ಇತ್ತೀಚಿಗೆ ಗೋವಾದಲ್ಲಿ ನಡೆದ ರಾಷ್ಟ್ರೀಯಮಟ್ಟದ ಸ್ಕೇಟಿಂಗ್ ಪಂದ್ಯಾವಳಿಯಲ್ಲಿ ಶಿಡ್ಲಘಟ್ಟದ ಸ್ಪೀಡ್ ಸ್ಕೇಟಿಂಗ್ ಅಸೋಸಿಯೇಷನ್ ವಿದ್ಯಾರ್ಥಿಗಳು ಭಾಗವಹಿಸಿ ಪದಕಗಳನ್ನು ಪಡೆದು ಇಂಡೋನೇಷಿಯಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಟ್ಟದ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ.
ಹದಿನಾರು ವರ್ಷ ಮೇಲ್ಪಟ್ಟ ೫೦೦ ಮೀಟರ್ ಸ್ಕೇಟಿಂಗ್ ಪಂದ್ಯಾವಳಿಯಲ್ಲಿ ಧನುಷ್ ದ್ವಿತೀಯ ಸ್ಥಾನ, ಹದಿನಾರು ವರ್ಷದೊಳಗಿನ ೫೦೦ ಮೀಟರ್ ಸ್ಕೇಟಿಂಗ್ ಪಂದ್ಯಾವಳಿಯಲ್ಲಿ ಮಹಿತ್ ನಾಲ್ಕನೇ ಸ್ಥಾನ ಮತ್ತು ಶಿವವಿಖ್ಯಾತ್ ಐದನೇ ಸ್ಥಾನವನ್ನು ಪಡೆದು ಅಂತರರಾಷ್ಟ್ರೀಯ ಮಟ್ಟಕ್ಕೇ ಆಯ್ಕೆಯಾಗಿದ್ದಾರೆ ಎಂದು ಸ್ಕೇಟಿಂಗ್ ಶಿಕ್ಷಕರಾದ ಚಂದ್ರಶೇಖರ್ ಮತ್ತು ಅರುಣ್ ಕುಮಾರ್ ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಸ್ಕೇಟಿಂಗ್ ವಿದ್ಯಾರ್ಥಿಗಳು
ತಂದೆ ತಾಯಿಯರ ಮೌಲ್ಯ, ಮಮತೆ, ಕಡಿಮೆಯಾತ್ತಿರುವ ಮಕ್ಕಳ ಪ್ರೀತಿಯನ್ನು ಆಧರಿಸಿದ ಚಿತ್ರ – ತ್ಯಾಗ
ನಗರದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೆಚ್ಚಾಗುತ್ತಿರುವ ಬಿಕ್ಷುಕರ ಸಂಖ್ಯೆ, ಅನಾಥರಾಗುತ್ತಿರುವ ವಯಸ್ಕರು ಹಾಗೂ ಸಮಾಜದಲ್ಲಿ ಹೆಚ್ಚಾಗುತ್ತಿರುವ ವೃದ್ಧಾಶ್ರಮಗಳನ್ನು ಗಮನದಲ್ಲಿಟ್ಟುಕೊಂಡು ಒಂದು ಗಂಟೆ ಅವಧಿಯ ಸಿನಿಮಾ ಮಾಡಿದ್ದೇವೆ. ಜನರು ಚಲನಚಿತ್ರ ವೀಕ್ಷಣೆ ಮಾಡಿ ಪ್ರೋತ್ಸಾಹಿಸಬೇಕು ಎಂದು ನಿರ್ದೇಶಕ ಲಿಖಿತ್ ಕುಮಾರ್ ತಿಳಿಸಿದರು.
“ತಾಯಿ ತಂದೆಯರು ತಮಗಾಗಿ ಗುಡಿಯನ್ನು ಕಟ್ಟುವಂತೆ ಮಕ್ಕಳನ್ನು ಕೋರುವುದಿಲ್ಲ. ಆದರೆ, ಬೇರೆ ಯಾರೋ ಕಟ್ಟಿರುವ ಗುಡಿಯಲ್ಲಿ ಭಿಕ್ಷೆ ಬೇಡುವಂತೆ ನಮ್ಮನ್ನು ಮಾಡಬೇಡಿ ಎಂದು ಕೋರಿಕೊಳ್ಳುತ್ತಾರೆ” – ಸಮಾಜದ ಈ ವಾಸ್ತವ ಸಂಗತಿಯೆಡೆಗೆ ಬೆಳಕು ಚೆಲ್ಲುವ, ತಂದೆ ತಾಯಿಯರ ಮೌಲ್ಯ, ಮಮತೆ, ಕಡಿಮೆಯಾತ್ತಿರುವ ಮಕ್ಕಳ ಪ್ರೀತಿಯನ್ನು ಆಧರಿಸಿ “ತ್ಯಾಗ” ಎಂಬ ಸಿನೆಮಾ ನಿರ್ಮಿಸಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದೇವೆ ಎಂದು ಅವರು ಹೇಳಿದರು.
ಮೈಸೂರು, ಮಂಡ್ಯ, ಹಾಸನ, ಕೆ.ಆರ್.ನಗರ ಸೇರಿದಂತೆ ಹಲವೆಡೆ ಚಿತ್ರೀಕರಣ ಮಾಡಿದ್ದೇವೆ. ಅನೇಕ ಮಂದಿ ರಂಗಭೂಮಿ ಕಲಾವಿದರು ನಟಿಸಿದ್ದಾರೆ. ಸುಮಾರು ೩ ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದೇವೆ. ಈಗಾಗಲೇ ಮೈಸೂರಿನಲ್ಲಿ ಬಿಡುಗಡೆ ಮಾಡಿದ್ದೇವೆ. ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಅದರಿಂದ ಬಂದ ಆದಾಯದಲ್ಲಿ ಸ್ವಲ್ಪ ಭಾಗವನ್ನು ವೃದ್ಧಾಶ್ರಮಗಳಿಗೆ ನೀಡಿದ್ದೇವೆ.
ತಾಲ್ಲೂಕಿನ ದಿಬ್ಬೂರಹಳ್ಳಿ ಮಾರುತಿ ಚಿತ್ರಮಂದಿರದಲ್ಲಿ ಫೆಬ್ರವರಿ ೭ ರಂದು ಬಿಡುಗಡೆ ಮಾಡುತ್ತಿದ್ದೇವೆ. ಒಂದು ಗಂಟೆಯ ಕಿರುಚಲನಚಿತ್ರವಾದ್ದರಿಂದ ಆರು ಆಟಗಳು ನಡೆಯಲಿದೆ. ಇಲ್ಲಿ ಬಂದ ಆದಾಯದಲ್ಲಿ ಸ್ವಲ್ಪ ಭಾಗವನ್ನು ವೃದ್ಧಾಶ್ರಮಕ್ಕೆ ನೀಡಲು ನಿರ್ಧರಿಸಿದ್ದೇವೆ. ಜನರು ಉತ್ತಮ ಸ್ಪಂದನೆ ನೀಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ಡಾಲ್ಫಿನ್ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಮಾತನಾಡಿ, ನಮ್ಮ ಶಾಲೆಯಲ್ಲಿ ಓದಿದ ಹುಡುಗ ಲಿಖಿತ್ ಕುಮಾರ್, ತಾಲ್ಲೂಕಿನ ದಿಬ್ಬೂರಹಳ್ಳಿಯವನು. ನಮ್ಮ ವಿದ್ಯಾಸಂಸ್ಥೆಯಲ್ಲಿ ಓದುವಾಗಲೇ ಸಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ತೊಡಗಿಸಿಕೊಳ್ಳುತ್ತಿದ್ದ. ಕ್ರಿಯಾಶೀಲವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದ. ನಮ್ಮಲ್ಲಿ ಪಿಯುಸಿ ಓದಿದ ನಂತರ ಮೈಸೂರಿನಲ್ಲಿ ರವಿವರ್ಮ ಆರ್ಟ್ ಇನ್ಸ್ ಟಿಟ್ಯೂಟ್ ನಲ್ಲಿ ವಿಷುವಲ್ ಆರ್ಟ್ಸ್ ನಲ್ಲಿ ಪದವಿಯನ್ನು ಪಡೆದಿದ್ದಾನೆ. ನಮ್ಮ ತಾಲ್ಲೂಕಿನ ಹುಡುಗ ಒಂದು ಚಿತ್ರವನ್ನು ನಿರ್ದೇಶಿಸಿರುವುದು, ಅದರಲ್ಲೂ ಸಮಾಜಕ್ಕೆ ಉತ್ತಮ ಸಂದೇಶ ಕೊಡುತ್ತಿರುವುದು ನಮಗೆ ಅಭಿಮಾನದ ಸಂಗತಿ. ನಾಮು ಚಿತ್ರ ವೀಕ್ಷಣೆ ಮಾಡಿದ್ದು, ಉತ್ತಮವಾಗಿ ಮೂಡಿಬಂದಿದೆ. ಜನರು ಹೆಚ್ಚಿನ ಸಹಕಾರ ನೀಡಬೇಕು ಎಂದರು.
ಡಿ.ಎಸ್.ನಿರಂಜನ್, ನಿಖಿಲ್, ತಬ್ರೇಜ್, ಆಕಾಶ್, ಶೀಹರ್ಷ, ಆರಿಫ್ ಹಾಜರಿದ್ದರು.
ಖಾಸಗಿ ಕೊಳವೆಬಾವಿಗಳಿಂದ ಕುಡಿಯುವ ನೀರು ಪೂರೈಕೆ – ಶಾಸಕ ವಿ.ಮುನಿಯಪ್ಪ
ತಾಲ್ಲೂಕಿನಾದ್ಯಂತ ತೀವ್ರ ಬರಗಾಲ ಕಾಡುತ್ತಿದ್ದು ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಸಹ ಕಷ್ಟಕರವಾದ ಸ್ಥಿತಿ ಉದ್ಭವವಾಗಿದೆ. ಮುಂಬರುವ ಮೂರು ತಿಂಗಳ ಕಾಲ ಖಾಸಗಿ ಕೊಳವೆಬಾವಿಗಳಿಂದ ಕುಡಿಯುವ ನೀರು ಪೂರೈಸಲು ರೈತರು ಹಾಗೂ ನಾಗರಿಕರು ಸಹಕರಿಸಬೇಕು ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಕೋರ್ಟ್ ಆವರಣದ ಮುಂಭಾಗದಿಂದ ಹನುಮಂತಪುರ ಗ್ರಾಮದ ವರೆಗಿನ ರಸ್ತೆ ಡಾಂಬರೀಕರಣ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗುತ್ತಿದೆ. ಕೊರೆಯಿಸಿರುವ ನೂರಾರು ಕೊಳವೆಬಾವಿಗಳು ನೀರಿಲ್ಲದೆ ವಿಫಲವಾಗಿವೆ. ಹಲವೆಡೆ ಖಾಸಗಿ ಕೊಳವೆಬಾವಿಗಳಿಂದ ನೀರು ಪಡೆದು ಪೂರೈಕೆ ಮಾಡುತ್ತಿದ್ದರೂ ನೀರಿನ ಅಭಾವ ನೀಗಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ರೈತರು ದೊಡ್ಡಮನಸ್ಸು ಮಾಡಿ ಮುಂದಿನ ೩ ತಿಂಗಳ ಕಾಲ ಕುಡಿಯಲಿಕ್ಕೆ ನೀರು ಪೂರೈಕೆ ಮಾಡಿ ಸಹಕಾರ ನೀಡಬೇಕು ಎಂದರು.
ಮೈತ್ರಿ ಸರ್ಕಾರದ ಆಡಳಿತಾವಧಿಯಲ್ಲಿ ತಾಲ್ಲೂಕಿನಾದ್ಯಂತ ಹಲವಾರು ಅಭಿವೃದ್ದಿ ಕಾರ್ಯಗಳು ನಡೆದಿವೆ. ಲೊಕೋಪಯೋಗಿ ಇಲಾಖೆಯಿಂದ ಬಿಡುಗಡೆಯಾಗಿರುವ ೪೨ ಕೋಟಿ ರೂ ಅನುಧಾನದಲ್ಲಿ ರಸ್ತೆ ಕಾಮಗಾರಿಗಳ ಟೆಂಡರ್ ಕಾರ್ಯ ಪ್ರಗತಿಯಲ್ಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ ೭೦ ರಷ್ಟು ಸ್ವಚ್ಚತೆ ಕಾಪಾಡಲು ಚರಂಡಿ ಮತ್ತು ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದೇವೆ ಎಂದರು.
