Home Blog Page 366

ರಾಘವೇಂದ್ರಸ್ವಾಮಿ ಮಠದಲ್ಲಿ ರಾಯರ 347ನೇ ಆರಾಧನಾ ಮಹೋತ್ಸವ

0

ನಗರದ ಮುತ್ತೂರು ಬೀದಿಯ ರಾಘವೇಂದ್ರಸ್ವಾಮಿ ಮಠದಲ್ಲಿ ರಾಯರ 347ನೇ ಆರಾಧನಾ ಮಹೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಮಂಗಳವಾರ ಆಚರಿಸಲಾಯಿತು.
ಮೂರು ದಿನಗಳ ಕಾಲ ನಡೆಸುವ ಆರಾಧನಾ ಮಹೋತ್ಸವವು ಸೋಮವಾರ ಪ್ರಾರಂಭವಾಯಿತು. ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆ, ಹಸ್ತೋದಕ, ಮಹಾಮಂಗಳಾರತಿ ನಡೆಯಿತು. ರಾಯರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಸಹಸ್ರ ನಾಮಾರ್ಚನೆ, ಉತ್ಸವವನ್ನು ನೆರವೇರಿಸಲಾಯಿತು. ಸೋಮವಾರ ಸಂಜೆ ಶಾಸ್ತ್ರೀಯ ಸಂಗೀತ ಕಚೇರಿಯನ್ನು ಆಯೋಜಿಸಲಾಗಿತ್ತು.
ಮಂಗಳವಾರ ತೀರ್ಥಪ್ರಸಾದ ವಿನಿಯೋಗಿಸಿದ ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ರಾಯರ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಉತ್ಸವ ಮೂರ್ತಿಗೆ ಭಕ್ತರು ಪೂಜೆ ಸಲ್ಲಿಸಿದರು. ಮೆರವಣಿಗೆ ಹಾದು ಹೋದ ರಸ್ತೆಗಳನ್ನು ಸಾರಿಸಿ ರಂಗವಲ್ಲಿ ಹಾಕಿ ಉತ್ಸವಕ್ಕೆ ಸ್ವಾಗತ ಕೋರಲಾಗಿತ್ತು.
ದೇವಾಲಯದ ಆವರಣದಲ್ಲಿ ರಾಘವೇಂದ್ರ ಸೇವಾ ಟ್ರಸ್ಟ್ ವತಿಯಿಂದ ಸಾಮೂಹಿಕ ಅನ್ನಸಂತರ್ಪಣೆಯನ್ನು ನಡೆಸಲಾಯಿತು.
‘ಸುಮಾರು 30 ವರ್ಷಗಳಿಂದಲೂ ನಗರದ ರಾಯರ ಮಠದಲ್ಲಿ ಮೂರು ದಿನಗಳ ಆರಾಧನೆಯನ್ನು ನಡೆಸಿಕೊಂಡು ಬರುತ್ತಿದ್ದೇವೆ. ಪೂರ್ವಾರಾಧನೆ, ಮಧ್ಯಾರಾಧನೆ ಮತ್ತು ಉತ್ತರಾರಾಧನೆ ಎಂದು ಮೂರು ದಿನಗಳ ಕಾಲ ನಡೆಯುವ ಆರಾಧನೆಯಲ್ಲಿ ಹೋಮ ಹವನಗಳು, ರಾಯರ ಕಥೆಯನ್ನು ತಿಳಿಸುಕೊಡುವುದು, ವಿಶೇಷ ಪೂಜೆಗಳು, ಭಜನೆ, ಗೀತಗಾಯನಗಳನ್ನು ಆಯೋಜಿಸಲಾಗುತ್ತದೆ. ರಾಯರು ಭಕ್ತಿಯಿಂದ ಪೂಜಿಸುತ್ತಿದ್ದ ರಾಮ, ಕೃಷ್ಣ, ವೇದವ್ಯಾಸ, ಲಕ್ಷ್ಮೀನರಸಿಂಹ ಮತ್ತು ಹಯಗ್ರೀವ ದೇವರುಗಳನ್ನು ಪೂಜಿಸಲಾಗುತ್ತದೆ. ಸರ್ವರಿಗೂ ಸಲ್ಲುವ ರಾಯರ ಮಹಿಮೆಯನ್ನು ಎಲ್ಲರಿಗೂ ಸಾರುವ ಉದ್ದೇಶದಿಂದ ಸಂಜೆಗೆ ದೇವರನಾಮಗಳು ಹಾಗೂ ಶ್ರೀರಾಘವೇಂದ್ರ ವಿಜಯ ಹರಿಕಥೆಯನ್ನು ಆಯೋಜಿಸಿದ್ದೇವೆ’ ಎಂದು ರಾಘವೇಂದ್ರ ಸೇವಾ ಟ್ರಸ್ಟ್‌ ಅಧ್ಯಕ್ಷ ಎಂ.ವಾಸುದೇವರಾವ್ ತಿಳಿಸಿದರು.
ಬ್ರಾಹ್ಮಣ ಸಂಘದ ತಾಲ್ಲೂಕು ಅಧ್ಯಕ್ಷ ಎ.ಎಸ್.ರವಿ, ವಿಪ್ರ ಪ್ರತಿಭಾ ಪುರಸ್ಕಾರ ಸೇವಾ ಟ್ರಸ್ಟ್‌ ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ, ಎಸ್.ವಿ.ನಾಗರಾಜರಾವ್, ವಿ.ಕೃಷ್ಣ, ಬಿ.ಕೃಷ್ಣಮೂರ್ತಿ, ಉದಯ್‌, ಸತೀಶ್‌, ಹರೀಶ್‌, ಬಿ.ಆರ್‌.ನಟರಾಜ್‌, ಶ್ರೀವತ್ಸ, ವೆಂಕಟೇಶ್‌, ವೈಶಾಖ್‌, ಪ್ರಕಾಶ್‌, ದೇವರಮಳ್ಳೂರು ವೆಂಕೋಬರಾವ್‌, ಡಿಲಕ್ಸ್‌ ವೆಂಕೋಬರಾವ್‌, ಗುರು, ನಾಗರಾಜ್‌, ಶ್ರೀನಿವಾಸಮೂರ್ತಿ, ಸತ್ಯನಾರಾಯಣರಾವ್‌ ಹಾಜರಿದ್ದರು.

ಬ್ರಹ್ಮಶ್ರೀ ನಾರಾಯಣ ಗುರು ಅವರ ಜಯಂತ್ಯುತ್ಸವ ಕಾರ್ಯಕ್ರಮ

0

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಅವರು ಮಾತನಾಡಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳು ಮಹಾತ್ಮ ಗಾಂಧೀಜಿಯವರ ಒಡನಾಟದಲ್ಲಿ ಗುರುತಿಸಿಕೊಂಡು ದೇಶಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿ ಎಂದು ಅವರು ತಿಳಿಸಿದರು.
ಬ್ರಹ್ಮಶ್ರೀ ನಾರಾಯಣ ಗುರು ಅವರು ಜಾತಿ, ಮತ ಭೇದವಿಲ್ಲದೇ ಎಲ್ಲರೂ ಒಂದೇ ಎಂಬ ಸಂದೇಶವನ್ನು ಸಾರಿ, ಪರಿಸರ ರಕ್ಷಣೆ ಜಾಗೃತಿ ಮೂಡಿಸಿದವರು. ಹಾಗೂ ಮಾನವನಿಗೆ ಮರುಜನ್ಮವೆಂಬುದಿಲ್ಲ ಎಂದು ಸಾರಿದ ಧೀಮಂತ ವ್ಯಕ್ತಿತ್ವ ಇವರದ್ದು ಎಂದರು.
ತಹಶೀಲ್ದಾರ್‌ ಅಜಿತ್‌ಕುಮಾರ್‌ ರೈ ಮಾತನಾಡಿ, ಕೇರಳದ ಮೂಲದವರಾದ ಇವರು ದೇಶದಾದ್ಯಂತ ಸಂಚರಿಸಿ ಮನುಕುಲದ ಏಳಿಗೆಗೆ ಸಲ್ಲಿಸಿದ ಸೇವೆ ಸ್ಮರಿಸಿ ಅವರ ಸ್ಮರಣೆಯಲ್ಲಿ ಅಂಚೆ ಚೀಟಿ ಹಾಗು 5 ರೂ ನಾಣ್ಯದಲ್ಲಿ ಇವರ ಭಾವಚಿತ್ರವನ್ನು ಮುದ್ರಿಸುವ ಮೂಲಕ ಗೌರವ ತೋರಲಾಗಿದೆ ಎಂದು ಹೇಳಿದರು.
ಆರ್ಯ ಈಡಿಗ ಸಂಘದ ತಾಲ್ಲೂಕು ಅಧ್ಯಕ್ಷ ಸಾದಲಿ ಎಸ್.ಎನ್.ವೆಂಕಟಾಚಲಪತಿ, ನಗರಸಭೆ ಆಯುಕ್ತ ಚಲಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು, ಸರ್ಕಲ್‌ ಇನ್ಸ್‌ಪೆಕ್ಟರ್‌ ಸಿದ್ದರಾಜು, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಭೀಮೇಶ್‌ ಹಾಜರಿದ್ದರು.

