ನಗರದ ಸ್ತ್ರೀಶಕ್ತಿ ಭವನದಲ್ಲಿ ಭಾನುವಾರ ಚೌದರಿ ಚರಣ್ ಸಿಂಗ್ ಜನ್ಮದಿನದ ಅಂಗವಾಗಿ ಆತ್ಮಾ ಯೋಜನೆಯಡಿಯಲ್ಲಿ ಆಯೋಜಿಸಿದ್ದ ರೈತ ದಿನಾಚರಣೆ ಹಾಗೂ ಕಿಸಾನ್ ಗೋಷ್ಠಿ ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕಿ ಎಲ್.ರೂಪ ಮಾತನಾಡಿದರು.
ನರೇಗಾ ಯೋಜನೆಯಡಿಯಲ್ಲಿ ಕೃಷಿ ಹೊಂಡ, ಬದು ನಿರ್ಮಾಣ, ಎರೆ ಹುಳು ತೊಟ್ಟಿಗಳನ್ನು ನಿರ್ಮಿಸಲು ಅವಕಾಶವಿದೆ. ರೈತರು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಇಂದು ರೈತ ದಿನ. ಇಡೀ ದೇಶಕ್ಕೆ ಅನ್ನ ನೀಡುವ ರೈತನನ್ನು ಗೌರವಿಸಲು ಆಚರಿಸುವ ದಿನ. ಭಾರತದ ಮಾಜಿ ಪ್ರಧಾನ ಮಂತ್ರಿ ಚೌಧರಿ ಚರಣ ಸಿಂಗ್ ರವರ ಜನ್ಮದಿನವನ್ನು ರೈತ ದಿನಾಚರಣೆ ದಿನವಾಗಿ ಘೋಷಿಸಲಾಗಿದೆ. ಸಮಾಜಕ್ಕೆ ತಮ್ಮ ಕೊಡುಗೆಗಾಗಿ ರೈತರಿಗೆ ಸಹಾಯ ಮತ್ತು ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ 23 ರಂದು ರೈತರ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ರೈತರ ಹಿತ ಕಾಯುವ ಬಿಲ್ ಅನ್ನು ಪ್ರಪ್ರಥಮ ಬಾರಿಗೆ ಚರಣ್ ಸಿಂಗ್ ಮಂಡಿಸಿದ್ದರು. ಇಂದು ಅವರ ಬಿಲ್-ಅನ್ನು ದೇಶದ ಎಲ್ಲ ರಾಜ್ಯಗಳು ಪಾಲಿಸುತ್ತಿವೆ ಎಂದು ಹೇಳಿದರು.
ಮಣ್ಣು ವಿಜ್ಞಾನಿ ಡಾ.ಲತಾ ಮಾತನಾಡಿ, ಮಣ್ಣು ಪರೀಕ್ಷೆಗೆ ಅನುಗುಣವಾಗಿ ಪೋಷಕಾಂಶಗಳನ್ನು ನೀಡಿ ಅಧಿಕ ಇಳುವರಿಯನ್ನು ಪಡೆಯಿರಿ ಎಂದರು.
ಬೇಸಾಯ ಶಾಸ್ತ್ರಜ್ಞ ಡಾ.ರವಿಕುಮಾರ್ ಮಾತನಾಡಿ, ಸಮಗ್ರ ಕೃಷಿಯ ಮಹತ್ವವನ್ನು ವಿವರಿಸಿ, ಅಳವಡಿಸಿಕೊಳ್ಳುವಂತೆ ರೈತರಿಗೆ ಹೇಳಿದರು.
ಆತ್ಮಾ ಯೋಜನೆಯಡಿಯಲ್ಲಿ ಉತ್ತಮ ಸಾಧನೆಗೈದ ಐದು ಮಂದಿ ರೈತರಿಗೆ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಹಾಗೂ ಹತ್ತು ಸಾವಿರ ರೂ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಬೋದಗೂರು ಬಿ.ಎನ್.ನಾಗೇಶ್ ಕುಮಾರ್ (ರೇಷ್ಮೆ), ಗೊರ್ಲಗುಮ್ಮನಹಳ್ಳಿ ಜಿ.ಎನ್.ನರಸಿಂಹರೆಡ್ಡಿ (ತೋಟಗಾರಿಕೆ), ಲಗಿನಾಯಕನಹಳ್ಳಿ ಎಲ್.ಎನ್.ಶಿವಾರೆಡ್ಡಿ (ಸಮಗ್ರ ಕೃಷಿ), ಕೋಟಗಲ್ ಬಿ.ನಾರಾಯಣಪ್ಪ (ಪಶು ಸಂಗೋಪನೆ) ಮತ್ತು ಹಾರಡಿ ತಿರುಮಳಪ್ಪ (ಸಮಗ್ರ ಕೃಷಿ) ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತರು.
ಈ ಸಂದರ್ಭದಲ್ಲಿ ಆತ್ಮಾ ಯೋಜನೆಯಡಿಯಲ್ಲಿ ರಚನೆಯಾದ ಬೆಳೆ ಆಸಕ್ತ ಗುಂಪುಗಳಿಗೆ ಬೀಜಧನ ವಿತರಿಸಲಾಯಿತು.
ಸಹಾಯಕ ಕೃಷಿ ನಿರ್ದೇಶಕ ಜಿ.ಬಿ.ಮಾಲತೇಶ್, ಆತ್ಮಾ ಯೋಜನೆಯ ತಾಂತ್ರಿಕ ವ್ಯವಸ್ಥಾಪಕ ಎನ್.ಅಶ್ವತ್ಥನಾರಾಯಣ್, ಕೃಷಿ ಅಧಿಕಾರಿಗಳಾದ ಗೋಪಾಲ್ ರಾವ್, ಶ್ರೀನಿವಾಸ್, ರವಿನಾರಾಯಣ ರೆಡ್ಡಿ, ಮಹೇಶ್ ಕುಮಾರ್, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಕೃಷಿಕ ಸಮಾಜದ ಪ್ರತಿನಿಧಿ ಕೆಂಪೇಗೌಡ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ವೆಂಕಟಸ್ವಾಮಿ, ಬಿ.ನಾರಾಯಣಸ್ವಾಮಿ, ಮುನಿಕೆಂಪಣ್ಣ, ರಾಮಚಂದ್ರ, ಆತ್ಮಾ ಸಿಬ್ಬಂದಿ ಹಾಗೂ ಅನುವುಗಾರರು ಹಾಜರಿದ್ದರು.
ರೈತ ದಿನಾಚರಣೆ ಹಾಗೂ ಕಿಸಾನ್ ಗೋಷ್ಠಿ ಕಾರ್ಯಕ್ರಮ
ದೇವರಮಳ್ಳೂರು ಗ್ರಾಮದಲ್ಲಿ ಮಳ್ಳೂರಾಂಭ ದೇವಿಯ ರಥೋತ್ಸವ
ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಶನಿವಾರ ಮಳ್ಳೂರಾಂಭ ದೇವಿಯ ರಥೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಅತ್ಯಂತ ಪುರಾತನ ದೇವಾಲಯವಾದ ಮಳ್ಳೂರಾಂಭ ದೇವಾಲಯದ ರಥೋತ್ಸವವು ಜಿಲ್ಲೆಯಾದ್ಯಂತ ಪ್ರಸಿದ್ಧವಾಗಿದ್ದು, ಧನುರ್ಮಾಸ ಹುಣ್ಣಿಮೆಯ ವಿಶೇಷವಾಗಿದೆ.
ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ಜನರು ದೇವಿಯ ದರ್ಶನ ಪಡೆದು ಪೂಜೆಯಲ್ಲಿ ಪಾಲ್ಗೊಂಡು ರಥವನ್ನು ಎಳೆದರು. ದೇವರನ್ನು ವಿಶೇಷವಾಗಿ ಅಲಂಕರಿಸಿದ್ದರು. ಬ್ರಹ್ಮರಥೋತ್ಸವಕ್ಕೆ ರಥವನ್ನು ವಿಶೇಷವಾಗಿ ಅಲಂಕರಿಸಿ ದಾರಿಯುದ್ದಕ್ಕೂ ತಳಿರು ತೋರಣಗಳಿಂದ ಸಿಂಗರಿಸಿದ್ದರು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.
ಗಾರುಡಿಬೊಂಬೆ, ಕೀಲುಕುದುರೆ, ವೀರಗಾಸೆ, ತಮಟೆ ವಾದನ ಆಕರ್ಷಕವಾಗಿತ್ತು. ತಿಂಡಿ ತಿನಿಸುಗಳು, ಆಟಿಕೆಗಳು, ಅಚ್ಚೆ ಹಾಕುವವರು, ದಿನೋಪಯೋಗಿ ವಸ್ತುಗಳು ಸೇರಿದಂತೆ ಬಹುತೇಕ ಅಂಗಡಿಗಳು ತೆರೆದಿದ್ದು ಜನಾಕರ್ಷಕವಾಗಿದ್ದವು.
ತಹಸೀಲ್ದಾರ್ ಎಸ್.ಅಜಿತ್ ಕುಮಾರ್ ರೈ ರಥೋತ್ಸವಕ್ಕೆ ಚಾಲನೆ ನೀಡಿದರು. ದೇವಾಲಯ ಸೇವಾ ಸಮಿತಿ ಅಧ್ಯಕ್ಷ ಡಿ.ಎ.ಮಳ್ಳೂರಯ್ಯ, ಎ.ವೆಂಕೋಬರಾವ್, ಕೆಂಪಣ್ಣ, ಎಸ್.ವಿ.ನಾಗರಾಜರಾವ್, ಬಿ.ಆರ್.ಅನಂತಕೃಷ್ಣ ಪೂಜಾಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಂಗಡಿಗಳ ಮೇಲೆ ದಾಳಿ – ಪ್ಲಾಶ್ಟಿಕ್ ವಶಪಡಿಸಿಕೊಂಡ ಅಧಿಕಾರಿಗಳು
ನಗರದಲ್ಲಿ ಶುಕ್ರವಾರ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಂಡು ನಗರಸಭೆ ಆಯುಕ್ತ ಜಿ.ಎನ್.ಚಲಪತಿ ಮಾತನಾಡಿದರು.
ಸಾರ್ವಜನಿಕರು ಪ್ಲಾಸ್ಟಿಕ್ ಬಳಸುವುದನ್ನು ಸಂಪೂರ್ಣ ನಿಲ್ಲಿಸಿದಾಗ ಮಾತ್ರ ನಗರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ವರ್ತಕರು ಮತ್ತು ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಪ್ಲಾಸ್ಟಿಕ್ ಬಳಸದೇ ಇರಲು ಸಂಕಲ್ಪ ಮಾಡಬೇಕು ಎಂದು ಅವರು ತಿಳಿಸಿದರು.
ನಗರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ನಗರದ ಪ್ರತಿಯೊಂದು ಅಂಗಡಿಗೂ ಭೇಟಿ ನೀಡಿ ಅಲ್ಲಿರುವ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗುತ್ತಿದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯಲಿದ್ದು, ಈಗಾಗಲೇ ಸಾಕಷ್ಟು ಬಾರಿ ಪ್ಲಾಸ್ಟಿಕ್ ಬಳಸದಂತೆ ಸೂಚನೆ ನೀಡಲಾಗಿದ್ದರೂ ಲೆಕ್ಕಿಸದೇ ಬಳಸುತ್ತಿರುವ ಅಂಗಡಿ ಮಾಲೀಕರಿಗೆ ದಂಡ ವಿಧಿಸುವ ಜೊತೆಗೆ ಅಂತಹವರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು. ನಗರದ ಸಾರ್ವಜನಿಕರೂ ಸಹ ಈ ಕಾರ್ಯಕ್ಕೆ ಕೈ ಜೋಡಿಸುವ ಮೂಲಕ ಪ್ಲಾಸ್ಟಿಕ್ ಬಳಸುವುದಿಲ್ಲ ಎಂಬ ಸಂಕಲ್ಪ ಮಾಡಿದಾಗ ಮಾತ್ರ ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರ ಎಂದು ಘೋಷಿಸಲು ಸಾಧ್ಯವಾಗುತ್ತದೆ ಎಂದರು.
