖಂಡರು ಹಾಜರಿದ್ದರು.

ಶ್ರೀ ಸವಿತಾ ಮಹರ್ಷಿಯ ಪ್ರಥಮ ಜಯಂತ್ಯೋತ್ಸವ ಕಾರ್ಯಕ್ರಮ

0

ನಗರದ ತಾಲೂಕು ಕಚೇರಿ ಪಕ್ಕದಲ್ಲಿರುವ ಕಂದಾಯ ಭವನದ ಆವರಣದಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಶ್ರೀ ಸವಿತಾ ಮಹರ್ಷಿಯ ಪ್ರಥಮ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಸದ್ಗುರು ಶ್ರೀ ಸವಿತಾ ಮಹರ್ಷಿಗಳ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸೇವೆ ಮಾಡುವ ಅವಕಾಶ ಸಿಗುತ್ತದೆ. ತಾವು ಮಾಡುವ ಸೇವೆಯಿಂದ ಆತ್ಮತೃಪ್ತಿ ಪಡೆಯಬೇಕು ಎಂದು ಅವರು ಹೇಳಿದರು.
ಪ್ರತಿಯೊಬ್ಬರೂ ತಮ್ಮನ್ನು ತಾವು ಧಾರ್ಮಿಕವಾಗಿ ತಿದ್ದಿಕೊಳ್ಳುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಸೇರಿ ಧಾರ್ಮಿಕ ಚಿಂತನೆಗಳನ್ನು ರೂಡಿಸಿಕೊಳ್ಳಬೇಕು ಎಂದರು.
ತಹಸೀಲ್ದಾರ್ ಎಸ್ ಅಜಿತ್‌ಕುಮಾರ್ ರೈ ಮಾತನಾಡಿ, ಪ್ರತಿಯೊಂದು ಸಮುದಾಯವೂ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎನ್ನುವ ಉದ್ದೇಶದಿಂದ ಜಯಂತಿಗಳನ್ನು ಆಚರಿಸಲಾಗುತ್ತಿದ್ದು ಮುಂದಿನ ಪೀಳಿಗೆಗೆ ಜಯಂತಿಗಳು ದಾರಿದೀಪಗಳಾಗಬೇಕು ಎಂದರು.
ಕರ್ನಾಟಕ ಲೋಕ ಸೇವಾ ಆಯೋಗದ ಸದಸ್ಯ ಡಾ.ಎಚ್.ಆರ್.ಲಕ್ಷ್ಮಿನಾರಾಯಣ ಹಾಗೂ ರೂಪಸಿರಮೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ನಗರದ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿಯವರೆಗೂ ಹಮ್ಮಿಕೊಂಡಿದ್ದ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಮುತ್ತಿನ ಪಲ್ಲಕ್ಕಿಗಳ ಮೆರವಣಿಗೆಯಲ್ಲಿ ಸಮುದಾಯದ ಸುಮಾರು ೧೦೦ ಕ್ಕೂ ಹೆಚ್ಚು ಕಲಾವಿದರು ನಾದಸ್ವರ ನುಡಿಸುತ್ತಾ ಸಾಗಿದ್ದು ನೋಡುಗರ ಮನಸೆಳೆಯುವಂತಿತ್ತು. ಡೊಳ್ಳುಕುಣಿತದ ತಂಡವೂ ಜೊತೆಗೂಡಿತ್ತು.
ನಗರಸಭೆ ಅಧ್ಯಕ್ಷ ಅಫ್ಸರ್‌ಪಾಷ, ಪೌರಾಯುಕ್ತ ಚಲಪತಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ಸವಿತಾ ಸಮಾಜದ ತಾಲ್ಲೂಕು ಅಧ್ಯಕ್ಷ ಎಚ್.ನಾರಾಯಣಸ್ವಾಮಿ, ಕಾರ್ಯದರ್ಶಿ ಬೆಳ್ಳೂಟಿ ರಮೇಶ್, ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಬೆಳ್ಳೂಟಿ ಸಂತೋಷ್ ಹಾಜರಿದ್ದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ ಬಲ

