ಕಳೆದ ಹತ್ತು ವರ್ಷಗಳಿಂದ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಸಂಘಟನೆಯ ಹೊಣೆ ಹೊತ್ತು ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಿದ ಬಿ.ಎನ್.ರವಿಕುಮಾರ್ ಕ್ಷೇತ್ರದ ಯುವಕರಿಗೆ ಮಾದರಿಯಾಗಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಹೇಳಿದರು.
ಜೆಡಿಎಸ್ ಮುಖಂಡ ಬಿ.ಎನ್.ರವಿಕುಮಾರ್‌ರ ೪೯ ನೇ ಹುಟ್ಟುಹಬ್ಬದ ಅಂಗವಾಗಿ ಬುಧವಾರ ನಗರದ ಆಶಾಕಿರಣ ಅಂಧ ಮಕ್ಕಳ ಶಾಲೆಯಲ್ಲಿ ಮಕ್ಕಳಿಂದ ಕೇಕ್ ಕತ್ತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಿ.ಎನ್.ರವಿಕುಮಾರ್ ಜನಾನುರಾಗಿ ನಾಯಕರಾಗಿದ್ದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೇವಲ ೯ ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಸೋಲನುಭವಿಸಬೇಕಾಯಿತು. ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಮುಖಂಡರು ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಮೂಲಕ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡುವ ಪಣ ತೊಡಬೇಕು ಎಂದರು.
ಇದೇ ಸಂದರ್ಭದಲ್ಲಿ ನಗರದ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಜೆಡಿಎಸ್ ಕಾರ್ಯಕರ್ತರಿಂದ ಬ್ರೆಡ್, ಹಣ್ಣು ಹಂಪಲು ವಿತರಿಸಲಾಯಿತು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಡಿ.ಬಿ.ವೆಂಕಟೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಉಪಾಧ್ಯಕ್ಷ ಮುನಿಯಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಶಿವಾರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಎಂ.ಗೋಪಾಲ್, ಮುಖಂಡರಾದ ಹುಜಗೂರು ರಾಮಯ್ಯ, ತಾದೂರು ರಘು ಹಾಜರಿದ್ದರು.
ಬಿ.ಎನ್.ರವಿಕುಮಾರ್ ಅವರ ಹುಟ್ಟು ಹಬ್ಬದ ಅಂಗವಾಗಿ ಬ್ರೆಡ್, ಹಣ್ಣು ಹಂಪಲು ವಿತರಣೆ
ಸಿ.ಆರ್.ಸಿ. ವ್ಯಾಪ್ತಿಯ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟನೆ
ತಾಲ್ಲೂಕಿನ ತುಮ್ಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಂಗಳವಾರ ನಡೆದ ತುಮ್ಮನಹಳ್ಳಿ ಸಿ.ಆರ್.ಸಿ. ವ್ಯಾಪ್ತಿಯ ಶಾಲೆಗಳ ಪ್ರತಿಭಾ ಕಾರಂಜಿ ಉದ್ಘಾಟಿಸಿ ತುಮ್ಮನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ವಿಜಯಮ್ಮ ಕದಿರಪ್ಪ ಮಾತನಾಡಿದರು.
ಮಕ್ಕಳ ಸರ್ವತೋಮುಖ ಪ್ರಗತಿಗೆ ಪ್ರತಿಭಾಕಾರಂಜಿ ಕಾರ್ಯಕ್ರಮ ಉತ್ತಮ ವೇದಿಕೆ. ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಅವರು ತಿಳಿಸಿದರು.
ಹಿಂಜರಿಕೆಯನ್ನು ಬಿಟ್ಟು ಮಕ್ಕಳು ತಮಗೆ ಆಸಕ್ತಿಯಿರುವ ಸ್ಪರ್ಧೆಗಳಲ್ಲಿ ಭಾಗವಹಿಸಿ. ಗೆಲುವು ಸೋಲನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡಿ. ಭಾಗವಹಿಸುವಿಕೆ ಮುಖ್ಯ ಎಂದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸುರೇಂದ್ರಪ್ಪ, ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ ಸ್ವಾಮಿ, ಗ್ರಾಮದ ರಮೇಶ್, ಬಿಆರ್‌ಪಿ ತ್ಯಾಗರಾಜ, ನೇತ್ರ, ಸಿಆರ್‌ಪಿ ಲಕ್ಷ್ಮಣ ರೆಡ್ಡಿ, ನರಸಿಂಹರಾಜು, ಪ್ರಕಾಶ್, ವೀಣಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ. ಮುನಿರಾಜು ಹಾಜರಿದ್ದರು.
ಮಕ್ಕಳಿಗೆ ಉಚಿತ ಸ್ಕೇಟಿಂಗ್ ವಿತರಣೆ ಕಾರ್ಯಕ್ರಮ
ನಗರದ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ಸಂಜೆ ಚಿಕ್ಕಬಳ್ಳಾಪುರ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ನಡೆಸಿದ ಮಕ್ಕಳಿಗೆ ಉಚಿತ ಸ್ಕೇಟಿಂಗ್ ವಿತರಣೆ ಕಾರ್ಯಕ್ರಮದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಸಿದ್ದರಾಜು ಮಾತನಾಡಿದರು.
ಕ್ರೀಡಾ ಚಟುವಟಿಕೆಗಳು ಅಗತ್ಯವಾಗಿದ್ದು ಮಕ್ಕಳನ್ನು ಕೇವಲ ಪುಸ್ತಕಗಳಿಗೆ ಸೀಮಿತಗೊಳಿಸದೇ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಪೋಷಕರು ಪ್ರೋತ್ಸಾಹಿಸಬೇಕು ಎಂದು ಅವರು ತಿಳಿಸಿದರು.
ಮಕ್ಕಳ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆಗಳು ಹೆಚ್ಚು ಸಹಕಾರಿಯಾಗಿದ್ದು ಪೋಷಕರೂ ಹಾಗೂ ಶಾಲಾ ಆಡಳಿತ ಮಂಡಳಿಯವರು ಮಕ್ಕಳಲ್ಲಿ ಕ್ರೀಡಾ ಆಸಕ್ತಿ ಬೆಳಸಬೇಕು ಎಂದರು.
ಗ್ರಾಮಾಂತರ ಠಾಣೆ ಪಿಎಸ್ಸೈ ವಿಜಯ್‌ರೆಡ್ಡಿ ಮಾತನಾಡಿ, ಮಕ್ಕಳು ಕೇವಲ ಓದುತ್ತಾ ಕಾಲ ಕಳೆದರಷ್ಟೇ ಸಾಲದು ಬದಲಿಗೆ ದೈಹಿಕವಾಗಿ ಕೂಡ ಶಕ್ತರಾಗಿರಬೇಕು. ಕ್ರೀಡೆಗಳಲ್ಲಿ ಭಾಗವಹಿಸಿದರೆ ಓದಲು ಏಕಾಗ್ರತೆಯಿರುವುದಿಲ್ಲ ಎಂಬ ಪೋಷಕರ ಭಾವನೆ ಸರಿಯಲ್ಲ. ಪಾಠದ ಜೊತೆಗೆ ಆಟವಿದ್ದರೆ ಮಾತ್ರ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಸಾಧ್ಯ ಎಂದರು.
ಚಿಕ್ಕಬಳ್ಳಾಪುರ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಜಬೀಉಲ್ಲಾ ಮಾತನಾಡಿ, ನಗರ ಪ್ರದೇಶಗಳನ್ನು ಹೊರತುಪಡಿಸಿ ಸಣ್ಣ ಪುಟ್ಟ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಮಕ್ಕಳ ಕ್ರೀಡಾಸಕ್ತಿಗೆ ಬೇಕಾದ ಪ್ರೋತ್ಸಾಹ ಸಿಗದ ಕಾರಣ ಅವರು ಕ್ರೀಡೆಗಳಲ್ಲಿ ಗುರುತಿಸಿಕೊಳ್ಳಲು ಆಗುತ್ತಿಲ್ಲ. ನಗರದ ನೆಹರೂ ಕ್ರೀಡಾಂಗಣದಲ್ಲಿ ಸುಮಾರು ೫೦ ಕ್ಕೂ ಹೆಚ್ಚು ಮಕ್ಕಳು ಸ್ಕೇಟಿಂಗ್ ಅಭ್ಯಾಸ ಮಾಡುತ್ತಾರಾದರೂ ಅವರಿಗೆ ಅಗತ್ಯವಿರುವ ಸವಲತ್ತುಗಳು ಇಲ್ಲ. ಕ್ರೀಡಾ ಮತ್ತು ಯುವಜನೆ ಸೇವಾ ಇಲಾಖೆ ಗ್ರಾಮೀಣ ಭಾಗದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಅಗತ್ಯ ಯೋಜೆನಗಳನ್ನು ರೂಪಿಸಿದಲ್ಲಿ ಗ್ರಾಮೀಣ ಭಾಗದ ಬಹುತೇಕ ಮಕ್ಕಳು ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ಹೆಸರು ಮಾಡುತ್ತಾರೆ ಎಂದರು.
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ಮಕ್ಕಳಿಗೆ ಸ್ಕೇಟಿಂಗ್ ಸಲಕರಣೆಗಳನ್ನು ಉಚಿತವಾಗಿ ವಿತರಿಸಿದರು.
