ನಗರದಲ್ಲಿ ಸುಸಜ್ಜಿತವಾದ ಗ್ರಂಥಾಲಯವಿರಲಿ ಎಂಬ ಉದ್ದೇಶದಿಂದ ಈಗಿರುವ ಗ್ರಂಥಾಲಯದ ಕಟ್ಟಡದ ಸ್ಥಳವನ್ನು ಗ್ರಂಥಾಲಯ ಇಲಾಖೆಗೆ ನೀಡಲು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸರ್ವಸದಸ್ಯರೂ ಒಪ್ಪಿಗೆ ನೀಡಿದ್ದಾರೆ. ಹಳೆಯ ಕಟ್ಟಡದ ಸ್ಥಳದಲ್ಲಿ ಅತ್ಯುತ್ತಮ ಗ್ರಂಥಾಲಯ ಕಟ್ಟಡವು ನಿರ್ಮಾಣವಾಗಲಿ ಎಂದು ನಗರಸಭೆ ಆಯುಕ್ತ ಚಲಪತಿ ತಿಳಿಸಿದರು.
ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಮಂಗಳವಾರ ನವರಾತ್ರಿಯ ಸರಸ್ವತಿ ಪೂಜೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಂಥಾಲಯವು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಓದುಗರನ್ನು ಸೆಳೆಯಬೇಕು. ಪುಸ್ತಕ ಓದುವವರ ಸಂಖ್ಯೆ ಹೆಚ್ಚಬೇಕು. ಮಕ್ಕಳಲ್ಲಿ ಓದುವ ಅಭಿರುಚಿಯನ್ನು ಹುಟ್ಟುಹಾಕಬೇಕು. ನಗರಸಭೆಯಿಂದಲೂ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡುತ್ತೇವೆ ಎಂದು ಹೇಳಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಸರಸ್ವತಿಯನ್ನು ವಿದ್ಯಾದೇವತೆ ಎಂದು ಪರಿಗಣಿಸುತ್ತಾರೆ. ಇಲ್ಲಿ ವಿದ್ಯೆ ಎಂದರೆ ಕೇವಲ ಪುಸ್ತಕದ ಮಾಹಿತಿಯಲ್ಲ, ಬದಲಿಗೆ ವಿವೇಕ, ಪ್ರಜ್ಞೆ, ಬುದ್ಧಿವಂತಿಕೆ, ಜ್ಞಾನ, ತಿಳಿವಳಿಕೆ, ಸಂಸ್ಕೃತಿ, ಕಲೆ ಎಲ್ಲವೂ ಒಳಗೊಂಡಿದೆ. ಉತ್ತಮ ಮಾನವನಾಗಲು ಹಣವಿಲ್ಲದೇ ಹೋದರೂ ಈ ಗುಣಗಳು ಅಗತ್ಯವಾಗಿ ಬೇಕು. ಗ್ರಂಥಾಲಯದಲ್ಲಿ ಸರಸ್ವತಿ ಪೂಜೆಯನ್ನು ನಡೆಸುತ್ತಿರುವುದು ಸಮಂಜಸವಾಗಿದೆ. ಸರಸ್ವತಿಯ ಆರಾಧನೆಯೆಂದರೆ ವಿದ್ಯೆ, ಜ್ಞಾನ ಸಂಪಾದಿಸುವುದು. ಇದರಿಂದ ಲಕ್ಷ್ಮಿ ಒಲಿಯುವಳು ಎಂದು ಹೇಳಿದರು.
ಗ್ರಂಥಪಾಲಕಿ ರಾಮಲೀಲಾ, ಸಹಾಯಕಿ ಭಾಂದವ್ಯ, ಓದುಗರಾದ ವೃಷಭೇಂದ್ರಪ್ಪ, ವೇದಶ್ರೀ, ಲಕ್ಷ್ಮೀಕಾಂತ್ ಹಾಜರಿದ್ದರು.
ಸಾರ್ವಜನಿಕ ಗ್ರಂಥಾಲಯದಲ್ಲಿ ನವರಾತ್ರಿಯ ಸರಸ್ವತಿ ಪೂಜೆ
ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ
ಮಹರ್ಷಿ ವಾಲ್ಮೀಕಿ ವಿಶ್ವಮಾನ್ಯರು. ಎಲ್ಲಾ ಸಮುದಾಯಗಳಿಗೂ ಬೇಕಾಗಿರುವ ದೈವಸಂಭೂತರು, ಅವರ ಜಯಂತ್ಯುತ್ಸವ ಆಚರಣೆಯನ್ನು ಅದ್ದೂರಿಯಾಗಿ ಮಾಡಲು ಎಲ್ಲರ ಸಹಕಾರ ಅತ್ಯಗತ್ಯವಿದೆ ಎಂದು ಶಾಸಕ ವಿ.ಮುನಿಯಪ್ಪ ಹೇಳಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಎಲ್ಲಾ ಸಮಾಜಗಳು ಸಮಾಜದಲ್ಲಿ ಸಾಮರಸ್ಯದಿಂದ ಬದುಕು ಕಟ್ಟಿಕೊಳ್ಳಬೇಕು. ಈ ನಿಟ್ಟಿನಲ್ಲಿ ರಾಮಾಯಣ ಗ್ರಂಥದ ಮೂಲಕ ಮಹರ್ಷಿ ವಾಲ್ಮೀಕಿಯವರು ನೀಡಿರುವ ಸಂದೇಶಗಳು ಸಮಾಜಕ್ಕೆ ತಿಳಿಸುವಂತಹ ಕೆಲಸವಾಗಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ವಾಲ್ಮೀಕಿಯವರ ಆದರ್ಶಗಳು, ಅವರ ಸಮಸಮಾಜದ ವಿಚಾರಧಾರೆ, ಶ್ರೀರಾಮರಾಜ್ಯದ ಪರಿಕಲ್ಪನೆ, ಶ್ರೀರಾಮನ ವ್ಯಕ್ತಿತ್ವದ ಚಿತ್ರಣದ ಮೂಲಕ ನೀಡಿರುವ ಆದರ್ಶ ಮುಂತಾದ ಎಲ್ಲಾ ವಿಚಾರಗಳನ್ನು ಸಮಾಜಕ್ಕೆ ತಿಳಿಸಬೇಕಾಗಿದೆ. ಆದ್ದರಿಂದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಆಚರಣೆಯಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕು ಎಂದರು.
ವಾಲ್ಮೀಕಿ ಜಯಂತಿಯ ದಿನದಂದು ಬೆಳಿಗ್ಗೆ ೮ ಗಂಟೆಗೆ ತಲಕಾಯಲಬೆಟ್ಟದಲ್ಲಿರುವ ವಾಲ್ಮೀಕಿ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ನಂತರ ಕೋಟೆ ವೃತ್ತದಿಂದ ಸಾಂಸ್ಕೃತಿಕ ಕಲಾತಂಡಗಳು ಪೂರ್ಣಕುಂಭದೊಂದಿಗೆ ಮೆರವಣಿಗೆ ನಡೆಸುವ ಮೂಲಕ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿನ ವೇದಿಕೆಗೆ ಬರುವುದು, ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಹೆಚ್ಚು ಅಂಕಗಳನ್ನು ಗಳಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಮುಖಂಡ ಲಗಿನಾಯಕನಹಳ್ಳಿ ಮುನಿಯಪ್ಪ ಮಾತನಾಡಿ, ಕಳೆದ ವರ್ಷ ವಿಧಾನಸೌಧ ಮುಂಭಾಗದಲ್ಲಿ ಮಹರ್ಷಿ ವಾಲ್ಮೀಕಿಯವರ ಪುತ್ಥಳಿ ಅನಾವರಣ ಇದ್ದ ಕಾರಣ, ತಾಲ್ಲೂಕಿನಲ್ಲಿ ಕಾರ್ಯಕ್ರಮವನ್ನು ಸರಳವಾಗಿ ಆಚರಣೆ ಮಾಡಲಾಗಿತ್ತು. ಈ ಬಾರಿ ವಿಜೃಂಭಣೆಯಿಂದ ನೆರವೇರಿಸಲು ಎಲ್ಲರ ಸಹಕಾರ ಮುಖ್ಯ ಎಂದರು.
ತಹಶೀಲ್ದಾರ್ ಅಜಿತ್ ಕುಮಾರ್ ರೈ ಮಾತನಾಡಿ, ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವುದು ಬೇಡ. ಕಾರ್ಯಕ್ರಮದ ಆಯೋಜನೆಯ ಹೊಣೆಗಾರಿಕೆಯನ್ನು ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ವಹಿಸಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ಯಾವುದೇ ಕೊರತೆಗಳು ಕಂಡು ಬಾರದಂತೆ ಗಮನಹರಿಸಬೇಕು ಎಂದರು. ಪತ್ರ ಬರೆದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಸ್ಪಂದಿಸುವುದಿಲ್ಲ, ಬರುವುದೂ ಇಲ್ಲ. ಅವರನ್ನು ಸಂಪರ್ಕ ಮಾಡುವ ಕೆಲಸವನ್ನು ಸಮುದಾಯದ ಮುಖಂಡರು ವಹಿಸಿಕೊಳ್ಳಿ ಎಂದು ತಹಶೀಲ್ದಾರ್ ಬೇಸರ ವ್ಯಕ್ತಪಡಿಸಿದರು.
ನಗರಸಭಾ ಅಧ್ಯಕ್ಷ ಅಫ್ಸರ್‌ಪಾಷ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್, ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಸಿದ್ದರಾಜು, ನಗರ ಠಾಣೆ ಸಬ್ ಇನ್ಸ್‌ಪೆಕ್ಟರ್ ಲಿಯಾಖತ್ ಉಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು
ಕುತ್ತಾಂಡಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ಕಳ್ಳತನ
ತಾಲ್ಲೂಕಿನ ಕುತ್ತಾಂಡಹಳ್ಳಿ ಗ್ರಾಮದಲ್ಲಿ ದೇವಾಲಯದ ಬೀಗ ಮುರಿದಿರುವ ಕಳ್ಳರು ಹಣ, ಬೆಳ್ಳಿ ಕಿರೀಟ ಕಳವು ಮಾಡಿದ್ದಾರೆ.
ತಾಲ್ಲೂಕಿನ ದೇವರ ಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುತ್ತಾಂಡಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ಭಾನುವಾರ ರಾತ್ರಿ ಬೀಗ ಮುರಿದ ಕಳ್ಳರು, ದೇವರ ಮುಂದ ಇಟ್ಟಿದ್ದ ಹಣ್ಣುಗಳನ್ನು ತಿಂದಿದ್ದಾರೆ. ನಂತರ ಹುಂಡಿಯನ್ನು ತೆಗೆದುಕೊಂಡು ಹೋಗಿ, ಹಣವನ್ನು ದೋಚಿಕೊಂಡು ಹುಂಡಿಯನ್ನು ಸಮೀಪದ ಹಿಪ್ಪುನೇರಳೆ ತೋಟದಲ್ಲಿ ಬಿಸಾಡಿದ್ದಾರೆ.
ದೇವಾಲಯ ಹಳೆಯದಾಗಿದ್ದರಿಂದ ಇತ್ತಿಚೆಗಷ್ಟೇ ದುರಸ್ಥಿಗೊಳಿಸಿ, ಕುಂಭಾಭೀಷೇಕ ಮಾಡಲಾಗಿತ್ತು. ಬೆಳ್ಳಿಕವಚ, ಅಂದಾಜು ೧.೫ ಲಕ್ಷ ಹುಂಡಿ ಹಣ, ದೋಚಿದ್ದಾರೆ ಎಂದು ಗ್ರಾಮದ ಕೃಷ್ಣಪ್ಪ ತಿಳಿಸಿದ್ದಾರೆ.
ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಬಂದು ಪರಿಶೀಲನೆ ನಡೆಸಿದ್ದಾರೆ.
ಟಿಪ್ಪು ಸೆಕ್ಯೂಲರ್ ಸೇನೆ ಪದಾಧಿಕಾರಿಗಳ ಆಯ್ಕೆ ಸಭೆ
ನಗರದ ಪ್ರವಾಸಿಮಂದಿರಲ್ಲಿ ಭಾನುವಾರ ನಡೆದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಆದೇಶ ಪತ್ರ ನೀಡಿ ಟಿಪ್ಪು ಸೆಕ್ಯೂಲರ್ ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೆ.ಶಬೀರ್ ಪಾಷ ಮಾತನಾಡಿದರು.
