Home Blog Page 358

ಕೆರೆ ಒತ್ತುವರಿ ತೆರವು ಗೊಳಿಸುವಂತೆ ಒತ್ತಾಯಿಸಿದ ರೈತಸಂಘದ ಸದಸ್ಯರು

0

ತಾಲ್ಲೂಕಿನಾದ್ಯಂತ ಇರುವ ಕೆರೆ ಒತ್ತುವರಿ ತೆರವುಗೊಳಿಸಬೇಕು ಹಾಗೂ ರಾಜಕಾಲುವೆ ಮತ್ತು ಕೆರೆಗಳಲ್ಲಿರುವ ಜಾಲಿ ಗಿಡಗಳನ್ನು ತಾಲ್ಲೂಕು ಆಡಳಿತ ಕೂಡಲೇ ತೆರವುಗೊಳಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ(ಪುಟ್ಟಣ್ಣಯ್ಯ ಬಣ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ ಒತ್ತಾಯಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ಪದಾಧಿಕಾರಿಗಳೊಂದಿಗೆ ಸೋಮವಾರ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ತಾಲ್ಲೂಕಿನಾಧ್ಯಂತ ಇರುವ ಕೆರೆ ಹಾಗೂ ರಾಜಕಾಲುವೆಗಳ ಒತ್ತುವರಿ ಮಾಡಿರುವವರನ್ನು ತೆರವುಗೊಳಿಸಬೇಕು. ಕೆರೆಗಳಲ್ಲಿ ಬೆಳೆದು ನಿಂತಿರುವ ಜಾಲಿ ಗಿಡಗಳನ್ನು ತೆಗೆಯುವಂತೆ ಒತ್ತಾಯಿಸಿ ಸಂಘಟನೆಯಿಂದ ಈ ಹಿಂದೆ ಹಲವಾರು ಭಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ತಾಲ್ಲೂಕು ಆಡಳಿತ ಕೆಲವೇ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಮಾತುಗಳನ್ನು ನಂಬಿ ತಾವು ಯಾವುದೇ ಕೆರೆ ಒತ್ತುವರಿ ಮಾಡದಿರುವುದು ನಾಗರಿಕರಲ್ಲಿ ಹಲವು ಅನುಮಾನಗಳು ಮೂಡಿಸಿವೆ ಎಂದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್ ಮಾತನಾಡಿ, ಜಿಲ್ಲೆಯಾದ್ಯಂತ ಎಲ್ಲಾ ತಾಲ್ಲೂಕುಗಳಲ್ಲಿಯೂ ಆಯಾ ತಾಲ್ಲೂಕು ಆಡಳಿತ ಕೆರೆ ಒತ್ತುವರಿ ತೆರವು ಮಾಡಲು ಮುಂದಾಗಿದ್ದರೂ ನಮ್ಮ ತಾಲ್ಲೂಕಿನಲ್ಲಿ ಮಾತ್ರ ಯಾವುದೇ ಪ್ರಗತಿ ಆಗಿಲ್ಲ. ಕೆಲ ಸಂಘಟನೆಗಳ ಪದಾಧಿಕಾರಿಗಳು ಪ್ರಭಾವಿಗಳ ಕೈ ಗೊಂಬೆಯಂತೆ ವರ್ತಿಸುವ ಜೊತೆಗೆ ಕೆರೆ ಒತ್ತುವರಿ ಮಾಡಿಕೊಂಡಿರುವವರ ಪರ ವಹಿಸಿ ತಮಗೆ ಇಲ್ಲ ಸಲ್ಲದ ಸುಳ್ಳುಗಳನ್ನು ಹೇಳಿ ವಿನಾಕಾರಣ ಒತ್ತುವರಿ ತೆರವಿಗೆ ಅಡ್ಡಿಯುಂಟು ಮಾಡುತ್ತಿದೆ. ಹಾಗಾಗಿ ಕೂಡಲೇ ತಾವು ಸ್ಥಳ ಪರಿಶೀಲನೆ ನಡೆಸಿ ನಿಜವಾದ ರೈತ ಒತ್ತುವರಿ ಸ್ಥಳದಲ್ಲಿ ದನಕರುಗಳಿಗಾಗಿ ಮೇವು ಬೆಳೆದಿದ್ದಾರೆಯೇ ಅಥವ ಮತ್ತೇನು ಬೆಳೆ ಇಟ್ಟಿದ್ದಾರೆ ಎಂಬುದನ್ನು ಅರಿತು ಒತ್ತುವರಿ ಕಾರ್ಯಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಎಸ್.ಅಜಿತ್‌ಕುಮಾರ್ ರೈರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಎಸ್.ಅಜಿತ್‌ಕುಮಾರ್‌ರೈ ಮಾತನಾಡಿ, ಈಗಾಗಲೇ ತಾಲ್ಲೂಕಿನಾದ್ಯತ ಇರುವ ಕೆರೆ, ರಾಜಕಾಲುವೆ ಒತ್ತುವರಿ ತೆರವು ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇನ್ನು ಕೆರೆಗಳಲ್ಲಿ ಬೆಳೆದು ನಿಂತಿರುವ ಜಾಲಿ ಗಿಡಗಳನ್ನು ತೆಗೆಯಲು ಅರಣ್ಯ ಇಲಾಖೆ ಮುಂದಾಗಬೇಕು. ಎಚ್.ಎನ್.ವ್ಯಾಲಿ ನೀರು ಬರುವ ಕೆರೆಗಳ ಒತ್ತುವರಿಯನ್ನು ಮೊದಲು ತೆರವುಗೊಳಿಸಲು ಕ್ರಮ ಜರುಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಎಚ್.ಮುದ್ದುರಾಜ್, ಎಂ.ಎಸ್.ಮಂಜುನಾಥ, ಅರುಣ್‌ಬಾಬು, ಬಿ.ಕೆ.ಚನ್ನೇಗೌಡ, ಶಂಕರನಾರಾಯಣ, ರವಿಕುಮಾರ್ ಹಾಜರಿದ್ದರು.

ಶವ ಸಂಸ್ಕಾರ ನಡೆಸುವ ಸ್ಥಳದ ವಿವಾದ, ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ

0

ಮೃತ ವ್ಯಕ್ತಿಯ ಶವ ಸಂಸ್ಕಾರ ನಡೆಸುವ ಸ್ಥಳದ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ಮಧ್ಯಸ್ಥಿಕೆಯಲ್ಲಿ ಅಂತ್ಯ ಸಂಸ್ಕಾರ ನಡೆಸಿದ ಘಟನೆ ತಾಲ್ಲೂಕಿನ ಗಂಗನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಹಳ್ಳಿ ಗ್ರಾಮದಲ್ಲಿ ಮೃತ ರತ್ನಮ್ಮ ಎಂಬುವವರ ಅಂತ್ಯಸಂಸ್ಕಾರಕ್ಕೆಂದು ಆಕೆಯ ಪತಿಯನ್ನು ಮಣ್ಣು ಮಾಡಿರುವ ಜಾಗದ ಪಕ್ಕದಲ್ಲಿ ಗುಂಡಿ ತೋಡುವಾಗ ಇದೇ ಗ್ರಾಮದ ರಾಮಾಂಜಿನಪ್ಪ, ಇದು ನಮಗೆ ಸೇರಿದ ಜಾಗ ನಮ್ಮ ಬಳಿ ದಾಖಲೆಯಿದೆ. ಈಗಾಗಲೇ ಸ್ಮಶಾನಗಳಿಗಾಗಿ ನಮ್ಮ ಇಡುವಳಿ ಜಮೀನಿನಲ್ಲಿ ೨೦ ಗುಂಟೆ ಜಮೀನು ಬಿಟ್ಟಿದ್ದೇವೆ. ಅಲ್ಲಿ ಮಾಡಿಕೊಳ್ಳದೆ ಇಲ್ಲಿ ಅಂತ್ಯ ಸಂಸ್ಕಾರ ಮಾಡುತ್ತಿರುವುದು ಸರಿಯಲ್ಲ, ಇಲ್ಲಿ ಮಾಡಬೇಡಿ, ಬೇರೆ ಕಡೆ ಮಾಡಿಕೊಳ್ಳಿ ಎಂದು ಅಡ್ಡಿ ಪಡಿಸಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಇದೇ ಸ್ಥಳದಲ್ಲಿ ಮೃತರನ್ನು ಮಣ್ಣು ಮಾಡಿದ್ದಾರೆ. ಅದರಲ್ಲಿಯೂ ಇದೀಗ ಮೃತಪಟ್ಟಿರುವ ರತ್ನಮ್ಮರ ಪತಿಯನ್ನು ಸಹ ಇದೇ ಸ್ಥಳದಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದು ಇದೀಗ ಪತಿಯನ್ನು ಮಣ್ಣು ಮಾಡಿರುವ ಪಕ್ಕದಲ್ಲಿಯೇ ಇವರ ಅಂತ್ಯಕ್ರಿಯೆ ನಡೆಯಬೇಕು ಎಂದು ಗ್ರಾಮದ ದೊಡ್ಡಪಾಪಣ್ಣ ಮತ್ತಿತರರು ಪಟ್ಟುಹಿಡಿದಾಗ ಎರಡು ಗುಂಪಿನ ನಡುವೆ ಕೆಲಕಾಲ ಮಾತಿನಚಕಮಕಿ ನಡೆದು ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಬಂದಿತ್ತು.
ವಿಷಯ ತಿಳಿದು ಸ್ಥಳಕ್ಕೆ ಬಂದಿದ್ದ ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ವಿಶ್ವನಾಥ್ ಮತ್ತು ಸರ್ಕಲ್ ಇನ್ ಸ್ಪೆಕ್ಟರ್ ಆನಂದ್‌ಕುಮಾರ್ ಪೋಲೀಸ್ ಸಿಬ್ಬಂದಿಯೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಕಂದಾಯ ಇಲಾಖೆಯ ಅಧಿಕಾರಿಗಳ ಸೂಚನೆಯ ಮೇರೆಗೆ ಅದೇ ಸ್ಥಳದಲ್ಲಿಯೇ ಪೊಲೀಸ್ ಬಂದೋ ಬಸ್ತ್ ನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ

