ನಗರದ ಕೆ.ಎಚ್.ಬಿ.ಕಾಲೋನಿಯ ನಿವಾಸಿ ನಿವೃತ್ತ ಶಿಕ್ಷಕ ಸುಂದರನ್ ಹಾಗೂ ರಮಾ ದಂಪತಿಗಳ ಮನೆಯಲ್ಲಿ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಆಯೋಜಿಸಿದ್ದ “ಚಾವಡಿಯಲ್ಲಿ ಚಿಂತನ ಮಂಥನ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಿರುತೆರೆಯ ಖ್ಯಾತ ನಟ, ನಿರ್ದೇಶಕ ಹಾಗೂ ಸಾಹಿತಿ ಎಸ್.ಎನ್.ಸೇತುರಾಮ್ ಮಾತನಾಡಿದರು.
ಮಾನಸಿಕವಾಗಿ ನಾವು ಭ್ರಷ್ಟರಾಗದಿದ್ದಲ್ಲಿ ಬದುಕು ಸುಲಭ ಆಗುತ್ತದೆ. ನಾವ್ಯಾರೂ ಹುಟ್ಟು ಭ್ರಷ್ಟರಲ್ಲ, ಸುಪ್ತಪ್ರಜ್ಞೆಗೆ ನ್ಯಾಯ ನೀತಿ ಧರ್ಮ ಗೊತ್ತಿದೆ. ಪ್ರಾಪಂಚಿಕ ಆಕರ್ಷಣೆಗಳು ನಮ್ಮನ್ನು ತಪ್ಪುದಾರಿಗೆ ಸೆಳೆಯುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಹಿಂದೆ ಸಾಹಿತಿಗಳ ಬದುಕು ಮತ್ತು ಬರಹ ಬೇರೆಯಾಗಿರಲಿಲ್ಲ. ಎರಡರಲ್ಲೂ ಪ್ರಾಮಾಣಿಕತೆಯಿರುತ್ತಿತ್ತು. ನಂತರದ ಕಾಲಘಟ್ಟದಲ್ಲಿ ಬದುಕು ಬೇರೆ ಮತ್ತು ಬರಹ ಬೇರೆಯಾಯ್ತು. ಅನಂತರದ ಕಾಲದಲ್ಲಿ ಸರ್ಕಾರದ ಪ್ರೋತ್ಸಾಹದ ಫಲವಾಗಿ ವಶೀಲಿಗಾಗಿ, ಗ್ರಂಥಾಲಯಕ್ಕಾಗಿ, ಪ್ರಶಸ್ತಿಗಾಗಿ ಬರವಣಿಗೆ ರೂಢಿಯಾಯ್ತು. ಅಭಿನಂದನಾ ಸಾಹಿತ್ಯ ಮತ್ತು ನಿಂದನಾ ಸಾಹಿತ್ಯ ಬಂದವು. ಸಾಹಿತ್ಯ ತೆಳ್ಳಗಾಯ್ತು. ಓದುವ ಪುಸ್ತಕಗಳು ಕಡಿಮೆಯಾದವು. ಸಾಹಿತ್ಯ ಬದುಕನ್ನು ಬಿಂಬಿಸಿದಾಗ ಜನರು ಓದುತ್ತಾರೆ. ಸಾಮಾನ್ಯ ಜನರಿಗೆ ಸುಳ್ಳು ಸತ್ಯ ಬಹು ಬೇಗ ಅರ್ಥವಾಗಬಲ್ಲದು. ಒಳಗೆ ಹೂರಣ ಬದಲಿಸದೆ ಕಡುಬಿನ ಆಕಾರ ಬದಲಿಸಿದರೆ ಏನು ತಾನೆ ಪ್ರಯೋಜನ ಎಂದು ಹೇಳಿದರು.
ಕಾಲೇಜುಗಳು ವಿದ್ಯಾರ್ಥಿಗಳನ್ನು ಕೆಲಸಕ್ಕೆ ತಯಾರು ಮಾಡುತ್ತವಾದ್ದರಿಂದ ಅಲ್ಲಿ ಕನ್ನಡ ಭಾಷೆ ಮುಖ್ಯವಾಗುತ್ತಿಲ್ಲ. ನಮ್ಮ ಬದುಕಿನ ಭಾಷೆಯಾದ ಕನ್ನಡದಿಂದ ಮಾತ್ರ ಭಾವವನ್ನು ಅಭಿವ್ಯಕ್ತಿಸಲು ಸಾಧ್ಯ. ಅನಕೃ ಅವರು ಹೇಳಿದಂತೆ ನಮ್ಮ ಗುರುತಿಗಾಗಿ ನಮ್ಮ ಭಾಷೆ ಮುಖ್ಯವಾಗುತ್ತದೆ. ಸರ್ಕಾರ ಕೈಹಾಕಿದ್ದು ಯಾವುದೂ ಸಂಪೂರ್ಣ ಅಭಿವೃದ್ಧಿ ಆಗಿಲ್ಲ. ಜನಸಾಮಾನ್ಯರ ಸಹಭಾಗಿತ್ವದಿಂದ ಊರ ದೇವರ ಜಾತ್ರೆ ವಿಜೃಂಭಿಸುತ್ತದೆ. ಇದು ಭಾಷೆ, ಸಂಸ್ಕೃತಿ, ಸಾಹಿತ್ಯಕ್ಕೂ ಅನ್ವಯಿಸುತ್ತದೆ. ಹೃದಯ ಜೀವಂತಿಕೆಯಿಂದ ಇರಬೇಕಾದರೆ ಕಲೆ ಬೇಕು ಎಂದರು.
ನಾನು ಬದುಕಿನಲ್ಲಿ ಕಂಡ ಹೆಣ್ಣುಮಕ್ಕಳಿಗೆ ಹಲವು ಸಮಸ್ಯೆಗಳಿದ್ದವು. ಇದ್ದಲ್ಲೇ ಬೇರು ಬಿಟ್ಟು ಮನೆಯನ್ನೇ ತಮ್ಮದಾಗಿಸಿಕೊಂಡರು. ಮನೆ ಬಿಟ್ಟು ಹೊರಹೋಗುವುದು ಸ್ತ್ರೀವಾದವಲ್ಲ. ಹಿಂದೆ ಹಂಪೆಯಲ್ಲಿ ಹಗಲಿನಲ್ಲಿ ಮಾರುತ್ತಿದ್ದ ಮುತ್ತು ರತ್ನಗಳನ್ನು ರಾತ್ರಿ ಹಾಗೇ ಮುಚ್ಚಿಟ್ಟು ಹೋಗುತ್ತಿದ್ದರಂತೆ. ಆದರೆ ಈಗ ರೈಲಿನ ಶೌಚಾಲಯದಲ್ಲಿ ತಗಡು ಡಬ್ಬಕ್ಕೆ ಚೈನ್ ಬಿಗಿದಿರುತ್ತಾರೆ. ತಳಿ ಅದೇ ಆದರೂ ನಾವ್ಯಾಕೆ ಕಳ್ಳರಾದೆವು? ಮಾನಸಿಕವಾಗಿ ಭ್ರಷ್ಟರಾದೆವಾ? ಪ್ರಜ್ಞೆಯಲ್ಲಿ ನಾವೆಲ್ಲಾ ಸಭ್ಯರೇ, ನಿರ್ವಾಹವಿಲ್ಲದೇ ಪಾಪದ ಕೆಲಸ ಮಾಡುತ್ತಿದ್ದೇವೆ, ಅದನ್ನು ಕಮ್ಮಿ ಮಾಡಬೇಕು ಎಂದು ನುಡಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ತಾವು ಭಾಷೆ, ದೇಶಪ್ರೇಮ, ಓದುವ ಅಭಿರುಚಿ ಬೆಳೆಸಲು ಮಾಡುತ್ತಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಸಾಹಿತಿ ಎಸ್.ಎನ್.ಸೇತುರಾಮ್, ಕವಿ, ಸಾಹಿತಿ ಶಾಂತಾರಾಮ್ ವಿ ಶೆಟ್ಟಿ, ತುಮಕೂರಿನ ಗೋಮಿನಿ ಪ್ರಕಾಶದ ಪ್ರಕಾಶಕ ಗುಬ್ಬಚ್ಚಿ ಸತೀಶ್, ನಿವೃತ್ತ ಶಿಕ್ಷಕ ಸುಂದರನ್ ಹಾಗೂ ರಮಾ ದಂಪತಿಯನ್ನು ಸನ್ಮಾನಿಸಲಾಯಿತು.
ನಗರಸಭಾ ಸದಸ್ಯೆ ಸುಗುಣಾ ಲಕ್ಷ್ಮೀನಾರಾಯಣ್, ಅಜಿತ್ ಕೌಂಡಿನ್ಯ, ನವ್ಯ, ಲಕ್ಷ್ಮೀನಾರಾಯಣ್, ಹೈಕೋರ್ಟ್ ವಕೀಲ ಮುನಿರಾಜು, ಚಂಪಾ ಸತೀಶ್, ಸಿನಿಮಾ ನಟ ಸಿ.ಎನ್.ಮುನಿರಾಜು, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಕಾರ್ಯದರ್ಶಿ ಸತೀಶ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ಅನಿಲ್ ಪದ್ಮಸಾಲಿ, ಸಾಹಿತಿಗಳಾದ ಚಂದ್ರಶೇಖರ್ ಹಡಪದ್, ಸುಂಡ್ರಳ್ಳಿ ಶ್ರೀನಿವಾಸಮೂರ್ತಿ, ಪ್ರೊ.ವೇಣುಗೋಪಾಲ್, ಶಿವರಾಂ, ಕಲಾಧರ್, ದೇವರಾಜ್, ವಿ.ವೆಂಕಟರಮಣ, ಕೃಷ್ಣಮೂರ್ತಿ, ಚಂದ್ರಶೇಖರ್, ನಾರಾಯಣ್, ಪ್ರಸಾದ್, ನಾಗರಾಜರಾವ್, ಪ್ರಸನ್ನಕುಮಾರಿ, ಸುರೇಶ್ ಹಾಜರಿದ್ದರು.
ಮಾನಸಿಕವಾಗಿ ನಾವು ಭ್ರಷ್ಟರಾಗದಿದ್ದಲ್ಲಿ ಬದುಕು ಸುಲಭ ಆಗುತ್ತದೆ – ಸಾಹಿತಿ ಎಸ್.ಎನ್.ಸೇತುರಾಮ್
ಹತ್ತನೇ ದಿನಕ್ಕೆ ಕಾಲಿಟ್ಟ ನಗರಸಭೆ ಹೊರಗುತ್ತಿಗೆ ಜಲಗಾರರ ಪ್ರತಿಭಟನೆ
ನಗರದ ನಗರಸಭೆ ಕಾರ್ಯಾಲಯದ ಮುಂಭಾಗದಲ್ಲಿ ಸಿಐಟಿಯು ನೇತೃತ್ವದಲ್ಲಿ ಜಲಗಾರರು ಮಾಡುತ್ತಿರುವ ಅನಿರ್ಧಿಷ್ಠ ಹೋರಾಟ ಹತ್ತನೇ ದಿನವಾದ ಭಾನುವಾರವೂ ಮುಂದುವರೆದಿದೆ.
ಸಿಐಟಿಯು ಬೆಂಬಲದೊಂದಿಗೆ ನಗರಸಭೆಯಲ್ಲಿ ಗುತ್ತಿಗೆ ಆಧಾರದದಲ್ಲಿ ಕಾರ್ಯ ನಿರ್ವಹಿಸುವ ಜಲಗಾರರು ತಮ್ಮ ಹದಿನೈದು ತಿಂಗಳ ವೇತನ ಸೇರಿದಂತೆ ಸಮಾನ ಕೆಲಸ ಸಮಾನ ವೇತನಕ್ಕಾಗಿ ಆಗ್ರಹಿಸಿ ನವೆಂಬರ್ ೨ ರ ಶುಕ್ರವಾರದಿಂದ ನಡೆಸುತ್ತಿರುವ ಹೋರಾಟ ಹತ್ತನೇ ದಿನವೂ ಮುಂದುವರೆದಿದೆ.
ಕಳೆದ ಹದಿನೈದು ತಿಂಗಳ ತಮ್ಮ ವೇತನ ಪಾವತಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿರುವ ಹೋರಾಟಕ್ಕೆ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳು ಸಕಾರವಾಗಿ ಸ್ಪಂದಿಸುತ್ತಿಲ್ಲ. ನ್ಯಾಯಯುತವಾಗಿ ನಮ್ಮ ವೇತನ ಪಾವತಿಸಿ ಎಂದಷ್ಟೇ ಕೇಳುತ್ತಿದ್ದೇವಾದರೂ ೨ ತಿಂಗಳು ಸಂಬಳ ಹಾಕುತ್ತೇವೆ, ನಾಲ್ಕು ತಿಂಗಳ ಸಂಬಳ ಹಾಕುತ್ತೇವೆ ಎಂದು ಹೇಳುವ ಮೂಲಕ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾಲ ಕಳೆಯುತ್ತಿದ್ದಾರೆ.
ಕಳೆದ ಹದಿನೈದು ತಿಂಗಳ ಕಾಲ ವೇತನವಿಲ್ಲದೇ ದುಡಿದ ನಮ್ಮಲ್ಲಿ ಹೋರಾಟ ಮಾಡಲು ಸಹ ಆರ್ಥಿಕ ಶಕ್ತಿ ಇಲ್ಲದಾಗಿದೆ. ಹಾಗಾಗಿ ಪ್ರತಿಭಟನೆ ಸ್ಥಳದಲ್ಲಿ ನಿಧಿ ಸಂಗ್ರಹಿಸಲು ಮುಂದಾಗಿದ್ದು ನಮ್ಮ ಭೇಡಿಕೆ ಈಡೇರುವವರೆಗೂ ಅನಿರ್ಧಿಷ್ಟ ಹೋರಾಟ ಮಾಡಲು ನಾಗರಿಕರು ನಿಧಿ ಸಂಗ್ರಹ ಪೆಟ್ಟಿಗೆಯಲ್ಲಿ ತಮ್ಮ ಕೈಲಾದ ಆರ್ಥಿಕ ಸಹಾಯ ಮಾಡುವ ಮೂಲಕ ನಮಗೆ ಬೆಂಬಲ ವ್ಯಕ್ತಪಡಿಸಬೇಕು ಎಂದು ಜಲಗಾರ ನಾಗರಾಜ್ ಮನವಿ ಮಾಡಿದ್ದಾರೆ.
