ಸ್ವಚ್ಛತೆ ಕೆಲಸ
ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯಲ್ಲಿ ಗ್ರಾಮೀಣ ಜಾಗೃತಿ ಕಾರ್ಯಾನುಭವದಲ್ಲಿ ತೊಡಗಿಸಿಕೊಂಡಿರುವ ಜಿಕೆವಿಕೆ ಕೃಷಿ ವಿದ್ಯಾರ್ಥಿಗಳು ಬಿ.ಎಂ.ವಿ ಶಾಲೆಯ ಸಹಯೋಗದಲ್ಲಿ ಗ್ರಾಮದಲ್ಲಿ ಸ್ವಚ್ಛತೆ ಕೆಲಸವನ್ನು ಮಾಡಿದರು. ಕೃಷಿ ಪ್ರಾಧ್ಯಾಪಕ ಡಾ.ವೈ.ಎನ್.ಶಿವಲಿಂಗಯ್ಯ, ಪಿಡಿಒ ಯಮುನಾ, ಡಾ.ಸುನೀತಾ, ಶಿಕ್ಷಣ ಸಂಸ್ಥೆಯ ಟ್ರಸ್ಟಿ ವೆಂಕಟಮೂರ್ತಿ, ಶಿಕ್ಷಕರಾದ ಪಂಚಮೂರ್ತಿ, ವೆಂಕಟಮೂರ್ತಿ ಹಾಜರಿದ್ದರು
ಜೈವಿಕ ಇಂಧನದ ಮಹತ್ವ
ಶಿಡ್ಲಘಟ್ಟ ತಾಲ್ಲೂಕಿನ ಮಲ್ಲಹಳ್ಳಿಯಲ್ಲಿ ಗ್ರಾಮೀಣ ಜಾಗೃತಿ ಕಾರ್ಯಾನುಭವದಲ್ಲಿ ತೊಡಗಿಸಿಕೊಂಡಿರುವ ಜಿಕೆವಿಕೆ ಕೃಷಿ ವಿದ್ಯಾರ್ಥಿಗಳು ಜೈವಿಕ ಇಂಧನದ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಜೈವಿಕ ಇಂಧನ ಸಂಶೋಧನಾ ಕೇಂದ್ರದ ಡಾ.ನಿಂಗರಾಜು, ಡಾ.ವೆಂಕಟೇಶ್, ಡಾ.ಹರೀಶ್ ಮತ್ತು ಕೃಷಿ ಪ್ರಾಧ್ಯಾಪಕ ವೈ.ಎನ್.ಶಿವಲಿಂಗಯ್ಯ ಗ್ರಾಮಸ್ಥರಿಗೆ ಜೈವಿಕ ಇಂಧನದ ಬಗ್ಗೆ ವಿವರಿಸಿದರು.
ಜಿಕೆವಿಕೆ ಕೃಷಿ ವಿದ್ಯಾರ್ಥಿಗಳಿಂದ ಗ್ರಾಮೀಣ ಜಾಗೃತಿ ಕಾರ್ಯಾನುಭವ ಕಾರ್ಯಾಗಾರ
ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ 72 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ
ನಗರದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಆಯೋಜನೆ ಮಾಡಲಾಗಿದ್ದ 72 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ದ್ವಜಾರೋಹಣ ಮಾಡಿ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಪಿ.ಈ.ಕರಗಪ್ಪ ಮಾತನಾಡಿದರು.
ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಮಹನೀಯರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ. ಇವರ ಸ್ಮರಣೆಯಿಂದ ಯುವ ಜನಾಂಗದಲ್ಲಿ ರಾಷ್ಟ್ರಪ್ರೇಮ ಜಾಗೃತಗೊಳಿಸಿ ಅವರನ್ನು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡಬೇಕಾಗಿರುವುದು ಅನಿವಾರ್ಯವಾಗಿದೆ. ಸ್ವತಂತ್ರ ಭಾರತದ ಏಕತೆಗೆ ಧಕ್ಕೆಯುಂಟುಮಾಡುವ ಇನ್ನೊಂದು ಅಂಶವೆಂದರೆ ಸೈದ್ಧಾಂತಿಕ ಸಂಘರ್ಷ. ಇಲ್ಲಿ ಎಡ ಪಂಥೀಯರಿಗೆ ಬಲಪಂಥೀಯರು ಅಸ್ಪೃಶ್ಯರಾದರೆ ಬಲ ಪಂಥೀಯರಿಗೆ ಎಡಪಂಥೀಯರು ಅಸ್ಪೃಶ್ಯರು. ಹೀಗಾಗಿ ಕ್ಷುಲ್ಲಕ ಕಾರಣಗಳಿಗಾಗಿ ಸಂಘರ್ಷ ನಡೆಯುತ್ತಿರುತ್ತದೆ ಎಂದು ಅವರು ಹೇಳಿದರು.
ದೇಶಾದ್ಯಂತ ಅಸಂಖ್ಯಾತ ಮಹನೀಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ಪ್ರಾಣಾರ್ಪಣೆ ಮಾಡಿದ್ದಾರೆ. ಕರ್ನಾಟಕ ರಾಜ್ಯದಲ್ಲೂ ಅನೇಕ ಮಹನೀಯರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಬಲಿದಾನ ನೀಡಿದ್ದಾರೆ. ಈ ಮಹನೀಯರ ತ್ಯಾಗ ಮತ್ತು ಬಲಿದಾನದ ಫಲವಾಗಿ ಇಂದು ನಾವು ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ ಎಂದರು.
ರಾಷ್ಟ್ರೀಯ ಸಮಿತಿ ಸದಸ್ಯ ರೂಪಸಿ ರಮೇಶ್ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಆಚರಣೆ ಮಾಡುವ ಮೂಲಕ ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿಹಿಡಿದು ಸಮಾಜದೊಟ್ಟಿಗೆ ಉತ್ತಮ ಭಾಂಧವ್ಯ ಹೊಂದಿಕೊಂಡು ಕೆಲಸ ಮಾಡಬೇಕು ಎಂದರು.
ಹಿರಿಯ ಸದಸ್ಯ ಕೆ.ವಿ.ಮುನೇಗೌಡ ಮಾತನಾಡಿ, ಸ್ವಾತಂತ್ರ್ಯ ಬಂದು 72 ವರ್ಷಗಳು ಕಳೆದರೂ ಪವಿತ್ರ ಸಂವಿಧಾನವನ್ನು ಸುಡುವಂತಹ ಮನಸ್ಥಿತಿಗಳು ನಿರ್ಮಾಣವಾಗಿರುವುದು ಖಂಡನೀಯ, ತಂತ್ರಜ್ಞಾನಗಳು ಮುಂದುವರಿದಂತೆ ಸಂಕುಚಿತ ಮನಃಸ್ಥಿತಿ ವ್ಯಾಪಕಗೊಂಡು ಸವಾಲಾಗಿ ಪರಿಣಮಿಸುತ್ತಿದೆ. ಪರಸ್ಪರ ಸಂಬಂಧಗಳು ಮರೆಯಾಗಿ ಮಾನವೀಯತೆ ನಶಿಸಿ ರಾಕ್ಷಸೀಯ ಪ್ರವೃತ್ತಿ ಬೆಳೆಯುತ್ತಿರುವುದು ಆತಂಕಕಾರಿ ವಿಷಯ. ಪುಸ್ತಕಗಳನ್ನು ಓದುವ, ಸುತ್ತಲಿನ ಪರಿಸರ, ಸಮಾಜವನ್ನು ಸೂಕ್ಷ್ಮವಾಗಿ ಗಮನಿಸುವ ಪ್ರವೃತ್ತಿ ಮಾನವನನ್ನು ಎತ್ತರಕ್ಕೇರಿಸುತ್ತದೆ. ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಮೂಲ ತಳಹದಿ ಕುಸಿಯದಿರಲು ಇಂತಹ ವಿಶಾಲ ಮನಃಸ್ಥಿತಿ ಅಗತ್ಯವಿದೆ ಎಂದರು.
ಸರಸ್ವತಿ ಕಾನ್ವೆಂಟ್ ಶಾಲೆಯ ಮಕ್ಕಳು, ವಂದೇ ಮಾತರಂ ಗೀತೆಯನ್ನು ಹಾಡಿದರು. ಆಶಾಕಿರಣ ಅಂಧ ಮಕ್ಕಳ ಶಾಲೆಯ ಮಕ್ಕಳು ರಾಷ್ಟ್ರಗೀತೆ ಹಾಡಿದರು.
ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಎ.ಶಶಿಕುಮಾರ್, ಕಾರ್ಯದರ್ಶಿ ಎಂ.ಮುನಿನಾರಾಯಣ, ಖಜಾಂಚಿ ಡಿ.ಜಿ.ಮಲ್ಲಿಕಾರ್ಜುನ, ಸದಸ್ಯರಾದ ಎಂ.ಎ.ತಮೀಮ್ ಪಾಷ, ರಮೇಶ್, ಲೊಕೇಶ್, ನಾರಾಯಣಸ್ವಾಮಿ, ಮಿಥುನ್ ಕುಮಾರ್, ಸಹಾಯಕ ಮಂಜುನಾಥ್, ಇದ್ದರು.
ಆಡಳಿತ ಕಾರ್ಯವೈಖರಿ ಖಂಡಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳಿಂದ ಶಾಸಕರಿಗೆ ಮನವಿ
ಕಳೆದ ಒಂದು ವರ್ಷದಿಂದ ದಲಿತರ ಕುಂದುಕೊರತೆ ಸಭೆ ಕರೆಯದೇ ನಿರ್ಲಕ್ಷಿಸಿರುವುದು ಹಾಗೂ ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ತಾಲ್ಲೂಕು ಆಡಳಿತದ ಕಾರ್ಯವೈಖರಿ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಬುಧವಾರ ತಾಲ್ಲೂಕು ಕಚೇರಿ ಆವರಣದಲ್ಲಿ ಶಾಸಕ ವಿ.ಮುನಿಯಪ್ಪರಿಗೆ ಮನವಿ ಪತ್ರ ಸಲ್ಲಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ೭೨ ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಮುಗಿಸಿಕೊಂಡು ತಾಲ್ಲೂಕು ಕಚೇರಿಗೆ ಬಂದ ಶಾಸಕರಿಗೆ ಕದಸಂಸ ಪದಾಧಿಕಾರಿಗಳು ತಾಲ್ಲೂಕು ಆಡಳಿತದ ಕಾರ್ಯವೈಖರಿ ಹಾಗೂ ದಲಿತರ ಹಕ್ಕೊತ್ತಾಯಗಳನ್ನು ಒಳಗೊಂಡ ಮನವಿ ಪತ್ರ ಸಲ್ಲಿಸಿದರು.