ಟಿಪ್ಪು ಸೆಕ್ಯೂಲರ್ ಸೇನೆಯು ಎಲ್ಲಾ ಜಾತಿ, ಧರ್ಮಗಳೊಟ್ಟಿಗೆ ಸಾಮರಸ್ಯವನ್ನು ಕಾಪಾಡಿಕೊಂಡು ಹೋಗುವಂತಹ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.
ಎಲ್ಲಾ ಜಯಂತಿಗಳಿಗೆ ಸಹಕಾರ ನೀಡುವ ಕೆಲಸ ಮಾಡಬೇಕು, ಸಮಾಜದಲ್ಲಿ ನಾವು ಎಲ್ಲರೊಟ್ಟಿಗೆ ಬೆರತು ಬದುಕು ಕಟ್ಟಿಕೊಳ್ಳಬೇಕು ಎನ್ನುವ ಸಂದೇಶವನ್ನು ಎಲ್ಲೆಡೆ ಸಾರಬೇಕಾಗಿದೆ. ನಾವು ಈ ನಾಡಿನಲ್ಲಿ ಹುಟ್ಟಿದ್ದೇವೆ. ನಾಡಿನ ಋಣ ತೀರಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್ ಮಾತನಾಡಿ, ಟಿಪ್ಪುಸುಲ್ತಾನ್ ಕೇವಲ ಮುಸ್ಲಿಂ ಸಮುದಾಯದ ನಾಯಕರಲ್ಲ, ಅವರು ಎಲ್ಲಾ ಸಮುದಾಯಗಳ ನಾಯಕರು ಎಂದು ನಾವೆಲ್ಲರೂ ಒಪ್ಪಿಕೊಳ್ಳಬೇಕು. ಅವರೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು, ರಾಜ್ಯದ ಏಳಿಗೆಗಾಗಿ ತಮ್ಮ ಮಕ್ಕಳನ್ನು ಬ್ರಿಟೀಷರ ಬಳಿಯಲ್ಲಿ ಒತ್ತೆಯಿಟ್ಟಿದ್ದರು. ಅವರು ರೇಷ್ಮೆಯನ್ನು ನಮಗೆ ಪರಿಚಯಿಸಿದ್ದರಿಂದ ಇಂದು ಈ ಭಾಗದಲ್ಲಿ ರೇಷ್ಮೆ ಒಂದು ಉದ್ಯಮವಾಗಿ ಬೆಳೆದು ನಿಂತಿದೆ. ಪ್ರತಿಯೊಬ್ಬ ರೈತರು ಟಿಪ್ಪುಸುಲ್ತಾನ್ ಅವರನ್ನು ನೆನೆಸಿಕೊಳ್ಳಬೇಕಾಗಿದೆ.
ಅವರು ರಾಜ್ಯಭಾರ ಮಾಡುವಾಗ ಹಿಂದೂಗಳಿಗೂ ಸ್ಥಾನಮಾನಗಳನ್ನು ಕೊಟ್ಟಿದ್ದರು. ಅನೇಕ ಹಿಂದೂ ದೇವಾಲಯಗಳನ್ನು ಕಟ್ಟಿಸಿದ್ದಾರೆ. ಜೀರ್ಣೋದ್ಧಾರ ಮಾಡಿದ್ದಾರೆ. ಅವರಿಗೆ ಹಿಂದೂ ವಿರೋಧಿ ಪಟ್ಟ ಕಟ್ಟುವುದು ಸರಿಯಲ್ಲ ಎಂದರು.
ಈ ಸಂದರ್ಭದಲ್ಲಿ ಟಿಪ್ಪು ಸೆಕ್ಯೂಲರ್ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಅಪ್ಜಲ್ ಪಾಷ ಅವರನ್ನು ನೇಮಕ ಮಾಡಿ ರಾಜ್ಯ ಘಟಕದ ಅಧ್ಯಕ್ಷ ಕೆ.ಶಬೀರ್ ಪಾಷ ಆದೇಶ ಪತ್ರ ನೀಡಿದರು.
ನೂತನ ತಾಲ್ಲೂಕು ಅಧ್ಯಕ್ಷ ಅಪ್ಜಲ್ ಪಾಷ ಮಾತನಾಡಿ, ತಾಲ್ಲೂಕಿನಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಹಾಗೂ ಎಲ್ಲಾ ಸಮುದಾಯಗಳೊಟ್ಟಿಗೆ ಉತ್ತಮ ಭಾಂಧವ್ಯ ವೃದ್ಧಿಸಿಕೊಂಡು ಸಮಾಜದ ಏಳಿಗೆಗಾಗಿ ಸೇನೆಯ ಪದಾಧಿಕಾರಿಗಳ ಸಹಕಾರದಲ್ಲಿ ಮುನ್ನಡೆಯುತ್ತೇವೆ. ರಾಜ್ಯ ಘಟಕದ ಅಧ್ಯಕ್ಷರ ಸಲಹೆಯ ಮೇರೆಗೆ ಎಲ್ಲಾ ಜಯಂತಿಗಳಲ್ಲಿ ಭಾಗವಹಿಸಿ ಸಹಕಾರ ನೀಡುತ್ತೇವೆ ಎಂದರು.
ಚಿಂತಾಮಣಿ ರೈತ ಸಂಘದ ಮುಖಂಡ ಹುಸೇನ್ ಸಾಬ್, ಮೈನುದ್ಧೀನ್ ಪಾಷ, ಡಾ.ಶಬೀರ್, ಜಹೀರ್, ಆಸೀಪ್ ಪಾಷ, ಬಾಬು ಹಾಜರಿದ್ದರು.
ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ
ನಗರದ ಡಾಲ್ಫಿನ್ ಶಾಲೆಯ ಆವರಣದಲ್ಲಿ ಭಾನುವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯೋಜಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘಕ್ಕೆ ಸೇರಿ ಸದಸ್ಯರಲ್ಲಿ ಶಿಸ್ತು, ವ್ಯವಹಾರ ಜ್ಞಾನ, ಸಂಘಟನಾ ಶಕ್ತಿ, ವೈಯಕ್ತಿಕ ಜೀವನದಲ್ಲಿ ಬದಲಾವಣೆಯಾಗಿ ಕುಟುಂಬಗಳು ಸರ್ವತೋಮುಖ ಅಭಿವೃದ್ಧಿಯತ್ತ ಸಾಗಿವೆ. ಇದು ಸಾಮಾಜಿಕ ಚಳುವಳಿಯಂತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬದಲಾಗುತ್ತಿರುವ ಇಂದಿನ ಸಮಾಜದಲ್ಲಿ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವಂತಹ ಇಂತಹ ಧಾರ್ಮಿಕ ಕಾರ್ಯಕ್ರಮದಿಂದ ಹೊಸ ಬದಲಾವಣೆಯಾಗುತ್ತದೆ ಮತ್ತು ಊರಿಗೆ ಶ್ರೇಯಸ್ಸಾಗುತ್ತದೆ. ಎಲ್ಲರೂ ಹೊಂದಾಣಿಕೆಯಿಂದ ಬಾಳುವಂತೆ ಪ್ರೇರೇಪಣೆ ನೀಡಿದಂತಾಗಿರುತ್ತದೆ. ಒಗ್ಗಟ್ಟಿಗೆ, ಯಶಸ್ಸಿಗೆ, ಸಮಾನತೆಗೆ ಈ ಕಾರ್ಯಕ್ರಮ ಸಹಕಾರಿ. ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಧಾರ್ಮಿಕ ಸಭಾ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಒಂದೇ ವೇದಿಕೆಯಲ್ಲಿ ಮೂಡಿ ಬಂದಿದೆ. ಈ ಕಾರ್ಯಕ್ರಮದಲ್ಲಿ ಇಷ್ಟು ಜನ ಸೇರಿರುವುದಕ್ಕೆ ಸಂಘಟನಾಶಕ್ತಿ, ಹೊಂದಾಣಿಕೆ ಮುಖ್ಯ ಎಂದು ಹೇಳಿದರು.
ಶ್ರೀ ಸಾಮೂಹಿಕ ಸತ್ಯ ನಾರಾಯಣ ಪೂಜೆ ಪ್ರಾರಂಭಗೊಂಡು ಈ ಪೂಜಾ ಕಾಯಕ್ರಮವನ್ನು ಒಕ್ಕೂಟದ ಅಧ್ಯಕ್ಷರುಗಳು, ಮೇಲ್ವಿಚಾರಕರು, ಆಡಳಿತ ಮಂಡಳಿಯ ಕಾರ್ಯಧ್ಯಕ್ಷರು , ಸೇವಾ ಪ್ರತಿನಿಧಿಗಳು ಮತ್ತು ಗಣ್ಯರ ಸಂಕಲ್ಪದೊಂದಿಗೆ ಪ್ರಾರಂಭಿಸಲಾಯಿತು. ಸುಮಾರು 65 ದಂಪತಿಗಳು ವ್ರತಾಧಾರಿಗಳಾಗಿ ಪೂಜೆಯಲ್ಲಿ ಪಾಲ್ಗೊಂಡರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಳ್ಳೂರು ಚೌಡೇಶ್ವರಿ ದೇವಸ್ಥಾನಕ್ಕೆ ಒಂದು ಲಕ್ಷ ರೂ, ಹೇಮಾರ್ಲಹಳ್ಳಿ ಪಟಾಲಮ್ಮನ ದೇವಸ್ಥಾನಕ್ಕೆ ಒಂದೂವರೆ ಲಕ್ಷರೂ ಹಾಗೂ ಕೃಷಿ ಅನುದಾನದ ಅಡಿಯಲ್ಲಿ 24 ಮಂದಿ ರೈತ ಫಲಾನುಭವಿಗಳಿಗೆ ತಲಾ ಮೂರು ಸಾವಿರ ರೂಗಳ ಪ್ರೋತ್ಸಾಹಧನವನ್ನು ವಿತರಿಸಲಾಯಿತು.
ಡಾಲ್ಫಿನ್ ಸಂಸ್ಥೆಯ ಅಧ್ಯಕ್ಷ ಎ.ನಾಗರಾಜು, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ವಸಂತ್, ಯೋಜನಾಧಿಕಾರಿ ಮೋಹನ್, ಜನಜಾಗೃತಿ ವೇದಿಕೆಯ ಸದಸ್ಯರಾದ ಬೋದಗೂರು ವೆಂಕಟಸ್ವಾಮಿರೆಡ್ಡಿ, ನಾಗೇಂದ್ರ, ಎ.ಎಂ.ತ್ಯಾಗರಾಜು, ಮೇಲ್ವಿಚಾರಕರಾದ ಜನಾರ್ಧನ, ಬಿ.ಜ್ಯೋತಿ, ನಗರಸಭೆ ಸದಸ್ಯ ಚಿಕ್ಕಮುನಿಯಪ್ಪ ಹಾಜರಿದ್ದರು.
ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಂತೆ ನಗರಸಭೆ ಸದಸ್ಯರ ಆಗ್ರಹ
ವಾರ್ಡುಗಳಲ್ಲಿರುವ ಕುಡಿಯುವ ನೀರಿನ ಸಮಸ್ಯೆ, ನಗರದ ಸ್ವಚ್ಚತೆ ಹಾಗೂ ಬೀದಿ ದೀಪಗಳ ಸಮಸ್ಯೆ ಪರಿಹರಿಸಲು ನಗರಸಭೆ ಅಧಿಕಾರಿಗಳು ಕೂಡಲೇ ಕ್ರಮ ಜರುಗಿಸಬೇಕು ಎಂದು ನಗರಸಭೆ ಸಾಮಾನ್ಯ ಸಭೆಯಲ್ಲಿ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು.
ನಗರದ ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷ ಅಫ್ಸರ್‌ಪಾಷ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಸಾಮಾನ್ಯಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಸದಸ್ಯರು ನಗರದಲ್ಲಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ನಗರಸಭೆ ಪೌರಾಯುಕ್ತರಾಗಿರುವ ಚಲಪತಿ ಸರ್ಕಾರಿ ಅಧಿಕಾರಿಯಂತೆ ವರ್ತಿಸದೇ ಯಾವುದೋ ಒಂದು ಪಕ್ಷದ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ. ಮಹಿಳಾ ಸದಸ್ಯರ ಪರವಾಗಿ ಕಚೇರಿಗೆ ಬರುವ ಅವರ ಪತಿ ಅಥವ ಮಕ್ಕಳು ಇವರನ್ನೇನಾದರೂ ಪ್ರಶ್ನಿಸಿದರೆ ‘ನೀನ್ಯಾರು ನನ್ನನ್ನು ಕೇಳಲು ಸದಸ್ಯರಾಗಿರುವವರನ್ನು ಕಳುಹಿಸು’ ಎಂದು ಅವಮಾನ ಮಾಡಿ ಕಳುಹಿಸುತ್ತಾರೆ ಎಂದು ಸದಸ್ಯರು ದೂರಿದರು.