ತಾಲ್ಲೂಕು ಪಂಚಾಯಿತಿ ಸದಸ್ಯೆ ಪಂಕಜಾನಿರಂಜನ್, ನೆಹರೂ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಿರಂಜನ್, ಎಸ್.ವಿ.ನಾಗರಾಜ್‌ರಾವ್, ಸಾಧಿಕ್, ಟಿ.ಟಿ.ನರಸಿಂಹಪ್ಪ, ಶಿವಪ್ಪ, ಕ್ರೀಡಾಪಟು ನಾರಾಯಣಸ್ವಾಮಿ, ಮಂಜುನಾಥ್, ಕ್ರೀಡಾಂಗಣದ ವ್ಯವಸ್ಥಾಪಕ ಶ್ರೀನಿವಾಸ್ ಹಾಜರಿದ್ದರು.
ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಚಾಲನೆ
ಪ್ರತಿ ಮಕ್ಕಳಲ್ಲೂ ವಿಶೇಷ ಪ್ರತಿಭೆಯಿರುತ್ತದೆ. ಅದಕ್ಕಾಗಿ ಮಕ್ಕಳಿಗೆ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುವ ನಿಟ್ಟಿನಿಂದ ಪ್ರತಿಭಾ ಕಾರಂಜಿಯನ್ನು ನಡೆಸಲಾಗುತ್ತದೆ ಎಂದು ಶಿಕ್ಷಣ ಸಂಯೋಜಕ ಭಾಸ್ಕರಗೌಡ ತಿಳಿಸಿದರು.
ನಗರದ ಶ್ರೀಗರುಡಾದ್ರಿ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ನಡೆದ ನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲ್ಲೂಕಿನಾದ್ಯಂತ 20 ಕ್ಲಸ್ಟರ್‌ಗಳಾಗಿ ವಿಂಗಡಿಸಲಾಗಿದೆ. ನಗರ ಕ್ಲಸ್ಟರ್‌ನ ಪ್ರತಿಭಾ ಕಾರಂಜಿಯಲ್ಲಿ 36 ಪ್ರಾಥಮಿಕ ಶಾಲೆಗಳ ಮಕ್ಕಳು ಭಾಗವಹಿಸಿದ್ದಾರೆ. ವೈಯಕ್ತಿಕ ವಿಭಾಗದಲ್ಲಿ 10 ಸ್ಪರ್ಧೆಗಳು, ಸಾಮೂಹಿಕ ವಿಭಾಗದಲ್ಲಿ 5 ಸ್ಪರ್ಧೆಗಳನ್ನು ನಡೆಸಲಾಗುತ್ತಿದ್ದು, ವಿಜೇತರು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗುತ್ತಾರೆ ಎಂದು ಹೇಳಿದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಾಜು, ಗುಚ್ಛ ಸಂಪನ್ಮೂಲ ವ್ಯಕ್ತಿಗಳಾದ ಸಿ.ಕೆ.ಶ್ರೀನಿವಾಸರೆಡ್ಡಿ, ಸಿ.ಬಿ.ಪ್ರಕಾಶ್, ನರಸಿಂಹರಾಜು, ಸುರೇಶ್, ಜನಾರ್ಧನ, ಶ್ರೀಗರುಡಾದ್ರಿ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕಿ ಕಾವ್ಯಶ್ರೀ, ಶಿಕ್ಷಕರಾದ ವಿ.ಕೃಷ್ಣ, ಕೆ.ಮುನಿಯಪ್ಪ ಹಾಜರಿದ್ದರು.
ನಿವೃತ್ತಿಯಾದ ಸರಕಾರಿ ನೌಕರರ ಮೇಲೆಯೂ ಭ್ರಷ್ಟಾಚಾರದ ಪ್ರಕರಣವನ್ನು ದಾಖಲಿಸಿ
ನಿವೃತ್ತಿಯಾದ ಸರಕಾರಿ ನೌಕರರ ಮೇಲೆಯೂ ಭ್ರಷ್ಟಾಚಾರದ ಪ್ರಕರಣವನ್ನು ದಾಖಲಿಸಿ, ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುವ ಅಧಿಕಾರ ಎಸಿಬಿ ಪೊಲೀಸರಿಗೆ ಇದೆ ಎಂದು ಜಿಲ್ಲಾ ಎಸಿಬಿ ಡಿವೈಎಸ್ಪಿ ಬಿ.ಪಿ.ಪ್ರಸಾದ್ ತಿಳಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಎಸಿಬಿ ಪೊಲೀಸರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಲಂಚವನ್ನು ಪಡೆಯುವುದು ಕಾನೂನು ಪ್ರಕಾರ ಎಷ್ಟು ತಪ್ಪೋ ಲಂಚವನ್ನು ಕೊಡುವುದೂ ಸಹ ಅಷ್ಟೆ ತಪ್ಪು. ಕೆಲಸವನ್ನು ನಿಗದಿತ ಅವಧಿಯಲ್ಲಿ ಮಾಡದೆ ಉದ್ದೇಶಪೂರ್ವಕವಾಗಿ ವಿಳಂಬ ಮಾಡಬೇಡಿ ಎಂದು ಹೇಳಿದರು.
ಜಿಲ್ಲೆಯ ಬೇರೆ ತಾಲ್ಲೂಕುಗಳಿಗೆ ಹೋಲಿಸಿದರೆ ಶಿಡ್ಲಘಟ್ಟ ತಾಲ್ಲೂಕಿನಿಂದ ಕಡಿಮೆ ದೂರುಗಳು ಸಲ್ಲಿಕೆ ಆಗುತ್ತಿವೆ. ಆದರೂ ಕಂದಾಯ ಇಲಾಖೆಗೆ ಸಂಬಂದಿಸಿದಂತೆ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರ ವಿರುದ್ಧ ಸಾಕಷ್ಟು ದೂರುಗಳು ಬರುತ್ತಿವೆ. ಹಾಗೆಯೆ ಗ್ರಾಮ ಪಂಚಾಯಿತಿಗಳ ಪಿಡಿಒಗಳ ಮೇಲೆ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು ಈ ಬಗ್ಗೆ ಸಂಬಂದಿಸಿದವರು ಎಚ್ಚೆತ್ತು ಕೆಲಸ ಮಾಡಿದರೆ ಒಳ್ಳೆಯದು ಎಂದು ಹೇಳಿದರು.
ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ದೊಡ್ಡದಾಸರಹಳ್ಳಿಯ ನಾರಾಯಣಪ್ಪ ಎನ್ನುವವರು ದೂರು ನೀಡಿದರು.
ಕಾರ್ಯನಿರ್ವಾಕ ಅಧಿಕಾರಿ ಎಂ.ವೆಂಕಟೇಶ್, ಪೌರಾಯುಕ್ತ ಜಿ.ಎನ್.ಚಲಪತಿ, ಎಸಿಬಿ ಇಲಾಖೆ ಪ್ರಥಮ ದರ್ಜೆ ಗುಮಾಸ್ತ ರವಿಶಂಕರ್, ತಾಲ್ಲೂಕು ಮಟ್ಟದ ಎಲ್ಲ ಅಧಿಕಾರಿಗಳು ಹಾಜರಿದ್ದರು.
ಎನ್.ಎಸ್.ಎಸ್ ಉತ್ತಮ ಸ್ವಯಂ ಸೇವಕ ಪ್ರಶಸ್ತಿ
ಬೆಂಗಳೂರು ವಿಶ್ವವಿದ್ಯಾಲಯದಿಂದ ರಾಜ್ಯ ಮಟ್ಟದ ರಾಷ್ಟ್ರೀಯ ಸೇವಾ ಯೋಜನೆಯ(ಎನ್.ಎಸ್.ಎಸ್) ಉತ್ತಮ ಸ್ವಯಂ ಸೇವಕ ಪ್ರಶಸ್ತಿಯನ್ನು ಕೇಶವಾರ ನವೀನ್‌ಕುಮಾರ್ ಅವರಿಗೆ ನೀಡಿ ಪುರಸ್ಕರಿಸಲಾಗಿದೆ. ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್.ಆರ್.ಶೆಟ್ಟಿ, ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್ ಹಾಜರಿದ್ದರು
ನಾಯಿಗಳ ದಾಳಿಗೆ ತುತ್ತಾದ ಕೃಷ್ಣಮೃಗವನ್ನು ರಕ್ಷಿಸಿದ ಗ್ರಾಮಸ್ಥರು
ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಬ್ಯಾಟರಾಯಸ್ವಾಮಿ ದೇವಾಲಯದ ತಪ್ಪಲಿನಲ್ಲಿ ನಾಯಿಗಳ ದಾಳಿಗೆ ತುತ್ತಾದ ಕೃಷ್ಣಮೃಗವನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.
ನಾಯಿಗಳ ದಾಳಿಗೆ ಸಿಕ್ಕಿ ಸಾವು ಬದುಕಿನ ಬಗ್ಗೆ ಹೋರಾಟ ಮಾಡುತ್ತಿದ್ದ ಮಳಮಾಚನಹಳ್ಳಿಯ ರಘು ಹಾಗೂ ಅವರ ಸ್ನೇಹಿತರು ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಪಶುವೈದ್ಯ ಡಾ. ಮಧು ಕೃಷ್ಣ ಮೃಗಕ್ಕೆ ಚಿಕಿತ್ಸೆ ನೀಡಿ ಅದು ಚೇತರಿಸಿ ಕೊಂಡನಂತರ ಅರಣ್ಯ ಇಲಾಖೆಯವರಿಗೆ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಒಪ್ಪಿಸಿದರು.
