Home Blog Page 431

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾಗಿ ಆಯ್ಕೆ

0

ಶಿಡ್ಲಘಟ್ಟ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡರ ಬಣದ ಅಧ್ಯಕ್ಷರಾಗಿ ಎ.ನಾಗರಾಜ್‌ ಆಯ್ಕೆಯಾಗಿದ್ದಾರೆ.

ತಾಲ್ಲೂಕು ಕಚೇರಿಗೆ ಸಾರ್ವಜನಿಕರು ಅಲೆದಾಡಬಾರದು

0

ತಾಲ್ಲೂಕು ಕಚೇರಿಗೆ ಸಾರ್ವಜನಿಕರು ಅಲೆದಾಡಬಾರದು. ತಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳಲು ಬರುವ ಜನರಿಗೆ ಆದಷ್ಟು ಬೇಗ ಪರಿಹಾರೋಪಾಯಗಳನ್ನು ಒದಗಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ನೂತನ ತಹಶೀಲ್ದಾರ್‌ ಎಸ್‌.ಅಜಿತ್‌ ಕುಮಾರ್‌ ರೈ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ನೂತನವಾಗಿ ಅಧಿಕಾರ ವಹಿಸಿಕೊಂಡು ಕಾರ್ಯಾರಂಭ ಆರಂಭಿಸಿರುವ ತಹಶೀಲ್ದಾರ್‌ ಅವರನ್ನು ಬುಧವಾರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಸದಸ್ಯರು ಮತ್ತು ಯೂನಿಟಿ ಸಿಲ್‌ಸಿಲಾ ಫೌಂಡೇಷನ್‌ ವತಿಯಿಂದ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ತಾಲ್ಲೂಕು ಕಚೇರಿಯಲ್ಲಿ ಕೆಲಸ ವಿಳಂಬವಾಗಬಾರದೆಂದು ತಾಲ್ಲೂಕು ಅಧಿಕಾರಿಗಳ ಸಭೆಯಲ್ಲಿ ತಿಳಿಸಿದ್ದೇನೆ. ನಗರದಲ್ಲಿ ಕಾಡುತ್ತಿರುವ ನೈರ್ಮಲ್ಯೀಕರಣ ಮತ್ತು ಕಸ ವಿಲೇವರಿಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ವಾಹನಗಳ ನಿಲುಗಡೆಯಿಂದಾಗಿ ಆಗುತ್ತಿರುವ ಟ್ರಾಫಿಕ್‌ ಸಮಸ್ಯೆ ಬಗೆ ಹರಿಸಲು ಪೊಲೀಸರಿಗೆ ಹೇಳಿದ್ದೇನೆ. ಮರಳು ಗಣಿಗಾಣಿಕೆ ಸೇರಿದಂತೆ ತಾಲ್ಲೂಕಿನ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುವುದಾಗಿ ತಿಳಿಸಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೇಶವಮೂರ್ತಿ, ಕಾರ್ಯದರ್ಶಿ ಅಕ್ಕಲರೆಡ್ಡಿ, ಮಾಜಿ ಅಧ್ಯಕ್ಷ ಗುರುರಾಜರಾವ್‌, ಯೂನಿಟಿ ನಿಲ್‌ಸಿಲಾ ಫೌಂಡೇಷನ್‌ನ ಮಹಮ್ಮದ್‌ ಅಸದ್‌, ಅಕ್ರಮ್‌, ಇಮ್ತಿಯಾಜ್‌ಪಾಷ ಮತ್ತಿತರರು ಹಾಜರಿದ್ದರು.

ಯುವ ಜನತೆ ಚುನಾವಣಾ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳಬೇಕು

0

ಪ್ರಜಾಪ್ರಭುತ್ವವನ್ನು ಬಲಪಡಿಸಲು ಯುವ ಜನತೆ ಚುನಾವಣಾ ಪ್ರಕ್ರಿಯೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ತಹಶೀಲ್ದಾರ್‌ ಎಸ್‌.ಅಜಿತ್‌ ಕುಮಾರ್‌ ರೈ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಬುಧವಾರ ಭಾರತ ಚುನಾವಣಾ ಆಯೋಗದ ಸಂಸ್ಥಾಪನಾ ದಿನದ ಅಂಗವಾಗಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯ ಕಾರ್ಯಕ್ರಮದಲ್ಲಿ ಯುವ ಮತದಾರರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿ ಅವರು ಮಾತನಾಡಿದರು.
ಲಕ್ಷಾಂತರ ಯುವ ಜನತೆ ಪ್ರತಿ ವರ್ಷ ನಡೆಯುವ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಮತದಾರರಾಗಿ ನೋಂದಾವಣೆಗೊಳ್ಳುತ್ತಾರೆ. ಪ್ರಜಾಪ್ರಭುತ್ವ ಬಲಗೊಳ್ಳಬೇಕಾದರೆ ಎಲ್ಲರ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ. ನಮ್ಮ ದೇಶ ಅಭಿವೃದ್ಧಿಯಾಗಬೇಕಾದರೆ, ನಾವು ನಮ್ಮ ಆಯ್ಕೆಯನ್ನು ಅಮೂಲ್ಯ ಮತದಾನದ ಮೂಲಕ ವ್ಯಕ್ತಪಡಿಸಬೇಕು ಎಂದು ಹೇಳಿದರು.
‘ಪ್ರಜಾಪ್ರಭುತ್ವದಲ್ಲಿ ದೃಢವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿಹಿಡಿಯುತ್ತೇವೆಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆಂದು ಈ ಮೂಲಕ ಪ್ರತಿಜ್ಞೆ ಸ್ವೀಕರಿಸುತ್ತೇವೆ’ ಎಂದು ಯುವ ಮತದಾರರಿಗೆ ತಹಶೀಲ್ದಾರ್‌ ಎಸ್‌.ಅಜಿತ್‌ ಕುಮಾರ್‌ ರೈ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಮತದಾರರ ಗುರುತಿನ ಚೀಟಿಯನ್ನು ವಿತರಿಸಿದರು.
ಗ್ರೇಡ್‌ 2 ತಹಶೀಲ್ದಾರ್‌ ವಾಸುದೇವಮೂರ್ತಿ, ನಗರಸಭಾ ಆಯುಕ್ತ ಹರೀಶ್‌, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೇಶವಮೂರ್ತಿ, ಮಾಜಿ ಅಧ್ಯಕ್ಷ ಗುರುರಾಜರಾವ್‌, ಪಿಆರ್‌ಓ ಸುಂದರಾಚಾರಿ ಮತ್ತಿತರರು ಹಾಜರಿದ್ದರು.

ಮುಂದಿನ ಪೀಳಿಗೆಗೆ ಪಾರಂಪರಿಕ ಕಲೆ ಪರಿಚಯಿಸಬೇಕು

0

ಭಾರತೀಯ ಸಂಸ್ಕೃತಿಯ ಪ್ರತೀಕವಾದ ರಂಗೋಲಿ ಕಲೆ ಉಳಿವಿಗೆ ಮಹಿಳೆಯರು ಮುಂದಾಗಬೇಕು. ಮುಂದಿನ ಪೀಳಿಗೆಗೆ ಪಾರಂಪರಿಕ ಕಲೆ ಪರಿಚಯಿಸಬೇಕು ಎಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಮಂಗಳಗೌರಮ್ಮ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗುರುವಾರ ಲೋಕ ಶಿಕ್ಷಣ ನಿರ್ದೇಶನಾಲಯ, ರಾಜ್ಯ ಸಾಕ್ಷರತ ಮಿಷನ್ ಪ್ರಾಧಿಕಾರ ಹಾಗೂ ಮೇಲೂರು ಗ್ರಾಮ ಲೋಕ ಶಿಕ್ಷಣ ಸಮಿತಿಯ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ರಂಗೋಲೆ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾಡಿನ ವೈವಿಧ್ಯಮಯ ಸಂಸ್ಕೃತಿಯನ್ನು ಬಿಂಬಿಸುವಂತಹ ದೇಶೀಯ ಕಲೆಗೆ ಮೊದಲನೇ ಆಧ್ಯತೆಯನ್ನು ನೀಡಬೇಕು. ಇತ್ತಿಚಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ರಂಗದಲ್ಲೂ ತಮ್ಮನ್ನು ತೊಡಗಿಸಿಕೊಂಡು ಪುರುಷರಿಗಿಂತ ಕಡಿಮೆಯಿಲ್ಲವೆಂಬುದನ್ನು ಸಾಬೀತುಪಡಿಸಬೇಕು. ಇತ್ತಿಚೆಗೆ ಹೆಚ್ಚಾಗುತ್ತಿರುವ ಟಿ.ವಿ.ಸಂಸ್ಕೃತಿಯಿಂದಾಗಿ ದೇಶೀಯ ಸಂಸ್ಕೃತಿಯಿಂದ ಮಹಿಳೆಯರು ವಿಮುಖರಾಗುತ್ತಿದ್ದು, ಇಂತಹ ರಾಷ್ಟ್ರೀಯ ಹಬ್ಬಗಳ ಆಚರಣೆ ಕಾರ್ಯಕ್ರಮಗಳಲ್ಲಿ ಅವಕಾಶಗಳನ್ನು ಕಲ್ಪಿಸಿಕೊಟ್ಟು ಅವರಲ್ಲಿರುವ ಕಲೆಯನ್ನು ಪ್ರೋತ್ಸಾಹಪಡಿಸಬೇಕು ಎಂದರು.
ಲೋಕ ಶಿಕ್ಷಣ ಸಮಿತಿ ಪ್ರೇರಕಿ ರಾಧಮ್ಮ ಮಾತನಾಡಿ, ಮಹಿಳೆಯರಲ್ಲಿ ಅಕ್ಷರ ಜ್ಞಾನದ ಅವಶ್ಯಕತೆಯ ಬಗ್ಗೆ ತಿಳಿಸಿಕೊಡುವುದು, ಹಾಗೂ ಅವರನ್ನು ಅಕ್ಷರಸ್ಥರನ್ನಾಗಿ ಮಾಡಿ, ಸಾಮಾಜಿಕ ಪ್ರಜ್ಞೆ ಮೂಡಿಸುವಂತಹ ಕಾರ್ಯವನ್ನು ಲೋಕ ಶಿಕ್ಷಣ ಸಮಿತಿಯ ಮೂಲಕ ಮಾಡಲಾಗುತ್ತಿದೆ. ಮೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲೂರು, ಗಂಗನಹಳ್ಳಿ, ಕಂಬದಹಳ್ಳಿ, ಚೌಡಸಂದ್ರ ಗ್ರಾಮಗಳಿಂದ ನೂರಾರು ಮಂದಿ ಮಹಿಳೆಯರಿಗೆ ತರಬೇತಿಗಳನ್ನು ನೀಡಲಾಗುತ್ತಿದೆ. ರಂಗೋಲೆಯಂತಹ ಕಲೆಯಿಂದ ಮಹಿಳೆಯರ ಮೆದುಳು ಹೆಚ್ಚು ಕ್ರೀಯಾಶೀಲವಾಗುವುದರ ಜೊತೆಗೆ ಏಕಾಗ್ರತೆಯನ್ನು ಉಂಟು ಮಾಡುತ್ತದೆ. ಇಂತಹ ಕಲೆಯನ್ನು ಮಕ್ಕಳು, ಮಹಿಳೆಯರು, ವೃಧ್ದರು ಸೇರಿದಂತೆ ಎಲ್ಲಾ ವಯೋಮಾನದ ಮಿತಿಯಿಲ್ಲದೆ ಕಲಿಯಬಹುದಾಗಿದೆ ಎಂದರು.
ಉಪಪ್ರೇರಕಿ ಎಸ್.ಎಂ.ಸರೋಜ, ಎಸ್.ರೇಣುಕಾ, ಶೋಭಾ, ಲತಾ, ಮುಂತಾದವರು ಹಾಜರಿದ್ದರು.

ದೇಶದಲ್ಲಿ ಆಂತರಿಕವಾದ ಜ್ವಲಂತ ಸಮಸ್ಯೆಗಳನ್ನು ತೊಡೆದು ಹಾಕಲು ಯುವಜನತೆ ಶ್ರಮಿಸಬೇಕು

0

ದೇಶದಲ್ಲಿ ಆಂತರಿಕವಾದ ಜ್ವಲಂತ ಸಮಸ್ಯೆಗಳನ್ನು ತೊಡೆದು ಹಾಕಲು ಯುವಜನತೆ ಹೆಚ್ಚು ಸಕ್ರಿಯರಾಗಬೇಕು. ಅತ್ಯಂತ ಹೆಚ್ಚು ಮಾನವ ಸಂಪನ್ಮೂಲವನ್ನು ಹೊಂದಿರುವ ಹಾಗೂ ಯುವಶಕ್ತಿಯಿಂದ ಕೂಡಿರುವ ರಾಷ್ಟ್ರವಾದ ಭಾರತವನ್ನು ಎಲ್ಲಾ ದೇಶಗಳಿಗಿಂತಲೂ ಉನ್ನತ ಸ್ಥಿತಿಗೆ ಕರೆದೊಯ್ಯಬೇಕಾದಂತಹ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜನೆ ಮಾಡಲಾಗಿದ್ದ ೬೮ ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜನೆ ಮಾಡಲಾಗಿದ್ದ ೬೮ ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಸರ್ಕಾರಿ ನೌಕರರಾದ ಸುಂದರಾಚಾರಿ, ಮತ್ತು ಟಿ.ಟಿ.ನರಸಿಂಹಪ್ಪ ಅವರನ್ನು ಸನ್ಮಾನಿಸಲಾಯಿತು.
ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜನೆ ಮಾಡಲಾಗಿದ್ದ ೬೮ ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಸರ್ಕಾರಿ ನೌಕರರಾದ ಸುಂದರಾಚಾರಿ, ಮತ್ತು ಟಿ.ಟಿ.ನರಸಿಂಹಪ್ಪ ಅವರನ್ನು ಸನ್ಮಾನಿಸಲಾಯಿತು.

ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ವಿರೋಧಿಸಿ, ಅವುಗಳನ್ನು ಬುಡ ಸಮೇತವಾಗಿ ಕಿತ್ತೊಗೆಯಬೇಕಾದಂತಹ ಮಾನಸಿಕ ಧೈರ್ಯವನ್ನು ಪ್ರತಿಯೊಬ್ಬ ನಾಗರಿಕರು ಪಡೆದುಕೊಳ್ಳಬೇಕು. ಶಿಕ್ಷಕರು ಮಕ್ಕಳಲ್ಲಿ ರಾಷ್ಟ್ರಪ್ರೇಮ, ಮತ್ತು ರಾಷ್ಟ್ರದ ಹಿರಿಮೆಯ ಬಗ್ಗೆ ತಿಳುವಳಿಕೆ ನೀಡಬೇಕು. ಸಂವಿಧಾನದ ಉದ್ದೇಶಗಳು, ರಚನೆ ಮಾಡಿದ ರೀತಿ, ಅದನ್ನು ಅನಸರಿಸಬೇಕಾದಂತಹ ಅನಿವಾರ್ಯತೆ ಕುರಿತು ಮಕ್ಕಳಿಗೆ ತಿಳಿಸಬೇಕು. ರಾಷ್ಟ್ರ ನಾಯಕರಾದ ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮಾಗಾಂಧೀಜಿ, ಸುಭಾಷ್‌ಚಂದ್ರಬೋಸ್, ಲಾಲ್‌ಬಹುದ್ದೂರ್ ಶಾಸ್ತ್ರೀ ಮುಂತಾದ ನಾಯಕರ ಆದರ್ಶವನ್ನು ತಿಳಿಸಿಕೊಡಬೇಕು ಎಂದರು.
ತಹಶೀಲ್ದಾರ್ ಎಸ್. ಅಜಿತ್ ಕುಮಾರ್ ರೈ ಮಾತನಾಡಿ, ಸ್ವಾತಂತ್ರ್ಯ ಭಾರತದ ಸಂವಿಧಾನವನ್ನು ಪ್ರತಿಯೊಬ್ಬ ನಾಗರಿಕರು ಗೌರವಿಸುವುದರ ಜೊತೆಗೆ ರಾಷ್ಟ್ರಧ್ವಜ, ರಾಷ್ಟ್ರಗೀತೆಯನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಬೇಕು ಎಂದು ಹೇಳಿದರು.
ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜನೆ ಮಾಡಲಾಗಿದ್ದ ೬೮ ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ನಡೆದ ಪಥಸಂಚಲನದಲ್ಲಿ  ಸರ್ಕಾರಿ ಶಾಲೆಯೊಂದರ ವಾದ್ಯವೃಂದದ ನೇತೃತ್ವ ವಹಿಸಿದ್ದ ವಿದ್ಯಾರ್ಥಿನಿ ಮುಖ್ಯದಂಡವನ್ನು ಆಗಸಕ್ಕೆ ಚಿಮ್ಮಿಸಿ ನಂತರ ಹಿಡಿದಳು.
ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜನೆ ಮಾಡಲಾಗಿದ್ದ ೬೮ ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ನಡೆದ ಪಥಸಂಚಲನದಲ್ಲಿ ಸರ್ಕಾರಿ ಶಾಲೆಯೊಂದರ ವಾದ್ಯವೃಂದದ ನೇತೃತ್ವ ವಹಿಸಿದ್ದ ವಿದ್ಯಾರ್ಥಿನಿ ಮುಖ್ಯದಂಡವನ್ನು ಆಗಸಕ್ಕೆ ಚಿಮ್ಮಿಸಿ ನಂತರ ಹಿಡಿದಳು.

ಪ್ರಪಂಚದಲ್ಲಿ ಅತ್ಯುತ್ತಮವಾದ, ಸರ್ವಧರ್ಮಗಳಿಗೆ ಸಮಾನತೆಯನ್ನು ಸಾರುವಂತಹ ಸಂವಿಧಾನವನ್ನು ಹೊಂದಿರುವ ಏಕೈಕ ರಾಷ್ಟ್ರ ಭಾರತವಾಗಿದೆ. ದೇಶದಲ್ಲಿ ಎಲ್ಲಾ ಧರ್ಮದ ಜನರು ಸಹಬಾಳ್ವೆಯಿಂದ ಜೀವಿಸಲು ಅವಕಾಶವಿದ್ದರೂ ಕೂಡಾ ಜಾತಿ ವ್ಯವಸ್ಥೆ, ಭ್ರಷ್ಟಾಚಾರ, ಅಪೌಷ್ಟಿಕತೆ, ಹಾಗೂ ಭಯೋತ್ಪಾದನೆ ಕೃತ್ಯಗಳ ಭಯ ರಾಷ್ಟ್ರದ ಜನತೆಯನ್ನುಕಾಡುತ್ತಿರುವುದು ಶೋಚನೀಯವಾದ ಸಂಗತಿಯಾಗಿದೆ. ಎಲ್ಲಾ ಧರ್ಮಗಳ ಜನತೆಯಲ್ಲಿ ಮೇಲು ಕೀಳೆಂಬ ಭಾವನೆ ತೊಲಗಿ ಹೋಗಿ, ನಾವೆಲ್ಲರೂ ಭಾರತೀಯರು ಎನ್ನುವಂತಹ ಸದ್ಭಾವನೆ ಮೂಡಬೇಕು ಎಂದರು.
ಸಮಾರಂಭದಲ್ಲಿ ಪೊಲೀಸ್, ಗೃಹ ರಕ್ಷಕದಳ, ಆಶಾಕಿರಣ ಶಾಲೆಯ ಮಕ್ಕಳು ಸೇರಿದಂತೆ ಬಹುತೇಕ ಶಾಲಾ ಮಕ್ಕಳಿಂದ ಧ್ವಜವಂದನೆ ಸ್ವೀಕಾರ ನಡೆಯಿತು.
ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಸರ್ಕಾರಿ ನೌಕರರಾದ ಸುಂದರಾಚಾರಿ, ಮತ್ತು ಟಿ.ಟಿ.ನರಸಿಂಹಪ್ಪ ಅವರನ್ನು ಸನ್ಮಾನಿಸಲಾಯಿತು. ಕಸಾಪ ತಾಲ್ಲೂಕು ಘಟಕದ ದತ್ತಿ ಕಾರ್ಯಕ್ರಮದ ಅಡಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ ಶಾಲಾ ತಂಡಗಳಿಗೆ ಪುಸ್ತಕ, ಭಾರತ ಮಾತೆಯ ಚಿತ್ರಪಟ ಮತ್ತು ಪ್ರಶಸ್ತಿಪತ್ರವನ್ನು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ನೀಡಿದರು.
ಶಾಲಾ ಮಕ್ಕಳಿಂದ ದೇಶ ಭಕ್ತಿ ಮೂಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ತಾಲ್ಲೂಕು ಪಂಚಾಯಿತಿ ಇ.ಓ.ವೆಂಕಟೇಶ್, ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಮುನೇಗೌಡ, ಕೇಶವರೆಡ್ಡಿ, ವೆಂಕಟಸ್ವಾಮಿ, ಸಿ.ಪಿ.ಐ.ವೆಂಕಟೇಶ್, ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಕಸಾಪ ತಾಲ್ಲೂಕು ಅಧ್ಯಕ್ಷ ಅನಂತಕೃಷ್ಣ ಮತ್ತಿತರರು ಹಾಜರಿದ್ದರು.

ಆಸಕ್ತಿಗೆ ಎಲ್ಲೆ ಎಲ್ಲಿದೆ

0

ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗುರುವಾರ ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘದ 40ನೇ ವರ್ಷ ಹಾಗೂ 2000ನೇ ಅಂಚೆ ಚೀಟಿಗಳ ಪ್ರದರ್ಶನದಲ್ಲಿ ಪ್ರದರ್ಶಿಸಿರುವ ಅಂಚೆ ಚೀಟಿಗಳ ಸಂಗ್ರಹವನ್ನು ಕುತೂಹಲದಿಂದ ವೀಕ್ಷಿಸುತ್ತಿರುವ ಅಂಗವಿಕಲರೊಬ್ಬರನ್ನು ಕಂಡಾಗ ಆಲೋಚನೆಗೆ, ಮನಸ್ಸಿಗಷ್ಟೆ ಅಂಗವೈಕಲ್ಯ ದೇಹಕ್ಕಲ್ಲ ಎಂಬುದನ್ನು ಸಾರುವಂತಿದೆ.

ಅಂಚೆ ಚೀಟಿಗಳು ದೇಶದ ಇತಿಹಾಸವನ್ನು ಹೇಳುತ್ತವೆ

0

ಅಂಚೆ ಚೀಟಿಗಳು ದೇಶದ ಇತಿಹಾಸವನ್ನು ಹೇಳುತ್ತವೆ. ದೇಶದ ಇತಿಹಾಸವನ್ನು ನೋಡಬೇಕಾದರೆ ನಾವು ಅಂಚೆ ಚೀಟಿಗಳನ್ನು ನೋಡಬೇಕು. ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಅಂಚೆ ಚೀಟಿಗಳನ್ನು ಇಲಾಖೆ ಹೊರತಂದಿದೆ. ಅವುಗಳನ್ನು ವಿವಿಧ ವಿಷಯಗಳಿಗನುಗುಣವಾಗಿ ಪ್ರದರ್ಶಿಸಿ ಮಾಹಿತಿ ಕಣಜವಾಗಿಸಬಹುದು ಎಂದು ಕರ್ನಾಟಕ ಅಂಚೆ ಚೀಟಿ ಸಂಗ್ರಹಕಾರರ ಸಂಘದ ಅಧ್ಯಕ್ಷ ಚೈತನ್ಯದೇವ್‌ ತಿಳಿಸಿದರು.
ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗುರುವಾರ ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘದ 40ನೇ ವರ್ಷ ಹಾಗೂ 2000ನೇ ಅಂಚೆ ಚೀಟಿಗಳ ಪ್ರದರ್ಶನ, ರೂರಾಪೆಕ್ಸ್(ರೂರಲ್ ಫಿಲಾಟಲಿ ಎಕ್ಸಿಬಿಷನ್) 2000 ಎಂಬ ವಿಶ್ವ ಗ್ರಾಮೀಣ ಅಂಚೆ ಚೀಟಿಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯಪೂರ್ಣ ಹವ್ಯಾಸಗಳಿಂದ ಉತ್ತಮ ಸಮಾಜವನ್ನು ಕಟ್ಟಲು ಸಾಧ್ಯವಾಗುತ್ತದೆ. ಚಿಕ್ಕವರಿದ್ದಾಗಲೇ ಅಂಚೆಚೀಟಿ ಸಂಗ್ರಹಣೆ ರಚನಾತ್ಮಕ ಹವ್ಯಾಸವಾಗುತ್ತದೆ. ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘವನ್ನು ಕಟ್ಟಿ, 40 ವರ್ಷಗಳ ಕಾಲ ಮುಂದುವರೆಸಿಕೊಂಡು ಬಂದು, 2000 ಪ್ರದರ್ಶನವನ್ನು ಪೂರೈಸಿರುವುದು ದಾಖಲೆಯ ಸಂಗತಿಯಾಗಿದೆ ಎಂದು ಹೇಳಿದರು.
ಚೀಫ್‌ ಫೋಸ್ಟ್‌ ಮಾಸ್ಟರ್‌ ಎಸ್‌.ಶಿವರಾಮ್‌ ಮಾತನಾಡಿ, ಅಂಚೆಚೀಟಿಗಳನ್ನು ಸಂಗ್ರಣೆಯು ಒಳ್ಳೆಯ ಹವ್ಯಾಸವಾಗಿದೆ. ಇದರಿಂದಾಗಿ ಉತ್ತಮ ಜ್ಞಾನ ಸಂಗ್ರಹಣೆ ಆಗುತ್ತದೆ. ಅಂಚೆಚೀಟಿಗಳ ಸಂಗ್ರಹಣೆಯ ಹವ್ಯಾಸವನ್ನು ಜೀವಂತವಾಗಿ ಉಳಿಸಬೇಕು. ಇದರಿಂದ ಎಲ್ಲರಿಗೂ ಜ್ಞಾನದ ವಿಸ್ತಾರವಾಗುವಂತೆ ಪ್ರದರ್ಶಿಸಬೇಕು ಎಂದು ಹೇಳಿದರು.