ನಗರದ ೮ ನೇ ವಾರ್ಡಿನಲ್ಲಿ ನಿರ್ಮಿಸಲಾಗಿದ್ದ ಶುದ್ದ ಕುಡಿಯುವ ನೀರಿನ ಘಟಕದ ಉದ್ಘಾಟನೆಯನ್ನು ನೆರವೇರಿಸಿಕೊಳ್ಳುವಂತೆ ಸದಸ್ಯರಿಗೆ ಹೇಳಿದ್ದ ಪೌರಾಯುಕ್ತ ಚಲಪತಿ ಉದ್ಘಾಟನೆಯಾದ ನಂತರ ಅದೇ ಶುದ್ದ ಕುಡಿಯುವ ನೀರಿನ ಘಟಕದ ಗಾಜುಗಳನ್ನು ಒಡೆಯಲು ಕಾಂಗ್ರೆಸ್ ಕಾರ್ಯಕರ್ತರಿಗೆ ಹೇಳಿದ್ದಾರೆ. ಸಾಲದು ಎಂಬಂತೆ ಉದ್ಘಾಟನೆಯಾದ ಘಟಕವನ್ನು ನಗರಸಭೆಯ ಯಾವುದೇ ಸದಸ್ಯರಿಗೆ ಆಹ್ವಾನ ನೀಡದೇ ಮತ್ತೊಮ್ಮೆ ಶಾಸಕರು ಮತ್ತು ಅವರ ಕಾರ್ಯಕರ್ತರನ್ನು ಮಾತ್ರ ಇಟ್ಟುಕೊಂಡು ಉದ್ಘಾಟನೆ ಮಾಡಿಸಿದ್ದಾರೆ. ರಾಜಕೀಯ ಮಾಡಲು ಅಷ್ಟು ಇಷ್ಟವಿದ್ದರೆ ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ಜನರ ಮುಂದೆ ಬಂದು ಚುನಾವಣೆಯಲ್ಲಿ ಸ್ಪರ್ಧಿಸಲಿ. ಘಟಕದ ಉದ್ಘಾಟನೆ ಮಾಡಿಕೊಳ್ಳುವಂತೆ ನಮಗೆ ಅವರು ಹೇಳಿದ ಸಾಕ್ಷಿಯಾಗಿ ದೂರವಾಣಿ ಸಂಭಾಷಣೆಯ ಆಡಿಯೋ ಇದೆ ಎಂದು ೮ ನೇ ವಾರ್ಡ್ ಸದಸ್ಯೆ ಸುಮಿತ್ರ ರಮೇಶ್ಆ ರೋಪಿಸಿದರು.
ನಗರಸಭೆ ವ್ಯಾಪ್ತಿಯಲ್ಲಿನ ಘೋಷಿತ ಕೊಳಚೆ ಪ್ರದೇಶಗಳಲ್ಲಿನ ಆಸ್ತಿ ಹಕ್ಕುದಾಖಲೆಗಳನ್ನು ನಿರ್ವಹಿಸುವ ಕುರಿತು ಚರ್ಚೆ ನಡೆಸುವ ಸಂದರ್ಭದಲ್ಲಿ ಸದಸ್ಯ ರಾಘವೇಂದ್ರ ಮಾತನಾಡಿ, ನಗರವ್ಯಾಪ್ತಿಯಲ್ಲಿರುವ ಎಲ್ಲರಿಗೂ ಹಕ್ಕು ಬದಲಾವಣೆ ಹಾಗೂ ಖಾತೆಗಳನ್ನು ನ್ಯಾಯಯುತವಾಗಿ ಮಾಡಿಕೊಡಿ. ನಗರಸಭೆಯ ಆದಾಯ ಹೆಚ್ಚಿಸುವ ಉದ್ದೇಶದಿಂದ ೫ ಕಿ.ಮೀ.ವ್ಯಾಪ್ತಿಯಲ್ಲಿ ಕಾನೂನು ಬದ್ಧವಾಗಿರುವ ಎಲ್ಲಾ ನಿವೇಶನಗಳನ್ನು ನಗರಸಭೆಗೆ ಸೇರಿಸಿಕೊಳ್ಳಿ. ಹಳೇ ನಗರದಲ್ಲಿ ಸಾಕಷ್ಟು ಮಂದಿಯ ಮನೆಗಳು, ನಿವೇಶನಗಳಿಗೆ ಈವರೆಗೂ ಖಾತೆ ಮಾಡಿಕೊಟ್ಟಿಲ್ಲ. ಈ ಬಗ್ಗೆ ಜನರೇ ನೇರವಾಗಿ ಕಚೇರಿಗೆ ಬಂದಾಗ ಅವರಿಗೆ ಸ್ಪಂದಿಸಿ ನಿಗಧಿತ ಶುಲ್ಕ ಕಟ್ಟಿಸಿಕೊಂಡು ಮಾಡಿಕೊಡಿ ಎಂದರು.
ನಗರಸಭೆ ಸದಸ್ಯರಾದ ನಮ್ಮ ಅವಧಿ ಇನ್ನು ಕೇವಲ ನಾಲ್ಕು ತಿಂಗಳಿದೆ. ಸಭೆಗಳಲ್ಲಿ ನಾವು ಹೇಳಿದ ಮಾತಿಗೆ ಬೆಲೆಕೊಡುತ್ತಿಲ್ಲ. ಜನರಿಗೆ ಕುಡಿಯುವ ನೀರು ಕೊಡಲಿಕ್ಕೆ ಸಾಧ್ಯವಾಗುತ್ತಿಲ್ಲ, ಸ್ವಚ್ಚತೆ ಕಾಪಾಡಲಿಕ್ಕೆ ಸಾಧ್ಯವಾಗುತ್ತಿಲ್ಲ, ಜನರಿಗೆ ಮೂಲಸೌಕರ್ಯಗಳನ್ನು ಒದಗಿಸಲಿಕ್ಕೆ ಸಾಧ್ಯವಾಗದಿದ್ದ ಮೇಲೆ ಕೌನ್ಸಿಲ್ ಸಭೆ ಮಾಡುವುದರಲ್ಲಿ ಅರ್ಥವಿದೆಯೇ ಎಂದು ಸದಸ್ಯ ಲಕ್ಮಯ್ಯ ಪ್ರಶ್ನಿಸಿದರು.
ನಗರದಲ್ಲಿನ ನಿವೇಶನ ರಹಿತ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ೨೩ ಎಕರೆ ಭೂಮಿಯನ್ನು ಖರೀದಿ ಮಾಡಲಾಗಿದ್ದು, ಅದರಲ್ಲಿ ರಸ್ತೆಗಳ ವಿಂಗಡಣೆ ಸೇರಿದಂತೆ ಎಲ್ಲಾ ಬಗೆಯ ಮೂಲಸೌಕರ್ಯಗಳನ್ನು ಒದಗಿಸಿಕೊಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಟೆಂಡರ್ ಕರೆಯಲಾಗುತ್ತದೆ. ಆಯಾ ವಾರ್ಡುಗಳ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಫಲಾನುಭವಿಗಳ ಸರ್ವೆ ಕಾರ್ಯವನ್ನು ಮಾಡಲಾಗುತ್ತದೆ ಎಂದು ಪೌರಾಯುಕ್ತ ಜಿ.ಎನ್.ಚಲಪತಿ ತಿಳಿಸಿದರು.
‘ಕಳೆದ ಹದಿನೈದು ವರ್ಷಗಳಿಂದ ಸ್ವಾದೀನಾನುಭವದಲ್ಲಿದ್ದು ಸ್ಥಳವನ್ನು ಮಂಜೂರು ಮಾಡುವಂತೆ ಕೋರಿ ನಗರಸಭೆಗೆ ಈವರೆಗೂ ಸಾಕಷ್ಟು ಭಾರಿ ಅರ್ಜಿ ಸಲ್ಲಿಸಿರುವ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಮೊದಲು ಸ್ಥಳವನ್ನು ಖಾತೆ ಮಾಡಿಕೊಡಿ’ ಎಂದು ಸದಸ್ಯೆ ಸುಗುಣ ಲಕ್ಷ್ಮೀನಾರಾಯಣ ಹೇಳಿದಾಗ, ಸದಸ್ಯರಾದ ಎಸ್.ರಾಘವೇಂದ್ರ, ಲಕ್ಮಯ್ಯ, ವೆಂಕಟಸ್ವಾಮಿ ಸೇರಿದಂತೆ ಎಲ್ಲಾ ಸದಸ್ಯರು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿವೇಶನ ಖಾತೆ ಮಾಡಿಕೊಡುವಂತೆ ಸಭೆಯಲ್ಲಿ ಒತ್ತಾಯಿಸಿದರು.
ಬಹುಜನ ಸಮಾಜವಾದಿ ಪಕ್ಷದಿಂದ ಬಡವರ ನಿವೇಶನಕ್ಕೆ ಒತ್ತಾಯ
ವಸತಿ ರಹಿತರು, ನಿವೇಶನ ರಹಿತರಾಗಿರುವ ದಲಿತರು, ಅಲ್ಪಸಂಖ್ಯಾತರು, ಬಡವರಿಗೆ ನಿವೇಶನಗಳನ್ನು ಒದಗಿಸಿಕೊಡಬೇಕು ಎಂದು ಬಹುಜನ ಸಮಾಜ ಪಕ್ಷದ ತಾಲ್ಲೂಕು ಘಟಕದ ಪದಾಧಿಕಾರಿಗಳು ನಗರಸಭೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.
ನಗರಸಭೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಅವರು, ಮೂರು ದಶಕಗಳಿಂದಲೂ ಸಾಕಷ್ಟು ಮಂದಿಗೆ ಸೂರಿಲ್ಲ, ದಿನನಿತ್ಯ ೨೦೦ ರೂಪಾಯಿಗಳ ಕೂಲಿ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡಿಕೊಳ್ಳುತ್ತಿರುವವರೇ ಹೆಚ್ಚಾಗಿದ್ದಾರೆ. ನಗರದಲ್ಲಿ ರೇಷ್ಮೆ ಉದ್ಯಮದಿಂದಲೇ ಬಹುತೇಕ ಕುಟುಂಬಗಳು ಜೀವನ ನಡೆಸುತ್ತಿದ್ದಾರೆ. ಸಾಕಷ್ಟು ಮಂದಿ ತಿಂಗಳ ಪೂರ್ತಿ ದುಡಿದ ದುಡಿಮೆಯ ಹಣದಲ್ಲಿ ಬಾಡಿಗೆ ಕಟ್ಟಲಿಕ್ಕೆ ಸರಿಹೋಗುತ್ತಿದೆ. ಜೀವನ ನಿರ್ವಹಣೆ ಕಷ್ಟಕರವಾಗುತ್ತಿದೆ.
ನಿವೇಶನ ರಹಿತರಿಗೆ ನಿವೇಶನಗಳನ್ನು ನೀಡಿ, ಮನೆಗಳ ನಿರ್ಮಾಣಕ್ಕೆ ಅನುದಾನ ಕೊಡಬೇಕು ಎಂದು ಪ್ರತಿ ವರ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಕೋಟ್ಯಾಂತರ ರೂಪಾಯಿಗಳ ಅನುದಾನಗಳು ಬಿಡುಗಡೆಯಾಗುತ್ತಿದ್ದರೂ ಕೂಡಾ ನಿಜವಾದ ಫಲಾನುಭವಿಗಳಿಗೆ ಸೌಲಭ್ಯಗಳು ಸಿಕ್ಕಿಲ್ಲ, ಉಳ್ಳವರಿಗೆ ಅನುಕೂಲ ಮಾಡಿಕೊಡುವ ಕೆಲಸವನ್ನು ಅಧಿಕಾರಿಗಳು ಮಾಡಿಕೊಡುತ್ತಲೇ ಬಂದಿದ್ದಾರೆ. ನಮ್ಮ ಮನವಿಗಳಿಗೆ ಇದುವರೆಗೂ ಸ್ಪಂದನೆ ನೀಡಿಲ್ಲ ಕೂಡಲೇ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ನಿವೇಶನ ರಹಿತ ಅರ್ಹರಾಗಿರುವ ಪ್ರತಿಯೊಬ್ಬ ಫಲಾನುಭವಿಗಳಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಬಹುಜನ ಸಮಾಜ ಪಕ್ಷದ ತಾಲ್ಲೂಕು ಅಧ್ಯಕ್ಷ ರಾಮು ಒತ್ತಾಯಿಸಿದರು.