0

ನಗರದ ಬಸ್ ನಿಲ್ದಾಣ ಸೇರಿದಂತೆ ಮಯೂರವೃತ್ತ, ಕೋಟೆ ವೃತ್ತದ ಆಟೋ ನಿಲ್ದಾಣಗಳಲ್ಲಿ ನಗರ ಠಾಣೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಅಪರಾಧತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ನಗರ ಠಾಣೆಯ ಎಎಸ್ಸೈ ನಾರಾಯಣಸ್ವಾಮಿ ಮಾತನಾಡಿದರು.
ಕಾನೂನನ್ನು ಯಾರು ಗೌರವಿಸಿ, ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸುತ್ತಾರೋ ಅವರು ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಕಾನೂನುಗಳನ್ನು ಇನ್ನೊಬ್ಬರ ಒತ್ತಾಯಕ್ಕಾಗಿ ಆಗಲಿ, ಪೊಲೀಸರಿಗೆ ಭಯ ಪಟ್ಟು ಆಗಲಿ ಪಾಲಿಸುವುದಲ್ಲ. ಅದು ನಿಮ್ಮ ನಮ್ಮ ಒಳ್ಳೆಯದಕ್ಕಾಗಿಯೆ ಕಾನೂನುಗಳಿದ್ದು, ಎಲ್ಲರ ಸುರಕ್ಷತೆಗಾಗಿ ಕಾನೂನನ್ನು ಪಾಲಿಸುವುದು ಸೂಕ್ತ ಎಂದರು.
ತಂತ್ರಜ್ಞಾನ ಬೆಳೆದಿದ್ದು ಶಾಲಾ ಕಾಲೇಜು ಹಂತದ ಮಕ್ಕಳ ಬೆರಳ ತುದಿಯಲ್ಲೇ ಎಲ್ಲ ಮಾಹಿತಿಗಳೂ ಸಿಗುತ್ತಿದ್ದು, ಇದು ತಮ್ಮ ಜ್ಞಾನದ ಬೆಳವಣಿಗೆಗೆಎಷ್ಟು ಸಹಕಾರಿಯೋ ಹಾದಿ ತಪ್ಪಲು ಕೂಡ ಅಷ್ಟೇ ಕಾರಣವಾಗುತ್ತಿದೆ. ವಿಜ್ಞಾನ ತಂತ್ರಜ್ಞಾನವನ್ನು ವಿದ್ಯಾರ್ಜನೆಗೆ ಬಳಸಿಕೊಂಡವರು ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಏರಿದ್ದರೆ, ಅದನ್ನು ದುರ್ಬಳಕೆ ಮಾಡಿಕೊಂಡವರು ತಪ್ಪು ಮಾಡಿ ಕಾನೂನಿನ ಕುಣಿಕೆಗೆ ಸಿಲುಕಿ ನಲಗುತ್ತಿದ್ದಾರೆ ಎಂದು ಹೇಳಿದರು.
ಎಲ್ಲಿಯೆ ಆಗಲಿ ಲೈಂಗಿಕ ದೌರ್ಜನ್ಯಗಳು ನಡೆದ ತಕ್ಷಣ ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡುವ ಕೆಲಸ ಮೊದಲು ಮಾಡಿ. ಇದರಿಂದ ಸಂತ್ರಸ್ಥರಿಗೆನ್ಯಾಯ ಸಿಗುವುದರ ಜತೆಗೆ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಎಎಸ್ಸೈ ಕೃಷ್ಣಪ್ಪ ಮಾತನಾಡಿ, ೧೮ ವರ್ಷದೊಳಗಿನ ಯಾರೇ ಆಗಲಿ ಅಂಗಡಿಗಳಲ್ಲಿ ಬೀಡಿ ಸಿಗರೇಟ್ ಗುಟ್ಕಾದಂತ ವಸ್ತುಗಳನ್ನು ಮಾರಾಟ ಮಾಡುವುದಾಗಲಿ, ಖರೀದಿಸುವುದಾಗಲಿ ಕಾನೂನು ಪ್ರಕಾರ ತಪ್ಪು. ಯಾರೇ ಅಪರಿಚಿತರು ಕರೆದಾಗ ಹೋಗುವುದು, ಅವರೊಂದಿಗೆ ವ್ಯವಹರಿಸುವುದು ತಪ್ಪು. ಎಟಿಎಂ ಬಳಕೆಯನ್ನು ತಿಳಿದುಕೊಳ್ಳುವುದು ಅಗತ್ಯ ಎಂದು ತಿಳಿಸಿದರು.
ವ್ಯವಹಾರ ಹಾಗೂ ಗಮನವನ್ನೆ ಬೇರೆಡೆ ಸೆಳೆದು ನಡೆಸುವ ಕಳ್ಳತನದ ಬಗ್ಗೆ ಇಲಾಖೆಯಿಂದ ಪ್ರಾತ್ಯಕ್ಷಿಕೆಗಳನ್ನು ನಡೆಸಿ ನಾಗರಿಕರು ಜಾಗರೂಕರಾಗಿರುವಂತೆ ಜಾಥಾ ನಡೆಸಿದರು.
ಈ ಸಂದರ್ಭದಲ್ಲಿ ನಗರಠಾಣೆಯ ಎಎಸ್ಸೈ ವೆಂಕಟರಾಮ್, ಮುಖ್ಯಪೇದೆ ರೆಡ್ಡಿ, ಪೇದೆಗಳಾದ ಸಂತೋಷ, ಗೋವಿಂದ, ವಸಂತ್ ಹಾಜರಿದ್ದರು.

ನಿವೇಶನ ಹೊಂದಿರುವವರಿಗೆ ಸ್ವಂತ ಮನೆಯನ್ನು ನಿರ್ಮಿಸಿಕೊಡಲಾಗುವುದು – ಶಾಸಕ ವಿ.ಮುನಿಯಪ್ಪ

0

ನಗರದ ೧೭ನೇ ವಾರ್ಡಿನ ರಹಮತ್ ನಗರದಲ್ಲಿ ನಗರಸಭೆ ಹಾಗೂ ಕೊಳಚೆ ಪ್ರದೇಶ ಅಭಿವೃದ್ದಿ ಮಂಡಳಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಲ್ಲರಿಗೂ ಸೂರು ಯೋಜನೆಯಡಿ ನಿವೇಶನ ಹೊಂದಿರುವ, ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಡಲು ನಿವೇಶನ ಹಸ್ತಾಂತರ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ನಗರ ವ್ಯಾಪ್ತಿಯಲ್ಲಿ ಮನೆ ಇಲ್ಲದೆ ನಿವೇಶನ ಹೊಂದಿರುವವರಿಗೆ ಸ್ವಂತ ಮನೆಯನ್ನು ನಿರ್ಮಿಸಿಕೊಡಲಾಗುವುದು ಎಂದು ಅವರು ತಿಳಿಸಿದರು.
ನಗರದಲ್ಲಿ ಮೊದಲ ಹಂತದಲ್ಲಿ ೫೦೦ ಮಂದಿ ಮನೆ ಇಲ್ಲದ ನಿವೇಶನ ಹೊಂದಿರುವವರಿಗೆ, ಪ್ರತಿಯೊಬ್ಬರಿಗೂ ೪.೬ ಲಕ್ಷ ರೂ.ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡಲಾಗುವುದು. ನಂತರದ ಅವಧಿಯಲ್ಲಿ ಉಳಿದ ಎಲ್ಲರಿಗೂ ಮನೆಗಳನ್ನು ಕಟ್ಟಿ ಕೊಡಲಾಗುವುದು ಎಂದರು.
ಮನೆ ಪಡೆಯುವ ಫಲಾನುಭವಿಗಳಲ್ಲಿ ಸಾಮಾನ್ಯ ವರ್ಗದವರು ಶೇ ೧೫ರಷ್ಟು, ಪರಿಶಿಷ್ಟ ಜಾತಿ ಪಂಗಡದವರು ಶೇ ೧೦ರಷ್ಟು ವಂತಿಗೆಯನ್ನು ಪಾವತಿಸಬೇಕಾಗುತ್ತದೆ. ಕೇಂದ್ರ ಸರ್ಕಾರ ೧.೫ ಲಕ್ಷ ರೂ ಹಣ ನೀಡಿದರೆ ಇನ್ನುಳಿದ ಹಣವನ್ನು ರಾಜ್ಯ ಸರ್ಕಾರ ಹೊಂದಿಸಲಿದೆ ಎಂದು ಹೇಳಿದರು.
ನಗರದ ಹೊರವಲಯದಲ್ಲಿ ಈಗಾಗಲೆ ೨೫ ಎಕರೆ ಜಮೀನನ್ನು ಖರೀಸಿದ್ದು, ಇನ್ನೂ ೧೫ ಎಕರೆಯಷ್ಟು ಜಮೀನನ್ನು ಖರೀದಿಸಿ ನಿವೇಶನ ಹಂಚಲಾಗುವುದು. ಇದರಿಂದ ಎಲ್ಲರೂ ಸ್ವಂತ ಮನೆ ಹೊಂದಿ ಇತರರಂತೆ ಸ್ವಾಭಿಮಾನದ ಬದುಕು ನಡೆಸಲು ಸಾಧ್ಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ೧೭ನೇ ವಾರ್ಡಿನ ಹಲವರಿಗೆ ಮನೆ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.
ಕೊಳಚೆ ನಿರ್ಮೂಲನಾ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರ ಹನುಮಂತರೆಡ್ಡಿ, ನಗರಸಭೆ ಪೌರಾಯುಕ್ತ ಚಲಪತಿ, ನಗರಸಭೆ ಸದಸ್ಯರಾದ ಮುಷ್ಠರಿತನ್ವೀರ್, ಚಿಕ್ಕಮುನಿಯಪ್ಪ, ಬಾಲಕೃಷ್ಣ ಹಾಜರಿದ್ದರು.

ಎಚ್.ಕ್ರಾಸ್ ಸೀತಾರಾಮಾಂಜನೇಯ ಬ್ರಹ್ಮರಥೋತ್ಸವ

0

ತಾಲ್ಲೂಕಿನ ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಚ್.ಕ್ರಾಸ್ ನಲ್ಲಿರುವ ಪುರಾಣ ಪ್ರಸಿದ್ಧ ಸೀತಾರಾಮಾಂಜನೇಯ ದೇವಾಲಯದಲ್ಲಿ ಬ್ರಹ್ಮರಥೋತ್ಸವವನ್ನು ವಿಜೃಂಭಣೆಯಿಂದ ಶುಕ್ರವಾರ ನೆರವೇರಿಸಲಾಯಿತು.
ಬೆಳಗಿನಿಂದಲೇ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಬ್ರಹ್ಮರಥೋತ್ಸವಕ್ಕೆ ಸಂಸದ ಕೆ.ಎಚ್.ಮುನಿಯಪ್ಪ ಮತ್ತು ಶಾಸಕ ವಿ.ಮುನಿಯಪ್ಪ ಚಾಲನೆ ನೀಡಿದರು.
ರಥೋತ್ಸವ ಅಂಗವಾಗಿ ಧ್ವಜಾರೋಹಣ, ಅಲಂಕಾರ ಸೇವೆ, ಪ್ರಾಕಾರೋತ್ಸವ, ವಾಸುದೇವ ಪುಣ್ಯಾಹ ಅಂಕುರಾರ್ಪಣೆ, ರಕ್ಷಾಬಂಧನ, ಹನುಮಂತೋತ್ಸವ, ಮಹಾಭಿಷೇಕ, ಪಲ್ಲಕ್ಕಿ ಉತ್ಸವ, ವಿದ್ಯುತ್ ದೀಪಾಲಂಕಾರ, ಶಯನೋತ್ಸವ, ದೇವರ ಪೂಜೆ, ಚಂದ್ರಪ್ರಭಾ, ಗರುಡೋತ್ಸವ, ಸೇರಿದಂತೆ ಹಲವು ಪೂಜಾ ವಿಧಾನಗಳನ್ನು ನೆರವೇರಿಸಲಾಯಿತು. ಸೀತಾರಾಮಾಂಜನೇಯಸ್ವಾಮಿ ದೇವಾಲಯ, ಸಪ್ಪಲಮ್ಮ ದೇವಾಲಯ ಮತ್ತು ಶನಿಮಹಾತ್ಮಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ಏರ್ಪಡಿಸಿದ್ದು ಭಕ್ತರು ಭಾಗವಹಿಸಿದ್ದರು.
ದೇವರನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ವಿವಿಧ ತಿನಿಸುಗಳ, ಆಟಿಕೆಗಳ, ಗೃಹೋಪಯೋಗಿ ವಸ್ತುಗಳ ಸಾಲು ಸಾಲು ಅಂಗಡಿಗಳಿದ್ದು, ಜನರು ಬತ್ತಾಸು, ಬುರುಗು, ಕಡ್ಲೇಬೀಜವನ್ನು ಕೊಂಡು ತಿನ್ನುತ್ತಿದ್ದುದು ಸಹಜವಾಗಿತ್ತು.
ಬರಗಾಲದ ಛಾಯೆ ರಥೋತ್ಸವದ ಮೇಲೂ ಬೀರಿದ್ದು ಕಂಡುಬಂದಿತು. ಮೇವು ಮತ್ತು ನೀರಿನ ಅಭಾವದಿಂದ ಈ ಬಾರಿ ರಾಸುಗಳನ್ನು ಕರೆತಂದಿರಲಿಲ್ಲ. ರಾಸುಗಳ ಸುಂಕಕ್ಕೆ ಪಂಚಾಯಿತಿ ವತಿಯಿಂದ ರಿಯಾಯಿತಿ ನೀಡಿದ್ದರೂ ಸಹ ರಾಸುಗಳಿಲ್ಲದೆ ರಥೋತ್ಸವ ಕಳೆಕಳೆದುಕೊಂಡಿತ್ತು. ಆದರೆ ರಾಸುಗಳಿಗೆ ಸಂಬಂಧಿಸಿದ ವಿವಿಧ ವಸ್ತುಗಳನ್ನು ಕೂಡ ಜಾತ್ರೆಯಲ್ಲಿ ಮಾರಾಟಕ್ಕಿಟ್ಟಿದ್ದು, ರೈತರು ಕೊಂಡುಕೊಳ್ಳಲು ಅನುಕೂಲವಾಗಿತ್ತು.

