ನಗರದ ಆಶಾಕಿರಣ ಅಂಧ ಮಕ್ಕಳ ಶಾಲೆಯಲ್ಲಿ ಸೋಮವಾರ ಅಂಧ ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಬಿಜೆಪಿ ಯುವ ಮೋರ್ಚಾ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಆಚರಣೆಯಲ್ಲಿ ಪಾಲ್ಗೊಂಡು ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್ ಮಾತನಾಡಿದರು.
ನಮ್ಮ ದೇಶದ ಘನತೆಯನ್ನು ವಿಶ್ವದಾದ್ಯಂತ ಹೆಚ್ಚಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರದ್ದು ಎಂದು ಅವರು ತಿಳಿಸಿದರು.
ಸಕ್ರಿಯ ಹಾಗೂ ಕ್ರಿಯಾಶೀಲ, ತನ್ಮಯತೆಯ, ಧ್ಯೇಯಹೊತ್ತ, ಸಾರ್ವಜನಿಕ ಜೀವನಕ್ಕೆ ತಮ್ಮನ್ನು ಮುಡಿಪಾಗಿಟ್ಟ ನಮ್ಮ ಪ್ರಧಾನಿ ನರೇಂದ್ರಮೋದಿ ಅವರು, ಇಂದು ದೇಶದ ಕೋಟ್ಯಾಂತರ ಜನತೆಯ ಆಶೋತ್ತರ ಹಾಗೂ ಅಪೇಕ್ಷೆಯ ಫಲವಾಗಿ ಜಾಗತಿಕ ಮಟ್ಟದಲ್ಲಿ ಮಿನುಗುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ಯುವ ಮೋರ್ಚಾ ವತಿಯಿಂದ ಆಶಾಕಿರಣ ಅಂಧ ಮಕ್ಕಳೊಂದಿಗೆ ಕೇಕ್ ಕತ್ತರಿಸಿ, ಮಕ್ಕಳಿಗೆ ಊಟ ನೀಡಲಾಯಿತು. ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಲಾಯಿತು.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬಿ.ವೆಂಕಟೇಶ್, ಸುರೇಂದ್ರಗೌಡ, ದಾಮೋದರ್, ರವಿ, ಕೃಷ್ಣಾರೆಡ್ಡಿ, ಮುರಳಿ, ನಾರಾಯಣಸ್ವಾಮಿ, ಗೌತಮ್, ದೇವರಾಜ್ ಹಾಜರಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ ಆಚರಣೆ
ನಾಲ್ಕನೇ ವರ್ಷದ ವಿಶ್ವಕರ್ಮ ಜಯಂತಿ ಆಚರಣೆ
ನಗರದ ಕಾಳಿಕಾಂಬ ಕಮಠೇಶ್ವರ ಸಮುದಾಯ ಭವನದಲ್ಲಿ ಸೋಮವಾರ ನಡೆದ ನಾಲ್ಕನೇ ವರ್ಷದ ಶ್ರೀ ವಿಶ್ವಕರ್ಮ ಜಯಂತಿ ಮಹೋತ್ಸವದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಶೈಕ್ಷಣಿಕ ಮತ್ತು ಆರ್ಥಿಕವಾಗಿ ವಿಶ್ವಕರ್ಮ ಜನಾಂಗದ ಅಭಿವೃದ್ಧಿಗೆ ಸರ್ಕಾರದ ಸೌಲಭ್ಯಗಳನ್ನು ಕೊಡಿಸುವಲ್ಲಿ ಸಹಕರಿಸುವುದಾಗಿ ಅವರು ತಿಳಿಸಿದರು.
ವಿಶೇಷ ಕುಸುರಿ ಕೌಶಲ ಹೊಂದಿರುವ ವಿಶ್ವಕರ್ಮ ಜನಾಂಗವು ವಿಶ್ವ ಮಾನ್ಯತೆ ಪಡೆದಿದೆ. ವಿಶ್ವಕರ್ಮ ಸಮುದಾಯವು ಚಿನ್ನಬೆಳ್ಳಿ ಕೆಲಸ, ಮರಗೆಲಸ, ಕಬ್ಬಿಣದ ಕೆಲಸ, ಶಿಲ್ಪಕಲೆ ಸೇರಿದಂತೆ ಪಂಚ ಕಸುಬುಗಳನ್ನು ಮಾಡುವ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ ಎಂದರು.
ನಿವೃತ್ತ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವೀರಬ್ರಹ್ಮಾಚಾರಿ ಮಾತನಾಡಿ, ದೇಶದಲ್ಲಿ ಸಾಮಾಜಿಕ ನ್ಯಾಯವಿಲ್ಲದಿದ್ದರೆ ಭಾರತ ದೇಶ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ, ವಿಶ್ವಕರ್ಮ ಎನ್ನುವುದು ಜಾತಿಯಲ್ಲ. ಇದೊಂದು ಸಂಸ್ಕೃತಿ, ಪಾರಂಪರಿಕ ಸಂಸ್ಕೃತಿಯುಳ್ಳ ಪಂಚ ಕಸಬುಗಳು ದೇಶಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದೇವೆ. ಆದರೂ ಎಲ್ಲಾ ರಂಗದಲ್ಲೂ ಹಿಂದೆ ಉಳಿದಿದ್ದೇವೆ. ವಿಶ್ವಕರ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.
ಪತ್ರಕರ್ತ ರೂಪಸಿ ರಮೇಶ್ ವಿಶ್ವಕರ್ಮ ಜನಾಂಗದ ಬಗ್ಗೆ ಮಾತನಾಡಿದರು.
ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಅಮರನಾರಾಯಣಾಚಾರಿ, ಗೌರವಾಧ್ಯಕ್ಷ ಕೆ.ಎನ್.ಜನಾರ್ಧನಮೂರ್ತಿ, ಮುನಿರತ್ನಾಚಾರಿ, ಈಶ್ವರಾಚಾರಿ, ಜಗದೀಶ್, ಕೃಷ್ಣಾಚಾರಿ, ಶ್ರೀನಿವಾಸ್, ವೆಂಕಟಸ್ವಾಮಿರೆಡ್ಡಿ ಹಾಜರಿದ್ದರು.
ಪಿ.ಎಲ್.ಡಿ. ಬ್ಯಾಂಕ್ ಸರ್ವ ಸದಸ್ಯರ ಮಹಾಸಭೆ
ನಗರದ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಆವರಣದಲ್ಲಿ ಆಯೋಜಿಸಿದ್ದ 2017–18 ನೇ ಸಾಲಿನ 80 ನೇ ವರ್ಷದ ಸಹಕಾರಿ ವರ್ಷದ ಸರ್ವ ಸದಸ್ಯರ ಮಹಾಸಭೆಯನ್ನು ಉದ್ಘಾಟನೆ ಮಾಡಿ ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿದರು.
ರೈತರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾಡಿರುವ ಸಾಲವನ್ನು 2 ಲಕ್ಷದವರೆಗೂ ಮನ್ನಾ ಮಾಡಿರುವ ಕ್ರಮ ಸ್ವಾಗತಾರ್ಹವಾಗಿದ್ದು, ಸಾಲ ಮನ್ನಾ ಮಾಡುವ ಬ್ಯಾಂಕುಗಳ ಸಾಲಿಗೆ ವ್ಯವಸಾಯ ಸೇವಾ ಸಹಕಾರ ಬ್ಯಾಂಕುಗಳನ್ನು ಸೇರಿಸಬೇಕಾಗಿತ್ತು. ಈ ಕುರಿತು ಮುಖ್ಯಮಂತ್ರಿಯೊಂದಿಗೆ ಚರ್ಚೆ ಮಾಡಲಾಗುವುದು ಎಂದು ಅವರು ಹೇಳಿದರು.
ಸಹಕಾರ ಸಂಘಗಳು ಸಮುದಾಯದ ಅಭಿವೃದ್ಧಿ ಜತೆಗೆ ಸಮಾಜದ ಅಭಿವೃದ್ಧಿಯ ಉದ್ದೇಶ ಹೊಂದಿದ್ದರೆ ಮಾತ್ರ ಯಶಸ್ಸು ಲಭಿಸಲು ಸಾಧ್ಯ, ಈ ನಿಟ್ಟಿನಲ್ಲಿ ಸಹಕಾರ ಸಂಘಗಳು ಸಮಾಜದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತಿವೆ ಈ ಸಾಲಿನಲ್ಲಿ ಇಲ್ಲಿನ ಪಿ.ಎಲ್.ಡಿ.ಬ್ಯಾಂಕ್ ಕೂಡಾ ಸೇರಿಕೊಂಡಿದೆ.
ಪರಸ್ಪರ ಕೈ ಜೋಡಿಸಿ ಒಬ್ಬರಿಗೊಬ್ಬರು ನೆರವಾಗುವ ಮೂಲಕ ತಾವು ಬೆಳೆದು ತಮ್ಮವರನ್ನೂ ಬೆಳೆಸುವುದು ಸಹಕಾರ ತತ್ತ್ವ. ಸಂಘ ಜೀವಿಯಾದ ಮನುಷ್ಯ ಸಹಕಾರ ಜೀವಿಯೂ ಆಗಬೇಕು. ಸ್ವಾರ್ಥ ಜೀವನದಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಹೀಗಾಗಿ ಸಹಕಾರ ಸಂಘಗಳ ಮೂಲಕ ನಾವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಪ್ರಯತ್ನಿಸಬೇಕು. ನಮ್ಮಂತೆ ಇತರರು ಬೆಳೆಯಲು ನಮ್ಮ ಕೈಯಲ್ಲಾದಷ್ಟು ನೆರವಾಗಬೇಕು. ಈ ನಿಟ್ಟಿನಲ್ಲಿ ಸಹಕಾರ ಸಂಘಗಳು ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದೆ ಎಂದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ, ತೀವ್ರ ಬರಗಾಲ ಎದುರಿಸುತ್ತಿರುವ ಬಯಲು ಸೀಮೆಭಾಗದಲ್ಲಿನ ತಾಲ್ಲೂಕಿನ ರೈತರಿಗೆ ಪಿ.ಎಲ್.ಡಿ. ಬ್ಯಾಂಕ್ ಬೆನ್ನೆಲುಬಾಗಿ ನಿಂತಿದೆ. ರೈತರು ಸಂಘಗಳಿಂದ ತೆಗೆದುಕೊಳ್ಳುವಂತಹ ಸಾಲ ಸೌಲಭ್ಯಗಳನ್ನು ನಿಗದಿತ ಸಮಯದಲ್ಲಿ ಮರು ಪಾವತಿ ಮಾಡಿದಾಗ ಸಂಘಗಳು ಅಭಿವೃದ್ಧಿಯತ್ತ ಸಾಗುತ್ತವೆ. ಈಗಾಗಲೇ ಸರ್ಕಾರ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದೆ. ವಿಶೇಷ ಅನುದಾನದ ಜೊತೆಗೆ ಬರಗಾಲ ಪೀಡಿತ ಜಿಲ್ಲೆಯ ವ್ಯಾಪ್ತಿಗೆ ಸೇರಿದ ಎಲ್ಲಾ ತಾಲ್ಲೂಕುಗಳಲ್ಲಿನ ಪಿ.ಎಲ್.ಡಿ ಬ್ಯಾಂಕುಗಳಲ್ಲಿ ರೈತರು ಮಾಡಿಕೊಂಡಿರುವ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಲು ಜಿಲ್ಲೆಯ ನಿಯೋಗದೊಂದಿಗೆ ತೆರಳುತ್ತೇವೆ ಎಂದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ಸಹಕಾರಿ ತತ್ವದಡಿಯಲ್ಲಿ ಸಂಘಗಳು ಮುನ್ನಡೆಯಬೇಕು. ಅರ್ಹಫಲಾನುಭವಿಗಳಿಗೆ ಸೌಲಭ್ಯಗಳು ಸಿಕ್ಕಿದಾಗ ಸಂಘದ ಧ್ಯೇಯೋದ್ದೇಶಗಳು ನೆರವೇರಿದಂತಾಗುತ್ತದೆ. ಸಂಘದ ಏಳಿಗೆಯಲ್ಲಿ ರೈತರ ಪಾತ್ರವೂ ಮಹತ್ತರವಾಗಿದ್ದು, ಆಡಳಿತ ಸಿಬ್ಬಂದಿ ವರ್ಗದವರು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದರು.
ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಭೀಮೇಶ್, ಭಕ್ತರಹಳ್ಳಿ ಮುನೇಗೌಡ, ಎ.ರಾಮಚಂದ್ರಪ್ಪ, ಅಶ್ವಥನಾರಾಯಣರೆಡ್ಡಿ ಹಾಜದ್ದರು.
ಮನೆ ಅಂಗಳದಲ್ಲಿ ವಚನ ಸಾಹಿತ್ಯ ಸಿಂಚನ
ನಗರದ ಮುತ್ತೂರು ಬೀದಿಯಲ್ಲಿರುವ ಶಿಕ್ಷಕ ಸುಂದರಾಚಾರಿ ಅವರ ಮನೆಯಲ್ಲಿ ತಾಲ್ಲೂಕು ವಚನ ಸಾಹಿತ್ಯ ಪರಿಷತ್‌ನಿಂದ ಶನಿವಾರ ಆಯೋಜಿಸಲಾಗಿದ್ದ ಮನೆ ಅಂಗಳದಲ್ಲಿ ವಚನ ಸಾಹಿತ್ಯ ಸಿಂಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃಷಿಪಂಡಿತ ಪ್ರಶಸ್ತಿ ಪುರಸ್ಕೃತ ಹಿತ್ತಲಹಳ್ಳಿ ಎಚ್.ಜಿ.ಗೋಪಾಲಗೌಡ ಮಾತನಾಡಿದರು.
ರೈತನ ಕಷ್ಟ ಸುಖಗಳಿಗೆ ಸ್ಪಂದಿಸುವುದು, ಹಳ್ಳಿ ಹೆಣ್ಣುಮಕ್ಕಳ ಜಾನಪದ ಹಾಡುಗಳಿಗೆ ಪ್ರೋತ್ಸಾಹಿಸುವುದು ಮತ್ತು ಅವನ್ನೆಲ್ಲಾ ದಾಖಲಿಸುವುದು ಸಹ ಕನ್ನಡದ ಕಾರ್ಯಕ್ರಮ ಆಗುತ್ತದೆ ಎಂದು ಅವರು ತಿಳಿಸಿದರು.
ಸಾಹಿತ್ಯದ ಕಾರ್ಯಕ್ರಮಗಳು ಕೇವಲ ಮನೆ, ಅಥವ ನಾಲ್ಕು ಗೋಡೆಗಳಿಗಷ್ಟೇ ಸೀಮಿತಗೊಳಿಸದೇ ಪೃಕೃತಿಯ ನಡುವೆ ನಡೆಯುವಂತಾಗಬೇಕು. ಇದರಿಂದ ಎಲ್ಲ ಕಡೆ ಕನ್ನಡದ ವಾತಾವರಣ ಮೂಡುವುದರ ಜೊತೆಗೆ ಕಾರ್ಯಕ್ರಮದಲ್ಲಿ ಭಾಗವಹಿಸುವವರಲ್ಲಿ ಆಸಕ್ತಿ ಹೆಚ್ಚಿಸುತ್ತದೆ. ಸಾಹಿತ್ಯ ಎಂದ ಮಾತ್ರಕ್ಕೆ ಕತೆ, ಕವನಗಳ ರಚನೆ, ಸಾಹಿತ್ಯ ರಚನೆ ಎಂದು ಭಾವಿಸಬೇಕಿಲ್ಲ. ಪುಸ್ತಕ ಓದುವುದು, ನಮ್ಮ ಮಾತೃ ಭಾಷೆಯನ್ನು ಮನೆಯಲ್ಲೂ, ವ್ಯವಹಾರದಲ್ಲೂ ಬಳಸುವುದು ಸಹ ಕನ್ನಡದ ಬೆಳವಣಿಗೆಗೆ ಅಗತ್ಯವಿದೆ. ಮುಂಬರುವ ದಿನಗಳಲ್ಲಿ ತಾವು ಕಾರ್ಯಕ್ರಮಗಳನ್ನು ಆಯೋಜಿಸುವುದಾದರೆ ನಮ್ಮ ತೋಟದಲ್ಲಿ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿದರು.
ವಚನ ಸಾಹಿತ್ಯ ಪರಿಷತ್‌ನ ತಾಲ್ಲೂಕು ಅಧ್ಯಕ್ಷ ಟಿ.ನಾರಾಯಣಸ್ವಾಮಿ ಮಾತನಾಡಿ ವಚನಕಾರರು ತಮ್ಮ ಬದುಕು ಹೇಗಿರಬೇಕು, ನಮ್ಮ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕೆಂಬುದರ ಬಗ್ಗೆ ವಚನಗಳ ಮೂಲಕ ವಿವರಿಸಿದ್ದಾರೆ. ಅವರ ವಚನಗಳನ್ನು ಅರ್ಥ ಮಾಡಿಕೊಂಡು ಅದರಂತೆ ನಾವು ಬದುಕಿದರೆ ನಾವೂ ಚೆಂದ, ನಮ್ಮ ಅಕ್ಕ ಪಕ್ಕದವರ ಬದುಕು ಚೆಂದವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವಚನ ಸಾಹಿತ್ಯ ಸಿಂಚನ ಕಾರ್ಯಕ್ರಮ ನಡೆಸಲು ಸ್ಥಳಾವಕಾಶ ಮಾಡಿಕೊಟ್ಟ ಶಿಕ್ಷಕ ಸುಂದರಾಚಾರಿ ದಂಪತಿಗಳನ್ನು ತಾಲ್ಲೂಕು ವಚನ ಸಾಹಿತ್ಯ ಪರಿಷತ್‌ನಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಲಕ್ಷ್ಮಿನಾರಾಯಣ(ಲಚ್ಚಿ), ಜಿ.ಎನ್.ಶ್ಯಾಮಸುಂದರ್, ನಾಗರಾಜ್‌ಶೆಟ್ಟಿ, ಎಸ್.ವಿ.ನಾಗರಾಜ್‌ರಾವ್, ವಿ.ಎನ್.ಗಜೇಂದ್ರ, ಟಿ.ಟಿ.ನರಸಿಂಹಪ್ಪ, ಕೆ.ಎಸ್.ವೇಣುಗೋಪಾಲ. ಲಕ್ಮಣ್, ಹರೀಶ್, ವೈಶಾಕ್, ಶ್ರೀನಿವಾಸ್, ಹೇಮಲತಾ, ಕು.ಮೇಘನಾ, ಪದ್ಮ, ಅನಂತಲಕ್ಷ್ಮಿ ಹಾಜರಿದ್ದರು.
ಎ.ಪಿ.ಎಂ.ಸಿ ಮಾರುಕಟ್ಟೆಗೆ ಸ್ಥಳ ನಿಗದಿಪಡಿಸಲು ಉಪ ವಿಭಾಗಾಧಿಕಾರಿಗಳಿಂದ ಭರವಸೆ
ಶಿಡ್ಲಘಟ್ಟ ನಗರದ ತಾಲ್ಲೂಕು ಕಚೇರಿ ಮುಂದೆ ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಕಳೆದ ೧೨ ದಿನಗಳಿಂದ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪ್ರತಿಭಟನಾ ನಿರತ ರೈತರನ್ನುದ್ದೇಶಿಸಿ ಉಪ ವಿಭಾಗಾಧಿಕಾರಿ ಶಿವಸ್ವಾಮಿ ಮಾತನಾಡಿದರು.
ತಾಲ್ಲೂಕಿನ ರೈತರ ಮೂಲಭೂತ ಅವಶ್ಯಕತೆಯಾದ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣಕ್ಕೆ ಚಿಕ್ಕದಾಸರಹಳ್ಳಿಯ ಬ್ಯಾಟರಾಯನಗುಡಿ ದೇವಾಲಯದ ಬಳಿ ಅಗತ್ಯ ಸರ್ಕಾರಿ ಸ್ಥಳ ಲಭ್ಯವಿದ್ದು ಜಿಲ್ಲಾಧಿಕಾರಿ ಹಾಗೂ ಎಪಿಎಂಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳ ಮಂಜೂರು ಮಾಡಲು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದರು.
ತಾಲ್ಲೂಕಿನ ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ತಾಲ್ಲೂಕಿನಲ್ಲಿ ಎಪಿಎಂಸಿ ನಿರ್ಮಾಣ ಮಾಡಲು ಸರ್ಕಾರಿ ಜಾಗದ ಲಭ್ಯತೆಯಿರುವ ಬಗ್ಗೆ ತಹಸೀಲ್ದಾರರಿಂದ ಮಾಹಿತಿ ಪಡೆದುಕೊಂಡಿದ್ದೇನೆ. ತಾಲ್ಲೂಕಿನ ಚಿಕ್ಕದಾಸರಹಳ್ಳಿ ಬಳಿ ಸುಮಾರು ೩೦ ಎಕರೆಯಷ್ಟು ಸರ್ಕಾರಿ ಗೋಮಾಳವಿದ್ದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅಲ್ಲಿ ಎಪಿಎಂಸಿ ನಿರ್ಮಾಣ ಮಾಡಲು ತ್ವರಿತವಾಗಿ ಸ್ಥಳ ಮಂಜೂರು ಮಾಡಲು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ ನಂತರ ರೈತ ಸಂಘದಿಂದ ಹಮ್ಮಿಕೊಂಡಿದ್ದ ಸತ್ಯಾಗ್ರಹವನ್ನು ಕೈಬಿಟ್ಟರು.
ರೈತಸಂಘದ ರಾಜ್ಯಾಧ್ಯಕ್ಷ ಜಿ.ಜಿ.ಹಳ್ಳಿ ನಾರಾಯಣಸ್ವಾಮಿ, ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಎನ್.ವೆಂಕಟಲಕ್ಷ್ಮಯ್ಯ, ಪದಾಧಿಕಾರಿಗಳಾದ ಗಂಗಾಧರ್, ಎಚ್.ಎಸ್.ಸತ್ತಾರ್, ಬಿ.ಎ.ಲೋಕೇಶ್, ಹಾಜರಿದ್ದರು.
ವರ್ಷಕ್ಕೆ ಒಂದು ಕೋಟಿ ಸಸಿ ನೆಡುವ ಕೋಟಿ-ನಾಟಿ ಕಾರ್ಯಕ್ರಮ
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಹಸಿರು ಕರ್ನಾಟಕ, ರೋಟರಿ ಕೋಟಿ- ನಾಟಿ ಕಾರ್ಯಾಗಾರದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನುದ್ದೇಶಿಸಿ ನಿವೃತ್ತ ಐಎಎಸ್ ಅಧಿಕಾರಿ ಕೆ.ಅಮರನಾರಾಯಣ ಮಾತನಾಡಿದರು.
ತಾಲ್ಲೂಕಿನಾದ್ಯಂತ ವರ್ಷಕ್ಕೆ ಒಂದು ಕೋಟಿ ಸಸಿ ನೆಡುವ ಕಾರ್ಯಕ್ಕೆ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹೆಚ್ಚು ಒತ್ತು ನೀಡಬೇಕು ಎಂದು ಅವರು ತಿಳಿಸಿದರು.
