ನಗರದ ಕಂದಾಯ ಭವನದ ಮುಂಭಾಗ ಮಂಗಳವಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ರವರ 114ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಗಾಂಧೀಜಿಯವರ ಜೀವನವೇ ಮಾದರಿ. ಅದಕ್ಕಾಗಿಯೇ ಅವರು ‘ನನ್ನ ಬದುಕೇ ನನ್ನ ಸಂದೇಶ’ ಎಂದು ಹೇಳಿದ್ದರು. ಬದುಕು, ಬರಹ, ಮಾತು ಎಲ್ಲವೂ ಒಂದೇ ಆಗಿದ್ದಂತಹ ನಮ್ಮ ನಡುವಿನ ಬಹು ದೊಡ್ಡ ಸಾಕ್ಷಿ ಪ್ರಜ್ಞೆ ಮಹಾತ್ಮ ಗಾಂಧೀಜಿ ಎಂದು ಅವರು ತಿಳಿಸಿದರು.
ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಲು ಅಹಿಂಸೆಯ ಅಸ್ತ್ರ ಹಿಡಿದು ಇಡಿಯ ರಾಷ್ಟ್ರವನ್ನೇ ಸ್ವತಂತ್ರ ಸಂಗ್ರಾಮದಲ್ಲಿ ಭಾಗವಹಿಸಲು ಪ್ರೇರೇಪಿಸಿ ಯಶಸ್ವಿಯಾದ ಬಳಿಕವೂ ಎಲ್ಲವೂ ಭಗವಂತನ ಕೃಪೆ ಎಂದು ಭಾವಿಸಿ ತಮ್ಮ ಸರಳ ಬದುಕನ್ನು ಮುಂದುವರೆಸಿದ್ದ ಮಹಾತ್ಮ ಗಾಂಧೀಜಿ ಎಂಬ ಮಹಾನ್ ಚೇತನ ಇಂದಿಗೂ ಮಾದರಿ ನಾಯಕರಾಗಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೇ ಇಡಿಯ ವಿಶ್ವದ ಹಲವು ರಾಷ್ಟ್ರಗಳು ಗಾಂಧೀಜಿಯವರಿಗೆ ಆಯಾ ದೇಶದ ಉನ್ನತ ಗೌರವವನ್ನು ನೀಡಿ ಗೌರವಿಸಿವೆ.
ಗಾಂಧಿಜೀ ಹೇಳಿದ್ದು ಸಹ ಶ್ರಮ ಸಂಸ್ಕ್ರತಿ. ಇವತ್ತು ಸರಕಾರಗಳು ಗ್ರಾಮಗಳಲ್ಲಿ ಜಾರಿಗೆ ತಂದಿರುವ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸಹ ಗಾಂಧೀಜಿ ತತ್ತ್ವಗಳ ಆಚರಣೆಯ ಮುಖ್ಯ ಭಾಗವಾಗಿದೆ. ಅಂದು ಗಾಂಧೀಜಿ ಅತಿಯಾದ ಯಂತ್ರ ಬಳಕೆ ವಿರೋಧಿಸಿದ್ದರು. ಇವತ್ತು ಅದು ನಿಜವಾಗುತ್ತಿದೆ. ಸರಕಾರಗಳು ಇದನ್ನು ಅರಿತೇ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಯಂತ್ರಗಳ ಬಳಕೆಯನ್ನು ನಿಷೇಧಿಸಿದೆ. ಅಷ್ಟರ ಮಟ್ಟಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ, ಇಲ್ಲಿ ಗಾಂಧೀ ತತ್ತ್ವ ಆಚರಣೆಗೆ ಬಂದಿದೆ.
ಲಾಲ್‌ಬಹದ್ದೂರ್ ಶಾಸ್ತ್ರಿ ಅವರು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯನ್ನು ಅನ್ವರ್ಥನಾಮವಾಗಿದ್ದಾರೆ. ಅವರದು ಸರಳ ಉಡುಪು, ಮೃದು ನುಡಿ, ಸ್ವಲ್ಪವೂ ಗತ್ತು, ದರ್ಪವಿಲ್ಲದೇ ಅಧಿಕಾರವನ್ನು ಬಯಸದೇ ದೇಶಕ್ಕಾಗಿ ಕೆಲಸ ಮಾಡಿದ ಮಹಾನ್ ವ್ಯಕ್ತಿ ಎಂದರು.
ತಹಶೀಲ್ದಾರ್ ಅಜಿತ್ ಕುಮಾರ್ ರೈ ಮಾತನಾಡಿ, ಮಹಾತ್ಮ ಗಾಂಧೀಜಿ ಅವರು ಈ ಜಗತ್ತು ಕಂಡ ಒಬ್ಬ ಶ್ರೇಷ್ಠ ಮಾನವತಾವಾದಿ. ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಎರಡು ಕಣ್ಣುಗಳಂತೆ ಕಾರ್ಯನಿರ್ವಹಿಸಿ ಭಾರತದ ಹಿರಿಮೆಯನ್ನು ವಿಶ್ವಕ್ಕೆ ಸಾರಿದರು. ಎಲ್ಲ ಧರ್ಮಗಳ ಸಾರವೂ ಒಂದೇ ಆಗಿದ್ದು, ಎಲ್ಲ ಧರ್ಮಗಳನ್ನು ಪ್ರೀತಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂಬುದು ಗಾಂಧೀಜಿಯವರ ತತ್ವವಾಗಿದ್ದು, ಅಹಿಂಸೆಯಿಂದ ಕಠಿಣವಾದ ಗೆಲುವನ್ನು ಸಾಧಿಸಬಹುದು ಎಂಬುದನ್ನು ವಿಶ್ವಕ್ಕೆ ತಿಳಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಅವರ ಹುಟ್ಟು ಹಬ್ಬವನ್ನು ಆಚರಿಸುವ ಮೂಲಕ ಅವರು ಸಾರಿರುವ ತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ನಿವೃತ್ತ ಪ್ರಾಂಶುಪಾಲ ಮಹಮ್ಮದ್‌ಖಾಸಿಂ ಅವರು ಮಾತನಾಡಿ, ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನ ದೃಷ್ಟಾಂತಗಳನ್ನು ವಿವರಿಸಿ ಅದರ ಮೂಲಕ ನಮಗೆ ಸಿಗುವ ಸಂದೇಶದ ಬಗ್ಗೆ ತಿಳಿಸಿದರು.
ಶಿಕ್ಷಕ ಅಜಗಜಾನನಮೂರ್ತಿ ನೇತೃತ್ವದಲ್ಲಿ ಶಾಲಾ ವಿದ್ಯಾರ್ಥಿಗಳು ಭಗವದ್ಗೀತೆ ಪಾರಾಯಣ, ಖುರಾನ್ ಪಠಣ ಮತ್ತು ಬೈಬಲ್ ಪ್ರವಚನ ಮಾಡಿದರು. ‘ರಘುಪತಿ ರಾಘವ ರಾಜಾರಾಂ…’ ಭಜನೆಯನ್ನು ಹಾಡಿಸಲಾಯಿತು. ಕಲಾವಿದ ಶಿವರಾಜ್ ಹಾಗೂ ಗಾಂಧಿ ವೇಷಧಾರಿ ಮಕ್ಕಳನ್ನು ಸನ್ಮಾನಿಸಲಾಯಿತು. ಅಕ್ರಮ ಸಕ್ರಮ ಯೋಜನೆಯ ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಅನಿಲಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಸಿಲಿಂಡರ್ ಹಾಗೂ ಸ್ಟೌ ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಾರಾಯಣಸ್ವಾಮಿ, ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ನಗರಸಭೆ ಅಧ್ಯಕ್ಷ ಅಫ್ಸರ್ ಪಾಷ, ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಆಯುಕ್ತ ಚಲಪತಿ, ಕೃಷಿ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ಸದಸ್ಯ ವಿ.ಸುಬ್ರಮಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೇಶವರೆಡ್ಡಿ, ಸಿಡಿಪಿಒ ಲಕ್ಷ್ಮೀದೇವಮ್ಮ, ರೈತ ಮುಖಂಡರು, ಅಧಿಕಾರಿಗಳು, ಶಿಕ್ಷಕರು ಹಾಜರಿದ್ದರು.
ಮಹಾತ್ಮ ಗಾಂಧೀಜಿಯವರ 150ನೇ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ರವರ 114ನೇ ಜನ್ಮ ದಿನಾಚರಣೆ
ಆಧಾರ್ ಕಾರ್ಡ್ ತಿದ್ದುಪಡಿಗೆ ಟೋಕನ್ ವಿತರಣೆ
ತಾಲ್ಲೂಕು ಕಚೇರಿಯಲ್ಲಿ ನಡೆಸಲಾಗುತ್ತಿದ್ದ ಆಧಾರ್ ಕಾರ್ಡ್ ತಿದ್ದುಪಡಿಯ ಕಾರ್ಯವನ್ನು ಇದೀಗ ನಗರ ವ್ಯಾಪ್ತಿಯಲ್ಲಿ ಪ್ರಗತಿ ಗ್ರಾಮೀಣ ಬ್ಯಾಂಕ್‌ಗೆ ನೀಡಲಾಗಿದೆ. ಮೊದಲ ದಿನವೇ ಸುಮಾರು ಐದು ನೂರು ಮಂದಿ ಸಾಲಾಗಿ ನಿಂತು ಟೋಕನ್ ಪಡೆದರು.
‘ಜನರ ಒತ್ತಡ ನಿವಾರಣೆಗಾಗಿ ಟೋಕನ್ ವಿತರಿಸಲಾಗುತ್ತಿದೆ. ದಿನಕ್ಕೆ ಇಪ್ಪತ್ತು ಮಂದಿಯ ತಿದ್ದುಪಡಿ ಮಾಡಬಹುದಾದ್ದರಿಂದ ದಿನಾಂಕವನ್ನು ನಮೂದಿಸಿ ಟೋಕನ್ ನೀಡಿದ್ದೇವೆ. ಜನರು ಸಾಲಾಗಿ ಬಂದು ಟೋಕನ್ ಪಡೆಯಲು ಪೊಲೀಸ್ ಬಂದೋಬಸ್ತ್ ನೀಡಿದ್ದರು’ ಎಂದು ಬ್ಯಾಂಕ್ ಅಧಿಕಾರಿ ಬಿ.ಆರ್.ನಟರಾಜ್ ತಿಳಿಸಿದರು.
ನಿವೃತ್ತಿ ಹೊಂದಿದ ಶ್ರೀ ಸರಸ್ವತಿ ವಿದ್ಯಾಸಂಸ್ಥೆಯ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ
ನಗರದ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕಳೆದ ೩೫ ವರ್ಷಗಳಿಂದ ಸೇವೆ ಸಲ್ಲಿಸಿ ಸೋಮವಾರ ನಿವೃತ್ತಿ ಹೊಂದಿದ ಎಸ್.ಕೆ.ಗೋಪಿನಾಥ್ ರವರಿಗೆ ಶಾಲಾ ಆಡಳಿತ ಮಂಡಳಿ, ಪ್ರೌಢಶಾಲಾ ಹಾಗೂ ಪ್ರಾಥಮಿಕ ಶಾಲಾ ಸಿಬ್ಬಂದಿ ವರ್ಗದವರಿಂದ ಆಯೋಜಿಸಲಾಗಿದ್ದ ಆತ್ಮೀಯ ಬೀಳ್ಕೊಡುಗೆ ಸಮಾರಂಭದಲ್ಲಿ ಶ್ರೀ ಸರಸ್ವತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್.ಶ್ರೀಕಾಂತ್ ಮಾತನಾಡಿದರು
ಸೇವಾವಧಿಯಲ್ಲಿ ಆಡಳಿತ ಮಂಡಳಿ ಹಾಗೂ ಮಕ್ಕಳ ಬೆಳವಣಿಗೆಗೆ ಪರಿಣಾಮಕಾರಿ ಯೋಜನೆಗಳನ್ನು ರೂಪಿಸಿರುವುದಷ್ಟೇ ಅಲ್ಲದೇ ಅದನ್ನು ಅನುಷ್ಠಾನಗೊಳಿಸುವಲ್ಲಿ ೩೫ ವರ್ಷಗಳ ನಿಸ್ವಾರ್ಥ ಸೇವೆ ಸಲ್ಲಿಸಿದ ಶಾಲೆಯ ನಿವೃತ್ತ ಶಿಕ್ಷಕ ಎಸ್.ಕೆ.ಗೋಪಿನಾಥ್ ನಿಜಕ್ಕೂ ಅಭಿನಂದನಾರ್ಹರು ಎಂದು ಅವರು ಹೇಳಿದರು.
೧೯೮೩ ರಲ್ಲಿ ಸಂಸ್ಥೆಯ ಸಹ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಇವರು ನಂತರ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಮಕ್ಕಳಲ್ಲಿ ವಿವಿಧ ರೀತಿಯ ಪಠ್ಯ, ಪಠ್ಯೇತರ ಚಟುವಟಿಕೆ, ಕ್ರೀಡಾ ಚಟುವಟಿಕೆಗಳಿಗೆ ಇವರು ನೀಡುತ್ತಿದ್ದ ಪ್ರೋತ್ಸಾಹ, ಸಿಬ್ಬಂದಿಯ ಜೊತೆಗಿನ ಸಹಮತ, ವಿವಿಧ ಕಚೇರಿಗಳಲ್ಲಿ ಕೆಲಸ ಮಾಡಿಸಿಕೊಂಡು ಬರುತ್ತಿದ್ದ ಕೌಶಲ್ಯ ಅದ್ಭುತವಾಗಿತ್ತು. ಕಳೆದ ೩೫ ವರ್ಷಗಳ ಕಾಲ ನಮ್ಮ ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿಯಾಗುತ್ತಿರುವ ಶಿಕ್ಷಕ ಎಸ್,ಕೆ.ಗೋಪಿನಾಥ್‌ರ ವಿಶ್ರಾಂತಿ ಜೀವನ ಸುಖವಾಗಿರಲಿ ಎಂದು ಆಶಿಸಿದರು.