ಈ ಹಿಂದೆ ತಾಲ್ಲೂಕು ಆಡಳಿತ ಮಾಜಿ ಶಾಸಕ ಎಂ.ರಾಜಣ್ಣರ ಅಧ್ಯಕ್ಷತೆಯಲ್ಲಿ ನಡೆಸಿದ ದಲಿತರ ಕುಂದುಕೊರತೆ ಸಭೆಯಲ್ಲಿ ತೀರ್ಮಾನಿಸಲಾಗಿದ್ದ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಭವನಕ್ಕೆ ಸ್ಥಳ ಈವರೆಗೂ ಗುರುತಿಸಿಲ್ಲ. ತಾಲ್ಲೂಕಿನಾದ್ಯಂತ ಈವರೆಗೂ ಬಗರ್‌ಹುಕುಂ ಯೋಜನೆಯಡಿ ನಮೂನೆ ೫೦ ಹಾಗು ೫೩ ಸಲ್ಲಿಸಿರುವ ಯಾವುದೇ ದಲಿತರಿಗೂ ಸಾಗುವಳಿ ಪತ್ರ ವಿತರಿಸಿಲ್ಲ. ತಾಲ್ಲೂಕಿನ ವಿವಿದೆಡೆ ನಕಲಿ ದಾಖಲೆ ಸೃಷ್ಟಿಸಿ ಸತ್ತವರ ಹೆಸರಲ್ಲಿ ಫಹಣಿ ನಮೂದಿಸಿ ಅಕ್ರಮವೆಸಗಿರುವ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಬೇಕು. ತಾಲ್ಲೂಕಿನ ವಿವಿದೆಡೆ ಇಂದಿಗೂ ದಲಿತರ ಹಾಗು ಅಲ್ಪಸಂಖ್ಯಾತರಿಗೆ ಸ್ಮಶಾನ ವಿಲ್ಲದೇ ಇದ್ದರೂ ತಾಲ್ಲೂಕು ಆಡಳಿತ ಮೌನವಹಿಸಿದೆ. ಸಾಲದೆಂಬಂತೆ ತಾಲ್ಲೂಕು ಆಡಳಿತದಿಂದ ಕಳೆದ ೨-೩ ವರ್ಷಗಳಿಂದ ಅಂತ್ಯ ಸಂಸ್ಕಾರದ ಹಣ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳ ಯಾವುದೇ ಪಿಂಚಣಿ ವಿತರಣೆಯಾಗಿಲ್ಲ.
ಮೇಲ್ಕಂಡ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಖುದ್ದು ತಹಸೀಲ್ದಾರ್‌ರನ್ನು ಸಂಪರ್ಕಿಸಲು ಅವರ ಕಚೇರಿಗೆ ಹೋದರೆ ದಲಿತರು ಎಂಬ ಒಂದೇ ಕಾರಣಕ್ಕೆ ಅವರನ್ನು ಗಂಟೆಗಟ್ಟಲೇ ಕಾಯಿಸುವುದು ಹಾಗೂ ದಲಿತ ಮುಖಂಡರ ಬಗ್ಗೆ ಕೇವಲವಾಗಿ ಮಾತಾಡುವ ಮೂಲಕ ದಲಿತ ವಿರೋಧಿ ನೀತಿಯನ್ನು ಅಧಿಕಾರಿಗಳು ಅನುಸರಿಸುತ್ತಾರೆ.
ಕೂಡಲೇ ತಾಲ್ಲೂಕು ಆಡಳಿತವನ್ನು ಚುರುಕುಗೊಳಿಸುವ ಕೆಲಸವನ್ನು ತಾವುಗಳು ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿ ಶಾಸಕ ವಿ.ಮುನಿಯಪ್ಪರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಶಾಸಕ ವಿ.ಮುನಿಯಪ್ಪ ಸ್ಥಳಕ್ಕೆ ತಹಸೀಲ್ದಾರ್ ಅಜಿತ್‌ಕುಮಾರ್ ರೈ ಅವರನ್ನು ಕರೆಸಿ ದಲಿತ ಮುಖಂಡರು ನೀಡಿರುವ ಮನವಿ ಪತ್ರವನ್ನು ನೀಡಿ ಮುಂದಿನ ದಲಿತರ ಕುಂದುಕೊರತೆ ಸಭೆಯೊಳಗೆ ಇದೀಗ ಮುಖಂಡರು ನೀಡಿರುವ ಎಲ್ಲಾ ಬೇಡಿಕೆಗಳನ್ನು ಪೂರ್ಣಗೊಳಿಸುವಂತೆ ತಿಳಿಸಿದರು. ಸಭೆಯಲ್ಲಿ ಪುನಃ ದಲಿತ ಮುಖಂಡರಿಂದ ಇದೇ ವಿಷಯಗಳ ಪ್ರಸ್ತಾಪವಾಗಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕದಸಂಸ ಜಿಲ್ಲಾ ಸಂಚಾಲಕ ಕೆ.ಎಸ್.ಅರುಣ್‌ಕುಮಾರ್, ತಾಲ್ಲೂಕು ಸಂಚಾಲಕ ಅಶೋಕ್, ಜಿಲ್ಲಾ ಸಂಘಟನಾ ಸಂಚಾಲಕ ಎಸ್.ಎಂ.ಮುನಿವೆಂಕಟಪ್ಪ, ನಗರ ಘಟಕ ಸಂಚಾಲಕ ಜೆ.ಎನ್.ಪ್ರಕಾಶ್, ಪದಾಧಿಕಾರಿಗಳಾದ ದ್ಯಾವಪ್ಪ, ಕಿರಣ್‌ಕುಮಾರ್, ವೇಣು, ನಾಗರಾಜ್ ಹಾಜರಿದ್ದರು.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ಸದಸ್ಯರ ಪ್ರತಿಭಟನೆ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ವತಿಯಿಂದ ಮಂಗಳವಾರ ರಾತ್ರಿ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಬಂಡವಾಳಪರ ಕಾರ್ಮಿಕ ಕಾನೂನುಗಳ ತಿದ್ದುಪಡಿ ವಿರೋಧಿಸಿ, ಕಾರ್ಮಿಕ ಕಾನೂನುಗಳ ಕಟ್ಟುನಿಟ್ಟಿನ ಜಾರಿಗಾಗಿ ಒತ್ತಾಯ, ಎಲ್ಲಾ ಕಾರ್ಮಿಕರಿಗೂ ಮಾಸಿಕ 18 ಸಾವರಿ ರೂಗಳ ಸಮಾನ ಕನಿಷ್ಠ ವೇತನ ಜಾರಿಯಾಗಬೇಕು, ಸ್ಕೀಂ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಬೇಕು, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ವಿರೋಧ, ನಿರುದ್ಯೋಗ ನಿವಾರಣೆ ಹಾಗೂ ಉದ್ಯೋಗ ಸೃಷ್ಟಿಗಾಗಿ ಒತ್ತಾಯ, ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಭವಿಷ್ಯನಿಧಿ, ಪಿಂಚಣಿ ಹಾಗೂ ವಸತಿ ಯೋಜನೆಗಾಗಿ ಆಗ್ರಹ, ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಸಾರ್ವಜನಿಕ ಪಡಿತರ ವ್ಯವಸ್ಥೆ ಸಾರ್ವತ್ರೀಕರಣಗೊಳಿಸಬೇಕು, ಕೃಷಿ ಕೂಲಿ ಕಾರ್ಮಿಕರಿಗಾಗಿ ಸೇವಾ ಸೌಲಭ್ಯಗಳ ಶಾಸನಕ್ಕಾಗಿ ಹಾಗೂ ನರೇಗಾ ಸಮರ್ಪಕ ಜಾರಿಗಾಗಿ ಒತ್ತಾಯ ಮುಂತಾದ ಬೇಡಿಕೆಗಳನ್ನಿಟ್ಟುಕೊಂಡು ಪ್ರತಿಭಟಿಸಿದರು.
ಮಧ್ಯರಾತ್ರಿಯಲ್ಲಿ ತಾಲ್ಲೂಕು ಕಚೇರಿಯ ಮುಂದೆ ಸಿಐಟಿಯು ಧ್ವಜಾರೋಹಣವನ್ನು ಮಾಡಿದರು.
ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಫಯಾಜ್, ಗುಲ್ಜಾರ್, ಪಾಪಣ್ಣ, ರತ್ನಕುಮಾರಿ, ಮಂಜುಳಾ, ಶಂಕರಪ್ಪ, ವೆಂಕಟೇಶ್, ಅಮ್ಮಾಜಾನ್ ಹಾಜರಿದ್ದರು.
72ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ
ನಗರದ ನೆಹರೂ ಕ್ರೀಡಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ 72ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ತಹಶೀಲ್ದಾರ್ ಅಜಿತ್ ಕುಮಾರ್ ರೈ ಮಾತನಾಡಿದರು.
ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು, ಬ್ರಿಟೀಷರಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿರಬಹುದು. ಕೃಷಿಕ ವರ್ಗದ ಘನತೆ ಹೆಚ್ಚಿದಾಗ, ಸೈನಿಕರಿಗೆ ಸೂಕ್ತ ಗೌರವ ಸಿಕ್ಕಾಗ, ಪ್ರತಿಯೊಬ್ಬ ಮಗುವಿಗೆ ಶಿಕ್ಷಣ ಸಿಕ್ಕಾಗ, ಪ್ರತಿಯೊಬ್ಬ ಪ್ರತಿಭಾವಂತರಿಗೆ ಸರಿಯಾದ ಅವಕಾಶ ಸಿಕ್ಕಿದಾಗ ಅದು ನಿಜವಾದ ಸ್ವಾತಂತ್ಯ. ಶಿಕ್ಷಣದಿಂದ ವಂಚಿತರಾಗಿರುವವರು ಬಹಳಷ್ಟು ಮಂದಿ ಇನ್ನೂ ನಮ್ಮ ದೇಶದಲ್ಲಿ ಇದ್ದಾರೆ. ಅಂಥವರಿಗೆ ಸೂಕ್ತ ಶಿಕ್ಷಣ ಮತ್ತು ಅವಕಾಶಗಳು ಸಿಗಬೇಕಾಗಿದೆ. ಪ್ರತಿಭಾವಂತರ ದೇಶ ಬಿಟ್ಟು ಹೋಗದ ವ್ಯವಸ್ಥೆಯನ್ನು ರೂಪಿಸಬೇಕಿದೆ. ವಿದ್ಯಾರ್ಥಿ ಜೀವನದಿಂದಲೇ ಭಾರತೀಯತೆಯನ್ನು ಮಕ್ಕಳ ಮನದಲ್ಲಿ ತುಂಬುವ ಕೆಲಸವಾಗಲಿ ಎಂದು ಹೇಳಿದರು.
ಸರ್ಕಾರ ರೈತರ ಪರವಾಗಿದೆ. 49 ಸಾವಿರ ಕೋಟಿ ರೂಗಳ ಬೃಹತ್ ಸಾಲ ಮನ್ನಾ ಮಾಡುವ ಯೋಜನೆಯನ್ನು ರೂಪಿಸಲಾಗಿದೆ ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ಹಲವು ಮಹನಿಯರ ಬಲಿತ್ಯಾಗದಿಂದ ದೇಶ ಸ್ವಾತಂತ್ರ್ಯವಾಗಿದೆ. ಯುವಜನರು ದೇಶ ಕಟ್ಟುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಬೇಕು. ಜಾತಿ ಭೇದ ಮರೆತು ಭಾರತೀಯತೆಯನ್ನು ಮೆರೆಯಬೇಕು ಎಂದರು.
ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಪೊಲೀಸರಿಂದ ಪಥಸಂಚಲನೆ ಮತ್ತು ಧ್ವಜವಂದನೆಯನ್ನು ಸ್ವೀಕರಿಸಿದ ನಂತರ ಶಾಸಕ ವಿ.ಮುನಿಯಪ್ಪ ಮತ್ತು ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರಿಗೆ ತಂಡಗಳ ಪರಿಚಯವನ್ನು ಮಾಡಿಕೊಡಲಾಯಿತು.
2017–18ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ತಾಲ್ಲೂಕಿಗೆ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಮೇಲೂರು ಸರ್ಕಾರಿ ಪ್ರೌಢಶಾಲೆಯ ಎಂ.ಎನ್.ಪಲ್ಲವಿ, ಬಶೆಟ್ಟಹಳ್ಳಿ ಸರ್ಕಾರಿ ಪ್ರೌಢಶಾಲೆಯ ಜೆ.ವೈ.ಅಂಬರೀಷ, ಮಳಮಾಚನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಪಿ.ಶ್ರಾವಣಿ ಅವರಿಗೆ ಶಿಕ್ಷಣ ಇಲಾಖೆಯಿಂದ ಲ್ಯಾಪ್‌ಟಾಪ್ ನೀಡಲಾಯಿತು. ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದ ಪೊಲೀಸ್, ದ್ವಿತೀಯ ಸ್ಥಾನ ಪಡೆದ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಮತ್ತು ತೃತೀಯ ಸ್ಥಾನ ಪಡೆದ ಕಂದಾಯ ಇಲಾಖೆಯವರಿಗೆ ಟ್ರೋಫಿ ನೀಡಲಾಯಿತು. ಸೈಕಲ್ ಟ್ಯಾಬಲೋ ರಚಿಸುವ ಉಲ್ಲೂರುಪೇಟೆ ಮಂಜುನಾಥ್ ಅವರಿಗೆ ಸೈಕಲ್ ನೀಡಲಾಯಿತು.
ನಗರದ ಕ್ರೆಸೆಂಟ್ ಶಾಲೆ, ಸರ್ಕಾರಿ ಪ್ರೌಢ ಶಾಲೆ ಮತ್ತು ಡಾಲ್ಫಿನ್ ಶಾಲೆಯ ವಿದ್ಯಾರ್ಥಿಗಳು ದೇಶ ಪ್ರೇಮವನ್ನು ಪ್ರದರ್ಶಿಸುವ ನೃತ್ಯ ರೂಪಕಗಳನ್ನು ನಡೆಸಿಕೊಟ್ಟರು. ಸ್ವಾತಂತ್ರ್ಯ ಹೋರಾಟಗಾರರ, ಯೋಧರ, ಪ್ರಾಣಿ ಪಕ್ಷಿಗಳ ವೈವಿಧ್ಯಮಯ ವೇಷಭೂಷಣಗಳನ್ನು ಧರಿಸಿದ್ದ ಮಕ್ಕಳ ನೃತ್ಯ ರೂಪಕಗಳು ಜನರ ಮೆಚ್ಚುಗೆಗೆ ಪಾತ್ರವಾದವು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಸದಸ್ಯ ಸತೀಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಉಪಾಧ್ಯಕ್ಷ ಮುನಿಯಪ್ಪ, ಸದಸ್ಯರಾದ ದೀಪಾ ರಾಂಬಾಬು, ಪಂಕಜಾ ನಿರಂಜನ್, ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್, ನಗರಸಭೆ ಅಧ್ಯಕ್ಷ ಅಫ್ಸರ್‌ಪಾಷ, ಸದಸ್ಯರಾದ ಚಿಕ್ಕಮುನಿಯಪ್ಪ, ಕೇಶವಮೂರ್ತಿ, ಆಯುಕ್ತ ಚಲಪತಿ, ರೈತಸಂಘದ ಜೆ.ಎಸ್.ವೆಂಕಟಸ್ವಾಮಿ, ರವಿಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೇಶವರೆಡ್ಡಿ, ಯಾಸ್ಮೀನ್‌ತಾಜ್ ಹಾಜರಿದ್ದರು.
ಸಂವಿಧಾನವನ್ನು ಸುಟ್ಟು ದೇಶದ್ರೋಹ ಬಗೆದವರನ್ನು ಶಿಕ್ಷಿಸುವಂತೆ ಸರ್ಕಾರಕ್ಕೆ ಮನವಿ
ನಗರದಲ್ಲಿ ಮಂಗಳವಾರ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ತಾಲ್ಲೂಕು ಕಚೇರಿಯ ಮುಂದೆ ಧರಣಿ ನಡೆಸಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ಎಂ ಮುನ್ನಯ್ಯ ಮಾತನಾಡಿದರು.
ದೇಶದ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಮೀಸಲಾತಿಯನ್ನು ಮತ್ತು ಎಸ್.ಸಿ, ಎಸ್.ಟಿ ಕಾಯಿದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಜನರು ಸಂವಿಧಾನವನ್ನು ಸುಟ್ಟು ದೇಶದ್ರೋಹ ಬಗೆದಿದ್ದಾರೆ. ಆ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಅವರು ಒತ್ತಾಯಿಸಿದರು.
ಸಂವಿಧಾನ ಸುಟ್ಟ ದೇಶದ್ರೋಹಿಗಳು ಅಂಬೇಡ್ಕರ್ ವಿರುದ್ಧ ಘೋಷಣೆ ಕೂಗಿದ ಬಗ್ಗೆ ವರದಿಯಾಗಿವೆ. ಸಂವಿಧಾನ ಸುಡುವ ವೀಡಿಯೋವನ್ನು ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟು ಈ ಗುಂಪು ವಿಕೃತಿ ಮೆರೆದಿದ್ದಾರೆ. ಸಾರ್ವಜನಿಕವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವನ್ನು ಸುಟ್ಟು ಹಾಕಿದ್ದಲ್ಲದೆ ಅವಹೇಳನ ಕಾರಿಯಾಗಿ ಮಾತನಾಡಿದ್ದಾರೆ. ಇವರಿಗೆ ಶಿಕ್ಷೆ ಆಗಬೇಕು. ಜನರಿಗೆ ಉತ್ತಮ ಸಂದೇಶ ನೀಡಬೇಕು ಎಂದು ಹೇಳಿದರು.
ಸಂವಿಧಾನ ಸುಡುವುದು, ರಾಷ್ಟ್ರಗೀತೆ, ರಾಷ್ಟ್ರಧ್ವಜ ಇವುಗಳನ್ನು ಅವಮಾನಿಸುವುದು ಅಕ್ಷಮ್ಯ ಅಪರಾದ. ಕೇಂದ್ರ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಈ ಕೃತ್ಯ ಎಸಗಿದವರನ್ನು ಕೋಡಲೇ ಬಂಧಿಸಿ ಕಾನೂನು ಅಡಿಯಲ್ಲಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರೇಡ್ ೨ ತಹಸಿಲ್ದಾರ್ ಲಕ್ಷೀಕಾಂತಮ್ಮ ಅವರಿಗೆ ಸರ್ಕಾರಕ್ಕೆ ತಲುಪಿಸುವಂತೆ ಕೋರಿ ಮನವಿ ಪತ್ರ ಸಲ್ಲಿಸಲಾಯಿತು.
ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳಾದ ಎನ್.ಎ ವೆಂಕಟೇಶ್, ಚಲಪತಿ, ಎಲ್.ವಿ ವೆಂಕಟೇಶ್,ಲಕ್ಷೀನಾರಾಯಣ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸಾಮೂಹಿಕ ವಾದ್ಯಗೋಷ್ಠಿ ಹಾಗೂ ಶ್ರೀರಾಮದೇವರ ಪಲ್ಲಕ್ಕಿ ಉತ್ಸವ
ತಾಲ್ಲೂಕು ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿಯ ಗೌಡನಹಳ್ಳಿಯಲ್ಲಿ ಸವಿತಾ ಸಮಾಜ, ಗೌಡನಹಳ್ಳಿಯ ಜಿ.ಪಿ.ವೆಂಕಟರಾಯಪ್ಪ ಹಾಗೂ ಗೌಡನಹಳ್ಳಿ, ಧನಮಿಟ್ಟೇನಹಳ್ಳಿ ಗ್ರಾಮಸ್ಥರ ಸಹಯೋಗದಲ್ಲಿ ಸಾಮೂಹಿಕ ವಾದ್ಯಗೋಷ್ಠಿ ಹಾಗೂ ಶ್ರೀರಾಮದೇವರ ಪಲ್ಲಕ್ಕಿ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲೆಯ ವಿವಿದಡೆಯಿಂದ ಆಗಮಿಸಿದ್ದ ೭೦ ಮಂದಿ ಕಲಾವಿದರು ಏಕ ಕಾಲಕ್ಕೆ ೩ ಗಂಟೆಗಳ ಕಾಲ ನಾದಸ್ವರ, ಸಾಕ್ಸಾಫೋನ್, ಡೋಲನ್ನು ನುಡಿಸಿದರು. ಗ್ರಾಮದ ನಡು ಬೀದಿಯಲ್ಲಿ ಸಾಲಾಗಿ ಕುಳಿತ ಕಲಾವಿದರ ಕಲಾಸ್ವರಕ್ಕೆ ಸಭಿಕರು ತಲೆತೂಗಿದರು.
ಕಳೆದ ಮೂರು ವರ್ಷಗಳಿಂದಲು ಈ ಗ್ರಾಮದಲ್ಲಿ ಸಾಮೂಹಿಕ ನಾದಸ್ವರ, ಡೋಲು ಹಾಗೂ ಸಾಕ್ಸಾಫೋನ್ ವಾದನವನ್ನು ನಡೆಸಿಕೊಂಡು ಬರುತ್ತಿದ್ದು ಕಲಾಸಕ್ತರನ್ನು ಆಕರ್ಷಿಸಿದೆ.
ಕನ್ನಡ ಹಾಗೂ ತೆಲುಗಿನ ಹಲವು ಜನಪದ ಗೀತೆಗಳನ್ನು ನುಡಿಸಿದ ಕಲಾವಿದರು ತಡರಾತ್ರಿಯವರೆಗೂ ಕಲಾಸಕ್ತರು ಕೊರೆಯುವ ಚಳಿಯಲ್ಲೂ ಕದಲದ ಕೂತಲ್ಲೆ ಕೂರುವಂತೆ ತಮ್ಮ ಕಲೆಯ ಮೂಲಕ ಸೆರೆ ಹಿಡಿದಿದ್ದರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀರಾಮ ದೇವರ ಪಲ್ಲಕ್ಕಿ ಉತ್ಸವ ನಡೆಯಿತು. ಹಿರಿಯ ಸಾಧಕ ಕಲಾವಿದರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೆ ಶಾಸಕ ವಿ.ಮುನಿಯಪ್ಪ ಚಾಲನೆ ನೀಡಿದರು. ಕಾಂಗ್ರೆಸ್ ಮುಖಂಡ ಬೆಳ್ಳೂಟಿ ಸಂತೋಷ್, ಜಿ.ಪಿ.ವೆಂಕಟರಾಯಪ್ಪ, ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಿಕ್ಕನಾರಾಯಣಸ್ವಾಮಿ, ಸದಸ್ಯ ಜಿ.ಕೆ.ವೆಂಕಟರೆಡ್ಡಿ, ಸವಿತಾ ಸಮಾಜದ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ಕಾರ್ಯದರ್ಶಿ ಬೆಳ್ಳೂಟಿ ರಮೇಶ್ ಹಾಜರಿದ್ದರು.
