ರೈತರಿಗೆ ಪ್ರೋತ್ಸಾಹ ಧನ (ತೆಲಂಗಾಣ ಮಾದರಿಯಂತೆ) ಮತ್ತು ರೈತರ ಕೃಷಿ ಯಂತ್ರೋಪಕರಣಗಳು ಮತ್ತು ಪರಿಕರಗಳಿಗೆ ಜಿ.ಎಸ್.ಟಿ ತೆರಿಗೆ ರದ್ದತಿ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಮೂಲಕ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಸದಸ್ಯರು ಮನವಿಯನ್ನು ಮಂಗಳವಾರ ಸಲ್ಲಿಸಿದರು.
ರಾಜ್ಯ ಸರ್ಕಾರ ರೈತರಿಗೆ ಒಂದು ಎಕರೆಗೆ ಕನಿಷ್ಟ ಹತ್ತು ಸಾವಿರ ರೂಗಳ ಪ್ರೋತ್ಸಾಹ ಧನವನ್ನು ನೇರವಾಗಿ ರೈತರ ಖಾತೆಗಳಿಗೆ ನೀಡಿದರೆ, ತಾತ್ಕಾಲಿಕವಾಗಿ ಜೀವನ ನಿರ್ವಹಣೆಗೆ ಅನುಕೂಲವಾಗುವುದು. ಇದನ್ನು ಶೀಘ್ರವಾಗಿ ಮಾಡಬೇಕು.
ರೈತರು ಆಹಾರ ಉತ್ಪಾದನೆಯನ್ನು ಎಲ್ಲಾ ಜನರ ಒಳಿತಿಗಾಗಿ ಮಾಡುವುದರಿಂದ ಅವರು ಬಳಸುವ ಕೃಷಿ ಯಂತ್ರೋಪಕರಣಗಳು ಮತ್ತು ಕೃಷಿ ಪರಿಕರಗಳಿಗೆ ಯಾವುದೇ ತೆರಿಗೆಗಳನ್ನು ವಿಧಿಸದೆ ರಿಯಾಯಿತಿ ನೀತಿಯನ್ನು ರೂಪಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಭಾರತೀಯ ಕಿಸಾನ್ ಸಂಘದ ರಾಜ್ಯ ಉಪಾಧ್ಯಕ್ಷ ಅಗಲಗುರ್ಕಿ ಕೃಷ್ಣಪ್ಪ, ಸದಸ್ಯ ಎಲ್.ಎನ್.ಶಿವಮೂರ್ತಿ, ಜಿಲ್ಲಾ ಘಟಕದ ಕಾರ್ಯದರ್ಶಿ ಬೂದಾಳ ರಾಮಾಂಜಿ, ಶಿಡ್ಲಘಟ್ಟ ತಾಲ್ಲೂಕು ಘಟಕದ ನಾಗಮಂಗಲ ವೆಂಕಟರೆಡ್ಡಿ, ಚಿಂತಾಮಣಿ ತಾಲ್ಲೂಕು ಘಟಕದ ಅಧ್ಯಕ್ಷ ಹೊಸಹಳ್ಳಿ ರವಿರಾಜು, ಜಾತವಾರ ಮುನಿರಾಜು, ಅಗಲಗುರ್ಕಿ ಅಕ್ಷ್ಮಿನಾರಾಯಣಪ್ಪ, ನಾಗಮಂಗಲ ನಾಗೇಶ್, ನಾಗರಾಜು, ಪೆರುಮಾಚನಹಳ್ಳಿ ಕೃಷ್ಣಪ್ಪ ಹಾಜರಿದ್ದರು.
ಜಿ.ಎಸ್.ಟಿ ತೆರಿಗೆ ರದ್ದತಿ ಹಾಗೂ ಪ್ರೋತ್ಸಾಹಧನ ನೀಡುವಂತೆ ಭಾರತೀಯ ಕಿಸಾನ್ ಸಂಘದಿಂದ ಮನವಿ
ನಗರದಲ್ಲಿ ಭಾರತ್ ಬಂದ್ ಗೆ ನೀರಸ ಪ್ರತಿಕ್ರಿಯೆ
ಕಾರ್ಮಿಕರ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ನ ಮೊದಲನೆಯ ದಿನ ಮಂಗಳವಾರ ತಾಲ್ಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಸಾರಿಗೆ ಸಂಚಾರ ಸ್ಥಗಿತಗೊಂಡಿದ್ದರಿಂದ, ಬ್ಯಾಂಕುಗಳು ಹಾಗೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ನಗರದಲ್ಲಿ ಜನಸಂಚಾರ ಕಡಿಮೆಯಿತ್ತು. ಬೆಳಗ್ಗೆ ಅಂಗಡಿಗಳು ತೆರೆಯುವುದು ತಡ ಮಾಡಿದರು. ನಂತರ ಒಬ್ಬೊಬ್ಬರೇ ಅಂಗಡಿಗಳನ್ನು ತೆರೆಯಲಾರಂಭಿಸಿದರು. ಹೋಟೆಲುಗಳು, ಪೆಟ್ರೋಲ್ ಬಂಕ್, ರೇಷ್ಮೆ ಗೂಡಿನ ಮಾರುಕಟ್ಟೆ, ತಾಲ್ಲೂಕು ಕಚೇರಿ, ಖಾಸಗಿ ಬಸ್ಸುಗಳು, ಆಟೋ ಮುಂತಾದವುಗಳು ಎಂದಿನಂತಿದ್ದವು.
ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟದ ನೌಕರರು, ಗ್ರಾಮ ಪಂಚಾಯಿತಿ ನೌಕರರು, ಕೆ.ಪಿ.ಆರ್.ಎಸ್., ಡಿ.ವೈ.ಎಫ್.ಐ, ರೈತ ಮುಖಂಡರು ಬಂದ್ ಗೆ ಬೆಂಬಲ ನೀಡಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ನಗರದ ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಸ್ ನಿಲ್ದಾಣದಲ್ಲಿ ಮಾನವ ಸರಪಣಿಯನ್ನು ನಿರ್ಮಿಸಿ ಪ್ರತಿಭಟಿಸಿದರು.
“ದೇಶದಲ್ಲಿ ೧೯೯೧ ರಲ್ಲಿ ಜಾರಿಗೆ ಬಂದ ಹೊಸ ಆರ್ಥಿಕ ನೀತಿಗಳನ್ನು ಕೇಂದ್ರ ಸರ್ಕಾರ ವೇಗವಾಗಿ ಜಾರಿ ಮಾಡುತ್ತಿದ್ದು, ಇದರ ಪರಿಣಾಮವಾಗಿ ದೇಶಕ್ಕೆ ಅನ್ನ ಕೊಡುವ ರೈತರು, ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕರು, ಸೇವೆಯನ್ನು ಮಾಡುವ ನೌಕರರು, ಕೂಲಿಯನ್ನು ನಂಬಿ ಬದುಕುತ್ತಿರುವ ಬಡಜನರು ಬೀದಿಪಾಲಾಗುತ್ತಿದ್ದಾರೆ” ಎಂದು ಈ ಸಂದರ್ಭದಲ್ಲಿ ಸಿ.ಐ.ಟಿ.ಯು ಜಿಲ್ಲಾ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಆರೋಪಿಸಿದರು.
ಗ್ರಾಮ ಪಂಚಾಯಿತಿ ನೌಕರರ ಕಾರ್ಯದರ್ಶಿ ಕೆ.ಎಂ. ಪಾಪಣ್ಣ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಗುಲ್ಜಾರ್, ಕರ್ನಾಟಕ ಪ್ರಾಂತ್ಯ ರೈತ ಸಂಘದ ಮುಖಂಡ ವೆಂಕಟರೆಡ್ಡಿ, ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಶಂಕರಪ್ಪ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಅಶ್ವಥಮ್ಮ, ಸಿ.ಐ.ಟಿ.ಯು ಸಂಯೋಜಕ ಫಯಾಜ್, ಸಿ.ಐ.ಟಿ.ಯು.ನೌಕರರ ಕಾರ್ಯದರ್ಶಿ ಗೀತಾ ಹಾಜರಿದ್ದರು.
ತಾಲ್ಲೂಕಿನ ಹಲವೆಡೆ ಜಾನುವಾರುಗಳ ಮೇವಿನ ಕೊರತೆ
ಚಳಿಗಾಲ ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ. ಆಗಲೇ ತಾಲ್ಲೂಕಿನ ಹಲವೆಡೆ ಜಾನುವಾರುಗಳ ಮೇವಿನ ಕೊರತೆಯಂಟಾಗಿದ್ದು, ಹೈನುಗಾರಿಕೆಯನ್ನು ಅವಲಂಬಿಸಿರುವವರು ಮೇವಿನ ಸಂಗ್ರಹಣೆಯಲ್ಲಿ ನಿರತರಾಗಿದ್ದಾರೆ.
ಮಳೆಯ ಕೊರತೆಯಿಂದಾಗಿ ರಾಗಿ ಬೆಳೆ ತಾಲ್ಲೂಕಿನಲ್ಲಿ ಕಡಿಮೆಯಾಗಿತ್ತು. ಬಹಳಷ್ಟು ಕಡೆ ಹೊಲ ತೆಳುವಾಗಿತ್ತು. ಕೂಲಿಯಾಳುಗಳ ಹಣ, ಸಮಯವನ್ನು ಉಳಿಸಲು ಕೆಲವರು ಯಂತ್ರದಿಂದ ಹೊಲದಲ್ಲಿದ್ದ ರಾಗಿ ಕೊಯ್ಲನ್ನು ನಡೆಸಿದ್ದರು. ಯಂತ್ರದಿಂದ ಕುಯ್ದ ನಂತರ ಉಳಿಕೆಯ ರಾಗಿ ದುಂಪೆಗಳಿಗೂ ಈಗ ಬೇಡಿಕೆ ಬಂದುಬಿಟ್ಟಿದೆ.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಈ ರೀತಿಯ ರಾಗಿ ದುಂಪೆಗಳನ್ನು ಮಹಿಳೆಯರು ಗುಂಪುಗುಂಪಾಗಿ ಬಂದು ರಾಗಿ ದುಂಪೆಗಳನ್ನು ಕತ್ತರಿಸಿಕೊಳ್ಳುತ್ತಾ, ಹೊಲದಲ್ಲಿ ಬಿದ್ದಿರುವ ಹುಲ್ಲನ್ನು ಸಹ ಬಾಚಿಕೊಳ್ಳುತ್ತಿದ್ದಾರೆ. ಮಹಿಳೆಯರು ತಮ್ಮ ಶಕ್ತ್ಯಾನುಸಾರ ಹುಲ್ಲಿನ ಸಂಗ್ರಹಣೆಯಲ್ಲಿ ನಿರತರಾಗಿದ್ದಾರೆ.
“ಇನ್ನೂ ಬೇಸಿಗೆ ಬಂದಿಲ್ಲ. ಈಗಾಗಲೇ ಮೇವಿಗೆ ಬೇಡಿಕೆ ಜಾಸ್ತಿಯಾಗಿದೆ. ಒಂದು ಲೋಡು ಒಣ ಮೇವು, ಹುಲ್ಲು, ಟ್ರಾಕ್ಟರ್ ಬಡಿಗೆ, ಕೂಲಿ ಎಲ್ಲಾ ಸೇರಿಸಿದರೆ ೧೮ ರಿಂದ ೨೦ ಸಾವಿರ ರೂಗಳಗುತ್ತಿದೆ. ಮುಂದೆ ತೊಂದರೆಯಾದೀತೆಂದು ಈಗಲೇ ಮೇವಿನ ಸಂಗ್ರಹಣೆಯಲ್ಲಿದ್ದೇವೆ” ಎನ್ನುತ್ತಾರೆ ರೈತ ಮುನಿರಾಜು.
“ನಮಗೆ ಜಮೀನಿಲ್ಲ, ಹಾಗಾಗಿ ಮೇವು ಬೆಳೆಯಲು ಆಗದು. ಮನೆಯಲ್ಲಿನ ಹಸುಗಳಿಗೆ ಮೇವು ಸಂಗ್ರಹಿಸಲು ರಾಗಿ ಹೊಲಗಳಿಗೆ ಬಂದಿದ್ದೇವೆ. ಯಂತ್ರದಿಂದ ಕತ್ತರಿಸಿ, ಮುಳ್ಳು ಕಂಬಿ ಎಳೆಸಿದ ನಂತರ ಉಳಿಕೆ ಹುಲ್ಲನ್ನು ಸಂಗ್ರಹಿಸುತ್ತಿದ್ದೇವೆ. ದುಂಪೆಗಳಲ್ಲಿ ಉಳಿಕೆಯನ್ನು ಬಿಡದೆ ಕುಡುಗೋಲಿನಿಂದ ಕತ್ತರಿಸಿಕೊಳ್ಳುತ್ತಿದ್ದೇವೆ” ಎಂದು ರತ್ನಮ್ಮ, ಮುನಿಯಮ್ಮ, ಶಾರದಮ್ಮ, ಮುನಿಅಕ್ಕಾಯಮ್ಮ, ಶಾಂತಮ್ಮ, ವೆಂಕಟಮ್ಮ ತಿಳಿಸಿದರು.
ಸಾಮೂಹಿಕ ರಾಸು ವಿಮೆ ಯೋಜನೆಯಡಿ ರೈತರಿಗೆ ಪರಿಹಾರ ಚೆಕ್ ವಿತರಣೆ
ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು ಹಾಗೂ ರೈತರು ಖಡ್ಡಾಯವಾಗಿ ರಾಸುಗಳಿಗೆ ವಿಮೆ ಮಾಡಿಸಲು ಮುಂದಾಗಬೇಕು ಎಂದು ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಹೇಳಿದರು.