ಶ್ರೀ ಕೃಷ್ಣ ಕಲಾಕುಂಜ ವಿದ್ಯಾರ್ಥಿಗಳಿಂದ ನೃತ್ಯೋತ್ಸವ

0

ಶ್ರೀ ಕೃಷ್ಣ ಕಲಾಕುಂಜ ನೃತ್ಯ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ನಗರದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ನೃತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ರಾಜ್ಯ ಸರ್ಕಾರದ ನಿವೃತ್ತ ಉಪಕಾರ್ಯದರ್ಶಿ ಎಚ್.ವಿ.ರಾಮಚಂದ್ರರಾವ್ ಅವರು ಮಾತನಾಡಿದರು.
ನಮ್ಮ ಸಾಂಪ್ರದಾಯಿಕ ಕಲೆಯಾದ ಭರತನಾಟ್ಯವನ್ನು ಗ್ರಾಮೀಣ ಪ್ರದೇಶದ ಮಕ್ಕಳಿಗೂ ಶಾಸ್ತ್ರಬದ್ದ ಹಾಗು ಸಮಕಾಲೀನ ಪದ್ದತಿಯಲ್ಲಿ ಕಲಿಸುವ ಮೂಲಕ ಇದು ಪ್ರವೃತ್ತಿಯಷ್ಟೇ ಅಲ್ಲ ವೃತ್ತಿಯನ್ನಾಗಿಯೂ ಮಾಡಿಕೊಳ್ಳಬಹುದು ಎಂಬುದನ್ನು ಶ್ರೀ ಕೃಷ್ಣ ಕಲಾಕುಂಜ ನೃತ್ಯ ಸಂಸ್ಥೆಯವರು ಸಾಬೀತು ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಕಳೆದ ಆರು ವರ್ಷಗಳ ಹಿಂದೆ ಶಿಡ್ಲಘಟ್ಟದಲ್ಲಿ ಶುರುವಾದ ಶ್ರೀ ಕೃಷ್ಣ ಕಲಾಕುಂಜ ನೃತ್ಯ ಸಂಸ್ಥೆ ಇದೀಗ ಜಿಲ್ಲೆಯ ಚಿಕ್ಕಬಳ್ಳಾಪುರ ಸೇರಿದಂತೆ ಮುದ್ದೇನಹಳ್ಳಿ, ಗೌರಿಬಿದನೂರು, ಗುಡಿಬಂಡೆ ಹಾಗೂ ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದವರೆಗೂ ಚಾಚಿ ಸುಮಾರು 500 ಕ್ಕೂ ಹೆಚ್ಚು ಮಕ್ಕಳಿಗೆ ಭರತನಾಟ್ಯ ನೃತ್ಯತರಬೇತಿ ನೀಡುತ್ತಿರುವುದು ಶ್ಲಾಘನೀಯ ಸಂಗತಿ ಎಂದರು.
ಈ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ಕೇವಲ ಪುಸ್ತಕಗಳಿಗಷ್ಟೇ ಸೀಮಿತಗೊಳಿಸದೇ ಪಠ್ಯೇತರ ಕಲೆಗಳನ್ನು ಕಲಿಯುವಂತೆ ಪ್ರೇರೇಪಿಸಬೇಕು. ಸಾಂಸ್ಕೃತಿಕ ನೃತ್ಯ ಪ್ರಕಾರವು ಎಲ್ಲರಿಗೂ ಒಲಿಯುವುದಿಲ್ಲ. ಆಸಕ್ತಿ ಇರುವ ಮಕ್ಕಳಿಗೆ ಉತ್ತೇಜನ ನೀಡಬೇಕಾದ್ದು ಹಿರಿಯರ ಕರ್ತವ್ಯ ಎಂದರು.
ಸರಸ್ವತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್.ಶ್ರೀಕಾಂತ್ ಮಾತನಾಡಿ, ಭರತನಾಟ್ಯ ಹಾಗೂ ಕೊರಿಯೋಗ್ರಫಿ (ನೃತ್ಯ ಸಂಯೋಜನೆ) ಯಲ್ಲಿ ಸ್ನಾತಕೋತ್ತರ ಪದವೀಧರರಾದ ಪವನ್‌ಕುಮಾರ್ ನೃತ್ಯವನ್ನೇ ತಮ್ಮ ಉಸಿರಾಗಿಸಿಕೊಂಡು, ಅದನ್ನು ತನ್ನ ಹುಟ್ಟೂರು ಹಾಗೂ ಸುತ್ತ ಮುತ್ತಲಿನ ಗ್ರಾಮೀಣ ಭಾಗದ ಮಕ್ಕಳಿಗೆ ಕಲಿಸುತ್ತಿರುವುದು ನಿಜಕ್ಕೂ ಅಭಿನಂದನೀಯ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಕಲಾಕುಂಜದ ಸುಮಾರು ೧೦೦ ಕ್ಕೂ ಹೆಚ್ಚು ಮಕ್ಕಳು ಭರತನಾಟ್ಯದ ವಿವಿಧ ನೃತ್ಯಗಳನ್ನು ಪ್ರದರ್ಶಿಸುವುದರೊಂದಿಗೆ ಭಾಗವಹಿಸಿದ್ದ ಪೋಷಕರು ಹಾಗೂ ಗಣ್ಯರ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮದಲ್ಲಿ ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಟಿ.ಎ.ಕೃಷ್ಣಯ್ಯಶೆಟ್ಟಿ, ಶ್ರೀ ಕೃಷ್ಣ ಕಲಾಕುಂಜದ ನಿರ್ದೇಶಕರಾದ ಜಿ.ಪವನ್‌ಕುಮಾರ್, ಜಿ.ಶರತ್‌ಕುಮಾರ್, ಮಾನಸಪವನ್‌ಕುಮಾರ್, ಟಿ.ಎಸ್.ಶರತ್ ಹಾಜರಿದ್ದರು.

ಚೀಮಂಗಲ ಶಾಲೆಯ ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ

0

ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಡಾ.ಎಂ.ಶಿವಕುಮಾರ್‌ ಅವರಿಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಲಭಿಸಿದೆ. ರಾಷ್ಟ್ರದ ಒಟ್ಟು 45 ಶಿಕ್ಷಕರಿಗೆ ಈ ಬಾರಿ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿಗೆ ಭಾಜನರಾದ ರಾಜ್ಯದ ಮೂವರು ಶಿಕ್ಷಕರಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಶಿಕ್ಷಕರೂ ಒಬ್ಬರಾಗಿರುವುದು ವಿಶೇಷ.
ಕರ್ನಾಟಕದ ಶಿಕ್ಷಕರಾದ ಡಾ.ಜಿ.ರಮೇಶಪ್ಪ, ಎಂ.ಶಿವಕುಮಾರ್, ಆರ್.ಎನ್.ಶೈಲಾ ಅವರು ಸಲ್ಲಿಸಿರುವ ಸೇವೆಗೆ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಲಭಿಸಿದ್ದು, ಸೆಪ್ಟೆಂಬರ್ 5ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆಯಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ ಪ್ರಮಾಣಪತ್ರದೊಂದಿಗೆ ಐವತ್ತು ಸಾವಿರ ರೂ ನಗದು ಹಾಗೂ ಬೆಳ್ಳಿ ಪದಕವನ್ನು ಇವರಿಗೆ ಪ್ರಧಾನ ಮಾಡಲಾಗುತ್ತದೆ.
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಡಾ.ಶಿವಕುಮಾರ್, ಭವಿಷ್ಯದಲ್ಲಿ ಇಂಟರ್‌ನೆಟ್ ಆಧಾರಿತ ಮಕ್ಕಳ ಶಿಕ್ಷಣದ ಕುರಿತಂತೆ ಆಸಕ್ತಿ ಹೊಂದಿದ್ದಾರೆ. ಎಂಎಸ್ಸಿ , ಬಿಎಡ್ ಪೂರೈಸಿರುವ ಇವರು ಮಿಲೆನಿಯಮ್ ಜನರೇಷನ್ ವಿದ್ಯಾರ್ಥಿಗಳಿಗೆ ಇಂಟರ್‍ನೆಟ್ ಮೊಬೈಲ್ ಅಪ್ಲಿಕೇಷನ್‍ನಂತಹ ಸಲಕರಣೆಗಳ ಮೂಲಕವೇ ಶಿಕ್ಷಣ ನೀಡಿದರೆ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂಬ ಕಾರಣದಿಂದ ಮೂರು ಮೊಬೈಲ್ ಅಪ್ಲಿಕೇಷನ್‌ಗಳನ್ನು ರೂಪಿಸಿರುವ ಇವರು ಸ್ವತಃ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಇದರಲ್ಲಿ ಸರಳ ಗಣಿತ ಸೂತ್ರಗಳ ಕಲಿಕೆ ಸೇರಿದಂತೆ ಕಲಿಕಾ ಮಾಧ್ಯಮದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. 200ಕ್ಕೂ ಹೆಚ್ಚು ಸಾಫ್ಟ್ ಸ್ಕಿಲ್ ಟ್ರೈನಿಂಗ್ ಕುರಿತಂತೆ ತರಗತಿಗಳನ್ನು ಉಚಿತವಾಗಿ ರಜಾ ದಿನಗಳಲ್ಲಿ ನಡೆಸಿರುವ ಇವರು ಶಿಕ್ಷಕರಾಗಿ 14 ವರ್ಷಗಳ ಸೇವೆ ಸಲ್ಲಿಸಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಭವಿಷ್ಯದ ಶಿಕ್ಷಣದಲ್ಲಿ ಇಂಟರ್‌ನೆಟ್ ಆಧರಿಸಿ ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಹೆಚ್ಚಿನ ಅನುಕೂಲವಿದೆ ಎಂಬ ಬಗ್ಗೆ ಪ್ರಾತ್ಯಕ್ಷಿಕೆ ಪ್ರಸ್ತುತಪಡಿಸಿದ್ದರು.
‘ಈ ಪ್ರಶಸ್ತಿ ನನಗೆ ಲಭಿಸಿರುವುದಕ್ಕೆ ಅತ್ಯಂತ ಸಂತಸವಾಗುತ್ತಿದೆ. ಇದಕ್ಕೆ ನನಗೆ ಸಹೋದ್ಯೋಗಿಗಳು, ಮುಖ್ಯ ಶಿಕ್ಷಕರಾದ ಶಿವಶಂಕರ್‌, ಡಯಟ್‌ನ ಪ್ರಾಂಶುಪಾಲರಾದ ಶಾರದಮ್ಮ, ಶಿಕ್ಷಕರಾದ ಸುಮಿತ್ರಾಬಾಯಿ, ಕಾಮಾಕ್ಷಮ್ಮ, ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಪ್ರೋತ್ಸಾಹ ಮತ್ತು ಸಹಕಾರ ಕಾರಣವಾಗಿದೆ’ ಎಂದು ಶಿಕ್ಷಕ ಡಾ.ಎಂ.ಶಿವಕುಮಾರ್‌ ತಿಳಿಸಿದರು.

ಹಸಿರು ಕರ್ನಾಟಕ ಆಂದೋಲನ

0

ಶಿಡ್ಲಘಟ್ಟ ತಾಲ್ಲೂಕಿನ ಕಾಚನಾಯಕನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ಶಿಡ್ಲಘಟ್ಟ ಸಾಮಾಜಿಕ ಅರಣ್ಯ ವಲಯ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಲಾಗಿದ್ದ ಹಸಿರು ಕರ್ನಾಟಕ ಆಂದೋಲನದಡಿ ಸಸಿ ನೆಡುವ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ ಮಾತನಾಡಿದರು.
ನೀರಿನ ಬವಣೆಯಿಂದ ಬೇಸತ್ತಿರುವ ಬಯಲುಸೀಮೆಯ ಜನರಿಗೆ ಗಿಡಗಳನ್ನು ನೆಟ್ಟು ಬೆಳೆಸುವುದು ಪರಿಹಾರವಾಗಲಿದೆ ಎಂದು ಅವರು ತಿಳಿಸಿದರು.
ಅರಣ್ಯ ನಾಶದಿಂದ ಮಳೆ ಪ್ರಮಾಣ ಕಡಿಮೆಯಾಗಿದ್ದು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಅರಣ್ಯವನ್ನು ಕಾಪಾಡುವ ಮೂಲಕ ಮುಂದಿನ ಪೀಳಿಗೆ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆಧ್ಯ ಕರ್ತವ್ಯ ಆಗಬೇಕು ಎಂದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಸುರೇಶ್‌ಬಾಬು ಮಾತನಾಡಿ, ಮನೆಗೊಂದು ಮರ, ಊರಿಗೊಂದು ತೋಪು, ತಾಲ್ಲೂಕಿಗೊಂದು ಕಿರುಅರಣ್ಯ, ಜಿಲ್ಲೆಗೊಂದು ಕಾಡು ಎನ್ನುವುದು ಹಸಿರು ಕರ್ನಾಟಕ ಆಂದೋಲನದ ಧ್ಯೇಯವಾಗಿದೆ. ಬೌಗೋಳಿಕ ಪ್ರದೇಶದ ಶೇ ೩೨ ರಷ್ಟು ಅರಣ್ಯ ಇರಬೇಕಿದ್ದು ಇದೀಗ ಶೇ ೨೩ ರಷ್ಟು ಮಾತ್ರ ಇದೆ. ಇದನ್ನು ಹೆಚ್ಚಿಸಲು ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕು. ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪರಿಸರ ಸಂಘಟನೆಗಳನ್ನು ಸಕ್ರಿಯವಾಗಿ ಈ ಆಂದೋಲನದಲ್ಲಿ ಬಳಸಿಕೊಳ್ಳುವ ಮೂಲಕ ನಾಗರಿಕರಲ್ಲಿ ಪರಿಸರ ಜಾಗೃತಿ ಮೂಡಿಸಲಾಗುವುದು ಎಂದರು.
ವಲಯ ಅರಣ್ಯಾಧಿಕಾರಿ ವಿ.ಮುನಿಯಪ್ಪ ಮಾತನಾಡಿ ರೈತರು ತಮ್ಮ ಕೃಷಿ ಭೂಮಿಯಲ್ಲಿ ಅರಣ್ಯೀಕರಣ ಕಾಮಗಾರಿ ಮಾಡಿ ಸಸಿಗಳನ್ನು ನಾಟಿ ಮಾಡಲು ಇಲಾಖೆ ವಿವಿಧ ಯೋಜನೆಗಳನ್ನು ರೂಪಿಸಿದ್ದು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ತಹಶೀಲ್ದಾರ್‌ ಅಜಿತ್‌ಕುಮಾರ್‌ರೈ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಮತಾ ಮಂಜುನಾಥ್, ಸದಸ್ಯ ಮುರಳಿ, ಮಾಜಿ ಸದಸ್ಯರಾದ ರಾಮಕೃಷ್ಣಪ್ಪ, ನರಸಿಂಹಪ್ಪ, ಎಂ.ರಘು, ಜಯಚಂದ್ರ, ನರಸಿಂಹಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು ಹಾಜರಿದ್ದರು.