ಅಂಚೆ ಚೀಟಿಗಳ ಪ್ರದರ್ಶನವನ್ನು ವೀಕ್ಷಿಸುತ್ತಿರುವ ಗಣ್ಯರು
ಅಂಚೆ ಚೀಟಿಗಳ ಪ್ರದರ್ಶನವನ್ನು ವೀಕ್ಷಿಸುತ್ತಿರುವ ಗಣ್ಯರು

ಈ ಸಂದರ್ಭದಲ್ಲಿ ರೂರಾಪೆಕ್ಸ್ 2000 ಎಂಬ ಸ್ಮರಣಸಂಚಿಕೆಯನ್ನು ಕರ್ನಾಟಕ ಗ್ರಾಮಾಂತರ ಅಂಚೆಚೀಟಿ ಸಂಗ್ರಹಕಾರರ ಸಂಘದಿಂದ ಬಿಡುಗಡೆ ಮಾಡಲಾಯಿತು. 40 ವರ್ಷಗಳಲ್ಲಿ ನಡೆಸಿರುವ 2000 ಪ್ರದರ್ಶನಗಳ ಚಿತ್ರಗಳು, ವಿಶೇಷ ಲಕೋಟೆಗಳು, ಅಂಚೆ ಚೀಟಿಗಳಿಗೆ ಸಂಬಂಧಿಸಿದ ಸಂಗ್ರಹಯೋಗ್ಯ ಲೇಖನಗಳು ಈ ಪುಸ್ತಕದಲ್ಲಿವೆ.
ದೇಶದ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ, ಭಾಷೆಯನ್ನು ಪ್ರತಿನಿಧಿಸುವ ಅಂಚೆ ಚೀಟಿಗಳು, ರಾಷ್ಟ್ರ ಲಾಂಛನ­ಗಳು, ದೇಶದ ಸಮೃದ್ಧ ಸಸ್ಯ ಸಂಪತ್ತು, ನದಿ, ಕಡಲು, ಬಂದರು, ಪ್ರಾಣಿ, ಪಕ್ಷಿಗಳ ಚಿತ್ರಗಳನ್ನು ಒಳಗೊಂಡಿರುವ ಅಂಚೆ ಚೀಟಿಗಳು, ಸ್ವಾತಂತ್ರ್ಯ ಹೋರಾಟಗಾರರು, ಭಾರತ ರತ್ನ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಖ್ಯಾತ ವಿಜ್ಞಾನಿಗಳು, ಮಹಾಪುರುಷರು, ಮಹಾತ್ಮ ಗಾಂಧೀಜಿ ಕುರಿತು ಅಂಚೆ ಚೀಟಿಗಳು, ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಟ, ನಟಿಯರ ಸ್ಮರಣೆಗಾಗಿ ಹೊರತರಲಾ­ಗಿರುವ ಅಂಚೆಚೀಟಿಗಳು, ರಾಷ್ಟ್ರೀಯ ಭಾವೈಕ್ಯತೆ ಸಾರುವ ಹಬ್ಬ, ಆಚರಣೆಗಳು, ವೈವಿಧ್ಯಮಯ ಆಭರಣಗಳು, ಶ್ರೇಷ್ಠ ಚಲನಚಿತ್ರಗಳು, ದೇಶದ ಪ್ರಖ್ಯಾತ ದೇವಾಲಯ, ಮಸೀದಿ, ಚರ್ಚ್‌, ಐತಿಹಾಸಿ ಸ್ಮಾರಕ­ಗಳು, ಅರಮನೆಗಳು, ಕ್ರೀಡೆ, ರೈಲು, ವಿಮಾನಯಾನ ಆರಂಭದ ದಿನಗಳನ್ನು ನೆನಪಿಸುವ ಚಿತ್ರಗಳನ್ನು ಒಳಗೊಂಡ ವೈವಿ­ಧ್ಯಮಯ ಭಾರತವನ್ನು ಪ್ರತಿನಿಧಿ­ಸುವ ಅಂಚೆಚೀಟಿಗಳನ್ನು ಮತ್ತು ವಿಶೇಷ ಅಂಚೆ ಕವರ್‌ಗಳನ್ನು ಪ್ರದರ್ಶನದಲ್ಲಿ ಇಡಲಾಗಿತ್ತು.
ಪ್ರದರ್ಶನದಲ್ಲಿ ವ್ಯವಸಾಯ, ಪರಿಸರ, ವಿಜ್ಞಾನ, ಭಾರತದ ಸಾಂಸ್ಕೃತಿಕ ಪರಂಪರೆ, ಹೂವುಗಳು, ಭಾರತದ ಇತಿಹಾಸ ಪುರುಷರು, ವಚನಕಾರರು, ದಾರ್ಶನಿಕರು ಅಲ್ಲದೆ ದೇವನಹಳ್ಳಿಯಲ್ಲಿ ಜನಿಸಿದ ಮೈಸೂರು ಹುಲಿ ಟಿಪ್ಪೂ ಸುಲ್ತಾನ್, ಸರ್. ಎಂ.ವಿಶ್ವೇಶ್ವರಯ್ಯ, ಡಾ.ರಾಜಕುಮಾರ್ ಅಲ್ಲದೆ ಇತರ ಸಾವಿರಾರು ಅಂಚೆ ಚೀಟಿಗಳು ವಿದ್ಯಾರ್ಥಿಗಳ ಗಮನ ಸೆಳೆದವು.
ಅಂಚೆ ಚೀಟಿ ಸಂಗ್ರಹಕಾರರಾದ ಮೇಲೂರು ಎಂ.ಆರ್‌.ಪ್ರಭಾಕರ್‌, ಪ್ರಕಾಶ್‌ ಚಂದ್ರ, ರಾಜಗೋಪಾಲ, ವಿನೋದ ಪುಠಾಣಿಕರ್‌, ಕೆ.ಟಿ.ಹನುಮಂತರಾಜು, ಎಚ್‌.ಟಿ.ಕೃಷ್ಣಾರೆಡ್ಡಿ, ಕೆ.ಈರಣ್ಣ ಅವರು ರೂರಾಪೆಕ್ಸ್‌ನ ಪ್ರದರ್ಶನದಲ್ಲಿ ತಮ್ಮ ಸಂಗ್ರಹವನ್ನು ಪ್ರದರ್ಶಿಸಿದ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಮುನಾ ಧರ್ಮೇಂದ್ರ, ಜಗನ್ನಾಥ್‌ಪ್ರಕಾಶ್‌, ಜಗನ್ನಾಥ್‌ಮಣಿ, ಮೇಲೂರು ವೆಂಕಟರೆಡ್ಡಿ, ರಾಮೇಗೌಡ, ಜೆ.ಜೆ.ಗೌಡ, ರಾಮಕೃಷ್ಣಪ್ಪ, ಮೋಹನ್‌ರಾವ್‌, ಕೃಷ್ಣಾರೆಡ್ಡಿ, ರಾಮು, ವರಪ್ರಸಾದ್‌ ಮತ್ತಿತರರು ಹಾಜರಿದ್ದರು.

ಸಮಾಜವನ್ನು, ಸಂಸ್ಕೃತಿಯನ್ನು ಸಂರಕ್ಷಿಸುವ ಹೊಣೆಗಾರಿಗೆ ಹಿಂದೂಗಳದ್ದು

0

ಹಿಂದೂಗಳನ್ನು ಸಂಘಟಿಸುವ ಮೂಲಕ ದೇಶ, ಸಮಾಜವನ್ನು, ಸಂಸ್ಕೃತಿಯನ್ನು ಸಂರಕ್ಷಿಸುವ ಕೆಲಸವನ್ನು ಹಿಂದೂ ಜಾಗರಣ ವೇದಿಕೆ ಮಾಡಿಕೊಂಡು ಬಂದಿದೆ. ದೇಶವನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬ ಹಿಂದೂವಿನ ಮೇಲಿದೆ ಎಂದು ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ದೋ.ಕೇಶವಮೂರ್ತಿ ಹೇಳಿದರು.
ತಾಲ್ಲೂಕು ಹಿಂದೂ ಜಾಗರಣ ವೇದಿಕೆ ವತಿಯಿಂದ ಭಾನುವಾರ ನಗರದ ವಾಸವಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಬೃಹತ್ ಹಿಂದೂ ಸಮಾಜೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಿಂದೂ ಸಮಾಜ ಜಾಗೃತಗೊಳ್ಳುವ ಮೂಲಕ ಸಂಘಟಿತರಾಗಬೇಕು ಎನ್ನುವ ದ್ಯೇಯದೊಂದಿಗೆ ಬೆಳೆದು ಬಂದ ಹಿಂದೂ ಜಾಗರಣ ವೇದಿಕೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ತಲುಪಿದ್ದು ಇದೀಗ ತಾಲ್ಲೂಕುಗಳಿಗೆ ದಾಪುಗಾಲು ಇಡುತ್ತಿದೆ ಎಂದರು.
ವಿಶ್ವದ ಯಾವುದೇ ಮೂಲೆಯಿಂದ ಬಂದ ವ್ಯಕ್ತಿಗಳನ್ನು ಎಲ್ಲರೂ ತಮ್ಮವರು ಎಂಬಂತೆ ಭಾವಿಸಿ ಅವರಿಗೆ ಸಮಾಜದಲ್ಲಿ ಸಮಾನವಾಗಿ ಬದುಕಲು ಅವಕಾಶ ನೀಡಿದ ಏಕೈಕ ದೇಶವೆಂದರೆ ಅದು ನಮ್ಮ ಭಾರತ ದೇಶ ಎಂಬ ಹೆಮ್ಮ ನಮ್ಮೆಲ್ಲರಿಗೂ ಇದೆ ಎಂದರು.

ಶಿಡ್ಲಘಟ್ಟ ತಾಲ್ಲೂಕು ಹಿಂದೂ ಜಾಗರಣ ವೇದಿಕೆ ವತಿಯಿಂದ ಭಾನುವಾರ ನಗರದ ವಾಸವಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಬೃಹತ್ ಹಿಂದೂ ಸಮಾಜೋತ್ಸವ ಸಮಾರಂಭದ ಉದ್ಘಾಟನೆಯನ್ನು ರಾಮಕೃಷ್ಣ ಆಶ್ರಮದ ಶ್ರೀ ಪೂರ್ಣಾನಂದ ಸ್ವಾಮೀಜಿ ನೆರವೇರಿಸಿದರು
ಶಿಡ್ಲಘಟ್ಟ ತಾಲ್ಲೂಕು ಹಿಂದೂ ಜಾಗರಣ ವೇದಿಕೆ ವತಿಯಿಂದ ಭಾನುವಾರ ನಗರದ ವಾಸವಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಬೃಹತ್ ಹಿಂದೂ ಸಮಾಜೋತ್ಸವ ಸಮಾರಂಭದ ಉದ್ಘಾಟನೆಯನ್ನು ರಾಮಕೃಷ್ಣ ಆಶ್ರಮದ ಶ್ರೀ ಪೂರ್ಣಾನಂದ ಸ್ವಾಮೀಜಿ ನೆರವೇರಿಸಿದರು