ಅನಾಥ ವೃದ್ಧೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

0

ಸುಮಾರು ೮೦ ವರ್ಷದ ವಯೋವೃದ್ಧ ಮಹಿಳೆಯನ್ನು ಅನಾಥವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಜ್ವರದಿಂದ ಬಳಲುತ್ತಿದ್ದ ವೃದ್ಧೆ ಫಾತೀಮಾ ಅವರಿಗೆ ಕಳೆದ ನಾಲ್ಕು ದಿನಗಳಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ‌ ನೀಡಲಾಗುತ್ತಿದೆ. ನಗರದ ರಹಮತ್ ನಗರದಲ್ಲಿ ಮಗಳೊಂದಿಗೆ ವಾಸಿಸುತ್ತಿದ್ದ ಈಕೆಯನ್ನು ಪೋಷಿಸುತ್ತಿದ್ದ ಮಗಳು ಸಹ ಇಹಲೋಕ ತ್ಯಜಿಸಿದ್ದಾಳೆ. ಈಗ ತನಗೆ ದಿಕ್ಕಿಲ್ಲದಂತಾಗಿದೆ ಎನ್ನುವ ಈಕೆ ಕಣ್ಣೀರು ಹಾಕಿ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾಳೆ.
“ಈಕೆಗೆ ಗಂಡು ಮಕ್ಕಳು ಇಲ್ಲ, ಗಂಡ ಸಹ ಸತ್ತು ಹೋಗಿದ್ದಾರೆ. ಇನ್ನೂ ಪೋಷಣೆ ಮಾಡುತ್ತಿದ್ದ ಮಗಳು ಸಹ ಇಲ್ಲವಾಗಿದ್ದಾಳೆ ಎಂದು ಈ ವೃದ್ಧ ಮಹಿಳೆ ತಿಳಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ನಾವು ಈಕೆಗೆ ಚಿಕಿತ್ಸೆ ಕೊಡಿಸುತ್ತಿದ್ದೇವೆ. ನಗರಸಭೆ ಆಯುಕ್ತರು ಬಂದು ನೋಡಿ ಮಾಹಿತಿ ಪಡೆದಿದ್ದಾರೆ. ಈಕೆಯ ಸಂಬಂಧಿಕರು ಯಾರಾದರೂ ಇದ್ದಾರೆಯೇ ಪತ್ತೆಹಚ್ಚಬೇಕಿದೆ. ಅದುವರೆಗೂ ನಾವು ನೋಡಿಕೊಳ್ಳುತ್ತೇವೆ” ಎಂದು ಆರೋಗ್ಯಾಧಿಕಾರಿ ಡಾ.ಅನಿಲ್ ಕುಮಾರ್ ತಿಳಿಸಿದ್ದಾರೆ.

ರೇಷ್ಮೆ ನೂಲು ಬಿಚ್ಚಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಸಮಾವೇಶ

0

ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಗುರುವಾರ ಶಿಡ್ಲಘಟ್ಟ ತಾಲ್ಲೂಕು ರೇಷ್ಮೆ ನೂಲು ಬಿಚ್ಚಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಸಮಾವೇಶ ಹಾಗೂ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿದರು.
ವಿದೇಶದಿಂದ ಆಮದಾಗುವ ರೇಷ್ಮೆಗೆ ಕಡಿವಾಣ ಹಾಕಿದಾಗ ಮಾತ್ರ ನಮ್ಮ ರೇಷ್ಮೆಗೆ ಬೆಲೆ ಬರುತ್ತದೆ. ರೇಷ್ಮೆಯನ್ನು ನಂಬಿದವರ ಜೀವನ ಸುಧಾರಣೆಯಾಗಲು ಆಮದು ರೇಷ್ಮೆಗೆ ಸುಂಕ ಹಾಕಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಯುಪಿಎ ಸರ್ಕಾರದ ಅವಧಿಯಲ್ಲಿ ರೇಷ್ಮೆ ಮೇಲಿನ ಆಮದು ಸುಂಕವನ್ನು ಶೇ ೧೦ ರಿಂದ ೧೫ ಕ್ಕೆ ಏರಿಸಿ ರೇಷ್ಮೆ ಉದ್ಯಮಕ್ಕೆ ಚೇತರಿಕೆಯನ್ನು ನೀಡಲಾಗಿತ್ತು. ಆದರೆ ಪ್ರಧಾನಿ ಮೋದಿಯವರು ಬೆನಾರಸಿನ ಮಗ್ಗದವರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಆಮದು ಸುಂಕವನ್ನು ಶೇ ೧೦ಕ್ಕೆ ಇಳಿಸಿದ್ದರಿಂದ ಅಸ್ಸಾಂ, ಪಶ್ಚಿಮ ಬಂಗಾಲ, ತಮಿಳುನಾಡು, ಆಂಧ್ರಪ್ರದೇಶ ಮತ್ತು ರಾಜ್ಯದ ಲಕ್ಷಾಂತರ ರೇಷ್ಮೆಯ ಅವಲಂಬಿತರು ಸಂಕಷ್ಟಕ್ಕೆ ಗುರಿಯಾದರು ಎಂದರು.
ರೇಷ್ಮೆ ನೂಲು ಬಿಚ್ಚಾಣಿಕೆದಾರರು ತಾವು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ತಿಳಿಸಿದ್ದಾರೆ. ಅವುಗಳನ್ನು ಸರಿಪಡಿಸಲು ಮುಖ್ಯಮಂತ್ರಿಗಳೊಂದಿಗೂ ಚರ್ಚಿಸುತ್ತೇನೆ. ಪ್ರೋತ್ಸಾಹಧನ ಕೊಡಿಸಲು ಪ್ರಯತ್ನಿಸುತ್ತೇನೆ. ರೇಷ್ಮೆಗೆ ಉತ್ತಮ ಬೆಲೆ ಸಿಕ್ಕರೆ ರೇಷ್ಮೆ ಬಿಚ್ಚಾಣಿಕೆದಾರರು ಅಭಿವೃದ್ಧಿ ಹೊಂದುವರು. ಇದರಿಂದ ರೈತರು ತರುವ ರೇಷ್ಮೆ ಗೂಡಿಗೂ ಒಳ್ಳೆಯ ಬೆಲೆ ಬರುತ್ತದೆ. ಅಧಿವೇಶನ ಮುಗಿದ ನಂತರ ರೀಲರುಗಳ ನಿಯೋಗವನ್ನು ಸಚಿವರ ಬಳಿ ಕರೆದೊಯ್ಯುತ್ತೇನೆ. ಸಮಸ್ಯೆಗಳನ್ನು ಬಗೆಹರಿಸಲು ಎಲ್ಲರೂ ಕೂಡಿ ಪ್ರಯತ್ನಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ರೇಷ್ಮೆ ನೂಲು ಬಿಚ್ಚಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ತಮ್ಮ ವಿವಿಧ ಬೇಡಿಕೆಗಳ ಪಟ್ಟಿ ಇರುವ ಮನವಿಯನ್ನು ಸಲ್ಲಿಸಿದರು ರೇಷ್ಮೆ ನೂಲನ್ನು ಕೆ.ಎಸ್.ಎಂ.ಬಿ ಮೂಲಕ ಒತ್ತೆ ಸಾಲ ಇಟ್ಟುಕೊಳ್ಳಲು ಅಗತ್ಯ ಬಂಡವಾಳವನ್ನು ಕೆ.ಎಸ್.ಎಂ.ಬಿ ಗೆ ಕೊಡಿ. ರೀಲರುಗಳ ಹಿತದೃಷ್ಟಿಯಿಂದ ಪ್ರೋತ್ಸಾಹಧನವನ್ನು ನೀಡಿ. ಇ ಹರಾಜನ್ನು ಉನ್ನತೀಕರಿಸಿ ಮುಂತಾದ ಬೇಡಿಕೆಗಳನ್ನು ಈಡೇರಿಸಿ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ನೆರವಾಗುವಂತೆ ಮನವಿಯನ್ನು ಸಲ್ಲಿಸಿದರು.
ತಾಲ್ಲೂಕು ರೇಷ್ಮೆ ನೂಲು ಬಿಚ್ಚಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅನ್ಸರ್ ಖಾನ್, ರಾಜ್ಯ ಘಟಕದ ಅಧ್ಯಕ್ಷ ವಹೀದ್ ಪಾಷ, ಗೌರವಾಧ್ಯಕ್ಷ ಗುರುಸ್ವಾಮಿ, ನಗರಸಭೆ ಅಧ್ಯಕ್ಷ ಅಫ್ಸರ್ ಪಾಷ, ಜಂಟಿ ನಿರ್ದೇಶಕ ಶಶಿಕುಮಾರ್, ರೇಷ್ಮೆ ಇಲಾಖೆಯ ಉಪನಿರ್ದೇಶಕರಾದ ಬೈರಾರೆಡ್ಡಿ, ಸುಭಾಷ್ ಬಿ ಸಾತೇನಹಳ್ಳಿ, ಲಕ್ಷ್ಮೀ ಸಿಲ್ಕ್ ನ ಎ.ರಮೇಶ್, ಕೇಂದ್ರ ರೇಷ್ಮೆ ಮಂಡಳಿಯ ತಿಮ್ಮಾರೆಡ್ಡಿ, ಸಹಾಯಕ ನಿರ್ದೇಶಕ ನರಸಿಂಹಮೂರ್ತಿ, ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ಮೊಹಮ್ಮದ್ ಅನ್ವರ್, ಕೆ.ಆನಂದ್ ಕುಮಾರ್, ಎಸ್.ಸಮೀವುಲ್ಲ, ಗುಡಿಹಳ್ಳಿ ನಾರಾಯಣಸ್ವಾಮಿ, ಎಸ್.ಎಂ.ನಾರಾಯಣಸ್ವಾಮಿ, ಬಾಬಾಸಾಬ್, ಮುನಾವರ್ ಪಾಷ, ಜಿ.ರಹಮಾನ್ ಹಾಜರಿದ್ದರು.