ನಿವೃತ್ತ ಶಿಕ್ಷಕ ಬಿ.ವಿ.ಗೋಪಿನಾಥ್ ಮಾತನಾಡಿ, ಸತತ ೩೫ ವರ್ಷ ನಾಲ್ಕು ತಿಂಗಳು ಈ ಶಾಲೆಯಲ್ಲಿ ಶಿಕ್ಷಕ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಪೂರ್ವ ಜನ್ಮದ ಪುಣ್ಯ, ನನ್ನ ಸೇವಾವಧಿಯಲ್ಲಿ ತುಂಬಾ ಸಂತೋಷವಾಗಿ ಕಾರ್ಯ ನಿರ್ವಹಿಸಿದ್ದೇನೆ, ಇದಕ್ಕೆಲ್ಲಾ ಕಾರಣರಾದ ಶಾಲಾ ಆಡಳಿತ ಮಂಡಳಿ ಹಾಗೂ ನಮ್ಮ ಸಿಬ್ಬಂದಿ ವರ್ಗಕ್ಕೆ ಆಭಾರಿಯಾಗಿರುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್.ನಾಗಲಕ್ಷ್ಮಿ, ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಕಾನೂನು ಅರಿವು ನೆರವು ಕಾರ್ಯಕ್ರಮ
ನಗರದ ಬಸ್ ನಿಲ್ದಾಣದ ಹತ್ತಿರ ಬಿ.ವಿ.ಮುನೇಗೌಡ ಕಾರ್ಖಾನೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಸೌಂದರ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಸಾಂತ್ವನ ಕೇಂದ್ರ ರವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಡೆದ ‘ಮಾನವ ಕಳ್ಳ ಸಾಗಣೆ ಮತ್ತು ಲೈಂಗಿಕ ಶೋಷಣೆಯ ಸಂತ್ರಸ್ತರ ಯೋಜನೆ- 2015’ ಕುರಿತಾದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಜೆಎಂಎಫ್‌ಸಿ ಮತ್ತು ಹಿರಿಯ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್ ಮಾತನಾಡಿದರು.
ಮಾನವ ಕಳ್ಳ ಸಾಗಣೆ ಪ್ರಕರಣಗಳು ಕಂಡು ಬಂದರೆ, ತಕ್ಷಣವೇ ಕ್ರಮಕೈಗೊಂಡು ನೊಂದವರಿಗೆ ರಕ್ಷಣೆ ನೀಡಬೇಕು ಎಂದು ಅವರು ತಿಳಿಸಿದರು.
‘ಹಳ್ಳಿಗಳಲ್ಲಿ ಬಡತನ ಪ್ರಮಾಣ ಹೆಚ್ಚಿರುವುದರಿಂದ ಚಿಕ್ಕ ಮಕ್ಕಳ ಮಾರಾಟ, ಸಾಗಾಣಿಕೆ ಹಾಗೂ ಹೆಣ್ಣು ಮಕ್ಕಳನ್ನು ಮಾರುಕಟ್ಟೆಯ ಉದ್ದೇಶದಿಂದ ನಗರ ಪ್ರದೇಶಗಳಿಗೆ ಸಾಗಾಣಿಕೆ ಮಾಡುವ ವ್ಯವಸ್ಥೆ ಉಂಟಾಗುತ್ತಿದ್ದು, ತಡೆಗಟ್ಟಬೇಕು. ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಶೋಷಿತರು ಕಾನೂನಿನ ನೆರವು ಪಡೆಯಬೇಕು’ ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಡಿಯಲ್ಲಿರುವ ಪ್ರತಿಯೊಂದು ಹಕ್ಕುಗಳು ಮಹಿಳೆಯರಿಗೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಸಿಗಬೇಕು. ಆರ್ಥಿಕವಾಗಿ ಹಿಂದುಳಿದ ಮತ್ತು ಶೋಷಿತ ಮಹಿಳೆಯರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು. ವ್ಯಾಪಾರೀಕರಣ, ಮಾನವ ಸಾಗಾಣಿಕೆ ತಡೆಗಟ್ಟಬೇಕು. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಕಾನೂನು ರಕ್ಷಣೆ ನೀಡಬೇಕು ಎಂದರು.
ಮಹಿಳಾ ಸಾಂತ್ವನ ಕೇಂದ್ರದ ಡಾ.ವಿಜಯ ವೆಂಕಟರಾಮ್ ಮಾತನಾಡಿ, ಪ್ರಪಂಚದಲ್ಲಿ ಪುರುಷ ಮಾತ್ರ ಮಹಿಳೆಯನ್ನು ಶೋಷಣೆ ಮಾಡುತ್ತಿಲ್ಲ. ವಿದ್ಯಾವಂತ ಮಹಿಳೆಯರಿಂದ ಅವಿದ್ಯಾವಂತ ಮಹಿಳೆಯರ ಮೇಲೆ, ಶ್ರೀಮಂತ ಮಹಿಳೆಯರಿಂದ ಬಡ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆ ಹೊಸತೇನಲ್ಲ. ಶಿಕ್ಷಣದಲ್ಲಿ, ಉದ್ಯೋಗದಲ್ಲಿ, ರಾಜಕೀಯದಲ್ಲಿ ಮತ್ತು ಸಮಾಜದಲ್ಲಿರುವ ಅವಕಾಶಗಳನ್ನು ನಿರಾಕರಿಸುವುದೇ ಮಹಿಳಾ ಶೋಷಣೆ ಆಗಿದೆ. ಇವುಗಳಲ್ಲದೇ ಮಹಿಳೆ ಲೈಂಗಿಕವಾಗಿಯೂ ಪುರುಷರಿಂದ ಶೋಷಣೆ ಅನುಭವಿಸುತ್ತಿದ್ದಾಳೆ. ಶೋಷಿತರು ದನಿ ಎತ್ತಬೇಕು. ಸಾಂತ್ವನ ಕೇಂದ್ರದಲ್ಲಿ ಬಂದು ಸಹಾಯ ಪಡೆಯಿರಿ ಎಂದರು.
ಸಿವಿಲ್ ನ್ಯಾಯಾಧೀಶರಾದ ಟಿ.ಎಲ್.ಸಂದೀಶ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ಸರಕಾರಿ ವಕೀಲೆ ಎಸ್.ಕುಮುದಿನಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಲಕ್ಷ್ಮೀದೇವಮ್ಮ, ಸರ್ಕಾರಿ ವೈದ್ಯಾಧಿಕಾರಿ ಡಾ.ವಿಜಯ್‌ಕುಮಾರ್, ವಕೀಲರಾದ ಎಂ.ಬಿ.ಲೋಕೇಶ್, ವೀಣಾ ಭಾಸ್ಕರ್ ಹಾಜರಿದ್ದರು.
ಭಗತ್‌ಸಿಂಗ್ ರ ೧೧೧ನೇ ಜಯಂತಿ ಕಾರ್ಯಕ್ರಮ
ನಗರದ ಎ.ಆರ್.ಎಂ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶ್ರೀ ಶಾರದ ವಿದ್ಯಾಸಂಸ್ಥೆ ಮತ್ತು ಎನ್.ಎಸ್.ಯು.ಐ ಸಹಯೋಗದಲ್ಲಿ ಗುರುವಾರ ಆಯೋಜಿಸಲಾಗಿದ್ದ ಭಗತ್‌ಸಿಂಗ್ ರ ೧೧೧ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಎನ್.ಎಸ್.ಯು.ಐ ರಾಜ್ಯಸಂಚಾಲಕ ಕೆ.ಎನ್.ಮುನೀಂದ್ರ ಮಾತನಾಡಿದರು.
ಕ್ರಾಂತಿಕಾರಿ ಭಗತ್‌ಸಿಂಗ್‌ರ ತತ್ವಾದರ್ಶಗಳನ್ನು ಪ್ರತಿಯೊಬ್ಬ ಯುವಕರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜ ಸದೃಢವಾಗಲು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಭಗತ್‌ಸಿಂಗ್ ರಂತಹ ಮಹಾನ್ ವ್ಯಕ್ತಿಗಳ ತತ್ವ, ಆದರ್ಶಗಳನ್ನು ಯುವಸಮೂಹ ಅಳವಡಿಸಿಕೊಳ್ಳಬೇಕು. ಲಕ್ಷಾಂತರ ಹೋರಾಟಗಾರರು ನೆತ್ತರು ಹರಿಸಿ, ಪ್ರಾಣತ್ಯಾಗ ಮಾಡಿದ ಫಲವಾಗಿ ನಮಗೆ ಸ್ವಾತಂತ್ರ್ಯ ಬಂದಿದೆ. ಅಂತಹ ಸ್ವಾತಂತ್ರ್ಯ ಅನುಭವಿಸುತ್ತಿರುವ ನಾವುಗಳು ನಮ್ಮ ಮಕ್ಕಳಿಗೆ ದೇಶದ ಇತಿಹಾಸ ತಿಳಿಸಿಕೊಡುವಲ್ಲಿ ವಿಫಲವಾಗಿದ್ದೇವೆ. ಹಾಗಾಗಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಗಳನ್ನು ನಮ್ಮ ಮಕ್ಕಳಿಗೆ ತಿಳಿಸುವುದೂ ಸೇರಿದಂತೆ ಮಕ್ಕಳಲ್ಲಿ ನಿಜವಾದ ದೇಶಾಭಿಮಾನ ಮೂಡಿಸುವ ಕೆಲಸ ಮಾಡಬೇಕು ಎಂದರು.
ಉಪನ್ಯಾಸಕ ಚಂದ್ರಶೇಖರ್ ಮಾತನಾಡಿ, ಇಂದಿನ ಯುವ ಸಮೂಹ ಕೇವಲ ಹಣ ಸಂಪಾದನೆ ಮಾಡುವುದೊಂದೇ ಜೀವನ ಎಂದು ಕೊಂಡಿದ್ದಾರೆ. ಕೇವಲ ತಾವು ಬದುಕಿದರಷ್ಟೇ ಸಾಕು ಎಂಬಷ್ಟು ಸ್ವಾರ್ಥಿಗಳಾಗಿ ಬಿಟ್ಟಿದ್ದಾರೆ. ದೇಶದ ಇತಿಹಾಸ, ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಹೋರಾಟಗಾರರ ಜೀವನ ತಿಳಿಯದ ನಮಗೆ ದೇಶದ ಪರಂಪರೆ ಹಾಗು ದೇಶದ ಬಗ್ಗೆ ಗೌರವ, ಅಭಿಮಾನ ಹೇಗೆ ಮೂಡಲು ಸಾಧ್ಯವಾದೀತು. ಹಾಗಾಗಿ ಇಂದಿನ ಯುವಕರು ಕ್ರಾಂತಿಕಾರಿ ಭಗತ್‌ಸಿಂಗ್ ಸೇರಿದಂತೆ ಹೋರಾಟಗಾರರ ಆದರ್ಶಗಳನ್ನು ಜೀವನದಲ್ಲಿ ರೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಎಂ.ಆರ್.ರಾಘವೇಂದ್ರ, ಉಪಪ್ರಾಂಶುಪಾಲ ಚಾಂದ್‌ಪಾಷ, ಮುಖ್ಯೋಪಾದ್ಯಾಯಿನಿ ವಿಜಯ ಹಾಜರಿದ್ದರು.
ನಂದಿನಿ ಹಾಲು ಉತ್ಪಾದಕರ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಸಿ.ಚಂದ್ರೇಗೌಡ ಆಯ್ಕೆ
ನಂದಿನಿ ಹಾಲು ಉತ್ಪಾದಕರ ವಿವಿದೋದ್ದೇಶ ಸಹಕಾರ ಸಂಘದ ಮುಂದಿನ ಐದು ವರ್ಷದ ಅವಧಿಗೆ ಅಧ್ಯಕ್ಷರ ಆಯ್ಕೆಗಾಗಿ ಸಂಘದ ಕಚೇರಿಯಲ್ಲಿ ಬುಧವಾರ ಕರೆಯಲಾಗಿದ್ದ ಸಭೆಯಲ್ಲಿ ಹಾಜರಿದ್ದ ಏಳು ಮಂದಿ ಸದಸ್ಯರ ಒಪ್ಪಿಗೆಯ ಮೇರೆಗೆ ಚುನಾವಣಾಧಿಕಾರಿ ವೆಂಕಟೇಶಮೂರ್ತಿ ಮೇಲೂರಿನ ಸಿ.ಚಂದ್ರೇಗೌಡ ಅವರನ್ನು ನೂತನ ಅಧ್ಯಕ್ಷರಾಗಿ ಘೋಷಿಸಿದರು.
ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಗೈರು
ಕಳೆದ ಸೆಪ್ಟೆಂಬರ್ ೧೬ ರಂದು ನಡೆದ ಚುನಾವನೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದ ೧೩ ಜನ ನಿರ್ದೇಶಕರ ಪೈಕಿ ಇಂದು ನಡೆದ ಸಭೆಗೆ ಕಾಂಗ್ರೆಸ್ ಬೆಂಬಲಿತ ಆರು ಜನ ನಿರ್ದೇಶಕರು ಗೈರು ಹಾಜರಾಗಿದ್ದರು.
ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ ಸೇರಿದಂತೆ ನಿರ್ದೇಶಕರಾದ ಟಿ.ಎಸ್.ಗೋಪಾಲರೆಡ್ಡಿ, ಬಿ.ವಿ.ಮುನೇಗೌಡ, ಮಂಜುನಾಥ್. ನಾಗರತ್ನಮ್ಮ, ಎಸ್.ವಿ.ಮೂರ್ತಿ ಗೈರು ಹಾಜರಾಗಿದ್ದರು.
ಅಧ್ಯಕ್ಷರ ಅವಿರೋಧ ಆಯ್ಕೆ
ಸಂಘದ ಒಟ್ಟು ೧೩ ಜನ ನಿರ್ದೇಶಕರ ಪೈಕಿ ಹಾಜರಿದ್ದ ೭ ಜನ ನಿರ್ದೇಶಕರು ೧೨.೩೦ ಕ್ಕೆ ನಡೆಯಬೇಕಿದ್ದ ಸಭೆಯನ್ನು ಸುಮಾರು ೧ ಗಂಟೆ ಕಾಲ ಮುಂದೂಡಿ ನಡೆಸಿದರು. ಮುಂದೂಡಿದ ಸಭೆಗೂ ಸಹ ಆರು ಜನ ನಿರ್ದೇಶಕರು ಬಾರದೇ ಇದ್ದುದರಿಂದ ಹಾಜರಿದ್ದ ೭ ಜನ ಸದಸ್ಯರಲ್ಲಿ ಒಂದೇ ಒಂದು ನಾಮಪತ್ರ ಸಲ್ಲಿಸಿದ್ದ ಸಿ.ಚಂದ್ರೇಗೌಡರ ನಾಮಪತ್ರವನ್ನು ಪುರಸ್ಕರಿಸಿ ನೂತನ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ನಿರ್ದೇಶಕರಾದ ಆರ್.ಎ.ಉಮೇಶ್, ಬಿ.ಎಂ.ಗೋಪಾಲಗೌಡ, ಎನ್.ಗೋವಿಂದರಾಜು, ಡಿ.ಬಿ.ವೆಂಕಟೇಶ್, ರತ್ನಮ್ಮ, ಎಂ.ಆಂಜಿನಪ್ಪ, ಚುನಾವಣಾಧಿಕಾರಿ ಎಂ.ವಿ.ವೆಂಕಟೇಶಮೂರ್ತಿ ಹಾಜರಿದ್ದರು.
ಕೃಷಿ ವಸ್ತು ಪ್ರದರ್ಶನ ಮತ್ತು ರೈತ ತರಬೇತಿ ಕಾರ್ಯಕ್ರಮ
ತಾಲ್ಲೂಕಿನ ಭಕ್ತರಹಳ್ಳಿಯಲ್ಲಿ ಬುಧವಾರ ಅಂತಿಮ ವರ್ಷದ ಕೃಷಿ ಪದವಿ ವಿದ್ಯಾರ್ಥಿಗಳ ತೊಂಬತ್ತು ದಿನಗಳ ಗ್ರಾಮೀಣ ಜಾಗೃತಿ ಕಾರ್ಯಾನುಭವದ ಕೊನೆಯ ದಿನದ ಕೃಷಿ ವಸ್ತು ಪ್ರದರ್ಶನ ಮತ್ತು ರೈತ ತರಬೇತಿ ಕಾರ್ಯಕ್ರಮದಲ್ಲಿ ಜಿಕೆವಿಕೆ ಕೃಷಿ ವಿಶ್ವವಿದ್ಯಾನಿಲಯದ ಡೀನ್ ಡಾ.ಎಂ.ಭೈರೇಗೌಡ ಮಾತನಾಡಿದರು.
‘ರೈತರಿಂದ ಕಲಿಯುವುದು ಮತ್ತು ರೈತರಿಗೆ ಕಲಿಸುವುದು’ ಎಂಬ ಉದ್ದೇಶದಿಂದ ಗ್ರಾಮೀಣ ಜಾಗೃತಿಯ ಕಾರ್ಯಾನುಭವದಲ್ಲಿ ಮೂರು ತಿಂಗಳು ಹಳ್ಳಿಯಲ್ಲಿ ವಾಸಿಸಿದ ವಿದ್ಯಾರ್ಥಿಗಳು ಭಕ್ತರಹಳ್ಳಿಯ ಮನೆಮಕ್ಕಳಾಗಿದ್ದಾರೆ ಎಂದು ಅವರು ತಿಳಿಸಿದರು.
ನಾಲ್ಕು ಗೋಡೆಯ ಮಧ್ಯೆ ಕಲಿಯುವ ಕಲಿಕೆಯ ಜೊತೆಗೆ ರೈತರೊಂದಿಗೆ ಒಡನಾಡಿ ಕಲಿಯುವ ಕಲಿಕೆ ವಿದ್ಯಾರ್ಥಿಗಳ ಬದುಕಿಗೆ ಸಾಕಷ್ಟು ಮೂಲ ದ್ರವ್ಯ ಒದಗಿಸುತ್ತದೆ. ರೈತರೊಂದಿಗೆ ವಿದ್ಯಾರ್ಥಿಗಳು ಬೆರೆಯಬೇಕು. ಅವರ ಸಮಸ್ಯೆ ಆಲಿಸಬೇಕು. ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ಅಪರಿಚಿತರಾಗಿ ಬಂದಿದ್ದ ವಿದ್ಯಾರ್ಥಿಗಳು ಪರಿಚಿತರಾಗಿ ಹೋಗುವಂತಹ ಈ ಅನುಭವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುತ್ತದೆ. ಗ್ರಾಮದ ಹಿರಿಯರು ರೈತರು ವಿದ್ಯಾರ್ಥಿಗಳಿಗೆ ಸಹಕರಿಸಿದ್ದಾರೆ ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ ಮಾತನಾಡಿ, ರೈತನ ನೋವಿರುವುದು ಅವನ ಉತ್ಪನ್ನ ಮಾರಾಟವಾಗದಿದ್ದಾಗ. ತಾಂತ್ರಿಕತೆ ಮುಂದುವರೆದಿರುವುದು ರೈತನ ಸಹಾಯಕ್ಕೆ ಬರಲಿ. ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಬೆಳೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ರೈತನಿಗೆ ಬೆಳೆ ಬೆಳೆಯಲು ಮಾರ್ಗದರ್ಶನ ಮಾಡಿ. ರೈತನ ಉತ್ಪನ್ನ ಬೆಲೆ ಕಳೆದುಕೊಳ್ಳದಂತೆ ಮಾಡಲು ತಾಂತ್ರಿಕ ಪರಿಣಿತರು ಸಹಕರಿಸಲಿ ಎಂದು ಹೇಳಿದರು.
ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ರೈತ ಎಚ್.ಜಿ.ಗೋಪಾಲಗೌಡ ಮಾತನಾಡಿ, ಸಾಫ್ಟ್‌ವೇರ್, ಮೆಡಿಕಲ್ ಎನ್ನುವ ಈ ಕಾಲದಲ್ಲಿ ಕೃಷಿಯನ್ನು ಓದುತ್ತಿರುವ ವಿದ್ಯಾರ್ಥಿಗಳು ಅಭಿನಂದನೀಯರು. ಸ್ವಂತ ಜಮೀನಿದ್ದರೆ ನೀವು ಎಲ್ಲೂ ಕೆಲಸಕ್ಕೆ ಹೋಗಬೇಡಿ. ಶ್ರದ್ಧೆಯಿದ್ದು ಕೆಟ್ಟ ಚಟಗಳಿರದಿದ್ದಲ್ಲಿ ಕೃಷಿಯೇ ಉತ್ತಮ. ರೇಷ್ಮೆ, ಹಾಲು, ಕುರಿ, ಮೇಕೆ, ಕೋಳಿ, ಜೇನು ಸಾಕಿ, ಉಪಕಸುಬುಗಳನ್ನು ಮಾಡಿದ್ದೇ ಆದರೆ ಯಾವ ಅಧಿಕಾರಿಗೂ ಕಮ್ಮಿಯಿಲ್ಲದಂತೆ ಸಂಪಾದಿಸಬಹುದು ಎಂದು ನುಡಿದರು.
‘ಕೃಷಿ ವಸ್ತು ಪ್ರದರ್ಶನ’ ಮತ್ತು ‘ಬೆಳೆ ಸಂಗ್ರಹಾಲಯ’ ಎಂಬ ಅಕ್ಷರಗಳು ಹಸಿರು ಪೈರಿನಲ್ಲಿ ನೆಲದ ಮೇಲೆ ಮೂಡಿದ್ದು, ರೈತರನ್ನು ಸ್ವಾಗತ ಕೋರುತ್ತಿತ್ತು. ವಿದ್ಯಾರ್ಥಿಗಳ ತೊಂಬತ್ತು ದಿನಗಳ ಗ್ರಾಮೀಣ ಜಾಗೃತಿಯ ಕೊನೆಯ ದಿನದಂದು ಅವರ ಗ್ರಾಮ ವಾಸದ ಅನುಭವವನ್ನು ವೈವಿಧ್ಯಮಯ ಬೆಳೆ, ವಸ್ತು ಮತ್ತು ಪ್ರಾತ್ಯಕ್ಷಕೆಗಳ ಮೂಲಕ ಪ್ರದರ್ಶಿಸಲಾಗಿತ್ತು.
ಸೂರ್ಯಕಾಂತಿ ಹೂ ಬಿರಿದು ಒಂದೆಡೆ ನಳನಳಿಸಿದ್ದರೆ, ಹಸು, ಕುರಿ, ಕೋಳಿ, ಜೇನು ಸಾಕಾಣಿಕೆಯ ಪ್ರದರ್ಶನ ಮತ್ತೊಂದೆಡೆಯಿತ್ತು. ಅಗಸೆ, ಹೆಸರುಕಾಳು, ಎಳ್ಳು, ಹುಚ್ಚೆಳ್ಳು, ರಾಗಿ, ಜೋಳ, ಸಿರಿಧಾನ್ಯಗಳು, ಗೋಡಂಬಿ, ಹುರಳಿ, ಅವರೆ, ತರಕಾರಿ ಬೆಳೆಗಳು, ಮೇವಿನ ಬೆಳೆಗಳು, ನುಗ್ಗೆ ತೋಪು, ತರಕಾರಿ, ಅಲಸಂದಿ ಮುಂತಾದ ಬೆಳೆಗಳನ್ನು ವಿದ್ಯಾರ್ಥಿಗಳೇ ಬೆಳೆದಿದ್ದು ತಳಿ, ಬೆಳೆಯ ಅವಧಿ ಮತ್ತು ಇಳುವರಿಯ ಮಾಹಿತಿಯನ್ನು ಮಾಹಿತಿಗಾಗಿ ಫಲಕಗನ್ನು ಬೆಳೆಯ ಬಳಿ ಲಗತ್ತಿಸಿದ್ದರು. ಬೀಜೋಪಚಾರ, ಎರೆಹುಳು ಗೊಬ್ಬರ ಮತ್ತು ರಸಮೇವಿನ ತಯಾರಿಕೆ, ಕೃಷಿ ಹೊಂಡ, ನೀರನ್ನು ಸದ್ಭಳಕೆ ಮಾಡಿಕೊಳ್ಳುವ ವಿಧಾನ, ಮಣ್ಣಿನ ಫಲವತ್ತತೆ ಕಾಪಾಡುವುದು ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶಿಸಿದ್ದರು.
ವಿದ್ಯಾರ್ಥಿಗಳು ವಿವಿಧ ಮಳಿಗೆಗಳ ಮೂಲಕವೂ ರೈತರಿಗೆ ಮಾಹಿತಿ ನೀಡುವ ಪ್ರಯತ್ನ ನಡೆಸಿದ್ದರು. ಸಾಂಪ್ರದಾಯಿಕ ಕೃಷಿ ಉಪಕರಣಗಳು, ಭಕ್ತರಹಳ್ಳಿಯ ಗ್ರಾಮ ನಕ್ಷೆ, ಕೃಷಿ ವಿಶ್ವವಿದ್ಯಾಲಯದ ಕುರಿತು ಮಾಹಿತಿ, ವಿವಿಧ ಬೆಳೆಗಳ ತಳಿಗಳು, ಸಾವಯವ ಉತ್ಪನ್ನಗಳು, ಗ್ರೀನ್ ಹೌಸ್, ಮಲ್ಚಿಂಗ್, ಮನೆಯಲ್ಲಿಯೇ ಕುಟುಂಬಕ್ಕೆ ಬೇಕಾದ ತರಕಾರಿ ಮುಂತಾದ ಬೆಳೆಗಳನ್ನು ಬೆಳೆಯುವ ಬಗ್ಗೆ ಪ್ರಾತ್ಯಕ್ಷಿಕೆ, ಅಣಬೆ ಬೇಸಾಯ, ಸಮರ್ಪಕ ರೇಷ್ಮೆ ಬೇಸಾಯ, ರೇಷ್ಮೆಯಿಂದ ತಯಾರಿಸಬಹುದಾದ ಕರಕುಶಲ ವಸ್ತುಗಳು, ಹಿಪ್ಪುನೇರಳೆ ಎಲೆಯಿಂದ ತಯಾರಿಸುವ ತಿನಿಸುಗಳು, ಬೆಳೆಗಳಿಗೆ ತಗುಲುವ ರೋಗಗಳ ಹತೋಟಿ, ಕೃಷಿ ಉತ್ಪನ್ನಗಳಿಂದ ತಯಾರಿಸಬಹುದಾದ ಮೌಲ್ಯವರ್ಧಿತ ಪದಾರ್ಥಗಳು ಮುಂತಾದವುಗಳನ್ನು ಪ್ರದರ್ಶಿಸಲಾಗಿತ್ತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಂ.ಗೋಪಾಲಗೌಡ, ಎಸ್‌ಎಫ್‌ಸಿಎಸ್ ಮಾಜಿ ಅಧ್ಯಕ್ಷ ಬಿ.ಆರ್.ರಮೇಶ್, ಎಂಪಿಸಿಎಸ್ ಅಧ್ಯಕ್ಷ ಕೋಟೆ ಚನ್ನೇಗೌಡ, ಕಾಕಚೊಕ್ಕಂಡಹಳ್ಳಿ ನಾರಾಯಣಸ್ವಾಮಿ, ರೈತ ಸಂಘದ ಪ್ರತೀಶ್, ಜಿಕೆವಿಕೆ ಪ್ರಾಧ್ಯಾಪಕರಾದ ಡಾ.ವೈ.ಎನ್.ಶಿವಲಿಂಗಯ್ಯ, ಜಿ.ಎನ್.ನಾಗರಾಜ್, ಡಾ.ಬಿ.ಕೃಷ್ಣಮೂರ್ತಿ, ಡಾ.ಡಿ.ಜಿಮ್ಲಾನಾಯಕ್, ಡಾ.ಭಾನುಪ್ರಕಾಶ್, ಡಾ.ಆನಂದ್, ಸಹಾಯಕ ತೋಟಗಾರಿಕಾ ಅಧಿಕಾರಿ ರವಿಕುಮಾರ್, ಶಿಬಿರದ ವಿದ್ಯಾರ್ಥಿಗಳಾದ ಅಜಿತ್, ಅನಿಲ್, ಅರುಣ್, ಅನೂಷಾ, ಅರ್ಚನಾ, ಬಾಲಗಂಗಾಧರ್, ಅಕ್ಷಯ್, ಅಶ್ವಿನ್, ಅಶ್ವಿನಿ, ಅಪೂರ್ವ, ಬೇಬಿ, ಅನನ್ಯ, ಅರ್ಚಿತ ಹಾಜರಿದ್ದರು.