ಸಿ.ಐ.ಟಿ.ಯು ಅಧ್ಯಕ್ಷ ಸುದರ್ಶನ್, ಗ್ರಾಮ ಪಂಚಾಯಿತಿ ನೌಕರರ ಸಂಘದ ಉಪಾಧ್ಯಕ್ಷ ಸುಬ್ರಮಣಿ, ಭಕ್ತರಹಳ್ಳಿ ನಾರಾಯಣಸ್ವಾಮಿ, ಬಿಸಿಯೂಟ ನೌಕರರ ಸಂಘದ ತಾಲ್ಲೂಕು ಕಾರ್ಯದರ್ಶಿ ಮಂಜುಳಾ, ಗ್ರಾಮ ಪಂಚಾಯಿತಿ ನೌಕರರ ಸಂಘದ ಗೌರವಾಧ್ಯಕ್ಷೆ ಮಧುಲಾತಾ, ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಕಾರ್ಯದರ್ಶಿ ಮಂಜುಳಾ, ಗ್ರಾಮ ಪಂಚಾಯಿತಿ ನೌಕರರ ಸಂಘದ ನಾರಾಯಣಸ್ವಾಮಿ, ಕೊತ್ತನೂರು ಮಂಜುನಾಥ್, ಚೀಮಂಗಲ ಹರೀಶ್, ಕುಂಬಿಗಾನಹಳ್ಳಿ ಅಶ್ವತ್ಥಪ್ಪ, ಗಂಜಿಗುಂಟೆ ಈರಪ್ಪ, ವೈ ಹುಣಸೇನಹಳ್ಳಿ ದೊಡ್ಡಬೊಮ್ಮಣ್ಣ, ಹಂಡಿಗನಾಳ ಮುನೇಗೌಡ, ಜಲಗಾರರಾದ ಟಿ.ಎನ್.ರವಿ, ರಮೇಶ್, ರಾಜೇಶ್, ಆನಂದ್, ಮಂಜುನಾಥ್, ಮುರಳಿ.ಆರ್, ಬಾಬು, ನವಾಜ್ ಪಾಷಾ, ನವೀನ್‌ಕುಮಾರ್, ಕೆ.ಶ್ರೀನಿವಾಸ್, ನರಸಿಂಹಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಉಚಿತ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ
ಪ್ರಕೃತಿಯಲ್ಲಿ ಹವಾಮಾನ ವೈಪರೀತ್ಯ ಹಾಗೂ ಆಹಾರದ ವ್ಯತ್ಯಾಸದ ಕಾರಣ ಮಕ್ಕಳು ಕಿವಿ, ಗಂಟಲು, ಮೂಗು ಸಂಬಂಧಿಸಿದಂತೆ ಅನಾರೋಗ್ಯಕ್ಕೆ ಒಳಗಾಗುವರು. ಉಚಿತವಾಗಿ ನಡೆಯುವ ಆರೋಗ್ಯ ಶಿಬಿರದಲ್ಲಿ ತಜ್ಞರಿಂದ ತಪಾಸಣೆ ಮಾಡಿಸಿಕೊಂಡು ಆರೋಗ್ಯ ಸುಧಾರಿಸಿಕೊಳ್ಳಿ ಎಂದು ಮಕ್ಕಳ ತಜ್ಞ ಡಾ. ನಿರ್ಮಲರಾಜ್ ತಿಳಿಸಿದರು.
ನಗರದ ಮಾನಸ ಆಸ್ಪತ್ರೆಯಲ್ಲಿ ಭಾನುವಾರ ಉಚಿತ ಮಕ್ಕಳ ಆರೋಗ್ಯ ಮತ್ತು ಕಿವಿ, ಮೂಗು, ಗಂಟಲು ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಮಕ್ಕಳಲ್ಲಿ ಪದೇ ಪದೇ ಜ್ವರ, ಶೀತ, ಕೆಮ್ಮ ಬರುವುದು, ಬೆಳವಣಿಗೆಯ ಸಮಸ್ಯೆ, ರಕ್ತ ಹೀನತೆ, ಚರ್ಮದ ಸಮಸ್ಯೆಗಳು, ಕಿವಿ ನೋವು, ಕಿವಿ ಸೋರುವುದು, ಗಂಟಲಲ್ಲಿ ನೋವು, ಗೆಡ್ಡೆ, ಉಸಿರಾಟದ ತೊಂದರೆ ಮುಂತಾದ್ವುಗಳನ್ನು ಪರೀಕ್ಷಿಸಿಕೊಳ್ಳಿ ಎಂದರು.
ಸುಮಾರು ೧೨೦ ಕ್ಕೂ ಹೆಚ್ಚು ಮಕ್ಕಳು ಹಾಗೂ ಹಿರಿಯರು ಶಿಬಿರದಲ್ಲಿ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡರು. ಈ ಸಂದರ್ಭದಲ್ಲಿ ಉಚಿತ ಔಷಧಿಗಳನ್ನು ಸಹ ನೀಡಲಾಯಿತು.
ವೈದ್ಯರಾದ ಡಾ.ಜಗದೀಶ್, ಡಾ.ಅಕ್ಷಯ್, ಡಾ.ನರಸಿಂಹಮೂರ್ತಿ, ಮಾನಸ ಆಸ್ಪತ್ರೆಯ ವ್ಯವಸ್ಥಾಪಕ ಸುರೇಶ್, ಶಿವಕುಮಾರ್, ಮಂಜುಳಮ್ಮ ಹಾಜರಿದ್ದರು.
ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ
ನಗರದ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗೆ ನಡೆದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು ಮಾತನಾಡಿದರು.
ಮಹಿಳೆಯರಲ್ಲಿ ಪ್ರೀತಿ ವಾತ್ಸಲ್ಯ ಹೆಚ್ಚಾಗಿರುವ ಕಾರಣಕ್ಕೆ ಅಕ್ಷರ ದಾಸೋಹ ಯೋಜನೆಗೆ ಮಹಿಳೆಯರನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಇದರ ಹಿಂದೆ ಮಹಿಳೆಯರು ಸ್ವಾವಲಂಬಿಯಾಗಿಸುವ ಉದ್ದೇಶವಿದೆ. ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಅಡುಗೆ ಸಿಬ್ಬಂದಿ ಪಾತ್ರ ಮುಖ್ಯ ಎಂದು ಅವರು ತಿಳಿಸಿದರು.
ಅಡುಗೆ ಗುಣಮಟ್ಟದ ಬಗ್ಗೆ ಸಿಬ್ಬಂದಿ ಹೆಚ್ಚು ಕಾಳಜಿವಹಿಸಬೇಕು. ಅಡುಗೆ ಕೊಠಡಿ ಸೇರಿದಂತೆ ಪರಿಕರಗಳು ಸ್ವಚ್ಛವಾಗಿರಬೇಕು. ಅಶುದ್ಧತೆಯಿಂದ ನಾನಾ ಕಾಯಿಲೆಗಳು ಹರಡುತ್ತವೆ. ಬಿಸಿಯೂಟವನ್ನು ಮಕ್ಕಳಿಗಾಗಿ ತಯಾರಿಸುವುದರಿಂದ ಹೆಚ್ಚು ಕಾಳಜಿಯ ಅಗತ್ಯ ಇದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಚಂದ್ರಶೇಖರ್, ಪ್ರಭಾಕರ್ ಮತ್ತು ಕಲ್ಪನಾ ಅಡುಗೆಯ ಗುಣಮಟ್ಟ, ಶುಚಿತ್ವದ ಕುರಿತಂತೆ ಸಲಹೆ, ಸೂಚನೆಗಳು, ಅಡುಗೆ ಗುಣಮಟ್ಟ ಪರೀಕ್ಷೆ ಹಾಗೂ ವಿವರಗಳನ್ನು ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಸಿಬ್ಬಂದಿಗೆ ಅಡುಗೆ ಸಿಲಿಂಡರ್ ಬಳಕೆ ಬಗ್ಗೆ ಇಂಡೇನ್ ಗ್ಯಾಸ್ ಸಿಬ್ಬಂದಿ ಮಾಹಿತಿ ನೀಡಿದರು. ಅಗ್ನಿಶಾಮಕ ದಳದ ಅಧಿಕಾರಿಗಳು ಬೆಂಕಿ ಅವಘಡವಾದಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಕ್ವಿಜ್ ನಡೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆಂಜನೇಯ, ಶ್ರೀನಿವಾಸ್, ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಮುನಿಲಕ್ಷ್ಮಮ್ಮ, ಕಾರ್ಯದರ್ಶಿ ಶ್ವೇತಾ, ಖಜಾಂಚಿ ಮಂಜುಳಾ, ಇಂಡೇನ್ ಗ್ಯಾಸ್ ನ ಪ್ರಕಾಶ್, ಅಣ್ಣಪ್ಪ, ಕುಮಾರ್, ಭರತ್, ಮಂಜುನಾಥ್ ಹಾಜರಿದ್ದರು.
ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಮರಗಳ ಮಾರಣಹೋಮ
ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಸುಮಾರು ೧೫ ವರ್ಷಗಳ ಹಳೆಯದಾದ ಮರಗಳನ್ನು ದುಷ್ಕರ್ಮಿಗಳು ಬುಧವಾರ ರಾತ್ರಿ ಕಡಿದಿದ್ದಾರೆ.
ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ರಾತ್ರಿ ಹಗಲು ಪಾಳಿಯಲ್ಲಿ ಕಾವಲುಗಾರರನ್ನು ನೇಮಿಸಿದ್ದು ಮಾರುಕಟ್ಟೆಯಲ್ಲಿ ಜನಸಂದಣಿ ಇದ್ದರೂ ಸಹ ದುಷ್ಕರ್ಮಿಗಳು ಮರಗಳನ್ನು ರಾತ್ರಿ ಚಾಣಾಕ್ಷತೆಯಿಂದ ಕಡಿದಿದ್ದಾರೆ. ಕಡಿದ ಮರಗಳ ತುಂಡುಗಳನ್ನು ಸಾಗಾಣಿಕೆ ಮಾಡಲು ಬಂದ ವಾಹನವನ್ನು ಇಲ್ಲಿನ ಕಾವಲುಗಾರರು ಹಿಡಿದು ನಿಲ್ಲಿಸಿದ್ದಾರೆ. ಮರದ ಕಟ್ಟಿಗೆಗಳನ್ನು ಅಲ್ಲೆ ಬಿಟ್ಟು ವಾಹನದ ಸಮೇತ ಪರಾರಿಯಾಗಿದ್ದಾರೆ.
ಎರಡು ಗೋದಾಮುಗಳ ನಡುವೆ ಇರುವ ಕಿರಿದಾದ ಸ್ಥಳದಲ್ಲಿ ಸುಮಾರು ೧೫ ವರ್ಷ ಹಳೆಯದಾದ ಬೃಹತ್ ಗಾತ್ರದ ಮರಗಳನ್ನು ಕಡಿದು ನೆಲಕ್ಕುರುಳಿದ ಮರಗಳನ್ನು ಕಂಡು ಕೆಲವು ರೀಲರುಗಳು ಮಾರುಕಟ್ಟೆ ಉಪನಿರ್ದೇಶಕರಿಗೆ ದೂರು ನೀಡಿದ್ದಾರೆ. ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ದೂರಿನ ಮೇರೆಗೆ ಆಗಮಿಸಿದ ಅರಣ್ಯ ಇಲಾಖೆಯ ಪ್ರಾದೇಶಿಕ ಕಚೇರಿ ಉಪವಿಭಾಗಾಧಿಕಾರಿ ಮದನ್ ಮೋಹನ್ ರವರು ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ. ಬಹಳ ಬೆಲೆ ಬಾಳುವ ಎರಡು ಮರಗಳನ್ನು ಕಡಿದಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿ ಮರಗಳನ್ನು ಕಡಿದವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಮಾರುಕಟ್ಟೆಯಲ್ಲಿನ ಮರಗಳನ್ನು ಕಡಿಯುವುದು ಸುಲಭವೇನಲ್ಲ, ಈ ಬಗ್ಗೆ ಯಾರ ಕೈವಾಡವಿದೆ ಎಂದು ಪತ್ತೆ ಹಚ್ಚಬೇಕು. ಸರಿಯಾಗಿ ತನಿಖೆ ನಡೆಸಿ ಅಪರಾಧಿಗಳನ್ನು ಪತ್ತೆಹಚ್ಚಿ ಸೂಕ್ತವಾದ ಶಿಕ್ಷೆ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರೈತರ ಸಮಸ್ಯೆಗಳನ್ನು ಬಗೆಹರಿಸಲು ರೈತ ಸಂಘದಿಂದ ರೇಷ್ಮೆ ಕೃಷಿ ಆಯುಕ್ತರಿಗೆ ಮನವಿ
ರೇಷ್ಮೆ ಕೃಷಿಯನ್ನು ಅವಲಂಬಿಸಿರುವ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಕೋರಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ಸದಸ್ಯರು ರೇಷ್ಮೆ ಕೃಷಿ ಆಯುಕ್ತ ಕೆ.ಎಸ್.ಮಂಜುನಾಥ್ ಅವರಿಗೆ ಮನವಿಯನ್ನು ಸಲ್ಲಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಈಚೆಗೆ ರೇಷ್ಮೆ ಕೃಷಿ ಆಯುಕ್ತರು ಭೇಟಿ ನೀಡಿದ್ದಾಗ, ರೈತ ಸಂಘದ ಸದಸ್ಯರು ರೇಷ್ಮೆಯನ್ನು ಅವಲಂಬಿತರಾದವರ ಸಮಸ್ಯೆಗಳನ್ನು ವಿವರಿಸಿದರು.