ಐದು ವರ್ಷಗಳಲ್ಲಿ ಜಿಲ್ಲೆಯ ಪ್ರತಿಯೊಂದು ಕೆರೆಯಲ್ಲೂ ನೀರು ಸಂಗ್ರಹ – ಸಂಸದ ಕೆ.ಎಚ್.ಮುನಿಯಪ್ಪ

0

ನಗರದ ದಿಬ್ಬೂರಹಳ್ಳಿ ಬೈಪಾಸ್ ರಸ್ತೆಯಲ್ಲಿ ಬುಧವಾರ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಒಂದೂಕಾಲು ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಉಪಕಚೇರಿ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿದರು.
ಇನ್ನು ಐದು ವರ್ಷಗಳಲ್ಲಿ ಜಿಲ್ಲೆಯ ಪ್ರತಿಯೊಂದು ಕೆರೆಯಲ್ಲೂ ನೀರಿರುತ್ತದೆ. ಹದಿಮೂರು ಸಾವಿರ ಕೋಟಿ ರೂಗಳ ಎತ್ತಿನಹೊಳೆ ಯೋಜನೆ, ಒಂದು ಸಾವಿರದ ಮುನ್ನೂರು ಕೋಟಿ ರೂಗಳ ಕೆ.ಸಿ.ವ್ಯಾಲಿ ಹಾಗೂ ಒಂದು ಸಾವಿರ ಕೋಟಿ ರೂಗಳ ಹೆಬ್ಬಾಳ ನಾಗವಾರ ಯೋಜನೆ ಫಲಪ್ರದವಾಗಲಿವೆ ಎಂದು ಅವರು ತಿಳಿಸಿದರು.
ಕೋಚಿಮುಲ್ ನ ಕ್ರಿಯಾಶೀಲ ಕಾರ್ಯಕಾರಿ ಸಮಿತಿ ಹಲವು ಮೈಲಿಗಲ್ಲುಗಳನ್ನು ಸಾಧಿಸಿ ರೈತರ ಆಶೋತ್ತರಗಳನ್ನು ನೆರೆವೇರಿಸುತ್ತಿದೆ. ನೆರೆಯ ಆಂಧ್ರ ರಾಜ್ಯದಲ್ಲಿ ನಮ್ಮ ಹಾಲನ್ನು ಮಾರಾಟ ಮಾಡುವುದು, ಕೋಲಾರದಲ್ಲಿ ಮತ್ತು ಚಿಕ್ಕಬಳ್ಳಾಪುರದಲ್ಲಿ ಮೆಗಾ ಡೈರಿಯ ನಿರ್ಮಾಣ, ಸಾದಲಿ ಬಳಿ ಫೀಡ್ ಪ್ಲಾಂಟ್ ಗೆ ಅನುಮೋದನೆ ಪಡೆದಿರುವುದು, ಹಾಲು ಉತ್ಪಾದಕರ ಹೆಣ್ಣುಮಕ್ಕಳಿಗೆಂದು ಯಲಹಂಕದಲ್ಲಿ ವಿದ್ಯಾರ್ಥಿನಿಲಯ ಸ್ಥಾಪನೆ ಮುಂತಾದ ಮಹತ್ವದ ಯೋಜನೆಗಳ ಮೂಲಕ ಹೈನುಗಾರರ ಬೆಳವಣಿಗೆಗೆ ಸಹಕರಿಸುತ್ತಿದೆ. ಕೋಚಿಮುಲ್ ಪ್ರತಿದಿನ ೧೫ ಲಕ್ಷ ಲೀಟರ್ ಹಾಲು ಸಂಗ್ರಹಿಸುವ ಗುರಿಯನ್ನು ಹೊಂದಲಿ. ಜಿಲ್ಲೆಯ ಕಟ್ಟಕಡೆಯ ಬಡವ ಕೂಡ ಮನೆಗೊಂದು ಹಸುವನ್ನು ಹೊಂದಿದ್ದು ಜೀವನ ನಿರ್ವಹಣೆ ಮಾಡಿಕೊಳ್ಳುವಂತೆ ಕೋಚಿಮುಲ್ ವ್ಯವಸ್ಥೆಯನ್ನು ಬಲಪಡಿಸಲಿ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.
ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಮಾತನಾಡಿ, ಕೋಲಾರದಲ್ಲಿ ೧೬೦ ಕೋಟಿ ರೂ ವೆಚ್ಚದಲ್ಲಿ ಗೋಲ್ಡನ್ ಡೈರಿ ನಿರ್ಮಾಣಕ್ಕೆ ಸರ್ವ ಸಿದ್ಧತೆಯನ್ನು ಮಾಡಲಾಗಿದೆ. ಇನ್ನು ಹದಿನೈದು ದಿನಗಳಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಬಳಿ ೨೫ ಎಕರೆ ಜಾಗದಲ್ಲಿ ಪಶು ಆಹಾರ ಘಟಕವನ್ನು ಮುಖ್ಯಮಂತ್ರಿಗಳು ಗುದ್ದಲಿ ಪೂಜೆ ನೆರವೇರಿಸುವರು. ಯಲಹಂಕದಲ್ಲಿ ೧೨ ಸಾವಿರ ಅಡಿ ಸ್ಥಳವನ್ನು ಸರ್ಕಾರದಿಂದ ಪಡೆದಿದ್ದು ಹೆಣ್ಣುಮಕ್ಕಳ ಹಾಸ್ಟೆಲ್ ನಿರ್ಮಿಸಲಾಗುತ್ತಿದೆ. ನಮ್ಮ ಹಾಲು ಸಂಗ್ರಹಣೆಗೆ ಸೂಕ್ತ ಮಾರುಕಟ್ಟೆಯನ್ನು ಹುಡುಕುವ ಮುಖ್ಯ ಪ್ರಯತ್ನದಲ್ಲಿ ಅಮರಾವತಿಯಲ್ಲಿ ನಂದಿನಿ ಹಾಲಿನ ಮಾರಾಟಕ್ಕೆ ವ್ಯವಸ್ಥೆಯನ್ನು ಮಾಡಿದ್ದೇವೆ ಎಂದು ಹೇಳಿದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸ್ವಂತ ಉಪಕಚೇರಿ ಕಟ್ಟಡ ಆಗಿರುವುದರಿಂದ ಹಲವು ಉಪಯೋಗಗಳಾಗುತ್ತವೆ. ಹಾಲು ಉತ್ಪಾದಕರಿಗೆ ನಿರಂತರವಾಗಿ ತರಬೇತಿ ನೀಡಬಹುದು ಹಾಗೂ ಹೈನುಗಾರಿಕೆ ಅಭಿವೃದ್ಧಿಯು ವೇಗ ಪಡೆಯಲಿದೆ. ಸಾದಲಿ ಬಳಿ ಪಶು ಆಹಾರ ಘಟಕವನ್ನು ೧೦೦ ಕೋಟಿ ವೆಚ್ಚದಲ್ಲಿ ನಿರ್ಮಿಸಲಿದ್ದು ಸುಮಾರು ೪೦೦ ಮಂದಿಗೆ ಉದ್ಯೋಗ ದೊರಕಲಿದೆ ಎಂದರು.
ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜು ಮಾತನಾಡಿ, ಕೋಲಾರ ಜಿಲ್ಲೆಯ ಮಾಲೂರು ಹೊರತುಪಡಿಸಿದರೆ ಶಿಡ್ಲಘಟ್ಟದಲ್ಲಿ ಸುಸಜ್ಜಿತವಾದ ಶಿಬಿರ ಕ್ಚೇರಿ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ತಾಲ್ಲೂಕು ಕೇಂದ್ರಗಳಲ್ಲೂ ಶಿಬಿರ ಕಚೇರಿಯನ್ನು ನಿರ್ಮಿಸಲಾಗುವುದು. ಇದರಿಂದ ವೈದ್ಯಕೀಯ ಮತ್ತು ತಾಂತ್ರಿಕ ಸೌಲಭ್ಯ ಒದಗಿಸಲು ಮತ್ತು ತರಬೇತಿಗೆ ಅನುಕೂಲವಾಗುತ್ತದೆ. ಈಗಿನ ಬರಪರಿಸ್ಥಿತಿಯಲ್ಲಿ ಹಾಲು ಉತ್ಪಾದನೆ ಕುಂಠಿತವಾಗದಂತೆ ತಡೆಯಲು ಸಂಸದರು ಮತ್ತು ಶಾಸಕರು ಮುಖ್ಯಮಂತ್ರಿಗಳ ಮೂಲಕ ಪಶು ಆಹಾರಕ್ಕೆ ಸಹಾಯಧನವನ್ನು ಕೊಡಿಸಬೇಕು ಎಂದು ಕೋರಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಸದಸ್ಯ ಸತೀಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ನಗರಸಭೆ ಅಧ್ಯಕ್ಷ ಅಫ್ಸರ್ ಪಾಷ, ಕೋಮುಲ್ ಆಡಳಿತ ಮಂಡಳಿಯ ನಿರ್ದೇಶಕರಾದ ಕೆ.ಅಶ್ವತ್ಥರೆಡ್ಡಿ, ಜಯಸಿಂಹಕೃಷ್ಣಪ್ಪ, ಜೆ.ಕಾಂತರಾಜು, ಆರ್.ರಾಮಕೃಷ್ಣೇಗೌಡ, ವೈ.ಬಿ.ಅಶ್ವತ್ಥನಾರಾಯಣ, ಆರ್.ಆರ್.ರಾಜೇಂದ್ರಗೌಡ, ಎಂ.ಬೈರಾರೆಡ್ಡಿ, ಕೆ.ಪ್ರಭಾಕರರೆಡ್ಡಿ, ಸುಬ್ಬಾರೆಡ್ಡಿ, ಸುನಂದಮ್ಮ, ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಸ್ವಾಮಿ, ಪ್ರಧಾನ ವ್ಯವಸ್ಥಾಪಕ ಡಿ.ಎಂ.ಚಂದ್ರಪ್ಪ, ವ್ಯವಸ್ಥಾಪಕರಾದ ಡಾ.ವಿ.ಎಂ.ರಾಜು, ಡಾ.ಕೆ.ರಾಘವನ್, ಕೆ.ಎನ್.ಗೋಪಾಲಮೂರ್ತಿ, ಉಪವ್ಯವಸ್ಥಾಪಕ ಡಾ.ಬಿ.ವಿ.ಚಂದ್ರಶೇಖರ್, ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಚಂದ್ರೇಗೌಡ, ಅಪ್ಪಾಜಿಗೌಡ ಹಾಜರಿದ್ದರು.

ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮ

0

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೃಷಿ ಇಲಾಖೆಯಿಂದ ಆತ್ಮಾ ಯೋಜನೆಯಡಿ ಬುಧವಾರ ಏರ್ಪಡಿಸಲಾಗಿದ್ದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಿ ವೆಂಕಟೇಶ್ ಮಾತನಾಡಿದರು.
ಮಣ್ಣಿನ ಫಲವತ್ತತೆಯನ್ನು ಆಧರಿಸಿ ಭೂಮಿಗೆ ಪೋಷಕಾಂಶಗಳನ್ನು ನೀಡುವ ಮೂಲಕ ರೈತರು ಅಧಿಕ ಇಳುವರಿ ಪಡೆಯಬಹುದು ಎಂದು ಅವರು ಹೇಳಿದರು.
ಇತ್ತೀಚೆಗೆ ದಿನೇ ದಿನೇ ಮಣ್ಣು ವಿವಿಧ ರೀತಿಯ ಮಾಲಿನ್ಯದಿಂದ ಕಲುಷಿತಗೊಳ್ಳುತ್ತಿದೆ. ಮಣ್ಣಿನ ಸವಕಳಿ ಹೆಚ್ಚಾದಂತೆ ಮಣ್ಣಿನಲ್ಲಿರಬೇಕಾದ ಪೋಷಕಾಂಶ ಮಟ್ಟ ಕಡಿಮೆಯಾಗುತ್ತದೆ. ಮಣ್ಣಿನ ಗುಣಮಟ್ಟದಲ್ಲಿ ವ್ಯತ್ಯಾಸವುಂಟಾದರೆ ಅದು ನಾವು ಸೇವಿಸುವ ಆಹಾರ, ನೀರು, ಗಾಳಿಯ ಮೇಲೆ ಪರಿಣಾಮ ಬೀರಿ ಪರಿಸರ ಹಾಳಾಗುತ್ತದೆ. ಆಧ್ದರಿಂದ ಕಾಲ ಕಾಲಕ್ಕೆ ಮಣ್ಣಿನ ಪರೀಕ್ಷೆ ಮಾಡಿಸುವ ಮೂಲಕ ಗುಣಮಟ್ಟದ ಬೆಳೆ ಬೆಳೆದು ರೈತರು ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ಮಣ್ಣು ವಿಜ್ಞಾನಿ ಡಾ.ನಳಿನಿ ಮಾತನಾಡಿ, ರೈತರು ಬೆಳೆ ಬೆಳೆಯುವ ಅವಸರದಲ್ಲಿ ಸಿಕ್ಕ ಸಿಕ್ಕ ಗೊಬ್ಬರಗಳನ್ನು ಭೂಮಿಗೆ ಹಾಕುವುದರಿಂದ ಮಣ್ಣಿನಲ್ಲಿರುವ ಸತ್ವಾಂಶ ನಶಿಸುತ್ತದೆ. ಹಾಗಾಗಿ ಮಣ್ಣಿನ ಆರೋಗ್ಯ ಕಾಪಾಡಲು ಬೇಕಾದ ಅಗತ್ಯ ಕ್ರಮಗಳನ್ನು ರೈತರು ಅನುಸರಿಸಬೇಕು ಎಂದರು. ರೈತರು ಕಡಿಮೆ ವೆಚ್ಚದಲ್ಲಿ ಕೃಷಿ ಮಾಡುವ ಮೂಲಕ ಹೆಚ್ಚಿನ ಲಾಭ ಪಡೆಯಬೇಕು. ಬುದ್ಧಿವಂತಿಕೆಯಿಂದ ತಾಂತ್ರಿಕತೆಯನ್ನು ಬಳಸಿಕೊಂಡು ಗುಣಮಟ್ಟದ ಕೃಷಿ ಮಾಡಿದಾಗ ಮಾತ್ರ ಕೃಷಿ ಕ್ಷೇತ್ರ ಲಾಭದಾಯಕವಾಗುತ್ತದೆ ಎಂದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಾಲತೇಶ್ ಮಾತನಾಡಿ, ಪ್ರತಿಯೊಬ್ಬ ರೈತರೂ ಮಣ್ಣಿನ ಪರೀಕ್ಷೆಯನ್ನು ಖಡ್ಡಾಯವಾಗಿ ಮಾಡಿಸಬೇಕು. ಮಣ್ಣಿನ ಪರೀಕ್ಷೆಯ ಅಂಕಿ ಅಂಶಗಳನ್ನು ಗಣಕೀಕೃತಗೊಳಿಸಲಾಗುತ್ತದೆ. ಇದರಿಂದ ರೈತರು ಯಾವ ಬೆಳೆ ಬೆಳೆಯಬಹುದು, ಅದಕ್ಕೆ ಬೇಕಾಗುವ ಪೌಷ್ಠಿಕಾಂಶಗಳೇನು ಮತ್ತು ಕಾಲಾನುಕ್ರಮದಲ್ಲಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ರೈತರು ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ಹಲವು ರೈತರ ಜಮೀನಿನ ಮಣ್ಣಿನ ಪರೀಕ್ಷೆ ಮಾಡಿಸಿರುವ ಮಣ್ಣು ಆರೋಗ್ಯ ಚೀಟಿ ವಿತರಿಸಲಾಯಿತು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಕೃಷಿ ಅಧಿಕಾರಿಗಳಾದ ಶ್ರೀನಿವಾಸ್, ಡಿ.ಟಿ.ಗೋಪಾಲರಾವ್, ಆತ್ಮಾ ವಿಭಾಗದ ತಾಂತ್ರಿಕ ವ್ಯವಸ್ಥಾಪಕ ಅಶ್ವತ್ಥನಾರಾಯಣ, ರೈತ ಮುಖಂಡರಾದ ವೆಂಕಟಸ್ವಾಮಿರೆಡ್ಡಿ, ಬೆಳ್ಳೂಟಿ ಕೆಂಪಣ್ಣ, ತಾದೂರು ಮಂಜುನಾಥ್, ಮುನಿನಂಜಪ್ಪ, ಆತ್ಮಾ ಸಿಬ್ಬಂದಿ ಹಾಗೂ ಅನುವುಗಾರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಜಿ.ಪಿ.ರಾಜರತ್ನಂ ಅವರ ಜನ್ಮದಿನ ಕಾರ್ಯಕ್ರಮ