ಮನೆ ಅಂಗಳದಲ್ಲಿ ವಚನ ಸಾಹಿತ್ಯ ಸಿಂಚನ ಕಾರ್ಯಕ್ರಮ
ನಗರದ ೨೧ ನೇ ವಾರ್ಡಿನ ನಗರಸಭೆ ಸದಸ್ಯೆ ಸುಗುಣ ಲಕ್ಮೀನಾರಾಯಣ ಅವರ ಮನೆಯಲ್ಲಿ ತಾಲ್ಲೂಕು ವಚನ ಸಾಹಿತ್ಯ ಪರಿಷತ್ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ ಮನೆ ಅಂಗಳದಲ್ಲಿ ವಚನ ಸಾಹಿತ್ಯ ಸಿಂಚನ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಚೀಮಂಗಲ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಡಾ.ಎಂ.ಶಿವಕುಮಾರ್ ಮಾತನಾಡಿದರು.
ವಚನ ಸಾಹಿತ್ಯ ನಮ್ಮ ಬದುಕಿಗೆ ಶತಮಾನಗಳಿಂದಲೂ ಉತ್ತಮ ಮಾರ್ಗದರ್ಶನ ಡುತ್ತ ಬಂದಿದೆ. 12ನೇ ಶತಮಾನದಲ್ಲಿ ಶರಣರು ಅಂದಿನ ಸಂಸ್ಕೃತ ಭಾಷೆ ಸಾಮಾನ್ಯ ಜನರಿಗೆ ಅರ್ಥವಾಗದ್ದನ್ನು ಮನಗಂಡು ಕನ್ನಡ ಭಾಷೆಯಲ್ಲಿ ಸರಳವಾಗಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ವಚನಗಳನ್ನು ರಚಿಸಿದರು. ಹಾಗಾಗಿ ಜನಸಮೂಹ ಈ ಸಾಹಿತ್ಯ ಪ್ರಕಾರದತ್ತ ಆಕರ್ಷಿತವಾಯಿತು ಎಂದರು.
ನಗರಸಭೆ ಸದಸ್ಯೆ ಸುಗುಣ ಲಕ್ಮೀನಾರಾಯಣ ಮಾತನಾಡಿ, ಶಿಕ್ಷಕರು ಸಮಾಜದ ಮಾರ್ಗದರ್ಶಕರು. ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅಪಾರವಾದದ್ದು. ಈ ಬಾರಿ ನಮ್ಮ ತಾಲ್ಲೂಕಿನಲ್ಲಿ ಐವರು ಶಿಕ್ಷಕರು ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ಸಂಗತಿ. ಅವರನ್ನು ಸನ್ಮಾನಿಸುವ ಅವಕಾಶ ನಮಗೆ ಲಭಿಸಿರುವುದು ಸಂತಸ ತಂದಿದೆ ಎಂದರು.
ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಪುರಸ್ಕೃತ ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಡಾ.ಎಂ.ಶಿವಕುಮಾರ್, ವೈಜ್ಞಾನಿಕ ಕ್ಷೇತ್ರದಲ್ಲಿ ವಿಶೇಷ ಶಿಕ್ಷಕ ರಾಜ್ಯ ಪ್ರಶಸ್ತಿ ಪುರಸ್ಕೃತ ಅಮ್ಮಗಾರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿ ಎಚ್.ಜಿ.ಚಂದ್ರಕಲಾ, ಮಳ್ಳೂರು ಶಾಲೆಯ ಎಂ.ಸೀನಪ್ಪ ಮತ್ತು ಸರಸ್ವತಿ ಕಾನ್ವೆಂಟ್ ಪ್ರೌಢಶಾಲೆಯ ಜಿ.ಎನ್.ಶಿವಣ್ಣ ಅವರನ್ನು ಸನ್ಮಾನಿಸಲಾಯಿತು. ವಚನ ಸಾಹಿತ್ಯ ಸಿಂಚನ ಕಾರ್ಯಕ್ರಮ ನಡೆಸಲು ಸ್ಥಳಾವಕಾಶ ಮಾಡಿಕೊಟ್ಟ ನಗರಸಭೆ ಸದಸ್ಯೆ ಸುಗುಣ ಲಕ್ಮೀನಾರಾಯಣ ದಂಪತಿಯನ್ನು ಗೌರವಿಸಲಾಯಿತು.
ವಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ನಾರಾಯಣಸ್ವಾಮಿ, ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್, ಎಸ್.ವಿ.ನಾಗರಾಜ್‌ರಾವ್, ಸುಂದರಾಚಾರಿ, ವೇಣುಗೋಪಾಲ್, ವೆಂಕಟೇಶಪ್ಪ, ಗಜೇಂದ್ರ, ನರಸಿಂಹಪ್ಪ, ಶ್ಯಾಮಸುಂದರ್, ರೈತ ಸಂಘದ ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಕಾರ್ಯದರ್ಶಿ ಪ್ರತೀಶ್ ಹಾಜರಿದ್ದರು.
ತಾಲ್ಲೂಕು ಕಸಾಪ ವತಿಯಿಂದ ‘ವನಸಿರಿ ನುಡಿಸಿರಿ’ ಕಾರ್ಯಕ್ರಮ
ತಾಲ್ಲೂಕಿನ ಜೆ.ವೆಂಕಟಾಪುರದ ಪ್ರಗತಿಪರ ರೈತ ಪಾಪರಾಜು (ರಾಜಣ್ಣ) ಅವರ ತೋಟದಲ್ಲಿ ಮಂಗಳವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ‘ವನಸಿರಿ ನುಡಿಸಿರಿ’ ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಪ್ರಕೃತಿ ನಮಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಶುದ್ಧ ನೀರು, ಗಾಳಿ, ಆಹಾರ ಸೇರಿದಂತೆ ಇನ್ನು ಅನೇಕ ಅಗತ್ಯ ವಸ್ತುಗಳನ್ನು ನೀಡುತ್ತಿದೆ. ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ.ಪ್ರಕೃತಿಯಲ್ಲಿನ ಏರುಪೇರುಗಳಿಂದ ಭೂಮಿಯ ತಾಪಮಾನ ಹೆಚ್ಚಾಗಿದ್ದು ಅದರಿಂದ ಪ್ರಾಕೃತಿಕ ಅಸಮತೋಲನ ಏರ್ಪಟ್ಟಿದೆ. ತಾಪಮಾನವನ್ನು ನಿಯಂತ್ರಿಸಿ ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳಲು ಪ್ರತಿಯೊಬ್ಬರೂ ಮರಗಿಡಗಳನ್ನು ಬೆಳೆಸಬೇಕು ಎಂದರು.
ಕನ್ನಡ ನಾಡಿನ ಪರಿಸರ ಸಂರಕ್ಷಣೆಯ ಹೊಣೆಗಾರಿಕೆಯೂ ಇರುವುದರಿಂದ ಕಸಾಪ ಪರಿಸರ ಸಂರಕ್ಷಣೆಯ ಕುರಿತಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಅವರು ತಿಳಿಸಿದರು.
ಪ್ರಗತಿಪರ ರೈತ ಪಾಪರಾಜು (ರಾಜಣ್ಣ) ಮಾತನಾಡಿ, ರಾಜ್ಯದ ರೈತರು ತಮ್ಮ ಜಮೀನಿನಲ್ಲಿ ಒಂದು ಎಕರೆಗೆ ಕನಿಷ್ಟ 20 ಮರಗಳನ್ನು ನೆಟ್ಟು ಬೆಳೆಸುವುದನ್ನು ಕಡ್ಡಾಯಗೊಳಿಸಲು ಹೊಸ ಕಾನೂನು ರಚಿಸುವ ಚಿಂತನೆ ನಡೆಸಲಾಗುತ್ತಿದೆ. ಇದು ಸ್ವಾಗತಾರ್ಹ. ಕಾಡು, ಗಿಡ- ಮರಗಳ ನಾಶದಿಂದಾಗಿ ನಾವಿಂದು ಮಳೆಯ ಅಭಾವ ಕಾಣುತ್ತಿದ್ದೇವೆ, ಮಳೆ ಇಲ್ಲದೆ ಭೀಕರ ಬರಗಾಲವನ್ನು ಕಾಣುವಂತಾಗಿದೆ. ನಾಡು ಸಮೃದ್ಧವಾಗಿರಬೇಕಾದರೆ ಮರ-ಗಿಡಗಳನ್ನು ಬೆಳೆಸುವುದು ಬಹಳ ಅವಶ್ಯಕವಾಗಿದೆ, ಪ್ರತಿಯೊಬ್ಬರೂ ನಮ್ಮ ಸುತ್ತಲೂ ಮರ ಗಿಡಗಳನ್ನು ಬೆಳೆಸುವದರತ್ತ ಗಮನಕೊಡಬೇಕು. ಗಿಡ ನೆಟ್ಟರಷ್ಟೇ ಸಾಲದು ಪೋಷಣೆಯ ಹೊಣೆಯನ್ನು ಸಹ ಹೊರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಸಾಪ ವತಿಯಿಂದ ಪ್ರಗತಿಪರ ರೈತ ಪಾಪರಾಜು (ರಾಜಣ್ಣ) ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಸಾಪ ಸದಸ್ಯರು ಗಿಡವನ್ನು ನೆಟ್ಟರು.
ಆರ್‌ಡಿಎಸ್ ನಾರಾಯಣಸ್ವಾಮಿ, ರಾಮಚಂದ್ರ, ಮಲ್ಲಿಕಾರ್ಜುನ, ನೀಲಚಂದ್ರ, ಲಕ್ಷ್ಮೀನಾರಾಯಣ, ಎಂ.ಆರ್.ನಾಗರಾಜ್, ಮಂಜುನಾಥಗುಪ್ತ, ವೆಂಕಟರಮಣಪ್ಪ, ಮುನಿರಾಜು ಕುಟ್ಟಿ ಹಾಜರಿದ್ದರು.
ಎಸ್‌ಎಸ್‌ಎಸ್ ಘಟಕದಿಂದ ‘ಸ್ವಚ್ಛತಾ ಹೈ ಸೇವಾ’ ಕಾರ್ಯಕ್ರಮ
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಆಯೋಜಿಸಿದ್ದ ಸ್ವಚ್ಛತಾ ಹೈ ಸೇವಾ ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯ ಡಾ.ವಿಜಯ್ ಮಾತನಾಡಿದರು.
ಪ್ಲಾಸ್ಟಿಕ್ ಪರಿಸರದ ಮಹಾಶತ್ರು. ನಿರುಪಯುಕ್ತ ಪ್ಲಾಸ್ಟಿಕ್ ಅನ್ನು ಸಿಕ್ಕ ಸಿಕ್ಕಲ್ಲಿ ಎಸೆಯುವುದರಿಂದ, ವಿಲೇವಾರಿಯ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವುದರಿಂದ ದುಷ್ಪರಿಣಾಮಗಳಿಗೆ ಕಾರಣವಾಗಿದೆ ಎಂದು ಅವರು ತಿಳಿಸಿದರು.