ಲೊಕೋಪಯೋಗಿ ಇಲಾಖೆ ಎಇಇ ಕೆ.ಎಂ.ವಿನೋದ್, ಪೌರಾಯುಕ್ತ ಚಲಪತಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ಅಮ್ಜದ್‌ಪಾಷ, ಕೃಷ್ಣಮೂರ್ತಿ, ನಾಗನರಸಿಂಹ, ರಾಜ್‌ಕುಮಾರ್, ಶ್ರೀನಾಥ್ ಹಾಜರಿದ್ದರು.
ತಾಲ್ಲೂಕು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಕ್ಷೇಮಾಬಿವೃದ್ಧಿ ಸಂಘದ ಸದಸ್ಯರಿಂದ ಪ್ರತಿಭಟನೆ
ಕೂಲಿ ಕೆಲಸಕ್ಕೆ ಹೋಗಿರುವವರನ್ನು ಹೊರತುಪಡಿಸಿ ಮನೆಯಲ್ಲಿ ಇರುವವರನ್ನು ಮಾತ್ರ ಸರ್ವೆ ಕಾರ್ಯ ನಡೆಸಿದ್ದು, ನಿಜವಾದ ವಸತಿ ಹೀನರಿಗೆ ಅನ್ಯಾಯವಾಗಿದೆ ಎಂದು ತಾಲ್ಲೂಕು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಕ್ಷೇಮಾಬಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ದೀಪಕ್ ತಿಳಿಸಿದರು.
ನಗರ ಸಭೆ ಆವರಣದಲ್ಲಿ ಪ್ರತಿಭಟನೆ ನಡೆಸಿ ನಂತರ ನಗರ ಸಭೆಯ ವ್ಯಾವಸ್ಥಪಕ ಜಯರಾಮಪ್ಪ ಅವರಿಗೆ ಮನವಿ ಪತ್ರ ನೀಡಿ ಮಾತನಾಡಿದರು.
ನಗರದಲ್ಲಿ ಸಾಕಷ್ಟು ಜನರು ವಿವಿಧ ರೀತಿಯ ಕೂಲಿ ಕೆಲಸವನ್ನು ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ನಗರಸಭೆ ಕಾರ್ಯಾಲಯದಿಂದ ವಸತಿಹೀನರಿಗೆ ಸೌಕರ್ಯ ಕಲ್ಪಿಸುವ ಬಗ್ಗೆ ಸರ್ವೆ ಕಾರ್ಯ ನಡೆಸಿದ್ದು, ಕೂಲಿ ಕಾರ್ಮಿಕರಿಗೆ ಯಾವುದೇ ಸಂದೇಶ ಅಥವಾ ತಿಳುವಳಿಕೆ ನೀಡದೆ ಸರ್ವೆ ಮಾಡಿದ್ದಾರೆ. ಜನರು ಕೂಲಿ ಕೆಲಸಗಳಿಗೆ ಹೋಗಿರುವುದರಿಂದ ನಿಜವಾದ ಫಲಾನುಭವಿಗಳನ್ನು ಗುರ್ತಿಸಲು ಸಾದ್ಯವಾಗಿಲ್ಲ ಎಂದರು.
ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರ ಪಟ್ಟಿಯನ್ನು ನೀಡಿ, ಸಮೀಕ್ಷೆಗೆ ಹಾಜರಾಗುವ ಮುನ್ನ ದೂರವಾಣಿ ಅಥವಾ ಸೂಕ್ತ ತಿಳುವಳಿಕೆ ನೀಡಿ ಸರ್ವೆ ನಡೆಸಬೇಕೆಂದು ಕೋರಿದರು.
ಮುನಿಕೃಷ್ಣ, ಸುಬ್ರಮಣಿ, ಉಷಾ, ಗಾಯಿತ್ರಿ, ಮಂಜುಳಾ, ಕುಮಾರ್ ಹಾಜರಿದ್ದರು.
ಅಕ್ಷರ ದಾಸೋಹ ನೌಕರರಿಂದ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿ ಧಹಿಸಿ ಪ್ರತಿಭಟನೆ
ಅಕ್ಷರ ದಾಸೋಹ ನೌಕರರ ಸಂಘದ ಸದಸ್ಯರು ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿಯನ್ನು ಧಹಿಸುವ ಮೂಲಕ ನಗರದಲ್ಲಿ ಶನಿವಾರ ಪ್ರತಿಭಟನೆಯನ್ನು ನಡೆಸಿದರು.
ಅಕ್ಷರ ದಾಸೋಹ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಮುನಿಲಕ್ಷ್ಮಮ್ಮ ಮಾತನಾಡಿ, ಬಿಸಿಯೂಟ ಪ್ರಾರಂಭವಾಗಿ ೧೫ ವರ್ಷಗಳಾಗಿವೆ. ಕೇಂದ್ರ ಸರ್ಕಾರ ನಮಗೆ ಯಾವುದೇ ಸೌಲಭ್ಯ, ಆರ್ಥಿಕ ಭದ್ರತೆ ನೀಡದೆ ಕಡೆಗಣಿಸಿದೆ. ಅಂಗನವಾಡಿ ನೌಕರರಿಗೆ, ಆಶಾಕಾರ್ಯಕರ್ತೆಯರಿಗೆ ಮತ್ತು ಗ್ರಾಮ ಪಂಚಾಯಿತಿ ನೌಕರರಿಗೆ ಸರ್ಕಾರ ಅನುದಾನ, ಕನಿಷ್ಠ ವೇತನ ನೀಡಿದೆ. ಆದರೆ ಪ್ರತಿದಿನ ಮಕ್ಕಳಿಗೆ ರುಚಿಕಟ್ಟಾಗಿ ಅಡುಗೆ ಮಾಡಿ ಬಡಿಸುವ ಬಿಸಿಯೂಟ ನೌಕರರ ಬಗ್ಗೆ ಕಾಳಜಿ ವಹಿಸಿಲ್ಲ. ವೇತನ ಬಿಡುಗಡೆಗೆ ನಾವು ನಿರಂತರವಾಗಿ ಹೋರಾಡುತ್ತಲೇ ಬಂದಿದ್ದೇವೆ.
ಒಂದು ಲಕ್ಷ ೨೦ ಸಾವಿರ ಮಂದಿ ನಾವು ಬಿಸಿಯೂಟ ನೌಕರರಿದ್ದೇವೆ. ಕೂಡಲೇ ಸರ್ಕಾರ ಎಚ್ಚೆತ್ತು ಬಿಸಿಯೋಟ ನೌಕರರ ವೇತನ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು.
ಪ್ರಧಾನಿ ನರೇಂದ್ರಮೋದಿ ಅವರು ಬಿಡುಗಡೆ ಮಾಡಿರುವ ಬಜೆಟ್‌ನಲ್ಲಿ ಅಸಂಘಟಿತ ಕಾರ್ಮಿಕರಿಗೂ ಸಹ ಯೋಜನೆ ರೂಪಿಸಿದ್ದು, ಬಿಸಿಯೂಟ ನೌಕರರನ್ನು ಕಡೆಗಣಿಸಲಾಗಿದೆ. ಕನಿಷ್ಟ ವೇತನ, ಭದ್ರತೆ ಒದಗಿಸಬೇಕೆಂದು ಬಿಸಿಯೋಟ ನೌಕರರು ಹಲವಾರು ವರ್ಷಗಳಿಂದ ಬೇಡಿಕೆ ಇಟ್ಟಿದ್ದರೂ ಫಲಪ್ರದವಾಗಿಲ್ಲ. ಮುಂದಿನ ದಿನಗಳಲ್ಲಿ ಕನಿಷ್ಟ ವೇತನ ನೀಡದಿದಲ್ಲಿ ದೆಹಲಿ ಚಲೋ ಆಂದೋಲನ ಹಮ್ಮಿಕೊಳ್ಳಲಾಗುವುದೆಂದು ಹೇಳಿದರು.
ನಗರದ ಪ್ರವಾಸಿ ಮಂದಿರದಿಂದ ಕೋಟೆ ವೃತ್ತದವರೆಗೂ ಹಾಗೂ ಕೋಟೆ ವೃತ್ತದಿಂದ ರೈಲ್ವೆ ನಿಲ್ದಾಣದವರೆಗೂ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿದ್ದರು. ರೈಲ್ವೆ ನಿಲ್ದಾಣದ ಬಳಿ ರಸ್ತೆಯಲ್ಲಿ ಪ್ರಧಾನಿ ಮೋದಿ ಅವರ ಪ್ರತಿಕೃತಿಯನ್ನು ದಹನ ಮಾಡಿದರು.
ಮಂಜುಳಮ್ಮ, ನಾಗರತ್ನ, ಮೀನಾಕ್ಷಮ್ಮ, ಶೋಭಾ, ಗಾಯಿತ್ರಿ, ಚಂದ್ರಕಲಾ, ಸೌಭಾಗ್ಯ ಹಾಜರಿದ್ದರು.
ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಅರಿವು ಕಾರ್ಯಕ್ರಮ
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ “ರಕ್ತಹೀನತೆಗೆ ಕಾರಣಗಳು, ವಿಟಮಿನ್ ಗಳ ಕೊರತೆಯಿಂದ ಬರುವ ಖಾಯಿಲೆಗಳು ಮತ್ತು ಪರಿಹಾರ”ದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಿಲ್ಲಾ ಸಂತಾನ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ.ಚನ್ನಕೇಶವರೆಡ್ಡಿ ಮಾತನಾಡಿದರು.
ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಆರೋಗ್ಯಕರ ಮಟ್ಟದಲ್ಲಿರುವುದು ಅತ್ಯಂತ ಅವಶ್ಯವಾಗಿದೆ. ನಿಗಧಿತ ಮಟ್ಟಕ್ಕಿಂತಲೂ ಕಡಿಮೆಯಾದರೆ ದೇಹ ಹಲವಾರು ತೊಂದರೆಗಳನ್ನು ಅನುಭವಿಸುತ್ತದೆ. ಕಬ್ಬಿಣ ಹೆಚ್ಚಿರುವ ಆಹಾರ, ಸರ್ಕಾರದಿಂದ ಶಾಲೆಗಳಲ್ಲಿ ನೀಡುವ ಮಾತ್ರೆಗಳನ್ನು ತೆಗೆದುಕೊಳ್ಳುವ ಮೂಲಕ ಈ ಕೊರತೆಯನ್ನು ನೀಗಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.
ವಿಟಮಿನ್ ಸಿ ಹೆಚ್ಚಿರುವ ಆಹಾರಗಳು, ಅದರಲ್ಲಿಯೂ ಮುಖ್ಯವಾಗಿ ಹಣ್ಣುಗಳನ್ನು ಸೇವಿಸುವುದು ಅಗತ್ಯವಾಗಿದೆ. ಅಲ್ಲದೇ ವಿಟಮಿನ್ ಸಿ ಇಲ್ಲದಿದ್ದರೆ ಕಬ್ಬಿಣವನ್ನು ನಮ್ಮ ದೇಹ ಅರಗಿಸಿಕೊಳ್ಳಲಾರದು. ಹಣ್ಣುಗಳಾದ ಪಪ್ಪಾಯಿ, ಕಿತ್ತಳೆ, ಲಿಂಬೆ, ದೊಣ್ಣೆಮೆಣಸು, ಚಕ್ಕೋತ, ಟೊಮೇಟೊ ಮತ್ತು ಪಾಲಕ್ ಸೊಪ್ಪುಗಳಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ. ಇದೆ. ಜೊತೆಗೆ ವೈದ್ಯರ ಸಲಹೆಯ ಮೇರೆಗೆ ಔಷಧಿಯ ರೂಪದಲ್ಲಿ ಲಭ್ಯವಿರುವ ವಿಟಮಿನ್ ಸಿ ಮಾತ್ರೆ ಅಥವಾ ಸಿರಪ್ ಗಳನ್ನೂ ಸೇವಿಸಬಹುದು ಎಂದು ಹೇಳಿದರು.