ಇದೀಗ ಸರ್ಕಾರ ಜಾರಿಗೊಳಿಸಿರುವ ಹಸಿರು ಕರ್ನಾಟಕದ ಮೂಲ ಉದ್ದೇಶ ಮನೆಗೊಂದು ಮರ, ಊರಿಗೊಂದು ತೋಪು, ತಾಲ್ಲೂಕಿಗೊಂದು ಕಿರು ಅರಣ್ಯ, ಜಿಲ್ಲೆಗೊಂದು ಕಾಡು ನಿರ್ಮಾಣ ಮಾಡುವುದಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಸಸಿಗಳನ್ನು ನೆಡುವ ಬಗ್ಗೆ ಮನವರಿಕೆ ಮಾಡಿಕೊಡುವ ಮೂಲಕ ಅವರನ್ನೆಲ್ಲಾ ಸೇರಿಸಿಕೊಂಡು ಕೋಟಿ ನಾಟಿ ಕಾರ್ಯಕ್ರಮ ಯಶಸ್ವಿಗೊಳಿಸುವ ಮೂಲಕ ಬಯಲು ಸೀಮೆ ಬಾಗವನ್ನು ಹಸಿರು ಸೀಮೆಯನ್ನಾಗಿಸಬೇಕು ಎಂದರು.
ಬಯಲುಸೀಮೆ ಭಾಗದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ಮೂರು ದಶಕಗಳ ಹಿಂದೆ ಪಾಲಾರ್ ಹಾಗೂ ಪಿನಾಕಿನಿ ನದಿ ಹರಿಯುವ ಮೂಲಕ ಈ ಭಾಗದಲ್ಲಿ ನೀರು ಹೇರಳವಾಗಿತ್ತು. ಕಾಲ ಕ್ರಮೇಣ ಅರಣ್ಯ ನಾಶವಾಗುವುದೂ ಸೇರಿದಂತೆ ಅಂತರ್ಜಲ ಕುಸಿದು ಇದೀಗ ಸಾವಿರದೈನೂರು ಅಡಿ ಆಳದಿಂದ ಕೊಳವೆಬಾವಿಗಳ ಮೂಲಕ ನೀರು ತೆಗೆಯುವಂತಾಗಿದೆ. ವರ್ಷಕ್ಕೆ ತಾಲ್ಲೂಕಿನಲ್ಲಿ ಸುಮಾರು ೫೦ ಲಕ್ಷ ಗಿಡ ನೆಟ್ಟು ಪೋಷಿಸಿದ್ದೇ ಆದಲ್ಲಿ ಮುಂಬರುವ ದಿನಗಳಲ್ಲಿ ಕಾಣೆಯಾಗಿರುವ ಪಾಲಾರ್ ಹಾಗೂ ಪಿನಾಕಿನಿ ನದಿಗಳು ಜೀವ ಪಡೆಯುತ್ತವೆ. ಈ ಭಾಗದ ರೈತ ಇಡೀ ದೇಶಕ್ಕೆ ಬೇಕಾಗುವ ಹಾಲು, ತರಕಾರಿಯನ್ನು ಪೂರೈಸಲು ಸಹಕಾರಿಯಾಗುತ್ತದೆ ಎಂದರು.
ಜಿಲ್ಲಾ ಪಂಆಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ ಮಾತನಾಡಿ, ಜಿಲ್ಲೆಯಲ್ಲಿಯೇ ಅತಿ ಹೆಚ್ಚು ನರೇಗಾ ಕಾಮಗಾರಿಗಳು ನಡೆಯುವ ತಾಲ್ಲೂಕು ಇದಾಗಿದೆ. ನರೇಗಾ ಯೋಜನೆಯಡಿ ಕೂಲಿ ಆಧಾರಿತ ಕೆಲಸಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಇದೀಗ ಸರ್ಕಾರ ಜಾರಿಗೊಳಿಸಿರುವ ಹಸಿರು ಕನಾಟಕ ಯೋಜನೆಯಡಿ ಸಸಿಗಳನ್ನು ನೆಡಲು ಹಾಗೂ ನರೇಗಾ ಯೋಜನೆಯ ಬಳಕೆಯ ಬಗ್ಗೆ ಜನರಿಗೆ ಮವರಿಕೆ ಮಾಡಿಕೊಡುವ ಕೆಲಸವನ್ನು ಆಯಾ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಓಗಳು ಮಾಡಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಇಓ ಎಂ.ವೆಂಕಟೇಶ್, ರೋಟರಿ ಆರ್ಚಡ್ಸ್‌ನ ಅಧ್ಯಕ್ಷ ರೊ.ರವಿಶಂಕರ್, ಎಸಿಎಫ್ ಸುರೇಶ್‌ಬಾಬು, ನರೇಗಾ ಸಹಾಯಕ ನಿರ್ದೇಶಕ ಶ್ರೀನಾಥಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಓಗಳು ಹಾಜರಿದ್ದರು.
‘ಭಾರತ್ ಬಂದ್’ಗೆ ನಗರದಲ್ಲಿ ಉತ್ತಮ ಬೆಂಬಲ
ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಸೋಮವಾರ ಕರೆನೀಡಿದ್ದ ‘ಭಾರತ್ ಬಂದ್’ಗೆ ನಗರದಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು.
ಸಾರಿಗೆ ಬಸ್ ಸಂಚಾರವಿರಲಿಲ್ಲ. ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್‌ಗಳು ಸಾಲಾಗಿ ನಿಂತಿದ್ದವು. ಶಾಲಾ ಕಾಲೇಜುಗಳು ರಜೆ ಘೋಷಿಸಿದ್ದವು. ವಿವಿಧ ಕಚೇರಿಗಳು, ಬ್ಯಾಂಕ್, ಪೆಟ್ರೋಲ್ ಬಂಕ್‌ಗಳು, ಚಿತ್ರಮಂದಿರ, ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು ಮುಚ್ಚಿದ್ದವು. ರೇಷ್ಮೆ ಗೂಡಿನ ಮಾರುಕಟ್ಟೆಗೆ ಆಗಮಿಸಿದ್ದ ಗೂಡಿನ ಪ್ರಮಾಣ ಕಡಿಮೆಯಾಗಿದ್ದರೂ ವ್ಯಾಪಾರ ವಹಿವಾಟು ನಡೆಯಿತು.
ಕಾಂಗ್ರೆಸ್‌ನ ಕೆಲವು ಕಾರ್ಯಕರ್ತರು ಬೈಕ್‌ಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು. ನಗರದ ಪ್ರವಾಸಿ ಮಂದಿರದ ಬಳಿ ಕಾಂಗ್ರೆಸ್‌ನ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಶಾಸಕ ವಿ.ಮುನಿಯಪ್ಪ, ‘ಪ್ರಧಾನಿ ನರೇಂದ್ರ ಮೋದಿ ಅವರು ಜನಸಾಮಾನ್ಯರ ಅನುಕೂಲಕ್ಕಾಗಿ ಕೆಲಸ ಮಾಡುತ್ತಿಲ್ಲ, ಕೇವಲ ಕಾರ್ಪೊರೇಟ್ ಕಂಪೆನಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ. ತೈಲ ಬೆಲೆ ಏರಿಕೆ ಖಂಡಿಸಿ ಮಾತ್ರವಲ್ಲದೆ, ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಪತನ ಕಾಣುತ್ತಿರುವುದು ಮತ್ತು ರಫೆಲ್ ಡೀಲ್ ಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ(ಜೆಪಿಸಿ) ರಚಿಸಲು ಒತ್ತಾಯಿಸಿ ಬಂದ್ ಆಚರಿಸಲಾಗುತ್ತಿದೆ. ಶಾಂತಿಯನ್ನು ಕಾಪಾಡಿಕೊಂಡು ಬಂದ್ ಆಚರಿಸಬೇಕು’ ಎಂದು ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ವಾರ್ಷಿಕೋತ್ಸವ ಕಾರ್ಯಕ್ರಮ
ನಗರದ ಕಾಳಿಕಾಂಭ ಸಮುದಾಯಭವನದಲ್ಲಿ ಭಾನುವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಕಾರ್ಯಕ್ರಮದ ಪ್ರಾದೇಶಿಕ ನಿರ್ದೇಶಕ ಆನಂದ್ ಸುವರ್ಣ ಮಾತನಾಡಿದರು.
ಆರೋಗ್ಯ, ಶಿಕ್ಷಣ, ಪೌಷ್ಠಿಕ ಆಹಾರ, ಸ್ವಚ್ಛತೆ, ಕಾನೂನು ಮಾಹಿತಿ, ಅಧ್ಯಯನ ಪ್ರವಾಸ, ಇಲಾಖೆಗಳ ಭೇಟಿ ಮಾಡಿಸುವ ಮೂಲಕ ಮಹಿಳೆಯರಿಗೆ ಜ್ಞಾನ ಹೆಚ್ಚಿಸುವ ಉದ್ದೇಶವನ್ನು ಹೊಂದಿದ್ದೇವೆ, ಜ್ಞಾನವಿಕಾಸ ಸಾವಿರಾರು ಮಹಿಳೆಯರ ಬದುಕನ್ನೇ ಬದಲಿಸಿದೆ. ಸಂಸಾರವಷ್ಟೇ ಸಾಕು ಎಂದು ತಮ್ಮಷ್ಟಕ್ಕೆ ತಾವಿದ್ದ ಹಲವು ಮಹಿಳೆಯರಿಕೆ ಆತ್ಮವಿಶ್ವಾಸ ತುಂಬಿದ ಈ ಕಾರ್ಯಕ್ರಮ ಎಲ್ಲೆಡೆ ಯಶಸ್ವಿಯಾಗಿದೆ ಎಂದು ಹೇಳಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಎ.ಎಂ.ತ್ಯಾಗರಾಜ್ ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾದಾಗ ಮಾತ್ರ ಕುಟುಂಬದ ಪ್ರಗತಿ ಸಾಧ್ಯವಾಗುತ್ತದೆ. ಸಾಲಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಿ. ಕೌಶಲ್ಯ ತರಬೇತಿಯನ್ನು ಪಡೆದು ಆರ್ಥಿಕವಾಗಿ ಸದೃಢರಾದಾಗ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ನುಡಿದರು.
ವಕೀಲೆ ಯಾಸ್ಮೀನ್ ತಾಜ್ ಮಾತನಾಡಿ, ಮಹಿಳೆಯರ ರಕ್ಷಣೆ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಇತ್ಯಾದಿ ಸೇರಿದಂತೆ ಅನೇಕ ಕಾನೂನುಗಳು ರಚನೆಯಾಗಿವೆ. ಮಹಿಳೆಯರಿಗೆ ಯಾವುದೇ ಸಂದರ್ಭದಲ್ಲಿ ಉಚಿತ ಕಾನೂನು ನೆರವು ದೊರೆಯುವುದರೊಂದಿಗೆ ವಿಶೇಷ ರಿಯಾಯಿತಿಗಳೂ ಇದೆ ಎಂದರು.
ಈ ಸಂದರ್ಭದಲ್ಲಿ ಸೋಲಾರ್ ದೀಪ ಅಳವಡಿಸಿಕೊಂಡವರಿಗೆ ಚೆಕ್, ಉತ್ತಮ ಸಂಘಗಳಿಗೆ ಬಹುಮಾನ ಹಾಗೂ ವೃದ್ಧಾಪ್ಯವೇತನ ವಿತರಿಸಲಾಯಿತು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಅವರನ್ನು ಗೌರವಿಸಲಾಯಿತು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ವಸಂತ್, ಉಪನಿರ್ದೇಶಕಿ ಭಾರತಿ, ತಾಲ್ಲೂಕು ಯೋಜನಾಧಿಕಾರಿ ಮೋಹನ್, ಮಹಮ್ಮದ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಲಕ್ಷ್ಮೀ, ಕೃಷಿ ಅಧಿಕಾರಿ ಪ್ರಶಾಂತ್, ಮೇಲ್ವಿಚಾರಕರಾದ ಜ್ಯೋತಿ, ಜನಾರ್ಧನ್ ಹಾಜರಿದ್ದರು.