ಒಂದು ಕೆಜಿ ರೇಷ್ಮೆ ಗೂಡನ್ನು ಬೆಳೆಯಲು ೩೫೦ ರೂ ಆಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಒಂದು ಕೇಜಿ ರೇಷ್ಮೆ ಗೂಡಿನ ಬೆಲೆ ೨೫೦ ರಿಂದ ೩೦೦ ರೂಗಳಿಗೆ ಕುಸಿದಿದೆ. ರೇಷ್ಮೆಯನ್ನು ನಂಬಿದ ರೈತರು ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ರೈತರಿಗೆ ಬೆಂಬಲ ಬೆಲೆಯನ್ನು ನೀಡಬೇಕು. ರೇಷ್ಮೆ ನೂಲು ಬಿಚ್ಚಾಣಿಕೆದಾರರ ಸಮಸ್ಯೆಗಳನ್ನು ಬಗೆಹರಿಸಬೇಕು. ಶಿಡ್ಲಘಟ್ಟ ತಾಲ್ಲೂಕಿನ ಕಚ್ಚಾ ರೇಷ್ಮೆಯನ್ನು ಬೇರೆ ರಾಜ್ಯಗಳಿಗೆ ರಫ್ತು ಮಾಡಲಾಗುತ್ತಿದೆ. ನಮ್ಮ ತಾಲ್ಲೂಕಿನಲ್ಲಿಯೇ ರೇಷ್ಮೆ ಸೀರೆ ಹಾಗೂ ಬಟ್ಟೆ ತಯಾರಿಸುವ ಮಗ್ಗಗಳ ಕಾರ್ಖಾನೆಗಳನ್ನು ಸ್ಥಾಪಿಸಿದರೆ ಉದ್ಯೋಗ ಸೃಷ್ಟಿಯಾಗುತ್ತದೆ ಮತ್ತು ಜಿಲ್ಲೆಯ ಅಭಿವೃದ್ಧಿಯಾಗುತ್ತದೆ. ರೇಷ್ಮೆ ಕೃಷಿಕರು ಹಾಗೂ ರೀಲರುಗಳ ಸಭೆ ಕರೆದು ಕುಂದುಕೊರತೆಗಳನ್ನು ನಿವಾರಿಸಬೇಕು. ರೇಷ್ಮೆ ಉದ್ದಿಮೆ ಅಭಿವೃದ್ಧಿಯಾಗಲು ಸಹಕರಿಸಬೇಕೆಂದು ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆಈಸ್.ವೆಂಕಟಸ್ವಾಮಿ, ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಕಾರ್ಯದರ್ಶಿ ಪ್ರತೀಶ್, ಬೂದಾಳ ರಾಮಣ್ಣ, ರಾಜಗೋಪಾಲ್, ಮಾರುತಿ, ಮುದ್ದುರಾಜು, ಶಂಕರನಾರಾಯಣ ಹಾಜರಿದ್ದರು.
ನವೆಂಬರ್ 10 ರಂದು ಟಿಪ್ಪು ಜಯಂತಿ ಆಚರಣೆ
ರಾಷ್ಟ್ರೀಯ ಹಾಗೂ ನಾಡ ಹಬ್ಬಗಳ ಆಚರಣಾ ಸಮಿತಿಯಿಂದ ನವೆಂಬರ್ ೧೦ ರಂದು ಟಿಪ್ಪು ಜಯಂತಿ ನಡೆಸಲಿದ್ದು, ಎಲ್ಲ ಸಂಘ ಸಂಸ್ಥೆಗಳು, ಸಮುದಾಯದವರು ಜಯಂತಿಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ತಹಶೀಲ್ದಾರ್ ಎಸ್.ಅಜಿತ್ ಕುಮಾರ್ ರೈ ಮನವಿ ಮಾಡಿದರು.
ತಾಲ್ಲೂಕು ಆಡಳಿತದ ವತಿಯಿಂದ ಟಿಪ್ಪು ಜಯಂತಿ ಆಚರಣೆಯ ಹಿನ್ನಲೆಯಲ್ಲಿ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರದ ನಿರ್ದೇಶನದಂತೆ ಟಿಪ್ಪು ಜಯಂತಿಯನ್ನು ಆಚರಿಸಲಾಗುವುದು. ಜಯಂತಿ ಅಂಗವಾಗಿ ಯಾವುದೇ ರೀತಿಯ ಮೆರವಣಿಗೆ ಮಾಡುವುದನ್ನು ನಿಷೇಧಿಸಲಾಗಿದ್ದು, ಸಮುದಾಯದವರು ಸಹಕಾರ ನೀಡಬೇಕು ಎಂದರು.
ಈಗಾಗಲೇ ರಾಜ್ಯಾದ್ಯತ ಪ್ಲಾಸ್ಟಿಕ್ ನಿಷೇಧವಿರುವುದರಿಂದ ಫ್ಲೆಕ್ಸ್, ಬ್ಯಾನರ್‌ಗಳನ್ನು ಕಟ್ಟುವಂತಿಲ್ಲ. ಬೆಳಗ್ಗೆ ೧೦ ಗಂಟೆಗೆ ಕಾರ್ಯಕ್ರಮ ಆರಂಭಿಸಿ ನಿಗಧಿತ ಸಮಯದೊಳಗೆ ಮುಗಿಸಲು ಸಹಕರಿಸುವಂತೆ ಕೋರಿದರು.
ಸಭೆಯಲ್ಲಿದ್ದ ಮುಸ್ಲೀಂ ಮುಖಂಡರು ಮಾತನಾಡಿ, ವೇದಿಕೆ ಕಾರ್ಯಕ್ರಮವನ್ನು ಮದ್ಯಾಹ್ನ ೨ ಗಂಟೆಗೆ ನಿಗಧಿ ಮಾಡಿ ಎಂದು ಸಲಹೆ ನೀಡಿದರು. ಆಗ ತಹಶೀಲ್ದಾರ್, ಸರ್ಕಾರ ಹಾಗೂ ಜಿಲ್ಲಾಡಳಿತದ ತೀರ್ಮಾನದಂತೆ ಮದ್ಯಾಹ್ನ ೨ ಗಂಟೆಯೊಳಗೆ ಕಾರ್ಯಕ್ರಮ ಮುಗಿಯಬೇಕು. ಹಾಗಾಗಿ ಬೆಳಗ್ಗೆ ೧೦ ಗಂಟೆಗೆ ಕಾರ್ಯಕ್ರಮ ಆರಂಭಿಸಲಾಗುವುದು ಸಹಕರಿಸಿ ಎಂದರು.
ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ ಮಾತನಾಡಿ, ಟಿಪ್ಪು ಸುಲ್ತಾನ್ ಜಯಂತಿಯ ಅಂಗವಾಗಿ ನಗರದಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್ ಕಟ್ಟುವುದನ್ನು ನಿಷೇಧಿಸಲಾಗಿದೆ. ಶನಿವಾರ ನಿಗಧಿತ ಸಮಯಕ್ಕೆ ಸಮುದಾಯದವರೂ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಸಾರ್ವಜನಿಕರು ಪಾಲ್ಗೊಂಡು ಜಯಂತಿಯನ್ನು ಶಾಂತಿ ಹಾಗು ಅರ್ಥಪೂರ್ಣವಾಗಿ ಆಚರಿಸಲು ಸಹಕರಿಸಿ ಎಂದರು.
ಸರ್ಕಲ್ ಇನ್ಸ್ ಪೆಕ್ಟರ್ ಆನಂದ್‌ಕುಮಾರ್ ಮಾತನಾಡಿ, ಟಿಪ್ಪು ಸುಲ್ತಾನ್ ಜಯಂತಿಯ ಅಂಗವಾಗಿ ಸರ್ಕಾರ ವಿಧಿಸಿರುವ ನೀತಿ ನಿಯಮಗಳನ್ನು ಎಲ್ಲರೂ ಒಪ್ಪಿಕೊಂಡು ಜಯಂತಿಯನ್ನು ಯಶಸ್ವಿಗೊಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸಮುದಾಯದ ಹಿರಿಯರು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರಸಭೆ ಅಧ್ಯಕ್ಷ ಅಫ್ಸರ್‌ಪಾಷ, ತಾಲ್ಲೂಕು ಪಂಚಾಯಿತಿ ಇಓ ಎಂ.ವೆಂಕಟೇಶ್, ನಗರಠಾಣೆ ಪಿಎಸ್ಸೈ ಲಿಯಾಖತ್, ಸಮುದಾಯದ ಮುಖಂಡರಾದ ಮೇಲೂರು ಅಜೀಜ್, ಹೈದರಾಲಿ, ಅಕ್ರಮ್‌ಪಾಷ, ಮೌಲಾ, ಅಸಾದ್ ಹಾಜರಿದ್ದರು.
ಕಸಾಪ ವತಿಯಿಂದ “ಮನೆಯಂಗಳದಲ್ಲಿ ನುಡಿಸಿರಿ” ಕಾರ್ಯಕ್ರಮ
ನಗರದ ಹಳೆ ಪೆಟ್ರೋಲ್ ಬಂಕ್ ಹಿಂದಿನ ರಸ್ತೆಯಲ್ಲಿರುವ ಶಿಕ್ಷಕರಾದ ಶ್ರೀನಿವಾಸರೆಡ್ಡಿ ಮತ್ತು ದಾಕ್ಷಾಯಿಣಿ ದಂಪತಿಯ ಮನೆಯಲ್ಲಿ ಮಂಗಳವಾರ ಸಂಜೆ ತಾಲ್ಲೂಕು ಕಸಾಪ ವತಿಯಿಂದ ಆಯೋಜಿಸಿದ್ದ “ಮನೆಯಂಗಳದಲ್ಲಿ ನುಡಿಸಿರಿ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ವನ್ಯಜೀವಿ ಛಾಯಾಗ್ರಾಹಕ ಡಿ.ಜಿ.ಮಲ್ಲಿಕಾರ್ಜುನ ಮಾತನಾಡಿದರು.
“ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಎಂದು ರಾಮಾಯಣದಲ್ಲಿ ರಾಮ ಲಕ್ಷ್ಮಣನಿಗೆ ಹೇಳುವ ಮಾತು ಸರ್ವಕಾಲಿಕವದದ್ದು. ನಮ್ಮ ಜನ್ಮಭೂಮಿಗೆ ನಾವು ಸದಾ ಋಣಿಗಳು. ನಮ್ಮ ತಾಯ್ನೆಲವನ್ನು ಸಸ್ಯಶಾಮಲೆಯನ್ನಾಗಿಸಲು ದೀಪಾವಳಿ ಹಬ್ಬದ ಸುಸಂದರ್ಭದಲ್ಲಿ ಸಂಕಲ್ಪಿಸೋಣ ಎಂದು ಅವರು ತಿಳಿಸಿದರು.
೧೮೬೨ ರಿಂದ ೧೮೭೦ ರವರೆಗೂ ಮೈಸೂರು ಮತ್ತು ಕೂರ್ಗ್ ನ ಮುಖ್ಯ ಕಮೀಷನರ್ ಆಗಿದ್ದ ಬೌರಿಂಗ್ ತಮ್ಮ ಅನುಭವಗಳನ್ನು ದಾಖಲಿಸಿದ್ದಾರೆ. ಅದರಲ್ಲಿ ಅವರು, ’ನಂದಿ ಬೆಟ್ಟದ ಮೇಲೆ ನಿಂತರೆ ೩೦೦ ಕೆರೆಗಳು ಕಾಣುತ್ತವೆ. ಚಿಕ್ಕಬಳ್ಳಾಪುರವೆಂಬ ಊರು ಬಹುಶಃ ಮೈಸೂರು ಸಂಸ್ಥಾನದಲ್ಲೇ ಸುಭಿಕ್ಷವಾದ ಊರೆನ್ನಬಹುದು. ಉತ್ತಮ ವ್ಯಾಪಾರ ವಹಿವಾಟು ನಡೆಯುವ ದೊಡ್ಡ ಊರು ಚಿಕ್ಕಬಳ್ಳಾಪುರ. ಇಲ್ಲಿ ಸಾಕಷ್ಟು ನೀರಿನ ಪೂರೈಕೆ ಇದ” ಎಂದು ಬರೆದಿದ್ದಾರೆ. ಸುಮಾರು ನೂರೈವತ್ತು ವರ್ಷಗಳ ಹಿಂದಿನ ನಮ್ಮ ಪ್ರಕೃತಿ ಸಂಪತ್ತನ್ನು ಪುನರುಜ್ಜೀವಗೊಳಿಸುವಲ್ಲಿ ನಾವು ಕಾರ್ಯಪ್ರವೃತ್ತರಾದರೆ ಅದು ಬಹುದೊಡ್ಡ ಕನ್ನಡ ಸೇವೆಯಾಗುತ್ತದೆ ಎಂದರು.
ಎಸ್.ಎಫ್.ಸಿ.ಎಸ್ ಬ್ಯಾಂಕ್ ಅಧ್ಯಕ್ಷ ಬಿ.ನಾರಾಯಣಸ್ವಾಮಿ ಮಾತನಾಡಿ, ಕನ್ನಡದ ಕಂಪು ಮನೆಮನಗಳಲ್ಲಿ ಹರಡಬೇಕು. ಈ ನಿಟ್ಟಿನಲ್ಲಿ ಮನೆಗಳಲ್ಲಿ ಕಾರ್ಯಕ್ರಮ ಆಯೋಜಿಸಲು ಅನುವು ಮಾಡಿಕೊಡುವ ಮೂಲಕ ಕನ್ನಡದ ಸೊಗಡು ಹರಡುವಲ್ಲಿ ಮತ್ತು ಮನೆಗೆ ಬಂದ ಕನ್ನಡ ಅಭಿಮಾನಿಗಳಿಗೆ ಸತ್ಕರಿಸುವ ಮೂಲಕ ನಮ್ಮ ತಾಲ್ಲೂಕಿನ ಹಲವಾರು ಕುಟುಂಬದವರು ಮಾದರಿಯಾಗಿದ್ದಾರೆ ಎಂದು ಹೇಳಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ಕನ್ನಡದ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಮಾಡುವ ಮೂಲಕ ನಮ್ಮ ಭಾಷೆಯನ್ನು ಪ್ರೀತಿಸುವ ಜನರನ್ನು ಬೆಳೆಸುವುದೇ ಕಸಾಪದ ಉದ್ದೇಶವಾಗಿದೆ. ನಮ್ಮ ತಾಲ್ಲೂಕಿನಲ್ಲಿ ಹಳ್ಳಿ ಹಳ್ಳಿಗಳಲ್ಲಿ ಕಸಾಪ ಕಾರ್ಯಕ್ರಮಕ್ಕೆ ಅತ್ಯುತ್ತಮ ಪ್ರೋತ್ಸಾಹ ಸಿಗುತ್ತಿದೆ. ಶಾಲೆಗಳಲ್ಲಿ, ಮನೆಗಳಲ್ಲಿ, ಹಸುರು ಪರಿಸರದ ನಡುವೆ, ಸಾಧಕರ ಸಂಗಡ ನಾವು ಕನ್ನಡ ಡಿಂಡಿಮವನ್ನು ಬಾರಿಸುತ್ತಿದ್ದೇವೆ ಎಂದು ಹೇಳಿದರು.