ಡಾ.ಕೀರ್ತಿ ಮಾತನಾಡಿ, ಸಿರಿಧಾನ್ಯಗಳಲ್ಲಿ ಹೆಚ್ಚು ಪೋಷಕಾಂಶಗಳು, ಹೆಚ್ಚು ಫೈಬರ್ ಅಂಶಗಳು ಮತ್ತು ಕಡಿಮೆ ಪ್ರಮಾಣದ ಗ್ಲೇಮಿಕ್ ಇಂಡೆಕ್ಸ್, ಹೆಚ್ಚು ಫೈಬರ್ ಅಂಶಗಳು ಇರುವುದರಿಂದ ಇವುಗಳು ಆರೋಗ್ಯಕ್ಕೆ ಪೂರಕವಾಗಿದೆ. ಆರೋಗ್ಯ ವೃದ್ಧಿಗೆ ಪೂರಕವಾಗುವ ಸಿರಿಧಾನ್ಯಗಳನ್ನು ಬಳಸಿ ಎಂದು ವಿವರಿಸಿದರು.
ಡಾ.ಫಣೀಂದ್ರ ಸ್ವಚ್ಛತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್, ಮುಖ್ಯ ಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ, ಶಿಕ್ಷಕರಾದ ಎಸ್.ಚಾಂದ್ ಪಾಷ, ಅಶೋಕ್, ಭಾರತಿ, ಸಿಬ್ಬಂದಿ ವೆಂಕಟಮ್ಮ ಹಾಜರಿದ್ದರು.
ಕಂದಾಯ ಇಲಾಖೆ ಮಾಹಿತಿಯನ್ನೊಳಗೊಂಡ ದಿನಚರಿ ಬಿಡುಗಡೆ
ತಾಲ್ಲೂಕಿನ ಹಂಡಿಗನಾಳದ ವೀರಣ್ಣ ಕೆಂಪಣ್ಣ ಕಲ್ಯಾಣಮಂಟಪದಲ್ಲಿ ಗುರುವಾರ ಸಂಜೆ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಹಾಗೂ ರಾಜ್ಯ ಕಂದಾಯ ಇಲಾಖಾ ನೌಕರರ ಸಂಘ ಶಿಡ್ಲಘಟ್ಟ ಶಾಖೆಯ ವತಿಯಿಂದ ಆಯೋಜಿಸಿದ್ದ ೨೦೧೯ ನೇ ಸಾಲಿನ ದಿನಚರಿ ಬಿಡುಗಡೆ ಸಮಾರಂಭದಲ್ಲಿ ದಿನಚರಿ ಬಿಡುಗಡೆ ಮಾಡಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಮಾತನಾಡಿದರು.
ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನೊಳಗೊಂಡ ದಿನಚರಿಯನ್ನು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಬಿಡುಗಡೆ ಮಾಡುತ್ತಿರುವುದು ಅನುಕರಣೀಯವಾಗಿದೆ ಎಂದು ಅವರು ತಿಳಿಸಿದರು.
ಕೆಲಸಗಳನ್ನು ವ್ಯವಸ್ಥಿತವಾಗಿ ಮಾಡುವವರು, ಜೀವನದಲ್ಲಿ ಗುರಿ, ದಿಕ್ಕು, ಮಾರ್ಗ ಇರುವವರು ದಿನಚರಿಯನ್ನು ಬಳಸುತ್ತಾರೆ. ದಿನಚರಿಯ ಪ್ರಾಮುಖ್ಯತೆಯನ್ನು ಅರಿತು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಅಗತ್ಯ ಮಾಹಿತಿಯನ್ನೊಳಗೊಂಡಂತೆ ದಿನಚರಿ ಪುಸ್ತಕವನ್ನು ಮಾಡಿರುವುದು ಬಹಳ ಉಪಯುಕ್ತವಾಗಿದೆ. ಜಿಲ್ಲಾ ಮಟ್ಟದಲ್ಲೂ ಈ ರೀತಿಯ ಕಾರ್ಯಗಳ ಅಗತ್ಯವಿದೆ ಎಂದರು.
ಗ್ರಾಮ ಲೆಕ್ಕಿಗರಿಗೆ ಮತ್ತು ಆರ್ ಐ ಗಳಿಗೆ ಜಾಬ್ ಚಾರ್ಟ್ ಅಗತ್ಯವಿದೆ. ಅವರಿಗೆ ಸೌಲಭ್ಯಗಳ ಕೊರತೆಯಿರುವುದನ್ನು ಗಮನಕ್ಕೆ ತಂದಿದ್ದಾರೆ. ಅವರು ಅತ್ಯುತ್ತಮಮವಾಗಿ ಕಾರ್ಯನಿರ್ವಹಿಸಲು ಅಗತ್ಯ ಸೌಲಭ್ಯವನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಆರತಿ ಆನಂದ್ ಮಾತನಾಡಿ, ಗ್ರಾಮ ಲೆಕ್ಕಿಗರಿಗೆ, ಆರ್ ಐ ಗಳಿಗೆ ಹಾಗೂ ಇತರ ಅಧಿಕಾರಿಗಳಿಗೆ ಕಾರ್ಯಾಗಾರಗಳನ್ನು ನಡೆಸುವ ಮೂಲಕ ಅವರ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು. ಸಮಾಜ ಕಂದಾಯ ಇಲಾಖೆಯ ಕಾರ್ಯವೈಖರಿಯ ಮೇಲೆ ಹೆಚ್ಚಿನ ಗಮನವಿರಿಸುವುದರಿಂದ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ನುಡಿದರು.
ತಹಶಿಲ್ದಾರ್ ಅಜಿತ್ ಕುಮಾರ್ ರೈ ಮಾತನಾಡಿ, ಇಲಖೆಯ ಎರಡೂ ಸಂಘಗಳಲ್ಲಿ ಒಗ್ಗಟ್ಟಿದ್ದಾಗ ಮಾತ್ರ ಈ ರೀತಿಯ ಮಾಹಿತಿಯುಕ್ತ ದಿನಚರಿ ಮಾಡಲು ಸಾಧ್ಯವಿದೆ. ಜಿಲ್ಲೆಯಲ್ಲಿಯೇ ಶಿಡ್ಲಘಟ್ಟದಲ್ಲಿ ದಿನಚರಿ ಪುಸ್ತಕ ಪ್ರಥಮವಾಗಿ ರೂಪಿಸಿದ ಹೆಮ್ಮೆಯಿದೆ ಎಂದರು.
ಈ ಸಂದರ್ಭದಲ್ಲಿ ವಯೋ ನಿವೃತ್ತಿ ಹೊಂದಲಿರುವ ಅಧಿಕಾರಿಗಳಾದ ಎನ್.ನರಸಿಂಹಯ್ಯ, ಡಿ.ಲಕ್ಷ್ಮಿನಾರಾಯಣರೆಡ್ಡಿ, ಮುನಿಶಾಮಪ್ಪ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಇಲಾಖೆಯ ನೌಕರರ ಮಕ್ಕಳಿಗೆ ಹಾಗೂ ಸೇನೆಯಿಂದ ನಿವೃತ್ತರಾಗಿ ಕಂದಾಯ ಇಲಾಖೆಗೆ ಸೇರಿರುವ ಕುಬೇರ, ಶಿವರಾಮ್ ಅವರನ್ನು ಸನ್ಮಾನಿಸಲಾಯಿತು.
ಚಿಕ್ಕಬಳ್ಳಾಪುರ ತಹಶೀಲ್ದಾರ್ ನರಸಿಂಹಮೂರ್ತಿ, ಗುಡಿಬಂಡೆ ತಹಶೀಲ್ದಾರ್ ಹನುಮಂತರಾಯಪ್ಪ, ಚಿಂತಾಮಣಿ ತಹಶೀಲ್ದಾರ್ ವಿಶ್ವನಾಥ್, ಶಿಡ್ಲಘಟ್ಟ ಗ್ರೇಡ್ ೨ ತಹಶೀಲ್ದಾರ್ ಹನುಮಂತರಾವ್, ಕಂದಾಯ ಇಲಾಖೆಯ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಜಿ.ವಿಶ್ವನಾಥ್, ಡಿ.ಆರ್.ಪ್ರೀತಮ್, ಜಿ.ಎಂ.ಮಂಜುನಾಥ್, ಗ್ರಾಮ ಲೆಕ್ಕಿಗರ ಸಂಘದ ತಾಲ್ಲೂಕು ಅಧ್ಯಕ್ಷ ಆರ್.ನಾಗೇಂದ್ರ, ತ್ರಿಮೂರ್ತಿ ಕಡಿಮನಿ ಹಾಜರಿದ್ದರು.
ಶ್ರೀ ಶಿವಕುಮಾರಸ್ವಾಮೀಜಿ ಭಕ್ತವೃಂದ ವತಿಯಿಂದ ಪುಣ್ಯಸ್ಮರಣೆ ಕಾರ್ಯಕ್ರಮ
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗುರುವಾರ ಗ್ರಾಮದ ವಿವಿಧ ಸಂಘಸಂಸ್ಥೆಗಳು, ಶ್ರೀ ಮಠದ ಹಳೆಯ ವಿದ್ಯಾರ್ಥಿಗಳು, ಶ್ರೀ ಶಿವಕುಮಾರಸ್ವಾಮೀಜಿ ಭಕ್ತವೃಂದ ವತಿಯಿಂದ ಹಮ್ಮಿಕೊಂಡಿದ್ದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿದರು.
ಶ್ರೀ ಶಿವಕುಮಾರಮಹಾಸ್ವಾಮೀಜಿ ಅವರು ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ಕಾಯಕದ ಮೂಲಕ ಕೃತಿರೂಪಕ್ಕಿಳಿಸಿದ ಮಹಾಚೇತನವಾಗಿದ್ದಾರೆ ಎಂದು ಅವರು ತಿಳಿಸಿದರು.
ಕಾಯಕ ಪದಕ್ಕೆ ಹೊಸಭಾಷ್ಯವನ್ನು ಬರೆದವರು ಶ್ರೀ ಶಿವಕುಮಾರಮಹಾಸ್ವಾಮೀಜಿ. ಅವರಲ್ಲಿ ದೃಷ್ಟಿಕಾಯಕ ಕಂಗೊಳಿಸಿದರೆ, ಮನಸ್ಸಿನಲ್ಲಿ ಕಾಯಕ ಮೈದುಂಬಿತ್ತು. ಕಿವಿಗೆ ಒಗ್ಗುವ ಧ್ವನಿಕಾಯಕ, ನುಡಿಗೆ ಬೆಂಬಲಿಸುವ ನಡೆಕಾಯಕದ ದಿಗ್ದರ್ಶನ ಅವರಿಂದಾಗುತ್ತಿತ್ತು. ಶರಣರ ನುಡಿಯನ್ನು ಕಾಯಕದ ಮೂಲಕ ಕಾಯಕ್ಕೆ ವಿಶೇಷ ಅರ್ಥ ತಂದವರು ಎಂದು ಬಣ್ಣಿಸಿದರು.
ಮಠಕ್ಕೆ ಬಂದ ಪ್ರತಿ ವಿದ್ಯಾರ್ಥಿಗೆ ಜೀವನೋಪಾಯ ಮಾರ್ಗವನ್ನು ಕಲ್ಪಿಸಿ ಬದುಕಿನ ಮಾರ್ಗವನ್ನು ತೋರಿದ ದಯಾಮಯಿ ಸ್ವಾಮೀಜಿ. ಅವರಲ್ಲಿ ಬಂದಿದ್ದ ದೈವದತ್ತವಾದ ಧಾರ್ಮಿಕ ಪ್ರವೃತ್ತಿಗಳು ಸಿದ್ಧಗಂಗೆಯಲ್ಲಿನ ನಿರಂತರವಾದ ಸಾಂಸ್ಕೃತಿಕ ಧಾರ್ಮಿಕ ಕಾರ್ಯಗಳಿಗೆ ಪ್ರೇರಣೆ ನೀಡುವಂತಿತ್ತು ಎಂದರು.