ಪ್ರತಿಯೊಂದು ಅಂಗಡಿಗಳವರೂ ನಗರಸಭೆಯಿಂದ “ಟ್ರೇಡ್ ಲೈಸೆನ್ಸ್” ಪಡೆಯಬೇಕು. ಇಲ್ಲದಿದ್ದ ಪಕ್ಷದಲ್ಲಿ ಅಂಗಡಿಗಳನ್ನು ಮುಚ್ಚಿಸಲಾಗುವುದೆಂದು ತಿಳಿಹೇಳಿ, ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ದಾಳಿಯಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರಾದ ಆಂಜಿನಪ್ಪ, ಸಯೀದಾ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಮದ್ಯವರ್ಜನ ಶಿಬಿರದ ಉದ್ಘಾಟನೆ
ತಾಲ್ಲೂಕಿನ ಮಳ್ಳೂರು ಸಮೀಪದ ಭಟ್ರೇನಹಳ್ಳಿಯ ಶ್ರೀ ಸಾಯಿನಾಥ ಜ್ಞಾನಮಂದಿರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ೧೩೦೭ ನೇ ಮದ್ಯವರ್ಜನ ಶಿಬಿರದ ಉದ್ಘಾಟನೆ ನೆರವೇರಿಸಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ ಅವರು ಮಾತನಾಡಿದರು.
ಕುಡಿತದ ಚಟದಿಂದ ಮಾನಸಿಕ ನೆಮ್ಮದಿ, ಆರೋಗ್ಯ ಮತ್ತು ಆರ್ಥಿಕ ಸ್ಥಿತಿಗತಿ ಹಾಳಾಗುತ್ತದೆ. ಹಾಗಾಗಿ ಕುಡಿತ ಸೇರಿದಂತೆ ಯಾವುದೇ ಚಟಕ್ಕೆ ಬಲಿಯಾಗದೇ ಎಲ್ಲರೂ ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಅವರು ತಿಳಿಸಿದರು.
ಮದ್ಯಸೇವನೆ ಸಮಾಜದ ದುಷ್ಚಟಗಳಲ್ಲಿ ಒಂದಾಗಿದೆ. ಇದು ಸಮಾಜದ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಇಂತಹ ಪಿಡುಗನ್ನು ಸಮಾಜದಿಂದ ಹೊರ ಓಡಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಿರಂತರ ಶ್ರಮಸಿಸುತ್ತಿರುವುದು ಶ್ಲಾಘನೀಯ. ಈಗಾಗಲೇ ೧೩೦೬ ಶಿಬಿರಗಳನ್ನು ಪೂರೈಸಿ ಸಾವಿರಾರು ಕುಟುಂಬಗಳ ಉಳಿವಿಗೆ ಕಾರಣವಾಗಿದೆ ಎಂದರು.
ಶ್ರೀ ಸಾಯಿನಾಥ ಜ್ಞಾನಮಂದಿರದ ಸಮಿತಿಯ ಮುಖ್ಯಸ್ಥ ಎಂ.ನಾರಾಯಣಸ್ವಾಮಿ ಮಾತನಾಡಿ, ಯುವಜನತೆ ಮದ್ಯಸೇವನೆಯಿಂದ ಹಾಳಾಗುತ್ತಿರುವುದು ಕಳವಳದ ಸಂಗತಿಯಾಗಿದೆ. ದೇಶಾದ್ಯಂತ ಯುವಕರ ಸಂಖ್ಯೆ ಹೆಚ್ಚಿದ್ದು, ಯುವಶಕ್ತಿ ವಿದ್ಯಾವಂತರಾಗಿ ದೇಶವನ್ನು ಮುನ್ನಡೆಸುವ ಜವಾಬ್ದಾರಿ ಹೊರಬೇಕಾಗಿದೆ ಎಂದರು.
ಕುಡಿತದ ಅಮಲಿನಲ್ಲಿ ಮನೆಯಲ್ಲಿ ಅಸಭ್ಯವಾಗಿ ವರ್ತಿಸುವುದು, ಹೊಡೆಯುವುದು, ಜಗಳವಾಡುವುದು, ಮುಂತಾದ ಕಾರಣಗಳಿಂದ ಮನೆ ಜಗಳ ಬೀದಿಗೆ ಬರುವುದಲ್ಲದೆ, ಕುಟುಂಬದ ಮಾನ ಮರ್ಯಾದೆ ಸಹ ಹೋಗುತ್ತಿದೆ. ಕೆಲವೊಂದು ಸಂದರ್ಭದಲ್ಲಿ ಕುಡಿದ ಅಮಲಿನಲ್ಲಿ ಕೊಲೆ ಮಾಡಿದ ಘಟನೆಗಳು ಸಹ ವರದಿಯಾಗಿದೆ. ಆದ್ದರಿಂದ ಯುವಕರು ಕುಡಿತವನ್ನು ಬಿಟ್ಟು ವಿದ್ಯಾವಂತರಾಗಿ ದೇಶದ ಸತ್ಪ್ರಜೆಗಳಾಗಿ ರೂಪಗೊಳ್ಳಬೇಕು ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ದಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಮೋಹನ್ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ೧೩೦೭ನೇ ಮದ್ಯವರ್ಜನ ಶಿಬಿರವನ್ನು ತಾಲ್ಲೂಕಿನಲ್ಲಿ ಆಯೋಜಿಸಲಾಗಿದ್ದು ಮದ್ಯವ್ಯಸನಿಗಳಿಗಾಗಿ ೭ ದಿನಗಳ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಮದ್ಯ ವ್ಯಸನಕ್ಕೆ ಒಳಗಾಗಿರುವವರು ಶಿಬಿರದ ೭ ದಿನಗಳು ಇಲ್ಲೇ ಇರಬೇಕಾಗಿದೆ. ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಊಟದ ವ್ಯವಸ್ಥೆ ಸೇರಿದಂತೆ ಆರೋಗ್ಯ ತಪಾಸಣೆ, ಗಣ್ಯರಿಂದ ಮಾರ್ಗದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಶಿಬಿರದಲ್ಲಿ ಮದ್ಯಪಾನದಿಂದಾಗುವ ದುಷ್ಟಪರಿಣಾಮಗಳು ಹಾಗೂ ಮದ್ಯಪಾನ ಬಿಡಲು ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ವಿವರವಾಗಿ ತಿಳಿಸಿ ಮದ್ಯಪಾನ ಬಿಡುವಂತೆ ಮಾಡಲಾಗುವುದು. ಶಿಬಿರದಲ್ಲಿ ಭಾಗವಹಿಸಿರುವ ಮದ್ಯವ್ಯಸನಿಗಳು ಸಂಯಮದಿಂದ ಇದ್ದು ಶಿಬಿರ ಮುಗಿದ ನಂತರ ಮದ್ಯಪಾನ ಬಿಟ್ಟು ಸಂತೋಷವಾಗಿ ಕುಟುಂಬದೊಂದಿಗೆ ಬಾಳಬೇಕು ಎನ್ನುವುದು ಶ್ರೀ ಕ್ಷೇತ್ರದ ಆಶಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿದೇಶಕ ವಸಂತ್‌ಕುಮಾರ್, ಮಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಶಿವಕುಮಾರ್, ಗ್ರಾಮಾಂತರ ಠಾಣೆ ಪಿಎಸ್ಸೈ ವಿಜಯ್‌ರೆಡ್ಡಿ, ಪ್ರಗತಿ ಪರ ರೈತ ಬೋದಗೂರು ವೆಂಕಟಸ್ವಾಮಿರೆಡ್ಡಿ, ಕಸಾಪ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಹಾಜರಿದ್ದರು.
ಶಿಡ್ಲಘಟ್ಟ ತಾಲ್ಲೂಕಿನೆಲ್ಲೆಡೆ ಶ್ರದ್ಧಾಭಕ್ತಿಯಿಂದ ಹನುಮ ಜಯಂತಿ ಆಚರಣೆ
ತಾಲ್ಲೂಕಿನೆಲ್ಲೆಡೆ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಹನುಮ ಜಯಂತಿಯ ಪ್ರಯುಕ್ತ ಗುರುವಾರ ವಿಶೇಷ ಪೂಜೆಯನ್ನು ನಡೆಸಲಾಯಿತು.
ತಾಲ್ಲೂಕಿನ ಚೌಡಸಂದ್ರ ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮಜಯಂತಿಯನ್ನು ಶ್ರದ್ಧಾಭಕ್ತಿಯಿಂದ ವಿಶೇಷವಾಗಿ ಆಚರಿಸಲಾಯಿತು. ಸೀತಾರಾಮ ಲಕ್ಷ್ಮಣ ಸಮೇತ ಆಂಜನೇಯಸ್ವಾಮಿಯ ಉತ್ಸವ ಮೂರ್ತಿಯ ಕಲ್ಯಾಣೋತ್ಸವ ಹಾಗೂ ೩೦ ನೇ ವಾರ್ಷಿಕೋತ್ಸವದ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜಾ ಮಹೋತ್ಸವದೊಂದಿಗೆ ಭಕ್ತಿಗೀತೆ, ಭಾವಗೀತೆ, ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.
ಬುಧವಾರ ರಾತ್ರಿ ಗ್ರಾಮದಲ್ಲಿ ಉತ್ಸವ ಮೂರ್ತಿಯ ಮೆರವಣಿಗೆಯನ್ನು ಮಾಡಲಾಯಿತು. ಹೂವಿನ ಪಲ್ಲಕ್ಕಿಯ ಉತ್ಸವಕ್ಕೆ ನೂರಾರು ಮಂದಿ ಸಾಕ್ಷಿಯಾದರು. ದೇವಾಲಯವನ್ನು ಹಾಗೂ ಗ್ರಾಮದ ಪ್ರಮುಖ ರಸ್ತೆಗಳನ್ನೆಲ್ಲಾ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ದೇವರನ್ನು ಮತ್ತು ದೇವಾಲಯವನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಹನುಮಜಯಂತಿಯ ಪ್ರಯುಕ್ತ ಗ್ರಾಮದಲ್ಲಿ ಜಾತ್ರೆಯ ವಾತಾವರಣ ಮೂಡಿದ್ದು, ಸಾವಿರಾರು ಭಕ್ತರು ವಿವಿಧ ತಾಲ್ಲೂಕು ಜಿಲ್ಲೆಗಳಿಂದ ಆಗಮಿಸಿ ದೇವರ ಪೂಜೆಯಲ್ಲಿ ಪಾಲ್ಗೊಂಡರು. ತಿಂಡಿ ತಿನಿಸುಗಳು, ಆಟಿಕೆಗಳು, ಮುಂತಾದ ವಿವಿಧ ರೀತಿಯ ಅಂಗಡಿಗಳು ತರೆಯಲಾಗಿತ್ತು. ಆಗಮಿಸಿದ ಭಕ್ತರಿಗೆಲ್ಲಾ ದೇವಾಲಯದ ಸಮಿತಿ ವತಿಯಿಂದ ಭೋಜನ ವ್ಯವಸ್ಥೆಯನ್ನು ಮಾಡಿದ್ದರು.
ತಾಲ್ಲೂಕಿನ ನಾಗಮಂಗಲ ಗ್ರಾಮದ ಅಭಯ ಹಸ್ತಾಂಜನೇಯಸ್ವಾಮಿ ದೇವಾಲಯದಲ್ಲಿ ೧೩ನೇ ವರ್ಷದ ಹನುಮಜಯಂತಿಯನ್ನು ಆಚರಿಸಲಾಯಿತು. ಚೋಳರ ಕಾಲದ ಅಭಯ ಹಸ್ತಾಂಜನೇಯಸ್ವಾಮಿ ದೇವಾಲಯ ತಾಲ್ಲೂಕಿನ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ಶಿಥಿಲಗೊಂಡಿದ್ದ ದೇವಾಲಯವನ್ನು ಗ್ರಾಮಸ್ಥರು ನವೀಕರಿಸಿದ ನಂತರ ಪ್ರತಿ ವರ್ಷವೂ ಹನುಮಜಯಂತಿಯನ್ನು ವಿಶೇಷವಾಗಿ ಒಗ್ಗಟ್ಟಿನಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜಾ ಮಹೋತ್ಸವದೊಂದಿಗೆ ಭಜನೆ ಕಾರ್ಯಕ್ರಮವನ್ನು ನಡೆಸಲಾಯಿತು. ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಮಾಡಲಾಗಿತ್ತು.
ದೇವರನ್ನು ಮತ್ತು ದೇವಾಲಯವನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಹನುಮಜಯಂತಿಯ ಪ್ರಯುಕ್ತ ಗ್ರಾಮದಲ್ಲಿ ಜಾತ್ರೆಯ ವಾತಾವರಣ ಮೂಡಿದ್ದು, ಭಕ್ತರು ವಿವಿಧ ತಾಲ್ಲೂಕು ಜಿಲ್ಲೆಗಳಿಂದ ಆಗಮಿಸಿ ದೇವರ ಪೂಜೆಯಲ್ಲಿ ಪಾಲ್ಗೊಂಡರು. ಆಗಮಿಸಿದ ಭಕ್ತರಿಗೆಲ್ಲಾ ದೇವಾಲಯದ ಸಮಿತಿ ವತಿಯಿಂದ ಭೋಜನ ವ್ಯವಸ್ಥೆಯನ್ನು ಮಾಡಿದ್ದರು.