ದೇಶಾದ್ಯಂತ ೩೦೦ಕ್ಕೂ ಹೆಚ್ಚು ಜಾತಿಗಳನ್ನು ಹೊಂದಿರುವ ನಮ್ಮ ದೇಶದಲ್ಲಿ ಪ್ರಪಂಚದ ೩೩ ಸಾವಿರ ದೇವರನ್ನು ಪೂಜಿಸುತ್ತೇವೆ. ಭಯೋತ್ಪಾದನೆ ನಮ್ಮ ರಕ್ತದಲ್ಲಿಲ್ಲ. ಅಲ್ಪಸಂಖ್ಯಾತ ಹೆಸರಿನಲ್ಲಿ ದುಷ್ಟರನ್ನು ಬೆಳೆಸಿದ ಪರಿಣಾಮ ಇದೀಗ ದೇಶಾದ್ಯಂತ ಭಯೋತ್ಪಾದನೆ ರಾರಾಜಿಸುತ್ತಿದ್ದು ಇದನ್ನು ತಡೆಯಲು ಹಿಂದೂ ಜನಶಕ್ತಿಯೊಂದು ಎಚ್ಚರವಾಗಬೇಕು ಎಂದರು.
ಲವ್ ಜಿಹಾದಿ ಹೆಸರಲ್ಲಿ ಹಿಂದೂ ಹೆಣ್ಣು ಮಕ್ಕಳನ್ನು ಮುಸ್ಲಿಂ ಹುಡುಗರು ಅಪಹರಿಸಿ ಮಾನವ ಬಾಂಬ್‌ಗಳಾಗಿ ರೂಪಿಸುತ್ತಿರುವುದನ್ನು ತಡೆಗಟ್ಟಲು ಈ ದೇಶದ ಮಾತೆಯರು ಎಚ್ಚೆತ್ತುಕೊಳ್ಳಬೇಕು ಎಂದರು.
ಸ್ವಾತಂತ್ರ ಪೂರ್ವದಲ್ಲಿ ನಮ್ಮ ದೇಶದ ಹಿಂದೂ ಸಮಾಜದವರು ಮತಾಂತರಗೊಂಡಿದ್ದಕ್ಕಿಂತ ಸ್ವಾತಂತ್ರ್ಯ ಬಂದ ಮೇಲೆ ಮತಾಂತರವಾದವರ ಸಂಖ್ಯೆಯೇ ಹೆಚ್ಚು ಇದಕ್ಕೆ ನಮ್ಮದೇ ರಾಜಕಾರಣಿಗಳು ಕಾರಣ, ನಮ್ಮ ಧರ್ಮವೇ ಬೇರೆ ನಮ್ಮ ರೀತಿ ನೀತಿಗಳೇ ಬೇರೆ. ರಾಜಕೀಯ ಕಾರಣದಿಂದ ಮಾತ್ರ ಹಿಂದೂಗಳನ್ನು ಕೋಮುವಾದಿ ಎಂಬ ಹಣೆ ಪಟ್ಟಿ ಕಟ್ಟಲು ಮುಂದಾಗುವ ರಾಜರಾಣಿಗಳಿಗೆ ಮೊದಲು ನಾಚಿಕೆಯಾಗಬೇಕು ಎಂದರು.
ಹಿಂದೂಗಳ ತಾಯಿಯೆಂದು ಪೂಜಿಸುವ ೩೩ ಕೋಟಿ ದೇವತೆಗಳ ವಾಸಸ್ಥಾನವಾದ ಗೋಮಾತೆಯನ್ನು ಹತ್ಯೆ ಮಾಡಿ ಹಿಂದೂಗಳ ನಂಬಿಕೆಯನ್ನು ಧಮನ ಮಾಡುವ ವಿರುದ್ದ ಹಿಂದೂ ಜಾಗರಣ ವೇದಿಕೆ ಪದಾಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದರು.
ಕಾರ್ಯಕ್ರಮಕ್ಕೂ ಮುನ್ನ ನಗರದಾದ್ಯಂತ ಬೃಹತ್ ಶೋಭಾಯಾತ್ರೆಯ ಮೂಲಕ ಸಾಗಿದ ಯುವಕರನ್ನು ಸ್ವಾಗತಿಸಲು ಹಿಂದೂ ಸಮಾದಾಯದ ಬಹುತೇಕ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದುದು ವಿಶೇಷವಾಗಿತ್ತು.
ರಾಮಕೃಷ್ಣ ಆಶ್ರಮದ ಶ್ರೀ ಪೂರ್ಣಾನಂದ ಸ್ವಾಮೀಜಿ, ತುಮಕೂರು ವಿಭಾಗ ಸಂಚಾಲಕ ಜಿ.ಎಸ್‌.ಬಸವರಾಜ್ಜೀ. ಜಿಲ್ಲಾ ಸಂಚಾಲಕ ಸ್ವಾಗತ್, ಜಿಲ್ಲಾಧ್ಯಕ್ಷ ಎನ್.ಮಂಜುನಾಥ, ತಾಲ್ಲೂಕು ಅಧ್ಯಕ್ಷ ಎಂ.ಶ್ರೀನಿವಾಸ್, ತಾಲ್ಲೂಕು ಸಂಚಾಲಕ ಕೆ.ಸಿ.ಯೋಗಾನಂದ, ಉಪಾಧ್ಯಕ್ಷ ಚಲಪತಿ, ಕಾರ್ಯದರ್ಶಿ ಕೃಷ್ಣಮೂರ್ತಿ, ನಗರ ಘಟಕದ ಅಧ್ಯಕ್ಷ ಮಹೇಶ್, ಗಾಂಧಿನಗರ ಅಶ್ವತ್ಥ್ ಮತ್ತಿತರರು ಹಾಜರಿದ್ದರು.

ನಿಜಗುಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ

0

ಶರಣರ ಮಹತ್ವಗಳನ್ನು ತತ್ವಗಳನ್ನು ಮತ್ತು ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಮಾತ್ರ ಶರಣರ ಜಯಂತ್ಯುತ್ಸವ ಆಚರಿಸಿದ್ದಕ್ಕೆ ಸಾರ್ಥಕ ವಾಗುತ್ತದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದಲ್ಲಿ ಶನಿವಾರ ಮಿನಿ ವಿಧಾನಸೌಧ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಶ್ರೀ ನಿಜಗುಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನೇರ ನಡೆ ನುಡಿಗೆ ಹೆಸರಾದ ಚೌಡಯ್ಯನವರು ನಿಜ ಶರಣ ಎಂದೇ ಖ್ಯಾತಿಯನ್ನು ಗಳಿಸಿದ್ದರು. ಅವರ ಆದರ್ಶ, ಜೀವನ ಮತ್ತು ಸಂದೇಶಗಳು ಎಲ್ಲರಿಗೂ ಪ್ರೇರಣೆಯಾಗಿವೆ. 12 ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಸಾಮಾಜಿಕ ಮೌಢ್ಯತೆಯನ್ನು ಹೊಡೆದು ಹಾಕುವಲ್ಲಿ ಶ್ರಮಿಸಿದ ನಿಜಗುಣ ಅಂಬಿಗರ ಚೌಡಯ್ಯ ನವರ ಸಾಧನೆ ಅವಿಸ್ಮರಣೀಯ ಎಂದು ಹೇಳಿದರು.
ಅಂಬಿಗರ ಚೌಡಯ್ಯನವರ ಭಾವಚಿತ್ರವನ್ನು ಹೂವಿನ ಪಲ್ಲಕ್ಕಿಯಲ್ಲಿ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ಜಿಲ್ಲಾ ಬೆಸ್ತರ ಸಂಘದ ಅಧ್ಯಕ್ಷ ಕೆ.ಜಯರಾಮ್‌, ತಾಲ್ಲೂಕು ಅಧ್ಯಕ್ಷ ಡಿ.ಎನ್‌.ಶಿವಣ್ಣ, ಕಾರ್ಯದರ್ಶಿ ಎಚ್‌.ಎನ್‌.ಗೋಪಾಲ್‌, ನಗರಾಧ್ಯಕ್ಷ ಎಸ್‌.ಎನ್‌.ಕೃಷ್ಣಮೂರ್ತಿ, ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಬಿಸಿಎಂ ಹಾಸ್ಟೆಲ್‌ನ ಶಂಕರ್‌, ಸಿಡಿಪಿಒ ಲಕ್ಷ್ಮೀದೇವಮ್ಮ, ಶಿರಸ್ತೆದಾರ್‌ ನರೇಂದ್ರಬಾಬು ಮತ್ತಿತರರು ಹಾಜರಿದ್ದರು.

ಹಿಂದೂ ಜಾಗರಣಾ ವೇದಿಕೆ ಸದಸ್ಯರಿಂದ ಬೈಕ್‌ ರ್ಯಾಲಿ

0

ಹಿಂದೂ ಜಾಗರಣಾ ವೇದಿಕೆಯಿಂದ ನಗರದ ವಾಸವಿ ಶಾಲೆಯ ಆವರಣದಲ್ಲಿ ಭಾನುವಾರ ನಡೆಯಲಿರುವ ಬೃಹತ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಪೂರ್ವಭಾವಿಯಾಗಿ ಶನಿವಾರ ಶಿಡ್ಲಘಟ್ಟದ ಪ್ರಮುಖ ಬೀದಿಗಳಲ್ಲಿ ಹಿಂದೂ ಜಾಗರಣಾ ವೇದಿಕೆ ಸದಸ್ಯರು ಬೈಕ್ ರ್ಯಾಾಲಿ ನಡೆಸಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಕೋರಿದರು.
ನಗರದ ಅಶೋಕ ರಸ್ತೆಯಲ್ಲಿರುವ ಬಸವೇಶ್ವರ ದೇವಾಲಯದಿಂದ ಮೆರವಣಿಗೆಗೆ ಚಾಲನೆ ನೀಡಿದ ಹಿಂದೂ ಜಾಗರಣಾ ವೇದಿಕೆಯ ಪದಾಧಿಕಾರಿಗಳು, ಬೈಕ್‌ಗಳು ಹಾಗೂ ಆಟೋಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಭಾರತ ಮಾತೆಗೆ ಜೈಕಾರಗಳನ್ನು ಹಾಕಿದರು.
ಭಾನುವಾರ ಮಧ್ಯಾಹ್ನ 3 ಗಂಟೆಗೆ ಬೃಹತ್‌ ಶೋಭಾ ಯಾತ್ರೆಯನ್ನು ಆಯೋಜಿಸಿದ್ದು, ಅಶೋಕ ರಸ್ತೆಯ ಬಸವೇಶ್ವರಸ್ವಾಮಿ ದೇವಸ್ಥಾನದಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಾಸವಿ ಶಾಲೆಯ ಬಳಿ ಸೇರುವುದಾಗಿ ತಿಳಿಸಿದರು. ಬೃಹತ್ ಹಿಂದೂ ಸಮಾಜೋತ್ಸವದಲ್ಲಿ ರಾಮಕೃಷ್ಣ ಆಶ್ರಮದ ಪೂರ್ಣಾನಂದ ಸ್ವಾಮೀಜಿ ಆಶೀರ್ವಚನವನ್ನು ನೀಡಲಿದ್ದು, ದಿಕ್ಸೂಚಿ ಭಾಷಣವನ್ನು ಹಿಂದೂ ಜಾಗರಣಾ ವೇದಿಕೆ ಕ್ಷೇತ್ರೀಯ ಸಂಘಟನಾ ಮಂತ್ರಿ ಜಗದೀಶ್‌ ಕಾರಂತ್‌ ಮಾಡಲಿದ್ದಾರೆ.

ಬಾಲ್ಯ ವಿವಾಹ ತಡೆಯಲು ಜನಜಾಗೃತಿ ಜಾಥಾ

0

ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಜಾಗ್ರತೆ ವಹಿಸಬೇಕು. ಬಾಲ್ಯ ವಿವಾಹ ಮಾಡುವುದು ಅಪರಾಧ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಶನಿವಾರ ನಗರದಲ್ಲಿ ಜಾಥಾ ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.
ಜಿಲ್ಲಾ ಪಂಚಾಯಿತಿ, ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಸಿಬ್ಬಂದಿ ಬಾಲ್ಯ ವಿವಾಹಗಳು ನಡೆಯುತ್ತಿರುವುದು ಕಂಡು ಬಂದಲ್ಲಿ ಬಾಲ್ಯ ವಿವಾಹಗಳನ್ನು ತಡೆಯುವ ನಿಟ್ಟಿನಲ್ಲಿ ರಚನೆ ಮಾಡಲಾಗಿರುವ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಅವರು ಮನವಿ ಮಾಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಗಳು ರಾಜ್ಯ, ಜಿಲ್ಲೆ, ತಾಲ್ಲೂಕು, ಹೋಬಳಿ, ಮುಂತಾದ ಕಡೆಗಳಲ್ಲಿ ಕೆಲಸ ಮಾಡುತ್ತಿವೆ ಎಂದು ಮಾಹಿತಿ ನೀಡಿದರು.
ಬಾಲ್ಯ ವಿವಾಹಗಳು ನಡೆಯುವುದು ಕಂಡು ಬಂದಲ್ಲಿ ೧೦೯೮ ಗೆ ಕರೆ ಮಾಡಬಹುದು. ಮಾಹಿತಿ ನೀಡದವರ ಮಾಹಿತಿ ಗೌಪ್ಯವಾಗಿಡುತ್ತೇವೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಲಕ್ಷ್ಮೀದೇವಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಸರಸ್ವತಿ ಕಾನ್ವೆಂಟ್ ಶಾಲೆಯ ನಿವೃತ್ತಿ ಶಿಕ್ಷಕಿ ಸೀತಾಲಕ್ಷ್ಮೀ ಹಾಗೂ ಸಿಬ್ಬಂದಿ ಹಾಜರಿದ್ದರು.

