Home Blog Page 361

ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಸನ್ಮಾನ

0

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆದ ಕ್ರೀಡಾಕೂಟದಲ್ಲಿ ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾದ ಐವರು ವಿದ್ಯಾರ್ಥಿಗಳನ್ನು ಭಾನುವಾರ ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಪುರಸ್ಕರಿಸಿ ಶೂ ವಿತರಿಸಲಾಯಿತು.
ನಗರದ ಮಯೂರ ವೃತ್ತದ ಮಹಾಮುಖ್ಯಪ್ರಾಣ ಆಂಜನೇಯಸ್ವಾಮಿ ದೇವಾಲಯದ ಬಳಿ ವಿದ್ಯಾರ್ಥಿಗಳಾದ ಮಾನಸ (೪೦೦ ಮೀ ಓಟ), ಚೈತನ್ಯ (ರಿಲೇ), ಕಾರ್ತಿಕ್ (ಕರಾಟೆ), ಚಂದು (೪೦೦ ಮೀ ಓಟ) ಮತ್ತು ಭಾರ್ಗವಿ (ಕರಾಟೆ) ಅವರನ್ನು ಪುರಸ್ಕರಿಸಿದ ಸಂಘದ ಅಧ್ಯಕ್ಷ ಲಕ್ಷ್ಮೀಪತಿ, ವಿದ್ಯಾರ್ಥಿಗಳು ರಾಷ್ಟಮಟ್ಟಕ್ಕೆ ಆಯ್ಕೆಯಾದರೆ ಐದು ಸಾವಿರ ರೂಗಳನ್ನು ಪ್ರೋತ್ಸಾಹಧನವಾಗಿ ನೀಡಲಾಗುವುದೆಂದು ತಿಳಿಸಿದರು.
ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷ ಎಂ.ಮುನಿರಾಜು, ರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ಕ್ರೀಡಾಪಟು ಮುನಿಕೃಷ್ಣ, ನೃತ್ಯಕಲಾವಿದ ಮುನಿರಾಜು, ಶ್ರೀರಾಮಣ್ಣ, ತಾದೂರು ಮಂಜು, ದಾಕ್ಷಾಯಿಣಿ, ಚಂದ್ರಕಲಾ, ಸಿ.ಬಾಬಾ, ನವೀನ್, ಶಿವಕುಮಾರ್, ಮುನಿರಾಜು, ಸುನಿಲ್ ಹಾಜರಿದ್ದರು.

ಸಾಮಾಜಿಕ ಜವಾಬ್ದಾರಿ ಮೂಡಿಸುವುದು ನೈಜ ಶಿಕ್ಷಣ – ಸಾಹಿತಿ ಪ್ರಶಾಂತ್ ರಾಮಸ್ವಾಮಿ

0

ಕನ್ನಡ ಸಾರಸ್ವತ ಪರಿಚಾರಿಕೆ ಶಿಡ್ಲಘಟ್ಟ ಮತ್ತು ಕೇಂದ್ರ ಗ್ರಂಥಾಲಯ ಸಹಯೋಗದೊಂದಿಗೆ ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ನಡೆದ ‘ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ’ 15 ನೇ ತಿಂಗಳ ಕಾರ್ಯಕ್ರಮದಲ್ಲಿ ಸಾಹಿತಿ ಪ್ರಶಾಂತ್ ರಾಮಸ್ವಾಮಿ ಮಾತನಾಡಿದರು.
ಶಿಕ್ಷಿತರು ಅಂದರೆ ಕೇವಲ ಅಕ್ಷರ ಕಲಿತವರಲ್ಲ. ಸಾಮಾಜಿಕ ಜವಾಬ್ದಾರಿಯನ್ನು ಹೊಂದಿದವರು ಎಂಬುದಾಗಿದೆ. ಕೇವಲ ಕೆಲಸಕ್ಕೆ ಅನ್ನದ ಮಾರ್ಗಕ್ಕೆ ಸಹಕಾರಿಯಾದುದು ಶಿಕ್ಷಣವಲ್ಲ. ನಮ್ಮೊಳಗೆ ಸಾಮಾಜಿಕ ಜವಾಬ್ದಾರಿ ಮೂಡಿಸುವುದು ನೈಜ ಶಿಕ್ಷಣ. ಅಂತಹ ಶಿಕ್ಷಣ ಮಕ್ಕಳಿಗೆ ಸಿಕ್ಕಾಗ ಮಾತ್ರ ಅಭಿವೃದ್ಧಿ ಕಾಣಬಹುದು ಎಂದು ಅವರು ಅಭಿಪ್ರಾಯಪಟ್ಟರು.
“ಸರ್ಕಾರಿ ಶಾಲಾ ಕಾಲೇಜುಗಳಿಗೆ ಮಕ್ಕಳನ್ನು ಸೇರಿಸುವ ಮೂಲಕ ಪ್ರೋತ್ಸಾಹಿಸಬೇಕು. ಶಿಕ್ಷಣ ಕ್ಷೇತ್ರವು ವ್ಯಾಪಾರಕ್ಕಾಗಿ ಅಲ್ಲ ಸೇವೆಗಾಗಿ ಮೀಸಲಿಡಬೇಕು. ಶಿಕ್ಷಕರು ಶಿಲೆಯನ್ನು ಕೆತ್ತುವ ಶಿಲ್ಪಿಗಳಂತೆ ಮಕ್ಕಳ ವ್ಯಕ್ತಿತ್ವವನ್ನು ಅರಳಿಸಬಲ್ಲರು. ನಮ್ಮ ಶಿಕ್ಷಕರ ಪ್ರೋತ್ಸಾಹದಿಂದಾಗಿ ಪಿಯುಸಿ ಓದುವ ಸಮಯದಲ್ಲಿಯೇ ಕವನ ಸಂಕಲನವನ್ನು ಹೊರತಂದೆ. ಓದುವ ಹವ್ಯಾಸವನ್ನು ಬೆಳೆಸಿಕೊಂಡೆ. ಜೀವನವನ್ನು ರೂಪಿಸಿಕೊಳ್ಳಲು ಮಾರ್ಗದರ್ಶನ ಮಾಡಿರುವ ಶಿಕ್ಷಕ ವೃಂದದವರಿಗೆ ಗೌರ್ವ ಸೂಚಿಸುವ ಸಲುವಾಗಿ ನಾನು ಪದವಿಯ ಕೊನೆಯ ವರ್ಷದಲ್ಲಿದ್ದಾಗ “ಆಚಾರ್ಯದೇವೋಭವ” ಎಂಬ ಪುಸ್ತಕವನ್ನು ಹೊರತಂದೆ” ಎಂದು ಹೇಳಿದರು.
“ಸಾಮಾಜಿಕ ಜಾಲತಾಣಗಳು ಈಗ ಪ್ರತಿಯೊಬ್ಬರನ್ನೂ ಮುಟ್ಟುವ ಮಾಧ್ಯಮವಾಗಿದೆ. ನಮ್ಮ ಬರಹವನ್ನು ಅತ್ಯಂತ ವೇಗವಾಗಿ ನಮ್ಮ ಸ್ನೇಹ ವೃಂದವನ್ನು ತಲುಪುತ್ತದೆ. ಮೊಬೈಲ್, ಇಂಟರ್ನೆಟ್, ವ್ಯಾಟ್ಸಪ್, ಫೇಸ್ ಬುಕ್ ಮುಂತಾದವುಗಳನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು. ಇಂಗ್ಲೆಂಡ್ ನಲ್ಲಿ ಓದಿ ಬಂದಿದ್ದರಿಂದ ವಿದೇಶದ ಶಿಕ್ಷಣದ ಗುಣಮಟ್ಟ, ಅವರು ನೀಡುವ ಆದ್ಯತೆಗಳು, ನಮ್ಮ ದೇಶೀ ಶಿಕ್ಷಣದ ಉದ್ದೇಶವನ್ನು ಸಮ್ಮಿಳಿತಗೊಳಿಸಿ ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಉದ್ದೇಶವಿದೆ” ಎಂದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಪುಸ್ತಕದಿಂದ ದೊರೆಯುವ ಜ್ಞಾನ ಮುಕುಟದ ಮಣಿಯಂತೆ, ಗಿಡದಲ್ಲಿ ಸುಂದರ ಹೂ ಹೊರಬರುವಂತೆ ಅಂತರಂಗದಿಂದ ಜ್ಞಾನವು ಹೊರಬರಬೇಕು ಎಂದು ಡಿ.ವಿ.ಜಿ ಅವರು ಹೇಳಿರುವ ಮಾತು ಸಾರ್ವಕಾಲಿಕ. ಸೃಜನಶೀಲ ಬರಹಗಾರರನ್ನು ಓದುಗರೊಂದಿಗೆ ಮುಖಾಮುಖಿ ಮಾಡಿ ಜ್ಞಾನವನ್ನು ಬೆಳಗಿಸುವುದು ನಮ್ಮ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ನುಡಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಖಾಜಾಂಚಿ ಸತೀಶ್ ಮಾತನಾಡಿ, ಒಳ್ಳೆಯದನ್ನು ಮೆಚ್ಚುವುದು ಕೂಡ ಒಂದು ಉತ್ತಮ ಸಂಸ್ಕಾರ. ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ, ಬರಹ ಇಷ್ಟವಾದರೆ ಮೆಚ್ಚುಗೆಯ ಮಾತನ್ನು ಆಡಿ, ಇನ್ನಷ್ಟು ಮಂದಿಗೆ ಓದಲು ಪ್ರೇರೇಪಿಸಿ. ಅದುವೇ ನಾವು ಲೇಖಕರಿಗೆ ಸಲ್ಲಿಸಬಹುದಾದ ಗೌರವ ಎಂದರು.
ಸಾಹಿತಿ ಪ್ರಶಾಂತ್ ರಾಮಸ್ವಾಮಿ ಗ್ರಂಥಾಲಯಕ್ಕೆ ತಮ್ಮ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಸಾಹಿತಿ ಪ್ರಶಾಂತ್ ರಾಮಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಗ್ರಂಥಪಾಲಕಿ ರಾಮಲೀಲ, ಸಹಾಯಕಿ ಬಾಂಧವ್ಯ, ಚಿತ್ರನಟ ಸಿ.ಎನ್‌. ಮುನಿರಾಜು, ಬೆಳ್ಳೂಟಿ ರಮೇಶ್, ಕಿರಣ್, ವಿ.ಆರ್.ನರಸಿಂಹರಾಜು, ಮುಕ್ತಾರ್ ಅಹಮದ್ ಖಾನ್, ಲಕ್ಷ್ಮೀಕಾಂತ್, ನಾಗರಾಜ್, ಅಬ್ದುಲ್ಲ, ಗೋಪಾಲಕೃಷ್ಣ, ರೋಹನ್, ಮಧುಸೂದನ್ ಹಾಜರಿದ್ದರು.

ಡಿಜಿಟಲ್ ಸಾಕ್ಷರತಾ ತರಬೇತಿಯ ವಾರ್ಷಿಕೋತ್ಸವ ಸಮಾರಂಭ

0

ಡಿಜಿಟಲ್ ಸಾಕ್ಷರತೆಯು ಈಗಿನ ಕಾಲದ ಅವಶ್ಯಕತೆಯಾಗಿದೆ. ಸಮಾಜವನ್ನು ಡಿಜಿಟಲ್ ಆಗಿ ಸದೃಢಗೊಳಿಸುವ, ಆರ್ಥಿಕ ಜ್ಞಾನ ಬೆಳೆಸುವ, ಇ ಆಡಳಿತದ ವಿವಿಧ ಯೋಜನೆಗಳನ್ನು ಜನರಿಗೆ ಅರ್ಥೈಸುವಂತೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ತಹಶೀಲ್ದಾರ್ ಅಜಿತ್ ಕುಮಾರ್ ರೈ ತಿಳಿಸಿದರು.
ನಗರದ ಸ್ತ್ರೀಶಕ್ತಿ ಭವನದಲ್ಲಿ ಆಕ್ಷನ್ ಆನ್ ಡಿಸೆಬಿಲಿಟಿ ಅಂಡ್ ಡೆವಲೆಪ್ ಮೆಂಟ್ ಇಂಡಿಯಾ ಮತ್ತು ನಾಸ್ಕಾಂ ಫೌಂಡೇಷನ್ ಆಯೋಜಿಸಿದ್ದ ಡಿಜಿಟಲ್ ಸಾಕ್ಷರತಾ ತರಬೇತಿಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ನಗರದ ವಾಸಿಗಳಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ಪ್ರಜೆಯೂ ಡಿಜಿಟಲ್ ಸೇವೆ ಮತ್ತು ತಂತ್ರಜ್ಞಾನವನ್ನು ಬಳಸಲು ಸಮರ್ಥರಾದಾಗ ಮಾತ್ರ ಡಿಜಿಟಲ್ ಸಾಕ್ಷರತೆ ಕಾರ್ಯಕ್ರಮ ಯಶಸ್ವಿಯಾದಂತೆ. ಡಿಜಿಟಲ್ ಸಾಕ್ಷರತೆಯು ಜೀವನ ಪರಿಸ್ಥಿತಿಗಳಲ್ಲಿ ಅರ್ಥಪೂರ್ಣ ಕ್ರಮಗಳಿಗಾಗಿ ಡಿಜಿಟಲ್ ತಂತ್ರಜ್ಞಾನಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಬಳಸಲು ವ್ಯಕ್ತಿಗಳು ಮತ್ತು ಸಮುದಾಯಗಳ ಸಾಮರ್ಥ್ಯವಾಗಿದೆ. ಡಿಜಿಟಲ್ ಸಾಕ್ಷರರಾದ ವ್ಯಕ್ತಿಗಳು ಕಂಪ್ಯೂಟರ್ ಗಳು ಸ್ಮಾರ್ಟ್ ಫೋನ್ ಮೊದಲಾದ ಸಾಧನಗಳನ್ನು, ಇಮೇಲ್ ಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು, ಇಂಟರ್ನೆಟ್ ಬ್ರೌಸ್, ಸರ್ಕಾರಿ ಸೇವೆಗಳನ್ನು ಪ್ರವೇಶಿಸುವುದು, ಮಾಹಿತಿಗಾಗಿ ಹುಡುಕಿ, ನಗದನ್ನು ಬಳಸದೇ ವಹಿವಾಟುಗಳನ್ನು ಕೈಗೊಳ್ಳುವುದು ಇತ್ಯಾದಿಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.
ಅಂಗವಿಕಲರಿಗೂ ಡಿಜಿಟಲ್ ಸಾಕ್ಷರತೆಯು ವರದಾನವಾಗಲಿದೆ. ಸರ್ಕಾರದ ಸೇವಗಳನ್ನು ಯಾರ ನೆರವೂ ಪಡೆಯದೇ ತಿಳಿದುಕೊಳ್ಳುವ, ಪಡೆದುಕೊಳ್ಳುವ ಹಾಗೂ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ತಮ್ಮ ಆರ್ಥಿಕ ವ್ಯವಹಾರಗಳು, ಶೈಕ್ಷಣಿಕ ಮತ್ತು ವೃತ್ತಿಪರ ಅವಶ್ಯಕತೆಗಳು ಮತ್ತು ವ್ಯಾಪಾರ ವಹಿವಾಟು ಮೊದಲಾದ ಕೆಲಸಗಳನ್ನು ಅಂತರ್ಜಾಲದ ಮೂಲಕ ಮೊಬೈಲ್ ಮತ್ತು ಗಣಕ ಯಂತ್ರದ ಸಹಾಯದಿಂದ ಮಾಡಿಕೊಳ್ಳಬಹುದಾಗಿದೆ. ಈ ತರಬೇತಿಯಿಂದ ಉದ್ಯೋಗದ ಅವಕಾಶಗಳೂ ಇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಶಾಕಿರಣ ಅಂಧ ಮಕ್ಕಳು ಹಾಡುಗಳನ್ನು ಹಾಡಿದರು. ಆಕ್ಷನ್ ಆನ್ ಡಿಸೆಬಿಲಿಟಿ ಅಂಡ್ ಡೆವಲೆಪ್ ಮೆಂಟ್ ಇಂಡಿಯಾ ಸಂಸ್ಥೆಯವರು ನಾಟಕದ ಮೂಲಕ ಡಿಜಿಟಲ್ ಸಾಕ್ಷರತೆಯ ಬಗ್ಗೆ ಅರಿವು ಮೂಡಿಸಿದರು.
ಇನ್ಫೋಸಿಸ್ ಬಿ.ಪಿ.ಎಂ ನ ಕೆ.ರಾಘವೇಂದ್ರ, ರೀನ ರವಿ, ಶಾಲಿನಿ ಜಯಕೃಷ್ಣನ್, ಬಿ.ಆರ್.ಸಿ ಯ ಎನ್.ತ್ಯಾಗರಾಜು, ನಾಸ್ಕಾಂ ಫೌಂಡೇಶನ್ ನ ಅನ್ವಿಶಾ ಭಾರದ್ವಾಜ್, ಎಡೀಡಿಯ ರಾಮಚಂದ್ರ, ವಿದ್ಯಾಶ್ರೀ, ರಕ್ಷಿತಾ, ಬಿ.ಜಿ.ನಾಗರಾಜು, ಮುರಳಿ ಹಾಜರಿದ್ದರು.