ತಾಲ್ಲೂಕಿನ ವಿವಿದೆಡೆ ಹನುಮಜಯಂತಿ: ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಾಲಯ, ಅಪ್ಪೇಗೌಡನಹಳ್ಳಿ ಗೇಟ್ ನ ಬಯಲಾಂಜನೇಯಸ್ವಾಮಿ ದೇವಾಲಯ, ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯ, ಮಯೂರ ವೃತ್ತದ ಆಂಜನೇಯಸ್ವಾಮಿ, ಚಿಂತಾಮಣಿ ರಸ್ತೆಯಲ್ಲಿರುವ ವೀರಾಂಜನೇಯಸ್ವಾಮಿ ದೇಗುಲ, ಮುತ್ತೂರು ಗ್ರಾಮ, ಎಚ್.ಕ್ರಾಸ್, ಚೊಕ್ಕಂಡಹಳ್ಳಿ, ಎದ್ದಲತಿಪ್ಪೇನಹಳ್ಳಿ ಮುಂತಾದೆಡೆ ಶ್ರದ್ಧಾ ಭಕ್ತಿಯಿಂದ ಹನುಮಜಯಂತಿಯನ್ನು ಆಚರಿಸಲಾಯಿತು.
ಮಾರುಕಟ್ಟೆ ಆವರಣದಲ್ಲಿ ರೇಷ್ಮೆ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲು ಪೂರ್ವಭಾವಿ ಸಭೆ
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ರೇಷ್ಮೆ ಪ್ರವಾಸೋಧ್ಯಮವನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ರೇಷ್ಮೆ ಗೂಡಿನ ಮಾರುಕಟ್ಟೆ ಆವರಣದಲ್ಲಿ ರೇಷ್ಮೆ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲು ಯೋಜನೆ ರೂಪಿಸಬೇಕಿದೆ ಎಂದು ಕೇಂದ್ರ ರೇಷ್ಮೆ ತಾಂತ್ರಿಕ ಸಂಶೋಧನಾ ಕೇಂದ್ರದ ನಿರ್ದೇಶಕ ಸುಭಾಷ್ ವಿ ನಾಯಕ್ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಬುಧವಾರ ರೇಷ್ಮೆ ವಸ್ತುಸಂಗ್ರಹಾಲಯ ಸ್ಥಾಪಿಸುವ ಸಲುವಾಗಿ ರೇಷ್ಮೆ ಇಲಾಖೆಯ ಅಧಿಕಾರಿಗಳು ಮತ್ತು ವಿಜ್ಞಾನಿಗಳೊಂದಿಗೆ ಪೂರ್ವಭಾವಿ ಸಭೆಯನ್ನು ನಡೆಸಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನಾಗಲಾಂಬಿಕಾದೇವಿ ಅವರು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ರೇಷ್ಮೆ ಪ್ರವಾಸೋಧ್ಯಮಕ್ಕೆ ಸಾಕಷ್ಟು ಅವಕಾಶವಿದೆ ಎಂದು ಆಸಕ್ತಿಯಿಂದ ಈ ಬಗ್ಗೆ ಕಾರ್ಯಪ್ರವೃತ್ತರಾಗಿದ್ದಾರೆ. ಇದರ ಒಂದು ಭಾಗವಾಗಿ ರೇಷ್ಮೆ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಗುವುದು. ವಿವಿಧ ತಳಿಯ ರೇಷ್ಮೆ ಗೂಡುಗಳು, ರೇಷ್ಮೆ ನೂಲು ಬಿಚ್ಚಾಣಿಕೆ ಯಂತ್ರೋಪಕರಣಗಳು, ರೇಷ್ಮೆ ಮಗ್ಗಗಳ ಯಂತ್ರಗಳು, ವಿವಿಧ ರೇಷ್ಮೆ ಬಟ್ಟೆಗಳು, ನೂಲು, ಒಟ್ಟಾರೆ ಚಿಟ್ಟೆಯಿಂದ ಬಟ್ಟೆಯವರೆಗೆ ಪ್ರದರ್ಶನ, ರೇಷ್ಮೆಯು ಬಳಕೆಯಾಗುವ ವಿವಿಧ ಉತ್ಪನ್ನಗಳಾದ ಪ್ಯೂಪಾ ಎಣ್ಣೆ, ಶಸ್ತ್ರಚಿಕಿತ್ಸೆಗೆ ಬಳಕೆಯಾಗುವ ದಾರ ಮುಂತಾದವುಗಳನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ಪ್ರದರ್ಶಿಸಲಾಗುವುದು. ದೇಶ ವಿದೇಶಗಳಿಂದ ಬರುವ ಪ್ರವಾಸಿಗರಿಗೆ ರೇಷ್ಮೆಯ ಸಂಪೂರ್ಣ ಚಿತ್ರಣ ಮತ್ತು ಮಾಹಿತಿ ಒಂದೇ ಕಡೆ ಸಿಗುವಂತೆ ಮಾಡಬೇಕಿದೆ ಎಂದು ಹೇಳಿದರು.
ವಿಜ್ಞಾನಿಗಳಾದ ಕೆ.ಎನ್.ಮಹೇಶ್, ರವಿಕುಮಾರ್, ತಿಮ್ಮಾರೆಡ್ಡಿ, ಕೈಮಗ್ಗ ಪ್ರವಾಸೋಧ್ಯಮದ ಅಧಿಕಾರಿ ಶಿವಕುಮಾರ್, ಸಹಾಯಕ ಪ್ರಾಧ್ಯಾಪಕಿ ಪಲ್ಲವಿ, ರೇಷ್ಮೆ ಉಪನಿರ್ದೇಶಕರಾದ ಬೈರಾರೆಡ್ಡಿ, ಸುಭಾಷ್ ಸಾತೇನಹಳ್ಳಿ, ರೇಷ್ಮೆ ಉತ್ಪಾದಕ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎನ್.ಜನಾರ್ಧನಮೂರ್ತಿ ಹಾಜರಿದ್ದರು.
ವಾರ್ಡ್ ಮತದಾರರ ಪಟ್ಟಿಯಲ್ಲಿ ವ್ಯತ್ಯಾಸಗಳನ್ನು ಸರಿಪಡಿಸುವಂತೆ ಮನವಿ
ನಗರಸಭಾ ಚುನಾವಣೆಗೆ ಸಂಬಂಧಿಸಿದಂತೆ ಹೊಸ ಟೌನ್ ವಾರ್ಡುಗಳ ವಿಂಗಡನೆಯಲ್ಲಿ ವ್ಯಾತ್ಯಾಸಗಳಾಗಿವೆ. ಮತದಾರರ ಪಟ್ಟಿಯಲ್ಲಿ ಆಯಾ ವಾರ್ಡ್ ನಲ್ಲಿ ವಾಸವಾಗಿರುವ ಜನರ ಹೆಸರು ಕೈಬಿಟ್ಟು ಬೇರೆಡೆ ವಾಸಿಸುವವರ ಹೆಸರು ಸೇರಿಸಲಾಗಿರುವುದನ್ನು ಸರಿಪಡಿಸಿ ಎಂದು ಮನವಿಯನ್ನು ನಾಗರಿಕ ಸಂರಕ್ಷಣಾ ಸೇವಾ ಸಮಿತಿ ಸದಸ್ಯರು ಚುನಾವಣಾಧಿಕಾರಿ ಸಿದ್ದಪ್ಪ ಅವರಿಗೆ ಬುಧವಾರ ಸಲ್ಲಿಸಿದರು.
ಆಯಾ ವಾರ್ಡಿನಲ್ಲಿ ವಾಸಿಸುವವರು ಮಾತ್ರ ಆಯಾ ವಾರ್ಡಿನ ಮತದಾರರ ಪಟ್ಟಿಯಲ್ಲಿರಬೇಕು. ಬೇರೆಡೆ ವಾಸಿಸುವವರು ಇರಬಾರದು. ಆಯಾ ವಾರ್ಡಿನಲ್ಲಿ ಇರುವ ಜಾತಿಯ ಆಧಾರದ ಮೇಲೆ ಮೀಸಲಾತಿಯನ್ನು ನೀಡಬೇಕು. ನಗರಸಭೆ ವ್ಯಾಪ್ತಿಗೆ ಸೇರಿದ ಹೊಸಟೌನ್ ನ ವಾರ್ಡುಗಳಾದ ೨೬, ೨೦, ೧೮, ೧೯, ೨೯, ೧೬, ೧೪, ೨೭, ೨೫, ೨೪, ೧೭, ೧೫ ಮುಂತಾದ ವಾರ್ಡುಗಳಲ್ಲಿ ಮತದಾರರ ಪಟ್ಟಿಯಲ್ಲಿ ವ್ಯತ್ಯಾಸಗಳಾಗಿವೆ. ಬೇರೆಡೆ ವಾಸಿಸುವವರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಸೇರಿಸಲ್ಪಟ್ಟಿದೆ. ವಾರ್ಡುಗಳ ವಿಂಗಡನೆ ಮಾಡುವಾಗಲೂ ಮತದಾರರ ಹೆಸರುಗಳ ವ್ಯಾತ್ಯಾಸವಾಗಿದೆ. ವಾರ್ಡುಗಳ ಪ್ರಕಾರ ಮಾಡಬೇಕಾದ ಮೀಸಲಾತಿ ಪ್ರಕ್ರಿಯೆಯಲ್ಲೂ ಬದಲಾವಣೆಗಳಾಗಿವೆ. ಆದ್ದರಿಂದ ಆಯಾ ವಾರ್ಡ್ ಗಳಲ್ಲಿ ವಾಸವಾಗಿರುವ ಮತದಾರರ ಹೆಸರು ಆಯಾ ವಾರ್ಡಿನ ಮತದಾರರ ಪಟ್ಟಿಗೆ ಸೇರಿಸಿ ಹಾಗೂ ಮೀಸಲಾತಿ (ಕ್ಯಾಟಗರಿ) ಯನ್ನು ಸರಿಪಡಿಸಿ ಎಂದು ಮನವಿ ಪತ್ರವನ್ನು ಸಲ್ಲಿಸಿದರು.
ಮನವಿ ಸ್ವೀಕರಿಸಿದ ಚುನಾವಣಾಧಿಕಾರಿ ಸಿದ್ದಪ್ಪ ಮಾತನಾಡಿ, ಮೇಲಧಿಕಾರಿಗಳ ಗಮನಕ್ಕೆ ತಂದು ನ್ಯೂನತೆಗಳನ್ನು ಸರಿಪಡಿಸುವುದಾಗಿ ತಿಳಿಸಿದರು.
ನಾಗರಿಕ ಸಂರಕ್ಷಣಾ ಸೇವಾ ಸಮಿತಿ ಅಧ್ಯಕ್ಷ ಆರ್.ನಾಗರಾಜಪ್ಪ, ಉಪಾಧ್ಯಕ್ಷ ಬಿ.ಅಂಜದ್ ಪಾಷ, ಕಾರ್ಯದರ್ಶಿ ಫೀರ್ ಪಾಷ(ಬಾಬು), ಮೌಲಾ, ನಾಸಿರ್, ಷಫೀವುಲ್ಲ, ಜಾದಿರ್ ಈ ಸಂದರ್ಭದಲ್ಲಿ ಹಾಜರಿದ್ದರು.
ವೈಕುಂಠ ಏಕಾದಶಿಯ ಪ್ರಯುಕ್ತ ಲಕ್ಷ್ಮೀ ಶ್ರೀನಿವಾಸರ ವೈಕುಂಠ ದರ್ಶನ
ಪುಷ್ಯಮಾಸ ಶುಕ್ಲಪಕ್ಷದ ಏಕಾದಶಿಯು ವೈಕುಂಠ ಏಕಾದಶಿ ಎಂಬ ವಿಶೇಷ ದಿನವಾದ್ದರಿಂದ ಮಂಗಳವಾರ ತಾಲ್ಲೂಕಿನ ಪ್ರಮುಖ ವೆಂಕಟೇಶ್ವರ, ಶ್ರೀನಿವಾಸ, ವಿಷ್ಣು ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಏರ್ಪಡಿಸಿದ್ದರು. ಎಲ್ಲಾ ದೇವಸ್ಥಾನಗಳಲ್ಲಿ ಜನಸಂದಣಿ ಹೆಚ್ಚಿದ್ದು, ಕೆಲವು ದೇವಸ್ಥಾನಗಳಲ್ಲಿ ನಿರ್ಮಿಸಿದ್ದ ವೈಕುಂಠ ದ್ವಾರದ ಒಳಗೆ ಹೋಗಿ ಬಂದರೆ ಮೋಕ್ಷ ಸಿಗುವುದೆಂಬ ನಂಬಿಕೆಯಿಂದ ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ನಗರದ ಕೆ.ಎಚ್.ಬಿ ಕಾಲೋನಿಯಲ್ಲಿ ಶ್ರೀ ಗಾಯಿತ್ರಿದೇವಿ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್ ವತಿಯಿಂದ ಗಾಯಿತ್ರಿ ದೇವಾಲಯದಲ್ಲಿ ವೈಕುಂಠ ಏಕಾದಶಿಯ ಅಂಗವಾಗಿ ಶ್ರೀ ಕಲ್ಯಾಣ ವೆಂಕಟೇಶ್ವರ ಸ್ವಾಮಿಯವರಿಗೆ ವಿಶೇಷ ಪೂಜೆ ನಡೆಸಲಾಯಿತು.