ಜಾನ್ಸಿರೆಡ್ಡಿ, ಶ್ರೀನಿವಾಸರೆಡ್ಡಿ, ಮುನಿರಾಜು, ಸುಂದರಾಚಾರಿ, ಪ್ರಕೃತಿ, ಚಿಕ್ಕನರಸಿಂಹಪ್ಪ, ಜಸ್ಮಿತಾ ಡಾನ್ಸ್ ಅಕಾಡೆಮಿಯ ಧನುಶ್ರೀ ಮಾನಸ ಭಕ್ತಿ ಗೀತೆಗಳನ್ನು ಹಾಡಿದರು. ಇತ್ತೀಚೆಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವನ್ಯಜೀವಿ ಛಾಯಾಗ್ರಾಹಕ ಡಿ.ಜಿ.ಮಲ್ಲಿಕಾರ್ಜುನ ಅವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು.
ಕ್ರೀಡಾಪಟು ಜಯಂತಿಗ್ರಾಮ ನಾರಾಯಣಸ್ವಾಮಿ, ಶ್ರೀನಿವಾಸರೆಡ್ಡಿ, ಟಿ.ಟಿ.ನರಸಿಂಹಪ್ಪ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮೋಹನ್, ಜನಾರ್ಧನ್, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ, ಕಸಾಪ ಕಾರ್ಯದರ್ಶಿಗಳಾದ ಚಾಂದ್ ಪಾಷ, ಸತೀಶ್, ಮಹಿಳಾ ಪ್ರತಿನಿಧಿ ದಾಕ್ಷಾಯಿಣಿ, ಮುನಿಯಪ್ಪ, ನಗರ ಘಟಕದ ಅಧ್ಯಕ್ಷ ಸಿ.ಎನ್.ಮುನಿರಾಜು, ಮಂಜುನಾಥ್, ಎಸ್.ವಿ.ನಾಗರಾಜರಾವ್, ಮನೋಜ್, ಸರಸ್ವತಮ್ಮ, ಯಾಸ್ಮಿನ್, ಚಂದ್ರಕಲಾ, ಅಮರನಾಥ್, ಪ್ರಕಾಶ್, ದೇವರಾಜ್, ಅಮಿತ್ ರೆಡ್ಡಿ ಹಾಜರಿದ್ದರು.
ಕಸಾಪ ತಾಲ್ಲೂಕು ಘಟಕದಿಂದ “ಗಾನಸಿರಿ” ಕಾರ್ಯಕ್ರಮ
ತಾಲ್ಲೂಕಿನ ಮುತ್ತೂರಿನಲ್ಲಿ ಶ್ರೀವೀರಾಂಜನೇಯಸ್ವಾಮಿ ಸಮುದಾಯ ಭವನದಲ್ಲಿ ಭಾನುವಾರ ಸಂಜೆ ಕಸಾಪ ತಾಲ್ಲೂಕು ಘಟಕದಿಂದ ನಡೆದ “ಗಾನಸಿರಿ” ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ವೇದಬ್ರಹ್ಮಶ್ರೀ ಮುತ್ತೂರು ವೆಂಕಟೇಶಮೂರ್ತಿ ಮಾತನಾಡಿದರು.
ಹಳ್ಳಿಗಳಲ್ಲಿ ದುಡಿವ ರೈತರ, ಶ್ರಮಿಕರ ಜೀವಾಳ ಜನಪದ. ದುಡಿದು ಬಂದವರಿಗೆ ಜನಪದ ಕಲೆಗಳು ಚೈತನ್ಯವನ್ನು ಮತ್ತು ಉತ್ಸಾಹವನ್ನು ತುಂಬುತ್ತದೆ ಎಂದು ಅವರು ತಿಳಿಸಿದರು.
ನಾಟಕ, ಭಜನೆ, ಹರಿಕಥೆ, ಜಾನಪದ ಕಲೆಗಳು ಹಳ್ಳಿಗಳಲ್ಲಿ ಹಿಂದೆ ಅವಿಭಾಜ್ಯ ಅಂಗಗಳಂತಿದ್ದವು. ದುಡಿವ ಜನರ ಮನರಂಜನೆಯ ಮೂಲವಾಗಿದ್ದವು. ಕಲೆಗೆ ಪ್ರೋತ್ಸಾಹ ಅಗತ್ಯವಿದೆ. ಹಳ್ಳಿಗಳಿಗೆ ಬಂದು ಕಲೆಯನ್ನು ಕಲಾವಿದರನ್ನು ಪ್ರೋತ್ಸಾಹಿಸುವ ಸಂಸ್ಕೃತಿ ಕಸಾಪ ಪ್ರಾರಂಭಿಸಿರುವುದು ಅಭಿನಂದನೀಯ. ಪ್ರತಿ ಹಳ್ಳಿಯಲ್ಲೂ ಕಸಾಪ ಈ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿ ಎಂದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್ ಮಾತನಾಡಿ, ಜನಪದರ ಕಲೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಹಾಗೂ ಹಳ್ಳಿಗಳಲ್ಲಿ ಎಲೆಮರೆ ಕಾಯಿಗಳಂತಿರುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಲು “ಗಾನಸಿರಿ” ಕಾರ್ಯಕ್ರಮವನ್ನು ಹಳ್ಳಿಗಳಲ್ಲಿ ನಡೆಸುತ್ತಿದ್ದೇವೆ. ನಮ್ಮ ಸ್ಥಳೀಯ ಕಲಾವಿದರು ನಮ್ಮ ಹೆಮ್ಮೆಯ ಸಾಂಸ್ಕೃತಿಕ ಪ್ರತಿನಿಧಿಗಳು ಎಂದರು.
ಸ್ಥಳೀಯ ಕಲಾವಿದರಿಂದ ಜಾನಪದ ಗೀತೆ ಗಾಯನ, ಭಾವಗೀತೆಗಳು, ದೇಶಭಕ್ತಿ ಗೀತೆಗಳು, ಭಜನೆ ನಡೆಯಿತು. ಮುತ್ತೂರು ವೆಂಕಟೇಶಮೂರ್ತಿ ಹಾಗೂ ವೆಂಕಟಲಕ್ಷ್ಮಮ್ಮ ಅವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಗೌರವ ಕಾರ್ಯದರ್ಶಿಗಳಾದ ಸತೀಶ್, ಚಾಂದ್ ಪಾಷ, ಸಂಘ ಸಂಸ್ಥೆಗಳ ಪ್ರತಿನಿಧಿ ಶಂಕರ್, ನಗರ ಘಟಕದ ಅಧ್ಯಕ್ಷ ಸಿ.ಎನ್.ಮುನಿರಾಜು, ಮಂಜುನಾಥ್, ನರಸಿಂಹಮೂರ್ತಿ, ಜಸ್ಮಿತಾ ಡಾನ್ಸ್ ಅಕಾಡೆಮಿಯ ಧನುಶ್ರೀ ಮಾನಸ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗೋಪಾಲಪ್ಪ, ಸದಸ್ಯರಾದ ಸೂರ್ಯನಾರಾಯಣಗೌಡ, ದೇವರಾಜ್, ಮುಖಂಡ ವೆಂಕಟರಾಜೇಗೌಡ, ಬೈರೇಗೌಡ, ಎಂ.ಬಿ.ಬೈರಾರೆಡ್ಡಿ, ಅನಂತರಾಮಯ್ಯ, ಹಾರ್ಮೋನಿಯಂ ಕೆ.ವೆಂಕಟೇಶ್, ಮೂರ್ತಿ, ಅನಿಲ್, ರಾಜಣ್ಣ, ಸೊಣ್ಣೇಗೌಡ, ವೀರಾಂಜನೇಯ ಸ್ವಾಮಿ ಭಕ್ತಮಂಡಳಿ ಕಲಾವಿದರು ವೆಂಕಟರೆಡ್ಡಿ, ನವೀನ್, ಮುನಿರಾಜು, ಸುರೇಶ್, ಹಾಲು ಕೆಂಪಣ್ಣ ಹಾಜರಿದ್ದರು.
ಚೀಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆ
ತಾಲ್ಲೂಕಿನ ಚೀಮಂಗಲ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆಯನ್ನು ಸೋಮವಾರ ನೆರವೇರಿಸಿ ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿದರು.
ಕೋಲಾರ ಹಾಗು ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರ ಜೀವನಮಟ್ಟ ಅಲ್ಪ ಸ್ವಲ್ಪ ಸುಧಾರಿಸಿದೆ ಎಂದರೆ ಅದಕ್ಕೆ ಈ ಭಾಗದ ಹೈನುಗಾರಿಕೆ ಹಾಗೂ ಹಾಲು ಉತ್ಪಾದನೆಯೇ ಕಾರಣ ಎಂದು ಅವರು ಹೇಳಿದರು.
ಕಳೆದ ಮೂರು ದಶಕಗಳ ಹಿಂದೆ ಈ ಭಾಗದ ರೈತರ ಉಪಕಸುಬಾಗಿದ್ದ ಹೈನುಗಾರಿಕೆ ಇದೀಗ ಮುಖ್ಯ ಕಸುಬಾಗಿದೆ. ಅವಿಭಾಜಿತ ಜಿಲ್ಲೆಯಲ್ಲಿ ಇಂದು ಕುಡಿಯುವ ನೀರಿಗೂ ಪರಿತಪಿಸುವ ವಾತಾವರಣ ನಿರ್ಮಾಣವಾಗಿದ್ದು ರೈತರು ಕೃಷಿ ಮಾಡಲಾಗುತ್ತಿಲ್ಲ. ಬಹುತೇಕ ರೈತರು ಮನೆಯಲ್ಲಿ ಒಂದೆರಡು ಹಸುಗಳನ್ನು ಸಾಕಿ ಹಾಲು ಉತ್ಪಾದಿಸಿ ಜೀವನ ನಡೆಸುವಂತಾಗಿದೆ. ತಾಲೂಕಿನ ರೈತರು ಅದರಲ್ಲಿಯೂ ಮಾತೆಯರು ಹಾಲಿನ ಉತ್ಪಾದನೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದು ಹಾಲು ಉತ್ಪಾದನೆ ಹಾಗೂ ಗುಣಮಟ್ಟದಲ್ಲಿ ಜಿಲ್ಲೆಯಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದರು.
ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ ಕೆ.ಸಿ.ಸ್ವಾಮಿ ಮಾತನಾಡಿ, ಸಂಘದ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಹಾಲು ಅಳೆಯುವಾಗ ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ರಾಜೀಯಾಗಬಾರದು. ಇನ್ನು ಇಡೀ ರಾಜ್ಯದಲ್ಲಿ ಕೋಲಾರ ಒಕ್ಕೂಟ ಹಾಲಿಗೆ ಅತಿ ಹೆಚ್ಚು ಧರ ನೀಡುವ ಮೂಲಕ ಒಳ್ಳೆಯ ರೀತಿಯಲ್ಲಿ ನಡೆಯುತ್ತಿದೆ ಎಂದರು.
ಚೀಮಂಗಲ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸಿ.ಎಂ.ರಮೇಶ್, ಉಪಾಧ್ಯಕ್ಷ ಬಿ.ಆಂಜಿನಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾರಘು, ತಾಲ್ಲೂಕು ಪಂಚಾಯಿತಿ ಸದಸ್ಯ ರಾಜಶೇಖರ್, ಶಿಡ್ಲಘಟ್ಟ ಕೋಚಿಮುಲ್ ಶಿಬಿರ ಘಟಕದ ಉಪವ್ಯವಸ್ಥಾಪಕರಾದ ಚಂದ್ರಶೇಖರ್, ಬಿ.ಎಸ್.ಹನುಮಂತರಾವ್, ಸಂಘದ ಕಾರ್ಯ ನಿರ್ವಹಣಾಧಿಕಾರಿ ಎ.ನಾಗರಾಜಯ್ಯಶೆಟ್ಟಿ ಹಾಜರಿದ್ದರು.
ರಾಜ್ಯಮಟ್ಟದ ಕರಾಟೆಯಲ್ಲಿ ಗೆದ್ದ ದಿವ್ಯ ಭಾರತ್ ಕರಾಟೆ ಡೊ ಅಸೋಸಿಯೇಷನ್ ಕರಾಟೆ ಪಟುಗಳು
ಶಿಡ್ಲಘಟ್ಟದ ದಿವ್ಯ ಭಾರತ್ ಕರಾಟೆ ಡೊ ಅಸೋಸಿಯೇಷನ್ ಕರಾಟೆ ಪಟುಗಳು ಬೆಂಗಳೂರಿನಲ್ಲಿ ವರ್ತೂರು ಸುಬ್ಬಯ್ಯ ಗಾರ್ಡನ್ ನಲ್ಲಿ ಕರ್ನಾಟಕ ಸ್ಕೂಲ್ ಗೇಮ್ಸ್ ಸ್ಪೋರ್ಟ್ಸ್ ಕರಾಟೆ ಡೊ ಅಸೋಸಿಯೇಷನ್ ಆಯೋಜಿಸಿದ್ದ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಪದಕಗಳನ್ನು ಗೆದ್ದಿದ್ದಾರೆ.