ಗ್ರಾಮ ಪಂಚಾಯಿತಿ ನೌಕರರ ನಾಲ್ಕನೇ ತಾಲ್ಲೂಕು ಸಮ್ಮೇಳನ

0

ತಾಲ್ಲೂಕಿನ ಮೇಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದ ಸಮುದಾಯಭವನದಲ್ಲಿ ಶುಕ್ರವಾರ ನಡೆದ ಗ್ರಾಮ ಪಂಚಾಯಿತಿ ನೌಕರರ ನಾಲ್ಕನೇ ತಾಲ್ಲೂಕು ಸಮ್ಮೇಳನದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್ ಮಾತನಾಡಿದರು.
ಶಿಡ್ಲಘಟ್ಟ ತಾಲ್ಲೂಕಿನ ೩೪೬ ಗ್ರಾಮ ಪಂಚಾಯಿತಿ ನೌಕರರಿಗೂ ಗುರುತಿನ ಚೀಟಿಯನ್ನು ನೀಡಿದ್ದು, ಪ್ರತಿಯೊಬ್ಬ ನೌಕರರ ಸೇವಾ ಪುಸ್ತಕವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನಿರ್ವಹಣೆ ಮಾಡಬೇಕು ಎಂದು ಅವರು ತಿಳಿಸಿದರು.
ಗ್ರಾಮ ಪಂಚಾಯಿತಿ ನೌಕರರು ಯಾವುದೇ ದುಶ್ಚಟಗಳಿಗೆ ಬಲಿಯಾಗದೇ, ಗ್ರಾಮಗಳಲ್ಲಿ ರಾಜಕೀಯದಲ್ಲಿ ಭಾಗಿಯಾಗದೇ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.
ಸಿ.ಐ.ಟಿ.ಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಗಂಗಪ್ಪ ಮಾತನಾಡಿ, ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ನೌಕರರಿಗೆ ಇ.ಎಫ್.ಎಂ.ಎಸ್ ಮೂಲಕ ಸರ್ಕಾರಿ ನೌಕರರಿಗೆ ವೇತನವಾಗುವಂತೆ ನೇರವಾಗಿ ಖಾತೆಗೆ ಸಂಬಳ ಜಮಾ ಆಗುವ ವ್ಯವಸ್ಥೆಗೆ ಇ.ಒ ಅನುಮೋದನೆ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ ೨೦೧೮ ರಿಂದ ೨೦೨೧ ರವರೆಗೆ ಗ್ರಾಮ ಪಂಚಾಯಿತಿ ನೌಕರರ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿರುವುದು ಮಾದರಿಯಾಗಿದೆ ಎಂದರು.
ಜಿಲ್ಲಾ ಸಿ.ಪಿ.ಐ.ಎಂ ಪ್ರಧಾನ ಕಾರ್ಯದರ್ಶಿ ಬಿ.ಎಂ.ಮುನಿಕೃಷ್ಣಪ್ಪ ಮಾತನಾಡಿ. ಗ್ರಾಮ ಪಂಚಾಯಿತಿ ನೌಕರರು ಒಗ್ಗಟ್ಟಿನಿಂದ ಇದ್ದಾಗ ಮಾತ್ರ ಸಮಸ್ಯೆಗಳು ಪರಿಹಾರವಾಗುತ್ತವೆ. ಒಬ್ಬರಿಗೊಬ್ಬರು ಕಷ್ಟ ಸುಖಗಳಿಗೆ ಸ್ಪಂದಿಸಬೇಕು ಎಂದರು.
ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಮುನಾ ಧರ್ಮೇಂದ್ರ, ಪಲಿಚೇರ್ಲು ಪಿಡಿಒ ಕಾತ್ಯಾಯಿನಿ, ಮೇಲೂರು ಪಿಡಿಒ ಕೆ.ವಿ.ಶಾರದಾ, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಮುನಿಲಕ್ಷ್ಮಮ್ಮ, ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುಳಾ ಹಾಜರಿದ್ದರು.

ತಾಲ್ಲೂಕು ಮಟ್ಟದ ಅಧಿಕಾರಿಗಳ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರ ಸಾಮಾನ್ಯ ಸಭೆ

0

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ಅಧಿಕಾರಿಗಳ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರ ಸಾಮಾನ್ಯ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ ಮಾತನಾಡಿದರು.
ಕುಡಿಯುವ ನೀರು ಪೂರೈಸಲು ಮಾತ್ರ ಬಳಸಲು ಸೂಚಿಸಿದ್ದರೂ ಅದಕ್ಕೆ ಮೀಸಲಿಟ್ಟ ಹಣವನ್ನು ಬೇರೆ ಕಾರ್ಯಗಳಿಗೆ ಬಳಸುತ್ತಿರುವ ದೂರು ಬಂದಿದೆ. ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಅವರು ತಿಳಿಸಿದರು.
ಗ್ರಾಮ ಪಂಚಾಯಿತಿಗಳಿಗೆ ಬರುವ ೧೪ ನೇ ಹಣಕಾಸು ಯೋಜನೆಯ ಅನುದಾನವನ್ನು ಕುಡಿಯುವ ನೀರು ಪೂರೈಸಲು ಮಾತ್ರ ಬಳಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಸೂಚಿಸಿದ್ದೆವು. ಕುಡಿಯುವ ನೀರಿಗೆ ಮೊದಲ ಆದ್ಯತೆಯಿರಲಿ.
ಖಾಸಗಿ ಕೊಳವೆ ಬಾವಿ ಹಾಗೂ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವವರಿಗೆ ತಿಂಗಳುಗಳಗಟ್ಟಲೇ ಹಣ ಸಂದಾಯ ಮಾಡದೇ ಇದ್ದರೆ ನೀರು ಪೂರೈಸಲು ತೊಂದರೆಯಾಗುತ್ತದೆ ಹಾಗಾಗಿ ಅವರಿಗೆ ವಾರಕ್ಕೊಮ್ಮೆ ಹಣ ಸಂದಾಯ ಮಾಡಲು ಕ್ರಮ ಜರುಗಿಸುವಂತೆ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ೨೦ ಮಂದಿ ಶುಶ್ರೂಷಕಿಯರ ಅಗತ್ಯವಿದ್ದು ಕೇವಲ ೯ ಮಂದಿ ಮಾತ್ರ ಇದ್ದಾರೆ. ಹಾಗಾಗಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಕೂಡಲೇ ಆಸ್ಪತ್ರೆಯಲ್ಲಿರುವ ಶುಶ್ರೂಷಕಿಯರ ಕೊರತೆ ತೀರಿಸಲು ಕ್ರಮ ಜರುಗಿಸಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್‌ಕುಮಾರ್ ಸಭೆಗೆ ಮಾಹಿತಿ ನೀಡಿದರು.
ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಅನಸೂಯಮ್ಮ ಮಾತನಾಡಿ ತಾಲ್ಲೂಕಿನಾದ್ಯಂತ ಬಹುತೇಕ ವಾಲ್ಮೀಕಿ ಭವನ ಹಾಗೂ ಅಂಬೇಡ್ಕರ್ ಭವನ ನಿರ್ಮಾಣ ಕಾರ್ಯ ಮುಗಿದಿದೆಯಾದರೂ ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ನಿರ್ಮಾಣ ಮಾಡಲು ಈವರೆಗೂ ನಿವೇಶನ ಮಂಜೂರು ಮಾಡಿಲ್ಲ. ಈ ಬಗ್ಗೆ ಹಲವಾರು ಭಾರಿ ಮನವಿ ಸಲ್ಲಿಸಲಾಗಿದೆಯಾದರೂ ಗ್ರಾಮ ಪಂಚಾಯಿತಿಯಿಂದ ನಿವೇಶನ ಲಭ್ಯವಿಲ್ಲದೇ ಇರುವುದರಿಂದ ಇದೀಗ ಕಂದಾಯ ಇಲಾಖೆಗೆ ನಿವೇಶನ ನೀಡುವಂತೆ ಮನವಿ ಮಾಡಲಾಗಿದೆ ಎಂದರು.
ಕೃಷಿ ಇಲಾಖೆಯ ಅವ್ಯವಸ್ಥೆಗಳ ಬಗ್ಗೆ ಸದಸ್ಯರು ಆರೋಪ ಮಾಡಿದಾಗ ತಾಲ್ಲೂಕಿನಾದ್ಯಂತ ಇರುವ ರಸಗೊಬ್ಬರ ಮಾರಾಟ ಕೇಂದ್ರಗಳಲ್ಲಿ ರಸಗೊಬ್ಬರದ ದರ ಪಟ್ಟಿ ಹಾಕಿರುವುದಿಲ್ಲ. ಈ ಬಗ್ಗೆ ಇಲಾಖೆ ಅಧಿಕಾರಿಗಳೂ ಅಂಗಡಿ ಮಾಲೀಕರಿಗೆ ನೋಟೀಸ್ ನೀಡುವಂತೆ ಸೂಚಿಸಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಮುನಿಯಪ್ಪ, ಇಓ ಎಂ.ವೆಂಕಟೇಶ್, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಜರಿದ್ದರು.

ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಚೀಮಂಗಲ, ತುಮ್ಮನಹಳ್ಳಿಯ ಶಾಲೆಯ ವಿದ್ಯಾರ್ಥಿಗಳು

0

ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಎಂ.ಯಶವಂತ್ ಹೈ ಜಂಪ್ ಪ್ರಥಮ ಮತ್ತು ಆರ್. ಮೌನಿಕ, ೧೫೦೦ ಮೀ. ಮತ್ತು ೩೦೦೦ ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತಾಲ್ಲೂಕಿನ ತುಮ್ಮನಹಳ್ಳಿಯ ವಿದ್ಯಾರ್ಥಿಗಳಾದ ಟಿ.ಎಸ್. ಸೌಂದರ್ಯ 400 ಮೀ ಪ್ರಥಮ, 800 ಮೀ ಪ್ರಥಮ, 400 ರಿಲೇ ದ್ವಿತೀಯ ; ಎಂ.ಡಿ.ವಾಣಿ – 200 ಮೀ ಪ್ರಥಮ, 400 ರಿಲೇ ದ್ವಿತೀಯ ; ಡಿ.ಎಸ್.ವಾಣಿಶ್ರೀ -3 ಕಿಮೀ ವೇಗದ ನಡಿಗೆ ಪ್ರಥಮ; ಟಿ.ಎನ್. ದಿವ್ಯ -400 ಮೀ ದ್ವಿತೀಯ, 400 ಮೀಟರ್ ರಿಲೇ ದ್ವಿತೀಯ; ಡಿ.ಎಸ್.ಅಕ್ಷಿತ- 800 ಮೀ ತೃತೀಯ 400ಮೀ ರಿಲೇ ದ್ವಿತೀಯ ಸ್ಥಾನವನ್ನು ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ

ಮಳಮಾಚನಹಳ್ಳಿಯ ಸಮುದಾಯಭವನದಲ್ಲಿ ತಾಲ್ಲೂಕು ಕಸಾಪ ವತಿಯಿಂದ “ಗಾನಸಿರಿ” ಕಾರ್ಯಕ್ರಮ

0

ತಾಲ್ಲೂಕಿನ ಮಳಮಾಚನಹಳ್ಳಿಯ ಸಮುದಾಯಭವನದಲ್ಲಿ ಬುಧವಾರ ಸಂಜೆ ತಾಲ್ಲೂಕು ಕಸಾಪ ಹಮ್ಮಿಕೊಂಡಿದ್ದ “ಗಾನಸಿರಿ” ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಬೈರೇಗೌಡ ಮಾತನಾಡಿದರು.
ನಾಟಕ, ಭಜನೆ, ಹರಿಕಥೆ, ಜಾನಪದ ಕಲೆಗಳು ಹಳ್ಳಿಗಳಲ್ಲಿ ಹಿಂದೆ ಅವಿಭಾಜ್ಯ ಅಂಗಗಳಂತಿದ್ದವು. ಈಗಿನ ಯುವ ಪೀಳಿಗೆ ಈ ಕಲೆಗಳತ್ತ ಆಕರ್ಷಿತರಾಗುತ್ತಿಲ್ಲ. ಯುವಪೀಳಿಗೆಗೆ ಗ್ರಾಮೀಣ ಕಲೆಗಳನ್ನು ಪರಿಚಯಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಹಳ್ಳಿಯಲ್ಲಿರುವ ಕಲಾವಿದರು ಯಾವುದೇ ಪ್ರಶಸ್ತಿ, ಪುರಸ್ಕಾರ, ಫಲಾಪೇಕ್ಷೆಯಿಲ್ಲದೆ ಕಲೆಯನ್ನು ಅನುಭವಿಸಿ, ಆಸ್ವಾದಿಸುತ್ತಾರೆ. ಪ್ರತಿಯೊಂದು ಹಳ್ಳಿಯಲ್ಲೂ ಈ ರೀತಿಯ ಕಲಾವಿದರಿದ್ದಾರೆ. ಒಳ್ಳೆಯ ಪ್ರೇಕ್ಷಕವರ್ಗವೇ ಕಲಾವಿದನಿಗೆ ಪ್ರಶಸ್ತಿಯಿದ್ದಂತೆ. ಕ್ಸಾಪ ವತಿಯಿಂದ ಈ ರೀತಿಯ ಕಲಾವಿದರೊಂದಿಗೆ ನಡೆಸುವ ಕಾರ್ಯಕ್ರಮವು ಯುವಪೀಳಿಗೆಗೆ ಸ್ಥಳೀಯ ಕಲೆಯ ಬಗ್ಗೆ ಆಸಕ್ತಿ ಹೆಚ್ಚಿಸಲು ಸಹಕಾರಿಯಾಗುತ್ತದೆ. ಪ್ರತಿ ಹಳ್ಳಿಯಲ್ಲೂ ಕಸಾಪ ಈ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿ ಎಂದು ಹೇಳಿದರು.
ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎನ್.ಕೃಷ್ಣಯ್ಯ ಮಾತನಾಡಿ, ಕಲೆಯಲ್ಲೇ ಭಗವಂತನನ್ನು ಕಾಣುವ ಕಲಾವಿದರಿಗೆ ಮಳಮಾಚನಹಳ್ಳಿ ಗ್ರಾಮದಲ್ಲಿ ಪ್ರೋತ್ಸಾಹವಿದೆ. ಪ್ರತಿ ಹುಣ್ಣಿಮೆ, ಹಬ್ಬ, ಶನಿವಾರ ದೇವಸ್ಥಾನದಲ್ಲಿ ಭಾಜನೆ ಕಾರ್ಯಕ್ರಮ ಹಲವಾರು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ಹೊಸ ತಲೆಮಾರಿನ ಯುವಕರಿಗೂ ತರಬೇತಿ ನೀಡಲಾಗುತ್ತಿದೆ ಎಂದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ಜನಪದರ ಕಲೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಹಾಗೂ ಹಳ್ಳಿಗಳಲ್ಲಿ ಎಲೆಮರೆ ಕಾಯಿಗಳಂತಿರುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಲು “ಗಾನಸಿರಿ” ಕಾರ್ಯಕ್ರಮವನ್ನು ಹಳ್ಳಿಗಳಲ್ಲಿ ನಡೆಸುತ್ತಿದ್ದೇವೆ. ನಮ್ಮ ಸ್ಥಳೀಯ ಕಲಾವಿದರು ನಮ್ಮ ಹೆಮ್ಮೆಯ ಸಾಂಸ್ಕೃತಿಕ ಪ್ರತಿನಿಧಿಗಳು ಎಂದರು.
ಈ ಸಂದರ್ಭದಲ್ಲಿ ನಾಟಕ ನಿರ್ದೇಶಕ ಹಾಗೂ ಹಾರ್ಮೋನಿಯಮ್ ಕಲಾವಿದ ಮಳಮಾಚನಹಳ್ಳಿ ಮುನಿಶಾಮಪ್ಪ ಅವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು. ಭಜನೆ ಕಾರ್ಯಕ್ರಮದಲ್ಲಿ ಸೀತಾರಾಮಪ್ಪ, ನಾರಾಯಣಸ್ವಾಮಿ, ವೆಂಕಟೇಶಪ್ಪ, ನಾಗರಾಜ್, ಎಂ.ರಮೇಶ್, ಶೈಲಜಾ, ಆಂಜಿನಮ್ಮ, ಲಕ್ಷ್ಮಮ್ಮ ಭಾಗವಹಿಸಿದ್ದರು.
ಕಸಾಪ ತಾಲ್ಲೂಕು ಕಾರ್ಯದರ್ಶಿ ಸತೀಶ್, ನಗರ ಘಟಕದ ಅಧ್ಯಕ್ಷ ಸಿ.ಎನ್.ಮುನಿರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ರಾಮಾಂಜಿನಪ್ಪ, ವೆಂಕಟೇಶಪ್ಪ, ಮಾಜಿ ಎಸ್.ಎಫ್.ಸಿ.ಎಸ್ ಅಧ್ಯಕ್ಷ ಕೆ.ವಿ.ಕೃಷ್ಣಪ್ಪ, ಕಲಾವಿದ ನಾಮದೇವ್, ಎಂ.ಎಲ್.ಶಿವಮೂರ್ತಿ, ರಮೇಶ್, ಆಂಜಿನಪ್ಪ, ಸುನಿಲ್, ಲಕ್ಷ್ಮಯ್ಯ, ನಾರಾಯಣಪ್ಪ, ಶಾರದಮ್ಮ, ಸೊಣ್ಣಮ್ಮ, ರತ್ನಮ್ಮ ಹಾಜರಿದ್ದರು.

ರಾಮಾಯಣವನ್ನು ಅರಿಯುವುದು ಈಗ ಅವಶ್ಯಕವಾಗಿದೆ – ಶಾಸಕ ವಿ.ಮುನಿಯಪ್ಪ

0

ನಗರದ ತಾಲ್ಲೂಕು ಕಚೇರಿ ಸಮೀಪದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜನೆ ಮಾಡಲಾಗಿದ್ದ ಒಂಬತ್ತನೇ ವರ್ಷದ ಮಹರ್ಷಿವಾಲ್ಮೀಕಿ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ವಾಲ್ಮೀಕಿ ಸಮಾಜವು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಮುಂದುವರೆಯಬೇಕು ಎಂದು ಅವರು ತಿಳಿಸಿದರು.
ಮಹರ್ಷಿ ವಾಲ್ಮೀಕಿಯವರು ತಮ್ಮ ಮಹಾ ತಪ್ಪಸ್ಸಿನಿಂದ ಉತ್ತಮವಾದ ಜ್ಞಾನೋಪದೇಶದ ಜೊತೆಗೆ ಅಹಿಂಸೆಯೆ ಪರಮಧರ್ಮವೆಂಬ ಮಂತ್ರವನ್ನು ತೋರಿಸಿಕೊಟ್ಟಿದ್ದಾರೆ. ಅವರ ಮಾರ್ಗದರ್ಶನಗಳು ಇಂದಿಗೂ ಕೂಡ ಪ್ರಸ್ತುತವಾಗಿವೆ. ವಿಶ್ವದ ಸಮಸ್ತ ಜನರು ಅವರ ದೂರದೃಷ್ಟಿಯನ್ನು ಹಾಗೂ ಅವರು ರಚಿಸಿದ ಮಹಾಕಾವ್ಯ ರಾಮಾಯಣವನ್ನು ಅರಿಯುವುದು ಅವಶ್ಯಕವಾಗಿದೆ. ಅದು ಮುಂದಿನ ಪೀಳಿಗೆಗೂ ಸಹಾ ದಾರಿ ದೀಪವಾಗಬೇಕು ಎಂದರು.
ತಹಶೀಲ್ದಾರ್ ಎಸ್.ಅಜಿತ್‌ಕುಮಾರ್ ರೈ ಮಾತನಾಡಿ, ಮಹರ್ಷಿ ವಾಲ್ಮೀಕಿ ರಚಿಸಿರುವ ಮಹಾಕಾವ್ಯದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗಿದೆ. ಈಗಾಗಲೇ ಸರ್ಕಾರದಿಂದ ಸುಮಾರು ೩೫-೪೦ ಜಯಂತಿಗಳನ್ನು ಆಚರಿಸುತ್ತಿದ್ದು ಮಾಹಾನ್ ವ್ಯಕ್ತಿಗಳ ಜಯಂತಿಗಳನ್ನು ಯಾವುದೋ ಒಂದು ಸಮಾಜದ ಮುಖಂಡರು ಆಚರಿಸುತ್ತಿರುವುದು ದುರಂತವೇ ಸರಿ, ಮಹಾ ಪುರುಷರ ಜಯಂತಿಗಳನ್ನು ಎಲ್ಲಾ ಸಮುದಾಯದವರು ಸೇರಿ ಆಚರಿಸಿದಾಗ ಮಾತ್ರ ಜಯಂತಿಗಳಿಗೆ ಗೌರವ ಸಿಗುವಂತಾಗುತ್ತದೆ ಎಂದರು.
ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭೆಯ ಜಿಲ್ಲಾಧ್ಯಕ್ಷ ಬಂಕ್ ಮುನಿಯಪ್ಪ ಮಾತನಾಡಿ, ತಾಲ್ಲೂಕಿನ ತಲಕಾಯಲಬೆಟ್ಟದಲ್ಲಿ ವಾಲ್ಮೀಕಿ ತಪೋವನ ನಿರ್ಮಿಸಲು ಶಾಸಕರು ಮುಂದಾಗಬೇಕು. ವಾಲ್ಮೀಕಿ ಸಮಾಜದಲ್ಲಿ ಇಂದಿಗೂ ಶಿಕ್ಷಣ ವಂಚಿತರು ಸಾಕಷ್ಟಿದ್ದು ಉತ್ತಮ ಶಿಕ್ಷಣಕ್ಕಾಗಿ ವಸತಿ ಶಾಲೆಗಳನ್ನು ನಿರ್ಮಿಸಿಕೊಡಬೇಕು. ತಮ್ಮ ಕಾಲಾವಧಿಯಲ್ಲಿ ವಾಲ್ಮೀಕಿ ಸಮುದಾಯಕ್ಕೆ ಹೆಚ್ಚಿನ ಆಧ್ಯತೆ ನೀಡುವ ಮೂಲಕ ಸಮಾಜದ ಏಳಿಗೆಗೆ ಸಹಕಾರ ನೀಡಬೇಕು ಎಂದು ಸಭೆಯಲ್ಲಿ ಶಾಸಕರಿಗೆ ಮನವಿ ಮಾಡಿದರು.
ಸಮಾರಂಭದಲ್ಲಿ ವಾಲ್ಮೀಕಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾಮುನಿರಾಜು, ನಗರಸಭೆ ಅಧ್ಯಕ್ಷ ಅಫ್ಸರ್‌ಪಾಷ, ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಪೌರಾಯುಕ್ತ ಜಿ.ಎನ್.ಚಲಪತಿ, ಸರ್ಕಲ್ ಇನ್ಸ್ ಪೆಕ್ಟರ್ ಸಿದ್ದರಾಜು, ವಾಲ್ಮೀಕಿ ಸಂಘದ ತಾಲ್ಲೂಕು ಅಧ್ಯಕ್ಷ ರಾಮಚಂದ್ರಪ್ಪ, ಯುವ ಘಟಕದ ಅಧ್ಯಕ್ಷ ಗಿರೀಶ್‌ನಾಯಕ್, ಎನ್.ಮುನಿಯಪ್ಪ, ದ್ಯಾವಪ್ಪ ಹಾಜರಿದ್ದರು.