ಅದ್ದೂರಿ ಪಲ್ಲಕ್ಕಿ ಉತ್ಸವ: ಸ್ವಾಮೀಜಿ ಅವರ ಭಾವಚಿತ್ರವನ್ನೊತ್ತ ಮುತ್ತಿನ ಪಲ್ಲಕ್ಕಿ ಉತ್ಸವವು ಸುಗಟೂರು, ಜಂಗಮಕೋಟೆ, ಜಂಗಮಕೋಟೆ ಕ್ರಾಸ್‌ನ ಪ್ರಮುಖ ಬೀದಿಗಳಲ್ಲಿ ಮಹಿಳೆಯರು, ಹೆಣ್ಣುಮಕ್ಕಳ ಕುಂಭ, ಗಂಗಾಧರ್ ತಂಡದವರಿಂದ ವೀರಗಾಸೆ ನೃತ್ಯ, ಕರಡಿಮಜಲು ವಾದ್ಯಗೋಷ್ಟಿಯೊಂದಿಗೆ ಸಂಚರಿಸಿತು. ಗ್ರಾಮದಲ್ಲಿರುವ ಸುಮಾರು ಇಪ್ಪತ್ತಕ್ಕೂ ಹೆಚ್ಚು ದೇವಾಲಯಗಳಲ್ಲಿ ಸ್ವಾಮೀಜಿ ಅವರ ಪುಣ್ಯಸ್ಮರಣೆಯ ಪ್ರಯುಕ್ತ ವಿಶೇಷ ಪೂಜೆ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆಯಿಂದ ಸಂಜೆವರೆಗೆ ನಿರಂತರವಾಗಿ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು.
ಗ್ರಾಮಪಂಚಾಯಿತಿ ಸದಸ್ಯ ಶಿವಶಂಕರಪ್ಪ, ಪದ್ಮಮ್ಮಅಶ್ವತ್ಥಪ್ಪ, ಎಸ್.ಡಿ.ದೇವರಾಜು, ಎಸ್‌ಡಿಎಂಸಿ ಅಧ್ಯಕ್ಷ ಎಸ್.ಎಂ.ಶಂಕರಪ್ಪ, ಮಾಜಿ ಅಧ್ಯಕ್ಷ ಎಸ್.ಆರ್.ನಾಗೇಶ್, ತಿರುಮಲೇಶ್, ಪಿಳ್ಳಪ್ಪ, ಚಿಕ್ಕಬಸವರಾಜು, ಚನ್ನಬಸವರಾಜು, ವರ್ತಕ ಸತೀಶ್, ಎಸ್.ಎ.ನಾಗೇಶ್‌ಗೌಡ, ಸ್ವಾಮೀಜಿ ಅವರ ಭಕ್ತಸಮೂಹ ಹಾಜರಿದ್ದರು.
ನಗರದ ಹ್ದಯಭಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಬೇಕೆಂದು ಮನವಿ
“ಅಂಬೇಡ್ಕರ್ ಭವನ”ವನ್ನು ನಗರದ ಹೃದಯಭಾಗದಲ್ಲಿ ನಿರ್ಮಿಸಬೇಕೆಂದು ಒತ್ತಾಯಿಸಿ ಶುಕ್ರವಾರ ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು ಶಾಸಕ ವಿ. ಮುನಿಯಪ್ಪ ಅವರಿಗೆ ಮನವಿ ಸಲ್ಲಿಸಿದರು.
ಸಾಕಷ್ಟು ವರ್ಷಗಳಿಂದ ಬೇಡಿಕೆ ಇಟ್ಟಿದ್ದರೂ ಸಹ ಸಂವಿಧಾನ ಶಿಲ್ಪಿಯ ಹೆಸರಲ್ಲಿ ನಗರದಲ್ಲಿ ಭವನ ನಿರ್ಮಿಸಿಲ್ಲ. ಸರ್ಕಾರ ಮತ್ತು ಜನಪ್ರತಿನಿಧಿಗಳ ಇಚ್ಚಾ ಶಕ್ತಿ ಕೊರತೆಯಿಂದ ನಮ್ಮ ಬೇಡಿಕೆ ಮೂಲೆ ಗುಂಪಾಗಿದೆ. ಅಂಬೇಡ್ಕರ್ ಭವನಕ್ಕೆ ಸರಿಯಾದ ಸ್ಥಳ ನಿಗಧಿ ಮಾಡಿ ಅತಿ ಶೀಘ್ರದಲ್ಲಿ ಉತ್ತಮ ಕಟ್ಟಡವನ್ನು ನಿರ್ಮಿಸಬೇಕೆಂದು ಆಗ್ರಹಿಸಿದರು.
ದಲಿತ ಸಂಘಟನೆಗಳ ಒಕ್ಕೂಟದಿಂದ ನಗರ ಸಭೆ ಸದಸ್ಯ ಚಿಕ್ಕಮುನಿಯಪ್ಪ ಮಾತನಾಡಿ, ಸುಮಾರು ವರ್ಷಗಳಿಂದ ಸುಸಜ್ಜಿತವಾದ ಡಾ. ಬಿ.ಆರ್ ಅಂಬೇಡ್ಕರ್ ಭವನವಿಲ್ಲದ ಸರ್ಕಾರದಿಂದ ಈಗಾಗಲೇ ಬಿಡುಗಡೆಯಾಗಿರುವ ಹಣವು ಸಹ ಉಪಯೋಗಕ್ಕೆ ಬಾರದಂತಾಗಿದೆ. ತಾಲ್ಲೂಕಿನ ಎಲ್ಲಾ ಸಮುದಾಯದವರಿಗೂ ಸಹ ಸದ್ಬಳಕೆಯಾಗುವಂತ ರೀತಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಭವನವನ್ನು ನಿರ್ಮಿಸಲು ನಗರದ ಹೃದಯಭಾಗಲ್ಲೇ ಸ್ಥಳ ನಿಗದಿ ಮಾಡಬೇಕೆಂದು ಕೋರಿದರು.
ನಗರದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘಟನೆಗಳ ಒಕ್ಕೂಟ ವತಿಯಿಂದ ಮನವಿ ಸ್ವೀಕರಿಸಿದ ಶಾಸಕ ವಿ. ಮುನಿಯಪ್ಪ ಮಾತನಾಡಿ, ಡಾ. ಬಿ.ಆರ್ ಅಂಬೇಡ್ಕರ್ ಭವನಕ್ಕೆ ಸ್ಥಳ ನಿಗಧಿ ಮಾಡುವ ಸಲುವಾಗಿ ಈಗಾಗಲೆ ಜಿಲ್ಲಾಧಿಕಾರಿಗಳ ಬಳಿ ಮಾತನಾಡಿದ್ದು, ಅವರ ಮುಖಾಂತರ ನಗರದಲ್ಲೇ ಸೂಕ್ತವಾದ ಸ್ಥಳವನ್ನು ಗುರ್ತಿಸಿಕೊಡುವುದಾಗಿ ಭರವಸೆ ನೀಡಿದರು.
ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಗಂಜಿಗುಂಟೆ ನರಸಿಂಹಮೂರ್ತಿ, ಮುಖಂಡರಾದ ಮಳ್ಳೂರು ಮುನಯ್ಯ, ಕೋಟಹಳ್ಳಿ ದ್ಯಾವಕೃಷ್ಣಪ್ಪ, ತಾತಹಳ್ಳಿ ಚಲಪತಿ, ಹುಜುಗೂರು ವೆಂಕಟೇಶ್, ಸೊಣ್ಣೇನಹಳ್ಳಿ ವೆಂಕಟೇಶ್, ಹನುಮಂತಪುರ ಕೃಷ್ಣ, ಮುತ್ತೂರು ಲಕ್ಷ್ಮಣ್, ನರಸಿಂಹಮೂರ್ತಿ ಹಾಜರಿದ್ದರು.
ಶ್ರೀ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಕಾರ್ಯಕ್ರಮ
ನಗರದ ತಾಲ್ಲೂಕು ಕಚೇರಿ ಪಕ್ಕದಲ್ಲಿರುವ ಕಂದಾಯ ಭವನದ ಆವರಣದಲ್ಲಿ ಶುಕ್ರವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಶ್ರೀ ಮಡಿವಾಳ ಮಾಚಿದೇವರ ಎರಡನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಹಿಂದುಳಿದ ಹಾಗೂ ಶ್ರಮಜೀವಿ ವರ್ಗದ ಸಮಾನತೆಗೆ ಸಾಮಾಜಿಕ ಕ್ರಾಂತಿ ಮಾಡಿದವರಲ್ಲಿ ಮಾಚಿದೇವ ಪ್ರಮುಖರು. ಮೇಲು ಕೀಳು, ಬಡವರು, ಸಾಮಾಜಿಕ ಬಹಿಷ್ಕಾರ ಹಾಗೂ ಶೋಷಣೆಗೆ ಒಳಗಾದವರ ಬಗ್ಗೆ ಚಿಂತಿಸಿ ವ್ಯಕ್ತಿ ವ್ಯಕ್ತಿಗಳ ಬಗ್ಗೆ ಇರುವ ಅಂತರವನ್ನು ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದರು ಎಂದು ಅವರು ತಿಳಿಸಿದರು.
ಆಧ್ಯಾತ್ಮಿಕ ಪ್ರವೃತ್ತಿಯ ಮೂಲಕ, ಜನರಲ್ಲಿ ಭಕ್ತಿಪ್ರಧಾನ ಚಿಂತನೆಗಳನ್ನು ತುಂಬಿಸಿದ ಅವರು ಮೂರು ಲಕ್ಷ ಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದಾರೆ. ಶರಣರ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಂಡು ಸಮಾಜದ ತಳಮಟ್ಟದ ಜನರನ್ನು ಮೇಲೆತ್ತುವ ಕಾಯಕಕ್ಕಾಗಿ ಅಹಿಂಸೆ ತತ್ವವನ್ನು ಅಳವಡಿಸಿಕೊಂಡ ಅವರ ವಿಶಾಲ ಮನೋಭಾವ ಸರ್ವರಿಗೂ ಮಾದರಿ. ಕಲ್ಯಾಣದ ಕ್ರಾಂತಿಯ ಸಂದರ್ಭದಲ್ಲಿ ಶರಣರ ವಚನಸಾಹಿತ್ಯವನ್ನು ನಾಶಪಡಿಸುವ ಪ್ರಯತ್ನ ತಡೆದ ಮಾಚಿದೇವ ವಚನಸಾಹಿತ್ಯವನ್ನು ಬೆನ್ನ ಮೇಲೆ, ತಲೆಯ ಮೇಲೆಯೇ ಹೊತ್ತು ಹೋರಾಡಿದರು. ಶರಣರ ವಚನಸಾಹಿತ್ಯದ ರಕ್ಷಣೆಗಾಗಿ ಹೋರಾಡಿದ ಮಾಚಿದೇವರ ಜಯಂತಿಯನ್ನು ಎಲ್ಲೆಡೆ ಶ್ರದ್ಧೆಯಿಂದ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.
ತಹಸೀಲ್ದಾರ್ ಅಜಿತ್‌ಕುಮಾರ್ ರೈ ಮಾತನಾಡಿ, ಸರ್ವರಿಗೂ ಸಮಪಾಲು -ಸಮಬಾಳು ಒದಗಿಸಲು ಬಸವ- ಮಾಚಿದೇವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು. ಶರಣರ ಅಗ್ರಗಣ್ಯ ಬಳಗದಲ್ಲಿ ‘ಮಡಿವಾಳ ಮಾಚಿದೇವ’ ಪ್ರಮುಖರು ಎಂದರು.