ಎಲ್ಲೋ ಬೆಲ್ಟ್ ಕಥಾ ಸ್ಪರ್ಧೆಯ ಮೊದಲ ಗ್ರೂಪ್ ನಲ್ಲಿ ಉತ್ತಮ್ (ಪ್ರಥಮ), ಎರಡನೇ ಗ್ರೂಪ್ ನಲ್ಲಿ ಇಂಧರ್ (ಪ್ರಥಮ), ಶೋಬಿತ (ದ್ವಿತೀಯ), ಮೂರನೇ ಗ್ರೂಪ್ ನಲ್ಲಿ ಕಿಶನ್, ನರೇಂದ್ರ, ವಿಕಾಸ್, ಮೋಹಿತ್, ಮನೋಜ್ ಸಮಾಧಾನಕರ ಬಹುಮಾನ, ಗ್ರೀನ್ ಬೆಲ್ಟ್ ಕಥಾ ಸ್ಪರ್ಧೆಯಲ್ಲಿ ಜೈಸಿಂಹ (ಪ್ರಥಮ), ಬ್ಲೂ ಬೆಲ್ಟ್ ಕಥಾ ಸ್ಪರ್ಧೆಯ ಮೊದಲ ಗ್ರೂಪ್ ನಲ್ಲಿ ನಂದೀಶ್ (ದ್ವಿತೀಯ), ಎರ್ಡು ಮತ್ತು ಮೂರನೇ ಗ್ರೂಪ್ ನಲ್ಲಿ ಜಗನ್, ಚೇತನ್, ಪರ್ ಪಲ್ ಬೆಲ್ಟ್ ಕಥಾ ಸ್ಪರ್ಧೆಯಲ್ಲಿ ಹರ್ಷಿತ್ (ತೃತೀಯ), ಆರೇಂಜ್ ಬೆಲ್ಟ್ ಕಥಾ ಸ್ಪರ್ಧೆಯಲ್ಲಿ ಓಜಸ್ವಿ (ತೃತೀಯ) ರಾಗಿದ್ದಾರೆ ಎಂದು ದಿವ್ಯ ಭಾರತ್ ಕರಾಟೆ ಡೊ ಅಸೋಸಿಯೇಷನ್ ಕರಾಟೆ ಶಿಕ್ಷಕ ಅರುಣ್ ಕುಮಾರ್ ತಿಳಿಸಿದ್ದಾರೆ.
ಮೂರನೇ ದಿನಕ್ಕೆ ಕಾಲಿಟ್ಟ ಜಲಗಾರರ ಧರಣಿ
ನಗರದ ನಗರಸಭೆ ಕಾರ್ಯಾಲಯದ ಮುಂಭಾಗದಲ್ಲಿ ಸಿಐಟಿಯು ನೇತೃತ್ವದಲ್ಲಿ ಜಲಗಾರರು ಮಾಡುತ್ತಿರುವ ಅನಿರ್ಧಿಷ್ಟ ಧರಣಿಯು ಮೂರನೇ ದಿನವಾದ ಭಾನುವಾರವೂ ಮುಂದುವರೆದಿದೆ.
ಗ್ರಾಮ ಪಂಚಾಯಿತಿ ನೌಕರರ ಸಂಘ ಹಾಗೂ ಬಿಸಿಯೂಟ ನೌಕರರ ಸಂಘದ ಬೆಂಬಲದೊಂದಿಗೆ ನಗರಸಭೆಯಲ್ಲಿ ಗುತ್ತಿಗೆ ಆಧಾರದದಲ್ಲಿ ಕಾರ್ಯ ನಿರ್ವಹಿಸುವ ಜಲಗಾರರು ತಮ್ಮ ಹದಿನೈದು ತಿಂಗಳ ವೇತನ ಸೇರಿದಂತೆ ಸಮಾನ ಕೆಲಸ ಸಮಾನ ವೇತನಕ್ಕಾಗಿ ಆಗ್ರಹಿಸಿ ಶುಕ್ರವಾರ ಆರಂಭಿಸಿದ ತಮ್ಮ ಹೋರಾಟವನ್ನು ಭಾನುವಾರವೂ ಮುಂದುವರೆಸಿದ್ದಾರೆ.
ನಗರಸಭೆ ಅಧ್ಯಕ್ಷ ಅಫ್ಸರ್‌ಪಾಷ ಹಾಗೂ ಪೌರಾಯುಕ್ತ ಜಿ.ಎನ್.ಚಲಪತಿ ಶನಿವಾರ ಸಂಜೆ ಪ್ರತಿಭಟನಾಕಾರರ ಮುಖಂಡರ ಜೊತೆ ಮಾತುಕತೆ ನಡೆಸಿ ಹೋರಾಟ ಹಿಂಪಡೆಯುಂತೆ ಮನವೊಲಿಸಲು ಯತ್ನಿಸಿದರಾದರೂ ಮಾತುಕತೆ ವಿಫಲವಾದ ಹಿನ್ನಲೆಯಲ್ಲಿ ಹೋರಾಟವನ್ನು ಭಾನವಾರವೂ ಮುಂದುವರೆಸಿದ್ದಾರೆ.
ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಭಾನುವಾರ ಸಿಐಟಿಯು ಜಿಲ್ಲಾ ಘಟಕದ ಪದಾಧಿಕಾರಿಗಳು ಸೇರಿದಂತೆ ಕಾರ್ಮಿಕ ಸಂಘಟನೆ ಹಾಗೂ ಟಿಪ್ಪು ಸಂಘಟನೆಯ ಮುಖಂಡರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಗಂಗಪ್ಪ, ತಾಲ್ಲೂಕು ಅಧ್ಯಕ್ಷ ಸುದರ್ಶನ್, ಗ್ರಾಮ ಪಂಚಾಯಿತಿ ನೌಕರರ ಸಂಘದ ಗೌರವಾಧ್ಯಕ್ಷೆ ಮಧುಲತಾ, ಬಿಸಿಯೂಟ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಮುನಿಲಕ್ಷ್ಮಮ್ಮ, ಕಾರ್ಮಿಕ ಸಮಘಟನೆಯ ಪ್ರದೀಪ್, ಟಿಪ್ಪು ಸಂಘಟನೆಯ ಮೌಲಾ, ಜಲಗಾರರಾದ ನಾಗರಾಜ, ಟಿ.ಎನ್.ರವಿ, ರಮೇಶ್, ರಾಜೇಶ್, ಆನಂದ್, ಮಂಜುನಾಥ್, ಮುರಳಿ, ಬಾಬು, ನವಾಜ್ ಪಾಷಾ, ನವೀನ್‌ಕುಮಾರ್, ಕೆ.ಶ್ರೀನಿವಾಸ್, ನರಸಿಂಹಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಶಿಡ್ಲಘಟ್ಟ ರೇಷ್ಮೆ ಪ್ರವಾಸೋಧ್ಯಮ ಮಾಡುವ ಉದ್ದೇಶ – ಜಿಲ್ಲಾಧಿಕಾರಿ ಅನಿರುದ್ ಶ್ರವಣ್
ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೈತರು ರೀಲರುಗಳು ಅಧಿಕಾರಿಗಳಿಗೆ ಸಹಕರಿಸಿ ಹೊಸ ಸಾಂಘಿಕ ಶಿಸ್ತನ್ನು ರೂಢಿಸಿಕೊಳ್ಳಬೇಕು. “ಕಾವಲು ಸಮಿತಿ” ರೀತಿಯ ಸಮಿತಿಯೊಂದನ್ನು ರಚಿಸಿಕೊಂಡು ನಿಮ್ಮೆಲ್ಲರ ಮಾರುಕಟ್ಟೆಯ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಅನಿರುದ್ ಶ್ರವಣ್ ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಬುಧವಾರ ದಿಢೀರ್ ಭೇಟಿ ನೀಡಿದ ಅವರಿಗೆ ರೈತರು ಮತ್ತು ರೀಲರುಗಳು ತಮ್ಮ ಸಮಸ್ಯೆಗಳನ್ನು ವಿವರಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ರೈತರ ಈಗಿನ ಪ್ರಮುಖ ಸಮಸ್ಯೆ ರೇಷ್ಮೆ ಗೂಡಿನ ಬೆಲೆ ಕುಸಿತ. “ಸರ್ಕಾರ ಮಧ್ಯಪ್ರವೇಶಿಸಿ ಬೆಲೆ ಕುಸಿತವನ್ನು ತಡೆಗಟ್ಟಬೇಕು, ಪ್ರೋತ್ಸಾಹ ಧನ ನೀಡಬೇಕು” ಎಂದು ರೈತರು ಕೋರುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು, ಬೆಲೆ ಕುಸಿತ ಎಂದಿನಿಂದಾಗುತ್ತಿದೆ, ಎಷ್ಟು ರೇಷ್ಮೆ ಗೂಡು ಬರುತ್ತಿದೆ, ರೇಷ್ಮೆಯ ಬೆಲೆ ಎಷ್ಟಿದೆ, ಮುಂತಾದ ಅಂಕಿ ಸಂಖ್ಯೆಗಳ ಸಂಪೂರ್ಣವಾದ ವರದಿಯೊಂದನ್ನು ಸಿದ್ಧಪಡಿಸಿ ಆದಷ್ಟು ಬೇಗ ಕೊಡಬೇಕೆಂದು ಸೂಚಿಸಿದ್ದೇನೆ. ಆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಮೂಲಕ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳೋಣ. ರೈತರು ಮತ್ತು ರೀಲರುಗಳ ಜೊತೆ ರೇಷ್ಮೆ ಅಧಿಕಾರಿಗಳು ಹದಿನೈದು ದಿನಗಳೊಳಗೆ ಸಭೆ ನಡೆಸಿ ಕುಂದುಕೊರತೆಗಳ ಪಟ್ಟಿ ಮಾಡಿ ನೀಡಬೇಕು ಎಂದು ಹೇಳಿದರು.
ಮಾರುಕಟ್ಟೆಯಲ್ಲಿ ಸಿಬ್ಬಂದಿ ಕೊರತೆಯಿದೆ ಎನ್ನುತ್ತೀರಿ. ನಮ್ಮ ಡಿ.ಎಂ.ಎಫ್.ಡಿ ಫಂಡ್ ನಿಂದ ಹಣವನ್ನು ಕೊಡುತ್ತೇನೆ. ಅವಶ್ಯವಿರುವ ಸಿಬ್ಬಂದಿಯ ಬಗ್ಗೆ ಮಾಹಿತಿ ನೀಡಿ, ಸಿಬ್ಬಂದಿ ಹೆಚ್ಚಿಸಿಕೊಳ್ಳಿ ಎಂದು ರೇಷ್ಮೆ ಅಧಿಕಾರಿಗಳಿಗೆ ತಿಳಿಸಿದರು.
ಶಿಡ್ಲಘಟ್ಟ ರೇಷ್ಮೆ ಪ್ರವಾಸೋಧ್ಯಮ ಮಾಡುವ ಉದ್ದೇಶದಿಂದ ಸ್ವಲ್ಪ ಹಣವನ್ನು ತೆಗೆದಿರಿಸಿದ್ದೇನೆ. ನಿಮ್ಮ ಸಹಕಾರ ಅಗತ್ಯವಿದೆ. ಅದರ ಮೂಲಕ ಈ ಉದ್ದಿಮೆಯನ್ನು ಇನ್ನಷ್ಟು ಬಲಪಡಿಸಬಹುದಾಗಿದೆ. ಚಿಕ್ಕಬಳ್ಳಾಪುರದಲ್ಲಿಯೇ ಒಂದು ಸಭೆಯನ್ನು ಮಾಡುತ್ತೇನೆ. ರೇಷ್ಮೆಗೆ ಸಂಬಂಧಿಸಿದ ಅಧಿಕಾರಿಗಳು, ರೈತರು, ರೀಲರುಗಳು ಸೇರಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾ, ಅಭಿವೃದ್ಧಿ, ಪ್ರವಾಸೋಧ್ಯಮ ಹಾಗೂ ವಿವಿಧ ಆಯಾಮಗಳಲ್ಲಿ ಈ ಉದ್ದಿಮೆಯ ಬೆಳವಣಿಗೆಗೆ ಚರ್ಚಿಸೋಣ, ಕಾರ್ಯಗತಗೊಳಿಸೋಣ ಎಂದರು.
ರೇಷ್ಮೆ ಪ್ರವಾಸೋದ್ಯಮದ ಅಭಿವೃದ್ಧಿಗೆ ರೀಲರ್ ಕಾಲೋನಿ ಮಾಡಿ. ಅದರಲ್ಲಿ ಚಿಟ್ಟೆಯಿಂದ ಬಟ್ಟೆಯವರೆಗೂ ಎಲ್ಲ ರೇಷ್ಮೆಯ ವಿವಿಧ ಹಂತಗಳ ವ್ಯವಸ್ಥೆಯಿರಲಿ. ಪ್ರವಾಸಿಗರಿಗೆ ಕೊಳ್ಳಲು ಮರುಕಟ್ಟೆಯನ್ನು ರೂಪಿಸಿದರೆ ಚೆನ್ನ ಎಂಬ ಇಂಗಿತವನ್ನು ರೀಲರೊಬ್ಬರು ವ್ಯಕ್ತಪಡಿಸಿದರು.
ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ರೇಷ್ಮೆ ಗೂಡಿನ ಧಾರಣೆ ಒಂದು ಕೆ.ಜಿಗೆ ೪೫೦ ರೂಗಳಿಂದ ೨೮೦ ರೂಗಳಿಗೆ ಕುಸಿತ ಕಂಡಿದೆ. ರೇಷ್ಮೆ ಗೂಡು ಉತ್ಪಾದನಾ ವೆಚ್ಚವೂ ರಯ್ತನಿಗೆ ಸಿಗದ ಪರಿಸ್ಥಿತಿ ಮೂಡಿದೆ. ಈ ಹಿಂದೆ ೨೦೧೪ – ೧೫ ರಲ್ಲಿ ಇದೇ ರೀತಿ ಧಾರಣೆ ಕುಸಿದಾಗ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ರೈತರಿಗೆ ಪ್ರೋತ್ಸಾಹ ಧನವನ್ನು ನೀಡಿದ್ದರಿಂದ ಇದನ್ನು ಅವಲಂಬಿತರು ಚೇತರಿಸಿಕೊಂಡಿದ್ದರು. ಈಗಲೂ ಜಿಲ್ಲಾಡಳಿತ ಮತ್ತು ರಾಜ್ಯಾಡಳಿತ ರೈತರನ್ನು ಕಾಪಾಡಬೇಕು. ಸರ್ಕಾರದ ಡಾ.ಬಸವರಾಜ್ ತಾಂತ್ರಿಕ ಸಮಿತಿಯ ವರದಿಯಂತೆ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಪ್ರೋತ್ಸಾಹಶನವನ್ನು ಕೊಡಬೇಕೆಂದು ವಿನಂತಿಸುತ್ತೇವೆ ಎಂದರು.
