Home Blog Page 355

ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ “ವಿದ್ಯಾವಿಕಾಸ ಯೋಜನೆ” ಗೆ ಚಾಲನೆ

0

ಜಾತಿ ಮತ ಭೇದವಿಲ್ಲದೆ ಶಿಕ್ಷಣ ಎಲ್ಲರಿಗೂ ಸಿಗಬೇಕು. ಕೆಳವರ್ಗದವರನ್ನು ಶಿಕ್ಷಣ ಮತ್ತು ಸಂಸ್ಕಾರ ಕಲಿಸುವ ಮೂಲಕ ಸದೃಢಗೊಳಿಸುವ ಕೆಲಸವನ್ನು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮೂಲಕ ಕೈಗೊಳ್ಳಲಾಗಿದೆ. ಈ ಕೆಲಸದ ಅಂಗವಾಗಿ ತಾತಹಳ್ಳಿ ಗ್ರಾಮವನ್ನು ದತ್ತು ತೆಗೆದುಕೊಳ್ಳುವ ಮೂಲಕ ಗ್ರಾಮೀಣಾಭಿವೃದ್ಧಿಯನ್ನು ಸಹ ಮಾಡಲಾಗುವುದು ಎಂದು ಶ್ರೀ ಆದಿಚುಂಚನಗಿರಿ ಮಠದ ಮಂಗಳನಾಥ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ತಾತಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಸಂಜೆ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ “ವಿದ್ಯಾವಿಕಾಸ ಯೋಜನೆ” ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಭಾನ್ವಿತ ಬಡ ಮಕ್ಕಳನ್ನು ಗುರುತಿಸಿ ಅವರಿಗೆ ಉಚಿತ ವಸತಿ, ವಿದ್ಯೆ ನೀಡಲಾಗುವುದು. ಮಕ್ಕಳನ್ನು ಸರ್ವಾಂಗೀಣ ಸಂಪನ್ನತೆಯನ್ನಾಗಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಮಕ್ಕಳ ಜ್ಞಾನಾರ್ಜನೆಗೆ ಪೋಷಕರು ಸಹಕಾರ ನೀಡಬೇಕಾಗಿದೆ. ಈ ಯೋಜನೆಯನ್ವಯ ತಾತಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಡಾ.ಎನ್‌.ಶಿವರಾಮರೆಡ್ಡಿ ಮಾತನಾಡಿ, ಪೂಜ್ಯ ಸ್ವಾಮೀಜಿಯವರ ಮಹತ್ತರ ಸ್ಮರಣೀಯ ಯೋಜನೆ ಇದಾಗಿದೆ. ನಿರ್ಲಕ್ಷಿತ ಮಕ್ಕಳ ಶ್ರೇಯೋಭಿಲಾಷೆಯೆ ಪರಮಗುರಿಯಾಗಿದ್ದು, ಗ್ರಾಮದ ಪೋಷಕರು ಮಕ್ಕಳನ್ನು ಪ್ರತಿದಿನ ಸಂಜೆ ೨ ಗಂಟೆ ಕಾಲ ನಮಗೆ ಕೊಡಿ. ಅವರು ನಮ್ಮ ಮಕ್ಕಳೆಂದೇ ತಿಳಿದು ಉತ್ತಮ ಸಂಸ್ಕಾರವನ್ನು ನೀಡುತ್ತೇವೆ. ಇದಕ್ಕೆ ನೀವು ಹಣ ಕೊಡಬೇಕಾಗಿಲ್ಲ. ನಮ್ಮದು ಉಚಿತ ಶಿಕ್ಷಣವಾಗಿದೆ. ಇದಕ್ಕಾಗಿಯೆ ನಮ್ಮ ಶಾಲಾ ಶಿಕ್ಷಕರು ಬಹಳ ಸಂತೋಷದಿಂದ ಪಾಠಮಾಡಲು ಉತ್ಸಾಹಿಗಳಾಗಿ ಮುಂದೆ ಬಂದಿದ್ದಾರೆ. ಈ ಮಕ್ಕಳು ಮುಂದೆ ಸಮಾಜಕ್ಕೆ ಉತ್ತಮ ಆಸ್ತಿಯಾಗುತ್ತಾರೆ ಎಂದು ಹೇಳಿದರು.
ಬಿಜಿಎಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಮಹದೇವ್ ಮಾತನಾಡಿ, ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಯ ಮಕ್ಕಳನ್ನು ನಮ್ಮ ಶಿಕ್ಷಣ ಸಂಸ್ಥೆಗೆ ಸೇರಿಸಿಕೊಳ್ಳುವುದಿಲ್ಲ. ಬದಲಿಗೆ ಸರ್ಕಾರಿ ಶಾಲೆಗಳನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸವನ್ನು ಈ ಯೋಜನೆಯ ಮೂಲಕ ಮಾಡುತ್ತೇವೆ. ಪ್ರತಿದಿನ ಸಂಜೆ ೬ ರಿಂದ ೮ ಗಂಟೆಯವರೆಗೂ ಮಕ್ಕಳಿಗೆ ಶಿಕ್ಷಣ, ಕಲಿಕೆ, ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಚಟುವಟಿಕೆಗಳನ್ನು ನಮ್ಮ ಸಂಸ್ಥೆಯ ಶಿಕ್ಷಕರ ಮೂಲಕ ಮಾಡಿಸಲಾಗುವುದು. ಗ್ರಾಮಸ್ಥರ ಸಹಕಾರದಿಂದ ಗ್ರಾಮೀಣ ಅಭಿವೃದ್ಧಿಯನ್ನು ಸಹ ಮಾಡಲಾಗುವುದು ಎಂದು ನುಡಿದರು.
ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಟಿ.ಎಲ್.ಸಂದೀಶ್ ಮಾತನಾಡಿ, ಕಡ್ಡಾಯ ಶಿಕ್ಷಣ, ಸಮಾನತೆ ಆರ್ಥಿಕ ಮುಗ್ಗಟ್ಟು ನಿವಾರಿಸಿ ಅಕ್ಷರಸ್ಥರನ್ನಾಗಿಸುವ ಆಶೋತ್ತರಗಳನ್ನು ಭಾರತದ ಸಂವಿಧಾನ ಹೊಂದಿದೆ. ಇದನ್ನು ಎಲ್ಲರೂ ಅಳವಡಿಸಿಕೊಂಡರೆ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಅಕ್ಷತೆಯಿರುವ ತಟ್ಟೆಯಲ್ಲಿ ಅರಿಶಿನ ಕೊಂಬನ್ನು ಮಕ್ಕಳ ಕೈಲಿ ಹಿಡಿಸಿ ಮಂಗಳನಾಥ ಸ್ವಾಮೀಜಿ ಅಕ್ಷರಾಭ್ಯಾಸ ಮಾಡಿಸಿದರು. ಗ್ರಾಮದಲ್ಲಿರುವ ಎಲ್ಲಾ ವಿದ್ಯಾರ್ಥಿಗಳಿಗೂ ನೋಟ್ ಪುಸ್ತಕಗಳು, ಲೇಖನ ಸಾಮಗ್ರಿ ಹಾಗೂ ಸಿಹಿಯನ್ನು ನೀಡಲಾಯಿತು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಗೌಡ, ವಕೀಲರಾದ ಮಂಜುನಾಥ, ಲೋಕೇಶ, ಎಸ್.ಡಿ.ಎಂ.ಸಿ ಅಧ್ಯಕ್ಷ ಕೃಷ್ಣಪ್ಪ, ಕನಕಪ್ರಸಾದ್, ಜೆ.ಎಸ್.ವೆಂಕಟಸ್ವಾಮಿ, ಶಿಕ್ಷಕರಾದ ಎಂ.ದೇವರಾಜ್, ಡಿ.ಎಸ್.ಶ್ರೀಕಾಂತ್, ಕೆ.ನಾಗರಾಜ್, ಶ್ರೀನಿವಾಸಯಾದವ್, ಜೈಭಾರತ್ ಯುವಕ ಸಂಘದ ಸದಸ್ಯರು, ಗ್ರಾಮದ ನಾರಾಯಣಸ್ವಾಮಿ, ನರಸಿಂಹಪ್ಪ ಹಾಜರಿದ್ದರು.

೭೦ನೇ ವರ್ಷದ ಗಣರಾಜ್ಯೋತ್ಸವ ಸಮಾರಂಭ

0

ನಗರದ ನೆಹರೂ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಾಗೂ ನಾಡ ಹಬ್ಬಗಳ ಆಚರಣಾ ಸಮಿತಿ ಶನಿವಾರ ಆಯೋಜನೆ ಮಾಡಿಗಿದ್ದ ೭೦ನೇ ವರ್ಷದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ದೇಶದ ಏಳಿಗೆಯು ಯುವಜನತೆಯ ಮೇಲೆ ಅವಲಂಬಿಸಿದೆ. ದೇಶಕ್ಕೆ ಪ್ರಪಂಚದ ಅತ್ಯಂತ ಬೃಹದಾಕಾರದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿರ್ಮಾಣ ಮಾಡಿಕೊಂಡ ವ್ಯವಸ್ಥೆಯಲ್ಲಿ ಜೀವನ ಮಾಡುತ್ತಿರುವ ಪ್ರತಿಯೊಬ್ಬ ನಾಗರಿಕರು ಸಂವಿಧಾನದ ಆಶಯಗಳಿಗೆ ಕಟಿಬದ್ಧರಾಗಿ ಜೀವಿಸಬೇಕಾದಂತಹ ಅವಶ್ಯಕತೆ ಇದೆ ಎಂದು ಅವರು ಹೇಳಿದರು.
ಮೂಲಭೂತ ಸಮಸ್ಯೆಗಳನ್ನು ನಿವಾರಣೆ ಮಾಡಬೇಕಾಗಿದೆ ಯುವಶಕ್ತಿಯ ಮುಂದೆ ವ್ಯವಸ್ಥಿತವಾದ ಸಮಸ್ಯೆಗಳು ಎದುರಾಗುತ್ತಿವೆ, ಭಯೋತ್ಪಾದನೆ, ಕುಡಿಯುವ ನೀರಿನ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಬೇಕಾಗಿದೆ, ಭಾರತಾಂಬೆಯ ರಕ್ಷಣೆಗೆ ನಾವೆಲ್ಲರೂ ಒಟ್ಟಾಗಬೇಕು, ಗಡಿಗಳ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಬೇಕು, ಶಾಲಾ ಮಕ್ಕಳು ಅಕ್ಷರಸ್ಥರಾಗಿ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡಬೇಕು, ಅನಕ್ಷರತೆ ತೊಲಗಬೇಕು, ದೇಶವನ್ನು ಸಾರ್ವಭೌಮ, ಸಮಾಜವಾದಿ, ಜ್ಯಾತ್ಯಾತೀತ ಮತ್ತು ಪ್ರಜಾಪ್ರಭುತ್ವ ಗಣತಂತ್ರವನ್ನಾಗಿ ಮಾಡಲು ಎಲ್ಲಾ ಪ್ರಜೆಗಳು ಸಂಕಲ್ಪ ಮಾಡಬೇಕಾಗಿದೆ, ದೇಶದಲ್ಲಿನ ಜನತೆಯನ್ನು ಭಯಬೀತಗೊಳಿಸುವಂತಹ ಭಯೋತ್ಪಾದನೆಯನ್ನು ಹತ್ತಿಕ್ಕುವಂತಹ ಪ್ರಯತ್ನಕ್ಕೆ ನಮ್ಮೆಲ್ಲರ ಸಹಕಾರ ನೀಡಬೇಕು ಎಂದರು.
ತಹಶೀಲ್ದಾರ್ ಅಜಿತ್ ಕುಮಾರ್ ರೈ ಮಾತನಾಡಿ, ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ, ನ್ಯಾಯ ಸಮ್ಮತವಾದ ಚಿಂತನೆ ಅಭಿವ್ಯಕ್ತಿ, ನಂಬಿಕೆ, ಭಕ್ತಿ, ಮತ್ತು ಆರಾಧನೆಗಳಿಗೆ ಸ್ವಾತಂತ್ರ್ಯವನ್ನು ಹೊಂದಲು ಇಷ್ಟಪಡುವಂತಹ ಸ್ಥಾನಮಾನಗಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವುದರೊಂದಿಗೆ ದೇಶದಲ್ಲಿ ಸಮಾನತೆ, ಸಹೋದರತ್ವ, ಪರಸ್ಪರ ಪ್ರೀತಿ ಆದರಗಳನ್ನು ನಿರ್ಮಾಣ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ, ರೈತರ ಅಭಿವೃದ್ದಿಗಾಗಿ ಕೃಷಿ ಭಾಗ್ಯ, ಹಸಿವು ಮುಕ್ತರಾಜ್ಯ, ನಾಡಿನ ಮಕ್ಕಳ ಅಪೌಷ್ಟಿಕತೆ ನಿವಾರಣೆ, ದುರ್ಬಲ ವರ್ಗದ ಜನರ ಅಭಿವೃದ್ದಿಯು ಅವಶ್ಯಕತೆಯಿದೆ ಎಂದರು.
ಈ ಸಂಧರ್ಭದಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಪಥಸಂಚಲನ ಆಯೋಜನೆ ಮಾಡಲಾಗಿತ್ತು. ಭಕ್ತರಹಳ್ಳಿ ಬಿ.ಎಂ.ವಿ. ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ವಾಸವಿಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿಯನ್ನು ಬಿಂಬಿಸುವ ನೃತ್ಯರೂಪಕಗಳನ್ನು ಪ್ರದರ್ಶಿಸಿದರು. ನಗರಸಭೆ ವತಿಯಿಂದ ಆಶಾಕಿರಣ ಅಂಧಮಕ್ಕಳ ಶಾಲೆಗೆ ೨೫ ಸಾವಿರ ರೂಗಳ ಚೆಕ್ ನೀಡಲಾಯಿತು. ಸರ್ಕಾರಿ ಆಸ್ಪತ್ರೆ ವತಿಯಿಂದ ಆಯುಷ್ ಮಾನ್ ಭಾರತ್ ಕಾರ್ಡ್ ವಿತರಿಸಲಾಯಿತು. ನಗರದ ಬಿಲಾಲ್ ಯೂತ್ ಕಮಿಟಿ ಮತ್ತು ಯೂನಿಟಿ ಸಿಲ್ ಸಿಲಾ ಸಂಘಟನೆ ವತಿಯಿಂದ ಪಥಸಂಚಲಕ್ಕೆ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಬಿಸ್ಕತ್, ನೀರು, ಸಿಹಿ ವಿತರಿಸಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಸದಸ್ಯ ಸತೀಶ್, ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್, ನಗರಸಭೆ ಆಯುಕ್ತ ಚಲಪತಿ, ಅಧ್ಯಕ್ಷ ಅಫ್ಸರ್ ಪಾಷ, ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಸದಸ್ಯ ಚಿಕ್ಕಮುನಿಯಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ಬಾಬು, ಸರ್ಕಲ್ ಇನ್ಸ್ ಪೆಕ್ಟರ್ ಆನಂದ್ ಕುಮಾರ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೇಶವರೆಡ್ಡಿ, ಸುಬ್ರಮಣಿ, ನಾಗರಾಜ್, ಬಿ.ಎಂ.ವಿ.ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ವಿ.ಮುನೇಗೌಡ, ಕಾರ್ಯದರ್ಶಿ ಎ.ಕಾಳಪ್ಪ, ರೈತಸಂಘದ ಭಕ್ತರಹಳ್ಳಿ ಬೈರೇಗೌಡ, ರವಿಪ್ರಕಾಶ್, ಜೆ.ಎಸ್.ವೆಂಕಟಸ್ವಾಮಿ, ಪ್ರತೀಶ್ ಹಾಜರಿದ್ದರು.