ಅರಣ್ಯ ಇಲಾಖೆ ಅಧಿಕಾರಿ ಭಾಸ್ಕರ್ ಕೃಷ್ಣಮೃಗವನ್ನು ತಾಲ್ಲೂಕಿನ ಕನ್ನಮಂಗಲದ ಅರಣ್ಯಕ್ಕೆ ಕಳುಹಿಸಿ ಕೊಟ್ಟರು. ಈ ಸಂದರ್ಭದಲ್ಲಿ ಡಾಕ್ಟರ್ ಮಧು, ವೆಂಕಟೇಶ್, ಗ್ರಾಮದ ರಘು, ಸುನಿಲ್, ಮಂಜುನಾಥ ಹಾಜರಿದ್ದರು
ಪ್ರೌಢಶಾಲಾ ಸಹಶಿಕ್ಷಕರ ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮ
ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಎಂ.ಇಂದಿರಾ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ತಾವು ಸಲ್ಲಿಸುತ್ತಿರುವ ಸೇವೆಯಲ್ಲಿ ವೃತ್ತಿಬದ್ಧತೆ, ಸಮಯಪ್ರಜ್ಞೆ, ಸೇವಾಮನೋಭಾವ ಇದ್ದರೆ ಉತ್ತಮಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಸರ್ಕಾರಿ ನೌಕರನಲ್ಲಿ ಪ್ರಾಮಾಣಿಕತೆಯಿರಬೇಕು. ಮಾಡುವ ಕೆಲಸದಲ್ಲಿ ಪಾರದರ್ಶಕತೆ ಇದ್ದರೆ ಯಾವುದೇ ಅನುಮಾನಗಳಿಗೆ ಆಸ್ಪದವಿರುವುದಿಲ್ಲ. ಆಗ ಮಾತ್ರ ನಿವೃತ್ತಿಯ ನಂತರ ಮಾನಸಿಕ ನೆಮ್ಮದಿಯಿಂದ ಬದುಕು ಸಾಗಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ ಮಾತನಾಡಿ, ತಾವು ಮಾಡಿದ ಉತ್ತಮಸೇವೆಯೇ ನಿವೃತ್ತಿಯ ನಂತರವೂ ಎಲ್ಲರ ಮನಸ್ಸಿನಲ್ಲಿ ಉಳಿಯುವುದು. ತಮ್ಮಿಂದ ಸಮಾಜಕ್ಕೆ ಆಗಬಹುದಾದ ಅನುಕೂಲಗಳನ್ನು ನಿಸ್ವಾರ್ಥ ಮನೋಭಾವದಿಂದ ಮಾಡಬೇಕು ಎಂದು ತಿಳಿಸಿದರು.
ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಬಿ.ರವೀಂದ್ರ ಮಾತನಾಡಿ, ಸರ್ಕಾರಿ ವೃತ್ತಿ ಬದುಕಿನಲ್ಲಿ ಏರಿಳಿತಗಳು ಸಾಮಾನ್ಯವಾದರೂ ಎಲ್ಲವನ್ನೂ ಸಮರ್ಥವಾಗಿ ಪ್ರಾಮಾಣಿಕವಾಗಿ ನಿಭಾಯಿಸಬೇಕು. ಸೇವಾರಂಭದ ದಿನಗಳಲ್ಲಿ ಸಿಗುವ ಆರಂಭಿಕ ಸೂಕ್ತ ಸರಿಯಾದ ಮಾರ್ಗದರ್ಶನದಿಂದ ಮಾತ್ರ ವೃತ್ತಿಯಲ್ಲಿ ಯಶಸ್ಸು ಕಾಣಲು ಸಾಧ್ಯ. ವ್ಯಕ್ತಿ ಮತ್ತು ಸಮಾಜ ನಡುವೆ ಬಿಡಿಸಲಾಗದ ಬಾಂಧವ್ಯವಿರಬೇಕು ಎಂದರು.
ವಯೋನಿವೃತ್ತಿ ಹೊಂದಿದ ಶಿಕ್ಷಕಿ ಎಂ.ಇಂದಿರಾ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸಂಘದ ಕಾರ್ಯದರ್ಶಿ ಎಲ್.ವೆಂಕಟರೆಡ್ಡಿ, ಕೆಂಪಣ್ಣ, ಎಚ್.ಎಸ್.ರುದ್ರೇಶಮೂರ್ತಿ, ಮಂಜುಳಾ, ಸರ್ದಾರ್‌ಚಾಂದ್‌ಪಾಶಾ, ಕಮಲಾ, ಸಿದ್ಧರಾಜು, ಗೋವಿಂದರಾಜು, ಹನುಮಂತಪ್ಪ, ಶಿಕ್ಷಕವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರೊ.ಬಿ.ಕೃಷ್ಣಪ್ಪ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭ
ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಶಾಖೆಯ ವತಿಯಿಂದ ಪ್ರೊ.ಬಿ.ಕೃಷ್ಣಪ್ಪ ಪ್ರಶಸ್ತಿ ಪುರಸ್ಕೃತರಾಗಿದ್ದಕ್ಕೆ ಅಭಿನಂದನೆ ಸಲ್ಲಿಸಿದ ಸಂಸರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್ ಮಾತನಾಡಿದರು.
ಯಾವುದೇ ಫಲಾಪೇಕ್ಷೆಯಿಲ್ಲದೆ ಶೋಷಿತ ವರ್ಗದ ಅಭ್ಯುದಯಕ್ಕಾಗಿ ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದೇವೆ. ಹೋರಾಟಗಳು ದಮನಿತರ ದನಿಯಾಗಿರಬೇಕು. ಸ್ವಾರ್ಥದಿಂದ ಗೂರವಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಶೋಷಿತ ವರ್ಗದ ವಿಮೋಚನೆಗಾಗಿ ಶ್ರಮಿಸಿದ ದಾರ್ಶನಿಕ, ಮಹಾಮಾನವತಾವಾದಿ, ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗದರ್ಶನ, ವಿಚಾರಗಳು ನಮ್ಮ ಪ್ರಗತಿಗೆ ದಿಕ್ಸೂಚಿ ಆಗಬೇಕು ಎಂದರು.
ಈ ಸಂದರ್ಭದಲ್ಲಿ ಪ್ರೊ.ಬಿ.ಕೃಷ್ಣಪ್ಪ ಪ್ರಶಸ್ತಿ ಪುರಸ್ಕೃತರಾದ ದ.ಸಂ.ಸ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್ ಅವರನ್ನು ಅಭಿನಂದಿಸಲಾಯಿತು.
ದ.ಸಂ.ಸ ರಾಜ್ಯ ಸಂಘಟನಾ ಸಂಚಾಲಕ ಎಚ್.ಎನ್.ಸನಂದ್‌ಕುಮಾರ್, ಭಾಗ್ಯಮ್ಮ ನಾರಾಯಣಸ್ವಾಮಿ, ಲಕ್ಷ್ಮೀನಾರಾಯಣ, ಜನಾರ್ಧನ್‌ಬಾಬು, ತಾಲ್ಲೂಕು ಸಂಚಾಲಕ ಎಚ್.ಎಂ.ಮುನಿಆಂಜಿನಪ್ಪ, ತೊಟ್ಲಗಾನಹಳ್ಳಿ ದ್ಯಾವಪ್ಪ, ಯಾಮ ನಾರಾಯಣಸ್ವಾಮಿ, ಹಿತ್ತಲಹಳ್ಳಿ ದೇವರಾಜ್, ಬೈರಸಂದ್ರ ದೇವರಾಜ್, ಯಣ್ಣಂಗೂರು ಸುಬ್ರಮಣಿ, ದಿಬ್ಬೂರಹಳ್ಳಿ ಮಂಜುನಾಥ್, ಕೃಷ್ಣಯ್ಯ, ಮಂಜುಳಮ್ಮ, ವೆನ್ನೆಲ, ಮೋಟಮ್ಮ, ಭಾಗ್ಯಮ್ಮ, ಶಶಿಕಲಾ ಹಾಜರಿದ್ದರು.