0

ಅವಧಿ ಮುಗಿದ ತಾಲ್ಲೂಕಿನ ನಾಲ್ಕು ಗ್ರಾಮ ಪಂಚಾಯಿತಿಗಳಿಗೆ ಇತ್ತೀಚೆಗೆ ಚುನಾವಣೆ ನಡೆದಿದ್ದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಶುಕ್ರವಾರ ನಡೆಯಿತು. ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿತರು ತಲಾ ಎರಡು ಗ್ರಾಮ ಪಂಚಾಯಿತಿಗಳಲ್ಲಿ ಅಧ್ಯಕ್ಷರಾದರು.
ತಾಲ್ಲೂಕಿನ ಭಕ್ತರಹಳ್ಳಿ ಮತ್ತು ಹೊಸಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆದರೆ, ಮಳಮಾಚನಹಳ್ಳಿಯ ಅಧ್ಯಕ್ಷ ಸ್ಥಾನ ಅವಿರೋಧ ಮತ್ತು ಉಪಾಧ್ಯಕ್ಷರ ಆಯ್ಕೆ ಚುನಾವಣೆಯ ಮೂಲಕ ನಡೆಯಿತು. ನಾಗಮಂಗಲ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಚುನಾವಣೆಯ ಮುಖಾಂತರ ನಡೆದಿದೆ.
ಭಕ್ತರಹಳ್ಳಿ
ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಚೆನ್ನಮ್ಮ (ಪರಿಶಿಷ್ಠ ಜಾತಿ ಮಹಿಳೆ) ಆಯ್ಕೆಯಾದರೆ ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕಲ್ಪನಾ (ಸಾಮಾನ್ಯ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹೊಸಪೇಟೆ
ತಾಲೂಕಿನ ಹೊಸಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಬಿ.ಎನ್ ಶ್ರೀನಿವಾಸ್ (ಹಿಂದುಳಿದ ವರ್ಗ ಬ) ಆಯ್ಕೆಯಾದರೆ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸುಜಾತ (ಪರಿಶಿಷ್ಠ ಜಾತಿ ಮಹಿಳೆ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾಗಮಂಗಲ
ತಾಲ್ಲೂಕಿನ ನಾಗಮಂಗಲ ಗ್ರಾಮ ಪಂಚಾಯಿತಿ ಅದ್ಯಕ್ಷರಾಗಿ ಜೆ.ಡಿ.ಎಸ್ ಬೆಂಬಲಿತ ಅಭ್ಯರ್ಥಿ ವಿ.ಶ್ವೇತ (ಸಾಮಾನ್ಯ) ಆಯ್ಕೆಯಾದರೆ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆಂಜಿನಮ್ಮ (ಸಾಮಾನ್ಯ ಮಹಿಳೆ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಳಮಾಚನಹಳ್ಳಿ
ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಭಾಗ್ಯಮ್ಮ (ಪರಿಶಿಷ್ಟಜಾತಿ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾದ್ಯಕ್ಷ ಸ್ಥಾನಕ್ಕೆ ಬಿ.ಎನ್.ಕವಿತ, ಚಂದ್ರಪ್ಪ ಹಾಗೂ ಬಿ.ಕೆ.ಲೋಕೇಶ್ ಮೂವರು ನಾಮ ಪತ್ರ ಸಲ್ಲಿಸಿದ್ದರು. ಈ ಪೈಕಿ ಬಿ.ಎನ್.ಕವಿತಾ ಹಾಗೂ ಬಿ.ಕೆ.ಲೋಕೇಶ್ ಇಬ್ಬರಿಗೂ ತಲಾ ಆರು ಮತಗಳು ಬಂದಿದ್ದರಿಂದ ಲಾಟರಿ ಮೊರೆ ಹೋಗಬೇಕಾಯಿತು. ಲಾಟರಿಯಲ್ಲಿ ವಿಜೇತರಾದ ಬಿ.ಕೆ.ಲೋಕೇಶ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಚಾಲಕರಿಗೆ ಪ್ರಥಮ ಚಿಕಿತ್ಸೆ ಕಿಟ್ ವಿತರಣೆ