ಎ.ಪಿ.ಎಂ.ಸಿ ಮಾರುಕಟ್ಟೆಗೆ ಸ್ಥಳ ನಿಗದಿಪಡಿಸಲು ಯುವಶಕ್ತಿ ಒತ್ತಾಯ
ನಗರದ ತಾಲ್ಲೂಕು ಕಚೇರಿ ಮುಂದೆ ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಭಾನುವಾರ ಯುವಶಕ್ತಿ ಸಂಘಟನೆಯ ಪದಾಧಿಕಾರಿಗಳೊಂದಿಗೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿ ಯುವಶಕ್ತಿ ಸಂಘಟನೆಯ ವಿಜಯಬಾವರೆಡ್ಡಿ ಮಾತನಾಡಿದರು.
ತಾಲ್ಲೂಕಿನಲ್ಲಿ ಎಪಿಎಂಸಿ ಮಾರುಕಟ್ಟೆಗೆ ಸ್ಥಳ ನಿಗಧಿಗೊಳಿಸುವುದು ಸೇರಿದಂತೆ ಕೊಳಚೆ ನಿವಾಸಿಗಳಿಗೆ ಕೂಡಲೇ ಮನೆಗಳನ್ನು ನಿರ್ಮಿಸಿಕೊಡುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಬೇಕು. ರೈತರ ಬೇಡಿಕೆಗಳನ್ನು ಈಡೇರಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಫಲವಾದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕೈಗೊಳ್ಳುವ ಹೋರಾಟದಲ್ಲಿ ಯುವಶಕ್ತಿ ಸಂಘಟನೆ ಕೈ ಜೋಡಿಸುವ ಮೂಲಕ ಬೆಂಬಲಿಸಲಾಗುತ್ತದೆ ಎಂದರು.
ತಾಲ್ಲೂಕಿನ ರೈತರ ಅಗತ್ಯ ಮೂಲಭೂತ ಅವಶ್ಯಕತೆಯಾದ ಕೃಷಿ ಉತ್ಪನ್ನ ಮಾರುಕಟ್ಟೆ ಈವರೆಗೂ ನಿರ್ಮಾಣಮಾಡದೇ ಇರುವುದು ಜನಪ್ರತಿನಿಧಿಗಳ ಹಾಗು ಅಧಿಕಾರಿಗಳ ವೈಪಲ್ಯಕ್ಕೆ ಸಾಕ್ಷಿಯಂತಿದೆ ಎಂದು ಅವರು ತಿಳಿಸಿದರು.
ಯುವಶಕ್ತಿ ಸಂಘಟನೆಯ ಶಿವಪ್ರಕಾಶ್‌ರೆಡ್ಡಿ, ಹಿರೇಬಲ್ಲ ರಾಘವೇಂದ್ರ, ಕ್ಯಾಲನೂರು ಸುಬ್ರಮಣಿ, ಗಟ್ಟೂರು ಮಂಜುನಾಥ್, ಲೋಕೇಶ್ ರೆಡ್ಡಿ, ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಸುಷ್ಮಾ ಶ್ರೀನಿವಾಸ್, ಜಿ.ನಾರಾಯಣಸ್ವಾಮಿ, ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಎನ್.ವೆಂಕಟಲಕ್ಷ್ಮಯ್ಯ ಹಾಜರಿದ್ದರು.
ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು
ತಾಲ್ಲೂಕಿನ ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಈಚೆಗೆ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದ ವಿವಿಧ ವಿಭಾಗಗಳಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಾಮೂಹಿಕ ವಿಭಾಗದ ಹೆಣ್ಣುಮಕ್ಕಳ ಕಬಡ್ಡಿ ಹಾಗೂ ಖೊಖೋದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ವೈಯಕ್ತಿಕ ವಿಭಾಗ :
ಟಿ.ಎಸ್.ಸೌಂಧರ್ಯ : 400 ಮೀಟರ್ (ಪ್ರಥಮ); 800 ಮೀಟರ್ (ಪ್ರಥಮ); ರಿಲೇ (ಪ್ರಥಮ); ಉದ್ದಜಿಗಿತ (ದ್ವಿತೀಯ)
ಟಿ.ಎನ್.ದಿವ್ಯ : 100 ಮೀಟರ್ (ಪ್ರಥಮ); 200 ಮೀಟರ್ (ಪ್ರಥಮ); ರಿಲೇ (ಪ್ರಥಮ); 400 ಮೀಟರ್ (ದ್ವಿತೀಯ)
ಎಂ.ಡಿ.ವಾಣಿ : ಉದ್ದಜಿಗಿತ (ಪ್ರಥಮ); ರಿಲೇ (ಪ್ರಥಮ); 100 ಮೀಟರ್ (ದ್ವಿತೀಯ); 200 ಮೀಟರ್ (ದ್ವಿತೀಯ)
ಡಿ.ಎಸ್.ವಾಣಿಶ್ರೀ : 3 ಕಿ.ಮೀ ವೇಗದ ನಡಿಗೆ (ಪ್ರಥಮ)
ಅಕ್ಷಿತ : 800 ಮೀಟರ್ (ದ್ವಿತೀಯ)
ವಿ.ನಂದೀಶ : 3000 ಮೀಟರ್ (ದ್ವಿತೀಯ)
ಕೆ.ಸುನಿಲ್ : 5 ಕಿ.ಮೀ ವೇಗದ ನಡಿಗೆ (ತೃತೀಯ)
ಶ್ರೀಕಾಂತ್ : 400 ಮೀಟರ್ (ತೃತೀಯ)
ಕಡೆಯ ಶ್ರಾವಣ ಶನಿವಾರದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ
ತಾಲ್ಲೂಕಿನಾದ್ಯಂತ ಕಡೆಯ ಶ್ರಾವಣ ಶನಿವಾರವನ್ನು ಶ್ರದ್ದೆ, ಭಕ್ತಿ ಭಾವದಿಂದ ಆಚರಿಸಲಾಯಿತು. ನಗರದ ಕೋಟೆ ಆಂಜನೇಯಸ್ವಾಮಿ, ಕೆ ಎಚ್ ಬಿ ಕಾಲೋನಿಯ ಶನೇಶ್ವರ, ವಿನಾಯಕ ಗಾಯಿತ್ರಿ ದೇವಾಲಯ, ನಗರೇಶ್ವರ ಸ್ವಾಮಿ ದೇವಾಲಯ, ವಾಸವಿ ದೇವಾಲಯ ಸೇರಿದಂತೆ ಪುರಾಣ ಪ್ರಸಿದ್ಧ ತಲಕಾಯಲಬೆಟ್ಟದ ಭೂನೀಳಾ ಸಮೇತ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.
ತಾಲ್ಲೂಕಿನ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ದೇವರ ಪೂಜೆಯಲ್ಲಿ ಪಾಲ್ಗೊಂಡರು. ಚಿಕ್ಕದಾಸರಹಳ್ಳಿ ಗುಟ್ಟದ ಮೇಲಿನ ಶ್ರೀವೆಂಕಟರಮಣಸ್ವಾಮಿ, ರಾಮಲಿಂಗನ ಬೆಟ್ಟದ ರಾಮಲಿಂಗೇಶ್ವರ ದೇವಾಲಯ, ಬಶೆಟ್ಟಹಳ್ಳಿ ಸಮೀಪದ ಅನಂತಪದ್ಮನಾಭ ದೇವಾಲಯ, ಚೌಡಸಂದ್ರದ ಶ್ರೀ ಆಂಜನೇಯಸ್ವಾಮಿ, ವೀರಾಪುರದ ಶ್ರೀವರಸಿದ್ಧ್ದಿ ವಿನಾಯಕಸ್ವಾಮಿ, ಅಪ್ಪೇಗೌಡನಹಳ್ಳಿ ಗೇಟ್ ನ ಬಯಲಾಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಪುನಸ್ಕಾರಗಳು ನಡೆದವು.
ನಗರ ಸೇರಿದಂತೆ ತಾಲೂಕಿನ ಬಹುತೇಕ ಎಲ್ಲ ದೇವಾಲಯಗಳಲ್ಲೂ ವಿಶೇಷ ಹೂವಿನ ಅಲಂಕಾರ ವಿಶೇಷ ಪೂಜೆ ನೆರವೇರಿಸಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
Attachments area
ಕಸಾಪ ವತಿಯಿಂದ ಪೂರ್ಣಚಂದ್ರ ತೇಜಸ್ವಿ 80ನೇ ಜನ್ಮದಿನ ಹಾಗೂ ವಿಶ್ವ ಸಾಕ್ಷರತಾ ದಿನ ಆಚರಣೆ
ತಾಲ್ಲೂಕಿನ ಗಂಗನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ತಾಲ್ಲೂಕು ಕಸಾಪ ವತಿಯಿಂದ ಆಚರಿಸಿದ ಪೂರ್ಣಚಂದ್ರ ತೇಜಸ್ವಿ 80ನೇ ಜನ್ಮದಿನ ಹಾಗೂ ವಿಶ್ವ ಸಾಕ್ಷರತಾ ದಿನ ಕಾರ್ಯಕ್ರಮದಲ್ಲಿ ಶಿಕ್ಷಕ ಚಾಂದ್‌ಪಾಷ ಮಾತನಾಡಿದರು.
‘ಮಾನವನಿಗೆ ಪ್ರಕೃತಿಯ ಅಗತ್ಯವಿದೆ ಹೊರತು ಪ್ರಕೃತಿಗೆ ಮಾನವನ ಅಗತ್ಯವಿಲ್ಲ’ ಇದು ಕನ್ನಡದ ಪ್ರಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಮಾತು. ಕೆಲ ದಿನಗಳ ಹಿಂದಷ್ಟೇ ಕೊಡಗು, ಕೇರಳದಲ್ಲಿ ಸಂಭವಿಸಿದ ಪ್ರವಾಹದ ವೇಳೆ ಈ ಮಾತುಗಳ ಅರ್ಥ ನಮಗಾಗಬೇಕು ಎಂದು ಅವರು ತಿಳಿಸಿದರು.
ತಮ್ಮ ಸಾಹಿತ್ಯದ ಮೂಲಕ ಪರಿಸರ ಹಾಗೂ ಮಾನವ ಸಂಬಂಧಗಳ ನಡುವಿನ ಎಳೆಗಳನ್ನು ತೋರಿಸಿಕೊಟ್ಟಿದ್ದ ತೇಜಸ್ವಿ ಇಂದು ನಮ್ಮೊಂದಿಗಿದ್ದಿದ್ದರೆ ಎಂಭತ್ತು ಭರ್ತಿಯಾಗುತ್ತಿತ್ತು. ಕೇವಲ ಸಾಹಿತಿಗಳು ಮಾತ್ರವಲ್ಲ. ಅವರು ಅನೇಕ ಚಳವಳಿಗಳನ್ನು ಹುಟ್ಟು ಹಾಕಿ ಹೋರಾಟ ನಡೆಸಿದ್ದಾರೆ. ಆದ್ದರಿಂದ ಕರ್ನಾಟಕದ ಸಮಗ್ರ ಚರಿತ್ರೆಯಲ್ಲಿ ಅವರು ಅಜರಾಮರ. ಸಾಹಿತ್ಯ, ಕೃಷಿ, ಪರಿಸರ ಕಾಳಜಿ, ವಿಜ್ಞಾನ, ಮಾನವ ಶಾಸ್ತ್ರ ಮುಂತಾದುವುಗಳ ಬಗ್ಗೆ ಆಳವಾದ ಪಾಂಡಿತ್ಯ ಹೊಂದಿದ್ದ ತೇಜಸ್ವಿ ಬದುಕಿದ್ದು ಸಹ ದಟ್ಟ ಹಸಿರಿನ ಕಾಡುಗಳ ನಡುವೆಯೇ ಎಂದು ಹೇಳಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ಶಿಕ್ಷಣದ ಮಹತ್ವ ಸಾರುವ ಈ ದಿನವನ್ನು ವಿಶ್ವ ಸಾಕ್ಷರತಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಕಸಾಪ ಸರ್ಕಾರಿ ಶಾಲೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಮಾಡಿತ್ತಾ ಮಕ್ಕಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಾರ್ಯಕ್ರಮ ರೂಪಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕಿ ಗಾಯಿತ್ರಿ ಅವರನ್ನು ಕಸಾಪ ತಾಲ್ಲೂಕು ಘಟಕದ ವತಿಯಿಂದ ಸನ್ಮಾನಿಸಲಾಯಿತು.