ಮನವಿ ಪತ್ರವನ್ನು ಸ್ವೀಕರಿಸಿ ನಗರಸಭೆ ಅಧ್ಯಕ್ಷ ಬಿ.ಅಪ್ಸರ್ ಪಾಷ ಮಾತನಾಡಿ, ನಿವೇಶನ ರಹಿತರಿಗೆ ನಿವೇಶನಗಳನ್ನು ವಿತರಣೆ ಮಾಡಬೇಕೆನ್ನುವ ವಿಚಾರವನ್ನು ಸಾಮಾನ್ಯ ಸಭೆಯಲ್ಲಿ ಚರ್ಚೆಯಲ್ಲಿಟ್ಟುಕೊಂಡಿದ್ದೇವೆ. ಈ ಬಗ್ಗೆ ಚರ್ಚೆ ನಡೆಸಿದ ನಂತರ ಸೂಕ್ತ ತೀರ್ಮಾನ ಕೈಗೊಂಡು ನ್ಯಾಯ ಒದಗಿಸಿಕೊಡುವ ಕೆಲಸ ಮಾಡುತ್ತೇವೆ ಎಂದರು.
ಆಯುಕ್ತ ಚಲಪತಿ ಮಾತನಾಡಿ, ಪ್ರತಿಭಟನಾ ಕಾರರು ನೀಡಿರುವ ಮನವಿಯನ್ನು ಆಧರಿಸಿ ಸಭೆಯಲ್ಲಿ ಚರ್ಚೆ ಮಾಡಿದ ನಂತರ ಎಲ್ಲಾ ನಿವೇಶನ ರಹಿತ ಅರ್ಹ ಫಲಾನುಭವಿಗಳಿಗೆ ನ್ಯಾಯ ಒದಗಿಸಿಕೊಡುವ ಕೆಲಸ ಮಾಡುತ್ತೇವೆ ಎಂದರು.
ನಗರಸಭೆ ಉಪಾಧ್ಯಕ್ಷೆ ಪ್ರಭಾವತಿಸುರೇಶ್, ಬಹುಜನ ಸಮಾಜವಾದಿ ಪಕ್ಷದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ನರೇಶ್‌ಬಾಬು, ಸುಂದರ್, ರವಿಕುಮಾರ್, ಮಂಜುನಾಥ್, ನರಸಿಂಹ, ರಾಜುವಿಟಲ್, ನಟರಾಜ್, ಮುರಳಿ, ವೆಂಕಟರಾಜು, ಆರಿಫ್, ಶಫಿವುಲ್ಲ ಹಾಜರಿದ್ದರು.
ಭಾರತ್ ನಿರ್ಮಾಣ್ ರಾಜೀವ್‌ಗಾಂಧಿ ಸೇವಾ ಕೇಂದ್ರದ ಉದ್ಘಾಟನೆ
ತಾಲ್ಲೂಕಿನ ನಾಗಮಂಗಲದಲ್ಲಿ ಗುರುವಾರ ನರೇಗಾ ಯೋಜನೆಯಡಿ ಸುಮಾರು ೧೬ ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಭಾರತ್ ನಿರ್ಮಾಣ್ ರಾಜೀವ್‌ಗಾಂಧಿ ಸೇವಾ ಕೇಂದ್ರದ ಉದ್ಘಾಟನೆ ನೆರವೇರಿಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಹಿಂದಿನ ಯುಪಿಎ ಸರ್ಕಾರದ ದೂರದೃಷ್ಟಿಯ ಮಹಾತ್ಮ ಗಾಂಧಿ ಉದ್ಯೋಗಖಾತ್ರಿ ಯೋಜನೆಯ ಫಲವಾಗಿ ಇಂದು ದೇಶದ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿಯೂ ಉತ್ತಮ ಗ್ರಾಮ ಪಂಚಾಯಿತಿ ಕಾರ್ಯಾಲಯಗಳು ನಿರ್ಮಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.
ಜನರಿಗೆ ಕೆಲಸ ಸಿಗುವಂತೆ ಮಾಡುವುದು ಹಾಗೂ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ನರೇಗಾ ಯೋಜನೆ ಬಹಳ ಉಪಯುಕ್ತವಾಗಿದ್ದು ಎಲ್ಲರೂ ಇದರ ಸವಲತ್ತು ಪಡೆದುಕೊಂಡು ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಇಓ ಎಂ.ವೆಂಕಟೇಶ್ ಮಾತನಾಡಿ, ಗ್ರಾಮ ಪಂಚಾಯಿತಿಗಳ ಏಳಿಗೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಧಿಕಾರಿಗಳು ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಒಟ್ಟಾಗಿ ದುಡಿಯಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾಮುನಿರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ರೂಪಶಿವಕುಮಾರ್, ಉಪಾಧ್ಯಕ್ಷ ಎನ್.ಡಿ.ನಾರಾಯಣಪ್ಪ, ಸದಸ್ಯರಾದ ಶ್ರೀನಿವಾಸಗೌಡ, ನರೇಗಾ ಸಹಾಯಕ ನಿರ್ದೇಶಕ ಶ್ರೀನಾಥಗೌಡ, ಕೆ.ಗುಡಿಯಪ್ಪ, ಗ್ರಾಮ ಪಂಚಾಯಿತಿ ಪಿಡಿಓ ಗೋಪಿನಾಥ್ ಹಾಜರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಶಿಕ್ಷಕರ ಪ್ರತಿಭಟನೆ
ಶಿಕ್ಷಕರ ವೇತನ ವಿಳಂಬ ಹಾಗೂ ಸಿಆರ್‌ಪಿ ಮತ್ತು ಬಿಆರ್‌ಪಿಗಳಿಗೆ ಪ್ರತಿ ತಿಂಗಳೂ ಮಾಡಬೇಕಾದ ವೇತನವನ್ನು ವಿನಾಕರಾಣ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಬುಧವಾರ ಶಿಕ್ಷಕರ ಸಂಘದ ಪದಾಧಿಕಾರಿಗಳು ಪ್ರತಿಭಟಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ಮುನಿರಾಜು ಮಾತನಾಡಿ, ಕಳೆದ ಕೆಲ ವರ್ಷಗಳಿಂದ ಶಿಕ್ಷಕರಿಗೆ ಸಿಗಬೇಕಾದ ವೇತನ ಬಡ್ತಿ, ವಿಶೇಷ ಹೆಚ್ಚುವರಿ ಸ್ವಯಂಚಾಲಿತ ಬಡ್ತಿಗಳನ್ನು ಸಮಯಕ್ಕೆ ಸರಿಯಾಗಿ ಮಾಡುತ್ತಿಲ್ಲ. ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ತೀರ್ಪುಗಾರರಿಗೆ ಈವರೆಗೂ ಯಾವುದೇ ಹಣವನ್ನು ಇಲಾಖೆಯಿಂದ ಪಾವತಿಸಿಲ್ಲ. ಶಿಕ್ಷಕರ ಸಮಸ್ಯೆಗಳ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಿಬ್ಬಂದಿಯನ್ನು ವಿಚಾರಿಸಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳೂ ಸಹ ಗಮನಹರಿಸುತ್ತಿಲ್ಲ. ಈ ಬಗ್ಗೆ ಸಾಕಷ್ಟು ಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಜರುಗಿಸದ ಹಿನ್ನಲೆಯಲ್ಲಿ ಇಂದು ಕಚೇರಿಗೆ ಬಾಗಿಲು ಹಾಕಿ ಪ್ರತಿಭಟನೆ ನಡೆಸುವ ಮೂಲಕ ಮನವಿ ಸಲ್ಲಿಸುತ್ತಿದ್ದೇವೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಚಂದ್ರಶೇಖರಬಾಬು ಮನವಿ ಸ್ವೀಕರಿಸಿ ಮಾತನಾಡಿ, ಹಂತ ಹಂತವಾಗಿ ಶಿಕ್ಷಕರ ಸಮಸ್ಯೆ ಪರಿಹರಿಸಲು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ವಿಜಯ್‌ಕುಮಾರ್, ನಾರಾಯಣಸ್ವಾಮಿ, ಶಿವಕುಮಾರ್, ಗಜೇಂದ್ರ, ನಾಗರಾಜ್, ಸುರೇಶ್, ದಾಕ್ಷಾಯಣಿ ಹಾಜರಿದ್ದರು.
‘ರೇಷ್ಮೆ ನಾಡು ಶಿಡ್ಲಘಟ್ಟ’ ಎಂಬ ನಾಮಫಲಕ ಅಳವಡಿಸಲು ಒತ್ತಾಯ
ಶಿಡ್ಲಘಟ್ಟವನ್ನು ಪ್ರವೇಶಿಸುವಲ್ಲಿ ನಾಮಫಲಕವನ್ನು ಅಳವಡಿಸುವಂತೆ ಒತ್ತಾಯಿಸಿ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಸದಸ್ಯರು ಗುರುವಾರ ನಗರಸಭೆ ಆಯುಕ್ತ ಚಲಪತಿ ಅವರಿಗೆ ಮನವಿಯನ್ನು ಸಲ್ಲಿಸಿದರು.
ರೇಷ್ಮೆಗೆ ಪ್ರಸಿದ್ಧವಾದ ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಬೇರೆ ಜಿಲ್ಲೆಗಳಿಂದ, ನೆರೆಯ ರಾಜ್ಯಗಳಿಂದೆಲ್ಲಾ ರೈತರು ರೇಷ್ಮೆ ಗೂಡನ್ನು ತರುತ್ತಾರೆ. ನಮ್ಮ ನಗರದ ಪ್ರವೇಶದಲ್ಲಿ ‘ರೇಷ್ಮೆ ನಾಡು ಶಿಡ್ಲಘಟ್ಟ’ ಎಂಬ ನಾಮಫಲಕವನ್ನು ಅಳವಡಿಸಿ. ನಮ್ಮ ನಗರದ ಹೆಮ್ಮೆಯ ಪ್ರತೀಕವಾಗುತ್ತದೆ. ಊರಿನ ಹೆಸರನ್ನು ಕೇಳಿಕೊಂಡು ಬರುವ ಪರಿಸ್ಥಿತಿ ಈಗ ಇದೆ ಅದನ್ನು ಹೋಗಲಾಡಿಸಿ ಎಂದು ಆಗ್ರಹಿಸಿ ಮನವಿಯನ್ನು ಸಲ್ಲಿಸಿದರು.
ನಗರಸಭೆ ಆಯುಕ್ತ ಚಲಪತಿ ಮಾತನಾಡಿ, ನಗರಸಭೆಯ ಸಭೆಯಲ್ಲಿ ಈ ವಿಷಯವನ್ನು ಚರ್ಚೆಗೆ ತಂದು ಅತಿ ಶೀಘ್ರದಲ್ಲಿ ನಾಮಫಲಕ ಅಳವಡಿಸುವುದಾಗಿ ಭರವಸೆ ನೀಡಿದರು.
ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕೆ.ನರೇಶ್‌ಕುಮಾರ್, ನಗರಾಧ್ಯಕ್ಷ ಮಧುಕುಮಾರ್, ತಾಲ್ಲೂಕು ಅಧ್ಯಕ್ಷ ಎಂ.ಬಿ.ಬೈರಾರೆಡ್ಡಿ, ನಾಗರಾಜ್, ಗಣೇಶ್, ಚಂದ್ರ, ಸತೀಶ್ ಹಾಜರಿದ್ದರು.
ಸಾಯಿನಾಥ ಜ್ಞಾನಮಂದಿರದಲ್ಲಿ ವಿಶೇಷ ಹೋಮ
ತಾಲ್ಲೂಕಿನ ಮಳ್ಳೂರು ಸಮೀಪದ ಶ್ರೀ ಸಾಯಿನಾಥ ಜ್ಞಾನಮಂದಿರದಲ್ಲಿ ಗುರುವಾರ ಶತಮಾನೋತ್ಸವ ಪೂಜಾ ಕಾರ್ಯಕ್ರಮದಲ್ಲಿ ವಿಶೇಷ ಹೋಮಗಳನ್ನು ನಡೆಸಲಾಯಿತು.
ಗಣ ಹೋಮ, ಗಜಗೌರಿ ಹೋಮ, ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಹೋಮ, ಸುದರ್ಶನ ಹೋಮ, ಮೃತ್ಯುಂಜಯ ಹೋಮವನ್ನು ನಡೆಸಲಾಯಿತು. ಸಾಯಿಬಾಬಾ, ಗಣಪತಿ ಮತ್ತು ಅಯ್ಯಪ್ಪಸ್ವಾಮಿ ದೇವರಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ನೂರಾರು ಭಕ್ತರು ದೇವರ ಪೂಜೆಯಲ್ಲಿ ಪಾಲ್ಗೊಂಡರು. ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಸಲಾಯಿತು.