ಪಟ್ರೇನಹಳ್ಳಿಯ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಪರಿಸರ ಪಾಠ

0

ದಿಬ್ಬೂರಹಳ್ಳಿ ರಸ್ತೆಯಲ್ಲಿ ಪಟ್ರೇನಹಳ್ಳಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ರೂಪಿಸಲಾಗಿರುವ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನಕ್ಕೆ ಶನಿವಾರ ಭೇಟಿ ನೀಡಿದ್ದ ಯೂನಿವರ್ಸಲ್‌ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿಗಳಿಗೆ ಅರಣ್ಯ ರಕ್ಷಕ ಹುಸೇನಿ ನಿಂಬಾಳ್‌ ಅವರು ಪರಿಸರ ಪಾಠವನ್ನು ಮಾಡಿದರು.
ಕೊಡಗಿನ ದುರಂತದಿಂದ ಪಾಠ ಕಲಿತು ನಾವು ಪ್ರಕೃತಿಯ ಬಗ್ಗೆ ಕಾಳಜಿ ಇಟ್ಟುಕೊಳ್ಳಬೇಕು. ಮರ ಗಿಡಗಳನ್ನು ಬೆಳೆಸಬೇಕು ಎಂದು ಅವರು ತಿಳಿಸಿದರು.
ನೈಸರ್ಗಿಕವಾಗಿ ಬೆಳೆದ ಮರಗಳನ್ನು ಕಡಿದರೆ ಆ ಮರ ಹಿಡಿದಿಟ್ಟುಕೊಳ್ಳುವ ಮಣ್ಣು ಸಡಿಲವಾಗುತ್ತದೆ. ಮಳೆಗೆ ಆ ಮಣ್ಣು ಕೊಚ್ಚಿಕೊಂಡುಹೋಗುತ್ತದೆ. ಇದನ್ನೇ ಭೂಸವಕಳಿ ಎನ್ನುತ್ತಾರೆ. ಇದು ಹಲವು ವರ್ಷ ನಿರಂತರವಾಗಿ ನಡೆದು ಬಂದ ಹಿನ್ನೆಲೆಯಲ್ಲಿ ಈಗ ಕೆಲವು ದಿನಗಳಿದಿಂದ ಎರಗಿರುವ ದುರಂತ ನಮ್ಮ ಕಣ್ಮುಂದೆ ಉದಾಹರಣೆಯಾಗಿದೆ ಎಂದರು.
ಸಿಲ್ವರ್‌ ಓಕ್‌, ಶ್ರೀಗಂಧ, ಗ್ಲಿರಿಸಿಡಿಯಾ, ಚಿಗರೆ, ಗೇರು ಮರ, ಹುಣಸೆ, ಸಾಗುವಾನಿ, ಬೇವು, ಬಿದಿರು ಮುಂತಾದ ಮರಗಳ ಮುಂದೆ ಮಕ್ಕಳನ್ನು ಕರೆತಂದು ಮರಗಳ ವೈಜ್ಞಾನಿಕ ಹೆಸರು, ಔಷಧೀಯ ಗುಣಗಳು, ಉಪಯೋಗಗಳು ಮುಂತಾದ ಮಾಹಿತಿಯನ್ನು ತಿಳಿಸಿದರು. ಈ ಕಾಡಿನಲ್ಲಿ ಕಂಡು ಬರುವ ಚಿಟ್ಟು ಮಡಿವಾಳ, ಕಳ್ಳಿಪೀರ, ಕದಿರುಗಿಣಿ, ಮಲ್ಲಿಕಾಕ್ಷ ಮೊದಲಾದ ಹಕ್ಕಿಗಳ ಬಗ್ಗೆಯೂ ಅಲ್ಲಿರುವ ಸಚಿತ್ರ ಫಲಕಗಳನ್ನು ತೋರಿಸಿ ಮಾಹಿತಿ ನೀಡಿದರು. ಕೆಲವು ಮಕ್ಕಳು ಕೇಳಿಸಿಕೊಂಡ ಮಾಹಿತಿಯನ್ನು ಬರೆದಿಟ್ಟುಕೊಂಡರೆ, ಕೆಲವರು ಪ್ರಶ್ನೆಗಳನ್ನು ಕೇಳಿ ತಮ್ಮ ಅನುಮಾನಗಳನ್ನು ಪರಿಹರಿಸಿಕೊಂಡರು.
ಶಿಕ್ಷಕ ಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಎಷ್ಟೇ ಶಾಲಾ ಕೊಠಡಿಯೊಳಗೆ ಕಲಿತರೂ ಪರಿಸರದ ನಡುವೆ ಕಲಿಯಬೇಕಾದ್ದು ಬಹಳಷ್ಟಿರುತ್ತದೆ. ಅದಕ್ಕಾಗಿ ನಮ್ಮ ಶಾಲೆಗೆ ಹತ್ತಿರದಲ್ಲಿಯೇ ಇರುವ ಈ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನಕ್ಕೆ ಕರೆತಂದಿದ್ದೇವೆ. ಮರಗಿಡಗಳ ಮಹತ್ವ ಮತ್ತು ಪರಿಚಯವನ್ನು ಅರಣ್ಯ ಇಲಾಖೆಯವರಿಂದಲೇ ಸಿಕ್ಕಾಗ ಮಕ್ಕಳ ಜ್ಞಾನ ವೃದ್ಧಿಸುತ್ತದೆ ಎಂದರು.
ಶಿಕ್ಷಕರಾದ ಮಲ್ಲಿಕಾ, ನಾಸಿಯಾ ಸುಲ್ತಾನ ಹಾಜರಿದ್ದರು.

ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಕೊಡಗಿನ ಸಂತ್ರಸ್ತರ ನೆರವಿಗೆ ದೇಣಿಗೆ ಸಂಗ್ರಹ

0

ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಶನಿವಾರ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಕೊಡಗಿನ ಸಂತ್ರಸ್ತರ ನೆರವಿಗೆ ದೇಣಿಗೆಯನ್ನು ಸಂಗ್ರಹಿಸಿದ ನಂತರ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಅದ್ಯಕ್ಷ ತಾದೂರು ಮಂಜುನಾಥ್ ಮಾತನಾಡಿದರು.
ಕಷ್ಟದ ಬದುಕನ್ನು ಹತ್ತಿರದಿಂದ ಕಂಡ ರೈತರು ಸಹಜವಾಗಿ ಕೊಡಗಿನ ಸಂತ್ರಸ್ತರ ನೋವಿಗೆ ಸ್ಪಂದಿಸಿದ್ದಾರೆ. ಸುಮಾರು ಐವತ್ತು ಸಾವಿರ ರೂಗಳಷ್ಟು ತಾಲ್ಲೂಕು ರೈತ ಸಂಘದಿಂದ ಶನಿವಾರ ಸಂಗ್ರಹಿಸಲಾಯಿತು ಎಂದು ಅವರು ತಿಳಿಸಿದರು.
ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಕೆಲವು ರೈತರು ರೇಷ್ಮೆ ಗೂಡನ್ನು ನೀಡಿದರೆ, ಕೆಲವರು ನಗದನ್ನು ನೀಡಿದರು. ಅವರು ದೇಣಿಗೆಯಾಗಿ ನೀಡಿದ ರೇಷ್ಮೆ ಗೂಡನ್ನು ಹರಾಜು ಹಾಕಿ ನಗದಾಗಿಸಿದೆವು. ಒಟ್ಟು 20 ಸಾವಿರ ರೂಗಳು ಸಂಗ್ರಹವಾಯಿತು. ರೈತ ಸಂಘದ ಸದಸ್ಯರು ಅದಕ್ಕೆ 30 ಸಾವಿರ ರೂ ಸೇರಿಸಿ ಒಟ್ಟು 50 ಸಾವಿರ ರೂ ಒಟ್ಟು ಮಾಡಿದೆವು. ನಮ್ಮ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡರು ಹಾಗೂ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಜಿಲ್ಲಾದ್ಯಂತ ಸಂಗ್ರಹವಾದ ಹಣವನ್ನು ಜಿಲ್ಲಾಧಿಕಾರಿಯವರ ಮೂಲಕ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ನೀಡಲಿದ್ದಾರೆ ಎಂದು ಹೇಳಿದರು.
ರೈತ ಸಂಘದ ಮುನಿನಂಜಪ್ಪ, ಶ್ರೀನಿವಾಸ್, ವೇಣು, ಟಿ.ಕೃಷ್ಣಪ್ಪ, ರಾಮಚಂದ್ರಪ್ಪ, ಎಸ್‌.ಎಂ.ನಾರಾಯಣಸ್ವಾಮಿ, ರಮೇಶ್‌, ಶಿವಮೂರ್ತಿ, ಏಜಾಜ್‌ ಹಾಜರಿದ್ದರು.

ಗಂಗಾದೇವಿಯ ನೂತನ ಶಿಲಾವಿಗ್ರಹ ಪ್ರತಿಷ್ಠಾಪನೆ ಮಹೋತ್ಸವ

0

ನಗರದ ಹೊರವಲಯದ ಇದ್ಲೂಡು ಗ್ರಾಮದ ಶ್ರೀ ಗಂಗಾದೇವಿ ದೇವಾಲಯದಲ್ಲಿ ಶುಕ್ರವಾರ ಶ್ರೀ ಗಂಗಾದೇವಿಯ ನೂತನ ಶಿಲಾವಿಗ್ರಹ ಪ್ರತಿಷ್ಠಾಪನೆ ಮಹೋತ್ಸವವನ್ನು ನಡೆಸಲಾಯಿತು.
ಬೆಳಿಗ್ಗೆ ಸುಪ್ರಭಾತ ವೇದಪಾರಾಯಣ, ಹೋಮಗಳು, ಕುಂಭಾಭಿಷೇಕ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ ಮಾಡಲಾಯಿತು. ಬುಧವಾರದಿಂದ ಪ್ರಾರಂಭವಾಗಿದ್ದ ಪೂಜಾ ಕಾರ್ಯಕ್ರಮಗಳು ಶುಕ್ರವಾರ ಪೂರ್ಣಗೊಂಡಿತು.
ಪೂಜಾ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಗಳು ಹಾಗೂ ನಗರ ಪ್ರದೇಶದಿಂದ ಭಕ್ತರು ಪಾಲ್ಗೊಂಡಿದ್ದರು. ಜೆಡಿಎಸ್‌ ಮುಖಂಡ ಮೇಲೂರು ಬಿ.ಎನ್‌.ರವಿಕುಮಾರ್‌, ನಗರಸಭೆ ಸದಸ್ಯ ಲಕ್ಷ್ಮಣ್‌, ಇದ್ಲೂಡು ವಿ.ರಮೇಶ್‌, ಅನಸೂಯಮ್ಮ, ಅರ್ಚಕ ನವೀನ್‌ ಕುಮಾರ್‌ ಹಾಜರಿದ್ದರು.