ನ್ಯಾಯಬೆಲೆ ಅಂಗಡಿಗಳಲ್ಲಿ ಗ್ರಾಹಕರಿಗೆ ತೊಂದರೆಯಾಗಬಾರದು

0

ನ್ಯಾಯಬೆಲೆ ಅಂಗಡಿಗಳಲ್ಲಿ ಗ್ರಾಹಕರಿಗೆ ಆಗುವಂತಹ ತೊಂದರೆಗಳನ್ನು ನಿವಾರಣೆ ಮಾಡಿ, ಸರ್ಕಾರದಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣೆ ಮಾಡುವ ಆಹಾರಧಾನ್ಯಗಳು ಸಮರ್ಪಕವಾಗಿ ಲಭಿಸುವಂತೆ ಜಾಗೃತಿ ವಹಿಸುವುದು ಜಾಗೃತಿ ಸಮಿತಿ ಸದಸ್ಯರುಗಳ ಕರ್ತವ್ಯ ಎಂದು ಆಹಾರ ಇಲಾಖೆಯ ಮುಖ್ಯಕಾರ್ಯದರ್ಶಿ ಹರ್ಷಗುಪ್ತಾ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ಶನಿವಾರ ತಾಲ್ಲೂಕಿನ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಹಾಗೂ ಜಾಗೃತಿ ಸಮಿತಿ ಸದಸ್ಯರುಗಳಿಗೆ ಆಯೋಜನೆ ಮಾಡಲಾಗಿದ್ದ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಅವರು ನ್ಯಾಯಬೆಲೆ ಅಂಗಡಿಗಳ ಮಾಲೀಕರು ಹಾಗೂ ಜಾಗೃತಿ ಸಮಿತಿಗಳ ಸದಸ್ಯರುಗಳೊಂದಿಗೆ ಸಂವಾದ ನಡೆಸಿ ಅವರ ಪ್ರಶ್ನೆಗಳಿಗೆ ಉತ್ತರಿಸಿದರು.
ಹಲವೆಡೆ ಜಾಗೃತಿ ಸಮಿತಿ ಸದಸ್ಯರುಗಳು ಜನರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಗಮನಹರಿಸುವುದರ ಬದಲಿಗೆ ಅವರೇ ಸ್ವತಃ ಆಹಾರ ಧಾನ್ಯಗಳನ್ನು ದುರುಪಯೋಗ ಪಡಿಸಿಕೊಳ್ಳಲು ಮುಂದಾಗುತ್ತಿರುವುದು ಕೇಳಿ ಬರುತ್ತಿದ್ದು ಯಾವುದೇ ಕಾರಣಕ್ಕೂ ಇಂತಹ ಅವ್ಯವಸ್ಥೆಯಾಗಬಾರದು. ಬಡವರು, ಮಧ್ಯಮ ವರ್ಗದ ಜನರು ಆಹಾರದ ಕೊರತೆ ಅನುಭವಿಸದಂತೆ ನೋಡಿಕೊಳ್ಳಲು ಸಮಿತಿಯ ಸದಸ್ಯರುಗಳು ಸಹಕಾರ ನೀಡಬೇಕು.
ನ್ಯಾಯಬೆಲೆ ಅಂಗಡಿಗಳಲ್ಲಿ ಏನಾದರೂ ಅಕ್ರಮಗಳು ನಡೆಯುತ್ತಿರುವುದು ಗಮನಕ್ಕೆ ಬಂದರೆ ತಕ್ಷಣ ಅಧಾರಸಹಿತ ಇಲಾಖೆಯ ಉಪನಿರ್ದೇಶಕರಿಗೆ ದೂರು ಸಲ್ಲಿಸಿದರೆ ಪರಿಶೀಲನೆ ನಡೆಸಿ ಅಂತಹ ನ್ಯಾಯಬೆಲೆಗಳನ್ನು ಅಮಾನತ್ತಿನಲ್ಲಿಟ್ಟು, ಆರೋಪಗಳು ಸಾಬೀತಾದರೆ ಅಂತಹವರ ಲೈಸನ್ಸ್ ವಜಾ ಮಾಡುತ್ತೇವೆ ಎಂದು ಹೇಳಿದರು.
ಜಿಲ್ಲಾ ಆಹಾರ ಇಲಾಖೆಯ ಉಪನಿರ್ದೇಶಕ ಶಿವಶಂಕರ್, ಶಿರಸ್ತೆದಾರ್ ಪ್ರಕಾಶ್ ಹಾಗೂ ತಾಲ್ಲೂಕಿನ ಜಾಗೃತಿ ಸಮಿತಿಯ ಸದಸ್ಯರುಗಳು, ನ್ಯಾಯಬೆಲೆ ಅಂಗಡಿಗಳ ಮಾಲೀಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಾವಿತ್ರಿ ಬಾಪುಲೆ ಅವರ ಜನ್ಮದಿನಾಚರಣೆ ನೆನಪಿನಲ್ಲಿ ಶಿಕ್ಷಕಿಯರಿಗೆ ಸನ್ಮಾನ

0

ಸ್ವಾತಂತ್ರ ಪೂರ್ವದಲ್ಲಿ ಜಿಡ್ಡುಗಟ್ಟಿದ ಸಾಮಾಜಿಕ ವ್ಯವಸ್ಥೆಯೊಳಗೆ ಮೌಢ್ಯತೆಗಳೇ ವಿಜೃಂಭಿಸುತ್ತಿದ್ದ ಸಂದರ್ಭದಲ್ಲಿ ಪರಿಸ್ಥಿತಿಯಲ್ಲಿ ಶೋಷಿತ, ದಲಿತ, ಹಿಂದುಳಿದ ವರ್ಗ ಸೇರಿದಂತೆ ಮಹಿಳೆಯರಿಗೆ ಅಕ್ಷರ ಕಲಿಸಿ ಶಿಕ್ಷಣ ನೀಡುವ ಮೂಲಕ ಹೊಸ ಕ್ರಾಂತಿಗೆ ನಾಂದಿಯಾಡಿದವರು ಮಹಾನ್ ತಾಯಿ ಸಾವಿತ್ರಿ ಬಾಪುಲೆ ಹಾಗೂ ಜ್ಯೋತಿಬಾಪುಲೆಯವರು ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಮುತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಕಸಾಪ ತಾಲ್ಲೂಕು ಘಟಕದಿಂದ ಸಾವಿತ್ರಿ ಬಾಪುಲೆ ಅವರ ಜನ್ಮದಿನಾಚರಣೆ ನೆನಪಿನಲ್ಲಿ ಆಯೋಜಿಸಿದ್ದ ಶಾಲೆಗೊಂದು ಕನ್ನಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಲೆ ತೆರೆದು ಶಿಕ್ಷಕಿಯಾಗಿ ದುಡಿದ ತಪ್ಪಿಗಾಗಿಯೇ ಸಾವಿತ್ರಿಬಾಯಿಪುಲೆ ಸೆಗಣಿ ಮತ್ತು ಕಲ್ಲೇಟು ತಿನ್ನುತ್ತಾರೆ. ಆದರೆ ಶಿಕ್ಷಣವನ್ನು ಅಕ್ಷರಾಭ್ಯಾಸಕ್ಕಿಂತ, ಸಾಮಾಜಿಕ, -ಸಾಂಸ್ಕೃತಿಕ ಬದಲಾವಣೆಗಾಗಿ ತಳಸಮುದಾಯದವರ ಮನಸ್ಸನ್ನು ಬೆಳಗಿಸುವಂತೆ ಮಾಡುವ ಮೂಲಭೂತ ಕೆಲಸವೆಂದೇ ನಂಬಿದ ಪುಲೆ ದಂಪತಿಗಳು ಯಾವುದಕ್ಕೂ ಹೆದರದೆ ಸವಾಲುಗಳನ್ನು ಎದುರಿಸುತ್ತಾರೆ. ಅವರು ಪ್ರತಿದಿನ ಹಳೆಯ ಸೀರೆಯನ್ನು ಉಟ್ಟು ಶಾಲೆಗೆ ಬರುತ್ತಿದ್ದರು. ನಂತರ ಮಲಿನಗೊಂಡ ಸೀರೆಯನ್ನು ಬದಲಾಯಿಸಿಕೊಳ್ಳುತ್ತಿದ್ದರು.
ಪುಲೆ ದಂಪತಿಯ ಹೆಚ್ಚುಗಾರಿಕೆ ಅವರು ತೆರೆದ ಶಾಲೆ ಮತ್ತು ಕಲಿಸಿದ ಅಕ್ಷರವಷ್ಟೇ ಅಲ್ಲ. ಅವರಿಗೆ ಸಾಮಾಜಿಕ ಜಾಗೃತಿ ಮುಖ್ಯವಾಗಿತ್ತು. ಹಾಗಾಗಿ ಪುಲೆ ದಂಪತಿ ಶಾಲೆ ಮತ್ತು ಕಲಿಕೆಯಿಂದಾಚೆಗೂ ವಿಸ್ತರಿಸಿಕೊಂಡರು. ಇದರ ಭಾಗವಾಗಿಯೇ ದಮನಿತರಿಗೆ ಶಾಲೆ ತೆರೆಯುವ ಜೊತೆಗೆ ವಿವಾಹಬಾಹಿರ ಗರ್ಭಿಣಿ ಮಹಿಳೆಯರಿಗೆ ಪುನರ್ವಸತಿ ಕೇಂದ್ರಗಳನ್ನೂ, ವಿವಾಹಬಾಹಿರ ಮಕ್ಕಳಿಗೆ ಶಿಶುಕೇಂದ್ರ ಗಳನ್ನೂ ಸ್ಥಾಪಿಸಿದರು. ವಿಧವಾ ಕೇಶಮುಂಡನವನ್ನು ಕ್ಷೌರಿಕರ ಸಂಘಟನೆಯ ಪ್ರತಿಭಟನೆ ಮೂಲಕ ವಿರೋಧಿಸಿದರು ಎಂದು ಹೇಳಿದರು.
ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಸ್‌.ವಿ.ನಾಗರಾಜರಾವ್‌, ಸಂಸ್ಕೃತ ಪಂಡಿತ ವೇಣುಗೋಪಾಲ ಕೃಷ್ಣಮಾಚಾರ್‌ ಮಾತನಾಡಿದರು.
ಕಸಾಪ ತಾಲ್ಲೂಕು ಘಟಕದಿಂದ ಶಿಕ್ಷಕಿಯರಾದ ವಿಜಯಲಕ್ಷ್ಮಿ, ಪ್ರೇಮಾ ಲೋಬೋ, ಕೆ.ಬೃಂದ, ಮೇಲೂರು ವಿದ್ಯಾ, ಕಾಕಚೊಕ್ಕಂಡಹಳ್ಳಿ ಸುಮಾ, ಅಪ್ಪೇಗೌಡನಹಳ್ಳಿ ವೆಂಕಟರತ್ನ, ಯಣ್ಣಂಗೂರು ಟಿ.ಕೆ.ಮಂಜುಳಮ್ಮ, ಹೊಸಪೇಟೆ ಜಿ.ಎನ್‌.ನೇತ್ರಾವತಿ ಅವರಿಗೆ ಸಾವಿತ್ರಿ ಬಾಪುಲೆ ಅವರ ಜನ್ಮದಿನಾಚರಣೆ ನೆನಪಿನಲ್ಲಿ ಪ್ರಶಸ್ತಿ ಪತ್ರ, ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು.
ಕಸಾಪ ತಾಲ್ಲೂಕು ಘಟಕದ ಉಪಾಧ್ಯಕ್ಷ ಚೌಡಸಂದ್ರ ಪಿ.ಈ.ಕರಗಪ್ಪ, ಪ್ರಧಾನ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್‌, ಪ್ರಗತಿಪರ ರೈತರಾದ ಮಂಜುನಾಥ್‌, ಗಜೇಂದ್ರ, ಎಂ.ಬಿ.ರವಿ, ವಿಮರ್ಶಕ ಚಂದ್ರಶೇಖರ ಹಡಪದ್‌, ಮುಖ್ಯ ಶಿಕ್ಷಕ ಆಂಜನೇಯ, ಶಿಕ್ಷಕರಾದ ರವಿ, ಶ್ರೀನಿವಾಸ್‌, ಬೃಂದಾ, ಮಂಗಳಾಬಾಯಿ, ಪ್ರಭಾಕರ, ಸುಮಿತ್ರಾ, ಬಯ್ಯಪ್ಪರೆಡ್ಡಿ, ಸುಮಾ ಮತ್ತಿತರರು ಹಾಜರಿದ್ದರು.