ಸುಗಟೂರು ಸರ್ಕಾರಿ ಶಾಲೆಗೆ ಬಣ್ಣ ಹಚ್ಚಿದ ಟೀಮ್ ಡಿಒಎಚ್ ಮತ್ತು ಲೈಕನ್ ರೈಡರ್ಸ್ ಸದಸ್ಯರು
ಸ್ವಾತಂತ್ರ್ಯೋತ್ಸವಕ್ಕೆ ಮುನ್ನ ಖಾಸಗಿ ಸಮುದಾಯದ ಸಹಭಾಗಿತ್ವದಲ್ಲಿ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೊಸದಾಗಿ ಬಣ್ಣ ಹೊಡೆದು ಅಂದಗೊಳಿಸಲಾಗಿದೆ.
ಬೆಂಗಳೂರಿನ ಟೀಮ್ ಡಿಒಎಚ್ ಮತ್ತು ಲೈಕನ್ ರೈಡರ್ಸ್ ಎಂಬ ಹವ್ಯಾಸಿ ಬುಲೆಟ್ ಬೈಕ್ ಓಡಿಸುವ ಗುಂಪಿನ ಸುಮಾರು ೨೫ ಯುವಕರು ಮತ್ತು ಯುವತಿಯರು ಒಗ್ಗೂಡಿ ಶಾಲೆಗೆ ಬಣ್ಣ ಹಚ್ಚಿದ್ದಾರೆ. ಶಬರಿ ಮತ್ತು ಗೌತಮ್ ನೇತೃತ್ವದ ಹವ್ಯಾಸಿ ಬುಲೆಟ್ ಬೈಕ್ ಓಡಿಸುವ ಸದಸ್ಯರು ಪ್ರತಿ ತಿಂಗಳು ಬುಲೆಟ್ ಬೈಕಿನಲ್ಲಿ ವಿವಿದೆಡೆ ಹೋಗುವ ರೂಢಿಯಿಟ್ಟುಕೊಂಡಿದ್ದು, ಅವರಲ್ಲಿ ಯುವತಿಯರೂ ಇದ್ದಾರೆ. ಈ ಹವ್ಯಾಸಿ ತಂಡವು ಬೈಕ್ ಓಡಿಸುವುದರೊಂದಿಗೆ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭಕ್ಕೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಆಲೋಚಿಸಿ ಸರ್ಕಾರಿ ಶಾಲೆಗೆ ಬಣ್ಣ ಹಚ್ಚಿ, ಶಾಲೆಯ ಅಭಿವೃದ್ಧಿಗೆ ಕೊಡುಗೆ ನೀಡಲು ಸುಗಟೂರಿಗೆ ಬಂದಿದ್ದಾರೆ.
ಶನಿವಾರ ಮತ್ತು ಭಾನುವಾರ ಗ್ರಾಮದಲ್ಲಿಯೇ ತಂಗಿದ್ದು ಅಂಗನವಾಡಿಯಿಂದ ಹಿಡಿದು ಶಾಲೆಯ ಎಲ್ಲಾ ಕೊಠಡಿಗಳಿಗೆ ತಾವೇ ಬಣ್ಣ ಬಳಿದಿದ್ದಾರೆ. ಆಗಸ್ಟ್-೧೫ ರಂದು ಕಾರ್ಯಕ್ರಮದಲ್ಲಿ ಕ್ರೀಡೋಪಕರಣಗಳು ಮತ್ತಿತರ ಅಗತ್ಯ ಪರಿಕರಗಳನ್ನು ಶಾಲೆಗೆ ವಿತರಿಸಲು ಅವರು ನಿರ್ಧರಿಸಿದ್ದಾರೆ.
ಬಿಜೆಪಿ ಯುವ ಮೋರ್ಚಾ ಸದಸ್ಯರಿಂದ ಜನೌಷಧಿ ಕೇಂದ್ರದ ಪ್ರಚಾರ
ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಿಜೆಪಿ ಯುವ ಮೋರ್ಚಾ ಸದಸ್ಯರು ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಜನೌಷಧಿ ಕೇಂದ್ರದ ಅನುಕೂಲತೆಯ ಬಗ್ಗೆ ಪ್ರಚಾರ ನಡೆಸಿ ಬಿಜೆಪಿ ಯುವ ಮೋರ್ಚಾ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ವೆಂಕಟೇಶ್ ಮಾತನಾಡಿದರು.
ಖಾಸಗಿ ಔಷಧಿ ಕೇಂದ್ರಗಳಿಗಿಂತ ನಮ್ಮ ಭಾರತೀಯ ಜನೌಷಧಿ ಕೇಂದ್ರಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಔಷಧಿಗಳು ದೊರೆಯುತ್ತವೆ. ಸಾರ್ವಜನಿಕರು ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಬಡವರಿಗೆ ಎಟಕುವ ಬೆಲೆಗಳಲ್ಲಿ ಔಷಧಿಗಳು ಲಭ್ಯವಿರುವಂತಾಗಬೇಕು. ಔಷಧಿಗಳ ಕೊರತೆಯಿಂದ ಬಡವರು ಪ್ರಾಣ ಕಳೆದುಕೊಳ್ಳುವಂತಾಗಬಾರದು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಸಾರ್ವಜನಿಕರಿಗೆ ಮಾಹಿತಿಯನ್ನು ತಲುಪಿಸುವ ಕೆಲಸ ಆಗಬೇಕಿದೆ. ವೈದ್ಯರೂ ಜನೌಷಧಿ ಕೇಂದ್ರಗಳಲ್ಲಿ ಔಷಧಿ ಕೊಳ್ಳುವಂತೆ ರೋಗಿಗಳಿಗೆ ತಿಳಿಸಬೇಕೆಂದು ಕೋರುತ್ತಿದ್ದೇವೆ ಎಂದು ಹೇಳಿದರು.
ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ದೇವರಾಜ್, ದಾಮೋದರ್, ಮಂಜುಳಮ್ಮ, ಲಕ್ಷ್ಮೀಕಾಂತ್, ನಾಗೇಶ್, ಸುರೇಶ್, ನವೀನ್, ಮುರಳಿ, ಮಧು, ಹರೀಶ್ ಹಾಜರಿದ್ದರು.
ವೇದೋನಿತ್ಯಮಧೀಯತಾಂ ವೇದ ಪಾರಾಯಣದ ಅಭಿನಂದನಾ ಸಮಾರಂಭ
ನಗರದ ನಗರೇಶ್ವರಸ್ವಾಮಿ ಕಲ್ಯಾಣ ಮಂಟಪದಲ್ಲಿ ಭಾನುವಾರ ವಿಪ್ರ ಪೌರೋಹಿತರ ಮತ್ತು ಆಗಮೀಕರ ವಿಶ್ವಸ್ಥ ಮಂಡಳಿಯ ಜಿಲ್ಲಾ ಮತ್ತು ತಾಲ್ಲೂಕು ಶಾಖೆಗಳಿಂದ ಆಯೋಜಿಸಿದ್ದ ‘ವೇದೋನಿತ್ಯಮಧೀಯತಾಂ’ ವೇದ ಪಾರಾಯಣದ ಅಭಿನಂದನಾ ಸಮಾರಂಭದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಸದಾ ಪರಮಾತ್ಮನ ಸನ್ನಿದಾನದಲ್ಲಿರುತ್ತಾ ಆದ್ಯಾತ್ಮ ಜೀವನ ನಡೆಸುವ ವಿಪ್ರರು ಸಮಾಜಕ್ಕೆ ತಮ್ಮನ್ನೇ ಅರ್ಪಣೆ ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ವೇದ ಮಂತ್ರಗಳು ಮನುಷ್ಯನ ಅಂತಃಸತ್ವವನ್ನು ಹೆಚ್ಚಿಸುತ್ತವೆ. ಅವನನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ಮಾಡುವ ಸಾಮರ್ಥ್ಯ ವೇದ ಮಂತ್ರಗಳಲ್ಲಿ ಇದೆ. ಈ ಮಂತ್ರಗಳನ್ನು ಲೋಕಕಲ್ಯಾಣಾರ್ಥವಾಗಿ ಪಠಿಸಿ ವಿಪ್ರವೃಂದ ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ. ಸಮಾಜಕ್ಕೆ ಮಾರ್ಗದರ್ಶನ ಮಾಡುವ ವಿಪ್ರ ಕುಲಕ್ಕೆ ಸರ್ಕಾರದ ವತಿಯಿಂದ ಏನೇ ಅನುಕೂಲ ಬೇಕಿದ್ದರೂ ಮುಂದೆ ನಿಂತು ನಡೆಸಿಕೊಡುತ್ತೇನೆ ಎಂದು ವಾಗ್ದಾನ ಮಾಡಿದರು.
ಖ್ಯಾತ ಜ್ಯೋತಿಷಿ ವೇ.ಬ್ರ.ಶ್ರೀ ವೆಲ್ಲಾಲ ಸತ್ಯನಾರಾಯಣ ಶಾಸ್ತ್ರಿ ಮಾತನಾಡಿ, ವೇದಗಳ ಸಂರಕ್ಷಣೆಯಾಗಬೇಕು ಹಾಗೂ ವೇದದ ಮಹತ್ವ ಎಲ್ಲರಿಗೂ ತಿಳಿಸಬೇಕೆಂಬ ಉದ್ದೇಶ ದಿಂದ ವೇದಪಾರಾಯಣ ಅಭಿಯಾನವನ್ನು ತಾಲ್ಲೂಕಿನ 29 ದೇವಸ್ಥಾನಗಳಲ್ಲಿ ಮತ್ತು 6 ಮನೆಗಳಲ್ಲಿ ನಡೆಸಿರುವುದು ಅಭಿನಂದನೀಯ. ಪ್ರತೀ ವರ್ಷವೂ ಈ ಅಭಿಯಾನವನ್ನು ಮುಂದುವರೆಸಿ. ಸಾಂಘಿಕವಾಗಿ ವಿಪ್ರಕುಲಕ್ಕೆ ಶಕ್ತಿ, ಆತ್ಮಸ್ಥೈರ್ಯ ತುಂಬಿ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುನ್ನ ವೇ.ಬ್ರ.ಶ್ರೀ ವಿರೂಪಾಕ್ಷಂ ರಾಮಮೋಹನ್ ಶಾಸ್ತ್ರಿ ಮತ್ತು ತಂಡದವರಿಂದ ಲೋಕಕಲ್ಯಾಣಾರ್ಥವಾಗಿ ರುದ್ರಹೋಮ ಮಾಡಿ ಮತ್ತು ಪೂರ್ಣಾಹುತಿಯನ್ನು ನೀಡಲಾಯಿತು. ವೇದ ಪಾರಾಯಣದಲ್ಲಿ ಪಾಲ್ಗೊಂಡಿದ್ದ ವೇದ ಪಂಡಿತರುಗಳಿಗೆ ಸನ್ಮಾನಿಸಲಾಯಿತು.