‘ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ’ 12 ನೇ ತಿಂಗಳ ಕಾರ್ಯಕ್ರಮ
ಲೇಖಕನಿಗೆ ಸಾಹಿತ್ಯ ರಚನೆಯು ಆತ್ಮಶೋಧ ಮತ್ತು ಹುಡುಕಾಟವಾದರೆ, ಓದುಗರಿಗೆ ಸಾಹಿತ್ಯದಿಂದ ಅಂತಃಕರಣ, ಮಾನವೀಯತೆ ಮತ್ತು ಮಾನಸಿಕ ವಿಕಸನವಾಗುತ್ತದೆ ಎಂದು ಮಾಸ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಚೀಮನಹಳ್ಳಿ ರಮೇಶ್‌ಬಾಬು ತಿಳಿಸಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಶಿಡ್ಲಘಟ್ಟ ಮತ್ತು ಕೇಂದ್ರ ಗ್ರಂಥಾಲಯ ಸಹಯೋಗದೊಂದಿಗೆ ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ನಡೆದ ‘ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ’ 12 ನೇ ತಿಂಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲೇಖಕನ ಸುಪ್ತಪ್ರಜ್ಞೆಯಲ್ಲಿ ನಡೆಯುವ ನಿರಂತರ ಹುಡುಕಾಟ ಬರವಣಿಗೆ ರೂಪಕ್ಕೆ ಬರುವುದು ವಿಶೇಷ ಪ್ರಕ್ರಿಯೆ. ತಮ್ಮ ಸುತ್ತಲಿನ ಬದಲಾವಣೆಗಳು, ಮಾನವೀಯ ಸಂಘರ್ಷಗಳು, ಪರಿಸರ ಮುಂತಾದ ಸಂಗತಿಗಳು ಕಾಡುತ್ತವೆ. ಅವು ಬರಹ ರೂಪದಲ್ಲಿ ಹೊರಹೊಮ್ಮುತ್ತವೆ.
ಸಾಹಿತ್ಯಕ್ಕೆ ಆತ್ಮ ವಿಕಸನದ ಶಕ್ತಿಯಿದೆ. ಓದಿನಿಂದ ಮಾನವೀಯ ಸಂಬಂಧಗಳನ್ನು ಉಳಿಸಿಕೊಂಡು ಬದಲಾವಣೆಯ ಪ್ರವಾಹದಲ್ಲಿ ಈಜಬಹುದಾಗಿದೆ. ಕಾಲದ ಬದಲಾವಣೆಯ ಪರ್ವದಲ್ಲಿ ಮಾನವೀಯತೆಯನ್ನು ಕಾಪಾಡಿಕೊಳ್ಳುವುದು ಅವಶ್ಯ. ಅದು ಸಾಹಿತ್ಯದಿಂದ ಮಾತ್ರ ಸಿಗಬಲ್ಲದು ಎಂದು ಹೇಳಿದರು.
ಎಲ್ಲೆಡೆ ಸಾಹಿತ್ಯ ಪರಿಚಾರಕರ ಅಗತ್ಯವಿದೆ. ಎಳೆಯ ವಯಸ್ಸಿನಿಂದಲೇ ಸಾಹಿತ್ಯಿಕ ಅಭಿರುಚಿ ಬೆಳೆಸುವ ಪ್ರಯತ್ನ ಮಾಡಬೇಕಿದೆ. ಲೇಖಕರ ಆಲೋಚನೆಯನ್ನು ಓದುಗರಿಗೆ ಮುಟ್ಟಿಸುವ ಸೇತುವೆಯಂತೆ ಕನ್ನಡ ಸಾರಸ್ವತ ಪರಿಚಾರಿಕೆ ಕಾರ್ಯನಿರ್ವಹಿಸುತ್ತಿರುವುದು ಮಾದರಿಯಾಗಿದೆ ಎಂದರು.
ತಮ್ಮ ಕೃತಿಗಳಾದ ಪ್ರಶ್ನೆ ಮತ್ತು ದೇವರು, ಎರಡು ಲೋಟಗಳು, ಮಾಯಾ ಸರೋವರ (ಕವನಸಂಕಲನಗಳು), ಹಸ್ತಬಲಿ (ಕಥಾಸಂಕಲನ-), ಬಲಿಹಾರ, ಹದ, ಟೈರ್ಸಾಮಿ (ಕಾದಂಬರಿಗಳು-) ಕುರಿತಂತೆ ಅವರು ಮಾತನಾಡಿದರು.
ಜಿಲ್ಲಾ ಗ್ರಂಥಾಲಯಾಧಿಕಾರಿ ಎಂ.ಶಂಕರಪ್ಪ ಮಾತನಾಡಿ, ಇಡೀ ರಾಜ್ಯದಲ್ಲಿಯೇ ಎಲ್ಲೂ ನಡೆಯದ ಅಪರೂಪದ ಸ್ಥಳೀಯ ಲೇಖಕರನ್ನು ಪರಿಚಯಿಸುವ ಈ ಕಾರ್ಯಕ್ರಮ ಜಿಲ್ಲಾ ಮಟ್ಟದಲ್ಲಿ ಹಾಗೂ ಇತರ ತಾಲ್ಲೂಕುಗಳಲ್ಲಿ ನಡೆಸುವ ಉದ್ದೇಶವಿದೆ ಎಂದರು.
ಸಾಹಿತಿ ಚೀಮನಹಳ್ಳಿ ರಮೇಶ್‌ಬಾಬು ಗ್ರಂಥಾಲಯಕ್ಕೆ ತಮ್ಮ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಸಾಹಿತಿ ಚೀಮನಹಳ್ಳಿ ರಮೇಶ್‌ಬಾಬು, ಜಿಲ್ಲಾ ಗ್ರಂಥಾಲಯಾಧಿಕಾರಿ ಎಂ.ಶಂಕರಪ್ಪ, ಸಾಹಿತ್ಯಾಭಿಮಾನಿಗಳಾದ ಲಕ್ಷ್ಮೀನಾರಾಯಣ್ ಮತ್ತು ಅನಿಲ್ ಪದ್ಮಸಾಲಿ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಗ್ರಂಥಪಾಲಕ ಎಂ.ಬಚ್ಚರೆಡ್ಡಿ, ಸಹಾಯಕಿ ಬಾಂಧವ್ಯ, ನಿವೃತ್ತ ಶಿಕ್ಷಕ ಸುಂದರನ್, ಅಕ್ಕಿಮಂಗಲ ಮಂಜುನಾಥ್, ಅಜಿತ್ ಕೌಂಡಿನ್ಯ, ನೃತ್ಯಪಟು ಸಿ.ಎನ್. ಮುನಿರಾಜು, ದೇವರಾಜ್, ವೃಷಬೇಂದ್ರಪ್ಪ, ರಾಮಚಂದ್ರ, ಟಿ.ಟಿ.ನರಸಿಂಹಪ್ಪ, ಸ್ನೇಕ್ ನಾಗರಾಜ್, ಮಧು, ವಿ.ಹರೀಶ್ ಹಾಜರಿದ್ದರು.
ಶಾಲಾ ಶಿಕ್ಷಣ ಗುಣಮಟ್ಟ ಸುಧಾರಣೆಗಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಕಾರ್ಯಾಗಾರ
ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್ ಬಳಿಯ ಬಾಲಾಜಿ ಕಲ್ಯಾಣಮಂಟಪದಲ್ಲಿ ಸೋಮವಾರ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಶಾಲಾ ಶಿಕ್ಷಣ ಗುಣಮಟ್ಟ ಸುಧಾರಣೆಗಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಕಾರ್ಯಾಗಾರದಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಯೋಜನಾ ಉಪಸಮನ್ವಯಾಧಿಕಾರಿ ಜಯರಾಮರೆಡ್ಡಿ ಮಾತನಾಡಿದರು.
ಓದು, ಬರಹ, ಮೂಲಭೂತ ಗಣಿತವನ್ನು ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಮನಸ್ಸಿಗೆ ನಾಟುವಂತೆ ಕಲಿಸಿದಲ್ಲಿ ಮುಂದಿನ ತರಗತಿಗಳಿಗೆ ಏನೂ ಸಮಸ್ಯೆ ಉಂಟಾಗದು ಎಂದು ಅವರು ತಿಳಿಸಿದರು.
ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸುವ ಸರ್ಕಾರಿ ಶಿಕ್ಷಕರು ವ್ಯತ್ಯಾಸವನ್ನು ಗಮನಿಸಬೇಕು. ಆತ್ನವಿಮರ್ಶೆಗಿದು ಸಕಾಲ. ಶಿಕ್ಷಕರ ಶಾಲಾ ಅವಧಿ ಇತರ ಕೆಲಸಗಳಿಗೆ ಬಳಕೆಯಾಗುತ್ತಿದೆ. ಕಲಿಕಾ ಅವಧಿಯಲ್ಲಿ ಇತರ ಕೆಲಸಗಳಿಗೆ ಶಿಕ್ಷಕರ ಬಳಕೆಯಾಗದಿರಲಿ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಶಿವಣ್ಣರೆಡ್ಡಿ ಮಾತನಾಡಿ, ಶಿಕ್ಷಕರೆಂದರೆ ಹಿಂದಿನಿಂದಲೂ ಸಮಾಜದಲ್ಲಿ ಉತ್ತಮ ಭಾವನೆಯಿದೆ. ಶಿಕ್ಷಕರನ್ನು ಮೌಲ್ಯಮಾಪನ ಮಾಡುವವರು ವಿದ್ಯಾರ್ಥಿಗಳು. ಮಕ್ಕಳಿಗೆ ಹೊಸಹೊಸದನ್ನು ಕಲಿಸಿದಲ್ಲಿ ಅವರು ಜೀವನಪರ್ಯಂತ ನೆನೆಸಿಕೊಳ್ಳುತ್ತಾರೆ. ಆದರ್ಶದ ಈ ವೃತ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಸಾಧ್ಯತೆಗಳಿವೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಚಂದ್ರಶೇಖರಬಾಬು, ಅಕ್ಷರದಾಸೋಹ ಸಹ ನಿರ್ದೇಶಕ ಆಂಜನೇಯಲು, ಪ್ರಭಾರ ಕ್ಷೇತ್ರ ಸಮನ್ವಯಾಧಿಕಾರಿ ಈ.ಭಾಸ್ಕರಗೌಡ, ಶಿಕ್ಷಣ ಸಂಯೋಜಕ ಲಕ್ಷ್ಮೀನರಸಿಂಹಗೌಡ, ಶಿಕ್ಷಣಾಧಿಕಾರಿ ಶಿವಲಿಂಗಯ್ಯ ಹಾಜರಿದ್ದರು.