0

ಹಂಡಿಗನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಚುಟುಕು ಕವಿ, ಶಿಶುಗೀತೆಗಳ ಕವಿ ಮತ್ತು ಸಾಹಿತಿ ಜಿ.ಪಿ.ರಾಜರತ್ನಂ ಅವರ ಜನ್ಮದಿನದ ಪ್ರಯುಕ್ತ ನಡೆಸಿದ ಕಾರ್ಯಕ್ರಮದಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಜಿ.ಪಿ. ರಾಜರತ್ನಂ ಅವರು ನಮಗೆ ನಾವು ಚಿಕ್ಕವರಿದ್ದಾಗ ಉಣಬಡಿಸಿದ್ದ “ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ”, “ಒಂದು ಎರಡು ಬಾಳೆಲೆ ಹರಡು”, “ಹತ್ತು ಹತ್ತು ಇಪ್ಪತ್ತು ತೋಟಕೆ ಹೋದನು ಸಂಪತ್ತು”, “ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ”, “ರೊಟ್ಟಿ ಅಂಗಡಿ ಕಿಟ್ಟಪ್ಪ, ನನಗೊಂದು ರೊಟ್ಟಿ ತಟ್ಟಪ್ಪ”… ಈ ಪದ್ಯಗಳು ಈಗಲೂ ಅಷ್ಟೇ ಮುದ ನೀಡುತ್ತವೆ ಎಂದು ಅವರು ತಿಳಿಸಿದರು.
ರಾಜರತ್ನಂ ಎಳೆಯ ಮಕ್ಕಳಿಗೆ ಅಗತ್ಯವಾದ ತಿಳಿಯಾದ ಸಾಹಿತ್ಯವನ್ನು ರಚಿಸಿಕೊಟ್ಟರು. ಬೆಳೆದವರ ಗಟ್ಟಿಹಲ್ಲಿಗೆ ತಕ್ಕುದಾದ ಪುಷ್ಟಿಕರ ವಿಚಾರದ ಉಂಡೆಗಳನ್ನು ಕಟ್ಟಿಕೊಟ್ಟರು. ಹಾಗೆಯೇ ದೊಡ್ಡವರ ಮೆಲುಕಿಗೆ ಚಿಂತನೆಯ ಗ್ರಾಸವನ್ನು ಒದಗಿಸಿದರು. ಅವರ ಮಹತ್ವಪೂರ್ಣ ಕಾರ್ಯವೆಂದರೆ ಸಾಹಿತ್ಯ ಪರಿಚಾರಿಕೆಯ ಕೆಲಸ. ತಮ್ಮದು ಬೇರೆಯವರದು ಎಂಬ ಭೇದ ಇಲ್ಲದೆ ಎಲ್ಲರ ಸಾಹಿತ್ಯವನ್ನೂ ಅವರು ಜನರಿಗೆ ಪರಿಚಯ ಮಾಡಿ ಕೊಟ್ಟರು.
ಶಿಕ್ಷಕ ರಾಮಾಂಜಿ ಮಾತನಾಡಿ, ರಾಜರತ್ನಂ ಅವರು “ಚೀನಾದೇಶದ ಬೌದ್ಧ ಯಾತ್ರಿಕರು”, “ಧರ್ಮದಾನಿ ಬುದ್ಧ”, “ಬುದ್ಧನ ಜಾತಕಗಳು” ಮುಂತಾದ ಬೌದ್ಧಕೃತಿಗಳನ್ನು ರಚಿಸಿದ್ದಾರೆ. “ಭಗವಾನ್ ಮಹಾವೀರ”, “ಶ್ರೀ ಗೋಮಟೇಶ್ವರ”, “ಮಹಾವೀರರ ಮಾತುಕತೆ”, “ಭಗವಾನ್ ಪಾರ್ಶ್ವನಾಥ”, “ಜೈನರ ಅರವತ್ತು ಮೂವರು” ಮೊದಲಾದ ಜೈನ ಸಾಹಿತ್ಯವನ್ನೂ ಸೃಷ್ಟಿಸಿದ್ದಾರೆ. ಕನ್ನಡದಲ್ಲಿ ಶಿಶುಸಾಹಿತ್ಯ ಪ್ರಕಾರವನ್ನು ರಾಜರತ್ನಂ ಪೋಷಿಸಿ ಬೆಳೆಸಿದರು. ಖಾದಿಯ ಉಡುಪು ಅವರ ಬಾಳಿನ ವ್ರತವೇ ಆಗಿತ್ತು. ನೆಹರೂ ಅವರು ಮಾಡಿದ ಒಂದು ಭಾಷಣ “ಗಂಡುಗೊಡಲಿ”ಯಂಥ ಉತ್ತಮ ವಿಶಿಷ್ಟ ನಾಟಕಕ್ಕೆ ಪ್ರೇರಕವಾಯಿತು ಎಂದು ವಿವರಿಸಿದರು.
ಶಾಲೆಯ ವಿದ್ಯಾರ್ಥಿಗಳಿಗೆ ರಾಜರತ್ನಂ ಅವರ ಕುರಿತಂತ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿಜೇತರಾದ ಎಚ್.ಎಂ.ರೋಹಿತ್ (ಪ್ರಥಮ), ಎಚ್.ಜಿ.ಯಶ್ವಂತ್ (ದ್ವಿತೀಯ), ಎಚ್.ಆರ್. ಮೈತ್ರಿ (ತೃತೀಯ) ಅವರಿಗೆ ಕಸಾಪ ವತಿಯಿಂದ ಪುಸ್ತಕ ಮತ್ತು ಪ್ರಮಾಣಪತ್ರವನ್ನು ವಿತರಿಸಲಾಯಿತು.
ಮುಖ್ಯಶಿಕ್ಷಕಿ ಎನ್.ಶೋಭಾ, ಶಿಕ್ಷಕರಾದ ಎಂ.ಜೆ.ಸುಜಾತ, ಕೆ.ಪದ್ಮಾವತಿ, ಪಿ.ವೆಂಕಟಲಕ್ಷ್ಮಮ್ಮ, ಕಸಾಪ ನಗರ ಘಟಕದ ಅಧ್ಯಕ್ಷ ಸಿ.ಎನ್.ಮುನಿರಾಜು, ಪಿ.ಡಿ.ಒ ಅಂಜನ್ ಕುಮಾರ್, ಕಾರ್ಯದರ್ಶಿ ಶ್ರೀನಿವಾಸ್, ಕರವಸೂಲಿಗಾರ ಶ್ರೀನಿವಾಸ್, ಮೋಹನ್, ಸೋಮಶೇಖರ್, ಅಂಬರೀಶ್ ಹಾಜರಿದ್ದರು.

ದೊಡ್ಡ ಚೊಕ್ಕಂಡಹಳ್ಳಿ ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ

0

ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಚೊಕ್ಕಂಡಹಳ್ಳಿ ಗ್ರಾಮದಲ್ಲಿ ನರೇಗಾ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಸುಮಾರು ೧೧ ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ ನೆರವೇರಿಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಮಹಾತ್ಮಗಾಂಧಿ ಉದ್ಯೋಗಖಾತ್ರಿ ಯೋಜನೆಯನ್ನು ಬಳಸಿಕೊಳ್ಳಿ ಎಂದು ಅವರು ತಿಳಿಸಿದರು.
ತಾಲ್ಲೂಕಿನಾದ್ಯಂತ ನರೇಗಾ ಯೋಜನೆಯಡಿ ಸುಸಜ್ಜಿತ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯ. ಈ ಯೋಜನೆಯನ್ನು ಮತ್ತಷ್ಟು ಬಳಸಿಕೊಂಡು ಗ್ರಾಮೀಣ ಭಾಗಗಳಲ್ಲಿ ಮೂಲಭೂತ ಸವಲತ್ತುಗಳನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾಕ್ಕಾಗಿ ಹಣ ಕ್ರೋಡಿಕರಿಸುತ್ತಿರುವ ಹಿನ್ನಲೆಯಲ್ಲಿ ವಿವಿಧ ಯೋಜನೆಗಳಿಗೆ ಅನುಧಾನ ಕಡಿಮೆ ಸಿಗುತ್ತಿದೆ. ಹಾಗಾಗಿ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌ರ ದೂರ ದೃಷ್ಟಿಯಿಂದ ಜಾರಿಗೆ ತಂದಂತಹ ಮಹಾತ್ಮ ಗಾಂಧಿ ಉದ್ಯೋಗಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಕೆಲಸಗಳನ್ನು ಮಾಡಿ ಎಲ್ಲರೂ ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ಗ್ರಾಮೀಣ ಭಾಗದಲ್ಲಿ ನಡೆಯುವ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡುವುದೂ ಸೇರಿದಂತೆ ಪಕ್ಷಾತೀತವಾಗಿ ಎಲ್ಲರೂ ಒಗ್ಗೂಡಿ ಗ್ರಾಮಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು. ಈಗಾಗಲೇ ಈ ಭಾಗದ ಕೆರೆಗಳಿಗೆ ನೀರು ಹರಿಸುವ ಕೆಸಿ ವ್ಯಾಲಿ ಯೋಜನೆ ಕಾಮಗಾರಿ ತ್ವರಿತವಾಗಿ ನಡೆಯುತ್ತಿದ್ದು ಈ ಯೋಜನೆಯಿಂದ ಬರುವ ನೀರನ್ನು ಶೇಖರಿಸಲು ಕೆರೆ, ರಾಜಕಾಲುವೆಗಳನ್ನು ತೆರವುಗೊಳಿಸಲು ಅಧಿಕಾರಿಗಳೂ ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಂಗಮಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ.ಮುನಿಯಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಆರ್.ಶ್ರೀನಿವಾಸ್, ನರೇಗಾ ಸಹಾಯಕ ನಿರ್ದೇಶಕ ಶ್ರೀನಾಥಗೌಡ, ಶಿಶು ಅಭಿವೃದ್ಧಿ ಅಧಿಕಾರಿ ಲಕ್ಷ್ಮಿದೇವಮ್ಮ, ಗ್ರಾಮ ಪಂಚಾಯಿತಿ ಸದಸ್ಯರಾದ ಗೌರಮ್ಮ, ಶ್ರೀನಿವಾಸ್, ಬಿ.ಎ.ಸುರೇಶ್, ಪಿಡಿಓ ಕೆ.ಮಧು, ರಾಮಕೃಷ್ಣಪ್ಪ, ಚನ್ನೇಗೌಡ, ಚನ್ನಕೃಷ್ಣಪ್ಪ, ಮಂಜುನಾಥ್, ಗುತ್ತಿಗೆದಾರ ರಾಜಶೇಖರ್, ಅಂಗನವಾಡಿ ಕಾರ್ಯಕರ್ತೆಯರಾದ ನಾಗರತ್ನ, ಜಯಂತಿ, ರತ್ನಮ್ಮ ಹಾಜರಿದ್ದರು.