ತಾಲ್ಲೂಕು ಕಸಾಪ ಕಾರ್ಯದರ್ಶಿ ಸತೀಶ್, ಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ, ವಿ.ಸಿ.ನಾಗರಾಜ್, ಜಿ.ಕೆ.ಶ್ರೀನಿವಾಸ್, ಮುತ್ತೂರು ಮುನೇಗೌಡ, ಶಿವಾನಂದ, ಮುನಿಬಚ್ಚಪ್ಪ ಹಾಜರಿದ್ದರು.
ರೈತನೊಬ್ಬನ ಆಸ್ತಿಯನ್ನು ಕಬಳಿಸಲು ಸಂಚು -ಹಸಿರುಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ
ರೈತರ ಸಿದ್ಧಾಂತಕ್ಕೆ ಧಕ್ಕೆಯಾಗಿದೆ. ರೈತರಲ್ಲದವರು ರೈತ ಸಂಘದ ಹೆಸರಿಟ್ಟುಕೊಂಡು ವೈಯಕ್ತಿಕ ಧ್ವೇಷದಿಂದ ರೈತನೊಬ್ಬನ ಆಸ್ತಿಯನ್ನು ಕಬಳಿಸಲು ಸಂಚು ಹೂಡಿರುವುದು ಖಂಡನೀಯ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ರೈತ ಸಂಘದ ಸದಸ್ಯರು ತಾಲ್ಲೂಕು ಕಚೇರಿಯ ಮುಂದೆ ಧರಣಿ ನಡೆಸಿದ್ದಾರೆ. ಎ.ಪಿ.ಎಂ.ಸಿ ಮಾರುಕಟ್ಟೆಗೆ ಸ್ಥಳ ನಿಗದಿ ಮಾಡಲು ಹಾಗೂ ಕೊಳಚೆ ನಿವಾಸಿಗಳಿಗೆ ಸ್ಥಳವನ್ನು ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ನಮ್ಮ ಸ್ವಾಗತವಿದೆ. ಆದರೆ, ಶಿಡ್ಲಘಟ್ಟ ಗ್ರಾಮ ಸರ್ವೆ ಸಂಖ್ಯೆ 64 ಅನ್ನು ಅವರು ಕೋರುತ್ತಿರುವುದು ಅಕ್ರಮವಾಗಿದೆ. ರೈತ ಬಿ.ನಾರಾಯಣಸ್ವಾಮಿ ಅವರ ಪಿತ್ರಾರ್ಜಿತ ಜಮೀನನ್ನು ಕಬಳಿಸಲು ಅವರು ಹುನ್ನಾರ ನಡೆಸಿದ್ದಾರೆ. ರೈತ ಸಂಘದ ಹೆಸರಿನಲ್ಲಿ ರೈತನೊಬ್ಬನಿಗೆ ಕಿರುಕುಳ ಕೊಡುತ್ತಿರುವುದು ತಲೆತಗ್ಗಿಸುವ ಕೆಲಸವಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳು, ಪೊಲೀಸ್ ಎಸ್‌ಪಿ, ತಹಶೀಲ್ದಾರ್ ಅವರ ಗಮನಕ್ಕೆ ಈ ವಿಷಯವನ್ನು ತಂದಿದ್ದೇವೆ. ಮುಂದಿನ ದಿನಗಳಲ್ಲಿ ರೈತನ ಪರವಾಗಿ ಚಳವಳಿಯನ್ನು ನಡೆಸುತ್ತೇವೆ ಎಂದು ಹೇಳಿದರು.
ರೈತ ಬಿ.ನಾರಾಯಣಸ್ವಾಮಿ ಮಾತನಾಡಿ, ನಮ್ಮ ಕುಟುಂಬದ ಮಾಲೀಕತ್ವಕ್ಕೆ ಸೇರಿರುವ ಜಮೀನಿನ ಸರ್ವೆ ನಂಬರನ್ನು ಭಿತ್ತಿ ಪತ್ರದಲ್ಲಿ ಹಾಕಿಸಿ ಬೀದಿ ಬೀದಿ ಪ್ರಚಾರ ನಡೆಸಿ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ನಮ್ಮ ಸ್ವತ್ತನ್ನು ಕಬಳಿಸುವ ಹುನ್ನಾರವಿದು. ಈ ಹಿಂದೆ ಕೆಲವರು ನಾಗರಿಕ ಹಕ್ಕುಗಳ ಸಂರಕ್ಷಣಾ ಸಮಿತಿ ಎಂಬ ಸಂಘಟನೆಯ ಮೂಲಕ ನಮಗೆ ಕಿರುಕುಳ ನೀಡಿದ್ದರು. ನ್ಯಾಯಾಲಯದಲ್ಲಿ ನಮ್ಮ ಪರವಾಗಿ ತೀರ್ಪು ಸಿಕ್ಕನಂತರ ಈಗ ಹಸಿರು ಶಾಲು ಧರಿಸಿ ತೊಂದರೆ ಮಾಡುತ್ತಿದ್ದಾರೆ. ಪೊಲೀಸರು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದು ಹೇಳಿದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ತಾದೂರು ಮಂಜುನಾಥ್, ಎಸ್.ಎಂ.ನಾರಾಯಣಸ್ವಾಮಿ, ಸತ್ಯನಾರಾಯಣ, ವೀರಾಪುರ ಮುನಿನಂಜಪ್ಪ, ವೇಣುಗೋಪಾಲ್, ಏಜಾಜ್ ಹಾಜರಿದ್ದರು.
ಪಿಡಿಓ ಹಾಗೂ ಕಾರ್ಯದರ್ಶಿಗಳ ಪ್ರಗತಿ ಪರಿಶೀಲನೆ ಸಭೆ
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಹಾಗೂ ಕಾರ್ಯದರ್ಶಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ನಿವೇಶನ ರಹಿತರಿಗೆ ನಿವೇಶನ ಮಂಜೂರು ಮಾಡುವುದು ಮತ್ತು ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿ ಕುಡಿಯುವ ನೀರಿನ ಪೂರೈಕೆಗಾಗಿ ಅಗತ್ಯ ಕ್ರಮಗಳನ್ನು ಜರುಗಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಅವರು ತಿಳಿಸಿದರು.
ತಾಲ್ಲೂಕಿನಾದ್ಯಂತ ಇರುವ ಗ್ರಾಮ ಪಂಚಾಯಿತಿಗಳಲ್ಲಿ ನಿವೇಶನ ರಹಿತರ ಪಟ್ಟಿ ತಯಾರಿಸಿ ಅಂತಹವರಿಗೆ ನಿವೇಶನ ಮಂಜೂರು ಮಾಡಬೇಕು. ಈಗಾಗಲೇ ತಾಲ್ಲೂಕಿನಾದ್ಯಂತ ಕೆಲವು ಗ್ರಾಮಗಳಿಗೆ ಕುಡಿಯುವ ನೀರನ್ನು ಖಾಸಗಿ ಕೊಳವೆ ಬಾವಿ ಹಾಗೂ ಟ್ಯಾಂಕರ್ ಮೂಲಕ ಪೂರೈಸಲಾಗುತ್ತಿದೆಯಾದರೂ ಆದಷ್ಟು ಬೇಗ ಅಂತಹ ಗ್ರಾಮಗಳಲ್ಲಿ ಸ್ಥಳ ಗುರುತಿಸಿ ಕೊಳವೆ ಬಾವಿ ಕೊರೆಸಲು ಕ್ರಮ ಜರುಗಿಸಬೇಕು ಎಂದರು.
ಇನ್ನು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ರೈತರು ಹಾಗೂ ನಾಗರಿಕರಿಗೆ ಕೆಲಸ ನೀಡುವ ಮೂಲಕ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ತಾಲ್ಲೂಕಿನಾದ್ಯಂತ ಇರುವ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿಯೂ ಘನ ಹಾಗು ದ್ರವ ತ್ಯಾಜ್ಯ ಘಟಕಗಳನ್ನು ಪ್ರಾರಂಭಿಸಲು ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ಕೂಡಲೇ ಪೂರ್ಣಗೊಳಿಸುವುದು ಹಾಗೂ ವಸತಿ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಸಕಾಲದಲ್ಲಿ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಭೆ ನಡೆಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಪಿಡಿಓ ಗಳಿಂದ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸಮಸ್ಯೆಗಳ ಮಾಹಿತಿ ಪಡೆದುಕೊಂಡರು.
ತಾಲ್ಲೂಕು ಪಂಚಾಯಿತಿ ಇಓ ಎಂ.ವೆಂಕಟೇಶ್, ನರೇಗಾ ಸಹಾಯಕ ನಿದೇಶಕ ಶ್ರೀನಾಥಗೌಡ, ಸರ್ಕಲ್ ಇನ್ಸ್‌ಪೆಕ್ಟರ್ ಸಿದ್ದರಾಜು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.
ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಿ – ತಹಸೀಲ್ದಾರ್ ಎಸ್.ಅಜಿತ್‌ಕುಮಾರ್ ರೈ
ನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ ಹಾಗು ನಗರಸಭೆ ವತಿಯಿಂದ ಗಣೇಶ ಚತುರ್ಥಿಯ ಅಂಗವಾಗಿ ಆಯೋಜಿಸಲಾಗಿದ್ದ ಶಾಂತಿಸಭೆಯಲ್ಲಿ ತಹಸೀಲ್ದಾರ್ ಎಸ್.ಅಜಿತ್‌ಕುಮಾರ್ ರೈ ಮಾತನಾಡಿದರು.
ಗಣೇಶನ ಹಬ್ಬದ ಆಚರಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ನಾಗರಿಕರು ಸಹಕರಿಸಬೇಕು ಎಂದು ಅವರು ತಿಳಿಸಿದರು.
ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಗಣಪತಿ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಲು ಇಚ್ಚಿಸುವ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ನಾಗರಿಕರು ಕಡ್ಡಾಯವಾಗಿ ನಗರಸಭೆ, ಬೆಸ್ಕಾಂ ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿಯನ್ನು ಪಡೆದುಕೊಳ್ಳುವುದರೊಂದಿಗೆ ಆಯಾ ಇಲಾಖೆಯವರು ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಅನುಮತಿ ಪಡೆಯದೆ ಗಣೇಶನ ಪ್ರತಿಷ್ಟಾಪನೆಗೆ ಯಾರಾದರೂ ಮುಂದಾದಲ್ಲಿ ಅಂತಹವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಗಣೇಶನ ಪ್ರತಿಷ್ಟಾಪನೆಯ ದಿನಾಂಕ, ಸ್ಥಳ, ವಿಸರ್ಜನೆ ಮಾಡುವ ದಿನಾಂಕ, ಮೆರವಣಿಗೆ ಹೋಗುವ ಮಾರ್ಗ, ವಿಸರ್ಜನೆ ಮಾಡುವ ಸ್ಥಳ ಮುಂತಾದ ಅಗತ್ಯವಾದ ಮಾಹಿತಿಯನ್ನು ಪೊಲೀಸ್ ಠಾಣೆಗೆ ಕಡ್ಡಾಯವಾಗಿ ನೀಡಬೇಕು. ವಿಸರ್ಜನೆಯ ದಿನಾಂಕದಂದು ಗಣೇಶನ ಮೂರ್ತಿಯನ್ನು ಸಂಜೆ ೬ ಘಂಟೆಯ ಒಳಗೆ ವಿಸರ್ಜಿಸಬೇಕು ಎಂದರು.