ನಗರದ ಕೋಚಿಮುಲ್ ಶಿಬಿರ ಘಟಕದ ಕಛೇರಿಯಲ್ಲಿ ಸಾಮೂಹಿಕ ರಾಸು ವಿಮೆ ಯೋಜನೆಯಡಿ ಮೃತಪಟ್ಟಿರುವ ರಾಸುಗಳ ರೈತರಿಗೆ ಪರಿಹಾರದ ಚೆಕ್ಕುಗಳನ್ನು ಶನಿವಾರ ವಿತರಿಸಿ ಅವರು ಮಾತನಾಡಿದರು.
ತಾಲ್ಲೂಕಿನಾದ್ಯಂತ ಸುಮಾರು ೨೨೦ ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು ಎಲ್ಲಾ ಸಂಘಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿವೆ. ಹಾಲು ಉತ್ಪಾದನೆ ಹಾಗೂ ಗುಣಮಟ್ಟದಲ್ಲಿ ಶಿಡ್ಲಘಟ್ಟ ತಾಲ್ಲೂಕು ಜಿಲ್ಲೆಯಲ್ಲಿಯೇ ಮೊದಲನೇ ಸ್ಥಾನದಲ್ಲಿದೆ. ಈ ಭಾಗದ ರೈತರು ತಮ್ಮ ರಾಸುಗಳಿಗೆ ವಿಮೆ ಮಾಡಿಸುವ ಮೂಲಕ ಕೋಚಿಮುಲ್ ಒಕ್ಕೂಟದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಮತ್ತಷ್ಟು ಮುಂದುವರೆಯಬೇಕು ಎಂದರು.
ತಾಲ್ಲೂಕಿನಾದ್ಯಂತ ಇತ್ತೀಚೆಗೆ ಮೃತಪಟ್ಟ ರಾಸುಗಳ ೧೮ ಮಂದಿ ಫಲಾನುಭವಿಗಳಿಗೆ ತಲಾ ೬೦ ಸಾವಿರದಂತೆ ಸುಮಾರು ೧ ಕೋಟಿ ಮೊತ್ತದ ವಿಮೆ ಚೆಕ್ ವಿತರಿಸಲಾಯಿತು. ರಾಸು ವಿಮೆ ಪಡೆದ ಫಲಾನುಭವಿಗಳು ಹಣವನ್ನು ವ್ಯರ್ಥಮಾಡದೆ ಉತ್ತಮ ರಾಸುಗಳನ್ನು ಖರೀದಿ ಮಾಡಿ ಗುಣಮಟ್ಟದ ಹಾಲು ಪೂರೈಕೆ ಮಾಡಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಿಬಿರ ಘಟಕದ ಉಪ ವ್ಯವಸ್ಥಾಪಕ ಡಾ.ಬಿ.ವಿ.ಚಂದ್ರಶೇಖರ್, ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಚಂದ್ರೇಗೌಡ, ವಿಸ್ತರಣಾಧಿಕಾರಿ ಶಂಕರ್ ಹಾಜರಿದ್ದರು.
ಕಾರ್ಯಕರ್ತರ ಸಾಂಘಿಕ ಪ್ರಯತ್ನದಿಂದಾಗಿ ಉತ್ತಮ ಫಲಿತಾಂಶ – ಬಿ.ಎನ್.ರವಿಕುಮಾರ್
ತಾದೂರು ಕ್ಷೇತ್ರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಎರಡೂ ಮಹಿಳೆಯರ ಸ್ಥಾನದ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸಿ ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ಮಾತನಾಡಿದರು.
ಜೆಡಿಎಸ್ ಕಾರ್ಯಕರ್ತರ ಸಾಂಘಿಕ ಪ್ರಯತ್ನದಿಂದಾಗಿ ಈ ಬಾರಿಯ ನಾಲ್ಕು ಗ್ರಾಮ ಪಂಚಾಯಿತಿಗಳ ಚುನಾವಣೆಯಲ್ಲಿ ಎರಡನ್ನು ಜೆಡಿಎಸ್ ಬೆಂಬಲಿತರು ಗೆಲ್ಲುವಂತಾಯಿತು ಎಂದು ಅವರು ತಿಳಿಸಿದರು.
ಕಳೆದ ಬಾರಿ ನಾಗಮಂಗಲ ಗ್ರಾಮ ಪಂಚಾಯಿತಿಯಲ್ಲಿ ಜೆಡಿಎಸ್ ಬೆಂಬಲಿತರು ಕೇವಲ ಒಬ್ಬರಿದ್ದರು. ಆದರೆ ಈ ಬಾರಿ ನಾಲ್ಕು ಸ್ಥಾನ ಪಡೆಯುವುದರೊಂದಿಗೆ ಗ್ರಾಮ ಪಂಚಾಯಿತಿಯಲ್ಲಿ ಜೆಡಿಎಸ್ ಚುಕ್ಕಾಣಿ ಹಿಡಿಯುವಂತಾಗಿದೆ. ಭಕ್ತರಹಳ್ಳಿ ಗ್ರಾಮ ಪಂಚಾಯಿತಿಯನ್ನು ನಾವು ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದೇವೆ. ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಈ ಬಾರಿ ಒಂದು ಸ್ಥಾನ ಹೆಚ್ಚಾಗಿ ಪಡೆದಿದ್ದೇವೆ. ಚೀಮಂಗಲ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾ ರಘು ಅವರ ಸ್ವಕ್ಷೇತ್ರದ ತಾದೂರಿನಲ್ಲಿ ಸರಸ್ವತಮ್ಮ ಮುನಿಕೃಷ್ಣಪ್ಪ ಮತ್ತು ಸುನಿತಾ ವೆಂಕಟಸ್ವಾಮಿ ಗೆಲ್ಲುವ ಮೂಲಕ ಜೆಡಿಎಸ್ ಪ್ರಾಬಲ್ಯ ಮೆರೆದಿದೆ. ಪಕ್ಷ ದ್ರೋಹಿಗಳನ್ನು ಮಟ್ಟ ಹಾಕಿದಾಗ ಮಾತ್ರ ಪಕ್ಷವನ್ನು ಬಲಪಡಿಸಲು ಸಾಧ್ಯ ಎಂದು ನುಡಿದರು.
ಸರಸ್ವತಮ್ಮ ಮುನಿಕೃಷ್ಣಪ್ಪ, ಸುನಿತಾ ವೆಂಕಟಸ್ವಾಮಿ, ಪ್ರಭಾಕರ್(ಪಿಳ್ಳ), ಗೋಪಾಲ್, ಕೆ.ಮುರಳಿ, ವಿ.ವೆಂಕಟೇಶಪ್ಪ, ಮುನಿಕೃಷ್ಣಪ್ಪ ಹಾಜರಿದ್ದರು.
ಎಸ್ ಆರ್ ಸಿಟಿಜನ್ ಸ್ಕೂಲ್ ಶಾಲಾ ವಾರ್ಷಿಕೋತ್ಸವ ಸಮಾರಂಭ
ನಗರದ ಹೊರವಲಯದ ಎಸ್ ಆರ್ ಸಿಟಿಜನ್ ಸ್ಕೂಲ್ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಎಸ್ ಆರ್ ಸಿಟಿಜನ್ ಸ್ಕೂಲ್ ಅಧ್ಯಕ್ಷ ಎಸ್.ರಾಮಚಂದ್ರರೆಡ್ಡಿ ಮಾತನಾಡಿದರು.
ಮಕ್ಕಳಲ್ಲಿ ಮಾನವೀಯ ಮೌಲ್ಯವನ್ನು ಎಳೆಯ ವಯಸ್ಸಿನಲ್ಲಿಯೇ ಬಿತ್ತಬೇಕು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂಬ ನಾಣ್ಣುಡಿಯಂತೆ ಮಕ್ಕಳಿಗೆ ಸಣ್ಣ ಪ್ರಾಯದಲ್ಲಿಯೇ ಶಿಕ್ಷಣದೊಂದಿಗೆ ಸಂಸ್ಕಾರ ನೀಡುವ ಪ್ರಯತ್ನ ನಮ್ಮದು ಎಂದು ಅವರು ತಿಳಿಸಿದರು.
ಶಿಕ್ಷಕರ ಉತ್ತಮ ಮಾರ್ಗದರ್ಶನದಿಂದ ಮಕ್ಕಳು ಸಂಸ್ಕಾರವಂತರಾಗಿ ರೂಪುಗೊಳ್ಳುತ್ತಾರೆ. ಹಿರಿಯರ ನಡೆಯನ್ನು ಮಕ್ಕಳು ಅನುಸರಿಸುವುದರಿಂದ ಶಿಕ್ಷಕರು ಮತ್ತು ಪೋಷಕರ ಜವಾಬ್ದಾರಿ ಹೆಚ್ಚಿನದಾಗಿದೆ. ವಿದ್ಯಾರ್ಥಿಗಳಿಗೆ ಸೌಜನ್ಯ, ಪ್ರೀತಿ, ಸಹಬಾಳ್ವೆ, ಜೀವನದ ಅಂಶಗಳನ್ನು ಕಲಿಸಿ ನಾಡಿನ ಸುಸಂಸ್ಕೃತ ಪ್ರಜೆಗಳನ್ನಾಗಿ ರೂಪಿಸುವುದು ಅತ್ಯಗತ್ಯವಾಗಿದೆ. ಗುಣಮಟ್ಟದ ಶಿಕ್ಷಣದೊಂದಿಗೆ ಯೋಗ, ವ್ಯಾಯಾಮ, ಸದ್ಗುಣಗಳನ್ನು ಸಹ ಮಕ್ಕಳಿಗೆ ಕಲಿಸಬೇಕಾಗ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ವತಿಯಿಂದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ನಗರಸಭಾ ಸದಸ್ಯ ಎಸ್.ರಾಘವೇಂದ್ರ, ಕೆ.ವೇಣುಗೋಪಾಲ್. ನಾಗರಾಜ್, ಮುಖ್ಯ ಶಿಕ್ಷಕ ಶಿವಣ್ಣ ಹಾಜರಿದ್ದರು.
ಮಹಿಳಾ ಸ್ವಸಹಾಯ ಸಂಘಗಳಿಗೆ 2.5 ಕೋಟಿ ರೂಗಳ ಸಾಲ ವಿತರಣೆ
ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂಬ ಉದ್ದೇಶದಿಂದ ಸಾಲ ವಿತರಿಸುತ್ತಿದ್ದೇವೆ. ಸ್ವ ಸಹಾಯ ಸಂಘಗಳ ಪದಾಧಿಕಾರಿಗಳು, ಬ್ಯಾಂಕುಗಳಿಂದ ಪಡೆದುಕೊಳ್ಳುವಂತಹ ಸಾಲಗಳನ್ನು ನಿಗದಿತ ಉದ್ದೇಶಗಳಿಗೆ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಮತ್ತಷ್ಟು ಅಭಿವೃದ್ದಿಯಾಗಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ತಿಳಿಸಿದರು.
ನಗರದ ಅಶೋಕರಸ್ತೆಯಲ್ಲಿ ಡಿಸಿಸಿ ಬ್ಯಾಂಕ್ ಮತ್ತು ಶಿಡ್ಲಘಟ್ಟ ಟೌನ್ ರೇಷ್ಮೆ ಬೆಳೆಗಾರರ ಸಂಘ ಹಾಗೂ ರೈತರ ಸಹಕಾರ ಬ್ಯಾಂಕ್ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಸ್ವ ಸಹಾಯ ಸಂಘಗಳಿಗೆ ಸಾಲ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮಹಿಳೆಯರು ಆರ್ಥಿಕವಾಗಿ ಸಬಲರಾದರೆ ಮಾತ್ರ ಕುಟುಂಬ ಸುಸ್ಥಿತಿಯಲ್ಲಿರುತ್ತದೆ. ಆ ಮೂಲಕ ಗ್ರಾಮೀಣ ಬದುಕನ್ನು ಹಸನಾಗಿಸುವುದು ಈ ಸಾಲ ಸೌಲಭ್ಯದ ಹಿಂದಿನ ಉದ್ದೇಶವಾಗಿದೆ. ಸರಿಯಾಗಿ ಲೆಕ್ಕಪತ್ರವನ್ನು ಬರೆಯುತ್ತಾ, ಸಮರ್ಪಕವಾಗಿ ಸಾಲದ ಹಣವನ್ನು ಸದ್ವಿನಿಯೋಗ ಮಾಡಿಕೊಂಡಲ್ಲಿ ಸ್ವಸಹಾಯ ಸಂಘಗಳ ಗ್ರಾಮೀಣ ಚಿತ್ರಣವನ್ನು ಬದಲಿಸಬಹುದು ಎಂದು ಹೇಳಿದರು.