ಕೆ.ಮುತ್ತುಗದಹಳ್ಳಿಯಲ್ಲಿ ಜಿಂಕೆಯ ರಕ್ಷಿಸಿ ಮಾನವೀಯತೆ ಮೆರೆದ ಗ್ರಾಮಸ್ಥರು

0

ತಾಲ್ಲೂಕಿನ ಕೆ.ಮುತ್ತುಗದಹಳ್ಳಿಗೆ ಹತ್ತಿರದ ಕಾಡಿನಿಂದ ಬಂದಿದ್ದ ಜಿಂಕೆಯ ಮೇಲೆ ಆಕ್ರಮಣ ಮಾಡಿ ಸುತ್ತುವರೆದಿದ್ದ ನಾಯಿಗಳನ್ನು ಓಡಿಸಿ ಗ್ರಾಮಸ್ಥರು ಮಾನವೀಯತೆಯನ್ನು ಮೆರೆದಿದ್ದಾರೆ.
ಶನಿವಾರ ಬೆಳಗಿನ ಜಾವ ಗ್ರಾಮಕ್ಕೆ ಮೇವು ಮತ್ತು ನೀರನ್ನು ಅರಸಿ ಬಂದಿದ್ದ ಜಿಂಕೆಯನ್ನು ನಾಯಿಗಳು ಆಕ್ರಮಣ ಮಾಡಿವೆ. ತಕ್ಷಣ ಅದನ್ನು ಕಂಡು ಗ್ರಾಮಸ್ಥರಾದ ಶ್ರೀನಿವಾಸ್, ನಾರಾಯಣಸ್ವಾಮಿ, ಅರುಣ್ ಕುಮಾರ್, ಆಂಜಿನಪ್ಪ ಮತ್ತಿತರರು ನಾಯಿಗಳನ್ನು ಓಡಿಸಿ ಜಿಂಕೆಯನ್ನು ರಕ್ಷಿಸಿ, ನೀರು ಕುಡಿಸಿದ್ದಾರೆ. ನಂತರ ಅರಣ್ಯ ಇಲಾಖೆಯವರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳಾದ ಭಾಸ್ಕರ್ ಮತ್ತು ಮದನ್, ಅದನ್ನು ಚಿಕಿತ್ಸೆ ಕೊಡಿಸಿ ನಂತರ ಅರಣ್ಯದಲ್ಲಿ ಬಿಡುವುದಾಗಿ ತಿಳಿಸಿ, ಗ್ರಾಮಸ್ಥರ ಈ ಪರಿಸರ ಕಾಳಜಿಯನ್ನು ಅಭಿನಂದಿಸಿದರು.
ಪಶುವೈದ್ಯರ ಬಳಿ ಚಿಕಿತ್ಸೆ ಕೊಡಿಸಿ ಜಿಂಕೆಯನ್ನು ಕೈವಾರದ ರಕ್ಷಿತಾರಣ್ಯದಲ್ಲಿ ಬಿಟ್ಟೆವು ಎಂದು ವಲಯ ಅರಣ್ಯಾಧಿಕಾರಿ ಶ್ರೀಲಕ್ಷ್ಮಿ ತಿಳಿಸಿದರು.

ಕಾಮಗಾರಿಯ ಗುಣಮಟ್ಟದಲ್ಲಿ ಲೋಪ ದೋಷಗಳು ಇರಬಾರದು – ಬಿ.ವಿ.ನಾರಾಯಣಸ್ವಾಮಿ

0

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ಅಧಿಕಾರಿಗಳ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರ ಸಾಮಾನ್ಯ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ ಮಾತನಾಡಿದರು.
ತಾಲ್ಲೂಕಿನಾಧ್ಯಂತ ನಡೆಯುವ ಯಾವುದೇ ಕಾಮಗಾರಿಯ ಗುಣಮಟ್ಟದಲ್ಲಿ ಲೋಪ ದೋಷಗಳು ಕಂಡು ಬಂದಲ್ಲಿ ನೇರವಾಗಿ ಪಿಡಬ್ಲ್ಯೂಡಿ ಇಲಾಖೆಯ ಎಇಇ ರನ್ನೇ ಗುರಿ ಮಾಡಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಕ್ಷೇತ್ರದಾಧ್ಯಂತ ಲೋಕೋಪಯೋಗಿ ಇಲಾಖೆಯ ಟೆಂಡರ್‌ಗಳನ್ನು ಶೇ ೨೫ ಕ್ಕಿಂತಲೂ ಕಡಿಮೆಗೆ ಪಡೆದಿರುವ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸುತ್ತಾರೆಯೇ ಎಂಬ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಇಲಾಖೆಯಿಂದ ನಡೆಯುವ ಕಾಮಗಾರಿಯ ಬಗ್ಗೆ ಆಯಾ ಕ್ಷೇತ್ರದ ಸದಸ್ಯರಿಗೆ ಮಾಹಿತಿ ನೀಡಬೇಕು. ಕಾಮಗಾರಿ ನಡೆಯುವ ವೇಳೆ ಅಧಿಕಾರಿಗಳು ಖುದ್ದಾಗಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ವೀಕ್ಷಣೆ ನಡೆಸಬೇಕು. ಗುಣಮಟ್ಟದಲ್ಲಿ ಯಾವುದೇ ಲೋಪ ದೋಷಗಳಿರುವ ಬಗ್ಗೆ ಸದಸ್ಯರಿಂದ ದೂರುಗಳು ಬಂದಲ್ಲಿ ನೇರವಾಗಿ ಲೋಕೋಪಯೋಗಿ ಇಲಾಖೆಯ ಎಇಇ ರ ಮೇಲೆ ಕ್ರಮ ಜರುಗಿಸಲಾಗುವುದು ಎಂದರು.
ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಇಓ ಬಿ.ಶಿವಕುಮಾರ್ ಮಾತನಾಡಿ, ತಾವು ಇಲಾಖೆಯಿಂದ ಕೈಗೊಳ್ಳುವ ಕಾಮಗಾರಿಗೆ ಮುನ್ನ ಆಯಾ ಗ್ರಾಮ ಪಂಚಾಯಿತಿಯಿಂದ ಎನ್.ಓ.ಸಿ ಪಡೆದು ನಂತರ ಕಾಮಗಾರಿ ಶುರುಮಾಡಿ. ಆಯಾ ಕ್ಷೇತ್ರದ ಜನಪ್ರತಿನಿಧಿಗಳಿಗೆ ಕಾಮಗಾರಿ ನಡೆಯುವ ಬಗ್ಗೆ ಮೊದಲೇ ಮಾಹಿತಿ ನೀಡಿ ಎಂದು ಪಿಡಬ್ಲ್ಯೂಡಿ ಜೆಇ ನಾರಾಯಣಸ್ವಾಮಿ ಅವರಿಗೆ ಸೂಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ಷೇತ್ರದಾದ್ಯಂತ ನೀರಿನ ಸಮಸ್ಯೆಯಿರುವ ಶಾಲೆಗಳ ಪಟ್ಟಿ ತಯಾರಿಸಿ ಕೂಡಲೇ ಕಚೇರಿಗೆ ಸಲ್ಲಿಸಿದಲ್ಲಿ ನೀರು ಪೂರೈಸಲು ಅಗತ್ಯ ಕ್ರಮ ಜರುಗಿಸಲಾಗುವುದು. ಶಾಲಾ ಕಾಂಪೌಂಡ್, ಅಡುಗೆ ಕೋಣೆ, ಅಡುಗೆ ದಾಸ್ತಾನು ಕೊಠಡಿ ನಿರ್ಮಿಸಿಕೊಳ್ಳಲು ನರೇಗಾ ಯೋಜನೆಯಡಿ ಅವಕಾಶವಿದ್ದು ಆಯಾ ಕ್ಷೇತ್ರದ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಆಗಬೇಕಾದ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದಲ್ಲಿ ಶೀಘ್ರ ಕ್ರಮ ಜರುಗಿಸಲಾಗುವುದು ಎಂದರು.
ಕೃಷಿ ಇಲಾಖೆಯ ಅವ್ಯವಸ್ಥೆಗಳ ಬಗ್ಗೆ ಹಿಂದಿನ ಸಭೆಯಲ್ಲಿ ಸದಸ್ಯರು ಮಾಡಿದ್ದ ಆರೋಪಗಳಿಗೆ ಸಂಬಂಧಿಸಿದಂತೆ ಮುಂದಿನ ಮೂರು ದಿನಗಳ ಒಳಗೆ ಅಗತ್ಯ ದಾಖಲೆಗಳನ್ನು ಕಚೇರಿಗೆ ನೀಡುವಂತೆ ಕೃಷಿ ಸಹಾಯಕ ನಿರ್ದೇಶಕ ಮಾಲತೇಶ್‌ ಅವರಿಗೆ ಅಧ್ಯಕ್ಷರು ಸೂಚಿಸಿದರು.
ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಅಂತರ್ಜಾತೀಯ ವಿವಾಹವಾಗಿದ್ದ ಕಾಚಹಳ್ಳಿಯ ಮುನಿರಾಜು ಹಾಗೂ ಎಸ್ ದೇವಗಾನಹಳ್ಳಿಯ ಸುಬ್ರಮಣಿ ದಂಪತಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಬಿಡುಗಡೆಯಾಗಿದ್ದಂತಹ ಸಹಾಯಧನದ ಚೆಕ್ ಅನ್ನು ವಿತರಿಸಲಾಯಿತು.
ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಮುನಿಯಪ್ಪ, ಇಓ ಬಿ.ಶಿವಕುಮಾರ್, ಮೇಲ್ವಿಚಾರಕ ಪ್ರಸಾದ್, ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಜರಿದ್ದರು.