ರೀಲರುಗಳ ಪರವಾಗಿ ಮಾತನಾಡಿದ ಅನ್ಸರ್, ಚೀನಾ ರೇಷ್ಮೆಯ ಬೆಲೆಯ ಅರ್ಧದಷ್ಟು ಬೆಲೆಗೆ ನಮ್ಮ ರೇಷ್ಮೆ ಬೆಲೆ ಕುಸಿತ ಕಂಡಿದೆ. ಸರ್ಕಾರದಿಂದ ರೇಷ್ಮೆ ಕೊಂಡು ಅಥವಾ ಅಡಮಾನ ಮಾಡಿಕೊಳ್ಳುವ ಮೂಲಕ ರೇಷ್ಮೆಯ ಬೆಲೆಯ ಸ್ಥಿರತೆ ಕಾಪಾಡಬೇಕು. ಮಾರುಕಟ್ಟೆಯಲ್ಲಿ ರೇಷ್ಮೆ ಗೂಡು ತೂಗುವ ತಕ್ಕಡಿ (ವೇಯಿಂಗ್ ಸ್ಕೇಲ್) ಒಂದೇ ಇದೆ. ಸಂಜೆವರೆಗೂ ಕಾಯಲು ಸಾಧ್ಯವಿಲ್ಲ. ಕೆಲಸ ಬೇಗ ಆಗಲು ಸಿಬ್ಬಂದಿ ಮತ್ತು ವೇಯಿಂಗ್ ಸ್ಕೇಲ್ ಸಂಖ್ಯೆ ಹೆಚ್ಚಿಸಿ. ಮಾರುಕಟ್ಟೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಶೌಚಾಲಯ, ಶುಚಿತ್ವ ಮತ್ತು ವಾಹನ ನಿಲುಗಡೆ ಸಮಸ್ಯೆಗಳಿಗೆ ಪರಿಹಾರ ಒದಗಿಸಿ. ಸಿಸಿ ಕ್ಯಾಮೆರಾ ಅಳವಡಿಸಿದ್ದರೂ ಅದನ್ನು ನಿರ್ವಹಣೆ ಮಾಡಲು ತಿಳಿಸಿ ಎಂದು ಕೋರಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೇಷ್ಮೆ ಕುಸಿತವನ್ನು ತಡೆಗಟ್ಟಿ ಉದ್ದಿಮೆಯನ್ನು ಉಳಿಸಲು ಕ್ರಮ ಕೈಗೊಳ್ಳುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಅನಿರುದ್ ಶ್ರವಣ್ ಅವರು, ನಗರದ ಪ್ಯಾರೇಗಾನ್ ಶಾಲೆಯ ಬಳಿಯ ರೇಷ್ಮೆ ನೂಲು ಬಿಚ್ಚಾಣಿಕೆಯ ಘಟಕ್ಕೆ ಹಾಗೂ ದಿಬ್ಬೂರಹಳ್ಳಿಯ ಸ್ವಯಂಚಾಲಿತ ರೇಷ್ಮೆ ನೂಲು ಬಿಚ್ಚಾಣಿಕೆಯ ಮಲ್ಟಿ ಎಂಡ್ ಘಟಕವನ್ನು ವೀಕ್ಷಿಸಿದರು. ಅಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಸಹ ಮಾತನಾಡಿಸಿ ಅವರ ಕೆಲಸ, ವೇತನ ಮತ್ತು ಸಮಸ್ಯೆಗಳನ್ನು ವಿಚಾರಿಸಿದರು. ಸ್ಥಳೀಯರು ದೂರು ನೀಡಿದ ಹಿನ್ನೆಲೆಯಲ್ಲಿ ತಾಲ್ಲೂಕಿನ ವರದನಾಯಕನಹಳ್ಳಿ ಹಾಗೂ ಹನುಮಂತಪುರದ ಬಳಿ ಸ್ಥಳ ಪರಿಶೀಲನೆಯನ್ನು ನಡೆಸಿದರು.
ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ, ರೋಗಿಗಳನ್ನು ಮಾತನಾಡಿಸಿದ ಜಿಲ್ಲಾಧಿಕಾರಿ ಅನಿರುದ್ ಶ್ರವಣ್ ಅವರು, ವಿವಿಧ ವಿಭಾಗಗಳನ್ನು, ಸ್ವಚ್ಚತೆ, ನೀರು, ಶೌಚಾಲಯ ವ್ಯವಸ್ಥೆಗಳನ್ನು ಪರಿಶೀಲಿಸಿದರು. ತಾಲ್ಲೂಕು ಕಚೇರಿ, ನಗರಭೆಯ ನೂತನ ಕಟ್ಟಡ ನಿರ್ಮಿಸುವ ಸ್ಥಳ, ಇಂದಿರಾ ಕ್ಯಾಂಟೀನ್, ನಗರಸಭೆ ಉದ್ಯಾನವನ ಪರಿಶೀಲನೆ ನಡೆಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗುರುದತ್ ಹೆಗಡೆ, ತಹಶೀಲ್ದಾರ್ ಅಜಿತ್ ಕುಮಾರ್ ರೈ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ನಗರಸಭೆ ಆಯುಕ್ತ ಚಲಪತಿ. ಎ.ಪಿ.ಎಂ.ಸಿ ಉಪಾಧ್ಯಕ್ಷ ಬೆಳ್ಳೂಟಿ ವೆಂಕಟೇಶ್, ರೇಷ್ಮೆ ಉಪನಿರ್ದೇಶಕರಾದ ಸುಭಾಷ್ ಸಾತೇನಹಳ್ಳಿ, ಬೈರಾರೆಡ್ಡಿ, ಸಹಾಯಕ ನಿರ್ದೇಶಕರಾದ ಬೋಜಣ್ಣ, ನರಸಿಂಹಮೂರ್ತಿ, ವಿಸ್ತರಣಾಧಿಕಾರಿಗಳಾದ ರಾಮಕೃಷ್ಣಪ್ಪ, ಕಾಂತರಾಜು, ರೈತಸಂಘದ ತಾದೂರು ಮಂಜುನಾಥ್, ಬಿ.ನಾರಾಯಣಸ್ವಾಮಿ, ವೇಣು, ಕೃಷ್ಣಪ್ಪ, ಮುನಿನಂಜಪ್ಪ, ರಾಮಕೃಷ್ಣಪ್ಪ, ಶ್ರೀರಾಮಪ್ಪ, ಸಿ.ಮೂರ್ತಿ, ಕೆಂಪಣ್ಣ, ರೀಲರುಗಳಾದ ಜಿ.ರೆಹಮಾನ್, ಅಕ್ಮಲ್, ರಾಮಕೃಷ್ಣಪ್ಪ, ಅನಂತು, ಅನ್ವರ್ ಹಾಜರಿದ್ದರು.
ಸಂಬಳ ಪಾವತಿ ಆಗ್ರಹಿಸಿ ಜಲಗಾರರು ಮತ್ತು ಪೌರಕಾರ್ಮಿಕರ ಅನಿರ್ದಿಷ್ಟಾವಧಿ ಧರಣಿ
ನಗರಸಭೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಜಲಗಾರರು ಹಾಗೂ ಪೌರ ಕಾರ್ಮಿಕರಿಗೆ ಬಾಕಿ ಇರುವ ಹದಿನೈದು ತಿಂಗಳುಗಳ ಸಂಬಳವನ್ನು ಕೂಡಲೇ ಪಾವತಿಸಬೇಕು ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲ್ಲೂಕು ಗೌರವಾಧ್ಯಕ್ಷೆ ಮಧುಲತ ಆಗ್ರಹಿಸಿದರು.
ನಗರದ ನಗರಸಭೆ ಕಾರ್ಯಾಲಯದ ಮುಂಭಾಗದಲ್ಲಿ ಜಲಗಾರರು ಹಾಗೂ ಪೌರಕಾರ್ಮಿಕರಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಗರಸಭೆಯಲ್ಲಿ ಗುತ್ತಿಗೆ ಆದಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ವಾಟರ್ ಮನ್ ಗಳು ಹಾಗೂ ಪೌರ ಕಾರ್ಮಿಕರಿಗೆ ಕಳೆದ ಹದಿನೈದು ತಿಂಗಳುಗಳಿಂದ ವೇತನ ನೀಡಿಲ್ಲ. ಈ ಬಗ್ಗೆ ಪೌರಾಯುಕ್ತರನ್ನು ಕೇಳಿದರೆ, “ಇಷ್ಟವಿದ್ದರೆ ಕೆಲಸಕ್ಕೆ ಬನ್ನಿ ಇಲ್ಲವಾದಲ್ಲಿ ಬರಬೇಡಿ ಸಂಬಳ ಕೊಡಲು ಆಗೋಲ್ಲ. ಈ ಬಗ್ಗೆ ನನ್ನನ್ನು ಕೇಳಬೇಡಿ ನಿಮ್ಮ ಗುತ್ತಿಗೆದಾರರನ್ನು ಕೇಳಿ” ಎಂದು ಉತ್ತರಿಸುತ್ತಾರೆ.
ಈ ಹಿಂದೆ ಇದ್ದ ಬಹಳಷ್ಟು ಅಧಿಕಾರಿಗಳು ಇಲ್ಲಿನ ಜಲಗಾರರು ಹಾಗೂ ಪೌರಕಾರ್ಮಿಕರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದರು. ಆದರೆ ಇದೀಗ ಬಂದಿರುವ ಪೌರಾಯುಕ್ತರು ಕಚೇರಿಯಲ್ಲಿರುವ ಸಿಬ್ಬಂದಿ ಸೇರಿದಂತೆ ಬೇರಾವ ನೌಕರರಿಗೂ ಕನಿಷ್ಠ ಗೌರವ ನೀಡುವುದಿಲ್ಲ. ನಗರದ ಕೆಲ ವಾರ್ಡುಗಳಲ್ಲಿ ಹದಿನೈದು ದಿನವಾದರೂ ನೀರು ಬಿಡುತ್ತಿಲ್ಲ. ಈ ಬಗ್ಗೆ ನಾಗರಿಕರು ಕೇಳಿದರೆ ಕೆಲಸದವರು ಬಂದಿಲ್ಲ ಎನ್ನುವ ಇವರು ಕಾರ್ಮಿಕರಿಗೆ ಸಕಾಲದಲ್ಲಿ ವೇತನ ಪಾವತಿಸಲು ಮಾತ್ರ ಸಿದ್ದರಿಲ್ಲ ಎಂದು ದೂರಿದರು.
ಈ ಬಗ್ಗೆ ನಗರಸಭೆ ಅಧ್ಯಕ್ಷರು ಮತ್ತು ಶಾಸಕರಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಈವರೆಗೂ ವೇತನ ಸಿಕ್ಕಿಲ್ಲ. ಹಾಗಾಗಿ ಇಂದಿನಿಂದ ಸಿಐಟಿಯು ಬೆಂಬಲದೊಂದಿಗೆ ಅನಿರ್ಧಿಷ್ಟ ಕಾಲ ಹೋರಾಟಕ್ಕೆ ಮುಂದಾಗಿದ್ದು, ಜಲಗಾರರಿಗೆ ವೇತನ ನೀಡುವವರೆಗೂ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸುವುದಿಲ್ಲ ಎಂದರು.
ನಗರಸಭೆಯಲ್ಲಿ ಗುತ್ತಿಗೆ ಆದಾರದ ಮೇಲೆ ಕೆಲಸ ಮಾಡುತ್ತಿರುವ ಜಲಗಾರರು ಹಾಗೂ ಪೌರಕಾರ್ಮಿಕರರಿಗೆ ಸಮಾನ ಕೆಲಸ, ಸಮಾನ ವೇತನ ಸಿಗಬೇಕು. ಕಳೆದ ಕೆಲ ವರ್ಷಗಳಿಂದ ಕೆಲಸ ಮಾಡುತ್ತಿರುವ ಇವರನ್ನೇ ಕೆಲಸದಲ್ಲಿ ಮುಂದುವರೆಸಬೇಕು ಎಂದು ಒತ್ತಾಯಿಸಿದರು.
ಬಿಸಿಯೂಟ ನೌಕರರ ಸಂಘದ ತಾಲ್ಲೂಕು ಅದ್ಯಕ್ಷೆ ಮುನಿಲಕ್ಷಮ್ಮ, ಜಲಗಾರರಾದ ನಾಗರಾಜ, ಟಿ.ಎನ್.ರವಿ, ರಮೇಶ್, ರಾಜೇಶ್, ಆನಂದ್, ಮಂಜುನಾಥ್, ಮುರಳಿ, ಬಾಬು, ನವಾಜ್ ಪಾಷಾ, ನವೀನ್‌ಕುಮಾರ್, ಕೆ.ಶ್ರೀನಿವಾಸ್, ನರಸಿಂಹಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಚಿಕ್ಕದಾಸರಹಳ್ಳಿ ದೇವಾಲಯದ ಬಳಿ ನಿರ್ಮಿಸಲಾದ ಯಾತ್ರಿ ನಿವಾಸ ಕಟ್ಟಡ ಲೋಕಾರ್ಪಣೆ
ತಾಲ್ಲೂಕಿನ ಚಿಕ್ಕದಾಸರಹಳ್ಳಿ ದೇವಾಲಯದ ಬಳಿ ಸುಮಾರು ಐವತ್ತು ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾದ ಏಳು ಕೊಠಡಿ ಮತ್ತು ಒಂದು ಹಾಲ್ ಒಳಗೊಂಡ ಯಾತ್ರಿ ನಿವಾಸ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿದರು.
ತಾಲ್ಲೂಕಿನ ಪ್ರಮುಖ ಪ್ರವಾಸಿ ಹಾಗೂ ಶ್ರದ್ಧಾ ಕೇಂದ್ರವಾದ ಬೇಟರಾಯಸ್ವಾಮಿ ದೇವಾಲಯಕ್ಕೆ ದೂರದೂರುಗಳಿಂದ ಭಕ್ತರು ಆಗಮಿಸುತ್ತಾರೆ. ಅವರಿಗೆ ಇನ್ನು ಮುಂದೆ ತಂಗಲು ತೊಂದರೆಯಾಗದಂತೆ ಯಾತ್ರಿ ನಿವಾಸ ಕಟ್ಟಡವನ್ನು ಪ್ರವಾಸೋದ್ಯಮ ಹಾಗೂ ವಿವಿಧ ಅನುದಾನಗಳಿಂದ ನಿರ್ಮಿಸಲಾಗಿದೆ. ಸಮರ್ಥವಾಗಿ ನಿರ್ವಹಣೆ ಮಾಡಿ ಎಂದು ಅವರು ತಿಳಿಸಿದರು.