ಮೇಲೂರಿನಲ್ಲಿ ನಡೆಯಲಿದೆ ಅಂಚೆ ಜಾತ್ರೆ

0

ನಲವತ್ತು ವರ್ಷ ಪ್ರಾಯದ ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘದ 2000ನೇ ಪ್ರದರ್ಶನ
ಅಂದು ಶಿಡ್ಲಘಟ್ಟದ ಸಮೀಪದ ಮೇಲೂರಿನಲ್ಲಿ ವಿಶಿಷ್ಟ ಜಾತ್ರೆಯೊಂದು ನಡೆದಿತ್ತು. ನಲವತ್ತು ವರ್ಷಗಳ ಹಿಂದಿನ ಮಾತಿದು. ‘ರೂರಾಪೆಕ್ಸ್‌’ ಹೆಸರಿನ ಫಲಕಗಳು ಅಲ್ಲಲ್ಲಿ ಕಾಣಿಸುತ್ತಿದ್ದವು. ಅಲ್ಲಿ ನಡೆದಿದ್ದು ಅಂಚೆ ಚೀಟಿಗಳ ಪ್ರದರ್ಶನ. ರೂರಾಪೆಕ್ಸ್‌ ಅಂದರೆ ರೂರಲ್‌ ಫಿಲಾಟಲಿಕ್‌ ಎಕ್ಸಿಬಿಷನ್ (ಗ್ರಾಮಾಂತರ ಅಂಚೆ ಚೀಟಿಗಳ ಪ್ರದರ್ಶನ). ಗ್ರಾಮದಲ್ಲಿ ನಡೆಯುವ ಅಪರೂಪದ ಪ್ರದರ್ಶನವನ್ನು ನೋಡಲು ಜನರು ಹೆಮ್ಮೆಪಟ್ಟು ಆಗಮಿಸಿದ್ದರು. ದೊಡ್ಡ ದೊಡ್ಡ ಫಲಕಗಳ ಮೇಲೆ ಪುಟ್ಟ ಪುಟ್ಟ ಅಂಚೆ ಚೀಟಿಗಳನ್ನು ಕಣ್ಣರಳಿಸಿ ನೋಡಿದ್ದರು. ಅಂಚೆ ಚೀಟಿಗಳಿಗೆ ಇಷ್ಟೆಲ್ಲ ಮಹತ್ವ ಇದೆಯೇ, ಇಷ್ಟೆಲ್ಲ ರೋಚಕ ಇತಿಹಾಸ ಇದೆಯೇ ಎಂದು ಅಚ್ಚರಿಪಟ್ಟಿದ್ದರು.
೧೯೭೮ರಲ್ಲಿ ಪ್ರಥಮ ಬಾರಿಗೆ ಮೇಲೂರಿನಲ್ಲಿ ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘವನ್ನು ಸ್ಥಾಪಿಸಿ ಪ್ರದರ್ಶನ ನಡೆಸಿ ರಾಜ್ಯದಲ್ಲೇ ದಾಖಲೆ ನಿರ್ಮಿಸಿದವರು ಮೇಲೂರು ಎಂ.ಆರ್.ಪ್ರಭಾಕರ್.
‘ಗ್ರಾಮೀಣ ಭಾಗದ ಮಕ್ಕಳಿಗಾಗಿ ಮತ್ತು ಜನರಿಗಾಗಿ ಅಂಚೆ ಚೀಟಿ ಮತ್ತು ನಾಣ್ಯ ನೋಟುಗಳ ಸಂಗ್ರಹದ ಮೂಲಕ ನಮ್ಮ ಹಿರಿಮೆಯನ್ನು ತಿಳಿಸಲೆಂದೇ ಮೇಲೂರಿನಲ್ಲಿ ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘವನ್ನು ಸ್ಥಾಪಿಸಿ ಪ್ರದರ್ಶನ ನಡೆಸಿದ್ದೆವು. ರಾಜ್ಯದಾದ್ಯಂತ ಗ್ರಾಮೀಣ ಭಾಗಗಳಲ್ಲಿ ಪ್ರದರ್ಶನಗಳನ್ನು ನಡೆಸುತ್ತಾ ಬಂದಿದ್ದು, ಇದೀಗ ನಮ್ಮ ಈ ಸಂಘದಿಂದ 40 ವರ್ಷಗಳ ನಂತರ ಪುನಃ ಮೇಲೂರಿನಲ್ಲಿಯೇ ೨00೦ ನೇ ಪ್ರದರ್ಶನವನ್ನು ಗಣರಾಜ್ಯೋತ್ಸವದ ದಿನದಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಸಲಿದ್ದೇವೆ. ವಿಶ್ವಶಾಂತಿ, ಸ್ನೇಹ ಸೌಹಾರ್ಧತೆ, ಭಾವೈಕ್ಯದ ಸಂದೇಶವನ್ನು ಸಮಾಜಕ್ಕೆ ತಲುಪಿಸುವುದು, ಸಂಸ್ಕೃತಿ, ಪರಿಸರ ಪ್ರೇಮ ಹಾಗೂ ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಅಂಚೆ ಚೀಟಿಗಳ ಮೂಲಕ ಪರಿಚಯಿಸುವುದು ನಮ್ಮ ಉದ್ದೇಶ’ ಎನ್ನುತ್ತಾರೆ ಮೇಲೂರು ಎಂ.ಆರ್.ಪ್ರಭಾಕರ್.
೧೯೭೮ರ ಜನವರಿ 26 ರಂದು ಮೇಲೂರು ಗ್ರಾಮದಲ್ಲಿ ಮೊಟ್ಟ ಮೊದಲ ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘ ಸ್ಥಾಪನೆಯಾದ ಸವಿನೆನಪಿಗೆ ರೇಷ್ಮೆ ಕುರಿತಂತೆ ವಿಶೇಷ ಅಂಚೆ ಮುದ್ರೆಯನ್ನು, ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಗಿತ್ತು. ಮೊಟ್ಟಮೊದಲ ರೂರಾಪೆಕ್ಸ್(ರೂರಲ್ ಫಿಲಾಟಲಿ ಎಕ್ಸಿಬಿಷನ್) ನಡೆದ ಜ್ಞಾಪಕಾರ್ಥವಾಗಿ ವಿಶೇಷ ಅಂಚೆ ಲಕೋಟೆ ಹಾಗೂ ಮುದ್ರೆ(ಕ್ಯಾನ್ಸಲೇಷನ್) ಯನ್ನು ಅಂಚೆ ಇಲಾಖೆ ಹೊರತಂದಿತ್ತು.

ಮೇಲೂರು ಎಂ.ಆರ್‌.ಪ್ರಭಾಕರ್‌
ಮೇಲೂರು ಎಂ.ಆರ್‌.ಪ್ರಭಾಕರ್‌

‘೧೯೭೮ರ ಗಣರಾಜ್ಯೋತ್ಸವದಂದು ಮೊಟ್ಟಮೊದಲ ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘವನ್ನು ಮೇಲೂರಿನಲ್ಲಿ ಪ್ರಾರಂಭಿಸಿದೆವು. ಕೃಷಿಗೆ ಸಂಬಂಧಿಸಿದ ಅಂಚೆ ಚೀಟಿಗಳದ್ದೇ ಪ್ರದರ್ಶನ ಏರ್ಪಡಿಸಿದ್ದೆವು. ವಿವಿಧ ದೇಶಗಳ ವೈವಿದ್ಯಮಯ ಅಂಚೆಚೀಟಿಗಳ ಪ್ರದರ್ಶನವನ್ನು ಏರ್ಪಡಿಸಿದ್ದೆವು. ಹೆಚ್ಚೆಚ್ಚು ರೇಷ್ಮೆ ಬೆಳೆಯಿರಿ ಎಂಬುದು ನಮ್ಮ ಧ್ಯೇಯವಾಕ್ಯವಾಗಿತ್ತು. ಅಂಚೆ ಇಲಾಖೆಯವರು ಈ ಕಾರ್ಯವನ್ನು ಗೌರವಿಸಿ ವಿಶೇಷ ಅಂಚೆ ಲಕೋಟೆಯನ್ನು ಅಂದು ಹೊರತಂದರು. ಅದು ನಮ್ಮ ತಾಲ್ಲೂಕಿಗೇ ನೀಡಿದ ಗೌರವವಾಗಿತ್ತು. ಕೃಷಿಕನೇ ಭಾರತದ ಬೆನ್ನೆಲುಬು ಎಂಬ ಘೋಷ ವಾಕ್ಯ, ಕೃಷಿಕನ ಚಿತ್ರ ಹಾಗೂ ರೂರಾಪೆಕ್ಸ್ ಪ್ರಾರಂಭಿಸಿದ ದಿನ ಒಂದು ಬದಿಯಲ್ಲಿ ಮುದ್ರಿಸಿದ್ದರೆ, ಇನ್ನೊಂದು ಬದಿಯಲ್ಲಿ ಅಂಚೆ ಚೀಟಿಯ ಮೇಲೆ ಮೇಲೂರು ಅಂಚೆ ಕಚೇರಿಯ ಮುದ್ರೆ, ರೇಷ್ಮೆ ಹುಳು, ಹಿಪ್ಪುನೇರಳೆ ಎಲೆ, ಗೂಡಿನ ಚಿತ್ರ ಮತ್ತು ಹೆಚ್ಚು ರೇಷ್ಮೆ ಬೆಳೆಯಿರಿ ಎಂದಿರುವ ಮುದ್ರೆ ಒತ್ತಲಾಗಿತ್ತು. ಇದು ಅಂಚೆ ಇತಿಹಾಸದಲ್ಲಿ ದಾಖಲಾದ ಮೌಲಿಕ ವಸ್ತು’ ಎಂದು ರೂರಾಪೆಕ್ಸ್ ಸಂಸ್ಥಾಪಕ ಮೇಲೂರು ಎಂ.ಆರ್.ಪ್ರಭಾಕರ್ ನೆನಪಿಸಿಕೊಳ್ಳುತ್ತಾರೆ.
ಇದಾದ ನಂತರ ಶಾಲಾ, ಕಾಲೇಜುಗಳು, ವಿವಿಧ ಗ್ರಾಮಗಳು, ಊರುಗಳು ಮೊದಲಾದೆಡೆ ಅಂಚೆ ಚೀಟಿ ಪ್ರದರ್ಶಿಸುತ್ತಾ ಬಂದ ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘದ ವತಿಯಿಂದ ಹತ್ತು ವರ್ಷಗಳ ನಂತರ ೧೯೮೮ರಲ್ಲಿ ಮತ್ತೊಮ್ಮ ರೂರಾಪೆಕ್ಸ್(ರೂರಲ್ ಫಿಲಾಟಲಿ ಎಕ್ಸಿಬಿಷನ್) ಮೇಲೂರಿನಲ್ಲಿ ನಡೆಸಲಾಯಿತು. ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಡೆದ ಈ ಅಂಚೆ ಚೀಟಿ ಪ್ರದರ್ಶನದಲ್ಲಿ ‘ಗ್ರಾಮದ ಅಭಿವೃದ್ಧಿ’ ಎಂಬ ಧ್ಯೇಯ ವಾಕ್ಯವುಳ್ಳ ವಿಶೇಷ ಅಂಚೆ ಲಕೋಟೆ ಹಾಗೂ ಮುದ್ರೆ(ಕ್ಯಾನ್ಸಲೇಷನ್) ಯನ್ನು ಅಂಚೆ ಇಲಾಖೆ ಹೊರತಂದಿತ್ತು.
ಆ ನಂತರ ಅಂಚೆ ಚೀಟಿ ಪ್ರದರ್ಶಿಸುತ್ತಾ ಒಂದು ಸಾವಿರದ ಅಂಚೆ ಚೀಟಿ ಪ್ರದರ್ಶನವನ್ನು ೨೦೦೩ರ ಜನವರಿ ೨೬ ರಂದು ಮೇಲೂರಿನಲ್ಲಿ ನಡೆಸಲಾಯಿತು. ಆ ಸಂದರ್ಭದಲ್ಲಿ ‘ಸರ್ವರಿಗೂ ಶಾಂತಿ’ ಎಂಬ ಧ್ಯೇಯ ವಾಕ್ಯದೊಂದಿಗೆ ವಿಶೇಷ ಅಂಚೆ ಲಕೋಟೆ ಹಾಗೂ ಮುದ್ರೆ(ಕ್ಯಾನ್ಸಲೇಷನ್) ಯನ್ನು ಅಂಚೆ ಇಲಾಖೆ ಹೊರತಂದಿತು.
ಇದೀಗ 40 ವರ್ಷಗಳ ನಂತರ 2000ನೇ ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘದ ಪ್ರದರ್ಶನದೊಂದಿಗೆ ವಿಶೇಷ ಅಂಚೆ ಲಕೋಟೆ ಹಾಗೂ ಮುದ್ರೆಯನ್ನು ಕರ್ನಾಟಕ ಸರ್ಕಲ್‌ ಪೋಸ್ಟ್‌ ಮಾಸ್ಟರ್‌ ಜನರಲ್‌ ವೀಣಾ ಶ್ರೀನಿವಾಸನ್‌ ಬಿಡುಗಡೆ ಮಾಡುವರು. ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘದಿಂದ ಪ್ರೇರಣೆ ಪಡೆದು ಅಂಚೆ ಚೀಟಿಗಳನ್ನು ಸಂಗ್ರಹಿಸುತ್ತಿರುವ ತಾಲ್ಲೂಕಿನ ಹಲವರ ಸಂಗ್ರಹಗಳನ್ನೂ ಈ ಎರಡು ದಿನಗಳ ಪ್ರದರ್ಶನದಲ್ಲಿ ಕಾಣಬಹುದಾಗಿದೆ.

ಈ ಸೃಷ್ಟಿಯಲಿ ಭಗವಂತ, ತಾಯಿಯ ರೂಪದಲ್ಲಿ ಪ್ರತಿಯೊಬ್ಬರಿಗೂ ಸಾಕಾರನಾಗುತ್ತಾನೆ

0

ಈಗಿನ ಫಾಸ್ಟ್ ಫುಡ್ ಯುಗದಲ್ಲಿ ತಾಯಂದಿರೇ ಅಡುಗೆ ಮಾಡಿಕೊಂಡು ಬಂದು ತಮ್ಮ ಮಕ್ಕಳಿಗಲ್ಲದೆ ಇತರ ಮಕ್ಕಳಿಗೂ ಉಣ ಬಡಿಸುವ ಕಾರ್ಯಕ್ರಮದ ಮೂಲಕ ಮಾತೃಭೋಜನವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ಹಿರಿಯ ಸುಗಮ ಸಂಗೀತ ಗಾಯಕಿ ರತ್ನಮಾಲಾ ಪ್ರಕಾಶ್‌ ತಿಳಿಸಿದರು.
ನಗರದ ಹೊರವಲಯದ ಹನುಮಂತಪುರ ಗೇಟ್‌ ಬಳಿ ಇರುವ ಬಿಜಿಎಸ್‌ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಮಾತೃಭೋಜನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಈ ಭುವಿಯಲ್ಲಿ ಕಣ್ಣು ಬಿಡುವ ಪ್ರತಿಯೊಂದು ಶಿಶುವಿನ ಬಾಯಿಂದ ಮೊದಲು ಬರುವ ಪದವೇ ಅಮ್ಮ. ಅಳುವಿನಲ್ಲೂ ಮಗು ತನ್ನ ತಾಯಿಯನ್ನು ಅಕ್ಕರೆಯಿಂದ ಅಮ್ಮ ಎಂದು ಕರೆಯುತ್ತದೆ. ಯಾವುದೇ ಭಾಷೆಯಲ್ಲೂ ಅಮ್ಮ ಎಂಬುದು ಅತ್ಯಂತ ಮಧುರವಾದ ಶಬ್ದ. ಪುಟ್ಟ ಕಂದನ ಮೊದಲ ತೊದಲು ನುಡಿಯೂ ಅಮ್ಮ. ಅಮ್ಮ ಎಂಬ ಎರಡಕ್ಷರದ ಪದದಲ್ಲಿ ಅದೇನು ಚೈತನ್ಯ, ದೇವರು ದಯಾಮಯ. ಕರುಣಾಮಯಿ. ತಾಯಿಯೂ ಕರುಣಾಮಯಿ. ತ್ಯಾಗಮಯಿ. ದಯಾಮಯಿ. ಈ ಸೃಷ್ಟಿಯಲಿ ಭಗವಂತ, ತಾಯಿಯ ರೂಪದಲ್ಲಿ ಪ್ರತಿಯೊಬ್ಬರಿಗೂ ಸಾಕಾರನಾಗುತ್ತಾನೆ ಎಂದು ಹೇಳಿದರು.