ಮಹರ್ಷಿ ವಾಲ್ಮೀಕಿ ಜಯಂತಿ ಮಹೋತ್ಸವ ಆಚರಣೆ

0

ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ತಾಲ್ಲೂಕು ಘಟಕ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಮಹೋತ್ಸವದ ಅಂಗವಾಗಿ ನಗರದ ಹೊರವಲಯದ ಮಯೂರ ವೃತ್ತದ ಬಳಿಯಿರುವ ವಾಲ್ಮೀಕಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಿರ್ಮಾಣದ ಹಂತದಲ್ಲಿರುವ ವಾಲ್ಮೀಕಿ ಸಮುದಾಯಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಬಜೆಟ್ ನಲ್ಲಿ ಹಣವನ್ನು ಮೀಸಲಿಟ್ಟು ಸರಿಯಾಗಿ ವಿತರಣೆ ಮಾಡಿರುವುದರಲ್ಲಿ ಕರ್ನಾಟಕ ರಾಜ್ಯ ಇಡೀ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಬಡವರು ಹಾಗೂ ಹಿಂದುಳಿದವರಿಗಾಗಿ ಸರ್ಕಾರ ಮಾಡಿರುವ ಉಚಿತ ವಸತಿ ಶಾಲೆಗಳು ಶೈಕ್ಷಣಿಕ ಪ್ರಗತಿಗೆ ಕಾರಣವಾಗಿದೆ ಎಂದು ಅವರು ತಿಳಿಸಿದರು.
ವಾಲ್ಮೀಕಿ ವಿರಚಿತ ರಾಮಾಯಣ ಮಹಾಕಾವ್ಯ ಇಂದಿಗೂ ತನ್ನ ಹಿರಿಮೆಯನ್ನು ಕಾಯ್ದಿರಿಸಿಕೊಂಡಿದೆ. ಅವರು ಹುಟ್ಟಿನಿಂದ ನಿರ್ಧಿಷ್ಟ ಜಾತಿಗೆ ಸೇರಿದ್ದಾದರೂ ಎಲ್ಲಾ ಸಮುದಾಯಕ್ಕೂ ಸೇರಿದವರು. ಭಾರತೀಯ ಚರಿತ್ರೆ ಮತ್ತು ಸಂಸ್ಕೃತಿಯಲ್ಲಿ ಮಹರ್ಷಿ ವಾಲ್ಮೀಕಿಯದು ಎತ್ತರದ ವ್ಯಕ್ತಿತ್ವ. ತನ್ನ ಬದುಕಿನಲ್ಲಿ ನೋವುಂಡರೂ ಸಿಹಿ ಹಂಚಿದ ಶ್ರೇಷ್ಠ ಸಾಧಕ. ಭಾರತೀಯ ಬದುಕಿನ ಆದರ್ಶವನ್ನು ಮೌಲ್ಯವನ್ನು ಕಾವ್ಯದ ಮೂಲಕ ಕಟ್ಟಿಕೊಟ್ಟ ಮಹಾನ್ ಕವಿ ಮತ್ತು ದಾರ್ಶನಿಕ. ಸಮಾಜಕ್ಕೆ ಬೇಕಾದ ಬದ್ಧತೆಯ ಸತ್ವತತ್ವ ಮತ್ತು ಸಿದ್ಧಾಂತವನ್ನು ರಾಮಾಯಣ ನೀಡಿರುವುದರಿಂದ ಇದು ಜನಸಂಸ್ಕೃತಿಯ ಮಹಾಕಾವ್ಯವಾಗಿದೆ ಎಂದರು.
ಸಮುದಾಯದ ಏಳಿಗೆಗಾಗಿ ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ತಾಲ್ಲೂಕಿಗೊಂದರಂತೆ ವಾಲ್ಮೀಕಿ ಭವನ ನಿಮಾಣ ಹಾಗೂ ಹೋಬಳಿಗೊಂದರಂತೆ ವಾಲ್ಮೀಕಿ, ಮೊರಾರ್ಜಿ ವಸತಿಶಾಲೆಗಳನ್ನು ನಿರ್ಮಿಸಲು ಕ್ರಮ ಜರುಗಿಸಿದೆ. ಸಮುದಾಯದ ಮಕ್ಕಳು ಉತ್ತಮ ವಿಧ್ಯಾಭ್ಯಾಸ ಮಾಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ಮುಖಂಡ ಮೇಲೂರು ರವಿಕುಮಾರ್ ಮಾತನಾಡಿ, ಸಮುದಾಯಗಳ ನಡುವೆ ರಾಜಕೀಯ ನುಸುಳಿದರೆ ಒಡಕು ಸೃಷ್ಟಿಯಾಗುತ್ತದೆ. ಅದಕ್ಕೆ ಆಸ್ಪದ ನೀಡಬೇಡಿ. ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಇದುವರೆಗೂ ಶಿಡ್ಲಘಟ್ಟದಲ್ಲಿ ವಿಶೇಷವಾಗಿ ಇತರರು ಮೆಚ್ಚುವಂತೆ ಆಚರಿಸಿಕೊಂಡು ಬರಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಒಗ್ಗಟ್ಟಾಗಿರುವ ಸಮುದಾಯವನ್ನು ಒಡೆಯುವ ಪ್ರಯತ್ನ ನಡೆದಿದೆ. ಅದು ಆಗದಂತೆ ನೋಡಿಕೊಳ್ಳಿ. ಒಗ್ಗಟ್ಟಿನಿಂದ ಸಮುದಾಯದ ಅಭಿವೃದ್ಧಿ ಕೆಲಸಗಳಿಗೆ ಕೈಜೋಡಿಸಿ. ನಾವೂ ಅಭಿವೃದ್ಧಿ ಕಾರ್ಯದಲ್ಲಿ ನಿಮ್ಮೊಂದಿಗೆ ಇರುವುದಾಗಿ ಹೇಳಿದರು.
ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ಜಿಲ್ಲಾಧ್ಯಕ್ಷ ಬಂಕ್ ಮುನಿಯಪ್ಪ ಮಾತನಾಡಿ, ಸಮಾಜದಲ್ಲಿನ ಮೌಢ್ಯತೆಯನ್ನು ತೊಲಗಿಸಿ, ಜನರ ಮನದಾಳದ ಅಂಧಕಾರವನ್ನು ತೊಲಗಿಸುವ ನಿಟ್ಟಿನಲ್ಲಿ ಜನಿಸಿದ ಅನೇಕ ಮಂದಿ ಸಾಧು, ಸಂತರು, ದಾರ್ಶನಿಕರು, ಕವಿಗಳು, ಸಾಹಿತಿಗಳಿಗೆಲ್ಲಾ ಮಾರ್ಗದರ್ಶನ ಮಾಡುವಂತಹ ರೀತಿಯಲ್ಲಿ ಸಂತರಾಗಿ, ದಾರ್ಶನಿಕ ಕವಿಗಳಾಗಿ ಉನ್ನತ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದ ಮಹರ್ಷಿ ವಾಲ್ಮೀಕಿಯವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು.
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲ್ಲೂಕು ಅಧ್ಯಕ್ಷ ರಾಮಚಂದ್ರಪ್ಪ, ತಹಶೀಲ್ದಾರ್ ಅಜಿತ್ ಕುಮಾರ್ ರೈ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಸದಸ್ಯ ರಾಜಶೇಖರ್, ತಾದೂರು ರಘು, ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್, ಎ.ನಾಗರಾಜು, ಲಕ್ಷ್ಮೀನಾರಾಯಣ, ಹುಜಗೂರು ರಾಮಣ್ಣ, ಜಗನ್ನಾಥ್, ನಗರಸಭೆ ಸದಸ್ಯರಾದ ಚಿಕ್ಕಮುನಿಯಪ್ಪ, ಕಿಶನ್, ಜಬೀವುಲ್ಲ ಹಾಜರಿದ್ದರು.

ವಸಾಪ ತಾಲ್ಲೂಕು ಘಟದಿಂದ ಮನೆಯಂಗಳದಲ್ಲಿ ವಚನ ಸಾಹಿತ್ಯ ಸಿಂಚನ ಕವಿಗೋಷ್ಥಿ ಕಾರ್ಯಕ್ರಮ

0

ನಗರದ ಖಾಜಿ ರಸ್ತೆಯಲ್ಲಿರುವ ಶಿಕ್ಷಕರಾದ ಶಹನಾಜ್ ಬೇಗ್ ಮತ್ತು ಫಾತಿಹಾಭಾನು ದಂಪತಿಯ ಮನೆಯಲ್ಲಿ ವಸಾಪ ತಾಲ್ಲೂಕು ಘಟದಿಂದ ಆಯೋಜಿಸಿದ್ದ ಮನೆಯಂಗಳದಲ್ಲಿ ವಚನ ಸಾಹಿತ್ಯ ಸಿಂಚನ ಕವಿಗೋಷ್ಥಿ ಕಾರ್ಯಕ್ರಮವನ್ನು ಉದ್ಘಾಟಿಸಿ ನಿವೃತ್ತ ಶಿಕ್ಷಕ ಸುಂದರನ್ ಮಾತನಾಡಿದರು.
ಕನ್ನಡ ಸಿನಿಮಾ ಹಾಡುಗಳು ಸಹ ಭಾಷೆಯ ಬೆಳವಣಿಗೆಗೆ ತಮ್ಮದೇ ಕಾಣಿಕೆಗಳನ್ನು ನೀಡಿವೆ. ಹಿರಿಯ ನಟ ರಾಜ್ ಕುಮಾರರು ತಮ್ಮ ಸಿನೆಮಾ ಮತ್ತು ಬದುಕಿನ ಮೂಲಕ ಕನ್ನಡಿಗರಿಗೆ ಸಾಮಾಜಿಕ ನಡವಳಿಕೆ, ಭಾಷೆ ಪ್ರೇಮ, ವಿನಯತೆ, ಒಳ್ಳೆಯತನವನ್ನು ಕಲಿಸಿದ್ದಾರೆ ಎಂದು ಅವರು ತಿಳಿಸಿದರು.
ನಮ್ಮ ಕಾಲದವರು ಬಹುತೇಕರು ಸಿನೆಮಾಗಳಿಂದ ಪ್ರಭಾವಿತರಾದವರು. ಆಗೆಲ್ಲಾ ಸಿನೆಮಾಗಳೇ ಸಾಮಾಜಿಕ ಸಂದೇಶ ಸಾರುತ್ತಿದ್ದವು. ಹಾಡುಗಳು ಎಲ್ಲರ ಬಾಯಲ್ಲಿ ಗುನುಗುತ್ತಿದ್ದವು. ಎಷ್ಟೋ ಕವಿಗಳ ಕವನಗಳು ಸಿನೆಮಾ ಮಾಧ್ಯಮದ ಮೂಲಕ ಅನಕ್ಷರಸ್ಥರಿಗೂ ಪರಿಚಿತವಾಗಿತ್ತು. ಇದೂ ಕೂಡ ಕನ್ನಡ ಸೇವೆಯೇ ಎಂದು ಅವ್ರು ಅಭಿಪ್ರಾಯಪಟ್ಟರು.
ಕವಿಗಳಾದ ಲಕ್ಷ್ಮೀನಾರಾಯಣಗೌಡ, ವೇಣುಗೋಪಾಲ್, ಪ್ರಕಾಶ್, ಎಸ್.ವಿ.ನಾಗರಾಜರಾವ್, ಸುಂದರಾಚಾರಿ, ರಾಮಮೂರ್ತಿ, ಪ್ರಕಾಶ್, ಜಿ.ಎನ್.ಶಾಮಸುಂದರ್, ಸುಮನ್, ಟಿ.ಟಿ.ನರಸಿಂಹಪ್ಪ, ನಾರಾಯಣಸ್ವಾಮಿ ಕವನ ವಾಚಿಸಿದರು. ಸಂಗೀತ ಶಿಕ್ಷಕ ಎಸ್.ವಿ.ರಾಮಮೂರ್ತಿ ವಚನಗೀತೆಗಳ ಗಾಯನ ನಡೆಸಿಕೊಟ್ಟರು. ಪಿಟೀಲು ವಾದನವನ್ನು ಜಿ.ಎನ್.ಶಾಮಸುಂದರ್ ಮೃದಂಗವನ್ನು ಎಸ್.ಎನ್.ಲಕ್ಷ್ಮಿನಾರಾಯಣ ನುಡಿಸಿದರು. ಶಹನಾಜ್ ಬೇಗ್ ಮತ್ತು ಫಾತಿಹಾಭಾನು ದಂಪತಿಯನ್ನು ಗೌರವಿಸಲಾಯಿತು. ವಸಾಪ ತಾಲ್ಲೂಕು ಘಟದ ಅಧ್ಯಕ್ಷ ನಾರಾಯಣಸ್ವಾಮಿ ಹಾಜರಿದ್ದರು.

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯುತ್ಸವ ಕಾರ್ಯಕ್ರಮ

0

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸಿ ತಹಶೀಲ್ದಾರ್ ಎಸ್.ಅಜಿತ್‌ಕುಮಾರ್ ರೈ ಮಾತನಾಡಿದರು.
ಬೆಳಗಾವಿಯಲ್ಲಿನ ಕಿತ್ತೂರು ಸಂಸ್ಥಾನವನ್ನಾಳಿದ ವೀರ ಮಹಿಳೆ ಚೆನ್ನಮ್ಮಾಜಿ ತನ್ನ ಪುಟ್ಟ ರಾಜ್ಯ ಕಿತ್ತೂರಿನ ರಕ್ಷಣೆಗಾಗಿ ಬಹುತೇಕ ಭಾರತವನ್ನೇ ಆಕ್ರಮಿಸಿಕೊಂಡಿದ್ದ ಪ್ರಬಲರಾದ ಬ್ರಿಟೀಷರ ವಿರುದ್ದ ಸೆಟೆದು ನಿಂತವಳು. ತಾನೊಬ್ಬಳೇ ಏಕಾಂಗಿಯಾಗಿ ಹೋರಾಡಿದ ಈ ಧೀರ ಮಹಿಳೆಯ ಕಥೆ ಎಂಥವರಿಗೂ ಸ್ಪೂರ್ತಿದಾಯಕವಾಗಬಲ್ಲುದು ಎಂದು ಅವರು ತಿಳಿಸಿದರು.
ತನ್ನ ಪುಟ್ಟ ರಾಜ್ಯದ ಸ್ವಾತಂತ್ರ್ಯ ರಕ್ಷಣೆಗಾಗಿ ಕೆಚ್ಚೆದೆಯಿಂದ ಹೋರಾಟ ನಡೆಸಿದ ಕನ್ನಡ ನಾಡಿನ ಹೆಮ್ಮೆಯ ಮಹಿಳೆ ರಾಣಿ ಚೆನ್ನಮ್ಮಳ ಅಗಾಧ ದೇಶಪ್ರೇಮವು ಎಲ್ಲರಿಗೂ ಮಾದರಿಯಾಗುವಂತಹುದು. ಆಕೆಯ ಜಯಂತ್ಯುತ್ಸವದಂದು ಕನ್ನಡಿಗರಾದ ನಾವೆಲ್ಲರೂ ಅವಳ ಹೋರಾಟವನ್ನು ನೆನೆಯುತ್ತಾ ಅವಳಂತೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ದೇಶದುದ್ದಗಲದ ಎಲ್ಲಾ ವೀರರ ತ್ಯಾಗ ಬಲಿದಾನಗಳನ್ನು ಸ್ಮರಿಸೋಣ. ಆ ಮುಖೇನ ಅವರ ಆದರ್ಶತಮ ಬದುಕಿಗೆ ವಂದಿಸೋಣ ಎಂದರು.
ಇತಿಹಾಸದಲ್ಲಿ ಹೆಣ್ಣನ್ನು ಭೂಮಿ, ದೇವಿ, ದುರ್ಗಿಗೆ ಹೋಲಿಸಲಾಗಿದೆ. ತಾಳ್ಮೆಗೂ ಒಂದು ಮಿತಿ ಇದೆ, ಅದನ್ನು ಮೀರಿದರೆ ಹೆಣ್ಣು ದುರ್ಗಿ ಅವತಾರ ತಾಳುತ್ತಾಳೆ ಎಂಬುದಕ್ಕೆ ರಾಣಿ ಚೆನ್ನಮ್ಮ ನಿದರ್ಶನ. ತನ್ನ ಸಣ್ಣ ಸಾಮ್ರಾಜ್ಯ ಕಾಪಾಡಿಕೊಳ್ಳಲು ಬ್ರಿಟೀಷರ ವಿರುದ್ಧ ಸಿಡಿದೆದ್ದ ದಿಟ್ಟ ಮಹಿಳೆ ಚೆನ್ನಮ್ಮ, ಆಕೆಯ ಧೈರ್ಯ, ಸಾಹಸವನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು.
ವೀರನಾರಿ ಕಿತ್ತೂರು ರಾಣಿ ಚೆನ್ನಮ್ಮಳ ಜಯಂತಿ ಇತಿಹಾಸ ಪ್ರಜ್ಞೆಯನ್ನು ಬಡಿದೆಬ್ಬಿಸುವಂತಿರಬೇಕು. ಈ ನೆಲದ ಇತಿಹಾಸವನ್ನು ಪರಿಚಯಿಸದಿದ್ದರೆ, ಜಾತಿ ಮೀರಿ ಭಾತೃತ್ವದ ಸಮಾಜ ಕಟ್ಟದಿದ್ದರೆ ಯಾವ ದಾರ್ಶನಿಕರ, ಮಹಾನುಭಾವರ ಜಯಂತಿ, ಜಾತ್ರೆಗಳು ಅರ್ಥಪೂರ್ಣವಾಗುವುದಿಲ್ಲ. ಈ ಸಮಾಜದಲ್ಲಿರುವ ಅಶಕ್ತರಿಗೆ ರಾಣಿ ಚೆನ್ನಮ್ಮನ ಜೀವನ ಚರಿತ್ರೆ ಪ್ರೇರಣೆಯಾಗಲಿ ಹಾಗೂ ಪ್ರತಿಯೋರ್ವ ಮಹಿಳೆ ವೀರನಾರಿ ಚೆನ್ನಮ್ಮನಂತಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಅಫ್ಸರ್‌ಪಾಷ, ಟಿಪ್ಪು ಸೆಕ್ಯುಲರ್ ಸೇನೆಯ ಮೌಲಾ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಚಂದ್ರಶೇಖರಬಾಬು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಲಕ್ಷ್ಮಿದೇವಮ್ಮ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶ್ರೀನಾಥಗೌಡ ಹಾಜರಿದ್ದರು

