Home Blog Page 365

ಡಾ.ಎಸ್‌.ರಾಧಾಕೃಷ್ಣನ್‌ರವರ ಜನ್ಮದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ

0

ತಾಲ್ಲೂಕಿನ ಹಂಡಿಗನಾಳದ ಕೆ.ವಿ.ಭವನದಲ್ಲಿ ಬುಧವಾರ ತಾಲ್ಲೂಕು ಆಡಳಿತ, ತಾಲ್ಲುಕು ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಭಾರತರತ್ನ ಡಾ.ಎಸ್‌.ರಾಧಾಕೃಷ್ಣನ್‌ರವರ ಜನ್ಮದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಸರ್ಕಾರವು ಶಿಕ್ಷಣಕ್ಕೆ ಹೆಚ್ಚು ಹಣವನ್ನು ಖರ್ಚು ಮಾಡುತ್ತಿದೆ. ಗುಣಮಟ್ಟದ ಶಿಕ್ಷಣವನ್ನು ನೀಡುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಅವರು ತಿಳಿಸಿದರು.
ಖಾಸಗಿ ಶಾಲೆಗಳ ಮಕ್ಕಳು ಉತ್ತಮ ಅಂಕಗಳನ್ನು ಗಳಿಸಿದರೆ, ಸರ್ಕಾರಿ ಸವಲತ್ತುಗಳನ್ನು ಪಡೆಯುವ ಸರ್ಕಾರಿ ಶಾಲೆಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಾಧನೆಗಳಾಗದಿರುವ ಕೊರತೆಯಿದೆ. ವೃತ್ತಿಧರ್ಮಕ್ಕೆ ಚ್ಯುತಿ ಬರದಂತೆ ಶಿಕ್ಷಕರು ಕಾರ್ಯನಿರ್ವಹಿಸಬೇಕು. ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಕೆಲಸ ಮಾಡಿ ಒಳ್ಳೆಯ ಫಲಿತಾಂಶ ಪಡೆದು ತಾಲ್ಲೂಕಿನ ಕೀರ್ತಿ ಹೆಚ್ಚಿಸಿ. ಎಂದರು.
ತಹಶೀಲ್ದಾರ್‌ ಅಜಿತ್‌ಕುಮಾರ್‌ ರೈ ಮಾತನಾಡಿ, ಶಿಕ್ಷಕರು ಸಮಾಜವನ್ನು ಕಟ್ಟುವ ಜವಾಬ್ದಾರಿಯನ್ನು ಹೊತ್ತವರು. ಮಕ್ಕಳ ಭವಿಷ್ಯವನ್ನು ರೂಪಿಸುವವರು. ಮಕ್ಕಳಲ್ಲಿ ಭವಿಷ್ಯದ ಕನಸುಗಳನ್ನು ಬಿತ್ತಿ. ಅವಕಾಶಗಳ ದಾರಿ ತೋರಿಸಿಕೊಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತರಾಗಿರುವ 21 ಮಂದಿ ಶಿಕ್ಷಕರನ್ನು, ಜಿಲ್ಲಾ ಪ್ರಶಸ್ತಿ ಪಡೆದ ಮೂವರು ಶಿಕ್ಷಕರನ್ನು ಹಾಗೂ ಖಾಸಗಿ ಅನುದಾನ ರಹಿತ ಶಾಲೆಯ ಇಬ್ಬರು ಶಿಕ್ಷಕರನ್ನು ಗೌರವಿಸಲಾಯಿತು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಉಪಾಧ್ಯಕ್ಷ ಮುನಿಯಪ್ಪ, ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್‌, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ಮುನಿರಾಜು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೇಶವರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯ ಜಯರಾಮ್‌, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು, ಶಿಕ್ಷಕರಾದ ಬೈರಾರೆಡ್ಡಿ, ಕೆಂಪಣ್ಣ ಹಾಜರಿದ್ದರು.

ಶಿಡ್ಲಘಟ್ಟ ತಾಲ್ಲೂಕಿನ ಐವರು ಶಿಕ್ಷಕರಿಗೆ ಪ್ರಶಸ್ತಿ

0

ಈ ಬಾರಿಯ ಶಿಕ್ಷಕರ ದಿನಾಚರಣೆಯಂದು ಶಿಡ್ಲಘಟ್ಟ ತಾಲ್ಲೂಕಿನ ಐವರು ಶಿಕ್ಷಕರಿಗೆ ಪ್ರಶಸ್ತಿ ಲಭಿಸುತ್ತಿದೆ. ಚೀಮಂಗಲ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಡಾ.ಎಂ.ಶಿವಕುಮಾರ್‌ ಅವರಿಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ, ಅಮ್ಮಗಾರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿ ಎಚ್‌.ಜಿ.ಚಂದ್ರಕಲಾ ಅವರಿಗೆ ‘ವೈಜ್ಞಾನಿಕ ಕ್ಷೇತ್ರದಲ್ಲಿ ವಿಶೇಷ ಶಿಕ್ಷಕ ರಾಜ್ಯ ಪ್ರಶಸ್ತಿ ಲಭಿಸಿದೆ. ಇವರೊಂದಿಗೆ ತಾಲ್ಲೂಕಿನ ಮೂವರು ಶಿಕ್ಷಕರು ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಟಿ.ವೆಂಕಟಾಪುರ ಶಾಲೆಯ ಶಿಕ್ಷಕ ಸಿ.ವೆಂಕಟರೆಡ್ಡಿ, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಮಳ್ಳೂರು ಶಾಲೆಯ ಎಂ.ಸೀನಪ್ಪ ಮತ್ತು ಪ್ರೌಢಶಾಲೆಯ ವಿಭಾಗದಲ್ಲಿ ಸರಸ್ವತಿ ಕಾನ್ವೆಂಟ್‌ ಪ್ರೌಢಶಾಲೆಯ ಜಿ.ಎನ್‌.ಶಿವಣ್ಣ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆಯುತ್ತಿದ್ದಾರೆ.
ಶಿಕ್ಷಕ ಸಿ.ವೆಂಕಟರೆಡ್ಡಿ :
2002 ರಿಂದ ತಾಲ್ಲೂಕಿನ ಕುಪ್ಪೇನಹಳ್ಳಿ, ಚೀಮಂಗಲ, ಗೌಡನಹಳ್ಳಿ, ಆನೆಮಡುಗು, ಬೈಯಪ್ಪನಹಳ್ಳಿ, ಗಾಂಡ್ಲಚಿಂತೆ, ಚಿಕ್ಕದಿಬ್ಬೂರಹಳ್ಳಿ, ಇಲಾಹಿನಗರ, ಇದ್ಲೂಡು ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಭಾರತ ಸೇವಾದಳ ಜಿಲ್ಲಾ ಸಹಸಂಘಟಕರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಟಿ.ವೆಂಕಟಾಪುರ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜನಪದ, ದೇಶಭಕ್ತಿ, ಭಾವಗೀತೆ, ಯೋಗ ಕ್ರೀಡೆಗಳಲ್ಲಿ ಇವರಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ರಾಜ್ಯಮಟ್ಟವನ್ನು ಪ್ರತಿನಿಧಿಸಿದ್ದಾರೆ. ಬಾಂಗ್ಡಾ, ಏರೋಬಿಕ್ಸ್‌ ಮಕ್ಕಳಿಗೆ ಕಲಿಸುತ್ತಾರೆ.
ಶಿಕ್ಷಕ ಎಂ.ಸೀನಪ್ಪ :
ಮಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಂ.ಸೀನಪ್ಪ ಜಿಲ್ಲಾ ಪ್ರಾಥಮಿಕ ಶಿಕ್ಷಣ ಯೋಜನೆಯ ಕಲಾತಂಡದೊಮದಿಗೆ 30 ಹಳ್ಳಿಗಳಲ್ಲಿ ಬೀದಿ ನಾಟಕ ನಡೆಸಿಕೊಟ್ಟಿದ್ದಾರೆ. 26 ವರ್ಷಗಳಿಂದ ತಾಲ್ಲೂಕಿನ 11 ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ನಾಟಕೋತ್ಸವ, ಪ್ರತಿಭಾ ಕಾರಂಜಿ ಹಾಗೂ ಕ್ರೀಡೆಯಲ್ಲಿ ಬಹುಮಾನಗಳನ್ನು ಗೆದ್ದಿದ್ದಾರೆ. ದಾನಿಗಳ ನೆರವು ಪಡೆದು ಬಡ ಮಕ್ಕಳಿಗೆ ನೆರವನ್ನು ನೀಡುತ್ತಾರೆ.
ಶಿಕ್ಷಕ ಜಿ.ಎನ್‌.ಶಿವಣ್ಣ :
ನಗರದ ಸರಸ್ವತಿ ಕಾನ್ವೆಂಟ್‌ ಪ್ರೌಢಶಾಲೆಯ ಶಿಕ್ಷಕ ಜಿ.ಎನ್‌.ಶಿವಣ್ಣ 35 ವರ್ಷಗಳಿಂದ ಸಮಾಜ ವಿಜ್ಞಾನದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು ಪ್ರಸ್ತುತ ಮುಖ್ಯ ಶಿಕ್ಷಕರಾಗಿದ್ದಾರೆ. ಯೋಗ, ಸ್ವಚ್ಛಭಾರತ, ಆರೋಗ್ಯ ಸುಧಾರಣೆ ವಿದ್ಯಾರ್ಥಿಗಳಿಗೆ ಕಲಿಸುತ್ತಾರೆ. ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡುತ್ತಾರೆ.
ಶಿಕ್ಷಕಿ ಎಚ್‌.ಜಿ.ಚಂದ್ರಕಲಾ :
ತಾಲ್ಲೂಕಿನ ಅಮ್ಮಗಾರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಹನ್ನೊಂದು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಯೋಗಗಳ ಮೂಲಕ ವಿಜ್ಞಾನ ಬೋಧನೆ, ಪ್ರಾತ್ಯಕ್ಷಿಕೆಗಳ ತಯಾರಿ ಹಾಗೂ ವಿಜ್ಞಾನದ ಪ್ರಯೋಗಗಳನ್ನು ಮಕ್ಕಳಿಗೆ ಕಲಿಸುತ್ತಾರೆ. ಪರಿಸರ ಸಂರಕ್ಷಣೆ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾರೆ.
ಶಿಕ್ಷಕ ಡಾ.ಎಂ.ಶಿವಕುಮಾರ್‌ :
ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಡಾ.ಶಿವಕುಮಾರ್, ಭವಿಷ್ಯದಲ್ಲಿ ಇಂಟರ್‌ನೆಟ್ ಆಧಾರಿತ ಮಕ್ಕಳ ಶಿಕ್ಷಣದ ಕುರಿತಂತೆ ಪ್ರಯೋಗಶೀಲರಾಗಿದ್ದಾರೆ. ಮಿಲೆನಿಯಮ್ ಜನರೇಷನ್ ವಿದ್ಯಾರ್ಥಿಗಳಿಗೆ ಇಂಟರ್‌ನೆಟ್ ಮೊಬೈಲ್ ಅಪ್ಲಿಕೇಷನ್‌ನಂತಹ ಸಲಕರಣೆಗಳ ಮೂಲಕವೇ ಶಿಕ್ಷಣ ನೀಡಿದರೆ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದು ಮೂರು ಮೊಬೈಲ್ ಅಪ್ಲಿಕೇಷನ್‌ಗಳನ್ನು ರೂಪಿಸಿರುವ ಇವರು ಸರಳ ಗಣಿತ ಸೂತ್ರಗಳ ಕಲಿಕೆ ಸೇರಿದಂತೆ ಕಲಿಕಾ ಮಾಧ್ಯಮದ ಬಗ್ಗೆ ವೀಡಿಯೋ ಮೂಲಕ ಮಾಹಿತಿ ನೀಡುತ್ತಿದ್ದಾರೆ. 200ಕ್ಕೂ ಹೆಚ್ಚು ಸಾಫ್ಟ್ ಸ್ಕಿಲ್ ಟ್ರೈನಿಂಗ್ ಕುರಿತಂತೆ ತರಗತಿಗಳನ್ನು ಉಚಿತವಾಗಿ ರಜಾ ದಿನಗಳಲ್ಲಿ ನಡೆಸಿರುವ ಇವರು ಶಿಕ್ಷಕರಾಗಿ 14 ವರ್ಷಗಳ ಸೇವೆ ಸಲ್ಲಿಸಿದ್ದಾರೆ.