ಮಕ್ಕಳಿಗೆ ದೊಣ್ಣೆ ವರಸೆ ಕಲಿಕಾ ಶಿಬಿರ
ನಗರದ ವೇಣುಗೋಪಾಲಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಭಾನುವಾರ ದಿವ್ಯಭಾರತ್ ಕರಾಟೆ ಅಸೋಸಿಯೇಶನ್ ವತಿಯಿಂದ ಕರಾಟೆ ವಿದ್ಯಾರ್ಥಿಗಳಿಗೆ ನಡೆದ ಒಂದು ದಿನದ ಶಿಬಿರದಲ್ಲಿ ಕರಾಟೆ ಶಿಕ್ಷಕ ಗೌರಿಬಿದನೂರಿನ ಚಂದ್ರಶೇಖರ್ ಮಾತನಾಡಿದರು.
ಕರಾಟೆ ಕಲಿಯುತ್ತಿರುವ ಮಕ್ಕಳಿಗೆ ವಿವಿಧ ಕಟ, ಬಂಕಾಯ್, ಕುಬುಡೂ, ದೊಣ್ಣೆ ವರಸೆ ಕಲಿಸುತ್ತಿರುವುದಾಗಿ ಅವರು ತಿಳಿಸಿದರು.
ಕರಾಟೆ ಕಲಿಯುವ ಮಕ್ಕಳಿಗೆ ಅವರ ಕಲಿಕೆಯನ್ನು ವಿಸ್ತಾರಗೊಳಿಸುವ ನಿಟ್ಟಿನಲ್ಲಿ ಅದಕ್ಕೆ ಸಂಬಂಧಿಸಿದ ಪ್ರಾವೀಣ್ಯತೆಗಳನ್ನು ಕಲಿಸಿ ಅಭ್ಯಸಿಸಲು ತಿಳಿಸಿಕೊಡಲಾಗಿದೆ ಎಂದರು.
ದಿವ್ಯಭಾರತ್ ಕರಾಟೆ ಅಸೋಸಿಯೇಶನ್ ಶಿಕ್ಷಕ ಅರುಣ್‌ಕುಮಾರ್ ಮಾತನಾಡಿ, ಕಲಿಕೆಯು ನಿರಂತರ. ಕರಾಟೆಯ ವಿವಿಧ ಮಜಲುಗಳನ್ನು ಮಕ್ಕಳಿಗೆ ತಿಳಿಸುತ್ತಾ ದೊಣ್ಣೆ ವರಸೆ ಮತ್ತು ನಾನ್‌ಚಾಕ್ ಕಲಿಸಲಾಯಿತು ಎಂದರು. 23 ಮಂದಿ ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು.
ಕ್ರೀಡಾಪಟು ಮುನಿರಾಜು, ಪುರುಷೋತ್ತಮ್, ನಾರಾಯಣಸ್ವಾಮಿ, ಕಲಾವಿದ ಮುನಿರಾಜು, ಮುರಳಿ ಹಾಜರಿದ್ದರು.
ಬ್ಯಾಗ್ ರಹಿತ ದಿನಾಚರಣೆ ಮತ್ತು ಫ್ಲೋರೋಸಿಸ್ ದಿನಾಚರಣೆ ಕಾರ್ಯಕ್ರಮ
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಬ್ಯಾಗ್ ರಹಿತ ದಿನಾಚರಣೆ ಮತ್ತು ಫ್ಲೋರೋಸಿಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಕ್ಷ್ಮಿದೇವಮ್ಮ ಮಾತನಾಡಿದರು.
ಅಂತರ್ಜಲಮಟ್ಟ ಕುಸಿಯುತ್ತಿದ್ದು ಕೊಳವೆ ಬಾವಿಗಳಲ್ಲಿ ಫ್ಲೋರೈಡ್‌ಯುಕ್ತ ನೀರಿನ ಲಭ್ಯತೆ ಹೆಚ್ಚಿದಂತೆಲ್ಲಾ ಆರೋಗ್ಯ ಸಮಸ್ಯೆಗಳೂ ಹೆಚ್ಚುತ್ತಿವೆ ಎಂದು ಅವರು ತಿಳಿಸಿದರು.
ಬಯಲುಸೀಮೆಯ ಸುಮಾರು ೨೪ ಜಿಲ್ಲೆಗಳಲ್ಲಿ ಫ್ಲೋರೈಡ್‌ಯುಕ್ತ ನೀರು ಸಿಗುತ್ತಿದೆ. ಕುಡಿಯವ ನೀರಿನ ಅಶುದ್ಧತೆಯಿಂದಾಗಿ ದಂತಕ್ಷಯ, ಮೂಳೆರೋಗಗಳಿಂದ ಹಲವಾರು ಮಂದಿ ಬಳಲುತ್ತಿದ್ದಾರೆ. ಅದಕ್ಕಾಗಿ ಎಳೆವಯಸ್ಸಿನಿಂದಲೇ ಸಿ ವಿಟಮಿನ್‌ಯುಕ್ತ ಆಹಾರ ಪದಾರ್ಥಗಳನ್ನು ಹೆಚ್ಚು ಬಳಸಬೇಕು ಎಂದರು.
ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸಹಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಫ್ಲೋರೈಡ್ ಅಂಶ ಮಿತಿಮೀರಿರುವ ಕುಡಿಯುವ ನೀರು ಲಭ್ಯವಾಗುವ ಪ್ರದೇಶಗಳಲ್ಲಿ ಬೆಳೆಯಲಾಗುವ ಹಣ್ಣು, ತರಕಾರಿಗಳಲ್ಲಿಯೂ ಜೈವಿಕಸಾಂದ್ರತೆಯ ಆಧಾರದಲ್ಲಿ ಪರಿಣಾಮಗಳಾಗುತ್ತವೆ. ಅದಕ್ಕಾಗಿ ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿ, ಅಗತ್ಯವಿರುವೆಡೆಯಲ್ಲೆಲ್ಲಾ ನೆಲ್ಲಿಕಾಯಿ, ನಿಂಬೆ ಜಾತಿಯ ಗಿಡಗಳು, ನುಗ್ಗೆ ಸಸ್ಯಗಳನ್ನು ಹೆಚ್ಚೆಚ್ಚು ಬೆಳಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಮಕ್ಕಳಿಗೆ ಬ್ಯಾಗ್ ರಹಿತ ದಿನಾಚರಣೆ ಅಂಗವಾಗಿ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ನಡೆಸಿ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾ ಆವರಣದಲ್ಲಿ ನಿಂಬೆ, ನೆಲ್ಲಿ, ನುಗ್ಗೆಜಾತಿಯ ಸಸಿಗಳನ್ನು ನೆಡಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ತಾಲ್ಲೂಕು ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ರಾಧಾ, ಅಂಗನವಾಡಿ ಕಾರ್ಯಕರ್ತೆ ಮಂಜುಳಮ್ಮ, ಶಿಕ್ಷಕ ಬಿ.ನಾಗರಾಜು, ಎಂ.ವೈ.ಲಕ್ಷ್ಮಯ್ಯ, ಶಿಕ್ಷಕಿ ತಾಜೂನ್, ಅನಿತಾ ಪಾಲ್ಗೊಂಡಿದ್ದರು.