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಧರಣಿ

0

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಹೊಂದಲು ಜನಪ್ರತಿನಿಧಿಗಳು ಕಾಳಜಿ ತೋರುತ್ತಿಲ್ಲ. ಅವರಿಗೆ ಮೀಸಲಿಟ್ಟ ಅನುದಾನಗಳ ದುರ್ಬಳಕೆ, ಕುಂದುಕೊರತೆಗಳ ಸಭೆ ಕರೆಯದೆ ಶೋಷಿತರನ್ನು ನಿರ್ಲಕ್ಷಿಸಲಾಗಿದೆ ಎಂದು ಆರಂಭಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಸೋಮಶೇಖರ್ ತಿಳಿಸಿದರು.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆ ಹಾಗೂ ತಾಲ್ಲೂಕು ಕಚೇರಿಯ ಮುಂದೆ ಧರಣಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾಲ್ಲೂಕು ಸಾಕಷ್ಟು ಹಿಂದುಳಿದಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ತಾಲ್ಲೂಕಿನಲ್ಲಿ ಶೇ ೩೩ ರಷ್ಟು ಇದ್ದಾರೆ. ಅವರಲ್ಲಿ ಶೇ ೮೦ ರಷ್ಟು ಮಂದಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಬಹುತೇಕ ಮಂದಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ನೀರಿನ ಸೌಕರ್ಯವಿಲ್ಲದೇ, ಮಳೆ ಬೆಳೆ ಸಕಾಲದಲ್ಲಿ ಆಗದೇ ಬಹು ಮಂದಿ ವಲಸೆ ಹೋಗಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಓಟು ಪಡೆದು ಗೆಲ್ಲುವ ಜನಪ್ರತಿನಿಧಿಗಳಿಗೆ ಹಿಂದುಳಿದ ತಾಲ್ಲೂಕನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಮತ್ತು ಹಿಂದುಳಿದವರನ್ನು ಮೇಲೆತ್ತುವ ಇಚ್ಚಾಶಕ್ತಿಯಿಲ್ಲ. ಮೀಸಲಿಟ್ಟ ಅನುದಾನವು ಸಮರ್ಪಕವಾಗಿ ಬಳಕೆಯಾಗಿದ್ದಿದ್ದರೆ ತಾಲ್ಲೂಕು ಅಭಿವೃದ್ಧಿಯಾಗಿರುತ್ತಿತ್ತು. ಕಾಲಕಾಲಕ್ಕೆ ಕುಂದುಕೊರತೆಗಳ ಸಭೆಯನ್ನೂ ಸಹ ನಡೆಸದೆ ಶೋಷಿತರ ಬದುಕು ಕೇಳುವವರಿಲ್ಲದಂತಾಗಿದೆ ಎಂದು ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್ ಮಾತನಾಡಿ, ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗಿದ್ದು, ನಮ್ಮ ತಾಲ್ಲೂಕಿನಲ್ಲಿ ಮಾತ್ರ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸ್ಥಳವೇ ಮಂಜೂರಾಗಿಲ್ಲ. ಸ್ಥಳ ಮಂಜೂರು ಮಾಡಬೇಕಾದ ತಾಲ್ಲೂಕು ದಂಡಾಧಿಕಾರಿಗಳು ದಲಿತ ವಿರೋಧ ನೀತಿಯನ್ನು ಅನುಸರಿಸುತ್ತಿದ್ದಾರೆ. ನಗರದ ಹೃದಯ ಭಾಗದಲ್ಲಿ ಅಂಬೇಡ್ಕರ್ ಭವನಕ್ಕೆ ಸ್ಥಳ ಮಂಜೂರು ಮಾಡಿ ನಿರ್ಮಾಣ ಮಾಡಬೇಕು. ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಸ್ಥಾಪಿಸಬೇಕು. ಹಳ್ಳಿಗಳಲ್ಲಿ ಅದರಲ್ಲೂ ದಲಿತ ಕಾಲೋನಿಗಳಲ್ಲಿ ಮದ್ಯ ನಿಷೇಧಿಸಬೇಕು. ತಾಲ್ಲೂಕಿನಾದ್ಯಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗಕ್ಕೆ ಸ್ಮಶಾನ ಜಾಗಗಳನ್ನು ಮಂಜೂರು ಮಾಡಿಬೇಕು. ಸಮಯಕ್ಕೆ ಸರಿಯಾಗಿ ದಲಿತರ ಕುಂದುಕೊರತೆ ಸಭೆಗಳನ್ನು ನಡೆಸಬೇಕು. ಪಿ ನಂಬರ್ ಜಮೀನುಗಳನ್ನು ಪೋಡಿ ಮಾಡಿ ಕೊಡಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಶೇ ೨೫.೫ ಅನುದಾನದ ಹಣ ದುರುಪಯೋಗ ಆಗಿರುವ ಬಗ್ಗೆ ತನಿಖೆ ನಡೆಸಬೇಕು. ಸರ್ಕಾರಿ ಜಾಗಗಳನ್ನು ಗುರುತಿಸಿ ದಲಿತ ಬಡವರಿಗೆ ನಿವೇಶನ ಹಂಚಬೇಕು ಎಂದು ಒತ್ತಾಯಿಸಿದರು.
ಪ್ರತಿ ತಿಂಗಳು ಪೊಲೀಸ್ ಇಲಾಖೆಯಿಂದ ಹಾಗೂ ತಹಿಶೀಲ್ದಾರ್ ಅವರು ಪ್ರತಿ ತಿಂಗಳು ದಲಿತರ ಕುಂದುಕೊರತೆ ಸಭೆ ಕರೆದು ಅವರ ಕುಂದು ಕೊರತೆಗಳನ್ನು ನಿವಾರಿಸಬೇಕೆಂದು ಸರ್ಕಾರದಿಂದ ನಿಯಮ ಇದ್ದರೂ ಸಹ ಸುಮಾರು ೧ ವರ್ಷದಿಂದ ಯಾವುದೇ ದಲಿತರ ಕುಂದುಕೊರತೆ ಸಭೆ ಕರೆದಿಲ್ಲ. ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಂಖ್ಯೆ ಶೇ ೩೩% ಇದ್ದು, ಸರ್ಕಾರದಿಂದ ಪ್ರತಿ ಇಲಾಖೆಯಿಂದ ಶೇ ೨೫% ಅನುದಾನ ಮೀಸಲಿಟ್ಟ ಅನುದಾನ ದುರ್ಭಳಕೆ ಆಗುತ್ತಿದ್ದರೂ ಸಹ ಕೇಳುವವರೇ ಇಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದರು.
ನಗರದ ರೇಷ್ಮೆ ವಿಸ್ತರಣಾಧಿಕಾರಿಗಳ ಕಚೇರಿಯಿಂದ ತಾಲ್ಲೂಕು ಕಚೇರಿಯವರೆಗೆ ಕದಸಂಸ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ತಾಲ್ಲೂಕು ಕಚೇರಿಯ ಮುಂದೆ ಧರಣಿಯನ್ನು ನಡೆಸಿ ತಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ಕಳಿಸುವಂತೆ ಕೋರಿ ಉಪವಿಬಾಗಾಧಿಕಾರಿ ಪಿ.ಶಿವಸ್ವಾಮಿ ಅವರಿಗೆ ನೀಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ದಡಂಘಟ್ಟ ತಿರುಮಲೇಶ್, ತಾಲ್ಲೂಕು ಸಂಚಾಲಕ ಎಚ್.ಎಂ.ಮುನಿಆಂಜಿನಪ್ಪ, ಬೈರಸಂದ್ರ ದೇವರಾಜು. ಯಣ್ಣಂಗೂರು ಸುಬ್ರಮಣಿ, ಅತ್ತಿಗಾನಹಳ್ಳಿ ನಾಗೇಶ್, ದಿಬ್ಬೂರಹಳ್ಳಿ ಮಂಜುನಾಥ್, ಭಾಗ್ಯಮ್ಮ, ದ್ಯಾವಮ್ಮ ಹಾಜರಿದ್ದರು.

ರಾಮನಗರ ರೈತರಿಂದ ರೇಷ್ಮೆ ಕೃಷಿ ಅಧ್ಯಯನ

0

ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್‌.ಜಿ.ಗೋಪಾಲಗೌಡ ಅವರ ರೇಷ್ಮೆ ಕೃಷಿಯ ವೀಕ್ಷಣೆಗೆ ರಾಮನಗರದಿಂದ ಸುಮಾರು 50 ಮಂದಿ ರೈತರು ಗುರುವಾರ ಆಗಮಿಸಿದ್ದರು.
ಸಮಗ್ರ ಕೃಷಿ ಪದ್ಧತಿ, ಕೃಷಿ ಹೊಂಡದಿಂದ ನೀರಿನ ಸದ್ಬಳಕೆ, ರೇಷ್ಮೆಯಲ್ಲಿ ಹಸಿರು ಎಲೆ ಗೊಬ್ಬರವಾಗಿ ಪರಿವರ್ತಿಸಲು ಸೆಣಬು ಹುರಳಿ ಬೆಳೆದಿರುವುದು, ಕುರಿ, ಹಸು ಸಾಕಣೆ, ರೇಷ್ಮೆ ಕೃಷಿಯಲ್ಲಿನ ಅನುಭವಗಳನ್ನು ರೈತರು ಕೇಳಿ ತಿಳಿದುಕೊಂಡರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸಿದ್ದ ಕೃಷಿ ಅಧ್ಯಯನ ಪ್ರವಾಸದಲ್ಲಿ ಎರಡು ದಿನಗಳ ಕಾಲ ಅಧಿಕಾರಿಗಳಿಂದ ತರಬೇತಿಯನ್ನು ಪಡೆದು ಪ್ರಾತ್ಯಕ್ಷಿಕೆಯಾಗಿ ಪ್ರಗತಿಪರ ರೈತರೊಂದಿಗೆ ಸಂವಾದಿಸಲು, ಹಿಪ್ಪುನೇರಳೆ ತೋಟ, ಹುಳು ಸಾಕಾಣಿಕಾ ಮನೆಯನ್ನು ನೋಡಲು ಹಿತ್ತಲಹಳ್ಳಿಗೆ ಬಂದಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಮನಗರ ರಾಮಪ್ಪ ಮಾಸ್ತರ್‌, ‘ಯಶಸ್ವಿ ರೈತರಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದ ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್‌.ಜಿ.ಗೋಪಾಲಗೌಡ ಅವರು ರೈತರು ಕೂಡ ಯಶಸ್ವಿಯಾಗಬಹುದು ಎಂದು ಪ್ರೋತ್ಸಾಹದಾಯಕವಾಗಿ ನಮ್ಮನ್ನು ಉತ್ತೇಜಿಸಿದ್ದಾರೆ. ಸಾಮಾನ್ಯವಾಗಿ ರೈತರು ಕಷ್ಟದಲ್ಲಿದ್ದೇವೆ ಎನ್ನುತ್ತಾರೆ. ಆದರೆ ಇವರು ನಾನು ರೈತನಾಗಿ ಆರ್ಥಿಕವಾಗಿ ಚೆನ್ನಾಗಿದ್ದೇನೆ, ನೀವೂ ಅದೇ ರೀತಿ ಭೂಮಿಯನ್ನು ನಂಬಿದರೆ ಯಶಸ್ವಿಯಾಗುವಿರಿ ಎಂದು ಧೈರ್ಯವನ್ನು ತುಂಬಿದ್ದಾರೆ. ಅವರ ಕೃಷಿ ಅನುಭವದಿಂದ ಸಾಕಷ್ಟು ಕಲಿತೆವು’ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ್ಯೋತಿ, ಕುಮಾರ್‌ ಹಾಜರಿದ್ದರು.

ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಮೇಜರ್‌ ಸುನಿಲ್‌ಕುಮಾರ್‌ ಅವರಿಗೆ ಸನ್ಮಾನ ಕಾರ್ಯಕ್ರಮ

0

ತಾಲ್ಲೂಕಿನ ಮುತ್ತೂರು ಗ್ರಾಮದ ಅವರ ಸ್ವಗೃಹದಲ್ಲಿ ಶುಕ್ರವಾರ ಸಂಜೆ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಅವರನ್ನು ಗೌರವಿಸಿದ ಸಂದರ್ಭದಲ್ಲಿ ಮೇಜರ್‌ ಸುನಿಲ್‌ಕುಮಾರ್‌ ಮಾತನಾಡಿದರು.
ಸಾರ್ವಜನಿಕರು ವ್ಯಕ್ತಪಡಿಸುವ ಸಣ್ಣ ಆದರ, ಗೌರವ, ಪ್ರೀತಿ ವಿಶ್ವಾಸಗಳು ಯೋಧರಿಗೆ ಆತ್ಮಸ್ಥೈರ್ಯ ತುಂಬುತ್ತದೆ ಎಂದು ಅವರು ತಿಳಿಸಿದರು.
‘ಯೋಧರಾದ ನಮಗೆ ಸಿಗುವ ಅತ್ಯಲ್ಪ ರಜೆಯಲ್ಲಿ ಮನೆಗೆ ಬರುತ್ತೇವೆ. ಆಗ ಸಮಾಜ ಬಾಂಧವರು ಆತ್ಮೀಯತೆಯನ್ನು ತೋರಿ ಪ್ರೀತ್ಯಾದರಗಳಿಂದ ನಡೆಸಿಕೊಳ್ಳುವುದು ನಮಗೆ ದೇಶಸೇವೆ ಮಾಡಲು ಸ್ಫೂರ್ತಿ ನೀಡಿದಂತಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಕೆಲಸಗಳಾಗಬೇಕು. ಸೈನ್ಯಕ್ಕೆ ಸೇರುವವರ ಸಂಖ್ಯೆ ನಮ್ಮ ಭಾಗದಲ್ಲಿ ಹೆಚ್ಚಬೇಕು. ಹೆಚ್ಚು ರಜೆ ಸಿಕ್ಕಾಗ ನಾನು ಕೂಡ ನಮ್ಮ ಭಾಗದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದಿಸುತ್ತೇನೆ’ ಎಂದರು.
ನಿವೃತ್ತ ಬಿಎಸ್‌ಎಫ್‌ ಯೋಧ ದೊಡ್ಡಕುರುಬರಹಳ್ಳಿ ರವಿಕುಮಾರ್‌ ಮಾತನಾಡಿ, ‘ನಮ್ಮ ಭಾಗದಲ್ಲಿ ಸೇನೆಯಲ್ಲಿ ಅಧಿಕಾರಿಗಳಾಗಿರುವವರು ವಿರಳ. ಚಿಕ್ಕ ವಯಸ್ಸಿಗೇ ಮೇಜರ್‌ ಪದವಿಯನ್ನು ಅಲಂಕರಿಸಿ ನಮ್ಮೆಲ್ಲರ ಹೆಮ್ಮೆಯಂತಿದ್ದಾರೆ ಮೇಜರ್‌ ಸುನಿಲ್‌ಕುಮಾರ್‌. ಯುವಕರಿಗೆ ಸೇನೆಗೆ ಸೇರಲು ಪ್ರೇರಣೆ, ಪ್ರೋತ್ಸಾಹ ಮತ್ತು ಮಾರ್ಗದರ್ಶನ ಮಾಡುವ ಅಗತ್ಯವಿದೆ. ಸೇನೆಯವರನ್ನು ಗುರುತಿಸಿ ಗೌರವಿಸುವ ಕೆಲಸ ಈಚೆಗೆ ಸಮಾಜದಲ್ಲಿ ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ’ ಎಂದರು.
ವೇದಬ್ರಹ್ಮಶ್ರೀ ವೆಂಕಟೇಶಮೂರ್ತಿ, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ, ಜೆ.ವೆಂಕಟಾಪುರ ರಮೇಶ್‌, ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್‌, ಲಕ್ಷ್ಮೀನಾರಾಯಣ್‌, ಅಜಿತ್‌ಕೌಂಡಿನ್ಯ, ನರಸಿಂಹಮೂರ್ತಿ, ಗಂಗಾಧರ್‌, ಪವನ್‌ ಹಾಜರಿದ್ದರು.

ಬನ್ನಿಮರದ ಪೂಜೆಯೊಂದಿಗೆ ದಸರಾ ಹಬ್ಬವನ್ನು ಆಚರಿಸಿದ ಕಸಾಪ ಸದಸ್ಯರು

0

ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗೇಟ್‌ ಬಳಿಯ ಮುನಿನಾರಾಯಣಪ್ಪ ಅವರ ಮಾವಿನ ತೋಟದಲ್ಲಿರುವ ಬನ್ನಿ ಮರಕ್ಕೆ ತಾಲ್ಲೂಕು ಕಸಾಪ ವತಿಯಿಂದ ಪೂಜೆ ಸಲ್ಲಿಸಿ ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್‌ ಅವರು ಮಾತನಾಡಿದರು.
ನಮ್ಮ ಸಂಸ್ಕೃತಿಯಲ್ಲಿ ಶಮೀವೃಕ್ಷಕ್ಕೆ ವಿಶೇಷವಾದ ಪ್ರಾಶಸ್ತ್ಯವಿದೆ. ಶಮೀ ಎಂದರೆ ಬನ್ನಿಮರ. ಅದು ಸಕಲ ಪಾಪಗಳನ್ನು ಉಪಶಮನ ಮಾಡುತ್ತದೆ. ಎಲ್ಲ ಬಗೆಯ ಕೆಟ್ಟ ಕೆಲಸಗಳನ್ನು ನಿವಾರಿಸುತ್ತದೆ. ದುಃಖ-ದುಸ್ವಪ್ನಗಳನ್ನು ನೀಗಿಸುತ್ತದೆ ಎಂದು ಅವರು ತಿಳಿಸಿದರು.
ಹಿಂದೆ ಪಾಂಡವರು ಅಜ್ಞಾತವಾಸಕ್ಕಾಗಿ, ಕಾಡಿಗೆ ಹೋದಾಗ ಅರ್ಜುನ ತಮ್ಮೆಲ್ಲರ ಅಸ್ತ್ರಗಳನ್ನು ಬನ್ನಿಮರಕ್ಕೆ ನೇತುಹಾಕಿದನಂತೆ. ಈಗಲೂ ವಿಜಯದಶಮಿಯಂದು ಒಡೆಯರ ವಂಶಜರು ಸಾಂಕೇತಿಕವಾಗಿ ಮೈಸೂರಿನಲ್ಲಿ ಬನ್ನಿಮಂಟಪಕ್ಕೆ ಮೆರವಣಿಗೆ ಸಮೇತ ಹೋಗಿ ಪೂಜೆ ಸಲ್ಲಿಸಿ ಬರುತ್ತಾರೆ. ಹೀಗೆ ಬನ್ನಿ ಅಥವಾ ಶಮೀ ಮರವು ವಿಜಯದ ಸಂಕೇತವಾದ್ದರಿಂದ ಕನ್ನಡದಲ್ಲಿ ವಿಜಯದಶಮಿಯನ್ನು ವಿಜಯ-ದಶಮೀ ಹಾಗೂ ವಿಜಯದ-ಶಮೀ ಎಂದು ಕನ್ನಡಿಗರು ಕೊಂಡಾಡುತ್ತಾರೆ. ಶಮೀ ಮರವು ರಾವಣನವಧೆ, ರಾಮಜಯ ಮತ್ತು ರಾಮರಾಜ್ಯದ ಉದಯಗಳಿಗೆ ಹೇತುವಾಗಿ ಇತಿಹಾಸ ಸಿದ್ಧವಾದ ವಿಜಯಸೇತುವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದೇವರಾಜ್‌, ಮಂಜುನಾಥ್‌, ಸುಬ್ರಮಣಿ, ಕೃಷ್ಣಮೂರ್ತಿ, ನರಸಿಂಹಪ್ಪ, ಮುನಿವೆಂಕಟಸ್ವಾಮಿ, ಮನೋಜ್‌ ಹಾಜರಿದ್ದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ದಲಿತರ ನಿರ್ಲಕ್ಷ್ಯ ಖಂಡಿಸಿ ಧರಣಿ

0

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಘೋಷ್ಠಿ ನಡೆಸಿ ಮಾತನಾಡಿದ ಕದಸಂಸ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್ ರವರು. ರಾಜ್ಯಾದ್ಯಂತ ಕಳೆದ ಮೂವತ್ತೈದು ವರ್ಷಗಳಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿ ದಲಿತರ, ಶೋಷಿತರ ಪರವಾಗಿ ವಿವಿಧ ಹೋರಾಟಗಳನ್ನು ಮಾಡುತ್ತಾ ಬಂದಿದೆ. ತಾಲ್ಲೂಕಿನ ಜನಪ್ರತಿನಿಧಿಗಳು ಮತ್ತು ತಾಲ್ಲೂಕು ಆಡಳಿತದ ನಿರ್ಲಕ್ಷ್ಯದಿಂದ ಈವರೆಗೂ ತಾಲ್ಲೂಕು ಕೇಂದ್ರ ಸ್ಥಾನದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗಿಲ್ಲ.
ತಾಲ್ಲೂಕು ಕೇಂದ್ರ ಸ್ಥಾನದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡುವುದೂ ಹಾಗೂ ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ತಾಲ್ಲೂಕು ಆಡಳಿತದ ಕಾರ್ಯವೈಖರಿ ಖಂಡಿಸಿ ಇದೇ ಅಕ್ಟೋಬರ್‌ ೨೨ ರ ಸೋಮವಾರ ಒಂದು ದಿನದ ಧರಣಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಮೂರು ತಿಂಗಳಿಗೊಮ್ಮೆ ದಲಿತರ ಕುಂದು ಕೊರತೆ ಸಭೆ ಆಯೋಜನೆ ಮಾಡಬೇಕು ಎಂಬ ಸರ್ಕಾರದ ನಿರ್ದೇಶನವಿದ್ದರೂ ತಹಶೀಲ್ದಾರ್ ಎಸ್.ಅಜಿತ್‌ಕುಮಾರ್ ರೈ ಈವರೆಗೂ ಯಾವುದೇ ದಲಿತ ಕುಂದುಕೊರತೆ ಸಭೆ ನಡೆಸಿಲ್ಲ. ಈ ಬಗ್ಗೆ ಹಲವಾರು ಭಾರಿ ತಹಶೀಲ್ದಾರರಿಗೆ ಮನವಿ ಮಾಡಲಾಗಿದ್ದರೂ ದಲಿತರ ವಿರೋಧಿ ನೀತಿ ಅನುಸರಿಸುವ ಮೂಲಕ ತಮ್ಮ ಕರ್ತವ್ಯವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
ತಾಲ್ಲೂಕಿನ ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಗ್ರಾಮೀಣ ಪ್ರದೇಶದ ಸಣ್ಣ ಪುಟ್ಟ ಅಂಗಡಿಗಳಲ್ಲಿ ಮತ್ತು ದಲಿತ ಕಾಲೋನಿಗಳಲ್ಲಿ ನಡೆಯುತ್ತಿರುವ ಮದ್ಯ ಮಾರಾಟ ತಡೆಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಈ ಹಿನ್ನಲೆಯಲ್ಲಿ ಅಕ್ಟೋಬರ್‌ ೨೨ ರಂದು ಸಾವಿರಾರು ಮಂದಿ ಜನರೊಂದಿಗೆ ನಗರದ ಬಸ್ ನಿಲ್ದಾಣದ ಬಳಿಯಿಂದ ತಾಲ್ಲೂಕು ಕಚೇರಿಯವರೆಗೂ ಬೃಹತ್ ಮೆರವಣಿಗೆ ಮೂಲಕ ಸಾಗಿ ತಾಲ್ಲೂಕು ಕಚೇರಿಯ ಮುಂಭಾಗ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಜಿಲ್ಲಾ ಸಂಘಟನಾ ಸಂಚಾಲಕ ದಡಂಘಟ್ಟ ತಿರುಮಲೇಶ್ ಮಾತನಾಡಿ, ತಾಲ್ಲೂಕಿನಾದ್ಯಂತ ಶೇ ೩೩ ರಷ್ಟಿರುವ ಪರಿಶಿಷ್ಠ ಜಾತಿ ಹಾಗೂ ಪಂಗಡದ ಜನತೆ ಸೂಕ್ತ ಭದ್ರತೆ ಹಾಗೂ ಸವಲತ್ತು ನೀಡುವಲ್ಲಿ ತಾಲ್ಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ಪರಿಶಿಷ್ಠ ಜಾತಿ ಹಾಗೂ ಪಂಗಡಕ್ಕೆ ಮೀಸಲಿಟ್ಟಿರುವ ಶೇ ೨೩.೫ ಅನುದಾನವನ್ನು ದಲಿತರ ಕಲ್ಯಾಣಕ್ಕೆ ಉಪಯೋಗಿಸದೇ ದುರುಪಯೋಗ ಪಡಿಸಿಕೊಂಡಿರುವ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿ ಧರಣಿ ಕಾರ್ಯಕ್ರಮ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕದಸಂಸ ಪದಾಧಿಕಾರಿಗಳೂ ಸೇರಿದಂತೆ ಜನತೆ ಧರಣಿಯಲ್ಲಿ ಪಾಲ್ಗೊಂಡು ಧರಣಿಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯ ಗೊರ್ಲೆಪ್ಪ, ತಾಲ್ಲೂಕು ಸಂಚಾಲಕ ಮುನಿ ಆಂಜಿನಪ್ಪ, ಸದಸ್ಯರಾದ ದೇವರಾಜ್, ಸುಬ್ರಮಣಿ, ದ್ಯಾವಪ್ಪ, ಎಚ್.ಕೆ.ದೇವರಾಜ್, ಯಾಮ ನಾರಾಯಣಸ್ವಾಮಿ, ಚಿಕ್ಕನರಸಿಂಹಯ್ಯ, ದೇವರಾಜ್‌ ಹಾಜರಿದ್ದರು.