ಎ.ಪಿ.ಎಂ.ಸಿ ಮಾರುಕಟ್ಟೆಗೆ ಸ್ಥಳ ನಿಗದಿಪಡಿಸಲು ಒತ್ತಾಯಿಸಿ ಧರಣಿ

0

ನಗರದ ತಾಲ್ಲೂಕು ಕಚೇರಿ ಮುಂದೆ ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಸೋಮವಾರ ಪ್ರಾರಂಭಿಸಿದರು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಹೋಲಿಸಿದರೆ ಶಿಡ್ಲಘಟ್ಟ ತಾಲ್ಲೂಕಿಗೆ ಮಾತ್ರ ಮಲತಾಯಿ ಧೋರಣೆ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಜಿಲ್ಲೆಯ ಎಲ್ಲಾ ಕಡೆ ಎ.ಪಿ.ಎಂ.ಸಿ ಮಾರುಕಟ್ಟೆಗಳಿದ್ದು ಶಿಡ್ಲಘಟ್ಟ ತಾಲ್ಲೂಕಿಗೆ ಮಾತ್ರ ಇಲ್ಲವಾಗಿದೆ. ಈ ತಕ್ಷಣ ಎ.ಪಿ.ಎಂ.ಸಿ ಮಾರುಕಟ್ಟೆಗೆ ಸ್ಥಳ ನಿಗದಿಪಡಿಸಿಕೊಟ್ಟು ನಮ್ಮ ತಾಲ್ಲೂಕಿನ ರೈತರಿಗೆ ಅನುಕೂಲ ಮಾಡಿಕೊಡಬೇಕು. ಕೊಳಚೆ ನಿವಾಸಿಗಳಿಗೆ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ರಾಜ್ಯ ಘಟಕದ ಗೌರವಾಧ್ಯಕ್ಷ ನಾರಾಯಣರೆಡ್ಡಿ, ಪದಾಧಿಕಾರಿ ನಾರಾಯಣರೆಡ್ಡಿ, ಜಿಲ್ಲಾ ಘಟಕದ ಅಧ್ಯಕ್ಷೆ ಸುಷ್ಮಾ ಶ್ರೀನಿವಾಸ್‌, ಪ್ರವೀಣ್‌ಕುಮಾರ್‌, ರಾಮುಶಿವಣ್ಣ, ಜಿ.ನಾರಾಯಣಸ್ವಾಮಿ, ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಎನ್‌.ವೆಂಕಟಲಕ್ಷ್ಮಯ್ಯ ಹಾಜರಿದ್ದರು.

ನಗರದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿ ಪ್ರಾರಂಭ

0

ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿ ರಸ್ತೆ ಡಾಂಬರೀಕರಣದ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಶಾಸಕ ವಿ.ಮುನಿಯಪ್ಪ ಅವರು ಮಾತನಾಡಿದರು.
ನಗರದಲ್ಲಿ ರಸ್ತೆ ಅಭಿವೃದ್ಧಿಗಾಗಿ ಹನ್ನೊಂದು ಕೋಟಿ ಇಪ್ಪತ್ತೈದು ಲಕ್ಷ ರೂಗಳ ಹಣವನ್ನು ಮೀಸಲಿಟ್ಟು ಡಾಂಬರೀಕರಣ ಕಾರ್ಯವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ನಗರಕ್ಕೆ ಸೇರಿಕೊಂಡಿರುವ ಒಟ್ಟು 5 ಕಿ.ಮೀ ರಸ್ತೆಯನ್ನು ಡಾಂಬರೀಕರಣ ಮಾಡಲಾಗುತ್ತಿದೆ. ನಗರೋತ್ತಾನದ ಹಣದೊಂದಿಗೆ ನಬಾರ್ಡ್‌ ನೆರವಿನ 2 ಕೋಟಿ ರೂಗಳನ್ನು ಸಹ ರಸ್ತೆ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಗುಣಮಟ್ಟದಲ್ಲಿ ರಾಜಿ ಇಲ್ಲದೆ ಕಾಮಗಾರಿ ನಡೆಸುವಂತೆ ಸೂಚನೆಗಳನ್ನು ನೀಡಿದ್ದೇವೆ ಎಂದರು.
ಆಶ್ರಯ ಲೇಔಟ್‌ನಲ್ಲಿ ಕಾಂಕ್ರೀಟ್‌ ರಸ್ತೆ ಮತ್ತು ಚರಂಡಿಗೆ ಒಂದು ಕೋಟಿ ಮೀಸಲಿಡಲಾಗುವುದು. ಸುಮಾರು 35 ಕೊಳವೆ ಬಾವಿಗಳಿಗೆ ಟೆಂಡರ್‌ ಪ್ರಕ್ರಿಯೆ ನಡೆಸಿ ನಗರದ ಪ್ರತಿಯೊಂದು ವಾರ್ಡಿನಲ್ಲೂ ಕೊಳವೆ ಬಾವಿಗಳನ್ನು ಕೊರೆಸಲಾಗುವುದೆಂದರು.
ಈ ಸಂದರ್ಭದಲ್ಲಿ ನಗರದ ರೇಷ್ಮೆ ಕಚೇರಿಯ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಇಂದಿರಾ ಕ್ಯಾಂಟೀನ್‌ಗೆ ಕೊಳವೆ ಬಾವಿಯನ್ನು ಕೊರೆಸಲು ಪೂಜೆಯನ್ನು ನೆರವೇರಿಸಿ, ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಕೆರೆಯ ಏರಿಯ ಮೇಲೆ ರಸ್ತೆ ನಡುವೆ ದೀಪಗಳನ್ನು ಅಳವಡಿಸಿರುವುದನ್ನು ವೀಕ್ಷಿಸಿದರು.
ನಗರಸಭೆ ಆಯುಕ್ತ ಜಿ.ಎನ್‌.ಚಲಪತಿ, ಅಧ್ಯಕ್ಷ ಅಫ್ಸರ್‌ಪಾಷ, ಎಂಜಿನಿಯರ್‌ ಗಂಗಾಧರನ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ಸಿದ್ದರಾಜು, ಯಾಸ್ಮೀನ್‌ತಾಜ್‌, ಟಿ.ಕೆ.ನಟರಾಜ್‌, ರಾಜ್‌ಕುಮಾರ್‌, ನಗರಸಭೆಯ ಸದಸ್ಯರು ಹಾಜರಿದ್ದರು.

ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ ಕಾರ್ಯಕ್ರಮ

0

ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ಕನ್ನಡ ಸಾರಸ್ವತ ಪರಿಚಾರಿಕೆ ಶಿಡ್ಲಘಟ್ಟ ತಾಲ್ಲೂಕು ಮತ್ತು ಕೇಂದ್ರ ಗ್ರಂಥಾಲಯ ಸಹಯೋಗದಲ್ಲಿ ನಡೆದ ‘ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ’ 13 ನೇ ತಿಂಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಡಾ. ಎಂ. ಶಿವಕುಮಾರ್ ಅವರು ಮಾತನಾಡಿದರು.
ಮಕ್ಕಳು ದೊಡ್ಡ ಪುಸ್ತಕಗಳನ್ನು ಓದುವುದಿಲ್ಲ ಹಾಗಾಗಿ ಅವರಿಗೆ ಇಷ್ಟವಾಗುವ ರೀತಿಯಲ್ಲಿ ಚಿಕ್ಕಚಿಕ್ಕ ವಿಷಯವಾಗಿ ಕೊಡುವ ಪ್ರಯತ್ನ ಮಾಡಿರುವೆ. ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ, ಭರವಸೆ ನೀಡಿದರೆ ಅವರು ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ. ಪರೀಕ್ಷೆಗೆ ಹೇಗೆ ಓದಬೇಕು, ಹೇಗೆ ಓದಿದ್ದನ್ನು ನೆನಪಿನಲ್ಲಿಟ್ಟುಕೊಂಡು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವುದು ಹೇಗೆ, ಈ ಹಲವು ಪ್ರಶ್ನೆಗಳು ವಿದ್ಯಾರ್ಥಿಗಳನ್ನು ಕಾಡುತ್ತದೆ. ಇಂತಹ ಪ್ರಶ್ನೆಗಳಿಗೆ ಅವರಿಗೆ ಉತ್ತರ ರೂಪದಲ್ಲಿ ‘ನೀವೂ ಯಶಸ್ಸನ್ನು ಗಳಿಸಬಲ್ಲಿರಿ’ ಎಂಬ ಪುಸ್ತಕವನ್ನು ಬರೆದಿರುವೆ. ವಿದ್ಯಾರ್ಥಿ ಜೀವನದ ದಾರಿದೀಪವಾಗಲಿ ಎಂಬ ಉದ್ದೇಶ ಇದರ ಹಿನ್ನೆಲೆಯಲ್ಲಿದೆ ಎಂದರು.
ಆಂತರಿಕ ಪ್ರೇರಣೆಯಿಂದ ಅದ್ಭುತಗಳನ್ನು ಸೃಷ್ಟಿಸಲು ಸಾಧ್ಯ. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಪ್ರೇರಣೆ ಸಿಕ್ಕಲ್ಲಿ ಸಾಧನೆಗೆ ದಾರಿಯಾಗುತ್ತದೆ ಎಂದು ಅವರು ತಿಳಿಸಿದರು.
ಸ್ವಾಮಿ ವಿವೇಕಾನಂದರು, ಸರ್ವೇಪಲ್ಲಿ ರಾಧಾಕೃಷ್ಣನ್‌, ಡಾ.ಅಬ್ದುಲ್‌ ಕಲಾಂ ನನಗೆ ಪ್ರೇರಣೆ. ಸ್ವ ಇಚ್ಛೆಯಿಂದ ವಿದ್ಯಾರ್ಥಿಗಳು ಕಲಿಯಲು ಬಯಸಬೇಕು. ಆ ಕಲಿಕಾ ಪ್ರವೃತ್ತಿ ಹುಟ್ಟಿಸುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಹೇಳಿದರು.
ಸಾಹಿತಿ ಚಂದ್ರಶೇಖರ್‌ ಹಡಪದ್‌ ಮಾತನಾಡಿ, ಜ್ಞಾನವನ್ನು ಪರಿಚಯಿಸುವ ಗ್ರಂಥಾಲಯವನ್ನು ಅರಮನೆಯೆಂದು ಕರೆಯುವ ಮೂಲಕ ಲೇಖಕರ ಪರಿಚಯವನ್ನು ಮಾಡಿಕೊಡುವ ಉತ್ತಮ ಕಾರ್ಯ ನಡೆಯುತ್ತಿದೆ. ಪ್ರತಿಯೊಬ್ಬರಿಗೂ ಅವಕಾಶ ಲಭಿಸುತ್ತದೆ ಆದರೆ ಸಂದರ್ಭಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಆಧಾರದಲ್ಲಿ ನಮ್ಮ ವ್ಯಕ್ತಿತ್ವ ನಿರ್ಧಾರವಾಗುತ್ತದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಶಿಕ್ಷಕ ಡಾ. ಎಂ. ಶಿವಕುಮಾರ್ ಅವರು ತಮ್ಮ ‘ನೀವೂ ಯಶಸ್ಸನ್ನು ಗಳಿಸಬಲ್ಲಿರಿ’ ಪುಸ್ತಕವನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು. ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಶಿಕ್ಷಕ ಡಾ. ಎಂ. ಶಿವಕುಮಾರ್ ಮತ್ತು ಸಾಹಿತಿ ಚಂದ್ರಶೇಖರ ಹಡಪದ್‌ ಅವರನ್ನು ಗೌರವಿಸಲಾಯಿತು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ಸ್ಥಳೀಯ ಲೇಖಕರನ್ನು ಪರಿಚಯಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಿದೆ ಎಂದು ಹೇಳಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್‌, ಕಾರ್ಯದರ್ಶಿ ಸತೀಶ್‌, ಗ್ರಂಥಪಾಲಕ ಬಚ್ಚರೆಡ್ಡಿ, ಸಿಬ್ಬಂದಿ ಬಾಂಧವ್ಯ, ಚಲನಚಿತ್ರ ನಟ ಸಿ.ಎನ್‌.ಮುನಿರಾಜು, ನಿವೃತ್ತ ಶಿಕ್ಷಕ ಸುಂದರನ್‌, ಕುಸ್ತಿಪಟು ಶೇಖರ್‌, ಅಜಿತ್‌ ಕೌಂಡಿನ್ಯ, ವಿ.ವೆಂಕಟರಮಣ, ಬೆಳ್ಳೂಟಿ ರಮೇಶ್‌, ವೃಷಬೇಂದ್ರಪ್ಪ ಹಾಜರಿದ್ದರು.