ಶಿಡ್ಲಘಟ್ಟದ ಹೊರವಲಯದ ಹನುಮಂತಪುರ ಗೇಟ್‌ನಲ್ಲಿರುವ ಬಿಜಿಎಸ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಮಾತೃಭೋಜನ ಕಾರ್ಯಕ್ರಮದಲ್ಲಿ ತಾಯಂದಿರು ಶಾಲಾ ಮಕ್ಕಳಿಗೆ ಉಣಬಡಿಸಿದರು.
ಶಿಡ್ಲಘಟ್ಟದ ಹೊರವಲಯದ ಹನುಮಂತಪುರ ಗೇಟ್‌ನಲ್ಲಿರುವ ಬಿಜಿಎಸ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಮಾತೃಭೋಜನ ಕಾರ್ಯಕ್ರಮದಲ್ಲಿ ತಾಯಂದಿರು ಶಾಲಾ ಮಕ್ಕಳಿಗೆ ಉಣಬಡಿಸಿದರು.

ತಾಯಿ ಮಮಕಾರದ ಸಾಕಾರ ಮೂರ್ತಿ. ತಾಯಿಯ ಹೃದಯ ಬಹು ಮೃದು, ತಾಯಿಯ ಅಡುಗೆ ಬಲು ರುಚಿ. ಏಕೆಂದರೆ ಅದರಲ್ಲಿ ಪ್ರೀತಿ ಬೆರೆತಿರುತ್ತದೆ. ಅದಕ್ಕಾಗಿಯೇ ಇಲ್ಲಿ ತಾಯಂದಿರು ಎಲ್ಲ ಮಕ್ಕಳಿಗೂ ಸಮಾನವಾಗಿ ಪ್ರೀತಿಯಿಂದ ಉಣಬಡಿಸಿರುತ್ತಾರೆ. ಇಷ್ಟೊಂದು ಪ್ರೀತಿಯಿಂದ ತುಂಬಿರುವ ಸ್ಥಳಕ್ಕೆ ಆಗಮಿಸಿ ನಾನೂ ಬೊಗಸೆಯಷ್ಟು ಪ್ರೀತಿಯನ್ನು ತುಂಬಿಕೊಂಡು ಹೋಗುತ್ತಿರುವುದಕ್ಕೆ ಹರ್ಷವಾಗುತ್ತಿದೆ ಎಂದು ನುಡಿದು, ಮಮಕಾರಕ್ಕೆ ಸಂಬಂಧಿಸಿದ ಭಾವಗೀತೆಗಳನ್ನು ಹಾಡಿದರು.
ಆದಿಚುಂಚನಗಿರಿ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಆಶೀರ್ವಚನವನ್ನು ನೀಡಿ ಮಾತನಾಡಿ, ಮಕ್ಕಳಿಗೆ ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಿಕೊಡುವಲ್ಲಿ ಪೋಷಕರು ಹೆಚ್ಚಿನ ಗಮನ ನೀಡಬೇಕು. ಮನೆಯೇ ಮೊದಲ ಪಾಠಶಾಲೆ ಎಂಬ ಹಿರಿಯರ ಮಾತಿನಂತೆ ಮಗುವಿನ ಶಿಕ್ಷಣ ಮನೆಯಿಂದಲೇ ಆರಂಭವಾಗುತ್ತದೆ ಹಾಗಾಗಿ ಮನೆಯಲ್ಲಿ ತಂದೆ-ತಾಯಿಗಳು ಮಕ್ಕಳಿಗೆ ಉತ್ತಮವಾದ ವಾತಾವರಣ ಕಲ್ಪಿಸಿದಿದ್ದಲ್ಲಿ ಮಕ್ಕಳು ಪರಿಪಕ್ವವಾಗಿ ಬೆಳೆಯಲು ಸಾಧ್ಯವಿಲ್ಲ ಎಂದರು.
ಮಕ್ಕಳಿಗೆ ಆದರ್ಶಮಯವಾದ ಶಿಕ್ಷಣದ ಜೊತೆ ಜೊತೆಗೆ ಉತ್ತಮ ಸಂಸ್ಕಾರವನ್ನು ಬೆಳೆಸುವ ಜವಾಬ್ದಾರಿ ತಾಯಿಯ ಮೇಲಿರುತ್ತದೆ. ಪ್ರತಿಯೊಬ್ಬ ಮಗುವೂ ದೇವರ ಪ್ರತಿರೂಪವಾದ ತಾಯಿಯನ್ನು ಗೌರವಿಸುವುದನ್ನು ರೂಡಿಸಿಕೊಳ್ಳಬೇಕು ಎಂದರು.
ಬಿಜಿಎಸ್ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಹಾಗು ಪೋಷಕರ ಪಾತ್ರ ಬಹಳಷ್ಟು ಮಹತ್ತರವಾದದ್ದು ಹಾಗಾಗಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿರುವ ಸಹಕಾರವನ್ನು ಪೋಷಕರು ಶಿಕ್ಷಕರಿಗೆ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಖ್ಯಾತ ಸುಗಮ ಸಂಗೀತ ಗಾಯಕಿ ರತ್ನಮಾಲಾ ಪ್ರಕಾಶ್ ಅವರನ್ನು ಶಾಲಾ ಆಡಳಿತ ಮಂಡಳಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ಪೋಷಕರು ಮಾತೃಭೋಜನ ಸಮಾರಂಭಕ್ಕಾಗಿ ತಯಾರಿಸಿ ತಂದಿದ್ದ ವಿವಿಧ ರೀತಿಯ ತಿಂಡಿಗಳನ್ನು ಮಕ್ಕಳು ಹಾಗು ಪೋಷಕರು ಸವಿದರು.
ಎಸ್‌ಜೆಸಿಐಟಿ ಕಾಲೇಜಿನ ಪ್ರಾಂಶುಪಾಲ ರವಿಕುಮಾರ್, ಬಿಜಿಎಸ್ ಶಾಲೆಯ ಪ್ರಾಂಶುಪಾಲ ಆರ್.ಮಹದೇವ್, ಕೆಂಪರೆಡ್ಡಿ, ಜೆ.ಎಸ್‌.ವೆಂಕಟಸ್ವಾಮಿ, ಪುರುಷೋತ್ತಮ್, ಮುರಳಿ, ದೇವರಾಜ್ ಮತ್ತಿತರರು ಹಾಜರಿದ್ದರು.

ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಬ್ಯಾಂಕ್‌ ಶಾಖೆ ಸ್ಥಾಪಿಸಲು ರೈತರ ಒತ್ತಾಯ

0

ಐದು ನೂರು ಮತ್ತು ಒಂದು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಪಡಿಸಿದ ನಂತರ ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡನ್ನು ಕೊಂಡ ರೀಲರುಗಳು ಚೆಕ್‌ ಮೂಲಕ ವ್ಯವಹಾರ ನಡೆಸುತ್ತಿದ್ದು, ರೈತರಿಗೆ ತೊಂದರೆಯುಂಟಾಗುತ್ತಿದೆ ಎಂದು ರೇಷ್ಮೆ ಹಿತರಕ್ಷಣಾ ವೇದಿಕೆ ಸದಸ್ಯರು ತಿಳಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಶುಕ್ರವಾರ ಮಾರುಕಟ್ಟೆಯ ಅಧಿಕಾರಿ ರತ್ನಯ್ಯಶೆಟ್ಟಿ ಅವರನ್ನು ಭೇಟಿ ಮಾಡಿದ ರೇಷ್ಮೆ ಹಿತರಕ್ಷಣಾ ವೇದಿಕೆ ಮತ್ತು ರೈತ ಸಂಘದ ಸದಸ್ಯರು ರೈತರ ತೊಂದರೆಗಳನ್ನು ವಿವರಿಸಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟರು.
ಉತ್ತಮ ಬೆಲೆ ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸಿಗುತ್ತದೆಂದು ದೂರದೂರುಗಳಿಂದ ಹಾಗೂ ನೆರೆಯ ರಾಜ್ಯಗಳಿಂದ ರೈತರು ಆಗಮಿಸುತ್ತಾರೆ. ಆದರೆ ಕೆಲವು ರೀಲರುಗಳು ನೀಡುವ ಚೆಕ್‌ಗಳಲ್ಲಿ ಇರುವ ತಪ್ಪುಗಳಿಂದಾಗಿ ಅವರು ತಿರುಗಾಡುವ ಪರಿಸ್ಥಿತಿ ಉಂಟಾಗುತ್ತಿದೆ. ತಾತ್ಕಾಲಿಕವಾಗಿ ಪಾಸ್‌ ನೀಡುವ ಅಧಿಕಾರಿಗಳು ರೀಲರುಗಳು ನೀಡುವ ಚೆಕ್‌ಗಳನ್ನು ಒಮ್ಮೆ ಪರಿಶೀಲಿಸಿ, ತಾವೂ ಅದರ ವಿವರಗಳನ್ನು ಬರೆದಿಟ್ಟುಕೊಂಡು ರೈತರಿಗೆ ನೀಡುವ ವ್ಯವಸ್ಥೆ ಮಾಡಬೇಕು.
ಈ ಹಿಂದೆ ಮಾರುಕಟ್ಟೆ ಅಧಿಕಾರಿಗಳು ರೀಲರುಗಳಿಂದ ಹಣ ಪಡೆದು ಕಮಿಷನ್‌ ಹಣ ಮುರಿದುಕೊಂಡು ರೈತರಿಗೆ ಹಣ ನೀಡುತ್ತಿದ್ದರು. ಅದೇ ರೀತಿಯಾಗಿ ರೀಲರುಗಳಿಂದ ಅಧಿಕಾರಿಗಳು ಚೆಕ್‌ ಪಡೆದು ಸರ್ಕಾರಕ್ಕೆ ಸಲ್ಲಿಸಬೇಕಾದ ಕಮಿಷನ್‌ ಹಣವನ್ನು ತೆಗೆದುಕೊಂಡು ರೈತರಿಗೆ ಸರ್ಕಾರದ ಚೆಕ್‌ ನೀಡುವ ವ್ಯವಸ್ಥೆ ಆಗಬೇಕು ಎಂದು ಒತ್ತಾಯಿಸಿದರು.
ಮಾರುಕಟ್ಟೆಯಲ್ಲಿನ ಸಮಸ್ಯೆಗಳು ಅಧಿಕವಾಗಿದೆ. ಅವನ್ನು ಅಧಿಕಾರಿಗಳು ಸರಿಪಡಿಸಬೇಕು. ರೇಷ್ಮೆ ಗೂಡಿನ ಮಾರುಕಟ್ಟೆಯ ವಹಿವಾಟಿಗೆ ಒಂದು ಬ್ಯಾಂಕ್‌ ಶಾಖೆಯ ಅಗತ್ಯವಿದೆ ಅದರ ಬಗ್ಗೆ ಮೇಲಧಿಕಾರಿಗಳಿಗೆ ಶೀಘ್ರವಾಗಿ ತಿಳಿಸುವಂತೆ ಕೋರಿದರು.
ರೇಷ್ಮೆ ಹಿತರಕ್ಷಣಾ ವೇದಿಕೆ ಸಂಚಾಲಕ ಯಲುವಳ್ಳಿ ಸೊಣ್ಣೇಗೌಡ, ಉಪಾಧ್ಯಕ್ಷ ಮಳ್ಳೂರು ಹರೀಶ್‌, ರೈತಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್‌, ಮಳಮಾಚನಹಳ್ಳಿ ದೇವರಾಜ್‌, ರಾಮಕೃಷ್ಣಪ್ಪ, ರಾಮಚಂದ್ರಪ್ಪ, ಮಂಜುನಾಥ, ಕೃಷ್ಣಪ್ಪ, ನಂಜಪ್ಪ ಮತ್ತಿತರರು ಹಾಜರಿದ್ದರು.