ನವರಾತ್ರಿ ಪ್ರಯುಕ್ತ ದುರ್ಗಾಪೂಜೆಯನ್ನು ಮಾಡಲಾಗಿತ್ತು. ಸೀತಾಮರಾಮಲಕ್ಷ್ಮಣರೊಂದಿಗೆ ದುರ್ಗೆಯ ಒಂಭತ್ತು ಪ್ರತಿರೂಪಗಳ ಪೂಜೆಯನ್ನು ನಡೆಸಲಾಯಿತು.
ಸೇವಾಕರ್ತರಾದ ಶಾಸಕ ವಿ.ಮುನಿಯಪ್ಪ, ರತ್ನಮ್ಮ ಮುನಿಯಪ್ಪ, ಶ್ರೀ ಸಾಯಿನಾಥ ಜ್ಞಾನಮಂದಿರ ದೇವಾಲಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ಸೇವಾಕರ್ತರು ಹಾಜರಿದ್ದರು.
ಮೇಲೂರಿನಲ್ಲಿ ದಸರಾ ಗೊಂಬೆಗಳ ಪ್ರದರ್ಶನ
ದಸರಾ ಬಂತೆಂದರೆ ಗೊಂಬೆ ಕೂರಿಸುವ ಸಂಭ್ರಮ, ಅಟ್ಟವೇರಿರುವ ಗೊಂಬೆ ತೆಗೆಯುವ ಉತ್ಸಾಹ, ಆ ಬೊಂಬೆಗಳಿಗೆ ಉಡುಗೆ ತೊಡಿಸಿ ಮಾಡುವ ಶೃಂಗಾರ, ಹಂತ ಹಂತವಾಗಿ ಬೊಂಬೆ ಜೋಡಿಸುವ ಸಡಗರ.
ಪಟ್ಟದ ಗೊಂಬೆ, ಅಮ್ಮನವರ ಮೂರ್ತಿ, ಬೆಣಚುಕಲ್ಲಿನ ಗಣಪತಿ, ದಶಾವತಾರ, ಮುವ್ವತ್ತು ವರ್ಷಗಳ ಹಿಂದಿನ ರಾಮ ಮತ್ತು ಕೃಷ್ಣರ ಅಪರೂಪದ ಮೂರ್ತಿಗಳು, ಶೆಟ್ಟಪ್ಪ ಶೆಟ್ಟಮ್ಮ, ಅವರ ಅಂಗಡಿಗೆ ದಿನಸಿ ತರುವ ಗಾಡಿ, ಹಣ್ಣು ತರುವವರು, ಈಶ್ವರನ ಅಭಿಷೇಕಕ್ಕೆ ಗಣಪತಿಯ ವಾದ್ಯಗೋಷ್ಠಿ, ರಾಮ ಗುಹನೊಂದಿಗೆ ವನವಾಸಕ್ಕೆ ತೆರಳುದ ದೃಶ್ಯ, ಶಬರಿ ರಾಮನಿಗೆ ಹಣ್ಣು ತಿನ್ನಿಸುವುದು, ರಾಮನ ತೊಡೆಯ ಮೇಲೆ ಮಲಗಿದ ಲಕ್ಷ್ಮಣ ಸಂಜೀವಿನಿ ತರಲು ಹೊರಟ ಹನುಮಂತ, ಮದುವೆ, ಮದುವೆ ಊಟ, ಹೆಣ್ಣಿನ ದೈನಂದಿನ ಕಾಯಕ, ಒಂಟೆ, ಕುದುರೆ, ಚನ್ನಪಟ್ಟಣದ ಬೊಂಬೆಗಳು, ವಿವಿಧ ದೇಶವಾಸಿಗಳ ದಿರಿಸುಗಳು, ಯೋಧರು, ಬುಡಕಟ್ಟು ಜನರು, ಮೈಸೂರು ಅರಮನೆ… ಹೀಗೆ ಗೊಂಬೆಗಳನ್ನು ತಾಲ್ಲೂಕಿನ ಮೇಲೂರಿನ ರವಿಪ್ರಸಾದ್ ಅವರ ಮನೆಯಲ್ಲಿ ವಿಶಿಷ್ಟವಾಗಿ ಜೋಡಿಸಿದ್ದಾರೆ.
‘ಆಶ್ವಯುಜ ಶುದ್ಧ ಪಾಡ್ಯದಿಂದ ದಶಮಿಯವರೆಗೆ 10 ದಿನ ನಡೆಯುವ ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರಿನ ಅರಮನೆ ಸಂಪ್ರದಾಯ ಅನುಸರಿಸಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಗೊಂಬೆಹಬ್ಬವನ್ನು ನಾಡಿನ ಗೃಹಿಣಿಯರು ಮನೆಮನೆಗಳಲ್ಲಿ ಆಚರಿಸುತ್ತಾರೆ. ನಮ್ಮ ಮನೆಯಲ್ಲಿ ಸುಮಾರು 35 ವರ್ಷಗಳಿಂದಲ್ಲೂ ಗೊಂಬೆಗಳನ್ನಿಡುವ ಸಂಪ್ರದಾಯವಿದೆ. ನಮ್ಮಜ್ಜಿ ಗೊಂಬೆ ಇಡುವುದನ್ನು ನಮಗೆ ಕಲಿಸಿಕೊಟ್ಟರು. ಈಬಾರಿ ಮೈಸೂರು ಅರಮನೆಯ ಸುಂದರ ಪ್ರತಿಕೃತಿನ್ನು ತಂದಿರಿಸಿದ್ದೇವೆ’ ಎಂದು ಮೇಲೂರು ರವಿಪ್ರಸಾದ್ ತಿಳಿಸಿದರು.
ಕೃಷ್ಣಮೂರ್ತಿ, ಅಶ್ವತ್ಥಮ್ಮ, ದಿವ್ಯಾ ಹಾಜರಿದ್ದರು.
ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಮಾನಸಿಕ ಆರೋಗ್ಯ ದಿನಾಚರಣೆ
ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬುಧವಾರ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಜೆಎಂಎಫ್‌ಸಿ ಮತ್ತು ಸಿವಿಲ್ ನ್ಯಾಯಾಧೀಶರಾದ ಟಿ.ಎಲ್.ಸಂದೀಶ್ ಮಾತನಾಡಿದರು.
ಪ್ರತಿಯೊಬ್ಬರಿಗೂ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯ ಬಹು ಮುಖ್ಯ. ಈ ಹಿನ್ನೆಲೆಯಲ್ಲಿ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆ ಮೇರೆಗೆ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವಂತೆ ಅವರು ತಿಳಿಸಿದರು.
ಮನುಷ್ಯನ ದೇಹಕ್ಕೆ ಹೇಗೆ ಜ್ವರ ನೆಗಡಿ ಮುಂತಾದ ರೋಗಗಳು ಕಾಡಿಸುತ್ತವೆ. ಅದೇ ರೀತಿ ಮನುಷ್ಯನ ಮೆದುಳು ಕೂಡ ಅನಾರೋಗ್ಯಕ್ಕೆ ತುತ್ತಾಗುತ್ತದೆ. ಇದನ್ನು ನಿರ್ಲಕ್ಷಿಸಿದರೆ ಮುಂದೆ ತೊಂದರೆ ಅನುಭವಿಸಬೇಕಾಗುತ್ತದೆ. ಎಚ್ಚರ ವಹಿಸಿ ಚಿಕಿತ್ಸೆ ಪಡೆದು ಗುಣಪಡಿಸಿಕೊಳ್ಳಬೇಕು ಎಂದು ಹೇಳಿದರು. ಹಿಂದೆ ಮಾನಸಿಕ ಆರೋಗ್ಯಕ್ಕೆ ಹೆಚ್ಚು ಗಮನ ಹರಿಸುತ್ತಿರಲ್ಲಿಲ್ಲ. ಮೂಢನಂಬಿಕೆಯಿಂದ ಪೂಜೆ, ಹೋಮಗಳ ಮೊರೆ ಹೋಗುತ್ತಿದ್ದರು. ಯಾವುದೇ ವ್ಯಕ್ತಿ ಶೇಕಡಾ ನೂರರಷ್ಟು ಮಾನಸಿಕ ಆರೋಗ್ಯ ಹೊಂದಿರುವುದಿಲ್ಲ . ಆದ್ದರಿಂದ ತಪಾಸಣೆ ಅಗತ್ಯ ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ಮಾತನಾಡಿ, ಇಂದು ನಾವೆಲ್ಲರೂ ಕಲುಷಿತ ವಾತಾವರಣದಲ್ಲಿ ಬದುಕುತ್ತಿದ್ದೇವೆ. ಮಾನಸಿಕ ಸ್ಥಿತಿಯಲ್ಲಿ ಏರುಪೇರು ಆಗುತ್ತಿರುವುದನ್ನು ಕಾಣುತ್ತಿದ್ದೇವೆ ಎಂದು ಉದಾಹರಿಸಿ ತಿಳಿಸಿದರು. ವಿದ್ಯಾರ್ಥಿಗಳು ಜೀವನದಲ್ಲಿ ಯೋಗ, ಪ್ರಾಣಾಯಾಮ ಮಾಡುವುದರ ಮೂಲಕ ಮಾನಸಿಕ ಸ್ಥಿತಿ ಕಾಪಾಡಿಕೊಳ್ಳಬೇಕು. ಒತ್ತಡದ ಬದುಕು ಪ್ರತಿಯೊಬ್ಬರಿಗೂ ಮಾನಸಿಕ ಅಸ್ವಸ್ಥತೆಗೆ ಕಾರಣವಾಗುತ್ತಿದೆ. ಶಿಸ್ತು, ಸಂಯಮದಲ್ಲಿ ಜೀವನ ಸಾಗಿಸುವುದರ ಮೂಲಕ ಇನ್ನೊಬ್ಬರಿಗೆ ಮಾದರಿಯಾಗಬೇಕು ಎಂದು ಹೇಳಿದರು.
ಆಶಾಕಾರ್ಯಕರ್ತೆಯರು ಮನೆಮನೆ ಭೇಟಿ ನೀಡುವಾಗ ಮಾನಸಿಕ ಅಸ್ವಸ್ಥತೆ ಅಥವಾ ಒತ್ತಡದಲ್ಲಿರುವವರು ಕಂಡಾಗ ಅವರಿಗೆ ಮನವೊಲಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ತಿಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಖ್ಯಾತ ಮನೋವೈದ್ಯ ಡಾ.ಸಿ.ಆರ್ ಚಂದ್ರಶೇಖರ್ ಬರೆದಿರುವ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ವಿತರಿಸಲಾಯಿತು.
ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಎಂ.ಬಿ.ಲೋಕೇಶ್, ವಕೀಲ ಮಂಜುನಾಥ್, ನಾಗೇಂದ್ರಬಾಬು, ಮುನಿರಾಜು, ಆಡಳಿತ ವೈದ್ಯಾಧಿಕಾರಿ ಡಾ.ವಾಣಿ, ಡಾ.ವಿಜಯ್ ಕುಮಾರ್ ಹಾಜರಿದ್ದರು.
ರೌಡಿ ಶೀಟರ್‌ಗಳಿಗೆ ಎಚ್ಚರಿಕೆ ನೀಡಿದ ಡಿವೈಎಸ್‌ಪಿ
ನಗರದ ಗ್ರಾಮಾಂತರ ಪೊಲೀಸ್ ಠಾಣೆ ಆವರಣದಲ್ಲಿ ಬುಧವಾರ ತಾಲ್ಲೂಕಿನಾಧ್ಯಂತ ಇರುವ ರೌಡಿ ಶೀಟರ್‌ಗಳಿಗೆ ಎಚ್ಚರಿಕೆ ನೀಡಿ ಡಿವೈಎಸ್‌ಪಿ ನಾಗೇಶ್ ಮಾತನಾಡಿದರು.
ತಾಲ್ಲೂಕಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದರೂ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿರುವ ಹಳೆ ರೌಡಿಗಳನ್ನೇ ಹೊಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.