ಪ್ರವಾಹ ಪೀಡಿತ ಕೊಡಗು ಜಿಲ್ಲಾ ನಿರಾಶ್ರಿತರಿಗೆ ಗೌರವ ನೀಡುವ ಸಲುವಾಗಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದನ್ನು ಒಂದು ದಿನ ಅಥವ ಮೂರು ದಿನಗಳಿಗೆ ಸೀಮಿತಗೊಳಿಸಿ ಹಬ್ಬಕ್ಕೆ ಖರ್ಚು ಮಾಡುವ ಹಣವನ್ನು ಉಳಿಸಿ ಕೊಡಗು ಸಂತ್ರಸ್ಥರಿಗೆ ಡಿಡಿ ಮೂಲಕ ನೀಡಿದರೆ ಉತ್ತಮ. ಅಂತಹ ಸಂಘ ಸಂಸ್ಥೆಗಳಿಗೆ ಮುಂಬರುವ ಗಾಂಧಿ ಜಯಂತಿಯಂದು ತಾಲ್ಲೂಕು ಆಡಳಿತದಿಂದ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದರು.
ಸರ್ಕಲ್ ಇನ್ಸ್‌ಪೆಕ್ಟರ್ ಸಿದ್ದರಾಜು ಮಾತನಾಡಿ, ಹಬ್ಬಗಳನ್ನು ಆಚರಿಸುವುದು ಸಂತೋಷ ಪಡಲಿಕ್ಕಾಗಿಯೇ ಹೊರತು ಅನ್ಯ ಧರ್ಮೀಯರ ಭಾವನೆಗಳಿಗೆ ಧಕ್ಕೆ ಯುಂಟು ಮಾಡಲಿಕ್ಕಲ್ಲ. ಹಬ್ಬದ ಹೆಸರಿನಲ್ಲಿ ನಾಗರಿಕರ ಭಾವನೆಗಳಿಗೆ ಧಕ್ಕೆಯುಂಟಾಗದಂತೆ ಆಚರಿಸಲು ಗಣೇಶ ಪ್ರತಿಷ್ಠಪನೆ ಮಾಡುವವರು ಕಡ್ಡಾಯವಾಗಿ ವ್ಯವಸ್ಥಾಪನಾ ಸಮಿತಿ ರಚಿಸಿಕೊಳ್ಳಬೇಕು ಹಾಗೂ ಸಮಿತಿಯ ಎಲ್ಲಾ ಸದಸ್ಯರ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳನ್ನು ಇಲಾಖೆಗೆ ನೀಡುವುದರೊಂದಿಗೆ ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎಂದರು.
ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ ಮಾತನಾಡಿ ಗಣೇಶನ ಮೂರ್ತಿಯ ಪ್ರತಿಷ್ಠಾಪನೆಯ ಹೆಸರಲ್ಲಿ ರಸ್ತೆಗೆ ಅಡ್ಡ ಹಾಕುವುದು, ಫ್ಲೆಕ್ಸ್, ಬಂಟಿಂಗ್ ಬಳಸುವುದಕ್ಕೆ ಈ ಬಾರಿ ಅವಕಾಶವಿರುವುದಿಲ್ಲ. ವಿಸರ್ಜನೆ ವೇಳೆಯಲ್ಲಿ ನಾಗರಿಕರು ಅದರಲ್ಲಿಯೂ ಮುಖ್ಯವಾಗಿ ಯುವಕರು ಸಂಯಮದಿಂದ ವರ್ತಿಸಬೇಕು. ಡಿಜೆ ಸೌಂಡ್ ಸಿಸ್ಟಂ ಮತ್ತು ಪಟಾಕಿ ಹೊಡೆಯುವುದನ್ನು ಸಂಪುರ್ಣ ನಿಷೇಧಿಸಲಾಗಿದೆ. ಗಣೇಶನ ವಿಸರ್ಜನೆಗೆ ಈಗಾಗಲೇ ತಾಲ್ಲೂಕು ಆಡಳಿತ ಸ್ಥಳ ನಿಗಧಿಪಡಿಸಿದ್ದು ಸೂರ್ಯಾಸ್ತದ ಮೊದಲೇ ವಿಸರ್ಜನೆ ಮಾಡಲು ಎಲ್ಲರೂ ಸಹಕರಿಸಬೇಕು ಎಂದರು.
ನಗರಠಾಣೆ ಪಿಎಸ್ಸೈ ಲಿಯಾಖತ್ ಮಾತನಾಡಿ, ಗಣೇಶನ ಹಬ್ಬದ ಆಚರಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಯಾ ವ್ಯವಸ್ಥಾಪನಾ ಸಮಿತಿ ಸದಸ್ಯರು ನೋಡಿಕೊಳ್ಳಬೇಕು. ಹಬ್ಬದ ಆಚರಣೆಯ ಹೆಸರಲ್ಲಿ ರಾತ್ರಿಯಿಡೀ ಧ್ವನಿವರ್ಧಕಗಳನ್ನು ಬಳಸುವುದರಿಂದ ವೃದ್ದರೂ ಹಾಗೂ ಮಕ್ಕಳಿಗೆ ತೊಂದರೆಯಾಗುತ್ತದೆ. ಹಾಗಾಗಿ ಸುಪ್ರೀಂ ಕೋರ್ಟ್ ಆಧೇಶದಂತೆ ರಾತ್ರಿ ೧೦ ಗಂಟೆಯ ನಂತರ ಯಾವುದೇ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಅನ್ಯ ಸಮುದಾಯಗಳ ಜನತೆಯ ಭಾವನೆಗಳಿಗೆ ಧಕ್ಕೆ ಬಾರದಂತೆ ಶಾಂತಿಯುತವಾಗಿ ಹಬ್ಬ ಆಚರಿಸಲು ಎಲ್ಲರ ಸಹಕಾರ ಅಗತ್ಯ ಎಂದರು.
ರೀಲರುಗಳ ಸಮಸ್ಯೆಗಳನ್ನು ಪರಿಹರಿಸಿಕೊಡಬೇಕೆಂದು ಮನವಿ
ರೇಷ್ಮೆ ನೂಲು ಬಿಚ್ಚುವ ರೀಲರುಗಳ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸಿಕೊಡಬೇಕೆಂದು ಸಿಲ್ಕ್ ಸಿಟಿ ರೀಲರ್ಸ್ ವೆಲ್‌ಫೇರ್ ಅಸೋಸಿಯೇಷನ್ಸ್ ಸದಸ್ಯರು ರೇಷ್ಮೆ ಜಂಟಿ ನಿರ್ದೇಶಕ ಎಸ್.ವಿ.ಕುಮಾರ್ ಅವರಿಗೆ ಮನವಿಯನ್ನು ಸಲ್ಲಿಸಿದರು.
ಶಿಡ್ಲಘಟ್ಟ ಗಾಹೂ ತಾಲ್ಲೂಕಿನಲ್ಲಿ ಸಾವಿರಾರು ಮಂದಿ ರೇಷ್ಮೆ ಬಿಚ್ಚಾಣಿಕೆ ಕಸುಬನ್ನು ಅವಲಂಬಿಸಿದ್ದಾರೆ. ಬಹುತೇಕರು ಕುಟುಂಬ ಸಮೇತರಾಗಿ ಈ ಕಸುಬಿನಲ್ಲಿ ತೊಡಗಿಸಿಕೊಂಡಿರುತ್ತಾರೆ. ರೈತರಿಗೆ ಸಮಸ್ಯೆಗಳು ಬಂದಾಗ ಸರ್ಕಾರ ಬೆನ್ನೆಲುಬಾಗಿ ನಿಂತು ದರ ಕುಸಿದಾಗ ಪ್ರೋತ್ಸಾಹ ಧನವನ್ನು ನೀಡಿ ಕಾಪಾಡುತ್ತದೆ. ಆದರೆ ರೀಲರುಗಳಿಗೆ ಸಮಸ್ಯೆಗಳುಂಟಾದಾಗ ಸರ್ಕಾರದಿಂದ ಯಾವುದೇ ರೀತಿಯ ಬೆಂಬಲ ಸಿಗುತ್ತಿಲ್ಲ. ಹಿಂದಿನ ಸರ್ಕಾರದಲ್ಲಿ ರೀಲರುಗಳ ಕಚ್ಚಾ ರೇಷ್ಮೆಗೆ ಪ್ರೋತ್ಸಾಹಧನವನ್ನು ನಿರಂತರವಾಗಿ ನೀಡಲಾಗುತ್ತಿತ್ತು. ಆದರೆ 2017 ನೇ ಸಾಲಿನಿಂದ ಈ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ. ಸಂಬಂಧಪಟ್ಟವರ ಗಮನ ಸೆಳೆದು ಪ್ರೋತ್ಸಾಹಧನವನ್ನು ಮುಂದುವರೆಸಬೇಕು. ರೀಲರುಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.
ಸಿಲ್ಕ್ ಸಿಟಿ ರೀಲರ್ಸ್ ವೆಲ್‌ಫೇರ್ ಅಸೋಸಿಯೇಷನ್ಸ್ ಗೌರವಾಧ್ಯಕ್ಷ ಸೈಯದ್, ಅಕ್ರಂ ಅಹಮದ್, ಅಧ್ಯಕ್ಷ ಮಹಮ್ಮದ್ ಜಮೀರ್, ಉಪಾಧ್ಯಕ್ಷ ನವೀದ್ ಅಹಮದ್, ಫಕೃದ್ದೀನ್, ಶ್ರೀನಿವಾಸ್, ಶ್ರೀನಾಥ್, ರಹಮತ್ತುಲ್ಲ, ಶಬೀರ್‌ಪಾಷ, ಅಮೀರ್‌ಪಾಷ, ಅಸ್ಲಂಪಾಷ ಹಾಜರಿದ್ದರು.
ಅಪ್ಪೇಗೌಡನಹಳ್ಳಿ ಸರ್ಕಾರಿ ಶಾಲೆಯಲ್ಲಿ 'ಶಾಲೆಯಂಗಳದಲ್ಲಿ ನುಡಿಸಿರಿ’ ಕಾರ್ಯಕ್ರಮ
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶುಕ್ರವಾರ ತಾಲ್ಲೂಕು ಕಸಾಪ ವತಿಯಿಂದ ಆಯೋಜಿಸಿದ್ದ ‘ಶಾಲೆಯಂಗಳದಲ್ಲಿ ನುಡಿಸಿರಿ’ ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್ ಮಾತನಾಡಿದರು.
ಕೈವಾರ ತಾತಯ್ಯನವರು ಹೇಳಿದಂತೆ ನೀಚ ಜನರ ಸಹವಾಸ ಬಿಟ್ಟು, ಸಜ್ಜನರ ಸಹವಾಸ ಮಾಡಬೇಕು. ಕುವೆಂಪು ಅವರ ಶ್ರೀರಾಮಾಯಣ ದರ್ಶನಂ, ಸರ್ವಜ್ಞನ ತ್ರಿಪದಿಗಳು, ಡಿವಿಜಿಯವರ ಮಂಕುತಿಮ್ಮನ ಕಗ್ಗ, ಶ್ರೀಮದ್ಭಗವದ್ಗೀತೆ, ಬಸವಣ್ಣನವರ ವಚನಗಳು ಮೊದಲಾದ ಪುಸ್ತಕಗಳನ್ನು ಸಂಗ್ರಹಿಸಿ ನಿರಂತರ ಓದಬೇಕು. ಮಕ್ಕಳಿಗೆ ಅವುಗಳ ಸಾರವನ್ನು ತಿಳಿಸಿ ನಮ್ಮ ಸಾಹಿತ್ಯ ಪರಂಪರೆ ಬಗ್ಗೆ ಹೆಮ್ಮೆ ಮೂಡಿಸಬೇಕು ಎಂದು ಹೇಳಿದರು.