“ಮತದಾರರ ದಿನಾಚರಣೆ” ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮ

0

ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆ ಸಂಯುಕ್ತಾಶ್ರಯದಲ್ಲಿ “ಮತದಾರರ ದಿನಾಚರಣೆ” ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಟಿ.ಎಲ್.ಸಂದೀಶ್ ಮಾತನಾಡಿದರು.
ಪ್ರಜಾಪ್ರಭುತ್ವವನ್ನು ಬಲಪಡಿಸಲು ಯುವ ಜನತೆ ಚುನಾವಣಾ ಪ್ರಕ್ರಿಯೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಮತದಾನ ಎಂಬುದು ಅಖಂಡ ಪ್ರಜಾ ಸಮೂಹದ ದನಿ. ಮತದಾನದ ಪ್ರಾಮುಖ್ಯತೆ ಮತ್ತು ಪ್ರಜೆಗಳ ಮೇಲಿರುವ ಹೊಣೆಯ ಕುರಿತು ಜಾಗೃತಿ ಮೂಡಿಸುವುದಕ್ಕಾಗಿಯೇ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಪ್ರತಿ ಪ್ರಜೆಯೂ ತನ್ನನ್ನು ಆಳುವ ಪ್ರತಿನಿಧಿಯನ್ನು ಆಯ್ಕೆಮಾಡಲು ಇರುವ ವ್ಯವಸ್ಥೆಯೇ ಮತದಾನ. ಪ್ರಜಾತಂತ್ರ ದೇಶದ ಪ್ರಜೆಗಳ ಪ್ರಮುಖ ಹಕ್ಕು ಇದು. ತಮ್ಮ ಒಳಿತನ್ನು ಬಯಸುವ ಜನಪರ ನಾಯಕನನ್ನು ತಾವೇ ಆಯ್ಕೆ ಮಾಡಿ ಕಳಿಸಲು ಮತದಾನ ಎಂಬ ಪ್ರಕ್ರಿಯೆ ಬೇಕು. ದೇಶಕ್ಕೆ ಒಳಿತುಮಾಡುವ ನಾಯಕನನ್ನು ಚುನಾಯಿಸುವುದು ಪ್ರಜೆಗಳ ಜವಾಬ್ದಾರಿ ಎಂದರು.
ತಹಶೀಲ್ದಾರ್ ಅಜಿತ್ ಕುಮಾರ್ ರೈ ಮಾತನಾಡಿ, ಲಕ್ಷಾಂತರ ಯುವ ಜನತೆ ಪ್ರತಿ ವರ್ಷ ನಡೆಯುವ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಮತದಾರರಾಗಿ ನೋಂದಾವಣೆಗೊಳ್ಳುತ್ತಾರೆ. ಪ್ರಜಾಪ್ರಭುತ್ವ ಬಲಗೊಳ್ಳಬೇಕಾದರೆ ಎಲ್ಲರ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ. ನಮ್ಮ ದೇಶ ಅಭಿವೃದ್ಧಿಯಾಗಬೇಕಾದರೆ, ನಾವು ನಮ್ಮ ಆಯ್ಕೆಯನ್ನು ಅಮೂಲ್ಯ ಮತದಾನದ ಮೂಲಕ ವ್ಯಕ್ತಪಡಿಸಬೇಕು ಎಂದು ಹೇಳಿದರು.
“ಪ್ರಜಾಪ್ರಭುತ್ವದಲ್ಲಿ ದೃಢವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿಹಿಡಿಯುತ್ತೇವೆಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆಂದು ಈ ಮೂಲಕ ಪ್ರತಿಜ್ಞೆ ಸ್ವೀಕರಿಸುತ್ತೇವೆ” ಎಂದು ಯುವ ಮತದಾರರಿಗೆ ಈ ಸಂದರ್ಭದಲ್ಲಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿಯನ್ನು ವಿತರಿಸಲಾಯಿತು.
ಉತ್ತಮವಾಗಿ ಮತದಾನ ಪಟ್ಟಿ ಪರಿಷ್ಕರಣೆ ಕಾರ್ಯ ನೆರವೇರಿಸಿದ ಮತಗಟ್ಟೆ ಅಧಿಕಾರಿಗಳಾದ ಎಸ್.ರವಿ ಮತ್ತು ಸಿ.ಎನ್.ವೆಂಕಟರಾಮ್ ಅವರಿಗೆ ಪ್ರಶಂಸಾ ಪತ್ರವನ್ನು ನೀಡಲಾಯಿತು.
ನಗರಸಭೆ ಆಯುಕ್ತ ಜಿ.ಎನ್.ಚಲಪತಿ, ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ಕಾರ್ಯದರ್ಶಿ ಎಂ.ಬಿ.ಲೋಕೇಶ್ ಹಾಜರಿದ್ದರು.

ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನಾಚರಣೆ

0

ಬ್ರಿಟಿಷರ ವಸಾಹತುಶಾಹಿ ಆಡಳಿತದಿಂದ ಭಾರತಕ್ಕೆ ಮುಕ್ತಿ ಸಿಗಲು ನೇತಾಜಿಯವರು ಹೋರಾಡಲು ಪ್ರಮುಖ ಪಾತ್ರ ವಹಿಸಿದ್ದರು. ಅತ್ಯಂತ ಬುದ್ಧಿಶಾಲಿಗಳಾಗಿದ್ದ ನೇತಾಜಿಯವರು ದೇಶದ ಜನರ ಹಿತಾಸಕ್ತಿ ಬಯಸಿ, ಇಡೀ ಸಮಾಜದ ಬಡಬಗ್ಗರು ಮತ್ತು ದೀನದಲಿತರ ಏಳಿಗೆಗಾಗಿ ಶ್ರಮಿಸಿದ್ದರು ಎಂದು ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ೧೨೨ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬ್ರಿಟೀಷರ ಆಳ್ವಿಕೆಯಲ್ಲಿದ ದೇಶವನ್ನು ಉಳಿಸಿಕೊಳ್ಳಲು ದೇಶಪ್ರೇಮದ ಜಾಗೃತಿಯ ಕಿಚ್ಚಿನೊಂದಿಗೆ ಮನೆಗೊಬ್ಬ ಯುವಕರನ್ನು ಸ್ವಾತಂತ್ರ್ಯ ಹೋರಾಟದ ಪರಿಕಲ್ಪನೆಯ ಮೂಲಕ ಕರೆತಂದು ಭಾರತೀಯ ಭೂಸೇನೆಯನ್ನು ಸ್ಥಾಪಿಸಿದ ಮಹಾನ್ ವ್ಯಕ್ತಿ ಸುಭಾಷ್ ಚಂದ್ರ ಬೋಸ್ ಎಂದು ಅವರು ಸ್ಮರಿಸಿದರು.
ವಿದ್ಯಾರ್ಥಿಗಳಾದ ತಿಲಕ್, ಕಿಶೋರ್ ಕುಮಾರ್, ರಂಜನ್, ದಿಲೀಪ್, ಪುನೀತ್ ರಾಜ್, ಮೋಹಿತ್ ಕುಮಾರ್, ರಕ್ಷಿತ್ ಕುಮಾರ್ ನೇತಾಜಿ ಕುರಿತಂತೆ ಮಾತನಾಡಿದರು.
ಮುಖ್ಯ ಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ, ಶಿಕ್ಷಕರಾದ ಎಸ್.ಚಾಂದ್ ಪಾಷಮ್ ಅಶೋಕ್, ಭಾರತಿ, ಸಿಬ್ಬಂದಿ ವೆಂಕಟಮ್ಮ ಹಾಜರಿದ್ದರು.

ಹಾಳಾಗಿರುವ ಮುಖ್ಯರಸ್ತೆ ಸರಿಪಡಿಸಲು ಪೌರಾಯುಕ್ತರಿಗೆ ಮನವಿ

0

ನಗರದ ಬಸ್ ನಿಲ್ದಾಣದಿಂದ ಕೋಟೆ ವೃತ್ತದವರೆಗಿನ ರಸ್ತೆ ವಿಪರೀತವಾಗಿ ಹಾಳಾಗಿದೆ. ಸಂಚಾರಕ್ಕೆ ತೊಂದರೆ ಮತ್ತು ಕಿತ್ತುಹೋದ ರಸ್ತೆಯಿಂದ ಬರುವ ಧೂಳಿನಿಂದ ಜನತೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೂಡಲೇ ರಸ್ತೆ ಡಾಂಬರೀಕರಣ ಕಾಮಗಾರಿ ಶುರು ಮಾಡುವಂತೆ ನಗರಸಭೆ ಪೌರಾಯುಕ್ತರಲ್ಲಿ ಸಾರ್ವಜನಿಕರು ಬುಧವಾರ ಮನವಿ ಮಾಡಿದರು.
ನಗರದ ವಾರ್ಡ್ ಸಂಖ್ಯೆ ೦೧ ಮತ್ತು ೦೨ ರ ನಾಗರಿಕರು ನಗರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿ ರಸ್ತೆ ಕಾಮಗಾರಿ ನಡೆಸಿ ಹಾಗೂ ವಾರ್ಡುಗಳಲ್ಲಿ ಸಮರ್ಪಕ ನೀರಿನ ಪೂರೈಕೆ ಆಗುತ್ತಿಲ್ಲ ಈ ಬಗ್ಗೆ ಕೂಡಲೇ ಕ್ರಮ ಜರುಗಿಸಿ ಎಂದು ಒತ್ತಾಯಿಸಿದರು.
ತಮ್ಮನ್ನು ಭೇಟಿ ಮಾಡಿದ ವರ್ತಕರನ್ನು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಪೌರಾಯುಕ್ತ ಜಿ.ಎನ್.ಚಲಪತಿ, “ನಗರೋತ್ಥಾನ-೩ ಯೋಜನೆಯಡಿ ಈಗಾಗಲೇ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಲಾಗಿದೆ. ಡಾಂಬರೀಕರಣ ಕಾಮಗಾರಿ ನಡೆಸುವ ಮುನ್ನ ಪೈಪ್ ಲೈನ್ ಕಾಮಗಾರಿ ಮಾಡಬೇಕಾಗಿದ್ದರಿಂದ ರಸ್ತೆಯ ಡಾಂಬರೀಕರಣ ಕಾಮಗಾರಿ ತಡವಾಗಿದೆ. ಮುಂದಿನ ಭಾನುವಾರದೊಳಗೆ ರಸ್ತೆ ಡಾಂಬರೀಕರಣ ಕಾಮಗಾರಿ ಶುರುಮಾಡಲು ಕ್ರಮ ಜರುಗಿಸಲಾಗುವುದು” ಎಂದು ಭರವಸೆ ನೀಡಿದರು.
ನಾಗರಿಕರಿಗೆ ಅಗತ್ಯವಿರುವ ಕುಡಿಯುವ ನೀರು ಪೂರೈಕೆ, ರಸ್ತೆ, ಸೇರಿದಂತೆ ಎಲ್ಲಾ ಸವಲತ್ತುಗಳನ್ನು ಕಲ್ಪಿಸಲು ನಗರಸಭೆ ಸಿದ್ದವಾಗಿದ್ದು ವರ್ತಕರು ಟ್ರೇಡ್ ಲೈಸೆನ್ಸ್ ಹಾಗೂ ನಾಗರಿಕರು ಸಕಾಲದಲ್ಲಿ ಬಾಕಿಯಿರುವ ಕಂದಾಯ, ನೀರಿನ ಬಿಲ್ಲು ಪಾವತಿಸಿ ನಗರಸಭೆಗೆ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ವರ್ತಕರಾದ ಮುನಿರಾಜು, ಮಂಜುನಾಥ್, ಶ್ರೀನಿವಾಸ್, ಇಸ್ಮಾಯಿಲ್, ರಮೇಶ್, ನಗರಸಭಾ ಸದಸ್ಯ ಕಿಶನ್ ಹಾಜರಿದ್ದರು.