ಬಿಜೆಪಿ ಹಾಗೂ ರಾಷ್ಟ್ರೋತ್ಥಾನ ರಕ್ತನಿಧಿಯ ಸಹಯೋಗದಲ್ಲಿ ರಕ್ತದಾನ ಶಿಬಿರ
ಅಪಘಾತದಲ್ಲಿ ಗಾಯಗೊಂಡವರು ಮತ್ತು ಹಲವು ಬಗೆಯ ರೋಗಿಗಳಿಗೆ ತುರ್ತು ರಕ್ತ ಬೇಕಾಗುತ್ತದೆ. ರಕ್ತದ ಕೊರತೆಯನ್ನು ನೀಗಿಸುವಲ್ಲಿ ದಾನಿಗಳ ಪಾತ್ರ ದೊಡ್ಡದು ಎಂದು ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ನಗರದ ಶ್ರೀ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಹಾಗೂ ರಾಷ್ಟ್ರೋತ್ಥಾನ ರಕ್ತನಿಧಿಯ ಸಹಯೋಗದಲ್ಲಿ ಕ್ರಾಂತಿವೀರ ಚಂದ್ರಶೇಖರ್‌ಆಜಾದ್ ಮತ್ತು ಭಗತ್‌ಸಿಂಗ್ ಜನ್ಮದಿನಾಚರಣೆಯ ಸ್ಮರಣಾರ್ಥ ಶನಿವಾರ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ರಕ್ತದ ಕೊರತೆಯಿಂದಾಗಿ ಅಪಾಯದಲ್ಲಿರುವ ಜನತೆಯನ್ನು ಉಳಿಸಲು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವಂತಹ ಗುಣವನ್ನು ಯುವಜನತೆ ರೂಡಿಸಿಕೊಳ್ಳಬೇಕು. ಅಪಘಾತಗಳಾಗಿ ಸಕಾಲದಲ್ಲಿ ರಕ್ತ ಸಿಗದೇ ಬಹಳಷ್ಟು ಮಂದಿ ಮೃತ ಪಡುವ ಸಾಧ್ಯತೆಯಿದ್ದು ಇಂತಹ ಪರಿಸ್ಥಿತಿ ತಪ್ಪಿಸುವ ಉದ್ದೇಶದಿಂದ ರಕ್ತದಾನ ಶಿಬಿರಗಳಲ್ಲಿ ರಕ್ತದಾನ ಮಾಡಬೇಕು. ಯುವಕರಲ್ಲಿ ರಾಷ್ಟ್ರಪ್ರೇಮ ಬೆಳಸುವುದು, ರಕ್ತ ಅವಶ್ಯಕವಿರುವವರಿಗೆ ಸಕಾಲದಲ್ಲಿ ರಕ್ತ ದೊರೆಯುವಂತೆ ಮಾಡುವ ಉದ್ದೇಶದಿಂದ ಬಿಜೆಪಿ ಪಕ್ಷದ ವತಿಯಿಂದ ಕಳೆದ ಐದು ವರ್ಷಗಳಿಂದ ನಿರಂತರವಾಗಿ ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡುತ್ತಿದೆ. ತಾಲ್ಲೂಕಿನ ಯುವಜನತೆಯಿಂದ ಉತ್ತಮವಾದ ಬೆಂಬಲ ವ್ಯಕ್ತವಾಗುತ್ತಿದೆ ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ಆರ್.ಸುರೇಂದ್ರಗೌಡ, ಮುಖಂಡರಾದ ದಾಮೋದರ್, ಸುಜಾತಮ್ಮ, ಮಂಜುಳಮ್ಮ, ನಗರಸಭೆ ಸದಸ್ಯ ಎಸ್.ರಾಘವೇಂದ್ರ, ತಾಲ್ಲೂಕು ಕಾರ್ಯದರ್ಶಿ ಶ್ರೀಧರ್ ಹಾಜರಿದ್ದರು.
ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಅಣಬೆ ಪ್ರಾತ್ಯಕ್ಷಿಕೆ
ತಾಲ್ಲೂಕಿನ ಶೆಟ್ಟಿಹಳ್ಳಿಯಲ್ಲಿ ಗುರುವಾರ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಣಬೆ ಬೇಸಾಯದ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.
ಸೂಕ್ಷ್ಮಾಣು ಜೀವಶಾಸ್ತ್ರದ ವಿಜ್ಞಾನಿ ಉಮಾಶಂಕರ್, ಗ್ರಾಮಸ್ಥರಿಗೆ ಅಣಬೆ ಬೇಸಾಯದ ಬಗ್ಗೆ ತಿಳಿಸಿಕೊಟ್ಟು ಅದರಿಂದ ಆಗುವ ಆರ್ಥಿಕ ಲಾಭಗಳ ಬಗ್ಗೆ ಹೇಳಿದರು.
ಅನುವಂಶೀಯಶಾಸ್ತ್ರದ ವಿಜ್ಞಾನಿ ಮಾರಪ್ಪ ರೈತರಿಗೆ ವಿವಿಧ ತಳಿಗಳ ಬಗ್ಗೆ ತಿಳಿಸಿಕೊಟ್ಟರು. ಸ್ಥಳೀಯ ಹವಾಮಾನಕ್ಕೆ ವಾತಾವರಣಕ್ಕೆ ಹೊಂದಿಕೊಳ್ಳುವ ತಳಿಗಳ ಬಗ್ಗೆ ಮಾಹಿತಿ ನೀಡಿದರು.
ತಾಲ್ಲೂಕು ರೈತಸಂಘದ ಅಧ್ಯಕ್ಷ ರವಿಪ್ರಕಾಶ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರಪ್ಪ, ವಿದ್ಯಾರ್ಥಿಗಳಾದ ಚಂದ್ರಮನು, ಅಪೂರ್ವರಾಜ್, ಅಮೃತ, ಆಶ, ಐಶ್ವರ್ಯ, ಅನುಷ, ಬದ್ರುನಿಸ, ಭರತ್, ಆನಂದ್, ಅವಿನಾಶ್, ಅಕ್ಷಯ್‌ಕುಮಾರ್, ಬಸವರಾಜ್, ಆದರ್ಶ್ ಹಾಜರಿದ್ದರು.
ತಾಲ್ಲೂಕು ಮಟ್ಟದ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆ
ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಅಧಿಕಾರಿಗಳು ಸಕಾಲದಲ್ಲಿ ಮಾಡದೇ ಇರುವುದು ಸಹ ಭ್ರಷ್ಟಾಚಾರಕ್ಕೆ ಸಮಾನ ಎಂದು ಜಿಲ್ಲಾ ಪಂಚಾಯಿತಿ ಅದ್ಯಕ್ಷ ಎಚ್.ವಿ.ಮಂಜುನಾಥ್ ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಮಟ್ಟದ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರ ಕುಡಿಯುವ ನೀರು ಪೂರೈಸಲು ಸಾಕಷ್ಟು ಅನುದಾನ ಬಿಡುಗಡೆ ಮಾಡಿ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಮಾಡಿದ್ದರೂ ನಿರ್ವಹಣೆಯಿಲ್ಲದೇ ಬಹುತೇಕ ಘಟಕಗಳು ನಿಂತಿರುವ ಬಗ್ಗೆ ಮಾಹಿತಿ ಬಂದಿದೆ. ಜನತೆಗೆ ಕುಡಿಯುವ ನೀರು ಪೂರೈಸಲು ನಿರ್ಲಕ್ಷ್ಯ ತೋರಿದರೆ ಸಂಬಧಪಟ್ಟ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
ಕುಡಿಯುವ ನೀರಿನ ಘಟಕಗಳ ನಿರ್ವಹಣೆಯ ಬಗ್ಗೆ ಕೂಡಲೇ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಸಮರ್ಪಕ ಮಾಹಿತಿಯನ್ನು ನೀಡಬೇಕು. ಇಲ್ಲವಾದಲ್ಲಿ ಆಯಾ ಪಂಚಾಯಿತಿ ಪಿಡಿಓಗಳನ್ನು ಹೊಣೆ ಮಾಡಲಾಗುವುದು ಎಂದರು.
ತಾಲ್ಲೂಕಿನ ಹಲವೆಡೆ ಫ್ಲೋರೈಡ್ ಅಂಶ ಹೆಚ್ಚಾಗಿ ಕಂಡು ಬಂದಿದೆ. ಫ್ಲೋರೊಸಿಸ್ ಖಾಯಿಲೆ ತಡೆಗಟ್ಟಲು ನೆಲ್ಲಿಕಾಯಿ ಬಳಸಲು ಜನರಿಗೆ ಮನವರಿಕೆ ಮಾಡುವ ಕೆಲಸವನ್ನು ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಮುಂದಾಗಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ಬಾಬು ಸಭೆಗೆ ಗೈರು ಹಾಜರಾಗಿರುವುದು ಮತ್ತು ಸಭೆಗೆ ಅಸಮರ್ಪಕ ಮಾಹಿತಿ ನೀಡಿರುವ ಹಿನ್ನಲೆಯಲ್ಲಿ ನೊಟೀಸ್ ಜಾರಿಗೊಳಿಸಿ ಎಂದು ಇಓ ವೆಂಕಟೇಶ್‌ರಿಗೆ ಅವರು ತಿಳಿಸಿದರು.
ತಾಲ್ಲೂಕಿನ ಕೆಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಕೊಳವೆಬಾವಿಗಳಿಂದ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಿ ಹಣ ಮಾಡುತ್ತಿರುವ ಬಗ್ಗೆ ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಸಭೆಗೆ ಮಾಹಿತಿ ನೀಡಿದರು. ಈ ಬಗ್ಗೆ ಮಾತನಾಡಿದ ಅಧ್ಯಕ್ಷ ಎಚ್.ವಿ.ಮಂಜುನಾಥ್ ಕೂಡಲೇ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸಂಬಂದಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದರು.
ಗ್ರಾಮ ವಿಕಾಸ್ ಯೋಜನೆಯಡಿ ತಾಲ್ಲೂಕಿನಾದ್ಯಂತ ಆಯ್ಕೆಯಾಗಿರುವ ಗ್ರಾಮಗಳಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡುವಂತೆ ಕಾರ್ಯನಿರ್ವಾಹಕ ಅಧಿಕಾರಿಗೆ ಎರಡು ಬಾರಿ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕಾಮಗಾರಿ ಪರಿಶೀಲನೆ ನಡೆಸುವಾಗ ಎಚ್ಚರ ವಹಿಸಿ ಎಂದರು.