ಮಕ್ಕಳ ಮನಸ್ಸಿನಲ್ಲಿ ಕನ್ನಡಮ್ಮನನ್ನು ಪ್ರತಿಷ್ಠಾಪಿಸುವುದು, ಎಳೆಯ ವಯಸ್ಸಿನಿಂದಲೇ ಕನ್ನಡ ಪ್ರೇಮವನ್ನು ಮಕ್ಕಳಲ್ಲಿ ಹುಟ್ಟಿಸುವುದು, ಕನ್ನಡ ಸಾಹಿತ್ಯ ಓದು ಹಾಗೂ ಬರವಣಿಗೆಗೆ ಉತ್ತೇಜನ ಕೊಡುವುದು ಕಸಾಪದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸರ್ಕಾರಿ ಶಾಲೆ ಹಾಗೂ ಮಕ್ಕಳಿಗೆ ಬೆನ್ನೆಲುಬಾಗಿ ಕಸಾಪ ನಿಂತಿದೆ. ದೇಶ ಸುತ್ತು ಕೋಶ ಓದು ಎಂಬ ನಾಣ್ಣುಡಿಯಂತೆ ಮಸ್ತಕ ಬೆಳಗಲು ಪುಸ್ತಕ ಓದಬೇಕು. ಟಿವಿ ಮೊಬೈಲ್ ಪ್ರಭಾದಿಂದ ಇಂದು ಪುಸ್ತಕ ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ. ನಮ್ಮ ಹಿರಿಯರು ಮುಂದಿನ ತಲೆಮಾರಿಗಾಗಿ ಅನೇಕ ಗ್ರಂಥಗಳನ್ನು ರಚಿಸಿ ಜ್ಞಾನಸಾಗರವನ್ನು ಸಂರಕ್ಷಿಸಿದ್ದಾರೆ. ಪುಸ್ತಕಗಳು ನಮ್ಮ ಸಂಸ್ಕೃತಿ ಮತ್ತು ಹಿಂದಿನವರ ಹಿರಿಮೆ ಗರಿಮೆಗಳ ಇತಿಹಾಸವನ್ನು ಸಾರುತ್ತವೆ. ಅವರುಗಳನ್ನು ಅರಿತು ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು, ನಾಡು ನುಡಿಯ ಬಗ್ಗೆ ಕಾಳಜಿ ಮೂಡಿಸಿಕೊಳ್ಳಬೇಕು. ಕಸಾಪ ವತಿಯಿಂದ ಪುಸ್ತಗಳನ್ನು ಕೊಡುಗೆಯಾಗಿ ಕೊಡುವುದನ್ನು ರೂಢಿಸಿಕೊಂಡಿದ್ದೇವೆ ಎಂದು ನುಡಿದರು.
ಗಣಿತದ ಪರೀಕ್ಷೆಯಲ್ಲಿ ವಿಜೇತರಾದ ಒಂಭತ್ತು ಮಕ್ಕಳಿಗೆ ಕಸಾಪ ವತಿಯಿಂದ ಪ್ರಮಾಣಪತ್ರ ಹಾಗೂ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. ಅಪ್ಪೇಗೌಡನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಎಚ್.ಎ.ಎಲ್ ಉದ್ಯೋಗಿ ವೆಂಕಟೇಶ್ ಟೀಶರ್ಟ್‌ಗಳನ್ನು ನೀಡಿದರು. ಅಪ್ಪೇಗೌಡನಹಳ್ಳಿ ಪ್ರಭಾಕರ್ ಮಕ್ಕಳಿಗೆಲ್ಲರಿಗೂ ನಿಘಂಟನ್ನು ಕೊಡುಗೆಯಾಗಿ ಕೊಟ್ಟರು. ನಿವೃತ್ತ ಶಿಕ್ಷಕ ಶಾಮಸುಂದರ್ ಕವನ ವಾಚಿಸಿದರು.
ಕಸಾಪ ತಾಲ್ಲೂಕು ಘಟಕದ ಕಾರ್ಯದರ್ಶಿಗಳಾದ ಎಸ್.ಸತೀಶ್, ಚಾಂದ್‌ಪಾಷ, ಮಹಿಳಾ ಪ್ರತಿನಿಧಿ ದಾಕ್ಷಾಯಿಣಿ, ನಗರ ಘಟಕದ ಅಧ್ಯಕ್ಷ ಸಿ.ಎನ್.ಮುನಿರಾಜು, ಕಸಬಾ ಹೋಬಳಿ ಅಧ್ಯಕ್ಷ ರಮೇಶ್, ಎಸ್.ವಿ.ನಾಗರಾಜರಾವ್, ಶಂಕರ್, ನರಸಿಂಹಮೂರ್ತಿ, ಹಂಡಿಗನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿಯಪ್ಪ, ಸದಸ್ಯರಾದ ಜಯರಾಮ್, ಮಾಹದೇವಯ್ಯ, ಉಮಾ, ಬೈರೇಗೌಡ, ದ್ಯಾವಪ್ಪ, ಮೂರ್ತಿ, ಸಿ.ಡಿ.ಪಿ.ಒ ಲಕ್ಷ್ಮೀದೇವಮ್ಮ, ಸಿ.ಆರ್.ಪಿ ಪ್ರಕಾಶ್, ಮುನಿರಾಜು, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶ್ರೀನಿವಾಸ್, ಎಸ್‌ಡಿಎಂಸಿ ಅಧ್ಯಕ್ಷೆ ಪುಷ್ಪ, ಕರವಸೂಲಿಗಾರ ಶ್ರೀನಿವಾಸ್, ಮೋಹನ್, ಮುಖ್ಯಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ, ಶಿಕ್ಷಕ ಅಶೋಕ್, ಶ್ರೀರಾಮ, ಹರೀಶ್, ಮುನಿರಾಜು ಹಾಜರಿದ್ದರು.
ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಾಯಾತ್ರೆ ಕಾರ್ಯಕ್ರಮ
ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಬೆಂಗಳೂರಿನ ಇಂಡಿಯ ಫೌಂಡೇಶನ್ ಫಾರ್ ದಿ ಆರ್ಟ್ಸ್ ಸಂಸ್ಥೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಯ ಸಹಯೋಗದೊಂದಿಗೆ ಕಲಾಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮುಖ್ಯಶಿಕ್ಷಕಿ ಸರಸ್ವತಮ್ಮ ಅವರು ಮಾತನಾಡಿದರು.
ಕಲೆಯ ಮೂಲಕ ಕಲಿಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಸಾಧ್ಯವಾಗಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಶಿಡ್ಲಘಟ್ಟ ತಾಲ್ಲೂಕಿನ ಆಯ್ದ ಹತ್ತು ಶಾಲೆಗಳಲ್ಲಿ ಕಲಾಯಾತ್ರೆ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಕಲಾಯಾತ್ರೆಯ ಮೂಲ ಉದ್ದೇಶ ಕಲೆಯ ಮೂಲಕ ಕಲಿಕೆಯನ್ನು ಪರಿಚಯಿಸುವುದಾಗಿದೆ. ಇದರಲ್ಲಿ ಚಿತ್ರಕಲೆ, ನಟನೆ, ಹಾಡು, ಕಾಗದಕಲೆ, ಬರವಣಿಗೆಯ ಮುಖಾಂತರ ಕಲಿಕೆಯನ್ನು ಪರಿಚಯಿಸಲಾಗುತ್ತದೆ ಎಂದು ಹೇಳಿದರು.
ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಂತರ ತಾಲ್ಲೂಕಿನ ವರದನಾಯಕನಹಳ್ಳಿ, ಗುಡಿಹಳ್ಳಿ, ಅಬ್ಲೂಡು ಶಾಲೆಗಳಲ್ಲಿ ಕಲಾಯಾತ್ರೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸಿ.ಆರ್.ಪಿ ಸುರೇಶ್ ಬಾಬು, ಶಿಕ್ಷಕರಾದ ಎಂ.ದೇವರಾಜ್, ಮಂಜುನಾಥ, ನಾಗರಾಜ್, ಶ್ರೀನಿವಾಸ ಯಾದವ್, ತ್ರಿವೇಣಿ, ಸಂಪನ್ಮೂಲ ವ್ಯಕ್ತಿಗಳಾದ ಎಸ್. ಕಲಾಧರ್, ಎಂ. ನಾಗರಾಜ್, ಎಫ್.ಹುಸೇನಿ, ಪ್ರವೀಣ್ ಬೆಳ್ಳಿ, ಅರುಣ್ ಬಿ.ಟಿ. ಎಸ್.ಡಿ.ಎಂ.ಸಿ ಅಧ್ಯಕ್ಷ ಕೃಷ್ಣಪ್ಪ, ಜೈಭಾರತ್ ಯುವಕ ಸಂಘದ ಅಧ್ಯಕ್ಷ ಮಂಜುನಾಥ್ ಹಾಗೂ ಸದಸ್ಯರು ಭಾಗವಹಿಸಿದ್ದರು.
Attachments area
ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದಿಂದ ‘ಮನೆಯಂಗಳದಲ್ಲಿ ನುಡಿಸಿರಿ’ ಕಾರ್ಯಕ್ರಮ
ತಾಲ್ಲುಕಿನ ಚೌಡಸಂದ್ರ ಗ್ರಾಮದಲ್ಲಿ ಹರಿಕಥೆ ವಿದ್ವಾನ್ ಹಾಗೂ ಭಜನೆ ಕಲಾವಿದ ನಾಮದೇವ್ ಅವರ ಮನೆಯಲ್ಲಿ ಮಂಗಳವಾರ ಸಂಜೆ ಕಸಾಪ ತಾಲ್ಲೂಕು ಘಟಕದಿಂದ ಆಯೋಜಿಸಿದ್ದ ‘ಮನೆಯಂಗಳದಲ್ಲಿ ನುಡಿಸಿರಿ’ ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್ ಮಾತನಾಡಿದರು.
ಜಾನಪದ ಕಲೆಗಳನ್ನು ಉಳಿಸಿ, ಬೆಳೆಸಿದರೆ ಗ್ರಾಮದಲ್ಲಿ ಹೊಂದಾಣಿಕೆ, ಸಹಬಾಳ್ವೆ ಇರುತ್ತದೆ. ಜನರಿಗೆ ರಾಮಾಯಣ, ಭಾರತಗಳ ಪರಿಚಯವನ್ನು ಮಾಡಿಕೊಡುವಲ್ಲಿ ಹರಿಕಥೆ, ಭಜನೆ ಮತ್ತು ಪುರಾಣ ವಾಚನಗಳು ನೆರವಾಗಿವೆ. ಜನರ ಬದುಕು, ಕಷ್ಟ ಸುಖ, ನೋವು ನಲಿವುಗಳಿಗೆ ಮುಲಾಮಿನಂತೆ ಕೆಲಸ ಮಾಡುವ ಭಕ್ತಿ ರಸವು ಕನ್ನಡ ಸಾಹಿತ್ಯ ಪರಿಷತ್ತಿನ ಭಾಗವಾಗಿದೆ ಎಂದು ಅವರು ಹೇಳಿದರು.