ಮಳ್ಳೂರು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಕಾಲೇಜು ವಾರ್ಷಿಕೋತ್ಸವ

0

ತಾಲ್ಲೂಕಿನ ಮಳ್ಳೂರು ಗ್ರಾಮದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಶನಿವಾರ ನಡೆದ ಕಾಲೇಜು ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಳ್ಳೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂರ್ಣಾನಂದಜೀ ಮಹಾರಾಜ್‌ ಮಾತನಾಡಿದರು.
ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಯುವ ಜನರು ಮೈಗೂಡಿಸಿಕೊಂಡಾಗ ಮಾತ್ರ ಸದೃಢ ದೇಶ ನಿರ್ಮಾಣ ಸಾಧ್ಯವಿದೆ ಎಂದು ಅವರು ತಿಳಿಸಿದರು.
ಸ್ವಾಮಿ ವಿವೇಕಾನಂದ ಹೆಸರೇ ಒಂದು ಪ್ರೇರಣೆ. ಸ್ವಾಮಿ ವಿವೇಕಾನಂದರು ತಮ್ಮ ಭಾಷಣದ ಮೂಲಕ ಹೇಗೆ ಜಗತ್ತಿನ ಗಮನ ಸೆಳೆದರೋ ಅದೇ ರೀತಿ ಬರವಣಿಗೆ ಮೂಲಕವೂ ಕ್ರಾಂತಿ ಮಾಡಿದವರು. ಕವಿ ರವೀಂದ್ರನಾಥ ಠಾಗೂರರು ಅವರ ಬಗ್ಗೆ ಹೇಳುತ್ತಾ, “ಶ್ರೀಕೃಷ್ಣನನ್ನು ಅರಿಯಬೇಕೆಂದರೆ ಭಗವದ್ಗೀತೆಯನ್ನು ಓದಿ, ಭಾರತವನ್ನು ತಿಳಿಯಬೇಕೆಂದಿದ್ದರೆ ಸ್ವಾಮೀ ವಿವೇಕಾನಂದರನ್ನು ಓದಿ” ಎಂದಿದ್ದರು. ಸ್ವಾಮೀಜಿ ಅವರ ಬದುಕೇ ಇಡೀ ಭಾರತದ ಚಿತ್ರಣ. ಅವರ ಜೀವನವೇ ಒಂದು ಯಶೋಗಾಥೆ. ದೇಶ, ವಿದೇಶದ ಅನೇಕ ಇತಿಹಾಸಕಾರರು ಹಾಗೂ ಲೇಖಕರು ಇವರ ತತ್ವಗಳಿಂದ ಪ್ರಭಾವಿತರಾಗಿದ್ದಾರೆ. ಭಾರತದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಇವರಿಂದ ಪ್ರಭಾವಿತರಾಗಿದ್ದರು. ಹಾಗಾಗಿ ಅವರಿಂದ ವಿದ್ಯಾರ್ಥಿಗಳು ಪ್ರೇರಣೆ ಹೊಂದಬೇಕು ಎಂದು ಹೇಳಿದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಕೋಡಿರಂಗಪ್ಪ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಅದಮ್ಯ ಉತ್ಸಾಹ, ಗುರುಯೆಡೆಗೆ ಸಾಗುವ ಇಚ್ಛಾಶಕ್ತಿ, ಬಿಡದ ಪ್ರಯತ್ನ, ಆತ್ಮನಂಬಿಕೆ ಇರಬೇಕು. ವಿದ್ಯಾರ್ಥಿಗಳು ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ವ್ಯಕ್ತಿತ್ವವು ಸಾಧನೆಗೆ ಪ್ರೇರಕವಾಗುತ್ತದೆ. ಜಾತಿ, ಬಡತನ ಸಾಧನೆಗೆ ಅಡ್ಡಿಯಲ್ಲ ಎಂಬುದನ್ನು ಹಲವು ಸಾಧಕರು ತಮ್ಮ ಬದುಕಿನೊಂದಿಗೆ ನಮಗೆ ಉದಾಹರಣೆಯಾಗಿದ್ದಾರೆ. ಯಾವುದೂ ಸುಲಭವಲ್ಲ ಹಾಗೆಯೇ ಸಾಧಿಸುವ ಛಲವಿದ್ದರೆ ಯಾವುದೂ ಕಷ್ಟವಲ್ಲ ಎಂದು ನುಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್. ಜನಾರ್ಧನ್ ಮಾತನಾಡಿ, ಪರೀಕ್ಷೆ ಎದುರಿಸಲು ಸುಲಭೋಪಾಯವೆಂದರೆ ಆರಂಭದಿಂದ ಓದಲು ಶುರು ಮಾಡುವುದು. ಸರಿಯಾದ ವೇಳಾಪಟ್ಟಿಯನ್ನು ಅನುಸರಿಸುವುದು. ಹೆಚ್ಚೆಚ್ಚು ಬಾರಿ ಪುನರಾವರ್ತನೆ ಮಾಡುವುದು. ಮೊಬೈಲ್ ಬಳಕೆಗೆ ಸ್ವಯಂ ನಿಷೇಧ ವಿಧಿಸುವುದು. ವಿಷಯ ಜ್ಞಾನವನ್ನು ವೃದ್ದಿಸಿಕೊಂಡು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು. ಸ್ವಯಂ ಶಿಸ್ತು ಅಳವಡಿಸಿಕೊಳ್ಳುವುದು ಎಂದು ವಿವರಿಸಿದರು.
ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ, ಸಾಂಸ್ಕೃತಿಕ ಹಾಗೂ ಕ್ರೀಡೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ನೀಡಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ವಿವೇಕಾನಂದ ವಿದ್ಯಾ ಸಂಸ್ಥೆ ಅಧ್ಯಕ್ಷ ಕೆ.ಎನ್. ರಾಮಾಂಜನಪ್ಪ, ಗೌರವ ಕಾರ್ಯದರ್ಶಿ ಎಂ.ಆರ್.ಶಿವಣ್ಣ, ನಿರ್ದೇಶಕರಾದ ಸಿ.ನಾರಾಯಣಸ್ವಾಮಿ, ಎಂ.ಕೆ.ಚಂದ್ರಶೇಖರ್, ಸಿ.ಎಂ.ದೇವರಾಜ್, ಪ್ರಾಂಶುಪಾಲ ಎಂ.ಚಂದ್ರಕುಮಾರ್ ಹಾಜರಿದ್ದರು.

ರಾಷ್ಟ್ರೀಯ ಯುವಸಪ್ತಾಹ ಸಮಾರೋಪ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ

0

ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಜಿಲ್ಲಾ ನೆಹರು ಯುವಕೇಂದ್ರ, ರಾಷ್ಟ್ರೀಯ ಯುವಯೋಜನೆಯ ಆಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯುವಸಪ್ತಾಹ ಸಮಾರೋಪ ಹಾಗೂ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಜಿ.ಎಂ.ಪರಮನಹಟ್ಟಿ ಮಾತನಾಡಿದರು.
ಭಾರತೀಯ ಸಂಸ್ಕೃತಿ, ಇಲ್ಲಿನ ನೆಲದ ಮೌಲ್ಯತೆಗೆ ಇರುವ ಅದ್ಭುತ ಶಕ್ತಿಯಿಂದಾಗಿಯೇ ಸಾಕಷ್ಟು ದಬ್ಬಾಳಿಕೆಗಳು ನಡೆದಿದ್ದರೂ ಕೂಡ ಸೊರಗದೇ ಇಲ್ಲಿಯ ತನಕ ಉಳಿದುಕೊಂಡು ಬರಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.
ನಮ್ಮ ಸಂಸ್ಕೃತಿಯ ಮೇಲೆ ಅನೇಕ ವರ್ಷಗಳಿಂದಲೂ ನಿರಂತರವಾಗಿ ಅನ್ಯ ರಾಷ್ಟ್ರಗಳ ಪ್ರಬಾವದ ಹೊಡೆತ ಆಗುತ್ತಲೇ ಇದೆ. ಇಂದಿನ ಯುವಪೀಳಿಗೆಯು ಅನ್ಯಸಂಸ್ಕೃತಿಗೆ ಮೊರೆಹೋಗುತ್ತಿದ್ದು, ಭಾರತೀಯ ಸಂಸ್ಕೃತಿಗೆ ಪಾಶ್ಚಿಮಾತ್ಯದ ಪ್ರಭಾವವು ಕೆಟ್ಟ ಪರಿಣಾಮವನ್ನುಂಟು ಮಾಡುತ್ತಿದೆ. ಮಕ್ಕಳು ವಿದ್ಯಾರ್ಥಿದಿಸೆಯಲ್ಲಿದ್ದಾಗಲೇ ದಾರ್ಶನಿಕರ, ದೇಶಭಕ್ತರ ಜೀವನಚರಿತ್ರೆಯನ್ನು ಅಧ್ಯಯನ ಮಾಡಿ, ಜೀವನಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ ಮಾತನಾಡಿ, ಸಮಾಜಕ್ಕೆ ನಮ್ಮ ರಾಷ್ಟ್ರದ ಪುರಾತನ ಸಂಸ್ಕೃತಿ, ಇತಿಹಾಸದ ಬಗ್ಗೆ ಒಲವು, ಪ್ರೀತಿ, ಅರಿವಿನ ಅವಶ್ಯಕತೆ ಇದೆ. ಮುಂದಿನ ಪೀಳಿಗೆಗೆ ಸಂಸ್ಕೃತಿ, ಆಚರಣೆ, ಎಲ್ಲವನ್ನೂ ತಿಳಿಸಿದಿದ್ದರೆ ಸಂಸ್ಕೃತಿಯ ಅಧೋಮುಖದ ಸ್ಥಿತಿಗೆ ಕಾರಣವಾಗುತ್ತದೆ ಎಂದರು.
ಮಾತೃಭೂಮಿಗೊಂದು ಪತ್ರ ಬರೆಯುವ ಹಾಗೂ “ನಾ ಅರಿತುಕೊಂಡಂತೆ ಸ್ವಾಮಿವಿವೇಕಾನಂದ” ಎಂಬ ವಿಚಾರವಾಗಿ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಬಹುಮಾನಗಳನ್ನು ವಿತರಿಸಲಾಯಿತು.
ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ, ರಾಷ್ಟ್ರೀಯ ಯುವ ಯೋಜನೆ ರಾಜ್ಯ ಸಂಯೋಜಕ ವಿ.ಪ್ರಶಾಂತ್, ಎಸ್‌ಡಿಎಂಸಿ ಮಾಜಿ ಸದಸ್ಯ ಬಚ್ಚೇಗೌಡ, ಮುಖ್ಯಶಿಕ್ಷಕಿ ಉಮಾದೇವಿ, ಶಿಕ್ಷಕರಾದ ಬಿ.ನಾಗರಾಜು, ಎ.ಬಿ.ನಾಗರಾಜು, ಲಕ್ಷ್ಮಯ್ಯ, ಶಿಕ್ಷಕಿ ತಾಜೂನ್, ಅನಿತಾ ಹಾಜರಿದ್ದರು.