ಶ್ರೀ ಕೃಷ್ಣ ಜಯಂತೋತ್ಸವ ಅಂಗವಾಗಿ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ

0

ತಾಲ್ಲೂಕಿನ ಬಶೆಟ್ಟಿಹಳ್ಳಿ ಗೇಟ್‌ನ ಶ್ರೀ ಸಾಯಿ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಶ್ರೀ ಕೃಷ್ಣ ಜಯಂತೋತ್ಸವ ಅಂಗವಾಗಿ ಮಕ್ಕಳಿಗೆ ವೇಷಭೂಷಣ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಶ್ರೀ ಸಾಯಿ ಇಂಟರ್‌ನ್ಯಾಷನಲ್ ಸ್ಕೂಲ್‌ ಕಾರ್ಯದರ್ಶಿ ಎಂ.ಮಂಜುನಾಥ್ ಮಾತನಾಡಿದರು.
ಹಿಂದೂ ಧರ್ಮದಲ್ಲಿ ಕೃಷ್ಣನ ಸಂದೇಶ ಅಪಾರ ಹಾಗೂ ಅತ್ಯಂತ ಮಹತ್ವಪೂರ್ಣವಾಗಿದೆ. ಯಾವುದೇ ರಾಜ್ಯದ ರಾಜನಾಗದೇ ಎಲ್ಲ ರಾಜರ ಮಾರ್ಗದರ್ಶಕನಾಗಿದ್ದ ಶ್ರೀಕೃಷ್ಣ. ದುಷ್ಟ ಶಿಕ್ಷಕ, ಶಿಷ್ಟರ ರಕ್ಷಕನಾಗಿರುವ ಶ್ರೀಕೃಷ್ಣ ಭಗವದ್ಗೀತೆಯ ಮೂಲಕ ಪ್ರಪಂಚಕ್ಕೆ ಜೀವನ ಸಂದೇಶ ಸಾರಿದ್ದು, ಪೋಷಕರು ಮಕ್ಕಳಿಗೆ ಶ್ರೀಕೃಷ್ಣ ನೀಡಿರುವ ಉಪದೇಶಗಳನ್ನು ನಿತ್ಯವೂ ಬೋಧಿಸಬೇಕಿದೆ ಎಂದು ಹೇಳಿದರು.
ಸತ್ಯ, ಧರ್ಮ, ಶಾಂತಿಗೆ ಪ್ರತಿರೂಪವಾಗಿರುವ ಶ್ರೀಕೃಷ್ಣನ ಸಂದೇಶ ಸರ್ವಕಾಲಿಕವಾಗಿದ್ದು, ಸಮಸಮಾಜದ ನಿರ್ಮಾಣಕ್ಕೆ ಶ್ರೀಕೃಷ್ಣನ ಆದರ್ಶಗಳು ದಾರಿದೀಪವಾಗಿದೆ ಎಂದು ಅವರು ತಿಳಿಸಿದರು.
ಶಾಲೆಯಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಮಕ್ಕಳು ಶ್ರೀಕೃಷ್ಣನ ವೇಷಭೂಷಣಗಳನ್ನು ಧರಿಸಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಮಕ್ಕಳ ಪೊಷಕರು ಸಹಾ ಭಾಗವಹಿಸಿ ಶಾಲೆಯಲ್ಲಿ ನಡೆಸುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖಂಡರಾದ ಶಿವರಾಮರೆಡ್ಡಿ, ಮುನಿಶಾಮಿಗೌಡ, ಶಿಕ್ಷಕರಾದ ವಿನುತ, ಮೀನಾಕ್ಷಿ ಮಾಲಾಶ್ರೀ, ಧನ್ಯ, ರೂಪಾಶ್ರೀ ಮಮತಾ, ಶೈಲಜ, ನೇತ್ರಾವತಿ, ಶ್ರೀನಿವಾಸ್, ಗಜೇಂದ್ರ, ಸೌಮ್ಯ, ಸುಮಿತ್ರ, ಮಂಜುಳ, ಲಲಿತಶ್ರೀ, ಶಾಲಾ ಮಕ್ಕಳ ಪೋಷಕರು, ಶಾಲಾ ಸಿಬ್ಬಂದಿ ಹಾಜರಿದ್ದರು.

ಸವಿತಾ ಸಮಾಜದಿಂದ ವಿಶೇಷ ಪೂಜಾ ಕಾರ್ಯಕ್ರಮ

0

ತಾಲ್ಲೂಕು ಸವಿತಾ ಸಮಾಜ ಹಾಗೂ ತಾಲ್ಲೂಕು ಸವಿತಾ ಕಲಾವಿದರ ಸಂಘದ ವತಿಯಿಂದ ಮೂರನೇ ಶ್ರಾವಣ ಶನಿವಾರದ ಪ್ರಯುಕ್ತ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ದೇವಾಲಯದಲ್ಲಿ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆದಿದ್ದು ಸವಿತಾ ಸಮಾಜದ ಎಲ್ಲಾ ಮುಖಂಡರು ಯುವಕರು ಹಾಗೂ ನಗರದ ನಾಗರಿಕರು ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಾಸಕ ವಿ.ಮುನಿಯಪ್ಪ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಊರಿನ ಪ್ರಮುಖ ಬೀದಿಗಳಲ್ಲಿ ಮುತ್ತಿನ ಪಲ್ಲಕಿಯಲ್ಲಿ ಮಂಗಳವಾದ್ಯಗಳೊಂದಿಗೆ ಸ್ವಾಮಿಯ ಮೆರವಣಿಗೆ ಮಾಡಲಾಯಿತು.