ವಿಪ್ರ ಪೌರೋಹಿತರ ಮತ್ತು ಆಗಮೀಕರ ವಿಶ್ವಸ್ಥ ಮಂಡಳಿಯ ತಾಲ್ಲೂಕು ಅಧ್ಯಕ್ಷ ವೈ.ಎನ್.ದಾಶರಥಿ, ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಶಿವಗುರುಶರ್ಮ, ಖ್ಯಾತ ಜ್ಯೋತಿಷಿ ವಿ.ಸುರೇಶ ಶಾಸ್ತ್ರಿ, ವಕೀಲ ವಿ.ಮುನಿರಾಜು, ಬಿಳಿಶಿವಾಲೆ ರವಿ, ಹಾಪ್‌ಕಾಮ್ಸ್ ಅಧ್ಯಕ್ಷ ಎ.ಎಸ್.ಚಂದ್ರೇಗೌಡ, ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎಸ್.ವೆಂಕಟೇಶಯ್ಯ, ತಾಲ್ಲೂಕು ಗೌರವಾಧ್ಯಕ್ಷ ಎ.ಎಸ್.ಶಂಕರರಾವ್, ವಿಪ್ರ ಪ್ರತಿಭಾ ಪುರಸ್ಕಾರ ಹಾಗೂ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಡಾ.ಡಿ.ಟಿ.ಸತ್ಯನಾರಾಯಣರಾವ್, ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಹಾಜರಿದ್ದರು.
ಶಿಡ್ಲಘಟ್ಟ ಸಾರ್ವಜನಿಕ ಗ್ರಂಥಾಲಯದಲ್ಲಿ ಗ್ರಂಥಾಲಯ ದಿನ ಆಚರಣೆ
ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ಗ್ರಂಥಾಲಯ ದಿನದ ಅಂಗವಾಗಿ ಡಾ.ಎಸ್.ಆರ್.ರಂಗನಾಥನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗ್ರಂಥಪಾಲಕ ಬಚ್ಚರೆಡ್ಡಿ ಮಾತನಾಡಿದರು.
ಗ್ರಂಥಾಲಯದ ಪಿತಾಮಹ ಎಂದೇ ಖ್ಯಾತರಾದ ಡಾ.ಎಸ್.ಆರ್.ರಂಗನಾಥನ್ ಗ್ರಂಥಪಾಲನೆ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಪರಿಗಣಿಸಿ ಇಂದು ಭಾರತೀಯ ಗ್ರಂಥಾಲಯ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಸಮಾಜದಲ್ಲಿರುವ ಪ್ರತಿಯೊಬ್ಬರು ಪುಸ್ತಕಗಳನ್ನು ಓದುವ ಮೂಲಕ ಜ್ಞಾನರ್ಜನೆಯನ್ನು ಹೆಚ್ಚಿಸಿಕೊಳ್ಳಬೇಕು. ಸಾರ್ವಜನಿಕ ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಪುಸ್ತಕಗಳಿವೆ. ಒಟ್ಟಾರೆ ಸುಮಾರು ಮುವ್ವತ್ತು ಸಾವಿರ ಪುಸ್ತಕಗಳಿವೆ ಪುಸ್ತಕಗಳ ಸಂಖ್ಯೆಗೆ ಅನುಗುಣವಾಗಿ ಓದುಗರು ಹೆಚ್ಚಾಗಬೇಕು ಪುಸ್ತಕಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಗ್ರಂಥಾಲಯದಲ್ಲಿ ಪ್ರತಿನಿತ್ಯ 28 ದಿನ ಪತ್ರಿಕೆಗಳು, 15ಕ್ಕೂ ಹೆಚ್ಚು ವಾರ ಮತ್ತು ಮಾಸಪತ್ರಿಕೆಗಳನ್ನು ತರಿಸುತ್ತೇವೆ ಗ್ರಂಥಾಲಯದ ಸದಸ್ಯರ ಸಂಖ್ಯೆ ಹೆಚ್ಚಾಗಬೇಕಿದೆ ನಾಗರಿಕರು ಈ ನಿಟ್ಟಿನಲ್ಲಿ ಸದಸ್ಯತ್ವವನ್ನು ಪಡೆದುಕೊಳ್ಳುವ ಮೂಲಕ ಗ್ರಂಥಾಲಯವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಗ್ರಂಥಾಲಯ ಸಹಾಯಕಿ ಬಾಂಧವ್ಯ ಹಾಗೂ ಓದುಗರು ಉಪಸ್ಥಿತರಿದ್ದರು.
ಪದ್ಮಶಾಲಿ ಸಮಾಜದ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
ನಗರದ ಉಲ್ಲೂರುಪೇಟೆ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ ಜಿಲ್ಲಾ ವ್ಯಾಪ್ತಿಯ ಪದ್ಮಶಾಲಿ ಸಮಾಜದ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ ೭೦ ಕ್ಕಿಂತಲೂ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ರಾಮಚಂದ್ರ ಮಾತನಾಡಿದರು.
ಸಾಧನೆ ಸಾಧಕನ ಸೊತ್ತು. ನಿರಂತದ ಕ್ರಿಯಾಶಿಲತೆ, ಆತ್ಮಾಭಿಮಾನ ಹಾಗೂ ದೃಢ ಸಂಕಲ್ಪದ ಕಾರ್ಯಗಳಿಂದ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ಅವರು ತಿಳಿಸಿದರು.
ಪದ್ಮಶಾಲಿ ಸಮಾಜದಿಂದ ಹತ್ತು ವರ್ಷದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದೇವೆ. ಪದ್ಮಶಾಲಿ ಸಮಾಜದ ಜನರು ಬಹಳ ಹಿಂದೆ ಉಳಿದಿದ್ದು, ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಇಂದಿನ ಸಮಾಜ ವಿದ್ಯೆ ಬಹಳ ಮುಖ್ಯವಾಗಿದ್ದು, ಎಲ್ಲರೂ ಕಷ್ಟಪಟ್ಟು ಓದಿ. ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಚಿಂತಾಮಣಿ ತಾಲ್ಲೂಕಿನ ವಿದ್ಯಾರ್ಥಿಗಳು ಮೇಲುಗೈ ಸಾದಿಸಿದ್ದು, ಶಿಡ್ಲಘಟ್ಟ ತಾಲ್ಲೂಕಿನ ಮಕ್ಕಳು ಇನ್ನು ಮುಂದೆ ಚೆನ್ನಾಗಿ ಓದಿ ಹೆಚ್ಚು ಅಂಕಗಳನ್ನು ಪಡೆದು ಶಾಲೆಗೆ, ತಂದೆ ತಾಯಿಗಳಿಗೆ ಕೀರ್ತಿ ತನ್ನಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಒಟ್ಟು ೩೬ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು.
ಪದ್ಮಶಾಲಿ ಸಮಾಜದ ಮುಖಂಡರಾದ ನಾಗರಾಜ್, ಕೇಶವ, ಅನ್ನಪೂರ್ಣಮ್ಮ, ಶ್ರೀನಿವಾಸ್ ಮೂರ್ತಿ, ಹನುಮಂತಯ್ಯ, ರಘು ಶೇಷಾದ್ರಿ ಹಾಜರಿದ್ದರು.
ದೇಶಭಕ್ತ ಕ್ರಾಂತಿವೀರ ಖುದಿರಾಮ್ ಬೋಸ್ ಪುಣ್ಯತಿಥಿ ಕಾರ್ಯಕ್ರಮ
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ದೇಶಭಕ್ತ ಕ್ರಾಂತಿವೀರ ಖುದಿರಾಮ್ ಬೋಸ್ ಪುಣ್ಯತಿಥಿಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿದ್ಯಾರ್ಥಿಗಳಿಗೆ ನೋಟ್‌ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳನ್ನು ನೀಡಿ ಟಿಪ್ಪು ಸೆಕ್ಯುಲರ್ ಸೇನೆಯ ಅಧ್ಯಕ್ಷ ಎಂ.ಮೌಲಾ ಮಾತನಾಡಿದರು.
ಸರ್ಕಾರಿ ಶಾಲೆಗಳು ಗ್ರಾಮದ ದೇಗುಲಗಳಂತೆ. ಮಕ್ಕಳ ಭವಿಷ್ಯದ ಬುನಾದಿಯಾದ ಶಾಲೆಗಳಿಗೆ ನೆರವು ನೀಡಬೇಕು ಎಂದು ಅವರು ತಿಳಿಸಿದರು.
ಪ್ರತಿಯೊಬ್ಬರಿಗೂ ಸಾಮಾಜಿಕ ಬದ್ಧತೆ ಇರಬೇಕು. ನಮ್ಮನ್ನು ಬೆಳೆಸಿದ ಸಮಾಜಕ್ಕೆ ನಾವು ಋಣಿಗಳಾಗಿರಬೇಕು. ಸಾಧ್ಯವಾದಷ್ಟೂ ಇತರರಿಗೆ ನೆರವಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಿಗೆ ಪ್ರೋತ್ಸಾಹಿಸುತ್ತಾ ಅಗತ್ಯ ನೆರವು ನೀಡುವುದು ಬಹು ಮುಖ್ಯವಾದುದು. ಮಕ್ಕಳಿಗೂ ಸಹಾಯ ಮಾಡುವ ಮನೋಭಾವವನ್ನು ತಿಳಿಸಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಹೇಳಿದರು.
ಶಿಕ್ಷಕ ಎಸ್.ಚಾಂದ್‌ಪಾಷ, ದೇಶಭಕ್ತ ಕ್ರಾಂತಿವೀರ ಖುದಿರಾಮ್ ಬೋಸ್ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಟಿಪ್ಪು ಸೆಕ್ಯುಲರ್ ಸೇನೆಯ ಉಪಾಧ್ಯಕ್ಷ ಇಂತಿಯಾಸ್, ಮಾನವ ಹಕ್ಕುಗಳ ಆಯೋಗದ ಪ್ರದೀಪ್, ಸಮೀವುಲ್ಲ, ಮುಜ್ಜು, ಶಂಕರ್, ಎಸ್‌ಡಿಎಂಸಿ ಅಧ್ಯಕ್ಷೆ ಪುಷ್ಪ ರಾಮಚಂದ್ರ, ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್, ಮುಖ್ಯಶಿಕ್ಷಕಿ ಎಂ.ವೆಂಕಟರತ್ನಮ್ಮ, ಶಿಕ್ಷಕರಾದ ಅಶೋಕ್, ಭಾರತಿ, ಸಿಬ್ಬಂದಿ ವೆಂಕಟಮ್ಮ, ಗ್ರಾಮಸ್ಥ ಮುನಿಕೃಷ್ಣಪ್ಪ ಹಾಜರಿದ್ದರು.