ಲೋಕಸಭೆ ಚುನಾವಣೆಗಾಗಿ ಬೇರುಮಟ್ಟದಿಂದ ಜೆಡಿಎಸ್ ಪಕ್ಷಸಂಘಟನೆ – ಬಿ.ಎನ್.ರವಿಕುಮಾರ್

0

ಪ್ರಸ್ತುತ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಎಸೆಯಬಲ್ಲ ಪ್ರಮುಖ ಪ್ರತಿಪಕ್ಷ ನಾಯಕರಾದ ಪ್ರಧಾನಿ ದೇವೇಗೌಡರು ಮುಂದಿನ ಲೋಕಸಭೆ ಚುನಾವಣೆಗಾಗಿ ಪಕ್ಷಸಂಘಟನೆ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಹಣಿಯಲು ಬೇರುಮಟ್ಟದಿಂದ ಜೆಡಿಎಸ್ ಸದೃಢಗೊಳಿಸಲಾಗುತ್ತಿದೆ ಎಂದು ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಅಮೀರ್ ಬಾಬಾ ದರ್ಗಾ ಆವರಣದಿಂದ ಗುರುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಜೆಡಿಎಸ್ ಅಲ್ಪಸಂಖ್ಯಾತರ ಸಮಾವೇಶಕ್ಕೆ, ಸುಮಾರು ೨೦ ಬಸ್ಸುಗಳಲ್ಲಿ ಹಾಗೂ ವಿವಿಧ ವಾಹನಗಳಲ್ಲಿ ಹೊರಟ ಒಂದೂವರೆ ಸಾವಿರ ಮಂದಿ ಜೆಡಿಎಸ್ ಮುಸ್ಲಿಂ ಕಾರ್ಯಕರ್ತರನ್ನು ಬೀಳ್ಕೊಟ್ಟು ಅವರು ಮಾತನಾಡಿದರು.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಅಲ್ಪಸಂಖ್ಯಾತರ ಸಮಾವೇಶ ನಡೆಯಲಿದ್ದು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಹ ಭಾಗವಹಿಸಲಿದ್ದಾರೆ. ಜೆಡಿಎಸ್‌ನ ಎಲ್ಲ ಶಾಸಕರು, ಸಚಿವರು, ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು, ಅಲ್ಪಸಂಖ್ಯಾತರ ಘಟಕದ ಮುಖಂಡರು ಭಾಗವಹಿಸಲಿದ್ದಾರೆ. ಮುಂದಿನ ಲೋಕಸಭೆ ಚುನಾವಣೆ ಕಾರ್ಯತಂತ್ರ ಹಾಗೂ ಪಕ್ಷ ಸಂಘಟನೆ ಬಗ್ಗೆ ಸಮಾವೇಶದಲ್ಲಿ ಚರ್ಚೆ ನಡೆಯಲಿದೆ. ಕೆಲವೊಂದು ನಿರ್ಣಯ ಕೈಗೊಳ್ಳಲಾಗುತ್ತದೆ. ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸಮ್ಮಿಶ್ರ ಸರ್ಕಾರದಲ್ಲಿ ಕೈಗೊಂಡಿರುವ ಯೋಜನೆಗಳನ್ನು ಜನರಿಗೆ ತಿಳಿಸುವುದು ಸಹ ಸಮಾವೇಶದ ಉದ್ದೇಶವಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ಶಿಡ್ಲಘಟ್ಟ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಸಕ್ರಿಯವಾಗಿದೆ. ಕ್ಷೇತ್ರದ ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್, ಪಕ್ಷದ ಕಾರ್ಯಕರ್ತರ ಬೆನ್ನೆಲುಬಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜೆ.ಡಿ.ಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು. ಜೆ.ಡಿ.ಎಸ್ ಪಕ್ಷ ಬಿ.ಜೆ.ಪಿ ಪಕ್ಷದೊಂದಿಗೆ ಕೈಜೋಡಿಸಿ ಸರ್ಕಾರ ರಚನೆ ಮಾಡುವುದೆಂಬ ಸುಳ್ಳು ಸುದ್ದಿ ಹಬ್ಬಿಸಿದ್ದನ್ನು ನಂಬಿದ ಅಲ್ಪಸಂಖ್ಯಾತರು ಜೆ.ಡಿ.ಎಸ್ ಪಕ್ಷಕ್ಕೆ ಮತ ನೀಡಿಲ್ಲ. ಇದು ಸುಳ್ಳು ಎಂಬುದು ಈಗ ಎಲ್ಲರಿಗೂ ಮನವರಿಕೆಯಾಗಿದೆ. ಯಾವುದೇ ಕಾರಣಕ್ಕೂ ಬಿ.ಜೆ.ಪಿ ಪಕ್ಷದೊಂದಿಗೆ ಜೆಡಿಎಸ್ ಕೈ ಜೋಡಿಸುವುದಿಲ್ಲ ಎಂದು ಸ್ವಷ್ಟನೆ ನೀಡಿದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಪಿ.ವಿ.ನಾಗರಾಜ್, ಹುಜಗೂರು ರಾಮಣ್ಣ, ಆದಿಲ್, ಸಿಖಂದರ್, ಷಫಿ, ಅಮ್ಜದ್, ಮಹಬೂಬ್ ಪಾಷ, ಲಕ್ಷ್ಮಿನಾರಾಯಣ, ತಾದೂರು ರಘು, ರಾಜಶೇಖರ್, ಧರ್ಮೇಂದ್ರ, ಯೂಸುಫ್, ನಯಾಜ್, ಸುಹೇಲ್, ಬಾಬು, ಅಮೀರ್ ಜಾನ್ ಹಾಜರಿದ್ದರು.

ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆ

0

ತಾಲ್ಲೂಕಿನ ರೈತರ ಜೀವನಮಟ್ಟ ಸುಧಾರಿಸಲು ಹೈನುಗಾರಿಕೆಯೇ ಮುಖ್ಯ ಕಾರಣವಾಗಿದೆ ಎಂದು ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಹೇಳಿದರು.
ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಗಿಲಡಪಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ೧೫ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಕಟ್ಟಡದ ಉದ್ಘಾಟನೆಯನ್ನು ಗುರುವಾರ ನೆರವೇರಿಸಿ ವರು ಮಾತನಾಡಿದರು.
ಕಳೆದ ಮೂರು ದಶಕಗಳ ಹಿಂದೆ ಈ ಭಾಗದ ರೈತರ ಉಪಕಸುಬಾಗಿದ್ದ ಹೈನುಗಾರಿಕೆ ಇದೀಗ ಮುಖ್ಯ ಕಸುಬಾಗಿ ರೂಪುಗೊಂಡಿದೆ. ಈ ಭಾಗದಲ್ಲಿ ಕುಡಿಯುವ ನೀರಿಗೂ ಆಹಾಕಾರ ಶುರುವಾಗಿದ್ದು ಕೃಷಿ ಮಾಡಲಾಗದೇ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಪ್ರತಿನಿತ್ಯ ತಾಲ್ಲೂಕಿನಿಂದ ಸುಮಾರು ೧ ಲಕ್ಷ ಲೀಟರಿಗೂ ಹೆಚ್ಚು ಹಾಲು ಡೈರಿಗಳ ಮುಖಂತರ ಒಕ್ಕೂಟಕ್ಕೆ ಪೂರೈಸಲಾಗುತ್ತಿದೆ ಎಂದರು.
ಶಿಬಿರ ಘಟಕದ ಉಪವ್ಯವಸ್ಥಾಪಕ ಡಾ.ಬಿ.ವಿ.ಚಂದ್ರಶೇಖರ್ ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕು ಹಾಲು ಉತ್ಪಾದನೆ ಮತ್ತು ಗುಣಮಟ್ಟದಲ್ಲಿ ಜಿಲ್ಲೆಯಲ್ಲಿಯೇ ಮೊದಲನೇ ಸ್ಥಾನದಲ್ಲಿದೆ. ಈ ಭಾಗದ ರೈತರು ತಮ್ಮ ರಾಸುಗಳಿಗೆ ವಿಮೆ ಮಾಡಿಸುವ ಮೂಲಕ ಕೋಚಿಮುಲ್ ನಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಮತ್ತಷ್ಟು ಮುಂದುವರೆಯಬೇಕು ಎಂದರು.
ಅತಿ ಹೆಚ್ಚಿನ ಹಾಲು ಸರಬರಾಜು ಮಾಡಿರುವ ರೈತರಾದ ಶಿವನಂಜುಂಡಸ್ವಾಮಿ, ರಾಮರೆಡ್ಡಿ ಮತ್ತು ನಾರಾಯಣಗೌಡರನ್ನು ಸನ್ಮಾನಿಸಲಾಯಿತು.
ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಚಂದ್ರೇಗೌಡ, ಮುಗಿಲಡಪಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ನಂಜಪ್ಪ, ನಿರ್ದೇಶಕರಾದ ಮುನಿಕದಿರಪ್ಪ, ಆರ್.ವೆಂಕಟೇಶ್, ಗಂಗಪ್ಪ, ನರಸಿಂಹಪ್ಪ, ವಿ.ವೆಂಕಟೇಶ್, ಚನ್ನಮ್ಮ ಹಾಜರಿದ್ದರು.

ಮಾರುಕಟ್ಟೆ ಮತ್ತು ತರಬೇತಿ ಕಾರ್ಯಾಗಾರ ಮತ್ತು ಕಸಾಪ ನಡಿಗೆ ಸಾಧಕರ ಕಡೆಗೆ ಕಾರ್ಯಕ್ರಮ

0

ಹಳ್ಳಿಗಳ ಸಮೀಪದ ಮುಖ್ಯರಸ್ತೆಯ ಬದಿಯಲ್ಲಿ ಚಿಕ್ಕಚಿಕ್ಕ ಮಾರುಕಟ್ಟೆಯನ್ನು ರೂಪಿಸಿಕೊಂಡು ತಮ್ಮ ಉತ್ಪನ್ನಗಳನ್ನು ಮಾರಿದರೆ ಮಾತ್ರ ಸಣ್ಣ ರೈತರಿಗೆ ಉಳಿಗಾಲವಿದೆ ಎಂದು ರಾಜ್ಯ ಕೃಷಿ ಮಾರಾಟ ಮಂಡಳಿ ನಿವೃತ್ತ ಅಧಿಕಾರಿ ಬಚ್ಚೇಗೌಡ ತಿಳಿಸಿದರು.
ತಾಲ್ಲೂಕಿನ ಕಾಚಹಳ್ಳಿಯ ರೈತ ಮಹಿಳೆ ಶಾಂತಮ್ಮ ಅವರ ಮನೆಯ ಆವರಣದಲ್ಲಿ ಬುಧವಾರ ರಾಜ್ಯ ಕೃಷಿ ಮಾರಾಟ ಮಂಡಳಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಿರಿ ಸಮೃದ್ಧ ರೈತಕೂಟ ಮತ್ತು ಭಾರತಾಂಬೆ ಮಹಿಳಾ ರೈತಕೂಟದ ಸಹಯೋಗದಲ್ಲಿ ನಡೆದ “ಮಾರುಕಟ್ಟೆ ಕಾರ್ಯಾಗಾರ ಮತ್ತು ತರಬೇತಿ ಕಾರ್ಯಾಗಾರ” ಮತ್ತು “ಕಸಾಪ ನಡಿಗೆ ಸಾಧಕರ ಕಡೆಗೆ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ನೆರೆಯ ಭೂತಾನ್ ದೇಶದಲ್ಲಿ ರಸ್ತೆ ಬದಿಯಲ್ಲಿ ಸರ್ಕಾರದ ವತಿಯಿಂದ ರೈತರ ಉತ್ಪನ್ನಗಳ ಮಾರಾಟಕ್ಕಾಗಿ ತಂಗುದಾಣಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಅದನ್ನು ಇಲ್ಲಿಯೂ ಅಳವಡಿಸಿಕೊಂಡರೆ ಮಧ್ಯವರ್ತಿಗಳು, ಬಾಡಿಗೆ, ಸುಂಕ, ಸಾಗಾಣಿಕೆಯ ವೆಚ್ಚ, ಕಮಿಷನ್ ಉಳಿಸಬಹುದು. ಸಣ್ಣ ರೈತರ ಆರ್ಥಿಕಮಟ್ಟ ಸುಧಾರಣೆಗೆ ದಾರಿಯಾಗುತ್ತದೆ. ಇದಕ್ಕೆ ರಾಜ್ಯ ಕೃಷಿ ಮಾರಾಟ ಮಂಡಳಿಯಿಂದಲೂ ನೆರವು ಸಿಗಲಿದೆ ಎಂದು ವಿವರಿಸಿದರು.
ರೇಷ್ಮೆ ಜಿಲ್ಲಾ ಉಪನಿರ್ದೇಶಕ ಬೈರಾರೆಡ್ಡಿ ಮಾತನಾಡಿ, ರೇಷ್ಮೆ ಬೆಳೆಗಾರರು ಬೈವೋಲ್ಟೀನ್ ಬೆಳೆಯಲು ಮನಸ್ಸು ಮಾಡಬೇಕು. ಆಗ ಮಾತ್ರ ನಾವು ಚೀನಾ ದೇಶದವರನ್ನು ರೇಷ್ಮೆಯಲ್ಲಿ ಮೀರಿಸಲು ಸಾಧ್ಯ. ಸರ್ಕಾರದ ಸಹಾಯಧನವನ್ನು ಪಡೆಯಲು ತೊಂದರೆಗಳಿದ್ದರೆ ತಿಳಿಸಿ, ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ಕೃಷಿಯಲ್ಲಿ ರೈತಮಹಿಳೆಯರ ಸಾಧನೆ ಪ್ರಮುಖವಾದದ್ದು. ಕನ್ನಡವು ಶ್ರಮಸಂಸ್ಕೃತಿಯನ್ನು ಒಳಗೊಂಡಿದೆ. ಹಳ್ಳಿಯ ಸೊಗಡು, ಜಾನಪದ ಉಳಿಸಿದರೆ ಮಾತ್ರ ಕನ್ನಡತನ ಉಳಿಯುತ್ತದೆ. ಕಸಾಪ ಪ್ರತಿಯೊಂದು ಹಳ್ಳಿಯನ್ನು, ಮನಮನದಲ್ಲೂ ಸೇರಬೇಕು ಎಂಬ ಉದ್ದೇಶದಿಂದ ಎಲೆಮರೆಯ ಕಾಯಿಯಂತಿರುವ ಸಾಧಕರನ್ನು ಗುರುತಿಸಿ ಗೌರವಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಕ್ರಾಂತಿ ಸುಗ್ಗಿ ರಾಶಿ ಪೂಜೆಯನ್ನು ನೆರವೇರಿಸಲಾಯಿತು. ಕಸಾಪ ತಾಲ್ಲೂಕು ಘಟಕದ ವತಿಯಿಂದ ಭಾರತಾಂಬೆ ರೈತಕೂಟದ ಅಧ್ಯಕ್ಷೆ ರತ್ನಮ್ಮ ಮತ್ತು ಮುನಿಯಪ್ಪ ದಂಪತಿಯನ್ನು ಗೌರವಿಸಲಾಯಿತು.
ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್.ಜಿ.ಗೋಪಾಲಗೌಡ, ಆತ್ಮಾ ಯೋಜನಾಧಿಕಾರಿ ಅಶ್ವತ್ಥನಾರಾಯಣಗೌಡ, ಸಾವಯವ ಕೃಷಿಕ ವೆಂಕಟಸ್ವಾಮಿರೆಡ್ಡಿ, ಮಳ್ಳೂರು ಎಂ.ಎನ್.ಗೋಪಾಲಪ್ಪ, ಪಿಳ್ಳವೆಂಕಟಸ್ವಾಮಪ್ಪ, ನಾಗರಾಜ್, ರಾಮಮೂರ್ತಿ, ನಾಗೇಂದ್ರಪ್ರಸಾದ್, ನವೀನ್, ಮೂರ್ತಿ, ಕಸಾಪ ಪದಾಧಿಕಾರಿಗಳಾದ ಶಂಕರ್, ಮಂಜುನಾಥ್ ಹಾಜರಿದ್ದರು.