ವೈಕುಂಠ ಏಕಾದಶಿಯ ಪ್ರಯುಕ್ತ ಸ್ವಾಮಿಯವರಿಗೆ ಸುಪ್ರಭಾತ ಸೇವೆ, ಅಭಿಷೇಕ, ವಜ್ರಾಕೋಷ ಅಲಂಕಾರ ಹಾಗೂ ವೈಕುಂಠ ದ್ವಾರ ದರ್ಶನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ವೈಕುಂಠ ಏಕಾದಶಿಯ ದಿನ ತಮ್ಮ ಪೂರ್ವಜರಿಗೆ, ಮಾತಾ ಪಿತೃಗಳಿಗೆ ಸದ್ಗತಿ ಮತ್ತು ವೈಕುಂಠ ಪ್ರಾಪ್ತಿಯಾಗಲಿ ಎಂದು ಹೇಳಿ ವೈಕುಂಠ ದ್ವಾರ ಪ್ರವೇಶವನ್ನು ಮಾಡಿದರೆ ಸದ್ಗತಿ ಸಿಗುತ್ತದೆ ಎಂಬ ನಂಬಿಕೆ ಭಕ್ತರದ್ದು. ಈ ಸಂದರ್ಭದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯದಕ್ಕೆ ಬರುವ ಭಕ್ತಾಧಿಗಳಿಗೆ ತೀರ್ಥ ಪ್ರಸಾದಗಳನ್ನು ವಿನಿಯೋಗ ಮಾಡಲಾಯಿತು.
ತಾಲ್ಲೂಕಿನ ಮಳ್ಳೂರು ಗ್ರಾಮದ ಹೊರವಲಯದ ಸಾಯಿನಾಥ ಜ್ಞಾನ ಮಂದಿರದಲ್ಲಿ ವೈಕುಂಠದ ದರ್ಶನಕ್ಕೆ ದ್ವಾರಗಳನ್ನು ಸ್ಥಾಪಿಸಿದ್ದು, ಸಪ್ತದ್ವಾರಗಳನ್ನು ದಾಟುತ್ತಿದ್ದಂತೆಯೇ ಲಕ್ಷ್ಮೀ ಶ್ರೀನಿವಾಸರ ಅಲಂಕೃತ ಬೃಹತ್ ಮೂರ್ತಿಗಳ ದರ್ಶನ ಸಿಗುವಂತೆ ಮಾಡಲಾಗಿತ್ತು. ಸುತ್ತಮುತ್ತಲಿನ ಗ್ರಾಮಗಳು ಹಾಗೂ ತಾಲ್ಲೂಕಿನಿಂದ ಆಗಮಿಸಿದ್ದ ಭಕ್ತರು ಸಾಲಾಗಿ ಸಾಗುತ್ತಾ ದೇವರ ದರ್ಶನ ಪಡೆದರು. ಪ್ರಸಾದ ವಿನಿಯೋಗ ಮತ್ತು ಅನ್ನಸಂತರ್ಪಣೆಯನ್ನೂ ದೇವಾಲಯದಲ್ಲಿ ಆಯೋಜಿಸಿದ್ದರು.
ತಾಲ್ಲೂಕಿನ ಮೇಲೂರು ಗ್ರಾಮದ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆಯನ್ನು ಏರ್ಪಡಿಸಲಾಗಿತ್ತು. ಸುಪ್ರಭಾತ, ವಿಷ್ಣು ಸಹಸ್ರನಾಮ, ವಿಶ್ವಕ್ಸೇನ ಪೂಜೆ, ಪುಣ್ಯಾಹವಾಚನ, ಪಂಚಾಮೃತಾಭಿಷೇಕ, ರಾಷ್ಟ್ರಾಶೀರ್ವಾದ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗವನ್ನು ನಡೆಸಲಾಯಿತು.
ತಾಲ್ಲೂಕಿನ ಚೌಡಸಂದ್ರದ ಸೋಮೇಶ್ವರಸ್ವಾಮಿ ದೇವಸ್ಥಾನ, ಚಿಕ್ಕದಾಸರಹಳ್ಳಿ ಬಳಿಯ ಬ್ಯಾಟರಾಯಸ್ವಾಮಿ ದೇವಾಲಯ, ಜಂಗಮಕೋಟೆ ಬಳಿಯ ಮುತ್ಯಾಲಮ್ಮ ದೇವಸ್ಥಾನ, ಒಡಯನಕೆರೆಯ ಅನಂತಪದ್ಮನಾಭಸ್ವಾಮಿ ದೇವಾಲಯ, ದೊಡ್ಡದಾಸೇನಹಳ್ಳಿ ಗ್ರಾಮದ ಲಕ್ಷ್ಮಿವೆಂಕಟೇಶ್ವರಸ್ವಾಮಿ ದೇವಾಲಯ, ವಾಸವಿ ರಸ್ತೆಯ ವೆಂಕಟರಮಣಸ್ವಾಮಿ ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳನ್ನು ನಡೆಸಲಾಗಿತ್ತು.
ಹೆಚ್ಚಿನ ಬಡ್ಡಿ ಖಂಡಿಸಿ ಮುತ್ತೂಟ್ ಫೈನಾನ್ಸ್ ಮುಂದೆ ರೈತರ ಪ್ರತಿಭಟನೆ
ತಾಲ್ಲೂಕಿನಲ್ಲಿ ಏಳು ವರ್ಷಗಳಿಂದ ಸತತವಾಗಿ ಬರಗಾಲ ಇದೆ. ಒಂದೆಡೆ ಸರ್ಕಾರ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದರೆ, ಮತ್ತೊಂದೆಡೆ ಮುತ್ತೂಟ್ ಫೈನಾನ್ಸ್ ನಲ್ಲಿ ರೈತರು ಇಟ್ಟ ಒಡವೆ ಮೇಲೆ ಹೆಚ್ಚಿನ ಬಡ್ಡಿ ಹಾಕಿರುವುದು ಖಂಡನೀಯ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೆಗೌಡ ಆಕ್ರೋಷ ವ್ಯಕ್ತಪಡಿಸಿದರು.
ನಗರದ ರೇಷ್ಮೆ ಮಾರುಕಟ್ಟೆ ಬಳಿ ಇರುವ ಮುತ್ತೂಟ್ ಫೈನಾನ್ಸ್ ಮುಂದೆ ರೈತರು ಹಾಗೂ ಹಸಿರು ಸೇನೆಯ ಮುಖಂಡರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಚಿಕ್ಕಬಳ್ಳಾಪುರ ಕೋಲಾರ ಜಿಲ್ಲೆಗಳು ಸತತ ಬರಗಾಲ ಎದುರಿಸುತ್ತಿದ್ದು, ರೈತರು ಬ್ಯಾಂಕ್‌ಗಳಲ್ಲಿ ತೆಗೆದುಕೊಂಡ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಸರ್ಕಾರ ರೈತರ ಸಾಲ ಮನ್ನಾ ಘೋಷಣೆ ಮಾಡಿದೆ. ಆದರೆ ಮುತ್ತೂಟ್ ಫೈನಾನ್ಸ್ ಕಡಿಮೆ ಬಡ್ಡಿ ದರದ ಆಸೆ ತೋರಿಸಿ ವರ್ಷಕ್ಕೆ ಸುಮಾರು ಶೇ ೨೨ ರಿಂದ ೩೦ ರಷ್ಟು ಬಡ್ಡಿ ವಸೂಲಿ ಮಾಡುತ್ತಿದೆ. ತಾಲ್ಲೂಕಿನ ಗಂಗಾಧರ್ ಎಂಬ ರೈತ ಸುಮಾರು ೨ ವರ್ಷದ ಹಿಂದೆ ೭೦ ಗ್ರಾಂ ಚಿನ್ನ ಗಿರಿವಿ ಇಟ್ಟು ೧,೨೦,೦೦೦ ರೂಗಳ ಹಣ ಪಡೆದಿದ್ದರು. ಬೆಳೆ ಸರಿಯಾಗಿ ಆಗದ ಕಾರಣ ಹಣ ಕಟ್ಟಲು ತೊಂದರೆಯಾಗಿದ್ದು, ಮುತ್ತೂಟ್ ಫೈನಾನ್ಸ್ ಕಡೆಯಿಂದ ಸತತವಾಗಿ ನೋಟಿಸ್ ನೀಡಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ನನ್ನದು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎಂದು ರೈತ ಸಂಘಕ್ಕೆ ಆತ ದೂರು ನೀಡಿದ್ದಾರೆ. ಇದನ್ನು ಖಂಡಿಸಿ ನಾವು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಸರ್ಕಾರದ ಸೂಚನೆಯಂತೆ ಹೆಚ್ಚಿನ ಬಡ್ಡಿ ದರ ವಿಧಿಸದೆ ಇದ್ದಲ್ಲಿ ಮುತ್ತೂಟ್ ಫೈನಾನ್ಸ್ ನ ಜಿಲ್ಲೆಯ ಎಲ್ಲಾ ಶಾಖೆಗಳ ಬಳಿ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ. ಕೂಡಲೇ ಮುತ್ತೂಟ್ ಫೈನಾನ್ಸ್ ನ ಅಧಿಕಾರಿಗಳು ತಮ್ಮ ಮುಖ್ಯಸ್ಥರೊಂದಿಗೆ ಚರ್ಚೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಮುತ್ತೂಟ್ ಫೈನಾನ್ಸ್ ಜಿಲ್ಲಾ ಕ್ಲಸ್ಟರ್ ವ್ಯವಸ್ಥಾಪಕ ವೆಂಕಟೇಶ್ ಮಾತನಾಡಿ, ಸರ್ಕಾರದ ಅಧಿಸೂಚನೆಯಂತೆ ನಾವು ಬಡ್ಡಿ ದರ ವಿಧಿಸುತ್ತಿದ್ದು, ಈ ವಿಷಯವಾಗಿ ೧೫ ದಿನಗಳ ಕಾಲಾವಕಾಶ ಪಡೆದಿದ್ದೇವೆ. ನಮ್ಮ ಮುಖ್ಯಸ್ಥರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುತ್ತೂಟ್ ಫೈನಾನ್ಸ್ ಅಧಿಕಾರಿಗಳಾದ ಪಿ.ಅರುಣ್, ವಿಜಯ್, ಗುರುಸ್ವಾಮಿ, ಸಿ.ಕೆ.ಶೆಟ್ಟಿ, ರೈತ ಸಂಘದ ಮುಖಂಡರಾದ ತಾದೂರು ಮಂಜುನಾಥ್, ವೇಣುಗೋಪಾಲ್, ಮುನಿನಂಜಪ್ಪ, ಎಸ್.ಎಂ.ನಾರಾಯಣ್ಣಸ್ವಾಮಿ, ಶ್ರೀನಿವಾಸ್, ಹಾಜರಿದ್ದರು.
ಪ್ರಧಾನಿ ಮೋದಿಯವರನ್ನು ಬೆಂಬಲಿಸಲು ಕೋರಿ "ಟೀಂ ಮೋದಿ” – ಬೃಹತ್ ಬೈಕ್ ರ‍್ಯಾಲಿ
ನಗರದ ಮಯೂರ ವೃತ್ತದಲ್ಲಿ ಭಾನುವಾರ ಸಂಜೆ “ಟೀಂ ಮೋದಿ” ಎಂಬ ಬೃಹತ್ ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡು ಯುವಾ ಬ್ರಿಗೇಡ್ ಜಿಲ್ಲಾ ಸಂಚಾಲಕ ಅಭಿಲಾಷ್ ಸೋಮೇನಹಳ್ಳಿ ಮಾತನಾಡಿದರು.