ಕೃಷಿಗೆ ಸರ್ಕಾರ ಹೆಚ್ಚು ಒತ್ತು ನೀಡುತ್ತಿದ್ದು ಅದುನಿಕ ತಂತ್ರಜ್ಞಾನದ ಮಾಹಿತಿಯನ್ನು ರೈತರಿಗೆ ಮುಟ್ಟಿಸುವಲ್ಲಿ ಕೃಷಿ ಅಧಿಕಾರಿಗಳು ಪ್ರಾಮಾಣಿಕ ಯತ್ನ ನಡೆಸಬೇಕು. ರೈತರಿಗೆ ಬೇಕಾದ ಅಗತ್ಯವಾದ ಉಪಕರಣಗಳ ಬಗ್ಗೆ ಮಾಹಿತಿ ನೀಡಿದ್ದಲ್ಲಿ ಅದನ್ನು ಜಿಲ್ಲಾ ಪಂಚಾಯಿತಿಯಿಂದ ಪೂರೈಸಲು ಕ್ರಮ ಜರುಗಿಸಲಾಗುವುದು ಎಂದರು.
ಸಭೆಯಲ್ಲಿ ಈವರೆಗೂ ನರೇಗಾ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ನರೇಗಾ ಸಹಾಯಕ ನಿರ್ದೇಶಕ ಶ್ರೀನಾಥಗೌಡ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾಮುನಿರಾಜು, ಸದಸ್ಯರಾದ ಬಂಕ್ ಮುನಿಯಪ್ಪ, ಸತೀಶ್, ತನುಜಾರಘು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ಉಪಾಧ್ಯಕ್ಷ ಮುನಿಯಪ್ಪ, ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಹಾಜರಿದ್ದರು.
ಹಡಪದ ಅಪ್ಪಣ್ಣ ಜಯಂತ್ಯುತ್ಸವ ಕಾರ್ಯಕ್ರಮ
ಕಾಯಕದಲ್ಲಿ ಮೇಲು ಕೀಳಿಲ್ಲ, ಯಾವುದೇ ವೃತ್ತಿ ಕೈಗೊಂಡರೂ ಅದು ಶ್ರೇಷ್ಠವೇ ಎಂದು ತೋರಿಸಿಕೊಟ್ಟ ಬಸವಾದಿ ಶರಣರಲ್ಲಿ ಹಡಪದ ಅಪ್ಪಣ್ಣ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ ಎಂದು ಗ್ರೇಡ್2 ತಹಶೀಲ್ದಾರ್ ಲಕ್ಷ್ಮೀಕಾಂತಮ್ಮ ತಿಳಿಸಿದರು.
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹನ್ನೆರಡನೇ ಶತಮಾನದ ಬಸವಣ್ಣನವರ ಆಪ್ತರಾಗಿದ್ದವರು ಹಡಪದ ಅಪ್ಪಣ್ಣನವರು. ಅಪ್ಪಣ್ಣ 200ಕ್ಕೂ ಹೆಚ್ಚು ವಚನಗಳನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ತಿಳಿಸಿದರು.
ಹಡಪದ ಅಪ್ಪಣ್ಣ ಜಯಂತ್ಯುತ್ಸವವನ್ನು ಪುನರ್ ಪರಿಶೀಲಿಸಿ ಸವಿತಾ ಸಮಾಜದ ಮೂಲ ಪುರುಷ ಸವಿತಾ ಮಹರ್ಷಿ ಜಯಂತ್ಯುತ್ಸವ ಎಂದು ಆಚರಿಸಬೇಕೆಂದು ಒತ್ತಾಯಿಸಿದ್ದ ಸವಿತಾ ಸಮಾಜದವರು ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ.
ಶಿಕ್ಷಣ ಇಲಾಖೆಯ ರಂಗನಾಥ್ , ಡಾ.ವಿಜಯ್ ಹಾಜರಿದ್ದರು.
ಜೆ.ವೆಂಕಟಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ
‘ಮಾತೃಭೂಮಿ ರಕ್ಷಣೆಯಷ್ಟೇ ನಮ್ಮ ಗುರಿಯಾಗಿರುತ್ತದೆ. ನಮಗೇನಾದರೂ ಆದಲ್ಲಿ ನಮ್ಮ ಕುಟುಂಬಕ್ಕೆ ನೆರವಾಗುವ ಮಾನವೀಯ ಗುಣವಿರುವ ಸಮಾಜ ನಮ್ಮದು’ ಎಂದು ಬಿಎಸ್‌ಎಫ್ ಯೋಧ ಸುರೇಶ್ ತಿಳಿಸಿದರು.
ತಾಲ್ಲೂಕಿನ ಜೆ.ವೆಂಕಟಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಗ್ರಾಮ ಪಂಚಾಯಿತಿ, ಎಂ.ಪಿ.ಸಿ.ಎಸ್ ಹಾಗೂ ಸಾಯಿ ಸೇವಾ ಸಂಘದ ವತಿಯಿಂದ ಆಚರಿಸಿದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾವಿಗೆ ಅಂಜಿ ಬದುಕಬಾರದು. ಸಾವೇ ನಮ್ಮನ್ನು ಕಂಡು ಅಂಜುವ ರೀತಿಯಲ್ಲಿ ಬದುಕಬೇಕು. ಎಷ್ಟು ಕಾಲ ಬದುಕಿದೆ ಎನ್ನುವುದಕ್ಕಿಂತ ಹೇಗೆ ಬದುಕಿದೆ ಎನ್ನುವುದು ಮುಖ್ಯವಾಗುತ್ತದೆ. ದೇಶಪ್ರೇಮ ಪ್ರತಿಯೊಬ್ಬರಲ್ಲೂ ಇರಬೇಕು. ನಮ್ಮ ಸಮಾಜಕ್ಕೆ ಉಪಯುಕ್ತರಾಗುವ ರೀತಿಯಲ್ಲಿ ನಾವು ಜೀವನವನ್ನು ನಡೆಸಬೇಕು. ಪ್ರಕೃತಿಯಲ್ಲಿ ಪ್ರತಿಯೊಂದು ಜೀವಿಯೂ ಪರೋಪಕಾರಿಯೇ. ಹಾಗಾಗಿ ಬುದ್ಧಿಶಕ್ತಿಯಿರುವ ಮನುಷ್ಯರಾದ ನಾವು ಕೂಡ ಪ್ರಯೋಜನಕಾರಿಯಾಗಬೇಕು ಎಂದು ಹೇಳಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ದೇಶದ ಆಗುಹೋಗುಗಳ ಕುರಿತು ನಾವು ಸದಾ ಜಾಗೃತವಾಗಿರಬೇಕು. ಅನ್ಯಾಯ, ಅತ್ಯಾಚಾರ, ದೇಶದ್ರೋಹಿ ಪ್ರಸಂಗಗಳು ಕಂಡುಬಂದರೆ ಸೈನಿಕನ ಮನೋಭಾವದಂತೆ ಪ್ರತಿಭಟಿಸಬೇಕು, ತಡೆಯಬೇಕು. ನಮ್ಮೆಲ್ಲರ ಸಂರಕ್ಷಣೆಗಾಗಿ ಪ್ರಕೃತಿಯ ವೈಪರೀತ್ಯಗಳನ್ನು ಎದುರಿಸುತ್ತಾ ಕಾದು ನಿಂತಿರುವ ಸೈನಿಕರನ್ನು ಸದಾ ನೆನಪಿಟ್ಟಿರಬೇಕು. ಅವರ ಕುಟುಂಬದ ಸದಸ್ಯರ ಮನಸ್ಥಿತಿಯನ್ನು ಯೋಚಿಸಬೇಕು. ಮುಖ್ಯವಾಗಿ ಗೌರವಿಸುವುದನ್ನು ಕಲಿಯಬೇಕು. ಪ್ರತಿಯೊಬ್ಬರೂ ಸೈನಿಕರಂತೆ ದೇಶಕ್ಕಾಗಿ ಬದುಕಬೇಕು ಎಂದು ಹೇಳಿದರು.
ಯೋಧ ಸುರೇಶ್ ಅವರನ್ನು ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು. ಹಾಲಿನ ಡೈರಿ ವತಿಯಿಂದ ಎಲ್ಲರಿಗೂ ಸಿಹಿ ವಿತರಿಸಲಾಯಿತು. ಸಾಯಿ ಸೇವಾ ಸಂಘದವರು ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳು ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷ ರಘುನಾಥ್, ಉಪಾಧ್ಯಕ್ಷ ಚಂದ್ರೇಗೌಡ , ಪಿಡಿಒ ಪ್ರಶಾಂತ್, ನಾಗೇಶ್, ಹರೀಶ್, ಗ್ರಾಮ ಪಂಚಾಯತಿ ಸದಸ್ಯರು, ಶಿಕ್ಷಕರು , ಸೂಲಿಬೆಲೆ ಸಾಯಿ ಸೇವಾ ಸಂಸ್ಥೆಯ ವಿನಯ್ ಕುಮಾರ್ , ಅಂಬರೀಶ್ , ಮುರುಳಿ , ಭರತ್ , ರಮೇಶ್ , ಪ್ರೀತಂ , ಮುನೇಗೌಡ , ಶಶಿ ಕುಮಾರ್, ವೆಂಕಟೇಶ್ ಮೂರ್ತಿ, ರವಿ ಕುಮಾರ್, ಸುರೇಶ್, ಶ್ರೀನಿವಾಸ್, ಪಾಪರಾಜ್, ವೇಣು, ಪಶು ವೈದ್ಯ ಅರುಣ್ ಹಾಜರಿದ್ದರು.