ಒಂದು ಪ್ಲಾಸ್ಟಿಕ್ ಚೀಲದ ವಿಭಜನೆಯಾಗಲು ೧೦೦ ವರ್ಷಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. ಈ ಸಮಯದಲ್ಲಿ ಆ ಪ್ಲಾಸ್ಟಿಕ್‌ನ ವಿಭಜನೆಯಾಗಿ ದೊಡ್ಡ ಪ್ರಮಾಣದಲ್ಲಿ ರಾಸಾಯನಿಕ ಘಟಕ ಹೊರಬೀಳುತ್ತವೆ. ಆದುದರಿಂದ ಆ ಭಾಗದಲ್ಲಿ ಭೂಮಿ ಬಂಜರು ಆಗುವ ಪ್ರಕ್ರಿಯೆಯು ಆರಂಭಗೊಳ್ಳುತ್ತದೆ. ಪ್ಲಾಸ್ಟಿಕ್‌ನ ಚೀಲಗಳು ಜಲಾಶಯದಲ್ಲಿ ಸೇರಿಕೊಳ್ಳುತ್ತವೆ. ಈ ಪ್ಲಾಸ್ಟಿಕ್‌ಯುಕ್ತ ನೀರನ್ನು ಹೊಲ ಗದ್ದೆಗಳ ನೀರಾವರಿಗೆ ಉಪಯೋಗಿಸಿದ್ದಲ್ಲಿ ಆ ಭೂಮಿಯ ಧಾರಣೆ ಕ್ಷಮತೆಯ ಮೇಲೆ, ಹಾಗೆಯೇ ಉತ್ಪನ್ನದ ಮೇಲೆಯೂ ಪರಿಣಾಮವಾಗುತ್ತದೆ. ಪ್ಲಾಸ್ಟಿಕ್ ಬಳಕೆ ಮಾಡಸಿರಲು ನಾವೆಲ್ಲಾ ದೃಢ ನಿರ್ಧಾರ ಕೈಗೊಳ್ಳೋಣ ಎಂದರು.
ಎನ್‌ಎಸ್‌ಎಸ್ ಕಾರ್ಯಕ್ರಮದ ಅಧಿಕಾರಿ ಎಚ್.ಸಿ.ಮುನಿರಾಜು ಮಾತನಾಡಿ, ಮಹಾತ್ಮನ ಕನಸಿನಂತೆ ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶದ ಸ್ವಚ್ಛತೆಗಾಗಿ ಸ್ವಚ್ಛತಾ ಹಿ ಸೇವಾ ಚಳವಳಿಯನ್ನೇ ಆಯೋಜಿಸಿದ್ದಾರೆ. ನಾವೆಲ್ಲಾ ನಮ್ಮ ಮನೆ, ಕಚೇರಿ, ಗಲ್ಲಿ, ಊರಿನ ಸ್ವಚ್ಛತೆ ಮಾಡಿಕೊಳ್ಳಬೇಕು. ಸ್ವಚ್ಛತೆಯ ಬಗ್ಗೆ ಇತರರಿಗೂ ಅರಿವು ಮೂಡಿಸಬೇಕು. ಕಾಲೇಜಿನ ಎಸ್‌ಎಸ್‌ಎಸ್ ಘಟಕದ ಮೂಲಕ ಜನರಲ್ಲಿ ಅರಿವು ಮೂಡಿಸುವ ಹಾಗೂ ಸ್ವಚ್ಛತಾ ಕಾರ್ಯ ನಡೆಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಾಂಶುಪಾಲ ಎನ್. ಆನಂದ್ ಮಾತನಾಡಿ, ದೊಡ್ಡದಾದ ನಮ್ಮ ದೇಶದಲ್ಲಿ ಪ್ರತೀ ಸ್ಥಳದಲ್ಲೂ ಸ್ವಚ್ಛತೆ ಕಾಯ್ದುಕೊಳ್ಳಬೇಕಾದರೆ ಜನರ ಸಹಭಾಗಿತ್ವ ಮುಖ್ಯ. ಈ ನಿಟ್ಟಿನಲ್ಲಿ ಸರ್ಕಾರ ಜಾಗೃತಿ ಮೂಡಿಸುತ್ತಿದ್ದು, ಬದಲಾವಣೆಯ ನೋಟ ಕಾಣುತ್ತಿದೆ. ಆದರೂ, ಕ್ರಮಿಸಬೇಕಾದ ಹಾದಿಯೂ ಸಾಕಷ್ಟಿದೆ. ಸ್ವಚ್ಛತೆ ಎಂಬುದು ಕೇವಲ ಆಚರಣೆ ಅಥವಾ ಕಾಟಾಚಾರವಾಗಬಾರದು, ಅದು ಸ್ವಭಾವವಾಗಿ ಬದಲಾದಾಗ ದೇಶದ ಚಿತ್ರಣವನ್ನೇ ಬದಲಾಯಿಸಬಹುದು. ನಮ್ಮ ಊರಿನಿಂದ ನಾವು ಈ ಕೆಲಸವನ್ನು ಪ್ರಾರಂಭಿಸೋಣ ಎಂದು ನುಡಿದರು.
ಕಾಲೇಜು ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಯಲ್ಲಿ ಸ್ವಚ್ಛತೆ ಕುರಿತಂತೆ ಘೋಷಣೆಗಳನ್ನು ಕೂಗುತ್ತಾ ಜಾಥಾ ನಡೆಸಿದರು.
ಉಪನ್ಯಾಸಕರಾದ ಶಿವಾರೆಡ್ಡಿ, ದೀಪಕ್, ಡಿ.ಲಕ್ಷ್ಮಯ್ಯ, ವೆಂಕಟಶಿವಾರೆಡ್ಡಿ, ಶ್ರೀನಿವಾಸಾಚಾರಿ, ಮಂಗಳಗೌರಿ ಹಾಜರಿದ್ದರು.
ನಾಯಿಗಳ ದಾಳಿಗೆ ಒಳಗಾದ ಕೃಷ್ಣಮೃಗ ಮರಿಯ ರಕ್ಷಣೆ
ನಗರದ ಹೊರವಲಯದ ಇದ್ಲೂಡು ಬಳಿ ನಾಯಿಗಳ ದಾಳಿಗೆ ಒಳಗಾದ ಕೃಷ್ಣಮೃಗ ಮರಿಯನ್ನು ಇದ್ಲೂಡು ನಾಗೇಶ್ ಮತ್ತು ಜನಾರ್ಧನ ರಕ್ಷಿಸಿದ್ದಾರೆ.
ಸೋಮವಾರ ಮುಂಜಾನೆ ಇದ್ಲೂಡಿನ ಸಮೀಪ ತೋಪುಗಳ ಕಡೆಯಿಂದ ಬಂದ ಕೃಷ್ಣಮೃಗಗಳ ಹಿಂಡಿನ ಮೇಲೆ ನಾಯಿಗಳು ಆಕ್ರಮಣ ಮಾಡಿವೆ. ಕೆಲವು ತಪ್ಪಿಸಿಕೊಂಡಿವೆಯಾದರೂ ಮರಿಯೊಂದು ಸಿಲುಕಿದೆ. ಅಷ್ಟರಲ್ಲಿ ಅವನ್ನು ಕಂಡ ಇದ್ಲೂಡು ನಾಗೇಶ್ ಮತ್ತು ಜನಾರ್ಧನ ನಾಯಿಗಳನ್ನು ಓಡಿಸಿ ಮರಿಯನ್ನು ರಕ್ಷಿಸಿದ್ದಾರೆ. ನಿತ್ರಾಣಗೊಂಡಿದ್ದ ಮರಿಯನ್ನು ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಅರಣ್ಯ ಇಲಾಖೆಯ ಅರಣ್ಯರಕ್ಷಕ ಹುಸೇನಿ ನಿಂಬಾಳ್ ಅವರಿಗೆ ಒಪ್ಪಿಸಿದ್ದಾರೆ.
ಅರಣ್ಯರಕ್ಷಕ ಹುಸೇನಿ ನಿಂಬಾಳ್ ಪಶು ವೈದ್ಯರ ಸಲಹೆಯಂತೆ ಮರಿಗೆ ಹಾಲನ್ನು ನೀಡಿ ಸಲಹುತ್ತಿದ್ದಾರೆ.
‘ಬಹಳ ಸುಸ್ತಾಗಿದ್ದ ಹೆಣ್ಣು ಕೃಷ್ಣಮೃಗದ ಮರಿಯನ್ನು ಕೆಲವು ನಾಗರಿಕರು ತಂದು ಕೊಟ್ಟು. ವೈದ್ಯರ ಸಲಹೆಯಂತೆ ಅದಕ್ಕೆ ಹಾಲು ನೀಡುತ್ತಿದ್ದೇವೆ. ಚೇತರಿಸಿಕೊಂಡ ಮೇಲೆ ಕಾಡಿಗೆ ಬಿಡುತ್ತೇವೆ. ಅಕಸ್ಮಾತ್ ಹುಷಾರು ತಪ್ಪಿದರೆ ಮತ್ತೊಮ್ಮೆ ವೈದ್ಯರ ಬಳಿ ಚಿಕಿತ್ಸೆ ಕೊಡಿಸುತ್ತೇವೆ. ಸಾರ್ವಜನಿಕರು ಈ ರೀತಿ ಕಾಳಜಿ ವಹಿಸುವುದು ಅಭಿನಂದನೀಯ’ ಎಂದು ಅರಣ್ಯರಕ್ಷಕ ಹುಸೇನಿ ನಿಂಬಾಳ್ ತಿಳಿಸಿದರು.
ಪಾದಚಾರಿ ಮಾರ್ಗದಲ್ಲಿದ್ದ ವ್ಯಾಪರಿಗಳ ತೆರವು ಕಾರ್ಯಾಚರಣೆ
ನಗರದಲ್ಲಿ ಪಾದಚಾರಿ ಮಾರ್ಗದಲ್ಲಿ ಅನಧಿಕೃತವಾಗಿ ಇಡಲಾಗಿದ್ದ ನಾಮಫಲಕಗಳು ಹಾಗೂ ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡುತ್ತಿದ್ದ ಫುಟ್‌ಪಾತ್ ವ್ಯಾಪಾರಿಗಳನ್ನು ನಗರ ಠಾಣೆ ಪೊಲೀಸರು ಸೋಮವಾರ ತೆರವುಗೊಳಿಸಿದರು.
ನಗರದ ಬಸ್ ನಿಲ್ದಾಣದಿಂದ ದಿಬ್ಬೂರಹಳ್ಳಿಗೆ ಸಂಪರ್ಕ ಕಲ್ಪಿಸುವ ಪ್ರವಾಸಿ ಮಂದಿರ ರಸ್ತೆಯ ಇಕ್ಕೆಲಗಳಲ್ಲಿ ರಸ್ತೆಯ ಸುಗಮ ಸಂಚಾರಕ್ಕೆ ಅನುಕೂಲ ಮಾಡುವ ನಿಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಒಂದೆರಡು ದಿನಗಳ ಹಿಂದೆಯೇ ಅಂಗಡಿಗಳವರಿಗೆ ಮಾಹಿತಿ ನೀಡಿ ರಸ್ತೆಯ ಮೇಲೆ ಅಂಗಡಿ ಸಾಮಾನುಗಳು ಇಡಬಾರದೆಂದು ತಿಳಿಸಿದ್ದರು.
ಸೋಮವಾರ ಫುಟ್‌ಪಾತ್ ತೆರವು ಕಾಮಗಾರಿಗೆ ಚಾಲನೆ ನೀಡಿದ ನಗರಠಾಣೆ ಪೊಲೀಸರು ಬಸ್ ನಿಲ್ದಾಣದಿಂದ ಪ್ರಥಮದರ್ಜೆ ಕಾಲೇಜಿನವರೆಗಿನ ಫುಟ್ ಪಾತ್ ಮೇಲಿನ ಅಂಗಡಿ ಮುಂಗಟ್ಟು ಹಾಗೂ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸದಂತೆ ನಾಗರಿಕರಲ್ಲಿ ಮನವಿ ಮಾಡಿದರು.
ನಗರಠಾಣೆ ಪಿಎಸ್ಸೈ ಲಿಯಾಖತ್ ಮಾತನಾಡಿ, ನಗರದ ಮುಖ್ಯರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ಮಾಡುವುದು ಮತ್ತು ಬಹುತೇಕ ಅಂಗಡಿಗಳವರು ತಮ್ಮ ಅಂಗಡಿ ಸರಕನ್ನು ಅಂಗಡಿಯಿಂದ ಹೊರಗಡೆ ರಸ್ತೆಯಲ್ಲಿ ಹಾಕುವುದರಿಂದ ನಗರದ ಮುಖ್ಯರಸ್ತೆಗಳಲ್ಲಿ ಸಂಚರಿಸುವುದು ಕಷ್ಟಕರವಾಗುತ್ತದೆ. ಈ ಬಗ್ಗೆ ಹಲವಾರು ಭಾರಿ ನಗರಸಭೆಗೆ ಮನವಿ ಮಾಡಲಾಗಿತ್ತಾದರೂ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ ಹಾಗಾಗಿ ನಮ್ಮದೇ ಸಿಬ್ಬಂದಿಯೊಂದಿಗೆ ಫುಟ್‌ಪಾತ್ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಪಾದಚಾರಿ ಮಾರ್ಗದಲ್ಲಿ ಯಾವುದೇ ನಾಮಫಲಕಗಳನ್ನು ಇಡದೇ ಪಾದಚಾರಿಗಳು ಸಂಚರಿಸಲು ಅಂಗಡಿ ಮಾಲೀಕರು ಸೇರಿದಂತೆ ಸಾರ್ವಜನಿಕರು ಸಹಕರಿಸಬೇಕು ಎಂದರು.
ಶ್ರೀ ಸಾಯಿನಾಥ ಜ್ಞಾನಮಂದಿರದಲ್ಲಿ ಶತಮಾನೋತ್ಸವ ಪೂಜಾ ಕಾರ್ಯಕ್ರಮ
ತಾಲ್ಲೂಕಿನ ಮಳ್ಳೂರು ಸಮೀಪದ ಶ್ರೀ ಸಾಯಿನಾಥ ಜ್ಞಾನಮಂದಿರದಲ್ಲಿ ನಡೆಯುತ್ತಿರುವ ಶತಮಾನೋತ್ಸವ ಪೂಜಾ ಕಾರ್ಯಕ್ರಮದಲ್ಲಿ ಶನಿವಾರ ಭಾಗವಹಿಸಿ ಕೈವಾರ ಧರ್ಮದರ್ಶಿ ಜಯರಾಮ್ ಮಾತನಾಡಿದರು.