ಸಿ.ಐ.ಟಿ.ಯು ಸದಸ್ಯರ ಪ್ರತಿಭಟನೆ

0

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶುಕ್ರವಾರ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಹಾಗೂ ರಾಜ್ಯ ಅಕ್ಷರ ದಾಸೋಹ ನೌಕರರಿಂದ ನಗರದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಏಳನೇ ವೇತನ ಆಯೋಗದ ಶಿಫಾರಸ್ಸಿನ ಪ್ರಕಾರ ಈ ನೌಕರರಿಗೂ ಕನಿಷ್ಠ ಕೂಲಿ ನೀಡಬೇಕು. ನಾಲ್ಕನೇ ದರ್ಜೆಯ ನೌಕರರನ್ನಾಗಿ ಪರಿಗಣಿಸಬೇಕು. ಹಿಂದಿನ ಸರ್ಕಾರ ಘೋಷಣೆ ಮಾಡಿದ ಹೆಚ್ಚುವರಿ ಸಂಭಾವನೆಯನ್ನು ಇಂದಿನ ಸರ್ಕಾರ ಜಾರಿಗೊಳಿಸಬೇಕು. 45ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸುಗಳನ್ನು ಜಾರಿ ಮಾಡಬೇಕು. ಅಡುಗೆ ಮಾಡುವಾಗ ಸಂಭವಿಸುವ ಅಪಘಾತ ಮೊತ್ತವನ್ನು ಹೆಚ್ಚಿಸಬೇಕು. ಐಸಿಡಿಎಸ್‌ ಯೋಜನೆಗೆ ಕಡಿತ ಮಾಡಿದ ಅನುದಾನವನ್ನು ಕೇಂದ್ರ ಸರ್ಕಾರ ವಾಪಸ್‌ ಮಾಡಬೇಕು. ಐಸಿಡಿಎಸ್‌ ಯೋಜನೆಯನ್ನು ಬಲಿಷ್ಠಗೊಳಿಸಬೇಕು. ಕನಿಷ್ಠ ವೇತನ ಮತ್ತು ನಿವೃತ್ತಿ ಸೌಲಭ್ಯ ನೀಡಬೇಕು ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಘೋಷಣೆಗಳನ್ನು ಕೂಗುತ್ತಾ ಪ್ರಮುಖ ಬೀದಿಗಳಲ್ಲಿ ಸಾಗಿ ತಾಲ್ಲೂಕು ಕಚೇರಿಯಲ್ಲಿ ಮನವಿ ಸಲ್ಲಿಸಿದರು.
ಸಿ.ಐ.ಟಿ.ಯು ಜಿಲ್ಲಾ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಮುನಿಲಕ್ಷ್ಮಮ್ಮ, ಎಸ್‌.ಎಂ.ಮಂಜುಳಾ, ಎಂ.ಆರ್‌.ಗೀತಾ, ಅಶ್ವತ್ಥಮ್ಮ, ಗುಲ್ಜಾರ್‌, ಟಿ.ಮಂಜುಳಮ್ಮ, ಫಯಾಜುಲ್ಲಾ, ಖಲೀಲ್‌, ನರಸಿಂಹಪ್ಪ, ವೆಂಕಟರಮಣಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮಕ್ಕಳ ಪ್ರತಿಭೆ ಗುರುತಿಸಲು ಕಲಾಶ್ರೀ ಶಿಬಿರ

0

ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಲಾಶ್ರೀ ಶಿಬಿರವನ್ನು ನಡೆಸಲಾಗುತ್ತಿದೆ. ಗ್ರಾಮೀಣ ಮಕ್ಕಳ ಪ್ರತಿಭೆಗಳ ವಿಕಸನಕ್ಕೆ ಶಿಬಿರ ಸಹಕಾರಿಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಲಕ್ಷ್ಮೀದೇವಮ್ಮ ತಿಳಿಸಿದರು.
ನಗರದ ಸ್ತ್ರೀ ಶಕ್ತಿ ಭವನದಲ್ಲಿ ಶುಕ್ರವಾರ ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣಿಕ ಇಲಾಖೆಯಿಂದ ಆಯೋಜಿಸಿದ್ದ 9–16 ವರ್ಷದೊಳಗಿನ ಮಕ್ಕಳಿಗೆ ತಾಲ್ಲೂಕು ಮಟ್ಟದ ಕಲಾಶ್ರೀ ಆಯ್ಕೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವಿಶಿಷ್ಟ ಪ್ರತಿಭೆ ಅಡಗಿರುತ್ತದೆ. ಇದನ್ನು ಗುರುತಿಸುವ ಕೆಲಸವಾಗಬೇಕು. ಶಾಲೆಗಳಲ್ಲಿ ಪಠ್ಯದ ಜತೆ ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡುವ ಅಗತ್ಯವಿದೆ. ಯಾವುದೇ ಸ್ಪರ್ಧೆಯಲ್ಲಿ ಗೆಲುವಿಗಿಂತ ಭಾಗವಹಿಸುವುದು ಮುಖ್ಯ ಎಂದು ಹೇಳಿದರು.
ವೈದ್ಯಾಧಿಕಾರಿ ಡಾ.ವಿಜಯಕುಮಾರ್‌ ಮಾತನಾಡಿ, ಗ್ರಾಮೀಣ ಮಕ್ಕಳಲ್ಲಿ ಹಿಂಜಕೆ ಹೆಚ್ಚಿರುತ್ತದೆ. ಆದರೆ ಕ್ರಿಯಾಶೀಲತೆ ಹೆಚ್ಚಿರುತ್ತದೆ. ಆತ್ಮವಿಶ್ವಾಸದಿಂದ ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಹಿಂಜರಿಕೆ ಬಿಟ್ಟು ಪ್ರದರ್ಶಿಸಿ. ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದು ನುಡಿದರು.
ಸೃಜನಾತ್ಮಕ ಕಲೆಯಲ್ಲಿ ಚಿತ್ರಕಲೆ, ಕರಕುಶಲ ಕಲೆ, ಜೇಡಿಮಣ್ಣಿನ ಕಲೆ, ಸೃಜನಾತ್ಮಕ ಬರವಣಿಗೆಯಲ್ಲಿ ಕಥೆ, ಕವನ, ಪ್ರಬಂಧ, ಸುಗಮ ಸಂಗೀತ, ವಿಜ್ಞಾನದಲ್ಲಿ ನೂತನ ಆವಿಷ್ಕಾರದಲ್ಲಿ ನಡೆದ ಮಾದರಿ ಪ್ರದರ್ಶನದಲ್ಲಿ ತಾಲ್ಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ಗಮನ ಸೆಳೆದರು.
ಸಂಪನ್ಮೂಲ ವ್ಯಕ್ತಿಗಳಾಗಿ ಎಂ.ಇಂದಿರಾ, ಶಿವಕುಮಾರ್‌, ಶ್ರೀನಿವಾಸ್‌, ಸುಮಿತ್ರ, ಶ್ರೀಲಕ್ಷ್ಮಿ, ಕೃಷ್ಣಮೂರ್ತಿ, ನರಸಿಂಹಪ್ಪ ಭಾಗವಹಿಸಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಗಿರಿಜಾಂಬಿಕೆ, ಮುಖ್ಯ ಶಿಕ್ಷಕರಾದ ಎಂ.ಶಿವಕುಮಾರ್‌, ಎನ್‌.ಕೃಷ್ಣಮೂರ್ತಿ, ಶ್ರೀನಿವಾಸ್‌, ಮುನಿನರಸಿಂಹಪ್ಪ, ಪ್ರಶಾಂತ್‌, ವಿ.ಕೃಷ್ಣ ಮತ್ತಿತರರು ಹಾಜರಿದ್ದರು.

ವಿದ್ಯೆ ಕಲಿತರೆ ಸಾಲದು ಕೌಶಲ್ಯವನ್ನು ಹೊಂದಬೇಕು

0

ನಾಡಿನ ಯುವಜನರಿಗೆ ಉದ್ಯೋಗ ನೀಡುವುದು ಸರ್ಕಾರಕ್ಕೆ ಸವಾಲಾಗಿದೆ. ಈಗಿನ ಯುಗದಲ್ಲಿ ಕೇವಲ ವಿದ್ಯೆ ಕಲಿತರೆ ಸಾಲದು ಕೌಶಲ್ಯವನ್ನು ಹೊಂದಬೇಕೆಂದು ಯುವ ಜನರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಂಜುನಾಥ್‌ ತಿಳಿಸಿದರು.
ನಗರದ ಬಸ್‌ನಿಲ್ದಾಣದ ಎದುರಿಗಿರುವ ಬಿ.ಆರ್‌.ಕಾಂಪ್ಲೆಕ್ಸ್‌ನಲ್ಲಿ ಸೌಂಧರ್ಯ ಗ್ರಾಮೀಣ ಹಾಗೂ ಪಟ್ಟಣ ಅಭಿವೃದ್ಧಿ ಸಂಸ್ಥೆಯಿಂದ ರಾಜೀವ್‌ಗಾಂಧಿ ಚೈತನ್ಯ ಯೋಜನೆಯಡಿಯಲ್ಲಿ ನಿರುದ್ಯೋಗಿ ಟೈಲರಿಂಗ್‌ ತರಬೇತಿ ಪಡೆದ ಯುವತಿಯರಿಗೆ ಗುರುವಾರ ಪ್ರಮಾಣ ಪತ್ರ ಮತ್ತು ಶಿಬಿರದ ಭತ್ಯೆಯ ಚೆಕ್‌ ವಿತರಿಸಿ ಅವರು ಮಾತನಾಡಿದರು, ನಲವತ್ತೈದು ದಿನಗಳ ಕಾಲ ಯುವತಿಯರು ಟೈಲರಿಂಗ್‌ ತರಬೇತಿಯೊಂದಿಗೆ ವಿವಿಧ ತರಬೇತಿಗಳನ್ನು ಪಡೆದು ಈ ದಿನ 4,500 ರೂಗಳ ಚೆಕ್‌ ಪಡೆಯುತ್ತಿರುವಿರಿ. ಈ ಹಣವನ್ನು ಪೋಲು ಮಾಡದೆ ಅದಕ್ಕೆ ಇನ್ನು ಸ್ವಲ್ಪ ಹಣವನ್ನು ಸೇರಿಸಿ ಒಂದು ಹೊಲಿಗೆ ಯಂತ್ರವನ್ನು ಕೊಳ್ಳಿ. ಸ್ವತಂತ್ರವಾಗಿ ಬದುಕುವುದನ್ನು ರೂಢಿಸಿಕೊಳ್ಳಿ. ಆರ್ಥಿಕವಾಗಿ ಸ್ವಾವಲಂಬಿಗಳಾದಲ್ಲಿ ನಿಮ್ಮಲ್ಲಿ ತಾನಾಗಿಗೇ ಆತ್ಮಸ್ಥೈರ್ಯ ಮತ್ತು ಆತ್ಮಗೌರವ ಮೂಡುತ್ತದೆ. ನೀವು ಸರ್ಕಾರದ ನೆರವಿನಿಂದ ತರಬೇತಿಯನ್ನು ಪಡೆದ ಕಾರಣ ಸರ್ಕಾರದ ರಾಯಭಾರಿಗಳಾಗಿ ನಿಮ್ಮ ಸುತ್ತಮುತ್ತ ವೈಯಕ್ತಿಯ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಪ್ರೇರಣೆ ನೀಡಿ. ಬಯಲು ಶೌಚಮುಕ್ತ ಜಿಲ್ಲೆಯನ್ನಾಗಿಸಲು ನಿಮ್ಮ ಸೇವೆಯೂ ಅಗತ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ತರಬೇತಿಯನ್ನು ಪಡೆದ ಎರಡನೇ ತಂಡಕ್ಕೆ ಪ್ರಮಾಣ ಪತ್ರ ಮತ್ತು ಶಿಬಿರದ ಭತ್ಯೆಯ ಚೆಕ್‌ ವಿತರಿಸಿ, ಮೂರನೇ ತಂಡದ ಶಿಬಿರಕ್ಕೆ ಚಾಲನೆ ನೀಡಲಾಯಿತು. ಶಿಬಿರದ ಅನುಭವಗಳನ್ನು ತರಬೇತಿ ಪಡೆದ ಯುವತಿಯರು ಹಂಚಿಕೊಂಡರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್‌, ಬ್ಯಾಂಕ್‌ ಸಂಪರ್ಕಾಧಿಕಾರಿ ರಾಮಸ್ವಾಮಿ, ಸೌಂಧರ್ಯ ಗ್ರಾಮೀಣ ಹಾಗೂ ಪಟ್ಟಣ ಅಭಿವೃದ್ಧಿ ಸಂಸ್ಥೆಯ ವೆಂಕಟರೋಣಪ್ಪ, ಭಕ್ತರಹಳ್ಳಿ ಮುನೇಗೌಡ ಮತ್ತಿತರರು ಹಾಜರಿದ್ದರು.

ತಾಲ್ಲೂಕು ಮಟ್ಟದ ಸಂಕ್ರಾಂತಿ ಕವಿಗೋಷ್ಠಿ

0

ತಾಲ್ಲೂಕು ಕಸಾಪ ವತಿಯಿಂದ ಸಂಕ್ರಾಂತಿ ಹಬ್ಬದ ನೆನಪಿನಲ್ಲಿ ತಾಲ್ಲೂಕು ಮಟ್ಟದ ಸಂಕ್ರಾಂತಿ ಕವಿಗೋಷ್ಠಿ ಕಾರ್ಯಕ್ರಮವನ್ನು ಜನವರಿ 20 ರ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ತಾಲ್ಲೂಕಿನ ಮುತ್ತೂರು ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಲಾಗಿದೆ. ಆಸಕ್ತ ಸಾಹಿತ್ಯಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.