ದೇಶ ಅಭಿವೃದ್ಧಿ ಪಥದಲ್ಲಿ ಸಾಗಬೇಕು. ಹಾಗಾಗಿ ನಮ್ಮ ರಾಷ್ಟ್ರದ ಹಿತದೃಷ್ಟಿಯಿಂದ ಪ್ರಧಾನಿ ಮೋದಿಯವರನ್ನು ಬೆಂಬಲಿಸಲು ಮತದಾರರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ದೇಶಕ್ಕಾಗಿ ಇಡೀ ಜೀವಮಾನವನ್ನೇ ಮುಡುಪಾಗಿಟ್ಟಿರುವ ನಿಸ್ವಾರ್ಥ ನಾಯಕ ನಮ್ಮ ಪ್ರಧಾನಿ ನರೇಂದ್ರ ಮೋದಿ. ಇಡೀ ವಿಶ್ವದ ಜನ ಇಂದು ಭಾರತವನ್ನು ಅಭಿಮಾನದಿಂದ ಹುಬ್ಬೇರಿಸಿ ನೋಡುವಂತಾಗಿದೆ. ನಮ್ಮ ದೇಶದ ಅಬಿವೃದ್ಧಿಯನ್ನು ವಿದೇಶದ ಜನರು ಕೊಂಡಾಡುತ್ತಿದ್ದಾರೆ. ಆದರೆ ಭಾರತೀಯರಾದ ನಾವು ಈ ಬಗ್ಗೆ ಹೆಮ್ಮೆ ಪಡದೆ ಕೇವಲ ಟೀಕೆ ಟಿಪ್ಪಣಿಗಳಲ್ಲೇ ಕಾಲ ಕಳೆಯುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ನಗರದ ಹಲವಾರು ಯುವಕರು ಸ್ವಯಂಪ್ರೇರಿತರಾಗಿ “ಟೀಂ ಮೋದಿ”ಯನ್ನು ಬೆಂಬಲಿಸಿ ಮುಂಬರುವ ಚುನಾವಣೆಗಳಲ್ಲಿ ದೇಶದ ಹಿತದೃಷ್ಟಿಯಿಂದ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೊಳ್ಳಬೇಕು. ವಾಸ್ತವತೆಯನ್ನು ಜನರಿಗೆ ತಿಳಿಸಬೇಕು. ಮುಂದಿನ ಲೋಕಸಭಾ ಚುನಾವಣೆಯಲ್ಲಿ 300 ಕ್ಕು ಹೆಚ್ಚು ಬಿಜೆಪಿ ಲೋಕಸಭಾ ಸದಸ್ಯರನ್ನು ಗೆಲ್ಲಿಸಬೇಕಿದೆ. ಆಗ ಮಾತ್ರ ಪ್ರಧಾನಿ ಕೈಗೊಂಡಿರುವ ರಾಷ್ಟ್ರ ಕೈಂಕರ್ಯಕ್ಕೆ ಸಹಕಾರಿಯಾಗಲಿದೆ. ವಿಶ್ವಗುರು ಸ್ಥಾನವನ್ನು ಕಲ್ಪಿಸಿಕೊಡಲು ಹಾಗೂ ಜಗತ್ತಿನಲ್ಲಿ ಭಾರತಕ್ಕೆ ಮತ್ತು ಭಾರತೀಯರಿಗೆ ಈಗಾಗಲೇ ಮೋದಿಯವರು ತಂದು ಕೊಟ್ಟಿರುವ ಗೌರವ ಹೀಗೇ ಮುಂದುವರಿಯಬೇಕಾದರೆ, ಭಾರತ ಎಲ್ಲಾ ಕ್ಷೇತ್ರಗಳಲ್ಲಿಯೂ ಅತ್ಯುನ್ನತ ಸಾಧನೆ ಮಾಡಲು ಮೋದಿಯವರೆ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಹೇಳಿದರು.
ಬೈಕ್ ರ‍್ಯಾಲಿಯನ್ನು ಉದ್ಘಾಟಿಸಿದ ನಿವೃತ್ತ ಯೋಧ ಹಾಗೂ ಹಿರಿಯ ಪತ್ರಕರ್ತ ಎಸ್.ವಿ.ಐಯ್ಯರ್ ಮಾತನಾಡಿ, ನಮ್ಮ ದೇಶವು ವಿಶ್ವ ನಾಯಕತ್ವವನ್ನು ಹೊಂದಲು ಮತ್ತೊಮ್ಮೆ ಮೋದಿಯವರನ್ನು ಪ್ರದಾನಿಯನ್ನಾಗಿ ಮಾಡುವ ಶಪಥವನ್ನು ಕೈಗೊಳ್ಳಬೇಕೆಂದರು.
ನೂರಕ್ಕೂ ಅಧಿಕ ಮಂದಿ ಬೈಕ್ ರ‍್ಯಾಲಿಯಲ್ಲಿ ಪಾಲ್ಗೂಂಡಿದ್ದ ಯುವಕರು ರಾಷ್ಟ್ರಧ್ವಜವನ್ನು ಹಿಡಿದು ಭಾರತ ಮಾತೆಯ ಜಯಘೋಷದೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು.
ಈ ಸಂದರ್ಭದಲ್ಲಿ ಟೀಂ ಮೋದಿ ಶಿಡ್ಲಘಟ್ಟ ಸಂಚಾಲಕ ಶ್ರೀನಿವಾಸ್ ಪ್ರಸಾದ್, ಪುರುಷೋತ್ತಮ್, ನಾಗೇಶ್, ಶಶಿಕಾಂತ್, ನರೇಶ್, ಕೇಶವ, ಮಂಜುನಾಥ್, ನಾಗೇಂದ್ರ, ಯತೀಶ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಅಂಧಮಕ್ಕಳ ಶಾಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹುಟ್ಟುಹಬ್ಬ ಆಚರಣೆ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಲೋಕೋಪಯೋಗಿ ಸಚಿವ ರೇವಣ್ಣ ಅವರ ಹುಟ್ಟುಹಬ್ಬವನ್ನು ಜೆಡಿಎಸ್ ಕಾರ್ಯಕರ್ತರು ನಗರದ ಆಶಾಕಿರಣ ಅಂಧಮಕ್ಕಳ ಶಾಲೆಯಲ್ಲಿ ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಿ ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್ ಮಾತನಾಡಿದರು.
ರೈತ ಸಾಮಾನ್ಯರೇ ಶ್ರೀಸಾಮಾನ್ಯರು ಎಂದು ತಿಳಿದವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. ರೈತರ ಸಾಲ ಮನ್ನಾ ಮಾಡುವ ಮೂಲಕ ನೇಗಿಲ ಯೋಗಿಯ ಕಷ್ಟಕ್ಕೆ ನೆರವಾಗಿದ್ದಾರೆ ಎಂದು ಅವರು ತಿಳಿಸಿದರು.
ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಗಳಾಗಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಜೆವಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಹಂತಹಂತವಾಗಿ ಈಡೇರಿಸಲು ಕಂಕಣಬದ್ಧವಾಗಿದ್ದಾರೆ. ಪ್ರತಿಯೊಬ್ಬ ರೈತರು, ಬಡವರು, ಮಹಿಳೆಯರು, ಹಿಂದುಳಿದವರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಕೃಷಿಕರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಈ ರಾಜ್ಯದಲ್ಲಿ ೪೫ ಲಕ್ಷ ರೈತರಿಗೆ ೪೬ ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಮೊದಲ ಹಂತವಾಗಿ ಈಗಾಗಲೇ ಹತ್ತೂವರೆ ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಕನ್ನಡಮಾಡಿನಲ್ಲಿ ಮುಂದೆ ಪ್ರಧಾನಿಯಾಗುವ ಅರ್ಹತೆ ಹೊಂದಿರುವ ಏಕೈಕ ವ್ಯಕ್ತಿ ಕುಮಾರಸ್ವಾಮಿಯವರು. ಜನಸೇವೆ ಮಾಡುವ ಮನಸ್ಸಿರುವ ಅವರಿಗೆ ತಾಯಿ ಚಾಮುಂಡೇಶ್ವರಿ ಶಕ್ತಿ ನೀಡಲಿ. ದೇಶದಲ್ಲಿಯೇ ಮಾದರಿ ರಾಜ್ಯವನ್ನಾಗಿ ಕರ್ನಾಟಕವನ್ನು ಅವರು ಮಾಡಲಿದ್ದಾರೆ ಎಂದು ಹೇಳಿದರು.
ಜೆಡಿಎಸ್ ಕಾರ್ಯಕರ್ತರು ಆಶಾಕಿರಣ ಅಂಧಮಕ್ಕಳ ಶಾಲೆಯಲ್ಲಿ ಮಕ್ಕಳೊಂದಿಗೆ ಕೇಕ್ ಕತ್ತರಿಸುವುದು ಹಾಗೂ ಊಟದ ವ್ಯವಸ್ಥೆಯನ್ನು ಆಯೋಜಿಸಿದ್ದರು. ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು, ಬ್ರೆಡ್ ಮತ್ತು ಹಾಲನ್ನು ರೋಗಿಗಳಿಗೆ ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಾರಾಯಣಸ್ವಾಮಿ, ಸದಸ್ಯರಾದ ಲಕ್ಷ್ಮೀನಾರಾಯಣರೆಡ್ಡಿ, ರಾಜಶೇಖರ್, ನರಸಿಂಹಯ್ಯ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ಪಿ.ವಿ.ನಾಗರಾಜ್, ಹುಜಗೂರು ರಾಮಣ್ಣ, ಶ್ರೀರಾಮರೆಡ್ಡಿ, ವೆಂಕಟಸ್ವಾಮಿ, ರಮೇಶ್, ಲಕ್ಷ್ಮಣ, ಲಕ್ಷ್ಮೀನಾರಾಯಣ, ಯೂಸುಫ್, ಆದಿಲ್, ಗೋಪಾಲ್, ತಾದೂರು ರಘು, ಸಚಿನ್, ದೊಣ್ಣಹಳ್ಳಿ ರಾಮಣ್ಣ, ಷಫಿ, ವೆಂಕಟಸ್ವಾಮಿ, ಜಗದೀಶ್, ಭಕ್ತರಹಳ್ಳಿ ಗೋಪಾಲಗೌಡ, ಧರ್ಮೇಂದ್ರ, ಆರ್.ಎ.ಉಮೇಶ್, ಬೈರೇಗೌಡ, ಕನ್ನಮಂಗಲ ಚಿಕ್ಕಾಂಜಿನಪ್ಪ, ಶ್ರೀನಿವಾಸಗೌಡ, ಆಂಜಿನಪ್ಪ, ತ್ಯಾಗರಾಜ್, ಮುನಿರಾಜು ಹಾಜರಿದ್ದರು.
ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಗೆ ಚಾಲನೆ
ನಗರದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಶಿಟೊ ರಿಯೋ ಕರಾಟೆ ಡೊ ಇಂಡಿಯಾ ಅಕಾಡೆಮಿ ವತಿಯಿಂದ ನಡೆದ ಮೂರನೇ ಜಿಲ್ಲಾ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಷಿಪ್ ನಲ್ಲಿ ದಿವ್ಯಭಾರತ್ ಕರಾಟೆ ಡೊ ಅಸೋಸಿಯೇಷನ್ ಕರಾಟೆ ಶಿಕ್ಷಕ ಅರುಣ್ ಕುಮಾರ್ ಮಾತನಾಡಿದರು.
ಕರಾಟೆ ಕೇವಲ ಆತ್ಮರಕ್ಷಣೆಯ ಕಲೆ ಮಾತ್ರವಲ್ಲ, ಅದರಿಂದ ಶಾರೀರಿಕ ಸದೃಢತೆ ಕಾಪಾಡಿಕೊಳ್ಳಬಹುದು ಎಂದು ಅವರು ತಿಳಿಸಿದರು.
ಸ್ವಯಂ ರಕ್ಷಣೆಗಾಗಿ ಕರಾಟೆ ಕಲಿಯುವುದರಿಂದ ಅತ್ಯಂತ ಹೆಚ್ಚಿನ ದೈಹಿಕ ಶ್ರಮ ಮತ್ತು ಮಾನಸಿಕ ಚಾಕಚಕ್ಯತೆಯನ್ನು ಬಯಸುತ್ತದೆ. ಹಾಗಾಗಿ, ಈ ಕ್ರೀಡೆಯಲ್ಲಿ ಪಾಲ್ಗೊಳ್ಳುವವರು ಹೆಚ್ಚು ವೇಗ ರೂಢಿಸಿಕೊಂಡಿರುತ್ತಾರೆ ಎಂದರು.