ಉಚಿತ ಆರೋಗ್ಯ ತಪಾಸಣಾ ಶಿಬಿರ
ನಗರದ ಸಿದ್ದಾರ್ಥನಗರದ ಬಡಾವಣೆ ಶಾಲೆಯ ಆವರಣದಲ್ಲಿ ಶನಿವಾರ ಜನಸೇವಾ ಕೇಂದ್ರ ಹಾಗೂ ಈಸ್ಟ್ ಪಾಯಿಂಟ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಬಹುಜನ ವಿದ್ಯಾರ್ಥಿ ಸಂಘದ ಸಂಪನ್ಮೂಲ ವ್ಯಕ್ತಿ ಪ್ರೊ.ಹರಿರಾಮ್ ಮಾತನಾಡಿದರು.
ನಗರ ಹಾಗೂ ಗ್ರಾಮೀಣ ಭಾಗದ ಬಡ ಜನರು ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯಲಾಗದು ಎಂಬ ಕಾರಣಕ್ಕೆ ಯುವಕರಿಂದ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಬಹಳಷ್ಟು ವಯೋವೃದ್ಧರೂ ಹಾಗೂ ಆರ್ಥಿಕವಾಗಿ ಹಿಂದುಳಿದವರು ದೂರದ ಒಳ್ಳೆಯ ಆಸ್ಪತ್ರೆಗೆ ಹೋಗಲು ಕಷ್ಟಪಡುತ್ತಿದ್ದಾರೆ. ಆಸ್ಪತ್ರೆಯ ಚಿಕಿತ್ಸೆ ವೆಚ್ಚ ಅಧಿಕವಾಗಿರುವುದರಿಂದ ಬಹುತೇಕ ಬಡವರಿಗೆ ಉತ್ತಮ ಚಿಕಿತ್ಸೆ ಪಡೆಯಲಾಗುವುದಿಲ್ಲ. ಹಾಗಾಗಿ ಜನಸೇವಾ ಕೇಂದ್ರದ ಯುವಕರು ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಶಿಬಿರದಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಈ ಸಂದರ್ಭದಲ್ಲಿ ವಕೀಲ ಮಹೇಶ್‌ದಾಸ್, ಜನಸೇವಾ ಕೇಂದ್ರದ ಪದಾಧಿಕಾರಿಗಳಾದ ಕೆ.ಮೂರ್ತಿ, ನರೇಶ್‌ಬಾಬು, ರವಿ, ರಾಜು, ರಾಮು, ಸುಂದರ್‌ರಾಜ್, ವೆಂಕಟರಾಜು ಹಾಜರಿದ್ದರು.
ಆನೂರು ಪಂಚಾಯಿತಿ ವತಿಯಿಂದ ಸ್ವಚ್ಛತೆ ಕಾರ್ಯ
ಐಕ್ಯತೆ, ಆರೋಗ್ಯ ಹಾಗೂ ಸ್ವಚ್ಛ ಪರಿಸರವನ್ನು ಉಂಟುಮಾಡುವ ಉದ್ದೇಶದಿಂದ ಆನೂರು ಗ್ರಾಮ ಪಂಚಾಯಿತಿ ವತಿಯಿಂದ ಎಲ್ಲಾ ಗ್ರಾಮಗಳಲ್ಲೂ ಗ್ರಾಮಸ್ಥರ ನೆರವಿನೊಂದಿಗೆ ಸ್ವಚ್ಛತೆ ಕಾರ್ಯವನ್ನು ಕೈಗೊಂಡಿದ್ದೇವೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣಕುಮಾರಿ ತಿಳಿಸಿದರು.
ತಾಲ್ಲೂಕಿನ ಹಿತ್ತಲಹಳ್ಳಿಯಲ್ಲಿ ಗ್ರಾಮ ಪಂಚಾಯಿತಿಯ ವತಿಯಿಂದ ಸ್ವಚ್ಛತೆ ಕಾರ್ಯವನ್ನು ನಡೆಸಿ ಅವರು ಮಾತನಾಡಿದರು.
ಹಿತ್ತಲಹಳ್ಳಿ ಗ್ರಾಮದಲ್ಲಿ ಕಳೆದ ಮೂರು ತಿಂಗಳಿನಿಂದ ಸ್ವಚ್ಛತೆ ಆಂದೋಲನವನ್ನು ಹಮ್ಮಿಕೊಂಡಿದ್ದಾರೆ. ಗ್ರಾಮದ ಯುವಕರು ಪ್ರತೀ ವಾರ ಸ್ವಚ್ಛತೆಯನ್ನು ನಡೆಸುತ್ತಾರೆ. ಪಂಚಾಯಿತಿ ವತಿಯಿಂದ ಒಂದು ತಿಂಗಳ ಕಾಲ ನಡೆಸುತ್ತಿರುವ ಸ್ವಚ್ಛತಾ ಕಾರ್ಯಕ್ಕೆ ಹಿರಿಯರು ಕಿರಿಯರು ಬೇಧವಿಲ್ಲದೆ ಜೊತೆಗೂಡಿ ಶ್ರಮದಾನ ಮಾಡುತ್ತಿದ್ದಾರೆ. ಎಲ್ಲೆಡೆ ‘ನಮ್ಮ ಗ್ರಾಮವನ್ನು ಸ್ವಚ್ಛವಾಗಿರಿಸಬೇಕು’ ಎಂಬ ಮನೋಭಾವ ಮೂಡಬೇಕು. ಈ ತಿಂಗಳ 19ನೇ ತಾರೀಕು ಬೆಂಗಳೂರಿನಿಂದ ವೀಕ್ಷಣೆಗೆ ಒಂದು ತಂಡ ಬರುತ್ತಿದ್ದಾರೆ. ಹಾಗಾಗಿ ಹಳ್ಳಿಯನ್ನು ಮಾದರಿಯಾಗಿರಿಸಿ ಎಂದು ಹೇಳಿದರು.
ಹಿತ್ತಲಹಳ್ಳಿ ಎಚ್.ಜಿ.ಗಪಾಲಗೌಡ ಮಾತನಾಡಿ, ಈ ದಿನ ಸ್ವಚ್ಛತಾ ಕೆಲಸಕ್ಕೆ ಆನೂರು ಗ್ರಾಮ ಪಂಚಾಯಿತಿ ವತಿಯಿಂದ ಪಿಡಿಒ ಮತ್ತು ಸಿಬ್ಬಂದಿ ಜೊತೆಗೂಡಿದ್ದಾರೆ. ಗ್ರಾಮದ ಹಿರಿಯರೂ ಸಹ ಯುವಕರೊಂದಿಗೆ ಕೈಜೋಡಿಸಿದ್ದಾರೆ. ಗ್ರಾಮವನ್ನು ಸ್ವಚ್ಛತೆಗೆ ಸಂಬಂಧಿಸಿದಂತೆ ಮಾದರಿ ಮಾಡಬೇಕು ಎಂಬ ಉದ್ದೇಶ ನಮ್ಮದು. ಶಾಲಾ ಆವರಣ, ಚರಂಡಿ, ಗ್ರಾಮದ ರಸ್ತೆ, ಮನೆ ಅಂಗಳ, ಸರ್ಕಾರಿ ಸ್ಥಳಗಳು ಎಲ್ಲವನ್ನೂ ಶುಚಿಯಾಗಿರಿಸಬೇಕು. ಆರೋಗ್ಯದ ದೃಷ್ಟಿಯಿಂದ ಈ ಕಾರ್ಯಕ್ರಮ ಬಹಳ ಒಳ್ಳೆಯದು. ಎಲ್ಲರೂ ಒಗ್ಗಟ್ಟಾಗಿ ಸ್ವಯಂಪ್ರೇರಣೆಯಿಂದ ದುಡಿಯುವುದರಿಂದ ಬೇಧಭಾವ ತೊಡೆಯುತ್ತದೆ. 50 ವರ್ಷಗಳ ಹಿಂದೆ ವಾರದ ಕೆಲಸ ಎಂದು ಗ್ರಾಮದಲ್ಲಿ ಸ್ವಚ್ಛತೆ ನಡೆಸುತ್ತಿದ್ದೆವು. ಪ್ರತಿ ಮನೆಯಿಂದಲೂ ಒಬ್ಬೊಬ್ಬರು ಭಾಗವಹಿಸುತ್ತಿದ್ದೆವು. ಅದು ನಿಂತಿತ್ತು. ಈಗ ಅದನ್ನು ಪುನಃ ಪ್ರಾರಂಭಿಸಿದ್ದೇವೆ ಎಂದು ಹೇಳಿದರು.
ಎಚ್.ಎಂ.ಮುನಿರಾಜು, ಎಚ್.ಸುರೇಶ್, ಎಚ್.ಬಿ.ಎನ್.ರಾಮಾಂಜಿನಪ್ಪ, ಲೋಕೇಶ್, ವೆಂಕಟೇಶ್, ಮುನಿಕೃಷ್ಣ, ರವಿಕುಮಾರ್, ದೇವರಾಜ್, ಆಂಜನೇಯ, ಎಚ್.ಪಿ.ಮುನಿರಾಜು ಹಾಜರಿದ್ದರು.
ಕ್ರೆಸೆಂಟ್ ಶಾಲೆಯಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಅಂಗವಾಗಿ ಕಾರ್ಯಕ್ರಮ
ನಗರದ ಕ್ರೆಸೆಂಟ್ ಶಾಲೆಯಲ್ಲಿ ಶುಕ್ರವಾರ ‘ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ’ ದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಜಂತುಹುಳು ನಿವಾರಣಾ ಮಾತ್ರೆಗಳನ್ನು ನೀಡಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್‌ಕುಮಾರ್ ಮಾತನಾಡಿದರು.
ಜಂತುಹುಳು, ಕೊಕ್ಕೆಹುಳು, ಲಾಡಿಹುಳು, ಮುಂತಾದವುಗಳು ಮಕ್ಕಳ ಹೊಟ್ಟೆ ಸೇರಿದಾಗ ರಕ್ತಹೀನತೆ, ಅಪೌಷ್ಠಿಕತೆ ಮುಂತಾದ ರೋಗಕ್ಕೆ ಮಕ್ಕಳು ಸುಲಭವಾಗಿ ತುತ್ತಾಗುತ್ತಾರೆ. ಇದರಿಂದಾಗಿ ಮಕ್ಕಳ ಕಲಿಕಾ ಸಾಮರ್ಥ್ಯ ಕಡಿಮೆ ಆಗುತ್ತದೆ. ಇಂತಹ ರೋಗಗಳು ಬಾರದಂತೆ ಮಕ್ಕಳು ಜಾಗ್ರತೆ ವಹಿಸಬೇಕೆಂದು ಅವರು ತಿಳಿಸಿದರು.