ಮುಖ್ಯ ಭಾಷಣಕಾರ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಎಂ.ದೇವರಾಜ್ ಮಾತನಾಡಿ, ಶರಣರ ಬಟ್ಟೆಗಳನ್ನು ಶುಚಿ ಮಾಡುವುದು ಮಾಚಿದೇವರ ಕಾಯಕ. ವೀರನಿಷ್ಠೆಯ ಶರಣನೀತ. ವಿಜಾಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ದೇವರ ಹಿಪ್ಪರಗಿಯಲ್ಲಿ ಪರುವತಯ್ಯ –ಸುಜ್ಞಾನವ್ವ ದಂಪತಿಗಳ ಪುತ್ರ. ಇವರ ಕಾರ್ಯಕ್ಷೇತ್ರ ಕಲ್ಯಾಣ. ಆರಾಧ್ಯದೈವ ಕಲ್ಲಿನಾಥ. ಕಾವ್ಯ ಪುರಾಣಗಳಲ್ಲಿ ಇವರನ್ನು ವೀರಭದ್ರನ ಅವತಾರವೆಂದು ಬಣ್ಣಿಸಲಾಗಿದೆ. ಶಾಸನ ಶಿಲ್ಪಗಳಲ್ಲಿಯೂ ಇವರ ಕುರಿತಾಗಿ ಮಾಹಿತಿಯಿದೆ. ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಅತಿ ಮಹತ್ವದ್ದು ಎಂದು ಮಾಚಿದೇವರ ಜೀವನದ ಘಟನೆಗಳನ್ನು, ವಚನಸಾಹಿತ್ಯವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಸಮುದಾಯದ ಹಿರಿಯ ಮುಖಂಡರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ರಾಜ್ಯ ಮಡಿವಾಳ ಸಂಘದ ಉಪಾಧ್ಯಕ್ಷ ಆರ್.ವಿ.ರಾಜಣ್ಣ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ನಗರಸಭೆ ಅಧ್ಯಕ್ಷ ಅಫ್ಸರ್‌ಪಾಷ, ಪೌರಾಯುಕ್ತ ಜಿ.ಎನ್.ಚಲಪತಿ, ಮಡಿವಾಳ ಯುವಕ ಸಂಘದ ಅಧ್ಯಕ್ಷ ಎನ್.ರಾಜು, ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎನ್.ಎನ್.ಮುರಳೀಧರ, ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಓಬಣ್ಣ, ಎಸ್.ಎಂ.ಕೃಷ್ಣಪ್ಪ, ಶ್ರೀನಿವಾಸ್, ಚಿಕ್ಕಮುನಿಯಪ್ಪ ಹಾಜರಿದ್ದರು.
ನೀರಿಗಾಗಿ ಒತ್ತಾಯಿಸಿ ನಾರಾಯಣದಾಸರಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಗ್ರಾಮದಲ್ಲಿ ಕೊಳವೆ ಬಾವಿ ಕೊರೆಸಬೇಕು ಇಲ್ಲವಾದಲ್ಲಿ ಈ ಹಿಂದಿನಂತೆ ಖಾಸಗಿ ಕೊಳವೆಬಾವಿ ಹಾಗೂ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಬೇಕು ಎಂದು ಒತ್ತಾಯಿಸಿ ನಾರಾಯಣದಾಸರಹಳ್ಳಿ ಗ್ರಾಮಸ್ಥರು ಚೀಮಂಗಲ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂಭಾಗ ಶುಕ್ರವಾರ ಪ್ರತಿಭಟಿಸಿದರು.
ತಾಲ್ಲೂಕಿನ ಚೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾರಾಯಣದಾಸರಹಳ್ಳಿ ಗ್ರಾಮದಲ್ಲಿ ಕಳೆದ ನಾಲ್ಕು ವರ್ಷಗಳಿಂದ ನೀರಿನ ತೊಂದರೆಯಿದ್ದು ಖಾಸಗಿ ಕೊಳವೆಬಾವಿ ಹಾಗೂ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿತ್ತು.
ಆದರೆ ಇದೀಗ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ರಾಜಕೀಯ ಕುತಂತ್ರದಿಂದ ಗ್ರಾಮಕ್ಕೆ ಸರಬರಾಜು ಮಾಡುತ್ತಿದ್ದ ಖಾಸಗಿ ಕೊಳವೆಬಾವಿ ಹಾಗು ಟ್ಯಾಂಕರ್ ನೀರನ್ನು ನಿಲ್ಲಿಸಿದ್ದು ಜನರು ಸೇರಿದಂತೆ ದನಕರುಗಳು ಪರದಾಡುವಂತಾಗಿದೆ. ಕಳೆದ ೧೫ ದಿನಗಳಿಂದ ಗ್ರಾಮಕ್ಕೆ ಒಂದು ಹನಿ ನೀರು ಪೂರೈಸದ ಅಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ಸಾಕಷ್ಟು ಭಾರಿ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಭೇಟಿ ನೀಡಿ ಗಮನಕ್ಕೆ ತಂದಿದ್ದೇವಾದರೂ ಪಿಡಿಓ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಇಂದು ಪಂಚಾಯಿತಿ ಕಾರ್ಯಾಲಯದ ಮುಂದೆ ಪ್ರತಿಭಟನೆ ಮಾಡಲು ಗ್ರಾಮಸ್ಥರೆಲ್ಲಾ ಬಂದರೆ ಪಿಡಿಓ ಸೇರಿದಂತೆ ಜಲಗಾರರು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿರದೇ ಉದ್ದೇಶಪೂರ್ವಕವಾಗಿ ಹೊರಗಡೆ ಹೋಗಿದ್ದಾರೆ. ಕೂಡಲೇ ಅಧಿಕಾರಿಗಳು ಗ್ರಾಮಕ್ಕೆ ನೀರು ಪೂರೈಸಲು ಅಗತ್ಯ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಪಂಚಾಯಿತಿ ಅಧಿಕಾರಿಗಳ ವಿರುದ್ದ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮಿನಾರಾಯಣ, ಗ್ರಾಮಸ್ಥರಾದ ಮುನಿರಾಜು, ಮಂಜುನಾಥ್, ವೆಂಕಟಪ್ಪ, ನಾರಾಯಣಪ್ಪ, ಚಿಕ್ಕಮುನಿಯಪ್ಪ, ನಾಗರತ್ನಮ್ಮ, ಶಾಂತಮ್ಮ ಹಾಜರಿದ್ದರು.
ಶಿವಕುಮಾರಸ್ವಾಮೀಜಿ ಅವರ ೧೧ನೇ ದಿನದ ಪುಣ್ಯತಿಥಿ
ಸಿದ್ದಗಂಗಾಮಠದ ಶಿವಕುಮಾರಸ್ವಾಮೀಜಿ ಅವರ ೧೧ನೇ ದಿನದ ಪುಣ್ಯತಿಥಿಯ ಅಂಗವಾಗಿ ಗುರುವಾರ ತಾಲ್ಲೂಕಿನ ಹಲವೆಡೆ ಅನ್ನಸಂತರ್ಪಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ನಗರೇಶ್ವರಸ್ವಾಮಿ ದೇವಾಲಯ, ಭುವನೇಶ್ವರಿ ವೃತ್ತ, ದ್ಯಾವಪ್ಪನಗುಡಿ, ಚೀಮಂಗಲ, ಸುಗಟೂರು ಸೇರಿದಂತೆ ತಾಲ್ಲೂಕಿನ ಹಲವೆಡೆ ಶಿವಕುಮಾರಸ್ವಾಮೀಜಿ ಅವರ ಭಾವಚಿತ್ರವನ್ನು ಇಟ್ಟು ಪೂಜೆ ಸಲ್ಲಿಸಿದ ನಾಗರಿಕರು, ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆಲ್ಲರಿಗೂ ಪ್ರಸಾದದ ರೂಪದಲ್ಲಿ ಅನ್ನಸಂತರ್ಪಣೆ ಮಾಡಿದರು.
ನೆರೆಯ ಚಿಂತಾಮಣಿ ತಾಲ್ಲೂಕಿನಲ್ಲಿ ವಿಷಯುಕ್ತ ಪ್ರಸಾದ ಸೇವನೆ ಮಾಡಿ ಇಬ್ಬರು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅನ್ನಸಂತರ್ಪಣೆ ಮಾಡುತ್ತಿದ್ದ ಸ್ಥಳಗಳಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಸಾದಕ್ಕಾಗಿ ತಯಾರಿಸಿದ್ದ ಆಹಾರವನ್ನು ಪರೀಕ್ಷೆಗೆ ಕಳುಹಿಸಿಕೊಟ್ಟರು.
ಜನರು ಭಕ್ತಿಭಾವದಿಂದ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಿರ್ಭೀತಿಯಿಂದ ಪ್ರಸಾದ ಸ್ವೀಕರಿಸಿದರು.
ಶಿವಕುಮಾರಸ್ವಾಮೀಜಿಗಳಲ್ಲಿದ್ದ ಪರೋಪಕಾರವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಾಗಿದೆ. ಅವರ ಅನ್ನದಾಸೋಹದ ಜೊತೆಗೆ ಅಕ್ಷರ ದಾಸೋಹವನ್ನು ನೀಡಿ ಸಮಾಜದಲ್ಲಿ ಲಕ್ಷಾಂತರ ಜ್ಯೋತಿಗಳನ್ನು ಬೆಳಗಿಸಿದ್ದಾರೆ ಅವರ ಮಾರ್ಗದರ್ಶನದಲ್ಲಿ ನಡೆಯುವುದು ನಮ್ಮ ಕರ್ತವ್ಯವಾಗಬೇಕು ಎಂದು ಭಕ್ತರು ಮೆಚ್ಚುಗೆ ಹಾಗೂ ಬದ್ಧತೆಯನ್ನು ವ್ಯಕ್ತಪಡಿಸಿದರು.
ಕುಷ್ಠ ಅರಿವು ಆಂದೋಲನ, ಜಾಥಾ
ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸ್ವರ್ಶ್ ಕುಷ್ಠ ಅರಿವು ಆಂದೋಳನ ಕಾರ್ಯಕ್ರಮದ ಅಂಗವಾಗಿ ಬುಧವಾರ ನಡೆದ ಜಾಥಾಗೆ ಚಾಲನೆ ನೀಡಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ ಕುಮಾರ್ ಮಾತನಾಡಿದರು.
ಹಿಂದೆ ಕುಷ್ಠ ಪೀಡಿತರನ್ನು ಕೇವಲವಾಗಿ ಕಾಣಲಾಗುತ್ತಿತ್ತಲ್ಲದೆ, ದೂರ ಇರಿಸಲಾಗುತ್ತಿತ್ತು. ಆದರೆ, ಈಗ ಅಂತಹ ಪರಿಸ್ಥಿತಿ ಇಲ್ಲ. ಜನರಲ್ಲಿ ಅರಿವು ಮೂಡಿದೆಯಾದರೂ, ಕಾಯಿಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಿಳಿವಳಿಕೆ ಮೂಡಿಸಬೇಕಾದ ಅವಶ್ಯಕತೆ ಇದೆ ಎಂದು ಅವರು ತಿಳಿಸಿದರು.