ಯಾವುದೇ ವ್ಯಕ್ತಿಯಾದರು ಸರಿ ಜನಿಸಿದ ಮೇಲೆ ತನ್ನನು ತಾನು ಗುರುವಿಗೆ ಸಮರ್ಪಿಸಿಕೊಳ್ಳದಿದ್ದರೆ ಅಥವಾ ಶರಣಾಗತನಾಗದಿದ್ದರೆ ಆತನಿಗೆ ಮುಕ್ತಿ ಹಾಗೂ ಜೀವನದ ಏಳಿಗೆಗಳೇ ಇರುವುದಿಲ್ಲ ಎಂಬ ಅಂಶವನ್ನು ಶಿರಡಿ ಸಾಯಿಬಾಬಾ ಬಲವಾಗಿ ನಂಬಿದ್ದರು ಮತ್ತು ಅದನ್ನೇ ಬೋದಿಸುತ್ತಿದ್ದರು. ದುರ್ಗುಣಗಳಿಗೆ ವಿಮುಖರಾಗಿ ಆತ್ಮ ಸಾಕ್ಷಾತ್ಕಾರಕ್ಕೆ ಮೊದಲಾಗಿ ಎಂಬುದೇ ಸಾಯಿಬಾಬ ತಮ್ಮ ಜೀವಿತಾವಧಿಯಲ್ಲಿ ಭಕ್ತರಿಗೆ ಕೊಡುತ್ತಿದ್ದ ಒಂದು ಮುಖ್ಯ ಉಪದೇಶ.
ಜಗತ್ತಿನಲ್ಲಿ ಸಾಕಷ್ಟು ಮಂದಿ ಅವಧೂತರಿದ್ದಾರೆ. ಅವರೆಲ್ಲರನ್ನು ಅನುಸರಿಸಲು ಆಗದಿದ್ದರೂ, ಕೆಲವರದ್ದಾದರೂ ಧ್ಯೇಯ ಹಾಗೂ ತತ್ವಗಳನ್ನು ಪಾಲಿಸಿದರೆ ಒಳಿತು ಎಂದು ಅವರು ತಿಳಿಸಿದರು.
ಬಾಬಾರವರು ತಮ್ಮ ಜೀವಿತಾವಧಿಯಲ್ಲಿ ಯಾವುದೇ ಒಂದು ಜಾತಿಗಾಗಲಿ ಅಥವಾ ಧರ್ಮಕ್ಕಾಗಲಿ ಬೆಲೆ ಕೊಟ್ಟವರಲ್ಲ. ಅವರು ಕೊಡುತ್ತಿದ್ದ ಬೆಲೆ ಒಂದೇ ಒಂದು ಧರ್ಮಕ್ಕೆ ಮಾತ್ರ. ಅದು ‘ಮನುಷ್ಯ’ ಧರ್ಮ. ಹೀಗಾಗಿ ಅವರ ವ್ಯಕ್ತಿತ್ವ ಧರ್ಮಾತೀತ ಹಾಗೂ ಜಾತ್ಯಾತೀತ. ಅವರು ಭಕ್ತರಿಗೆ ಬೋಧಿಸುತ್ತಿದ್ದ ಅಂಶಗಳು ಹಿಂದೂ ಮತ್ತು ಮುಸ್ಲಿಂ ಧರ್ಮಗಳ ತತ್ವಗಳಿಂದ ಪಕ್ವವಾಗಿ ಮನುಕುಲದ ಏಳಿಗೆಗೆ ಮಾರ್ಗದರ್ಶಿಗಳಾಗಿದ್ದವು. ನಾವೀಗ ಅವನ್ನು ಪಾಲಿಸಿದರೆ ಸತ್ಪ್ರಜೆಗಳಾಗುತ್ತೇವೆ, ಸಮಾಜವೂ ಏಳಿಗೆಯಾಗುತ್ತದೆ ಎಂದರು.
ಬೆಂಗಳೂರಿನ ಸೃಷ್ಟಿ ಆರ್ಟ್ ಫೌಂಡೇಶನ್‌ನ ವೇದಾ ದೀಕ್ಷಿತ್ ವೆಲ್ಲಾಬ್ ಅವರ 20 ಮಂದಿ ಶಿಷ್ಯರು ಭರತನಾಟ್ಯ ನೃತ್ಯವನ್ನು ಪ್ರದರ್ಶಿಸಿದರು.
ಶ್ರೀ ಸಾಯಿನಾಥ ಜ್ಞಾನಮಂದಿರ ದೇವಾಲಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ಸೇವಾಕರ್ತರಾದ ಮೇಲೂರು ಎಸ್.ವಿ.ರಾಮಕೃಷ್ಣಪ್ಪ, ಕೆ.ಸೀತಾರಾಮರೆಡ್ಡಿ, ಎಂ.ಎನ್.ಗೋಪಾಲಪ್ಪ, ವೀಣಾದೇವಿ, ರತ್ನಮ್ಮ, ಪ್ರಮೀಳಾ, ದಿನದ ಪೂಜಾ ಸೇವಾಕರ್ತವಾದ ಎಸ್.ಎನ್.ಸುರೇಶ್, ನಾಗರತ್ನ, ಸನತ್ ಶ್ರೀನಾಥ್, ನಾಗಮಣಿ ಹಾಜರಿದ್ದರು.
ಉತ್ತಮ ಪ್ರಶಸ್ತಿ ಪಡೆದ ತಾಲ್ಲೂಕಿನ ಶಿಕ್ಷಕರುಗಳಿಗೆ ಸನ್ಮಾನ ಕಾರ್ಯಕ್ರಮ
ತಾಲ್ಲೂಕಿನ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ತಾಲ್ಲೂಕು ಕಸಾಪ ವತಿಯಿಂದ ನಡೆದ ‘ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಉತ್ತಮ ಪ್ರಶಸ್ತಿ ಪಡೆದ ತಾಲ್ಲೂಕಿನ ಶಿಕ್ಷಕರುಗಳಿಗೆ ಸನ್ಮಾನ ಕಾರ್ಯಕ್ರಮ’ ದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಬೆಳವಣಿಗೆಯ ಸಮಯದ ಹೆಚ್ಚಿನ ಅವಧಿಯನ್ನು ಶಾಲೆ ಮತ್ತು ಕಾಲೇಜಿನಲ್ಲಿಯೇ ಕಳೆಯುವುದರಿಂದ ಅವರ ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಕರು ಮಹತ್ವದ ಪಾತ್ರವನ್ನು ವಹಿಸುತ್ತಾರೆ ಎಂದು ಅವರು ತಿಳಿಸಿದರು.
ಶಿಕ್ಷಕರು ತರಗತಿಯಲ್ಲಿ ಮಕ್ಕಳನ್ನು ಶಾಂತಿಯಿಂದ ಹಾಗೂ ಪಠ್ಯವಿಷಯಗಳಲ್ಲಿ ಆಸಕ್ತಿಯಿಂದ ಕಲಿಯುವಿಕೆಗೆ ಪ್ರೇರೇಪಿಸಬೇಕೆ ಹೊರತು ಅವರು ಸಾಕಪ್ಪಾ ಈ ಶಾಲೆಯ ಸಹವಾಸ ಎಂದು ತರಗತಿ ಬಿಟ್ಟು ಹೋಗುವಂತಿರಬಾರದು. ಶಿಕ್ಷಕರಾದವರ ಮೊದಲ ಕರ್ತವ್ಯವೇನೆಂದರೆ ವಿಷಯಗಳ ಬಗ್ಗೆ ಸೂಕ್ತಜ್ಞಾನವನ್ನು ಹೊಂದಿರಬೇಕು ಹಾಗೂ ತರಗತಿಯ ಅವಶ್ಯಕತೆಗೆ ಹಾಗೂ ಮಗುವಿನ ಆಸಕ್ತಿಗೆ ಪೂರಕವಾಗಿ ಶಿಕ್ಷಣವನ್ನು ನೀಡುವ ಪ್ರಯತ್ನವನ್ನು ಮಾಡಬೇಕು ಎಂದು ಹೇಳಿದರು.
ತಾಲ್ಲೂಕು ಕಸಾಪ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ನಮ್ಮ ತಾಲ್ಲೂಕಿನಲ್ಲಿ 157 ಸರ್ಕಾರಿ ಶಾಲೆಗಳು ಮಕ್ಕಳ ಕೊರತೆಯನ್ನು ಅನುಭವಿಸುತ್ತಾ ಮುಚ್ಚುವ ಹಂತಕ್ಕೆ ಬಂದಿರುವ ಆಘಾತಕಾರಿ ವಿಷಯ ಒಂದೆಡೆಯಾದರೆ, ಮತ್ತೊಂದೆಡೆ ಐವರು ಶಿಕ್ಷಕರು ಈ ಬಾರಿ ಪ್ರಶಸ್ತಿಯನ್ನು ಪಡೆಯುವ ಮೂಲಕ ನಮಗೆಲ್ಲಾ ಹೆಮ್ಮೆಯನ್ನು ತಂದಿದ್ದಾರೆ. ಒಟ್ಟಾರೆ ಉತ್ತಮ ಶಿಕ್ಷಕರಿದ್ದಾರೆ, ಅವರಿಗೆ ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ. ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ನಾವೆಲ್ಲಾ ಪಣ ತೊಡೋಣ. ಗ್ರಾಮೀಣ ಭಾಗದಲ್ಲಿ ಮುಖ್ಯವಾಗಿ ಸರ್ಕಾರಿ ಶಾಲೆಗಳ ಅವಶ್ಯಕತೆಯಿದೆ. ಬಡವರು, ಕೂಲಿ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಬೇಕೇ ಬೇಕು. ಎಲ್ಲರಿಗೂ ಶಿಕ್ಷಣ ದೊರಕಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಚೀಮಂಗಲ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಡಾ.ಎಂ.ಶಿವಕುಮಾರ್ ಮಾತನಾಡಿ, ಪ್ರಶಸ್ತಿಯನ್ನು ಈಗ ಆನ್‌ಲೈನ್ ಮೂಲಕ ಸಲ್ಲಿಸುವ ವ್ಯವಸ್ಥೆ ಮಾಡಿರುವುದರಿಂದ ಪಾರದರ್ಶಕವಾಗಿದೆ. ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಶಿಕ್ಷಕರಿಗೆ ಪ್ರಶಸ್ತಿಗಳು ಉತ್ತೇಜನ ನೀಡುತ್ತವೆ. ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದು ನುಡಿದರು.
ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಪುರಸ್ಕೃತ ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಡಾ.ಎಂ.ಶಿವಕುಮಾರ್, ವೈಜ್ಞಾನಿಕ ಕ್ಷೇತ್ರದಲ್ಲಿ ವಿಶೇಷ ಶಿಕ್ಷಕ ರಾಜ್ಯ ಪ್ರಶಸ್ತಿ ಪುರಸ್ಕೃತ ಅಮ್ಮಗಾರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿ ಎಚ್.ಜಿ.ಚಂದ್ರಕಲಾ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಟಿ.ವೆಂಕಟಾಪುರ ಶಾಲೆಯ ಶಿಕ್ಷಕ ಸಿ.ವೆಂಕಟರೆಡ್ಡಿ, ಮಳ್ಳೂರು ಶಾಲೆಯ ಎಂ.ಸೀನಪ್ಪ ಮತ್ತು ಸರಸ್ವತಿ ಕಾನ್ವೆಂಟ್ ಪ್ರೌಢಶಾಲೆಯ ಜಿ.ಎನ್.ಶಿವಣ್ಣ ಅವರನ್ನು ತಾಲ್ಲೂಕು ಕಸಾಪ ವತಿಯಿಂದ ಸನ್ಮಾನಿಸಲಾಯಿತು.
ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿಗಳಾದ ಸತೀಶ್, ಚಾಂದ್‌ಪಾಷ, ಖಜಾಂಚಿ ಸುಧೀರ್, ಸುದರ್ಶನ್, ನರಸಿಂಹಮೂರ್ತಿ, ಚಿಕ್ಕಾಂಜಿನಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಮ್ಮ ಕದಿರಪ್ಪ, ಸದಸ್ಯ ದೇವರಾಜ್, ಎಸ್.ವಿ.ನಾಗರಾಜರಾವ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ಮುನಿರಾಜು, ಎಸ್‌ಡಿಎಂಸಿ ಅಧ್ಯಕ್ಷ ಮುನಿಆಂಜಿನಪ್ಪ, ಸ್ನೇಹ ಯುವಕರ ಸಂಘದ ಅಧ್ಯಕ್ಷ ಕೆ.ವಸಂತ ವಲ್ಲಭ ಕುಮಾರ್, ಕಾರ್ಯದರ್ಶಿ ವಾಸುದೇವ್, ಮುಖ್ಯ ಶಿಕ್ಷಕ ಚೌಡರೆಡ್ಡಿ, ಶಿಕ್ಷಕರಾದ ಜೆ.ಶ್ರೀನಿವಾಸ್, ಕೆ.ಎಸ್.ಶಿವಶಂಕರ್, ಎಸ್.ಕಲಾಧರ್, ಟಿ.ಜೆ.ಸುನೀತಾ, ಪದ್ಮಾವತಿ ಹಾಜರಿದ್ದರು.