ಜಂತುಹುಳು ಆಗದಂತೆ ಪ್ರತಿಯೊಬ್ಬರು ಶುಚಿತ್ವ ವಹಿಸಬೇಕು, ಉತ್ತಮ ಆಹಾರ ಮತ್ತು ಶುದ್ಧವಾದ ನೀರನ್ನು ಸೇವಿಸಬೇಕು ಹಾಗೂ ಆರೋಗ್ಯ ಇಲಾಖೆ ನೀಡಿದ ಮಾತ್ರೆಗಳನ್ನು ಸೇವಿಸಬೇಕು. ಊಟ ಆದ 30 ನಿಮಿಷಗಳ ನಂತರವಷ್ಟೆ ಮಕ್ಕಳಿಗೆ ಜಂತುಹುಳು ನಿವಾರಕ ಆಲ್ಬೆಂಡೊಜೋಲ್ ಮಾತ್ರೆಯುನ್ನು ಕುಡಿಸಬೇಕು. ಮಾತ್ರೆ ಕುಡಿದ ನಂತರ ಹೆಚ್ಚು ನೀರು ಕುಡಿಯುವಂತೆ ಮಕ್ಕಳಿಗೆ ತಿಳಿಸಬೇಕು. ಮಾತ್ರೆ ಕೊಡುವಾಗ ಶಿಕ್ಷಕರು ವೈಯಕ್ತಿಕ ಜವಾಬ್ದಾರಿ ತೆಗೆದುಕೊಂಡು ನಿರ್ವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಉಚಿತವಾಗಿ ಕೊಡಮಾಡಿದ ಜಂತು ಹುಳು ನಿವಾರಣಾ ಮಾತ್ರೆಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಕ್ರೆಸೆಂಟ್ ಶಾಲೆಯ ಕಾರ್ಯದರ್ಶಿ ತಮೀಮ್ ಅನ್ಸಾರಿ, ಆರೋಗ್ಯ ಇಲಾಖೆಯ ಡಾ.ವಿಜಯ್, ಡಾ.ವೈಶಾಲಿ, ಡಾ.ಭರತ್, ಡಾ.ರಾಘವೇಂದ್ರ. ಆರೋಗ್ಯ ಮೇಲ್ವಿಚಾರಕಿಯರಾದ ಮುನಿರತ್ನಮ್ಮ, ವಿಜಯಮ್ಮ ಹಾಜರಿದ್ದರು.
ಮಹಿಳೆಯರಿಂದ ಅಪ್ಪೇಗೌಡನಹಳ್ಳಿ ಗೇಟ್‌ನ ಬಯಲಾಂಜನೇಯಸ್ವಾಮಿ ದೇವಾಲಯ ಸ್ವಚ್ಛತೆ
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗೇಟ್‌ನ ಬಯಲಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಸ್ವಸಹಾಯ ಸಂಘದ ಸದಸ್ಯರೊಂದಿಗೆ ಸ್ವಚ್ಛತೆ ಕಾರ್ಯದಲ್ಲಿ ಭಾಗಿಯಾಗಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮೇಲ್ವಿಚಾರಕಿ ಜ್ಯೋತಿ ಮಾತನಾಡಿದರು.
‘ನಾವೇ ಮಾಲಿನ್ಯ ಹೋಗಲಾಡಿಸಿದರೆ ಮತ್ತೆ ನಮಗೆ ಮಾಲಿನ್ಯವಾಗಿಸಬಾರದೆಂಬ ಎಚ್ಚರಿಕೆ ಮೂಡುತ್ತದೆ’ ಎಂಬ ಉದ್ದೇಶದಿಂದ ನಮ್ಮ ಗ್ರಾಮದ ಶ್ರದ್ಧಾ ಕೇಂದ್ರವನ್ನು ಸಾಮೂಹಿಕವಾಗಿ ಸ್ವಚ್ಛಗೊಳಿಸುವ ಸಂಪ್ರದಾಯವನ್ನು ಪ್ರಾರಂಭಿಸಿದ್ದೇವೆ ಎಂದು ಅವರು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭಾರತದ ಸ್ವಚ್ಛ ಧಾರ್ಮಿಕ ಕ್ಷೇತ್ರ ಎಂಬ ಪ್ರಶಸ್ತಿ ಬಂದಿದೆ. ನಾಡಿನ ಎಲ್ಲ ದೇಗುಲಗಳೂ ಸ್ಚಚ್ಛವಾಗಿರಬೇಕು ಎಂಬ ಸದುದ್ದೇಶದಿಂದ ವರ್ಷಕ್ಕೆ ಎರಡು ಬಾರಿ ಎಲ್ಲಾ ಗ್ರಾಮದ ಶ್ರದ್ಧಾಕೇಂದ್ರಗಳಾದ ದೇವಸ್ಥಾನಗಳನ್ನು ಸ್ವಚ್ಛತೆ ಕಾರ್ಯ ಮಾಡಲು ಧರ್ಮಸ್ಥಳದ ಧರ್ಮದರ್ಶಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಕರೆ ನೀಡಿದ್ದಾರೆ. ಅವರ ಆದರ್ಶ ಮತ್ತು ಸ್ಫೂರ್ತಿಯನ್ನು ಗಮನದಲ್ಲಿರಿಸಿ ಸ್ವಚ್ಛತೆಯನ್ನು ನಡೆಸಿದ್ದೇವೆ. ಸ್ವಚ್ಛ ಮಾಡಿದ ನಂತರ ಮಹಿಳೆಯರು ರಂಗೋಲಿಯನ್ನು ಹಾಕಿ ಇನ್ನಷ್ಟು ಸುಂದರಗೊಳಿಸುವರು ಎಂದು ಅವರು ಹೇಳಿದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸೇವಾ ಪ್ರತಿನಿಧಿ ಲಕ್ಷ್ಮಮ್ಮ, ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಮ, ಸದಸ್ಯರಾದ ಜಾನಕಮ್ಮ, ಪಾರ್ವತಮ್ಮ, ಮಂಜುಳ, ಸುವರ್ಣಮ್ಮ, ಮುನಿಲಕ್ಷ್ಮಮ್ಮ, ದೇವಮ್ಮ, ಮುನಿರತ್ನಮ್ಮ, ನೀಲಮ್ಮ, ವೆಂಕಟಮ್ಮ ಹಾಜರಿದ್ದರು.
ಅಪಘಾತಕ್ಕೀಡಾದ ವ್ಯಕ್ತಿಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ರೆಡ್‌ಕ್ರಾಸ್ ಕಾರ್ಯದರ್ಶಿ
ತಾಲ್ಲೂಕಿನ ಎಚ್.ಕ್ರಾಸ್ ಬಳಿಯ ಕರಿಯನಪುರದ ಬಳಿ ಶುಕ್ರವಾರ ಅಪಘಾತಕ್ಕೀಡಾಗಿ ರಸ್ತೆ ಬದಿ ಬಿದ್ದಿದ್ದ ಗಾಯಾಳುವನ್ನು ರೆಡ್‌ಕ್ರಾಸ್ ಕಾರ್ಯದರ್ಶಿ ಮತ್ತು ಸಿಬ್ಬಂದಿ ರಕ್ಷಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ರೆಡ್‌ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್, ಸಾರ್ವಜನಿಕ ಸಂಪರ್ಕಾಧಿಕಾರಿ ಭರತ್‌ಗೌಡ ಸಂಸ್ಥೆಯ ವಾಹನದಲ್ಲಿ ಚಿಂತಾಮಣಿಯಿಂದ ವಾಪಸಾಗುವಾಗ ಕರಿಯನಪುರದ ಬಳಿ ಅಪಘಾತಕ್ಕೀಡಾಗಿ ರಸ್ತೆ ಬದಿ ಬಿದ್ದಿದ್ದ ಮಂಜುನಾಥ್ ಎಂಬುವವರನ್ನು ಕಂಡಿದ್ದಾರೆ. ತಕ್ಷಣ ವಾಹನದಲ್ಲಿ ಹತ್ತಿಸಿಕೊಂಡು ನಂದಗುಡಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಅವರ ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದಾರೆ.
‘ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮಂಜುನಾಥ್ ಅವರಿಗೆ ಯಾವುದೋ ವಾಹನ ಡಿಕ್ಕಿ ಹೊಡೆದು ಹೊರಟು ಹೋಗಿದೆ. ತಲೆಗೆ ತೀವ್ರ ಪೆಟ್ಟಾಗಿ ರಸ್ತೆ ಬದಿ ಬಿದ್ದಿದ್ದ ಅವರನ್ನು ಕೆಲವು ಜನರು ನೋಡುತ್ತಾ ನಿಂತಿದ್ದರು. ನಾವು ಕಂಡು ಅವರನ್ನು ಕರೆದೊಯ್ದು ಚಿಕಿತ್ಸೆ ಕೊಡಿಸಿದೆವು. ಅವರ ಸಂಬಂಧಿಕರು ಬಂದ ಮೇಲೆ ಹೆಚ್ಚಿನ ಚಿಕಿತ್ಸೆಗೆ ನಿಮ್ಯಾನ್ಸ್‌ಗೆ ಕಳುಹಿಸುವುದಾಗಿ ವೈದ್ಯರು ತಿಳಿಸಿದರು. ನಮ್ಮೊಂದಿಗೆ ಇದ್ದ ಚಾಲಕ ಖಲಂದರ್ ಕೂಡ ಸಹಕಾರ ನೀಡಿದರು’ ಎಂದು ರೆಡ್‌ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಗುರುರಾಜರಾವ್ ತಿಳಿಸಿದರು.
ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೈಜ ಫಲಾನುಭವಿಗಳಿಗೆ ನೆರವಾಗಲು ಪಿಂಚಣಿ ಅದಾಲತ್
ನಗರದ ಸ್ತ್ರೀಶಕ್ತಿ ಭವನದಲ್ಲಿ ಗುರುವಾರ ಕಸಬಾ ಹೋಬಳಿಯ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಗ್ರೇಡ್ 2 ತಹಶೀಲ್ದಾರ್ ಲಕ್ಷ್ಮೀಕಾಂತಮ್ಮ ಮಾತನಾಡಿ, ಸಾಮಾಜಿಕ ಭದ್ರತಾ ಯೋಜನೆಗಳನ್ನು ನೈಜ ಫಲಾನುಭವಿಗಳಿಗೆ ದೊರಕಿಸಿ ಕೊಡಲು ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ವೇತನ, ವಿಧವಾ ವೇತನ, ಅಂಗವಿಕಲರ ವೇತನಗಳನ್ನು ಪಡೆಯಲು ಅರ್ಹ ಫಲಾನುಭವಿಗಳು ಮಧ್ಯವರ್ತಿಗಳ ಮೊರೆ ಹೋಗಬಾರದು. ಪಿಂಚಣಿ ಅದಾಲತ್‌ನಲ್ಲಿ ದಾಖಲೆಗಳನ್ನು ಪರಿಶೀಲಿಸಿ ನೆರವಾಗಲು ಅಧಿಕಾರ ವರ್ಗವಿರುತ್ತದೆ. ಈಗ ಆಧಾರ್ ಕಾರ್ಡ್ ಕಡ್ಡಾಯವಿರುವುದರಿಂದ ತಪ್ಪಾಗಿದ್ದರೆ ಸರಿಪಡಿಸಿಕೊಳ್ಳಿ ಎಂದು ಹೇಳಿದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೇಶವರೆಡ್ಡಿ ಮಾತನಾಡಿ, ಪಿಂಚಣಿಗೆ ಸಂಬಂಧಿಸಿದಂತೆ ಯಾವುದೇ ತೊಂದರೆಯಿದ್ದರೂ ಮಧ್ಯಾಹ್ನ ಮೂರು ಗಂಟೆಯ ನಂತರ ಸಂಪರ್ಕಿಸಿ. ಅಂಗವಿಕಲರು ಮತ್ತು ವೃದ್ಧರು ಸಂಬಂಧಿಕರನ್ನು ಕಳುಹಿಸಿಕೊಡಿ. ನಿಮಗೆ ಸೇವೆ ನೀಡಲು ಅಧಿಕಾರಿಗಳು ಸಿದ್ಧವಿರುತ್ತಾರೆ. ಸಾಮಾಜಿಕ ಭದ್ರತಾ ಯೋಜನೆಯಡಿ ಅರ್ಹತೆಯುಳ್ಳವರು ಈ ಯೋಜನೆಯ ಲಾಭ ಪಡೆಯಿರಿ. ನಿಮಗೆ ತಿಳಿದಿದ್ದವರಿಗೂ ಈ ಯೋಜನೆಯ ಬಗ್ಗೆ ತಿಳಿಸಿ ಕಚೇರಿಗೆ ಕಳುಹಿಸಿಕೊಡಬೇಕೆಂದು ಹೇಳಿದರು.