ದೇವಸ್ಥಾನದ ಬಳಿಯ ಕ್ಲ್ಯಾಣಿಯನ್ನು ನರೇಗಾ ಯೋಜನೆಯಡಿ ಅಭಿವೃದ್ಧಿ ಮಾಡಿ. ಕಲ್ಯಾಣ ಮಂಟಪದ ಬೇಡಿಕೆಯನ್ನು ಇಟ್ಟಿದ್ದೀರಿ. ಸಂಬಂಧಪಟ್ಟ ಇಲಾಖೆಗೆ ಶಿಫಾರಸ್ಸು ಪತ್ರವನ್ನು ನೀಡುತ್ತೇನೆ. ದೇವಸ್ಥಾನದ ಸಮಿತಿಯವರು ಒಗ್ಗೂಡಿ ಪವಿತ್ರವಾದ ಅಭಿವೃದ್ಧಿ ಕೆಲಸಗಳನ್ನು ಮಾಡಿ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ಮಾತನಾಡಿ, ಇದು ಅತ್ಯಂತ ಪವಿತ್ರವಾದ ಕ್ಷೇತ್ರ. ಇಲ್ಲಿ ಬಡವರಿಗೆ ಮದುವೆ ಮುಂತಾದ ಶುಭಕಾರ್ಯಕ್ಕೆ ಛತ್ರದ ಅವಶ್ಯಕತೆಯಿದೆ. ಶಾಸಕ ವಿ.ಮುನಿಯಪ್ಪ ಹಾಗೂ ಸಂಸದ ಕೆ.ಎಚ್.ಮುನಿಯಪ್ಪ ಅವರಿಬ್ಬರೂ ಮನಸ್ಸು ಮಾಡಿದಲ್ಲಿ ಸಮುದಾಯ ಭವನ ಮತ್ತು ಛತ್ರವನ್ನು ನಿರ್ಮಿಸಲು ಸಾಧ್ಯವಿದೆ. ಜಿಲ್ಲಾ ಪಂಚಾಯಿತಿ ಕಡೆಯಿಂದಲೂ ಏನೇನು ಸಾಧ್ಯವೋ ಅದನ್ನೆಲ್ಲಾ ಮಾಡಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯ ಬೇಟರಾಯಶೆಟ್ಟಿ ಮಾತನಾಡಿ, ಈ ಪವಿತ್ರ ಕ್ಷೇತ್ರದ ಅಭಿವೃದ್ಧಿಗೆ ಸಂಸದರು ಹಾಗೂ ಶಾಸಕರು ಸಂಪೂರ್ಣವಾಗಿ ಬೆಂಬಲಿಸುತ್ತಿದ್ದಾರೆ. ನಮಗೆ ಇಲ್ಲಿ ಕಲ್ಯಾಣಮಂಟಪ ಮತ್ತು ಗೋಪುರದ ಜೀರ್ಣೋದ್ಧಾರ ಕೆಲಸ ಆಗಬೇಕಿದೆ. ಧಾರ್ಮಿಕ ದತ್ತಿ ಇಲಾಖೆಗೆ ಸಂಸದರು ಶಿಫಾರಸ್ಸು ಮಾಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಭವನವನ್ನು ನಿರ್ಮಾಣ ಮಾಡಿಕೊಡಿ ಎಂದು ಸಂಸದ ಕೆ.ಎಚ್.ಮುನಿಯಪ್ಪ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎನ್.ಬೈರೇಗೌಡ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಡಾ.ಎನ್.ಭಾಸ್ಕರ್, ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಜಿ.ಕೃಷ್ಣೇಗೌಡ, ಮುಖಂಡರಾದ ಕೃಷ್ಣಪ್ಪ, ಕೆ.ಗುಡಿಯಪ್ಪ, ಎಸ್.ಎಂ.ನಾರಾಯಣಸ್ವಾಮಿ, ಯರ್ರಪ್ಪ, ದಾಸಪ್ಪ, ಮುನೇಗೌಡ, ಪ್ರಕಾಶ್, ನಾಗೇಂದ್ರ, ನಾರಾಯಣಸ್ವಾಮಿ ಹಾಜರಿದ್ದರು.
ಸಂಜಾಯ್ ದಾಸ್ ಗುಪ್ತ ಅವರ ೧೩ನೇ ಪುಣ್ಯ ತಿಥಿ ಕಾರ್ಯಕ್ರಮ
ತಾಲ್ಲೂಕಿನ ಮುತ್ತೂರು ಗ್ರಾಮದ ಶ್ರೀ ವೀರಾಂಜನೇಯ ಸಮುದಾಯ ಭವನದಲ್ಲಿ ಗ್ರಾಮಾಂತರ ಟ್ರಸ್ಟ್ ಹಾಗೂ ನಮ್ಮ ಮುತ್ತೂರು ಸಂಸ್ಥೆಯ ವತಿಯಿಂದ ಗುರುವಾರ ನಡೆದ ದಿವಂಗತ ಸಂಜಾಯ್ ದಾಸ್ ಗುಪ್ತ ಅವರ ೧೩ನೇ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಡಾ.ಶಾಂಗೋನ್ ದಾಸ್ ಗುಪ್ತ ಮಾತನಾಡಿದರು.
ಬೆಟ್ಟದ ನೆಲ್ಲಿಕಾಯಿಗೂ ಸಮುದ್ರದ ಉಪ್ಪಿಗೂ ನಂಟಿರುವಂತೆ, ಮುತ್ತೂರಿಗೂ ನಮ್ಮ ಕುಟುಂಬಕ್ಕೂ ಕರುಳಬಳ್ಳಿಯ ಸಂಬಂಧವಿದೆ. ಮುತ್ತೂರಿನವರು ನಮ್ಮನ್ನು ತಮ್ಮವರನ್ನಾಗಿಸಿಕೊಂಡು ಗ್ರಾಮದಲ್ಲಿ ಸಮಾಜಸೇವೆ ಮಾಡಲು ಅನುವು ಮಾಡಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.
ಹಿಂದೆ ಅವಿಭಾಜ್ಯ ಕೋಲಾರ ಜಿಲ್ಲಾಧಿಕಾರಿಗಳಾಗಿದ್ದ ಸಂಜಾಯ್ ದಾಸ್ ಗುಪ್ತ ಅವರು ಮುತ್ತೂರಿನ ಬಗ್ಗೆ ವಿಶೇಷ ಪ್ರೀತಿಯನ್ನು ಹೊಂದಿದ್ದರು. ೨೦೦೫ ರಲ್ಲಿ ಅವರು ನಿಧನರಾದಾಗ ಮುತ್ತೂರಿನ ಜನರು ತಮ್ಮ ಬಂಧುವಿನ ಅಗಲಿಕೆಯಂತೆ ಭಾವಿಸಿ ಕಂಬನಿ ಮಿಡಿದಿದ್ದರು. ಅಂದಿನಿಂದ ದಿವಂಗತ ಸಂಜಾಯ್ ದಾಸ್ ಗುಪ್ತ ಅವರ ತಾಯಿ, ನಾನು ಹಾಗೂ ಮಕ್ಕಳು ಜೊತೆಗೂಡಿ ಮುತ್ತೂರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ನಿರಂತರವಾಗಿ ಹದಿಮೂರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕೆಲಸಗಳಿಗೆ ಗ್ರಾಮಸ್ಥರು ಬೆಂಬಲಿಸಿದ್ದಾರೆ ಎಂದರು.
ಈ ಹಿಂದೆ ಸಮುದಾಯ ಭವನದ ನಿರ್ಮಾಣಕ್ಕೆ ಎರಡು ಲಕ್ಷ ರೂಗಳನ್ನು ದೇಣಿಗೆಯಾಗಿ ನೀಡಿದ್ದ ಡಾ.ಖದೀಜಾ ದಾಸ್ ಗುಪ್ತ ಅವರು ಸಮುದಾಯ ಭವನದಲ್ಲಿ ಚೇರುಗಳು ಮತ್ತು ಟೇಬಲ್ಲುಗಳನ್ನು ಖರೀದಿಸಲು ಐವತ್ತು ಸಾವಿರ ರೂಗಳನ್ನು ನೀಡಿದರು.
ಗ್ರಾಮಾಂತರ ಟ್ರಸ್ಟ್ ಹಾಗೂ ನಮ್ಮ ಮುತ್ತೂರು ಸಂಸ್ಥೆಯ ಉಷಾ ಶೇಟ್ಟಿ ಮಾತನಾಡಿ, ಸಂಜಾಯ್ ದಾಸ್ ಗುಪ್ತ ಅವರ ವ್ಯಕ್ತಿತ್ವ ರೂಪುಗೊಳ್ಳೂವಲ್ಲಿ ಅವರ ಪೋಷಕರ ಪಾತ್ರ ಪ್ರಮುಖವಾದದ್ದು. ಅವರ ತಾಯಿ ಡಾ.ಖದೀಜಾ ದಾಸ್ ಗುಪ್ತ ಲಕ್ನೌ ನಗರದ ಉನ್ನತ ಕುಟುಂಬದ ಹಿನ್ನೆಯವರು. ಚಿಕ್ಕ ವಯಸ್ಸಿನಲ್ಲಿಯೇ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲು ಸೇರಿದ್ದರು. ತಮ್ಮ ಪತಿ ಅನಿರುದ್ಧ್ ದಾಸ್ ಗುಪ್ತ ಬೆಂಬಲದಿಂದ ಉನ್ನತ ವಿದ್ಯಾಭ್ಯಾಸ ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಇವರ ಒಬ್ಬನೇ ಮಗ ಸಂಜಾಯ್ ದಾಸ್ ಗುಪ್ತ ಪೋಷಕರಂತೆಯೇ ಸಾಮಾಜಿಕ ಸುಧಾರಣೆಗಳ ಆಶೋತ್ತರ ಹೊಂದಿದ್ದರು. ಅವರ ನಿಧನದ ನಂತರ ಅವರ ಕುಟುಂಬ ಆ ಕೆಲಸ ಮಾಡುತ್ತಿದೆ ಎಂದರು.
ಎ.ಟಿ. ವೇಣುಗೋಪಾಲ ಕೃಷ್ಣಮಾಚಾರ್ ಅವರು ತಾವು ಮುತ್ತೂರಿನ ಇತಿಹಾಸದ ಕುರಿತಾಗಿ ಬರೆದ ಹಸ್ತಪ್ರತಿಯನ್ನು ಪುಸ್ತಕರೂಪದಲ್ಲಿ ಹೊರತರುವಂತೆ ಡಾ.ಶಾಂಗೋನ್ ದಾಸ್ ಗುಪ್ತ ಅವರಿಗೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಟ್ರಸ್ಟ್ ಹಾಗೂ ನಮ್ಮ ಮುತ್ತೂರು ಸಂಸ್ಥೆಯ ಕೆಲಸಗಳಿಗೆ ಸಹಕರಿಸುತ್ತಿರುವ ಸ್ವಯಂಸೇವಕರು, ಶಿಕ್ಷಕರು, ಮಹಿಳೆಯರನ್ನು ಗೌರವಿಸಲಾಯಿತು.
ಗ್ರಾಮದ ಹಿರಿಯರಾದ ಎಂ.ಎಸ್.ವೆಂಕಟೇಶಮೂರ್ತಿ, ಬೈರಾರೆಡ್ಡೀ, ಕೆಂಪೇಗೌಡ, ಗೋಪಾಲಪ್ಪ, ಬೈರೇಗೌಡ, ಸೂರಪ್ಪ, ಎಂ.ಕೆ.ವೆಂಕಟೇಶಮೂರ್ತಿ, ಸರ್ಕಾರಿ ಶಾಲೆಯ ಶಿಕ್ಷಕರು ಹಾಜರಿದ್ದರು.
೬೩ ನೇ ಕನ್ನಡ ರಾಜ್ಯೋತ್ಸವ ಸಮಾರಂಭ
ರಾಷ್ಟ್ರೀಯ ಮತ್ತು ನಾಡ ಹಬ್ಬಗಳ ಆಚರಣಾ ಸಮಿತಿ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ನಗರದ ಬಸ್ ನಿಲ್ದಾಣದ ವೃತ್ತದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ೬೩ ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಧ್ವಜಾರೋಹಣ ಮಾಡಿ, ಮೆರವಣಿಗೆಗೆ ಚಾಲನೆ ನೀಡಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಹೆಮ್ಮೆಪಡುವಂತಹ ಪರಂಪರೆ ಮತ್ತು ಐತಿಹ್ಯವನ್ನು ಹೊಂದಿರುವ ಕನ್ನಡಿಗರಾದ ನಾವು ನಮ್ಮ ನಾಡು, ನುಡಿಯ ರಕ್ಷಣೆಗೆ ಮುಂದಾಗೋಣ. ಗಡಿಭಾಗದ ಜನರ ಜವಾಬ್ದಾರಿ ಹೆಚ್ಚಿದ್ದು, ಮಾತೃ ಭಾಷೆಯ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕು ಎಂದು ಅವರು ಹೇಳಿದರು.
ಕನ್ನಡ ಭಾಷೆಗೆ ಬಹಳ ವೈಭವಯುತ ಹಿನ್ನೆಲೆಯಿದೆ. ದೇಶಕ್ಕೆ ಅನೇಕ ಮಂದಿ ದಿಗ್ಗಜರನ್ನು, ಸಾಧಕರನ್ನು ಕೊಡುಗೆಯಾಗಿ ನೀಡಿರುವಂತಹ ನಾಡಿನಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿ ಎಂದು ಹೇಳುವ ನಾವೇ ನಮ್ಮ ಮಾತೃಭಾಷೆಯಾದ ಕನ್ನಡವನ್ನು ಕಡೆಗಣಿಸುತ್ತಿದ್ದೇವೆ. ಅದು ಆಗಬಾರದು ಎಂದರು.