ಸಾರಿಗೆ ಬಸ್ ಡಿಪೋ ಸ್ಥಳಕ್ಕೆ ಗ್ರಾಮಸ್ಥರ ಅಡ್ಡಿ
ತಾಲ್ಲೂಕಿನ ಹಿತ್ತಲಹಳ್ಳಿ ಬಳಿ ಸಾರಿಗೆ ಬಸ್ ಡಿಪೋ ನಿರ್ಮಿಸಲು ಗುರುತಿಸಿರುವ ಜಾಗದ ಬಳಿ ಸ್ವಚ್ಛತೆ ಮಾಡಲು ಗುರುವಾರ ಇಲಾಖೆಯ ಅಧಿಕಾರಿಗಳು ಬಂದಾಗ ಕೆಲ ಗ್ರಾಮಸ್ಥರು ಅದಕ್ಕೆ ಅಡ್ಡಿಪಡಿಸಿದರು.
‘ಇಲ್ಲಿ ನಮ್ಮ ಜಮೀನು, ಸ್ಮಶಾನಕ್ಕೆ ತೆರಳಲು ದಾರಿ ಇದೆ. ಅದನ್ನು ಹೊರತುಪಡಿಸಿ ಉಳಿದ ಜಾಗದಲ್ಲಿ ಡಿಪೋ ಕಾರ್ಯ ನಡೆಸಿ. ನಿಮ್ಮ ಕೆಲಸದಿಂದ ನಮ್ಮ ಹೊಲ, ಜಮೀನುಗಳಿಗೆ ಹೋಗುವ ದಾರಿ ಮುಚ್ಚಿಹೋಗಲಿದೆ’ ಎಂದು ಅಧಿಕಾರಿಗಳ ಮುಂದೆ ತಕರಾರು ತೆಗೆದಿದ್ದಾರೆ. ಡಿಪೋ ಆಗುವುದರಿಂದ ಆಗುವ ಅನುಕೂಲಗಳ ಬಗ್ಗೆ ಅಧಿಕಾರಿಗಳು ಸಾಕಷ್ಟು ವಿವರಿಸಿದರೂ ಪ್ರಯೋಜನವಾಗಲಿಲ್ಲ.
ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ವಿಜಯ್‌ರೆಡ್ಡಿ, ಈ ಸ್ಥಳದ ಸರ್ವೆ ಕಾರ್ಯವನ್ನು ಮಾಡಿಸಿ ಡಿಪೋ ಸ್ಥಳ, ಜಮೀನುಗಳಿಗೆ ಹೋಗುವ ದಾರಿಗಳನ್ನು ಗುರುತಿಸಬೇಕು. ಆನಂತರ ಕಾಮಗಾರಿ ಪ್ರಾರಂಭಿಸಿ. ತಕರಾರು ತೆಗೆದವರು ತಮ್ಮ ದಾಖಲೆಗಳನ್ನು ಒದಗಿಸಿ ಎಂದು ಇಬ್ಬರನ್ನೂ ಸಮಾಧಾನಗೊಳಿಸಿದರು.
ವಾಲ್ಮೀಕಿ ಯುವಕ ಸಂಘದ ಅಧ್ಯಕ್ಷ ಮೇಲೂರು ಗಿರೀಶ್ ನಾಯಕ್, ಬೆಳ್ಳೂಟಿ ಆನಂದ್, ಟಿ.ಆನಂದ್, ನರಸಿಂಹಪ್ಪ, ಹಿತ್ತಲಹಳ್ಳಿ ಗಣೇಶ್, ಉಗ್ರಪ್ಪ ಹಾಜರಿದ್ದರು.
ಕಸಾಪ ನಡಿಗೆ ಸಾಧಕರ ಕಡೆಗೆ ಕಾರ್ಯಕ್ರಮ
ತಾಲ್ಲೂಕಿನ ಘಟಮಾರನಹಳ್ಳಿಯ ಕೃಷಿ ಪಂಡಿತ ಪುರಸ್ಕೃತ ರೈತ ಜಿ.ಬಿ.ಆಂಜಿನಪ್ಪ ಅವರ ಮನೆಯಲ್ಲಿ ತಾಲ್ಲೂಕು ಕಸಾಪ ವತಿಯಿಂದ ಆಯೋಜಿಸಿದ್ದ ‘ಕಸಾಪ ನಡಿಗೆ ಸಾಧಕರ ಕಡೆಗೆ’ ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್ ಮಾತನಾಡಿದರು.
ಮಣ್ಣಿನ ಬದುಕು ಮುಖ್ಯವೆಂದು ನೆಲದ ಪ್ರೀತಿಯಿಂದ ಬದುಕುವ ರೈತ ಸಾಮಾನ್ಯರೇ ಶ್ರೀಮಾನ್ಯರು ಎಂದು ಅವರು ತಿಳಿಸಿದರು.
ನೆಲ ಮೂಲದ ಕೊಂಡಿ ಕಳಚುತ್ತಿದೆ. ಅಕ್ಷರ ಓದಿದ ತಲೆಮಾರು ಕಾಂಕ್ರೀಟ್ ನೀತಿಗೆ ಸರಿಯುತ್ತಿರುವ ಈ ಹೊತ್ತಿನಲ್ಲಿ ರೈತರನ್ನು ಗುರುತಿಸಿ ಗೌರವಿಸುವ ಪ್ರೋತ್ಸಾಹಿಸುವ ಕೆಲಸ ಅತ್ಯಂತ ಜರೂರಾದದ್ದು. ಈ ಕೆಲಸವನ್ನು ಕಸಾಪ ಕೈಗೆತ್ತುಕೊಂಡಿದೆ. ಇದೂ ಕೂಡ ಕನ್ನಡದ ಕೆಲಸವೇ ಆಗಿದೆ. ಎಳೆ ತಲೆಮಾರಿಗೆ ಕೃಷಿ ಜ್ಞಾನವನ್ನು ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಎಲೆ ಮರೆಯ ಕಾಯಿಗಳಂತಿರುವ ಎಲ್ಲಾ ಕ್ಷೇತ್ರಗಳ ಸಾಧಕರನ್ನು ಗುರುತಿಸುವ ಪ್ರಯತ್ನಕ್ಕೆ ನಾವು ‘ಕಸಾಪ ನಡಿಗೆ ಸಾಧಕರ ಕಡೆಗೆ’ ಎಂದು ಹೆಸರಿಟ್ಟಿದ್ದೇವೆ. ತಮ್ಮ ಪಾಡಿಗೆ ತಾವು ತಮ್ಮತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿಕೊಂಡಿರುವವರನ್ನು ಗುರುತಿಸಿ ಗೌರವಿಸುವ ಮೂಲಕ ಇತರರಿಗೆ ಪ್ರೇರಣೆ ನೀಡಿದಂತಾಗುತ್ತದೆ ಎಂದರು.
ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ಹಳ್ಳಿಯ ಒಬ್ಬೊಬ್ಬ ಹಿರಿಯರೂ ಕೃಷಿ ಜ್ಞಾನವನ್ನು ಹೊಂದಿರುವ ಪದಕೋಶದಂತೆ. ಅವರ ಅನುಭವ ಜ್ಞಾನಕ್ಕೆ ಮನ್ನಣೆ ನೀಡಬೇಕು. ಕೃಷಿ ತಳಿಗಳನ್ನು ಉಳಿಸಿಕೊಳ್ಳುವಂತೆ ಈ ಹಿರಿಯರ ಜ್ಞಾನವನ್ನು ಸಹ ಉಳಿಸಿಕೊಳ್ಳಬೇಕಿದೆ. ಪರಂಪರೆಯ ಕೃಷಿ ಜ್ಞಾನವನ್ನು ಮರೆತರೆ ನಮ್ಮ ಹಳ್ಳಿಗಳು ಬಡವಾಗುತ್ತವೆ ಎಂದು ನುಡಿದರು.
ರೈತ ಮತ್ತು ಯೋಧ ಎರಡು ಕಣ್ಣುಗಳಂತೆ ಇಬ್ಬರನ್ನೂ ಗೌರವಿಸುವ ಸಂಸ್ಕಾರ ನಮ್ಮದು. ಕಸಾಪ ಕೂಡ ಈ ಸಂಸ್ಕಾರದ ಪ್ರತೀಕವಾಗಿ ಇಬ್ಬರೆಡೆಗೂ ಗೌರವವನ್ನು ಹೊಂದಿದೆ ಎಂದರು.
ಸಮಗ್ರ ಕೃಷಿ ಪದ್ಧತಿ ಹಾಗೂ ಬೆಳೆ ವೈವಿದ್ಧೀಕರಣ ವಿಭಾಗದಲ್ಲಿ 2013–14ನೇ ಸಾಲಿನ ‘ಕೃಷಿ ಪಂಡಿತ’ ಪ್ರಶಸ್ತಿ ಪುರಸ್ಕೃತ ತಾಲ್ಲೂಕಿನ ಘಟಮಾರನಹಳ್ಳಿಯ ಪ್ರಗತಿಪರ ರೈತ ಜಿ.ಬಿ.ಆಂಜಿನಪ್ಪ ಅವರನ್ನು ತಾಲ್ಲೂಕು ಕಸಾಪ ವತಿಯಿಂದ ಗೌರವಿಸಲಾಯಿತು.
ಕಸಾಪ ಜಿಲ್ಲಾ ಘಟಕದ ಕೋಶಾಧಿಕಾರಿ ನಂಜುಂಡಪ್ಪ, ಜಂಗಮಕೋಟೆ ಹೋಬಳಿ ಘಟಕದ ಅಧ್ಯಕ್ಷ ಜಗದೀಶ್‌ಬಾಬು, ಶಂಕರ್, ರಾಮಚಂದ್ರ, ಮಂಜುನಾಥ, ನರಸಿಂಹಮೂರ್ತಿ, ಜಿ.ವಿ.ಕೆಂಪಣ್ಣ, ಜಿ.ಬಿ.ರಾಜಶೇಖರ, ರಾಜಣ್ಣ, ವೀರೇಂದ್ರಕುಮಾರ್, ರಾಮಾಂಜಿನಪ್ಪ, ಚನ್ನಕೇಶವ, ಪ್ರಕಾಶ್, ಅಶೋಕ, ಕೆ.ಶ್ರೀನಿವಾಸ್, ಶಕುಂತಲಮ್ಮ, ಚಂದ್ರಕಲಾ ಹಾಜರಿದ್ದರು.
ಫಲಾನುಭವಿಗಳಿಗೆ ಅನುದಾನ ವಿತರಣೆ ಕಾರ್ಯಕ್ರಮ
ನಗರದ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ೨೦೧೪-–೧೫ ನೇ ಸಾಲಿನಿಂದ ೨೦೧೭–-೧೮ ನೇ ಸಾಲಿನವರೆಗಿನ ತಾಲ್ಲೂಕು ಪಂಚಾಯಿತಿ ವಿವಿಧ ಯೋಜನೆಗಳಲ್ಲಿ ಶೇ ೩ ರ ಅನುದಾನದಡಿಯಲ್ಲಿ ಒಟ್ಟು ೨೦.೨೫ ಲಕ್ಷ ಅನುದಾನದ ಹಣವನ್ನು ಸುಮಾರು ೨೯೨ ಫಲಾನುಭವಿಗಳಿಗೆ ವಿತರಿಸುವ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ ಮಾತನಾಡಿದರು.
ಸರ್ಕಾರದಿಂದ ಸಿಗುವಂತಹ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಲು ಅಂಗವಿಕಲರು ಪ್ರಯತ್ನ ಮಾಡಬೇಕು ಎಂದು ಅವರು ತಿಳಿಸಿದರು.