ಶಿರಸ್ತೆದಾರ ಮಂಜುನಾಥ, ಗ್ರಾಮ ಲೆಕ್ಕಿಗರಾದ ನಾಗೇಂದ್ರ, ನಾಗರಾಜ್ ಹಾಜರಿದ್ದರು.
ಗ್ರಂಥಾಲಯ ಮತ್ತು ಪ್ರಯೋಗಾಲಯ ಉದ್ಘಾಟನೆ
ತಾಲ್ಲೂಕಿನ ಭಕ್ತರಹಳ್ಳಿ ಬಿ.ಎಂ.ವಿ.ಎಜುಕೇಷನ್ ಟ್ರಸ್ಟ್‌ನ ಶಾಲಾ ಆವರಣದಲ್ಲಿ ಬುಧವಾರ ಕನ್ಸುಲೇಟ್ ಜನರಲ್ ಆಫ್ ಜರ್ಮನಿಯವರ ಆರ್ಥಿಕ ನೆರವಿನಿಂದ ನಿರ್ಮಾಣವಾಗಿರುವ ಗ್ರಂಥಾಲಯ ಮತ್ತು ಪ್ರಯೋಗಾಲಯವನ್ನು ಉದ್ಘಾಟನೆ ಮಾಡಿ ಕನ್ಸುಲ್ ಜನರಲ್ ಆಫ್ ಜರ್ಮನಿ, ಮಾರ್ಗಿಟ್ ಹೆಲ್‌ವಿಗ್ ಬೊಟ್ಟೆ ಮಾತನಾಡಿದರು.
ಪುಸ್ತಕ ಓದುವುದು ಮತ್ತು ವೈಜ್ಞಾನಿಕ ಪ್ರಯೋಗಗಳ ಮೂಲಕ ಮಕ್ಕಳ ಮನೋವಿಕಾಸವಾಗಬೇಕೆಂಬುದು ನಮ್ಮ ಆಶಯವಾಗಿದೆ ಎಂದು ಅವರು ತಿಳಿಸಿದರು.
ಭಾರತದ ಮೇಧಾವಿ ಎಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ಅವರ ಹೆಸರಿನಿಂದ ಗ್ರಾಮೀಣ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಮತ್ತು ಜೀವನಾದರ್ಶಗಳನ್ನು ಕಲಿಸುವ ಈ ಶಾಲೆಯ ಮಕ್ಕಳ ಶಿಸ್ತನ್ನು ಕಂಡು ಖುಷಿಯಾಯಿತು. ಈ ಹಳ್ಳಿಗೂ ಜರ್ಮನಿಗೂ ನಂಟಿದೆ ಎಂಬುದು ತಿಳಿದು ಸಂತಸವಾಯಿತು. ತೋಟಗಾರಿಕಾ ತಜ್ಞ ಜರ್ಮನ್ ದೇಶದ ಕೃಂಬೀಗಲ್ ಇಲ್ಲಿ ಸುಂದರವಾದ ಕಂಬಗಳನ್ನು ನಿರ್ಮಿಸಿರುವುದು ತಿಳಿಯಿತು. ಗ್ರಂಥಾಲಯ ಮತ್ತು ಪ್ರಯೋಗಾಲಯದ ಮೂಲಕ ಈ ನಂಟನ್ನು ಮುಂದುವರೆಸಿದ್ದೇವೆ ಎಂದರು.
ಹಳ್ಳಿಯಲ್ಲಿ ಓದಿ ನಗರವನ್ನು ಸೇರುವವರು ಮತ್ತೆ ಹಳ್ಳಿಗೆ ಹಿಂದಿರುಗಿ ತಾವು ಓದಿದ ಶಾಲೆಗೆ ನೆರವು ನೀಡುತ್ತಿರುವುದನ್ನು ಕಂಡು ಸಂತಸವಾಗುತ್ತಿದೆ. ಮಕ್ಕಳಲ್ಲಿ ಈ ರೀತಿಯ ಮೌಲ್ಯಗಳನ್ನು ಬಿತ್ತುವುದೇ ನಿಜವಾದ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮುಂದುವರೆದಂತೆಲ್ಲಾ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದೆ. ಆದರೂ ಪುಸ್ತಕ ಓದಿಗೆ ಸರಿಸಾಟಿಯಿಲ್ಲ. ಗ್ರಂಥಾಲಯ ಮತ್ತು ವಿಜ್ಞಾನದ ಪ್ರಯೋಗಾಲಯಗಳ ಸದ್ಭಳಕೆಯಾಗಲಿ ಎಂದು ನುಡಿದರು.
ಬರೋಡದ ರಾಜಮನೆತನದ ರಾಯಲ್ ಹೆರಿಟೇಜ್ ಗ್ರೀನ್ ಮಿಷನ್ ಮುಖ್ಯಸ್ಥ ಜೀತೇಂದ್ರಸಿಂಗ್ ಜಿ ಗಾಯಕ್‌ವಾಡ್ ಮಾತನಾಡಿ, ಹಿಂದಿನಿಂದಲೂ ಬರೋಡ ರಾಜ ಮನೆತನ ಶಾಲೆಗಳ ಸ್ಥಾಪನೆ, ಗ್ರಂಥಾಲಯಗಳ ಸ್ಥಾಪನೆ ಮತ್ತು ಗಿಡಬೆಳೆಸಲು ಉತ್ತೇಜನ ನೀಡುತ್ತಾ ಬಂದಿದೆ. ಬರೋಡ ಸಂಸ್ಥಾನಕ್ಕೂ ಮೈಸೂರಿಗೂ ಅವಿನಾಭಾವ ಸಂಬಂಧವಿದೆ. ಬರೋಡದಲ್ಲಿ ಮೈಸೂರು ಜಯಚಾಮರಾಜೇಂದ್ರ ಮಹಾರಾಜರ ಹೆಸರಿನ ರಸ್ತೆಯಿದ್ದರೆ, ಮೈಸೂರಿನಲ್ಲಿ ಸಯ್ಯಾಜಿರಾವ್ ಗಾಯಕವಾಡ್ ಮಹಾರಾಜರ ಹೆಸರಿನ ರಸ್ತೆಯಿದೆ. ಈ ಬಾಂಧವ್ಯ ಭಕ್ತರಹಳ್ಳಿಗೂ ವಿಸ್ತರಿಸಿದೆ ಎಂದು ಹೇಳಿದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿನ ಮಕ್ಕಳನ್ನು ಪ್ರಜ್ಞಾವಂತರನ್ನಾಗಿ ಮಾಡುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾಗಿದೆ. ಬಿ.ಎಂ.ವಿ. ಶಾಲೆಯನ್ನು ಹಿರಿಯರು ಸಾಮಾಜಿಕ ಕಳಕಳಿಯಿಂದ ಪ್ರಾರಂಭಿಸಿದ್ದನ್ನು ಅವರ ಮುಂದಿನ ತಲೆಮಾರು ಅದೇ ಬದ್ಧತೆಯಿಂದ ಬೆಳೆಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬರೋಡದ ರಾಜಮನೆತನದ ಜೀತೇಂದ್ರಸಿಂಗ್ ಜಿ ಗಾಯಕ್‌ವಾಡ್ ರವಿವರ್ಮ ಚಿತ್ರಿಸಿರುವ ಜಯಚಾಮರಾಜೇಂದ್ರ ಮಹಾರಾಜರ ಮತ್ತು ಸಯ್ಯಾಜಿರಾವ್ ಗಾಯಕವಾಡ್ ಮಹಾರಾಜರ ಚಿತ್ರವನ್ನು ಮತ್ತು ಉತ್ತಮ ಅಂಕ ಪಡೆದ ಮಕ್ಕಳಿಗೆ ಪ್ರಶಸ್ತಿ ನೀಡಲು ಸಹಾಯಧನ ಹಾಗೂ ಬರೋಡ ಸಂಸ್ಥಾನದ ಕುರಿತ ಪುಸ್ತಕವನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರೆಲ್ಲಾ ಶಾಲೆಯ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟರು. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಅವರ ಭಾವಚಿತ್ರವನ್ನು ಅನಾವರಣಗೊಳಿಸಲಾಯಿತು. ನಾರಾಯಣ ಮಾನೆ ಅವರು ಶಾಲೆಗೆ ಹತ್ತು ಕಂಪ್ಯೂಟರ್‌ಗಳನ್ನು ನೀಡಿದರು. ಶಾಲೆಯ ವಿದ್ಯಾರ್ಥಿಗಳ ರೋಟರಾಕ್ಟ್ ಕ್ಲಬ್‌ನ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನಡೆಯಿತು.
ಬಿ.ಎಂ.ವಿ.ಸಂಸ್ಥೆಯ ಅಧ್ಯಕ್ಷ ಬಿ.ವಿ.ಮುನೇಗೌಡ, ಕಾರ್ಯದರ್ಶಿ ಎಲ್. ಕಾಳಪ್ಪ, ರಾಣೀ ಸಾಹೇಬ್ ದುರ್ಗಾರಾಜೇ ಗಾಯಕ್ ವಾಡ್, ರೋಟರಿ ಬೆಂಗಳೂರು ಸೆಂಟೀನಿಯಲ್ ಅಧ್ಯಕ್ಷೆ ನಂದಿನಿ ಜಗನ್ನಾಥ್, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಎಚ್.ಪಿ.ಮೋಹನ್, ಸ್ಟೈಲ್ ಫೌಂಡೇಷನ್‌ನ ಸಿ.ಎಂ.ಮುನೇಗೌಡ, ಬಿ.ಎಂ.ವಿ.ಸಂಸ್ಥೆಯ ಟ್ರಸ್ಟಿಗಳಾದ ಎಸ್.ನಾರಾಯಣಸ್ವಾಮಿ, ವೆಂಕಟಮೂರ್ತಿ, ಪುಟ್ಟಮೂರ್ತಿ, ನಂಜುಡಾರಾಧ್ಯ, ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬೈರೇಗೌಡ, ಸತೀಶ್ ಮೋಕ್ಷಗುಂಡಂ, ಡಾ.ಹಿತ್ತಲಮನಿ, ಜಯರಾಮೇಗೌಡ, ನಾರಾಯಣ್‌ಮಾನೆ ಹಾಜರಿದ್ದರು.