‘ಈ ಹಿಂದೆ ತಮ್ಮ ಬುದ್ದಿಗೇಡಿತನದಿಂದ ಅಹಿತಕರ ಘಟನೆಗಳಿಗೆ ನೀವು ಕಾರಣಕರ್ತರಾಗಿದ್ದೀರಿ, ಆದರೆ ಇದೀಗ ನಿಮಗೆ ಒಳ್ಳೆಯವರಾಗಲು ಅವಕಾಶವಿದೆ. ಅವಕಾಶವನ್ನು ಉಪಯೋಗಿಸಿಕೊಂಡು ಸತ್ಪ್ರಜೆಗಳಾಗಿ ರೂಪುಗೊಳ್ಳಿ, ಅದು ಬಿಟ್ಟು ತಮ್ಮ ಹಳೆಯ ಚಾಳಿಯನ್ನೇ ಮುಂದುವರೆಸಿಕೊಂಡು ಅಮಾಯಕರನ್ನು ಹೆದರಿಸಿಕೊಂಡು ರೌಡಿಸಂ ಮುಂದುವರೆಸಿದ್ದೇ ಆದಲ್ಲಿ ಮುಂದಿನ ನಿಮ್ಮ ಜೀವನ ಕಠಿಣವಾಗಿರುತ್ತದೆ’ ಎಂದು ಎಚ್ಚರಿಸಿದರು.
ತಾಲ್ಲೂಕಿನ ರೌಡಿ ಷೀಟರ್ ಪಟ್ಟಿಯಲ್ಲಿರುವ ಬಹುತೇಕರು ಇನ್ನೂ ೨೦-–೨೫ ವಯಸ್ಸಿನ ಆಸು ಪಾಸಿನವರಾಗಿದ್ದಾರೆ. ಐಷಾರಾಮಿ ಬದುಕು ನಡೆಸುವ ನೆಪದಲ್ಲಿ ಅಮಾಯಕರನ್ನು ಬೆದರಿಸುವುದೂ ಹಾಗೂ ಅಹಿತಕರ ಘಟನೆಗಳಲ್ಲಿ ಪಾಲ್ಗೊಂಡಿದ್ದೇ ಆದಲ್ಲಿ ಪೊಲೀಸ್ ಇಲಾಖೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಒಳ್ಳೆಯವರಾಗಿ ಬದುಕಲು ಇದೀಗ ಇಲಾಖೆ ಅವಕಾಶ ನೀಡಿದೆ. ಒಳ್ಳೆಯವಾಗಿ ಪರಿವರ್ತನೆಯಾಗಿ ಇಲ್ಲವಾದಲ್ಲಿ ತಮ್ಮ ಜೀವನವನ್ನೂ ಹಾಳು ಮಾಡಿಕೊಳ್ಳುತ್ತೀರಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಗರಠಾಣೆ ವ್ಯಾಪ್ತಿಯ ಕೆಲ ಯುವ ರೌಡಿ ಷೀಟರ್‌ಗಳನ್ನುದ್ದೇಶಿಸಿ, ‘ಚಿಕ್ಕವಯಸ್ಸಿನಲ್ಲಿಯೇ ರೌಡಿ ಷೀಟರ್ ಪಟ್ಟ ಹಾಕಿಸಿಕೊಂಡಿದ್ದೀರಿ, ಇನ್ನಾದರೂ ತಮ್ಮನ್ನು ತಾವು ಬದಲಾಯಿಸಿಕೊಳ್ಳಿ, ಇದೇ ರೀತಿ ಮುಂದುವರೆದಿದ್ದೇ ಆದರೆ ಕೈಕಾಲು ನೆಟ್ಟಗಿರಲು ಇಲಾಖೆ ಬಿಡುವುದಿಲ್ಲ. ಇಂದು ಸಂಜೆಯೊಳಗೆ ಕೂದಲನ್ನು ನೀಟಾಗಿ ಕತ್ತರಿಸಿಕೊಂಡು ಬಂದು ಟಾಣೆಯಲ್ಲಿ ಸಹಿ ಹಾಕಬೇಕು. ವಾರಕ್ಕೊಮ್ಮೆ ಠಾಣೆಗೆ ಖುದ್ದಾಗಿ ಬಂದು ಸಹಿ ಹಾಕಿ ಹೋಗಬೇಕು’ ಎಂದು ಸೂಚಿಸಿದರು. ನಿಮ್ಮೆಲ್ಲರ ನಡವಳಿಕೆಗಳ ಮೇಲೆ ನಮ್ಮ ಸಿಬ್ಬಂದಿ ನಿಗಾ ವಹಿಸಿರುತ್ತಾರೆ. ಹಾಗಾಗಿ ಒಳ್ಳೆಯವರಾಗಿ ಬದುಕುವ ಜೊತೆಗೆ ಸಮಾಜದ ಒಳಿತಿಗಾಗಿ ಶ್ರಮಿಸಿರಿ ಎಂದರು.
ಸರ್ಕಲ್ ಇನ್ಸ್‌ಪೆಕ್ಟರ್ ಪಿ.ಸಿದ್ದರಾಜು, ಗ್ರಾಮಾಂತರ ಠಾಣೆ ಸಬ್ ಇನ್ಸ್‌ಪೆಕ್ಟರ್ ವಿಜಯ್‌ರೆಡ್ಡಿ, ನಗರಠಾಣೆ ಸಬ್ ಇನ್ಸ್‌ಪೆಕ್ಟರ್ ಲಿಯಾಖತ್‌ಉಲ್ಲಾ, ದಿಬ್ಬೂರಹಳ್ಳಿ ಠಾಣೆ ಸಬ್ ಇನ್ಸ್‌ಪೆಕ್ಟರ್ ರಂಜನ್‌ಕುಮಾರ್ ಹಾಜರಿದ್ದರು.
ಕನ್ನಮಂಗಲ ಗ್ರಾಮದಲ್ಲಿ ‘ಅತ್ತೆಮ್ಮನ ಅಂಗಳ ಪೂಜೆ’ ಆಚರಣೆ
ತಾಲ್ಲೂಕಿನ ಕನ್ನಮಂಗಲ ಗ್ರಾಮದಲ್ಲಿ ಮಂಗಳವಾರ ಮಳೆರಾಯನ ಪೂಜೆಯ ಒಂದು ರೀತಿಯಾದ ‘ಅತ್ತೆಮ್ಮನ ಅಂಗಳ ಪೂಜೆ’ಯನ್ನು ಹಳ್ಳಿಗರು ಒಗ್ಗೂಡಿ ವಿಶೇಷವಾಗಿ ಆಚರಿಸಿದರು.
‘ಮಳೆ ಬೆಳೆ ಚೆನ್ನಾಗಿ ಆಗಿ ಜನ, ಜಾನುವಾರಗಳಿಗೆ ಯಾವುದೇ ರೀತಿಯ ರೋಗ ರುಜಿನಗಳು ಬಾರದಿರಲೆಂದು ಹಲವಾರು ಸಂಪ್ರದಾಯಗಳನ್ನು ಹಳ್ಳಿಗಳಲ್ಲಿ ಹಿಂದಿನಿಂದಲೂ ಆಚರಿಸಿಕೊಂಡು ಬಂದಿದ್ದಾರೆ. ಅಂತಹ ಹಲವು ಸಂಪ್ರದಾಯಗಳಲ್ಲಿ ಅತ್ತೆಮ್ಮನ ಅಂಗಳ ಪೂಜೆಯೂ ಒಂದು. ನಮ್ಮಲ್ಲಿ ಮಳೆಗೆ ಹೆಸರುಗಳಿಟ್ಟಿದ್ದಾರೆ. ಹದಿನೈದು ದಿನಕ್ಕೊಮ್ಮೆಯಂತೆ ಮಳೆ ಹೆಸರು ಬದಲಾಗುತ್ತದೆ. ರೇವತಿಯಿಂದ ಪ್ರಾರಂಭವಾಗಿ ಜೇಷ್ಠ ಮಳೆಗೆ ಕೊನೆಯಾಗುತ್ತದೆ. ಪಿತೃಪಕ್ಷದಲ್ಲಿ ಬರುವ ಮಳೆಯೇ ಅತ್ತೆ ಮಳೆ. ಈ ಮಳೆಯು ಪ್ರಾರಂಭವಾದ ದಿನದಿಂದ ಕೊನೆಯಾಗುವ ವೇಳೆಗೆ ಯಾವುದಾದರೂ ಒಂದು ಶುಕ್ರವಾರ ಅಥವಾ ಮಂಗಳವಾರ ದಿನ ಅತ್ತೆಮ್ಮನ ಅಂಗಳ ಪೂಜೆ ಮಾಡುವುದು ವಾಡಿಕೆ’ ಎಂದು ಗ್ಮ ಪಂಚಾಯಿತಿ ಅಧ್ಯಕ್ಷೆ ವಿಜಯಮ್ಮ ಕದಿರಪ್ಪ ತಿಳಿಸಿದರು.
‘ಪೂಜೆ ಮಾಡುವ ದಿನ ಕುಂಬಾರರ ಮನೆಯಿಂದ ಒಲೆ ಬೂದಿಯನ್ನ ತಂದು ಊರು ಬಾಗಿಲ ಬಳಿ ಅತ್ತೆಮ್ಮನ ಚಿತ್ರ ಬಿಡಿಸಿ ಪೂಜೆಮಾಡಿ ಕುರಿ ಬಲಿ ನೀಡಿದ ನಂತರ ಕತ್ತರಿಸಿದ ಹಸಿರು ರಾಗಿ ಹುಲ್ಲು, ಅವರೆ ಸೊಪ್ಪು, ಜೋಳದ ರೆಕ್ಕೆಗಳನ್ನ ಕುರಿಯ ರಕ್ತದಲ್ಲಿ ಬೆರಸಿ ಆ ಹುಲ್ಲನ್ನು ಊರಿನ ಸುತ್ತಲೂ ಗಸ್ತು ಹಾಕಲಾಗುತ್ತದೆ. ಹಾಗೂ ಕುಂಬಾರನ ಮನೆಯಿಂದ ತಂದ ಬೂದಿಯನ್ನ ಊರಿನ ಪ್ರತಿಯೊಬ್ಬರೂ ತೆಗೆದುಕೊಂಡು ಹೋಗಿ ಜಮೀನುಗಳ ಬಳಿ ಅತ್ತೆಮ್ಮನ ಚಿತ್ರ ಬಿಡಿಸಿ ಬರಬೇಕು. ಇದರಿಂದ ಮಳೆ ಚೆನ್ನಾಗಿ ಬಿದ್ದು ಸಮೃದ್ಧವಾದ ಬೆಳೆಯಾಗಿ, ಜನ, ಜಾನುವಾರಗಳು ರೋಗ ರುಜಿನಗಳಿಲ್ಲದಂತೆ ನಾಡು ಸುಭಿಕ್ಷವಾಗುತ್ತದೆ. ಎಂಬ ನಂಬಿಕೆಯಿಂದ ಆಚರಣೆಯನ್ನು ಎಲ್ಲರೂ ಒಗ್ಗೂಡಿ ನಡೆಸಿದೆವು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ದೇವರಾಜ್ ವಿವರಿಸಿದರು.
ಗ್ರಾಮದ ಆಂಜನೇಯ, ಕೆ.ಎಂ. ಮಂಜುನಾಥ, ಚಿಕ್ಕ ಆಂಜಿನಪ್ಪ, ಆರ್.ರಘುನಾಥ್, ಕೆ.ಎನ್ ಮುನಿಯಪ್ಪ, ಕದಿರಪ್ಪ, ಮುನಿರಾಜು, ನಾರಾಯಣಸ್ವಾಮಿ,ಮುನಿನಾರಾಯಣಪ್ಪ, ಕೆ.ಇ.ಕೇಶವ, ಪಿಳ್ಳನರಸಿಂಹಯ್ಯ ಹಾಜರಿದ್ದರು.
ಕಸಾಪದಿಂದ ವಿಶ್ವ ಅಂಚೆ ದಿನಾಚರಣೆ ಕಾರ್ಯಕ್ರಮ
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಗಂಗಮ್ಮನ ದೇವಾಲಯದ ಆವರಣದಲ್ಲಿ ಮಂಗಳವಾರ ತಾಲ್ಲೂಕು ಕಸಾಪ ವತಿಯಿಂದ ಆಚರಿಸಿದ ವಿಶ್ವ ಅಂಚೆ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೊಂಡೇನಹಳ್ಳಿ ವಿಭಾಗದ ಅಂಚೆ ಪೇದೆ ಆನಂದಮೂರ್ತಿ ಮಾತನಾಡಿದರು.
ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಹಾಗೂ ಅವರ ಭವಿಷ್ಯದ ವಿದ್ಯಾಭ್ಯಾಸ, ವಿವಾಹದಂತಹ ಖರ್ಚು ವೆಚ್ಚಗಳ ವಿಚಾರದಲ್ಲಿ ಪೋಷಕರಿಗೆ ನೆರವಾಗುವ ಹಣ ಉಳಿತಾಯ ಖಾತೆಯೇ ಭಾರತ ಸರ್ಕಾರ ಆರಂಭಿಸಿರುವ ಸುಕನ್ಯ ಸಮೃದ್ಧಿ ಯೋಜನೆ ಖಾತೆ. ಹಳ್ಳಿಯ ಗೃಹಿಣಿಯರು ತಮ್ಮ ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಸ್ವಲ್ಪಸ್ವಲ್ಪ ಹಣವನ್ನು ಕೂಡಿಡಬಹುದಾಗಿದೆ ಎಂದು ಅವರು ತಿಳಿಸಿದರು.