ಕಸಾಪ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ. ಮನುಷ್ಯನಲ್ಲಿರುವ ಸಂಪತ್ತು ದೋಚಬಹುದು. ಆದರೆ, ಅವನಲ್ಲಿರುವ ವಿದ್ಯೆಯನ್ನು ಕಸಿದುಕೊಳ್ಳಲು ಸಾಧ್ಯ ಇಲ್ಲ. ಹಾಗಾಗಿ ವಿದ್ಯಾರ್ಥಿಗಳು ಅದರಲ್ಲೂ ಹೆಣ್ಣುಮಕ್ಕಳು ಶಿಕ್ಷಣದ ಜೊತೆಯಲ್ಲಿ ದೈಹಿಕ ಆರೋಗ್ಯವನ್ನು ನೀಡುವ ಕರಾಟೆಯಂತಹ ಪಠ್ಯೇತರ ಚಟುವಟಿಕೆಗಳಲ್ಲಿಯೂ ಹೆಚ್ಚು ಪಾಲ್ಗೊಳ್ಳಬೇಕೆಂದು ಕಿವಿಮಾತು ಹೇಳಿದರು.
ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ್ದ ಕರಾಟೆ ಪಟುಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದರು.
ಲಯನ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷ ಮುನಿರಾಜು, ಕಲಾವಿದ ಸಿ.ಎನ್.ಮುನಿರಾಜು, ಕರಾಟೆ ಶಿಕ್ಷಕರಾದ ಚಂದ್ರಶೇಖರ್, ನಾಗೇಶ್, ನೂರುಲ್ಲ, ಅಫ್ರೋಸ್ ಹಾಜರಿದ್ದರು.
ಸ್ವ ಸಹಾಯ ಸಂಘಗಳಿಗೆ ಬಡ್ಡಿ ರಹಿತ ಸಾಲ ವಿತರಣೆ
ತಾಲ್ಲೂಕಿನ ವೈ ಹುಣಸೇನಹಳ್ಳಿ ರೇಷ್ಮೆ ಬೆಳೆಗಾರರ ಹಾಗು ರೈತರ ಸೇವಾ ಸಹಕಾರ ಸಂಘದ ಆವರಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಮಹಿಳಾ ಸ್ವ ಸಹಾಯ ಸಂಘಗಳಿಗೆ ಬಡ್ಡಿ ರಹಿತ ಸಾಲ ವಿತರಣೆ ಸಮಾರಂಭದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿದರು.
ರೈತರು ಹಾಗೂ ಸ್ತ್ರೀಶಕ್ತಿ ಸಂಘಗಳ ಪದಾಧಿಕಾರಿಗಳು ಸಹಕಾರಿ ಬ್ಯಾಂಕುಗಳಲ್ಲಿ ಪಡೆಯುವಂತಹ ಸಾಲಗಳನ್ನು ಸಕಾರಣಕ್ಕೆ ಬಳಸಿಕೊಂಡು ಆರ್ಥಿಕವಾಗಿ ಮುಂದುವರೆಯುವ ಜೊತೆಗೆ ನಿಗದಿತ ಸಮಯದಲ್ಲಿ ಮರುಪಾವತಿ ಮಾಡುವ ಮೂಲಕ ಬ್ಯಾಂಕುಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಅವರು ತಿಳಿಸಿದರು.
ಪ್ರತಿಯೊಬ್ಬ ರೈತರು ಡಿಸಿಸಿ ಬ್ಯಾಂಕ್‌ನಲ್ಲಿ ಖಾತೆ ತೆರೆದು ಹಣ ಠೇವಣಿ ಇಡುವ ಮೂಲಕ ವ್ಯವಹರಿಸಿದಾಗ ಡಿಸಿಸಿ ಬ್ಯಾಂಕ್ ನಿಂದ ಮತ್ತಷ್ಟು ಜನರಿಗೆ ಸಾಲ ನೀಡಲು ಸಹಕಾರಿಯಾಗುತ್ತದೆ. ಸಹಕಾರ ಸಂಘದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಬೆರಸದೇ ಸಾಲಕ್ಕಾಗಿ ಅರ್ಜಿ ಸಲ್ಲಿಸಿರುವ ಎಲ್ಲಾ ರೈತರಿಗೂ ಸಾಲ ವಿತರಣೆ ಮಾಡುವ ಬದ್ದತೆ ನಿರ್ದೇಶಕರೂ ಹಾಗೂ ಸಿಬ್ಬಂದಿ ಬೆಳೆಸಿಕೊಳ್ಳಬೇಕು ಎಂದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ, ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ರಾಷ್ಟ್ರೀಕೃತ ಬ್ಯಾಂಕುಗಳು ಸೇರಿ ಸುಮಾರು ೭೪ ಸಾವಿರ ಕೋಟಿ ರೂಪಾಯಿಗಳ ಸಾಲ ಮನ್ನಾ ಮಾಡಿದ್ದರ ಪರಿಣಾಮ ದಿವಾಳಿಯಾಗಿದ್ದ ಸಹಕಾರಿ ಬ್ಯಾಂಕುಗಳು ಚೇತರಿಸಿಕೊಂಡು ಕೋಟ್ಯಾಂತರ ರೂಪಾಯಿಗಳ ವಹಿವಾಟು ನಡೆಸುವಂತಾಗಿದೆ. ಸಹಕಾರಿ ಬ್ಯಾಂಕುಗಳ ಏಳಿಗೆಗಾಗಿ ರೈತರು ಮತ್ತು ಮಹಿಳಾ ಸ್ವ ಸಹಾಯ ಗುಂಪಿನ ಸದಸ್ಯರು ಕಾಲ ಕಾಲಕ್ಕೆ ಮರುಪಾವತಿ ಮಾಡುವ ಮೂಲಕ ಸಹಕಾರ ನೀಡಬೇಕು ಎಂದರು.
ಮಾಜಿ ಶಾಸಕ ಎಂ.ರಾಜಣ್ಣ ಮಾತನಾಡಿ, ಸಹಕಾರಿ ಸಂಘಗಳ ಮೂಲಕ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವಲ್ಲಿ ಸ್ವಸಹಾಯ ಗುಂಪುಗಳು ರಾಜ್ಯಾದ್ಯಂತ ಹೆಸರು ಮಾಡಿದೆ. ರೈತರು, ಮಹಿಳೆಯರು ತಾವು ಪಡೆದುಕೊಂಡ ಸಾಲಗಳನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡಿ, ಇತರರಿಗೂ ಅನುಕೂಲ ಮಾಡಿಕೊಡಬೇಕು ಎಂದರು.
ಈ ಸಂದರ್ಭದಲ್ಲಿ ೪೩ ಮಹಿಳಾ ಸ್ವಸಹಾಯ ಸಂಘಗಳಿಗೆ ಒಟ್ಟು ೧ ಕೋಟಿ ೨೯ ಲಕ್ಷದ ಸಾಲದ ಚೆಕ್‌ಗಳನ್ನು ವಿತರಿಸಲಾಯಿತು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಪಂಕಜ ನಿರಂಜನ್, ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ.ಬಸವರಾಜ್, ಕೆ.ಗುಡಿಯಪ್ಪ, ಎಸ್.ಎಂ.ನಾರಾಯಣಸ್ವಾಮಿ, ಸುಬ್ರಮಣಿ, ಕ್ಯಾತಪ್ಪ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಆನಂದ್ ಹಾಜರಿದ್ದರು.
ತಂಬಾಕು ನಿಯಂತ್ರಣ ಕಾನೂನು ಉಲ್ಲಂಘಿಸಿದವರಿಗೆ ದಂಡ ವಿಧಿಸಿದ ಅಧಿಕಾರಿಗಳು
ಎ.ಎಸ್.ಐ ಗಳಾದ ನಾರಾಯಣಸ್ವಾಮಿ ಮತ್ತು ಕೃಷ್ಣಪ್ಪ ಅವರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ನಗರದ ಶಾಲಾ ಕಾಲೇಜುಗಳ ಹತ್ತಿರದ ಅಂಗಡಿ, ಹೋಟೆಲುಗಳಿಗೆ, ಬಸ್ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆ ಮಾಡುತ್ತಿರುವವರಿಗೆ ತಂಬಾಕು ನಿಯಂತ್ರಣ ಕಾನೂನಿನನ್ವಯ ಗುರುವಾರ ದಂಡ ವಿಧಿಸಿದರು.
ಆರೋಗ್ಯ ಇಲಾಖೆಯ ಲೋಕೇಶ್ ಹಾಗೂ ತಂಡ ಪೊಲೀಸರ ಜೊತೆಯಲ್ಲಿದ್ದು, ಸರ್ಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ವಿವಿಧ ಶಾಲೆಗಳ ಹತ್ತಿರದ ಅಂಗಡಿಗಳು, ತಳ್ಳುವ ಗಾಡಿಗಳು, ಕಾಫಿ ಟೀ ಶಾಪ್‌ಗಳಿಗೆ ಹೋಗಿ ತಂಬಾಕು ಉತ್ಪನ್ನಗಳ ಮಾರಾಟವನ್ನು ಕಂಡು ತಿಳುವಳಿಕೆ ನೀಡಿದ್ದಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದ ವ್ಯಕ್ತಿಗಳಿಗೆ ದಂಡ ವಿಧಿಸಿದರು.
ಆರೋಗ್ಯ ಇಲಾಖೆಯ ಲೋಕೇಶ್ ಮಾತನಾಡಿ, “ತಂಬಾಕು ನಿಯಂತ್ರಣ ಕಾನೂನು ಕೋಟ್ಪಾ ಕಾಯ್ದೆಯ ಬಗ್ಗೆ ಜನರಿಗೆ ತಿಳಿವಳಿಕೆ ನೀಡುತ್ತಾ ಸಾರ್ವಜನಿಕವಾಗಿ ಬೀಡಿ ಸಿಗರೇಟ್ ಸೇದುವವರಿಗೆ ಸಣ್ಣ ಪ್ರಮಾಣದ ದಂಡ ವಿಧಿಸಿದೆವು. 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಹಾಗೂ ಶಾಲಾ ಕಾಲೇಜುಗಳ 100 ಯಾರ್ಡ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರುವುದನ್ನು ನಿಷೇಧಿಸಿದೆ. ಈ ಬಗ್ಗೆ ನಾಮಫಲಕವನ್ನೂ ಕಡ್ಡಾಯವಾಗಿ ಶಾಲಾ ಕಾಲೇಜಿನ ಆವರಣ ಗೋಡೆಯ ಮುಂಭಾಗದಲ್ಲಿ ಪ್ರದರ್ಶಿಸಬೇಕಾಗುತ್ತದೆ. ಇಂದು ಸುಮಾರು ಹತ್ತು ಮಂದಿಗೆ ದಂಡ ವಿಧಿಸಿದ್ದೇವೆ’ ಎಂದು ತಿಳಿಸಿದರು.
ಹೊಸಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳ ಹೂಳೆತ್ತುವ ಕಾಮಗಾರಿಗೆ ಚಾಲನೆ
ತಾಲ್ಲೂಕು ಆಡಳಿತದಿಂದ ಕೆರೆ ಒತ್ತುವರಿ ತೆರವುಗೊಳಿಸಲಾಗಿರುವ ತಾಲ್ಲೂಕಿನ ಮಳಮಾಚನಹಳ್ಳಿ ಹಾಗೂ ಹಿರೇಬಲ್ಲ ಕೆರೆಗಳ ಸಮಗ್ರ ಅಭಿವೃದ್ಧಿಗೆ ನರೇಗಾ ಯೋಜನೆಯಡಿ ಕೆರೆಗಳ ಹೂಳೆತ್ತುವ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ತಾಲ್ಲೂಕು ಪಂಚಾಯಿತಿ ಇಓ ಶಿವಕುಮಾರ್ ಮಾತನಾಡಿದರು.
ಮಹಾತ್ಮಗಾಂಧಿ ಉದ್ಯೋಗಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಪೂರಕವಾದ ಕಾಮಗಾರಿಗಳನ್ನು ಮಾಡಿದಲ್ಲಿ ಗ್ರಾಮಗಳು ಮತ್ತಷ್ಟು ಅಭಿವೃದ್ಧಿಯಾಗಲು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು.