ಕಸಾಪ ತಾಲ್ಲೂಕು, ಹೋಬಳಿ ಘಟಕಗಳ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

0

ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಶ್ರೀ ಲಕ್ಷ್ಮೀ ವಿದ್ಯಾನಿಕೇತನ ಶಾಲೆಯಲ್ಲಿ ಶನಿವಾರ ತಾಲ್ಲೂಕು, ಹೋಬಳಿ ಕಸಾಪ ಘಟಕಗಳ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಅಭಿನಂದನಾ ಸಮಾರಂಭದಲ್ಲಿ ಪ್ರಧಾನ ಭಾಷಣಕಾರರಾಗಿ ‘ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು’ ವಿಷಯವಾಗಿ ಪತ್ರಕರ್ತ ಬಿ.ಗಣಪತಿ ಮಾತನಾಡಿದರು.
ಸಾಹಿತ್ಯದ ಹರಿವಿನಿಂದ ಬಂದದ್ದೇ ಜಾತ್ಯತೀತ ಪ್ರಜ್ಞೆ. ಸಾಹಿತ್ಯದ ಮೂಲ ಧೋರಣೆ ಮನುಷ್ಯನನ್ನು ಮನುಷ್ಯನನ್ನಾಗಿಸುವುದಾಗಿದೆ. ನಮ್ಮನ್ನು ನಾವು ಕಂಡುಕೊಳ್ಳುವುದೇ ಸಾಹಿತ್ಯದ ಮುಖ್ಯ ಆಶಯ ಎಂದು ಅವರು ತಿಳಿಸಿದರು.
ಮನುಷ್ಯ ಸಮಾಜವನ್ನು ಒಟ್ಟಾಗಿ ಕಟ್ಟುವ ಸಮಷ್ಟಿಯ ಭಾವನೆಯ ಕುವೆಂಪುರವರ ಆಶಯವು ಸಾಹಿತ್ಯದ ಧೋರಣೆಯನ್ನು ಪ್ರತಿಧ್ವನಿಸುತ್ತದೆ. ಕುವೆಂಪುರವರು ನಾಡಿನ ಪ್ರಜ್ಞೆಯಾದರೆ, ಡಾ.ರಾಜ್‌ಕುಮಾರ್‌ ಸಾಂಸ್ಕೃತಿಯ ಧ್ವನಿಯಾಗಿದ್ದರು. ಬಿರುಸಾಗಿದ್ದ ಚಳುವಳಿಗಳು ನಿರಸನಗೊಂಡದ್ದಕ್ಕೆ ಸಾಹಿತ್ಯದ ಮೌಲ್ಯದ ಅಧಃಪತನವೇ ಕಾರಣ. ಕನ್ನಡದಿಂದ ನಾವು ಬದುಕಲು ಕಲಿತಿದ್ದೇವೆ, ಆದರೆ ಕನ್ನಡವನ್ನು ಬದುಕಿಸಲು ಕಲಿಯದಿರುವುದು ದುರಂತ. ವಿಧಾನಸೌಧದ ಮೆಟ್ಟಿಲು ತುಳಿದೊಡನೆಯೇ ಸಾಹಿತ್ಯದ ಮೌಲ್ಯ ಕುಸಿಯಿತು.
ಹಿಂದೆ ಸಾಹಿತ್ಯ ಬಡವರ, ದಲಿತರ, ಶೋಷಿತರ, ಕೃಷಿಕರ ಆತ್ಮಾಭಿಮಾನದ ಸಂಕೇತವಾಗಿತ್ತು. ಸಾಹಿತ್ಯ ಯಾವತ್ತಿಗೂ ಸಮಾಜದಿಂದ ಹೊರತಲ್ಲ. ಸಾಹಿತ್ಯ ಸಹಜ ಜೀವನಪ್ರಜ್ಞೆಯ ಪ್ರತಿಬಿಂಬ, ಮನೋವಿಕಾಸವೇ ಇದರ ಮೂಲ ಉದ್ದೇಶ. ಓದು, ಪರ್ಯಟನೆ, ಗುರು ಮತ್ತು ಸ್ವಅಧ್ಯಯನದಿಂದ ಮಾತ್ರ ವ್ಯಕ್ತಿ ಮತ್ತು ಸಮಾಜ ಬೆಳೆಯಬಲ್ಲದು ಎಂದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ, ಕಸಾಪ ತೆಲುಗನ್ನಡಿಗರ ಪ್ರದೇಶದಲ್ಲಿ ಕನ್ನಡದ ಪ್ರೇಮ ಬಿತ್ತಲಿ. ತಾಲ್ಲೂಕಿನಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಲಿ, ಎಲ್ಲರನ್ನೂ ಮುಟ್ಟುವಂತಾಗಲಿ ಎಂದು ಹೇಳಿದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್‌ ಮಾತನಾಡಿ, ತಿಂಗಳಿಗೆ ನಾಲ್ಕು ಕಾರ್ಯಕ್ರಮಗಳನ್ನು ಪ್ರತಿಯೊಂದು ತಾಲ್ಲೂಕಿನವರೂ ಮಾಡಿದಲ್ಲಿ ಜಿಲ್ಲೆಯಾಧ್ಯಂತ ಪ್ರತಿದಿನ ಕನ್ನಡದ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತವೆ. ಗ್ರಾಮೀಣ ಭಾಗದಲ್ಲಿ ತಾಲ್ಲೂಕು ಅಧ್ಯಕ್ಷರು ಹೆಚ್ಚೆಚ್ಚು ಕನ್ನಡದ ಕಾರ್ಯಕ್ರಮಗಳನ್ನು ಮಾಡಿ ಕಸಾಪಗೆ ಕೀರ್ತಿ ತರಬೇಕೆಂದು ಹೇಳಿದರು.
ನೂತನ ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್‌ ಅವರಿಗೆ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್‌ ಕಸಾಪ ಹಾಗೂ ಕನ್ನಡ ಧ್ವಜವನ್ನು ನೀಡಿ ಸನ್ಮಾನಿಸಿದರು. ತಾಲ್ಲೂಕು, ಹೋಬಳಿ ಕಸಾಪ ಘಟಕಗಳ ನೂತನ ಪದಾಧಿಕಾರಿಗಳಿಗೆ ಈ ಸಂದರ್ಭದಲ್ಲಿ ಪ್ರಮಾಣಪತ್ರವನ್ನು ನೀಡಲಾಯಿತು.
ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬೈರೇಗೌಡ, ಶ್ರೀ ಲಕ್ಷ್ಮೀ ವಿದ್ಯಾನಿಕೇತನ ಶಾಲೆಯ ಸಂಸ್ಥಾಪಕ ಎನ್‌.ದೇವರಾಜ್‌, ಎಸ್‌.ವಿ.ನಾಗರಾಜರಾವ್‌, ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್‌, ಜಿಲ್ಲಾ ಸಂಚಾಲಕ ಜೆ.ಎಸ್‌.ವೆಂಕಟಸ್ವಾಮಿ, ಎಸ್‌.ಸತೀಶ್‌, ಚಾಂದ್‌ಪಾಷ, ಮುನಿಯಪ್ಪ, ದಾಕ್ಷಾಯಿಣಿ, ಶಂಕರ್‌, ಬಿ.ಆರ್‌.ಪ್ರಭಾಕರರೆಡ್ಡಿ, ಸಿ.ಎಂ.ಮುನಿರಾಜು ಹಾಜರಿದ್ದರು.

ನಾಡಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮ

0

ನಗರದ ಕಂದಾಯಭವನದ ಮುಂಭಾಗದಲ್ಲಿ ಶನಿವಾರ ನಾಡಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಶ್ರೀ ಕೃಷ್ಣ ಜಯಂತಿ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಮಹಾಭಾರತದಲ್ಲಿ ಶ್ರೀ ಕೃಷ್ಣ ತೋರಿಸಿಕೊಟ್ಟ ಮಾರ್ಗದರ್ಶನಗಳು ಸರ್ವಕಾಲಿಕವಾಗಿದ್ದು ಎಲ್ಲರೂ ಅದನ್ನು ಅನುಸರಿಸಬೇಕು. ಯಾದವ ಸಮಾಜದ ಏಳಿಗೆಯ ಹಿತದೃಷ್ಠಿಯಿಂದ ನಗರದಲ್ಲಿ ಸಮುದಾಯ ಭವನ ನಿರ್ಮಾಣಕ್ಕಾಗಿ ನಿವೇಶನ ಹಂಚಿಕೆ ಮಾಡಲು ಸೂಕ್ತ ಜಾಗವನ್ನು ಗುರ್ತಿಸಿ ಮಂಜೂರು ಮಾಡಿಕೊಡುವುದಾಗಿ ಭರವಸೆ ನೀಡಿದರು.
ಯಾವುದೇ ಸಮುದಾಯಗಳು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಅವರು ಹೇಳಿದರು.
ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಅರಿಕೆರೆ ಮುನಿರಾಜು ಮಾತನಾಡಿ, ಯಾವುದೇ ಸರ್ಕಾರಗಳು ಬಂದರೂ ಹಿಂದುಳಿದ ವರ್ಗದ ಜನಾಂಗಕ್ಕೆ ಈವರೆಗೂ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ, ಹಿಂದುಳಿದ ವರ್ಗಗಳ ಆಯೋಗಕ್ಕೆ ಇದುವರೆಗೂ ಸಂವಿಧಾನಿಕ ಮಾನ್ಯತೆ ಸಿಕ್ಕಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬಂದು ೭೨ ವರ್ಷಗಳು ಕಳೆದರೂ ಇಂದಿಗೂ ಸಮಾಜದಲ್ಲಿ ಹಿಂದುಳಿದವರು, ಅಲ್ಪ ಸಂಖ್ಯಾತರು, ದಲಿತರಿಗೆ ಶಿಕ್ಷಣ ಸಿಗಬಾರದೆನ್ನುವ ವಿಕೃತ ಮನಸ್ಸಿನ ಜನರು ಇದ್ದಾರೆಂದರೆ ನಮ್ಮ ಸಮಾಜ ಎಲ್ಲಿಗೆ ಸಾಗುತ್ತಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ.
ಯಾವುದೇ ರಾಜಕೀಯ ಪಕ್ಷಗಳು, ರಾಜಕಾರಣಿಗಳಿಂದ ಜನಾಂಗ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಸಂಘಟಿತರಾಗಿ ಸಂವಿಧಾನ ಬದ್ಧವಾಗಿ ನಮಗೆ ಸಿಗಬೇಕಾಗಿರುವ ಸೌಲತ್ತುಗಳನ್ನು ಪಡೆದುಕೊಳ್ಳಲು ಹೋರಾಟ ಮಾಡುವ ಮೂಲಕ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಗುಜರಾತ್‌ನಂತಹ ರಾಜ್ಯದಲ್ಲಿ ಒಂದು ಸಮುದಾಯ ಒಗ್ಗಟ್ಟಿನಿಂದ ಸರ್ಕಾರಗಳನ್ನು ನಿರ್ಧರಿಸುವುದಾದರೆ ನಮ್ಮಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ? ಎಂದರು.
ಈ ಸಂದರ್ಭದಲ್ಲಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ತಹಶೀಲ್ದಾರ್ ಅಜಿತ್ ಕುಮಾರ್ ರೈ, ನಗರಸಭೆ ಆಯುಕ್ತ ಚಲಪತಿ, ಸರ್ಕಲ್ ಇನ್ಸ್‌ಪೆಕ್ಟರ್ ಸಿದ್ದರಾಜು, ಯಾದವ ಸಂಘದ ಅಧ್ಯಕ್ಷ ಕೇಶವಮೂರ್ತಿ, ನಗರಸಭೆ ಅಧ್ಯಕ್ಷ ಅಫ್ಸರ್ ಪಾಷ, ರಾಮಕೃಷ್ಣಪ್ಪ, ನಗರಸಭಾ ಸದಸ್ಯ ಚಿಕ್ಕಮುನಿಯಪ್ಪ ಹಾಜರಿದ್ದರು.

ಬಿಜಿಎಸ್ ವಿದ್ಯಾ ಸಂಸ್ಥೆಗೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಭೇಟಿ

0

ನಗರದ ಹೊರವಲಯದ ಹನುಮಂತಪುರ ಗೇಟ್ ಬಳಿಯಿರುವ ಬಿಜಿಎಸ್ ವಿದ್ಯಾ ಸಂಸ್ಥೆಗೆ ಶನಿವಾರ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಭೇಟಿ ನೀಡಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಸಮಯ ಅಮೂಲ್ಯವಾದುದು. ವಿದ್ಯಾರ್ಥಿಗಳು ಅಮೂಲ್ಯವಾದ ಸಮಯವನ್ನು ಸದುಪಯೋಗ ಮಾಡಿಕೊಳ್ಳುವುದರ ಮುಖಾಂತರ ಜೀವನದಲ್ಲಿ ಮುಂದೆ ಬರಬೇಕು. ಈಗಿನ ನಿಮ್ಮ ಅಧ್ಯಯನ, ಜ್ಞಾನ ಸಂಗ್ರಹಣೆಯು ಬೀಜ ಬಿತ್ತಿದಂತೆ. ಅದು ಮುಂದೆ ಮರವಾಗಿ ಫಲಕೊಡುವುದು ಖಚಿತ ಎಂದು ಅವರು ತಿಳಿಸಿದರು.
ವಿದ್ಯಾರ್ಥಿಗಳು ಶ್ರದ್ದೆಯಿಂದ ಕಲಿತಾಗ ಮಾತ್ರ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಕೇವಲ ತಮ್ಮ ಮನೆಗಳಿಗೆ ಮಾತ್ರ ಮಕ್ಕಳಾಗದೇ ಇಡೀ ದೇಶದ ಮಕ್ಕಳಾಗಬೇಕು. ಸುತ್ತಲೂ ಇರುವ ಎಲ್ಲ ಸಮುದಾಯದವರನ್ನು ಪ್ರೀತಿಸುವ ಹಾಗು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ದ್ವೇಷ ಮನೋಭಾವನೆ ಬೆಳೆಸಿಕೊಳ್ಳಬೇಡಿ. ಸಾಧಕರ ಜೀವನ ಶೈಲಿಯನ್ನು ಅನುಸರಿಸುವ ಮೂಲಕ ಉತ್ತಮ ಪ್ರಜೆಗಳಾಗಿ ರೂಪಗೊಳ್ಳಬೇಕು ಎಂದರು.
ನಗರದ ಹೊರವಲಯದಲ್ಲಿರುವ ಬಿಜಿಎಸ್ ವಿದ್ಯಾ ಸಂಸ್ಥೆ ಸುಂದರ ವಾತಾವರಣದಲ್ಲಿದ್ದು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನುಕೂಲಕರವಾಗಿದೆ. ಇಂತಹ ಸುಂದರ ಪರಿಸರದ ನಡುವೆ ಕಲಿಯುವ ಶಾಲೆಯ ಮಕ್ಕಳಿಗೆ ಅಗತ್ಯವಿರುವ ಎಲ್ಲಾ ಸವಲತ್ತುಗಳನ್ನು ಕಲ್ಪಿಸಲು ತಾವು ಸದಾ ಸಿದ್ದರಾಗಿರುತ್ತೇವೆ ಎಂದರು.
ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ, ಬಿಜಿಎಸ್ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ, ಪ್ರಾಂಶುಪಾಲ ಆರ್.ಮಹದೇವ್ ಹಾಜರಿದ್ದರು.

ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯಿಂದ ನೇತ್ರದಾನದ ಬಗ್ಗೆ ಅರಿವು ಮೂಡಿಸುವ ಜಾಥಾ

0

ಶಿಡ್ಲಘಟ್ಟದಲ್ಲಿ ಶುಕ್ರವಾರ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನೇತ್ರದಾನದ ಬಗ್ಗೆ ಅರಿವು ಮೂಡಿಸುವ ಜಾಥಾ ಹಮ್ಮಿಕೊಂಡಿದ್ದರು. ನೇತ್ರಾಧಿಕಾರಿಗಳಾದ ಲವಕುಮಾರ್‌, ಮೀನಾಕ್ಷಿ, ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು, ಆಶಾ ಕಿರಣ ಅಂಧ ಮಕ್ಕಳು ಜಾಥಾದಲ್ಲಿ ಭಾಗವಹಿಸಿದ್ದರು

ರಕ್ಷಾಬಂಧನ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ

0

ನಗರದ ಸಾರ್ವಜನಿಕ ಗ್ರಂಥಾಲಯದ ಮುಂಭಾಗ ಪ್ರಜಾಪಿತ ಬ್ರಹ್ಮಕುಮಾರೀಸ್‌ ಈಶ್ವರಿಯ ವಿಶ್ವವಿದ್ಯಾಲಯದ ಆದ್ಯಾತ್ಮಿಕ ಸಂಸ್ಥೆಯಲ್ಲಿ ಶುಕ್ರವಾರ ನಡೆದ ರಕ್ಷಾಬಂಧನ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಆಶಾಕಿರಣ ಅಂಧಮಕ್ಕಳಿಗೆ ರಕ್ಷಾಬಂಧನವನ್ನು ಕಟ್ಟಿ ಪ್ರಜಾಪಿತ ಬ್ರಹ್ಮಕುಮಾರೀಸ್‌ ಈಶ್ವರಿಯ ವಿಶ್ವವಿದ್ಯಾಲಯದ ಶಾಖಾ ಸಂಚಾಲಕಿ ಬಿ.ಕೆ. ಜಯಕ್ಕ ಮಾತನಾಡಿದರು.
ಭಗವಂತನನ್ನು ಕಾಣಲು ಬಾಹ್ಯ ಕಣ್ಣಿನ ಅಗತ್ಯವಿಲ್ಲ, ಜ್ಞಾನ ನೇತ್ರ ಅಥವಾ ಸೂಕ್ಷ್ಮ ಕಣ್ಣಿರಬೇಕು ಎಂದು ಅವರು ತಿಳಿಸಿದರು.
ಅಣ್ಣನಿಗೆ ತಂಗಿ ರಕ್ಷೆ ನೀಡಲೆಂದು ರಕ್ಷಾಬಂಧನ ಕಟ್ಟುವುದು ವಾಡಿಕೆ. ಹಾಗೆಯೇ ಎಲ್ಲರನ್ನೂ ಕಾಪಾಡುವ ಭಗವಂತ ನ ರಕ್ಷಣೆಯೂ ನಮ್ಮೆಲ್ಲರ ಮೇಲಿರಲಿ ಎಂಬ ಭಾವದಿಂದ ನಾವು ರಕ್ಷಾಬಂಧನವನ್ನು ಆಚರಿಸುತ್ತೇವೆ ಎಂದು ಹೇಳಿ ಧ್ಯಾನದ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಜಾಪಿತ ಬ್ರಹ್ಮಕುಮಾರೀಸ್‌ ಈಶ್ವರಿಯ ವಿಶ್ವವಿದ್ಯಾಲಯದ ವತಿಯಿಂದ ಆಶಾಕಿರಣ ಅಂಧಮಕ್ಕಳಿಗೆ ರಕ್ಷಾಬಂಧನವನ್ನು ಕಟ್ಟಿ, ಸಿಹಿ ಹಾಗೂ ಊಟವನ್ನು ಆಯೋಜಿಸಲಾಗಿತ್ತು.
ಬಿ.ಕೆ.ರೂಪಕ್ಕ, ಎಂ.ಎ.ರಾಮಕೃಷ್ಣ ಹಾಜರಿದ್ದರು.

ವಲಸೆ ತಡೆಯಲು ರೈತರಿಗಾಗಿ ವಿಶೇಷ ಗ್ರಾಮಸಭೆ

0

ಬಯಲು ಸೀಮೆ ಭಾಗದಲ್ಲಿ ಮಳೆಯ ಅಭಾವವಿರುವುದರಿಂದ ರೈತರು ಹಾಗೂ ಇತರ ಜನರು ಕೆಲಸ ಅರಸಿ ಬೇರೆಡೆಗೆ ಹೋಗುವುದನ್ನು ತಡೆಗಟ್ಟುವ ಉದ್ದೇಶದಿಂದ ಜಿಲ್ಲೆಯಾದ್ಯಂತ ರೈತರಿಗಾಗಿ ವಿಶೇಷ ಗ್ರಾಮಸಭೆಯನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ಅಬ್ಲೂಡು ಗ್ರಾಮದ ಸರ್ಕಲ್ ಬಳಿಯಿರುವ ಸಪ್ಪಲಮ್ಮ ದೇವಸ್ಥಾನದ ಬಳಿ ಗುರುವಾರ ಏರ್ಪಡಿಸಲಾಗಿದ್ದ ರೈತರಿಗಾಗಿ ವಿಶೇಷ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.
ಈ ಹಿಂದೆ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮಸಭೆಗಳು ನಡೆಯುತ್ತಿದ್ದವಾದರೂ ನಾಗರಿಕರಿಗೆ ವಿವಿಧ ಇಲಾಖೆಗಳಿಂದ ಸಿಗುವ ಸವಲತ್ತುಗಳ ಮಾಹಿತಿ ದೊರಕುತ್ತಿರಲಿಲ್ಲ. ಹಾಗಾಗಿ ಇದೀಗ ರೈತರಿಗಾಗಿ ವಿಶೇಷ ಗ್ರಾಮಸಭೆಗಳು ನಡೆಸಿ ಆ ಭಾಗದ ರೈತರ ಸಮಸ್ಯೆಗಳನ್ನು ಆಲಿಸುವ ಜೊತೆಗೆ ರೈತರಿಗೆ ವಿವಿಧ ಇಲಾಖೆಗಳಿಂದ ಸಿಗುವ ಸವಲತ್ತುಗಳ ಮಾಹಿತಿಯನ್ನು ನೀಡುವುದು ಮತ್ತು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಏನೆಲ್ಲಾ ಕಾಮಗಾರಿಗಳನ್ನು ಮಾಡಬಹುದು ಎನ್ನುವುದರ ಮಾಹಿತಿ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುರುದತ್ ಹೆಗಡೆ ಮಾತನಾಡಿ, ಈಗಾಗಲೇ ಜಿಲ್ಲಾದ್ಯಂತ ಇರುವ ರೈತ ಕುಟುಂಬಗಳಿಗೆ ಸುಮಾರು ೨೫ ಸಾವಿರ ಉದ್ಯೋಗ ಚೀಟಿಗಳನ್ನು ವಿತರಿಸಲಾಗಿದ್ದು ಇನ್ನೂ ಮಾಡಿಸದೇ ಇರುವವರು ಕೂಡಲೇ ಮಾಡಿಸಿಕೊಳ್ಳಬೇಕು ಎಂದರು.
ಅಬ್ಲೂಡು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ತಾಲ್ಲೂಕಿನ ಅಬ್ಲೂಡು ಗ್ರಾಮ ಬೇರೆಲ್ಲಾ ಗ್ರಾಮಗಳಿಗಿಂತ ಮುಂದುವರೆದ ಗ್ರಾಮವಾಗಿದ್ದು ಇಲ್ಲಿನ ಬಹುತೇಕ ರೈತರು ರೇಷ್ಮೆಯನ್ನೇ ಜೀವನಾಧಾರವನ್ನಾಗಿಸಿಕೊಂಡಿದ್ದಾರೆ. ನರೇಗಾ ಯೋಜನೆ ಸೇರಿದಂತೆ ವಿವಿಧ ಇಲಾಖೆಗಳಿಂದ ಸಿಗುವ ಸವಲತ್ತುಗಳನ್ನು ಬಳಸಿಕೊಂಡು ಮತ್ತಷ್ಟು ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ರೈತ ಸಂಘದಿಂದ ಮನವಿ
ರೈತರು ವ್ಯವಸಾಯ ಮಾಡಲು ಅಗತ್ಯವಾಗಿ ಬೇಕಾಗಿರುವುದು ನೀರು. ಆದರೆ ತಾಲ್ಲೂಕಿನ ಬಹುತೇಕ ಕೆರೆ ಕುಂಟೆಗಳು ಒತ್ತುವರಿಯಾಗಿದೆ. ಮತ್ತಷ್ಟು ಕೆರೆಗಳಲ್ಲಿ ಜಾಲಿ ಗಿಡಗಳು ಬೆಳೆದುನಿಂತಿವೆ. ಬೀಳುವ ಅಲ್ಪ ಪ್ರಮಾಣದ ಮಳೆಯ ನೀರು ಸಹ ಎಲ್ಲಿಯೂ ಶೇಖರಣೆಯಾಗುವುದಿಲ್ಲ. ಇನ್ನು ಇಡೀ ಏಷ್ಯಾ ಖಂಡದಲ್ಲಿಯೇ ರೇಷ್ಮೆಗೆ ಹೆಸರುವಾಸಿಯಾಗಿರುವ ಇಲ್ಲಿನ ಮಾರುಕಟ್ಟೆಯನ್ನು ಈವರೆಗೂ ಹೈಟೆಕ್ ಮಾರುಕಟ್ಟೆಯನ್ನಾಗಿಸಿಲ್ಲ. ನಗರದಲ್ಲಿ ರೇಷ್ಮೆ ತ್ಯಾಜ್ಯ ಪೀಪಾ ಘಟಕಗಳಿಂದ ಹೊರಬರುವ ದುರ್ವಾಸನೆಯಿಂದ ನಗರದ ಜನತೆಯಲ್ಲಿ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಹಲವಾರು ಭಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಖಾಸಗಿ ಶಾಲೆಗಳಲ್ಲಿ ಡೋನೆಷನ್ ಹಾವಳಿ ನಿಂತಿಲ್ಲ. ಕೂಡಲೇ ಇವೆಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ಪದಾಧಿಕಾರಿಗಳು ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ಮಾತನಾಡಿ, ಜಿಲ್ಲೆಯಾದ್ಯಂತ ಇರುವ ಕೆರೆ, ರಾಜಕಾಲುವೆ, ಗೋಕುಂಟೆ ಒತ್ತುವರಿಯನ್ನು ಆದಷ್ಟು ಬೇಗ ತೆರವುಗೊಳಿಸಲಾಗುವುದು. ನೀಲಗಿರಿ, ಜಾಲಿ ಮರಗಳನ್ನು ತೆಗೆಸಲು ಕ್ರಮ ಕೈಗೊಳ್ಳಲಾಗುವುದು. ಅತ್ಯಾದುನಿಕ ತಂತ್ರಜ್ಞಾನ ಬಳಸಿ ಜಿಲ್ಲೆಯನ್ನು ಸ್ಯಾಟಲೈಟ್ ಸರ್ವೆ ಮಾಡುವ ಕ್ರಮ ಜಾರಿಯಲಿದ್ದು, ಈಗಾಗಲೇ ಕೆಲ ತಾಲ್ಲೂಕುಗಳ ಸರ್ವೆ ಕಾರ್ಯ ಮುಗಿದಿದೆ. ತಾಲ್ಲೂಕನ್ನು ಸಹ ಸರ್ವೆ ಮಾಡಿ ವರದಿ ಬಂದ ನಂತರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾರಘು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ತಹಸಿಲ್ದಾರ್ ಅಜಿತ್ ಕುಮಾರ್ ರೈ, ನರೇಗಾ ಸಹಾಯಕ ನಿರ್ದೇಶಕ ಶ್ರೀನಾಥಗೌಡ, ಅಬ್ಲೂಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ, ಉಪಾಧ್ಯಕ್ಷೆ ಕೃಷ್ಣಮ್ಮ ಹಾಜರಿದ್ದರು.

ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯಿತಿಯಿಂದ ‘ಮಲ್ಟಿ ಪರ್ಪಸ್‌ ಹಾಲ್‌’

0

ಜಿಲ್ಲಾ ಪಂಚಾಯಿತಿಯಿಂದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಂಪ್ಯೂಟರ್‌ ಲ್ಯಾಬ್‌, ಪ್ರೊಜೆಕ್ಟರ್‌ ಮತ್ತು ಗ್ರಂಥಾಲಯವನ್ನೊಳಗೊಂಡ ‘ಮಲ್ಟಿ ಪರ್ಪಸ್‌ ಹಾಲ್‌’ ರೂಪಿಸುವ ಯೋಜನೆಯಿದೆ. ಸ್ಥಳಾವಕಾಶ ನೀಡಿದಲ್ಲಿ ಚೀಮಂಗಲ ಸರ್ಕಾರಿ ಪ್ರೌಢಶಾಲೆಯಿಂದಲೇ ಈ ಯೋಜನೆಯನ್ನು ಪ್ರಾರಂಭಿಸೋಣ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ವಿ.ಮಂಜುನಾಥ್‌ ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕ ಡಾ.ಎಂ.ಶಿವಕುಮಾರ್‌ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಶಿಕ್ಷಕ ಡಾ.ಎಂ.ಶಿವಕುಮಾರ್‌ ಅವರು ನಮ್ಮ ರಾಜ್ಯಕ್ಕೆ, ಶಿಕ್ಷಕ ಬಾಂಧವರಿಗೆಲ್ಲಾ ಹೆಮ್ಮೆಯನ್ನು ತಂದಿದ್ದಾರೆ. ಇಂಥಹ ಸರ್ಕಾರಿ ಶಿಕ್ಷಕರ ಸಂಖ್ಯೆ ಹೆಚ್ಚಾಗಲಿ ಎಂದರು.
‘ಸರ್ಕಾರಿ ಶಾಲೆಯಲ್ಲಿಯೇ ಓದಿದವರು ನಾವು. ನಿಮ್ಮೊಂದಿಗೆ ಇರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗುರುದತ್‌ ಹೆಗಡೆಯವರು ಕನ್ನಡ ಮಾಧ್ಯಮದಲ್ಲಿ ಓದಿ ಐ.ಎ.ಎಸ್‌ ನಲ್ಲಿ 25 ನೇ ರ್ಯಾಂಕ್‌ ಪಡೆದಿದ್ದಾರೆ. ನಮ್ಮ ಜಿಲ್ಲೆಯ ಕೀರ್ತಿ ಹೆಚ್ಚಿಸಿರುವ ಸರ್‌.ಎಂ.ವಿ., ಡಾ.ಎಚ್‌.ನರಸಿಂಹಯ್ಯ, ಡಾ.ಸಿ.ಎನ್‌.ಆರ್‌. ರಾವ್‌ ಎಲ್ಲರೂ ಕನ್ನಡ ಮಾಧ್ಯಮದಲ್ಲಿ ಓದಿದವರಾಗಿದ್ದಾರೆ. ಮಕ್ಕಳು ಇಂಥಹವರಿಂದ ಸ್ಫೂರ್ತಿ ಪಡೆದು ಸಾಧಕರಾಗಿ’ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗುರುದತ್‌ ಹೆಗಡೆ ಮಾತನಾಡಿ, ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕ ಡಾ.ಎಂ.ಶಿವಕುಮಾರ್‌ ಅವರನ್ನು ಅಭಿನಂದಿಸಲೆಂದೇ ಬಂದೆವು. ಶಾಲೆಗೆ ಏನೇ ಅಗತ್ಯವಿದ್ದರೂ ಪಟ್ಟಿ ಮಾಡಿಕೊಡಿ. ನಮ್ಮಿಂದ ಸಾಧ್ಯವಾದಷ್ಟೂ ಅನುಕೂಲ ಮಾಡಿಕೊಡುತ್ತೇವೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಂಕ್‌ ಮುನಿಯಪ್ಪ, ತನುಜಾ ರಘು, ಮುಖ್ಯ ಲೆಕ್ಕಾಧಿಕಾರಿ ಎಂ.ಎಚ್‌.ನಾಗೇಶ್‌, ಸಹಾಯಕ ಯೋಜನಾಧಿಕಾರಿ ಎನ್‌.ಮುನಿರಾಜು, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್‌, ಸದಸ್ಯ ಪರಮಶಿವಯ್ಯ, ಮುಖ್ಯ ಶಿಕ್ಷಕ ಎಸ್‌.ಶಿವಶಂಕರ್‌, ಶಿಕ್ಷಕರಾಸ ಎಚ್‌.ಎಸ್‌.ವಿಠಲ್‌, ಎ.ವಿ.ನವೀನ್‌ಕುಮಾರ್‌, ಬಿ.ಸಿ.ದೊಡ್ಡನಾಯಕ್‌, ಶಿವಕುಮಾರ್‌, ಟಿ.ಇ.ಶ್ರೀನಿವಾಸ, ಪಿ.ಸವಿತಾ ಹಾಜರಿದ್ದರು.

ದಕ್ಷಿಣ ಪಿನಾಕಿನಿ ನದಿ ಪುನಶ್ಚೇತನ

0

ದಕ್ಷಿಣ ಪೆನ್ನಾರ್ ಎಂದು ಕರೆಯುವ ದಕ್ಷಿಣ ಪಿನಾಕಿನಿ ನದಿ ಪುನಶ್ಚೇತನ ಹಾಗೂ ಮೇಲೂರು, ಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟು ಕಾಲುವೆ ಪುನಶ್ಚೇತನ ಮಾಡುವುದರಿಂದ ಈ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗಲಿದೆ. ಈ ಉದ್ದೇಶದಿಂದ ಈ ಭಾಗದಲ್ಲಿ ಪರಿವೀಕ್ಷಣೆ ಕಾರ್ಯ ನಡೆಸಿದ್ದೇವೆ ಎಂದು ಟಾಟಾ ಟ್ರಸ್ಟ್‌ ವ್ಯವಸ್ಥಾಪಕ ನಿರ್ದೇಶಕಿ ಕನ್ನಿಕಾ ತಿಳಿಸಿದರು.
ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಟ್ಟು ಕಾಲುವೆಗಳನ್ನು ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳೊಂದಿಗೆ ವೀಕ್ಷಿಸಿ ಅವರು ಮಾತನಾಡಿದರು.
ಜಿಲ್ಲೆಯ ನಂದಿಬೆಟ್ಟದ ವಾಯುವ್ಯಕ್ಕೆ ಇರುವ ಚನ್ನರಾಯನಬೆಟ್ಟದಲ್ಲಿ ಹುಟ್ಟುವ ದಕ್ಷಿಣ ಪಿನಾಕಿನಿ ನದಿ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹರಿದು ದೇವನಹಳ್ಳಿ ತಾಲ್ಲೂಕನ್ನು ವಿಜಯಪುರದ ದಕ್ಷಿಣದಲ್ಲಿ ಪ್ರವೇಶಿಸುತ್ತದೆ. ಮುಂದೆ ಹೊಸಕೋಟೆ ತಾಲ್ಲೂಕು ದಾಟಿ ತಮಿಳುನಾಡನ್ನು ಪ್ರವೇಶಿಸುತ್ತದೆ. ಜಂಗಮಕೋಟೆ ಭದ್ರನಕೆರೆ ಮತ್ತು ಹೊಸಕೋಟೆ ಕೆರೆ ಈ ನದಿಗೆ ಅಡ್ಡಲಾಗಿ ಕಟ್ಟಿರುವ ಕೆರೆಗಳು. ಅಲ್ಲದೆ ಅಲ್ಲಲ್ಲಿ ಸಣ್ಣ ಕೆರೆಗಳು ಮತ್ತು ಒಡ್ಡುಗಳು ಸಹ ಇವೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹರಿಯುವ ದಕ್ಷಿಣ ಪಿನಾಕಿನಿ ನದಿಯನ್ನು ಮೇಲೂರು ತಾಲ್ಲೂಕಿನ ಕಟ್ಟು ಕಾಲುವೆಗಳಿಗೆ ಹರಿಸುವ ಮೂಲಕ ಅಂತರ್ಜಲ ವೃದ್ಧಿಯಾಗಲಿದೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ ತಾಲ್ಲೂಕಿನ ಕೊಂಡೇನಹಳ್ಳಿ, ಕಡಿಶೀಗೇನಹಳ್ಳಿ, ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ, ಕಂಬದಹಳ್ಳಿ, ಮೇಲೂರು, ಭಕ್ತರಹಳ್ಳಿ, ಕಾಕಚೊಕ್ಕಂಡನಹಳ್ಳಿ ನಂತರ ಜಂಗಮಕೋಟೆಯ ಭದ್ರನಕೆರೆಗೆ ಕಾಲುವೆ ಸೇರುತ್ತದೆ. ಈ ಕಾಲುವೆಯ ಪುನಶ್ಚೇತನ ಅತ್ಯವಶ್ಯಕ ಎಂದು ತಿಳಿಸಿದರು.
ಗುಜರಾತ್ ರಾಜ್ಯದಲ್ಲಿ ಈಚೆಗೆ 100 ಕಿಮೀ ಕಾಲುವೆಯನ್ನು ತೋಡಿದ್ದಾರೆ. ಅದರ ಅಕ್ಕಪಕ್ಕದ ಐದು ಕಿಮೀ ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಯಾಗಿ ರೈತರು ಆರ್ಥಿಕವಾಗಿ ಸಬಲರಾಗಿದ್ದಾರೆ. ಆದರೆ ನಮ್ಮಲ್ಲಿ ಈಗಾಗಲೇ ಇರುವ ಕಾಲುವೆಗಳನ್ನು ಸಂರಕ್ಷಿಸಬೇಕು. ಅದರಲ್ಲಿ ನೀರು ಹರಿಯುವಂತಾಗಬೇಕು. ಚರಂಡಿ ತ್ಯಾಜ್ಯ, ಮನೆ ಬಳಕೆ ನೀರು, ಪ್ಲಾಸ್ಟಿಕ್, ಕಸ ಮುಂತಾದವುಗಳನ್ನು ಕಾಲುವೆಗೆ ಹರಿಸಬಾರದು ಎಂದು ವಿವರಿಸಿದರು.
ಟಾಟಾ ಟ್ರಸ್ಟ್‌ನ ಅಶೋಕ್‌ಕುಮಾರ್‌, ಸಿದ್ದೇಶ್ವರ್‌, ಪಾಟಕ್‌, ದಕ್ಷಿಣ ಪಿನಾಕಿನಿ ನದಿ ಪುನಶ್ಚೇತನ ಸಮಿತಿ ಸದಸ್ಯರಾದ ಎನ್‌.ವಿಶ್ವನಾಥ್‌, ವಿ.ಸಿ.ಕಿಮಾರ್‌, ಪ್ರತಾಪ್‌ ಹೆಗಡೆ, ಶಾಂಪ್ರಸಾದ್‌, ವೆಂಕಟರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಮುನಾಧಮೇಂದ್ರ, ಉಪಾಧ್ಯಕ್ಷ ಆಂಜನೇಯರೆಡ್ಡಿ, ಸದಸ್ಯರಾದ ಆರ್.ಎ.ಉಮೇಶ್, ರೂಪೇಶ್ ಹಾಜರಿದ್ದರು.