ಸರ್ಕಾರಿ ಎನ್‌ಪಿಎಸ್‌ ನೌಕರರಿಂದ “ಬೆಳಗಾವಿ ಚಲೋ”

0

ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದ ವತಿಯಿಂದ ಡಿಸೆಂಬರ್ 12 ರಂದು “ಬೆಳಗಾವಿ ಚಲೋ” ಆಯೋಜಿಸಿದ್ದೇವೆ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸಲು ಸರ್ಕಾರ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಲಿ ಎಂಬುದು ನಮ್ಮ ಆಶಯವಾಗಿದೆ ಎಂದು ಎನ್‌ಪಿಎಸ್‌ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ವಿ.ಎನ್.ಗಜೇಂದ್ರ ತಿಳಿಸಿದರು.
ನಗರದಲ್ಲಿ ಸೋಮವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ನಾವು ಹಲವು ರೀತಿಯಲ್ಲಿ ಹಲವು ಬಾರಿ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಎಂದು ಹೋರಾಟ ನಡೆಸಿದ್ದೇವೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹಿಸಿ ‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಎಂಬ ಘೋಷ ವಾಕ್ಯದೊಂದಿಗೆ ರಾಜ್ಯದಾದ್ಯಂತ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದ ವತಿಯಿಂದ ೨೦,೨೫೪ ಯೂನಿಟ್ ರಕ್ತವನ್ನು ಸಂಗ್ರಹಿಸಲಾಗಿತ್ತು. ಮಾನ್ಯ ಮುಖ್ಯಮಂತ್ರಿಗಳು ಚುನಾವಣೆಯ ಮುನ್ನ ತಮ್ಮ ಪ್ರಣಾಳಿಕೆಯಲ್ಲಿ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸುವುದಾಗಿ ಭರವಸೆ ನೀಡಿದ್ದರು. ಕಳೆದ ಶೈಕ್ಷಣಿಕ ಸಮ್ಮೇಳನದ ವೇಳೆ ಮುಖ್ಯಮಂತ್ರಿಗಳು ಈ ಬಗ್ಗೆ ಸಕಾರಾತ್ಮಕವಾಗಿ ಆಶ್ವಾಸನೆ ನೀಡಿದ್ದಾರೆ.
ಆದರೆ ಈ ಬಗ್ಗೆ ಸಮಿತಿಯನ್ನು ರಚಿಸುವ ಬಗ್ಗೆ ಸುದ್ದಿ ತಿಳಿದು ಬಂದಿದೆ. ತಮಿಳುನಾಡಿನಲ್ಲಿ ಸಮಿತಿ ರಚಿಸಿ ಅದು ಉದ್ದೇಶ ಈಡೇರದೆ ವಿಫಲವಾಗಿದೆ. ಆದ್ದರಿಂದ ಈ ಚಳಿಗಾಲದ ಅಧಿವೇಶನದಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ರಾಜ್ಯದಾದ್ಯಂತ ಇರುವ ಎನ್‌ಪಿಎಸ್‌ ನೌಕರರೆಲ್ಲ ಬೆಳಗಾವಿಗೆ ಹೋಗುತ್ತಿದ್ದೇವೆ. ಎಲ್ಲೆಡೆ ಸ್ಥಳೀಯ ಶಾಸಕರಿಂದ ನಮ್ಮ ಬೆಂಬಲವಾಗಿ ಪತ್ರಗಳನ್ನು ಪಡೆದು ಬೆಳಗಾವಿಗೆ ಹೊರಟಿದ್ದು, ನಾವೂ ಸಹ ಶಾಸಕ ವಿ.ಮುನಿಯಪ್ಪ ಅವರಿಂದ ನಮ್ಮ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಪಡೆದಿದ್ದೇವೆ ಎಂದು ಹೇಳಿದರು.
ಡಿಸೆಂಬರ್ 11 ರಂದು ಶಿಡ್ಲಘಟ್ಟದಿಂದ ಸರ್ಕಾರಿ ಎನ್‌ಪಿಎಸ್‌ ನೌಕರರು ಬಸ್ ಗಳ ಮೂಲಕ ಬೆಳಗಾವಿಗೆ ಹೊರಟು ಡಿಸೆಂಬರ್ 12 ರಂದು ಅಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಿದ್ದೇವೆ. ಶಾಸಕರು ಸಹ ನಮ್ಮ ಬೆಂಬಲವಾಗಿ ಅಧಿವೇಶನದಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಎನ್.ಪಿ.ಎಸ್ ನೌಕರರ ಸಂಘ ಪ್ರಧಾನ ಕಾರ್ಯದರ್ಶಿ ಎಸ್.ಎ.ನರಸಿಂಹರಾಜು, ಎ.ಎಂ.ವೀಣಾ, ಟಿ.ಟಿ.ನರಸಿಂಹಪ್ಪ, ಎಸ್. ಶಿವಶಂಕರ್, ಜನಾರ್ಧನ್ ಹಾಜರಿದ್ದರು.

ಕಾರ್ತಿಕ ಮಾಸದ ಕೊನೆಯ ಸೋಮವಾರದ ಪ್ರಯುಕ್ತ ವಿಶೇಷ ಪೂಜೆ

0

ಕಾರ್ತಿಕ ಮಾಸದ ಕೊನೆಯ ಸೋಮವಾರದ ಪ್ರಯುಕ್ತ ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ಶ್ರೀ ಕಲ್ಲೇಶ್ವರ ಸ್ವಾಮಿ ಮತ್ತು ಶ್ರೀ ಸಿದ್ದರಾಮೇಶ್ವರ ಸ್ವಾಮಿ ದೇವರುಗಳಿಗೆ ವಿಶೇಷ ಪೂಜೆಯನ್ನು ನಡೆಸಲಾಯಿತು.
ದೇವರಿಗೆ ಅಭಿಷೇಕ, ಮಂಗಳರಾತಿ, ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು. ಸಾವಿರಾರು ಮಂದಿ ಭಕ್ತರು ಆಗಮಿಸಿ ದೇವರ ಪೂಜೆಯಲ್ಲಿ ಪಾಲ್ಗೊಂಡಿದ್ದರು. ವೀರಕುಮಾರರ ತೆಂಗಿನಕಾಯಿ ಪವಾಡ ನಡೆಸಿಕೊಟ್ಟರು.
ದೇವಾಲಯದ ಟ್ರಸ್ಟ್ ವತಿಯಿಂದ ಅನ್ನಸಂತರ್ಪಣೆಯನ್ನು ನಡೆಸಲಾಯಿತು. ದೇವಾಲಯವನ್ನು ಮತ್ತು ದೇವರನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಅಲಂಕರಿಸಿದ್ದ ಎತ್ತುಗಳನ್ನು ಭಕ್ತರು ಕರೆತಂದಿದ್ದುದು ಆಕರ್ಷಕವಾಗಿತ್ತು. ಸುತ್ತ ಮುತ್ತಲಿನ ಗ್ರಾಮ ಹಾಗೂ ತಾಲ್ಲೂಕುಗಳಿಂದ ಭಕ್ತರು ಆಗಮಿಸಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು.

ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ

0

ನಗರದ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ಸಮಗ್ರ ಶಿಕ್ಷಣ ಅಭಿಯಾನದ ವತಿಯಿಂದ ವಿಶ್ವ ಅಂಗವಿಕಲರ ದಿನಾಚರಣೆಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷ ಅಫ್ಸರ್ ಪಾಷ ಮಾತನಾಡಿದರು.
ಅಂಗವಿಕಲರಿಗೆ ನಗರಸಭೆಯಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ. ಅಂಗವಿಕಲರ ಅನುಕೂಲಕ್ಕಾಗಿಯೇ ಶೇ ೫ ಅನುದಾನವನ್ನು ಒದಗಿಸಿದ್ದು, ಈ ಅನುದಾನದಡಿ ಹಲವು ಉಪಯೋಗಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.
ಅಂಗವಿಕಲ ಮಕ್ಕಳಿಗೆ ಅನುಕಂಪದ ಜತೆಗೆ ಪ್ರೀತಿ ತೋರಿಸಿದಾಗ ಅವರಿಗೂ ಬದುಕಿನಲ್ಲಿ ಭರವಸೆ ಮೂಡಲು ಸಾಧ್ಯ. ಈ ನಿಟ್ಟಿನಲ್ಲಿ ಅವರ ಪ್ರತಿಭೆಗಳನ್ನು ಗಮನಿಸಿ ಅದನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಬೇಕು. ನೈತಿಕ ಸ್ಥೈರ್ಯ ತುಂಬುವ ಕಾರ್ಯಾವಾಗಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಬಾಬು ಮಾತನಾಡಿ, ಅಂಗವಿಕಲ ಮಕ್ಕಳಿಗೂ ಶಿಕ್ಷಣ ಸಿಗುವಂತಾಗಬೇಕು. ಅವರ ಆರೋಗ್ಯದ ಬಗ್ಗೆ ಕಾಲಕಾಲಕ್ಕೆ ಶಿಕ್ಷಕರು ಪೋಷಕರಿಂದ ಮಾಹಿತಿ ಪಡೆಯಬೇಕು. ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಬೇಕು. ಶಾಲೆಗೆ ಬರಲು ತೊಂದರೆಯಿದ್ದಲ್ಲಿ ಅವರಿರುವ ಕಡೆಗೇ ವೈದ್ಯಕೀಯ ಚಿಕಿತ್ಸೆ ಕೊಡಿಸುವ ಅವಕಾಶವಿದೆ. ಈ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಸಮಾಜ ಮಾಡಬೇಕಾಗಿದೆ. ಅಂಗವಿಕಲತೆಯನ್ನು ಶಾಪವೆಂದು ಭಾವಿಸದೇ ಸಾಧನೆ ಮಾಡುವ ಛಲವಿರಬೇಕು. ಪ್ರತಿಯೊಬ್ಬರು ಹುಮ್ಮಸ್ಸಿನಿಂದ ಜೀವನವನ್ನು ಸಾಗಿಸಬೇಕು ಗುರಿ ಸಾಧಿಸುವ ಮನೋಭಾವನೆ ಮೈಗೊಡಿಸಿಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಅಂಗವಿಕಲ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ, ಕಪ್ಪೆ ಓಟದ ಸ್ಪರ್ಧೆ, ಸಂಗೀತ ಕುರ್ಚಿ, ಗಾಯನ ಸ್ಪರ್ಧೆ, ಮಡಿಕೆ ಒಡೆಯುವ ಸ್ಪರ್ಧೆಯನ್ನು ನಡೆಸಿ ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ನೀಡಲಾಯಿತು.
ಸಮನ್ವಯಾಧಿಕಾರಿ ಭಾಸ್ಕರ್, ಮುಖ್ಯ ಶಿಕ್ಷಕ ಕೃಷ್ಣಮೂರ್ತಿ, ಶಿಕ್ಷಕರಾದ ರಂಗನಾಥ್, ತ್ಯಾಗರಾಜ್, ಸುದರ್ಶನ್, ನೇತ್ರ, ವೀಣಾ, ಪ್ರಕಾಶ್, ಪ್ರಭಾಕರ್, ಚಂದ್ರಕಲಾ, ಜಯಂತಿ, ಜಗದೀಶ್, ರಮೇಶ್, ಲಲಿತಮ್ಮ, ಶಾಂತಮ್ಮ ಹಾಜರಿದ್ದರು.