ಶಿಡ್ಲಘಟ್ಟ ತಾಲ್ಲೂಕು ಕಸಾಪ ವತಿಯಿಂದ ಕೊಡಗು ಸಂತ್ರಸ್ತರಿಗೆ ಹಣ ಸಂಗ್ರಹಣೆ

0

ತಾಲ್ಲೂಕಿನ ಜಂಗಮಕೋಟೆ ಕ್ರಾಸ್‌ನಲ್ಲಿ ಶಿಡ್ಲಘಟ್ಟ ತಾಲ್ಲೂಕು ಕಸಾಪ ವತಿಯಿಂದ ನಡೆಸಿದ ಕೊಡಗು ಸಂತ್ರಸ್ತರಿಗೆ ನೆರವಾಗಲು ಹಣ ಸಂಗ್ರಹಣೆಯ ಕಾರ್ಯಕ್ಕೆ ಚಾಲನೆ ನೀಡಿ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್‌ ಮಾತನಾಡಿದರು.
ಸತತವಾಗಿ ಸುರಿದ ಮಹಾಮಳೆಯಿಂದಾಗಿ ಕೊಡಗು ತತ್ತರಿಸಿದೆ. ಅಲ್ಲಿನ ಜನರು ಮನೆ, ಜಮೀನು, ಜಾನುವಾರುಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅವರ ಕಷ್ಟಕ್ಕೆ ಸ್ವಲ್ಪವಾದರೂ ನೆರವಾಗಲು ಕನ್ನಡ ಸಾಹಿತ್ಯ ಪರಿಷತ್ತು ಕೂಡ ಮುಂದಾಗಿದೆ ಎಂದು ಅವರು ತಿಳಿಸಿದರು.
ಕಸಾಪ ಕೇವಲ ಭಾಷೆಯಷ್ಟೇ ಅಲ್ಲದೆ ಜನರ ಬದುಕಿಗೂ ಸ್ಪಂದಿಸುತ್ತದೆ. ನಮ್ಮ ಕನ್ನಡಿಗರು ಕಷ್ಟದಲ್ಲಿರುವಾಗ ನಮ್ಮ ಕೈಲಾದಷ್ಟು ಅಳಿಲು ಸೇವೆ ಸಲ್ಲಿಸಿ ಅವರಿಗೆ ನೆರವಾಗೋಣ, ಹನಿ ಹನಿಗೂಡಿದರೆ ಹಳ್ಳ ಎಂಬಂತೆ ಎಲ್ಲರೂ ಕೈಜೋಡಿಸಿದಾಗ ಸಹಾಯದ ಹಸ್ತ ದೊಡ್ಡದಾಗುತ್ತದೆ ಎಂದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್‌ ಹಣ ಸಂಗ್ರಹಣೆಯ ನಂತರ ಮಾತನಾಡಿ, ಚಿಕ್ಕ ಚಿಕ್ಕ ಗೂಡಂಗಡಿಗಳವರು, ದಿನಗೂಲಿ ಮಾಡುವವರು, ಅಂಗವಿಕಲರು, ಮಹಿಳೆಯರು, ಮಸೀದಿಯಲ್ಲಿನ ಮುಸ್ಲೀಮರು ಉದಾರ ಮನಸ್ಸಿನಿಂದ ಹಣ ನೀಡಿದರು. ಸುಮಾರು ಮುವ್ವತ್ತು ಸಾವಿರ ರೂಗಳಷ್ಟು ಹಣ ಸಂಗ್ರಹವಾಗಿದೆ ಎಂದು ಹೇಳಿದರು.
ಕಸಾಪ ಜಿಲ್ಲಾ ಘಟಕದ ಕೋಶಾಧಿಕಾರಿ ನಂಜುಂಡಪ್ಪ, ಆರ್‌ಡಿಎಸ್‌ ನಾರಾಯಣಸ್ವಾಮಿ, ಶಶಿಕುಮಾರ್‌, ರಾಮಚಂದ್ರ, ಆನಂದ್‌, ರಘು, ಅಶೋಕ್‌, ಪ್ರದೀಪ್‌, ನರಸಿಂಹಮೂರ್ತಿ, ಮುನಿರಾಜು, ದೇವರಾಜು, ಮುನಿರಾಜು ಕುಟ್ಟಿ, ಸುಂದರಾಚಾರಿ, ನರಸಿಂಹಪ್ಪ ಹಾಜರಿದ್ದರು.

ಮಲ್ಲಿಶೆಟ್ಟಿಪುರದ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ

0

ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಮಲ್ಲಿಶೆಟ್ಟಿಪುರದ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಬುಧವಾರ ನಡೆಯಿತು.
ತಹಸೀಲ್ದಾರ್ ಎಸ್.ಅಜಿತ್ ಕುಮಾರ್ ರೈ ನೇತೃತ್ವದಲ್ಲಿ ಕಂದಾಯ ನಿರೀಕ್ಷಕ ವಿಶ್ವನಾಥ್, ಗ್ರಾಮ ಲೆಕ್ಕಿಗ ನಾಗರಾಜ್ ಹಾಗೂ ಸಿಬ್ಬಂದಿ ಜೆಸಿಬಿ ಮೂಲಕ ಕೆರೆಯ ಒತ್ತುವರಿಯನ್ನು ತೆರವುಗೊಳಿಸಿದರು.
ಮಲ್ಲಿಶೆಟ್ಟಿಪುರ ಕೆರೆಯು ಸುಮಾರು ೩೦೦ ಎಕರೆಯಷ್ಟು ವಿಶಾಲವಾಗಿದ್ದು ಈ ಪೈಕಿ ಕೆರೆಯ ಅಚ್ಚುಕಟ್ಟಿದ ಮಲ್ಲಿಶೆಟ್ಟಿಪುರ, ತುಮ್ಮನಹಳ್ಳಿ, ಹುಜಗೂರು ಇನ್ನಿತರೆ ಗ್ರಾಮಸ್ಥರು ಸುಮಾರು ೯೦ಕ್ಕೂ ಹೆಚ್ಚು ಎಕರೆಯಷ್ಟು ಕೆರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದ್ದರು. ಹಿಪ್ಪುನೇರಳೆ, ಚೇಪೆ ಹಣ್ಣು, ದ್ರಾಕ್ಷಿ, ಸೀಮೆ ಹುಲ್ಲು, ಬಜ್ಜಿ ಮೆಣಸಿನಕಾಯಿ ಸೇರಿದಂತೆ ವಿವಿದ ಬೆಳೆಗಳನ್ನು ಒತ್ತುವರಿ ಮಾಡಿಕೊಂಡ ಜಮೀನಿನಲ್ಲಿ ಬೆಳೆಯುತ್ತಿದ್ದರು.
ಕೆರೆ ಪ್ರದೇಶವನ್ನು ಸುತ್ತಾಡಿ ಪರಿಶೀಲಿಸಿದ ತಹಸೀಲ್ದಾರರು, ಈ ಮೊದಲೆ ಗುರ್ತಿಸಿದಂತೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಆರಂಭಿಸಿದರು.
ಈಗಾಗಲೆ ಇಟ್ಟ ಬೆಳೆಗಳ ಫಸಲನ್ನು ಕಟಾವು ಮಾಡಿಕೊಳ್ಳಲು ಒಂದೆರಡು ದಿನಗಳ ಕಾಲಾವಕಾಶವನ್ನು ಒತ್ತುವರಿದಾರರಿಗೆ ನೀಡಿ, ಇಲ್ಲವಾದಲ್ಲಿ ಫಸಲಿನೊಂದಿಗೆ ಒತ್ತುವರಿಯನ್ನು ತೆರವುಗೊಳಿಸಲಾಗುವುದಲ್ಲದೆ ಕ್ರಿಮಿನಲ್ ಕೇಸನ್ನು ದಾಖಲಿಸುವ ಎಚ್ಚರಿಕೆ ನೀಡಿದರು. ಆದರೆ ಯಾವೊಬ್ಬ ರೈತರೂ ಇದಕ್ಕೆ ಆಕ್ಷೇಪ ವ್ಯಕ್ತಪಡಿಸದೆ ಎಲ್ಲ ರೈತರು ಒತ್ತುವರಿ ಮಾಡಿಕೊಂಡ ಜಮೀನನ್ನು ಬಿಟ್ಟುಕೊಡಲು ಸಮ್ಮತಿಸಿದರು.
ಎಲ್ಲ ಒತ್ತುವರಿದಾರರ ಹೆಸರು, ವಿಳಾಸವನ್ನು ಪಟ್ಟಿ ಮಾಡಿಕೊಳ್ಳುವಂತೆ ಸಿಬ್ಬಂದಿಗೆ ಸೂಚಿಸಿ ಒತ್ತುವರಿ ತೆರವಿನ ನಂತರ ಈ ಬಗ್ಗೆ ನಿಗಾ ಇಡಲಿದ್ದು ಮತ್ತೊಮ್ಮೆ ಒತ್ತುವರಿ ಮಾಡಿಕೊಂಡರೆ ಅವರ ವಿರುದ್ದ ಅತಿಕ್ರಮ ಪ್ರವೇಶ, ಸರಕಾರಿ ಸ್ವತ್ತು ನಾಶದಂತ ಕ್ರಿಮಿನಲ್ ಕೇಸು ದಾಖಲಿಸುವಂತೆ ತಿಳಿಸಿದರು.