ಕುಷ್ಠ ರೋಗಾಣುವಿನಿಂದ ಹರಡುವ ಕಾಯಿಲೆ. ಪ್ರಾರಂಭದಲ್ಲೆ ಚಿಕಿತ್ಸೆ ಪಡೆದರೆ, ಇದನ್ನು ಗುಣಪಡಿಸಬಹುದಾಗಿದೆ. ಅಂಗವಿಕಲರಾಗುವುದನ್ನು ತಪ್ಪಿಸಬಹುದಾಗಿದೆ. ಕುಷ್ಠ ರೋಗ ಆವರಿಸಿದವರಿಗೆ ಬಹು ಔಷಧ ಚಿಕಿತ್ಸೆ ಮೂಲಕ ಗುಣಪಡಿಸಲು ಅವಕಾಶವಿದೆ. ಜತೆಗೆ, ಅಂಗವಿಕಲರಾದರೆ ಪುನಃಶ್ಚೇನಗೊಳಿಸಲು ಅವಕಾಶವಿದೆ. ಈ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ ಅವರು, ಮೈಮೇಲೆ ಮಚ್ಚೆ ಕಂಡುಬಂದ ಕೂಡಲೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ಸಾರ್ವಜನಿಕರಲ್ಲಿ ಕುಷ್ಟರೋಗದ ಬಗ್ಗೆ ಇರುವ ಮೂಡನಂಬಿಕೆಯನ್ನು ತೊಲಗಿರುವ ಉದ್ದೇಶದಿಂದ ಜನವರಿ ೩೦ ರಿಂದ ಫೆಬ್ರುವರಿ ೧೩ ರವರೆಗೆ ತಾಲ್ಲೂಕಿನೆಲ್ಲೆಡೆ ಸ್ವರ್ಶ್ ಕುಷ್ಠ ಅರಿವು ಆಂದೋಲನವನ್ನು ಹಮ್ಮಿಕೊಂಡಿದ್ದೇವೆ. ತಾಲ್ಲೂಕಿನ ಎಲ್ಲಾ ಗ್ರಾಮಗಳೂ ಹಾಗೂ ನಗರವನ್ನು ಆಶಾ ಕಾರ್ಯಕರ್ತೆಯರು ಸರ್ವೆ ನಡೆಸಿದ್ದಾರೆ. ೧೧ ಕುಷ್ಠರೋಗ ಚಿಹ್ನೆ ಇರುವವರು ಪತ್ತೆಯಾಗಿದ್ದಾರೆ. ರೋಗವನ್ನು ಗುಣಪಡಿಸುವ ಬಹುಔಷಧಿ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ದೊರೆಯುತ್ತದೆ. ಚಿಕಿತ್ಸೆ ಅವಧಿ ಕೇವಲ ೬ ತಿಂಗಳು ಅಥವಾ ೧೨ ತಿಂಗಳು. ರೋಗದ ಲಕ್ಷಣದ ಅನುಗುಣವಾಗಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದಾಗಿದ್ದು, ಪ್ರಾರಂಬಿಕ ಹಂತದಲ್ಲಿ ಗುರ್ತಿಸಿ ಕ್ರಮ ಬದ್ದ ಚಿಕಿತ್ಸೆ ಪಡೆದಲ್ಲಿ ಅಂಗವಿಕಲತೆ ತಡೆಗಟ್ಟಬಹುದು ಎಂದು ತಿಳಿಸಿದರು.
ನಗರಸಭಾ ಅಧ್ಯಕ್ಷ ಅಫ್ಸರ್ ಪಾಷಾ ಮಾತನಾಡಿ, ಕುಷ್ಠ ಮುಕ್ತ ಭಾರತ ಮಹಾತ್ಮಾ ಗಾಂದೀಜಿಯರವರ ಕನಸಾಗಿದ್ದು, ಎಲ್ಲರೂ ಸೇರಿ ಗಾಂಧೀಜಿಯವರ ಕನಸನ್ನು ನನಸು ಮಾಡೋಣ. ರೋಗ ಮುಕ್ತ ಸಮಾಜಕ್ಕೆ ಎಲ್ಲರೂ ಸಹಕರಿಸಿ ಎಂದು ಹೇಳಿದರು.
ಸ್ವರ್ಶ್ ಕುಷ್ಠ ಅರಿವು ಆಂದೋಳನ ಕಾರ್ಯಕ್ರಮದಲ್ಲಿ ಕುಷ್ಠ ರೋಗದ ವಿರುದ್ಧ ಪ್ರತಿಜ್ಞಾವಿಧಿಯನ್ನು ಭೋದಿಸಲಾಯಿತು.
ಶಾಲಾ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತರು ಮತ್ತು ಆಸ್ಪತ್ರೆಯ ಸಿಬ್ಬಂದಿ ನಗರದ ಪ್ರಮುಖ ಬೀದಿಗಳಲ್ಲಿ ಜಾಥ ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಡಾ.ವಿಜಯ್, ಹಿರಿಯ ಆರೋಗ್ಯ ಸಹಾಯಕಿ ಮುನಿಲಕ್ಷಮ್ಮ, ಆಸ್ಪತ್ರೆಯ ಸಿಬ್ಬಂದಿ ವಿಜಯ, ಲೋಕೇಶ್ ಹಾಜರಿದ್ದರು.
ಜೆಡಿಎಸ್ ಮಹಾ ಅಧಿವೇಶನಕ್ಕೆ ತೆರಳಿದ ಕಾರ್ಯಕರ್ತರು
ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟಿಸಿ, ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಬೆಂಗಳೂರಿನಲ್ಲಿ ಜೆಡಿಎಸ್ ಮಹಾ ಅಧಿವೇಶನ ಆಯೋಜಿಸಿದ್ದಾರೆ. ಶಿಡ್ಲಘಟ್ಟ ಕ್ಷೇತ್ರದಿಂದ ಜೆಡಿಎಸ್ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ತೆರಳುತ್ತಿರುವುದಾಗಿ ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ತಾದೂರು ಗ್ರಾಮದಿಂದ ಐವತ್ತಕ್ಕೂ ಹೆಚ್ಚು ಸಂಖ್ಯೆಯ ಬಸ್ ಗಳಲ್ಲಿ ಹಾಗೂ ಖಾಸಗಿ ವಾಹನಗಳಲ್ಲಿ ಜೆಡಿಎಸ್ ಮಹಾ ಅಧಿವೇಶನಕ್ಕೆ ಬುಧವಾರ ತೆರಳಿದ ಕಾರ್ಯಕರ್ತರಿಗೆ ಶುಭ ಕೋರಿ ಅವರು ಮಾತನಾಡಿದರು.
ಪ್ರಸ್ತುತ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಎಸೆಯಬಲ್ಲ ಪ್ರಮುಖ ಪ್ರತಿಪಕ್ಷ ನಾಯಕರಾದ ಮಾಜಿ ಪ್ರಧಾನಿ ದೇವೇಗೌಡರು ಬೇರುಮಟ್ಟದಿಂದ ಜೆಡಿಎಸ್ ಸದೃಢಗೊಳಿಸುತ್ತಿದ್ದಾರೆ. ಶಿಡ್ಲಘಟ್ಟ ಕ್ಷೇತ್ರದಿಂದ ನಿಷ್ಠಾವಂತ ಕಾರ್ಯಕರ್ತರು, ಮುಖಂಡರು, ಜನಪ್ರತಿನಿಧಿಗಳು ದೇವೇಗೌಡರ ಮಾರ್ಗದರ್ಶನದಂತೆ ಚುನಾವಣೆಯನ್ನು ಎದುರಿಸಲು ಸಿದ್ಧವಿದ್ದಾರೆ. ಪಕ್ಷದ ಗೆಲುವಿಗೆ ಶ್ರಮಿಸುವ ಕಾರ್ಯಕರ್ತರ ಪಡೆ ಅಪಾರ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಭಾಗಿಯಾಗುತ್ತಿರುವುದಾಗಿ ಅವರು ಹೇಳಿದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದರೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ ಪರವಾಗಿ ಶ್ರಮಿಸುತ್ತಿದ್ದಾರೆ. ಸಾಲ ಮನ್ನಾ ಘೋಷಣೆ ಮಾಡಿದ್ದಾರೆ. ಅನೇಕ ರೈತ ಪರ, ಶ್ರಮಿಕರ ಪರ, ಮಹಿಳೆಯರ ಪರವಾದ ಯೋಜನೆಗಳನ್ನು ಸಹ ಹಮ್ಮಿಕೊಂಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿ ಗೆಲ್ಲಿಸಬೇಕೆಂದು ನುಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ಮುಂದಿನ ಲೋಕಸಭೆ ಚುನಾವಣೆ ಕಾರ್ಯತಂತ್ರ ಹಾಗೂ ಪಕ್ಷ ಸಂಘಟನೆ ಬಗ್ಗೆ ಸಮಾವೇಶದಲ್ಲಿ ಚರ್ಚೆ ನಡೆಯಲಿದೆ. ಕೆಲವೊಂದು ನಿರ್ಣಯ ಕೈಗೊಳ್ಳಲಾಗುತ್ತದೆ. ಶಿಡ್ಲಘಟ್ಟ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಸಕ್ರಿಯವಾಗಿದೆ. ಕ್ಷೇತ್ರದ ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್, ಪಕ್ಷದ ಕಾರ್ಯಕರ್ತರ ಬೆನ್ನೆಲುಬಾಗಿದ್ದಾರೆ. ಅಭಿವೃದ್ಧಿಯ ದೃಷ್ಟಿಯಿಂದ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜೆ.ಡಿ.ಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಹೇಳಿದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಸದಸ್ಯ ರಾಜಶೇಖರ್, ಹುಜಗೂರು ರಾಮಣ್ಣ, ಆದಿಲ್, ಲಕ್ಷ್ಮಿನಾರಾಯಣ, ತಾದೂರು ರಘು, ರಾಜಶೇಖರ್, ಧರ್ಮೇಂದ್ರ, ಆರ್.ಎ.ಉಮೇಶ್, ಯೂಸುಫ್, ನಯಾಜ್, ಸುಹೇಲ್, ಅಮೀರ್ ಜಾನ್, ಶ್ರೀನಿವಾಸಗೌಡ ಹಾಜರಿದ್ದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರಿಂದ ಪ್ರತಿಭಟನೆ
ತಾಲ್ಲೂಕು ಕಚೇರಿಯ ನೋಂದಣಾಧಿಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ಹಾಗೂ ಮಧ್ಯವರ್ತಿಗಳಿಂದ ಲೂಟಿ ನಡೆಯುತ್ತಿದ್ದು ರೈತರಿಗೆ ತೊಂದರೆಯಾಗುತ್ತಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಮಂಗಳವಾರ ಪ್ರತಿಭಟಿಸಿದರು.
ನಗರದಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ ರೈತರು ತಾಲ್ಲೂಕು ಕಚೇರಿಯ ಮುಂದೆ ಘೋಷಣೆಗಳನ್ನು ಕೂಗಿದರು.
ತಪ್ಪು ಮಾಡುವ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು. ಭೂಮಾಪನ ಇಲಾಖೆಯಲ್ಲಿ ರೈತರಿಗೆ ತ್ವರಿತವಾಗಿ ಕೆಲಸಗಳು ಆಗುತ್ತಿಲ್ಲ. ರೆಕಾರ್ಡ್ ರೂಮಿನಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ದಂಧೆ ಹೆಚ್ಚಾಗಿದ್ದು ಕಡತಗಳು ಮಾಯವಾಗುತ್ತಿವೆ. ಸಾಮಾನ್ಯ ರೈತರು ಬಂದರೆ ದಾಖಲೆಗಳು ಸಿಗುತ್ತಿಲ್ಲ. ಸುಖಾ ಸುಮ್ಮನೆ ಅಲೆದಾಡಿಸುತ್ತಾರೆ. ಆರ್.ಆರ್.ಟಿ ಕಚೇರಿಯಲ್ಲಿ ಅಧಿಕಾರಿಗಳು ಸಾಮಾನ್ಯ ಜನರನ್ನು ಅಲೆದಾಡಿಸುತ್ತಾರೆ. ತಾಲ್ಲೂಕಿನ ಕೆರೆಗಳನ್ನು ಸಂರಕ್ಷಣೆ ಮಾಡುವುದರಲ್ಲಿ ತಾಲ್ಲೂಕು ಆಡಳಿತ ವಿಫಲವಾಗಿದೆ. ಕೇವಲ ಬೆರಳೆಣಿಕೆ ಕೆರೆಗಳನ್ನು ಸರ್ವೆ ಮಾಡಿ ಕೆಲಸ ನಿಲ್ಲಿಸಿದ್ದಾರೆ. ಜಾಲಿಮರಗಳನ್ನು ತೆಗೆಯುವುದಕ್ಕೆ ಅರಣ್ಯ ಇಲಾಖೆ ಕಡೆ ಬೆರಳು ತೋರಿಸಿ ಕಾಲ ಕಳೆಯುತ್ತಿದ್ದಾರೆ. ಕೆರೆ ಒತ್ತುವರಿ ಮತ್ತು ರಾಜ ಕಾಲುವೆ ಒತ್ತುವರಿ ತೆರವುಗೊಳಿಸಿಲ್ಲ ಎಂದು ಆರೋಪಿಸಿದರು.
ತಾಲ್ಲೂಕನ್ನು ಬರಗಾಲ ಪೀಡಿತವೆಂದು ಘೋಷಿಸಿರುವುದರಿಂದ ನೀರಿನ ಸಮಸ್ಯೆ ನೀಗಿಸಬೇಕು ಮತ್ತು ಪಂಚಾಯಿತಿಗೆ ಒಂದು ಗೋಶಾಲೆ ನಿರ್ಮಿಸಬೇಕು. ಬರ ಪರಿಹಾರದ ಹಣ ಒಂದು ಹೆಕ್ಟೇರಿಗೆ ೨೫ ಸಾವಿರದಂತೆ ಕೊಡಬೇಕು ಎಂದು ಆಗ್ರಹಿಸಿದರು.