ಗ್ರಾಮೀಣ ಭಾಗದ ಅಭಿವೃದ್ಧಿಯ ಹಿತದೃಷ್ಠಿಯಿಂದ ಕೇಂದ್ರ ಸರ್ಕಾರ ನರೇಗಾ ಯೋಜನೆಯನ್ನು ಜಾರಿಗೆ ತಂದಿದೆ. ಗ್ರಾಮದ ರೈತರೂ ಹಾಗೂ ಬಡ ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿ ಕೆಲಸವನ್ನು ನೀಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ತಹಶೀಲ್ದಾರ್ ಎಸ್.ಅಜಿತ್‌ಕುಮಾರ್ ರೈ ಮಾತನಾಡಿ, ಗ್ರಾಮೀಣ ಭಾಗಗಳಿಗೆ ಕುಡಿಯುವ ನೀರು ಮತ್ತು ಕೃಷಿಗೆ ನೀರೊದಗಿಸುವ ಉದ್ದೇಶದಿಂದ ಸರ್ಕಾರ ರೂಪಿಸಿರುವ ಎಚ್.ಎನ್ ವ್ಯಾಲಿ ನೀರು ತಾಲ್ಲೂಕಿನ ಕೆರೆಗಳಿಗೆ ಬರುವ ಹಿನ್ನಲೆಯಲ್ಲಿ ಈಗಾಗಲೇ ತಾಲ್ಲೂಕಿನಾದ್ಯಂತ ಇರುವ ಕೆರೆ, ರಾಜಕಾಲುವೆ ಒತ್ತುವರಿ ತೆರವು ಕಾರ್ಯ ನಡೆಯುತ್ತಿದೆ. ಬರುವ ನೀರನ್ನು ಸಂಗ್ರಹಿಸಲು ಗ್ರಾಮೀಣ ಪ್ರದೇಶಗಳಲ್ಲಿರುವ ಕೆರೆಗಳ ಹೂಳೆತ್ತಲು ಉದ್ಯೋಗಖಾತ್ರಿ ಯೋಜನೆಯಡಿ ಅವಕಾಶವಿದ್ದು ಸ್ಥಳೀಯರೂ ಹಾಗೂ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಸಿ.ಎಸ್.ಶ್ರೀನಾಥಗೌಡ ಮಾತನಾಡಿ, ಉದ್ಯೋಗಖಾತ್ರಿ ಯೋಜನೆಯ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸುವ ಕೆಲಸವನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಾಡಬೇಕು. ಇದರಿಂದ ಗ್ರಾಮೀಣ ಭಾಗದ ಜನರು ನರೇಗಾ ಯೋಜನೆಯಡಿ ಹೆಚ್ಚಿನ ಕಾಮಗಾರಿಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದರು.
ಹೊಸಪೇಟೆ ಗ್ರಾಮ ಪಂಚಾಯಿತಿ ಪಿಡಿಓ ಕೆ.ಎಸ್.ಮಧು ಹಾಜರಿದ್ದರು.
ಅನಾಥವಾಗಿದ್ದ ವೃದ್ಧೆಗೆ ಪುನರ್ವಸತಿ ಕಲ್ಪಿಸಿದ ಜನತೆ
ವಾರಸುದಾರರು ಯಾರೂ ಇಲ್ಲದೆ ಅನಾಥವಾಗಿದ್ದ ವೃದ್ಧೆಯನ್ನು ನಾಗರಿಕರು ಹಾಗೂ ಪತ್ರಕರ್ತರು ಮಾನವೀಯತೆಯಿಂದ ಜಿಲ್ಲಾ ಹಿರಿಯ ನಾಗರಿಕ ಸಹಾಯವಾಣಿ ಅವರ ಮೂಲಕ ವೃದ್ಧಾಶ್ರಮಕ್ಕೆ ಗುರುವಾರ ಸೇರಿಸಿದರು.
ಕಳೆದ ನಾಲ್ಕೈದು ದಿನಗಳಿಂದ ನಗರದ ಸಿದ್ಧಾರ್ಥ ನಗರದಲ್ಲಿ ಒಬ್ಬಂಟಿಯಾಗಿದ್ದ ವೃದ್ಧೆ ಗೌರಮ್ಮ ಅವರ ಚಿತ್ರವನ್ನು ಮೊಬೈಲ್ ನಲ್ಲಿ ಕ್ಲಿಕ್ಕಿಸಿದ ಸ್ಥಳೀಯ ಯುವಕ ಸುರೇಶ್, “ಈ ಅಜ್ಜಿಗೆ ಯಾರೂ ಇಲ್ಲ. ಸುತ್ತಮುತ್ತಲಿನ ಜನರು ಮಾನವೀಯತೆಯಿಂದ ಊಟ ನೀಡುತ್ತಿದ್ದಾರೆ. ಇವರನ್ನು ನಿರಾಶ್ರಿತೆ ಕೇಂದ್ರಕ್ಕೆ ಸೇರಿಸಲು ದಯವಿಟ್ಟು ಪತ್ರಿಕಾ ಮಿತ್ರರು ಸಹಕರಿಸಿ” ಎಂದು ಸಂದೇಶವನ್ನು ವ್ಯಾಟ್ಸಪ್ ಗ್ರೂಪಿನಲ್ಲಿ ಹರಿಬಿಟ್ಟಿದ್ದರು.
ಇದನ್ನು ಕಂಡು ಸ್ಥಳಕ್ಕೆ ಪತ್ರಕರ್ತರು ತೆರಳಿದಾಗ ಸ್ಥಳೀಯ ನಾಗರಿಕರು ಜೊತೆಯಾದರು. ವೃದ್ಧೆ ಗೌರಮ್ಮ ಅವರನ್ನು ಅವರ ಬಂಧುಗಳ ಬಗ್ಗೆ ವಿಚಾರಿಸಿದಾಗ ಆಕೆ, “ನನಗೆ ಆರು ಮಂದಿ ಮಕ್ಕಳು. ಈಗ ಅವರು ಬದುಕಿಲ್ಲ. ಮಗಳ ಮಗಳು ನನ್ನನ್ನು ಪೋಷಿಸುತ್ತಿದ್ದರೆ. ಕಳೆದ ನಾಲ್ಕೈದು ದಿನಗಳ ಹಿಂದೆ ಅವಳು ಬಾಡಿಗೆಗೆ ಇದ್ದ ಮನೆ ಖಾಲಿ ಮಾಡಿಕೊಂಡು ಹೋದಳು. ಎಲ್ಲಿಗೆ ಹೋದಳೋ ತಿಳಿಯದು” ಎಂದು ಹೇಳಿದರು.
ವೃದ್ಧೆ ಗೌರಮ್ಮ ಅವರ ದೂರದ ಸಂಬಂಧಿಗಳನ್ನು ವಿಚಾರಿಸಿದಾಗ ಅವರು ಯಾರೂ ಆಕೆಯ ಪೋಷಣೆಯ ಜವಾಬ್ದಾರಿ ಹೊರಲು ತಯಾರಾಗಲಿಲ್ಲ. ಆಗ ಚಿಕ್ಕಬಳ್ಳಾಪುರದ ಜಿಲ್ಲಾ ಹಿರಿಯ ನಾಗರಿಕರ ಸಹಾಯವಾಣಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಲಾಯಿತು. ಜಿಲ್ಲಾ ಸಂಯೋಜನಾಧಿಕಾರಿ ಶ್ರೀನಿವಾಸರೆಡ್ಡಿ ಆಗಮಿಸಿ ವೃದ್ಧೆ ಗೌರಮ್ಮ ಅವರನ್ನು ಗೌರಿಬಿದನೂರಿನ ಪ್ರೀತಿ ಚಾರಿಟಬಲ್ ಟ್ರಸ್ಟ್ ವೃದ್ಧಾಶ್ರಮಕ್ಕೆ ಕರೆದುಕೊಂಡು ಹೋದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಹಿರಿಯ ನಾಗರಿಕರ ಸಹಾಯವಾಣಿಯ ಸಂಯೋಜನಾಧಿಕಾರಿ ಶ್ರೀನಿವಾಸರೆಡ್ಡಿ, “ಹಿರಿಯ ಅನಾಥ ವಯೋವೃದ್ಧರು ಯಾರೇ ಇದ್ದರೂ ಸಹಾಯವಾಣಿ ೧೦೯೦ ಸಂಖ್ಯೆಗೆ ಕರೆಮಾಡಿ. ನಾವು ಒಂದು ಗಂಟೆಯೊಳಗೆ ಸ್ಥಳಕ್ಕೆ ಆಗಮಿಸಿ ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸಿ ಸುಲ್ತಾನಪೇಟೆ, ಕೈವಾರ, ಬಾಗೇಪಲ್ಲಿ ಮತ್ತು ಚಿಂತಾಮಣಿ ಗಳಲ್ಲಿ ಇರುವ ವೃದ್ಧಾಶ್ರಮಕ್ಕೆ ಸೇರಿಸುತ್ತೇವೆ. ಅವರಿಗೆ ಸರ್ಕಾರದ ವೆಚ್ಚದಲ್ಲಿ ಪುನರ್ವಸತಿ ಕಲ್ಪಿಸಲಾಗುತ್ತದೆ. ಈ ದಿನ ಮಾನವೀಯತೆಯಿಂದ ಈ ವೃದ್ಧೆಯ ಪುನರ್ವಸತಿಗೆ ಸಹಕರಿಸಿದ ಎಲ್ಲರೂ ಅಭಿನಂದನಾರ್ಹರು” ಎಂದು ಹೇಳಿದರು.
ಮೇಲೂರು ಗ್ರಾಮಕ್ಕೆ ಗಾಂಜಾ ಪೂರೈಕೆ : ದೂರು ದಾಖಲಿಸಿದ ಗ್ರಾಮ ಪಂಚಾಯಿತಿ
ತಾಲ್ಲೂಕಿನ ಮೇಲೂರು ಹಾಗೂ ಸುತ್ತಮುತ್ತ ಬೇರೆಡೆಯಿಂದ ಗಾಂಜಾ ಹಾಗೂ ಇನ್ನಿತರ ಮಾದಕ ವಸ್ತುಗಳನ್ನು ತರಿಸಿ ಇಲ್ಲಿನ ಯುವಕರ ಮೂಲಕ ಮಾರಾಟ ಮಾಡುತ್ತಿರುವ ದಂಧೆ ನಡೆಯುತ್ತಿರುವ ಅನುಮಾನವಿದ್ದು ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮೇಲೂರು ಗ್ರಾಮ ಪಂಚಾಯಿತಿಯಿಂದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರನ್ನು ದಾಖಲಿಸಲಾಗಿದೆ.
ತಾಲ್ಲೂಕಿನ ಸುಶಿಕ್ಷತ ಹಾಗೂ ಪ್ರಗತಿಪರ ಗ್ರಾಮ ಎಂದೇ ಖ್ಯಾತಿ ಪಡೆದಿರುವ ಮೇಲೂರು ಗ್ರಾಮದಲ್ಲಿ ಇತ್ತೀಚೆಗೆ ಕೆಲ ಯುವಕರು ಗಾಂಜಾ ಹಾಗೂ ಇನ್ನಿತರ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗಿರುವುದು ಪೋಷಕರು ಹಾಗೂ ನಾಗರಿಕರಲ್ಲಿ ಆತಂಕವನ್ನುಂಟು ಮಾಡಿದೆ.
ಬೇರೆಡೆಯಿಂದ ಇಲ್ಲಿಗೆ ಗಾಂಜಾ ಹಾಗೂ ಇನ್ನಿತರ ಮಾದಕ ವಸ್ತುಗಳನ್ನು ತರಿಸಿ ಇಲ್ಲಿನ ಯುವಕರನ್ನು ಬಳಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳಿಗೆ ಸರಬರಾಜು ಮಾಡುತ್ತಿರುವ ಶಂಕೆಯಿದೆ. ಸಾಲದೆಂಬಂತೆ ಗ್ರಾಮದ ಶಾಲಾ ಆವರಣದಲ್ಲಿ ಮದ್ಯ, ಗಾಂಜಾ ಹಾಗೂ ಇತರ ಮಾದಕ ವಸ್ತುಗಳ ಬಳಕೆ ಮಾಡಿ ಆವರಣವನ್ನು ಕಲುಷಿತಗೊಳಿಸುತ್ತಿರುವುದರಿಂದ ಶಾಲೆಗೆ ಹೋಗುವ ಮಕ್ಕಳಲ್ಲಿ ಭಯದ ವಾತಾವರಣ ಕೂಡ ನಿರ್ಮಾಣವಾಗಿದೆ.
ಕಳೆದ ತಿಂಗಳಿನಲ್ಲಿ ಮೇಲೂರು ಗ್ರಾಮದಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಶಾಲಾ ಆವರಣದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಬೆಳಗ್ಗೆ ಶಾಲೆಗೆ ಬಂದರೆ ಆವರಣದಲ್ಲಿ ಮದ್ಯದ ಬಾಟಲಿ ಮುಂತಾದ ವಸ್ತುಗಳು ಬಿದ್ದಿರುತ್ತವೆ, ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ದೂರಿದ್ದರು.