ತ್ಯಾಗ ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬ ಆಚರಣೆ

0

ತ್ಯಾಗ ಬಲಿದಾನಗಳ ಸಂಕೇತವಾಗಿರುವಂತಹ ಬಕ್ರೀದ್ ಹಬ್ಬವನ್ನು ತಾಲ್ಲೂಕಿನಾದ್ಯಂತ ಮುಸ್ಲೀಮರು ಬುಧವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ನಗರದ ಪ್ರಮುಖ ರಸ್ತೆಯಲ್ಲಿ ಮುಸ್ಲೀಮರು ಮೆರವಣಿಗೆ ನಡೆಸಿ ಬೈಪಾಸ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸೇರಿ ಸಕಲ ಮಾನವ ಕುಲದ ಒಳಿತಿಗಾಗಿ ಅಲ್ಲಾಹುವಿನಲ್ಲಿ ಪ್ರಾರ್ಥಿಸಿದರು.
ಪರಸ್ಪರ ಅಪ್ಪಿಕೊಳ್ಳುವ ಮೂಲಕ ಹಬ್ಬದ ಶಭಾಶಯಗಳನ್ನು ಈ ಸಂದರ್ಭದಲ್ಲಿ ವಿನಿಮಯಿಸಿಕೊಂಡ ಜಮಾತ್ ಬಾಂಧವರು ನಗರದ ಪ್ರಮುಖ ಬೀದಿಗಳ ಮೂಲಕ ಸಾಗಿ ಈದ್ಗಾ ಮೈದಾನದಲ್ಲಿ ದುವಾ ನೆರವೇರಿಸಿದರು.
‘ಬಕ್ರೀದ್ ಹಬ್ಬವನ್ನು ಈದ್-ಅಲ್-ಅದಾ ಎಂದೂ ಕರೆಯುತ್ತಾರೆ. ಈದ್-ಅಲ್-ಅದಾ ಹಬ್ಬವನ್ನು ಮುಸ್ಲೀಮರು, ಮುಸ್ಲಿಂ ಮಾಸಿಕವಾದ ಝುಲ್-ಹಿಜ್ಜಾದ ಹತ್ತನೆಯ ದಿನದಂದು ಆಚರಿಸುತ್ತಾರೆ. ಈ ಶುಭದಿನದಂದು ಕುರಿಯನ್ನು ಬಲಿ ನೀಡುತ್ತಾರೆ ಹಾಗೂ ಮಸೀದಿಗಳಲ್ಲಿ ಪ್ರಾರ್ಥಿಸುತ್ತಾರೆ. ಹಸ್ರತ್ ಇಬ್ರಾಹಿಮ್‌ ಅಲ್ಲಾಹನಿಗೆ ಶರಣಾಗುವ ಅಗ್ನಿಪರೀಕ್ಷೆಯ ಸ್ಮರಣಾರ್ಥವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಬಲಿಗೊಳ್ಳುವ ಪಶುವಿನ ಮಾಂಸವನ್ನು ಬಳಸಿಕೊಳ್ಳುವುದರ ಕುರಿತು ಇಸ್ಲಾಂ ನಲ್ಲಿ ಕೆಲವು ಮಾರ್ಗದರ್ಶೀ ಸೂತ್ರಗಳಿವೆ. ಬಲಿಪಶುವಿನ ಮಾಂಸವನ್ನು ಮೂರು ಭಾಗಗಳಾಗಿ ವಿಭಾಗಿಸಿ, ದೊಡ್ಡಭಾಗವನ್ನು, ಅಶಕ್ತರಾದ ಅಥವಾ ಆ ದಿನದ ಊಟವನ್ನು ಗಳಿಸಲಾಗದ ಬಡವರಲ್ಲಿ ಹಂಚಬೇಕು. ಮಿಕ್ಕುಳಿದ ಎರಡು ಚಿಕ್ಕ ತುಂಡುಗಳನ್ನು ಗೆಳೆಯರು, ಬಂಧುಗಳು ಮತ್ತು ಕುಟುಂಬದ ಸದಸ್ಯರ ನಡುವೆ ಹಂಚಬೇಕು. ಇದು ಸಂಭ್ರಮದ ಹಾಗೂ ಭೂರಿಭೋಜನದ ಸಂದರ್ಭವಾಗಿದೆ. ಇವೆಲ್ಲಕ್ಕಿಂತಲೂ ಮಿಗಿಲಾಗಿ, ಈ ಹಬ್ಬವು ಏಕತೆ ಹಾಗೂ ಭ್ರಾತೃತ್ವದ ಆಚರಣೆಯಾಗಿದೆ’ ಎಂದು ಜಾಮೀಯಾ ಮಸೀದಿಯ ಧರ್ಮಗುರು ಹಝರತ್ ಅಲಾಮಾ ಮೌಲಾನಾ ನಝರ್ ಸಲಾಮೀ ತಿಳಿಸಿದರು.
ರಾಜಕೀಯ ಮುಖಂಡರೂ ಸೇರಿದಂತೆ ವಿವಿಧ ಜನಾಂಗದವರೂ ಕೂಡಾ ಮುಸ್ಲಿಂ ಭಾಂಧವರಿಗೆ ಶುಭಾಶಯಗಳನ್ನು ಕೋರಿದರು. ಶಾಸಕ ವಿ.ಮುನಿಯಪ್ಪ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ ಮುಸ್ಲೀಮರಿಗೆ ಶುಭಕೋರಿದರು.

ಕಾನೂನು ಅರಿವು ನೆರವು ಕಾರ್ಯಕ್ರಮ

0

ನಗರದ ನ್ಯಾಯಾಲಯದ ಸಂಕೀರ್ಣದಲ್ಲಿ ಮಂಗಳವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ‘ಆಮ್ಲ ದಾಳಿಯ ಸಂತ್ರಸ್ಥರ ಯೋಜನೆ(ನಲ್ಸಾ ಯೋಜನೆ 2016)’ಯ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಜೆ.ಎಂ.ಎಫ್‌.ಸಿ ಮತ್ತು ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಡಿ.ಆರ್‌.ಮಂಜುನಾಥ್‌ ಮಾತನಾಡಿದರು.
ಆಸಿಡ್ ದಾಳಿಯೆಂಬುದು ಭಾರತವನ್ನು ಬಹುಕಾಲದಿಂದ ಕಾಡುತ್ತಿರುವ ಪಿಡುಗು. ಆಸಿಡ್ ದಾಳಿಯಿಂದ ಬದುಕುಳಿದ ಯುವತಿಯರು, ಮಹಿಳೆಯರು ನರಕಯಾತನೆ ಅನುಭವಿಸುವ ದುರ್ಘಟನೆಗಳು ಸಮಾಜದಲ್ಲಿ ಕಂಡಿರುತ್ತೇವೆ. ಈ ರೀತಿಯ ಸಮಾಜದ ಸ್ವಾಸ್ಥ್ಯ ಕೆಡಿಸುವ ಘಟನೆಗಳು ನಡೆಯಬಾರದು ಎಂದು ಕಾನೂನು ರೂಪುಗೊಂಡಿದೆ.
ಕ್ರೂರ ಮನಸ್ಸಿನ ಸಮಾಜಘಾತುಕರಿಂದ ಮಹಿಳೆಯರ ಮೇಲೆ ಆಸಿಡ್‌ ದಾಳಿ ನಡೆಯುತ್ತಿದ್ದು, ಇಂತಹ ದಾಳಿಯನ್ನು ತಪ್ಪಿಸಲು ಜೀವಾವಧಿ ಶಿಕ್ಷೆಯಂತಹ ಕಠಿಣ ಕಾನೂನು ಸಮಾಜದಲ್ಲಿ ಜೀವಂತವಿದೆ ಎಂದು ಅವರು ತಿಳಿಸಿದರು.
ಅಪರಿಚಿತರಿಗೆ ಆಸಿಡ್‌ ಮಾರಾಟ ಮಾಡಬಾರದು ಎಂಬ ನಿಯಮವಿದೆ. ಆಸಿಡ್‌ ಖರೀದಿಸಿದವರು ಅದನ್ನು ಯಾವ ಉದ್ದೇಶಕ್ಕೆ ಬಳಕೆ ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕು. ದಾಳಿ ನಡೆಸಲೆಂದೇ ಆಸಿಡ್‌ ಖರೀದಿಸುವುದು ಮುಂಚಿತವಾಗಿ ಗೊತ್ತಿದ್ದರೆ ಪೊಲೀಸರಿಗೆ ದೂರು ನೀಡಬೇಕು ಎಂದರು.
ಸಿವಿಲ್‌ ನ್ಯಾಯಾಧೀಶರಾಸ ಟಿ.ಎಲ್‌.ಸಂದೀಶ್‌ ಮಾತನಾಡಿ, ಆಸಿಡ್ ದಾಳಿ ಅಪರಾಧಕ್ಕೆ ಪ್ರತ್ಯೇಕವಾಗಿ ಶಿಕ್ಷೆ ನೀಡುವಂತಾಗಬೇಕು ಎಂದು 2013ರ ಏಪ್ರಿಲ್ 3ರಂದು ಜಾರಿಗೆ ತಂದಿತು. ಈ ಕಾನೂನಿನಲ್ಲಿ ಐಪಿಸಿಗೆ ಎರಡು ಉಪವಿಧಿಗಳನ್ನು ಸೇರಿಸಲಾಯಿತು. 326ಎ ಉಪವಿಧಿಯು ಆಸಿಡ್ ಬಳಕೆಯಿಂದ ಸ್ವಯಂಪ್ರೇರಿತವಾಗಿ ಇತರರಿಗೆ ತೀವ್ರ ಹಾನಿಯುಂಟುಮಾಡುವುದಕ್ಕೆ ಸಂಬಂಧಿಸಿದ್ದರೆ, 326ಬಿ ಉಪವಿಧಿಯು ಸ್ವಇಚ್ಛೆಯಿಂದ ಆಸಿಡ್ ಎರಚುವುದು ಅಥವಾ ಎರಚಲು ಯತ್ನಿಸುವುದಕ್ಕೆ ಸಂಬಂಧಿಸಿದೆ. ಇದಲ್ಲದೆ, ಲೈಂಗಿಕ ದೌರ್ಜನ್ಯ, ದುರುದ್ದೇಶದಿಂದ ಹಿಂಬಾಲಿಸುವುದು ಮುಂತಾದ ಅಂಶಗಳನ್ನೂ ಈ ಕಾನೂನಿನ ವ್ಯಾಪ್ತಿಗೆ ಸೇರಿಸಲಾಗಿದೆ.
ಆಸಿಡ್ ದಾಳಿ ಮೂಲಕ ತೀವ್ರತರಹದ ಹಾನಿ ಮಾಡಿದರೆ ಅಥವಾ ಇದರಿಂದ ಶಾಶ್ವತ ಅಥವಾ ಭಾಗಶಃ ಅಂಗ ಊನವಾದರೆ ಅಥವಾ ಸುಟ್ಟ ಗಾಯಗಳಾದರೆ ಅಥವಾ ಸಂತ್ರಸ್ತರ ದೇಹದ ಯಾವುದೇ ಅಂಗಕ್ಕೆ ವೈಕಲ್ಯ ಉಂಟಾದರೆ ಅಂಥ ವ್ಯಕ್ತಿಗೆ ಸೆಕ್ಷನ್ 326 ಎ ಪ್ರಕಾರ,10 ವರ್ಷಕ್ಕೆ ಕಡಿಮೆಯಿಲ್ಲದ ಕಾರಾಗೃಹ ಶಿಕ್ಷೆ ವಿಧಿಸಬಹುದು. ಈ ಶಿಕ್ಷೆ ಪ್ರಮಾಣವನ್ನು ಜೀವಾವಧಿಗೂ ವಿಸ್ತರಿಸಬಹುದು. ಇದಲ್ಲದೆ, ಸಂತ್ರಸ್ತೆಯ ವೈದ್ಯಕೀಯ ಚಿಕಿತ್ಸೆಗೆ ತಗಲುವ ವೆಚ್ಚದಷ್ಟು ದಂಡವನ್ನೂ ಆರೋಪಿಗೆ ವಿಧಿಸಬಹುದಾಗಿದೆ ಎಂದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್‌ಕುಮಾರ್‌, ವಕೀಲರ ಸಂಘದ ಕಾರ್ಯದರ್ಶಿ ಎಂ.ಬಿ.ಲೋಕೇಶ್‌ ಹಾಜರಿದ್ದರು.