ದೇವಿಗೆ ಶಕ್ತಿಯನ್ನು ನೀಡಿ ತಾವು ಗೊಂಬೆಗಳಾಗಿ ನಿಂತ ದೇವತೆಗಳನ್ನು ಪೂಜಿಸುವ ಗೊಂಬೆಹಬ್ಬ

0

‘ಚಾಮುಂಡೇಶ್ವರಿ ದೇವಿಯು ದುಷ್ಟನಾದ ಮಹಿಷಾಸುರನನ್ನು ಸಂಹರಿಸಲು ಶಕ್ತಿ ರೂಪಳಾಗಿ, ಸಿಂಹದ ಮೇಲೆ ಕುಳಿತು, ಹತ್ತು ಕೈಗಳಲ್ಲಿ ಹತ್ತು ಬಗೆಯ ಆಯುಧಗಳನ್ನು ಹಿಡಿದು ಬಂದಳು. ರಾಕ್ಷಸನಾದ ಮಹಿಷಾಸುರನನ್ನು ವಿಜಯ ದಶಮಿಯ ದಿನ ಸಂಹಾರ ಮಾಡಿದಳು. ದೇವಿಗೆ ಎಲ್ಲಾ ದೇವತೆಗಳು ತಮ್ಮ ಶಕ್ತಿಯನ್ನು ನೀಡಿ ತಾವು ಗೊಂಬೆಗಳಾಗಿ ನಿಂತರು. ಆ ಎಲ್ಲಾ ದೇವತೆಗಳ ಪ್ರತಿರೂಪವನ್ನೇ ನಾವು ನವರಾತ್ರಿಯ ಗೊಂಬೆಹಬ್ಬವನ್ನಾಗಿಸಿ ಪೂಜಿಸುವ ಮೂಲಕ ಆಚರಿಸುತ್ತೇವೆ. ಅದಕ್ಕಾಗಿಯೇ ಮಣ್ಣಿನ ಗೊಂಬೆಗಳನ್ನೇ ಗೊಂಬೆಹಬ್ಬದಲ್ಲಿ ಇಡುವ ಸಂಪ್ರದಾಯವಿದೆ’ ಎಂದು ವೈದ್ಯ ಡಾ.ರವಿಶಂಕರ್‌ ತಮ್ಮ ಮನೆಯ ಗೊಂಬೆಗಳ ಆಚರಣೆಯ ಉದ್ದೇಶವನ್ನು ವಿವರಿಸಿದರು.
ಹಿಂದೆ ಈ ಬೊಂಬೆಗಳ ಪ್ರದರ್ಶನದಲ್ಲಿ ಮಾನವಾಕಾರದ ಬೊಂಬೆಗಳನ್ನು ತಯಾರಿಸುತ್ತಿದ್ದರು. ಕೇವಲ ತಲೆಯ ಭಾಗ ಮಾತ್ರ ಇರುವ ಈ ಗೊಂಬೆಗಳಿಗೆ ದೇಹದಾಕೃತಿಯನ್ನು ಕೊಟ್ಟು ಉಡುಗೆ ತೊಡುಗೆಗಳನ್ನು ಉಡಿಸುವುದೇ ದೊಡ್ಡ ಸವಾಲಾಗಿತ್ತು.
ಮರೆತೇ ಹೋಗಿದ್ದ ಈ ರೀತಿಯ ಗೊಂಬೆಗಳನ್ನು ನಗರದ ಮೊದಲನೇ ನಗರ್ತಪೇಟೆಯಲ್ಲಿರುವ ಪ್ರಸೂತಿ ತಜ್ಞೆ ಡಾ.ರೋಹಿಣಿ ರವಿಶಂಕರ್ ತಮ್ಮ ಮನೆಯಲ್ಲಿ ಜೋಡಿಸಿಟ್ಟಿದ್ದಾರೆ. ತಮ್ಮ ಅಜ್ಜಿಯ ಕಾಲದಿಂದ ಉಳಿಸಿಕೊಂಡು ಬಂದಿರುವ ಈ ನೂರಕ್ಕೂ ಹೆಚ್ಚು ವರ್ಷದ ಗೊಂಬೆಗಳ ತಲೆ ಭಾಗಕ್ಕೆ ದೇಹದಾಕೃತಿಯನ್ನು ಕಾಲಕ್ಕೆ ತಕ್ಕಂತೆ ಅಲಂಕರಿಸಿದ್ದಾರೆ. ಅದರೊಂದಿಗೆ ಸಂದೇಶವನ್ನೂ ಸಾರಿದ್ದಾರೆ. ಅಂತರ್ಜಾತೀಯ ವಿವಾಹವನ್ನು ಪ್ರತಿಪಾದಿಸುವ ಅಕ್ಕಪ್ಪ ಮತ್ತು ಅಕ್ಕಮ್ಮ ದೃಷ್ಟಿಬೊಂಬೆಗಳು, ರಾಜಸ್ಥಾನಿ ಬೆಡಗಿ ಮತ್ತು ಸಾಂಪ್ರದಾಯಿಕ ದಂಪತಿಗಳ ರೂಪವನ್ನು ನೀಡಿದ್ದಾರೆ.

ಅಂತರ್ಜಾತೀಯ ವಿವಾಹವನ್ನು ಪ್ರತಿಪಾದಿಸುವ ಅಕ್ಕಪ್ಪ ಮತ್ತು ಅಕ್ಕಮ್ಮ ದೃಷ್ಟಿಬೊಂಬೆಗಳು ಮತ್ತು ಘಟೋತ್ಕಚನ ಭೋಜನ

‘ದೇವನಹಳ್ಳಿ ಮೂಲದವರಾದ ನಮ್ಮ ಹಾರೋಬಂಡೆ ಕುಟುಂಬ ಗೊಂಬೆಗಳನ್ನು ಜೋಡಿಸುವುದಕ್ಕೆ, ಕಲಾತ್ಮಕವಾಗಿ ಪ್ರದರ್ಶಿಸುವುದಕ್ಕೆ ಪ್ರಸಿದ್ಧಿಯಾಗಿತ್ತು. ನಮ್ಮಜ್ಜಿಯ ಮನೆಯಲ್ಲಿ ರಾಜ, ರಾಣಿ, ಯುವರಾಜ, ಯುವರಾಣಿ, ಮಂತ್ರಿ, ಸೈನಾಧಿಪತಿ, ದರ್ಬಾರ್ ಎಲ್ಲವನ್ನೂ ಬೊಂಬೆಗಳ ಮೂಲಕವೇ ನಿರೂಪಿಸುತ್ತಿದ್ದರು. ಗೊಂಬೆಗಳೆಂದರೆ ಕೇವಲ ತಲೆಗಳು ಮಾತ್ರ. ಅವಕ್ಕೆ ಉಡುಗೆಗಳನ್ನು ತೊಡಿಸಿ, ಕೈಕಾಲುಗಳನ್ನು ನಾವೇ ತಯಾರಿಸಿಡಬೇಕು. ಬೊಂಬೆಗಳಿಗೆ ಕೊಡುವ ಆಕಾರ, ನಿಲುವು, ಮೂಡಿಸುವ ಭಾವ, ತೊಡಿಸುವ ಉಡುಗೆ ತೊಡುಗೆ, ರಚನಾ ಕ್ರಿಯೆಯಲ್ಲಿ ತೋರಿಸುವ ನಯ ನಾಜೂಕು, ಇವೆಲ್ಲ ಸೊಬಗನ್ನು ಹೆಚ್ಚಿಸುತ್ತವೆ. ನಮ್ಮಜ್ಜಿಯಿಂದ ಕೊಡುಗೆಯಾಗಿ ನಮ್ಮ ಪಾಲಿಗೆ ಬಂದ ಗೊಂಬೆಗಳನ್ನು ಪ್ರತಿವರ್ಷ ವಿಶೇಷವಾಗಿ ಅಲಂಕರಿಸಿ, ವಸ್ತ್ರವನ್ನೆಲ್ಲಾ ತೊಡಿಸಿ ಜೋಡಿಸಿಡುತ್ತೇವೆ. ಈ ಗೊಂಬೆಗಳ ಪ್ರದರ್ಶನಕ್ಕೆ ‘ಹಾರೋಬಂಡೆ ಬೊಂಬೆ ಉತ್ಸವ’ ಎಂದು ಹೆಸರಿಟ್ಟಿದ್ದೇವೆ’ ಎಂದು ಪುರಾತನ ಗೊಂಬೆಗಳ ಬಗ್ಗೆ ಡಾ.ರೋಹಿಣಿ ರವಿಶಂಕರ್ ತಿಳಿಸಿದರು.
ವೈವಿಧ್ಯಮಯ ಮಣ್ಣಿನ ಗೊಂಬೆಗಳು :
ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’ ಪುಸ್ತದೊಂದಿಗಿನ ಸರಸ್ವತಿ ಮೂರ್ತಿ ಮತ್ತು ಈಶ್ವರನ ಆಸ್ಥಾನ

ಪುರಾತನ ಗೊಂಬೆಗಳ ನಡುವೆ, ಅಗ್ರಪೂಜಿತೆ ತಾಯಿ ಚಾಮುಂಡೇಶ್ವರಿ, ಕಾಡಿನಲ್ಲಿ ಬುಡಕಟ್ಟು ತಾಂಡ, ಬುದ್ಧ ವಿಹಾರ, ಘಟೋತ್ಕಚನ ಭೋಜನ, ತಂಜಾವೂರಿನ ನೃತ್ಯಗಾರ್ತಿ ಬೊಂಬೆಗಳು, ಪುರಿ ಜಗನ್ನಾಥ, ಬಲಭದ್ರ, ಕೃಷ್ಣ, ರುಕ್ಮಿಣಿ, ಬಲರಾಮ, ಆದಿಯೋಗಿ, ಗಂಡು ಹೆಣ್ಣಿಮ ಸಮಾನತೆ ಸಾರುವ ಅರ್ಧನಾರೀಶ್ವರ, ಗುಜರಾತಿನ ಗಾರ್ಭ ನೃತ್ಯ, ನಂದಗೋಕುಲ, ಗುಹನ ದೋಣಿಯಲ್ಲಿ ಹೊರಟ ರಾಮ ಲಕ್ಷ್ಮಣ ಸೀತೆ, ದೃತರಾಷ್ಟ್ರನ ದರ್ಬಾರ್‌, ಗಣೇಶನ ವಿವಿಧ ರೂಪಗಳು, ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’ ಪುಸ್ತದೊಂದಿಗಿನ ಸರಸ್ವತಿ ಮೂರ್ತಿ, ಈಶ್ವರನ ಆಸ್ಥಾನ, ಅಷ್ಟ ಲಕ್ಷ್ಮಿಯರು, ಪಟ್ಟದ ಗೊಂಬೆಗಳ ಜೊತೆ ಪಟ್ಟದ ಆನೆ, ಕುದುರೆ, ಹಸು, ದಶಾವತಾರ, ಶೆಟ್ಟಿಯ ಸಿರಿಧಾನ್ಯದ ಅಂಗಡಿ, ಆಡಿಸಿ ನೋಡಿ ಬೀಳಿಸಿ ನೋಡು ಗೊಂಬೆಗಳು, ಮಣ್ಣಿನಲ್ಲಿ ತಯಾರಾದ ಫಲಪುಷ್ಪಗಳು ಇವೆ.
ಪರಿಸರ ಕಾಳಜಿ :
ಪರಿಸರ ಪ್ರೇಮವನ್ನು ಪ್ರತಿನಿಧಿಸುವಂತೆ ಒಂದು ಭಾಗದಲ್ಲಿ ಪೈರನ್ನು ಬೆಳೆಯುವ ಮೂಲಕ ಕಾಡನ್ನು, ಕಾಡುಪ್ರಾಣಿಗಳು, ಹಕ್ಕಿಗಳು, ಕಾಡಿನಲ್ಲಿ ವಾಸಿಸುವವರ ಬುಡಕಟ್ಟು ಜನರನ್ನು ಗೊಂಬೆಗಳ ಮೂಲಕ ಪ್ರದರ್ಶಿಸಿದ್ದಾರೆ.