ಕಳೆದ ಒಂದೂವರೆ ಶತಮಾನದಿಂದಲೂ ಸೇವೆಯನ್ನು ಸಲ್ಲಿಸುತ್ತಿರುವ ಭಾರತೀಯ ಅಂಚೆ ಇಲಾಖೆ ವಿಶ್ವದಲ್ಲೇ ಅತಿ ದೊಡ್ಡದಾದ ಸಂಪರ್ಕ ಜಾಲವನ್ನು ಹೊಂದಿರುವ ಕೀರ್ತಿ ಪಡೆದಿದೆ. ಅಂಚೆ ಸೇವೆ ಸಲ್ಲಿಸುವ ಪೋಸ್ಟ್ ಮ್ಯಾನ್ ನನ್ನು ಹಳ್ಳಿಗಳಲ್ಲಿ ಅಂಚೆಯಣ್ಣ ಎಂದು ಕರೆಯುತ್ತಾ ಕುಟುಂಬದ ಸದಸ್ಯನಂತೆ ಕಾಣುತ್ತಾರೆ ಎಂದರು.
ಅಂಚೆ ಇಲಾಖೆಯ ಸೌಲಭ್ಯಗಳಾದ ಪಿ.ಎಲ್.ಐ, ಆರ್.ಡಿ, ಎಸ್.ಬಿ ಖಾತೆಗಳು, ಅಂಚೆ ಕಾರ್ಡ್, ಅಂತರದೇಶೀಯ ಪತ್ರಗಳು, ರಿಜಿಸ್ಟರ್ಡ್ ಪೋಸ್ಟ್, ಮನಿ ಆರ್ಡರ್, ಸ್ಪೀಡ್ ಪೋಸ್ಟ್ ಹಾಗೂ ಇತರೆ ಅಂಚೆ ಇಲಾಖೆಯ ಸೌಲಭ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕವಾಗಿ ವಿವರಿಸಿದರು. ಹೆಣ್ಣುಮಕ್ಕಳ ವಿಶೇಷ ಖಾತೆಯ ಕುರಿತೂ ಅವರು ವಿವರಿಸಿದರು.
ಕಳೆದ ೩7 ವರ್ಷಗಳಿಂದ ತಾಲ್ಲೂಕಿನ ಕೊಂಡೇನಹಳ್ಳಿ, ಕಡಿಶೀಗೇನಹಳ್ಳಿ, ಅಪ್ಪೇಗೌಡನಹಳ್ಳಿ, ಗಂಗನಹಳ್ಳಿ, ಕಂತಹಳ್ಳಿ, ಹನುಮಂತಪುರ, ತಿಮ್ಮನಹಳ್ಳಿ ಗ್ರಾಮಗಳಿಗೆ ಪ್ರತಿದಿನ ಭೇಟಿ ನೀಡಿ ಅಂಚೆ ವಿತರಿಸುವ ಅಂಚೆ ಪೇದೆ ಆನಂದಮೂರ್ತಿ ಅವರನ್ನು ಈ ಸಂದರ್ಭದಲ್ಲಿ ಕಸಾಪ ವತಿಯಿಂದ ಸನ್ಮಾನಿಸಲಾಯಿತು.
ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್, ದೇವರಾಜ್, ಮುನಿಯಪ್ಪ, ತಿರುಮಳಪ್ಪ, ಮುನಿಕೃಷ್ಣಪ್ಪ, ಮುನಿರಾಜು, ಸುಪ್ರಿಯ, ಸಂಗೀತ, ಮುನಿಯಮ್ಮ, ಮೌನಿಕ, ಚಿಕ್ಕಮುನಿಯಮ್ಮ, ಐಶ್ವರ್ಯ, ಜಳ್ಳಪ್ಪ, ಲಕ್ಷ್ಮಮ್ಮ, ಚಂದನ್, ಗಂಗಮ್ಮ, ನಾರಾಯಣಮ್ಮ, ಉಮಾದೇವಿ, ಯಲ್ಲಪ್ಪ ಹಾಜರಿದ್ದರು.
ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ – 14 ನೇ ತಿಂಗಳ ಕಾರ್ಯಕ್ರಮ
ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ಕನ್ನಡ ಸಾರಸ್ವತ ಪರಿಚಾರಿಕೆ ಗ್ರಂಥಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ‘ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ’ 14 ನೇ ತಿಂಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಕವಿ ಮತ್ತು ಸಾಹಿತಿ ಮ.ಸುರೇಶ್ ಬಾಬು ಮಾತನಾಡಿದರು.
ಕವಿ ಸಮಯದಲ್ಲಿ ಕವಿತೆ ಹುಟ್ಟುತ್ತದೆ. ಕವನಕ್ಕೆ ಸ್ಫೂರ್ತಿ ಎಲ್ಲಿಂದಲಾದರೂ ಸಿಗಬಹುದು. ಅರ್ಥದೊಂದಿಗೆ ಸೌಂದರ್ಯ ಮತ್ತು ಭಾವನಾತ್ಮಕತೆಯನ್ನು ಹೊರತರುವ ಪ್ರಕಾರ ಕವಿತೆ. ಕವಿಯ ಮನಸ್ಸು ಸರಳ ಸುಂದರವಾದಷ್ಟೂ ಕವಿತೆಯ ಲಾಲಿತ್ಯ ಹೆಚ್ಚಿರುತ್ತದೆ ಎಂದು ಅವರು ತಿಳಿಸಿದರು.
ನಾನು ಓದಿದ್ದು ಕೇವಲ ಎಸ್‌ಎಸ್‌ಎಲ್‌ಸಿ. ವೃತ್ತಿಯಲ್ಲಿ ವ್ಯಾಪಾರಿ ಆದರೂ ಕನ್ನಡ ಭಾಷೆಯ ಪ್ರೇಮ, ಕನ್ನಡದ ಕವಿಗಳ ಒಡನಾಟ ಮತ್ತು ಪ್ರೋತ್ಸಾಹ ನನ್ನನ್ನು ಕವಿಯಾಗಿಸಿತು. ಪ್ರತಿಯೊಬ್ಬರಲ್ಲಿಯೂ ಒಬ್ಬ ಕವಿಯಿರುತ್ತಾನೆ. ಆದರೆ ಆ ಕವಿಯನ್ನು ಪೋಷಿಸುವ ಹದಗೊಂಡ ಮನಸ್ಸು ನಮ್ಮದಾಗಬೇಗಷ್ಟೆ. ಮೊದಲು ಕಲೆಯನ್ನು ಆಸ್ವಾದಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ನಂತರ ಓದುವುದನ್ನು ಹವ್ಯಾಸ ಮಾಡಿಕೊಳ್ಳಬೇಕು. ಆಗ ನಮ್ಮ ಕಣ್ಣುಗಳು ಲೋಕವನ್ನು ವಿಭಿನ್ನವಾಗಿ ನೋಡುತ್ತವೆ. ನಮ್ಮ ಅನುಭವದೊಂದಿಗೆ ಭಾಷೆಯು ಜೊತೆಗೂಡಿ ಪದಪುಂಜಗಳಾಗುತ್ತವೆ. ಆಲೋಚನೆ ಬಂದೊಡನೆ ಎಲ್ಲಿದ್ದರೂ ಬರೆದಿಟ್ಟುಕೊಳ್ಳುತ್ತೇನೆ. ಆನಂತರ ಅದುವೇ ಕವನದ ರೂಪ ಪಡೆಯುತ್ತದೆ ಎಂದು ಹೇಳಿದರು.
ತಮ್ಮ ಕೃತಿಗಳಾದ ಭಾವ ಕಾವೇರಿ, ಮಾನಸ ಚಂದ್ರಿಕೆ, ಚುಕ್ಕಿ ಚಂದ್ರಮ ಮುಂತಾದವುಗಳು ರೂಪುಗೊಂಡ ಬಗ್ಗೆಯನ್ನು ವಿವರಿಸಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಎಷ್ಟೋ ಮಂದಿ ಪದವೀಧರರು ಒಂದು ಅರ್ಜಿಯನ್ನು ಬರೆಯಲು ಕಷ್ಟಪಡುತ್ತಾರೆ. ಅಂಥಹುದರಲ್ಲಿ ಎಸ್‌ಎಸ್‌ಎಲ್‌ಸಿ ಓದಿ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕೃಷಿ ಮಾಡಿರುವ ಮ.ಸುರೇಶ್ ಬಾಬು ಮಾದರಿಯಾಗಿದ್ದಾರೆ. ಪರಿಶ್ರಮವಿದ್ದಲ್ಲಿ ಸಾಧನೆಗೆ ಏನೂ ಅಡ್ಡಿಯಲ್ಲ. ನಮ್ಮ ಶಿಕ್ಷಣವು ಸಮಾಜಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಮಕ್ಕಳನ್ನು ರೂಪಿಸಲಿ ಎಂದರು.
ಅಜಿತ್ ಕೌಂಡಿನ್ಯ ಮಾತನಾಡಿ, ಸಾಹಿತಿ ಮ.ಸುರೇಶ್ ಬಾಬು ಸುಮಾರು 30 ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಭಾವ ಕಾವೇರಿ (ಕವನ ಸಂಕಲನ), ಮಾನಸ ಚಂದ್ರಿಕೆ( ಕವನ ಸಂಕಲನ),ಚುಕ್ಕಿ ಚಂದ್ರಮ(ಹನಿಗವನ ಸಂಕಲನ), ಮಾರ್ದನಿ(ಕವಿತೆಗಳು), ಶ್ರೀ ನಗರೇಶ್ವರ ಸ್ವಾಮಿಯ ಸುಪ್ರಭಾತ ಧ್ವನಿಸುರುಳಿಗೆ ಸಾಹಿತ್ಯ ರಚನೆ, ಅರವಿನೊಳಹು ಭಕ್ತಿ ಗೀತೆಗಳನ್ನು ಬರೆದಿರುವರು. ಜಿಲ್ಲಾ ಕಸಾಪದಿಂದ ‘ಚುಕ್ಕಿ ಚಂದ್ರಮ’ ಕವನ ಸಂಕಲನಕ್ಕೆ 2006 ರ ಅತ್ಯುತ್ತಮ ಪುಸ್ತಕ ಪ್ರಶಸ್ತಿ, ರಾಷ್ಟ್ರಮಟ್ಟದ 2007 ರ ಕಸ್ತೂರಬಾ ಗಾಂಧಿ ಸದ್ಬಾವನಾ ಪ್ರಶಸ್ತಿ, 2013 ನೇ ಸಾಲಿನ ಸಾಹಿತಿ ಶ್ರೀ ಹೆಬ್ಬಗೋಡಿ ಗೋಪಾಲ ದತ್ತಿ ಪುಸ್ತಕ ಬಹುಮಾನ ಲಭಿಸಿದೆ ಎಂದು ಲೇಖಕರ ಪರಿಚಯ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಕವಿ ಮತ್ತು ಸಾಹಿತಿ ಮ.ಸುರೇಶ್ ಬಾಬು ತಮ್ಮ ಕೃತಿಗಳನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.
ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಸಾಹಿತಿ ಕವಿ ಮತ್ತು ಸಾಹಿತಿ ಮ.ಸುರೇಶ್ ಬಾಬು ಅವರನ್ನು ಗೌರವಿಸಲಾಯಿತು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಗ್ರಂಥಪಾಲಕಿ ರಾಮಲೀಲಾ, ಸಿಬ್ಬಂದಿ ಬಾಂಧವ್ಯ, ಚಲನಚಿತ್ರ ನಟ ಸಿ.ಎನ್.ಮುನಿರಾಜು, ನಿವೃತ್ತ ಶಿಕ್ಷಕ ಸುಂದರನ್, ಅಜಿತ್ ಕೌಂಡಿನ್ಯ, ವೃಷಭೇಂದ್ರಪ್ಪ, ಬೆಳ್ಳೂಟಿ ರಮೇಶ್, ನಾಗರಾಜ ಹಾಜರಿದ್ದರು.