ಕೂಡಲೇ ಪೊಲೀಸ್ ಇಲಾಖೆ ಕಾನೂನು ರೀತಿಯ ಕ್ರಮ ಜರುಗಿಸುವ ಮೂಲಕ ಗ್ರಾಮದಲ್ಲಿ ಶಾಂತಿಯ ವಾತಾವರಣ ನಿರ್ಮಾಣ ಮಾಡಿಕೊಡಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಲ್.ಜಮುನಾ ಧರ್ಮೇಂದ್ರ ಮತ್ತು ಪಿಡಿಓ ಕೆ.ವಿ.ಶಾರದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಿಜಾಪುರದ ಗೋಲ ಗುಮ್ಮಟದ ಮುಂದೆ ತಾಲ್ಲೂಕು ಕಸಾಪ ವತಿಯಿಂದ ಸಾಧಕರಿಗೆ ಸನ್ಮಾನ
ವಿಶ್ವದ ಎರಡನೆ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್ ಎಂದೇ ಖ್ಯಾತಿ ಪಡೆದ ವಿಜಾಪುರದ ಗೋಲ ಗುಮ್ಮಟದೊಳದೊಳಗಿನ ಪ್ರಧಾನ ಕೊಠಡಿಯಲ್ಲಿ ಪ್ರತಿ ಶಬ್ದವೂ ಏಳು ಬಾರಿ ಪ್ರತಿಧ್ವನಿತವಾಗುತ್ತದೆ. ಕನ್ನಡ ಸಾಹಿತ್ಯ ಸಂಸ್ಕೃತಿಯೂ ಇದೇ ರೀತಿ ಎಲ್ಲಾ ದಿಕ್ಕುಗಳಲ್ಲೂ ಪ್ರತಿಧ್ವನಿಸಲಿ ಎಂದು ಕಸಾಪ ಅಧ್ಯಕ್ಷ ಎ.ಎಂ.ತ್ಯಾಗರಾಜ್ ತಿಳಿಸಿದರು.
ತಾಲ್ಲೂಕು ಕಸಾಪ ವತಿಯಿಂದ “ಕಸಾಪ ನಡಿಗೆ ಐತಿಹಾಸಿಕ ಸ್ಮಾರಕದೆಡೆಗೆ” ಕಾರ್ಯಕ್ರಮದಡಿಯಲ್ಲಿ ವಿಜಾಪುರದ ಗೋಲ ಗುಮ್ಮಟದ ಮುಂದೆ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಗೋಲ ಗುಮ್ಮಟದಲ್ಲಿನ “ಪಿಸುಗುಟ್ಟುವ ಶಾಲೆ”ಯಲ್ಲಿ ಅತಿ ಸಣ್ಣ ಶಬ್ದವೂ ೩೭ ಮಿ ದೂರದಲ್ಲಿ ಸ್ಪಷ್ಟವಾಗಿ ಕೇಳಿಬರುತ್ತದೆ. ಹಾಗೆಯೇ ಕನ್ನಡವೂ ಸಹ ದಶದಿಕ್ಕುಗಳಿಗೂ ಪಸರಿಸುವಂತಾಗಲಿ. ಕಸಾಪ ಕೇವಲ ಒಂದು ಪ್ರದೇಶಕ್ಕೆ ಸೀಮಿತವಲ್ಲ. ಕರ್ನಾಟಕದ ಐತಿಹಾಸಿಕ ಪರಂಪರೆಯ ಪ್ರತಿನಿಧಿಗಳಾದ ಸ್ಮಾರಕಗಳ ಬಳಿ ತೆರಳಿ ನಾಡಬಾವುಟವನ್ನು ಹಾರಿಸುವುದು, ಸ್ಥಳೀಯ ಸಾಧಕರನ್ನು ಸನ್ಮಾನಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಾನಪದ ಕಲಾವಿದರಾದ ರಾಜಗೆರೆ ಎಸ್.ಶಿವಣ್ಣ, ಸಾಹಿತಿ ಹಾಗೂ ಶಿಕ್ಷಕಿ ಭಾರತಿ ಪಂಡಿತ ಮದಿನವರ, ಜಮಖಂಡಿ ಕನ್ನಡ ಜಾನಪದ ಪರಿಷತ್ತು ಸಂಘಟನಾ ಕಾರ್ಯದರ್ಶಿ ಶಂಕರನಿಂಗಪ್ಪ ಕಂಕಣವಾಡೆ ಅವರನ್ನು ಶಿಡ್ಲಘಟ್ಟ ಕಸಾಪ ವತಿಯಿಂದ ಸನ್ಮಾನಿಸಲಾಯಿತು.
ಜಮಖಂಡಿ ಕನ್ನಡ ಜಾನಪದ ಪರಿಷತ್ತು ಅಧ್ಯಕ್ಷ ಪಿ.ಎಸ್.ಕಟ್ಟೀಮನಿ ಹಾಜರಿದ್ದರು.
ಎರಡು ಪಾಳಿಯಲ್ಲಿ ವಿದ್ಯುತ್ ನೀಡಬೇಕೆಂದು ರೈತ ಸಂಘದಿಂದ ಒತ್ತಾಯ
ಮೇಲೂರು ಸಬ್ ಸ್ಟೇಷನ್ ನಲ್ಲಿ ಸತತ ಏಳು ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡುತ್ತಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಹಿಂದೆ ಇದ್ದಂತೆ ಹಗಲು ಮತ್ತು ರಾತ್ರಿ ಎರಡು ಪಾಳಿಯಲ್ಲಿ ವಿದ್ಯುತ್ ನೀಡಬೇಕೆಂದು ರೈತ ಸಂಘದ ಪದಾಧಿಕಾರಿಗಳು ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀನಾಥರೆಡ್ಡಿ ಅವರಿಗೆ ಮಂಗಳವಾರ ಮನವಿಯನ್ನು ಸಲ್ಲಿಸಿದರು.
“ನಮ್ಮ ತಾಲ್ಲೂಕಿನಲ್ಲಿ ಕೊಳವೆಬಾವಿಗಳಲ್ಲಿ ಹೆಚ್ಚಿನ ನೀರು ಇಲ್ಲ. ಎರಡು ಅಥವಾ ಮೂರು ಗಂಟೆ ನೀರು ಮೇಲೆತ್ತುವಷ್ಟರಲ್ಲಿ ಅಂತರ್ಜಲ ಬರಿದಾಗುತ್ತದೆ. ಅದು ಶೇಖರಣೆಯಾಗಲು ಕೆಲವು ಗಂಟೆಗಳು ಬೇಕು. ಹಿಂದೆ ಹಗಲಿನಲ್ಲಿ ಮೂರು ಗಂಟೆ ರಾತ್ರಿ ವೇಳೆ ನಾಲ್ಕು ಗಂಟೆಗಳ ಕಾಲ ತ್ರೀ ಫೇಸ್ ವಿದ್ಯುತ್ ನೀಡಲಾಗುತ್ತಿತ್ತು. ಅದು ನಮ್ಮ ಬಯಲು ಸೀಮೆಯ ರೈತರಿಗೆ ಅನುಕೂಲಕರವಾಗಿತ್ತು. ಆದರೆ ಈಗ ಸತತ ಏಳು ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡುತ್ತಿರುವುದರಿಂದ ನೀರಿನ ಕೊರತೆ ಹಾಗೂ ಮೋಟರ್ ಗಳು ಸುಟ್ಟುಹೋಗುತ್ತಿವೆ. ಆದ್ದರಿಂದ ದಯವಿಟ್ಟು ಹಿಂದೆ ಇದ್ದಂತೆಯೇ ವಿದ್ಯುತ್ ಸರಬರಾಜನ್ನು ಎರಡು ಪಾಳಿಯಲ್ಲಿ ಕೊಡಿ ಎಂದು ರೈತರು ಮನವಿ ಮಾಡಿದರು.
ಎಇಇ ಸಯ್ಯದ್ ರೆಹಮಾನ್ ಮಾತನಾಡಿ, ಸರ್ಕಾರದ ಆದೇಶದಂತೆ ನಾವು ಮೇಲೂರು ಹಾಗೂ ಪಲಿಚೇರ್ಲು ಸಬ್ ಸ್ಟೇಷನ್ ಗಳಲ್ಲಿ ಸತತ ಏಳು ಗಂಟೆಗಳ ಕಾಲ ವಿದ್ಯುತ್ ನೀಡುತ್ತಿದ್ದೇವೆ. ರೈತರ ಸಮಸ್ಯೆಯನ್ನು ಮೇಲಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ, ಚಿಂತಾಮಣಿ ತಾಲ್ಲೂಕು ಅಧ್ಯಕ್ಷ ರಮಣಾರೆಡ್ಡಿ, ಬೀರಪ್ಪ, ಚೌಡಪ್ಪ, ಮಂಜುನಾಥ್, ಅಶ್ವತ್ಥ್, ಆನಂದ್, ಶ್ರೀನಾಥ್, ವೆಂಕಟೇಶಪ್ಪ, ಪಾಪಣ್ಣ ಹಾಜರಿದ್ದರು.
ಅಂತರರಾಜ್ಯ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್ ಗಳಾದ ಶಿಡ್ಲಘಟ್ಟದ ಬಾಲಕರು
ನಗರದ ಸ್ಪೀಡ್ ಸ್ಕೇಟಿಂಗ್ ಅಸೋಸಿಯೇಷನ್ ವಿದ್ಯಾರ್ಥಿಗಳು ಗೌರಿಬಿದನೂರಿನಲ್ಲಿ ಈಚೆಗೆ ನಡೆದ ಎರಡನೇ ಅಂತರರಾಜ್ಯ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾಗವಹಿಸಿ ಹಲವು ವಿಭಾಗಗಳಲ್ಲಿ ವಿಜೇತರಾಗಿದ್ದಾರೆ.
೧೩ ರಿಂದ ೧೪ ವಯೋಮಾನದ ಇನ್ ಲೈನ್ ರಿಂಕ್ ರೇಸ್ ನಲ್ಲಿ ಮಹಿತ್ (೩೦೦ ಮೀ ಮೊದಲ ಸ್ಥಾನ, ೫೦೦ ಮೀ ಎರಡನೇ ಸ್ಥಾನ, ೮೦೦ ಮೀ ಮೊದಲ ಸ್ಥಾನ), ಶಿವ ವಿಖ್ಯಾತ್ (೩೦೦ ಮೀ ಎರಡನೇ ಸ್ಥಾನ, ೫೦೦ ಮೀ ಮೊದಲ ಸ್ಥಾನ, ೮೦೦ ಮೀ ಎರಡನೇ ಸ್ಥಾನ), ಪ್ರಜ್ವಲ್ (೩೦೦ ಮೀ ಮೂರನೇ ಸ್ಥಾನ, ೫೦೦ ಮೀ ಮೂರನೇ ಸ್ಥಾನ, ೮೦೦ ಮೀ ಮೂರನೇ ಸ್ಥಾನ), ಧನುಷ್ (ಸಮಾಧಾನಕರ ). ೧೦ ರಿಂದ ೧೨ ವಯೋಮಾನದ ಇನ್ ಲೈನ್ ರಿಂಕ್ ರೇಸ್ ನಲ್ಲಿ ತಿಲಕ್ ಗೌಡ (೩೦೦ ಮೀ ಮೊದಲ ಸ್ಥಾನ, ೫೦೦ ಮೀ ಮೊದಲ ಸ್ಥಾನ, ೮೦೦ ಮೀ ಮೊದಲ ಸ್ಥಾನ), ೧೦ ರಿಂದ ೧೨ ವಯೋಮಾನದ ಕ್ವಿಡ್ ರಿಂಕ್ ರೇಸ್ ನಲ್ಲಿ ಕಿಶನ್ (೩೦೦ ಮೀ ಎರಡನೇ ಸ್ಥಾನ, ೫೦೦ ಮೀ ಎರಡನೇ ಸ್ಥಾನ, ೮೦೦ ಮೀ ಎರಡನೇ ಸ್ಥಾನ), ಚೇತನ್ (೩೦೦ ಮೀ ಮೂರನೇ ಸ್ಥಾನ, ೫೦೦ ಮೀ ಮೂರನೇ ಸ್ಥಾನ, ೮೦೦ ಮೀ ಮೂರನೇ ಸ್ಥಾನ) ಪಡೆದಿದ್ದಾರೆಂದು ಸ್ಕೇಟಿಂಗ್ ತರಬೇತುದಾರ ವಿ.ಅರುಣ್ ಕುಮಾರ್ ತಿಳಿಸಿದ್ದಾರೆ.