ಕಸಾಪ ಮತ್ತು ಗ್ರಾಮಸ್ಥರ ಸಹಯೋಗದಲ್ಲಿ ಸುಗ್ಗಿ-ಹುಗ್ಗಿ ಸಂಕ್ರಾಂತಿ ಜಾನಪದ ಸಂಭ್ರಮ

0

ತಾಲ್ಲೂಕಿನ ಹರಳಹಳ್ಳಿ ಗ್ರಾಮದ ತಿರುಮಲ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಕಸಾಪ ತಾಲ್ಲೂಕು ಘಟಕ ಮತ್ತು ಗ್ರಾಮಸ್ಥರ ಸಹಯೋಗದಲ್ಲಿ ಆಚರಿಸಿದ “ಸುಗ್ಗಿ-ಹುಗ್ಗಿ ಸಂಕ್ರಾಂತಿ ಜಾನಪದ ಸಂಭ್ರಮ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಧಾರ್ಮಿಕ ಹಿನ್ನೆಲೆಯ ಜತೆಗೆ ರೈತರಿಗೆ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವನ್ನು ಹಂಚಿಕೊಂಡು ಸಂಭ್ರಮಿಸುವ ದಿನ ಸಂಕ್ರಾಂತಿ ಹಬ್ಬದ ವಿಶೇಷ ಎಂದು ಅವರು ತಿಳಿಸಿದರು.
ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯೆಂದರೆ, ರೈತಪರಿವಾರವು ತಮ್ಮ ಬೆಳೆ, ಹೊಲ, ಎತ್ತು, ದನ ಕರುಗಳ ಜತೆ ಸಂಭ್ರಮಿಸುವ ಹಬ್ಬ. ನಮ್ಮಲ್ಲಿ ಎತ್ತುಗಳನ್ನು ದೇವರೆಂದು ಭಾವಿಸುತ್ತೇವೆ. ವಿಶೇಷವೆಂದರೆ ಹಬ್ಬಕ್ಕೆ ಮಾಡಿದ ತಿಂಡಿಯನ್ನೇ ಈ ದಿನ ಎತ್ತುಗಳಿಗೆ ತಿನ್ನಿಸಲಾಗುತ್ತದೆ. ಹಬ್ಬದಡುಗೆಯನ್ನು ಎತ್ತಿಗೂ ತಿನ್ನಿಸುವ ಮೂಲಕ ಎತ್ತನ್ನು ಮನೆ ಮಕ್ಕಳಂತೆ ನೋಡಿಕೊಳ್ಳುವ ಆಶಯ ವ್ಯಕ್ತವಾಗುತ್ತದೆ ಎಂದು ಹೇಳಿದರು.
ಹರಳಹಳ್ಳಿ ತಿರುಮಲ ದೇವಸ್ಥಾನದ ಅರ್ಚಕ ಕೆ.ವಿ.ನಾರಾಯಣಸ್ವಾಮಿ ಮಾತನಾಡಿ, ಹದವಾಗಿ ಹುರಿದ ಎಳ್ಳು, ಶೇಂಗಾ, ಹುರಿಗಡಲೆ, ಒಣಕೊಬ್ಬರಿ ತುಂಡು, ಬೆಲ್ಲದಚ್ಚು , ಜೊತೆಗೆ ಕಬ್ಬಿನ ತುಂಡುಗಳ ಮಿಶ್ರಣವನ್ನು ತಯಾರಿಸಿ, ಅದನ್ನು ಎಳ್ಳುಬೀರಿ ‘ಎಳ್ಳು ಬೆಲ್ಲ ಕೊಳ್ಳಿ, ಒಳ್ಳೊಳ್ಳೆ ಮಾತಾಡಿ’ ಎನ್ನುವುದು ಸಂಕ್ರಮಣದ ಸಂಭ್ರಮವನ್ನು ಹಂಚಿಕೊಳ್ಳುವ ವಿಧಾನ ಎಂದರು.
ಕಲಾವಿದ ನಾಮದೇವ್ ಮಾತನಾಡಿ, ಗ್ರಾಮಗಳಲ್ಲಿ ಎತ್ತುಗಳು ಕಡಿಮೆಯಾಗುತ್ತಿವೆ, ಬಹುತೇಕ ಕೃಷಿ ಪರಿಕರಗಳು ಮಾಯವಾಗಿವೆ. ಆಧುನಿಕತೆಯು ಜಾನಪದವನ್ನು ಕಳೆಯಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ರಂಗೋಲಿ ಹಾಕಿ, ರಾಗಿಯ ರಾಶಿಗೆ ಮಾವಿನ ಸೊಪ್ಪು, ಕಬ್ಬು, ಹೂಗಳಿಂದ ಅಲಂಕರಿಸಿ ಪೂಜೆಯನ್ನು ಮಾಡಿ, ಕೃಷಿ ಪರಿಕರಗಳಾದ ನೊಗ, ನೇಗಿಲು, ಮೊರ, ಕುಡುಗೋಲು, ಜರಡಿ, ಮುಣಗೋಲು ಮುಂತಾದ ಕಣದ ಸಾಮಾನುಗಳನ್ನು ಜೋಡಿಸಿಟ್ಟು, ಕಬ್ಬು, ಕಾಶಿ ಮತ್ತು ಊಶಿ ಹುಲ್ಲು, ಮಾವಿನ ಸೊಪ್ಪು, ಶೃಂಗರಿಸಿದ ಎತ್ತುಗಳ ಜೊತೆಯಲ್ಲಿಟ್ಟು ಪೂಜೆ ಸಲ್ಲಿಸಿದರು. ಅಲಂಕರಿಸಿದ ಎತ್ತುಗಳಿಗೆ ಅಕ್ಕಿ, ಬೆಲ್ಲ, ಬಾಳೆಹಣ್ಣು, ಕಬ್ಬನ್ನು ತಿನ್ನಿಸಿದರು. ಭಾಗವಹಿಸಿದ್ದವರಿಗೆಲ್ಲಾ ಎಳ್ಳು ಬೆಲ್ಲವನ್ನು ಹಂಚಲಾಯಿತು.
ಕಸಾಪ ತಾಲ್ಲೂಕು ಘಟಕದ ವತಿಯಿಂದ ಗ್ರಾಮದ ಹಿರಿಯ ಸೊಣ್ಣೇಗೌಡ ಮತ್ತು ರೈತ ನಾರಾಯಣಸ್ವಾಮಿ ಅವರಿಗೆ ಪ್ರಮಾಣಪತ್ರ ಮತ್ತು ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು. ಗ್ರಾಮದ ಶ್ರೀ ಭುವನೇಶ್ವರಿ ಕನ್ನಡ ಯುವಕರ ಸಂಘಕ್ಕೆ ಕಸಾಪ ವತಿಯಿಂದ ಪ್ರಮಾಣಪತ್ರ ಮತ್ತು ಪುಸ್ತಕವನ್ನು ನೀಡಲಾಯಿತು.
ಕಸಾಪ ತಾಲ್ಲೂಕು ಗೌರವ ಕಾರ್ಯದರ್ಶಿ ಚಾಂದ್ ಪಾಷ , ನಗರ ಘಟಕದ ಅಧ್ಯಕ್ಷ ಸಿ.ಎನ್.ಮುನಿರಾಜು, ಸಂಘ ಸಂಸ್ಥೆಗಳ ಪ್ರತಿನಿಧಿ ಶಂಕರ್, ಮಹಿಳಾ ಪ್ರತಿನಿಧಿ ದಾಕ್ಷಾಯಿಣಿ, ಶಿಕ್ಷಕಿ ಚಂದ್ರಕಲಾ, ಜಸ್ಮಿತಾ ಡ್ಯಾನ್ಸ್ ಅಕಾಡೆಮಿ ಧನುಶ್ರೀ ಮಾನಸ್, ನೃತ್ಯ ನಿರ್ದೇಶಕ ಸುಬ್ಬು, ಗ್ರಾಮ ಪಂಚಾಯಿತಿ ಸದಸ್ಯೆ ಸುಮಿತ್ರಮ್ಮ ಕೃಷ್ಣಪ್ಪ, ಪದ್ಮಮ್ಮ, ನಂದಕುಮಾರ್, ಶಶಿಕುಮಾರ್, ಶ್ರೀನಿವಾಸ್, ಎಂ.ಪಿ.ಸಿ.ಎಸ್ ಅಧ್ಯಕ್ಷ ಚನ್ನಪ್ಪ, ನಂದೀಶ್ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಸಂಕ್ರಾಂತಿ ಕವಿ ಗೋಷ್ಠಿ ಹಾಗೂ ಕುವೆಂಪು ರವರ ಜನ್ಮ ದಿನಾಚರಣೆ