ಇಂದು ನೀಡಲಾಗುತ್ತಿರುವ ಬಡ್ಡಿ ರಹಿತ ಸಾಲ ವಿತರಣೆ ಯೋಜನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಜಾರಿಗೆ ಬಂದಿತ್ತು. ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿದವರನ್ನು ಜನ ಬೆಂಬಲಿಸಬೇಕೇ ಹೊರತು ಚುನಾವಣೆ ವೇಳೆಯಲ್ಲಿ ಯಾರೋ ನೀಡುವ ಹಣಕ್ಕೆ ಮತ ಮಾರಿಕೊಳ್ಳಬೇಡಿ ಎಂದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ, ಈ ಹಿಂದೆ ಸಾಲ ಪಡೆಯಬೇಕಾದರೆ ನಮ್ಮಲ್ಲಿರುವ ಬಂಗಾರವನ್ನು ಅಡವಿಟ್ಟು ಅದರ ಮೇಲೆ ಬಡ್ಡಿ ನೀಡಬೇಕಾಗಿತ್ತು. ಆದರೆ ಇದೀಗ ಯಾವುದೇ ಗಿರವಿ, ಬಡ್ಡಿಯಿಲ್ಲದೇ ಸರ್ಕಾರ ಸಾಲ ನೀಡುತ್ತಿದೆ. ರಾಜ್ಯದಲ್ಲಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಇದೀಗ ೪೫ ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಲು ಮುಂದಾಗಿದೆ. ಉಳಿದಂತೆ ಹಿಂದಿನ ಸಕಾರ ಜಾರಿಗೆ ತಂದಿದ್ದಂತಹ ಅನ್ನಬಾಗ್ಯ, ಕ್ಷೀರಭಾಗ್ಯ ಯೋಜನೆಗಳು ಸೇರಿದಂತೆ ಬಡ್ಡಿರಹಿತ ಸಾಲ ವಿತರಣೆ ಯೋಜನೆ ಮುಂದುವರೆಸಿದೆ. ಇದರ ಸದುಪಯೋಗ ಪಡಿಸಿಕೊಂಡು ಪ್ರತಿಯೊಬ್ಬರೂ ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ಈ ಸಂದರ್ಭದಲ್ಲಿ ಸುಮಾರು ೮೫ ಮಹಿಳಾ ಸ್ವ ಸಹಾಯ ಸಂಘಗಳಿಗೆ ಒಟ್ಟು ೨ ಕೋಟಿ ೫೦ ಲಕ್ಷ ರೂ ಬಡ್ಡಿ ರಹಿತ ಸಾಲ ವಿತರಿಸಲಾಯಿತು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ಕೆ.ಗುಡಿಯಪ್ಪ, ಮುನಿಕೃಷ್ಣಪ್ಪ, ಮಳ್ಳೂರು ಸಹಕಾರ ಸಂಘದ ಅಧ್ಯಕ್ಷ ರಾಮರೆಡ್ಡಿ, ಟೌನ್ ಎಸ್ ಎಫ್ ಸಿ ಎಸ್ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ನಿರ್ದೇಶಕರಾದ ನರಸಿಂಹಮೂರ್ತಿ, ವೇಣುಗೋಪಾಲ್, ಶೆಟ್ಟಹಳ್ಳಿ ರಾಮಚಂದ್ರಪ್ಪ, ವೆಂಕಟೆಶಪ್ಪ, ನರಸಿಂಹಪ್ಪ, ನಾರಾಯಣಪ್ಪ, ನೀಲಮ್ಮ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಆನಂದ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ‘ಚಿಗುರು’ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ
ತಾಲ್ಲೂಕಿನ ಕೊತ್ತನೂರು ಗ್ರಾಮದ ಈಶ್ವರ ದೇವಾಲಯದ ಆವರಣದಲ್ಲಿ ಶುಕ್ರವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ‘ಚಿಗುರು’ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಶಿವಕುಮಾರ್ ಮಾತನಾಡಿದರು.
ಒಂದೊಂದು ಮಕ್ಕಳಲ್ಲೂ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ. ಆದರೆ, ಅವುಗಳನ್ನು ತೋರ್ಪಡಿಸಲು ಅವರಿಗೆ ವೇದಿಕೆಗಳು ಸಿಕ್ಕಿರುವುದಿಲ್ಲ. ಮಕ್ಕಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಪ್ರೋತ್ಸಾಹದಾಯಕ ವೇದಿಕೆಗಳು ಮುಖ್ಯವಾಗುತ್ತವೆ ಎಂದು ಅವರು ತಿಳಿಸಿದರು.
ಪೋಷಕರು ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವ ಮೂಲಕ ಪ್ರತಿಭೆ ತೋರಿಸಲು ಅನುಕೂಲ ಮಾಡಿಕೊಡಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎಸ್.ವೆಂಕಟಾಚಲಪತಿ ಮಾತನಾಡಿ, ಚಿಗುರು ಕಾರ್ಯಕ್ರಮದಲ್ಲಿ ೬ರಿಂದ ೧೪ ವರ್ಷಗಳ ಮಕ್ಕಳಲ್ಲಿರುವ ಕಲೆಯನ್ನು ಪ್ರದರ್ಶಿಸಲು ಇಲಾಖೆಯಿಂದ ಈ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಎಳೆಯ ವಯಸ್ಸಿನಲ್ಲಿಯೇ ಪ್ರೋತ್ಸಾಹ ನೀಡಿದಲ್ಲಿ ಅವರ ಉತ್ಸಾಹ ಇಮ್ಮಡಿಯಾಗಿ ಮುಂದೆ ಸಾಧಕರಾಗಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಸಿನಿಮಾ ನಟ ಸಿ.ಎನ್.ಮುನಿರಾಜು ಮಾತನಾಡಿ, ಕಲಾವಿದರಿಗೆ ಪ್ರೋತ್ಸಾಹ ಅತ್ಯಗತ್ಯ. ತಾಲ್ಲೂಕು ಕೇಂದ್ರ ಹಾಗೂ ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ಮಂದಿ ಬಾಲ ಕಲಾವಿದರಿದ್ದಾರೆ. ಅವರಿಗೆ ಮಾರ್ಗದರ್ಶನ ಮತ್ತು ಬೆನ್ನುತಟ್ಟುವ ಕೆಲಸವಾಗಬೇಕು. ಕಲೆ ಅರಳಲು ವೇದಿಕೆಗಳು ಸಿಗಬೇಕು. ಮಕ್ಕಳಿಗೆ ಅವರ ಆಸಕ್ತಿ ಕ್ಷೇತ್ರವನ್ನು ಆಯ್ದುಕೊಳ್ಳಲು ಶಿಕ್ಷಕರು ಮತ್ತು ಪೋಷಕರು ನೆರವಾಗಬೇಕು ಎಂದು ನುಡಿದರು.
ಕೋಲಾರದ ಪವಿತ್ರ ಮತ್ತು ತಂಡದ ಕರ್ನಾಟಕ ಶಾಸ್ತ್ರೀಯ ಸಂಗೀತ, ಚಿಕ್ಕಬಳ್ಳಾಪುರ ಸಪ್ತಸ್ವರ ಗಾನ ಮಂಡಳಿಯಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಮಹೇಶ್ ಕುಮಾರ್ ಮತ್ತು ತಂಡದಿಂದ ಸುಗಮ ಸಂಗೀತ, ಶ್ರೀ ಲಕ್ಷ್ಮೀ ಮತ್ತು ತಂಡದಿಂದ ಜಾನಪದ ಗೀತಗಾಯನ, ಅದಿತಿ ಎನ್ ಸ್ವಾಮಿ ಮತ್ತು ತಂಡದಿಂದ ಶಾಸ್ತ್ರೀಯ ಭರತನಾಟ್ಯ, ಶಿಡ್ಲಘಟ್ಟದ ಶ್ರೀ ಮಯೂರಿ ನಾಟ್ಯ ಕಲಾ ಕೇಂದ್ರದಿಂದ ಸಮೂಹ ನೃತ್ಯ ರೂಪಕ, ಅನನ್ಯ ಎನ್ ಸ್ವಾಮಿ ಮತ್ತು ತಂಡದಿಂದ ಏಕಪಾತ್ರಾಭಿನಯ, ಓಂ ಶ್ರೀ ಸಾಯಿ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸಂಸ್ಥೆಯಿಂದ ಸಮೂಹ ನೃತ್ಯ ರೂಪಕ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಎನ್.ರಾಧ, ಪಿ.ಡಿ.ಒ ಅಶ್ವತ್ಥ್, ನಾಡೋಜ ಮುನಿವೆಂಕಟಪ್ಪ, ವೀರಗಾಸೆ ಕಲಾವಿದ ಕೊತ್ತನೂರು ಗಂಗಾಧರ್, ನವೀನ್ ಕುಮಾರ್, ಗ್ರಾಮ ಪಂಚಾಯಿತಿ ಸದಸರಾದ ಗೌರಮ್ಮ, ಕೃಷ್ಣಪ್ಪ, ಆಂಜಿನಪ್ಪ, ಜಸ್ಮಿತ ಡ್ಯಾನ್ಸ್ ಅಕಾಡೆಮಿ ಧನುಶ್ರೀ ಮಾನಸ್, ನೃತ್ಯ ನಿರ್ದೇಶಕ ಸುಬ್ಬು ಹಾಜರಿದ್ದರು.
ನಾಲ್ಕು ಗ್ರಾಮ ಪಂಚಾಯಿತಿಗಳ ಚುನಾವಣೆ ಫಲಿತಾಂಶ; ಎರಡು ಜೆಡಿಎಸ್ ಮತ್ತು ಎರಡು ಕಾಂಗ್ರೆಸ್
ತಾಲ್ಲೂಕಿನ ನಾಲ್ಕು ಗ್ರಾಮ ಪಂಚಾಯಿತಿಗಳ ಚುನಾವಣೆ ಮತ ಎಣಿಕೆ ಕಾರ್ಯ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆಯಿತು.
ನಾಗಮಂಗಲ, ಭಕ್ತರಹಳ್ಳಿ, ಹೊಸಪೇಟೆ ಮತ್ತು ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿಗಳ ಚುನಾವಣೆಯ ಎಣಿಕೆ ನಡೆದು ನಾಗಮಂಗಲ ಹಾಗೂ ಭಕ್ತರಹಳ್ಳಿ ಗ್ರಾಮ ಪಂಚಾಯಿತಿಗಳು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಪಾಲಾಗಿದ್ದರೆ ಉಳಿದ ಎರಡು ಪಂಚಾಯಿತಿಗಳಾದ ಹೊಸಪೇಟೆ ಹಾಗೂ ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಿಜೇತರಾಗಿದ್ದಾರೆ.
ಈ ಹಿಂದೆ ನಾಲ್ಕು ಗ್ರಾಮ ಪಂಚಾಯಿತಿಗಳ ಪೈಕಿ ಭಕ್ತರಹಳ್ಳಿ ಹೊರತುಪಡಿಸಿ ಉಳಿದ ಮೂರು ಪಂಚಾಯಿತಿಗಳು ಕಾಂಗ್ರೆಸ್ ವಶದಲ್ಲಿದ್ದವು. ಆದರೆ ಇದೀಗ ನಡೆದ ಚುನಾವಣೆಯಲ್ಲಿ ನಾಗಮಂಗಲ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಕೈ ತಪ್ಪಿದ್ದು ಜೆಡಿಎಸ್ ವಶವಾಗಿದೆ.
ನಾಗಮಂಗಲ ಗ್ರಾಮ ಪಂಚಾಯಿತಿ :
ನಾಗಮಂಗಲ ಗ್ರಾಮ ಪಂಚಾಯಿತಿಯ ೦೭ ಸ್ಥಾನಗಳಲ್ಲಿ ೦೪ ಸ್ಥಾನಗಳು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಪಾಲಾಗಿದ್ದರೆ ಉಳಿದ ಮೂರು ಸ್ಥಾನಗಳು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪಾಲಾಗಿದೆ.
ನಾಗಮಂಗಲ ಅನುಸೂಚಿತ ಮಹಿಳೆ ಸ್ಥಾನಕ್ಕೆ ಆಂಜಿನಮ್ಮ, ಸಾಮಾನ್ಯ ಮಹಿಳೆ ಸ್ಥಾನಕ್ಕೆ ಕೆ.ರೂಪ, ಸಾಮಾನ್ಯ ಸ್ಥಾನಕ್ಕೆ ಎನ್.ಎನ್.ತಮ್ಮಣ್ಣ, ಸಾಮಾನ್ಯ ಸ್ಥಾನಕ್ಕೆ ಹೆಚ್.ಡಿ.ಶ್ರೀನಿವಾಸ, ಅನುಸೂಚಿತ ಸ್ಥಾನಕ್ಕೆ ಎನ್.ಸಿ.ಚನ್ನಕೃಷ್ಣಪ್ಪ, ಅನುಸೂಚಿತ ಪಂಗಡ ಸ್ಥಾನಕ್ಕೆ ವೆಂಕಟಲಕ್ಷ್ಮಮ್ಮ, ಸಾಮಾನ್ಯ ಮಹಿಳೆ ಸ್ಥಾನಕ್ಕೆ ವಿ.ಶ್ವೇತ ವಿಜೇತರಾಗಿದ್ದಾರೆ.
ಭಕ್ತರಹಳ್ಳಿ ಗ್ರಾಮ ಪಂಚಾಯಿತಿ
ಭಕ್ತರಹಳ್ಳಿ ಗ್ರಾಮ ಪಂಚಾಯಿತಿಯ ೧೦ ಸ್ಥಾನಗಳಲ್ಲಿ ೦೬ ಸ್ಥಾನಗಳು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಪಾಲಾಗಿದ್ದರೆ ಉಳಿದ ನಾಲ್ಕು ಸ್ಥಾನಗಳು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪಾಲಾಗಿದೆ.
ಭಕ್ತರಹಳ್ಳಿ ಅನುಸೂಚಿತಜಾತಿ ಮಹಿಳೆ ಸ್ಥಾನಕ್ಕೆ ಲಲಿತಮ್ಮ, ಸಾಮಾನ್ಯ ಸ್ಥಾನಕ್ಕೆ ಬಿ.ಆರ್.ಮಂಜುನಾಥ್, ಸಾಮಾನ್ಯ ಸ್ಥಾನಕ್ಕೆ ಹೆಚ್.ಜೆ.ಕಲ್ಪನ, ಪರಿಶಿಷ್ಠ ಜಾತಿ ಸ್ಥಾನಕ್ಕೆ ಮುನಿಕೃಷ್ಣಪ್ಪ, ಸಾಮಾನ್ಯ ಮಹಿಳೆ ಸ್ಥಾನಕ್ಕೆ ದ್ಯಾವಮ್ಮ, ಸಾಮಾನ್ಯ ಸ್ಥಾನಕ್ಕೆ ಬಿ.ಚಿದಾನಂದಮೂರ್ತಿ, ಪರಿಶಿಷ್ಠ ಜಾತಿ ಮಹಿಳೆ ಸ್ಥಾನಕ್ಕೆ ಚನ್ನಮ್ಮ, ಹಿಂದುಳಿದ ವರ್ಗ ಅ ಮಹಿಳೆ ಸ್ಥಾನಕ್ಕೆ ಲೋಚನ, ಪರಿಶಿಷ್ಠ ಪಂಗಡ ಮಹಿಳೆ ಸ್ಥಾನಕ್ಕೆ ನರಸಮ್ಮ, ಹಾಗು ಸಾಮನ್ಯ ಸ್ಥಾನಕ್ಕೆ ಟಿ.ಸಿ.ಶಂಕರಯ್ಯ ವಿಜೇತರಾಗಿದ್ದಾರೆ.