ಗ್ರಾಮೀಣ ಭಾಗದಲ್ಲಿ ಎಲೆಮರೆಯ ಕಾಯಿಗಳಂತೆ ಕೇವಲ ತಮ್ಮ ಆತ್ಮ ಸಂತೋಷಕ್ಕಾಗಿ ಹರಿಕಥೆ, ಭಜನೆ ಕಲೆ, ತತ್ವಪದ, ವಿವಿಧ ವಾದ್ಯಗಳನ್ನು ಕರಗತ ಮಾಡಿಕೊಂಡ ಸಾಧಕರೇ ನಿಜವಾದ ಕನ್ನಡದ ರಾಯಭಾರಿಗಳು. ಅವರ ಮನೆಯಲ್ಲಿ ನಾದಗಂಗೆಯನ್ನು ಕನ್ನಡದ ಬಂಧುಗಳು ಆಲಿಸಿ ಕಲಾವಿದರ ಮನಸ್ಸಿನೊಳಗೆ ಪ್ರವೇಶ ಪಡೆಯುವ ಅವಕಾಶವನ್ನು ಕಸಾಪ ಪಡೆದಿದೆ ಎಂದು ತಿಳಿಸಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ತಾಲ್ಲೂಕಿನ ಗಡಿ ತೆಲುಗುಮಯವಾಗಿದೆ ಎಂದು ಎಲ್ಲರೂ ಹೇಳುತ್ತಾರೆ. ಈ ಕರಣದಿಂದ ಕಸಾಪ ಕಾರ್ಯಕ್ರಮಗಳನ್ನು ಗ್ರಾಮೀಣ ಭಾಗದಲ್ಲಿಯೇ ನಡೆಸಲು ತೀರ್ಮಾನಿಸಿದ್ದು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಜನರಿಂದ ಸಕಾರಾತ್ಮಕವಾಗಿ ಸ್ಪಂದನೆಯಿದೆ ಎಂದರು.
ಹರಿಕಥೆ ವಿದ್ವಾನ್ ಹಾಗೂ ಭಜನೆ ಕಲಾವಿದ ನಾಮದೇವ್ ಮಾತನಾಡಿ, ಮೊಟ್ಟ ಮೊದಲ ಬಾರಿಗೆ ಕಲಾವಿದರ ಮನೆಯಲ್ಲಿ ಅದರಲ್ಲೂ ಹಳ್ಳಿಗೆ ಕಸಾಪ ಬಂದಿರುವುದು ಸಂತಸದ ವಿಷಯ. ಕ್ರಿಯಾಶೀಲ ಆಲೋಚನೆಯುಳ್ಳ ಮುಂದಿನ ಕಸಾಪ ಕಾರ್ಯಕ್ರಮಗಳಿಗೆ ಕಲಾವಿದರು ತನುಮನಧನದ ಜೊತೆಯಲ್ಲಿ ಸದಾ ತೊಡಗಿಸಿಕೊಳ್ಳುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕಸಾಪ ವತಿಯಿಂದ ಹರಿಕಥೆ ವಿದ್ವಾನ್ ನಾಮದೇವ್ ಅವರನ್ನು ಗೌರವಿಸಲಾಯಿತು.
ನಿವೃತ್ತ ರೇಷ್ಮೆ ಪ್ರದರ್ಶಕ ಬಸವರಾಜ್, ರೇಷ್ಮೆ ಇಲಾಖೆಯ ಅಧಿಕಾರಿ ಜಯದೇವಪ್ಪ ಗುಗ್ರಿ, ಕಸಾಪ ತಾಲ್ಲೂಕು ಘಟಕದ ಕಾರ್ಯದರ್ಶಿಗಳಾದ ಎಸ್.ಸತೀಶ್, ಚಾಂದ್‌ಪಾಷ, ಖಜಾಂಚಿ ಸುಧೀರ್, ಮಹಿಳಾ ಪ್ರತಿನಿಧಿ ದಾಕ್ಷಾಯಿಣಿ, ಮುನಿರಾಜು, ರಮೇಶ್, ಎಸ್.ವಿ.ನಾಗರಾಜರಾವ್, ಶಂಕರ್, ಎಂ.ಎನ್.ನಾಗರಾಜ್, ಮುನಿಶಾಮಪ್ಪ, ಸಿ.ವಿ.ಕೃಷ್ಣಪ್ಪ, ನರಸಿಂಹಮೂರ್ತಿ, ದೇವರಾಜ್, ನಾಗರಾಜ್, ಕೃಷ್ಣಪ್ಪ, ನಂಜುಂಡಪ್ಪ, ಶಿವಾನಂದ ಹಾಜರಿದ್ದರು.
ಕೃಷಿ ಅಭಿಯಾನ ಹಾಗೂ ವಸ್ತು ಪ್ರದರ್ಶನ ಕಾರ್ಯಕ್ರಮ
ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಬುಧವಾರ ನಡೆದ ಸಮಗ್ರ ಕೃಷಿ ಅಭಿಯಾನ, ವಸ್ತು ಪ್ರದರ್ಶನ ಹಾಗೂ ರೈತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಶೇಕಡಾ ಐವತ್ತರಷ್ಟು ರೈತರಿಗೆ ಸಹಾಯಧನದ ಬಗ್ಗೆಯಾಗಲೀ, ಸರ್ಕಾರಿ ಯೋಜನೆಗಳ ಬಗ್ಗೆ ತಿಳಿವಳಿಕೆ ಇಲ್ಲ. ಕೆಲವೇ ಮಂದಿ ಬುದ್ಧಿವಂತ ರೈತರು ಸರ್ಕಾರದ ಯೋಜನೆಗಳ ಸದ್ಭಳಕೆ ಮಾಡಿಕೊಳ್ಳಲು ಸಾಧ್ಯವಾಗಿದೆ. ರೈತರಿಗೆ ಅರಿವು ಮೂಡಿಸುವ ಜವಾಬ್ದಾರಿಯಿದೆ. ನಗರದಲ್ಲಿ ಕಚೇರಿಯ ಬಳಿ ನಡೆಸುವ ಬದಲು ರೈತರ ತೋಟಗಳಲ್ಲಿ ಈ ರೀತಿಯ ಅಭಿಯಾನಗಳನ್ನು ನಡೆಸಿದ್ದರೆ ಚೆನ್ನಾಗಿತ್ತು ಎಂದು ಅಭಿಪ್ರಾಯಪಟ್ಟರು.
ಒಣಬೇಸಾಯದ ಕ್ಷೇತ್ರೋತ್ಸವವನ್ನು ಮಾಡುವ ಮೂಲಕ ಇಲಾಖೆಗಳು ರೈತರನ್ನು ಉತ್ತೇಜಿಸುವ, ಪ್ರೋತ್ಸಾಹಿಸುವ ಮತ್ತು ಜ್ಞಾನ ನೀಡುವ ಕೆಲಸವನ್ನು ಮಾಡಬೇಕು ಎಂದು ಅವರು ತಿಳಿಸಿದರು.
ಜಿಕೆವಿಕೆ ಬೇಸಾಯ ಶಾಸ್ತ್ರಜ್ಞ ಡಾ.ಆನಂದ್ ಮಾತನಾಡಿ, ಪೌಷ್ಠಿಕಯುಕ್ತ ಸತ್ವಭರಿತ ಆಹಾರದ ಉತ್ಪಾದನೆಗೆ ಆದ್ಯತೆ ನೀಡಬೇಕಾದ ಅಗತ್ಯವಿದೆ. ಆಹಾರ ಉತ್ಪಾದನೆಗಿಂತ ಆರೋಗ್ಯ ಕಾಪಾಡಲು ನಾವು ಹೆಚ್ಚು ಖರ್ಚು ಮಾಡುತ್ತಿರುವುದು ದುರಂತದ ಸಂಗತಿಯಾಗಿದೆ. ದೇಶೀಯ ರೋಗನಿಯಂತ್ರಣ ಪದ್ಧತಿಗಳನ್ನು ಬಿಟ್ಟು ನಾವೀಗ ಕೀಟನಾಶಕ, ಕಳೆನಾಶಕ, ರೋಗನಾಶಕ ರಾಸಾಯನಿಕಗಳನ್ನು ವಿದೇಶಗಳಿಂದ ತರಿಸಿ ಬಳಸುತ್ತೇವೆ. ಈ ಕಾರಣದಿಂದ ನಮ್ಮ ಆಹಾರ ಬೆಳೆಗಳನ್ನು ವಿದೇಶಿ ಮಾರುಕಟ್ಟೆ ತಿರಸ್ಕರಿಸುತ್ತಿದೆ. ನೀರಿನ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು. ಹನಿಹನಿ ನೀರನ್ನು ಇಂಗಿಸಬೇಕು. ಜೀವಂತಿಕೆಯನ್ನು ತುಂಬುವ ಜಮೀನನ್ನು ತಯಾರು ಮಾಡಬೇಕು. ರೈತರು ತಮ್ಮ ಜಮೀನಿನ ಒಂದೆಡೆ ಮನೆಗೆ ಆಗುವಷಟಾದರೂ ಸಿರಿಧಾನ್ಯಗಳನ್ನು ಬೆಳೆದುಕೊಳ್ಳಬೇಕು ಎಂದು ಹೇಳಿದರು.
ಕೃಷಿ ಪಂಡಿತ ಪುರಸ್ಕೃತ ಎಚ್.ಜಿ.ಗೋಪಾಲಗೌಡ ಮಾತನಾಡಿ, ಈ ಬಾರಿ ಮಗೆ ಮಳೆಯೂ ಕೈಕೊಟ್ಟಿದೆ. ರಾಗಿ ಬೆಲೆ ಗಗನಕ್ಕೇರಿದೆ. ರೈತ ಸಾಕಷ್ಟು ಕುಗ್ಗಿ ಹೋಗಿದ್ದಾನೆ. ಸರ್ಕಾರದ ಮಟ್ಟದಲ್ಲಿ ಶಾಸಕರು ನಮ್ಮ ಪರಿಸ್ಥಿತಿಯನ್ನು ವಿವರಿಸಿ ಬರ ಪ್ರದೇಶವೆಂದು ಘೋಷಿಸಿ, ಒಂದು ಎಕರೆಗೆ ಇಪ್ಪತ್ತು ಸಾವಿರ ರೂಗಳನ್ನು ಕೊಡಿಸಿ ರೈತರನ್ನು ಉಳಿಸಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಸಿಡಿಪಿಒ ಅಧಿಕಾರಿ ಲಕ್ಷ್ಮೀದೇವಮ್ಮ ತಮ್ಮ ಇಲಾಖೆಯ ಅಡಿಯಲ್ಲಿ ಬರುವ ಸ್ತ್ರೀಶಕ್ತಿ, ಅಂಗನವಾಡಿ, ಆಶಾಕಾರ್ಯಕರ್ತೆಯರೆಲ್ಲಾ ಸೇರಿ ಸಂಗ್ರಹಿಸಿದ ದೇಣಿಗೆ ಒಂದೂಕಾಲು ಲಕ್ಷ ರೂಗಳ ಚೆಕ್ ಅನ್ನು ಕೊಡಗಿನ ಸಂತ್ರಸ್ತರಿಗೆ ತಲುಪಿಸಲು ಶಾಸಕರಿಗೆ ನೀಡಿದರು.
ರೈತರಿಗೆ ಮಾಹಿತಿ ನೀಡಲು ವಿವಿಧ ಇಲಾಖೆಗಳ ಮಳಿಗೆಗಳು, ಯಂತ್ರೋಪಕಕರಣಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ತಹಶೀಲ್ದಾರ್ ಅಜಿತ್‌ಕುಮಾರ್ ರೈ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಉಪಾಧ್ಯಕ್ಷ ಮುನಿಯಪ್ಪ, ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ಕೃಷಿ ಉಪನಿರ್ದೇಶಕಿ ಪಂಕಜಾ, ತೋಟಗಾರಿಕಾ ಸಹಾಯಕ ನಿರ್ದೇಶಕ ಮುನೇಗೌಡ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಬೋಜಣ್ಣ, ಕೃಷಿ ಇಲಾಖೆಯ ಮುರಳಿ, ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಮುನಿಯಪ್ಪ, ಜಿಕೆವಿಕೆಯ ಹುಲ್ಲುನಾಚೇಗೌಡ, ಡಾ.ರಂಗಯ್ಯ, ಡಾ.ಸೋಮಶೇಖರ್, ವಿಶ್ವನಾಥ್, ಡಾ.ಪುಷ್ಪ, ರೈತಸಂಘದ ಪದಾಧಿಕಾರಿಗಳು ಹಾಜರಿದ್ದರು.