0

ತಾಲ್ಲೂಕಿನ ಆನೂರು ಗ್ರಾಮದಲ್ಲಿ ಸಂಕ್ರಾಂತಿ ಅಂಗವಾಗಿ ತಾಲ್ಲೂಕು ವಚನ ಸಾಹಿತ್ಯ ಪರಿಷತ್ತಿನ ವತಿಯಿಂದ ಶ್ರೀನಿವಾಸ್ ಅವರ ಮನೆಯಲ್ಲಿ ಸೋಮವಾರ ಸಂಜೆ ಏರ್ಪಡಿಸಲಾಗಿದ್ದ “ಸಂಕ್ರಾಂತಿ ಕವಿ ಗೋಷ್ಠಿ ಹಾಗೂ ಕುವೆಂಪು ರವರ ಜನ್ಮ ದಿನಾಚರಣೆ”ಯ ಕಾರ್ಯಕ್ರಮ ಉದ್ಘಾಟಿಸಿ ವೈದ್ಯ ಡಾ.ರಮೇಶ್ ಕೋಲಾರ ಮಾತನಾಡಿದರು.
ಪರಂಪರಾನುಗತವಾಗಿ ನಾವುಗಳು ಆಚರಿಸುವ ಹಬ್ಬ ಹರಿದಿನಗಳಲ್ಲಿ ಜಾನಪದ ಸಂಸ್ಕೃತಿಯು ಹಾಸುಹೊಕ್ಕಾಗಿದೆ. ಕುವೆಂಪುರವರು ಮಾತೃಭಾಷೆಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕೆಂದು ಒತ್ತಾಯಿಸುತ್ತಿದ್ದರು ಎಂದರು.
ಶಿಕ್ಷಕ ಕೆಂಪಣ್ಣ ಕುವೆಂಪು ವರ ಸಾಹಿತ್ಯ ಮತ್ತು ಜೀವನದ ಬಗ್ಗೆ ವಿವರಿಸಿದರು. ಶಿಕ್ಷಕ ವಿ.ಕೃಷ್ಣ ಸಂಕ್ರಾಂತಿ ಹಬ್ಬದ ಬಗ್ಗೆ ಮಾತನಾಡಿದರು.
ಕವಿ ಗೋಷ್ಠಿಯಲ್ಲಿ ಶ್ಯಾಮಸುಂದರ್, ರೂಪಸಿ ರಮೇಶ್, ಟಿ ಟಿ ನರಸಿಂಹಪ್ಪ, ವೇಣು ಸೇರಿದಂತೆ ವಿವಿಧ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು. ಆನೂರು ಶ್ರೀನಿವಾಸ್ ಮತ್ತು ರೂಪ ದಂಪತಿಯನ್ನು ಸನ್ಮಾನಿಸಲಾಯಿತು.
ವಚನ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ನಾರಾಯಣ ಸ್ವಾಮಿ, ಸುಂದರಾಚಾರಿ, ಬೈರೇಗೌಡ, ರವಿ ಪ್ರಕಾಶ್, ಗೋಪಾಲ ಗೌಡ, ಮಂಜುನಾಥ್, ವೆಂಕಟಸ್ವಾಮಿರೆಡ್ಡಿ, ಸುರೇಶ್, ಗ್ರಾಮ ಪಂಚಾಯತಿ ಸದಸ್ಯೆ ಉಮಾ, ಸರಸ್ವತಮ್ಮ ಹಾಜರಿದ್ದರು.

ಸಂಕ್ರಾಂತಿ ಹಬ್ಬದ ಪ್ರಯುಕ್ತ ರಾಸುಗಳ ಮೆರವಣಿಗೆ

0

ಉಲ್ಲೂರುಪೇಟೆಯಶ್ರೀರಾಮ ಭಜನೆ ಮಂದಿರದಲ್ಲಿ ಮಂಗಳವಾರ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ದೇವರಿಗೆ ಅಭಿಷೇಕ ಮಾಡಲಾಯಿತು. ಶ್ರೀರಾಮ, ಮಾರಮ್ಮ ಮತ್ತು ಬಸವಣ್ಣ ದೇವರುಗಳಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು.
ಸಂಜೆ ಶ್ರೀಕೃಷ್ಣಸ್ವಾಮಿಯ ತಂಜಾವೂರು ಚಿತ್ರಕಲೆಯ ಚಿತ್ರಪಟವನ್ನು ಪಲ್ಲಕ್ಕಿಯಲ್ಲಿಟ್ಟು ಅಲಂಕರಿಸಿರುವ ಎತ್ತುಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.

ಪತೀಕ್ಷಾರ್ಥಿ ಕೃಷಿ ಅಧಿಕಾರಿಗಳಿಂದ ಸಮಗ್ರ ಕೃಷಿ ಪದ್ಧತಿಯ ವೀಕ್ಷಣೆ

0

ಜಿಲ್ಲೆಯಾದ್ಯಂತ ನೂತನವಾಗಿ ಕೃಷಿ ಇಲಾಖೆಗೆ ನೇಮಕಗೊಂಡಿರುವ ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಹಾಗೂ ಸಹಾಯಕ ಕೃಷಿ ಅಧಿಕಾರಿಗಳು ಸಾಮಾನ್ಯ ಬುನಾದಿ ತರಬೇತಿಯಡಿ ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಜಿ.ಗೋಪಾಲಗೌಡ ಅವರ ತೋಟಕ್ಕೆ ಶನಿವಾರ ಭೇಟಿ ನೀಡಿದ್ದರು.
ಜಂಟಿ ಕೃಷಿ ನಿರ್ದೇಶಕರ ಸೂಚನೆಯ ಮೇರೆಗೆ ರೇಷ್ಮೆ ಇಲಾಖೆಯ ಸಹಯೋಗದಲ್ಲಿ ಕ್ಷೇತ್ರ ಭೇಟಿಗಾಗಿ ಆಗಮಿಸಿದ್ದ ಸುಮಾರು ೧೪ ಮಂದಿ ನೂತನ ಅಧಿಕಾರಿಗಳು ಪ್ರಗತಿಪರ ರೈತ ಗೋಪಾಲಗೌಡರೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು.
ಸಮಗ್ರ ಕೃಷಿ ಪದ್ಧತಿ, ಕೃಷಿ ಹೊಂಡದಿಂದ ನೀರಿನ ಸದ್ಬಳಕೆ, ರೇಷ್ಮೆಯಲ್ಲಿ ಹಸಿರು ಎಲೆ ಗೊಬ್ಬರವಾಗಿ ಪರಿವರ್ತಿಸಲು ಸೆಣಬು ಹುರಳಿ ಬೆಳೆದಿರುವುದು, ಕುರಿ, ಹಸು ಸಾಕಣೆ, ರೇಷ್ಮೆ ಕೃಷಿ ಹಾಗೂ ಜಮೀನಿನ ಸುತ್ತಲೂ ಸಿಲ್ವರ್ ಮರ, ೨೪ ಅಡಿಗೊಂದರಂತೆ ಮಾವು, ಆರು ಅಡಿ ಅಂತರದಲ್ಲಿ ಹಿಪ್ಪುನೇರಳೆ, ಅದರ ನಡುವೆ ತರಕಾರಿ ಬೆಳೆಗಳು, ಕೃಷಿ ಹೊಂಡ, ಅದರ ಸುತ್ತಲೂ ಮಾವು, ಗೋಡಂಬಿ, ನಿಂಬೆ, ಹಲಸು, ಪಪ್ಪಾಯ, ಬಾಳೆ, ನೆಲ್ಲಿ, ಸೀಬೆ, ಸಪೋಟ, ದಾಳಿಂಬೆ, ಕಿತ್ತಳೆ, ಚಕ್ಕೆ ಗಿಡ, ಗೆಣಸು ಮುಂತಾದವುಗಳನ್ನು ಬೆಳೆದಿದ್ದು ಎಲ್ಲರೂ ಸಮಗ್ರ ಬೇಸಾಯ ಪದ್ದತಿ ಅಳವಡಿಸಿಕೊಂಡಿದ್ದೇ ಆದಲ್ಲಿ ಈ ಭಾಗದ ರೈತನಿಗೆ ಲಾಭದಾಯಕವಾಗಲಿದೆ ಎಂಬುದನ್ನು ರೈತ ಹೆಚ್.ಜಿ.ಗೋಪಾಲಗೌಡ ನೂತನ ಅಧಿಕಾರಿಗಳಿಗೆ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ರಾಮಕೃಷ್ಣ, ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ್ ಹಾಜರಿದ್ದರು.

ಮಹರ್ಷಿ ವಾಲ್ಮೀಕಿ ದೇವಾಲಯಕ್ಕೆ ಗುರುಗಳ ಭೇಟಿ

0

ವಾಲ್ಮೀಕಿ ಜಾತ್ರಾ ಮಹೋತ್ಸವ ಇಡೀ ದೇಶದ ಗಮನ ಸೆಳೆಯುವ ಜೊತೆಗೆ ಸಮುದಾಯದವರಿಗೆ ಸಾಮಾಜಿಕ ನ್ಯಾಯ ಪಡೆಯಲು ವೇದಿಕೆಯಾಗಬೇಕು ಎಂದು ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಸ್ವಾಮಿ ಹೇಳಿದರು.
ಮುಂಬರುವ ಫೆಬ್ರುವರಿ ೮ ಮತ್ತು ೯ ರಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿರುವ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಆಯೋಜಿಸಿರುವ ವಾಲ್ಮೀಕಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ನಗರದ ಶ್ರೀ ಮಹರ್ಷಿ ವಾಲ್ಮೀಕಿ ದೇವಾಲಯದ ಆವರಣದಲ್ಲಿ ಸಮುದಾಯದ ಮುಖಂಡರ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಮಾರಂಭದಲ್ಲಿ ರಾಜ್ಯದ ವಿವಿದೆಡೆಯಿಂದ ಸುಮಾರು ೩ ಲಕ್ಷಕ್ಕೂ ಹೆಚ್ಚು ಜನ ಆಗಮಿಸುವ ನಿರೀಕ್ಷೆಯಿದ್ದು ನಾಯಕ ಸಮಾಜಕ್ಕೆ ಶೇ ೭.೫ ಮೀಸಲಾತಿ ಕಲ್ಪಿಸುವುದೂ ಸೇರಿದಂತೆ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ನಾಯಕ ಸಮುದಾಯದ ನೋವು ಸರ್ಕಾರಗಳಿಗೆ ತಿಳಿಯುವಂತೆ ಮಾಡಬೇಕಾಗಿದೆ ಎಂದರು.
ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಬಾದ ಜಿಲ್ಲಾಧ್ಯಕ್ಷ ಬಂಕ್ ಮುನಿಯಪ್ಪ ಮಾತನಾಡಿ, ಸಮುದಾಯದ ಪ್ರತಿಯೊಬ್ಬರೂ ವರ್ಷಕ್ಕೊಮ್ಮೆಯಾದರೂ ಗುರುಪೀಠಕ್ಕೆ ಭೇಟಿ ನೀಡುವುದನ್ನು ರೂಡಿಸಿಕೊಳ್ಳಬೇಕು. ಇದರಿಂದ ರಾಜ್ಯಾದ್ಯಂತ ಇರುವ ಸಮುದಾಯದವರು ಒಗ್ಗಟ್ಟಾಗಿರಲು ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಜಾತ್ರಾ ಮಹೋತ್ಸವದ ಆಚರಣಾ ಸಮಿತಿ ರಚಿಸಿಕೊಂಡು ತಾಲ್ಲೂಕಿನಾದ್ಯಂತ ಇರುವ ವಾಲ್ಮೀಕಿ ಸಮುದಾಯದ ಪ್ರತಿ ಮನೆಗೂ ಜಾತ್ರೆಗ ಆಹ್ವಾನ ನೀಡುವುದೂ ಸೇರಿದಂತೆ ಅವರಿಂದ ದೇಣಿಗೆ ಸಂಗ್ರಹಿಸಿ ಗುರುಪೀಠಕ್ಕೆ ತಲುಪಿಸಲು ತಾಲ್ಲೂಕು ಸಮಿತಿಗೆ ಜವಾಬ್ದಾರಿ ನೀಡಲಾಯಿತು.
ದೇಣಿಗೆ ನೀಡುವವರ ಹೆಸರು, ಗೋತ್ರ ಹಾಗು ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿದಲ್ಲಿ ಮುಂದಿನ ದಿನಗಳಲ್ಲಿ ನಮ್ಮದೇ ಮಹರ್ಷಿ ವಾಲ್ಮೀಕಿ ವೆಬ್‌ಸೈಟಿನಲ್ಲಿ ಆಯಾ ತಾಲ್ಲೂಕಿನಲ್ಲಿರುವ ವಾಲ್ಮೀಕಿ ಸಮುದಾಯದ ಜನಸಂಖ್ಯೆಯ ಹಾಗೂ ವಿವರಗಳನ್ನು ದಾಖಲಿಸಲಾಗುವುದು ಎಂದರು.
ಪ್ರತಿ ತಾಲ್ಲೂಕಿನಿಂದಲೂ ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಕಾರ್ಯದರ್ಶಿ ಬಸವರಾಜ ನಾಯಕ್, ಶ್ರೀನಿವಾಸಪುರದ ಗೋವಿಂದಸ್ವಾಮಿ, ಚಿಂತಾಮಣಿಯ ಅಗ್ರಹಾರ ಮುರಳಿ, ತಾಲ್ಲೂಕಿನ ಮುಖಂಡರಾದ ಎನ್.ಮುನಿಯಪ್ಪ, ತಾಲ್ಲೂಕು ಘಟಕ, ಯುವಘಟಕ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಹಾಜರಿದ್ದರು.