ಹೊಸಪೇಟೆ ಗ್ರಾಮ ಪಂಚಾಯಿತಿ
ಹೊಸಪೇಟೆ ಗ್ರಾಮ ಪಂಚಾಯಿತಿಯ ೧೭ ಸ್ಥಾನಗಳಲ್ಲಿ ೧೧ ಸ್ಥಾನಗಳು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪಾಲಾಗಿದ್ದರೆ ಉಳಿದ ೦೬ ಸ್ಥಾನಗಳು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಪಾಲಾಗಿದೆ.
ಹೊಸಪೇಟೆ ಗ್ರಾಮ ಪಂಚಾಯಿತಿಯ ಅನುಸೂಚಿತ ಜಾತಿ ಸ್ಥಾನಕ್ಕೆ ಹೆಚ್.ಎಂ.ಮುನಿಆಂಜನೇಯ, ಹಿಂದುಳಿದ ವರ್ಗ ಅ ಸ್ಥಾನಕ್ಕೆ ಹೆಚ್.ಎಂ.ಮಂಜುನಾಥಗೌಡ, ಸಾಮಾನ್ಯ ಮಹಿಳೆ ಸ್ಥಾನಕ್ಕೆ ಮೀನಾಕ್ಷಿ, ಸಾಮಾನ್ಯ ಮಹಿಳಾ ಸ್ಥಾನಕ್ಕೆ ಆರ್.ನಳಿನಾ, ಸಾಮಾನ್ಯ ಸ್ಥಾನಕ್ಕೆ ರಾಜಶೇಖರ್.ಜಿ.ಬಿ. ಅನುಸೂಚಿತ ಪಂಗಡ ಮಹಿಳೆ ಸ್ಥಾನಕ್ಕೆ ಸುಶೀಲಮ್ಮ, ಹಿಂದುಳಿದ ವರ್ಗ ಅ ಮಹಿಳೆ ಸ್ಥಾನಕ್ಕೆ ಮುನಿರತ್ನಮ್ಮ, ಸಾಮಾನ್ಯ ಸ್ಥಾನಕ್ಕೆ ವೈ.ಎನ್.ನರಸಿಂಹಮೂರ್ತಿ, ಅನುಸೂಚಿತ ಜಾತಿ ಮಹಿಳೆ ಸ್ಥಾನಕ್ಕೆ ಜಯಮ್ಮ, ಅನುಸೂಚಿತ ಪಂಗಡ ಸ್ಥಾನಕ್ಕೆ ಎನ್.ಸುರೇಶ್, ಸಾಮಾನ್ಯ ಸ್ಥಾನಕ್ಕೆ ಬಿ.ಎನ್.ಶ್ರೀನಿವಾಸ, ಸಾಮಾನ್ಯ ಮಹಿಳೆ ಸ್ಥಾನಕ್ಕೆ ರಜಿನಿ.ಸಿ, ಅನುಸೂಚಿತ ಜಾತಿ ಮಹಿಳೆ ಸ್ಥಾನಕ್ಕೆ ಸುಜಾತ, ಸಾಮಾನ್ಯ ಸ್ಥಾನಕ್ಕೆ ಎಸ್.ಜಿ.ನಾರಾಯಣಸ್ವಾಮಿ, ಸಾಮಾನ್ಯ ಸ್ಥಾನಕ್ಕೆ ಅಶ್ವತ್ಥಪ್ಪ, ಸಾಮಾನ್ಯ ಮಹಿಳೆ ಸ್ಥಾನಕ್ಕೆ ಎಂ.ವಿ.ರೂಪ, ಹಿಂದುಳಿದ ವರ್ಗ ಅ ಮಹಿಳೆ ಸ್ಥಾನಕ್ಕೆ ಯಶೋದಮ್ಮ.ಡಿ.ಎ ವಿಜೇತರಾಗಿದ್ದಾರೆ.
ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ :
ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿಯ ೧೪ ಸ್ಥಾನಗಳಲ್ಲಿ ೦೭ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪಾಲಾಗಿದ್ದರೆ ೫ ಸ್ಥಾನಗಳು ಜೆಡಿಎಸ್ ಬೆಂಬಲಿತ ಹಾಗು ೨ ಸ್ಥಾನಗಳು ಪಕ್ಷೇತರ ಅಭ್ಯರ್ಥಿಗಳ ಪಾಲಾಗಿದೆ.
ಮಳಮಾಚನಹಳ್ಳಿ ಅನುಸೂಚಿತ ಪಂಗಡ ಮಹಿಳೆ ಅಭ್ಯರ್ಥಿ ಸ್ಥಾನಕ್ಕೆ ಎನ್.ಮಂಜುಳ, ಸಾಮಾನ್ಯ ಮಹಿಳೆ ಸ್ಥಾನಕ್ಕೆ ಬಿ.ಎನ್.ಕವಿತಾ, ಸಾಮಾನ್ಯ ಬೈರೇಗೌಡ.ಡಿ. ಸಾಮಾನ್ಯ ಮಹಿಳೆ ಸ್ಥಾನಕ್ಕೆ ವಿಜಯಲಕ್ಷ್ಮಿ, ಸಾಮಾನ್ಯ ಸ್ಥಾನಕ್ಕೆ ಬೈರೇಗೌಡ, ಪರಿಶಿಷ್ಟ ಜಾತಿ ಸ್ಥಾನಕ್ಕೆ ಸರಸ್ವತಮ್ಮ, ಪರಿಶಿಷ್ಠ ಪಂಗಡ ಸ್ಥಾನಕ್ಕೆ ಸುನಿತ, ಪರಿಶಿಷ್ಠ ಜಾತಿ ಸ್ಥಾನಕ್ಕೆ ಬಿ.ಎಂ.ನರಸಿಂಹಮೂರ್ತಿ, ಹಿಂದುಳಿದ ವರ್ಗ ಅ ಸ್ಥಾನಕ್ಕೆ ವರಲಕ್ಷ್ಮಮ್ಮ, ಸಾಮಾನ್ಯ ಸ್ಥಾನಕ್ಕೆ ಬಿ.ಕೆ.ಲೋಕೇಶ್, ಪರಿಶಿಷ್ಟ ಜಾತಿ ಮಹಿಳೆ ಸ್ಥಾನಕ್ಕೆ ಭಾಗ್ಯಮ್ಮ, ಪರಿಶಿಷ್ಠ ಪಂಗಡ ಸ್ಥಾನಕ್ಕೆ ವಿ.ಮುರಳಿ, ಸಾಮಾನ್ಯ ಕ್ಷೇತ್ರದ ಸ್ಥಾನಕ್ಕೆ ಎನ್.ದೇವರಾಜಪ್ಪ, ಸಾಮಾನ್ಯ ಕ್ಷೇತ್ರದ ಸ್ಥಾನಕ್ಕೆ ಚಂದ್ರಪ್ಪ, ವಿಜೇತರಾಗಿದ್ದಾರೆ.
ದೊಡ್ಡದಾಸೇನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮಾತೃಭೋಜನ ಮತ್ತು ಅಕ್ಷರಭ್ಯಾಸ ಕಾರ್ಯಕ್ರಮ
ತಾಲ್ಲೂಕಿನ ದೊಡ್ಡದಾಸೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಾತೃಭೋಜನ ಮತ್ತು ಅಕ್ಷರಭ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಚಿಂತಾಮಣಿ ಸರ್ಕಾರಿ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್.ರಘು ಮಾತನಾಡಿದರು.
ತಾಯಿಯಿಂದ ಮಕ್ಕಳಲ್ಲಿ ಸಂಸ್ಕಾರಗಳು ವೃದ್ಧಿಯಾಗುತ್ತವೆ. ಅಕ್ಷರಾಭ್ಯಾಸಕ್ಕೆ ಒಂದು ಪರಂಪರೆಯಿದೆ. “ಅಕ್ಷರ” ಎಂಬ ಶಬ್ದಕ್ಕೆ “ನಕ್ಷರತಿ ಇತಿ ಅಕ್ಷರಂ” ಅಂದರೆ “ಯಾವುದಕ್ಕೆ ಅಳಿವಿಲ್ಲವೋ ಅದು ಅಕ್ಷರ” ಎಂಬ ಅರ್ಥವಿದೆ ಎಂದು ಅವರು ತಿಳಿಸಿದರು.
ಜಗತ್ತಿನ ಮೊದಲು ಗುರು ಮಾತೃ. ತಾಯಿ ಸಮಾಜದಲ್ಲಿ ಸಂಸ್ಕಾರಗಳನ್ನು ಬಿತ್ತುವ ಮೊದಲ ಗುರು. ಮನೆಯೇ ಪಾಠಶಾಲೆ. ಮನೆಯಲ್ಲಿನ ಎಲ್ಲರಿಂದರಿಂದಲೂ ಮೌಲ್ಯಗಳನ್ನು ಮತ್ತು ಜೀವನದ ಸಂಬಂಧಗಳನ್ನು ಮಗು ಕಲಿಯುತ್ತದೆ. ತಾಯಿಯ ಪೋಷಣೆ ಮತ್ತು ಲಾಲನೆಯಿಂದ ಮಗು ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತದೆ. ಮಾನವನು ವ್ಯಕ್ತಿತ್ವ ವಿಕಸನ ಮತ್ತು ಎಲ್ಲಾ ರೀತಿಯ ಅನುಬಂಧಗಳನ್ನು ತಾಯಿಯ ಮೂಲಕ ಪಡೆಯುತ್ತಾನೆ. ತಾಯಿಯ ಋಣವನ್ನು ಯಾವುದೇ ಜನ್ಮದಲ್ಲೂ ತೀರಿಸಲು ಸಾಧ್ಯವಿಲ್ಲ.
ಇಂದಿನ ಮಕ್ಕಳಿಗೆ ತಂದೆ ತಾಯಿಗಳೇ ಆದರ್ಶರಾಗಬೇಕು. ಮೌಲ್ಯಗಳನ್ನು ಮೊದಲು ಮಗು ಮನೆಯಿಂದಲೇ ಕಲಿಯುತ್ತದೆ, ತಂದೆತಾಯಿಯರಲ್ಲಿ ಮೌಲ್ಯಗಳಿದ್ದರೆ ಅದನ್ನು ಮಗು ಪಾಲಿಸುತ್ತದೆ. ಆದ್ದರಿಂದ ಪ್ರತಿಯೊಂದು ಮನೆಯಲ್ಲಿಯೂ ಮಗುವಿನ ಆಲೋಚನೆಗಳನ್ನು ಮತ್ತು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಠಿಸಬೇಕೆಂದರು.
ಇಲ್ಲಿನ ಶಾಲೆಯಲ್ಲಿ ಖಾಸಗಿ ಶಾಲೆಗಿಂತಲೂ ಉತ್ತಮ ಪರಿಸರ, ಭೋದನೆ, ಕಲಿಕೆ, ಸಾಮಾಜಿಕ ಸೇವೆ ಹಾಗೂ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತುತ್ತಿರುವುದು ಶ್ಲಾಘನೀಯವಾಗಿದೆ. ಜಿಲ್ಲಾ ಮಟ್ಟದ ಉತ್ತಮ ಪರಿಸರ ಶಾಲೆ ಪ್ರಶಸ್ತಿ ಪಡೆದಿರುವುದು ಇಲ್ಲಿನ ಮುಖ್ಯ ಶಿಕ್ಷಕ ಶ್ರೀಕಾಂತ್ ಮತ್ತು ಮಹೇಶ್ ರವರ ಪರಿಶ್ರಮದ ಪ್ರತೀಕವಾಗಿದೆ. ಅವರಿಗೆ ಇನ್ನಷ್ಟು ಇಂತಹ ಕಾರ್ಯಗಳನ್ನು ಮಾಡಲು ನಾವೆಲ್ಲರೂ ಪ್ರೋತ್ಸಾಹ ನೀಡಬೇಕಾಗಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಡಿ.ವಿ.ಆಂಜನೇಯರೆಡ್ಡಿ ಮಾತನಾಡಿ, ನಾವೆಲ್ಲರೂ ಸೇರಿ ನಮ್ಮೂರಿನ ಶಾಲೆಯನ್ನು ಬಲಪಡಿಸಬೇಕೆಂದರು. ನಮ್ಮೂರಿನ ಶಾಲೆಯಿಂದ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಲು ಎಲ್ಲರ ಸಹಕಾರ ಮುಖ್ಯ ಎಂದರು.
ಅಕ್ಷರಾಭ್ಯಾಸದ ಮಹತ್ವವನ್ನು ವಿವರಿಸಿ ವೇದ ಬ್ರಹ್ಮಶ್ರೀ ಹಿಂದೂಪುರ ಅನಂತರಾಮು ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮಾತೃಭೋಜನವನ್ನು ಅದರ ಪ್ರಾಮುಖ್ಯತೆಯನ್ನು ವೇದ ಬ್ರಹ್ಮಶ್ರೀ ಕಂಗಾನಹಳ್ಳಿ ಚಂದ್ರಮೋಹನ್ ತಿಳಿಸಿದರು. ಚಿಂತಾಮಣಿಯ ಸಿಂಧೂ ಮುದ್ರಣಾಲಯದಿಂದ ಲೇಖನ ಸಾಮಾಗ್ರಿಗಳು ಮತ್ತು ಸ್ಲೇಟು ಇತರ ಪುಸ್ತಕಗಳನ್ನು ಗ್ರಾಮಸ್ಥರು ಕೊಡುಗೆಯಾಗಿ ನೀಡಿದರು. ಸ್ಟೋಡೆಂಟ್ ಜೆರಾಕ್ಸ್ ಅಂಗಡಿ ವತಿಯಿಂದ ಪೆನ್ಸಿಲ್ ಇತರ ಸಾಮಾಗ್ರಿಗಳನ್ನು ಉಚಿತವಾಗಿ ನೀಡಲಾಯಿತು.