ಅಂಧ ಮಕ್ಕಳಿಗೆ ನಿತ್ಯ ಬಳಕೆಯ ಅಗತ್ಯ ವಸ್ತುಗಳ ವಿತರಣೆ

0

ನಗರದ ಆಶಾಕಿರಣ ಅಂಧ ಮಕ್ಕಳ ಶಾಲೆಯಲ್ಲಿ ಮಂಗಳವಾರ ಅಭಿಮಾನಿಗಳು ಆಚರಿಸಿದ ಅವರ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಸ್‌.ಎನ್‌.ಕ್ರಿಯಾ ಟ್ರಸ್ಟ್‌ ಅಧ್ಯಕ್ಷ ಆಂಜಿನಪ್ಪ ಪುಟ್ಟು ಮಾತನಾಡಿದರು.
ಹಿಂದೆ ಹುಟ್ಟು ಹಬ್ಬಗಳನ್ನು ಆಚರಿಸುವ ಪದ್ಧತಿ ನಮ್ಮಲ್ಲಿ ಇರಲಿಲ್ಲ. ಕೆಲವು ವರ್ಷಗಳಿಂದ ಈಚೆಗೆ ಅಭಿಮಾನಿಗಳು ಹಾಗೂ ಸ್ನೇಹಿತರ ಒತ್ತಡಕ್ಕೆ ಮಣಿದು ಆಚರಣೆಯಲ್ಲಿ ಭಾಗಿಯಾಗುತ್ತಿದ್ದೇನೆ. ಆದರೂ ನೆಪದಲ್ಲಿ ಕೈಲಾದಷ್ಟು ಸಮಾಜ ಸೇವೆಯನ್ನು ಮಾಡುವ ಮೂಲಕ ಈ ಆಚರಣೆಯಲ್ಲಿ ಹಾಜರಿರುತ್ತೇನೆ. ಪರರ ಕಣ್ಣಿನಿಂದ ನೋಡುವ ಈ ಮಕ್ಕಳಿಗೆ ಸಾಧ್ಯವಾದಷ್ಟೂ ನೆರವಾಗಿವ ನಿಟ್ಟಿನಲ್ಲಿ ಅವರಿಗೆ ಅಗತ್ಯವಿರುವ ವಸ್ತುಗಳನ್ನು ನೀಡಿ ಅವರೊಂದಿಗೆ ಕೇಕ್‌ ಹಾಗೂ ತಿಂಡಿಯನ್ನು ತಿಂದು ಈ ದಿನ ಕಳೆಯುವುದು ಸಮಾಧಾನ ತಂದಿದೆ. ಎಲ್ಲರೂ ಕಣ್ಣು ದಾನ ಮಾಡುವ ಪ್ರಮಾಣ ಪತ್ರಕ್ಕೆ ಸಹಿ ಹಾಕಬೇಕು. ಮೃತ ವ್ಯಕ್ತಿಯ ಎರಡು ಕಣ್ಣುಗಳು ಇಬ್ಬರಿಗೆ ದೃಷ್ಟಿ ನೀಡಬಲ್ಲದು ಎಂದು ಅವರು ಹೇಳಿದರು.
ಪ್ರತಿಯೊಬ್ಬರ ಬೆಳವಣಿಗೆಗೂ ಹಲವಾರು ವ್ಯಕ್ತಿಗಳ ಕೊಡುಗೆ ಇರುತ್ತದೆ. ಸಮಾಜದ ಕೊಡುಗೆಯಿಂದ ಬೆಳೆದು ಬಂದ ನಾವು ಸಮಾಜಕ್ಕೆ ಋಣಿಯಾಗಿರಬೇಕು. ಸಾಧ್ಯವಾದಾಗಲೆಲ್ಲ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಂಧಮಕ್ಕಳೊಂದಿಗೆ ಕೇಕ್‌ ಕತ್ತರಿಸಿದ ಎಸ್‌.ಎನ್‌.ಕ್ರಿಯಾ ಟ್ರಸ್ಟ್‌ ಅಧ್ಯಕ್ಷ ಆಂಜಿನಪ್ಪ ಪುಟ್ಟು, ಮಕ್ಕಳಿಗೆ ನಿತ್ಯ ಬಳಕೆಯ ಅಗತ್ಯ ವಸ್ತುಗಳನ್ನು ವಿತರಿಸಿದರು.
ಆನೂರು ದೇವರಾಜ್‌, ಕೋಟಹಳ್ಳಿ ಆಂಜಿನಪ್ಪ, ಅಶ್ವತ್ಥನಾರಾಯಣರೆಡ್ಡಿ, ನಟರಾಜ್‌, ಅಫ್ಸರ್‌ಪಾಷ, ವಿಶ್ವನಾಥ್‌, ವೆಂಕಟೇಶ್‌, ನರಸಿಂಹಪ್ಪ, ಕೃಷ್ಣಪ್ಪ, ಶ್ರೀನಿವಾಸ್‌ ಹಾಜರಿದ್ದರು.

ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಎರಡನೇ ವಾರ್ಷಿಕೋತ್ಸವ

0

ನಗರದ ಉಲ್ಲೂರು ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಂಗಳವಾರ ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಎರಡನೇ ವಾರ್ಷಿಕೋತ್ಸವ ಅಂಗವಾಗಿ ಶಾಲೆಗೆ ಕ್ರೀಡಾ ಸಾಮಗ್ರಿ ವಿತರಣೆ, ಕ್ರೀಡಾಪಟುಗಳಿಗೆ ಟೀ ಷರ್ಟ್ ವಿತರಣೆ ಹಾಗೂ ಪ್ರತಿಭಾವಂತರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿದರು.
ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ. ಹಲವಾರು ಪ್ರತಿಭೆಗಳಿಗೆ ಪ್ರೋತ್ಸಾಹ ಸಿಕ್ಕಿದಲ್ಲಿ ರಾಜ್ಯ, ರಾಷ್ಟ್ರ ಮಟ್ಟವಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರು ಗಳಿಸಲು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು.
ಈಗಾಗಲೇ ತಾಲ್ಲೂಕಿನ ಹಲವು ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಎಳೆಯ ವಯಸ್ಸಿನಿಂದಲೇ ಕ್ರೀಡಾಪಟುಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದಲ್ಲಿ ಮತ್ತಷ್ಟು ಉತ್ತಮ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದರು.
ಖಾಸಗಿ ಶಾಲೆ ಹಾಗು ಆಂಗ್ಲ ಭಾಷೆಯ ಮೇಲಿನ ವ್ಯಾಮೋಹದಿಂದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಬದಲಿಗೆ ಎಲ್ಲಾ ಸವಲತ್ತುಗಳೂ ಇರುವ ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗೆ ಯತ್ನಿಸಬೇಕು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮುಂದಿನ ದಿನಗಳಲ್ಲಿ ಪೋಷಕರ ಮನವೊಲಿಸುವ ಕೆಲಸಕ್ಕೆ ಮುಂದಾಗಲಿದೆ. ಸರ್ಕಾರಿ ಶಾಲೆಯಲ್ಲಿ ಇದೀಗ ಕೊರತೆಯಿರುವ ಆಂಗ್ಲಬಾಷೆ ಬೋದನೆಗಾಗಿ ಶಿಕ್ಷಕರನ್ನು ನಿಯೋಜಿಸಿದ್ದೇ ಆದಲ್ಲಿ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಯಾವುದರಲ್ಲೂ ಕಡಿಮೆಯಿರುವುಲ್ಲ ಎಂದರು.
ಈ ಸಂದರ್ಭದಲ್ಲಿ ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಶಾಲಾ ಮಕ್ಕಳಿಗೆ ಕ್ರೀಡಾ ಸಾಮಗ್ರಿ, ಕ್ರೀಡಾಪಟುಗಳಿಗೆ ಟೀ ಷರ್ಟ್ ವಿತರಿಸಲಾಯಿತು. ವಿವಿಧ ಕ್ರೀಡಾಪಟುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಾಲೆಯ ಮುಖ್ಯಶಿಕ್ಷಕ ಕೃಷ್ಣಮೂರ್ತಿ, ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಲಕ್ಮೀಪತಿ, ಗೌರವಾಧ್ಯಕ್ಷ ಮುನಿರಾಜು, ಖಜಾಂಚಿ ಮಂಜುನಾಥ್, ಕಾರ್ಯದರ್ಶಿ ಪುರುಷೋತ್ತಮ್, ರಾಷ್ಟ್ರೀಯ ವಾಲೀಬಾಲ್ ಕ್ರೀಡಾಪಟು ಮಹೇಶ್, ಕಬಡ್ಡಿ ಕ್ರೀಡಾಪಟು ವೆಂಕಟಾಚಲಪತಿ, ಮಾಜಿ ಯೋಧ ಭಗವಾನ್‌ಸಿಂಗ್, ಸಿಆರ್‌ಪಿ ಪ್ರಕಾಶ್, ಶಿಕ್ಷಕಿ ಚಂದ್ರಕಲಾ ಹಾಜರಿದ್ದರು.

ಸಂತ್ರಸ್ಥರ ನೋವಿಗೆ ಸ್ಪಂದಿಸಿದ ಶಿಡ್ಲಘಟ್ಟ ತಾಲ್ಲೂಕಿನ ಜನತೆ

0

ಭಾರಿ ಮಳೆಯಿಂದ ತತ್ತರಗೊಂಡಿರುವ ಕೊಡಗು ಮತ್ತು ಕೇರಳದ ಜನರ ಸಂಕಷ್ಟಕ್ಕೆ ಶಿಡ್ಲಘಟ್ಟ ತಾಲ್ಲೂಕಿನ ಜನತೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ವಿವಿಧ ಗ್ರಾಮಗಳಲ್ಲಿ ಯುವ ಸಂಘಟನೆಗಳು, ಟ್ರಸ್ಟ್‌ಗಳು ಹಾಗೂ ಶಿಕ್ಷಣ ಸಂಸ್ಥೆಗಳಿಂದ ಹಣ, ಆಹಾರ, ಬಟ್ಟೆ ಹಾಗೂ ಅಗತ್ಯ ವಸ್ತುಗಳನ್ನ ಸಂಗ್ರಹಿಸಿ ಸಂಬಂಧಿಸಿದವರಿಗೆ ತಲುಪಿಸುವ ಕಾರ್ಯ ಭರದಿಂದ ಸಾಗಿದೆ.
ಕೊಡಗು ಮತ್ತು ಕೇರಳ ಪ್ರವಾಹದ ಪರಿಹಾರಕ್ಕಾಗಿ ಶಿಡ್ಲಘಟ್ಟದ ಶ್ರೀ ಶಾರದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ನಗರದೆಲ್ಲೆಡೆ ಸಂಚರಿಸಿ ನೆರೆ ಸಂತ್ರಸ್ಥರಿಗೆ ಹಣವನ್ನು ಸಂಗ್ರಹಿಸಿದರು. ತಾಲ್ಲೂಕಿನ ಹಿತ್ತಲಹಳ್ಳಿಯಲ್ಲಿ ಯುವಕರು ಗ್ರಾಮದಲ್ಲಿ ಹಣವನ್ನು ಸಂಗ್ರಹಿಸಿದರು. ಸುಗಟೂರು ಗ್ರಾಮದ ಯುವಕರು ಅಗತ್ಯ ವಸ್ತುಗಳನ್ನು ಗ್ರಾಮದಲ್ಲಿ ಸಂಗ್ರಹಿಸಿದರು.
‘ಶ್ರೀ ಎಚ್‌.ಡಿ.ದೇವೇಗೌಡ ರವರ ಮತ್ತು ಶ್ರೀ ಜಯಪ್ರಕಾಶ್‌ ನಾರಾಯಣ್‌ ರವರ ಸೇವಾಭಿವೃದ್ಧಿ ಚಾರಿಟಬಲ್‌ ಟ್ರಸ್ಟ್‌’ ಮತ್ತು ನಾಗಮಂಗಲ ಗ್ರಾಮ ಪಂಚಾಯಿತಿ ವತಿಯಿಂದ ಕ್ಯಾಂಟರ್‌ ತುಂಬ ಅಗತ್ಯ ವಸ್ತುಗಳನ್ನು ಕಳುಹಿಸಿಕೊಡಲಾಯಿತು.
ಶಿಡ್ಲಘಟ್ಟ ಡಾಟ್‌ ಕಾಮ್‌ ವತಿಯಿಂದ ಫೇಸ್‌ ಬುಕ್‌ ಮತ್ತು ವ್ಯಾಟ್ಸಪ್‌ ಮೂಲಕ ಸಂದೇಶ ರವಾನಿಸಿ ದಾನಿಗಳಿಂದ ಹಣ ಪಡೆದು ತಹಶೀಲ್ದಾರ್‌ ಎಸ್.ಅಜಿತ್ ಕುಮಾರ್ ರೈ ಅವರಿಗೆ ನೀಡಲಾಯಿತು.
ಶ್ರೀಸರಸ್ವತಿ ಕಾನ್ವೆಂಟ್‌ನ ಶಿಕ್ಷಕಿ ಬಿ.ಮಂಜುಳ ಹಾಗೂ ಸತ್ಯನಾರಾಯಣರಾವ್ ದಂಪತಿಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ೨೦ ಸಾವಿರ ರೂಪಾಯಿಗಳ ಚೆಕ್‌ನ್ನು ತಹಸೀಲ್ದಾರ್ ಎಸ್.ಅಜಿತ್ ಕುಮಾರ್ ರೈ ಅವರಿಗೆ ನೀಡಿದ್ದಾರೆ.
ಟಿಪ್ಪು ಸೆಕ್ಯುಲರ್‌ ಸೇನಾ ಅಧ್ಯಕ್ಷ ಎಂ.ಮೌಲಾ ನೇತೃತ್ವದಲ್ಲಿ 14,630 ರೂ ಹಾಗೂ ನಿವೃತ್ತ ಸರ್ಕಾರಿ ನೌಕರರ ಸಂಘದ ಸದಸ್ಯರು 5 ಸಾವಿರ ರೂಗಳ ಮೊತ್ತದ ಚೆಕ್‌ಅನ್ನು ತಹಶೀಲ್ದಾರರಿಗೆ ನೀಡಿದರು.
ಹಿತ್ತಲಹಳ್ಳಿ ಯುವಕರ ನೇತೃತ್ವದಲ್ಲಿ ಗ್ರಾಮದಲ್ಲಿ ಸಂಗ್ರಹಿಸಿದ ಹಣದ ಮೊತ್ತ 25 ಸಾವಿರ ರೂಗಳನ್ನು ಚೆಕ್‌ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ಅವರ ಮೂಲಕ ಸಲ್ಲಿಸಲಾಯಿತು.