ಜಿಲ್ಲಾ ಪಂಚಾಯಿತಿ ಸಿಇಓರಿಂದ ಹಿರೇಬಲ್ಲ ಕೆರೆಯ ಹೂಳೆತ್ತುವ ಕಾಮಗಾರಿ ವೀಕ್ಷಣೆ

0

ಗ್ರಾಮೀಣ ಭಾಗದ ಅಭಿವೃದ್ದಿಯ ಹಿತದೃಷ್ಠಿಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನರೇಗಾ ಯೋಜನೆಯಡಿ ತಾಲ್ಲೂಕಿನ ಎಲ್ಲಾ ೨೮ ಗ್ರಾಮ ಪಂಚಾಯಿತಿಗಳಲ್ಲಿಯೂ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನಿಡಲಾಗಿದೆ. ರೈತರು ಸೇರಿದಂತೆ ಕೂಲಿಕಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ ಹೇಳಿದರು.
ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿಯ ಗುಡಿಹಳ್ಳಿ, ಹೊಸಪೇಟೆ ಗ್ರಾಮ ಪಂಚಾಯಿತಿಯ ಹಿರೇಬಲ್ಲ ಹಾಗೂ ಕಲ್ಯಾಪುರ ಗ್ರಾಮಗಳಿಗೆ ಗುರುವಾರ ಭೇಟಿ ನೀಡಿ ನರೇಗಾ ಯೋಜನೆಯಡಿ ಕೈಗೊಂಡಿರುವ ಕೆರೆಗಳ ಹೂಳೆತ್ತುವ ಕಾಮಗಾರಿ ಸೇರಿದಂತೆ ಕುಡಿಯುವ ನೀರಿನ ಪೂರೈಕೆಗಾಗಿ ಗ್ರಾಮ ಪಂಚಾಯಿತಿಗಳು ಕೈಗೊಂಡಿರುವ ಕ್ರಮಗಳನ್ನು ವೀಕ್ಷಿಸಿ ಮಾತನಾಡಿದರು.
ಈಗಾಗಲೇ ಶಿಡ್ಲಘಟ್ಟ ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಸರ್ಕಾರ ಘೋಷಣೆ ಮಾಡಿದ್ದು ಜನರು ಕೆಲಸ ಅರಸಿ ಬೇರೆಡೆಗೆ ವಲಸೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ನರೇಗಾ ಯೋಜನೆಯಡಿ ಕೆರೆಗಳ ಹೂಳೆತ್ತುವ ಕೆಲಸ ಪ್ರಾರಂಭಿಸಲಾಗಿದೆ. ಬರಗಾಲ ಇರುವುದರಿಂದ ಪ್ರತಿ ಕುಟುಂಬಕ್ಕೆ ೧೦೦ ದಿನಗಳ ಕೂಲಿ ಜೊತೆಗೆ ೫೦ ಹೆಚ್ಚುವರಿ ಕೂಲಿ ದಿನಗಳನ್ನು ಈ ಯೋಜನೆಯಡಿ ಕಲ್ಪಿಸಿದ್ದು ಒಟ್ಟಾರೆ ಒಂದು ಕುಟುಂಬಕ್ಕೆ ೧೫೦ ದಿನ ಕೂಲಿ ಹಾಗು ಪ್ರತಿ ದಿನಕ್ಕೆ ೨೪೯ ರೂ ಗಳಂತೆ ಕೂಲಿ ಪಾವತಿಸಲು ಕ್ರಮವಹಿಲಾಗಿದೆ ಎಂದರು.
ತಾಲ್ಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿ ಸೇರಿದಂತೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಕ್ರಮವಹಿಸಬೇಕು. ಬರ ಪರಿಸ್ಥಿತಿ ಎದುರಿಸಲು ಎಲ್ಲಾ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು ಸಿದ್ಧರಿರಲು ಈಗಾಗಲೇ ಸೂಚನೆ ನೀಡಲಾಗಿದ್ದು ಅಸಡ್ಡೆ ತೋರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಹಿಸಲಾಗುವುದೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಇಓ ಬಿ.ಶಿವಕುಮಾರ್, ನರೇಗಾ ಸಹಾಯಕ ನಿದೇಶಕ ಸಿ.ಎಸ್.ಶ್ರೀನಾಥಗೌಡ, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಾದ ಕೆ.ಎಸ್.ಮಧು, ಜಯಶ್ರೀ, ನರೇಗಾ ಎಂಜಿನಿಯರ್‌ಗಳಾದ ಕಿಶೋರ್, ರಂಜಿತ್, ಅಶೋಕ್‌ಕುಮಾರ್ ಹಾಜರಿದ್ದರು.

ಪದಕಗಳನ್ನು ಪಡೆದ ದಿವ್ಯ ಭಾರತ್ ಕರಾಟೆ ಡೋ ಅಸೋಸಿಯೇಷನ್ ಕರಾಟೆ ಪಟುಗಳು

0

ಗೌರಿಬಿದನೂರಿನಲ್ಲಿ ಶಿಟೋ ರಿಯೋ ಕರಾಟೆ ಡೋ ಇಂಡಿಯಾ ಅಕಾಡೆಮಿಯಿಂದ ನಡೆದ ಐದನೆಯ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಷಿಪ್ ನಲ್ಲಿ ನಗರದ ದಿವ್ಯ ಭಾರತ್ ಕರಾಟೆ ಡೋ ಅಸೋಸಿಯೇಷನ್ ಕರಾಟೆ ಪಟುಗಳು ಭಾಗವಹಿಸಿ ಪದಕಗಳನ್ನು ಪಡೆದಿದ್ದಾರೆ.
ಕತಾ ವಿಭಾಗದಲ್ಲಿ ಮೊಮೀನ್ (ದ್ವಿತೀಯ), ಕಿಶೋರ್ (ಪ್ರಥಮ), ಪವನ್ ತೀರ್ಥ (ತೃತೀಯ), ಪೋಜಿತ್ (ದ್ವಿತೀಯ), ಕುಮಾರ್ (ದ್ವಿತೀಯ), ಮನೋಜ್ (ತೃತೀಯ), ಶೋಬಿತಾ (ಪ್ರಥಮ), ಜಗನ್ (ದ್ವಿತೀಯ), ಹರ್ಷಿತ್ (ದ್ವಿತೀಯ), ಕುಮಿತೆ ವಿಭಾಗದಲ್ಲಿ ಶೋಭಿತಾ (ತೃತೀಯ) ಸ್ಥಾನವನ್ನು ಪಡೆದಿದ್ದಾರೆ ಎಂದು ಕರಾಟೆ ಶಿಕ್ಷಕ ಅರುಣ್ ಕುಮಾರ್ ತಿಳಿಸಿದ್ದಾರೆ.

ಕೋಚಿಮುಲ್ ನಿಂದ ಸಂಜೀವಿನಿ ಯೋಜನೆಯಡಿ ಹಣದ ಚೆಕ್ ಹಂಚಿಕೆ

0

ಕೋಚಿಮುಲ್ ಹಾಲು ಒಕ್ಕೂಟದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಹಾಲು ಉತ್ಪಾದಕರು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಮುಂದುವರೆಯಬೇಕು ಎಂದು ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ತಿಳಿಸಿದರು.
ನಗರದ ಕೋಚಿಮುಲ್ ಶಿಬಿರ ಘಟಕದ ಕಚೇರಿಯ ಆವರಣದಲ್ಲಿ ಕನಕನಗರದ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ಒಕ್ಕೂಟದ ಸಂಜೀವಿನಿ ಯೋಜನೆಯಡಿ ಹಂಚಿಕೆ ಹಣದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಾಲು ಮತ್ತು ರೇಷ್ಮೆಯಿಂದ ಜೀವನ ನಡೆಸುತ್ತಿರುವ ಈ ಭಾಗದ ರೈತರು ಹೈನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಹಾಲು ಉತ್ಪಾದಕರಿಗಾಗಿ ಒಕ್ಕೂಟದಿಂದ ವಿವಿಧ ಸವಲತ್ತುಗಳನ್ನು ನೀಡುತ್ತಿದ್ದು ಸ್ವಂತ ಡೈರಿ ಕಟ್ಟಡ ನಿರ್ಮಾಣ ಸೇರಿದಂತೆ ಡೈರಿಗಳಿಗೆ ಕಂಪ್ಯೂಟರ್, ಹಾಲು ಉತ್ಪಾದಕರಿಗೆ ವಿಮೆ ಯೋಜನೆ, ರಾಸುಗಳ ಕೆಳ ಹಾಕುವ ಮ್ಯಾಟ್ ಸೇರಿದಂತೆ ವಿವಿಧ ಪರಿಕರಗಳನ್ನು ಒಕ್ಕೂಟ ವಿತರಿಸುತ್ತಿದೆ. ಒಕ್ಕೂಟದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಮುಂದುವರೆಯುವ ಜೊತೆಗೆ ಉತ್ತಮ ಗುಣಮಟ್ಟದ ಹಾಲು ಉತ್ಪಾದನೆ ಮಾಡಿ ಒಕ್ಕೂಟಕ್ಕೆ ಸರಬರಾಜು ಮಾಡಬೇಕು ಎಂದರು.
ಶಿಬಿರ ಘಟಕದ ಉಪವ್ಯವಸ್ಥಾಪಕ ಡಾ.ಚಂದ್ರಶೇಖರ್ ಮಾತನಾಡಿ, ಹಾಲು ಉತ್ಪಾದಕರು ಕಳಪೆ ಗುಣಮಟ್ಟದ ಹಾಲನ್ನು ಡೈರಿಗಳಿಗೆ ಪೂರೈಕೆ ಮಾಡಬಾರದು. ಪ್ರತಿಯೊಬ್ಬ ಉತ್ಪಾದಕರು ತಮ್ಮ ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ಎಲ್ಲೆಡೆ ಕಾಲುಬಾಯಿ ಜ್ವರಗಳು ಹರಡುತ್ತಿರುವ ಬಗ್ಗೆ ವರದಿಗಳಾಗುತ್ತಿವೆ. ಉತ್ಪಾದಕರು ಭಯಪಡುವಂತಹ ಅಗತ್ಯವಿಲ್ಲ, ರೋಗಗಳನ್ನು ನಿಯಂತ್ರಣ ಮಾಡಲಿಕ್ಕೆ ಅಗತ್ಯವಾಗಿರುವ ಔಷಧಿಗಳನ್ನು ನೀಡಲು ಇಲಾಖೆ ಸಿದ್ಧವಾಗಿದೆ. ರೈತರು ರೋಗಗಳು ಬರುವ ಮುನ್ನಾ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಉತ್ತಮ ಎಂದರು.
ಈ ಸಂದರ್ಭದಲ್ಲಿ ನಗರದ ಕನಕನಗರದ ಹಾಲು ಉತ್ಪಾದಕರ ಸಹಕಾರ ಸಂಘದ ೧೦ ಮಂದಿ ಫಲಾನುಭವಿಗಳಿಗೆ ತಲಾ ೨೦ ಸಾವಿರ ರೂಗಳಂತೆ ಚೆಕ್ಕುಗಳನ್ನು ವಿತರಿಸಲಾಯಿತು.
ಉಪವ್ಯವಸ್ಥಾಪಕ ನಾರಾಯಣಸ್ವಾಮಿ, ವಿಸ್ತರಣಾಧಿಕಾರಿಗಳಾದ ಉಮೇಶ್‌ರೆಡ್ಡಿ, ನರಸಿಂಹಯ್ಯ, ಗುಲಾಬ್ ಜಾನ್, ಶಂಕರ್‌ಕುಮಾರ್, ಕುಮ್ಮಣ್ಣ, ಚಿಕ್ಕಮುನಿಯಪ್ಪ ಹಾಜರಿದ್ದರು.