ಎಸ್.ಡಿ.ಎಂ.ಸಿ ಅಧ್ಯಕ್ಷ ಡಿ.ಎನ್.ರಾಮಚಂದ್ರ, ಗ್ರಾಮ ಪಂಚಾಯಿತಿ ಸದಸ್ಯೆ ಸುಮಿತ್ರಮ್ಮ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ಮುನಿರಾಜು, ಡಿ.ಎನ್.ಆಂಜನೇಯರೆಡ್ಡಿ, ಶಿಕ್ಷಕರಾದ ಮಂಜುನಾಥ, ಪಿಳ್ಳಣ್ಣ, ಮುಖ್ಯಶಿಕ್ಷಕ ಕೆ.ಎನ್.ಶ್ರೀಕಾಂತ್, ಸಹಶಿಕ್ಷಕ ಎ.ಆರ್.ಮಹೇಶ್, ಅಂಗನವಾಡಿ ಕಾರ್ಯಕರ್ತೆ ಶಶಿಕಲ ಹಾಜರಿದ್ದರು.
ರಾಷ್ರೀಯ ಸೇವಾ ಯೋಜನೆ ವಿಶೇಷ ವಾರ್ಷಿಕ ಶಿಬಿರದ ಉದ್ಘಾಟನಾ ಕಾರ್ಯಕ್ರಮ
ಕೇಶವಾರ ಗ್ರಾಮದಲ್ಲಿ ಯಲಹಕಂದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು ಮತ್ತು ಶ್ರೀನಿವಾಸ ಚಾರಿಟಬಲ್ ಟ್ರಸ್ಟ್ ನ ವತಿಯಿಂದ ರಾಷ್ರೀಯ ಸೇವಾ ಯೋಜನೆ ವಿಶೇಷ ವಾರ್ಷಿಕ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದ ಎನ್.ಎಸ್.ಎಸ್ ನ ಸಂಯೋಜನಾಧಿಕಾರಿ ಡಾ.ಆರ್.ಶ್ರೀನಿವಾಸ್ ಮಾತನಾಡಿದರು.
ಯುವಕರಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಸಾಂಘಿಕವಾಗಿ ಸಮಾಜದ ಒಳಿತಿಗಾಗಿ ಯುವಶಕ್ತಿಯ ಸದ್ಭಳಕೆಯಾಗಲಿ ಎಂದು ಅವರು ತಿಳಿಸಿದರು.
ಶ್ರೀನಿವಾಸ ಚಾರಿಟಬಲ್ ಟ್ರಸ್ಟ್ ನ ಸಹಯೋಗದಲ್ಲಿ ಗ್ರಾಮದ ದೇವಾಲಯದ ಆವರಣದಲ್ಲಿ ಶೌಚಾಲಯಗಳ ನಿಮಾರ್ಣಕ್ಕೆ ಗುದ್ದಲಿ ಪೊಜೆ ನಡೆಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ರವಾನಿಸಿದ್ದೀರಿ. ಸಮಾಜಮುಖಿ ಕಾರ್ಯಗಳ ಮೂಲಕ ಸತ್ಪ್ರಜೆಗಳಾಗಿ ಎಂದರು.
ಈ ಸಂದರ್ಭದಲ್ಲಿ ಶ್ರೀನಿವಾಸ ಚಾರಿಟಬಲ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಮತ್ತು ಎನ್.ಎಸ್.ಎಸ್ ನ ರಾಜ್ಯ ಪ್ರಶಸ್ತಿ ಪುರಸ್ಕತ ಕೇಶವಾರ ನವೀನ್ ಅವರ ನೇತೃತ್ವದಲ್ಲಿ ಗುರುವಂದನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರು ವಿಶ್ವವಿದ್ಯಾಲಯ ಎನ್.ಎಸ್.ಎಸ್ ನ ಸಂಯೋಜನಾಧಿಕಾರಿ ಡಾ.ಆರ್.ಶ್ರೀನಿವಾಸ್, ಯಲಹಂಕದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎನ್.ವೆಂಕಟೇಶ್ ಮತ್ತು ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ನ ಕಾರ್ಯಕ್ರಮಾಧಿಕಾರಿ ಎನ್.ಟಿ.ತಿಮ್ಮಪ್ಪ ಅವರನ್ನು ಗೌರವಿಸಲಾಯಿತು.
ಎನ್.ಎಸ್.ಎಸ್ ರಾಜ್ಯ ಪ್ರಶಸ್ತಿ ವಿಜೇತ ಡೊಳ್ಳು ಕುಣಿತ ಕಲಾವಿದ ಡಾ.ಎ.ಎಸ್.ಚಂದ್ರಕುಮಾರ್, ಸಂತೋಷ, ಕೇಶವಾರ ಗ್ರಾಮ ಪಂಚಾಯಿತಿ ಸದ್ಯಸ್ಯ ಕೆ.ಎಸ್. ಚಂದ್ರಶೇಖರ್, ಚೈತ್ರಾ ಮುರಳಿಧರ್, ಕೆ.ಟಿ.ಮಂಜುನಾಥ್, ನಾರಾಯಣಸ್ವಾಮಿ, ಭರತ್, ರಾಕೇಶ್, ಕೇಶವಾರ ಗ್ರಾಮಸ್ಥರು ಹಾಜರಿದ್ದರು.
ಅಪ್ಪೇಗೌಡನಹಳ್ಳಿ ಸರ್ಕಾರಿ ಶಾಲೆಯಲ್ಲಿ ಸಾವಿತ್ರಿ ಬಾಪುಲೆ ಅವರ ೧೮೮ನೇ ಜನ್ಮದಿನಾಚರಣೆ
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಸಾವಿತ್ರಿ ಬಾಪುಲೆ ಅವರ ೧೮೮ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ ಮಾತನಾಡಿದರು.
ಸ್ವಾತಂತ್ರ ಪೂರ್ವದಲ್ಲಿ ಮೌಢ್ಯತೆಗಳೇ ವಿಜೃಂಭಿಸುತ್ತಿದ್ದ ಪರಿಸ್ಥಿತಿಯಲ್ಲಿ ಶೋಷಿತ, ದಲಿತ, ಹಿಂದುಳಿದ ವರ್ಗ ಸೇರಿದಂತೆ ಮಹಿಳೆಯರಿಗೆ ಅಕ್ಷರ ಕಲಿಸಿ ಶಿಕ್ಷಣ ನೀಡುವ ಮೂಲಕ ಹೊಸ ಕ್ರಾಂತಿಗೆ ನಾಂದಿಯಾಡಿದವರು ಮಹಾನ್ ತಾಯಿ ಸಾವಿತ್ರಿ ಬಾಪುಲೆ ಹಾಗೂ ಜ್ಯೋತಿಬಾಪುಲೆಯವರು ಎಂದು ಅವರು ತಿಳಿಸಿದರು.
ಶಾಲೆ ತೆರೆದು ಶಿಕ್ಷಕಿಯಾಗಿ ದುಡಿದ ತಪ್ಪಿಗಾಗಿಯೇ ಸಾವಿತ್ರಿಬಾಯಿಪುಲೆ ಸೆಗಣಿ ಮತ್ತು ಕಲ್ಲೇಟು ತಿನ್ನುತ್ತಾರೆ. ಆದರೆ ಶಿಕ್ಷಣವನ್ನು ಅಕ್ಷರಾಭ್ಯಾಸಕ್ಕಿಂತ, ಸಾಮಾಜಿಕ, -ಸಾಂಸ್ಕೃತಿಕ ಬದಲಾವಣೆಗಾಗಿ ತಳಸಮುದಾಯದವರ ಮನಸ್ಸನ್ನು ಬೆಳಗಿಸುವಂತೆ ಮಾಡುವ ಮೂಲಭೂತ ಕೆಲಸವೆಂದೇ ನಂಬಿದ ಪುಲೆ ದಂಪತಿಗಳು ಯಾವುದಕ್ಕೂ ಹೆದರದೆ ಸವಾಲುಗಳನ್ನು ಎದುರಿಸುತ್ತಾರೆ ಎಂದು ಅವರ ಜೀವನ ಕಥೆಯನ್ನು ಮಕ್ಕಳಿಗೆ ವಿವರಿಸಿದರು.
ಶಿಕ್ಷಕ ಚಾಂದ್ ಪಾಷ ಮಾತನಾಡಿ, ಪುಲೆ ದಂಪತಿಯ ಹೆಚ್ಚುಗಾರಿಕೆ ಅವರು ತೆರೆದ ಶಾಲೆ ಮತ್ತು ಕಲಿಸಿದ ಅಕ್ಷರವಷ್ಟೇ ಅಲ್ಲ. ಅವರಿಗೆ ಸಾಮಾಜಿಕ ಜಾಗೃತಿ ಮುಖ್ಯವಾಗಿತ್ತು. ಹಾಗಾಗಿ ಪುಲೆ ದಂಪತಿ ಶಾಲೆ ಮತ್ತು ಕಲಿಕೆಯಿಂದಾಚೆಗೂ ವಿಸ್ತರಿಸಿಕೊಂಡರು. ಇದರ ಭಾಗವಾಗಿಯೇ ದಮನಿತರಿಗೆ ಶಾಲೆ ತೆರೆಯುವ ಜೊತೆಗೆ ವಿವಾಹಬಾಹಿರ ಗರ್ಭಿಣಿ ಮಹಿಳೆಯರಿಗೆ ಪುನರ್ವಸತಿ ಕೇಂದ್ರಗಳನ್ನೂ, ವಿವಾಹಬಾಹಿರ ಮಕ್ಕಳಿಗೆ ಶಿಶುಕೇಂದ್ರಗಳನ್ನೂ ಸ್ಥಾಪಿಸಿದರು. ವಿಧವಾ ಕೇಶಮುಂಡನವನ್ನು ಕ್ಷೌರಿಕರ ಸಂಘಟನೆಯ ಪ್ರತಿಭಟನೆ ಮೂಲಕ ವಿರೋಧಿಸಿದರು ಎಂದು ಹೇಳಿದರು.
ಶಿಕ್ಷಕರಾದ ಅಶೋಕ್, ಭಾರತಿ ಹಾಜರಿದ್ದರು.
ನಡಿಪಿನಾಯಕನಹಳ್ಳಿ ಬಳಿ ನೀಲಗಿರಿ ತೋಪಿಗೆ ಬೆಂಕಿ
ತಾಲ್ಲೂಕಿನ ಜಂಗಮಕೋಟೆ ರಸ್ತೆಯಲ್ಲಿರುವ ನಡಿಪಿನಾಯಕನಹಳ್ಳಿಯ ಬಳಿ ರಸ್ತೆಯ ಪಕ್ಕದಲ್ಲೆ ಇದ್ದ ನೀಲಗಿರಿ ತೋಪಿಗೆ ಬೆಂಕಿ ಹೊತ್ತಿಕೊಂಡಿರುವ ಪರಿಣಾಮ ಸುಮಾರು ೩ ಎಕರೆಯಷ್ಟು ಪ್ರದೇಶದಲ್ಲಿನ ಮರಗಳು ಸುಟ್ಟುಹೋಗಿವೆ.
ತಾಲ್ಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಪದಾಧಿಕಾರಿಗಳು ಬೆಂಕಿ ಹೊತ್ತುಕೊಂಡಿರುವ ಬಗ್ಗೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗೆ ತಕ್ಷಣ ಮಾಹಿತಿ ನೀಡಿದ್ದರಿಂದ ನೀಲಗಿರಿ ತೋಪಿನ ಸಮೀಪದಲ್ಲಿದ್ದ ತೋಟಗಳಲ್ಲಿನ ಬೆಳೆಗಳು ನಾಶವಾಗುವುದನ್ನು ತಪ್ಪಿಸಿದ್ದಾರೆ.
ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮೋಹನ್ ತಿಳಿಸಿದರು.
ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ 9 ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ಕನ್ನಡವನ್ನು ಕಟ್ಟುವ ಕೆಲಸದ ಜೊತೆಯಲ್ಲಿ ಕನ್ನಡಿಗರ ಬದುಕು ಕಟ್ಟುವ ಕೆಲಸವನ್ನು ಕನ್ನಡಪರ ಸಂಘಟನೆಗಳು ಮಾಡಬೇಕಿದೆ. ನಾಡ ಜನರ ಬದುಕನ್ನು ಹಸನುಗೊಳಿಸುವ ಹಲವು ಜನಪರ ಕಾರ್ಯಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ರಾಜ್ಯಾಧ್ಯಕ್ಷ ನಾಗೇನಹಳ್ಳಿ ಕೃಷ್ಣಮೂರ್ತಿ ತಿಳಿಸಿದರು.