0

ನಗರದ ವೇಣುಗೋಪಲಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಕಾರ್ಮಿಕ ಇಲಾಖೆ ಮತ್ತು ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಡಿ “ಅಪಘಾತ ಜೀವ ರಕ್ಷಕ ತರಬೇತಿ ಶಿಬಿರದಲ್ಲಿ ತರಬೇತಿ ಪಡೆದ ಚಾಲಕರಿಗೆ ಪ್ರಥಮ ಚಿಕಿತ್ಸಾ ಕಿಟ್ ವಿತರಣೆ” ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ.ಜಯಪ್ರಕಾಶ್ ನಾಯಕ್ ಮಾತನಾಡಿದರು.
ಅಪಘಾರ ಸಂಭವಿಸಿದ ಮೊದಲ ೬೦ ನಿಮಿಷಗಳು ಸುವರ್ಣ ಅವಧಿಯಾಗಿದ್ದು, ಆ ಅವಧಿಯಲ್ಲಿ ಸೂಕ್ತ ಚಿಕಿತ್ಸೆ ದೊರೆತಲ್ಲಿ ಜೀವಗಳನ್ನು ರಕ್ಷಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಅಪಘಾತ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡಲು ಈ ಕಿಟ್ ಸಹಕಾರಿಯಾಗಲಿದೆ. ಯಾವುದೇ ಸಂದರ್ಭದ ಅಪಘಾತ ನಡೆದ ತಕ್ಷಣ ಗಾಯಾಳುಗಳನ್ನು ಕಿಟ್‍ನಲ್ಲಿರುವ ಔಷಧಿಗಳನ್ನು ಬಳಸಿ ಪ್ರಥಮ ಹಂತದ ಚಿಕಿತ್ಸೆ ನೀಡಿದ ನಂತರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು ಸಹಕಾರಿಯಾಗಲಿದೆ. ಕರ್ನಾಟಕ ರಾಜ್ಯದ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮಂಡಲಿ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಎರಡು ಸಾವಿರ ರೂ ಬೆಲೆಯ ಈ ಕಿಟ್ ಉಚಿತವಾಗಿ ನೀಡಲಾಗುತ್ತಿದೆ. ಈ ಕಿಟ್‍ನ್ನು ಎಲ್ಲಾ ವಾಹನ ಚಾಲಕರು ಬಳಸಬೇಕು. ತಮ್ಮ ವಾಹನದಲ್ಲಿ ಮುಂಜಾಗೃತವಾಗಿ ಈ ಕಿಟ್ ಇಟ್ಟಿರಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಸೋಮಶೇಖರ್ ಮಾತನಾಡಿ, ಕಾರ್ಮಿಕ ಇಲಾಖೆಯ ವತಿಯಿಂದ ಈ ದಿನ ಭಾಗವಹಿಸಿರುವ ಚಾಲಕರಿಗೆ ೩೫೦ ರೂ ಸಂಭಾವನೆ ನೀಡಲಾಗುತ್ತಿದೆ. ಚಾಲಕರಿಗೆ ಕಾರ್ಮಿಕ ಇಲಾಖೆಯಿಂದ ಅಪಘಾತ ವಿಮೆ ಸೌಲಭ್ಯವನ್ನು ಕೂಡ ಒದಗಿಸಿದೆ. ಕೈಕಾಲು ಊನವಾದಲ್ಲಿ ೨ ಲಕ್ಷ ರೂ, ಪ್ರಾಣಾಪಾಯ ಸಂಭವಿಸಿದಲ್ಲಿ ಕುಟುಂಬದವರಿಗೆ ೫ ಲಕ್ಷ ರೂ ಹಾಗೂ ಮೃತರ ಇಬ್ಬರು ಮಕ್ಕಳಿಗೆ ಎಸ್ ಎಸ್ ಎಲ್ ಸಿ ವರೆಗೂ ವಾರ್ಷಿಕ ೧೦ ಸಾವಿರ ರೂ ನೀಡಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ೧೨೦ ಮಂದಿ ಚಾಲಕರಿಗೆ ಪ್ರಥಮ ಚಿಕಿತ್ಸೆ ಕಿಟ್ ವಿತರಿಸಲಾಯಿತು.
ಕಾರ್ಮಿಕ ನಿರೀಕ್ಷಕಿ ಜೆ.ವಿ.ಕಲಾವಾಣಿ, ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್, ಭರತ್ ಹಾಜರಿದ್ದರು.

ಕುಷ್ಠರೋಗ ಅರಿವು ಆಂದೋಲನ ಜಾಥಾ

0

ಕುಷ್ಠರೋಗ ನಿವಾರಣೆಯಾಗುವಂತಹ ರೋಗ. ಆರಂಭದ ದಿನಗಳಲ್ಲಿ ಪತ್ತೆ ಹಿಡಿದು ಸೂಕ್ತ ಚಿಕಿತ್ಸೆ ನೀಡಿದಲ್ಲಿ ಕುಷ್ಠರೋಗ ಗುಣಮುಖವಾಗುತ್ತದೆ ಎಂದು ಮುಖ್ಯ ಶಿಕ್ಷಕ ಬೈಯಣ್ಣ ತಿಳಿಸಿದರು.
ತಾಲ್ಲೂಕಿನ ನಾಗಮಂಗಲ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಕುಷ್ಠರೋಗ ನಿವಾರಣೆಯ ಬಗ್ಗೆ ಜಾಥ ಹಾಗೂ ಅರಿವುಮೂಡಿಸುವ “ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕುಷ್ಠರೋಗವನ್ನು ಬಹು ಔಷಧಿ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸಬಹುದು. ಪ್ರಾರಂಭಿಕ ಹಂತದಲ್ಲಿ ಗುರ್ತಿಸಿ ಕ್ರಮಬದ್ಧ ಚಿಕಿತ್ಸೆ ಪಡೆದಲ್ಲಿ ಅಂಗವಿಕಲತೆ ತಡೆಗಟ್ಟಬಹುದು ಎಂದರು.
ಗ್ರಾಮದಲ್ಲಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಜಾಥಾ ನಡೆಸಿ ಜನರಲ್ಲಿ ಅರಿವು ಮೂಡಿಸಿದರು.
ಶಿಕ್ಷಕಿ ನಾಗವೇಣಿ, ಕಿರಿಯ ಆರೋಗ್ಯ ಸಹಾಯಕಿ ನಕ್ಷತ್ರ ಮೇರಿ, ಅಂಗನವಾಡಿ ಕಾರ್ಯಕರ್ತೆಯರಾದ ಭವ್ಯ, ಕನಕರತ್ನಮ್ಮ, ಆಶಾಕಾರ್ಯಕತೆಯರಾದ ಪ್ರಭಾವತಿ, ಸುಶೀಲ, ಶಾಂತಮ್ಮ ಹಾಜರಿದ್ದರು.