ರಾಷ್ಟ್ರೀಯ ಕ್ರೀಡಾ ದಿನಾಚರಣೆ – ಕ್ರೀಡಾ ತರಬೇತುದಾರರಿಗೆ ಸನ್ಮಾನ

0

ನಗರದ ನೆಹರು ಕ್ರೀಡಾಂಗಣದಲ್ಲಿ ಬುಧವಾರ ಲಯನ್‌ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಹಾಕಿ ಮಾಂತ್ರಿಕ ಧ್ಯಾನ್‌ಚಂದ್‌ರವರ ಹುಟ್ಟುಹಬ್ಬದ ಪ್ರಯುಕ್ತ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ನೆಹರು ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಿರಂಜನ್‌ ಮಾತನಾಡಿದರು.
ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಅವರ ಮಿಂಚಿನ ಆಟ ನೋಡಿದ ಹಿಟ್ಲರ್ ತಮ್ಮ ದೇಶಕ್ಕೆ ಬರುವಂತೆ ಹಲವು ಆಮಿಷಗಳನ್ನು ಒಡ್ಡಿದರೂ ಅದನ್ನು ತಿರಸ್ಕರಿಸಿ ಭಾರತ ಕಿರೀಟವನ್ನು ವಿಶ್ವಮಟ್ಟದಲ್ಲಿ ಎತ್ತಿಹಿಡಿದ ದೇಶಪ್ರೇಮಿ ಎಂದು ಅವರು ಹೇಳಿದರು.
ಧ್ಯಾನ್‌ಚಂದ್ ಹಾಕಿಯ ದಂತಕಥೆ ಆಗಿದ್ದಾರೆ. ಆಗಿನ ಕಾಲದಲ್ಲಿ ಪುಟ್ಬಾಲ್‌ನಲ್ಲಿ ಪೀಲೆ, ಕ್ರಿಕೆಟ್‌ನಲ್ಲಿ ಡೊನಾಲ್ಡ್ ಬ್ರಾಡ್ಮನ್‌ರವರ ಸಾಧನೆಗೆ ಸಮನಾದ ಸಾಧನೆ ಇವರದು. ಧ್ಯಾನ್ ಚಂದ್‌ ಅವರ ಪುತ್ಥಳಿಯನ್ನು ಮೊದಲ ಸ್ಥಾಪಿಸಿದ್ದು ಆಸ್ಟ್ರೀಯಾ ದೇಶದ ವಿಯನ್ನಾದಲ್ಲಿ ಎಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಖ್ಯಾತಿ ಎಷ್ಟು ಇತ್ತು ಎಂದು ತಿಳಿಯುತ್ತದೆ. ಲಂಡನ್ನಿನ ಹಾಕಿ ಕ್ರೀಡಾಂಗಣಕ್ಕೆ ಇವರ ಹೆಸರನ್ನು ಇಡಲಾಗಿದೆ. ಕ್ರೀಡಾ ರಂಗದಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ಇವರನ್ನು ಇಡೀ ವಿಶ್ವವೇ ಈಗ ಸ್ಮರಿಸುತ್ತಿದೆ. ದಿಲ್ಲಿಯಲ್ಲಿ ಇವರ ಹೆಸರಿನಲ್ಲಿ ರಾಷ್ಟ್ರೀಯ ಕ್ರೀಡಾಂಗಣವನ್ನು ನಿರ್ಮಿಸಿದ್ದಾರೆ. ಇವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಘೋಷಿಸಿ, ಕ್ರೀಡೆಗಳಲ್ಲಿ ಉನ್ನತ ಸಾಧನೆ ಮಾಡಿದವರಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ.
ಶಿಡ್ಲಘಟ್ಟದಲ್ಲಿಯೂ ಕ್ರೀಡೆಯಲ್ಲಿ ಸಾಧಕರನ್ನು ತಯಾರು ಮಾಡಿರುವ ತರಬೇತುದಾರರನ್ನು ಗೌರವಿಸುವ ಮೂಲಕ ಕ್ರೀಡಾ ದಿನಾಚರಣೆಯ ಸಂಪ್ರದಾಯವನ್ನು ಈ ಬಾರಿಯಿಂದ ರೂಢಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಮಳ್ಳೂರು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಕ್ರೀಡಾ ಶಿಕ್ಷಕ ವಿ.ಪಿ.ನರಸಿಂಹಮೂರ್ತಿರಾವ್‌ ಅವರನ್ನು ಗೌರವಿಸಲಾಯಿತು. ಕ್ರೀಡಾಪಟುಗಳು ಕೇಕ್‌ ಕತ್ತರಿಸಿ ಧ್ಯಾನ್‌ಚಂದ್‌ ಅವರ ಹುಟ್ಟುಹಬ್ಬವನ್ನು ಆಚರಿಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯೆ ಪಂಕಜಾ ನಿರಂಜನ್‌, ಲಯನ್‌ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಲಕ್ಷ್ಮೀಪತಿ, ಗೌರವಾಧ್ಯಕ್ಷ ಮುನಿರಾಜು, ಟಿ.ಟಿ.ನರಸಿಂಹಪ್ಪ, ರಾಮಚಂದ್ರಪ್ಪ, ಶಿವಲಿಂಗ, ವೆಂಕಟೇಶ್‌, ಮುರಳಿ, ಬಾಬು, ಗಂಗಾಧರ್‌, ರಾಜಶೇಖರ್‌, ರಘು ಹಾಜರಿದ್ದರು.

ಪಿಒಪಿ ಗಣಪ ಮಾರುತ್ತಿದ್ದವರಿಗೆ ದಂಡ ವಿಧಿಸಿದ ಅಧಿಕಾರಿಗಳು

0

ನಗರದಲ್ಲಿ ಬುಧವಾರ ನಗರಸಭೆ ಅಧಿಕಾರಿಗಳು ಸುಮಾರು ಒಂದು ಕ್ವಿಂಟಾಲ್‌ನಷ್ಟು ಪ್ಲಾಸ್ಟಿಕ್‌ ಮತ್ತು ಆರು ಪಿಒಪಿ ಗಣಪನ ಮೂರ್ತಿಗಳನ್ನು ವಶಪಡಿಸಿಕೊಂಡು ಮಾರುತ್ತಿದ್ದವರಿಗೆ ತಲಾ ಒಂದು ಸಾವಿರ ರೂಗಳ ದಂಡ ವಿಧಿಸಿದರು.
ಪಿಒಪಿ ಗಣೇಶ ಮೂರ್ತಿಗಳ ಮೇಲೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಷೇಧ ಹೇರಿದೆ. ಮುಂಚಿತವಾಗಿಯೇ ತಿಳಿಸಿದ್ದರೂ ಪಿಒಪಿ ಗಣಪ ಮಾರುತ್ತಿದ್ದವರಿಗೆ ದಂಡ ವಿಧಿಸಿ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶನ ಮೂರ್ತಿಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ ಎಂದು ನಗರಸಭೆ ಆಯುಕ್ತ ಚಲಪತಿ ಈ ಸಂದರ್ಭದಲ್ಲಿ ತಿಳಿಸಿದರು.
ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶನ ಮೂರ್ತಿಗಳನ್ನು ಮಾರಲೇಬಾರದು. ಬಣ್ಣ ಹಚ್ಚದ ಮಣ್ಣಿನ ಗಣೇಶನ ಮೂರ್ತಿಗಳನ್ನಷ್ಟೇ ಮಾರಬೇಕು. ಮೂರ್ತಿಗಳನ್ನು ಮಾರುವವರು ನಗರಸಭೆಯಿಂದ ಅನುಮತಿ ಪಡೆಯುವುದು ಖಡ್ಡಾಯ ಎಂದು ಹೇಳಿದರು.
ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ. ಹಬ್ಬದ ಆಚರಣೆಯಲ್ಲಿಯೂ ನಾವೆಲ್ಲರೂ ಪರಿಸರ ಕಾಳಜಿಯನ್ನು ವ್ಯಕ್ತಪಡಿಸಬೇಕು. ಪ್ಲಾಸ್ಟಿಕ್‌ ಬಳಕೆ ಹಾಗೂ ಬಣ್ಣಗಳ ಬಳಕೆ ಮಾಡಲೇ ಬಾರದು ಎಂದರು.
ಪರಿಸರ ಅಭಿಯಂತರ ದಿಲೀಪ, ಆರೋಗ್ಯ ಅಧಿಕಾರಿ ಸಯೀದಾ ಹಾಜರಿದ್ದರು