ನೆರೆ ರಾಜ್ಯಗಳಿಗೆ ಹೋದರೆ ಅಲ್ಲಿನ ಸ್ಥಳೀಯ ಭಾಷೆಯಲ್ಲಿಯೆ ವ್ಯವಹರಿಸಬೇಕಾಗುತ್ತದೆ. ಪ್ರಾಚೀನ ಭಾಷೆಯಾದ ಕನ್ನಡವನ್ನು ನಮ್ಮ ರಾಜ್ಯದ ಗಡಿ ಭಾಗಗಳಲ್ಲಿ ಉಳಿಸಿಕೊಳ್ಳಲು ಹೋರಾಟದ ಹಾದಿ ಹಿಡಿದಿರುವುದು ಶೋಚನೀಯ ಸಂಗತಿಯಾಗಿದೆ ಎಂದರು.
ನಾವು ವರ್ಷಕ್ಕೊಮ್ಮೆ ರಾಜ್ಯೋತ್ಸವದ ಹೆಸರಿನಲ್ಲಿ ಹಬ್ಬ ಆಚರಿಸಿದ ಮಾತ್ರಕ್ಕೆ ಭಾಷೆ ಉಳಿಯುವುದಿಲ್ಲ ಬದಲಿಗೆ ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಮಾತನಾಡುವುದು ಹಾಗೂ ಮಾತೃಭಾಷೆಯಲ್ಲಿ ವ್ಯವಹರಿಸಿದಾಗ ಮಾತ್ರ ಭಾಷೆ ಉಳಿಯುತ್ತದೆ ಎಂದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ನಾಡಿನ ಹಿರಿಮೆ ಗರಿಮೆಗಳನ್ನು ಸಾರುವ ಜಾನಪದ ಕಲಾ ಪ್ರದರ್ಶನ, ಮಂಗಳ ವಾದ್ಯಗಳೊಡನೆ ಭುವನೇಶ್ವರಿಯ ಮೆರವಣಿಗೆಯನ್ನು ಆಯೋಜಿಸಲಾಗಿತ್ತು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಇದೇ ಮೊದಲ ಭಾರಿಗೆ ವೇದಿಕೆ ಕಾರ್ಯಕ್ರಮ ರದ್ದುಗೊಳಿಸಿ ನಗರದ ಆಶಾಕಿರಣ ಅಂಧಮಕ್ಕಳಿಗೆ ತಾಲ್ಲೂಕು ಆಡಳಿತದಿಂದ ಹೊದಿಕೆಗಳನ್ನು ವಿತರಿಸಲಾಯಿತು.
ತಹಸೀಲ್ದಾರ್ ಎಸ್.ಅಜಿತ್‌ಕುಮಾರ್ ರೈ, ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು, ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಕಸಾಪ ಅಧ್ಯಕ್ಷ ಎ.ಎಂ.ತ್ಯಾಗರಾಜು, ಕಾರ್ಯದರ್ಶಿ ಸತೀಶ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.
ಏಕತಾ ದಿವಸ್ ಅಂಗವಾಗಿ ಏಕತಾ ಓಟ
ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಏಕತಾ ದಿವಸ್ ಅಂಗವಾಗಿ ಚೀಮಂಗಲ ದಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಣ್ಣೂರು ಶಾಲೆಯವರಿಗೆ ಏಕತಾ ಓಟವನ್ನು ಹಮ್ಮಿಕೊಳ್ಳಲಾಗಿತ್ತು . ಮುಖ್ಯ ಶಿಕ್ಷಕ ಶಿವಶಂಕರ್, ಶಿಕ್ಷಕರಾದ ವಿಠ್ಠಲ್ ದೊಡ್ಡ ನಾಯಕ್, ಶ್ರೀನಿವಾಸ್, ಸವಿತಾ, ನಾಗರಾಜ್, ಮಮತಾ, ಶರ್ಫುದ್ದೀನ್, ಶಿವಶಂಕರ್ ಹಾಜರಿದ್ದರು
ವಲ್ಲಭಬಾಯಿ ಪಟೇಲರ ಜನ್ಮದಿನಾಚರಣೆ, ರಾಷ್ಟ್ರೀಯ ಏಕತಾದಿವಸ್ ಕಾರ್ಯಕ್ರಮ
ತಾಲ್ಲೂಕಿನ ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನೆಹರು ಯುವಕೇಂದ್ರ, ನವದೆಹಲಿಯ ರಾಷ್ಟ್ರೀಯ ಯುವಯೋಜನೆಯ ವತಿಯಿಂದ ಹಮ್ಮಿಕೊಂಡಿದ್ದ ವಲ್ಲಭಬಾಯಿ ಪಟೇಲರ ಜನ್ಮದಿನಾಚರಣೆ, ರಾಷ್ಟ್ರೀಯ ಏಕತಾದಿವಸ್ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಸಾಪ ಅಧ್ಯಕ್ಷ ಚಿ.ಮಾ.ಸುಧಾಕರ್ ಮಾತನಾಡಿದರು.
ಸರ್ದಾರ್ ವಲ್ಲಭಬಾಯಿ ಪಟೇಲರದ್ದು ಮೇರುವ್ಯಕ್ತಿತ್ವವಾಗಿದ್ದು, ಏಕತೆಯ ಹರಿಕಾರರೂ, ಉಕ್ಕಿನಂತಹ ದೃಡತೆಯುಳ್ಳ ಮನುಷ್ಯರಾಗಿದ್ದರು. ಅವರ ಸ್ತುತಿ ಇಂದು ಅನಿವಾರ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸ್ವಾತಂತ್ರ್ಯ ತಂದುಕೊಡುವಲ್ಲಿ ಪಟೇಲರ ಕೊಡುಗೆ ಅಪಾರವಾದುದು, ವಕೀಲಿವೃತ್ತಿಯ ಘನತೆ, ಗೌರವ ಎಲ್ಲವನ್ನೂ ತ್ಯಜಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ಸರಳಜೀವನ, ಕಷ್ಟಕಾರ್ಪಣ್ಯಗಳಿಗೆ ತಮ್ಮನ್ನು ಒಡ್ಡಿಕೊಂಡಿದ್ದರು ಎಂದರು.
ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ ಮಾತನಾಡಿ, ಪಟೇಲರು ಮದ್ಯಪಾನ, ಅಸೃಶ್ಯತೆ, ಬಡತನ, ಅಜ್ಞಾನದ ವಿರುದ್ಧ ವ್ಯಾಪಕ ಚಳವಳಿ ನಡೆಸಿದರು. ಸಾರ್ವಜನಿಕ ಸೇವೆಯೊಂದಿಗೆ ರಾಜನೀತಿ, ಆಡಳಿತರಂಗದಲ್ಲಿ ಅಧಿಕ ಅನುಭವ ಹೊಂದಿದ್ದರು. ವಿದ್ಯುತ್ ಸರಬರಾಜು, ನೈರ್ಮಲ್ಯ ಮತ್ತು ಶಿಕ್ಷಣ ವ್ಯವಸ್ಥೆಯ ಬಗ್ಗೆ ಹೆಚ್ಚು ಒಲವು ಹೊಂದಿದ್ದರು ಎಂದು ವಿವರಿಸಿದರು.
ನವದೆಹಲಿಯ ರಾಷ್ಟ್ರೀಯ ಯುವಯೋಜನೆ ರಾಜ್ಯ ಸಂಯೋಜಕ ವಿ.ಪ್ರಶಾಂತ್ ಮಾತನಾಡಿ, ಭಾರತೀಯ ರಾಜಕೀಯ ಏಕೀಕರಣ ಕಾರ್ಯ ಕೈಗೊಳ್ಳುವ ಮನಃಸ್ಥೈರ್ಯ, ಚಾಣಾಕ್ಷತನ, ಅಚಲತೆಯನ್ನು ಪಟೇಲರು ಹೊಂದಿದ್ದರು. ನಾಗರೀಕ ಸ್ವಾತಂತ್ರ್ಯದ ರೂಪುರೇಷೆಗಳನ್ನು ನಿರ್ಧರಿಸುವಲ್ಲಿ, ರಾಷ್ಟ್ರೀಕೃತ ಸಿವಿಲ್‌ಸರ್ವೀಸ್‌ನ್ನು ಬೆಂಬಲಿಸುವಲ್ಲಿ ಅವರು ತೋರಿದ ಕಾಳಜಿಯು ಅಪಾರವಾದುದು ಎಂದು ವಿವರಿಸಿದರು.
ವಿದ್ಯಾರ್ಥಿಗಳಿಗೆ ನುಡಿಮುತ್ತುಗಳ ಕಿರುಹೊತ್ತಿಗೆ, ಉಚಿತ ಪೆನ್ನುಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಗಾಗಿ ವಲ್ಲಭಬಾಯಿಪಟೇಲ್ ಜೀವನಚರಿತ್ರೆ ಕುರಿತಾದ ಪ್ರಬಂಧ ಸ್ಪರ್ಧೆಯನ್ನು ನಡೆಸಿ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಶಿಕ್ಷಕರಾದ ಎಚ್.ಎಸ್.ರುದ್ರೇಶಮೂರ್ತಿ, ಎ.ಬಿ.ನಾಗರಾಜು ಮಾತನಾಡಿದರು. ಎಸ್‌ಡಿಎಂಸಿ ಉಪಾಧ್ಯಕ್ಷ ಜಗದೀಶ್, ಗ್ರಾಮ ಪಂಚಾಯಿತಿ ಸದಸ್ಯ ಎನ್.ಅಶ್ವತ್ಥಪ್ಪ, ಎಂ.ದೇವರಾಜು, ದೊಡ್ಡಮುನಿವೆಂಕಟಶೆಟ್ಟಿ, ಎನ್.ಪಿ.ನಾಗರಾಜಪ್ಪ, ಮುಖ್ಯಶಿಕ್ಷಕಿ ಉಮಾದೇವಿ, ರಾಷ್ಟ್ರೀಯ ಯುವಯೋಜನೆ ಸ್ವಯಂಸೇವಕ ಪ್ರವೇಶ್, ಬೋಧಕವರ್ಗದವರು ಹಾಜರಿದ್ದರು.
ಲೋಕ ಕಲ್ಯಾಣಾರ್ಥ ಸಾಮೂಹಿಕ ಸತ್ಯನಾರಾಯಣ ಪೂಜೆ
ತಾಲ್ಲೂಕಿನ ದ್ಯಾವಪ್ಪನಗುಡಿ (ಜಯಂತಿಗ್ರಾಮ) ಗ್ರಾಮದಲ್ಲಿ ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ದಿ ಯೋಜನೆ, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಪ್ರಗತಿಬಂಧು ಜ್ಞಾನವಿಕಾಸ ಹಾಗೂ ಸ್ವ ಸಹಾಯ ಸಂಘಗಳ ಒಕ್ಕೂಟ ಬಶೆಟ್ಟಹಳ್ಳಿ ವಲಯದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾಜಿ ಶಾಸಕ ಎಂ.ರಾಜಣ್ಣ ಮಾತನಾಡಿದರು.
ಲೋಕ ಕಲ್ಯಾಣಾರ್ಥ ಹಾಗೂ ಕಾಲ ಕಾಲಕ್ಕೆ ಉತ್ತಮ ಮಳೆ ಬೆಳೆಗಳಾಗಲಿ ಎಂಬ ಉದ್ದೇಶದಿಂದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆಯಂತಹ ಧಾರ್ಮಿಕ ಕಾರ್ಯಗಳನ್ನು ಆಯೋಜಿಸಿರುವುದು ಅಭಿನಂದನೀಯ ಎಂದು ಅವರು ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಜೊತೆಗೆ ರಾಜ್ಯಾದ್ಯಂತ ಇರುವ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಧರ್ಮದ ಅಭಿವೃದ್ಧಿ ಸೇರಿದಂತೆ ಸಮಾಜದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.
ಶ್ರೀ ಸಾಯಿನಾಥ ಜ್ಞಾನಮಂದಿರದ ಮುಖ್ಯಸ್ಥ ಎಂ.ನಾರಾಯಣಸ್ವಾಮಿ ಮಾತನಾಡಿ, ಇತ್ತೀಚೆಗೆ ಮನೆಗಳಲ್ಲಿ ಸತ್ಯನಾರಾಯಣ ಪೂಜೆಯಂತಹ ಆಚರಣೆಗಳು ಮಾಡುವುದು ತುಂಬಾ ವಿರಳವಾಗಿವೆ. ಕಾರಣ ಜನರಿಗೆ ಪೂಜೆ ಮಾಡಿಸುವ ಆಸಕ್ತಿಯಿರುತ್ತದೆಯಾದರೂ ಆರ್ಥಿಕ ಶಕ್ತಿಯಿರುವುದಿಲ್ಲ. ಇದನ್ನು ಮನಗಂಡ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯವರು ಗ್ರಾಮಗಳಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿಸುವ ಮೂಲಕ ಹಳ್ಳಿಗಳು ಸುಭೀಕ್ಷೆಯಾಗಿರಲಿ ಹಾಗೂ ಸಕಾಲದಲ್ಲಿ ಉತ್ತಮ ಮಳೆ ಬೆಳೆಯಾಗಲಿ ಎಂದು ಪ್ರಾರ್ಥಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಮೋಹನ್ ಮಾತನಾಡಿ, ತಾಲ್ಲೂಕಿನಲ್ಲಿ ಕಳೆದ ಮೂರೂವರೆ ವರ್ಷದ ಅವಧಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಇಷ್ಟೊಂದು ಮುಂದುವರೆಯಬೇಕಾದರೆ ಈ ಭಾಗದ ಜನರ ಪ್ರೋತ್ಸಾಹವೇ ಕಾರಣ ಎಂದರು.
ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ನಮ್ಮ ಸೇವಾ ಪ್ರತಿನಿಧಿಗಳು ಭೇಟಿ ನೀಡಿ ಸ್ವಚ್ಚತೆ ಸೇರಿದಂತೆ ಆರೋಗ್ಯದ ಬಗ್ಗೆ ತಿಳುವಳಿಕೆ ನೀಡುವ ಕೆಲಸವನ್ನು ಮಾಡುತ್ತಾರೆ. ವಿಶೇಷವಾಗಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನಿರ್ಗತಿಕರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಧನ ನೀಡುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ ಎಂದರು.
ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಸುಮಾರು ೧೫೦ ಕ್ಕೂ ಹೆಚ್ಚು ದಂಪತಿಗಳು ಪಾಲ್ಗೊಂಡಿದ್ದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧೀಕಾರಿ ಮೋಹನ್, ಮೇಲ್ವಿಚಾರಕ ಡಿ.ರಮೇಶ್ ಹಾಜರಿದ್ದರು.