ಹಾಳಾದ ರಸ್ತೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಗ್ರಾಮಸ್ಥರಿಂದ ಪ್ರತಿಭಟನೆ

0

ಹಾಳಾದ ರಸ್ತೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ತಾಲ್ಲೂಕಿನ ಅಮ್ಮಗಾರಹಳ್ಳಿ ಗೇಟ್ ನಲ್ಲಿ ಅಮ್ಮಗಾರಹಳ್ಳಿ, ದ್ಯಾವರಹಳ್ಳಿ ಮತ್ತು ಆನೂರು ತಿಮ್ಮನಹಳ್ಳಿ ಗ್ರಾಮಸ್ಥರು ಶನಿವಾರ ಧರಣಿ ನಡೆಸಿದರು.
ಶಿಡ್ಲಘಟ್ಟ ದಿಬ್ಬೂರಹಳ್ಳಿ ಮಾರ್ಗದಲ್ಲಿರುವ ಬಶೆಟ್ಟಹಳ್ಳಿ ಪಂಚಾಯಿತಿ ವ್ಯಾಪ್ತಿಯ ಅಮ್ಮಗಾರಹಳ್ಳಿ ಗೇಟ್ ನಿಂದ ದ್ಯಾವರಹಳ್ಳಿ ಮತ್ತು ಆಮೂರು ತಿಮ್ಮನಹಳ್ಳಿ ಗ್ರಾಮಗಳ ಮೂಲಕ ಶಿಡ್ಲಘಟ್ಟ ಚಿಕ್ಕಬಳ್ಳಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದ್ದು, ಸರಿಪಡಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಭಾರತ್ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಮೂರೂ ಗ್ರಾಮಗಳ ಗ್ರಾಮಸ್ಥರು ಅಮ್ಮಗಾರಹಳ್ಳಿ ಗೇಟ್ ಬಳಿ ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನಮ್ಮ ಅಹವಾಲನ್ನು ಆಲಿಸಿ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿ, ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಒಂದು ತಿಂಗಳ ಒಳಗೆ ರಸ್ತೆ ಕಾಮಗಾರಿಗೆ ಅನುಮೋದನೆ ಪಡೆಯುವುದಾಗಿ ಭರವಸೆ ನೀಡಿದರು.
ಭಾರತ್ ರಕ್ಷಣಾ ವೇದಿಕೆಯ ಸದಾನಂದ, ಮಾಣಿಕ್ಯಾಚಾರಿ, ಶ್ರೀನಾಥ್, ಸುನಿಲ್ ಕುಮಾರ್, ಬಾಬಾಜಾನ್ ಹಾಜರಿದ್ದರು.

ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಸಮಸ್ಯೆಗಳನ್ನು ತಿಳಿಸಿದ ವಿದ್ಯಾರ್ಥಿಗಳು

0

“ನನಗೆ ಓದಲು ಇಷ್ಟ, ಆದರೆ ಮನೆಯಲ್ಲಿ ಶಾಲೆಗೆ ಹೋಗಬೇಡ ಅನ್ನುತ್ತಾರೆ. ನಾನು ಶಾಲೆಗೆ ಬರಲು ಹೆಚ್ಚು ಓದಲು ಅವಕಾಶ ಮಾಡಿಕೊಡಿ” ಎಂದು ಮೇಲೂರಿನ ಸರ್ಕಾರಿ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿ ಯಾಸ್ಮೀನ್ ಹೇಳುತ್ತಿದ್ದಂತೆಯೇ ವೇದಿಕೆಯಲ್ಲಿದ್ದ ಗಣ್ಯರೆಲ್ಲರೂ ಒಂದು ಕ್ಷಣ ದಿಗ್ಮೂಢರಾದರು.
ತಾಲ್ಲೂಕಿನ ಮೇಲೂರು ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶುಕ್ರವಾರ ಗ್ರಾಮಾಂತರ ಟ್ರಸ್ಟ್, ಸಿ.ಎಂ.ಸಿ.ಎ ಸಂಸ್ಥೆ ಮತ್ತು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನಡೆದ “ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ” ವಿದ್ಯಾರ್ಥಿಗಳು ತಮ್ಮ ಶಾಲೆ ಹಾಗೂ ಗ್ರಾಮದ ಸಮಸ್ಯೆಗಳ ಬಗ್ಗೆ ಮಾತನಾಡಿದರು.
ಶಾಲೆಯ ಕಟ್ಟಡವನ್ನು ನವೀಕರಿಸಿ ಎಂದು ಚಂದ್ರಿಕ, ಕಿರಣ್, ಸಾಯಿಪ್ರಕಾಶ್ ಕೋರಿದರೆ, ಚೌಡಸಂದ್ರದ ನಿತಿನ್ ರಂಗಮಂದಿರದ ಬೇಡಿಕೆಯಿಟ್ಟ. ಕುಸುಮ ಕಂಬದಹಳ್ಳಿಯಲ್ಲಿ ರಾತ್ರಿ ವೇಳೆ ನಾಯಿಗಳ ಕಾಟವೆಂದರೆ, ಎಂ.ಅಕ್ಷಯ ಆಟದ ಮೈದಾನ ಬೇಕೆಂದನು. ಚೌಡಸಂದ್ರದ ಮೀನಾಕ್ಷಿ ಆಟದ ಮೈದಾನದಲ್ಲಿ ಕಲ್ಲು ಮುಳ್ಳುಗಳಿವೆ ಎಂಬುದನ್ನು ತಿಳಿಸಿದರೆ, ಚರಣ್ ಕಸದ ತೊಟ್ಟಿಯಿಲ್ಲದೆ ಕಸ ಎಲ್ಲೆಂದರಲ್ಲಿ ಹಾಕುತ್ತಾರೆ ಎಂಬ ಸಂಗತಿಯನ್ನು ವಿವರಿಸಿದನು. ಹೀಗೆ ವಿವಿಧ ಸಮಸ್ಯೆಗಳನ್ನು ವಿದ್ಯಾರ್ಥಿಗಳು ವಿವರಿಸಿದರು.
ಮಕ್ಕಳ ಅಭಿವೃದ್ಧಿ ಅಧಿಕಾರಿ ಗೋಪಾಲ್ ಮಾತನಾಡಿ,”ಶಿಕ್ಷಣವು ಮಕ್ಕಳ ಹಕ್ಕು. ಅದನ್ನು ಯಾರೂ ಕಸಿಯುವಂತಿಲ್ಲ. ವಿದ್ಯಾವಂತ ಹೆಣ್ಣುಮಕ್ಕಳು ದೇಶದ ಆಸ್ತಿಯಿದ್ದಂತೆ. ಸಾಧಕ ಮಹಿಳೆಯರ ಉದಾಹರಣೆಗಳನ್ನು ನೀಡಿ ಶಿಕ್ಷಕರು ಪೋಷಕರಿಗೆ ಅರಿವು ಮೂಡಿಸಬೇಕು. ಓದಿ ಸಾಧನೆ ಮಾಡಿದ ಹೆಣ್ಣು ಮಗು ಪೋಷಕರು ಹೆಮ್ಮೆ ಪಡುವಂತೆ ಜೀವನ ನಡೆಸಬಹುದಾಗಿದೆ. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಬೇಕಾದ್ದು ನಮ್ಮ ಕರ್ತವ್ಯ. ಮಕ್ಕಳು ತಿಳಿಸಿದ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ. ಸಾರ್ವಜನಿಕರು ಕೂಡ ಸಹಕರಿಸಬೇಕು. ಸ್ವಚ್ಛತೆಗೆ ಆದ್ಯತೆಯನ್ನು ನೀಡಬೇಕು. ನಮ್ಮ ಗ್ರಾಮ ಎಂಬ ಮನೋಭಾವ ಬಂದರೆ ಒಗ್ಗಟ್ಟಿನಿಂದ ಅಭಿವೃದ್ಧಿಯತ್ತ ಸಾಗಬಹುದು” ಎಂದರು.
ಈ ಸಂದರ್ಭದಲ್ಲಿ ಮಕ್ಕಳು ತಿಳಿಸಿದ ಸಮಸ್ಯೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಹಾರಗಳನ್ನು ತಿಳಿಸಿದರು. ಗ್ರಾಮ ಪಂಚಾಯಿತಿ ವತಿಯಿಂದ ಆಗುವ ಕೆಲಸಗಳನ್ನು ಶೀಘ್ರವಾಗಿ ಮಾಡುವುದಾಗಿ ತಿಳಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಮುನಾ ಧರ್ಮೇಂದ್ರ, ಉಪಾಧ್ಯಕ್ಷ ಆಂಜನೇಯರೆಡ್ಡಿ, ಸದಸ್ಯೆ ವಿಮಲಮ್ಮ, ಅಭಿವೃದ್ಧಿ ಅಧಿಕಾರಿ ಕೆ.ವಿ.ಶಾರದಾ, ಸಿ.ಡಬ್ಲು.ಸಿ ಸಂಸ್ಥೆಯ ನಾಗಮಣಿ, ಗ್ರಾಮಾಂತರ ಟ್ರಸ್ಟ್ ನ ಉಷಾಶೆಟ್ಟಿ, ಅನಂತಲಕ್ಷ್ಮಿ, ಮುಖ್ಯಶಿಕ್ಷಕ ಗಂಗಪ್ಪ, ಎಂ.ನಳಿನ ಹಾಜರಿದ್ದರು.

ವಿದ್ಯುತ್ ಶಾರ್ಟ್ ಸರ್ಕೀಟ್ ನಿಂದಾಗಿ ರೇಷ್ಮೆ ಹುಳು ಸಾಕಾಣಿಕಾ ಶೆಡ್ ಬೆಂಕಿಗೆ ಆಹುತಿ

0

ತಾಲ್ಲೂಕಿನ ನಾಗಮಂಗಲ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್ ನಿಂದಾಗಿ ಗ್ರಾಮ ಪಂಚಾಯಿತಿ ಅದ್ಯಕ್ಷೆ ರೂಪ ಶಿವಕುಮಾರ್ ಅವರ ರೇಷ್ಮೆ ಹುಳು ಸಾಕಾಣಿಕಾ ಶೆಡ್ ಬೆಂಕಿಗೆ ಆಹುತಿಯಾಗಿದೆ.
“ಸುಮಾರು ೪೫೦ ಚಂದ್ರಂಕಿಗಳನ್ನು ಇಟ್ಟಿದ್ದೆವು. ೪೦೦ ರೇಷ್ಮೆ ಮೊಟ್ಟೆಗಳನ್ನು ಮೇಯಿಸಿದ್ದು ಇವತ್ತು ಗೂಡು ಬಿಡಿಸಿ ನಾಳಿದ್ದು ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕಿತ್ತು. ಮಧ್ಯರಾತ್ರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ಗ್ರಾಮಸ್ಥರು ಮದುವೆಗೆಂದು ಹೋಗಿ ತಡವಾಗಿ ಬಂದವರು ನೋಡಿ ವಿಷಯ ಮುಟ್ಟೀಸಿದರು. ತಕ್ಷಣವೇ ಅಗ್ನಿಶಾಮಕದಳದವರಿಗೆ ವಿಷಯ ಮುಟ್ಟಿಸಿದೆವು. ಅವರು ಬರುವಷ್ಟರಲ್ಲಿ ಪೂರ್ತಿ ಸುಟ್ಟು ಹೋಗಿತ್ತು. ಶೆಡ್ ಕೂಡ ಜಖಂ ಆಗಿದೆ. ಸುಮಾರು ೧೨ ಲಕ್ಷ ರೂಗಳಷ್ಟು ನಷ್ಟವಾಗಿದೆ” ಎಂದು ಶಿವಕುಮಾರ್ ತಿಳಿಸಿದರು.