ಕಸಾಪ ನಡೆ ಸಾಧಕರ ಕಡೆ ಮತ್ತು ಅಂತರರಾಷ್ಟ್ರೀಯ ಗ್ರಾಮೀಣ ಮಹಿಳಾ ದಿನಾಚರಣೆ ಕಾರ್ಯಕ್ರಮ

0

ಗ್ರಾಮೀಣ ಪ್ರದೇಶದಲ್ಲಿನ ಮಹಿಳೆ ಹಲವು ಸವಾಲುಗಳನ್ನು ಎದುರಿಸಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್‌ ತಿಳಿಸಿದರು.
ತಾಲ್ಲೂಕಿನ ಮಳಮಾಚನಹಳ್ಳಿಯ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ‘ಕಸಾಪ ನಡೆ ಸಾಧಕರ ಕಡೆ’ ಮತ್ತು ಅಂತರರಾಷ್ಟ್ರೀಯ ಗ್ರಾಮೀಣ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಈಗೀಗ ಗ್ರಾಮೀಣ ಮಹಿಳೆಯರು ಪಂಚಾಯಿತಿ ವ್ಯವಸ್ಥೆಯಲ್ಲಿ ರಾಜಕೀಯ ಅಧಿಕಾರದ ವಲಯಕ್ಕೆ ಪ್ರವೇಶಿಸಿದ್ದಾರೆ. ಪರಿಸ್ಥಿತಿ ಬದಲಾಗುತ್ತಿದೆ. ಆದರೂ ಅವರನ್ನು ಘನತೆಯಿಂದ ನಡೆಸಿಕೊಳ್ಳುವ ಸಮಾಜವಿನ್ನೂ ಸೃಷ್ಟಿಯಾಗಿಲ್ಲ. ನಮ್ಮ ದೇಶದಲ್ಲಿ ಅನೇಕ ಮಹಿಳೆಯರು ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರೂ ನಿತ್ಯ ಜೀವನದಲ್ಲಿ ಅವರ ಕುರಿತ ಸಮಾಜದ ನಡವಳಿಕೆ ಪೂರ್ತಿ ಬದಲಾಗಿಲ್ಲ. ಅದು ಬದಲಾದಾಗ ಮಾತ್ರ ಹಳ್ಳಿ ಹೆಣ್ಣುಮಕ್ಕಳ ಶ್ರಮಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎನ್‌.ಬೈರೇಗೌಡ ಮಾತನಾಡಿ, ಹೆಣ್ಣುಮಕ್ಕಳು ಖಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಸಬಲರಾಗಬೇಕು. ಮನೆಗಳ ಬಳಿ ಕೋಳಿ, ಕುರಿ, ಜೇನು ಸಾಕಣೆ ಮಾಡುತ್ತಾ ತರಕಾರಿಗಳನ್ನು ಬೆಳೆಯುತ್ತಾ ಕೈಖರ್ಚಿಗೆ ಹಣ ಸಂಪಾದಿಸಬಹುದು. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಸರ್ಕಾರಿ ಶಾಲೆಗಳು ಮುಚ್ಚದಂತೆ ಕಾಪಾಡುವ ಹೊಣೆ ನಮ್ಮದು ಎಂದರು.
ಈ ಸಂದರ್ಭದಲ್ಲಿ ಮೂವರು ಸಾಧಕಿಯರನ್ನು ಸನ್ಮಾನಿಸಲಾಯಿತು. ಮಳಮಾಚನಹಳ್ಳಿ ಪಾರ್ವತಮ್ಮ (ಹರಿಕತೆ ಮತ್ತು ನಾಟಕ ಕಲಾವಿದೆ), ಮಳಮಾಚನಹಳ್ಳಿ ಪದ್ಮಮ್ಮ(ಗ್ರಾಮದಲ್ಲಿ ಮದ್ಯಪಾನ ನಿಷೇಧಿಸಲು ಹೋರಾಟಿದ ಮಹಿಳೆ), ಬೋದಗೂರು ಮಾಣಿಕ್ಯಮ್ಮ (ಸಿರಿಧಾನ್ಯ, ಸಮಗ್ರ ಸಾವಯವ ಕೃಷಿ, ಹೈನುಗಾರಿಕೆ) ಅವರನ್ನು ಗೌರವಿಸಲಾಯಿತು.
ಕಸಾಪ ತಾಲ್ಲೂಕು ಘಟಕದ ಕಾರ್ಯದರ್ಶಿ ಚಾಂದ್‌ಪಾಷ, ಸಂಘಸಂಸ್ಥೆಗಳ ಪ್ರತಿನಿಧಿ ಶಂಕರ್‌, ನಗರಘಟಕದ ಅಧ್ಯಕ್ಷ ಮುನಿರಾಜು, ನರಸಿಂಹಮೂರ್ತಿ, ಮಂಜುನಾಥ್‌, ಗ್ರಾಮ ಪಂಚಾಯಿತಿ ಪಿಡಿಒ ಪವಿತ್ರ, ಕಾರ್ಯದರ್ಶಿ ರಾಜಣ್ಣ, ರೇಷ್ಮೆ ರೈತ ಉತ್ಪಾದಕ ಕಂಪೆನಿ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ರಾಧಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ಮಂಜುಳಾ, ಭಾಗ್ಯಮ್ಮ, ಸೌಮ್ಯಶ್ರೀ, ವಿಮಲಾ, ಲಕ್ಷ್ಮೀದೇವಮ್ಮ, ಮುನಿಆಂಜಿನಮ್ಮ, ದ್ಯಾವಮ್ಮ, ವೀಣಾ, ರೂಪಾ, ರಮಾದೇವಿ, ಲಕ್ಷ್ಮೀದೇವಿ, ವರಲಕ್ಷ್ಮಿ, ರತ್ನಮ್ಮ, ಮಂಜುಳಮ್ಮ, ನಾಗರತ್ನ, ಆನಂದ್‌ ಹಾಜರಿದ್ದರು.

ದೇವರಮಳ್ಳೂರು ಮಳ್ಳೂರಾಂಭ ದೇವಾಲಯದಲ್ಲಿ ಕಳ್ಳತನ

0

ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಸೋಮವಾರ ರಾತ್ರಿ ಗ್ರಾಮ ದೇವತೆಯಾದ ಶ್ರೀ ಮಳ್ಳೂರಾಂಭ ದೇವಾಲಯದಲ್ಲಿ ಬೀಗ ಮುರಿದಿರುವ ಕಿಡಿಗೇಡಿಗಳು ದೇವಾಲಯದಲ್ಲಿದ್ದ ಹುಂಡಿ ಹಣವನ್ನು ದೋಚಿದ್ದಾರೆ.
ಕಳೆದ ಅಕ್ಟೋಬರ್‌ ೧೦ ರಂದು ನಗರದ ಹೊರವಲಯದ ಚಿಂತಾಮಣಿ ರಸ್ತೆಯಲ್ಲಿರುವ ಶ್ರೀ ವೀರಾಂಜನೇಯಸ್ವಾಮಿ ದೇವಾಲಯ, ವೀರಾಪುರದ ಶ್ರೀ ವರಸಿದ್ದಿ ವಿನಾಯಕ ಸ್ವಾಮಿ ದೇವಾಯದಲ್ಲಿ ಕಳ್ಳತನವಾಗಿತ್ತು. ನಂತರ ದ್ಯಾವಪ್ಪನಗುಡಿ ದೇವಾಲಯ ಸೇರಿದಂತೆ ಅಕ್ಟೋಬರ್‌ ೧೫ ರ ಭಾನುವಾರ ರಾತ್ರಿ ತಾಲ್ಲೂಕಿನ ಕುತ್ತಾಂಡಹಳ್ಳಿ ಗ್ರಾಮದ ದೇವಾಲಯವೊಂದರಲ್ಲಿ ಕಳ್ಳತನವಾಗಿತ್ತು.
ಇತ್ತೀಚೆಗೆ ನಡೆದ ಎಲ್ಲಾ ದೇವಾಲಯ ಕಳವು ಪ್ರಕರಣಗಳಲ್ಲಿ ದೇವಾಲಯದ ಹುಂಡಿಯಲ್ಲಿರುವ ಹಣವನ್ನು ಅದರಲ್ಲಿಯೂ ಚಿಲ್ಲರೆ ಕಾಸನ್ನು ಬಿಟ್ಟು ಉಳಿದ ನೋಟುಗಳನ್ನು ಮಾತ್ರ ಕದಿಯುತ್ತಿರುವುದು ವಿಶೇಷವಾಗಿದೆ. ಕಳೆದ ಒಂದು ವಾರದಲ್ಲಿ ತಾಲ್ಲೂಕಿನ ಸುಮಾರು ಐದು ದೇವಾಲಯಗಳಲ್ಲಿ ಕಳ್ಳತನ ಪ್ರಕರಣಗಳು ನಡೆದಿರುವುದು ತಾಲ್ಲೂಕಿನ ಜನತೆಯಲ್ಲಿ ಆತಂಕ ಮೂಡಿಸಿದೆ.
ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗೊಂಬೆಹಬ್ಬದಲ್ಲಿ ಮಕ್ಕಳಿಗೆ ಉಚಿತವಾಗಿ ಗೊಂಬೆ ತಯಾರಿಕೆಯ ಕಲಿಕೆ

0

ನಗರದ ಗೌಡರ ಬೀದಿಯ ಡಿ. ಪಾರ್ಥಸಾರಥಿ ಮತ್ತು ಮಂಜುನಾಥ ಅವರ ಮನೆಯಲ್ಲಿ ದಸರಾ ಸಂಭ್ರಮಾಚರಣೆಯ ಅಂಗವಾಗಿ ವೈವಿಧ್ಯಮಯ ಗೊಂಬೆಗಳನ್ನು ಜೋಡಿಸಿಡಲಾಗಿದೆ.
ಗೊಂಬೆಗಳ ಜೊತೆ ವಿವಿಧ ತಿಂಡಿಗಳನ್ನು ಮಾಡಿಟ್ಟು ನವರಾತ್ರಿಯ ಗೊಂಬೆ ಹಬ್ಬವನ್ನು ಆಚರಿಸಲಾಗುತ್ತಿದೆ. ಹಲವಾರು ವರ್ಷಗಳಿಂದ ಗೊಂಬೆ ಹಬ್ಬವನ್ನು ಆಚರಿಸಿಕೊಂಡು ಬರುತ್ತಿರುವ ಅವರ ಮನೆಯಲ್ಲಿ ಮಹಿಳೆಯರು ಮಕ್ಕಳಿಗೆ ಉಚಿತವಾಗಿ ಗೊಂಬೆ ತಯಾರಿಕೆಯನ್ನು ಹೇಳಿಕೊಡುವ ಮೂಲಕ ಗೊಂಬೆ ಹಬ್ಬಕ್ಕೆ ವಿಶೇಷ ಅರ್ಥವನ್ನು ಕಲ್ಪಿಸಿದ್ದಾರೆ. ಗೊಂಬೆ ವೀಕ್ಷಿಸಲು ಬರುವ ಮಕ್ಕಳಿಗೆ ಸಿಹಿ ಹಂಚಿ, ಕಲಿಯುವ ಆಸಕ್ತಿಯುಳ್ಳವರಿಗೆ ಕಲಿಸುತ್ತಾ, ಗೊಂಬೆಗಳ ಮೂಲಕ ಹಲವು ಕಥೆಗಳನ್ನು ತಿಳಿಸುತ್ತಿದ್ದಾರೆ.
ದೇವಾನು ದೇವತೆಗಳು, ಪದ್ಮಾವತಿ ಪರಿಣಯ, ಗೋಕುಲದ ಶ್ರೀಕೃಷ್ಣ, ದಶಾವತಾರ, ಕಾಳಿಂಗಮರ್ಧನ, ಕೈಲಾಸ, ಅನಂತಪದ್ಮನಾಭ, ವ್ಯಾಪಾರಕ್ಕೆ ಕುಳಿತ ಶೆಟ್ಟಿ ದಂಪತಿಗಳು, ಅವರ ವ್ಯಾಪಾರೀ ವಸ್ತುಗಳು, ಆಟಿಕೆಗಳು, ಪಕ್ಷಿಗಳು, ಹಣ್ಣುಗಳು, ವಿವಾಹ ಮಂಟಪ, ಪಟ್ಟದ ಗೊಂಬೆಗಳು, ಸಾಯಿಬಾಬಾ, ಚಾಮುಂಡೇಶ್ವರಿ, ರಾಘವೇಂದ್ರಸ್ವಾಮಿ, ಯೋಧರು, ಗೋಪೂಜೆ ಮುಂತಾದ ಗೊಂಬೆಗಳು ಸಾಲುಸಾಲಾಗಿ ಜೋಡಿಸಿಡಲಾಗಿದೆ. ಪೈರನ್ನು ಬೆಳೆಸಿ ಹಸುರನ್ನು ಮೂಡಿಸಿ ಕಾಡಿನಲ್ಲಿನ ಪ್ರಾಣಿಗಳು ಇಟ್ಟಿದ್ದಾರೆ.
‘ನಮ್ಮ ಮನೆಯಲ್ಲಿ ಸುಮಾರು 20 ವರ್ಷಗಳಿಗೂ ಹಿಂದಿನಿಂದ ಈ ಗೊಂಬೆ ಹಬ್ಬವನ್ನು ಆಚರಿಸುವುದು ರೂಢಿಯಲ್ಲಿದೆ. ನಾವು ಹೋದೆಡೆಯಲ್ಲೆಲ್ಲಾ ಗೊಂಬೆಗಳನ್ನು ಮತ್ತು ಅವುಗಳನ್ನು ಅಲಂಕರಿಸಲು ಬೇಕಾದ ವಸ್ತುಗಳನ್ನು ಹುಡುಕುತ್ತೇವೆ. ಮನೆಯಲ್ಲಿ ಗೊಂಬೆಗಳನ್ನು ವಸ್ತು ವಿಷಯಕ್ಕೆ ಸಂಬಂಧಿಸಿದಂತೆ ತಯಾರಿಸುತ್ತೇವೆ ಹಾಗೂ ಅಲಂಕರಿಸುತ್ತೇವೆ. ಗೊಂಬೆಗಳನ್ನು ನೋಡಲು ಬರುವ ಮಕ್ಕಳಿಗೆ ಸಿಹಿ ನೀಡಿ ಕಥೆ ಹೇಳುತ್ತೇವೆ. ಮನೆಯ ಹತ್ತಿರದ ಕೆಲ ಮಕ್ಕಳು ಕುಸುರಿ ಕೆಲಸ, ಗೊಂಬೆ ಅಲಂಕಾರ ಹಾಗೂ ಕಸದಿಂದ ರಸ ಎಂಬಂತೆ ಬಿಸಾಡುವ ಪದಾರ್ಥದಿಂದ ಕಲಾಕೃತಿ ಮಾಡುವುದನ್ನು ಕಲಿಸುತ್ತೇವೆ’ ಎಂದು ಲತಾ ಮಂಜುನಾಥ್ ತಿಳಿಸಿದರು.
‘ರಾಮಾಯಣ, ಮಹಾಭಾರತ ಸೇರಿದಂತೆ ಹಲವಾರು ದೇವರ ವಿಗ್ರಹಗಳ ಜೊತೆಗೆ ಹಲವಾರು ಬೊಂಬೆಗಳನ್ನು ಜೋಡಿಸಿ ಅಲಂಕರಿಸಿ ವಿಶೇಷವಾಗಿ ಪೂಜೆ ಸಲ್ಲಿಸುವ ವಿಧಾನವನ್ನು ಹಲವಾರು ವರ್ಷಗಳಿಂದಲೂ ಸಹ ಮಾಡುತ್ತಾ ಬಂದಿದ್ದು, ವರ್ಷಕ್ಕೊಮ್ಮೆ ಬರುವ ನವರಾತ್ರಿ ಹಬ್ಬಕ್ಕೆ ಬೊಂಬೆಗಳನ್ನು ಸಿಂಗರಿಸಲಾಗುತ್ತದೆ. ಈಬಾರಿ ಪಾಂಡುರಂಗನ ವಿಗ್ರಹ ಹೊಸದಾಗಿ ಸೇರ್ಪಡೆಯಾಗಿದೆ’ ಎಂದು ರೂಪಾ ಪಾರ್ಥಸಾರಥಿ ತಿಳಿಸಿದರು.