ನಗರದ ಕೋಟೆ ವೃತ್ತದಲ್ಲಿ ಬುಧವಾರ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ ಒಂಭತ್ತನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ನಾಡು ನುಡಿ ನೆಲ ಜಲದ ರಕ್ಷಣೆ ಈ ನೆಲದಲ್ಲಿ ಮಣ್ಣಿನ ಋಣಹೊತ್ತ ಪ್ರತಿಯೊಬ್ಬರ ಆದ್ಯ ಕರ್ತವ್ಯ. ಕನ್ನಡಿಗರು ವಿಶಾಲ ಹೃದಯವರು. ಎಲ್ಲ ಭಾಷೆ ಭಾಷಿಗರನ್ನೂ ಪ್ರೀತಿಸುತ್ತಾರೆ, ಬರ ಮಾಡಿಕೊಳ್ಳುತ್ತಾರೆ ವಿಶ್ವಾಸದಿಂದ ನೋಡುತ್ತಾರೆ. ಹಾಗಂತ ನಿರಭಿಮಾನಿಗಳಲ್ಲ, ಅಶಕ್ತರೂ ಅಲ್ಲ, ಕನ್ನಡ ನಾಡು ನುಡಿ ನೆಲ ಜಲಕ್ಕೆ ದಕ್ಕೆ ಬರುವುದಾದರೆ ಸೆಟೆದು ನಿಂತು ಯಾರನ್ನಾದರೂ ಎಂತಹ ಶಕ್ತಿಯನ್ನಾದರೂ ತಡೆದು ನಿಲ್ಲಿಸಬಲ್ಲ ನಿಜವಾದ ಶೂರರು ಎಂದು ಹೇಳಿದರು.
ನಮ್ಮ ಸಂಘಟನೆ ಸೇರಿದಂತೆ ಇತರೆ ಸಂಘಟನೆಗಳ ಕೇವಲ ನಾಡು ನುಡಿ ನೆಲ ಜಲದ ರಕ್ಷಣೆಯ ಬಗ್ಗೆ ಮಾತ್ರ ಹೋರಾಟ ಮಾಡುತ್ತಿಲ್ಲ. ಬದಲಿಗೆ ಶಾಶ್ವತ ನೀರಾವರಿ ಸಮಸ್ಯೆ, ರೈತರ ಉತ್ಪಾದನೆಗಳಿಗೆ ಬೆಲೆ ಕುಸಿತ, ನಿರುದ್ಯೋಗ ಸಮಸ್ಯೆ ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮದುವೆ ಸಮಾರಂಭಗಳ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಾಮೂಹಿಕ ವಿವಾಹ, ವೃದ್ಧರಿಗೆ ಆಶ್ರಯತಾಣವಾಗಿ ಪ್ರೀತಿಯಿಂದ ನೋಡಿಕೊಳ್ಳಲು “ಅಪ್ಪ ಅಪ್ಪ ಮನೆ” ಸ್ಥಾಪಿಸುತ್ತೇವೆ ಎಂದರು.
ರೈತರು ಸಾಲದ ಸುಳಿಗೆ ಸಿಲುಕದಂತೆ ಮಾಡುವ ಕೆಲಸ ಸರ್ಕಾರದ್ದು. ರೈತರಿಗೆ ನೀರಿನ ವ್ಯವಸ್ಥೆ, ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಒದಗಿಸಿದರೆ ಅವರಿಗೆ ಯಾವ ಆರ್ಥಿಕ ನೆರವಿನ ಅಗತ್ಯ ಬರುವುದಿಲ್ಲ. ಸಹಾಯಧನ, ಸಾಲ ಮನ್ನಾ ಮುಂತಾದ ಯೋಜನೆಗಳಿಗೆ ಕೋಟಿಗಟ್ಟಲೆ ಹಣ ವ್ಯಯಿಸುವ ಬದಲು ರೈತರ ಮೂಲಭೂತ ಸೌಲಭ್ಯಕ್ಕೆ ಸರ್ಕಾರ ಹಣ ಖರ್ಚು ಮಾಡಲಿ ಎಂದು ನುಡಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಾದ ಎಸ್.ವಿ.ಅಯ್ಯರ್, ರೂಪಸಿ ರಮೇಶ್, ಡಿ.ಜಿ.ಮಲ್ಲಿಕಾರ್ಜುನ, ಎಚ್.ಜಿ.ಗೋಪಾಲಗೌಡ, ಬೋದಗೂರು ವೆಂಕಟಸ್ವಾಮಿರೆಡ್ಡಿ, ಕಾಚಹಳ್ಳಿ ರತ್ನಮ್ಮ, ಟಿ.ಸಾವಿತ್ರಮ್ಮ, ನಾಡೋಜ ಮುನಿವೆಂಕಟಪ್ಪ, ಖಾ.ರ.ಖಂಡೇರಾವ್, ಚನ್ನಕೃಷ್ಣಪ್ಪ, ಶಿವಕುಮಾರ್, ಜಿ.ರಮೇಶಪ್ಪ ಅವರನ್ನು ಸನ್ಮಾನಿಸಲಾಯಿತು.
ಚಲನಚಿತ್ರ ನಟ ಸಿ.ಎನ್.ಮುನಿರಾಜು, ಜಸ್ಮಿತಾ ಡಾನ್ಸ್ ಅಕಾಡೆಮಿಯ ಮಾನಸ್ ಧನುಶ್ರೀ ತಂಡ, ಲಿಟಲ್ ಸ್ಟಾರ್ ಡಾನ್ಸ್ ಗ್ರೂಪ್ ಮನೋಜ್ ತಂಡ ಸಾಂಸ್ಕೃತಿಕ ನೃತ್ಯ ಪ್ರದರ್ಶನವನ್ನು ನಡೆಸಿಕೊಟ್ಟರು. ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಗರದ ಬಸ್ ನಿಲ್ದಾಣದಿಂದ ಕೋಟೆ ವೃತ್ತದವರೆಗೂ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.
ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥಗೌಡ, ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷ ಕೆ.ಎಂ.ಹನುಮಂತರೆಡ್ಡಿ, ರಾಜ್ಯ ಉಪಾಧ್ಯಕ್ಷ ಪುಟ್ಟೇಗೌಡ, ರಾಜ್ಯ ಸಮಿತಿ ಸದಸ್ಯ ಮಹಮ್ಮದ್ ಆಲಿ, ತಾಲ್ಲೂಕು ಅಧ್ಯಕ್ಷ ಎಂ.ಬಿ.ಬೈರಾರೆಡ್ಡಿ, ಗೌರವಾಧ್ಯಕ್ಷ ಸಂಜೀವಪ್ಪ, ನಗರ ಅಧ್ಯಕ್ಷ ಜೆ.ಮಧುಕುಮಾರ್, ಡಾ.ಶಶಿಧರ್, ಡಾ.ಮಧುಕರ್, ಶಿವಕುಮಾರ್, ಸುರೇಶ್, ರಮೇಶ್, ಚಂದ್ರು, ಗಂಗಾಧರ್, ನರೇಶ್, ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್, ಮಂಜುನಾಥ್ ಹಾಜರಿದ್ದರು.
ಎತ್ತಿನಹೊಳೆ ಯೋಜನೆಯಿಂದ ನೀರು ಬರುವುದು ಖಾತರಿಯಿಲ್ಲ – ಎಸ್.ಎಂ.ರವಿಪ್ರಕಾಶ್
ಬಯಲು ಸೀಮೆ ಜಿಲ್ಲೆಗಳಿಗೆ ಎತ್ತಿನಹೊಳೆ ಯೋಜನೆಯಿಂದ ನೀರು ಬರುತ್ತದೆ ಎಂದು ಹೇಳಿಕೊಳ್ಳುತ್ತಿರುವ ರಾಜಕಾರಣಿಗಳು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ (ಪುಟ್ಟಣ್ಣಯ್ಯ ಬಣ) ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್ ಹೇಳಿದರು.
ಎತ್ತಿನಹೊಳೆ ಯೋಜನೆಯಿಂದ ೧೦ ವರ್ಷವಾದರೂ ನೀರು ಬರುವುದು ಖಚಿತವಿಲ್ಲ. ಸರ್ಕಾರ ೧೩ ಸಾವಿರ ಕೋಟಿ ಯೋಜನೆಗೆ ಮೀಸಲಿಟ್ಟು ೨ ಸಾವಿರ ಕೋಟಿಗಳನ್ನು ಈಗಾಗಲೇ ಶಾಸಕರಿಗೆ ಅನುದಾನಗಳ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆ.
ಪ್ರತಿಯೊಂದು ಚುನಾವಣೆಗಳ ಸಮಯದಲ್ಲಿ ಬಯಲು ಸೀಮೆ ಭಾಗಗಳಲ್ಲಿನ ಜನರಿಗೆ ನೀರಾವರಿ ಯೋಜನೆಗಳನ್ನು ೨ ವರ್ಷಗಳಲ್ಲಿ ಅನುಷ್ಠಾನ ಮಾಡುತ್ತೇವೆ ಎಂದು ಸುಳ್ಳು ಆಶ್ವಾಸನೆಗಳನ್ನು ನೀಡಿ ಮತಗಳನ್ನು ಗಳಿಸಿಕೊಂಡು ಹೋದ ನಂತರ ಯೋಜನೆಯ ವಸ್ತುಸ್ಥಿತಿಯ ಬಗ್ಗೆ ರೈತರಿಗಾಗಲಿ, ಈ ಭಾಗದ ಜನತೆಗಾಗಲಿ ವಿಚಾರ ತಿಳಿಸಲ್ಲ. ಚುನಾವಣೆಗಳು ಸಮೀಪಕ್ಕೆ ಬಂದಾಗ ಸಂಸದರು ತಮ್ಮ ಸ್ವಂತ ಖರ್ಚಿನಲ್ಲೆ ಲೋಕಸಭಾ ವ್ಯಾಪ್ತಿಯಲ್ಲಿ ಕಾಂಗ್ರೆಸ್ ನಾಯಕರನ್ನು ಕಾಮಗಾರಿಯನ್ನು ವೀಕ್ಷಣೆ ಮಾಡಲು ಕರೆದುಕೊಂಡು ತೋರಿಸಿಕೊಂಡು ಬರುತ್ತಿದ್ದಾರೆ ಎಂದರು.
ಜಿಲ್ಲಾ ರೈತ ಸಂಘದ ಮುಖಂಡ ಜೆ.ಎಸ್.ವೆಂಕಟಸ್ವಾಮಿ ಮಾತನಾಡಿ, ಅಲ್ಲಿನ ಕಾಫಿ ತೋಟಗಳು, ಗದ್ದೆಗಳನ್ನು ಕಳೆದುಕೊಂಡಿರುವ ರೈತರಿಗೆ ಪರಿಹಾರ ಕೊಟ್ಟಿಲ್ಲ. ಹಾಕಿರುವ ಪೈಪ್ ಗಳು ತೂತುಗಳಾಗಿವೆ. ನೀರು ಬಂದರೂ ವ್ಯರ್ಥವಾಗುತ್ತವೆ. ಕಳೆದ ಚುನಾವಣೆಯಲ್ಲೂ ಇದೇ ಪರಿಸ್ಥಿತಿ ಆಗಿತ್ತು. ೨ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದು ಹೇಳಿದ್ದರು. ೫ ವರ್ಷಗಳು ಮುಕ್ತಾಯವಾಯಿತು. ಇದುವರೆಗೂ ಕಾಮಗಾರಿ ಶೇ ೫೦ ರಷ್ಟು ಆಗಿಲ್ಲ. ಇಲ್ಲಿಂದ ಹೋಗುತ್ತಿರುವ ತಂಡಗಳಿಗೆ ವಿವರಣೆ ನೀಡಲು ಕೆಲ ಅಧಿಕಾರಿಗಳನ್ನು ನೇಮಕ ಮಾಡಿದ್ದಾರೆ.
ಅವರು ಮುಂದಿನ ಚುನಾವಣೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜನರಿಗೆ ಮಾಹಿತಿಗಳನ್ನು ನೀಡಿ ದಿಕ್ಕು ತಪ್ಪಿಸುತ್ತಿದ್ದಾರೆ. ನಾವೂ ಸ್ವತಃ ಯೋಜನೆಯ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದೆವು. ಭಾಷಣಗಳಲ್ಲಿ ಇಲ್ಲಿ ಹೇಳುತ್ತಿರುವ ಹೇಳಿಕೆಗಳಿಗೂ ಅಲ್ಲಿ ನಡೆಯುತ್ತಿರುವ ಕಾಮಗಾರಿಗಳ ಹಂತಕ್ಕೆ ಹೆಚ್ಚು ವ್ಯತ್ಯಾಸವಿದೆ. ೧೦ ವರ್ಷವಾದರೂ ನೀರು ಬರುವುದು ಖಚಿತವಿಲ್ಲ ಎಂದರು. ರೈತ ಮುಖಂಡ ಮಂಜುನಾಥ್ ಇದ್ದರು.
ಪ್ರೌಢಶಾಲಾ ಸಹಶಿಕ್ಷಕರ ಸಂಘದ ವತಿಯಿಂದ ನೂತನ ಶೈಕ್ಷಣಿಕ ದಿನದರ್ಶಿಕೆ ಬಿಡುಗಡೆ ಸಮಾರಂಭ
ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ನೂತನ ಶೈಕ್ಷಣಿಕ ದಿನದರ್ಶಿಕೆ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಚಂದ್ರಶೇಖರಬಾಬು ಮಾತನಾಡಿದರು.
ಪ್ರತಿಯೊಬ್ಬರೂ ತಾವು ಮಾಡುವ ಕಾರ್ಯದಲ್ಲಿ, ಅವಲಂಬಿಸಿರುವ ವೃತ್ತಿಯ ಬಗ್ಗೆ ಗೌರವ ಮತ್ತು ಪ್ರೀತಿಯನ್ನು ಹೊಂದಿರಬೇಕು. ವೃತ್ತಿಯನ್ನು ಸೇವೆಯೆಂದು ಪರಿಭಾವಿಸಬೇಕು ಎಂದು ಅವರು ತಿಳಿಸಿದರು.
ಆಜನ್ಮದತ್ತವಾಗಿ ಅಡಗಿರುವ ಅದಮ್ಯವಾದ ಬುದ್ಧಿ, ಬಲ, ಉತ್ಸಾಹವನ್ನು ಕ್ರಿಯಾತ್ಮಕ ಮತ್ತು ರಚನಾತ್ಮಕ ಕಾರ್ಯಗಳಿಗೆ ಬಳಸಿಕೊಳ್ಳಬೇಕು. ಶಿಕ್ಷಕರಿಗೆ ವಾರ್ಷಿಕವಾಗಿ ಕೈಗೊಳ್ಳಬೇಕಾದ ಶೈಕ್ಷಣಿಕ ಚಟುವಟಿಕೆಗಳನ್ನು ಯೋಜಿಸಿಕೊಳ್ಳಲು ದಿನದರ್ಶಿಕೆ ಸಹಕಾರಿಯಾಗಲಿದೆ ಎಂದರು.
ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನಿರೀಕ್ಷೆಯಲ್ಲಿದ್ದು, ಅದಕ್ಕಾಗಿ ಎಲ್ಲಾ ಶಾಲೆಗಳಲ್ಲಿಯೂ ಸಾಕಷ್ಟು ಕಾರ್ಯಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಶಾಲಾ ಅವಧಿಪೂರ್ವ ಮತ್ತು ನಂತರದಲ್ಲಿ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಕನಿಷ್ಟ ಉತ್ತೀರ್ಣರಾಗಲು ಬೇಕಾದಷ್ಟನ್ನಾದರೂ ಅಂಕಗಳನ್ನು ಗಳಿಸಲು ಈಗಾಗಲೇ ಎಲ್ಲಾ ವಿಷಯಗಳಲ್ಲಿಯೂ ಪಾಸಿಂಗ್ ಪ್ಯಾಕೇಜ್ ರಚಿಸಿಕೊಂಡು ಕಲಿಸಲಾಗುತ್ತಿದೆ ಎಂದರು.
ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ ಮಾತನಾಡಿ, ಪ್ರೌಢಶಾಲೆಗಳಲ್ಲಿ ಶಿಕ್ಷಕರು ಫಲಿತಾಂಶಗಳಿಕೆಯ ದೃಷ್ಟಿಯಿಂದ ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿ ಮಕ್ಕಳ ಮನೆ ಭೇಟಿ, ಪರಿಹಾರ ಭೋಧನೆ, ವಿಶೇಷ ತರಗತಿಗಳಂತಹ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸುತ್ತಿದ್ದು, ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಸಂಪೂರ್ಣವಾಗಿ ಸಿದ್ಧಗೊಳಿಸಲಾಗುವುದು ಎಂದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೇಶವರೆಡ್ಡಿ, ಪ್ರಾಥಮಿಕಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ಮುನಿರಾಜು ರಾಜ್ಯಪರಿಷತ್ ಸದಸ್ಯ ಸುಬ್ಬಾರೆಡ್ಡಿ, ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಗಜೇಂದ್ರ, ಕಾರ್ಯದರ್ಶಿ ನರಸಿಂಹರಾಜು, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಎಲ್.ವೆಂಕಟರೆಡ್ಡಿ, ಸಹಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ಖಜಾಂಚಿ ಅಶ್ರಥ್, ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ರವೀಂದ್ರನಾಥ್ ಪಾಲ್ಗೊಂಡಿದ್ದರು.
ಪ್ರಯಾಣಿಕರಿಗೆ ಪುಸ್ತಕಗಳನ್ನು ಹಂಚುವ ಮೂಲಕ ರೈಲಿನಲ್ಲಿ ಮಲ್ಲಿಕಾರ್ಜುನ ಮನ್ಸೂರ್ ಜನುಮ ದಿನ ಆಚರಣೆ
ನಗರದ ರೈಲ್ವೆ ನಿಲ್ದಾಣದಲ್ಲಿ ರೈಲಿನ ಚಾಲಕ ಉಮಾಶಂಕರ್ ಅವರನ್ನು ಕಸಾಪ ತಾಲ್ಲೂಕು ಘಟಕದ ವತಿಯಿಂದ ಸನ್ಮಾನಿಸಿ ಪ್ರಯಾಣಿಕರಿಗೆ ಕನ್ನಡ ಪುಸ್ತಕಗಳನ್ನು ಉಚಿತವಾಗಿ ನೀಡಿ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ರೈಲಿನ ಪ್ರಯಾಣಿಕರಿಗೆ ಪುಸ್ತಕಗಳನ್ನು ಹಂಚುವ ಮೂಲಕ ಖ್ಯಾತ ಸಂಗೀತ ವಿದ್ವಾಂಸ ಮಲ್ಲಿಕಾರ್ಜುನ ಮನ್ಸೂರ್ ಅವರ ಜನುಮ ದಿನವನ್ನು ವಿಶಿಷ್ಟವಾಗಿ ಆಚರಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ನಮ್ಮ ದೇಶದ ನರನಾಡಿಯಂತಿರುವ ರೈಲುಗಳಲ್ಲಿ ಪ್ರತಿ ದಿನ ಲಕ್ಷಾಂತರ ಮಂದಿ ಪ್ರಯಾಣಿಸುತ್ತಾರೆ. ನಮ್ಮ ಭಾಗದಲ್ಲೂ ರೈಲನ್ನು ಅವಲಂಬಿಸಿರುವವರು ಅನೇಕ ಮಂದಿ. ರೈಲಿನಲ್ಲೂ ಕನ್ನಡ ಸದಾ ಉಲಿಯುತ್ತಿರಬೇಕು. ಅದಕ್ಕಾಗಿ ಕನ್ನಡ ಪುಸ್ತಕಗಳನ್ನು ಹಂಚಿದೆವು. ಸಾವಿರಾರು ಮಂದಿಯ ಸುರಕ್ಷಕರಾದ ರೈಲಿನ ಚಾಲಕರನ್ನು ಸಹ ಗುರುತಿಸಿ ಗೌರವಿಸುವುದು ನಮ್ಮ ಕರ್ತವ್ಯವಾಗಿದೆ. ಈ ಸಂದರ್ಭದಲ್ಲಿ ಕನ್ನಡ ನಾಡು ಕಂಡ ಶ್ರೇಷ್ಠ ಸಂಗೀತ ಪ್ರತಿಭೆ ಮಲ್ಲಿಕಾರ್ಜುನ ಮನ್ಸೂರ್ ಅವರ ಬಗ್ಗೆಯೂ ತಿಳಿಸಿದೆವು ಎಂದು ಹೇಳಿದರು.
ರೈಲಿನಲ್ಲಿ ಕನ್ನಡ ಬಳಕೆ ಮಾಡಬೇಕು. ಪ್ರಕಟಣೆಗಳಲ್ಲಿ, ನಾಮಫಲಕಗಳಲ್ಲಿ ಕನ್ನಡವಿರಲಿ. ಜ್ಞಾನಪೀಠ ತಂದುಕೊಟ್ಟ ಸಾಹಿತಿಗಳ ಹಾಗೂ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮಹಾನುಭಾವರ ಚಿತ್ರಸಹಿತ ಮಾಹಿತಿ ಮತ್ತು ಕನ್ನಡನಾಡಿನ ವೈಭವವನ್ನು ಬಿಂಬಿಸುವ ಚಿತ್ರಗಳು ರೈಲ್ವೆ ನಿಲ್ದಾಣದಲ್ಲಿ ಶೋಭಿಸಲಿ. ಕನ್ನಡಿಗರಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಸಿಗಲಿ ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ರೈಲ್ವೆ ಚಾಲಕ ಉಮಾಶಂಕರ್, ಸ್ಟೇಷನ್ ಮಾಸ್ಟರ್ ಮುಖೇಶ್ ಕುಮಾರ್, ಸಿಗ್ನಲ್ ಟೆಕ್ನೀಶಿಯನ್ ಗಳಾದ ಬೀರೇಂದ್ರ ಪ್ರಸಾದ್, ಪ್ರಜ್ವಲ್ ಗೌಡ, ಕಸಾಪ ತಾಲ್ಲೂಕು ಕಾರ್ಯದರ್ಶಿ ಚಾಂದ್ ಪಾಷ, ಸಂಘ ಸಂಸ್ಥೆಗಳ ಪ್ರತಿನಿಧಿ ಶಂಕರ್, ಮುನಿಯಪ್ಪ, ಮಂಜುನಾಥ್, ಅಜಿತ್ ಕುಮಾರ್ ಯಾದವ್ ಹಾಜರಿದ್ದರು.
ಶಿಡ್ಲಘಟ್ಟದಲ್ಲಿ ಸಡಗರ ಸಂಭ್ರಮದಿಂದ ಕ್ರಿಸ್ ಮಸ್ ಆಚರಣೆ
ನಗರದ ಚಿಂತಾಮಣಿ ರಸ್ತೆಯ ಸೇಕ್ರೆಡ್ ಹಾರ್ಟ್ ಚರ್ಚ್, ದಿಬ್ಬೂರಹಳ್ಳಿ ರಸ್ತೆಯ ಎಬೆನೆಜರ್ ಮಾರ್ತೋಮ ಚರ್ಚ್, ನೆಲ್ಲೀಮರದಹಳ್ಳಿಯ ಇಮ್ಮಾನುವೇಲ್ ಚರ್ಚ್ ಹಾಗೂ ತಾಲ್ಲೂಕಿನ ವಿವಿದೆಡೆಗಳಲ್ಲಿರುವ ಚರ್ಚ್ ಗಳನ್ನು ಮಂಗಳವಾರ ಕ್ರಿಸ್ ಮಸ್ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು. ಮೇಣದ ಬತ್ತಿಗಳನ್ನು ಬೆಳಗುವ ಮೂಲಕ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಜಾತಿ ಬೇಧವಿಲ್ಲದೆ ನೂರಾರು ಮಂದಿ ವಿವಿಧ ಚರ್ಚ್ ಗಳಿಗೆ ಭೇಟಿ ನೀಡಿ ಮೇಣದ ಬತ್ತಿಗಳನ್ನು ಬೆಳಗಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಚರ್ಚ್ ಗಳಲ್ಲಿ ಕೇಕನ್ನು ಹಂಚಿದರು.
“ವರ್ಷಕ್ಕೊಮ್ಮೆ ಬರುವ ಏಸುಕ್ರಿಸ್ತನ ಜಯಂತಿಯನ್ನು ಸಡಗರದಿಂದ, ಭಕ್ತಿ ಭಾವದಿಂದ ಕ್ರಿಶ್ಚಿಯನ್ನರು ಆಚರಿಸುತ್ತಾರೆ. ಕ್ರೈಸ್ತರಿಗೆ ಪವಿತ್ರ ಹಬ್ಬವಾಗಿರುವ ಕ್ರಿಸ್ ಮಸ್ ಅಥವಾ ಕ್ರಿಸ್ತ ಜಯಂತಿಯನ್ನು ಪ್ರತಿವರ್ಷ ವಿಶ್ವದಾದ್ಯಂತ ಸಂಭ್ರಮ ಸಡಗರಗಳಿಂದ ಆಚರಣೆ ಮಾಡಲಾಗುತ್ತದೆ. ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ತಾಲ್ಲೂಕಿನ ಎಲ್ಲಾ ಚರ್ಚುಗಳಲ್ಲಿ ವಿವಿಧ ರೀತಿಗಳಲ್ಲಿ ಆಚರಣೆ ಮಾಡುತ್ತಾ ಬಂದಿದ್ದು, ಏಸುವಿನ ಸಂದೇಶವನ್ನು ಜನರಿಗೆ ತಿಳಿಸಲಾಗುತ್ತಿದೆ.
ಕ್ರಿಸ್ ಮಸ್ ಸಮಯದಲ್ಲಿ ಕ್ರೈಸ್ತ ಕುಟುಂಬಗಳ ಮೇಲೆ ನಕ್ಷತ್ರಗಳನ್ನು ಕಟ್ಟುವುದು ವಾಡಿಕೆ. ಕ್ರೈಸ್ತರು ನಮಗಾಗಿ ಜನಿಸಿದ ರಕ್ಷಕನು ಏಸು ಎಂಬ ನಂಬಿಕೆಯಿಂದ ಕ್ರಿಸ್ ಮಸ್ ಹಬ್ಬವನ್ನು ಶ್ರದ್ಧಾಭಕ್ತಿಗಳಿಂದ ತಮ್ಮ ಮನೆಗಳನ್ನು ವಿವಿಧ ಬಣ್ಣದ ಕಾಗದಗಳಿಂದ ಅಲಂಕಾರ ಮಾಡಿ, ಸ್ನೇಹಿತರು, ಬಂಧುಗಳು, ಸೇರಿದಂತೆ ಎಲ್ಲರೊಂದಿಗೂ ಶುಭಾಶಯಗಳನ್ನು ಹಂಚಿಕೊಂಡು ಎಲ್ಲರ ಒಳಿತಾಗಿ ಪ್ರಾರ್ಥನೆ ಮಾಡುವುದು ರೂಢಿಯಲ್ಲಿದೆ. ಪ್ರತಿಯೊಂದು ಚರ್ಚ್ ನಲ್ಲಿಯೂ ಏಸುವಿನ ಜನ್ಮವೃತ್ತಾಂತವನ್ನು ಪ್ರತಿನಿಧಿಸುವಂತೆ ಪ್ರತಿಕೃತಿಗಳ ಮೂಲಕ ಅಲಂಕಾರವನ್ನು ಮಾಡಿರುತ್ತಾರೆ’ ಎಂದು ಪೂಜೆ ಸಲ್ಲಿಸಲು ಬಂದಿದ್ದ ಜೋಸೆಫ್ ತಿಳಿಸಿದರು.