ರೈತಸಂಘದ ಸದಸ್ಯರು ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರಿಗೆ ಮನವಿಯನ್ನು ಸಲ್ಲಿಸಿದರು. ಮನವಿ ಸ್ವೀಕರಿಸಿ ಅವರು ರೈತರ ಬೇಡಿಕೆಗಳನ್ನು ಅತಿ ಶೀಘ್ರವಾಗಿ ಈಡೇರಿಸುವುದಾಗಿ ಭರವಸೆ ನೀಡಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಿನಾರಾಯಣರೆಡ್ಡಿ, ಉಪಾಧ್ಯಕ್ಷ ಬಿ.ಕೆ.ಮುನಿಕೆಂಪಣ್ಣ, ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ, ರಾಜ್ಯ ವಿಭಾಗಮಟ್ಟದ ಕಾರ್ಯದರ್ಶಿ ಪಾರ್ವತಮ್ಮ, ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಪ್ರತೀಶ್, ರಘುನಾಥರೆಡ್ಡಿ, ಬಾಜಿಸಾಬ್, ವರದರಾಜ್, ಶಿವಶಂಕರರೆಡ್ಡಿ, ಕದಿರೇಗೌಡ, ಆಂಜಿನಪ್ಪ, ಆನೂರು ದೇವರಾಜ್, ಬೈರಣ್ಣ, ಅರುಣ್ ಕುಮಾರ್, ಶಂಕರನಾರಾಯಣ, ಗೋವಿಂದಪ್ಪ, ವೆಂಕಟರೆಡ್ಡಿ, ಪ್ರವೀಣ್, ಗಡಿಮಿಂಚೇನಹಳ್ಳಿ ಬಾಬು, ಚನ್ನೇಗೌಡ, ಜಗನ್ನಾಥ, ಶ್ರೀಧರ್, ಶ್ರೀನಿವಾಸ್, ರಮೇಶ್, ಶ್ರೀಕೃಷ್ಣಪ್ಪ ಹಾಜರಿದ್ದರು.
ಶ್ರೀ ವಿರಾಟ್ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ
ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ವಿಶ್ವಕರ್ಮ ಸಮುದಾಯ ಸಂಘಟಿತರಾಗುವ ಮೂಲಕ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಶ್ರೀ ವಿರಾಟ್ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಮುರಳಿ ಮೋಹನ್ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಕ್ರಾಸ್ ಬಳಿ ಇರುವ ಶ್ರೀ ಮುತ್ಯಾಲಮ್ಮ ದೇವಾಲಯದಲ್ಲಿ ಸೋಮವಾರ ಶ್ರೀ ವಿರಾಟ್ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನ ವಾಸ್ತುಶಿಲ್ಪ ಹಾಗೂ ಕಲೆಯಲ್ಲಿ ವಿಶ್ವಕರ್ಮ ಸಮುದಾಯದ ಪಾತ್ರ ಮಹತ್ತರವಾಗಿದೆ. ತಮ್ಮ ಸುತ್ತಲಿನ ಪರಿಸರದ ಸೊಬಗನ್ನು ಹೆಚ್ಚಿಸುವ ವಿಶ್ವಕರ್ಮ ಸಮುದಾಯದ ಜನರು ವೈಯಕ್ತಿಕವಾಗಿ ತೊಂದರೆಯಲ್ಲೇ ಜೀವನ ಸಾಗಿಸುತ್ತಿದ್ದಾರೆ. ವಿಶ್ವಕರ್ಮ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ಬರುವ ಸಲುವಾಗಿ ತಮ್ಮ ಮಕ್ಕಳನ್ನು ಶಿಕ್ಷಿತರನ್ನಾಗಿಸಲು ಮುಂದಾಗಬೇಕು ಎಂದರು.
ಸಂಘದ ಗೌರವಾಧ್ಯಕ್ಷ ದೇವೆಂದ್ರಚಾರಿ, ಸುಭ್ರಮಣ್ಯಚಾರಿ, ಉಪಾಧ್ಯಕ್ಷ ವೀರಭದ್ರ, ಕಾರ್ಯದರ್ಶಿ ಮುರಳಿಧರ್, ಖಜಾಂಚಿ ಬಸವರಾಜಾಚಾರಿ, ಪ್ರಧಾನ ಕಾರ್ಯದರ್ಶಿ ಸುಬ್ಬಾಚಾರಿ, ಜೆ.ಆರ್.ಚಿಕ್ಕಬಸವರಾಜು, ಗಾಯಿತ್ರಮ್ಮ, ರಮಾದೇವಿ, ಸುಧಾ, ಶ್ರೀದೇವಿ ಹಾಜರಿದ್ದರು.
ಆಕ್ಸ್ ಫರ್ಡ್ ಪ್ರೈಮರಿ ಮತ್ತು ಹೈಯರ್ ಪ್ರೈಮರಿ ಶಾಲೆಯ ವಾರ್ಷಿಕೋತ್ಸವ ಸಮಾರಂಭ
ತಾಲ್ಲೂಕಿನ ಅಂಕತಟ್ಟಿ ಗೇಟ್ ನಲ್ಲಿರುವ ಆಕ್ಸ್ ಫರ್ಡ್ ಪ್ರೈಮರಿ ಮತ್ತು ಹೈಯರ್ ಪ್ರೈಮರಿ ಶಾಲೆಯ ಆವರಣದಲ್ಲಿ ಈಚೆಗೆ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಕ್ಕಳು ನೃತ್ಯ ಹಾಗೂ ಸಾಂಸ್ಕೃತಿಕ ಪ್ರದರ್ಶನ ನಡೆಯಿತು.
ಬಣ್ಣ ಬಣ್ಣದ ಉಡುಗೆಗಳನ್ನು ತೊಟ್ಟು, ಪದೇ ಪದೇ ಬದಲಾಗುತ್ತಿದ್ದ ಬಣ್ಣದ ಲೈಟುಗಳ ಎದುರಿನಲ್ಲಿ ಕುಣಿದಾಡಿದ ಮಕ್ಕಳು, ಮಕ್ಕಳ ನೃತ್ಯಗಳನ್ನು ನೋಡಿ ಎಲ್ಲಾ ಚಿಂತೆಗಳನ್ನು ಪೋಷಕರು ಮರೆತು ಸಿಳ್ಳೆ ಹಾಕುತ್ತಾ ಚಪ್ಪಾಳೆ ತಟ್ಟುತ್ತಾ ಮಕ್ಕಳನ್ನು ಪ್ರೋತ್ಸಾಹಿಸಿದರು.
“ಮಕ್ಕಳ ಕಲಿಕೆಗೆ ಪೂರಕವಾಗಿರುವ ವಾತಾವರಣ ನಿರ್ಮಾಣ ಮಾಡಿಕೊಡುವ ಹೊಣೆಗಾರಿಕೆ ಪ್ರತಿಯೊಬ್ಬ ತಂದೆ, ತಾಯಿಯರ ಮೇಲಿದೆ” ಎಂದು ಜೇಸಿಐ ನಿಕಟ ಪೂರ್ವ ಅದ್ಯಕ್ಷ ಜನಾರ್ದನ ಹೇಳಿದರು.
“ಮಕ್ಕಳು ಕಷ್ಟಪಟ್ಟು ಕಲಿಯದಂತೆ ಇಷ್ಟಪಟ್ಟು ಕಲಿಯುವಂತಹ ವಾತಾವರಣವನ್ನು ನಿರ್ಮಾಣ ಮಾಡಿಕೊಡಬೇಕು. ಪ್ರಾಥಮಿಕ ಹಂತದಲ್ಲಿ ಏನನ್ನು ಕಲಿಯುತ್ತಾರೋ ಅದೇ ಶಿಕ್ಷಣ ಅವರಿಗೆ ಭವಿಷ್ಯದಲ್ಲಿ ಉತ್ತಮ ದಾರಿಯಾಗಲಿದೆ ಆದ್ದರಿಂದ ಮಕ್ಕಳ ಬಗ್ಗೆ ಜಾಗ್ರತೆ ವಹಿಸಬೇಕು” ಎಂದರು.
ಆಕ್ಸ್ ಫರ್ಡ್ ಪ್ರೈಮರಿ ಮತ್ತು ಹೈಯರ್ ಪ್ರೈಮರಿ ಶಾಲೆಯ ಅಧ್ಯಕ್ಷ ಕೆ.ಪಿ. ಪ್ರಕಾಶ್ ಮಾತನಾಡಿ, “ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾಗಿರುವ ಶ್ರಮವನ್ನು ನಾವು ಹಾಕುತ್ತಿದ್ದೇವೆ. ಶಿಕ್ಷಕರಿಂದ ಮಕ್ಕಳ ಕಲಿಕೆ ಹಾಗೂ ದೈಹಿಕ ಬೆಳವಣಿಗೆಗೆ ಬೇಕಾಗುವಂತಹ ಎಲ್ಲವನ್ನೂ ಶಿಕ್ಷಕರು ಮಾಡುತ್ತಿದ್ದಾರೆಯೇ ಎನ್ನುವುದನ್ನು ಶಿಕ್ಷಣ ಸಂಸ್ಥೆ ಸದಾ ಪರಿಶೀಲನೆ ಮಾಡುತ್ತಿದೆ. ಪೋಷಕರೂ ಕೂಡಾ ಶಿಕ್ಷಕರೊಂದಿಗೆ ಉತ್ತಮ ಭಾಂಧವ್ಯವನ್ನು ವೃದ್ಧಿಸಿಕೊಂಡು ಅವರ ಕಲಿಕೆಯ ಗುಣಮಟ್ಟದ ಬಗ್ಗೆ ಸಲಹೆ ಸೂಚನೆಗಳನ್ನು ನೀಡುವುದರ ಮೂಲಕ ಅವರ ಏಳಿಗೆಗೆ ಸಹಕರಿಸಬೇಕು” ಎಂದರು.
ಟ್ರಸ್ಟಿಗಳು, ಶಾಲಾ ಸಿಬ್ಬಂದಿ, ಪೋಷಕರು ಹಾಜರಿದ್ದರು.
ವೆಂಕಟೇಶ್ವರ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಎನ್.ಎಸ್.ಎಸ್ ಶಿಬಿರ ಉದ್ಘಾಟನೆ
ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಯನ್ನರಿತು ಬದುಕಿನೊಡನೆ ನೇರ ಸಂಪರ್ಕವಿಟ್ಟುಕೊಳ್ಳಬೇಕು. ಈ ಉದ್ದೇಶದಿಂದಲೇ ಹಳ್ಳಿಗಳಿಗೆ ವಿದ್ಯಾರ್ಥಿಗಳನ್ನು ಕರೆತಂದು ಎನ್.ಎಸ್.ಎಸ್ ಶಿಬಿರ ಆಯೋಜಿಸಲಾಗುತ್ತಿದೆ ಎಂದು ವೆಂಕಟೇಶ್ವರ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಸುರೇಶ್ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿ ಆವರಣದಲ್ಲಿ ಸೋಮವಾರ ವೆಂಕಟೇಶ್ವರ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಆರು ದಿನಗಳ ಎನ್.ಎಸ್.ಎಸ್ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೇವೆಯ ಮೂಲಕ ಸಮಾಜದ ಅರಿವು ಮೂಡಿಸುವುದು ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಉದ್ದೇಶ. ಇದರಿಂದ ಸ್ವಯಂಸೇವಕರ ವ್ಯಕ್ತಿತ್ವ ವಿಕಸನವಾಗುತ್ತದೆ. ಸಮಾಜಸೇವೆಯ ಪ್ರಜ್ಞೆ ಜಾಗೃತಗೊಳ್ಳುತ್ತದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಂ.ಜಯರಾಮ್ ಮಾತನಾಡಿ, ಹಳ್ಳಿಗಳ ಉದ್ಧಾರದ ನೆಲೆಯಲ್ಲಿ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ನಗರದಲ್ಲಿ ಬೆಳೆದ ವಿದ್ಯಾರ್ಥಿಗಳು ಗ್ರಾಮದ ಜನಜೀವನದ ಪರಿಚಯ ಮಾಡಿಕೊಂಡು ಒಳ್ಳೆಯ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಸಾಮರಸ್ಯ, ಸಹಜೀವನ, ಸಹಬಾಳ್ವೆಯ, ಸಹಾಯದ ಮಹತ್ವವನ್ನು ಅರಿಯಬೇಕು. ಊರಿನ ಕೊಳೆಯನ್ನು ತೊಳೆಯುವುದಕ್ಕಿಂತ ಮಿಗಿಲಾಗಿ ಮನುಷ್ಯನ ಮನಸ್ಸಿನಲ್ಲಿರುವ ಕೊಳೆಯನ್ನು ನಾಶ ಮಾಡುವುದು ಪ್ರಮುಖವಾದುದು ಎಂದು ನುಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟು ಸ್ವಚ್ಛತೆ ಕಾರ್ಯವನ್ನು ನಡೆಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿಯಪ್ಪ, ಸದಸ್ಯರಾದ ಎ.ಎಂ.ತ್ಯಾಗರಾಜ್, ಬೈರಾರೆಡ್ಡಿ, ಪಿಡಿಒ ಅಂಜನ್ ಕುಮಾರ್, ಕಾರ್ಯದರ್ಶಿ ಶ್ರೀನಿವಾಸ್, ಕರವಸೂಲಿಗಾರ ಶ್ರೀನಿವಾಸ್, ರಾಜಣ್ಣ, ನರಸಿಂಹಮೂರ್ತಿ, ಕೃಷ್ಣಪ್ಪ, ವೆಂಕಟೇಶ್ವರ ಎಂಜಿನಿಯರಿಂಗ್ ಕಾಲೇಜಿನ ಜೋಷಿ, ಲೋಕೇಶ್ ಹಾಜರಿದ್ದರು.