ಚಿತ್ರನಟ ಅಂಬರೀಶ್ ನೆನಪಿನಲ್ಲಿ ಗಿಡ ನೆಟ್ಟ ಕಸಾಪ ಸದಸ್ಯರು

0

ತಾಲ್ಲೂಕಿನ ಯಣ್ಣಂಗೂರು ಗ್ರಾಮದಲ್ಲಿ ಗುರುವಾರ ಕಸಾಪ ವತಿಯಿಂದ “ವನಸಿರಿ ನುಡಿಸಿರಿ” ಕಾರ್ಯಕ್ರಮದಲ್ಲಿ ಗ್ರಾಮದ ಕೆರೆಯಂಚಿನಲ್ಲಿ ಸಂಪಿಗೆ, ಗಸಗಸೆ ಮುಂತಾದ ಗಿಡಗಳನ್ನು ನೆಟ್ಟು ಕಸಾಪ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಚಿತ್ರನಟ ಅಂಬರೀಶ್ ನೆನಪಿನಲ್ಲಿ ಹಲವಾರು ಗಿಡಗಳನ್ನು ನೆಡುತ್ತಿದ್ದೇವೆ. ಗಿಡಗಳನ್ನು ನೆಟ್ಟಷ್ಟೇ ಪ್ರೀತಿಯಿಂದ ಅವನ್ನು ಬೆಳೆಸಬೇಕು ಎಂದು ಅವರು ತಿಳಿಸಿದರು.
ಯಣ್ಣಂಗೂರು ಗ್ರಾಮದ ಯುವಕರು ಪ್ರತಿವರ್ಷ ಕನ್ನಡರಾಜ್ಯೋತ್ಸವ ಕಾರ್ಯಕ್ರಮವನ್ನು ವಿಶೇಷವಾಗಿ ಹಮ್ಮಿಕೊಳ್ಳುತ್ತಾರೆ. ಈ ಯುವಕರ ಜೊತೆಗೂಡಿ ಚಿತ್ರನಟ ಅಂಬರೀಶ್ ನೆನಪಿನಲ್ಲಿ ಹಲವು ಗಿಡಗಳನ್ನು ನೆಡುತ್ತಿದ್ದೇವೆ. ಪರಿಸರ ಕಾಪಾಡಿದಲ್ಲಿ ಮಾತ್ರ ನಮಗೆ ಉಳಿಗಾಲವಿದೆ. ಈಗ ಇರುವ ನೀರಿನ ಸಮಸ್ಯೆಗೆ ಪರಿಹಾರ ಗಿಡಗಳನ್ನು ನೆಟ್ಟು ಭೂಮಿಯನ್ನು ಆದಷ್ಟು ಹಸಿರುಮಯವನ್ನಾಗಿಸಬೇಕು ಎಂದು ಹೇಳಿದರು.
ಸಾಧ್ಯವಾದಾಗಲೆಲ್ಲಾ ರಾಸಾಯನಿಕ ಮುಕ್ತ, ಸಾವಯವ ಹಾಗೂ ಸಸ್ಯಮೂಲದ ಆಹಾರ ಪದಾರ್ಥಗಳನ್ನೇ ಖರೀದಿಸಿರಿ. ಇದರಿಂದ ಪರಿಸರಕ್ಕೂ ನಿರಾಳ, ನಿಮ್ಮ ಆರೋಗ್ಯಕ್ಕೂ ವರದಾನ. ಸುತ್ತಮುತ್ತಲೂ ಹಸಿರು ಹೆಚ್ಚುವಂತೆ ಪ್ರಯತ್ನ ಮಾಡಿ. ನಿಮ್ಮ ಹುಟ್ಟುಹಬ್ಬದಂದು, ಇತರ ವಿಶೇಷ ದಿನಗಳಂದು ಗಿಡ ನೆಡುವ ಕಾರ್ಯ ಕೈಗೊಳ್ಳಿ, ಅದನ್ನು ನೀರೆರೆದು ಪೋಷಿಸಲು ಮರೆಯಬೇಡಿ. ಇಂಗು ಗುಂಡಿಗಳನ್ನು ಸ್ಥಾಪಿಸಿ. ಮನೆಯ ಸುತ್ತಮುತ್ತಲೂ ಹರಿದು ಪೋಲಾಗಿಹೋಗುವ ಮಳೆನೀರನ್ನು ಇಂಗಿಸಲು ವ್ಯವಸ್ಥೆ ಕಲ್ಪಿಸಲು ಸಾಧ್ಯವಾದರೆ ಮಾಡಿ ಎಂದರು.
ಅಶ್ವತ್ಥನಾರಾಯಣಗೌಡ, ರಾಮಚಂದ್ರಪ್ಪ, ಸೀತಾರೆಡ್ಡಿ, ನಾಗೇಶ್, ಅಶೋಕ್, ರಘು, ವಿಶ್ವನಾಥ್, ಮೋಹನ್, ಗಜೇಂದ್ರ, ಗೋಪಲಪ್ಪ, ಮೂರ್ತಿ ಹಾಜರಿದ್ದರು.

ಅಂಬೇಡ್ಕರ್‌ರ ಭವನ ನಿರ್ಮಿಸಲು ಒತ್ತಾಯಿಸಿ ಬೈಕ್ ರ‍್ಯಾಲಿ

0

ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ನಗರದ ಪ್ರವಾಸಿ ಮಂದಿರದಿಂದ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಯವರೆಗೂ ಬುಧವಾರ ಹೊರಟ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಜಿ.ನರಸಿಂಹಮೂರ್ತಿ ಮಾತನಾಡಿದರು
ನಗರದ ಹೃದಯ ಭಾಗದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ರ ಭವನ ನಿರ್ಮಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅವರು ಆರೋಪಿಸಿದರು.
ಕಳೆದ ಕೆಲ ವರ್ಷಗಳಿಂದ ದಲಿತ ಕುಂದು ಕೊರತೆ ಸಭೆ ಮತ್ತು ನಾಡ ಹಬ್ಬಗಳ ಆಚರಣಾ ಸಮಿತಿಯ ಸಭೆಗಳಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಒತ್ತಾಯಿಸುತ್ತಾ ಬಂದಿದ್ದೇವೆ. ತಾಲ್ಲೂಕು ಆಡಳಿತ ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಯಾವುದೇ ಕ್ರಮ ಜರುಗಿಸುವ ಬದಲಿಗೆ ಕಣ್ಣೊರೆಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್‌ರ ಭವನ ನಿರ್ಮಿಸಲು ನಗರದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿರುವ ತೋಟಗಾರಿಕೆ ಇಲಾಖೆ ಆವರಣ ಅಥವ ಕಂದಾಯ ಭವನದ ಹಿಂಭಾಗದ ಹಳೆ ಪೊಲೀಸ್ ಕ್ವಾಟ್ರಸ್ ಅಥವಾ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಪಾಳು ಬಿದ್ದಿರುವ ವಸತಿ ಗೃಹಗಳ ನಿವೇಶನವನ್ನು ಮಂಜೂರು ಮಾಡಿದಲ್ಲಿ ಅಂಬೇಡ್ಕರ್ ಭವನ ಎಲ್ಲರಿಗೂ ಉಪಯೋಗಕ್ಕೆ ಬರುತ್ತದೆ. ಹಾಗಾಗಿ ಕೂಡಲೇ ಮೇಲಿನ ಮೂರು ಸ್ಥಳಗಳಲ್ಲಿ ಯಾವುದಾದರೂ ಒಂದು ಸ್ಥಳ ಮಂಜೂರು ಮಾಡಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಹೊರಟಿದ್ದೇವೆ ಎಂದರು.
ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ಉಪಾಧ್ಯಕ್ಷ ಎಸ್.ಎಂ.ರಮೇಶ್, ಕಾರ್ಯದರ್ಶಿಗಳಾದ ಕೆ.ಎಸ್.ಅರುಣ್‌ಕುಮಾರ್, ಈಧರೆ ಪ್ರಕಾಶ್, ಮುಖಂಡರಾದ ಸಿ.ಎಂ.ಮುನೆಯ್ಯ, ಮುನಿನರಸಿಂಹ, ಶ್ರೀರಾಮಣ್ಣ, ನಾಗನರಸಿಂಹ, ಮಳ್ಳೂರು ಅಶೋಕ್, ಭಕ್ತರಹಳ್ಳಿ ಪ್ರತೀಶ್, ಸುರೇಶ್, ರವಿ, ಮಂಜುನಾಥ್ ಹಾಜರಿದ್ದರು.

ಕೆಎಸ್‌ಆರ್‌ಟಿಸಿ ಬಸ್ ಘಟಕಕ್ಕೆ ಗುದ್ದಲಿ ಪೂಜೆ

0

ಮಾಜಿ ಶಾಸಕ ಎಂ.ರಾಜಣ್ಣ ತಮ್ಮ ಅವಧಿಯಲ್ಲಿಯೇ ಕೆಎಸ್‌ಆರ್‌ಟಿಸಿ ಡಿಪೋ ಕಾಮಗಾರಿ ಆರಂಭವಾಗಬೇಕು ಎಂದು ಚುನಾವಣೆಗೂ ಮುನ್ನ ಕಳೆದ ಮಾರ್ಚ್ ೨೧ ರಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳೊಂದಿಗೆ ಹಿತ್ತಲಹಳ್ಳಿ ಗೇಟ್ ಬಳಿ ಗುದ್ದಲಿಪೂಜೆ ನೆರವೇರಿಸಿದ್ದರು. ಇದೀಗ ಶಾಸಕರಾಗಿರುವ ವಿ.ಮುನಿಯಪ್ಪ ತಮ್ಮ ಬೆಂಬಲಿಗರೊಂದಿಗೆ ಬುಧವಾರ ಅದೇ ಸ್ಥಳದಲ್ಲಿ ಕೆಎಸ್‌ಆರ್‌ಟಿಸಿ ಡಿಪೋಗೆ ಎರಡನೇ ಬಾರಿ ಗುದ್ದಲಿಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವಿ.ಮುನಿಯಪ್ಪ, ನಗರದ ಹೊರವಲಯದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಘಟಕ ನಿರ್ಮಾಣವಾಗುವುದರಿಂದ ನಗರ ಉನ್ನತೀಕರಣಗೊಳ್ಳುವುದು. ಕ್ಷೇತ್ರದ ಗ್ರಾಮೀಣ ಪ್ರದೇಶದ ಜನತೆ ಹಾಗೂ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗಲಿದೆ. ಸುಮಾರು ೫ ಎಕರೆ ೧೫ ಗುಂಟೆ ಜಮೀನಿನಲ್ಲಿ ೫ ಕೋಟಿ ೬೮ ಲಕ್ಷ ರೂಗಳ ವೆಚ್ಚದಲ್ಲಿ ಬಸ್ ಘಟಕದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ್ದು ಮುಂಬರುವ ಒಂಬತ್ತು ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿರುವುದಾಗಿ ಹೇಳಿದರು.
ಕ್ಷೇತ್ರದಲ್ಲಿ ನೂತನ ಬಸ್ ಘಟಕ ನಿರ್ಮಾಣವಾಗುವುದರಿಂದ ತಾಲ್ಲೂಕಿನ ಸುಮಾರು ೧೬೨ ಗ್ರಾಮಗಳಿಗೆ ಸಾರಿಗೆ ಸೌಲಭ್ಯ ಸಿಗಲಿದೆ. ಪ್ರತಿನಿತ್ಯ ಸುಮಾರು ೭,೦೦೦ ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲಾ ಕಾಲೇಜು ಗಳಿಗೆ ಹೋಗಲು ಸಹಕಾರಿಯಾಗಲಿದೆ ಎಂದರು.
ಈ ಭಾಗದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಬದ್ದ ವೈರಿಗಳಾಗಿದ್ದರೂ ಇದೀಗ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸಮ್ಮಿಶ್ರ ಸರ್ಕಾರದ ಮಹತ್ತರವಾದ ಯೋಜನೆಗಳು ಜಾರಿಯಾಗಬೇಕಾದರೆ ಎಲ್ಲರೂ ಸಹಕರಿಸಬೇಕು. ಮುಂದಿನ ಎರಡು ವರ್ಷಗಳೊಳಗೆ ತಾಲ್ಲೂಕಿನಾದ್ಯಂತ ಕೆರೆಗಳಲ್ಲಿ ಬೆಳೆದು ನಿಂತಿರುವ ಜಾಲಿ ಗಿಡಗಳನ್ನು ತೆರವು ಗೊಳಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮುಂದಾಗಬೇಕು ಎಂದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಕಾರ್ಯಪಾಲಕ ಗುರುಪ್ರಸಾದ್, ತಾಲ್ಲೂಕು ಪಂಚಾಯಿತಿ ಸದಸ್ಯ ನರಸಿಂಹಯ್ಯ, ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್, ಪಿಡಿಓ ಅರುಣಕುಮಾರಿ, ಬೆಳ್ಳೂಟಿ ಸಂತೋಷ್, ಚಂದ್ರು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀನಿವಾಸ್, ಎಸ್.ಎಂ.ನಾರಾಯಣಸ್ವಾಮಿ ಹಾಜರಿದ್ದರು.