ಸಾಮೂಹಿಕ ರಾಸು ವಿಮೆ ಯೋಜನೆಯಡಿ ರೈತರಿಗೆ ಪರಿಹಾರದ ಚೆಕ್ಕುಗಳ ವಿತರಣೆ
ನಗರದ ಕೋಚಿಮುಲ್ ಶಿಬಿರ ಘಟಕದ ಕಚೇರಿಯಲ್ಲಿ ಸಾಮೂಹಿಕ ರಾಸು ವಿಮೆ ಯೋಜನೆಯಡಿ ಮೃತಪಟ್ಟಿರುವ ರಾಸುಗಳ ರೈತರಿಗೆ ಪರಿಹಾರದ ಚೆಕ್ಕುಗಳನ್ನು ಶುಕ್ರವಾರ ವಿತರಿಸಿ ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿದರು.
ತಾಲ್ಲೂಕಿನಾದ್ಯಂತ ಇರುವ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು ಹಾಗೂ ರೈತರು ಖಡ್ಡಾಯವಾಗಿ ರಾಸುಗಳಿಗೆ ವಿಮೆ ಮಾಡಿಸಲು ಮುಂದಾಗಬೇಕು ಎಂದು ಅವರು ತಿಳಿಸಿದರು.
ತಾಲ್ಲೂಕಿನಾದ್ಯಂತ ಸುಮಾರು ೨೧೦ ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು ಎಲ್ಲಾ ಸಂಘಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿವೆ. ಹಾಲು ಉತ್ಪಾದನೆ ಹಾಗೂ ಗುಣಮಟ್ಟದಲ್ಲಿ ಶಿಡ್ಲಘಟ್ಟ ತಾಲ್ಲೂಕು ಜಿಲ್ಲೆಯಲ್ಲಿಯೇ ಮೊದಲನೇ ಸ್ಥಾನದಲ್ಲಿದೆ. ಈ ಭಾಗದ ರೈತರು ತಮ್ಮ ರಾಸುಗಳಿಗೆ ವಿಮೆ ಮಾಡಿಸುವ ಮೂಲಕ ಕೋಚಿಮುಲ್ ನಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಮತ್ತಷ್ಟು ಮುಂದುವರೆಯಬೇಕು ಎಂದರು.
ತಾಲ್ಲೂಕಿನಾದ್ಯಂತ ಇತ್ತೀಚೆಗೆ ಮೃತಪಟ್ಟ ರಾಸುಗಳ ೨೯ ಮಂದಿ ಫಲಾನುಭವಿಗಳಿಗೆ ಸುಮಾರು ೧೬ ಲಕ್ಷ ಮೊತ್ತದ ವಿಮೆ ಚೆಕ್ ವಿತರಿಸಲಾಯಿತು. ರಾಸು ವಿಮೆ ಪಡೆದ ಫಲಾನುಭವಿಗಳು ಹಣವನ್ನು ವ್ಯರ್ಥಮಾಡದೆ ಉತ್ತಮ ರಾಸುಗಳನ್ನು ಖರೀದಿ ಮಾಡಿ ಗುಣಮಟ್ಟದ ಹಾಲು ಪೂರೈಕೆ ಮಾಡಬೇಕೆಂದು ಸಲಹೆ ನೀಡಿದರು.
ಗಾಂಧಿ ಜಯಂತಿ ಪ್ರಯುಕ್ತ ಉಚಿತ ಬರಡು ರಾಸು ಚಿಕಿತ್ಸಾ ಶಿಬಿರ
ಆನೂರು ಗ್ರಾಮದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ನಡೆದ ಉಚಿತ ಬರಡು ರಾಸು ಚಿಕಿತ್ಸಾ ಶಿಬಿರದಲ್ಲಿ ರಾಸುಗಳಿಗೆ ಚಿಕಿತ್ಸೆ ನೀಡಿ ಪಶುಪಾಲನಾ ಮತ್ತು ಪಶುಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ ಮಾತನಾಡಿದರು.
ರೈತರು ಹಸುಗಳಿಗೆ ಪೌಷ್ಠಿಕಾಂಶವುಳ್ಳ ಹಸಿ ಮೇವು, ಒಣ ಹುಲ್ಲು, ನೇಪಿಯರ್ ಹುಲ್ಲು, ಹಲಸಂದಿ, ಹುರುಳಿ, ಹಿಪ್ಪುನೇರಳೆ ಕಡ್ಡಿ ಮತ್ತು ಕೆ.ಎಂ.ಎಫ್ನ ಮಿಶ್ರಣ ಪಶು ಆಹಾರ ನೀಡುವುದರ ಮುಖಾಂತರ ಗರ್ಭಧಾರಣೆ ಸಮಸ್ಯೆಯನ್ನು ನಿವಾರಿಸಬಹುದು. ಶುಚಿತ್ವವಿಲ್ಲದೆ ಗರ್ಭಕೋಶದ ಸೋಂಕು ಉಂಟಾಗುತ್ತದೆ ಎಂದು ಅವರು ತಿಳಿಸಿದರು.
ಬಯಲು ಸೀಮೆ ಪ್ರದೇಶದಲ್ಲಿ ಹಸುಗಳಿಗೆ ಪೌಷ್ಠಿಕಾಂಶವುಳ್ಳ ಮೇವಿನ ಕೊರತೆಯಿಂದಾಗಿ ಬರಡು ರಾಸುಗಳ ಸಂಖ್ಯೆ ಹೆಚ್ಚುತ್ತಿದೆ. ನೀರಿನ ಕೊರತೆಯಿಂದ ಮೇವು ಉತ್ಪಾದನೆ ಕುಂಠಿತಗೊಂಡು, ರಾಸಾಯನಿಕ ಸಿಂಪಡಿಸಿರುವ ಮೇವು ಬಳಸುವುದರಿಂದ ರಾಸುಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರಿಂದ ಹಸುಗಳ ಜೀರ್ಣಕ್ರಿಯೆ ಮತ್ತು ರೋಗ ತಡೆದುಕೊಳ್ಳುವ ಶಕ್ತಿ ಕ್ಷೀಣಿಸುತ್ತಿದೆ ಎಂದರು.
ಶಿಬಿರದಲ್ಲಿ 50ರಾಸುಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಯಿತು.
ಪಶುಪಾಲನಾ ಇಲಾಖೆಯ ನಿವೃತ್ತ ಉಪನಿರ್ದೇಶಕ ಜಿ.ಆರ್.ಪ್ರಕಾಶ್, ಪಶು ವೈದ್ಯಾಧಿಕಾರಿಗಳಾದ ಡಾ.ಬಿಂದುಜಾ, ಡಾ.ಸುಪ್ರೀತ್, ಡಾ.ಪರ್ಹ ಯಾಸ್ಮೀನ್, ಡಾ.ವಿನೋದ್, ಡಾ.ಅರುಣ್ ಹಾಜರಿದ್ದರು.
ಎನ್.ಪಿ.ಎಸ್.ನೌಕರರ ಸಂಘದಿಂದ ‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಕಾರ್ಯಕ್ರಮ
ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ವತಿಯಿಂದ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹಿಸಿ ‘ರಕ್ತ ಕೊಟ್ಟೇವು ಪಿಂಚಣಿ ಬಿಡೆವು’ ಎಂಬ ಘೋಷ ವಾಕ್ಯದೊಂದಿಗೆ ಬುಧವಾರ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಸಿದ ರಕ್ತದಾನ ಶಿಬಿರದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಎನ್‌ಪಿಎಸ್ ನೌಕರರ ಹೋರಾಟ ನ್ಯಾಯಯುತವಾಗಿದೆ. ನಿಮಗೆ ಆಗಿರುವ ಅನ್ಯಾಯದ ಬಗ್ಗೆ ಸದನದಲ್ಲಿ ದನಿ ಎತ್ತುತ್ತೇನೆ. ನಿಮಗೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ಅವರು ತಿಳಿಸಿದರು.
‘ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ವತಿಯಿಂದ ಕೆಲವಾರು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಅವರಿಗೆ ಆಗಿರುವ ತೊಂದರೆಗಳ ಬಗ್ಗೆ ವಿವರಿಸಿದ್ದಾರೆ. ಮುಖ್ಯಮಂತ್ರಿಗಳು ಅವರಿಗೆ ನ್ಯಾಯ ಕೊಡಿಸುವುದಾಗಿ ಹಿಂದೆ ಹೇಳಿದ್ದರು. ಇತರ ಶಾಸಕರೊಂದಿಗೆ ನಾನೂ ಅವರ ಕಷ್ಟದ ಬಗ್ಗೆ ಸದನದಲ್ಲಿ ದನಿ ಎತ್ತುತ್ತೇನೆ. ರಕ್ತದಾನ ಮಾಡುವ ಮೂಲಕ ಪ್ರತಿಭಟಿಸುವ ಆಲೋಚನೆ ಮೆಚ್ಚುವಂತಹದು’ ಎಂದು ನುಡಿದರು.
ರಕ್ತದಾನ ಶಿಬಿರಕ್ಕೆ ಮೊಟ್ಟ ಮೊದಲು ರಕ್ತದಾನ ಮಾಡುವ ಮೂಲಕ ಸಿವಿಲ್ ನ್ಯಾಯಾಧೀಶರಾದ ಟಿ.ಎಲ್.ಸಂದೀಶ್ ಚಾಲನೆ ನೀಡಿ, ‘ನಿಮ್ಮ ಹೋರಾಟಕ್ಕೆ ಜಯ ಸಿಗಲಿ’ ಎಂದು ಹಾರೈಸಿದರು.
ಎನ್‌ಪಿಎಸ್ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ವಿ.ಎನ್.ಗಜೇಂದ್ರ ಮಾತನಾಡಿ, ನಮ್ಮ ಹಲವು ವರ್ಷಗಳ ಕಾಲದ ಹೋರಾಟದ ಹಿನ್ನೆಲೆಯಲ್ಲಿ ನೌಕರರಿಗೆ ಡಿ.ಸಿ.ಆರ್.ಜಿ. ಮತ್ತು ಕುಟುಂಬ ಪಿಂಚಣಿ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆ ಗೊಂದಲಮಯವಾಗಿದೆ. ಸರ್ಕಾರ ಜಾರಿಗೆ ತಂದಿರುವ ಯೋಜನೆಯಿಂದ ೧೨ ವರ್ಷಗಳಿಂದ ದುಡಿದು, ನಿವೃತ್ತಿಯಾಗಿರುವ, ಮೃತಪಟ್ಟಿರುವ ನೌಕರರ ಕುಟುಂಬಗಳಿಗೆ ಅನ್ಯಾಯವಾಗುತ್ತಿದೆ. ಅವರಿಗೆ ಭದ್ರತೆಯಿಲ್ಲದಂತಾಗಿದೆ. ಆದ್ದರಿಂದ ಏಪ್ರಿಲ್ 1, ೨೦೦೬ ರಿಂದ ಪೂರ್ವಾನ್ವಯವಾಗುವಂತೆ ಯೋಜನೆಯನ್ನು ಅನುಷ್ಠಾನಗೊಳಿಸಿದರೆ ಅನುಕೂಲವಾಗಲಿದೆ.
ಈ ಉದ್ದೇಶದಿಂದಾಗಿ ನಮಗೆ ನಿಶ್ಚಿತ ಪಿಂಚಣಿ ಸೌಲಭ್ಯವನ್ನು ಸರ್ಕಾರ ಹಿಂದೆ ಮಾತು ಕೊಟ್ಟಿದ್ದಂತೆ ಜಾರಿಗೆ ತರಬೇಕು. ಅದಕ್ಕಾಗಿ ರಕ್ತ ಕೊಟ್ಟು ನ್ಯಾಯ ಕೇಳುತ್ತಿದ್ದೇವೆ ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ನಗರಸಭಾ ಆಯುಕ್ತ ಚಲಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು, ಡಾ. ಅನಿಲ್ ಕುಮಾರ್, ಡಾ. ವಿಜಯ್ ಕುಮಾರ್, ಡಾ. ವಾಣಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಕಾರ್ಯದರ್ಶಿ ಗುರುರಾಜ್‌ರಾವ್, ಎನ್.ಪಿ.ಎಸ್ ನೌಕರರ ಸಂಘ ಪ್ರಧಾನ ಕಾರ್ಯದರ್ಶಿ ಎಸ್.ಎ.ನರಸಿಂಹರಾಜು, ಎ.ಎಂ.ವೀಣಾ, ಟಿ.ಟಿ.ನರಸಿಂಹಪ್ಪ, ಜೆ.ಎ.ತನ್ವೀರ್ ಅಹಮದ್, ಎಸ್. ಶಿವಶಂಕರ್, ಸೈಯದ್ ಶರ್ಫುದ್ದೀನ್, ಕಾತ್ಯಾಯಿನಿ ಹಾಜರಿದ್ದರು.