ವೃತ್ತಿ ಬದುಕಿನ ಹಿನ್ನೆಲೆಯ ಅನುಭವ ಸಾಹಿತ್ಯವಾಗುತ್ತಿದೆ – ಸಾಹಿತಿ ಧನಪಾಲ್ ನಾಗರಾಜಪ್ಪ ನೆಲವಾಗಿಲು
ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ಕನ್ನಡ ಸಾರಸ್ವತ ಪರಿಚಾರಿಕೆ ಶಿಡ್ಲಘಟ್ಟ ತಾಲ್ಲೂಕು ಮತ್ತು ಕೇಂದ್ರ ಗ್ರಂಥಾಲಯ ಸಹಯೋಗದಲ್ಲಿ ನಡೆದ “ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ” ೧೬ ನೇ ತಿಂಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಹಿತಿ ಧನಪಾಲ್ ನಾಗರಾಜಪ್ಪ ನೆಲವಾಗಿಲು ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರು ತಮ್ಮ ವೃತ್ತಿ ಬದುಕಿನ ಹಿನ್ನೆಲೆಯ ಅನುಭವವನ್ನು ಬರೆಯುವ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ತಮ್ಮದೇ ಆದ ರೀತಿಯಲ್ಲಿ ಕಾಣಿಕೆ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ಹೆಸರು ಗಳಿಸಲು ಮತ್ತು ಕೀರ್ತಿಯನ್ನು ಬೆನ್ನತ್ತಿ ಸಾಹಿತ್ಯ ರಚನೆ ಅಥವಾ ಪುಸ್ತಕ ಮಾಡಬಾರದು. ಉಪಯುಕ್ತ ಸಾಹಿತ್ಯ ರಚನೆಯಾಗಬೇಕು. ಓದುಗರು ತಾವು ಓದಿದ ಇಷ್ಟವಾದ ಪುಸ್ತಕದ ಬಗ್ಗೆ ತಮ್ಮ ಅನಿಸಿಕೆ ಬರೆಯಬೇಕು. ಇದು ಮತ್ತಷ್ಟು ಮಂದಿಗೆ ಓದಲು ಪ್ರೇರಣೆ ನೀಡುತ್ತದೆ. ಸಾಹಿತಿಗೆ ಇದಕ್ಕಿಂತ ಹೆಚ್ಚಿನ ಬಹುಮಾನ ಬೇರೆ ಬೇಕಿಲ್ಲ. ಜನರ ಬದುಕನ್ನು ಹಸನುಗೊಳಿಸುವಲ್ಲಿ ದುಡಿಯುವ, ಎಲೆ ಮರೆಯ ಕಾಯಿಯಂತಹ ಪ್ರಾಮಾಣಿಕ ಜನರನ್ನು ಗುರುತಿಸಬೇಕು ಮತ್ತು ಗೌರವಿಸಬೇಕು ಎಂದರು.
ರಾಜ್ಯದಲ್ಲಿ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣದ ಮಾಧ್ಯಮ ಕನ್ನಡವೇ ಆಗಿರಬೇಕು. ಜೊತೆಗೆ ಒಂದನೇ ತರಗತಿಯಿಂದಲೇ ಇಂಗ್ಲೀಷ್ ಅನ್ನು ಭಾಷಾ ವಿಷಯವಾಗಿ ಪ್ರಾಮಾಣಿಕವಾಗಿ, ಪರಿಣಾಮಕಾರಿಯಾಗಿ ಕಲಿಸಬೇಕು ಎಂದು ಹೇಳಿದರು.
ತೆಲುಗಿನ ಲೇಖಕ ಸಲೀಂ ಅವರ ಹಲವು ಕಥೆ, ಕಾದಂಬರಿಗಳನ್ನು ಅನುವಾದಿಸಿದ್ದೇನೆ. ಜನಪರ ಆಶಯ, ಮುಸ್ಲಿಂ ಹೆಣ್ಣು ಮಕ್ಕಳ ಬದುಕು, ಬವಣೆ, ಒಳಮನಸ್ಸಿನ ಬೇಗುದಿ, ಗೊಂದಲ, ತಾಕಲಾಟ, ಜ್ವಲಂತ ಸಮಸ್ಯೆ ಮತ್ತು ಅದಕ್ಕೆ ಪರಿಹಾರೋಪಾಯಗಳು ಇವುಗಳಲ್ಲಿದೆ. ಎರಡು ಮಕ್ಕಳ ಕಾದಂಬರಿಗಳನ್ನು ಬರೆದಿದ್ದೇನೆ. ಮಕ್ಕಳು ತಮ್ಮ ಸಹಜವಾದ ಬಾಲ್ಯವನ್ನು ಅನುಭವಿಸಬೇಕು, ಟೀವಿ, ಮೊಬೈಲ್ ಗಳ ಆಕರ್ಷಣೆಗೆ ಒಳಗಾಗಿ ಅವರ ಸ್ವಭಾವ ಬದಲಾಗುತ್ತಿದೆ. ಮಕ್ಕಳ ಮನಸ್ಸನ್ನು ಅರಳಿಸುವ, ಕುತೂಹಲ ಮತ್ತು ಕ್ರಿಯಾಶೀಲತೆ ಬೆಳೆಸುವ ಕೆಲಸವಾಗಬೇಕು ಎಂದು ನುಡಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಸ್ಥಳೀಯ ಲೇಖಕರನ್ನು ಪರಿಚಯಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾಹಿತಿ ಧನಪಾಲ್ ನಾಗರಜಪ್ಪ ನೆಲವಾಗಿಲು ಅವರು ತಮ್ಮ “ಅಪರಾಜಿತ”, “ಮೇಧ ೦೧೭”, “ನಿವೇದನೆ”, “ತಣ್ಣೀರ ಬಟ್ಟೆಯ ಬಿಸಿ” ಪುಸ್ತಕಗಳನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಕಾರ್ಯದರ್ಶಿ ಸತೀಶ್, ಗ್ರಂಥಪಾಲಕ ಬಚ್ಚರೆಡ್ಡಿ, ಸಿಬ್ಬಂದಿ ಬಾಂಧವ್ಯ, ಚಲನಚಿತ್ರ ನಟ ಸಿ.ಎನ್.ಮುನಿರಾಜು, ನಿವೃತ್ತ ಶಿಕ್ಷಕ ಸುಂದರನ್, ಅಜಿತ್ ಕೌಂಡಿನ್ಯ, ವಿ.ವೆಂಕಟರಮಣ, ಹುಜಗೂರು ಕೆಂಪೇಗೌಡ, ಅನಿಲ್ ಪದ್ಮಸಾಲಿ, ಜಸ್ಮಿತಾ ಡಾನ್ಸ್ ಅಕಾಡೆಮಿಯ ಮಾನಸ್ ಧನುಶ್ರೀ, ಲಿಟಲ್ ಸ್ಟಾರ್ ಡಾನ್ಸ್ ಗ್ರೂಪ್ ಮನೋಜ್, ಮುನಿಯಪ್ಪ, ಕೃಷ್ಣಪ್ಪ, ವೈಶಾಖ್, ಶ್ರೀನಾಥ್, ಗೋಪಾಲಕೃಷ್ಣ, ಸತ್ಯನಾರಾಯಣ್ ಹಾಜರಿದ್ದರು.
ಕ್ರೆಸೆಂಟ್ ಶಾಲೆಯಲ್ಲಿ “ಕಲೋತ್ಸವ” ಕಾರ್ಯಕ್ರಮ
ಪೋಷಕರು ಮಕ್ಕಳ ಮೇಲೆ ಹೆಚ್ಚಿನ ಒತ್ತಡ ಹೇರಬಾರದು. ಮಕ್ಕಳು ತಮ್ಮ ನೈಜ ಶಕ್ತಿಯನ್ನು ಕಂಡುಕೊಳ್ಳಲು ಅನುಕೂಲ ಕಲ್ಪಿಸುವುದು ಮತ್ತು ಕಠಿಣ ಪರಿಶ್ರಮಿಗಳಾಗಿ ರೂಪುಗೊಳ್ಳಲು ಅನುಕೂಲ ಕಲ್ಪಿಸಬೇಕು. ಶ್ರೇಷ್ಠತೆಯನ್ನು ಸಾಧಿಸುವ ದಾರಿಯಲ್ಲಿ ಉತ್ತಮ ಹವ್ಯಾಸ ರೂಢಿಸಿಕೊಳ್ಳುವಂತೆ ಮಕ್ಕಳನ್ನು ಪ್ರೇರೇಪಿಸಿ ಎಂದು ಜಿಲ್ಲಾಧಿಕಾರಿ ಪಿ.ಅನಿರುದ್ಧ್ ಶ್ರವಣ್ ತಿಳಿಸಿದರು.
ನಗರದ ಕ್ರೆಸೆಂಟ್ ಶಾಲೆಯಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ “ಕಲೋತ್ಸವ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲರಿಗೂ ತಮ್ಮ ಮಕ್ಕಳು ಓದಿನಲ್ಲಿ ಎಲ್ಲರಿಗಿಂತ ಮುಂದಿರಬೇಕು ಎಂಬ ಆಸೆ ಇರುತ್ತದೆ. ಆದರೆ ಅತಿಯಾದ ಒತ್ತಡ ಹೇರುವುದರಿಂದ ಮಗುವಿನ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮಕ್ಕಳನ್ನು ಸ್ವಾವಲಂಬಿ ಹಾಗೂ ಉತ್ತಮ ನಾಗರಿಕರನ್ನಾಗಿಸುವ ಉದ್ದೇಶದಿಂದ ಶಿಕ್ಷಣವನ್ನು ನೀಡಬೇಕು. ಪ್ರತಿಯೊಂದು ಮಗುವೂ ವಿಭಿನ್ನ ರೀತಿಯ ಸಾಮರ್ಥ್ಯ ಹೊಂದಿರುತ್ತದೆ. ಅವರು ಯಾವ ಕ್ಷೇತ್ರದಲ್ಲಿ ಚುರುಕಾದವರೆಂದು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಖಲೀಲ್ ಗಿಬ್ರಾನ್ ಹೇಳಿದಂತೆ, “ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ, ಅವರು ನಿಮ್ಮೊಳಗಿಂದ ಬಂದಿರಬಹುದು, ಆದರೆ ನಿಮ್ಮಿಂದ ಅಲ್ಲ, ನೀವು ಅವರ ದೇಹಗಳನ್ನು ರೂಪಿಸಬಹುದು, ಅವರ ಆತ್ಮಗಳನ್ನಲ್ಲ, ಅವರನ್ನು ನಿಮ್ಮಂತೆ ಮಾಡುವುದು ಬೇಡ
ಏಕೆಂದರೆ, ಜೀವನ ಹಿಮ್ಮುಖವಾಗಿ ಹೋಗದು, ನೀವು ಬಿಲ್ಲಿನಂತೆ, ಮಕ್ಕಳು ನಿಮ್ಮಿಂದ ಚಿಮ್ಮಿದ ಜೀವಂತ ಬಾಣಗಳು” ಎಂಬ ಮಾತುಗಳನ್ನು ನೆನಪಿಟ್ಟುಕೊಳ್ಳಬೇಕು. ಮಕ್ಕಳು ಪೋಷಕರನ್ನು ಅನುಸರಿಸುತ್ತವೆ. ಹಾಗಾಗಿ ಮಕ್ಕಳು ಟೀವಿ ನೋಡುವುದು ಕಡಿಮೆ ಮಾಡಬೇಕಾದರೆ ಮೊದಲು ಪೋಷಕರು ಅದನ್ನು ಪಾಲಿಸಬೇಕು ಎಂದರು.
ಬೆಂಗಳೂರು ಮೆಡಿಕಲ್ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ಡಾ.ಅಬ್ದುಲ್ ರಜಾಕ್ ಮಾತನಾಡಿ, ಬಹಳಷ್ಟು ಸಂದರ್ಭದಲ್ಲಿ ಅಂಕಗಳಿಕೆ ಆಧಾರದ ಮೇಲೆ ವಿದ್ಯಾರ್ಥಿಗಳ ಬುದ್ಧಿಶಕ್ತಿ ನಿರ್ಧರಿಸಲಾಗುತ್ತದೆ. ಅಂಕ ಗಳಿಕೆ ಒಂದರಿಂದಲೇ ವ್ಯಕ್ತಿಯ ಬುದ್ಧಿಮತ್ತೆ ನಿರ್ಧರಿಸಲಾಗದು. ಆದರೆ ಇಂದು ಅನೇಕ ಪೋಷಕರು ತಮ್ಮ ಮಕ್ಕಳು ಹೆಚ್ಚಿನ ಅಂಕ ಪಡೆಯಬೇಕು ಎಂದು ಒತ್ತಡ ಹೇರುವುದು ಕಂಡುಬರುತ್ತಿದೆ. ಇದರಿಂದ ಭಯಕ್ಕೊಳಗಾಗುವ ಮಕ್ಕಳ ಕಲಿಕೆ ಕುಂಠಿತವಾಗುತ್ತದೆ. ಉತ್ತಮ ಹವ್ಯಾಸಗಳನ್ನು ಮಕ್ಕಳು ರೂಢಿಸಿಕೊಳ್ಳಬೇಕು ಎಂದು ನುಡಿದರು.
ಶಾಲಾ ವಿದ್ಯಾರ್ಥಿಗಳು ವಿವಿಧ ರೀತಿಯ ಸಾಂಸ್ಕೃತಿಕ ಕಲಾ ಪ್ರದರ್ಶನ ನಡೆಸಿಕೊಟ್ಟರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಉತ್ತಮ ಶಿಕ್ಷಕರನ್ನು ಗೌರವಿಸಲಾಯಿತು.
ಕ್ರೆಸೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಮ್ಮದ್ ಯೂಸುಫ್, ಕಾರ್ಯದರ್ಶಿ ತಮೀಮ್ ಅನ್ಸಾರಿ, ಡಿ.ಡಿ.ಪಿ.ಐ ಶಿವಣ್ಣರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು, ತಹಶೀಲ್ದಾರ್ ಅಜಿತ್ ಕುಮಾರ್ ರೈ, ನಗರಸಭೆ ಆಯುಕ್ತ ವಲಪತಿ, ರವಿಶಂಕರ್, ಕೆ.ಎಸ್.ಎಫ್.ಸಿ ವ್ಯವಸ್ಥಾಪಕ ಬಬಾಸಾಬ್, ಡಾ.ಸತ್ಯನಾರಾಯಣ್ ಹಾಜರಿದ್ದರು.