ಕೊತ್ತನೂರು ಚನ್ನಕೇಶವಸ್ವಾಮಿ ದೇವಾಲಯದಲ್ಲಿ ತಿರುಕಲ್ಯಾಣೋತ್ಸವ

0

ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಶ್ರೀದೇವಿ ಭೂದೇವಿ ಸಮೇತ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ತಿರುಕಲ್ಯಾಣೋತ್ಸವ ಹಾಗೂ ಮಹಾಸುದರ್ಶನ ನಾರಸಿಂಹ ಹೋಮವನ್ನು ನೆರವೇರಿಸಲಾಯಿತು.
ಪುರಾತನವಾದ ದೇವಾಲಯದಲ್ಲಿ ಶ್ರೀದೇವಿ ಭೂದೇವಿ ಸಮೇತ ಚನ್ನಕೇಶವಸ್ವಾಮಿಯನ್ನು ಪ್ರತಿಷ್ಠಾಪಿಸಿ ನಾನಾ ಹೂಗಳಿಂದ ಅಲಂಕರಿಸಿ, ವಿಶೇಷ ಪೂಜೆಯನ್ನು ನೆರವೇರಿಸಿ, ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಬೆಳಗ್ಗೆ ಸುಪ್ರಭಾತ ಸೇವೆ, ವೇದಸೂತ್ರ ದಿವ್ಯ ಪ್ರಬಂಧ ಪಾರಾಯಣದೊಂದಿಗೆ ಆರಂಭವಾದ ಪೂಜಾ ಕಾರ್ಯಕ್ರಮಗಳು ಸಂಜೆಯವರೆಗೂ ನಡೆದವು. ಚನ್ನಕೇಶವಸ್ವಾಮಿಗೆ ವಿಶೇಷ ಫಲ ಪಂಚಾಮೃತ ಅಭಿಷೇಕ, ವಿಶೇಷ ತಿರುಕಲ್ಯಾಣ ಮಹೋತ್ಸವ, ಅಷ್ಟಾವಧಾನ, ರಾಷ್ಟ್ರಾಶೀರ್ವಾದ ಇನ್ನಿತರೆ ಸೇವೆಗಳನ್ನು ಸ್ವಾಮಿಗೆ ನೆರವೇರಿಸಲಾಯಿತು.
ಪ್ರಧಾನ ಅರ್ಚಕರಾದ ಚನ್ನಕೇಶವಾಚಾರ್ ಹಾಗೂ ಇತರ ಪುರೋಹಿತರ, ಆಗಮೀಕರ ತಂಡ ಈ ಎಲ್ಲ ಪೂಜೆ ಪುನಸ್ಕಾರ ಹೋಮ ಹವನಗಳನ್ನು ನಡೆಸಿಕೊಟ್ಟರು. ಕೊತ್ತನೂರು ಗ್ರಾಮದ ಹಲವು ದಂಪತಿಗಳು ಹೋಮಕ್ಕೆ ಕುಳಿತು ನವದಾನ್ಯ ಸೀರೆ ಕುಪ್ಪಸ ಶ್ರೀಗಂಧ, ರಾಗಿ ಮರದ ತುಂಡುಗಳನ್ನು ಹೋಮಕ್ಕೆ ಅರ್ಪಿಸಿದರು.
ಕೊತ್ತನೂರು ಹಾಗೂ ಸುತ್ತ ಮುತ್ತಲ ಗ್ರಾಮಗಳ ಭಕ್ತರು ಆಗಮಿಸಿದ್ದು ಎಲ್ಲರಿಗೂ ದೇವರಿಗೆ ಅರ್ಪಿಸಿದ ಪಂಚಾಮೃತದಿಂದ ತಯಾರಿಸಿದ ನೈವೇಧ್ಯವನ್ನು ಪ್ರಸಾದವನ್ನಾಗಿ ಹಂಚಲಾಯಿತು.

ವಾರಹುಣಸೇನಹಳ್ಳಿಯಲ್ಲಿ ಶ್ರೀಆಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ಧಾರ

0

ತಾಲ್ಲೂಕಿನ ವಾರಹುಣಸೇನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಆಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ಧಾರ, ಧ್ವಜಸ್ತಂಭ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಪೂಜಾ ಕಾರ್ಯಕ್ರಮಗಳನ್ನು ಸೋಮವಾರ ನೆರವೇರಿಸಲಾಯಿತು.
ಬೆಳಗ್ಗೆ ಕಳಶಾರಾಧನೆ, ವೇದಪಾರಾಯಣ, ಸ್ವಸ್ತಿವಾಚನ, ವೇದ ಗಣಪತಿ ಹೋಮದೊಂದಿಗೆ ಆರಂಭವಾದ ಪೂಜಾ ಕಾರ್ಯಕ್ರಮಗಳು ಸಂಜೆಯವರೆಗೂ ನಿರಂತರವಾಗಿ ನಡೆದವು.
ದೇವಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಧ್ವಜಸ್ತಂಭ, ವಿಮಾನಗೋಪುರ ಕಳಶಕ್ಕೆ ವಿಶೇಷ ಪೂಜೆ ಸಲ್ಲಿಸಿ ಕುಂಭಾಭಿಷೇಕ, ಪಂಚಾಮೃತಾಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಿ ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಪೂಜಾ ಕಾರ್ಯಕ್ರಮಗಳ ನಂತರ ಆಗಮಿಸಿದ್ದ ಎಲ್ಲ ಭಕ್ತರಿಗೂ ಭಕ್ತರಿಂದ ಸಂಗ್ರಹಿಸಿದ್ದ ದವಸ ದಾನ್ಯ ಅಕ್ಕಿ ಬೇಳೆಯಿಂದ ತಯಾರಿಸಿ ಊಟದ ಅನ್ನ ಸಂತರ್ಪಣೆಯನ್ನು ನೆರವೇರಿಸಲಾಯಿತು.
ಸಂಜೆ ಶ್ರೀಆಂಜನೇಯಸ್ವಾಮಿ ಭಕ್ತರಿಂದ ಶ್ರೀರಾಮ, ಆಂಜನೇಯನನ್ನು ಭಜಿಸುವ ಭಕ್ತಿ ಗೀತೆಗಳ ಗಾಯನ ನಡೆಯಿತು. ವಾರಹುಣಸೇನಹಳ್ಳಿ ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾದರು.

ಕಸಾಪ ತಾಲ್ಲೂಕು ಅಧ್ಯಕ್ಷರಾಗಿ ಅಪ್ಪೇಗೌಡನಹಳ್ಳಿ ಎ.ಎಂ.ತ್ಯಾಗರಾಜ್‌ ನೇಮಕ

0

ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯಕ್ರಮಗಳು ನಿತ್ಯನೂತನವಾಗಿ, ನಿರಂತರವಾಗಿ, ಕ್ರಿಯಾಶೀಲವಾಗಿ ನಡೆಯಲೆಂದು ಶಿಡ್ಲಘಟ್ಟ ತಾಲ್ಲೂಕಿಗೆ ನೂತನ ಕಸಾಪ ಅಧ್ಯಕ್ಷರನ್ನಾಗಿ ಅಪ್ಪೇಗೌಡನಹಳ್ಳಿ ಎ.ಎಂ.ತ್ಯಾಗರಾಜ್‌ ಅವರನ್ನು ಆಯ್ಕೆ ಮಾಡಿರುವುದಾಗಿ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್‌ ತಿಳಿಸಿದರು.
ಕೈವಾರದ ಶ್ರೀ ಯೋಗಿ ನಾರೇಯಣ ಯತೀಂದ್ರರ ಮಠದಲ್ಲಿ ಶುಕ್ರವಾರ ಅಪ್ಪೇಗೌಡನಹಳ್ಳಿ ಎ.ಎಂ.ತ್ಯಾಗರಾಜ್‌ ಅವರಿಗೆ ಶಿಡ್ಲಘಟ್ಟ ತಾಲ್ಲೂಕು ಕಸಾಪ ಅಧ್ಯಕ್ಷರಾಗಿ ನೇಮಕಾತಿ ಪತ್ರವನ್ನು ನೀಡಿ ಅವರು ಮಾತನಾಡಿದರು.
ಕಸಾಪ ತಾಲ್ಲೂಕಿನ ಮೂಲೆ ಮೂಲೆಗೂ ಹರಡಬೇಕು. ತ್ಯಾಗರಾಜ್‌ ಅವರ ಕನ್ನಡ ತುಡಿತವನ್ನು ಪುರಸ್ಕರಿಸಿ ರಾಜ್ಯ ಹಾಗೂ ಜಿಲ್ಲಾ ಕಸಾಪ ಕಾಲಕಾಲಕ್ಕೆ ನೀಡುವ ಸಲಹೆ ಸೂಚನೆಗಳನ್ವಯ ಕಾರ್ಯ ನಿರ್ವಹಿಸಬೇಕೆಂದು ಸೂಚಿಸಿ 2018 ರ ಆಗಸ್ಟ್‌ 17 ರಿಂದ ಅನ್ವಯವಾಗುವಂತೆ ಶಿಡ್ಲಘಟ್ಟ ತಾಲ್ಲೂಕು ಕಸಾಪ ಅಧ್ಯಕ್ಷರಾಗಿ ನೇಮಿಸಿದ್ದೇನೆ. ಮನೆಯಂಗಳದಲ್ಲಿ ಮತ್ತು ಶಾಲೆಯಂಗಳದಲ್ಲಿ ನುಡಿಸಿರಿ, ವನಸಿರಿ, ಕಸಾಪ ನಡಿಗೆ ಸಾಧಕರ ಕಡೆಗೆ ಎಂಬ ನಾಲ್ಕು ಕಾರ್ಯಕ್ರಮಗಳನ್ನು ವಾರಕ್ಕೊಂದರಂತೆ ಮಾಡಬೇಕು. ಗ್ರಾಮೀಣ ಭಾಗದವರನ್ನು ಆಯ್ಕೆ ಮಾಡುವ ಮೂಲಕ ಕಸಾಪ ನಗರಕ್ಕೆ ಸೀಮಿತವಾಗಿಲ್ಲ ಎಂಬ ಸಂದೇಶವನ್ನು ಸಹ ಈ ಮೂಲಕ ನೀಡುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಸಾಪ ನೂತನ ತಾಲ್ಲೂಕು ಅಧ್ಯಕ್ಷ ಅಪ್ಪೇಗೌಡನಹಳ್ಳಿ ಎ.ಎಂ.ತ್ಯಾಗರಾಜ್‌ ಮತ್ತು ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್‌ ಅವರನ್ನು ಮಠದ ವತಿಯಿಂದ ಗೌರವಿಸಲಾಯಿತು.
ಕಸಾಪ ಜಿಲ್ಲಾ ಕೋಶಾಧಿಕಾರಿ ನಂಜುಂಡಪ್ಪ, ಮಾಜಿ ತಾಲ್ಲೂಕು ಅಧ್ಯಕ್ಷ ವಿ.ಕೃಷ್ಣ, ಶಂಕರ್‌, ಸತೀಶ್‌, ಮೂರ್ತಿ, ವಿಜಯಲಕ್ಷ್ಮಿ ಹಾಜರಿದ್ದರು.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ

0

ನಗರದ ಕೋಟೆ ವೃತ್ತದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್‌ ಮಾತನಾಡಿದರು.
ದೇಶ ಕಂಡ ಅಪ್ರತಿಮ ಪ್ರಧಾನಿ, ಅಜಾತಶತ್ರು, ಅಪರೂಪದ ರಾಜಕಾರಣಿಯನ್ನು ನಾವು ಕಳೆದುಕೊಂಡಿದ್ದೇವೆ ಎಂದು ಅವರು ತಿಳಿಸಿದರು.
ಆರ್‌ಎಸ್‌ಎಸ್‌ ಕಾರ್ಯಕರ್ತರಾಗಿ, ತುರ್ತು ಪರಿಸ್ಥಿತಿಯಲ್ಲಿ ಹೋರಾಟ ಮಾಡಿ, ಬಿಜೆಪಿಯನ್ನು ಅಧಿಕಾರಕ್ಕೆ ತಂದ ಅವರ ಬದುಕು, ಧ್ಯೇಯ, ತತ್ವಾದರ್ಶ, ವಾಗ್ಝರಿ, ದಿಟ್ಟ ನಿಲುವು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದೆ. ದೇಶ ಕಂಡ ಅಪ್ರತಿಮ ಪ್ರಧಾನಿ, ಅಜಾತಶತ್ರು, ಕವಿ ಹೃದಯಿ, ಮಾನವತಾವಾದಿ, ಮುತ್ಸದ್ಧಿ, ಅಸ್ಖಲಿತ ವಾಗ್ಮಿಯಾಗಿದ್ದ ವಾಜಪೇಯಿಯವರನ್ನು ವಿರೋಧ ಪಕ್ಷದವರೂ ಸಹ ಮೆಚ್ಚುತ್ತಿದ್ದರು ಎಂದು ಹೇಳಿದರು.
ಅಟಲ್‌ಜೀ ಇಂದು ನಮ್ಮ ಜೊತೆಗಿಲ್ಲ. ಆದರೆ, ಅವರ ಪ್ರೇರಣೆ, ಮಾರ್ಗದರ್ಶನವು ಪ್ರತಿಯೊಬ್ಬ ಭಾರತೀಯ, ಬಿಜೆಪಿ ಕಾರ್ಯಕರ್ತನಿಗೆ ಎಂದೆಂದಿಗೂ ಸಿಗುತ್ತಲೇ ಇರುತ್ತದೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಸುರೇಂದ್ರಗೌಡ, ದಾಮೋದರ್‌, ಮಂಜುಳಮ್ಮ, ಪುರುಷೋತ್ತಮ್‌, ಮುನಿರಾಜು, ನರೇಶ್‌, ರೈತಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್‌, ಪ್ರತೀಶ್‌, ಎ.ಎಸ್‌.ರವಿ, ಮಂಜುನಾಥ್‌ ಹಾಜರಿದ್ದರು.

ಅತ್ತಿಗಾನಹಳ್ಳಿ ನಾಗಲಗಟ್ಟುವಿನಲ್ಲಿ ವಿಶೇಷ ಪೂಜೆ

0

ತಾಲ್ಲೂಕಿನ ಚೀಮಂಗಲ ಗ್ರಾಮಪಂಚಾಯಿತಿ ವ್ಯಾಪ್ತಿಯ ಅತ್ತಿಗಾನಹಳ್ಳಿ ನಾಗಲಗಟ್ಟು ಪ್ರದೇಶದಲ್ಲಿರುವ ಶ್ರೀ ನಾಗಲಮುದ್ದಮ್ಮದೇವಿ, ಶ್ರೀ ಶೇಷಪ್ಪಸ್ವಾಮಿ, ಮಹಾ ಗಣಪತಿ ಮತ್ತು ನಾಗದೇವತೆಗಳ ಆರನೆಯ ವಾರ್ಷಿಕ ಮಹೋತ್ಸವ ಹಾಗೂ ನಾಗರಪಂಚಮಿಯ ಅಂಗವಾಗಿ ವಿಶೇಷ ಪೂಜಾ ಮಹೋತ್ಸವವನ್ನು ಬುಧವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ನಾಗರ ಪಂಚಮಿ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಹಾಗು ಅನ್ನಸಂತರ್ಪಣೆ ನಡೆಸಲಾಯಿತು.
ಚೀಮಂಗಲ, ಅತ್ತಿಗಾನಹಳ್ಳಿ, ಯಣ್ಣೂರು ಹಾಗೂ ಕೆ.ಜಿ.ಪುರ ಸೇರಿದಂತೆ ತಾಲ್ಲೂಕಿನ ವಿವಿದೆಡೆಗಳಿಂದ ಆಗಮಿಸಿದ್ದ ಭಕ್ತರು ಪೂಜೆಯಲ್ಲಿ ಪಾಲ್ಗೊಂಡರು.
ಪುರಾಣ ಹಿನ್ನೆಲೆ : ರಾಮಾಯಣದಲ್ಲಿ ಜಟಾಯುವಿನೊಂದಿಗೆ ಸೀತಾಪಹರಣ ಮಾಡುತ್ತಿದ್ದ ರಾವಣನನ್ನು ತಡೆಯಲು ಹೋದ ಜಟಾಯುವಿನೊಂದಿಗೆ ನಾಗದೇವತೆಯೂ ಇದ್ದರು. ರಾವಣ ಜಟಾಯುವಿನ ರೆಕ್ಕೆ ಕತ್ತರಿಸಿದಾಗ ಅದರ ಕಾಲಿನಲ್ಲಿ ಹಿಡಿದಿದ್ದ ನಾಗದೇವತೆಯನ್ನು ಬಿಟ್ಟುಬಿಡುತ್ತದೆ. ಅದು ಬಿದ್ದದ್ದು ತಾಲ್ಲೂಕಿನ ಚೀಮಂಗಲ ಪಂಚಾಯ್ತಿಯ ಯಣ್ಣೂರು ಬಳಿಯ ಅತ್ತಿಗಾನಹಳ್ಳಿ ನಾಗಲಗಟ್ಟು ಸ್ಥಳದಲ್ಲಿ ಎಂಬ ನಂಬಿಕೆಯಿದೆ.
ಜಟಾಯು ಬಿದ್ದದ್ದು ಮುಳಬಾಗಿಲು ತಾಲ್ಲೂಕಿನ ಕೊಲದೇವಿ ಗ್ರಾಮದಲ್ಲಿ. ಅಲ್ಲಿ ಏಕೈಕ ಗರುಡ ದೇವಾಲಯವಿದೆ. ಕೊಲದೇವಿಗೂ ಅತ್ತಿಗಾನಹಳ್ಳಿ ನಾಗಲಗಟ್ಟು ಸ್ಥಳಕ್ಕೂ ಪುರಾಣದ ನಂಟಿದೆ. ಅಂತೆಯೇ ಭಕ್ತರ ಹಲವು ನಂಬಿಕೆಗಳಿವೆ ಎಂದು ಪ್ರಧಾನ ಅರ್ಚಕ ಜೆ.ವೆಂಕಟಾಪುರ ಎಲ್‌.ನಾರಾಯಣಾಚಾರ್ಯ ತಿಳಿಸಿದರು.
ಸರ್ಪ ದೋಷಗಳು ನಿವಾರಣೆ : ಪುರಾಣದ ಹಿನ್ನೆಲೆಯಿದ್ದರೂ ಈ ದೇವಾಲಯವನ್ನು ಕೆಲವರ್ಷಗಳಿಂದ ಅಭಿವೃದ್ಧಿಪಡಿಸಲಾಗಿದೆ. ಹನ್ನೆರಡು ಅಡಿ ಎತ್ತರದ ನಾಗರಕಲ್ಲು ಇಲ್ಲಿನ ವಿಶೇಷವಾಗಿದೆ. ಈ ಸ್ಥಳದಲ್ಲಿ ಊಡುಗ ಮರ, ತಬಸಿ ಮರ, ತೊಟ್ಲಿ ಮರ, ಜಗಳಗಂಟಿ ಮರಗಳಿವೆ. ಈ ಮರಗಳೆಲ್ಲ ಅತ್ಯಂತ ಹಳೆಯದಾದವು. ತಬಸಿ ಮರದ ಬುಡದಲ್ಲಿ ರಂದ್ರವೊಂದಿದ್ದು, ಅದರಲ್ಲಿ ನೀರು ಸದಾ ಒಸರುತ್ತಿರುತ್ತದೆ. ಈ ನೀರು ಅತ್ಯಂತ ಪವಿತ್ರವೆಂಬುದು ಜನರ ನಂಬಿಕೆಯಾಗಿದೆ. ಇಲ್ಲಿ ದೇವಾಲಯದಲ್ಲಿ ದರ್ಶನ ಮಾಡಿದರೆ ಹಲವು ರೀತಿಯ ಸರ್ಪ ದೋಷಗಳು ನಿವಾರಣೆಯಾಗುತ್ತವೆ. ಇಲ್ಲಿಗೆ ಬಂದ ಸಾಕಷ್ಟು ಜನರು ಒಳಿತನ್ನು ಕಂಡಿದ್ದಾರೆ ಎಂದು ಅರ್ಚಕ ಗೋಪಾಲಕೃಷ್ಣಮಾಚಾರ್ಯ ತಿಳಿಸಿದರು.