ಅಧಿಕಾರಿಗಳ ಗೈರು – ನಿಂತುಹೋದ ರೈತರ ಗ್ರಾಮ ಸಭೆ

0

ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆ ಎಲ್‌.ಜಮುನಾ ಧರ್ಮೇಂದ್ರ ಅವರ ಅಧ್ಯಕ್ಷತೆಯಲ್ಲಿ ರೈತರಿಗಾಗಿ ವಿಶೇಷ ಗ್ರಾಮ ಸಭೆಯನ್ನು ಏರ್ಪಡಿಸಲಾಗಿತ್ತು. ಸಭೆಯಲ್ಲಿ ವಿವಿಧ ಇಲಾಖೆಗಳಿಂದ ರೈತರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ, ಸರ್ಕಾರಿ ಯೋಜನೆಗಳ ಕುರಿತಂತೆ ಮಾಹಿತಿಯನ್ನು ತಿಳಿಸುವುದಿತ್ತು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಯ ಅಭಾವ ಉಂಟಾಗಿರುವುದರಿಂದ ರೈತರು, ಸಾರ್ವಜನಿಕರು ಕೆಲಸ ಅರಸಿ ಬೇರೆಡೆಗೆ ವಲಸೆ ಹೋಗದಂತೆ ತಡೆಯುವ ಬಗ್ಗೆ ಚರ್ಚಿಸುವುದಿತ್ತು. ಆದರೆ ಯಾವುದೇ ಇಲಾಖೆಯ ಅಧಿಕಾರಿಯೂ ಸಹ ಬರದೇ ಹೋದದ್ದರಿಂದ ಮೇಲೂರು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಬುಧವಾರ ನಡೆಯಬೇಕಿದ್ದ ರೈತರ ಗ್ರಾಮ ಸಭೆ ನಡೆಯಲಿಲ್ಲ.
ಅಧಿಕಾರಿಗಳಿಗೆ ಕಾಯುತ್ತಾಕುಳಿತಿದ್ದ ಪಂಚಾಯಿತಿ ವ್ಯಾಪ್ತಿಯ ರೈತರು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿ ಹಿಂದಿರುಗಿದರು.
ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರೂ, ಪಂಚಾಯಿತಿ ವ್ಯಾಪ್ತಿಯ ರೈತರು ಹಾಜರಿದ್ದ ಸಭೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವನ್ನು ರೈತರು ಖಂಡಿಸಿದರು. “ರೈತರ ಬಗ್ಗೆ ಅಷ್ಟೊಂದು ತಾತ್ಸಾರ ಧೋರಣೆ ತಳೆದರೆ ಹೇಗೆ? ರೇಷ್ಮೆಯನ್ನೇ ನಂಬಿರುವ ರೈತರಿದ್ದೇವೆ. ನಮ್ಮ ಗ್ರಾಮದಿಂದ ಒಂದೂವರೆ ಕಿ.ಮೀ ದೂರದಲ್ಲಿ ರೇಷ್ಮೆ ಫಾರಂ ಇದೆ. ಆದರೂ ಅಧಿಕಾರಿಗಳಿಗೆ ನಮ್ಮ ಗ್ರಾಮ ದೂರವಾಯಿತೇ. ಬರ ಪೀಡಿತರಾಗಿ ರೈತರು ಸಂಕಷ್ಟದಲ್ಲಿದ್ದರೂ ಅಗತ್ಯ ಮಾಹಿತಿ ನೀಡುವ ಸೌಜನ್ಯವೂ ಇಲ್ಲವೇ” ಎಂದು ದೂರಿದರು.
ರೈತರಾದ ಶ್ರೀನಿವಾಸರೆಡ್ಡಿ, ಗೋಪಾಲ್‌, ಪ್ರಭಾಕರ್‌, ಆನಂದ್‌, ರೂಪೇಶ್‌, ಶ್ರೀಧರ್‌, ಅಂಬರೀಷ್‌, ಶಿವಕುಮಾರ್‌, ಮಾರೇಗೌಡ, ಆರ್‌.ಎ.ಉಮೇಶ್‌ ಹಾಜರಿದ್ದರು.

ಸುಗಟೂರು ಸರ್ಕಾರಿ ಶಾಲೆಯಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ

0

ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ದೇವನಹಳ್ಳಿ ತಾಲ್ಲೂಕು ಶರಣಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ಚುಂಚನಕುಪ್ಪೆ ಸಿ.ಬಿ.ಸಿದ್ಧಗಂಗಪ್ಪ ಸುಶೀಲಮ್ಮ ದತ್ತಿ ಉಪನ್ಯಾಸ, ವಚನಶ್ರಾವಣ ವಚನವ್ಯಾಖ್ಯಾನ ಹಾಗೂ ಮಕ್ಕಳಿಗೆ ಉಚಿತ ನೋಟ್‌ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ದೇವನಹಳ್ಳಿ ತಾಲ್ಲೂಕು ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮ.ಸುರೇಶ್‌ಬಾಬು ಮಾತನಾಡಿದರು.
ಸತ್ಯಶುದ್ಧ ಕಾಯಕ, ದಾಸೋಹ, ಏಕದೇವೋಪಾಸನೆಯಂತಹ ಶರಣರ ಆದರ್ಶಗಳು ಸಾರ್ವಕಾಲಿಕ ಅನುಕರಣೀಯವಾದುವು. ಸಾಮಾಜಿಕ ಸೇವೆಯೂ ಅವರ ಬಳುವಳಿಯೇ ಎಂದು ಅವರು ತಿಳಿಸಿದರು.
ವಚನಕಾರರು ಹಾಗು ಶರಣರು ತಮ್ಮ ಕಾಯಕ ಬದುಕಿನಲ್ಲಿ ಗಳಿಸಿದ ಅನುಭವಗಳ ಸಾರವನ್ನು ವಚನಗಳ ರೂಪದಲ್ಲಿ ಕನ್ನಡ ಸಾಹಿತ್ಯಕ್ಕೆ ಅಪೂರ್ವವಾದ ಕೊಡುಗೆ ನೀಡಿದ್ದಾರೆ ಎಂದರು.
ತಾಲ್ಲೂಕು ಶರಣಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಚಿದಾನಂದಬಿರಾದಾರ್ ಅವರು ವಚನವ್ಯಾಖ್ಯಾನ ಮಾಡಿ, ಅಜ್ಞಾನದ ಅಂಧಕಾರ, ಜೀವನದ ಮಾರ್ಗದ ಕತ್ತಲನ್ನು ಹೋಗಲಾಡಿಸಲು ಜ್ಞಾನದ ಬೆಳಕಿನ ಅಗತ್ಯವಿದೆ. ಶರಣರ ವಚನಗಳಲ್ಲಿ ಬದುಕಿನ ಮಾರ್ಗಗಳಿವೆ ಎಂದರು.
ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಧರ್ಮಗಳ ನಡುವೆ ಬೇದ ಭಾವ ಬಾರದೇ ಮಾನವಧರ್ಮದ ಪಾಲನೆಯಾಗುವಂತಾಗಬೇಕು. ಎಲ್ಲಾ ಧರ್ಮಗಳ ಸಾರವೂ ಒಂದೇ ಆಗಿದ್ದು, ಶರಣರ ಗುರು, ಲಿಂಗ, ಜಂಗಮ ತತ್ವಗಳ ಪಾಲನೆಯು ಶ್ರೇಷ್ಟವಾದುದು. ಮಕ್ಕಳ ದಿಸೆಯಿಂದಲೇ ವಚನಗಳ ಅಧ್ಯಯನಶೀಲತೆಯನ್ನು ಬೆಳೆಸಬೇಕು. ವಚನಗಳ ಆಳವಾದ ಅರ್ಥವನ್ನು ಪ್ರಸಾರ ಮಾಡುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್‌ಪುಸ್ತಕಗಳನ್ನು ಹಾಗೂ ಪ್ರತಿಭಾ ಕಾರಂಜಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಎಂ.ಶಂಕರಪ್ಪ, ಶಿಕ್ಷಕ ಬಿ.ನಾಗರಾಜು, ಎಂ.ವೈ.ಲಕ್ಷ್ಮಯ್ಯ, ಶಿಕ್ಷಕಿ ಕೆ.ಎಲ್.ಅನಿತಾ, ಹಾಜರಿದ್ದರು

ಎರಡನೇ ವರ್ಷದ ಜಿಲ್ಲಾ ಮಟ್ಟದ ಸ್ಕೇಟಿಂಗ್‌ ಪಂದ್ಯಾವಳಿ

0

ಕ್ರೀಡಾ ಸ್ಪರ್ಧೆಗಳನ್ನು ನಡೆಸಲು ಸಾರ್ವಜನಿಕರು ಸಹಕಾರ ನೀಡಬೇಕು. ಸ್ಥಳೀಯ ಪ್ರತಿಭೆಗಳು ಹೊರಹೊಮ್ಮಲು, ಕ್ರೀಡಾಸಕ್ತ ಮಕ್ಕಳಿಗೆ ಪ್ರೋತ್ಸಾಹಿಸಲು ಇದು ವೇದಿಕೆಯಾಗುತ್ತದೆ ಎಂದು ಗೌರಿಬಿದನೂರು ನಂದಿ ರೈಡರ್ಸ್‌ ಸ್ಕೇಟಿಂಗ್‌ ಅಸೋಸಿಯೇಷನ್‌ ಮುಖ್ಯಸ್ಥ ಚಂದ್ರಶೇಖರ್‌ ತಿಳಿಸಿದರು.
ನಗರದ ನೆಹರು ಕ್ರೀಡಾಂಗಣದಲ್ಲಿ ಭಾನುವಾರ ಶಿಡ್ಲಘಟ್ಟ ಸ್ಪೀಡ್‌ ಸ್ಕೇಟಿಂಗ್‌ ಅಸೋಸಿಯೇಷನ್‌ ಆಯೋಜಿಸಿದ್ದ ಎರಡನೇ ವರ್ಷದ ಜಿಲ್ಲಾ ಮಟ್ಟದ ಸ್ಕೇಟಿಂಗ್‌ ಪಂದ್ಯಾವಳಿಯಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ ಅವರು ಮಾತನಾಡಿದರು.
ನಿರಂತರ ಅಭ್ಯಾಸದಿಂದ ಮಾತ್ರ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ದೈಹಿಕ, ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗಿದೆ. ಎಲ್ಲರೂ ಕ್ರೀಡೆಗೆ ಹೆಚ್ಚಿನ ಒತ್ತು ನೀಡಬೇಕು. ಪ್ರತಿದಿನವೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಪಡೆಯುತ್ತಾ ದೇಶದ ಕೀರ್ತಿಯನ್ನು ಬೆಳಗಿಸುತ್ತಿರುವ ಕ್ರೀಡಾಪಟುಗಳ ಚಿತ್ರಗಳನ್ನು ಪತ್ರಿಕೆಗಳಲ್ಲಿ ನೋಡಿದಾಗ ಹೆಮ್ಮೆಯಾಗುತ್ತದೆ. ಅವರಿಂದ ಮಕ್ಕಳು ಸ್ಫೂರ್ತಿ ಹೊಂದುವಂತಾಗಲಿ ಎಂದರು.
ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಗೌರಿಬಿದನೂರು ಸೇರಿದಂತೆ ಹಲವೆಡೆಗಳಿಂದ ಸುಮಾರು 40 ಮಕ್ಕಳು ಸ್ಕೇಟಿಂಗ್‌ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ಶಿಡ್ಲಘಟ್ಟ ಸ್ಪೀಡ್‌ ಸ್ಕೇಟಿಂಗ್‌ ಅಸೋಸಿಯೇಷನ್‌ ತಂಡದ ಮಕ್ಕಳು ಟ್ರೋಫಿ ಗೆದ್ದರೆ, ಗೌರಿಬಿದನೂರಿನ ಸ್ಕೇಟಿಂಗ್‌ ತಂಡ ರನ್ನರ್‌ ಅಪ್‌ ಟ್ರೋಫಿ ಪಡೆದರು.
ಶಿಡ್ಲಘಟ್ಟ ಸ್ಕೇಟಿಂಗ್‌ ತರಬೇತುದಾರ ಅರುಣ್‌ಕುಮಾರ್‌, ಚಿಕ್ಕಬಳ್ಳಾಫುರ ಸ್ಕೇಟಿಂಗ್‌ ತರಬೇತುದಾರ ಹರಿ, ಲಯನ್ಸ್‌ ಕ್ರೀಡಾ ಸಂಸ್ಥೆ ಗೌರವಾಧ್ಯಕ್ಷ ಮುನಿರಾಜು ಹಾಜರಿದ್ದರು.