ಅನಿವಾರ್ಯವಾಗಿ ಹೊಂದಿಕೊಂಡು ಸರ್ಕಾರ ನಡೆಸುತ್ತಿದ್ದೇವೆ – ಶಾಸಕ ವಿ.ಮುನಿಯಪ್ಪ
ಎಷ್ಟೇ ವೈರಿಗಳಾದರೂ ಚುನಾವಣೆಯನ್ನು ತಪ್ಪಿಸಬೇಕು ಎಂದು ಅನಿವಾರ್ಯವಾಗಿ ಎರಡೂ ಪಕ್ಷಗಳು ಸಂಧಾನ ಮಾಡಿಕೊಂಡಿದ್ದೇವೆ. ಸಿದ್ದರಾಮಯ್ಯ ಸರ್ಕಾರವಿದ್ದಾಗ ಪ್ರಕಟಿಸಿದ್ದ ಯೋಜನೆಗಳು ಈಗಲೂ ಮುಂದುವರೆದಿವೆ ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ ಪಶುಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆ, ಹಾಲು ಒಕ್ಕೂಟ ಶಿಡ್ಲಘಟ್ಟ ಶಿಬಿರ ಮತ್ತು ಬೋದಗೂರು ಹಾಲು ಉತ್ಪಾದಕರ ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ ಸೋಮವಾರ ನಡೆದ ಹದಿನೈದನೇ ಸುತ್ತಿನ ಕಾಲು ಬಾಯಿ ಜ್ವರ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಲಸಿಕೆಯಿಂದ ಮಾತ್ರ ಕಾಲು-ಬಾಯಿ ಜ್ವರ ರೋಗ ನಿಯಂತ್ರಣ ಸಾಧ್ಯ. ಈ ಹಿನ್ನೆಲೆಯಲ್ಲಿ ರೈತರ ಸಹಕಾರ ಅವಶ್ಯ. ಪ್ರತಿಯೊಬ್ಬರೂ ತಪ್ಪದೆ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಎಂದರು.
ಪಶುಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ ಮಾತನಾಡಿ, ಜನವರಿ ೨೮ ರಿಂದ ಫೆಬ್ರುವರಿ ೧೬ ರವರೆಗೂ ತಾಲ್ಲೂಕಿನಲ್ಲಿ ಕಾಲು ಬಾಯಿ ಜ್ವರ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾಲ್ಕು ತಂಡಗಳನ್ನಾಗಿ ವೈದ್ಯರು ವಿಂಗಡಿಸಿಕೊಂಡು ಎಲ್ಲಾ ಗ್ರಾಮಗಳಲ್ಲಿಯೂ ಹಸುಗಳಿಗೆ ಲಸಿಕೆ ಹಾಕಲಾಗುವುದು. ಕಾಲು ಬಾಯಿ ಜ್ವರ ನಿಯಂತ್ರಣಕ್ಕಾಗಿ ವರ್ಷಕ್ಕೆ ಎರಡು ಬಾರಿ ಲಸಿಕೆ ಹಾಕುತ್ತಿದ್ದು, ಪ್ರತಿಯೊಬ್ಬರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಎಂದು ಹೇಳಿದರು.
ಎ.ಪಿ.ಎಂ.ಸಿ ಉಪಾಧ್ಯಕ್ಷ ಬೆಳ್ಳೂಟಿ ವೆಂಕಟೇಶ್, ಕೋಚಿಮುಲ್ ಶಿಬಿರದ ಉಪವ್ಯವಸ್ಥಾಪಕ ಡಾ.ಚಂದ್ರಶೇಖರ್, ವಿಸ್ತರಣಾಧಿಕಾರಿ ಶಂಕರ್, ಡಾ.ಹರೀಶ್, ಡಾ.ಮಧು, ಚಂದ್ರೇಗೌಡ, ಆನೂರು ಸುರೇಶ್, ಮುನಿರಾಜು, ಬೋದಗೂರು ವೆಂಕಟಸ್ವಾಮಿರೆಡ್ಡಿ, ಆಂಜಿನಪ್ಪ, ನಾರಾಯಣಸ್ವಾಮಿ, ಕೆಂಪಣ್ಣ, ಕೃಷ್ಣಪ್ಪ ಹಾಜರಿದ್ದರು.
ಕ್ರೆಸೆಂಟ್ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಿದ್ಧತೆ ಕುರಿತು ಕಾರ್ಯಾಗಾರ
ನಗರದ ಕ್ರೆಸೆಂಟ್ ಶಾಲೆಯಲ್ಲಿ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ “ಪಬ್ಲಿಕ್ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವುದು ಹೇಗೆ?” ಎಂಬ ವಿಷಯವಾಗಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ, ಅವರ ಪರೀಕ್ಷೆಯ ಕುರಿತಾದ ಆತಂಕವನ್ನು ದೂರ ಮಾಡಲು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಡಾ.ಎಂ.ಶಿವಕುಮಾರ್ ಮಾತನಾಡಿದರು.
ಭವಿಷ್ಯವನ್ನು ರೂಪಿಸಿಕೊಳ್ಳುವ ಅಧಮ್ಯ ಇಚ್ಛೆ ವಿದ್ಯಾರ್ಥಿಯ ಒಳಗೆ ಕಿಚ್ಚಿನಂತೆ ಉರಿಯುತ್ತಿರಬೇಕು. ಕೋಶದಿಂದ ರೂಪಾಂತರಗೊಂಡ ಸುಂದರ ಚಿಟ್ಟೆ ಹೊರಹೊಮ್ಮುವಂತೆ ವಿದ್ಯಾರ್ಥಿಗಳು ಜೀವನವನ್ನು ರೂಪಾಂತರಗೊಳಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ತಾನು ಏನಾಗಬೇಕು ಎಂಬುದರ ಕುರಿತು ಸದಾ ಜಪ ಮಾಡಬೇಕು, ಕನಸು ಕಾಣಬೇಕು. ಕನಸನ್ನು ಗುರಿಯಾಗಿ ಪರಿವರ್ತಿಸಿಕೊಳ್ಳಬೇಕು. ಮಾನಸಿಕವಾಗಿ ನಮ್ಮ ಗುರಿಯೆಡೆಗೆ ಸಾಗುವ ಹಾದಿಯಲ್ಲಿರಬೇಕು. ಅಚಲವಾದ ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ನಮ್ಮ ಮೇಲೆ ನಮಗೆ ನಂಬಿಕೆ ಇದ್ದರೆ ಏನನ್ನಾದರೂ ಸಾಧಿಸಲಿಕ್ಕೆ ಸಾದ್ಯವಿದೆ. ಸದಾ ಜಾಗೃತರಾಗಿರಿ. ನಿಮ್ಮನ್ನು ನೀವು ಅರಿಯಿರಿ. ಪರೀಕ್ಷೆ ಎಂಬುದು ಯುದ್ದವಲ್ಲ ಇದು ಒಂದು ಆಟ. ಕ್ರೀಡಾಸ್ಫೂರ್ತಿಯಿಂದ ಈ ಆಟವನ್ನು ನಿಯಮಗಳನ್ನು ಅರಿತು ಆಡಿ. ಏಕಾಗ್ರತೆಯಿಂದ ಅದ್ಬುತವಾದ ಜ್ಞಾಪಕ ಶಕ್ತಿ ನಿಮ್ಮದಾಗುತ್ತದೆ. ಪರಿಣಾಮಕಾರಿ ಅಭ್ಯಾಸ ಮಾಡಬೇಕು ಎಂದು ವಿವಿಧ ವ್ಯಕ್ತಿ, ವಸ್ತುಗಳ ಉದಾಹರಣೆಗಳ ಮೂಲಕ ವಿವರಿಸಿದರು.
ಗಣಿತ ಲೆಕ್ಕದ ಪಕ್ಕದಲ್ಲಿ ಪ್ರತಿಯೊಂದು ಹಂತವನ್ನು ಗುರುತಿಸಿ. ಎರಡು ಇಷ್ಟವಾದ ವಿಷಯಗಳ ಮಧ್ಯೆ ಕಷ್ಟವಾದ ವಿಷಯ ಓದಿ. ಅದನ್ನು ಸ್ಯಾಂಡ್ ವಿಚ್ ಟೆಕ್ನಿಕ್ ಎನ್ನುತ್ತಾರೆ. ರೀಡಿಂಗ್, ರೀಕಾಲ್, ರಿಜಿಸ್ಟರ್ ತಂತ್ರವನ್ನು ನಿಮ್ಮದಾಗಿಸಿಕೊಳ್ಳಿ ಎಂದು ಸ್ಲೈಡ್ ಶೋ ಮೂಲಕ ವಿದ್ಯಾರ್ಥಿಗಳಿಗೆ ಅಗತ್ಯ ಅಂಶಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ಸಮಯದ ಸದುಪಯೋಗ, ಪ್ರಶ್ನೋತ್ತರ ವಿಧಾನ, ಗಣಿತದ ವಿಷಯದ ಅನುಮಾನಗಳು, ಚಿತ್ರಸಹಿತ ಬರೆಯಬೇಕಾದ ಅಗತ್ಯ ಮುಂತಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಪ್ರಶ್ನೆ ಕೇಳಿ ಉತ್ತರ ಪಡೆದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಸಮರ್ಥ ಸಂಪನ್ಮೂಲ ವ್ಯಕ್ತಿಯ ಮೂಲಕ ವಿದ್ಯಾರ್ಥಿಗಳಲ್ಲಿ ಸಾಮಾನ್ಯವಾಗಿ ಮನೆಮಾಡಿರುವ ಪರೀಕ್ಷೆಯ ಭಯ ಹೋಗಲಾಡಿಸುವುದು ಹಾಗೂ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಹೆಚ್ಚು ಅಂಕಗಳನ್ನು ಗಳಿಸುವಂತೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕ್ರೆಸೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ತಮೀಮ್ ಅನ್ಸಾರಿ, ಶಿಕ್ಷಕರಾದ ಭಾಸ್ಕರ್, ಪ್ರಕಾಶ್, ಮೂರ್ತಿ, ಮುನಿನರಸಿಂಹಯ್ಯ, ಕಸಾಪ ನಗರ ಘಟಕದ ಅಧ್ಯಕ್ಷ ಸಿ.ಎನ್.ಮುನಿರಾಜು ಹಾಜರಿದ್ದರು.