ತಾಲ್ಲೂಕಿನಲ್ಲಿ ಆಡಳಿತ ಯಂತ್ರ ಕುಸಿದಿದೆ – ಬಿ.ಸಿ.ನಂದೀಶ್ ಆರೋಪ
‘ತಾಲ್ಲೂಕಿನಲ್ಲಿ ಆಡಳಿತ ಯಂತ್ರ ಕುಸಿದಿದೆ. ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ’ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಸಿ.ನಂದೀಶ್ ಆರೋಪಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಅಧಿಕಾರಿಗಳ ವೇಗಕ್ಕೆ ಕಡಿವಾಣ ಹಾಕುವಲ್ಲಿ ಶಾಸಕ ವಿ.ಮುನಿಯಪ್ಪ ವಿಫಲರಾಗಿದ್ದಾರೆ. ತಾಲ್ಲೂಕಿನಲ್ಲಿ ಇದೇ ರೀತಿಯಾಗಿ ಆಡಳಿತ ವ್ಯವಸ್ಥೆ ವಿಫಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದರು.
ಮೈತ್ರಿ ಸರ್ಕಾರದಲ್ಲಿ ಕೇವಲ ಸಚಿವ ಸ್ಥಾನಗಳ ಹಂಚಿಕೆಯಲ್ಲೆ ಕಾಲಕಳೆದಿದ್ದಾರೆ. ಶಾಲಾವಿದ್ಯಾರ್ಥಿಗಳಿಗೆ ಬಸ್ ಪಾಸ್‌ಗಳನ್ನು ವಿತರಣೆ ಮಾಡಲಿಲ್ಲ, ರೈತರಿಗೆ ಸಾಲ ಮನ್ನಾ ಮಾಡುವುದಾಗಿ ನೀಡಿದ್ದ ಭರವಸೆಗಳನ್ನು ಸಮರ್ಪಕವಾಗಿ ಈಡೇರಿಸಲಿಲ್ಲ. ಕ್ಷೇತ್ರಗಳ ಅಭಿವೃದ್ಧಿಯನ್ನು ಕಡೆಗಣಿಲಾಗಿದೆ. ಹಾಲಿನ ದರ ಕಡಿಮೆ ಮಾಡಿದರು. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿದ್ದಾರೆ. ಅಧಿಕಾರ, ಹಣದಾಸೆಗಾಗಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಒಂದಾಗಿವೆ. ಜನರ ಹಿತ ಅವರಿಗೆ ಬೇಕಾಗಿಲ್ಲ. ಈ ಸರ್ಕಾರ ಹೆಚ್ಚುದಿನ ಬಾಳಲ್ಲ ಎಂದರು.
ಕೇಂದ್ರ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಜನರು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಫಸಲ್ ಭೀಮಾ ಯೋಜನೆಯಡಿ ೨೦೧೫–-೧೬ ನೇ ಸಾಲಿನಲ್ಲಿ ೨ ಕೋಟಿ ೪೯ ಲಕ್ಷ ಅನುದಾನವನ್ನು ತಾಲ್ಲೂಕಿನ ರೈತರು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ರಾಗಿ, ಜೋಳ, ಅವರೆ, ಸೇರಿದಂತೆ ಬೆಳೆಗಳಿಗೆ ವಿಮಾ ಮಾಡಿಸಲು ಜುಲೈ ೩೧ ರವರೆಗೆ ಅವಕಾಶವಿದ್ದು ರೈತರು ಸದುಪಯೋಗ ಪಡಿಸಿಕೊಳ್ಳಬೇಕು. ೪ ವರ್ಷಗಳ ಕೇಂದ್ರ ಸರ್ಕಾರದ ಜನಪರವಾದ ಕಾರ್ಯಕ್ರಮಗಳಿಂದ ಕಂಗಾಲಾಗಿರುವ ಇತರೆ ಪಕ್ಷಗಳಿಗೆ ನಡುಕ ಶುರುವಾಗಿದೆ. ಮುಂದಿನ ಲೋಕಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ಒಂದಾಗುತ್ತಿವೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆದು ಪುನಃ ಅಧಿಕಾರಕ್ಕೆ ಬರಲಿದ್ದಾರೆ ಎಂದು ಹೇಳಿದರು.
‘ಸಮರ್ಥನೆಗಾಗಿ ಸಂಪರ್ಕ’ ಕಾರ್ಯಕ್ರಮದಡಿ ಸಾಧಕರ ಕುರಿತು ತಯಾರಾಗುವ ಪುಸ್ತಕದ ಮೂಲಕ ಜನರಿಗೆ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡಲಿದ್ದು, ತಾಲ್ಲೂಕಿನಲ್ಲಿ ೫೦ ಮಂದಿಯನ್ನು ಗುರುತಿಸಿದ್ದೇವೆ ಎಂದರು.
ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಕೆ.ಆರ್.ಸುರೇಂದ್ರಗೌಡ, ದಾಮೋದರ್, ಸುಜಾತಮ್ಮ, ದೇವರಾಜ್, ಪುರುಷೋತ್ತಮ, ಮುನಿರಾಜು, ವೆಂಕಟೇಶ್, ನಟರಾಜ್ ಉಪಸ್ಥಿತರಿದ್ದರು.
ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ
‘ದೇಶಸೇವೆ ಪವಿತ್ರವಾದ ಕೆಲಸ. ಮಕ್ಕಳೇ ನಿಮ್ಮಲ್ಲಿ ಸೈನಿಕರಾಗಬೇಕೆಂಬ ಉತ್ಸಾಹ, ಹುಮ್ಮಸ್ಸು ಮತ್ತು ಗುರಿಯು ಮೂಡಲಿ. ನೀವು ಸೈನಿಕರಾದರೆ ನಮ್ಮ ಇಡೀ ಹಳ್ಳಿಯೇ ಗರ್ವಪಡುತ್ತದೆ’ ಎಂದು ಮುಖ್ಯ ಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ ಹೇಳಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇಂದಿನ ಬಹುತೇಕ ವಿದ್ಯಾವಂತ ಯುವಜನರು ಕೇವಲ ಐಟಿ ಉದ್ಯೋಗವನ್ನು ಮಾತ್ರ ಇಷ್ಟಪಡುತ್ತಿದ್ದಾರೆ. ದೇಶ ಸೇವೆ ಮತ್ತು ಸಮಾಜ ಸೇವೆ ಬಹು ಮುಖ್ಯವಾದದ್ದು. ಜನ್ಮ ನೀಡಿದ ತಾಯಿ ಮತ್ತು ಜನ್ಮಭೂಮಿ ಎರಡೂ ಶ್ರೇಷ್ಠ. ತಾಯ್ನಾಡಿನ ರಕ್ಷಣೆಗೆ ಯುವಜನರು ಸೇನೆಯತ್ತ ಆಕರ್ಷಿತರಾಗಬೇಕು. ಎಳೆಯ ವಯಸ್ಸಿನಿಂದಲೇ ನಿಮಗೆ ದೇಶಸೇವೆಗೆ ಬದುಕನ್ನು ಮುಡಿಪಾಗಿಡುವ ಆದರ್ಶ ಮೈಗೂಡಲಿ’ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ಮಾತನಾಡಿ, ಪ್ರವಾಸಿಗರ ಸ್ವರ್ಗ ತಾಣವಾದ ಕಾಶ್ಮೀರದ ಕಾರ್ಗಿಲ್ ಪ್ರದೇಶದ ಮೇಲೆ 1999ರಲ್ಲಿ ನಡೆದ ಪಾಕಿಸ್ತಾನದ ಮೋಸದಿಂದ ದಾಳಿ ಮಾಡಿತು. ಈ ಕಾರ್ಗಿಲ್ ಕದನದಲ್ಲಿ ಕೆಚ್ಚೆದೆಯ ಹೋರಾಟ ನಡೆಸಿದ ಸೈನಿಕರ ಹೋರಾಟದ ಫಲವೇ ಕಾರ್ಗಿಲ್ ವಿಜಯೋತ್ಸವ. ನಿರಂತರ ದೇಶಸೇವೆಯಲ್ಲಿ ತೊಡಗಿರುವ ಸೈನಿಕರು ನಮ್ಮೆಲ್ಲರಿಗೂ ಪ್ರೇರಣಾದಾಯಿಗಳು ಎಂದು ಹೇಳಿದರು.
ಶಿಕ್ಷಕರಾದ ಚಾಂದ್‌ಪಾಷ, ಅಶೋಕ್, ಭಾರತಿ, ಅಂಗನವಾಡಿ ಶಿಕ್ಷಕಿ ಮಂಜುಳಮ್ಮ, ನೀಲಮ್ಮ, ಎಸ್‌ಡಿಎಂಸಿ ಅಧ್ಯಕ್ಷೆ ಪುಷ್ಪ, ಸದಸ್ಯರಾದ ಚಿಕ್ಕಮುನಿಯಪ್ಪ, ಹನುಮಂತರೆಡ್ಡಿ, ಗ್ರಾಮದ ದ್ಯಾವಪ್ಪ, ಗೋವಿಂದರಾಜ್, ಶ್ರೀನಾಥ್, ರವೀಂದ್ರ, ವಿಜಿ, ನಯನ್, ಮುನಿರಾಜು, ಮಂಜುಳಮ್ಮ, ಮುನಿರತ್ನಮ್ಮ, ವೆಂಕಟಮ್ಮ ಹಾಜರಿದ್ದರು.