ಸರ್ಕಾರದಿಂದ ಬಿಡುಗಡೆಯಾಗುವಂತಹ ಅನುದಾನಗಳಲ್ಲಿ ಶೇ ೩ ರ ಅನುದಾನವನ್ನು ಪ್ರತ್ಯೇಕಿಸಿ ಅಂಗವಿಕಲರಿಗೆ ವಿತರಣೆ ಮಾಡಲಾಗುತ್ತಿದೆ. ಸರ್ಕಾರಿ ಸವಲತ್ತುಗಳ ಕುರಿತು ಇಲಾಖೆಯ ಅಧಿಕಾರಿಗಳು ಜಾಗೃತಿ ಮೂಡಿಸಬೇಕು. ಒಂದೇ ಹಂತದಲ್ಲಿ ಎಲ್ಲರಿಗೂ ವಿತರಣೆ ಮಾಡಲಿಕ್ಕೆ ಸಾಧ್ಯವಿಲ್ಲದ ಕಾರಣ ಹಂತ ಹಂತವಾಗಿ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ.ವೆಂಕಟೇಶ್ ಮಾತನಾಡಿ, ೨೦೧೪-–೧೫ ಸಾಲಿನಿಂದ ೨೦೧೭-–೧೮ ನೇ ಸಾಲಿನವರೆಗೂ ಶೇ ೩ ರ ಅನುದಾನದಲ್ಲಿ ಸುಮಾರು ೨೦ ಲಕ್ಷ ೨೫ ಸಾವಿರ ಹಣದ ಕ್ರಿಯಾಯೋಜನೆ ರೂಪಿಸಲಾಗಿದೆ. ಇದರಲ್ಲಿ ಶಿಕ್ಷಣವಲಯಕ್ಕಾಗಿ ಶೇ ೩೦ ರಷ್ಟು, ಸಾಮಾಜಿಕ ವಲಯಕ್ಕೆ ಶೇ ೨೦ ರಷ್ಟು, ಜೀವನಾಧಾರ ಶೇ ೨೦ ರಷ್ಟು, ವೈದ್ಯಕೀಯ ಪುನರ್ವಸತಿಗಾಗಿ ಶೇ ೨೦ ರಷ್ಟು ಹಣವನ್ನು ವರ್ಗೀಕರಿಸುವ ಮೂಲಕ ಅನುದಾನಗಳನ್ನು ವಿನಿಯೋಗ ಮಾಡಲಾಗುತ್ತಿದೆ. ಮುಂಬರುವ ವರ್ಷಗಳಲ್ಲಿ ಸರ್ಕಾರದಿಂದ ಬಿಡುಗಡೆಯಾಗುವಂತಹ ಅನುದಾನಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಲು ಕ್ರಮ ಜರುಗಿಸಲಾಗುವುದು ಎಂದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಮುನಿಯಪ್ಪ ಮಾತನಾಡಿ, ಸರ್ಕಾರದಿಂದ ಬರುವ ಅನುದಾನಗಳಲ್ಲಿ ಶೇ ೩ ರಷ್ಟು ಹಣವನ್ನು ಅಂಗವಿಕಲರಿಗಾಗಿ ಮೀಸಲಿಡಬೇಕು ಎಂಬ ನಿಯಮವಿದ್ದರೂ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಈ ಹಣವನ್ನು ಮೀಸಲಿರಿಸದೇ ರಸ್ತೆ, ಬೀದಿ ದ್ವೀಪ ಕಾಮಗಾರಿಗಳಿಗೆ ಅಳವಡಿಸುವುದು ರೂಢಿಯಿದೆ. ಈ ಬಗ್ಗೆ ಅಧಿಕಾರಿಗಳು ಎಚ್ಚರವಹಿಸಿ ಅಂಗವಿಕಲರಿಗಾಗಿ ಮೀಸಲಿರುವ ಹಣವನ್ನು ಅವರ ಕಲ್ಯಾಣಕ್ಕೆ ಉಪಯೋಗಿಸಲು ಮುಂದಾಗಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯರಾದ ಕೆ.ಲಕ್ಷ್ಮೀನಾರಾಯಣರೆಡ್ಡಿ, ಎಚ್.ನರಸಿಂಹಯ್ಯ, ಶ್ರೀನಿವಾಸ್, ಚಂದ್ರಕಲಾ, ಶೋಭಾ, ಶಂಕರಮ್ಮ, ದೀಪಾ, ನಾಗವೇಣಿ, ನಾಗರಾಜ್, ನರಸಿಂಹಪ್ಪ, ರಾಜಶೇಖರ್, ನರೇಗಾ ಸಹಾಯಕ ನಿರ್ದೇಶಕ ಸಿ.ಎಸ್.ಶ್ರೀನಾಥ್‌ಗೌಡ, ಮುಖಂಡರಾದ ಮಾರಪ್ಪ, ರಾಂಬಾಬು ಹಾಜರಿದ್ದರು.
ಮೇಲೂರಿನಲ್ಲಿ ವಿಷ್ಣುವರ್ಧನ್ ಹುಟ್ಟುಹಬ್ಬ ಆಚರಣೆ
ವಿಷ್ಣುವರ್ಧನ್ ಅವರ ಪ್ರತಿಯೊಂದು ಚಿತ್ರಗಳು ಸಹ ಕೌಟುಂಬಿಕ ಪ್ರಧಾನವಾಗಿತ್ತು. ಅವರು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಜತೆಯಲ್ಲೆ ಹೊಸ ಆಯಾಮ ಸೃಷ್ಟಿಸಲು ಕಾರಣವಾಗಿದ್ದರು. ಡಾ.ವಿಷ್ಣುವರ್ಧನ್ ಅವರ ಸಾಧನೆಯ ನೆನಪು ಕೋಟ್ಯಂತರ ಅಭಿಮಾನಿಗಳಲ್ಲಿ ಶಾಶ್ವತವಾಗಿದೆ ಎಂದು ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹಸುರಪ್ಪನವರ ಅರವಿಂದ್ ತಿಳಿಸಿದರು.
ತಾಲ್ಲೂಕಿನ ಮೇಲೂರಿನ ಚಂಗಲರಾಯರೆಡ್ಡಿ ವೃತ್ತದಲ್ಲಿ ಮಂಗಳವಾರ ವಿಷ್ಣುವರ್ಧನ್ ಅಭಿಮಾನಿಗಳು ಕೇಕ್ ಕತ್ತರಿಸಿ, ಅನ್ನಸಂತರ್ಪಣೆ ನಡೆಸುವ ಮೂಲಕ ಸಾಹಸ ಸಿಂಹ ಡಾ ವಿಷ್ಣುವರ್ಧನ್ ಅವರ ಜನ್ಮ ದಿನವನ್ನು ಆಚರಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ವಿಷ್ಣುವರ್ಧನ್ ಅವರು ಕೇವಲ ದಿಗ್ಗಜ ನಟ ಮಾತ್ರವಲ್ಲ, ಅದೇಷ್ಟೋ ಪ್ರತಿಭೆಗಳಿಗೆ ಸ್ಫೂರ್ತಿ. ಅವರ ಜೀವನ ಶೈಲಿ, ಅವರ ನಟನೆಯನ್ನ ನೋಡಿ ಚಿತ್ರರಂಗಕ್ಕೆ ಬಂದವರು ಅನೇಕರು. ಅವರ ಮಾರ್ಗದರ್ಶನದಲ್ಲಿ ಬೆಳೆದವರು ಹಲವರು. ಉತ್ತಮ ನಟನೆಯ ಮೂಲಕ ಅನೇಕರನ್ನು ಪ್ರಭಾವಿಸಿರುವ ಅವರು ತಮ್ಮ ಜೀವನದುದ್ದಕ್ಕೂ ಸಮಾಜಸೇವೆಯಲ್ಲಿ ತೊಡಗಿದ್ದರು ಎಂದು ಹೇಳಿದರು.
ಭಾರತಿ ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಎಂ.ಕೆ.ರವಿಪ್ರಸಾದ್ ಮಾತನಾಡಿ, ಕನ್ನಡಿಗರ ಹೃದಯದಲ್ಲಿ ಸಿಂಹ ಘರ್ಜನೆ ನಿರಂತರವಾಗಿರುತ್ತದೆ. ವಿಷ್ಣುವರ್ಧನ್ ಭಾರತ ಚಿತ್ರರಂಗ ಕಂಡ ಅತ್ಯಂತ ಸ್ಫುರದ್ರೂಪಿ ನಟರಲ್ಲೊಬ್ಬರು, ತಮ್ಮ ಪ್ರತಿಭೆ-, ವ್ಯಕ್ತಿತ್ವದಿಂದಲೇ ಮನೆಮಾತಾದ ನಮ್ಮೆಲ್ಲರ ನಲ್ಮೆಯ ‘ಅಭಿನಯ ಭಾರ್ಗವ’ಡಾ. ವಿಷ್ಣುವರ್ಧನ್ ಅವರ ಪ್ರೀತಿ-ಆದರ್ಶಗಳು ಎಲ್ಲಾ ಪೀಳಿಗೆಗೂ ದಾರಿದೀಪವಿದ್ದಂತೆ ಎಂದರು.
ಶ್ರೀನಿವಾಸ್(ದಾಸ್), ಮಹೇಶ್, ಧರ್ಮೇಂದ್ರ, ಆರ್.ಎ.ಉಮೇಶ್, ಗೋಪಾಲ್ ಹಾಜರಿದ್ದರು.
ವಿಶೇಷ ಅಗತ್ಯವುಳ್ಳ ಮಕ್ಕಳ ಉಚಿತ ವೈದ್ಯಕೀಯ ಮೌಲ್ಯಾಂಕನ ತಪಾಸಣಾ ಶಿಬಿರ
ನಗರದ ಉಲ್ಲೂರುಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ವಿಶೇಷ ಅಗತ್ಯವುಳ್ಳ ಮಕ್ಕಳ ಉಚಿತ ವೈದ್ಯಕೀಯ ಮೌಲ್ಯಾಂಕನ ತಪಾಸಣಾ ಶಿಬಿರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು ಮಾತನಾಡಿದರು.
ಅನುಕಂಪ ತೋರದೆ ಅವಕಾಶ ಮಾಡಿಕೊಟ್ಟು ವಿಶೇಷ ಅಗತ್ಯವುಳ್ಳ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ಸಮಾಜದಲ್ಲಿ ಸಮಾನತೆ ನೀಡಿ ಮುಂದೆ ಬರುವಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಸಮಾಜದಲ್ಲಿ ನಮ್ಮಂತೆ ಬಾಳಿ ಬದುಕಲು ಅಂಗವಿಕಲರಿಗೆ ಅವಕಾಶ ಒದಗಿಸಿಕೊಡಬೇಕು. ದೇವರು ಅವರಲ್ಲಿ ವಿಶಿಷ್ಟವಾದ ಕ್ರೀಯಾಶೀಲತೆಯೊಂದಿಗೆ ಬುದ್ದಿಮತ್ತೆಯನ್ನು ನೀಡಿರುತ್ತಾನೆ. ಹಲವಾರು ಅಂಗವಿಕಲರು ವಿಶ್ವವಿಖ್ಯಾತ ಸಾಧಕರ ಪಟ್ಟಿಯಲ್ಲಿದ್ದಾರೆ. ಇಂತಹ ಹಲವಾರು ಪ್ರತಿಭೆಗಳನ್ನು ಗುರುತಿಸಿ ಸರಿಯಾದ, ಸಮರ್ಪಕ ವೈದ್ಯಕೀಯ ಚಿಕಿತ್ಸೆ ಹಾಗೂ ಶಿಕ್ಷಣ ನೀಡಬೇಕು ಎಂದರು.
ಸಾರ್ವಜನಿಕ ಆಸ್ಪತ್ರೆಯ ಡಾ. ಪ್ರಮೋದ್ ಮಾತನಾಡಿ, ಅಂಗವಿಕಲರು ಎದೆಗುಂದದೆ ಬದುಕು ಸಾಗಿಸಬೇಕು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡು ಮುನ್ನುಗ್ಗಬೇಕು. ಶಿಕ್ಷಣ ಇಲಾಖೆಯ ಜೊತೆಗೆ ಆರೋಗ್ಯ ಇಲಾಖೆ ವಿಕಲಚೇತನ ಮಕ್ಕಳ ಸಲುವಾಗಿ ವಿಶೇಷ ಕಾಳಜಿ ಮೂಲಕ ನೋಡಿಕೊಳ್ಳಬೇಕು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ತ್ಯಾಗರಾಜ್ ಮಾತನಾಡಿ, ಎಲ್ಲ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ತಪಾಸಣೆ ನಡೆಯಲಿದೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡುವುದರ ಜೊತೆಗೆ ಅವರಿಗೆ ಸಾಧನ ಸಲಕರಣೆಗಳನ್ನು ನೀಡಲಾಗುವುದು ಎಂದರು.
ಬಿಆರ್‌ಪಿ ಕೃಷ್ಣಮೂರ್ತಿ, ಮನೋಹರ, ಎಸ್.ಸುಬ್ರಮಣ್ಯ, ಜಗದೀಶ್‌ಕುಮಾರ್, ವೈದ್ಯಕೀಯ ಸಿಬ್ಬಂದಿ ಲೋಕೇಶ್‌ನಾಯಕ್, ಪ್ರವೀಣ್, ಹರೀಶ್, ಮಧುಸೂದನ್, ಡಾ.ಸುಗುಣ ಹಾಜರಿದ್ದರು.
ಪಿ ಯು ವಿದ್ಯಾರ್ಥಿಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟ
ನಗರದ ನೆಹರು ಕ್ರೀಡಾಂಗಣದಲ್ಲಿ ಸೋಮವಾರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜನಾರ್ಧನ್ ಮಾತನಾಡಿದರು.
ಕ್ರೀಡೆಗಳಿಂದ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯ ವಿಕಾಸವಾಗಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಓದಿನ ಜೊತೆಗೆ ಕ್ರಿಯಾಶೀಲ ಚಟುವಟಿಕೆಯಿದ್ದರೆ ವಿದ್ಯಾರ್ಥಿಗಳ ಉತ್ಸಾಹ ಇಮ್ಮಡಿಗೊಳ್ಳುತ್ತದೆ. ವಿದ್ಯಾರ್ಥಿ ದಿಸೆಯಿಂದಲೇ ಕ್ರೀಡೆಯಲ್ಲಿ ಶ್ರದ್ಧೆ ಮತ್ತು ಬದ್ಧತೆಯಿಂದ ಪಾಲ್ಗೊಳ್ಳಬೇಕು. ಛಲ, ಆತ್ಮವಿಶ್ವಾಸದಿಂದ ಸಾಧನೆ ಮಾಡಿ ಎಂದು ಹೇಳಿದರು.
ವಿದ್ಯಾದ್ರಿ ಕಾಲೇಜಿನ ಅಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ, ಎರಡು ದಿನಗಳ ಕಾಲ ನಡೆಯುವ ತಾಲ್ಲೂಕುಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದಾರೆ. ಕ್ರೀಡೆಯಲ್ಲಿನ ಪ್ರತಿಭಾವಂತರಿಗೆ ಇದು ಒಳ್ಳೆಯ ಅವಕಾಶ ಎಂದರು.
ವಿದ್ಯಾದ್ರಿ ಕಾಲೇಜಿನ ಪ್ರಾಂಶುಪಾಲ ನಾಗರಾಜ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆನಂದ್, ಗೈಹಿಕ ಶಿಕ್ಷಕ ಎಚ್.ಎಂ.ರಂಗನಾಥ್, ಮುಖ್ಯಶಿಕ್ಷಕಿ ಕೆ.ಎಸ್.ಮಂಜುಳಾ ಹಾಜರಿದ್ದರು.

